ಬಾಹ್ಯಾಕಾಶ ಚಲನೆ ಹಾಗೂ ಆಧುನಿಕ ಮುಸ್ಲಿಮರ ದೃಷ್ಟಿಕೋನಗಳು

ಸರಿಸುಮಾರು ಸಾವಿರ ವರ್ಷಗಳ ಹಿಂದೆ ಮುಸ್ಲಿಂ ಚಿಂತಕರು, ವಿದ್ವಾಂಸರು ವೈಜ್ಞಾನಿಕ ಅಧ್ಯಯನದ ಸುವರ್ಣ ಯುಗಕ್ಕೆ ಮುಹೂರ್ತವಿಟ್ಟಿದ್ದಾರೆ. ಅವರು ಗ್ರೀಕ್, ಸಂಸ್ಕೃತ ಭಾಷೆಗಳಲ್ಲಿದ್ದ ಖಗೋಳಶಾಸ್ತ್ರದ ಕೃತಿಗಳನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿ ಹೊಸ ಜಗತ್ತನ್ನು ತೆರೆದರು. ಆಕಾಶ ಲೋಕಗಳ ನಿಗೂಢತೆಗಳ ಬಗ್ಗೆ ಅಧ್ಯಯನ ಮಾಡಲು ಈ ಗ್ರಂಥಗಳು ಹಸಿರು ನಿಶಾನೆ ತೋರಿಸಿದ್ದೇ ಅಲ್ಲದೆ ಅವರದ್ದೇ ಆದ ಅಧ್ಯಯನದ ಹೊಸ ರೂಪು ರೇಷೆಗೆ ಮೇಲ್ಪಂಕ್ತಿ ಹಾಕಲು ಇದು ನಿಮಿತ್ತವಾಯಿತು. ಅವರು ಸೂರ್ಯ ಮತ್ತು ಚಂದ್ರನ ಚಲನೆ ನಿಖರವಾಗಿ ದಾಖಲಿಸಿ, ಭೂಮಿಯಿಂದ ನೋಡಬಹುದಾದ ಇತರ ಗೋಳಗಳ ವ್ಯಾಸ (Diameter) ಲೆಕ್ಕಹಾಕಿ, ಭೂಮಿಯಲ್ಲಿ ಅದರ ಸ್ಪಷ್ಟ ಸ್ಥಾನಗಳನ್ನು ಅರ್ಥೈಸಿದರು.

ಎಂಟನೇ ಶತಮಾನದಲ್ಲಿ ಆರಂಭಗೊಂಡು ಸುಮಾರು ಹದಿನಾಲ್ಕನೇ ಶತಮಾನದವರೆಗೆ ಮುಂದುವರಿದ ಇಸ್ಲಾಮಿಕ್ ಸುವರ್ಣ ಯುಗದ ಕುರಿತಾಗಿದೆ ಮೇಲಿನ ವಿವರಣೆ. ಆದರೆ ಈ ಮಧ್ಯಕಾಲೀನ ಸಾಧನೆಗಳ ಬಗೆಗಿನ ಚರ್ಚೆಗಳ ತೆರೆಯ ಮರೆಯಲ್ಲಿ ಪಶ್ಚಿಮೇಷ್ಯಾದಂತಹ ಪ್ರದೇಶಗಳ ಆಧುನಿಕ ಮುಸ್ಲಿಮರು ಪ್ರಸ್ತುತ ಈ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಮುನ್ನಡೆಗಳು ಕಾಣದಂತಾಗಿವೆ. ಸೌರವ್ಯೂಹದ ಆಚೆಗಿನ ಗ್ರಹಗಳನ್ನು ಕಂಡುಹಿಡಿಯಲು ಜಗತ್ತಿನಾದ್ಯಂತ 2010 ರಲ್ಲಿ ಖತರ್ ನಡೆಸಿದ ‘Qatar Exoplanet Survey’ ಸಮೀಕ್ಷೆ ಇದಕ್ಕೊಂದು ತಾಜಾ ಉದಾಹರಣೆ.

‘ಇತರರಿಗೆ ಹೋಲಿಸಿದರೆ ಅರಬ್ ಲೋಕದ ವಿಜ್ಞಾನಿಗಳ ಪರಿಚಯ ಹೆಚ್ಚಿನವರಿಗೆ ಇಲ್ಲ. ಹೆಚ್ಚಿನವರಿಗೆ ಅರಬಿ ಹೆಸರಿನ ಉಗ್ರಗಾಮಿಗಳನ್ನು ತಿಳಿದಿದೆ. ಒಮ್ಮೆಯೂ ಅರಬ್ ವಿಜ್ಞಾನಿಗಳ ಹೆಸರುಗಳನ್ನು ಅವರು ಕೇಳುತ್ತಲೇ ಇಲ್ಲ. ಇಂತಹಾ ತಪ್ಪುಧೋರಣೆಯ ಹಿನ್ನೆಲೆಯಲ್ಲಿ ಅರಬ್ ಉಗ್ರಗಾಮಿಗಳ ಕುರಿತು ಬಂದಿರುವ ಹೇರಳ ಪುಸ್ತಕಗಳ ಪ್ರಭಾವ ಇರಬಹುದು!’ ಎಂದು ಖತಾರಿನ ವರ್ಜೀನಿಯಾ ಕಾಮನ್ ವೆಲ್ತ್ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕರಾದ ಮಥಿಯಾಸ್ ಡೆಟರ್ಮನ್ ಅಭಿಪ್ರಾಯ ಪಡುತ್ತಾರೆ. Space science and Arab world: Astronaut’s, observatories and Nationalism in the Middle East ಎಂಬ ತನ್ನ ನೂತನ ಪುಸ್ತಕದಲ್ಲಿ ಮಥಿಯಾಸ್ ಡೆಟರ್ಮನ್ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಾರೆ. ಈ ಕ್ಷೇತ್ರದ ವಿವಿಧ ವಿಜ್ಞಾನಿಗಳ ಸಾಧನೆಗಳ ಬಗ್ಗೆ ಪುಸ್ತಕ ಪರಿಶೀಲನೆ ಮಾಡಿದೆ. ಅವರ ಯೋಜನೆಯಲ್ಲಿ 1800 ರಲ್ಲಿ ಸ್ಥಾಪಿಸಿದ ಮೊದಲ ಬಾಹ್ಯಾಕಾಶ ವೀಕ್ಷಣಾಲಯದಿಂದ ಹಿಡಿದು 2020 ರಲ್ಲಿ ನಡೆದ ಮಂಗಳ ಗ್ರಹದ ಸಂಶೋಧನೆ ಸಹಿತ ಎಲ್ಲವನ್ನೂ ಒಳಗೊಂಡಿದೆ.

ಮರೀನಾ ಕೋರನ್: ಸುವರ್ಣ ಯುಗವನ್ನು ಬದಿಗಿಟ್ಟು, ಪಶ್ಚಿಮೇಷ್ಯದ ಆಧುನಿಕ ಬಾಹ್ಯಾಕಾಶ ಪರಿವೀಕ್ಷಣೆ ಬಗೆಗಿನ ಅನ್ವೇಷಣೆಗಳತ್ತ ಗಮನ ಹರಿಸುವ ನಿರ್ಧಾರಕ್ಕೆ ತಾವು ಬಂದದ್ದು ಯಾಕೆ?

ಮಥಿಯಾಸ್ ಡೆಟರ್ಮನ್: “೧೮೦೦ ರ ಶತಮಾನದ ನಂತರ ಅರಬ್ ಲೋಕದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಅನ್ವೇಷಣೆಗಳ ಬಗೆಗಿನ ಅಧ್ಯಯನಗಳು ಅಷ್ಟೇನೂ ನಡೆದಿಲ್ಲ. ವಿಶೇಷವಾಗಿ, ಮಧ್ಯಯುಗದ ಅರಬ್, ಮುಸ್ಲಿಂ ವೈಜ್ಞಾನಿಕ ಪ್ರಗತಿಯ ಸಂಶೋಧನೆಗೆ ಹೋಲಿಸಿದಾಗ ಬೆರಳೆಣಿಕೆಯಷ್ಟು ಬಾಹ್ಯಾಕಾಶ ಪರಿಶೋಧನೆಗಳ ಅಧ್ಯಯನ ಮಾತ್ರ ನಡೆದಿರುವುದು! ವಿಜ್ಞಾನವು ಇತಿಹಾಸದೊಂದಿಗೆ ಮುಂದಡಿಯಿಡುತ್ತಿದ್ದು ಇತಿಹಾಸದ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಅರಬ್ ಲೋಕಕ್ಕೆ ಏನನ್ನಾದರೂ ಮಾಡಲು ಸಾಧ್ಯವಾಗಿದೆ ಎಂಬ ನಂಬಿಕೆ ಸಾಮಾನ್ಯವಾಗಿ ಬೀಡುಬಿಟ್ಟಿದೆ ಸಾವಿರಗಟ್ಟಲೆ ವರ್ಷಗಳ ಹಿಂದೆ ವಿಜ್ಞಾನವು, ಪುರಾತನ ಬ್ಯಾಬಿಲೋನಿಯಾ ಸಮುದಾಯದೊಂದಿಗೆ ಜನ್ಮತಾಳಿತೆಂದೂ, ಅದರ ಸಣ್ಣ ಭಾಗ ಪುರಾತನ ಚೀನೀಯರೊಂದಿಗೂ, ಮುಂದುವರಿದು ರೋಮ್, ಗ್ರೀಕ್ ಸಂಸ್ಕೃತಿಗೆ ಹಸ್ತಾಂತರವಾಗಿ ಬಳಿಕ ಅರಬಿಯನ್ನರಿಗೆ ತಲುಪಿ ಅವರದನ್ನು ಸಂರಕ್ಷಿಸಿ, ಅದನ್ನು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರು. ಬಳಿಕ ಯುರೋಪಿಗೆ ಹಸ್ತಾಂತರಿಸಲಾಯಿತು. ಯುರೋಪ್ ನವೋತ್ಥಾನದ ಮೂಲಕ ಅಂತಿಮವಾಗಿ ವಿಜ್ಞಾನ ಇಂದಿನ ಕೇಂದ್ರವಾದ ಅಮೇರಿಕಾಕೆ ತಲುಪಿತು ಎಂಬ ರೀತಿಯಲ್ಲಿ ನೆರೆಟಿವ್ ಇದೆ.

ನಮ್ಮಲ್ಲಿ ಪ್ರಾಚೀನ ಗ್ರೀಕ್, ಪರ್ಷಿಯನ್ ಗ್ರಂಥಗಳ ಸಂರಕ್ಷಿಸುವಿಕೆಯಲ್ಲೂ, ಅನುವಾದ ಮಾಡುವುದರಲ್ಲೂ ಮಧ್ಯಕಾಲೀನ ಅರಬ್ ಮುಸ್ಲಿಂ ಚಿಂತಕರ ಪಾತ್ರ ವಿವರಿಸುವ ಸಾಕಷ್ಟು ಪುಸ್ತಕಗಳಿವೆ. ಮಾತ್ರವಲ್ಲದೇ ಆಧುನಿಕ ಯುರೋಪಿಗೆ ಜ್ಞಾನ ಹಸ್ತಾಂತರದ ಇತಿಹಾಸ ಅಧ್ಯಯನ ಮಾಡಲು ಹಲವು ಸ್ಕಾಲರ್ಶಿಪ್ಗಳು ನಮ್ಮ ಮುಂದಿದೆ. ಈ ನಸಂಕಥನದ ಪ್ರಕಾರ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷತಃ ಯುರೋಪಿನಲ್ಲಿ ಐಸಾಕ್ ನ್ಯೂಟನ್, ಗೆಲಿಲಿಯೋರಂತಹ ಘಟಾನುಘಟಿ ವಿಜ್ಞಾನಿಗಳ ಕಾಲದಲ್ಲಿ ವೈಜ್ಞಾನಿಕ ಕ್ರಾಂತಿಗಳು ನಡೆಯುತ್ತಾ ಇರುವಾಗಲೇ ಅರಬ್ ಮುಸ್ಲಿಂ ಲೋಕದಲ್ಲಿ ಚಾಲ್ತಿಯಲ್ಲಿದ್ದ ಸುವರ್ಣ ಯುಗಕ್ಕೆ ಕೊನೆಗಾಣುತ್ತದೆ. ಈ ಸಂಕಥನ ಪ್ರಶ್ನಾರ್ಹ.

“ಈ ಸಂಕಥನ ಪ್ರಶ್ನಾರ್ಹ ಎಂದು ತಾವು ಸೂಚಿಸಲು ಕಾರಣ?”

ಇದು ಪಾಶ್ಚಾತ್ಯ ಜಗತ್ತಿನಲ್ಲಿ ಮಾತ್ರ ನೆಲೆಯೂರಿರುವ ದೃಷ್ಟಿಕೋನವಲ್ಲ. ಅರಬ್ ಜಗತ್ತಿನಲ್ಲಿ ಕೂಡಾ ಇಂತದೆ ದೃಷ್ಟಿಕೋನ ಚಾಲ್ತಿಯಲ್ಲಿದೆ. ಅರಬ್ ಮುಸ್ಲಿಂ ಲೋಕದಲ್ಲಿ ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ವಿಜ್ಞಾನದೊಂದಿಗೆ ಬಗ್ಗೆ ಜಾಸ್ತಿ ನೊಸ್ಟಾಲ್ಜಿಕ್ ಆಗಿ ಅನುಸಂಧಾನ ನಡೆಸುವುದು ಸ್ವಲ್ಪ ಅಪಾಯಕಾರಿ. ಅದು ಪ್ರಗತಿಗಾಮಿತನ ಬೆಳೆಸಲು ಮಾತ್ರ ಉಪಯುಕ್ತ. ‘ಸಾವಿರ ವರ್ಷಗಳ ಹಿಂದಿನ ಸುವರ್ಣ ಯುಗದಲ್ಲಿ ನಮ್ಮ ವಿಜ್ಞಾನ ವಿಶ್ವದಲ್ಲೇ ಪರಿಣಾಮಕಾರಿಯಾಗಿತ್ತು ಹಾಗೂ ಸಾರ್ವಭೌಮತೆಯನ್ನು ಪಡೆದಿತ್ತು. ಮತ್ತೆ ದಾರಿ ತಪ್ಪಿದ್ದು ಎಲ್ಲಿ ? ಬಹುಶಃ ನಾವು ಶತಮಾನಗಳ ಹಿಂದಿನ ಇಸ್ಲಾಮ್ ಹೇಗಿತ್ತೋ ಅಲ್ಲಿಗೆ ಮರಳಬೇಕಿದೆ. ಇದಲ್ಲದೆ ಸಾವಿರ ವರ್ಷಗಳ ಹಿಂದಿನ ಸಾಮಾಜಿಕ- ಸಾಂಸ್ಕೃತಿಕ ವಿಚಾರಗಳಿಗೂ ಕೂಡಾ! ಇಂತಹ ಚಿಂತನೆ ಅಪಾಯಕಾರಿಯಾದ ಮೂಲಭೂತವಾದಕ್ಕೋ ಸಲಫಿಸಮ್ಗೋ ಕೊಂಡೊಯ್ಯಲು ಕಾರಣವಾಗುತ್ತದೆ.

ನಾನು ಇಂದು ಜಗತ್ತಿನಲ್ಲಿರುವ ಅರಬ್ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಗಗನಯಾತ್ರಿಗರ ಬಗ್ಗೆ ಸಮೀಕ್ಷೆ ನಡೆಸಲು ಪ್ರಯತ್ನಿಸುತ್ತಿದ್ದೇನೆ. ಅರೇಬಿಕ್ ಭೂಪ್ರದೇಶಗಳಾದ್ಯಂತ ಯುನಿವರ್ಸಿಟಿಗಳು ಹಾಗೂ ಸಂಶೋಧನಾ ಕೇಂದ್ರಗಳಿವೆ. ಆದರೆ ಅಲ್ಲಿ ನಡೆಯುತ್ತಿರುವ ಸಂಶೋಧನೆ, ಅಧ್ಯಯನ ಯಾವುದೂ ನಮ್ಮ ಕಿವಿಗೆ ಮುತುತ್ತಿಲ್ಲ! ಬಹುಶಃ ಅರಬ್ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿರುವ ಬೆರಳೆಣಿಕೆಯಷ್ಟು ಸುಶಿಕ್ಷಿತರಿಗೆ ಮಾತ್ರ ಮಧ್ಯಕಾಲೀನ ಮುಸ್ಲಿಮ್ ವಿದ್ವಾಂಸರ ಪರಿಚಯ ಇರಬಲ್ಲದು. ನನ್ನ ಪ್ರಕಾರ ಕೆಲವೇ ಕೆಲವು ಜನರಿಗೆ ಮಾತ್ರ ಅರಬ್ ಗಗನಯಾತ್ರಿಗಳ ಬಗ್ಗೆ ತಿಳಿದಿರುವುದು. ಇತರರಿಗೆ ಹೋಲಿಸಿದರೆ ಅರಬ್ ಜಗತ್ತಿನ ವಿಜ್ಞಾನಿಗಳ ಅರಿವು ತುಂಬಾನೇ ಕಡಿಮೆ.”

ಮಧ್ಯಕಾಲೀನ ಪೂರ್ವಿಕರ ಬಗ್ಗೆ ಆಧುನಿಕ ಖಗೋಳಶಾಸ್ತ್ರಜ್ಞರ ಅಭಿಪ್ರಾಯವೇನು?


ಮೊದಲನೆಯದಾಗಿ ಸುವರ್ಣ ಯುಗವು ಅವರ ಪರಂಪರೆಯ ಪ್ರಧಾನ ಅಂಗ. ಭಾರೀ ದುಬಾರಿಯಾದ ಖಗೋಳಶಾಸ್ತ್ರದ ಅಧ್ಯಯನಗಳಿಗೆ ಹಣ ಮಂಜೂರು ಮಾಡುವಂತೆ ಸರ್ಕಾರವನ್ನು ಮನವೊಲಿಸಲು ಈ ಪರಂಪರೆಯನ್ನು ಉಪಯೋಗಿಸಬಹುದು. ಓರ್ವ ಗಗನಯಾತ್ರಿಯನ್ನು (astronaut) ಬಾಹ್ಯಾಕಾಶಕ್ಕೆ ಕಳುಹಿಸುವುದು, ಅದಕ್ಕಾಗಿ ರಾಕೆಟ್ ನಿರ್ಮಾಣ, ದೊಡ್ಡ ಟೆಲಿಸ್ಕೋಪ್ಗಳ ನಿರ್ವಹಣೆ ಎಲ್ಲಾ ದುಬಾರಿ ಯೋಜನೆಗಳಾಗಿವೆ. ಆದ್ದರಿಂದ ಮಿಲಿಟರಿ , ಶಾಲೆ, ಆಸ್ಪತ್ರೆಗಳಿಗಿಂತ ಹೊಸ ಬಾಹ್ಯಾಕಾಶ ದೂರದರ್ಶಕಗಳ ಮೂಲಕ ಪರಿಶೋಧನೆ ಮಾಡಲು ಶತಕೋಟಿ ಡಾಲರುಗಳಷ್ಟು ಖರ್ಚು ಮಾಡಬೇಕಾಗುತ್ತದೆ.

ಮಧ್ಯಕಾಲೀನ ವಿದ್ವಾಂಸರ ಹೆಸರಿನ ಬೀದಿಗಳು ಇಂದಿಗೂ ಅಲ್ಲಿ ಅಸ್ತಿತ್ವದಲ್ಲಿದೆ. ಮಧ್ಯಕಾಲೀನ ಪರ್ಷಿಯನ್ ವೈದ್ಯ ಹಾಗೂ ಬರಹಗಾರನಾದ ಇಬ್ನು ಸೀನಾರ (Avisenna) ಹೆಸರಿನ ಪಟ್ಟಣಗಳಿವೆ. ನಾನು ವಾಸಿಸುವ ದೋಹಾದಲ್ಲಿರುವ ಔಷಧಾಲಯಗಳು ಇಬ್ನಾ ಸೀನಾರ ನಾಮದಿಂದ ಸುಪ್ರಸಿದ್ಧ. ಇಂಗ್ಲೆಂಡ್ ಹಾಗೂ ಕೇಂಬ್ರಿಡ್ಜ್ನಂತೆ ಸೈನ್ಸ್ ಹಾಗೂ ಟೆಕ್ನಾಲಜಿ ಉದ್ಯಾನವನಗಳನ್ನು ಇಂದು ಕತಾರ್ ಹೊಂದಿದೆ. ಅಮೇರಿಕನ್ ಯುನಿವರ್ಸಿಟಿಯನ್ನು ಸುತ್ತುವರಿದ ಹಬ್ಬಿನ ಹಾಗೆ ಇರುವ ನಿರ್ಮಾಣವಾಗಿದೆ ಇದು. ಹೃದ್ಯವಾಗಿ ಗೋಚರಿಸುವ ಈ ಹಬ್ಬುಗಳನ್ನು ಉಕ್ಕು ಮತ್ತು ಗಾಜಿನಿಂದ ನಿರ್ಮಿಸಲಾಗಿದೆ. ಇದರೊಳಗಿರುವ ಪ್ರತೀ ಮೀಟಿಂಗ್ ರೂಮಿಗೆ ಅರೇಬ್ಯನ್ ಮುಸ್ಲಿಂ ವಿದ್ವಾಂಸರ ನಾಮವನ್ನು ಇಡಲಾಗಿದೆ. ಈ ಸುವರ್ಣ ಯುಗದ ಸ್ಮರಣೆ, ಐತಿಹ್ಯ, ಪರಂಪರೆಗಳೆಲ್ಲವೂ ಆಧುನಿಕ ವಿಜ್ಞಾನದ ಒಂದು ಸುಪ್ರಧಾನ ಸಾನಿಧ್ಯ.

ನಿಮ್ಮ ಅಭಿಪ್ರಾಯ ಪ್ರಕಾರ ಮಧ್ಯಪ್ರಾಚ್ಯದಲ್ಲಿನ ಬಾಹ್ಯಾಕಾಶ ವಿಜ್ಞಾನದ ಆಧುನಿಕ ಇತಿಹಾಸ ಎಲ್ಲಿಂದ ಪ್ರಾರಂಭವಾಗುತ್ತದೆ..!?

ಆಧುನಿಕ ಇತಿಹಾಸವು ಹತ್ತೊಂಬತ್ತನೇ ಶತಮಾನದಿಂದ ಪ್ರಾರಂಭವಾಯಿತು. ಬಹುಶಃ ಪ್ರಪಂಚದ ಹೀಲಿಯೋ ಸೆಂಟ್ರಿಕ್ ದೃಷ್ಟಿಕೋನ ಆರಂಭಗೊಳ್ಳುವ ಸಮಯ. ಆ ಸಂದರ್ಭದಲ್ಲಿ ಸೌರವ್ಯೂಹ ಹಾಗೂ ಹಲವು ಗ್ರಹಗಳ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಅರಬಿ ಭಾಷೆಗೆ ಅನುವಾದಿಸಿಲಾಗಿತ್ತು. ಅದೇ ವೇಳೆ ಆಧುನಿಕ ಟೆಲಿಸ್ಕೋಪ್ಗಳನ್ನು ಉಪಯೋಗಿಸಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ೧೮೭೦ ರ ದಶಕದಲ್ಲಿ ಸಿರಿಯನ್ ಪ್ರೊಟೆಸ್ಟೆಂಟ್ ಕಾಲೇಜಿನಲ್ಲಿ ಸ್ಥಾಪಿಸಲಾದ ವೀಕ್ಷಣಾಲಯವು ಇದಕ್ಕೆ ತಾಜಾ ಉದಾಹರಣೆ. ನಂತರ ಈ ಸಂಸ್ಥೆಗೆ ಅಮೇರಿಕಾ ಯುನಿವರ್ಸಿಟಿ ಆಫ್ ಬೈರೂತ್ ಎಂದು ಮರು ನಾಮಕರಣ ಮಾಡಲಾಯಿತು. 1880 ರಲ್ಲಿ ಈಜಿಪ್ಟ್ ಸರ್ಕಾರ ಮತ್ತು ಬ್ರಿಟಿಷ್ ವಸಾಹತುಶಾಹಿ ಸರ್ಕಾರವು ಈಜಿಪ್ಟಿನಲ್ಲಿ ನಿರ್ಮಿಸಿದ ಸಂಶೋಧನಾ ಕೇಂದ್ರಗಳು ಕೂಡಾ ಈ ಇತಿಹಾಸದ ಭಾಗ.

ಮುಂದಿನ ಶತಮಾನಕ್ಕೆ ಪ್ರವೇಶಿಸುವುದಾದರೆ ನೀವಲ್ಲಿ ಈಜಿಪ್ಶ್ಯ ನ್ ಸೈಂಟಿಸ್ಟ್ ಫಾರೂಖ್ ಅಲ್-ಬಾಸ್ ಬಗ್ಗೆ ಬರೆದಿದ್ದೀರಿ. 1970ರ ವೇಳೆಗೆ ಈಜಿಪ್ಟಿನ ಅಧ್ಯಕ್ಷರ ಸಲಹೆಗಾರನಾಗಿಯೂ ವಾಷಿಂಗ್ಟನ್ ಡಿ.ಸಿ.ಯ Smithsonian National Air and Space Museum ಡೈರೆಕ್ಟರಾಗಿ ಅವರು ಒಟ್ಟೊಟ್ಟಿಗೆ ಸೇವೆ ಸಲ್ಲಿಸಿದರು. ಈ ಎರಡು ಜಗತ್ತನ್ನು ಏಕಕಾಲಕ್ಕೆ ನಿರ್ವಹಿಸಲು ಅವರಿಗೆ ಸಾಧ್ಯವಾದದ್ದು ಹೇಗೆ?

ಬಹುಶಃ ಅರೇಬಿಯಾದ ಗಗನಯಾತ್ರಿಗಳ ಪೈಕಿ ಅತ್ಯಂತ ಸುಪ್ರಸಿದ್ಧ ನಾಮ ಫಾರೂಖ್ ಅಲ್-ಬಾಸ್ ಅವರದ್ದು. ಆರಂಭದಲ್ಲಿ ಅವರು ಗಗನಯಾತ್ರಿಯಾಗಿರಲಿಲ್ಲ. ಈಜಿಪ್ಟ್ ಮತ್ತು ಅಮೇರಿಕಾದಲ್ಲಿ ಜಿಯೋಲಜಿಯ ತರಬೇತಿಯನ್ನಾಗಿತ್ತು ಅವರು ಪೂರ್ಣಗೊಳಿಸಿದ್ದು. ಆದ್ದರಿಂದ ಅವರಿಗೆ ಎರಡೂ ರಾಷ್ಟ್ರಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಯ ಕುರಿತಾದ ಮೂಲಭೂತ ಅರಿವು ಇತ್ತು. ಅಮೇರಿಕಾದಿಂದ ಪಿ.ಎಚ್.ಡಿ ಮತ್ತು ಜರ್ಮನಿಯಿಂದ ಪೋಸ್ಟ್ ಡಾಕ್ಟರಲ್ ಪದವಿ ಪ್ರಾಪ್ತಿಯಾದ ಬಳಿಕ ಅಮೇರಿಕನ್ ಪತ್ನಿಯೊಂದಿಗೆ ಈಜಿಪ್ಟಿನಲ್ಲಿ ನೆಲೆಸುವ ನಿರ್ಧಾರದಿಂದ ಈಜಿಪ್ಟಿಗೆ ಮರಳಿದರು. ಆದರೆ ದುರದೃಷ್ಟವಶಾತ್ ತನ್ನ ದೊಡ್ಡ ಯೋಜನೆಗಳಿಗೆ ಮತ್ತು ಚಿಂತನೆಗಳಿಗೆ ತನ್ನ ರಾಷ್ಟ್ರ ಅವಕಾಶ ನೀಡದು ಎಂದು ಅವರಿಗೆ ಖಾತ್ರಿಯಾಯಿತು.ಬಳಿಕ ಅಮೇರಿಕಾಗೆ ಯಾತ್ರೆಯಾಗಿ ಅಪೋಲೋ ಬಾಹ್ಯಾಕಾಶ ಯೋಜನೆಯ ಭಾಗವಾದರು.ಆ ಸಮಯದಲ್ಲಿ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗೆ ಚಂದ್ರನ ಮೇಲ್ಮೈಯ ಬಗ್ಗೆ ಮತ್ತು ನಿಖರವಾದ ಲ್ಯಾಂಡಿಂಗ್ ತಾಣಗಳ ಬಗ್ಗೆ ಅಧ್ಯಯನ ಮಾಡಲು ಉತ್ತಮ ಜಿಯೋಲಜಿಸ್ಟ್ ಒಬ್ಬರು ಬೇಕಾಗಿತ್ತು.

ಅಲ್-ಬಾಸ್ ಇತರೆ ಅರಬಿಗಳಂತೆ ತಾರತಮ್ಯಕ್ಕೆ ಒಳಗಾದರು. ಧೃತಿಗೆಡದ ಬಾಸ್ ರವರಿಗೆ ಯಾವುದೂ ಕೂಡಾ ಅಡಚಣೆಯಾಗಲಿಲ್ಲ. ಮಾತ್ರವಲ್ಲದೆ ತನ್ನ ಕೆಲಸ ಹಾಗೂ ಧ್ಯೇಯವನ್ನು ಮುಂದಿಟ್ಟು ಕಠಿಣ ಪ್ರಯತ್ನ ಮಾಡಿದರು. ಬಳಿಕ ಅಪೋಲೋ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿನ ಚಂದ್ರನ ಮೇಲ್ಮೈ ಬಗೆಗಿನ ಅಧ್ಯಯನದಲ್ಲಿ ಖ್ಯಾತಿ ಪಡೆದರು. ಚಂದ್ರನ ಮೇಲಿನ ಗಗನಯಾತ್ರಿಗಳ ಮುಖ್ಯ ತರಬೇತುದಾರರಾದರು.

ಇದೇ ಅಲ್ಲವೇ ಸೌದಿ ಅರೇಬಿಯಾದ ಮೊದಲ ಗಗನಯಾತ್ರಿ ಸುಲ್ತಾನ್ ಬಿನ್ ಸಲ್ಮಾನ್ ರವರ ವಿಚಾರದಲ್ಲೂ ನಡೆದಿದ್ದು. ಅವರು ಬಾಹ್ಯಾಕಾಶ ಯಾನಕ್ಕೆ ಸಿದ್ಧವಾಗುತ್ತಿದ್ದಂತೆ ಹೂಸ್ಟನಿನ ಬಳಿಯಿರುವ ಮುಖ್ಯ ಅರಬ್ ತೈಲ ಕಂಪನಿಯಾದ Aramcoದಿಂದ ನಾಸಾ ಜನರನ್ನು ತಲುಪಿಸಿತು. ಸೌದಿಯ ಸಂಸ್ಕೃತಿಯ ಕುರಿತು ನಾಸಾದ ಜನರಿಗೆ ಒಂದು ದಿನದ ‘ಕ್ರಾಶ್ ಕೋರ್ಸ್’ ನೀಡಲೋಸ್ಕರವಾಗಿತ್ತು ಈ ಶಿಬಿರ. ಇದು ಅಗತ್ಯವೆಂದು ನಾಸಾದ ಮುಖ್ಯ ಅಧಿಕಾರಿಗಳು ತೀರ್ಮಾನಿಸಿದ್ದು ಯಾಕೆ?


ಒಬ್ಬ ಸಾಧಾರಣ ಅಮೇರಿಕನ್ ಪ್ರಜೆಗೆ ಸಂಬಂಧಿಸಿದಂತೆ ಅಥವಾ ಆ ಬಾಹ್ಯಾಕಾಶ ಯೋಜನೆ ಭಾಗಿಯಾಗಿರುವ ಅಮೇರಿಕನ್ ಗಗನಯಾತ್ರಿಯೊಬ್ಬನಿಗೆ ಅರೇಬಿಕ್ ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಜ್ಞಾನ ಇರಬೇಕೆಂದಿಲ್ಲ! ಇದ್ದರೂ ಪಾಶ್ಚಿಮಾತ್ಯ ಜನರಿಗೆ ಅರಬಿಗಳ ಬಗ್ಗೆ ಓರಿಯಂಟಲಿಸ್ಟ್ ಮಿಥ್ ಗಳು ಕಟ್ಟಿಕೊಟ್ಟ ಅಪಾಯಕಾರಿ ವಿಷಯಗಳೊಂದಿಗಾಗಿತ್ತು ಸಂಬಂಧ. ಅವರಿಗೆ ಸೌದಿ ಅರೇಬಿಯಾ ಎಂದು ಕೇಳಿದಾಗ ಮನಸ್ಸಿಗೆ ಮೊದಲು ನೆನಪಾಗುವುದು ಲಾರೆನ್ಸ್ ಆಫ್ ಅರೇಬಿಯಾ, ಒಂಟೆಗಳು, ಮರುಭೂಮಿಗಳು, ಸುಲ್ತಾನರು, ಶೇಖರು ಮತ್ತು ರಾಜಕುಮಾರರು. ಅರೇಬಿಯಾದ ಗಗನಯಾತ್ರಿಗಳನ್ನು ರೂಪಿಸುವುದು ಏನೆಂದು ಹೆಚ್ಚಿನ ಅಮೇರಿಕನ್ನರಿಗೆ ತಿಳಿದಿಲ್ಲ. ಇದಲ್ಲದೆ, ಅವರು ಯಾವ ರೀತಿಯ ವ್ಯಕ್ತಿ, ಸ್ಪೇಸ್ ಪ್ರೊಜಕ್ಟಿನ ಸದಸ್ಯರು ಎಂಬ ನೆಲೆಯಲ್ಲಿ ಯಾವ ರೀತಿ ಅವರೊಂದಿಗೆ ಸಂವಹನ ನಡೆಸಬೇಕು ಅಥವಾ ವರ್ತಿಸಬೇಕೆಂದು ತಿಳಿದಿಲ್ಲ. ಬಹುಶಃ ನಾಸಾ ಅಧಿಕಾರಿಗಳು ಇಂತಹಾ ಸಾಂಸ್ಕೃತಿಕ ತಪ್ಪುಗ್ರಹಿಕೆಯಿಂದ ಗೊಂದಲಕ್ಕೆ ಈಡಾಗಿದ್ದಾರೆ.

ವಾಸ್ತವದಲ್ಲಿ ಅಂದು ಇತರೆ ಅರಬ್ ಗಣ್ಯ ವ್ಯಕ್ತಿಗಳಂತೆ ಅವರು ಕೂಡಾ ಅಮೇರಿಕನ್ ಸಂಸ್ಕೃತಿಗೆ ರೂಪಾಂತರಗೊಂಡಿದ್ದರು. ಅವರು ಅಮೇರಿಕಾದಲ್ಲೇ ಶಿಕ್ಷಣ ಪೂರ್ತಿಗೊಳಿಸಿದ್ದರು. ಅಲ್ಲಿ ವಾಸಿಸುತ್ತಿದ್ದ ಫ್ರೆಂಚ್ ಗಗನಯಾತ್ರಿಗಳಿಗಿಂತ ಅಮೇರಿಕನ್ ಸಂಸ್ಕೃತಿಯ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಇತ್ತು. ಇದಲ್ಲದೆ ಇಂಗ್ಲಿಷ್ ಮಾತಾಡುವುದರಲ್ಲೂ ಅವರು ಹೆಚ್ಚು ಪ್ರಾವೀಣ್ಯತೆ ಪಡೆದಿದ್ದರು. ಅದಾಗ್ಯೂ ನಾಸಾ ಅಧಿಕಾರಿಗಳಿಗೆ ಫ್ರೆಂಚ್ ಗಗನಯಾತ್ರಿಗಳ ಬಗ್ಗೆ ಸಾಂಸ್ಕೃತಿಕ ತಪ್ಪು ಕಲ್ಪನೆ ಕಡಿಮೆ ಇತ್ತು.

ಪ್ರಾಣಾಪಾಯ ಸಾಧ್ಯತೆ ಹೆಚ್ಚಾಗಿ ಇರುವುದರಿಂದ 2014 ರಲ್ಲಿ ಇಸ್ಲಾಮಿಕ್ ವಿದ್ವಾಂಸರು ಒನ್ ವೇ ಮಂಗಳಯಾನದ ವಿರುದ್ಧ ಫತ್ವಾ ಹೊರಡಿಸಿದ್ದರೆಂದು ತಾವು ಈ ಮೊದಲು ಸೂಚಿಸಿದ್ದೀರಿ. ‘ಈ ದೌತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ಪರಲೋಕದಲ್ಲಿ ಆತ್ಮಹತ್ಯೆ ಮಾಡಿದ ಶಿಕ್ಷೆಗೆ ಗುರಿಯಾಗಬಹುದು’ ಎಂದಾಗಿತ್ತು ಫತ್ವ. ಒಬ್ಬರ ಜೀವ ತೆಗೆಯುವುದು ದೊಡ್ಡ ಪಾಪವೆಂದು ಪರಿಗಣಿಸುವ ಇಸ್ಲಾಮಿಕ್ ಸಾಂಪ್ರದಾಯಿಕ ಮೌಲ್ಯಗಳನ್ನು ಅತ್ಯಂತ ಅಪಾಯಕಾರಿ ಖಗೋಳ ಸಂಶೋಧನೆಯೊಂದಿಗೆ ಹೇಗೆ ಹೊಂದಾಣಿಕೆ ಮಾಡಬಹುದು..!?

ಮನುಷ್ಯ ಜೀವನದ ಬಗ್ಗೆ ಅಭ್ಯಸಿಸುವ ಆಧುನಿಕ ಬಯೋ ಎಥಿಕ್ಸ್ (Bio Ethics) ಅರಬ್ ಜಗತ್ತಿನಲ್ಲಿ ವಿಕಸನಗೊಳ್ಳುತ್ತಿದೆ. ಇಂತಹ ಫತ್ವಾಗಳನ್ನು ಹೊರಡಿಸಿದವರ ಪಾಲಿಗೆ ಆತ್ಮಹತ್ಯೆ ಎನ್ನುವುದು ಒಂದು ದೊಡ್ಡ ಸಮಸ್ಯೆ. ಮಾನವ ಜೀವವನ್ನು ಗೌರವಿಸುವ ಯಾವುದೇ ಧರ್ಮಕ್ಕೂ ಇದು ಸಮಾನ. ಇದು ಇಸ್ಲಾಮಿನಲ್ಲಿ ಮಾತ್ರ ಇರುವ ಸಮಸ್ಯೆ ಅಲ್ಲ.

ಇದು ಮಂಗಳಯಾನ ದೌತ್ಯದಿಂದ ಮುಸ್ಲಿಂ ರಾಷ್ಟ್ರಗಳನ್ನು ಹಿಂದೆ ಸರಿಯಲು ಪ್ರೇರೇಪಿಸಿಲ್ಲ ಎನ್ನುತ್ತೀರಾ?
ಈ ಯೋಜನೆಗಳ ಹಿನ್ನೆಲೆಯಲ್ಲಿ ಯುಎಇಗೆ ಹಲವಾರು ರಾಷ್ಟ್ರೀಯ, ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಇವೆ. ಬಹುಶಃ ಪಶ್ಚಿಮೇಷ್ಯಾದ ರಾಷ್ಟ್ರಗಳ ಪೈಕಿ ಯುಎಇ ಮಂಗಳದ ದೌತ್ಯವನ್ನು ಸ್ವಲ್ಪ ಹೆಚ್ಚು ಮಹತ್ವಾಕಾಂಕ್ಷೆ ಇಟ್ಟುಕೊಂಡಿದೆ. ಅವರು ೨೦೨೦ರ ವೇಳೆಗೆ ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆ ಉಡಾಯಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾಹ್ಯಾಕಾಶ ನೌಕೆ ೨೦೨೧ ರಲ್ಲಿ ಮಂಗಳ ಗ್ರಹ ತಲುಪುವ ನಿರೀಕ್ಷೆಯಿದೆ. ಯುಎಇ ಯ ಗೋಲ್ಡನ್ ಜ್ಯುಬಿಲಿ ನಡೆಯುವ ಸಮಯವೂ ಹೌದು!.

ಇದಲ್ಲದೆ ಯುಎಇ ನೂರು ವರ್ಷಗಳ ಕಾಲಾವಧಿಯಲ್ಲಿ, ೨೧೧೭ ಆಗುವ ಹೊತ್ತಿಗೆ ಮಂಗಳ ಗ್ರಹದಲ್ಲಿ ಬೃಹತ್ ನಗರವನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆ ಪ್ರಥಮ ಹಂತದಲ್ಲಿದೆ. ಮಂಗಳ ಗ್ರಹದಲ್ಲಿ ಒಂದು ನಗರ ಸ್ಥಾಪಿಸಲು ಬಯಸಿದರೆ ನೀವು ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಯೋಜನೆ ಮತ್ತು ಚಟುವಟಿಕೆಗಳ ಬಗ್ಗೆ ಮುಸ್ಲಿಂ ವಿದ್ವಾಂಸರೆಡೆಯಲ್ಲಿ ಭಿನ್ನಾಭಿಪ್ರಾಯ ಮೂಡುವುದು ಖಂಡಿತಾ. ಆದರೆ ಇಂತಹಾ ಆಕಾಂಕ್ಷೆ ಮತ್ತು ಯೋಜನೆ ಮುಂದೆ ಸಾಗುವುದಂತೂ ವಾಸ್ತವ..!

ಮೂಲ: ಮರೀನಾ ಕೋರಿನ್
ಅನು: ಅಶ್ರಫ್ ನಾವೂರು

Leave a Reply

*