ಪರಂಪರಾಗತ ಮತ್ತು ಬೌದ್ಧಿಕ ವಿಜ್ಞಾನ;ಇಸ್ಲಾಮಿ ಸಾರಸ್ವತ ಲೋಕದ ಅನನ್ಯತೆ

ಇಸ್ಲಾಮೀ ವೈಜ್ಞಾನಿಕ ಪರಂಪರೆಯಲ್ಲಿ ಎರಡು ಬಗೆಯ ಧಾರೆಗಳು ಕಂಡುಬರುತ್ತವೆ; ಒಂದು ಪರಂಪರಾಗತ ವಿಜ್ಞಾನ(Transmitted knowledge), ಮತ್ತೊಂದು ಬೌದ್ದಿಕ ವಿಜ್ಞಾನ(intellectual knowledge).ಮೊದಲನೆಯದರ ವೈಶಿಷ್ಟೈತೆಯೇನೆಂದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಸ್ತಾಂತರ ಮಾಡಲಾಗುತ್ತದೆ. ಹಾಗಾಗಿಯೇ ಅದನ್ನು ಕಲಿಯಲು ಯಾರನ್ನಾದರೂ ಅನುಗಮಿಸುವುದು ಅನಿವಾರ್ಯ. ತದ್ವಿರುದ್ದವೆಂಬಂತೆ, ಬೌದ್ದಿಕ ವಿಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಸಲಾಗುವುದಿಲ್ಲ. ಮಾರ್ಗದರ್ಶನಕ್ಕಾಗಿ ಅಧ್ಯಾಪಕರನ್ನು ಆಶ್ರಯಿಸಬೇಕಾಗಿ ಬರಬಹುದು,ಅಷ್ಟೆ. ಪ್ರಸ್ತುತ ಜ್ಞಾನವನ್ನು ಕರಗತ ಮಾಡಲಿರುವ ಏಕೈಕ ಮಾರ್ಗ, ಬದ್ದಿಮತ್ತೆಗೆ ತರಬೇತಿ ನೀಡುವ ಮೂಲಕ ಆತ್ಮಶೋಧನೆ ಮಾಡಿ ತನ್ನೊಳಗೇ ಅವನ್ನು ಕಂಡರಿಸುವುದು. ಈ ಕೈಂಕರ್ಯ ಮಾಡದವನು ಎಲ್ಲಾ ವಿಚಾರಗಳಲ್ಲೂ ಇತರರನ್ನು ಆತು ಕೊಳ್ಳಬೇಕಾಗಿ ಬರುತ್ತದೆ.

ಪರಂಪರಾಗತವಾಗಿ ದೊರಕುವ ಜ್ಞಾನ ಧಾರೆಗಳಿಗೆ ಉದಾಹರಣೆ ಕಾನೂನು,ಇತಿಹಾಸ,ಭಾಷೆ ಇತ್ಯಾದಿ. ಎಲ್ಲಾ ಗುಣಗಳಲ್ಲಿ ಹೊಂದಿಕೆಯಿಲ್ಲದಿದ್ದರೂ ಗಣಿತವನ್ನು ಬೌದ್ದಿಕ ಜ್ಞಾನ ಪರಂಪರೆಯ ಉದಾಹರಣೆಯಾಗಿ ಹೇಳಬಹುದು. ʼಎರಡು ಕೂಡಿಸು ಎರಡು ಸಮ ನಾಲ್ಕು. ಕಾರಣ ಟೀಚರ್‌ ಹಾಗೆ ಹೇಳಿದ್ದಾರೆʼ ಎನ್ನುವುದು ಅಸಂಬದ್ದ. ಗಣಿತಾತ್ಮಕ ಸರಿ ತಪ್ಪುಗಳನ್ನು ಪರಸಹಾಯವಿಲ್ಲದೆ ಬುದ್ದಿ ತಾನೇ ಕಂಡು ಕೊಂಡುಕೊಳ್ಳುತ್ತದೆ.ಮೊದಲನಯದ್ದು ಮೌಖಿಕ ಪರಂಪರೆಯನ್ನು ಆಧರಿಸಿಕೊಂಡಿವೆ. ಎಲ್ಲಾ ಸಂಸ್ಕೃತಿ ಮತ್ತು ಧರ್ಮ ಪರಂರಯಲ್ಲಿ ಪ್ರಸ್ತುತ ಬಗೆಯ ಜ್ಞಾನಧಾರೆ ಇರುವುದಾಗಿ ಕಾಣಬಹುದು. ಬೌದ್ದ ಧರ್ಮದಲ್ಲಿ ಜ್ಞಾನೋದಯವೆಂಬುದು ಎಲ್ಲಾತರದ ಸಾಮಾನ್ಯ ಅರಿವುಗಳಿಗೆ ಅತೀತವಾದುದು. ಆದರೆ ಅದು ಕೈಗೆಟುಕುವುದಕ್ಕಿಂತ ಮುನ್ನ ಗುರುಪರಂಪರೆ ಮುಖಾಂತರ ಜ್ಞಾನವನ್ನು ಸ್ವೀಕಾರ ಮಾಡಿಯೇ ಬೇಕು. ಮುಸ್ಲಿಮರಿಗೆ ನಮಾಝಿನ ಕುರಿತ ಅರಿವು ದೊರಕಬೇಕಾದರೆ ವಿದ್ವಾಂಸರನ್ನು ಸಮೀಪಿಸಬೇಕಾಗುತ್ತದೆ. ದೇವರು ತಮ್ಮಿಂದೇನುಬಯಸುತ್ತಾನೆಂದು ತಿಳಿಯಲು ದಿವ್ಯಜ್ಞಾನ ತಲೆಮಾರಿಂದ ತಲೆಮಾರಿಗೆ ಸಾಗುತ್ತಲೇ ಬರಬೇಕು. ಭಾಷೆ,ಸಂಸ್ಕೃತಿ,ಪ್ರಪಂಚ ಜ್ಞಾನ ಮುಂತಾಗಿ ನಮಗೆ ಗೊತ್ತಿದೆಯೆಂದು ಭಾಸವಾಗುವ ಎಲ್ಲವೂ ಪರಂಪರಾಗತವಾಗಿಯೇ ನಮಗೆ ಲಭಿಸಿದ್ದು. ತದ್ವಿರುದ್ದವಂಬಂತೆ, ನಮ್ಮ ಆತ್ಮದಾಳದಲ್ಲಿ ಸಂಪೂರ್ಣ ಖಚಿತತೆಯೊಂದಿಗೆ ನಾವೇ ಅರಿದುಕೊಳ್ಳುವುದಾಗಿದೆ ವೈಚಾರಿಕ ಜ್ಞಾನವಂಬುದು. ಆದರೆ ಅಂತ ಅರಿವು ಕಡಿಮೆ.

ಇಸ್ಲಾಮೀ ನಾಗರಿಕತೆಯನ್ನು ತೆಗೆದುನೋಡುವಾಗ ಎರಡು ಬಗೆಯ ಅಧ್ಯಯನ ಕ್ಷೇತ್ರದೊಳಗೆ ವೈಚಾರಿಕ ಜ್ಞಾನದ ಅನ್ವೇಷಣೆ ನಡೆದಿರುವುದಾಗಿ ಕಂಡುಬರುತ್ತದೆ. ಸುಲಭವಾಗಿ ಅರ್ಥ ಮಾಡುವುದಕ್ಕೋಸ್ಕರ ಅವನ್ನು ಸೂಫಿಸಂ ಮತ್ತು ಫಿಲಾಸಫಿ ಅಂತ ಕರೆಯಬಹುದು. ಗ್ರೀಕರು ಮುಂದಿಟ್ಟ ತಾರ್ಕಿಕ ಮತ್ತು ವೈಚಾರಿಕ ವಿಧಾನಗಳನ್ನು ಅವಲಂಬಿಸಿ ಫಿಲಾಸಫಿಯನ್ನು ಬೆಳಸಲಾಗಿದೆ. ಸೂಫಿಸಂ ಪ್ರವಾದಿ ಮುಹಮ್ಮದ್(ಸ) ರಿಂದ ಪಡೆದ ಧ್ಯಾನಾತ್ಮಕ ಪರಿಕರಗಳನ್ನು ಒಳಗೊಂಡಿದೆ. ಹದಿಮೂರು ಶತಮಾನದಿಂದೀಚೆಗೆ ಉಭಯ ಕ್ಷೇತ್ರಗಳು ಪರಸ್ಪರ ಕೊಡುಕೊಳ್ಳುವಿಕೆಯ ಮುಖಾಂತರ ವಿಕಾಸಗೊಂಡಿದೆ.

ಆತ್ಮಜ್ಞಾನದ ಹೊರತಾಗಿ ವಸ್ತುಗಳ ಅರ್ಥಗಳನ್ನು ಗ್ರಹಿಸುವುದು ಅಸಾಧ್ಯ ಎಂಬ ತತ್ವ ಮುಂದಿಡುವ ಮೂಲಕ ಫಿಲಾಸಫಿ ಮತ್ತು ಸೂಫಿಸಂ ಪರಂಪರಾಗತ ಜ್ಞಾನಶಾಸ್ತ್ರಗಳಿಂದ ಸಂಪೂರ್ಣ ಭಿನ್ನವಾಗಿದೆ. ಖಂಡಿತವಾಗಿಯೂ, ವಿಶ್ವದ ಕುರಿತು ಕಲಿಯುವುದು ವಿದ್ಯಮಾನಗಳ ಬಗ್ಗೆ ಗ್ರಹಿಸುವ ಉದ್ದೇಶದಿಂದ. ಆದರೆ, ಗ್ರಹಿಕೆ ಎಂಬುವುದು ಆತ್ಮದ ಒಂದು ಗುಣವಾದ್ದರಿಂದ ಮೊದಲು ಅದನ್ನು ಅರಿಯುವುದು ಮುಖ್ಯವಾಗುತ್ತದೆ. ವೈಚಾರಿಕ ವಿಧಾನದ ವಕ್ತಾರರು ಅಲ್ಲಾಹನ ದೃಷ್ಟಾಂತಗಳ ಹಿನ್ನಲೆಯಲ್ಲಿ ಅರ್ಥಗಳನ್ನು ಕಂಡರಿಸುತ್ತಾರೆ. ಅಂದರೆ, ಜಗತ್ತಿನ ವಿದ್ಯಮಾನಗಳೆಲ್ಲ ನೈಜ ಮೂಲಾರ್ಥಗಳೆಡೆಗೆ ಬೊಟ್ಟು ಮಾಡುತ್ತದೆ, ಈ ಮೂಲಾರ್ಥಗಳು ಆತ್ಮವನ್ನು ಅರಿಯುವ ಮೂಲಕ ಮಾತ್ರವಾಗಿದೆ ಪ್ರಾಪ್ತವಾಗುವುದು.

ಸ್ಥೂಲನೋಟದಲ್ಲಿ ಬೌದ್ಧಿಕ ಪರಂಪರೆಯನ್ನು ವಿಶ್ಲೇಷಿಸುವಾಗ, ಆಧುನಿಕ ವಿಜ್ಞಾನಗಳಿಗೆ ಅತಿಮುಖ್ಯವಾಗಿರುವ ವ್ಯಕ್ತಿ (Subject) ಮತ್ತು ವಸ್ತು (Object) ಗಳ ನಡುವಿನ ವ್ಯತ್ಯಾಸ ಕಾಣುವಿಕೆಯನ್ನು ಅದು ಒಪ್ಪುವುದಿಲ್ಲವೆಂದು ನಿಚ್ಚಳವಾಗುತ್ತದೆ. ನಾಲ್ಕು ಮೂಲ ವಿಷಯಗಳನ್ನಾಗಿದೆ ಪ್ರಸ್ತುತ ಪರಂಪರೆ ಗಣನೆಗೆ ತೆಗೆದುಕೊಂಡಿರುವುದು; ದೇವ, ವಿಶ್ವ, ಮನುಷ್ಯಾತ್ಮ ಮತ್ತು ಅಂತರ್ವ್ಯಕ್ತೀಯ ಸಂಬಂಧಗಳು. ಮೊದಲ ಮೂರು ಸಂಗತಿಗಳು ವಾಸ್ತವಿಕತೆಯ ಮೂಲಘಟಕಗಳಾಗಿವೆ ಮತ್ತು ಈ ಮೂರು ಸಂಗತಿಗಳಿಂದ ಸಿಕ್ಕಿದ ಒಳನೋಟಗಳನ್ನು ನಾಲ್ಕನೆಯದು ಮಾನವನ ಚಟುವಟಿಕೆಗಳಿಗೆ ಅನ್ವಯಗೊಳಿಸುತ್ತದೆ.ಈ ವಿಚಾರಗಳನ್ನು ಪರಂಪರಾಗತ ಜ್ಞಾನಗಳ ಅಧಿಕೃತ ಮೂಲಗಳಾದ ಖುರಾನ್‌ ಮತ್ತು ಹದೀಸ್‌ ನ ಮೂಲಕ ತಿಳಿಯಬಹುದು. ಆದರೆ, ಇವುಗಳ ಕುರಿತು ತನ್ನೊಳಗೇ ಅರಿತುಕೊಳ್ಳುವುದು ಹಾಗೂ ಆತ್ಮ ಸಾಕ್ಷಾತ್ಕಾರ ಪಡೆಯುವುದು ಬೇರೇನೇ. ಬೌದ್ಧಿಕ ಪರಂಪರೆಯಲ್ಲಿ ಪರಂಪರಾಗತ ಜ್ಞಾನ ಸಂಪ್ರದಾಯದ ಪಾತ್ರವೇನೆಂದರೆ, ಅದು ಸಾಧಕನು ಆತ್ಮ ಸಾಕ್ಷಾತ್ಕಾರಗೊಳಿಸಬೇಕಾದ ಸಂಗತಿಗಳೆಡೆಗೆ ಮಾರ್ಗಸೂಚಕಗಳನ್ನು ಒದಗಿಸುತ್ತದೆ.

ಪ್ರಾಯಶಃ ಪರಂಪರಾಗತ ಮತ್ತು ಬೌದ್ಧಿಕ ಜ್ಞಾನದ ವ್ಯತ್ಯಾಸ ಮನಗಾಣಲು ಸೂಕ್ತ ಮಾರ್ಗ ಯಾವುದೆಂದರೆ, ಜ್ಞಾನ ಸಂಪಾದನೆಯ ಮೂಲಭೂತ ಮಾರ್ಗಗಳನ್ನು ಸೂಚಿಸುವ ತಖ್ಲೀದ್‌ (ಅನುಕರಣೆ, ಅಧಿಕೃತಮೂಲಗಳನ್ನು ಒಪ್ಪುವುದು) ಮತ್ತು ತಹ್ಖೀಖ್‌ (ದೃಢಪಡಿಸುವಿಕೆ, ಆತ್ಮಸಾಕ್ಷಾತ್ಕಾರ) ಎಂಬೀ ಸಂಜ್ಞೆಗಳನ್ನು ಅರ್ಥೈಸುವುದು. ಯಾವುದೇ ಧರ್ಮ, ಸಮಾಜ ಅಥವಾ ಒಕ್ಕೂಟದಲ್ಲಿ ಸೇರಲು ಇಚ್ಛಿಸುವ ಒಬ್ಬನಿಗೆ, ಮೊದಲೇ ಅದರಲ್ಲಿ ಸದಸ್ಯರಾಗಿರುವವರಿಂದ ಅನೇಕ ವಿಚಾರಗಳನ್ನು ಕಲಿಯಬೇಕಾಗುತ್ತದೆ ಮತ್ತು ಪ್ರಸ್ತುತ ಕಲಿಕೆ ʼಅನುಕರಣೆʼ ಎಂಬ ವಿಧಾನದ ಮೂಲಕ ಮಾತ್ರ ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಕಾನೂನು, ಆಚಾರಗಳು ಮುಂತಾಗಿ ಎಲ್ಲವನ್ನೂ ನಾವು ಕಲಿಯುವುದು ಅನುಕರಣೆಯಿಂದಲೇ ಆಗಿದೆ. ಇಸ್ಲಾಮಿನಲ್ಲಿ ಇಂತಹ ಪರಂರಪರಾಗತ ಜ್ಞಾನಗಳ ಸಂರಕ್ಷಣೆ ಮಾಡುವವರನ್ನು ʼಉಲಮಾʼ ಅಥವಾ ಪರಂಪರೆಯ ವಕ್ತಾರರೆಂದು ಕರೆಯಲಾಗುತ್ತದೆ.

ಪರಂರಾಗತ ಜ್ಞಾನದಲ್ಲಿ ʼಏಕೆʼ ಎಂಬ ಪ್ರಶ್ನೆಗೆ ಜಾಗವೇ ಇಲ್ಲ. ಇಂತ ಇಂತ ನಂಬಿಕೆ ತಾಳುವುದೇಕೆ ಅಥವಾ ಇಂತಹ ಆಚಾರಗಳನ್ನು ಮಾಡುವುದೇಕೆ ಎಂದು ಓರ್ವ ಉಲಮಾರನ್ನು ಪ್ರಶ್ನಿಸಿದರೆ, ಸರಳ ಉತ್ತರ ʼ ದೇವರು ಹಾಗೆ ಹೇಳಿದ್ದಾನೆʼ ಎಂದಾಗಿರುತ್ತದೆ. ಅಂದರೆ, ಖುರಾನ್‌ ಮತ್ತು ಹದೀಸಿನ ಅಧಿಕೃತತೆಯ ಮೇಲೆ ಅವುಗಳನ್ನು ಅಂಗೀಕರಿಸಲಾಗಿದೆ ಎಂದರ್ಥ. ಹೀಗೆಯೇ, ಪೋಷಕರು ತಮ್ಮ ಮಕ್ಕಳ ಭಾಷೆಯನ್ನು ಅಧಿಕೃತ ಮೂಲಗಳ ಆಧಾರದಲ್ಲಿ ತಿದ್ದುಪಡಿ ಮಾಡುತ್ತಿರುತ್ತಾರೆ.

ಬೌದ್ಧಿಕ ವಿಜ್ಞಾನ ಸಂಪೂರ್ಣ ಭಿನ್ನವಾಗಿದೆ. ಒಬ್ಬ ಅದನ್ನು ವಾಚಿಕ ಮೂಲಗಳ ಆಧಾರದಲ್ಲಿ ಸ್ವೀಕರಿಸುವುದಾದರೆ, ಅದನ್ನು ಅರ್ಥ ಮಾಡಿಲ್ಲ ಎಂದರ್ಥ. ಅಧಿಕೃತ ಮೌಖಿಕ ಮೂಲಗಳ ಮೇಲೆ ಆಧಾರಿತಗೊಂಡ ವಿಜ್ಞಾನವಲ್ಲ ಗಣಿತವೆಂಬುದು. ಹೊರತು, ಪ್ರಜ್ಞಾಪೂರ್ವಕವಾಗಿ ತನ್ನೊಳಗೆ ಅದನ್ನು ಕಂಡರಿಸಿಕೊಳ್ಳಬೇಕಾಗುತ್ತದೆ. ಗಣಿತವನ್ನು ಕಲಿಯುವಾಗ ಅಧ್ಯಾಪಕನ್ನು ಅನುಕರಿಸುವ ಬದಲು ʼಏಕೆʼ ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರ ಕಂಡುಕೊಳ್ಳುತ್ತಾರೆ. ಪ್ರಾರಂಭದ ಹಂತದಲ್ಲಿರುವ ವಿದ್ಯಾರ್ಥಿಗೆ ಮಾತ್ರ ಬೌದ್ಧಿಕ ಜ್ಞಾನಗಳಲ್ಲಿ ಅನುಕರಣೆ ಮಾಡಬಹುದು. ಪಾರಂಪರಿಕ ಜ್ಞಾನಗಳಲ್ಲಿ ಖುರಾನ್‌ ಮತ್ತು ಹದೀಸನ್ನು ಅನುಕರಿಸುವುದೇ ಸರಿಯಾದ ದಾರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡು ತರದ ಜ್ಞಾನಗಳಿವೆ, ಎರಡಕ್ಕೂ ಅದರದ್ದೇ ವಿಧಾನಗಳಿವೆ. ತಖ್ಲೀದ್‌ ಅಥವಾ ಅನುಕರಣೆ ಪಾರಂಪರಿಕ ಜ್ಞಾನಕ್ಕೆ ಸೂಕ್ತವಾಗಿದೆ ಮತ್ತು ಬೌದ್ಧಿಕ ಜ್ಞಾನಕ್ಕೆ ತಹ್ಖೀಖ್‌ ಯಾ ಆತ್ಮ ಸಾಕ್ಷಾತ್ಕಾರ ಎಂಬ ವಿಧಾನವನ್ನು ಅನ್ವಯಗೊಳಿಸಬೇಕಾಗಿದೆ.

ʼತಖ್ಲೀದ್‌ʼ ಎಂಬ ಪರಿಭಾಷೆ ಹಲವಾರು ನವ ಮುಸ್ಲಿಂ ಚಿಂತಕರ ಕಂಗೆಡಿಸಿದೆ. ಮುಸ್ಲಿಂ ಸಮಾಜದ ದೌರ್ಬಲ್ಯವಾಗಿ ಅದನ್ನು ಕಾಣುವವರಿದ್ದಾರೆ. ಇವರು ಹೇಳುವಂತ ತಖ್ಲೀದ್‌, ನಾನು ವಿವರಿಸಿದ ತಹ್ಖೀಖ್‌ ಗೆ ವಿರುದ್ದವಾಗಿ ನಿಲ್ಲುವ ಸಂಜ್ಞೆಯಲ್ಲ, ಹೊರತು ಇಜ್ತಿಹಾದ್‌ ನ ಎದುರಲ್ಲಿ ಬಳಸುವ ಪದವಾಗಿದೆ. ಫಿಕ್ಹ್‌ ಎಂಬುವುದು ಪರಂರಾಗತ ಶಾಸ್ತ್ರಗಳ ಗುಂಪಿನಲ್ಲಿ ಸೇರುವುದರಿಂದ, ಅದರಲ್ಲಿ ಅನನ್ಯ ನಿಪುಣತೆ ಪಡೆದ ಮುಜ್ತಹಿದ್‌ (ಕರ್ಮಶಾಸ್ತ್ರ ಸಂಶೋಧಕ) ಗಳನ್ನು ಅನುಕರಣೆ ಮಾಡುವುದು ಅನಿವಾರ್ಯವಾಗುತ್ತದೆ. ನಾನು ಪ್ರಸ್ತಾಪಿಸಿದ್ದು, ಬೌದ್ಧಿಕ ವಿಜ್ಞಾನಗಳಲ್ಲಿ ತಖ್ಲೀದ್‌ ಸಲ್ಲದು ಎಂದಾಗಿದೆ. ಇವೆರಡರ ನಡುವಿನ ಸ್ಪಷ್ಟ ವ್ಯತ್ಯಾಸ ತಿಳಿದಿರುವುದರಿಂದಲೇ, ಮುಸ್ಲಿಂ ವಿದ್ವಾಂಸರು ದೇವರಲ್ಲಿರುವ ನಂಬಿಕೆಗೆ ವೈಚಾರಿಕ ಅಡಿಪಾಯ ಅಗತ್ಯ ಎಂಬ ನಿಲುವನ್ನು ತಾಳಿದ್ದಾರೆ. ಅಂದರೆ, ಪೋಷಕರು ಹೇಳಿದ ಕಾರಣದಿಂದ ದೇವರಲ್ಲಿ ನಂಬಿದ್ದೇನೆ ಎಂದು ಒಬ್ಬಾತ ಹೇಳುವುದಾದರೆ ಆತನ ವಿಶ್ವಾಸ ಸರಿಯಾಗಿಲ್ಲ ಎಂದಾಗಿದೆ ವಿದ್ವಾಂಸರ ಅಂಬೋಣ. ಆತನ ನಂಬಿಕೆಗೆ ಸಾಕ್ಷ್ಯ ಪ್ರಮಾಣಗಳು ಬೇಕಾಗುತ್ತದೆ.

ಉಭಯ ಜ್ಞಾನಧಾರೆಗಳ ನಡುವೆ ಸೈದ್ಧಾಂತಿಕ ನೆಲೆಗಟ್ಟಲ್ಲಿ ವಿವೇಚನೆ ಸಾಧ್ಯವಾದರೂ, ಪ್ರಾಯೋಗಿಕತೆಯ ನೆಲೆಗೆ ಬರುವಾಗ ಎರಡೂ ಪರಸ್ಪರ ತಳುಕು ಹಾಕಿಕೊಂಡಿರುವುದನ್ನು ಮನಗಾಣಬಹುದು. ಇತಿಹಾಸದುದ್ದಕ್ಕೂ ಬೌದ್ಧಿಕ ವಿಜ್ಞಾನ, ಪಾರಂಪರಿಕ ವಿಜ್ಞಾನವನ್ನು ಆತುಕೊಂಡೇ ಬೆಳೆದಿದೆ. ಧರ್ಮಗ್ರಂಥಗಳ ಸಮಂಜಸ ಗ್ರಹಿಕೆಗೆ ವೈಚಾರಿಕ ವಿಧಾನಗಳನ್ನು ಅವಲಂಬಿಸಲಾಗಿದೆ. ಯಾವುದೇ ಧರ್ಮ ಕಾಲದ ಪ್ರವಾಹದಲ್ಲಿ ಅಚಂಚಲವಾಗಿ ಉಳಿಯಬೇಕಾದರೆ ಪಾರಂಪರಿಕ ಹಾಗೂ ಬೌದ್ಧಿಕ ಎರಡೂ ಬಗೆಯ ವಿಜ್ಞಾನ ಅತ್ಯಗತ್ಯ. ಆದರೆ, ಎರಡೂ ಈಗ ಉಳಿವಿನ ಅಂಚಿನಲ್ಲಿದೆ ಎಂಬುವುದು ಖೇದಕರ.

ಇಲ್ಲಿ ಮಹತ್ವದ ಸಂಗತಿಯೇನೆಂದರೆ, ಸಕ್ರಿಯವಾದ ಬೌದ್ಧಿಕ ಪರಂಪರೆಯಿಲ್ಲದೆ ಧರ್ಮಕ್ಕೆ ಉಳಿಗಾಲವಿಲ್ಲ. ಜನರು ಏಕೆ ಆಲೋಚಿಸುತ್ತಾರೆ? ಯೋಚನೆ ರಹಿತವಾಗಿ ಏಕೆ ಏನನ್ನೂ ಒಪ್ಪುವುದಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಮುಂದಿಟ್ಟರೆ ಈ ವಿಚಾರ ಸ್ಪಷ್ಟವಾಗುತ್ತದೆ. ಇಸ್ಲಾಮೀ ದೃಷ್ಟಿಕೋನದಲ್ಲಿ ಉತ್ತರ ಬಹಳ ಸರಳ. ಮನುಷ್ಯರು ವಿವೇಕ ಹೊಂದಿದ ಯೋಚಿಸುವ ಜೀವಿಗಳಾದ್ದರಿಂದ ಖಂಡಿತವಾಗಿಯೂ ಚಿಂತನೆ ಮಾಡಬೇಕಾಗಿದೆ. ದೇವರು ಬುದ್ದಿ ಮತ್ತು ಮನಸ್ಸನ್ನು ನೀಡಿರುವಾಗಿ ಜನರಿಗೆ ಯೋಚಿಸದೆ ಉಪಾಯವಿಲ್ಲ. ಜತೆಗೆ, ಖುರ್‌ ಆನಿನ ಉದ್ದಕ್ಕೂ ಹಲವಾರು ಸೂಕ್ತಗಳಲ್ಲಿ ಚಿಂತನೆ ನಡೆಸಲು ಮತ್ತು ತಮ್ಮ ವಿವೇಕಶಕ್ತಿಯನ್ನು ಬಳಸಲು ಜನರಿಗೆ ಆಜ್ಞಾಪಿಸಲಾಗಿದೆ.

ಇಸ್ಲಾಮೀ ಚಿಂತನೆಗೆ ಕೆಲವೊಂದು ಮೂಲಭೂತ ತತ್ವಗಳನ್ನು ಪೂರ್ವಭಾವಿಯಾಗಿ ಪರಿಗಣಿಸಲಾಗಿದೆ. ಆ ಪೈಕಿ ʼತೌಹೀದ್‌ʼ (ದೇವರ ಏಕತ್ವದ ತತ್ವ) ಮುಂಚೂಣಿಯಲ್ಲಿ ನಿಲ್ಲುತ್ತದೆ. ಸಮಕಾಲೀನ ಪರಿಸ್ಥಿತಿಯನ್ನು ಪ್ರಸ್ತುತ ತತ್ವದ ಮೇಲೆ ಚಿಂತನೆ ನಡೆಸುವಾಗ, ಆಧುನಿಕತೆಯು ಎಷ್ಟೊಂದು ಅಪಾಯಗಳನ್ನು ಒಡ್ಡುತ್ತಿವೆಯೆಂದು ಮನಗಾಣಬಹುದು. ತೌಹೀದಿಗೆ ಸಂಪೂರ್ಣ ವಿರುದ್ಧವಾದ ಶಿರ್ಕ್‌ (ದೇವತ್ವದಲ್ಲಿ ಭಾಗಿದಾರಿಕೆ) ನ ಗುಣಗಳನ್ನಾಗಿದೆ ಆಧುನಿಕತೆ ಪ್ರಚುರಪಡಿಸುತ್ತಿರುವುದು. ಶಿರ್ಕ್‌ ಎಂಬ ಪದ ಬಹಳ ಗಂಭಿರವಾದ್ದರಿಂದ, ಪ್ರತಿಯಾಗಿ ʼತಕ್ಸೀರ್‌ʼ ಎಂಬ ಪದವನ್ನು ಇಲ್ಲಿ ಬಳಸುತ್ತೇನೆ. ತೌಹೀದ್‌ ಎಂಬುವುದು ದೇವರು ಏಕನೆಂದು ದೃಢಪಡಿಸುವುದಾದರೆ, ತಕ್ಸೀರ್‌ (ಶಿರ್ಕ್‌ ಎನ್ನುವುದೇ ಸೂಕ್ತ ಪದ, ಸದ್ಯ ತಕ್ಸೀರ್‌ ಎಂದು ಬಳಸುತ್ತೇನೆ) ಎಂದರೆ ಅನೇಕ ದೇವರಿದ್ದಾರೆಂದು ದೃಢೀಕರಿಸುವುದು.

ನವಯುಗದ ಚಿಂತನೆ ಒಂದು ಕೇಂದ್ರ, ಒಂದು ದಿಕ್ಕು, ಒಂದು ಉದ್ದೇಶ ಇವೆಲ್ಲವನ್ನು ಕಳಕೊಂಡಿದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ, ʼಏಕದೇವʼ ನ ನಷ್ಟವಾಗಿದೆ. ದೇವರು ಬದುಕಿಗೊಂದು ಅರ್ಥ ನೀಡುವ, ಕಾರ್ಯಗಳಿಗೆ ಕೇಂದ್ರೀಕರಣ ಒದಗಿಸುವ ಅಸ್ತಿತ್ವ. ಆಧುನಿಕ ಜಗತ್ತು ಅರ್ಥಗಳನ್ನು, ದಿಕ್ಕುಗಳನ್ನು ಬಹು ʼದೇವರುʼಗಳಿಂದ ಪಡೆಯುತ್ತಿದೆ. ನಿರಂತರ ಸಾಗುತ್ತಿರುವ ತಕ್ಸೀರನ್ನು ಬಿರುಸುಗೊಳಿಸುವ ಕೈಂಕರ್ಯದಿಂದ, ದೇವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ಅವರವರಿಗೆ ಅಪ್ಯಾಯಮಾನವಾದ ದೇವರನ್ನು ಪೂಜಿಸುತ್ತಿದ್ದಾರೆ.

ತಕ್ಸೀರ್‌ ನ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಇತಿಹಾಸದಲ್ಲಿ ಜರುಗಿದ ಇಸ್ಲಾಮೀ ಮತ್ತು ಐರೋಪ್ಯ ಚಿಂತನೆಗಳ ಗತಿಸ್ಥಿತಿಯನ್ನು ತುಲನೆ ಮಾಡಿ ನೋಡಿದರಾಯಿತು. ಇತ್ತೀಚಿನ ವರೆಗೂ, ಇಸ್ಲಾಮೀ ಚಿಂತನೆ , ಪರಸ್ಪರ ಸಾಮರಸ್ಯ, ಏಕೀಕರಣ, ಸಮನ್ವಯ, ಐಕಮತ್ಯ ಎಂಬಿತ್ಯಾದಿ ಗುಣಗಳಿಂದ ಕೂಡಿತ್ತು. ಹಲವಾರು ಜ್ಞಾನಸಂಹಿತೆಗಳ ಪರಿಣತರಾಗಿದ್ದರು ಮುಸ್ಲಿಂ ವಿದ್ವಾಂಸರು. ಆದರೆ,ಅವೆಲ್ಲವನ್ನು ತೌಹೀದ್‌ ಎಂಬ ಏಕಮರದ ವಿಭಿನ್ನ ಟಿಸಿಲುಗಳಾಗಿ ಕಂಡಿದ್ದರು. ಖಗೋಳಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ನಡುವೆ, ಭೌತಶಾಸ್ತ್ರ ಮತ್ತು ನೀತಿಶಾಸ್ತ್ರದ ನಡುವೆ, ಗಣಿತ ಮತ್ತು ಕಾನೂನು ಸಂಹಿತೆಯ ನಡುವೆ ಹೀಗೆ ಯಾವುದೇ ಶಾಸ್ತ್ರಗಳ ನಡುವೆ ಸಂಘರ್ಷಗಳಿರಲಿಲ್ಲ. ಒಂದೇ ತತ್ವದ ಅಡಿಯಲ್ಲಿ ಎಲ್ಲವೂ ಕಾರ್ಯಾಚರಿಸುತ್ತಿದ್ದವು.

ತದ್ವಿರುದ್ಧವಾದ ಧೋರಣೆಯಾಗಿದೆ ಐರೋಪ್ಯ ನಾಗರಿಕತೆಯಲ್ಲಿ ಕಂಡುಬರುವುದು.ಮಧ್ಯಕಾಲ ಯುರೋಪಿನಲ್ಲಿ ಏಕೀಕೃತ ಚಿಂತನಾ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲ್ಪಟ್ಟಿದ್ದರೂ, ತರುವಾಯ ಅದು ಅಳಿದು ಹೋಯಿತು. ಈಗಿನ ದಿನಗಳಲ್ಲಿ, ಪ್ರತಿಯೊಬ್ಬರೂ ಕೆಲವು ಸೂಕ್ಷ್ಮ ಅಧ್ಯಯನ ಕ್ಷೇತ್ರದಲ್ಲಿ ನಿಪುಣರಾಗಿತ್ತಾರೆ, ಆ ಮೂಲಕ ಮಾಹಿತಿಗಳು ಪ್ರವಾಹದೋಪಾದಿಯಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ, ಪರಸ್ಪರ ಅರ್ಥೈಸುವಿಕೆಯ ರಾಹಿತ್ಯ ಮತ್ತು ಸಾರ್ವತ್ರಿಕವಾದ ಅಸಾಮರಸ್ಯ ಎಂಬೀ ಸಮಸ್ಯೆಗಳು ಸಾರಸ್ವತ ಲೋಕವನ್ನು ಅತಿಯಾಗಿ ಕಾಡುತ್ತಿದೆ. ಒಂದು ಏಕಗ್ರಹಿಕಾ ಪ್ರವೃತ್ತಿಯನ್ನು ಸ್ಥಾಪಿಸುವುದು ಅಸಾಧ್ಯವಾಗಿದೆ.

ಅಸಂಖ್ಯೆ ದೇವರುಗಳಾಗಿದೆ ತಕ್ಸೀರ್‌ ನ ಜಗತ್ತಿನಲ್ಲಿರುವುದು. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ, ಸಮಕಾಲೀನ ಜಗತ್ತನ್ನು ನಿರ್ಣಯಿಸುವ ವಿಚಾರಧಾರೆಗಳನ್ನು ಹೇಳುವುದು ಸೂಕ್ತವೆನಿಸುತ್ತದೆ: ಸ್ವಾತಂತ್ಯ್ರ, ಲಿಂಗ ಸಮಾನತೆ, ವಿಕಾಸವಾದ, ಪ್ರಗತಿ, ವಿಜ್ಞಾನ, ರಾಷ್ಟೀಯತೆ, ಸಮಾಜವಾದ, ಭೌತವಾದ ಇತ್ಯಾದಿ. ಇನ್ನು ಗುರುತಿಸಲಾಗದ ಕೆಲವೊಂದಿದೆ. ಅವು ಅತ್ಯಂತ ಅಪಾಯಕಾರಿ ದೇವಗಳು.ನಮ್ಮೆಡೆಯಲ್ಲಿ ನಿರಂತರ ಗಿರಿಗೀಟು ಹೊಡೆಯುವ ನೀರಸ ಪದಗಳಲ್ಲದೆ ಬೇರೇನೂ ಅಲ್ಲ ಅವು: ಅಭಿವೃದ್ಧಿ, ಮಾಹಿತಿ, ಉತ್ಪಾದನೆ, ಕ್ಷೇಮ, ಯೋಜನೆ, ಅನುಭೋಗ, ಸಂಪನ್ಮೂಲ, ವ್ಯವಸ್ಥೆ, ಸೇವೆ ಇತ್ಯಾದಿ.

ಪ್ರಸ್ತುತ ಪದಗಳು ದೇವರ ಪಾತ್ರವನ್ನು ವಹಿಸುತ್ತಿದೆಯೆಂದು ನಂಬಲಾಗದವರು, Uwe Poerksen ರವರ ʼPlastic Wordsʼ ಪುಸ್ತಕವನ್ನೊಮ್ಮೆ ಓದುವುದು ಒಳ್ಳೆಯದು. ಪಾರ್ಕಸನ್‌ ವಿವರಣೆ ಪ್ರಕಾರ, ಎರಡನೇ ಜಾಗತಿಕ ಯುದ್ಧದ ಬಳಿಕ ಪ್ರಾಬಲ್ಯಕ್ಕೆ ಬಂದ ಆಧುನಿಕ ಭಾಷಾ ಸಂಪ್ರದಾಯ, ಜಗತ್ತು ಇಷ್ಟರವರೆಗೆ ಕಂಡಿಲ್ಲದ ಅತ್ಯಂತ ವಿನಾಶಕಾರಕ ʼನಿರಂಕುಶ ಪ್ರಭುʼ ಪದಗಳನ್ನಾಗಿದೆ ಸೃಷ್ಟಿಸಿರುವುದು. ಪಾರ್ಕಸನ್‌ ಥಿಯಾಲಜಿಯಲ್ಲಿ ಆಸಕ್ತಿಯಿಲ್ಲದ ಕೇವಲ ಭಾಷಾತಜ್ಞನಾದ್ದರಿಂದ ಅವುಗಳನ್ನು ʼದೇವರುʼ ಎನ್ನದೆ, “ನಿರಂಕುಶ ಪ್ರಭುಗಳುʼ ಎಂದು ಕರೆದಿದ್ದಾರೆ. ಒಂದರ್ಥದಲ್ಲಿ ಇದು ಖುರಾನಿನ ʼಜಬ್ಬಾರ್‌ʼ ಎಂಬ ದೇವನಾಮದ ಸರಿಯಾದ ಅನುವಾದ. ಈ ನಾಮ ದೇವರಿಗೆ ಅನ್ವಯಿಸುವಾಗ ಅದರರ್ಥ ಸೃಷ್ಟಿಗಳ ಮೇಲೆ ಆತನಿಗೆ ಸಂಪೂರ್ಣ ನಿಯಂತ್ರಣಾಧಿಕಾರವಿದೆ ಎಂದಾಗುತ್ತದೆ. ನಿರಂಕುಶ ಪ್ರಭುತ್ವ ಅಥವಾ ಪರಮಾಧಿಕಾರ ಸೃಷ್ಟಿಗಳಿಗೆ ಆರೋಪಿಸುವಾಗ, ಅದು ದೇವರ ಪರಮಶಕ್ತಿಯನ್ನು ಪ್ರಶ್ನಿಸಿದಂತಾಗುತ್ತದೆ. ಈ ಪ್ಲಾಸ್ಟಿಕ್‌ ಪದಗಳು ಕೆಲಕಾಲ ಜನರನ್ನಾಳುತ್ತಾ ಬೇರೆ ಪದಗಳಿಗೆ ವೇದಿಕೆ ಬಿಟ್ಟು ಕೊಟ್ಟು ಮಾಯವಾಗುತ್ತದೆ. ವ್ಯಕ್ತವಾದ ಒಂದು ಡೆಫಿನಿಷನ್‌ ಹೇಳಲು ಸಾಧ್ಯವಾಗದಿದ್ದರೂ ಇವುಗಳ ಪ್ರಭಾವ ಅಪಾರ. ಈ ಪದಗಳನ್ನು ಪೂಜಿಸಲು ಜನರು ಹೆಮ್ಮೆಪಡುತ್ತಾರೆ ಮತ್ತು ಇವುಗಳ ಉರುಹೊಡೆಯವಿಕೆ ಜ್ಞಾನೋದಯದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಗುಪ್ತ ಅಪಾಯಗಳನ್ನು ಮನಗಾಣಲು ನಮಗೆ ಇಸ್ಲಾಮೀ ವೈಚಾರಿಕ ಚಿಂತನೆ ಉಪಯುಕ್ತವಾಗುತ್ತದೆ.

ವಿಲ್ಯಂ ಸಿ ಚಿಟ್ಟಿಕ್‌
ಭಾಷಾಂತರ: ಎಂ.ಎಂ.ಸುರೈಜಿ

1 Comment

Leave a Reply

*