ನೂಬಿಯನ್ ದರ್ವೇಶಿಯ ಅಂತರ್ದೃಷ್ಟಿ

1976ರ ಬೇಸಿಗೆಯಲ್ಲಿ ನಾನು ಕೈರೋ ತಲುಪಿದ ಕೂಡಲೇ ಸೌದಿ ಅರೇಬಿಯಾ ಗೆ ವೀಸಾ ಪಡೆಯುವ ಶ್ರಮ ನಡೆಸಿದೆನು. ಉದ್ಯಾನ ನಗರಿಯ ಒಂದು ವಿಶಾಲವಾದ ಕಟ್ಟಡ ಸಂಕೀರ್ಣದಲ್ಲಿ ಅಂದು ಸೌದಿಯ ಕಾನ್ಸುಲೇಟ್ ಜನರಲ್ ಕಾರ್ಯಾಚರಿಸುತ್ತಿತ್ತು. ಸೌದಿಯಲ್ಲಿ ತೈಲ ನಿಕ್ಷೇಪಗಳನ್ನು ಕಂಡು ಹಿಡಿಯಲಾದ ಆ ಸಂದರ್ಭದಲ್ಲಿ ಉದ್ಯೋಗ, ಹಜ್-ಉಮ್ರಾಗಳ ವೀಸಾ ಪಡೆಯಲು ಸಾವಿರಾರು ಜನರು ಎಂಬೆಸಿಗೆ ಮುತ್ತಿಗೆ ಹಾಕಿದ್ದರು.
ಜನರ ರೋಷವು ಹೆಚ್ಚುತ್ತಲೇ ಇತ್ತು. ಗೇಟಿನ ಬಳಿ ಕಾಂಪೌಂಡ್‌ನ ಹೊರಗೂ ಒಳಗೂ ಜನ ಜಮಾಯಿಸಿದ್ದರು. ಬಿಳಿ ಸಮವಸ್ತ್ರ ಮತ್ತು ಕಪ್ಪು ಟೋಪಿ ಧರಿಸಿದ್ದ ಈಜಿಪ್ಟ್‌ ಪೊಲೀಸರು ಕೈಯಲ್ಲಿ ಬೆಲ್ಟ್‌ಗಳನ್ನು ಹಿಡಿದು ಜನರ ಬಳಿ ಬರುತ್ತಿದ್ದರು. ಜನರ ರೋಷಾಗ್ನಿ ಮತ್ತು ಬೆವರ ಹನಿಯ ವಾಸನೆಯು ನಗರವನ್ನೇ ವ್ಯಾಪಿಸಿತ್ತು. ಗತ್ಯಂತರವಿಲ್ಲದೆ ಗೇಟಿನ ಮೂಲಕ ಒಳಹೋದ ನನಗೆ ದಾಖಲೆಗಳನ್ನು ಸಲ್ಲಿಸುವ ಕಿಟಕಿಯವರೆಗೂ ಉದ್ದವಾಗಿದ್ದ ಸರತಿಯ ಸಾಲು ಕಂಡಿತು. ಕೊನೆಯಿಲ್ಲದ ಆ ಕ್ಯೂನಲ್ಲಿ ನಾನು ಸಿಲುಕಿಕೊಂಡಿದ್ದೆ. ಸದ್ಯಕ್ಕಂತೂ ಆ ಕ್ಯೂ ಮುಗಿಯುವಂತೆ ಇರಲಿಲ್ಲ. ಜನರು ಬಂದು ಆ ಸರತಿಯಲ್ಲಿ ತಮ್ಮನ್ನು ತೂರಿಸಿಕೊಳ್ಳುತ್ತಿದ್ದರು. ಯಾರೊಂದಿಗೂ ವಾಗ್ವಾದಕ್ಕಿಳಿಯದೆ ತಾಳ್ಮೆಯಿಂದ ಆ ಸರತಿಯ ಕೊನೆಯಲ್ಲಿ ನನ್ನ ಸರದಿಗಾಗಿ ಕಾಯುತ್ತಾ ನಿಂತೆನು. ತಾಳ್ಮೆಯು ನನ್ನಲ್ಲಿದ್ದ ದೊಡ್ಡ ಗುಣವೇನೂ ಆಗಿರಲಿಲ್ಲ. ಆದರೆ ಗತ್ಯಂತರವಿಲ್ಲದೆ ಆ ಸರತಿಯಲ್ಲಿ ನಿಂತಿದ್ದೆ. ಕೆಟ್ಟ ಗಳಿಗೆಯನ್ನು ಅಲ್ಲಾಹನ ಸ್ಮರಣೆಯ ಮೂಲಕ ಧನ್ಯಗೊಳಿಸಿ, ಸಮಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ನಾನು ಅರಿತೆನು. ಸಾವಿರ ಸಲ ಪ್ರವಾದಿಯವರ ಮೇಲೆ ಸ್ವಲಾತ್ ಹೇಳಲು ತೀರ್ಮಾನಿಸಿದೆನು. ಮುಖದಲ್ಲಿ ನದಿಯ ಬೆವರ ಹನಿ ಹರಿಯುತ್ತಿತ್ತು. ಅಲ್ಲಿ ಉಸಿರಾಡುವಾಗ ವಾಕರಿಕೆ ಉಂಟಾಗುತ್ತಿತ್ತು. ನಬಿಯವರ ಮೇಲೆ ಸ್ವಲಾತ್ ಹೇಳುತ್ತಿದ್ದ ನನ್ನನ್ನು ಸರತಿಯ ಸಾಲು ನಾನರಿಯದೆ ಮುಂದಕ್ಕೆ ತಳ್ಳುತ್ತಿತ್ತು.

ಕ್ಯೂನ ಮುಂದಿನ ಸಾಲು ತಲಯಪಿದಾಗ 990 ಬಾರಿ ಸ್ವಲಾತ್ ಹೇಳಿ ಮುಗಿಸಿದ್ದೆ. ನನ್ನ ಆತಂಕ ಮತ್ತು ನಿರಾಶೆ ಕೊಂಚ ಕಡಿಮೆಯಾಗಿತ್ತು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಾನು ದಾಖಲೆಗಳನ್ನು ಕಿಟಕಿ ಮೂಲಕ ಇಟ್ಟೆನು. ಹಾಗೂ ಆನಂದದಿಂದ ಕಾನ್ಸುಲೇಟ್ ನ ಕಾಂಪೌಂಡ್ ಹೊರಗೆ ಬಂದೆನು. ಅಲ್ಲಿದ ಸೈಯ್ಯಿದ ಝೈನಬ (ರ) ಮಸೀದಿ ಗೆ ಟ್ಯಾಕ್ಸಿ ಹಿಡಿದೆನು. ಆ ಮಸೀದಿಯ ವಠಾರದಲ್ಲಿ ಪ್ರವಾದಿಯವರ ಮೊಮ್ಮಗಳು ಝೈನಬ್ ಅವರ ಮಝಾರ್ ಇದೆ. ಟ್ಯಾಕ್ಸಿ ಪ್ರಯಾಣದ ಮಧ್ಯೆ ಸಾವಿರ ಸ್ವಲಾತ್ ಪೂರೈಸಿದೆನು. ಡ್ರೈವರ್‌ಗೆ ಹಣ ಪಾವತಿಸಿ, ಮಸೀದಿಗೆ ನಡೆದೆನು‌. ಝೈನಬ್ (ರ) ಅವರ ಮಝಾರ್ ಬಳಿ ತಲುಪಿದಾಗ ಬಿಳಿ ಬಟ್ಟೆ ಮತ್ತು ಬಣ್ಣ ಬಣ್ಣದ ಶಿರವಸ್ತ್ರ ಧರಿಸಿದ್ದ ಓರ್ವ ನೂಬಿಯನ್ ದರ್ವೇಶಿಯೋರ್ವರು ಕುಳಿತಿದ್ದರು. ಏನೋ ಚಿಂತನೆಯಲ್ಲಿ ಮುಳುಗಿದಂತೆ ತಲೆ ತಗ್ಗಿಸಿ ಕುಳಿತಿದ್ದರು. ಆತ ಏನನ್ನೋ ಅರಿತವರಂತೆ ಒಂದು ಕ್ಷಣ ನನ್ನ ಮುಖವನ್ನು ದಿಟ್ಟಿಸಿ ನೋಡಿ, ಜೋರಾಗಿ ‘ಅಲ್ಲಾಹ್, ಅಲ್ಲಾಹ್’ ಎಂದು ಕೂಗಿದರು. ನನ್ನ ಹೃದಯದಲ್ಲಿ ಅಡಗಿದ್ದ ಏನೋ ಒಂದನ್ನು ಸಂಗ್ರಹಿಸುವ ರೀತಿಯಲ್ಲಿ ಅವರು ತಮ್ಮ ಕೈಗಳ ಮೂಲಕ ನನ್ನನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಮುಖವು ಹೊಳೆಯುತ್ತಿತ್ತು. ನಾನು ನನ್ನ ತಲೆಯಾಡಿಸಿದೆನು. ಅವರು ಭಾವಪರವಶರಾಗಿ ಮಂದಹಾಸ ಬೀರಿದರು. ನಂತರ ಅವರು ದ್ಸಿಕ್ರ್‌ನಲ್ಲಿ ತಲ್ಲೀನರಾದರು.

ಒಂದು ವಾರದ ಬಳಿಕ ನಾನು ಸಯ್ಯಿದ ಝೈನಬ ಅವರ ಮಝಾರ್‌ಗೆ ತೆರಳಿದೆನು. ಆದಿನ ನಾನು ಸೌದಿ ಕಾನ್ಸುಲೇಟ್‌ನಲ್ಲಿದ್ದ ಕಾರಣ ದ್ಸಿಕ್ರ್-ಸ್ವಲಾತ್‌ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಝಾರ್‌ನ ಬಳಿ ನೂಬಿಯನ್ ದರ್ವೇಶಿಯನ್ನು ನೋಡಿದೆ. ಅವರ ಬಳಿ ಹೋಗಿ ಹತ್ತಿರದಲ್ಲಿ ಕುಳಿತೆನು. ಒಂದು ವಾರದ ಹಿಂದಿನ ಪರಿಚಯ ಇರಬಹುದು ಎಂದು ಭಾವಿಸಿದ್ದೆ. ಆದರೆ ಅವರಿಗೆ ಅದರ ಪರಿವೆಯೇ ಇರಲಿಲ್ಲ. ಅವರು ನನ್ನನ್ನು ನಿರ್ಲಕ್ಷಿಸಿ ದರು. ನಾನು ಅವರ ಗಮನವನ್ನು ನನ್ನತ್ತ ಸೆಳೆಯಲು ಕಸರತ್ತು ನಡೆಸಿದೆನು. ಅಪರಿಚಿತರಂತೆ ನನ್ನ ಕಡೆ ನೋಟವನ್ನು ಬೀರಿ, ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಳೆದ ವಾರ ಅವರು ನನ್ನನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಿರಲಿಲ್ಲ ಎಂಬುದು ದಿಟವಾಯಿತು. ಅವರ‌ ಅಂತರ್ದೃಷ್ಟಿಯ ಮೂಲಕ ನಾನು ಹೇಳಿದ್ದ ಸ್ವಲಾತ್‌ಗಳನ್ನು ಅವರು ಕಂಡಿದ್ದಾಗಿರಬಹುದು. ಅಲ್ಲಾಹನೇ ಬಲ್ಲ!

ಮೈಕಲ್ ಸುಗಿಚ್ ಅವರು ಓರ್ವ ಇಂಗ್ಲಿಷ್ ಬರಹಗಾರ. ಮುಸ್ಲಿಂ ಜಗತ್ತಿನ ಬಗ್ಗೆ ಆಳ ಜ್ಞಾನವನ್ನು ಹೊಂದಿರುವವರು. ಈ ಅನುವಾದಿತ ಲೇಖನವನ್ನು ಅವರ Signs of Horizans ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.

-ಮೈಕಲ್ ಸುಗಿಚ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ

Leave a Reply

*