ಒಂದು ಸಮುದ್ರ ಮತ್ತು ನಾಲ್ಕು ಕಾದಂಬರಿಕಾರರು: ಹಿಂದೂ ಮಹಾಸಾಗರದ ಸಾಹಿತ್ಯ ವಿಶ್ವವನ್ನು ಮರುರೂಪಿಸುವ ಬಗೆ

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ.

ವಸಾಹತೋತ್ತರ ಸಾಹಿತ್ಯದ ಆರಂಭಕಾಲದಲ್ಲಿ ಕಾದಂಬರಿಯ ಲೋಕವು ಒಂದು ರಾಷ್ಟ್ರವೇ ಆಗಿತ್ತು. ಆದರೆ ಅದೇ ಕಾಲದ ನಂತರದ ಕಾದಂಬರಿಗಳು ಸಾಮಾನ್ಯವಾಗಿ ಒಂದು ರಾಷ್ಟ್ರೀಯ ಗಡಿಯೊಳಗೆ ರೂಪುಗೊಳ್ಳುತ್ತಿತ್ತು ಮತ್ತು ಕೆಲವು ರೀತಿಯಲ್ಲಿ ರಾಷ್ಟ್ರೀಯ ಪ್ರಶ್ನೆಗಳಿಗೂ ಸಂಬಂಧಪಡುತ್ತಿತ್ತು. ಕೆಲವೊಮ್ಮೆ ಕಾದಂಬರಿಯ ಸಂಪೂರ್ಣ ಕಥೆಯು ಒಂದು ದೇಶದ ಅನ್ಯೋಕ್ತಿಯಾಗಿ(allegory) ಸ್ವೀಕರಿಸಲಾಗುತ್ತಿತ್ತು. ಇದು ವಸಾಹತು ವಿರೋಧಿ ರಾಷ್ಟ್ರೀಯತೆಯ ಬೆಂಬಲಕ್ಕೆ ಮುಖ್ಯವಾಗಿದ್ದರೂ ಅದರ ಭೊಕೇಂದ್ರಿತ ಮತ್ತು ಆಂತರಿಕ ಗಮನ ಸ್ವಭಾವವು ಒಂದು ಮಿತಿಯಾಗಿ ವರ್ತಿಸುತ್ತದೆ.

ನನ್ನ ಹೊಸ ಕೃತಿ ‘writing ocean worlds’, ಹಳ್ಳಿ ಅಥವಾ ರಾಷ್ಟ್ರಗಳನ್ನು ಬಿಟ್ಟು ಹಿಂದೂ ಮಹಾಸಾಗರವನ್ನು ಕೇಂದ್ರೀಕರಿಸುವ ಮೂಲಕ ಕಾದಂಬರಿಗಳ ಮತ್ತೊಂದು ರೀತಿಯ ಪ್ರಪಂಚವನ್ನು ಅನ್ವೇಷಿಸುತ್ತದೆ. ಪ್ರಸ್ತುತ ಪುಸ್ತಕವು, ಹಿಂದೂ ಮಹಾಸಾಗರವನ್ನು ಸುತ್ತುವರಿದ ಕಥೆಗಳನ್ನೊಳಗೊಂಡ ಕೆಲವು ಕಾದಂಬರಿಗಳನ್ನು ಪರಿಚಯಿಸುತ್ತದೆ. ಇದು ಕಾದಂಬರಿಕಾರರಾದ ಅಮಿತಾವ್ ಘೋಷ್, ಅಬ್ದುಲ್ ರಝಾಕ್ ಗುರ್ನಾ, ಲಿಂಡ್ಸೆ ಕಾಲೆನ್ ಹಾಗೂ ಜೋಸೆಫ್ ಕಾನ್ರಾಡ್ ಅವರನ್ನು ಕೇಂದ್ರೀಕರಿಸಿದೆ.

ಈ ನಾಲ್ಕು ಲೇಖಕರೂ ತಮ್ಮ ಬಹುತೇಕ ಕಾದಂಬರಿಗಳಲ್ಲಿ ಹಿಂದೂ ಮಹಾಸಾಗರದ ಪ್ರಪಂಚವನ್ನು ಕೇಂದ್ರೀಕರಿಸುವ ಮೂಲಕ ಗಮನಾರ್ಹರು. ಅವರ ಪೈಕಿ ಪ್ರತಿಯೊಬ್ಬರೂ ಹಿಂದೂ ಮಹಾ ಸಾಗರದ ಪ್ರಮುಖ ಪ್ರದೇಶಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಘೋಷ್ ಮತ್ತು ಗುರ್ನಾ ಅನುಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ಕೇಂದ್ರೀಕರಿಸಿದ್ದು ಕಾಲೆನ್‌ ರವರು ದ್ವೀಪಗಳನ್ನು ಹಾಗೂ ಕಾನ್ರಾಡ್‌ರವರು ಸಾಮ್ರಾಜ್ಯಶಾಹಿಯರ ಹೊರಗಿನ ನೋಟವನ್ನು ಚಿತ್ರಿಸಿದ್ದಾರೆ.ಮೂಲತಃ ಭಾರತ ಮತ್ತು ಯು.ಎಸ್ ನಡುವೆ ನೆಲೆಗೊಳ್ಳುವ ಬರಹಗಾರರಾದ ಘೋಷ್ ರವರ ಕೃತಿಯು ಹಿಂದೂ ಮಹಾಸಾಗರದ ಐತಿಹಾಸಿಕ ಕಾದಂಬರಿಯನ್ನು ಒಳಗೊಂಡಿದೆ. ಝಾಂಝಿಬಾರಿನ ಗುರ್ನಾ 2021ರಲ್ಲಿ ಸಾಹಿತ್ಯಕ್ಕೆ ನೋಬೆಲ್ ಪುರಸ್ಕೃತ ಕಾದಂಬರಿಕಾರರು. ಕಾಲೆನ್ ಮಾರಿಷಸ್ ಮೂಲದ ಲೇಖಕ ಮತ್ತು ಹೋರಾಟಗಾರ ಮತ್ತು ಜೋಸೆಫ್ ಕಾನ್ರಾಡ್ ಇಂಗ್ಲಿಷ್ ಸಾಹಿತ್ಯಲೋಕದ ಪ್ರಮುಖ ಧ್ವನಿ.

ಇವರ ಕೃತಿಗಳು ಚಲನೆ, ಗಡಿ ದಾಟುವಿಕೆ ಮತ್ತು ದಕ್ಷಿಣ-ದಕ್ಷಿಣಗಳ ನಡುವಿನ ಪರಸ್ಪರ ಅಂತರ್ಸಂಬಂಧಗಳಿಂದ ತುಂಬಿರುವ ಹೊರಜಗತ್ತಿಗೆ ಕಣ್ಣು ಹಾಯಿಸಿರುವ ಜಗತ್ತನ್ನು ಅನಾವರಣಗೊಳಿಸಿದೆ. ವಸಾಹತುಶಾಹಿ ಒಲವುಳ್ಳ ಕಾನ್ರಾಡರಿಂದ ಬಹುದೊಡ್ಡ ಬಂಡವಾಳಶಾಹಿ ವಿರೋಧಿ ಹೋರಾಟಗಾರ ಕಾಲೆನ್‌ವರೆಗೆ ಇವರು ಬಹಳ ಭಿನ್ನಭಿನ್ನರಾಗಿದ್ದರೂ ಭಾಷೆ, ಚಿತ್ರ ಮತ್ತು ರೂಪಕಗಳ ಮೂಲಕ ಜತೆಯಾಗಿ ಹಿಂದೂ ಮಹಾಸಾಗರ ಪ್ರಪಂಚದ ಪ್ರವಿಶಾಲವಾದ ಪರಿಕಲ್ಪನೆಯನ್ನು ರಚಿಸುತ್ತಾರೆ. ಪರಸ್ಪರ ಒಳಸಂಪರ್ಕ ಹೊಂದಿರುವ ಜಾಗತಿಕ ದಕ್ಷಿಣ ಅಥವಾ ಗ್ಲೋಬಲ್‌ ಸೌತ್‌ನಲ್ಲಿ ಕೇಂದ್ರೀಕೃತವಾಗಿದ್ದುಕೊಂಡು ಓದುಗರ ಮನಸ್ಸಿನಲ್ಲಿ ಒಡಮೂಡಿರುವ ಜಗತ್ತಿನ ಕಲ್ಪನೆಯನ್ನು ಮರುರೂಪಿಸುವ ಶಕ್ತಿ ಅದಕ್ಕಿದೆ.

ಕೀನ್ಯಾ ಕಾದಂಬರಿಕಾರರಾದ ಯವೂನ್ ಅದಿಯಾಂಬೊ ಒವೂರ್ ಹೇಳಿದಂತೆ, ಪ್ರಪಂಚದೊಂದಿಗಿನ ಆಫ್ರಿಕಾದ ಅಂತರ್ಸಂಪರ್ಕದ ಆಖ್ಯಾನಗಳು “ನಮ್ಮ ಸ್ವಾತಂತ್ರ್ಯಾನಂತರದ ವಸಾಹತೋತ್ತರ ಕಲ್ಪನೆಯಲ್ಲಿ ಕಳೆದುಹೋದಂತಿದೆ”. ಆಫ್ರಿಕಾದ ಬಹುತೇಕ ಭಾಗವು ಸಮುದ್ರದಡಿಯಲ್ಲಡಗಿದೆ ಎಂದವರು ಹೇಳುತ್ತಾರೆ.

ಕಳೆದು ಹೋದ ಆಫ್ರಿಕಾವನ್ನು ಹುದುಗಿಸಿಕೊಂಡ ಕಾದಂಬರಿಯ ಪ್ರಪಂಚಕ್ಕೆ ಧುಮುಕಲು ಓದುಗರನ್ನು ಪ್ರಚೋದಿಸುವ ಗುರಿಯನ್ನು ನನ್ನ ಕೃತಿಯು ಹೊಂದಿದೆ.

ಹಿಂದೂ ಮಹಾಸಾಗರದ ಸಂಬಂಧ
ಪೂರ್ವ ಆಫ್ರಿಕಾ, ಅರಬ್ ಕರಾವಳಿಗಳು, ದಕ್ಷಿಣ ಮತ್ತು ಪೂರ್ವ ಏಷ್ಯಾ ತೀರಗಳ ನಡುವಿನ ಬಹುಕಾಲದ ಸಂಬಂಧಗಳನ್ನು ಸೂಚಿಸಲು ಬಳಸುವ ಪದವೇ ಹಿಂದೂ ಮಹಾಸಾಗರ ಪ್ರಪಂಚ. ಹಿಂದೂ ಮಹಾಸಾಗರದ ಭೌಗೋಳಿಕತೆ ಪ್ರಸ್ತುತ ಸಂಪರ್ಕವನ್ನು ಸಾಧ್ಯವಾಗುವಂತೆ ಮಾಡಿದೆ.

ಇತಿಹಾಸದುದ್ದಕ್ಕೂ ಸಮುದ್ರದಾರಿಯಲ್ಲಿನ ಪ್ರಯಾಣ ಭೂಮಾರ್ಗಕ್ಕಿಂತ ಬಹಳ ಸುಲಭವಾಗಿತ್ತು. ಆದ್ದರಿಂದಲೇ ಬಹಳ ದೂರದಲ್ಲಿರುವ ಬಂದರು ನಗರಗಳು ಹೊರಗಿನ ಹೆಚ್ಚು ಹತ್ತಿರದ ನಗರಗಳಿಗಿಂತ ಸುಲಭವಾಗಿ ಪರಸ್ಪರ ಸಂಪರ್ಕವನ್ನು ಹೊಂದಿದ್ದವು. ನಾವಿಂದು ಜಾಗತೀಕರಣವೆಂದು ಕರೆಯುತ್ತಿರುವ ಕಲ್ಪನೆಯು ಮೊದಲಿಗೆ ಪ್ರತ್ಯಕ್ಷವಾದದ್ದು ಹಿಂದೂ ಮಹಾಸಾಗರದಲ್ಲೆಂದು ಐತಿಹಾಸಿಕ ಮತ್ತು ಪುರಾತತ್ತ್ವ ಪುರಾವೆಗಳು ಸೂಚಿಸುತ್ತದೆ. ನನ್ನ ಪುಸ್ತಕದಲ್ಲಿ ಪರಾಮರ್ಶಿಸಿದ ಕಾದಂಬರಿಗಳಿಂದ ರೂಪಿಸಲ್ಪಟ್ಟ ಅಂತರ್ಸಂಪರ್ಕಿತ ಸಮುದ್ರಲೊಕವೂ ಇದುವೇ.

ಎಂ ಜಿ ವಾಸ್ಸಂಜಿ, ಮೈಕಲ್ ಆನ್ಡಾಟ್ಜೆ, ರೊಮೆಶ್ ಗುಣಸೇಖರ ಮತ್ತು ಇತರರ ಕೃತಿಗಳನ್ನು ಒಳಗೊಂಡಿರುವ ಹಿಂದೂ ಮಹಾಸಾಗರದ ಇಂಗ್ಲಿಷ್ ಕಾದಂಬರಿಯು ಸಣ್ಣದಾದರೂ ಸಮೃದ್ಧವಾದ ವಸ್ತುಗಳನ್ನು ಹೊಂದಿದೆ.

ಘೋಷ್, ಗುರ್ನಾ, ಕಾಲೆನ್ ಮತ್ತು ಕಾನ್ರಾಡ್ ಭೌಗೋಳಿಕತೆ ಮತ್ತು ಇತಿಹಾಸದ ಕುರುಹುಗಳನ್ನು ಬಹಳ ವಿಭಿನ್ನವಾಗಿ ಬಳಸಿದ್ದಾರೆ. ಕ್ರಿಶ್ಚಿಯನ್ ಮತ್ತು ಬಿಳಿಯ ಹಿನ್ನೆಲೆಯನ್ನು ಬಳಸುವ ಯುರೋಪ್ ಅಥವಾ ಯುಎಸ್‌ನಲ್ಲಿ ಹೆಚ್ಚಾಗಿ ಕೇಂದ್ರೀಕೃತಗೊಂಡಿರುವ ಹಾಗೂ ಪ್ಯಾರಿಸ್ ಮತ್ತು ನ್ಯೂಯಾರ್ಕ್‌ನಂತಹ ಸ್ಥಳಗಳನ್ನು ಉಲ್ಲೇಖಿಸುವ ಇಂಗ್ಲಿಷ್ ಕಾಲ್ಪನಿಕ ಕಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿದ್ಯಮಾನಗಳಲ್ಲ ಇಲ್ಲಿನ ಹೈಲೈಟ್. ಬದಲಾಗಿ ಈ ಕೃತಿಯಲ್ಲಿ ಪರಿಶೀಲಿಸಲಾದ ಕಾದಂಬರಿಗಳು ವಿಶಾಲವಾದ ಇಸ್ಲಾಮಿಕ್ ಪ್ರಪಂಚವನ್ನು ಹೈಲೈಟ್ ಮಾಡುತ್ತದೆ, ವರ್ಣ ಆಧಾರಿತ ಕಥಾಪಾತ್ರಗಳನ್ನು ಒಳಗೊಳ್ಳುತ್ತದೆ ಮತ್ತು ಮಲಿಂಡಿ, ಮೊಂಬಾಸಾ, ಏಡೆನ್, ಜಾವಾ ಹಾಗೂ ಬಾಂಬೆ ಬಂದರುಗಳನ್ನು ಕೇಂದ್ರೀಕರಿಸುತ್ತದೆ.

ಉದಾಹರಣೆಗೆ, ‘ಬೈ ದಿ ಸೀ’ ಎಂಬ ಗೂರ್ನಾರವರ ಕಾದಂಬರಿಯಲ್ಲಿ ಝಾಂಝಿಬಾರಿನ ಅಧ್ಯಾಪಕನೊಬ್ಬ ತನ್ನ ವಿಧ್ಯಾರ್ಥಿಗಳಿಗೆ ವಿಶ್ವದಲ್ಲಿ ತಮಗಿರುವ ಸ್ಥಾನವನ್ನು ತೋರಿಸುತ್ತಾ ಆಫ್ರಿಕಾದ ಪೂರ್ವ ಕರಾವಳಿಯ ಸುತ್ತ ದೀರ್ಘವಾದ ಗೆರೆಯನ್ನೆಳೆದು ಬಳಿಕ ಭಾರತವನ್ನು ಸುತ್ತಿ ಮಲಾಯ್ ಮತ್ತು ಇಂಡೊನೇಷಿಯನ್ ದ್ವೀಪಸಮೂಹಗಳ ಮೂಲಕ ಚೀನಾದಲ್ಲಿ ನಿಲ್ಲಿಸುತ್ತಾನೆ. ಬಳಿಕ ಝಾಂಝಿಬಾರ್ ಮೇಲೆ ಸುತ್ತಿ ಪೂರ್ವಕ್ಕೆ ಸಮುದ್ರದತ್ತ ಕೈ ತೋರಿಸಿ ಇದೇ ಈಗ ನಾವಿರುವ ಜಾಗವೆಂದು ಹೇಳುತ್ತಾನೆ. ಆಗ ತರಗತಿಯ ಹೊರಗಿನ ದೃಶ್ಯವನ್ನು ಹೀಗೆ ಚಿತ್ರಿಸಲಾಗಿದೆ:

“ಹಡಗುಗಳ ಗುಂಪುಗಳು ಹಲಗೆಗಳಂತೆ ಮಲಗಿವೆ. ಅವುಗಳೆಡೆಯಿರುವ ಸಮುದ್ರವು, ಅವುಗಳ ತ್ಯಾಜ್ಯದ ನುಣುಪುಗಳಿಂದ ಹೊಳೆಯುತ್ತಿದೆ. ವ್ಯಾಪಾರ ಮಾಡುತ್ತಾ, ಜಗಳವಾಡುತ್ತಾ, ರಾತ್ರಿಯಲ್ಲಿ ಜನರಿಲ್ಲದೆಡೆ ಜತೆಗೂಡಿ ಹಾಡುತ್ತಾ ಚಹಾ ಕುದಿಸುವ ಸೊಮಾಲಿಗಳು ಅಥವಾ ಸುರಿ ಅರಬರು ಅಥವಾ ಸಿಂಧಿಗಳಿಂದ ಬೀದಿಗಳು ತುಂಬಿತುಳುಕಿದೆ.”

ಪ್ರಪಂಚದಲ್ಲಿನ ಭೌಗೋಳಿಕ ಸ್ಥಾನ ಬಗೆಗಿನ ಹಿಗ್ಗಿಸಲಾದ ಸಂವೇದನೆಯನ್ನು ಒದಗಿಸುವ ದಕ್ಷಿಣದ ಕಾಸ್ಮೊಪಾಲಿಟನ್ ಸಂಸ್ಕೃತಿಯ ದಟ್ಟವಾದ ಕಲ್ಪನೆ ಮತ್ತು ಒಂದು ಸಮೃದ್ಧ ಸಂವೇದನಾಶೀಲ ಚಿತ್ರವನ್ನು ಇದು ಬಿಡಿಸಿಕೊಡುತ್ತದೆ.

ಆಫ್ರಿಕಾ ಪ್ರಾತಿನಿಧ್ಯ
ಈ ಪುನಃಸೃಷ್ಟಿ ಆಫ್ರಿಕಾದ ಪ್ರಾತಿನಿಧ್ಯವನ್ನು ಬಹಿರಂಗಪಡಿಸುವಲ್ಲಿ ವಿಶೇಷವಾದ ಶಕ್ತಿಯನ್ನು ಪಡೆದಿದೆ. ಕಾದಂಬರಿಯಲ್ಲಿರುವ ನಾವಿಕರು, ಪ್ರಯಾಣಿಕರೆಲ್ಲರೂ ಯುರೋಪಿಗರಲ್ಲ. ಅನ್ವೇಷಕರನ್ನು ಸ್ವೀಕರಿಸುವ ಗೋಜಿಗೆ ಹೋಗದೆ ಕಳುಹಿಸುವಲ್ಲಿ ಮಾತ್ರ ಗಮನ ಹರಿಸುವ ಜಲಭಯ ಹೊಂದಿರುವ ಖಂಡವಾಗಿ ಆಫ್ರಿಕಾವನ್ನು ಚಿತ್ರಿಸಲೂ ಇಲ್ಲ. ಭಾರತೀಯರು ಹಾಗೂ ಅರಬರ ಹಾಗೆ ಆಫ್ರಿಕನ್ನರೂ ಇಲ್ಲಿ ವ್ಯಾಪಾರಿಗಳು, ನಖೋಡಗಳು (ಧೋ ಹಡಗಿನ ಕಪ್ತಾನರು), ಊರುಬಿಟ್ಟವರು, ಖಳನಾಯಕರು, ಹೋರಾಟಗಾರರು, ಧರ್ಮಪ್ರವರ್ತಕರು ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದರರ್ಥ ಹಿಂದೂ ಮಹಾಸಾಗರ ಆಫ್ರಿಕಾವು ಅತಿರಂಜಿತವಾಗಿ ಬಣ್ಣಿಸಲ್ಪಟ್ಟಿದೆಯೆಂದಲ್ಲ. ಇಲ್ಲಿ ವಲಸೆ ಬಲವಂತವಾಗಿ ಹೇರಲಾಗಿದೆ. ಪ್ರಯಾಣವನ್ನು ಸಾಹಸ ಎಂಬ ರೀತಿಯಲ್ಲಿ ಚಿತ್ರಿಸದೆ ತ್ಯಾಗದ ಚಿಹ್ನೆಯಾಗಿ ಚಿತ್ರೀಕರಿಸಲಾಗಿದೆ. ಮಹಿಳೆಯರ ಸ್ವಾತಂತ್ರ್ಯವು ಮರೀಚಿಕೆಯಾಗಿದೆ ಹಾಗೂ ಗುಲಾಮಗಿರಿ ರಾರಾಜಿಸುತ್ತಿದೆ. ಅಂದರೆ, ಹಿಂದೂ ಮಹಾಸಾಗರ ಪ್ರಪಂಚದ ಆಫ್ರಿಕನ್ ಭಾಗವು ಅದರ ಸುದೀರ್ಘ, ಸಮೃದ್ಧ ಇತಿಹಾಸದ ಮೂಲಕ ವಿಶಾಲ ಜಗತ್ತಿನಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸುತ್ತದೆ.‌

ಮೂಲ ಲೇಖಕರು: ಚಾರ್ನೆ ಲಾವೆರಿ
ಕನ್ನಡಕ್ಕೆ: ತ್ವಾಹಿರ್‌ ಸಿದ್ದೀಖ್

ಕೃಪೆ: https://theconversation.com/four-novelists-one-ocean-how-indian-ocean-literature-can-remap-the-world-184080

1 Comment

Leave a Reply

*