ಇಕ್ಬಾಲ್ ಕಾವ್ಯದ ಗುಂಗಲ್ಲಿ

ನಶಾ ಪಿಲಾ ಕೆ ಗಿರಾನಾ ಸಬ್ಕೊ ಆತಾ ಹೈ
ಮಝಾ ತೊ ತಬ್ ಹೈ ಗಿರ್ತೋಂಕೋ ಥಾಮ್ ಲೆ ಸಾಕಿ !
– ಅಲ್ಲಾಮ ಇಕ್ಬಾಲ್

ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ,
ಖುಷಿಯಿರುವುದು ಬಿದ್ದವನ ಎತ್ತಿ
ಗಮ್ಯ ಸೇರಿಸುವುದರಲ್ಲಿ, ಸಾಕಿ!
– ಪುನೀತ್ ಅಪ್ಪು

ಬಹಳಷ್ಟು ದಿನಗಳ ಕಾಲ ಈ ಸಾಲನ್ನು ಗುನುಗಿಕೊಳ್ಳುತ್ತಾ ಓಡಾಡುತ್ತಿದ್ದೆ. ಅದು ಕೊಡುವ ಎನರ್ಜಿಯ ಸುಖ ವಿಚಿತ್ರ. ಈ ಸಾಲಲ್ಲಿ ಅಂತದ್ದೇನಿದೆ ಎನ್ನಬಹುದು. ಸಾರಾಂಶ ಹೇಳುತ್ತಾ ಕೂತರೆ ತೀರಾ ಸಾಮಾನ್ಯ ಅನಿಸಬಹುದು. ಆದರೆ, ಕವಿಯೊಬ್ಬನ ಬದ್ಧತೆ, ಸಾಹಿತ್ಯದ ಶ್ರೇಷ್ಟತೆಯ ದೃಷ್ಟಿಕೋನದಿಂದ ನೋಡಿದಾಗ ಬಹಳ ಅದ್ಭುತ ಸಾಲುಗಳು ಇವು.
ಕವಿ ತೀವ್ರವಾದ ವೈಯಕ್ತಿಕ ಭಾವನೆಗಳನ್ನು ಕವಿತೆಯಾಗಿಸುತ್ತಾನೆ. ಆ ಕವಿತೆ ಶ್ರೇಷ್ಠವಾಗುವುದು ಅದು ವೈಯಕ್ತಿಕತೆಯನ್ನು ಮೀರಿ ಸಾರ್ವತ್ರಿಕ ಗುಣ ಪಡೆದುಕೊಂಡಾಗ. ಅರ್ಥಾತ್ ಎಲ್ಲರ ಅನುಭವವಾದಾಗ. `ಕಾವ್ಯವು ತೀವ್ರವಾದ ಭಾವನೆಗಳ ಸಹಜ ಹರಿವು’ ಎಂದು ಲಿರಿಕಲ್ ಬ್ಯಾಲಡ್ ಗೆ ಮುನ್ನುಡಿ ಬರೆಯುತ್ತಾ  ವಿಲಿಯಮ್ ವರ್ಡ್ಸ್ ವರ್ಥ್ ಹೇಳುತ್ತಾನೆ.
ಮಹಾಕವಿ ಅಲ್ಲಾಮ ಇಕ್ಬಾಲರ ಬಹುತೇಕ ಕವಿತೆಗಳು ಈ ಗುಣವನ್ನು ಪಡೆದುಕೊಂಡಿದೆ. ಈ ಮೇಲಿನ ಸಾಲುಗಳನ್ನೇ ನೋಡಿ, ದೇಶಕಾಲಗಳನ್ನು ಮೀರಿ ಯಾರೂ ಬೇಕಾದರೂ ಇದು ನನ್ನದೇ ಸಾಲು ಅಥವಾ ಅನುಭವ ಎನ್ನವಷ್ಟು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಗುಣವನ್ನು ಹೊಂದಿದೆ. ಇಕ್ಬಾಲರ ಪ್ರತಿಭೆ ಅದು. ಕವಿಗೆ ವೈಯಕ್ತಿಕವಾಗಿ ಏನೋ ನೋವಿದೆ. ಅದು ಅವರನ್ನು ತೀವ್ರವಾಗಿ ಕಾಡಿರಬೇಕು. ಆದ್ದರಿಂದಲೇ ಅದು burning bright ತರದ ಕವಿತೆಯಾಗಿ ಮೈತಳೆದಿದೆ. ಆದರೆ, ಆ ನೋವು ತನ್ನೊಬ್ಬನದ್ದೇ ಅಲ್ಲ; ಬಹು ಜನರದ್ದು ಎಂಬ ಅರಿವೂ ಕವಿಗಿದೆ. ಆತ ಅದನ್ನು ಶೋಧಿಸಿಕೊಳ್ಳುತ್ತಾನೆ. ಇಲ್ಲಿ ನೋವಿದೆ, ದೂರಿದೆ. ಹೊಯ್ದಾಟವಿದೆ. ಆದರೆ, ಅಷ್ಟಕ್ಕೇ ಮುಗಿದಿದ್ದರೆ ಈ ಸಾಲು ಸಪ್ಪೆ ಎನಿಸಿಬಿಡುತ್ತಿತ್ತು. ತೀರಾ ಸಾಮಾನ್ಯ ಎಂಬ ಷರಾ ಪಡೆದು ಕಸದ ಬುಟ್ಟಿ ಸೇರುತ್ತಿತ್ತು.  ಕವಿ ನೋವನ್ನು ಮೀರುವ, ಆರೋಪವನ್ನು ನೀಗಿಸಿಕೊಳ್ಳುವ ವಿಶೇಷ ಪ್ರಯತ್ನವನ್ನು ಕವಿತೆಯಲ್ಲೇ ಮಾಡುತ್ತಾನೆ. ಬದುಕನ್ನು ಪ್ರೀತಿಸುತ್ತಾನೆ. ಬದುಕುವವರಿಗೆ positive energy ಕೊಡುತ್ತಾನೆ. ಖುಷಿಯ ಮೂಲದ ಹುಡುಕಾಟ ನಡೆಸುತ್ತಾನೆ.
ಎಲ್ಲಿದೆ ಖುಷಿ?
ಅಧಿಕಾರದಲ್ಲಿ? ಶ್ರೀಮಂತಿಕೆಯಲ್ಲಿ? ಖ್ಯಾತಿಯಲ್ಲಿ?  No way. ಖುಷಿಯಿರುವುದು ಬದುಕಿನ ಸಣ್ಣ ಪುಟ್ಟ ಸಂಗತಿಗಳನ್ನು ಆಪ್ತತೆಯಿಂದ ಅನುಭವಿಸುವುದರಲ್ಲಿ. ಬಿದ್ದವನ ಎತ್ತಿ ಗುರಿ ಮುಟ್ಟಿಸುವಂತಹ ಪರೋಪಕಾರಗಳಲ್ಲಿ. ಖಿನ್ನತೆ ಕಾಡಿದಾಗಲೆಲ್ಲಾ ನಾನು ಈ ಈ ಸಾಲನ್ನು ಜೋರಾಗಿ ಓದಿಕೊಳ್ಳುತ್ತೇನೆ. ಅದು ನೀಡುವ ಆನಂದ, ಸಾಂತ್ವನ ಅನುಭವಿಸಿಯೇ ತಿಳಿಯಬೇಕು. ಇಕ್ಬಾಲರ ಕವಿತೆಗಳನ್ನು ಓದಲು ಉರ್ದು ಅರ್ಥವಾಗಲೇಬೇಕಿಲ್ಲ. ಅರ್ಥ ಬೇಕೇ ಬೇಕು ಎಂದೆನಿಸಿದಾಗ ನನ್ನ ಮಟ್ಟಿಗೆ  ಪುನಿತ್ ಅಪ್ಪು ಇದ್ದಾರೆ. ಅವರ ಫೇಸ್ಬುಕ್ ಗೋಡೆಗೆ ಹೋದರೆ ಅಲ್ಲಿ ಇಕ್ಬಾಲರ ಬಹಳಷ್ಟು ಕವಿತೆಗಳು ಸಿಗುತ್ತವೆ.  ಇಕ್ಬಾಲರ, ಗಾಲಿಬರ ಅನೇಕ ಕವಿತೆಗಳನ್ನು ಕನ್ನಡಕ್ಕೆ ತರುವ ಮಹತ್ವದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಅನುವಾದವನ್ನು ಓದುವುದೇ ಒಂದು ಚಂದ. ಈ ಮೇಲೆ ಉಲ್ಲೇಖಿಸಿದ ಸಾಲಿನ ಭಾವಾನುವಾದವೂ ಅವರದ್ದೇ. ಇಕ್ಬಾಲರ ಕವನಗಳನ್ನು ತಮ್ಮದೇ ಸ್ವಂತ ಕವಿತೆ ಎಂಬಷ್ಟು ಆಪ್ತವಾಗಿ ಕನ್ನಡೀಕರಿಸುವ ಛಾತಿ ಅವರಿಗಿದೆ.

ಈ ನಡುವೆ `ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ..’ ಎಂದರೇನೆಂದು ಯೋಚಿಸುತ್ತಿದ್ದೆ. ಉರ್ದು, ಪರ್ಷಿಯನ್ ಕವಿತೆಗಳಲ್ಲೇಕೆ `ಶರಾಬು’, ‘ಮತ್ತು’, ‘ಮಧುಪಾತ್ರೆ’ ಮೊದಲಾದ ರೂಪಕಗಳು ಪದೇ ಪದೇ ಬಂದು ಕಾಡುತ್ತವೆ?  `ಮರಣವೆಂಬ ಮಧುಸುರಿಯುವವನಿಂದ ಬೆಳಗಿನ ಮಧು ಕುಡಿಯುವ ಕರ್ಮ!'(ಅನುವಾದ: ಪುನೀತ್ ಅಪ್ಪು) ಎಂಬುದು ಇಕ್ಬಾಲರ ಇನ್ನೊಂದು ಕವಿತೆಯ ಸಾಲು. ಇಲ್ಲಿ ಕವಿಗೆ ಮರಣವೇ ಮಧು!  ಅವರ ‘ಮೋಟಾರು’ ಕವನದಲ್ಲಿ `ಕೆಂಡದೊಳಗಿಂದ ಧಗಧಗವಾಗಿ
ಮಧುಪಾತ್ರೆಯೂ ಸಾಗಿದರು ಕೂಡ/ಮಧುಬಟ್ಟಲಿನಿಂದ ಸುರೆ / ಹರಿಯುತಿರುವ ವೈಖರಿಯೇ ಮೌನ’! ಎಂದು ಮೌನಕ್ಕೂ ಸುರೆಗೂ ತಳುಕು ಹಾಕಲಾಗಿದೆ. ಸೂಫಿಗಳಿಗೆ ಮೌನವೇ ಒಂದು ಸುರೆ ಎಂದು ಯೋಚಿಸುವಾಗ ಏನೇನೋ ಹೊಳೆಯುತ್ತದೆ.  ಆದರೆ, ಇಲ್ಲಿ ಭಾವನೆಗಳಲ್ಲಿ ಕುದಿತವಿದೆ. ಕೆಂಡವಿದೆ. ಧಗಧಗವಿದೆ. ಆನಂತರ ಮಧು ಬಟ್ಟಲಿನಿಂದ ಸುರೆ ಹರಿಯುತ್ತದೆ. ಮೌನ ಒಡಮೂಡುತ್ತದೆ.
ಗಾಲಿಬ್‌ನ ಕವಿತೆಗಳುದ್ದಕ್ಕೂ ಮಧು, ಮಧು ಬಟ್ಟಲು ಕಾಣಿಸಿಕೊಳ್ಳುತ್ತದೆ.  ಅಗಲಬೇಕೆಂಬ ಇರಾದೆಯಿದ್ದೂ, ಅಗಲಲಾರದ ಸಖಿಯ ರೂಪಕವೇ ಮಧು, ಶರಾಬು ಇತ್ಯಾದಿ? ಪ್ರೇಮದ ಆತ್ಯಂತಿಕ ಸ್ಥಿತಿಯನ್ನು ವರ್ಣಿಸಲಾಗದ ಅಸಹಾಯಕತೆಯಲ್ಲಿ ‘ಮತ್ತು’ ಅಂದುಬಿಟ್ಟರೆ ಉರ್ದು ಕವಿಗಳು? ಅಥವಾ ಕುಡುಕನೊಬ್ಬ ಮಧುಬಟ್ಟಲ ಮುಂದೆ ಪ್ರಜ್ಞೆ ಕಳೆದುಕೊಳ್ಳುವಂತೆ ಭಕ್ತಿಯ ನಶೆಯಲ್ಲಿ ತಾನು ದೇವನ ಮುಂದೆ ಪ್ರಜ್ಞಾಹೀನನಾಗಿರುವ ಸ್ಥಿತಿಯನ್ನು ಶರಾಬಿನ ರೂಪಕದ ಮೂಲಕ ಕವಿ ಹೇಳುತ್ತಿದ್ದಾನೆಯೇ?  ಗೊತ್ತಿಲ್ಲ.  ಕವಿತೆಗಳಲ್ಲಿ ಸಾಮಾನ್ಯ ಪದವೂ ವಿಶೇಷ ಅರ್ಥವನ್ನು ಕೊಡಬಲ್ಲುದು. ಹಾಗೆಯೇ, ವಿಶೇಷ ಪದಗಳೂ ಸಾಮಾನ್ಯ ಅರ್ಥವನ್ನು ಕೊಡಬಹುದು. ಕವಿತೆಯೆಂದರೆ, ಬದುಕಿನ ತಿರುಗು ಮುರುಗು ಕನ್ನಡಿ. ಆ ಕನ್ನಡಿಯೊಳಗೆ ಕಾಣುವುದೆಲ್ಲವೂ ಅರ್ಥವಾಗಬೇಕೆಂದಿಲ್ಲ.  ಬದುಕನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟವಾದಾಗ ಅದರ ಪ್ರತಿಬಿಂಬವಾದ ಕವಿತೆಯನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಹಠವೇಕೇ? ತೀವ್ರ ಭಾವನೆಗಳ ಸಹಜ ಹರಿವು ಕವಿತೆಯೆಂದಾಗ, ಅರ್ಥವೂ ಸಹಜವಾಗಿ ದಕ್ಕಬೇಕಲ್ಲ ಎಂದು ನನ್ನ ಕವಿ ಗೆಳೆಯ ಕೇಳುತ್ತಾನೆ. ಅವನ ಮಾತನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಿಲ್ಲ. ಮತ್ತೆ ಮತ್ತೆ ಓದಿಕೊಂಡು ಕವಿತೆಯ ಬಿಲದೊಳಗೆ ಅರ್ಥದ ಇಲಿಯನ್ನು ಹುಡುಕುವುದು ತಪ್ಪೇನಲ್ಲ.
ರೂಮಿಯ ಕವಿತೆಗಳನ್ನು ಓದುವಾಗ ಹೀಗಾಗುತ್ತದೆ. ಅಲ್ಲಿ ಅರ್ಥದ ಹುಡುಕಾಟ ಎಂಬುದು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ಇಲಿಗಳ ಜೀವನ್ಮರಣದ ಪ್ರಶ್ನೆಯಷ್ಟೇ ಕಷ್ಟಕರವಾದುದು.
“ಕಳೆದ ರಾತ್ರಿ ಗುರುವಿನೊಡನೆ ಬೇಡಿದೆ,
ಜಗತ್ತಿನ ಆ ಮಹಾರಹಸ್ಯವನ್ನು ಅರುಹು,
ಆತ ಮೆಲ್ಲನೇ, ಅತೀ ಮೆಲ್ಲನೇ ಪಿಸುಗುಟ್ಟಿದ,
ಶ್ಶ್…! ಸುಮ್ಮನಿರು, ಮಹಾರಹಸ್ಯವನ್ನು
ಹೇಳಲಾಗದು, ಅದನ್ನು ಮೌನದಲ್ಲಿ ಸುತ್ತಿಡಲಾಗಿದೆ!”(ರೂಮಿ: ಅನುವಾದ ಪುನೀತ್ ಅಪ್ಪು). ಈ ಸಾಲುಗಳ ಅರ್ಥವೇನೆಂದು ಬಹಳಷ್ಟು ದಿನಗಳಿಂದ ಯೋಚಿಸುತ್ತಿರುವೆ. ಮಹಾರಹಸ್ಯ ಎಂದ ಮೇಲೆ ಅದನ್ನು ಯಾಕೆ ಹೇಳಬೇಕು? ಹೇಳಿದರೆ ಅದು ‘ರಹಸ್ಯ’ವೆಂಬ ತನ್ನ  ಅತ್ಯಮೂಲ್ಯ ಗುಣವನ್ನು ಕಳೆದುಕೊಳ್ಳುವುದಿಲ್ಲವೇ? ಅನ್ನೋದು ಕವಿಯ ಭಾವವಾಗಿರಬಹುದು. ನನಗೆ ರೋಮಾಂಚನವಾಗಿದ್ದು, ‘ಮೌನದಲ್ಲಿ ಸುತ್ತಿಡಲಾಗಿದೆ’ ಎಂಬ ರೂಮಿಯ ಅದ್ಭುತ ರೂಪಕವನ್ನು ಓದಿದಾಗ. ಮಹಾರಹಸ್ಯ ಮತ್ತು ಮೌನ ಎರಡು ಕೂಡ ಭಾಷೆಗೆ ಅತೀತವಾದುದು. ಈ ಸಾಲುಗಳು ಎಷ್ಟು ನಾಟಕೀಯವಾಗಿದೆ ಎಂದರೆ, ಗುರುವಿನ ಉತ್ತರ ನೋಡಿ; ಅಂತಹ ಪ್ರಶ್ನೆಗಳನ್ನು ಕೇಳಕೂಡದು. ಯಾಕೆಂದರೆ, ಅದಕ್ಕೆ ಉತ್ತರವಿಲ್ಲ. ಶಿಷ್ಯನ ಪ್ರಶ್ನೆ ಕೇಳಿ ಗುರು ಆಘಾತಕ್ಕೊಳಗಾಗುತ್ತಾನೆ. ‘ಶ್..ಸುಮ್ಮನಿರು’ ಎಂದು ಗದರಿಸುತ್ತಾನೆ. ಆನಂತರ ಪ್ರೀತಿಪೂರ್ವಕವಾಗಿ ಆತನನ್ನು ತನ್ನ ಸಮೀಪಕ್ಕೆ ಆಹ್ವಾನಿಸಿ, ಗುಟ್ಟು ಹೇಳುವವನಂತೆ, ಪಿಸುಗುಟ್ಟಿ ಒಂದು ಸತ್ಯವನ್ನು ಹೇಳುತ್ತಾನೆ. ಅದನ್ನು ಹೀಗೆ ಹೇಳಬಹುದು; ‘ಮಹಾ ರಹಸ್ಯವನ್ನು ಮಾತಿನಲ್ಲಿ ಹುಡುಕಬೇಡ. ಅದು ಮೌನದ ಗರ್ಭದಲ್ಲಿ ಅಡಗಿದೆ. ಅದನ್ನು ನೀನು ಮೌನದಲ್ಲೇ ಹುಡುಕಬೇಕು. ಧ್ಯಾನ ಮಾಡಬೇಕು. ಸಾಧನೆಗಳಲ್ಲಿ ಮುಳುಗಬೇಕು. ತಪಸ್ವಿಯಾಗಬೇಕು. ಆ ಮಹಾ ರಹಸ್ಯದ ಜೊತೆಗೆ ಮೌನದ ಮೂಲಕ ತಾದಾತ್ಮ ್ಯವನ್ನು ಸಾಧಿಸಿಕೊಳ್ಳಬೇಕು. ಆ ಮಹಾ ರಹಸ್ಯದ ಜೊತೆ ಪ್ರೇಮದಲ್ಲಿ ಒಂದಾಗಬೇಕು’ ಹೀಗೆ ಏನೇನೋ ಹೊಳೆಯುತ್ತದೆ.  ಶ್ರೇಷ್ಠ ಕಾವ್ಯಗಳು ಮಾತ್ರ ಇಂತಹ ಸಂಗತಿಗಳನ್ನು ಹೇಳಬಲ್ಲುದು.


ಹಾಗೆ ನೋಡಿದರೆ, ಅರ್ಥದ ಬೇಲಿಯನ್ನು ದಾಟಿ ಇಶ್ಖನ್ನು ನಶೆಯ ಮಟ್ಟಕ್ಕೆ ಏರಿಸಿದವರು ಸೂಫಿ ಕವಿಗಳು. ಅವರು ಪರಿತ್ಯಕ್ತ, ಭಕ್ತಿಯ, ಪ್ರೇಮದ ನಶೆಯಲ್ಲಿ ಹೇಳಿದ್ದನ್ನು ಓದೋದು ಎಷ್ಟು ಚಂದ! ಆದರೆ, ಅರಗಿಸಿಕೊಳ್ಳೋದು ಎಷ್ಟು ಕಷ್ಟ! ಆದ್ದರಿಂದಲೇ ಕವಿಗಳು ಬದುಕಿನ ಕನ್ನಡಿಯನ್ನು ತಲೆ ಕೆಳಗು ಮಾಡಿ ನೋಡುತ್ತಾರೆ. ಅವರಿಗೆ ಅಲ್ಲಿ ಏನೋ ಕಾಣುತ್ತದೆ. ಏನೋ ಕೇಳಿಸುತ್ತದೆ. ಎಲ್ಲರಿಗೂ ಹೇಳಬೇಕೆಂಬ ತುಡಿತದಲ್ಲಿ ಅಥವಾ ಕಂಡದ್ದರ, ಕೇಳಿದ್ದರ ಭಾರದಿಂದ ಬಿಡುಗಡೆ ಪಡೆಯಲು ಕವಿತೆ ಬರೆಯುತ್ತಾರೆ. ಪ್ರತಿಭೆಯಿದ್ದವನು ಕವಿತೆಯ ಮೂಲಕ ಓದುಗರಿಗೆ ವಿಶಿಷ್ಟ ರಸಾನುಭವವನ್ನು ನೀಡುತ್ತಾನೆ. ಅದೂ ಒಂದು ರೀತಿಯ ‘ಮತ್ತೇ’. ಅತ್ಯುತ್ತಮ ಕವಿತೆ ಓದುತ್ತಾ ರಸಾನುಭವದ ಮಧು ಹೀರುವವರಿದ್ದಾರೆ.  ಕವಿತೆ ಓದುವವನಿಗೆ ಕವಿತೆಯ ಮೇಲೆ ಮಮತೆ ಇರಬೇಕು ಅನ್ನೋದು ಎಷ್ಟು ನಿಜ!
ಮೇಲಿನ ಸಾಲಿನಲ್ಲಿರುವ ‘ಮತ್ತು’  ಶರಾಬಿನದ್ದೇ ಆಗಿರಬೇಕಿಲ್ಲ. ಅಧಿಕಾರದ ಅಮಲಾಗಿರಬಹುದು. ಶ್ರೀಮಂತಿಕೆಯ ದಾಹವಾಗಿರಬಹುದು. ಪ್ರೇಮದ ನಶೆಯಾಗಿರಬಹುದು. ‘ಮತ್ತೇರಿಸಿದ’ ಮೇಲೆ ದೂಡಿ ಹಾಕುವವರ ಸಂಖ್ಯೆ ನಾಯಿಕೊಡೆಯಂತೆ ಬೆಳೆಯುತ್ತಿರುವ ಕಾಲಘಟ್ಟ ಇದು. ಅಧಿಕಾರದ ಮದದ ವಿಮರ್ಶೆ ಇಲ್ಲಿ ಇದೆಯಾ? ಶ್ರೀಮಂತಿಕೆಯ ಹಪಾಹಪಿಯಲ್ಲಿ ಕೆಳಗಿರುವವರ ತುಳಿವ ಜಾಢ್ಯದ ಬಗ್ಗೆ ಕವಿ ಹೇಳುತ್ತಿದ್ದಾರಾ? ಪ್ರೇಮದಲ್ಲಿ ಕುರುಡಾದವನು ಕತ್ತಲಲ್ಲಿ ನಡೆದು ಎಡವಿ ಬೀಳುವುದರ ಬಗ್ಗೆ ಕವಿ ಮಾತನಾಡುತ್ತಿದ್ದಾರಾ?  ಗೊತ್ತಿಲ್ಲ. ಕವಿತೆಯ ಅರ್ಥ ಇದಮಿತ್ಥಂ ಎನ್ನುವಂತಿಲ್ಲ. ಒಬ್ಬೊಬ್ಬ ಓದುಗರಿಗೆ ಅರ್ಥದ ಒಂದೊAದು ದಿಗಂತವನ್ನು ತೆರೆದು ತೋರುವುದೇ ಕವಿತೆ.
ಇಲ್ಲಿ ನಾನು ಕವಿತೆಯ ವಿಮರ್ಶೆ ಮಾಡುತ್ತಿಲ್ಲ. ಕವಿತೆಯ ಒಂದು ಸಾಲು ಅಥವಾ ಒಂದಿಡೀ ಕವಿತೆ ನಮ್ಮನ್ನು ಆವರಿಸಿಕೊಳ್ಳುವ, ಸಂತೈಸುವ, ಹೊಸದೇನನ್ನೋ ಹೊಳೆಯಿಸುವುದರ ಬಗ್ಗೆ ಹೇಳುತ್ತಿದ್ದೇನೆ. ಒಳ್ಳೆಯ ಕವಿತೆಯನ್ನು ಓದಿದ ಮೇಲೆ ಮನಸಿಗೇನೋ ಹುರುಪು, ಖುಷಿ, ಕಂಪು. ಕೆಲವೊಂದು ಕವಿತೆಗಳು ಕಂಗೆಡಿಸುವುದೂ ಇದೆ. ನೆಲಕ್ಕೆ ಬೇರು ಬಿಟ್ಟಂತೆ ಕುಳಿತವರನ್ನು,  ಪರಿಸರ ಮರೆತು ಸುಖ ನಿದ್ರೆಯಲ್ಲಿ ಮುಳುಗಿರುವವರನ್ನು ಎಬ್ಬಿಸಿ, ನಾಗರಿಕ ಕರ್ತವ್ಯ ಪ್ರಜ್ಞೆಯನ್ನು ಬಿತ್ತುವುದಿದೆ.
ಕವಿತೆ ಓದುವುದರ ಉದ್ದೇಶವೂ ಇದೇ ಇರಬಹುದಾ? ಕನಿಷ್ಠ ಪಕ್ಷ ನಮ್ಮ ಮನಸ್ಸನ್ನು ತಟ್ಟದಿದ್ದರೆ ಅದು ಎಂತಹ ಗತಿಗೆಟ್ಟ ಕವಿತೆಯಾಗಿರಬಹುದು? ದುರ್ಬಲನ ನೋವನ್ನು ತನ್ನದಾಗಿಸಿಕೊಳ್ಳದ ಕವಿ ಎಂತಹ ಮಾನಗೆಟ್ಟ ಕವಿ.
‘ಬಿದ್ದವನ ಎತ್ತಿ ಗಮ್ಯ ಸ್ಥಾನಕೆ ಸೇರಿಸದ’ ಬದುಕು ಬದುಕೇ ಅಲ್ಲ, ಅಂತಹ ಬದುಕು ಹುಟ್ಟಿಸಿದ ಕವಿತೆ ಕವಿತೆಯೇ ಅಲ್ಲ.
ಇಕ್ಬಾಲರು ಇಷ್ಟನ್ನು ಹೇಳಿರಬಹುದು ಅಂತ ನಂಬಿಕೊಂಡಿದ್ದೇನೆ.


ಲೇ: ಸ್ವಾಲಿಹ್‌ ತೋಡಾರ್‌

ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನದ ಆನುಭಾವಿಕ ಒಳನೋಟಗಳು

ಹಸಿರು ಬಣ್ಣ ಇಸ್ಲಾಮಿನೊಂದಿಗೆ ತಳುಕುಹಾಕಿಕೊಂಡದ್ದು ಒಂದು ಕಾಕತಾಳೀಯ ವಿದ್ಯಮಾನವೇನಲ್ಲ.ಪವಿತ್ರ ಖುರ್ಆನಿನಲ್ಲಿ ಸ್ವರ್ಗೀಯ ಉದ್ಯಾನಗಳನ್ನು ಪರಿಚಯಿಸುವಾಗ ಹಸಿರು ಬಣ್ಣವು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಹಸಿರೆನ್ನುವುದು ಸಸ್ಯ ವರ್ಗಗಳ ಸಾಮಾನ್ಯ ವರ್ಣವೆಂಬುವುದಕ್ಕಿಂತ ಮಿಗಿಲಾಗಿ ಅದು ಬೆಳವಣಿಗೆ, ಭರವಸೆ, ಫಲವತ್ತತೆ ಎಂಬಿತ್ಯಾದಿಗಳನ್ನು ಸೂಚಿಸುತ್ತದೆ.ಉಳಿದ ಯಾವ ಬಣ್ಣಕ್ಕಿಂತಲೂ ಮನೆ,ಮನ ತಂಪಾಗಿಸಲು ಹಸಿರು ಬಣ್ಣಕ್ಕೆ ಸುಲಭ ಸಾಧ್ಯ.ಪ್ರವಾದಿ ಮುಹಮ್ಮದರ ಕಾಲದಲ್ಲಿ,ಅಂದರೆ ಆರನೇ ಶತಮಾನದಲ್ಲಿ ಇಂತಹ ಉದ್ಯಾನವನದ ಪರಿಕಲ್ಪನೆಗಳು ಅರೇಬಿಯಾದಲ್ಲಿರಲಿಲ್ಲ.ಕೇವಲ ಖರ್ಜೂರ ಮರಗಳು ಹಾಗೂ ತೊರೆಗಳಾಗಿತ್ತು ಅಂದಿನ ಉದ್ಯಾನಗಳ ಪ್ರಮುಖ ವಿನ್ಯಾಸಗಳು.ಇಸ್ಲಾಮಿಕ್ ನಾಗರಿಕತೆಯು ಅರೇಬಿಯಾವನ್ನು ದಾಟಿ ಇತರ ರಾಷ್ಟ್ರಗಳತ್ತ ವ್ಯಾಪಿಸುವವರೆಗೂ ಇದಕ್ಕೆ ಪ್ರಾಧಾನ್ಯವಿರಲಿಲ್ಲವೆಂದೇ ಹೇಳಬಹುದು.ಮುಖ್ಯವಾಗಿ, ಇಸ್ಲಾಮಿಕ್ ನಾಗರಿಕತೆಯು ಪರ್ಷಿಯಾ ತಲುಪುವುದರೊಂದಿಗೆ ಇಸ್ಲಾಮಿಕ್ ವಿನ್ಯಾಸದ ಉದ್ಯಾನವನ(Islamic garden) ರೂಪುಗೊಂಡಿತು. ಬಳಿಕ ಪರ್ಷಿಯನ್ ಪರಂಪರೆಯಲ್ಲಿ ಬರುವ ರಾಜಕುಟುಂಬದ ಬೇಟೆ ವಿನೋದಗಳಿಗಾಗಿ ನಿರ್ಮಿಸಲಾಗುತ್ತಿದ್ದ ಕ್ರೀಡಾ-ಉದ್ಯಾನವನಗಳನ್ನು (ಇದನ್ನು ಪರ್ಶಿಯನ್ ಭಾಷೆಯಲ್ಲಿ ‘ಪೈರೀದೇಸ’ ಎನ್ನುತ್ತಾರೆ. ಇಂಗ್ಲೀಷಿನ paradise ಎಂಬ ಪದದ ಮೂಲವೂ ಪ್ರಸ್ತುತ ಪರ್ಶಿಯನ್ ಪದವೇ ಆಗಿದೆ)‌ ಇಸ್ಲಾಂ ತನ್ನದಾಗಿಸಿಕೊಳ್ಳುತ್ತದೆ ಮತ್ತು ಅವುಗಳಿಗೆಲ್ಲಾ ಹೊಸತೊಂದು ಆಧ್ಯಾತ್ಮಿಕ ಆಯಾಮವನ್ನು ನೀಡುತ್ತದೆ. ಪರ್ಶಿಯಾದ ಸಸಾನಿಡ್(sassanid) ಸಾಮ್ರಾಜ್ಯವನ್ನು ಮತ್ತು ಅಕ್ಕೀಮೆನಿಡ್(achaemenid) ನಾಗರಿಕತೆಯನ್ನು ಸೋಲಿಸಿದ ಬಳಿಕ ಅತಿನೂತನವಾದ ನೀರಾವರಿ ವ್ಯವಸ್ಥೆಗಳು ಸ್ಥಾಪಿತವಾದ ಬೆನ್ನಿಗೆ ಇಸ್ಲಾಮಿಕ್ ಉದ್ಯಾನವನವು ಹೆಚ್ಚಿನ ಪ್ರಚಾರವನ್ನು ಪಡೆಯತೊಡಗಿತು.
ನನಗೆ ಉದ್ಯಾನವನಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದ್ದು ಲಂಡನಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ(RCA)‌ ವಿದ್ಯಾರ್ಥಿಯಾಗಿದ್ದಾಗ. ಕೇಂಬ್ರಿಡ್ಜ್ ಮಸೀದಿಯ ಜ್ಯಾಮಿತಿಯ ವಿನ್ಯಾಸದಲ್ಲಿರುವ(Geometric design)ಅಲಂಕಾರಗಳ ಕಾರ್ಯಯೋಜನೆ ಸಿದ್ಧಡಿಸಿದ ಕೀಥ್ ಕ್ರಿಚ್ಲೋ(keith critchlow)ರ ಗರಡಿಯಲ್ಲಾಗಿತ್ತು ನನ್ನ ಅಧ್ಯಯನ ಪ್ರಾರಂಭಗೊಂಡದ್ದು.ಇಸ್ಲಾಮಿಕ್ ಅಲಂಕಾರ ರೀತಿಗಳ ಮೂಲ ಭಾಷೆಗಳಲ್ಲೊಂದಾಗಿ ಪ್ರಸಿದ್ಧಿ ಪಡೆದ ಜ್ಯಾಮಿತೀಯ ಅಲಂಕಾರ ರೀತಿಯ ಕುರಿತು ಅವರಲ್ಲಿ ಪ್ರಾವೀಣ್ಯತೆ ಇದ್ದಿತು. RCA ಯಲ್ಲಿ ಇಸ್ಲಾಮಿಕ್ ಕಲೆಯ ಅರ್ಥಗಳನ್ನೂ ಅದರ ಆಳವಾದ ಸೌಂದರ್ಯವನ್ನೂ ನನಗೆ ಕಲಿಸಿಕೊಟ್ಟರು.ಇಂತಹ ಇಸ್ಲಾಂ ಕೇಂದ್ರೀಕೃತ ಅಧ್ಯಯನಗಳ ಮೂಲಕ ನಾನೊಬ್ಬ ಮುಸ್ಲಿಮನಾದೆ.ಅದರೊಂದಿಗೆ ಬಾಲ್ಯದಲ್ಲಿ ನನಗಿದ್ದ ಉದ್ಯಾನವನಗಳೊಂದಿಗಿನ ಆಸಕ್ತಿಯನ್ನೂ,ಇಸ್ಲಾಮಿಕ್ ನಾಗರಿಕತೆ ಮತ್ತು ಅಧ್ಯಾತ್ಮಿಕತೆಯೊಂದಿಗಿರುವ ಹೊಸ ಉತ್ಸಾಹವನ್ನೂ ಒಂದೆಡೆ ಕೇಂದ್ರೀಕೃತಗೊಳಿಸಲು ಸಾಧ್ಯವಾಯಿತು ಎನ್ನಬೇಕು.‌ಬಳಿಕ 2011ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ವಿಭಾಗ ಉಪನ್ಯಾಸಕರಾದ ಡಾ.ಅಬ್ದುಲ್ ಹಕೀಂ ಮುರಾದ್ ಕೇಂಬ್ರಿಡ್ಜ್ ಮಸೀದಿಗೊಂದು ಉದ್ಯಾನವನವೆಂಬ ಚಿಂತನೆಯೊಂದಿಗೆ ನನ್ನನ್ನು ಭೇಟಿಮಾಡಿ ಆರ್ಥಿಕ ಸಹಾಯದ ಭರವಸೆಯನ್ನೂ ನೀಡಿದರು. ಇದರೆಡೆಯಲ್ಲೇ, ನನ್ನ ‘the art of islamic garden’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು.ಆ ಮೂಲಕ ಯೂರೋಪ್ ಮತ್ತು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಅಲಂಕಾರ ರೀತಿಯಲ್ಲಿರುವ ಹಲವಾರು ಉದ್ಯಾನವನಗಳ ವಿನ್ಯಾಸ ಮಾಡಲು ನನಗೆ ಸಾಧ್ಯವಾಯಿತು.
ಕೇಂಬ್ರಿಜ್‌ ಮಸೀದಿ ಪರಿಸರ ಸ್ನೇಹಿ ಮಾರ್ಗಸೂಚಿಗಳನ್ನು ಅಕ್ಷರಶಃ ಪಾಲಿಸಿ ನಿರ್ಮಿಸಲಾದ ಯೂರೋಪಿನ ಪ್ರಪ್ರಥಮ ಕಟ್ಟಡವೆನಿಸುತ್ತದೆ. ಉದ್ಯಾನವನದ ಚೈತನ್ಯ ವಿನಿಯೋಗದಿಂದ ಹಿಡಿದು ರಚನಾತ್ಮಕ ತಂತ್ರಗಳವರೆಗೂ ಪ್ರತಿಯೊಂದು ವಿಷಯಗಳನ್ನು ಕೂಡಾ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿತ್ತು.ಇಸ್ಲಾಮಿಕ್ ಮಾದರಿಯಲ್ಲಿರುವ ಉದ್ಯಾನವನಗಳೆಲ್ಲವೂ ಶಾಂತ ವಾತಾವರಣವನ್ನು ಸೃಷ್ಟಿಸುವುದರಿಂದ ಕೇಂಬ್ರಿಡ್ಜ್ ನಂತಹ ನಗರ ವಲಯಗಳಿಗೆ ಇಂತಹ ಉದ್ಯಾನವನಗಳು ಸೂಕ್ತವೆನಿಸುತ್ತದೆ. ರಸ್ತೆ ಮತ್ತು ಮಸೀದಿಯ ಒಳಾಂಗಣದ ಮಧ್ಯೆಯಿರುವ ಸೀಮಿತ ಸ್ಥಳವನ್ನು ವಿನ್ಯಾಸಗೊಳಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಒಳಗಿನ ಪ್ರಧಾನ ಉದ್ಯಾನವನ ಇಸ್ಲಾಮಿಕ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, 30m × 30m ವಿಸ್ತೀರ್ಣ ಹೊಂದಿದೆ.

ಖುರ್ಆನಿನಲ್ಲಿ ಬಣ್ಣಿಸಲಾದ ಫಿರ್ದೌಸಿನ ಉದ್ಯಾನವನಗಳ ಕನಿಷ್ಠ ಅನುಭೂತಿಯನ್ನಾದರೂ ಈ ಉದ್ಯಾನದ ಸಂದರ್ಶಕರಲ್ಲುಂಟುಮಾಡಬೇಕೆಂಬ ಗುರಿ ನನ್ನದಾಗಿತ್ತು. ಲಂಡನ್ ನಗರದ ಸದ್ದು-ಗದ್ದಲಗಳಿಂದೆಲ್ಲಾ ಮುಕ್ತಿ ನೀಡಿ ನೋಡುಗರಿಗೆ ನವ ಹುರುಪನ್ನು ಹುಟ್ಟಿಸುವ ಮಟ್ಟಿಗೆ ಉದ್ಯಾನವನದ ಪ್ರಭಾವವು ಪಸರಿಸಬೇಕೆಂದು ನಾನು ಬಯಸಿದ್ದೆ. ಒಂದೇ ವೇಳೆ ಇಂಗ್ಲಿಷ್‌ ಜನತೆಗೆ ಇಸ್ಲಾಮಿಕ್ ವಿನ್ಯಾಸವನ್ನೂ ಪರಿಚಯಿಸುವ ಮತ್ತು ಇಂಗ್ಲೆಂಡಿನ ನಾಗರಿಕರಿಗೆ ಮುದ ನೀಡುವ ಏನಾದರೂ ನಿರ್ಮಿಸಬೇಕೆಂಬ ಇರಾದೆ ಕೂಡಾ ನಾನು ಭಾಗವಾಗಿರುವ Urquhart and hunt landscape studio ದ ನಿಷ್ಣಾತ ಸದಸ್ಯರಿಗಿತ್ತು. ಏತನ್ಮಧ್ಯೆ, ಇಲ್ಲಿನ ಪಾಶ್ಚಾತ್ಯ ಸಂದರ್ಭದೊಂದಿಗೆ ಪೌರಾತ್ಯ ತೋಟಗಾರಿಕಾ ವಿನ್ಯಾಸವನ್ನು ಸಂಯೋಜಿಸಲು ಸಾಧ್ಯವೆಂದು ಕ್ಯಾಂಬ್ರಿಜ್‌ ನಲ್ಲಿನ ಇತರ ಜನರಿಗೆ ತಿಳಿಸಲು ಈ ಮೂಲಕ ನಮಗೆ ಸಾಧ್ಯವಾಯಿತು

ಉದ್ಯಾನವನದ ಮೂಲಧಾತುಗಳು:
ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಮೂಲಧಾತುಗಳು ಸಾರ್ವತ್ರಿಕ ಸ್ವಭಾವ ಇರುವಂತದ್ದು. ಈಜಿಪ್ಟಿನ ಕೈರೋದಲ್ಲಿ ಪ್ರಯೋಗಿಸಿದ ವಿಧಾನವನ್ನೆ ಇಂಗ್ಲೆಂಡಿನ ಕೇಂಬ್ರಿಡ್ಜ್‌ನಲ್ಲೂ ಮುಖ್ಯವಾಗಿ ಬಳಸಿದ್ದೆವು. ಇಸ್ಲಾಮಿಕ್ ಉದ್ಯಾನವನಗಳ ಅಂಶಗಳಲ್ಲೊಂದಾದ ಫೋರ್ ಫೋಲ್ಡ್ ಮಾದರಿ(four fold design)ಅಥವಾ ಚಹರ್ ಬಾಗ್ ಮಾದರಿ(ಪರ್ಷಿಯನ್ ಭಾಷೆಯಲ್ಲಿ ನಾಲ್ಕು ಉದ್ಯಾನಗಳು ಎಂದರ್ಥ) ಕ್ಯೇಂಬ್ರಿಡ್ಜ್‌ನಲ್ಲಿ ಮಾತ್ರವಲ್ಲ ವಿಶ್ವದ ವಿವಿಧೆಡೆಗಳಲ್ಲಿ ಹಲವು ರೀತಿಯಲ್ಲಿ ಬಳಸಿದ್ದನ್ನು ಕಾಣಬಹುದು.
ಕೇಂಬ್ರಿಜ್‌ ವಿಶ್ವವಿದ್ಯಾಲಯದ ಕಟ್ಟಡಗಳ ಅಂಗಣಗಳೂ ಪ್ರಸ್ತುತ ಚಹರ್ ಬಾಗ್ ಮಾದರಿಯಲ್ಲೇ ಇದೆ. ಮಧ್ಯಕಾಲೀನ ಯೂರೋಪಿನ ಕ್ರೈಸ್ತ ವಾಸ್ತುಶಿಲ್ಪಗಳಲ್ಲೂ ಈ ಮಾದರಿ ವ್ಯಾಪಕವಾಗಿ ಕಾಣಬಹುದು. ಸಂಪೂರ್ಣವಾಗಿಯೂ ಯೂರೋಪಿಯನ್ ಎಂದು ನಂಬಲಾದ ಕ್ಯೇಂಬ್ರಿಡ್ಜ್‌ನ ಪರಂಪರಾಗತ ವಾಸ್ತುಶಿಲ್ಪದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರಭಾವ ಕಿರಿದಲ್ಲವೆಂಬುವುದು ಸಾರಾಂಶ. ಇಸ್ಲಾಮಿಕ್ ಉದ್ಯಾನವನದ ಮತ್ತೊಂದು ಪ್ರಮುಖ ಘಟಕವಾಗಿದೆ ಆವರಣ(enclosure).ಇದು ಹೊರಗಿನ ವಿಪರೀತ ಬಿಸಿಲು ಹಾಗೂ ಧೂಳುಗಾಳಿಗಳನ್ನೆಲ್ಲಾ ತಡೆದು ಒಳಾಂಗಣವನ್ನು ಸಂರಕ್ಷಿಸಿ ಬೆಳವಣಿಗೆಗೆ ಅನುಕೂಲವಾದ ಸುರಕ್ಷಿತ ವಲಯ(sanctuary)ವನ್ನುಒದಗಿಸುವುದರಿಂದ enclosure ಎಂಬುವುದು ಆಶಯ ಪ್ರಧಾನ ಎನಿಸಿದೆ. ಕೇಂಬ್ರಿಡ್ಜ್ ನ ವಿಷಯಕ್ಕೆ ಬಂದರೆ ಹೊರಭಾಗವು ಜನನಿಬಿಡತೆ, ಮಾಲಿನ್ಯಗಳಿಂದ ತುಂಬಿದ್ದರೂ ಈ ಆವರಣ(enclosure) ಮೂಲಕ ಒಳಗೆ ಹಚ್ಚ ಹಸಿರಾದ ಉದ್ಯಾನವನವೊಂದರ ಬೆಳವಣಿಗೆ ಸಾಧ್ಯವಾಗುತ್ತದೆ. ಅದರಿಂದಲೇ ಇದನ್ನೊಂದು ಆಂತರಿಕ ಉದ್ಯಾನವೆನ್ನಬಹುದು.
ಆಂತರಿಕ ಉದ್ಯಾನವೆಂಬ ಈ ಪರಿಕಲ್ಪನೆ ಖಂಡಿತವಾಗಿಯೂ ಗಮನಾರ್ಹ. ಸೂಫಿ ಕಾವ್ಯಲೋಕದ ಅಗ್ರಗಣ್ಯ ಜಲಾಲುದ್ದೀನ್ ರೂಮಿ(ರ)ರು ಹೇಳಿದಂತೆ “ನಿಜವಾದ ಉದ್ಯಾನವನದ ಪರಿಣಾಮಗಳೆಲ್ಲವೂ ಮಾನವ ಹೃದಯಗಳಲ್ಲೇ ಅಡಗಿರುವುದು,ಹೊರಗಲ್ಲ”.ಕೊನೆಯಿಲ್ಲದ ನಮ್ಮ ಸೋಮಾರಿ ಚಿಂತನೆಗಳಿಂದ ಸಂತಸಗೊಳಿಸಲು ಆತ್ಮವೆಂಬ ಹೂದೋಟವನ್ನು ಪರಿಪಾಲಿಸಬೇಕಿದೆ. ಇಸ್ಲಾಮಿನಲ್ಲಿ ಇದಕ್ಕಿರುವ ದಾರಿಗಳು ಪ್ರಾರ್ಥನೆ, ಧ್ಯಾನ, ದೈವಿಕ ಚಿಂತನೆ ಎಂಬಿತ್ಯಾದಿಗಳು. ಸೂರಃ ಅರ್ರಹ್ಮಾನಿನಲ್ಲಿ ನಾಲ್ಕು ಸ್ವರ್ಗೀಯ ಆನಂದಗಳ ಕುರಿತು ಪರಾಮರ್ಶೆಯಿದೆ; ಪರಂಪರಾಗತ ಚಹರ್ ಬಾಗ್ ಮಾದರಿಯ ಉತ್ಪತ್ತಿ ಮತ್ತು ಸ್ಪೂರ್ತಿ ಇದರಿಂದಲೇ. ಸ್ಪೇನ್ ನ ಅಲ್ ಹಂರಾದ Geralife gardens,ಭಾರತದ ಮುಘಲ್ ಸ್ಮಾರಕಸೌಧಗಳು, ಇರಾನಿನ ಫಿನ್ ಗಾರ್ಡನ್, ಚಹಲ್ ಸುತುನ್ ಎಂಬಿವುಗಳು ಚಹರ್ ಬಾಗ್ ಮಾದರಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ.

ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಇತರ ಪ್ರಮುಖ ಘಟಕಗಳಾಗಿವೆ ನೀರು ಮತ್ತು ನೆರಳು.ನೀರು ಹಾಗೂ ಹರಿಯುವ ನದಿಗಳನ್ನು ಪರಾಮರ್ಶಿಸಿದ ಹಲವಾರು ಖುರ್ಆನ್ ಸೂಕ್ತಗಳಿವೆ.ನೀರಿನ ಪ್ರಾಮುಖ್ಯತೆ ಆಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ(physical)ಗ್ರಹಿಸಬಹುದು.ಕಾರಣ, ಶಾಶ್ವತವಾಗಿ ಹರಿಯುವ ನದಿಗಳು ಭೂಮಿಯ ಸಕಲ ಜೀವಜಾಲಗಳ ಉತ್ಪತ್ತಿಯನ್ನು ಪ್ರತಿನಿಧೀಕರಿಸುತ್ತದೆ. ಕೆಲವು ಸಮಯಗಳಲ್ಲಿ ಅವು ಶಾಂತವೂ ಕೆಲ ವೇಳೆಗಳಲ್ಲಿ ಪ್ರಕ್ಷುಬ್ಧವೂ ಆಗಿರುತ್ತದೆ. ಆದುದರಿಂದ ಅದನ್ನು ಮಾನವರ ಆತ್ಮದೊಂದಿಗೆ ಹೋಲಿಸಬಹುದು. ದೇವರ ಇಷ್ಟದಾಸರಿಗೆ ಲಭಿಸುವ ದೈವಿಕ ಜ್ಞಾನದೊಂದಿಗೆ ಶುದ್ಧ ನೀರನ್ನು ಹೋಲಿಸುವ ಪರಿಪಾಠ ಖುರ್ಆನಿನಲ್ಲಿ ಕಾಣಬಹುದು‌.ಖುರ್ಆನ್ ಹೇಳಿದ ಸ್ವರ್ಗೋದ್ಯಾನಗಳಲ್ಲಿ ಪ್ರತಿಯೊಂದರಲ್ಲೂ ಮಧ್ಯಭಾಗದಲ್ಲಿ ಜಲಮೂಲಗಳಿಂದ ನಾಲ್ಕು ನದಿಗಳು ಹರಿಯುತ್ತದೆ.ಆದರೆ ಭೌಮೋದ್ಯಾನವನಗಳ ನೀರಿನ ಅಲಭ್ಯತೆ ಮತ್ತು ಪರಿಪಾಲನಾ ವೆಚ್ಚ ಪರಿಗಣಿಸಿ ನದಿಗಳಿಗೆ ಬದಲಾಗಿ ಇಲ್ಲಿರುವುದು ನಾಲ್ಕು ಕಾಲುದಾರಿಗಳು.ನೀರು,ನೆರಳು ಎಂಬೀ ಅಂಶಗಳು ಕೇಂಬ್ರಿಡ್ಜ್‌ನ ಶೀತಲ ವಾತಾವರಣಕ್ಕೆ ಅನಿವಾರ್ಯವಲ್ಲದಿದ್ದರೂ ಒಟ್ಟಿನಲ್ಲಿ ಉದ್ಯಾನವನದ ದೃಶ್ಯವನ್ನು ರಮಣೀಯವಾಗಿಸುವುದರಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.

ಉದ್ಯಾನವನದ ರಾಜ ಪ್ರೌಢಿಮೆ:
ಜ್ಯಾಮಿತೀಯ ವಿನ್ಯಾಸಗಳೆಲ್ಲವೂ ಒಂದು ವೃತ್ತಾಕಾರದ ಮಧ್ಯಬಿಂದುವಿನ ಮೂಲಕ ಪ್ರಾರಂಭವಾಗುವುದರಿಂದ ಉದ್ಯಾನವನದ ಮಧ್ಯಭಾಗದಲ್ಲಿ ಒಂದು ಕಾರಂಜಿಯನ್ನು ನಿರ್ಮಿಸಬೇಕಿತ್ತು.ಮಾತ್ರವಲ್ಲದೆ ಇದು ಇಸ್ಲಾಮಿಕ್ ಉದ್ಯಾನವನದ ಪ್ರಧಾನ ಆಕರ್ಷಣೆಯೂ ಹೌದು.ಅದರ ಸಮೀಪದಲ್ಲಿ ನಾವು ಸಣ್ಣ ಚಹರ್ ಬಾಗ್ ಸಿದ್ಧಪಡಿಸಿದ್ದೆವು.ಕೆನೆ ಬಣ್ಣದಲ್ಲಿರುವ ಒಂದು ತರಹದ ಶಿಲೆಯ(York stone)ಮೂಲಕ ಕಾಲುದಾರಿಗಳನ್ನು ನಿರ್ಮಿಸಲಾಗಿತ್ತು.ಹೂದೋಟವನ್ನು ವಿಭಿನ್ನ ಗಿಡಗಳಿಂದ ಅಲಂಕರಿಸಿದ್ದೆವು.ಗುಲಾಬಿ,ಜೆರೇನಿಯಂ,ಐರಿಸ್ ಮುಂತಾದವುಗಳು ಮತ್ತು ಕೆಲವು ಹೂಬಿಡುವ ಪೊದೆಗಳು(flowering shrubs), ನಾಸಿಡಸ್ ಹಾಗೂ ಟುಲಿಪ್ ವರ್ಗಕ್ಕೆ ಸೇರಿದ ಗಿಡಗಳನ್ನಾಗಿತ್ತು ಉದ್ಯಾನವನದಲ್ಲಿ ಮುಖ್ಯವಾಗಿ ನೆಟ್ಟು ಬೆಳೆಸಿದ್ದು. ಪರಿಮಳ ಬೀರುವ ವಾತಾವರಣವೆಂಬುವುದೇ ಇಸ್ಲಾಮಿಕ್ ಗಾರ್ಡನಿಂಗ್ ನ ಪ್ರಧಾನ ಸವಿಶೇಷತೆ. ಕಾರಣ, ಅವುಗಳು ಹೊಸತೆರೆನಾದ ಆನಂದ ನೀಡುವುದಲ್ಲದೆ ನಮ್ಮೊಳಗೆ ಗಾಢವಾಗಿರುವ ಹಲವು ಚಿಂತನೆಗಳನ್ನು ಹೊರತರುವ ಬೃಹತ್ ಶಕ್ತಿಯನ್ನೂ ಹೊಂದಿರುತ್ತದೆ.
ಗಿಡಗಳ ಆಯ್ಕೆ ಉದ್ಯಾನವನದ ಹಚ್ಚ ಹಸಿರನ್ನು ಹೆಚ್ಚಿಸಿ ಸಂದರ್ಶಕರಿಗೆ ರಮಣೀಯ ದೃಶ್ಯವೊದಗಿಸಿ ಅನನ್ಯಾನುಭೂತಿ ನೀಡಲು ಸಹಾಯಕವಾಯಿತು. ಉದ್ಯಾನ ನಿರ್ಮಾಣಕ್ಕಾಗಿ ನಾವು ಆರಿಸಿದ ಗಿಡಗಳು ಹೇರಳವಾಗಿ ತುರ್ಕಿಯಲ್ಲಿ ಕಂಡುಬರುವುದೇ ಆಗಿತ್ತು. ತುರ್ಕಿ ಏಶ್ಯಾದ ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಯೂರೋಪಿಗೆ ತಾಗಿ ನಿಲ್ಲುವುದರಿಂದ ಬ್ರಿಟನಿನ ವಾತಾವರಣದಲ್ಲೂ ಅವುಗಳು ಚೆಂದ ಎಂದು ನಾವು ಬಗೆದೆವು.ಇವುಗಳೊಂದಿಗೆ ಕೆಲ ಹುಲ್ಲುಗಳನ್ನು ಮತ್ತು ಸಸ್ಯಗಳನ್ನು ಪ್ರಕೃತಿದತ್ತ ರೀತಿಯಲ್ಲಿ ನಾವು ಸಿದ್ಧಪಡಿಸಿದೆವು.ಇದರಿಂದ ಒಂದು ನಗರದಲ್ಲಿ ಪರಿಸರ ಸ್ನೇಹಿಯೂ ಸುಸ್ಥಿರವೂ ಆದ ಉದ್ಯಾನವನ ಹೇಗಿರಬೇಕೆಂಬುವುದಕ್ಕೆ ಆಧುನಿಕ ಮಾದರಿಯಾಗಿ ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನವನ್ನು ಜನರ ಮುಂದಿಡಳು ನಮಗೆ ಸಾಧ್ಯವಾಯಿತು.
ಉದ್ಯಾನವನಕ್ಕೆ ಅಗತ್ಯವಾದ ಗಿಡಗಳನ್ನು ಹೊರಗಿನಿಂದ ಆಯ್ಕೆಗೊಳಿಸಿರುವ ಹಿಂದೆ ಇಸ್ಲಾಮಿಕ್ ಪ್ಲಾಂಟಿಂಗ್ ಮಾದರಿಯನ್ನು ಬ್ರಿಟಿಷ್ ರೀತಿಯೊಂದಿಗೆ ಸಂಯೋಜಿಸುವ,ಜೀವವೈವಿಧ್ಯತೆಗಳಿಗೆ ಪ್ರೋತ್ಸಾಹ ನೀಡುವ,ವಿದೇಶಿಗಳಾದ ಸಸ್ಯಗಳ ಬಳಕೆ ಎಂಬೀ ಗುರಿಗಳೂ ಇತ್ತು.ಫಲವೃಕ್ಷಗಳು ಸ್ವರ್ಗೀಯೋದ್ಯಾನವನಗಳ ಪ್ರಧಾನ ಘಟಕವಾಗಿರುವುದರಿಂದಲೇ ಗಹನವಾದ ವಿಶ್ಲೇಷಣೆಯ ಬಳಿಕ ನಾವು ಇದಕ್ಕಾಗಿ ಕಾಡು ಅಂಜೂರದ ವೃಕ್ಷಗಳನ್ನು(crab apple tree)ಆರಿಸಿದೆವು. ಬಳಿಕ ಅದನ್ನು ಪ್ರತಿ ಎಂಟು ಶೆಡ್ ಗಳಲ್ಲಿ ವಿನ್ಯಾಸಗೊಳಿಸಿದೆವು. ಇದಕ್ಕೆ ಗುಲಾಬಿ ಬಣ್ಣದ ಎಲೆಗಳು ಮತ್ತು ರಕ್ತ ವರ್ಣದ ಫಲಗಳು ಇರುತ್ತದೆ.ಉದ್ಯಾನವನ ನಿರ್ಮಾಣದ ಬಗ್ಗೆ ಊರ ನಿವಾಸಿಗಳಿಂದ ದೊರೆತ ಅಪಾರ ಮಟ್ಟದ ಸಕಾರಾತ್ಮಕ ಸ್ಪಂದನೆ ಕಂಡು ಪ್ರಮುಖ ಭೂದೃಶ್ಯ ವಿನ್ಯಾಸಕಾರ ಪೆಟ್ರ ಉಲ್ರಿಕ್ ಈ ಯೋಜನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದರು.

ಆನಂದದಿ ಲೀನವಾಗುವ ಆತ್ಮಗಳು;
ಒಂದು ವರ್ಷದಲ್ಲೇ ನಾವು ಬಯಸಿದ ರೀತಿಯಲ್ಲಿ ಉದ್ಯಾನವನವು ಬೆಳೆಯಿತು. ಮಸೀದಿಯ ವಿನ್ಯಾಸದೊಂದಿಗೆ ಪೂರ್ಣವಾಗಿಯೂ ಹೊಂದಿಕೊಳ್ಳುವ ಚೈತನ್ಯ ಅದಕ್ಕಿತ್ತು. ಮಸೀದಿಯ ಮುಂದೆ ಗಿಡಮರಗಳಿಂದ ಸುತ್ತಲ್ಪಟ್ಟ ಜಲಧಾರೆಯ ಸಮೀಪ ಸೇರುವಾಗ ಅನನ್ಯವಾದ ನಿರಾಳತೆಯೊಂದು ಸಂದರ್ಶಕರಿಗೆ ಲಭಿಸುತ್ತದೆ. ಲಾಕ್ ಡೌನಿನ ಮುನ್ನ ದೂರ ದೇಶಗಳಿಂದ ಮಸ್ಲಿಮರೂ ಮುಸ್ಲಿಮೇತರರೂ ಧಾರಾಳವಾಗಿ ತಲುಪುತ್ತಿದ್ದರು. ಮಸೀದಿಗೆ ಪ್ರಾರ್ಥನೆಗಾಗಿ ಬರುವ ವಿಶ್ವಾಸಿಗಳ ಹಾಗೂ ಮಸೀದಿಯ ವಿನ್ಯಾಸವನ್ನು ಸವಿಯಲು ಬರುವವರ ನಯನಕ್ಕೆ ಮೊದಲು ಬೀಳುವುದು ನಮ್ಮ ಉದ್ಯಾನವನವಾಗಿದೆ. ಇಲ್ಲಿ ನಡೆದಾಡುವುದು,ಪರಿಸರದ ಸೌಂದರ್ಯ ಸವಿಯುವುದು ಹಾಗೂ ಪರಿಪಾಲಿಸುವುದು ಮನಸ್ಸಿಗೂ ಆತ್ಮಕ್ಕೂ ವಿಶೇಷ ಹುರುಪನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಚಹರ್ ಬಾಗ್ ಮಾದರಿಯಲ್ಲಿರುವ ಇಸ್ಲಾಮಿಕ್ ಉದ್ಯಾನವನಗಳು ಅತ್ಯಂತ ಸುಂದರ ವಾತಾವರಣ ಹೊಂದಿರುವುದರಿಂದ ಅವುಗಳನ್ನು ಸ್ವರ್ಗೋದ್ಯಾನಗಳೊಂದಿಗೆ ಹೋಲಿಸಬಹುದೇನೋ ಅನಿಸುತ್ತದೆ.
ಈ ಕೋರೋನಾ ಕಾಲದಲ್ಲಿ ನಾವೆಲ್ಲರೂ ಮರಣವನ್ನು ಅತ್ಯಂತ ಗಂಭೀರವಾಗಿ ಕಾಣುವವರಾಗಿದ್ದೇವೆ.ಶಾಶ್ವತವಾದ ಸ್ವರ್ಗ ಸುಖದ ಪ್ರೇರಣೆ ಪಡೆದು ಭೌತಿಕ ಉದ್ಯಾನವನಗಳಲ್ಲಿ ಸಮಯ ಕಳೆಯುವಾಗ ಅವರ್ಣನೀಯ ಶಾಂತಿ ಮತ್ತು ಸಮಾಧಾನವು ನಮಗೆ ಸಿಗುತ್ತದೆ. ನೆನಪಿಡಿ,ಪವಿತ್ರವಾದ ಸ್ವರ್ಗದ ಉದ್ಯಾನವನಗಳಲ್ಲಿ ಸಮಾಧಾನ ಇದ್ದೇ ಇರುತ್ತದೆ.

ಮೂಲ ಲೇಖಕಿ: ಎಮ್ಮಾ ಕ್ಲಾರ್ಕ್‌
ಕನ್ನಡಕ್ಕೆ: ತ್ವಾಹಿರ್‌ ಸಿದ್ದೀಖ್

ರಾವಿ ನದಿಯ ದಂಡೆಯಲ್ಲಿ

ಶಾಂತ ಸಂಜೆಯಲ್ಲಿ ಹರಿಯುತ್ತಿದೆ
ಮಧುರವಾಗಿ ರಾವಿ,
ನನ್ನೆದೆಯ ನೋವನ್ನು ಮಾತ್ರ
ಕೇಳದಿರಿ ಇಲ್ಲಿ

ಸುಜೂದಿನ ಮೇಲುಕೀಳುಗಳ
ಸಂದೇಶ ದೊರೆಯುತ್ತಿದೆಯಿಲ್ಲಿ
ಜಗವೆಲ್ಲವೂ ‘ಹರಂ’ ನ
ಹಿತ್ತಿಲಾಗಿದೆಯಿಲ್ಲಿ!

ರಾವಿಯ ಅನಂತ ಹರಿವಿನ ದಂಡೆಯಲಿ
ನಿಂತಿಹೆನು ನಾನು
ಆದರೂ ತಿಳಿಯದಾಗಿಹೆ
ಎಲ್ಲಿ ನಿಂತಿರುವೆ ನಾನು!

ವೃದ್ಧಗುರು ಮಧುಬಟ್ಟಲನು ಹಿಡಿದು
ನಿಂತಿಹನು ನಡುಗುತಿಹ ಕೈಗಳಲ್ಲಿ
ರಕ್ತವರ್ಣದ ಮದ್ಯ ಚೆಲ್ಲಿದೆ
ಸಂಜೆ ಬಾನಿನ ಸೆರಗಿನಲ್ಲಿ!

ಈ ಕಾರವಾನವೂ ಕೊನೆಯಾಗುತ್ತಲಿದೆ
ದಿನದ ಆವರ್ತನೆಯಂತೆ
ಮುಸ್ಸಂಜೆಯಾಗುತ್ತಿದೆ, ಅಚ್ಚರಿಯೇಕೆ
ಬದುಕು ಸೂರ್ಯಕಾಂತಿ ಹೂವಿನಂತೆ!

ನಿಂತುಕೊಂಡಿವೆ ಒಂಟಿತನವ ಸಾರುತ್ತ
ಎತ್ತರೆತ್ತರದ ಮಿನಾರಗಳು
ಒಂದು ಕಾಲದಲ್ಲಿ ಮೆರೆದಿದ್ದ
ಮೊಘಲ್ ದೊರೆಗಳ ಗೋರಿಗಳು!

ವಿದ್ರೋಹದ ಕಥೆಗಳನು
ಸಾರುತಿಹುದೀ ನೆಲವು
ಅಳಿದು ಹೋದ ಜಗತ್ತಿನ
ತೆರೆದ ಹೊತ್ತಗೆಗಳಾಗಿ!

ಸಾಗುತಿದೆ ನೋಡಿ ಮೌನ ಡಂಗುರ
ಆ ನದಿಯ ದಂಡೆಯಲ್ಲಿ
ಮರಗಿಡಗಳಿಲ್ಲದ ಮೌನ ಮರ್ಮರ
ಗೋಷ್ಠಿಯನ್ನೊಮ್ಮೆ ನೋಡಿ!

ಅಲೆಗಳೆದೆಯನ್ನು ಸೀಳುತ್ತ
ಸಾಗುತಿದೆ ಆ ಹಾಯಿದೋಣಿ
ಅಲೆಗಳೊಂದಿಗೆ ಗುದ್ದಾಡುತಿಹ
ನಾವಿಕನ ನೋಡಿ!

ಕಣ್ಮಿಂಚಿನಂತೆ ಚಿಮ್ಮುತಿದೆ
ಆ ನಾವೆಯು ರಾವಿಯಲ್ಲಿ
ಕಣ್ಮುಚ್ಚಿ ತೆರೆಯುವುದರೊಳಗೆ
ಮಿಂಚಿ ಮಾಯಾವಾಗುತಿದೆಯಲ್ಲಿ!

ಅಸ್ತಿತ್ವದ ಅನಂತ ತೆರೆಗಳ ಮೇಲೆ
ಹುಟ್ಟುತ್ತ ಸಾಯುತ್ತಾ,
ಹೀಗೆಯೇ ಸಾಗುತಿವೆ
ಮನುಷ್ಯರ ಜೀವದೋಣಿಗಳು!

ಧೃತಿಗೆಡದು ಎಂದೆಂದಿಗೂ
ಸೋಲಿನಲೆಗಳೇ ಮೇಲೆ ಹರಿಯೇ
ಕಣ್ಣೋಟದಿಂದ ದೂರವಾಗಿರಬಹುದು
ಆದರೂ, ನಾಶವಾಗದು ಮನುಜ ಯಾತ್ರೆ!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಹಕ್ಕಿಯ ದೂರು

ನೆನಪಾಗುತಿವೆ ಇಂದು
ಕಳೆದುಹೋದ ಆ ದಿನವು
ಹಕ್ಕಿಗಳ ಚಿಲಿಪಿಲಿಯಲ್ಲಿ
ವಸಂತನ ಆಗಮನವು

ಅತ್ತಿತ್ತ ಹಾರಿ ನಲಿದಾಡುತಿದ್ದ
ಬೇಕೆಂದ ಕಡೆಗೆ ಹಾರಾಡುತಿದ್ದ
ಸಂತಸದ ಗುಡಿಯಲಿದ್ದ
ಆ ನನ್ನ ಸ್ವಾತಂತ್ರ್ಯವೆಲ್ಲಿ

ಆ ಕ್ಷಣಗಳ ನೆನಪಿನಲ್ಲಿ
ಎದೆಯೊಡೆಯುತಿಹುದಿಲ್ಲಿ
ಇಬ್ಬನಿಯ ಕಣ್ಣೀರಿನಲ್ಲಿ
ನಗುತಿದ್ದ ಆ ಮೊಗ್ಗೆಗಳೆಲ್ಲಿ

ಯಾವ ಸೌಂದರ್ಯದ ಖನಿಯೋ
ಅದಾವ ಮೋಹಿನಿಯ ಇರವೋ
ಆ ಮೈಮಾಟದಲ್ಲಿ ತುಂಬಿ
ಮುದಗೊಳ್ಳುತಿತ್ತು ಗುಡಿಯು

ಬಂಧನದೊಳಗಿರುವೆ
ಆ ಮಧುರಧ್ವನಿಗಳ ಸದ್ದುಗಳಿಲ್ಲ
ಅಯ್ಯೋ ಆ ಸ್ವಾತಂತ್ರ್ಯವೆಂಬುದೊಂದು
ನನ್ನ ಕೈಯೊಳಗಿರಬೇಕಾಗಿತ್ತು

ಮನೆಸೇರಲು ಚಡಪಡಿಸುತಿರುವೆ
ಹಣೆಬರಹವ ಹಳಿಯುತಿರುವೆ
ಇಲ್ಲಿ ಬಂಧಿಯಾಗಿ ಬಿದ್ದಿರುವೆ
ಒಡನಾಡಿಗಳೆನ್ನ ಕಾಡಿನಲ್ಲಿಹರು!

ವಸಂತನ ಆಗಮನವೇನೋ
ಈ ಮೊಗ್ಗುಗಳು ನಕ್ಕು ನಲಿಯುತಿವೆ ಅಲ್ಲಿ
ಎನ್ನ ವಿಧಿಯ ಹಳಿಯುತಿರುವೆ
ಈ ಕೈದಿನ ಕಗ್ಗತ್ತಲೆಯಲ್ಲಿ

ಈ ಬಂಧನದ ಬಿನ್ನಹವ
ಯಾರ ಬಳಿಗೊಯ್ಯಲಿ ದೊರೆಯೇ
ಬರದಿರಲಿ ನನ್ನ ಸಾವು
ಈ ಬಂಧನದ ನೋವಿನಾ ಬಳಿಯೇ

ದುಸ್ಥಿತಿಗೆ ಇಳಿದಿರುವೆ ನಾನು
ಆ ತೋಟದಿಂದ ಕಳೆದು,
ನೋವುಣ್ಣುತಿದೆ ಎದೆಯು
ಎದೆಯ ನುಂಗುತಿದೆ ನೋವು

ಹಾಡೆಂದು ತಿಳಿದು
ನಗಬೇಡಿ ನೀವು
ದುಃಖತಪ್ತ ಮನದ
ಒಡಲಾಳದ ಕೂಗು

ಮುಕ್ತಗೊಳಿಸೆನ್ನ ಒಮ್ಮೆ
ಓ ಕೈದುಗಾರನೆ ನೀನು
ಮುಕ್ತಿಗೊಳಿಸೀ ಮೂಕ ಕೈದಿಯ
ಧನ್ಯನಾಗುವೆ ನೀನು

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ನವ ಮಂದಿರ

ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,
ತಪ್ಪು ತಿಳಿಯದಿರು ಎನ್ನ
ಹಳತಾಗುತಿವೆ ಗರ್ಭಗುಡಿಯೊಳಿರುವ
ಆ ಮೂರ್ತಿಗಳು ನಿನ್ನ

ನಿನ್ನವರನೇ ದ್ವೇಷಿಸಲು
ಆ ಮೂರ್ತಿಗಳಿಂದ ನೀ ಕಲಿತಿರುವಾಗ
ವೈರತ್ವ ದ್ವೇಷಗಳನ್ನೇ ಕಕ್ಕಲು
ಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು

ಅಯ್ಯೋ! ಈ ಮಂದಿರ ಮಸೀದಿಗಳಿಂದಲೇ
ನಾ ಬೇಸತ್ತು ಹೋದೆ
ಗುರುವಿನ ಧರ್ಮವೇ ಕಳೆದುಹೋಗಿದೆ
ನಿನ್ನ ಪುರಾಣಗಳೂ ಕಳೆದುಹೋಗಿವೆ

ಕಲ್ಲಿನಾ ಶಿಲ್ಪಗಳನ್ನು
ನೀ ದೇವರೆಂದು ಬಗೆದಿರುವೆ
ಈ ನಾಡಿನ ಮಣ್ಣ ಕಣಕಣಗಳೂ
ಎನಗೆ ದೇವತೆಗಳಾಗುತಿವೆ

ಬಾ ಇನ್ನೊಮ್ಮೆ ಈ ಪರಕೀಯತೆಯ
ಪರದೆಯನ್ನೊಮ್ಮೆ ಎತ್ತಿಬಿಡೋಣ
ಅಗಲಿದವರನೊಮ್ಮೆ ಒಂದಾಗಿಸೋಣ
ಗಡಿರೇಖೆಗಳ ಕಲೆಯ ಅಳಿಸೋಣ

ಶೂನ್ಯವಾಗಿದೆ ಎದೆಯ ಗೂಡು
ಹಕ್ಕಿಗಳ ಸುಳಿವಿಲ್ಲ
ಬಾ ಈ ನಮ್ಮ ದೇಶದಲ್ಲಿ
ನವ ಮಂದಿರವ ನಿರ್ಮಿಸೋಣ

ಸರ್ವ ತೀರ್ಥಗಳಿಗೆ ಮಿಗಿಲಾದ
ತೀರ್ಥವಿಹುದಿಲ್ಲಿ
ಬಾ ಸಗ್ಗದಾ ನೆತ್ತಿಯ ಮೇಲೆ
ಪ್ರೇಮ ಕಳಶವನಿಡೋಣ

ಆ ಮಧುರಮಂತ್ರಗಳನ್ನು
ದಿನವೆದ್ದು ಹಾಡೋಣ
ಆ ಭಕುತರ ಹೃದಯಕ್ಕೆ
ಪ್ರೇಮಮಧುವ ಸುರಿಯೋಣ

ಶಕ್ತಿ-ಶಾಂತಿಗಳೆರಡೂ ಅಡಗಿಹುದು
ಭಕುತರ ಮಧುರವಾಣಿಯಲ್ಲಿ
ಈ ಭುವಿಯ ಜೀವರಾಶಿಗಳೆಲ್ಲಾ
ಮುಕ್ತಿ ಕಾಣುವವು ಪ್ರೀತಿಯಲ್ಲಿ !

ಉರ್ದು ಮೂಲ : ಅಲ್ಲಾಮಾ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಯುರೋಪ್ ಜ್ಞಾನೋದಯ‌ ಮತ್ತು ಪೈಗಂಬರ್ ಮುಹಮ್ಮದ್(ಸ)

ಹದಿನಾರನೇ ಶತಮಾನದಲ್ಲಿ ಯುರೋಪ್‌ನಲ್ಲಿ ಖುರ್‌ಆನ್ ಅನುವಾದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವು ನೂರಾರು ತೊಡಕುಗಳನ್ನು ಎದುರಿಸಬೇಕಾದ ಒಂದು ಉದ್ಯಮವೇ ಆಗಿತ್ತು. ಕ್ರಿ.ಶ 1542 ರಲ್ಲಿ ಖುರ್‌ಆನಿನ ಲಾಟಿನ್ ಭಾಷೆಯ ಅನುವಾದವೊಂದನ್ನು ಪ್ರಕಟಿಸಲು ಮುಂದಾದ ಪ್ರಕಾಶಕನೊಬ್ಬನನ್ನು ಬಂಧಿಸಿ ಬೆಯ್‌ಸಲ್ ಪ್ರೊಟಸ್ಟಂಟ್‌ಸಿಟಿ ವಕ್ತಾರರು ಅಭಿಪ್ರಾಯ ಪಟ್ಟಿದ್ದೇನೆಂದರೆ; ಖುರ್‌ಆನ್ ಜನರನ್ನು ಗೊಂದಲಕ್ಕೀಡು ಮಾಡಬಹುದು ಎಂದು. ಕೊನೆಗೆ ತುರ್ಕಿಗಳನ್ನು ಎದುರಿಸಲು ಉತ್ತಮ ದಾರಿ ಖುರ್‌ಆನಿನ ಕೆಲವು ಸುಳ್ಳುಗಳನ್ನು ಬಹಿರಂಗಗೊಳಿಸುವುದು ಎಂದು ಪ್ರೊಟೆಸ್ಟಂಟ್ ಮೇಧಾವಿ ಮಾರ್ಟಿನ್ ಲೂಥರ್ ಘೋಷಿಸುವುದರೊಂದಿಗೆ ಖುರ್‌ಆನ್ ಅನುವಾದ ಪ್ರಕ್ರಿಯೆಯು ಮುಂದುವರಿಯುತ್ತದೆ.


ಮುಂದೆ ಕ್ರಿ.ಶ 1543 ರಲ್ಲಿ ಪ್ರಕಟವಾದ ಈ ಲ್ಯಾಟಿನ್ ಭಾಷೆಯ ಖುರ್‌ಆನ್ ಅನುವಾದವು ಯುರೋಪ್‌ನ ಬೌದ್ಧಿಕ ವಲಯವನ್ನು ತಲುಪಿತು ಮತ್ತು ಆ ಮೂಲಕ ಇಸ್ಲಾಮನ್ನು ಇನ್ನೂ ಹೆಚ್ಚು ಅರಿತುಕೊಂಡು ಪ್ರತಿರೋಧಿಸಲು ಸಾಧ್ಯವಾಯಿತು. ಅದೇವೇಳೆ ಈ ಗ್ರಂಥದ ಅಧ್ಯಯನಕ್ಕಿಳಿದ ಕೆಲವು ಮಂದಿ, ಕ್ರೈಸ್ತ ಧರ್ಮದ ನಂಬಿಕೆ ಮತ್ತು ಸಂಹಿತೆಗಳನ್ನು ಪ್ರಶ್ನಿಸಲು ಖುರ್‌ಆನನ್ನು ಆಧಾರವಾಗಿಟ್ಟುಕೊಂಡರು. ಕಾಟ್ಟೋಲೋನಿಯನ್ ದಾರ್ಶನಿಕನೂ, ದೇವಶಾಸ್ತ್ರಜ್ಞನೂ ಆಗಿದ್ದ ಮಿಶೇಲ್ ಸೆರ್ವಿಟ್ಟಸ್ ಬರೆದ Christianismi Restitutio (1553) ಎಂಬ ತ್ರಿಯೇಕತ್ವವನ್ನು ವಿಮರ್ಶಿಸುವ ಕೃತಿಯಲ್ಲಿ ಆತ ತನ್ನ ವಾದಗಳಿಗೆ ಪೂರಕವಾಗಿ ಖುರ್‌ಆನಿನ ಅನೇಕ ವಚನಗಳನ್ನು ಆಧಾರವಾಗಿ ಉಲ್ಲೇಖಿಸಿದ್ದ. ಮಿಶೇಲ್ ಈ ಪುಸ್ತಕದಲ್ಲಿ ಕ್ರೈಸ್ತ ದೇವಶಾಸ್ತ್ರಜ್ಞರು ಸೃಷ್ಟಿಸಿದ ಅಸಂಬದ್ಧವಾದ ತ್ರಿಯೇಕತ್ವವು ಕಳಂಕಗೊಳಿಸಿದ ದೇವನಂಬಿಕೆಯಿಂದ ಕಳಂಕರಹಿತ ಏಕದೇವೋಪಾಸನೆಯತ್ತ ದಾರಿತೋರಲು ಬಂದ ಸುಧಾರಕರೆಂದು ಪೈಗಂಬರ್ ಮುಹಮ್ಮದ (ಸ) ರನ್ನು ಪರಿಚಯಿಸುತ್ತಾರೆ. ಧರ್ಮವಿರೋಧಿ ವಿಚಾರವನ್ನು ಮಂಡಿಸಿದ ಗ್ರಂಥವನ್ನು ಹೊರತರುವುದರೊಂದಿಗೆ ಸರ್ವಿಟ್ಟಸ್ ವಿರುದ್ಧ ವಿಯೆನ್ನಾದಲ್ಲಿ ನಡೆದ ಕಾಥೋಲಿಕಾ ಇನ್‌ಕ್ವಿಸಿಷನ್‌ನಲ್ಲಿ ಧರ್ಮದ್ರೋಹದ ಆಪಾದನೆಯನ್ನು ಹೊರಿಸಿ ಆತನ ಗ್ರಂಥಗಳೊಂದಿಗೆ ಆತನನ್ನೂ ಅಮಾನುಷವಾಗಿ ಸುಟ್ಟು ಹಾಕಲಾಯಿತು.

Johann Wolfgang von Goethe


ಯುರೋಪ್‌ನ ಜ್ಞಾನೋದಯ ಕಾಲದಲ್ಲಿ ಅನೇಕ ಬರಹಗಾರರು ಇದೇರೀತಿ ಪೈಗಂಬರ್ ಮುಹಮ್ಮದ್ (ಸ)ರನ್ನು ಪೌರೋಹಿತ್ಯ ವಿರೋಧಿ ನಾಯಕನನ್ನಾಗಿ ಪ್ರತಿಪಾದಿಸಿದುದನ್ನು ಗಮನಿಸಬಹುದು. ಕೆಲವರು ಇಸ್ಲಾಮನ್ನು ತಾತ್ವಿಕ ದೈವಸಿದ್ಧಾಂತಕ್ಕೆ (philosophic deism) ಸಮಾನವಾದ ಏಕದೇವ ನಂಬಿಕೆಯಾಗಿ ಮತ್ತು ಖುರ್‌ಆನನ್ನು ಯುಕ್ತಿಪೂರ್ಣ ಗ್ರಂಥವಾಗಿ ಕಂಡರು. ಕ್ರಿ.ಶ 1734 ರಲ್ಲಿ ಜಾರ್ಜ್ ಸೆಯ್‌ಲ್ ಎಂಬಾತ ಖುರ್‌ಆನಿನ ಒಂದು ಹೊಸ ಇಂಗ್ಲೀಷ್ ಅನುವಾದವನ್ನು ಹೊರತಂದನು. ಅದರ ಮುನ್ನುಡಿಯಲ್ಲಿ ಆದ್ಯ ಕಾಲದ ಕ್ರೈಸ್ತರ ಅನಾಚಾರಗಳನ್ನೂ ಮೌಢ್ಯವನ್ನೂ ನಿರ್ಮೂಲನೆ ಮಾಡುವ, ಪೌರೋಹಿತ್ಯದ ವಿರುದ್ಧ ಹೋರಾಡುವ ಸುಧಾರಣಾವಾದಿಯಾಗಿ ಮತ್ತು ಮಾದರಿಯೋಗ್ಯ ಪುರುಷೋತ್ತಮನಂತೆ ಪೈಗಂಬರರನ್ನು ಚಿತ್ರಿಸಲಾಗಿತ್ತು. ಸೇಯ್ಲ್‌ನ ಈ ಖುರ್‌ಆನ್ ಅನುವಾದವು ಇಂಗೆಂಡಿನಾದ್ಯಂತ ವ್ಯಾಪಕ ಪ್ರಮಾಣದ ಓದುಗರನ್ನು ತಲುಪಿತು ಮತ್ತು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿತು. ಓದುಗರ ಪೈಕಿ ಹೆಚ್ಚಿನವರೂ ಪೈಗಂಬರ್(ಸ)ರನ್ನು ಪೌರೋಹಿತ್ಯ ವಿರೋಧಿ ಮತ್ತು ಪ್ರಜಾಪ್ರಭುತ್ವದ ಪ್ರತೀಕವಾಗಿ ಕಂಡರು. ಇಂಗ್ಲೆಂಡ್ ನ ಹೊರಗೂ ಈ ಕೃತಿಗೆ ದೊಡ್ಡ ಪ್ರಚಾರ ಲಭಿಸಿತು. ಅಮೇರಿಕಾದ ಸ್ಥಾಪಕ ಪಿತಾಮಹ ಥಾಮಸ್ ಜೆಫರ್ಸನ್ 1765 ರಲ್ಲಿ ವಿರ್ಜೀನಿಯಾದ ವಿಲಿಯಂ ಬರ್ಗ್‌ನ ಒಬ್ಬ ಪುಸ್ತಕ ವ್ಯಾಪಾರಿಯಿಂದ ಈ ಅನುವಾದದ ಪ್ರತಿಯೊಂದನ್ನು ಖರೀದಿಸಿದ್ದರು. ದೈವಶಾಸ್ತ್ರದ ಕುರಿತಾದ ತನ್ನ ನಿಲುವುಗಳನ್ನು ಬದಲಿಸಲು ಖುರ್‌ಆನ್ ಅವರಿಗೆ ನೆರವಾಗಿತ್ತು. (ಜೆಫರ್ಸನ್ ರ ಈ ಅನುವಾದದ ಪ್ರತಿಯನ್ನು ಈಗ ಅಮೇರಿಕಾದ ಕಾಂಗ್ರೆಸ್ ಲೈಬ್ರರಿಯಲ್ಲಿ ತೆಗೆದಿರಿಸಲಾಗಿದೆ. ಕಾಂಗ್ರೆಸ್‌ನಿಂದ ಚುನಾಯಿತರಾಗುವ ಮುಸ್ಲಿಂ ಪ್ರತಿನಿಧಿಗಳು ಈ ಕೃತಿಯನ್ನು ಬಳಸಿ ಪ್ರಮಾಣವಚನ ಸ್ವೀಕರಿಸುತ್ತಾರೆ. 2007ರಲ್ಲಿ ಕೇಥ್ ಎಲಿಸನ್ ಎಂಬಾತನು ಈ ಪರಂಪರೆಯನ್ನು ಆರಂಭಿಸಿದ್ದನು.) ಜರ್ಮನಿಯ ರೋಮ್ಯಾಂಟಿಕ್ ಕವಿಯಾಗಿದ್ದ ಗೋಥೆಯು ಸೆಯ್ಲ್‌‌ನ ಅನುವಾದವನ್ನು ಓದುವ ಸಂದರ್ಭವೊದಗಿದ ಕಾರಣದಿಂದ ಪೈಗಂಬರರ ಕುರಿತಾದ ತನ್ನ ಕಲ್ಪನೆಗಳಿಗೆ ಬಣ್ಣತುಂಬಲು ಸಹಾಯಕವಾಗಿದೆ. ಗೋಥೆಯ ಪಾಲಿಗೆ ಪೈಗಂಬರರು ಓರ್ವ ಮಾದರಿ ಕವಿಯೂ, ಪ್ರವಾದಿತ್ವಕ್ಕೆ ಉದಾತ್ತ ರೂಪಕವೂ ಆಗಿದ್ದರು.

W. Montgomery Watt

ಸೆಯ್ಲ್‌‌ನ ಖುರ್‌ಆನ್ ಅನುವಾದವನ್ನು ಅಧ್ಯಯನ ನಡೆಸಿದ ಫ್ರಾನ್ಸ್‌ನ ದಾರ್ಶನಿಕನಾಗಿದ್ದ ವಾಲ್ಟರ್ ತನ್ನ ಜಾಗತಿಕ ಚರಿತ್ರೆಯ ಕುರಿತಾದ ಕೃತಿಯಲ್ಲಿ (Essai sur les mœurs et l’esprit des nations) ಪೈಗಂಬರರನ್ನು ಅತ್ಯಂತ ಗೌರವದಿಂದ ಪರಾಮರ್ಶಿಸುತ್ತಾರೆ. ಕಳಂಕಿತ ಪೌರೋಹಿತ್ಯ ಶಕ್ತಿಗಳನ್ನು ಮಣಿಸಲು, ಮೌಢ್ಯ-ಅನಾಚಾರಗಳನ್ನು ತೊಡೆದು ಹಾಕಲು ಬಂದ ಒಬ್ಬ ಸುಧಾರಣಾವಾದಿಯಾಗಿ ಪೈಗಂಬರರನ್ನು ಬಣ್ಣಿಸುತ್ತಾನೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಸೆಯ್ಲ್ ಮತ್ತು ವಾಲ್ಟರ್‌ರ ಅನುವಾದವನ್ನು ಅಧ್ಯಯನ ನಡೆಸಿದ ಎಡ್ವರ್ಡ್ ಗಿಬ್ಬನ್ ತನ್ನ The History of the Decline and Fall of the Roman Empire ಎಂಬ ಗ್ರಂಥದಲ್ಲಿ ಪೈಗಂಬರರ ಕುರಿತು ಮನೋಜ್ಞವಾಗಿ ಬರೆಯುವುದು ಹೀಗೆ;
“ಪ್ರವಾದಿ ಮುಹಮ್ಮದರು ಪ್ರತಿಪಾದಿಸಿದ ತತ್ವಗಳು ಅಸ್ಪಷ್ಟತೆಗಳಿಂದ ಮತ್ತು ಸಂದೇಹಗಳಿಂದ ಮುಕ್ತವಾದವುಗಳು. ಅವರಿಗೆ ಅವತೀರ್ಣವಾದ ಖುರ್‌ಆನ್ ಸೃಷ್ಟಿಕರ್ತನು ಏಕತ್ವಕ್ಕಿರುವ ಬಲುದೊಡ್ಡ ಪುರಾವೆಯಾಗಿದೆ. ನಶಿಸುವುದೆಲ್ಲವೂ ಜೀರ್ಣಿಸುತ್ತದೆ, ಜನಿಸುವುದೆಲ್ಲವೂ ಮರಣ ಹೊಂದುತ್ತದೆ, ಉದಿಸುವುದೆಲ್ಲವೂ ಅಸ್ತಮಿಸುತ್ತದೆ ಮುಂತಾದ ಯುಕ್ತಿಬದ್ದ ಪ್ರತಿಪಾದನೆಗಳಿಂದ ವಿಗ್ರಹಗಳಿಗೂ, ಬಹುದೈವಗಳಿಗೂ ಆರಾಧಿಸುತ್ತಿದ್ದ ಮಕ್ಕಾದ ಜನರನ್ನು ತಡೆದರು. ಪ್ರಪಂಚದ ಸೃಷ್ಟಿಕರ್ತನಾದ ದೇವನು ಸ್ಥಳ ಕಾಲಗಳ ಅಗತ್ಯವಿಲ್ಲದ, ಪ್ರತಿಚ್ಛಾಯೆಯೋ ಪ್ರತಿಮೆಗಳೋ ಇಲ್ಲದ, ಅನಶ್ವರವಾದ ಒಂದು ಅಸ್ತಿತ್ವವಾಗಿತ್ತು. ಆ ಅಸ್ತಿತ್ವವು ಸ್ವಯಂ ಅನಿವಾರ್ಯತೆಯಲ್ಲೇ ನೆಲೆನಿಂತಿದೆ. ಆಸ್ತಿಕನಾದ ದಾರ್ಶನಿಕನು ನಮ್ಮ ಕಾಲಕ್ಕೆ ಹೊಂದುವ ಉದಾತ್ತವಾದ ಮುಹಮ್ಮದೀಯ ನಂಬಿಕೆಯನ್ನು ಅಪ್ಪಿಕೊಂಡಿದ್ದರು.”
-The History of the Decline and Fall of the Roman Empire

ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ.

ಆದರೆ 1783ರಲ್ಲಿ ಕ್ಲೋಡ್ ಎಟಿನೆ ಸಾವರಿ ಬರೆದ ಖುರ್‌ಆನಿನ ಫ್ರೆಂಚ್ ಅನುವಾದವನ್ನು ಓದಿಕೊಂಡ ನೆಪೋಲಿಯನ್ ಬೊನಪಾರ್ಟೆ ಅತ್ಯುತ್ಸಾಹದಿಂದ ಖುರ್‌ಆನ್‌ ನ್ನು ಆವಾಹಿಸಿಕೊಂಡು ಸ್ವಯಂ ತಾನೊಬ್ಬ ಹೊಸ ಪ್ರವಾದಿಯಾಗಿ ರೂಪಾಂತರಗೊಳ್ಳುವ ಸಾಹಸಕ್ಕಿಳಿದಿದ್ದನು. ಅರೇಬಿಕ್ ಸಾಹಿತ್ಯದ ಕಲರವ ತುಂಬಿದ್ದ ಈಜಿಪ್ಟ್‌ನಲ್ಲಿದ್ದುಕೊಂಡು ಖುರ್‌ಆನ್ ಅನುವಾದ ಬರೆದ ಸಾವರಿ ಅರೇಬಿಕ್ ಭಾಷೆಯ ಸಾಹಿತ್ಯ ಸಂಪುಷ್ಟಿಯನ್ನು ತನ್ನ ಬರೆಹದಲ್ಲಿ ಆವಾಹಿಸಿಕೊಳ್ಳಲು ಪ್ರಯತ್ನಿಸಿದ. ಸೆಯ್‌ಲ್‌ನಂತೆಯೇ ತನ್ನ ಕೃತಿಯ ಆರಂಭದಲ್ಲಿ ಸುದೀರ್ಘ ಮುನ್ನುಡಿಯನ್ನು ಬರೆದ ಸಾವರಿ, ಪೈಗಂಬರ್ (ಸ) ರನ್ನು ಒಬ್ಬ ಅಸಾಧಾರಣ ವ್ಯಕ್ತಿಯನ್ನಾಗಿಯೂ, ಯುದ್ಧರಂಗದ ಪ್ರತಿಭಾಶಾಲಿಯಾಗಿಯೂ, ಅನುಯಾಯಿಗಳ ನಡುವೆ ಪ್ರಭಾವ ಬೀರಲು ಸಮರ್ಥನಾದ ಒಬ್ಬ ನಾಯಕನನ್ನಾಗಿಯೂ ಚಿತ್ರಿಸಿದ್ದಾನೆ. 1798 ರಲ್ಲಿ ತನ್ನ ಹಡಗಿನಲ್ಲಿ ಕುಳಿತು ಈ ಅನುವಾದವನ್ನು ಓದುತ್ತಿದ್ದ ನೆಪೋಲಿಯನ್ ಬೊನಪಾರ್ಟೆ ತಕ್ಷಣ ಹಡಗನ್ನು ಈಜಿಪ್ಟ್‌ ನತ್ತ ತಿರುಗಿಸಿದನು. ಸಮರ್ಥನಾದ ಸಮರ ನಾಯಕ, ಕುಶಾಗ್ರನಾದ ನ್ಯಾಯತಜ್ಞ ಮುಂತಾದ ಪೈಗಂಬರರ ಕುರಿತಾದ ಸಾವೆರಿಯ ವರ್ಣನೆಗಳಿಗೆ ಪ್ರಚೋದಿತನಾದ ನೆಪೋಲಿಯನ್, ತನ್ನಲ್ಲೊಬ್ಬ ಹೊಸ ಮುಹಮ್ಮದನನ್ನು ಕಾಣುವ ಹುಚ್ಚು ಧಾವಂತಕ್ಕೆ ಬಿದ್ದ. ಕೈರೋದ ಮುಸ್ಲಿಂ ವಿದ್ವಾಂಸರು ತನ್ನನ್ನು ಅಂಗೀಕರಿಸಬಹುದೆಂದೂ, ಉಸ್ಮಾನಿಗಳ ಆಧಿಪತ್ಯದಿಂದ ಈಜಿಪ್ಟನ್ನು ವಿಮೋಚಿಸಲು ಬಂದ ಇಸ್ಲಾಮಿನ ಹಿಂಬಾಲಕರಂತೆ ತನ್ನ ಸೇನೆಯನ್ನು ಕೈರೋದ ಜನರು ಕಾಣಬಹುದೆಂದೂ ಆತ ಲೆಕ್ಕಹಾಕಿದ. ಈಜಿಪ್ಟ್‌ಗಿರುವ ತನ್ನ ಈ ಆಗಮನವನ್ನು ಖುರ್‌ಆನಿನಲ್ಲಿ ಪರಾಮರ್ಶಿಸಲ್ಪಟ್ಟಿದೆಯೆಂದೂ ಆತ ವಾದಿಸಿದ. ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ. ಆದರೆ ತನ್ನ ಕೊನೆಗಾಲದಲ್ಲಿ ಸೈಂಟ್ ಹೆಲೆನಾಗೆ ವಲಸೆ ಹೋದ ನೆಪೋಲಿಯನ್ ತನ್ನ ಸೋಲುಗಳನ್ನು ಮೆಲುಕು ಹಾಕುತ್ತ, ಪ್ರವಾದಿಯರನ್ನು ‘ಚರಿತ್ರೆಯ ದಿಕ್ಕು ಬದಲಿಸಿದ ಮಹಾನ್ ವ್ಯಕ್ತಿ’ ಎಂದು ಬರೆದ. ನೆಪೋಲಿಯನ್ನನ ಮನಸ್ಸಿನಲ್ಲಿದ್ದ ಪ್ರವಾದಿಯೆಂದರೆ ಆತನಂತೆಯೇ ಒಬ್ಬ ನಾಯಕನೂ, ನ್ಯಾಯ ಶಾಸ್ತ್ರಜ್ಞನೂ, ಪ್ರಭಾವಿಯೂ ಆಗಿರುವ ವ್ಯಕ್ತಿಯಷ್ಟೇ.

Louis Massignon

ಪ್ರವಾದಿ(ಸ)ಮರ ಕುರಿತು, ಜಗತ್ತಿನ ಅತ್ಯಂತ ಉತ್ಕೃಷ್ಟ ನ್ಯಾಯಾಂಗ ವ್ಯವಸ್ಥೆಯ ನಿರ್ಮಾತೃ ಎಂಬ ನೆಲೆಯಲ್ಲಿನ ಅಭಿಪ್ರಾಯವು 20ನೇ ಶತಮಾನದ ತನಕವೂ ಮುಂದುವರೆಯಿತು. 1935 ರಲ್ಲಿ ಅಡಾಲ್ಫ್ ಎ. ವೆಯಿನ್‌ಮೆನ್ ಎಂಬ ಶಿಲ್ಪಿಯೊಬ್ಬ ಅಮೇರಿಕಾದ ಸುಪ್ರೀಂ ಕೋರ್ಟ್‌ನ ಮುಖ್ಯ ಚೇಂಬರ್‌ನಲ್ಲಿ ಕೆತ್ತಿದ ಶಿಲ್ಪಗಳಲ್ಲಿ 18 ನ್ಯಾಯ ನಿರ್ಮಾತೃಗಳ ಪೈಕಿ ಪ್ರವಾದಿಯವರನ್ನೂ ಸೇರಿಸಿದ್ದ. ಮುಹಮ್ಮದ್ (ಸ) ರನ್ನು ಮುಸ್ಲಿಮರ ಪ್ರವಾದಿ ಎಂಬ ಪದವಿಯನ್ನು ಅಂಗೀಕರಿಸುವ ಸಲುವಾಗಿ ಯೂರೋಪಿನ ವಿವಿಧ ಕಡೆಗಳಲ್ಲಿ ಕ್ರೈಸ್ತರು ಅವರ ಚರ್ಚುಗಳಲ್ಲಿ ಸಭೆ ಸೇರಿದ್ದರೆಂದು ಚರಿತ್ರೆಯಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು. ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದ ಕಾಥೋಲಿಕ್ ವಿದ್ವಾಂಸನಾದ ಲೂಯಿ ಮಸೈನನ್, ಹಾನ್ಸ್ ಕುಂಗ್, ಸ್ಕಾಟಿಷ್ ಪ್ರೊಟೆಸ್ಟಂಟ್ ವಿದ್ವಾಂಸ ವಿಲಿಯಂ ಮೋಂಟ್‌ಗೋಮರಿ ವಾಟ್ಟ್ ಮುಂತಾದವರು, ಇಂಥ ಉಪಕ್ರಮಗಳು ಮುಸ್ಲಿಂ-ಕ್ರೈಸ್ತ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆ ಮತ್ತು ರಚನಾತ್ಮಕ ಸಂವಾದಗಳು ರೂಪುಗೊಳ್ಳಲು ಅನಿವಾರ್ಯವೆಂದು ವಾದಿಸಿದ್ದಾರೆ.
ಇಂದಿಗೂ ಮುಂದುವರೆಯುತ್ತಿರುವ ಇಂತಹ ಧಾರ್ಮಿಕ ಬಾಂಧವ್ಯಗಳು ಸಂಘರ್ಷದ ಕೋಲಾಹಲದಲ್ಲಿ ಗೋಚರಿಸದೇ ಹೋಗುತ್ತಿದೆ ಎಂಬುದು ವಾಸ್ತವ ಸಂಗತಿ. ಇಂದು ಯುರೋಪ್ ಮತ್ತು ಜಗತ್ತಿನ ಇತರ ಭಾಗದಲ್ಲಿರುವ ಉಗ್ರ ಬಲಬಂಥೀಯ ರಾಷ್ಟ್ರೀಯವಾದಿಗಳು ಮುಸ್ಲಿಂ ವಿರೋಧಿ ತತ್ವವನ್ನು ನ್ಯಾಯೀಕರಿಸಲು ಪೈಗಂಬರರನ್ನು ನಿಕೃಷ್ಟರನ್ನಾಗಿ ಚಿತ್ರೀಕರಿಸುತ್ತಿದ್ದಾರೆ. ರಾಷ್ಟ್ರೀಯವಾದಿಯಾಗಿದ್ದ ಗೀರ್ಟ್ ವಿಲ್‌ಡರ್ಸ್ ಎಂಬಾತ ಪೈಗಂಬರ್ (ಸ) ರನ್ನು ಮನೋರೋಗಿ, ಭಯೋತ್ಪಾದಕ ಮುಂತಾದ ಪದಗಳಿಂದ ಸಂಭೋಧಿಸಿದ್ದ. ಪ್ರವಾದಿಯವರ ಬೋಧನೆಗಳ ಎಲ್ಲ ಬಗೆಯ ಚಾರಿತ್ರಿಕ ಅಧ್ಯಯನವನ್ನೂ ನಿರಾಕರಿಸುವ ಮುಸ್ಲಿಂ ಮೂಲಭೂತವಾದಿಗಳೇ ಪ್ರವಾದಿಯವರ ಕುರಿತು ತಪ್ಪಾದ ಚಿತ್ರಣವನ್ನು ಸೃಷ್ಟಿಸುವುದು ಎಂಬುದು ಇಲ್ಲಿನ ವಿಪರ್ಯಾಸ. ಅದೇವೇಳೆ ಅಕ್ರಮಾಸಕ್ತ ಮೂಲಭೂತವಾದಿಗಳು ಇಸ್ಲಾಮನ್ನೂ ಪ್ರವಾದಿಯವರನ್ನೂ ನಿಂದನೆ ಮತ್ತು ಅಪಹಾಸ್ಯಗಳಿಂದ ಸಂರಕ್ಷಿಸಲು ಭಯೋತ್ಪಾದನೆಯ ಮತ್ತು ಹಿಂಸಾತ್ಮಕ ದಾರಿಯನ್ನು ತುಳಿಯುತ್ತಿದ್ದಾರೆ. ಇತಿಹಾಸಕ್ಕೆ ಇಣುಕಿ ನೋಡಿದರೆ ಪೈಗಂಬರ್ ಮುಹಮ್ಮದ್ (ಸ) ರ ಜೀವನದ ಕುರಿತು ವೈವಿಧ್ಯತೆಯಿಂದ ಕೂಡಿದ, ಅಚ್ಚರಿ ಮೂಡಿಸುವ ವೃತ್ತಾಂತಗಳು ಪಾಶ್ಚಾತ್ಯರ ವಿಶ್ಲೇಷಣೆಗಳಲ್ಲಿ ಕಾಣಬಹುದು.

ಮೂಲ: ಜಾನ್ ಥೋಲಾನ್
ಕನ್ನಡಕ್ಕೆ: ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಕಾಫಿಯ ಇತಿಹಾಸ: ಐತಿಹ್ಯಗಳಿಂದ ಸೂಫಿಸಂವರೆಗೆ

ಇಥಿಯೋಪಿಯನ್ ಪರ್ವತಶ್ರೇಣಿಗಳೇ ಕಾಫಿಯ ತಾಯ್ನಾಡು. ಕ್ರಿ.ಶ 525 ರಲ್ಲಿ ಯೆಮೆನ್ ಅನ್ನು ವಶಪಡಿಸಿಕೊಂಡ ಸೆಮಿಟಿಕ್- ಭಾಷಿಕರಾದ ಆಕ್ಸಿಮೈಟ್‌ಗಳೇ ಕಾಫಿಯನ್ನು ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಪರಿಚಯಿಸಿದವರು. ಇಥಿಯೋಪಿಯಾಗೆ ಸಮಾನವಾದ ಭೌಗೋಳಿಕತೆ ಮತ್ತು ಹವಾಮಾನವು ಈ ಪ್ರದೇಶದಲ್ಲಿ ಕಾಫಿ ಉತ್ಪಾದನೆ ಮತ್ತು ಬಳಕೆಯನ್ನು ಸ್ಥಳೀಯ ಸಂಸ್ಕೃತಿಯ ಭಾಗವನ್ನಾಗಿ ಮಾಡಿತು. ಆಕ್ಸಿಮೈಟ್‌ಗಳ ಆಳ್ವಿಕೆಯು ಅತ್ಯಲ್ಪವಾಗಿದ್ದರೂ, ಕಾಫಿ ಸಾಂಸ್ಕೃತಿಕ ಸಂಕೇತವಾಗಿ ಉಳಿದಿದ್ದು ಅದು ಸಮಾಜದ ಮೇಲೆ ಬಹುದೊಡ್ಡ ಪ್ರಭಾವವನ್ನು ಬೀರಿತು. ನಂತರದ ಸಸ್ಸಾನೀಯನ್ ಮತ್ತು ಮುಸ್ಲಿಂ ಕಾಲದಲ್ಲೂ ಈ ಸಂಸ್ಕೃತಿಯು ಉಳಿದುಕೊಂಡಿತು. ಆಧುನಿಕ ಕಾಲದಲ್ಲಿ ಯೆಮೆನ್ ಕಾಫಿಯ ತವರುಮನೆಯಾಗಿ ಮುಂದುವರೆದಿದೆ.

ಕಾಫಿಯ ಮೂಲದ ಬಗ್ಗೆ ಅನೇಕ ಐತಿಹ್ಯಗಳಿವೆ. ಇಥಿಯೋಪಿಯಾದ ಕುರುಬನಾದ ಕಲ್ದಿಯ ಕಥೆಯು ಅವುಗಳಲ್ಲಿ ಮುಖ್ಯವಾಗಿದೆ. ಕಥಾವಸ್ತುವು ಸುಮಾರು ಕ್ರಿ.ಶ 800 ರ ಸುತ್ತ ಸುತ್ತುತ್ತದೆ. ಆಕ್ಸಿಮೈಟ್ಸ್ ಯೆಮೆನ್ ಅನ್ನು ವಶಪಡಿಸಿಕೊಳ್ಳುವುದಕ್ಕಿಂತ 300 ವರ್ಷಗಳಿಗೂ ಮೊದಲು; ತನ್ನ ಕುರಿಗಳಲ್ಲಿ ಕಂಡುಬರುವ ಕಾಫಿ ಬಣ್ಣವು ಒಂದು ನಿರ್ದಿಷ್ಟ ಬಗೆಯ ಬೀಜಗಳಿಂದ ಆಗಿರುವಂತದ್ದು ಎಂದು ಕಂಡುಹಿಡಿದ ಆತ ಸ್ವತಃ ಅದರ ರುಚಿಯನ್ನು ಅನುಭವಿಸಿ ಅದನ್ನು ತನ್ನ ಊರವರಿಗೆ ಪರಿಚಯಿಸಿದನು. ಮತ್ತೊಂದು ದಂತಕಥೆಯ ಪ್ರಕಾರ, ರಾಜನ ಮಗಳನ್ನು ನಿಂದಿಸಿದ್ದಕ್ಕಾಗಿ ಯೆಮೆನ್‌ನಿಂದ ಗಡಿಪಾರು ಮಾಡಲ್ಪಟ್ಟ ಪಾದ್ರಿಯೊಬ್ಬನು ಕಾಫಿಯನ್ನು ಮೊದಲ ಬಾರಿಗೆ ಬಳಸಿದನು. ಮರುಭೂಮಿಯಲ್ಲಿ ಸುದೀರ್ಘ ಕಾಲದ ಅಲೆದಾಟದ ನಂತರ ಮನೆಗೆ ಹಿಂದಿರುಗಿದ ಅವನು ಕಾಫಿಯನ್ನು ಒಂದು ಪವಾಡವೆಂಬಂತೆ ಪ್ರಸ್ತುತಪಡಿಸುತ್ತಾನೆ. ಮುಂದೆ ಆತನು ಮೆಕ್ಕಾಗಿರುವ ತನ್ನ ತೀರ್ಥಯಾತ್ರೆಯಲ್ಲಿ ಮರಣ ಹೊಂದಿದನು ಎಂದು ಹೇಳಲಾಗುತ್ತದೆ. ಯೆಮೆನ್ ಆಧಾರಿತ ಮತ್ತೊಂದು ಪುರಾಣವಿದೆ. ತನ್ನ ಶತ್ರುಗಳಿಂದ ಗಡೀಪಾರು ಮಾಡಲ್ಪಟ್ಟ ದಾರ್ವಿಶ್ ಹಡ್ಜಿ ಉಮರ್ ಎಂಬವರು, ಮರುಭೂಮಿಯಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪರಿಚಯವಿಲ್ಲದ ಸಸ್ಯವೊಂದರ ಕಾಯಿಯನ್ನು ತಿನ್ನುತ್ತಿದ್ದರು. ನಂತರದ ದಿನಗಳಲ್ಲಿ, ಆರೋಗ್ಯಕರ ಪಾನೀಯವನ್ನು ಅದರಲ್ಲಿ ನೀರನ್ನು ಸೇರಿಸುವ ಮೂಲಕ ತಯಾರಿಸಬಹುದು ಎಂದು ಕಂಡುಹಿಡಿದರು. ಹಿಂದಿರುಗಿದ ನಂತರ ಅವರು ಹೊಸ ಪಾನೀಯವನ್ನು ತಮ್ಮ ಅನುಯಾಯಿಗಳಿಗೆ ಪರಿಚಯಿಸಿದರು.

ಕಾಫಿಗೆ ಧಾರ್ಮಿಕವಾದ ಚರಿತ್ರೆ ಹಿನ್ನೆಲೆಯೂ ಇದೆ. ಜಿಬ್ರೀಲ್ (ಅ) ದೈವಿಕ ಸಂದೇಶದೊಂದಿಗೆ ಪೈಗಂಬರ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರಿಗೆ ಕಾಫಿಯನ್ನು ನೀಡಿದರು ಎಂದು ನಂಬಲಾಗಿದೆ. ಮತ್ತೊಂದು ವಾದದ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಪೈಗಂಬರರಿಗೆ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರ ಆರೋಗ್ಯ ರಕ್ಷಣೆಗಾಗಿ ನೀಡಲಾಯಿತು. ಪ್ರವಾದಿ ಈಸಾ (ಅ) ಅನ್ನು ಕುರಿತು ಉಲ್ಲೇಖಿಸಲಾಗುವ ಹೊಸ ಒಡಂಬಡಿಕೆಯಲ್ಲಿ ಅಥವಾ ಹಳೆಯ ಒಡಂಬಡಿಕೆಯಲ್ಲಿ ಕಾಫಿಯ ಪರಾಮರ್ಶೆ ಇಲ್ಲ. ಹದಿನೇಳನೇ ಶತಮಾನದ ಪ್ರಸಿದ್ಧ ಸಾಮಾಜಿಕ ವಿಮರ್ಶಕ ಮತ್ತು ಬುದ್ಧಿಜೀವಿ ಖತೀಬ್ ಅಸ್ಸಾಲ್ಬಿ ಕಾಫಿ ಬಳಕೆಯ ಇತಿಹಾಸವನ್ನು ವಿವರಿಸುತ್ತಾರೆ. ಕ್ರಿ.ಶ 1640-50 ರ ನಡುವೆ ಬರೆದ ತನ್ನ ಪುಸ್ತಕ ميزان الحق في اختيار(ಮೀಝಾನುಲ್ ಹಕ್) ನಲ್ಲಿ ಅವರು ಹೀಗೆ ಬರೆಯುತ್ತಾರೆ: ‘ಯೆಮೆನ್ ನ ಪರ್ವತದ ತಪ್ಪಲುಗಳಲ್ಲಿ ತಮ್ಮ ಶಿಷ್ಯರೊಂದಿಗೆ ವಾಸಿಸುತ್ತಿದ್ದ ಸೂಫೀ ಸಂತರು ಕಾಫಿಯ ಬೀಜಗಳನ್ನು ಹುಡಿಮಾಡಿ ಉಪಯೋಗಿಸುತ್ತಿದ್ದರು. ಅವರು ಅದನ್ನು ‘ಖಲ್ಬ್ ವಬುಂ’ ಎಂದು ಕರೆದರು. ಕೆಲವರು ಇದನ್ನು ಪಾನೀಯವಾಗಿಯೂ ಬಳಸುತ್ತಿದ್ದರು. ಶೀತಲವಾಗಿರುವ ಒಣ ಆಹಾರವಿದು. ಪರಿತ್ಯಕ್ತ ಜೀವನಕ್ಕೆ ಮತ್ತು ಲೈಂಗಿಕ ನಿಯಂತ್ರಣಕ್ಕೆ ಕಾಫಿ ಅವಶ್ಯಕ. ಆಧ್ಯಾತ್ಮಿಕ ಅನುಭಾವಿಗಳ ಮೂಲಕ ಸಾಮಾನ್ಯ ಜನರಿಗೂ ಹರಡಿತು. ಈ ಸಂಸ್ಕೃತಿಯು 950/1540 ರಲ್ಲಿ ಏಷ್ಯಾ ಮೈನರ್ ತಲುಪಿದಾಗ, ಅಲ್ಲಿನ ಜನರು ಇದನ್ನು ಒಂದು ಕೆಟ್ಟ ಸಂಸ್ಕೃತಿಯಂತೆ ಕಂಡು ವಿರೋಧಿಸಿದರು”.

ಹತ್ತೊಂಬತ್ತನೇ ಶತಮಾನದ ಭಾರತದ ಹಲವಾರು ಕಾಫಿ ತೋಟಗಳ ಮಾಲೀಕರಾಗಿದ್ದ ಎಡ್ವಿನ್ ಅರ್ನಾಲ್ಡ್ ಲೂಕರ್ ಅವರ ಪ್ರಕಾರ, ಕಾಫಿ ಇಥಿಯೋಪಿಯಾದಲ್ಲಿ ಹುಟ್ಟಿಕೊಂಡಿತು. ಕ್ರಿ.ಶ 875 ರ ಹೊತ್ತಿಗೆ ಇದು ಪರ್ಷಿಯಾದ ಕೆಲವು ಭಾಗಗಳನ್ನು ತಲುಪಿ ಹದಿನಾಲ್ಕನೆಯ ಶತಮಾನದಲ್ಲಿ ಅರೇಬಿಯಾಕ್ಕೆ ಹರಡಿತು. ಪುರಾಣಗಳು ಮತ್ತು ಮೌಖಿಕ ಸಂಪ್ರದಾಯಗಳು ಇತಿಹಾಸದ ವಸ್ತುನಿಷ್ಠತೆಯೊಂದಿಗೆ ಸರಿಸಮನಾಗಿ ನಿಲ್ಲದಿದ್ದರೂ, ಆದರೆ ಅವೆಲ್ಲವೂ ವಸ್ತುಸ್ಥಿತಿಯ ಸೃಜನಶೀಲ ಸಾಧ್ಯತೆಗಳಾಗಿವೆ. ಪುರಾತತ್ತ್ವಜ್ಞರು ಕಾಫಿಯ ಪ್ರಾಚೀನತೆಗೆ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಖಾದ್ಯ ಸಸ್ಯದ ಆವಿಷ್ಕಾರದಿಂದ ಹಿಡಿದು ಮಾನವ ಸಂಸ್ಕೃತಿಯಲ್ಲಿ ಅದರ ಸಂಯೋಜನೆಯವರೆಗಿನ ವಿಷಯಗಳನ್ನು ದಂತಕಥೆಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ. ತಮ್ಮ ಜಾನುವಾರುಗಳಲ್ಲಿನ ಅಸಹಜತೆಗಳ ಕಾರಣವನ್ನು ಹುಡುಕಿ ಹೊರಟವರು ಮೊದಲು ಗಮನಿಸಿದ ವಿಷಯವೆಂದರೆ ಕಾಫಿ. ಪ್ರಾಣಿಗಳು ತಿನ್ನುವ ಕಾಫಿ ಗಿಡದ ಕಾಯಿಯು ಯಾವುದೇ ಹಾನಿಕಾರಕ ಪರಿಣಾಮಗಳನ್ನು ಹೊಂದಿಲ್ಲ ಎಂದರಿತ ಅವರು ಅದನ್ನು ಸ್ವತಃ ರುಚಿಸಿ ನೋಡಿದರು. ಕ್ರಮೇಣ ಹೆಚ್ಚಿನ ಬಳಕೆಯ ಉದ್ದೇಶದಿಂದ ಸಂಸ್ಕರಿಸದ ಕಾಫೀ ಬೀಜವನ್ನು ಬೇಯಿಸಿ ನೀರು ಸೇರಿಸಿ ಪಾನೀಯವಾಗಿಯೂ ಉಪಯೋಗಿಸಲಾಯಿತು.

ಕಲಾದಿಯ ಕಥೆಯ ಪ್ರಕಾರ, ಕಾಫಿಯು ಇಥಿಯೋಪಿಯಾ ಮೂಲದ್ದೆಂದೂ 6 ನೇ ಶತಮಾನದ ಆಕ್ರಮಣಕಾರಿ ಪಡೆಗಳು ಯೆಮೆನ್ ಜನರಿಗೆ ಪರಿಚಯಿಸಿದ್ದೂ ಆಗಿದೆ. ಆದರೆ ಇಮಾಮ್ ಗಝಾಲಿ(ರ) ರ ಪ್ರಕಾರ, ಮಧ್ಯಂತರ ಅವಧಿಯಲ್ಲಿ ಯೆಮೆನ್ ನ ಜನರಿಗೆ ಅಂಟಿಕೊಂಡ ಅಭ್ಯಾಸವಾಗಿತ್ತು. ಸಾಕ್ಷ್ಯಗಳ ಅಸಮರ್ಪಕತೆಯು ಇತಿಹಾಸವನ್ನು ಹೆಚ್ಚು ವೈವಿಧ್ಯಮಯವಾಗಿಸುತ್ತದೆ. ಇಥಿಯೋಪಿಯನ್ ವಸಾಹತುಶಾಹಿ ಇತಿಹಾಸವು ಯೆಮೆನ್‌ಗಳಿಗೆ ಕಿಂಚಿತ್ತೂ ಸ್ವೀಕಾರಾರ್ಹವಲ್ಲ. ಆದ್ದರಿಂದಲೇ ಅವರ ಮೌಖಿಕ ಸಂಪ್ರದಾಯಗಳು ದೇಸಿ ಸೊಗಡಿನ ಕಾಫಿಯನ್ನು ಪರಿಚಯಿಸುತ್ತವೆ. ಹದಿನಾರನೇ ಶತಮಾನದವರೆಗೂ ಇದ್ದ ಕಾಫಿ ರಫ್ತಿನ ಏಕಸ್ವಾಮ್ಯವನ್ನು ಮೌಲ್ಯೀಕರಿಸುವುದಕ್ಕೂ ಇದು ಸೂಕ್ತವಾಗಿದೆ. ಸಮಾಜದಲ್ಲಿನ ಆಹಾರದ ಇತಿಹಾಸವನ್ನು ಗುರುತಿಸಲು ಆತ್ಮಚರಿತ್ರೆಯ ನಿರೂಪಣೆಗಳು ಬಹಳ ಸಹಾಯಕವಾಗಿವೆ. ಆಹಾರಪದ್ಧತಿಯ ಮೂಲ ಮತ್ತು ಅಸ್ತಿತ್ವವು ತಲೆಮಾರುಗಳ ಮೂಲಕ ಸ್ವಾರಸ್ಯಕರ ಕಥೆಗಳಾಗಿ ರವಾನೆಯಾಗಿರುತ್ತದೆ. ಮೇಲಿನ ಕಥೆಗಳಲ್ಲಿ ಕುರುಬ ಮತ್ತು ಸೂಫಿಗಳು ಕಾಫಿಯ ಸಾಮಾಜಿಕ ಮಟ್ಟವನ್ನು ಪ್ರತಿನಿಧಿಸುತ್ತಾರೆ. ಮೌಖಿಕ ಸಂಪ್ರದಾಯ ಮತ್ತು ಪುರಾಣಗಳಲ್ಲಿ ಎಲ್ಲವೂ ಅದರ ಸಾಂಸ್ಕೃತಿಕ ಅಸ್ತಿತ್ವವೇ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ, ಕಾಫಿಯ ಇತಿಹಾಸವು ಪ್ರಸ್ತುತವಾಗಿದೆ.

ಪರ್ಷಿಯನ್ ವೈದ್ಯ ಅಬೂಬಕರ್ ಮುಹಮ್ಮದ್ ಬಿನ್ ಝಕಾರಿಯಾ ರಾಝಿ ಅವರು ತಮ್ಮ ಆರೋಗ್ಯದ ಕುರಿತಾದ ಸಂಶೋಧನಾ ಸಂಗ್ರಹದಲ್ಲಿ (ಕಿತಾಬ್ ಅಲ್ ಹಾವೀ ಫೀ ತ್ವಿಬ್ಬ್ ) ಕಾಫಿಯನ್ನು ಉಲ್ಲೇಖಿಸಿದ್ದಾರೆ. 22 ಸಂಪುಟಗಳಲ್ಲಿ, ಪುಸ್ತಕವು ಹಿಪೊಕ್ರೆಟಿಸ್ ಮತ್ತು ಇತರ ಗ್ರೀಕ್ ವೈದ್ಯರ ಚಿಕಿತ್ಸಾ ವಿಧಾನ ಮತ್ತು ರಾಝೀ ಸ್ವಯಂ ಅಭಿವೃದ್ಧಿಗೊಳಿಸಿದ ಚಿಕಿತ್ಸೆಗಳನ್ನೂ ವಿವರಿಸುತ್ತದೆ. ಕಾಫಿ ಗ್ರೀಕ್ ಔಷಧದ ಭಾಗವಲ್ಲದಿದ್ದೂ ಕೂಡ, ಅದರ ನಾಲ್ಕು ಚಿಕಿತ್ಸಾ ಉಪಯೋಗಗಳನ್ನು ಅವರು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಇದು ಉಷ್ಣ ದೇಹದವರಿಗೆ ಉತ್ತಮ ಆಹಾರವಾಗಿದೆ. ಆದಾಗ್ಯೂ, ಇದು ಲೈಂಗಿಕ ಬಯಕೆಯನ್ನು ಗಣನೀಯವಾಗಿ ಹತೋಟಿಯಲ್ಲಿಡುತ್ತದೆ.” ರಾಝಿ ಆರೋಗ್ಯವಂತ ಜನರ ಪಾನೀಯವೆಂದು ಕಾಫಿಯನ್ನು ಪರಿಚಯಿಸುತ್ತಾರೆ. ದೇಹವು ನಾಲ್ಕು ಅಂಶಗಳ ಸಂಯೋಜನೆಯೆಂದೂ ಅವುಗಳ ಅಸಮತೋಲನವೇ ಅನಾರೋಗ್ಯದ ಕಾರಣವೆಂಬ ಹಿಪೊಕ್ರೆಟಿಸ್ ನ ಚಿಕಿತ್ಸಾ ವಿಧಾನವನ್ನೇ ರಾಝೀ ಕೂಡ ಬಳಸುತ್ತಾರೆ. ಉತ್ತೇಜಕ ಪಾನೀಯವಾಗಿದ್ದೂ ಕೂಡ ಲೈಂಗಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಂಶವು ಕುತೂಹಲಕಾರಿಯಾಗಿದೆ.

ಇನ್ನೊಬ್ಬ ಪರ್ಷಿಯನ್ ವಿದ್ವಾಂಸ ಇಬ್ನ್ ಸೀನಾ ಅವರ ಬರಹಗಳಲ್ಲಿಯೂ ಕಾಫಿಯನ್ನು ಉಲ್ಲೇಖಗಳನ್ನು ಕಾಣಬಹುದು. ಅವರ ಕಿತಾಬ್ ಅಲ್-ಶಿಫಾ ಮತ್ತು ಅಲ್-ಖಾನುನ್ ಫಿ ತ್ವಿಬ್ ವೈದ್ಯಕೀಯಶಾಸ್ತ್ರದಲ್ಲಿ ಮೈಲಿಗಲ್ಲುಗಳು. ಕಿತಾಬು ಶಿಫಾ ಕಾಫಿಯನ್ನು ವಾಂತಿಗೆ ಪರಿಹಾರವಾಗಿ ಪರಿಚಯಿಸುತ್ತದೆ. ಮಧ್ಯಕಾಲೀನ ಇಟಾಲಿಯನ್ ಚಿಂತಕ ಪ್ರೊಸ್ಪ್ರೊ ಅಲ್ಪಿನಿ, ಇಬ್ನ್ ಸಿನಾ ಅವರನ್ನು ಉಲ್ಲೇಖಿಸಿದ್ದಾರೆ. ಮಧ್ಯಕಾಲೀನ ಟರ್ಕಿಶ್ ವಿದ್ವಾಂಸ ಕಾತೀಬು ಸೆಲ್ಬಿ ಬರೆಯುತ್ತಾರೆ: “ಖಿನ್ನತೆಯಿಂದ ಬಳಲುವವರಿಗೆ ಕಾಫಿ ಬಹಳ ಪರಿಣಾಮಕಾರಿ. ಆದರೆ ಅದರ ಅತಿಯಾದ ಬಳಕೆಯು ನಿದ್ರಾಹೀನತೆ ಮತ್ತು ತೀವ್ರ ಖಿನ್ನತೆಗೆ ಕಾರಣವಾಗಬಹುದು. ಇದನ್ನು ಸಿಹಿಯೊಂದಿಗೆ ಬಳಸುವುದು ಸೂಕ್ತ. ಸಣ್ಣಪುಟ್ಟ ಪರಿತ್ಯಾಗಿಗಳಿಗೆ ಡಿಕಾಕ್ಷನ್ ಕಾಫಿ ಅತ್ಯುತ್ತಮ ಪಾನೀಯವಾಗಿದೆ ”.

ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಕಾಫಿಯನ್ನು ಚಿಕಿತ್ಸೆಗಾಗಿ ಪರಿಗಣಿಸಲಾಗಿತ್ತು. ವಿಲಿಯಂ ಯುಕ್ ಅವರ ‘ಟೀ ಎಂಡ್ ಕಾಫಿ ಟ್ರೇಡ್ ಜರ್ನಲ್’ ಇಂತಹ ಸಮಸ್ಯೆಗಳನ್ನು ಬಗೆಹರಿಸಿತ್ತು. ಪ್ರಸ್ತುತ ಜರ್ನಲ್ ನಲ್ಲಿ ಅದನ್ನಿನವರಾದ ಶೇಖ್ ಕಮಾಲುದ್ದೀನ್ ರ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. ಅಲ್ ದಬಾನಿ ಎಂದೂ ಕರೆಯಲ್ಪಡುವ ಅದಾನ್ ನ ಮುಫ್ತಿಯಾಗಿದ್ದ ಮುಹಮ್ಮದ್ ಕಮಾಲುದ್ದೀನ್ ಅಬ್ಸೀನಿಯಾಗೆ ಹೋಗುತ್ತಿದ್ದ ಪ್ರಯಾಣ ಮಧ್ಯೆ ದಣಿದು ಬಸವಳಿದ ಒಬ್ಬ ವ್ಯಕ್ತಿಯು ಒಂದು ಕಪ್ ಕಾಫಿ ಕುಡಿದು ಆರೋಗ್ಯವನ್ನು ಮರಳಿ ಪಡೆಯುವುದನ್ನು ನೋಡುತ್ತಾರೆ. ಮನೆಗೆ ಮರಳಿದ ಮೇಲೆ ತನ್ನ ಅನಾರೋಗ್ಯದ ಸಂದರ್ಭದಲ್ಲಿ, ಅವರು ಇದೇ ಪಾನೀಯವನ್ನು ಕುಡಿದು ರೋಗಮುಕ್ತಿ ಪಡೆಯುತ್ತಾರೆ. ನಂತರ, ಕಮಾಲುದ್ದೀನ್ ಈ ಪಾನೀಯವನ್ನು ತನ್ನ ಶಿಷ್ಯರಿಗೆ ಪರಿಚಯಿಸಿದರು. ರಾತ್ರಿಯಿಡೀ ಆರಾಧನೆಯಲ್ಲಿ ಮುಳುಗಿರುವ ದರವೇಶಿಗಳಿಗೆ ಇದು ತುಂಬಾ ಉಪಯುಕ್ತವಾಗಿತ್ತು.

ಕಾಫಿ ಮತ್ತು ಸೂಫಿಗಳು

14 ಮತ್ತು 15 ನೇ ಶತಮಾನಗಳಲ್ಲಿ ಧಾರ್ಮಿಕ ಜಗತ್ತಿನಲ್ಲಿ ಕಾಫಿ ವ್ಯಾಪಕವಾಗಿ ಹರಡಿತು. ಇಸ್ಲಾಮಿಕ್ ಸೂಫಿ ಸಂಪ್ರದಾಯದ ಮೂಲಕ ಈ ಪ್ರಸರಣವು ನಡೆದಿತ್ತು. ಸೂಫಿಸಂ ಎಂಬುದು ದೇವರ ಸನ್ನಿಧಿ ಬಯಸಿ ಮಾಡುವ ನಿರಂತರ ಸಾಧನೆಯಾಗಿದೆ. ಇಸ್ಲಾಂನಲ್ಲಿ ಅಸಂಖ್ಯಾತ ಭಿನ್ನಾಭಿಪ್ರಾಯಗಳು ಮತ್ತು ವಿಭಜನೆಗಳನ್ನು ಮೀರಿದ ಕೆಲವು ಸಾಮಾನ್ಯ ನೆಲೆಯಲ್ಲಿ ಸೂಫಿಸಂ ಅಸ್ತಿತ್ವದಲ್ಲಿದೆ. ನಿರಂತರ ಆರಾಧನೆ/ಬಿನ್ನಹಗಳ ಮೂಲಕ ಸೂಫಿಗಳು ಯಾವಾಗಲೂ ದೈವಿಕ ಪ್ರೀತಿಯಲ್ಲಿರುತ್ತಾರೆ. ಸೂಫಿ ನೃತ್ಯವು ಅವರ ದೈವೀಪ್ರೇಮದ ಭಾಗವಾಗಿದೆ. 13 ನೇ ಶತಮಾನದಲ್ಲಿ ಜಲಾಲುದ್ದೀನ್ ರೂಮಿ ಇದನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ. 14 ನೇ ಶತಮಾನದವರಾದ ಅಲಿ ಇಬ್ನ್ ಉಮರ್ ಅಲ್-ಶಾದುಲಿ (ರ) ಎಂದೂ ಅಭಿಪ್ರಾಯವಿದೆ. ಶಾದುಲಿ (ರ) ಕಾಫಿ ಮತ್ತು ಖತ್ತ್ (ಅರೇಬಿಯಾದಲ್ಲಿ ಕಾಫಿಗೆ ಸಮಾನವಾಗಿ ಬಳಸುವ ಒಂದು ರೀತಿಯ ಸೊಪ್ಪು) ನ್ನು ತನ್ನ ಸೂಫೀ ಸಭೆಗಳಲ್ಲಿ ಬಳಸಿದರು. ರಾತ್ರಿಯಿಡೀ ನಡೆಯುವ ಸೂಫೀ ಆರಾಧನೆಯ ಮೇಲೆ ಕಾಫಿಯ ಪ್ರಭಾವವನ್ನು ಖತೀಬು ಸಲ್ಬಿ ವಿವರಿಸುತ್ತಾರೆ. 15 ಮತ್ತು 16 ನೇ ಶತಮಾನಗಳ ಹೊತ್ತಿಗೆ, ಕಾಫಿ ನೀಡುವ ಚೈತನ್ಯ ಮತ್ತು ಹುರುಪು ಪ್ರಸಿದ್ಧವಾಯಿತು. ಸೂಫಿಗಳ ನಡುವೆ ಕಾಫಿಗಿದ್ದ ಜನಪ್ರಿಯತೆಯು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತು. ಇತರ ಸೆಮಿಟಿಕ್ ಧರ್ಮಗಳಾದ ಯಹೂದಿ-ಕ್ರಿಶ್ಚಿಯನ್ ಧರ್ಮಗಳಲ್ಲಿನ ರಾತ್ರಿಯ ಆರಾಧನೆಗಳ ವೇ

15 ನೇ ಶತಮಾನದ ವೇಳೆಗೆ ಕಾಫಿಯು ಇತರ ಮುಸ್ಲಿಂ ದೇಶಗಳಲ್ಲೂ ಜನಜನಿತವಾಯಿತು. ಮುಖ್ಯವಾಗಿ ಮೂರು ವಿಭಾಗದವರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.
ಒಂದು, ತೀರ್ಥಯಾತ್ರಿಗಳ ಗುಂಪು. ಮೆಕ್ಕಾ ಮತ್ತು ಇತರ ಪವಿತ್ರ ಸ್ಥಳಗಳಿಗಿರುವ ಮುಸ್ಲಿಮರ ಪ್ರಯಾಣವು ಸಾಂಸ್ಕೃತಿಕ ವಿನಿಮಯಕ್ಕೆ ತಕ್ಕ ಸಂದರ್ಭವಾಗಿತ್ತು. ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕಾ ಮತ್ತು ಟರ್ಕಿಯಂತಹ ಸ್ಥಳಗಳಲ್ಲಿ ಇಂತಹ ಪ್ರಭಾವವು ಪ್ರಬಲವಾಗಿತ್ತು. ಎರಡನೆಯದು, ಅರಬ್ ವ್ಯಾಪಾರಿಗಳು. ಕಾಫಿಯನ್ನು ದೈನಂದಿನ ಅವಶ್ಯಕತೆಯನ್ನಾಗಿ ಮಾಡುವಲ್ಲಿ ಅವರು ಯಶಸ್ವಿಯಾದರು. ಕಾಫಿಯ ಪರಿಚಯವಿಲ್ಲದ ಕಡೆಗಳಲ್ಲೂ ಅದನ್ನು ಅತ್ಯಗತ್ಯ ವಸ್ತುವನ್ನಾಗಿ ಮಾಡುವಂತಹ ವಹಿವಾಟುಗಳನ್ನು ಅವರು ಮಾಡುತ್ತಿದ್ದರು. ಮೂರನೆಯ ವಿಭಾಗ, ಸೂಫಿಗಳು ಮತ್ತು ಧಾರ್ಮಿಕ ನೇತಾರರು. ಮುಸ್ಲಿಮರ ಆರಾಧನಾ ಜೀವನದ ಭಾಗವಾಗಿ ಕಾಫಿಯನ್ನು ಚಿತ್ರಿಸಲು ಈ ವ್ಯಕ್ತಿಗಳ ಪ್ರಭಾವವು ಕಾರಣವಾಯಿತು.

ಮೂಲ: ಜಾನಟ್ ಪ್ರೇಗೂಲ್ಯ
ಕನ್ನಡಕ್ಕೆ: ಜುಬೇರ್ ಅಹಮ್ಮದ್ ಕೊಂಡಂಗೇರಿ

ಅಲಿಘರ್ ವಿದ್ಯಾಲಯದಲ್ಲಿರುವ ಸಯ್ಯದರ ಸಮಾಧಿಯ ನುಡಿಗಳು

ಓ ಇಹದ ಬದುಕಿನಲಿ
ಸಿಲುಕಿರುವ ಮನುಷ್ಯನೇ
ಓ ಬದುಕೆಂಬ ಪಂಜರದಲಿ
ಬಂಧಿಯಾಗಿಹ ಆತ್ಮವೇ

ಈ ತೋಟದೊಳು ನಲಿಯುತಿಹ
ಆ ಪಾದಗಳ ಸ್ವಾತಂತ್ರ್ಯವ ನೋಡು!
ಅಂದು ಕಂಗೆಟ್ಟಿದ್ದವರ
ಸಮೃದ್ಧತೆಯನೊಮ್ಮೆ ನೋಡು!

ಯಾವ ಭವಿಷ್ಯದ ಕನಸಿತ್ತೋ
ಆ ಮಹಾ ಪರ್ವವಿದು!
ಸಹನೆ ತಾಳ್ಮೆಗಳ ಹೊಲದಲ್ಲಿ
ಬೆಳೆದಿರುವ ಫಲವಿದು!

ನನ್ನ ಸಮಾಧಿಯ ಫಲಕಗಳು
ಮಾತನಾಡ ಬಯಸುತಿವೆ ನೋಡು
ಅಲ್ಲಿ ಕೆತ್ತಿರುವ ಭವಿಷ್ಯ
ವಾಣಿಯನ್ನು ನೋಡು !

ಮತ-ಪಂಥಗಳಿಗಾಗಿ ನಾಲಗೆಯ
ಹರಿಯಗೊಡದಿರು
ಪುನರುತ್ಥಾನದ ಸಂಭ್ರಮವು
ಇಲ್ಲಿ ಅಡಗಿಹುದು ಮೌನವಾಗಿ!

ಐಕ್ಯತೆಯ ದಾರಿಗಳು
ಜನ್ಮತಳೆಯಲಿ ನಿನ್ನ ಬರಹದಲ್ಲಿ
ಎಚ್ಚರ! ಹೃದಯಗಳು ನೋವುಣ್ಣದಿರಲಿ
ನಿನ್ನ ಲೇಖನಿಯಲ್ಲಿ!

ಹಾಡದಿರು ಹಳೆಯ
ರಾಗಗಳನ್ನು ನವ ಮಿಲನದಲ್ಲಿ
ಪುನರುಚ್ಚರಿಸದಿರು ಆ
ಉತ್ತರಗಳಿಲ್ಲದ ಸವಾಲುಗಳನ್ನು!

ಮುತ್ಸದ್ಧಿಯಾಗಿದ್ದರೆ ನೀನು
ನನ್ನ ಮಾತನೊಮ್ಮೆ ಕೇಳು
ಧೈರ್ಯವೇ ಸಾಧನವು
ಜನನಾಯಕನ ಹೃದಯದಲ್ಲಿ!

ಸಂಶಯವಿಲ್ಲದಿರಲಿ ನಿನ್ನ
ಆಶೋತ್ತರಗಳ ಅಭಿವ್ಯಕ್ತಿಯಲ್ಲಿ
ಭಯವಿಲ್ಲದಿರಲಿ
ಸದುದ್ದೇಶಗಳ ಹಾದಿಯಲ್ಲಿ

ಶರಣರ ಪರಿಶುದ್ಧ ಹೃದಯದಲ್ಲಿ
ದಗಾ ವಂಚನೆಗಳಿಗೆ ಜಾಗವಿಲ್ಲ
ಸರ್ವಾಧಿಕಾರದ ಭಯಗಳಿಗೆ
ಅಲ್ಲಿ ಅರ್ಥವಿಲ್ಲ!

ನಿನ್ನ ಕೈಗಳು ಮಾಯಾ ಲೇಖನಿಯ
ಎತ್ತಿ ಹಿಡಿಯಲಿ
ನಿನ್ನ ಹೃದಯವು ಜಮ್ ಶಾದನ*
ಮಧುಪಾತ್ರೆಯಾಗಲಿ!

ಓ ಅಲೌಖಿಕ ವಿದ್ಯಾರ್ಥಿಯೇ
ನಿನ್ನ ನಾಲಗೆಯು ನಿರ್ಮಲವಾಗಿರಲಿ
ನಿನ್ನ ಪ್ರಾರ್ಥನೆಯ ಕೂಗು
ನಿರುತ್ತರವಾಗದಿರಲಿ

ನಿನ್ನ ಮಾಯಾ ಕವಿತೆಗಳು
ಮಲಗಿರುವವರ ಎಚ್ಚರಿಸಲಿ
ನಿನ್ನ ಧ್ವನಿಯ ಕಿರಣಗಳು
ಅಂಧಕಾರಗಳ ಹುಟ್ಟಡಗಿಸಲಿ!!

ಅಲ್ಲಾಮ ಇಕ್ಬಾಲರ ಉರ್ದು ಕವಿತೆ
ಅನುವಾದ : ಪುನೀತ್ ಅಪ್ಪು

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ್ ಅಹ್ಮದ್ ಖಾನ್ ಇವರ ಸಮಾಧಿಗೆ ಬೇಟಿಕೊಟ್ಟ ಸಂದರ್ಭದಲ್ಲಿ ಕವಿ ಅಲ್ಲಾಮ ಇಕ್ಬಾಲರು ಬರೆದ ಕವಿತೆಯಿದು. ಸಯ್ಯದ್ ಅಹ್ಮದ್ ಖಾನ್ ಮುಸ್ಲಿಂ ಯುವಕರ ರಾಜಕೀಯ ಮುಂದಾಳುತ್ವದ ಬಗ್ಗೆ ಕಂಡಿದ್ದ ಕನಸನ್ನು ಇಕ್ಬಾಲರು ಕಾವ್ಯವಾಗಿಸಿದ್ದಾರೆ.
*ಜಮ್ ಶಾದನ ಮಧುಪಾತ್ರೆ (Jaam -O-jam) ಇಸ್ಲಾಂ ಪೂರ್ವದ ಪರ್ಶಿಯಾದ ದಂತಕಥೆಯಲ್ಲಿ ಬರುವ ಜಮ್ ಶಾದ್ ದೊರೆಯ ಕೈಯಲ್ಲಿದ್ದ ಭವಿಷ್ಯ ನೋಡಬಹುದಾದ ಮಧುಪಾತ್ರೆ, ಇಲ್ಲಿ ಕವಿ ಇಕ್ಬಾಲರು ಅದನ್ನು ರೂಪಕವಾಗಿ ಬಳಸಿದ್ದಾರೆ )

ಸಾಕಿ

ಮತ್ತೇರಿಸಿದ ಮೇಲೆ ದೂಡಿ
ಹಾಕುವವರೇ ಎಲ್ಲಾ,
ಖುಷಿಯಿರುವುದು ಬಿದ್ದವನ ಎತ್ತಿ
ಗಮ್ಯ ಸೇರಿಸುವುದರಲ್ಲಿ, ಸಾಕಿ!

ಆ ಹಳೆಯ ಮಧುಪಾನೀಕರೆಲ್ಲರೂ
ದೂರವಾಗುತಿಹರು,
ಎಲ್ಲಿಂದಲಾದರೂ ಆ ಅಮೃತಜಲವನ್ನೊಮ್ಮೆ
ದಯಪಾಲಿಸು ಸಾಕಿ!

ವರ್ಣರಂಜಿತ ಸದ್ದುಗದ್ದಲಗಳಲ್ಲೇ
ರಾತ್ರಿಯಿಡೀ ಕಳೆದುಹೋಯಿತು,
ಅದೋ ಮುಂಜಾವು ಸಮೀಪಿಸುತ್ತಿದೆ
ಅಲ್ಲಾಹನ ಸ್ಮರಣೆ ಮಾಡು ಸಾಕಿ!!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನು: ಪುನೀತ್ ಅಪ್ಪು

ಬ್ಯಾರಿಗಳ ಬದುಕಿನ ಜಾಡು ಹಿಡಿದು

ಸಹಸ್ರಾರು ವರುಷಗಳ ಇತಿಹಾಸವನ್ನೂ ಪರಂಪರೆಯನ್ನೂ ಹೊಂದಿರುವ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರ ಚರಿತ್ರೆಯನ್ನು ಹುಡುಕಿಕೊಂಡು ಮಂಗಳೂರಿಗೆ ತಲುಪಿದ್ದೆ. ಮುಂಜಾನೆ ರೈಲಿನಿಂದಿಳಿದು ಪೈಗಂಬರರ ಕಾಲದಷ್ಟು ಪ್ರಾಚೀನತೆಯುಳ್ಳ ಬಂದರಿನ ಝೀನತ್ ಬಕ್ಷ್ ಮಸೀದಿ ಹುಡುಕುತ್ತಾ ನಡೆದೆ. ಬೆಳಗಾಗುವ ಮುನ್ನವೇ ವ್ಯಾಪಾರಿಗಳಿಂದಲೂ ಸರಕು ಗಾಡಿಗಳಿಂದಲೂ ಗಿಜಿಗುಡುತ್ತಿದ್ದ ಬಂದರ್ ಸಾಮ್ರಾಜ್ಯದ ಚಲನವಲನಗಳು ಆ ಪ್ರದೇಶದ ವರ್ಣಮಯವಾದ ಚರಿತ್ರೆಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಹೆಂಚು ಹಾಕಿದ ಅರಿಶಿಣ ಹಚ್ಚಿದ ಗೋಡೆಗಳು ತುಂಬಿತುಳುಕುತ್ತಿರುವ ಗೋದಾಮುಗಳು, ಒಡೆದು ಬೀಳುವುದೋ ಎಂದು ತೋರುವ ಕಟ್ಟಡಗಳು, ಕಿರಿದಾದ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿರುವ ಸರಕು ವಾಹನಗಳು, ತುಂಬಿದ ಬಂದರಿನ ದಾರಿಹೋಕರಾದ ಅರಬಿಗಳು, ಬ್ಯಾರಿಗಳು ವ್ಯಾಪಾರಿಗಳ ಕಾಲದ ನೆನಪುಗಳು ಮೂಡಿ ಬರುತ್ತವೆ.
ಕೆತ್ತನೆಗಳಿಂದ ಅಲಂಕೃತವಾದ ಝೀನತ್ ಬಕ್ಷ್ ಮಸೀದಿ ನಿರ್ಮಾಣಗೊಂಡದ್ದು ಹಿಜರಿ 22 ರಲ್ಲಿ. ಇಸ್ಲಾಂ ಸಂದೇಶದೊಂದಿಗೆ ಕೇರಳಕ್ಕೆ ಕಾಲಿಟ್ಟ ಮಾಲಿಕ್ ದೀನಾರ್ ಸಂತಾನಪರಂಪರೆಯ ‘ಹಬೀಬ್ ಇಬ್ನ್ ಮಾಲಿಕ್’ ಎಂಬುವವರು ದೀನಾರ್ ಎಂಬ ನಾಮದಿಂದ ಕರೆಯಲ್ಪಟ್ಟವರು. ಅವರು ಝೀನತ್ ಬಕ್ಷ್ ನ್ನು ನಿರ್ಮಿಸಿದರು ಎಂದು ಹೇಳಲಾಗುತ್ತಿದೆ.

ಮಾಲಿಕ್ ದೀನಾರ್ ಸಂಘದಿಂದ ನಿರ್ಮಿಸಲ್ಪಟ್ಟ ಮೊದಲನೇ ಹತ್ತು ಮಸೀದಿಗಳಲ್ಲೊಂದು ಎಂದು ಕರೆಯಲ್ಪಡುವ ಈ ಮಸೀದಿಯಲ್ಲಿ ಪ್ರಥಮ ಖಾಝೀಯಾಗಿ ಆಯ್ಕೆಗೊಂಡದ್ದು ಮೂಸಾ ಇಬ್ನ್ ಮಾಲಿಕ್ ರವರಾಗಿದ್ದಾರೆ. ‘ಬ್ಯಾರಿ’ ಎಂಬುದು ಸಾಮಾನ್ಯವಾಗಿ ದಕ್ಷಿಣಕನ್ನಡ ಹಾಗೂ ತುಳುನಾಡಿನ ಮುಸಲ್ಮಾನರನ್ನು ಕರೆಯುವ ಪದ. ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುವ ಬ್ಯಾರಿಗಳು ಪುರಾತನ ಕಾಲದಿಂದಲೂ ವ್ಯಾಪಾರಿಗಳಾಗಿದ್ದರು. ಬ್ಯಾರಿ ಎಂಬುದು ‘ವ್ಯಾಪಾರ’ ಎಂಬರ್ಥವನ್ನು ನೀಡುವ ‘ಬ್ಯಾರ’ ಎಂಬ ತುಳು ಪದದಿಂದ ರೂಪುಗೊಂಡಿದೆ ಎನ್ನಲಾಗುತ್ತದೆ. ತುಳುನಾಡಿನ ಮುಸ್ಲಿಮರ ಚರಿತ್ರೆಯನ್ನು ಉಲ್ಲೇಖಿಸಿದ ಅಹ್ಮದ್ ನೂರಿ ಮತ್ತು ಪ್ರೊ. ಇಚ್ಚಿಲಂಗೋಡು ರವರ ಅಭಿಪ್ರಾಯದ ಪ್ರಕಾರ, ‘ಕಡಲ ವ್ಯಾಪಾರಿಗಳಾದ್ದರಿಂದ ‘ಬಹಾರಿ’ ಎಂಬ ಅರಬ್ಬೀ ಪದದಿಂದಾಗಿರಬಹುದು ಎಂದೂ, ಮಲಬಾರಿನೊಂದಿಗೆ ವಿಶೇಷ ಬಂಧ ಸ್ಥಾಪಿಸಿದ್ದರಿಂದ ಮಲಬಾರಿನ ಬಾರಿಯಿಂದ ರೂಪು ತಾಳಿತೆಂಬ ನಿಲುವುಗಳೂ ಕಾಣಸಿಗುತ್ತವೆ. ಇವರ ಪ್ರಧಾನ ಕೇಂದ್ರವು ಹಳೆಯ ವಿಜಯನಗರ ಸಾಮ್ರಾಜ್ಯದ ಬಾರಕೂರ್, ಮಂಗಳೂರು, ಕಾಸರಗೋಡು ಒಳಗೊಂಡಿರುವ ದಕ್ಷಿಣಕನ್ನಡ ಪ್ರದೇಶ. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಾಸರಗೋಡಿನ ಚಂದ್ರಗಿರಿಯಿಂದ ಕರ್ನಾಟಕದ ಉಡುಪಿಯವರೆಗೆ ವಿಸ್ತಾರಗೊಂಡಿರುವ ಪ್ರದೇಶ. ಕಾಲಕ್ರಮೇಣ ರಾಜ್ಯ ಮತ್ತು ತೀರಪ್ರದೇಶದ ನಡುವಿನ ಸಂಬಂಧ ಕಡಿಮೆಯಾಗುವಾಗ ಬ್ಯಾರಿಗಳು ಇತರ ರಾಜ್ಯಗಳಿಗೆ ವಲಸೆ ಹೋಗಲು ಪ್ರಾರಂಭಿಸಿದರು. ಹಾಗಾಗಿ, ‘ಮೈಕಾಲ’ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರು ಪ್ರದೇಶದ ಬಂದರನ್ನು ಕೇಂದ್ರೀಕರಿಸಿ ಈ ಒಂದು ಸಮೂಹವು ಕಸುಬಾಧಾರಿತ, ಸಂಪತ್ಭರಿತವಾದ ಪರಂಪರೆಯನ್ನು ರೂಪಿಸಿಕೊಂಡಿತು. ಪ್ರಾಚೀನ ಕಾಲದಿಂದಲೇ ಭಾರತದ ಭೂಪಟದಲ್ಲಿ ಗುರುತಿಸಲ್ಪಟ್ಟ ಇಲ್ಲಿನ ಕಡಲ ವ್ಯಾಪಾರಿಗಳಾದ ಅರಬ್ಬೀಗಳು ಮತ್ತು ಪರ್ಶಿಯನ್ನರನ್ನೊಳಗೊಂಡ ಅನೇಕ ವ್ಯಾಪಾರ ಸಂಘಗಳ ತಾಣವಾಗಿತ್ತು ಮಲಬಾರಿಗೆ ಸೇರಿನಿಂತಿರುವ ಈ ದಕ್ಷಿಣ ಕನ್ನಡ. ಈ ವ್ಯಾಪಾರಕ್ಕೆ ನೆಲೆಯೊದಗಿಸಿದ ಪ್ರಮುಖ ಅಂಶವು ಭಾರತದ ಸರಕುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದ ಅತಿಯಾದ ಬೇಡಿಕೆಯಾಗಿದೆ. ವ್ಯಾಪಾರಕ್ಷೇತ್ರದಲ್ಲಿ ಮುದ್ರೆಯೊತ್ತಲು ಬ್ಯಾರಿಗಳಿಗೆ ಸಹಾಯಕವಾದದ್ದು ತಮ್ಮ ರಾಜ್ಯಕ್ಕೆ ಬರುವ ಅರಬ್ಬೀಗಳೊಂದಿಗೂ ಪರ್ಶಿಯನ್ನರೊಂದಿಗೂ ಇರಿಸಿಕೊಂಡ ಅತ್ಯುನ್ನತ ಸಂಭಂಧದ ಕಾರಣದಿಂದ ಎನ್ನಬಹುದು.

ಬ್ಯಾರಿಗಳ ಪರಂಪರೆಗೆ ರೂಪವನ್ನು ನೀಡಿದ್ದು ಅರಬ್ಬೀಗಳ ಹಾಗೂ ಮತ್ತಿತರರ ಜೊತೆಗಿದ್ದ ಈ ವ್ಯಾಪಾರದ ಸಂಬಂಧ ಎಂದೇ ಹೇಳಬಹುದು. ಅತೀಕಡಿಮೆ ಕಾಲಾವಧಿಯಲ್ಲಿ ತುಳುನಾಡಿನ ವ್ಯಾಪಾರದ ಮೇಧಾವಿತ್ವವನ್ನು ಕರಗತ ಮಾಡಿಕೊಳ್ಳುವ ಮಟ್ಟಕ್ಕೆ ಬ್ಯಾರಿಗಳು ಬೆಳೆದರು. ಕ್ರಿ.ಶ 1891 ರ ಬ್ರಿಟೀಷ್ ಈಸ್ಟ್ ಇಂಡಿಯಾ ಜನಗಣತಿಯ ಪ್ರಕಾರ ತುಳುನಾಡಿನ ತೊಂಬತೈದು ಸಾವಿರ ವ್ಯಾಪಾರಿಗಳಲ್ಲಿ ತೊಂಬತ್ಮೂರು ಸಾವಿರದಷ್ಟು ಬ್ಯಾರಿಗಳು, ಎರಡು ಸಾವಿರದಷ್ಟು ಮತ್ತಿತರ ವಿಭಾಗದವರಾಗಿದ್ದರು. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಮನಾದ ಪಾಲುದಾರರಾದ ಬ್ಯಾರಿಗಳಿಗೆ ಕೆಳದಿ ನಾಯಕರು, ವಿಜಯನಗರ, ಬಿಜಾಪುರ, ಮೈಸೂರು ರಾಜರಿಂದ ವ್ಯಾಪಾರಕ್ಕೆ ಸಂಪೂರ್ಣವಾದ ಸ್ವಾತಂತ್ರ್ಯವು ದೊರಕಿತ್ತು. ನೇತ್ರಾವತಿ ನದಿಯಲ್ಲಿ ಬ್ಯಾರಿಗಳ ವಸ್ತುಗಳು ಮಾತ್ರ ಸಾಗುತ್ತಿದ್ದ ಕಾಲವಿತ್ತು. ಅವರ ವ್ಯಾಪಾರಸಂಘ ‘ಹಜ್ಜಮಾನ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅರಬ್ಬೀಗಳ ಜೊತೆಗಿನ ಸಂಬಂಧ, ಸೂಫಿಗಳು, ಜಾತ್ಯಾತೀತತೆ ಹೀಗೆ ತುಳುನಾಡಿನ ಇಸ್ಲಾಂ ವ್ಯಾಪಕತೆಗೆ ಅನೇಕ ಕಾರಣಗಳಿವೆ. ‘ಏಳನೇ ಶತಮಾನದವರೆಗೆ ಅರಬ್ಬೀಗಳು ಇಲ್ಲಿ ನೆಲೆಯೂರಿದ್ದರಿಂದ, ಅವರು ಇಲ್ಲಿನ ಸ್ಥಳೀಯ ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದರು’ ಎಂದು ರೌಲತ್ ಸೇನ್ ತರ್ಕಿಸುತ್ತಾರೆ. ಬಾರ್ಕೂರನ್ನು ಸಂದರ್ಶಿಸಿದ್ದ ಇಬ್ನುಬತೂತ, ‘ಯೆಮನ್’ ನಿಂದಲೂ ಪರ್ಷಿಯಾದಿಂದಲೂ ಬಂದ ಮುಸ್ಲಿಮರನ್ನು ತಾನು ಕಂಡದ್ದಾಗಿ ಉಲ್ಲೇಖಿಸಿದ್ದಾರೆ. ತುಳುನಾಡಿನ ಇಸ್ಲಾಮಿನ ಸೂಫಿ ಪಥಿಕರಾದ ಬಾಬಾ ಫಕ್ರುದ್ದಿನ್ ಪೆನುಕೊಂಡ, ಫರೀದ್ ಮಸೂದ್ ಗಂಜಶಕರ, ಮಹಮದ್ ಶರೀಫುಲ್ ಮದನಿ, ಶೇಖ್ ಯೂಸುಫ್ ಅಡಯಾರ್, ಶಾಹ್ ಮೀರ್ ಮುಂತಾದವರಿಂದಲೂ ಇಸ್ಲಾಂ ಪ್ರಚಾರಗೊಂಡಿತು. ಬ್ರಾಹ್ಮಣಶಾಹಿ/ವೈದಿಕತೆಯು ತುಳುನಾಡಿಗೆ ಬಂದಾಗಿನಿಂದ ಸ್ವರಾಜ್ಯದವರಾದ ಕೀಳು ಜಾತಿಯವರೆಂದು ಗುರುತಿಸಲ್ಪಟ್ಟ ಕೋರಗಾಸರು, ಮಾನ್ಸಾಸರು, ಮೀನುಗಾರರಾದ ಭೂಪಾಲಕರು ಹಾಗೂ ಮೊಗವೀರರೂ ಜಾತಿ ಹಿಂಸೆಯಿಂದ ಬೇಸತ್ತು, ಅಭಯವನ್ನು ಹುಡುಕಿ ಇಸ್ಲಾಮಿನಲ್ಲಿ ಆಶ್ರಯವನ್ನು ಕಂಡುಕೊಂಡರು. ಪಶ್ಚಿಮ ತೀರದಲ್ಲಿರುವ ಮುಸ್ಲಿಮರು ಜಾತಿಹಿಂಸೆಯಿಂದ ಅಭಯವನ್ನು ಹುಡುಕಿ ಬಂದು ಮತಾಂತರವಾದರು ಎಂಬುದನ್ನು ‘ವಿಲಿಯಮ್ ಲೋಗನ್’ ರವರು ದಾಖಲಿಸಿದ್ದಾರೆ. (ಮಲಬಾರ್ ಮ್ಯಾನ್ಯುವಲ್)

ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಡಲ ವ್ಯಾಪಾರಕ್ಕೆ ತಿರುಗೇಟು ಬೀಳುವುದು ಪೋರ್ಚುಗೀಸರ ಆಗಮನದ ನಂತರ. ಅಕ್ಕಿ, ಸಕ್ಕರೆ, ಕರಿಮೆಣಸು, ಸುಗಂಧ ದ್ರವ್ಯಗಳು, ಮರದ ದಿನ್ನೆಗಳು, ಶ್ರೀಗಂಧ, ಅಡಿಕೆ, ಹೆಂಚು ಮುಂತಾದ ವಸ್ತುಗಳನ್ನು ಸಾಗಿಸುತಿದ್ದ ತೀರವು ಪೋರ್ಚುಗೀಸರ ವಸಾಹತೀಕರಣದಿಂದಾಗಿ ಕರಿಮೆಣಸು ಮತ್ತು ಅಕ್ಕಿಗೆ ಮಾತ್ರ ಸೀಮಿತಗೊಂಡಿತು. ಕೆಲವರು ವ್ಯಾಪಾರವನ್ನು ಕಡೆಗಣಿಸಿ ಒಳಪ್ರದೇಶಗಳಿಗೆ ವಲಸೆ ಹೋಗಿ ವಸಾಹತುಗಾರರ ಎದುರಾಳಿಗಳೊಂದಿಗೆ ಕೈಜೋಡಿಸಿ ನಿಲ್ಲಲು ಪ್ರಾರಂಭಿಸಿದರು. ಮುಸ್ಲಿಮರಿಗೆ ಸಹಾಯವನ್ನು ನೀಡುತ್ತಿದ್ದ ವಿಜಯನಗರದ ಸಾಮ್ರಾಜ್ಯದ ಕುಸಿತವು ಬ್ಯಾರಿಗಳಿಗೆ ಬಲವಾದ ಹೊಡೆತ ನೀಡಿತು. ಬಿಜಾಪುರದ ಸುಲ್ತಾನರು, ಮಲಬಾರಿನ ಸಾಮೂದಿರಿಗಳು ಮತ್ತು ಕಣ್ಣೂರಿನ ಅಲೀ ರಾಜರುಗಳು ಸೇರಿ ಪರಂಗಿಗಳ ಎದುರು ನಡೆಸಿದ ಹೋರಾಟವು ವಿಫಲಗೊಂಡಿತು. ರಾಣಿ ಅಬ್ಬಕ್ಕದೇವಿಯ ಮುಂದಾಳತ್ವದಲ್ಲಿ ಮುಸ್ಲಿಮರು ನಡೆಸಿದ ಹೋರಾಟದಲ್ಲಿ ಮೈಕಾಲವನ್ನು ಮರುವಶಪಡಿಸಿಕೊಂಡರು.
ಬ್ರಿಟೀಷರ ಆಗಮನದಿಂದ ಪೋರ್ಚುಗೀಸರು ಹಿಂತಿರುಗಿದರೂ ಬ್ಯಾರಿಗಳ ವ್ಯಾಪಾರವು ಹದಗೆಟ್ಟಿತ್ತು. ನಂತರ ಮೈಸೂರಿನ ಆಡಳಿತಾವಧಿಯಲ್ಲಿ ಬ್ಯಾರಿಗಳು ಹಳೆಯ ಪ್ರಭಾವವನ್ನು ಹಿಂಪಡೆದರು. ದಕ್ಷಿಣ ಕನ್ನಡಕ್ಕೆ ಟಿಪ್ಪು ನೇತೃತ್ವದಲ್ಲಿ ನಡೆದ ಆಂಗ್ಲೋ-ಮಂಗಳೂರು ಯುದ್ಧದ ಕಾಲದಲ್ಲಿ ಝೀನತ್ ಬಕ್ಷ್ ಮಸೀದಿ ಪುನರ್ ನಿರ್ಮಾಣಗೊಂಡಿತು. ಈ ಪ್ರದೇಶಗಳಲ್ಲಿ ಟಿಪ್ಪುವು ಅಧಿಕವಾಗಿ ಮಸೀದಿಗಳನ್ನು ನಿರ್ಮಿಸುತ್ತಲೂ, ಸೂಫಿಗಳ ದರ್ಗಾ ನಿರ್ಮಿಸುತ್ತಲೂ ಮಸೀದಿಗಳಿಗೆ ಬೃಹತಾದ ತಸ್ದೀರ್ ಸಂಪ್ರದಾಯವನ್ನು ಚಾಲ್ತಿಗೆ ತರಲಾಯಿತು. ವಿವಿಧ ರಾಜರುಗಳ ಅಧೀನದಲ್ಲಿ ಸೈನಿಕರಾಗಿಯೂ ಸೇನಾಧಿಪತಿಗಳಾಗಿಯೂ ಬ್ಯಾರಿಗಳು ಕೆಲಸ ಮಾಡುತ್ತಿದ್ದರು. ಟಿಪ್ಪು ಸುಲ್ತಾನರ ಸಹಾಯದೊಂದಿಗೆ ಬ್ರಿಟಿಷರಿಗೆದುರಾಗಿ ಬ್ಯಾರಿಗಳು ಒಗ್ಗೂಡಿದ್ದು ಪ್ರಸಿದ್ಧವಾಗಿದೆ. ಬ್ರಿಟಿಷರ ಸಹಾಯವನ್ನು ಪಡೆದುಕೊಂಡಿದ್ದ ಕೊಡಗಿನ ರಾಜನೆದುರು ಬ್ಯಾರಿಗಳು ರಂಗಕ್ಕಿಳಿದರು. ಬಡತನದಲ್ಲಿದ್ದ ಸಾಮಾನ್ಯ ಮುಸ್ಲಿಮರು ಸ್ವಾತಂತ್ರ್ಯ ಸಂಗ್ರಾಮ ಮಾಡಿದ್ದಕ್ಕೋ, ರಾಷ್ಟೀಯ ಮಟ್ಟದ ಅವಕಾಶ ಸಿಗಲಾರದ್ದಕ್ಕೋ ಹೆಚ್ಚಿನ ಪ್ರತಿಫಲ ಲಭಿಸಲಿಲ್ಲ. ಕ್ರಿ.ಶ 1914 ರಲ್ಲಿ ಕಾಂಗ್ರೆಸ್ ಪಕ್ಷ ಮಂಗಳೂರಿಗೆ ತಲುಪಿದಾಗ ಹಲವರು ಪಕ್ಷದ ಭಾಗವಾದರೂ, ಪಕ್ಷದ ಹೋರಾಟಕ್ಕೆ ಹೆಚ್ಚಾಗಿ ಪ್ರತಿಕ್ರಿಯೆ ಇರಲಿಲ್ಲ. ಬ್ಯಾರಿಗಳಲ್ಲಿ ಬೆಳೆದು ಬಂದ ನೇತಾರರಾದ ಶೆಂರೂಲ್ ಮುಹಮ್ಮದ್ ಶಂನಾದ್ ಹಾಗೂ ಇತರ ನೇತಾರರು ಜನರಿಗೆ ರಾಜಕೀಯದ ಅವಶ್ಯಕತೆಯ ಕುರಿತು ಮಾಹಿತಿ ನೀಡಿದ ಮೇಲೂ ದೊಡ್ಡಮಟ್ಟದ ವಿಜಯ ಸಾಧ್ಯವಾಗಲಿಲ್ಲ. ಕ್ರಿ.ಶ 1930 ರಲ್ಲಿ ಮುಸ್ಲಿಂ ಲೀಗ್ ಬಂದರೂ ಪ್ರಾದೇಶಿಕ ಮಟ್ಟದಲ್ಲಿ ಕಾಂಗ್ರೆಸ್ ಗೆ ಲಭಿಸಿದ ಅಂಗೀಕಾರವು ಕೂಡ ಅದಕ್ಕೆ ಸಿಗಲಿಲ್ಲ.
ಆರ್ಥಿಕವಾಗಿ ಬೆಳೆದು ನಿಂತಿದ್ದ ಬ್ಯಾರಿಗಳು ಕರಾವಳಿ ಪ್ರದೇಶದಲ್ಲಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರು. ಬ್ಯಾರಿ ಸಾಮುದಾಯಿಕ ಸೌಹಾರ್ದತೆಯ ಪ್ರತೀಕವಾಗಿರುವವರು ಬಪ್ಪ ಬ್ಯಾರಿ. ಶಾಂಭವಿ ನದಿಯ ತೀರದಲ್ಲಿ ಅವರು ಪುನರ್ ನಿರ್ಮಿಸಿಕೊಟ್ಟ ಬಪ್ಪನಾಡ್ ದುರ್ಗಾ ಪರಮೇಶ್ವರಿ ಕ್ಷೇತ್ರವು ಧಾರ್ಮಿಕ ಸೌಹಾರ್ದತೆಯ ಗುರುತಾಗಿದೆ. ಕ್ಷೇತ್ರದ ಹೆಸರೇ ಬಪ್ಪ ಬ್ಯಾರಿಯವರಿಂದ ಬಂದಿರುವಂತದ್ದು. ಎಂಟುನೂರು ವರ್ಷಗಳಷ್ಟು ಹಳೆಯದಾದ ಈ ಕ್ಷೇತ್ರದ ಉತ್ಸವದ ಮೊದಲ ಪ್ರಸಾದ ಇಂದಿಗೂ ಕೂಡ ಸನ್ಮಾನ ರೂಪದಲ್ಲಿ ಸಿಗುವುದು ಒಂದು ಬ್ಯಾರಿ ಕುಟುಂಬಕ್ಕೆ. ಹಲವು ಮತಗಳು, ಭಾಷೆಗಳು ಇರುವ ದಕ್ಷಿಣಕನ್ನಡದಲ್ಲಿ ತಮ್ಮದೇ ಆದ ಒಂದು ಭಾಷೆಯನ್ನು ತಂದಿದ್ದು ಬ್ಯಾರಿಗಳ ನಿರ್ಮಾಣ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ. ಬ್ಯಾರಿಯು ತುಳುನಾಡಿನ ಮುಸ್ಲಿಮರಲ್ಲಿ ಇಂದಿಗೂ ಮೌಖಿಕವಾಗಿ ಬೇರೂರಿದ ಭಾಷೆಯಾಗಿದೆ. ‘ನಕ್ಕ್ ನಿಕ್ಕ್’ ಎಂದೂ ಕರೆಯಲ್ಪಡುವ ಬ್ಯಾರಿ ಭಾಷೆಯು ಮಲೆಯಾಳಂ ಭಾಷೆಗೆ ಹೆಚ್ಚು ಹೋಲಿಕೆ ಇರುವ ಭಾಷೆಯಾಗಿದೆ. ನಕ್ನಿಕ್ ಅಂದರೆ ಸ್ವಂತ ಲಿಪಿ ಇಲ್ಲದ್ದು (ಈ ಲೇಖನವು ಮೂಲಭಾಷೆಯಲ್ಲಿ ಬರೆಯಲ್ಪಡುವಾಗ ಬ್ಯಾರಿ ಲಿಪಿ ಪ್ರಕಟವಾಗಿರಲಿಲ್ಲ- ಸಂಪಾದಕ). ಅರಬ್ಬೀ, ತಮಿಳು, ತುಳು, ಕನ್ನಡ ಭಾಷೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುಣ ಕೂಡ ಬ್ಯಾರಿಗೆ ಇದೆ. ಮೊದಮೊದಲು ‘ಮಾಪಿಳ’ ಮಲಯಾಳಂ ಎಂಬ ನಾಮದಿಂದ ಇದು ಪ್ರಚಾರಕ್ಕೆ ಬಂದಿತ್ತು.

ಸಂಸ್ಕೃತಿಯಲ್ಲಿ ಮಲಬಾರಿನ ಮುಸ್ಲಿಮರೊಂದಿಗೆ ಸಾದೃಶ್ಯ ಹೊಂದಿರುವ ಬ್ಯಾರಿಗಳು ಮಾಪಿಳ್ಳ ಸಮೂಹದ ಭಾಗವೆಂದು, ಬ್ಯಾರಿ ಭಾಷೆ ಮಲಯಾಳಂ ದಿಂದ ಹುಟ್ಟಿದ್ದು ಎಂದು ಕೆಲವು ಅನ್ವೇಷಣೆಗಳು ತಿಳಿಸುತ್ತದೆ. ಪ್ರೊಫೆಸರ್ ಇಚ್ಚಿಲಂಗೋಡು ಅವರ ಪ್ರಕಾರ, ಬ್ಯಾರಿಗಳು ಆಚರಣೆಗಳಿಂದಲೂ ಭಾಷೆಯಿಂದಲೂ ಸ್ವಂತ ಅಸ್ಮಿತೆಯನ್ನು ಹೊಂದಿರುವುದರಿಂದ ಅವರು ಮಾಪಿಳ ಸಮೂಹದ ಭಾಗವಲ್ಲ. ಮಾಪ್ಪಿಳ ಹಾಡುಗಳ ಥರಹದ್ದೇ ಬ್ಯಾರಿ ಭಾಷೆಯಲ್ಲಿಯೂ ಹಾಡುಗಳು ಇದ್ದಿತೆಂದು ಅವರು ಹೇಳುತ್ತಾರೆ.
‘ಓಲು ನಡನ್ನ ಬಿಸಯತ್ತೆ ಚೆನ್ನಾಲ್
ಆಂಙಲಮಾರ್ ಪೆಂಞಾಯಿಮಾರೆ ಬುಟ್ಟುಟ್ಟು ಓಲಟ್ಟಿಗೆ ಕೇಟ್ಟಾರ್’
ಈ ಹಾಡು ಬ್ಯಾರಿ ಭಾಷೆಯಲ್ಲಿ ರಚಿತವಾಗಿದೆ. ಬ್ಯಾರಿ ಮದುವೆಗಳಲ್ಲಿಯೂ ಮತ್ತಿತರ ಸಂಭ್ರಮಗಳಲ್ಲಿಯೂ ಮಾಪ್ಪಿಳ ಹಾಡುಗಳು ಅಧಿಕವಾಗಿ ರೂಢಿಯಲ್ಲಿತ್ತು .ಬ್ಯಾರಿಗಳು ತಮ್ಮದೇ ಆದ ಸಾಂಸ್ಕೃತಿಕ ಪಾರಂಪರ್ಯವನ್ನು ಪ್ರತಿಪಾದಿಸುತ್ತಾರೆ. ಹಲವು ಸಂದರ್ಭದಲ್ಲಿ ಮಾಪ್ಪಿಳ ಸಂಸ್ಕೃತಿಯ ಜೊತೆಗೆ ಹೊಂದಿಕೊಳ್ಳುವ ಗುಣ ಬ್ಯಾರಿಗಳಲ್ಲಿ ಕಾಣಸಿಗುತ್ತದೆ. ಬ್ಯಾರಿಗಳ ಅಭಿವ್ಯಕ್ತಿ, ಜೀವನಕ್ರಮವು ಅರಬ್ಬೀ, ತುಳು, ಮಾಪ್ಪಿಳ ಸಂಸ್ಕೃತಿಗಳ ಸಮ್ಮಿಶ್ರಣವಾಗಿದೆ. ತುಳುನಾಡಿನ ಮುಸ್ಲಿಮರು ಸಾಧಾರಣವಾಗಿ ಮಾತನಾಡುವ ಬ್ಯಾರಿಯಲ್ಲೂ ಈ ಸಮ್ಮಿಶ್ರಣ ಪ್ರಕಟವಾಗುತ್ತದೆ. ಬ್ಯಾರಿಗಳ ಮದುವೆ ಮಂಟಪಗಳಲ್ಲಿ ಆಲಾಪಿಸುತ್ತಿದ್ದುದು ಮಾಪ್ಪಿಳ ಹಾಡುಗಳಾಗಿದ್ದವು. ಕಿಸ್ಸಪಾಟ್, ಮಾಲಪಾಟ್, ಒಪ್ಪನಪಾಟ್, ಮೊಯಿಲಾಂಜಿಪಾಟ್, ಅಮ್ಮಾಯಿಪಾಟ್, ತಾಲೇಲಪಾಟ್ ಮುಂತಾದ ವೈವಿಧ್ಯಮಯ ಆವಿಷ್ಕಾರಗಳು ಕೂಡ ಬ್ಯಾರಿಗಳಲ್ಲಿದ್ದವು. ಬಾಪ್ಪು ಕುಂಞಿ ಮುಸ್ಲಿಯಾರ್, ಸಾಹುಕಾರ್ ಕುಂಞಿಪ್ಪಕ್ಕಿ , ಕುಂಞಾಮು ಮುಸ್ಲಿಯಾರ್ ಮುಂತಾದವರು ಬ್ಯಾರಿ ಹಾಡುಗಳನ್ನು ಬರೆದವರಲ್ಲಿ ಪ್ರಮುಖರು. ಹಲವು ದಿನಗಳವರೆಗೆ ನಡೆಯುವ ಮದುವೆ ಸಮಾರಂಭ ಬ್ಯಾರಿಗಳ ಮತ್ತೊಂದು ವಿಶೇಷತೆಯಾಗಿದೆ. ಅವರ ಮದುವೆ ಸಮಾರಂಭಗಳು ಮೂರು ದಿನದಿಂದ ಹಿಡಿದು ವಾರಗಟ್ಟಲೆ ನಡೆಯುವಂತಹದ್ದಾಗಿದೆ. ಮೊಯಿಲಾಂಜಿ(ಮೆಹಂದಿ), ಮದುವೆ, ದಫ್ ಹಾಗು ಕೈಕೊಟ್ಟು ಪಾಟ್ಟು (ಚಪ್ಪಾಳೆ ಹಾಡು) ,ವಾದ್ಯ ಮೇಳಗಳು, ಕೋಲಾಟ ಮುಂತಾದವುಗಳಿಂದ ವಿವಾಹ ಸಂದರ್ಭವು ಅಲಂಕೃತವಾಗಿರುತ್ತಿತ್ತು. ಮಾಪ್ಪಿಳಗಳಲ್ಲಿ ವ್ಯಾಪಕವಾಗಿದ್ದ ‘ಮಕ್ಕತ್ತಾಯ’ ಎಂಬ ಸಂಪ್ರದಾಯವನ್ನು ಬ್ಯಾರಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಸಾಕಷ್ಟು ವಿಧದ ಊಟೋಪಚಾರಗಳು ಇರುವ ವ್ಯವಸ್ಥೆ ಇದು. ಮದುವೆ ಸಮಾರಂಭ……………………………… ಮುಂತಾದೆಡೆ ಬ್ಯಾರಿಗಳಲ್ಲಿ ಮಾತ್ರ ಪ್ರಸಿದ್ದವಾಗಿರುವ ಭೋಜನಗಳು ಇರುತ್ತವೆ. ಬ್ಯಾರಿ ಬಿರಿಯಾನಿ ಸವಿಶೇಷತೆಯುಳ್ಳದ್ದಾಗಿದೆ.


ದರ್ಸ್, ಮದರಸಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ವಿದ್ಯಾಭ್ಯಾಸವನ್ನು ಬಿಟ್ಟು ಕೆಲಸದ ಮಾರ್ಗದತ್ತ ಜೀವನ ಸಾಗಿಸುವುದು ಅವರೆಡೆಯಲ್ಲಿ ಕಂಡುಬರುತ್ತಿದೆ. ಮಲಬಾರಿನಿಂದ ಬಂದ ವಿದ್ವಾಂಸರು ಮತಧರ್ಮದ ವಿದ್ಯಾಭ್ಯಾಸ ನೀಡಿದುದರಿಂದ ಹೆಚ್ಚಿನವರು ಶಾಫಿಈ ಕರ್ಮಶಾಸ್ತ್ರ(ಇಸ್ಲಾಂ ಅನುಷ್ಠಾನ ಮಾರ್ಗಗಳಲ್ಲಿ ಒಂದು) ವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಿಟೀಷರೊಂದಿಗಿನ ದ್ವೇಷವೇ ಒಂದು ಕಾಲದಲ್ಲಿ ಬ್ಯಾರಿಗಳು ಭೌತಿಕ ವಿದ್ಯಾಭ್ಯಾಸವನ್ನು ನಿಷೇಧಿಸಲು ಪ್ರೇರಣೆ ನೀಡಿದ್ದು ಎನ್ನಲಾಗುತ್ತದೆ. ಕ್ರಿ.ಶ 1871 ರಲ್ಲಿ ಬ್ರಿಟಿಷರು ಸರ್ಕಾರಿ ಶಾಲೆ ಪ್ರಾರಂಭಿಸಿದರೂ ಬ್ಯಾರಿಗಳು ಸಹಕಾರ ನೀಡಲಿಲ್ಲ.

ಇಂದು ಮಂಗಳೂರಿನ ಪ್ರಧಾನ ಕಾಯಕ ಮೀನುಗಾರಿಕೆಯಾಗಿದೆ. ಬೆಳೆದು ಬರುತ್ತಿರುವ ಮಂಗಳೂರಿನ ಪ್ರಾಂತ್ಯ ಪ್ರದೇಶಗಳಲ್ಲಿ ಬ್ಯಾರಿ ಸಮೂಹದ ಪಳೆಯುವಳಿಕೆಗಳು ಈಗಲೂ ಕಾಣಸಿಗುತ್ತಗವೆ. ಪೋರ್ಚುಗೀಸ್, ಬ್ರಿಟೀಷ್ ಅವಧಿಯ ನಂತರ ನಶಿಸಿಹೋದ ಬ್ಯಾರಿಗಳ ಆರ್ಥಿಕತೆ ಈಗೀಗ ಮತ್ತೆ ಚಿಗುರೊಡೆದಿದೆ. ದಶಕಗಳ ಹಿಂದೆ ಅನುಭವಿಸಿದ ಸಾಂಸ್ಕೃತಿಕ, ಆರ್ಥಿಕ ಸಂಕಷ್ಟಗಳಿಂದ ಹೊಸ ದಾರಿ ಕಂಡು ಹಿಡಿಯುವ ರೂಢಿ ಬೆಳೆದು, ಬ್ಯಾರಿಗಳ ಸಂಘಟನೆಗಳು ಶಕ್ತಿಯುತವಾದ ಸ್ವಾಧೀನತೆಯನ್ನು ಪಡೆದುಕೊಂಡವು. ಆಸ್ಪತ್ರೆಗಳು, ವಿದ್ಯಾಭ್ಯಾಸ, ಸಾಂಸ್ಕೃತಿಕ ಕೇಂದ್ರಗಳು, ಸಮೂಹ ಮಾಧ್ಯಮಗಳು, ಪತ್ರಿಕೆಗಳು, ರಿಲೀಫ್ ಸಂಘಟನೆಗಳು ಮುಂತಾದ ಅನೇಕ ರೀತಿಗಳಲ್ಲಿ ಬ್ಯಾರಿಗಳು ತುಂಬಿ ನಿಂತಿದ್ದಾರೆ. ಕಾಸರಗೋಡಿನ ಕಡೆ ಬ್ಯಾರಿಗೆ ಸ್ವಲ್ಪ ತೊಂದರೆಯ ವಾತಾವರಣವಿದ್ದರೂ ಮಂಗಳೂರಿನ ಪ್ರದೇಶಗಳಲ್ಲಿ ಅವರ ಅಸ್ಮಿತೆಯು ಪ್ರಕಾಶಮಾನವಾಗಿದೆ. ಇಂದು ಬ್ಯಾರಿಗಳೆಡೆಯಲ್ಲಿ ಸಾಂಸ್ಕೃತಿಕ ಜೀವನಕ್ರಮ ಜೀವಂತವಾಗಿದೆ. ಬ್ಯಾರಿ ಸಾಹಿತ್ಯ ಭಾಷೆಯ ಮರುನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಅಕಾಡೆಮಿಯು ಬ್ಯಾರಿ ಭಾಷೆ ಮತ್ತು ಬ್ಯಾರಿ ಸಂಸ್ಕೃತಿಯ ಮರುನಿರ್ಮಾಣದ ಉದ್ದೇಶದಿಂದ ಜನರ ನಡುವೆ ಹೊಸದಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮೂಲ: ಅಮೀರುದ್ದೀನ್ ತೂವಕ್ಕಾಡ್, ಫಝಲ್ ಕೆ
ಅನುವಾದ: ಶೌಕತ್ ಅಲಿ ಕಿಕ್ಕರೆ
ಕೃಪೆ: ತೆಳಿಚ್ಚಂ ಮ್ಯಾಗಝಿನ್

1 8 9 10 11 12 14