‘ಅರಬ್ಬಿ ಕಡಲಿನ ರಾಜಕುಮಾರಿʼ ಕೊಚ್ಚಿಯ ಸೂಫಿ ಜಾಡು

ಕೊಚ್ಚಿ ನಗರದ ಸಾಂಸ್ಕೃತಿಕ ಅರಿವೆಯನ್ನು ಇಸ್ಲಾಮ್‌ ನ ಸೌಂದರ್ಯದಿಂದ ಸೊಗಸಾಗಿ ಹೆಣೆಯಲಾಗಿದೆ. ‘ಅರಬ್ಬಿ ಕಡಲಿನ ರಾಜಕುಮಾರಿ’ ಎಂದೇ ಪ್ರಸಿದ್ಧಗೊಂಡಿರುವ ಕೊಚ್ಚಿ ಕೇರಳದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಆದರೆ, ಕೊಚ್ಚಿಯ ಮೇಲಿನ ಇಸ್ಲಾಮಿಕ್‌ ಪ್ರಭಾವದ ಬಗೆಗೆ ಗಂಭೀರವಾದ ಅಧ್ಯಯನಗಳು ನಡೆದೇ ಇಲ್ಲ ಎನ್ನಬಹುದು.1

ಅದಾಗ್ಯೂ, ಕೊಚ್ಚಿಯ ಇಸ್ಲಾಮಿಕ್ ಸೌಂದರ್ಯವು ಮಬ್ಬಿನಲ್ಲಿ ಮರೆಯಾಗಿದ್ದರೂ ಸಹ ಅದು ಗಮನಾರ್ಹ ಮತ್ತು ಗಂಭೀರ ಚರ್ಚೆಗೆ ಅರ್ಹವಾಗಿದೆ. ಕೊಚ್ಚಿಯ ಇಸ್ಲಾಮ್‌ ತನ್ನ ವಿಶಿಷ್ಟವಾದ ಸ್ಥಳೀಯ ಗುಣಗಳಿಂದ ವಿಶೇಷವಾಗಿದೆ. ಒಂದು ಕಾಲದ ಅತ್ಯಂತ ಲವಲವಿಕೆಯ ವ್ಯಾಪಾರಿ ಬಂದರಿನಲ್ಲಿ ಬದುಕಿದ ಸೂಫಿಗಳಿಂದ ಸಂಪನ್ನವಾಗಿದೆ. ಆದರೆ, ಈ ಅಂಶವು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ವಿದ್ವಾಂಸರು ಹಾಗೂ ಸೂಫಿಗಳು ಬಿಟ್ಟುಹೋದ ಕುರುಹುಗಳ ಮೂಲಕ ಕೊಚ್ಚಿಯ ಇಸ್ಲಾಮಿಕ್‌ ಸಂಸ್ಕೃತಿಯನ್ನು ಅನ್ವೇಷಿಸಲು ಹಾಗೂ ವಿಶ್ಲೇಷಿಸಲು ಈ ಲೇಖನವು ಪ್ರಯತ್ನಿಸುತ್ತದೆ. ಕೊಚ್ಚಿಯ ಹಳೆಯ ಕಾಲದ ಮರದ ಮಸೀದಿಗಳ ನಡುವೆ ನಡೆದಾಡುವುದು, ಹಳೆಯ ಕಾಲದ ಇಸ್ಲಾಮಿಕ್‌ ಸಂಪ್ರದಾಯಗಳು ಮತ್ತು ವೈಭವಗಳ ಗತನೆನಪುಗಳನ್ನು ಕಾಣಿಸಿಕೊಡುತ್ತದೆ. ಹಾಗೂ ಇಲ್ಲಿನ ಕಡಲ ಕಿನಾರೆಯಲ್ಲಿ, ಕಿರಿದಾದ ಬೀದಿಯಲ್ಲಿ ಅಲೆದಾಡಿದ ಸೂಫಿ, ಸಂತರ ಕಾಲವನ್ನು ನೆನಪಿಸುತ್ತದೆ.

ಕೊಚ್ಚಿಯ ಬೀದಿಗಳು ಯಹೂದ್ಯರು, ಕ್ರಿಸ್ತಿಯನ್ನರು ಮತ್ತು ಮುಸ್ಲಿಮರ ವಾಸಸ್ಥಾನಗಳಾಗಿದ್ದವು. ಇಂದು, ಅದರ ಜನಸಂಖ್ಯೆಯು 42 ವೈವಿಧ್ಯಮಯ ಸಮುದಾಯಗಳಿಗೆ ಹಂಚಲ್ಪಟ್ಟಿದೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ ಕಾಲು ಭಾಗವೂ ಮುಸ್ಲಿಮರದ್ದು. ನಗರವು ಯಹೂದಿ ವಸಾಹತುಶಾಹಿಗಳಿಗೆ ಮಾತ್ರ ಹೆಸರುವಾಸಿಯಾಗಿದ್ದು, ಅದರ ಶ್ರೀಮಂತ ಮುಸ್ಲಿಮ್ ಪರಂಪರೆಯು ಮರೆಯಲ್ಲಿಯೇ ಉಳಿದಿದೆ2. ಇಸ್ಲಾಮಿಕ್ ಪ್ರಭಾವದ ಮತ್ತೊಂದು ನಗರವಾದ ಕ್ಯಾಲಿಕಟ್‌ ನಂತೆ ಕೊಚ್ಚಿ ಎಂದಿಗೂ ಹೆಚ್ಚು ಪ್ರಭಾವಶಾಲಿ ವಾಣಿಜ್ಯ ಕೇಂದ್ರವಾಗಿರದಿದ್ದ ಕಾರಣ ಅದರ ಪರಂಪರೆಯು ಸ್ವಲ್ಪಮಟ್ಟಿಗೆ ಮರೆಯಾಗಿದೆ ಎಂದು ಹಲವರು ಸೂಚಿಸಿದ್ದಾರೆ3.

ಕೊಚ್ಚಿಯ ಕುರಿತಾದ ಲಿಖಿತ ದಾಖಲೆಯನ್ನು ಹಲವಾರು ಇತಿಹಾಸಕಾರರು, ಸಮುದ್ರಯಾನಿಗಳು ದಾಖಲಿಸಿದ್ದಾರೆ. ಖ್ಯಾತ ಲೋಕ ಸಂಚಾರಿ ಇಬ್ನ್‌ ಬತೂತ (Ibn Battuta) ತಮ್ಮ ರಿಹ್ಲಾದಲ್ಲಿ (Rihla) ಹೀಗೆ ದಾಖಲಿಸುತ್ತಾರೆ:

“ಜಲಮಾರ್ಗವಾಗಲಿ ಅಥವಾ ನೆಲದ ಮೂಲಕವಾಗಲಿ ಕಿಲೋನ್‌ (ಕೊಲ್ಲಂ- Quilon) ನಿಂದ ಕ್ಯಾಲಿಕಟ್‌ಗೆ ತಲುಪುವ ಪ್ರಯಾಣಕ್ಕೆ ಸುಮಾರು ಹತ್ತು ದಿನಗಳು ಬೇಕಾಗುತ್ತದೆ. ನಾನು ಜಲಮಾರ್ಗವನ್ನು ಆಯ್ದುಕೊಂಡೆ. ಹಾಗೂ ನನ್ನ ಸರಂಜಾಮುಗಳನ್ನು ಹಿಡಿದುಕೊಳ್ಳಲು ಓರ್ವ ಮುಸಲ್ಮಾನನನ್ನು ನೇಮಿಸಿಕೊಂಡೆ. ನೀರಿನಲ್ಲಿ ಪ್ರಯಾಣಿಸುವವರು ಮುಸ್ಸಂಜೆಯ ವೇಳೆ ಕರಾವಳಿಯ ಹಳ್ಳಿಗಳ ದಡಕ್ಕೆ ಬಂದು ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುವುದು ಸಾಮಾನ್ಯ, ನಾವೂ ಹಾಗೆಯೇ ಮಾಡಿದ್ದೇವೆ. ನನ್ನ ಸೇವಕನು ದೋಣಿಯಲ್ಲಿದ್ದ ಒಬ್ಬನೇ ಮುಸ್ಲಿಮನಾಗಿದ್ದ. ಆದರೆ, ಆತ ಪ್ರತೀ ಬಾರಿ ದೋಣಿ ತೀರ ತಲುಪಿದಾಗಲೂ ಅವಿಶ್ವಾಸಿಗಳೊಂದಿಗೆ ಸೇರಿ ಶೇಂದಿ ಕುಡಿದು, ನನ್ನ ಕುರಿತು ಗೊಣಗುತ್ತಿದ್ದ. ಇದು ನನ್ನನ್ನು ಚಿಂತೆಗೀಡು ಮಾಡಿತ್ತು. ಐದನೇ ದಿನ, ನಾವು ಬೆಟ್ಟದ ಮೇಲಿರುವ ಕುಂಞಿ ಕಾರಿಯನ್ನು (Kunji Karī) ಯನ್ನು ತಲುಪಿದೆವು. ಅಲ್ಲಿನ ಜನ, ಕ್ವಿಲೋನ್ ರಾಜನಿಗೆ ಗೌರವವನ್ನು ಸಲ್ಲಿಸುವ, ತಮ್ಮದೇ ಸಾಮುದಾಯಿಕ ನಾಯಕನನ್ನು ಹೊಂದಿರುವ ಯಹೂದಿಗಳು. “

ಚೆಂಬಿಟ್ಟ ಮಸೀದಿ (Chembitta Mosque)

Chembitta Mosque

ಚೆಂಬಿಟ್ಟಾ ಮಸೀದಿ, ಸ್ಥಳೀಯವಾಗಿ ಇದು ಚೆಂಬಿಟ್ಟಾ ಪಳ್ಳಿ ಅಥವಾ ಕಾಪರ್‌ ಮಾಸ್ಕ್‌ (ತಾಮ್ರದ ಮಸೀದಿ) ಎಂದು ಕರೆಯಲ್ಪಡುತ್ತದೆ, ಕೊಚ್ಚಿಯ ಇಸ್ಲಾಮಿಕ್‌ ಪರಂಪರೆಗೆ ಇದೊಂದು ಉತ್ತಮ ಉದಾಹರಣೆ. ಇದನ್ನು ಮಾನ್ಸೂನ್‌ ಮಸೀದಿಯೆಂದೂ ಕರೆಯಲಾಗುತ್ತದೆ. ಮಲಬಾರ್ ಕರಾವಳಿಗೆ ನಿರ್ದಿಷ್ಟವಾದ ವಾಸ್ತುಶಿಲ್ಪದ ಶೈಲಿ ಹೊಂದಿರುವ ಇದು ಕೊಚ್ಚಿಯ ಅತ್ಯಂತ ಪ್ರಮುಖ ಮಸೀದಿ. ಶಾಫಿ ಜಾಮಿ ಅಥವಾ ಶಾಫಿ ಮಸೀದಿ ಎಂದೂ ಇದನ್ನು ಗುರುತಿಸಲಾಗುತ್ತದೆ.

ಈ ಮಸೀದಿ ಕಟ್ಟಡವು ಮರದ ರಚನೆಯನ್ನು ಹೊಂದಿದ್ದು, ಪ್ರಾರ್ಥನಾ ಸಭಾಂಗಣಕ್ಕೆ ಪ್ರವೇಶಿಸುವ ಪೂರ್ವ ಭಾಗದಲ್ಲಿ ಸ್ತಂಭಾಕಾರದ ಪ್ರವೇಶ ದ್ವಾರ ಇದೆ. ಹೊರ ಗೋಡೆಗಳು ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದು, ಬಾಗಿಲ ಮೇಲೆ, ಮಸೀದಿ ಪ್ರವೇಶಿಸುವಾಗಿನ ಶಿಷ್ಟಾಚಾರದ ಬಗ್ಗೆ ಹದೀಸುಗಳ ಉಲ್ಲೇಖವನ್ನು ಅರೆಬಿಕ್‌ ಮತ್ತು ಹಳೆ ತಮಿಳಿನಲ್ಲಿ ಕೆತ್ತಲಾಗಿದೆ. ಈ ಶಾಸನಗಳನ್ನು ಹಿಜರಿ 926 (ಕ್ರಿಸ್ತ ಶಕ 1519) ಕ್ಕೂ ಹಿಂದೆ ಕೆತ್ತಲ್ಪಟ್ಟಿದೆ.

ಎಲ್ಲಾ ಮಾನ್ಸೂನ್‌ ಮಸೀದಿಗಳಂತೆ ಇದನ್ನೂ ಆದಷ್ಟು ಸೂರ್ಯ ರಶ್ಮಿ ಒಳಬರದಂತೆ ಕಟ್ಟಲಾಗಿದೆ. ಇಂತಹ ರಚನೆಯಲ್ಲಿ ಕತ್ತಲು ಏಕಾಗ್ರತೆ ನಷ್ಟವಾಗದಿರಲು, ಹೆಚ್ಚಿನ ಖುಷೂ (ನಮ್ರತೆ ಮತ್ತು ನೆಮ್ಮದಿ) ಮತ್ತು ತಖ್ವಾ (ದೇವರ ಪ್ರಜ್ಞೆ) ಹೃದಯದಲ್ಲಿ ಹೊರಹೊಮ್ಮಲು ಸಹಾಯ ಮಾಡುತ್ತದೆ, ಅದಕ್ಕಾಗಿಯೇ ಸೂರ್ಯನ ಬೆಳಕು ಒಳಬರದಂತಹ ವಿನ್ಯಾಸದಲ್ಲಿ ಮಸೀದಿಯನ್ನು ಕಟ್ಟಲಾಗಿದೆ. ಖಲ್ವಾ (ಏಕಾಂತ) ದ ಇಸ್ಲಾಮಿಕ್ ಆಚರಣೆಗೆ ಅನುಗುಣವಾಗಿ ಇದನ್ನು ನೋಡಬಹುದು.

ಸೂಫಿಗಳು ಮತ್ತು ಮುಸ್ಲಿಮ್ ಕೊಚ್ಚಿಯ ನಿರ್ಮಾಣ

ಮಸೀದಿ ಸ್ಥಾಪಿಸುವಲ್ಲಿ ಮಾತ್ರವಲ್ಲದೆ ಚಲನಶೀಲ (vibrant) ಮುಸ್ಲಿಮ್ ಸಮುದಾಯವನ್ನು ನಿರ್ಮಿಸುವಲ್ಲಿಯೂ ಕೊಡುಗೆ ನೀಡಿದ ಹಲವಾರು ಸೂಫಿಗಳ ಮಖ್ ಬರ (ಸಮಾಧಿ) ಗಳು ಮಸೀದಿ ಸಂಕೀರ್ಣದ ಸುತ್ತಲೂ ಕಾಣಸಿಗುತ್ತವೆ. ಸಯ್ಯಿದ್ ಇಸ್ಮಾಯಿಲ್ ಬುಖಾರಿ ಮತ್ತು ಅವರ ಪುತ್ರ ಸಯ್ಯಿದ್ ಫಕ್ರುದ್ದೀನ್ ಬುಖಾರಿ ಅವರು ತಮ್ಮ ವಿಶ್ವಾಸ ಮತ್ತು ಬೋಧನೆಗಳಲ್ಲಿ ಮಾದರಿಯಾಗಿ ಮುಸ್ಲಿಮ್ ಕೊಚ್ಚಿಯನ್ನು ಸಮೃದ್ಧವಾಗಿಸಲು ಸಹಾಯ ಮಾಡಿದರು. ಅವರ ಮಖ್ ಬರವೂ ಮಸೀದಿಯ ಸಮೀಪದಲ್ಲಿದೆ. ಸ್ಥಳೀಯರು ಪದೇ ಪದೇ ಭೇಟಿ ನೀಡುವ ಮಖ್ ಬರಗಳಲ್ಲಿ ಇದೂ ಒಂದು.

ಶೇಖ್ ಇಸ್ಮಾಯಿಲ್ ಬುಖಾರಿ ಅವರು ‘ಬುಖಾರಿ ಸೈಯದ್ʼ ಪರಂಪರೆಯಲ್ಲಿ ಮೊದಲಿಗರಾದ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ ಅವರ ಏಕೈಕ ಪುತ್ರರಾಗಿದ್ದರು (ಪ್ರವಾದಿ ಮುಹಮ್ಮದ್ ﷺ ವಂಶದ ಸಂತ ಜಲಾಲುದ್ದೀನ್ ‘ಸುರ್ಖ್-ಪೋಶ್ʼ ಬುಖಾರಿ ಅವರು ಬುಖಾರಾ ಅಥವಾ ಆಧುನಿಕ ಉಜ್ಬೇಕಿಸ್ತಾನ್ ನಿಂದ ಕ್ರಿ.ಶ 1521/ಹಿಜರಿ 928 ರಲ್ಲಿ ಕೇರಳಕ್ಕೆ ಬಂದರು). ತನ್ನ ಅಧ್ಯಯನದ ನಂತರ, ಸೈಯದ್ ಇಸ್ಮಾಯಿಲ್ ಅವರು ಉತ್ತರ ಕೇರಳದ ತಮ್ಮ ತವರು ವಾಲಪಟ್ಟಣದಿಂದ (ಆ ಕಾಲದಲ್ಲಿ ಕೆಲವೇ ಮುಸ್ಲಿಮರು ವಾಸಿಸುತ್ತಿದ್ದ) ಕೊಚ್ಚಿಗೆ ಪ್ರಯಾಣ ಬೆಳೆಸಿದರು. ವಿದ್ವಾಂಸರಾದ ಅವರು ಅಲ್ಲಿ ಇಸ್ಲಾಮ್ ಧರ್ಮವನ್ನು ಪ್ರಚಾರ ಮಾಡಿದರು. ಅವರ ಮೂವರು ಪುತ್ರರಾದ ಸಯ್ಯಿದ್ ಅಹ್ಮದ್ ಬುಖಾರಿ, ಸಯ್ಯಿದ್ ಮುಹಮ್ಮದ್ ಬುಖಾರಿ ಮತ್ತು ಸಯ್ಯಿದ್ ಬಾ ಫಕ್ರುದ್ದೀನ್ ಬುಖಾರಿ ಅವರು ಕೂಡಾ ʼಮುಸ್ಲಿಮ್ ಕೊಚ್ಚಿʼಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾನ್ ವಿದ್ವಾಂಸರು ಮತ್ತು ಸೂಫಿಗಳು. ಕೇರಳದ ಸಾದಾತ್ (ಪ್ರವಾದಿ ವಂಶಸ್ಥರು/ಸಯ್ಯಿದರ) ವಂಶಾವಳಿಯು ಸಯ್ಯಿದ್ ಫಕ್ರುದ್ದೀನ್ ಅವರಿಂದ ಪ್ರಾರಂಭವಾಗುತ್ತದೆ.

ಶೇಖ್ ಮಖ್ದುಮ್
ವಿದ್ವಾಂಸ ಶೇಖ್ ಮಖ್ದುಮ್ ಅವರನ್ನು ಮುಸ್ಲಿಮ್ ಕೊಚ್ಚಿಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಮೂಲತಃ ಯೆಮೆನ್‌ ನವರಾದ ಶೇಖ್ ಝೈನುದ್ದೀನ್ ಅಲ್-ಮಖ್ದುಮ್ ಅಲ್ ಮಬಾರಿ (1465- 1522) ಅವರು ಹದಿನೈದನೇ ಶತಮಾನದ ಆರಂಭದಲ್ಲಿ ತಮಿಳುನಾಡಿನ ನಾಗೂರಿಗೆ ಮೊದಲು ಬಂದರು. ನಂತರ, ಅಲ್ಲಿಂದ ಕೊಚ್ಚಿಗೆ ತೆರಳಿದರು. ಕೊಚ್ಚಿಯಲ್ಲಿ ಧಾರ್ಮಿಕ ಗುರುಗಳಾಗಿ ಮತ್ತು ಆಧ್ಯಾತ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದ ಅವರ ಮುಖಾಂತರ ಹಲವಾರು ಸ್ಥಳೀಯ ಜನರು ಇಸ್ಲಾಮಿಗೆ ಪರಿವರ್ತನೆಯಾದರು. ಝೈನುದ್ದೀನ್ ಅಲ್ ಮಖ್ದೂಮ್ ಅವರು ಚೆಂಬಿಟ್ಟ ಮಸೀದಿ ಆವರಣದಲ್ಲಿರುವ ಮೂಲ ಜಾಮಿ (ಮಸೀದಿ) ಯ ಸ್ಥಾಪಕರು ಎಂದು ಹೇಳಲಾಗುತ್ತದೆ. ಅಲ್ಲದೆ, ಮಖ್ದೂಮ್‌ ಅವರು ಮಲಬಾರ್ ಕರಾವಳಿಯಲ್ಲಿ ಪೋರ್ಚುಗೀಸ್ ವಸಾಹತುಶಾಹಿಯ ಬಗ್ಗೆ ಮೊದಲ ದಾಖಲೆಯನ್ನು ಬರೆದ ಇತಿಹಾಸಕಾರರೂ ಹೌದು.

ಇಬ್ರಾಹಿಂ ಮತ್ತು ಅಲಿ ಇಬ್ಬರು ಪುತ್ರರು ಝೈನುದ್ದೀನ್‌ ಅಲ್‌ ಮಖ್ದೂಮ್‌ ರಿಗೆ ಇದ್ದರು. ಮಖ್ದೂಮ್‌ ಅವರ ಮರಣದ ನಂತರ ಅವರನ್ನು ಕೊಚ್ಚಿಯಲ್ಲೇ ದಫನಗೊಳಿಸಲಾಯಿತು. ಮಖ್ದೂಮ್‌ ವಫಾತ್‌ ಬಳಿಕ ಓರ್ವ ಪುತ್ರ ಅಲಿ ಅವರು ಕೊಚ್ಚಿಯ ಖಾಝಿಯಾಗಿಯೇ ಉಳಿದರೆ, ಇನ್ನೋರ್ವ ಪುತ್ರ ಇಬ್ರಾಹಿಂ ಪೊನ್ನಾನಿಗೆ ತೆರಳಿ ಅಲ್ಲಿ ಖಾಝಿಯಾಗಿದ್ದರು4. ಸಯ್ಯಿದ್ ಬಾ ಫಕ್ರುದ್ದೀನ್‌ ಅವರು ಶೈಖ್‌ ಝೈನುದ್ದೀನ್‌ ಮಖ್ದೂಮ್‌ ಅವರ ಆಧ್ಯಾತ್ಮಿಕ (ಮುರ್ಷಿದ್/ಮುರಬ್ಬಿ) ಗುರುವಾಗಿದ್ದರು.

ಮುರೀದ್-ಮುರಬ್ಬಿ (ಆಧ್ಯಾತ್ಮಿಕ ಗುರು-ಶಿಷ್ಯ) ಸಂಬಂಧವು ಕೇರಳೀಯ ಇಸ್ಲಾಮಿನ ಪ್ರಮುಖ ಅಡಿಪಾಯ ಕಲ್ಲುಗಳಲ್ಲಿ ಒಂದಾಗಿದ್ದು, ಕೊಚ್ಚಿಯಲ್ಲಿಯೇ ಇದರ ಬೀಜಗಳು ಮೊಳಕೆಯೊಡೆದವು. ಉದಾಹರಣೆಗೆ, ಮಲಬಾರ್‌ನ ಮೆಕ್ಕಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಕ್ಷಿಣ ಭಾರತದ ಆರಂಭಿಕ ಮುಸ್ಲಿಮ್ ವಸಾಹತುಗಳಲ್ಲಿ ಒಂದಾದ ಪೊನ್ನಾನಿ, ಮನ್ ರೂಮ್ ಕುಟುಂಬದ ವಿದ್ವಾಂಸರ ಅಡಿಯಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಪ್ರಯಾಣಿಸುವ ಪ್ರದೇಶದಲ್ಲಿ ಮಹತ್ವದ ಕಲಿಕೆಯ ಕೇಂದ್ರವೆಂದು ಪರಿಗಣಿಸಲಾಗಿದೆ. ಈ ವಿದ್ವಾಂಸ ಕುಟುಂಬದ ಬೇರುಗಳನ್ನು ಕೊಚ್ಚಿಯ ಶೇಖ್ ಮಖ್ದುಮ್‌ ರಲ್ಲಿ ಗುರುತಿಸಬಹುದು.

ಕೊಚ್ಚಿಯ ಬುಖಾರಿ ಸಾದತ್ ಹೊರತುಪಡಿಸಿಯೂ, ನಗರಕ್ಕೆ ಸಂಬಂಧಿಸಿ ಇತರ ಕೆಲವು ಸಯ್ಯಿದ್ ಕುಟುಂಬಗಳು ಇವೆ, ಉದಾಹರಣೆಗೆ ಐದಾರಸ್, ಜಮಲುಲ್ಲೈಲ್, ಬಾಫಖೀ ಮತ್ತು ಜೀಲಾನಿ ಕುಟುಂಬಗಳು. ಸಯ್ಯಿದ್ ಅಬ್ದುರಹ್ಮಾನ್ ಅಲ್-ಐದ್ರೋಸ್ ಅವರನ್ನು ಕೊಚ್ಚಿಯ ಶ್ರೇಷ್ಠ ಸೂಫಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಥಕ್ಯಾ ಮಸೀದಿಯ ಆವರಣದಲ್ಲಿ ಅವರ ಮಖಬರ ಇದೆ.

ಇವೆಲ್ಲವೂ ಕೇರಳೀಯ ಮತ್ತು ದಕ್ಷಿಣ ಭಾರತದ ಇತಿಹಾಸದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ತಯಾರಿಕೆಯಲ್ಲಿ ಕೊಚ್ಚಿಯ ಅವಿಭಾಜ್ಯ ಸ್ಥಾನವನ್ನು ಸೂಚಿಸುತ್ತದೆ. ಈಗಿನ ಕೊಚ್ಚಿಯು ಕಾಸ್ಮೋಪಾಲಿಟನ್ ಆಗಿರುವುದರಿಂದ5, ಆಫ್ರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ವ್ಯಾಪಾರಿಗಳು ಮತ್ತು ವಿದ್ವಾಂಸರನ್ನು ಆಕರ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊಚ್ಚಿಯು ಜಾಗತಿಕ ಇಸ್ಲಾಮಿಕ್ ಇತಿಹಾಸದಲ್ಲಿಯೂ ಮಹತ್ವದ್ದಾಗಿದೆ ಎಂದು ಗಮನಿಸಬೇಕಾದ ಅನಿವಾರ್ಯತೆ ಇದೆ.

“ಕೊಚ್ಚಿಯನ್ನು ಸುಂದರವಾದ ಮತ್ತು ಗಮನಾರ್ಹವಾದ ನೆಲವನ್ನಾಗಿ ಮಾಡಿದ ಈ ಸೂಫಿಗಳನ್ನು ನೆನಪಿಸಿಕೊಳ್ಳಬೇಕು ಹಾಗೂ ಅವರನ್ನು ನಗರದ ಸ್ಥಾಪಕರು ಎಂದು ಪರಿಗಣಿಸಬೇಕು, ಅವರು ಈ ನಗರದ ವಾಸ್ತುಶಿಲ್ಪಿಗಳು.” ಎಂದು ಸ್ಥಳೀಯರೊಬ್ಬರು ನನ್ನಲ್ಲಿ ಹೇಳಿದ್ದರು. ಪಶ್ಚಿಮ ಆಫ್ರಿಕಾದಲ್ಲಿ ಉಸ್ಮಾನ್ ಡ್ಯಾನ್ ಫೋಡಿಯೊ, ಹಿಂದೂಸ್ತಾನ್‌ನಲ್ಲಿ ಮುಈನುದ್ದೀನ್ ಚಿಶ್ತಿ ಮತ್ತು ಅನಟೋಲಿಯಾದಲ್ಲಿ ಯೂನುಸ್ ಎಮ್ರೆ ತಮ್ಮ ನೆಲವನ್ನು ಪಾಂಡಿತ್ಯ ಮತ್ತು ಸೂಫಿಸಮ್ಮಿನ ಕೇಂದ್ರಗಳಾಗಿ ಪರಿವರ್ತಿಸಿದಂತೆಯೇ, ಕೊಚ್ಚಿಯ ಸೂಫಿಗಳೂ ಸಹ ಮಾಡಿದರು. ಕಲಾತ್ಮಕವಾಗಿ ಸಮ್ಮೋಹನಗೊಳಿಸುವ ಈ ನಗರದಲ್ಲಿನ ಮುಸುಕನ್ನು ಸ್ವಲ್ಪ ಮಟ್ಟಿಗೆ ಸರಿಸಿದರೆ ನಗರದಲ್ಲಿರುವ ಸೂಫಿಗಳ ಪ್ರಭಾವವು ಇನ್ನೂ ಗೋಚರಿಸುತ್ತದೆ.

ಮೂಲ ಲೇಖಕ: ಮುಹಮ್ಮದ್‌ ಎ ತ್ವಾಹಿರ್‌
ಅನುವಾದ: ಫೈಝ್‌


Footnotes:

1Shokoohy, Mehrdad. “The Town of Cochin and Its Muslim Heritage on the Malabar Coast, South India.” Journal of the Royal Asiatic Society, vol. 8, no. 3, 1998, pp. 351–94. JSTOR, http://www.jstor.org/stable/25183570. Accessed 5 Sep. 2022.

Ibid.

3 Ibid.

Shokoohy, Mehrdad, 1998.

5 Pearson, MN and Mahmūd Kūria, Malabar in the Indian Ocean : Cosmopolitanism in a Maritime Historical Region (Oxford University Press, First edition., 2018)