ಇಸ್ಲಾಮಿಕ್ ಜ್ಯಾಮಿತಿ ರಚನೆ: ಕಲೆ ಮತ್ತು ಚರಿತ್ರೆ

‘ಎಲ್ಲವನ್ನೂ ಬಹಳ ಸೂತ್ರಬದ್ಧವಾಗಿ ನಿರ್ಮಿಸುವುದು ಅಲ್ಲಾಹನ ಕಲಾತ್ಮಕತೆಯಾಗಿರುತ್ತದೆ’ (ಪವಿತ್ರ ಖುರ್‌ಆನ್ 27:88).
ಈ ಒಂದು ಸಣ್ಣ ಲೇಖನದಲ್ಲಿ ನಾನು ಇಸ್ಲಾಮಿಕ್ ಕಲೆಯ ಆಧ್ಯಾತ್ಮಿಕ ಸ್ವರೂಪ, ಇತಿಹಾಸ ಮತ್ತು ಅದು ಇಸ್ಲಾಮಿಕ್ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಕೃತಿಯತ್ತ ನಾವು ಕಣ್ಣು ಹಾಯಿಸಿದಾಗ ಆಕಾಶಕಾಯಗಳ ಸಮತೋಲನ, ಸಸ್ಯ ಮತ್ತು ಪ್ರಾಣಿಗಳ ಆಕೃತಿಗಳಲ್ಲಿ, ಭೂಮಿಯ ರಚನೆಯಲ್ಲಿ ಹಾಗೂ ಜೀವಕೋಶಗಳ ಆಕಾರದಲ್ಲಿ ಅಲ್ಲಾಹನ ಸಂಪೂರ್ಣ ಸೃಷ್ಟಿವೈಭವದ ಪ್ರತಿಬಿಂಬವನ್ನು ನೋಡಲು ಸಾಧ್ಯವಾಗುತ್ತದೆ.

‘ISLAMIC HISTORY’ ಎಂಬ ಕೃತಿಯ ಲೇಖಕ ಸ್ವಾಹಿಕ್ ಒಮರ್ ಬರೆಯುತ್ತಾರೆ; ಪ್ರವಾದಿ(ಸ) ರವರು ಹೇಳಿದರು; “ಅಲ್ಲಾಹನು ಸುಂದರನು ಹಾಗೂ ಅವನು ಸೌಂದರ್ಯವನ್ನು ಪ್ರೀತಿಸುತ್ತಾನೆ”. ಆದ್ದರಿಂದಲೇ ಅವನ ಎಲ್ಲ ಸೃಷ್ಟಿಗಳನ್ನು ಅತ್ಯುನ್ನತ ಸ್ವರ್ಗೀಯ ವೈಭವದಿಂದ ಮತ್ತು ಕ್ರಮೀಕರಣದಿಂದ ಯಾರಿಂದಲೂ ಅನುಕರಿಸಲಾಗದ ರೀತಿಯಲ್ಲಿ  ಸೃಷ್ಟಿಸಲಾಗಿದೆ. ಸೂಫಿ ಚಿಂತನೆಯ ಸೌಂದರ್ಯಮೀಮಾಂಸೆಯನ್ನು ಸಂಶೋಧಿಸಿದ ಇಬ್ನ್ ಅರಬಿಯವರ ಪ್ರಕಾರ, ‘ದೇವರನ್ನು ಸುಂದರ ಎಂದು ಬಣ್ಣಿಸುವ ಮತ್ತು ತನ್ನನ್ನು ತಾನು ಪ್ರೇಮದ ಸೌಂದರ್ಯ ಎಂದು ವಿಶ್ಲೇಷಿಸುವ ದೈವಿಕ ಸೌಂದರ್ಯವು ಎಲ್ಲದರಲ್ಲೂ ನೆಲೆಸುತ್ತದೆ. ಸೌಂದರ್ಯವನ್ನು ಹೊರತುಪಡಿಸಿ ಬೇರೆ ಯಾವುದೂ ಶಾಶ್ವತವಲ್ಲ. ಏಕೆಂದರೆ ಈ ಬ್ರಹ್ಮಾಂಡವನ್ನು ಅವನ ಅನಂತ ಸೌಂದರ್ಯದ ಪ್ರತಿಚ್ಛಾಯೆಯೆಂಬಂತೆ ರಚಿಸಲಾಗಿದೆ. ಆದ್ದರಿಂದ ಈ ವಿಶ್ವ ಮತ್ತು ಅದರ ವಸ್ತುಗಳು ಹಾಗೂ ಘಟಕಗಳು ಸೇರಿದಂತೆ ಎಲ್ಲವೂ ಸುಂದರವಾಗಿದೆ.

ಈ ಆಯತ್‌ನ ವ್ಯಾಪ್ತಿಯಲ್ಲಿ  ಇಸ್ಲಾಮಿನ ಕಲೆ ಮತ್ತು  ವಾಸ್ತುಶಿಲ್ಪಗಳು ಕೂಡಾ ಸೇರುತ್ತದೆ ಎಂಬುದು ಗಮನಾರ್ಹ. ಫೆಲೆಸ್ತೀನಿನ ಜೆರೂಸಲೇಮಿನ Dome of rock ನೋಡಿದರೆ ಆ ಕುರಿತು ನಮಗೆ ಮನವರಿಕೆಯಾಗುತ್ತದೆ. ಇದನ್ನು ಅಷ್ಟಭುಜಾಕೃತಿಯ ತಳಹದಿಯ ಮೇಲೆ ನಿರ್ಮಿಸಲಾಗಿದೆ. ಅದರ ಮೇಲೆ ವೃತ್ತಾಕಾರದ ಗುಮ್ಮಟವಿದೆ. ವಾಸ್ತುಶಿಲ್ಪದಲ್ಲಿ ಅಗಾಧ ಪ್ರಮಾಣದ ಪ್ರಾವೀಣ್ಯತೆ ಹೊಂದಿದ್ದ ಕಾರಣದಿಂದಲೇ ಅದನ್ನು ಪ್ರಜ್ಞಾಪೂರ್ವಕವಾಗಿ ನಿರ್ಮಿಸಲಾಗಿದೆ. ಅಂತ್ಯದಿನದಂದು 8 ದೇವಚರರು ಸಿಂಹಾಸನವನ್ನು ಹೊತ್ತಿರುತ್ತಾರೆ ಎಂಬ ಖುರ್‌ಆನ್ ಸೂಕ್ತವನ್ನು ಇದು ಪ್ರತಿಬಿಂಬಿಸುತ್ತದೆ.

ಇಸ್ಲಾಂ ಮತ್ತು ವಿಗ್ರಹಾರಾಧನೆ ವಿರೋಧ

ಇಸ್ಲಾಮಿಕ್ ಅನಿಕೋನಿಸಮ್(aniconism) ಎಂಬ ಕಲ್ಪನೆ – ಮಾನವ ಆಕೃತಿಗಳನ್ನು ಬಳಸಿ ಪ್ರತಿಮೆಗಳನ್ನು ನಿರ್ಮಾಣದ ನಿಷೇಧ – “ಜೀವಜಾಲಗಳ ರೂಪ ವಿನ್ಯಾಸ ಮತ್ತು ಸೃಷ್ಟಿಕ್ರಿಯೆಯು ದೇವರ ವಿಶೇಷ ಹಕ್ಕು” ಎಂಬ ನಂಬಿಕೆಯ ಮೇಲೆ ನಿಂತಿದೆ. ಈ ಕಾರಣಕ್ಕಾಗಿ, ಮುಸ್ಲಿಮ್ ಕುಶಲಕರ್ಮಿಗಳು ಮತ್ತು ಕಲಾವಿದರು ಗಣಿತ ಮತ್ತು ಕಲೆಯ ಅಂಶಗಳನ್ನು ಪುನರಾವರ್ತಿತ ಜ್ಯಾಮಿತೀಯ (Geometrical) ರೂಪಗಳಾಗಿ ಬೆರೆಸುವ ಮೂಲಕ ತಮ್ಮದೇ ಆದ ಒಂದು ಸೌಂದರ್ಯಶಾಸ್ತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಉತ್ತರ ಆಫ್ರಿಕಾದ ಕುಶಲಕರ್ಮಿಗಳು ಇದನ್ನು ಝೆಲ್ಲಿಜ್ (zellij) ಎಂದು ಕರೆಯುತ್ತಾರೆ. ಈ ವಿಶಿಷ್ಟವಾದ ಶೈಲಿಯನ್ನು ಸಂರಚಿಸಲು ಮುಸ್ಲಿಮ್ ಗಣಿತಶಾಸ್ತ್ರಜ್ಞರು ಮತ್ತು ಖಗೋಳಶಾಸ್ತ್ರಜ್ಞರ ಗಣನೀಯವಾದ ಕೊಡುಗೆಗಳು ಅನಿವಾರ್ಯವಾಗಿದ್ದವು. ಇಬ್ನು ಸೀನಾ ಅವರ ಕಾಲದಲ್ಲಿ ಇದನ್ನು ಗಣಿತಶಾಸ್ತ್ರ ಎಂದೇ ಕರೆಯಲಾಗುತ್ತಿತ್ತು. ಪ್ರಾಚೀನ ಮಸೀದಿಗಳಾದ ಡೆಮಾಸ್ಕಸಿನ ಗ್ರೇಟ್ ಮಸೀದಿ, ಗ್ರಾನಡಾದ ಅಲ್ ಹಮ್ರ, ಕಸಬ್ಲಾಂಕಾದ ಹಸನ್ ಮಸೀದಿ ಮತ್ತು ಇರಾನಿನ ಇಸ್ಪಹಾನಿನಲ್ಲಿರುವ ಷಾ  ಮಸೀದಿ ಇತ್ಯಾದಿ ಪ್ರಾಚೀನ ಮಸೀದಿಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ಇಂತಹ ಮಾದರಿಗಳನ್ನು ಕಾಣಬಹುದು. ಆ ಕಾಲದಲ್ಲಿ ಆಕರ್ಷಕವಾದ ಬಣ್ಣಗಳಾಗಲಿ, ವೈವಿಧ್ಯಮಯವಾದ ವಿಧಗಳಾಗಲಿ ಇರಲಿಲ್ಲ. ಖುರ್‌ಆನ್ ಮತ್ತು ಹದೀಸ್ ಗಳಲ್ಲಿ ವಿವರಿಸಿದಂತೆ ಅರಮನೆಗಳು, ಹಣ್ಣಿನ ಮರಗಳು, ಖರ್ಜೂರದ ಮರಗಳನ್ನೊಳಗೊಂಡ ಉದ್ಯಾನವನಗಳನ್ನು ಹೊಂದಿರುವ ಸ್ವರ್ಗ ಸಮಾನವಾದ ಅಲಂಕಾರವನ್ನು ಉಲ್ಲೇಖಿಸಲಾದ ಈ ಮೊಸಾಯಿಕ್ (mosaic) ಚಿತ್ರಗಳು ಖಲೀಫರುಗಳ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.

zellij

ಝೆಲ್ಲಿಜ್ (zellij)

ಮೊರೊಕೊ ದೇಶದ ಆಕೃತಿಗಳಾದ ಚೌಕಗಳು, ತ್ರಿಕೋನಗಳು, ನಕ್ಷತ್ರಗಳು, ವಜ್ರಗಳು, ಮತ್ತು ಬಹುಭುಜಾಕೃತಿಗಳ ವ್ಯವಸ್ಥಿತ ಮತ್ತು ನಿಖರವಾದ ಮೊಸಾಯಿಕ್ ಗಳನ್ನು ರೂಪಿಸುವ Tail work ನ ಒಂದು ಮೂರಿಷ್ ಕಲಾ ಪ್ರಕಾರವನ್ನು ‘ಝೆಲ್ಲಿಜ್’ ಎನ್ನಲಾಗುತ್ತದೆ. ಇಂತಹ ಮೊಸಾಯಿಕ್ಸ್ ಗಳು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಲು ಸಹಕಾರಿಯಾಗುತ್ತದೆ.

ಝೆಲ್ಲಿಜ್ ನ ಒಂದು ಹೃಸ್ವ ಚರಿತ್ರೆ

ಹತ್ತನೇ ಶತಮಾನದಲ್ಲಿ ಚಾಲನೆಯಲ್ಲಿದ್ದ ರೋಮನ್ ಮತ್ತು ಬೈಝಂಟೈನ್ ಮೊಸಾಯಿಕ್ ಗಳಿಂದ ಸ್ಪೂರ್ತಿ ಪಡೆದಿದೆ ಎನ್ನಲಾಗುವ ‘ಮೊರೋಕ್ಕೋ ಟೈಲ್’ ಇದೇ ಶತಮಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಉಜ್ವಲವಾದ ಬಣ್ಣಗಳು ಅಥವಾ ಆಯ್ಕೆ ಮಾಡುವಂತಹ ವಿಶೇಷ ವೈವಿಧ್ಯತೆಯೋ ಇರಲಿಲ್ಲ. ಬಿಳಿ ಅಥವಾ ಬೂದು ಬಣ್ಣಗಳನ್ನು ನೋಡಿ ನೀವು ಮಾರುಕಟ್ಟೆಗೆ ಬರುತ್ತೀರೆಂದರೆ ನಿಮಗೆ ಅದೃಷ್ಟ ಖುಲಾಯಿಸಬಹುದು ಎಂಬ ಸ್ಥಿತಿ ಆಗಿನ ಕಾಲದಲ್ಲಿತ್ತು.

ನಂತರ 11ನೇ ಶತಮಾನದಲ್ಲಿ ನಕ್ಷತ್ರಾಕಾರದ ಜ್ಯಾಮಿತಿ ರಚನೆಗಳು ರೂಪುಗೊಂಡವು. ಅಸುಲೇಜೋನ ಕಾಲದಲ್ಲಿ (ಹಿಸ್ಪಾನಿಕ್- ಮೊರೆಸ್ಕ್ ಕಾಲಘಟ್ಟ) ಮೋರೋಕೋ(ವಾಯುವ್ಯ ಆಫ್ರಿಕಾ),ಅಲ್ ಅಂದಲೂಸ್ (ಈಗಿನ ಸ್ಪೇನ್) ಎಂಬಿತ್ಯಾದಿ ನಗರಗಳಲ್ಲಿ ಝೆಲ್ಲಿಜ್ ಕಲೆಯು (art of zellij) ಬಹಳ ಜನಪ್ರಿಯವಾಗಿತ್ತು. ಕಾಲ ಉರುಳಿದಂತೆ ಝೆಲ್ಲಿಜ್ ತಂತ್ರಜ್ಞಾನವು ಅಭಿವೃದ್ಧಿಹೊಂದಿತು. 14ನೇ ಶತಮಾನದಲ್ಲಿ ನಾಸರಿ ಮತ್ತು ಮರೀನಿ ರಾಜವಂಶವು ಹಸಿರು, ನೀಲಿ ಮತ್ತು ಹಳದಿ ಬಣ್ಣಗಳ ಮೊರೊಕೊ ಹೆಂಚುಗಳನ್ನು ಒಟ್ಟುಗೂಡಿಸಿ ಈ ಕಲೆಯನ್ನು ಆಶ್ರಯಿಸಲು ಪ್ರಾರಂಭಿಸಿದರು. ಅನೇಕ ಜನರು ಜ್ಯಾಮಿತೀಯ ರಚನೆಗಳನ್ನು ಪವಿತ್ರ ಅಥವಾ ಧಾರ್ಮಿಕ ಕಲೆ ಎಂಬಂತೆ ನೋಡತೊಡಗಿದರು. ಕ್ರಿಸ್ತಪೂರ್ವ 375 ರಲ್ಲಿ ಪ್ಲೇಟೋ ರಿಪಬ್ಲಿಕ್ ನಲ್ಲಿ,”ಜ್ಯಾಮಿತಿಯೇ ಅಸ್ತಿತ್ವದ ಕುರಿತ ಜ್ಞಾನವಾಗಿದೆ” ಎಂದು ಬರೆದನು.

ಇಸ್ಲಾಮಿನ ಕಲೆಯ ಶಕ್ತಿ ಮತ್ತು ಪ್ರಭಾವವನ್ನು ಸೂಚಿಸುವ ಈ ಉಲ್ಲೇಖದೊಂದಿಗೆ ನಾನು ಮುಕ್ತಾಯಗೊಳಿಸುತ್ತೇನೆ. “ಪ್ರೇಮವು ಯಾವಾಗಲೂ ಸೌಂದರ್ಯದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದೆ. ಮಸೀದಿಗಳು ಮತ್ತು ಅಧ್ಯಯನ ಶಾಲೆಗಳನ್ನು ಸುಂದರಗೊಳಿಸುವಾಗ ನಾವು ಅದರತ್ತ ಆಕರ್ಷಿತರಾಗುತ್ತೇವೆ. ಮಾತು ಸೊಗಸಾಗುವಾಗ ನಾವು ಅದರತ್ತ ಆಕರ್ಷಿತರಾಗುತ್ತೇವೆ. ಸೌಂದರ್ಯವು ಪ್ರೇಮವನ್ನು ಪ್ರಚೋದಿಸುತ್ತದೆ. ಪ್ರೇಮವು ನಮ್ಮ ಆತ್ಮವನ್ನು ಚಲನಶೀಲವಾಗಿಸುತ್ತದೆ”.

ಮೂಲ: ನಶ್‌ವ ಅಖ್ತರ್
ಕನ್ನಡಕ್ಕೆ: ಮುಹಮ್ಮದ್ ಯಾಸೀನ್ ಸಿದ್ದಾಪುರ

Leave a Reply

*