ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ ಅದನ್ನು ಕಲಿಯಲು ಯಾರನ್ನಾದರೂ ಅನುಗಮಿಸುವುದು ಅನಿವಾರ್ಯ. ತದ್ವಿರುದ್ದವೆಂಬಂತೆ, ಬೌದ್ದಿಕ ವಿಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಸಲಾಗುವುದಿಲ್ಲ. ಮಾರ್ಗದರ್ಶನಕ್ಕಾಗಿ ಅಧ್ಯಾಪಕರನ್ನು ಆಶ್ರಯಿಸಬೇಕಾಗಿ ಬರಬಹುದು,ಅಷ್ಟೆ. ಪ್ರಸ್ತುತ ಜ್ಞಾನವನ್ನು ಕರಗತ ಮಾಡಲಿರುವ ಏಕೈಕ ಮಾರ್ಗ, ಬದ್ದಿಮತ್ತೆಗೆ ತರಬೇತಿ ನೀಡುವ ಮೂಲಕ ಆತ್ಮಶೋಧನೆ ಮಾಡಿ ತನ್ನೊಳಗೇ ಅವನ್ನು ಕಂಡರಿಸುವುದು. ಈ ಕೈಂಕರ್ಯ ಮಾಡದವನು ಎಲ್ಲಾ ವಿಚಾರಗಳಲ್ಲೂ ಇತರರನ್ನು ಆತು ಕೊಳ್ಳಬೇಕಾಗಿ ಬರುತ್ತದೆ.

ಪರಂಪರಾಗತವಾಗಿ ದೊರಕುವ ಜ್ಞಾನ ಧಾರೆಗಳಿಗೆ ಉದಾಹರಣೆ ಕಾನೂನು,ಇತಿಹಾಸ,ಭಾಷೆ ಇತ್ಯಾದಿ. ಎಲ್ಲಾ ಗುಣಗಳಲ್ಲಿ ಹೊಂದಿಕೆಯಿಲ್ಲದಿದ್ದರೂ ಗಣಿತವನ್ನು ಬೌದ್ದಿಕ ಜ್ಞಾನ ಪರಂಪರೆಯ ಉದಾಹರಣೆಯಾಗಿ ಹೇಳಬಹುದು. ʼಎರಡು ಕೂಡಿಸು ಎರಡು ಸಮ ನಾಲ್ಕು. ಕಾರಣ ಟೀಚರ್‌ ಹಾಗೆ ಹೇಳಿದ್ದಾರೆʼ ಎನ್ನುವುದು ಅಸಂಬದ್ದ. ಗಣಿತಾತ್ಮಕ ಸರಿ ತಪ್ಪುಗಳನ್ನು ಪರಸಹಾಯವಿಲ್ಲದೆ ಬುದ್ದಿ ತಾನೇ ಕಂಡು ಕೊಂಡುಕೊಳ್ಳುತ್ತದೆ.ಮೊದಲನಯದ್ದು ಮೌಖಿಕ ಪರಂಪರೆಯನ್ನು ಆಧರಿಸಿಕೊಂಡಿವೆ. ಎಲ್ಲಾ ಸಂಸ್ಕೃತಿ ಮತ್ತು ಧರ್ಮ ಪರಂರಯಲ್ಲಿ ಪ್ರಸ್ತುತ ಬಗೆಯ ಜ್ಞಾನಧಾರೆ ಇರುವುದಾಗಿ ಕಾಣಬಹುದು. ಬೌದ್ದ ಧರ್ಮದಲ್ಲಿ ಜ್ಞಾನೋದಯವೆಂಬುದು ಎಲ್ಲಾತರದ ಸಾಮಾನ್ಯ ಅರಿವುಗಳಿಗೆ ಅತೀತವಾದುದು. ಆದರೆ ಅದು ಕೈಗೆಟುಕುವುದಕ್ಕಿಂತ ಮುನ್ನ ಗುರುಪರಂಪರೆ ಮುಖಾಂತರ ಜ್ಞಾನವನ್ನು ಸ್ವೀಕಾರ ಮಾಡಿಯೇ ಬೇಕು. ಮುಸ್ಲಿಮರಿಗೆ ನಮಾಝಿನ ಕುರಿತ ಅರಿವು ದೊರಕಬೇಕಾದರೆ ವಿದ್ವಾಂಸರನ್ನು ಸಮೀಪಿಸಬೇಕಾಗುತ್ತದೆ. ದೇವರು ತಮ್ಮಿಂದೇನುಬಯಸುತ್ತಾನೆಂದು ತಿಳಿಯಲು ದಿವ್ಯಜ್ಞಾನ ತಲೆಮಾರಿಂದ ತಲೆಮಾರಿಗೆ ಸಾಗುತ್ತಲೇ ಬರಬೇಕು. ಭಾಷೆ,ಸಂಸ್ಕೃತಿ,ಪ್ರಪಂಚ ಜ್ಞಾನ ಮುಂತಾಗಿ ನಮಗೆ ಗೊತ್ತಿದೆಯೆಂದು ಭಾಸವಾಗುವ ಎಲ್ಲವೂ ಪರಂಪರಾಗತವಾಗಿಯೇ ನಮಗೆ ಲಭಿಸಿದ್ದು. ತದ್ವಿರುದ್ದವಂಬಂತೆ, ನಮ್ಮ ಆತ್ಮದಾಳದಲ್ಲಿ ಸಂಪೂರ್ಣ ಖಚಿತತೆಯೊಂದಿಗೆ ನಾವೇ ಅರಿದುಕೊಳ್ಳುವುದಾಗಿದೆ ವೈಚಾರಿಕ ಜ್ಞಾನವಂಬುದು. ಆದರೆ ಅಂತ ಅರಿವು ಕಡಿಮೆ.

ಇಸ್ಲಾಮೀ ನಾಗರಿಕತೆಯನ್ನು ತೆಗೆದುನೋಡುವಾಗ ಎರಡು ಬಗೆಯ ಅಧ್ಯಯನ ಕ್ಷೇತ್ರದೊಳಗೆ ವೈಚಾರಿಕ ಜ್ಞಾನದ ಅನ್ವೇಷಣೆ ನಡೆದಿರುವುದಾಗಿ ಕಂಡುಬರುತ್ತದೆ. ಸುಲಭವಾಗಿ ಅರ್ಥ ಮಾಡುವುದಕ್ಕೋಸ್ಕರ ಅವನ್ನು ಸೂಫಿಸಂ ಮತ್ತು ಫಿಲಾಸಫಿ ಅಂತ ಕರೆಯಬಹುದು. ಗ್ರೀಕರು ಮುಂದಿಟ್ಟ ತಾರ್ಕಿಕ ಮತ್ತು ವೈಚಾರಿಕ ವಿಧಾನಗಳನ್ನು ಅವಲಂಬಿಸಿ ಫಿಲಾಸಫಿಯನ್ನು ಬೆಳಸಲಾಗಿದೆ. ಸೂಫಿಸಂ ಪ್ರವಾದಿ ಮುಹಮ್ಮದ್(ಸ) ರಿಂದ ಪಡೆದ ಧ್ಯಾನಾತ್ಮಕ ಪರಿಕರಗಳನ್ನು ಒಳಗೊಂಡಿದೆ. ಹದಿಮೂರು ಶತಮಾನದಿಂದೀಚೆಗೆ ಉಭಯ ಕ್ಷೇತ್ರಗಳು ಪರಸ್ಪರ ಕೊಡುಕೊಳ್ಳುವಿಕೆಯ ಮುಖಾಂತರ ವಿಕಾಸಗೊಂಡಿದೆ.

ಆತ್ಮಜ್ಞಾನದ ಹೊರತಾಗಿ ವಸ್ತುಗಳ ಅರ್ಥಗಳನ್ನು ಗ್ರಹಿಸುವುದು ಅಸಾಧ್ಯ ಎಂಬ ತತ್ವ ಮುಂದಿಡುವ ಮೂಲಕ ಫಿಲಾಸಫಿ ಮತ್ತು ಸೂಫಿಸಂ ಪರಂಪರಾಗತ ಜ್ಞಾನಶಾಸ್ತ್ರಗಳಿಂದ ಸಂಪೂರ್ಣ ಭಿನ್ನವಾಗಿದೆ. ಖಂಡಿತವಾಗಿಯೂ, ವಿಶ್ವದ ಕುರಿತು ಕಲಿಯುವುದು ವಿದ್ಯಮಾನಗಳ ಬಗ್ಗೆ ಗ್ರಹಿಸುವ ಉದ್ದೇಶದಿಂದ. ಆದರೆ, ಗ್ರಹಿಕೆ ಎಂಬುವುದು ಆತ್ಮದ ಒಂದು ಗುಣವಾದ್ದರಿಂದ ಮೊದಲು ಅದನ್ನು ಅರಿಯುವುದು ಮುಖ್ಯವಾಗುತ್ತದೆ. ವೈಚಾರಿಕ ವಿಧಾನದ ವಕ್ತಾರರು ಅಲ್ಲಾಹನ ದೃಷ್ಟಾಂತಗಳ ಹಿನ್ನಲೆಯಲ್ಲಿ ಅರ್ಥಗಳನ್ನು ಕಂಡರಿಸುತ್ತಾರೆ. ಅಂದರೆ, ಜಗತ್ತಿನ ವಿದ್ಯಮಾನಗಳೆಲ್ಲ ನೈಜ ಮೂಲಾರ್ಥಗಳೆಡೆಗೆ ಬೊಟ್ಟು ಮಾಡುತ್ತದೆ, ಈ ಮೂಲಾರ್ಥಗಳು ಆತ್ಮವನ್ನು ಅರಿಯುವ ಮೂಲಕ ಮಾತ್ರವಾಗಿದೆ ಪ್ರಾಪ್ತವಾಗುವುದು.

ಸ್ಥೂಲನೋಟದಲ್ಲಿ ಬೌದ್ಧಿಕ ಪರಂಪರೆಯನ್ನು ವಿಶ್ಲೇಷಿಸುವಾಗ, ಆಧುನಿಕ ವಿಜ್ಞಾನಗಳಿಗೆ ಅತಿಮುಖ್ಯವಾಗಿರುವ ವ್ಯಕ್ತಿ (Subject) ಮತ್ತು ವಸ್ತು (Object) ಗಳ ನಡುವಿನ ವ್ಯತ್ಯಾಸ ಕಾಣುವಿಕೆಯನ್ನು ಅದು ಒಪ್ಪುವುದಿಲ್ಲವೆಂದು ನಿಚ್ಚಳವಾಗುತ್ತದೆ. ನಾಲ್ಕು ಮೂಲ ವಿಷಯಗಳನ್ನಾಗಿದೆ ಪ್ರಸ್ತುತ ಪರಂಪರೆ ಗಣನೆಗೆ ತೆಗೆದುಕೊಂಡಿರುವುದು; ದೇವ, ವಿಶ್ವ, ಮನುಷ್ಯಾತ್ಮ ಮತ್ತು ಅಂತರ್ವ್ಯಕ್ತೀಯ ಸಂಬಂಧಗಳು. ಮೊದಲ ಮೂರು ಸಂಗತಿಗಳು ವಾಸ್ತವಿಕತೆಯ ಮೂಲಘಟಕಗಳಾಗಿವೆ ಮತ್ತು ಈ ಮೂರು ಸಂಗತಿಗಳಿಂದ ಸಿಕ್ಕಿದ ಒಳನೋಟಗಳನ್ನು ನಾಲ್ಕನೆಯದು ಮಾನವನ ಚಟುವಟಿಕೆಗಳಿಗೆ ಅನ್ವಯಗೊಳಿಸುತ್ತದೆ.ಈ ವಿಚಾರಗಳನ್ನು ಪರಂಪರಾಗತ ಜ್ಞಾನಗಳ ಅಧಿಕೃತ ಮೂಲಗಳಾದ ಖುರಾನ್‌ ಮತ್ತು ಹದೀಸ್‌ ನ ಮೂಲಕ ತಿಳಿಯಬಹುದು. ಆದರೆ, ಇವುಗಳ ಕುರಿತು ತನ್ನೊಳಗೇ ಅರಿತುಕೊಳ್ಳುವುದು ಹಾಗೂ ಆತ್ಮ ಸಾಕ್ಷಾತ್ಕಾರ ಪಡೆಯುವುದು ಬೇರೇನೇ. ಬೌದ್ಧಿಕ ಪರಂಪರೆಯಲ್ಲಿ ಪರಂಪರಾಗತ ಜ್ಞಾನ ಸಂಪ್ರದಾಯದ ಪಾತ್ರವೇನೆಂದರೆ, ಅದು ಸಾಧಕನು ಆತ್ಮ ಸಾಕ್ಷಾತ್ಕಾರಗೊಳಿಸಬೇಕಾದ ಸಂಗತಿಗಳೆಡೆಗೆ ಮಾರ್ಗಸೂಚಕಗಳನ್ನು ಒದಗಿಸುತ್ತದೆ.

ಪ್ರಾಯಶಃ ಪರಂಪರಾಗತ ಮತ್ತು ಬೌದ್ಧಿಕ ಜ್ಞಾನದ ವ್ಯತ್ಯಾಸ ಮನಗಾಣಲು ಸೂಕ್ತ ಮಾರ್ಗ ಯಾವುದೆಂದರೆ, ಜ್ಞಾನ ಸಂಪಾದನೆಯ ಮೂಲಭೂತ ಮಾರ್ಗಗಳನ್ನು ಸೂಚಿಸುವ ತಖ್ಲೀದ್‌ (ಅನುಕರಣೆ, ಅಧಿಕೃತಮೂಲಗಳನ್ನು ಒಪ್ಪುವುದು) ಮತ್ತು ತಹ್ಖೀಖ್‌ (ದೃಢಪಡಿಸುವಿಕೆ, ಆತ್ಮಸಾಕ್ಷಾತ್ಕಾರ) ಎಂಬೀ ಸಂಜ್ಞೆಗಳನ್ನು ಅರ್ಥೈಸುವುದು. ಯಾವುದೇ ಧರ್ಮ, ಸಮಾಜ ಅಥವಾ ಒಕ್ಕೂಟದಲ್ಲಿ ಸೇರಲು ಇಚ್ಛಿಸುವ ಒಬ್ಬನಿಗೆ, ಮೊದಲೇ ಅದರಲ್ಲಿ ಸದಸ್ಯರಾಗಿರುವವರಿಂದ ಅನೇಕ ವಿಚಾರಗಳನ್ನು ಕಲಿಯಬೇಕಾಗುತ್ತದೆ ಮತ್ತು ಪ್ರಸ್ತುತ ಕಲಿಕೆ ʼಅನುಕರಣೆʼ ಎಂಬ ವಿಧಾನದ ಮೂಲಕ ಮಾತ್ರ ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಕಾನೂನು, ಆಚಾರಗಳು ಮುಂತಾಗಿ ಎಲ್ಲವನ್ನೂ ನಾವು ಕಲಿಯುವುದು ಅನುಕರಣೆಯಿಂದಲೇ ಆಗಿದೆ. ಇಸ್ಲಾಮಿನಲ್ಲಿ ಇಂತಹ ಪರಂರಪರಾಗತ ಜ್ಞಾನಗಳ ಸಂರಕ್ಷಣೆ ಮಾಡುವವರನ್ನು ʼಉಲಮಾʼ ಅಥವಾ ಪರಂಪರೆಯ ವಕ್ತಾರರೆಂದು ಕರೆಯಲಾಗುತ್ತದೆ.

ಪರಂರಾಗತ ಜ್ಞಾನದಲ್ಲಿ ʼಏಕೆʼ ಎಂಬ ಪ್ರಶ್ನೆಗೆ ಜಾಗವೇ ಇಲ್ಲ. ಇಂತ ಇಂತ ನಂಬಿಕೆ ತಾಳುವುದೇಕೆ ಅಥವಾ ಇಂತಹ ಆಚಾರಗಳನ್ನು ಮಾಡುವುದೇಕೆ ಎಂದು ಓರ್ವ ಉಲಮಾರನ್ನು ಪ್ರಶ್ನಿಸಿದರೆ, ಸರಳ ಉತ್ತರ ʼ ದೇವರು ಹಾಗೆ ಹೇಳಿದ್ದಾನೆʼ ಎಂದಾಗಿರುತ್ತದೆ. ಅಂದರೆ, ಖುರಾನ್‌ ಮತ್ತು ಹದೀಸಿನ ಅಧಿಕೃತತೆಯ ಮೇಲೆ ಅವುಗಳನ್ನು ಅಂಗೀಕರಿಸಲಾಗಿದೆ ಎಂದರ್ಥ. ಹೀಗೆಯೇ, ಪೋಷಕರು ತಮ್ಮ ಮಕ್ಕಳ ಭಾಷೆಯನ್ನು ಅಧಿಕೃತ ಮೂಲಗಳ ಆಧಾರದಲ್ಲಿ ತಿದ್ದುಪಡಿ ಮಾಡುತ್ತಿರುತ್ತಾರೆ.

ಬೌದ್ಧಿಕ ವಿಜ್ಞಾನ ಸಂಪೂರ್ಣ ಭಿನ್ನವಾಗಿದೆ. ಒಬ್ಬ ಅದನ್ನು ವಾಚಿಕ ಮೂಲಗಳ ಆಧಾರದಲ್ಲಿ ಸ್ವೀಕರಿಸುವುದಾದರೆ, ಅದನ್ನು ಅರ್ಥ ಮಾಡಿಲ್ಲ ಎಂದರ್ಥ. ಅಧಿಕೃತ ಮೌಖಿಕ ಮೂಲಗಳ ಮೇಲೆ ಆಧಾರಿತಗೊಂಡ ವಿಜ್ಞಾನವಲ್ಲ ಗಣಿತವೆಂಬುದು. ಹೊರತು, ಪ್ರಜ್ಞಾಪೂರ್ವಕವಾಗಿ ತನ್ನೊಳಗೆ ಅದನ್ನು ಕಂಡರಿಸಿಕೊಳ್ಳಬೇಕಾಗುತ್ತದೆ. ಗಣಿತವನ್ನು ಕಲಿಯುವಾಗ ಅಧ್ಯಾಪಕನ್ನು ಅನುಕರಿಸುವ ಬದಲು ʼಏಕೆʼ ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳುತ್ತಾರೆ. ಪ್ರಾರಂಭದ ಹಂತದಲ್ಲಿರುವ ವಿದ್ಯಾರ್ಥಿಗೆ ಮಾತ್ರ ಬೌದ್ಧಿಕ ಜ್ಞಾನಗಳಲ್ಲಿ ಅನುಕರಣೆ ಮಾಡಬಹುದು. ಪಾರಂಪರಿಕ ಜ್ಞಾನಗಳಲ್ಲಿ ಖುರಾನ್‌ ಮತ್ತು ಹದೀಸನ್ನು ಅನುಕರಿಸುವುದೇ ಸರಿಯಾದ ದಾರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡು ತರದ ಜ್ಞಾನಗಳಿವೆ, ಎರಡಕ್ಕೂ ಅದರದ್ದೇ ವಿಧಾನಗಳಿವೆ. ತಖ್ಲೀದ್‌ ಅಥವಾ ಅನುಕರಣೆ ಪಾರಂಪರಿಕ ಜ್ಞಾನಕ್ಕೆ ಸೂಕ್ತವಾಗಿದೆ ಮತ್ತು ಬೌದ್ಧಿಕ ಜ್ಞಾನಕ್ಕೆ ತಹ್ಖೀಖ್‌ ಯಾ ಆತ್ಮ ಸಾಕ್ಷಾತ್ಕಾರ ಎಂಬ ವಿಧಾನವನ್ನು ಅನ್ವಯಗೊಳಿಸಬೇಕಾಗಿದೆ.

ʼತಖ್ಲೀದ್‌ʼ ಎಂಬ ಪರಿಭಾಷೆ ಹಲವಾರು ನವ ಮುಸ್ಲಿಂ ಚಿಂತಕರ ಕಂಗೆಡಿಸಿದೆ. ಮುಸ್ಲಿಂ ಸಮಾಜದ ದೌರ್ಬಲ್ಯವಾಗಿ ಅದನ್ನು ಕಾಣುವವರಿದ್ದಾರೆ. ಇವರು ಹೇಳುವಂತ ತಖ್ಲೀದ್‌, ನಾನು ವಿವರಿಸಿದ ತಹ್ಖೀಖ್‌ ಗೆ ವಿರುದ್ದವಾಗಿ ನಿಲ್ಲುವ ಸಂಜ್ಞೆಯಲ್ಲ, ಹೊರತು ಇಜ್ತಿಹಾದ್‌ ನ ಎದುರಲ್ಲಿ ಬಳಸುವ ಪದವಾಗಿದೆ. ಫಿಕ್ಹ್‌ ಎಂಬುವುದು ಪರಂರಾಗತ ಶಾಸ್ತ್ರಗಳ ಗುಂಪಿನಲ್ಲಿ ಸೇರುವುದರಿಂದ, ಅದರಲ್ಲಿ ಅನನ್ಯ ನಿಪುಣತೆ ಪಡೆದ ಮುಜ್ತಹಿದ್‌ (ಕರ್ಮಶಾಸ್ತ್ರ ಸಂಶೋಧಕ) ಗಳನ್ನು ಅನುಕರಣೆ ಮಾಡುವುದು ಅನಿವಾರ್ಯವಾಗುತ್ತದೆ. ನಾನು ಪ್ರಸ್ತಾಪಿಸಿದ್ದು, ಬೌದ್ಧಿಕ ವಿಜ್ಞಾನಗಳಲ್ಲಿ ತಖ್ಲೀದ್‌ ಸಲ್ಲದು ಎಂದಾಗಿದೆ. ಇವೆರಡರ ನಡುವಿನ ಸ್ಪಷ್ಟ ವ್ಯತ್ಯಾಸ ತಿಳಿದಿರುವುದರಿಂದಲೇ, ಮುಸ್ಲಿಂ ವಿದ್ವಾಂಸರು ದೇವರಲ್ಲಿರುವ ನಂಬಿಕೆಗೆ ವೈಚಾರಿಕ ಅಡಿಪಾಯ ಅಗತ್ಯ ಎಂಬ ನಿಲುವನ್ನು ತಾಳಿದ್ದಾರೆ. ಅಂದರೆ, ಪೋಷಕರು ಹೇಳಿದ ಕಾರಣದಿಂದ ದೇವರಲ್ಲಿ ನಂಬಿದ್ದೇನೆ ಎಂದು ಒಬ್ಬಾತ ಹೇಳುವುದಾದರೆ ಆತನ ವಿಶ್ವಾಸ ಸರಿಯಾಗಿಲ್ಲ ಎಂದಾಗಿದೆ ವಿದ್ವಾಂಸರ ಅಂಬೋಣ. ಆತನ ನಂಬಿಕೆಗೆ ಸಾಕ್ಷ್ಯ ಪ್ರಮಾಣಗಳು ಬೇಕಾಗುತ್ತದೆ.

ಉಭಯ ಜ್ಞಾನಧಾರೆಗಳ ನಡುವೆ ಸೈದ್ಧಾಂತಿಕ ನೆಲೆಗಟ್ಟಲ್ಲಿ ವಿವೇಚನೆ ಸಾಧ್ಯವಾದರೂ, ಪ್ರಾಯೋಗಿಕತೆಯ ನೆಲೆಗೆ ಬರುವಾಗ ಎರಡೂ ಪರಸ್ಪರ ತಳುಕು ಹಾಕಿಕೊಂಡಿರುವುದನ್ನು ಮನಗಾಣಬಹುದು. ಇತಿಹಾಸದುದ್ದಕ್ಕೂ ಬೌದ್ಧಿಕ ವಿಜ್ಞಾನ, ಪಾರಂಪರಿಕ ವಿಜ್ಞಾನವನ್ನು ಆತುಕೊಂಡೇ ಬೆಳೆದಿದೆ. ಧರ್ಮಗ್ರಂಥಗಳ ಸಮಂಜಸ ಗ್ರಹಿಕೆಗೆ ವೈಚಾರಿಕ ವಿಧಾನಗಳನ್ನು ಅವಲಂಬಿಸಲಾಗಿದೆ. ಯಾವುದೇ ಧರ್ಮ ಕಾಲದ ಪ್ರವಾಹದಲ್ಲಿ ಅಚಂಚಲವಾಗಿ ಉಳಿಯಬೇಕಾದರೆ ಪಾರಂಪರಿಕ ಹಾಗೂ ಬೌದ್ಧಿಕ ಎರಡೂ ಬಗೆಯ ವಿಜ್ಞಾನ ಅತ್ಯಗತ್ಯ. ಆದರೆ, ಎರಡೂ ಈಗ ಉಳಿವಿನ ಅಂಚಿನಲ್ಲಿದೆ ಎಂಬುವುದು ಖೇದಕರ.

ಇಲ್ಲಿ ಮಹತ್ವದ ಸಂಗತಿಯೇನೆಂದರೆ, ಸಕ್ರಿಯವಾದ ಬೌದ್ಧಿಕ ಪರಂಪರೆಯಿಲ್ಲದೆ ಧರ್ಮಕ್ಕೆ ಉಳಿಗಾಲವಿಲ್ಲ. ಜನರು ಏಕೆ ಆಲೋಚಿಸುತ್ತಾರೆ? ಯೋಚನೆ ರಹಿತವಾಗಿ ಏಕೆ ಏನನ್ನೂ ಒಪ್ಪುವುದಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಮುಂದಿಟ್ಟರೆ ಈ ವಿಚಾರ ಸ್ಪಷ್ಟವಾಗುತ್ತದೆ. ಇಸ್ಲಾಮೀ ದೃಷ್ಟಿಕೋನದಲ್ಲಿ ಉತ್ತರ ಬಹಳ ಸರಳ. ಮನುಷ್ಯರು ವಿವೇಕ ಹೊಂದಿದ ಯೋಚಿಸುವ ಜೀವಿಗಳಾದ್ದರಿಂದ ಖಂಡಿತವಾಗಿಯೂ ಚಿಂತನೆ ಮಾಡಬೇಕಾಗಿದೆ. ದೇವರು ಬುದ್ದಿ ಮತ್ತು ಮನಸ್ಸನ್ನು ನೀಡಿರುವಾಗಿ ಜನರಿಗೆ ಯೋಚಿಸದೆ ಉಪಾಯವಿಲ್ಲ. ಜತೆಗೆ, ಖುರ್‌ ಆನಿನ ಉದ್ದಕ್ಕೂ ಹಲವಾರು ಸೂಕ್ತಗಳಲ್ಲಿ ಚಿಂತನೆ ನಡೆಸಲು ಮತ್ತು ತಮ್ಮ ವಿವೇಕಶಕ್ತಿಯನ್ನು ಬಳಸಲು ಜನರಿಗೆ ಆಜ್ಞಾಪಿಸಲಾಗಿದೆ.

ಇಸ್ಲಾಮೀ ಚಿಂತನೆಗೆ ಕೆಲವೊಂದು ಮೂಲಭೂತ ತತ್ವಗಳನ್ನು ಪೂರ್ವಭಾವಿಯಾಗಿ ಪರಿಗಣಿಸಲಾಗಿದೆ. ಆ ಪೈಕಿ ʼತೌಹೀದ್‌ʼ (ದೇವರ ಏಕತ್ವದ ತತ್ವ) ಮುಂಚೂಣಿಯಲ್ಲಿ ನಿಲ್ಲುತ್ತದೆ. ಸಮಕಾಲೀನ ಪರಿಸ್ಥಿತಿಯನ್ನು ಪ್ರಸ್ತುತ ತತ್ವದ ಮೇಲೆ ಚಿಂತನೆ ನಡೆಸುವಾಗ, ಆಧುನಿಕತೆಯು ಎಷ್ಟೊಂದು ಅಪಾಯಗಳನ್ನು ಒಡ್ಡುತ್ತಿವೆಯೆಂದು ಮನಗಾಣಬಹುದು. ತೌಹೀದಿಗೆ ಸಂಪೂರ್ಣ ವಿರುದ್ಧವಾದ ಶಿರ್ಕ್‌ (ದೇವತ್ವದಲ್ಲಿ ಭಾಗಿದಾರಿಕೆ) ನ ಗುಣಗಳನ್ನಾಗಿದೆ ಆಧುನಿಕತೆ ಪ್ರಚುರಪಡಿಸುತ್ತಿರುವುದು. ಶಿರ್ಕ್‌ ಎಂಬ ಪದ ಬಹಳ ಗಂಭಿರವಾದ್ದರಿಂದ, ಪ್ರತಿಯಾಗಿ ʼತಕ್ಸೀರ್‌ʼ ಎಂಬ ಪದವನ್ನು ಇಲ್ಲಿ ಬಳಸುತ್ತೇನೆ. ತೌಹೀದ್‌ ಎಂಬುವುದು ದೇವರು ಏಕನೆಂದು ದೃಢಪಡಿಸುವುದಾದರೆ, ತಕ್ಸೀರ್‌ (ಶಿರ್ಕ್‌ ಎನ್ನುವುದೇ ಸೂಕ್ತ ಪದ, ಸದ್ಯ ತಕ್ಸೀರ್‌ ಎಂದು ಬಳಸುತ್ತೇನೆ) ಎಂದರೆ ಅನೇಕ ದೇವರಿದ್ದಾರೆಂದು ದೃಢೀಕರಿಸುವುದು.

ನವಯುಗದ ಚಿಂತನೆ ಒಂದು ಕೇಂದ್ರ, ಒಂದು ದಿಕ್ಕು, ಒಂದು ಉದ್ದೇಶ ಇವೆಲ್ಲವನ್ನು ಕಳಕೊಂಡಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ, ʼಏಕದೇವʼ ನ ನಷ್ಟವಾಗಿದೆ. ದೇವರು ಬದುಕಿಗೊಂದು ಅರ್ಥ ನೀಡುವ, ಕಾರ್ಯಗಳಿಗೆ ಕೇಂದ್ರೀಕರಣ ಒದಗಿಸುವ ಅಸ್ತಿತ್ವ. ಆಧುನಿಕ ಜಗತ್ತು ಅರ್ಥಗಳನ್ನು, ದಿಕ್ಕುಗಳನ್ನು ಬಹು ʼದೇವರುʼಗಳಿಂದ ಪಡೆಯುತ್ತಿದೆ. ನಿರಂತರ ಸಾಗುತ್ತಿರುವ ತಕ್ಸೀರನ್ನು ಬಿರುಸುಗೊಳಿಸುವ ಕೈಂಕರ್ಯದಿಂದ, ದೇವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ಅವರವರಿಗೆ ಅಪ್ಯಾಯಮಾನವಾದ ದೇವರನ್ನು ಪೂಜಿಸುತ್ತಿದ್ದಾರೆ.

ತಕ್ಸೀರ್‌ ನ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಇತಿಹಾಸದಲ್ಲಿ ಜರುಗಿದ ಇಸ್ಲಾಮೀ ಮತ್ತು ಐರೋಪ್ಯ ಚಿಂತನೆಗಳ ಗತಿಸ್ಥಿತಿಯನ್ನು ತುಲನೆ ಮಾಡಿ ನೋಡಿದರಾಯಿತು. ಇತ್ತೀಚಿನ ವರೆಗೂ, ಇಸ್ಲಾಮೀ ಚಿಂತನೆ , ಪರಸ್ಪರ ಸಾಮರಸ್ಯ, ಏಕೀಕರಣ, ಸಮನ್ವಯ, ಐಕಮತ್ಯ ಎಂಬಿತ್ಯಾದಿ ಗುಣಗಳಿಂದ ಕೂಡಿತ್ತು. ಹಲವಾರು ಜ್ಞಾನಸಂಹಿತೆಗಳ ಪರಿಣತರಾಗಿದ್ದರು ಮುಸ್ಲಿಂ ವಿದ್ವಾಂಸರು. ಆದರೆ,ಅವೆಲ್ಲವನ್ನು ತೌಹೀದ್‌ ಎಂಬ ಏಕಮರದ ವಿಭಿನ್ನ ಟಿಸಿಲುಗಳಾಗಿ ಕಂಡಿದ್ದರು. ಖಗೋಳಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ನಡುವೆ, ಭೌತಶಾಸ್ತ್ರ ಮತ್ತು ನೀತಿಶಾಸ್ತ್ರದ ನಡುವೆ, ಗಣಿತ ಮತ್ತು ಕಾನೂನು ಸಂಹಿತೆಯ ನಡುವೆ ಹೀಗೆ ಯಾವುದೇ ಶಾಸ್ತ್ರಗಳ ನಡುವೆ ಸಂಘರ್ಷಗಳಿರಲಿಲ್ಲ. ಒಂದೇ ತತ್ವದ ಅಡಿಯಲ್ಲಿ ಎಲ್ಲವೂ ಕಾರ್ಯಾಚರಿಸುತ್ತಿದ್ದವು.

ತದ್ವಿರುದ್ಧವಾದ ಧೋರಣೆಯಾಗಿದೆ ಐರೋಪ್ಯ ನಾಗರಿಕತೆಯಲ್ಲಿ ಕಂಡುಬರುವುದು.ಮಧ್ಯಕಾಲ ಯುರೋಪಿನಲ್ಲಿ ಏಕೀಕೃತ ಚಿಂತನಾ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲ್ಪಟ್ಟಿದ್ದರೂ, ತರುವಾಯ ಅದು ಅಳಿದು ಹೋಯಿತು. ಈಗಿನ ದಿನಗಳಲ್ಲಿ, ಪ್ರತಿಯೊಬ್ಬರೂ ಕೆಲವು ಸೂಕ್ಷ್ಮ ಅಧ್ಯಯನ ಕ್ಷೇತ್ರದಲ್ಲಿ ನಿಪುಣರಾಗಿತ್ತಾರೆ, ಆ ಮೂಲಕ ಮಾಹಿತಿಗಳು ಪ್ರವಾಹದೋಪಾದಿಯಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ, ಪರಸ್ಪರ ಅರ್ಥೈಸುವಿಕೆಯ ರಾಹಿತ್ಯ ಮತ್ತು ಸಾರ್ವತ್ರಿಕವಾದ ಅಸಾಮರಸ್ಯ ಎಂಬೀ ಸಮಸ್ಯೆಗಳು ಸಾರಸ್ವತ ಲೋಕವನ್ನು ಅತಿಯಾಗಿ ಕಾಡುತ್ತಿದೆ. ಒಂದು ಏಕಗ್ರಹಿಕಾ ಪ್ರವೃತ್ತಿಯನ್ನು ಸ್ಥಾಪಿಸುವುದು ಅಸಾಧ್ಯವಾಗಿದೆ.

ಅಸಂಖ್ಯೆ ದೇವರುಗಳಾಗಿದೆ ತಕ್ಸೀರ್‌ ನ ಜಗತ್ತಿನಲ್ಲಿರುವುದು. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ, ಸಮಕಾಲೀನ ಜಗತ್ತನ್ನು ನಿರ್ಣಯಿಸುವ ವಿಚಾರಧಾರೆಗಳನ್ನು ಹೇಳುವುದು ಸೂಕ್ತವೆನಿಸುತ್ತದೆ: ಸ್ವಾತಂತ್ಯ್ರ, ಲಿಂಗ ಸಮಾನತೆ, ವಿಕಾಸವಾದ, ಪ್ರಗತಿ, ವಿಜ್ಞಾನ, ರಾಷ್ಟೀಯತೆ, ಸಮಾಜವಾದ, ಭೌತವಾದ ಇತ್ಯಾದಿ. ಇನ್ನು ಗುರುತಿಸಲಾಗದ ಕೆಲವೊಂದಿದೆ. ಅವು ಅತ್ಯಂತ ಅಪಾಯಕಾರಿ ದೇವಗಳು.ನಮ್ಮೆಡೆಯಲ್ಲಿ ನಿರಂತರ ಗಿರಿಗೀಟು ಹೊಡೆಯುವ ನೀರಸ ಪದಗಳಲ್ಲದೆ ಬೇರೇನೂ ಅಲ್ಲ ಅವು: ಅಭಿವೃದ್ಧಿ, ಮಾಹಿತಿ, ಉತ್ಪಾದನೆ, ಕ್ಷೇಮ, ಯೋಜನೆ, ಅನುಭೋಗ, ಸಂಪನ್ಮೂಲ, ವ್ಯವಸ್ಥೆ, ಸೇವೆ ಇತ್ಯಾದಿ.

ಪ್ರಸ್ತುತ ಪದಗಳು ದೇವರ ಪಾತ್ರವನ್ನು ವಹಿಸುತ್ತಿದೆಯೆಂದು ನಂಬಲಾಗದವರು, Uwe Poerksen ರವರ ʼPlastic Wordsʼ ಪುಸ್ತಕವನ್ನೊಮ್ಮೆ ಓದುವುದು ಒಳ್ಳೆಯದು. ಪಾರ್ಕಸನ್‌ ವಿವರಣೆ ಪ್ರಕಾರ, ಎರಡನೇ ಜಾಗತಿಕ ಯುದ್ಧದ ಬಳಿಕ ಪ್ರಾಬಲ್ಯಕ್ಕೆ ಬಂದ ಆಧುನಿಕ ಭಾಷಾ ಸಂಪ್ರದಾಯ, ಜಗತ್ತು ಇಷ್ಟರವರೆಗೆ ಕಂಡಿಲ್ಲದ ಅತ್ಯಂತ ವಿನಾಶಕಾರಕ ʼನಿರಂಕುಶ ಪ್ರಭುʼ ಪದಗಳನ್ನಾಗಿದೆ ಸೃಷ್ಟಿಸಿರುವುದು. ಪಾರ್ಕಸನ್‌ ಥಿಯಾಲಜಿಯಲ್ಲಿ ಆಸಕ್ತಿಯಿಲ್ಲದ ಕೇವಲ ಭಾಷಾತಜ್ಞನಾದ್ದರಿಂದ ಅವುಗಳನ್ನು ʼದೇವರುʼ ಎನ್ನದೆ, “ನಿರಂಕುಶ ಪ್ರಭುಗಳುʼ ಎಂದು ಕರೆದಿದ್ದಾರೆ. ಒಂದರ್ಥದಲ್ಲಿ ಇದು ಖುರಾನಿನ ʼಜಬ್ಬಾರ್‌ʼ ಎಂಬ ದೇವನಾಮದ ಸರಿಯಾದ ಅನುವಾದ. ಈ ನಾಮ ದೇವರಿಗೆ ಅನ್ವಯಿಸುವಾಗ ಅದರರ್ಥ ಸೃಷ್ಟಿಗಳ ಮೇಲೆ ಆತನಿಗೆ ಸಂಪೂರ್ಣ ನಿಯಂತ್ರಣಾಧಿಕಾರವಿದೆ ಎಂದಾಗುತ್ತದೆ. ನಿರಂಕುಶ ಪ್ರಭುತ್ವ ಅಥವಾ ಪರಮಾಧಿಕಾರ ಸೃಷ್ಟಿಗಳಿಗೆ ಆರೋಪಿಸುವಾಗ, ಅದು ದೇವರ ಪರಮಶಕ್ತಿಯನ್ನು ಪ್ರಶ್ನಿಸಿದಂತಾಗುತ್ತದೆ. ಈ ಪ್ಲಾಸ್ಟಿಕ್‌ ಪದಗಳು ಕೆಲಕಾಲ ಜನರನ್ನಾಳುತ್ತಾ ಬೇರೆ ಪದಗಳಿಗೆ ವೇದಿಕೆ ಬಿಟ್ಟು ಕೊಟ್ಟು ಮಾಯವಾಗುತ್ತದೆ. ವ್ಯಕ್ತವಾದ ಒಂದು ಡೆಫಿನಿಷನ್‌ ಹೇಳಲು ಸಾಧ್ಯವಾಗದಿದ್ದರೂ ಇವುಗಳ ಪ್ರಭಾವ ಅಪಾರ. ಈ ಪದಗಳನ್ನು ಪೂಜಿಸಲು ಜನರು ಹೆಮ್ಮೆಪಡುತ್ತಾರೆ ಮತ್ತು ಇವುಗಳ ಉರುಹೊಡೆಯವಿಕೆ ಜ್ಞಾನೋದಯದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಗುಪ್ತ ಅಪಾಯಗಳನ್ನು ಮನಗಾಣಲು ನಮಗೆ ಇಸ್ಲಾಮೀ ವೈಚಾರಿಕ ಚಿಂತನೆ ಉಪಯುಕ್ತವಾಗುತ್ತದೆ.

ವಿಲ್ಯಂ ಸಿ ಚಿಟ್ಟಿಕ್‌
ಭಾಷಾಂತರ: ಎಂ.ಎಂ.ಸುರೈಜಿ

ಮಕ್ಕಾದಿಂದ ಮಾಲ್ಕಂ ಎಕ್ಸ್‌ ಬರೆದ ಪತ್ರ

ಭೂಮಿಯ ಮೇಲಿನ ಅತ್ಯಂತ ಪವಿತ್ರ ನಗರವೂ, ಮುಸ್ಲಿಮೇತರರಿಗೆ ತಮ್ಮ ಕಣ್ಣಿನಿಂದಲೂ ಅನುಭವಿಸಲಾಗದ, ಪರಿಶುದ್ಧ ಮಕ್ಕಾ ನಗರದಲ್ಲಿ ನಾನು ಈಗಷ್ಟೇ ನನ್ನ ಹಜ್‌ ಯಾತ್ರೆ ಮುಗಿಸಿದ್ದೇನೆ. ಪ್ರತಿಯೊಬ್ಬ ಮುಸ್ಲಿಮನ ಬದುಕಿನಲ್ಲೂ ಈ ಪುಣ್ಯ ಯಾತ್ರೆ ಅತ್ಯಂತ ಪ್ರಮುಖವಾದ ಘಟನೆಯಾಗಿರುತ್ತದೆ. ಇಲ್ಲಿಗೀಗ 2,26,000 ಕ್ಕೂ ಹೆಚ್ಚು ಮಂದಿ ಅರೇಬಿಯಾದ ಹೊರಗಿನಿಂದ ಬಂದು ಸೇರಿದ್ದಾರೆ. ಅವರಲ್ಲಿ ಟರ್ಕಿಯಿಂದ ಬಂದವರೇ ಹೆಚ್ಚು. ಟರ್ಕಿಯು ಇಸ್ಲಾಮಿಂದ ದೂರ ಸರಿಯುತ್ತಿದೆ ಎಂಬ ಪಾಶ್ಚಾತ್ಯರ ಪ್ರಚಾರವನ್ನು ಅಲ್ಲಗೆಳೆಯುವಂತೆ ಸುಮಾರು 600 ಕ್ಕೂ ಹೆಚ್ಚು ಬಸ್ಸುಗಳಲ್ಲಿ ಬಹುತೇಕ 50,000 ಮಂದಿ ಟರ್ಕಿಯಿಂದ ಬಂದವರಿದ್ದಾರೆ.

ಅಮೇರಿಕಾದರಿಂದ ಬಂದು ಮಕ್ಕಾದಲ್ಲಿ ಹಜ್‌ ನಿರ್ವಹಿಸಿದ ಇಬ್ಬರನ್ನಷ್ಟೇ ನನಗೆ ಗೊತ್ತು, ಆ ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡ ವೆಸ್ಟ್‌ ಇಂಡಿಯನ್ನರು. ತಮ್ಮ ಇಬ್ಬರು ಪುತ್ರರು ಹಾಗೂ ಕೆಲವು ಅನುಯಾಯಿಗಳೊಂದಿಗೆ ಎಲಿಜಾ಼ ಮುಹಮ್ಮದ್‌ ಮಕ್ಕಾಗೆ ಭೇಟಿ ನೀಡಿದ್ದರು. ಅವರ ಭೇಟಿಯು ಹಜ್‌ ಕಾಲಘಟ್ಟದಲ್ಲಿ ಅಲ್ಲವಾದ್ದರಿಂದ ಅವರ ತೀರ್ಥಯಾತ್ರೆಯನ್ನು ʼಉಮ್ರಾʼ ಎಂದು ಪರಿಗಣಿಸಲಾಗುತ್ತದೆ. ʼಉಮ್ರಾʼಗಿಂತಲೂ ಹಜ್‌ ಯಾತ್ರೆಗೆ ಹೆಚ್ಚಿನ ಮಹತ್ವವಿದೆ. ಅದಾಗ್ಯೂ, ಮುಸ್ಲಿಂ ಜಗತ್ತಿನಲ್ಲಿ ಉಮ್ರಾವನ್ನು ಕೂಡಾ ಬಹುದೊಡ್ಡ ಅನುಗ್ರಹವೆಂದೇ ಕಾಣಲಾಗುತ್ತದೆ. 

ಇದುವರೆಗೆ ಕನಿಷ್ಟ 10 ಮಂದಿ ಅಮೇರಿಕನ್ನರಾದರೂ ಮಕ್ಕಾ ನಗರಕ್ಕೆ ಭೇಟಿ ನೀಡಿರುವ ಬಗ್ಗೆ ನನಗೆ ಬಲವಾದ ಅನುಮಾನವಿದೆ. ಹಾಗೂ, ನಿಜವಾದ ಹಜ್‌ ನಿರ್ವಹಿಸಿದ ಮೊದಲ ಅಮೇರಿಕನ್-ನೀಗ್ರೋ ನಾನೇ ಇರಬಹುದು.  ನಾನಿದನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ, ಬದಲಾಗಿ ಇದು ಎಷ್ಟೊಂದು ಅನುಗ್ರಹೀತ ಹಾಗೂ ಅದ್ಭುತ ಸಾಧನೆಯೆಂದು ಹೇಳಲು, ಮತ್ತು ನೀವು ಅದರ ಆಧಾರದ ಮೇಲೆ ಇದನ್ನು ಪರಿಗಣಿಸಲೆಂಬ ಕಾರಣಕ್ಕೆ ಮಾತ್ರ ಹೇಳುತ್ತಿದ್ದೇನೆ. 

ಈ ಪುಣ್ಯ ನಗರದ ಯಾತ್ರೆಯು ನನಗೆ ನೀಡಿದ ಅನನ್ಯ ಅನುಭವವು ನನ್ನ ಹುಚ್ಚು ಬಯಕೆಗಳನ್ನು ಮೀರಿದ ಹಲವಾರು ಅನಿರೀಕ್ಷಿತ ಅನುಗ್ರಹಗಳನ್ನು ಪಡೆದ ಒಂದು ದಿವ್ಯ ಅನುಭೂತಿ.

 ನಾನು ಜಿದ್ದಾಗೆ ಆಗಮಿಸಿದ ಕೆಲವೇ ಘಳಿಗೆಯಲ್ಲಿ ಘನತೆವೆತ್ತ ಕಿರೀಟಧಾರಿ ಯುವರಾಜ ಫೈಸಲ್‌ ರ ಸಂದೇಶದೊಂದಿಗೆ ಅವರ ಪುತ್ರ, ರಾಜಕುಮಾರ ಮುಹಮ್ಮದ್‌ ಫೈಸಲ್‌ ನನ್ನನ್ನು ಭೇಟಿಯಾದರು. ಅವರ ವಿಶೇಷ ಗಣ್ಯ ಅತಿಥಿಯಾಗಿ ನಾನು ಆತಿಥ್ಯ ಸ್ವೀಕರಿಸಬೇಕೆಂಬುದು ರಾಜ ಫೈಸಲ್ ಅವರ ಅಭಿಲಾಷೆಯಾಗಿತ್ತು. ಅದಾದ ಬಳಿಕ ಜರುಗಿದ್ದನ್ನು ವರ್ಣಿಸಲು ಹಲವು ಗ್ರಂಥಗಳೇ ಬೇಕಾದೀತು. ಅದರ ಬಳಿಕ ನನಗೆ ಸಿಕ್ಕ ಆತಿಥ್ಯ ಅದ್ಭುತವಾಗಿತ್ತು. ನನಗಾಗಿಯೇ ಖಾಸಗಿ ಕಾರು, ಓರ್ವ ಚಾಲಕ, ಧಾರ್ಮಿಕ ಮಾರ್ಗದರ್ಶಿ ಹಾಗೂ ಅನೇಕ ಸಹಾಯಕರನ್ನು ನೇಮಿಸಲಾಯಿತು. ನನ್ನನ್ನು ಅತೀ ಗೌರವಾದರಗಳಿಂದ ಕಾಣಲಾಯಿತು. ಅದುವರೆಗೂ ನಾನು ಅಷ್ಟೊಂದು ಮರ್ಯಾದೆ ಎಂದೂ ಪಡೆದಿರಲಿಲ್ಲ. ಈ ಅತಿಯಾದ ಆದರಕ್ಕೆ ನಾನು ಅನರ್ಹ ಹಾಗೂ ವಿನಮ್ರ ಭಾವನೆಯನ್ನು ನನ್ನಲ್ಲಿ ಉಂಟುಮಾಡಿತು. ಓರ್ವ ಅಮೇರಿಕನ್‌-ಕಪ್ಪು ಮನುಷ್ಯನಿಗೆ ಇಷ್ಟೊಂದು ಆದರವೇ? ಯಾರು ನಂಬಿಯಾರು ಇದನ್ನು? ಆದರೆ, ಮುಸ್ಲಿಂ ಜಗತ್ತಿನಲ್ಲಿ, ಒಬ್ಬ ಇಸ್ಲಾಮನ್ನು ಸತ್ಯವೆಂದು ಒಪ್ಪಿಕೊಂಡಾಗ ಕರಿಯನೋ-ಬಿಳಿಯನೋ ಎಂಬ ಎಲ್ಲ ವ್ಯತ್ಯಾಸವನ್ನೂ ತೊರೆಯುತ್ತಾನೆ. ಎಲ್ಲಾ ಮನುಷ್ಯರನ್ನು ಮನುಷ್ಯರೆಂದೇ ಇಸ್ಲಾಂ ಪರಿಗಣಿಸಿದೆ. ಅರೇಬಿಯಾದ ಜನ ದೇವನೊಬ್ಬನೇ ಎಂದು ವಿಶ್ವಾಸವಿಡುತ್ತಾರೆ, ಹಾಗೂ ಎಲ್ಲಾ ಮನುಷ್ಯರೂ ಒಂದೇ, ಎಲ್ಲಾ ಸಹೋದರ-ಸಹೋದರಿಯರೂ ಒಂದೇ ಮಾನವ ಕುಟುಂಬ ಎಂದು ನಂಬುತ್ತಾರೆ.

ನಾನು ಇಲ್ಲಿ ಅರೇಬಿಯಾದಲ್ಲಿ ನೋಡಿದಂತಹ ಪ್ರಾಮಾಣಿಕ ಆತಿಥ್ಯ ಮತ್ತು ನಿಜವಾದ ಸಹೋದರತ್ವದ ಅಭ್ಯಾಸವನ್ನು ನಾನು ಹಿಂದೆಂದೂ ಕಂಡಿಲ್ಲ. ವಾಸ್ತವದಲ್ಲಿ, ಈ ಪುಣ್ಯ ಹಜ್‌, ನಾನು ಈ ಹಿಂದೆ ಹೊಂದಿದ್ದ ಎಲ್ಲಾ ಆಲೋಚನೆಗಳ ಮಾದರಿಗಳನ್ನು, ಹಿಂದಿನ ಪೂರ್ವಾಗ್ರಹಗಳನ್ನು ಪಕ್ಕಕ್ಕೆ ಎತ್ತಿ ಎಸೆಯುವಂತೆ ಮಾಡಿದೆ. ನಾನೇನನ್ನೇ ನಂಬಲಿ, ಅದರಲ್ಲಿ ಧೃಡವಾದ ನಂಬಿಕೆ ಹೊಂದಿದ್ದರೂ,  ಯಾವತ್ತೂ ಮುಕ್ತ, ತೆರೆದ ಮನಸ್ಸನ್ನು ಇಡಲು ನಾನು ಶ್ರಮಿಸುತ್ತಿದ್ದರಿಂದ ಈ ವಾಸ್ತವಕ್ಕೆ ಒಗ್ಗಿಕೊಳ್ಳುವುದು ನನಗೆ ಕಷ್ಟವೆಂದು ಅನ್ನಿಸಲೇ ಇಲ್ಲ. ಆತ್ಯಂತಿಕ ಸತ್ಯದ ಕುರಿತ ಬೌದ್ಧಿಕ ಅನ್ವೇಷಣೆಯೊಂದಿಗೆ ಯಾರೊಂದಿಗೂ ಕೈಜೋಡಿಸಬೇಕಾದ ನಮ್ಯತೆಯನ್ನು (flexibility) ಪ್ರತಿಬಿಂಬಿಸಲು ಇದು ಖಂಡಿತಾ ಅಗತ್ಯವಾಗಿದೆ.

 ಭೂಮಿಯ ಎಲ್ಲಾ ಭಾಗದಿಂದ ಬಂದ, ಎಲ್ಲಾ ವರ್ಣಗಳ ಜನರು ಇಲ್ಲಿದ್ದಾರೆ. ಇಲ್ಲಿ (ಮಕ್ಕಾದಲ್ಲಿ) ಕಳೆಯುತ್ತಿರುವ ದಿನಗಳಲ್ಲಿ, ಹಜ್‌ ಕರ್ಮದ ರೀತಿ ರಿವಾಜುಗಳನ್ನು ಕಲಿಯುತ್ತಿರುವ ನಡುವೆ, ನಾನು ಎಲ್ಲರೊಂದಿಗೆ ಅದೇ ತಟ್ಟೆಯಲ್ಲಿ ಉಂಡಿದ್ದೇನೆ, ಅದೇ ಲೋಟದಲ್ಲಿ ಕುಡುದಿದ್ದೇನೆ. ರಾಜ, ಸೇವಕ, ಬಲ್ಲಿದ, ಬಿಳಿಯರಲ್ಲಿ ಬಿಳಿಯ, ಕಡು ನೀಲಿ ಕಣ್ಣವ, ಕಂದು ಕೂದಲಿನವರೊಂದಿಗೆ ಅದೇ ತಟ್ಟೆಯಲ್ಲಿ ಉಂಡು, ಅವರೊಂದಿಗೆ ಹಾಸಿಗೆ ಹಂಚಿ ಮಲಗಿ ಎದ್ದಿದ್ದೇನೆ. ಅವರ ನೀಲಿ ಕಣ್ಣಲ್ಲಿ ನನ್ನನ್ನು ಅವರಂತೆಯೇ ಎಂದು ನೋಡುವ ನೋಟವನ್ನು ಕಂಡಿದ್ದೇನೆ. ಏಕೆಂದರೆ, ಏಕ ದೇವ ಅಲ್ಲಾಹನಲ್ಲಿ ವಿಶ್ವಾಸವಿರುವ ಅವರ ಮೆದುಳಲ್ಲಿ ತಾನು ಬಿಳಿಯನೆಂಬ ಪ್ರಜ್ಞೆ ಕಳೆದು ಹೋಗುತ್ತದೆ. ಅದು ಇತರೆ ವರ್ಣದವರೊಂದಿಗಿನ ಅವರ ವರ್ತನೆಗಳಲ್ಲಿ ಸ್ವಾಭಾವಿಕವಾಗಿ ಮಾರ್ಪಾಡನ್ನು ತರುತ್ತದೆ.  

ಏಕತ್ವದ ಮೇಲಿನ ಅವರ ನಂಬಿಕೆಗಳು ಅವರನ್ನು ಅಮೇರಿಕನ್ ಬಿಳಿಯರಿಗಿಂತ ತುಂಬಾ ವಿಭಿನ್ನವಾಗಿಸಿದೆ, ಅವರ ಬಣ್ಣ  ಅವರೊಂದಿಗೆ ನಾನು ವ್ಯವಹರಿಸುವಾಗ ನನ್ನ ಮನಸ್ಸಿನಲ್ಲಿ ಯಾವುದೇ ಪಾತ್ರವನ್ನು ವಹಿಸಿರಲಿಲ್ಲ. ಒಬ್ಬ ದೇವರಿಗೆ ಅವರ ಪ್ರಾಮಾಣಿಕತೆ ಮತ್ತು ಎಲ್ಲಾ ಜನರನ್ನು ಸಮಾನವಾಗಿ ಸ್ವೀಕರಿಸುವುದು ಅವರನ್ನು ಬಿಳಿಯೇತರ ವರ್ಣದವರನ್ನೂ ಇಸ್ಲಾಂನ ಸಹೋದರತ್ವಕ್ಕೆ ಸ್ವೀಕರಿಸುವಂತೆ ಮಾಡುತ್ತದೆ. 

ಒಂದು ವೇಳೆ ಅಮೆರಿಕನ್ನರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡರೆ, ಅಲ್ಲಾಹನನ್ನು ಏಕದೇವನೆಂದು ಒಪ್ಪಿಕೊಂಡರೆ ಅವರು ಖಂಡಿತವಾಗಿಯೂ ಎಲ್ಲಾ ಮನುಷ್ಯರು ಒಂದೇ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಹಾಗೂ ಬಣ್ಣಗಳಿಂದ ಇತರೆ ಮನುಷ್ಯರನ್ನು ಅಳೆಯುವದನ್ನು ನಿಲ್ಲಿಸುತ್ತಾರೆ. ವರ್ಣಭೇದ ನೀತಿಯು ಈಗ ಗುಣಪಡಿಸಲಾಗದ ಕ್ಯಾನ್ಸರ್‌ನಂತೆ ಅಮೆರಿಕದಲ್ಲಿ ಹಾವಳಿಯನ್ನು ಹೊಂದಿದ್ದು, ಎಲ್ಲಾ ಚಿಂತಕ ಅಮೆರಿಕನ್ನರು ಜನಾಂಗೀಯ ಸಮಸ್ಯೆಗೆ ಈಗಾಗಲೇ ಪರಿಹಾರವಾಗಿ ಸಾಬೀತಾಗಿರುವ ಇಸ್ಲಾಮನ್ನು ಹೆಚ್ಚು ಸ್ವೀಕರಿಸಬೇಕು. ಹಾಗೆ ಮಾಡುವುದರಿಂದ, ಅಮೇರಿಕನ್ ಬಿಳಿಯರು ತೋರುವ ವರ್ಣಭೇದ ನೀತಿಯ ವಿರುದ್ಧ ಪ್ರತಿಕ್ರಿಯಿಸುವಂತೆ ಕಪ್ಪು ವರ್ಣೀಯರ ಆಳಮನಸ್ಸು ಪ್ರೇರೇಪಿಸಿದ ಪ್ರತಿರೋಧವೇ “(ಬಿಳಿಯೆರೆಡೆಗಿನ) ಜನಾಂಗೀಯ ಹಗೆತನ” ಎಂಬ ರಕ್ಷಣಾತ್ಮಕ ದೂಷಣೆಗಳನ್ನೂ ನೀಗ್ರೋಗಳು ಹೂಡಲಾರರು. ಆದರೆ ವರ್ಣಭೇದ ನೀತಿಯ ಮೇಲಿನ ಅಮೇರಿಕದ ಹುಚ್ಚು ಗೀಳು ಅದನ್ನು ಸ್ವಯಂ ನಾಶದ ಹಾದಿಗೆ ಕರೆದೊಯ್ಯುತ್ತದೆ.

ಕಾಲೇಜು ಮತ್ತು ಯುನಿವರ್ಸಿಟಿಗಳಲ್ಲಿರುವ ಬಿಳಿಯ ಯುವ ತಲೆಮಾರು, ಅವರದ್ದೇ ತಲೆಮಾರುಗಳೊಂದಿಗೆ, ಆಧ್ಯಾತ್ಮಿಕ ಮೋಕ್ಷಕ್ಕಾಗಿ ಇಸ್ಲಾಂ ಧರ್ಮಕ್ಕೆ ಬದಲಾಗುತ್ತಾರೆ ಹಾಗೂ ಹಳೆಯ ತಲೆಮಾರನ್ನು ತಮ್ಮೊಂದಿಗೆ ಬದಲಾಗಲು ಒತ್ತಾಯಿಸಲಿದ್ದಾರೆ ಎಂದು ನಾನು ನಂಬುತ್ತೇನೆ.

ಹಿಟ್ಲರನ ನಾಝಿ ಜರ್ಮನಿಯಂತಾಗದೆ, ಜನಾಂಗೀಯವಾದದ ವಿಪತ್ತಿನಿಂದ ಬಿಳಿಯ ಅಮೇರಿಕಕ್ಕೆ ರಕ್ಷಿಸಿಕೊಳ್ಳಲು ಇದೊಂದೇ ಉತ್ತಮ  ದಾರಿಯಾಗಿದೆ.

ಈಗ ಮೆಕ್ಕಾಗೆ ಭೇಟಿ ನೀಡಿದ್ದೇನೆ, ನನ್ನ ಧರ್ಮದ (ಇಸ್ಲಾಂ) ಆಳವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನ್ನ ಸ್ವಂತ ಆಧ್ಯಾತ್ಮಿಕ ಮಾರ್ಗವನ್ನು ಸರಿಹೊಂದಿಸಿದ್ದೇನೆ. ಒಂದೆರಡು ದಿನಗಳ ಬಳಿಕ ನಾನು ನಮ್ಮ ಪಿತೃಭೂಮಿ ಆಫ್ರಿಕಾ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದೇನೆ. ಅಲ್ಲಾಹನ ಇಚ್ಛೆಯಂತೆ, ಮೇ 20 ರೊಳಗೆ ನಾನು ನ್ಯೂಯಾರ್ಕ್‌ಗೆ ಹಿಂದಿರುಗುವ ಮೊದಲು, ಸುಡಾನ್, ಕೀನ್ಯಾ, ಟಂಗ್ವಾನ್ಯಿಕಾ, ಜಂಜಿಬಾರ್, ನೈಜೀರಿಯಾ, ಘಾನಾ ಮತ್ತು ಅಲ್ಜೀರಿಯಾಗಳಿಗೆ ನಾನು ಭೇಟಿ ನೀಡುತ್ತೇನೆ.

ನೀವು ಬಯಸಿದಲ್ಲಿ ಈ ಪತ್ರವನ್ನು ನೀವು ಬಳಸಬಹುದು,

ಅಲ್‌-ಹಜ್‌ ಮಲಿಕ್‌ ಅಲ್-ಶಬ್ಬಾಝ್

 (ಮಾಲ್ಕಂ ಎಕ್ಸ್)

ಆಫ್ರಿಕನ್ ಗ್ರಂಥ ಪರಂಪರೆ; ಇತಿಹಾಸ ಹಾಗೂ ವರ್ತಮಾನ

ತನ್ನ ಮೂವತ್ತನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದ ಕೇಪ್ ಮಲಾಯ್ ಜನಾಂಗದಲ್ಲಿ ಜನಿಸಿದ ಸಾರಾ ಜಾಪ್ಪೆ ಮಾತ್ರ ‘ಆಫ್ರಿಕನ್ಸ್’ ಕುರಿತು ಮಾತನಾಡಲು ಸಿಕ್ಕ ವನಿತೆ. ಟೋಂಬೋಕ್ಟೋ ಮ್ಯಾನುಸ್ಕ್ರಿಪ್ಟ್ಸ್ ಪ್ರಾಜೆಕ್ಟಿನ (Tombouctou Manuscripts Project) ಭಾಗವಾಗಿ ಸಂಶೋಧನೆ ನಡೆಸುವಾಗ ಸಾರಾ ೨೦೦೮ ರಲ್ಲಿ ಆಫ್ರಿಕಾದ ಗ್ರಂಥಗಳ ಕುರಿತು ಕೇಳಲಾರಂಭಿಸುತ್ತಾರೆ. ಜೋಹಾನ್ಸ್ ಬರ್ಗ್‌ನ ವಿಟ್ವಾಟರ್ಸ್ಟಾಂಡ್ ಯುನಿವರ್ಸಿಟಿಯಲ್ಲಿ (University of the Witwatersrand) ಇತಿಹಾಸಕಾರ’ಳಾಗಿ ಸಾರಾ ಇಂದು ಅರೇಬಿಕ್, ಆಫ್ರಿಕನ್-ಅರಬಿ ಹಾಗೂ ಜಾವಿ ಭಾಷೆಯಲ್ಲಿ ಗ್ರಂಥ ವಾಚನ ನಡೆಸುತ್ತಿದ್ದರು. ‘ಗುಲಾಮೀ ವಂಶಸ್ಥರಾದ ಕೇಪ್ ಮಲಾಯ್ ಮುಸ್ಲಿಮರಿಗೆ ಕಿತಾಬ್‌ಗಳಲ್ಲದೆ ಬೇರೊಂದು ಪರಂಪರಾಗತ ಆಸ್ತಿಯಿಲ್ಲ..!’ ಸಾರಾ ತನ್ನ ಮಾತನ್ನು ಮುಂದುವರಿಸಿದರು ‘ಕಿತಾಬ್ ಅಂದರೆ ವೈಯಕ್ತಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಉತ್ಪನ್ನ. ಅಂತಹ ಕಿತಾಬ್‌ಗಳು ಕಾಲಹರಣವಾಗಿ ಹೋದರರೂ ಪ್ರತೀ ಗ್ರಂಥಗಳ ಮಹತ್ವ ತುಂಬಾ ಮಹತ್ತರವಾದ್ದು. ಬಹುಕಾಲದಿಂದ ಗುಲಾಮಗಿರಿ ಹಾಗೂ ವರ್ಣಭೇಧದಿಂದ ಕಳೆದ ನಿಮಿತ್ತ ಸಮಾಜ ಕಡೆಗಣಿಸಿದರೂ ಉತ್ತಮ ಜೀವನ ‘ಗ್ರಂಥ’ ನೀಡಿದೆ ಎಂದರೆ ತಪ್ಪಾಗಲಾರದು..’

ಹಳದಿ ಬಣ್ಣವುಳ್ಳ ಗ್ರಂಥ ವಾಚಿಸುವಾಗ ತನ್ನ ಕುಟುಂಬದ ಬೇರು ಇಂಡೋನೇಷ್ಯಾದಲ್ಲಿವೆ ಎಂದು ಇಬ್ರಾಹೀಮರಿಗೆ ವೇದ್ಯವಾದವು. ಕೇಪ್ ಟೌನ್‌ನಿಂದ ನಲವತ್ತೈದು ನಿಮಿಷಗಳ ದೂರದಲ್ಲಿರುವ Simon’s Town ಲ್ಲಿ ಇಬ್ರಾಹೀಮರ ಜನನ. ಶಾಲಾ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಬೀದಿಗಳಲ್ಲಿ ಅಲೆದಾಡಿ, ಖುರ್‌ಆನ್ ಕಲಿಯಬೇಕು ಎಂಬ ತನ್ನ ತಂದೆಯ ನಿರೀಕ್ಷೆ ಹುಸಿ ಮಾಡಿದ ನತದೃಷ್ಟ ವ್ಯಕ್ತಿ ಎಂದು ತನ್ನನ್ನು ಪರಿಚಯಿಸುತ್ತಾರೆ. ಇನ್ನು ಗ್ರಂಥವನ್ನು ನಾಜೂಕಾಗಿ ಸಂರಕ್ಷಿಸಿ ಇಟ್ಟ ತಂದೆಯ ಕಪ್ಪು ಸೂಟ್‌ಕೇಸ್ ಹಾಗೂ ತನಗೆ ಐದು ಅಥವಾ ಆರು ವರ್ಷವಿದ್ದಾಗ ‘ಅದನ್ನು ಮುಟ್ಟಬೇಡ’ ಎಂಬ ತಂದೆಯ ಶಾಸನವೂ ಇಬ್ರಾಹೀಮರ ಮನದಿಂದ ಮಾಯವಾಗಿಲ್ಲ. ಇಬ್ರಾಹೀಂ ಕುಡಿದದ್ದು ವರ್ಣಭೇದದ ಕಹಿ ನೀರು ಮಾತ್ರವಲ್ಲ ಹೊರತಾಗಿ ದಕ್ಷಿಣಾಫ್ರಿಕ ಸರ್ಕಾರವು ೧೯೫೦ ರಲ್ಲಿ ಜಾರಿಗೊಳಿಸಿದ ಗ್ರೂಪ್ ಏಷ್ಯನ್ ಕಾಯ್ದೆ ಅಂದರೆ ಲಕ್ಷಗಟ್ಟಲೆ ಜನ ತಮ್ಮ ತಲೆಮಾರುಗಳಿಂದ ಮನೆಕಟ್ಟಿ ವಾಸಿಸುತ್ತಿದ್ದು, ಅವರನ್ನು ಬಲವಂತವಾಗಿ ಹೊರಗಟ್ಟುವ ಮೂಲಕ ಸಮುದಾಯವನ್ನು ಭಿನ್ನವಾಗಿಸುವಲ್ಲೂ ಇಬ್ರಾಹೀಂ ಬಲಿಪಶುವಾಗಿದ್ದರು. ತನ್ನ ಹದಿ ಹರೆಯದ ಸಮಯ ಇಕ್ಕಟ್ಟಾದ ಫ್ಲಾಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದರು. ‘ನಮ್ಮ ಕೈಯಲ್ಲಿದ್ದ ಅನೇಕ ಗ್ರಂಥಗಳು ನಶಿಸಿ ಹೋದದ್ದು ಆ ದಿನಗಳಲ್ಲೇ ಆಗಿರಬಹುದು..!’ ಎನ್ನುತ್ತಾರೆ ಇಬ್ರಾಹೀಂ. ‘ದೊಡ್ಡ ಅವಿಭಕ್ತ ಕುಟುಂಬವಾದ ಕಾರಣ ಎಲ್ಲಾ ಸಾಮಾಗ್ರಿಗಳು ಖರೀದಿಸಲು ಸಾಧ್ಯವಾಗಲಿಲ್ಲ. ಅವರು ನನ್ನ ಕುಟುಂಬವನ್ನು ನಿರ್ದಯವಾಗಿ ಟ್ರಕ್ಕ್‌ಗೆ ಎಳೆದೊಯ್ಯಲಾಯಿತು. ಅಲ್ಲಿ ಟ್ರಕ್ಕಿಗೇರಿಸುವವರು ಮಾತ್ರವಿದ್ದು, ಊರವರು ಟ್ರಕ್ಕ್ ಕಂಡಷ್ಟರಲ್ಲೇ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಓಡಿಹೋದರು. ಅತ್ಯಗತ್ಯ ಉಪಕರಣಗಳು ಬಿಟ್ಟು ತೆಗೆದುಕೊಳ್ಳಲು ಸಾಧ್ಯವಾಗದ ಎಲ್ಲವನ್ನೂ ವಾಸವಿದ್ದ ಆ ಮಣ್ಣಿನಲ್ಲಿಯೇ ಅವಶೇಷಿಸಲಾಯಿತು..’ ಎಂದು ಇಬ್ರಾಹೀಂ ವಿಷಾದ ವ್ಯಕ್ತಪಡಿಸಿದರು. ನಂತರ, ಅವರು ಬೀಚ್ ಬಳಿಯ ಸಣ್ಣ ಗುಡಿಸಲಿನಲ್ಲಿ ವಾಸ ಹೂಡಲು ಪ್ರಾರಂಭಿಸಿದರು. ಬಿಳಿಯರಿಗೆ ಆಹಾರವನ್ನು ಬೇಯಿಸಿ, ನೌಕಾಪಡೆಯಲ್ಲಿ ಸೇರಿ ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದರು.

Simon’s Town

ಆಫ್ರಿಕಾದ ಗ್ರಂಥ ಸಂರಕ್ಷಕರಲ್ಲಿ ಇಬ್ರಾಹೀಂ ಮ್ಯಾನುವೇಲಿಯು ಒಬ್ಬರು. ನಾವು ಸ್ಕೈಪಿನ ಮೂಲಕ ವಿನಿಮಯಿಸಲು ಕೆಲ ಕಾಲ ಕಳೆದರೂ ಭೇಟಿಯಾಗಿರಲಿಲ್ಲ. ಎಪ್ಪತ್ತೊಂದು ವರ್ಷದ ಇಬ್ರಾಹೀಮರನ್ನು ಅವರ ಮನೆಯಲ್ಲೇ ಭೇಟಿಯಾದೆ. ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿಲ್ಲ ಎಂದು ಆರ್ಧ್ರದಿಂದ ಸಾರಾಗೆ ಹೇಳಿದರು. ನಾಲ್ಕು ಕೊಠಡಿಯಿಂದಾವೃತವಾದ ಪುಟ್ಟ ಮನೆ, ಅದರೊಳಗೆ ಇಬ್ರಾಹೀಮರ ಸುಂದರ ಜಗತ್ತು. ಅಲ್ಲಿನ ‘ಬಾಗಿಲ ಅಂತರ’ವು ಇತರ ಮನೆಗಳಿಂದ ಪ್ರತ್ಯೇಕಿಸುವ ಅಂಶವೆಂದು ಭಾವಿಸಿದೆ. ಮತ್ತೊಂದು ಗಮನಾರ್ಹ ಸಂಗತಿ ಹೆಚ್ಚಿನ ಸಂಧ್ಯಾ ವೇಳೆಗಳಲ್ಲಿ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿ ಸಂಚರಿಸುವ ಕಾರುಗಳ ಗುಂಪಿನ ದೃಶ್ಯ ಕಾಣ ಸಿಗುವುದು ಖಂಡಿತಾ. ಆಜು ಬಾಜಿನಲ್ಲಿ ಕರ್ಕಶಗಳಿಂದ ಕೂಡಿದ್ದರೂ ಇಬ್ರಾಹೀಮರು ತನ್ನ ಸುಂದರ ಜಗತ್ತನ್ನು ವಾಸ್ತವದೊಂದಿಗೂ ಕಲ್ಪನೆಯೊಂದಿಗೂ ಬೇರ್ಪಡಿಸಲಾಗದಂತೆ ಹೆಣೆದಿರುವರು. ಜೋಪಡಿಯ ಅಂಚುಗಳು ಕೇಪ್ ಮಲಾಯ್ ಮುಸ್ಲಿಮರ ಐತಿಹ್ಯ ಹಾಗೂ ವರ್ತಮಾನದ ಚಿತ್ರಣಗಳು, ಇತರೆ ದಾಖಲೆಗಳನ್ನು ವಿವರಿಸುತ್ತಿದೆ ಎಂದು ಭಾಸವಾಗುತ್ತದೆ.

೧೯೯೨ ಸೆಪ್ಟೆಂಬರ್ ೭ ರಂದು ಇಬ್ರಾಹೀಮರ ತಂದೆ ಅಸುನೀಗಿದರು. ತಂದೆಯ ಮರಣದ ಐದು ವರ್ಷಗಳ ಬಳಿಕ ಕುಟುಂಬದ ಆಸ್ತಿಯಾಗಿರುವ ಹಳದಿ ಬಣ್ಣವುಳ್ಳ ಗ್ರಂಥವನ್ನು ಅನ್ವೇಷಿಸಲು ಖುದ್ದಾಗಿ ತಂದೆ ಕನಸಿನಲ್ಲಿ ಬಂದು ಸೂಚಿಸುತ್ತಾರೆ. ಇಬ್ರಾಹಿಂ ಸತತ ಮೂರು ದಿನ ಇದೇ ಕನಸು ಕಂಡರು. ಇದಕ್ಕಾಗಿ ತನ್ನ ಚಿಕ್ಕಮ್ಮ ಕೋಬೆಯನ್ನು ಭೇಟಿ ಮಾಡಿ, ಗ್ರಂಥದ ಕುರಿತು ಮಾಹಿತಿ ಪಡೆಯಲು ಪ್ರಾರಂಭಿಸಿದರು. ಹುಡುಕಾಟದ ಅಂತಿಮ ವೇಳೆಯಲ್ಲಿ ಆ ಗ್ರಂಥವನ್ನು ಕೋಬೇಯ್ ಇಬ್ರಾಹೀಂಗೆ ಹಸ್ತಾಂತರಿಸಿದರು. ಆ ಗ್ರಂಥ ವಾಚಿಸುವಾಗ ಇಬ್ರಾಹೀಮರ ಪೂರ್ವಜರನ್ನು ಉಲ್ಲೇಖಿಸಲಾಗಿತ್ತು. ತನ್ನ ಕುಟುಂಬದ ವಂಶಾವಳಿಯ ನಕ್ಷೆಯಿಂದ ತನ್ನ ತಲೆಮಾರು ಇಂಡೋನೇಷ್ಯಾದ ಸುಂಬಾವ ದ್ವೀಪದ (Sumbawa Island) ದೊರೆ ಅಬ್ದುಲ್ ಖಾದರ್ ಜೀಲಾನಿ ಡೆಯ್ ಕೋಸಾ ಹಾಗೂ ಅವರ ಮಗ ಇಮಾಂ ಇಸ್ಮಾಈಲ್ ಡೆಯ್ ಮಲೀಲಾಗೆ ತಲುಪುತ್ತದೆ ಎಂದು ಇಬ್ರಾಹೀಮರಿಗೆ ಗ್ರಾಸವಾದವು. ೧೭೫೩ ರಲ್ಲಿ ಡಚ್ಚರು ಅವರನ್ನು ಕೇಪ್ ಆಫ್ ಗುಡ್ ಹೋಪ್ (Cape of good hope) ಗೆ ಕರೆತಂದು ಸೈಮನ್ಸ್ ಪಟ್ಟಣದ ಒಂದು ಜೈಲಿನಲ್ಲಿ ಬಂಧಿಸಿದರು. ೧೭೫೫ ರಲ್ಲಿ ಗೋಡೆ ಅಗೆದು ಜೈಲಿನಿಂದ ತಪ್ಪಿಸಿಕೊಂಡರು. ಶೀಘ್ರದಲ್ಲೇ ಅಬ್ದುಲ್ ಖಾದಿರ್ ಹಾಗೂ ಮಗ ಜನ ಸೇವೆಯಲ್ಲಿ ನಿರತರಾಗಿ ಅವರ ಸಮಸ್ಯೆಗೆ ಸ್ಪಂದಿಸಲು ತೊಡಗುತ್ತಾರೆ. ಮುಂದೆ ನಾಯಕರಾಗಿ ಬೆಳೆಯತೊಡಗಿದರು. ಸೈಮನ್ಸ್ ಟೌನ್‌ನ ಒಂದು ಬೆಟ್ಟದ ಮೇಲೆ ಅವರ ಮಖ್‌ಬರ ಇದೆ.

ತುಂತುರು ಮಳೆ ಬೀಳುವ ಮೊದಲು ನಾವು ಖಬರಿನ ಬಳಿ ಸಾಗಿದೆವು. ಮಖ್‌ಬರದಲ್ಲಿ ವಯೋವೃದ್ಧರೋರ್ವರು ಖುರ್‌ಆನ್ ಪಠಿಸುತ್ತಿದ್ದರು. ಅವರ ಪತ್ನಿ ಪಾರಾಯಣಗೈಯ್ಯುತ್ತಿದ್ದ ಪತಿಗೆ ಕೊಡೆ ಹಿಡಿಯುವ ದೃಶ್ಯ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದವು..! ಟೌನಿನ ಕೆಳಭಾಗದಲ್ಲಿರುವ ಸಮುದ್ರ ತೀರದಲ್ಲಾಗಿದೆ ಇಬ್ರಾಹೀಮರ ಚಿಕ್ಕಮ್ಮ ಕೋಬೆಯ ಜೋಪಡಿ. ಮನೆಯ ಪಕ್ಕದಲ್ಲಿ ಸೈಮನ್ಸ್ ಸ್ಕೂಲ್ ಹಾಗೂ ಮಸೀದಿಯಿದೆ. ೧೯೨೩ ರಲ್ಲಿ ನಿರ್ಮಿಸಲಾದ ಸುಂದರ ಶಾಲೆಯು ಸಮುದ್ರದ ಹೃದ್ಯ ನೋಟ ನೀಡುವುದು ಖಂಡಿತಾ. ೧೯೯೯ ರಲ್ಲಿ ಓರ್ವ ಅನುವಾದಕನೊಂದಿಗೆ ಸುಂಬಾವೆಗೆ ಪ್ರಯಾಣಿಸಲು ಇಬ್ರಾಹೀಂ ಅನ್ನು ಪ್ರೇರೇಪಿಸಿದ ವಸ್ತು ‘ದೈವೀ ವಾಣಿ’ಯಾಗಿದೆ. ಅವರನ್ನು ಕಂಡೊಡನೆ ಗ್ರಾಮಸ್ಥರ ಕಣ್ಣು ತುಂಬಿದ್ದವಂತೆ. ಡಚ್ ಈಸ್ಟ್ ಇಂಡಿಯಾ ಕಂಪನಿ ಅಸಹಕಾರದಿಂದಾಗಿ ನಾಯಕರನ್ನು ಗುಲಾಮರಂತೆ ಕರೆದೊಯ್ಯುವ ಚಿತ್ರಣವು ಇಬ್ರಾಹೀಮರ ಮನಸ್ಸಿಗೆ ಘಾಸಿ ಮಾಡಿದ್ದವು. ‘ನನಗೆ ರಾಜಕೀಯ ಸ್ವಾಗತ ನೀಡಲಾಯಿತು. ನನ್ನ ಇಡೀ ಶರೀರದಲ್ಲಿ ಒಮ್ಮೆಲೇ ರಕ್ತ ಸಂಚಾರವಾದವು. ಅದಲ್ಲದೆ ನನ್ನ ತಂದೆಗೆ ‘ಗ್ರಾಮ ನಾಯಕ ಪಟ್ಟ’ ನೋಡಿ ಆಘಾತಕ್ಕೊಳಗಾದೆ..’ ಎಂದು ಸ್ವತಃ ಇಬ್ರಾಹಿಂ ನಮ್ಮಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು. ತನ್ನ ಕುಟುಂಬದ ವಂಶಾವಳಿ ಗುರುತಿಸುವ ಆ ಹಳದಿ ಬಣ್ಣವುಳ್ಳ ಕಿತಾಬಿನ ಪ್ರತಿ ಇಬ್ರಾಹೀಂ ನಮಗೆ ತೋರಿಸಿದರು. ಇದರ ಒರ್ಜಿನಲ್ ಕಾಪಿ ಎಲ್ಲಿದೆ ಎಂಬ ನನ್ನ ಪ್ರಶ್ನೆಗೆ ವಿಷಣ್ಣತೆಯ ನೋಟ ಉತ್ತರವಾಗಿಸಿದರು. ಬಳಿಕ ಮುಂದುವರೆಸಿದರು- ‘ಆ ಕಿತಾಬು ಹಾಗೂ ಇತರೆ ಎರಡು ಕಿತಾಬನ್ನು ೩೦೦೩ ರಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಿದೆ. ಮತ್ತೆ ಆ ವ್ಯಕ್ತಿಯನ್ನು ನಾನು ನೋಡಲಿಲ್ಲ..!’ ತನ್ನ ಸಂಶೋಧನೆ ತೀವ್ರಗೊಳಿಸಲು ಹಾಗೂ ನಷ್ಟವಾದ ಕಿತಾಬನ್ನು ಸಂಗ್ರಹಿಸುತ್ತೇನೆ ಎಂದು ಇಬ್ರಾಹೀಂ ಸಾರಾಳೊಂದಿಗೆ ಹೇಳಿ ಸಂಭಾಷಣೆಗೆ ವಿರಾಮ ಹಾಕಿದರು.

ಇಂಡೋನೇಷ್ಯಾ ಹಾಗೂ ದಕ್ಷಿಣ ಆಫ್ರಿಕಾದ ಜನರು ಇಬ್ರಾಹೀಮರ ಕತೆಯಲ್ಲಿ ಅಭಿಪ್ರಾಯ ವ್ಯತ್ಯಾಸವಿದ್ದರೂ ಅದನ್ನು ಒದಗಿಸಬೇಕೆಂಬ ನಗ್ನ ಸತ್ಯವನ್ನು ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ. ‘ಇಬ್ರಾಹೀಂ ತನ್ನ ಕುಟುಂಬದ ಬೇರನ್ನು ಹುಡುಕಲು ಕಠಿಣ ಪ್ರಯಾಣ ಕೈಗೊಂಡಿದ್ದಾರೆ..’ ಎಂದು ಸಾರ ತನ್ನ ಮಾತನ್ನು ಮುಂದುವರಿಸಿದರು ‘ಆದ್ದರಿಂದ ಇಬ್ರಾಹೀಮರ ದೃಷ್ಟಿಕೋನ ಆಳ ಪರಂಪರೆಯ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಅನೇಕರು ಇಬ್ರಾಹೀಮರ ಬಳಿಯಿರುವ ಕಿತಾಬುಗಳನ್ನು ಸಂರಕ್ಷಿಸಲು ಸೈಮನ್ಸ್ ಟೌನ್‌ನ ಹೆರಿಟೇಜ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲು ಅನುಮತಿ ನೀಡದ್ದಕ್ಕೆ ಇದಲ್ಲದೆ ಬೇರೆ ಕಾರಣ ಹುಡುಕುವ ಅಗತ್ಯವಿಲ್ಲ!’.

Iziko Social History Resource

ನಾವು ಪ್ಯಾಟಿ ಆಂಟಿ ಎಂದು ಕರೆಯಲ್ಪಡುವ ಝೈನಬ್ ಡೇವಿಡನ್ಸ್ ಹಾಗೂ ಅವರ ಪತಿ ಸೆಡಿಕ್‌ರ ಮನೆಗೆ ಭೇಟಿ ನೀಡಿದೆವು. ಮನೆಯ ನೆಲ ಮಹಡಿಯಲ್ಲಿ (ಮ್ಯೂಸಿಯಂ) ಹಳೆಯ ಬಟ್ಟೆ ಸಂಗ್ರಹ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಗೋಡೆ ಚಿತ್ರ ಹಾಗೂ ಇತರೆ ದಾಖಲೆಗಳಿಂದ ತುಂಬಿದ್ದವು. ಇದಲ್ಲದೆ, ಅರೇಬಿಕ್ ಹಾಗೂ ಜಾವಿ ಭಾಷೆಯಲ್ಲಿ ಹಲವಾರು ಕಿತಾಬ್‌ಗಳನ್ನು ಗಾಜಿನಡಿಯಲ್ಲಿ ಸಂರಕ್ಷಿಸಿಟ್ಟಿದ್ದರು. ಮ್ಯೂಸಿಯಂನಲ್ಲಿ ವಿಶೇಷ ಮೇಲ್ವಿಚಾರಕರು ಇಲ್ಲದಿದ್ದರೂ ಮನುಷ್ಯ ಸ್ಪರ್ಶದಿಂದ ಕಿತಾಬ್‌ಗಳಿಗೆ ಒಂಚೂರು ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಅವರ ಸಂಗ್ರಹದಲ್ಲಿರುವ ಅತ್ಯಂತ ಹಳೆಯ ಕಿತಾಬ್ ತೋರಿಸಲು ಸೆಡಿಕ್ ನಮ್ಮ ಬಳಿ ಬಂದರು. ಪ್ಯಾಟಿ ಆಂಟಿ ಬೆಳೆದ ಈ ಮನೆ ೧೯೯೮ ರಲ್ಲಿ ವಸ್ತು ಸಂಗ್ರಹಾಲಯವಾಯಿತು. ‘ನಮ್ಮ ಸಮುದಾಯ ಒಂದು ಅದ್ಭುತ..’ ಎಂದು ಪ್ಯಾಟಿ ಆಂಟಿ ಮುಗುಳ್ನಕ್ಕು ಪುನಃ ಮಂಡಿಸಿದರು ‘ಜನರು ಈ ಮ್ಯೂಸಿಯಂ ಅನ್ನು ನಡೆಸಲೋಸ್ಕರ ಅವರ ಕೈವಶವಿರುವುದನ್ನು ನಮಗೆ ನೀಡಿದ್ದರು. ಈ ಕೂಟದಲ್ಲಿ ಇಬ್ರಾಹೀಂ ಸಾಕಷ್ಟು ಭಾವಚಿತ್ರ, ಪತ್ರಿಕಾ ಪ್ರಕಟಣೆಗಳು ನೀಡಿದರು. ಇದಲ್ಲದೆ ಒಳ್ಳೆಯ ಭವಿಷ್ಯಕ್ಕಾಗಿ ದುಡಿದರು. ಮ್ಯೂಸಿಯಮಿನ ಉದ್ಘಾಟನಾ ಸಮಾರಂಭದಂದು ಸಾವಿರಗಟ್ಟಲೆ ಜನ ಸೇರಿದ್ದರು..’ ವಿಷಾದದ ಸಂಗತಿಯೆಂದರೆ ಇಲ್ಲಿ ಪ್ಯಾಟಿ ಆಂಟಿಯ ಕುಟುಂಬದ ಕಿತಾಬ್‌ಗಳು ಯಾವುದು ಇಲ್ಲ. ಎಲ್ಲಿದೆ ಎಂಬ ನಮ್ಮ ಪ್ರಶ್ನೆಗೆ ‘ಅದನ್ನು ಅವರ ಹಿರಿಯ ಸೋದರಳಿಯನ ಬಳಿಯಿದೆ. ಅದು ಭಾರೀ ಅನರ್ಘ್ಯ ಸಂಪತ್ತು..!’ ಎಂದು ಪ್ಯಾಟಿ ಆಂಟಿ ಸಂಭಾಷಣೆಗೆ ಗೆರೆ ಎಳೆದರು.

ಪ್ರತೀ ಕುಟುಂಬಗಳು ಕಿತಾಬನ್ನು ಪರಿಗಣಿಸಿದ ರೀತಿ ವಿಭಿನ್ನ. ೯೪ ವರ್ಷ ಪ್ರಾಯದ ಇಸ್ಮಾಯಿಲ್ ಪೀಟರ್ಸನ್ ಹಾಗೂ ಅವರ ಪತ್ನಿಯ ಬಳಿ ಸಾರಾ ಕರೆದೊಯ್ದರು. ದರ್ಜಿಯಾಗಿದ್ದ ಅವರು ನನ್ನನ್ನು ಕಂಡೊಡನೆ ಅರೇಬಿಕ್ ಭಾಷೆಯ ಕೆಲವು ಪ್ರಯೋಗಗಳನ್ನು ಉಡಾಯಿಸಿದರು. “ಬಂದರಿನಲ್ಲಿ ಕೆಲಸ ಮಾಡುವಾಗ ಅನೇಕಾರು ಭಾಷೆಗಳೊಂದಿಗೆ ಒಡನಾಟ ಬೆಳೆಸಿದ್ದೆ” ಎಂದು ನನ್ನ ಆಶ್ಚರ್ಯಕ್ಕೆ ಜವಾಬು ನೀಡಿದರು. ಈ ದಂಪತಿಗಳು ಕೇಪ್ ಟೌನಿನ ಕೈಗಾರಿಕಾ ವಲಯದ ಪಕ್ಕದಲ್ಲಿರುವ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಏತನ್ಮಧ್ಯೆ ಇಸ್ಮಾಯಿಲ್, ತನ್ನಜ್ಜನ ಆಪ್ತ ವ್ಯಕ್ತಿಯಾಗಿದ್ದರು. ಅವರ ಜೊತೆ ಮಕ್ಕಾಗೆ ಪ್ರಯಾಣ ಕೈಗೊಂಡಿದ್ದರು ಎಂದು ಖುದ್ದಾಗಿ ಸಾರ ನನ್ನೊಂದಿಗೆ ಹೇಳಿದಳು. ಹತ್ತು ವರ್ಷಗಳ ಹಿಂದೆ ಸಾರಾಗೆ ಇಸ್ಮಾಯಿಲ್ ತೋರಿಸಿದ ಕೆಲವು ‘ಕುಟುಂಬ ಕಿತಾಬ್‌’ಗಳನ್ನು ತೋರಿಸಬಹುದಾ ಎಂದು ಕುತೂಹಲ ವ್ಯಕ್ತಪಡಿಸಿದರು. ಅವರು ಒಳಗೆ ಹೋಗಿ ಪತ್ರಿಕೆ ಪ್ರಕಟಣೆ ಹಾಗೂ ತಾನು ಮತ್ತು ಮಲೇಷ್ಯಾದ ರಾಜ ಸಂಭಾಷಣೆ ನಡೆಸುವ ಕೆಲವು ಫೋಟೋದೊಂದಿಗೆ ಮರಳಿದರು. ವರ್ಣಭೇದ ನೀತಿಯ ಬಳಿಕ ಕೇಪ್ ಮಲಾಯ್ ಮುಸ್ಲಿಮರನ್ನು ಮಲೇಷ್ಯಾದ ನಾಗರಿಕ ಮತ್ತು ಧಾರ್ಮಿಕ ಚಳುವಳಿಗೆ ಕೈಜೋಡಿಸಲು ಅವರು Indonesian and Malasian Seamen club ಎಂಬ ಸಮಿತಿ ರಚಿಸಿದರು. ತನ್ನ ‘ಕುಟುಂಬ ಕಿತಾಬ್’ ಎಲ್ಲೂ ನಶಿಸದೆ, ಬೀದಿಯ ಪಕ್ಕದಲ್ಲೇ ವಾಸಿಸುವ ತಮ್ಮನ ಕೈಯ್ಯಲ್ಲಾದರು ಇದೆ ಎನ್ನುವುದು ಸ್ವಲ್ಪ ಸಮಾಧಾನ ಸಂಗತಿ. ಆದರೆ ಸಹೋದರ ಇವರೊಂದಿಗೆ ಹಂಚಿಕೊಳ್ಳುವುದಿಲ್ಲ ಎನ್ನುವುದು ಖೇದಕರ.

ಇಸ್ಮಾಯಿಲರ ಪೀಳಿಗೆ ನಶಿಸಿ ಹೋದರೆ ಕಿತಾಬ್‌ಗಳ ಉಳಿವಿಗಾಗಿ ಗಂಭೀರ ಕಾಳಜಿ ಅಗತ್ಯ. ಫಾತಿಮಾ, ಕೇಪ್ ಟೌನಿನಲ್ಲಿರುವ Iziko Social History Resource ಕೇಂದ್ರದಲ್ಲಿ ಕಿತಾಬ್ ಸಂಗ್ರಹಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಳಿ ಕೈಗವಸು ಧರಿಸಿ ಅವರು ಆ ಕಿತಾಬುಗಳನ್ನು ಗ್ರಂಥ ಸಂಗ್ರಹ ಪೆಟ್ಟಿಗೆಯಿಂದ ಹೊರತೆಗೆಯುತ್ತಾರೆ. ಅವುಗಳನ್ನು ಕಾಗದದ ತುಂಡುಗಳಿಂದ ಮುಚ್ಚುಲ್ಪಟ್ಟರೂ ಪ್ರದರ್ಶನಕ್ಕಾಗಿ ಪಟ್ಟಿ ಮಾಡಲೋ, ದಾಖಲಿಸಲೋ ಹೋಗಲಿಲ್ಲ. ನಷ್ಟಹೊಂದಿದ ಕಿತಾಬ್‌ಗಳ ಬಗ್ಗೆಯಿರುವ ಪ್ರಶ್ನೆಗೆ ಫಾತಿಮಾರ ಬಳಿ ಸ್ಪಷ್ಟ ಉತ್ತರವಿಲ್ಲ. ಅವಳೊಂದಿಗೆ ಮಾತ್ರವಲ್ಲ, ಸಹೋದ್ಯೋಗಿಗಳಿಗೂ ಕೂಡಾ! ಇದು ಸತ್ಯ, ಯಾವುದೇ ಸಂಶಯ ಪಡಬೇಡಿ. ಕೇಪ್ ಮುಸ್ಲಿಮರ ಪರಂಪರೆ ನಿರ್ಧರಿಸುವಲ್ಲಿ ವಿಶಿಷ್ಟ ಪಾತ್ರ ವಹಿಸಿದ ಕಿತಾಬುಗಳು ಒಂದು ದಿನ ನಿಗೂಢ ರಹಸ್ಯ ಬಯಲು ಮಾಡುತ್ತದೆ ಎಂಬ ನಿರೀಕ್ಷೆ ಹುಸಿಯಾಗದಿರಲಿ!!

ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು

ಹಳದಿ ನಾಯಿ

ಭಾಗ-3

ನಾನು ಅಲ್ಲಿಂದ ಎದ್ದು, ಮುಂದೆ ಸಾಗಿದೆ. ಸಯ್ಯದ್ ರಜಿ಼ಯ ನಿವಾಸದ ಮುಖ್ಯದ್ವಾರದ ಬಳಿ ದೊಡ್ಡ ಹಳದಿ ನಾಯಿಯೊಂದು ನಿಂತಿರುವುದನ್ನು ಅಲ್ಲಿಂದ ಸಾಗುವಾಗ ಕಂಡೆ. ಈ ಹಳದಿ ನಾಯಿಯು ಶೇಖ್ ಹಮ್ಜಾನ ಭವನದ ಎದುರು ಸಹ ನಿಂತಿದ್ದು ನೋಡಿದ್ದೆ. ಅಬು ಜಾಫರ್ ಶಿರಾಜಿಯ ಮನೆಯ ಮುಂದೆ ಮಲಗಿಕೊಂಡಿದ್ದು ಕಂಡೆ ಹಾಗೂ ಅಬು ಮುಸ್ಲಿಂ ಬಾಗ್ದಾದಿಯ ಮಹಲಿನಲ್ಲಿ ಬಾಲ ಮುದುರಿಕೊಂಡು ನಿಂತದ್ದು ಕಂಡೆ. ಆಗ ನಾನುಡಿದೆ., ಹೇ ಶೇಖರೇ, ನಿಮ್ಮ ಅನುಯಾಯಿಗಳು ಹಳದಿ ನಾಯಿಯ ಆಶ್ರಯದಲ್ಲಿದ್ದಾರೆ. ನಾನು ಈ ರಾತ್ರಿ ಮತ್ತೆ ಅಬು ಮುಸ್ಲಿಂ ಬಾಗ್ದಾದಿಯ ಮನೆಗೆ ಹೋದೆ. ಆಗ ನಾನು ಸ್ವಯಂ ನನ್ನನ್ನೇ ಪ್ರಶ್ನಿಸಿದೆ- ‘ಹೇ! ಖಾಸಿಂ ನೀನು ಇಲ್ಲಿ ಏಕೆ ಬಂದಿದೆಯಾ? ಅಬು ಖಾಸಿಂನು ನುಡಿದನು’ ‘ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಪಂಥದ ಆಹ್ವಾನ ನೀಡಲು ಬಂದಿದ್ದೇನೆ.


ಈ ರಾತ್ರಿಯೂ ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯನ್ನು ಅಬು ಮುಸ್ಲಿಂ ಬಾಗ್ದಾದಿಯ ಭೋಜನಹಾಸಿನ ಮೇಲೆ ಕುಳಿತಿರುವುದನ್ನು ಕಂಡೆ. ಅಬು ಮುಸ್ಲಿಂ ಬಾಗ್ದಾದಿಯು ನನಗೆ ಊಟಕ್ಕೆ ಆಹ್ವಾನಿಸಿದನು. ಆದರೆ ನಾನು ತಂಪಾದ ನೀರಿನಿಂದಲೇ ನನ್ನನ್ನು ಸಂತೃಪ್ತಪಡಿಸಿಕೊAಡೆ. ಹಾಗೂ ನುಡಿದೆ ‘ಹೇ ಅಬು ಮುಸ್ಲಿಂ ಜಗತ್ತು ದಿನವಾಗಿದೆ. ಹಾಗೂ ನಾವು ಅದರಲ್ಲಿ ಉಪವಾಸ ವ್ರತ ಆಚರಿಸುವರಾಗಿದ್ದೇವೆ’. ಇದನ್ನು ಕೇಳಿ ಅಬು ಮುಸ್ಲಿಂ ಬಾಗ್ದಾದಿ ಅತ್ತನು ಹಾಗೂ ಭೋಜನ ಮಾಡಿದನು. ಜತೆಗಿದ್ದ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ಸಹ ಅತ್ತನು ಹಾಗೂ ಹಬೀಬ್ ಬಿನ್ ಯಾಹ್ಯಾ ಸಹ ಹೊಟ್ಟೆ ತುಂಬಾ ತಿಂದನು.
ತದನAತರ ಮತ್ತೆ ಆ ನರ್ತಕಿ ಬಂದಳು, ನಾನು ಹೊರಡಲನುವಾದೆ. ಆ ನರ್ತಕಿಯ ಹೆಜ್ಜೆಯ ಸಪ್ಪಳ ಹಾಗೂ ಗೆಜ್ಜೆಯ ಧ್ವನಿಯ ನನ್ನನ್ನು ಹಿಂಬಾಲಿಸಿತು. ನಾನು ಕಿವಿಯಲ್ಲಿ ಬೆರಳನ್ನು ಇಟ್ಟುಕೊಂಡು ಮುಂದೆ ಸಾಗಿದೆ.


ಮೂರನೇ ದಿನ ಮತ್ತೇ ನಗರದ ಪ್ರದಿಕ್ಷಣೆ ಮಾಡಿದೆ. ಎರಡು ದಿನಗಳಿಂದ ನಾನು ಯಾವ್ಯಾವ ದೃಶ್ಯಗಳನ್ನು ಕಂಡಿದ್ದೆ, ಅದರಲ್ಲಿ ಯಾವುದೇ ಬದಲಾವಣೆಯನ್ನು ಗ್ರಹಿಸಲಿಲ್ಲ. ರಾತ್ರಿ ಮತ್ತೆ ನಾನು ಅಬು ಮುಸ್ಲಿಂ ಬಾಗ್ದಾದಿಯ ಬಾಗಿಲ ಮುಂದೆ ಹಾಜರಾದೆ. ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಬೋಧನೆಗಳು ಮನವರಿಕೆ ಮಾಡಿಸಲು ಬಂದಿದ್ದೇನೆ ಎಂದು ನನಗೆ ಸ್ಪಷ್ಟವಾಗಿ ನೆನಪಿತ್ತು. ಹೀಗಾಗಿ ನಾನು ನನ್ನನ್ನು ಏನನ್ನೂ ಪ್ರಶ್ನಿಸಿಕೊಳ್ಳಲಿಲ್ಲ. ನೇರವಾಗಿ ಒಳಗೆ ಪ್ರವೇಶಿಸಿದೆ. ಇಂದು ಸಹ ಹಬೀಬ್ ಬಿನ್ ಯಾಹ್ಯಾ ಭೋಜನದ ಹಾಸಿನ ಮೇಲೆ ಹಾಜರಿದ್ದನು. ಅಬು ಮುಸ್ಲಿಂ ಬಾಗ್ದಾದಿಯು ‘ಹೇ ಗೆಳೆಯನೇ, ಭೋಜನವನ್ನು ಸ್ವೀಕರಿಸು’ ಎಂದು ನುಡಿದನು. ಸತತವಾಗಿ ನಾನು ಮೂರು ದಿನಗಳಿಂದ ಊಟ ಮಾಡಿರಲಿಲ್ಲ. ಊಟದ ಹಾಸಿನ ಮೇಲೆ ವಿವಿಧ ಖಾದ್ಯಗಳ ಜತೆಗೆ ಮುಜಾಫರ್ (ಅಕ್ಕಿಯ ಸಿಹಿ ತಿಂಡಿ) ಸಹ ಇತ್ತು. ಒಂದು ಕಾಲಕ್ಕೆ ಅದು ನನ್ನ ಪ್ರಿಯ ಸಿಹಿ ತಿಂಡಿಯಾಗಿತ್ತು. ನಾನು ಒಂದು ತುತ್ತು ಮುಜಾಫರ್ ಕೈಯಲ್ಲಿ ತೆಗೆದುಕೊಂಡು, ಕೈಯನ್ನು ಹಿಂತೆಗೆದುಕೊAಡೆ, ಮತ್ತೆ ತಣ್ಣೀರನ್ನು ಕುಡಿದು ನುಡಿದೆ- ಜಗತ್ತು ಹಗಲಾಗಿದೆ. ಹಾಗೂ ಅದರಲ್ಲಿ ಉಪವಾಸ ವ್ರತ ಆಚರಿಸುವವರಾಗಿದ್ದೇವೆ.


ನನ್ನ ಈ ಮಾತನ್ನು ಕೇಳಿ, ಅಬು ಮುಸ್ಲಿಂ ಬಾಗ್ದಾದಿ ಇಂದು ಅಳುವುದರ ಬದಲು ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಆ ನರ್ತಕಿ ಮತ್ತೆ ಬಂದಳು ನಾನು ಅವಳೆಡೆ ದೃಷ್ಟಿ ಬೀರಿದೆ. ಚಹರೆ ಕೆಂಪಗಿದ್ದು, ಕೆಂಡದAಥ ಕಣ್ಣುಗಳು ಪಿಂಗಾಣಿ ಪಾತ್ರೆಗಳಂತಿದ್ದು, ಸ್ತನಗಳು ದೃಢವಾಗಿದ್ದು, ತೊಡೆಗಳು ತುಂಬಿಕೊAಡಿದ್ದವು. ಹೊಟ್ಟೆಯು ಶ್ರೀಗಂಧದ ಫಲಕದಂತಿದ್ದು, ನಾಭಿಯು ದುಂಡನೆ ಚಿಕ್ಕ ಮಧು ಪಾತ್ರೆಯಂತಿತ್ತು. ಉಟ್ಟ ಉಡುಪು ಅದೆಷ್ಟು ತೆಳುವಾಗಿತ್ತೆಂದರೆ ಶ್ರೀಗಂಧದ ಫಲಕ, ಹಾಗೂ ದುಂಡನೆ ಚಿಕ್ಕ ಮಧುಪಾತ್ರೆ, ಸೊಂಟ, ಪ್ರಕಾಶಿಸುವ ಮೊಳಕಾಲಿನ ಮೀನಖಂಡ ಎಲ್ಲವೂ ಪಾರದರ್ಶಕವಾಗಿ ಕಾಣುತ್ತಿತ್ತು. ಆಗ ನನಗೆ ಘಮಘಮಿಸುವ ಮುಜಾಫರಿನ ಮತ್ತೊಂದು ತುತ್ತನ್ನು ತೆಗೆದುಕೊಂಡAತೆ ಭಾಸವಾಯಿತು. ನನ್ನ ಬೆರಳುಗಳಲ್ಲಿ ಎಂಥದೋ ಸಂಚಲನ ಉಂಟಾದAತೆ ತೋರಿತು ಹಾಗೂ ಕೈಗಳು ನನ್ನ ನಿಯಂತ್ರಣವನ್ನು ಮೀರುತ್ತಿರುವಂತೆ ಅನಿಸಿತು. ಆಗ ನನಗೆ ಕೈಗಳ ಕುರಿತು ನನ್ನ ಶೇಖರ ಆದೇಶದ ನೆನಪಾಯಿತು. ನಾನು ಗಾಬರಿಗೊಂಡು ಎದ್ದು ನಿಂತೆ, ಅಬು ಮುಸ್ಲಿಂ ಬಾಗ್ದಾದಿಯು ಇಂದು ಊಟ ಮಾಡಿ ಹೋಗು ಎಂದು ಒತ್ತಾಯ ಮಾಡಲಿಲ್ಲ. ಆದರೆ ಆ ರಂಡಿಯ ಕಾಲಿನ ಸಪ್ಪಳ ಹಾಗೂ ಹೆಜ್ಜೆಯ ನಿನಾದವು ಮಧುರ ಅಮಲಾಗಿ ನನ್ನನ್ನು ಬಹುದೂರದವರೆಗೆ ಹಿಂಬಾಲಿಸಿತು.
ಮನೆ ತಲುಪಿ ಒಳಾಂಗಣ ಪ್ರವೇಶಿಸಿದಾಗ ನಾನು ನೋಡುವುದೇನೆಂದರೆ ನನ್ನ ಚಾಪೆಯ ಮೇಲೆ ಹಳದಿ ನಾಯಿ ಮಲಗಿಕೊಂಡಿತ್ತು. ಅದನ್ನು ಕಂಡು ನಾನು ಕಕ್ಕಾಬಿಕ್ಕಿಯಾದೆ ಹಾಗೂ ಸಣ್ಣಗೆ ಬೆವರತೊಡಗಿದೆ. ನಾನು ಅದನ್ನು ಹೊಡೆದೋಡಿಸಲು ಪ್ರಯತ್ನಿಸಿದೆ ಆದರೆ ನಾಯಿಯು ಓಡಿ ಹೋಗುವ ಬದಲು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು. ಆಗ ನನಗೆ ಆ ಶಂಕೆಗಳು ಹಾಗೂ ಭ್ರಮೆಗಳು ಸುತ್ತುವರಿದವು. ನನ್ನ ಕಣ್ಣುಗಳಿಂದ ನಿದ್ರೆ ಮಾಯವಾಯಿತು. ಹಾಗೂ ಮನಶ್ಯಾಂತಿ ಕದಡಿ ಹೋಯಿತು. ನಾನು ಅರ್ತನಾಗಿ ಪ್ರಾರ್ಥಿಸಿದೆ. ‘ಹೇ ನನ್ನ ಆರಾಧ್ಯನೇ, ನನ್ನ ಮೇಲೆ ಕೃಪೆ ತೋರು. ನನ್ನ ಹೃಯದವು ಪ್ರಲೋಭನೆಗಳಲ್ಲಿ ಸಿಲುಕಿಕೊಂಡಿದೆ. ನನ್ನಲ್ಲಿ ಹಳದಿ ನಾಯಿಯು ಆವರಿಸಿದೆ ನನ್ನ ಮನಸ್ಸಿಗೆ ನೆಮ್ಮದಿ ಬರಲಿಲ್ಲ. ತತ್‌ಕ್ಷಣವೇ ನನಗೆ ಅಬು ಅಲಿ ರೂದ್‌ಬಾರಿಯವರು ನೆನಪಿಗೆ ಬಂದರು ಯಾಕೆಂದರೆ ಅವರು ತಮ್ಮ ಜೀವನದಲ್ಲಿ ಕೊಂಚ ಕಾಲ ಆಶಂಕೆ ಹಾಗೂ ಭ್ರಮೆಗಳ ರೋಗದಿಂದ ಬಳಲುತ್ತಿದ್ದರು. ಒಂದು ದಿನ ಅವರು ಸೂರ್ಯೋದಯದ ಮುಂಚೆ ನದಿಯ ದಂಡೆಗೆ ಹೋಗಿ ಸೂರ್ಯೋದಯದವರೆಗೂ ಅಲ್ಲೇ ಕಳೆದರು. ಈ ಅವಧಿಯಲ್ಲಿ ಅವರ ಹೃದಯವು ಪ್ರಕ್ಷÄಬ್ಧವಾಗಿತ್ತು. ಅವರು ವಿನಯಪೂರ್ವಕ ವಿನಂತಿಸಿಕೊAಡರು- ‘ಹೇ ಸ್ನೇಹಿತನೇ, ದೇವರೇ, ನನಗೆ ನೆಮ್ಮದಿ ನೀಡು, ಆಗ ನದಿಯಿಂದ ಅಶರೀರವಾಣಿಯಾಯಿತು. ‘ನೆಮ್ಮದಿಯು ಜ್ಞಾನದಲ್ಲಿದೆ’ ಆಗ ನಾನು ನನ್ನನ್ನೇ ಉದ್ದೇಶಿಸಿ ನುಡಿದೆ- ಹೇ ಅಬು ಖಾಸಿಂ ಖಿಜ್ರಿ, ನೀನು ಇಲ್ಲಿಂದ ನಡೆ. ಈಗ ನಿನ್ನ ಒಳಗೊ,ಹೊರಗೂ ಹಳದಿ ನಾಯಿಗಳು ಹುಟ್ಟಿಕೊಂಡಿವೆ ಹಾಗೂ ನಿನ್ನ ನೆಮ್ಮದಿ ಭಗ್ನವಾಗಿದೆ.


ನಾನು ನನ್ನ ಕೋಣೆಯ ಕಡೆ ಕೊನೆಯ ಸಲ ದೃಷ್ಟಿ ಹಾಯಿಸಿದೆ. ದೀರ್ಘ ಶ್ರಮದಿಂದ ಸಂಗ್ರಹಿಸಿದ್ದ ತತ್ವಜ್ಞಾನ ಹಾಗೂ ಇಸ್ಲಾಂ ನ್ಯಾಯಶಾಸ್ತçದ ಗ್ರಂಥಗಳನ್ನು ಅಲ್ಲಿಯೇ ಬಿಟ್ಟು ಶೇಖ್‌ರ ಪ್ರವಚನಗಳ ಸಂಗ್ರಹದ ಜೊತೆ ನಗರದಿಂದ ಹೊರಬಂದೆ. ನಾನು ನಗರವನ್ನು ತೊರೆದು ಹೊರಬರುತ್ತಿದ್ದಂತೆ ಭೂಮಿಯು ನನ್ನ ಕಾಲುಗಳನ್ನು ಹಿಡಿದುಕೊಂಡಿತು ಹಾಗೂ ನನಗೆ ನನ್ನ ಶೇಖರ ಪ್ರವಚನ ಗೋಷ್ಠಿಗಳ ಸುಗಂಧವು ನೆನಪಾಗತೊಡಗಿತು. ಹಾಗೂ ಯಾವ ಭೂಮಿಯನ್ನು ನಾನು ಶುದ್ಧ ಹಾಗೂ ಪವಿತ್ರವೆಂದು ಭಾವಿಸುತ್ತಿದ್ದೆ., ಅದು ನನ್ನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಯಾವ ರಸ್ತೆಗಳು ನನ್ನ ಶೇಖರ ಪಾದಗಳನ್ನು ಚುಂಬಿಸುತ್ತಿದ್ದವೋ ನನ್ನನ್ನು ಕೂಗಿ ಕೂಗಿ ಕರೆಯುತ್ತಿದ್ದವು. ಅವಗಳ ಕೂಗನ್ನು ಕೇಳಿ ನಾನು ಅಳಹತ್ತಿದೆ ಹಾಗೂ ಬಡಬಡಿಸಹತ್ತಿದೆ. ಹೇ ಶೇಖರೇ, ನಿಮ್ಮ ನಗರವು ಈಗ ಸೂರುಗಳಲ್ಲಿ ಅಡಗಿಹೋಗಿದೆ. ಹಾಗೂ ಆಕಾಶವು ಅತಿ ದೂರವಾಗಿದೆ. ಅನುಯಾಯಿಗಳು ನಿಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ. ಅವರುಗಳು ಸಹಭಾಗಿ ರಹಿತವಾದ ಆಕಾಶಕ್ಕೆ ಸಮಾನಾಂತರವಾಗಿ ತಮ್ಮ ತಮ್ಮ ಸೂರುಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಣ್ಣು-ಮಣ್ಣಿನ ಮಧ್ಯೆ ಅಂತರ ಉಂಟಾಗಿದೆ. ಹಳದಿ ನಾಯಿಯು ಗೌರವಾದರ ಪಡೆಯುತ್ತಿದೆ. ಹಾಗೂ ಶ್ರೇಷ್ಠಾತಿಶ್ರೇಷ್ಠ ಜೀವಿ ಎನಿಸಿದ ಮನುಷ್ಯನು ಮಣ್ಣಿನ ಸಮಾನವಾಗಿದ್ದಾನೆ. ನಿಮ್ಮ ನಗರವು ನನಗಾಗಿ ಕಿರಿದಾಗಿದೆ. ನಾನು ನಿಮ್ಮ ನಗರವನ್ನು ತ್ಯಜಿಸುತ್ತಿದ್ದೇನೆ. ಈ ರೀತಿ ನುಡಿದು ದೃಢ ನಿರ್ಧಾರ ಮಾಡಿ, ಮುಂದೆ ಸಾಗಿದೆ.


ನಾನು ನಡೆಯುತ್ತಾ ನಡೆಯುತ್ತಾ ಅತಿ ದೂರ ಸಾಗಿ ಬಂದೆ ನನ್ನ ಶ್ವಾಸ ಉಬ್ಬತೊಡಗಿತು. ಹಾಗೂ ನನ್ನ ಪಾದಲ್ಲಿ ಬೊಬ್ಬೆಗಳಾದವು. ಮತ್ತೆ ಹಠಾತ್ತನೆ ನನ್ನ ಗಂಟಲಿನಿAದ ಯಾವುದೇ ವಸ್ತು ರಭಸದಿಂದ ಹೊರಬಂದಿತು. ಹಾಗೂ ನನ್ನ ಪಾದಗಳ ಮೇಲೆ ಬಿದ್ದಿತು. ನಾನು ನನ್ನ ಪಾದಗಳತ್ತ ದೃಷ್ಟಿ ಹಾಯಿಸಿದೆ. ನರಿಮರಿಯೊಂದು ನನ್ನ ಪಾದಗಳಲ್ಲಿ ಹೊರಳಾಡುತ್ತಿದ್ದು, ಕಂಡು ನಾನು ಚಕಿತನಾದೆ. ಆಗ ನಾನು ನನ್ನ ಪಾದಗಳಿಂದ ಅದನ್ನು ತುಳಿದು ಹಾಕಲು ಬಯಸಿದೆ ಆದರೆ ನರಿಮರಿಯು ಉಬ್ಬಿ ದೊಡ್ಡದಾಯಿತು. ಆಗ ನಾನು ಮತ್ತೆ ಅದನ್ನು ಪಾದಗಳಿಂದ ತುಳಿದೆ. ಅದು ಇನ್ನು ದೊಡ್ಡದಾಯಿತು. ದೊಡ್ಡದಾಗುತ್ತಾ ಅದು ಹಳದಿ ನಾಯಿಯಾಗಿ ಪರಿವರ್ತಿತವಾಯಿತು. ನಾನು ನನ್ನ ಸಮಸ್ತ ಬಲವನ್ನು ಪ್ರಯೋಗಿಸಿ ಅದಕ್ಕೆ ಒದ್ದೆ ಹಾಗೂ ಪಾದಗಳಿಂದ ಶಕ್ತಿ ಪ್ರಯೋಗಿಸಿ ಅದನ್ನು ತುಳಿಯುತ್ತಾ ಮುಂದೆ ಸಾಗಿದೆ. ಆಗ ನಾನುಡಿದೆ- ದೇವರಾಣೆ! ನಾನು ನನ್ನ ಪಾದಗಳಿಂದ ನಾಯಿಯನ್ನು ತುಳಿದೆ ಹಾಗೂ ಸಾಗುತ್ತಾ ಇದ್ದೆ. ನನ್ನ ಪಾದದ ಬೊಬ್ಬೆಗಳು ಕುರುಗಳಾಗದವು. ನನ್ನ ಪಾದದ ಬೆರಳುಗಳು ಬೇರ್ಪಡಹತ್ತಿದವು ಹಾಗೂ ನನ್ನ ಪಾದಗಳು ರಕ್ತಸಿಕ್ತವಾದವು. ಆದರೆ ಮತ್ತೆ ಹೀಗಾಯಿತು. ಯಾವ ಹಳದಿ ನಾಯಿಯನ್ನು ನಾನು ತುಳಿಯುತ್ತಾ ಬಂದಿದ್ದನೋ, ಅದು ನನ್ನ ದಾರಿಯನ್ನು ಅಡ್ಡಗಟ್ಟಿ ನಿಂತಿತು. ನಾನು ಅದರ ಜೊತೆ ಹೋರಾಡಿದೆ ಹಾಗೂ ಅದನ್ನು ದಾರಿಯಿಂದ ಸರಿಸಲು ಬಹಳ ಪ್ರಯತ್ನಿಸಿದೆ. ಆದರೆ ಅದು ಸುತಾರಾಂ ಸರಿಯಲು ಸಿದ್ಧನಿರಲಿಲ್ಲ. ಕೊನೆಗೆ ನಾನು ದಣಿದು ಹೋದೆ, ದಣಿದು ಕುಬ್ಜನಾದೆ. ಆದರೆ ಆ ಹಳದಿ ನಾಯಿ ಉಬ್ಬಿ ದೊಡ್ಡದಾಯಿತು.


ಆಗ ನಾನು ಮಹಾಮಹಿಮನಾದ ದೇವರ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡೆ. ‘ಹೇ, ನಮ್ಮನ್ನು ಸಲಹುವವನೇ! ಮನುಷ್ಯನು ಕುಬ್ಜನಾಗಿದ್ದಾನೆ. ಹಾಗೂ ಹಳದಿ ನಾಯಿ ಬೆಳೆದು ದೊಡ್ಡದಾಗಿದೆ. ನಾನು ಅದನ್ನು ನನ್ನ ಕಾಲುಗಳಿಂದ ತುಳಿಯ ಬಯಸಿದೆ. ಅದು ನನ್ನ ನಿಲುವಂಗಿಯನ್ನು ಸುತ್ತುವರಿದು ಅದೃಶ್ಯವಾಯಿತು. ಹಾಗೂ ತುಂಡಾದ ನನ್ನ ಕಾಲ್ಬೆರಳು ಹಾಗೂ ರಕ್ತಸಿಕ್ತವಾದ ಪಾದಗಳು, ಹಾಗೂ ಅವುಗಳಲ್ಲಿ ಆದ ಬೊಬ್ಬೆ, ಗಾಯಗಳತ್ತ ದೃಷ್ಟಿ ಹಾಯಿಸಿದೆ. ನಾನು ನನ್ನ ದುಸ್ಥಿತಿಗೆ ಅತ್ತೆ. ನಾನೆಂದುಕೊAಡೆ ನಾನು ಶೇಖರ ನಗರವನ್ನು ತೊರೆದು ಬರದೇ ಇದ್ದರೆ ಒಳ್ಳೆಯದಿತ್ತು. ಆಗ ನನ್ನ ಗಮನ ಮತ್ತೊಂದು ಕಡೆ ಹೋಯಿತು. ಸುಗಂಧಿತ ಮುಜಾಫರ್ ಸಿಹಿಯ ನೆನಪು ಸುಳಿದು ಹೋಯಿತು. ಶ್ರೀಗಂಧದ ಫಲಕ ಹಾಗೂ ದುಂಡಾದ ಪಿಂಗಾಣಿ ಮಧು ಬಟ್ಟಲಿನ ಕಲ್ಪನೆಯನ್ನು ಮಾಡಿಕೊಂಡೆ. ಶೇಖ್‌ರ ಸಮಾಧಿಯ ಧನರಾಶಿಯ ಅರ್ಪಣೆಯ ಕಲ್ಪನೆಯೂ ಬಂದಿತು. ನಾನುಡಿದೆ- ನಿಸ್ಸಂದೇಹವಾಗಿ ಅನುಯಾಯಿಗಳು ಶೇಖ್‌ರ ಬೋಧನೆಗಳ ವಿರೋಧಿಯಾಗಿದ್ದಾರೆ. ಹಾಗೂ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ನಯವಂಚನೆಯ ಮಾರ್ಗದಲ್ಲಿ ಸಾಗುತ್ತಿದ್ದಾನೆ. ನಿಸ್ಸಂದೇಹವಾಗಿ ಶೇಖ್‌ರ ಪ್ರವಚನಗಳು ನನ್ನ ವಶದಲ್ಲಿದೆ. ನನಗನಿಸಿತು ನಾನು ನಗರಕ್ಕೆ ಹಿಂತಿರುಗಿ ಶೇಖರ ಪ್ರವಚನಗಳ ಮೇಲೆ ಮತ್ತೊಮ್ಮೆ ದೃಷ್ಟಿ ಹಾಯಿಸುವುದು ಸೂಕ್ತವಲ್ಲವೆ? ಜನರು ಪ್ರಭಾವಿತರಾಗುವ ಹಾಗೂ ಅದನ್ನು ಮೆಚ್ಚುವ ರೀತಿಯಲ್ಲಿ ಅವುಗಳನ್ನು ಪರಿಷ್ಕರಿಸಿ, ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲೇ? ಯಾರಿಗೂ ಚ್ಯುತಿ ಬಾರದ ಹಾಗೆ ವೃತ್ತಾಂತವು ಸ್ನೇಹಿತರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅದ್ಭುತವಾಗಿ ಬರೆಯಲೇ? ಆದರೆ ಹಠಾತ್ತನೆ ನನಗೆ ಶೇಖ್‌ರ ಬೋಧನೆ ನೆನಪಾಯಿತು ಅದೇನೆಂದರೆ ಕೈಗಳು ಮನುಷ್ಯನ ಶತ್ರುಗಳಾಗಿವೆ, ಆಗ ನನಗೆ ನನ್ನ ಕೈಗಳು ನನ್ನಿಂದ ವಂಚನೆ ಮಾಡುತ್ತಿರುವಂತೆ ತೋರಿತು. ಅದೇ ರಾತ್ರಿ ನಾನು ಮಲಗುವ ನಿರ್ಧಾರ ಮಾಡಿದಾಗ, ಅದೇ ಹಳದಿ ನಾಯಿ ಮತ್ತೆ ಪ್ರತ್ಯಕ್ಷವಾಯಿತು ಹಾಗೂ ನನ್ನ ಚಾಪೆಯ ಮೇಲೆ ಮಲಗಿಕೊಂಡಿತ್ತು. ಆಗ ನಾನು ಹಳದಿ ನಾಯಿಗೆ ಹೊಡೆದೆ ಹಾಗೂ ನನ್ನ ಚಾಪೆಯನ್ನು ಎಳೆದುಕೊಳ್ಳಲು ಬಲಪ್ರಯೋಗ ಮಾಡಿದೆ. ನಾನು ಮತ್ತು ಹಳದಿ ನಾಯಿ ರಾತ್ರಿಯಿಡಿ ಕಾದಾಡುತ್ತಿದ್ದೆವು. ಕೆಲವೊಮ್ಮೆ ಅದು ಎದ್ದು ನಿಂತು ಬಿಡುತ್ತಿತ್ತು. ಆಗ ನಾನು ಕುಬ್ಜನಾಗುತ್ತಿದ್ದೆ ಹಾಗೂ ಅದು ದೊಡ್ಡದಾಗುತ್ತಿತ್ತು. ಈ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬೆಳಗಾಯಿತು. ಈಗ ಅದರ ಶಕ್ತಿ ಕ್ಷೀಣವಾಗಹತ್ತಿತ್ತು. ಕೊನೆಗೆ ಅದು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು.


ಅಂದಿನಿAದ ಇಂದಿನವರೆಗೆ ನನ್ನ ಹಾಗೂ ಹಳದಿ ನಾಯಿಯ ಕಾದಾಟ ನಡೆದೇ ಇವೆ. ಈ ದೀರ್ಘ ಸಂಘರ್ಷದಲ್ಲಿ ಹಲವು ಮಜಲುಗಳಿದ್ದು, ಇದಕ್ಕೆ ಸಂಬAಧಿಸಿದ ಅಸಂಖ್ಯಾತ ಚಿಕ್ಕಪುಟ್ಟ ಘಟನೆಗಳು ಜರುಗಿವೆ. ಆದರೆ ವಿಷಯವು ದೀರ್ಘವಾಗುತ್ತದೆಂದು ಅದನ್ನು ನಾನು ಅಲಕ್ಷಿಸುತ್ತಿದ್ದೇನೆ. ಕೆಲವೊಮ್ಮೆ ನಾನು ಬಿದ್ದು ಬಿಡುತ್ತಿದ್ದೆ. ಆಗ ಅದು ನನ್ನ ಕಾಲುಗಳಲ್ಲಿ ನುಗ್ಗಿ ನರಿಮರಿಯಂತಾಗುತ್ತಿತ್ತು. ಒಟ್ಟಾರೆ ಒಮ್ಮೆ ಹಳದಿ ನಾಯಿ ನನ್ನ ಮೇಲೆ ಹಾಗೂ ಮಗದೊಮ್ಮೆ ನಾನು ಹಳದಿ ನಾಯಿಯ ಮೇಲೆ ಮೇಲುಗೈ ಸಾಧಿಸುತ್ತಿದ್ದೆವು. ಘಮಘಮಿಸುವ ಮುಜಾಫರ್, ಶ್ರೀಗಂಧದ ಫಲಕ, ಹಾಗೂ ಪಿಂಗಾಣಿಯ ದುಂಡನೆಯ ಬಟ್ಟಲು ನನ್ನನ್ನು ಕಾಡತೊಡಗುತ್ತಿದ್ದವು. ಆಗ ಹಳದಿ ನಾಯಿ ನುಡಿಯುತ್ತದೆ- “ಎಲ್ಲರೂ ಹಳದಿ ನಾಯಿಗಳಾದಾಗ ಮನುಷ್ಯರಾಗಿ ಬದುಕುವುದು ನಾಯಿಗಿಂತ ಕೀಳು.” ಇದನ್ನು ಕೇಳಿ ನಾನು ಅರಿಕೆಮಾಡಿಕೊಳ್ಳುತ್ತೇನೆ. ‘ಹೇ ಪಾಲಿಸುವವನೇ! ಎಲ್ಲಿಯವರೆಗೆ ನಾನು ಮರಗಳ ನೆರಳಲ್ಲಿದ್ದು, ಜನಮಾನಸರಿಂದ ದೂರವಾಗಿ ತಿರುಗಲಿ. ಅಪಕ್ವವಾದ ಹಣ್ಣುಗಳನ್ನು ತಿನ್ನುತ್ತಾ, ದಪ್ಪ ಸೆಣಬಿನ ನಿಲುವಂಗಿ ಧರಿಸಿ ಜೀವನ ಸಾಗಿಸಲಿ ಆಗ ನನ್ನ ಪಾದಗಳು ನಗರದ ಕಡೆ ಸಾಗಲು ನಿರ್ಧರಿಸಿದವು. ನನಗೆ ಮತ್ತೆ ಶೇಖರ ಬೋಧನೆ ನೆನಪಿಗೆ ಬಂದಿತು. ಅದೇನೆಂದರೆ ಹಿಂದೆ ಇಡುವ ಹೆಜ್ಜೆಗಳು ಸಾಧಕನ ಶತ್ರುಗಳಾಗಿವೆ. ಆಗ ನಾನು ಮತ್ತೆ ನನ್ನ ಪಾದಗಳಿಗೆ ರಕ್ಷಿಸುತ್ತೇನೆ ಹಾಗು ದಾರಿಯಲ್ಲಿನ ಕಲ್ಲಿನ ಹರಳುಗಳನ್ನು ಆರಿಸಲು ಪ್ರಾರಂಭಿಸುತ್ತೇನೆ. ಹೇ! ಗೌರವಾನ್ವಿತ ದೇವನೇ! ನಾನು ನನ್ನ ಶತ್ರುಗಳಿಗೆ ಅದೆಷ್ಟು ಘೋರ ಶಿಕ್ಷೆ ನೀಡಿದ್ದೆನೆಂದರೆ ಅವು ರಕ್ತಸಿಕ್ತವಾಗಿವೆ. ಹಾಗೂ ನನ್ನ ಕೈಗಳಲ್ಲಿ ಕಲ್ಲಿನ ಹರಳುಗಳನ್ನು ಆರಿಸುತ್ತಾ ಆರಿಸುತ್ತಾ ಬೊಬ್ಬೆಗಳ ಬಂದಿವೆ. ನನ್ನ ಚರ್ಮವು ಬಿಸಿಲಿನ ತಾಪದಿಂದ ಕಪ್ಪುಗಟ್ಟಿದೆ. ಹಾಗೂ ನನ್ನ ಎಲುಬುಗಳು ಕರಗಲು ಪ್ರಾರಂಭಿಸಿವೆ. ಹೇ ಆದರಣೀಯ ದೇವನೆ! ನನ್ನ ನಿದ್ದೆಯು ಹಾರಿಹೋಗಿದೆ. ಹಾಗೂ ನನ್ನ ದಿನಗಳು ಕಷ್ಟಕರವಾಗಿವೆ. ಜಗತ್ತು ನನಗೆ ಉರಿಬಿಸಿಲಿನ ದಿನವಾಗಿದೆ. ಅದರಲ್ಲೂ ನಾನು ಉಪವಾಸ ವ್ರತ ಆಚರಿಸುವವನಾಗಿದ್ದೇನೆ. ಉಪವಾಸ ವ್ರತಧಾರಿಗೆ ಹಗಲು ದೀರ್ಘವಾಗಿರುತ್ತದೆ. ಈ ಉಪವಾಸ ವ್ರತದಿಂದ ನಾನು ಅಶಕ್ತನಾಗಿದ್ದೇನೆ. ಆದರೆ ಹಳದಿ ನಾಯಿ ದಷ್ಟಪುಷ್ಟವಾಗಿದೆ. ಹಾಗೂ ಪ್ರತಿರಾತ್ರಿ ನನ್ನ ಚಾಪೆಯ ಮೇಲೆ ಮಲಗಿಕೊಳ್ಳುತ್ತದೆ.


ಇದರಿಂದಾಗಿ ನನ್ನ ನೆಮ್ಮದಿ ನನ್ನನ್ನು ತ್ಯಜಿಸಿದೆ. ಹಾಗು ನನ್ನ ಚಾಪೆಯು ಅನ್ಯರ ಸ್ವಾಧೀನದಲ್ಲಿ ಹೋಗಿದೆ. ಹಳದಿ ನಾಯಿ ಉನ್ನತ ಹಾಗೂ ಮನುಷ್ಯ ತುಚ್ಛನಾಗಿದ್ದಾನೆ. ಇಂತಹ ಸಮಯದಲ್ಲಿ ನಾನು ಅಬು ಅಲಿ ರುದ್‌ಬಾರಿಯವರನ್ನು ಮತ್ತೆ ಸ್ಮರಿಸಿದೆ. ಹಾಗೂ ನದಿಯ ದಂಡೆಯಲ್ಲಿ ಮೊಣಕಾಲೂರಿ ಕುಳಿತುಕೊಂಡೆ. ನನ್ನ ಹೃದಯವು ಅಂತರಾಳದಿAದ ತುಂಬಿ ಬಂದಿತು. ನಾನು ‘ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು’ ಎಂದು ಬಡಬಡಿಸಹತ್ತಿದೆ. ನಾನು ಇಡೀ ರಾತ್ರಿ ಬಡಬಡಿಸುತ್ತಾ ಇದ್ದೆ.ಹಾಗೂ ನದಿಯ ಕಡೆ ಕಣ್ಣು ಹಾಯಿಸಿದೆ. ರಾತ್ರಿಯೆಲ್ಲಾ ಧೂಳು ಮುಸುಕಿದ ರಭಸವಾದ ಗಾಳಿಯು ಹಳದಿಯಾದ ಎಲೆಗಳ ಮರಗಳ ಮಧ್ಯೆ ಬೀಸಿತು. ಹಾಗೂ ರಾತ್ರಿಯಿಡೀ ಎಲೆಗಳು ಉದುರಿದವು ನಾನು ನದಿಯಿಂದ ನನ್ನ ನೋಟವನ್ನು ಬದಲಿಸಿ, ಎಲೆಗಳಿಂದ ಆವೃತವಾದ ನನ್ನ ದೇಹವನ್ನು ನೋಡಿದೆ. ನನ್ನ ಸುತ್ತ ಮುತ್ತು ಉದುರಿದ ಹಳದಿ ಎಲೆಗಳ ರಾಶಿಯನ್ನು ಕಂಡೆ. ಆಗ ನಾನುಡಿದೆ- ಇದು ನನ್ನ ಬಯಕೆ ಹಾಗೂ ಆಕಾಂಕ್ಷೆಯಾಗಿದೆ. ದೇವರಾಣೆ ನಾನು ಪ್ರಲೋಭನೆಯಿಂದ ಮುಕ್ತನಾಗಿ ಪವಿತ್ರನಾಗಿದ್ದೇನೆ. ಹಾಗೂ ಎಲೆ ಉದುರಿದ ನಗ್ನ ವೃಕ್ಷನಂತಾಗಿದ್ದೇನೆ. ಬೆಳಗಾದಂತೆ ನನ್ನ ಬಾಯಿಯಲ್ಲಿ ಮಧುರ ರಸ ಹರಿದಂತೆ ಭಾಸವಾಯಿತು. ಆ ಶ್ರೀಗಂಧದ ಫಲಕವು ನಾನು ಸ್ಪರ್ಶಿಸಿದಂತಾಯಿತು. ಆ ದುಂಡನೆಯ ಸ್ವರ್ಣಲೇಪಿತ ಬಟ್ಟಲು ಹಾಗೂ ಬೆಳ್ಳಿಯಂತಹ ಮೀನಖಂಡವನ್ನು ಸ್ಪರ್ಶಿಸಿದಂತಾಯಿತು. ಬೆಳ್ಳಿ ಬಂಗಾರದ ರಾಶಿಯಲ್ಲಿ ಬೆರಳನ್ನು ಆಡಿಸಿದಂತಾಯಿತು. ಅವುಗಳ ಮಧ್ಯೆ ದರಹಮ್ ಹಾಗೂ ದೀನಾರಗಳು ಖನಖಣಿಸಿದಂತಾಯ್ತು. ನಾನು ಕಣ್ಣುಗಳನ್ನು ತೆರೆದೆ. ಆಗ ಭಯಾನಕವಾದಂತಹ ಈ ದೃಶ್ಯವನ್ನು ಕಂಡೆ. ಹಳದಿ ನಾಯಿಯು ತನ್ನೆರಡು ಹಿಂದಿನ ಕಾಲುಗಳನ್ನು ನಗರದಲ್ಲಿಯೂ ಹಾಗೂ ಮುಂದಿನ ಎರಡು ಕಾಲಗಳನ್ನು ನನ್ನ ಚಾಪೆಯ ಮೇಲೆ ಇಟ್ಟು ನಿಂತು ಕೊಂಡಿತ್ತು. ಹಾಗೂ ಅದರ ತೇವವಾದ ಮೂಗಿನ ಬಿಸಿ ಹೊಳ್ಳೆಗಳು ನನ್ನ ಎಡಗೈಯನ್ನು ಸ್ಪರ್ಶಿಸುವಂತೆ ಕಂಡೆ. ನಾನು ನನ್ನ ಕೈಯ ಅಬು ಸಯೀದ್‌ರ ತುಂಡಾದ ಕೈಗಳಂತೆ ಬೇರೆಯಾಗಿ ಬಿದ್ದಕೊಂಡAತೆ ಕಂಡೆ. ನಾನು ನನ್ನ ಕೈಯನ್ನು ಉದ್ದೇಶಿಸಿ ನುಡಿದೆ, ‘ಹೇ ನನ್ನ ಕೈ, ನನ್ನ ಸ್ನೇಹಿತ, ನೀನು ಶತ್ರುವಿನ ಜತೆ ಸೇರಿಕೊಂಡಿದ್ದಿಯಾ! ಕಣ್ಮುಚ್ಚಿ ಅರ್ತನಾಗಿ ಮತ್ತೊಮ್ಮೆ ಪ್ರಾರ್ಥಿಸಿದೆ. “ಹೇ ಮಹಾಮಹಿಮ ದೇವರೇ, ನನಗೆ ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು.”

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಹಳದಿ ನಾಯಿ

ಭಾಗ-2

ಆ ಹಿರಿಯರು ತಮ್ಮ ಪ್ರವಾಸದಿಂದ ಹಿಂತಿರುಗಿದಾಗ ರಸ್ತೆಯ ಪಕ್ಕದಲ್ಲಿ ದೈವಿ ಕಾಂತಿಯುಳ್ಳ ಮುಖಮುದ್ರೆಯ ವ್ಯಕ್ತಿಯೊಬ್ಬ ಚಪ್ಪಲಿ ಹೊಲಿಯುತ್ತಿದ್ದನು ಮುಂದೆ ಸಾಗಿ ನೋಡಿದರೆ, ಅಲ್ಲೊಂದು ಗೋಷ್ಠಿ ನಡೆದಿತ್ತು. ನಗರದ ವಿದ್ಯಾವಂತ ಜನರು ಅಲ್ಲಿ ಸೇರಿದ್ದರು. ಅದರಲ್ಲಿ ಒಬ್ಬ ವ್ಯಕ್ತಿಯು ಅಪ್ರಯೋಜಕ ವಿಷಯಗಳ ಕುರಿತು ಪ್ರವಚನ ನೀಡುತ್ತಿದ್ದನು. ಇದನ್ನು ಕಂಡು ಆ ಹಿರಿಯರು ನಖಶಿಖಾಂತ ಕೆಂಡಮAಡಲರಾದರು.
‘ಹೇ ನಗರವೇ, ನಿನ್ನ ಸರ್ವನಾಶವಾಗಲಿ, ನೀನು ಜ್ಞಾನಿಯನ್ನು ಚಮ್ಮಾರನನ್ನಾಗಿಸಿದೆ ಹಾಗೂ ಚಮ್ಮಾರನನ್ನು ಜ್ಞಾನಿಯ ಸ್ಥಾನದಲ್ಲಿ ಕೂಡಿಸಿದೆ. ತದನಂತರ ಅವರೂ ಚರ್ಮಕಾರಿಕೆ ಸಾಮಗ್ರಿಗಳನ್ನು ಖರೀದಿಸಿ, ಆ ಜ್ಞಾನಿಯ ಪಕ್ಕದಲ್ಲಿ ಕುಳಿತು ಚಪ್ಪಲಿ ಹೊಲೆಯುವ ಕಾಯಕ ಪ್ರಾರಂಭಿಸಿದರು.
ಈ ತರ್ಕವನ್ನು ಕೇಳಿ ನಾನು ಪ್ರಶ್ನಿಸಿದೆ
ಯಾ ಶೇಖ್! ಜ್ಞಾನಿಯ ಲಕ್ಷಣವೇನು?
ನುಡಿದರು: ಅವನಲ್ಲಿ ಲೋಭ ಇರಬಾರದು.
ನಾನು ಪ್ರಶ್ನಿಸಿದೆ.
ಲೋಕಾಕಾಂಕ್ಷೆ ಯಾವಾಗ ಉತ್ಪತ್ತಿಯಾಗುತ್ತದೆ.
ನುಡಿದರು: ಜ್ಞಾನದ ಅಧೋಗತಿಯಾದಾಗ!
ಅರಿಕೆ ಮಾಡಿಕೊಂಡೆ: ಜ್ಞಾನದ ಅಧೋಗತಿ ಯಾವಾಗ ಆಗುತ್ತದೆ.
ಉತ್ತರಿಸಿದರು: ಯಾವಾಗ ದರ್ವೇಷನು ಸವಾಲು ಹಚ್ಚಿ ಬೇಡುತ್ತಾನೆ. ಕವಿಯು ಫಲಾಪೇಕ್ಷೆಯಾದಾಗ, ಹುಚ್ಚನು ಬುದ್ಧಿವಂತ ಎನಿಸಿಕೊಂಡಾಗ, ಜ್ಞಾನಿಯು ವ್ಯಾಪಾರಿಯಾದಾಗ ಹಾಗೂ ಬುದ್ಧಿಜೀವಿ ಲಾಭ ಗಳಿಕೆಯಲ್ಲಿ ತೊಡಗಿದಾಗ ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಏರಿದ ದನಿಯಲ್ಲಿ ಕವನವನ್ನು ಹಾಡಿದ್ದು ಕೇಳಿಸಿತು. “ಆ ದೂರದ ನಗರದಲ್ಲಿ ಬರಗಾಲ ಸ್ಥಿತಿ ಉಂಟಾಗಿದೆ, ಯಾಕೆಂದರೆ ಸ್ನೇಹಿತರು ಪ್ರೇಮಭಾವ ತ್ಯಜಿಸಿದರು.” ಅವರು ಆ ಗಾಯಕನನ್ನು ಕರೆದರು. ಅವನನ್ನು ಆ ಕವನ ಸಾಲನ್ನು ಮತ್ತೆ ಹಾಡಲು ಒತ್ತಾಯಿಸಿದರು. ಅವನು ಸುಶ್ರಾವ್ಯವಾಗಿ ಕವನ ಸಾಲನ್ನು ವಾಚಿಸಿದರು. ಅವರಿಗೆ ಚಿಂತನೆಯ ಸ್ಥಿತಿಯು ಆವರಿಸಿತು. ನಂತರ ಅವರ ತಲೆ ಎತ್ತಿ ಈ ತರ್ಕವನ್ನು ಪ್ರಸ್ತಾಪಿಸಿದರು.
ಒಂದು ಊರಿನಲ್ಲಿ ಒಬ್ಬ ಉದಾರಿ ಇದ್ದನು. ಅವನ ದಾನಗುಣದ ಚರ್ಚೆ ಎಲ್ಲೆಡೆ ವ್ಯಾಪಿಸಿತ್ತು. ಅವನ ನಗರದಲ್ಲಿ ಒಬ್ಬ ದರ್ವೇಷ್, ಒಬ್ಬ ಕವಿ, ಒಬ್ಬ ಪಂಡಿತ ಹಾಗೂ ಒಬ್ಬ ಬುದ್ಧಿಜೀವಿ ಇದ್ದರು. ದರ್ವೇಷನಿಗೆ ಸತತವಾಗಿ ಮೂರು ದಿನದಿಂದ ಉಪವಾಸ ಆವಸ್ಥೆ ಬಂದಿತ್ತು. ಆಗ ಅವನು. ಆ ಉದಾರಿಯ ಬಳಿಗೆ ಹೋಗಿ ಸವಾಲು ಹಚ್ಚಿ ಬೇಡಿದನು. ಉದಾರಿಯು ಅವನ ಬೇಡಿಕೆಯನ್ನು ಪೂರ್ಣಗೊಳಿಸಿದನು. ಪಂಡಿತನ ಪತ್ನಿಯು ದರ್ವೇಷನ ಸಮೃದ್ಧಿಯ ಈ ಸ್ಥಿತಿ ನೋಡಿ, ತನ್ನ ಪತಿಗೆ ನಿಮ್ಮ ಜ್ಞಾನದ ಪ್ರಯೋಜನವೇನೆಂದು ಅವನನ್ನು ವ್ಯಂಗವಾಡಿದಳು. ನಿಮಗಿಂತ ಆ ದರ್ವೇಷನು ಉತ್ತಮನಾಗಿದ್ದಾನೆ. ಉದಾರಿಯು ಸಂಪತ್ತಿನಿAದ ಅವನನ್ನು ಸಮೃದ್ಧಗೊಳಿಸಿದ್ದಾನೆ. ಆಗ ಪಂಡಿತನು ಉದಾರಿಯ ಬಳಿ ಹೋಗಿ ಬೇಡಿಕೆ ಇಟ್ಟನು. ಉದಾರಿಯು ಅವನಿಗೆ ಸಾಕಷ್ಟು ಇನಾಮನ್ನು ನೀಡಿ ಕಳುಹಿಸಿದನು. ಬುದ್ಧಿ ಜೀವಿಯು ಇವರಿಬ್ಬರಿಗಿಂತಲೂ ಅಧಿಕ ಸಾಲಗಾರನಾಗಿದ್ದನು. ದರ್ವೇಷ್ ಹಾಗೂ ಪಂಡಿತರಿಬ್ಬರೂ ಉದಾರಿಯ ಮನೆಬಾಗಿಲಿಂದ ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಂಡು ಬಂದದ್ದನ್ನು ಕಂಡ ಅವನೂ ಉದಾರಿಯ ಮನೆಗೆ ತಲುಪಿ, ತನ್ನ ಸ್ಥಿತಿಯನ್ನು ವಿವರಿಸಿದನು. ಉದಾರಿಯು ಅವನನ್ನೂ ಉತ್ತಮ ಉಡುಪು ಹಾಗೂ ಗೌರವ ನೀಡಿ ಕಳುಹಿಸಿದನು. ಇದನ್ನು ಕೇಳಿದ ಕವಿಗೂ ತನ್ನ ಕಾವ್ಯ ವಾಚನ ಮಾಡಿ, ಸೂಕ್ತ ಇನಾಮು ಪಡೆಯುವ ಹಂಬಲ ಹುಟ್ಟಿತು. ಉದಾರಿಯ ಅವನ ಕಾವ್ಯ ವಾಚನ ಕೇಳಿ, ಸಂತುಷ್ಟನಾಗಿ ಅವನಿಗೆ ಸಾಕಷ್ಟು ಧನವನ್ನು ನೀಡಿ ಕಳುಹಿಸಿದನು.
ದರ್ವೇಷನಿಗೆ ಅದೆಷ್ಟು ದೊರಕಿತ್ತು, ಅಷ್ಟರಲ್ಲೇ ತೃಪ್ತನಾಗಿ ಮತ್ತೆ ದುರ್ಗತಿ ಬಾರದಂತೆ, ಜಿಪುಣತನದಿಂದ ಹಣವನ್ನು ವ್ಯಯಿಸಿದ. ಆದರೆ ಪಂಡಿತನು ದೊರೆತ ಸಂಪತ್ತಿನಿAದ ಕೆಲವು ಒಂಟೆಗಳನ್ನು ಹಾಗೂ ವ್ಯಾಪಾರ ಸರಕನ್ನು ಖರೀದಿಸಿ, ವ್ಯಾಪಾರ ಕೇಂದ್ರವಾಗಿದ್ದ ಅಸ್‌ಫಹಾನ್ ಕಡೆ ವರ್ತಕ ಕಾರವಾನ್ ಜತೆ ಹೊರಟನು. ಈ ವ್ಯಾಪಾರಾ ಪಯಣದಲ್ಲಿ ಅವನಗೆ ತುಂಬಾ ಲಾಭವಾಯಿತು. ಮುಂದೆ ಸಾಗಿ ಖರಾಸಾನ್ ತಲುಪಿದನು. ಬುದ್ಧಿಜೀವಿಗೆ ಸಾಲ ಪಡೆಯುವ ಹಾಗೂ ತೀರಿಸುವ ಅನುಭವವಿತ್ತು. ಆದುದರಿಂದ ಧನವನ್ನು ಬಡ್ಡಿಯ ವ್ಯವಹಾರದಲ್ಲಿ ತೊಡಗಿಸಿದನು. ಆದರೆ ಕವಿಯು ಆಲಸಿಯಾಗಿದ್ದು, ಇನ್ನೂ ಕೆಲವು ಪ್ರಶಂಷಾ ಕವನಗಳು, ಕೆಲವು ವಿಲಾಪದ ಕವನಗಳನ್ನು ಬರೆದು ಇನ್ನಷ್ಟು ಇನಾಮು ಪ್ರಾಪ್ತಿಸಿದನು. ಒಟ್ಟಾರೆ ದರ್ವೇಷ್, ಪಂಡಿತ, ಬುದ್ದಿಜೀವಿ ಹಾಗೂ ಕವಿ- ಈ ನಾಲ್ವರು ಧನಿಕರಾದರು. ಆದರೆ ವಾಸ್ತವಿಕವಾಗಿ ದರ್ವೇಷನ ದರ್ವೇಷಿತನದ ಗೌರವ, ಪಂಡಿತನ ಜ್ಞಾನ, ಬುದ್ಧಿಜೀವಿಯ ಬುದ್ಧಿವಂತಿಕೆ ಹಾಗೂ ಕವಿಯ ಕವನ ಪಾವಿತ್ರö್ಯತೆ ಹೊರಟು ಹೋಯಿತು.


ಶೇಖರು ಈ ವೃತ್ತಾಂತವನ್ನು ಹೇಳಿ ಮಾತಿಗೆ ವಿರಾಮ ನಿಡದರು. ನಂತರ ಮತ್ತೆ ನುಡಿದರು. ಹಜ್ರತ್ ಶೇಖ್ ಸಾದಿಯವರೂ ಸಹ ವಾಸ್ತವವನ್ನೇ ನುಡಿದಿದ್ದಾರೆ. ನಾನು ಶೇಖ್ ಕಬುತರ್ ಸಹ ವಾಸ್ತವವನ್ನೇ ನುಡಿಯುತ್ತೇನೆ. ಅದೇನೆಂದರೆ ದಮಿಷ್ಕ್ ನಗರದಲ್ಲಿ ಪ್ರೇಮದ ಉಪೇಕ್ಷೆ ಎರಡೂ ರೀತಿಯಿಂದ ಆಯಿತು. ಬಹಳ ಹೊತ್ತು ಒಂದು ಕವನದ ಸಾಲನ್ನು ಗುನುಗುನಿಸಹತ್ತಿದರು. ಹಾಗೂ ಆ ದಿನದ ನಂತರ ಮತ್ತೆ ಯಾವುದೇ ಮಾತನ್ನು ಆಡಲಿಲ್ಲ. ನನಗೆ ಅರಿವಾಯಿತು- ಶೇಖರ ಸ್ವಭಾವವೇಕೋ ಮ್ಲಾನವಾಗಿದೆ. ಹಾಗೂ ಹೃದಯದಲ್ಲಿ ಯಾವುದೋ ಯಾತನೆಯಿದೆ. ಕವನದ ಸಾಲನ್ನು ಕೇಳುತ್ತಿದ್ದಂತೆ ವಿಚಿತ್ರ ಸ್ಥಿತಿಯಲ್ಲಿರುತ್ತಿದ್ದರು. ಬಹಳ ಪ್ರಭಾವಿತರಾಗಿದ್ದರು. ಅತೀವ ಕನಿಕರಪಡುತ್ತಿದ್ದರು. ಹಾಗೂ ತಮ್ಮ ನಿಲುವಂಗಿ ಹರಿದುಕೊಳ್ಳುತ್ತಿದ್ದರು. ಅವರು ಕೇಳಿದ ಅಂತಿಮ ಕವನದ ಸಾಲಿನ ವೃತ್ತಾಂತದ ಕುರಿತೂ ಪ್ರಸ್ತಾಪಿಸುತ್ತೇನೆ.
ಆ ದಿನದ ರಾತ್ರಿಯೆಲ್ಲಾ ಅವರು ಉದ್ವಿಗ್ನತೆಯ ಸ್ಥಿತಿಯಲ್ಲಿದ್ದರು. ರಾತ್ರಿ ಎಚ್ಚರವಾಗಿರುವುದು ಅವರ ರೂಢಿಯಾಗಿತ್ತು. ಆದರೆ ಈ ರಾತ್ರಿ ಅವರು ಒಂದು ಕ್ಷಣವೂ ವಿಶ್ರಾಂತಿ ಪಡೆಯಲಿಲ್ಲ. ನಾನು ಇದರ ಕುರಿತು ವಿಚಾರಿಸಿದಾಗ ಯಾತ್ರಿಕರಿಗೆ ನಿದ್ದೆಯೆಲ್ಲಿ? ಎಂದು ಉತ್ತರಿಸಿದರು, ದೈವಿಸ್ಮರಣೆ ಮತ್ತು ಧ್ಯಾನದಲ್ಲಿ ನಿರತರಾದರು. ಇನ್ನೂ ಬೆಳಗಾಗುವದರಲ್ಲಿತ್ತು. ಅವರು ಬೆಳಗಿನ ನಮಾಜಿನ ಕರ್ತವ್ಯವನ್ನು ನಿರ್ವಹಿಸಿದರು. ಆಗ ಒಬ್ಬ ಫಕೀರನು ಸುಶ್ರಾವ್ಯವಾಗಿ ಕವನದ ಈ ಸಾಲನ್ನು ಹಾಡುತ್ತಾ ಸಾಗುತ್ತಿದ್ದನು.

ಆಕಾಂಕ್ಷೆಯ ಹಸ್ತವನು ಮುಂದೆ ಮಾಡಿ ಮತ್ತೇನು ಬೇಡಲಿ ಆ ದಾತನಲಿ
ದಣಿದು ಮುದುಡಿ ಮಲಗಿದೆ, ಆ ಕೈಯು ನನ್ನ ತಲೆಯ ಕೆಳಗಡೆ
ಇದನ್ನು ಕೇಳಿ ಅವರ ಹೃದಯು ತುಂಬಿ ಬಂದು, ತನ್ಮಯ ಭಾವ ಆವರಿಸಿತು. ಹಾಡಲು ಕೋರಿದರು. ಅವನೂ ಆ ಹಾಡನ್ನು ತನ್ಮಯವಾಗಿ ಮತ್ತೆ ಹಾಡಿದನು. ಅವರು ತಮ್ಮ ಉಡುಪನ್ನು ಹರಿದು ಹಾಕಹತ್ತಿದರು. ಅವನನ್ನು ಮತ್ತೇ ಆ ಕವನದ ಸಾಲನ್ನು ಹಾಡಲು ಕೋರಿದರು. ಫಕೀರನು ಆ ಸಾಲನ್ನು ಮತ್ತೇ ಪುನರಾವರ್ತಿಸಿದನು. ಅವರ ಹೃದಯವು ಮತ್ತೆ ತುಂಬಿ ಬಂದಿತು. ದುಃಖಭರಿತ ಸ್ವರದಲ್ಲಿ ನುಡಿದರು- ವಿಷಾದವಿದೆ, ಆ ಕೈಗಳ ಬಗ್ಗೆ, ಯಾವುದರ ನೆರವಿನಿಂದ ಅವರು ಬೇಡಿದ್ದನ್ನು ಪಡೆದರು. ಅವರು ತಮ್ಮ ಕೈಗಳತ್ತ ದೃಷ್ಟಿ ಹಾಯಿಸಿದರು. ಮತ್ತು ನುಡಿದರು, ಹೇ ನನ್ನ ಕೈಗಳೇ, ಸಾಕ್ಷಿಯಾಗಿರಬೇಕು ನೀವು, ಶೇಖ್ ಕಬುತರ್‌ನು ಎಂದಿಗೂ ನಿಮ್ಮನ್ನು ಈ ಅವಮಾನಕ್ಕೆ ಗುರಿಪಡಿಸಲಿಲ್ಲ. ಆ ಫಕೀರನನ್ನು ಈ ಹಿಂದೆ ನಾವು ಎಂದು ನೋಡಿರಲಿಲ್ಲ ಹಾಗೂ ಕೇಳಿರಲಿಲ್ಲ. ಅವನು ಒಳಗೆ ಬಂದನು ಹಾಗೂ ಶೇಖ್‌ರನ್ನು ಉದ್ದೇಶಿಸಿ ನುಡಿದನು ಹೇ ಉಸ್ಮಾನ್ ಈಗ ಸಾಯಬೇಕು, ಯಾಕೆಂದರೆ ಈಗ ಕೈಗಳು ಬೇಡುವ ಹಂಬಲವನ್ನು ಹೊಂದಿದೆ.
ಶೇಖರು ಇದನ್ನು ಕೇಳಿ ನುಡಿದರು-
ಹಾಂ! ನಾನು ಸಾಯುವೆ
ನಂತರ ಅವರು ತಲೆದಿಂಬಾಗಿ ಇಟ್ಟಿಗೆಯನ್ನು ಇಟ್ಟುಕೊಂಡು ಒಂದು ಚಾದರನ್ನು ಹೊದ್ದು ಕೊಂಡು ಮಲಗಿದರು, ಆ ಫಕೀರ್ ಎಲ್ಲಿಂದ ಬಂದಿದ್ದನು ಆ ಕಡೆ ಮರಳಿ ಹೋದನು. ನಾನು ಅವರ ಕೇಶರಾಶಿಯಲ್ಲಿ ಬೆರಳಾಡಿಸುತ್ತ ಕುಳಿತುಕೊಂಡೆ ಆಗ ನನಗೆ ಚಾದರಿನ ಒಳಗಿನಿಂದ ಯಾವುದೇ ಜೀವಿ ರೆಕ್ಕೆ ಬಡಿಯುತ್ತಾ ಹೊರಬಂದAತೆ ಭಾಸವಾಯಿತು. ನಾನು ಚಾದರಿನ ಒಂದು ಕೊನೆಯನ್ನು ಸರಿಸಿದೆ. ಆಗ ಚಾದರಿನ ಒಳಗಿನಿಂದ ಒಂದು ಬಿಳಿ ಪಾರಿವಾಳ ರೆಕ್ಕೆ ಬಡಿಯುತ್ತಾ ಹೊರಬಂದಿತು. ಕ್ಷಣಾರ್ಧದಲ್ಲೆ ಅದು ಬೃಹದಾಕಾರವಾಗಿ ಬೆಳೆದು ಆಕಾಶದಲ್ಲಿ ಅದೃಶ್ಯವಾಯಿತು. ನಾನು ಕೌತುಕಗೊಂಡು ಚಾದರಿನ ಇನ್ನೊಂದು ಕೊನೆಯನ್ನು ಸರಿಸಿ, ಶೇಖರ ಮುಖದ ಮೇಲೆ ದೃಷ್ಟಿ ಹಾಯಿಸಿದೆ. ಅವರ ಮುಖದ ಮೇಲೆ ದೈವಿಕ ಕಾಂತಿಯಿತ್ತು. ಬಹುಶಃ ಅವರು ಚಿರನಿದ್ರೆಯಲ್ಲಿ ಜಾರಿದಂತೆ ತೋರಿತು. ನನ್ನಲ್ಲಿ ದಿಜ್ಮೂಢತನ ಆವರಿಸಿತು. ನನಗೆ ತಲೆ ಸುತ್ತು ಬಂದAತಾಗಿ, ಪ್ರಜ್ಞಾಹೀನನಾದೆ.


ಶೇಖರ ಮೃತ್ಯವು ನನಗೆ ಎಂತಹ ಪ್ರಭಾವ ಬೀರಿತೆಂದರೆ, ನಾನು ಒಂದು ಕೋಣೆಯಲ್ಲಿ ಏಕಾಂಗಿಯಾಗಿ ಬಂಧಿತನಾದೆ. ಜಗದ ಬಗ್ಗೆ ತಾತ್ಸಾರ ಉಂಟಾಗಿತ್ತು. ಸಹಲಿಂಗಿಗಳ ಜತೆ ಬೆರೆಯುವ ಇಚ್ಛೆ ಅಳಿದು ಹೋಗಿತ್ತು. ಅದೆಷ್ಟು ದಿನ ನಾನು ಒಂದೇ ಕೋಣೆಯಲ್ಲಿ ಅಜ್ಞಾತವಾಸವಾಗಿದ್ದೆ, ಆದರೆ ಒಂದು ರಾತ್ರಿ ಶೇಖರು- ಅಲ್ಲಾಹನು ಅವರ ಗೋರಿಯನ್ನು ಪ್ರಕಾಶದಿಂದ ಬೆಳಗಿಸಲಿ- ನನ್ನ ಸ್ವಪ್ನದಲ್ಲಿ ಬಂದರು. ಅವರು ಮೇಲೆ ದೃಷ್ಟಿ ಹಾಯಿಸಿದರು. ಆಗ ಕೋಣೆಯ ಸೂರು ತೆರೆದುಕೊಂಡಿತು. ಹಾಗೂ ಆಕಾಶವು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಈ ಕನಸನ್ನು ನಾನು ಶೇಖರ ಆದೇಶವೆಂದು ಭಾವಿಸಿದೆ ಹಾಗೂ ಮರುದಿನವೇ ನನ್ನ ಕೋಣೆಯಿಂದ ಹೊರಬಂದೆ.


ಅದೆಷ್ಟು ದಿನ ನಾನು ಕೋಣೆಯಲ್ಲಿ ಏಕಾಂತವಾಸಿಯಾಗಿದ್ದೆ ನನಗೆ ತಿಳಿಯದು. ಹೊರ ಬಂದರೆ ಇಡೀ ಲೋಕವೇ ಬದಲಾದಂತೆ ತೋರುತ್ತಿತ್ತು. ಬಜಾರಿಯಲ್ಲಿ ಸುತ್ತಿದಾಗ ಅಲ್ಲಿಯ ಆಡಂಬರ ಕಣ್ಣು ಕೋರೈಸುವಂತಿದ್ದು, ನಾನು ಈ ಹಿಂದೆ ಎಂದೂ ನೋಡದೇ ಇದ್ದಂತ ನೋಟವಿತ್ತು. ಲಕಲಕನೆ ಹೊಳೆಯುವ ಶುಭ್ರ ಅಂಗಡಿಗಳು, ಸರಾಫಿನ ಎದುರು ಸಮನಾಂತರವಾಗಿ ಇನ್ನೊಬ್ಬ ಸರಾಫ್. ಸಾವಿರಾರುಗಳು ವಹಿವಾಟು ಕ್ಷಣಾರ್ಧದಲ್ಲಿ ಆಗುತ್ತಿತ್ತು. ಧನದ ಹೊಳೆ ವರ್ತಕರಿಗೆ ದೈವದಂತಿರುವAತೆ ಕಂಡಿತು. ನಾನು ಪಿಳಿ ಪಿಳಿ ಕಣ್ಣು ಬಿಟ್ಟು ನೋಡಿದೆ. ಹೇ ದೇವರೆ, ಇದು ವಾಸ್ತವ ಲೋಕವೇ ಅಥವಾ ಕನಸನ್ನು ಕಾಣುತ್ತಿದ್ದೆನೆಯೇ? ನಾನು ಯಾವ ನಗರಕ್ಕೆ ಬಂದಿದ್ದೇನೆ ನನಗೆ ತಿಳಿಯದಾಯಿತು? ಆಗ ನಾನು ಯೋಚಿಸಿದೆ, ಶೇಖರ ಇತರ ಅನುಯಾಯಿಗಳು ಹಾಗೂ ಸಹ ಸೂಫಿ ಸೋದರರನ್ನು ಭೇಟಿಯಾಗಬೇಕು. ಅವರ ಸ್ಥಿತಿ-ಗತಿ ಹಾಗೂ ಕ್ಷೇಮ ಸಮಾಚಾರ ವಿಚಾರಿಸಬೇಕೆಂದು ತೋರಿತು. ಶೇಖರಿಂದ ಪ್ರಭಾವಿತನಾಗಿ ತನ್ನ ಮನೆಯನ್ನೇ ಧ್ವಂಸ ಮಾಡಿದ್ದ ಸಯ್ಯದ್ ರಜಿ಼ಯ ವಿಳಾಸವನ್ನು ವಿಚಾರಿಸಿದೆ. ಹುಡುಕುತ್ತಾ, ಹುಡುಕುತ್ತಾ ನಗರದ ಒಂದು ಸುಂದರ ವಸತಿ ಪ್ರದೇಶಕ್ಕೆ ತಲುಪಿದೆ. ಅಲ್ಲಿ ಒಂದು ಭವನದ ಸಮೀಪ ಬಂದೆ. ಜನರು ಇದೇ ಸಯ್ಯದ್ ರಜಿ಼ಯ ಮನೆಯೆಂದು ಹೇಳಿದರು. ನಾನು ಆ ಭವ್ಯ ಭವನವನ್ನು ಕಂಡು ನಂಬದಾದೆ. ದೇವರಾಣೆ, ಹೇ ಜನರೇ, ನೀವು ನನಗೆ ಸುಳ್ಳು ಹೇಳುತ್ತಿದ್ದೀರಿ. ಸಯ್ಯದ್ ರಜಿ಼ ಮನೆ ಕಟ್ಟಲಾರ. ನಾನು ಮುಂದೆ ಸಾಗಿದೆ. ನಾನು ಮತ್ತೆ ಅಬು ಮುಸ್ಲಿಂ ಬಾಗ್ದಾದಿಯ ವಿಳಾಸ ಕೇಳಿದೆ. ವ್ಯಕ್ತಿಯೊಬ್ಬ ನನ್ನನ್ನು ನಗರದ ಖಾಜಿಯ ಅರಮನೆ ಸದೃಶ ಕಟ್ಟಡದ ಮುಂದೆ ತಂದು ನಿಲ್ಲಿಸಿದ ಹಾಗೂ ಇದೆ ಅಬು ಮುಸ್ಲಿಂ ಬಾಗ್ದಾದಿಯ ನಿವಾಸವೆಂದು ಹೇಳಿದ. ನಾನು ಆ ಅರಮನೆ ಸದೃಶ ನಿವಾಸವನ್ನು ಚಕಿತನಾಗಿ ನೋಡಿ ಅಬು ಮುಸ್ಲಿಂ ಬಾಗ್ದಾದಿಯ ಉನ್ನತ ಸ್ಥಾನವನ್ನು ಪಡೆದಿದ್ದಾನೆ ಎಂದು ಭಾವಿಸಿದೆ. ನಾನು ಮುಂದೆ ಸಾಗಿ, ಶೇಖ್ ಹಮ್ಜಾನ ವಿಳಾಸ ಕೇಳಿದೆ. ಹುಡುಕುತ್ತಾ ಹುಡುಕುತ್ತಾ, ನಾನು ಒಂದು ಹವೇಲಿಯ ಮುಂದೆ ಬಂದು ನಿಂತೆ. ಅದು ಶೇಖ್ ಹಮ್ಜಾನ ಹವೇಲಿಯೆಂದು ಜನರು ತಿಳಿಸಿದರು. ನಾನು ನುಡಿದೆ. ದೇವರಾಣೆ, ಶೇಕ್ ಹಮ್ಜಾನು ಸೂರನ್ನು ಹೊಂದಿದ್ದಾನೆ, ಹಾಗೂ ನನ್ನಿಂದ ದೂರವಾಗಿದ್ದಾನೆ. ನಾನು ಮುಂದೆ ಸಾಗಿ, ಅಬು ಜಾಫರ್ ಶಿರಾಜಿಯ ವಿಳಾಸವನ್ನು ಕೇಳಿದೆ. ಆಗ ಒಬ್ಬ ವ್ಯಕ್ತಿಯು ನನ್ನನ್ನು ಒಂದು ಚಿನ್ನದ ಅಂಗಡಿಯ ಮುಂದೆ ತಂದು ನಿಲ್ಲಿಸಿದ. ಅಲ್ಲಿ ಬೆಲೆಬಾಳುವ ನೆಲಹಾಸಿನ ಮೇಲೆ, ದಿಂಬಿಗೆ ಆತುಕೊಂಡು ರೇಷ್ಮೆ ವಸ್ತçಧಾರಿಯಾದ ಅಬು ಜಾಫರ್ ಶಿರಾಜಿ ಪವಡಿಸಿದ್ದನು. ಒಬ್ಬ ಸುಂದರ ತರುಣ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದನು. ಆಗ ನಾನು ಅವನ ಮುಂದೆ ಸಾಗಿ ನುಡಿದ “ಹೇ ಅಬು ಜಾಫರ್, ಮಣ್ಣು ಮಣ್ಣಿಗೆ ಪ್ರಿಯವಾಗಿದೆ. ನಾನು ಅವನ ಉತ್ತರಕ್ಕೆ ಕಾಯದೇ ತಿರುಗಿ ನೋಡದೆಯೆ ಹೊರಟು ಬಿಟ್ಟೆ. ದಾರಿಯಲ್ಲಿ ಸಯ್ಯದ್ ರಜಿ಼ ರೇಷ್ಮೆ ವಸ್ತçಧಾರಿಯಾಗಿ ಗುಲಾಮರ ರಕ್ಷಣೆಯಲಿ ಠೀವಿಯಿಂದ ಬರುತ್ತಿರುವುದನ್ನು ಕಂಡೆ. ನನ್ನ ಸಹನೆಯ ಮಿತಿ ಮೀರಿ ಹೋಯಿತು. ನಾನು ಮುನ್ನುಗ್ಗಿ ಅವನ ನಿಲುವಂಗಿಯಲ್ಲಿನ ಭಾರಿ ಕೈಯನ್ನು ಎತ್ತಿ ನುಡಿದೆ, ಹೇ ಕುಲೀನ ಕುಟುಂಬದ ನನ್ನ ಹಳೆಯ ಸ್ಮೃತಿಯೇ, ಹೇ ಸಾದತ್ ವಂಶದ ಶ್ರೇಷ್ಠನೇ, ನೀನು ಸೆಣಬಿನ ಉಡುಪನ್ನು ತೊರೆದು ರೇಷ್ಮೆ ವಸ್ತçಧಾರಣೆ ಮಾಡಿರುವಿಯಾ? ಇದರಿಂದ ಅವನು ಗಲಿಬಿಲಿಗೊಂಡನು. ನಾನು ರೋಧಿಸುತ್ತ ಅಲ್ಲಿಂದ ಕೋಣೆಯ ದಿಕ್ಕಿಗೆ ಹೊರಟೆ. ಕೋಣೆಗೆ ಬಂದು ಬಹಳ ಸಮಯದವರೆಗೆ ಅಳುತ್ತಾ ಕುಳಿತೆ ಹಾಗೂ ನುಡಿದೆ, ದೇವರಾಣೆ! ಇಂದು ನಾನು ಒಂಟಿಯಾಗಿದ್ದೇನೆ.


ಮರುದಿನ ನಾನು ಶೇಖರ ಸಮಾಧಿಗೆ ಭೇಟಿ ನೀಡಿದೆ. ಅಲ್ಲಿ ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯನ್ನು ಹರಕು ಬಟ್ಟೆ ಹಾಗೂ ಚಾಪೆಯ ಜೊತೆ ಕಂಡೆ. ನಾನು ಅವನ ಪಕ್ಕ ಕುಳಿತುಕೊಂಡೆ. ನಾನುಡಿದೆ- ಹೇ! ಹಬೀಬ್, ನೋಡಿದೆಯಾ, ಜಗವು ಯಾವ ರೀತಿ ಬದಲಾಗಿದೆ. ನಮ್ಮ ಸಹ ಸೂಫಿ ಸಹೋದರರು ಶೇಖರ ತತ್ವಗಳನ್ನು ತ್ಯಜಿಸಿದ್ದಾರೆ. ಹಾಗೂ ಅವರ ಪಂಥದಿAದ ವಿಮುಖರಾಗಿದ್ದಾರೆ. ಇದನ್ನು ಕೇಳಿ, ಅವನ ಮುಖದ ಮೇಲೆ ವಿಷಾದದ ಛಾಯೆ ಹಾಯ್ದು ಹೋಯ್ತು. ತಣ್ಣನೆಯ ನಿಟ್ಟುಸಿರು ಬಿಡುತ್ತಾ ಹೇಳಿದ! ನಿಸ್ಸಂದೇಹವಾಗಿ ಸಹ ಸೂಫಿಗಳು ಶೇಖರ ತತ್ವಗಳನ್ನು ತೊರೆದಿದ್ದಾರೆ ಹಾಗೂ ತಮ್ಮ ಪಂಥದಿAದ ವಿಮುಖರಾಗಿದ್ದಾರೆ. ಆಗ ನಾನುಡಿದೆ ದೀನಾರ್‌ನ ಭಕ್ತರು ಹತರಾಗಲಿ, ದೀನಾರ್‌ನ ಭಕ್ತರು ಹತರಾಗಲಿ.
ಅದೇ ಸಂಜೆ ಅಬು ಮುಸ್ಲಿಂ ಬಾಗ್ದಾದಿಯ ಸೇವಕನು ನನ್ನನ್ನು ಕರೆಯಲು ಬಂದನು, ‘ನಡಿ! ನಿನ್ನ ಮಿತ್ರನು ಕರೆಯುತ್ತಿದ್ದಾನೆ’ ಎಂದು ನುಡಿದನು. ನಾನು ತಲುಪಿದಾಗ ಅಲ್ಲಿ ಹಬೀಬ್ ಬಿನ್ ಯಾಹ್ಯಾನು ಅವನ ಸಾಂಗತ್ಯದಲ್ಲಿ ಕುಳಿತಿರುವುದನ್ನು ಕಂಡನು. ಹಾಗೂ ಅಬು ಖಾಸಿಂ ಖಿಜ್ರಿಯು ನಮ್ಮನು ಶೇಖರ ತತ್ವಭ್ರಷ್ಟರೆಂದು ಹೇಳುತ್ತಾ ಹತರಾಗಲಿ, ಹತರಾಗಲಿ ಎಂಬುದಾಗಿ ಕೂಗುತ್ತಾನೆ ಎಂದು ದೂರಿದನು. ಇದಕ್ಕಾಗಿ ಪ್ರತಿಕ್ರಿಯೆಯಾಗಿ ನಾನು ಹಬೀಬ್ ಬಿನ್ ಯಾಹ್ಯಾನ ಮೇಲೆ ಕೋಪದಿಂದ ದೃಷ್ಟಿ ಹಾಯಿಸಿದೆನು. ನಂತರ ಅಬು ಮುಸ್ಲಿಂ ಬಾಗ್ದಾದಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನುಡಿದೆ- ಹೇ! ಅಬು ಮುಸ್ಲಿಂ ಪ್ರವಾದಿಗಳು ಏನನ್ನು ನುಡಿದಿರುತ್ತಾರೆ. ಅದು ಪುನರುಚ್ಚಿಸಿರುವುದರಿಂದ ನನ್ನನ್ನು ತಡೆಯುವಿಯಾ? ಅದನ್ನು ಶೇಖರು ಸಹ ಅನೇಕ ಸಲ ಪುನರಾವರ್ತಿಸಿದ್ದಾರೆ. ನಾನು ಪ್ರವಾದಿಯರ ಹದೀಸನ್ನು ಸಂಪೂರ್ಣವಾಗಿ ಉಲ್ಲೇಖಿಸಿದೆ.


“ದೀನಾರ್‌ನ ಭಕ್ತರು ಹತರಾಗಲಿ, ದರ್‌ಹಮ್‌ನ ಭಕ್ತರು ಹತರಾಗಲಿ ಬಹುಮೂಲ್ಯ ಉಡುಪುಧಾರಿಗಳು ಹತರಾಗಲಿ” ಇದೇ ಸಮಯದಲ್ಲಿ ಭೋಜನ ಹಾಸನು ಹಾಸಲಾಯಿತು. ಅದರ ಮೇಲೆ ವಿವಿಧ ಸ್ವಾದಿಷ್ಟ ಖಾದ್ಯಗಳನ್ನು ಇಡಲಾಗಿತ್ತು. ಅಬು ಮುಸ್ಲಿಂ ಬಾಗ್ದಾದಿ ನುಡಿದನು. ‘ಹೇ, ಮಿತ್ರನೇ, ಊಟ ಮಾಡು’ ನಾನು ತಂಪಾದ ನೀರನ್ನು ಕುಡಿದು ಸಂತೃಪ್ತನಾದೆ ಹಾಗೂ ನುಡಿದೆ-
‘ಹೇ! ಅಬು ಮುಸ್ಲಿಂ ಬಾಗ್ದಾದಿ, ಜಗತ್ತು ಹಗಲಾಗಿದೆ. ಅದರಲ್ಲಿ ನಾವು ಉಪವಾಸ ವ್ರತ ಆಚರಿಸುವವರಾಗಿದ್ದೇವೆ’ ಇದನ್ನು ಕೇಳಿ ಅಬು ಮುಸ್ಲಿಂ ಬಾಗ್ದಾದಿ ಗಳಗಳನೆ ಅತ್ತನು. ಮತ್ತು ನುಡಿದನು. ‘ಹೇ ಖಾಸಿಂ, ನೀನು ನಿಜವನ್ನೇ ನುಡಿದಿರುವೆ’ ಎಂದು ಹೇಳಿ ಊಟ ಮಾಡಿದನು. ಜತೆಗಿದ್ದ ಹಬೀಬ್ ಬಿನ್ ತಿರ್ಮಿಜಿ಼ಯು ಇದನ್ನು ಕೇಳಿ ಅತ್ತನು ತಿರ್ಮಿಜಿ಼ಯೂ ಸಹ ಹೊಟ್ಟೆ ತುಂಬಾ ಉಂಡನು. ಊಟದ ಹಾಸನ್ನು ಮಡಿಚಿದಾಗ ಪರಿಚಾರಿಕೆಯ ವೇಷದಲ್ಲಿ ಒಬ್ಬ ನರ್ತಕಿ ಬಂದಳು. ಆಕೆಯನ್ನು ಕಂಡು ನಾನು ಹೊರಡಲುನುವಾದೆ. ಅಬು ಮುಸ್ಲಿಂ ಬಾಗ್ದಾದಿಯು ಒತ್ತಾಯ ಮಾಡಿ, ಹೇ! ಸ್ನೇಹಿತನೆ ನಿಲ್ಲು, ಎಂದನು. ನಾನು ನುಡಿದೆ ‘ಹೇ! ಅಬು ಮುಸ್ಲಿಂ ಬಾಗ್ದಾಗಿ ಜಗತ್ತು ಹಗಲಾಗಿದೆ. ಹಾಗೂ ನಾವು ಅದರಲ್ಲಿ ಉಪವಾಸ ವ್ರತ ಆಚರಿಸುವವರಾಗಿದ್ದೇವೆ’ ಎಂದು ನುಡಿದು ಅಲ್ಲಿಂದ ಹೊರಟು ಬಂದೆ. ಆದರೆ ದೂರದವರೆಗೆ ಆ ಛಿನಾಲಿಯ ಹೆಜ್ಜೆಯ ಸಪ್ಪಳ ಹಾಗೂ ಗೆಜ್ಜೆಯ ಧ್ವನಿಯ ನನ್ನನ್ನು ಹಿಂಬಾಲಿಸುತ್ತಿತ್ತು. ನಾನು ಕಿವಿಯಲ್ಲಿ ಬೆರಳಿಟ್ಟು ಮುಂದೆ ಸಾಗಿದೆ.
ನಾನು ನನ್ನ ಕೋಣೆಯಲ್ಲಿ ಪಾದಾರ್ಪಣೆ ಮಾಡಿದಾಗ ಯಾವುದೋ ಜೀವಿ ನರಳಾಡಿ ನನ್ನ ಗಂಟಲಿAದ ಹೊರಬಂದಿತು. ನಾನು ದೀಪ ಹಚ್ಚಿದೆ. ಕೋಣೆಯ ಮೂಲೆಮೂಲೆಯಲ್ಲಿ ಹುಡುಕಿದೆ ಏನೂ ಕಂಡು ಬರಲಿಲ್ಲ. ನಿಸ್ಸಂಶಯವಾಗಿ ಇದು ನನ್ನ ಶಂಕೆಯಾಗಿತ್ತು. ನಾನು ಚಾಪೆಯ ಮೇಲೆ ಬಂದು ಮಲಗಿಕೊಂಡೆ. ಮರುದಿನ ಎದ್ದು ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯ ಕಡೆ ಹೊರಟೆ. ಅವನ ಚಾಪೆಯ ಮೆಲೆ ಒಂದು ಹಳದಿ ನಾಯಿ ಮಲಗಿತ್ತು. ನಾನು ನುಡಿದೆ ‘ಹೇ ಯಾಹ್ಯಾನ ಪುತ್ರನೇ! ನೀನು ನಿನ್ನನ್ನು ಚಿತ್ತಕ್ಕೆ ಅರ್ಪಿಸಿಕೊಂಡಿದ್ದಿಯಾ? ಹಾಗೂ ನಯವಂಚಕನಾಗಿದ್ದೀಯಾ! ಇದನ್ನು ಕೇಳಿ ಅವನು ಅತ್ತನು ಹಾಗೂ ನುಡಿದನು. ‘ದೇವರಾಣೆ! ನಾನು ನಿನ್ನ ಜೊತೆಗಾರರಲ್ಲಿ ಒಬ್ಬನಾಗಿದ್ದೇನೆ. ಇತರ ಜೊತೆಗಾರರಿಗೆ ಶೇಖರ ಪಂಥ ತತ್ವಗಳ ನೆನಪು ಮಾಡಿಸಲು ಹೋಗುತ್ತೇನೆ’ ಆಗ ನಾನು ಶೇಖ್‌ರ ಸಮಾಧಿಗೆ- ದೇವರು ಅವರ ಗೋರಿಯ ಮೇಲೆ ಪ್ರಕಾಶವನ್ನು ಬೀರಲಿ- ಧನ ಸಂಪತ್ತು ಅರ್ಪಿಸುತ್ತಿರುವುದು ಕಂಡೆ.


ನಾನು ನುಡಿದೆ ಹೇ! ಯಾಹ್ಯಾನ ಪುತ್ರನೇ, ನಿನಗೆ ನಿಜಕ್ಕೂ ಕೆಡಕಾಗಲಿ, ನೀನು ಶೇಖ್‌ರನ್ನು ಅವರ ಮೃತ್ಯುವಿನ ಬಳಿಕ ಧನವಂತರನ್ನಾಗಿ ಮಾಡುತ್ತಿರುವಿ ಇಷ್ಟು ಸಂಪತ್ತನ್ನು ನೀನು ಏನು ಮಾಡುವಿಯಾ? ಹಬೀಬ್ ಬಿನ್ ತಿರ್ಮಿಜಿ಼ ಮತ್ತೆ ಅಳಹತ್ತಿದನು ಹಾಗೂ ನುಡಿದನು. ‘ದೇವರಾಣೆ! ಈ ಧನ ಸಂಪತ್ತು ಸಯ್ಯದ್ ರಜಿ಼, ಅಬು ಜಾಫರ್ ಶಿಕಾಜಿ, ಅಬು ಮುಸ್ಲಿಂ ಬಾಗ್ದಾದಿ, ಶೇಖ್ ಹಮ್ಜಾ ಹಾಗೂ ನನ್ನ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆ. ನಾನು ನನ್ನ ಪಾಲನ್ನು ಬಡಬಗ್ಗರಲ್ಲಿ ಹಂಚುತ್ತೇನೆ ಹಾಗೂ ನುಡಿಯನ್ನೇ ನನ್ನ ಭಾಗ್ಯವೆಂದು ತಿಳಿಯುತ್ತೇನೆ.

-ಮುಂದುವರೆಯುವುದು

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಹಳದಿ ನಾಯಿ

ಭಾಗ-೧

ನರಿಮರಿಯಂಥ ವಸ್ತುವೊಂದು ಬಾಯಿಯಿಂದ ಹೊರಬಂದಿತು. ಅದನ್ನು ದುರುಗುಟ್ಟಿ ನೋಡಿದನು. ನಂತರ ಅವನು ಕಾಲಿಂದ ತುಳಿದನು. ಆದರೆ ತುಳಿದಷ್ಟು ಆ ನರಿಮರಿ ದೊಡ್ಡದಾಗುತ್ತ ಹೋಯಿತು.
ಸೂಫಿ ಗುರುಗಳು ಈ ಕಥನವನ್ನು ನುಡಿದು ಮೌನಿಯಾದರು. ನಾನು ಪ್ರಶ್ನಿಸಿದೆ – ಶೇಖರೇ! ಈ ನರಿಮರಿಯ ತಾತ್ಪರ್ಯವೇನು? ತುಳಿದಷ್ಟು ಬೆಳೆದು ದೊಡ್ಡದಾಗುವ ನರಿಮರಿಯ ಆ ದೈವಿ ಗೂಢವೇನು? ಆಗ ಶೇಖ್ ಉಸ್ಮಾನರು ನುಡಿದರು –ಈ ನರಿಮರಿ ನಿನ್ನ ನಿಕೃಷ್ಟ ಚಿತ್ತವಾಗಿದೆ. ನಿಕೃಷ್ಟ ಚಿತ್ತವನ್ನು ನೀನು ಅದೆಷ್ಟೊ ತುಳಿಯುವೆಯೋ, ಅದು ಅಷ್ಟೇ ಬೃಹದಾಕಾರವಾಗಿ ಬೆಳೆಯುತ್ತದೆ.
ನಾನು ಬಿನ್ನವಿಸಿದೆ
ಹೇ! ಶೇಖರೇ, ಅನುಮತಿ ಇದೆಯೇ?
ಶೇಖರು ನುಡಿದರು – ಅನುಮತಿ ನೀಡಲಾಗಿದೆ.
ಅವರು ಮತ್ತೆ ಹಾರಿ ಹುಣಸೇ ಮರದ ಮೇಲೆ ಕುಳಿತುಕೊಂಡರು. ನಾನು ವುಜೂ (ಕೈಕಾಲು ಮುಖ ತೊಳೆದುಕೊಳ್ಳುವುದು) ಮಾಡಿದೆ. ಲೇಖನಿ, ಕುಡಿಕೆ ಹಾಗೂ ಕಾಗದ ತೆಗೆದುಕೊಂಡು ಕುಳಿತುಕೊಂಡೆ.
ಹೇ ವೀಕ್ಷಕರೇ! ಈ ವೃತ್ತಾಂತವನ್ನು ನಾನು ನನ್ನ ಎಡಗೈಯಿಂದ ಲೇಖನಿಯಲ್ಲಿ ಬಂಧಿಸುತ್ತೇನೆ. ಯಾಕೆಂದರೆ ಬಲಗೈ ನನ್ನ ಶತ್ರುವಿನ ಜೊತೆ ಸೇರಿಕೊಂಡಿದೆ. ಯಾವುದರಿಂದ ನಾನು ಅಭಯ ಯಾಚಿಸುತ್ತೇನೆ. ಅದನ್ನು ಬರೆಯಲು ನಿರ್ಧರಿಸಿದೆ. ಆದರೆ ಶೇಖರು ಕೈಯಿಂದ ಅಭಯ ಯಾಚಿಸುತ್ತಿದ್ದರು. ಅವರ ಪ್ರಕಾರ, ಯಾರು ಮನುಷ್ಯನ ಸಹಾಯಕ ಹಾಗೂ ಮಿತ್ರನಾಗಿದ್ದಾನೆ, ಅವನು ಮನುಷ್ಯನ ಶತ್ರುವಾಗಿದ್ದಾನೆ.


ನಾನು ಶೇಖರ ಈ ಉವಾಚವನ್ನು ಕೇಳಿ ಅರಿಕೆ ಮಾಡಿಕೊಂಡೆ. ಹೇ, ಶೇಖರೇ! ಇದನ್ನು ವಿಷದೀಕರಿಸಿ ನುಡಿಯಿರಿ. ಆಗ ಅವರು ಶೇಖ್ ಅಬೂ ಸಯೀದ್‌ರವರ ಈ ವೃತ್ತಾಂತವನ್ನು ಪ್ರಸ್ತಾಪಿಸಿದರು.
ಶೇಖ್ ಅಬುಸಯೀದ್ ಅವರ ಮನೆಯಲ್ಲಿ ಸತತವಾಗಿ ಮೂರನೇ ದಿನದ ಉಪವಾಸ ನಡೆದಿತ್ತು. ಅವರ ಪತ್ನಿಯ ಸಹನೆಯ ಕಟ್ಟೆ ಒಡೆದು ಹೋಯಿತು. ಆಕೆಯು ಅಸಹನೆಯಿಂದ ಅವರನ್ನು ದೂರಿದ್ದಳು. ಆಗ ಹೊರಬಂದ ಅಬುಸಯೀದ್ ಜನರ ಬಳಿ ಸವಾಲು ಹಚ್ಚಿ ಬೇಡಲು ಪ್ರಾರಂಭಿಸಿದರು. ಆಗ ಏನೆಲ್ಲಾ ಸಂಗ್ರಹವಾಗಿತ್ತು. ಅದನ್ನು ಮನೆಗೆ ಒಯ್ಯುವಾಗ ಕೋತ್ವಾಲನು ಜೇಬು ಕತ್ತರಿಸಿದ ಅಪರಾಧದಲ್ಲಿ ಅವರನ್ನು ಬಂಧಿಸಿದನು. ಹಾಗೂ ಶಿಕ್ಷೆಯ ರೂಪದಲ್ಲಿ ಒಂದು ಕೈಯನ್ನು ತುಂಡರಸಿದನು. ಬೇರ್ಪಡಿಸಿದ ಆ ತುಂಡು ಕೈಯನ್ನು ಎತ್ತಿಕೊಂಡು ತಂದು, ಎದುರಿಗೆ ಇಟ್ಟುಕೊಂಡು ಅಬುಸಯೀದ್ ಅಳತೊಡಗಿದರು. ಹೇ! ಹಸ್ತವೇ, ನೀನು ಲೋಭಿಯಾದೆ. ನೀನು ಸವಾಲು ಹಚ್ಚಿ ಬೇಡಿದೆ. ಹೀಗಾಗಿ ಅದರ ಪರಿಣಾಮ ಅನುಭವಿಸುತ್ತಿರುವೆ. ಈ ಕಥನವನ್ನು ಕೇಳಿ, ನಾನು ಶೇಖ್‌ರಲ್ಲಿ ಅನುಮತಿ ಕೋರಿದೆ. ಶೇಖರು ಮತ್ತೇ ಮೌನಿಯಾಗಿ, ನಂತರ ನುಡಿದರು.
“ಹೇ! ಅಬು ಖಾಸಿಂ ಖಿಜ್ರಿ, ಅಕ್ಷರವು ನುಡಿಯಾಗಿದೆ. ಹಾಗೂ ಬರವಣಿಗೆಯು ಉಪಾಸನೆಯಾಗಿದೆ”
“ವುಜೂ ಮಾಡಿ, ಮೊಣಕಾಲೂರಿ ಕುಳಿತುಕೋ! ಏನೆಲ್ಲವನ್ನು ನೀನು ಕೇಳುವೆ. ಅದನ್ನು ಅಕ್ಷರ ರೂಪದಲ್ಲಿ ದಾಖಲಿಸು” ಆಗ ಅವರು ಪವಿತ್ರ ಕುರಾನಿನ ಈ ಸ್ತೋತ್ರವನ್ನು ವಾಚಿಸಿದರು.
“ವ್ಯಥೆಯಿದೆ ಅದರ ಬಗ್ಗೆ, ಯಾರು ತಮ್ಮ ಕೈಗಳಿಂದ ಬರೆದರು. ಅಧಿಕ ವ್ಯಥೆಯಿದೆ, ಅವರ ಬಗ್ಗೆ ಯಾರು ಅದರಿಂದ ಹಣ ಗಳಿಕೆ ಮಾಡಿದರು”
ಅವರು ಈ ಸ್ತೋತ್ರವನ್ನು ಓದಿ ಖಿನ್ನರಾದರು. ಆಗ ನಾನು ಪ್ರಶ್ನಿಸಿದೆ, ಹೇ ಶೇಖರೇ, ತಾವು ಆ ಸ್ತೋತ್ರವನ್ನು ಯಾಕೆ ಪಠಿಸಿದಿರಿ? ಹಾಗೂ ಅದನ್ನು ಪಠಿಸಿ ಏಕೆ ಖಿನ್ನರಾದಿರಿ?


ಇದರ ಪ್ರತಿಕ್ರಿಯೆಯಾಗಿ ತಣ್ಣನೆಯ ನಿಟ್ಟುಸಿರು ಬಿಟ್ಟರು. ಹಾಗೂ ಅಹ್ಮದ್ ಹುಜ್ರಿಯ ಈ ಕಥನವನ್ನು ಹೇಳಿದರು. ಅದನ್ನು ಅಕ್ಷರಶಃ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಅಹ್ಮದ್ ಹುಜ್ರಿ ತನ್ನ ಕಾಲದ ಶ್ರೇಷ್ಠ ಕವಿಗಳಾಗಿದ್ದರು. ಆದರೆ ಒಂದು ಹಂತದಲ್ಲಿ ಹೀಗಾಯ್ತು. ಅವರ ನಗರದಲ್ಲಿ ಕವಿಗಳು ಅಧಿಕರಾದರು. ಯೋಗ್ಯ ಮತ್ತು ಅಯೋಗ್ಯರ ಮಧ್ಯದ ಅಂತರ ಅಳಿದು ಹೋಯಿತು. ಪ್ರತಿಯೊಬ್ಬ ಕವಿಯೂ ಪ್ರತಿಷ್ಠಿತ ಹಾಗೂ ಬಿರುದಾಂಕಿತರಾದರು. ಪ್ರಶಂಸಾ ಕಾವ್ಯವನ್ನು ಬರೆಯ ಹತ್ತಿದರು. ಅಹ್ಮದ್ ಹುಜ್ರಿಯವರು ಈ ಸ್ಥಿತಿಯನ್ನು ನೋಡಿ ಕಾವ್ಯರಚನೆಯನ್ನು ತ್ಯಜಿಸಿ ಶರಾಬಿನ ಮಾರಾಟ ಪ್ರಾರಂಭಿಸಿದರು. ಒಂದು ಕತ್ತೆಯನ್ನು ಖರೀದಿಸಿ, ಶರಾಬಿನ ಮಡಕೆಯನ್ನು ಹೇರಿಕೊಂಡು ಸಂತೆಗೆ ಹೋಗಿ ಶರಾಬನ್ನು ಮಾರುತ್ತಿದ್ದರು. ಅಹ್ಮದನು ಪಥಭ್ರಷ್ಟನಾಗಿದ್ದಾನೆ ಎಂದು ಹಲವರು ನಿಂದಿಸಿದರು. ಪವಿತ್ರ ವಾಚನದಿಂದ ಶರಾಬಿನ ವ್ಯವಹಾರದಲ್ಲಿ ಬಿದ್ದನು ಎಂದು ಶಪಿಸಿದರು. ಈ ನಿಂದನೆಗೆ ಅವರು ಸರ್ವಥಾ ಕಿವಿಗೊಡಲಿಲ್ಲ ಹಾಗೂ ತಮ್ಮ ವ್ಯವಹಾರದಲ್ಲಿ ತಲ್ಲೀನರಾಗಿದ್ದರು. ಆದರೆ ಒಂದು ದಿನ ಕತ್ತೆಯು ಒಂದು ಕವಲು ದಾರಿಗೆ ಒಂದು, ಮುಂದೆ ಸಾಗದೆ ಹಠಮಾರಿಯಾಯಿತು. ಅವರು ಕತ್ತೆಗೆ ಚಾಬೂಕಿನಿಂದ ಹೊಡೆಯಹತ್ತಿದರು. ಕತ್ತೆಯ ಅವರನ್ನು ತಿರುಗಿ ನೋಡಿ ಒಂದು ಕವನ ವಾಚನ ಮಾಡಿತು. ಕವನದಲ್ಲಿ ಅಭಿಪ್ರಾಯ ಕೋರಿಕೆಯ ಶಬ್ದ ಪ್ರಯೋಗವಿತ್ತು. ಅದರ ಸಾರಾಂಶವೆAದರೆ- ನಾನು ಕವಲು ದಾರಿಯಲ್ಲಿ ನಿಂತಿದ್ದೇನೆ ‘ನಡಿ’ ಎಂದು ಅಹ್ಮದ್ ನುಡಿಯುತ್ತಿದ್ದಾನೆ. ‘ನಡೆಯ ಬೇಡ’ ಎಂದು ಅಹ್ಮದ್ ನುಡಿಯುತ್ತಿದ್ದಾನೆ. ಇದನ್ನು ಕೇಳಿ ಅಹ್ಮದ್ ಹುಜ್ರಿ ತಮ್ಮ ಕೊರಳ ಪಟ್ಟಿಯನ್ನು ಹರಿದು ಹಾಕಿದರು. ಉದ್ಗಾರದಿಂದ ನುಡಿದರು- ಇಂಥ ಕಾಲಕ್ಕೆ ಕೆಡಕಾಗಲಿ, ಈಗ ಕತ್ತೆಗಳೂ ಕಾವ್ಯ ವಾಚನ ಮಾಡುತ್ತಿವೆ. ಆದರೆ ಅಹ್ಮದ್ ಹುಜ್ರಿಯ ನಾಲಿಗೆಯ ಸ್ತಬ್ಧವಾಗಿದೆ. ಆಗ ಅವರು ಆ ಕತ್ತೆಯನ್ನು ಬಿಡುಗಡೆಗೊಳಿಸಿ, ನಗರದ ಕಡೆ ಬಿಟ್ಟುಬಿಟ್ಟರು. ಹಾಗೂ ಸ್ವಯಂ ಬೆಟ್ಟ ಗುಡ್ಡದ ಕಡೆ ನಡೆದರು. ಅಲ್ಲಿ ತನ್ಮಯದ ಹುಚ್ಚುಸ್ಥಿತಿಯಲ್ಲಿ ಗಿಡ-ಮರಗಳನ್ನು ಸಂಬೋಧಿಸಿ ಕಾವ್ಯವಾಚನ ಮಾಡಹತ್ತಿದರು. ಹಾಗೂ ಉಗರಿನಿಂದ ಕಲ್ಲಿನ ಮೇಲೆ ಕವನ ಗೀರತೊಡಗಿದರು.


ಈ ವೃತ್ತಾಂತವನ್ನು ನುಡಿದು ಶೇಖರು ದೀರ್ಘ ಮೌನಿಯಾಗಿ, ತಲೆ ತಗ್ಗಿಸಿ ಕುಳಿತರು. ಆಗ ನಾನು ಅರುಹಿದೆ, ಶೇಖರೇ ಗಿಡ-ಮರಗಳು ನಿರ್ಜೀವವಾಗಿವೆ. ಅವು ಕಾವ್ಯವನ್ನು ಗ್ರಹಿಸುತ್ತವೆಯೆ? ಶೇಖರು ತಲೆ ಎತ್ತಿ, ನನಗೆ ದುರುಗುಟ್ಟಿ ನೋಡಿದರು. ಮತ್ತು ನುಡಿದರು- ನಾಲಿಗೆಯು ವಾಚನದ ರಹಿತ ಇರಲು ಸಾಧ್ಯವಿಲ್ಲ. ಕಾವ್ಯವು ಶ್ರೋತೃರಹಿತವಾಗಿ ಇರಲು ಸಾಧ್ಯವಿಲ್ಲ. ಕಾವ್ಯದ ಶ್ರೋತೃವು ವಾಸ್ತವವಾಗಿ ಮನುಷ್ಯನೇ, ಆದರೆ ಮನುಷ್ಯನಲ್ಲಿ ಶ್ರೋತೃತ್ವದ ಅರ್ಹತೆಯು ಹೋಗುತ್ತಿದೆ. ಶ್ರೋತೃತ್ವದಿಂದ ವಂಚಿತರಾದವರು ಹೊಸ ಶ್ರೋತೃಗಳನ್ನು ಹುಡುಕಲೇ ಬೇಕಾಗುತ್ತದೆ. ಯಾಕೆಂದರೆ ಕಾವ್ಯವು ಶ್ರೋತೃರಹಿತವಾಗಿ ಇರಲು ಸಾಧ್ಯವೇ ಇಲ್ಲ. ಮತ್ತೇ ಶೇಖರು ಸಯ್ಯದ್ ಅಲಿ ಅಲ್ ಜಜಾಯಿರ್‌ರವರ ವೃತ್ತಾಂತವನ್ನು ನುಡಿಯಹತ್ತಿದರು. – ಕೇಳಿ, ಸಯ್ಯದ ಅಲಿ ಅಲ್ ಜಜಾಯಿರ್ ತಮ್ಮ ಕಾಲದ ಹೆಸರುವಾಸಿಯಾದ ಪ್ರಚಂಡ ಪ್ರವಚನಕಾರರಾಗಿದ್ದರು. ಆದರೆ ಒಂದು ಕಾಲ ಹೀಗೆ ಬಂದಿತು, ಅವರು ದಿಢೀರನೆ ಪ್ರವಚನ ನೀಡುವದನ್ನೆ ನಿಲ್ಲಿಸಿದರು. ಹಾಗೂ ತಮ್ಮ ನಾಲಿಗೆಗೆ ಬೀಗ ಜಡಿದುಕೊಂಡರು. ಇದರಿಂದ ಪ್ರವಚನ ಕೇಳುಗರಲ್ಲಿ ತಳಮಳ ಉಂಟಾಯಿತು. ತಳಮಳ ಹೆಚ್ಚಾಗಾಗ ಜನರು ಅವರ ಸನ್ನಿಧಿಯಲ್ಲಿ ಹಾಜರಾಗಿ ಅರಿಕೆ ಮಾಡಿಕೊಂಡರು, ‘ಮಹನೀಯರೇ, ದಯವಿಟ್ಟು ಪ್ರವಚನ ನೀಡಿ’ ಆಗ ಅವರು ಉತ್ತರಿಸಿದರು. ‘ಹೌದಾ! ಹಾಗಾದರೆ ನನ್ನ ಪ್ರವಚನಾ ವೇದಿಕೆಯನ್ನು ಸ್ಮಶಾನದಲ್ಲಿ ವ್ಯವಸ್ಥೆ ಮಾಡಿ. ಇಂತಹ ವಿಚಿತ್ರ ಆದೇಶವನ್ನು ಕೇಳಿ ಜನ ತಬ್ಬಿಬ್ಬಾದರು. ಆದರೆ ಅವರ ಪ್ರವಚನದ ವೇದಿಕೆಯನ್ನು ಸ್ಮಶಾನದಲ್ಲಿ ವ್ಯವಸ್ಥೆ ಮಾಡಿದರು. ಅದನ್ನೇರಿ ಅವರು ಒಂದು ಅಮೋಘ ಪ್ರವಚನ ನೀಡಿದರು. ಇದರ ಪ್ರಭಾವವೇನಾಯಿತೆಂದರೆ ಗೋರಿಗಳಿಂದ ದುರೂದ್ (ಮೃತದ ಮುಕ್ತಿಗಾಗಿ ಪಠಿಸುವ ಸ್ತೋತ್ರ)ನ ಧ್ವನಿ ಮಾರ್ದನಿಗೊಂಡಿತು. ಆಗ ಸಯ್ಯದ್ ಅಲಿ ಅಲ್ ಜಜಾ಼ಯಿಲ್ ಜನವಸತಿಯ ಕಡೆಗೆ ಮುಖ ಮಾಡಿ, ಎತ್ತರದ ದನಿಯಲಿ ನುಡಿದರು- “ಹೇ! ನಗರವೇ, ನಿನಗೆ ದೇವರ ಕೃಪೆಯಾಗಲಿ, ನಿನ್ನ ಸಜೀವ ಜನರು ಕಿವುಡರಾಗಿದ್ದಾರೆ. ಆದರೆ ನಿನ್ನ ಮೃತ ಜನರಿಗೆ ಕೇಳುವ ಅರ್ಹತೆ ಪ್ರಾಪ್ತಿಯಾಗಿದೆ. ತದನಂತರ ಅವರು ಜನವಸತಿಯಿಂದ ದೂರ ಹೋಗಿ ಸ್ಮಶಾನದಲ್ಲಿ ಇರತೊಡಗಿದರು. ಅಲ್ಲಿ ಅವರು ಶವಗಳಿಗೆ ಪ್ರವಚನ ನೀಡುತ್ತಿದ್ದರು.
ಈ ವೃತ್ತಾಂತ ಕೇಳಿ ನಾನು ವಿಚಾರಿಸಿದೆ


ಯಾ ಶೇಖ್! ಸಜೀವಿಗಳಿಗೆ ಕೇಳುವ ಅರ್ಹತೆ ಯಾವಾಗ ಅಂತ್ಯಗೊಳುತ್ತದೆ. ಹಾಗೂ ಶವಗಳಿಗೆ ಕಿವಿಗಳು ಯಾವಾಗ ಪ್ರಾಪ್ತವಾಗುತ್ತವೆ ಇದಕ್ಕೆ ಅವರು ತಣ್ಣನೆಯ ನಿಟ್ಟುಸಿರು ಬಿಟ್ಟು ನುಡಿದುರು- ಇದು ದೈವೀ ರಹಸ್ಯವಾಗಿದೆ. ಭಕ್ತರಿಗೆ ಈ ರಹಸ್ಯವನ್ನು ತಿಳಿಸುವ ಅನುಮತಿ ಇಲ್ಲ. ಮತ್ತೆ ಅವರು ರೆಕ್ಕೆ ಬಡಿಯುತ್ತಾ ಹುಣಸೇ ಮರದ ಮೇಲೆ ಹೋಗಿ ಕುಳಿತರು. ಇಲ್ಲಿ ಈ ವಿಷಯ ಸ್ಪಷ್ಟೀಕರಸಿಬೇಕಾಗಿದೆ. ಶೇಖ್ ಉಸ್ಮಾನರು ಪಾರಿವಾಳ ಹಾಗೂ ಪಕ್ಷಿಗಳಂತೆ ಹಾರಬಲ್ಲವರಾಗಿದ್ದರು. ಆ ಮನೆಯಲ್ಲಿ ಒಂದು ಹುಣಸೆ ಮರವಿತ್ತು. ಚಳಿ, ಮಳೆ, ಬೇಸಿಗೆಯನ್ನು ಶೇಖರು ಇದೇ ಮರದ ನೆರಳಿನಲ್ಲಿ ಧ್ಯಾನ ಚಿಂತನೆಯಲ್ಲಿ ಮಗ್ನರಾಗಿರುತ್ತಿದ್ದರು. ಸೂರಿನ ಕೆಳಗೆ ಕುಳಿತುಕೊಳ್ಳು ನಿರಾಕರಿಸುತ್ತಿದ್ದರು. ಒಂದೇ ಸೂರಿನಡಿ ಉಸಿರುಗಟ್ಟುತ್ತಿದೆ. ಇನ್ನು ಎರಡನೇ ನಿರ್ಮಿತ ಸೂರನ್ನು ಸಹಿಸಿಕೊಳ್ಳುವ ತ್ರಾಣವೆಲ್ಲಿ? ಎಂದು ನುಡಿಯುತ್ತಿದ್ದರು. ಇದನ್ನು ಕೇಳಿ ಸಯ್ಯದ್ ರಜಿ಼ಯು ಆವೇಶದ ಸ್ಥಿತಿಗೆ ತಲುಪಿದನು ಹಾಗೂ ತನ್ನ ಮನೆಯನ್ನು ಧ್ವಂಸಗೊಳಿಸಿ, ಸೆಣಬಿನ ಒರಟು ಬಟ್ಟೆ ಧರಿಸಿ, ಹುಣಸೆ ಮರದ ಕೆಳಗೆ ಕುಳಿತನು. ಸಯ್ಯದ್ ರಜೀ಼, ಅಬು ಮುಸ್ಲಿಂ ಬಾಗ್ದಾದಿ, ಶೇಖ್ ಮಾಜಾ಼, ಅಬು ಜಾಫರ್ ಶಿರಾಜಿ, ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼, ಹಾಗೂ ಈ ಅಲ್ಪಭಕ್ತನು ಶೇಖ್‌ರ ಫಕೀರ ಅನುಯಾಯಿಗಳಾಗಿದ್ದರು. ನನ್ನ ಹೊರತು ಉಳಿದ ಐವರು ನಿರ್ಮಲ ಹೃದಯದ ಶ್ರೇಷ್ಠ ಸಾಧಕರಾಗಿದ್ದರು. ಫಕೀರಿ ಹಾಗೂ ಖಲಂದರಿಯು ಇವರ ಆಚರಣೆಯ ಪಂಥವಾಗಿತ್ತು.


ಶೇಖ್ ಹಮ್ಜಾ ಅವಿವಾಹಿತ ಜೀವನ ಸಾಗಿಸುತ್ತಿದ್ದನು. ಸೂರಿಲ್ಲದೆ ವಸತಿಯಲ್ಲಿ ವಾಸ ಮಾಡುತ್ತಿದ್ದನು. ಅವನು ಶೇಖರ್‌ರ ತತ್ವ-ಸಿದ್ಧಾಂತಗಳಿAದ ಪ್ರಭಾವಿತನಾಗಿದ್ದನು. ನಿರ್ಮಿತ ಸೂರಿನ ಕೆಳಗಡೆ ವಾಸಿಸುವುದು ‘ಶಿರ್ಕ’ (ದೇವರ ಜತೆ ಅನ್ಯರನ್ನು ಸೇರಿಸುವುದು) ಎಂದು ಭಾವಿಸುತ್ತಿದ್ದನು. ಸೂರು ಒಂದೇ ಇದೆ. ಅದು ‘ಏಕ’ನ ಅಧೀನದಲ್ಲಿದೆ ಭಕ್ತರು ಒಂದು ಸೂರಿಗೆ ಸಮನಾಂತರವಾಗಿ ಇನ್ನೊಂದು ಸೂರು ನಿರ್ಮಿಸುವುದು ತರವಲ್ಲ ಎಂದು ನಂಬಿದ್ದನು. ಅಬು ಮುಸ್ಲಿಂ ಬಾಗ್ದಾದಿ ಕುಲೀನ ಸ್ಥಾನದ ತಂದೆಯ ಮಗನಾಗಿದ್ದನು. ಆದರೂ ಮನೆ ಹಾಗೂ ತಂದೆಯ ಸಂಬAಧನ್ನು ತ್ಯಜಿಸಿ ಇಲ್ಲಿ ಬಂದು ಕುಳಿತಿದ್ದನು. ಹಾಗೂ ಅರ್ಹತೆಯು ಪರಮಸತ್ಯದ ಅರ್ಹತೆಯಾಗಿದೆ ಎಂದು ನುಡಿಯುತ್ತಿದ್ದನು. ಅಬು ಜಾಫರ್ ಶಿರಾಜಿಯು ಒಂದು ಸಲ ಧ್ಯಾನ ಸ್ಥಿತಿಯಲ್ಲಿ ತನ್ನ ಉಡುಪನ್ನು ಚಿಂದಿ ಚಿಂದಿಯಾಗಿ ಹರಿದಿದ್ದನು ಹಾಗೂ ಚಾಪೆಯನ್ನು ಸುಟ್ಟು ಹಾಕಿದ್ದನು. ಚಾಪೆಯು ಮಣ್ಣು ಹಾಗೂ ಮಣ್ಣಿನ ಮಧ್ಯೆ ಅಂತರ ಸೃಷ್ಟಿ ಮಾಡುತ್ತದೆ. ಉಡುಪು ಮಣ್ಣನ್ನು ಮಣ್ಣಿನ ಮೇಲೆ ಶ್ರೇಷ್ಠತಾ ಭಾವ ಉಂಟು ಮಾಡುತ್ತದೆ. ಆ ದಿನ ಅವನು ಸರ್ವಪರಿತ್ಯಾಗಿಯಾಗಿ ನಗ್ನವಾಗಿ ನೆಲದ ಮೇಲೆ ಕುಳಿತಿದ್ದನು. ಶೇಖರು ಮಣ್ಣು ತಮ್ಮ ಪಂಥ, ಇಟ್ಟಿಗೆಯನ್ನು ತನ್ನ ತಲೆದಿಂಬಾಗಿ, ಹುಣಸೆ ಮರಕೆ ಬೆನ್ನು ಹಚ್ಚಿ ಕುಳಿತಿದ್ದರು. ಅವರು ಈ ತುಚ್ಛ ಲೌಕಿಕದಿಂದ ಉನ್ನತರಾಗಿದ್ದರು. ಸ್ಮರಣೆ ಮಾಡುತ್ತಾ ಮಾಡುತ್ತಾ ಹಾರಾಡುತ್ತಿದ್ದರು. ಕೆಲವೊಮ್ಮೆ ಗೋಡೆಯ ಮೇಲೆ, ಮಗದೊಮ್ಮೆ ಹುಣಸೇ ಮರದ ಮೇಲೆ ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಆಕಾಶದೆತ್ತರಕ್ಕೆ ಹಾರಿ ವಾತಾವರಣದಲ್ಲಿ ಎಲ್ಲೊ ಅದೃಶ್ಯರಾಗುತ್ತಿದ್ದರು. ಒಂದು ದಿನ ನಾನು ವಿಚಾರಿಸಿದೆ-
“ಯಾ ಶೇಖ್! ಹಾರಾಡುವ ಶಕ್ತಿ ತಮಗೆ ಹೇಗೆ ಪ್ರಾಪ್ತವಾಯಿತು?” ಉಸ್ಮಾನರು ನುಡಿದರು- ಲೋಕ ಅಧೋಗತಿಯಿಂದ ಮೇಲೆದ್ದು ಬಂದೆ. ಅರಿಕೆ ಮಾಡಿಕೊಂಡೆ: ಯಾ ಶೇಖ್! ಲೋಕ ಪರಿತ್ಯಾಗ ಎಂದರೆ ಏನು? ಅವರು ನುಡಿದರು- ಲೋಕ ಪರಿತ್ಯಾಗದ ತಾತ್ಪರ್ಯ ನಿನ್ನ ಚಿತ್ತವಾಗಿದೆ. ಮತ್ತೇ ಕೇಳಿದೆ. ಚಿತ್ತ ಎಂದರೇನು? ಅದಕ್ಕವರು ಈ ಪ್ರಸಂಗವನ್ನು ನುಡಿದರು.
ಶೇಖ್ ಅಬು ಅಲ್ಬಾಸ್ ಅಶ್ಪಾಖಿ಼ಯವರು ಒಂದು ದಿನ ಮನೆಯಲ್ಲಿ ಪ್ರವೇಶಿಸಿದಾಗ, ಅವರ ಹಾಸಿಗೆಯ ಮೇಲೆ ಹಳದಿ ನಾಯಿಯೊಂದು ಮಲಗಿರುವುದನ್ನು ಕಂಡರು. ಬಹುಶಃ ಹಾದಿಯ ನಾಯಿಯು ಬಂದು ಮಲಗಿರಬಹುದೆಂದು ಅವರು ಭಾವಿಸಿದರು. ಅವರು ಅದನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅದು ಅವರ ನಿಲುವಂಗಿಯಲ್ಲಿ ಹೊಕ್ಕು ಅದೃಶ್ಯವಾಯಿತು. ಇದನ್ನು ಕೇಳಿ ನಾನು ಅರಿಕೆ ಮಾಡಿಕೊಂಡೆ
ಯಾ ಶೇಖ್! ಈ ಹಳದಿ ನಾಯಿ ಎಂದರೆ ಏನು?
ನುಡಿದರು- ಹಳದಿ ನಾಯಿ ನಿನ್ನ ಚಿತ್ತವಾಗಿದೆ.
ನಾನು ಕೇಳಿದೆ: ಯಾ ಶೇಖ್! ಹಾಗಾದರೆ ಚಿತ್ತ ಎಂದರೇನು?
ಶೇಖರು ನುಡಿದರು: ಅದು ಲೋಕಾಕಾಂಕ್ಷೆಯ ಅಧೋಗತಿಯಾಗಿದೆ.
ನಾನು ಕೇಳಿದೆ: ಯಾ ಶೇಖ್! ಅಧೋಗತಿ ಎಂದರೇನು?
ಶೇಖ್‌ರು ನುಡಿದರು: ಅಧೋಗತಿ ಎಂದರೆ ಜ್ಞಾನದ ಅಭಾವ
ನಾನು ವಿನಂತಿಸಿಕೊAಡೆ:
ಯಾ ಶೇಖ್ ಜ್ಞಾನದ ಅಭಾವ ಎಂದರೇನು?
ಶೇಖರು ನುಡಿದರು: ಬುದ್ಧಿಜೀವಿಗಳ ಬಾಹುಳ್ಯ. ನಾನು ಕೇಳಿದೆ, ಶೇಖರೇ, ವಿವರಣೆ ಕೊಡಿ, ಅವರು ತರ್ಕವನ್ನು ದೃಷ್ಟಾಂತದ ರೂಪದಲ್ಲಿ ನುಡಿದರು.


ಗತಕಾಲದಲ್ಲಿ ಒಬ್ಬ ದಾನಶೂರನೆಂದು ಹೆಸರುವಾಸಿಯಾಗಿದ್ದ ಬಾದಶಹಾನಿದ್ದನು. ಒಂದು ದಿನ ಅವನ ಆಸ್ಥಾನಕ್ಕೆ ತನ್ನನ್ನು ಬುದ್ದಿಜೀವಿ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಆಗಮಿಸಿದನು. ಹಾಜರಾಗಿ ಮಹಾಪ್ರಭುಗಳೇ ಬುದ್ಧಿಜೀವಿಗಳಿಗೆ ಗೌರವ ದೊರೆಯಬೇಕಾಗಿದೆ ಎಂದು ಬಿನ್ನವಿಸಿದನು. ಬಾದಶಾಹನು ಅವನನ್ನು ರಾಜಡುಪು ಹಾಗೂ ಚಿನ್ನದ ನಾಣ್ಯಗಳನ್ನು ನೀಡಿ ಗೌರವ ಪೂರ್ವಕವಾಗಿ ಕಳುಹಿಸಿಕೊಟ್ಟನು. ಈ ಸುದ್ದಿಯು ವ್ಯಾಪಕ ಪ್ರಚಾರ ಪಡೆಯಿತು. ತನ್ನನ್ನು ಬುದ್ಧಿಜೀವಿಯೆಂದೂ ತಿಳಿಯುತ್ತಿದ್ದ ಮತ್ತೊಬ್ಬ ವ್ಯಕ್ತಿಯು, ಆಸ್ಥಾನಕ್ಕೆ ಬಂದು, ನಿವೇದನೆ ಮಾಡಿ, ತನ್ನ ಇಷ್ಟಾರ್ಥವನ್ನು ಪೂರೈಸಿಕೊಂಡನು. ಹಾಗೆಯೇ ತನ್ನನ್ನೂ ಬುದ್ಧಿಜೀವಿಯೆಂದು ತಿಳಿಯುತ್ತಿದ್ದ ಮೂರನೇ ವ್ಯಕ್ತಿಯೂ ದರ್ಬಾರಿಗೆ ಬಂದು ಬಾದಶಹಾನಿಂದ ಬಳುವಳಿ ಪಡೆದನು. ಮುಂದೆ ಬುದ್ಧಿಜೀವಿಗಳ ಸಮೂಹವೇ ಆಸ್ಥಾನಕ್ಕೆ ಬರಹತ್ತಿತ್ತು. ಎಲ್ಲರೂ ಒಬ್ಬರ ನಂತರ ಒಬ್ಬರು ತಮ್ಮನ್ನು ಬುದ್ಧಿಜೀವಿ ಎಂದು ಹೇಳಿಕೊಂಡು ಇನಾಮು ಪಡೆದುಕೊಂಡು ಹೋಗುತ್ತಿದ್ದರು.
ಆ ಬಾದಶಹಾನ ಮಂತ್ರಿಯು ತುಂಬಾ ಚಾಣಾಕ್ಷನಾಗಿದ್ದನು. ಬುದ್ದಿಜೀವಿಗಳ ಈ ಜನಜಂಗುಳಿಯನ್ನು ಕಂಡು, ಅಸ್ಥಾನದಲ್ಲಿ ಒಂದು ದಿನ ತಲೆ ಮೇಲೆ ಕೈ ಇಟ್ಟುಕೊಂಡು ತಣ್ಣನೆಯ ನಿಟ್ಟುಸಿರು ಬಿಟ್ಟನು. ಇದನ್ನು ಗಮನಿಸಿದ ಬಾದಶಾಹನು ತಣ್ಣನೆಯ ನಿಟ್ಟುಸಿರು ಬಿಡಲು ಕಾರಣವೇನೆಂದು ವಿಚಾರಿಸಿದನು. ಆಗ ಮಂತ್ರಿಯು ಕೈ ಜೋಡಿಸಿ ನುಡಿದನು ‘ಮಹಾಪ್ರಭುಗಳೇ, ನನ್ನ ಪ್ರಾಣದ ಅಭಯ ನೀಡುವುದಾದರೆ ನುಡಿಯುವೆ” ಬಾದಶಹಾನು ಅಭಯ ನೀಡಿದನು. ಆ ಮಂತ್ರಿಯು ನುಡಿದನು- “ಹೇ, ದೈವೀ ಸ್ವರೂಪಿಯೇ, ನಿಮ್ಮ ಸಾಮ್ರಾಜ್ಯವು ಬುದ್ಧಿಜೀವಿಗಳಿಂದ ಬರಿದಾಗಿದೆ.” ಬಾದಶಹಾ ನುಡಿದನು. “ಇದು ವಿಚಿತ್ರ ವಿಸ್ಮಯವಾಗಿದೆ. ಗಮನಿಸುವುದಿಲ್ಲವೇ ನೀನು, ದಿನಾಲು ಇಲ್ಲಿ ಬುದ್ದಿಜೀವಿಗಳು ಬರುತ್ತಾರೆ. ನನ್ನಿಂದ ಇನಾಮು ತೆಗೆದುಕೊಂಡು ಹೋಗುತ್ತಾರೆ, ಅದನ್ನು ನೋಡಿಯೂ ನೀನು ಹೀಗೆ ನುಡಿಯುವಿಯಾ?


ಆ ಚಾಣಾಕ್ಷ್ಯ ಮಂತ್ರಿ ಆಗ ನುಡಿಯುತ್ತಾನೆ. “ಹೇ ವಿಶಾಲ ಹೃದಯಿ ಪ್ರಭುವೇ, ಬುದ್ಧಿಜೀವಿಗಳು ಹಾಗೂ ಕತ್ತೆಗಳಿಗೆ ಸಂಬAಧಿಸಿದAತೆ ಒಂದು ಲೋಕೋಕ್ತಿ ಇದೆ. ಎಲ್ಲಿ ಎಲ್ಲರೂ ಕತ್ತೆಗಳಾಗಿರುತ್ತಾರೆ, ಅಲ್ಲಿ ಕತ್ತೆಗಳಿರುವುದಿಲ್ಲ ಹಾಗೂ ಎಲ್ಲಿ ಎಲ್ಲರೂ ಬುದ್ದಿಜೀವಿಗಳಾಗಿರುತ್ತಾರೆ. ಅಲ್ಲಿ ಬುದ್ಧಿಜೀವಿಗಳ್ಯಾರೂ ಇರುವುದಿಲ್ಲ.
ಈ ತರ್ಕವನ್ನು ಆಲಿಸಿ, ನಾನೊಂದು ಪ್ರಶ್ನೆ ಕೇಳಿದೆ.
ಎಲ್ಲರೂ ಬುದ್ಧಿಜೀವಿಗಳಾಗಿದ್ದು, ಯಾರೂ ಬುದ್ಧಿಜೀವಿಗಳಿಲ್ಲದ ಸ್ಥಿತಿ ಯಾವಾಗ ಬರುತ್ತದೆ. ಶೇಖರು ನುಡಿದರು- ಯಾವಾಗ ಜ್ಞಾನಿಯು ತನ್ನ ಜ್ಞಾನವನ್ನು ಮರೆಮಾಚುತ್ತಾನೆ. ಪ್ರಶ್ನಿಸಿದೆ ಶೇಖರೇ ಜ್ಞಾನಿಯು ಯಾವಾಗ ಜ್ಞಾನವನ್ನು ಮರೆಮಾಚುತ್ತಾನೆ. ಆಗ ನುಡಿದರು ಅಜ್ಞಾನಿಯ ಜ್ಞಾನಿ, ಹಾಗೂ ಜ್ಞಾನಿಯ ಅಜ್ಞಾನಿ ಎನಿಸಿಕೊಂಡಾಗ, ಮತ್ತೆ ಪ್ರಶ್ನಿಸಿದೆ- ಅಜ್ಞಾನಿಯು ಜ್ಞಾನಿ ಹಾಗೂ ಜ್ಞಾನಿಯ ಅಜ್ಞಾನಿ ಯಾವಾಗ ಎನಿಸಿಕೊಳ್ಳುತ್ತಾನೆ. ಇದಕ್ಕೆ ಉತ್ತರವಾಗಿ ಮತ್ತೊಂದು ತರ್ಕವನ್ನು ವಿವರಿಸಿದರು. ಅದು ಹೀಗಿದೆ- ಒಬ್ಬ ಪ್ರಖ್ಯಾತ ಜ್ಞಾನಿಗೆ ಬಡತನವು ಅತಿಯಾಗಿ ಕಾಡಿತು. ಇದರಿಂದಾಗಿ ಅವನು ತನ್ನ ನಗರದಿಂದ ಇನ್ನೊಂದು ನಗರಕ್ಕೆ ವಲಸೆ ಹೋದನು. ಈ ಎರಡನೇ ನಗರದಲ್ಲಿ ಒಬ್ಬ ಗೌರವಾನ್ವಿತ ಹಿರಿಯರಿರುತಿದ್ದರು. ಅವರು ತಮ್ಮ ನಗರವಾಸಿಗಳಿಗೆ ಇಂತಹ ದಿನ, ಇಂತಹ ಸಮಯದಲ್ಲಿ ಒಬ್ಬ ಜ್ಞಾನಿಯು ಆಗಮಿಸುವವರಿದ್ದಾರೆ. ಅವರನ್ನು ಗೌರವಪೂರ್ವಕವಾಗಿ ಉಪಚರಿಸಿ, ಎಂದುಹೇಳಿ ತಾವು ಮತ್ತೊಂದು ಪ್ರದೇಶದ ಪ್ರಯಾಣಕ್ಕೆ ತೆರಳಿದರು. ನಗರವಾಸಿಗಳೆಲ್ಲರೂ ನಿಗದಿತ ಸಮಯಕ್ಕೆ ಬಂದರಿಗೆ ಆಗಮಿಸಿದರು. ಅದೇ ಸಮಯಕ್ಕೆ ಒಂದು ಹಡಗು ಬಂದು ತಂಗಿತು. ಇದೇ ಹಡಗಿನಲ್ಲಿ ಆ ಜ್ಞಾನಿಗಳು ಪ್ರಯಾಣ ಮಾಡುತ್ತಿದ್ದರು. ಅದೇ ಹಡಗಿನಲ್ಲಿ ಒಬ್ಬ ಚಮ್ಮಾರನು ಅವರ ಸಹ ಪ್ರಯಾಣಿಕನಾಗಿದ್ದನು. ಆ ಚಮ್ಮಾರನು ತುಂಬಾ ಕುಟೀಲನೂ, ಆಲಸಿಯೂ ಆಗಿದ್ದನು. ಸರಳ ಸ್ವಭಾವದ ಈ ಜ್ಞಾನಿ ಮಹಾಪುರುಷನನ್ನು ಕಂಡು ಅವನು ತನ್ನ ಸಾಮಗ್ರಿಗಳನ್ನು ಅವರ ಮೇಲೆ ಹೇರಿದನು. ಹಾಗೂ ತಾನು ಕೈ ಬೀಸುತ್ತಾ ನಡೆದನು. ಹಡಗಿನಿಂದ ಇಬ್ಬರೂ ಇಳಿದಾಗ ಸೆಣಬಿನ ವಸ್ತçಧಾರಿ ಹಾಗೂ ಹಲವು ಸಾಮಗ್ರಿಗಳನ್ನು ಹೊತ್ತುಕೊಂಡಿದ್ದ ಅವರನ್ನು ಯಾರೂ ಗಮನಿಸಲಿಲ್ಲ ಹಾಗೂ ಚಮ್ಮಾರನನ್ನು ಗೌರವಪೂರ್ವಕ ಇಳಿಸಿಕೊಂಡು ತಮ್ಮ ಜೊತೆ ಕರೆದೊಯ್ದರು.

-ಮುಂದುವರೆಯುವುದು

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಅಲ್- ಫಿಜಿರೀ : ಪರ್ಶಿಯನ್ ಕೊಲ್ಲಿಯ ಸಮುದ್ರ ಸಂಗೀತ

1930ನೇ ದಶಕದ ವಿಶಾಲವಾದ ತೈಲ ನಿಕ್ಷೇಪಗಳ ಆವಿಷ್ಕಾರಕ್ಕಿಂತಲೂ ಪೂರ್ವ ಕಾಲದಲ್ಲಿ ಪರ್ಶಿಯನ್ ಕೊಲ್ಲಿಯಲ್ಲಿನ ಜನಜೀವನ ವಿಧಾನ ಇಂದಿನ ಸ್ಥಿತಿಗತಿಗಳಿಗಿಂತ ಬಹಳ ಭಿನ್ನಾವಸ್ಥೆಯಲ್ಲಿತ್ತು. ಆಧುನಿಕ ಬಹ್ರೇನ್, ಕತಾರ್, ಕುವೈತ್ ಮತ್ತು ಸಮೀಪ ಪ್ರದೇಶದಲ್ಲಿನ ಪುರುಷರು ಆ ಕಾಲದಲ್ಲಿ ಹೆಚ್ಚಾಗಿ ಮೀನುಗಾರಿಕೆ, ಹಡಗು ನಿರ್ಮಾಣ, ನೌಕಾ ಕೆಲಸ, ಸಾಗರದಾಳದಿಂದ ಮುತ್ತುಗಳ ಸಂಗ್ರಹ ಇತ್ಯಾದಿ ಸಮುದ್ರಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುತ್ತು ಸಂಗ್ರಹಣಾ ಉದ್ಯಮ ಇತರ ಉದ್ಯೋಗಗಳಿಗಿಂತ ವಿಭಿನ್ನವಾಗಿದ್ದರೂ ವಿದೇಶಿ ವಹಿವಾಟುಗಳಲ್ಲಿ ಇತರ ಉದ್ಯಮಗಳಿಗಿಂತ ಹೆಚ್ಚು ಲಾಭದಾಯಕವಾಗಿತ್ತು. ವಿಶೇಷವಾಗಿ ಇತರ ದೇಶಗಳಿಗೆ ಮುತ್ತುಗಳನ್ನು ಮಾರಾಟ ಮಾಡುವ ಅಂದಿನ ನೌಕಾ ನಾಯಕರುಗಳ ಮತ್ತು ವ್ಯಾಪಾರಿಗಳ ಪ್ರಮುಖ ವ್ಯಾಪಾರವಾಗಿತ್ತು. ಆದರೆ, ಪೂರ್ವ ಆಫ್ರಿಕಾದ ಅನೇಕ ಗುಲಾಮರನ್ನು ಒಳಗೊಂಡ ಸಾಮಾನ್ಯ ಮುಳುಗು ತಜ್ಞರ ಪಾಲಿಗೆ ಈ ಉದ್ಯೋಗ ಆಶಾದಾಯಕವಾಗಿದ್ದರೂ,, ತುಂಬಾ ಕಷ್ಟಕರ ಮತ್ತು ಅಪಾಯಕಾರಿಯಾತ್ತು. ನಾಲ್ಕೈದು ತಿಂಗಳುಗಳ ಕಾಲ ಮುಂದುವರೆಯುತ್ತಿತ್ತು ಮತ್ತು ಶೋಧನೆಯ ಸಂಧರ್ಭ ಸಾಕಷ್ಟು ಮುಳುಗು ತಜ್ಞರು ಅಪೌಷ್ಟಿಕತೆ, ರಕ್ತ ಹೀನತೆ, ಶೀತ, ಕೋಮಾ ಇತ್ಯಾದಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿತ್ತು. ಕೆಲವರು ಟೈಲ್, ಶಾರ್ಕ್ ಇತ್ಯಾದಿ ಮತ್ಸ್ಯದಾಕ್ರಮಣದಿಂದ ಸಾವಿಗೀಡಾಗುವ ಸಂದರ್ಭವೂ ಬರುತ್ತಿತ್ತು.. ‘ಕತಾರಿ’ಗಳ ಮೊದಲ ನಾಯಕರಾದ ‘ಮಹಮ್ಮದ್ ಬಿನ್ ಅಸ್ಸಾನಿ’ ಯವರ ಪ್ರಸಿದ್ಧ ಮಾತುಗಳು ಈ ರೀತಿಯಾಗಿದೆ.
“ಮೇಲ್ದರ್ಜೆಯಿಂದ ಕೆಳದರ್ಜೆಯವರೆಗಿನ ನಾವೆಲ್ಲರೂ ‘ಮುತ್ತು’ ಎಂಬ ಯಜಮಾನನ ಅಡಿಯಾಳುಗಳಾಗಿದ್ದೇವೆ”.

ಅಂತಹ ವಿಶಿಷ್ಟ ಉದ್ಯೋಗದ ಸುತ್ತ ಅಸಂಖ್ಯಾತ ಜಾನಪದ ಗಾಯನ ಶೈಲಿಗಳು ರೂಪು ಪಡೆಯಿತು. ಸಾಮಾನ್ಯವಾಗಿ ಆ ವಿಧಾನಗಳನ್ನು ‘ಫಿಜಿರೀ’ ( الفجري ) ಎಂದು ಕರೆಯಲಾಗುತ್ತದೆಯಾದರೂ, ‘ಸಾಗರ ಕಲೆ’ (فن البحري) ಯೆಂಬ ವಿಶಾಲ ಕ್ಯಾಟಗರಿಯ ಒಂದು ಭಾಗವಾಗಿ ಅವು ಪರಿಗಣಿಸಲ್ಪಡುತ್ತಿದೆ.

ಮುತ್ತು ಸಂಗ್ರಹಣಾ ಉದ್ಯಮದಂತೆಯೇ, ಅದರೊಂದಿಗೆ ಸಂಬಂಧಿಸಿದ ಸಂಗೀತ ಸಂಪ್ರದಾಯ ಫಿಜಿರಿಯೂ ಸಾಮಾನ್ಯ ಜನರೆಡೆಯಲ್ಲಿ ಅಸಾಧ್ಯವೂ, ಅಪಾಯಕಾರಿಯೂ ಆದ ಕಲೆಯಾಗಿಯೇ ಉಳಿಯಿತು. ಫಿಜಿರೀ ಸಂಗೀತ ಕಲೆಯ ಪ್ರಾರಂಭ ಅಮಾನುಷಿಕವಾದದ್ದೆಂಬ ವಿಶ್ವಾಸ, ಪ್ರಸ್ತುತ ಮನೋಭಾವವನ್ನು ಅವರಲ್ಲಿ ದೃಢಪಡಿಸಿತು. ಒಂದು ದಂತಕಥೆಯನುಸಾರ ಒಂದು ಸುದೀರ್ಘ ಪ್ರಯಾಣದ ಮಧ್ಯೆ ‘ದಿಲ್ಮೂನ್ ‘ (DILMUN) ಪ್ರದೇಶದ ಮೂರು ಅಲೆಮಾರಿಗಳು ನಿಗೂಢವಾದ ಒಂದು ಚರ್ಚ್ ಬಳಿಗೆ ತಲುಪಿದರು. ಅಲ್ಲಿ ಅವರು ಪ್ರಾಚೀನ ಜೀವಿಗಳಾದ ‘ಜಿನ್ನ್ ‘ ವರ್ಗದವರನ್ನು ಭೇಟಿಯಾಗುವರು. ಮಾನವ ರೂಪ ಮತ್ತು ಕತ್ತೆ ರೂಪ ಸಮ್ಮಿಶ್ರಣಗೊಂಡ ಪತ್ತೆ ಹಚ್ಚಲಸಾಧ್ಯ ವಿಶಿಷ್ಟ ಆಕೃತಿಯೊಂದಿಗೆ ಪ್ರತ್ಯಕ್ಷಗೊಂಡ ಅವರು ಯಾತ್ರಿಕರಿಗೆ ತಾವೆಂದೂ ಕೇಳಿತಿಳಿದಿರದ ಅಪರಿಚಿತ ಕಾವ್ಯಗಳನ್ನು ಕಲಿಸಿದರು. ಆದರೆ ತಮ್ಮ ಅಂತಿಮ ಕ್ಷಣದವರೆಗೂ ತಾವು ಸಂಧಿಸಿದ ಆ ವಿಚಿತ್ರ ಅನುಭವವನ್ನು ಇತರರೊಂದಿಗೆ ಹಂಚಲು ಯಾತ್ರಿಕರು ನಿರಾಕರಿಸಿದರು. ನಂತರ ಆ ಯಾತ್ರಿಕರಲ್ಲೊಬ್ಬ ಮರಣ ಶೈಯೆಯಲ್ಲಿರುವ ಅಂತಿಮ ಕ್ಷಣದಲ್ಲಿ ತನ್ನ ಬಂಧುಗಳೊಂದಿಗೆ ಆ ರಹಸ್ಯ ಬೇಧಿಸಿ ಫಿಜಿರಿಯ ಜ್ಞಾನವನ್ನು ಅವರಿಗೆ ತಲುಪಿಸುವಲ್ಲಿ ಸಫಲನೂ ಆದನು. ಈ ರೀತಿಯಾಗಿ ಫಿಜಿರೀ ಗಾಯನ ಶೈಲಿ ಅರಬ್ ಸಂಗೀತ ಜಗತ್ತಿಗೆ ಮತ್ತೊಂದು ಮೈಲುಗಲ್ಲಾಗಿ ಸೇರ್ಪಡೆಯಾಯಿತು. ಪ್ರಯಾಣದ ಮಧ್ಯೆಯಿರುವ ಸಾಪ್ತಾಹಿಕ ಸಭೆಗಳಲ್ಲಾಗಿತ್ತು ಹಡಗಿನ ಸಿಬ್ಬಂದಿಗಳು ಹೆಚ್ಚು ಫಿಜಿರೀ ಸಂಗೀತಗಳನ್ನು ಪ್ರದರ್ಶಿಸುತ್ತಿದ್ದುದು. ಕೆಲ ಸಂದರ್ಭಗಳಲ್ಲಿ ‘ದಾರ್ ‘(Dar) ಎಂಬ ವಿಶೇಷ ಕಟ್ಟಡದಲ್ಲೂ ಫಿಜಿರಿಗಾಗಿ ಅವರ ಸಮ್ಮಿಲನ ನಡೆಯುತ್ತಿತ್ತು. ಕೆಲವೊಮ್ಮೆ ನೌಕಾ ನಾಯಕನ ಮನೆಯಲ್ಲಿಯೂ ಪ್ರಯಾಣಿಕರು ಸಂಗೀತಕ್ಕಾಗಿ ಒಟ್ಟುಗೂಡುತ್ತಿದ್ದರು. ಸುಮಾರು ನಲ್ವತ್ತಕ್ಕಿಂತಲೂ ಮಿಕ್ಕ ಪುರುಷರು ಒಂದು ಫಿಜಿರೀ ಸಂಗಮದಲ್ಲಿ ಭಾಗವಹಿಸಲು ಅವಕಾಶವಿತ್ತು. ಸಂಗೀತ ಸಭೆಯ ವಿರಾಮದ ವೇಳೆ ಪಾನೀಯ ಕುಡಿದು, ಸುವಿಶಾಲ ಸಾಗರದಲ್ಲಿನ ನೌಕಾಯಾನದ ವಿಶಿಷ್ಟ ಅನುಭವಗಳನ್ನು ಮೆಲುಕು ಹಾಕುತ್ತಾ ಮುಂಜಾವಿನವರೆಗೂ (فجر) ನೃತ್ಯದೊಳು ತಲ್ಲೀನರಾಗಿ, ತಮ್ಮನ್ನು ತಾವೇ ಕಳೆದುಕೊಳ್ಳುವರು. ಆ ಸುಪ್ರಭಾತ ಪ್ರಾರ್ಥನೆ (فجر) ಯಿಂದಲೇ ಫಿಜಿರೀ ಕಲಾ ಸಂಗೀತಕ್ಕೆ ಆ ಹೆಸರು ಬಂದಿದೆಯೆಂಬ ಐತಿಹ್ಯವೂ ಇದೆ.

ಇದಲ್ಲದೆ, ‘ಅಹಾಸಿಜ್’ (Ahasij) ಅಥವಾ ‘ನಿಹ್ಮಾ’ (Nihma) ಎಂಬಿತ್ಯಾದಿ ಹಡಗಿನ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಕೆಲವೊಂದು ಹಾಡುಗಳು ಫಿಜಿರಿಯ ಆಂತರ್ಯದಲ್ಲಿ ಜೀವ ತಳೆದು ಅದರದ್ದೇ ಆದ ರೂಪುರೇಷೆಗಳನ್ನು ಹೆಣೆದುಕೊಂಡಿದೆ. ಉದಾಹರಣೆಗೆ, ‘ಮೈದಾಫ್’ (Mydaf) ಹಡಗಿನ ರೋಯಿಂಗ್ ಸಮಯದಲ್ಲಿ ಹಾಡುವ ಸಂಗೀತವಾಗಿ ಪ್ರಚಲಿತದಲ್ಲಿತ್ತು. ಚುಟುಕು ಯಾತ್ರೆಗಳಲ್ಲಿ ಹಾಡುವ ಸಂಗೀತಗಳಿಗೆ ‘ಬಾಸ್ಸ’ (Basseh) ಎಂದೂ, ದೀರ್ಘ ಪ್ರಯಾಣದಲ್ಲಿನ ಹಾಡುಗಳಿಗೆ ‘ಖೈಲಾಮಿ ‘(Qaylami) ಎಂದೂ ಕರೆಯುತ್ತಿದ್ದರು. ಅದೇರೀತಿ, ‘ಖ್ರಾಬ್ ‘(Khrab) ಎಂಬ ನಾಮಧೇಯದಲ್ಲಿ ಹಡಗಿನ ಆಂಕರ್ ಕಳಚಲು ಹಗ್ಗವನ್ನು ಎಳೆಯುವಾಗ ಹಾಡುವ ಪದ್ಧತಿಯೂ ಅವರೆಡೆಯಲ್ಲಿದ್ದವು. ಆ ಕಾರಣದಿಂದಲೇ ಉದ್ಯೋಗ ವಿಧಾನಗಳ ಪ್ರಭಾವವನ್ನು ಆ ಹಾಡುಗಳ ಸಂಯೋಜನೆ ಮತ್ತು ಗಾಯನದಲ್ಲಿ ಕಾಣಲು ಸಾಧ್ಯವಾಗುವುದು.

ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಉದ್ಯಮ ಸಂಗೀತಗಳಲ್ಲಿ ಕಂಡುಬರುವ “ಕರೆ ಮತ್ತು ಉತ್ತರ “(Call and response) ಎಂಬ ಸಾಮಾನ್ಯ ರಚನೆಯ ಸರಣಿ ಇಲ್ಲಿಯೂ ಮುಂದುವರೆದು ಫಿಜಿರೀ ಸಂಗೀತದ ಪರಿಪೂರ್ಣತೆಯೆಡೆಗಿನ ಕಾಲುದಾರಿಯಾಗಿ ಪರಿಣಮಿಸುತ್ತದೆ. ‘ನಹ್ಹಾಂ ‘(Soloist) ಎಂಬ ಒಬ್ಬಂಟಿ ಹಾಡುಗಾರನನ್ನು ಫಿಜಿರೀಯ ನಾಯಕತ್ವ ನಿರ್ವಹಿಸುವುದಕ್ಕಾಗಿ ನಿಯೋಜಿಸಲಾಗುತ್ತದೆ. ಪ್ರಯಾಣದ ವೇಳೆ ನಾವಿಕರ ಉತ್ಸಾಹವನ್ನು ಉತ್ಕಟಿಸಿ ಹಾಡುವುದನ್ನು ಹೊರತುಪಡಿಸಿ ಬೇರೆ ಕೆಲಸವಿಲ್ಲದ ವ್ಯಕ್ತಿಯಾಗಿರುತ್ತಾನೆ ಆತ. ಉತ್ತಮ ಧ್ವನಿ ಮಾಧುರ್ಯದೊಂದಿಗೆ ಉನ್ನತ ಸಂಗೀತ ಸ್ವರದೊಳು ನಹ್ಹಾಂ ಕಾವ್ಯಾತ್ಮಕ ಪದ್ಯಗಳನ್ನು ಹಾಡಲು ಪ್ರಾರಂಭಿಸುವನು. ತತ್ಸಮಯ, ನಾವಿಕರ ಒಂದು ತಂಡ ಆತನ ಗಾಯನ ಶೈಲಿಗೆ ಅನುಗುಣವಾಗಿ ಆವೇಶಭರಿತರಾಗಿ ಮತ್ತು ಉತ್ಸಾಹಪೂರ್ಣರಾಗಿ ಕೂಗು ಹಾಕುತ್ತಾ, ತಮ್ಮ ಶಬ್ಧೋಪಯೋಗದ ಮೂಲಕ ಮೆಲೋಡಿಕ್ ವಿಧಾನಗಳನ್ನು ರೂಪಿಸಲು ಪ್ರಯತ್ನಿಸುವರು. ಅವರ ಸುಮಧುರ ಶಬ್ಧಗಳು ನಹ್ಹಾಮಿನ ಸಂಗೀತ ಶ್ರಾವ್ಯಕ್ಕಿಂತ ಸ್ವಲ್ಪ ಆಕ್ಟೇವ್ಸ್ (ಸಂಗೀತದಲ್ಲಿನ ಒಂದು ಧ್ವನಿ ವಿಧಾನ) ಕಡಿಮೆಯಿರುತ್ತದೆ. ಅರಬ್ ಸಂಗೀತ ಕಲೆಯ ಮತ್ಯಾವ ರೂಪದಲ್ಲಿಯೂ ಕಾಣಸಿಗದ ಆ ಅಸಾಮಾನ್ಯ ವಿಧಾನ ಸಾಗರದಾಳಕ್ಕೆ ಚಲಿಸುವಾಗ ಮುಳುಗು ತಜ್ಞರನುಭವಿಸುವ ಸಮುದ್ರ ರೋಧನವನ್ನು ಅನುಕರಿಸುವಂತಿರುತ್ತದೆ.

ಮುಳುಗು ತಜ್ಞರ ಕಠಿಣ ಜೀವನ, ಸಮುದ್ರಯಾನ ಮತ್ತು ಸಾಗರ ತಳದಲ್ಲಿ ದಾರಿ ನೋಡುತ್ತಿರುವ ಅಪಾಯಗಳು, ಕುಟುಂಬಗಳೊಂದಿಗಿನ ಪುನರ್ಮಿಲನಾ ಸಂಭ್ರಮ ಎಂಬಿತ್ಯಾದಿ ವಸ್ತುಗಳನ್ನಿಟ್ಟುಕೊಂಡು ಫಿಜಿರೀ ಸಾಲುಗಳ ಧಾಟಿ ಮುಂದುವರೆಯುತ್ತದೆ. ಬರವಣಿಗೆಯ ಸಾಲುಗಳು ಸಾಮಾನ್ಯವಾಗಿ ಅವುಗಳನ್ನು ರಹಸ್ಯ ನಿರ್ಣಯಗಳಾಗಿಯೇ ಕಟ್ಟಿಕೊಡುವಲ್ಲಿ ತಮ್ಮ ಪಾತ್ರ ಭದ್ರಪಡಿಸಿಕೊಂಡಿದೆ. ಗಾಯಗಳು, ತೀರ್ಪು, ಸಮುದ್ರದ ಅತಿಯಾದ ಶಕ್ತಿ ಎಂಬಿತ್ಯಾದಿ ಉಲ್ಲೇಖಗಳಲ್ಲಿರುವ ಭೌತಿಕ ಸಂಕಷ್ಟಗಳು ಮಾನವನ ಸಹಜ ಸಂಕಲ್ಪಕ್ಕಿಂತಲೂ ವ್ಯತಿರಿಕ್ತವಾಗಿದೆ.

‘ಮುರ್ಶಿದ್ ಬಿನ್ ಸಅದ್ ಅಲ್- ಬಿತಾಲಿ’ ಯ ಫಿಜಿರೀ ಕಾವ್ಯಕ್ಕೆ ಸಂಶೋಧಕ ‘ನಾಸರ್ ಅಲ್- ತಾಯ್’ ನೀಡುವ ಭಾವಾನುವಾದ ಈ ರೀತಿಯಾಗಿದೆ,
“ಕಿರುನಗುವಿನೊಳೂ ಸಾವಿನೊಂದಿಗೂ ಅದರ ಸರ್ವ ಅಂಶಗಳೊಂದಿಗೂ ಹೋರಾಡುತಿಹರು ಅವರು..”

‘ಓ ಮಾತೃ ಹೀನರಾದ ಮುಳುಗು ತಜ್ಞರಿಗೆ ಸಾಕ್ಷಿಯಾಗಿ ಈ ದೀರ್ಘ ರಾತ್ರಿಗಳೊಲು ನಾ ಹೇಗೆ ಬಳಲುತಿಹೆನು ಒಂದು ತಿಂಗಳು ಕಳೆದು ಕಣ್ಮರೆಯಾಗುತ್ತಿದ್ದಂತೆಲ್ಲ ಇನ್ನೊಂದು ತಿಂಗಳು ಅನುಸರಿಸುತಿಹುದು ಕಣ್ಣುಗಳೊಲು ಮಂಜು ಹತ್ತುವವರೆಗೂ…’

ಮೆಲೊಡಿಕಲ್ ರಚಿಸುವ ಸಂಗೀತೋಪಕರಣಗಳಿಲ್ಲದೆ ಫಿಜಿರೀ ಸಂಗೀತ ಕಲೆಯು ಪ್ರದರ್ಶಿಸಲ್ಪಡುವುದು ಚಪ್ಪಾಳೆ ಸ್ವರದ ತಾಳಕ್ಕೆ ಅನುಗುಣವಾಗಿಯಾಗಿದೆ. ಆದರೆ, ಅನೇಕ ತಾಳವಾದ್ಯಗಳನ್ನು ದಾರ್ ಸಂಗೀತ ಕಚೇರಿಗಳಲ್ಲಿ ಬಳಸಲಾಗುತ್ತದೆ. ತಬಲ,ಮಿರ್ವಾಸ್ ಎಂಬೀ ಎರಡು ರೀತಿಯ ಡಬಲ್ ಹೆಡ್ ಸಿಲಿಂಡರ್ ಡ್ರಮ್ಮುಗಳು, ‘ತಾರ್ ‘ ಎಂಬ ಒನ್ ಸೈಡ್ ಡ್ರಮ್ಮು ಸೆಟ್ಟು. ‘ತೂಸ್ ‘ ಎಂಬ ಒಂದು ಸಣ್ಣ ಪಾತ್ರೆ. ನೀರಿಗಾಗಿ ಉಪಯೋಗಿಸುವ ‘ಜಹ್ಲಾ ‘ ಎಂಬ ಮಣ್ಣಿನ ಮಡಕೆಗಳು ಇತ್ಯಾದಿ ಅವುಗಳಲ್ಲಿ ಪ್ರಮುಖವಾದವುಗಳು. ಇತರ ಅರೇಬಿಕ್ ನೃತ್ಯ ಕಲೆಗಳಲ್ಲಿ ಕಾಣಸಿಗದ ನಿಧಾನಗತಿಯ ದೇಹಚಲನೆಯಿಂದ ಫಿಜಿರೀ ಸಂಗೀತ ಕಲೆಯು ಅನುಕರಿಸಲ್ಪಟ್ಟಿದೆ. ನರ್ತಕರು ತನ್ಮಧ್ಯೆ ತೋಳನ್ನು ಮೇಲಕ್ಕೆತ್ತಿ – ಕೆಳಗಿಳಿಸಿ, ಪರಸ್ಪರ ಸ್ಪರ್ಶಿಸುವುದೂ – ಸವರುವುದೂ ಮಾಡುವರು. ಸಂಗೀತದೊಳಗಿನ ಈ ಕ್ರಿಯೆಯು ಆರೋಗ್ಯ ಸ್ವಾಸ್ಥ್ಯದೆಡೆಗಿನ ಹೆಜ್ಜೆಯನ್ನಾಗಿದೆ ಸಂಕೇತಿಸುವುದು. ಈ ನಿಧಾನಗತಿಯ ಗೋಡೆಗಳ ಮಧ್ಯೆಯಿರುವ ಮುಳುಗು ತಜ್ಞರ ನೀರಿನೆಡೆಗಿನ ಜಿಗಿತಗಳನ್ನು ಸೂಚಿಸುವ ತ್ವರಿತ ಹೊರಚಿಮ್ಮುವಿಕೆಯು, ಕಾಲಕಾಲಕ್ಕೆ ಫಿಜಿರೀ ಕಲೆಯ ಹರಿವಿಗೆ ಅಡಚಣೆಯಾದಂತಿರುತ್ತದೆ.

ಜಪಾನಿನ ಮುತ್ತು ಸಂಸ್ಕರಣಾ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಕೊಲ್ಲಿ ರಾಷ್ಟ್ರಗಳ ತೈಲ ಆವಿಷ್ಕಾರದ ಸಂಶೋಧನೆಯೋತ್ತರ ಸಂದರ್ಭ, ಮುತ್ತು ಸಂಗ್ರಹಣಾ ಸಂಸ್ಕೃತಿ ನಿಧಾನವಾಗಿ ಮಾಯವಾಗಲಾರಂಭಿಸಿತು. 1960 ರಲ್ಲಿ ಬ್ರಿಟೀಷ್ ಎಥ್ನೋಮ್ಯೂಸಿಕಾಲಜಿಸ್ಟ್ ‘ಡೇವಿಡ್ ಫಾನಶಾವೇ ‘(David Fanshawe) ಮುಳುಗು ತಜ್ಞರ ಸಂಗೀತ ಶ್ರಾವ್ಯ ಆಲಿಸಲು ಮತ್ತು ಅವುಗಳನ್ನು ರೆಕಾರ್ಡ್ ಮಾಡುವ ಮೂಲಕ ಮುಂಬರುವ ತಲೆಮಾರುಗಳೆಡೆಯಲ್ಲಿಯೂ ಅದರ ಜೀವಂತಿಕೆಯನ್ನು ಉದ್ದೇಶಿಸಿ ಬಹ್ರೇನಿಗೆ ತಲುಪಿದಾಗ ಅಂತಹ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಕೇವಲ ನಾಲ್ಕು ಹಡಗುಗಳು ಮಾತ್ರವೇ ಉಳಿದು ಫಿಜಿರೀ ಸಂಗೀತ ಪರಂಪರೆಯೇ ಅಳಿವಿನಂಚಿನಲ್ಲಿತ್ತು. ದುರಾದೃಷ್ಟವಶಾತ್ ಅವುಗಳೂ ಮೀನುಗಾರಿಕೆಗೆ ತೆರಳಿಯಾಗಿತ್ತು. ಆದ್ದರಿಂದ, ಆಂಕರ್ ಮೇಲೆತ್ತುವಾಗ ಪ್ರದರ್ಶಿಸುವ ಹಾಡುಗಳನ್ನು ದಾಖಲಿಸಲು ಅವರಿಗೆ ವಿಶೇಷ ತಂತ್ರಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಯಿತು. ದಡದಲ್ಲಿ ಹಡಗಿನ ಹಗ್ಗದ ಬದಲು ಬಸ್ ಟೈರಿನ ಸುತ್ತ ಸುತ್ತಿರುವ ಒಂದು ಹಳೆಯ ಹಗ್ಗವನ್ನು ಎಳೆದುಕೊಂಡು ನಾವಿಕರು ‘ಖ್ರಾಬ್ ‘ ಸಂಗೀತವನ್ನು ಪ್ರದರ್ಶಿಸಲು ಶ್ರಮಿಸಿದರು.

1970 ರ ದಶಕ, ಫಿಜಿರೀ ಸಂಗೀತ ಸಂಪ್ರದಾಯ ಮತ್ತೊಮ್ಮೆ ಗುರುತಿಸಲ್ಪಟ್ಟಿತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಪ್ರಜ್ಞಾಪೂರ್ವಕ ಜಾಗೃತ ಕ್ರಿಯೆಯ ಭಾಗವಾಗಿ ಸೇರ್ಪಡೆಯಾಯಿತು. ಮುತ್ತು ಸಂಗ್ರಹಣಾ ಸಂಸ್ಕೃತಿಯ ವಾಣಿಜ್ಯ ಮೌಲ್ಯವು ಕ್ರಮೇಣ ಕಣ್ಮರೆಯಾದ್ದರಿಂದ, ನೌಕಾ ಉದ್ಯೋಗ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಯಥೇಷ್ಚ ಹಾಡುಗಳನ್ನು ಪ್ರದರ್ಶಿಸುವುದು ಅಸಾಧ್ಯವಾಯಿತು. ಆದಾಗ್ಯೂ, ವಿಶೇಷ ದಾರ್ ಬಂಗಲೆಗಳಲ್ಲಿ ಫಿಜಿರೀ ಸಂಗೀತ ಕಲೆಗಳನ್ನು ಪ್ರದರ್ಶಿಸುವಲ್ಲಿಯೂ, ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವಲ್ಲಿಯೂ ರಾಷ್ಟ್ರವು ಅವರಿಗೆ ಸಂಪೂರ್ಣ ಬೆಂಬಲ ನೀಡುವಲ್ಲಿ ಯಶಸ್ವಿಯಾಗಿದೆ ಎಂಬುದು ತೃಪ್ತಿಕರ. ಇಂದು ಶಾಪಿಂಗ್ ಮಾಲುಗಳು ಮತ್ತು ಸಂಗೀತ ಹಾಲುಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪರ್ಶಿಯನ್ ಕೊಲ್ಲಿಯ ಗತ ಕಾಲದ ವೈಭವದ ಪ್ರತೀಕವಾಗಿ ಫಿಜಿರೀಯ ಅಮೂರ್ತ ಆಯಾಮಗಳನ್ನು ಕಣ್ತುಂಬಿಕೊಳ್ಳಬಹುದು. ಆದರೆ, ಅದು ಫಿಜಿರೀಯ ಸಂಗೀತ ಸಂಸ್ಕೃತಿಯ ಕ್ಲಾಸಿಕಲ್ ಅಂಶಗಳೊಂದಿಗೆ ‘ಪಾಶ್ಚಾತ್ಯ ಸ್ವರಮೇಳ ಸಂಗೀತ ‘(Symphonic music) ದ ಸಂಯೋಜಿತ ಪ್ರದರ್ಶನವಾಗಿ ಮಾತ್ರ. ಸಮಕಾಲೀನ ಇಲೆಕ್ಟ್ರಾನಿಕ್ ಸಂಗೀತಗಾರರು ಮತ್ತು ಅರಬ್ ವಂಶಜರಾದ ಮಲ್ಟಿಮೀಡಿಯಾ ಕಲಾವಿದರು ಚರಿತ್ರೆಯ ಪುಟಗಳಲ್ಲಿ ನೇಪಥ್ಯಕ್ಕೆ ಸರಿದ ಫಿಜಿರೀ ಸಂಸ್ಕೃತಿಯನ್ನು ಪುನರ್ವ್ಯಾಖ್ಯಾನಿಸುವ ಪ್ರಯತ್ನದಲ್ಲಿದ್ದಾರೆ. ಆದಾಗ್ಯೂ, ಇಂತಹ ಪ್ರಯೋಗಗಳು ಇನ್ನೂ ಬಹಳಷ್ಟು ವಿರಳವಾಗಿಯೇ ಮುಂದುವರೆಯುತ್ತಿದೆ ಎಂಬುದು ಮಾತ್ರ ಖೇದಕರ.

ಮೂಲ: ಆಂಡ್ರೇಯ್ ಸಾಯಿಲರ್
ಅನುವಾದ: ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು

‘ಎ ಸ್ಮಾಲ್ ಡೆತ್’ – ‘ಇಬ್ನ್-ಅರಬಿ’ಯೆಡೆಗೊಂದು ಪಯಣ

"ಸೃಷ್ಟಿಕರ್ತನೇ... 
ನಿನ್ನ ಮೇಲಿನ ಪ್ರೀತಿ 
ನನ್ನೊಳು ಮಾತ್ರವಲ್ಲ
ಆದರೆ, ನನ್ನೊಳಿರುವ
ಪ್ರೀತಿ ನಿನ್ನೊಳು ಮಾತ್ರ...
                    -ಇಬ್ನ್- ಅರಬಿ

ಹದಿನೇಳನೆಯ ಶತಮಾನದ ಹೊತ್ತಿಗೆ ಅರಬ್ ಪ್ರಪಂಚದಲ್ಲಿ ಕಾದಂಬರಿ ಸಾಹಿತ್ಯವು ಸಣ್ಣ ಪ್ರಮಾಣದಲ್ಲಿ ಪರಿಚಿತವಾಗಿದ್ದರೂ, ಆರಂಭಿಕ ದಿನಗಳಲ್ಲಿ ಇವು ಕೇವಲ ಅನುವಾದಿತ ಕೃತಿಗಳು ಮಾತ್ರವಾಗಿತ್ತು. ಇಸ್ಲಾಮಿಕ್ ಜೀವನ ಶೈಲಿಯೆಡೆಗಿನ ಸಾಹಿತ್ಯದ ನವ್ಯ ರೂಪದ ಅಭಿವ್ಯಕ್ತಿಯ ಪ್ರಾರಂಭ ಅವರ ಕೃತಿಗಳಲ್ಲಿ ಸ್ಪಷ್ಟವಾದ ಪ್ರಭಾವ ಬೀರಿತು. ಜಾರ್ಜ್ ಸೈದಾನ್, ನಜೀಬ್ ಕಯ್ಲಾನಿ, ಮಅರೂಫ್ ಅರ್ನಾತ್ವ್ ಮುಂತಾದವರ ಲೇಖನಿಯು ಅರಬ್ ಸಾಹಿತ್ಯವೆಂಬ ವಿಶಾಲ ಜಗತ್ತಿಗೆ ಇಸ್ಲಾಮಿಕ್ ಇತಿಹಾಸ ಕಾದಂಬರಿಗಳ ಪ್ರವೇಶಕ್ಕೆ ಪ್ರಮುಖ ಪಾತ್ರ ವಹಿಸಿವೆ. ಜಾರ್ಜ್ ಸೈದಾನನ ಕಾದಂಬರಿಗಳಲ್ಲಿ ಮುಸ್ಲಿಂ ವಿದ್ವಾಂಸರು ಕೀಳು ಮಟ್ಟದಲ್ಲಿ ಚಿತ್ರಿಸಲ್ಪಡತೊಡಗಿದಾಗ ನಜೀಬ್ ಕೈಲಾನಿ ಈ ಬಗ್ಗೆ ಪ್ರಾಮಾಣಿಕತೆ ವ್ಯಕ್ತಪಡಿಸಲಾರಂಭಿಸಿದರು. ವ್ಯಕ್ತಿಗತ ಇತಿಹಾಸದ ಜೊತೆಗೆ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಪರಿಚಯಿಸುವ ಮತ್ತು ಇಸ್ಲಾಂ ಧರ್ಮದ ಆಚಾರಗಳನ್ನು ಜನರೆಡೆಯಲ್ಲಿ ಬಿತ್ತರಿಸುವ ಸಾಧ್ಯತೆಗಳನ್ನು ಅವರು ತಮ್ಮ ಬರಹಗಳ ಮೂಲಕ ಸಾಫಲ್ಯಗೊಳಿಸಲು ಶ್ರಮಿಸಿದರು.

ಮುಹಮ್ಮದ್ ಹಸನ್ ಅಲ್- ವಾನ್

ಕೆಲವೊಮ್ಮೆ ವೈಯಕ್ತಿಕ ಇತಿಹಾಸಗಳು ಸಾಮಾಜಿಕ ಇತಿಹಾಸವನ್ನು ಉತ್ಕೃಷ್ಟಗೊಳಿಸುತ್ತವೆ. ವಿದ್ವಾಂಸರು ಮತ್ತು ಆತ್ಮಜ್ಞಾನಿಗಳ ಪುಣ್ಯ ಸ್ಮರಣೆಗಳು ಮುಸ್ಲಿಂ ದೈನಂದಿನ ಜೀವನದ ಒಂದು ಪ್ರಮುಖ ಭಾಗವಾಗಿಯೂ ಕಾಣಬಹುದು. ಆಧ್ಯಾತ್ಮಿಕ ವಾತಾವರಣವನ್ನು ರಚಿಸುವಲ್ಲಿ ಧಾರ್ಮಿಕ ಪಂಡಿತರ ಜೀವನ ಚರಿತ್ರೆಯ ಕಥೆಗಳು ಮತ್ತು ಕಾವ್ಯಗಳು ಸೇರಿದಂತೆ ವಿಭಿನ್ನ ರೀತಿಯ ಕಥನಗಳನ್ನು ಬಳಸಲಾಗುತ್ತದೆ. ರೂಮಿ ಮತ್ತು ತಿಬ್ರೀಸಿಯನ್ನು ಕಾದಂಬರಿ ಸಾಹಿತ್ಯದಲ್ಲಿ ಓದಿ ಪಡೆದ ಆಧುನಿಕ ಜಗತ್ತಿನ ಮುಂದೆ ಇಬ್ನ್- ಅರಬಿಯ ಜೀವನ ಪಯಣಗಳು ಮತ್ತು ದೈವಿಕ ಸ್ನೇಹದ ಆಳವನ್ನು ಅಕ್ಷರ ರೂಪಕ್ಕಿಳಿಸುವ ಮೂಲಕ ಕಳೆದ ವರ್ಷದ ಅರೇಬಿಕ್ ಬುಕರ್ ಪ್ರಶಸ್ತಿ ವಿಜೇತ ಕೃತಿ ಮುಹಮ್ಮದ್ ಹಸನ್ ಅಲ್- ವಾನ್ ವಿರಚಿತ ‘ಎ ಸ್ಮಾಲ್ ಡೆತ್ ‘(موت الصغير ) ತನ್ನ ಸ್ವ- ಭಾವನೆಗಳ ಸಾಗರದಲ್ಲಿ ಮಿಂದು ದಡ ಸೇರುವಲ್ಲಿ ಯಶಸ್ವಿಯಾಗಿದೆ. ದೈವಿಕ ಪ್ರೀತಿಯ ಅವಿಸ್ಮರಣೀಯ ಬ್ರಹ್ಮಾಂಡದೊಳು ತೀರ್ಥಯಾತ್ರೆ ಹೊರಟ ಆಧ್ಯಾತ್ಮಿಕ ಜ್ಞಾನಿಗಳಲ್ಲಿ ಪ್ರಮುಖರಾಗಿದ್ದಾರೆ ಇಬ್ನ್- ಅರಬಿ. ಅಪವಿತ್ರ ಮನಸ್ಸಿನಲ್ಲಿ ಶಾಂತಿ ನೆಲೆಸಲು ಮತ್ತು ಏಕಾಂತ ಪ್ರಯಾಣದ ಮೂಲಕ ದೈವಿಕ ಪ್ರೀತಿಯ ದಾಹ ನೀಗಿಸಲು ದಿವ್ಯ ಜ್ಞಾನಿಗಳೆಂದೂ ಅಲೆದಾಡುತ್ತಿರುವರು. ತನ್ನ ಮನಶ್ಶಾಂತಿಗಾಗಿ ದೈವಿಕ ಪ್ರೇಮದ ಆಳವನ್ನರಸುತ್ತಾ ನಾಲ್ಕು ಆಧ್ಯಾತ್ಮಿಕ ಸಾಧಕರನ್ನು ಹುಡುಕುವ ಪ್ರಯಾಣವಾಗಿದೆ ಈ ಕಾದಂಬರಿಯ ಹೂರಣ. ಅರೇಬಿಕ್ ಬುಕರ್ ಪ್ರಶಸ್ತಿ ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ‘ಅಲ್- ಖುನ್ದುಸ್ ‘(2013) ಸೇರಿದಂತೆ ಸುಮಾರು ಐದು ಕಾದಂಬರಿಗಳನ್ನು ರಚಿಸಿದ ಹಸನ್ ಅಲ್- ವಾನ್ ಈ ಹಿಂದೆಂದಿಗಿಂತಲೂ ಬಹಳ ಭಿನ್ನವಾಗಿ ಕಲ್ಪನಾಮಯ ಅವಾಸ್ತವಿಕ ಬರವಣಿಗೆಯ ತೊಡೆದು ವಾಸ್ತವಾಧಾರಿತ ಕಾದಂಬರಿಯೆಡೆಗಿನ ಬದಲಾವಣೆಯನ್ನಾಗಿದೆ ಈ ಕೃತಿಯ ಮೂಲಕ ಸಾಕ್ಷಾತ್ಕಾರಗೊಳಿಸುವುದು.

ಮೌಲ್ಯಗಳ, ವ್ಯಕ್ತಿಗಳ, ಘಟನಾ ಸಂದರ್ಭಗಳ ಈ ರಚನೆಗೆ ಸಾಹಿತ್ಯಿಕವಾದದ್ದೇ ಅಲ್ಲದೆ ಸಾಮಾಜಿಕವಾದ ಹಾಗೂ ಒಮ್ಮೊಮ್ಮೆ ದಾರ್ಶನಿಕವಾದ ಆಯಾಮವೂ ಉಂಟು. ಇಸ್ಲಾಮಿಕ್ ಸೂಫೀ- ಬೌದ್ಧಿಕ ಸಂಕಥನದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟ ಇಬ್ನ್- ಅರಬಿಯ ಕಲ್ಪನಾ ಜಗತ್ತನ್ನು ಅನಾವರಣಗೊಳಿಸುವ ಮೂಲಕವಾಗಿದೆ ಕಾದಂಬರಿಯ ಪ್ರತಿಯೊಂದು ಸಾಲುಗಳು ಮುಂದುವರಿಯುವುದು. ಇಬ್ನ್- ಅರಬಿಯೊಂದಿಗಿನ ಕೆಲವೊಂದು ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಿದ್ದರೂ, ಅವರ ಯಾವುದೇ ಜೀವನ ಚರಿತ್ರೆಗಳು ಪ್ರಕಟಿಸಲ್ಪಟ್ಟಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ಕಾದಂಬರಿಯು ಸಾಹಿತ್ಯ ವಲಯದಲ್ಲಿ ಹೊಸ ಮೈಲಿಗಲ್ಲಾಗುತ್ತದೆ. ಅದೇ ಸಂದರ್ಭ, ಅತ್ಯಂತ ಪ್ರಸಿದ್ಧ ಅರೇಬಿಕ್ ತತ್ವಜ್ಞಾನಿ (Arabic philosopher) ಎಂಬ ನಿಟ್ಟಿನಲ್ಲಿ ಕಾದಂಬರಿಯು ಇಬ್ನ್- ಅರಬಿಯ ಜೀವನ ಮತ್ತು ವಿಚಾರಗಳನ್ನು ಪ್ರಸ್ತುತಪಡಿಸುವಲ್ಲಿ ತನ್ನದೇ ಆದ ಇತಿ- ಮಿತಿಗಳನ್ನು ಎದುರಿಸುತ್ತಿದೆ. ಇಪ್ಪತ್ತೊಂದನೆಯ ಶತಮಾನದ ಅಕಾಡಮಿಕ್ ವಲಯದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿರುವ ವ್ಯಕ್ತಿಗಳಲ್ಲಿ ಇಬ್ನ್- ಅರಬಿಯ ಹೆಸರೂ ಸ್ಥಳಹಿಡಿದಿದೆ.

ಧಾರ್ಮಿಕ ಜ್ಞಾನದಲ್ಲಿ ಪರಿಣಿತರಾದ ಇಬ್ನ್- ಅರಬಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಆ ಹೆಸರು ಚರ್ಚಾವಿಷಯವಾಗಿ ಮಾರ್ಪಡುವ ಸಾಧ್ಯತೆಯಿಲ್ಲದಿದ್ದರೂ, ಹಸನ್ ಅಲ್- ವಾನ್ ಉಪಯೋಗಿಸಿದ ಈ ವಿಧಾನವು ಅಂತಹ ಒಂದು ಸಾಧ್ಯತೆಯನ್ನು ಮುಂದಿಡುವ ಪ್ರಯತ್ನ ಮಾಡಿದೆ. ಇಬ್ನ್- ಅರಬಿಯ ಜೀವನವನ್ನು ಸಂಪೂರ್ಣ ನಿಖರವಾಗಿ ದಾಖಲಿಸಲಾಗಿಲ್ಲವಾದರೂ, ತನ್ನ ಸ್ವ- ರಚನೆಯಾದ ಪ್ರಸಿದ್ಧ ಕೃತಿ ‘ಫುತೂಹಾತುಲ್ ಮಕ್ಕಿಯ್ಯಾ’ ದಲ್ಲಿ ಸ್ವಯಂ ದಾಖಲಿಸಿದ ಜೀವನದ ಭಾಗಗಳನ್ನು ಅದರ ನೈತಿಕತೆ ನಷ್ಟ ಹೊಂದದ ರೀತಿ ತನ್ನ ಬರವಣಿಗೆಯಲ್ಲಿ ಸ್ವೀಕರಿಸಿದ್ದಾರೆ. ನೀರಸ ಓದುವಿಕೆಯ ಅಪಾಯದಿಂದ ಪಾರಾದ ಈ ಕೃತಿಯ ಭಾಷಾ ತೇಜಸ್ಸು, ಇಬ್ನ್- ಅರಬಿಯ ಸ್ವಂತ ಭಾಷಾ ಪ್ರಾವೀಣ್ಯತೆಯ ಸಂಯೋಗದೊಂದಿಗೆ ಕಾದಂಬರಿಯ ಹಾದಿ ಹಿಡಿಯುತ್ತದೆ.

ವಿಧಿಗಳಿಂದ ಮಾರ್ಗದರ್ಶಿಸಲ್ಪಟ್ಟ ಜೀವನ…

ಯಾವುದೇ ಒಬ್ಬ ವ್ಯಕ್ತಿಯನ್ನು ಮತ್ತು ಆತ ಬೆಳೆದು ಬಂದ ಸಾಮಾಜಿಕ- ಸಾಂಸ್ಕೃತಿಕ ವ್ಯವಸ್ಥೆಯನ್ನು ಇತಿಹಾಸ ಪುಸ್ತಕಗಳಿಗಿಂತ ಹೆಚ್ಚು ಹೃದಯಸ್ಪರ್ಶಿಯಾಗಿ ಕಣ್ಣಿಗೆ ಕಟ್ಟುವಂತೆ ಕಾದಂಬರಿಗಳು ಹೆಣೆದು ಕೊಡುತ್ತವೆ. ಕಾದಂಬರಿಕಾರ ಇಲ್ಲಿ ಇಬ್ನ್- ಅರಬಿಯನ್ನು ಆತ್ಮ ಚರಿತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ಈ ಅನುಭವಗಳನ್ನು ಅನುವಾದಿಸಲು ಪ್ರಯತ್ನಿಸತ್ತಾರೆ. ತಾಯಿಯ ಗರ್ಭದಿಂದ ತನ್ನ ಜೀವನದ ಕೊನೆಯ ಉಸಿರಿನವರೆಗೂ, ಅದರೆಡೆಯಲ್ಲಿ ಸವೆಸಿದ ಅನಂತ ಹಾದಿಗಳು ಮೂಡಿಸಿದ ಹೆಜ್ಜೆ ಗುರುತುಗಳನ್ನೂ ಹನ್ನೊಂದು ಅಧ್ಯಾಯಗಳನ್ನಾಗಿಸಿ ತಮ್ಮ ಕೃತಿಯಲ್ಲಿ ವಿವರಿಸಹೊರಟಿದ್ದಾರೆ. ಇಬ್ನ್- ಅರಬಿಯ ಕೃತಿ ಸಂಗ್ರಹಗಳು ಮತ್ತು ಜೀವನ ಚರಿತ್ರೆಯು ಹಸ್ತಾಂತರಿಸಲ್ಪಟ್ಟ ಹಿ. 610 ರಿಂದ ಹಿ. 1433 ( ಕ್ರಿ.ಶ 1212 – ಕ್ರಿ.ಶ 2012 ) ರವರೆಗಿನ ತೀವ್ರವಾದ ಇತಿಹಾಸವನ್ನು ವಿವರಿಸುವ ಭಾಗವೂ ಈ ಹನ್ನೊಂದು ಅಧ್ಯಾಯಗಳೆಡೆಯಲ್ಲಿ ಕಾದಂಬರಿಯ ಒಂದು ಭಾಗವಾಗಿ ಪರಿಚಯಿಸಲ್ಪಟ್ಟಿದೆ.

“ಜನನ ಪೂರ್ವ ಮತ್ತು ಮರಣೋತ್ತರವಾಗಿ ಸೃಷ್ಟಿಕರ್ತನು ನನಗೆ ಎರಡು ಅಲೌಕಿಕ ಜೀವನವನ್ನು ಅನುಭವಿಸುವ ಅವಕಾಶ ನೀಡಿದ. ಮೊದಲನೆಯದಾಗಿ, ತಾಯಿ ನನಗೆ ಜನ್ಮ ನೀಡುವುದು ಮತ್ತು ಎರಡನೇಯದು, ನನ್ನ ಮಗ ನನ್ನನ್ನು ದಫನ್ ಮಾಡುವುದಾಗಿಯೂ ನಾನು ಕಂಡೆನು” ತಾಯಿಯ ಗರ್ಭಾಶಯದಿಂದ ಇಬ್ನ್- ಅರಬಿಯ ಆಗಮನದಿಂದಾಗಿದೆ ಕಾದಂಬರಿಯ ಪ್ರಾರಂಭ. ತನ್ನ ತಂದೆ ಮಹಾನ್ ವಿದ್ವಾಂಸರು ಮತ್ತು ಅಂದಿನ ಆಡಳಿತಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯಾಗಿದ್ದರು. ಇಬ್ನ್- ಅರಬಿ ಧಾರ್ಮಿಕ ವಾತಾವರಣದಲ್ಲಿ ಬೆಳೆಯುವುದರ ಜೊತೆಗೆ ಧಾರ್ಮಿಕ ವಿಷಯಗಳಲ್ಲಿ ಜಾಗರೂಕತೆಯನ್ನು ಪಾಲಿಸ ತೊಡಗಿದರು. ದೈವಿಕ ಮಾರ್ಗಸೂಚಿಗಳನ್ನನುಸರಿಸಿ ಜೀವನದ ಹಾದಿಯನ್ನು ದಾಟಿದರು. ರಾತ್ರಿಯ ಏಕಾಂತತೆಯಲ್ಲಿ ದೈವಿಕ ಗ್ರಂಥದ ಪಾರಾಯಣದೊಳು ತೊಡಗಿ, ದೈವೀಸ್ಮರಣೆಯೊಳು ಜಪಮಣಿಯ ಎಣಿಸುತ್ತಾ ನಿರ್ಲಿಪ್ತ ಮನಸ್ಸಿನೊಡನೆ ಗಾಢ ಕತ್ತಲನ್ನೂ ಭೇದಿಸುವ ದಿವ್ಯ ದೀಪ್ತಿಯನ್ನು ಬೆಳಗಿಸಿದರು. ಆಧ್ಯಾತ್ಮಿಕತೆಯ ಔನ್ನತ್ಯಕ್ಕೆ ತಲುಪಿದಾಗ ರಾತ್ರಿ ವೇಳೆಗಳಲ್ಲಿ ದೈವಿಕ ಗ್ರಂಥದ ಪಾರಾಯಣಕ್ಕಾಗಿ ಸಮಾಧಿ ಸ್ಥಳಗಳ ಇರುಳಿನ ಏಕಾಂತತೆಯನ್ನರಸುತ್ತಾ ಹೊರಟ ಇಬ್ನ್- ಅರಬಿಯ ಆರಂಭಿಕ ದಿನಗಳನ್ನಾಗಿದೆ ಕಾದಂಬರಿಯ ಪ್ರಾರಂಭಿಕ ಹಂತದಲ್ಲಿ ವಿವರಿಸುವುದು.

ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳನ್ನು ತಡೆಯುವ ಮತ್ತು ಧರ್ಮ ಪ್ರಚಾರದಲ್ಲಿ ತಮ್ಮನ್ನು ಸಕ್ರಿಯಗೊಳಿಸಿದ್ದ, ಇಮಾಂ ಗಝಾಲಿಯ ಶಿಷ್ಯನೂ ಆದ ಇಬ್ನ್- ತೂಮರ್ ಆರಂಭಿಸಿದ ‘ಅಲ್- ಮುವಹ್ಹಿದೀನ್ ‘ ಆಡಳಿತದ ಕೊನೆಯ ದಿನಗಳಲ್ಲಿ ಅಂದರೆ, ಹಿ. 560 ರಲ್ಲಾಗಿತ್ತು ಇಬ್ನ್- ಅರಬಿಯ ಜನನ. ಧಾರ್ಮಿಕ ವಿದ್ವಾಂಸರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಗೌರವಿಸಿದ ಇವರಿಗೆ ಅತಿ ದೊಡ್ಡ ಬೆದರಿಕೆ ಫ್ರೆಂಚ್ ಆಕ್ರಮಣವಾಗಿತ್ತು. ಮುವಹ್ಹಿದೀನ್ ಆಡಳಿತಗಾರರ ಉಳಿವಿಗೆ ಅಡ್ಡಿಪಡಿಸುವ ಶಕ್ತಿಗಳನ್ನು ಎದುರಿಸುವುದು ಅವರಿಗೆ ಬೆದರಿಕೆಯಾಗಿ ಮಾರ್ಪಟ್ಟಿತು. ಹಿ. 567 ರಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಂತೆ ಇಬ್ನ್- ಅರಬಿಯ ಕುಟುಂಬ ಮುರ್ಸಿಯ್ಯಾದಿಂದ ಇಶ್ಬೆಲಿಯ್ಯಾ (ಸೆವಿಯ್ಯಾ) ಪ್ರದೇಶದತ್ತ ವಲಸೆ ಹೋಗಬೇಕಾಯಿತು. ತನ್ನದೆಲ್ಲವ ಬಿಟ್ಟು ತನ್ನದಲ್ಲದೂರಿಗೆ ಹೊರಡುವ ಈ ನೋವು ಕಾದಂಬರಿಯುದ್ದಕ್ಕೂ ಇಬ್ನ್- ಅರಬಿಯ ಅಂತಃಕರಣದೊಳು ತನ್ಮಯವಾಗಿ ನರ್ತಿಸುವ ನರ್ತನೆಯ ಕಾಣಬಹುದು.

ಆತ್ಮೀಯ ಚೈತನ್ಯ ಮತ್ತು ಸಂರಕ್ಷಣೆಯನ್ನು ಒದಗಿಸುವ ನಾಲ್ಕು ಆಧ್ಯಾತ್ಮಿಕ ಗುರುಗಳ ಅನ್ವೇಷಣೆಯಲ್ಲಾಗಿದೆ ಇನ್ನು ಮುಂದಕ್ಕೆ ಕಾದಂಬರಿಯ ಪ್ರಯಾಣ ಮುಂದುವರೆಯುವುದು. ಬದಲಾವಣೆಯಾಗುವ ವಿಶ್ವಾಸಿಯ ಜೀವನ ಕ್ರಮಗಳು ಮತ್ತು ಜೀವನದ ಜಂಜಾಟದೊಳು ಎದುರಾಗುವ ತೊಂದರೆಗಳು, ಈ ಯಾತ್ರೆಯ ಉದ್ದಗಲಕ್ಕೂ ಇಬ್ನ್- ಅರಬಿಯೆಂಬ ದೈವಿಕ ಸಂಪ್ರೀತಿಯೆಡೆಗಿನ ದಾರಿಹೋಕನೊಂದಿಗಿದೆ. ಈಜಿಪ್ಟ್, ಹಿಜಾಸ್, ಶಾಮ್, ಇರಾಕ್ ಮತ್ತು ತುರ್ಕೀ ಮೊದಲಾದ ದೇಶಗಳ ಮೇಲೆ ಹಾದು ತನ್ನ ಯಾತ್ರೆ ಡಮಾಸ್ಕಸಿನಲ್ಲಿ ಅಂತ್ಯಗೊಳ್ಳುತ್ತದೆ. ಈ ಒಂದು ದೀರ್ಘ ಪ್ರಯಾಣದ ಮಧ್ಯೆ ತನ್ನೆಲ್ಲಾ ಸಂತೋಷಗಳು ಮತ್ತು ಕಷ್ಟಗಳಲ್ಲಿ ಭಾಗಿಯಾದ ಸಹ ಪ್ರಯಾಣಿಕರಾಗಿದ್ದರು ತನ್ನ ಶಿಷ್ಯಂದಿರಲ್ಲೊಬ್ಬರಾದ ‘ಬದ್ರುಲ್ ಹಬ್ಶೀ’. ಯಾತ್ರೆಯ ಅಂತ್ಯದವರೆಗೂ ಜೊತೆಗಿದ್ದ ಅವರು ಕೊನೆಯ ಸಮಯದಲ್ಲಿ ಕುಷ್ಠರೋಗ ಬಾಧಿತರಾಗಿ ಇಬ್ನ್- ಅರಬಿಯಿಂದ ಅಗಲಬೇಕಾಯಿತು. ಸುಧಾರಿಸಿಕೊಳ್ಳಲಾಗದ ಬೇಸರದೊಂದಿಗಾಗಿತ್ತು ತನ್ನ ಶಿಷ್ಯನನ್ನು ತೊರೆದು ಯಾತ್ರೆ ಮುಂದುವರೆಸುವುದು.

ಜೀವನದ ಕೊನೆಯವರೆಗೂ ನೆಲೆನಿಲ್ಲುವ ಪ್ರೀತಿಯ ವಿಭಿನ್ನ ಮುಖಗಳು ಕಾದಂಬರಿಯುದ್ದಕ್ಕೂ ವ್ಯಕ್ತವಾಗಿದೆ. ಜನ್ಮ ನೀಡಿದ ತಾಯಿ – ತಂದೆಯ ಪ್ರೀತಿ ಅವರೊಂದಿಗಿನ ಪ್ರತ್ಯೇಕಗೊಳ್ಳುವಿಕೆಯಲ್ಲಿಯೂ, ಹುಟ್ಟಿ ಬೆಳೆದು ಬಾಲ್ಯವನ್ನು ರೂಪಿಸಿದ ತಾಯ್ನಾಡು ಮುರ್ಸಿಯ್ಯಾದೊಂದಿಗಿನ ಪ್ರೀತಿ ಅದರೊಂದಿಗಿನ ಅಗಲುವಿಕೆಯಲ್ಲಿಯೂ, ಗುರು – ಶಿಷ್ಯ ಪ್ರೀತಿಯ ಪ್ರಾಮಾಣಿಕ ಮುಖಗಳು ಯಾತ್ರೆಗಳಾಗಿಯೂ, ಜ್ಞಾನಾನುಭವಗಳಾಗಿಯೂ ಕಾದಂಬರಿಯೊಳು ಚಿತ್ರೀಕರಿಸಲ್ಪಟ್ಟಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಕಾದಂಬರಿ ರೂಪುಗೊಳ್ಳುವುದೇ, ವಿಶಾಲ ಮರುಭೂಮಿಯೊಳು ದಿಕ್ಕುತಪ್ಪಿ ಓಯಸಿಸ್ ಹುಡುಕಿ ನಡೆವ ಅಲೆಮಾರಿಗಳಂತೆಯೇ ದೈವಿಕ ಪ್ರೀತಿಯ ದಾಹ ತಣಿಸುವಿಕೆಗಾಗಿ ಕೈಗೊಳ್ಳುವ ಯಾತ್ರೆಗಳ ಮೂಲಕವಾಗಿದೆ.

ಪರಿಕಲ್ಪನಾ ಜಗತ್ತು ಮತ್ತು ವಿಭಿನ್ನ ಸಾಂಸ್ಕೃತಿಕ ಚಿತ್ರಗಳು…

ಸಮರ್ಪಕವಾದ ಒಂದು ಜೀವನ ಚರಿತ್ರೆ ಎಂಬ ನಿಟ್ಟಿನಿಂದ ಹೊರತಾಗಿ ಹಾಗೂ ಕಾದಂಬರಿಯೆಂಬ ಸಂಕೀರ್ಣತೆಯಿಂದ ಸ್ವತಂತ್ರರಾಗಿಯಾಗಿದೆ ಇಬ್ನ್- ಅರಬಿಯ ಪರಿಕಲ್ಪನಾ ಜಗತ್ತನ್ನು ಅಕ್ಷರಲೋಕದಿಂದ ಓದಬೇಕಾಗಿರುವುದು. ಆಧ್ಯಾತ್ಮಿಕತೆ ಒಂದು ಲಕ್ಷಣವೆಂದೂ, ಆ ಲಕ್ಷಣ ದೂರ ಸರಿದಾಗ ಆಧ್ಯಾತ್ಮಿಕತೆ ಆತನಿಂದ ದೂರವಾಗುತ್ತದೆಯೆಂಬ ಇಬ್ನ್- ಅರಬಿಯ ಈ ಮಾತುಗಳನ್ನೂ ಓದಬೇಕಾಗಿರುವುದು ಕಾದಂಬರಿಯ ಸೀಮೆಯ ಹೊರ ನಿಂತುಕೊಂಡಾಗಿದೆ. ಕಾರಣ, ಕಾದಂಬರಿಯ ಒಳಗಿರುವ ಇಬ್ನ್- ಅರಬಿ ಆಪ್ತರಾಗುವುದು ಪ್ರಯಾಣಗಳ ಮೂಲಕವೇ ಹೊರತು ತಮ್ಮ ಪರಿಕಲ್ಪನಾ ಜಗತ್ತಿನ ಮೂಲಕವಲ್ಲ.

ಜನನಿಬಿಡತೆಯಿಂದ ದೂರ ಸರಿದು ಆರಾಧನಾ ಲೋಕದಲ್ಲಿ ವಿಹರಿಸುವುದಕ್ಕೆ ಭಿನ್ನವಾಗಿ ಜ್ಞಾನಾರ್ಜನೆ ಮತ್ತು ಜ್ಞಾನ ಪ್ರಸಾರದಲ್ಲಿ ಸಾಗುವ ಆಧ್ಯಾತ್ಮಿಕ ಜೀವನವಾಗಿತ್ತು ಅವರ ಆಯ್ಕೆ. ಆದ್ದರಿಂದಲೇ, ಅವರ ಆತ್ಮೀಯ ಸಭೆಗಳಲ್ಲಿ ಪಾಲ್ಗೊಂಡ ಸಾಮಾನ್ಯ ಜನರಿಗೆ ತಮ್ಮ ಸಂಪೂರ್ಣ ಆಲೋಚನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಒಮ್ಮೆ ಕೈರೋ ನಗರದಲ್ಲಿ ನೆರೆದ ಜನಸ್ತೋಮಕ್ಕೆ ಆಧ್ಯಾತ್ಮಿಕ ಹಿತೋಪದೇಶ ನೀಡುತ್ತಿರುವಾಗ ಸಭೆಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಎದ್ದು ನಿಂತು ಟೀಕಿಸಲು ಪ್ರಾರಂಭಿಸಿದ. ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆ ಏಕಾದೈವಾರಾಧನೆಯನ್ನು ನಿರಾಕರಿಸುತ್ತದೆಯೆಂದೂ, ತಾವು ಅವಿಶ್ವಾಸಿ ಎಂದೂ ಆಗಿತ್ತು ಅವನ ವಾದ. ಈ ವಿಚಾರ ನ್ಯಾಯಾಧೀಶರ ಬಳಿ ತಲುಪಿ ಇಬ್ನ್- ಅರಬಿಯ ತರಗತಿಗಳು ಸ್ಥಗಿತಗೊಳಿಸಿ ಅವರನ್ನು ಬಂಧಿಸುವ ಮಟ್ಟಿಗೆ ವಿಷಯ ತಾರಕ್ಕೇರಿತು. ಇನ್ನೊಂದೆಡೆ ಆ ಊರಿನ ನ್ಯಾಯಾಧೀಶರಾಗಿದ್ದ ಇಬ್ನ್- ಸಕಿಯ್ಯ್ ಇಬ್ನ್- ಅರಬಿಯ ಆಧ್ಯಾತ್ಮಿಕ ಪ್ರವಚದಲ್ಲಿ ಭಾಗವಹಿಸಿದರು. ತರಗತಿಯ ನಂತರ ಊಟದ ಮಧ್ಯೆ ನ್ಯಾಯಾಧೀಶರು, ಪ್ರವಾದಿ ಮಹಮ್ಮದರ ಆರಂಭಿಕ ಉತ್ತರಾಧಿಕಾರಿಯಾಗಿ ತಮ್ಮ ಅಳಿಯನಾದ ಅಲೀಯವರು ನಿಯುಕ್ತರಾಗಬೇಕಿತ್ತೆಂದೂ, ಖಿಲಾಫತ್ ನೀಡುವಿಕೆಯಲ್ಲಿ ಒಳಸಂಚು ನಡೆದಿದೆಯೆಂದೂ ಶಿಯಾ ಪಂಗಡದವರು ಸಮರ್ಥಿಸುತ್ತಾರಲ್ಲ ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನೆಂದು ಕೇಳಿ ಪ್ರಶ್ನಾರ್ಥಕವಾಗಿ ಮುಖ ನೋಡಿದರು. “ಪ್ರತಿಯೊಂದು ಕ್ಷಣವೂ ದೈವ ಇಚ್ಛೆಗೆ ಅನುಗುಣವಾಗಿಯಾಗಿದೆ ಹಾದುಹೋಗುವುದು. ಒಂದನೇ ಉತ್ತರಾಧಿಕಾರಿಯಾದ ಅಬೂಬಕ್ಕರ್ ಅವರ ಮರಣಾವಧಿಯನ್ನಾಗಿದೆ ಸೃಷ್ಟಿಕರ್ತನು ಮೊದಲು ನಿಶ್ಚಯಿಸಿದ್ದು. ನಂತರ ಉಮರ್, ಉಸ್ಮಾನ್, ಅಲೀ ಈ ರೀತಿಯಾಗಿ ಅವರಿಗೆ ನೀಡಿದ ಅಧಿಕಾರ ಕಾಲಾವಧಿಯನುಸರಿಸಿಯಾಗಿದೆ ಅವರ ಮರಣ ಸಂಭವಿಸುವುದು.” ಈ ರೀತಿಯಾಗಿ ಇತರರಿಗಿಂತ ಭಿನ್ನ ರೂಪದಲ್ಲಿ ತಮ್ಮ ಕೃತಿಗಳಲ್ಲಿ ಆಧ್ಯಾತ್ಮಿಕ ಭಾಷೆಯನ್ನು ವಿವರಿಸಿದ ಇಬ್ನ್- ಅರಬಿಯ ವಚನಗಳನ್ನು ಯುಗಗಳಿಂದ ಇಸ್ಲಾಮ್ ಎದುರಿಸುತ್ತಿರುವ ಶಿಯಾ ವಾದಗಳಿಗಿರುವ ಪ್ರತ್ಯುಕ್ತಿಗಳಾಗಿ ಎತ್ತಿಹಿಡಿಯುತ್ತಲಿದ್ದೇವೆ. ಅಕ್ಷರದ ಆಳಕ್ಕಿಳಿಯುವಾಗ ಹಸನ್ ಅಲ್- ವಾನಿನ ರಾಜಕೀಯ ನಿಲುವುಗಳನ್ನೂ ಕಾದಂಬರಿಯ ಈ ಭಾಗ ವಿವರಿಸುವುದು ಗೋಚರಿಸುತ್ತದೆ.

ಕಾದಂಬರಿಯಲ್ಲಿ ಆ ಕಾಲಾವಧಿಯ ನಾಗರಿಕತೆ, ಸಾಂಸ್ಕೃತಿಕ ಚಿತ್ರಣಗಳು, ಉಡುಪು ಶೈಲಿಗಳು ಮತ್ತು ಆಹಾರ ವಿಧಾನಗಳನ್ನು ನಿಖರವಾಗಿ ಚಿತ್ರಿಸುವಲ್ಲಿನ ಪ್ರಯತ್ನ ಅಪೂರ್ಣವಾದರೂ, ಸಾಫಲ್ಯತೆಯೆಡೆಗಿನ ದಾರಿ ಹಿಡಿದಿದೆ. ಅಸಾಸಿನುಗಳಿಗೆ (ಶಿಯಾ ಪಂಗಡದ ಇಸ್ಮಾಯೀಲೀ ವಿಭಾಗದಲ್ಲಿರುವ ರಹಸ್ಯ ಹೋರಾಟಗಾರರು) ಹೆದರಿ ಮುಸಲ್ಮಾನರ ಪೋಷಾಕು ಧರಿಸಿ ಪ್ರಯಾಣ ಬೆಳೆಸುವ ಕ್ರೈಸ್ತರನ್ನು ಮತ್ತು ಮದರಸಾಗಳನ್ನು ನಿರ್ಮಿಸಿ ವಿದ್ವಾಂಸರಿಗೆ ಒಪ್ಪಿಸುವ ಅಧಿಕಾರಿಗಳನ್ನು ಹಸನ್ ಅಲ್- ವಾನ್ ವಿವರಿಸುವುದು ಅಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಪೂರ್ವ ಕಾಲಗಳಲ್ಲಿ ಸರ್ಕಾರ ಮತ್ತು ರಾಜಕೀಯದೊಂದಿಗೆ ವಿದ್ವತ್ ಸಮುದಾಯಕ್ಕೆ ನೇರ ಸಂಬಂಧಗಳಿದ್ದವು. ಕಾರಣ, ಅಂದು ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವದಲ್ಲಿದ್ದುದ್ದರಿಂದ ಧಾರ್ಮಿಕ ತೀರ್ಪುಗಳನ್ನು ಹೊರಡಿಸಲು ರಾಜಕೀಯ ನಾಯಕತ್ವವು ಅವರೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆಯಿತ್ತು. ಇಬ್ನ್- ಅರಬಿಯ ಕಾಲಾವಧಿಯಲ್ಲಿ ಮುವಹ್ಹಿದೀನ್ ಆಡಳಿತವು ಕಟ್ಟು ನಿಟ್ಟಿನ ಧಾರ್ಮಿಕ ತೀರ್ಪುಗಳನ್ನು ವಿಧಿಸಿತು ಮತ್ತು ವಿದ್ವಾಂಸರಿಗೆ ರಾಜ ಮನೆತನದಲ್ಲಿ ಪ್ರಮುಖ ಸ್ಥಾನಗಳನ್ನು ನೀಡುವಲ್ಲಿಯೂ ಯಶಸ್ವಿಯಾಯಿತು. ಜನರ ಧಾರ್ಮಿಕ ನಂಬಿಕೆಯಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆಯೆಂಬ ಕಾರಣ ನೀಡಿ ಅನೇಕ ಕೃತಿಗಳ ಮಾರಾಟದ ಹಕ್ಕನ್ನು ಹತ್ತಿಕ್ಕಲು ಪ್ರಾರಂಭಿಸಿದರು. ಈ ಸಂದರ್ಭ ಇಬ್ನ್- ರುಶ್ದ್ ಅವರ ಬರಹಗಳನ್ನು ನಿಷೇಧಿಸುವ ಮೂಲಕ ಅವರನ್ನು ಬಂಧನಕ್ಕೊಳಪಡಿಸಿದ ಘಟನೆಯ ಪರಿಣಾಮ ಇಬ್ನ್- ಅರಬಿಯ ದುಃಖ ಮತ್ತು ನೋವು ಕಾದಂಬರಿಯಲ್ಲಿ ಅಕ್ಷರಗಳ ನಾಡಿಮಿಡಿತಗಳನ್ನು ಆಲಿಸುವಂತಿದೆ. ನಾಲ್ಕು ಆಧ್ಯಾತ್ಮಿಕ ಗುರುಗಳನ್ನರಸುತ್ತಾ ಹೊರಟ ಯಾತ್ರೆಯ ಮಧ್ಯೆ ತಮ್ಮ ಯಾತ್ರೆಯ ದಿಕ್ಕನ್ನು ಮಕ್ಕಾದೆಡೆಗೆ ಬದಲಿಸಿ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಯಿತು. ಮಕ್ಕಾದಲ್ಲಿರಲು ಅಲ್ಲಿನ ನ್ಯಾಯಾಧೀಶರಾಗಿದ್ದ ಅಸ್ಫಹಾನಿಯ ಸನ್ನಿಧಿಗೆ ಜ್ಞಾನಾರ್ಜನೆಗೆ ತೆರಳುತ್ತಿದ್ದರು ಮತ್ತು ಅವರ ಮಗಳಾದ ನಳಾಮಿಯ ಬಳಿ ಜ್ಞಾನ ಸಂಪಾದನೆಯನ್ನೂ ನಡೆಸಿದ್ದರು. ‘ನಳಾಮ್ ‘ ಎಂಬ ಈ ಮಹಿಳಾ ಮಣಿಯೊಂದಿಗಿನ ಆಧ್ಯಾತ್ಮಿಕ ಸಂಬಂಧವನ್ನು ‘ತರ್ಜುಮಾನುಲ್ ಅಶ್ವಾಖ್ ‘ ಎಂಬ ಕೃತಿಯ ಮೂಲಕ ಇಬ್ನ್- ಅರಬಿ ವಿವರಿಸಿದ್ದರೂ ವಾಸ್ತವವಾಗಿ ಇದು ದೈವಿಕ ಸ್ನೇಹದ ಪ್ರತೀಕವಾಗಿತ್ತು. ಇಬ್ನ್- ಅರಬಿಯ ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆಯ ಮಟ್ಟವನ್ನು ಈ ಘಟನೆಯೊಂದಿಗೆ ತಾಳೆ ಹಾಕಿ ನೋಡದಿದ್ದರೆ ಸತ್ಯವನ್ನು ಅರಿಯುವಲ್ಲಿ ನಾವು ವಿಫಲರಾಗುತ್ತೇವೆ. ತರ್ಜುಮಾನುಲ್ ಅಶ್ವಾಖಿನ ಪ್ರಕಟನೆಯೊಂದಿಗೆ ಇಬ್ನ್- ಅರಬಿಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡರು. ‘ಫುತೂಹಾತುಲ್ ಮಕ್ಕಿಯ್ಯಾ ‘ಎಂಬ ಕೃತಿ ರಚನೆಯು ಅನಿಷ್ಟ ಭ್ರಮೆಗಳ ಕಾರಣದಿಂದ ಪೂರ್ತಿ ಮಾಡಲಾಗದ ಸ್ಥಿತಿ ಎದುರಿಸಬೇಕಾಯಿತು. ಅವರು ಮಕ್ಕಾ ತೊರೆದು ಡಮಾಸ್ಕಸ್ ಬಳಿ ಯಾತ್ರೆ ಹೊರಟರು. ನಳಾಮ್ ತನ್ನ ಆಧ್ಯಾತ್ಮಿಕ ಗುರುಗಳ ಪೈಕಿ ಮೂರನೆಯವರೆಂದು ಡಮಾಸ್ಕಸಿನಲ್ಲಿ ಇಬ್ನ್- ಅರಬಿ ಗುರುತಿಸುವರು. ಡಮಾಸ್ಕಸಿನ ಮಸೀದಿಯಲ್ಲಿರಲು ನಳಾಮಿಯ ತಂದೆ ಅಸ್ಫಹಾನಿಯ ನಿಧನದ ಸುದ್ದಿಯೊಂದಿಗೆ ಬಂದು ತಲುಪಿದ ಶಿಷ್ಯ ಬದರ್, ಅವರ ಮರಣೋತ್ತರ ಕರ್ಮಗಳಲ್ಲಿ ಭಾಗವಹಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ನಳಾಮ್ ತನ್ನ ಬಳಿಯಲ್ಲಿಯೇ ಇದ್ದರು ಎಂಬ ವಾಸ್ತವಿಕತೆಯನ್ನು ಅರಿತ ಇಬ್ನ್- ಅರಬಿಯ ಮನಸ್ಥಿತಿ ಓದುಗನನ್ನು ಭಾವನಾತ್ಮಕವಾಗಿ ಆವರಿಸತೊಡಗುತ್ತದೆ. ಡಮಾಸ್ಕಸಿನಲ್ಲಿಯೇ ತಮ್ಮ ಅಂತಿಮ ಗುರುಗಳನ್ನು ಸಂಧಿಸುವುದರೊಂದಿಗೆ ಆಧ್ಯಾತ್ಮಿಕ ಶ್ರೇಣಿಯೊಳು ತನ್ನ ಗುರುವೃಂದದ ಆಶೀರ್ವಾದವು ಪೂರ್ಣಗೊಳ್ಳುತ್ತದೆ. ದೈವಿಕ ಸಂಪ್ರೀತಿಯೆಡೆಗಿನ ತನ್ನ ಯಾತ್ರೆಯು ಸಫಲತೆಯನ್ನು ಕಂಡ ನಂತರ ಉಳಿದ ತನ್ನ ಜೀವಿತಾವಧಿಯನ್ನು ಕುಟುಂಬದೊಂದಿಗೆ ವ್ಯಯಿಸಲು ಕೃಷಿ ಉದ್ಯೋಗದಲ್ಲೇರ್ಪಡಲು ತೀರ್ಮಾನಿಸಿದರು.

ಸಮಗ್ರವಲ್ಲದಿದ್ದರೂ, ಸಾಹಿತ್ಯ ಜಗತ್ತಿಗೆ ಅನ್ಯವಾಗಿದ್ದ ಇಬ್ನ್- ಅರಬಿಯ ಜೀವನವನ್ನು ಪರಿಚಯಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಇಬ್ನ್- ಅರಬಿಯ ಚಿಂತನೆಯ ಆಳ ಮತ್ತು ಅದರ ಕುರಿತಾದ ಚರ್ಚೆಗಳಲ್ಲಿ ವಿದ್ವಾಂಸರು ಪಾಲಿಸಿದ ವಿವೇಕತೆಗಳು, ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ಜೀವನದ ಸಮಗ್ರ ಪರಿಚಯದ ಅಸಲುಚಿತ್ರವಾಗಿ ಅತ್ಯಂತ ಅರ್ಥಪೂರ್ಣ ಮತ್ತು ಒಂದು ಮೋಹಕವಾದ ಕಥೆಯನ್ನು ನೇಯುತ್ತದೆ.

ಬಿಶ್ರ್ ಇಸ್ಮಾಯೀಲ್
ಅನುವಾದ:ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು.

ವಿಶ್ವ ಸಂಚಾರಿ ಕಬಾಬಿನ ಕಥೆ

ಬಹುಶಃ ನಿಮಗೆ ‘ಶೀಶ್ ಕಬಾಬ್’ ಅಂದರೆ ಏನೆಂದು ಗೊತ್ತಿರಬಹುದು. ಆದರೆ ಹೆಚ್ಚಿನ ಜನರಿಗೆ ಅದರ ಅರ್ಥವೇನೆಂದು ಗೊತ್ತಿರುವ ಸಂಭಾವ್ಯ ಕಡಿಮೆ. ತುರ್ಕಿ ಭಾಷೆಯಲ್ಲಿ ‘ಸೀಸ್’ ಅಂದರೆ ಖಡ್ಗ ಎಂದೂ, ಕಬಾಬ್ ಅಂದರೆ ಮಾಂಸ (ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆಡಿನ ಮಾಂಸ ಮತ್ತು ಕುರಿಯ ಮಾಂಸ) ಎಂಬ ಅರ್ಥವನ್ನು ನೀಡುತ್ತದೆ. ನಾವು ಅರಿತ ಮಟ್ಟಿಗೆ ಕಬಾಬ್ ಅಂದರೆ ಮೇಡಿಟರೀಯನ್ ರಾಷ್ಟ್ರದಿಂದ ಮಿಡಲ್ ಈಸ್ಟ್, ಉತ್ತರ ಆಫ್ರಿಕಾ, ಗ್ರೀಸ್ ದೇಶದವರೆಗೆ ಮಾಂಸದ ಆಮದು-ರಫ್ತು ನಡೆಸಿದ್ದ ತುರ್ಕಿ ಆಟಮನ್ ಸಾಮ್ರಾಜ್ಯದಲ್ಲಿ (1301-1922) ಆದಿಯಿಂದಲೂ ಇದ್ದ ಪ್ರಕ್ರಿಯೆ.

ಇದು ಆರಂಭವಾದದ್ದು ಪೇರ್ಷ್ಯನ್ (ಈಗಿನ ಇರಾನ್) ದೇಶದಿಂದ ಎಂಬುವುದು ಕೆಲವರ ಅಭಿಪ್ರಾಯ. ಮಧ್ಯಕಾಲದಲ್ಲಿ ಜನರು ಒಂದು ಲೋಟ ವೈನಿನೊಂದಿಗೆ ಸಣ್ಣ ಮಾಂಸ ತುಂಡನ್ನು ಸಿಕ್ಕಿಸುವ ‘ಲೋಹದ ಕಂಬಿ’ಗೆ(Skewer) ಸಮಾನವಾದ ಪದವನ್ನು ಬಳಕೆ ಮಾಡಿದ್ದಾಗಿ ಚರಿತ್ರೆಗಳಲ್ಲಿ ಕಾಣಬಹುದು. ಯಾಕೆ ಮಾಂಸವನ್ನು ಇಷ್ಟು ಸಣ್ಣದಾಗಿ ಕತ್ತರಿಸಿಡುತ್ತಾರೆ ಎಂದರೆ ಬೆರಳುಗಳೆಡೆಯಲಿ ಹಿಡಿಯಲು ಸುಲಭ ಸಾಧ್ಯ ಕೆಲಸವಿದು. ಅಲ್ಲದೆ ಮಾಂಸ ಸೇವಿಸುವಾಗ ಕೈಬೆರಳುಗಳ ಮಧ್ಯೆ ಹಾಗೂ ವೈನ್ ಕುಡಿಯುವಾಗ ಭಕ್ಷ್ಯದ ಅವಶಿಷ್ಟ ಗ್ಲಾಸಿನಲ್ಲಿ ಬಾಕಿಯುಳಿದರೆ ಶುಚಿಯಾಗಿಸಲು ಸ್ವಸ್ಥವೂ ಹೌದು. ಅಲ್ಲದೆ, ಕಡಿಮೆ ವನ ಪ್ರದೇಶಗಳುಳ್ಳ ದೇಶಗಳಲ್ಲಿ ಸಣ್ಣ ಮಾಂಸ ತುಂಡನ್ನು ಪಾಕ ಮಾಡಲು ಅಲ್ಪ ಸಮಯ ಮತ್ತು ಕಡಿಮೆ ಪ್ರಮಾಣದ ಇಂಧನವೂ ಸಾಕು.

ಒಟ್ಟಿನಲ್ಲಿ ಕಬಾಬ್ ಬಾಣಸಿಗರಿಗೆ ಪಾಕಕ್ರಾಂತಿಯಲ್ಲಿ ಇಷ್ಟ ಪ್ರಿಯ ವಸ್ತು. ತುರ್ಕಿಯನ್ನರ ಮೂಲಕ ಕಬಾಬ್ ಗ್ರೀಕ್ ತಲುಪಿದಾಗ ಹಲವು ಬದಲಾವಣೆಗಳಾಯಿತು. ಮಾಂಸದ ಗಾತ್ರ ಸಣ್ಣದಾಗಿದ್ದರೂ ಅದರ ನಡುವೆ ಟೊಮ್ಯಾಟೊ, ನೀರುಳ್ಳಿ, ಹಸಿರು ಮೆಣಸನ್ನು ಸೇರಿಸಿ, ಮಾಂಸವನ್ನು ಸಲಾಡ್ ರೂಪವಾಗಿಸಿಡುವ ಶೈಲಿ ಹೊಸತಾಗಿ ಆರಂಭವಾಯಿತು.


ಈ ಪಾಕ ಶೈಲಿಯಲ್ಲಿರುವ ಕಬಾಬ್ ನಂತರ ಅಮೇರಿಕಾದಲ್ಲಿ ಪ್ರಸಿಧ್ಧಿ ಪಡೆಯಲಾರಂಭಿಸಿತು. ಆಡಿನ ಮಾಂಸದ ಬದಲಿಗೆ ಅಮೇರಿಕನ್ನರು ಬೀಫ್ ಮತ್ತು ಕೋಳಿಯನ್ನು ಉಪಯೋಗಿಸ ತೊಡಗಿದರು. ಅಮೇರಿಕನ್ನರು ಉಪಯೋಗಿಸುವ ಮಾಂಸದ ಗಾತ್ರ ದೊಡ್ಡದಾದ ಕಾರಣ ಬಾಣಸಿಗರಿಗೆ ಹೆಚ್ಚು ಸಮಯ, ಕಠಿಣ ಶ್ರಮ ವ್ಯಯಿಸಬೇಕಾಯಿತು. ಮನೆಯ ಹಿಂಭಾಗದಲ್ಲಿ ಕೆಂಡವನ್ನು ರಾಶಿ ಹಾಕಿ ಅಡುಗೆ ಮಾಡುತ್ತಿದ್ದರು. ಮಾಂಸಖಂಡದ ಒಂದು ಭಾಗ ಬೆಂದು ಪಕ್ವವಾದರೆ ಅದನ್ನು ತಿರುಗಿಸುತ್ತಾ, ಪೂರ್ತಿ ಬೇಯುವವರೆಗೂ ಉರಿವ ಬೆಂಕಿಯ ಮೇಲಿಟ್ಟು ‘ಬೇಯುವಿಕೆಯ ಪ್ರಕ್ರಿಯೆ’ಯನ್ನು ಕೊನೆಗೊಳಿಸುತ್ತಿದ್ದರು. 1960ರ ಕಾಲಾವಧಿಯಲ್ಲಿ ಗ್ರೀಕ್ ಸಿನಿಮಾಗಳಲ್ಲಿ ಕಬಾಬ್ ಅಚ್ಚಳಿಯದೇ ಅವಶೇಷವಾಗಿ ಉಳಿಯಿತು. ತರುವಾಯ ಕಬಾಬ್ ಪಾಕ ಮಾಡುವ ಸ್ಥಳಗಳು ಅಮೇರಿಕನ್ ವಿದೇಶಿಗರ ನಿರಂತರ ಸಂಚಾರಿ ಕೇಂದ್ರವಾಯಿತು. ಕಬಾಬ್ ಇತರ ದೇಶಗಳಲ್ಲಿಯೂ ಸಂಚಾರ ಆರಂಭಿಸಿತು. ಸಿಲ್ಕ್ ರೋಡಿನಲ್ಲಿ ಪಶ್ಚಿಮಕ್ಕೆ ಸಂಚರಿಸುವ ವ್ಯಾಪಾರಸ್ಥರು, ಕೋಲಿಗೆ(Stick) ಮಾಂಸ ತುಂಡನ್ನು ತುರುಕಿಸಿ ಕಡಿಮೆ ಸಮಯ ಮತ್ತು ಸುಲಭವಾಗಿ ಪಾಕ ಮಾಡುವ ವಿಧಾನವನ್ನು ಕಂಡ ವ್ಯಾಪಾರಸ್ಥರು ತಮ್ಮ ಊರಿಗೆ ಕೊಂಡೊಯ್ದರು. ಕೋಕಸ್ ಪರ್ವತದಲ್ಲಿರುವ ಜೋರ್ಜಿಯಾ ರಾಷ್ಟ್ರದಲ್ಲೂ ಕಬಾಬ್ ನಿತ್ಯ ಉಪಯೋಗಿಕ ಆಹಾರ ವಸ್ತುವಾಯಿತು. ಇಲ್ಲಿ ಕಬಾಬನ್ನು ಷೇಷ್’ಲಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಅಲ್ಲಿಂದ ರಷ್ಯಾ, ಸೋವಿಯತ್ ರಿಪಬ್ಲಿಕಿನ ಪ್ರಧಾನ ಭಕ್ಷ್ಯ ವಸ್ತುವಾಗಿ ಕಬಾಬ್ ಗಮನ ಸೆಳೆಯಿತು.

ಭಾರತ, ಪಾಕಿಸ್ತಾನ ದೇಶದಲ್ಲಿ ಮಾಂಸ ಬೆರೆಸುವ ಸಾಮಗ್ರಿಗಳ ಪ್ರಕಿಯೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂತು. ಆಡು, ಕೋಳಿ ಮಾಂಸವನ್ನು ಈ ಎರಡು ದೇಶಗಳಲ್ಲಿ ಉಪಯೋಗಿಸಲಾಯಿತು. ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿಯೂ ಇದೇ ಶೈಲಿಯನ್ನು ಸ್ವೀಕರಿಸಿದರು. ಕೆಲವೊಮ್ಮೆ ಕಡ್ಡಿಯ ಸಹಾಯವಿಲ್ಲದೆ ಪಾತ್ರದಲ್ಲಿಯೋ, ಆವಿಯಲ್ಲೋ ಬೇಯಿಸಿ ಚೆನ್ನಾಗಿ ಬಿಸುಪು ಮಾಡಿ ಕಾಯಿಸಿ ತಿನ್ನುತ್ತಿದ್ದರು. ಜನರು ಕಬಾಬನ್ನು ಸತಾಯ್(sataay) ಎಂಬ ಹೆಸರಿನಿಂದ ಗುರುತಿಸುವರು. ಚಿಕನ್ ಅಥವಾ ಬೀಫ್ ಉಪಯೋಗಿಸಿ ತಯಾರಿಸಿದ ನಂತರ ಸುತ್ತಲೂ ಇರುವ ನೆಲಗಡಲೆ ಸೋಸಿನೊಂದಿಗೆ(Peanut Sauce) ಬಡಿಸಿ ತಿನ್ನುವುದು ಅವರ ಶೈಲಿ.

ಇಂದು ಕಬಾಬ್ ಜಪಾನ್ ರಾಷ್ಟ್ರದವರೆಗೂ ವ್ಯಾಪಿಸಿದೆ. ಅದಕ್ಕಾಗಿ ಯಕಿಟೋರಿ ಮಾದರಿಯ ಪಾಕ ಶೈಲಿಯನ್ನು ಉಪಯೋಗಿಸಿ, ಮಾಂಸ ತುಂಡಿನೊಂದಿಗೆ ತರಕಾರಿಯನ್ನೂ ಕೋಲಿಗೆ ಸಿಕ್ಕಿಸಿ ತಿನ್ನುವುದನ್ನೂ ಶುರುವಿಟ್ಟಿದ್ದಾರೆ. ಸದ್ಯ ಎಲ್ಲರೂ ಸಣ್ಣ ಕೋಲಿನ ಕಡ್ಡಿಯಲ್ಲಿ ಮಾಂಸವನ್ನು ಸಿಕ್ಕಿಸಿ ತಿನ್ನುವುದು ಮಾಮೂಲಿ ದೃಶ್ಯ. ಕಬಾಬ್ ಬಹುತೇಕ ರಾಷ್ಟ್ರಗಳ ಬೀದಿಬದಿಯ ತಿನಿಸಾಗಿ(Street food) ಮಾರ್ಪಾಡಾಗಿದೆ. ನ್ಯೂಯಾರ್ಕ್ ಸಿಟಿಯಯಲ್ಲಿ ಕಬಾಬ್ ಪ್ರತಿದಿನದ ವ್ಯಾಪಾರ ವಸ್ತು. ಯೂನಿಯನ್ ಉತ್ತರ ಭಾಗದಲ್ಲಿ ಕೆಂಡವನ್ನು ಬಳಸಿ ಅಡುಗೆ ಮಾಡುವ ತಳ್ಳುಗಾಡಿ ಇಂದಿಗೂ ಕಾಣಲು ಸಾಧ್ಯ.

ಮೂಲ: ಮುಹಮ್ಮದ್ ನಿನ್ಸಿಲ್ ನಾಸಿರ್
ಭಾವಾನುವಾದ: ಸಲೀಂ ಇರುವಂಬಳ್ಳ

ರೂಮಿಯಿಂದ ಶಮ್ಸ್ ತಬ್ರೇಝರ ಮಡಿಲಿಗೆ

ಭಾಗ ಎರಡು

ರೂಮಿಯನ್ನು ಕಣ್ತುಂಬಿಕೊಂಡ ನಾವು ಶಮ್ಸ್ ತಬ್ರೇಝರನ್ನು ಅರಸುತ್ತಾ ಮುಂದೆ ನಡೆದೆವು.ವಾಸ್ತವದಲ್ಲಿ ನಾನು ಮೊದಲಾಗಿ ತಬ್ರೇಝರನ್ನು ಕೇಳಿದ್ದೇ ರೂಮಿಯೆಂಬ ಸೇತುವೆಯ ಮುಖಾಂತರವಾಗಿತ್ತು.ತುರ್ಕಿಗೆ ವೀಸಾ ಮಂಜೂರಾದ ಬಳಿಕ ವಿಲಿಯಂ ಚಿಟ್ಟಿಕ್ ಇಂಗ್ಲಿಷ್‌ಗೆ ಅನುವಾದಿಸಿದ ಶಮ್ಸ್ ತಬ್ರೇಝರ ಆತ್ಮಚರಿತ್ರೆ, ‘ಮಿ ಆಂಡ್ ರೂಮಿ’ ಕೃತಿಯನ್ನು ಕುತೂಹಲದಿಂದ ಓದಿ ಮುಗಿಸಿದ್ದೆ.
ಆ ಕೃತಿಯ ಮುನ್ನುಡಿಯಲ್ಲಿ ರೂಮಿ ಮತ್ತು ತಬ್ರೇಝರ ಒಡನಾಟದ ಬಗ್ಗೆ ಆನ್ ಮೇರಿ ಶಿಮ್ಮೆಲ್ ಬರೆದ ಒಂದಿಷ್ಟು ಸಾಲುಗಳು ರೂಮಿ ಮತ್ತು ತಬ್ರೇಝರ ನಡುವಿನ ಆತ್ಮಬಂಧವನ್ನು ಬಹಳಷ್ಟು ಸೊಗಸಾಗಿಯೇ ತೆರೆದಿಡುತ್ತಿದ್ದವು.

ತನ್ನ ಮೂವತ್ತೆಂಟನೆಯ ವಯಸ್ಸಿನಲ್ಲಾಗಿತ್ತು ರೂಮಿಯ ಬದುಕಿನಲ್ಲಿ ಶಮ್ಸ್ ಎಂಬ ನೇಸರನ ಉದಯವಾಗುವುದು.ಮುಂದಕ್ಕೆ ರೂಮಿಯ ಚಿಂತನೆಗಳಿಗೆ ರೆಕ್ಕೆಗಳು ಜೋಡಿಸಿಕೊಟ್ಟದ್ದು ಶಮ್ಸ್ ಎಂಬ ಆ ‘ನೂರ್’ ಆಗಿತ್ತೆಂಬುವುದು ಮತ್ತೊಂದು ವಿಶೇಷ.ಅವರ ಮೊದಲ ಭೇಟಿಯ ಕುರಿತಾದಂತೆ ಹಲವಾರು ಕಥೆಗಳು ಚಾಲ್ತಿಯಲ್ಲಿರುವುದು ಕಾಣಬಹುದು.ಒಮ್ಮೆ ರೂಮಿಯವರ ತರಗತಿಗೆ ಶಮ್ಸ್ ತಬ್ರೇಝರು ಒಬ್ಬ ದಾರಿಹೋಕನಂತೆ ಬರುತ್ತಾರೆ.ಸುತ್ತಲೂ ಜೋಡಿಸಿರುವ ಗ್ರಂಥಗಳತ್ತ ಬೊಟ್ಟುಮಾಡಿ ಈ ಪುಸ್ತಕಗಳಲ್ಲಿ ಏನಿದೆ ಎಂದು ರೂಮಿಯರ ಬಳಿ ಕೇಳಿದಾಗ,
ಅವೆಲ್ಲಾ ನಿಮಗೆ ಅರ್ಥವಾಗದು ಎಂದು ರೂಮಿ ಉತ್ತರಿಸುತ್ತಾರೆ.ಇದನ್ನು ಕೇಳಿದ ತಬ್ರೇಝರು ಆ ಗ್ರಂಥಗಳನ್ನೆಲ್ಲ ಹತ್ತಿರವಿದ್ದ ಕೊಳಕ್ಕೆ ಎತ್ತಿ ಎಸೆದುಬಿಡುತ್ತಾರೆ. ಅರೆಕ್ಷಣ ಎಲ್ಲವೂ ಸ್ತಬ್ಧವಾದಂತೆ…ಇದನ್ನು ಕಂಡ ರೂಮಿ ವಿಚಲಿತಗೊಳ್ಳುತ್ತಾರೆ .ಶಮ್ಸ್ ತಬ್ರೇಝರು ತಕ್ಷಣವೇ ಕೊಳದಲ್ಲಿದ್ದ ಅಷ್ಟೂ ಗ್ರಂಥಗಳನ್ನು ಎತ್ತಿ ರೂಮಿಯವರ ಕೈಗಿಡುತ್ತಾರೆ. ಆದರೆ ಏನಾಶ್ಚರ್ಯ!.ಒಂದೇ ಒಂದು ಪುಸ್ತಕವೂ ನೆನೆಯದೇ ಇರುವುದನ್ನು ಗಮನಿಸಿದ ರೂಮಿಯವರು ಕುತೂಹಲಭರಿತರಾಗಿ ಕೇಳುತ್ತಾರೆ. ಅರೆ…ಇದೆಲ್ಲ ಹೇಗೆ ಸಾಧ್ಯ,? ಇದರ ರಹಸ್ಯವಾದರೂ ಏನು?ತಬ್ರೇಝರು ತೆಳು ನಗೆಯೊಂದಿಗೆ ಹೀಗನ್ನುತ್ತಾರೆ ‘ ಅವೆಲ್ಲಾ ನಿಮಗೆ ಅರ್ಥವಾಗಲಾರದು’.!

ಈ ಘಟನೆಯ ಬಳಿಕ,ರೂಮಿ ಶಮ್ಸ್‌ರನ್ನು ಹುಡುಕುತ್ತಾ ಅಲೆದಾಡತೊಡಗಿದರು. ಸುಜ್ಞಾನದ ಸಾಗರವೇ ಆಗಿದ್ದ ಶಮ್ಸ್ ತಬ್ರೇಝರಿಂದ ಅರಿವಿನ ಅಮೃತವನ್ನು ಸಾಕಷ್ಟು ಎದೆಗಿಳಿಸಿಕೊಂಡರು. ಇದರೊಂದಿಗೆ ರೂಮಿಯ ಬದುಕಿನಲ್ಲಿ ಬದಲಾವಣೆಯ ಮಂದ ಮಾರುತವೊಂದು ಮೆಲ್ಲನೆ ಬೀಸತೊಡಗಿತು. ಆಧ್ಯಾತ್ಮಿಕತೆಯ ಬಗೆಗಿನ ತನ್ನ ಅರಿವು, ಜಿಜ್ಞಾಸೆ, ವಿಚಾರಗಳನ್ನು ರೂಮಿ, ಶಮ್ಸ್ ತಬ್ರೇಝರ ಸಮ್ಮುಖದಲ್ಲಿ ಹಂಚಿಕೊಂಡರು. ಅಲ್ಲೊಂದು ಶ್ರೇಷ್ಠ ಮಟ್ಟದ ವಿಚಾರ ಮಂಥನವೇ ನಡೆಯಿತು. ಇವುಗಳು ನಂತರ ಅದ್ಭುತ ಕಥೆಗಳಾದವು,ಎಂದಿಗೂ ಓದಿ ಮುಗಿಸಲಾಗದ ಕವನಗಳಾದವು.! ನಾನಾರ್ಥಗಳು ಸ್ಪುರಿಸುವ ಮಹಾ ಕಾವ್ಯಗಳಾದವು..! ಸುಮಾರು ಆರು ತಿಂಗಳುಗಳ ಕಾಲ ಇಬ್ಬರೂ ಅಗುಣಿಹಾಕಿದ ಕೋಣೆಯಲ್ಲಿ ತಪಸ್ಸಿಗೆ ಕುಳಿತವರಂತೆ ಆಧ್ಯಾತ್ಮಿಕತೆಯ ಬಗೆಗಿನ ಚರ್ವಿತ ಚರ್ವಣನದಲ್ಲಿ ತಲ್ಲೀನಗೊಂಡರು.

ಆ ಬಳಿಕ ಶಮ್ಸ್ ತಬ್ರೇಝರ ಅನಿರೀಕ್ಷಿತ ಅದೃಶ್ಯವಾಗುವಿಕೆ ರೂಮಿಯನ್ನು ಬಹಳವಾಗಿ ಕಾಡತೊಡಗಿತ್ತು. ಆ ಏಕಾಂತದ ಫಲವಾಗಿಯೇ ರೂಮಿ ‘ದಿವಾನೇ ಶಮ್ಸ್ ತಬ್ರೇಝ್’ ಎಂಬ ನಲವತ್ತು ಸಾವಿರ ಕವಿತೆಗಳುಳ್ಳ ಬೃಹತ್ ಕಾವ್ಯವನ್ನು ರಚಿಸಿದರು. “ಶಮ್ಸರ ನೆನಪಿನಲ್ಲಿ ನಾನು ಸುರಿಸಿದ ಕಂಬನಿಗಳು ಯಾವ ಸಾಗರದಲ್ಲಿ ಲೀನವಾದವೋ” ಎಂದು ರೂಮಿ ಒಬ್ಬ ಅಪ್ಪಟ ವಿರಹಿಯಂತೆ ಹಾಡುತ್ತಿದ್ದರು.

ತಬ್ರೇಝರ ಮಖ್‌ಬರದ ಕಡೆಗೆ ಚಲಿಸುತ್ತಿದ್ದ ನಾವು ಅಲ್ಲೊಂದು ಕಪ್ಪುಎಲೆಯಾಕಾರದ ಆಕೃತಿಯನ್ನು ನೋಡಿದೆವು.ಅದರ ಹಿಂಭಾಗದಲ್ಲಿ ಸಣ್ಣ ಬೋರ್ಡ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ. ಈ ಸ್ಥಳವನ್ನು ‘ಮಜ್ಮೌಲ್ ಬಹ್ರೇನ್’ ಅಥವಾ ‘ಎರಡು ಸಾಗರಗಳ ಸಮಾಗಮ’ ಎಂದು ಕರೆಯಲಾಗುತ್ತದೆ.1244 ರ ನವೆಂಬರ್ 30 ರಂದು ರೂಮಿ ಮತ್ತು ಶಮ್ಸ್ ತಬ್ರೇಝರು ಭೇಟಿಯಾದ ಸ್ಥಾನವಾಗಿದೆ .’ಇದು ಎರಡು ಮಹಾಸಾಗರಗಳ ಸಂಗಮ ಭೂಮಿಯಾಗಿದೆ’ ಎಂದು ಇಂಗ್ಲಿಷ್ ಮತ್ತು ಟರ್ಕಿಶ್ ಭಾಷೆಯಲ್ಲಿ ಬರೆದಿರುವುದನ್ನು ನೋಡಿದೆವು.ನಿಜಕ್ಕೂ ಆ ಸಂಗಮ ಭೂಮಿಯಲ್ಲಿ ಒಂದು ತೆರನಾದ ಆಧ್ಯಾತ್ಮಿಕ ಅನುಭೂತಿ ಅನುಭವೇದ್ಯವೂ ಹೌದು.

ನಾವು ‘ಮಜ್ಮೌಲ್ ಬಹ್ರೇನ್’ ಅನ್ನು ದಾಟಿ ಅಲ್ಲಿಯೇ ಅನತಿ ದೂರದಲ್ಲಿರುವ ಸಣ್ಣ ಪಾಕೆಟ್ ರಸ್ತೆಯೊಂದರಲ್ಲಿ ಮುಂದಕ್ಕೆ ಚಲಿಸಿದರೆ ಅಲ್ಲೊಂದು ಚಂದದ ವಿನ್ಯಾಸದ ಮಿನಾರ ದರ್ಶನವಾಗುತ್ತದೆ.ಮುಕುಟವಿಲ್ಲದ ಮಹಾರಾಜ,ಜ್ಞಾನ ಲೋಕದ ವಿದ್ವತ್‌ ಪ್ರತಿಭೆ ತಬ್ರೇಝರು ಚಿರ ವಿಶ್ರಾಂತಿ ಪಡೆಯುತ್ತಿರುವುದು ಅಲ್ಲಿಯೇ.ಶಮ್ಸ್ ಸಮಾಧಿಗೆ ಸಂಬಂಧಿಸಿದಂತೆ ಇತಿಹಾಸಕಾರರೆಡೆಯಲ್ಲಿ ಹತ್ತು ಹಲವು ಭಿನ್ನವಾದ ಅಭಿಪ್ರಾಯಗಳಿವೆ.
ಶಮ್ಸರ ಸಮಾಧಿ ಇರಾನ್‌ನಲ್ಲಿದೆಯೆಂದೂ,ಪಾಕಿಸ್ತಾನದಲ್ಲಿರುವ ಎರಡು ಸಮಾಧಿಗಳನ್ನು ಶಮ್ಸರದೆಂಬ ನಂಬಿಕೆಯಿಂದ ಜನರು ಸಂದರ್ಶಿಸುತ್ತರೆಂದೂ ಹೇಳಲಾಗುತ್ತದೆ.ಆದರೂ ಕೊನ್ಯಾದಲ್ಲಿನ ಶಮ್ಸ್ ತಬ್ರೇಝರ ಸಮಾಧಿ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿರುವುದಂತೂ ನಿಜ.ಈ ಮಕ್‌ಬರದಲ್ಲಿ ನಡೆಯುವ ಪ್ರಾರ್ಥನೆಯ ಮುಖಾಂತರವೇ ರೂಮಿಯ ಉರುಸ್ ಅಧಿಕೃತವಾಗಿ ಪ್ರಾರಂಭಗೊಳ್ಳುವುದೆಂಬ ಮಾಹಿತಿಯನ್ನು ಸ್ಥಳೀಯರು ನಮ್ಮೊಂದಿಗೆ ಹಂಚಿಕೊಂಡರು.

ಕೊನ್ಯಾದ ಆಧ್ಯಾತ್ಮಿಕ ಪರಂಪರೆ ರೂಮಿಗೆ ಮಾತ್ರ ಸೀಮಿತವಾಗಿಲ್ಲ.ತತ್ವಜ್ಞಾನಿ ಮತ್ತು ಇಬ್ನ್ ಅರಬಿ ಚಿಂತನೆಯ ವಕ್ತಾರ ‘ಸದ್ರುದ್ದೀನ್ ಕೂನವಿ’ ಕೊನ್ಯಾ ಮೂಲದವರು.ರೂಮಿ ತನ್ನ ಮೇಲಿನ ಮಯ್ಯತ್ ನಮಾಝ್ (ಅಂತ್ಯಕ್ರಿಯೆಯ ಪ್ರಾರ್ಥನೆ)ಮುನ್ನಡೆಸುವಂತೆ ಸದ್ರುದ್ದೀನ್ ಕೂನವಿಯವರಲ್ಲಿ ವಿನಂತಿಸಿಕೊಂಡಿದ್ದರಂತೆ.

ನಾವು ಶಮ್ಸ್ ತಬ್ರೇಝರ ಸಮಾಧಿಯನ್ನು ದಾಟಿ ಸಿರಿಯನ್ ನಿರಾಶ್ರಿತರ ಕಾಲೋನಿಗಳ ಮೂಲಕ ನಡೆಯತೊಡಗಿದೆವು.ಉರ್ದುಗನ್ ಒಬ್ಬ ಜಾಗತಿಕ ಮುಸ್ಲಿಮರ ನಾಯಕ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕಾಲೋನಿಗಳ ಮೂಲಕ ಒಂದಿಷ್ಟು ನಡೆದರೆ ಸಾಕಾಗಬಹುದೇನೋ.ಸಿರಿಯನ್ ನಿರಾಶ್ರಿತರಿಗೆ ಸುಂದರವಾದ ಸುಮಾರು ಮೈಲುಗಳಷ್ಟು ದೂರದ ವಿಶಾಲ ಪ್ರದೇಶಗಳನ್ನು ನಿಗದಿಪಡಿಸಿ ನೀಡಲಾಗಿತ್ತು.ಅವರುಗಳು ಅಲ್ಲಿ ಮತ್ತೆ ಬದುಕು ಕಟ್ಟಿಕೊಂಡು ನಿರಾಳರಾಗಿರುವುದನ್ನು ನಾವಲ್ಲಿ ಕಂಡೆವು.

ಹೃದಯಗಳ ನಗರ ಎಂದೇ ಕರೆಯಲ್ಪಡುವ ಕೊನ್ಯಾದ ಆ ಬೀದಿಗಳಲ್ಲಿ,ಅರೇಬಿಯನ್ ಹೋಟೆಲ್‌ಗಳು,ಅರೇಬಿಯನ್ ದೇಶಗಳಲ್ಲಿ ಕಾಣಸಿಗುವ ಪೀಠೋಪಕರಣಗಳು,ಆಟಿಕೆಗಳು ಮತ್ತು ಬಟ್ಟೆಗಳನ್ನು ಹರವಿಕೊಂಡು ಕುಳಿತುಕೊಂಡಿರುವ ವ್ಯಾಪಾರಿಗಳು ಅಲ್ಲಿದ್ದರು.

ಒಡಲ ತುಂಬೆಲ್ಲಾ ಒಲುಮೆ ತುಂಬಿಕೊಂಡಿರುವ,ಪ್ರೀತಿಸಲು ಮಾತ್ರವೇ ಗೊತ್ತಿರುವ ಕೋನ್ಯಾದ ಜನತೆಗೆ ಸಿರಿಯನ್ ನಿರಾಶ್ರಿತರ ಬಗ್ಗೆ ತಮ್ಮದೇ ತಕರಾರುಗಳಿವೆ.ಸಿರಿಯನ್ ಜನರ ವಲಸೆಯ ಬಳಿಕವಷ್ಟೇ ಕೋನ್ಯಾದಲ್ಲಿ ಕಳ್ಳತನ,ದರೋಡೆ,ಕಗ್ಗೊಲೆಗಳು ಹುಟ್ಟಿಕೊಂಡವೆನ್ನುವ ಹಲವರನ್ನು ನಾವಲ್ಲಿ ಮಾತನಾಡಿಸಿದೆವು.ಶಾಂತವಾಗಿದ್ದ ಊರಿನಲ್ಲಿ ಭೀತಿಯ ವಾತಾವರಣ ಹುಟ್ಟಿಸಿದ ಬಗೆಗೆ ಅಸಮಾಧಾನ ಇರುವುದು ಅವರ ಮಾತಿನಲ್ಲಿ ಡಾಳಾಗಿ ಕಾಣುತ್ತಿದ್ದವು.

ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಮೈಯೊಡ್ಡಿ ಜೊತೆಗೆ ಮಳೆರಾಯನ ಮಿದುವಾದ ಸುಖಸ್ಪರ್ಶವನ್ನು ಎದೆಗಿಳಿಸಿಕೊಂಡ ನಾವು ವಿಶ್ರಾಂತಿಗೆಂದು ಕೋಣೆಯ ಕಡೆಗೆ ನಡೆದೆವು.ನನ್ನ ಮನಸ್ಸಿಡೀ ಶನಿವಾರ ಪ್ರದರ್ಶನಗೊಳ್ಳಲಿರುವ ‘ಸೆಮಾ’ ನೃತ್ಯದ ಬಗೆಗಿನ ಕಲ್ಪನಾ ಲೋಕದಲ್ಲಿಯೇ ತೇಲಾಡುತ್ತಿತ್ತು.ಸೆಮಾ ನೃತ್ಯ ನಡೆಯುವ ಆ ಎರಡು ದಿನಗಳೆಂದರೆ ರೂಮಿ ಮತ್ತು ತಬ್ರೇಝರ ಅಧಮ್ಯ ಪ್ರೇಮಿಗಳಿಗೆ ಹಬ್ಬದ ದಿನವಿದ್ದಂತೆ.ಒಬ್ಬೊಬ್ಬರ ಎದೆಬಡಿತವೂ ಮತ್ತೊಬ್ಬನಿಗೆ ಅನುಭವಿಸಲಾಗುವ ಆಶಿಕುಗಳು ಒಂದೆಡೆ ಸೇರುವುದೆಂದರೆ ಅದೊಂದು ಹಬ್ಬವಾಗದೆ ಇರುವುದಾದರೂ ಹೇಗೆ…!

ಮರುದಿನ ಸೆಮಾ ನೃತ್ಯವನ್ನು ವೀಕ್ಷಿಸಲೆಂದು ಹೋದೆವು. ಈ ಸೆಮಾ ನೃತ್ಯವೂ ಸೂಫಿ ಪರಂಪರೆಯ ಮುಖ ಮುದ್ರೆಯಂತೆ ಜನಜನಿತವಾಗಿದೆ.ಇದು ಹುಟ್ಟಿಕೊಂಡ ಬಗೆಗೆ ಭಿನ್ನ ಕಥೆಗಳಿವೆ.
ಒಂದು ದಿನ ಮುಂಜಾನೆ ರೂಮಿ ನಗರವೊಂದರ ಮೂಲಕ ಸಾಗುವಾಗ ಅಕ್ಕಸಾಲಿಗನಾದ ಸದ್ರುದ್ದೀನ್ ಕೂನವಿಯ ಸುತ್ತಿಗೆಯ ಲಯಬದ್ಧವಾದ ಬಡಿತದ ಸದ್ದು ಕಿವಿಗೆ ಬಿಳುತ್ತದೆ.ಆ ಬಡಿತದ ಸದ್ದು ‘ಅಲ್ಲಾಹ್ ಅಲ್ಲಾಹ್’ ಎಂಬ ದ್ಸಿಕ್ರ್ ಸ್ತುತಿಯಂತೆ ಕೇಳಿಬರುತ್ತದೆ.ಆನಂದಮತ್ತನಾದ ರೂಮಿ ತನ್ನೆರಡೂ ತೋಳುಗಳನ್ನು ಚಾಚಿ ವೃತ್ತಾಕಾರವಾಗಿ ತಿರುಗಲಾರಂಭಿಸುತ್ತಾರೆ‌.ಹೀಗೆ ಸೆಮಾ ನೃತ್ಯ ಹುಟ್ಟಿಕೊಂಡಿತು ಎನ್ನಲಾಗುತ್ತದೆ.ಮೌಲಾನರ ತ್ವರೀಕತಿನ ಮುರೀದರು(ಹಿಂಬಾಲಕರು) ಈಗಲೂ ಸೆಮಾ ನೃತ್ಯವನ್ನು ಪರಿಶೀಲಿಸುವುದು, ಸೆಮಾ ಪ್ರದರ್ಶನಗಳನ್ನು ಆಯೋಜಿಸುವುದು ಕಾಣಬಹುದು.

ತುರ್ಕಿಯಲ್ಲಿ ಅತ್ತಾತುರ್ಕ್ ಆಳ್ವಿಕೆಯ ಅವಧಿಯಲ್ಲಿ ಸೆಮಾ ಪ್ರದರ್ಶನವನ್ನು ನಿಷೇದಿಸಲ್ಪಟ್ಟಿದ್ದರೂ ತದನಂತರ ಮೌಲಾನರ ಅನುಯಾಯಿಗಳು ಮತ್ತೆ ಸೆಮಾ ನೃತ್ಯವನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಂಡು ಆ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಸೆಮಾ ನೃತ್ಯವು ಅಲ್ಲಿರುವ ಹಿರಿಯ ಶೈಖರೋರ್ವರ ಮುಂದಾಳತ್ವದಲ್ಲಿ ನಡೆಯುತ್ತದೆ.ಆ ಶೈಖರ ಸನ್ನಿಧಿಯಲ್ಲಿ ದರ್ವೇಶುಗಳು ಸಾಲಾಗಿ ಬಂದು ನಮಿಸಿ ಆಶಿರ್ವಾದವನ್ನು ಪಡೆಯುತ್ತಾರೆ.ಬಳಿಕ ಅಧಿಕೃತವಾಗಿ ನೃತ್ಯವು ಪ್ರಾರಂಭಗೊಳ್ಳುತ್ತದೆ‌.ಒಂದು ಕೈಯನ್ನು ಆಕಾಶಕೆತ್ತಿಯೂ ಮತ್ತೊಂದು ಕೈಯನ್ನು ಭೂಮಿಯೆಡೆಗೆ ತೋರುತ್ತಾ ವರ್ತುಲಾಕಾರವಾಗಿ ಸುತ್ತು ಹಾಕುತ್ತಾ ಚಲಿಸಲಾಗುತ್ತದೆ.ಇದರ ಒಂದೊಂದು ಚಲನೆಗಳಿಗೂ ಹಲವಾರು ಒಳಾರ್ಥಗಳಿವೆ.ದರ್ವೇಶರು ಧರಿಸುವ ಆ ಉಡುಪುಗಳ ಕುರಿತೇ ಹಲವಾರು ಕೃತಿಗಳಿದೆಯೆಂಬುದು ಈ ನೃತ್ಯದ ಆಳ ಅಗಲವನ್ನು ಪ್ರತಿಬಿಂಬಿಸುತ್ತದೆ.

ಆ ದಿನ ಎಲ್ಲವೂ ಮುಗಿಸಿದ ಬಳಿಕ ನಮ್ಮ ವಿಶ್ರಾಂತಿ ಕೋಣೆಗೆ ತಲುಪಿದೆವು.ಆಕಾಂಕ್ಷೆಯಿಂದ ವೀಕ್ಷಿಸಿದ ಸೆಮಾ ನೃತ್ಯದ ಬಗೆಗೆ ಕೋನ್ಯಾದ ಜನರೆಡೆಯಲ್ಲಿಯೇ ಹಲವಾರು ಅಭಿಪ್ರಾಯಗಳಿರುವುದು ನಮ್ಮ ಗಮನಕ್ಕೆ ಅದಾಗಲೇ ಬಂದಿತ್ತು‌.ಆ ಕುರಿತು ಒಂದಿಷ್ಟು ಮಾತನಾಡುತ್ತಾ ನಿದ್ರೆಗೆ ಜಾರಿದೆವು.ಒಂದು ಅವಿಸ್ಮರಣೀಯ ಘಳಿಗೆಯಾಗಿ,ಮರೆಯಲಾಗದ ದಿನವಾಗಿ ನನ್ನ ಬದುಕಿನಲ್ಲಿ ಆ ದಿನ ಅಚ್ಚಳಿಯದೆ ಉಳಿದುಬಿಟ್ಟಿತು.

ನಾಳೆ ಹೊರಡಬೇಕಿರುವ ಖೋಜಾರ ನಗರಕ್ಕೆ ಬಸ್ ಟಿಕೆಟ್ ಬುಕ್ ಮಾಡುವ ಕೆಲಸವೂ ಆ ಮೊದಲೇ ಶ್ರದ್ಧೆಯಿಂದ ಗೆಳೆಯರು ಮಾಡಿದ್ದರು.ಇನ್ನು ನಾಳೆ ಖೋಜಾರ ದರ್ಬಾರಿನತ್ತ ಪಯಣ…

ಮೂಲ : ಫಾಝಿಲ್ ಫಿರೋಝ್
ಅನು : ಝುಬೈರ್ ಹಿಮಮಿ ಪರಪ್ಪು

1 6 7 8 9 10 16