ಮುಸ್ಲಿಮರ ಆರೋಗ್ಯ ಮತ್ತು ಇಸ್ಲಾಮೋಫೋಬಿಯಾ

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒಂದು ವಿಷಣ್ಣತೆಯಲ್ಲೇ ಕಳೆದುಹೋಯಿತು. ವರ್ಷದ ಆರಂಭದಿಂದಲೇ ದೇಶದಲ್ಲಿ ಇಸ್ಲಾಮೋಫೋಬಿಕ್ ಘಟನೆಗಳಲ್ಲಿ ಭಯಾನಕ ಹೆಚ್ಚಳ ಕಂಡಿದೆ. ‘ಡೀಲ್ ಆಫ್ ದಿ ಡೇ’ ಎಂದು ಪ್ರಖ್ಯಾತ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕಿದ ‘ಬುಲ್ಲಿ ಬಾಯ್’ ಅಪ್ಲಿಕೇಶನ್ ನಿಂದ ಹಿಡಿದು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಹಿಂದೂ ಸ್ವಾಮಿಗಳು ನೀಡಿದ ಬಹಿರಂಗ ಕರೆ, ಹಲವು ರಾಜ್ಯಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಮುಸ್ಲಿಮ್ ಮನೆಗಳು ಮತ್ತು ಮಸೀದಿಗಳ ಮೇಲೆ ನಡೆದ ಅಪ್ರಚೋದಕ ಹಿಂಸಾತ್ಮಕ ದಾಳಿಗಳೆಲ್ಲವೂ ಇಡೀ ದೇಶದ ಮುಸ್ಲಿಮರಲ್ಲಿ‌ ಒಂದು ವಿವರಿಸಲಾಗದ ಕಳವಳಕ್ಕೆ ಕಾರಣವಾಗಿತ್ತು.

ಇಸ್ಲಾಮೋಫೋಬಿಯಾವು ಈ ದೇಶದಲ್ಲಿ ಈಗ  ಮುಸ್ಲಿಮರ ಜೀವನದ ದೈನಂದಿನ ಭಾಗವಾಗಿ ಬಿಟ್ಟಿದೆ. ಏಕೆಂದರೆ ನಾವು ಇಲ್ಲಿ ವಿನಾಕಾರಣ ಹತ್ಯೆಗೀಡಾಗುತ್ತೇವೆ, ಟೀಕೆಗೊಳಗಾಗುತ್ತೇವೆ, ಅನ್ಯಾಯವಾಗಿ ಸೆರೆವಾಸಕ್ಕೆ ಒಳಗಾಗುತ್ತೇವೆ ಮತ್ತು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತದೆ. ನಾವು  ಕೆಲಸದ ಸ್ಥಳಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಬೀದಿಗಳಲ್ಲಿ ಮತ್ತು ನಮ್ಮ ಆರಾಧನಾ ಸ್ಥಳಗಳಲ್ಲಿ ಹಿಂಸೆಯ ಬೆದರಿಕೆಯನ್ನು ಎದುರಿಸುತ್ತೇವೆ. ನಾವು ಪ್ರತ್ಯಕ್ಷವಾಗಿ ಹಿಂಸೆಗೆ ಒಳಗಾಗುತ್ತಿದ್ದೇವೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅದಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಮತ್ತೊಂದೆಡೆ ಧಾರ್ಮಿಕ ತಾರತಮ್ಯವು ಲಕ್ಷಾಂತರ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದು ಇಡೀ ಸಮುದಾಯವನ್ನು ಆರೋಗ್ಯ ಬಿಕ್ಕಟ್ಟಿಗೆ ತಳ್ಳುತ್ತದೆ.  ಅನಿಯಂತ್ರಿತವಾಗಿ ಹಬ್ಬುತ್ತಿರುವ ಇಸ್ಲಾಮೋಫೋಬಿಯಾವು ಪ್ರಪಂಚದಾದ್ಯಂತದ ಮುಸ್ಲಿಮ್ ಸಮುದಾಯಗಳನ್ನು ಆಳವಾದ ಮಾನಸಿಕ ಆಘಾತಕ್ಕೆ ಒಳಗಾಗಿಸಿದೆ. ಈ ರೀತಿಯ ಆಘಾತಕ್ಕೆ ಒಂದು ದೊಡ್ಡ ಐತಿಹ್ಯವೇ ಇದೆ, ಮತ್ತಿದು ಒಂದು ವ್ಯವಸ್ಥಿತ ತಂತ್ರದ ಫಲ. ಅಷ್ಟು ಮಾತ್ರವಲ್ಲದೆ ಆಘಾತವು ಒಂದು ತಲೆಮಾರಿಗೆ ಮುಗಿದು ಹೋಗದೆ ತಲೆಮಾರಿನಿಂದ ತಲೆಮಾರಿಗೆ ಒಂದು ವಜ್ಜೆಯಂತೆ ಸಾಗುತ್ತದೆ ಎಂಬುದು ದೊಡ್ಡ ದುರಂತ. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಇಂತಹ ವ್ಯವಸ್ಥಿತ ಆಘಾತ ಉಂಟುಮಾಡುವ ಪರಿಣಾಮಗಳೇನು ಮತ್ತು ಅದರಿಂದ ನಾವು ಹೇಗೆ ಹೊರಬರಬಹುದು? ಎಂಬುವುದನ್ನು ನಾವೀಗ ಅವಶ್ಯಕವಾಗಿ ಚಿಂತಿಸಲೇಬೇಕಾಗಿದೆ.

ವ್ಯವಸ್ಥಿತ ದಬ್ಬಾಳಿಕೆ, ಮುಖ್ಯವಾಹಿನಿಯಿಂದ ದೂರವಿಡುವುದು ಮತ್ತು ತಾರತಮ್ಯದಂತಹ ಇಸ್ಲಾಮೋಫೋಬಿಕ್ ನಡವಳಿಕೆಗಳು ಒಂದು ಪ್ರದೇಶದ ಅಲ್ಪಸಂಖ್ಯಾತರಲ್ಲಿ ಖಿನ್ನತೆ, ಆತ್ಮಹತ್ಯೆ, ಆತಂಕ, ಕಿರಿಕಿರಿ, ಕಳಪೆ ಏಕಾಗ್ರತೆ, ಹೈಪರ್ವಿಜಿಲೆನ್ಸ್, ಕಡಿಮೆ ಸ್ವಾಭಿಮಾನ ಮತ್ತು ನಕಾರಾತ್ಮಕ ಸ್ವಾಭಿಮಾನದಂತಹ ಋಣಾತ್ಮಕ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ವ್ಯವಸ್ಥಿತ ಆಘಾತವು PTSD ಅಥವಾ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನೊಂದಿಗೆ ಸಾಮತ್ಯೆಯನ್ನು ಹೊಂದಿದೆ. ಆದರೆ ಪ್ರಸ್ತುತ ನಾವು ಅನುಭವಿಸುತ್ತಿರುವ ತಾರತಮ್ಯವು‌ ನಿರಂತರ ಮತ್ತು ವ್ಯಾಪಕವಾಗಿರುವುದರಿಂದ ಮುಸ್ಲಿಮರ ಮಾನಸಿಕ ಆರೋಗ್ಯದ ಮೇಲೆ ಅದು ಬೀರುತ್ತಿರುವ ಪರಿಣಾಮವನ್ನು ವಿವರಿಸಲು ಈ ಪದವು ಸಾಕಾಗುವುದಿಲ್ಲ.

ವ್ಯವಸ್ಥೆಯೇ ಹುಟ್ಟು ಹಾಕಿರುವ ಈ ಆಘಾತವು ನಮ್ಮ ನರಮಂಡಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅಪಾಯಕಾರಿ ಸಂದರ್ಭಗಳಲ್ಲಿ ಹೋರಾಡಲು ಅಥವಾ ಪಲಾಯನ ಮಾಡಲು ನಮ್ಮ ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ (ಸಾಮಾನ್ಯವಾಗಿ ಒತ್ತಡದ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ). ಈ ರಾಸಾಯನಿಕಗಳು ನಮ್ಮ ದೇಹದಲ್ಲಿ ಸಣ್ಣ ಸಣ್ಣ ಸ್ಫೋಟಗಳಲ್ಲಿ ಬಿಡುಗಡೆಯಾಗಬೇಕು. ಇದರಿಂದ ನಾವು ಅಪಾಯದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.  ವ್ಯವಸ್ಥಿತ ಆಘಾತದ ಸಂದರ್ಭದಲ್ಲಿ, ದೀರ್ಘಕಾಲದವರೆಗೆ ಅಪಾಯದಿಂದ ಯಾವುದೇ ವಿರಾಮ ಇಲ್ಲದೇ ಇದ್ದಾಗ ಏನಾಗುತ್ತದೆ?  ದೀರ್ಘಾವಧಿಯ ಒತ್ತಡದ ಪ್ರತಿಕ್ರಿಯೆಯು ಅಧಿಕ ರಕ್ತದೊತ್ತಡ, ಹೃದ್ರೋಗ, ನಿದ್ರಾಹೀನತೆ, ನಿದ್ರಾ ಭಂಗಗಳು, ಖಿನ್ನತೆ, ಆತಂಕ ಮತ್ತು ಋಣಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗಬಹುದು.

ಜೆನ್ನಿಫರ್ ಫ್ರೈಡ್

ಆಘಾತಕಾರಿ ಅನುಭವವನ್ನು ಇನ್ನಷ್ಟು ಹದಗೆಡಿಸುವ ಸಾಂಸ್ಥಿಕ ಕ್ರಿಯೆ ಅಥವಾ ನಿಷ್ಕ್ರಿಯತೆಯನ್ನು ವಿವರಿಸಲು 2008 ರಲ್ಲಿ, ಒರೆಗಾನ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಜೆನ್ನಿಫರ್ ಫ್ರೈಡ್ ಅವರು “ಸಾಂಸ್ಥಿಕ ದ್ರೋಹ” ಎಂಬ ಪದವನ್ನು ಸೃಷ್ಟಿಸಿದರು. ನಮ್ಮ ಸುರಕ್ಷತೆ ಮತ್ತು ಯೋಗಕ್ಷೇಮವನ್ನು (ಶಾಲೆಗಳು, ಕಾಲೇಜುಗಳು, ನ್ಯಾಯಾಲಯಗಳು, ಸರ್ಕಾರಗಳು) ರಕ್ಷಿಸಲು ರಚಿಸಲಾದ ವಿಶ್ವಾಸಾರ್ಹ ಸಂಸ್ಥೆಗಳೇ ಹಿಂಸಾಚಾರ ಮತ್ತು ತಾರತಮ್ಯವನ್ನು ಎಸಗುತ್ತಿರುವುದರಿಂದ ಈ ದೇಶದ ಮುಸ್ಲಿಮ್ ಸಮುದಾಯದ ತಲ್ಲಣಗಳನ್ನು ಸೂಕ್ತವಾಗಿ ವಿವರಿಸಲು ಸಾಧ್ಯವಿರುವುದು ಬಹುಶಃ ಇದೊಂದೇ ಪದಕ್ಕೆ. ಯಾಕೆಂದರೆ ಇಲ್ಲಿನ‌ ಮುಸ್ಲಿಂ ಸಮುದಾಯಕ್ಕೆ ಇಂತಹ ಆಘಾತಕಾರಿ ಅನುಭವಗಳು ಪದೇಪದೇ ಸಂಭವಿಸುತ್ತಲೇ ಇರುವುದಷ್ಟೇ ಅಲ್ಲದೆ ಇದಕ್ಕೆ ಯಾವುದೇ ಪರಿಹಾರಗಳು ಕಂಡುಬರುತ್ತಿಲ್ಲ.

ವ್ಯವಸ್ಥಿತ ಅಥವಾ ಸಾಂಸ್ಥಿಕ ಆಘಾತ ಎಂಬುವುದು ಚಾರಿತ್ರಿಕ‌ವಾದದ್ದು ಮತ್ತು ಪೀಳಿಗೆಯಿಂದ ಪೀಳಿಗೆಗೆ ಹರಡುವಂಥದ್ದು. ಇತ್ತೀಚಿನ ಅಧ್ಯಯನಗಳು ಇಂತಹ ಆಘಾತದ ಪರಿಣಾಮಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಡಬಹುದು ಎಂದೇ ಹೇಳಿದೆ.  ಆಘಾತದ ಪರಿಣಾಮಗಳಿಗೆ ನೇರವಾಗಿ ಒಡ್ಡಿಕೊಂಡವರು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯವರೂ ಇದರ ದೂರಗಾಮಿ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂಬುವುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ಮುಸ್ಲಿಮರ ಬಗ್ಗೆ ಪ್ರಚಾರ ಮಾಡಲಾದ ನಕಾರಾತ್ಮಕ ಸ್ಟೀರಿಯೊಟೈಪ್‌ಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಆಂತರಿಕವಾಗಿಯೇ ರವಾನಿಸಲ್ಪಡಬಹುದು. ಇದು ಅಂತಿಮವಾಗಿ ಸ್ವಾಭಿಮಾನದ ಕೊರತೆಯಂತೆ ಅಥವಾ ದುರ್ಬಲ‌ ಮಾನಸಿಕ ಸ್ಥಿತಿಯಂತೆ ಪ್ರಕಟಗೊಳ್ಳಬಹುದು. ಹಲವು ವೈಜ್ಞಾನಿಕ ಸಂಶೋಧನೆಗಳು ಮುಂದಿನ ಪೀಳಿಗೆಯ ಮುಸ್ಲಿಮ್ ಸಮುದಾಯದ ಸಂಸ್ಕೃತಿ ಮತ್ತು ಜೀವಶಾಸ್ತ್ರವನ್ನು ಸಾಮೂಹಿಕ ನೋವು ಹೇಗೆ ರೂಪಿಸುತ್ತದೆ ಎಂಬುದರ ಕುರಿತು ಪ್ರಬಲವಾದ ವಾದಗಳನ್ನು ಪ್ರಸ್ತುತಪಡಿಸಿದೆ.

ಜೊತೆಗೆ ಈ ಸಂಶೋಧನೆಗಳು ಆಘಾತವನ್ನು ತಲೆಮಾರುಗಳವರೆಗೆ ರವಾನಿಸಬಹುದಾದರೆ, ಆಶಾವಾದಗಳಂತಹ ಸಕಾರಾತ್ಮಕ ಚಿಂತನೆಗಳೂ ಸಹ ‘ಇಂಟರ್ ಜನರೇಶನಲ್’ ಆಗಿ ಪ್ರವಹಿಸಬಹುದು ಎಂಬ ಭರವಸೆಯನ್ನೂ ನೀಡುತ್ತವೆ.

ಸಾಮೂಹಿಕ ಚಿಕಿತ್ಸೆ ಮತ್ತು ಸಾಧ್ಯತೆಗಳು
ಮುಸ್ಲಿಮ್ ಬದುಕನ್ನು ಅಮಾನವೀಯಗೊಳಿಸಿರುವ  ವ್ಯವಸ್ಥೆಯಲ್ಲಿ, ಚಿಕಿತ್ಸೆಯು ಸುಲಭವಲ್ಲ ಮತ್ತು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. ಆದರೆ ನಾವು, ಆಘಾತದಿಂದ ಗುಣವಾಗಲು ಮಾತ್ರವಲ್ಲದೆ ಆಳವಾದ ಭಾವನಾತ್ಮಕ ಮತ್ತು ಸಾಮೂಹಿಕ ರೂಪಾಂತರಕ್ಕೆ ಅವಕಾಶಗಳನ್ನು ಹುಡುಕಲೇಬೇಕಾಗಿದೆ. ಇದನ್ನು ಮಾಡಲು ಯಾವುದೇ ನಿಶ್ಚಿತ  ಮಾರ್ಗವಿಲ್ಲ, ಆದರೆ ಇಲ್ಲಿ ಕೆಲವು ಸಲಹೆಗಳನ್ನು ಚರ್ಚಿಸಲಾಗಿದೆ:

  1. ಮಾನಸಿಕ ಆಘಾತದ ಪ್ರಭಾವವನ್ನು ಕುಗ್ಗಿಸದಿರುವುದು: ತನಗೆ ಅಥವಾ ತನ್ನ ಸಮಾಜಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂಬಂತೆ ವರ್ತಿಸಿ ಅದರ ಪ್ರಭಾವವನ್ನು ತಗ್ಗಿಸಲು ಯತ್ನಿಸುವುದನ್ನು ನಿಲ್ಲಿಸಿ ನಮ್ಮ ಮೇಲಾಗುತ್ತಿರುವ ವ್ಯವಸ್ಥಿತ ಹಿಂಸಾಚಾರದಿಂದ ನಾವು ಕೆಲವು ರೀತಿಯಲ್ಲಿ ಪ್ರಭಾವಿತರಾಗಿದ್ದೇವೆ ಎಂಬುವುದನ್ನು ಮೊದಲು ಒಪ್ಪಿಕೊಳ್ಳಬೇಕು. ನಾವು ಬಲಶಾಲಿಗಳು ಮತ್ತು ಸ್ಥಿರವಾಗಿದ್ದೇವೆ ಎನ್ನುವುದು ನಿಜವೇ ಆಗಿದ್ದರೂ ಸಹ ನಾವು ಕೂಡ ಮನುಷ್ಯರೇ, ಮತ್ತು ಮನುಷ್ಯರಲ್ಲಿರುವ ಎಲ್ಲಾ ಸಹಜ ದುರ್ಬಲತೆ ನಮ್ಮಲ್ಲೂ ಇದೆ. ಅದನ್ನು ಹಾಗೆಯೇ ಒಪ್ಪಿಕೊಳ್ಳುವುದು ನಮಗೆ ಚಿಕಿತ್ಸಾತ್ಮಕವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.
  2. ಆಘಾತಕಾರಿ ಪ್ರತಿಕ್ರಿಯೆಗಳನ್ನು ಗುರುತಿಸುವುದು: ಮಿನಿಯಾಪೋಲಿಸ್ ಮೂಲದ ಚಿಕಿತ್ಸಕ ಮತ್ತು ಮಾನಸಿಕ ಆಘಾತ ತಜ್ಞ ರೆಸ್ಮಾ ಮನಕೆನ್, ವ್ಯವಸ್ಥಿತ ಮಾನಸಿಕ ಆಘಾತದ ಬಗ್ಗೆ ವಿವರಿಸುತ್ತಾ “ವ್ಯಕ್ತಿಯಲ್ಲಿ ಡಿಕಾಂಟೆಕ್ಚುವಲೈಸ್ ಮಾಡಿದ ಆಘಾತವು ವ್ಯಕ್ತಿತ್ವದಂತೆ ಕಾಣುತ್ತದೆ. ಒಂದು ಕುಟುಂಬದಲ್ಲಿ ಉಂಟಾದ ಆಘಾತವು ಕುಟುಂಬದ ಲಕ್ಷಣಗಳಂತೆ ಕಾಣುತ್ತದೆ. ಜನರಲ್ಲಿನ ಆಘಾತವು ಸಂಸ್ಕೃತಿಯಂತೆ ಕಾಣುತ್ತದೆ” ಎಂದು ಹೇಳುತ್ತಾರೆ. ಉದಾಹರಣೆಗೆ, ನಮ್ಮನ್ನು ಅನುಪಯುಕ್ತ ಎಂದು ಪರಿಗಣಿಸುವವರಿಗೆ ನಮ್ಮ ಮಹತ್ವವನ್ನು ಸಾಬೀತುಪಡಿಸಲು ಕೆಲವೊಮ್ಮೆ ನಾವು ವಿಪರೀತವಾಗಿ ಕೆಲಸದಲ್ಲಿ ಮುಳುಗುತ್ತೇವೆ. ಹಾಗೆಯೇ ಒಂದು ಸಮುದಾಯವಾಗಿ, ನಾವು ಹೆಚ್ಚು ಭಯ, ತಲ್ಲಣ, ಅಥವಾ ವೇದನೆಯನ್ನು ಅನುಭವಿಸಬಹುದು. ಆದರೆ ಇದು ಕಾಲ ಮತ್ತು ತಲೆಮಾರುಗಳ ಮೇಲೆ ಸಂದರ್ಭೋಚಿತವಾಗಿ ಮಾರ್ಪಾಡಾಗಿರುವುದರಿಂದ ಅದನ್ನು ಇಂಟರ್ಜೆನೆರೇಶನಲ್ ಆಘಾತ ಎಂದು ಗುರುತಿಸಲು ವಿಫಲರಾಗುತ್ತೇವೆ. ಹೀಲಿಂಗ್‌ನ ಎರಡನೇ ಭಾಗವು ನಮಗಾಗಿರುವ ಆಘಾತಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ಗುರುತಿಸುವುದೇ ಆಗಿದೆ.
  3. ಸಮುದಾಯದೊಳಗಡೆ ಸುರಕ್ಷತೆ ಮತ್ತು ಬೆಂಬಲವನ್ನು ಕಂಡುಕೊಳ್ಳುವುದು. ನಾವು ಸಂಪರ್ಕ, ಭದ್ರತೆ ಮತ್ತು ಒಗ್ಗಟ್ಟಿನ ಮಾನಸಿಕ ಅಗತ್ಯವನ್ನು ಹೊಂದಿದ್ದೇವೆ. ನಮ್ಮ‌ ದಿನನಿತ್ಯದ ಆಗುಹೋಗುಗಳಿಗೆ ಸಮಾಜವನ್ನು ಅವಲಂಬಿಸಬೇಕಾಗಿರುವುದರಿಂದ   ‘ನೀವು ನಮಗೆ ಸೇರಿದವರಲ್ಲ’ ಅಥವಾ ‘ನೀವು ವಿಭಿನ್ನವಾಗಿರುವುದರಿಂದ ನೀವು ಸ್ವೀಕಾರಾರ್ಹವಲ್ಲ’ ಎಂಬಂಥ ಸೂಚ್ಯ ಮತ್ತು ಸ್ಪಷ್ಟ ಸಂದೇಶಗಳನ್ನು ಸ್ವೀಕರಿಸಿದಾಗ ಈ ಪ್ರಮುಖವಾದ ಮಾನಸಿಕ ಅಗತ್ಯವನ್ನೇ ನಿರ್ಬಂಧಿಸಿದಂತಾಗುತ್ತದೆ.  ಇಸ್ಲಾಮೋಫೋಬಿಯಾವು ಒಬ್ಬರ ಅಸ್ಮಿತೆಯ ಪ್ರಮುಖ ಭಾಗವನ್ನು ಆಕ್ರಮಿಸುವುದರಿಂದ, ಧಾರ್ಮಿಕ ಗುರುತಿಸುವಿಕೆಗಳನ್ನು ತ್ಯಜಿಸುವ ಅಥವಾ ನಿಮ್ಮ ನಂಬಿಕೆಯೊಂದಿಗೆ ಸಂಕೀರ್ಣವಾದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ; ಹಿಜಾಬ್ ಅನ್ನು ಧರಿಸುವ ಯುವತಿಯರು ಅದರ ಬಗ್ಗೆ ಸಂಕೀರ್ಣವಾದ ಭಾವನೆಗಳನ್ನು ಬೆಳೆಸಿಕೊಳ್ಳಬಹುದು. ಏಕೆಂದರೆ ಇದು ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಾಗಿದೆ. ಆದರೆ ಧಾರ್ಮಿಕ ಗುರುತಿಸುವಿಕೆಯೂ ಸಹ ಸ್ಪಷ್ಟವಾದ ತಾರತಮ್ಯ ಅಥವಾ ಹಿಂಸೆಯನ್ನು ಆಹ್ವಾನಿಸಿದರೆ ಅದರ ಬಗ್ಗೆ ಸಹಜವಾಗಿಯೇ ಸಂಕೀರ್ಣವಾದ ಭಾವನೆ ಬರುತ್ತದೆ.

ಇದರಿಂದ ಹೊರಬರಲು, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ ಮತ್ತು ಬೆಂಬಲಿಸುವ ಸಮುದಾಯದ ಕಡೆಗೆ ತಿರುಗುವುದು ನಿರ್ಣಾಯಕವಾಗಿದೆ. ಇದು ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬ ಅಥವಾ ಇತರ ಸಮುದಾಯದ ಸದಸ್ಯರ ಗುಂಪಾಗಿರಬಹುದು.  ನಿಮ್ಮ ನೋವು ಹಂಚಿಕೊಳ್ಳುವ, ಕೇಳುವ ಮತ್ತು ಸಾಕ್ಷಿಯಾಗುವ ಪ್ರೀತಿಯ ಸಮುದಾಯದ ಉಪಸ್ಥಿತಿಯು ನಮ್ಮ ನರಮಂಡಲದಲ್ಲಿ ಅದ್ಭುತಗಳನ್ನು ಮಾಡಬಹುದು. ಮೆದುಳಿನಲ್ಲಿ ಇದು ಸುರಕ್ಷತೆ ಮತ್ತು ಘನತೆಯನ್ನು ಸೌಮ್ಯವಾಗಿ ಆದರೆ ಶಕ್ತಿಯುತವಾಗಿ ಪುನಃಸ್ಥಾಪನೆ ಮಾಡಬಹುದು.

  1. ವೃತ್ತಿಪರ ಸಹಾಯವನ್ನು ಪಡೆಯುವುದು: ಮಾನಸಿಕ ಆರೋಗ್ಯ ವೃತ್ತಿಪರರಿಂದ ಸಹಾಯವನ್ನು ಪಡೆಯುವುದು ಕೂಡ ವ್ಯವಸ್ಥಿತ ಆಘಾತದಿಂದ ಗುಣವಾಗಲು ಒಂದು ಮಾರ್ಗವಾಗಿದೆ. ಆದರೆ, ಈ ಮಾರ್ಗವು ಭಾರತದ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳು ಈ ಸೌಲಭ್ಯವನ್ನು ಪಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಮೇಲಾಗಿ ಮುಖ್ಯವಾಹಿನಿಯ ಮಾನಸಿಕ ಆರೋಗ್ಯ ಕ್ಷೇತ್ರವು ಸಾಮಾಜಿಕವಾಗಿ ಸಂಬಂಧಿಸಿದ ಆಘಾತವನ್ನು ಆಘಾತ ಎಂದು ಗುರುತಿಸುವಲ್ಲೇ ವಿಫಲವಾಗಿದೆ.

ಹೆಚ್ಚಿನ ಮುಖ್ಯವಾಹಿನಿಯ ಆಘಾತದ ಚಿಕಿತ್ಸೆಯು ವ್ಯಕ್ತಿಯನ್ನು ನಿಭಾಯಿಸುವುದರ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಮಾನಸಿಕ ಚಿಕಿತ್ಸೆಯಲ್ಲಿ ನಿಭಾಯಿಸುವಿಕೆ ಒಂದು ಮಹತ್ವದ ಮತ್ತು ಅಗತ್ಯವಾದ ಸಾಧನವಾಗಿದ್ದರೂ, ವ್ಯವಸ್ಥೆಯಿಂದಾದ ಆಘಾತವನ್ನು ಗುಣಪಡಿಸಲು ಇದು ಸಾಕಾಗುವುದಿಲ್ಲ. ಸಾಮಾನ್ಯವಾಗಿ, ಚಿಕಿತ್ಸಕರು ತಮ್ಮ ರೋಗಿಗಳಿಗೆ ಸಾಮಾಜಿಕ ಮಾಧ್ಯಮದಿಂದ ಸ್ವಿಚ್ ಆಫ್ ಮಾಡಲು, ಸುದ್ದಿ ನೋಡುವುದನ್ನು ಮಿತಿಗೊಳಿಸಲು ಅಥವಾ ರಾಜಕೀಯವಾಗಿ ತೊಡಗಿಸಿಕೊಳ್ಳದಿರಲು ಸಲಹೆ ನೀಡುತ್ತಾರೆ. ಆದರೆ ಸಾಮಾಜಿಕ ಘಟನೆಗಳು ಒಬ್ಬರು ‘ಸ್ವಿಚ್ ಆಫ್’ ಮಾಡಿಡಬಹುದಾದ ಘಟನೆಗಳಲ್ಲ, ನಾವು ಪ್ರತಿದಿನ ವಾಸಿಸುವ ಮತ್ತು ಅನುಭವಿಸುವ ವಾಸ್ತವ. ಇದೇ ಕಾರಣಕ್ಕಾಗಿ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳ ರೋಗಿಗಳು ಮಾನಸಿಕ ಚಿಕಿತ್ಸೆಗಾಗಿ ತಮ್ಮ ಜನಾಂಗ, ಧಾರ್ಮಿಕ ಗುರುತಿನ ಚಿಕಿತ್ಸಕರಿಗೇ ಆದ್ಯತೆ ನೀಡುತ್ತಾರೆ.

ಜನಾಂಗೀಯ ಮತ್ತು ಜನಾಂಗೀಯ ಹಿಂಸಾಚಾರದ ಬಗ್ಗೆ ಮುಕ್ತ ಚರ್ಚೆಗಳು ಚಿಕಿತ್ಸಕ ಮತ್ತು ರೋಗಿಯ ನಡುವೆ ನಡೆದರೆ ನಂಬಿಕೆಯ ವಾತಾವರಣವನ್ನು ಬೆಳೆಸಬಹುದು ಮತ್ತು ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಫಲಿತಾಂಶಗಳನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಹೆಚ್ಚು ಪ್ರಗತಿಪರವಾದ ಚಿಕಿತ್ಸೆ ಅಥವಾ ಪ್ರತಿರೋಧದ ಮೇಲೆ ಹೆಚ್ಚು ಕೇಂದ್ರೀಕರಿಸುವ ಚಿಕಿತ್ಸೆಗಳು ಅಲ್ಪಸಂಖ್ಯಾತ ಗುಂಪುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.  ಯಾಕೆಂದರೆ, ಈ ಚಿಕಿತ್ಸೆಯು ದಬ್ಬಾಳಿಕೆಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿ ಕೋಪ ಮತ್ತು ಉದ್ವೇಗಗಳನ್ನು ನೋಡುತ್ತದೆ ಮತ್ತು ಅದನ್ನು ಎಂದೂ ಅಪರಾಧೀಕರಿಸುವುದಿಲ್ಲ. ವೈದ್ಯಕೀಯ ಮನಶ್ಶಾಸ್ತ್ರಜ್ಞ ಮತ್ತು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ ಥೀಮಾ ಬ್ರ್ಯಾಂಟ್ ಅವರ ಪ್ರಕಾರ, ಅಂತಹ ಚಿಕಿತ್ಸೆಗಳು “ನನ್ನ ಮತ್ತು ನನ್ನ ಸಮುದಾಯದ ಬಗ್ಗೆ ಈ ನಕಾರಾತ್ಮಕ ನಂಬಿಕೆಗಳನ್ನು ಸಾಮಾನ್ಯೀಕರಣಗೊಳಿಸದಿರುವಂತೆ ನಾನು ಹೇಗೆ ಹೋರಾಡುತ್ತೇನೆ?” ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ. “ನನ್ನ ಧ್ವನಿಯನ್ನು ಕೇಳಲು ಮತ್ತು ನನ್ನ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ನಾನು ನನ್ನ ಏಜೆನ್ಸಿಯನ್ನು ಹೇಗೆ ಬಳಸಬಹುದು? ನಾನು ಏನನ್ನು ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ  ಸಹಾನುಭೂತಿ ಮತ್ತು ಬೆಂಬಲವನ್ನು ಹೇಗೆ ಬೆಳೆಸಿಕೊಳ್ಳಬಹುದು?” ಎಂಬ ಪ್ರಶ್ನೆಗೂ ಉತ್ತರ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಹೆಚ್ಚಿನ ದಿನಗಳಲ್ಲಿ, ನಮಗೆ ಆಘಾತವನ್ನುಂಟುಮಾಡುವ ವ್ಯವಸ್ಥೆಯಲ್ಲಿ ಚಿಕಿತ್ಸೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ನಮ್ಮ ನೋವನ್ನು ವ್ಯಕ್ತಪಡಿಸಲು ಮತ್ತು ಹಂಚಿಕೊಳ್ಳಲು ಒಂದು ಸಮರ್ಪಕ ಭಾಷೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಅತ್ಯಂತ ಭಯಾನಕ ಸ್ಥಿತಿಯಲ್ಲೂ ಚೆನ್ನಾಗಿಯೇ ಬದುಕಿದ ನಮ್ಮ ಪೂರ್ವಜರ ಬುದ್ಧಿವಂತಿಕೆಯಿಂದಲೂ ನಾವು ನೆರವು ಪಡೆದುಕೊಳ್ಳಬಹುದು. ನನ್ನ ಸ್ನೇಹಿತ ಐಮನ್ ನಂಬಿರುವಂತೆ, ನಿಮ್ಮದೇ ಆದ ಪರಿಹಾರವನ್ನು ಹುಡುಕಲು ಹೆಣಗಾಡುತ್ತಿದ್ದರೆ ಹಿಂದಿನ ಮತ್ತು ಈಗಿನ ಕ್ರಾಂತಿಕಾರಿಗಳ ಬರಹಗಳು, ಕವಿತೆಗಳು ಮತ್ತು ವರ್ಣಚಿತ್ರಗಳಿಂದ ಭರವಸೆಯನ್ನು ಎರವಲು ಪಡೆಯಿರಿ. ಎರಿಕ್ ಫ್ರೈಡ್ ಅವರ ‘Repeal’ ಎನ್ನುವ ಪದ್ಯದ ಆಯ್ದ ಈ ಸಾಲುಗಳಿಂದ ನಾನು ಭರವಸೆಯನ್ನು ಎರವಲು ಪಡೆದಂತೆ;

ಬಹುಶಃ ದುಃಖದ
ಬಗ್ಗೆ ಮಾತನಾಡಲು
ಸಾಧ್ಯವಾಗುತ್ತದೆ
ಪದಗಳಲ್ಲಿ
ನಿಜವಾದ ಪದಗಳಲ್ಲಿ
ಅರ್ಥಪೂರ್ಣವಾಗಿ ಮತ್ತು
ದುಃಖಕ್ಕೆ ಸಂಬಧಪಟ್ಟ ಪದಗಳಲ್ಲಿ

ಯಾವುದೋ ಒಂದು
ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ
ಅಥವಾ ಅದು
ಬೇರೆ ಯಾರಿಗೋ
ಅರ್ಥವಾಗಲೂಬಹುದು
ಅಥವಾ ಯಾರೋ ಅರ್ಥಮಾಡಿಕೊಳ್ಳಬಹುದು

ಮತ್ತು ಸುಮ್ಮನೆ ಅಳಲೂ
ಸಾಧ್ಯವಾಗಬಹುದು
ಒಂದು ಆತ್ಯಂತಿಕ ಸಂತೋಷದಂತೆ

ಲೇಖಕಿ- ಅಹ್ಲಾ ಮಾತ್ರ
(ಲೇಖಕರು ಕೇರಳದ ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞರು)

ಅನುವಾದ- ಫಾತಿಮಾ ರಲಿಯಾ ಹೆಜಮಾಡಿ
ಕೃಪೆ- ನ್ಯೂಸ್ ಮಿನಿಟ್

‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮಾಜವಾದಿ ಚಳವಳಿಯ ಫಲವಾಗಿ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಯಿತು. ಅಂತರಾಷ್ಟ್ರೀಯ ವರ್ಕಿಂಗ್ ವಿಮೆನ್ಸ್ ದಿನವೆಂದು ಅಂಗೀಕರಿಸಲ್ಪಟ್ಟಿದ್ದ ಈ ದಿನವನ್ನು 1967ರಲ್ಲಿ ಸೋವಿಯತ್ ರಷ್ಯಾದ ನೆರವಿನಿಂದ ಸ್ತ್ರೀವಾದಿ ಆಂದೋಲನವು ಮಹಿಳಾ ದಿನವಾಗಿ ಹಮ್ಮಿಕೊಂಡು 1975 ರಲ್ಲಿ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಅಧಿಕೃತವಾಗಿ ಆಚರಿಸಿತು.

ಮಹಿಳಾ ಚಳವಳಿಯ ಇತಿಹಾಸವು ರಾಜಕೀಯದಿಂದ ಹಿಡಿದು ಕಲೆಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸುಸ್ಪಷ್ಟಗೊಂಡ ಪರಿಣಾಮ ಇಸ್ಲಾಂ ಮತ್ತು ಮಹಿಳೆಯರು ಎಂಬ ಚರ್ಚೆಗಳೂ ಮುನ್ನೆಲೆಗೆ ಬರತೊಡಗಿದವು. ಕಲಾ ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಅಧ್ಯಯನಕ್ಕೀಡಾದ ವಿಷಯಗಳಲ್ಲೊಂದಾಗಿದೆ ಇದು. ಇಸ್ಲಾಮಿಕ್ ಇತಿಹಾಸದ ವಿಶೇಷವಾಗಿ ಒಟ್ಟೋಮನ್ ಯುಗದ ಪ್ರಸಿದ್ಧ ಮಹಿಳೆಯರ ಕುರಿತಾದ ಕಾದಂಬರಿಗಳು, ಚಲನಚಿತ್ರಗಳು ಮತ್ತು ಸರಣಿಗಳು ಗಮನಾರ್ಹವಾಗಿ ಹೊರಹೊಮ್ಮತೊಡಗಿದವು. ಪ್ರವಾದಿಯವರ ಅನುಯಾಯಿಗಳಲ್ಲಿ ಗೌರವಾನ್ವಿತ ಅನೇಕ ಮಹಿಳಾ ಮಾದರಿಗಳನ್ನು ನಮಗೆ ದರ್ಶಿಸಬಹುದು. ಪ್ರವಾದಿಯವರನ್ನು ಜೀವಿತಾವಧಿಯಲ್ಲಿ ನೋಡಿ, ಪ್ರವಾದಿಯವರು ಬೋಧಿಸಿದ ತತ್ವಗಳನ್ನು ಅನುಸರಿಸಿದ ಮುಸ್ಲಿಂ ವಿಶ್ವಾಸಿಗಳನ್ನು ಸ್ವಹಾಬಿಗಳು ಅಥವಾ ಅನುಯಾಯಿಗಳು ಎಂದು ಕರೆಯಲಾಗುತ್ತದೆ. ಕೆಲ ಅರಬ್ ಚಲನಚಿತ್ರಗಳು ಈ ಮಹಿಳೆಯರ ಜೀವನ ಮತ್ತು ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ.

ಒಟ್ಟೋಮನ್ ಸಾಹಿತ್ಯ ರಚನೆಗಳನ್ನು ಪರಿಶೀಲಿಸಿದರೆ ‘ಮೆಶಾಹಿರುನ್ನಿಸಾ’ (Meshahirun-nisa) ಎಂಬ ಜೀವನದರ್ಶನ ಗ್ರಂಥವು ವಿಭಿನ್ನವಾಗಿ ನಿಲ್ಲುವ ಒಂದು ಮೇರು ಅಧ್ಯಾಯ. ಪ್ರಖ್ಯಾತ ಮಹಿಳೆಯರು ಎಂದು ಅರ್ಥವಿರುವ ಮೆಶಾಹಿರುನ್ನಿಸಾ ಎಂಬ ಕೃತಿಯು ಇಸ್ಲಾಮಿಕ್ ವಿದ್ವಾಂಸರು ವಿಶ್ಲೇಷಿಸಿದ ಮಹಿಳಾ ಪ್ರಮುಖರ ಜೀವನ ಚರಿತ್ರೆಗಳನ್ನು ಒಳಗೊಂಡಿದೆ. ಪ್ರಸ್ತುತ ಮಹತ್ ಕೃತಿ ಹಾಗೂ ಒಟ್ಟೋಮನ್ ಸಾಹಿತ್ಯದ ಪ್ರಸಿದ್ಧ ಮಹಿಳೆಯರ ಕುರಿತ ಅವಲೋಕನವೇ ಈ ಲೇಖನದ ವಸ್ತು.

ಮಹಿಳೆಯರು ಪ್ರಧಾನ ಕಥಾಪಾತ್ರಗಳಾಗುವ ಪ್ರಾರಂಭಿಕ ರಚನೆಗಳು

ಇಸ್ಲಾಮಿಕ್ ಇತಿಹಾಸ ರಚನೆಯಲ್ಲಿ ಒಂದೇ ಜ್ಞಾನ ಶಾಖೆಯನ್ನು ನಿರ್ವಹಿಸಿ, ಒಂದೇ ಕೆಲಸದಲ್ಲಿದ್ದು, ಒಂದು ಪ್ರದೇಶ ಅಥವಾ ಒಂದೇ ಕಾಲಘಟ್ಟದಲ್ಲಿ ಬದುಕಿದವರ ಜೀವನ ಚರಿತ್ರೆಗಳ ಕುರಿತಾದ ಗ್ರಂಥಗಳು ‘ತ್ವಬಖಾತ್’ ಎಂಬ ವಿಭಾಗದಲ್ಲಿ ಗುರುತಿಸಲ್ಪಡುತ್ತದೆ. ಈ ಗ್ರಂಥಗಳು ಸರಣಿ ತಲೆಮಾರುಗಳಿಂದ ಕಾಲಕ್ರಮಗಳಿಗೆ ಅನುಸಾರವಾಗಿ ವಿಶೇಷವಾಗಿ ವಿದ್ವಾಂಸರು, ಕಲಾವಿದೆಯರು, ಕವಯಿತ್ರಿಯರು ಸಹಿತ ಪ್ರಸಕ್ತವಾದ ಸಾವಿರಾರು ಮಹನೀಯರ ಜೀವನ ಚರಿತ್ರೆಗಳನ್ನು ನಮಗೆ ಪರಿಚಯಿಸುತ್ತದೆ. ಈ ಗ್ರಂಥದ ಮೂಲಕವೇ ನಾವು ಪ್ರಖ್ಯಾತ ಮಹಿಳೆಯರ ಕುರಿತು ಮೊದಲ ಬಾರಿಗೆ ಓದಿ ತಿಳಿಯಬಹುದು.

ಇಸ್ಲಾಮಿಕ್ ಜಗತ್ತಿಗೆ ವಿಶಿಷ್ಟವಾದ ಈ ರಚನೆಗಳು ಆರಂಭ ಕಾಲದ ಮುಸಲ್ಮಾನರ ಬಗ್ಗೆ ಬರೆಯತೊಡಗಿದಾಗ ಒಂದನೇ ಶತಮಾನದ ಇಸ್ಲಾಮಿನ ಬೆಳವಣಿಗೆಯ ಜೊತೆಗೆ ಇದೂ ಕೂಡ ವಿಕಸನಗೊಂಡಿತು. ಆಳವಾಗಿ ಬೇರೂರಿದ್ದ ರಚನಾ ಪರಂಪರೆಯಾಗಿದ್ದರೂ ಇದರಲ್ಲಿ ಮಹಿಳೆಯರಿಗೆ ಮಾತ್ರವಾಗಿ ಪ್ರತ್ಯೇಕ ಪುಸ್ತಕಗಳು ಬರೆಯಲ್ಪಡಲೇ ಇಲ್ಲ. ಸೆಕ್ಸಿಸ್ಟ್ ದೃಷ್ಟಿಕೋನದಿಂದಾಗಿ ಇಂತಹ ಪರಿಸ್ಥಿತಿ ಉದ್ಭವಿಸಿತೆಂದು ಟೀಕಿಸಲ್ಪಟ್ಟಿದ್ದರೂ ವಸ್ತುಸ್ಥಿತಿ ಬೇರೆಯೇ ಇದೆ. ಇಸ್ಲಾಮಿನ ಸುನ್ನೀ ಚಿಂತನಾಧಾರೆಯಲ್ಲಿ ಪ್ರವಾದಿಯವರ ಅನುಯಾಯಿಗಳನ್ನು ಯಾವುದೇ ಬೇಧವಿಲ್ಲದೆ ಶ್ರೇಷ್ಟರೆಂದು ಕೊಂಡಾಡಲಾಗುತ್ತಿದೆ. ಕೆಲವು ಪುಸ್ತಕಗಳಲ್ಲಿ ಮಹಿಳೆಯರ ಜೀವನ ಚರಿತ್ರೆಗಳು ಒಂದು ಪ್ರತ್ಯೇಕ ಸಂಪುಟವಾಗಿ ಹಾಗೂ ಕೆಲವೆಡೆಗಳಲ್ಲಿ ಮಹಿಳೆಯರ ಕುರಿತಾದ ಮಾಹಿತಿಗಳು ಪ್ರತ್ಯೇಕ ವಿಭಾಗವಾಗಿ ಸಂಗ್ರಹಿಸಿರುವುದನ್ನು ಕಾಣಬಹುದು.

ಬಹುಮುಖ ವಿದ್ವಾಂಸ

ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಬರಹ ಪ್ರಕಾರಗಳು ಬದಲಾಗಲಾರಂಭಿಸಿದವು. ಹಾಜೆ ಮುಹಮ್ಮದ್ ಝಿಹ್ನಿ ಎಫಂದಿ ತನ್ನ ‘ಮೆಶಾಹಿರುನ್ನಿಸಾ’ ಎಂಬ ಹೆಸರಿನಲ್ಲಿ ಮಹಿಳಾ ಜೀವನ ಚರಿತ್ರೆಗಳ ಮೇಲೆ ಪ್ರಥಮವಾಗಿ ಘನವೆತ್ತ ಹಾಗೂ ಸಮಗ್ರವಾದ ಗ್ರಂಥವನ್ನು ಬರೆದರು. ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಹೊಂದಿದ್ದರಿಂದ ಅವರು ಈಜಿಪ್ಟಿನ ಅಲೆಕ್ಸಾಂಡ್ರಿಯಾ ಹಾಗೂ ಇಸ್ತಾಂಬುಲ್‌ನ ನುರಿತ ಅಧ್ಯಾಪಕರಿಂದ ಶಿಕ್ಷಣವನ್ನು ಪಡೆದಿದ್ದರು. ಒಟ್ಟೋಮನ್ ಸಾಮ್ರಾಜ್ಯದ ಮೊದಲ ಅಧಿಕೃತ ಮುದ್ರಣಾಲಯವಾದ ‘ಮತ್ಬ- ಇ- ಅಮೀರ್’ ನಲ್ಲಿ ಕ್ಲರ್ಕ್ ಮತ್ತು ಪ್ರೂಫ್ ರೀಡರ್ ಆಗಿ ಹತ್ತು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಬಳಿಕ ಅವರು ಪ್ರಾಧ್ಯಾಪಕ ಹುದ್ದೆಗೆ ನಿಯೋಜಿತರಾದರು.

ಅಂದು ಫ್ರೆಂಚ್ ಭಾಷೆಯಲ್ಲಿ ‘ಗಲಟ್ಟಸಾರೆ ಮಕ್ತಬೀ ಸುಲ್ತಾನಿ (ಗಲಟ್ಟಸಾರೆ ಇಂಪೀರಿಯಲ್ ಹೈಸ್ಕೂಲ್), ಲೈಸೀ ಇಂಪೀರಿಯಲ್ ಒಟ್ಟೋಮನ್ ಡಿ ಗಲಟ್ಟ-ಸೆರ’ ಎಂಬಿತ್ಯಾದಿ ಹೆಸರುಗಳಲ್ಲಿ ಗುರುತಿಸಲ್ಪಟ್ಟಿದ್ದ ಗಲಟ್ಟಸಾರೆ ಹೈಸ್ಕೂಲ್‌ಗಳಲ್ಲಿ ಝಿಹ್ನಿ ಎಫಂದಿ ಅರಬಿ ಭಾಷೆ ಹಾಗೂ ಧಾರ್ಮಿಕ ವಿಷಯಗಳ ಬೋಧಕರಾಗಿದ್ದರು. ಆ ಕಾಲದಲ್ಲಿಯೇ ಅವರು ಶಿಕ್ಷಣ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ಆಯೋಗಗಳ ಅಧ್ಯಕ್ಷರಾಗಿಯೂ ಹಾಗೂ ಪಠ್ಯಪುಸ್ತಕಗಳ ರಚನಾ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ವ್ಯಾಕರಣ, ಧಾರ್ಮಿಕ ಜ್ಞಾನ, ಇತಿಹಾಸ, ಸಾಹಿತ್ಯ ಹೀಗೆ ಜ್ಞಾನದ ವಿವಿಧ ವಿಭಾಗಗಳಲ್ಲಿ ಹಲವು ಕೃತಿಗಳನ್ನು ರಚಿಸಿದ ಝಿಹ್ನಿ ಎಫಂದಿ ಓರ್ವ ಬಹುಮುಖ ವಿದ್ವಾಂಸ.

ಸರ್ಕಾರದಿಂದ ಗಮನಾರ್ಹವಾದ ಪದಕಗಳನ್ನು ಪಡೆದು ಪುರಸ್ಕ್ರತಗೊಂಡ ಅವರು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದರು. ಕೆಲವು ಗ್ರಂಥಗಳನ್ನು 1889 ರ ಸೆಪ್ಟೆಂಬರ್ ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಸಭೆ ಸೇರಿದ ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್‌ಗೆ ಕಳುಹಿಸಲಾಯಿತು. ಅವರ ಕೃತಿಗಳ ವೈಜ್ಞಾನಿಕತೆ ಹಾಗೂ ಬೋಧನಾ ಶೈಲಿ, ಅರೇಬಿಕ್ ಭಾಷೆಯಲ್ಲಿನ ಅವರ ಸೇವಾ ಮನೋಭಾವಗಳೆಲ್ಲ ಜಗತ್ತಿನ ಗಮನ ಸೆಳೆದವು. ಕಾಂಗ್ರೆಸ್‌ನ ಶಿಫಾರಸ್ಸಿನ ಮೇರೆಗೆ ಅಂದಿನ ಅಧಿಕೃತ ವಿಶ್ವಸಂಸ್ಥೆಯಾಗಿದ್ದ ಸ್ವೀಡನ್- ನಾರ್ವೆ ಒಕ್ಕೂಟವು ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಈ ಪದಕವನ್ನು ಗಲಟ್ಟಸಾರೆ ಹೈಸ್ಕೂಲ್ ಮ್ಯೂಸಿಯಂನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ.

ಹೆಣ್ಣು ಮಕ್ಕಳ ಗುರು

ಓರಿಯಂಟಲ್ ಸಾಹಿತ್ಯದಲ್ಲಿ ‘ಇಲ್ಮಿಹಾಲ್’ (ಇಸ್ಲಾಮಿಕ್ ನಂಬಿಕೆ, ಆರಾಧನೆ, ನೈತಿಕತೆ ಎಂಬಿತ್ಯಾದಿಗಳ ಸಂಕ್ಷಿಪ್ತ ಕೈಪಿಡಿ) ಎಂದು ಕರೆಯಲ್ಪಡುವ ಧರ್ಮ ಗ್ರಂಥಗಳನ್ನು ಮಹಿಳೆಯರಿಗೆ ಸೀಮಿತವಾದ ಅವತರಣಿಕೆಯನ್ನೂ ಅವರು ಸಿದ್ಧಗೊಳಿಸಿದರು. ಅದಕ್ಕಿಂತ ಮೊದಲು ತಥಾಕಥಿತ ಕೃತಿಗಳು ಲಭ್ಯವಿದ್ದರೂ ‘ಹನಿಂಲಾಲ್ ಇಲ್ಮಿಹಾಲ್’ (ಮಹಿಳೆಯರ ಇಲ್ಮಿಹಾಲ್) ‘ಕಿಸ್ ಲಾರ್ ಹೊಚಾಸಿ’ (ಹೆಣ್ಣು ಮಕ್ಕಳ ಗುರು) ಎಂಬ ಹೆಸರಿನಲ್ಲಿ ಅವರು ಪ್ರಕಟಿಸಿದ ಪುಸ್ತಕಗಳು ಎಲ್ಲರಿಂದಲೂ ಪ್ರಶಂಸಿತಗೊಂಡಿತಲ್ಲದೆ ಪಠ್ಯ ಪುಸ್ತಕವಾಗಿಯೂ ಬಳಸಲ್ಪಟ್ಟಿತು. ಪ್ರಾಯಮಿತಿಯನ್ನು ಪರಿಗಣಿಸಿ ಅದರ ವಿವಿಧ ಆವೃತ್ತಿಗಳನ್ನು ಹೊರತರಲಾಯಿತು. ಆದ್ದರಿಂದಲೇ ಝಿಹ್ನಿ ಎಫಂದಿಯವರನ್ನು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿರುವ ಪ್ರಮುಖ ವ್ಯಕ್ತಿಯೆಂದು ಗುರುತಿಸಲಾಗಿದೆ. ಈ ಹಿಂದೆ ಉಲ್ಲೇಖಿಸಿದ 1878 ರಲ್ಲಿ ಪ್ರಕಟವಾದ ‘ಮೆಶಾಹಿರುನ್ನಿಸಾ’ ಎಂಬ ಕೃತಿಯು ಮಹಿಳೆಯರಿಗೆ ಸಂಬಂಧಿಸಿದ ಅವರ ಮೇರು ಕೃತಿಯಾಗಿದೆ.

ಎರಡು ಸಂಪುಟಗಳಿರುವ ಪ್ರಸ್ತುತ ಕೃತಿಯು ಇಸ್ಲಾಮಿಕ್ ಇತಿಹಾಸದ ವಿಜ್ಞಾನ, ಕಲೆ, ಸಾಹಿತ್ಯ, ರಾಜಕೀಯ ವಲಯಗಳಲ್ಲಿ ವಿಖ್ಯಾತರಾದ ಸುಮಾರು 1165 ಮಹಿಳೆಯರ ಜೀವನ ಚರಿತ್ರೆಗಳನ್ನು ಸಂಗ್ರಹಿಸುತ್ತದೆ. ಅನೇಕ ಮಹಿಳೆಯರ, ವಿಶೇಷತಃ ಸೂಫಿಗಳು, ಶಿಕ್ಷಕರು, ಕವಿಗಳು, ಗಾಯಕರ ವಿಭಿನ್ನ ಗುಣಗಳು ಮತ್ತು ನೈಸರ್ಗಿಕ ಸ್ವಭಾವ ಸವಿಶೇಷತೆಗಳನ್ನು ಅದು ವರ್ಣಿಸುತ್ತದೆ. ‘ಚಾರಿತ್ರಿಕ ಮಹಿಳೆಯರು’, ‘ತಖ್ವಾದಿಂದ (ಸೃಷ್ಟಿಕರ್ತನ ಕುರಿತು ಅರಿವು, ಪ್ರಜ್ಞೆ ಹೊಂದುವಿಕೆ) ಹೆಸರುವಾಸಿಯಾದ ಮಹಿಳಾ ವಕೀಲರು’, ‘ಭಾಷಣ ಕಲೆ ಹಾಗೂ ಪ್ರಬೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರಾದ ಮಹಿಳೆಯರು’, ‘ಸಾಹಿತ್ಯ ಹಾಗೂ ಕ್ಯಾಲಿಗ್ರಫಿಯಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆಯರು’ ಹೀಗೇ ಹಲವು ಅಧ್ಯಾಯಗಳಿವೆ. ಪ್ರಸಿದ್ಧ ವಚನಗಳ ಮೂಲ ಎಂದು ತಿಳಿದಿದ್ದವರನ್ನೂ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಸೇರಿಸಲಾಗಿದೆ. ಮಹಿಳಾ ಆಡಳಿತಗಾರರು, ವೈದ್ಯರುಗಳ ಜೀವನ ಚರಿತ್ರೆಗಳನ್ನೂ ವಿಶೇಷವಾಗಿ ದಾಖಲಿಸಲಾಗಿದೆ.

ಮೂರು ಗುರಿಗಳನ್ನು ಆಧರಿಸಿ ಎಫಂದಿಯವರು ಈ ಕೃತಿಯನ್ನು ರಚಿಸಿದ್ದಾರೆ. ಅದರಲ್ಲಿ ಮೊದಲನೆಯದ್ದು; ಸಾಹಿತ್ಯ, ಸಾಮಾಜಿಕ, ವೈಜ್ಞಾನಿಕ ವೃತ್ತಿ ವಲಯಗಳಲ್ಲಿ ಶ್ರೇಷ್ಟ ಕೊಡುಗೆಗಳನ್ನು ನೀಡಿದ ಮಹಿಳೆಯರನ್ನು ಅವರ ಸಾಧನೆಗೆ ಅನುಗುಣವಾಗಿ ಪರಿಚಯಿಸುವುದು. ತನ್ಮೂಲಕ ವಿದ್ಯಾರ್ಥಿಗಳಾದ ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ಭರವಸೆ ಮೂಡಿಸಿ ಹುರಿದುಂಬಿಸುವುದು.

ಎರಡನೆಯ ಗುರಿ ಉನ್ನತ ಧಾರ್ಮಿಕ ಪ್ರಜ್ಞೆಯುಳ್ಳ ಮಹಿಳೆಯರ ಮಹಿಮೆಗಳನ್ನು ಪರಿಚಯಿಸುವುದು. ಧಾರ್ಮಿಕತೆಯಲ್ಲಿ ಉತ್ತುಂಗದಲ್ಲಿರುವ ಮಹಿಳೆಯರನ್ನು ಮಾದರಿಗಳಾಗಿ ಸ್ವೀಕರಿಸಲು ಸಾಧಿಸುವುದು. ಕೃತಿ ರಚನೆಯ ಮೂರನೆಯ ಗುರಿಯು ಇತಿಹಾಸ, ಧರ್ಮ ಮತ್ತು ಕಲಾ ಕ್ಷೇತ್ರಗಳ ಕುರಿತು ಓದುಗರಿಗೆ ಜಾಗೃತಿ ಮೂಡಿಸುವುದು.

ಯಾರಿಗೆ ಅನುಗುಣವಾಗಿ? ಯಾವುದನ್ನು ಆಧರಿಸಿ?

ಝಿಹ್ನಿ ಎಫಂದಿಯವರ ಪ್ರಕಾರ ಇಸ್ಲಾಂ ಅನ್ನು ಖುರ್‌ಆನ್ ಮಾತ್ರ ಮಾನದಂಡಗೊಳಿಸಿ ಮನದಟ್ಟು ಮಾಡುವುದು ನಮ್ಮನ್ನು ತಪ್ಪುಕಲ್ಪನೆಗಳಿಗೆ ತಳ್ಳಬಹುದು. ಪ್ರವಾದಿ ಮುಹಮ್ಮದರ ಬದುಕು ಪವಿತ್ರ ಖುರ್‌ಆನಿನ ಸಾಕ್ಷಾತ್ಕಾರವಾಗಿತ್ತು. ಇಸ್ಲಾಮನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಪ್ರವಾದಿಯವರ ಜೀವನ ಹಾಗೂ ಖುರ್‌ಆನನ್ನು ಸ್ಪಷ್ಟವಾಗಿ ಕಲಿಯುವುದು ಮಾತ್ರವಲ್ಲದೆ ಆಯಾ ಕಾಲದ ಪರಿಸ್ಥಿತಿಗೆ ತಕ್ಕಂತೆ ಜನರು ಮತ್ತು ಘಟನೆಗಳನ್ನು ವಿಶ್ಲೇಷಿಸುವುದು ಅಗತ್ಯ.

ಇಸ್ಲಾಂನಲ್ಲಿ ತಖ್ವಾದ ಆಧಾರದಲ್ಲಿ ಶ್ರೇಷ್ಠತೆಯನ್ನು ನಿರ್ಧರಿಸಲಾಗುತ್ತದೆಯೇ ಹೊರತು ಲಿಂಗದ ಆಧಾರದಲ್ಲಿ ಅಲ್ಲ. ‘ವಖಾ’ ಎಂಬ ಪದದಿಂದ ತಖ್ವಾ ಎಂಬ ಪದವು ಉದ್ಭವಿಸಿದೆ. ಪಾಪ ಕೃತ್ಯಗಳಿಂದ ಸ್ವಶರೀರವನ್ನು ಸಂರಕ್ಷಿಸಿ ಕೆಟ್ಟ ನಡವಳಿಕೆಗಳನ್ನು ತ್ಯಜಿಸಿ ಪೂರ್ಣ ಧಾರ್ಮಿಕ ಪ್ರಜ್ಞೆಯೊಂದಿಗೆ ಬದುಕುವುದೇ ‘ತಖ್ವಾ’. ಆದುದರಿಂದಲೇ ವಿಶ್ವಾಸಿಗಳ ಆಚರಣೆಗಳ ಆರಾಧನಾ ಕರ್ಮಗಳಿಗೆ ಅನುಸಾರವಾಗಿ ಮೇಲು-ಕೀಳು ಎಂಬುದನ್ನು ನಿರ್ಧರಿಸಲಾಗುತ್ತದೆ. ಮಹಿಳೆ ಮತ್ತು ಪುರುಷ ಪರಸ್ಪರ ನ್ಯೂನತೆಗಳನ್ನು ನೀಗಿಸಬೇಕಾದವರು ಹಾಗೂ ಬೇರ್ಪಡಿಸಲು ಸಾಧ್ಯವಿಲ್ಲದ ಒಂದು ವಸ್ತುವಿನ ಎರಡು ಮುಖಗಳಂತೆ ಬದುಕಬೇಕಾದವರು. ಈ ದೃಷ್ಟಿಕೋನವನ್ನಾಧರಿಸಿ ಮೆಶಾಹಿರುನ್ನಿಸಾ ರಚಿತವಾಗಿದೆ.

ಲಕ್ಷಾಂತರ ಪುರುಷರಿಗಿಂತ ಉತ್ತಮರು

ಈ ಪುಸ್ತಕದಲ್ಲಿನ ಮಹಿಳೆಯರ ಪಟ್ಟಿಯನ್ನು ಗಮನಿಸಿದರೆ ಪ್ರಾರಂಭದಲ್ಲಿ ಪ್ರವಾದಿ ಪತ್ನಿಯರು ಎಂಬ ನೆಲೆಯಲ್ಲಿ ಪ್ರಸಿದ್ಧರಾದ ಮಹಿಳೆಯರ ಕುರಿತು ಕಾಣಬಹುದು. ನಂತರ ಪ್ರವಾದಿ ಪುತ್ರಿಯರು ಹಾಗೂ ಸಂಬಂಧಿಗಳಾದ ಇತರ ಮಹಿಳೆಯರ ಜೀವನ ಚರಿತ್ರೆಗಳನ್ನು ಬರೆಯಲಾಗಿದೆ. ಮುಂದಿನ ಅಧ್ಯಾಯವು ಪ್ರವಾದಿಯವರ ಕಾಲದಲ್ಲಿ ಬದುಕಿದ್ದ ಹಾಗೂ ಅದಕ್ಕಿಂತ ಮುಂಚೆಯೇ ತೀರಿ ಹೋಗಿದ್ದರೂ ಪ್ರವಾದಿಯವರಿಂದ ಪ್ರಶಂಸಿಸಲ್ಪಟ್ಟಿದ್ದ ಪ್ರಖ್ಯಾತರನ್ನು ಪರಿಚಯಿಸುತ್ತದೆ. ಅವರ ಕುರಿತು ವಿವಿಧ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ‘ಮುಸ್ಲಿಂ ಆದ ಕಾರಣದಿಂದ ದೌರ್ಜನ್ಯಕ್ಕೀಡಾದ ಮಹಿಳೆಯರು, ಖುರ್‌ಆನಿನಲ್ಲಿ ಹೆಸರಿಸಲ್ಪಟ್ಟ ಮಹಿಳೆಯರು’ ಎಂಬ ಅಧ್ಯಾಯಗಳು ಅವುಗಳಲ್ಲಿ ಕೆಲವು ಉದಾಹರಣೆಗಳು. ಇಂದಿನ ಇಸ್ಲಾಮೋಫೋಬಿಯ ಟೀಕೆಗಳ ಮುಂದೆ ಇಂತಹ ಜೀವನ ಚರಿತ್ರೆಗಳ ಉದಾಹರಣೆಗಳು ಅತ್ಯಂತ ಆಸಕ್ತಿದಾಯಕವಾಗಿದೆ.

ಮುಹಮ್ಮದ್ ಝಿಹ್ನಿ ಎಫಂದಿ ಅದರ ಪ್ರಥಮ ಅಧ್ಯಾಯದ ತಲೆಬರಹದಲ್ಲಿ ಪ್ರತಿಪಾದಿಸಿದಂತೆ ‘ಉಮ್ಮಹಾತುಲ್ ಮುಅ‍್‌ಮಿನೀನ್’ (ಸತ್ಯವಿಶ್ವಾಸಿಗಳ ಮಹಾಮಾತೆಯರು) ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪ್ರವಾದಿ ಪತ್ನಿಯರು ಲಕ್ಷಾಂತರ ಪುರುಷರಿಗಿಂತ ಉತ್ತಮರಾಗಿದ್ದಾರೆ. ಪುಸ್ತಕದ ವಿಖ್ಯಾತ ಮಹಿಳೆಯರ ಹೆಸರುಗಳನ್ನು ಪರಿಶೀಲಿಸಿದರೆ ಅದರಲ್ಲಿ ಅನೇಕರಿಗೂ ಪ್ರವಾದಿ ಪತ್ನಿಯರ ಹಾಗೂ ಪುತ್ರಿಯರ ಹೆಸರುಗಳಿರುವುದನ್ನು ಗಮನಿಸಬಹುದು.

ವಿಶೇಷ ತಲೆಬರಹವೊಂದರ ಕೆಳಗೆ ವಿವರಿಸಲಾದ ಹನ್ನೆರಡನೇ ಶತಮಾನದ ಫಾತಿಮಾ ಅಲ್‌-ಫಖೀಹ ಎಂಬ ವಿದ್ವಾಂಸೆ ವನಿತೆಯ ಬದುಕು ಬಹಳ ಕೌತುಕಭರಿತವಾಗಿದೆ. ಪ್ರಸಿದ್ಧ ಮುಸ್ಲಿಂ ನ್ಯಾಯವಾದಿ ಅಲಾವುದ್ದೀನ್ ಸಮರ್ಖಂದಿಯವರ ಮಗಳಾದ ಫಾತಿಮಾ ತಂದೆಯಂತೆಯೇ ಕಾನೂನು ವಿಭಾಗದಲ್ಲಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು. ಅಲಾವುದ್ದೀನ್ ಸಮರ್ಖಂದಿ ಪ್ರತಿಯೊಂದು ವಿಷಯದಲ್ಲೂ ಮಗಳ ನಿಲುವನ್ನು ಕೇಳಿದ ನಂತರವೇ ತೀರ್ಮಾನಕ್ಕೆ ಬರುತ್ತಿದ್ದರು. ಧಾರ್ಮಿಕ ನೀತಿ ನಿಯಮಗಳಲ್ಲಿ ಅತೀವ ಜಾಗರೂಕಳಾಗಿದ್ದ ಫಾತಿಮಾಳಿಗೆ ಮದುವೆ ಪ್ರಾಯ ತಲುಪಿದಾಗ ಹಲವು ವಿವಾಹ ಪ್ರಸ್ತಾಪಗಳು ಬಂದರೂ ಫಾತಿಮಾ ಅವರ ಮುಂದೆ ನಿಬಂಧನೆಯಿಟ್ಟದ್ದು ತನ್ನ ತಂದೆಯ ಗ್ರಂಥಕ್ಕೆ ಅತ್ಯುತ್ತಮ Scholia (ಶರಹ್, ವಿವರಣೆ) ರಚಿಸಬೇಕೆಂದಾಗಿತ್ತು.

ಒಂದು ಪುಸ್ತಕ ಪ್ರತಿಪಾದಿಸುವ ವಿಷಯದ ಮೇಲೆ ಆ ಪುಸ್ತಕ ಬರೆದವನ ತಿಳುವಳಿಕೆಯನ್ನೂ ಪಾಂಡಿತ್ಯದ ಆಳವನ್ನೂ ವಿವರಿಸುವ ವ್ಯಾಖ್ಯಾನವನ್ನು ಸ್ಕೋಲಿಯಾ ಎಂದು ಹೇಳುತ್ತಾರೆ. ಆಸ್ತಿ ಅಂತಸ್ತನ್ನು ಪರಿಗಣಿಸದೆ, ಅಜ್ಞಾನಿಗಳನ್ನು ಅವಗಣಿಸಿಯೂ ಸೂಕ್ತ ವರನನ್ನು ಆಯ್ಕೆ ಮಾಡುವಲ್ಲಿ ಈ ಮೂಲಕ ಫಾತಿಮಾ ಯಶಸ್ವಿಯಾದರು. ಫಾತಿಮಾರ ನಿಬಂಧನೆಯನ್ನು ಸವಾಲಾಗಿ ಸ್ವೀಕರಿಸಿದ ಅನೇಕ ಯುವ ವಿದ್ವಾಂಸರು ಸ್ಪರ್ಧೆಗಿಳಿದವರಂತೆ ಹಲವು ವ್ಯಾಖ್ಯಾನಗಳನ್ನು ಬರೆದು ಕಳುಹಿಸಿದರು. ಆದರೆ ಅದ್ಯಾವುದೂ ಫಾತಿಮಾ ಹಾಗೂ ಅವರ ತಂದೆಗೆ ಮೆಚ್ಚುಗೆಯಾಗಲಿಲ್ಲ. ಕೆಲವು ದಿನಗಳ ನಂತರ ಅಲಾವುದ್ದೀನ್ ಸಮರ್ಖಂದಿಯ ಶಿಷ್ಯನೇ ಆದ ಅಲಾವುದ್ದೀನ್ ಅಲ್ ಕಾಸಾನಿ ಬರೆದ ವ್ಯಾಖ್ಯಾನ ಗ್ರಂಥವು ಇಬ್ಬರಿಂದಲೂ ಮೆಚ್ಚುಗೆ ಪಡೆಯಿತು. ಫಾತಿಮಾ ಹಾಗೂ ಅಲ್ ಕಾಸಾನೀ ವಿವಾಹಿತರಾದರು. ಮಾವನಂತೆಯೇ ಅಲ್ ಕಾಸಾನಿಯೂ ತನ್ನ ಪ್ರತಿ ನಿರ್ಧಾರಗಳಲ್ಲಿ ಪತ್ನಿ ಫಾತಿಮಾರ ನಿಲುವನ್ನು ಕೇಳಿ ಪಡೆಯುತ್ತಿದ್ದರು. ಅವರ ಅನುಮೋದನೆಯಿಲ್ಲದೆ ಯಾವುದನ್ನೂ ಪ್ರಕಟಿಸುತ್ತಿರಲಿಲ್ಲ.

ಫಾತಿಮಾ ಹಾಗೂ ಅವರಂತಹ ಅನೇಕ ಮಹಿಳೆಯರ ವಿಸ್ಮಯ ಬದುಕಿನ ಮೇಲೆ ಬೆಳಕು ಚೆಲ್ಲಿದ ಮೆಶಾಹಿರುನ್ನಿಸಾ ಕೃತಿಯು ಇಸ್ಲಾಮಿಕ್ ಜಗತ್ತಿನಲ್ಲಿ ಬಹಳ ಪ್ರಭಾವವನ್ನು ಬೀರಿತು. ಲೇಖಕ ಮುಹಮ್ಮದ್ ಹಸನ್ ಹಾನ್ ಇದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿ ಟೆಹ್ರಾನಿನಲ್ಲಿ ಪ್ರಕಟಿಸಿದ್ದಾರೆ.

ಮೂಲ~ ಡಾ: ಅಲೀ ತುಫೆಕ್ಚಿ
ಅನುವಾದ~ ಶಂಸ್ ಗಡಿಯಾರ್

‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ

[ತೋಪ್ಪಿಲ್ ಮುಹಮ್ಮದ್ ಮೀರಾನ್(1944–2019)

ಆರು ಕಾದಂಬರಿಗಳನ್ನು ಹಲವು ಸಣ್ಣಕತೆಗಳನ್ನೂ ಬರೆದಿದ್ದಾರೆ. 1997 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ‘ಸೈವು ನರಕ್ಕಾಲಿ’ ಕೃತಿಗಾಗಿ ಪಡೆದಿದ್ದಾರೆ. ‘ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಅವಾರ್ಡ್’ ಹಾಗೂ ‘ಇಳಕ್ಕಿಯ ಚಿಂತನೈ ಅವಾರ್ಡ್’ ಸೇರಿದಂತೆ ಇತರ ಅನೇಕ ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಮಲಯಾಳಂ ಭಾಷೆಯ ಹೆಸರಾಂತ ಸಾಹಿತಿ ವೈಕಮ್ ಮುಹಮ್ಮದ್ ಬಶೀರ್ ಅವರ ಬಯಾಗ್ರಫಿಯನ್ನು ತಮಿಳು ಭಾಷೆಗೆ ಭಾಷಾಂತರಿಸಿದ್ದಾರೆ. ತಮ್ಮ ಬರವಣಿಗೆಗಳಲ್ಲಿ ಮನುಷ್ಯ ಮನುಷ್ಯನ ಜೊತೆಗೆ ಏನು ಮಾಡುತ್ತಿರುವನು ಮತ್ತು ಮಾನವನು ಪ್ರಕೃತಿಯ ಜೊತೆಗೆ ಯಾವ ರೀತಿ ವರ್ತಿಸುತ್ತಿದ್ದಾನೆ ಎಂಬುದರ ಬಗ್ಗೆ ವಿಷಾದದಿಂದ ದಾಖಲಿಸಿದ್ದಾರೆ. ಸೃಷ್ಟಿಗಳಲ್ಲೇ ಅತ್ಯಂತ ಶ್ರೇಷ್ಟನಾಗಿರುವ ಮಾನವನು ಧರ್ಮ, ಜಾತಿ ಹಾಗೂ ಲಿಂಗ ತಾರತಮ್ಯ ಭಾವನೆಯಿಂದ ಮಾಡುವ ಕೃತ್ಯಗಳನ್ನು ನೋಡಿ ಅವರು ನೊಂದುಕೊಂಡಿದ್ದಾರೆ. ಅವರು ನೈಜ ಮಾನವರ ಬಗ್ಗೆ ಬರೆದಿದ್ದಾರೆ. ಅವರ ಬರಹಗಳು ಅಪಾರ ಸಹಾನುಭೂತಿ, ಉತ್ಕಟ ಮಾನವೀಯತೆ ಹಾಗೂ ದೃಢವಾದ ಭರವಸೆಯನ್ನು ಹೊಂದಿವೆ.]

‘ಆನ ಪಾರೈ’ ಅಥವಾ ಆನೆಕಲ್ಲು ಎಂಬ ಬೃಹದಾಕಾರದ ಬಂಡೆಗಲ್ಲೊಂದು ಪಟ್ಟಣದ ದಕ್ಷಿಣ ದಿಕ್ಕಿನಲ್ಲಿದೆ. ಮುಸ್ಲಿಮರ ಪವಿತ್ರ ರಂಜಾನ್ ಉಪವಾಸದ ಆರಂಭದ ಬಾಲಚಂದ್ರನನ್ನು ಮತ್ತು ಕೊನೆಯ ದಿನದ ‘ಪೆರುನ್ನಾಳ್’ (ಈದ್) ನ ಚಂದ್ರನನ್ನೂ ನೋಡಬೇಕೆಂದರೆ ನೀವು ಈ ಆನೆಪಾರೈಯನ್ನು ಹತ್ತಬೇಕು. ಮೋಡವಿಲ್ಲದ ರಾತ್ರಿಯಲ್ಲಿ ಬಾಲಚಂದ್ರನು ಬಾಗಿರುವ ದಾರದಂತೆ ಆಕಾಶಕ್ಕೆ ಅಂಟಿಕೊಂಡಿರುತ್ತಾನೆ. ರಂಜಾನ್ ಆರಂಭದ ‘ನೋಂಬು’ (ಉಪವಾಸ) ಶುರುವಾಗಿದ್ದನ್ನು ಖಚಿತಪಡಿಸಲು ಜನರು ‘ಚಂದ್ರ ದರ್ಶನವಾಯಿತೆ’ ಎಂದು ಕೇಳುತ್ತ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿರುತ್ತಾರೆ.

ರಂಜಾನಿನ ಚಂದ್ರದರ್ಶನಕ್ಕೆ ಹಾಗೂ ಪೆರುನ್ನಾಳ್ ನ ಹಬ್ಬದ ಸಂಭ್ರಮದಂದು ನಾವೂ ಬಂಡೆಗಲ್ಲನ್ನು ಹತ್ತುತ್ತಿದ್ದೆವು. ನಾವೂ ನಿಂತುಕೊಂಡು ಬಾಲಚಂದಿರನನ್ನು ನೋಡಲು ತವಕಿಸುತ್ತಿದ್ದೆವು. ಚಂದ್ರನ ಮೊದಲ ನೋಟವನ್ನು ಸೆರೆಹಿಡಿಯಲು ನಮ್ಮ ಕಣ್ಣುಗಳು ಬಲೆ ಬೀಸುತ್ತಿದ್ದವು. ಆದರೆ, ಅದು ಗೋಚರಿಸಿದ ಕೆಲವೇ ಕೆಲವು ಕ್ಷಣಗಳೊಳಗೆ ಮಾಯವಾಗುತ್ತಿತ್ತು. ಶುಭ್ರ ನೀಲಾಕಾಶಕ್ಕೆ ಎಲ್ಲಾದರೂ ಕೊಂಚ ಮೋಡ ಆವರಿಸಿಬಿಟ್ಟಿತೆಂದರೆ ನಾವೆಲ್ಲ ಸಿಟ್ಟಿನಿಂದ ಹುಚ್ಚೆದ್ದು ಬಿಡುತ್ತಿದ್ದೆವು. ನಾವು ಅದಕ್ಕೆ ಮನಸಾರೆ ಹಿಡಿಶಾಪ ಹಾಕುತ್ತಿದ್ದೆವು. ಹಠದಿಂದ ಅಲ್ಲೇ ನಿಂತು ಮೋಡ ಮರೆಯಾಗುವವರೆಗೂ ಕಾಯುತ್ತಿದ್ದೆವು. ಮೋಡ ಮರೆಯಾದರೆ ಮಾತ್ರ ನಾವು ಪೆರುನ್ನಾಳ್ ಆಚರಿಸಬಹುದಿತ್ತು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಹಾಗಿದ್ದರೆ ಮಾತ್ರ ನಾವು ಹೊಸ ಬಟ್ಟೆಗಳನ್ನು ಧರಿಸಿ ಕಿವಿಯೊಳಗೆ ಅತ್ತರಿನ (ಸುಗಂಧ ದ್ರವ್ಯ) ಪುಟ್ಟ ಹತ್ತಿಯುಂಡೆಗಳನ್ನು ತುರುಕಿ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ರಂಜಾನ್ ಉಡುಗೊರೆಗಳನ್ನು ಕೇಳಬಹುದಿತ್ತು. ಬಿಳಿ ಬಣ್ಣದ ಪುಟ್ಟ ಚಂದ್ರನನ್ನು ಕ್ಷಣಮಾತ್ರಕ್ಕೆ ಕಂಡಕೂಡಲೇ ಆನಪಾರೈ ನಿಂದ ಜಿಗಿಯುತ್ತ ಇಳಿಯುತ್ತಲೇ ಜೋರಾಗಿ ಕಿರಿಚುತ್ತಿದ್ದೆವು.
‘ಏನ್ರೋ ನಿಜವಾಗ್ಲೂ ಚಂದ್ರನನ್ನು ನೋಡಿದಿರೇನು?’ ಎಂದು ನಮ್ಮ ಸಂಭ್ರಮದಲ್ಲಿ ಜೊತೆಯಾಗುತ್ತ ನಾವು ಮಕ್ಕಳು ಹೇಳುವುದು ನಿಜವೋ ಸುಳ್ಳೋ ಎಂದು ಒಬ್ಬರು ಪರಾಂಬರಿಸುತ್ತಿದ್ದರು. ಅವರೇ ‘ಕ್ಯಾಲೆಂಡರ್ ಬಾವಾ’. ಅವರು ಎಂದಿಗೂ ಸುಳ್ಳನ್ನು ಹೇಳಿರಲಿಲ್ಲ. ಕಂಡದ್ದನ್ನು ಕಂಡಹಾಗೆ ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಹೇಳುತ್ತಿದ್ದ ಪ್ರಾಮಾಣಿಕ ವ್ಯಕ್ತಿ ಅವರು. ಅವರೇನಾದರೂ ಒಂದನ್ನು ಹೇಳಿದರೆ, ಅದನ್ನು ಸಾಬೀತುಪಡಿಸಲು ಮತ್ತೆ ಸಾಕ್ಷಿಯ ಅಗತ್ಯ ಬೀಳುತ್ತಿರಲಿಲ್ಲ.

‘ಓಹ್, ನಿಜವಾಗ್ಲೂ ನಾನು ಕಂಡೆ’ ಹೀಗೆಂದು ಬಾವಾ ಹೇಳಿದರೆ ‘ನೋಡಿದ್ದೀರ?’ ಊರಿನ ಮುಖ್ಯಸ್ಥ ಖಚಿತಪಡಿಸಿಕೊಳ್ಳಲೆಂಬಂತೆ ಕೇಳುತ್ತಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ‘ನಾನು ಕಣ್ಣಾರೆ ಕಂಡೆ’ ಎಂದು ಬಾವಾ ನುಡಿಯುತ್ತಿದ್ದರು. ಪ್ರತಿ ವರ್ಷವೂ ಅದೇ ಪ್ರಶ್ನೆ ಅದೇ ಉತ್ತರ ಮುಂದುವರಿಯುತ್ತಿತ್ತು.

ನಗಾರಿ ಬಾರಿಸಿ ಡಂಗುರ ಸಾರಿದ ತಕ್ಷಣ ಮಸೀದಿಯ ಧ್ವನಿವರ್ಧಕದಲ್ಲಿ ಪೆರುನ್ನಾಳಿನ ಅಧಿಕೃತ ಘೋಷಣೆಯನ್ನು ಹೊರಡಿಸಲಾಗುತ್ತಿತ್ತು. ನಮ್ಮ ಹಳ್ಳಿಯಲ್ಲಿ ನಾವು ಕ್ಯಾಲೆಂಡರ್ ನೋಡುತ್ತಿರಲಿಲ್ಲ. ‘ಬಾವಾ’ ನಮ್ಮ ಪಾಲಿನ ಕ್ಯಾಲೆಂಡರಾಗಿದ್ದರು. ಹಳ್ಳಿಯ ಮುಖ್ಯಸ್ಥರೇ ಖುದ್ದು ಬಾವಾರಿಗೆ ಹೊಸ ಬಟ್ಟೆಗಳನ್ನು ಹಬ್ಬಕ್ಕೆಂದು ಕೊಡುತ್ತಿದ್ದರು. ಬಾವಾರಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಅದೊಂದು
ಧೋತಿ ಮತ್ತು ಟವೆಲ್ ಸೆಟ್. ಜೊತೆಗೆ ಮಸೀದಿಯನ್ನು ಸ್ವಚ್ಛವಾಗಿಡುವ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಮಾಡಲು ಶುರುಮಾಡಿದಂದಿನಿಂದ ಊರವರಿಂದ ದೈನಂದಿನ ಎರಡು ಹೊತ್ತು ಊಟವನ್ನು ಅವರು ಪುಕ್ಕಟೆಯಾಗಿ ಪಡೆಯುತ್ತಿದ್ದರು. ಬೂದುಬಣ್ಣದ ಮಾಸಲು ಗಡ್ಡ, ಕೆಂಪನೆಯ ದುಂಡಗಿನ ಟೋಪಿ, ಸೊಂಟಕ್ಕೆ ಸುತ್ತಿದ ಕಣಕಾಲುಗಳ ತನಕ ಇಳಿಯಬಿಟ್ಟ ಧೋತಿ ಮತ್ತು ಮೊಣಕಾಲುಗಳವರೆಗೆ ಇಳಿಯಬಿಟ್ಟ ತುಂಬಾ ಸಡಿಲವಾದ ಅಂಗಿ – ಇವಿಷ್ಟು ಬಾವಾ ಅವರ ಕುರಿತ ಸಣ್ಣ ವ್ಯಕ್ತಿಚಿತ್ರ.

ಅದ್ರಾಬು, ಸುಲ್ತಾನ್, ಹಮೀದು ಮತ್ತು ಉಳಿದ ನಾವೆಲ್ಲರೂ ಚಂದ್ರನನ್ನು ನೋಡುವ ಸಲುವಾಗಿ ಆನೆಕಲ್ಲನ್ನು ಹತ್ತಿದೆವು. ಎಂದಿನಂತೆ, ಕ್ಯಾಲೆಂಡರ್ ಬಾವಾ ಅವರೂ ಸಾಕ್ಷಿಯಾಗಿ ನಮ್ಮ ಜೊತೆ ಸೇರಿಕೊಂಡರು. ಮದುವೆಯಾಗಿ ತಿರುವನಂತಪುರಂ ಗೆ ಹೋಗಿರುವ ನನ್ನ ಅಕ್ಕ ಅಲ್ಲಿ ನಾಳೆ ಪೆರುನ್ನಾಳ್ ಎಂದು ಉಮ್ಮ(ತಾಯಿ) ಗೆ ಹೇಳಿದಳು. ಅವಳ ಮಾತು ಕೇಳಿ ಉಮ್ಮ ಒಟ್ಟಪ್ಪಮ್, ಪಾಲಡೈ ಹಾಗೂ ಕಿಣ್ಣತ್ತಪ್ಪಮ್ ನಂತಹ ರುಚಿರುಚಿಯಾದ ತಿಂಡಿಗಳನ್ನು ಮಾಡಲು ಅಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಿದರು. ಕೈಮಣಿ ಸುಂದರಮ್ ನ ಉಡುಗೊರೆಯೆಂದರೆ ಎರಡು ಹುಂಜಗಳು. ಅವುಗಳನ್ನು ಹಗ್ಗಗಳಿಂದ ಬೇಲಿಗೆ ಕಟ್ಟಲಾಗಿತ್ತು. ಅವು ನೆಲಕ್ಕೆ ಕುಕ್ಕಿ ಕಾಳುಗಳನ್ನು ಹೆಕ್ಕುತ್ತಿದ್ದವು. ಅವು ನಾಳೆ ಅಡುಗೆಕೋಣೆಯ ಒಂದು ಪಾತ್ರೆಯಲ್ಲಿ ಘಮಘಮದ ಸಾರಿನೊಳಗಿರುವುದನ್ನು ನಾನು ಈಗಲೇ ಊಹಿಸಬಲ್ಲೆ. ಇದೆಲ್ಲದರ ಜೊತೆಗೆ ತುಪ್ಪ ಹಾಕಿದ ಅನ್ನ ಮತ್ತಿತರ ರುಚಿಯಾದ ತಿಂಡಿಗಳೂ ಇರಬಹುದು.
ಅಲ್ಲಾಹ್! ನಾಳೆ ಪೆರುನ್ನಾಳ್ ಹಬ್ಬವಾಗಲಿ. ಹಬ್ಬಕ್ಕೆ ಸಿಗುವ ಉಡುಗೊರೆಗಳಲ್ಲಿ ಒಂದು ರೂಪಾಯಿಯನ್ನು ನಾನು ನಿನಗೆ ಹರಕೆ ಹೊರುತ್ತೇನೆ.

ಸುಲ್ತಾನನ ಮನೆಯಲ್ಲಿ ಹಬ್ಬಕ್ಕಾಗಿ ಓರಟ್ಟಿ (ಚಪ್ಪಟೆ ರೊಟ್ಟಿ) ಗಳನ್ನು ಮಾಡಲು ಅಕ್ಕಿಹಿಟ್ಟನ್ನು ಬೆರೆಸುತ್ತಿದ್ದರು. ಹಮೀದನ ಅಪ್ಪ ಒಂದು ಮೇಕೆಯನ್ನು ತಂದು ಬೇಲಿಗೆ ಕಟ್ಟಿದ್ದರು.
ನಾವೆಲ್ಲರೂ ಆನೆಕಲ್ಲಿನ ಮೇಲೆ ಕ್ಯಾಲೆಂಡರ್ ಬಾವಾ ಜೊತೆಗಿದ್ದೆವು. ಆಕಾಶವು ಮೋಡಗಳಿಲ್ಲದೆ ಚೆನ್ನಾಗಿ ತೊಳೆದಿಟ್ಟಂತೆ ಶುಭ್ರವಾಗಿತ್ತು. ಕ್ಯಾಲೆಂಡರ್ ಬಾವಾ ಅವರ ಗಡ್ಡದ ಮೇಲಿನ, ತುಟಿಗಳ ಸ್ವಲ್ಪ ಕೆಳಗಿನ ಕೂದಲು ಬೀಡಿಯ ಕಲೆಗಳಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಅವರು ಮೂಗಿನಿಂದ ಹೊಗೆ ಹೊರಹಾಕಿ ನಮ್ಮನ್ನು ಅಚ್ಚರಿಗೊಳಿಸುತ್ತಿದ್ದರು. ಕುಮಾರಿ ಮಕ್ಕಳ್ ಬೀಡಿಗಳು ಮತ್ತು ಎಲಿ-ಮಾರ್ಕ್ ಬೆಂಕಿಪೊಟ್ಟಣವನ್ನು ನಾವು ಅವರ ಅಂಗಿ ಜೇಬಿಗೆ ತುರುಕಿದರೆ ಮಾರ್ಗಶಿರ ಮಾಸದ ಚಳಿಯಲ್ಲಿ ನಡುಗುತ್ತಿದ್ದ ಕ್ಯಾಲೆಂಡರ್ ಬಾವಾರಿಗೆ ಹೇಳಲಾಗದಷ್ಟು ಖುಷಿ. ಅರಬ್ಬೀ ಸಮುದ್ರದತ್ತಣಿಂದ ಬೀಸಿ ಬರುವ ಸಂಜೆಯ ತಂಗಾಳಿ ತೇವಮಯವಾಗಿತ್ತು. ಸೂರ್ಯನು ಸಮುದ್ರದಲ್ಲಿ ಮುಳುಗಿದಾಗ, ನಮ್ಮ ಕಣ್ಣುಗಳು ಆಕಾಶದತ್ತ ನೆಟ್ಟವು.

‘ಯಾಕೆ ಈ ಬೀಡಿಗಳು?’

‘ಚಳಿ ಅಲ್ವಾ’

‘ಹೌದು, ತುಂಬಾ ಚಳಿ’

‘ಬಾವಾ, ನಮ್ಮ ಉಮ್ಮ ಅಕ್ಕಿಯನ್ನು ನೆನೆಯಲು ಹಾಕಿದ್ದಾರೆ’ ಬಾವಾ ಅದ್ರಾಬುವಿನ ಮಾತುಗಳಿಗೆ ಕಿವಿಗೊಡಲಿಲ್ಲ.

‘ನನ್ನ ಉಮ್ಮ ಹಿಟ್ಟನ್ನು ರುಬ್ಬುತ್ತಿದ್ದಾರೆ’ ಸುಲ್ತಾನ ಹೇಳಿದ.

ಬಾವಾ ಅವರ ಕ್ಯಾಲೆಂಡರ್ ಕಣ್ಣುಗಳು ಮೋಡರಹಿತವಾದ ನೀಲಿ ಆಕಾಶದತ್ತ ನೋಡುತ್ತಿದ್ದವು.
‘ಬಾವಾ, ಚಂದ್ರ ಕಂಡನೇ?’ ಹುಡುಗರಲ್ಲೊಬ್ಬ ಕೇಳಿದನು.

ಪೆರುನ್ನಾಳಿಗಾಗಿ ವಿಶೇಷವಾಗಿ ಮಸೀದಿಯ ಮಿನಾರದ ಮೇಲೆ ಕಟ್ಟಿರುವ ಧ್ವನಿವರ್ಧಕದಿಂದ ಉಪವಾಸ ತೊರೆಯುವ ಹೊತ್ತಿನ ಪ್ರಾರ್ಥನೆಯ ಶಬ್ದಗಳು ಕೇಳಿಸಲಾರಂಭಿಸಿದವು. ಬಾವಾ ಒಂದು ಬೀಡಿಯನ್ನೆಳೆದು ಉಪವಾಸ ತೊರೆದರು.

‘ಅಲ್ನೋಡಿ, ಮೋಡ. ನೋಡಿ.. ನೋಡಿ.. ಒಂದು ನೂಲಿನ ಹಾಗೆ ಏನೋ ಕಾಣ್ತಿದೆಯಲ್ಲಾ..’

ಬಾವಾ ಮೌನವಾಗಿದ್ದರು. ಅವರು ಆಕಾಶಕ್ಕೆ ನೆಟ್ಟ ತನ್ನ ಕಣ್ಣನ್ನು ಕೀಳಲಿಲ್ಲ. ಅಲ್ಲೆಲ್ಲೂ ಮೋಡವಿದ್ದಂತೆ ಕಾಣಲಿಲ್ಲ. ನಾಳೆ ಪೆರುನ್ನಾಳ್ ಆಗುವ ಸಾಧ್ಯತೆ ಇಲ್ಲ ಎಂದು ಬಾವಾ ಮನದಲ್ಲೇ ಅಂದುಕೊಂಡಿರಬೇಕು.

‘ನಾವೆಲ್ಲ ನೋಡಿದೆವು, ಬಾವಾ. ನೀವು ನೋಡಿಲ್ಲವೆ?’

ಬಾವಾ ಮಾತಿಗಾಗಿ ತಡಕಾಡಿದರು.
ಬಹುಶಃ ವಯಸ್ಸಾದ ಕಾರಣದಿಂದ ನನ್ನ ದೃಷ್ಟಿ ಮಂಜಾಗಿರಬಹುದು. ಈ ಮಕ್ಕಳೆಲ್ಲ ಅವರಿಗೆ ಚಂದ್ರ ಕಂಡನೆಂದು ಹೇಳುತ್ತಿದ್ದಾರಲ್ಲ. ಇವರೆಲ್ಲ ಒಳ್ಳೆಯ ಹುಡುಗರು. ಈಗಿನ ಕಾಲದಲ್ಲಿ ನನ್ನ ಕಣ್ಣುಗಳು ಹೆಚ್ಚಿನ ವೇಳೆ ತೇವಗೊಂಡಿರುತ್ತವೆ; ಬಹುಶಃ ದೃಷ್ಟಿ ಕ್ಷೀಣಿಸಿರುವುದರ ಲಕ್ಷಣ ಇರಬಹುದು ಅದು. ನಾನು ಕಣ್ಣಾರೆ ಕಾಣದೆ ಚಂದ್ರದರ್ಶನವಾಯಿತೆಂದು ಹೇಗೆ ಹೇಳಲಿ? ಈ ಎಲ್ಲ ಮಕ್ಕಳೂ ಚಂದ್ರನನ್ನು ಕಂಡೆವೆಂದು ಹೇಳುವಾಗ ನಾನು ಅದನ್ನು ತಳ್ಳಿಹಾಕುವುದಾದರೂ ಹೇಗೆ? ಮುಖ್ಯಸ್ಥನಿಗೆ ನಾನು ಏನೆಂದು ಉತ್ತರ ಕೊಡಲಿ?

ಬಾವಾ ಗೊಂದಲಕ್ಕೊಳಗಾದರು. ಇಷ್ಟರತನಕ ಅವರು ಸುಳ್ಳು ಹೇಳಿರಲಿಲ್ಲ. ಅವರ ಕಣ್ಣುಗಳು ಮಂಜಾಗಿರುವ ವಿಷಯವು ಊರಿನವರಿಗೇನಾದರೂ ತಿಳಿದರೆ ಊರವರೆಲ್ಲ ಸೇರಿ ಅವರನ್ನು ಒದ್ದು ಓಡಿಸುವರು. ‘ಕ್ಯಾಲೆಂಡರ್’ ಎಂಬ ಕಾರಣಕ್ಕಾಗಿ ಮಾತ್ರ ಅವರು ಊರವರ ಗೌರವಕ್ಕೆ ಪಾತ್ರರಾಗಿದ್ದರು. ಹುಡುಗರು ಹೇಳಿದಂತೆ ಆ ಮೋಡವು ಚಂದ್ರನನ್ನು ಮರೆಮಾಡಿರಬಹುದು. ಬಾವಾ ತನ್ನ ನೀರಿಳಿಯುತ್ತಿದ್ದ ಕಣ್ಣುಗಳನ್ನು ಒರೆಸಿಕೊಳ್ಳುತ್ತಿರುವಾಗಲೇ ಮೋಡ ಬಂದು ಅರ್ಧಚಂದ್ರವನ್ನು ಮರೆಮಾಚಿರಬಹುದು.

ಸಂದೇಹಗಳು ತನ್ನ ಮನಸ್ಸನ್ನು ಆವರಿಸಿದವು. ಹರಿತವಾದ ಚಾಕುಗಳನ್ನು ಕಂಡ ಎಳೆಮೇಕೆಗಳು ನಾಳೆ ತಮ್ಮ ಕತ್ತು ಕುಯ್ದು, ಚರ್ಮ ಸುಲಿದು, ಪ್ರಾಣ ಕಳೆದುಕೊಳ್ಳಲಿದ್ದೇವೆ ಎಂದು ತಿಳಿದು ಜೋರಾಗಿ ಅರಚಲಾರಂಭಿಸಿದವು. ಆ ಸದ್ದು ಪಟ್ಟಣದ ಪಶ್ಚಿಮ ಭಾಗದಲ್ಲಿ, ಆನೆಕಲ್ಲಿನ ತಪ್ಪಲಲ್ಲಿ ಕಂಪನವನ್ನು ಉಂಟುಮಾಡಿತು.

ಬಂಡೆಗಲ್ಲಿನ ಮೇಲೆ ನಿಂತುಕೊಂಡು ಪಟ್ಟಣದ ಸಂಭ್ರಮವನ್ನೆಲ್ಲ ನೋಡಬಹುದಿತ್ತು, ಜೊತೆಗೆ ಮಕ್ಕಳ ಸಡಗರವನ್ನೂ.
ನಾನು ಚಂದ್ರನನ್ನು ನೋಡಲಿಲ್ಲ ಎಂದು ಹೇಳಿದರೆ ಇಡೀ ಊರು ದುಃಖದಲ್ಲಿ ಮುಳುಗುತ್ತದೆ. ಈ ಸಂಭ್ರಮ, ಈ ಸಡಗರ ಎಲ್ಲ ಕೊನೆಯಾಗುತ್ತದೆ. ಪಟಾಕಿಗಳನ್ನು ಸಿಡಿಸಿ ಸಂತೋಷದಿಂದ ಓಡಾಡುತ್ತಿರುವ ಮಕ್ಕಳೆಲ್ಲ ಆ ಸುದ್ದಿ ಕೇಳಿದರೆ ಬಸಳೆಯ ಕಾಂಡಗಳಂತೆ ಮುದುಡಿ ಬೀಳುತ್ತಾರೆ. ಈ ಬಡಜನರು ಕಷ್ಟಪಟ್ಟು ನೆನೆಸಿಟ್ಟ ಅಕ್ಕಿ, ರುಬ್ಬಿರುವ ಹಿಟ್ಟುಗಳೆಲ್ಲ..

ಹೊಳೆಯುವ ಹರಿತವಾದ ಚಾಕುಗಳನ್ನು ನೋಡಿ ಸಾವಿನ ಭಯದಿಂದ ಅದಾಗಲೇ ನಡುಗುತ್ತಿದ್ದ ಆ ಮೇಕೆಮರಿಗಳ ಭೀತಿಯನ್ನು ಮುಂದೂಡುವುದು ಅತ್ಯಂತ ಕ್ರೌರ್ಯದ ಕೃತ್ಯವೇ ಸರಿ. ಈ ಪವಿತ್ರ ದಿನದಲ್ಲಿ ಅವುಗಳಿಗೆ ಸಹಾನುಭೂತಿ ತೋರಿಸಲು.. ಅವುಗಳ ಭಯ ಮತ್ತು ಸಂಕಟವನ್ನು ಒಂದು ದಿನ ಕಡಿಮೆ ಮಾಡಲು.. ‘ಚಂದ್ರ ಕಾಣಿಸಿಕೊಂಡನೆ?’ ಅದ್ರಾಬು ಕೂಗಿದನು. ಸುಲ್ತಾನ್ ಮತ್ತು ಹಮೀದು ಆತನಿಗೆ ದನಿಗೂಡಿಸಿದರು. ಕ್ಯಾಲೆಂಡರ್ ಬಾವಾ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರ ಹಿಂದೆಯೇ ನಡೆದರು, ಗ್ರಾಮದ ಮುಖ್ಯಸ್ಥರು ಮಸೀದಿಯಲ್ಲಿ ಅವರಿಗಾಗಿ ಕಾಯುತ್ತಿದ್ದರು.

‘ಚಂದ್ರನನ್ನು ನೋಡಿದಿರಾ?’

‘ಹೌದು, ನಾನು ಕಣ್ಣಾರೆ ಕಂಡೆ’ ಎಂದು ಹೇಳಲೇ ಅಥವಾ ‘ನಾನು ನೋಡಲಿಲ್ಲ’ ಎಂದು ಹೇಳಲೆ?
ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅವರ ಕಣ್ಣುಗಳು ತೇವಗೊಂಡವು.

‘ಏನು ಹೇಳುತ್ತೀರಿ ಬಾವಾ?’

‘ನನ್ನ ದೃಷ್ಟಿ ಚೆನ್ನಾಗಿಲ್ಲ’

ಆತ ಈಗ ಜನರಿಗೆ ಬೇಡವಾದ ಮೂಲೆಗುಂಪಾಗಿರುವ ಹಳೆಯದಾದ ಕ್ಯಾಲೆಂಡರ್.

ಊರಿನ ಮುಖ್ಯಸ್ಥರು ನಗಾರಿ ಬಾರಿಸಿ ಧ್ವನಿವರ್ಧಕದಲ್ಲಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂಬ ಘೋಷಣೆ) ಕೂಗಿ ಪೆರುನ್ನಾಳ್ ಅನ್ನು ಘೋಷಿಸಲು ಆದೇಶ ನೀಡಿದರು. ಮಕ್ಕಳ ಪಾಲಿಗೆ ಅದು ಹೊಸ ಕ್ಯಾಲೆಂಡರ್.

ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್..

ಫ್ರಂಟ್‌ಲೈನ್ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದವರು – ಡಾ. ಸಿ ಯಂ ಹನೀಫ್ ಬೆಳ್ಳಾರೆ

ರಾಷ್ಟ್ರೀಯತೆಯ ಹುಸಿ ದುರಭಿಮಾನದ ಪೊಳ್ಳು ಕಥೆಗಳು: ಎರಿಕ್ ಹಾಬ್ಸ್ ಬಾಮ್ ಕೃತಿ ವಿಮರ್ಶೆ

“ಎರಿಕ್ ಹಾಬ್ಸ್ ಬಾಮ್ ರಾಷ್ಟ್ರೀಯತೆಯನ್ನು ಇಷ್ಟಪಟ್ಟಿರಲಿಲ್ಲ” ಎಂದು ವಿವರಿಸುತ್ತಾರೆ ಡೊನಾಲ್ಡ್ ಸಾಸೂನ್. ರಾಷ್ಟ್ರೀಯತೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರರಾದ ಹಾಬ್ಸ್ ಬಾಮ್ ಬರೆದ ಪ್ರಬಂಧಗಳ ಸಮಾಹಾರಕ್ಕೆ ಮುನ್ನುಡಿ ಬರೆಯುತ್ತಾ ಅವರು ಹೀಗೆ ನುಡಿದಿದ್ದಾರೆ.

ರಾಷ್ಟ್ರವಾದ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ಹಾಬ್ಸ್ ಬಾಮ್ ವ್ಯಯಿಸಿದ್ದರು. ಹಿಂದಿನ ಮತ್ತು ಸದ್ಯದ ಸಮಾಜಗಳಲ್ಲಿ ಅದರ ಅರ್ಥ ಮತ್ತು ಪ್ರಭಾವ ಹೇಗಿತ್ತೆಂಬ ವಿವರಗಳನ್ನು ಅನ್ವೇಷಿಸಲು ಅವರು ಪ್ರಯತ್ನಿಸಿದರು. ಅಂತಿಮವಾಗಿ, “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆಯ ಇತಿಹಾಸವನ್ನು ಕಲಿಯುವ ಯಾವುದೇ ಗಂಭೀರ ಇತಿಹಾಸಕಾರರು ರಾಜಕೀಯ ರಾಷ್ಟ್ರೀಯವಾದದ ವಕ್ತಾರರಾಗಲು ಸಾಧ್ಯವಿಲ್ಲ” ಎಂಬ ತೀರ್ಮಾನಕ್ಕೆ ಅವರು ಬಂದರು.

1990 ರಲ್ಲಿ ಪ್ರಥಮವಾಗಿ ಪ್ರಕಟವಾದ ಸಣ್ಣ ಆದರೆ ಆಳ ಒಳನೋಟವುಳ್ಳ “1780 ರ ನಂತರದ ರಾಷ್ಟ್ರ ಮತ್ತು ರಾಷ್ಟ್ರೀಯವಾದ” ಎಂಬ ಕೃತಿಯಲ್ಲಿ ಹಾಬ್ಸ್ ಬಾಮ್ ರವರ ಈ ಒಳನೋಟ ಪ್ರಕಟವಾಗಿದೆ. ಸಾಸೂನ್ ಹೇಳಿರುವುದು ಅರ್ಥ ಆಗದವರು ಇದನ್ನೆಲ್ಲಾ ಗಮನಿಸಬೇಕಿದೆ. “ರಾಷ್ಟ್ರೀಯತೆಯ ಕುರಿತು” ಎಂಬ ಸರಳ ಶೀರ್ಷಿಕೆಯನ್ನು ಹೊಂದಿರುವ ಈ ಹೊಸ ಪ್ರಬಂಧಗಳ ಸಂಗ್ರಹ ಹಲವಾರು ಬರಹಗಳು, ಉಪನ್ಯಾಸಗಳು, ಪುಸ್ತಕ ವಿಮರ್ಶೆಗಳು ಮತ್ತು ಇತರ ಪುಸ್ತಕಗಳಿಂದ ಆಯ್ದ ಉಲ್ಲೇಖಗಳನ್ನು ಒಳಗೊಂಡ ಸಮಗ್ರ ಸಂಪುಟ ಎಂದು ಹೇಳಬಹುದು. “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆ” ಕೃತಿ ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ರಾಷ್ಟ್ರೀಯವಾದದ ಕಲ್ಪನೆ ಮತ್ತು ಅದರ ರಾಜಕೀಯ ಅಭಿವ್ಯಕ್ತಿಗಳ ವ್ಯವಸ್ಥಿತ ಅಧ್ಯಯನವಾಗಿದ್ದರೆ, ʼಆನ್ ನ್ಯಾಶನಲಿಸಂʼ ಕೃತಿಯು ವೈವಿಧ್ಯಮಯ ಮತ್ತು ಪ್ರಾಯಶಃ ಹೆಚ್ಚು ವೈಯಕ್ತಿಕ ಹಾಗೂ ಊಹಾತ್ಮಕ ವಿಷಯಗಳನ್ನು ಚರ್ಚಿಸುತ್ತದೆ. ಆದಾಗ್ಯೂ, ಅತೀಂದ್ರಿಯ ರಾಜಕೀಯದ ಒಂದು ವಿಧಾನ ಎಂಬ ನೆಲೆಯಲ್ಲಿನ ಅದರ ಸಾಮರ್ಥ್ಯದ ಬಗ್ಗೆ ಅವರ ಬಲವಾದ ಪೂರ್ವ ನಿಶ್ಚಯಗಳು ಸ್ಥಿರವಾಗಿ ನಿಂತಿರುವುದು ಕಂಡುಬರುತ್ತದೆ.

ಎರಿಕ್ ಹಾಬ್ಸ್ ಬಾಮ್

ಈ ಪೂರ್ವ ನಿಶ್ಚಯಗಳನ್ನು ಅರ್ಥಮಾಡಿಕೊಳ್ಳಲು ಇತಿಹಾಸಕಾರ ಹಾಗೂ ರಾಜಕೀಯ ಚಿಂತಕ ಎಂಬ ನೆಲೆಯಲ್ಲಿನ ಹಾಬ್ಸ್ ಬಾಮ್ ವೃತ್ತಿಜೀವನದ ಕಡೆಗೆ ಕಣ್ಣು ಹಾಯಿಸಿದರೆ ಸಾಕು. 1917 ರಲ್ಲಿ ಪೋಲಿಷ್ ಮತ್ತು ಆಸ್ಟ್ರಿಯನ್ ಮೂಲದ ಯಹೂದಿ ಪೋಷಕರಿಗೆ ಜನಿಸಿದ ಅವರು 1933 ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯತೆಯ ದಬ್ಬಾಳಿಕೆಯನ್ನು ನೇರವಾಗಿ ಅನುಭವಿಸಿದರು ಮತ್ತು ಅವರ ಕುಟುಂಬ ಬರ್ಲಿನ್ ನಿಂದ ಲಂಡನಿಗೆ ತೆರಳಬೇಕಾಯಿತು. ಅವರ ಎಡಪಂಥೀಯ ಒಲವು ವೃತ್ತಿಜೀವನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಅವರ ಶೈಕ್ಷಣಿಕ ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ಇಡಲು MI5 ಅವರ ಹೆಸರಿನಲ್ಲಿ ಒಂದು ವೈಯಕ್ತಿಕ ಫೈಲನ್ನೇ ತೆರೆದಿತ್ತು. ಇಪ್ಪತ್ತನೇ ಶತಮಾನದ ಅಗ್ರಗಣ್ಯ ಇತಿಹಾಸಕಾರರಲ್ಲಿ ಒಬ್ಬರೆಂಬ ಖ್ಯಾತಿ ಅವರಿಗೆ ಸಿಕ್ಕಿದ್ದರೂ ಕೇಂಬ್ರಿಡ್ಜ್ ಅಲ್ಲಿ ಉಪನ್ಯಾಸ ನೀಡದಂತೆ ತಡೆದು ಅವಕಾಶ ನಿರಾಕರಿಸಲಾಯಿತು. ಆದರೆ ಫ್ರೆಂಚ್ ಕ್ರಾಂತಿ ಮತ್ತು ಮೊದಲನೆಯ ಮಹಾಯುದ್ಧದ ನಡುವಿನ ಅವಧಿಯ ಇತಿಹಾಸದ ಬಗ್ಗೆ ಪಟ್ಟುಬಿಡದೆ ನಡೆಸಿದ ಅನ್ವೇಷಣೆಗಳು ಅವರನ್ನು ರಾಷ್ಟ್ರ ಕಲ್ಪನೆಯ ಸಮಯಾತೀತತೆಯನ್ನು ತೀವ್ರವಾಗಿ ಅನುಮಾನಿಸುವಂತೆ ಮಾಡಿತು ಮತ್ತು ರಾಷ್ಟ್ರವಾದದ ಆವಿಷ್ಕಾರ ಹತ್ತೊಂಬತ್ತನೆಯ ಶತಮಾನದ ನಂತರದ ಅತ್ಯಂತ ಜನಪ್ರಿಯ ರಾಜಕೀಯ ಸಂಪ್ರದಾಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಭಾಷೆ ಅಥವಾ ಜನಾಂಗೀಯತೆ ಮುಂತಾದ ಯಾವುದೇ ನಿಯತಾಂಕಗಳನ್ನು ರಾಷ್ಟ್ರೀಯತೆಯ ಸ್ಥಿರ, ನಿರ್ವಿವಾದ ಮತ್ತು ಪೌರಾಣಿಕವಲ್ಲದ ತಾರ್ಕಿಕತೆಯಾಗಿ ಮತ್ತು ಪವಿತ್ರತೆಯನ್ನು ಪ್ರಕಟಿಸುವ ‘-ism’ ಗಳಾಗಿ ಸ್ವೀಕರಿಸಲು ಅವರು ಸಿದ್ಧರಿರಲಿಲ್ಲ.
ಪ್ರಸ್ತುತ ಸಂಪುಟದಿಂದ ಸ್ಪಷ್ಟವಾಗುವಂತೆ, ತಮ್ಮ ಸಹ ನಾಗರಿಕರ ರಕ್ತವನ್ನು ತನ್ನ ಹೆಸರಿನಲ್ಲಿ ಬೇಟೆಯಾಡಲು ಅನುವಾಗುವ ರೀತಿಯಲ್ಲಿ ಲಕ್ಷಾಂತರ ಜನರ ಮೇಲೆ ರಾಷ್ಟ್ರೀಯವಾದ ಹೊಂದಿರುವ ಅಪಾಯಕಾರಿ ಪ್ರಭಾವವನ್ನು ಗುರುತಿಸಲು ಕೂಡಾ ಅವರಿಗೆ ಸಾಧ್ಯವಾಗಿತ್ತು. ಹತ್ತೊಂಬತ್ತನೇ ಶತಮಾನದಲ್ಲಿ ರಾಷ್ಟ್ರವಾದ ಗಳಿಸಲು ಪ್ರಾರಂಭಿಸಿದ ಅತೀಂದ್ರಿಯ, ಶಾಶ್ವತ ಹಾಗೂ ವಾಸ್ತವಿಕವಲ್ಲದ ಸ್ವರೂಪವೇ ವಿರೋಧಿಗಳಿಗೆ ದಿಗಿಲು ಹುಟ್ಟಲು ಮತ್ತು ಅದು ಎಲ್ಲಾ ತರದ ವೈಚಾರಿಕ ಸೆಳೆತಗಳಿಗೂ ಹೊಂದುವಂತಾಗಲು ಕಾರಣವಾಗಿದೆ ಎಂದು ಅವರು ಮನಗಾಣಿಸುತ್ತಾರೆ. ಫಾಲ್ಸಿಫಿಕೇಶನ್ ತತ್ವ ಹಾಗೂ ಪುರಾವೆಗಳಲ್ಲಿ ಮಾತ್ರ ನಂಬಿ ವಾಸ್ತವೀಕರಿಸಲು ಸಾಧ್ಯವಿಲ್ಲದ್ದನ್ನು ತಳ್ಳಿ ಹಾಕುವ ಜಾಯಮಾನದ ಇತಿಹಾಸಕಾರರಾಗಿಯೂ ಅವರು ಸದ್ರಿ ವಿಶ್ಲೇಷಣೆ ನಡೆಸುತ್ತಿದ್ದಾರೆನ್ನುವುದು ಗಮನಾರ್ಹ.

ಪ್ರಸ್ತುತ ಸಂಪುಟದಲ್ಲಿನ ಪ್ರಬಂಧಗಳನ್ನು ಎರಡು ವಿಭಾಗಗಳಲ್ಲಾಗಿ ಸಂಕಲಿಸಲಾಗಿದೆ. ಒಂದನೆಯದ್ದು “ಇತಿಹಾಸದಲ್ಲಿ ರಾಷ್ಟ್ರೀಯತೆ” ಮತ್ತು ಎರಡನೆಯದ್ದು”ರಾಷ್ಟ್ರೀಯತೆಯ ಅಪಾಯಗಳು.” ಮೊದಲ ವಿಭಾಗದಲ್ಲಿ, ಹಾಬ್ಸ್‌ ಬಾಮ್ ರವರ ಅತ್ಯಂತ ಪ್ರಸಿದ್ಧ ಕೃತಿಗಳಾದ‌ ʼದಿ ಏಜ್ ಆಫ್ ರೆವಲ್ಯೂಷನ್ʼ, ʼದಿ ಏಜ್ ಆಫ್ ಕ್ಯಾಪಿಟಲ್ʼ ಮತ್ತು ʼದಿ ಏಜ್ ಆಫ್ ಎಂಪೈರಿʼನ ಸಂಪಾದಿತ ಸಂಪುಟ ಹಾಗೂ ʼದಿ ಇನ್ವೆನ್ಶನ್ ಆಫ್ ಟ್ರೆಡಿಶನ್ʼನ ಬಹುತೇಕ ಆಯ್ದ ಭಾಗಗಳಿವೆ. ಸಾಮ್ರಾಜ್ಯದ ಭೌಗೋಳಿಕ ವಿಸ್ತರಣೆಯ ತರ್ಕದ ಜಾಗದಲ್ಲಿ ಜನಾಂಗೀಯ-ಭಾಷಾ ವ್ಯತ್ಯಾಸಗಳನ್ನು ರಾಜಕೀಯ ಅಸ್ಮಿತೆಯ ರಚನೆ ಮತ್ತು ಸಾಕ್ಷಾತ್ಕಾರದ ಆಧಾರವಾಗಿ ತೆಗೆದುಕೊಳ್ಳುವ ನೇಷನ್-ಸ್ಟೇಟುಗಳು ಬಂದ “ದೀರ್ಘ ಹತ್ತೊಂಬತ್ತನೇ ಶತಮಾನದ” ಯುಗಗಳ ಬಗೆಗಿನ ಮೊದಲ ಭಾಗ ವಿವರಿಸುತ್ತದೆ. ʼದ ಇನ್ವೆನ್ಶನ್ ಆಫ್ ಟ್ರಡೀಶನ್ʼ ಕೃತಿಯ ಆಯ್ದ ಭಾಗಗಳು ಕೆಲವು ಸಾಂಕೇತಿಕ ಕ್ರಿಯೆಗಳ ಆಚರಣೆಗಳು ಸೈದ್ಧಾಂತಿಕ ಕಾಲ್ಪನಿಕತೆಯ ಶಕ್ತಿಯನ್ನು ಹೇಗೆ ಬಲಪಡಿಸುತ್ತದೆ ಎಂದು ವಿವರಿಸುತ್ತದೆ. ಜತೆಜತೆಗೆ, ಅದು ಹೇಗೆ ಸಮಾನವಾದ ಮೌಲ್ಯಗಳು, ಆಚರಣೆಗಳು ಮತ್ತು ದ್ವೇಷಗಳು ಇರುವ ಮಿಥ್ಯಾಜಗತ್ತನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಮಹತ್ವಪೂರ್ಣವಾಗಿ ಸಾಬೀತುಪಡಿಸುತ್ತಿದೆ. ಎರಡನೆಯ ವಿಭಾಗವು ರಾಷ್ಟ್ರೀಯತೆಯೊಂದಿಗೆ ವ್ಯವಹರಿಸುವ ಪುಸ್ತಕಗಳ ಕೆಲವು ವಿಮರ್ಶೆಗಳನ್ನು ಹೊಂದಿದೆ ಮತ್ತು ಎಂಭತ್ತರ ಫಾಕ್ಲ್ಯಾಂಡ್ ಯುದ್ಧದಂತಹ ಸ್ಥಳೀಯ ವಿಷಯಗಳ ಕುರಿತ ವ್ಯಾಖ್ಯಾನಗಳನ್ನು ಹೊಂದಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ಯುರೋಪಿನಲ್ಲಿ ಉಂಟಾಗಲಿರುವ ಉಗ್ರಗಾಮಿ ರಾಷ್ಟ್ರೀಯತೆಯ ಉಗಮದ ಕುರಿತ ಭಯ ಹುಟ್ಟಿಸುವ ಹಾಗೂ ಬೇಸರದಿಂದ ತುಂಬಿದ ಎಚ್ಚರಿಕೆಯ ಮಾತು ಈ ಬರಹಗಳಲ್ಲಿ (ಮೊದಲ ವಿಭಾಗದಲ್ಲಿಯೂ ಸಹ) ಪುನರಾವರ್ತಿತವಾದ ಆಶಯ. ಹಾಬ್ಸ್ ಬಾಮ್ ತನ್ನ ಭವಿಷ್ಯವಾಣಿಗಳು ನಿಜವಾಗುತ್ತಿರುವುದನ್ನು ಮತ್ತು ಜನಪ್ರಿಯ ರಾಷ್ಟ್ರೀಯತೆಯ ಹೊಸ ಅಲೆಯು ಇಡೀ ಜಗತ್ತನ್ನು ಆವರಿಸುವುದನ್ನು ನೋಡುತ್ತಾ 2012 ರವರೆಗೆ ಬದುಕಿದ್ದರು.

ಯುಗಗಳ ಬಗೆಗಿನ ಸರಣಿಯ ಕೊನೆಯ ಪುಸ್ತಕವಾದ “ ದಿ ಏಜ್ ಆಫ್ ಎಕ್ಸ್ಟ್ರೀಮ್ಸ್”ನಲ್ಲಿ ಅವರು ಪ್ರತಿಪಾದಿಸಿದ ಹಾಗೆ, ಎರಡು ಮಹಾಯುದ್ಧಗಳ ನಡುವಿನ ಭಯಾನಕ ಸಮಯವನ್ನು ಹೋಲುವ ರೀತಿಯಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಉಗ್ರತೆ ಮೆರೆಯುವ ರಾಜಕೀಯ ಇಚ್ಛಾಶಕ್ತಿಯ ಬಲವರ್ಧನೆ ನಡೆಯುತ್ತಿರುವ ಈ ಕಾಲದಲ್ಲಿ ಹಾಬ್ಸ್ ಬಾಮ್‌ ರವರ ರಾಷ್ಟ್ರೀಯತೆಯ ಕುರಿತಾದ ಆಶಯಗಳು ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ ಎಂದು ಬೇರೆ ಹೇಳಬೇಕಾಗಿಲ್ಲ. ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪ್ರದಾಯಗಳ ಆವಿಷ್ಕಾರ ಮತ್ತು ವಿಮರ್ಶೆಯ ನಿರಾಕರಣೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ, ಜನಾದೇಶಗಳ ಹೆಸರಿನಲ್ಲಿ ಸಾಮೂಹಿಕ ಭೂತಕಾಲವನ್ನು ಪೌರಾಣಿಕಗೊಳಿಸುವ ಪ್ರಯತ್ನಗಳು ಪ್ರಶ್ನೆಗೆ ಒಳಪಡದಿರುವ, ರಾಷ್ಟ್ರಾಭಿಮಾನದ ಸಂಕೇತಗಳು ಐತಿಹಾಸಿಕ ಸತ್ಯಾಸತ್ಯತೆ ಪರೀಕ್ಷಣೆಯ ಹಂಗಿಲ್ಲದೆ ವಿರಾಜಮಾನವಾಗುತ್ತಿರುವ ಈ ಅತಿರೇಕದ ಯುಗದಲ್ಲಿ, “ರಾಷ್ಟ್ರೀಯತೆಯು ಒಂದು ಐತಿಹಾಸಿಕ ವಿದ್ಯಮಾನವಾಗಿದ್ದು ನಿಕಟಪೂರ್ವ ಭೂತಕಾಲದ ಉತ್ಪನ್ನವಷ್ಟೆ. ಸ್ವತಃ ಬದಲಾವಣೆಗೆ ಒಳಪಡುತ್ತಿರುವ ಇದು ಅನಿರ್ದಿಷ್ಟವಾಗಿ ಮುಂದುವರಿಯುವ ಸಾಧ್ಯತೆಯಿಲ್ಲ” ಎಂದು ನಮ್ಮನ್ನು ನಾವೇ ನೆನಪಿಸಿಕೊಳ್ಳಬೇಕಾಗಿದೆ. ಸುಳ್ಳು ದುರಭಿಮಾನ ಮತ್ತು ಕಠಿಣ ನೀತಿಕಥೆಗಳಿಂದ ಪ್ರಯೋಜನ ಪಡೆಯುವ ಶಕ್ತಿಗಳನ್ನು ನಿಷ್ಠುರವಾಗಿ ಬಹಿರಂಗಪಡಿಸುವ ಈ ಸಮಯೋಚಿತ ಸಂಪುಟವನ್ನು ಸಂಪಾದಿಸಿದ ಡೊನಾಲ್ಡ್ ಸಾಸೂನ್ ರವರಿಗೆ ಖಂಡಿತಾ ಕೃತಜ್ಞತೆಗಳು ಸಲ್ಲಬೇಕು. ಅದೇ ವೇಳೆ, ದ್ವೇಷಪೂರಿತ ಪ್ರಚಾರಗಳಿಗೆ ಒಳಗಾಗುವ ಜನಸಾಮಾನ್ಯರ ದುರದೃಷ್ಟಕರ ಪರಿಸ್ಥಿತಿಗಳನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಬೇಕು.

-ಇಮಾನ್ ಮಿತ್ರ
ಕನ್ನಡಕ್ಕೆ: ನಝೀರ್ ಅಬ್ಬಾಸ್

(ಲೇಖಕರು ದೆಹಲಿಯ ಪ್ರತಿಷ್ಠಿತ ಶಿವನಾಡಾರ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.)

Dr. Iman Mitra
Assistant Professor
Department of History and Archaeology
School of Humanities and Social Sciences (SHSS)
Shiv Nadar University

ಇಸ್ಲಾಮಿಕ್ ನಾಗರಿಕತೆಯ ಅನನ್ಯ ಕೃತಿಗಳು ಮತ್ತು ರಚನಾ ಪರಂಪರೆ

ಜಾಗತಿಕವಾಗಿ ಪಠ್ಯ ರೂಪದಲ್ಲಿರುವ ಹಲವು ಕೃತಿಗಳು ಮನುಷ್ಯರ ವಿಭಿನ್ನವಾದ ದೃಷ್ಟಿಕೋನಗಳನ್ನು, ಜೀವನಶೈಲಿಗಳನ್ನು ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಪ್ರತಿಫಲಿಸುತ್ತದೆ. ಆಧುನಿಕ ಪ್ರಕಟಣೆಗಳ ಆಗಮನಕ್ಕಿಂತ ಮೊದಲು ಧಾರಾಳ ಪುಸ್ತಕಗಳನ್ನು ರಚಿಸುವುದು ಹಾಗೂ ಅವುಗಳನ್ನು ಮತ್ತೆ ನಕಲು ಮಾಡಿಡುವ ರೀತಿಯಿತ್ತು. ಅಂತಹ ಹಲವು ರಚನೆಗಳು ಇಂದಿಗೂ ಲಭ್ಯವಿದೆ.

ಇಸ್ಲಾಮಿಕ್ ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರಾಗತ ರಚನಾ ರೂಪಗಳಾದ ಶರಹ್ (Scholia, ವಿವರಣೆ)ಗಳು ಹಾಗೂ ಹಾಶಿಯಾ (Footnote, ಟಿಪ್ಪಣಿ)ಗಳ ಮೂಲಕ ಮುಂದಿನ ತಲೆಮಾರಿಗಾಗಿ ಮೂಲಗ್ರಂಥಗಳನ್ನು (ಮತ್ನ್‌ಗಳು) ಸಂರಕ್ಷಿಸಲ್ಪಟ್ಟಿದೆ.

ʼಮತ್ನ್‌ಗಳುʼ ಅಂದರೆ ಪ್ರತ್ಯೇಕ ವಿಷಯಗಳಲ್ಲಾಗಿ ಬರೆಯಲ್ಪಟ್ಟಿರುವ ಸರಳ ರಚನೆಗಳಾಗಿವೆ. (ಹಿಂದಿನ ಕಾಲದ) ವಿದ್ಯಾರ್ಥಿಗಳು ಅವುಗಳನ್ನು ಕಂಠಪಾಠ ಮಾಡುತ್ತಾ ಅಧ್ಯಯನಗೈಯುವುದು ರೂಢಿಯಾಗಿತ್ತು. ಮತ್ನ್‌ಗಳು ಅದರಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ವಿಭಿನ್ನ ನಿಲುವು, ವಾದ, ವಿಶಾಲ ದೃಷ್ಟಿಕೋನಗಳು ಅದರಲ್ಲಿ ಇರುವುದಿಲ್ಲ.

ಶರಹ್ ಎಂಬ ಅರಬಿ ಪದಕ್ಕೆ ʼವಿಭಜಿಸುವುದು, ಪ್ರತ್ಯೇಕಿಸುವುದುʼ ಎಂಬರ್ಥವಿದೆ. ಮತ್ನ್‌ಗಳಲ್ಲಿ ವಿವರಿಸಲ್ಪಡದ ವಿಷಯಗಳ ಮೇಲೆ ಶರಹ್ ಸ್ಪಷ್ಟತೆಯನ್ನು ನೀಡುತ್ತದೆ. ಅದೇ ರೀತಿ ಹಾಶಿಯಗಳು ಶರಹಿನಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸವಿವರ ಮಾಹಿತಿಗಳನ್ನು ನೀಡುವುದರೊಂದಿಗೆ ವಿಷಯದ ಕುರಿತು ಆಳ ಅರಿವಿನತ್ತ ಕೊಂಡೊಯ್ಯುತ್ತದೆ. ಅಂತಹ ವಿವರಣಾತ್ಮಕ ಗ್ರಂಥಗಳು ಅಸಮರ್ಪಕವೆಂಬ ಭಾವನೆಯಿದ್ದರೆ ಅಥವಾ ವಿಭಿನ್ನವಾದ ವಿವರಣೆಗಳು ಲಭ್ಯವಾದಲ್ಲಿ ಅದೇ ಪಠ್ಯಗಳಿಗೆ ಹೊಸ ಶರಹ್ ಮತ್ತು ಹಾಶಿಯಾಗಳನ್ನು ಬರೆಯಲಾಗುತ್ತಿತ್ತು. ಹೀಗೇ ಅನೇಕ ಗ್ರಂಥಗಳು ಇಸ್ಲಾಮಿಕ್ ವೈಜ್ಞಾನಿಕ ವಲಯದಲ್ಲಿ ರಚನೆಗೊಂಡವು. ಮೂರ್ನಾಲ್ಕು ಶತಮಾನಗಳ ಹಿಂದೆ ಬರೆಯಲ್ಪಟ್ಟ ಇಸ್ಲಾಮಿಕ್ ನಾಗರಿಕತೆಯ ಹಲವು ರಚನೆಗಳು ಇಂದಿಗೂ ಲಭ್ಯವಿರುವುದು ಭಾರೀ ವಿಶೇಷತೆಯಾಗಿದೆ.

2012ರಲ್ಲಿ ‘ಹಾಶಿಯಗಳು ಹಾಗೂ ಬೌದ್ಧಿಕ ಚರಿತ್ರೆಗಳು’ ಎಂಬ ಶೀರ್ಷಿಕೆಯಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಆಯೋಜಿಸಿದ ಕಾನ್ಫರೆನ್ಸ್‌ನಲ್ಲಿ ಶರಹುಗಳ ಹಾಗೂ ಹಾಶಿಯಾಗಳ ಪರಂಪರೆಯ ಕುರಿತು ಗಮನಾರ್ಹ ಚರ್ಚೆ ನಡೆಯಿತು.

ಇಸ್ಲಾಮಿಕ್ ನಾಗರಿಕತೆಯಲ್ಲಿ ಬರೆಯಲ್ಪಟ್ಟ ಕೃತಿಗಳ ಪೈಕಿ ಹತ್ತು ದಶಲಕ್ಷ ಕೃತಿಗಳು ಇಂದು ಲಭ್ಯವಿದೆ ಎಂದು ಕಾನ್ಫರೆನ್ಸ್‌ನಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಹೇಳುತ್ತವೆ. ಅವುಗಳ ಪೈಕಿ ಕೇವಲ ಶೇಕಡಾ ಹತ್ತರಷ್ಟು ಗ್ರಂಥಗಳನ್ನು ಮಾತ್ರ ಸದ್ಯ ಅಧ್ಯಯನ ಮಾಡಲಾಗುತ್ತಿದೆ ಎಂದೂ ಚಿಂತಕರು ಅಭಿಪ್ರಾಯ ಪಡುತ್ತಾರೆ.

ಹಾರ್ವರ್ಡ್ ಯುನಿವರ್ಸಿಟಿಯ ಅರಬ್-ಇಸ್ಲಾಮಿಕ್ ಬೌದ್ಧಿಕ ಇತಿಹಾಸ ವಿಭಾಗದ ಪ್ರೊಫೆಸರ್ ಆದ ಖಾಲಿದ್ ಅಲ್ ರುಹೈಬಿಯವರು (Khalid al Rouheyb) ಈ ಬಗೆಗಿನ ಸಮಗ್ರ ಅಧ್ಯಯನ ಮಾಡಿದ್ದಾರೆ. ʼIslamic intellectual history in the seventeenth century: Scholarly currents in the ottoman empire and the Magrib’ ಎಂಬ ತನ್ನ ಪುಸ್ತಕದಲ್ಲಿ ಒಟ್ಟೋಮನ್ ಆಡಳಿತಾವಧಿಯಲ್ಲಿ ರಚಿಸಲ್ಪಟ್ಟ ಧಾರಾಳ ಗ್ರಂಥಗಳ ವೈಜ್ಞಾನಿಕ ವಾತಾವರಣದ ಅಸ್ತಿತ್ವವನ್ನು ನಿರೂಪಿಸುತ್ತಾರೆ.

ಇಸ್ಲಾಮಿಕ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ ಇಂತಹ ಸಾವಿರಾರು ಕೃತಿಗಳ ಪೈಕಿ ಅನೇಕ ಕೃತಿಗಳು ಭೌಗೋಳಿಕ ವ್ಯಾಪ್ತಿ ಮತ್ತು ಶತಮಾನಗಳನ್ನು ಮೀರಿ ನಿಲ್ಲುತ್ತದೆ. ಅವುಗಳ ಪೈಕಿ ಸುದೀರ್ಘ ಕಾಲ ಮುಸ್ಲಿಂ ಸಮುದಾಯವನ್ನು ಪ್ರಭಾವಿಸಿದ ಹಾಗೂ ಅವರ ಹೃದಯವನ್ನು ಬೆಳಗಿಸಿದ ಕೆಲವು ಕೃತಿಗಳ ಕುರಿತು ಅರಿಯೋಣ.

ಆಧ್ಯಾತ್ಮಿಕ ಆನಂದದ ರಹಸ್ಯ

ಸೂಫೀ ಕೃತಿಗಳಲ್ಲಿ ಅಧಿಕವೂ ಪ್ರಸಿದ್ಧಿಗೊಂಡಿರುವುದು ಅದರ ಕರ್ತೃ‌ಗಳು ಅಳವಡಿಸಿದ್ದ ಆಧ್ಯಾತ್ಮಿಕ ಜೀವನಶೈಲಿಯಿಂದಾಗಿದೆ. ಅಂತಹ ಸೂಫಿಗಳು ಸಂಗಮಿಸಿದಾಗ ನಡೆಯುವ ಗ್ರಂಥಗಳಾಧಾರಿತ ಚರ್ಚೆಗಳು ಇಸ್ಲಾಮಿಕ್ ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತು ದರ್ವೇಶ್‌ಗಳು ಎಲ್ಲಾ ಸಂದರ್ಭಗಳಲ್ಲೂ ವಿವಿಧ ಗ್ರಂಥಗಳನ್ನು ಓದುವುದರೊಂದಿಗೆ ಅದನ್ನು ಅಧ್ಯಯನಗೈಯುತ್ತಿದ್ದರು.

ಪ್ರಧಾನ ಸೂಫೀ ರಚನೆಗಳು ವಿಶ್ವಾಸಿಗಳನ್ನು ಕೇವಲ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಭೌತಿಕವಾಗಿಯೂ ಪೋಷಿಸುತ್ತವೆ ಎಂಬುವುದು ಅಲ್ಲಗಳೆಯಲಾಗದ ವಾಸ್ತವ. ಪರ್ಷಿಯನ್ ತತ್ವಚಿಂತಕರಾದ ಅಬೂ ಹಾಮಿದ್ ಮುಹಮ್ಮದ್ ಅಲ್-ಗಝ್ಝಾಲಿಯವರ ಗ್ರಂಥಗಳು ಭೌತಶಾಸ್ತ್ರದ ಹಲವು ತರ್ಕಗಳಿಗೆ ದಿಕ್ಕು ತೋರಿಸುತ್ತದೆ.

1058ರಲ್ಲಿ ಇರಾನಿನ ಖುರಾಸಾನ್ ಪಟ್ಟಣದ ತೂಸ್ ಎಂಬಲ್ಲಿ ಜನಿಸಿದ ಇಮಾಂ ಗಝ್ಝಾಲಿಯ ಕೃತಿಗಳು ವಿಜ್ಞಾನ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಅನೇಕ ಚರ್ಚೆಗಳತ್ತ ಬೆಳಕು ಚೆಲ್ಲಿತು. ಮಹಾನುಭಾವರ ದಾರ್ಶನಿಕ ಕ್ರಾಂತಿಯು ಅವರನ್ನು ಹುಜ್ಜತುಲ್ ಇಸ್ಲಾಂ ( The proof of Islam) ಎಂಬ ಅನ್ವರ್ಥನಾಮದಿಂದ ಖ್ಯಾತಿಗೊಳಿಸಿತು. ಪಶ್ಚಿಮ ಏಷ್ಯಾದ ಮಾಂಗೋಲಿಯನ್ ಅತಿಕ್ರಮಣದಿಂದಾಗಿ ಇಮಾಮರ ಹಲವು ಕೃತಿಗಳು ನಾಶಗೊಂಡರೂ ಸಂಶೋಧಕರನೇಕರು ಅವರ ಕೃತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಲು ನಿರಂತರವಾಗಿ ಶ್ರಮಿಸಿದ್ದರು. ಫ್ರೆಂಚ್ ಓರಿಯಂಟಲಿಸ್ಟ್ ಆದ ಮೌರಿಸ್ ಬೌಗ್ಯೂಸ್ ಸುಮಾರು 404 ರಷ್ಟು ಗಝಾಲಿಯನ್ ರಚನೆಗಳನ್ನು ಉಲ್ಲೇಖಿಸುತ್ತಾರೆ.

ಸಾವಿರ ವರ್ಷಗಳಿಂದೀಚೆಗೆ ಓದಲ್ಪಡುತ್ತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ‘ಇಹ್ಯಾ ಉಲೂಮುದ್ದೀನ್’ ಇಮಾಂ ಗಝ್ಝಾಲಿಯವರ ಪ್ರಮುಖ ಕೃತಿಗಳಲ್ಲೊಂದು. ಇಸ್ಲಾಮಿಕ್ ಜ್ಞಾನ ಜಗತ್ತಿನ ಮಹತ್ವದ ರಚನೆಗಳಲ್ಲೊಂದಾದ ಪ್ರಸ್ತುತ ಗ್ರಂಥವು ನಾಲ್ಕು ಸಂಪುಟಗಳಲ್ಲಾಗಿ ಪ್ರಕಟಗೊಂಡಿದೆ.

ಹೆಚ್ಚಿನ ಜನರನ್ನು ತಲುಪಿಸುವ ಸಲುವಾಗಿ ʼಇಹ್ಯಾ ಉಲೂಮುದ್ದೀನ್‌ʼನ ಪರ್ಷಿಯನ್ ಭಾಷಾಂತರವನ್ನು ಸ್ವತಃ ಇಮಾಮರೇ ರಚಿಸಿದ್ದಾರೆ. ವಿವಿಧ ಭಾಷೆಗಳಿಗೆ ತರ್ಜುಮೆಗೈಯಲ್ಪಟ್ಟು ಇಂದು ಜಾಗತಿಕ ಮಟ್ಟದಲ್ಲಿ ಅಸಂಖ್ಯಾತ ಓದುಗರನ್ನು ಹೊಂದಿರುವ ಅಲ್‌ಕೀಮಿಯಾಉಸ್ಸಆದಃ (The alchemy of happiness) ಇಮಾಂ ಗಝ್ಝಾಲಿಯವರ ಮತ್ತೊಂದು ಮಹತ್ವದ ಕೃತಿ.

ಇಮಾಂ ಗಝ್ಝಾಲಿಯವರ ರಚನೆಗಳು ಹೊರಹೊಮ್ಮಿದ್ದು ಆಫ್ರಿಕಾ, ಭಾರತ, ಕಾಕಸ್, ಅರಬ್ ರಾಷ್ಟ್ರಗಳ ಸಹಿತ ಮುಸ್ಲಿಂ ಭೂಪ್ರದೇಶಗಳಲ್ಲಿರುವ ಪ್ರಮುಖ ಗ್ರಂಥಾಲಯಗಳಿಂದ. ಗಝ್ಝಾಲಿಯನ್ ಕೃತಿಗಳಿಗೆ ಸಂಬಂಧಿಸಿದಂತೆ ವಿವಿಧ ಅಧ್ಯಯನಗಳು, ಸಂಶೋಧನೆಗಳು ನಡೆದಿವೆ. ಶತಮಾನಗಳು ಕಳೆದರೂ ಗಝ್ಝಾಲಿಯವರ ಕೃತಿಗಳು ಇಂದಿಗೂ ಕಳೆಗುಂದದೆ ಹೊಳೆಯುತ್ತಿದೆ.

ಉತ್ಕೃಷ್ಟ ರಚನೆ

ಇಮಾಂ ಗಝ್ಝಾಲಿಯ ಕಾಲಾನಂತರ ಸುಮಾರು ಎರಡು ಶತಮಾನಗಳ ನಂತರ ಜನಿಸಿದ ಮೌಲಾನ ಜಲಾಲುದ್ದೀನ್ ರೂಮಿ ಅವರ ಬರೆಹಗಳು ತಸವ್ವುಫ್ ವಿಭಾಗದಲ್ಲಿ ಮತ್ತೆ ಪ್ರಸಿದ್ಧಿ ಪಡೆದ ಕೃತಿಗಳು. ಆರು ಸಂಪುಟಗಳಿರುವ ಮಸ್ನವಿ ರೂಮಿಯ ಅತ್ಯಂತ ಪ್ರಮುಖ ರಚನೆ. ರೂಮಿಯ ರಚನೆಗ ಇಮಾಂ ಗಝ್ಝಾಲಿಯವರ ರಚನಾಶೈಲಿಗಿಂತ ತೀರಾ ಭಿನ್ನವಾಗಿ ಕಾವ್ಯಾತ್ಮಕ ರೂಪದಲ್ಲಿದೆ. ರೂಮಿಯ ಕೃತಿಗಳನೇಕವೂ ಒಟ್ಟೋಮನ್ ಯುಗದ ಮೇರು ಕೃತಿಗಳಾಗಿ ಪರಿಗಣಿಸಲ್ಪಡುತ್ತದೆ.

ರಚನೆ ಪರ್ಷಿಯನ್ ಭಾಷೆಯಲ್ಲಾಗಿದ್ದರೂ ರೂಮೀ ಗ್ರಂಥಗಳು ಆನಾಟೋಲಿಯಾದಂತಹ ತುರ್ಕಿಶ್ ಪ್ರದೇಶಗಳಲ್ಲೂ ಬಹಳ ಅಂಗೀಕಾರ ಪಡೆಯಿತು. ರೂಮಿಯ ಮಸ್ನವಿ ರಮಳಾನ್ ಹಾಗೂ ಇತರ ಪುಣ್ಯ ದಿನ ರಾತ್ರಿಗಳಲ್ಲಿ ಪಾರಾಯಣಗೈಯಲ್ಪಡುತ್ತಿದೆ. ತುರ್ಕಿಶ್ ಭಾಷೆಯಲ್ಲಿ ಮಸ್ನವಿ ಧಾರಾಳ ಪರಿಭಾಷೆಗಳನ್ನು ಹೊಂದಿದೆ‌. ಅವುಗಳಲ್ಲಿ ಅಧಿಕವೂ ಪದ್ಯ ರೂಪದಲ್ಲಿಯೇ ಭಾಷಾಂತರಗೊಂಡಿದೆ.

ನಖ್ಶಬಂಧಿ ತ್ವರೀಕತಿನ ಶೈಖ್ ಹಾಗೂ ಸೂಫೀಯೂ ಆದ ಶಾಹ್ ಗುಲಾಂ ಅಲೀ ದಹ್ಲವಿಯವರು ರೂಮಿಯ ಮಸ್ನವಿಯನ್ನು ಆಲಿಸುವುದು ಮತ್ತು ಪಾರಾಯಣಗೈಯುವುದನ್ನು ರೂಢಿಗೊಳಿಸಿದ್ದರು. “ಖುರ್‌ಆನ್ ಹಾಗೂ ಹದೀಸುಗಳ ಬಳಿಕ ಅತ್ಯಂತ ಉತ್ಕೃಷ್ಟ ರಚನೆಯೆಂದರೆ ಅದು ಮೌಲಾನಾ ಜಲಾಲುದ್ದೀನ್ ರೂಮಿಯ ಮಸ್ನವಿ.” ಎಂದು ಅವರು ಮಸ್ನವಿ ಕುರಿತು ಅಭಿಪ್ರಾಯ ಪಡುತ್ತಾರೆ.

ಅದ್ವಿತೀಯ ಗ್ರಂಥ

ಅತ್ತ ಅನಾಟೋಲಿಯಾದಲ್ಲಿ ವಾಸಿಸಿದ್ದ ಓರ್ವ ಸೂಫಿಯ ಗ್ರಂಥ ಭಾರತದಲ್ಲಿ ಪ್ರಭಾವ ಬೀರಿದಾಗ ಇತ್ತ ಭಾರತೀಯ ಸೂಫಿಯೊಬ್ಬರ ಕೃತಿ ಅನಾಟೋಲಿಯಾದಲ್ಲೂ ಖ್ಯಾತಿ ಪಡೆಯಿತು. ಹದಿನಾರನೇ ಶತಮಾನದಲ್ಲಿ ಜೀವಿಸಿ ʼಇಮಾಂ ರಬ್ಬಾನೀʼ ಎಂಬ ಅಪರನಾಮ ಗಳಿಸಿದ್ದ ಸೂಫೀ ಅಹ್ಮದ್ ಅಲ್ ಫಾರೂಖ್ ಅಲ್- ಸರ್‌ಹಿಂದೀ (ರ) ಅವರ ʼಮಕ್ತೂಬಾತ್ʼ ಎಂಬ ಕೃತಿ ಅದು.

‘ಮಕ್ತೂಬಾತೇ ಇಮಾಂ ರಬ್ಬಾನೀʼ ಇಮಾಂ ರಬ್ಬಾನೀ ಬರೆದ ಪತ್ರಗಳ ಸಮಗ್ರ ಸಂಗ್ರಹ. ಹಿಜ್ರಃ ಎರಡನೇ ಶತಮಾನದಲ್ಲಿ ಇಸ್ಲಾಮಿಕ್ ಜ್ಞಾನ ವಲಯಗಳನ್ನು ಸಮೃದ್ಧಗೊಳಿಸುವುದರಲ್ಲಿ ಮಹಾನುಭಾವರು ನಡೆಸಿದ ಸಂಶೋಧನೆ ಮತ್ತು ರಚನೆಗಳು ಅವರಿಗೆ ʼಮುಜದ್ದಿದ್ʼ ಎಂಬ ವಿಶಿಷ್ಟ ಪದವಿಯನ್ನೂ ಪ್ರದಾನಿಸಿತು. ಮೂರು ಸಂಪುಟಗಳಲ್ಲಾಗಿ ಪ್ರಸ್ತುತ ಗ್ರಂಥ ಪ್ರಸಿದ್ಧಿ ಪಡೆದಿದೆ.

ಇಮಾಂ ರಬ್ಬಾನಿ ತನ್ನ ಶಿಷ್ಯಂದಿರಿಗೆ ಕಳುಹಿಸಿದ್ದ ಪತ್ರಗಳು ಸರ್ವಾಂಗೀಕೃತವೂ ಸಾರ್ವಕಾಲಿಕವೂ ಆದ ಅತ್ಯಮೂಲ್ಯ ರಚನೆಗಳಾಗಿತ್ತು. ಪರ್ಷಿಯನ್ ಭಾಷೆಯಲ್ಲಿ ಬರೆಯಲ್ಪಟ್ಟ ಈ ಪತ್ರಗಳು ಒಂದು ಕೃತಿಯಾಗಿ ಕ್ರೋಢೀಕರಿಸಲ್ಪಟ್ಟು ಇಸ್ಲಾಮಿಕ ಬೌದ್ಧಿಕ ವ್ಯವಹಾರ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರವನ್ನೂ ಪಡೆಯಿತು. ಮಹಾನುಭಾವರು ಮರಣಿಸಿ ಐದು ಶತಮಾನಗಳು ಕಳೆದ ನಂತರವೂ ಮಕ್ತೂಬಾತಿಗೆ ಲಭಿಸುತ್ತಿರುವ ಪುರಸ್ಕಾರ ಅದರ ಸ್ವೀಕೃತಿಯ ಸ್ಪಷ್ಟ ನಿದರ್ಶನವಾಗಿದೆ.

ಸೂಫಿಸಂ ಹಾಗೂ ಇಸ್ಲಾಮಿಕ್ ನೀತಿ ನ್ಯಾಯ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ತಿಳುವಳಿಕೆ ನೀಡುವ ಅದ್ವಿತೀಯ ಗ್ರಂಥವಾಗಿದೆ ಇಮಾಂ ರಬ್ಬಾನಿಯ ಮಕ್ತೂಬಾತ್ ಎಂದು ಅನಾಟೋಲಿಯಾದ ಸುನ್ನೀ ವಿದ್ವಾಂಸರಲ್ಲಿ ಪ್ರಮುಖರಾಗಿದ್ದ ಅಬ್ದುಲ್ ಹಕೀಂ ಅರ್ವಾದೀ ಪ್ರತಿಪಾದಿಸಿದ್ದರು. ಇಮಾಂ ರಬ್ಬಾನಿಯವರನ್ನು ಅವರ ಸಮಕಾಲೀನ ವಿದ್ವಾಂಸರು ಸಿಲಃ(ಒಗ್ಗೂಡಿಸುವವರು) ಎಂಬ ಹೆಸರಿನಿಂದ ಕರೆಯುತ್ತಿದ್ದರು. ಇಮಾಂ ರಬ್ಬಾನಿಯವರ ಪ್ರಕಾರ ಲೌಕಿಕತೆ, ಆಧ್ಯಾತ್ಮಿಕತೆ, ಇಸ್ಲಾಮಿಕ್ ಶಿಷ್ಟಾಚಾರ, ಸೂಫಿಸಂ, ಹೃದಯ, ಮನಸ್ಸು ಎಲ್ಲವೂ ಒಂದು ಪಕ್ಷಿಯ ಎರಡು ರೆಕ್ಕೆಗಳಂತೆ ಜೊತೆಯಾಗಿ ಕಾರ್ಯನಿರ್ವಹಿಸಬೇಕಾದ ವಿಚಾರವಾಗಿದೆ.

ಮೂಲ: ಡಾ ಅಲಿ ತುಫೆಕ್ಚಿ
ಅನುವಾದ: ಶಂಸ್ ಗಡಿಯಾರ್

ಬಾಹ್ಯಾಕಾಶ ಚಲನೆ ಹಾಗೂ ಆಧುನಿಕ ಮುಸ್ಲಿಮರ ದೃಷ್ಟಿಕೋನಗಳು

ಸರಿಸುಮಾರು ಸಾವಿರ ವರ್ಷಗಳ ಹಿಂದೆ ಮುಸ್ಲಿಂ ಚಿಂತಕರು, ವಿದ್ವಾಂಸರು ವೈಜ್ಞಾನಿಕ ಅಧ್ಯಯನದ ಸುವರ್ಣ ಯುಗಕ್ಕೆ ಮುಹೂರ್ತವಿಟ್ಟಿದ್ದಾರೆ. ಅವರು ಗ್ರೀಕ್, ಸಂಸ್ಕೃತ ಭಾಷೆಗಳಲ್ಲಿದ್ದ ಖಗೋಳಶಾಸ್ತ್ರದ ಕೃತಿಗಳನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿ ಹೊಸ ಜಗತ್ತನ್ನು ತೆರೆದರು. ಆಕಾಶ ಲೋಕಗಳ ನಿಗೂಢತೆಗಳ ಬಗ್ಗೆ ಅಧ್ಯಯನ ಮಾಡಲು ಈ ಗ್ರಂಥಗಳು ಹಸಿರು ನಿಶಾನೆ ತೋರಿಸಿದ್ದೇ ಅಲ್ಲದೆ ಅವರದ್ದೇ ಆದ ಅಧ್ಯಯನದ ಹೊಸ ರೂಪು ರೇಷೆಗೆ ಮೇಲ್ಪಂಕ್ತಿ ಹಾಕಲು ಇದು ನಿಮಿತ್ತವಾಯಿತು. ಅವರು ಸೂರ್ಯ ಮತ್ತು ಚಂದ್ರನ ಚಲನೆ ನಿಖರವಾಗಿ ದಾಖಲಿಸಿ, ಭೂಮಿಯಿಂದ ನೋಡಬಹುದಾದ ಇತರ ಗೋಳಗಳ ವ್ಯಾಸ (Diameter) ಲೆಕ್ಕಹಾಕಿ, ಭೂಮಿಯಲ್ಲಿ ಅದರ ಸ್ಪಷ್ಟ ಸ್ಥಾನಗಳನ್ನು ಅರ್ಥೈಸಿದರು.

ಎಂಟನೇ ಶತಮಾನದಲ್ಲಿ ಆರಂಭಗೊಂಡು ಸುಮಾರು ಹದಿನಾಲ್ಕನೇ ಶತಮಾನದವರೆಗೆ ಮುಂದುವರಿದ ಇಸ್ಲಾಮಿಕ್ ಸುವರ್ಣ ಯುಗದ ಕುರಿತಾಗಿದೆ ಮೇಲಿನ ವಿವರಣೆ. ಆದರೆ ಈ ಮಧ್ಯಕಾಲೀನ ಸಾಧನೆಗಳ ಬಗೆಗಿನ ಚರ್ಚೆಗಳ ತೆರೆಯ ಮರೆಯಲ್ಲಿ ಪಶ್ಚಿಮೇಷ್ಯಾದಂತಹ ಪ್ರದೇಶಗಳ ಆಧುನಿಕ ಮುಸ್ಲಿಮರು ಪ್ರಸ್ತುತ ಈ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಮುನ್ನಡೆಗಳು ಕಾಣದಂತಾಗಿವೆ. ಸೌರವ್ಯೂಹದ ಆಚೆಗಿನ ಗ್ರಹಗಳನ್ನು ಕಂಡುಹಿಡಿಯಲು ಜಗತ್ತಿನಾದ್ಯಂತ 2010 ರಲ್ಲಿ ಖತರ್ ನಡೆಸಿದ ‘Qatar Exoplanet Survey’ ಸಮೀಕ್ಷೆ ಇದಕ್ಕೊಂದು ತಾಜಾ ಉದಾಹರಣೆ.

‘ಇತರರಿಗೆ ಹೋಲಿಸಿದರೆ ಅರಬ್ ಲೋಕದ ವಿಜ್ಞಾನಿಗಳ ಪರಿಚಯ ಹೆಚ್ಚಿನವರಿಗೆ ಇಲ್ಲ. ಹೆಚ್ಚಿನವರಿಗೆ ಅರಬಿ ಹೆಸರಿನ ಉಗ್ರಗಾಮಿಗಳನ್ನು ತಿಳಿದಿದೆ. ಒಮ್ಮೆಯೂ ಅರಬ್ ವಿಜ್ಞಾನಿಗಳ ಹೆಸರುಗಳನ್ನು ಅವರು ಕೇಳುತ್ತಲೇ ಇಲ್ಲ. ಇಂತಹಾ ತಪ್ಪುಧೋರಣೆಯ ಹಿನ್ನೆಲೆಯಲ್ಲಿ ಅರಬ್ ಉಗ್ರಗಾಮಿಗಳ ಕುರಿತು ಬಂದಿರುವ ಹೇರಳ ಪುಸ್ತಕಗಳ ಪ್ರಭಾವ ಇರಬಹುದು!’ ಎಂದು ಖತಾರಿನ ವರ್ಜೀನಿಯಾ ಕಾಮನ್ ವೆಲ್ತ್ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕರಾದ ಮಥಿಯಾಸ್ ಡೆಟರ್ಮನ್ ಅಭಿಪ್ರಾಯ ಪಡುತ್ತಾರೆ. Space science and Arab world: Astronaut’s, observatories and Nationalism in the Middle East ಎಂಬ ತನ್ನ ನೂತನ ಪುಸ್ತಕದಲ್ಲಿ ಮಥಿಯಾಸ್ ಡೆಟರ್ಮನ್ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಾರೆ. ಈ ಕ್ಷೇತ್ರದ ವಿವಿಧ ವಿಜ್ಞಾನಿಗಳ ಸಾಧನೆಗಳ ಬಗ್ಗೆ ಪುಸ್ತಕ ಪರಿಶೀಲನೆ ಮಾಡಿದೆ. ಅವರ ಯೋಜನೆಯಲ್ಲಿ 1800 ರಲ್ಲಿ ಸ್ಥಾಪಿಸಿದ ಮೊದಲ ಬಾಹ್ಯಾಕಾಶ ವೀಕ್ಷಣಾಲಯದಿಂದ ಹಿಡಿದು 2020 ರಲ್ಲಿ ನಡೆದ ಮಂಗಳ ಗ್ರಹದ ಸಂಶೋಧನೆ ಸಹಿತ ಎಲ್ಲವನ್ನೂ ಒಳಗೊಂಡಿದೆ.

ಮರೀನಾ ಕೋರನ್: ಸುವರ್ಣ ಯುಗವನ್ನು ಬದಿಗಿಟ್ಟು, ಪಶ್ಚಿಮೇಷ್ಯದ ಆಧುನಿಕ ಬಾಹ್ಯಾಕಾಶ ಪರಿವೀಕ್ಷಣೆ ಬಗೆಗಿನ ಅನ್ವೇಷಣೆಗಳತ್ತ ಗಮನ ಹರಿಸುವ ನಿರ್ಧಾರಕ್ಕೆ ತಾವು ಬಂದದ್ದು ಯಾಕೆ?

ಮಥಿಯಾಸ್ ಡೆಟರ್ಮನ್: “೧೮೦೦ ರ ಶತಮಾನದ ನಂತರ ಅರಬ್ ಲೋಕದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಅನ್ವೇಷಣೆಗಳ ಬಗೆಗಿನ ಅಧ್ಯಯನಗಳು ಅಷ್ಟೇನೂ ನಡೆದಿಲ್ಲ. ವಿಶೇಷವಾಗಿ, ಮಧ್ಯಯುಗದ ಅರಬ್, ಮುಸ್ಲಿಂ ವೈಜ್ಞಾನಿಕ ಪ್ರಗತಿಯ ಸಂಶೋಧನೆಗೆ ಹೋಲಿಸಿದಾಗ ಬೆರಳೆಣಿಕೆಯಷ್ಟು ಬಾಹ್ಯಾಕಾಶ ಪರಿಶೋಧನೆಗಳ ಅಧ್ಯಯನ ಮಾತ್ರ ನಡೆದಿರುವುದು! ವಿಜ್ಞಾನವು ಇತಿಹಾಸದೊಂದಿಗೆ ಮುಂದಡಿಯಿಡುತ್ತಿದ್ದು ಇತಿಹಾಸದ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಅರಬ್ ಲೋಕಕ್ಕೆ ಏನನ್ನಾದರೂ ಮಾಡಲು ಸಾಧ್ಯವಾಗಿದೆ ಎಂಬ ನಂಬಿಕೆ ಸಾಮಾನ್ಯವಾಗಿ ಬೀಡುಬಿಟ್ಟಿದೆ ಸಾವಿರಗಟ್ಟಲೆ ವರ್ಷಗಳ ಹಿಂದೆ ವಿಜ್ಞಾನವು, ಪುರಾತನ ಬ್ಯಾಬಿಲೋನಿಯಾ ಸಮುದಾಯದೊಂದಿಗೆ ಜನ್ಮತಾಳಿತೆಂದೂ, ಅದರ ಸಣ್ಣ ಭಾಗ ಪುರಾತನ ಚೀನೀಯರೊಂದಿಗೂ, ಮುಂದುವರಿದು ರೋಮ್, ಗ್ರೀಕ್ ಸಂಸ್ಕೃತಿಗೆ ಹಸ್ತಾಂತರವಾಗಿ ಬಳಿಕ ಅರಬಿಯನ್ನರಿಗೆ ತಲುಪಿ ಅವರದನ್ನು ಸಂರಕ್ಷಿಸಿ, ಅದನ್ನು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರು. ಬಳಿಕ ಯುರೋಪಿಗೆ ಹಸ್ತಾಂತರಿಸಲಾಯಿತು. ಯುರೋಪ್ ನವೋತ್ಥಾನದ ಮೂಲಕ ಅಂತಿಮವಾಗಿ ವಿಜ್ಞಾನ ಇಂದಿನ ಕೇಂದ್ರವಾದ ಅಮೇರಿಕಾಕೆ ತಲುಪಿತು ಎಂಬ ರೀತಿಯಲ್ಲಿ ನೆರೆಟಿವ್ ಇದೆ.

ನಮ್ಮಲ್ಲಿ ಪ್ರಾಚೀನ ಗ್ರೀಕ್, ಪರ್ಷಿಯನ್ ಗ್ರಂಥಗಳ ಸಂರಕ್ಷಿಸುವಿಕೆಯಲ್ಲೂ, ಅನುವಾದ ಮಾಡುವುದರಲ್ಲೂ ಮಧ್ಯಕಾಲೀನ ಅರಬ್ ಮುಸ್ಲಿಂ ಚಿಂತಕರ ಪಾತ್ರ ವಿವರಿಸುವ ಸಾಕಷ್ಟು ಪುಸ್ತಕಗಳಿವೆ. ಮಾತ್ರವಲ್ಲದೇ ಆಧುನಿಕ ಯುರೋಪಿಗೆ ಜ್ಞಾನ ಹಸ್ತಾಂತರದ ಇತಿಹಾಸ ಅಧ್ಯಯನ ಮಾಡಲು ಹಲವು ಸ್ಕಾಲರ್ಶಿಪ್ಗಳು ನಮ್ಮ ಮುಂದಿದೆ. ಈ ನಸಂಕಥನದ ಪ್ರಕಾರ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷತಃ ಯುರೋಪಿನಲ್ಲಿ ಐಸಾಕ್ ನ್ಯೂಟನ್, ಗೆಲಿಲಿಯೋರಂತಹ ಘಟಾನುಘಟಿ ವಿಜ್ಞಾನಿಗಳ ಕಾಲದಲ್ಲಿ ವೈಜ್ಞಾನಿಕ ಕ್ರಾಂತಿಗಳು ನಡೆಯುತ್ತಾ ಇರುವಾಗಲೇ ಅರಬ್ ಮುಸ್ಲಿಂ ಲೋಕದಲ್ಲಿ ಚಾಲ್ತಿಯಲ್ಲಿದ್ದ ಸುವರ್ಣ ಯುಗಕ್ಕೆ ಕೊನೆಗಾಣುತ್ತದೆ. ಈ ಸಂಕಥನ ಪ್ರಶ್ನಾರ್ಹ.

“ಈ ಸಂಕಥನ ಪ್ರಶ್ನಾರ್ಹ ಎಂದು ತಾವು ಸೂಚಿಸಲು ಕಾರಣ?”

ಇದು ಪಾಶ್ಚಾತ್ಯ ಜಗತ್ತಿನಲ್ಲಿ ಮಾತ್ರ ನೆಲೆಯೂರಿರುವ ದೃಷ್ಟಿಕೋನವಲ್ಲ. ಅರಬ್ ಜಗತ್ತಿನಲ್ಲಿ ಕೂಡಾ ಇಂತದೆ ದೃಷ್ಟಿಕೋನ ಚಾಲ್ತಿಯಲ್ಲಿದೆ. ಅರಬ್ ಮುಸ್ಲಿಂ ಲೋಕದಲ್ಲಿ ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ವಿಜ್ಞಾನದೊಂದಿಗೆ ಬಗ್ಗೆ ಜಾಸ್ತಿ ನೊಸ್ಟಾಲ್ಜಿಕ್ ಆಗಿ ಅನುಸಂಧಾನ ನಡೆಸುವುದು ಸ್ವಲ್ಪ ಅಪಾಯಕಾರಿ. ಅದು ಪ್ರಗತಿಗಾಮಿತನ ಬೆಳೆಸಲು ಮಾತ್ರ ಉಪಯುಕ್ತ. ‘ಸಾವಿರ ವರ್ಷಗಳ ಹಿಂದಿನ ಸುವರ್ಣ ಯುಗದಲ್ಲಿ ನಮ್ಮ ವಿಜ್ಞಾನ ವಿಶ್ವದಲ್ಲೇ ಪರಿಣಾಮಕಾರಿಯಾಗಿತ್ತು ಹಾಗೂ ಸಾರ್ವಭೌಮತೆಯನ್ನು ಪಡೆದಿತ್ತು. ಮತ್ತೆ ದಾರಿ ತಪ್ಪಿದ್ದು ಎಲ್ಲಿ ? ಬಹುಶಃ ನಾವು ಶತಮಾನಗಳ ಹಿಂದಿನ ಇಸ್ಲಾಮ್ ಹೇಗಿತ್ತೋ ಅಲ್ಲಿಗೆ ಮರಳಬೇಕಿದೆ. ಇದಲ್ಲದೆ ಸಾವಿರ ವರ್ಷಗಳ ಹಿಂದಿನ ಸಾಮಾಜಿಕ- ಸಾಂಸ್ಕೃತಿಕ ವಿಚಾರಗಳಿಗೂ ಕೂಡಾ! ಇಂತಹ ಚಿಂತನೆ ಅಪಾಯಕಾರಿಯಾದ ಮೂಲಭೂತವಾದಕ್ಕೋ ಸಲಫಿಸಮ್ಗೋ ಕೊಂಡೊಯ್ಯಲು ಕಾರಣವಾಗುತ್ತದೆ.

ನಾನು ಇಂದು ಜಗತ್ತಿನಲ್ಲಿರುವ ಅರಬ್ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಗಗನಯಾತ್ರಿಗರ ಬಗ್ಗೆ ಸಮೀಕ್ಷೆ ನಡೆಸಲು ಪ್ರಯತ್ನಿಸುತ್ತಿದ್ದೇನೆ. ಅರೇಬಿಕ್ ಭೂಪ್ರದೇಶಗಳಾದ್ಯಂತ ಯುನಿವರ್ಸಿಟಿಗಳು ಹಾಗೂ ಸಂಶೋಧನಾ ಕೇಂದ್ರಗಳಿವೆ. ಆದರೆ ಅಲ್ಲಿ ನಡೆಯುತ್ತಿರುವ ಸಂಶೋಧನೆ, ಅಧ್ಯಯನ ಯಾವುದೂ ನಮ್ಮ ಕಿವಿಗೆ ಮುತುತ್ತಿಲ್ಲ! ಬಹುಶಃ ಅರಬ್ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿರುವ ಬೆರಳೆಣಿಕೆಯಷ್ಟು ಸುಶಿಕ್ಷಿತರಿಗೆ ಮಾತ್ರ ಮಧ್ಯಕಾಲೀನ ಮುಸ್ಲಿಮ್ ವಿದ್ವಾಂಸರ ಪರಿಚಯ ಇರಬಲ್ಲದು. ನನ್ನ ಪ್ರಕಾರ ಕೆಲವೇ ಕೆಲವು ಜನರಿಗೆ ಮಾತ್ರ ಅರಬ್ ಗಗನಯಾತ್ರಿಗಳ ಬಗ್ಗೆ ತಿಳಿದಿರುವುದು. ಇತರರಿಗೆ ಹೋಲಿಸಿದರೆ ಅರಬ್ ಜಗತ್ತಿನ ವಿಜ್ಞಾನಿಗಳ ಅರಿವು ತುಂಬಾನೇ ಕಡಿಮೆ.”

ಮಧ್ಯಕಾಲೀನ ಪೂರ್ವಿಕರ ಬಗ್ಗೆ ಆಧುನಿಕ ಖಗೋಳಶಾಸ್ತ್ರಜ್ಞರ ಅಭಿಪ್ರಾಯವೇನು?


ಮೊದಲನೆಯದಾಗಿ ಸುವರ್ಣ ಯುಗವು ಅವರ ಪರಂಪರೆಯ ಪ್ರಧಾನ ಅಂಗ. ಭಾರೀ ದುಬಾರಿಯಾದ ಖಗೋಳಶಾಸ್ತ್ರದ ಅಧ್ಯಯನಗಳಿಗೆ ಹಣ ಮಂಜೂರು ಮಾಡುವಂತೆ ಸರ್ಕಾರವನ್ನು ಮನವೊಲಿಸಲು ಈ ಪರಂಪರೆಯನ್ನು ಉಪಯೋಗಿಸಬಹುದು. ಓರ್ವ ಗಗನಯಾತ್ರಿಯನ್ನು (astronaut) ಬಾಹ್ಯಾಕಾಶಕ್ಕೆ ಕಳುಹಿಸುವುದು, ಅದಕ್ಕಾಗಿ ರಾಕೆಟ್ ನಿರ್ಮಾಣ, ದೊಡ್ಡ ಟೆಲಿಸ್ಕೋಪ್ಗಳ ನಿರ್ವಹಣೆ ಎಲ್ಲಾ ದುಬಾರಿ ಯೋಜನೆಗಳಾಗಿವೆ. ಆದ್ದರಿಂದ ಮಿಲಿಟರಿ , ಶಾಲೆ, ಆಸ್ಪತ್ರೆಗಳಿಗಿಂತ ಹೊಸ ಬಾಹ್ಯಾಕಾಶ ದೂರದರ್ಶಕಗಳ ಮೂಲಕ ಪರಿಶೋಧನೆ ಮಾಡಲು ಶತಕೋಟಿ ಡಾಲರುಗಳಷ್ಟು ಖರ್ಚು ಮಾಡಬೇಕಾಗುತ್ತದೆ.

ಮಧ್ಯಕಾಲೀನ ವಿದ್ವಾಂಸರ ಹೆಸರಿನ ಬೀದಿಗಳು ಇಂದಿಗೂ ಅಲ್ಲಿ ಅಸ್ತಿತ್ವದಲ್ಲಿದೆ. ಮಧ್ಯಕಾಲೀನ ಪರ್ಷಿಯನ್ ವೈದ್ಯ ಹಾಗೂ ಬರಹಗಾರನಾದ ಇಬ್ನು ಸೀನಾರ (Avisenna) ಹೆಸರಿನ ಪಟ್ಟಣಗಳಿವೆ. ನಾನು ವಾಸಿಸುವ ದೋಹಾದಲ್ಲಿರುವ ಔಷಧಾಲಯಗಳು ಇಬ್ನಾ ಸೀನಾರ ನಾಮದಿಂದ ಸುಪ್ರಸಿದ್ಧ. ಇಂಗ್ಲೆಂಡ್ ಹಾಗೂ ಕೇಂಬ್ರಿಡ್ಜ್ನಂತೆ ಸೈನ್ಸ್ ಹಾಗೂ ಟೆಕ್ನಾಲಜಿ ಉದ್ಯಾನವನಗಳನ್ನು ಇಂದು ಕತಾರ್ ಹೊಂದಿದೆ. ಅಮೇರಿಕನ್ ಯುನಿವರ್ಸಿಟಿಯನ್ನು ಸುತ್ತುವರಿದ ಹಬ್ಬಿನ ಹಾಗೆ ಇರುವ ನಿರ್ಮಾಣವಾಗಿದೆ ಇದು. ಹೃದ್ಯವಾಗಿ ಗೋಚರಿಸುವ ಈ ಹಬ್ಬುಗಳನ್ನು ಉಕ್ಕು ಮತ್ತು ಗಾಜಿನಿಂದ ನಿರ್ಮಿಸಲಾಗಿದೆ. ಇದರೊಳಗಿರುವ ಪ್ರತೀ ಮೀಟಿಂಗ್ ರೂಮಿಗೆ ಅರೇಬ್ಯನ್ ಮುಸ್ಲಿಂ ವಿದ್ವಾಂಸರ ನಾಮವನ್ನು ಇಡಲಾಗಿದೆ. ಈ ಸುವರ್ಣ ಯುಗದ ಸ್ಮರಣೆ, ಐತಿಹ್ಯ, ಪರಂಪರೆಗಳೆಲ್ಲವೂ ಆಧುನಿಕ ವಿಜ್ಞಾನದ ಒಂದು ಸುಪ್ರಧಾನ ಸಾನಿಧ್ಯ.

ನಿಮ್ಮ ಅಭಿಪ್ರಾಯ ಪ್ರಕಾರ ಮಧ್ಯಪ್ರಾಚ್ಯದಲ್ಲಿನ ಬಾಹ್ಯಾಕಾಶ ವಿಜ್ಞಾನದ ಆಧುನಿಕ ಇತಿಹಾಸ ಎಲ್ಲಿಂದ ಪ್ರಾರಂಭವಾಗುತ್ತದೆ..!?

ಆಧುನಿಕ ಇತಿಹಾಸವು ಹತ್ತೊಂಬತ್ತನೇ ಶತಮಾನದಿಂದ ಪ್ರಾರಂಭವಾಯಿತು. ಬಹುಶಃ ಪ್ರಪಂಚದ ಹೀಲಿಯೋ ಸೆಂಟ್ರಿಕ್ ದೃಷ್ಟಿಕೋನ ಆರಂಭಗೊಳ್ಳುವ ಸಮಯ. ಆ ಸಂದರ್ಭದಲ್ಲಿ ಸೌರವ್ಯೂಹ ಹಾಗೂ ಹಲವು ಗ್ರಹಗಳ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಅರಬಿ ಭಾಷೆಗೆ ಅನುವಾದಿಸಿಲಾಗಿತ್ತು. ಅದೇ ವೇಳೆ ಆಧುನಿಕ ಟೆಲಿಸ್ಕೋಪ್ಗಳನ್ನು ಉಪಯೋಗಿಸಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ೧೮೭೦ ರ ದಶಕದಲ್ಲಿ ಸಿರಿಯನ್ ಪ್ರೊಟೆಸ್ಟೆಂಟ್ ಕಾಲೇಜಿನಲ್ಲಿ ಸ್ಥಾಪಿಸಲಾದ ವೀಕ್ಷಣಾಲಯವು ಇದಕ್ಕೆ ತಾಜಾ ಉದಾಹರಣೆ. ನಂತರ ಈ ಸಂಸ್ಥೆಗೆ ಅಮೇರಿಕಾ ಯುನಿವರ್ಸಿಟಿ ಆಫ್ ಬೈರೂತ್ ಎಂದು ಮರು ನಾಮಕರಣ ಮಾಡಲಾಯಿತು. 1880 ರಲ್ಲಿ ಈಜಿಪ್ಟ್ ಸರ್ಕಾರ ಮತ್ತು ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಈಜಿಪ್ಟಿನಲ್ಲಿ ನಿರ್ಮಿಸಿದ ಸಂಶೋಧನಾ ಕೇಂದ್ರಗಳು ಕೂಡಾ ಈ ಇತಿಹಾಸದ ಭಾಗ.

ಮುಂದಿನ ಶತಮಾನಕ್ಕೆ ಪ್ರವೇಶಿಸುವುದಾದರೆ ನೀವಲ್ಲಿ ಈಜಿಪ್ಶ್ಯ ನ್ ಸೈಂಟಿಸ್ಟ್ ಫಾರೂಖ್ ಅಲ್-ಬಾಸ್ ಬಗ್ಗೆ ಬರೆದಿದ್ದೀರಿ. 1970ರ ವೇಳೆಗೆ ಈಜಿಪ್ಟಿನ ಅಧ್ಯಕ್ಷರ ಸಲಹೆಗಾರನಾಗಿಯೂ ವಾಷಿಂಗ್ಟನ್ ಡಿ.ಸಿ.ಯ Smithsonian National Air and Space Museum ಡೈರೆಕ್ಟರಾಗಿ ಅವರು ಒಟ್ಟೊಟ್ಟಿಗೆ ಸೇವೆ ಸಲ್ಲಿಸಿದರು. ಈ ಎರಡು ಜಗತ್ತನ್ನು ಏಕಕಾಲಕ್ಕೆ ನಿರ್ವಹಿಸಲು ಅವರಿಗೆ ಸಾಧ್ಯವಾದದ್ದು ಹೇಗೆ?

ಬಹುಶಃ ಅರೇಬಿಯಾದ ಗಗನಯಾತ್ರಿಗಳ ಪೈಕಿ ಅತ್ಯಂತ ಸುಪ್ರಸಿದ್ಧ ನಾಮ ಫಾರೂಖ್ ಅಲ್-ಬಾಸ್ ಅವರದ್ದು. ಆರಂಭದಲ್ಲಿ ಅವರು ಗಗನಯಾತ್ರಿಯಾಗಿರಲಿಲ್ಲ. ಈಜಿಪ್ಟ್ ಮತ್ತು ಅಮೇರಿಕಾದಲ್ಲಿ ಜಿಯೋಲಜಿಯ ತರಬೇತಿಯನ್ನಾಗಿತ್ತು ಅವರು ಪೂರ್ಣಗೊಳಿಸಿದ್ದು. ಆದ್ದರಿಂದ ಅವರಿಗೆ ಎರಡೂ ರಾಷ್ಟ್ರಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಯ ಕುರಿತಾದ ಮೂಲಭೂತ ಅರಿವು ಇತ್ತು. ಅಮೇರಿಕಾದಿಂದ ಪಿ.ಎಚ್.ಡಿ ಮತ್ತು ಜರ್ಮನಿಯಿಂದ ಪೋಸ್ಟ್ ಡಾಕ್ಟರಲ್ ಪದವಿ ಪ್ರಾಪ್ತಿಯಾದ ಬಳಿಕ ಅಮೇರಿಕನ್ ಪತ್ನಿಯೊಂದಿಗೆ ಈಜಿಪ್ಟಿನಲ್ಲಿ ನೆಲೆಸುವ ನಿರ್ಧಾರದಿಂದ ಈಜಿಪ್ಟಿಗೆ ಮರಳಿದರು. ಆದರೆ ದುರದೃಷ್ಟವಶಾತ್ ತನ್ನ ದೊಡ್ಡ ಯೋಜನೆಗಳಿಗೆ ಮತ್ತು ಚಿಂತನೆಗಳಿಗೆ ತನ್ನ ರಾಷ್ಟ್ರ ಅವಕಾಶ ನೀಡದು ಎಂದು ಅವರಿಗೆ ಖಾತ್ರಿಯಾಯಿತು.ಬಳಿಕ ಅಮೇರಿಕಾಗೆ ಯಾತ್ರೆಯಾಗಿ ಅಪೋಲೋ ಬಾಹ್ಯಾಕಾಶ ಯೋಜನೆಯ ಭಾಗವಾದರು.ಆ ಸಮಯದಲ್ಲಿ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗೆ ಚಂದ್ರನ ಮೇಲ್ಮೈಯ ಬಗ್ಗೆ ಮತ್ತು ನಿಖರವಾದ ಲ್ಯಾಂಡಿಂಗ್ ತಾಣಗಳ ಬಗ್ಗೆ ಅಧ್ಯಯನ ಮಾಡಲು ಉತ್ತಮ ಜಿಯೋಲಜಿಸ್ಟ್ ಒಬ್ಬರು ಬೇಕಾಗಿತ್ತು.

ಅಲ್-ಬಾಸ್ ಇತರೆ ಅರಬಿಗಳಂತೆ ತಾರತಮ್ಯಕ್ಕೆ ಒಳಗಾದರು. ಧೃತಿಗೆಡದ ಬಾಸ್ ರವರಿಗೆ ಯಾವುದೂ ಕೂಡಾ ಅಡಚಣೆಯಾಗಲಿಲ್ಲ. ಮಾತ್ರವಲ್ಲದೆ ತನ್ನ ಕೆಲಸ ಹಾಗೂ ಧ್ಯೇಯವನ್ನು ಮುಂದಿಟ್ಟು ಕಠಿಣ ಪ್ರಯತ್ನ ಮಾಡಿದರು. ಬಳಿಕ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿನ ಚಂದ್ರನ ಮೇಲ್ಮೈ ಬಗೆಗಿನ ಅಧ್ಯಯನದಲ್ಲಿ ಖ್ಯಾತಿ ಪಡೆದರು. ಚಂದ್ರನ ಮೇಲಿನ ಗಗನಯಾತ್ರಿಗಳ ಮುಖ್ಯ ತರಬೇತುದಾರರಾದರು.

ಇದೇ ಅಲ್ಲವೇ ಸೌದಿ ಅರೇಬಿಯಾದ ಮೊದಲ ಗಗನಯಾತ್ರಿ ಸುಲ್ತಾನ್ ಬಿನ್ ಸಲ್ಮಾನ್ ರವರ ವಿಚಾರದಲ್ಲೂ ನಡೆದಿದ್ದು. ಅವರು ಬಾಹ್ಯಾಕಾಶ ಯಾನಕ್ಕೆ ಸಿದ್ಧವಾಗುತ್ತಿದ್ದಂತೆ ಹೂಸ್ಟನಿನ ಬಳಿಯಿರುವ ಮುಖ್ಯ ಅರಬ್ ತೈಲ ಕಂಪನಿಯಾದ Aramcoದಿಂದ ನಾಸಾ ಜನರನ್ನು ತಲುಪಿಸಿತು. ಸೌದಿಯ ಸಂಸ್ಕೃತಿಯ ಕುರಿತು ನಾಸಾದ ಜನರಿಗೆ ಒಂದು ದಿನದ ‘ಕ್ರಾಶ್ ಕೋರ್ಸ್’ ನೀಡಲೋಸ್ಕರವಾಗಿತ್ತು ಈ ಶಿಬಿರ. ಇದು ಅಗತ್ಯವೆಂದು ನಾಸಾದ ಮುಖ್ಯ ಅಧಿಕಾರಿಗಳು ತೀರ್ಮಾನಿಸಿದ್ದು ಯಾಕೆ?


ಒಬ್ಬ ಸಾಧಾರಣ ಅಮೇರಿಕನ್ ಪ್ರಜೆಗೆ ಸಂಬಂಧಿಸಿದಂತೆ ಅಥವಾ ಆ ಬಾಹ್ಯಾಕಾಶ ಯೋಜನೆ ಭಾಗಿಯಾಗಿರುವ ಅಮೇರಿಕನ್ ಗಗನಯಾತ್ರಿಯೊಬ್ಬನಿಗೆ ಅರೇಬಿಕ್ ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಜ್ಞಾನ ಇರಬೇಕೆಂದಿಲ್ಲ! ಇದ್ದರೂ ಪಾಶ್ಚಿಮಾತ್ಯ ಜನರಿಗೆ ಅರಬಿಗಳ ಬಗ್ಗೆ ಓರಿಯಂಟಲಿಸ್ಟ್ ಮಿಥ್ ಗಳು ಕಟ್ಟಿಕೊಟ್ಟ ಅಪಾಯಕಾರಿ ವಿಷಯಗಳೊಂದಿಗಾಗಿತ್ತು ಸಂಬಂಧ. ಅವರಿಗೆ ಸೌದಿ ಅರೇಬಿಯಾ ಎಂದು ಕೇಳಿದಾಗ ಮನಸ್ಸಿಗೆ ಮೊದಲು ನೆನಪಾಗುವುದು ಲಾರೆನ್ಸ್ ಆಫ್ ಅರೇಬಿಯಾ, ಒಂಟೆಗಳು, ಮರುಭೂಮಿಗಳು, ಸುಲ್ತಾನರು, ಶೇಖರು ಮತ್ತು ರಾಜಕುಮಾರರು. ಅರೇಬಿಯಾದ ಗಗನಯಾತ್ರಿಗಳನ್ನು ರೂಪಿಸುವುದು ಏನೆಂದು ಹೆಚ್ಚಿನ ಅಮೇರಿಕನ್ನರಿಗೆ ತಿಳಿದಿಲ್ಲ. ಇದಲ್ಲದೆ, ಅವರು ಯಾವ ರೀತಿಯ ವ್ಯಕ್ತಿ, ಸ್ಪೇಸ್ ಪ್ರೊಜಕ್ಟಿನ ಸದಸ್ಯರು ಎಂಬ ನೆಲೆಯಲ್ಲಿ ಯಾವ ರೀತಿ ಅವರೊಂದಿಗೆ ಸಂವಹನ ನಡೆಸಬೇಕು ಅಥವಾ ವರ್ತಿಸಬೇಕೆಂದು ತಿಳಿದಿಲ್ಲ. ಬಹುಶಃ ನಾಸಾ ಅಧಿಕಾರಿಗಳು ಇಂತಹಾ ಸಾಂಸ್ಕೃತಿಕ ತಪ್ಪುಗ್ರಹಿಕೆಯಿಂದ ಗೊಂದಲಕ್ಕೆ ಈಡಾಗಿದ್ದಾರೆ.

ವಾಸ್ತವದಲ್ಲಿ ಅಂದು ಇತರೆ ಅರಬ್ ಗಣ್ಯ ವ್ಯಕ್ತಿಗಳಂತೆ ಅವರು ಕೂಡಾ ಅಮೇರಿಕನ್ ಸಂಸ್ಕೃತಿಗೆ ರೂಪಾಂತರಗೊಂಡಿದ್ದರು. ಅವರು ಅಮೇರಿಕಾದಲ್ಲೇ ಶಿಕ್ಷಣ ಪೂರ್ತಿಗೊಳಿಸಿದ್ದರು. ಅಲ್ಲಿ ವಾಸಿಸುತ್ತಿದ್ದ ಫ್ರೆಂಚ್ ಗಗನಯಾತ್ರಿಗಳಿಗಿಂತ ಅಮೇರಿಕನ್ ಸಂಸ್ಕೃತಿಯ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಇತ್ತು. ಇದಲ್ಲದೆ ಇಂಗ್ಲಿಷ್ ಮಾತಾಡುವುದರಲ್ಲೂ ಅವರು ಹೆಚ್ಚು ಪ್ರಾವೀಣ್ಯತೆ ಪಡೆದಿದ್ದರು. ಅದಾಗ್ಯೂ ನಾಸಾ ಅಧಿಕಾರಿಗಳಿಗೆ ಫ್ರೆಂಚ್ ಗಗನಯಾತ್ರಿಗಳ ಬಗ್ಗೆ ಸಾಂಸ್ಕೃತಿಕ ತಪ್ಪು ಕಲ್ಪನೆ ಕಡಿಮೆ ಇತ್ತು.

ಪ್ರಾಣಾಪಾಯ ಸಾಧ್ಯತೆ ಹೆಚ್ಚಾಗಿ ಇರುವುದರಿಂದ 2014 ರಲ್ಲಿ ಇಸ್ಲಾಮಿಕ್ ವಿದ್ವಾಂಸರು ಒನ್ ವೇ ಮಂಗಳಯಾನದ ವಿರುದ್ಧ ಫತ್ವಾ ಹೊರಡಿಸಿದ್ದರೆಂದು ತಾವು ಈ ಮೊದಲು ಸೂಚಿಸಿದ್ದೀರಿ. ‘ಈ ದೌತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ಪರಲೋಕದಲ್ಲಿ ಆತ್ಮಹತ್ಯೆ ಮಾಡಿದ ಶಿಕ್ಷೆಗೆ ಗುರಿಯಾಗಬಹುದು’ ಎಂದಾಗಿತ್ತು ಫತ್ವ. ಒಬ್ಬರ ಜೀವ ತೆಗೆಯುವುದು ದೊಡ್ಡ ಪಾಪವೆಂದು ಪರಿಗಣಿಸುವ ಇಸ್ಲಾಮಿಕ್ ಸಾಂಪ್ರದಾಯಿಕ ಮೌಲ್ಯಗಳನ್ನು ಅತ್ಯಂತ ಅಪಾಯಕಾರಿ ಖಗೋಳ ಸಂಶೋಧನೆಯೊಂದಿಗೆ ಹೇಗೆ ಹೊಂದಾಣಿಕೆ ಮಾಡಬಹುದು..!?

ಮನುಷ್ಯ ಜೀವನದ ಬಗ್ಗೆ ಅಭ್ಯಸಿಸುವ ಆಧುನಿಕ ಬಯೋ ಎಥಿಕ್ಸ್ (Bio Ethics) ಅರಬ್ ಜಗತ್ತಿನಲ್ಲಿ ವಿಕಸನಗೊಳ್ಳುತ್ತಿದೆ. ಇಂತಹ ಫತ್ವಾಗಳನ್ನು ಹೊರಡಿಸಿದವರ ಪಾಲಿಗೆ ಆತ್ಮಹತ್ಯೆ ಎನ್ನುವುದು ಒಂದು ದೊಡ್ಡ ಸಮಸ್ಯೆ. ಮಾನವ ಜೀವವನ್ನು ಗೌರವಿಸುವ ಯಾವುದೇ ಧರ್ಮಕ್ಕೂ ಇದು ಸಮಾನ. ಇದು ಇಸ್ಲಾಮಿನಲ್ಲಿ ಮಾತ್ರ ಇರುವ ಸಮಸ್ಯೆ ಅಲ್ಲ.

ಇದು ಮಂಗಳಯಾನ ದೌತ್ಯದಿಂದ ಮುಸ್ಲಿಂ ರಾಷ್ಟ್ರಗಳನ್ನು ಹಿಂದೆ ಸರಿಯಲು ಪ್ರೇರೇಪಿಸಿಲ್ಲ ಎನ್ನುತ್ತೀರಾ?
ಈ ಯೋಜನೆಗಳ ಹಿನ್ನೆಲೆಯಲ್ಲಿ ಯುಎಇಗೆ ಹಲವಾರು ರಾಷ್ಟ್ರೀಯ, ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಇವೆ. ಬಹುಶಃ ಪಶ್ಚಿಮೇಷ್ಯಾದ ರಾಷ್ಟ್ರಗಳ ಪೈಕಿ ಯುಎಇ ಮಂಗಳದ ದೌತ್ಯವನ್ನು ಸ್ವಲ್ಪ ಹೆಚ್ಚು ಮಹತ್ವಾಕಾಂಕ್ಷೆ ಇಟ್ಟುಕೊಂಡಿದೆ. ಅವರು ೨೦೨೦ರ ವೇಳೆಗೆ ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆ ಉಡಾಯಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾಹ್ಯಾಕಾಶ ನೌಕೆ ೨೦೨೧ ರಲ್ಲಿ ಮಂಗಳ ಗ್ರಹ ತಲುಪುವ ನಿರೀಕ್ಷೆಯಿದೆ. ಯುಎಇ ಯ ಗೋಲ್ಡನ್ ಜ್ಯುಬಿಲಿ ನಡೆಯುವ ಸಮಯವೂ ಹೌದು!.

ಇದಲ್ಲದೆ ಯುಎಇ ನೂರು ವರ್ಷಗಳ ಕಾಲಾವಧಿಯಲ್ಲಿ, ೨೧೧೭ ಆಗುವ ಹೊತ್ತಿಗೆ ಮಂಗಳ ಗ್ರಹದಲ್ಲಿ ಬೃಹತ್ ನಗರವನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆ ಪ್ರಥಮ ಹಂತದಲ್ಲಿದೆ. ಮಂಗಳ ಗ್ರಹದಲ್ಲಿ ಒಂದು ನಗರ ಸ್ಥಾಪಿಸಲು ಬಯಸಿದರೆ ನೀವು ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಯೋಜನೆ ಮತ್ತು ಚಟುವಟಿಕೆಗಳ ಬಗ್ಗೆ ಮುಸ್ಲಿಂ ವಿದ್ವಾಂಸರೆಡೆಯಲ್ಲಿ ಭಿನ್ನಾಭಿಪ್ರಾಯ ಮೂಡುವುದು ಖಂಡಿತಾ. ಆದರೆ ಇಂತಹಾ ಆಕಾಂಕ್ಷೆ ಮತ್ತು ಯೋಜನೆ ಮುಂದೆ ಸಾಗುವುದಂತೂ ವಾಸ್ತವ..!

ಮೂಲ: ಮರೀನಾ ಕೋರಿನ್
ಅನು: ಅಶ್ರಫ್ ನಾವೂರು

ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ ಅದನ್ನು ಕಲಿಯಲು ಯಾರನ್ನಾದರೂ ಅನುಗಮಿಸುವುದು ಅನಿವಾರ್ಯ. ತದ್ವಿರುದ್ದವೆಂಬಂತೆ, ಬೌದ್ದಿಕ ವಿಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಸಲಾಗುವುದಿಲ್ಲ. ಮಾರ್ಗದರ್ಶನಕ್ಕಾಗಿ ಅಧ್ಯಾಪಕರನ್ನು ಆಶ್ರಯಿಸಬೇಕಾಗಿ ಬರಬಹುದು,ಅಷ್ಟೆ. ಪ್ರಸ್ತುತ ಜ್ಞಾನವನ್ನು ಕರಗತ ಮಾಡಲಿರುವ ಏಕೈಕ ಮಾರ್ಗ, ಬದ್ದಿಮತ್ತೆಗೆ ತರಬೇತಿ ನೀಡುವ ಮೂಲಕ ಆತ್ಮಶೋಧನೆ ಮಾಡಿ ತನ್ನೊಳಗೇ ಅವನ್ನು ಕಂಡರಿಸುವುದು. ಈ ಕೈಂಕರ್ಯ ಮಾಡದವನು ಎಲ್ಲಾ ವಿಚಾರಗಳಲ್ಲೂ ಇತರರನ್ನು ಆತು ಕೊಳ್ಳಬೇಕಾಗಿ ಬರುತ್ತದೆ.

ಪರಂಪರಾಗತವಾಗಿ ದೊರಕುವ ಜ್ಞಾನ ಧಾರೆಗಳಿಗೆ ಉದಾಹರಣೆ ಕಾನೂನು,ಇತಿಹಾಸ,ಭಾಷೆ ಇತ್ಯಾದಿ. ಎಲ್ಲಾ ಗುಣಗಳಲ್ಲಿ ಹೊಂದಿಕೆಯಿಲ್ಲದಿದ್ದರೂ ಗಣಿತವನ್ನು ಬೌದ್ದಿಕ ಜ್ಞಾನ ಪರಂಪರೆಯ ಉದಾಹರಣೆಯಾಗಿ ಹೇಳಬಹುದು. ʼಎರಡು ಕೂಡಿಸು ಎರಡು ಸಮ ನಾಲ್ಕು. ಕಾರಣ ಟೀಚರ್‌ ಹಾಗೆ ಹೇಳಿದ್ದಾರೆʼ ಎನ್ನುವುದು ಅಸಂಬದ್ದ. ಗಣಿತಾತ್ಮಕ ಸರಿ ತಪ್ಪುಗಳನ್ನು ಪರಸಹಾಯವಿಲ್ಲದೆ ಬುದ್ದಿ ತಾನೇ ಕಂಡು ಕೊಂಡುಕೊಳ್ಳುತ್ತದೆ.ಮೊದಲನಯದ್ದು ಮೌಖಿಕ ಪರಂಪರೆಯನ್ನು ಆಧರಿಸಿಕೊಂಡಿವೆ. ಎಲ್ಲಾ ಸಂಸ್ಕೃತಿ ಮತ್ತು ಧರ್ಮ ಪರಂರಯಲ್ಲಿ ಪ್ರಸ್ತುತ ಬಗೆಯ ಜ್ಞಾನಧಾರೆ ಇರುವುದಾಗಿ ಕಾಣಬಹುದು. ಬೌದ್ದ ಧರ್ಮದಲ್ಲಿ ಜ್ಞಾನೋದಯವೆಂಬುದು ಎಲ್ಲಾತರದ ಸಾಮಾನ್ಯ ಅರಿವುಗಳಿಗೆ ಅತೀತವಾದುದು. ಆದರೆ ಅದು ಕೈಗೆಟುಕುವುದಕ್ಕಿಂತ ಮುನ್ನ ಗುರುಪರಂಪರೆ ಮುಖಾಂತರ ಜ್ಞಾನವನ್ನು ಸ್ವೀಕಾರ ಮಾಡಿಯೇ ಬೇಕು. ಮುಸ್ಲಿಮರಿಗೆ ನಮಾಝಿನ ಕುರಿತ ಅರಿವು ದೊರಕಬೇಕಾದರೆ ವಿದ್ವಾಂಸರನ್ನು ಸಮೀಪಿಸಬೇಕಾಗುತ್ತದೆ. ದೇವರು ತಮ್ಮಿಂದೇನುಬಯಸುತ್ತಾನೆಂದು ತಿಳಿಯಲು ದಿವ್ಯಜ್ಞಾನ ತಲೆಮಾರಿಂದ ತಲೆಮಾರಿಗೆ ಸಾಗುತ್ತಲೇ ಬರಬೇಕು. ಭಾಷೆ,ಸಂಸ್ಕೃತಿ,ಪ್ರಪಂಚ ಜ್ಞಾನ ಮುಂತಾಗಿ ನಮಗೆ ಗೊತ್ತಿದೆಯೆಂದು ಭಾಸವಾಗುವ ಎಲ್ಲವೂ ಪರಂಪರಾಗತವಾಗಿಯೇ ನಮಗೆ ಲಭಿಸಿದ್ದು. ತದ್ವಿರುದ್ದವಂಬಂತೆ, ನಮ್ಮ ಆತ್ಮದಾಳದಲ್ಲಿ ಸಂಪೂರ್ಣ ಖಚಿತತೆಯೊಂದಿಗೆ ನಾವೇ ಅರಿದುಕೊಳ್ಳುವುದಾಗಿದೆ ವೈಚಾರಿಕ ಜ್ಞಾನವಂಬುದು. ಆದರೆ ಅಂತ ಅರಿವು ಕಡಿಮೆ.

ಇಸ್ಲಾಮೀ ನಾಗರಿಕತೆಯನ್ನು ತೆಗೆದುನೋಡುವಾಗ ಎರಡು ಬಗೆಯ ಅಧ್ಯಯನ ಕ್ಷೇತ್ರದೊಳಗೆ ವೈಚಾರಿಕ ಜ್ಞಾನದ ಅನ್ವೇಷಣೆ ನಡೆದಿರುವುದಾಗಿ ಕಂಡುಬರುತ್ತದೆ. ಸುಲಭವಾಗಿ ಅರ್ಥ ಮಾಡುವುದಕ್ಕೋಸ್ಕರ ಅವನ್ನು ಸೂಫಿಸಂ ಮತ್ತು ಫಿಲಾಸಫಿ ಅಂತ ಕರೆಯಬಹುದು. ಗ್ರೀಕರು ಮುಂದಿಟ್ಟ ತಾರ್ಕಿಕ ಮತ್ತು ವೈಚಾರಿಕ ವಿಧಾನಗಳನ್ನು ಅವಲಂಬಿಸಿ ಫಿಲಾಸಫಿಯನ್ನು ಬೆಳಸಲಾಗಿದೆ. ಸೂಫಿಸಂ ಪ್ರವಾದಿ ಮುಹಮ್ಮದ್(ಸ) ರಿಂದ ಪಡೆದ ಧ್ಯಾನಾತ್ಮಕ ಪರಿಕರಗಳನ್ನು ಒಳಗೊಂಡಿದೆ. ಹದಿಮೂರು ಶತಮಾನದಿಂದೀಚೆಗೆ ಉಭಯ ಕ್ಷೇತ್ರಗಳು ಪರಸ್ಪರ ಕೊಡುಕೊಳ್ಳುವಿಕೆಯ ಮುಖಾಂತರ ವಿಕಾಸಗೊಂಡಿದೆ.

ಆತ್ಮಜ್ಞಾನದ ಹೊರತಾಗಿ ವಸ್ತುಗಳ ಅರ್ಥಗಳನ್ನು ಗ್ರಹಿಸುವುದು ಅಸಾಧ್ಯ ಎಂಬ ತತ್ವ ಮುಂದಿಡುವ ಮೂಲಕ ಫಿಲಾಸಫಿ ಮತ್ತು ಸೂಫಿಸಂ ಪರಂಪರಾಗತ ಜ್ಞಾನಶಾಸ್ತ್ರಗಳಿಂದ ಸಂಪೂರ್ಣ ಭಿನ್ನವಾಗಿದೆ. ಖಂಡಿತವಾಗಿಯೂ, ವಿಶ್ವದ ಕುರಿತು ಕಲಿಯುವುದು ವಿದ್ಯಮಾನಗಳ ಬಗ್ಗೆ ಗ್ರಹಿಸುವ ಉದ್ದೇಶದಿಂದ. ಆದರೆ, ಗ್ರಹಿಕೆ ಎಂಬುವುದು ಆತ್ಮದ ಒಂದು ಗುಣವಾದ್ದರಿಂದ ಮೊದಲು ಅದನ್ನು ಅರಿಯುವುದು ಮುಖ್ಯವಾಗುತ್ತದೆ. ವೈಚಾರಿಕ ವಿಧಾನದ ವಕ್ತಾರರು ಅಲ್ಲಾಹನ ದೃಷ್ಟಾಂತಗಳ ಹಿನ್ನಲೆಯಲ್ಲಿ ಅರ್ಥಗಳನ್ನು ಕಂಡರಿಸುತ್ತಾರೆ. ಅಂದರೆ, ಜಗತ್ತಿನ ವಿದ್ಯಮಾನಗಳೆಲ್ಲ ನೈಜ ಮೂಲಾರ್ಥಗಳೆಡೆಗೆ ಬೊಟ್ಟು ಮಾಡುತ್ತದೆ, ಈ ಮೂಲಾರ್ಥಗಳು ಆತ್ಮವನ್ನು ಅರಿಯುವ ಮೂಲಕ ಮಾತ್ರವಾಗಿದೆ ಪ್ರಾಪ್ತವಾಗುವುದು.

ಸ್ಥೂಲನೋಟದಲ್ಲಿ ಬೌದ್ಧಿಕ ಪರಂಪರೆಯನ್ನು ವಿಶ್ಲೇಷಿಸುವಾಗ, ಆಧುನಿಕ ವಿಜ್ಞಾನಗಳಿಗೆ ಅತಿಮುಖ್ಯವಾಗಿರುವ ವ್ಯಕ್ತಿ (Subject) ಮತ್ತು ವಸ್ತು (Object) ಗಳ ನಡುವಿನ ವ್ಯತ್ಯಾಸ ಕಾಣುವಿಕೆಯನ್ನು ಅದು ಒಪ್ಪುವುದಿಲ್ಲವೆಂದು ನಿಚ್ಚಳವಾಗುತ್ತದೆ. ನಾಲ್ಕು ಮೂಲ ವಿಷಯಗಳನ್ನಾಗಿದೆ ಪ್ರಸ್ತುತ ಪರಂಪರೆ ಗಣನೆಗೆ ತೆಗೆದುಕೊಂಡಿರುವುದು; ದೇವ, ವಿಶ್ವ, ಮನುಷ್ಯಾತ್ಮ ಮತ್ತು ಅಂತರ್ವ್ಯಕ್ತೀಯ ಸಂಬಂಧಗಳು. ಮೊದಲ ಮೂರು ಸಂಗತಿಗಳು ವಾಸ್ತವಿಕತೆಯ ಮೂಲಘಟಕಗಳಾಗಿವೆ ಮತ್ತು ಈ ಮೂರು ಸಂಗತಿಗಳಿಂದ ಸಿಕ್ಕಿದ ಒಳನೋಟಗಳನ್ನು ನಾಲ್ಕನೆಯದು ಮಾನವನ ಚಟುವಟಿಕೆಗಳಿಗೆ ಅನ್ವಯಗೊಳಿಸುತ್ತದೆ.ಈ ವಿಚಾರಗಳನ್ನು ಪರಂಪರಾಗತ ಜ್ಞಾನಗಳ ಅಧಿಕೃತ ಮೂಲಗಳಾದ ಖುರಾನ್‌ ಮತ್ತು ಹದೀಸ್‌ ನ ಮೂಲಕ ತಿಳಿಯಬಹುದು. ಆದರೆ, ಇವುಗಳ ಕುರಿತು ತನ್ನೊಳಗೇ ಅರಿತುಕೊಳ್ಳುವುದು ಹಾಗೂ ಆತ್ಮ ಸಾಕ್ಷಾತ್ಕಾರ ಪಡೆಯುವುದು ಬೇರೇನೇ. ಬೌದ್ಧಿಕ ಪರಂಪರೆಯಲ್ಲಿ ಪರಂಪರಾಗತ ಜ್ಞಾನ ಸಂಪ್ರದಾಯದ ಪಾತ್ರವೇನೆಂದರೆ, ಅದು ಸಾಧಕನು ಆತ್ಮ ಸಾಕ್ಷಾತ್ಕಾರಗೊಳಿಸಬೇಕಾದ ಸಂಗತಿಗಳೆಡೆಗೆ ಮಾರ್ಗಸೂಚಕಗಳನ್ನು ಒದಗಿಸುತ್ತದೆ.

ಪ್ರಾಯಶಃ ಪರಂಪರಾಗತ ಮತ್ತು ಬೌದ್ಧಿಕ ಜ್ಞಾನದ ವ್ಯತ್ಯಾಸ ಮನಗಾಣಲು ಸೂಕ್ತ ಮಾರ್ಗ ಯಾವುದೆಂದರೆ, ಜ್ಞಾನ ಸಂಪಾದನೆಯ ಮೂಲಭೂತ ಮಾರ್ಗಗಳನ್ನು ಸೂಚಿಸುವ ತಖ್ಲೀದ್‌ (ಅನುಕರಣೆ, ಅಧಿಕೃತಮೂಲಗಳನ್ನು ಒಪ್ಪುವುದು) ಮತ್ತು ತಹ್ಖೀಖ್‌ (ದೃಢಪಡಿಸುವಿಕೆ, ಆತ್ಮಸಾಕ್ಷಾತ್ಕಾರ) ಎಂಬೀ ಸಂಜ್ಞೆಗಳನ್ನು ಅರ್ಥೈಸುವುದು. ಯಾವುದೇ ಧರ್ಮ, ಸಮಾಜ ಅಥವಾ ಒಕ್ಕೂಟದಲ್ಲಿ ಸೇರಲು ಇಚ್ಛಿಸುವ ಒಬ್ಬನಿಗೆ, ಮೊದಲೇ ಅದರಲ್ಲಿ ಸದಸ್ಯರಾಗಿರುವವರಿಂದ ಅನೇಕ ವಿಚಾರಗಳನ್ನು ಕಲಿಯಬೇಕಾಗುತ್ತದೆ ಮತ್ತು ಪ್ರಸ್ತುತ ಕಲಿಕೆ ʼಅನುಕರಣೆʼ ಎಂಬ ವಿಧಾನದ ಮೂಲಕ ಮಾತ್ರ ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಕಾನೂನು, ಆಚಾರಗಳು ಮುಂತಾಗಿ ಎಲ್ಲವನ್ನೂ ನಾವು ಕಲಿಯುವುದು ಅನುಕರಣೆಯಿಂದಲೇ ಆಗಿದೆ. ಇಸ್ಲಾಮಿನಲ್ಲಿ ಇಂತಹ ಪರಂರಪರಾಗತ ಜ್ಞಾನಗಳ ಸಂರಕ್ಷಣೆ ಮಾಡುವವರನ್ನು ʼಉಲಮಾʼ ಅಥವಾ ಪರಂಪರೆಯ ವಕ್ತಾರರೆಂದು ಕರೆಯಲಾಗುತ್ತದೆ.

ಪರಂರಾಗತ ಜ್ಞಾನದಲ್ಲಿ ʼಏಕೆʼ ಎಂಬ ಪ್ರಶ್ನೆಗೆ ಜಾಗವೇ ಇಲ್ಲ. ಇಂತ ಇಂತ ನಂಬಿಕೆ ತಾಳುವುದೇಕೆ ಅಥವಾ ಇಂತಹ ಆಚಾರಗಳನ್ನು ಮಾಡುವುದೇಕೆ ಎಂದು ಓರ್ವ ಉಲಮಾರನ್ನು ಪ್ರಶ್ನಿಸಿದರೆ, ಸರಳ ಉತ್ತರ ʼ ದೇವರು ಹಾಗೆ ಹೇಳಿದ್ದಾನೆʼ ಎಂದಾಗಿರುತ್ತದೆ. ಅಂದರೆ, ಖುರಾನ್‌ ಮತ್ತು ಹದೀಸಿನ ಅಧಿಕೃತತೆಯ ಮೇಲೆ ಅವುಗಳನ್ನು ಅಂಗೀಕರಿಸಲಾಗಿದೆ ಎಂದರ್ಥ. ಹೀಗೆಯೇ, ಪೋಷಕರು ತಮ್ಮ ಮಕ್ಕಳ ಭಾಷೆಯನ್ನು ಅಧಿಕೃತ ಮೂಲಗಳ ಆಧಾರದಲ್ಲಿ ತಿದ್ದುಪಡಿ ಮಾಡುತ್ತಿರುತ್ತಾರೆ.

ಬೌದ್ಧಿಕ ವಿಜ್ಞಾನ ಸಂಪೂರ್ಣ ಭಿನ್ನವಾಗಿದೆ. ಒಬ್ಬ ಅದನ್ನು ವಾಚಿಕ ಮೂಲಗಳ ಆಧಾರದಲ್ಲಿ ಸ್ವೀಕರಿಸುವುದಾದರೆ, ಅದನ್ನು ಅರ್ಥ ಮಾಡಿಲ್ಲ ಎಂದರ್ಥ. ಅಧಿಕೃತ ಮೌಖಿಕ ಮೂಲಗಳ ಮೇಲೆ ಆಧಾರಿತಗೊಂಡ ವಿಜ್ಞಾನವಲ್ಲ ಗಣಿತವೆಂಬುದು. ಹೊರತು, ಪ್ರಜ್ಞಾಪೂರ್ವಕವಾಗಿ ತನ್ನೊಳಗೆ ಅದನ್ನು ಕಂಡರಿಸಿಕೊಳ್ಳಬೇಕಾಗುತ್ತದೆ. ಗಣಿತವನ್ನು ಕಲಿಯುವಾಗ ಅಧ್ಯಾಪಕನ್ನು ಅನುಕರಿಸುವ ಬದಲು ʼಏಕೆʼ ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳುತ್ತಾರೆ. ಪ್ರಾರಂಭದ ಹಂತದಲ್ಲಿರುವ ವಿದ್ಯಾರ್ಥಿಗೆ ಮಾತ್ರ ಬೌದ್ಧಿಕ ಜ್ಞಾನಗಳಲ್ಲಿ ಅನುಕರಣೆ ಮಾಡಬಹುದು. ಪಾರಂಪರಿಕ ಜ್ಞಾನಗಳಲ್ಲಿ ಖುರಾನ್‌ ಮತ್ತು ಹದೀಸನ್ನು ಅನುಕರಿಸುವುದೇ ಸರಿಯಾದ ದಾರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡು ತರದ ಜ್ಞಾನಗಳಿವೆ, ಎರಡಕ್ಕೂ ಅದರದ್ದೇ ವಿಧಾನಗಳಿವೆ. ತಖ್ಲೀದ್‌ ಅಥವಾ ಅನುಕರಣೆ ಪಾರಂಪರಿಕ ಜ್ಞಾನಕ್ಕೆ ಸೂಕ್ತವಾಗಿದೆ ಮತ್ತು ಬೌದ್ಧಿಕ ಜ್ಞಾನಕ್ಕೆ ತಹ್ಖೀಖ್‌ ಯಾ ಆತ್ಮ ಸಾಕ್ಷಾತ್ಕಾರ ಎಂಬ ವಿಧಾನವನ್ನು ಅನ್ವಯಗೊಳಿಸಬೇಕಾಗಿದೆ.

ʼತಖ್ಲೀದ್‌ʼ ಎಂಬ ಪರಿಭಾಷೆ ಹಲವಾರು ನವ ಮುಸ್ಲಿಂ ಚಿಂತಕರ ಕಂಗೆಡಿಸಿದೆ. ಮುಸ್ಲಿಂ ಸಮಾಜದ ದೌರ್ಬಲ್ಯವಾಗಿ ಅದನ್ನು ಕಾಣುವವರಿದ್ದಾರೆ. ಇವರು ಹೇಳುವಂತ ತಖ್ಲೀದ್‌, ನಾನು ವಿವರಿಸಿದ ತಹ್ಖೀಖ್‌ ಗೆ ವಿರುದ್ದವಾಗಿ ನಿಲ್ಲುವ ಸಂಜ್ಞೆಯಲ್ಲ, ಹೊರತು ಇಜ್ತಿಹಾದ್‌ ನ ಎದುರಲ್ಲಿ ಬಳಸುವ ಪದವಾಗಿದೆ. ಫಿಕ್ಹ್‌ ಎಂಬುವುದು ಪರಂರಾಗತ ಶಾಸ್ತ್ರಗಳ ಗುಂಪಿನಲ್ಲಿ ಸೇರುವುದರಿಂದ, ಅದರಲ್ಲಿ ಅನನ್ಯ ನಿಪುಣತೆ ಪಡೆದ ಮುಜ್ತಹಿದ್‌ (ಕರ್ಮಶಾಸ್ತ್ರ ಸಂಶೋಧಕ) ಗಳನ್ನು ಅನುಕರಣೆ ಮಾಡುವುದು ಅನಿವಾರ್ಯವಾಗುತ್ತದೆ. ನಾನು ಪ್ರಸ್ತಾಪಿಸಿದ್ದು, ಬೌದ್ಧಿಕ ವಿಜ್ಞಾನಗಳಲ್ಲಿ ತಖ್ಲೀದ್‌ ಸಲ್ಲದು ಎಂದಾಗಿದೆ. ಇವೆರಡರ ನಡುವಿನ ಸ್ಪಷ್ಟ ವ್ಯತ್ಯಾಸ ತಿಳಿದಿರುವುದರಿಂದಲೇ, ಮುಸ್ಲಿಂ ವಿದ್ವಾಂಸರು ದೇವರಲ್ಲಿರುವ ನಂಬಿಕೆಗೆ ವೈಚಾರಿಕ ಅಡಿಪಾಯ ಅಗತ್ಯ ಎಂಬ ನಿಲುವನ್ನು ತಾಳಿದ್ದಾರೆ. ಅಂದರೆ, ಪೋಷಕರು ಹೇಳಿದ ಕಾರಣದಿಂದ ದೇವರಲ್ಲಿ ನಂಬಿದ್ದೇನೆ ಎಂದು ಒಬ್ಬಾತ ಹೇಳುವುದಾದರೆ ಆತನ ವಿಶ್ವಾಸ ಸರಿಯಾಗಿಲ್ಲ ಎಂದಾಗಿದೆ ವಿದ್ವಾಂಸರ ಅಂಬೋಣ. ಆತನ ನಂಬಿಕೆಗೆ ಸಾಕ್ಷ್ಯ ಪ್ರಮಾಣಗಳು ಬೇಕಾಗುತ್ತದೆ.

ಉಭಯ ಜ್ಞಾನಧಾರೆಗಳ ನಡುವೆ ಸೈದ್ಧಾಂತಿಕ ನೆಲೆಗಟ್ಟಲ್ಲಿ ವಿವೇಚನೆ ಸಾಧ್ಯವಾದರೂ, ಪ್ರಾಯೋಗಿಕತೆಯ ನೆಲೆಗೆ ಬರುವಾಗ ಎರಡೂ ಪರಸ್ಪರ ತಳುಕು ಹಾಕಿಕೊಂಡಿರುವುದನ್ನು ಮನಗಾಣಬಹುದು. ಇತಿಹಾಸದುದ್ದಕ್ಕೂ ಬೌದ್ಧಿಕ ವಿಜ್ಞಾನ, ಪಾರಂಪರಿಕ ವಿಜ್ಞಾನವನ್ನು ಆತುಕೊಂಡೇ ಬೆಳೆದಿದೆ. ಧರ್ಮಗ್ರಂಥಗಳ ಸಮಂಜಸ ಗ್ರಹಿಕೆಗೆ ವೈಚಾರಿಕ ವಿಧಾನಗಳನ್ನು ಅವಲಂಬಿಸಲಾಗಿದೆ. ಯಾವುದೇ ಧರ್ಮ ಕಾಲದ ಪ್ರವಾಹದಲ್ಲಿ ಅಚಂಚಲವಾಗಿ ಉಳಿಯಬೇಕಾದರೆ ಪಾರಂಪರಿಕ ಹಾಗೂ ಬೌದ್ಧಿಕ ಎರಡೂ ಬಗೆಯ ವಿಜ್ಞಾನ ಅತ್ಯಗತ್ಯ. ಆದರೆ, ಎರಡೂ ಈಗ ಉಳಿವಿನ ಅಂಚಿನಲ್ಲಿದೆ ಎಂಬುವುದು ಖೇದಕರ.

ಇಲ್ಲಿ ಮಹತ್ವದ ಸಂಗತಿಯೇನೆಂದರೆ, ಸಕ್ರಿಯವಾದ ಬೌದ್ಧಿಕ ಪರಂಪರೆಯಿಲ್ಲದೆ ಧರ್ಮಕ್ಕೆ ಉಳಿಗಾಲವಿಲ್ಲ. ಜನರು ಏಕೆ ಆಲೋಚಿಸುತ್ತಾರೆ? ಯೋಚನೆ ರಹಿತವಾಗಿ ಏಕೆ ಏನನ್ನೂ ಒಪ್ಪುವುದಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಮುಂದಿಟ್ಟರೆ ಈ ವಿಚಾರ ಸ್ಪಷ್ಟವಾಗುತ್ತದೆ. ಇಸ್ಲಾಮೀ ದೃಷ್ಟಿಕೋನದಲ್ಲಿ ಉತ್ತರ ಬಹಳ ಸರಳ. ಮನುಷ್ಯರು ವಿವೇಕ ಹೊಂದಿದ ಯೋಚಿಸುವ ಜೀವಿಗಳಾದ್ದರಿಂದ ಖಂಡಿತವಾಗಿಯೂ ಚಿಂತನೆ ಮಾಡಬೇಕಾಗಿದೆ. ದೇವರು ಬುದ್ದಿ ಮತ್ತು ಮನಸ್ಸನ್ನು ನೀಡಿರುವಾಗಿ ಜನರಿಗೆ ಯೋಚಿಸದೆ ಉಪಾಯವಿಲ್ಲ. ಜತೆಗೆ, ಖುರ್‌ ಆನಿನ ಉದ್ದಕ್ಕೂ ಹಲವಾರು ಸೂಕ್ತಗಳಲ್ಲಿ ಚಿಂತನೆ ನಡೆಸಲು ಮತ್ತು ತಮ್ಮ ವಿವೇಕಶಕ್ತಿಯನ್ನು ಬಳಸಲು ಜನರಿಗೆ ಆಜ್ಞಾಪಿಸಲಾಗಿದೆ.

ಇಸ್ಲಾಮೀ ಚಿಂತನೆಗೆ ಕೆಲವೊಂದು ಮೂಲಭೂತ ತತ್ವಗಳನ್ನು ಪೂರ್ವಭಾವಿಯಾಗಿ ಪರಿಗಣಿಸಲಾಗಿದೆ. ಆ ಪೈಕಿ ʼತೌಹೀದ್‌ʼ (ದೇವರ ಏಕತ್ವದ ತತ್ವ) ಮುಂಚೂಣಿಯಲ್ಲಿ ನಿಲ್ಲುತ್ತದೆ. ಸಮಕಾಲೀನ ಪರಿಸ್ಥಿತಿಯನ್ನು ಪ್ರಸ್ತುತ ತತ್ವದ ಮೇಲೆ ಚಿಂತನೆ ನಡೆಸುವಾಗ, ಆಧುನಿಕತೆಯು ಎಷ್ಟೊಂದು ಅಪಾಯಗಳನ್ನು ಒಡ್ಡುತ್ತಿವೆಯೆಂದು ಮನಗಾಣಬಹುದು. ತೌಹೀದಿಗೆ ಸಂಪೂರ್ಣ ವಿರುದ್ಧವಾದ ಶಿರ್ಕ್‌ (ದೇವತ್ವದಲ್ಲಿ ಭಾಗಿದಾರಿಕೆ) ನ ಗುಣಗಳನ್ನಾಗಿದೆ ಆಧುನಿಕತೆ ಪ್ರಚುರಪಡಿಸುತ್ತಿರುವುದು. ಶಿರ್ಕ್‌ ಎಂಬ ಪದ ಬಹಳ ಗಂಭಿರವಾದ್ದರಿಂದ, ಪ್ರತಿಯಾಗಿ ʼತಕ್ಸೀರ್‌ʼ ಎಂಬ ಪದವನ್ನು ಇಲ್ಲಿ ಬಳಸುತ್ತೇನೆ. ತೌಹೀದ್‌ ಎಂಬುವುದು ದೇವರು ಏಕನೆಂದು ದೃಢಪಡಿಸುವುದಾದರೆ, ತಕ್ಸೀರ್‌ (ಶಿರ್ಕ್‌ ಎನ್ನುವುದೇ ಸೂಕ್ತ ಪದ, ಸದ್ಯ ತಕ್ಸೀರ್‌ ಎಂದು ಬಳಸುತ್ತೇನೆ) ಎಂದರೆ ಅನೇಕ ದೇವರಿದ್ದಾರೆಂದು ದೃಢೀಕರಿಸುವುದು.

ನವಯುಗದ ಚಿಂತನೆ ಒಂದು ಕೇಂದ್ರ, ಒಂದು ದಿಕ್ಕು, ಒಂದು ಉದ್ದೇಶ ಇವೆಲ್ಲವನ್ನು ಕಳಕೊಂಡಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ, ʼಏಕದೇವʼ ನ ನಷ್ಟವಾಗಿದೆ. ದೇವರು ಬದುಕಿಗೊಂದು ಅರ್ಥ ನೀಡುವ, ಕಾರ್ಯಗಳಿಗೆ ಕೇಂದ್ರೀಕರಣ ಒದಗಿಸುವ ಅಸ್ತಿತ್ವ. ಆಧುನಿಕ ಜಗತ್ತು ಅರ್ಥಗಳನ್ನು, ದಿಕ್ಕುಗಳನ್ನು ಬಹು ʼದೇವರುʼಗಳಿಂದ ಪಡೆಯುತ್ತಿದೆ. ನಿರಂತರ ಸಾಗುತ್ತಿರುವ ತಕ್ಸೀರನ್ನು ಬಿರುಸುಗೊಳಿಸುವ ಕೈಂಕರ್ಯದಿಂದ, ದೇವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ಅವರವರಿಗೆ ಅಪ್ಯಾಯಮಾನವಾದ ದೇವರನ್ನು ಪೂಜಿಸುತ್ತಿದ್ದಾರೆ.

ತಕ್ಸೀರ್‌ ನ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಇತಿಹಾಸದಲ್ಲಿ ಜರುಗಿದ ಇಸ್ಲಾಮೀ ಮತ್ತು ಐರೋಪ್ಯ ಚಿಂತನೆಗಳ ಗತಿಸ್ಥಿತಿಯನ್ನು ತುಲನೆ ಮಾಡಿ ನೋಡಿದರಾಯಿತು. ಇತ್ತೀಚಿನ ವರೆಗೂ, ಇಸ್ಲಾಮೀ ಚಿಂತನೆ , ಪರಸ್ಪರ ಸಾಮರಸ್ಯ, ಏಕೀಕರಣ, ಸಮನ್ವಯ, ಐಕಮತ್ಯ ಎಂಬಿತ್ಯಾದಿ ಗುಣಗಳಿಂದ ಕೂಡಿತ್ತು. ಹಲವಾರು ಜ್ಞಾನಸಂಹಿತೆಗಳ ಪರಿಣತರಾಗಿದ್ದರು ಮುಸ್ಲಿಂ ವಿದ್ವಾಂಸರು. ಆದರೆ,ಅವೆಲ್ಲವನ್ನು ತೌಹೀದ್‌ ಎಂಬ ಏಕಮರದ ವಿಭಿನ್ನ ಟಿಸಿಲುಗಳಾಗಿ ಕಂಡಿದ್ದರು. ಖಗೋಳಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ನಡುವೆ, ಭೌತಶಾಸ್ತ್ರ ಮತ್ತು ನೀತಿಶಾಸ್ತ್ರದ ನಡುವೆ, ಗಣಿತ ಮತ್ತು ಕಾನೂನು ಸಂಹಿತೆಯ ನಡುವೆ ಹೀಗೆ ಯಾವುದೇ ಶಾಸ್ತ್ರಗಳ ನಡುವೆ ಸಂಘರ್ಷಗಳಿರಲಿಲ್ಲ. ಒಂದೇ ತತ್ವದ ಅಡಿಯಲ್ಲಿ ಎಲ್ಲವೂ ಕಾರ್ಯಾಚರಿಸುತ್ತಿದ್ದವು.

ತದ್ವಿರುದ್ಧವಾದ ಧೋರಣೆಯಾಗಿದೆ ಐರೋಪ್ಯ ನಾಗರಿಕತೆಯಲ್ಲಿ ಕಂಡುಬರುವುದು.ಮಧ್ಯಕಾಲ ಯುರೋಪಿನಲ್ಲಿ ಏಕೀಕೃತ ಚಿಂತನಾ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲ್ಪಟ್ಟಿದ್ದರೂ, ತರುವಾಯ ಅದು ಅಳಿದು ಹೋಯಿತು. ಈಗಿನ ದಿನಗಳಲ್ಲಿ, ಪ್ರತಿಯೊಬ್ಬರೂ ಕೆಲವು ಸೂಕ್ಷ್ಮ ಅಧ್ಯಯನ ಕ್ಷೇತ್ರದಲ್ಲಿ ನಿಪುಣರಾಗಿತ್ತಾರೆ, ಆ ಮೂಲಕ ಮಾಹಿತಿಗಳು ಪ್ರವಾಹದೋಪಾದಿಯಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ, ಪರಸ್ಪರ ಅರ್ಥೈಸುವಿಕೆಯ ರಾಹಿತ್ಯ ಮತ್ತು ಸಾರ್ವತ್ರಿಕವಾದ ಅಸಾಮರಸ್ಯ ಎಂಬೀ ಸಮಸ್ಯೆಗಳು ಸಾರಸ್ವತ ಲೋಕವನ್ನು ಅತಿಯಾಗಿ ಕಾಡುತ್ತಿದೆ. ಒಂದು ಏಕಗ್ರಹಿಕಾ ಪ್ರವೃತ್ತಿಯನ್ನು ಸ್ಥಾಪಿಸುವುದು ಅಸಾಧ್ಯವಾಗಿದೆ.

ಅಸಂಖ್ಯೆ ದೇವರುಗಳಾಗಿದೆ ತಕ್ಸೀರ್‌ ನ ಜಗತ್ತಿನಲ್ಲಿರುವುದು. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ, ಸಮಕಾಲೀನ ಜಗತ್ತನ್ನು ನಿರ್ಣಯಿಸುವ ವಿಚಾರಧಾರೆಗಳನ್ನು ಹೇಳುವುದು ಸೂಕ್ತವೆನಿಸುತ್ತದೆ: ಸ್ವಾತಂತ್ಯ್ರ, ಲಿಂಗ ಸಮಾನತೆ, ವಿಕಾಸವಾದ, ಪ್ರಗತಿ, ವಿಜ್ಞಾನ, ರಾಷ್ಟೀಯತೆ, ಸಮಾಜವಾದ, ಭೌತವಾದ ಇತ್ಯಾದಿ. ಇನ್ನು ಗುರುತಿಸಲಾಗದ ಕೆಲವೊಂದಿದೆ. ಅವು ಅತ್ಯಂತ ಅಪಾಯಕಾರಿ ದೇವಗಳು.ನಮ್ಮೆಡೆಯಲ್ಲಿ ನಿರಂತರ ಗಿರಿಗೀಟು ಹೊಡೆಯುವ ನೀರಸ ಪದಗಳಲ್ಲದೆ ಬೇರೇನೂ ಅಲ್ಲ ಅವು: ಅಭಿವೃದ್ಧಿ, ಮಾಹಿತಿ, ಉತ್ಪಾದನೆ, ಕ್ಷೇಮ, ಯೋಜನೆ, ಅನುಭೋಗ, ಸಂಪನ್ಮೂಲ, ವ್ಯವಸ್ಥೆ, ಸೇವೆ ಇತ್ಯಾದಿ.

ಪ್ರಸ್ತುತ ಪದಗಳು ದೇವರ ಪಾತ್ರವನ್ನು ವಹಿಸುತ್ತಿದೆಯೆಂದು ನಂಬಲಾಗದವರು, Uwe Poerksen ರವರ ʼPlastic Wordsʼ ಪುಸ್ತಕವನ್ನೊಮ್ಮೆ ಓದುವುದು ಒಳ್ಳೆಯದು. ಪಾರ್ಕಸನ್‌ ವಿವರಣೆ ಪ್ರಕಾರ, ಎರಡನೇ ಜಾಗತಿಕ ಯುದ್ಧದ ಬಳಿಕ ಪ್ರಾಬಲ್ಯಕ್ಕೆ ಬಂದ ಆಧುನಿಕ ಭಾಷಾ ಸಂಪ್ರದಾಯ, ಜಗತ್ತು ಇಷ್ಟರವರೆಗೆ ಕಂಡಿಲ್ಲದ ಅತ್ಯಂತ ವಿನಾಶಕಾರಕ ʼನಿರಂಕುಶ ಪ್ರಭುʼ ಪದಗಳನ್ನಾಗಿದೆ ಸೃಷ್ಟಿಸಿರುವುದು. ಪಾರ್ಕಸನ್‌ ಥಿಯಾಲಜಿಯಲ್ಲಿ ಆಸಕ್ತಿಯಿಲ್ಲದ ಕೇವಲ ಭಾಷಾತಜ್ಞನಾದ್ದರಿಂದ ಅವುಗಳನ್ನು ʼದೇವರುʼ ಎನ್ನದೆ, “ನಿರಂಕುಶ ಪ್ರಭುಗಳುʼ ಎಂದು ಕರೆದಿದ್ದಾರೆ. ಒಂದರ್ಥದಲ್ಲಿ ಇದು ಖುರಾನಿನ ʼಜಬ್ಬಾರ್‌ʼ ಎಂಬ ದೇವನಾಮದ ಸರಿಯಾದ ಅನುವಾದ. ಈ ನಾಮ ದೇವರಿಗೆ ಅನ್ವಯಿಸುವಾಗ ಅದರರ್ಥ ಸೃಷ್ಟಿಗಳ ಮೇಲೆ ಆತನಿಗೆ ಸಂಪೂರ್ಣ ನಿಯಂತ್ರಣಾಧಿಕಾರವಿದೆ ಎಂದಾಗುತ್ತದೆ. ನಿರಂಕುಶ ಪ್ರಭುತ್ವ ಅಥವಾ ಪರಮಾಧಿಕಾರ ಸೃಷ್ಟಿಗಳಿಗೆ ಆರೋಪಿಸುವಾಗ, ಅದು ದೇವರ ಪರಮಶಕ್ತಿಯನ್ನು ಪ್ರಶ್ನಿಸಿದಂತಾಗುತ್ತದೆ. ಈ ಪ್ಲಾಸ್ಟಿಕ್‌ ಪದಗಳು ಕೆಲಕಾಲ ಜನರನ್ನಾಳುತ್ತಾ ಬೇರೆ ಪದಗಳಿಗೆ ವೇದಿಕೆ ಬಿಟ್ಟು ಕೊಟ್ಟು ಮಾಯವಾಗುತ್ತದೆ. ವ್ಯಕ್ತವಾದ ಒಂದು ಡೆಫಿನಿಷನ್‌ ಹೇಳಲು ಸಾಧ್ಯವಾಗದಿದ್ದರೂ ಇವುಗಳ ಪ್ರಭಾವ ಅಪಾರ. ಈ ಪದಗಳನ್ನು ಪೂಜಿಸಲು ಜನರು ಹೆಮ್ಮೆಪಡುತ್ತಾರೆ ಮತ್ತು ಇವುಗಳ ಉರುಹೊಡೆಯವಿಕೆ ಜ್ಞಾನೋದಯದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಗುಪ್ತ ಅಪಾಯಗಳನ್ನು ಮನಗಾಣಲು ನಮಗೆ ಇಸ್ಲಾಮೀ ವೈಚಾರಿಕ ಚಿಂತನೆ ಉಪಯುಕ್ತವಾಗುತ್ತದೆ.

ವಿಲ್ಯಂ ಸಿ ಚಿಟ್ಟಿಕ್‌
ಭಾಷಾಂತರ: ಎಂ.ಎಂ.ಸುರೈಜಿ

ಮಕ್ಕಾದಿಂದ ಮಾಲ್ಕಂ ಎಕ್ಸ್‌ ಬರೆದ ಪತ್ರ

ಭೂಮಿಯ ಮೇಲಿನ ಅತ್ಯಂತ ಪವಿತ್ರ ನಗರವೂ, ಮುಸ್ಲಿಮೇತರರಿಗೆ ತಮ್ಮ ಕಣ್ಣಿನಿಂದಲೂ ಅನುಭವಿಸಲಾಗದ, ಪರಿಶುದ್ಧ ಮಕ್ಕಾ ನಗರದಲ್ಲಿ ನಾನು ಈಗಷ್ಟೇ ನನ್ನ ಹಜ್‌ ಯಾತ್ರೆ ಮುಗಿಸಿದ್ದೇನೆ. ಪ್ರತಿಯೊಬ್ಬ ಮುಸ್ಲಿಮನ ಬದುಕಿನಲ್ಲೂ ಈ ಪುಣ್ಯ ಯಾತ್ರೆ ಅತ್ಯಂತ ಪ್ರಮುಖವಾದ ಘಟನೆಯಾಗಿರುತ್ತದೆ. ಇಲ್ಲಿಗೀಗ 2,26,000 ಕ್ಕೂ ಹೆಚ್ಚು ಮಂದಿ ಅರೇಬಿಯಾದ ಹೊರಗಿನಿಂದ ಬಂದು ಸೇರಿದ್ದಾರೆ. ಅವರಲ್ಲಿ ಟರ್ಕಿಯಿಂದ ಬಂದವರೇ ಹೆಚ್ಚು. ಟರ್ಕಿಯು ಇಸ್ಲಾಮಿಂದ ದೂರ ಸರಿಯುತ್ತಿದೆ ಎಂಬ ಪಾಶ್ಚಾತ್ಯರ ಪ್ರಚಾರವನ್ನು ಅಲ್ಲಗೆಳೆಯುವಂತೆ ಸುಮಾರು 600 ಕ್ಕೂ ಹೆಚ್ಚು ಬಸ್ಸುಗಳಲ್ಲಿ ಬಹುತೇಕ 50,000 ಮಂದಿ ಟರ್ಕಿಯಿಂದ ಬಂದವರಿದ್ದಾರೆ.

ಅಮೇರಿಕಾದರಿಂದ ಬಂದು ಮಕ್ಕಾದಲ್ಲಿ ಹಜ್‌ ನಿರ್ವಹಿಸಿದ ಇಬ್ಬರನ್ನಷ್ಟೇ ನನಗೆ ಗೊತ್ತು, ಆ ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡ ವೆಸ್ಟ್‌ ಇಂಡಿಯನ್ನರು. ತಮ್ಮ ಇಬ್ಬರು ಪುತ್ರರು ಹಾಗೂ ಕೆಲವು ಅನುಯಾಯಿಗಳೊಂದಿಗೆ ಎಲಿಜಾ಼ ಮುಹಮ್ಮದ್‌ ಮಕ್ಕಾಗೆ ಭೇಟಿ ನೀಡಿದ್ದರು. ಅವರ ಭೇಟಿಯು ಹಜ್‌ ಕಾಲಘಟ್ಟದಲ್ಲಿ ಅಲ್ಲವಾದ್ದರಿಂದ ಅವರ ತೀರ್ಥಯಾತ್ರೆಯನ್ನು ʼಉಮ್ರಾʼ ಎಂದು ಪರಿಗಣಿಸಲಾಗುತ್ತದೆ. ʼಉಮ್ರಾʼಗಿಂತಲೂ ಹಜ್‌ ಯಾತ್ರೆಗೆ ಹೆಚ್ಚಿನ ಮಹತ್ವವಿದೆ. ಅದಾಗ್ಯೂ, ಮುಸ್ಲಿಂ ಜಗತ್ತಿನಲ್ಲಿ ಉಮ್ರಾವನ್ನು ಕೂಡಾ ಬಹುದೊಡ್ಡ ಅನುಗ್ರಹವೆಂದೇ ಕಾಣಲಾಗುತ್ತದೆ. 

ಇದುವರೆಗೆ ಕನಿಷ್ಟ 10 ಮಂದಿ ಅಮೇರಿಕನ್ನರಾದರೂ ಮಕ್ಕಾ ನಗರಕ್ಕೆ ಭೇಟಿ ನೀಡಿರುವ ಬಗ್ಗೆ ನನಗೆ ಬಲವಾದ ಅನುಮಾನವಿದೆ. ಹಾಗೂ, ನಿಜವಾದ ಹಜ್‌ ನಿರ್ವಹಿಸಿದ ಮೊದಲ ಅಮೇರಿಕನ್-ನೀಗ್ರೋ ನಾನೇ ಇರಬಹುದು.  ನಾನಿದನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ, ಬದಲಾಗಿ ಇದು ಎಷ್ಟೊಂದು ಅನುಗ್ರಹೀತ ಹಾಗೂ ಅದ್ಭುತ ಸಾಧನೆಯೆಂದು ಹೇಳಲು, ಮತ್ತು ನೀವು ಅದರ ಆಧಾರದ ಮೇಲೆ ಇದನ್ನು ಪರಿಗಣಿಸಲೆಂಬ ಕಾರಣಕ್ಕೆ ಮಾತ್ರ ಹೇಳುತ್ತಿದ್ದೇನೆ. 

ಈ ಪುಣ್ಯ ನಗರದ ಯಾತ್ರೆಯು ನನಗೆ ನೀಡಿದ ಅನನ್ಯ ಅನುಭವವು ನನ್ನ ಹುಚ್ಚು ಬಯಕೆಗಳನ್ನು ಮೀರಿದ ಹಲವಾರು ಅನಿರೀಕ್ಷಿತ ಅನುಗ್ರಹಗಳನ್ನು ಪಡೆದ ಒಂದು ದಿವ್ಯ ಅನುಭೂತಿ.

 ನಾನು ಜಿದ್ದಾಗೆ ಆಗಮಿಸಿದ ಕೆಲವೇ ಘಳಿಗೆಯಲ್ಲಿ ಘನತೆವೆತ್ತ ಕಿರೀಟಧಾರಿ ಯುವರಾಜ ಫೈಸಲ್‌ ರ ಸಂದೇಶದೊಂದಿಗೆ ಅವರ ಪುತ್ರ, ರಾಜಕುಮಾರ ಮುಹಮ್ಮದ್‌ ಫೈಸಲ್‌ ನನ್ನನ್ನು ಭೇಟಿಯಾದರು. ಅವರ ವಿಶೇಷ ಗಣ್ಯ ಅತಿಥಿಯಾಗಿ ನಾನು ಆತಿಥ್ಯ ಸ್ವೀಕರಿಸಬೇಕೆಂಬುದು ರಾಜ ಫೈಸಲ್ ಅವರ ಅಭಿಲಾಷೆಯಾಗಿತ್ತು. ಅದಾದ ಬಳಿಕ ಜರುಗಿದ್ದನ್ನು ವರ್ಣಿಸಲು ಹಲವು ಗ್ರಂಥಗಳೇ ಬೇಕಾದೀತು. ಅದರ ಬಳಿಕ ನನಗೆ ಸಿಕ್ಕ ಆತಿಥ್ಯ ಅದ್ಭುತವಾಗಿತ್ತು. ನನಗಾಗಿಯೇ ಖಾಸಗಿ ಕಾರು, ಓರ್ವ ಚಾಲಕ, ಧಾರ್ಮಿಕ ಮಾರ್ಗದರ್ಶಿ ಹಾಗೂ ಅನೇಕ ಸಹಾಯಕರನ್ನು ನೇಮಿಸಲಾಯಿತು. ನನ್ನನ್ನು ಅತೀ ಗೌರವಾದರಗಳಿಂದ ಕಾಣಲಾಯಿತು. ಅದುವರೆಗೂ ನಾನು ಅಷ್ಟೊಂದು ಮರ್ಯಾದೆ ಎಂದೂ ಪಡೆದಿರಲಿಲ್ಲ. ಈ ಅತಿಯಾದ ಆದರಕ್ಕೆ ನಾನು ಅನರ್ಹ ಹಾಗೂ ವಿನಮ್ರ ಭಾವನೆಯನ್ನು ನನ್ನಲ್ಲಿ ಉಂಟುಮಾಡಿತು. ಓರ್ವ ಅಮೇರಿಕನ್‌-ಕಪ್ಪು ಮನುಷ್ಯನಿಗೆ ಇಷ್ಟೊಂದು ಆದರವೇ? ಯಾರು ನಂಬಿಯಾರು ಇದನ್ನು? ಆದರೆ, ಮುಸ್ಲಿಂ ಜಗತ್ತಿನಲ್ಲಿ, ಒಬ್ಬ ಇಸ್ಲಾಮನ್ನು ಸತ್ಯವೆಂದು ಒಪ್ಪಿಕೊಂಡಾಗ ಕರಿಯನೋ-ಬಿಳಿಯನೋ ಎಂಬ ಎಲ್ಲ ವ್ಯತ್ಯಾಸವನ್ನೂ ತೊರೆಯುತ್ತಾನೆ. ಎಲ್ಲಾ ಮನುಷ್ಯರನ್ನು ಮನುಷ್ಯರೆಂದೇ ಇಸ್ಲಾಂ ಪರಿಗಣಿಸಿದೆ. ಅರೇಬಿಯಾದ ಜನ ದೇವನೊಬ್ಬನೇ ಎಂದು ವಿಶ್ವಾಸವಿಡುತ್ತಾರೆ, ಹಾಗೂ ಎಲ್ಲಾ ಮನುಷ್ಯರೂ ಒಂದೇ, ಎಲ್ಲಾ ಸಹೋದರ-ಸಹೋದರಿಯರೂ ಒಂದೇ ಮಾನವ ಕುಟುಂಬ ಎಂದು ನಂಬುತ್ತಾರೆ.

ನಾನು ಇಲ್ಲಿ ಅರೇಬಿಯಾದಲ್ಲಿ ನೋಡಿದಂತಹ ಪ್ರಾಮಾಣಿಕ ಆತಿಥ್ಯ ಮತ್ತು ನಿಜವಾದ ಸಹೋದರತ್ವದ ಅಭ್ಯಾಸವನ್ನು ನಾನು ಹಿಂದೆಂದೂ ಕಂಡಿಲ್ಲ. ವಾಸ್ತವದಲ್ಲಿ, ಈ ಪುಣ್ಯ ಹಜ್‌, ನಾನು ಈ ಹಿಂದೆ ಹೊಂದಿದ್ದ ಎಲ್ಲಾ ಆಲೋಚನೆಗಳ ಮಾದರಿಗಳನ್ನು, ಹಿಂದಿನ ಪೂರ್ವಾಗ್ರಹಗಳನ್ನು ಪಕ್ಕಕ್ಕೆ ಎತ್ತಿ ಎಸೆಯುವಂತೆ ಮಾಡಿದೆ. ನಾನೇನನ್ನೇ ನಂಬಲಿ, ಅದರಲ್ಲಿ ಧೃಡವಾದ ನಂಬಿಕೆ ಹೊಂದಿದ್ದರೂ,  ಯಾವತ್ತೂ ಮುಕ್ತ, ತೆರೆದ ಮನಸ್ಸನ್ನು ಇಡಲು ನಾನು ಶ್ರಮಿಸುತ್ತಿದ್ದರಿಂದ ಈ ವಾಸ್ತವಕ್ಕೆ ಒಗ್ಗಿಕೊಳ್ಳುವುದು ನನಗೆ ಕಷ್ಟವೆಂದು ಅನ್ನಿಸಲೇ ಇಲ್ಲ. ಆತ್ಯಂತಿಕ ಸತ್ಯದ ಕುರಿತ ಬೌದ್ಧಿಕ ಅನ್ವೇಷಣೆಯೊಂದಿಗೆ ಯಾರೊಂದಿಗೂ ಕೈಜೋಡಿಸಬೇಕಾದ ನಮ್ಯತೆಯನ್ನು (flexibility) ಪ್ರತಿಬಿಂಬಿಸಲು ಇದು ಖಂಡಿತಾ ಅಗತ್ಯವಾಗಿದೆ.

 ಭೂಮಿಯ ಎಲ್ಲಾ ಭಾಗದಿಂದ ಬಂದ, ಎಲ್ಲಾ ವರ್ಣಗಳ ಜನರು ಇಲ್ಲಿದ್ದಾರೆ. ಇಲ್ಲಿ (ಮಕ್ಕಾದಲ್ಲಿ) ಕಳೆಯುತ್ತಿರುವ ದಿನಗಳಲ್ಲಿ, ಹಜ್‌ ಕರ್ಮದ ರೀತಿ ರಿವಾಜುಗಳನ್ನು ಕಲಿಯುತ್ತಿರುವ ನಡುವೆ, ನಾನು ಎಲ್ಲರೊಂದಿಗೆ ಅದೇ ತಟ್ಟೆಯಲ್ಲಿ ಉಂಡಿದ್ದೇನೆ, ಅದೇ ಲೋಟದಲ್ಲಿ ಕುಡುದಿದ್ದೇನೆ. ರಾಜ, ಸೇವಕ, ಬಲ್ಲಿದ, ಬಿಳಿಯರಲ್ಲಿ ಬಿಳಿಯ, ಕಡು ನೀಲಿ ಕಣ್ಣವ, ಕಂದು ಕೂದಲಿನವರೊಂದಿಗೆ ಅದೇ ತಟ್ಟೆಯಲ್ಲಿ ಉಂಡು, ಅವರೊಂದಿಗೆ ಹಾಸಿಗೆ ಹಂಚಿ ಮಲಗಿ ಎದ್ದಿದ್ದೇನೆ. ಅವರ ನೀಲಿ ಕಣ್ಣಲ್ಲಿ ನನ್ನನ್ನು ಅವರಂತೆಯೇ ಎಂದು ನೋಡುವ ನೋಟವನ್ನು ಕಂಡಿದ್ದೇನೆ. ಏಕೆಂದರೆ, ಏಕ ದೇವ ಅಲ್ಲಾಹನಲ್ಲಿ ವಿಶ್ವಾಸವಿರುವ ಅವರ ಮೆದುಳಲ್ಲಿ ತಾನು ಬಿಳಿಯನೆಂಬ ಪ್ರಜ್ಞೆ ಕಳೆದು ಹೋಗುತ್ತದೆ. ಅದು ಇತರೆ ವರ್ಣದವರೊಂದಿಗಿನ ಅವರ ವರ್ತನೆಗಳಲ್ಲಿ ಸ್ವಾಭಾವಿಕವಾಗಿ ಮಾರ್ಪಾಡನ್ನು ತರುತ್ತದೆ.  

ಏಕತ್ವದ ಮೇಲಿನ ಅವರ ನಂಬಿಕೆಗಳು ಅವರನ್ನು ಅಮೇರಿಕನ್ ಬಿಳಿಯರಿಗಿಂತ ತುಂಬಾ ವಿಭಿನ್ನವಾಗಿಸಿದೆ, ಅವರ ಬಣ್ಣ  ಅವರೊಂದಿಗೆ ನಾನು ವ್ಯವಹರಿಸುವಾಗ ನನ್ನ ಮನಸ್ಸಿನಲ್ಲಿ ಯಾವುದೇ ಪಾತ್ರವನ್ನು ವಹಿಸಿರಲಿಲ್ಲ. ಒಬ್ಬ ದೇವರಿಗೆ ಅವರ ಪ್ರಾಮಾಣಿಕತೆ ಮತ್ತು ಎಲ್ಲಾ ಜನರನ್ನು ಸಮಾನವಾಗಿ ಸ್ವೀಕರಿಸುವುದು ಅವರನ್ನು ಬಿಳಿಯೇತರ ವರ್ಣದವರನ್ನೂ ಇಸ್ಲಾಂನ ಸಹೋದರತ್ವಕ್ಕೆ ಸ್ವೀಕರಿಸುವಂತೆ ಮಾಡುತ್ತದೆ. 

ಒಂದು ವೇಳೆ ಅಮೆರಿಕನ್ನರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡರೆ, ಅಲ್ಲಾಹನನ್ನು ಏಕದೇವನೆಂದು ಒಪ್ಪಿಕೊಂಡರೆ ಅವರು ಖಂಡಿತವಾಗಿಯೂ ಎಲ್ಲಾ ಮನುಷ್ಯರು ಒಂದೇ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಹಾಗೂ ಬಣ್ಣಗಳಿಂದ ಇತರೆ ಮನುಷ್ಯರನ್ನು ಅಳೆಯುವದನ್ನು ನಿಲ್ಲಿಸುತ್ತಾರೆ. ವರ್ಣಭೇದ ನೀತಿಯು ಈಗ ಗುಣಪಡಿಸಲಾಗದ ಕ್ಯಾನ್ಸರ್‌ನಂತೆ ಅಮೆರಿಕದಲ್ಲಿ ಹಾವಳಿಯನ್ನು ಹೊಂದಿದ್ದು, ಎಲ್ಲಾ ಚಿಂತಕ ಅಮೆರಿಕನ್ನರು ಜನಾಂಗೀಯ ಸಮಸ್ಯೆಗೆ ಈಗಾಗಲೇ ಪರಿಹಾರವಾಗಿ ಸಾಬೀತಾಗಿರುವ ಇಸ್ಲಾಮನ್ನು ಹೆಚ್ಚು ಸ್ವೀಕರಿಸಬೇಕು. ಹಾಗೆ ಮಾಡುವುದರಿಂದ, ಅಮೇರಿಕನ್ ಬಿಳಿಯರು ತೋರುವ ವರ್ಣಭೇದ ನೀತಿಯ ವಿರುದ್ಧ ಪ್ರತಿಕ್ರಿಯಿಸುವಂತೆ ಕಪ್ಪು ವರ್ಣೀಯರ ಆಳಮನಸ್ಸು ಪ್ರೇರೇಪಿಸಿದ ಪ್ರತಿರೋಧವೇ “(ಬಿಳಿಯೆರೆಡೆಗಿನ) ಜನಾಂಗೀಯ ಹಗೆತನ” ಎಂಬ ರಕ್ಷಣಾತ್ಮಕ ದೂಷಣೆಗಳನ್ನೂ ನೀಗ್ರೋಗಳು ಹೂಡಲಾರರು. ಆದರೆ ವರ್ಣಭೇದ ನೀತಿಯ ಮೇಲಿನ ಅಮೇರಿಕದ ಹುಚ್ಚು ಗೀಳು ಅದನ್ನು ಸ್ವಯಂ ನಾಶದ ಹಾದಿಗೆ ಕರೆದೊಯ್ಯುತ್ತದೆ.

ಕಾಲೇಜು ಮತ್ತು ಯುನಿವರ್ಸಿಟಿಗಳಲ್ಲಿರುವ ಬಿಳಿಯ ಯುವ ತಲೆಮಾರು, ಅವರದ್ದೇ ತಲೆಮಾರುಗಳೊಂದಿಗೆ, ಆಧ್ಯಾತ್ಮಿಕ ಮೋಕ್ಷಕ್ಕಾಗಿ ಇಸ್ಲಾಂ ಧರ್ಮಕ್ಕೆ ಬದಲಾಗುತ್ತಾರೆ ಹಾಗೂ ಹಳೆಯ ತಲೆಮಾರನ್ನು ತಮ್ಮೊಂದಿಗೆ ಬದಲಾಗಲು ಒತ್ತಾಯಿಸಲಿದ್ದಾರೆ ಎಂದು ನಾನು ನಂಬುತ್ತೇನೆ.

ಹಿಟ್ಲರನ ನಾಝಿ ಜರ್ಮನಿಯಂತಾಗದೆ, ಜನಾಂಗೀಯವಾದದ ವಿಪತ್ತಿನಿಂದ ಬಿಳಿಯ ಅಮೇರಿಕಕ್ಕೆ ರಕ್ಷಿಸಿಕೊಳ್ಳಲು ಇದೊಂದೇ ಉತ್ತಮ  ದಾರಿಯಾಗಿದೆ.

ಈಗ ಮೆಕ್ಕಾಗೆ ಭೇಟಿ ನೀಡಿದ್ದೇನೆ, ನನ್ನ ಧರ್ಮದ (ಇಸ್ಲಾಂ) ಆಳವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನ್ನ ಸ್ವಂತ ಆಧ್ಯಾತ್ಮಿಕ ಮಾರ್ಗವನ್ನು ಸರಿಹೊಂದಿಸಿದ್ದೇನೆ. ಒಂದೆರಡು ದಿನಗಳ ಬಳಿಕ ನಾನು ನಮ್ಮ ಪಿತೃಭೂಮಿ ಆಫ್ರಿಕಾ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದೇನೆ. ಅಲ್ಲಾಹನ ಇಚ್ಛೆಯಂತೆ, ಮೇ 20 ರೊಳಗೆ ನಾನು ನ್ಯೂಯಾರ್ಕ್‌ಗೆ ಹಿಂದಿರುಗುವ ಮೊದಲು, ಸುಡಾನ್, ಕೀನ್ಯಾ, ಟಂಗ್ವಾನ್ಯಿಕಾ, ಜಂಜಿಬಾರ್, ನೈಜೀರಿಯಾ, ಘಾನಾ ಮತ್ತು ಅಲ್ಜೀರಿಯಾಗಳಿಗೆ ನಾನು ಭೇಟಿ ನೀಡುತ್ತೇನೆ.

ನೀವು ಬಯಸಿದಲ್ಲಿ ಈ ಪತ್ರವನ್ನು ನೀವು ಬಳಸಬಹುದು,

ಅಲ್‌-ಹಜ್‌ ಮಲಿಕ್‌ ಅಲ್-ಶಬ್ಬಾಝ್

 (ಮಾಲ್ಕಂ ಎಕ್ಸ್)

ಆಫ್ರಿಕನ್ ಗ್ರಂಥ ಪರಂಪರೆ; ಇತಿಹಾಸ ಹಾಗೂ ವರ್ತಮಾನ

ತನ್ನ ಮೂವತ್ತನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದ ಕೇಪ್ ಮಲಾಯ್ ಜನಾಂಗದಲ್ಲಿ ಜನಿಸಿದ ಸಾರಾ ಜಾಪ್ಪೆ ಮಾತ್ರ ‘ಆಫ್ರಿಕನ್ಸ್’ ಕುರಿತು ಮಾತನಾಡಲು ಸಿಕ್ಕ ವನಿತೆ. ಟೋಂಬೋಕ್ಟೋ ಮ್ಯಾನುಸ್ಕ್ರಿಪ್ಟ್ಸ್ ಪ್ರಾಜೆಕ್ಟಿನ (Tombouctou Manuscripts Project) ಭಾಗವಾಗಿ ಸಂಶೋಧನೆ ನಡೆಸುವಾಗ ಸಾರಾ ೨೦೦೮ ರಲ್ಲಿ ಆಫ್ರಿಕಾದ ಗ್ರಂಥಗಳ ಕುರಿತು ಕೇಳಲಾರಂಭಿಸುತ್ತಾರೆ. ಜೋಹಾನ್ಸ್ ಬರ್ಗ್‌ನ ವಿಟ್ವಾಟರ್ಸ್ಟಾಂಡ್ ಯುನಿವರ್ಸಿಟಿಯಲ್ಲಿ (University of the Witwatersrand) ಇತಿಹಾಸಕಾರ’ಳಾಗಿ ಸಾರಾ ಇಂದು ಅರೇಬಿಕ್, ಆಫ್ರಿಕನ್-ಅರಬಿ ಹಾಗೂ ಜಾವಿ ಭಾಷೆಯಲ್ಲಿ ಗ್ರಂಥ ವಾಚನ ನಡೆಸುತ್ತಿದ್ದರು. ‘ಗುಲಾಮೀ ವಂಶಸ್ಥರಾದ ಕೇಪ್ ಮಲಾಯ್ ಮುಸ್ಲಿಮರಿಗೆ ಕಿತಾಬ್‌ಗಳಲ್ಲದೆ ಬೇರೊಂದು ಪರಂಪರಾಗತ ಆಸ್ತಿಯಿಲ್ಲ..!’ ಸಾರಾ ತನ್ನ ಮಾತನ್ನು ಮುಂದುವರಿಸಿದರು ‘ಕಿತಾಬ್ ಅಂದರೆ ವೈಯಕ್ತಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಉತ್ಪನ್ನ. ಅಂತಹ ಕಿತಾಬ್‌ಗಳು ಕಾಲಹರಣವಾಗಿ ಹೋದರರೂ ಪ್ರತೀ ಗ್ರಂಥಗಳ ಮಹತ್ವ ತುಂಬಾ ಮಹತ್ತರವಾದ್ದು. ಬಹುಕಾಲದಿಂದ ಗುಲಾಮಗಿರಿ ಹಾಗೂ ವರ್ಣಭೇಧದಿಂದ ಕಳೆದ ನಿಮಿತ್ತ ಸಮಾಜ ಕಡೆಗಣಿಸಿದರೂ ಉತ್ತಮ ಜೀವನ ‘ಗ್ರಂಥ’ ನೀಡಿದೆ ಎಂದರೆ ತಪ್ಪಾಗಲಾರದು..’

ಹಳದಿ ಬಣ್ಣವುಳ್ಳ ಗ್ರಂಥ ವಾಚಿಸುವಾಗ ತನ್ನ ಕುಟುಂಬದ ಬೇರು ಇಂಡೋನೇಷ್ಯಾದಲ್ಲಿವೆ ಎಂದು ಇಬ್ರಾಹೀಮರಿಗೆ ವೇದ್ಯವಾದವು. ಕೇಪ್ ಟೌನ್‌ನಿಂದ ನಲವತ್ತೈದು ನಿಮಿಷಗಳ ದೂರದಲ್ಲಿರುವ Simon’s Town ಲ್ಲಿ ಇಬ್ರಾಹೀಮರ ಜನನ. ಶಾಲಾ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಬೀದಿಗಳಲ್ಲಿ ಅಲೆದಾಡಿ, ಖುರ್‌ಆನ್ ಕಲಿಯಬೇಕು ಎಂಬ ತನ್ನ ತಂದೆಯ ನಿರೀಕ್ಷೆ ಹುಸಿ ಮಾಡಿದ ನತದೃಷ್ಟ ವ್ಯಕ್ತಿ ಎಂದು ತನ್ನನ್ನು ಪರಿಚಯಿಸುತ್ತಾರೆ. ಇನ್ನು ಗ್ರಂಥವನ್ನು ನಾಜೂಕಾಗಿ ಸಂರಕ್ಷಿಸಿ ಇಟ್ಟ ತಂದೆಯ ಕಪ್ಪು ಸೂಟ್‌ಕೇಸ್ ಹಾಗೂ ತನಗೆ ಐದು ಅಥವಾ ಆರು ವರ್ಷವಿದ್ದಾಗ ‘ಅದನ್ನು ಮುಟ್ಟಬೇಡ’ ಎಂಬ ತಂದೆಯ ಶಾಸನವೂ ಇಬ್ರಾಹೀಮರ ಮನದಿಂದ ಮಾಯವಾಗಿಲ್ಲ. ಇಬ್ರಾಹೀಂ ಕುಡಿದದ್ದು ವರ್ಣಭೇದದ ಕಹಿ ನೀರು ಮಾತ್ರವಲ್ಲ ಹೊರತಾಗಿ ದಕ್ಷಿಣಾಫ್ರಿಕ ಸರ್ಕಾರವು ೧೯೫೦ ರಲ್ಲಿ ಜಾರಿಗೊಳಿಸಿದ ಗ್ರೂಪ್ ಏಷ್ಯನ್ ಕಾಯ್ದೆ ಅಂದರೆ ಲಕ್ಷಗಟ್ಟಲೆ ಜನ ತಮ್ಮ ತಲೆಮಾರುಗಳಿಂದ ಮನೆಕಟ್ಟಿ ವಾಸಿಸುತ್ತಿದ್ದು, ಅವರನ್ನು ಬಲವಂತವಾಗಿ ಹೊರಗಟ್ಟುವ ಮೂಲಕ ಸಮುದಾಯವನ್ನು ಭಿನ್ನವಾಗಿಸುವಲ್ಲೂ ಇಬ್ರಾಹೀಂ ಬಲಿಪಶುವಾಗಿದ್ದರು. ತನ್ನ ಹದಿ ಹರೆಯದ ಸಮಯ ಇಕ್ಕಟ್ಟಾದ ಫ್ಲಾಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದರು. ‘ನಮ್ಮ ಕೈಯಲ್ಲಿದ್ದ ಅನೇಕ ಗ್ರಂಥಗಳು ನಶಿಸಿ ಹೋದದ್ದು ಆ ದಿನಗಳಲ್ಲೇ ಆಗಿರಬಹುದು..!’ ಎನ್ನುತ್ತಾರೆ ಇಬ್ರಾಹೀಂ. ‘ದೊಡ್ಡ ಅವಿಭಕ್ತ ಕುಟುಂಬವಾದ ಕಾರಣ ಎಲ್ಲಾ ಸಾಮಾಗ್ರಿಗಳು ಖರೀದಿಸಲು ಸಾಧ್ಯವಾಗಲಿಲ್ಲ. ಅವರು ನನ್ನ ಕುಟುಂಬವನ್ನು ನಿರ್ದಯವಾಗಿ ಟ್ರಕ್ಕ್‌ಗೆ ಎಳೆದೊಯ್ಯಲಾಯಿತು. ಅಲ್ಲಿ ಟ್ರಕ್ಕಿಗೇರಿಸುವವರು ಮಾತ್ರವಿದ್ದು, ಊರವರು ಟ್ರಕ್ಕ್ ಕಂಡಷ್ಟರಲ್ಲೇ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಓಡಿಹೋದರು. ಅತ್ಯಗತ್ಯ ಉಪಕರಣಗಳು ಬಿಟ್ಟು ತೆಗೆದುಕೊಳ್ಳಲು ಸಾಧ್ಯವಾಗದ ಎಲ್ಲವನ್ನೂ ವಾಸವಿದ್ದ ಆ ಮಣ್ಣಿನಲ್ಲಿಯೇ ಅವಶೇಷಿಸಲಾಯಿತು..’ ಎಂದು ಇಬ್ರಾಹೀಂ ವಿಷಾದ ವ್ಯಕ್ತಪಡಿಸಿದರು. ನಂತರ, ಅವರು ಬೀಚ್ ಬಳಿಯ ಸಣ್ಣ ಗುಡಿಸಲಿನಲ್ಲಿ ವಾಸ ಹೂಡಲು ಪ್ರಾರಂಭಿಸಿದರು. ಬಿಳಿಯರಿಗೆ ಆಹಾರವನ್ನು ಬೇಯಿಸಿ, ನೌಕಾಪಡೆಯಲ್ಲಿ ಸೇರಿ ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದರು.

Simon’s Town

ಆಫ್ರಿಕಾದ ಗ್ರಂಥ ಸಂರಕ್ಷಕರಲ್ಲಿ ಇಬ್ರಾಹೀಂ ಮ್ಯಾನುವೇಲಿಯು ಒಬ್ಬರು. ನಾವು ಸ್ಕೈಪಿನ ಮೂಲಕ ವಿನಿಮಯಿಸಲು ಕೆಲ ಕಾಲ ಕಳೆದರೂ ಭೇಟಿಯಾಗಿರಲಿಲ್ಲ. ಎಪ್ಪತ್ತೊಂದು ವರ್ಷದ ಇಬ್ರಾಹೀಮರನ್ನು ಅವರ ಮನೆಯಲ್ಲೇ ಭೇಟಿಯಾದೆ. ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿಲ್ಲ ಎಂದು ಆರ್ಧ್ರದಿಂದ ಸಾರಾಗೆ ಹೇಳಿದರು. ನಾಲ್ಕು ಕೊಠಡಿಯಿಂದಾವೃತವಾದ ಪುಟ್ಟ ಮನೆ, ಅದರೊಳಗೆ ಇಬ್ರಾಹೀಮರ ಸುಂದರ ಜಗತ್ತು. ಅಲ್ಲಿನ ‘ಬಾಗಿಲ ಅಂತರ’ವು ಇತರ ಮನೆಗಳಿಂದ ಪ್ರತ್ಯೇಕಿಸುವ ಅಂಶವೆಂದು ಭಾವಿಸಿದೆ. ಮತ್ತೊಂದು ಗಮನಾರ್ಹ ಸಂಗತಿ ಹೆಚ್ಚಿನ ಸಂಧ್ಯಾ ವೇಳೆಗಳಲ್ಲಿ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿ ಸಂಚರಿಸುವ ಕಾರುಗಳ ಗುಂಪಿನ ದೃಶ್ಯ ಕಾಣ ಸಿಗುವುದು ಖಂಡಿತಾ. ಆಜು ಬಾಜಿನಲ್ಲಿ ಕರ್ಕಶಗಳಿಂದ ಕೂಡಿದ್ದರೂ ಇಬ್ರಾಹೀಮರು ತನ್ನ ಸುಂದರ ಜಗತ್ತನ್ನು ವಾಸ್ತವದೊಂದಿಗೂ ಕಲ್ಪನೆಯೊಂದಿಗೂ ಬೇರ್ಪಡಿಸಲಾಗದಂತೆ ಹೆಣೆದಿರುವರು. ಜೋಪಡಿಯ ಅಂಚುಗಳು ಕೇಪ್ ಮಲಾಯ್ ಮುಸ್ಲಿಮರ ಐತಿಹ್ಯ ಹಾಗೂ ವರ್ತಮಾನದ ಚಿತ್ರಣಗಳು, ಇತರೆ ದಾಖಲೆಗಳನ್ನು ವಿವರಿಸುತ್ತಿದೆ ಎಂದು ಭಾಸವಾಗುತ್ತದೆ.

೧೯೯೨ ಸೆಪ್ಟೆಂಬರ್ ೭ ರಂದು ಇಬ್ರಾಹೀಮರ ತಂದೆ ಅಸುನೀಗಿದರು. ತಂದೆಯ ಮರಣದ ಐದು ವರ್ಷಗಳ ಬಳಿಕ ಕುಟುಂಬದ ಆಸ್ತಿಯಾಗಿರುವ ಹಳದಿ ಬಣ್ಣವುಳ್ಳ ಗ್ರಂಥವನ್ನು ಅನ್ವೇಷಿಸಲು ಖುದ್ದಾಗಿ ತಂದೆ ಕನಸಿನಲ್ಲಿ ಬಂದು ಸೂಚಿಸುತ್ತಾರೆ. ಇಬ್ರಾಹಿಂ ಸತತ ಮೂರು ದಿನ ಇದೇ ಕನಸು ಕಂಡರು. ಇದಕ್ಕಾಗಿ ತನ್ನ ಚಿಕ್ಕಮ್ಮ ಕೋಬೆಯನ್ನು ಭೇಟಿ ಮಾಡಿ, ಗ್ರಂಥದ ಕುರಿತು ಮಾಹಿತಿ ಪಡೆಯಲು ಪ್ರಾರಂಭಿಸಿದರು. ಹುಡುಕಾಟದ ಅಂತಿಮ ವೇಳೆಯಲ್ಲಿ ಆ ಗ್ರಂಥವನ್ನು ಕೋಬೇಯ್ ಇಬ್ರಾಹೀಂಗೆ ಹಸ್ತಾಂತರಿಸಿದರು. ಆ ಗ್ರಂಥ ವಾಚಿಸುವಾಗ ಇಬ್ರಾಹೀಮರ ಪೂರ್ವಜರನ್ನು ಉಲ್ಲೇಖಿಸಲಾಗಿತ್ತು. ತನ್ನ ಕುಟುಂಬದ ವಂಶಾವಳಿಯ ನಕ್ಷೆಯಿಂದ ತನ್ನ ತಲೆಮಾರು ಇಂಡೋನೇಷ್ಯಾದ ಸುಂಬಾವ ದ್ವೀಪದ (Sumbawa Island) ದೊರೆ ಅಬ್ದುಲ್ ಖಾದರ್ ಜೀಲಾನಿ ಡೆಯ್ ಕೋಸಾ ಹಾಗೂ ಅವರ ಮಗ ಇಮಾಂ ಇಸ್ಮಾಈಲ್ ಡೆಯ್ ಮಲೀಲಾಗೆ ತಲುಪುತ್ತದೆ ಎಂದು ಇಬ್ರಾಹೀಮರಿಗೆ ಗ್ರಾಸವಾದವು. ೧೭೫೩ ರಲ್ಲಿ ಡಚ್ಚರು ಅವರನ್ನು ಕೇಪ್ ಆಫ್ ಗುಡ್ ಹೋಪ್ (Cape of good hope) ಗೆ ಕರೆತಂದು ಸೈಮನ್ಸ್ ಪಟ್ಟಣದ ಒಂದು ಜೈಲಿನಲ್ಲಿ ಬಂಧಿಸಿದರು. ೧೭೫೫ ರಲ್ಲಿ ಗೋಡೆ ಅಗೆದು ಜೈಲಿನಿಂದ ತಪ್ಪಿಸಿಕೊಂಡರು. ಶೀಘ್ರದಲ್ಲೇ ಅಬ್ದುಲ್ ಖಾದಿರ್ ಹಾಗೂ ಮಗ ಜನ ಸೇವೆಯಲ್ಲಿ ನಿರತರಾಗಿ ಅವರ ಸಮಸ್ಯೆಗೆ ಸ್ಪಂದಿಸಲು ತೊಡಗುತ್ತಾರೆ. ಮುಂದೆ ನಾಯಕರಾಗಿ ಬೆಳೆಯತೊಡಗಿದರು. ಸೈಮನ್ಸ್ ಟೌನ್‌ನ ಒಂದು ಬೆಟ್ಟದ ಮೇಲೆ ಅವರ ಮಖ್‌ಬರ ಇದೆ.

ತುಂತುರು ಮಳೆ ಬೀಳುವ ಮೊದಲು ನಾವು ಖಬರಿನ ಬಳಿ ಸಾಗಿದೆವು. ಮಖ್‌ಬರದಲ್ಲಿ ವಯೋವೃದ್ಧರೋರ್ವರು ಖುರ್‌ಆನ್ ಪಠಿಸುತ್ತಿದ್ದರು. ಅವರ ಪತ್ನಿ ಪಾರಾಯಣಗೈಯ್ಯುತ್ತಿದ್ದ ಪತಿಗೆ ಕೊಡೆ ಹಿಡಿಯುವ ದೃಶ್ಯ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದವು..! ಟೌನಿನ ಕೆಳಭಾಗದಲ್ಲಿರುವ ಸಮುದ್ರ ತೀರದಲ್ಲಾಗಿದೆ ಇಬ್ರಾಹೀಮರ ಚಿಕ್ಕಮ್ಮ ಕೋಬೆಯ ಜೋಪಡಿ. ಮನೆಯ ಪಕ್ಕದಲ್ಲಿ ಸೈಮನ್ಸ್ ಸ್ಕೂಲ್ ಹಾಗೂ ಮಸೀದಿಯಿದೆ. ೧೯೨೩ ರಲ್ಲಿ ನಿರ್ಮಿಸಲಾದ ಸುಂದರ ಶಾಲೆಯು ಸಮುದ್ರದ ಹೃದ್ಯ ನೋಟ ನೀಡುವುದು ಖಂಡಿತಾ. ೧೯೯೯ ರಲ್ಲಿ ಓರ್ವ ಅನುವಾದಕನೊಂದಿಗೆ ಸುಂಬಾವೆಗೆ ಪ್ರಯಾಣಿಸಲು ಇಬ್ರಾಹೀಂ ಅನ್ನು ಪ್ರೇರೇಪಿಸಿದ ವಸ್ತು ‘ದೈವೀ ವಾಣಿ’ಯಾಗಿದೆ. ಅವರನ್ನು ಕಂಡೊಡನೆ ಗ್ರಾಮಸ್ಥರ ಕಣ್ಣು ತುಂಬಿದ್ದವಂತೆ. ಡಚ್ ಈಸ್ಟ್ ಇಂಡಿಯಾ ಕಂಪನಿ ಅಸಹಕಾರದಿಂದಾಗಿ ನಾಯಕರನ್ನು ಗುಲಾಮರಂತೆ ಕರೆದೊಯ್ಯುವ ಚಿತ್ರಣವು ಇಬ್ರಾಹೀಮರ ಮನಸ್ಸಿಗೆ ಘಾಸಿ ಮಾಡಿದ್ದವು. ‘ನನಗೆ ರಾಜಕೀಯ ಸ್ವಾಗತ ನೀಡಲಾಯಿತು. ನನ್ನ ಇಡೀ ಶರೀರದಲ್ಲಿ ಒಮ್ಮೆಲೇ ರಕ್ತ ಸಂಚಾರವಾದವು. ಅದಲ್ಲದೆ ನನ್ನ ತಂದೆಗೆ ‘ಗ್ರಾಮ ನಾಯಕ ಪಟ್ಟ’ ನೋಡಿ ಆಘಾತಕ್ಕೊಳಗಾದೆ..’ ಎಂದು ಸ್ವತಃ ಇಬ್ರಾಹಿಂ ನಮ್ಮಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು. ತನ್ನ ಕುಟುಂಬದ ವಂಶಾವಳಿ ಗುರುತಿಸುವ ಆ ಹಳದಿ ಬಣ್ಣವುಳ್ಳ ಕಿತಾಬಿನ ಪ್ರತಿ ಇಬ್ರಾಹೀಂ ನಮಗೆ ತೋರಿಸಿದರು. ಇದರ ಒರ್ಜಿನಲ್ ಕಾಪಿ ಎಲ್ಲಿದೆ ಎಂಬ ನನ್ನ ಪ್ರಶ್ನೆಗೆ ವಿಷಣ್ಣತೆಯ ನೋಟ ಉತ್ತರವಾಗಿಸಿದರು. ಬಳಿಕ ಮುಂದುವರೆಸಿದರು- ‘ಆ ಕಿತಾಬು ಹಾಗೂ ಇತರೆ ಎರಡು ಕಿತಾಬನ್ನು ೩೦೦೩ ರಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಿದೆ. ಮತ್ತೆ ಆ ವ್ಯಕ್ತಿಯನ್ನು ನಾನು ನೋಡಲಿಲ್ಲ..!’ ತನ್ನ ಸಂಶೋಧನೆ ತೀವ್ರಗೊಳಿಸಲು ಹಾಗೂ ನಷ್ಟವಾದ ಕಿತಾಬನ್ನು ಸಂಗ್ರಹಿಸುತ್ತೇನೆ ಎಂದು ಇಬ್ರಾಹೀಂ ಸಾರಾಳೊಂದಿಗೆ ಹೇಳಿ ಸಂಭಾಷಣೆಗೆ ವಿರಾಮ ಹಾಕಿದರು.

ಇಂಡೋನೇಷ್ಯಾ ಹಾಗೂ ದಕ್ಷಿಣ ಆಫ್ರಿಕಾದ ಜನರು ಇಬ್ರಾಹೀಮರ ಕತೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿದ್ದರೂ ಅದನ್ನು ಒದಗಿಸಬೇಕೆಂಬ ನಗ್ನ ಸತ್ಯವನ್ನು ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ. ‘ಇಬ್ರಾಹೀಂ ತನ್ನ ಕುಟುಂಬದ ಬೇರನ್ನು ಹುಡುಕಲು ಕಠಿಣ ಪ್ರಯಾಣ ಕೈಗೊಂಡಿದ್ದಾರೆ..’ ಎಂದು ಸಾರ ತನ್ನ ಮಾತನ್ನು ಮುಂದುವರಿಸಿದರು ‘ಆದ್ದರಿಂದ ಇಬ್ರಾಹೀಮರ ದೃಷ್ಟಿಕೋನ ಆಳ ಪರಂಪರೆಯ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಅನೇಕರು ಇಬ್ರಾಹೀಮರ ಬಳಿಯಿರುವ ಕಿತಾಬುಗಳನ್ನು ಸಂರಕ್ಷಿಸಲು ಸೈಮನ್ಸ್ ಟೌನ್‌ನ ಹೆರಿಟೇಜ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಅನುಮತಿ ನೀಡದ್ದಕ್ಕೆ ಇದಲ್ಲದೆ ಬೇರೆ ಕಾರಣ ಹುಡುಕುವ ಅಗತ್ಯವಿಲ್ಲ!’.

Iziko Social History Resource

ನಾವು ಪ್ಯಾಟಿ ಆಂಟಿ ಎಂದು ಕರೆಯಲ್ಪಡುವ ಝೈನಬ್ ಡೇವಿಡನ್ಸ್ ಹಾಗೂ ಅವರ ಪತಿ ಸೆಡಿಕ್‌ರ ಮನೆಗೆ ಭೇಟಿ ನೀಡಿದೆವು. ಮನೆಯ ನೆಲ ಮಹಡಿಯಲ್ಲಿ (ಮ್ಯೂಸಿಯಂ) ಹಳೆಯ ಬಟ್ಟೆ ಸಂಗ್ರಹ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಗೋಡೆ ಚಿತ್ರ ಹಾಗೂ ಇತರೆ ದಾಖಲೆಗಳಿಂದ ತುಂಬಿದ್ದವು. ಇದಲ್ಲದೆ, ಅರೇಬಿಕ್ ಹಾಗೂ ಜಾವಿ ಭಾಷೆಯಲ್ಲಿ ಹಲವಾರು ಕಿತಾಬ್‌ಗಳನ್ನು ಗಾಜಿನಡಿಯಲ್ಲಿ ಸಂರಕ್ಷಿಸಿಟ್ಟಿದ್ದರು. ಮ್ಯೂಸಿಯಂನಲ್ಲಿ ವಿಶೇಷ ಮೇಲ್ವಿಚಾರಕರು ಇಲ್ಲದಿದ್ದರೂ ಮನುಷ್ಯ ಸ್ಪರ್ಶದಿಂದ ಕಿತಾಬ್‌ಗಳಿಗೆ ಒಂಚೂರು ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಅವರ ಸಂಗ್ರಹದಲ್ಲಿರುವ ಅತ್ಯಂತ ಹಳೆಯ ಕಿತಾಬ್ ತೋರಿಸಲು ಸೆಡಿಕ್ ನಮ್ಮ ಬಳಿ ಬಂದರು. ಪ್ಯಾಟಿ ಆಂಟಿ ಬೆಳೆದ ಈ ಮನೆ ೧೯೯೮ ರಲ್ಲಿ ವಸ್ತು ಸಂಗ್ರಹಾಲಯವಾಯಿತು. ‘ನಮ್ಮ ಸಮುದಾಯ ಒಂದು ಅದ್ಭುತ..’ ಎಂದು ಪ್ಯಾಟಿ ಆಂಟಿ ಮುಗುಳ್ನಕ್ಕು ಪುನಃ ಮಂಡಿಸಿದರು ‘ಜನರು ಈ ಮ್ಯೂಸಿಯಂ ಅನ್ನು ನಡೆಸಲೋಸ್ಕರ ಅವರ ಕೈವಶವಿರುವುದನ್ನು ನಮಗೆ ನೀಡಿದ್ದರು. ಈ ಕೂಟದಲ್ಲಿ ಇಬ್ರಾಹೀಂ ಸಾಕಷ್ಟು ಭಾವಚಿತ್ರ, ಪತ್ರಿಕಾ ಪ್ರಕಟಣೆಗಳು ನೀಡಿದರು. ಇದಲ್ಲದೆ ಒಳ್ಳೆಯ ಭವಿಷ್ಯಕ್ಕಾಗಿ ದುಡಿದರು. ಮ್ಯೂಸಿಯಮಿನ ಉದ್ಘಾಟನಾ ಸಮಾರಂಭದಂದು ಸಾವಿರಗಟ್ಟಲೆ ಜನ ಸೇರಿದ್ದರು..’ ವಿಷಾದದ ಸಂಗತಿಯೆಂದರೆ ಇಲ್ಲಿ ಪ್ಯಾಟಿ ಆಂಟಿಯ ಕುಟುಂಬದ ಕಿತಾಬ್‌ಗಳು ಯಾವುದು ಇಲ್ಲ. ಎಲ್ಲಿದೆ ಎಂಬ ನಮ್ಮ ಪ್ರಶ್ನೆಗೆ ‘ಅದನ್ನು ಅವರ ಹಿರಿಯ ಸೋದರಳಿಯನ ಬಳಿಯಿದೆ. ಅದು ಭಾರೀ ಅನರ್ಘ್ಯ ಸಂಪತ್ತು..!’ ಎಂದು ಪ್ಯಾಟಿ ಆಂಟಿ ಸಂಭಾಷಣೆಗೆ ಗೆರೆ ಎಳೆದರು.

ಪ್ರತೀ ಕುಟುಂಬಗಳು ಕಿತಾಬನ್ನು ಪರಿಗಣಿಸಿದ ರೀತಿ ವಿಭಿನ್ನ. ೯೪ ವರ್ಷ ಪ್ರಾಯದ ಇಸ್ಮಾಯಿಲ್ ಪೀಟರ್ಸನ್ ಹಾಗೂ ಅವರ ಪತ್ನಿಯ ಬಳಿ ಸಾರಾ ಕರೆದೊಯ್ದರು. ದರ್ಜಿಯಾಗಿದ್ದ ಅವರು ನನ್ನನ್ನು ಕಂಡೊಡನೆ ಅರೇಬಿಕ್ ಭಾಷೆಯ ಕೆಲವು ಪ್ರಯೋಗಗಳನ್ನು ಉಡಾಯಿಸಿದರು. “ಬಂದರಿನಲ್ಲಿ ಕೆಲಸ ಮಾಡುವಾಗ ಅನೇಕಾರು ಭಾಷೆಗಳೊಂದಿಗೆ ಒಡನಾಟ ಬೆಳೆಸಿದ್ದೆ” ಎಂದು ನನ್ನ ಆಶ್ಚರ್ಯಕ್ಕೆ ಜವಾಬು ನೀಡಿದರು. ಈ ದಂಪತಿಗಳು ಕೇಪ್ ಟೌನಿನ ಕೈಗಾರಿಕಾ ವಲಯದ ಪಕ್ಕದಲ್ಲಿರುವ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಏತನ್ಮಧ್ಯೆ ಇಸ್ಮಾಯಿಲ್, ತನ್ನಜ್ಜನ ಆಪ್ತ ವ್ಯಕ್ತಿಯಾಗಿದ್ದರು. ಅವರ ಜೊತೆ ಮಕ್ಕಾಗೆ ಪ್ರಯಾಣ ಕೈಗೊಂಡಿದ್ದರು ಎಂದು ಖುದ್ದಾಗಿ ಸಾರ ನನ್ನೊಂದಿಗೆ ಹೇಳಿದಳು. ಹತ್ತು ವರ್ಷಗಳ ಹಿಂದೆ ಸಾರಾಗೆ ಇಸ್ಮಾಯಿಲ್ ತೋರಿಸಿದ ಕೆಲವು ‘ಕುಟುಂಬ ಕಿತಾಬ್‌’ಗಳನ್ನು ತೋರಿಸಬಹುದಾ ಎಂದು ಕುತೂಹಲ ವ್ಯಕ್ತಪಡಿಸಿದರು. ಅವರು ಒಳಗೆ ಹೋಗಿ ಪತ್ರಿಕೆ ಪ್ರಕಟಣೆ ಹಾಗೂ ತಾನು ಮತ್ತು ಮಲೇಷ್ಯಾದ ರಾಜ ಸಂಭಾಷಣೆ ನಡೆಸುವ ಕೆಲವು ಫೋಟೋದೊಂದಿಗೆ ಮರಳಿದರು. ವರ್ಣಭೇದ ನೀತಿಯ ಬಳಿಕ ಕೇಪ್ ಮಲಾಯ್ ಮುಸ್ಲಿಮರನ್ನು ಮಲೇಷ್ಯಾದ ನಾಗರಿಕ ಮತ್ತು ಧಾರ್ಮಿಕ ಚಳುವಳಿಗೆ ಕೈಜೋಡಿಸಲು ಅವರು Indonesian and Malasian Seamen club ಎಂಬ ಸಮಿತಿ ರಚಿಸಿದರು. ತನ್ನ ‘ಕುಟುಂಬ ಕಿತಾಬ್’ ಎಲ್ಲೂ ನಶಿಸದೆ, ಬೀದಿಯ ಪಕ್ಕದಲ್ಲೇ ವಾಸಿಸುವ ತಮ್ಮನ ಕೈಯ್ಯಲ್ಲಾದರು ಇದೆ ಎನ್ನುವುದು ಸ್ವಲ್ಪ ಸಮಾಧಾನ ಸಂಗತಿ. ಆದರೆ ಸಹೋದರ ಇವರೊಂದಿಗೆ ಹಂಚಿಕೊಳ್ಳುವುದಿಲ್ಲ ಎನ್ನುವುದು ಖೇದಕರ.

ಇಸ್ಮಾಯಿಲರ ಪೀಳಿಗೆ ನಶಿಸಿ ಹೋದರೆ ಕಿತಾಬ್‌ಗಳ ಉಳಿವಿಗಾಗಿ ಗಂಭೀರ ಕಾಳಜಿ ಅಗತ್ಯ. ಫಾತಿಮಾ, ಕೇಪ್ ಟೌನಿನಲ್ಲಿರುವ Iziko Social History Resource ಕೇಂದ್ರದಲ್ಲಿ ಕಿತಾಬ್ ಸಂಗ್ರಹಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಳಿ ಕೈಗವಸು ಧರಿಸಿ ಅವರು ಆ ಕಿತಾಬುಗಳನ್ನು ಗ್ರಂಥ ಸಂಗ್ರಹ ಪೆಟ್ಟಿಗೆಯಿಂದ ಹೊರತೆಗೆಯುತ್ತಾರೆ. ಅವುಗಳನ್ನು ಕಾಗದದ ತುಂಡುಗಳಿಂದ ಮುಚ್ಚುಲ್ಪಟ್ಟರೂ ಪ್ರದರ್ಶನಕ್ಕಾಗಿ ಪಟ್ಟಿ ಮಾಡಲೋ, ದಾಖಲಿಸಲೋ ಹೋಗಲಿಲ್ಲ. ನಷ್ಟಹೊಂದಿದ ಕಿತಾಬ್‌ಗಳ ಬಗ್ಗೆಯಿರುವ ಪ್ರಶ್ನೆಗೆ ಫಾತಿಮಾರ ಬಳಿ ಸ್ಪಷ್ಟ ಉತ್ತರವಿಲ್ಲ. ಅವಳೊಂದಿಗೆ ಮಾತ್ರವಲ್ಲ, ಸಹೋದ್ಯೋಗಿಗಳಿಗೂ ಕೂಡಾ! ಇದು ಸತ್ಯ, ಯಾವುದೇ ಸಂಶಯ ಪಡಬೇಡಿ. ಕೇಪ್ ಮುಸ್ಲಿಮರ ಪರಂಪರೆ ನಿರ್ಧರಿಸುವಲ್ಲಿ ವಿಶಿಷ್ಟ ಪಾತ್ರ ವಹಿಸಿದ ಕಿತಾಬುಗಳು ಒಂದು ದಿನ ನಿಗೂಢ ರಹಸ್ಯ ಬಯಲು ಮಾಡುತ್ತದೆ ಎಂಬ ನಿರೀಕ್ಷೆ ಹುಸಿಯಾಗದಿರಲಿ!!

ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು

ಹಳದಿ ನಾಯಿ

ಭಾಗ-3

ನಾನು ಅಲ್ಲಿಂದ ಎದ್ದು, ಮುಂದೆ ಸಾಗಿದೆ. ಸಯ್ಯದ್ ರಜಿ಼ಯ ನಿವಾಸದ ಮುಖ್ಯದ್ವಾರದ ಬಳಿ ದೊಡ್ಡ ಹಳದಿ ನಾಯಿಯೊಂದು ನಿಂತಿರುವುದನ್ನು ಅಲ್ಲಿಂದ ಸಾಗುವಾಗ ಕಂಡೆ. ಈ ಹಳದಿ ನಾಯಿಯು ಶೇಖ್ ಹಮ್ಜಾನ ಭವನದ ಎದುರು ಸಹ ನಿಂತಿದ್ದು ನೋಡಿದ್ದೆ. ಅಬು ಜಾಫರ್ ಶಿರಾಜಿಯ ಮನೆಯ ಮುಂದೆ ಮಲಗಿಕೊಂಡಿದ್ದು ಕಂಡೆ ಹಾಗೂ ಅಬು ಮುಸ್ಲಿಂ ಬಾಗ್ದಾದಿಯ ಮಹಲಿನಲ್ಲಿ ಬಾಲ ಮುದುರಿಕೊಂಡು ನಿಂತದ್ದು ಕಂಡೆ. ಆಗ ನಾನುಡಿದೆ., ಹೇ ಶೇಖರೇ, ನಿಮ್ಮ ಅನುಯಾಯಿಗಳು ಹಳದಿ ನಾಯಿಯ ಆಶ್ರಯದಲ್ಲಿದ್ದಾರೆ. ನಾನು ಈ ರಾತ್ರಿ ಮತ್ತೆ ಅಬು ಮುಸ್ಲಿಂ ಬಾಗ್ದಾದಿಯ ಮನೆಗೆ ಹೋದೆ. ಆಗ ನಾನು ಸ್ವಯಂ ನನ್ನನ್ನೇ ಪ್ರಶ್ನಿಸಿದೆ- ‘ಹೇ! ಖಾಸಿಂ ನೀನು ಇಲ್ಲಿ ಏಕೆ ಬಂದಿದೆಯಾ? ಅಬು ಖಾಸಿಂನು ನುಡಿದನು’ ‘ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಪಂಥದ ಆಹ್ವಾನ ನೀಡಲು ಬಂದಿದ್ದೇನೆ.


ಈ ರಾತ್ರಿಯೂ ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯನ್ನು ಅಬು ಮುಸ್ಲಿಂ ಬಾಗ್ದಾದಿಯ ಭೋಜನಹಾಸಿನ ಮೇಲೆ ಕುಳಿತಿರುವುದನ್ನು ಕಂಡೆ. ಅಬು ಮುಸ್ಲಿಂ ಬಾಗ್ದಾದಿಯು ನನಗೆ ಊಟಕ್ಕೆ ಆಹ್ವಾನಿಸಿದನು. ಆದರೆ ನಾನು ತಂಪಾದ ನೀರಿನಿಂದಲೇ ನನ್ನನ್ನು ಸಂತೃಪ್ತಪಡಿಸಿಕೊAಡೆ. ಹಾಗೂ ನುಡಿದೆ ‘ಹೇ ಅಬು ಮುಸ್ಲಿಂ ಜಗತ್ತು ದಿನವಾಗಿದೆ. ಹಾಗೂ ನಾವು ಅದರಲ್ಲಿ ಉಪವಾಸ ವ್ರತ ಆಚರಿಸುವರಾಗಿದ್ದೇವೆ’. ಇದನ್ನು ಕೇಳಿ ಅಬು ಮುಸ್ಲಿಂ ಬಾಗ್ದಾದಿ ಅತ್ತನು ಹಾಗೂ ಭೋಜನ ಮಾಡಿದನು. ಜತೆಗಿದ್ದ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ಸಹ ಅತ್ತನು ಹಾಗೂ ಹಬೀಬ್ ಬಿನ್ ಯಾಹ್ಯಾ ಸಹ ಹೊಟ್ಟೆ ತುಂಬಾ ತಿಂದನು.
ತದನAತರ ಮತ್ತೆ ಆ ನರ್ತಕಿ ಬಂದಳು, ನಾನು ಹೊರಡಲನುವಾದೆ. ಆ ನರ್ತಕಿಯ ಹೆಜ್ಜೆಯ ಸಪ್ಪಳ ಹಾಗೂ ಗೆಜ್ಜೆಯ ಧ್ವನಿಯ ನನ್ನನ್ನು ಹಿಂಬಾಲಿಸಿತು. ನಾನು ಕಿವಿಯಲ್ಲಿ ಬೆರಳನ್ನು ಇಟ್ಟುಕೊಂಡು ಮುಂದೆ ಸಾಗಿದೆ.


ಮೂರನೇ ದಿನ ಮತ್ತೇ ನಗರದ ಪ್ರದಿಕ್ಷಣೆ ಮಾಡಿದೆ. ಎರಡು ದಿನಗಳಿಂದ ನಾನು ಯಾವ್ಯಾವ ದೃಶ್ಯಗಳನ್ನು ಕಂಡಿದ್ದೆ, ಅದರಲ್ಲಿ ಯಾವುದೇ ಬದಲಾವಣೆಯನ್ನು ಗ್ರಹಿಸಲಿಲ್ಲ. ರಾತ್ರಿ ಮತ್ತೆ ನಾನು ಅಬು ಮುಸ್ಲಿಂ ಬಾಗ್ದಾದಿಯ ಬಾಗಿಲ ಮುಂದೆ ಹಾಜರಾದೆ. ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಬೋಧನೆಗಳು ಮನವರಿಕೆ ಮಾಡಿಸಲು ಬಂದಿದ್ದೇನೆ ಎಂದು ನನಗೆ ಸ್ಪಷ್ಟವಾಗಿ ನೆನಪಿತ್ತು. ಹೀಗಾಗಿ ನಾನು ನನ್ನನ್ನು ಏನನ್ನೂ ಪ್ರಶ್ನಿಸಿಕೊಳ್ಳಲಿಲ್ಲ. ನೇರವಾಗಿ ಒಳಗೆ ಪ್ರವೇಶಿಸಿದೆ. ಇಂದು ಸಹ ಹಬೀಬ್ ಬಿನ್ ಯಾಹ್ಯಾ ಭೋಜನದ ಹಾಸಿನ ಮೇಲೆ ಹಾಜರಿದ್ದನು. ಅಬು ಮುಸ್ಲಿಂ ಬಾಗ್ದಾದಿಯು ‘ಹೇ ಗೆಳೆಯನೇ, ಭೋಜನವನ್ನು ಸ್ವೀಕರಿಸು’ ಎಂದು ನುಡಿದನು. ಸತತವಾಗಿ ನಾನು ಮೂರು ದಿನಗಳಿಂದ ಊಟ ಮಾಡಿರಲಿಲ್ಲ. ಊಟದ ಹಾಸಿನ ಮೇಲೆ ವಿವಿಧ ಖಾದ್ಯಗಳ ಜತೆಗೆ ಮುಜಾಫರ್ (ಅಕ್ಕಿಯ ಸಿಹಿ ತಿಂಡಿ) ಸಹ ಇತ್ತು. ಒಂದು ಕಾಲಕ್ಕೆ ಅದು ನನ್ನ ಪ್ರಿಯ ಸಿಹಿ ತಿಂಡಿಯಾಗಿತ್ತು. ನಾನು ಒಂದು ತುತ್ತು ಮುಜಾಫರ್ ಕೈಯಲ್ಲಿ ತೆಗೆದುಕೊಂಡು, ಕೈಯನ್ನು ಹಿಂತೆಗೆದುಕೊAಡೆ, ಮತ್ತೆ ತಣ್ಣೀರನ್ನು ಕುಡಿದು ನುಡಿದೆ- ಜಗತ್ತು ಹಗಲಾಗಿದೆ. ಹಾಗೂ ಅದರಲ್ಲಿ ಉಪವಾಸ ವ್ರತ ಆಚರಿಸುವವರಾಗಿದ್ದೇವೆ.


ನನ್ನ ಈ ಮಾತನ್ನು ಕೇಳಿ, ಅಬು ಮುಸ್ಲಿಂ ಬಾಗ್ದಾದಿ ಇಂದು ಅಳುವುದರ ಬದಲು ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಆ ನರ್ತಕಿ ಮತ್ತೆ ಬಂದಳು ನಾನು ಅವಳೆಡೆ ದೃಷ್ಟಿ ಬೀರಿದೆ. ಚಹರೆ ಕೆಂಪಗಿದ್ದು, ಕೆಂಡದAಥ ಕಣ್ಣುಗಳು ಪಿಂಗಾಣಿ ಪಾತ್ರೆಗಳಂತಿದ್ದು, ಸ್ತನಗಳು ದೃಢವಾಗಿದ್ದು, ತೊಡೆಗಳು ತುಂಬಿಕೊAಡಿದ್ದವು. ಹೊಟ್ಟೆಯು ಶ್ರೀಗಂಧದ ಫಲಕದಂತಿದ್ದು, ನಾಭಿಯು ದುಂಡನೆ ಚಿಕ್ಕ ಮಧು ಪಾತ್ರೆಯಂತಿತ್ತು. ಉಟ್ಟ ಉಡುಪು ಅದೆಷ್ಟು ತೆಳುವಾಗಿತ್ತೆಂದರೆ ಶ್ರೀಗಂಧದ ಫಲಕ, ಹಾಗೂ ದುಂಡನೆ ಚಿಕ್ಕ ಮಧುಪಾತ್ರೆ, ಸೊಂಟ, ಪ್ರಕಾಶಿಸುವ ಮೊಳಕಾಲಿನ ಮೀನಖಂಡ ಎಲ್ಲವೂ ಪಾರದರ್ಶಕವಾಗಿ ಕಾಣುತ್ತಿತ್ತು. ಆಗ ನನಗೆ ಘಮಘಮಿಸುವ ಮುಜಾಫರಿನ ಮತ್ತೊಂದು ತುತ್ತನ್ನು ತೆಗೆದುಕೊಂಡAತೆ ಭಾಸವಾಯಿತು. ನನ್ನ ಬೆರಳುಗಳಲ್ಲಿ ಎಂಥದೋ ಸಂಚಲನ ಉಂಟಾದAತೆ ತೋರಿತು ಹಾಗೂ ಕೈಗಳು ನನ್ನ ನಿಯಂತ್ರಣವನ್ನು ಮೀರುತ್ತಿರುವಂತೆ ಅನಿಸಿತು. ಆಗ ನನಗೆ ಕೈಗಳ ಕುರಿತು ನನ್ನ ಶೇಖರ ಆದೇಶದ ನೆನಪಾಯಿತು. ನಾನು ಗಾಬರಿಗೊಂಡು ಎದ್ದು ನಿಂತೆ, ಅಬು ಮುಸ್ಲಿಂ ಬಾಗ್ದಾದಿಯು ಇಂದು ಊಟ ಮಾಡಿ ಹೋಗು ಎಂದು ಒತ್ತಾಯ ಮಾಡಲಿಲ್ಲ. ಆದರೆ ಆ ರಂಡಿಯ ಕಾಲಿನ ಸಪ್ಪಳ ಹಾಗೂ ಹೆಜ್ಜೆಯ ನಿನಾದವು ಮಧುರ ಅಮಲಾಗಿ ನನ್ನನ್ನು ಬಹುದೂರದವರೆಗೆ ಹಿಂಬಾಲಿಸಿತು.
ಮನೆ ತಲುಪಿ ಒಳಾಂಗಣ ಪ್ರವೇಶಿಸಿದಾಗ ನಾನು ನೋಡುವುದೇನೆಂದರೆ ನನ್ನ ಚಾಪೆಯ ಮೇಲೆ ಹಳದಿ ನಾಯಿ ಮಲಗಿಕೊಂಡಿತ್ತು. ಅದನ್ನು ಕಂಡು ನಾನು ಕಕ್ಕಾಬಿಕ್ಕಿಯಾದೆ ಹಾಗೂ ಸಣ್ಣಗೆ ಬೆವರತೊಡಗಿದೆ. ನಾನು ಅದನ್ನು ಹೊಡೆದೋಡಿಸಲು ಪ್ರಯತ್ನಿಸಿದೆ ಆದರೆ ನಾಯಿಯು ಓಡಿ ಹೋಗುವ ಬದಲು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು. ಆಗ ನನಗೆ ಆ ಶಂಕೆಗಳು ಹಾಗೂ ಭ್ರಮೆಗಳು ಸುತ್ತುವರಿದವು. ನನ್ನ ಕಣ್ಣುಗಳಿಂದ ನಿದ್ರೆ ಮಾಯವಾಯಿತು. ಹಾಗೂ ಮನಶ್ಯಾಂತಿ ಕದಡಿ ಹೋಯಿತು. ನಾನು ಅರ್ತನಾಗಿ ಪ್ರಾರ್ಥಿಸಿದೆ. ‘ಹೇ ನನ್ನ ಆರಾಧ್ಯನೇ, ನನ್ನ ಮೇಲೆ ಕೃಪೆ ತೋರು. ನನ್ನ ಹೃಯದವು ಪ್ರಲೋಭನೆಗಳಲ್ಲಿ ಸಿಲುಕಿಕೊಂಡಿದೆ. ನನ್ನಲ್ಲಿ ಹಳದಿ ನಾಯಿಯು ಆವರಿಸಿದೆ ನನ್ನ ಮನಸ್ಸಿಗೆ ನೆಮ್ಮದಿ ಬರಲಿಲ್ಲ. ತತ್‌ಕ್ಷಣವೇ ನನಗೆ ಅಬು ಅಲಿ ರೂದ್‌ಬಾರಿಯವರು ನೆನಪಿಗೆ ಬಂದರು ಯಾಕೆಂದರೆ ಅವರು ತಮ್ಮ ಜೀವನದಲ್ಲಿ ಕೊಂಚ ಕಾಲ ಆಶಂಕೆ ಹಾಗೂ ಭ್ರಮೆಗಳ ರೋಗದಿಂದ ಬಳಲುತ್ತಿದ್ದರು. ಒಂದು ದಿನ ಅವರು ಸೂರ್ಯೋದಯದ ಮುಂಚೆ ನದಿಯ ದಂಡೆಗೆ ಹೋಗಿ ಸೂರ್ಯೋದಯದವರೆಗೂ ಅಲ್ಲೇ ಕಳೆದರು. ಈ ಅವಧಿಯಲ್ಲಿ ಅವರ ಹೃದಯವು ಪ್ರಕ್ಷÄಬ್ಧವಾಗಿತ್ತು. ಅವರು ವಿನಯಪೂರ್ವಕ ವಿನಂತಿಸಿಕೊAಡರು- ‘ಹೇ ಸ್ನೇಹಿತನೇ, ದೇವರೇ, ನನಗೆ ನೆಮ್ಮದಿ ನೀಡು, ಆಗ ನದಿಯಿಂದ ಅಶರೀರವಾಣಿಯಾಯಿತು. ‘ನೆಮ್ಮದಿಯು ಜ್ಞಾನದಲ್ಲಿದೆ’ ಆಗ ನಾನು ನನ್ನನ್ನೇ ಉದ್ದೇಶಿಸಿ ನುಡಿದೆ- ಹೇ ಅಬು ಖಾಸಿಂ ಖಿಜ್ರಿ, ನೀನು ಇಲ್ಲಿಂದ ನಡೆ. ಈಗ ನಿನ್ನ ಒಳಗೊ,ಹೊರಗೂ ಹಳದಿ ನಾಯಿಗಳು ಹುಟ್ಟಿಕೊಂಡಿವೆ ಹಾಗೂ ನಿನ್ನ ನೆಮ್ಮದಿ ಭಗ್ನವಾಗಿದೆ.


ನಾನು ನನ್ನ ಕೋಣೆಯ ಕಡೆ ಕೊನೆಯ ಸಲ ದೃಷ್ಟಿ ಹಾಯಿಸಿದೆ. ದೀರ್ಘ ಶ್ರಮದಿಂದ ಸಂಗ್ರಹಿಸಿದ್ದ ತತ್ವಜ್ಞಾನ ಹಾಗೂ ಇಸ್ಲಾಂ ನ್ಯಾಯಶಾಸ್ತçದ ಗ್ರಂಥಗಳನ್ನು ಅಲ್ಲಿಯೇ ಬಿಟ್ಟು ಶೇಖ್‌ರ ಪ್ರವಚನಗಳ ಸಂಗ್ರಹದ ಜೊತೆ ನಗರದಿಂದ ಹೊರಬಂದೆ. ನಾನು ನಗರವನ್ನು ತೊರೆದು ಹೊರಬರುತ್ತಿದ್ದಂತೆ ಭೂಮಿಯು ನನ್ನ ಕಾಲುಗಳನ್ನು ಹಿಡಿದುಕೊಂಡಿತು ಹಾಗೂ ನನಗೆ ನನ್ನ ಶೇಖರ ಪ್ರವಚನ ಗೋಷ್ಠಿಗಳ ಸುಗಂಧವು ನೆನಪಾಗತೊಡಗಿತು. ಹಾಗೂ ಯಾವ ಭೂಮಿಯನ್ನು ನಾನು ಶುದ್ಧ ಹಾಗೂ ಪವಿತ್ರವೆಂದು ಭಾವಿಸುತ್ತಿದ್ದೆ., ಅದು ನನ್ನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಯಾವ ರಸ್ತೆಗಳು ನನ್ನ ಶೇಖರ ಪಾದಗಳನ್ನು ಚುಂಬಿಸುತ್ತಿದ್ದವೋ ನನ್ನನ್ನು ಕೂಗಿ ಕೂಗಿ ಕರೆಯುತ್ತಿದ್ದವು. ಅವಗಳ ಕೂಗನ್ನು ಕೇಳಿ ನಾನು ಅಳಹತ್ತಿದೆ ಹಾಗೂ ಬಡಬಡಿಸಹತ್ತಿದೆ. ಹೇ ಶೇಖರೇ, ನಿಮ್ಮ ನಗರವು ಈಗ ಸೂರುಗಳಲ್ಲಿ ಅಡಗಿಹೋಗಿದೆ. ಹಾಗೂ ಆಕಾಶವು ಅತಿ ದೂರವಾಗಿದೆ. ಅನುಯಾಯಿಗಳು ನಿಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ. ಅವರುಗಳು ಸಹಭಾಗಿ ರಹಿತವಾದ ಆಕಾಶಕ್ಕೆ ಸಮಾನಾಂತರವಾಗಿ ತಮ್ಮ ತಮ್ಮ ಸೂರುಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಣ್ಣು-ಮಣ್ಣಿನ ಮಧ್ಯೆ ಅಂತರ ಉಂಟಾಗಿದೆ. ಹಳದಿ ನಾಯಿಯು ಗೌರವಾದರ ಪಡೆಯುತ್ತಿದೆ. ಹಾಗೂ ಶ್ರೇಷ್ಠಾತಿಶ್ರೇಷ್ಠ ಜೀವಿ ಎನಿಸಿದ ಮನುಷ್ಯನು ಮಣ್ಣಿನ ಸಮಾನವಾಗಿದ್ದಾನೆ. ನಿಮ್ಮ ನಗರವು ನನಗಾಗಿ ಕಿರಿದಾಗಿದೆ. ನಾನು ನಿಮ್ಮ ನಗರವನ್ನು ತ್ಯಜಿಸುತ್ತಿದ್ದೇನೆ. ಈ ರೀತಿ ನುಡಿದು ದೃಢ ನಿರ್ಧಾರ ಮಾಡಿ, ಮುಂದೆ ಸಾಗಿದೆ.


ನಾನು ನಡೆಯುತ್ತಾ ನಡೆಯುತ್ತಾ ಅತಿ ದೂರ ಸಾಗಿ ಬಂದೆ ನನ್ನ ಶ್ವಾಸ ಉಬ್ಬತೊಡಗಿತು. ಹಾಗೂ ನನ್ನ ಪಾದಲ್ಲಿ ಬೊಬ್ಬೆಗಳಾದವು. ಮತ್ತೆ ಹಠಾತ್ತನೆ ನನ್ನ ಗಂಟಲಿನಿAದ ಯಾವುದೇ ವಸ್ತು ರಭಸದಿಂದ ಹೊರಬಂದಿತು. ಹಾಗೂ ನನ್ನ ಪಾದಗಳ ಮೇಲೆ ಬಿದ್ದಿತು. ನಾನು ನನ್ನ ಪಾದಗಳತ್ತ ದೃಷ್ಟಿ ಹಾಯಿಸಿದೆ. ನರಿಮರಿಯೊಂದು ನನ್ನ ಪಾದಗಳಲ್ಲಿ ಹೊರಳಾಡುತ್ತಿದ್ದು, ಕಂಡು ನಾನು ಚಕಿತನಾದೆ. ಆಗ ನಾನು ನನ್ನ ಪಾದಗಳಿಂದ ಅದನ್ನು ತುಳಿದು ಹಾಕಲು ಬಯಸಿದೆ ಆದರೆ ನರಿಮರಿಯು ಉಬ್ಬಿ ದೊಡ್ಡದಾಯಿತು. ಆಗ ನಾನು ಮತ್ತೆ ಅದನ್ನು ಪಾದಗಳಿಂದ ತುಳಿದೆ. ಅದು ಇನ್ನು ದೊಡ್ಡದಾಯಿತು. ದೊಡ್ಡದಾಗುತ್ತಾ ಅದು ಹಳದಿ ನಾಯಿಯಾಗಿ ಪರಿವರ್ತಿತವಾಯಿತು. ನಾನು ನನ್ನ ಸಮಸ್ತ ಬಲವನ್ನು ಪ್ರಯೋಗಿಸಿ ಅದಕ್ಕೆ ಒದ್ದೆ ಹಾಗೂ ಪಾದಗಳಿಂದ ಶಕ್ತಿ ಪ್ರಯೋಗಿಸಿ ಅದನ್ನು ತುಳಿಯುತ್ತಾ ಮುಂದೆ ಸಾಗಿದೆ. ಆಗ ನಾನುಡಿದೆ- ದೇವರಾಣೆ! ನಾನು ನನ್ನ ಪಾದಗಳಿಂದ ನಾಯಿಯನ್ನು ತುಳಿದೆ ಹಾಗೂ ಸಾಗುತ್ತಾ ಇದ್ದೆ. ನನ್ನ ಪಾದದ ಬೊಬ್ಬೆಗಳು ಕುರುಗಳಾಗದವು. ನನ್ನ ಪಾದದ ಬೆರಳುಗಳು ಬೇರ್ಪಡಹತ್ತಿದವು ಹಾಗೂ ನನ್ನ ಪಾದಗಳು ರಕ್ತಸಿಕ್ತವಾದವು. ಆದರೆ ಮತ್ತೆ ಹೀಗಾಯಿತು. ಯಾವ ಹಳದಿ ನಾಯಿಯನ್ನು ನಾನು ತುಳಿಯುತ್ತಾ ಬಂದಿದ್ದನೋ, ಅದು ನನ್ನ ದಾರಿಯನ್ನು ಅಡ್ಡಗಟ್ಟಿ ನಿಂತಿತು. ನಾನು ಅದರ ಜೊತೆ ಹೋರಾಡಿದೆ ಹಾಗೂ ಅದನ್ನು ದಾರಿಯಿಂದ ಸರಿಸಲು ಬಹಳ ಪ್ರಯತ್ನಿಸಿದೆ. ಆದರೆ ಅದು ಸುತಾರಾಂ ಸರಿಯಲು ಸಿದ್ಧನಿರಲಿಲ್ಲ. ಕೊನೆಗೆ ನಾನು ದಣಿದು ಹೋದೆ, ದಣಿದು ಕುಬ್ಜನಾದೆ. ಆದರೆ ಆ ಹಳದಿ ನಾಯಿ ಉಬ್ಬಿ ದೊಡ್ಡದಾಯಿತು.


ಆಗ ನಾನು ಮಹಾಮಹಿಮನಾದ ದೇವರ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡೆ. ‘ಹೇ, ನಮ್ಮನ್ನು ಸಲಹುವವನೇ! ಮನುಷ್ಯನು ಕುಬ್ಜನಾಗಿದ್ದಾನೆ. ಹಾಗೂ ಹಳದಿ ನಾಯಿ ಬೆಳೆದು ದೊಡ್ಡದಾಗಿದೆ. ನಾನು ಅದನ್ನು ನನ್ನ ಕಾಲುಗಳಿಂದ ತುಳಿಯ ಬಯಸಿದೆ. ಅದು ನನ್ನ ನಿಲುವಂಗಿಯನ್ನು ಸುತ್ತುವರಿದು ಅದೃಶ್ಯವಾಯಿತು. ಹಾಗೂ ತುಂಡಾದ ನನ್ನ ಕಾಲ್ಬೆರಳು ಹಾಗೂ ರಕ್ತಸಿಕ್ತವಾದ ಪಾದಗಳು, ಹಾಗೂ ಅವುಗಳಲ್ಲಿ ಆದ ಬೊಬ್ಬೆ, ಗಾಯಗಳತ್ತ ದೃಷ್ಟಿ ಹಾಯಿಸಿದೆ. ನಾನು ನನ್ನ ದುಸ್ಥಿತಿಗೆ ಅತ್ತೆ. ನಾನೆಂದುಕೊAಡೆ ನಾನು ಶೇಖರ ನಗರವನ್ನು ತೊರೆದು ಬರದೇ ಇದ್ದರೆ ಒಳ್ಳೆಯದಿತ್ತು. ಆಗ ನನ್ನ ಗಮನ ಮತ್ತೊಂದು ಕಡೆ ಹೋಯಿತು. ಸುಗಂಧಿತ ಮುಜಾಫರ್ ಸಿಹಿಯ ನೆನಪು ಸುಳಿದು ಹೋಯಿತು. ಶ್ರೀಗಂಧದ ಫಲಕ ಹಾಗೂ ದುಂಡಾದ ಪಿಂಗಾಣಿ ಮಧು ಬಟ್ಟಲಿನ ಕಲ್ಪನೆಯನ್ನು ಮಾಡಿಕೊಂಡೆ. ಶೇಖ್‌ರ ಸಮಾಧಿಯ ಧನರಾಶಿಯ ಅರ್ಪಣೆಯ ಕಲ್ಪನೆಯೂ ಬಂದಿತು. ನಾನುಡಿದೆ- ನಿಸ್ಸಂದೇಹವಾಗಿ ಅನುಯಾಯಿಗಳು ಶೇಖ್‌ರ ಬೋಧನೆಗಳ ವಿರೋಧಿಯಾಗಿದ್ದಾರೆ. ಹಾಗೂ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ನಯವಂಚನೆಯ ಮಾರ್ಗದಲ್ಲಿ ಸಾಗುತ್ತಿದ್ದಾನೆ. ನಿಸ್ಸಂದೇಹವಾಗಿ ಶೇಖ್‌ರ ಪ್ರವಚನಗಳು ನನ್ನ ವಶದಲ್ಲಿದೆ. ನನಗನಿಸಿತು ನಾನು ನಗರಕ್ಕೆ ಹಿಂತಿರುಗಿ ಶೇಖರ ಪ್ರವಚನಗಳ ಮೇಲೆ ಮತ್ತೊಮ್ಮೆ ದೃಷ್ಟಿ ಹಾಯಿಸುವುದು ಸೂಕ್ತವಲ್ಲವೆ? ಜನರು ಪ್ರಭಾವಿತರಾಗುವ ಹಾಗೂ ಅದನ್ನು ಮೆಚ್ಚುವ ರೀತಿಯಲ್ಲಿ ಅವುಗಳನ್ನು ಪರಿಷ್ಕರಿಸಿ, ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲೇ? ಯಾರಿಗೂ ಚ್ಯುತಿ ಬಾರದ ಹಾಗೆ ವೃತ್ತಾಂತವು ಸ್ನೇಹಿತರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅದ್ಭುತವಾಗಿ ಬರೆಯಲೇ? ಆದರೆ ಹಠಾತ್ತನೆ ನನಗೆ ಶೇಖ್‌ರ ಬೋಧನೆ ನೆನಪಾಯಿತು ಅದೇನೆಂದರೆ ಕೈಗಳು ಮನುಷ್ಯನ ಶತ್ರುಗಳಾಗಿವೆ, ಆಗ ನನಗೆ ನನ್ನ ಕೈಗಳು ನನ್ನಿಂದ ವಂಚನೆ ಮಾಡುತ್ತಿರುವಂತೆ ತೋರಿತು. ಅದೇ ರಾತ್ರಿ ನಾನು ಮಲಗುವ ನಿರ್ಧಾರ ಮಾಡಿದಾಗ, ಅದೇ ಹಳದಿ ನಾಯಿ ಮತ್ತೆ ಪ್ರತ್ಯಕ್ಷವಾಯಿತು ಹಾಗೂ ನನ್ನ ಚಾಪೆಯ ಮೇಲೆ ಮಲಗಿಕೊಂಡಿತ್ತು. ಆಗ ನಾನು ಹಳದಿ ನಾಯಿಗೆ ಹೊಡೆದೆ ಹಾಗೂ ನನ್ನ ಚಾಪೆಯನ್ನು ಎಳೆದುಕೊಳ್ಳಲು ಬಲಪ್ರಯೋಗ ಮಾಡಿದೆ. ನಾನು ಮತ್ತು ಹಳದಿ ನಾಯಿ ರಾತ್ರಿಯಿಡಿ ಕಾದಾಡುತ್ತಿದ್ದೆವು. ಕೆಲವೊಮ್ಮೆ ಅದು ಎದ್ದು ನಿಂತು ಬಿಡುತ್ತಿತ್ತು. ಆಗ ನಾನು ಕುಬ್ಜನಾಗುತ್ತಿದ್ದೆ ಹಾಗೂ ಅದು ದೊಡ್ಡದಾಗುತ್ತಿತ್ತು. ಈ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬೆಳಗಾಯಿತು. ಈಗ ಅದರ ಶಕ್ತಿ ಕ್ಷೀಣವಾಗಹತ್ತಿತ್ತು. ಕೊನೆಗೆ ಅದು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು.


ಅಂದಿನಿAದ ಇಂದಿನವರೆಗೆ ನನ್ನ ಹಾಗೂ ಹಳದಿ ನಾಯಿಯ ಕಾದಾಟ ನಡೆದೇ ಇವೆ. ಈ ದೀರ್ಘ ಸಂಘರ್ಷದಲ್ಲಿ ಹಲವು ಮಜಲುಗಳಿದ್ದು, ಇದಕ್ಕೆ ಸಂಬAಧಿಸಿದ ಅಸಂಖ್ಯಾತ ಚಿಕ್ಕಪುಟ್ಟ ಘಟನೆಗಳು ಜರುಗಿವೆ. ಆದರೆ ವಿಷಯವು ದೀರ್ಘವಾಗುತ್ತದೆಂದು ಅದನ್ನು ನಾನು ಅಲಕ್ಷಿಸುತ್ತಿದ್ದೇನೆ. ಕೆಲವೊಮ್ಮೆ ನಾನು ಬಿದ್ದು ಬಿಡುತ್ತಿದ್ದೆ. ಆಗ ಅದು ನನ್ನ ಕಾಲುಗಳಲ್ಲಿ ನುಗ್ಗಿ ನರಿಮರಿಯಂತಾಗುತ್ತಿತ್ತು. ಒಟ್ಟಾರೆ ಒಮ್ಮೆ ಹಳದಿ ನಾಯಿ ನನ್ನ ಮೇಲೆ ಹಾಗೂ ಮಗದೊಮ್ಮೆ ನಾನು ಹಳದಿ ನಾಯಿಯ ಮೇಲೆ ಮೇಲುಗೈ ಸಾಧಿಸುತ್ತಿದ್ದೆವು. ಘಮಘಮಿಸುವ ಮುಜಾಫರ್, ಶ್ರೀಗಂಧದ ಫಲಕ, ಹಾಗೂ ಪಿಂಗಾಣಿಯ ದುಂಡನೆಯ ಬಟ್ಟಲು ನನ್ನನ್ನು ಕಾಡತೊಡಗುತ್ತಿದ್ದವು. ಆಗ ಹಳದಿ ನಾಯಿ ನುಡಿಯುತ್ತದೆ- “ಎಲ್ಲರೂ ಹಳದಿ ನಾಯಿಗಳಾದಾಗ ಮನುಷ್ಯರಾಗಿ ಬದುಕುವುದು ನಾಯಿಗಿಂತ ಕೀಳು.” ಇದನ್ನು ಕೇಳಿ ನಾನು ಅರಿಕೆಮಾಡಿಕೊಳ್ಳುತ್ತೇನೆ. ‘ಹೇ ಪಾಲಿಸುವವನೇ! ಎಲ್ಲಿಯವರೆಗೆ ನಾನು ಮರಗಳ ನೆರಳಲ್ಲಿದ್ದು, ಜನಮಾನಸರಿಂದ ದೂರವಾಗಿ ತಿರುಗಲಿ. ಅಪಕ್ವವಾದ ಹಣ್ಣುಗಳನ್ನು ತಿನ್ನುತ್ತಾ, ದಪ್ಪ ಸೆಣಬಿನ ನಿಲುವಂಗಿ ಧರಿಸಿ ಜೀವನ ಸಾಗಿಸಲಿ ಆಗ ನನ್ನ ಪಾದಗಳು ನಗರದ ಕಡೆ ಸಾಗಲು ನಿರ್ಧರಿಸಿದವು. ನನಗೆ ಮತ್ತೆ ಶೇಖರ ಬೋಧನೆ ನೆನಪಿಗೆ ಬಂದಿತು. ಅದೇನೆಂದರೆ ಹಿಂದೆ ಇಡುವ ಹೆಜ್ಜೆಗಳು ಸಾಧಕನ ಶತ್ರುಗಳಾಗಿವೆ. ಆಗ ನಾನು ಮತ್ತೆ ನನ್ನ ಪಾದಗಳಿಗೆ ರಕ್ಷಿಸುತ್ತೇನೆ ಹಾಗು ದಾರಿಯಲ್ಲಿನ ಕಲ್ಲಿನ ಹರಳುಗಳನ್ನು ಆರಿಸಲು ಪ್ರಾರಂಭಿಸುತ್ತೇನೆ. ಹೇ! ಗೌರವಾನ್ವಿತ ದೇವನೇ! ನಾನು ನನ್ನ ಶತ್ರುಗಳಿಗೆ ಅದೆಷ್ಟು ಘೋರ ಶಿಕ್ಷೆ ನೀಡಿದ್ದೆನೆಂದರೆ ಅವು ರಕ್ತಸಿಕ್ತವಾಗಿವೆ. ಹಾಗೂ ನನ್ನ ಕೈಗಳಲ್ಲಿ ಕಲ್ಲಿನ ಹರಳುಗಳನ್ನು ಆರಿಸುತ್ತಾ ಆರಿಸುತ್ತಾ ಬೊಬ್ಬೆಗಳ ಬಂದಿವೆ. ನನ್ನ ಚರ್ಮವು ಬಿಸಿಲಿನ ತಾಪದಿಂದ ಕಪ್ಪುಗಟ್ಟಿದೆ. ಹಾಗೂ ನನ್ನ ಎಲುಬುಗಳು ಕರಗಲು ಪ್ರಾರಂಭಿಸಿವೆ. ಹೇ ಆದರಣೀಯ ದೇವನೆ! ನನ್ನ ನಿದ್ದೆಯು ಹಾರಿಹೋಗಿದೆ. ಹಾಗೂ ನನ್ನ ದಿನಗಳು ಕಷ್ಟಕರವಾಗಿವೆ. ಜಗತ್ತು ನನಗೆ ಉರಿಬಿಸಿಲಿನ ದಿನವಾಗಿದೆ. ಅದರಲ್ಲೂ ನಾನು ಉಪವಾಸ ವ್ರತ ಆಚರಿಸುವವನಾಗಿದ್ದೇನೆ. ಉಪವಾಸ ವ್ರತಧಾರಿಗೆ ಹಗಲು ದೀರ್ಘವಾಗಿರುತ್ತದೆ. ಈ ಉಪವಾಸ ವ್ರತದಿಂದ ನಾನು ಅಶಕ್ತನಾಗಿದ್ದೇನೆ. ಆದರೆ ಹಳದಿ ನಾಯಿ ದಷ್ಟಪುಷ್ಟವಾಗಿದೆ. ಹಾಗೂ ಪ್ರತಿರಾತ್ರಿ ನನ್ನ ಚಾಪೆಯ ಮೇಲೆ ಮಲಗಿಕೊಳ್ಳುತ್ತದೆ.


ಇದರಿಂದಾಗಿ ನನ್ನ ನೆಮ್ಮದಿ ನನ್ನನ್ನು ತ್ಯಜಿಸಿದೆ. ಹಾಗು ನನ್ನ ಚಾಪೆಯು ಅನ್ಯರ ಸ್ವಾಧೀನದಲ್ಲಿ ಹೋಗಿದೆ. ಹಳದಿ ನಾಯಿ ಉನ್ನತ ಹಾಗೂ ಮನುಷ್ಯ ತುಚ್ಛನಾಗಿದ್ದಾನೆ. ಇಂತಹ ಸಮಯದಲ್ಲಿ ನಾನು ಅಬು ಅಲಿ ರುದ್‌ಬಾರಿಯವರನ್ನು ಮತ್ತೆ ಸ್ಮರಿಸಿದೆ. ಹಾಗೂ ನದಿಯ ದಂಡೆಯಲ್ಲಿ ಮೊಣಕಾಲೂರಿ ಕುಳಿತುಕೊಂಡೆ. ನನ್ನ ಹೃದಯವು ಅಂತರಾಳದಿAದ ತುಂಬಿ ಬಂದಿತು. ನಾನು ‘ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು’ ಎಂದು ಬಡಬಡಿಸಹತ್ತಿದೆ. ನಾನು ಇಡೀ ರಾತ್ರಿ ಬಡಬಡಿಸುತ್ತಾ ಇದ್ದೆ.ಹಾಗೂ ನದಿಯ ಕಡೆ ಕಣ್ಣು ಹಾಯಿಸಿದೆ. ರಾತ್ರಿಯೆಲ್ಲಾ ಧೂಳು ಮುಸುಕಿದ ರಭಸವಾದ ಗಾಳಿಯು ಹಳದಿಯಾದ ಎಲೆಗಳ ಮರಗಳ ಮಧ್ಯೆ ಬೀಸಿತು. ಹಾಗೂ ರಾತ್ರಿಯಿಡೀ ಎಲೆಗಳು ಉದುರಿದವು ನಾನು ನದಿಯಿಂದ ನನ್ನ ನೋಟವನ್ನು ಬದಲಿಸಿ, ಎಲೆಗಳಿಂದ ಆವೃತವಾದ ನನ್ನ ದೇಹವನ್ನು ನೋಡಿದೆ. ನನ್ನ ಸುತ್ತ ಮುತ್ತು ಉದುರಿದ ಹಳದಿ ಎಲೆಗಳ ರಾಶಿಯನ್ನು ಕಂಡೆ. ಆಗ ನಾನುಡಿದೆ- ಇದು ನನ್ನ ಬಯಕೆ ಹಾಗೂ ಆಕಾಂಕ್ಷೆಯಾಗಿದೆ. ದೇವರಾಣೆ ನಾನು ಪ್ರಲೋಭನೆಯಿಂದ ಮುಕ್ತನಾಗಿ ಪವಿತ್ರನಾಗಿದ್ದೇನೆ. ಹಾಗೂ ಎಲೆ ಉದುರಿದ ನಗ್ನ ವೃಕ್ಷನಂತಾಗಿದ್ದೇನೆ. ಬೆಳಗಾದಂತೆ ನನ್ನ ಬಾಯಿಯಲ್ಲಿ ಮಧುರ ರಸ ಹರಿದಂತೆ ಭಾಸವಾಯಿತು. ಆ ಶ್ರೀಗಂಧದ ಫಲಕವು ನಾನು ಸ್ಪರ್ಶಿಸಿದಂತಾಯಿತು. ಆ ದುಂಡನೆಯ ಸ್ವರ್ಣಲೇಪಿತ ಬಟ್ಟಲು ಹಾಗೂ ಬೆಳ್ಳಿಯಂತಹ ಮೀನಖಂಡವನ್ನು ಸ್ಪರ್ಶಿಸಿದಂತಾಯಿತು. ಬೆಳ್ಳಿ ಬಂಗಾರದ ರಾಶಿಯಲ್ಲಿ ಬೆರಳನ್ನು ಆಡಿಸಿದಂತಾಯಿತು. ಅವುಗಳ ಮಧ್ಯೆ ದರಹಮ್ ಹಾಗೂ ದೀನಾರಗಳು ಖನಖಣಿಸಿದಂತಾಯ್ತು. ನಾನು ಕಣ್ಣುಗಳನ್ನು ತೆರೆದೆ. ಆಗ ಭಯಾನಕವಾದಂತಹ ಈ ದೃಶ್ಯವನ್ನು ಕಂಡೆ. ಹಳದಿ ನಾಯಿಯು ತನ್ನೆರಡು ಹಿಂದಿನ ಕಾಲುಗಳನ್ನು ನಗರದಲ್ಲಿಯೂ ಹಾಗೂ ಮುಂದಿನ ಎರಡು ಕಾಲಗಳನ್ನು ನನ್ನ ಚಾಪೆಯ ಮೇಲೆ ಇಟ್ಟು ನಿಂತು ಕೊಂಡಿತ್ತು. ಹಾಗೂ ಅದರ ತೇವವಾದ ಮೂಗಿನ ಬಿಸಿ ಹೊಳ್ಳೆಗಳು ನನ್ನ ಎಡಗೈಯನ್ನು ಸ್ಪರ್ಶಿಸುವಂತೆ ಕಂಡೆ. ನಾನು ನನ್ನ ಕೈಯ ಅಬು ಸಯೀದ್‌ರ ತುಂಡಾದ ಕೈಗಳಂತೆ ಬೇರೆಯಾಗಿ ಬಿದ್ದಕೊಂಡAತೆ ಕಂಡೆ. ನಾನು ನನ್ನ ಕೈಯನ್ನು ಉದ್ದೇಶಿಸಿ ನುಡಿದೆ, ‘ಹೇ ನನ್ನ ಕೈ, ನನ್ನ ಸ್ನೇಹಿತ, ನೀನು ಶತ್ರುವಿನ ಜತೆ ಸೇರಿಕೊಂಡಿದ್ದಿಯಾ! ಕಣ್ಮುಚ್ಚಿ ಅರ್ತನಾಗಿ ಮತ್ತೊಮ್ಮೆ ಪ್ರಾರ್ಥಿಸಿದೆ. “ಹೇ ಮಹಾಮಹಿಮ ದೇವರೇ, ನನಗೆ ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು.”

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

1 5 6 7 8 9 16