ಮುಸ್ಲಿಂ ಸಾಮ್ರಾಜ್ಯದಲ್ಲಿ ವಕ್ಫ್‌: ಉದ್ದೇಶ ಮತ್ತು ಹಿನ್ನೆಲೆ

ಪ್ರವಾದಿಯವರ ಕಾಲದ ಸರಿಸುಮಾರು ಎರಡು ಶತಮಾನಗಳ ನಂತರ, ಒಂಬತ್ತನೇ ಶತಮಾನದ ವೇಳೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದತ್ತಿ ಸಂಸ್ಥೆಗಳ, ಧಾರ್ಮಿಕ ದತ್ತಿಗಳ(ಅವ್ಕಾಫ್/ವಕ್ಫ್) ಹರಡುವಿಕೆ ವ್ಯಾಪಕಗೊಂಡವು. ನಂತರದ ಸಹಸ್ರಮಾನದತ್ತ ಗಮನಿಸಿದರೆ ಮುಸ್ಲಿಂ ಸಮುದಾಯವು ವಾಸಿಸುತ್ತಿದ್ದ ಭೂ ಪ್ರದೇಶಗಳ ಬೆಳವಣಿಗೆಯನ್ನು ಅವಲೋಕಿಸುವ ಅಧ್ಯಯನಗಳಲ್ಲಿ ‘ವಕ್ಫ್’ ಎಂಬುವುದು ಅವಿಭಾಜ್ಯ ಪರಿಕಲ್ಪನೆಯಾಗಿ ಕಾಣಬಹುದು.

ಅಂದಾಜು ಪ್ರಕಾರ, ಹತ್ತೊಂಬತ್ತನೇ ಶತಮಾನದ ಪ್ರಾರಂಭ ಘಟ್ಟದ ಕೃಷಿಯೋಗ್ಯ ಸ್ಥಳಗಳಲ್ಲಿ ಆಧುನಿಕ ತುರ್ಕಿಯ ಮುಕ್ಕಾಲು ಭಾಗ, ಈಜಿಪ್ಟಿನ ಐದರಲ್ಲೊಂದು ಭಾಗ, ಇರಾನಿನ ಏಳನೇ ಒಂದು ಭಾಗ, ಅಲ್ಜೀರಿಯಾದ ಅರ್ಧದಷ್ಟು ಹಾಗೂ, ಗ್ರೀಸ್- ಟುನಿಷ್ಯಾ ರಾಷ್ಟ್ರಗಳ ಮೂರನೇ ಒಂದು ಭಾಗದಷ್ಟು ಭೂಮಿಗಳೂ ಧಾರ್ಮಿಕ ದತ್ತಿ(ವಕ್ಫ್) ಪ್ರದೇಶಗಳಾಗಿದ್ದವು.

ಪ್ರಸ್ತುತ ಶತಮಾನದ ಒಟ್ಟೋಮನ್ ಸಾಮ್ರಾಜ್ಯದ ವಾರ್ಷಿಕ ಆದಾಯದ ಮೂರನೇ ಒಂದು ಭಾಗವು ಇಪ್ಪತ್ತು ಸಾವಿರದಷ್ಟು ಇದ್ದ ವಕ್ಫ್ ಪ್ರದೇಶಗಳ ಆದಾಯವೇ ಆಗಿತ್ತು. ಇಸ್ಲಾಮ್‌ ಮಾಡಿರುವ ಇಂತಹ ದತ್ತಿ ದಾನಗಳ ಸಾಂಸ್ಥೀಕರಣವು ನಗರಾಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಗಳು, ಧಾರ್ಮಿಕ ಆಚರಣೆಗಳು ಮತ್ತು ಅವುಗಳ ಪ್ರಯೋಗ, ಕಲೆ, ಮಾರುಕಟ್ಟೆಗಳ ಹಾಗೂ ಆರ್ಥಿಕ ಶಕ್ತಿ ಕೇಂದ್ರಗಳ ರಚನೆ ಮತ್ತು ದೃಢತೆ, ರಾಜಕೀಯ ಸ್ಥಿರತೆ ಹೀಗೇ ಹತ್ತು ಹಲವು ಕ್ಷೇತ್ರಗಳಲ್ಲಿ ದೊಡ್ಡ ಪ್ರಭಾವ ಬೀರಿತು.

ಇಸ್ಲಾಮಿನ ವೈವಿಧ್ಯಮಯ ಸಂಸ್ಕೃತಿಗಳ ಅಭಿವ್ಯಕ್ತಿಗಳ ಮೂಲಾಧಾರವಾಗಿ ವಕ್ಫ್ ಸಂಸ್ಥೆಗಳು ಕಾರ್ಯ ನಿರ್ವಹಿಸಿದವು ಎಂದು ನಿಸ್ಸಂಶಯ ಹೇಳಬಹುದು. ಅಧಿಕಾರ ಕೇಂದ್ರಗಳ ಹಸ್ತಕ್ಷೇಪವಿಲ್ಲದೇ ಪ್ರಜೆಗಳ ಅಗತ್ಯಗಳನ್ನು ಪೂರೈಸಲು ವಕ್ಫ್ ದಾನಗಳ ಮೂಲಕ ಸಾಧ್ಯವಾದವು. ಇಸ್ಲಾಮಿಕ್ ನಾಗರಿಕತೆಯ ಈ ‘ಅಡಿಗಲ್ಲು’ ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಹೊಸದಾಗಿ ರೂಪುಗೊಂಡ ರಾಜ್ಯ- ರಾಷ್ಟ್ರಗಳ (Nation states) ದುರುದ್ದೇಶಪೂರಿತ ಪ್ರಕ್ರಿಯೆಗಳಿಗೆ ಸಿಲುಕಿ ಪತನಗೊಳ್ಳತೊಡಗಿತು. ಒಂದು ಅದ್ವಿತೀಯ ಇಸ್ಲಾಮಿಕ್ ಸಂಸ್ಥೆಯಾಗಿದ್ದ ವಕ್ಫ್ ಅವನತಿಯ ಹಾದಿ ಹಿಡಿದ ಪರಿಣಾಮ ಪಾಶ್ಚಾತ್ಯೀಕರಣ ಹಾಗೂ ಅನರ್ಥ ಸುಧಾರಣೆಗಳು ವೇಗ ಪಡೆಯಿತು ಎಂಬುವುದು ಐತಿಹಾಸಿಕ ಸತ್ಯ.

ವಖ್ಫ್ ಒಂದು ಸಾಮಾಜಿಕ ಚಳುವಳಿಯಾಗಿ ರೂಪುಗೊಂಡದ್ದರ ಹಿಂದೆ ಮುಸ್ಲಿಂ ಸಮುದಾಯದಲ್ಲಿ ಸರ್ವ ಸಾಮಾನ್ಯವಾದ ಎರಡು ವಿಭಿನ್ನ ಆಚರಣೆಗಳ ಹಿನ್ನೆಲೆ ಇದೆ. ಧಾನ ಧರ್ಮಗಳಿಗೆ ಒತ್ತು ನೀಡಿ ನಿರ್ಗತಿಕರಿಗೆ ನೆರವಾಗುವುದನ್ನು ಬದುಕಿನ ಕೇಂದ್ರ ಬಿಂದುವಾಗಿ ಪರಿಗಣಿಸುವ ಇಸ್ಲಾಮಿನ ನೀತಿ ಬೋಧನೆ ಮತ್ತು ಧರ್ಮಶಾಸ್ತ್ರ ಒಂದು ಹಿನ್ನೆಲೆಯಾದರೆ, ಮರಣವೆಂಬ ವಾಸ್ತವಿಕತೆಯ ಕಾನೂನಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಎದುರಿಸುವಲ್ಲಿ ಬೇಕಾಗುವ ಪೂರ್ವ ಸಿದ್ಧತೆಗಳ ಭಾಗವಾದ ಉಯಿಲು ಮತ್ತು ಉತ್ತರಾಧಿಕಾರ ವಿಚಾರಗಳು ಮತ್ತೊಂದು ಹಿನ್ನೆಲೆ.

ಪರಸ್ಪರ ಪ್ರೀತಿಸುವುದನ್ನು ಜೀವನದ ಪ್ರಧಾನ ಕಾರ್ಯವಾಗಿ ಪರಿಗಣಿಸುವಾಗ ಜನನದಿಂದಲೇ ಮಸಲ್ಮಾನನ ಪ್ರತಿಯೊಂದು ನಿಮಿಷವನ್ನೂ ಧನ್ಯಗೊಳಿಸುವುದರಲ್ಲಿ ಧಾನ ಧರ್ಮಗಳಿಗೆ ನಿರ್ದಿಷ್ಟ ಸ್ಥಾನವಿದೆ. ಆತನ ದೇಹದ ಎಲ್ಲಾ ಕೀಲುಗಳಿಗೂ ದಾನ ಧರ್ಮಗಳ ನೆರವೇರಿಸಬೇಕೆಂದು ಪರಿಗಣಿಸಲಾಗಿದೆ.

ಪ್ರವಾದಿಯವರು ಹೇಳುತ್ತಾರೆ “ಪ್ರತಿ ದಿನವೂ ಮನುಷ್ಯನ ಕೀಲುಗಳು ಅದರ ದಾನವನ್ನು ನಿರ್ವಹಿಸಬೇಕು. ಇಬ್ಬರ ಮಧ್ಯೆ ನ್ಯಾಯಯುತವಾಗಿ ವರ್ತಿಸುವುದು, ಒಬ್ಬಾತನಿಗೆ ಆತನ ವಾಹನವನ್ನು ಚಲಾಯಿಸಲು ಹಾಗೂ ಭಾರವನ್ನು ಎತ್ತಲು ನೆರವಾಗುವುದು, ಒಳಿತಿನ ಮಾತು, ದಾರಿಯಲ್ಲಿನ ತೊಡಕುಗಳನ್ನು ನೀಗಿಸುವುದು, ಎಲ್ಲವೂ ನೀನು ನಿರ್ವಹಿಸುವ ದಾನಗಳಾಗಿವೆ”.

ದಯೆಯ ಮಾತುಗಳು, ಕೈ ಹಿಡಿದು ರಸ್ತೆ ದಾಟಿಸುವುದು, ದಾರಿಯನ್ನು ಕಸ ಕಡ್ಡಿಗಳಿಂದ ಮುಕ್ತಗೊಳಿಸುವುದು, ಸಂಗಾತಿಯೊಂದಿಗೆ ಪ್ರೀತಿ ತೋರುವುದು, ನಿರ್ಗತಿಕರ ಹೊಟ್ಟೆ ತಣಿಸುವುದು, ಅನ್ಯಾಯದ ವಿರುದ್ಧ ದನಿಯೆತ್ತುವುದು ಹೀಗೇ ಅಲ್ಲಾಹನ ಸಂಪ್ರೀತಿ ಬಯಸಿ ನಿರ್ವಹಿಸುವ ಎಲ್ಲವನ್ನೂ ದಾನದ ವಿವಿಧ ರೂಪಗಳೆಂದು ಇಸ್ಲಾಂ ಹೇಳುತ್ತದೆ.

ಹಿರಿ- ಕಿರಿದಾದ ಪರೋಪಕಾರ ಕರ್ಮಗಳಿಂದ ಮುಸಲ್ಮಾನನ ದೈನಂದಿನ ಬದುಕು ಧನ್ಯಗೊಳಿಸಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ದಾನಗೈಯುವುದಕ್ಕೆ ಬಹಳ ಪ್ರಾಮುಖ್ಯತೆಯಿರುವ ವಿಶೇಷ ದಿನಗಳು ಮತ್ತು ತಿಂಗಳುಗಳನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಪ್ರತ್ಯೇಕವಾಗಿ ಗುರುತಿಸಿಡಲಾಗುತ್ತದೆ. ಮುಸ್ಲಿಮರು ವಾರಕ್ಕೊಮ್ಮೆ ಪ್ರಾರ್ಥನೆಗಾಗಿ ಸಂಗಮಿಸುವ ಶುಕ್ರವಾರ (ಜುಮುಅಃ) ದಿನವು ದಾನಗಳಿಗೆ ಶ್ರೇಷ್ಠತೆಯಿರುವ ಪುಣ್ಯ ದಿನವಾಗಿದೆ. ಜುಮಾ ನಮಾಝಿನ ನಂತರ ನಿರ್ಗತಿಕರು ಮತ್ತು ಅತಿಥಿಗಳಿಗೆ ಅನ್ನ ನೀಡುವ ಸಂಪ್ರದಾಯವು ಮುಸ್ಲಿಂ ಮನೆಗಳಲ್ಲಿವೆ. ಹಿಜರಿ ವರ್ಷಾರಂಭದ ಮುಹರ್ರಂ ಹತ್ತರ ತನಕವಿರುವ ದಿನಗಳು, ಪ್ರವಾದಿ ಜನನವನ್ನು ಆಚರಿಸಲ್ಪಡುವ ರಬೀಉಲ್ ಅವ್ವಲ್, ಪವಿತ್ರ ರಜಬ್ ತಿಂಗಳು, ಬರಾಅತ್ ರಾತ್ರಿ, ವ್ರತಾಚರಣೆಯ ರಮಳಾನ್, ಎರಡು ಈದ್ ದಿನಗಳು, ಹೀಗೇ ಈ ಕಾರ್ಯವು ನಿಖರವಾದ ಕ್ರಮೀಕರಣವನ್ನು ಹೊಂದಿದೆ. ವಿಶ್ವಾಸಿಗಳು ಪ್ರಸ್ತುತ ಶ್ರೇಷ್ಠ ದಿನಗಳಲ್ಲಿ ಪ್ರಾರ್ಥನಾ ನಿರತರಾಗುತ್ತಾ, ಅಲ್ಲಾಹನು ತಮ್ಮ ಪಾಪಗಳನ್ನು ಮನ್ನಿಸುತ್ತಾನೆ ಎಂಬ ಅಚಲ ನಂಬಿಕೆಯೊಂದಿಗೆ ಧಾರಾಳವಾಗಿ ದಾನ ಧರ್ಮಗಳಲ್ಲಿ ತೊಡಗುತ್ತಾರೆ.

ಒಂದು ಮಗು ಹುಟ್ಟಿ ಏಳು ದಿನಗಳ ಬಳಿಕ ಸೃಷ್ಟಿಕರ್ತನಿಗೆ ಕೃತಜ್ಞತೆಯೆಂಬಂತೆ ‘ಅಖೀಖತ್’ ಎಂಬ ಹೆಸರಿನಲ್ಲಿ ಮಾಂಸ ವಿತರಣೆ ನಡೆಸಲಾಗುತ್ತದೆ. ಜೀವನದ ಪ್ರಥಮ ಘಳಿಗೆಯಿಂದಲೇ ಪರೋಪಕಾರ ಪೃವೃತ್ತಿಗಳನ್ನು ಬಹಳ ಪ್ರಾಧಾನ್ಯತೆಯಿಂದ ಗಣಿಸುತ್ತಾ, ಸಣ್ಣ ಪ್ರಾಯದಿಂದಲೇ ಕಾರುಣ್ಯ ಕಾರ್ಯಗಳನ್ನು ಬದುಕಿನಲ್ಲಿ ಅಳವಡಿಸುವಂತೆ ಉತ್ತೇಜಿಸುವ ಇಸ್ಲಾಮಿನ ಉದಾತ್ತ ಸಂದೇಶವನ್ನು ಇಲ್ಲಿ ನಮಗೆ ಕಾಣಬಹುದು.

ಇಸ್ಲಾಮಿಕ್ ಸಾಮಾಜಿಕ ಆಂದೋಲನ(ವಖ್ಫ್) ಆವಿರ್ಭಾವದ ಹಿನ್ನೆಲೆಯ ಎರಡನೇ ಕಾರಣ ಮರಣ ಹಾಗೂ ಮರಣಾನಂತರದ ಪರಲೋಕ ಮೋಕ್ಷವೆಂಬ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಇಸ್ಲಾಮಿಕ್ ನಿಯಮ ಪ್ರಕಾರವಿರುವ ಉಯಿಲು(ವಸಿಯ್ಯತ್), ವಾರಸುದಾರಿಕೆ(ಮೀರಾಸ್) ಎಂಬಿವುಗಳ ಪ್ರಾಯೋಗಿಕತೆಯು ಬಹಳ ಜಟಿಲ. ಅದಾಗ್ಯೂ ಒಬ್ಬನ ಮರಣದ ತರುವಾಯ ಆತನ ಸಂಬಂಧಿಕರ ಅಥವಾ ಊರ ವಿದ್ವಾಂಸರ ಮೂಲಕ ಅವುಗಳು ಸರಿಯಾಗಿ ನಿರ್ವಹಿಸಲ್ಪಡುತ್ತದೆ. ಒಬ್ಬಾತನ ಉಯಿಲು ಪತ್ರವು ಆತನ ಆಸ್ತಿಯ ಮೂರನೇ ಒಂದಂಶವನ್ನು ಮೀರಬಾರದು. ಈ ನಿರ್ಬಂಧ ಮರಣಶಯ್ಯೆಯಲ್ಲಿ ಆತನ ಆಸ್ತಿಯ ದೊಡ್ಡ ಪಾಲು ವಾರಸುದಾರರ ಕೈಯಿಂದ ತಪ್ಪಿ ಅನರ್ಹರ ವಶವಾಗುವುದನ್ನು ತಡೆಯುತ್ತದೆ.

ಇಸ್ಲಾಮಿನ ವಾರೀಸುದಾರಿಕೆಯ ಕಾನೂನಿನ ನಿಯಂತ್ರಿತವಾದ ಉಯಿಲು ಆಧಾರಿತ ಸಾಮಾನ್ಯ ದಾನಕ್ಕಿಂತ ವಿಭಿನ್ನವಾದ ಯಾವುದೇ ನಿಯಂತ್ರಣಗಳಿಲ್ಲದೆ ದಾನಿಯ ಪಾರತ್ರಿಕ ಜೀವನದಲ್ಲಿ ನಿರಂತರ ಪ್ರಯೋಜನ ನೀಡುವ ಹಾಗೂ ಇಹದಲ್ಲಿ ಸದಾ ಚಾಲನೆಯಲ್ಲಿರುವ ದಾನದ ಪ್ರಕಾರವನ್ನು ಆವಿಷ್ಕಾರ ಮಾಡುವಲ್ಲಿ ಎದುರಿಸಿದ ಸವಾಲುಗಳು ‘ವಖ್ಫ್’ ಎಂಬ ವಿಶಿಷ್ಟ ವ್ಯವಸ್ಥೆಯ ರಚನೆಗೆ ಕಾರಣವಾಯಿತು. ಹಿಂದಿನ ಕಾಲಕ್ಕಿಂತ ಭಿನ್ನವಾಗಿ ಕಾಲಕ್ರಮೇಣ ನಿಶ್ಶರ್ತ ದೇಣಿಗೆ (ಸ್ವದಖ) ಹಾಗೂ ವಿಶೇಷ ಗುರಿಯೊಂದಿಗಿನ ದೇಣಿಗೆಗಳನ್ನು (ವಖ್ಫ್) ಪ್ರತ್ಯೇಕಿಸಿ ಪ್ರಬಲವಾದ ರೀತಿಯಲ್ಲಿ ಪ್ರಾಯೋಗಿಕಗೊಳಿಸಲಾಯಿತು. ಆಧುನಿಕ ಕಾಲದಲ್ಲಿ ವಖ್ಫ್ ಎಂಬ ಮಾನವ ಸೇವಾ ಸಂಸ್ಥೆಯು ವಸಾಹತುಶಾಹಿ ದಾಳಿಗಳಿಂದ ಹಾಗೂ ಸ್ವಂತ ನೆಲದಲ್ಲಿ ಯುರೋಪ್ಯನ್ ಜ್ಞಾನೋದಯ ಪರಿಕಲ್ಪನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುವ ಸ್ವಯಂಘೋಷಿತ ಮುಸ್ಲಿಂ ಸುಧಾರಕರಿಂದಾಗಿ ವಿನಾಶದಂಚಿಗೆ ತಲುಪಿರುವುದು ಅತ್ಯಂತ ವಿಷಾದನೀಯ.

(ಮುಂದುವರಿಯುವುದು)

ಮೂಲ: ಖಲೀಲ್ ಅಬ್ದುರ್ರಶೀದ್
ಅನುವಾದ: ಶಂಸ್ ಗಡಿಯಾರ್

Leave a Reply

*