ಮುಸ್ಲಿಮರ ಆರೋಗ್ಯ ಮತ್ತು ಇಸ್ಲಾಮೋಫೋಬಿಯಾ

ರಂಝಾನ್ ಎಂದರೆ ಮುಸ್ಲಿಮ್ ಪ್ರಪಂಚಕ್ಕೆ ಶಾಂತಿ, ಆಧ್ಯಾತ್ಮಿಕ ಸಂಭ್ರಮ ಮತ್ತು ಭರವಸೆಯ ತಿಂಗಳು. ಆದರೆ ಭಾರತೀಯ ಮುಸ್ಲಿಮರ ಈ ಬಾರಿಯ ಇಡೀ ರಂಝಾನ್ ಒಂದು ವಿಷಣ್ಣತೆಯಲ್ಲೇ ಕಳೆದುಹೋಯಿತು. ವರ್ಷದ ಆರಂಭದಿಂದಲೇ ದೇಶದಲ್ಲಿ ಇಸ್ಲಾಮೋಫೋಬಿಕ್ ಘಟನೆಗಳಲ್ಲಿ ಭಯಾನಕ ಹೆಚ್ಚಳ ಕಂಡಿದೆ. ‘ಡೀಲ್ ಆಫ್ ದಿ ಡೇ’ ಎಂದು ಪ್ರಖ್ಯಾತ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕಿದ ‘ಬುಲ್ಲಿ ಬಾಯ್’ ಅಪ್ಲಿಕೇಶನ್ ನಿಂದ ಹಿಡಿದು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಹಿಂದೂ ಸ್ವಾಮಿಗಳು ನೀಡಿದ ಬಹಿರಂಗ ಕರೆ, ಹಲವು ರಾಜ್ಯಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಮುಸ್ಲಿಮ್ ಮನೆಗಳು ಮತ್ತು ಮಸೀದಿಗಳ ಮೇಲೆ ನಡೆದ ಅಪ್ರಚೋದಕ ಹಿಂಸಾತ್ಮಕ ದಾಳಿಗಳೆಲ್ಲವೂ ಇಡೀ ದೇಶದ ಮುಸ್ಲಿಮರಲ್ಲಿ‌ ಒಂದು ವಿವರಿಸಲಾಗದ ಕಳವಳಕ್ಕೆ ಕಾರಣವಾಗಿತ್ತು.

ಇಸ್ಲಾಮೋಫೋಬಿಯಾವು ಈ ದೇಶದಲ್ಲಿ ಈಗ  ಮುಸ್ಲಿಮರ ಜೀವನದ ದೈನಂದಿನ ಭಾಗವಾಗಿ ಬಿಟ್ಟಿದೆ. ಏಕೆಂದರೆ ನಾವು ಇಲ್ಲಿ ವಿನಾಕಾರಣ ಹತ್ಯೆಗೀಡಾಗುತ್ತೇವೆ, ಟೀಕೆಗೊಳಗಾಗುತ್ತೇವೆ, ಅನ್ಯಾಯವಾಗಿ ಸೆರೆವಾಸಕ್ಕೆ ಒಳಗಾಗುತ್ತೇವೆ ಮತ್ತು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತದೆ. ನಾವು  ಕೆಲಸದ ಸ್ಥಳಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಬೀದಿಗಳಲ್ಲಿ ಮತ್ತು ನಮ್ಮ ಆರಾಧನಾ ಸ್ಥಳಗಳಲ್ಲಿ ಹಿಂಸೆಯ ಬೆದರಿಕೆಯನ್ನು ಎದುರಿಸುತ್ತೇವೆ. ನಾವು ಪ್ರತ್ಯಕ್ಷವಾಗಿ ಹಿಂಸೆಗೆ ಒಳಗಾಗುತ್ತಿದ್ದೇವೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅದಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಮತ್ತೊಂದೆಡೆ ಧಾರ್ಮಿಕ ತಾರತಮ್ಯವು ಲಕ್ಷಾಂತರ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದು ಇಡೀ ಸಮುದಾಯವನ್ನು ಆರೋಗ್ಯ ಬಿಕ್ಕಟ್ಟಿಗೆ ತಳ್ಳುತ್ತದೆ.  ಅನಿಯಂತ್ರಿತವಾಗಿ ಹಬ್ಬುತ್ತಿರುವ ಇಸ್ಲಾಮೋಫೋಬಿಯಾವು ಪ್ರಪಂಚದಾದ್ಯಂತದ ಮುಸ್ಲಿಮ್ ಸಮುದಾಯಗಳನ್ನು ಆಳವಾದ ಮಾನಸಿಕ ಆಘಾತಕ್ಕೆ ಒಳಗಾಗಿಸಿದೆ. ಈ ರೀತಿಯ ಆಘಾತಕ್ಕೆ ಒಂದು ದೊಡ್ಡ ಐತಿಹ್ಯವೇ ಇದೆ, ಮತ್ತಿದು ಒಂದು ವ್ಯವಸ್ಥಿತ ತಂತ್ರದ ಫಲ. ಅಷ್ಟು ಮಾತ್ರವಲ್ಲದೆ ಆಘಾತವು ಒಂದು ತಲೆಮಾರಿಗೆ ಮುಗಿದು ಹೋಗದೆ ತಲೆಮಾರಿನಿಂದ ತಲೆಮಾರಿಗೆ ಒಂದು ವಜ್ಜೆಯಂತೆ ಸಾಗುತ್ತದೆ ಎಂಬುದು ದೊಡ್ಡ ದುರಂತ. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಇಂತಹ ವ್ಯವಸ್ಥಿತ ಆಘಾತ ಉಂಟುಮಾಡುವ ಪರಿಣಾಮಗಳೇನು ಮತ್ತು ಅದರಿಂದ ನಾವು ಹೇಗೆ ಹೊರಬರಬಹುದು? ಎಂಬುವುದನ್ನು ನಾವೀಗ ಅವಶ್ಯಕವಾಗಿ ಚಿಂತಿಸಲೇಬೇಕಾಗಿದೆ.

ವ್ಯವಸ್ಥಿತ ದಬ್ಬಾಳಿಕೆ, ಮುಖ್ಯವಾಹಿನಿಯಿಂದ ದೂರವಿಡುವುದು ಮತ್ತು ತಾರತಮ್ಯದಂತಹ ಇಸ್ಲಾಮೋಫೋಬಿಕ್ ನಡವಳಿಕೆಗಳು ಒಂದು ಪ್ರದೇಶದ ಅಲ್ಪಸಂಖ್ಯಾತರಲ್ಲಿ ಖಿನ್ನತೆ, ಆತ್ಮಹತ್ಯೆ, ಆತಂಕ, ಕಿರಿಕಿರಿ, ಕಳಪೆ ಏಕಾಗ್ರತೆ, ಹೈಪರ್ವಿಜಿಲೆನ್ಸ್, ಕಡಿಮೆ ಸ್ವಾಭಿಮಾನ ಮತ್ತು ನಕಾರಾತ್ಮಕ ಸ್ವಾಭಿಮಾನದಂತಹ ಋಣಾತ್ಮಕ ಆರೋಗ್ಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ವ್ಯವಸ್ಥಿತ ಆಘಾತವು PTSD ಅಥವಾ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನೊಂದಿಗೆ ಸಾಮತ್ಯೆಯನ್ನು ಹೊಂದಿದೆ. ಆದರೆ ಪ್ರಸ್ತುತ ನಾವು ಅನುಭವಿಸುತ್ತಿರುವ ತಾರತಮ್ಯವು‌ ನಿರಂತರ ಮತ್ತು ವ್ಯಾಪಕವಾಗಿರುವುದರಿಂದ ಮುಸ್ಲಿಮರ ಮಾನಸಿಕ ಆರೋಗ್ಯದ ಮೇಲೆ ಅದು ಬೀರುತ್ತಿರುವ ಪರಿಣಾಮವನ್ನು ವಿವರಿಸಲು ಈ ಪದವು ಸಾಕಾಗುವುದಿಲ್ಲ.

ವ್ಯವಸ್ಥೆಯೇ ಹುಟ್ಟು ಹಾಕಿರುವ ಈ ಆಘಾತವು ನಮ್ಮ ನರಮಂಡಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಅಪಾಯಕಾರಿ ಸಂದರ್ಭಗಳಲ್ಲಿ ಹೋರಾಡಲು ಅಥವಾ ಪಲಾಯನ ಮಾಡಲು ನಮ್ಮ ದೇಹವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ (ಸಾಮಾನ್ಯವಾಗಿ ಒತ್ತಡದ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ). ಈ ರಾಸಾಯನಿಕಗಳು ನಮ್ಮ ದೇಹದಲ್ಲಿ ಸಣ್ಣ ಸಣ್ಣ ಸ್ಫೋಟಗಳಲ್ಲಿ ಬಿಡುಗಡೆಯಾಗಬೇಕು. ಇದರಿಂದ ನಾವು ಅಪಾಯದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.  ವ್ಯವಸ್ಥಿತ ಆಘಾತದ ಸಂದರ್ಭದಲ್ಲಿ, ದೀರ್ಘಕಾಲದವರೆಗೆ ಅಪಾಯದಿಂದ ಯಾವುದೇ ವಿರಾಮ ಇಲ್ಲದೇ ಇದ್ದಾಗ ಏನಾಗುತ್ತದೆ?  ದೀರ್ಘಾವಧಿಯ ಒತ್ತಡದ ಪ್ರತಿಕ್ರಿಯೆಯು ಅಧಿಕ ರಕ್ತದೊತ್ತಡ, ಹೃದ್ರೋಗ, ನಿದ್ರಾಹೀನತೆ, ನಿದ್ರಾ ಭಂಗಗಳು, ಖಿನ್ನತೆ, ಆತಂಕ ಮತ್ತು ಋಣಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗಬಹುದು.

ಜೆನ್ನಿಫರ್ ಫ್ರೈಡ್

ಆಘಾತಕಾರಿ ಅನುಭವವನ್ನು ಇನ್ನಷ್ಟು ಹದಗೆಡಿಸುವ ಸಾಂಸ್ಥಿಕ ಕ್ರಿಯೆ ಅಥವಾ ನಿಷ್ಕ್ರಿಯತೆಯನ್ನು ವಿವರಿಸಲು 2008 ರಲ್ಲಿ, ಒರೆಗಾನ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರಾಧ್ಯಾಪಕರಾದ ಜೆನ್ನಿಫರ್ ಫ್ರೈಡ್ ಅವರು “ಸಾಂಸ್ಥಿಕ ದ್ರೋಹ” ಎಂಬ ಪದವನ್ನು ಸೃಷ್ಟಿಸಿದರು. ನಮ್ಮ ಸುರಕ್ಷತೆ ಮತ್ತು ಯೋಗಕ್ಷೇಮವನ್ನು (ಶಾಲೆಗಳು, ಕಾಲೇಜುಗಳು, ನ್ಯಾಯಾಲಯಗಳು, ಸರ್ಕಾರಗಳು) ರಕ್ಷಿಸಲು ರಚಿಸಲಾದ ವಿಶ್ವಾಸಾರ್ಹ ಸಂಸ್ಥೆಗಳೇ ಹಿಂಸಾಚಾರ ಮತ್ತು ತಾರತಮ್ಯವನ್ನು ಎಸಗುತ್ತಿರುವುದರಿಂದ ಈ ದೇಶದ ಮುಸ್ಲಿಮ್ ಸಮುದಾಯದ ತಲ್ಲಣಗಳನ್ನು ಸೂಕ್ತವಾಗಿ ವಿವರಿಸಲು ಸಾಧ್ಯವಿರುವುದು ಬಹುಶಃ ಇದೊಂದೇ ಪದಕ್ಕೆ. ಯಾಕೆಂದರೆ ಇಲ್ಲಿನ‌ ಮುಸ್ಲಿಂ ಸಮುದಾಯಕ್ಕೆ ಇಂತಹ ಆಘಾತಕಾರಿ ಅನುಭವಗಳು ಪದೇಪದೇ ಸಂಭವಿಸುತ್ತಲೇ ಇರುವುದಷ್ಟೇ ಅಲ್ಲದೆ ಇದಕ್ಕೆ ಯಾವುದೇ ಪರಿಹಾರಗಳು ಕಂಡುಬರುತ್ತಿಲ್ಲ.

ವ್ಯವಸ್ಥಿತ ಅಥವಾ ಸಾಂಸ್ಥಿಕ ಆಘಾತ ಎಂಬುವುದು ಚಾರಿತ್ರಿಕ‌ವಾದದ್ದು ಮತ್ತು ಪೀಳಿಗೆಯಿಂದ ಪೀಳಿಗೆಗೆ ಹರಡುವಂಥದ್ದು. ಇತ್ತೀಚಿನ ಅಧ್ಯಯನಗಳು ಇಂತಹ ಆಘಾತದ ಪರಿಣಾಮಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಡಬಹುದು ಎಂದೇ ಹೇಳಿದೆ.  ಆಘಾತದ ಪರಿಣಾಮಗಳಿಗೆ ನೇರವಾಗಿ ಒಡ್ಡಿಕೊಂಡವರು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯವರೂ ಇದರ ದೂರಗಾಮಿ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂಬುವುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ಮುಸ್ಲಿಮರ ಬಗ್ಗೆ ಪ್ರಚಾರ ಮಾಡಲಾದ ನಕಾರಾತ್ಮಕ ಸ್ಟೀರಿಯೊಟೈಪ್‌ಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಆಂತರಿಕವಾಗಿಯೇ ರವಾನಿಸಲ್ಪಡಬಹುದು. ಇದು ಅಂತಿಮವಾಗಿ ಸ್ವಾಭಿಮಾನದ ಕೊರತೆಯಂತೆ ಅಥವಾ ದುರ್ಬಲ‌ ಮಾನಸಿಕ ಸ್ಥಿತಿಯಂತೆ ಪ್ರಕಟಗೊಳ್ಳಬಹುದು. ಹಲವು ವೈಜ್ಞಾನಿಕ ಸಂಶೋಧನೆಗಳು ಮುಂದಿನ ಪೀಳಿಗೆಯ ಮುಸ್ಲಿಮ್ ಸಮುದಾಯದ ಸಂಸ್ಕೃತಿ ಮತ್ತು ಜೀವಶಾಸ್ತ್ರವನ್ನು ಸಾಮೂಹಿಕ ನೋವು ಹೇಗೆ ರೂಪಿಸುತ್ತದೆ ಎಂಬುದರ ಕುರಿತು ಪ್ರಬಲವಾದ ವಾದಗಳನ್ನು ಪ್ರಸ್ತುತಪಡಿಸಿದೆ.

ಜೊತೆಗೆ ಈ ಸಂಶೋಧನೆಗಳು ಆಘಾತವನ್ನು ತಲೆಮಾರುಗಳವರೆಗೆ ರವಾನಿಸಬಹುದಾದರೆ, ಆಶಾವಾದಗಳಂತಹ ಸಕಾರಾತ್ಮಕ ಚಿಂತನೆಗಳೂ ಸಹ ‘ಇಂಟರ್ ಜನರೇಶನಲ್’ ಆಗಿ ಪ್ರವಹಿಸಬಹುದು ಎಂಬ ಭರವಸೆಯನ್ನೂ ನೀಡುತ್ತವೆ.

ಸಾಮೂಹಿಕ ಚಿಕಿತ್ಸೆ ಮತ್ತು ಸಾಧ್ಯತೆಗಳು
ಮುಸ್ಲಿಮ್ ಬದುಕನ್ನು ಅಮಾನವೀಯಗೊಳಿಸಿರುವ  ವ್ಯವಸ್ಥೆಯಲ್ಲಿ, ಚಿಕಿತ್ಸೆಯು ಸುಲಭವಲ್ಲ ಮತ್ತು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. ಆದರೆ ನಾವು, ಆಘಾತದಿಂದ ಗುಣವಾಗಲು ಮಾತ್ರವಲ್ಲದೆ ಆಳವಾದ ಭಾವನಾತ್ಮಕ ಮತ್ತು ಸಾಮೂಹಿಕ ರೂಪಾಂತರಕ್ಕೆ ಅವಕಾಶಗಳನ್ನು ಹುಡುಕಲೇಬೇಕಾಗಿದೆ. ಇದನ್ನು ಮಾಡಲು ಯಾವುದೇ ನಿಶ್ಚಿತ  ಮಾರ್ಗವಿಲ್ಲ, ಆದರೆ ಇಲ್ಲಿ ಕೆಲವು ಸಲಹೆಗಳನ್ನು ಚರ್ಚಿಸಲಾಗಿದೆ:

  1. ಮಾನಸಿಕ ಆಘಾತದ ಪ್ರಭಾವವನ್ನು ಕುಗ್ಗಿಸದಿರುವುದು: ತನಗೆ ಅಥವಾ ತನ್ನ ಸಮಾಜಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂಬಂತೆ ವರ್ತಿಸಿ ಅದರ ಪ್ರಭಾವವನ್ನು ತಗ್ಗಿಸಲು ಯತ್ನಿಸುವುದನ್ನು ನಿಲ್ಲಿಸಿ ನಮ್ಮ ಮೇಲಾಗುತ್ತಿರುವ ವ್ಯವಸ್ಥಿತ ಹಿಂಸಾಚಾರದಿಂದ ನಾವು ಕೆಲವು ರೀತಿಯಲ್ಲಿ ಪ್ರಭಾವಿತರಾಗಿದ್ದೇವೆ ಎಂಬುವುದನ್ನು ಮೊದಲು ಒಪ್ಪಿಕೊಳ್ಳಬೇಕು. ನಾವು ಬಲಶಾಲಿಗಳು ಮತ್ತು ಸ್ಥಿರವಾಗಿದ್ದೇವೆ ಎನ್ನುವುದು ನಿಜವೇ ಆಗಿದ್ದರೂ ಸಹ ನಾವು ಕೂಡ ಮನುಷ್ಯರೇ, ಮತ್ತು ಮನುಷ್ಯರಲ್ಲಿರುವ ಎಲ್ಲಾ ಸಹಜ ದುರ್ಬಲತೆ ನಮ್ಮಲ್ಲೂ ಇದೆ. ಅದನ್ನು ಹಾಗೆಯೇ ಒಪ್ಪಿಕೊಳ್ಳುವುದು ನಮಗೆ ಚಿಕಿತ್ಸಾತ್ಮಕವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.
  2. ಆಘಾತಕಾರಿ ಪ್ರತಿಕ್ರಿಯೆಗಳನ್ನು ಗುರುತಿಸುವುದು: ಮಿನಿಯಾಪೋಲಿಸ್ ಮೂಲದ ಚಿಕಿತ್ಸಕ ಮತ್ತು ಮಾನಸಿಕ ಆಘಾತ ತಜ್ಞ ರೆಸ್ಮಾ ಮನಕೆನ್, ವ್ಯವಸ್ಥಿತ ಮಾನಸಿಕ ಆಘಾತದ ಬಗ್ಗೆ ವಿವರಿಸುತ್ತಾ “ವ್ಯಕ್ತಿಯಲ್ಲಿ ಡಿಕಾಂಟೆಕ್ಚುವಲೈಸ್ ಮಾಡಿದ ಆಘಾತವು ವ್ಯಕ್ತಿತ್ವದಂತೆ ಕಾಣುತ್ತದೆ. ಒಂದು ಕುಟುಂಬದಲ್ಲಿ ಉಂಟಾದ ಆಘಾತವು ಕುಟುಂಬದ ಲಕ್ಷಣಗಳಂತೆ ಕಾಣುತ್ತದೆ. ಜನರಲ್ಲಿನ ಆಘಾತವು ಸಂಸ್ಕೃತಿಯಂತೆ ಕಾಣುತ್ತದೆ” ಎಂದು ಹೇಳುತ್ತಾರೆ. ಉದಾಹರಣೆಗೆ, ನಮ್ಮನ್ನು ಅನುಪಯುಕ್ತ ಎಂದು ಪರಿಗಣಿಸುವವರಿಗೆ ನಮ್ಮ ಮಹತ್ವವನ್ನು ಸಾಬೀತುಪಡಿಸಲು ಕೆಲವೊಮ್ಮೆ ನಾವು ವಿಪರೀತವಾಗಿ ಕೆಲಸದಲ್ಲಿ ಮುಳುಗುತ್ತೇವೆ. ಹಾಗೆಯೇ ಒಂದು ಸಮುದಾಯವಾಗಿ, ನಾವು ಹೆಚ್ಚು ಭಯ, ತಲ್ಲಣ, ಅಥವಾ ವೇದನೆಯನ್ನು ಅನುಭವಿಸಬಹುದು. ಆದರೆ ಇದು ಕಾಲ ಮತ್ತು ತಲೆಮಾರುಗಳ ಮೇಲೆ ಸಂದರ್ಭೋಚಿತವಾಗಿ ಮಾರ್ಪಾಡಾಗಿರುವುದರಿಂದ ಅದನ್ನು ಇಂಟರ್ಜೆನೆರೇಶನಲ್ ಆಘಾತ ಎಂದು ಗುರುತಿಸಲು ವಿಫಲರಾಗುತ್ತೇವೆ. ಹೀಲಿಂಗ್‌ನ ಎರಡನೇ ಭಾಗವು ನಮಗಾಗಿರುವ ಆಘಾತಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ಗುರುತಿಸುವುದೇ ಆಗಿದೆ.
  3. ಸಮುದಾಯದೊಳಗಡೆ ಸುರಕ್ಷತೆ ಮತ್ತು ಬೆಂಬಲವನ್ನು ಕಂಡುಕೊಳ್ಳುವುದು. ನಾವು ಸಂಪರ್ಕ, ಭದ್ರತೆ ಮತ್ತು ಒಗ್ಗಟ್ಟಿನ ಮಾನಸಿಕ ಅಗತ್ಯವನ್ನು ಹೊಂದಿದ್ದೇವೆ. ನಮ್ಮ‌ ದಿನನಿತ್ಯದ ಆಗುಹೋಗುಗಳಿಗೆ ಸಮಾಜವನ್ನು ಅವಲಂಬಿಸಬೇಕಾಗಿರುವುದರಿಂದ   ‘ನೀವು ನಮಗೆ ಸೇರಿದವರಲ್ಲ’ ಅಥವಾ ‘ನೀವು ವಿಭಿನ್ನವಾಗಿರುವುದರಿಂದ ನೀವು ಸ್ವೀಕಾರಾರ್ಹವಲ್ಲ’ ಎಂಬಂಥ ಸೂಚ್ಯ ಮತ್ತು ಸ್ಪಷ್ಟ ಸಂದೇಶಗಳನ್ನು ಸ್ವೀಕರಿಸಿದಾಗ ಈ ಪ್ರಮುಖವಾದ ಮಾನಸಿಕ ಅಗತ್ಯವನ್ನೇ ನಿರ್ಬಂಧಿಸಿದಂತಾಗುತ್ತದೆ.  ಇಸ್ಲಾಮೋಫೋಬಿಯಾವು ಒಬ್ಬರ ಅಸ್ಮಿತೆಯ ಪ್ರಮುಖ ಭಾಗವನ್ನು ಆಕ್ರಮಿಸುವುದರಿಂದ, ಧಾರ್ಮಿಕ ಗುರುತಿಸುವಿಕೆಗಳನ್ನು ತ್ಯಜಿಸುವ ಅಥವಾ ನಿಮ್ಮ ನಂಬಿಕೆಯೊಂದಿಗೆ ಸಂಕೀರ್ಣವಾದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗುತ್ತದೆ. ಉದಾಹರಣೆಗೆ; ಹಿಜಾಬ್ ಅನ್ನು ಧರಿಸುವ ಯುವತಿಯರು ಅದರ ಬಗ್ಗೆ ಸಂಕೀರ್ಣವಾದ ಭಾವನೆಗಳನ್ನು ಬೆಳೆಸಿಕೊಳ್ಳಬಹುದು. ಏಕೆಂದರೆ ಇದು ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಾಗಿದೆ. ಆದರೆ ಧಾರ್ಮಿಕ ಗುರುತಿಸುವಿಕೆಯೂ ಸಹ ಸ್ಪಷ್ಟವಾದ ತಾರತಮ್ಯ ಅಥವಾ ಹಿಂಸೆಯನ್ನು ಆಹ್ವಾನಿಸಿದರೆ ಅದರ ಬಗ್ಗೆ ಸಹಜವಾಗಿಯೇ ಸಂಕೀರ್ಣವಾದ ಭಾವನೆ ಬರುತ್ತದೆ.

ಇದರಿಂದ ಹೊರಬರಲು, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ ಮತ್ತು ಬೆಂಬಲಿಸುವ ಸಮುದಾಯದ ಕಡೆಗೆ ತಿರುಗುವುದು ನಿರ್ಣಾಯಕವಾಗಿದೆ. ಇದು ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬ ಅಥವಾ ಇತರ ಸಮುದಾಯದ ಸದಸ್ಯರ ಗುಂಪಾಗಿರಬಹುದು.  ನಿಮ್ಮ ನೋವು ಹಂಚಿಕೊಳ್ಳುವ, ಕೇಳುವ ಮತ್ತು ಸಾಕ್ಷಿಯಾಗುವ ಪ್ರೀತಿಯ ಸಮುದಾಯದ ಉಪಸ್ಥಿತಿಯು ನಮ್ಮ ನರಮಂಡಲದಲ್ಲಿ ಅದ್ಭುತಗಳನ್ನು ಮಾಡಬಹುದು. ಮೆದುಳಿನಲ್ಲಿ ಇದು ಸುರಕ್ಷತೆ ಮತ್ತು ಘನತೆಯನ್ನು ಸೌಮ್ಯವಾಗಿ ಆದರೆ ಶಕ್ತಿಯುತವಾಗಿ ಪುನಃಸ್ಥಾಪನೆ ಮಾಡಬಹುದು.

  1. ವೃತ್ತಿಪರ ಸಹಾಯವನ್ನು ಪಡೆಯುವುದು: ಮಾನಸಿಕ ಆರೋಗ್ಯ ವೃತ್ತಿಪರರಿಂದ ಸಹಾಯವನ್ನು ಪಡೆಯುವುದು ಕೂಡ ವ್ಯವಸ್ಥಿತ ಆಘಾತದಿಂದ ಗುಣವಾಗಲು ಒಂದು ಮಾರ್ಗವಾಗಿದೆ. ಆದರೆ, ಈ ಮಾರ್ಗವು ಭಾರತದ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳು ಈ ಸೌಲಭ್ಯವನ್ನು ಪಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಮೇಲಾಗಿ ಮುಖ್ಯವಾಹಿನಿಯ ಮಾನಸಿಕ ಆರೋಗ್ಯ ಕ್ಷೇತ್ರವು ಸಾಮಾಜಿಕವಾಗಿ ಸಂಬಂಧಿಸಿದ ಆಘಾತವನ್ನು ಆಘಾತ ಎಂದು ಗುರುತಿಸುವಲ್ಲೇ ವಿಫಲವಾಗಿದೆ.

ಹೆಚ್ಚಿನ ಮುಖ್ಯವಾಹಿನಿಯ ಆಘಾತದ ಚಿಕಿತ್ಸೆಯು ವ್ಯಕ್ತಿಯನ್ನು ನಿಭಾಯಿಸುವುದರ ಮೇಲೆಯೇ ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಮಾನಸಿಕ ಚಿಕಿತ್ಸೆಯಲ್ಲಿ ನಿಭಾಯಿಸುವಿಕೆ ಒಂದು ಮಹತ್ವದ ಮತ್ತು ಅಗತ್ಯವಾದ ಸಾಧನವಾಗಿದ್ದರೂ, ವ್ಯವಸ್ಥೆಯಿಂದಾದ ಆಘಾತವನ್ನು ಗುಣಪಡಿಸಲು ಇದು ಸಾಕಾಗುವುದಿಲ್ಲ. ಸಾಮಾನ್ಯವಾಗಿ, ಚಿಕಿತ್ಸಕರು ತಮ್ಮ ರೋಗಿಗಳಿಗೆ ಸಾಮಾಜಿಕ ಮಾಧ್ಯಮದಿಂದ ಸ್ವಿಚ್ ಆಫ್ ಮಾಡಲು, ಸುದ್ದಿ ನೋಡುವುದನ್ನು ಮಿತಿಗೊಳಿಸಲು ಅಥವಾ ರಾಜಕೀಯವಾಗಿ ತೊಡಗಿಸಿಕೊಳ್ಳದಿರಲು ಸಲಹೆ ನೀಡುತ್ತಾರೆ. ಆದರೆ ಸಾಮಾಜಿಕ ಘಟನೆಗಳು ಒಬ್ಬರು ‘ಸ್ವಿಚ್ ಆಫ್’ ಮಾಡಿಡಬಹುದಾದ ಘಟನೆಗಳಲ್ಲ, ನಾವು ಪ್ರತಿದಿನ ವಾಸಿಸುವ ಮತ್ತು ಅನುಭವಿಸುವ ವಾಸ್ತವ. ಇದೇ ಕಾರಣಕ್ಕಾಗಿ ಹೆಚ್ಚಿನ ಅಲ್ಪಸಂಖ್ಯಾತ ಗುಂಪುಗಳ ರೋಗಿಗಳು ಮಾನಸಿಕ ಚಿಕಿತ್ಸೆಗಾಗಿ ತಮ್ಮ ಜನಾಂಗ, ಧಾರ್ಮಿಕ ಗುರುತಿನ ಚಿಕಿತ್ಸಕರಿಗೇ ಆದ್ಯತೆ ನೀಡುತ್ತಾರೆ.

ಜನಾಂಗೀಯ ಮತ್ತು ಜನಾಂಗೀಯ ಹಿಂಸಾಚಾರದ ಬಗ್ಗೆ ಮುಕ್ತ ಚರ್ಚೆಗಳು ಚಿಕಿತ್ಸಕ ಮತ್ತು ರೋಗಿಯ ನಡುವೆ ನಡೆದರೆ ನಂಬಿಕೆಯ ವಾತಾವರಣವನ್ನು ಬೆಳೆಸಬಹುದು ಮತ್ತು ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಫಲಿತಾಂಶಗಳನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಹೆಚ್ಚು ಪ್ರಗತಿಪರವಾದ ಚಿಕಿತ್ಸೆ ಅಥವಾ ಪ್ರತಿರೋಧದ ಮೇಲೆ ಹೆಚ್ಚು ಕೇಂದ್ರೀಕರಿಸುವ ಚಿಕಿತ್ಸೆಗಳು ಅಲ್ಪಸಂಖ್ಯಾತ ಗುಂಪುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.  ಯಾಕೆಂದರೆ, ಈ ಚಿಕಿತ್ಸೆಯು ದಬ್ಬಾಳಿಕೆಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿ ಕೋಪ ಮತ್ತು ಉದ್ವೇಗಗಳನ್ನು ನೋಡುತ್ತದೆ ಮತ್ತು ಅದನ್ನು ಎಂದೂ ಅಪರಾಧೀಕರಿಸುವುದಿಲ್ಲ. ವೈದ್ಯಕೀಯ ಮನಶ್ಶಾಸ್ತ್ರಜ್ಞ ಮತ್ತು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ ಥೀಮಾ ಬ್ರ್ಯಾಂಟ್ ಅವರ ಪ್ರಕಾರ, ಅಂತಹ ಚಿಕಿತ್ಸೆಗಳು “ನನ್ನ ಮತ್ತು ನನ್ನ ಸಮುದಾಯದ ಬಗ್ಗೆ ಈ ನಕಾರಾತ್ಮಕ ನಂಬಿಕೆಗಳನ್ನು ಸಾಮಾನ್ಯೀಕರಣಗೊಳಿಸದಿರುವಂತೆ ನಾನು ಹೇಗೆ ಹೋರಾಡುತ್ತೇನೆ?” ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ. “ನನ್ನ ಧ್ವನಿಯನ್ನು ಕೇಳಲು ಮತ್ತು ನನ್ನ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ನಾನು ನನ್ನ ಏಜೆನ್ಸಿಯನ್ನು ಹೇಗೆ ಬಳಸಬಹುದು? ನಾನು ಏನನ್ನು ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ  ಸಹಾನುಭೂತಿ ಮತ್ತು ಬೆಂಬಲವನ್ನು ಹೇಗೆ ಬೆಳೆಸಿಕೊಳ್ಳಬಹುದು?” ಎಂಬ ಪ್ರಶ್ನೆಗೂ ಉತ್ತರ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಹೆಚ್ಚಿನ ದಿನಗಳಲ್ಲಿ, ನಮಗೆ ಆಘಾತವನ್ನುಂಟುಮಾಡುವ ವ್ಯವಸ್ಥೆಯಲ್ಲಿ ಚಿಕಿತ್ಸೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ನಮ್ಮ ನೋವನ್ನು ವ್ಯಕ್ತಪಡಿಸಲು ಮತ್ತು ಹಂಚಿಕೊಳ್ಳಲು ಒಂದು ಸಮರ್ಪಕ ಭಾಷೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಅತ್ಯಂತ ಭಯಾನಕ ಸ್ಥಿತಿಯಲ್ಲೂ ಚೆನ್ನಾಗಿಯೇ ಬದುಕಿದ ನಮ್ಮ ಪೂರ್ವಜರ ಬುದ್ಧಿವಂತಿಕೆಯಿಂದಲೂ ನಾವು ನೆರವು ಪಡೆದುಕೊಳ್ಳಬಹುದು. ನನ್ನ ಸ್ನೇಹಿತ ಐಮನ್ ನಂಬಿರುವಂತೆ, ನಿಮ್ಮದೇ ಆದ ಪರಿಹಾರವನ್ನು ಹುಡುಕಲು ಹೆಣಗಾಡುತ್ತಿದ್ದರೆ ಹಿಂದಿನ ಮತ್ತು ಈಗಿನ ಕ್ರಾಂತಿಕಾರಿಗಳ ಬರಹಗಳು, ಕವಿತೆಗಳು ಮತ್ತು ವರ್ಣಚಿತ್ರಗಳಿಂದ ಭರವಸೆಯನ್ನು ಎರವಲು ಪಡೆಯಿರಿ. ಎರಿಕ್ ಫ್ರೈಡ್ ಅವರ ‘Repeal’ ಎನ್ನುವ ಪದ್ಯದ ಆಯ್ದ ಈ ಸಾಲುಗಳಿಂದ ನಾನು ಭರವಸೆಯನ್ನು ಎರವಲು ಪಡೆದಂತೆ;

ಬಹುಶಃ ದುಃಖದ
ಬಗ್ಗೆ ಮಾತನಾಡಲು
ಸಾಧ್ಯವಾಗುತ್ತದೆ
ಪದಗಳಲ್ಲಿ
ನಿಜವಾದ ಪದಗಳಲ್ಲಿ
ಅರ್ಥಪೂರ್ಣವಾಗಿ ಮತ್ತು
ದುಃಖಕ್ಕೆ ಸಂಬಧಪಟ್ಟ ಪದಗಳಲ್ಲಿ

ಯಾವುದೋ ಒಂದು
ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ
ಅಥವಾ ಅದು
ಬೇರೆ ಯಾರಿಗೋ
ಅರ್ಥವಾಗಲೂಬಹುದು
ಅಥವಾ ಯಾರೋ ಅರ್ಥಮಾಡಿಕೊಳ್ಳಬಹುದು

ಮತ್ತು ಸುಮ್ಮನೆ ಅಳಲೂ
ಸಾಧ್ಯವಾಗಬಹುದು
ಒಂದು ಆತ್ಯಂತಿಕ ಸಂತೋಷದಂತೆ

ಲೇಖಕಿ- ಅಹ್ಲಾ ಮಾತ್ರ
(ಲೇಖಕರು ಕೇರಳದ ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞರು)

ಅನುವಾದ- ಫಾತಿಮಾ ರಲಿಯಾ ಹೆಜಮಾಡಿ
ಕೃಪೆ- ನ್ಯೂಸ್ ಮಿನಿಟ್

Leave a Reply

*