ಮಕ್ಕಾದಿಂದ ಮಾಲ್ಕಂ ಎಕ್ಸ್‌ ಬರೆದ ಪತ್ರ

ಭೂಮಿಯ ಮೇಲಿನ ಅತ್ಯಂತ ಪವಿತ್ರ ನಗರವೂ, ಮುಸ್ಲಿಮೇತರರಿಗೆ ತಮ್ಮ ಕಣ್ಣಿನಿಂದಲೂ ಅನುಭವಿಸಲಾಗದ, ಪರಿಶುದ್ಧ ಮಕ್ಕಾ ನಗರದಲ್ಲಿ ನಾನು ಈಗಷ್ಟೇ ನನ್ನ ಹಜ್‌ ಯಾತ್ರೆ ಮುಗಿಸಿದ್ದೇನೆ. ಪ್ರತಿಯೊಬ್ಬ ಮುಸ್ಲಿಮನ ಬದುಕಿನಲ್ಲೂ ಈ ಪುಣ್ಯ ಯಾತ್ರೆ ಅತ್ಯಂತ ಪ್ರಮುಖವಾದ ಘಟನೆಯಾಗಿರುತ್ತದೆ. ಇಲ್ಲಿಗೀಗ 2,26,000 ಕ್ಕೂ ಹೆಚ್ಚು ಮಂದಿ ಅರೇಬಿಯಾದ ಹೊರಗಿನಿಂದ ಬಂದು ಸೇರಿದ್ದಾರೆ. ಅವರಲ್ಲಿ ಟರ್ಕಿಯಿಂದ ಬಂದವರೇ ಹೆಚ್ಚು. ಟರ್ಕಿಯು ಇಸ್ಲಾಮಿಂದ ದೂರ ಸರಿಯುತ್ತಿದೆ ಎಂಬ ಪಾಶ್ಚಾತ್ಯರ ಪ್ರಚಾರವನ್ನು ಅಲ್ಲಗೆಳೆಯುವಂತೆ ಸುಮಾರು 600 ಕ್ಕೂ ಹೆಚ್ಚು ಬಸ್ಸುಗಳಲ್ಲಿ ಬಹುತೇಕ 50,000 ಮಂದಿ ಟರ್ಕಿಯಿಂದ ಬಂದವರಿದ್ದಾರೆ.

ಅಮೇರಿಕಾದರಿಂದ ಬಂದು ಮಕ್ಕಾದಲ್ಲಿ ಹಜ್‌ ನಿರ್ವಹಿಸಿದ ಇಬ್ಬರನ್ನಷ್ಟೇ ನನಗೆ ಗೊತ್ತು, ಆ ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡ ವೆಸ್ಟ್‌ ಇಂಡಿಯನ್ನರು. ತಮ್ಮ ಇಬ್ಬರು ಪುತ್ರರು ಹಾಗೂ ಕೆಲವು ಅನುಯಾಯಿಗಳೊಂದಿಗೆ ಎಲಿಜಾ಼ ಮುಹಮ್ಮದ್‌ ಮಕ್ಕಾಗೆ ಭೇಟಿ ನೀಡಿದ್ದರು. ಅವರ ಭೇಟಿಯು ಹಜ್‌ ಕಾಲಘಟ್ಟದಲ್ಲಿ ಅಲ್ಲವಾದ್ದರಿಂದ ಅವರ ತೀರ್ಥಯಾತ್ರೆಯನ್ನು ʼಉಮ್ರಾʼ ಎಂದು ಪರಿಗಣಿಸಲಾಗುತ್ತದೆ. ʼಉಮ್ರಾʼಗಿಂತಲೂ ಹಜ್‌ ಯಾತ್ರೆಗೆ ಹೆಚ್ಚಿನ ಮಹತ್ವವಿದೆ. ಅದಾಗ್ಯೂ, ಮುಸ್ಲಿಂ ಜಗತ್ತಿನಲ್ಲಿ ಉಮ್ರಾವನ್ನು ಕೂಡಾ ಬಹುದೊಡ್ಡ ಅನುಗ್ರಹವೆಂದೇ ಕಾಣಲಾಗುತ್ತದೆ. 

ಇದುವರೆಗೆ ಕನಿಷ್ಟ 10 ಮಂದಿ ಅಮೇರಿಕನ್ನರಾದರೂ ಮಕ್ಕಾ ನಗರಕ್ಕೆ ಭೇಟಿ ನೀಡಿರುವ ಬಗ್ಗೆ ನನಗೆ ಬಲವಾದ ಅನುಮಾನವಿದೆ. ಹಾಗೂ, ನಿಜವಾದ ಹಜ್‌ ನಿರ್ವಹಿಸಿದ ಮೊದಲ ಅಮೇರಿಕನ್-ನೀಗ್ರೋ ನಾನೇ ಇರಬಹುದು.  ನಾನಿದನ್ನು ಹೆಗ್ಗಳಿಕೆಗಾಗಿ ಹೇಳುತ್ತಿಲ್ಲ, ಬದಲಾಗಿ ಇದು ಎಷ್ಟೊಂದು ಅನುಗ್ರಹೀತ ಹಾಗೂ ಅದ್ಭುತ ಸಾಧನೆಯೆಂದು ಹೇಳಲು, ಮತ್ತು ನೀವು ಅದರ ಆಧಾರದ ಮೇಲೆ ಇದನ್ನು ಪರಿಗಣಿಸಲೆಂಬ ಕಾರಣಕ್ಕೆ ಮಾತ್ರ ಹೇಳುತ್ತಿದ್ದೇನೆ. 

ಈ ಪುಣ್ಯ ನಗರದ ಯಾತ್ರೆಯು ನನಗೆ ನೀಡಿದ ಅನನ್ಯ ಅನುಭವವು ನನ್ನ ಹುಚ್ಚು ಬಯಕೆಗಳನ್ನು ಮೀರಿದ ಹಲವಾರು ಅನಿರೀಕ್ಷಿತ ಅನುಗ್ರಹಗಳನ್ನು ಪಡೆದ ಒಂದು ದಿವ್ಯ ಅನುಭೂತಿ.

 ನಾನು ಜಿದ್ದಾಗೆ ಆಗಮಿಸಿದ ಕೆಲವೇ ಘಳಿಗೆಯಲ್ಲಿ ಘನತೆವೆತ್ತ ಕಿರೀಟಧಾರಿ ಯುವರಾಜ ಫೈಸಲ್‌ ರ ಸಂದೇಶದೊಂದಿಗೆ ಅವರ ಪುತ್ರ, ರಾಜಕುಮಾರ ಮುಹಮ್ಮದ್‌ ಫೈಸಲ್‌ ನನ್ನನ್ನು ಭೇಟಿಯಾದರು. ಅವರ ವಿಶೇಷ ಗಣ್ಯ ಅತಿಥಿಯಾಗಿ ನಾನು ಆತಿಥ್ಯ ಸ್ವೀಕರಿಸಬೇಕೆಂಬುದು ರಾಜ ಫೈಸಲ್ ಅವರ ಅಭಿಲಾಷೆಯಾಗಿತ್ತು. ಅದಾದ ಬಳಿಕ ಜರುಗಿದ್ದನ್ನು ವರ್ಣಿಸಲು ಹಲವು ಗ್ರಂಥಗಳೇ ಬೇಕಾದೀತು. ಅದರ ಬಳಿಕ ನನಗೆ ಸಿಕ್ಕ ಆತಿಥ್ಯ ಅದ್ಭುತವಾಗಿತ್ತು. ನನಗಾಗಿಯೇ ಖಾಸಗಿ ಕಾರು, ಓರ್ವ ಚಾಲಕ, ಧಾರ್ಮಿಕ ಮಾರ್ಗದರ್ಶಿ ಹಾಗೂ ಅನೇಕ ಸಹಾಯಕರನ್ನು ನೇಮಿಸಲಾಯಿತು. ನನ್ನನ್ನು ಅತೀ ಗೌರವಾದರಗಳಿಂದ ಕಾಣಲಾಯಿತು. ಅದುವರೆಗೂ ನಾನು ಅಷ್ಟೊಂದು ಮರ್ಯಾದೆ ಎಂದೂ ಪಡೆದಿರಲಿಲ್ಲ. ಈ ಅತಿಯಾದ ಆದರಕ್ಕೆ ನಾನು ಅನರ್ಹ ಹಾಗೂ ವಿನಮ್ರ ಭಾವನೆಯನ್ನು ನನ್ನಲ್ಲಿ ಉಂಟುಮಾಡಿತು. ಓರ್ವ ಅಮೇರಿಕನ್‌-ಕಪ್ಪು ಮನುಷ್ಯನಿಗೆ ಇಷ್ಟೊಂದು ಆದರವೇ? ಯಾರು ನಂಬಿಯಾರು ಇದನ್ನು? ಆದರೆ, ಮುಸ್ಲಿಂ ಜಗತ್ತಿನಲ್ಲಿ, ಒಬ್ಬ ಇಸ್ಲಾಮನ್ನು ಸತ್ಯವೆಂದು ಒಪ್ಪಿಕೊಂಡಾಗ ಕರಿಯನೋ-ಬಿಳಿಯನೋ ಎಂಬ ಎಲ್ಲ ವ್ಯತ್ಯಾಸವನ್ನೂ ತೊರೆಯುತ್ತಾನೆ. ಎಲ್ಲಾ ಮನುಷ್ಯರನ್ನು ಮನುಷ್ಯರೆಂದೇ ಇಸ್ಲಾಂ ಪರಿಗಣಿಸಿದೆ. ಅರೇಬಿಯಾದ ಜನ ದೇವನೊಬ್ಬನೇ ಎಂದು ವಿಶ್ವಾಸವಿಡುತ್ತಾರೆ, ಹಾಗೂ ಎಲ್ಲಾ ಮನುಷ್ಯರೂ ಒಂದೇ, ಎಲ್ಲಾ ಸಹೋದರ-ಸಹೋದರಿಯರೂ ಒಂದೇ ಮಾನವ ಕುಟುಂಬ ಎಂದು ನಂಬುತ್ತಾರೆ.

ನಾನು ಇಲ್ಲಿ ಅರೇಬಿಯಾದಲ್ಲಿ ನೋಡಿದಂತಹ ಪ್ರಾಮಾಣಿಕ ಆತಿಥ್ಯ ಮತ್ತು ನಿಜವಾದ ಸಹೋದರತ್ವದ ಅಭ್ಯಾಸವನ್ನು ನಾನು ಹಿಂದೆಂದೂ ಕಂಡಿಲ್ಲ. ವಾಸ್ತವದಲ್ಲಿ, ಈ ಪುಣ್ಯ ಹಜ್‌, ನಾನು ಈ ಹಿಂದೆ ಹೊಂದಿದ್ದ ಎಲ್ಲಾ ಆಲೋಚನೆಗಳ ಮಾದರಿಗಳನ್ನು, ಹಿಂದಿನ ಪೂರ್ವಾಗ್ರಹಗಳನ್ನು ಪಕ್ಕಕ್ಕೆ ಎತ್ತಿ ಎಸೆಯುವಂತೆ ಮಾಡಿದೆ. ನಾನೇನನ್ನೇ ನಂಬಲಿ, ಅದರಲ್ಲಿ ಧೃಡವಾದ ನಂಬಿಕೆ ಹೊಂದಿದ್ದರೂ,  ಯಾವತ್ತೂ ಮುಕ್ತ, ತೆರೆದ ಮನಸ್ಸನ್ನು ಇಡಲು ನಾನು ಶ್ರಮಿಸುತ್ತಿದ್ದರಿಂದ ಈ ವಾಸ್ತವಕ್ಕೆ ಒಗ್ಗಿಕೊಳ್ಳುವುದು ನನಗೆ ಕಷ್ಟವೆಂದು ಅನ್ನಿಸಲೇ ಇಲ್ಲ. ಆತ್ಯಂತಿಕ ಸತ್ಯದ ಕುರಿತ ಬೌದ್ಧಿಕ ಅನ್ವೇಷಣೆಯೊಂದಿಗೆ ಯಾರೊಂದಿಗೂ ಕೈಜೋಡಿಸಬೇಕಾದ ನಮ್ಯತೆಯನ್ನು (flexibility) ಪ್ರತಿಬಿಂಬಿಸಲು ಇದು ಖಂಡಿತಾ ಅಗತ್ಯವಾಗಿದೆ.

 ಭೂಮಿಯ ಎಲ್ಲಾ ಭಾಗದಿಂದ ಬಂದ, ಎಲ್ಲಾ ವರ್ಣಗಳ ಜನರು ಇಲ್ಲಿದ್ದಾರೆ. ಇಲ್ಲಿ (ಮಕ್ಕಾದಲ್ಲಿ) ಕಳೆಯುತ್ತಿರುವ ದಿನಗಳಲ್ಲಿ, ಹಜ್‌ ಕರ್ಮದ ರೀತಿ ರಿವಾಜುಗಳನ್ನು ಕಲಿಯುತ್ತಿರುವ ನಡುವೆ, ನಾನು ಎಲ್ಲರೊಂದಿಗೆ ಅದೇ ತಟ್ಟೆಯಲ್ಲಿ ಉಂಡಿದ್ದೇನೆ, ಅದೇ ಲೋಟದಲ್ಲಿ ಕುಡುದಿದ್ದೇನೆ. ರಾಜ, ಸೇವಕ, ಬಲ್ಲಿದ, ಬಿಳಿಯರಲ್ಲಿ ಬಿಳಿಯ, ಕಡು ನೀಲಿ ಕಣ್ಣವ, ಕಂದು ಕೂದಲಿನವರೊಂದಿಗೆ ಅದೇ ತಟ್ಟೆಯಲ್ಲಿ ಉಂಡು, ಅವರೊಂದಿಗೆ ಹಾಸಿಗೆ ಹಂಚಿ ಮಲಗಿ ಎದ್ದಿದ್ದೇನೆ. ಅವರ ನೀಲಿ ಕಣ್ಣಲ್ಲಿ ನನ್ನನ್ನು ಅವರಂತೆಯೇ ಎಂದು ನೋಡುವ ನೋಟವನ್ನು ಕಂಡಿದ್ದೇನೆ. ಏಕೆಂದರೆ, ಏಕ ದೇವ ಅಲ್ಲಾಹನಲ್ಲಿ ವಿಶ್ವಾಸವಿರುವ ಅವರ ಮೆದುಳಲ್ಲಿ ತಾನು ಬಿಳಿಯನೆಂಬ ಪ್ರಜ್ಞೆ ಕಳೆದು ಹೋಗುತ್ತದೆ. ಅದು ಇತರೆ ವರ್ಣದವರೊಂದಿಗಿನ ಅವರ ವರ್ತನೆಗಳಲ್ಲಿ ಸ್ವಾಭಾವಿಕವಾಗಿ ಮಾರ್ಪಾಡನ್ನು ತರುತ್ತದೆ.  

ಏಕತ್ವದ ಮೇಲಿನ ಅವರ ನಂಬಿಕೆಗಳು ಅವರನ್ನು ಅಮೇರಿಕನ್ ಬಿಳಿಯರಿಗಿಂತ ತುಂಬಾ ವಿಭಿನ್ನವಾಗಿಸಿದೆ, ಅವರ ಬಣ್ಣ  ಅವರೊಂದಿಗೆ ನಾನು ವ್ಯವಹರಿಸುವಾಗ ನನ್ನ ಮನಸ್ಸಿನಲ್ಲಿ ಯಾವುದೇ ಪಾತ್ರವನ್ನು ವಹಿಸಿರಲಿಲ್ಲ. ಒಬ್ಬ ದೇವರಿಗೆ ಅವರ ಪ್ರಾಮಾಣಿಕತೆ ಮತ್ತು ಎಲ್ಲಾ ಜನರನ್ನು ಸಮಾನವಾಗಿ ಸ್ವೀಕರಿಸುವುದು ಅವರನ್ನು ಬಿಳಿಯೇತರ ವರ್ಣದವರನ್ನೂ ಇಸ್ಲಾಂನ ಸಹೋದರತ್ವಕ್ಕೆ ಸ್ವೀಕರಿಸುವಂತೆ ಮಾಡುತ್ತದೆ. 

ಒಂದು ವೇಳೆ ಅಮೆರಿಕನ್ನರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡರೆ, ಅಲ್ಲಾಹನನ್ನು ಏಕದೇವನೆಂದು ಒಪ್ಪಿಕೊಂಡರೆ ಅವರು ಖಂಡಿತವಾಗಿಯೂ ಎಲ್ಲಾ ಮನುಷ್ಯರು ಒಂದೇ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಹಾಗೂ ಬಣ್ಣಗಳಿಂದ ಇತರೆ ಮನುಷ್ಯರನ್ನು ಅಳೆಯುವದನ್ನು ನಿಲ್ಲಿಸುತ್ತಾರೆ. ವರ್ಣಭೇದ ನೀತಿಯು ಈಗ ಗುಣಪಡಿಸಲಾಗದ ಕ್ಯಾನ್ಸರ್‌ನಂತೆ ಅಮೆರಿಕದಲ್ಲಿ ಹಾವಳಿಯನ್ನು ಹೊಂದಿದ್ದು, ಎಲ್ಲಾ ಚಿಂತಕ ಅಮೆರಿಕನ್ನರು ಜನಾಂಗೀಯ ಸಮಸ್ಯೆಗೆ ಈಗಾಗಲೇ ಪರಿಹಾರವಾಗಿ ಸಾಬೀತಾಗಿರುವ ಇಸ್ಲಾಮನ್ನು ಹೆಚ್ಚು ಸ್ವೀಕರಿಸಬೇಕು. ಹಾಗೆ ಮಾಡುವುದರಿಂದ, ಅಮೇರಿಕನ್ ಬಿಳಿಯರು ತೋರುವ ವರ್ಣಭೇದ ನೀತಿಯ ವಿರುದ್ಧ ಪ್ರತಿಕ್ರಿಯಿಸುವಂತೆ ಕಪ್ಪು ವರ್ಣೀಯರ ಆಳಮನಸ್ಸು ಪ್ರೇರೇಪಿಸಿದ ಪ್ರತಿರೋಧವೇ “(ಬಿಳಿಯೆರೆಡೆಗಿನ) ಜನಾಂಗೀಯ ಹಗೆತನ” ಎಂಬ ರಕ್ಷಣಾತ್ಮಕ ದೂಷಣೆಗಳನ್ನೂ ನೀಗ್ರೋಗಳು ಹೂಡಲಾರರು. ಆದರೆ ವರ್ಣಭೇದ ನೀತಿಯ ಮೇಲಿನ ಅಮೇರಿಕದ ಹುಚ್ಚು ಗೀಳು ಅದನ್ನು ಸ್ವಯಂ ನಾಶದ ಹಾದಿಗೆ ಕರೆದೊಯ್ಯುತ್ತದೆ.

ಕಾಲೇಜು ಮತ್ತು ಯುನಿವರ್ಸಿಟಿಗಳಲ್ಲಿರುವ ಬಿಳಿಯ ಯುವ ತಲೆಮಾರು, ಅವರದ್ದೇ ತಲೆಮಾರುಗಳೊಂದಿಗೆ, ಆಧ್ಯಾತ್ಮಿಕ ಮೋಕ್ಷಕ್ಕಾಗಿ ಇಸ್ಲಾಂ ಧರ್ಮಕ್ಕೆ ಬದಲಾಗುತ್ತಾರೆ ಹಾಗೂ ಹಳೆಯ ತಲೆಮಾರನ್ನು ತಮ್ಮೊಂದಿಗೆ ಬದಲಾಗಲು ಒತ್ತಾಯಿಸಲಿದ್ದಾರೆ ಎಂದು ನಾನು ನಂಬುತ್ತೇನೆ.

ಹಿಟ್ಲರನ ನಾಝಿ ಜರ್ಮನಿಯಂತಾಗದೆ, ಜನಾಂಗೀಯವಾದದ ವಿಪತ್ತಿನಿಂದ ಬಿಳಿಯ ಅಮೇರಿಕಕ್ಕೆ ರಕ್ಷಿಸಿಕೊಳ್ಳಲು ಇದೊಂದೇ ಉತ್ತಮ  ದಾರಿಯಾಗಿದೆ.

ಈಗ ಮೆಕ್ಕಾಗೆ ಭೇಟಿ ನೀಡಿದ್ದೇನೆ, ನನ್ನ ಧರ್ಮದ (ಇಸ್ಲಾಂ) ಆಳವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನ್ನ ಸ್ವಂತ ಆಧ್ಯಾತ್ಮಿಕ ಮಾರ್ಗವನ್ನು ಸರಿಹೊಂದಿಸಿದ್ದೇನೆ. ಒಂದೆರಡು ದಿನಗಳ ಬಳಿಕ ನಾನು ನಮ್ಮ ಪಿತೃಭೂಮಿ ಆಫ್ರಿಕಾ ದೇಶಗಳಿಗೆ ಪ್ರಯಾಣ ಬೆಳೆಸಲಿದ್ದೇನೆ. ಅಲ್ಲಾಹನ ಇಚ್ಛೆಯಂತೆ, ಮೇ 20 ರೊಳಗೆ ನಾನು ನ್ಯೂಯಾರ್ಕ್‌ಗೆ ಹಿಂದಿರುಗುವ ಮೊದಲು, ಸುಡಾನ್, ಕೀನ್ಯಾ, ಟಂಗ್ವಾನ್ಯಿಕಾ, ಜಂಜಿಬಾರ್, ನೈಜೀರಿಯಾ, ಘಾನಾ ಮತ್ತು ಅಲ್ಜೀರಿಯಾಗಳಿಗೆ ನಾನು ಭೇಟಿ ನೀಡುತ್ತೇನೆ.

ನೀವು ಬಯಸಿದಲ್ಲಿ ಈ ಪತ್ರವನ್ನು ನೀವು ಬಳಸಬಹುದು,

ಅಲ್‌-ಹಜ್‌ ಮಲಿಕ್‌ ಅಲ್-ಶಬ್ಬಾಝ್

 (ಮಾಲ್ಕಂ ಎಕ್ಸ್)

Leave a Reply

*