ಹಳದಿ ನಾಯಿ

ಭಾಗ-೧

ನರಿಮರಿಯಂಥ ವಸ್ತುವೊಂದು ಬಾಯಿಯಿಂದ ಹೊರಬಂದಿತು. ಅದನ್ನು ದುರುಗುಟ್ಟಿ ನೋಡಿದನು. ನಂತರ ಅವನು ಕಾಲಿಂದ ತುಳಿದನು. ಆದರೆ ತುಳಿದಷ್ಟು ಆ ನರಿಮರಿ ದೊಡ್ಡದಾಗುತ್ತ ಹೋಯಿತು.
ಸೂಫಿ ಗುರುಗಳು ಈ ಕಥನವನ್ನು ನುಡಿದು ಮೌನಿಯಾದರು. ನಾನು ಪ್ರಶ್ನಿಸಿದೆ – ಶೇಖರೇ! ಈ ನರಿಮರಿಯ ತಾತ್ಪರ್ಯವೇನು? ತುಳಿದಷ್ಟು ಬೆಳೆದು ದೊಡ್ಡದಾಗುವ ನರಿಮರಿಯ ಆ ದೈವಿ ಗೂಢವೇನು? ಆಗ ಶೇಖ್ ಉಸ್ಮಾನರು ನುಡಿದರು –ಈ ನರಿಮರಿ ನಿನ್ನ ನಿಕೃಷ್ಟ ಚಿತ್ತವಾಗಿದೆ. ನಿಕೃಷ್ಟ ಚಿತ್ತವನ್ನು ನೀನು ಅದೆಷ್ಟೊ ತುಳಿಯುವೆಯೋ, ಅದು ಅಷ್ಟೇ ಬೃಹದಾಕಾರವಾಗಿ ಬೆಳೆಯುತ್ತದೆ.
ನಾನು ಬಿನ್ನವಿಸಿದೆ
ಹೇ! ಶೇಖರೇ, ಅನುಮತಿ ಇದೆಯೇ?
ಶೇಖರು ನುಡಿದರು – ಅನುಮತಿ ನೀಡಲಾಗಿದೆ.
ಅವರು ಮತ್ತೆ ಹಾರಿ ಹುಣಸೇ ಮರದ ಮೇಲೆ ಕುಳಿತುಕೊಂಡರು. ನಾನು ವುಜೂ (ಕೈಕಾಲು ಮುಖ ತೊಳೆದುಕೊಳ್ಳುವುದು) ಮಾಡಿದೆ. ಲೇಖನಿ, ಕುಡಿಕೆ ಹಾಗೂ ಕಾಗದ ತೆಗೆದುಕೊಂಡು ಕುಳಿತುಕೊಂಡೆ.
ಹೇ ವೀಕ್ಷಕರೇ! ಈ ವೃತ್ತಾಂತವನ್ನು ನಾನು ನನ್ನ ಎಡಗೈಯಿಂದ ಲೇಖನಿಯಲ್ಲಿ ಬಂಧಿಸುತ್ತೇನೆ. ಯಾಕೆಂದರೆ ಬಲಗೈ ನನ್ನ ಶತ್ರುವಿನ ಜೊತೆ ಸೇರಿಕೊಂಡಿದೆ. ಯಾವುದರಿಂದ ನಾನು ಅಭಯ ಯಾಚಿಸುತ್ತೇನೆ. ಅದನ್ನು ಬರೆಯಲು ನಿರ್ಧರಿಸಿದೆ. ಆದರೆ ಶೇಖರು ಕೈಯಿಂದ ಅಭಯ ಯಾಚಿಸುತ್ತಿದ್ದರು. ಅವರ ಪ್ರಕಾರ, ಯಾರು ಮನುಷ್ಯನ ಸಹಾಯಕ ಹಾಗೂ ಮಿತ್ರನಾಗಿದ್ದಾನೆ, ಅವನು ಮನುಷ್ಯನ ಶತ್ರುವಾಗಿದ್ದಾನೆ.


ನಾನು ಶೇಖರ ಈ ಉವಾಚವನ್ನು ಕೇಳಿ ಅರಿಕೆ ಮಾಡಿಕೊಂಡೆ. ಹೇ, ಶೇಖರೇ! ಇದನ್ನು ವಿಷದೀಕರಿಸಿ ನುಡಿಯಿರಿ. ಆಗ ಅವರು ಶೇಖ್ ಅಬೂ ಸಯೀದ್‌ರವರ ಈ ವೃತ್ತಾಂತವನ್ನು ಪ್ರಸ್ತಾಪಿಸಿದರು.
ಶೇಖ್ ಅಬುಸಯೀದ್ ಅವರ ಮನೆಯಲ್ಲಿ ಸತತವಾಗಿ ಮೂರನೇ ದಿನದ ಉಪವಾಸ ನಡೆದಿತ್ತು. ಅವರ ಪತ್ನಿಯ ಸಹನೆಯ ಕಟ್ಟೆ ಒಡೆದು ಹೋಯಿತು. ಆಕೆಯು ಅಸಹನೆಯಿಂದ ಅವರನ್ನು ದೂರಿದ್ದಳು. ಆಗ ಹೊರಬಂದ ಅಬುಸಯೀದ್ ಜನರ ಬಳಿ ಸವಾಲು ಹಚ್ಚಿ ಬೇಡಲು ಪ್ರಾರಂಭಿಸಿದರು. ಆಗ ಏನೆಲ್ಲಾ ಸಂಗ್ರಹವಾಗಿತ್ತು. ಅದನ್ನು ಮನೆಗೆ ಒಯ್ಯುವಾಗ ಕೋತ್ವಾಲನು ಜೇಬು ಕತ್ತರಿಸಿದ ಅಪರಾಧದಲ್ಲಿ ಅವರನ್ನು ಬಂಧಿಸಿದನು. ಹಾಗೂ ಶಿಕ್ಷೆಯ ರೂಪದಲ್ಲಿ ಒಂದು ಕೈಯನ್ನು ತುಂಡರಸಿದನು. ಬೇರ್ಪಡಿಸಿದ ಆ ತುಂಡು ಕೈಯನ್ನು ಎತ್ತಿಕೊಂಡು ತಂದು, ಎದುರಿಗೆ ಇಟ್ಟುಕೊಂಡು ಅಬುಸಯೀದ್ ಅಳತೊಡಗಿದರು. ಹೇ! ಹಸ್ತವೇ, ನೀನು ಲೋಭಿಯಾದೆ. ನೀನು ಸವಾಲು ಹಚ್ಚಿ ಬೇಡಿದೆ. ಹೀಗಾಗಿ ಅದರ ಪರಿಣಾಮ ಅನುಭವಿಸುತ್ತಿರುವೆ. ಈ ಕಥನವನ್ನು ಕೇಳಿ, ನಾನು ಶೇಖ್‌ರಲ್ಲಿ ಅನುಮತಿ ಕೋರಿದೆ. ಶೇಖರು ಮತ್ತೇ ಮೌನಿಯಾಗಿ, ನಂತರ ನುಡಿದರು.
“ಹೇ! ಅಬು ಖಾಸಿಂ ಖಿಜ್ರಿ, ಅಕ್ಷರವು ನುಡಿಯಾಗಿದೆ. ಹಾಗೂ ಬರವಣಿಗೆಯು ಉಪಾಸನೆಯಾಗಿದೆ”
“ವುಜೂ ಮಾಡಿ, ಮೊಣಕಾಲೂರಿ ಕುಳಿತುಕೋ! ಏನೆಲ್ಲವನ್ನು ನೀನು ಕೇಳುವೆ. ಅದನ್ನು ಅಕ್ಷರ ರೂಪದಲ್ಲಿ ದಾಖಲಿಸು” ಆಗ ಅವರು ಪವಿತ್ರ ಕುರಾನಿನ ಈ ಸ್ತೋತ್ರವನ್ನು ವಾಚಿಸಿದರು.
“ವ್ಯಥೆಯಿದೆ ಅದರ ಬಗ್ಗೆ, ಯಾರು ತಮ್ಮ ಕೈಗಳಿಂದ ಬರೆದರು. ಅಧಿಕ ವ್ಯಥೆಯಿದೆ, ಅವರ ಬಗ್ಗೆ ಯಾರು ಅದರಿಂದ ಹಣ ಗಳಿಕೆ ಮಾಡಿದರು”
ಅವರು ಈ ಸ್ತೋತ್ರವನ್ನು ಓದಿ ಖಿನ್ನರಾದರು. ಆಗ ನಾನು ಪ್ರಶ್ನಿಸಿದೆ, ಹೇ ಶೇಖರೇ, ತಾವು ಆ ಸ್ತೋತ್ರವನ್ನು ಯಾಕೆ ಪಠಿಸಿದಿರಿ? ಹಾಗೂ ಅದನ್ನು ಪಠಿಸಿ ಏಕೆ ಖಿನ್ನರಾದಿರಿ?


ಇದರ ಪ್ರತಿಕ್ರಿಯೆಯಾಗಿ ತಣ್ಣನೆಯ ನಿಟ್ಟುಸಿರು ಬಿಟ್ಟರು. ಹಾಗೂ ಅಹ್ಮದ್ ಹುಜ್ರಿಯ ಈ ಕಥನವನ್ನು ಹೇಳಿದರು. ಅದನ್ನು ಅಕ್ಷರಶಃ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಅಹ್ಮದ್ ಹುಜ್ರಿ ತನ್ನ ಕಾಲದ ಶ್ರೇಷ್ಠ ಕವಿಗಳಾಗಿದ್ದರು. ಆದರೆ ಒಂದು ಹಂತದಲ್ಲಿ ಹೀಗಾಯ್ತು. ಅವರ ನಗರದಲ್ಲಿ ಕವಿಗಳು ಅಧಿಕರಾದರು. ಯೋಗ್ಯ ಮತ್ತು ಅಯೋಗ್ಯರ ಮಧ್ಯದ ಅಂತರ ಅಳಿದು ಹೋಯಿತು. ಪ್ರತಿಯೊಬ್ಬ ಕವಿಯೂ ಪ್ರತಿಷ್ಠಿತ ಹಾಗೂ ಬಿರುದಾಂಕಿತರಾದರು. ಪ್ರಶಂಸಾ ಕಾವ್ಯವನ್ನು ಬರೆಯ ಹತ್ತಿದರು. ಅಹ್ಮದ್ ಹುಜ್ರಿಯವರು ಈ ಸ್ಥಿತಿಯನ್ನು ನೋಡಿ ಕಾವ್ಯರಚನೆಯನ್ನು ತ್ಯಜಿಸಿ ಶರಾಬಿನ ಮಾರಾಟ ಪ್ರಾರಂಭಿಸಿದರು. ಒಂದು ಕತ್ತೆಯನ್ನು ಖರೀದಿಸಿ, ಶರಾಬಿನ ಮಡಕೆಯನ್ನು ಹೇರಿಕೊಂಡು ಸಂತೆಗೆ ಹೋಗಿ ಶರಾಬನ್ನು ಮಾರುತ್ತಿದ್ದರು. ಅಹ್ಮದನು ಪಥಭ್ರಷ್ಟನಾಗಿದ್ದಾನೆ ಎಂದು ಹಲವರು ನಿಂದಿಸಿದರು. ಪವಿತ್ರ ವಾಚನದಿಂದ ಶರಾಬಿನ ವ್ಯವಹಾರದಲ್ಲಿ ಬಿದ್ದನು ಎಂದು ಶಪಿಸಿದರು. ಈ ನಿಂದನೆಗೆ ಅವರು ಸರ್ವಥಾ ಕಿವಿಗೊಡಲಿಲ್ಲ ಹಾಗೂ ತಮ್ಮ ವ್ಯವಹಾರದಲ್ಲಿ ತಲ್ಲೀನರಾಗಿದ್ದರು. ಆದರೆ ಒಂದು ದಿನ ಕತ್ತೆಯು ಒಂದು ಕವಲು ದಾರಿಗೆ ಒಂದು, ಮುಂದೆ ಸಾಗದೆ ಹಠಮಾರಿಯಾಯಿತು. ಅವರು ಕತ್ತೆಗೆ ಚಾಬೂಕಿನಿಂದ ಹೊಡೆಯಹತ್ತಿದರು. ಕತ್ತೆಯ ಅವರನ್ನು ತಿರುಗಿ ನೋಡಿ ಒಂದು ಕವನ ವಾಚನ ಮಾಡಿತು. ಕವನದಲ್ಲಿ ಅಭಿಪ್ರಾಯ ಕೋರಿಕೆಯ ಶಬ್ದ ಪ್ರಯೋಗವಿತ್ತು. ಅದರ ಸಾರಾಂಶವೆAದರೆ- ನಾನು ಕವಲು ದಾರಿಯಲ್ಲಿ ನಿಂತಿದ್ದೇನೆ ‘ನಡಿ’ ಎಂದು ಅಹ್ಮದ್ ನುಡಿಯುತ್ತಿದ್ದಾನೆ. ‘ನಡೆಯ ಬೇಡ’ ಎಂದು ಅಹ್ಮದ್ ನುಡಿಯುತ್ತಿದ್ದಾನೆ. ಇದನ್ನು ಕೇಳಿ ಅಹ್ಮದ್ ಹುಜ್ರಿ ತಮ್ಮ ಕೊರಳ ಪಟ್ಟಿಯನ್ನು ಹರಿದು ಹಾಕಿದರು. ಉದ್ಗಾರದಿಂದ ನುಡಿದರು- ಇಂಥ ಕಾಲಕ್ಕೆ ಕೆಡಕಾಗಲಿ, ಈಗ ಕತ್ತೆಗಳೂ ಕಾವ್ಯ ವಾಚನ ಮಾಡುತ್ತಿವೆ. ಆದರೆ ಅಹ್ಮದ್ ಹುಜ್ರಿಯ ನಾಲಿಗೆಯ ಸ್ತಬ್ಧವಾಗಿದೆ. ಆಗ ಅವರು ಆ ಕತ್ತೆಯನ್ನು ಬಿಡುಗಡೆಗೊಳಿಸಿ, ನಗರದ ಕಡೆ ಬಿಟ್ಟುಬಿಟ್ಟರು. ಹಾಗೂ ಸ್ವಯಂ ಬೆಟ್ಟ ಗುಡ್ಡದ ಕಡೆ ನಡೆದರು. ಅಲ್ಲಿ ತನ್ಮಯದ ಹುಚ್ಚುಸ್ಥಿತಿಯಲ್ಲಿ ಗಿಡ-ಮರಗಳನ್ನು ಸಂಬೋಧಿಸಿ ಕಾವ್ಯವಾಚನ ಮಾಡಹತ್ತಿದರು. ಹಾಗೂ ಉಗರಿನಿಂದ ಕಲ್ಲಿನ ಮೇಲೆ ಕವನ ಗೀರತೊಡಗಿದರು.


ಈ ವೃತ್ತಾಂತವನ್ನು ನುಡಿದು ಶೇಖರು ದೀರ್ಘ ಮೌನಿಯಾಗಿ, ತಲೆ ತಗ್ಗಿಸಿ ಕುಳಿತರು. ಆಗ ನಾನು ಅರುಹಿದೆ, ಶೇಖರೇ ಗಿಡ-ಮರಗಳು ನಿರ್ಜೀವವಾಗಿವೆ. ಅವು ಕಾವ್ಯವನ್ನು ಗ್ರಹಿಸುತ್ತವೆಯೆ? ಶೇಖರು ತಲೆ ಎತ್ತಿ, ನನಗೆ ದುರುಗುಟ್ಟಿ ನೋಡಿದರು. ಮತ್ತು ನುಡಿದರು- ನಾಲಿಗೆಯು ವಾಚನದ ರಹಿತ ಇರಲು ಸಾಧ್ಯವಿಲ್ಲ. ಕಾವ್ಯವು ಶ್ರೋತೃರಹಿತವಾಗಿ ಇರಲು ಸಾಧ್ಯವಿಲ್ಲ. ಕಾವ್ಯದ ಶ್ರೋತೃವು ವಾಸ್ತವವಾಗಿ ಮನುಷ್ಯನೇ, ಆದರೆ ಮನುಷ್ಯನಲ್ಲಿ ಶ್ರೋತೃತ್ವದ ಅರ್ಹತೆಯು ಹೋಗುತ್ತಿದೆ. ಶ್ರೋತೃತ್ವದಿಂದ ವಂಚಿತರಾದವರು ಹೊಸ ಶ್ರೋತೃಗಳನ್ನು ಹುಡುಕಲೇ ಬೇಕಾಗುತ್ತದೆ. ಯಾಕೆಂದರೆ ಕಾವ್ಯವು ಶ್ರೋತೃರಹಿತವಾಗಿ ಇರಲು ಸಾಧ್ಯವೇ ಇಲ್ಲ. ಮತ್ತೇ ಶೇಖರು ಸಯ್ಯದ್ ಅಲಿ ಅಲ್ ಜಜಾಯಿರ್‌ರವರ ವೃತ್ತಾಂತವನ್ನು ನುಡಿಯಹತ್ತಿದರು. – ಕೇಳಿ, ಸಯ್ಯದ ಅಲಿ ಅಲ್ ಜಜಾಯಿರ್ ತಮ್ಮ ಕಾಲದ ಹೆಸರುವಾಸಿಯಾದ ಪ್ರಚಂಡ ಪ್ರವಚನಕಾರರಾಗಿದ್ದರು. ಆದರೆ ಒಂದು ಕಾಲ ಹೀಗೆ ಬಂದಿತು, ಅವರು ದಿಢೀರನೆ ಪ್ರವಚನ ನೀಡುವದನ್ನೆ ನಿಲ್ಲಿಸಿದರು. ಹಾಗೂ ತಮ್ಮ ನಾಲಿಗೆಗೆ ಬೀಗ ಜಡಿದುಕೊಂಡರು. ಇದರಿಂದ ಪ್ರವಚನ ಕೇಳುಗರಲ್ಲಿ ತಳಮಳ ಉಂಟಾಯಿತು. ತಳಮಳ ಹೆಚ್ಚಾಗಾಗ ಜನರು ಅವರ ಸನ್ನಿಧಿಯಲ್ಲಿ ಹಾಜರಾಗಿ ಅರಿಕೆ ಮಾಡಿಕೊಂಡರು, ‘ಮಹನೀಯರೇ, ದಯವಿಟ್ಟು ಪ್ರವಚನ ನೀಡಿ’ ಆಗ ಅವರು ಉತ್ತರಿಸಿದರು. ‘ಹೌದಾ! ಹಾಗಾದರೆ ನನ್ನ ಪ್ರವಚನಾ ವೇದಿಕೆಯನ್ನು ಸ್ಮಶಾನದಲ್ಲಿ ವ್ಯವಸ್ಥೆ ಮಾಡಿ. ಇಂತಹ ವಿಚಿತ್ರ ಆದೇಶವನ್ನು ಕೇಳಿ ಜನ ತಬ್ಬಿಬ್ಬಾದರು. ಆದರೆ ಅವರ ಪ್ರವಚನದ ವೇದಿಕೆಯನ್ನು ಸ್ಮಶಾನದಲ್ಲಿ ವ್ಯವಸ್ಥೆ ಮಾಡಿದರು. ಅದನ್ನೇರಿ ಅವರು ಒಂದು ಅಮೋಘ ಪ್ರವಚನ ನೀಡಿದರು. ಇದರ ಪ್ರಭಾವವೇನಾಯಿತೆಂದರೆ ಗೋರಿಗಳಿಂದ ದುರೂದ್ (ಮೃತದ ಮುಕ್ತಿಗಾಗಿ ಪಠಿಸುವ ಸ್ತೋತ್ರ)ನ ಧ್ವನಿ ಮಾರ್ದನಿಗೊಂಡಿತು. ಆಗ ಸಯ್ಯದ್ ಅಲಿ ಅಲ್ ಜಜಾ಼ಯಿಲ್ ಜನವಸತಿಯ ಕಡೆಗೆ ಮುಖ ಮಾಡಿ, ಎತ್ತರದ ದನಿಯಲಿ ನುಡಿದರು- “ಹೇ! ನಗರವೇ, ನಿನಗೆ ದೇವರ ಕೃಪೆಯಾಗಲಿ, ನಿನ್ನ ಸಜೀವ ಜನರು ಕಿವುಡರಾಗಿದ್ದಾರೆ. ಆದರೆ ನಿನ್ನ ಮೃತ ಜನರಿಗೆ ಕೇಳುವ ಅರ್ಹತೆ ಪ್ರಾಪ್ತಿಯಾಗಿದೆ. ತದನಂತರ ಅವರು ಜನವಸತಿಯಿಂದ ದೂರ ಹೋಗಿ ಸ್ಮಶಾನದಲ್ಲಿ ಇರತೊಡಗಿದರು. ಅಲ್ಲಿ ಅವರು ಶವಗಳಿಗೆ ಪ್ರವಚನ ನೀಡುತ್ತಿದ್ದರು.
ಈ ವೃತ್ತಾಂತ ಕೇಳಿ ನಾನು ವಿಚಾರಿಸಿದೆ


ಯಾ ಶೇಖ್! ಸಜೀವಿಗಳಿಗೆ ಕೇಳುವ ಅರ್ಹತೆ ಯಾವಾಗ ಅಂತ್ಯಗೊಳುತ್ತದೆ. ಹಾಗೂ ಶವಗಳಿಗೆ ಕಿವಿಗಳು ಯಾವಾಗ ಪ್ರಾಪ್ತವಾಗುತ್ತವೆ ಇದಕ್ಕೆ ಅವರು ತಣ್ಣನೆಯ ನಿಟ್ಟುಸಿರು ಬಿಟ್ಟು ನುಡಿದುರು- ಇದು ದೈವೀ ರಹಸ್ಯವಾಗಿದೆ. ಭಕ್ತರಿಗೆ ಈ ರಹಸ್ಯವನ್ನು ತಿಳಿಸುವ ಅನುಮತಿ ಇಲ್ಲ. ಮತ್ತೆ ಅವರು ರೆಕ್ಕೆ ಬಡಿಯುತ್ತಾ ಹುಣಸೇ ಮರದ ಮೇಲೆ ಹೋಗಿ ಕುಳಿತರು. ಇಲ್ಲಿ ಈ ವಿಷಯ ಸ್ಪಷ್ಟೀಕರಸಿಬೇಕಾಗಿದೆ. ಶೇಖ್ ಉಸ್ಮಾನರು ಪಾರಿವಾಳ ಹಾಗೂ ಪಕ್ಷಿಗಳಂತೆ ಹಾರಬಲ್ಲವರಾಗಿದ್ದರು. ಆ ಮನೆಯಲ್ಲಿ ಒಂದು ಹುಣಸೆ ಮರವಿತ್ತು. ಚಳಿ, ಮಳೆ, ಬೇಸಿಗೆಯನ್ನು ಶೇಖರು ಇದೇ ಮರದ ನೆರಳಿನಲ್ಲಿ ಧ್ಯಾನ ಚಿಂತನೆಯಲ್ಲಿ ಮಗ್ನರಾಗಿರುತ್ತಿದ್ದರು. ಸೂರಿನ ಕೆಳಗೆ ಕುಳಿತುಕೊಳ್ಳು ನಿರಾಕರಿಸುತ್ತಿದ್ದರು. ಒಂದೇ ಸೂರಿನಡಿ ಉಸಿರುಗಟ್ಟುತ್ತಿದೆ. ಇನ್ನು ಎರಡನೇ ನಿರ್ಮಿತ ಸೂರನ್ನು ಸಹಿಸಿಕೊಳ್ಳುವ ತ್ರಾಣವೆಲ್ಲಿ? ಎಂದು ನುಡಿಯುತ್ತಿದ್ದರು. ಇದನ್ನು ಕೇಳಿ ಸಯ್ಯದ್ ರಜಿ಼ಯು ಆವೇಶದ ಸ್ಥಿತಿಗೆ ತಲುಪಿದನು ಹಾಗೂ ತನ್ನ ಮನೆಯನ್ನು ಧ್ವಂಸಗೊಳಿಸಿ, ಸೆಣಬಿನ ಒರಟು ಬಟ್ಟೆ ಧರಿಸಿ, ಹುಣಸೆ ಮರದ ಕೆಳಗೆ ಕುಳಿತನು. ಸಯ್ಯದ್ ರಜೀ಼, ಅಬು ಮುಸ್ಲಿಂ ಬಾಗ್ದಾದಿ, ಶೇಖ್ ಮಾಜಾ಼, ಅಬು ಜಾಫರ್ ಶಿರಾಜಿ, ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼, ಹಾಗೂ ಈ ಅಲ್ಪಭಕ್ತನು ಶೇಖ್‌ರ ಫಕೀರ ಅನುಯಾಯಿಗಳಾಗಿದ್ದರು. ನನ್ನ ಹೊರತು ಉಳಿದ ಐವರು ನಿರ್ಮಲ ಹೃದಯದ ಶ್ರೇಷ್ಠ ಸಾಧಕರಾಗಿದ್ದರು. ಫಕೀರಿ ಹಾಗೂ ಖಲಂದರಿಯು ಇವರ ಆಚರಣೆಯ ಪಂಥವಾಗಿತ್ತು.


ಶೇಖ್ ಹಮ್ಜಾ ಅವಿವಾಹಿತ ಜೀವನ ಸಾಗಿಸುತ್ತಿದ್ದನು. ಸೂರಿಲ್ಲದೆ ವಸತಿಯಲ್ಲಿ ವಾಸ ಮಾಡುತ್ತಿದ್ದನು. ಅವನು ಶೇಖರ್‌ರ ತತ್ವ-ಸಿದ್ಧಾಂತಗಳಿAದ ಪ್ರಭಾವಿತನಾಗಿದ್ದನು. ನಿರ್ಮಿತ ಸೂರಿನ ಕೆಳಗಡೆ ವಾಸಿಸುವುದು ‘ಶಿರ್ಕ’ (ದೇವರ ಜತೆ ಅನ್ಯರನ್ನು ಸೇರಿಸುವುದು) ಎಂದು ಭಾವಿಸುತ್ತಿದ್ದನು. ಸೂರು ಒಂದೇ ಇದೆ. ಅದು ‘ಏಕ’ನ ಅಧೀನದಲ್ಲಿದೆ ಭಕ್ತರು ಒಂದು ಸೂರಿಗೆ ಸಮನಾಂತರವಾಗಿ ಇನ್ನೊಂದು ಸೂರು ನಿರ್ಮಿಸುವುದು ತರವಲ್ಲ ಎಂದು ನಂಬಿದ್ದನು. ಅಬು ಮುಸ್ಲಿಂ ಬಾಗ್ದಾದಿ ಕುಲೀನ ಸ್ಥಾನದ ತಂದೆಯ ಮಗನಾಗಿದ್ದನು. ಆದರೂ ಮನೆ ಹಾಗೂ ತಂದೆಯ ಸಂಬAಧನ್ನು ತ್ಯಜಿಸಿ ಇಲ್ಲಿ ಬಂದು ಕುಳಿತಿದ್ದನು. ಹಾಗೂ ಅರ್ಹತೆಯು ಪರಮಸತ್ಯದ ಅರ್ಹತೆಯಾಗಿದೆ ಎಂದು ನುಡಿಯುತ್ತಿದ್ದನು. ಅಬು ಜಾಫರ್ ಶಿರಾಜಿಯು ಒಂದು ಸಲ ಧ್ಯಾನ ಸ್ಥಿತಿಯಲ್ಲಿ ತನ್ನ ಉಡುಪನ್ನು ಚಿಂದಿ ಚಿಂದಿಯಾಗಿ ಹರಿದಿದ್ದನು ಹಾಗೂ ಚಾಪೆಯನ್ನು ಸುಟ್ಟು ಹಾಕಿದ್ದನು. ಚಾಪೆಯು ಮಣ್ಣು ಹಾಗೂ ಮಣ್ಣಿನ ಮಧ್ಯೆ ಅಂತರ ಸೃಷ್ಟಿ ಮಾಡುತ್ತದೆ. ಉಡುಪು ಮಣ್ಣನ್ನು ಮಣ್ಣಿನ ಮೇಲೆ ಶ್ರೇಷ್ಠತಾ ಭಾವ ಉಂಟು ಮಾಡುತ್ತದೆ. ಆ ದಿನ ಅವನು ಸರ್ವಪರಿತ್ಯಾಗಿಯಾಗಿ ನಗ್ನವಾಗಿ ನೆಲದ ಮೇಲೆ ಕುಳಿತಿದ್ದನು. ಶೇಖರು ಮಣ್ಣು ತಮ್ಮ ಪಂಥ, ಇಟ್ಟಿಗೆಯನ್ನು ತನ್ನ ತಲೆದಿಂಬಾಗಿ, ಹುಣಸೆ ಮರಕೆ ಬೆನ್ನು ಹಚ್ಚಿ ಕುಳಿತಿದ್ದರು. ಅವರು ಈ ತುಚ್ಛ ಲೌಕಿಕದಿಂದ ಉನ್ನತರಾಗಿದ್ದರು. ಸ್ಮರಣೆ ಮಾಡುತ್ತಾ ಮಾಡುತ್ತಾ ಹಾರಾಡುತ್ತಿದ್ದರು. ಕೆಲವೊಮ್ಮೆ ಗೋಡೆಯ ಮೇಲೆ, ಮಗದೊಮ್ಮೆ ಹುಣಸೇ ಮರದ ಮೇಲೆ ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಆಕಾಶದೆತ್ತರಕ್ಕೆ ಹಾರಿ ವಾತಾವರಣದಲ್ಲಿ ಎಲ್ಲೊ ಅದೃಶ್ಯರಾಗುತ್ತಿದ್ದರು. ಒಂದು ದಿನ ನಾನು ವಿಚಾರಿಸಿದೆ-
“ಯಾ ಶೇಖ್! ಹಾರಾಡುವ ಶಕ್ತಿ ತಮಗೆ ಹೇಗೆ ಪ್ರಾಪ್ತವಾಯಿತು?” ಉಸ್ಮಾನರು ನುಡಿದರು- ಲೋಕ ಅಧೋಗತಿಯಿಂದ ಮೇಲೆದ್ದು ಬಂದೆ. ಅರಿಕೆ ಮಾಡಿಕೊಂಡೆ: ಯಾ ಶೇಖ್! ಲೋಕ ಪರಿತ್ಯಾಗ ಎಂದರೆ ಏನು? ಅವರು ನುಡಿದರು- ಲೋಕ ಪರಿತ್ಯಾಗದ ತಾತ್ಪರ್ಯ ನಿನ್ನ ಚಿತ್ತವಾಗಿದೆ. ಮತ್ತೇ ಕೇಳಿದೆ. ಚಿತ್ತ ಎಂದರೇನು? ಅದಕ್ಕವರು ಈ ಪ್ರಸಂಗವನ್ನು ನುಡಿದರು.
ಶೇಖ್ ಅಬು ಅಲ್ಬಾಸ್ ಅಶ್ಪಾಖಿ಼ಯವರು ಒಂದು ದಿನ ಮನೆಯಲ್ಲಿ ಪ್ರವೇಶಿಸಿದಾಗ, ಅವರ ಹಾಸಿಗೆಯ ಮೇಲೆ ಹಳದಿ ನಾಯಿಯೊಂದು ಮಲಗಿರುವುದನ್ನು ಕಂಡರು. ಬಹುಶಃ ಹಾದಿಯ ನಾಯಿಯು ಬಂದು ಮಲಗಿರಬಹುದೆಂದು ಅವರು ಭಾವಿಸಿದರು. ಅವರು ಅದನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅದು ಅವರ ನಿಲುವಂಗಿಯಲ್ಲಿ ಹೊಕ್ಕು ಅದೃಶ್ಯವಾಯಿತು. ಇದನ್ನು ಕೇಳಿ ನಾನು ಅರಿಕೆ ಮಾಡಿಕೊಂಡೆ
ಯಾ ಶೇಖ್! ಈ ಹಳದಿ ನಾಯಿ ಎಂದರೆ ಏನು?
ನುಡಿದರು- ಹಳದಿ ನಾಯಿ ನಿನ್ನ ಚಿತ್ತವಾಗಿದೆ.
ನಾನು ಕೇಳಿದೆ: ಯಾ ಶೇಖ್! ಹಾಗಾದರೆ ಚಿತ್ತ ಎಂದರೇನು?
ಶೇಖರು ನುಡಿದರು: ಅದು ಲೋಕಾಕಾಂಕ್ಷೆಯ ಅಧೋಗತಿಯಾಗಿದೆ.
ನಾನು ಕೇಳಿದೆ: ಯಾ ಶೇಖ್! ಅಧೋಗತಿ ಎಂದರೇನು?
ಶೇಖ್‌ರು ನುಡಿದರು: ಅಧೋಗತಿ ಎಂದರೆ ಜ್ಞಾನದ ಅಭಾವ
ನಾನು ವಿನಂತಿಸಿಕೊAಡೆ:
ಯಾ ಶೇಖ್ ಜ್ಞಾನದ ಅಭಾವ ಎಂದರೇನು?
ಶೇಖರು ನುಡಿದರು: ಬುದ್ಧಿಜೀವಿಗಳ ಬಾಹುಳ್ಯ. ನಾನು ಕೇಳಿದೆ, ಶೇಖರೇ, ವಿವರಣೆ ಕೊಡಿ, ಅವರು ತರ್ಕವನ್ನು ದೃಷ್ಟಾಂತದ ರೂಪದಲ್ಲಿ ನುಡಿದರು.


ಗತಕಾಲದಲ್ಲಿ ಒಬ್ಬ ದಾನಶೂರನೆಂದು ಹೆಸರುವಾಸಿಯಾಗಿದ್ದ ಬಾದಶಹಾನಿದ್ದನು. ಒಂದು ದಿನ ಅವನ ಆಸ್ಥಾನಕ್ಕೆ ತನ್ನನ್ನು ಬುದ್ದಿಜೀವಿ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಆಗಮಿಸಿದನು. ಹಾಜರಾಗಿ ಮಹಾಪ್ರಭುಗಳೇ ಬುದ್ಧಿಜೀವಿಗಳಿಗೆ ಗೌರವ ದೊರೆಯಬೇಕಾಗಿದೆ ಎಂದು ಬಿನ್ನವಿಸಿದನು. ಬಾದಶಾಹನು ಅವನನ್ನು ರಾಜಡುಪು ಹಾಗೂ ಚಿನ್ನದ ನಾಣ್ಯಗಳನ್ನು ನೀಡಿ ಗೌರವ ಪೂರ್ವಕವಾಗಿ ಕಳುಹಿಸಿಕೊಟ್ಟನು. ಈ ಸುದ್ದಿಯು ವ್ಯಾಪಕ ಪ್ರಚಾರ ಪಡೆಯಿತು. ತನ್ನನ್ನು ಬುದ್ಧಿಜೀವಿಯೆಂದೂ ತಿಳಿಯುತ್ತಿದ್ದ ಮತ್ತೊಬ್ಬ ವ್ಯಕ್ತಿಯು, ಆಸ್ಥಾನಕ್ಕೆ ಬಂದು, ನಿವೇದನೆ ಮಾಡಿ, ತನ್ನ ಇಷ್ಟಾರ್ಥವನ್ನು ಪೂರೈಸಿಕೊಂಡನು. ಹಾಗೆಯೇ ತನ್ನನ್ನೂ ಬುದ್ಧಿಜೀವಿಯೆಂದು ತಿಳಿಯುತ್ತಿದ್ದ ಮೂರನೇ ವ್ಯಕ್ತಿಯೂ ದರ್ಬಾರಿಗೆ ಬಂದು ಬಾದಶಹಾನಿಂದ ಬಳುವಳಿ ಪಡೆದನು. ಮುಂದೆ ಬುದ್ಧಿಜೀವಿಗಳ ಸಮೂಹವೇ ಆಸ್ಥಾನಕ್ಕೆ ಬರಹತ್ತಿತ್ತು. ಎಲ್ಲರೂ ಒಬ್ಬರ ನಂತರ ಒಬ್ಬರು ತಮ್ಮನ್ನು ಬುದ್ಧಿಜೀವಿ ಎಂದು ಹೇಳಿಕೊಂಡು ಇನಾಮು ಪಡೆದುಕೊಂಡು ಹೋಗುತ್ತಿದ್ದರು.
ಆ ಬಾದಶಹಾನ ಮಂತ್ರಿಯು ತುಂಬಾ ಚಾಣಾಕ್ಷನಾಗಿದ್ದನು. ಬುದ್ದಿಜೀವಿಗಳ ಈ ಜನಜಂಗುಳಿಯನ್ನು ಕಂಡು, ಅಸ್ಥಾನದಲ್ಲಿ ಒಂದು ದಿನ ತಲೆ ಮೇಲೆ ಕೈ ಇಟ್ಟುಕೊಂಡು ತಣ್ಣನೆಯ ನಿಟ್ಟುಸಿರು ಬಿಟ್ಟನು. ಇದನ್ನು ಗಮನಿಸಿದ ಬಾದಶಾಹನು ತಣ್ಣನೆಯ ನಿಟ್ಟುಸಿರು ಬಿಡಲು ಕಾರಣವೇನೆಂದು ವಿಚಾರಿಸಿದನು. ಆಗ ಮಂತ್ರಿಯು ಕೈ ಜೋಡಿಸಿ ನುಡಿದನು ‘ಮಹಾಪ್ರಭುಗಳೇ, ನನ್ನ ಪ್ರಾಣದ ಅಭಯ ನೀಡುವುದಾದರೆ ನುಡಿಯುವೆ” ಬಾದಶಹಾನು ಅಭಯ ನೀಡಿದನು. ಆ ಮಂತ್ರಿಯು ನುಡಿದನು- “ಹೇ, ದೈವೀ ಸ್ವರೂಪಿಯೇ, ನಿಮ್ಮ ಸಾಮ್ರಾಜ್ಯವು ಬುದ್ಧಿಜೀವಿಗಳಿಂದ ಬರಿದಾಗಿದೆ.” ಬಾದಶಹಾ ನುಡಿದನು. “ಇದು ವಿಚಿತ್ರ ವಿಸ್ಮಯವಾಗಿದೆ. ಗಮನಿಸುವುದಿಲ್ಲವೇ ನೀನು, ದಿನಾಲು ಇಲ್ಲಿ ಬುದ್ದಿಜೀವಿಗಳು ಬರುತ್ತಾರೆ. ನನ್ನಿಂದ ಇನಾಮು ತೆಗೆದುಕೊಂಡು ಹೋಗುತ್ತಾರೆ, ಅದನ್ನು ನೋಡಿಯೂ ನೀನು ಹೀಗೆ ನುಡಿಯುವಿಯಾ?


ಆ ಚಾಣಾಕ್ಷ್ಯ ಮಂತ್ರಿ ಆಗ ನುಡಿಯುತ್ತಾನೆ. “ಹೇ ವಿಶಾಲ ಹೃದಯಿ ಪ್ರಭುವೇ, ಬುದ್ಧಿಜೀವಿಗಳು ಹಾಗೂ ಕತ್ತೆಗಳಿಗೆ ಸಂಬAಧಿಸಿದAತೆ ಒಂದು ಲೋಕೋಕ್ತಿ ಇದೆ. ಎಲ್ಲಿ ಎಲ್ಲರೂ ಕತ್ತೆಗಳಾಗಿರುತ್ತಾರೆ, ಅಲ್ಲಿ ಕತ್ತೆಗಳಿರುವುದಿಲ್ಲ ಹಾಗೂ ಎಲ್ಲಿ ಎಲ್ಲರೂ ಬುದ್ದಿಜೀವಿಗಳಾಗಿರುತ್ತಾರೆ. ಅಲ್ಲಿ ಬುದ್ಧಿಜೀವಿಗಳ್ಯಾರೂ ಇರುವುದಿಲ್ಲ.
ಈ ತರ್ಕವನ್ನು ಆಲಿಸಿ, ನಾನೊಂದು ಪ್ರಶ್ನೆ ಕೇಳಿದೆ.
ಎಲ್ಲರೂ ಬುದ್ಧಿಜೀವಿಗಳಾಗಿದ್ದು, ಯಾರೂ ಬುದ್ಧಿಜೀವಿಗಳಿಲ್ಲದ ಸ್ಥಿತಿ ಯಾವಾಗ ಬರುತ್ತದೆ. ಶೇಖರು ನುಡಿದರು- ಯಾವಾಗ ಜ್ಞಾನಿಯು ತನ್ನ ಜ್ಞಾನವನ್ನು ಮರೆಮಾಚುತ್ತಾನೆ. ಪ್ರಶ್ನಿಸಿದೆ ಶೇಖರೇ ಜ್ಞಾನಿಯು ಯಾವಾಗ ಜ್ಞಾನವನ್ನು ಮರೆಮಾಚುತ್ತಾನೆ. ಆಗ ನುಡಿದರು ಅಜ್ಞಾನಿಯ ಜ್ಞಾನಿ, ಹಾಗೂ ಜ್ಞಾನಿಯ ಅಜ್ಞಾನಿ ಎನಿಸಿಕೊಂಡಾಗ, ಮತ್ತೆ ಪ್ರಶ್ನಿಸಿದೆ- ಅಜ್ಞಾನಿಯು ಜ್ಞಾನಿ ಹಾಗೂ ಜ್ಞಾನಿಯ ಅಜ್ಞಾನಿ ಯಾವಾಗ ಎನಿಸಿಕೊಳ್ಳುತ್ತಾನೆ. ಇದಕ್ಕೆ ಉತ್ತರವಾಗಿ ಮತ್ತೊಂದು ತರ್ಕವನ್ನು ವಿವರಿಸಿದರು. ಅದು ಹೀಗಿದೆ- ಒಬ್ಬ ಪ್ರಖ್ಯಾತ ಜ್ಞಾನಿಗೆ ಬಡತನವು ಅತಿಯಾಗಿ ಕಾಡಿತು. ಇದರಿಂದಾಗಿ ಅವನು ತನ್ನ ನಗರದಿಂದ ಇನ್ನೊಂದು ನಗರಕ್ಕೆ ವಲಸೆ ಹೋದನು. ಈ ಎರಡನೇ ನಗರದಲ್ಲಿ ಒಬ್ಬ ಗೌರವಾನ್ವಿತ ಹಿರಿಯರಿರುತಿದ್ದರು. ಅವರು ತಮ್ಮ ನಗರವಾಸಿಗಳಿಗೆ ಇಂತಹ ದಿನ, ಇಂತಹ ಸಮಯದಲ್ಲಿ ಒಬ್ಬ ಜ್ಞಾನಿಯು ಆಗಮಿಸುವವರಿದ್ದಾರೆ. ಅವರನ್ನು ಗೌರವಪೂರ್ವಕವಾಗಿ ಉಪಚರಿಸಿ, ಎಂದುಹೇಳಿ ತಾವು ಮತ್ತೊಂದು ಪ್ರದೇಶದ ಪ್ರಯಾಣಕ್ಕೆ ತೆರಳಿದರು. ನಗರವಾಸಿಗಳೆಲ್ಲರೂ ನಿಗದಿತ ಸಮಯಕ್ಕೆ ಬಂದರಿಗೆ ಆಗಮಿಸಿದರು. ಅದೇ ಸಮಯಕ್ಕೆ ಒಂದು ಹಡಗು ಬಂದು ತಂಗಿತು. ಇದೇ ಹಡಗಿನಲ್ಲಿ ಆ ಜ್ಞಾನಿಗಳು ಪ್ರಯಾಣ ಮಾಡುತ್ತಿದ್ದರು. ಅದೇ ಹಡಗಿನಲ್ಲಿ ಒಬ್ಬ ಚಮ್ಮಾರನು ಅವರ ಸಹ ಪ್ರಯಾಣಿಕನಾಗಿದ್ದನು. ಆ ಚಮ್ಮಾರನು ತುಂಬಾ ಕುಟೀಲನೂ, ಆಲಸಿಯೂ ಆಗಿದ್ದನು. ಸರಳ ಸ್ವಭಾವದ ಈ ಜ್ಞಾನಿ ಮಹಾಪುರುಷನನ್ನು ಕಂಡು ಅವನು ತನ್ನ ಸಾಮಗ್ರಿಗಳನ್ನು ಅವರ ಮೇಲೆ ಹೇರಿದನು. ಹಾಗೂ ತಾನು ಕೈ ಬೀಸುತ್ತಾ ನಡೆದನು. ಹಡಗಿನಿಂದ ಇಬ್ಬರೂ ಇಳಿದಾಗ ಸೆಣಬಿನ ವಸ್ತçಧಾರಿ ಹಾಗೂ ಹಲವು ಸಾಮಗ್ರಿಗಳನ್ನು ಹೊತ್ತುಕೊಂಡಿದ್ದ ಅವರನ್ನು ಯಾರೂ ಗಮನಿಸಲಿಲ್ಲ ಹಾಗೂ ಚಮ್ಮಾರನನ್ನು ಗೌರವಪೂರ್ವಕ ಇಳಿಸಿಕೊಂಡು ತಮ್ಮ ಜೊತೆ ಕರೆದೊಯ್ದರು.

-ಮುಂದುವರೆಯುವುದು

ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್

ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.

Leave a Reply

*