ಭಾರತದ ಇತಿಹಾಸವನ್ನು ರೂಪಿಸಿದ ಎರಡು ಭಾಷೆಗಳು

ಪಾಶ್ಚಿಮಾತ್ಯ ನಾಗರಿಕತೆ, ದಾರುಲ್-ಇಸ್ಲಾಮ್ (ಇಸ್ಲಾಮಿನ ವಾಸಸ್ಥಾನ), ಕ್ರಿಶ್ಚಿಯನ್ ಡೋಮ್, ಮಾತೃಭೂಮಿ, ಮುಕ್ತ ಜಗತ್ತು, ಪ್ರಾಮಿಸ್ಡ್ ಲ್ಯಾಂಡ್, ಮೂರನೇ ಪ್ರಪಂಚ, ಮಧ್ಯ ಸಾಮ್ರಾಜ್ಯ ಮುಂತಾದವುಗಳು ಸಾಂಸ್ಕೃತಿಕ ಚಹರೆ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೆಲ ಪ್ರದೇಶಗಳನ್ನು ಗುರುತಿಸಲು ಜನರೇ ಕೊಟ್ಟು ಕೊಂಡಿರುವ ಹೆಸರುಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ನಿರ್ದಿಷ್ಟ ಭೌಗೋಳಿಕ‌ ಪ್ರದೇಶಕ್ಕೆ ಈ ರೀತಿ ಹೆಸರಿಸುವುದು ಅದರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ದಬ್ಬಾಳಿಕೆಯೇ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಅನೇಕ ಸಂಶೋಧನೆಗಳನ್ನು ಕೈಗೊಂಡಿರುವ ಸಂಸ್ಕೃತ ತಜ್ಞ ಮತ್ತು ಇತಿಹಾಸಕಾರ ಶೆಲ್ಡನ್ ಪೊಲಾಕ್ (Sheldon Pollock) ಸಾಂಸ್ಕೃತಿಕ ಹೆಸರಿರುವ ಸ್ಥಳಗಳ ಬಗ್ಗೆ ವಿಭಿನ್ನವಾದ ಚಿಂತನೆಯನ್ನು ವ್ಯಕ್ತಪಡಿಸುತ್ತಾ, ನಾಲ್ಕನೇ ಶತಮಾನ ಮತ್ತು ಹದಿನಾಲ್ಕನೆಯ ಶತಮಾನಗಳ ನಡುವೆ ದಕ್ಷಿಣ ಏಶ್ಯದ ವಿಶಾಲವಾದ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ಪ್ರಸರಣವನ್ನು ಉಲ್ಲೇಖಿಸುತ್ತಾ ‘ಸಂಸ್ಕೃತ ಕಾಸ್ಮೊಪೊಲಿಸ್’ ಎಂಬ ಪದವನ್ನು ಸೃಷ್ಟಿಸಿದರು. ಅಫ್ಘಾನಿಸ್ತಾನದ ಕಂದಹಾರ್ (ಗಾಂಧಾರ) ಮತ್ತು ಆಗ್ನೇಯ ಏಶ್ಯದ ಸಿಂಗಾಪುರ (ಸಿಂಘಾಪುರ) ನಡುವಿನ ಸಾಂಸ್ಕೃತಿಕವಾಗಿ ಅಂತರ್ಸಂಪರ್ಕ ಹೊಂದಿರುವ ಸ್ಥಳಗಳು‌ ಕೇವಲ‌ ಸಂಸ್ಕೃತ ಹೆಸರುಗಳನ್ನು ಮಾತ್ರ ಹೊಂದಿವೆ ಎಂದು ಅವರು ಗುರುತಿಸುತ್ತಾರೆ.

ಪೊಲಾಕ್ ಅವರ ಪ್ರಕಾರ ಸಂಸ್ಕೃತವೆಂದರೆ‌ ಒಂದು ಧರ್ಮವಲ್ಲ, ಬದಲಾಗಿ ನಾಲ್ಕನೇ ಮತ್ತು ಹದಿನಾಲ್ಕನೇ ಶತಮಾನಗಳ‌ ಮಧ್ಯೆ ಮೇಲಿನ‌ ಪ್ರದೇಶಗಳಲ್ಲಿ ಪುಸ್ತಕಗಳ ಮೂಲಕ ಹರಡಿದ ಭಾಷೆಯಾಗಿದೆ. ಸಂಸ್ಕೃತವೂ ಸಹ ಇತರ ಕೆಲವು ಭಾಷೆಯಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಿದ ಭಾಷೆಯಾಗಿದೆ. ಅದು ಒಂದು ನಿರ್ದಿಷ್ಟ ಸ್ಥಳದ ಭಾಷೆ ಅಲ್ಲ. ಅಥವಾ ಅದನ್ನು ನಿರ್ದಿಷ್ಟ ಜನಾಂಗದ ಜೊತೆ, ಭಾಷಾ ಗುಂಪಿನೊಂದಿಗೆ ಅಥವಾ ನಿರ್ದಿಷ್ಟ ಪ್ರದೇಶದೊಂದಿಗೆ ಗುರುತಿಸಲಾಗಿಲ್ಲ. ಸಂಸ್ಕೃತವು ಪ್ರಾಕೃತಿಕವಾಗಿಯೇ ‘ಕ್ರೌರ್ಜಿಯಾನ್’ ಆಗಿರಬಹುದು ಎನ್ನುವ ಪೊಲಾಕ್ ಅದನ್ನು “ಮನುಷ್ಯರ ಜಗತ್ತಿನಲ್ಲಿರುವ ದೇವರುಗಳ ಭಾಷೆ” ಎನ್ನುತ್ತಾರೆ. ಸಂಸ್ಕೃತದಲ್ಲಿ ರಚಿಸಲ್ಪಟ್ಟ ಕೃತಿಗಳು ವ್ಯಾಕರಣ ನಿಯಮಗಳು, ರಾಜನೀತಿ, ವಾಸ್ತು ಶಿಲ್ಪ, ಬದುಕಿನ ಗುರಿಗಳು, ಸಮಾಜದ ನಿಯಂತ್ರಣ, ಶಕ್ತಿ ಮತ್ತು ಅಧಿಕಾರದ ಸ್ವಾಧೀನತೆ ಹೀಗೆ ಮಾನವ ಬದುಕಿನ ಪ್ರತಿಯೊಂದು ಮಜಲುಗಳ ಬಗ್ಗೆಯೂ ಮಾತಾಡುತ್ತವೆ. ಈ ಕೃತಿಗಳ ವ್ಯಾಪಕ ಪ್ರಸರಣೆ ಮತ್ತು ಅದನ್ನು ಪ್ರಚಾರ ಮಾಡಿದ ಜನಾಂಗವು ಒಂದೇ ರೀತಿಯ ಸೌಂದರ್ಯ ಶಾಸ್ತ್ರ, ಕಲಿಕೆ, ರಾಜಕಾರಣ, ಸಾಮಾಜಿಕ ಸಂರಚನೆ ಹುಟ್ಟಿಕೊಳ್ಳಲು ಕಾರಣವಾಯಿತು. ಅಂತಹ ಪಠ್ಯಗಳು ಪ್ರಸಾರವಾಗುತ್ತಿದ್ದ ಮತ್ತು ಪ್ರಮಾಣವಾಗಿ ಪರಿಗಣಿಸಲಾಗುತ್ತಿದ್ದ ಸಂಸ್ಕೃತ ಜಗತ್ತು ಮೂಲಭೂತವಾಗಿ ನೈತಿಕ ಮತ್ತು ಸಾಮಾಜಿಕ ಕ್ರಮವನ್ನು ವ್ಯಾಖ್ಯಾನಿಸುವ ಮತ್ತು ಸಂರಕ್ಷಿಸುವ ವಿಚಾರದಲ್ಲಿ ಹೆಚ್ಚು ಶ್ರದ್ಧೆ ವಹಿಸಿತ್ತು.

ಅಲ್ಲದೆ ಈ ಸಾಂಸ್ಕೃತಿಕ ಸಂರಚನೆಯನ್ನು ಏಶ್ಯದಲ್ಲಿ ಶಸ್ತ್ರಾಸ್ತ್ರಗಳ ಬಲದಿಂದ ವಿಸ್ತರಿಸಲಾಗಿಲ್ಲ, ಮತ್ತು ಇದಕ್ಕೆ ಯಾವುದೇ ಆಡಳಿತಾತ್ಮಕ ಮತ್ತು ಬಲವಾದ ಗಡಿಗಳಿಲ್ಲ ಎನ್ನುವುದು ಗಮನಾರ್ಹ. ಈ ಪಲ್ಲಟವನ್ನು ಅಲೆಕ್ಸಾಂಡರ್‌ನ ಮಹಾವಿಜಯದ ನಂತರದ ಮೆಡಿಟರೇನಿಯನ್ ಬೇಸಿನ್ ಮತ್ತು ಮಧ್ಯ ಪ್ರಾಚ್ಯಕ್ಕೆ ಹೋಲಿಸಬಹುದು. ಅದೂ ಸಹ ರಾಜಕೀಯ ಗಡಿರೇಖೆಯಿಲ್ಲದ ಸಾಂಸ್ಕೃತಿಕ ವಲಯವಾಗಿದ್ದು, ಇದರಲ್ಲಿ ಅನೇಕ ಜನಾಂಗ ಮತ್ತು ಧಾರ್ಮಿಕ ಹಿನ್ನೆಲೆಗಳು ಗ್ರೀಕ್ ಭಾಷೆ, ಶಿಲ್ಪ, ನಾಟಕ, ತಿನಿಸು, ವಾಸ್ತುಶಿಲ್ಪ ಮತ್ತು ಮುಂತಾದವುಗಳನ್ನು ಸುಲಭವಾಗಿ ತಮ್ಮದಾಗಿಸಿಕೊಂಡಿದ್ದವು., ನಾವು ಈ ರೀತಿಯ “ಕಾಸ್ಮೊಪೊಲಿಸ್” ಕಲ್ಪನೆಯನ್ನು ಇತರ ಯಾವುದೇ ಕ್ಲಾಸಿಕಲ್ ಸಾಮ್ರಾಜ್ಯದ ಕೇಂದ್ರೀಕೃತ ಆಡಳಿತ ರಚನೆಯೊಂದಿಗೆ, ನಾಗರಿಕರು ಮತ್ತು ನಾಗರಿಕರಲ್ಲದವರ ನಡುವಿನ ಚೂಪಾದ ವ್ಯತ್ಯಾಸ ಮತ್ತು ಬಲ ಉಳ್ಳವರು ಅಬಲರ ಮೇಲೆ ನಡೆಸುವ ದೌರ್ಜನ್ಯದ ಜೊತೆ ಹೋಲಿಸಬಹುದು.

ಪೊಲಾಕ್ ವಿವರಿಸುವ ಸಂಸ್ಕೃತ ಜಗತ್ತು ದಕ್ಷಿಣ ಏಶ್ಯದ ಇತಿಹಾಸದಲ್ಲಿ ಈ ರೀತಿಯ ಸಂರಚನೆ ಹೊಂದಿದ ಏಕೈಕ ಭಾಷಾ ಪ್ರಪಂಚ. ಹನ್ನೊಂದನೇ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಪರ್ಶಿಯನೇಟ್‌ ಜಗತ್ತು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯವನ್ನು ಆಲಿಂಗನ ಮಾಡಿತ್ತು. ಪರ್ಷಿಯನ್‌ ಮತ್ತು ಸಂಸ್ಕೃತ ಎರಡೂ ಭಾಷೆಗಳಿಗೆ ಒಂದು ರೀತಿ ಸ್ಥಳಗಳ ಮಿತಿಯನ್ನು ಮೀರಿದ ಗುಣವಿದೆ. ಎರಡೂ ಭಾಷೆಯನ್ನು ಬಳಕೆ ಮಾಡುವವರಿಗೆ ಸಮಾಜ ಒಂದು ಗಣ್ಯ ಸ್ಥಾನಮಾನವನ್ನು ನೀಡಿತ್ತು. ಎರಡೂ ಭಾಷೆಗಳು ಧಾರ್ಮಿಕ ಸಂಪ್ರದಾಯಗಳು, ವಿಧಿ ವಿಧಾನಗಳನ್ನು ನಿರೂಪಿಸುವ ಕೃತಿಗಳನ್ನು ಹೊಂದಿವೆ ಹಾಗೂ ಎರಡೂ ಭಾಷೆ ಆಡಳಿತದ ರೂಪು ರೇಷೆಗಳನ್ನು ಒದಗಿಸಿಕೊಟ್ಟ ಭಾಷೆಗಳಾಗಿವೆ. ಈ ಬಗ್ಗೆ ಮಾತನಾಡುವ ರಿಚರ್ಡ್ ಎಮ್ ಈಟನ್ ಅವರ India in the Persianate Age: 1000-1765 ಎನ್ನುವ ಪುಸ್ತಕವು ಕ್ರಿ.ಶ 1000 ಮತ್ತು 1800 ರ ನಡುವಿನ ಭಾರತದ ಇತಿಹಾಸವನ್ನು ಸಂಸ್ಕೃತ ಮತ್ತು ಪರ್ಶಿಯನ್ ಲೋಕಗಳ ನಡುವಿನ ದೀರ್ಘಕಾಲದ ಮತ್ತು ಬಹುಮುಖಿ ಸಂವಹನಗಳ‌ ಮೂಲಕ ಅರ್ಥೈಸಿಕೊಳ್ಳಬಹುದು ಎನ್ನುತ್ತದೆ.

ಆದರೆ, ಪರ್ಶಿಯನ್ ಪ್ರಪಂಚವೆಂದರೆ ನಿಖರವಾಗಿ ಏನು ಮತ್ತು ಅದು ಹೇಗೆ ವಿಕಸನಗೊಂಡಿತು? ಏಳನೇ ಶತಮಾನದಲ್ಲಿ ಇರಾನಿನ ಮೇಲೆ ಅರಬ್ ಜಗತ್ತು ಸಾಧಿಸಿದ ವಿಜಯದ ಹಲವಾರು ವರ್ಷಗಳ ನಂತರ ಹಲವಾರು ಪರ್ಶಿಯನ್ ಭಾಷಿಕರು, ಅದರಲ್ಲೂ ಮುಖ್ಯವಾಗಿ ಶ್ರೀಮಂತರು ಇಸ್ಲಾಮಿನ ಪೂರ್ವದ ಪರ್ಶಿಯನ್ ನಾಗರಿಕತೆ ಮತ್ತೆ ಚೇತರಿಸಿಕೊಳ್ಳುವಂತೆ ನೋಡಿಕೊಂಡರು. ಈ ಐತಿಹಾಸಿಕ ಚಳವಳಿಯ ಭಾಷಾ ಆಯಾಮವು ಇರಾನಿನ ಸಾಸಾನಿಯನ್ ಅವಧಿಯ (AD 224-651) ಸ್ಥಳೀಯ ಮತ್ತು ಅರಬ್ ವಿಜಯದ ಸಂದರ್ಭದಲ್ಲಿ ಇರಾನಿಗೆ ಕಾಲಿಟ್ಟ ಅರೆಬಿಕ್ ಭಾಷೆಯ ಸಂಯೋಗದೊಂದಿಗೆ ಹೊಸ ಪರ್ಶಿಯನ್ ಭಾಷೆಯ ಹುಟ್ಟಿಗೆ ಕಾರಣವಾಯಿತು. ಈ ಹೊಸ ಭಾಷೆ ಮೊದಲು ಆಡುಮಾತಿನ ರೂಪದಲ್ಲಿ ಇರಾನ್ ಪ್ರಸ್ಥಭೂಮಿಯ ಉದ್ದಕ್ಕೆ ಮತ್ತು ಮಧ್ಯ ಏಶ್ಯದಲ್ಲಿ ಮೂಲೆಮೂಲೆಗಳಲ್ಲಿ ಕಾಣಿಸಿಕೊಂಡಿತು. ಪರಿಷ್ಕರಿಸಲಾದ ಅರಬ್ ಲಿಪಿಯನ್ನು ಬಳಸಿಕೊಂಡು ಪರ್ಶಿಯನ್ ಬರಹಗಾರರು ಇಂದಿನ ಈಶಾನ್ಯ ಇರಾನ್, ಪಶ್ಚಿಮ ಅಫ್ಘಾನಿಸ್ತಾನ ಮತ್ತು ಮಧ್ಯ ಏಶ್ಯದಲ್ಲಿ ಅರಬ್ ಇಸ್ಲಾಮ್ ಮತ್ತು ಇಸ್ಲಾಮಿನ ಆಗಮನಕ್ಕಿಂತ ಮೊದಲಿನ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ತಂದರು.

ಆರಂಭದಲ್ಲಿ, ಈ ಬೆಳವಣಿಗೆಗಳು ಮಧ್ಯ ಏಶ್ಯದಲ್ಲಿ (819-999) ಸಮನಿದ್ ರಾಜರ ಆಸ್ಥಾನದಿಂದ ಉತ್ತೇಜಿಸಲ್ಪಟ್ಟವು ಮತ್ತು ಪ್ರೋತ್ಸಾಹಿಸಲ್ಪಟ್ಟವು. ಬುಖಾರಾ (ಇಂದಿನ ದಕ್ಷಿಣ ಉಜ್ಬೇಕಿಸ್ತಾನ್‌ನಲ್ಲಿ) ಕೇಂದ್ರೀಕೃತವಾಗಿ ಮನ್ನಡೆಯುತ್ತಿದ್ದ ಸಮನಿದ್ ಸಾಮ್ರಾಜ್ಯವು ಇರಾನ್ ಪ್ರಸ್ಥಭೂಮಿಯನ್ನು ಪಶ್ಚಿಮಕ್ಕೆ ಮೆಡಿಟರೇನಿಯನ್, ದಕ್ಷಿಣಕ್ಕೆ ಭಾರತ ಮತ್ತು ಸಿಲ್ಕ್ ರೋಡ್ ಮೂಲಕ ಪೂರ್ವಕ್ಕೆ ಚೀನಾದೊಂದಿಗೆ ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗಗಳನ್ನು ವ್ಯಾಪಿಸಿತ್ತು. ಅರೆಬಿಕ್ ಮತ್ತು ಟರ್ಕಿಶ್ ಎರಡನ್ನೂ ಸಾಮಾನ್ಯವಾಗಿ ಅಲ್ಲಿ ಬಳಸಲಾಗುತ್ತಿದ್ದುದರಿಂದ ಹನ್ನೊಂದನೇ ಶತಮಾನದವರೆಗೆ ಇದು ಬಹುಭಾಷಿಕ ಪ್ರದೇಶವಾಗಿತ್ತು. ಆದರೆ ʼಹೊಸ ಪರ್ಶಿಯನ್ʼ ( ಇನ್ನು ಪರ್ಶಿಯನ್ ಎಂದು ಬಳಸಲಾಗಲಿದೆ) ಆ ಪ್ರದೇಶದ ಸ್ಥಳೀಯ ಇರಾನಿನ ಭಾಷೆಗಳು ಮತ್ತು ಉಪಭಾಷೆಗಳ ಸ್ಥಾನದಲ್ಲಿ ನಿಂತುಕೊಂಡು ವಿಭಿನ್ನ ಭಾಷಿಕರ ನಡುವಿನ ಸಾಮಾನ್ಯ ಸಂವಹನದ ಭಾಷೆಯಾಗಿ (lingua franca) ಮಾರ್ಪಟ್ಟಿತು.

ಸಂಸ್ಕೃತ ಪಠ್ಯಗಳಂತೆಯೇ, ಹನ್ನೊಂದನೇ ಶತಮಾನದಿಂದ ಪರ್ಶಿಯನ್ ಭಾಷೆಯಲ್ಲಿ ಕಾಲ್ಪನಿಕ ಸಾಹಿತ್ಯದ ದೊಡ್ಡ ಸಂಗ್ರಹವು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯದ ಮೂಲಕ ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಇರಾನ್‌ನಲ್ಲಿ ಫಿರ್ದೌಸಿ (ಡಿ. 1020), ಜಾರ್ಜಿಯಾದಲ್ಲಿ ನಿಝಾಮಿ (ಡಿ. 1209), ಭಾರತದಲ್ಲಿ ಅಮೀರ್ ಖುಸ್ರು (ಡಿ. 1325) ಮತ್ತು ಅಫ್ಘಾನಿಸ್ತಾನದಲ್ಲಿ ಜಾಮಿ (ಡಿ. 1492) ಮುಂತಾದ ದಿಗ್ಗಜರು ಬರೆದ ಐತಿಹಾಸಿಕ ಅಲೆಕ್ಸಾಂಡರ್ ಆಧಾರಿತ ಮಹಾಕಾವ್ಯಗಳು ಇದಕ್ಕೊಂದು ಉದಾಹರಣೆಯಾಗಿದೆ. ಒಂದು ದೊಡ್ಡ‌ ಭೌಗೋಳಿಕ ಅಂತರದಲ್ಲಿ ಇವು ರಚಿಸಲ್ಪಟ್ಟಿದ್ದರೂ ಮತ್ತು ಇವೆಲ್ಲವುಗಳಿಗೆ ಅನೇಕ ದೇಶೀಯ ಆಯಾಮಗಳಿದ್ದರೂ ಸಹ ಒಂದು ವಿಶಾಲವಾದ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿ ಅಲೆಕ್ಸಾಂಡರ್ ನ ಬಗೆಗೆ ಒಂದು ಕಲ್ಪನೆ ಹುಟ್ಟಲು ಮತ್ತು ಕಾಸ್ಮೋಪಾಲಿಟನ್ ಸಂಸ್ಕೃತಿ ಬೆಳೆಯಲು ಕಾರಣವಾಯಿತು. ಇಂತಹ ಸಾಹಿತ್ಯ ಕೃತಿಗಳು ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಶ್ಯದಾದ್ಯಂತ ‘ಪರ್ಶಿಯಾನೇಟ್ ಪ್ರಪಂಚ’ ವನ್ನು ಜೋಡಿಸಲು ಸಹಾಯ ಮಾಡಿತು. ಆದರೆ ಸಂಸ್ಕೃತ ಕೃತಿಗಳಂತೆಯೇ ಪರ್ಶಿಯನ್ ಸಾಹಿತ್ಯವು ಯಾವುದೇ ಭೌಗೋಳಿಕ ಅಥವಾ ರಾಜಕೀಯ ಕೇಂದ್ರವನ್ನು ಹೊಂದಿರಲಿಲ್ಲ, ವಿಶೇಷವಾಗಿ ಹದಿಮೂರನೇ ಶತಮಾನದ ನಂತರ ಮಂಗೋಲ್ ಆಕ್ರಮಣಕಾರರು ಮಧ್ಯ ಏಶ್ಯ ಮತ್ತು ಉತ್ತರ ಇರಾನ್‌ಗಳನ್ನು ಆಕ್ರಮಿಸಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ ನಂತರ.

ಆ ಹಂತದಿಂದ, ಕಾಕಸಸ್ ಅಥವಾ ಭಾರತದಂತಹ ದೂರದ ಪ್ರದೇಶಗಳಲ್ಲಿನ ಜನರು ಪರ್ಶಿಯನ್ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಓದಿ, ಬರೆಯುವುದನ್ನು ಮಾಡುತ್ತಿದ್ದರೂ ತಮ್ಮ ದೈನಂದಿನ ಬಳಕೆಗಾಗಿ ಸ್ಥಳೀಯ ಭಾಷೆಗಳ ಮೇಲೆಯೇ ಅವಲಂಬಿತರಾಗಿದ್ದಿರಬಹುದು. ಹದಿನಾಲ್ಕನೆಯ ಶತಮಾನದ ವೇಳೆಗೆ ಪರ್ಶಿಯನ್ ಒಂದು ರೋಮಾಂಚಕ ಮತ್ತು ಪ್ರತಿಷ್ಠಿತ ಸಾಹಿತ್ಯಿಕ ಭಾಷೆಯಾಗಿ ಮಾರ್ಪಟ್ಟಿತು, ಆಡಳಿತದಲ್ಲಿ ಮತ್ತು ಅಂತರ-ಪ್ರಾದೇಶಿಕ ರಾಜತಾಂತ್ರಿಕತೆಗೆ ಪ್ರಮುಖ ಸಂಪರ್ಕ ಭಾಷೆಯಾಗಿ ಬಳಕೆಯಾಗಲಾರಂಭಿಸಿತು. ಮಂಗೋಲ್ ಪ್ರಾಬಲ್ಯದ ಚೀನಾದಲ್ಲಿ, ಇದು ಒಂದು ಭಾಷೆಯಾಗಿ ಮಾತ್ರವಲ್ಲದೆ ಅಧಿಕೃತ ವಿದೇಶಿ ಭಾಷೆಯಾಗಿಯೂ ಕಾರ್ಯನಿರ್ವಹಿಸಿತು. ವೆನೆಶಿಯನ್ ವ್ಯಾಪಾರಿ ಮಾರ್ಕೊ ಪೊಲೊ (ಡಿ. 1324) ಮುಖ್ಯವಾಗಿ ಚೀನಾದಲ್ಲಿ ಪರ್ಶಿಯನ್ ಭಾಷೆಯನ್ನು ಬಳಸಿದರು. ಸಿಲ್ಕ್ ರೋಡ್‌ನಲ್ಲಿ ತಾನು ನಡೆಸಿದ ಪ್ರಯಾಣದ ಉದ್ದಕ್ಕೂ ಪರ್ಶಿಯನ್ ಭಾಷೆಯನ್ನೇ ಆತ ಬಳಸಿದ್ದರು. ಹದಿನಾಲ್ಕನೇ ಶತಮಾನದದಲ್ಲಿ ಅದೇ ಪ್ಯಾನ್-ಏಶ್ಯನ್ ಸರ್ಕ್ಯೂಟ್‌ಗಳಲ್ಲಿ ಪ್ರಯಾಣಿಸಿದ ಅವರ ಸಮಕಾಲೀನ ಮತ್ತು ವಿಶ್ವ ಸಂಚಾರಿ ಇಬ್ನ್ ಬತೂತ (ಡಿ. 1377) ಸಹ ಸಂವಹನಕ್ಕಾಗಿ ಪರ್ಶಿಯನ್ ಭಾಷೆಯನ್ನೇ ಬಳಸಿದರು.

ಹನ್ನೆರಡನೆಯ ಶತಮಾನದ ಅಂತ್ಯದ ವೇಳೆಗೆ ಭಾರತದ ಬದಲಾದ ರಾಜಕೀಯ ಕ್ರಮವನ್ನು ಅರ್ಥಮಾಡಿಕೊಳ್ಳುವಲ್ಲಿ ಪರ್ಶಿಯನ್ ಬರಹಗಾರರು ಅಧಿಕಾರ ಮತ್ತು ಅಧಿಕಾರದ ವಕ್ತಾರರ ಬಗ್ಗೆ ಬರೆದಿರುವ ವಿಚಾರಗಳು ಮಹತ್ವವನ್ನು ಪಡೆಯುತ್ತದೆ. ಪರ್ಶಿಯಾ ಭಾಷೆಯ ಸಾಹಿತ್ಯ ಮತ್ತು ಆಡಳಿತದಲ್ಲಿನ ಬಳಕೆಯನ್ನು ಪೋಷಿಸಿರುವ ಅದೇ ಸಾಂಸ್ಕೃತಿಕ ಪರಿಸರವು ‘ಯುನಿವರ್ಸಲ್ ದೊರೆ’ ಅಥವಾ ‘ಸುಲ್ತಾನ್’ ಎಂಬ ನಿರ್ದಿಷ್ಟ ಪರಿಕಲ್ಪನೆಯನ್ನೂ ರೂಪಿಸಿತು. ಸುಲ್ತಾನ್‌ ಎನ್ನುವ ಬಿರುದು ಪರ್ಶಿಯನೇಟ್ ಜಗತ್ತಿನಲ್ಲಿ ಜೀವಿಸುವ ಎಲ್ಲಾ ಜನರಿಗೂ ಅಚ್ಚುಮೆಚ್ಚಾಗಿ ಮಾರ್ಪಟ್ಟಿತ್ತು. ಸುಲ್ತಾನ್ ಅನಿಸಿಕೊಂಡವರು ಎಲ್ಲಾ ಜನಾಂಗೀಯ ಗುಂಪುಗಳು ಮತ್ತು ಧಾರ್ಮಿಕ ಸಮುದಾಯಗಳ ಮೇಲೆ ರಾಜಕೀಯ ಅಧಿಪತ್ಯವನ್ನೂ ಸ್ಥಾಪಿಸಿದರು. ಪರಮಾಧಿಕಾರ ಹಾಗೂ ರಾಜಕೀಯ ನಿಷ್ಠೆಯ ದ್ಯೋತಕವಾಗಿ ಈ ಪದ ಬದಲಾಯಿತು.

ಹತ್ತನೆಯ ಮತ್ತು ಹನ್ನೊಂದನೇ ಶತಮಾನಗಳಲ್ಲಿನ ಸುಲ್ತಾನ್ ಎಂಬ ಪರಿಕಲ್ಪನೆಯು ನಿರ್ದಿಷ್ಟವಾಗಿ ಎರಡು ಅಂಶಗಳಿಂದ ಉಂಟಾಗುತ್ತದೆ:
1.ಮಧ್ಯ ಏಶ್ಯ ಸಹಿತವಿರುವ ಪೌರಾತ್ಯ ಇಸ್ಲಾಮಿಕ್‌ ಜಗತ್ತಿನ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಾಗ್ದಾದ್‌ ಕೇಂದ್ರೀಕೃತವಾದ ಅಬ್ಬಾಸಿದ್ ಖಿಲಾಫತಿನ ಕುಸಿತ

  1. ಪೂರ್ವ ಏಶ್ಯದಿಂದ ನಗರೀಕೃತ ಮಧ್ಯ ಏಶ್ಯ ಮತ್ತು‌ ಇರಾನ್‌ಗೆ ನುಸುಳಿ ಬಂದ ಪ್ರಬಲ‌ ಟರ್ಕಿಶ್ ಜನರ ವಲಸೆ.
    ಈ ಹೊಸ ರಾಜಕೀಯವನ್ನು ಸರಿದೂಗಿಸಲು, ನೈಋತ್ಯ ಏಶ್ಯದಲ್ಲಿ ರಾಜಕೀಯ ಚಿಂತನೆಯು ತೀವ್ರವಾದ ಪರಿಷ್ಕರಣೆಗೆ ಒಳಗಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಆಧ್ಯಾತ್ಮಿಕ ಮತ್ತು ರಾಜಕೀಯ ಪ್ರಾಧಿಕಾರವು ಪ್ರತ್ಯೇಕ ಘಟಕಗಳಾಗಿ ವಿಭಜಿಸಲ್ಪಟ್ಟು ಖಲೀಫರು ಧಾರ್ಮಿಕ‌ ನಾಯಕರಾಗಿ ಮತ್ತು ಸುಲ್ತಾನರು ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳುವಂತಾಯಿತು. ಆಧ್ಯಾತ್ಮಿಕ ವಿಚಾರಗಳಲ್ಲಿ ಖಲೀಫರ ಪ್ರಾಧಿಕಾರವನ್ನು ಅಂಗೀಕರಿಸುವ ಯಾವುದೇ ಸರಕಾರ ಕಾನೂನಾತ್ಮಕವಾಗಿ ಸಿಂಧುತ್ವವನ್ನು ಪಡೆಯುತ್ತದೆ ಎಂದು ಘೋಷಿಸಿದ ಆ ಕಾಲದ ಪ್ರಸಿದ್ಧ ಧಾರ್ಮಿಕ ವಿದ್ವಾಂಸ ಇಮಾಂ ಗಝ್ಝಾಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಖಲೀಫರು ಕೂಡಾ ತಿರುಗಿ ಅನ್ಯೋನ್ಯತೆಯನ್ನು ಉಳಿಸಲು ತಾವೇ ನೇಮಕ ಮಾಡಿದವರೆಂಬ ಕಲ್ಪನೆಯಲ್ಲಿ ಸುಲ್ತಾನರುಗಳ ಧಾರ್ಮಿಕೇತರ ಆಡಳಿತವನ್ನು ಒಪ್ಪಿಕೊಂಡರು.

ಹನ್ನೆರಡನೆಯ ಶತಮಾನದ ಆರಂಭದಲ್ಲಿ ಇತಿಹಾಸಕಾರ ಇಬ್ನ್ ಬಲ್ಖಿಯು ದಾಖಲಿಸಿದಂತೆ ಪ್ರತಿಯೊಬ್ಬ ರಾಜನೂ ತನ್ನ ಉತ್ತರಾಧಿಕಾರಿಗೆ ‘ಸೈನ್ಯವಿಲ್ಲದೆ ರಾಜ್ಯವಿಲ್ಲ, ಸಂಪತ್ತಿಲ್ಲದ ಸೈನ್ಯವಿಲ್ಲ, ಭೌತಿಕ ಸಮೃದ್ಧಿಯಿಲ್ಲದೆ ಸಂಪತ್ತಿಲ್ಲ ಮತ್ತು ನ್ಯಾಯವಿಲ್ಲದೆ ಭೌತಿಕ ಸಮೃದ್ಧಿ ಇಲ್ಲ’ ಎಂಬ ಸೂತ್ರವನ್ನು ಕಲಿಸುತ್ತಿದ್ದರು.

ಇಬ್ನ್ ಬಲ್ಖಿಯಂತಹ ಪರ್ಶಿಯನ್ ವಿದ್ವಾಂಸರು ಇಸ್ಲಾಮ್ ಅಥವಾ ಯಾವುದೇ ಇತರ ಧಾರ್ಮಿಕ ಸಂಪ್ರದಾಯಗಳಿಗೆ ಸುಲ್ತಾನರ ಅಧಿಕಾರವನ್ನು ಕಟ್ಟಿ ಹಾಕಲು ಪ್ರಯತ್ನಿಸಿಲ್ಲ. ಅವರನ್ನು ಒಗ್ಗೂಡಿಸಿದ ಘಟಕ ‘ನ್ಯಾಯ’ ವಲ್ಲದೆ ಬೇರೇನೂ ಅಲ್ಲ. ಯುರೋಪ್‌ನಲ್ಲಿ ಚರ್ಚ್ ಮತ್ತು ಆಡಳಿತವನ್ನು ಬೇರ್ಪಡಿಸುವುದರ ಬಗ್ಗೆ ಯೋಚಿಸುವುದಕ್ಕಿಂತ ಮೊದಲೇ, ಅಂದರೆ ಹನ್ನೊಂದನೇ ಮತ್ತು ಹನ್ನೆರಡನೆಯ ಶತಮಾನದಲ್ಲೇ ಇರಾನ್ ಮತ್ತು ಮಧ್ಯ ಏಶ್ಯದ ಬುದ್ಧಿಜೀವಿಗಳು ಅದನ್ನು ಜಾರಿಗೆ ತಂದಿದ್ದರು. ಆಡಳಿತದ ಇಂತಹ ಜಾತ್ಯತೀತ ಪರಿಕಲ್ಪನೆಯು ಭಾರತದಂತಹ ಜನಾಂಗೀಯವಾಗಿ ವೈವಿಧ್ಯಮಯ ಪ್ರದೇಶಗಳಲ್ಲಿ ತಮ್ಮನ್ನು ಸುಲ್ತಾನರನ್ನಾಗಿ ಮಾಡಿಕೊಳ್ಳುವ ಆಡಳಿತಗಾರರ ಮೇಲೆ ದೂರಗಾಮಿ ಆದರೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಾಸ್ತವವಾಗಿ, ಭಾರತವನ್ನು ತಲುಪುವ ಹೊತ್ತಿಗೆ, ‘ಸುಲ್ತಾನ್’ ಎಂಬ ಪದವು ಜನಾಂಗೀಯತೆ ಅಥವಾ ಧರ್ಮದಿಂದ ಎಷ್ಟು ಬೇರ್ಪಟ್ಟಿದೆ ಎಂದರೆ, ಹಿಂದೂ ಆಡಳಿತಗಾರರೂ‌ ಆ ಪದವಿಯನ್ನು ಬಳಸಲು ಆರಂಭಿಸಿದ್ದರು. 1347ರಲ್ಲಿ ದಖ್ಖನ್ ಭೂಭಾಗವನ್ನು ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ದೊರೆ ಮಾರಪ್ಪ ʼಭಾರತೀಯ ದೊರೆಗಳ ಸುಲ್ತಾನʼ ಎಂದು ಸ್ವಯಂ ಘೋಷಿಸಿಕೊಂಡಿದ್ದ.

ವಿಸ್ತರಿಸುತ್ತಿರುವ ಪರ್ಶಿಯನೇಟ್ ಜಗತ್ತಿನಲ್ಲಿ ಭಾರತವೂ ಸೇರಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾರ್ವತ್ರಿಕ ನ್ಯಾಯದ ತತ್ವವನ್ನು ಅಳವಡಿಸಿಕೊಂಡಿತು. ಧಾರ್ಮಿಕವಾಗಿ, ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ವೈವಿಧ್ಯಮಯವಾಗಿರುವ ಉತ್ತರ ಭಾರತದ ಸಮಾಜವನ್ನು ಆಳಲು ಇಂತಹ ಅಂತರ್ಗತ ರಾಜಕೀಯ ಸಿದ್ಧಾಂತದ ಅಗತ್ಯವೂ ಇತ್ತು‌. ‘ಧರ್ಮ’ದ ಬದಲು ‘ನ್ಯಾಯ’ವೇ ಸಮರ್ಪಕ ಆಡಳಿತದ ಸೂತ್ರವಾಗಿ ಸ್ವೀಕಾರ ಮಾಡಿದ್ದರಿಂದ ಆಡಳಿತಗಾರನ ಸ್ವಂತ ಧರ್ಮ ಲೆಕ್ಕಕ್ಕೆ ಬಾರದೆ ಪರ್ಶಿಯನೀಕೃತ ರಾಜ್ಯಗಳು ಭಾರತದಾದ್ಯಂತ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟಿತು. ದೆಹಲಿ ಸುಲ್ತಾನೇಟ್‌ನ ಇತಿಹಾಸಗಾರನಾಗಿದ್ದ ಝಿಯಾವುದ್ದೀನ್‌ ಬರನಿ “ನ್ಯಾಯಪರನಾಗಿರುವ ಮುಸ್ಲಿಮೇತರ ಆಡಳಿತಗಾರನ ಕೆಳಗೆ ಯಾವುದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿದೆ. ಆದರೆ, ಅನ್ಯಾಯ ಮಾಡುವ ಮುಸ್ಲಿಮ್ ಆಡಳಿತಗಾರ ಆಳುವ ದೇಶ ಒಮ್ಮೆಯೂ ಪ್ರವರ್ಧಮಾನಕ್ಕೆ ಬರದು” ಎಂದು ಹೇಳಿದ್ದು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ.

ಪರ್ಶಿಯನ್ ಪ್ರಪಂಚದ ಬಗ್ಗೆ ಬಹುಶಃ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, ದೆಹಲಿ ಸುಲ್ತಾನೇಟ್‌ನಂತಹ ಪರ್ಶಿಯನ್ ರಾಜ್ಯಗಳ ಆಡಳಿತದಲ್ಲಿರುವ ಭಾರತೀಯ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ ಅಂತಹ ರಾಜ್ಯಗಳ ಆಚೆಗೆ ಇರುವ ಪ್ರದೇಶಗಳಿಗೂ ಅದರ ಪ್ರಮುಖ ಆಲೋಚನೆಗಳು ಎಷ್ಟು ಸುಲಭವಾಗಿ ಹರಡಿವೆ ಎಂಬುದು. ನ್ಯಾಯ ಮತ್ತು ಆರ್ಥಿಕತೆ, ನೈತಿಕತೆ ಮತ್ತು ರಾಜಕೀಯವನ್ನು ಸಂಪರ್ಕಿಸುವ ಪರಿಕಲ್ಪನೆಯ ಪರ್ಶಿಯನ್ ಸಿದ್ಧಾಂತವು ಕೆಲವು ಹಿಂದೂ‌ ರಾಜರಿರುವ ಆಡಳಿತ ಪ್ರದೇಶಗಳನ್ನೂ ಆಕರ್ಷಿಸಿತ್ತು. ಹನ್ನೆರಡನೆಯ ಅಥವಾ ಹದಿಮೂರನೆಯ ಶತಮಾನದಲ್ಲಿ ತೆಲುಗು ಕವಿ ಬದ್ದೇನಾ, ವಾರಂಗಲ್‌ನಲ್ಲಿರುವ ಕಾಕತೀಯ ಆಸ್ಥಾನದಲ್ಲಿದ್ದುಕೊಂಡು
“ಸಂಪತ್ತನ್ನು ಸಂಪಾದಿಸಲು: ಜನರನ್ನು ಸಮೃದ್ಧಿಗೊಳಿಸು. ಜನರ ಏಳಿಗೆಗೆ: ನ್ಯಾಯವೇ ಸಾಧನ.
ಓ ಕೀರ್ತಿ ನಾರಾಯಣ! ನ್ಯಾಯವು ರಾಜರ ಖಜಾನೆ ಎಂದು ಅವರು ಹೇಳುತ್ತಾರೆ” ಎಂದು ಬರೆದಿದ್ದರು.

ಸಂಪತ್ತು, ಸಮೃದ್ಧಿ ಮತ್ತು ನ್ಯಾಯವನ್ನು ಪರಸ್ಪರ ಸಂಪರ್ಕಿಸುವ ಇಬ್ನ್ ಬಲ್ಖಿಯ ಬರಹವನ್ನೇ ಇದು ಹೋಲುತ್ತದೆ. ಅಲ್ಲದೆ, ಪರ್ಶಿಯನ್ ರಾಜಕೀಯ ಚಿಂತನೆಯ ಕೇಂದ್ರವಾದ ನ್ಯಾಯದ ಕಲ್ಪನೆಯನ್ನು ಬದ್ದೇನಾ ಮುಕ್ತವಾಗಿ ಎರವಲು ಪಡೆದರು ಮತ್ತು ಹೊರಗಿನಿಂದ ಹೇರಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದ್ದೇನಾ ಅವರು ದೆಹಲಿ ಸುಲ್ತಾನರಿಂದ ಬಹಳ ದೂರದಲ್ಲಿದ್ದರೂ ಸಹ, ರಾಜಕೀಯ ಮತ್ತು ನೈತಿಕ ಕ್ರಮದ ಪರ್ಶಿಯನ್ ದೃಷ್ಟಿಕೋನವನ್ನು ಹರಳುಗೊಳಿಸಿದ್ದರು ಎನ್ನಬಹುದು.

ಹದಿಮೂರನೇ ಶತಮಾನದ ಉತ್ತರ ಭಾರತವನ್ನು ಟರ್ಕಿಯು ವಶಪಡಿಸಿಕೊಂಡ ನಂತರ ರಾಜಕೀಯ ಸಿದ್ಧಾಂತದ ಹೊರತಾಗಿಯೂ ಪರ್ಶಿಯನ್ ಸಂಸ್ಕೃತಿಯ ಇತರ ಅಂಶಗಳು ದಕ್ಷಿಣ ಏಶ್ಯದಾದ್ಯಂತ ಹರಡಿತು. ಇದರಲ್ಲಿ ವಾಸ್ತುಶಿಲ್ಪ, ಉಡುಗೆ, ಸಂಗೀತ, ಪಾಕಪದ್ಧತಿ ಮತ್ತು ವಿಶೇಷವಾಗಿ ಪರ್ಶಿಯನ್ ಶಬ್ದಕೋಶಗಳು ಸೇರಿವೆ. ಪರ್ಶಿಯನ್ ಅಕ್ಷರಗಳ ಭೌಗೋಳಿಕ ವ್ಯಾಪ್ತಿಯು ವಿಸ್ತರಿಸಿದಂತೆ, ನಿಘಂಟುಗಳ ರಚನೆಯೂ ವಿಸ್ತರಿಸಿತು. ಅದರ ಸಂಕಲನಕಾರರು ಪರ್ಶಿಯನ್ ಮಾತಾಡುವ ಪ್ರಪಂಚದ ವಿವಿಧ ಭಾಗಗಳಲ್ಲಿ ರಚಿಸಲಾದ ಸಾಹಿತ್ಯವನ್ನು ಪರಸ್ಪರ ಗ್ರಾಹ್ಯವಾಗುವಂತೆ ಮಾಡಲು ಪ್ರಯತ್ನಿಸಿದರು. ಹತ್ತೊಂಬತ್ತನೇ ಶತಮಾನದ ವೇಳೆಗೆ, ಇರಾನ್‌ಗಿಂತಲೂ ಹೆಚ್ಚಿನ ಪರ್ಶಿಯನ್ ಭಾಷೆಯ ನಿಘಂಟುಗಳು ಭಾರತದಲ್ಲಿ ರಚಿಸಲ್ಪಟ್ಟವು ಎಂಬ ಐತಿಹಾಸಿಕ ಸತ್ಯವು, ಭಾರತವು ಪರ್ಶಿಯನ್ ಜಗತ್ತನ್ನು ಯಾವ ಪ್ರಮಾಣದಲ್ಲಿ ಒಳಗೊಂಡಿತು ಎಂಬುದನ್ನು ಸೂಚಿಸುತ್ತದೆ. ಹದಿನಾಲ್ಕನೆಯ ಶತಮಾನದ ವೇಳೆಗೆ ಪರ್ಶಿಯನ್ ದಕ್ಷಿಣ ಏಶ್ಯದಾದ್ಯಂತ ವ್ಯಾಪಕವಾಗಿ ಬಳಸಲಾಗುವ ಆಡಳಿತ ಭಾಷೆಯಾಯಿತು. ದೆಹಲಿ ಸುಲ್ತಾನರು ಮತ್ತು ಅದರ ಉತ್ತರಾಧಿಕಾರಿಗಳು ಮತ್ತು ಆ ನಂತರ ಮೊಘಲರು (1526-1858) ನ್ಯಾಯಾಂಗ ಮತ್ತು ಆಡಳಿತ ಭಾಷೆಯಾಗಿ ಪರ್ಶಿಯನ್ ಭಾಷೆಯನ್ನೇ ಬಳಸಿದರು. ಇದರ ಪರಿಣಾಮವಾಗಿ, ದಕ್ಷಿಣ ಏಶ್ಯದ ಹಲವು ಪ್ರಮುಖ ಪ್ರಾದೇಶಿಕ ಭಾಷೆಗಳ ಶಬ್ದಕೋಶದಲ್ಲಿ ಪರ್ಶಿಯನ್ ಪದಗಳ ವ್ಯಾಪಕವಾಗಿ ನುಸುಳಿತು.

ಇವೆಲ್ಲವೂ ನಮ್ಮನ್ನು periodizationಗೆ ಹಿಂತಿರುಗಿಸುತ್ತದೆ. ಭಾರತದ ಇತ್ತೀಚಿನ ತಲೆಮಾರಿನ ಇತಿಹಾಸಕಾರರು ಹಳೆಯ ತ್ರಿಪಕ್ಷೀಯ ಹಿಂದೂ-ಮುಸ್ಲಿಮ್-ಬ್ರಿಟಿಷ್ ಕಲ್ಪನೆಯನ್ನು ತ್ಯಜಿಸಿ ಪ್ರಾಚೀನ-ಮಧ್ಯಕಾಲೀನ-ಆಧುನಿಕ ಎಂಬ ಕಲ್ಪನೆಗೆ ಹಿಂದಿರುಗಿದ್ದಾರೆ. ‘ಮಧ್ಯಕಾಲೀನ ಎಂಬ ಪದಕ್ಕೆ ಪರ್ಯಾಯ ಪದ ನೀಡುವ ಬದಲು ಇತಿಹಾಸಕಾರರು 1000-1800 ಅವಧಿಯ ಸಂಪೂರ್ಣ ಅಥವಾ ಭಾಗವನ್ನು ಒಳಗೊಂಡಿರುವ ಉತ್ತಮ ಗುಣಮಟ್ಟದ ಪ್ರಾದೇಶಿಕ ಅಧ್ಯಯನಗಳನ್ನು ಬಂಗಾಳ, ಗುಜರಾತ್, ಮಲಬಾರ್, ಒರಿಸ್ಸಾ, ಪಂಜಾಬ್, ಡೆಕ್ಕನ್ ಪ್ರಸ್ಥಭೂಮಿ, ದೆಹಲಿ ಪ್ರದೇಶ, ತಮಿಳು ದೇಶ ಮುಂತಾದ ಪ್ರದೇಶಗಳ ಮೇಲೆ ಕೈಗೊಂಡಿದ್ದಾರೆ. ಪರಿಣಾಮವಾಗಿ ಈ ಅಧ್ಯಯನದ ಫಲಿತಾಂಶವನ್ನು ಇಡೀ ಭಾರತಕ್ಕೆ ಅನ್ವಯಿಸಿದಾಗ ‘ಮಧ್ಯಕಾಲೀನ’ ಎಂಬ ಪದವು ಅಪ್ರಸಕ್ತವಾದಂತೆ ಅನಿಸುತ್ತದೆ. ಇತಿಹಾಸಕಾರ ದಾವೂದ್ ಅಲಿ ಹೇಳುವಂತೆ “ಮಧ್ಯಯುಗ ಎನ್ನುವ ಪರಿಕಲ್ಪನೆ ಬಹುತೇಕ ರಾಷ್ಟ್ರೀಯ ಇತಿಹಾಸಶಾಸ್ತ್ರಗಳಲ್ಲಿ ಯಾವುದೇ ನಿರ್ಣಾಯಕ ಅಂಶಗಳಿಲ್ಲದ ವರ್ಗವಾಗಿ ಕ್ರಮೇಣ ಮಾರ್ಪಟ್ಟಿದೆ ಮತ್ತು ಪ್ರಾದೇಶಿಕ ಪ್ರತ್ಯೇಕತೆಗಳ ಒಂದು ರೀತಿಯ ಕ್ಯಾಕೊಫೋನಿ ರೀತಿ ವರ್ತಿಸಿದೆ. ಹೊಸ ಅಶ್ವದಳದ ಆಗಮನ ಆಗುವವರೆಗೆ ಇದು ಮುಂದುವರಿಯಲಿದೆ”.
ಅಲಿಯವರ “ಅಶ್ವದಳ” ಎಂಬ ಪರಿಕಲ್ಪನೆಯನ್ನು ಒಂದು ಹೊಸ ಸೈದ್ಧಾಂತಿಕ ಹ್ಯಾಂಡಲ್‌ ಆಗಿ ಅರ್ಥೈಸಬಹುದು. ಈ ಪರಿಕಲ್ಪನೆಯು ಧಾರ್ಮಿಕವಾಗಿ ವ್ಯಾಖ್ಯಾನಿಸಲಾದ ಮುಸ್ಲಿಮ್ ಯುಗ ಎಂಬ ಅರ್ಥವನ್ನು ಹೊರತುಪಡಿಸಿದ ಬೇರೆಯೇ ಅರ್ಥವನ್ನು ‘ಮಧ್ಯಕಾಲೀನ’ ಎಂಬ ಪದಕ್ಕೆ ನೀಡಬಲ್ಲದು.

ಅಂತಹ ಸೈದ್ಧಾಂತಿಕ ಚೀಲವೊಂದು ಈಗಾಗಲೇ ಚಾಲ್ತಿಯಲ್ಲಿದೆ ಎನ್ನುವುದು ನನ್ನ ವಾದ. ಸಾಂಪ್ರದಾಯಿಕವಾಗಿ ‘ಮಧ್ಯಕಾಲೀನ’ ಎಂದು ಲೇಬಲ್ ಮಾಡಲಾದ ಭಾರತದ ಇತಿಹಾಸದ ಅವಧಿಯು ಪರ್ಶಿಯನೇಟ್ ಸಂಸ್ಕೃತಿ ಬಹುತೇಕ ಎಲ್ಲಾ ಭಾರತೀಯ ಉಪಖಂಡದಾದ್ಯಂತ ಪ್ರಸರಣಗೊಂಡು ಅದರ ಸಂಸ್ಕೃತ ಪ್ರತಿರೂಪದೊಂದಿಗಿನ ಸಂಪರ್ಕ ಸಾಧಿಸಿದ ಕಾಲಸಂಧಿಯೊಂದಿಗೆ ತಾಳೆಯಾಗುತ್ತಿದೆ. ಈ ಪರ್ಶಿಯನ್ ಮತ್ತು ಸಂಸ್ಕೃತ ಪ್ರಪಂಚದ ನಡುವಿನ ಮುಖಾಮುಖಿ ಅತ್ಯಂತ ಶ್ರೀಮಂತ ಮತ್ತು ಅಷ್ಟೇ ಸಂಕೀರ್ಣವಾಗಿದೆ.

( ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್‌ ಉತ್ತರ ಅಮೆರಿಕಾದಲ್ಲಿ ಪ್ರಕಟಿಸಿದ ರಿಚರ್ಡ್ ಎಂ. ಈಟನ್ ಅವರ from India in the Persianate Age: 1000-1765 ರ ಆಯ್ದ ಭಾಗ)

ಅನುವಾದ: ಫಾತಿಮಾ ರಲಿಯಾ ಹೆಜಮಾಡಿ

Leave a Reply

*