ಇಸ್ಲಾಮಿಕ್ ನಾಗರಿಕತೆಯ ಅನನ್ಯ ಕೃತಿಗಳು ಮತ್ತು ರಚನಾ ಪರಂಪರೆ

ಜಾಗತಿಕವಾಗಿ ಪಠ್ಯ ರೂಪದಲ್ಲಿರುವ ಹಲವು ಕೃತಿಗಳು ಮನುಷ್ಯರ ವಿಭಿನ್ನವಾದ ದೃಷ್ಟಿಕೋನಗಳನ್ನು, ಜೀವನಶೈಲಿಗಳನ್ನು ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಪ್ರತಿಫಲಿಸುತ್ತದೆ. ಆಧುನಿಕ ಪ್ರಕಟಣೆಗಳ ಆಗಮನಕ್ಕಿಂತ ಮೊದಲು ಧಾರಾಳ ಪುಸ್ತಕಗಳನ್ನು ರಚಿಸುವುದು ಹಾಗೂ ಅವುಗಳನ್ನು ಮತ್ತೆ ನಕಲು ಮಾಡಿಡುವ ರೀತಿಯಿತ್ತು. ಅಂತಹ ಹಲವು ರಚನೆಗಳು ಇಂದಿಗೂ ಲಭ್ಯವಿದೆ.

ಇಸ್ಲಾಮಿಕ್ ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರಾಗತ ರಚನಾ ರೂಪಗಳಾದ ಶರಹ್ (Scholia, ವಿವರಣೆ)ಗಳು ಹಾಗೂ ಹಾಶಿಯಾ (Footnote, ಟಿಪ್ಪಣಿ)ಗಳ ಮೂಲಕ ಮುಂದಿನ ತಲೆಮಾರಿಗಾಗಿ ಮೂಲಗ್ರಂಥಗಳನ್ನು (ಮತ್ನ್‌ಗಳು) ಸಂರಕ್ಷಿಸಲ್ಪಟ್ಟಿದೆ.

ʼಮತ್ನ್‌ಗಳುʼ ಅಂದರೆ ಪ್ರತ್ಯೇಕ ವಿಷಯಗಳಲ್ಲಾಗಿ ಬರೆಯಲ್ಪಟ್ಟಿರುವ ಸರಳ ರಚನೆಗಳಾಗಿವೆ. (ಹಿಂದಿನ ಕಾಲದ) ವಿದ್ಯಾರ್ಥಿಗಳು ಅವುಗಳನ್ನು ಕಂಠಪಾಠ ಮಾಡುತ್ತಾ ಅಧ್ಯಯನಗೈಯುವುದು ರೂಢಿಯಾಗಿತ್ತು. ಮತ್ನ್‌ಗಳು ಅದರಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ವಿಭಿನ್ನ ನಿಲುವು, ವಾದ, ವಿಶಾಲ ದೃಷ್ಟಿಕೋನಗಳು ಅದರಲ್ಲಿ ಇರುವುದಿಲ್ಲ.

ಶರಹ್ ಎಂಬ ಅರಬಿ ಪದಕ್ಕೆ ʼವಿಭಜಿಸುವುದು, ಪ್ರತ್ಯೇಕಿಸುವುದುʼ ಎಂಬರ್ಥವಿದೆ. ಮತ್ನ್‌ಗಳಲ್ಲಿ ವಿವರಿಸಲ್ಪಡದ ವಿಷಯಗಳ ಮೇಲೆ ಶರಹ್ ಸ್ಪಷ್ಟತೆಯನ್ನು ನೀಡುತ್ತದೆ. ಅದೇ ರೀತಿ ಹಾಶಿಯಗಳು ಶರಹಿನಲ್ಲಿ ಪ್ರತಿಪಾದಿಸುವ ವಿಷಯಗಳ ಮೇಲೆ ಸವಿವರ ಮಾಹಿತಿಗಳನ್ನು ನೀಡುವುದರೊಂದಿಗೆ ವಿಷಯದ ಕುರಿತು ಆಳ ಅರಿವಿನತ್ತ ಕೊಂಡೊಯ್ಯುತ್ತದೆ. ಅಂತಹ ವಿವರಣಾತ್ಮಕ ಗ್ರಂಥಗಳು ಅಸಮರ್ಪಕವೆಂಬ ಭಾವನೆಯಿದ್ದರೆ ಅಥವಾ ವಿಭಿನ್ನವಾದ ವಿವರಣೆಗಳು ಲಭ್ಯವಾದಲ್ಲಿ ಅದೇ ಪಠ್ಯಗಳಿಗೆ ಹೊಸ ಶರಹ್ ಮತ್ತು ಹಾಶಿಯಾಗಳನ್ನು ಬರೆಯಲಾಗುತ್ತಿತ್ತು. ಹೀಗೇ ಅನೇಕ ಗ್ರಂಥಗಳು ಇಸ್ಲಾಮಿಕ್ ವೈಜ್ಞಾನಿಕ ವಲಯದಲ್ಲಿ ರಚನೆಗೊಂಡವು. ಮೂರ್ನಾಲ್ಕು ಶತಮಾನಗಳ ಹಿಂದೆ ಬರೆಯಲ್ಪಟ್ಟ ಇಸ್ಲಾಮಿಕ್ ನಾಗರಿಕತೆಯ ಹಲವು ರಚನೆಗಳು ಇಂದಿಗೂ ಲಭ್ಯವಿರುವುದು ಭಾರೀ ವಿಶೇಷತೆಯಾಗಿದೆ.

2012ರಲ್ಲಿ ‘ಹಾಶಿಯಗಳು ಹಾಗೂ ಬೌದ್ಧಿಕ ಚರಿತ್ರೆಗಳು’ ಎಂಬ ಶೀರ್ಷಿಕೆಯಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಆಯೋಜಿಸಿದ ಕಾನ್ಫರೆನ್ಸ್‌ನಲ್ಲಿ ಶರಹುಗಳ ಹಾಗೂ ಹಾಶಿಯಾಗಳ ಪರಂಪರೆಯ ಕುರಿತು ಗಮನಾರ್ಹ ಚರ್ಚೆ ನಡೆಯಿತು.

ಇಸ್ಲಾಮಿಕ್ ನಾಗರಿಕತೆಯಲ್ಲಿ ಬರೆಯಲ್ಪಟ್ಟ ಕೃತಿಗಳ ಪೈಕಿ ಹತ್ತು ದಶಲಕ್ಷ ಕೃತಿಗಳು ಇಂದು ಲಭ್ಯವಿದೆ ಎಂದು ಕಾನ್ಫರೆನ್ಸ್‌ನಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಹೇಳುತ್ತವೆ. ಅವುಗಳ ಪೈಕಿ ಕೇವಲ ಶೇಕಡಾ ಹತ್ತರಷ್ಟು ಗ್ರಂಥಗಳನ್ನು ಮಾತ್ರ ಸದ್ಯ ಅಧ್ಯಯನ ಮಾಡಲಾಗುತ್ತಿದೆ ಎಂದೂ ಚಿಂತಕರು ಅಭಿಪ್ರಾಯ ಪಡುತ್ತಾರೆ.

ಹಾರ್ವರ್ಡ್ ಯುನಿವರ್ಸಿಟಿಯ ಅರಬ್-ಇಸ್ಲಾಮಿಕ್ ಬೌದ್ಧಿಕ ಇತಿಹಾಸ ವಿಭಾಗದ ಪ್ರೊಫೆಸರ್ ಆದ ಖಾಲಿದ್ ಅಲ್ ರುಹೈಬಿಯವರು (Khalid al Rouheyb) ಈ ಬಗೆಗಿನ ಸಮಗ್ರ ಅಧ್ಯಯನ ಮಾಡಿದ್ದಾರೆ. ʼIslamic intellectual history in the seventeenth century: Scholarly currents in the ottoman empire and the Magrib’ ಎಂಬ ತನ್ನ ಪುಸ್ತಕದಲ್ಲಿ ಒಟ್ಟೋಮನ್ ಆಡಳಿತಾವಧಿಯಲ್ಲಿ ರಚಿಸಲ್ಪಟ್ಟ ಧಾರಾಳ ಗ್ರಂಥಗಳ ವೈಜ್ಞಾನಿಕ ವಾತಾವರಣದ ಅಸ್ತಿತ್ವವನ್ನು ನಿರೂಪಿಸುತ್ತಾರೆ.

ಇಸ್ಲಾಮಿಕ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ ಇಂತಹ ಸಾವಿರಾರು ಕೃತಿಗಳ ಪೈಕಿ ಅನೇಕ ಕೃತಿಗಳು ಭೌಗೋಳಿಕ ವ್ಯಾಪ್ತಿ ಮತ್ತು ಶತಮಾನಗಳನ್ನು ಮೀರಿ ನಿಲ್ಲುತ್ತದೆ. ಅವುಗಳ ಪೈಕಿ ಸುದೀರ್ಘ ಕಾಲ ಮುಸ್ಲಿಂ ಸಮುದಾಯವನ್ನು ಪ್ರಭಾವಿಸಿದ ಹಾಗೂ ಅವರ ಹೃದಯವನ್ನು ಬೆಳಗಿಸಿದ ಕೆಲವು ಕೃತಿಗಳ ಕುರಿತು ಅರಿಯೋಣ.

ಆಧ್ಯಾತ್ಮಿಕ ಆನಂದದ ರಹಸ್ಯ

ಸೂಫೀ ಕೃತಿಗಳಲ್ಲಿ ಅಧಿಕವೂ ಪ್ರಸಿದ್ಧಿಗೊಂಡಿರುವುದು ಅದರ ಕರ್ತೃ‌ಗಳು ಅಳವಡಿಸಿದ್ದ ಆಧ್ಯಾತ್ಮಿಕ ಜೀವನಶೈಲಿಯಿಂದಾಗಿದೆ. ಅಂತಹ ಸೂಫಿಗಳು ಸಂಗಮಿಸಿದಾಗ ನಡೆಯುವ ಗ್ರಂಥಗಳಾಧಾರಿತ ಚರ್ಚೆಗಳು ಇಸ್ಲಾಮಿಕ್ ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತು ದರ್ವೇಶ್‌ಗಳು ಎಲ್ಲಾ ಸಂದರ್ಭಗಳಲ್ಲೂ ವಿವಿಧ ಗ್ರಂಥಗಳನ್ನು ಓದುವುದರೊಂದಿಗೆ ಅದನ್ನು ಅಧ್ಯಯನಗೈಯುತ್ತಿದ್ದರು.

ಪ್ರಧಾನ ಸೂಫೀ ರಚನೆಗಳು ವಿಶ್ವಾಸಿಗಳನ್ನು ಕೇವಲ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಭೌತಿಕವಾಗಿಯೂ ಪೋಷಿಸುತ್ತವೆ ಎಂಬುವುದು ಅಲ್ಲಗಳೆಯಲಾಗದ ವಾಸ್ತವ. ಪರ್ಷಿಯನ್ ತತ್ವಚಿಂತಕರಾದ ಅಬೂ ಹಾಮಿದ್ ಮುಹಮ್ಮದ್ ಅಲ್-ಗಝ್ಝಾಲಿಯವರ ಗ್ರಂಥಗಳು ಭೌತಶಾಸ್ತ್ರದ ಹಲವು ತರ್ಕಗಳಿಗೆ ದಿಕ್ಕು ತೋರಿಸುತ್ತದೆ.

1058ರಲ್ಲಿ ಇರಾನಿನ ಖುರಾಸಾನ್ ಪಟ್ಟಣದ ತೂಸ್ ಎಂಬಲ್ಲಿ ಜನಿಸಿದ ಇಮಾಂ ಗಝ್ಝಾಲಿಯ ಕೃತಿಗಳು ವಿಜ್ಞಾನ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಅನೇಕ ಚರ್ಚೆಗಳತ್ತ ಬೆಳಕು ಚೆಲ್ಲಿತು. ಮಹಾನುಭಾವರ ದಾರ್ಶನಿಕ ಕ್ರಾಂತಿಯು ಅವರನ್ನು ಹುಜ್ಜತುಲ್ ಇಸ್ಲಾಂ ( The proof of Islam) ಎಂಬ ಅನ್ವರ್ಥನಾಮದಿಂದ ಖ್ಯಾತಿಗೊಳಿಸಿತು. ಪಶ್ಚಿಮ ಏಷ್ಯಾದ ಮಾಂಗೋಲಿಯನ್ ಅತಿಕ್ರಮಣದಿಂದಾಗಿ ಇಮಾಮರ ಹಲವು ಕೃತಿಗಳು ನಾಶಗೊಂಡರೂ ಸಂಶೋಧಕರನೇಕರು ಅವರ ಕೃತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಲು ನಿರಂತರವಾಗಿ ಶ್ರಮಿಸಿದ್ದರು. ಫ್ರೆಂಚ್ ಓರಿಯಂಟಲಿಸ್ಟ್ ಆದ ಮೌರಿಸ್ ಬೌಗ್ಯೂಸ್ ಸುಮಾರು 404 ರಷ್ಟು ಗಝಾಲಿಯನ್ ರಚನೆಗಳನ್ನು ಉಲ್ಲೇಖಿಸುತ್ತಾರೆ.

ಸಾವಿರ ವರ್ಷಗಳಿಂದೀಚೆಗೆ ಓದಲ್ಪಡುತ್ತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ‘ಇಹ್ಯಾ ಉಲೂಮುದ್ದೀನ್’ ಇಮಾಂ ಗಝ್ಝಾಲಿಯವರ ಪ್ರಮುಖ ಕೃತಿಗಳಲ್ಲೊಂದು. ಇಸ್ಲಾಮಿಕ್ ಜ್ಞಾನ ಜಗತ್ತಿನ ಮಹತ್ವದ ರಚನೆಗಳಲ್ಲೊಂದಾದ ಪ್ರಸ್ತುತ ಗ್ರಂಥವು ನಾಲ್ಕು ಸಂಪುಟಗಳಲ್ಲಾಗಿ ಪ್ರಕಟಗೊಂಡಿದೆ.

ಹೆಚ್ಚಿನ ಜನರನ್ನು ತಲುಪಿಸುವ ಸಲುವಾಗಿ ʼಇಹ್ಯಾ ಉಲೂಮುದ್ದೀನ್‌ʼನ ಪರ್ಷಿಯನ್ ಭಾಷಾಂತರವನ್ನು ಸ್ವತಃ ಇಮಾಮರೇ ರಚಿಸಿದ್ದಾರೆ. ವಿವಿಧ ಭಾಷೆಗಳಿಗೆ ತರ್ಜುಮೆಗೈಯಲ್ಪಟ್ಟು ಇಂದು ಜಾಗತಿಕ ಮಟ್ಟದಲ್ಲಿ ಅಸಂಖ್ಯಾತ ಓದುಗರನ್ನು ಹೊಂದಿರುವ ಅಲ್‌ಕೀಮಿಯಾಉಸ್ಸಆದಃ (The alchemy of happiness) ಇಮಾಂ ಗಝ್ಝಾಲಿಯವರ ಮತ್ತೊಂದು ಮಹತ್ವದ ಕೃತಿ.

ಇಮಾಂ ಗಝ್ಝಾಲಿಯವರ ರಚನೆಗಳು ಹೊರಹೊಮ್ಮಿದ್ದು ಆಫ್ರಿಕಾ, ಭಾರತ, ಕಾಕಸ್, ಅರಬ್ ರಾಷ್ಟ್ರಗಳ ಸಹಿತ ಮುಸ್ಲಿಂ ಭೂಪ್ರದೇಶಗಳಲ್ಲಿರುವ ಪ್ರಮುಖ ಗ್ರಂಥಾಲಯಗಳಿಂದ. ಗಝ್ಝಾಲಿಯನ್ ಕೃತಿಗಳಿಗೆ ಸಂಬಂಧಿಸಿದಂತೆ ವಿವಿಧ ಅಧ್ಯಯನಗಳು, ಸಂಶೋಧನೆಗಳು ನಡೆದಿವೆ. ಶತಮಾನಗಳು ಕಳೆದರೂ ಗಝ್ಝಾಲಿಯವರ ಕೃತಿಗಳು ಇಂದಿಗೂ ಕಳೆಗುಂದದೆ ಹೊಳೆಯುತ್ತಿದೆ.

ಉತ್ಕೃಷ್ಟ ರಚನೆ

ಇಮಾಂ ಗಝ್ಝಾಲಿಯ ಕಾಲಾನಂತರ ಸುಮಾರು ಎರಡು ಶತಮಾನಗಳ ನಂತರ ಜನಿಸಿದ ಮೌಲಾನ ಜಲಾಲುದ್ದೀನ್ ರೂಮಿ ಅವರ ಬರೆಹಗಳು ತಸವ್ವುಫ್ ವಿಭಾಗದಲ್ಲಿ ಮತ್ತೆ ಪ್ರಸಿದ್ಧಿ ಪಡೆದ ಕೃತಿಗಳು. ಆರು ಸಂಪುಟಗಳಿರುವ ಮಸ್ನವಿ ರೂಮಿಯ ಅತ್ಯಂತ ಪ್ರಮುಖ ರಚನೆ. ರೂಮಿಯ ರಚನೆಗ ಇಮಾಂ ಗಝ್ಝಾಲಿಯವರ ರಚನಾಶೈಲಿಗಿಂತ ತೀರಾ ಭಿನ್ನವಾಗಿ ಕಾವ್ಯಾತ್ಮಕ ರೂಪದಲ್ಲಿದೆ. ರೂಮಿಯ ಕೃತಿಗಳನೇಕವೂ ಒಟ್ಟೋಮನ್ ಯುಗದ ಮೇರು ಕೃತಿಗಳಾಗಿ ಪರಿಗಣಿಸಲ್ಪಡುತ್ತದೆ.

ರಚನೆ ಪರ್ಷಿಯನ್ ಭಾಷೆಯಲ್ಲಾಗಿದ್ದರೂ ರೂಮೀ ಗ್ರಂಥಗಳು ಆನಾಟೋಲಿಯಾದಂತಹ ತುರ್ಕಿಶ್ ಪ್ರದೇಶಗಳಲ್ಲೂ ಬಹಳ ಅಂಗೀಕಾರ ಪಡೆಯಿತು. ರೂಮಿಯ ಮಸ್ನವಿ ರಮಳಾನ್ ಹಾಗೂ ಇತರ ಪುಣ್ಯ ದಿನ ರಾತ್ರಿಗಳಲ್ಲಿ ಪಾರಾಯಣಗೈಯಲ್ಪಡುತ್ತಿದೆ. ತುರ್ಕಿಶ್ ಭಾಷೆಯಲ್ಲಿ ಮಸ್ನವಿ ಧಾರಾಳ ಪರಿಭಾಷೆಗಳನ್ನು ಹೊಂದಿದೆ‌. ಅವುಗಳಲ್ಲಿ ಅಧಿಕವೂ ಪದ್ಯ ರೂಪದಲ್ಲಿಯೇ ಭಾಷಾಂತರಗೊಂಡಿದೆ.

ನಖ್ಶಬಂಧಿ ತ್ವರೀಕತಿನ ಶೈಖ್ ಹಾಗೂ ಸೂಫೀಯೂ ಆದ ಶಾಹ್ ಗುಲಾಂ ಅಲೀ ದಹ್ಲವಿಯವರು ರೂಮಿಯ ಮಸ್ನವಿಯನ್ನು ಆಲಿಸುವುದು ಮತ್ತು ಪಾರಾಯಣಗೈಯುವುದನ್ನು ರೂಢಿಗೊಳಿಸಿದ್ದರು. “ಖುರ್‌ಆನ್ ಹಾಗೂ ಹದೀಸುಗಳ ಬಳಿಕ ಅತ್ಯಂತ ಉತ್ಕೃಷ್ಟ ರಚನೆಯೆಂದರೆ ಅದು ಮೌಲಾನಾ ಜಲಾಲುದ್ದೀನ್ ರೂಮಿಯ ಮಸ್ನವಿ.” ಎಂದು ಅವರು ಮಸ್ನವಿ ಕುರಿತು ಅಭಿಪ್ರಾಯ ಪಡುತ್ತಾರೆ.

ಅದ್ವಿತೀಯ ಗ್ರಂಥ

ಅತ್ತ ಅನಾಟೋಲಿಯಾದಲ್ಲಿ ವಾಸಿಸಿದ್ದ ಓರ್ವ ಸೂಫಿಯ ಗ್ರಂಥ ಭಾರತದಲ್ಲಿ ಪ್ರಭಾವ ಬೀರಿದಾಗ ಇತ್ತ ಭಾರತೀಯ ಸೂಫಿಯೊಬ್ಬರ ಕೃತಿ ಅನಾಟೋಲಿಯಾದಲ್ಲೂ ಖ್ಯಾತಿ ಪಡೆಯಿತು. ಹದಿನಾರನೇ ಶತಮಾನದಲ್ಲಿ ಜೀವಿಸಿ ʼಇಮಾಂ ರಬ್ಬಾನೀʼ ಎಂಬ ಅಪರನಾಮ ಗಳಿಸಿದ್ದ ಸೂಫೀ ಅಹ್ಮದ್ ಅಲ್ ಫಾರೂಖ್ ಅಲ್- ಸರ್‌ಹಿಂದೀ (ರ) ಅವರ ʼಮಕ್ತೂಬಾತ್ʼ ಎಂಬ ಕೃತಿ ಅದು.

‘ಮಕ್ತೂಬಾತೇ ಇಮಾಂ ರಬ್ಬಾನೀʼ ಇಮಾಂ ರಬ್ಬಾನೀ ಬರೆದ ಪತ್ರಗಳ ಸಮಗ್ರ ಸಂಗ್ರಹ. ಹಿಜ್ರಃ ಎರಡನೇ ಶತಮಾನದಲ್ಲಿ ಇಸ್ಲಾಮಿಕ್ ಜ್ಞಾನ ವಲಯಗಳನ್ನು ಸಮೃದ್ಧಗೊಳಿಸುವುದರಲ್ಲಿ ಮಹಾನುಭಾವರು ನಡೆಸಿದ ಸಂಶೋಧನೆ ಮತ್ತು ರಚನೆಗಳು ಅವರಿಗೆ ʼಮುಜದ್ದಿದ್ʼ ಎಂಬ ವಿಶಿಷ್ಟ ಪದವಿಯನ್ನೂ ಪ್ರದಾನಿಸಿತು. ಮೂರು ಸಂಪುಟಗಳಲ್ಲಾಗಿ ಪ್ರಸ್ತುತ ಗ್ರಂಥ ಪ್ರಸಿದ್ಧಿ ಪಡೆದಿದೆ.

ಇಮಾಂ ರಬ್ಬಾನಿ ತನ್ನ ಶಿಷ್ಯಂದಿರಿಗೆ ಕಳುಹಿಸಿದ್ದ ಪತ್ರಗಳು ಸರ್ವಾಂಗೀಕೃತವೂ ಸಾರ್ವಕಾಲಿಕವೂ ಆದ ಅತ್ಯಮೂಲ್ಯ ರಚನೆಗಳಾಗಿತ್ತು. ಪರ್ಷಿಯನ್ ಭಾಷೆಯಲ್ಲಿ ಬರೆಯಲ್ಪಟ್ಟ ಈ ಪತ್ರಗಳು ಒಂದು ಕೃತಿಯಾಗಿ ಕ್ರೋಢೀಕರಿಸಲ್ಪಟ್ಟು ಇಸ್ಲಾಮಿಕ ಬೌದ್ಧಿಕ ವ್ಯವಹಾರ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರವನ್ನೂ ಪಡೆಯಿತು. ಮಹಾನುಭಾವರು ಮರಣಿಸಿ ಐದು ಶತಮಾನಗಳು ಕಳೆದ ನಂತರವೂ ಮಕ್ತೂಬಾತಿಗೆ ಲಭಿಸುತ್ತಿರುವ ಪುರಸ್ಕಾರ ಅದರ ಸ್ವೀಕೃತಿಯ ಸ್ಪಷ್ಟ ನಿದರ್ಶನವಾಗಿದೆ.

ಸೂಫಿಸಂ ಹಾಗೂ ಇಸ್ಲಾಮಿಕ್ ನೀತಿ ನ್ಯಾಯ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ತಿಳುವಳಿಕೆ ನೀಡುವ ಅದ್ವಿತೀಯ ಗ್ರಂಥವಾಗಿದೆ ಇಮಾಂ ರಬ್ಬಾನಿಯ ಮಕ್ತೂಬಾತ್ ಎಂದು ಅನಾಟೋಲಿಯಾದ ಸುನ್ನೀ ವಿದ್ವಾಂಸರಲ್ಲಿ ಪ್ರಮುಖರಾಗಿದ್ದ ಅಬ್ದುಲ್ ಹಕೀಂ ಅರ್ವಾದೀ ಪ್ರತಿಪಾದಿಸಿದ್ದರು. ಇಮಾಂ ರಬ್ಬಾನಿಯವರನ್ನು ಅವರ ಸಮಕಾಲೀನ ವಿದ್ವಾಂಸರು ಸಿಲಃ(ಒಗ್ಗೂಡಿಸುವವರು) ಎಂಬ ಹೆಸರಿನಿಂದ ಕರೆಯುತ್ತಿದ್ದರು. ಇಮಾಂ ರಬ್ಬಾನಿಯವರ ಪ್ರಕಾರ ಲೌಕಿಕತೆ, ಆಧ್ಯಾತ್ಮಿಕತೆ, ಇಸ್ಲಾಮಿಕ್ ಶಿಷ್ಟಾಚಾರ, ಸೂಫಿಸಂ, ಹೃದಯ, ಮನಸ್ಸು ಎಲ್ಲವೂ ಒಂದು ಪಕ್ಷಿಯ ಎರಡು ರೆಕ್ಕೆಗಳಂತೆ ಜೊತೆಯಾಗಿ ಕಾರ್ಯನಿರ್ವಹಿಸಬೇಕಾದ ವಿಚಾರವಾಗಿದೆ.

ಮೂಲ: ಡಾ ಅಲಿ ತುಫೆಕ್ಚಿ
ಅನುವಾದ: ಶಂಸ್ ಗಡಿಯಾರ್

Leave a Reply

*