ಬೇಟೆ

ದೀರ್ಘಕಾಲದ ಅಜ್ಞಾತ ವಾಸದ ನಂತರ ಝಕಿಯ್ಯಾ ಮತ್ತೆ ಆ ಬೀದಿಯಲ್ಲಿ ಕಾಣಿಸಿಕೊಂಡಳು. ಈ ಬಾರಿ ಅವಳ ಕೈಯಲ್ಲಿ ಹಸುಗೂಸಿತ್ತು. ನಿಜ ಹೇಳಬೇಕೆಂದರೆ, ಅವಳು ಇಲ್ಲಿಂದ ಕಣ್ಮರೆಯಾದದ್ದಾಗಲೀ, ಈಗ ಮತ್ತೆ ಪ್ರತ್ಯಕ್ಷವಾದದ್ದಾಗಲಿ ಯಾರ ಗಮನಕ್ಕೂ ಬಿದ್ದಿಲ್ಲ. ಮೊದಲೇ ಲಾಚಾರಾಗಿದ್ದ ಅವಳು ಈಗ ಇನ್ನಷ್ಟು ಲಾಚಾರಾಗಿದ್ದಳು. ಮುಖದ ಸೌಂದರ್ಯ ಕೈಕೊಟ್ಟಿತ್ತು. ಎಂದೋ ಬಿಟ್ಟಗಲಿದ್ದ ಯೌವ್ವನದ ಒಂದೆರಡು ಕುರುಹುಗಳಷ್ಟೇ ಬಾಕಿ ಉಳಿದಿತ್ತು.
ಅಗಸಳಾಗಿದ್ದ ಅವಳ ತಾಯಿ ಸತ್ತ ನಂತರ ಅವಳು ಕೆಲಸಕ್ಕೆ ಹೋಗುತ್ತಿದ್ದ ಮೂರು ಮನೆಗಳ ಪಕ್ಕ ನಿಂತು ಅವುಗಳನ್ನೇ ನೋಡತೊಡಗಿದಳು. ಕ್ರಮೇಣ ಎರಡು ಮನೆಗಳು ಅವಳ ನೋಟದ ಪರಿಧಿಯಿಂದ ಹೊರಬಿದ್ದು ಒಂದು ಮನೆಯಷ್ಟೇ ಉಳಿಯಿತು. ಅದು ಊರುಗೋಲು ಹಾಗೂ ಕೊಡೆಗಳ ವ್ಯಾಪಾರಿ ಉಸ್ಮಾನ್ ಧಣಿಯ ಮನೆ.
ಝಕಿಯ್ಯಾ ಬಡವಳಾಗಿದ್ದಳು. ಜೀವನಾಧಾರಕ್ಕಾಗಿ ಅವಳು ತುರ್ಕಿ ಕಲ್ಲು ಸಕ್ಕರೆ, ಜೀರಿಗೆ ಮಿಠಾಯಿಗಳಂತಹ ಮಕ್ಕಳ ಸಿಹಿ ತಿನಿಸುಗಳನ್ನು ಮಾರಾಟ ಮಾಡುವ ಕೆಲಸಕ್ಕೆ ಸೇರಿಕೊಂಡಳು. ಒಂದು ಕೈಯಲ್ಲಿ ಸಿಹಿ ತಿನಿಸುಗಳ ಪ್ಯಾಕೇಟುಗಳಿದ್ದ ಡಬ್ಬ ಹಾಗೂ ಇನ್ನೊಂದು ಕೈಯಲ್ಲಿ ತನ್ನ ಹಸುಗೂಸನ್ನು ಎತ್ತಿ ಅಳೆಯುತ್ತಿದ್ದಳು. ಹೆಚ್ಚಾಗಿ ಅವಳು ಉಸ್ಮಾನ್ ಧಣಿಯ ಅಂಗಡಿಯ ಅಕ್ಕಪಕ್ಕದಲ್ಲೇ ಓಡಾಡುತ್ತಿದ್ದಳು. ಉಸ್ಮಾನ್ ಧಣಿ ತನ್ನ ದನಿ ಕೇಳುವಂತೆ, ತನ್ನನ್ನು ಗಮನಿಸುವಂತೆ ಮಾಡಲು ಅವಳು ಶತ ಪ್ರಯತ್ನ ಮಾಡುತ್ತಿದ್ದಳು. ಆದರೆ, ಉಸ್ಮಾನ್ ಅವಳನ್ನು ಕಂಡರೂ ಕಾಣದವನಂತೆ ನಟಿಸುತ್ತಿದ್ದನು.
ಎಷ್ಟು ದಿನ ಅಂತ ನಟಿಸಲು ಸಾಧ್ಯ? ಒಂದು ದಿನ ಅವನ ಸಹನೆಯ ಕಟ್ಟೆಯೊಡೆಯಿತು. ಸುತ್ತಮುತ್ತಲು ಯಾರೂ ಇಲ್ಲದ ವೇಳೆ ನೋಡಿ ಝಕಿಯ್ಯಾಳನ್ನು ಪಕ್ಕಕ್ಕೆ ಕರೆದನು.
ಝಕಿಯ್ಯಾ ಆತನನ್ನು ನೋಡಲು ಇಷ್ಟವಿಲ್ಲದವಳಂತೆ ಅನಾಸಕ್ತಿಯ ನೋಟ ಬೀರಿದಳು.
ಉಸ್ಮಾನ್ ಆಕೆಯನ್ನು ಓಲೈಸುವ ಶತ ಪ್ರಯತ್ನಕ್ಕೆ ಮನಸಿನಲ್ಲೇ ಸಿದ್ಧವಾಗುತ್ತಿದ್ದನು.
”ಹೇಗಿರುವೆ ಝಕಿಯ್ಯಾ?”
“ದೇವರ ದಯೆ. ಹೀಗಿದ್ದೇನೆ” ಝಕಿಯ್ಯಾಳ ದನಿ ಕರ್ಕಶವಾಗಿತ್ತು.
“ನಿನಗೇನಾದರು ಬೇಕೇ?”
”ಮೂರೊತ್ತಿನ ಅನ್ನವನ್ನು ದೇವರು ಕೊಡುತ್ತಾನೆ. ಆದರೆ, ಈ ಮಗುವಿಗಂತ ದೇವರು ನಿಗದಿಪಡಿಸಿದ ಹಕ್ಕು ಸಿಗಲೇಬೇಕು”
“ಯಾಕೆ ಸುಮ್ಮನೆ ಸುತ್ತು‌ ಬಳಸು ಮಾತು. ನಿನಗೇನು ಬೇಕು ನೇರವಾಗಿ ಹೇಳು”
“ನನಗೇನು ಬೇಕೆಂದೇ ನಾನು ಹೇಳಿದ್ದು. ಅದನ್ನು ಅರ್ಥ ಮಾಡಿಕೊಳ್ಳುವ ಸದ್ಬುದ್ಧಿ‌ ದೇವರು ನಿಮಗೆ ನೀಡಲಿ”
ಝಕಿಯ್ಯಾಳ ಒರಟು ಮಾತುಗಳನ್ನು ಕೇಳಿ ಉಸ್ಮಾನ್ ನ ಸಿಟ್ಟು ನೆತ್ತಿಗೇರಿತು.
“ನಿನ್ನ ಒಗಟಿನಂತಹ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪುರುಸೊತ್ತು ನನಗಿಲ್ಲ ತೊಲಗು ಇಲ್ಲಿಂದ. ಅರ್ಹತೆಯಿಲ್ಲದವರನ್ನು ತಲೆಯ ಮೇಲೆ ಕೂರಿಸಿದರೆ ಹೀಗೆಯೇ ಆಗುವುದು” ಎಂದು ಕುದಿಯುತ್ತಾ ಅಂಗಡಿಯೊಳಗೆ ಹೊಕ್ಕನು.
ಆದರೆ, ಝಕಿಯ್ಯಾ ಅವನ ಮಾತಿಗೆ ಸೊಪ್ಪು ಹಾಕದೆ, ಅವನ ಅಂಗಡಿಯ ಸುತ್ತಮುತ್ತ ಓಡಾಡುತ್ತಾ ವ್ಯಾಪಾರ ಮಾಡುತ್ತಿದ್ದಳು. ಆದರೆ, ಆಕೆಯ ಗಮನವಿಡೀ ಉಸ್ಮಾನ್ ಧಣಿಯ ಅಂಗಡಿಯ ಮೇಲೆಯೇ ಇತ್ತು. ತನ್ನ ನಿರ್ಧಾರದಿಂದ‌ ಹಿಂದಕ್ಕೆ ಸರಿಯುವ ಯಾವ ಸೂಚನೆಯೂ ಅವಳಲ್ಲಿ ಕಂಡು ಬರುತ್ತಿರಲಿಲ್ಲ. ಉಸ್ಮಾನ್ ಧಣಿಗೆ ತಲೆ ಚಿಟ್ಟು ಹಿಡಿಯತೊಡಗಿತು. ಅಂಗಡಿ ಮೇಲೆ ಗಮನವಿಡುವುದೂ ಕಷ್ಟವಾಯಿತು. ಆತ ನಿಂತಲ್ಲೇ ಚಡಪಡಿಸತೊಡಗಿದನು.
‘ಎಂತಹ ಅವಸ್ಥೆ! ಏಕಾಗ್ರತೆಯಿಂದ ಕೆಲಸ ಮಾಡುವುದೂ ಸಾಧ್ಯವಾಗುತ್ತಿಲ್ಲವಲ್ಲ’ ಎಂದು ಗೊಣಗತೊಡಗಿದನು.
ಸಮಾಧಾನದಿಂದ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಮಾತನಾಡಿಸಲಾಗದ ದುಃಸ್ಥಿತಿ ಅವನನ್ನು ಕಾಡಿತು. ತಾನು ಹಾಗೂ ಕುಟುಂಬ ಯಾವುದೋ ಜಿನ್ನಿನ(ಯಕ್ಷಿ) ಮಾಯಾವಿ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಿರಬೇಕು ಎಂದು ತನ್ನ ದುರಿತಕ್ಕೆ ಕಾರಣಗಳನ್ನು ಹುಡುಕತೊಡಗಿದನು.
ಒಂದು ದಿನ ಅವನು ಅಂಗಡಿ‌ ಮುಚ್ಚಿ ಮನೆಗೆ ಹೊರಡುವ ವೇಳೆ ಝಕಿಯ್ಯಾಳನ್ನು ಕಂಡು;
“ನೋಡು, ನನ್ನ ಸಹನೆಗೊಂದು ಮಿತಿ ಇದೆ. ನೀನು ಹೀಗೆಯೇ ಮುಂದುವರಿದರೆ ನಿನ್ನನ್ನು ಕೊಂದು ನಿನ್ನ ದೇಹವನ್ನು ನಾಯಿನರಿಗಳಿಗೆ ಹಾಕುತ್ತೇನೆ” ಎಂದನು. ಆಗ ಅವನ ದನಿ‌ ಸಿಟ್ಟಿನಲ್ಲಿ ನಡುಗುತ್ತಿದ್ದುದನ್ನು ಝಕಿಯ್ಯಾ ಗಮನಿಸಿದಳು.
ಆದರೆ, ಅವಳು ಯಾವುದೇ ಭಯವನ್ನು ತೋರ್ಪಡಿಸದೆ ಮಗುವನ್ನು ಹೆಗಲ‌ ಮೇಲೆ ಮಲಗಿಸಿ ಲಾಲಿ ಹಾಡತೊಡಗಿದಳು.
ಉಸ್ಮಾನ್ ಗೆ ತನ್ನ ಬೆದರಿಕೆಗಳಿಂದ ಯಾವುದೇ ಪ್ರಯೋಜನವಿಲ್ಲವೆನಿಸಿತು. ಇವಳು ಹೀಗೆ ತನ್ನ ಅಂಗಡಿಯ ಮುಂದೆ ಎಳೆಗೂಸಿನೊಂದಿಗೆ ಓಡಾಡುತ್ತಿರುವುದನ್ನು ಜನರು ಗಮನಿಸುತ್ತಿರಬಹುದು ಎಂದು ಅವನಿಗೆ ಆತಂಕವಾಯಿತು. ಅವನು ಸಪ್ಪೆ ಮೋರೆಯೊಂದಿಗೆ ತನ್ನ ಗೆಳೆಯನೂ ಆಗಿದ್ದ ಊರ ಮುಖಂಡನ ಬಳಿಗೆ ಹೋದನು‌. ಅವನೊಂದಿಗೆ ತನ್ನ ನಿದ್ದೆ ಗೆಡಿಸುತ್ತಿರುವ ಗುಟ್ಟನ್ನು ಬಿಚ್ಚಿಟ್ಟನು.
“ಸುಮ್ಮನೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾಳೆ. ನನ್ನ ಬಗ್ಗೆ ಅಪಪ್ರಚಾರ ಮಾಡುವುದು ಅವಳ ಉದ್ದೇಶವಾಗಿರಬಹುದು”
ಊರ ಮುಖಂಡ ಸಂಶಯ ಎತ್ತದಿದ್ದರೂ, ಅಲ್ಪ ಹೊತ್ತು ಉಸ್ಮಾನ್ ನ ಮುಖವನ್ನೇ ನೋಡುತ್ತಾ ಕುಳಿತನು.
‘ನೋಡು ಉಸ್ಮಾನ್, ಆ ಯುವತಿ ಹೇಳುತ್ತಿರುವುದರಲ್ಲಿ ಸತ್ಯವಿರುವುದಾದರೆ ಅದನ್ನು ಒಪ್ಪಿಕೊಂಡು ನ್ಯಾಯಯುತವಾಗಿ ನಡೆಯುವುದು ಒಳ್ಳೆಯದಲ್ಲವೇ”
“ಇಲ್ಲ, ಇಲ್ಲ, ಅವಳು ಹೇಳುತ್ತಿರುವುದು ಶುದ್ಧ ಸುಳ್ಳು” ಉಸ್ಮಾನ್ ಪೇಚಿಗೆ ಸಿಕ್ಕವನಂತೆ ಹೇಳಿದನು.
“ಆದರೆ, ಅವಳು ನಿಮ್ಮ ಮೇಲೆ ಗಂಭೀರ ಆರೋಪ ಮಾಡಿ, ಪೇಚಿಗೆ ಸಿಲುಕಿಸುವ ಸಾಧ್ಯತೆ ಇದೆ. ಜನರು ಅದನ್ನು ಸುಲಭವಾಗಿ ನಂಬುತ್ತಾರೆ”
“ಹಾಗಾಗಲು ತಾವು ಬಿಡಬಾರದು”
ಊರ ಮುಖಂಡ ಸ್ವಲ್ಪ ಹೊತ್ತು ಆಲೋಚಿಸಿ, “ಹಾಗಾದರೆ ಒಂದು ಕೆಲಸ ಮಾಡೋಣ, ನಾನು ಅವಳ‌ ಬಳಿಗೆ ಹೋಗಿ ನೀನು ಈ ಊರು‌ ಬಿಟ್ಟು ಹೋದರೆ ನಿನಗೆ ತಿಂಗಳಿಗೆ ಇಂತಿಷ್ಟು ಹಣ ಕೊಡುವುದಾಗಿ ಹೇಳುತ್ತೇನೆ. ಆ ಹಣವನ್ನು ನೀನು ದಾನ ಮಾಡುತ್ತಿದ್ದೇನೆ ಅಂದುಕೊಂಡರೆ ಸಾಕು”
“ಸರಿ ನೀನು ಹೇಳಿದಂತೆಯೇ ಮಾಡುತ್ತೇನೆ. ಆ ಪೀಡೆ ಇಲ್ಲಿಂದ ತೊಲಗಿದರೆ ಸಾಕು” ಎಂದು ಉಸ್ಮಾನ್ ಧಣಿ ನಿಟ್ಟುಸಿರು ಬಿಟ್ಟನು.
ಮರುದಿನ ಊರ ಮುಖಂಡ ಝಕಿಯ್ಯಾಳನ್ನು ತನ್ನ ಬಳಿ ಕರೆಸಿಕೊಂಡು;
“ನಿನ್ನ ಸಮಸ್ಯೆಗೆ ನಾನು ಪರಿಹಾರ ಹೇಳುತ್ತೇನೆ” ಎಂದು ಹೇಳಿ, ಮೊದಲೇ ಯೋಚಿಸಿದ್ದ ಪರಿಹಾರವನ್ನು ಹೇಳಿದನು.
“ಇನ್ನೊಂದು ಊರಲ್ಲಿ ಗೌರವಯುತವಾಗಿ ನಿನಗೆ ಬದುಕಬಹುದು. ಆ ಬೀದಿಯ ಶೈಖ್ ರೊಂದಿಗೆ ಮಾತನಾಡುತ್ತೇನೆ”
ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಚಿಂತೆ, ಭಾವನೆಗಳ ಭಾರವನ್ನು ಪ್ರಕಟಿಸುತ್ತಿದ್ದ ಮೌನ ಅವರನ್ನು ಸುತ್ತುವರಿಯಿತು‌.
ತಾನು ನಿರೀಕ್ಷಿಸಿದ ಉತ್ತರ ಸಿಗುವುದಿಲ್ಲವೆಂದು ಊರ ಮುಖಂಡನಿಗೆ ಸ್ಪಷ್ಟವಾಯಿತು.
”ನಾನು ಹೇಳಿದ್ದು ಕೇಳಿಸಲಿಲ್ಲವೇ?”
“ಕೇಳಿಸಿತು. ಬೇರೆ ಊರು, ಶೈಖ್ ಅಂತ ಏನೇನೋ ಹೇಳಿದ್ರಲ್ಲ. ಆದರೆ, ನಾನಂತೂ ಈ ಊರು ಬಿಟ್ಟು ಹೋಗಲಾರೆ”
ಅವಳ ಉಕ್ಕಿನ ನಿರ್ಧಾರಕ್ಕೆ ಊರ ಮುಖಂಡ ತಬ್ಬಿಬ್ಬಾದನು.
ಆತ ಹಲ್ಲು ಕಡಿದು “ನಿನಗೆ ಹುಚ್ಚು” ಎಂದನು.
“ಇದು ಉಸ್ಮಾನ್ ಧಣಿಯ ಮಗು. ಆದ್ದರಿಂದ‌ ನಿಮ್ಮ ಭಿಕ್ಷೆಯ ಹಣ ನನಗೆ ಬೇಕಿಲ್ಲ”
“ಮತ್ತಿನ್ನೇನು ಬೇಕು‌ ನಿನಗೆ”
“ಆತನ ಕಣ್ಣ ಮುಂದೆಯೇ ಈ ಮಗು ಬೆಳೆಯಬೇಕು. ತಾನು ಮಾಡಿದ ಅಪರಾಧ ಪ್ರತೀ ಕ್ಷಣವೂ ಆತನಿಗೆ ನೆನಪಾಗುತ್ತಿರಬೇಕು” ಎಂದು ಝಕಿಯ್ಯಾ ತನ್ನ ವ್ಯಾಪಾರದ ಕಡೆಗೆ ತಿರುಗಿದಳು.
ಝಕಿಯ್ಯಾಳ ದಿನಚರಿ ಬದಲಾಗಲಿಲ್ಲ. ಮಗುವನ್ನು ಎತ್ತಿಕೊಂಡು‌ ನಿತ್ಯವೂ ಉಸ್ಮಾನ್ ಧಣಿಯ ಅಂಗಡಿಯ ಸುತ್ತಮುತ್ತಲೇ ಓಡಾಡಿಕೊಂಡಿರುತ್ತಿದ್ದಳು. ತನ್ನ ವ್ಯಾಪಾರಕ್ಕೆ ಆ ಅಂಗಡಿಯ ಪರಿಸರವನ್ನೇ ಅವಳು ಖಾಯಂ ನೆಲೆಯನ್ನಾಗಿ‌ ಮಾಡಿಕೊಂಡಿದ್ದಳು‌.
ಅವಳನ್ನು ನೋಡುವಾಗಲೆಲ್ಲಾ ಉಸ್ಮಾನ್ ಧಣಿಗೆ ಬೆಂಕಿ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡ ಅನುಭವವಾಗುತ್ತಿತ್ತು. ತಲೆ ಜುಮ್ ಎನ್ನುತ್ತಿತ್ತು.‌ ಚಿಂತೆಯ ಭಾರಕ್ಕೆ ಆತ ಕುಸಿದೇ ಹೋಗುತ್ತಿದ್ದನು. ಇದೇ ಮೊದಲ ಬಾರಿಗೆ ಆತ ಕೊಲೆ ಮಾಡುವ ಕುರಿತೂ ಯೋಚಿಸಿದನು.
ಆದರೆ, ಅ ದಿನ ಆತನಿಗೆ ಇದ್ದಕ್ಕಿದ್ದಂತೆ ಅದೇನಾಯಿತೋ. ಅಂಗಡಿ ಕೆಲಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಅವಸರವಸರವಾಗಿ ಊರ ಮುಖಂಡನ ಬಳಿಗೆ ದೌಡಾಯಿಸಿದನು.
“ಆಕೆಯನ್ನು ನಾನು ಮದುವೆಯಾಗುವೆ. ಮಗುವನ್ನು ನನ್ನ ರಕ್ತವೆಂದು ಒಪ್ಪಿಕೊಳ್ಳುವೆ. ಆದರೆ, ಒಂದು‌ ನಿಬಂಧನೆ, ಆಕೆ ಈ ಊರು ಬಿಟ್ಟು ಬೇರೆ ಊರಿಗೆ ಹೋಗಬೇಕು. ಇಷ್ಟು ಹೇಳಿ ಈಗಲೇ ಆಕೆಯನ್ನು ನೀವು ಒಪ್ಪಿಸಬೇಕು” ಎಂದು ಅಕ್ಷರಶಃ ಅಂಗಲಾಚತೊಡಗಿದನು.
ಉಸ್ಮಾನ್ ನ ಮಾತುಗಳನ್ನು ಕೇಳಿದ ಊರ ಮುಖಂಡ;
“ಉಕ್ಕಿನ ನಿರ್ಧಾರದ ಹೆಣ್ಣವಳು. ಅಂದುಕೊಂಡದ್ದನ್ನು ಮಾಡಿಯೇ ತೀರುವೆ ಎಂಬ ಛಲದೊಂದಿಗೆ ತಿರುಗಿ ಬಂದಿದ್ದಾಳೆ. ಇನ್ನು ಮಾತನಾಡಿ ಪ್ರಯೋಜನವಿಲ್ಲ” ಎಂದು ಕಡ್ಡಿಮುರಿದಂತೆ ಹೇಳಿದನು.

ಮೂಲ: ನಜೀಬ್ ಮಹ್ಫೂಸ್
ಅನುವಾದ: ಸ್ವಾಲಿಹ್‌ ತೋಡಾರ್‌


ನಜೀಬ್ ಮೆಹ್ಫೂಸ್

ನೋಡಲು ನಮ್ಮ ಮಾಸ್ತಿ ವೆಂಕಟೇಶ್ ಅಯ್ಯಂಗಾರರಂತೆ ಕಾಣಿಸುವ ನಜೀಬ್ ಮೆಹ್ಫೂಝ್ ಅಪ್ಪಟ ಅರಬ್ ಪ್ರತಿಭೆ. ಅರಬ್ ಸಾಹಿತ್ಯದಲ್ಲಿ ಇವರು ಕುತ್ ಬ್ ಮಿನಾರ್. ಮೂಲತಃ ಕಾದಂಬರಿಕಾರರಾದ ಇವರು ಸಾಕಷ್ಟು ಕಥೆಗಳನ್ನೂ ಬರೆದಿದ್ದಾರೆ. 1988ರಲ್ಲಿ ಸಾಹಿತ್ಯಕ್ಕಾಗಿ ನೋಬೆಲ್ ಗೌರವ ಪಡೆದಿರುವ ಇವರು ಮೂವತ್ತೈದು ಕಾದಂಬರಿ, ಇಪ್ಪತ್ತು ಸಣ್ಣಕಥೆಗಳ ಸಂಕಲನ, ಹದಿನೇಳು ನಾಟಕ ಸಂಕಲನ, ಇಪ್ಪತ್ತಾರು ಚಿತ್ರಕಥೆ ಮೊದಲಾದವುಗಳನ್ನು ರಚಿಸಿದ್ದಾರೆ. 1956-57ರ ಕಾಲಾವಧಿಯಲ್ಲಿ ಪ್ರಕಟಗೊಂಡಿರುವ Cairo trilogy ಇವರ ಮಾಸ್ಟರ್ ಪೀಸ್ ಕೃತಿ ಎಂದು ಪರಿಗಣಿತವಾಗಿದೆ. ಇವರ ಬಹುತೇಕ ಕೃತಿಗಳು‌ ಕ್ರಿಟಿಕಲ್ ರಿಯಲಿಸ್ಟಿಕ್ ಮಾದರಿಯಲ್ಲಿ ಕೈರೋ‌ ನಗರದ ಬೀದಿಗಳ ಕಥೆಗಳನ್ನು ಹೇಳುತ್ತವೆ. ಅರುವತ್ತರ ದಶಕದ ನಂತರ ಇವರು ಸಿಂಬಾಲಿಕ್, ಅಸ್ತಿತ್ವವಾದ ಮಾದರಿಯ ರಚನೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ‌. ಇವರ ಕೆಲವೊಂದು ಮುಕ್ತ ಬರವಣಿಗೆಗಳು ತೀವ್ರ ಟೀಕೆಗಳನ್ನೂ ಎದುರಿಸಿದ್ದಿದೆ. ಪರಿಣಾಮ 1994ರಲ್ಲಿ ಇವರ ಕೊಲೆ ಯತ್ನವೂ ನಡೆಯಿತು. 2006ರ ಆಗಸ್ಟ್ 30ರಂದು ನಜೀಬ್ ಮೆಹ್ಫೂಝ್ ಇಹಲೋಕ ತ್ಯಜಿಸಿದರು.

ಈ ಕಥೆಯನ್ನು ಇವರ ಮರಣಾನಂತರ ಪ್ರಕಟವಾದ whispers of stars ಕೃತಿಯಿಂದ ಆಯ್ದುಕೊಳ್ಳಲಾಗಿದೆ.

Leave a Reply

*