ಅಲ್- ಖೈರುವಾನ್: ಆಫ್ರಿಕಾದ ಪ್ರಥಮ ಇಸ್ಲಾಮಿಕ್ ನಗರ

ಅಲ್- ಮಗ್‍ರಿಬ್, ಅಲ್- ಅದ್‍ನಾ, ಇಫ್ರೀಖಿಯ್ಯಾ ಎಂಬಿತ್ಯಾದಿ ನಾಮಗಳಿಂದ ಹೆಸರುವಾಸಿಯಾಗಿದ್ದ ಉತ್ತರ ಆಫ್ರಿಕಾದ ಭಾಗಗಳನ್ನು ವಶಪಡಿಸಿಕೊಳ್ಳಲು ಅರಬ್- ಮುಸ್ಲಿಮರಿಗೆ ಅರ್ಧ ಶತಮಾನಗಳೇ ಹಿಡಿಯಿತು.

‘ಕಾರ್ತೇಜ್’ ( carthage ) ಭದ್ರಕೋಟೆಯನ್ನಾಗಿಸಿ ಕಾರ್ಯ ನಿರ್ವಹಿಸುತ್ತಿದ್ದ ‘ಬೈಸಾಂಟಿಯಾ’ ಕರಾವಳಿಯಲ್ಲಿಯೂ ತನ್ನ ಅಧಿಕಾರ ಹಸ್ತ ಚಾಚಿತ್ತು. ಒಳನಾಡಿನ ಓಯಸಿಸ್‍ಗಳು ಬೆರ್-ಬೆರ್ ಬುಡಕಟ್ಟುಗಳ ( Berber Tribes ) ಹಿಡಿತದಲ್ಲಿತ್ತು. ಪೈಗಂಬರ್ (ಸ.ಅ)ರವರ ವಿಯೋಗದ ಹನ್ನೊಂದು ವರ್ಷಗಳ ನಂತರ ಅಂದರೆ ಸುಮಾರು CE 643 ರಲ್ಲಿ ಅಲೆಕ್ಸಾಂಡ್ರಿಯಾ ವಶಪಡಿಸಿಕೊಳ್ಳಲು ಕಳುಹಿಸಲ್ಪಟ್ಟ ಅರಬ್ ಜನರಲ್ ಅಂರುಬ್ನ್ ಆಸ್ವ್ ತದನಂತರದ ದಂಡಯಾತ್ರೆಗಳಲ್ಲಿ ಪಶ್ಚಿಮದ ಕಡೆಗೇ ಮುಖಮಾಡಿದರು. ಅಳಿಯ ‘ಉಖ್‍ಬತುಬ್ನ್ ನಾಫಿ’ಯೂ ಯಾತ್ರೆಯಲ್ಲಿ ಜೊತೆಗೂಡಿದರು. ಅರೇಬಿಕ್ ಐತಿಹ್ಯಗಳ ಪ್ರಕಾರ ಇಬ್ನ್ ಆಸ್ವ್ ತನ್ನ ಸಹೋದರಿ ಪುತ್ರ ನಾಫಿಯನ್ನು ಮಧ್ಯ-ಲಿಬಿಯಾದ ಒಂದು ಮಿಲಿಟರಿ ದಾಳಿಗಾಗಿ ಹುರಿದುಂಬಿಸಿ ಕಳುಹಿಸಿದರು. ಕರಾವಳಿಯ ಬಂದರುಗಳು ಅಥವಾ ಯಾವುದೇ ನಗರಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಬ್ ಸೈನ್ಯವು ವಿಫಲವಾದರೂ ಇಬ್ನ್ ನಾಫಿಯ ಅನುಭವಗಳು ಮೌಲ್ಯಯುತವೆಂದು ಪರಿಗಣಿಸಲ್ಪಟ್ಟಿತು.

ಸುಮಾರು ಎರಡು ದಶಕಗಳ ನಂತರ (೨೭ ವರ್ಷಗಳ ನಂತರ), ಡಮಸ್ಕಸ್‌ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದ ‘ಖಿಲಾಫತ್’ ಉತ್ತರ ಆಫ್ರಿಕಾದ ತನ್ನ ಸೇನಾ-ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿತು.

ಒಂದು ಶಾಶ್ವತ ಸೈನಿಕ ನೆಲೆಯ ನಿರ್ಮಾಣವು ಅವರ ಮುಂದಿನ ಗುರಿಗಳಲ್ಲೊಂದಾಯಿತು. ನಿರ್ಮಾಣ ಪ್ರವೃತ್ತಿಯ ಕೆಲಸದ ಪೂರ್ಣ ಜವಾಬ್ದಾರಿಯನ್ನು ಖಲೀಫ ‘ಮುಆವಿಯಾ’ ಇಬ್ನ್‌ ನಾಫಿಯವರಿಗೆ ವಹಿಸುವುದರೊಂದಿಗೆ, ಬೈಸಾಂಟಿಯನ್‌ ಸೈನ್ಯದಿಂದ ಅರಬಿಗಳ ಮೇಲೆ ನಿರಂತರ ಸಂಘಟಿತ ದಾಳಿಯೆಸಗುತ್ತಿದ್ದ ಬೆರ್-ಬೆರ್‌ ಬುಡಕಟ್ಟು ಜನರು ನೆಲೆಯೂರಿದ್ದ ಗುಡ್ಡಗಾಡು ಪ್ರದೇಶಗಳಿಂದ ಸುರಕ್ಷಿತ ಅಂತರ ಹೊಂದಿದ ಒಳನಾಡಿನ ಬಯಲು ಪ್ರದೇಶಗಳನ್ನಾಗಿತ್ತು ಇಬ್ನ್‌ ನಾಫಿ ಆಯ್ಕೆ ಮಾಡಿದ್ದು. ಫಾರ್ಸಿಯಿಂದ ಅರಬೀಕರಿಸಿದ caravan ಎಂಬ ಅರ್ಥ ಸಿಗುವ ಪ್ರಸ್ತುತ ‘ಮಿಲಿಟರಿ ಶಿಬಿರ’ (garrison camp) ಎಂಬ ಪದಬಳಕೆಗೆ ಸಾಮ್ಯತೆ ಹೊಂದಿರುವ ಅಲ್‌-ಖೈರುವಾನ್‌ ಎಂದಾಗಿತ್ತು ಇಬ್ನ್‌ ನಾಫಿ ಆ ಪ್ರದೇಶವನ್ನು ಗುರುತಿಸಿದ್ದು. ಗತ ಕಾಲಗಳಲ್ಲಿ ರೋಮನ್ನರು ಮತ್ತು ಬೈಜಾಂಟಿಯನ್ನರು ವಾಸಿಸುತ್ತಿದ್ದ ಈ ಪ್ರದೇಶವು ಕಾಲದ ಮರೆಯಲ್ಲಿ ಸಿಲುಕಿ ನಾಶವಾಯಿತು ಎಂದು ‘ಆರಂಭಿಕ ಅರಬ್ ಇತಿಹಾಸಕಾರರು’ ಅಭಿಪ್ರಾಯ ಪಡುತ್ತಾರೆ.

ಖೈರುವಾನಿನಲ್ಲಿ ಬೃಹತ್ ಮಸೀದಿ ( The Great mosque of khairuvan) ಮತ್ತು ಸವಿಸ್ತಾರವಾದ ಸರಕಾರಿ ಭವನವನ್ನು ನಿರ್ಮಿಸಿದ 12 ವರ್ಷಗಳ ನಂತರವಾಗಿತ್ತು ಇಬ್ನ್ ನಾಫಿಯ ಅರಬ್ ಸೈನ್ಯ ಪಶ್ಚಿಮದ ಕಡೆ ಚಲಿಸಲಾರಂಭಿಸುವುದು. ಕೆಲವು ಮೂಲಗಳು ಅವರು ಮೊರೋಕ್ಕನ್ ಕರಾವಳಿಯನ್ನು ಸಹ ತಲುಪಿದ್ದರು ಎಂದು ಸೂಚಿಸುತ್ತದೆ. ಖೈರುವಾನ್ ಮೇಲಿನ ಬೆರ್-ಬೆರ್ ಪ್ರತಿಸ್ಪರ್ಧಿಗಳ ದಾಳಿಯಲ್ಲಿ ಇಬ್ನ್ ನಾಫಿ ವಧಿಸಲ್ಪಟ್ಟರೂ, ಅವರ ಆ ಅನಿರೀಕ್ಷಿತ ಗೆಲುವು ಅರಬ್ ಮುಸ್ಲಿಮರ ಅಧಿಕಾರ ವಿಸ್ತರಣೆಯನ್ನು ಕಲ್ಪಿಸಿಕೊಂಡಿದ್ದ ಭಾವೀ ನಾಯಕರುಗಳಿಗೆ ಉಪಯುಕ್ತವಾಯಿತು. ಅನಂತರದ ಖೈರುವಾನ್ ಮುಖ್ಯ ಆಡಳಿತ ಕಛೇರಿಯು ಉತ್ತರಾಫ್ರಿಕ ಮತ್ತು ಯುರೋಪಿಗಿರುವ ನಿರ್ಣಾಯಕ ಸಭೆಯ ಸ್ಥಳವಾಗಿ ಮಾರ್ಪಟ್ಟಿತ್ತು. ಇಸ್ಲಾಮಿನ ಆಗಮನ ಮತ್ತು ತದನಂತರದ ಸಾಂಸ್ಕೃತಿಕ ಪ್ರಭಾವವು ಈ ಹಿಂದಿನ ಎಲ್ಲಾ ಸಂಸ್ಕೃತಿಗಳನ್ನು ಬೆರಗುಗೊಳಿಸಿತು. ‘ವೆನ್ಡಾಲ್ (vendal)’ ಆಡಳಿತಗಾರರ ಕೈಯಲ್ಲಿ ‘ಅಲ್ ಅಂದ್‌ಲೂಸ್’ ಆಗಿ ಮಾರ್ಪಟ್ಟ ‘ಐಬೀರಿಯಾ’ದ ಜೊತೆಗೆ ದಕ್ಷಿಣ ಮೆಡಿಟರೇನಿಯನ್ ಕರಾವಳಿಗೂ , ಸೆನಗಲ್ ನದಿ ‘ಜಲಾನಯನ’ ಪ್ರದೇಶದ ದಕ್ಷಿಣಕ್ಕೆ ಅಟ್ಲಾಂಟಿಕ್ ಕರಾವಳಿಯ ಉದ್ದಕ್ಕೂ ಸಹರಾ ಮರುಭೂಮಿಯ ಓಯಸಿಸ್‌ಗಳಿಗೂ ನೈಜರ್ ನದಿಯ ಸಮೀಪ ಪಟ್ಟಣಗಳಿಗೂ ಅರಬ್ ಪ್ರಭಾವ ವ್ಯಾಪಿಸಲು ಪ್ರಾರಂಭವಾಯಿತು.

“ತೀವ್ರ ಪ್ರತಿಕೂಲ ವಾತಾವರಣದಲ್ಲಾಗಿತ್ತು ಖೈರುವಾನ್ ರೂಪುಗೊಳ್ಳುವುದು. ಹಲವಾರು ರಾಜಮನೆತನಗಳು ಅದನ್ನು ತಮ್ಮ ತೆಕ್ಕೆಗೆ ಪಡೆಯಲು ಬಯಸಿದವು ಮತ್ತು ಅದಕ್ಕಾಗಿ ಪರಸ್ಪರ ಸ್ಪರ್ಧಿಸಿದವು.” ಎಂದು ‘Khairouan Association to safeguard the city’ ಯ ಅಧ್ಯಕ್ಷರೂ, ಸ್ಥಳೀಯ ಇತಿಹಾಸಕಾರರೂ ಆದ ‘ಮುರಾದ್ ರಹ್ಮಾನ್’ ಹೇಳುತ್ತಾರೆ. ಪ್ರಸ್ತುತ ಈ ಸಂಸ್ಥೆಯ ಮೂಲಕ 1988 ರ ಯುನೆಸ್ಕೋ ವಿಶ್ವ ಪರಂಪರೆಯ ತಾಣ (unesco World Heritage site) ದ ಪಟ್ಟಿಯಲ್ಲಿ ಖೈರುವಾನ್ ಹೆಸರನ್ನು ಕಾಯ್ದುಕೊಳ್ಳಲು ಸಾಧ್ಯವಾಯಿತು ಎಂದವರು ಸಂತೋಷ ಪಡುತ್ತಾರೆ.

ಮೂಲತಃ ಇವರು, ಇಬ್ನ್ ನಾಫಿಯ ಆಗಮನದೊಂದಿಗೆ ಖೈರುವಾನ್ ತಲುಪಿದ ಪುರಾತನ ‘ಖೈಸ್’ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ಪೂರ್ವಜರಲ್ಲಿ ಹದಿನಾಲ್ಕನೇ ಶತಮಾನದ ಆರಂಭದಲ್ಲಿ ಜೀವಿಸಿದ್ದ ಅಬೂ ಅಬ್ದುರಹ್ಮಾನ್ ರಮ್ಮಾಹ್ ಅಲ್ ಖೈಸ್ ಪಟ್ಟಣದ ಮುಖ್ಯ ಕರ್ಮಶಾಸ್ತ್ರ ಪಂಡಿತರು ಮತ್ತು ಮಸೀದಿಯ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ನು ನಾಫಿ ನಿರ್ಮಿಸಿದ ಆಡಳಿತಾಧಿಕಾರಿಗಳ ವಸತಿನಿಲಯವು ಅಧಿಕ ಸಮಯ ಉಳಿಯಲಿಲ್ಲ. ಆದರೆ ಬಲ ಮತ್ತು ಭವ್ಯತೆಯಿಂದ ಕೂಡಿದ ಗತಕಾಲದ ನಗರ ನಿರ್ಮಾಣ ದೃಷ್ಟಿಯಿಂದ ಈ ಮಸ್ಜಿದ್ ನಿರ್ಮಿತವಾಗಿದೆ ಎಂದು ಮುರಾದ್ ರಹ್ಮಾನ್ ವಿವರಿಸುತ್ತಾರೆ. ಉತ್ತರ ಆಫ್ರಿಕಾದಲ್ಲೇ ಅತ್ಯಂತ ಪ್ರಾಚೀನ ಮಸೀದಿಯಾಗಿದೆ ಇದು. ಆಗಾಗ್ಗೆ ಪುನರ್ ನಿರ್ಮಿಸಲ್ಪಟ್ಟ ಮತ್ತು ನವೀಕರಿಸಲಾದ ಈ ಮಸ್ಜಿದ್ ಬಹುತೇಕ ಸಂಪೂರ್ಣವಾಗಿ ಆವಿಷ್ಕರಿಸಲ್ಪಡುವುದು ಸುಮಾರು 19 ನೇ ಶತಮಾನದಲ್ಲಿ ಖೈರುವಾನ್ ನಗರದ ಪ್ರಭಾವ ವಲಯದ ನೀಲನಕ್ಷೆಯನ್ನು ಇನ್ನಷ್ಟು ವಿಸ್ತರಿಸಿದ ‘ಅಗ್ಲಬಿ’ (Aghlabids) ಗಳ ಕಾಲದಲ್ಲಾಗಿತ್ತು.

ಅರಬ್ ಭೂವಿಜ್ಞಾನಿಯಾಗಿದ್ದ ಅಲ್- ಮುಖದ್ದಸಿ ಶತಮಾನದ ಕೊನೆಯಲ್ಲಿ ಈ ರೀತಿ ಬರೆಯುತ್ತಾರೆ – ”ನಿಶಾಪುರಿಗಿಂತಲೂ ಆಕರ್ಷಣೀಯವೂ, ಡಮಸ್ಕಸ್‌ಗಿಂತಲೂ ಸಮೃದ್ಧಿಯುತವೂ, ಅಫ್ಸಹಾನಿಗಿಂತಲೂ ಪ್ರಶಂಸನಾರ್ಹವಾಗಿದೆ ಖೈರುವಾನ್”. ಸ್ವತಃ ವಿಮರ್ಶಕರೂ ಆದ ಅವರು ಹೇಳುತ್ತಾರೆ “ಇಲ್ಲಿಯ ನೀರು ಅಷ್ಟು ಶುದ್ಧವಲ್ಲದ ಕಾರಣ ಮಳೆನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸುತ್ತಾರೆ. ಸಮಕಾಲೀನ ಇಸ್ಲಾಮಿಕ್ ನಗರಗಳಲ್ಲಿ ಆಚರಣೆಯಲ್ಲಿದ್ದ ನೀರಾವರಿಗಿಂತ ಮುಂಚೂಣಿಯಲ್ಲಿದ್ದ ನೀರಾವರಿ ಯೋಜನೆಯ ಕುರಿತು ಅಲ್ ಮುಖದ್ದಿಸಿ ಈ ರೀತಿ ಉಲ್ಲೇಖಿಸುತ್ತಾರೆ. ಶತಮಾನಗಳ ಹಿಂದೆಯೇ ಅಗ್ಲಬಿಗಳು ಖೈರುವಾನ್ ನಗರದ ಹೊರವಲಯದಲ್ಲಿ ಐವತ್ತಕ್ಕೂ ಮಿಕ್ಕ ವೃತ್ತಾಕಾರದ ಕೊಳಗಳನ್ನು ನಿರ್ಮಿಸಿ, ಮಳೆ ನೀರು ಮತ್ತು (ವಾದಿ) ಯ ಮೂಲಕ ಅದನ್ನು ತುಂಬಿಸುವ ಯೋಜನೆಯನ್ನು ಮಾಡಿದ್ದರು. ಅಂದಾಜು 120 ಮೀಟರ್ ವ್ಯಾಸ ಮತ್ತು ಐದು ಮೀಟರಿನಷ್ಟು ಆಳವಿರುವುದಾಗಿತ್ತು ಅವುಗಳಲ್ಲಿ ಅತ್ಯಂತ ದೊಡ್ಡ ಕೊಳಗಳು. ಅದರ ಮಧ್ಯಭಾಗಗಳಲ್ಲಿ ರಾಜ ಕುಟುಂಬಗಳು ಮತ್ತು ಅಧಿಕಾರಿಗಳು ವಿಶ್ರಾಂತಿ ಪಡೆಯಲು ಅಷ್ಟಭುಜಾಕೃತಿಯ ಗೋಪುರ ನಿರ್ಮಿಸಲಾಗಿತ್ತು. ಇಂದು ನಾಲ್ಕು ‘ನೀರು ತೊಟ್ಟಿಲು’ಗಳು (cistern) ಒಳಗೊಂಡಿರುವ ನಗರವು ಒಂದು ಸಾರ್ವಜನಿಕ ಉದ್ಯಾನವನ ಮತ್ತು ಐತಿಹಾಸಿಕ ಮಹತ್ವದ ಸ್ಥಳವೂ ಆಗಿದೆ “.

ಟುನೀಷಿಯಾದ ‘National Heritage Institute ‘ ಇದರ ಮಹಾ ನಿರ್ದೇಶಕರಾಗಿರುವ ‘ಫೌಝೀ ಮಹ್ ಫೂಲ್ ‘ (Faouzi mahfoudh) ಅಭಿಪ್ರಾಯಪಡುತ್ತಾರೆ ‘ಖೈರುವಾನ್ ಉದ್ವಿಗ್ನ ಕಾಲದಲ್ಲಿ ರೂಪುಗೊಂಡ ನಗರವಾದರೂ ಧರ್ಮ, ವಿಜ್ಞಾನ, ನಿಯಮ ಸಂಹಿತೆ, ವಾಸ್ತುಶೈಲಿ ಇತ್ಯಾದಿ ವಿಚಾರಗಳಲ್ಲಿ ಉತ್ತರ ಆಫ್ರಿಕಾದ ಪ್ರಥಮ ಸಾಂಸ್ಕೃತಿಕ ಕೇಂದ್ರವಾಗಿ ನೆಲೆಗೊಳ್ಳುತ್ತದೆ. ಎಂಟನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಖೈರುವಾನ್ ವಿಶ್ವವಿದ್ಯಾಲಯವಾಗಿವೆ ಉತ್ತರಾಫ್ರಿಕದ ಪ್ರಥಮ ಮಹಾವಿದ್ಯಾಲಯ. ಚರಿತ್ರೆಯ ಪುಟಗಳಲ್ಲಿ ಅಧಿಕೃತವಾಗಿ ಹೆಸರಿಸಲ್ಪಡದಿದ್ದರೂ ಆಫ್ರಿಕಾದ ಅವಿಶ್ರಾಂತ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಉನ್ನತ ವಿದ್ಯಾಸಂಸ್ಥೆಯಾಗಿರುವ University of Al-qarawiyyun ನಿರ್ಮಾಣಕ್ಕೆ ಪ್ರೇರಣೆಯಾದದ್ದು ಇದೇ ವಿಶ್ವವಿದ್ಯಾಲಯ ಆಗಿತ್ತು. ಇದರ ನಿರ್ಮಾತೃ ಫಾತಿಮಾ ಅಲ್ ಫಿಹ್ರಿ ಕೌಟುಂಬಿಕ ಸರಣಿಗೂ ಒಳಪಡುತ್ತಾರೆ. ಆಫ್ರಿಕಾದ ಪೂರ್ವ ಭಾಗವಾದ ಈಜಿಪ್ಟ್ ನಲ್ಲಿ ಕ್ರಿ.ಶ 970 ರ ಸುಮಾರಿಗೆ ಫಾತಿಮೀ ಆಡಳಿತಗಾರರು ನಿರ್ಮಿಸಿದ University of Al – qarawiyyin ಸ್ಥಾಪಿತ ಪ್ರೇರಣಾ ಶಕ್ತಿ ಖೈರುವಾನ್ ಯುನಿವರ್ಸಿಟಿ ಆಗಿತ್ತು. ಬಗ್ದಾದಿನ ಮಾದರಿಯ ಮಲ್ಟೀ ಡಿಸ್ಪನ್ಸರೀ ‘ಬೈತುಲ್ ಹಿಕ್ಮ’ ಜ್ಞಾನ ನಗರಿಯೂ ಒಂಭತ್ತನೆಯ ಶತಮಾನದ ಹೊತ್ತಿಗೆ ಖೈರುವಾನ್ ನಗರದಲ್ಲಿತ್ತು ಎಂಬ ಸತ್ಯದ ಕಡೆಗೆ ಚರಿತ್ರೆಯ ಪುಟಗಳು ಬೆಳಕು ಚೆಲ್ಲುತ್ತದೆ.

ಹದಿನಾರನೆಯ ಶತಮಾನದ ನಗರದ ತನ್ನ ಅನುಭವಗಳ ಬಗ್ಗೆ ಸ್ಪ್ಯಾನಿಷ್ ಇತಿಹಾಸಕಾರ ಲೂಯಿಸ್ ಡೆಲ್ ಮರ್‌ಮೆಲ್ (Luis del marmal caruajal ) ಈ ರೀತಿ ಬರೆಯುತ್ತಾರೆ: ಫ್ರೆಂಚರು ಪ್ಯಾರಿಸ್ಸಿಗೆ, ಸ್ಪೈ ನ್ ನಾಗರಿಕರು ಸಲಾಮಾನ್‌ಗೆ ಹೋಗುವ ರೀತಿ ಆಫ್ರಿಕಾದ ಎಲ್ಲೆಡೆಯಿಂದ ಜನರು ಖೈರುವಾನ್ ವಿಶ್ವವಿದ್ಯಾಲಯದ ಕಡೆಗೆ ಧಾವಿಸತೊಡಗಿದರು.

ಒಂದು ಕಾಲದಲ್ಲಿ ಆಫ್ರಿಕಾದ ಹಿರಿಯ ಲೇಖಕರು ಮತ್ತು ವೈದ್ಯರುಗಳು ನಾವು- ಅಲ್ಲಿಯ ವಿದ್ಯಾರ್ಥಿಗಳು ಎಂದು ಸ್ವತಃ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಮುಂದುವರಿದು ಮಹ್ಫೂಳ್ ಹೇಳುತ್ತಾರೆ: ಈ ಸರ್ವ ಸಂಪನ್ನ ವಿನಿಮಯವು ಕೇವಲ ಅರಬ್ ಇಸ್ಲಾಮಿಕ್ ಜಗತ್ತಿಗೆ ಸೀಮಿತವಾಗಿರಲಿಲ್ಲ. ಬದಲಿಗೆ ಯುರೋಪಿಯನ್ನರೊಂದಿಗೂ ಅಸ್ತಿತ್ವದಲ್ಲಿತ್ತು.

ಈ ನಗರದ ಶೈಕ್ಷಣಿಕ ಅಭಿವೃದ್ಧಿ ಮತ್ತು ಕಲಾತ್ಮಕ ಪ್ರಭಾವವನ್ನು ಉತ್ತೇಜಿಸುವಲ್ಲಿ ವಾಣಿಜ್ಯವು ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಂಸ್ಕೃತಿಗಳು ಮತ್ತು ಧರ್ಮಾಚರಣೆಗಳ ಪ್ರಯೋಗಶಾಲೆಯಾಗಿತ್ತು ಖೈರುವಾನ್. ಪಶ್ಚಿಮದ ಕಡೆಯಿಂದ ಬೆರ್‌ ಬೆರ್, ಪೂರ್ವದ ಅರಬಿಗಳು ಕ್ರೈಸ್ತರು ಮತ್ತು ಯಹೂದಿಗಳು ಮೊದಲಾದವರಿಗೆ ನಗರವು ಸಾಂಸ್ಕೃತಿಕ ಅಂಶಗಳ ಸಂಗಮ ಸ್ಥಳವಾಗಿತ್ತು. ಖುರೈಶ್, ರಾಬಿಯಾ, ಮುಲರ್, ಕಹ್‌ತಾನ್ ವಂಶಜರಾದ ಅರಬಿಗಳ, ಖುರಾಸಾನಿನ ಪರ್ಶಿಯನ್ನರ ಮತ್ತು ರೋಮಿನ ಬೆರ್‌ಬೆರುಗಳ ಖೈರುವಾನಿನೊಂದಿಗಿರುವ ವಾಣಿಜ್ಯ ವಿನಿಮಯ ಉಪಸ್ಥಿತಿಯ ಕುರಿತು ಅರಬ್ ಇತಿಹಾಸಕಾರ ಅಲ್ ಯಾಖೂಬೀ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಈ ರೀತಿ ದಾಖಲಿಸಿದ್ದಾರೆ.

ಖೈರುವಾನಿನಲ್ಲಿ ವಿಜ್ಞಾನ ಕ್ಷೇತ್ರವು ಹೊಂದಿದ್ದ ಪ್ರಾಮುಖ್ಯತೆಯನ್ನು ಪರಿಗಣಿಸಿದಾಗ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಮಹ್‌ಫೂಳ್ ಬರೆಯುತ್ತಾರೆ: ಅವುಗಳ ಪೈಕಿ ವಿಶಿಷ್ಟವಾದ ಎರಡು ಉದಾಹರಣೆಗಳನ್ನು ಉಲ್ಲೇಖಿಸೋಣ. ಹತ್ತನೆಯ ಶತಮಾನದ ಪ್ರಮುಖ ವೈದ್ಯ ಮತ್ತು ಫಾರ್ಮಸಿಸ್ಟ ರಾಗಿದ್ದ ‘ಇಬ್ನುಲ್ ಜಸ್ಸಾರ್’ (Ibn al-jazzar) ಸಾಲೇರ್‌ನೋ (Salerno) ಮತ್ತು ಮೋನ್ಟ್‌ಪೇಲಿಯರ್ (Montpellier) ವಿಶ್ವವಿದ್ಯಾಲಯಗಳ ಮೂಲಕ ಯುರೋಪಿನಾದ್ಯಂತ ವೈದ್ಯಶಾಸ್ತ್ರದ ತೀವ್ರ ಪ್ರಗತಿಗೆ ಕಾರಣನಾದ ‘ಕಾನ್ಸ್ಟೈನ್ಟೈನ್’ (Constantine the African) ಎಂಬುವವರಾಗಿದ್ದರು. ಕಾನ್ಸ್ಟನ್ಟೈನ್ ಎಂಬ ಕ್ರೈಸ್ತ ಧರ್ಮದ ವಿಶ್ವಾಸಿ ಇಟಲಿಯ ಪ್ರಸಿದ್ಧ ‘ಮೋಂಡಿಕೆಸ್ಸಿನೋ’ (Montecassino Abbey) ಸನ್ಯಾಸಿ ಮಠದಲ್ಲಿ ವೈದ್ಯಶಾಸ್ತ್ರದ ಅಧ್ಯಾಪಕನಾಗುವುದಕ್ಕಿಂತಲೂ ಪೂರ್ವ ಕಾಲದಲ್ಲಿ ಖೈರುವಾನ್ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿದ್ದರು ಎಂದು ನಂಬಲಾಗಿದೆ. ಅಲ್ಲಿ ಅವರು ಸ್ವತಃ ತನ್ಮೂಲಕ ವಿರಚಿತಗೊಂಡ ಅರಬಿಕ್ ಗ್ರಂಥಗಳನ್ನು ಭಾಷಾಂತರಿಸಲು ತಮ್ಮ ಎಲ್ಲಾ ಶಕ್ತಿಯನ್ನು ಬಳಸಿದ ಕಾರಣ ‘ಪಶ್ಚಿಮದಲ್ಲಿ ಪೂರ್ವ ಭಾಗದ ಮಹಾ ಗುರು’ ಎಂದು ಜನರಿಂದ ಕರೆಯಿಸಲ್ಪಟ್ಟರು. ಪೂರ್ವ ಭಾಗದಲ್ಲಿ ಸುಮಾರು ಒಂದೂವರೆ ಶತಮಾನಗಳ ಕಾಲ ಸಿಸಿಲಿ (siaions) ಗಳು, ಟೋಲಿಡೋ (toledons) ಗಳು, ವೆನೇಷ್ಯಗಳೂ (venetians) ವೈಜ್ಞಾನಿಕ ವೈದ್ಯಕೀಯ ಪಠ್ಯಗಳ ವ್ಯವಸ್ಥಿತ ಅನುವಾದಗಳಲ್ಲಿ ಪ್ರಬುದ್ಧರಾಗುವವರೆಗೆ ಕಾನ್ಸ್ಟನ್ಟೈನಿನ ಅನುವಾದಗಳಿಗೆ ಮೌಲಿಕವಾದ ಪರಿಗಣನೆ ಇತ್ತು.

ಇಂತಹ ವಿಶೇಷತೆಗಳನ್ನು ಹೊಂದಿರುವುದರಿಂದಲೇ ಆಧುನಿಕ ಇತಿಹಾಸಕಾರರು ಮತ್ತು ಭೂ ವಿಜ್ಞಾನಿಗಳ ಪಾಲಿಗೆ ಖೈರುವಾನ್ ಸಮಾನ ಪ್ರಮುಖ ತಾಣವಾಗಿದೆ. ಇದು ಇಸ್ಲಾಂ ಧರ್ಮದ ನಾಲ್ಕನೇ ಪವಿತ್ರ ನಗರವಾಗಿದೆ ಎಂದೂ ಕೆಲವರು ವಾದಿಸುತ್ತಾರೆ . ಹಲವಾರು ಪೀಳಿಗೆಯ ಪಯಣದ ಗುರಿಯೂ ಇದೇ ಆಗಿತ್ತು. ಪ್ರಯಾಣಿಕರ ದಾಖಲೆಗಳು ವಿವಿಧ ಯುಗಗಳಲ್ಲಿನ ನಗರದ ಬದಲಾದ ಚಿತ್ರಣಗಳು, ಅದರ ನಾಗರಿಕ ಮತ್ತು ಸಾಮಾಜಿಕ ಸಮೃದ್ಧಿಯ ಎತ್ತರಗಳು, ತದನಂತರ ಎದುರಿಸಬೇಕಾಗಿ ಬಂದ ಏರಿಳಿತಗಳ ಬಗ್ಗೆಯೂ ಚರಿತ್ರೆಯ ಪುಟಗಳು ಉಲ್ಲೇಖಿಸುತ್ತದೆ. ‘ಜನರಲ್ ಡಿಸ್ಕ್ರಿಪ್ಶನ್ಸ್ ಆಫ್ ಆಫ್ರಿಕಾ ‘ ಎಂಬ ಪುಸ್ತಕದ ಲೇಖಕರೂ, ಹದಿನಾರನೆಯ ಶತಮಾನದ ಪ್ರಸಿದ್ಧ ರಾಜತಂತ್ರಜ್ಞರೂ ಆದ ಲಿಯೋ ಆಫ್ರಿಕಾನಲ್ ಎಂಬ ನಾಮದಲ್ಲಿ ಚಿರಪರಿಚಿತರಾಗಿದ್ದ ಹಸ್ಸಾನ್ ಅಲ್ ವಸ್ಸಾನ್ (hassan al vazzan ) ತಮ್ಮ ಗ್ರಂಥದಲ್ಲಿ ಖೈರುವಾನಿನ ಚೇತರಿಕೆಯ ಕುರಿತು ಈ ರೀತಿ ಉಲ್ಲೇಖಿಸುತ್ತಾರೆ: “ದುಃಖಕರವಾದರೂ ನಗರದಲ್ಲಿ ಇಂದು ಬಹುತೇಕ ಜನಜೀವನವು ಪುನರ್ – ಪ್ರಾರಂಭವಾಗಿದೆ. ಪ್ರಸ್ತುತ ಬಡ ಕರಕುಶಲಕರ್ಮಿಗಳು ಮಾತ್ರ ಅಲ್ಲಿ ಕಾಣಸಿಗುತ್ತಾರೆ. ಅವರಲ್ಲಿ ಹೆಚ್ಚಿನವರು ಆಡು ಮತ್ತು ಕುರಿಗಳ ಚರ್ಮ ಒಣಗಿಸಿ ಉತ್ಪಾದನಾ ಯೋಗ್ಯವನ್ನಾಗಿ ಮಾಡಿ ಯುರೋಪಿಯನ್ ಬಟ್ಟೆಗಳು ಲಭ್ಯವಿಲ್ಲದ ನೊಮೀಡಿಯಾದಂತಹ ಪ್ರದೇಶಗಳಲ್ಲಿ ಚರ್ಮದ ವಸ್ತುಗಳನ್ನು ಮಾರಾಟ ಮಾಡುವವರಾಗಿದ್ದರು. ಇದು ಅವರ ದಿನದ ಮೂರು ಹೊತ್ತಿನ ಆಹಾರಕ್ಕಿರುವ ದಾರಿಯೇ ಹೊರತು ಜೀವನ ಪೂರ್ತಿಯಲ್ಲ”.

ಹತ್ತನೆಯ ಶತಮಾನದ ಆದಿ ಕಾಲದಿಂದಲೂ ಖೈರುವಾನ್ ನಗರದ ಉನ್ನತಿಯ ಪ್ರಭೆಯನ್ನು ಮಂದಗೊಳಿಸುತ್ತಾ ಟ್ಯೂನಿಶ್, ಮರಾಖೇಷ್, ಫೆಝ್, ತ್ಲೆಂಸರ್ ಮೊದಲಾದ ನಗರಗಳು ಬಲಾಢ್ಯಗೊಳ್ಳಲು ಪ್ರಾರಂಭವಾಯಿತು. ಜನಾಂಗೀಯ ಘರ್ಷಣೆಗಳು ಸಹ ವಿನಾಶಕಾರಿಯಾಗಿ ಸಂಭವಿಸಿತು. ಖೈರುವಾನ್‌ ಜನಸಂಖ್ಯಾ ನಿಬಿಢತೆಯು ಕ್ಷೀಣಿಸುತ್ತಿರುವ ಹೊರತಾಗಿಯೂ ಸ್ವತಃ ತೀರ್ಥ ಯಾತ್ರಾ ಕೇಂದ್ರವಾಗಿ ತನ್ನ ಪ್ರಾಮುಖ್ಯತೆಯನ್ನು ಕಾಪಾಡುವಲ್ಲಿ ಸಫಲವಾಯಿತು. ಹತ್ತನೆಯ ಶತಮಾನದ ಕೊನೆಯಲ್ಲಿ ಪ್ರಬಲ ಫಾತಿಮೀ ಆಡಳಿತಗಾರರು ಖೈರುವಾನಿನಿಂದ ನೈಲ್ ನದಿ ದಂಡೆಯ ‘ಅಲ್-ಖಾಹಿರ’ (ಕೈರೋ) ನಗರಕ್ಕೆ ತಮ್ಮ ರಾಜಧಾನಿಯನ್ನು ಬದಲಾಯಿಸಿದರು. ನಗರದ ಆರ್ಥಿಕ ಮತ್ತು ರಾಜಕೀಯ ಹಿನ್ನಡೆಯ ನೋವಿನ ಜೊತೆಗೆಯೇ ಕೆಲವು ದಶಕಗಳ ನಂತರ ‘ಪ್ಲೇಗ್’ ಹಾವಳಿಯೂ ಹರಡಿತು. ‘ಬಾನಿ ಹಿಲಾಲ್’ ಬುಡಕಟ್ಟು ನಗರದ ಮೇಲೆ ಆಕ್ರಮಣ ಶುರುಮಾಡಿದ 1045 ರಲ್ಲಿ ಒಂದು ಸಮಸ್ಯೆ ಉದ್ಭವಿಸುತ್ತದೆ ಮತ್ತು ನಗರ ಪ್ರದೇಶವು ಒಂದು ವಿಶಾಲವಾದ ಗ್ರಾಮೀಣ ಆರ್ಥಿಕತೆಗೆ ಮರಳುತ್ತದೆ. ಮುರಾದ್ ರಹ್ಮಾನ್ ವಿವರಿಸುತ್ತಾರೆ: “ತನ್ನ ಗತಕಾಲದ ವೈಭವವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಸಾಧ್ಯವಾಗದಿದ್ದರೂ, ಉತ್ತರ ಆಫ್ರಿಕಾ ಮತ್ತು ಯುರೋಪನ್ನು ಸಂಪೂರ್ಣ ರೂಪಿಸುವಲ್ಲಿ ಶ್ರಮಿಸಿದ್ದು ಅದರ ಪರಂಪರೆಯಾಗಿದೆ.” ಪಾಶ್ಚಾತ್ಯ ಇಸ್ಲಾಮಿಕ್ ಪ್ರಪಂಚದ ಬೌದ್ಧಿಕ ಆಳವು ಪ್ರಾರಂಭವಾದದ್ದು ಇಲ್ಲಿಂದಲೇ. ಇಂದಿನ ಉತ್ತರ ಆಫ್ರಿಕದಾದ್ಯಂತ ಅವರ ದೈನಂದಿನ ಬದುಕಿನ ಇಸ್ಲಾಮಿಕ್ ನಿಯಮ ಸಂಹಿತೆಯ ಅನ್ವಯಿಕತೆಯಲ್ಲಿ ಈ ನೈಜತೆಯನ್ನು ಕಾಣಬಹುದು. ಇಸ್ಲಾಮಿನ ನಾಲ್ಕು ಪ್ರಮುಖ ಮದ್ಸ್ ಹಬ್‌ಗಳಲ್ಲಿ ಒಂದೂ, ಉತ್ತರ ಆಫ್ರಿಕಾದಲ್ಲಿ ಹೆಚ್ಚು ಜನಮನ್ನಣೆ ಗಳಿಸಿ ಪ್ರಚಲಿತದಲ್ಲಿರುವ ‘ಮಾಲಿಕೀ’ ಸಿದ್ಧಾಂತವು ವಿಕಸನಗೊಂಡದ್ದು ಖೈರುವಾನ್ ನಗರದಿಂದಲೇ ಆಗಿತ್ತು.

ವಾಸ್ತುಶಿಲ್ಪ ಕ್ಷೇತ್ರದಲ್ಲಿ ವಿವಿಧ ಸ್ಥಳಗಳಲ್ಲಿ ಇಂದು ಕಂಡುಬರುವ ಪ್ರಭಾವಕ್ಕೆ ಖೈರುವಾನಿನ ‘ದಿ ಗ್ರೇಟ್ ಮಸ್ಜಿದ್’ ಸಾಕ್ಷಿಯಾಗಿದೆ. ಅದರ ಸರಳವಾದ ಆಯತಾಕಾರದ ಗೋಪುರಗಳು, ನಂತರದ ಕಾಲಾವಧಿಯ ಪೂರ್ವ ಭಾಗದ ರಾಜಧಾನಿಗಳ ಗಗನಚುಂಬಿ ಕಟ್ಟಡಗಳಿಗಿಂತ ಬಲವಾದ ವ್ಯತಿರಿಕ್ತತೆಯನ್ನು ನಿರ್ವಹಿಸುವುದಾಗಿದೆ. ಪಶ್ಚಿಮ ಮತ್ತು ಉತ್ತರದ ಪ್ರಸಿದ್ಧ ವಿನ್ಯಾಸಕಾರರನ್ನು ಪ್ರಭಾವಿಸಿದ ಮಾದರಿಯಾಗಿತ್ತು ಖೈರುವಾನಿನ ನಗರ ನಿರ್ಮಾಣ ಶೈಲಿ. ಮೂರು ಚೌಕಾಕಾರದ ಸ್ತಂಭಗಳ ಮೇಲೆ ನಿರ್ಮಿತವಾದ ವಿಶಾಲ ಗೋಪುರಗಳು ಹೊಂದಿರುವ ಖೈರುವಾನಿನ ಮಿನಾರಗಳು, ಪ್ರಸ್ತುತ ‘ಕ್ಯಾಥೆಡ್ರಲ್’ ಗೋಪುರಗಳಿಂದಾವೃತವಾದ ಕೊರೊಡೋವಾ ಮತ್ತು ಸ್ಪೈನ್ ನಗರಗಳ ಹದಿನೊಂದನೇ ಶತಮಾನದ ಮಸ್ಜಿದ್‌ಗಳ ಮೇಲೆ ನಿರ್ಮಿಸಲಾಗಿದ್ದ ಗೋಪುರಗಳೊಂದಿಗೆ ಹೆಚ್ಚಿನ ಸಾಮ್ಯತೆಗಳಿವೆ. ಪಶ್ಚಿಮ ಟ್ಯುನೀಶಿಯಾದ ಬಹುತೇಕ ಎಲ್ಲಾ ಗೋಪುರಗಳು ಇಂದು ಚೌಕಾಕೃತಿಯನ್ನು ಹೊಂದಿದೆ. ಗ್ರೇಟ್ ಮಸ್ಜಿದ್ ಮೇಲಿನ ಮೂವತ್ತೆರಡು ಮೀಟರ್ ಉದ್ದದ ಸುಂದರ ವಾಸ್ತುಶೈಲಿಯನ್ನು ಹೊಂದಿದ ಗೋಪುರವಾಗಿದೆ ಖೈರುವಾನಿನ ಅತಿ ಎತ್ತರದ ಕಟ್ಟಡ. ಪ್ರಾಚೀನ ಪ್ರಯಾಣಿಕರಿಗೆಂಬಂತೆ, ಸಾಲು- ಸಾಲಾಗಿ ನಿಂತ ಅಂಗಡಿ ಮುಗ್ಗಟ್ಟುಗಳು ಮತ್ತು ಜನನಿಬಿಡವಾದ ಪುಣ್ಯಕ್ಷೇತ್ರಗಳ ಮಧ್ಯೆ ಅವ್ಯಕ್ತವಾದ ದಿಗಂತದಲ್ಲಿ ಚಿತ್ರಿಸಿದ ಈ ಭವ್ಯವಾದ ಪರಂಪರೆಯ ಗಾಂಭೀರ್ಯತೆ ಚಿಹ್ನೆಗಳು ಇಂದಿಗೂ ಗೋಚರಿಸುತ್ತವೆ. ನಗರಕ್ಕೆ ಹತ್ತಿರವಾದಷ್ಟು ಮನೆ ಬಾಗಿಲುಗಳು, ಅಂಗಡಿ ಮುಗ್ಗಟ್ಟುಗಳು, ಕೃಷಿಯೋಗ್ಯ ಭೂಮಿಗಳು, ಬಂಜರು ಭೂಮಿಗಳು ಇವೆಲ್ಲದರ ಮಧ್ಯೆ ಮರುಭೂಮಿಯ ದಾರಿದೀಪವಾಗಿ ಈ ಗೋಪುರವು ನೆಲೆ ನಿಂತಿದೆ.

ಆರಾಧನಾ ಸಮಯಗಳ ನಡುವೆ ಮಸ್ಜಿದ್ ಬಳಿ ತಲುಪುವ ಯಾತ್ರಿಕರು ಫೋಟೊಗಳನ್ನು ತೆಗೆಯುತ್ತಾ ಅಲ್ಲಿ ಸಮಯ ಕಳೆಯುತ್ತಾರೆ. ವಿಶ್ವಾಸಿಗಳು ಮುಂದಿನ ಪ್ರಾರ್ಥನೆಗೆ ಹಿಂದಿರುಗುವ ವೇಳೆ ದೃಶ್ಯ ಶಾಂತವಾಗಿರುತ್ತದೆ. ಒಟ್ಟು ಮೂವತ್ತಾರು ಕಟ್ಟಡಗಳನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸಿದ ‘ಯುನೆಸ್ಕೊ’ ಅವುಗಳನ್ನು ಉತ್ತರ ಆಫ್ರಿಕಾದ ಇಸ್ಲಾಂ ಧರ್ಮದ ಪ್ರಾರಂಭಿಕ ಶತಮಾನದ ನಾಗರಿಕತೆಯ ಅಸಾಧಾರಣ ಸಾಕ್ಷಿಗಳೆಂದು ಪರಿಗಣಿಸಿದೆ. ಇಂತಹ ಬಿರುದುಗಳು ಮತ್ತು ದೀರ್ಘಕಾಲೀನ ಪ್ರಭಾವ ಶಕ್ತಿಯ ಹೊರತಾಗಿಯೂ, ಟ್ಯುನೀಶಿಯಾದ ಕಡಲತೀರದ ರೆಸಾರ್ಟುಗಳಲ್ಲಿ ಇಂದು ವಿರಾಮಕ್ಕಾಗಿ ತಲುಪುವವರಿಗಿಂತಲೂ ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ಪ್ರವಾಸಿಗರು ನಗರಕ್ಕೆ ಸಂದರ್ಶನಕ್ಕಾಗಿ ತಲುಪುತ್ತಾರೆ ಎಂದು ಮುರಾದ್ ರಹ್ಮಾನ್ ವಿಷಾದಿಸುತ್ತಾರೆ.

ಮೂಲ: Ana M. Carreno leyva
ಅನುವಾದ: ಅಬ್ದುಸ್ಸಲಾಂ ಮಿತ್ತರಾಜೆ, ಸಾಲೆತ್ತೂರು

Leave a Reply

*