ಬ್ಯಾರಿಗಳ ಬದುಕಿನ ಜಾಡು ಹಿಡಿದು

ಸಹಸ್ರಾರು ವರುಷಗಳ ಇತಿಹಾಸವನ್ನೂ ಪರಂಪರೆಯನ್ನೂ ಹೊಂದಿರುವ ದಕ್ಷಿಣ ಕನ್ನಡದ ಬ್ಯಾರಿ ಮುಸ್ಲಿಮರ ಚರಿತ್ರೆಯನ್ನು ಹುಡುಕಿಕೊಂಡು ಮಂಗಳೂರಿಗೆ ತಲುಪಿದ್ದೆ. ಮುಂಜಾನೆ ರೈಲಿನಿಂದಿಳಿದು ಪೈಗಂಬರರ ಕಾಲದಷ್ಟು ಪ್ರಾಚೀನತೆಯುಳ್ಳ ಬಂದರಿನ ಝೀನತ್ ಬಕ್ಷ್ ಮಸೀದಿ ಹುಡುಕುತ್ತಾ ನಡೆದೆ. ಬೆಳಗಾಗುವ ಮುನ್ನವೇ ವ್ಯಾಪಾರಿಗಳಿಂದಲೂ ಸರಕು ಗಾಡಿಗಳಿಂದಲೂ ಗಿಜಿಗುಡುತ್ತಿದ್ದ ಬಂದರ್ ಸಾಮ್ರಾಜ್ಯದ ಚಲನವಲನಗಳು ಆ ಪ್ರದೇಶದ ವರ್ಣಮಯವಾದ ಚರಿತ್ರೆಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಹೆಂಚು ಹಾಕಿದ ಅರಿಶಿಣ ಹಚ್ಚಿದ ಗೋಡೆಗಳು ತುಂಬಿತುಳುಕುತ್ತಿರುವ ಗೋದಾಮುಗಳು, ಒಡೆದು ಬೀಳುವುದೋ ಎಂದು ತೋರುವ ಕಟ್ಟಡಗಳು, ಕಿರಿದಾದ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿರುವ ಸರಕು ವಾಹನಗಳು, ತುಂಬಿದ ಬಂದರಿನ ದಾರಿಹೋಕರಾದ ಅರಬಿಗಳು, ಬ್ಯಾರಿಗಳು ವ್ಯಾಪಾರಿಗಳ ಕಾಲದ ನೆನಪುಗಳು ಮೂಡಿ ಬರುತ್ತವೆ.
ಕೆತ್ತನೆಗಳಿಂದ ಅಲಂಕೃತವಾದ ಝೀನತ್ ಬಕ್ಷ್ ಮಸೀದಿ ನಿರ್ಮಾಣಗೊಂಡದ್ದು ಹಿಜರಿ 22 ರಲ್ಲಿ. ಇಸ್ಲಾಂ ಸಂದೇಶದೊಂದಿಗೆ ಕೇರಳಕ್ಕೆ ಕಾಲಿಟ್ಟ ಮಾಲಿಕ್ ದೀನಾರ್ ಸಂತಾನಪರಂಪರೆಯ ‘ಹಬೀಬ್ ಇಬ್ನ್ ಮಾಲಿಕ್’ ಎಂಬುವವರು ದೀನಾರ್ ಎಂಬ ನಾಮದಿಂದ ಕರೆಯಲ್ಪಟ್ಟವರು. ಅವರು ಝೀನತ್ ಬಕ್ಷ್ ನ್ನು ನಿರ್ಮಿಸಿದರು ಎಂದು ಹೇಳಲಾಗುತ್ತಿದೆ.

ಮಾಲಿಕ್ ದೀನಾರ್ ಸಂಘದಿಂದ ನಿರ್ಮಿಸಲ್ಪಟ್ಟ ಮೊದಲನೇ ಹತ್ತು ಮಸೀದಿಗಳಲ್ಲೊಂದು ಎಂದು ಕರೆಯಲ್ಪಡುವ ಈ ಮಸೀದಿಯಲ್ಲಿ ಪ್ರಥಮ ಖಾಝೀಯಾಗಿ ಆಯ್ಕೆಗೊಂಡದ್ದು ಮೂಸಾ ಇಬ್ನ್ ಮಾಲಿಕ್ ರವರಾಗಿದ್ದಾರೆ. ‘ಬ್ಯಾರಿ’ ಎಂಬುದು ಸಾಮಾನ್ಯವಾಗಿ ದಕ್ಷಿಣಕನ್ನಡ ಹಾಗೂ ತುಳುನಾಡಿನ ಮುಸಲ್ಮಾನರನ್ನು ಕರೆಯುವ ಪದ. ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುವ ಬ್ಯಾರಿಗಳು ಪುರಾತನ ಕಾಲದಿಂದಲೂ ವ್ಯಾಪಾರಿಗಳಾಗಿದ್ದರು. ಬ್ಯಾರಿ ಎಂಬುದು ‘ವ್ಯಾಪಾರ’ ಎಂಬರ್ಥವನ್ನು ನೀಡುವ ‘ಬ್ಯಾರ’ ಎಂಬ ತುಳು ಪದದಿಂದ ರೂಪುಗೊಂಡಿದೆ ಎನ್ನಲಾಗುತ್ತದೆ. ತುಳುನಾಡಿನ ಮುಸ್ಲಿಮರ ಚರಿತ್ರೆಯನ್ನು ಉಲ್ಲೇಖಿಸಿದ ಅಹ್ಮದ್ ನೂರಿ ಮತ್ತು ಪ್ರೊ. ಇಚ್ಚಿಲಂಗೋಡು ರವರ ಅಭಿಪ್ರಾಯದ ಪ್ರಕಾರ, ‘ಕಡಲ ವ್ಯಾಪಾರಿಗಳಾದ್ದರಿಂದ ‘ಬಹಾರಿ’ ಎಂಬ ಅರಬ್ಬೀ ಪದದಿಂದಾಗಿರಬಹುದು ಎಂದೂ, ಮಲಬಾರಿನೊಂದಿಗೆ ವಿಶೇಷ ಬಂಧ ಸ್ಥಾಪಿಸಿದ್ದರಿಂದ ಮಲಬಾರಿನ ಬಾರಿಯಿಂದ ರೂಪು ತಾಳಿತೆಂಬ ನಿಲುವುಗಳೂ ಕಾಣಸಿಗುತ್ತವೆ. ಇವರ ಪ್ರಧಾನ ಕೇಂದ್ರವು ಹಳೆಯ ವಿಜಯನಗರ ಸಾಮ್ರಾಜ್ಯದ ಬಾರಕೂರ್, ಮಂಗಳೂರು, ಕಾಸರಗೋಡು ಒಳಗೊಂಡಿರುವ ದಕ್ಷಿಣಕನ್ನಡ ಪ್ರದೇಶ. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಾಸರಗೋಡಿನ ಚಂದ್ರಗಿರಿಯಿಂದ ಕರ್ನಾಟಕದ ಉಡುಪಿಯವರೆಗೆ ವಿಸ್ತಾರಗೊಂಡಿರುವ ಪ್ರದೇಶ. ಕಾಲಕ್ರಮೇಣ ರಾಜ್ಯ ಮತ್ತು ತೀರಪ್ರದೇಶದ ನಡುವಿನ ಸಂಬಂಧ ಕಡಿಮೆಯಾಗುವಾಗ ಬ್ಯಾರಿಗಳು ಇತರ ರಾಜ್ಯಗಳಿಗೆ ವಲಸೆ ಹೋಗಲು ಪ್ರಾರಂಭಿಸಿದರು. ಹಾಗಾಗಿ, ‘ಮೈಕಾಲ’ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರು ಪ್ರದೇಶದ ಬಂದರನ್ನು ಕೇಂದ್ರೀಕರಿಸಿ ಈ ಒಂದು ಸಮೂಹವು ಕಸುಬಾಧಾರಿತ, ಸಂಪತ್ಭರಿತವಾದ ಪರಂಪರೆಯನ್ನು ರೂಪಿಸಿಕೊಂಡಿತು. ಪ್ರಾಚೀನ ಕಾಲದಿಂದಲೇ ಭಾರತದ ಭೂಪಟದಲ್ಲಿ ಗುರುತಿಸಲ್ಪಟ್ಟ ಇಲ್ಲಿನ ಕಡಲ ವ್ಯಾಪಾರಿಗಳಾದ ಅರಬ್ಬೀಗಳು ಮತ್ತು ಪರ್ಶಿಯನ್ನರನ್ನೊಳಗೊಂಡ ಅನೇಕ ವ್ಯಾಪಾರ ಸಂಘಗಳ ತಾಣವಾಗಿತ್ತು ಮಲಬಾರಿಗೆ ಸೇರಿನಿಂತಿರುವ ಈ ದಕ್ಷಿಣ ಕನ್ನಡ. ಈ ವ್ಯಾಪಾರಕ್ಕೆ ನೆಲೆಯೊದಗಿಸಿದ ಪ್ರಮುಖ ಅಂಶವು ಭಾರತದ ಸರಕುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದ ಅತಿಯಾದ ಬೇಡಿಕೆಯಾಗಿದೆ. ವ್ಯಾಪಾರಕ್ಷೇತ್ರದಲ್ಲಿ ಮುದ್ರೆಯೊತ್ತಲು ಬ್ಯಾರಿಗಳಿಗೆ ಸಹಾಯಕವಾದದ್ದು ತಮ್ಮ ರಾಜ್ಯಕ್ಕೆ ಬರುವ ಅರಬ್ಬೀಗಳೊಂದಿಗೂ ಪರ್ಶಿಯನ್ನರೊಂದಿಗೂ ಇರಿಸಿಕೊಂಡ ಅತ್ಯುನ್ನತ ಸಂಭಂಧದ ಕಾರಣದಿಂದ ಎನ್ನಬಹುದು.

ಬ್ಯಾರಿಗಳ ಪರಂಪರೆಗೆ ರೂಪವನ್ನು ನೀಡಿದ್ದು ಅರಬ್ಬೀಗಳ ಹಾಗೂ ಮತ್ತಿತರರ ಜೊತೆಗಿದ್ದ ಈ ವ್ಯಾಪಾರದ ಸಂಬಂಧ ಎಂದೇ ಹೇಳಬಹುದು. ಅತೀಕಡಿಮೆ ಕಾಲಾವಧಿಯಲ್ಲಿ ತುಳುನಾಡಿನ ವ್ಯಾಪಾರದ ಮೇಧಾವಿತ್ವವನ್ನು ಕರಗತ ಮಾಡಿಕೊಳ್ಳುವ ಮಟ್ಟಕ್ಕೆ ಬ್ಯಾರಿಗಳು ಬೆಳೆದರು. ಕ್ರಿ.ಶ 1891 ರ ಬ್ರಿಟೀಷ್ ಈಸ್ಟ್ ಇಂಡಿಯಾ ಜನಗಣತಿಯ ಪ್ರಕಾರ ತುಳುನಾಡಿನ ತೊಂಬತೈದು ಸಾವಿರ ವ್ಯಾಪಾರಿಗಳಲ್ಲಿ ತೊಂಬತ್ಮೂರು ಸಾವಿರದಷ್ಟು ಬ್ಯಾರಿಗಳು, ಎರಡು ಸಾವಿರದಷ್ಟು ಮತ್ತಿತರ ವಿಭಾಗದವರಾಗಿದ್ದರು. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಮನಾದ ಪಾಲುದಾರರಾದ ಬ್ಯಾರಿಗಳಿಗೆ ಕೆಳದಿ ನಾಯಕರು, ವಿಜಯನಗರ, ಬಿಜಾಪುರ, ಮೈಸೂರು ರಾಜರಿಂದ ವ್ಯಾಪಾರಕ್ಕೆ ಸಂಪೂರ್ಣವಾದ ಸ್ವಾತಂತ್ರ್ಯವು ದೊರಕಿತ್ತು. ನೇತ್ರಾವತಿ ನದಿಯಲ್ಲಿ ಬ್ಯಾರಿಗಳ ವಸ್ತುಗಳು ಮಾತ್ರ ಸಾಗುತ್ತಿದ್ದ ಕಾಲವಿತ್ತು. ಅವರ ವ್ಯಾಪಾರಸಂಘ ‘ಹಜ್ಜಮಾನ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅರಬ್ಬೀಗಳ ಜೊತೆಗಿನ ಸಂಬಂಧ, ಸೂಫಿಗಳು, ಜಾತ್ಯಾತೀತತೆ ಹೀಗೆ ತುಳುನಾಡಿನ ಇಸ್ಲಾಂ ವ್ಯಾಪಕತೆಗೆ ಅನೇಕ ಕಾರಣಗಳಿವೆ. ‘ಏಳನೇ ಶತಮಾನದವರೆಗೆ ಅರಬ್ಬೀಗಳು ಇಲ್ಲಿ ನೆಲೆಯೂರಿದ್ದರಿಂದ, ಅವರು ಇಲ್ಲಿನ ಸ್ಥಳೀಯ ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದರು’ ಎಂದು ರೌಲತ್ ಸೇನ್ ತರ್ಕಿಸುತ್ತಾರೆ. ಬಾರ್ಕೂರನ್ನು ಸಂದರ್ಶಿಸಿದ್ದ ಇಬ್ನುಬತೂತ, ‘ಯೆಮನ್’ ನಿಂದಲೂ ಪರ್ಷಿಯಾದಿಂದಲೂ ಬಂದ ಮುಸ್ಲಿಮರನ್ನು ತಾನು ಕಂಡದ್ದಾಗಿ ಉಲ್ಲೇಖಿಸಿದ್ದಾರೆ. ತುಳುನಾಡಿನ ಇಸ್ಲಾಮಿನ ಸೂಫಿ ಪಥಿಕರಾದ ಬಾಬಾ ಫಕ್ರುದ್ದಿನ್ ಪೆನುಕೊಂಡ, ಫರೀದ್ ಮಸೂದ್ ಗಂಜಶಕರ, ಮಹಮದ್ ಶರೀಫುಲ್ ಮದನಿ, ಶೇಖ್ ಯೂಸುಫ್ ಅಡಯಾರ್, ಶಾಹ್ ಮೀರ್ ಮುಂತಾದವರಿಂದಲೂ ಇಸ್ಲಾಂ ಪ್ರಚಾರಗೊಂಡಿತು. ಬ್ರಾಹ್ಮಣಶಾಹಿ/ವೈದಿಕತೆಯು ತುಳುನಾಡಿಗೆ ಬಂದಾಗಿನಿಂದ ಸ್ವರಾಜ್ಯದವರಾದ ಕೀಳು ಜಾತಿಯವರೆಂದು ಗುರುತಿಸಲ್ಪಟ್ಟ ಕೋರಗಾಸರು, ಮಾನ್ಸಾಸರು, ಮೀನುಗಾರರಾದ ಭೂಪಾಲಕರು ಹಾಗೂ ಮೊಗವೀರರೂ ಜಾತಿ ಹಿಂಸೆಯಿಂದ ಬೇಸತ್ತು, ಅಭಯವನ್ನು ಹುಡುಕಿ ಇಸ್ಲಾಮಿನಲ್ಲಿ ಆಶ್ರಯವನ್ನು ಕಂಡುಕೊಂಡರು. ಪಶ್ಚಿಮ ತೀರದಲ್ಲಿರುವ ಮುಸ್ಲಿಮರು ಜಾತಿಹಿಂಸೆಯಿಂದ ಅಭಯವನ್ನು ಹುಡುಕಿ ಬಂದು ಮತಾಂತರವಾದರು ಎಂಬುದನ್ನು ‘ವಿಲಿಯಮ್ ಲೋಗನ್’ ರವರು ದಾಖಲಿಸಿದ್ದಾರೆ. (ಮಲಬಾರ್ ಮ್ಯಾನ್ಯುವಲ್)

ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಡಲ ವ್ಯಾಪಾರಕ್ಕೆ ತಿರುಗೇಟು ಬೀಳುವುದು ಪೋರ್ಚುಗೀಸರ ಆಗಮನದ ನಂತರ. ಅಕ್ಕಿ, ಸಕ್ಕರೆ, ಕರಿಮೆಣಸು, ಸುಗಂಧ ದ್ರವ್ಯಗಳು, ಮರದ ದಿನ್ನೆಗಳು, ಶ್ರೀಗಂಧ, ಅಡಿಕೆ, ಹೆಂಚು ಮುಂತಾದ ವಸ್ತುಗಳನ್ನು ಸಾಗಿಸುತಿದ್ದ ತೀರವು ಪೋರ್ಚುಗೀಸರ ವಸಾಹತೀಕರಣದಿಂದಾಗಿ ಕರಿಮೆಣಸು ಮತ್ತು ಅಕ್ಕಿಗೆ ಮಾತ್ರ ಸೀಮಿತಗೊಂಡಿತು. ಕೆಲವರು ವ್ಯಾಪಾರವನ್ನು ಕಡೆಗಣಿಸಿ ಒಳಪ್ರದೇಶಗಳಿಗೆ ವಲಸೆ ಹೋಗಿ ವಸಾಹತುಗಾರರ ಎದುರಾಳಿಗಳೊಂದಿಗೆ ಕೈಜೋಡಿಸಿ ನಿಲ್ಲಲು ಪ್ರಾರಂಭಿಸಿದರು. ಮುಸ್ಲಿಮರಿಗೆ ಸಹಾಯವನ್ನು ನೀಡುತ್ತಿದ್ದ ವಿಜಯನಗರದ ಸಾಮ್ರಾಜ್ಯದ ಕುಸಿತವು ಬ್ಯಾರಿಗಳಿಗೆ ಬಲವಾದ ಹೊಡೆತ ನೀಡಿತು. ಬಿಜಾಪುರದ ಸುಲ್ತಾನರು, ಮಲಬಾರಿನ ಸಾಮೂದಿರಿಗಳು ಮತ್ತು ಕಣ್ಣೂರಿನ ಅಲೀ ರಾಜರುಗಳು ಸೇರಿ ಪರಂಗಿಗಳ ಎದುರು ನಡೆಸಿದ ಹೋರಾಟವು ವಿಫಲಗೊಂಡಿತು. ರಾಣಿ ಅಬ್ಬಕ್ಕದೇವಿಯ ಮುಂದಾಳತ್ವದಲ್ಲಿ ಮುಸ್ಲಿಮರು ನಡೆಸಿದ ಹೋರಾಟದಲ್ಲಿ ಮೈಕಾಲವನ್ನು ಮರುವಶಪಡಿಸಿಕೊಂಡರು.
ಬ್ರಿಟೀಷರ ಆಗಮನದಿಂದ ಪೋರ್ಚುಗೀಸರು ಹಿಂತಿರುಗಿದರೂ ಬ್ಯಾರಿಗಳ ವ್ಯಾಪಾರವು ಹದಗೆಟ್ಟಿತ್ತು. ನಂತರ ಮೈಸೂರಿನ ಆಡಳಿತಾವಧಿಯಲ್ಲಿ ಬ್ಯಾರಿಗಳು ಹಳೆಯ ಪ್ರಭಾವವನ್ನು ಹಿಂಪಡೆದರು. ದಕ್ಷಿಣ ಕನ್ನಡಕ್ಕೆ ಟಿಪ್ಪು ನೇತೃತ್ವದಲ್ಲಿ ನಡೆದ ಆಂಗ್ಲೋ-ಮಂಗಳೂರು ಯುದ್ಧದ ಕಾಲದಲ್ಲಿ ಝೀನತ್ ಬಕ್ಷ್ ಮಸೀದಿ ಪುನರ್ ನಿರ್ಮಾಣಗೊಂಡಿತು. ಈ ಪ್ರದೇಶಗಳಲ್ಲಿ ಟಿಪ್ಪುವು ಅಧಿಕವಾಗಿ ಮಸೀದಿಗಳನ್ನು ನಿರ್ಮಿಸುತ್ತಲೂ, ಸೂಫಿಗಳ ದರ್ಗಾ ನಿರ್ಮಿಸುತ್ತಲೂ ಮಸೀದಿಗಳಿಗೆ ಬೃಹತಾದ ತಸ್ದೀರ್ ಸಂಪ್ರದಾಯವನ್ನು ಚಾಲ್ತಿಗೆ ತರಲಾಯಿತು. ವಿವಿಧ ರಾಜರುಗಳ ಅಧೀನದಲ್ಲಿ ಸೈನಿಕರಾಗಿಯೂ ಸೇನಾಧಿಪತಿಗಳಾಗಿಯೂ ಬ್ಯಾರಿಗಳು ಕೆಲಸ ಮಾಡುತ್ತಿದ್ದರು. ಟಿಪ್ಪು ಸುಲ್ತಾನರ ಸಹಾಯದೊಂದಿಗೆ ಬ್ರಿಟಿಷರಿಗೆದುರಾಗಿ ಬ್ಯಾರಿಗಳು ಒಗ್ಗೂಡಿದ್ದು ಪ್ರಸಿದ್ಧವಾಗಿದೆ. ಬ್ರಿಟಿಷರ ಸಹಾಯವನ್ನು ಪಡೆದುಕೊಂಡಿದ್ದ ಕೊಡಗಿನ ರಾಜನೆದುರು ಬ್ಯಾರಿಗಳು ರಂಗಕ್ಕಿಳಿದರು. ಬಡತನದಲ್ಲಿದ್ದ ಸಾಮಾನ್ಯ ಮುಸ್ಲಿಮರು ಸ್ವಾತಂತ್ರ್ಯ ಸಂಗ್ರಾಮ ಮಾಡಿದ್ದಕ್ಕೋ, ರಾಷ್ಟೀಯ ಮಟ್ಟದ ಅವಕಾಶ ಸಿಗಲಾರದ್ದಕ್ಕೋ ಹೆಚ್ಚಿನ ಪ್ರತಿಫಲ ಲಭಿಸಲಿಲ್ಲ. ಕ್ರಿ.ಶ 1914 ರಲ್ಲಿ ಕಾಂಗ್ರೆಸ್ ಪಕ್ಷ ಮಂಗಳೂರಿಗೆ ತಲುಪಿದಾಗ ಹಲವರು ಪಕ್ಷದ ಭಾಗವಾದರೂ, ಪಕ್ಷದ ಹೋರಾಟಕ್ಕೆ ಹೆಚ್ಚಾಗಿ ಪ್ರತಿಕ್ರಿಯೆ ಇರಲಿಲ್ಲ. ಬ್ಯಾರಿಗಳಲ್ಲಿ ಬೆಳೆದು ಬಂದ ನೇತಾರರಾದ ಶೆಂರೂಲ್ ಮುಹಮ್ಮದ್ ಶಂನಾದ್ ಹಾಗೂ ಇತರ ನೇತಾರರು ಜನರಿಗೆ ರಾಜಕೀಯದ ಅವಶ್ಯಕತೆಯ ಕುರಿತು ಮಾಹಿತಿ ನೀಡಿದ ಮೇಲೂ ದೊಡ್ಡಮಟ್ಟದ ವಿಜಯ ಸಾಧ್ಯವಾಗಲಿಲ್ಲ. ಕ್ರಿ.ಶ 1930 ರಲ್ಲಿ ಮುಸ್ಲಿಂ ಲೀಗ್ ಬಂದರೂ ಪ್ರಾದೇಶಿಕ ಮಟ್ಟದಲ್ಲಿ ಕಾಂಗ್ರೆಸ್ ಗೆ ಲಭಿಸಿದ ಅಂಗೀಕಾರವು ಕೂಡ ಅದಕ್ಕೆ ಸಿಗಲಿಲ್ಲ.
ಆರ್ಥಿಕವಾಗಿ ಬೆಳೆದು ನಿಂತಿದ್ದ ಬ್ಯಾರಿಗಳು ಕರಾವಳಿ ಪ್ರದೇಶದಲ್ಲಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರು. ಬ್ಯಾರಿ ಸಾಮುದಾಯಿಕ ಸೌಹಾರ್ದತೆಯ ಪ್ರತೀಕವಾಗಿರುವವರು ಬಪ್ಪ ಬ್ಯಾರಿ. ಶಾಂಭವಿ ನದಿಯ ತೀರದಲ್ಲಿ ಅವರು ಪುನರ್ ನಿರ್ಮಿಸಿಕೊಟ್ಟ ಬಪ್ಪನಾಡ್ ದುರ್ಗಾ ಪರಮೇಶ್ವರಿ ಕ್ಷೇತ್ರವು ಧಾರ್ಮಿಕ ಸೌಹಾರ್ದತೆಯ ಗುರುತಾಗಿದೆ. ಕ್ಷೇತ್ರದ ಹೆಸರೇ ಬಪ್ಪ ಬ್ಯಾರಿಯವರಿಂದ ಬಂದಿರುವಂತದ್ದು. ಎಂಟುನೂರು ವರ್ಷಗಳಷ್ಟು ಹಳೆಯದಾದ ಈ ಕ್ಷೇತ್ರದ ಉತ್ಸವದ ಮೊದಲ ಪ್ರಸಾದ ಇಂದಿಗೂ ಕೂಡ ಸನ್ಮಾನ ರೂಪದಲ್ಲಿ ಸಿಗುವುದು ಒಂದು ಬ್ಯಾರಿ ಕುಟುಂಬಕ್ಕೆ. ಹಲವು ಮತಗಳು, ಭಾಷೆಗಳು ಇರುವ ದಕ್ಷಿಣಕನ್ನಡದಲ್ಲಿ ತಮ್ಮದೇ ಆದ ಒಂದು ಭಾಷೆಯನ್ನು ತಂದಿದ್ದು ಬ್ಯಾರಿಗಳ ನಿರ್ಮಾಣ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ. ಬ್ಯಾರಿಯು ತುಳುನಾಡಿನ ಮುಸ್ಲಿಮರಲ್ಲಿ ಇಂದಿಗೂ ಮೌಖಿಕವಾಗಿ ಬೇರೂರಿದ ಭಾಷೆಯಾಗಿದೆ. ‘ನಕ್ಕ್ ನಿಕ್ಕ್’ ಎಂದೂ ಕರೆಯಲ್ಪಡುವ ಬ್ಯಾರಿ ಭಾಷೆಯು ಮಲೆಯಾಳಂ ಭಾಷೆಗೆ ಹೆಚ್ಚು ಹೋಲಿಕೆ ಇರುವ ಭಾಷೆಯಾಗಿದೆ. ನಕ್ನಿಕ್ ಅಂದರೆ ಸ್ವಂತ ಲಿಪಿ ಇಲ್ಲದ್ದು (ಈ ಲೇಖನವು ಮೂಲಭಾಷೆಯಲ್ಲಿ ಬರೆಯಲ್ಪಡುವಾಗ ಬ್ಯಾರಿ ಲಿಪಿ ಪ್ರಕಟವಾಗಿರಲಿಲ್ಲ- ಸಂಪಾದಕ). ಅರಬ್ಬೀ, ತಮಿಳು, ತುಳು, ಕನ್ನಡ ಭಾಷೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುಣ ಕೂಡ ಬ್ಯಾರಿಗೆ ಇದೆ. ಮೊದಮೊದಲು ‘ಮಾಪಿಳ’ ಮಲಯಾಳಂ ಎಂಬ ನಾಮದಿಂದ ಇದು ಪ್ರಚಾರಕ್ಕೆ ಬಂದಿತ್ತು.

ಸಂಸ್ಕೃತಿಯಲ್ಲಿ ಮಲಬಾರಿನ ಮುಸ್ಲಿಮರೊಂದಿಗೆ ಸಾದೃಶ್ಯ ಹೊಂದಿರುವ ಬ್ಯಾರಿಗಳು ಮಾಪಿಳ್ಳ ಸಮೂಹದ ಭಾಗವೆಂದು, ಬ್ಯಾರಿ ಭಾಷೆ ಮಲಯಾಳಂ ದಿಂದ ಹುಟ್ಟಿದ್ದು ಎಂದು ಕೆಲವು ಅನ್ವೇಷಣೆಗಳು ತಿಳಿಸುತ್ತದೆ. ಪ್ರೊಫೆಸರ್ ಇಚ್ಚಿಲಂಗೋಡು ಅವರ ಪ್ರಕಾರ, ಬ್ಯಾರಿಗಳು ಆಚರಣೆಗಳಿಂದಲೂ ಭಾಷೆಯಿಂದಲೂ ಸ್ವಂತ ಅಸ್ಮಿತೆಯನ್ನು ಹೊಂದಿರುವುದರಿಂದ ಅವರು ಮಾಪಿಳ ಸಮೂಹದ ಭಾಗವಲ್ಲ. ಮಾಪ್ಪಿಳ ಹಾಡುಗಳ ಥರಹದ್ದೇ ಬ್ಯಾರಿ ಭಾಷೆಯಲ್ಲಿಯೂ ಹಾಡುಗಳು ಇದ್ದಿತೆಂದು ಅವರು ಹೇಳುತ್ತಾರೆ.
‘ಓಲು ನಡನ್ನ ಬಿಸಯತ್ತೆ ಚೆನ್ನಾಲ್
ಆಂಙಲಮಾರ್ ಪೆಂಞಾಯಿಮಾರೆ ಬುಟ್ಟುಟ್ಟು ಓಲಟ್ಟಿಗೆ ಕೇಟ್ಟಾರ್’
ಈ ಹಾಡು ಬ್ಯಾರಿ ಭಾಷೆಯಲ್ಲಿ ರಚಿತವಾಗಿದೆ. ಬ್ಯಾರಿ ಮದುವೆಗಳಲ್ಲಿಯೂ ಮತ್ತಿತರ ಸಂಭ್ರಮಗಳಲ್ಲಿಯೂ ಮಾಪ್ಪಿಳ ಹಾಡುಗಳು ಅಧಿಕವಾಗಿ ರೂಢಿಯಲ್ಲಿತ್ತು .ಬ್ಯಾರಿಗಳು ತಮ್ಮದೇ ಆದ ಸಾಂಸ್ಕೃತಿಕ ಪಾರಂಪರ್ಯವನ್ನು ಪ್ರತಿಪಾದಿಸುತ್ತಾರೆ. ಹಲವು ಸಂದರ್ಭದಲ್ಲಿ ಮಾಪ್ಪಿಳ ಸಂಸ್ಕೃತಿಯ ಜೊತೆಗೆ ಹೊಂದಿಕೊಳ್ಳುವ ಗುಣ ಬ್ಯಾರಿಗಳಲ್ಲಿ ಕಾಣಸಿಗುತ್ತದೆ. ಬ್ಯಾರಿಗಳ ಅಭಿವ್ಯಕ್ತಿ, ಜೀವನಕ್ರಮವು ಅರಬ್ಬೀ, ತುಳು, ಮಾಪ್ಪಿಳ ಸಂಸ್ಕೃತಿಗಳ ಸಮ್ಮಿಶ್ರಣವಾಗಿದೆ. ತುಳುನಾಡಿನ ಮುಸ್ಲಿಮರು ಸಾಧಾರಣವಾಗಿ ಮಾತನಾಡುವ ಬ್ಯಾರಿಯಲ್ಲೂ ಈ ಸಮ್ಮಿಶ್ರಣ ಪ್ರಕಟವಾಗುತ್ತದೆ. ಬ್ಯಾರಿಗಳ ಮದುವೆ ಮಂಟಪಗಳಲ್ಲಿ ಆಲಾಪಿಸುತ್ತಿದ್ದುದು ಮಾಪ್ಪಿಳ ಹಾಡುಗಳಾಗಿದ್ದವು. ಕಿಸ್ಸಪಾಟ್, ಮಾಲಪಾಟ್, ಒಪ್ಪನಪಾಟ್, ಮೊಯಿಲಾಂಜಿಪಾಟ್, ಅಮ್ಮಾಯಿಪಾಟ್, ತಾಲೇಲಪಾಟ್ ಮುಂತಾದ ವೈವಿಧ್ಯಮಯ ಆವಿಷ್ಕಾರಗಳು ಕೂಡ ಬ್ಯಾರಿಗಳಲ್ಲಿದ್ದವು. ಬಾಪ್ಪು ಕುಂಞಿ ಮುಸ್ಲಿಯಾರ್, ಸಾಹುಕಾರ್ ಕುಂಞಿಪ್ಪಕ್ಕಿ , ಕುಂಞಾಮು ಮುಸ್ಲಿಯಾರ್ ಮುಂತಾದವರು ಬ್ಯಾರಿ ಹಾಡುಗಳನ್ನು ಬರೆದವರಲ್ಲಿ ಪ್ರಮುಖರು. ಹಲವು ದಿನಗಳವರೆಗೆ ನಡೆಯುವ ಮದುವೆ ಸಮಾರಂಭ ಬ್ಯಾರಿಗಳ ಮತ್ತೊಂದು ವಿಶೇಷತೆಯಾಗಿದೆ. ಅವರ ಮದುವೆ ಸಮಾರಂಭಗಳು ಮೂರು ದಿನದಿಂದ ಹಿಡಿದು ವಾರಗಟ್ಟಲೆ ನಡೆಯುವಂತಹದ್ದಾಗಿದೆ. ಮೊಯಿಲಾಂಜಿ(ಮೆಹಂದಿ), ಮದುವೆ, ದಫ್ ಹಾಗು ಕೈಕೊಟ್ಟು ಪಾಟ್ಟು (ಚಪ್ಪಾಳೆ ಹಾಡು) ,ವಾದ್ಯ ಮೇಳಗಳು, ಕೋಲಾಟ ಮುಂತಾದವುಗಳಿಂದ ವಿವಾಹ ಸಂದರ್ಭವು ಅಲಂಕೃತವಾಗಿರುತ್ತಿತ್ತು. ಮಾಪ್ಪಿಳಗಳಲ್ಲಿ ವ್ಯಾಪಕವಾಗಿದ್ದ ‘ಮಕ್ಕತ್ತಾಯ’ ಎಂಬ ಸಂಪ್ರದಾಯವನ್ನು ಬ್ಯಾರಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಸಾಕಷ್ಟು ವಿಧದ ಊಟೋಪಚಾರಗಳು ಇರುವ ವ್ಯವಸ್ಥೆ ಇದು. ಮದುವೆ ಸಮಾರಂಭ……………………………… ಮುಂತಾದೆಡೆ ಬ್ಯಾರಿಗಳಲ್ಲಿ ಮಾತ್ರ ಪ್ರಸಿದ್ದವಾಗಿರುವ ಭೋಜನಗಳು ಇರುತ್ತವೆ. ಬ್ಯಾರಿ ಬಿರಿಯಾನಿ ಸವಿಶೇಷತೆಯುಳ್ಳದ್ದಾಗಿದೆ.


ದರ್ಸ್, ಮದರಸಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ನಂತರ ವಿದ್ಯಾಭ್ಯಾಸವನ್ನು ಬಿಟ್ಟು ಕೆಲಸದ ಮಾರ್ಗದತ್ತ ಜೀವನ ಸಾಗಿಸುವುದು ಅವರೆಡೆಯಲ್ಲಿ ಕಂಡುಬರುತ್ತಿದೆ. ಮಲಬಾರಿನಿಂದ ಬಂದ ವಿದ್ವಾಂಸರು ಮತಧರ್ಮದ ವಿದ್ಯಾಭ್ಯಾಸ ನೀಡಿದುದರಿಂದ ಹೆಚ್ಚಿನವರು ಶಾಫಿಈ ಕರ್ಮಶಾಸ್ತ್ರ(ಇಸ್ಲಾಂ ಅನುಷ್ಠಾನ ಮಾರ್ಗಗಳಲ್ಲಿ ಒಂದು) ವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಿಟೀಷರೊಂದಿಗಿನ ದ್ವೇಷವೇ ಒಂದು ಕಾಲದಲ್ಲಿ ಬ್ಯಾರಿಗಳು ಭೌತಿಕ ವಿದ್ಯಾಭ್ಯಾಸವನ್ನು ನಿಷೇಧಿಸಲು ಪ್ರೇರಣೆ ನೀಡಿದ್ದು ಎನ್ನಲಾಗುತ್ತದೆ. ಕ್ರಿ.ಶ 1871 ರಲ್ಲಿ ಬ್ರಿಟಿಷರು ಸರ್ಕಾರಿ ಶಾಲೆ ಪ್ರಾರಂಭಿಸಿದರೂ ಬ್ಯಾರಿಗಳು ಸಹಕಾರ ನೀಡಲಿಲ್ಲ.

ಇಂದು ಮಂಗಳೂರಿನ ಪ್ರಧಾನ ಕಾಯಕ ಮೀನುಗಾರಿಕೆಯಾಗಿದೆ. ಬೆಳೆದು ಬರುತ್ತಿರುವ ಮಂಗಳೂರಿನ ಪ್ರಾಂತ್ಯ ಪ್ರದೇಶಗಳಲ್ಲಿ ಬ್ಯಾರಿ ಸಮೂಹದ ಪಳೆಯುವಳಿಕೆಗಳು ಈಗಲೂ ಕಾಣಸಿಗುತ್ತಗವೆ. ಪೋರ್ಚುಗೀಸ್, ಬ್ರಿಟೀಷ್ ಅವಧಿಯ ನಂತರ ನಶಿಸಿಹೋದ ಬ್ಯಾರಿಗಳ ಆರ್ಥಿಕತೆ ಈಗೀಗ ಮತ್ತೆ ಚಿಗುರೊಡೆದಿದೆ. ದಶಕಗಳ ಹಿಂದೆ ಅನುಭವಿಸಿದ ಸಾಂಸ್ಕೃತಿಕ, ಆರ್ಥಿಕ ಸಂಕಷ್ಟಗಳಿಂದ ಹೊಸ ದಾರಿ ಕಂಡು ಹಿಡಿಯುವ ರೂಢಿ ಬೆಳೆದು, ಬ್ಯಾರಿಗಳ ಸಂಘಟನೆಗಳು ಶಕ್ತಿಯುತವಾದ ಸ್ವಾಧೀನತೆಯನ್ನು ಪಡೆದುಕೊಂಡವು. ಆಸ್ಪತ್ರೆಗಳು, ವಿದ್ಯಾಭ್ಯಾಸ, ಸಾಂಸ್ಕೃತಿಕ ಕೇಂದ್ರಗಳು, ಸಮೂಹ ಮಾಧ್ಯಮಗಳು, ಪತ್ರಿಕೆಗಳು, ರಿಲೀಫ್ ಸಂಘಟನೆಗಳು ಮುಂತಾದ ಅನೇಕ ರೀತಿಗಳಲ್ಲಿ ಬ್ಯಾರಿಗಳು ತುಂಬಿ ನಿಂತಿದ್ದಾರೆ. ಕಾಸರಗೋಡಿನ ಕಡೆ ಬ್ಯಾರಿಗೆ ಸ್ವಲ್ಪ ತೊಂದರೆಯ ವಾತಾವರಣವಿದ್ದರೂ ಮಂಗಳೂರಿನ ಪ್ರದೇಶಗಳಲ್ಲಿ ಅವರ ಅಸ್ಮಿತೆಯು ಪ್ರಕಾಶಮಾನವಾಗಿದೆ. ಇಂದು ಬ್ಯಾರಿಗಳೆಡೆಯಲ್ಲಿ ಸಾಂಸ್ಕೃತಿಕ ಜೀವನಕ್ರಮ ಜೀವಂತವಾಗಿದೆ. ಬ್ಯಾರಿ ಸಾಹಿತ್ಯ ಭಾಷೆಯ ಮರುನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಅಕಾಡೆಮಿಯು ಬ್ಯಾರಿ ಭಾಷೆ ಮತ್ತು ಬ್ಯಾರಿ ಸಂಸ್ಕೃತಿಯ ಮರುನಿರ್ಮಾಣದ ಉದ್ದೇಶದಿಂದ ಜನರ ನಡುವೆ ಹೊಸದಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮೂಲ: ಅಮೀರುದ್ದೀನ್ ತೂವಕ್ಕಾಡ್, ಫಝಲ್ ಕೆ
ಅನುವಾದ: ಶೌಕತ್ ಅಲಿ ಕಿಕ್ಕರೆ
ಕೃಪೆ: ತೆಳಿಚ್ಚಂ ಮ್ಯಾಗಝಿನ್

ದೆಹಲಿ ಸುಲ್ತಾನರಿಗೆ ಶರಣಾಗದ ಸೂಫಿ ಶ್ರೇಷ್ಠರು

ದೆಹಲಿ ಸುಲ್ತಾನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನಲ್ಲಿ ಚಿಶ್ತಿ ಸೂಫಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದರು. ಅವರ ಅತೀಂದ್ರಿಯ ಚಟುವಟಿಕೆಗಳು ಮತ್ತು ಆಲೋಚನೆಗಳಲ್ಲಿ ‘ಅಲ್ಲಾಹನೇ ಕಾರಣ, ಸೃಷ್ಟಿಕರ್ತ ಮತ್ತು ಕೇಂದ್ರ’ ಎಂಬ ಬಲವಾದ ನಂಬಿಕೆ ಎದ್ದು ಕಾಣುತ್ತಿತ್ತು. ಅಲ್ಲಾಹನ ಸಾಮೀಪ್ಯ ಹೊಂದಲು ಸ್ವಯಂ ತರಬೇತಿಯ ಮೂಲಕ ತಮ್ಮನ್ನು ತಾವು ಪರಿವರ್ತಿಸುವ ಗುರಿಯೊಂದಿಗೆ ಅವರು ಆಧ್ಯಾತ್ಮಿಕ ವ್ಯಾಯಾಮಗಳು, ಉಪವಾಸ, ರಾತ್ರಿ ಹೊತ್ತಿನ ಸುದೀರ್ಘ ಪ್ರಾರ್ಥನೆಗಳಲ್ಲಿ ತಲ್ಲೀನರಾಗಿದ್ದರು.
ಚಿಶ್ತಿಗಳು ಒಂದರ್ಥದಲ್ಲಿ ಲೌಕಿಕ ವಿರಕ್ತಿಯನ್ನು ಮೂಡಿಸುವ ದೇವೋಪಾಸನೆಯಿಂದ ಉಂಟಾಗುವ ಸಂಕೀರ್ಣವಾದ ಅಸ್ಪಷ್ಟತೆಯನ್ನು ನಿವಾರಿಸಲು ಯತ್ನಿಸುತ್ತಿದ್ದರು. ಸರಳವಾಗಿ ಹೇಳುವುದಾದರೆ, ಅಲ್ಲಾಹನು ವಿಧಿಸಿದ ಕಠಿಣವಾದ ಏಕದೇವೋಪಾಸನೆ ಪ್ರಕಾರ, ಅದೃಶ್ಯ ದೇವರು ಈ ಭೌತಿಕ ಜಗತ್ತನ್ನು ಸೃಷ್ಟಿಸಿದ. ಅದೇ ಸಮಯದಲ್ಲಿ ಆತನು ಸೃಷ್ಟಿಸಿದ ಲೋಕದಿಂದ ಸಂಪೂರ್ಣವಾಗಿ ದೂರ ನಿಲ್ಲುತ್ತಾನೆ ಎನ್ನುವಾಗ ಓರ್ವ ಅನ್ವೇಷಕನು ಅಲ್ಲಾಹನ ಉಪಸ್ಥಿತಿಯನ್ನು ಹೇಗೆ ಅರ್ಥೈಸಿಕೊಳ್ಳಬಹುದು? ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವರು ಇದೇ ರೀತಿಯ ಸವಾಲುಗಳು ಬಂದಾಗ ಅವುಗಳಿಗೆ ಪರಿಹಾರವನ್ನೂ ಕಂಡುಕೊಂಡರು. ಜೀವನವೆಂದರೆ ಏನು? ಜೀವನದ ಅರ್ಥವೇನು? ಪ್ರೀತಿ ಎಂದರೇನು? ಕಲಾತ್ಮಕ ಸಂತೋಷ ಏನು? ಈ ಕಲ್ಪನೆಗಳು ದೈವಿಕ ಉಪಸ್ಥಿತಿ ಮತ್ತು ಸಾಕಾರದೊಂದಿಗೆ ಹೇಗೆ ಸಂಬಂಧ ಹೊಂದಿದೆ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡರು. ಉತ್ತರ ಭಾರತದಲ್ಲಿ ಹಲವಾರು ಧರ್ಮ ಪಂಥಗಳ ನಡುವೆ ಇಸ್ಲಾಮಿನ ನೈಜ ಅರ್ಥವಾದ ‘ಶರಣಾಗತಿ’ ಎಂಬುದನ್ನು ಸೂಫಿಗಳು ಒತ್ತಿ ಹೇಳಿದರು.
ಚಿಶ್ತಿ ಸೂಫಿಗಳು ತಾವೆದುರಿಸಿದ ಪ್ರಶ್ನೆಗಳಿಗೆ ಸಾಂಸ್ಕೃತಿಕವೂ ಆಧ್ಯಾತ್ಮಿಕವೂ ಆದ ಮಾರ್ಗಗಳ ಮೂಲಕ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆಸಿದರು. ಅಲ್ಲಾಹನ ಆಧ್ಯಾತ್ಮಿಕ ಸಾಮೀಪ್ಯ ಸಿಗುವ ರೀತಿಯಲ್ಲಿ ಇಂದ್ರಿಯಗಳನ್ನು ಪಳಗಿಸುವುದು, ಪ್ರಣಯ ಕವಿತೆಗಳನ್ನು ಆಲಿಸುವ ಮೂಲಕ ಆತ್ಮದ ಪರಿವರ್ತನೆ ಹೀಗೆ ಹಲವಾರು ರೀತಿಗಳಲ್ಲಿ ಉತ್ತರವನ್ನು ಕಂಡರು. ಚಿಶ್ತಿ ಸಮಾ ಅಥವಾ ಖವಾಲಿ ಮಜ್ಲಿಸುಗಳಲ್ಲಿದ್ದ ಸೂಫಿ ಸಂಗೀತವು ಆತ್ಮ ಪರಿವರ್ತನೆ ಮಾಡುತ್ತಿದ್ದವು. ನಕ್ಷಬಂದಿಯಂತಹ ಚಿಶ್ತಿಯೇತರ 8 ಸಿಲ್ಸಿಲಗಳು (ಪರಂಪರೆ) ‘ಸಮಾ’ ಎಂಬ ಕಾರ್ಯಕ್ರಮವನ್ನು ಸಂಘಟಿಸದಿದ್ದರೂ, ತಮ್ಮದೇ ಆದ ವಿಶಿಷ್ಟವಾದ ಆಧ್ಯಾತ್ಮಿಕ ತರಬೇತಿಗಳ ಮೂಲಕ ಜಾಗೃತಿ ಮೂಡಿಸಿದವು.

ಹದಿಮೂರು- ಹದಿನಾಲ್ಕನೆಯ ಶತಮಾನದ ದೆಹಲಿ ಸುಲ್ತಾನರು ಈ ಸೂಫಿ ಸಂತರ ಆಧ್ಯಾತ್ಮಿಕ ಕಾರ್ಯಸೂಚಿಗಳಿಗೆ ಬೆಂಬಲ ನೀಡಿದ್ದರು. ಕೆ.ಎ ನಿಝಾಮಿಯವರ ಭಾರತೀಯ ಸೂಫಿ ಚಿಂತನೆಗಳ ಬಗೆಗಿನ ಅಧ್ಯಯನವು ಈ ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತದೆ. ಹದಿಮೂರನೆಯ ಶತಮಾನದ ಭಾರತದಲ್ಲಿ ಧರ್ಮ ಮತ್ತು ರಾಜಕೀಯ ನಡುವಿನ ಸಂಬಂಧದ ಕೆಲವು ಅಂಶಗಳು, ವಿಶೇಷವಾಗಿ ಸೂಫಿಗಳು ಮತ್ತು ಆಡಳಿತಗಾರರ ನಡುವಿನ ಅಂತರದ ಕುರಿತು ವಿಶ್ಲೇಷಿಸಲಾಗಿದೆ. ಚಿಶ್ತಿಗಳ ನಂಬಿಕೆ ಮತ್ತು ಅಭ್ಯಾಸಗಳ ಬಗ್ಗೆ ಉಲ್ಲೇಖಗಳನ್ನು ನೀಡಿ, ಚಿಶ್ತಿಗಳಿಗೆ ಆಸ್ಥಾನ ರಾಜಕೀಯದ ಮೇಲೆ ಎಷ್ಟು ಅಸಹನೆ ಇತ್ತೆಂಬುದನ್ನು ವಿವರಿಸಿದ್ದಾರೆ. “ಅರ್ಧ ಡಜನ್ ಗಳಿಗೂ ಹೆಚ್ಚು ಸುಲ್ತಾನರನ್ನು ಕಂಡ ದೆಹಲಿ ಸುಲ್ತಾನೇಟ್ ನ ಅವಧಿಯಲ್ಲಿ ಬದುಕಿದ್ದ ಹಝ್ರತ್ ನಿಝಾಮುದ್ದೀನ್ ಔಲಿಯಾರವರು ಒಮ್ಮೆಯೂ ಕೂಡ ಆಸ್ಥಾನದಲ್ಲಿ ಸುಲ್ತಾನರನ್ನು ಭೇಟಿಯಾಗಿರಲಿಲ್ಲ. ಅವರನ್ನು ಸಂದರ್ಶಿಸಲೂ ಉತ್ಸುಕರಾಗಿರಲಿಲ್ಲ. ಸುಲ್ತಾನ ಎಷ್ಟೇ ಪ್ರಬಲನಾಗಿರಲಿ, ಅವನು ಎಷ್ಟೇ ವಿನಂತಿಸಿದರೂ ಹಝ್ರತ್ ಯಾವತ್ತೂ ತಮ್ಮ ತೀರ್ಮಾನದಿಂದ ಹಿಂದೆ ಸರಿದವರಲ್ಲ. ಸುಲ್ತಾನ್ ಅಲಾವುದ್ದೀನ್ ಖಿಲ್ಜಿಯವರನ್ನು ಕಾಣಲು ನಿರಾಕರಿಸಿದ ಹಝ್ರತ್, ಅವರು ಒತ್ತಾಯಿಸಿದಾಗ ಈ ರೀತಿ ಪ್ರತಿಕ್ರಿಯಿಸಿದರು: ‘ನನ್ನ ಮನೆಗೆ ಎರಡು ಬಾಗಿಲುಗಳಿವೆ. ಒಂದರ ಮೂಲಕ ಸುಲ್ತಾನನು ಪ್ರವೇಶಿಸಿದರೆ, ಇನ್ನೊಂದರ ಮೂಲಕ ನಾನು ಹೊರನಡೆಯುವೆನು’!

ಈ ಮನೋಭಾವವು ಕನಿಷ್ಟವೆಂದರೆ ಹದಿನೇಳನೆಯ ಶತಮಾನದ ಅಂತ್ಯದವರೆಗೂ ಚಿಶ್ತಿ ಸಿಲ್ಸಿಲದ ಒಂದು ಆದರ್ಶವಾಗಿ ಪ್ರಚಲಿತದಲ್ಲಿತ್ತು. ಕ್ರಮೇಣ ಚಿಶ್ತಿ ಸಿಲ್ಸಿಲ ಸಣ್ಣಪುಟ್ಟ ಮತ್ತು ದೊಡ್ಡ ದೊಡ್ಡ ಸ್ವಾಯತ್ತ ಸಂಘಗಳಾಗಿ ವಿಘಟಿಸಿತು. ಅವರಲ್ಲಿ ಹಲವರು ಆಡಳಿತಗಾರರು ನೀಡುತ್ತಿದ್ದ ಕಂದಾಯ ರಹಿತ ಭೂಮಿಗಳನ್ನು ಪಡೆದುಕೊಂಡರು. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೂಫಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಸೈಮನ್ ಡಿಗ್ಬಿಯವರು; ಸೂಫಿಗಳು ಮತ್ತು ಸುಲ್ತಾನರ ನಡುವೆ ಸಂಕೀರ್ಣವೂ ವೈವಿಧ್ಯಮಯವೂ ಆದ, ಅಷ್ಟೇ ವಿರೋಧಾತ್ಮಕವೂ ಆದ ಸಂಬಂಧವನ್ನು ಸಾರುವ ಅನೇಕ ಘಟನೆಗಳು ನಡೆದಿವೆ ಎನ್ನುತ್ತಾರೆ. ಒಂದೆಡೆ ಸೂಫಿಗಳು ತಾವು ರಾಜಕೀಯದ ಮೇಲೆ ಅವಲಂಬಿತರು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೊಂದೆಡೆ ತಾವು ರಾಜರಿಗಿಂತ ಶ್ರೇಷ್ಠರು, ತಮ್ಮ ಆಶೀರ್ವಾದದಿಂದ ಅವರು ಶಕ್ತಿ ಪಡೆದಿದ್ದಾರೆ ಅಂತಲೂ ಹೇಳುತ್ತಾರೆ. ತರ್ಕ್-ಎ-ದುನಿಯಾ ಅಥವಾ ಐಹಿಕ ವೈರಾಗ್ಯ ಎಂಬ ಆಶಯವು ಪ್ರಚಲಿತದಲ್ಲಿರುವಾಗಲೂ ಹಲವಾರು ಬಾರಿ ಆಡಳಿತ ಯಂತ್ರದ ಸಹಾಯವನ್ನು ಅವರು ಪಡೆದಿರುತ್ತಾರೆ. ಹಾಗೂ ಅಧಿಕಾರಿಗಳ ಆಯ್ಕೆಯಲ್ಲೂ ಮಹತ್ತರ ಪಾತ್ರ ವಹಿಸಿದ್ದರು ಎಂಬುದು ಕೂಡ ಆಗಿನ ಕಾಲದ ರಾಜಕೀಯ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಕೀರ್ಣವಾದ ಸಂಬಂಧದ ನಿದರ್ಶನವಷ್ಟೇ.
ದೆಹಲಿಯ ಸೂಫಿ ಶೇಖ್ ಗಳು ಮತ್ತು ಭಾರತದ ಪ್ರಾಂತೀಯ ವಿಲಾಯ (Territorial jurisdictions) ಗಳು ಪುರುಷ ಪ್ರಧಾನ ತಪಸ್ವಿ ಸಂಸ್ಕೃತಿಯನ್ನು (ascetic culture) ಸೃಷ್ಟಿಸಿದ್ದರು. ದೆಹಲಿ ಸುಲ್ತಾನರ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ಚಿಶ್ತಿ ಸೂಫಿಗಳು ತಮ್ಮ ಧರ್ಮಶಾಲೆಗಳನ್ನು (ಖಾನ್ ಖಾಹ್) ಸ್ಥಾಪಿಸಿ, ಅಲ್ಲಿ ಆಧ್ಯಾತ್ಮಿಕ ಬೋಧನೆ ಮತ್ತು ತರಬೇತಿ ಪಡೆದ ತಮ್ಮ ಶಿಷ್ಯಂದಿರನ್ನು ನೇಮಿಸಿದರು. ಚಿಶ್ತಿಗಳು ಕಾರ್ಯರೂಪಕ್ಕೆ ತಂದಿದ್ದ ಹಲವಾರು ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಸೂಚಿಗಳ ಅಂಶಗಳು ಗಮನಾರ್ಹ. ಆಡಳಿತಗಾರರೊಂದಿಗಿನ ಅವರ ಸಂಬಂಧಗಳು ಮತ್ತು ಭೌತಿಕ ಉಡುಗೊರೆಗಳ ಹರಿವು, ದೈವಪ್ರಜ್ಞೆಯನ್ನು ಬೆಳೆಸುವಲ್ಲಿ ಅವರಿಟ್ಟಿದ್ದ ಅಪಾರ ಶ್ರದ್ಧೆ, ಅಗೋಚರ ಲೋಕದ ಬಗೆಗಿನ ವಿಶ್ವಾಸ, ಪ್ರಾರ್ಥನೆ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಅಭಿವ್ಯಕ್ತಿಯನ್ನು ರೂಪುಗೊಳಿಸುವ ಸೂಫಿ ಸಂಗೀತಗಳು ಅವುಗಳಲ್ಲಿ ಪ್ರಧಾನವಾದವು.
ಈ ಅಂಶಗಳಲ್ಲಿ ಮೊದಲನೆಯದು, ಆಡಳಿತಗಾರರೊಂದಿಗೆ ಅವರ ಸಂಬಂಧ ಮತ್ತು ಹೊಸದಾಗಿ ಸೇರಿಸಲ್ಪಟ್ಟ ಪ್ರಾಂತ್ಯಗಳ ಶ್ರೀಮಂತ ವರ್ಗದವರೊಂದಿಗೆ ಅವರು ಬೆಳೆಸಿದ ಸಂಬಂಧವಾಗಿದೆ. ಸೂಫಿಗಳು ತಮ್ಮ ಆಧ್ಯಾತ್ಮಿಕ ಹಕ್ಕನ್ನು ಬಳಸಿ, ತಮ್ಮ ದಿವ್ಯ ನ್ಯಾಯವ್ಯಾಪ್ತಿಯನ್ನು ಬಳಸಿ ಆಡಳಿತಗಾರರ ಮೇಲೆ ಪ್ರಾಬಲ್ಯ ಸಾಧಿಸಿದ್ದುಂಟು. ಪುಣ್ಯ ವ್ಯಕ್ತಿಗಳ ಆಶೀರ್ವಾದವಿರುವುದರಿಂದ ನೀವು ಅಧಿಕಾರದಲ್ಲಿದ್ದೀರಿ ಎಂಬುದನ್ನು ಅವರಿಗೆ ಜ್ಞಾಪಿಸುತ್ತಿದ್ದರು. ದೃಶ್ಯ ಮತ್ತು ಅದೃಶ್ಯ ಎಂಬ ಎರಡು ಲೋಕದಲ್ಲೂ ಅವರು ಒಂದೇ ಸಮಯದಲ್ಲಿ ವಿಹರಿಸುತ್ತಾ, ಅದೃಶ್ಯಲೋಕದ ಸಂದೇಶಗಳನ್ನು ತಮ್ಮ ಆಯ್ದ ಶಿಷ್ಯರಿಗೆ ಮತ್ತು ಆಗಾಗ್ಗೆ ಬರುವ ಜನರಿಗಾಗಿ ವ್ಯಾಖ್ಯಾನಿಸಿ ಕೊಡುತ್ತಿದ್ದರು. “ಲೌಕಿಕ ಅಧಿಕಾರಸ್ಥರಿಗಿಂತ ಅತ್ಯುನ್ನತವಾದ ಶ್ರೇಣಿಯನ್ನು ಅಲೌಕಿಕ ಶಕ್ತಿ ಹೊಂದಿರುವವರಿಗೆ ನಿಗದಿಪಡಿಸಲಾಗಿದೆ. ವಿಶ್ವದ ಎಲ್ಲಾ ಪ್ರದೇಶಗಳ ಕಲ್ಯಾಣದ ಬಗ್ಗೆ ಗಮನ ಹರಿಸಬೇಕು. ಒಂದು ನಿರ್ದಿಷ್ಟ ಪ್ರದೇಶದ ವಿಲಾಯತ್ (ಅಧಿಕಾರ)ಗೆ ಸಂಬಂಧಿಸಿದ ಅಂತಹ ಹಕ್ಕುಮಂಡನೆಯನ್ನು ಖುರಾಸಾನಿನ ಶೇಖ್‌ಗಳು ತೀವ್ರವಾಗಿ ಮಾಡುತ್ತಿದ್ದರು. ಇದು ಹದಿನಾಲ್ಕನೆಯ ಶತಮಾನ ಹಾಗೂ ನಂತರದ ಭಾರತೀಯ ಸೂಫಿ ಸಾಹಿತ್ಯದಲ್ಲಿ ಸಾಮಾನ್ಯವಾಗಿದೆ.”
ಪ್ರಾದೇಶಿಕ ಅಧಿಕಾರದ (ವಿಲಾಯ) ಕಲ್ಪನೆ ಮತ್ತು ಸೂಫಿ ಸಂತರ ಇಹಲೋಕ (ದುನಿಯಾ) ದೊಂದಿಗಿನ ಸಂಬಂಧವು ಒಂದು ರೀತಿಯ ವಿರೋಧಾಭಾಸವಾಗಿತ್ತು. ಸೂಫಿ ಧರ್ಮಶಾಲೆಗಳ (ಖಾನ್ ಖಾಹ್) ಕಾರ್ಯ ನಿರ್ವಹಣೆಗೋಸ್ಕರ ಆಡಳಿತಗಾರರ ಆರ್ಥಿಕ ಸಹಾಯ ಮತ್ತು ಸರಕಾರವು ನೀಡುತ್ತಿದ್ದ ಕಂದಾಯ ರಹಿತ ಭೂಮಿ (ಮದದೇ ಮಆಷ್), ದಾನದ ರೂಪದಲ್ಲಿ ನೀಡುತ್ತಿದ್ದ ಸಹಾಯದ ಅಗತ್ಯತೆ ಅವರಿಗಿತ್ತು. ಇಂತಹ ಸಹಾಯಗಳನ್ನ ಚಿಶ್ತಿಗಳು ಪುನರ್ ವಿತರಣೆ ಎಂಬ ಆಧ್ಯಾತ್ಮಿಕ ವ್ಯವಸ್ಥೆ ಮೂಲಕ ನಿಭಾಯಿಸಿದರು. ಉದಾಹರಣೆಗೆ, ಭೌತಿಕ ವಸ್ತುಗಳ ಶೇಖರಣೆ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಹಝ್ರತ್ ನಿಝಾಮುದ್ದೀನ್ ಔಲಿಯಾ ಹೇಳುತ್ತಾರೆ:
“ಮಹಿಳೆಯರ ಮುಸುಕಿಗೆ ಸಮಾನವಾದಂತಹ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಭೌತಿಕ ವಸ್ತುಗಳನ್ನು ಶೇಖರಿಸಬಾರದು. ಆದರೆ ತನಗೆ ಲಭಿಸಿದ್ದಕ್ಕಿಂತ ಹೆಚ್ಚಾಗಿ ಲಭಿಸುವುದನ್ನೆಲ್ಲವನ್ನೂ ವಿತರಿಸಬೇಕು. ಓ ಮಗನೇ, ಚಿನ್ನವು ಇತರರಿಗೆ ನೀಡಲಿಕ್ಕೋಸ್ಕರ ಇರುವಂತದ್ದು. ಅದನ್ನು ಶೇಖರಿಸಿಟ್ಟರೆ ಕಲ್ಲಿಗೂ ಚಿನ್ನಕ್ಕೂ ವ್ಯತ್ಯಾಸವೇನು?.” – Amir Hasan sijzi, Favaid Al fuad

ಈ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಉನ್ನತಿ ಎಂಬುದು ಖಾನ್ ಖಾಹ್ ಗಳಿಗೆ ಬರುವ ಸಂಪತ್ತಿನ ಹರಿವಿನ ಮೇಲೆ ಅವಲಂಬಿಸಿದೆ. ಆರಾಧನೆ ಮತ್ತು ಆಧ್ಯಾತ್ಮಿಕ ತರಬೇತಿಗಳಿಗೆ ಸಂಪತ್ತು ಅಡ್ಡಿಯಾಗುತ್ತದೆ ಎಂಬುದು ಸೂಫಿ ಉಪದೇಶಗಳ ಸಾರ. ತಾನು ಮಾಡುವ ಕರ್ಮಗಳು ಧನ-ಕನಕಗಳಿಗೆ ಮರುಪಾವತಿ ಆಗಬಹುದೆನ್ನುವ ಕಾರಣಕ್ಕೆ ಅವುಗಳ ನಿರೀಕ್ಷೆಯು ಆಧ್ಯಾತ್ಮಿಕತೆಗೆ ಅಡಚಣೆಯಾಗುತ್ತದೆ. ಭೌತಿಕ ವಸ್ತುಗಳ ಈ ರೀತಿಯ ಅಪಮೌಲ್ಯೀಕರಣದ ಜೊತೆಗೆ, ಈ ಲೋಕದ ಬಗ್ಗೆ ಚಿಶ್ತಿಗಳು ವಿಶೇಷ ದೃಷ್ಟಿಕೋನವನ್ನು ಹೊಂದಿದ್ದರು. ಈ ಲೋಕವು ಅಗೋಚರಲೋಕದ ಮೇಲ್ಪದರ ಮಾತ್ರ. ಅಗೋಚರ ಲೋಕದ ಆಧ್ಯಾತ್ಮಿಕ ತತ್ವಗಳು ಈ ಲೋಕದಲ್ಲಿ ಎಲ್ಲರಿಗೂ ಗೋಚರವಾಗುತ್ತವೆ.
ಅಗೋಚರ ಲೋಕ ಮತ್ತು ಅದರಲ್ಲಿನ ಸಂತರ ಹಾಗೂ ಅವರ ಶಿಷ್ಯಂದಿರ ಶ್ರೇಣಿಯು, ಚಿಶ್ತಿ ಸೂಫಿಗಳಿಗೂ ಅವರ ಹಿಂಬಾಲಕರಿಗೂ ಮಾರ್ಗದರ್ಶನ ಹಾಗೂ ದೃಶ್ಯ ಜಗತ್ತಿನಲ್ಲಿ ನಡೆಯುವ ಘಟನೆಗಳ ವ್ಯಾಖ್ಯಾನಗಳಾಗಿದ್ದವು. ಅಗೋಚರ ಲೋಕದ ವ್ಯಕ್ತಿಗಳು (Mardan -E- Ghaib) ದೃಶ್ಯ ಜಗತ್ತಿನ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರೆಂಬುದಕ್ಕೆ ಹಲವು ಪುರಾವೆಗಳಿವೆ:
“ಸಂಭಾಷಣೆಯು ಅಗೋಚರ ಲೋಕದ ಜನರತ್ತ ಹೊರಳಿತು. ಅವರು ಪರಮ ಭಕ್ತಿ, ಒಳನೋಟ ಹೊಂದಿರುವವವರನ್ನು ಕಂಡರೆ ತಮ್ಮೊಡನೆ ಕರೆದೊಯ್ಯುತ್ತಿದ್ದರು. ಗುರುಗಳು ಬದಾಯೂನಿನ ನಾಸಿರ್ ಎಂಬ ಯುವಕನ ಬಗ್ಗೆ ಒಂದು ಕಥೆ ಹೇಳುತ್ತಾರೆ. ತನ್ನ ತಂದೆ ದೇವರೊಂದಿಗೆ ಲೀನವಾಗಿದ್ದರೆಂದು ಆತ ಹೇಳುತ್ತಿದ್ದುದನ್ನು ನಾನು ಕೇಳಿದ್ದೆ. ಒಂದು ರಾತ್ರಿ ಅವರು ತಂದೆಯವರನ್ನು ಬಾಗಿಲ ಬಳಿ ಬರಲು ಹೇಳಿದರು. ಅವರು ಹೊರಬಂದರು. ಅವರು ಅಲ್ಲಿ ಪರಸ್ಪರ ಕುಶಲತೆಯಿಂದ ಮಾತನಾಡುವುದಾಗಿ ಕೇಳಿಸಿತು. ಬಳಿಕ ನನ್ನ ತಂದೆಯವರು ‘ನಾನು ನನ್ನ ಮಗನಿಗೂ ಪರಿವಾರದವರಿಗೂ ವಿದಾಯ ಹೇಳುವೆ’ ಎಂದು ಹೇಳುವುದನ್ನು ಕೇಳಿಸಿಕೊಂಡೆನು. ‘ಸಮಯ ದಾಟುತ್ತಿದೆ’ ಎಂದು ಅವರು ಹೇಳಿದರು. ಅದಾದ ನಂತರ ಅವರು ಎಲ್ಲಿಗೆ ಹೋದರು ಎಂಬುದನ್ನು ನಾನರಿಯೆ!” – Favaid Ul fuad

Favaid Ul fuad- Nizamuddeen Aulia

ಈ ರೀತಿಯ ಕಥೆಗಳ ಕಾರಣದಿಂದ ಭೌತಿಕ ವಸ್ತುಗಳಿಗೆ, ಭಕ್ತಿ ಕಾರ್ಯಗಳಿಗೆ ಆಧ್ಯಾತ್ಮಿಕ ಮಹತ್ವಗಳನ್ನು ಚಿಶ್ತಿಗಳು ತಳಕು ಹಾಕಿದರು. ಅಗೋಚರ ಮತ್ತು ಗೋಚರ ಜಗತ್ತಿನ ಸಂಕೇತಗಳು ಒಳನೋಟ ಇರುವ ಜನರಿಗೆ ತಿಳಿಯುತ್ತದೆ. ಆದ್ದರಿಂದಲೇ ಅವರಿಗೆ ಒಂದು ವಿಶೇಷ ಸ್ಥಾನವಿರುವುದು. ಭೌತಿಕ ವಸ್ತುಗಳು ಮತ್ತು ಕಥೆಗಳಲ್ಲಿ ಅಡಕವಾಗಿರುವ ಆಧ್ಯಾತ್ಮಿಕ ರಹಸ್ಯಗಳನ್ನು ವಿವರಿಸುವ ನಿದರ್ಶನಗಳು ಮತ್ತು ರೂಪಕಗಳನ್ನು ಪರ್ಷಿಯನ್ ಮತ್ತು ಅರೇಬಕ್ ಭಾಷೆಗಳ ಸೂಫಿ ಸಾಹಿತ್ಯದಲ್ಲಿ ಹೇರಳವಾಗಿ ನೋಡಲು ಸಾಧ್ಯ. ಫರೀದುದ್ದೀನ್ ಅತ್ತಾರರ ‘ಮಂತಿಖು ತ್ತುಯೂರ್’ (ಪಕ್ಷಿಗಳ ಭಾಷೆ), ಜಲಾಲುದ್ದೀನ್ ರೂಮಿಯವರ ‘ಮಸ್ನವಿ’ ಎಂಬ ಕಾವ್ಯ ಸಂಕಲನಗಳಲ್ಲಿರುವ ನಿಗೂಢಾರ್ಥಗಳನ್ನು ವ್ಯಾಖ್ಯಾನಿಸುವ ಅನೇಕ ಕಥೆಗಳು, ಉದಾಹರಣೆಗಳು ಅವುಗಳಲ್ಲಿವೆ.

ಚಿಶ್ತಿಗಳ ಪ್ರಕಾರ, ಅಲ್ಲಾಹನ ಸದಾ ಸ್ಮರಣೆಯು (Mashghool -E- Haqq) ಉಳಿದೆಲ್ಲಾ ಕಾರ್ಯಗಳಿಗಿಂತ ಪ್ರಧಾನವಾಗಿದೆ.
“ನಂತರ ಸಂಭಾಷಣೆಯು ದೇವರ ಸದಾ ಸ್ಮರಣೆಯತ್ತ ಹೊರಳಿತು. ಅದು ಪ್ರಧಾನ ಕಾರ್ಯವಾಗಿದೆ. ಅದರ ಹೊರತಾಗಿ ಇತರ ಕಾರ್ಯಗಳು ಅಲ್ಲಾಹನ ಅನುಗ್ರಹಗಳಿಗೆ ಅಡಚಣೆಯಾಗಿವೆ. ಗುರುಗಳು ಹೇಳುತ್ತಾರೆ, ‘ಒಮ್ಮೆ ನನಗೆ ನಾನು ಓದಿದ ಪುಸ್ತಕಗಳ ಬಗ್ಗೆ ಭಯ ಮೂಡಿತು. ಆ ಓದಿನ ಮೂಲಕ ನಾನು ಏನಾಗಿದ್ದೇನೆ ಎಂದು ನನ್ನನ್ನು ನಾನೇ ಪ್ರಶ್ನಿಸಿದೆನು’. ಇದಕ್ಕೆ ಸಂಬಂಧಿಸಿದಂತೆ ಗುರುಗಳು ಒಂದು ಕಥೆಯನ್ನು ಕೂಡ ಹೇಳಿದರು. ‘ಶೈಖ್ ಅಬೂ ಸಈದ್ ಅಬುಲ್ ಖೈರ್ ಅವರು ಆಧ್ಯಾತ್ಮಿಕ ಉನ್ನತಿಯನ್ನು ತಲುಪಿದಾಗ, ಅವರು ಓದಿದ್ದ ಎಲ್ಲಾ ಪುಸ್ತಕಗಳನ್ನು ಒಂದು ಮೂಲೆಯಲ್ಲಿ ಇರಿಸಿದರು. ಅದರಲ್ಲಿನ ಬರಹಗಳನ್ನು ತೊಳೆದರು ಎಂದೂ ಕೆಲವರು ಹೇಳುತ್ತಾರೆ’. ಸಣ್ಣ ವಿರಾಮದ ಬಳಿಕ ಅವರು ಮುಂದುವರೆಸುತ್ತಾರೆ; ‘ಅವುಗಳೆಲ್ಲವನ್ನೂ ಅವರು ತೊಳೆದರು ಎನ್ನುವುದು ಸರಿಯಲ್ಲ. ಅವರು ಅವುಗಳನ್ನು ಒಂದು ಪ್ರತ್ಯೇಕ ಸ್ಥಳದಲ್ಲಿ ಇಟ್ಟರು. ಒಂದು ದಿನ ಆ ಪುಸ್ತಕಗಳಿಂದ ಕೆಲವು ಕಾರ್ಯಗಳನ್ನು ಕಲಿತರು. ಆಗ ಒಂದು ಅಶರೀರವಾಣಿ ಕೇಳಿಸಿತು. ‘ಓ ಅಬೂ ಸ’ಈದ್, ನಮ್ಮ ಒಪ್ಪಂದವನ್ನು ರದ್ದುಗೊಳಿಸೋಣ, ಏಕೆಂದರೆ ನೀವು ಬೇರೆ ವಿಷಯದಲ್ಲಿ ತಲ್ಲೀನರಾದಿರಿ!’. ಕಥೆಯ ಈ ಹಂತವನ್ನು ತಲುಪಿದಾಗ ಗುರುಗಳು ಅಳಲಾರಂಭಿಸಿದರು. ಮತ್ತು ಈ ಎರಡು ಸಾಲುಗಳನ್ನು ಹಾಡಿದರು;
‘ಓ ದ್ವೇಷದ ನೆರಳೇ,
ನಿನ್ನನ್ನು ಹೇಗೆ ಇಟ್ಟುಕೊಳ್ಳಬಹುದು,‌
ಇನಿಯನ ಆಲೋಚನೆ ಕೂಡಾ ಸಿಗದ ಕಡೆ’.
ಅಂದರೆ, ಸೂಫಿಗಳ ಬಗೆಗಿನ ಪುಸ್ತಕಗಳು ಕೂಡ ಆಧ್ಯಾತ್ಮಿಕತೆಗೆ ಅಡಚಣೆಯಾಗುವ ಕಡೆ, ಆತನ ಹೊರತು ಇತರ ಕಾರ್ಯಗಳಿಗೆ ಹೇಗೆ ಜಾಗ ಸಿಗಬಹುದು?.” – Favaid ul fuad

ಒಂದು ಅಶರೀರವಾಣಿಯು ಅಬೂ ಸ’ಈದರಿಗೆ ತಮ್ಮ ಪುಸ್ತಕಗಳನ್ನು ತ್ಯಜಿಸಲು ಪ್ರೇರೇಪಿಸಿತು. ಅದೂ ಕೂಡ ಪೂರ್ವಕಾಲದ ಸೂಫಿಗಳ ಬಗೆಗಿನ ಪುಸ್ತಕಗಳನ್ನು!. ಅಲ್ಲಾಹನ ಸ್ಮರಣೆಯಲ್ಲಿ ನಿರತರಾಗುವುದನ್ನು ಇಂತಹ ಆಲೋಚನೆಗಳು ತಡೆಯುವುದು ಎಂಬುದನ್ನು ಪರ್ಷಿಯನ್ ಸೂಫಿ ಗ್ರಂಥಗಳಲ್ಲಿ ಕಾಣಬಹುದು. ಅಂತಹ ಧ್ಯಾನಾಸಕ್ತ ಮನೋಭಾವವು ಲೈಂಗಿಕತೆ, ಹಸಿವು ಮುಂತಾದ ವಾಂಛೆಗಳನ್ನು ದೂರಮಾಡುತ್ತದೆ. ದೇವರಿಗೋಸ್ಕರ ಮಾತ್ರ ಬದುಕು ಎಂಬ ಚಿಶ್ತಿ ತತ್ವದ ಉದಾಹರಣೆಯಾಗಿ ನಿಝಾಮಿಯವರು ಉಲ್ಲೇಖಿಸಿದ ಒಂದು ಕಥೆಯಲ್ಲಿ ದೇವನ ಸ್ಮರಣೆಯಲ್ಲಿ ನಿರತರಾದ ಸೂಫಿಗಳ ಮನೋಭಾವವು ಜಗತ್ತಿನ ಜೀವನಾನುಭವವನ್ನು ಹೇಗೆ ಬದಲಾಯಿಸುತ್ತದೆ ಎಂದು ವಿವರಿಸಿದ್ದಾರೆ. “ಓರ್ವ ಸಂತರು ಒಂದು ನದಿ ದಡದಲ್ಲಿ ತಮ್ಮ ಬದುಕು ಕಂಡುಕೊಂಡಿದ್ದರು. ಒಂದು ದಿನ ಅವರು ನದಿಯ ಇನ್ನೊಂದು ದಡದಲ್ಲಿರುವ ದರ್ವೇಶರಿಗೆ ಆಹಾರ ನೀಡುವಂತೆ ತಮ್ಮ ಪತ್ನಿಗೆ ಆದೇಶಿಸಿದರು. ನದಿ ನೀರನ್ನು ದಾಟಲು ಅಸಾಧ್ಯ ಎಂದು ಪತ್ನಿ ನೆಪ ಹೇಳಿದರು. ಅವರು ಹೇಳಿದರು: ‘ನದಿ ತೀರವನ್ನು ತಲುಪಿದಾಗ, ನನ್ನ ಗಂಡನ ಮೇಲಿನ ಗೌರವದ ಕಾರಣ ದಾರಿತೋರಿಸಬೇಕು ಎಂದು ನದಿ ನೀರಿಗೆ ಹೇಳಬೇಕು’. ಇದನ್ನು ಕೇಳಿದ ಆಕೆ ಒಂದು ಕ್ಷಣ ಹೌಹಾರಿದರೂ, ತನ್ನ ಗಂಡನ ಆದೇಶವನ್ನು ಹೇಗೆ ಧಿಕ್ಕರಿಸಲಿ ಎಂದು ಹೊರಟಳು. ಆಕೆ ಆಹಾರದ ಜೊತೆ ನದಿ ತೀರಕ್ಕೆ ಬಂದು ತನ್ನ ಗಂಡನ ಸಂದೇಶವನ್ನು ವಿವರಿಸಿದಳು. ನದಿಯು ಆಕೆಗೆ ದಾರಿಮಾಡಿಕೊಟ್ಟಿತು. ನೀರನ್ನು ದಾಟಿದ ಮೇಲೆ ಆಕೆಯು ದರ್ವೇಶಿಯ ಎದುರು ಆಹಾರವನ್ನು ಇಟ್ಟಳು. ಬಳಿಕ ‘ನಾನು ಹೇಗೆ ನದಿ ದಾಟಲಿ’ ಎಂದು ದರ್ವೇಶರನ್ನು ಕೇಳಿದಾಗ, ‘ನೀವು ಹೇಗೆ ಬಂದಿರಿ?’ ಎಂದು ದರ್ವೇಶ್ ಕೇಳಿದರು. ಆಗ ಆಕೆ ತನ್ನ ಗಂಡನ ಮಾತುಗಳನ್ನು ವಿವರಿಸಿದಳು. ‘ಮೂವತ್ತು ವರ್ಷಗಳಿಂದ ಉಪವಾಸವಿದ್ದ ದರ್ವೇಶರ ಮೇಲಿನ ಗೌರವದಿಂದ ದಾರಿ ತೋರಿಸು’ ಎನ್ನಬೇಕೆಂದರು. ಈ ಮಾತನ್ನು ಕೇಳಿ ಹೌಹಾರಿದ ಆ ಮಹಿಳೆಯು ನದಿ ಹತ್ತಿರ ಬಂದು, ದರ್ವೇಶರ ಸಂದೇಶವನ್ನು ವಿವರಿಸಿದಳು. ತಕ್ಷಣ ನದಿ ದಾರಿಮಾಡಿಕೊಟ್ಟಿತು. ಮನೆಗೆ ತಲುಪಿದ ಆ ಮಹಿಳೆ ತನ್ನ ಗಂಡನ ಕಾಲಿಗೆರಗಿ, ಗಂಡ ಮತ್ತು ದರ್ವೇಶರ ಸಂದೇಶದ ರಹಸ್ಯವನ್ನು ವಿವರಿಸುವಂತೆ ಬಿನ್ನವಿಸಿಕೊಂಡಳು. ಆ ಸಂತರು ಹೇಳಿದರು, ‘ನೋಡು, ನನ್ನ ಉದ್ರೇಕಗಳನ್ನು ಪೂರೈಸಲು ನಾನೆಂದಿಗೂ ನಿನ್ನೊಂದಿಗೆ ಮಲಗಿರಲಿಲ್ಲ. ನಾನು ಕೇವಲ ನಿನ್ನ ಬಯಕೆಗಳನ್ನಷ್ಟೇ ಪೂರೈಸಿದ್ದೆ. ವಾಸ್ತವದಲ್ಲಿ ನಾನು ಎಂದಿಗೂ ನಿನ್ನೊಂದಿಗೆ ಮಲಗಿರಲಿಲ್ಲ. ಅದೇ ರೀತಿ ಆ ದರ್ವೇಶರು ಕೂಡಾ ಅವರ ಹಸಿವನ್ನು ನೀಗಿಸಲು ಅನ್ನಾಹಾರವನ್ನು ಮುಟ್ಟಿರಲಿಲ್ಲ. ದೇವಸ್ಮರಣೆಗೆ ಶಕ್ತಿ ಲಭಿಸಲಿಕ್ಕೋಸ್ಕರ ಮಾತ್ರ ಅವರು ಆಹಾರ ಸೇವಿಸುತ್ತಿದ್ದರು” – favaid ul fuad.

ಮೂಲ: ಆದಿತ್ಯ ಬೆಹ್ಲ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ


ಡಾ. ಆದಿತ್ಯ ಬೆಹಲ್ ಅವರು ತಮ್ಮ ಸೂಫೀ ಅಧ್ಯಯನ ಹಾಗೂ ದಕ್ಷಿಣ ಏಷ್ಯಾದ ಸಾಂಸ್ಕೃತಿಕ ಸಂಶೋಧನೆಗಳಿಂದ ಪ್ರಸಿದ್ಧರಾದವರು. ಅವರು ತಮ್ಮ ಬಿಎ ಪದವಿಯನ್ನು 1988 ರಲ್ಲಿ ಬೌಡಿನ್ ಕಾಲೇಜಿನಲ್ಲಿ, ಶಿಕಾಗೊ ಯುನಿವರ್ಸಿಟಿಯಲ್ಲಿ ರಿಲೀಜಿಯಸ್ ಸ್ಟಡೀಸ್ ನಲ್ಲಿ ಮಾಸ್ಟರ್ ಪದವಿ(1989) ಮತ್ತು ಪಿಹೆಚ್‌ಡಿ ಪದವಿಯನ್ನೂ (1995) ಪಡೆದರು. ಡಾ. ಬೆಹಲ್ ಉರ್ದು ಮತ್ತು ಹಿಂದಿ ಸಾಹಿತ್ಯ ಹಾಗೂ ದಕ್ಷಿಣ ಏಷ್ಯಾದ ಮಧ್ಯಕಾಲೀನ ಸಾಂಸ್ಕೃತಿಕ ಇತಿಹಾಸವನ್ನು ಪಾಠ ಮಾಡುತ್ತಿದ್ದರು. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅಧ್ಯಯನ ವಿಭಾಗದಲ್ಲಿ ಕಲಿಸುತ್ತಿದ್ದರು. ಮುಂದೆ 2001 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ರಿಲೀಜಿಯಸ್ ಸ್ಟಡೀಸ್ ವಿಭಾಗದಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ಮುಂದಿನ ವರ್ಷ ಅದೇ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕಗೊಂಡರು. ಅವರು ದಕ್ಷಿಣ ಏಷ್ಯಾದ ಇಂಡೋ ಮುಸ್ಲಿಂ ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ತೀವ್ರವಾದ ಆಸಕ್ತಿ ಹೊಂದಿದ್ದರು. ವಿಶೇಷವಾಗಿ ಸೂಫೀ ಅನುಭಾವ ಸಾಹಿತ್ಯದಲ್ಲಿ ಅವರಿಗೆ ಅಪಾರ ಒಲವು ಇತ್ತು.
ಆದಾಗ್ಯೂ ಅವರ ಪ್ರತಿಭೆಯು ಚರಿತ್ರೆ, ಧರ್ಮ, ಉಪಭೂಖಂಡದ ಸಾಹಿತ್ಯ, ಸಾಹಿತ್ಯ ಮತ್ತು ಧರ್ಮ ಮೀಮಾಂಸೆ ಮೊದಲಾದ ಹಲವಾರು ವಿಷಯಗಳನ್ನು ಆವರಿಸಿತ್ತು. ಭಾರತೀಯ ಸೂಫೀ ಅನುಭಾವ ಸಾಹಿತ್ಯ ಮತ್ತು ಸಂಸ್ಕೃತ ಭಾಷೆಯ ಕುರಿತು ಬಹಳಷ್ಟು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿರುವ ಇವರು ಹಿಂದೂಸ್ತಾನಿ ಸಂಗೀತ ಹಾಗೂ ಸೂಫೀ ಸಂಗೀತಗಳ ಆರಾಧಕರೂ ಆಗಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯದಿಂದ ತನ್ನ 43 ನೆಯ ವಯಸ್ಸಿನಲ್ಲಿ ನಿಧನರಾದರು.

ಹುಟ್ಟುಹಬ್ಬ

ಮಕರ ೮ನೇ ದಿನ, ಇಂದು ನನ್ನ ಜನ್ಮ ದಿನ. ಮಾಮೂಲಿಗೆ ವಿರುದ್ಧವಾಗಿ ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ಇವತ್ತಿಗಾಗಿಯೇ ತೆಗೆದಿಟ್ಟಿದ್ದ ಖಾದಿ ಶರ್ಟ್, ಬಿಳಿ ಬಣ್ಣದ ಖಾದಿ ಲುಂಗಿ, ಬಿಳಿಯ ಕ್ಯಾನ್ವಾಸ್ ಶೂಸ್ ಧರಿಸಿ ಕೋಣೆಯಲ್ಲಿ, ಭಗ್ನ ಹೃದಯದೊಂದಿಗೆ ನನ್ನ ಆರಾಮ ಕುರ್ಚಿಯಲ್ಲಿ ಅಂಗಾತ ಮಲಗಿದ್ದೆ. ಬೆಳ್ಳಂಬೆಳಗ್ಗೆಯೇ ನನ್ನನ್ನು ಕಂಡು ನನ್ನ ಕೋಣೆಯ ಸಮೀಪದಲ್ಲಿ ಉಳಕೊಂಡಿರುವ ಬಿ.ಎ. ವಿದ್ಯಾರ್ಥಿ ಮ್ಯಾಥ್ಯೂ ಚಕಿತರಾದರು. ಅವರು ಮುಗುಳ್ನಗೆ ಬೀರಿ ಪ್ರಭಾತ ವಂದನೆ ಸಲ್ಲಿಸಿದರು;
ಹಲೋ, ಗುಡ್ ಮಾರ್ನಿಂಗ್’ ಯಸ್ ಗುಡ್ ಮಾರ್ನಿಂಗ್’ ನಾನು ಉತ್ತರಿಸಿದೆ.
ಏನು ಅಪರೂಪಕ್ಕೆ ಬೆಳ್ಳಂಬೆಳಗ್ಗೆ? ಎಲ್ಲಿಗಾದರೂ ಹೋಗಲಿಕ್ಕಿತ್ತೇ?’ ಅವರು ಕೇಳಿದರು. ಹೇ.. ಏನೂ ಇಲ್ಲ. ಇಂದು ನನ್ನ ಹುಟ್ಟುಹಬ್ಬ’ ನಾನು ಹೇಳಿದೆ.
ಯುವರ್ ಬರ್ತ್ಡೇ?!’ ಯಸ್’
ಓ.. ಹೇ, ವಿಷ್ ಯು ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ’ ಥಾಂಕ್ಯೂ’
ಮ್ಯಾಥ್ಯೂ ಕೈಯಲ್ಲಿದ್ದ ಬ್ರಶ್ಶನ್ನು ಕಚ್ಚಿ ಹಿಡಿದು ಸ್ನಾನಗೃಹಕ್ಕೆ ಹೋದರು. ವಿದ್ಯಾರ್ಥಿಗಳು ಹಾಗೂ ಕ್ಲರ್ಕ್ ಗಳ ಕಡೆಯಿಂದ; ಅತ್ತಿತ್ತ ಚೀರಾಟ, ಗದ್ದಲ, ನಡುನಡುವೆ ಶೃಂಗಾರ ಗಾನಗಳು. ಯಾರಿಗೇನು ಬೇಸರ. ಜೀವನ ಉಲ್ಲಾಸಕರ. ನಾನು ಒಂದು ಗುಟುಕು ಚಹಾ ಕುಡಿಯಲು ದಾರಿಯೇನಾದರೂ ಇದೆಯೇ ಎಂದು ಯೋಚಿಸುತ್ತಿದ್ದೆ. ಮಧ್ಯಾಹ್ನದ ಊಟದ ಭಯವಿಲ್ಲ. ನಿನ್ನೆ ನಾನು ಬಝಾರಿನಲ್ಲಿ ನಡೆಯುತ್ತಿರುವಾಗ ಹಮೀದ್ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅವರೊಬ್ಬ ಪುಟ್ಟ ಕವಿ, ದೊಡ್ಡ ಧನಿಕ. ಅದೇನಿದ್ದರೂ ಮಧ್ಯಾಹ್ನದವರೆಗೆ ಚಹಾದ್ದೇ ಸಮಸ್ಯೆ. ಬಿಸಿ ಬಿಸಿ ಚಹಾ ಸಿಗಲೇನು ದಾರಿ? ಮ್ಯಾಥ್ಯುವಿನ ಕೆಲಸದಾಳು ಮ್ಯಾಥ್ಯುವಿಗೆ ಚಹಾ ಸಿದ್ಧಪಡಿಸುವುದರಲ್ಲಿ ಬ್ಯುಝಿಯಾಗಿರುವುದಾಗಿ ನಾನು ನನ್ನ ಕೋಣೆಯಲ್ಲಿ ಕುಳಿತು ಊಹಿಸಿಕೊಂಡೆ. ಅದಕ್ಕೊಂದು ಕಾರಣವಿದೆ. ನನ್ನ ಕೋಣೆ ಮ್ಯಾಥ್ಯುವಿನ ಅಡುಗೆ ಮನೆಯ ಸ್ಟೋರ್ ರೂಮ್. ತಿಂಗಳಿಗೆ ಎಂಟಾಣೆ(ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದ ನಾಣ್ಯ – ಅರ್ಧ ರುಪಾಯಿ)ಗೆ ಮನೆಯ ಯಜಮಾನ ನನಗದನ್ನು ಬಾಡಿಗೆಗೆ ಕೊಟ್ಟಿದ್ದರು. ಕಟ್ಟಡದಲ್ಲೇ ಅತ್ಯಂತ ಸಣ್ಣ ಹಾಗೂ ಕೆಟ್ಟ ಕೋಣೆ. ಅಲ್ಲಿ ನನ್ನ ಆರಾಮ ಕುರ್ಚಿ, ಮೇಜು, ಶೆಲ್ಪ್, ಹಾಸಿಗೆ- ಇಷ್ಟು ತುಂಬಿದ ಬಳಿಕ ಮತ್ತೆ ಅಲ್ಲಿ ಶ್ವಾಸ ಬಿಡಲೂ ಜಾಗವಿಲ್ಲ. ದೈತ್ಯ ಗೋಡೆಯ ಒಳಗಿರುವ ಮೂರು ಕಟ್ಟಡಗಳ ಮೇಲೆ ಕೆಳಗಿರುವ ಕೋಣೆಗಳಲ್ಲಿ ವಿದ್ಯಾರ್ಥಿಗಳು, ಕ್ಲರ್ಕ್ ಗಳು ತುಂಬಿಹೋಗಿದ್ದರು. ಮನೆಯ ಒಡೆಯನಿಗೆ ಬೇಡದ ಏಕೈಕ ವ್ಯಕ್ತಿ ನಾನು ಮಾತ್ರ. ಅದಕ್ಕೆ ಕಾರಣ ಬೇರೇನೂ ಅಲ್ಲ; ಸರಿಯಾಗಿ ಬಾಡಿಗೆ ನೀಡುವುದಿಲ್ಲವೆಂಬುದಷ್ಟೇ. ನನ್ನನ್ನು ಇಷ್ಟಪಡದ ಇನ್ನಿಬ್ಬರೆಂದರೆ, ಹೋಟೆಲ್‌ನವನು ಮತ್ತು ಗವರ್ನ್ಮೆಂಟ್. ಹೋಟೆಲ್‌ನವನಿಗಾದರೋ ನಾನು ಸ್ವಲ್ಪ ಹಣ ಕೊಡುವುದಿದೆ; ಸರಕಾರಕ್ಕೆ ನಾನು ಕೊಡಬೇಕಾದುದೇನೂ ಇಲ್ಲ. ಆದರೂ, ಅವರಿಗೆ ನನ್ನನ್ನು ಕಂಡರೆ ಆಗದು.
ಇಲ್ಲಿಯವರೆಗೆ ವಸತಿ, ಆಹಾರ, ಊರು- ಈ ಮೂರು ಸಂಗತಿಗಳ ಬಗ್ಗೆ ಹೇಳಿದೆ. ಇನ್ನು ನನ್ನ ವಸ್ತ್ರ, ಬೂಟು, ಲ್ಯಾಂಪಿನ ವಿಷಯ ಹೇಳಬೇಕಿದೆ(ಈ ಎಲ್ಲಾ ಸಂಗತಿಗಳನ್ನು ಬರೆಯುವ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಿದೆ. ಈಗ ಅರ್ಧರಾತ್ರಿ ಕಳೆದಿದೆ. ಕಾಗದ ಲೇಖನಿಯೊಂದಿಗೆ ನನ್ನ ಕೋಣೆಯಿಂದ ಹೊರಗಿಳಿದು ಬಹಳ ಹೊತ್ತಿನಿಂದ ಈ ಪಟ್ಟಣದಲ್ಲಿ ಅಲೆದಾಡುತ್ತಿದ್ದೇನೆ. ಬೇರೆ ವಿಶೇಷವಾಗಿ ಏನೂ ಇಲ್ಲ. ಈ ದಿನದ ಡೈರಿಯನ್ನು ಆರಂಭದಿಂದ ಕೊನೆಯವರೆಗೂ ಬರೆಯಬೇಕು. ಉತ್ತಮ ಸಣ್ಣಕತೆಯ ಸಾಧ್ಯತೆ ಇದರಲ್ಲಿದೆ. ಆದರೆ, ನನ್ನ ಕೋಣೆಯಲ್ಲಿರುವ ಲ್ಯಾಂಪಿನಲ್ಲಿ ಎಣ್ಣೆಯಿಲ್ಲ. ಬರೆಯಲು ಬಹಳಷ್ಟಿದೆ. ಆ ಕಾರಣದಿಂದ ಮಲಗಿದ್ದವನು ಎದ್ದು ಕಡಲ ಕಿನಾರೆಯ ಏಕಾಂತಮಯವಾದ ಬೀದಿದೀಪದಡಿಯಲ್ಲಿ ಕುಳಿತು ವಿಷಯಗಳ ತೀವ್ರತೆ ಕಡಿಮೆಯಾಗುವ ಮೊದಲೇ ಬರೆಯಬೇಕು). ಇನ್ನೇನು ಸುರಿಯಲಿರುವ ಕಾರ್ಮೋಡಗಳ ಹಾಗೆ ಈ ದಿನದ ಘಟನೆಗಳೆಲ್ಲಾ ನನ್ನ ಅಂತರಂಗವು ಒಡೆದು ಹೋಗುವಂತೆ ಒತ್ತೊತ್ತಿ ನಿಂತಿದೆ. ಅಸಾಧಾರಣವಾದುದೇನೂ ಇಲ್ಲ, ನನ್ನ ಜನ್ಮದಿನವನ್ನು ಹೊರತುಪಡಿಸಿ. ನಾನಾದರೋ, ಹುಟ್ಟಿದ ಊರಿನಿಂದ ಬಹಳ ದೂರದಲ್ಲಿರುವ ಅನ್ಯ ಊರಿನಲ್ಲಿದ್ದೇನೆ. ಕೈಯಲ್ಲಿ ಬಿಡಿಗಾಸಿಲ್ಲ; ಸಾಲ ಸಿಗುವ ಸಾಧ್ಯತೆಯೂ ಇಲ್ಲ. ಧರಿಸಿರುವ ವಸ್ತ್ರ ಗೆಳೆಯರ ಕೊಡುಗೆ. ನನ್ನದೆಂದು ಹೇಳಲಾಗುವ ಒಂದೂ ಇಲ್ಲ. ಇಂತಹ ಜನ್ಮದಿನ ಮತ್ತೆ ಮತ್ತೆ ಆಗಮಿಸಲಿ ಎಂದು ಮ್ಯಾಥ್ಯೂ ಶುಭಾಶಯ ಕೋರಿದಾಗ ನನ್ನ ಹೃದಯಕ್ಕೆ ಒಂದು ಚೂರು ನೋವಿನ ಅನುಭವವಾಯಿತು.
ನೆನೆನಪಿಸಿಕೊಳ್ಳುತ್ತ ಹೋದೆ.

ಗಂಟೆ ಏಳು. ನಾನು ಆರಾಮ ಕುರ್ಚಿಯಲ್ಲಿ ಮಲಗಿರುತ್ತ ಈ ದಿನವನ್ನಾದರೂ ಕಳಂಕರಹಿತ ದಿನವನ್ನಾಗಿ ಉಳಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ. ಇಂದು ಯಾರೊಂದಿಗೂ ಸಾಲ ಕೇಳಬಾರದು. ಯಾವ ತೊಂದರೆಯೂ ಆಗಬಾರದು. ಈ ದಿನ ಮಂಗಳಕರವಾಗಿಯೇ ಕೊನೆಗೊಳ್ಳಬೇಕು. ಕಳೆದು ಹೋದ ಹಗಲುರಾತ್ರಿಗಳ ಕಪ್ಪುಬಿಳುಪು ಸಂಕೋಲೆಯಲ್ಲಿ ನಾನು ಕಾಣುವ ಆ ನೂರು ನೂರು ‘ನಾನು’ ಆಗಿರಬಾರದು. ಇಂದು ನನಗೆ ಎಷ್ಟು ವಯಸಾಗಿರಬಹುದು? ಕಳೆದ ವರ್ಷಕ್ಕಿಂತ ಒಂದು ಹೆಚ್ಚಿದೆ. ಕಳೆದ ವರ್ಷದಲ್ಲಿ?.. ಇಪ್ಪತ್ತಾರು. ಅಲ್ಲ. ಮೂವತ್ತೆರಡು; ಅಥವಾ ನಲ್ವತ್ತ ಏಳೋ?
ಮನಸಿಗೆ ವಿಪರೀತ ನೋವು. ಎದ್ದು ಕನ್ನಡಿ ನೋಡಿದೆ. ಮುಖ ಪರವಾಗಿಲ್ಲ, ಚೆನ್ನಾಗಿದೆ. ವಿಶಾಲವಾದ ಹಣೆ; ನಿಶ್ಚಲ ಕಣ್ಣುಗಳು; ಬಾಗಿದ ಬಾಕುವಿನಂತಹ ಕಿರು ಮೀಸೆ. ಒಟ್ಟಿನಲ್ಲಿ ಪರವಾಗಿಲ್ಲ- ಎಂದೆಲ್ಲಾ ಯೋಚಿಸುತ್ತಿರಬೇಕಾದರೆ ಆ ದೃಶ್ಯ ಕಂಡು ನನ್ನ ಎದೆ ಧಸಕ್ಕೆಂದಿತು.
ನೆರೆತ ಕೂದಲು!
ನನ್ನ ಕಿವಿಯ ಮೇಲ್ಭಾಗದಲ್ಲಿ ಕಪ್ಪು ಕೂದಲಿನ ನಡುವೆ ಬೆಳ್ಳಿ ರೇಖೆ! ನಾನದನ್ನು ಬಹಳ ಕಷ್ಟಪಟ್ಟು ಕಿತ್ತೆಸೆದೆ. ಬಳಿಕ ತಲೆ ಸವರಿಕೊಳ್ಳಲಾರಂಭಿಸಿದೆ. ಹಿಂಭಾಗದಲ್ಲಿ ತಲೆ ಹೊಳೆಯುತ್ತಿತ್ತು. ಬೊಕ್ಕ ತಲೆ. ನಾನದನ್ನು ಸವರುತ್ತಿರಬೇಕಾದರೆ ತಲೆ ನೋವಿನ ಸಣ್ಣ ಅನುಭವ. ಬಿಸಿ ಬಿಸಿ ಚಹಾ ಕುಡಿಯದೆ ಹೀಗಾಗಿರಬಹುದೇ?
ಗಂಟೆ ಒಂಬತ್ತು. ನನ್ನನ್ನು ಕಂಡೊಡನೇ ಹೋಟೆಲಿನ ಯಜಮಾನ ಸಿಟ್ಟಿನಿಂದ ಮುಖ ತಿರುಗಿಸಿದನು. ಚಹಾ ಮಾಡುವ ಆ ದುಷ್ಟ ಹುಡುಗ ಬಾಕಿ ಕೊಡುವಂತೆ ಆಗ್ರಹಿಸಿದನು.
ಓ.. ಅದನ್ನು ನಾಳೆ ಕೊಡುತ್ತೇನೆ’ ನಾನು ಹೇಳಿದೆ. ಅವನಿಗೆ ನಂಬಿಕೆ ಬರಲಿಲ್ಲ; ನಿನ್ನೆಯೂ ಹೀಗೆಯೇ ಹೇಳಿದಿರಿ’
ಇವತ್ತು ಸಿಗುತ್ತದೆಂದು ಭಾವಿಸಿದ್ದೆ’ ಹಳೇ ಬಾಕಿ ಸಿಗದೆ ನಿಮಗೆ ಚಹಾ ಕೊಡಬೇಡವೆಂದು ಹೇಳಿದ್ದಾರೆ’
ಓ.. ’ ಅಪನಂಬಿಕೆ ಸ್ಫುರಿಸುವ ಪುಟ್ಟ ಮುಖ! ಅಂತರಂಗ ತಿಳಿಯಲಾಗದ ಮುಗ್ಧ ಹೃದಯ! ಈ ವೇಷಭೂಷಣವೂ, ಆರಾಮ ಕುರ್ಚಿಯಲ್ಲಿನ ನನ್ನ ನಿದ್ರೆಯೂ! ನಾನೊಬ್ಬಸಾರ್’ ಅಂತೆ! ಆರಾಮ ಕುರ್ಚಿ, ಶರ್ಟ್, ಲುಂಗಿ, ಬೂಟು ಯಾವುದೂ ನನ್ನದಲ್ಲ ಮಕ್ಕಳೇ! ಈ ಲೋಕದಲ್ಲಿ ಸ್ವಂತವೆಂದು ಹೇಳಿಕೊಳ್ಳಲು ನನ್ನ ಬಳಿ ಏನೂ ಇಲ್ಲ. ನಗ್ನನಾದ ಈ ನಾನು’ ನನಗೆ ಸೇರಿದ್ದೇ? ಭಾರತದ ಪ್ರತೀ ಪಟ್ಟಣಗಳಲ್ಲೂ ಎಷ್ಟೊಂದು ವರ್ಷಗಳ ಕಾಲ ಅಲೆದಾಡಿದೆ. ಎಷ್ಟೊಂದು ಜಾತಿಗಳ ನಡುವೆ ನೆಲೆಸಿದೆ. ಯಾರ‍್ಯಾರದೋ ಆಹಾರ. ನಾನು! ನನ್ನ ರಕ್ತ, ನನ್ನ ಮಾಂಸ, ನನ್ನ ಅಸ್ತಿ ಭಾರತಕ್ಕೆ ಸೇರಿದ್ದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಕರಾಚಿ(ಆಗಿನ್ನೂ ಭಾರತದಲ್ಲಿತ್ತು)ಯಿಂದ ಕಲ್ಕತ್ತದವರೆಗೆ; ಹೀಗೆ ಭಾರತದ ಹೆಚ್ಚಿನೆಲ್ಲಾ ಭಾಗಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಹೆಣ್ಣು ಗಂಡೆಂಬ ವ್ಯತ್ಯಾಸವಿಲ್ಲದೆ ಪ್ರತೀ ಸ್ನೇಹಿತರನ್ನೂ ನಾನಿಂದು ಸ್ಮರಿಸುತ್ತೇನೆ. ಸ್ಮರಣೆ! ಪ್ರತಿಯೋರ್ವರನ್ನೂ ಹುಡುಕಿ ನನ್ನ ಸ್ನೇಹವನ್ನು ಹೇಗೆ ಹೇಳಲಿ?ಭಾರತವನ್ನು ಕವಿದು.. ಭೂಗೋಳವನ್ನು ಕವಿದು.. ಸುಗಂಧದಲ್ಲಿ ಮುಳುಗಿರುವ ಸ್ಪುರದ್ರುಪಿ ಚಂದ್ರನ ಬೆಳಕಿನಂತೆ ನನ್ನ ಸ್ನೇಹ ಹರಡಲಿ. ಸ್ನೇಹ! ನನ್ನನ್ನು ಅರಿತು ಪ್ರೀತಿಸುವವರು ಯಾರಾದರು ಇದ್ದಾರೆಯೇ? ಅರಿವು; ನನ್ನ ಪ್ರಕಾರ ಅರಿವೆಂದರೆ ನಿಗೂಢತೆಯತಡೆ’ಯನ್ನು ನೀಗಿಸುವುದು. ಕೊರತೆ, ದೌರ್ಬಲ್ಯಗಳನ್ನು ಕಳೆದರೆ ಉಳಿಯುವುದೇನು? ಪ್ರೀತಿಸಲು, ಪ್ರೀತಿಸಲ್ಪಡಲು ಆಕರ್ಷಕವಾದ ಏನಾದರೂ ಬೇಕು. ಅಬ್ಬಾ! ಕಾಲ ಅದೆಷ್ಟು ತ್ವರಿತವಾಗಿ ಸಾಗುತ್ತಿದೆ! ಅಪ್ಪನ ತೋರುಬೆರಳಿನಲ್ಲಿ ಆಟವಾಡುತ್ತಿದ್ದ ನಾನು; ಹಸಿವಾಗುತ್ತಿದೆ’ ಎಂದು ಅಮ್ಮನ ಸೀರೆಯ ಚುಂಗು ಹಿಡಿದು ಅಳುತ್ತಿದ್ದ ನಾನು; ಇಂದು! ಅಬ್ಬಾ, ಕಾಲದ ನಾಗಾಲೋಟವೇ! ಆದರ್ಶದ ಅದೆಷ್ಟು ಬಾಂಬುಗಳು ನನ್ನ ಅಂತರಂಗಕ್ಕೆ ಬಿದ್ದು ಸಿಡಿದಿವೆ. ನನ್ನ ಹೃದಯವೋ ಭೀಕರ ಯುದ್ಧಭೂಮಿ! ಇಂದು ನಾನು ಯಾರು? ಕ್ರಾಂತಿಕಾರಿ, ದೇಶದ್ರೋಹಿ, ಧರ್ಮದ್ರೋಹಿ, ಕಮ್ಯೂನಿಸ್ಟ್--ಇನ್ನು ಏನೇನೋ ಈ ನಾನು. ವಾಸ್ತವದಲ್ಲಿ ನಾನು ಇವೆಲ್ಲ ಆಗಿದ್ದೆನೇ? ಅಬ್ಬಾ! ಎಂತಹ ಅಸ್ವಸ್ಥತೆ. ದೇವರೇ! ತಲೆಯೊಳಗೆ ಹೊತ್ತಿ ಉರಿಯುತ್ತಿದೆ. ಚಹಾ ಕುಡಿಯದ ಪರಿಣಾಮವೋ? ತಲೆ ನೆಟ್ಟಗೆ ನಿಲ್ಲುವುದಿಲ್ಲ. ಆದದ್ದಾಗಲೀ, ಹೋಗಿ ಊಟ ಮಾಡೋಣ. ಆದರೆ, ತಲೆನೋವಿನೊಂದಿಗೆ ಒಂದು ಮೈಲಿ ನಡೆಯಬೇಕು. ಆದರೂ, ಇಂದು ಹೊಟ್ಟೆ ತುಂಬಾ ಊಟ ಮಾಡಬೇಕಲ್ಲವೇ. ಗಂಟೆ ಹನ್ನೊಂದು: ಹಮೀದ್ ಅಂಗಡಿಯಲ್ಲಿಲ್ಲ! ಮನೆಯಲ್ಲಿರಬಹುದೇ? ನನ್ನನ್ನೂ ಜೊತೆಗೆ ಕರೆದೊಯ್ಯಬಹುದಿತ್ತು. ಬಹುಶಃ ಅವನು ಮರೆತು ಹೋಗಿರಬಹುದೇ? ನೇರವಾಗಿ ಮನೆಗೆ ಹೋದರೆ ಸರಿ. ಗಂಟೆ ಹನ್ನೊಂದುವರೆ. ಹಮೀದ್‌ನ ಮಾಳಿಗೆ ಮನೆಯ ತಗಡಿನ ಬಾಗಿಲು ಮುಚ್ಚಿತ್ತು. ನಾನು ಬಾಗಿಲು ತಟ್ಟಿದೆ: ಏಯ್ ಮಿಸ್ಟರ್ ಹಮೀದ್’
ಉತ್ತರವಿಲ್ಲ.
ಹಲೋ, ಮಿಸ್ಟರ್ ಹಮೀ...ದ್’ ಒಬ್ಬ ಮಹಿಳೆಯಿಂದ ಕೋಪಿಷ್ಠ ಶಬ್ದದಲ್ಲಿ ಘರ್ಜನೆ;ಇಲ್ಲಿಲ್ಲ’
ಎಲ್ಲಿಗೆ ಹೋದ?’ ನಿರುತ್ತರ. ನಾನು ಮತ್ತೆ ಬಾಗಿಲು ಬಡಿದೆ. ಮನಸು ವಿಪರೀತವಾಗಿ ದಣಿದಿತ್ತು. ಹಿಂದಿರುಗಿ ನಡೆಯಲಾರಂಭಿಸಿದೆ. ಹಿಂದಿನಿಂದ ಯಾರದೋ ಹೆಜ್ಜೆ ಸಪ್ಪಳ ಕೇಳಿಸಿತು; ಜೊತೆಗೆ ಬಳೆಯ ಕಿಂಕಿಣಿ. ಯುವತಿಯೊಬ್ಬಳು ಬಾಗಿಲನ್ನು ಅಲ್ಪ ತೆರೆದಳು. ಹಮೀದ್ ಎಲ್ಲಿಗೆ ಹೋದ?’ ನಾನು ಕೇಳಿದೆ.
ಏನೋ ಅಗತ್ಯಕ್ಕೆ ಒಂದು ಕಡೆಗೆ ಹೋದರು’ ಮೃದು ದನಿಯಲ್ಲಿ ಆಕೆ ಹೇಳಿದಳು. ಯಾವಾಗ ಬರುತ್ತಾನೆ?’
ಸಂಜೆಯ ಬಳಿಕ’ ಸಂಜೆಯ ಬಳಿಕ! ಬರುವಾಗ ನಾನು ಬಂದು ಹೋದೆ ಅಂತ ಹೇಳಬೇಕು’
ನೀವು ಯಾರು?’ ನಾನು ಯಾರು? ನಾನು.. ನಾ.. ಯಾರೂ ಅಲ್ಲ. ಏನೂ ಹೇಳಬೇಕಾಗಿಲ್ಲ’
ಅಲ್ಲಿಂದ ಹಿಂದಿರುಗಿದೆ. ಸುಡು ಬಿಸಿಲ ಧಗೆಗೆ ಕರಗಿದ ಸಕ್ಕರೆ ಮಣ್ಣು; ಅದನ್ನು ದಾಟಿದ ಬಳಿಕ ಕನ್ನಡಿಯ ಚೂರುಗಳಂತೆ ಹೊಳೆಯುವ ಕಡಲ ಕಿನಾರೆ. ಕಣ್ಣು, ತಲೆಯೊಳಗೆ ಕತ್ತಲೆ ಕವಿಯಿತು! ಅಸಾಧ್ಯ ನೋವು. ಎಲುಬುಗಳು ಬೇಯುತ್ತಿವೆ! ನೀರಡಿಕೆ! ಹಸಿವು! ದುರಾಸೆ! ಲೋಕವನ್ನೇ ನುಂಗುವ ಅತ್ಯಾಗ್ರಹ! ಹಸಿವು ನೀಗಿಸಲು ದಾರಿಯಿಲ್ಲ ಎಂಬ ಯೋಚನೆಯೇ ಈ ತೀವ್ರತೆಗೆ ಕಾರಣ. ಇಂತಹ ಎಷ್ಟೊಂದು ಹಗಲು ರಾತ್ರಿಗಳು ಕಳೆದು ಹೋಗಿವೆ! ನಾನೀಗ ಕುಸಿದು ಬೀಳುವೆನೇ? ಇಲ್ಲ. ಬೀಳಬಾರದು. ನಡೆ ಮುಂದೆ ನಡೆ!
ಗಂಟೆ ಹನ್ನೆರಡುವರೆ; ಪರಿಚಿತರು ನೋಡಿಯೂ ನೋಡದಂತೆ ದಾಟಿ ಹೋಗುತ್ತಿದ್ದಾರೆ. ಸಂಗಾತಿಗಳೇ, ಇಂದು ನನ್ನ ಜನ್ಮದಿನ; ಶುಭಾಶಯ ಕೋರಿ ಮುಂದೆ ನಡೆಯಿರಿ’ ಎಂದು ನನ್ನ ಹೃದಯ ಮಂತ್ರಿಸಿತು. ನೆರಳ ಗುರುತುಗಳು ನನ್ನನ್ನು ದಾಟಿ ಹೋದವು.ಸ್ನೇಹಿತರೇ, ಯಾಕೆ ನನ್ನನ್ನು ಕಂಡು ಮಾತನಾಡದೆ ಹೋಗುತ್ತಿರುವಿರಿ’
ಓಹೋ.. ಹಾಗೋ ವಿಷಯ.
ನನ್ನ ಹಿಂದೆ ಒಬ್ಬ ಸಿ.ಒ.ಡಿ!
ಗಂಟೆ ಒಂದು. ಮಾಜಿ ಪತ್ರಕರ್ತರೂ, ಆಗಿನ ವ್ಯಾಪಾರಿಯೂ ಆಗಿದ್ದ ಮಿಸ್ಟರ್ ‘ಪಿ’ ಯ ಬಳಿ ನಾನು ಹೋದೆ. ಕಣ್ಣು ಕಾಣುತ್ತಿಲ್ಲ. ಮುಜುಗರ.
ಕ್ರಾಂತಿ ಎಲ್ಲಿಯವರೆಗೆ ಬಂತು’ ಪಿ. ಕೇಳಿದರು. ಹತ್ತಿರ ಹತ್ತಿರ ಆಯಿತು’
ಎಲ್ಲಿಂದ ಬರುತ್ತಿರುವಿರಿ! ನೋಡಿ ತುಂಬಾ ಸಮಯವಾಯಿತಲ್ಲವೇ’ ಮ್ಞ್’
ಏನು ವಿಶೇಷ?’ ಏನು ಇಲ್ಲ ಸುಮ್ಮನೆ ಬಂದೆ’
ನಾನು ಅವರ ಸಮೀಪದಲ್ಲಿದ್ದ ಕುರ್ಚಿಯಲ್ಲಿ ಕುಳಿತೆ. ನನ್ನ ಅನೇಕ ಲೇಖನಗಳು ಅವರ ಹೆಸರಲ್ಲಿ ಪ್ರಕಟಗೊಂಡಿದ್ದವು. ಅಂದಿನ ತನ್ನ ಮಹತ್ವವನ್ನು ನೆನಪಿಸಲು ಹಳೆಯ ಪತ್ರಗಳನ್ನೆಲ್ಲಾ ಬೈಂಡ್ ಮಾಡಿ ಇಟ್ಟಿದ್ದರು. ನಾನು ಅದನ್ನೆತ್ತಿ ಸಿಡಿಯುತ್ತಿದ್ದ ತಲೆಯೊಂದಿಗೆ ನೋಡುತ್ತಿದ್ದೆ. ನನಗೊಂದು ಚಹಾ ಬೇಕು. ಬಹಳ ನಿತ್ರಾಣಗೊಂಡಿರುವೆ’ ಎಂದು ನನ್ನ ಹೃದಯ ಅತಿವೇಗದಲ್ಲಿ ಬಡಿದುಕೊಳ್ಳುತಿತ್ತು. ಪಿ. ಯಾಕೆ ನನ್ನೊಂದಿಗೆ ಏನನ್ನೂ ಕೇಳುತ್ತಿಲ್ಲ? ಅವರಿಗೆ ನನ್ನ ದಣಿವು ಕಾಣುತ್ತಿಲ್ಲವೇ? ಅವರು ಹಣದ ಪೆಟ್ಟಿಗೆಯ ಬಳಿ ಗಾಂಭೀರ‍್ಯತೆಯಲ್ಲಿ ಕುಳಿತಿದ್ದಾರೆ. ನಾನು ಮೂಗನಂತೆ ಬೀದಿಯತ್ತ ನೋಡಿದೆ. ಖಾನದಲ್ಲಿ ಬಿದ್ದಿದ್ದ ತುಂಡು ದೋಸೆಗಾಗಿ ತುಂಟ ಮಕ್ಕಳಿಬ್ಬರು ಜಗಳವಾಡುತ್ತಿದ್ದರು.ಒಂದು ಬಿಸಿ ಚಹಾ’ ಎಂದು ನನ್ನ ಸರ್ವವೂ ಮೂಕ ಮರ್ಮರಗೈದಿತು. ಪಿ. ಪೆಟ್ಟಿಗೆ ತೆರೆದರು. ರುಪಾಯಿಗಳು ಹಾಗೂ ಚಿಲ್ಲರೆಗಳ ನಡುವೆ ಒಂದು ಆಣೆ ತೆಗೆದು ಒಬ್ಬ ಹುಡುಗನ ಕೈಗಿತ್ತು; ಹೋಗಿ ಚಹಾ ತಾ’ ಎಂದರು. ಹುಡುಗ ಓಡಿದ. ನನ್ನ ಹೃದಯ ತಣಿಯಿತು. ಎಷ್ಟು ಒಳ್ಳೆಯ ಮನುಷ್ಯ! ಹುಡುಗ ತಂದ ಚಹಾ ಕೈಗೆತ್ತಿ ಪಿ. ನನ್ನ ಕಡೆಗೆ ತಿರುಗಿದರು; ನಿಮಗೆ ಚಹಾ ಬೇಕೆ?’
ಬೇಡ’ ಎಂದು ಹೇಳಿ ನಾನು ಷೂಸ್‌ನ ಲೇಸ್ ಕಟ್ಟುವವನಂತೆ ನಟಿಸಿ ಬಗ್ಗಿದೆ. ನನ್ನ ಮುಖ ಅವರು ಕಾಣುತ್ತಾರೆ; ನನ್ನ ಮನಸಿನ ಕ್ಷೋಭೆಯನ್ನು ಅರಿಯುತ್ತಾರೆ! ನಿಮ್ಮ ಪುಸ್ತಕಗಳ್ಯಾವುದನ್ನೂ ನನಗೆ ಕೊಡಲಿಲ್ಲವಲ್ಲ’ ಪಿ. ಬೇಸರ ವ್ಯಕ್ತಪಡಿಸಿದರು.
ಕೊಡುತ್ತೇನೆ’ ನಾನು ಹೇಳಿದೆ. ಅವುಗಳ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಅಭಿಪ್ರಾಯಗಳನ್ನು ನಾನು ಓದುತ್ತಿದ್ದೇನೆ’
ಒಳ್ಳೆಯದು’ ಎಂದು ಮಂದಹಾಸ ಬೀರಲು ಯತ್ನಿಸಿದೆ. ಆದರೆ, ಹೃದಯದಲ್ಲಿ ಬೆಳಕಿಲ್ಲದೆ ಮುಖ ಹೇಗೆ ಮಂದಹಾಸ ಬೀರಲು ಸಾಧ್ಯ? ನಾನು ಗುಡ್ ಬೈ ಹೇಳಿ ಎದ್ದು ಬೀದಿಗಿಳಿದು ನಡೆದೆ. ನನ್ನ ಹಿಂದೆ ಆ ಸಿ.ಒ.ಡಿ! ಗಂಟೆ ಎರಡು. ನಾನು ದಣಿದು ಹೈರಾಣಾಗಿ ಆರಾಮ ಕುರ್ಚಿಯಲ್ಲಿ ಮಲಗಿದ್ದೆ. ಉತ್ತಮ ಬಟ್ಟೆಗಳನ್ನು ಧರಿಸಿದ ಸುವಾಸಿತಳಾದ ಅಪರಿಚಿತ ಹೆಣ್ಣೊಬ್ಬಳು ನನ್ನ ಕೋಣೆಯ ಬಾಗಿಲ ಬಳಿ ಬಂದಳು. ದೂರದೂರಿನವಳು. ಪ್ರವಾಹ ಬಂದು ಊರು ಸರ್ವನಾಶವಾಗಿದೆ. ಏನಾದರೂ ಸಹಾಯ ಮಾಡಬೇಕು! ಮಂದಹಾಸ ಬೀರುತ್ತಾ ಅವಳು ನನ್ನೆಡೆಗೆ ಮಾದಕ ನೋಟ ಬೀರಿದಳು. ನನ್ನ ಹೃದಯದಲ್ಲಿ ಜ್ವಾಲೆಯೆದ್ದು, ಭಾವನೆಯೊಂದು ಮೊಳೆಯಿತು. ಅದು ಹೊತ್ತಿ ಉರಿದು ಇಡೀ ನರನಾಡಿಗಳನ್ನು ವ್ಯಾಪಿಸಿತು. ನನ್ನ ಹೃದಯ ಬಡಿತ ನನಗೇ ಕೇಳಿಸುವ ಅನುಮಾನ ಮೂಡಿತು. ಅಬ್ಬಾ.. ಅದೊಂದು ಭಯಾನಕ ನಿಮಿಷ. ಸಹೋದರಿ ನನ್ನ ಬಳಿ ಏನೂ ಇಲ್ಲ; ನೀವು ಬೇರೆ ಯಾರ ಬಳಿಯಾದರೂ ಹೋಗಿ ಕೇಳಿ’
ಏನೂ ಇಲ್ಲವೇ?’ ಇಲ್ಲ’
ಆದರೂ ಅವಳು ಹೋಗಲಿಲ್ಲ.
ಹೋಗು. ನನ್ನ ಬಳಿ ಏನೂ ಇಲ್ಲ’ ದನಿ ಎತ್ತರಿಸಿ ಹೇಳಿದೆ. ಓ..’ ಅವಳು ನೋವಿನಿಂದ ಕುಲುಕುತ್ತ ನಡೆದಳು. ಆದರೂ, ಅವಳ ದೇಹದಿಂದ ಹೊರಹೊಮ್ಮುತ್ತಿದ್ದ ಪರಿಮಳ ಅದ್ಭುತ!
ಗಂಟೆ ಮೂರು. ಯಾರೊಂದಿಗಾದರೂ ಸಾಲ ಕೇಳಿದರೆ ಹೇಗೆ? ಭಯಾನಕ ದಣಿವು. ಅಸಹಾಯಕ ಸ್ಥಿತಿ. ಯಾರೊಂದಿಗೆ ಕೇಳಲಿ? ಅನೇಕ ಹೆಸರುಗಳು ಸ್ಮೃತಿಪಟಲದಲ್ಲಿ ತೇಲಿ ಬಂದವು. ಆದರೆ, ಸಾಲವು ಸ್ನೇಹ ಆದರವನ್ನು ಕಡಿಮೆಗೊಳಿಸುವ ಸಂಗತಿ. ಸತ್ತರೆ ಹೇಗೆ.. ಎಂದು ನಾನು ಯೋಚಿಸಿದೆ.
ಆದರೆ, ಹೇಗೆ ಸಾಯುವುದು?
ಗಂಟೆ ಮೂರುವರೆ. ನಾಲಗೆ ಕುಸಿದು ಹೋಗುತ್ತಿದೆ. ತೀರಾ ಅಸೌಖ್ಯ. ತಣ್ಣೀರಿನಲ್ಲಿ ಮುಳುಗೆದ್ದರೆ ಹೇಗೆ? ದೇಹದ ಬಿಸಿ ತಣಿದರೆ! ಹೀಗೆ ಮಲಗಿರಬೇಕಾದರೆ ಕೆಲವು ಸಂಪಾದಕರುಗಳ ಕಾಗದ ಬಂತು. ಕಥೆಗಳನ್ನು ಆದಷ್ಟು ಬೇಗ ಕಳುಹಿಸಿಕೊಡಬೇಕು. ಕಾಗದಗಳನ್ನು ಅಲ್ಲಿಯೇ ಬಿಟ್ಟು ನಾನು ದಣಿದು ಮಲಗಿದೆ. ಬ್ಯಾಂಕ್ ಕ್ಲರ್ಕ್ ಕೃಷ್ಣ ಪಿಳ್ಳೆಯ ಆಳು ಬೆಂಕಿಕಡ್ಡಿ ಕೇಳಿ ಬಂದನು. ಅವನಿಂದ ಒಂದು ಗ್ಲಾಸ್ ನೀರು ತರಿಸಿ ಕುಡಿದೆ.
ಸಾರ್‌ಗೆ ಅಸೌಖ್ಯವೇ?’ ಹನ್ನೊಂದು ವಯಸಿನ ಆ ಹುಡುಗನ ಪ್ರಶ್ನೆ. ಅಸೌಖ್ಯವೇನೂ ಇಲ್ಲ’ ನಾನು ಹೇಳಿದೆ.
ಮತ್ತೆ...ಸಾರ್ ಊಟ ಮಾಡಲಿಲ್ಲವೇ?’ ಇಲ್ಲ’
ಅಯ್ಯೋ ಅದೇಕೆ ಸಾರ್ ಊಟ ಮಾಡಲಿಲ್ಲ’ ಆ ಪುಟ್ಟ ಮುಖ, ಕಪ್ಪು ಕಣ್ಣುಗಳು, ಇದ್ದಿಲು ಮೆತ್ತಿದ ಟವಲ್. ಅವನು ಕುತೂಹಲದಿಂದ ನಿಂತಿದ್ದಾನೆ. ನಾನು ಕಣ್ಣು ಮುಚ್ಚಿದೆ. ಸಾರ್’ ಮೆಲುದನಿಯಲ್ಲಿ ಅವನು ಕರೆದನು.
ಮ್ಞ್...’ ನನ್ನ ಬಳಿ ಎರಡಾಣೆ ಇದೆ’
ಅದಕ್ಕೇನು?’ ನಾನು ಮುಂದಿನ ತಿಂಗಳು ಮನೆಗೆ ಹೋಗುತ್ತಿದ್ದೇನೆ. ಆಗ ಕೊಟ್ಟರೆ ಸಾಕು’
ನನ್ನ ಹೃದಯ ಬಿಕ್ಕಿತು. ಯಾ ಅಲ್ಲಾಹ್! ಕೊಡು’ ನನ್ನ ಮಾತು ಕೇಳಿದ್ದೇ ತಡ. ಅವನು ಓಡಿದನು. ಅಷ್ಟು ಹೊತ್ತಿಗೆ ಗೆಳೆಯ ಗಂಗಾಧರನ್ ಬಂದ. ಬಿಳಿಯ ಖಾದಿ ಲುಂಗಿ, ಬಿಳಿಯ ಖಾದಿ ಜುಬ್ಬ. ಅದರ ಮೇಲೆ ಹೊದಿಸಿದ ನೀಲಿ ಶಾಲು. ಕರ‍್ರಗಿನ ಉದ್ದದ ಮುಖ, ಗಂಭೀರ ಮುಖಭಾವ.
ಆರಾಮ ಕುರ್ಚಿಯಲ್ಲಿ ನಾನು ಗತ್ತಿನಿಂದ ಮಲಗಿರುವುದು ಕಂಡು ಆ ನಾಯಕ; ಅಬ್ಬಬ್ಬಾ! ನೀನು ದೊಡ್ಡ ಬೂರ್ಜ್ವಾ (bourgeois) ಆಗಿಬಿಟ್ಟೆಯಲ್ಲಾ?’ ಎಂದನು. ಅಸಾಧ್ಯ ತಲೆನೋವಿನ ನಡುವೆಯೂ ನನಗೆ ನಗು ಬಂತು. ಆ ಪುಡಾರಿಗಳು ಧರಿಸಿರುವ ವಸ್ತ್ರದ ಒಡೆತನದ ಹಕ್ಕು ಯಾರದ್ದೆಂದು ನಾನು ಯೋಚಿಸಿದೆ. ನನಗೆ ಪರಿಚಯವಿರುವ ಪ್ರತಿಯೊಬ್ಬ ರಾಜಕೀಯ ನೇತಾರನ ಚಿತ್ರ ಮನಃಪಟಲದಲ್ಲಿ ಮೂಡಿತು. ಏನು ಪ್ರಯೋಜನ? ಯಾಕೋ ನಗ್ತಿದ್ದೀಯಾ?’ ಗಂಗಾಧರನ್ ಕೇಳಿದ.
`ಏನಿಲ್ಲ ಕಣೋ, ನಮ್ಮ ಈ ವೇಷಭೂಷಣವನ್ನು ನೋಡಿ ನಗು ಬಂತು’ ತಮಾಷೆ ಬಿಟ್ಟು ಇಲ್ಲಿ ಕೇಳು. ದೊಡ್ಡ ಸಮಸ್ಯೆಯಾಗಿದೆ. ಸದ್ಯದಲ್ಲೇ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಗುಂಡು ಹಾರಾಟ ಶುರುವಾಗಬಹುದು. ಹದಿಮೂರು ಸಾವಿರ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ. ಒಂದೂವರೆ ವಾರದಿಂದ ಅವರು ಅರೆ ಹೊಟ್ಟೆಯಲ್ಲಿದ್ದಾರೆ. ದೊಡ್ಡ ಗಲಾಟೆ ನಡೆಯಬಹುದು. ಮನುಷ್ಯ ಹಸಿವಿನಲ್ಲಿರುವಾಗ ಏನು ಬೇಕಾದರೂ ಸಂಭವಿಸಬಹುದು’
ಈ ವಿಷಯಗಳ್ಯಾವುದೂ ಪತ್ರಿಕೆಯಲ್ಲಿ ಕಾಣಲಿಲ್ಲವಲ್ಲಾ’ ಪತ್ರಿಕೆಗಳಿಗೆ ಸುದ್ದಿ ಮಾಡದಂತೆ ತಾಕೀತಿದೆ’
ಓ..ಹೋ ಹಾಗೋ ವಿಷಯ. ಅದಿರಲಿ. ನಾನೇನು ಮಾಡಲಿ?’ ಕಾರ್ಮಿಕರ ಒಂದು ಮೀಟಿಂಗ್ ಇದೆ. ಅದರ ಅಧ್ಯಕ್ಷ ನಾನೇ. ಅಲ್ಲಿಗೆ ಹೋಗಬೇಕಾದರೆ ಬೋಟ್‌ನವನಿಗೆ ಕೊಡಲು ಒಂದಾಣೆ ಬೇಕು. ಮತ್ತೆ ನಾನು ಇಂದು ಏನೂ ತಿಂದಿಲ್ಲ. ನೀನು ನನ್ನ ಜೊತೆಗೆ ಬರಬೇಕು’
ವಿಷಯ ಒಳ್ಳೆಯದೇ ಮಗಾ, ಆದರೆ, ನನ್ನ ಬಳಿ ನಯಾಪೈಸೆ ಇಲ್ಲ. ನಾನು ಸರಿಯಾಗಿ ಹೊಟ್ಟೆ ತುಂಬಿಸಿಯೇ ಬಹಳ ದಿನಗಳಾದವು. ಸೂರ್ಯೋದಯವಾಗಿ ಇದುವರೆಗೆ ನಾನೂ ಕೂಡಾ ಏನೂ ತಿಂದಿಲ್ಲ. ಸಾಲದ್ದಕ್ಕೆ ಇವತ್ತು ನನ್ನ ಜನ್ಮದಿನ ಬೇರೆ.' ಜನ್ಮದಿನ? ನಮ್ಮಂಥವರಿಗೆಲ್ಲಾ ಏನು ಜನ್ಮದಿನ?’
ಪ್ರಪಂಚದಲ್ಲಿರುವ ಎಲ್ಲದಕ್ಕೂ ಜನ್ಮದಿನಾಂತ ಒಂದು ಇದೆಯಲ್ಲವೇ’ ಹೀಗೆ ಮಾತು ವಿವಿಧ ದಿಕ್ಕು ಹಿಡಿದು ಸಾಗಿತು. ಗಂಗಾಧರನ್ ಕಾರ್ಮಿಕರ ಬಗ್ಗೆ, ರಾಜಕೀಯದ ಬಗ್ಗೆ, ಗವರ್ನ್ಮೆಂಟಿನ ಬಗ್ಗೆ ಮಾತನಾಡಿದನು. ನಾನು ಜೀವನದ ಬಗ್ಗೆ, ಸಂಪಾದಕರುಗಳ ಬಗ್ಗೆ, ಸಾಹಿತಿಗಳ ಬಗ್ಗೆ ಮಾತನಾಡಿದೆ. ಅದರ ನಡುವೆ ಆ ಹುಡುಗ ಬಂದನು. ಒಂದಾಣೆಯನ್ನು ನಾನು ತೆಗೆದುಕೊಂಡೆ. ಉಳಿದ ಒಂದಾಣೆಗೆ ಚಹಾ, ಬೀಡಿ, ದೋಸೆ ತರುವಂತೆ ಹೇಳಿದೆ. ಕಾಲಾಣೆ ಚಹಾಕ್ಕೆ, ಅರೆ ಆಣೆ ದೋಸೆಗೆ, ಕಾಲಾಣೆ ಬೀಡಿಗೆ. ದೋಸೆ ಮುಚ್ಚಿ ತಂದ ಅಮೆರಿಕನ್ ಪತ್ರಿಕೆಯ ತುಂಡಿನಲ್ಲಿ ಒಂದು ಚಿತ್ರವಿತ್ತು. ಅದು ನನ್ನನ್ನು ಆಕರ್ಷಿಸಿತು. ಗಂಗಾಧರನ್‌ನ ಜೊತೆ ಸೇರಿ ದೋಸೆ ತಿಂದೆ. ಒಂದೊಂದು ಗ್ಲಾಸ್‌ನಂತೆ ನೀರು ಕುಡಿದೆವು. ಜೊತೆಗೆ ಅಲ್ಪ ಚಹಾ ಹೀರಿಕೊಂಡೆವು. ಆ ಬಳಿಕ ಒಂದು ಬೀಡಿ ಹೊತ್ತಿಸಿ ಹೊಗೆ ಬಿಟ್ಟು ಗಂಗಾಧರನ್‌ಗೆ ಒಂದು ಕೊಟ್ಟೆ. ಹೊರಡುವ ಸಂದರ್ಭದಲ್ಲಿ ಗಂಗಾಧರನ್ ತಮಾಷೆಗೆ ಒಂದು ಮಾತು ಕೇಳಿದ; ಇಂದು ನಿನ್ನ ಜನ್ಮದಿನವಲ್ಲವೇ. ಜಗತ್ತಿಗೆ ಏನಾದರು ಸಂದೇಶ ಕೊಡುವುದಕ್ಕಿದೆಯೇ?’
ಇದೆ ಕಣೋ, ಕ್ರಾಂತಿಗೆ ಸಂಬಂಧಿಸಿದ್ದು ಒಂದು..’ ಎಲ್ಲಿ, ಹೇಳು ನೋಡೋಣ’
ಕ್ರಾಂತಿಯ ಅಗ್ನಿ ಜ್ವಾಲೆಗಳು ಸದಾ ಪ್ರಜ್ವಲಿಸುತ್ತಿರಲಿ. ಇಂದಿನ ಸಾಮಾಜಿಕ ಘಟಕಗಳೆಲ್ಲಾ ದಹಿಸಿ ಹೋಗಲಿ. ಸುಖ ಸಂಪೂರ್ಣವಾದ, ಸಮಸಮಾಜ ಹುಟ್ಟಿಕೊಳ್ಳಲಿ’ ಭೇಷ್! ನಾನಿದನ್ನು ಇಂದಿನ ಕಾರ್ಮಿಕರ ಸಭೆಯಲ್ಲಿ ಹೇಳುತ್ತೇನೆ’ ಎಂದು ಹೇಳಿ ಗಂಗಾಧರನ್ ಅವಸರವಸರವಾಗಿ ಹೊರಟು ಹೋದನು. ನಾನು ಪ್ರತಿಯೋರ್ವ ರಾಜಕೀಯ ಕಾರ್ಯಕರ್ತರ ಕುರಿತು ಯೋಚಿಸತೊಡಗಿದೆ. ಬರಹಗಾರರ ಕುರಿತು ಯೋಚಿಸಿದೆ. ಪ್ರತೀ ಸ್ತ್ರೀ-ಪುರುಷರ ಬಗ್ಗೆ. ಅವರೆಲ್ಲಾ ಹೇಗೆ ಜೀವಿಸುತ್ತಾರೆ? ಹೀಗೆ ಯೋಚಿಸುತ್ತಾ ನಾನು ಆ ದೋಸೆ ಕಟ್ಟಿ ತಂದ ಪತ್ರಿಕೆಯ ತುಂಡನ್ನು ಕೈಗೆತ್ತಿಕೊಂಡೆ. ಆಗ ಮೆಟ್ಟಿಲು ದಾಟಿ ಮನೆಯ ಯಜಮಾನ ಮುಖ ಗಂಟಿಕ್ಕಿ ಬರುತ್ತಿರುವುದು ಕಂಡಿತು. ಅವರೊಂದಿಗೆ ಇನ್ನೆಷ್ಟು ದಿನದ ಸಮಯಾವಕಾಶ ಕೋರಲಿ ಎಂದು ಯೋಚಿಸಿ ಚಿತ್ರದತ್ತ ನೋಡಿದೆ; ಗಗನಚುಂಬಿ ಕಟ್ಟಡಗಳಿಂದ ತುಂಬಿರುವ ಮಹಾನಗರ. ಅದರ ನಡುವೆ ತಲೆಯೆತ್ತಿ ನಿಂತಿರುವ ಒಬ್ಬ ಮನುಷ್ಯ. ಆತನನ್ನು ಕಬ್ಬಿಣದ ಸಂಕೋಲೆಗಳಿಂದ ಭೂಮಿಗಾನಿಸಿ ಬಂಧಿಸಲಾಗಿತ್ತು. ಆದರೂ, ಆತನ ನೋಟ ತನ್ನ ಬಂಧನದ ಮೇಲೋ, ಭೂಮಿಯ ಮೇಲೋ ಆಗಿರಲಿಲ್ಲ. ದೂರದ, ಸೌರವ್ಯೂಹಗಳಿಗೂ ಆಚೆಗಿನ, ಅನಂತ ದೂರದಲ್ಲಿ ಪ್ರಕಾಶಗಳನ್ನು ಚೆಲ್ಲುವ ಆ ಮಹಾ ತೇಜೋಪುಂಜದಲ್ಲಿ! ಆತನ ಕಾಲುಗಳ ಬಳಿ ತೆರೆದ ಪುಸ್ತಕ! ಅದರ ಎರಡು ಪುಟಗಳಲ್ಲೂ ಆತನ ಮಾತ್ರವಲ್ಲ, ಸರ್ವ ಮಾನವರ ಚರಿತ್ರೆ. ಅದು ಹೀಗಿದೆ;
ಸಂಕೋಲೆಯಲ್ಲಿ ಬಂಧಿಸಲ್ಪಟ್ಟಂತೆ ಮಣ್ಣಿನೊಂದಿಗೆ ಬಂಧಿಸಲ್ಪಟ್ಟಿದ್ದರೂ, ಸಮಯ ಕಾಲವನ್ನು ಮೀರಿ ಅವನು ಮನಮೋಹಕ ನಾಳೆಯತ್ತ ನೋಡುತ್ತಿದ್ದಾನೆ.
ಎಲ್ಲಿದೆ ಆ ಮನಮೋಹಕ‌ ನಾಳೆ?
‘ಏನ್ರೀ ಮಿಸ್ಟರ್!’ ಮನೆಯ ಯಜಮಾನನ ತಣ್ಣಗಿನ ಪ್ರಶ್ನೆ.
‘ಇಂದಾದರೂ ಕೊಡುತ್ತೀರೇನ್ರೀ?’
‘ಹಣ ಇನ್ನೂ ಸಿಕ್ಕಿಲ್ಲ. ನಾಳೆಯೋ ನಾಳಿದ್ದೋ ಕೊಡಬಲ್ಲೆ’ ಎಂದೆ.
ಆದರೆ, ಆತ ಬಿಡುವಂತೆ ತೋರುತ್ತಿಲ್ಲ.
‘ಇದೂ ಒಂದು ಬದುಕೇ?’ ಆತನ ಪ್ರಶ್ನೆ. ಪಾರಮಾರ್ಥಿಕ ಪ್ರಶ್ನೆ. ಹೀಗೆ ಏಕೆ ಬದುಕಬೇಕು? ನಾನು ಈ ಕಟ್ಟಡಕ್ಕೆ ಬಂದು ಮೂರು ವರ್ಷವಾಗುತ್ತ ಬಂತು. ಮೂರು ಕೋಣೆಗಳ ಮೌಲ್ಯವನ್ನು ಹೆಚ್ಚಿಸಿದ್ದೇನೆ. ಈಗ ಅದಕ್ಕೆಲ್ಲಾ ಒಳ್ಳೆಯ ಬಾಡಿಗೆ ಸಿಗುತ್ತಿದೆ. ಇದೀಗ ಈ ಸ್ಟೋರ್ ರೂಮನ್ನೂ ಮನುಷ್ಯ ವಾಸಕ್ಕೆ ಅರ್ಹವನ್ನಾಗಿ ಮಾಡಿದಾಗ, ಹೆಚ್ಚು ಬಾಡಿಗೆ ಕೊಡುವ ಬೇರೆ ಜನರಿದ್ದಾರಂತೆ! ಹೆಚ್ಚು ಬಾಡಿಗೆ ನಾನೇ ಕೊಡುತ್ತೇನೆ ಎಂದು ಹೇಳಿದರೆ ಸಾಲದು; ಜಾಗ ಖಾಲಿ ಮಾಡಬೇಕಂತೆ! ‘ಇಲ್ಲ! ಅದು ನನ್ನಿಂದ ಸಾಧ್ಯವಿಲ್ಲ. ಸದ್ಯಕ್ಕೆ ಜಾಗ ಖಾಲಿ ಮಾಡುವ ಯೋಚನೆಯೂ ಇಲ್ಲ. ಏನು ಮಾಡಲಿ?’
ಗಂಟೆ ನಾಲ್ಕು. ಈ ಊರು ಸಾಕಾಯ್ತು. ನನ್ನನ್ನು ಸೆಳೆಯುವಂತದ್ದೇನಿದೆ ಈ ಊರಿನಲ್ಲಿ? ಅದೇ ರಸ್ತೆಗಳು, ಅದೇ ಅಂಗಡಿಗಳು, ಅದೇ ಮುಖಗಳು! ನೋಡಿದ್ದನ್ನೇ ನೋಡಿ, ಕೇಳಿದ್ದನ್ನೇ ಕೇಳಿ ಮನಸು ಜಡ್ಡುಗಟ್ಟಿದೆ. ಬರೆಯಲು ಸಾಧ್ಯವಾಗುತ್ತಿಲ್ಲ. ಬರೆಯಲು ಏನಾದರು ಉಳಿದಿದ್ದರೆ ತಾನೇ?
ಗಂಟೆ ಆರು. ಪ್ರಸನ್ನ ಸಂಜೆ. ರಕ್ತವರ್ಣದಲ್ಲಿ ಪ್ರಜ್ವಲಿಸುತ್ತಿರುವ ಸಂಧ್ಯಾ ಸೂರ್ಯ. ಚಿನ್ನದ ಬಣ್ಣದ ಮೋಡಗಳಿಂದ ತುಂಬಿದ ಪಶ್ಚಿಮ ದಿಗಂತ. ಅಕ್ಕರೆಯಿಲ್ಲದ ಸಮುದ್ರ! ಅಲೆಗಳ ಜೊತೆ ಓಲಾಡುತ್ತಿರುವ ದಂಡೆ. ಸಿಗರೇಟು ಸೇದುತ್ತಾ ಹೊಸ ಬಟ್ಟೆಯಲಿ ವಿಹರಿಸುತ್ತಿರುವ ಯುವಕರು. ಕಿನಾರೆಯಲಿ ಪ್ರಚ್ಛನ್ನ ಶಾಂತಿ. ವರ್ಣರಂಜಿತ ಸೀರೆಗಳಲಿ ಮಂದಸ್ಮಿತರಾಗಿ ಓಡಾಡುತ್ತಿರುವ ಯುವತಿಯರು; ಅವರ ಕಣ್ಣುಗಳಲ್ಲಿ ಅದೇನೋ ಕಾಂತಿ. ಪ್ರೇಮ ನಾಟಕಗಳ ಹಿನ್ನೆಲೆ ಗೀತೆಯಂತೆ, ಪಾರ್ಕ್ ನ ಕಡೆಯಿಂದ ತೇಲಿ ಬರುತ್ತಿದೆ ಹೃದಯಕ್ಕೆ ತಂಪೆರೆಯುವ ರೇಡಿಯೋ ಗಾನ. ನಡುನಡುವೆ ಹೂವುಗಳನ್ನು ಸ್ಪರ್ಶಿಸಿ ಬೀಸಿಬರುವ ಸುವಾಸಿತ ತಂಗಾಳಿ.
ಆದರೆ, ನಾನು ಕುಸಿದುಬೀಳುವ ಸ್ಥಿತಿಯಲ್ಲಿದ್ದೇನೆ.
ಗಂಟೆ ಏಳು. ಇಂದು ಸಹ ಒಬ್ಬ ಪೊಲೀಸ್ ಪೇದೆ ನನ್ನ ರೂಮಿಗೆ ಬಂದು ನನ್ನನ್ನು ಕರೆದೊಯ್ದನು. ಕಣ್ಣು ಕೋರೈಸುವ ‘ಪೆಟ್ರೋಮ್ಯಾಕ್ಸ್’ ಬೆಳಕಿನ ಮುಂದೆ ಕುಳಿತುಕೊಳ್ಳುವಂತೆ ಹೇಳಿದನು. ವಿಚಾರಣೆಯ ವೇಳೆ ನನ್ನ ಮುಖದಲ್ಲಾಗುತ್ತಿದ್ದ ಭಾವ ವ್ಯತ್ಯಾಸಗಳನ್ನು ಗಮನಿಸುತ್ತಾ ಪೊಲೀಸ್ ಡೆಪ್ಯೂಟಿ ಕಮಿಷನರ್ ನನ್ನ ಬೆನ್ನ ಹಿಂದೆ ಕೈಕಟ್ಟಿ ಅತ್ತಿತ್ತ ನಡೆಯುತ್ತಿದ್ದನು. ಅವನ ಗಮನವಿಡೀ ನನ್ನ ಮುಖದ ಮೇಲೆ! ಅದೇನು ಭಾವ! ಅದೇನು ನೋಟ! ನಾನೋರ್ವ ಮಹಾ ಅಪರಾಧಿಯೆಂಬಂತೆ! ಒಂದು ತಾಸಿನ ವಿಚಾರಣೆ. ನಿನ್ನ ಸ್ನೇಹಿತರು ಯಾರು? ಎಲ್ಲಿಂದೆಲ್ಲ ನಿನಗೆ ಪತ್ರಗಳು ಬರುತ್ತವೆ? ಸರಕಾರವನ್ನು ಉರುಳಿಸಲು ಕೆಲಸ ಮಾಡುತ್ತಿರುವ ರಹಸ್ಯ ಗುಂಪಿನ ಸದಸ್ಯನಲ್ಲವೇ ನೀನು? ಹೊಸದಾಗಿ ಏನು ಬರೆಯುತ್ತಿರುವೆ? ಎಲ್ಲಾ ಸತ್ಯಗಳನ್ನು ಹೇಳಬೇಕು? ಮತ್ತೆ ನಿಮಗೆ ತಿಳಿದಿರಬೇಕು; ಇಲ್ಲಿಂದ ನಿಮ್ಮನ್ನು ಗಡಿಪಾರು ಮಾಡುವ ಅಧಿಕಾರ ನನಗಿದೆ’
‘ತಿಳಿದಿದೆ ಸಾರ್ ನನ್ನ ಅಸಹಾಯಕತೆ. ಕೇವಲ ಒಬ್ಬ ಪೊಲೀಸ್ ಮನಸು ಮಾಡಿದರೆ ಸಾಕು, ನನ್ನನ್ನು ಬಂಧಿಸಿ, ಲಾಕಪ್ಪಿಗೆ ಹಾಕಿ..’
ಗಂಟೆ ಏಳೂವರೆ. ರೂಮಿಗೆ ಹಿಂದಿರುಗಿ ಕತ್ತಲಲ್ಲಿ ಕೂತೆ. ಮೈ ತುಂಬಾ ಬೆವರು. ಜನ್ಮದಿನ! ಇಂದು ನನ್ನ ರೂಮಿನಲ್ಲಿ ಕತ್ತಲೆ! ಸೀಮೆಎಣ್ಣೆ ಎಲ್ಲಿಂದ ತರಲಿ? ಹಸಿವು ನೀಗಿಸಲು ಏನಾದರು ತಿನ್ನಲೇಬೇಕು. ದೇವರೇ, ಯಾರು ಕೊಡುತ್ತಾರೆ? ಯಾರೊಂದಿಗೂ ಸಾಲ ಕೇಳಲು ಸಾಧ್ಯವಿಲ್ಲ. ಮ್ಯಾಥ್ಯುನೊಂದಿಗೆ ಕೇಳಿದರೆ ಹೇಗೆ? ಬೇಡ. ಪಕ್ಕದ ಬಿಲ್ಡಿಂಗ್ ನಲ್ಲಿರುವ ಕನ್ನಡಕಧಾರಿ ವಿದ್ಯಾರ್ಥಿಯೊಂದಿಗೆ ಒಂದು ರುಪಾಯಿ ಕೇಳೋಣ. ಆತ ಏನೋ ಭಯಂಕರ ಕಾಯಿಲೆಗೆ ತುತ್ತಾಗಿ ಅದರಿಂದ ಗುಣಮುಖನಾಗಲು ಸಾಕಷ್ಟು ಹಣ ಖರ್ಚು ಮಾಡಿದ್ದ. ಕೊನೆಗೆ ನನ್ನ ನಾಲ್ಕಾಣೆಯ ಔಷಧದಿಂದ ಅವನ ಕಾಯಿಲೆ ವಾಸಿಯಾಗಿತ್ತು. ಅದಕ್ಕೆ ಪ್ರತ್ಯುಪಕಾರ ಎಂಬಂತೆ ನನ್ನನ್ನೊಮ್ಮೆ ಸಿನಿಮಾ ತೋರಿಸಲು ಕರೆದೊಯ್ದಿದ್ದ. ಈಗ ಹೋಗಿ ಒಂದು ರೂಪಾಯಿ ಕೇಳಿದರೆ ಕೊಡದಿರಬಹುದೇ?
ಗಂಟೆ ಎಂಟು ಮುಕ್ಕಾಲು. ದಾರಿಯಲ್ಲಿ ಮ್ಯಾಥ್ಯುವಿನ ಬಗ್ಗೆ ವಿಚಾರಿಸಿದೆ. ಆತ ಸಿನಿಮಾ ನೋಡಲು ಹೋಗಿದ್ದ. ಮಾತು, ಗಹಗಹಿಕೆಗಳಿಂದ ಗದ್ದಲದ ಗೂಡಾಗಿದ್ದ ಪಕ್ಕದ ಬಿಲ್ಡಿಂಗಿನ ಮೇಲ್ಭಾಗಕ್ಕೆ ಹತ್ತಿ ಹೋದೆ. ಗಮ್ಮೆನ್ನುತ್ತಿರುವ ಸಿಗರೇಟಿನ ವಾಸನೆ. ಮೇಜಿನ ಮೇಲಿರುವ ಕಂದೀಲಿನ ಬೆಳಕಿನಲ್ಲಿ ಹೊಳೆಯುತ್ತಿರುವ ಹಲ್ಲುಗಳು, ರಿಸ್ಟ್ ವಾಚ್ ಗಳು, ಚಿನ್ನದ ಗುಂಡಿಗಳು. ಅಸಹಾಯಕತೆಯ ಉಚ್ಛ್ರಾಯ ಸ್ಥಿತಿಯಲ್ಲಿ ನಾನು ಕುರ್ಚಿಯಲ್ಲಿ ಕುಳಿತೆ. ಅವರು ಮಾತನಾಡಲು ಆರಂಭಿಸಿದರು. ರಾಜಕೀಯ, ಸಿನಿಮಾ, ಕಾಲೇಜು ವಿದ್ಯಾರ್ಥಿನಿಯರ ಅಂಗವರ್ಣನೆ, ದಿನಕ್ಕೆರಡು ಬಾರಿ ಸೀರೆ ಬದಲಾಯಿಸುವ ವಿದ್ಯಾರ್ಥಿನಿಯರ ಹೆಸರುಗಳು ಹೀಗೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು. ಎಲ್ಲದಕ್ಕೂ ನಾನು ನನ್ನ ಅಭಿಪ್ರಾಯ ಮಂಡಿಸಿದೆ. ನಡುವೆ ನಾನೊಂದು ಕಾಗದದ ತುಂಡಿನಲ್ಲಿ ಹೀಗೆ ಬರೆದೆ; ‘ಒಂದು ರುಪಾಯಿ ಬೇಕಿತ್ತು. ಬಹಳ ಅಗತ್ಯವಿದೆ. ಎರಡು ಮೂರು ದಿನದಲ್ಲಿ ಹಿಂದಿರುಗಿಸುತ್ತೇನೆ’
ಕನ್ನಡಕಧಾರಿ ನನ್ನ ನೋಡಿ ನಕ್ಕನು. ‘ಸಣ್ಣಕತೆಗೆ ಟಿಪ್ಪಣಿ ಮಾಡುತ್ತಿದ್ದೀರಾ?’
‘ಹಾಗೇನೂ ಇಲ್ಲ’ ನಾನು ಹೇಳಿದೆ.
ಅನಂತರ ಸಣ್ಣಕತೆಯ ಬಗ್ಗೆ ಸಂಭಾಷಣೆ ನಡೆಯಿತು.
‘ನಮ್ಮ ಭಾಷೆಯಲ್ಲಿ ಉತ್ತಮ ಸಣ್ಣಕತೆಗಳೇ ಇಲ್ಲ’
‘ಅಷ್ಟಕ್ಕೂ ನಮ್ಮ ಭಾಷೆಯಲ್ಲಿ, ಊರಿನಲ್ಲಿ ಉತ್ತಮವಾದುದೇನಾದರು ಇದೆಯೇ? ಒಳ್ಳೆಯ ಗಂಡಸರು ಹೆಂಗಸರೆಲ್ಲ ಸಮುದ್ರದಾಚೆಗಿದ್ದಾರೆ’
‘ಯಾರ ಸಣ್ಣಕತೆಗಳನ್ನೆಲ್ಲಾ ಓದಿರುವಿರಿ?’ ಎಂದು ಕೇಳಿದೆ.
ಹೆಚ್ಚೇನೂ ಓದಿಲ್ಲ. ಮೊದಲನೇಯದಾಗಿ ಮಾತೃಭಾಷೆಯಲ್ಲಿ ಏನಾದರು ಓದುವುದೆಂದರೇನೇ ಘನತೆಗೆ ಕುಂದು. ನಾನು ಅನೇಕ ಸಣ್ಣಕತೆಗಾರರ ಹೆಸರು ಹೇಳಿದೆ. ಅವರಲ್ಲಿ ಅನೇಕ ಮಂದಿಯ ಹೆಸರನ್ನೂ ಅವರು ಕೇಳಿಲ್ಲ.
‘ಇಂಗ್ಲೀಷ್ ಮಾತ್ರವಲ್ಲ; ಲೋಕದ ಎಲ್ಲಾ ಭಾಷೆಯ ಸಣ್ಣಕತೆಗಳೊಂದಿಗೆ ಸ್ಪರ್ಧಿಸಬಲ್ಲ ಉತ್ತಮ ಕತೆಗಳು ಇಂದು ನಮ್ಮ ಭಾಷೆಯಲ್ಲಿದೆ. ನೀವು ಯಾಕೆ ಅವನ್ನೆಲ್ಲ ಓದುತ್ತಿಲ್ಲ’
‘ಹಾ…ಕೆಲವೊಂದನ್ನು ನಾವೂ ಓದಿದ್ದೇವೆ. ಹೆಚ್ಚಿನವುಗಳು ಬಡತನವನ್ನು ಹೇಳುವ ಕಥೆಗಳು. ಅವುಗಳನ್ನೆಲ್ಲ ಯಾಕೆ ಬರೆಯಬೇಕೋ?’
ನಾನು ಮಾತನಾಡಲಿಲ್ಲ.
‘ನಿಮ್ಮ ಕತೆಗಳನ್ನೆಲ್ಲ ಓದಿದರೆ..’ ಚಿನ್ನದ ಕನ್ನಡಕಧಾರಿ ತೀರ್ಪು ನೀಡಿದ.
‘..ಇಡೀ ಜಗತ್ತಿಗೆ ಏನೋ ದೊಡ್ಡ ಸಮಸ್ಯೆ ಇದೆ ಅನ್ನಿಸುತ್ತದೆ’
ಲೋಕಕ್ಕೆ ಏನು ಸಮಸ್ಯೆ? ಅಪ್ಪ ಅಮ್ಮ ಮೈಮುರಿದು ದುಡಿದು ಹಣ ಕಳುಹಿಸುತ್ತಾರೆ. ಅದನ್ನು ಖರ್ಚು ಮಾಡಿ ಶಿಕ್ಷಣ ಪಡೆಯುತ್ತಾರೆ. ಸಿಗರೇಟು, ಚಹಾ, ಕಾಫಿ, ಐಸ್ ಕ್ರೀಮ್, ಸಿನಿಮಾ, ಕುಟ್ಟಿಕುರ ಪೌಡರ್, ವಾಸ್ ಲೆಯಿನ್, ಸ್ಪ್ರೇ, ದುಬಾರಿ ಬಟ್ಟೆಬರೆಗಳು, ದುಬಾರಿ ಆಹಾರ, ಮದ್ಯ, ಮಾದಕ ದ್ರವ್ಯ, ಸಿಫಿಲಿಸ್, ಗುನೋರಿಯ- ಹೀಗೆ ಇನ್ನೂ ಹಲವು.
ಭವಿಷ್ಯದ ಪ್ರಜೆಗಳು! ಊರು ಆಳಬೇಕಾದವರು, ಕಾನೂನು ಜಾರಿಗೊಳಿಸಬೇಕಾದವರು, ಬುದ್ಧಿಜೀವಿಗಳು, ಸಾಂಸ್ಕೃತಿಕ ನಾಯಕರುಗಳು, ಧಾರ್ಮಿಕ ನೇತಾರರು, ರಾಜಕೀಯ ನೇತಾರರು, ದಾರ್ಶನಿಕರು!
ಲೋಕಕ್ಕೇನು ಸಮಸ್ಯೆ?
ನನಗೆ ಭೀಷಣ ಭಾಷಣವೊಂದನ್ನು ಮಾಡಬೇಕನಿಸಿತು.
‘ಇಂದಿನ ಲೋಕ..’ ಆರಂಭಿಸಿದೆ.
ಅಷ್ಟರಲ್ಲಿ ಕೆಳಗಿನಿಂದ ಕ್ಷೀಣ ದನಿ ಕೇಳಿಸಿತು;
‘ಮೆಟ್ಟು ಬೇಕೆ ಮೆಟ್ಟು’
‘ತಗೊಂಡು ಬಾ’ ಕನ್ನಡಕಧಾರಿ ನಗುತ್ತಾ ಆಜ್ಞಾಪಿಸಿದನು. ಅಲ್ಲಿಗೆ ವಿಷಯಾಂತರವಾಯಿತು. ನಾನು ಬೆಳಗ್ಗೆ ನೋಡಿದ ಪುಟ್ಟ ಮಕ್ಕಳು ಮೇಲೆ ಹತ್ತಿ ಬಂದರು! ಅವರು ಏದುಸಿರುಬಿಡುತ್ತಿದ್ದರು. ಅವರ ಕಣ್ಣುಗಳು ಬತ್ತಿ ಹೋಗಿದ್ದವು. ಮುಖಗಳು ಬಾಡಿದ್ದವು. ತುಟಿಗಳು ಸುರುಟಿ ಒಣಗಿದ್ದವು.
ವಿಷಾದಭಾವದಿಂದ ಹಿರಿಯವನು ಹೇಳಿದನು; ‘ಸಾರ್, ನಿಮಗೆ ಬೇಕಿದ್ದರೆ ಎರಡುವರೆ ಆಣೆಗೆ ಕೊಡುತ್ತೇನೆ’
ಬೆಳಿಗ್ಗೆ ಮೂರಾಣೆಯಾಗಿತ್ತು.
‘ಎರಡುವರೆ ಆಣೆಯೇ?’ ಅನುಮಾನದಿಂದ ಕನ್ನಡಕಧಾರಿ ತಿರುಗಿಸಿ ಮರುಗಿಸಿ ನೋಡಿದನು.
ಮೆಟ್ಟು ಅಲ್ವಲ್ಲಾ' ಸರ್, ಇದು ಮೆಟ್ಟು’
‘ನಿಮ್ಮ ಮನೆಯೆಲ್ಲಿ ಮಕ್ಕಳೇ’ ನನ್ನ ಪ್ರಶ್ನೆಗೆ ದೊಡ್ಡ ಹುಡುಗ ಉತ್ತರಿಸಿದ,
‘ಇಲ್ಲಿಂದ ಮೂರು ಮೈಲಿ ದೂರದಲ್ಲಿ ನಮ್ಮ ಮನೆ’
‘ಎರಡಾಣೆ ಕೊಡುತ್ತೇ‌ನೆ’ ಚಿನ್ನದ ಕನ್ನಡಕಧಾರಿ ಹೇಳಿದ.
‘ಸಾರ್, ಎರಡು ಕಾಲಾಣೆ ಕೊಡಿ’
‘ಬೇಡ’
‘ಬೇಡ್ವೇ?’ ಬೇಸರದಿಂದ ಆ ಮಕ್ಕಳು ಹೊರಟರು.
ಕನ್ನಡಕಧಾರಿ ಮತ್ತೆ ಅವರನ್ನು ಕರೆದನು.
‘ತಗೊಂಡು ಬಾರೋ’
ಅವರು ಮತ್ತೆ ಬಂದರು. ಇದ್ದುದರಲ್ಲಿ ಒಳ್ಳೆಯ ಎರಡು ಜೋಡಿ ಆಯ್ದು ತೆಗೆದು ಹತ್ತು ರುಪಾಯಿಯ ನೋಟು ತೋರಿಸಿದನು. ಮಕ್ಕಳ ಬಳಿ ನಯಾಪೈಸೆಯೂ ಇರಲಿಲ್ಲ. ಬೆಳಗ್ಗಿನಿಂದ ಅವರು ತಿರುಗಾಡಿದ್ದೇ ಬಂತು. ಯಾರೂ ಖರೀದಿಸಿರಲಿಲ್ಲ. ಮೂರು ಮೈಲಿ ದೂರದಲ್ಲಿ ಯಾವುದೋ ಒಂದು ಗುಡಿಸಲಿನಲ್ಲಿ ಒಲೆಯ ಮೇಲೆ ನೀರಿಟ್ಟು ಮಕ್ಕಳ ಆಗಮನಕ್ಕಾಗಿ ಕಾಯುತ್ತಿರುವ ತಂದೆತಾಯಿಗಳ ಚಿತ್ರ ನನ್ನ ಕಲ್ಪನೆಯಲ್ಲಿ ಮೂಡಿತು.
ಕನ್ನಡಕಧಾರಿ ಎಲ್ಲಿಂದಲೋ ಎರಡಾಣೆ ಹುಡುಕಿ ತಂದುಕೊಟ್ಟನು.
‘ಸರ್, ಕಾಲಾಣೆ’
‘ಇಷ್ಟೇ ಇರುವುದು; ಇಲ್ಲದಿದ್ದರೆ ಬೇಡ ತಗೋ ಈ ಮೆಟ್ಟು’
ಮಕ್ಕಳು ಪರಸ್ಪರರ ಮುಖ ನೋಡಿ ಮರುಮಾತನಾಡದೆ ಹೊರಟು ಹೋದರು.
ಇಲೆಕ್ಟ್ರಿಟ್ ಬೆಳಕಿನ ಕೆಳಗಿನ ರಸ್ತೆಯಲ್ಲಿ ಆ ಪುಟ್ಟ ಮಕ್ಕಳು ನಡೆದು ಹೋಗುತ್ತಿರುವುದನ್ನು ನೋಡುತ್ತಾ ಸ್ವರ್ಣ ಕನ್ನಡಕಧಾರಿ ನಕ್ಕನು;
‘ಮೂರ್ಖರು! ನಾನು ಕೊಟ್ಟ ಎರಡಾಣೆಯಲ್ಲಿ ಒಂದು ನಕಲಿ’
‘ಹ್ಹಹ್ಹಹ್ಹ’ ಎಲ್ಲರೂ ಗಹಗಹಿಸಿದರು. ವಿದ್ಯಾರ್ಥಿಗಳಲ್ಲವೇ. ಏನು ಮಾಡಲಿಕ್ಕಾಗುತ್ತದೆ. ಬಡತನದ ಬೇಗುದಿ ಏನೆಂದು ತಿಳಿದಿಲ್ಲ ಎಂದು ಯೋಚಿಸಿದೆ. ಚೀಟಿಯಲ್ಲಿ ಬರೆದಿದ್ದನ್ನು ಯಾರಿಗೂ ಕಾಣಿಸದೆ ಕನ್ನಡಕಧಾರಿಯ ಕೈಗಿತ್ತೆ. ಆತ ಅದನ್ನು ಓದುತ್ತಿರಬೇಕಾದರೆ ನನ್ನ ಮನಸು ಹೋಟೆಲ್ ನ ಒಳಗಡೆಯಿತ್ತು. ಬಿಸಿ ಹಬೆಯಾಡುವ ಊಟದ ಮುಂದೆ ನಾನು ಕೂತಿದ್ದೇನೆ! ಅಷ್ಟರಲ್ಲಿ ಚೀಟಿ ಓದಿ ಕನ್ನಡಕಧಾರಿ ಎಲ್ಲರಿಗೂ ಕೇಳಿಸುವಂತೆ ಬೊಬ್ಬಿಟ್ಟನು.
‘ಸಾರಿ, ಚೇಂಜ್ ಇಲ್ಲ’
ಆತನ ಮಾತು ಕೇಳುತ್ತಿದ್ದಂತೆ ನನಗೆ ನನ್ನ ದೇಹದಿಂದ ಬಿಸಿಗಾಳಿ ಎದ್ದು ಹೋದಂತೆ ಭಾಸವಾಯಿತು. ಬೆವರೊರೆಸಿಕೊಳ್ಳುತ್ತಾ ನಾನು ಕೆಳಗಿಳಿದು ರೂಮಿನತ್ತ ನಡೆದೆ.
ಗಂಟೆ ಒಂಬತ್ತು. ಚಾಪೆ ಹಾಸಿ ಮಲಗಿದೆ. ಆದರೆ, ನಿದ್ರೆ ಹತ್ತುತ್ತಿಲ್ಲ. ತಲೆ ಗುಂಯ್ ಎನ್ನುತ್ತಿತ್ತು. ಆದರೂ, ಮಲಗಿದೆ; ಈ ಲೋಕದ ಅಸಹಾಯಕರ ಕುರಿತು ಯೋಚಿಸುತ್ತಾ! ಎಷ್ಟು ಕೋಟಿ ಸ್ತ್ರೀಪುರುಷರು ಈ ಸುಂದರವಾದ ಭೂಮಿಯ ಮೇಲೆ ಹಸಿವಿನಿಂದ ಮಲಗಿರಬಹುದು! ಅವರ ನಡುವೆ ನಾನೂ ಒಬ್ಬ! ನನಗೇನಿದೆ ವಿಶೇಷತೆ? ನಾನೊಬ್ಬ ಬಡವ! ಅಷ್ಟೇ. ಹೀಗೆ ಯೋಚಿಸುತ್ತಾ ಮಲಗಿರಬೇಕಾದರೆ ನನ್ನ ಬಾಯಿಯಲ್ಲಿ ಲಾಲಾರಸ ತುಂಬಿತು. ಮ್ಯಾಥ್ಯುವಿನ ಅಡುಗೆ ಮನೆಯಿಂದ ಒಗ್ಗರಣೆಯ ಶಬ್ಧ! ಬೆಂದ ಅನ್ನದ ಪರಿಮಳ!
ಗಂಟೆ ಒಂಬತ್ತುವರೆ. ಮತ್ತೆ ಹೊರಗಿಳಿದು ನಡೆದೆ. ಹೃದಯ ಒಡೆದು ಹೋಗುವಷ್ಟು ಜೋರಾಗಿ ಎದೆ ಬಡಿದುಕೊಳ್ಳುತ್ತಿತ್ತು. ಯಾರಾದರೂ ನೋಡಿದರೆ!? ಮೈ ವಿಪರೀತವಾಗಿ ಬೆವರತೊಡಗಿತು! ಹಿತ್ತಲಲ್ಲಿ ಅಡಗಿ ನಿಂತು ನೋಡಿದೆ. ಅದೃಷ್ಟ ಅನ್ನಬೇಕು; ವೃದ್ಧ ವ್ಯಕ್ತಿ ದೊಂದಿ ಮತ್ತು ಕೊಡೆಯೊಂದಿಗೆ ಹೊರಗೆ ಬಂದನು. ಅಡುಗೆ ಮನೆಯ ಬಾಗಿಲು ನಿಧಾನಕ್ಕೆ ಮುಚ್ಚಿ ಪೈಪ್ ನ ಬಳಿ ಹೋದೆ. ಕಡಿಮೆಯೆಂದರೆ ಹತ್ತು ಮಿನಿಟು ಬೇಕು. ಶಬ್ಧ ಬರದಂತೆ ಎಚ್ಚರಿಕೆಯಿಂದ ನಡೆದು ಹೃದಯ ಬಡಿತವನ್ನು ತಡೆ ಹಿಡಿಯಲಾಗದೆ ಮೆಲ್ಲನೆ ಅಡುಗೆ ಮನೆಯ ಒಳಗೆ ನುಗ್ಗಿದೆನು.
ಹತ್ತು ಗಂಟೆ. ಹೊಟ್ಟೆ ತುಂಬಿದ ಸಂತೃಪ್ತಿಯೊಂದಿಗೆ ಬೆವರಿನಲ್ಲಿ ಸ್ನಾನ ಮಾಡಿ ಹೊರಗಿಳಿದೆ. ವೃದ್ಧ ಹಿಂದಿರುಗಿ ಬಂದಾಗ ನಾನು ನಳ್ಳಿಯಿಂದ ನೀರು ಕುಡಿದು, ಕೈಕಾಲು ಮುಖ ತೊಳೆದು ನನ್ನ ರೂಮಿಗೆ ಹಿಂದಿರುಗಿ, ಬೀಡಿ ಹೊತ್ತಿಸಿದೆ. ಒಟ್ಟಿನಲ್ಲಿ ಅದೇನೋ ಸಂತೃಪ್ತ ಭಾವ! ಆದರೂ, ಏನೋ ಬಳಲಿಕೆ. ದಣಿವು. ಮಲಗಿದೆ. ನಿದ್ರೆ ಹತ್ತುವ ಮೊದಲು ಮತ್ತೆ ಆಲೋಚನೆ ಶುರುವಾಯಿತು; ಆ ವೃದ್ಧನಿಗೆ ತಿಳಿದಿರಬಹುದೇ? ಹಾಗಾದರೆ ಆತ ಮ್ಯಾಥ್ಯುಗೆ ಹೇಳುತ್ತಾನೆ. ಇತರ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೂ ವಿಷಯ ಗೊತ್ತಾಗುತ್ತದೆ. ಮಾನಗೆಡುತ್ತದೆ. ಏನಾದರೂ ಆಗಲಿ; ಬರುವುದೆಲ್ಲ ಬರಲಿ. ಜನ್ಮದಿನವಲ್ಲವೇ ಸುಖ ನಿದ್ರೆ ಮಾಡೋಣ!
ಎಲ್ಲರ ಎಲ್ಲಾ ಜನ್ಮದಿನಗಳು.. ಮನುಷ್ಯ.. ಬಡಪಾಯಿ.. ನನಗೆ ನಿದ್ರೆಯ ಮಂಪರು ಕವಿಯಿತು.
ಅಷ್ಟರಲ್ಲಿ ನನ್ನ ರೂಮ್ ಕಡೆಗೆ ಯಾರೋ ಬರುತ್ತಿರುವ ಶಬ್ಧ.
‘ಹಲೋ ಮಿಸ್ಟರ್!’ ಮ್ಯಾಥ್ಯು ಕರೆಯುತ್ತಿದ್ದಾನೆ. ನಾನು ಬೆವರತೊಡಗಿದೆ. ನಿದ್ರೆ ಹಾರಿಹೋಯಿತು. ತಿಂದದ್ದೆಲ್ಲ ಜರ್ರನೆ ಇಳಿದ ಹಾಗಾಯಿತು. ಮ್ಯಾಥ್ಯುಗೆ ಎಲ್ಲ ತಿಳಿಯಿತು. ಮುದುಕ ಎಲ್ಲ ಹೇಳಿದ್ದಾನೆ.
ಬಾಗಿಲು ತೆರೆದೆ.
ಕತ್ತಲ ಗರ್ಭದಿಂದ ಎದ್ದು ಬಂದಂತೆ ತೀಕ್ಷ್ಣ ಬೆಳಕೊಂದು ಗಾಳಿಯ ವೇಗದಲ್ಲಿ ಬಂದು ಮುಖಕ್ಕೆ ರಾಚಿತು!
ಅದು ಟಾರ್ಚ್ ಲೈಟ್!
ನಾನು ಅದರ ಬೆಳಕಿನಲ್ಲಿ ಸಿಲುಕಿಕೊಂಡಿದ್ದೆ.
‘ಮ್ಯಾಥ್ಯು ಏನು ಹೇಳಬಹುದು!?’ ಭ್ರಾಂತ ಸ್ಥಿತಿಯಲ್ಲಿ ನಿಂತು ಯೋಚಿಸಿದೆ.
‘ಐಸ ಸಿನಿಮಕ್ಕೆ ಹೋಗಿದ್ದಳು. ವಿಕ್ಟರ್ ಹ್ಯೂಗೊ ನ ‘ಬಡಪಾಯಿಗಳು’. ನೀವು ನೋಡಲೇಬೇಕಾದ ಚಿತ್ರ. ಅದ್ಭುತ ಚಿತ್ರ’
‘ಹಾ…’
‘ನಿಮ್ಮ ಊಟ ಆಯಿತೇ? ನನಗೆ ಹಸಿವಿಲ್ಲ. ಅನ್ನ ವೇಸ್ಟ್ ಆಗಬಾರದಲ್ಲವೇ. ಬನ್ನಿ ಊಟ ಮಾಡೋಣ. ದಾರಿಮಧ್ಯೆ ನಾವು ಮೋಡಲ್ ಹೋಟೆಲ್ ಗೆ ಹೋಗಿ ಬಂದೆವು’
‘ಥ್ಯಾಂಕ್ಸ್. ನನ್ನ ಊಟ ಆಯಿತು’
‘ಓಹೋ.. ಹಾಗಾದರೆ ಮಲಗಿ. ಗುಡ್ ನೈಟ್’
‘ಯಸ್, ಗುಡ್ ನೈಟ್!’


ಮಲಯಾಳಂ ಮೂಲ: ವೈಕಂ ಮುಹಮ್ಮದ್ ಬಶೀರ್
ಕನ್ನಡಕ್ಕೆ‌: ಸ್ವಾಲಿಹ್ ತೋಡಾರ್

ರೂಮಿಯ ಪಟ್ಟಣದಲ್ಲೊಂದು ಪ್ರೇಮ ಯಾನ: ಭಾಗ ಒಂದು

ಇಸ್ತಾಂಬುಲ್‌ನಿಂದ ಸುಮಾರು 716 ಕಿ.ಮೀ ದೂರದಲ್ಲಿರುವ ಟರ್ಕಿಯ ಹೃದಯಭಾಗದಲ್ಲಿ ಬೆಚ್ಚಗೆ ಮಲಗಿರುವ ಪುಟ್ಟದಾದ ನಗರವೇ ಕೋನ್ಯಾ. ಮೌಲಾನಾ ಜಲಾಲುದ್ದೀನ್ ರೂಮಿ ಮತ್ತು ‘ಸಮಾ’ ನೃತ್ಯ ನನ್ನನ್ನು ಈ ಶಹರಕ್ಕೆ ಬರಮಾಡಿಕೊಂಡಿತೋ ಅಥವಾ ಜಿಯಾವುದ್ದೀನ್ ಸರ್ದಾರ್ ಅವರ ‘ಡೆಸ್ಪರೇಟ್ಲೀ ಸೀಕಿಂಗ್ ಪ್ಯಾರಡೈಸ್’ ಪುಸ್ತಕದ ಕೆಲವು ಪುಟಗಳು ಮತ್ತು ಎಲಿಫ್ ಶೆಫಾಕ್ ಅವರ ‘ಫೋರ್ಟೀ ರೂಲ್ಸ್ ಆಫ್ ಲವ್’ ಕಾದಂಬರಿಯ ಪ್ರಣಯಭರಿತ ಸಾಲುಗಳು ನನಗೆ ಆ ಊರೇ ಬಲು ಪ್ರೀತಿಯಿಂದ ಖುದ್ದಾಗಿ ಕಳುಹಿಸಿಕೊಟ್ಟಿರುವ ಕರೆಯೋಲೆಯಂತೆ ಕಾಣಿಸಿತೋ ಗೊತ್ತಿಲ್ಲ. ನಾನಂತೂ ಒಂದು‌ ಪುಟ್ಟ ಮಗುವಿನಂತೆ ಕೋನ್ಯಾದ ಮಡಿಲನ್ನು ಸೇರಿಕೊಂಡು ಬಿಟ್ಟಿದ್ದೆ. ಸುಮಾರು ಹನ್ನೊಂದು ಗಂಟೆಗಳ ದೀರ್ಘ ಯಾತ್ರೆಯ ಬಳಿಕ ಕೋನ್ಯಾದಲ್ಲಿ ರೈಲು ತನ್ನ ನೀಳವಾದ ನಿಟ್ಟುಸಿರು ಬಿಡುತ್ತಿದ್ದರೆ ಅಲ್ಲಿ ಸಮಾ ಸಂಗೀತದ ನಿನಾದ ಮೆತ್ತಗೆ ಕೇಳಿಸುತ್ತಿತ್ತು. ಕೋನ್ಯಾ ಬಸ್ ನಿಲ್ದಾಣಕ್ಕೆ ತಲುಪುವ ಯಾವೊಬ್ಬ ಯಾತ್ರಿಕನನ್ನೂ ಮೊದಲಾಗಿ ಸ್ವಾಗತಿಸುವುದು ಸಮಾದ ಇದೇ ಇಂಪಾದ ಸಂಗೀತದ ಸ್ವರಮೇಳಗಳು. ಟರ್ಕಿಶ್ ನಿರ್ದೇಶಕ ಫಾತಿಹ್ ಅಕಿನ್ ಬರೆದ ‘ಕ್ರಾಸಿಂಗ್ ದಿ ಬ್ರಿಡ್ಜ್: ದಿ ಸೌಂಡ್ ಆಫ್ ಇಸ್ತಾಂಬುಲ್’ ಸಾಕ್ಷ್ಯಚಿತ್ರದ ಆರಂಭದಲ್ಲಿ ಹೀಗಿದೆ: If you want to know a civilization you should listen its music, music can reveal you everything about a place (ನೀವು ಒಂದು ನಾಗರಿಕತೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಅಲ್ಲಿನ ಸಂಗೀತವನ್ನು ಆಲಿಸಿ! ಸಂಗೀತವು ಆ ಮಣ್ಣಿನ ಸೊಗಡೆಲ್ಲವನ್ನು ನಿಮ್ಮ ಮುಂದೆ ಅನಾವರಣಗೊಳಿಸುತ್ತದೆ).
ಕೋನ್ಯಾ ಪಟ್ಟಣವನ್ನು ತಲುಪಿದ ನಾನು ಸ್ನೇಹಿತ ಮುಹಮ್ಮದಲಿಯ ಆಗಮನದ ನಿರೀಕ್ಷೆಯಲ್ಲಿದ್ದೆ. ‘ಕೋನ್ಯಾ: ದಿ ಸಿಟಿ ಆಫ್ ಹಾರ್ಟ್ಸ್’ ಎಂಬ ನೇರವಾಗಿ ಎದೆಗೆ ಇಳಿದು ಬಿಡಬಹುದಾದ
ಫಲಕವೊಂದು ದೂರದಿಂದಲೇ ನಮ್ಮನ್ನು ಕೈಬೀಸಿ ಕರೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಸದಾ ಗಿಜಿಗುಡುವ ನಗರ ಇಸ್ತಾಂಬುಲ್‌ನಿಂದ ಕೋನ್ಯಾಕ್ಕೆ ತಲುಪಿದರೆ ಅದೊಂದು ಶಾಂತ ಸುಂದರವೂ ಮನೋಹರವೂ ಆದ ಮೌನದ ನಗರವೆಂದು ನಿಮಗೆ ಅನಿಸತೊಡಗುತ್ತದೆ.

ಒಲವನ್ನು ತನ್ನೊಡಲಲ್ಲಿ ಕಾಪಿಟ್ಟು ಕಾಯುವ, ಪ್ರೀತಿಗಾಗಿ ಪ್ರತಿ ನಿಮಿಷವೂ ಮಿಡಿಯುವ ಆ ಶಹರದ ಎದೆಬಡಿತವು ನಿಮಗೆ ಕೇಳಿಸುವಷ್ಟು ಮೌನದಿಂದಿರುವ ನಗರಿಯದು. ಮೌಲಾನಾ ರೂಮಿಯ ಆತ್ಮವನ್ನು ತನ್ನ ಬಗಲಲ್ಲಿಟ್ಟುಕೊಂಡಿರುವ ಕಾರಣಕ್ಕಾಗಿಯೇ ಆ ಮಣ್ಣಿಗೆ ಈ ಮೌನ, ಒಲುಮೆಯ ದಾಹ ಸರಾಗವಾಗಿ ಬಂದು ಸೇರಿಕೊಂಡಿರಬೇಕೆಂದು ನನಗನಿಸುತ್ತಿತ್ತು. ಈ ಊರಿನ ನಿನ್ನೆಗಳನ್ನು ತಿರುವಿನೋಡಿದರೆ ಇತಿಹಾಸ ಪುಟದಲ್ಲಿ ಪ್ರಸ್ತಾಪಿಸಲ್ಪಟ್ಟ ಕೆಲವೊಂದು ಅಪರೂಪದ, ಅಚ್ಚರಿಯ ಘಟನೆಗಳೂ ಕಾಣಸಿಗುವುದುಂಟು.
ಪ್ರವಾಹದಿಂದ ಹಾನಿಗೊಳಗಾಗಿ ಶೂನ್ಯದಿಂದ ಬದುಕು ಕಟ್ಟಿಕೊಂಡ ಮೊದಲ ನಗರವಾಗಿದೆ ಕೋನ್ಯಾ ಎಂದು ಜಿಯಾವುದ್ದೀನ್ ಸರ್ದಾರ್ ತನ್ನ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.
ಸ್ವರ್ಗವನ್ನು ಅರಸುತ್ತ ಸಾಗಿದ ಈ ನನ್ನ ಪಯಣದುದ್ದಕ್ಕೂ ಸರ್ದಾರ್ ಅವರ ‘ಡೆಸ್ಪರೇಟ್ಲೀ ಸೀಕಿಂಗ್ ಪ್ಯಾರಡೈಸ್’ ಪುಸ್ತಕದ ಕೆಲವು ಪುಟಗಳನ್ನು ಮತ್ತೆಮತ್ತೆ ಆವರ್ತಿಸಿ ಓದಿಕೊಂಡದ್ದಿದೆ. ಇಮ್ಮಡಿ ರಾಮೆಸ್ಸೆಸ್ ತನ್ನ ಹೆಣ್ಣುಮಗಳೊಬ್ಬಳನ್ನು ಇಲ್ಲಿಯೇ ಲಗ್ನಮಾಡಿಕೊಟ್ಟನೆಂದೂ, ಅಪೊಸ್ತಲ ಬರ್ನಬಸ್ ಮತ್ತು ಅವನ ಶಿಷ್ಯನಾಗಿರುವ ಸಂತ ತಿಮೋತಿ ಸುವಾರ್ತೆಯನ್ನು ಮೊದಲಬಾರಿಗೆ ಇಲ್ಲಿಯೇ ಭೋದಿಸಿದರೆಂದೂ, ಮೊದಲ ಕ್ರೈಸ್ತ ಸಮುದಾಯಗಳ ಹುಟ್ಟು ಇಲ್ಲೇ ನಡೆಯಿತೆಂದೂ ಆರಂಭಿಕ ಚರ್ಚಿನ ಸಭೆಗಳು ಈ ನಗರ ಮತ್ತು ಇದರ ಆಸುಪಾಸಿನ ಪ್ರದೇಶಗಳಲ್ಲಿ ಜರುಗಿದ್ದವೆಂದೂ ಸರ್ದಾರ್ ದಾಖಲಿಸಿದ್ದಾರೆ. ಇಮ್ಮಡಿ ರಾಮೆಸ್ಸೆಸ್ ನಿಂದ ಹಿಡಿದು ಸಲ್ಜೂಕ್ ರಾಜವಂಶದ ಆಡಳಿತ ಅವಧಿಯವರೆಗಿನ ಕೋನ್ಯಾದ ಪ್ರೌಢಿಮೆ ಅಪಾರವಾದದ್ದಾದರೂ ಮೌಲಾನ ರೂಮಿಯ ಕಾಲದಲ್ಲಿ ಜಗತ್ತು ಈ ಊರಿನ ಕಡೆಗೆ ಬೆರಗುಗೊಂಡು ಹುಬ್ಬೇರಿಸಿ ನೋಡಲು ಶುರುಮಾಡುತ್ತದೆ. ಇದೊಂದು ಚಾರಿತ್ರಿಕ ಸತ್ಯವೂ ಹೌದು.
ಕೋನ್ಯಾ ಪಟ್ಟಣದಲ್ಲಿ ಇಳಿದ ಬಳಿಕ ಅಲ್ಲಿಯ ಪ್ರಯಾಣಕ್ಕಾಗಿ ಪಾಸೊಂದನ್ನು ಪಡೆದುಕೊಂಡ ನಾನು ಫ್ರೆಶ್ ಆಗಲೆಂದು ನನ್ನ ಸ್ನೇಹಿತರು ಅಧ್ಯಯನಗೈಯುತ್ತಿರುವ ನಜ್ಮುದ್ದೀನ್ ಅರ್ಬಕನ್ ಯೂನಿವರ್ಸಿಟಿ ಹಾಸ್ಟೆಲಿನತ್ತ ಟ್ರಾಮ್ ಹಿಡಿದೆ. ನಿಧಾನಕ್ಕೆ ಮೀದು ಅಲ್ಪ ನಿರಾಳವಾದ ಬಳಿಕ ತಣ್ಣನೆಯ ಕುಳಿರ್ಗಾಳಿಯನ್ನು ಹೀರುತ್ತಾ ಜುಮಾ ನಮಾಝಿಗಾಗಿ (ಶುಕ್ರವಾರದ ವಿಶೇಷ ಪ್ರಾರ್ಥನೆ) ಮೌಲಾನಾ ನಗರದತ್ತ ಹೆಜ್ಜೆ ಹಾಕಿದೆವು.
ಮೂರು ವರ್ಷಗಳಿಂದ ಕೋನ್ಯಾದಲ್ಲೇ ಇರುವ ಮೊಹಮ್ಮದ್ ಅಲಿ ಹೇಳಿದಂತೆ ಕೊನ್ಯಾದ ಜನರು ಸಾಮಾನ್ಯವಾಗಿ ಯಾತ್ರೆಯಲ್ಲಿ ಮೌನಿಗಳಾಗುತ್ತಾರೆ. ಒಂದು ರೀತಿಯಲ್ಲಿ ಅಂತರ್ಮುಖಿಗಳಾಗಿಬಿಡುತ್ತಾರೆ. ಆ ದಿನ ಒಂದರ್ಥದಲ್ಲಿ ನೀರವ ಮೌನವೇ ನನ್ನ ಯಾತ್ರೆಯ ಸಂಗಾತಿಯಾಗಿತ್ತೆಂದು ಹೇಳಬೇಕು. ಯಾವ ಒಡನಾಡಿಗೂ ಕಡಿಮೆಯಿಲ್ಲದ ಮೌನದ ಸೆರಗನ್ನು ಹಿಡಿದು ಕಿಟಕಿಯ ಬಳಿಯಲ್ಲಿ ಒಬ್ಬನೇ ಕುಳಿತಿದ್ದೆ. ಮೌನದ ಜೊತೆಗಿನ ಒಡನಾಟ ತೆರೆದಿಡುವ ಬದುಕಿನ ಬಗೆಗಿನ ಒಳನೋಟಗಳು ಮನುಷ್ಯನಿಗೆ ಎಷ್ಟು ಅಗತ್ಯ ಎಂದು ನನ್ನಲ್ಲೇ ಕೇಳಿಕೊಳ್ಳುತ್ತಾ ಕುಳಿತಿದ್ದ ಕ್ಷಣವದು. ಯಾಕೋ ಏಕಾಂತವು ಸಾಕೆನಿಸಿ ನನ್ನ ಸಣ್ಣ ಬ್ಯಾಗ್ ನಿಂದ ಇಯರ್‌ಫೋನನ್ನು ಹೊರಗೆಳೆದು ಆಬಿದಾ ಪರ್ವೀನ್ ಹಾಡಿದ ‘ಆಖಾ’ ಹಾಡನ್ನು ಟ್ಯೂನ್ ಮಾಡಿದೆ. ‘ಯೆ ಸಬ್ ತುಮಾರಾ ಕರಮ್ ಹೈ ಮೌಲಾ’ ಸಾಲುಗಳು ಕೇಳುತ್ತಿದ್ದಂತೆ ನನ್ನ ಕಣ್ಣುಗಳು ಆಬಿದಾಜಿಯ ಆ ಹಾಡಿನ ಲಯದೊಂದಿಗೆ ಮೆತ್ತಗೆ ತಲೆದೂಗುತ್ತಾ ನನಗರಿವಿಲ್ಲದಂತೆಯೇ ತೇವಗೊಂಡಿದ್ದವು.
ನಾವು ನಗರವನ್ನು ತಲುಪುವ ಹೊತ್ತಿಗೆ ಕೋನ್ಯಾದ ಒಂದಿಷ್ಟು ಕಥೆಗಳನ್ನು ಗೆಳೆಯರಾದ ಉಮರ್ ಟಿ, ಎನ್.ಮೊಹಮ್ಮದ್ ಅಲಿ, ಶಫೀಕ್ ಉತ್ಸಾಹದಿಂದ ಹಂಚಿಕೊಂಡಿದ್ದರು. ಅವರಲ್ಲಿ ಕೋನ್ಯಾದ ಬಗೆಗೆ ವಿಶೇಷವೆನಿಸುವ ಮೋಹವಿರುವುದು ಸ್ಪಷ್ಟವಾಗಿ ಗೊತ್ತಾಗುವಂತಿತ್ತು. ಕೇಳುಗರಿಲ್ಲದೆ ಒದ್ದಾಡುವ ಅಜ್ಜಿಯಂತೆ ತನ್ನೊಳಗೆ ಸಾವಿರ ಕಥೆಗಳನ್ನು ಹುದುಗಿಕೊಂಡು ಮೌನವಾಗಿ ಕುಳಿತಿರುವ ಒಂದಿಷ್ಟು ಪುರಾತನ ಪ್ರತಿಮೆಗಳು, ಪಾಳುಬಿದ್ದ ಕಟ್ಟಡಗಳು ಮತ್ತು ಚರ್ಚುಗಳು ಅಲ್ಲಿದ್ದವು. ಅವುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭೂತಿಯೆಂದು ಹೇಳಬೇಕಿಲ್ಲ ತಾನೇ?!
ಬಳಿಕ ನಾವು ಊಟಕ್ಕೆಂದು ರೆಸ್ಟೋರೆಂಟುಗಳನ್ನು ಹುಡುಕುತ್ತಿದ್ದಾಗ ಅಲ್ಲಿಯ ಹೋಟೆಲುಗಳ ಹೆಸರುಗಳು ಸೂಫಿಸಮ್ಮಿನ ಅತ್ತರಿನ ಘಮವನ್ನು ಸ್ಫುರಿಸುತ್ತಿದ್ದದ್ದನ್ನು ಕಂಡು ಒಳಗೊಳಗೆ ಹಿಗ್ಗಿಕೊಂಡಿದ್ದೆ. ಅವುಗಳಲ್ಲಿ ಸೂಫಿ ಕಬಾಬ್, ಸೂಫಿ ರೆಸ್ಟೋರೆಂಟ್, ಮಥ್ಅಮ್(ಹೋಟೆಲ್) ಮೌಲಾನಾ, ಸಮಾ ರೆಸ್ಟೋರೆಂಟ್, ದರ್ವೇಶ್ ಹೋಟೆಲ್ ಮುಂತಾದ ಸೊಗಸಾದ ಹೆಸರುಗಳಿದ್ದವು. ಕೊನ್ಯಾದ ಜನರ ದೈನಂದಿನ ಬದುಕು, ಸಂಸ್ಕೃತಿ ಮತ್ತು ಜೀವನಶೈಲಿ ಈ ಹೋಟೆಲುಗಳಲ್ಲಿ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ನೇರವಾಗಿ ಪ್ರತಿಫಲನಗೊಂಡದ್ದು ಕಾಣುತ್ತಿದ್ದವು. ಒಂದಿಷ್ಟು ಹುಡುಕಾಟದ ತರುವಾಯ ‘ಸಮಾ ರೆಸ್ಟೋರೆಂಟ್‌’ನಿಂದ ಕೋನ್ಯಾದ ಸ್ಪೆಷಲ್ ಡಿಶ್ ‘ಬೊರಾಕ್’ಅನ್ನು ಸವಿದು ಜುಮಾ ನಮಾಝಿಗಾಗಿ ರೂಮಿಯ ಮಸೀದಿಯತ್ತ ಹೆಜ್ಜೆ ಬದಲಿಸಿದೆವು. ಕೋನ್ಯಾದ ಜನರಲ್ಲಿ ರೂಮಿ ಮಸೀದಿಯೆಂದರೆ ಅವರೊಂದು ಕ್ಷಣ ತಬ್ಬಿಬ್ಬಾಗಿ ಅತ್ತಿತ್ತ ನೋಡುತ್ತಾರೆ. ಕೋನ್ಯಾದಲ್ಲೆಲ್ಲೂ ನಿಮಗೆ ರೂಮಿಯೆಂಬ ಹೆಸರನ್ನು ಕೇಳಸಿಗುವುದೇ ಇಲ್ಲ ಎನ್ನಬಹುದೇನೊ. ಅವರು ರೂಮಿಯನ್ನು ಉಸ್ತಾದ್(ಗುರುಗಳು) ಎಂಬರ್ಥವಿರುವ ‘ಮೌಲಾನಾ’ ಅಥವಾ ‘ಮೆವ್‌ಲಾನಾ’ ಎಂದೇ ಸಂಭೋದಿಸುವುದು. ನಮ್ಮ ನೆಚ್ಚಿನ ರೂಮಿ ಕೋನ್ಯಾದ ಜನರ ಮನಸ್ಸುಗಳಲ್ಲಿ ಮೌಲಾನರಾಗಿಹೋದದ್ದು ನನಗೆ ಸೋಜಿಗವೆನಿಸಿತ್ತು. ಕೊನೆಗೂ ಮೌಲಾನಾರ ಮಸೀದಿಯನ್ನು ಕಂಡುಹಿಡಿದು ಅತ್ತ ಧಾವಿಸಿದೆವು.

ಶುಕ್ರವಾರದ ಪ್ರಾರ್ಥನೆಯನ್ನು ಮುಗಿಸಿ ಮಸೀದಿಯಿಂದ ಹೊರಬೀಳುತ್ತಲೇ ಗೆಳೆಯರು ರೂಮಿಯ ಸಮಾಧಿಯ ಬಗಲಲ್ಲಿ ಇಕ್ಬಾಲರ ಸಾಂಕೇತಿಕ ಸಮಾಧಿ ಇದೆಯೆಂದೂ ಮೊದಲು ಅಲ್ಲಿಗೆ ಹೋಗಿ ಬಳಿಕ ರೂಮಿಯ ಸಮಾಧಿಯನ್ನು ಸಂದರ್ಶಿಸುವುದಾಗಿ ಹೇಳಿದರು. ನಾನು ಉತ್ಸಾಹದಿಂದಲೇ ಅದಕ್ಕೆ ಒಪ್ಪಿಗೆಯನ್ನು ನೀಡಿದೆ. ನನಗೆ ಕುತೂಹಲ, ಸಂತೋಷ ಮತ್ತು ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಎದೆಯೊಳಗೆ ಮಗ್ಗುಲು ಬದಲಿಸಿದ ಅನುಭವವಾಗಿತ್ತು. ಆ ಒಂದು ಕ್ಷಣ ರೂಮಿಯನ್ನು ಬಿಟ್ಟು ನನ್ನಿಡೀ ಮನಸ್ಸು ಇಕ್ಬಾಲರಿಂದ ತುಂಬಿಕೊಂಡುಬಿಟ್ಟಿತ್ತು. ‘ಇಕ್ಬಾಲ್..’ ಒಂದು ಉದ್ಗಾರದೊಂದಿಗೆ ನನ್ನೊಳಗೆ ಸಂಚಲನ ಸೃಷ್ಟಿಸಿತ್ತು ಆ ಹೆಸರು. ‘ದಾರುಲ್ ಹುದಾ’‌ ಕಾಲೇಜಿನ ಪಠ್ಯಕ್ರಮದಲ್ಲಿ ಶಿಕ್ಷಕರು ಭೋದಿಸುವ ಕವಿತೆಗಳಲ್ಲಿ ರೂಮಿಯ ಜೊತೆಗೆ ‌ಇಕ್ಬಾಲರ ಕವಿತೆಗಳು ಕೂಡ ಇರುತ್ತಿದ್ದವು. ಇಕ್ಬಾಲರ ಕವಿತೆಯಲ್ಲಿ ‌ಆಗೊಮ್ಮೆ ಈಗೊಮ್ಮೆ ‌ಇಣುಕಿಹೋಗುತ್ತಿದ್ದ ಹೆಸರು ಮಾತ್ರವಾಗಿತ್ತು ರೂಮಿ! ಆ ಕವಿತೆಗಳ ಮೂಲಕವೇ ರೂಮಿಯನ್ನು ನಾನು ಮೊದಮೊದಲು ಕೇಳಿದ್ದು. ಈ ಏಕಮಾತ್ರ ಕಾರಣಕ್ಕಾಗಿಯೇ ಕಾಕತಾಳೀಯವೋ ಎಂಬಂತೆ ಇಕ್ಬಾಲರ ಸಾಂಕೇತಿಕ ಸಮಾಧಿಯನ್ನು ನೋಡಿದ ನಂತರವೇ ‘ಇಕ್ಬಾಲ್ ವಸೀಲಾ’ದ ಮೂಲಕ ಇಕ್ಬಾಲರ ಆಶಿರ್ವಾದದೊಂದಿಗೆ ಮಾತ್ರ ರೂಮಿಯನ್ನು ದರ್ಶಿಸಬೇಕೆಂಬುದು ವಿಧಿಲಿಖಿತವಾಗಿರಬೇಕೆಂದು ಭಾವಿಸಿಕೊಂಡೆ.
ಇಕ್ಬಾಲ್ ಅವರ ಕವಿತೆಗಳಿಗೆ ಒಂದು ವಿಶೇಷ ತೆರನಾದ ಮಾಧುರ್ಯವನ್ನು ಸುರಿದುಕೊಟ್ಟದ್ದೇ ರೂಮಿಯೊಂದಿಗಿನ ನಿಕಟವಾದ ಆತ್ಮಬಂಧವೆನಿಸುತ್ತದೆ. ತನ್ನ ಎಲ್ಲಾ ಕೃತಿಗಳಲ್ಲಿಯೂ ಇಕ್ಬಾಲ್ ರೂಮಿಯನ್ನು ಸುಂದರವಾದ ರೂಪಕವಾಗಿ ಬಣ್ಣಿಸಿರುವುದನ್ನು ನಾನು ಆಗ ನೆನಪಿಸಿಕೊಳ್ಳುತ್ತಿದ್ದೆ.
ರೂಮಿಯ ಪ್ರವಾದಿ ಪ್ರೇಮ(ಇಶ್ಕ್) ಮತ್ತು ಮಸ್ನವಿಯಲ್ಲಿ ಖುರಾನನ್ನು ವ್ಯಾಖ್ಯಾನಿಸಿದ ರೀತಿಗೆ ಮಾರುಹೋಗಿದ್ದ ಇಕ್ಬಾಲರು ತನ್ನನ್ನು ಪ್ರಭಾವಿಸಿದ ಕವಿಗಳಲ್ಲಿ ರೂಮಿ ಅಗ್ರಗಣ್ಯರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
‘The light of the Quran is hidden in his (Rumi’s) breast, the cup of Jam fades in the presence of his mirror’ಎಂದು ಇಕ್ಬಾಲರ ರೂಮಿಯ ಕುರಿತ ಮಾತುಗಳಲ್ಲಿ ಆ ಆತ್ಮೀಯತೆಯನ್ನು ಗ್ರಹಿಸಬಹುದಾಗಿದೆ.
ರೂಮಿಯ ಮಸೀದಿಯ ಬಳಿಯಲ್ಲಿ ಕಟ್ಟಲಾಗಿರುವ ಇಕ್ಬಾಲರ ಸಾಂಕೇತಿಕ ಸಮಾಧಿಯ ಮೇಲೆ ಹೀಗೆ ಬರೆಯಲಾಗಿದೆ; ‘This position was given to Muhammad Iqbal, a national poet and philosopher of Pakistan, in the spiritual presence of his beloved mentor Mavlana. 1965’.

ಪ್ರೇಮಿಗಳ ಕ‌ಅಬಾದೆಡೆಗೆ:

ಇಕ್ಬಾಲರಿಗೆ ಸಲಾಂ ಹೇಳಿ ಮತ್ತೆ ರೂಮಿಯನ್ನು ಅರಸುತ್ತಾ ನಾವಲ್ಲಿಂದ ಮುಂದೆ ನಡೆದೆವು. ಆ ಕ್ಷಣಕ್ಕೆ ಮನಸ್ಸೆಲ್ಲವೂ ರೂಮಿಯೇ ತುಂಬಿಕೊಂಡುಬಿಟ್ಟಿದ್ದರು. ಮೌಲಾನ ರೂಮಿಯ ಕುರಿತಾಗಿ ಓದಿದ ಹಳೆಯ ಕೃತಿಗಳ ಜೊತೆಗೆ ಇತ್ತೀಚೆಗೆ ಓದಿಕೊಂಡ ಮೌಲಾನರ ಕೃತಿ ‘ಫೀಹಿ ಮಾ ಫೀಹಿ’

ಮತ್ತು ವಿಲಿಯಂ ಸಿ ಚಿಟ್ಟಿಕ್ಕ್ ರ ಇಂಗ್ಲಿಷ್ ಅನುವಾದಿತ ತಬ್ರೇಝರ ಆತ್ಮಕಥೆ ‘ಮಿ ಆಂಡ್ ರೂಮಿ’ ಎಂಬೀ ಕೃತಿಗಳ ಹಲವು ಸಾಲುಗಳಲ್ಲಿಯೇ ನನ್ನ ಮನಸ್ಸು ತೇಲಾಡುತ್ತಿತ್ತು. ಆ ಪದ್ಯದ ಸಾಲುಗಳ ಜೋಕಾಲಿಯಲ್ಲಿ ಹೊಯ್ದಾಡಿದಂತೆ ಎದೆಯಲ್ಲಿ ತಣ್ಣನೆಯ ಗಾಳಿಯೊಂದು ಸೋಕಿದ ಅನುಭೂತಿಯಾಗುತ್ತಿತ್ತು.

ಮುಂದೆ ನೋಡಿದರೆ ಸಮಾಧಿಯ ಪ್ರವೇಶದ್ವಾರದ ಬಳಿ ಸಂದರ್ಶಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೆಚ್ಚಾಗಿ ವಿದೇಶಿಯರು! ಚೀನೀಯರು ಮತ್ತು ಜಪಾನಿಗರನ್ನು ಹೋಲುವ ವಿಭಿನ್ನ ಚಹರೆಯ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ಇರಾನಿಯನ್ನರಂತೆ ಕಾಣುವ ಮಹಿಳೆಯರೂ ಬಹಳಷ್ಟಿದ್ದರು. ಅವರಲ್ಲಿ ಧಾರ್ಮಿಕ ಚಿಹ್ನೆಗಳಿದ್ದವರು, ಇಲ್ಲದವರು, ಆಸ್ತಿಕರು, ನಾಸ್ತಿಕರು ಎಲ್ಲರೂ ಇದ್ದರು. ರೂಮಿಯ ಕರೆಗೆ ವರುಷಗಳ ಬಳಿಕ ಓಗೊಟ್ಟು ಬಂದ ಯಾತ್ರಾರ್ಥಿಗಳು ಆ ಸನ್ನಿಧಿಯಲ್ಲಿ ತುಂಬಿ ಹೋಗಿದ್ದರು. ರೂಮಿ ಜನಹೃದಯಗಳನ್ನು ತಟ್ಟಿ ಕರೆದದ್ದೇ ಹೀಗೆ! “ನೀವು ಯಾರೇ ಆಗಿದ್ದರೂ ನನ್ನೆಡೆಗೆ ಬನ್ನಿ. ನೀವು ಧರ್ಮ ವಿಶ್ವಾಸಿಯೋ, ಪ್ರಾಚೀನ ಧರ್ಮದವರೋ, ಅಗ್ನಿ ಆರಾಧಕರೋ ಯಾರಾದರೂ ಬನ್ನಿ. ನಮ್ಮದು ಹತಾಶೆಯ ಸಹೋದರ ಗುಂಪು ಖಂಡಿತಾ ಅಲ್ಲ. ನೀವು ಪಶ್ಚಾತ್ತಾಪದ ಒಡಂಬಡಿಕೆಯನ್ನು ಸಾವಿರ ಬಾರಿ ಮುರಿದಿರಬಹುದು. ಆದರೂ ಬನ್ನಿ.”

ವಾಸ್ತವದಲ್ಲಿ, ಬೃಹತ್ತಾದ ಗೋರಿಗಳನ್ನು ಕಟ್ಟುವುದು ಮತ್ತು ಸಮಾಧಿಗಳನ್ನು ಎತ್ತಿಕಟ್ಟುವುದರ ಬಗೆಗೆ ರೂಮಿಗೆ ತನ್ನದೇ ಆದ ಕೆಲವೊಂದು ತಕರಾರುಗಳಿದ್ದವು. ತಮ್ಮ ಸವಿನೆನಪಿಗಾಗಿ ಒಂದೊಳ್ಳೆಯ ವೈಭವದ ಸಮಾಧಿಯನ್ನು ಕಟ್ಟುವ ಕುರಿತು ಶಿಷ್ಯರು ರೂಮಿಯನ್ನು ಕೇಳಿಕೊಂಡಾಗ “ಆಕಾಶಕ್ಕಿಂತ ವಿಶಾಲವಾದ, ಮಿಗಿಲಾದ ಗುಂಬಜ್ ಎಲ್ಲಿಯಾದರು ಇರಲಿಕ್ಕೆ ಸಾಧ್ಯವೇ?” ಎಂದು ತಿರುಗಿ ಕೇಳಿದ್ದರಂತೆ. ನಂತರ, ರೂಮಿಯ ಮರಣದ ಬಳಿಕ, ಅವರ ಮಗನ ಅನುಮತಿಯೊಂದಿಗೆ, ಪರ್ಷಿಯನ್ ವಾಸ್ತುಶಿಲ್ಪಿ ಬದ್ರುದ್ದೀನ್ ಇಲ್ಲಿ ಒಂದು ಸಣ್ಣ ಸ್ಮಾರಕವನ್ನು ನಿರ್ಮಿಸಿದರು. ಕಾಲಗಳು ಕಳೆದ ಅನಂತರದ ದಿನಗಳಲ್ಲಿ ಆಡಳಿತಗಾರರು ರೂಮಿಯ ಸಮಾಧಿಯನ್ನು ಅರಮನೆಯಂತೆ ಭವ್ಯವಾಗಿ ನಿರ್ಮಿಸಿದರು.
ನಾವು ರೂಮಿಯ ಸಮಾಧಿಯ ದರ್ಬಾರಿನ ಬಳಿಗೆ ಸಮೀಪಿಸಿದೆವು. ಅಲ್ಲಿ ಪ್ರೇಮಭಾವ ಸ್ಫುರಿಸುವ ಒಂದು ವಿಶೇಷವಾದ ಅನುಭೂತಿಯ ವಾತಾವರಣವಿದ್ದಿತು. ಜೊತೆಜೊತೆಗೆ ಅತ್ತರಿನ ಮತ್ತು ಬರಿಸುವ ಮೋಹಕವೆನಿಸುವ ಘಮ. ದಿವಾನ್ ಶಮ್ಸಿನ ಎರಡು ಸಾಲುಗಳನ್ನು ಬಾಗಿಲಿನ ಮೇಲ್ಭಾಗದಲ್ಲಿ ಆ ಸನ್ನಿಧಿಗೆ ಆಗಮಿಸುವ ಪ್ರೇಮ ಪಥಿಕರಿಗಾಗಿ ಕೆತ್ತಿರುವಂತೆ ಕಾಣುತ್ತಿತ್ತು. ಆ ಎರಡು ಸಾಲುಗಳ ಅರ್ಥ ಹೀಗಿದೆ, “ಈ ಸನ್ನಿಧಿಯು ಪ್ರೇಮಿಗಳ ಕ‌ಅಬಾ (ಕೇಂದ್ರ) ಆಗಿದೆ. ಇಲ್ಲಿ ಅಪೂರ್ಣರಾಗಿ ಬರುವವರೆಲ್ಲರೂ ಪೂರ್ಣರಾಗಿಯೇ ಮರಳುತ್ತಾರೆ”.
ಸಮಾಧಿಯ ಬಾಗಿಲಿನ ಮೂಲಕ ಒಳಹೊಕ್ಕಾಗ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಅನೇಕ ಸುಂದರವಾದ ಕ್ಯಾಲಿಗ್ರಫಿಯನ್ನು ನೋಡಬಹುದು. ಒಂದಿಷ್ಟು ಕವನಗಳ ಸಾಲುಗಳು‌ ಮತ್ತು ದೀರ್ಘಪದ್ಯಗಳನ್ನು ಅಲ್ಲಿನ ಕಲ್ಲುಗಳ ಮೇಲೆ ಕೆತ್ತಲಾಗಿದೆ. ಕಂಬಳಿಯಂತ ದಪ್ಪನೆಯ ಚಾದರಗಳಲ್ಲಿ ಕೈಯ್ಯಲ್ಲೇ ಹೊಲಿದ ಅರಬಿಕ್ ಅಕ್ಷರಗಳು ವಿಶಿಷ್ಠವಾಗಿ ಆಕರ್ಷಿಸುವಂತಿದೆ. ಸುಲ್ತಾನ್ ಅಬ್ದುಲ್ ಹಮೀದ್ ನ ಆಳ್ವಿಕೆಯಲ್ಲಿ ಸಮಾಧಿಯನ್ನು ಕುರ್‌ಆನಿನ ವಚನಗಳಿಂದ ನೇಯ್ದ ಬಟ್ಟೆಯಿಂದ ತಯಾರಿಸಿದ ವಿಶೇಷ ಹೊದಿಕೆಗಳಿಂದ ಅಲಂಕರಿಸಲಾಯಿತೆಂದು ತಿಳಿದುಕೊಂಡೆವು. ರೂಮಿಯ ತಂದೆ, ಮಗ, ಸುಲ್ತಾನ್ ವಲೀದ್ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರ ಸಮಾಧಿಗಳು ರೂಮಿಯ ಗೋರಿಗೆ ಆಸುಪಾಸಿನಲ್ಲಿ ಸ್ಥಾಪಿಸಲಾಗಿದೆ. ಪ್ರತಿ ಸಮಾಧಿಯ ತಲೆಯ ಮೇಲೆ ಪೇಟದಂತಹ ಟೋಪಿ ಇದೆ. ಇದನ್ನೆಲ್ಲಾ ಮೀರಿಸುವಂತೆ ಮೌಲಾನ‌ ರೂಮಿಯವರು ಅಪ್ಪಟ ಮಹಾರಾಜರ ಠೀವಿಯಲ್ಲಿ ಸೂಫಿಗಳ ಕಿರೀಟವನ್ನು ತೊಟ್ಟು ಎಲ್ಲವನ್ನು ಮತ್ತು ಎಲ್ಲರನ್ನು ಆತ್ಮೀಯವಾಗಿ ಮುನ್ನಡೆಸುತ್ತಿರುವಂತೆ ಮಲಗಿರುವುದನ್ನು ಕಾಣುವುದು ನಮ್ಮ ಕಣ್ಣುಗಳಿಗೆ ಹಬ್ಬ ಮತ್ತು ಹೆಮ್ಮೆಯ ನೋಟವೆನಿಸುತ್ತದೆ. ರೂಮೀ ಅಭಿಮಾನಿಗಳಿಗೆ ಇದಕ್ಕಿಂತಲೂ ಮೋಹಕವೆನಿಸುವ ನೋಟವೊಂದು ಇರಲಾರದೆಂದರೆ ನೀವು ನಂಬಲೇಬೇಕು!


ಅಲ್ಲಿ ಸುತ್ತಲೂ ದಪ್ಪನೆಯ ಶ್ವೇತವರ್ಣದ ಲೋಹದಲ್ಲಿ ನಿರ್ಮಿಸಲಾದ ಗೋಳಾಕಾರದ ಕಮಾನುಗಳಿವೆ. ಒಳಗೆ ಎತ್ತರದಲ್ಲಿ ಚಿರನಿದ್ರೆಯಲ್ಲಿರುವ ರೂಮಿಯ ಸಮಾಧಿ. ಅದರ ಸ್ವಲ್ಪವೇ ಮೇಲೆಯಾಗಿ ಹಸಿರು ಅಂಚುಗಳನ್ನು ಹೊಂದಿರುವ ಭವ್ಯವಾದ ನೀಲಿ ಗುಮ್ಮಟವೂ ಇದೆ! ರೂಮಿಯ ಗೋರಿಯನ್ನು ಹಸಿರು ಬಟ್ಟೆಯಿಂದ ಹೊದಿಸಲಾಗಿದ್ದು, ಕುರಾನ್‌ನ ಶ್ಲೋಕಗಳನ್ನು ಸುಂದರವಾಗಿ ಚಿನ್ನದ ದಾರದಿಂದ ನೇಯಲಾಗಿದೆ. ‘ಮಸ್ನವಿಯ’ ಮತ್ತು ‘ದಿವಾನ್ ಕಬೀರ್’ ಕಾವ್ಯಗಳ ತುಣುಕುಗಳು ವಿಶ್ವದ ವಿಚಾರಗಳನ್ನು ಬೊಟ್ಟುಮಾಡಿ ತೋರಿಸುತ್ತಿರುವಂತೆ ಸಮಾಧಿಯ ಸುತ್ತಲೂ ಚಂದದ ಹಸ್ತಾಕ್ಷರದಲ್ಲಿ ಬರೆಯಲಾಗಿದೆ. ನಾವು ಅವುಗಳನ್ನೆಲ್ಲಾ ನೋಡುತ್ತಾ ನಮ್ಮನ್ನೇ ಮರೆತು ಬಿಟ್ಟಿದ್ದೆವು. ಅಷ್ಟೊಂದು ಸೊಗಸಾದ ಕಸೂತಿಯಾಗಿದ್ದವು ಅವುಗಳು.
ಬಳಿಕ, ನಾವು ಒಳಗೆ ಪ್ರವೇಶಿಸುತ್ತಿರುವಂತೆ ಆ ದರ್ಬಾರಿನ ದಾರವಂದದ ಮೇಲೆ ಬರೆದಿಡಲಾದ ‘ಈ ಸನ್ನಿಧಿ ಪ್ರೇಮಿಗಳ ಕ‌ಅಬಾ’ಎಂಬ ಸಾಲುಗಳು ನಮ್ಮೆದೆಯಲ್ಲೊಂದು ಇಶ್ಕಿನ ಕಡಲನ್ನು ತೆರೆದಿಡುತ್ತದೆ. ನಿಜಕ್ಕೂ ಆ ಸನ್ನಿಧಿ ಮೊಹಬ್ಬತಿನ ಸಾಗರದಲ್ಲಿ ಅದ್ದಿ ತೆಗೆದಿರುವ ಇಶ್ಕಿನ ಇಟ್ಟಿಗೆಗಳಿಂದ ಕಟ್ಟಲಾಗಿರುವ ಆಶಿಕುಗಳ ಕ‌ಅಬಾವೇ ಆಗಿದೆ. ಆ ಪ್ರೇಮ ಗೋಪುರದ ಪ್ರಾಕಾರಗಳ ಸುತ್ತಲೂ ತವಾಫ್ ಮಾಡುತ್ತಿರುವಂತೆ ಪ್ರಪಂಚದ ನಾನಾ ದಿಕ್ಕುಗಳಿಂದ ರೂಮಿಯನ್ನು ಕಾಣಲು ಬಂದಿರುವ ನೂರಾರು ಯಾತ್ರಿಕರಿದ್ದಾರೆ.

ಒಂದು ಗುಂಪು ಪ್ರಾರ್ಥನೆಯಲ್ಲಿ ಮುಳುಗಿ ಕಣ್ಣೀರಾದರೆ ಮತ್ತೊಂದು ಗುಂಪು ಪ್ರೇಮ ಭಾವ, ದುಃಖ, ಸಂತೋಷ, ನೋವು ಮತ್ತು ಆಶ್ಚರ್ಯ ಇವೆಲ್ಲವನ್ನೂ ತಮ್ಮೆದೆಯಲ್ಲಿ ಒಂದೇ ತೂಕದಲ್ಲಿ ಒಳಗೊಳ್ಳುತ್ತಲೇ ಶಾಂತವಾದ ಅನುಭೂತಿಯ ಲೋಕಕ್ಕೆ ತೆರಳುತ್ತಿರುವಂತೆ ಕಾಣುತ್ತಾರೆ. ಇದೆಲ್ಲವನ್ನು ನೋಡುತ್ತಾ ಇತ್ತ ರೂಮಿ ಮುಗುಳ್ನಗುತ್ತಲೇ ಅಲ್ಲಿಯೇ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಇದೆ.
ರೂಮಿಯ ಪಕ್ಕದಲ್ಲೇ ಪೈಗಂಬರ್(ಸ.ಅ)ರ ‘ಶ‌ಅ್‌ರೇ ಮುಬಾರಕ್'(ಪವಿತ್ರ ಕೇಶ) ವನ್ನು ಬಹಳ ಗೌರವಾದರದಿಂದ ಜೋಪಾನವಾಗಿರಿಸಲಾಗಿದೆ. ವಿಶ್ವಾಸಿಗಳೆಲ್ಲರೂ ಆ ಶ‌ಅ್‌ರೇ ಮುಬಾರಕ್ಕನ್ನು ಕಣ್ತುಂಬಿಕೊಳ್ಳುತ್ತಿರುತ್ತಾರೆ. ಇಷ್ಕ್ ಮತ್ತು ಶಾಂತಿಗಾಗಿ ಮಾತ್ರ ಬದುಕಿದ್ದ ಪ್ರವಾದಿಯ ಶ‌‌ಅ್‌ರೇ ಮುಬಾರಕ್ಕೊಂದು ಇಷ್ಕಿನ ರಾಜಕುಮಾರನ ಸನ್ನಿಧಿಯಲ್ಲಿ ಇರಿಸಲಾಗಿರುವುದು ಒಂದೊಮ್ಮೆ
ರೂಮಿ ಮಾಡಿದ ಕರ್ಮಫಲದ ಕಾರಣದಿಂದಲೇ ಆಗಿರಬಹುದೇನೋ
ನಾವು ರೂಮಿಯ ಬಳಿಯಿಂದ ಸರಿದು ಪಕ್ಕದ ಮ್ಯೂಸಿಯಂನತ್ತ ನಡೆದೆವು. ರೂಮಿಯ ಬದುಕನ್ನು ಆಧರಿಸಿ ಸ್ಥಾಪಿಸಲಾಗಿರುವ ಆ ಮ್ಯೂಸಿಯಂ ಸಂದರ್ಶನಕ್ಕೆಂದು ಅಲ್ಲಿಗೆ ಹೋದೆವು. ಅಲ್ಲಿ ‘ಸಮಾ’ದ ಒಂದಷ್ಟು ಉಪಕರಣಗಳು, ಮಸ್ನವಿಯ ಹಳೆಯ ಹಸ್ತಪ್ರತಿಗಳು, ರೂಮಿಯ ಉಡುಪುಗಳು, ದರ್ವೇಶರು ಬಳಸುವ ಟೋಪಿ, ಪೇಟ ಮತ್ತು ಸೂಫಿಗಳ ಬದುಕನ್ನು ತೆರೆದಿಡುವ ವಸ್ತುಗಳಿಂದ ತುಂಬಿದ್ದ ಆ ಮ್ಯೂಸಿಯಂ ನಮ್ಮನ್ನು ಆದರದಿಂದ ಬರಮಾಡಿಕೊಂಡಿತು. ಆ ಪುರಾತನ ವಸ್ತುಗಳು ತಮ್ಮನ್ನು ಕಾಣಲು ಬರಲಿರುವ ಯಾತ್ರಿಕರಿಗಾಗಿ ಗಾಜಿನ ಗೋಪುರದ ಪಂಜರದಲ್ಲಿ ಕಾಯುತ್ತಾ ಕುಳಿತಿದ್ದಂತೆ ಕಾಣುತ್ತಿದ್ದವು.

(ಮುಂದಿನ ಭಾಗದಲ್ಲಿ ರೂಮಿಯಿಂದ ಶಂಮ್ಸ್ ಏ ತಬ್ರೇಝ್ ಕಡೆಗಿನ ಯಾತ್ರಾ ವಿವರಣೆಯಿದೆ)

ಮೂಲ: ಫಾಸಿಲ್ ಫಿರೋಝ್
ಅನು: ಝುಬೈರ್ ಅಹ್ಮದ್ ಪರಪ್ಪು

ನನ್ನ ನೆನಪಿನ ಮದೀನಾ ಯಾತ್ರೆ

ಮನೆಮಂದಿಯೆಲ್ಲರೂ ಮದೀನಾಕ್ಕೆ ತೆರಳಿದ ದಿನ ನಾನು ಯೂಟ್ಯೂಬ್ ತೆರೆದು ಮೊದಲೇ ಡೌನ್ಲೋಡ್ ಮಾಡಿಟ್ಟ ಹಾಡು ಕೇಳುತ್ತಿದ್ದಂತೆ ಅಚಾನಕ್ಕಾಗಿ ಅಶ್ರಫ್ ತೈನೇರಿ ಹಾಗೂ ರೆಹೆನಾ ಜೊತೆಗೂಡಿ ಹಾಡಿದ
‘ಮಕ್ಕಾ ಮದೀನಾ ಞಾನ್ ಓರ್ತು ಪೋಯಿ
ಹಕ್ ರಸೂಲಿಂಡೆ ನಿನವಿಲಾಯಿ’
ಎಂಬ ಹಾಡು ಕಿವಿಗಪ್ಪಳಿಸಿತ್ತು.
ಮಕ್ಕಾ-ಮದೀನಾದ ಚಿತ್ರಣವನ್ನು ಬರೆದ ಗೆರೆಗಳವು.
‘ಕಅಬಾವನ್ನು ಗುರಿಯಿಟ್ಟು ಬರುವ ಪಕ್ಷಿಗಳ ಪೈಕಿ ಒಂದು ಪಕ್ಷಿ ನಾನಾಗಿರುತ್ತಿದ್ದರೆ’ ಎಂದು ಅರ್ಥ ಸಾರುವ ಭಾವಸಾಂದ್ರರನ್ನಾಗಿಸುವ ಹಾಡು ಕೇಳುತ್ತಿದ್ದಂತೆ ಅಣ್ಣ ಮದೀನಾದಿಂದ ಕರೆ ಮಾಡಿದ. ‘ನಾವು ಮದೀನಾಕ್ಕೆ ತಲುಪಿದ್ದೇವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮಲಗಿರುವ ಮದೀನಾದ ಅಂಗಳದಿಂದ ಮಾತನಾಡುತ್ತಿದ್ದೇನೆ’ ಎಂದರು.

ಅದು ರಮಳಾನ್ ತಿಂಗಳು. ಮದೀನಾ ತಲುಪಿ ವಾಹನ ಇಳಿದಾಗ ಮಕ್ಕಳೆಲ್ಲರೂ ಸುತ್ತುಗಟ್ಟಿ ‘ಉಪವಾಸ ನಮ್ಮೊಂದಿಗೆ ತೊರೆಯಿರಿ’ ಎಂದು ತೋಳನ್ನು ಹಿಡಿದು ಎಳೆಯುತ್ತಿದ್ದರು. ಯಾರೊಂದಿಗೆ ಹೋಗಬೇಕೆಂದು ತಿಳಿಯದೇ ನಿಂತಿರುವಾಗ ಅಮೀರ್ (ಯಾತ್ರಾ ಸಂಘದ ನಾಯಕ) ಅಶ್ರಫ್ ವಯನಾಡ್ ಹೇಳಿದರು; “ನಮ್ಮ ಕೈಯ್ಯನ್ನು ಮೊದಲು ಯಾರು ಹಿಡಿದರೋ ಅವರೊಂದಿಗೆ ಹೊರಡೋಣ” ಇದನ್ನು ಕೇಳಿದ ಅರಬೀ ವ್ಯಕ್ತಿಯ ಮುಖದಲ್ಲಿ ಕಿರುನಗೆ ಅರಳಿತು.

ಅರವತ್ತರಷ್ಟು ಜನರಿರುವ ಸಂಘವನ್ನು ಆ ಮದೀನಾದ ಯುವಕ ಒಬ್ಬ ರಾಜನಂತೆ ಮುನ್ನಡೆಸುವ ದೃಶ್ಯವನ್ನು ನನ್ನ ಅಣ್ಣ ಹಬೀಬ್ ವಿವರಿಸಿಕೊಟ್ಟಾಗ, ಮದೀನಾದ ಅತಿಥಿ ಸತ್ಕಾರದ ಕುರಿತು ಕೇಳಿದ್ದ ಕಥೆಯನ್ನು ಮತ್ತೊಮ್ಮೆ ನೆನಪಿಸಿಕೊಂಡೆ.
ಫೋನ್ ತೆಗೆದು ಅಮ್ಮ ಕೇಳಿದಳು
‘ಮಗನೇ, ಇಡೀ ಜಗತ್ತನ್ನು ಸುತ್ತಿದ ನಿನಗೆ ಮಕ್ಕಾ-ಮದೀನಾ ತಲುಪಲು ಯಾಕೆ ಸಾಧ್ಯವಾಗಲಿಲ್ಲ?’
ನಿಜ ಹೇಳಬೇಕೆಂದರೆ, ಅಮ್ಮನ ಈ ಮಾತುಗಳನ್ನು ಕೇಳಿದ ನಂತರವೇ ನಾನು ಆ ಕುರಿತು ಯೋಚನೆ ಮಾಡತೊಡಗಿದೆ.

ಇತರ ಯಾತ್ರೆಗಳ ನಡುವೆ ನಾನು ಆರೇಬಿಯಾದ ಆಕಾಶದಲ್ಲಿ ಹಲವು ಬಾರಿ ಸಂಚರಿಸಿದ್ದೆ. ಒಮ್ಮೆ ಪ್ರಯತ್ನಿಸಿದ್ದರೆ ಜಿದ್ದಾದಲ್ಲಿ ಇಳಿಯಲು ಅವಕಾಶವಿರುವ ಯಾತ್ರೆಯೂ ಸಹ ಇತ್ತಲ್ಲವೇ? ಹಾಗಿದ್ದೂ ನನಗ್ಯಾಕೆ ಅದು ಸಾಧ್ಯವಾಗದೇ ಹೋಯಿತು? ಸಣ್ಣ ಒಂದು ಪ್ರಯತ್ನವನ್ನಾದರೂ ಮಾಡಬಹುದಿತ್ತಲ್ಲವೇ? ಅಂತಹ ಒಂದು ಯೋಚನೆಯೂ ಉದ್ಭವಿಸದೆ ಹೋದದ್ದಾರೂ ಹೇಗೆ? ನಾನು ಅವರೊಂದಿಗಿಲ್ಲದ ಬೇಸರ ಮಾತ್ರವಲ್ಲದೆ ಮಕ್ಕಾ-ಮದೀನಾ ಕಾಣಲು ಸಾಧ್ಯವಾಗದೇ ಹೋದ ದೌರ್ಭಾಗ್ಯವನ್ನೂ ಸಹ ಅಮ್ಮ ನೆನಪಿಸಿದರು.

ಯಾತ್ರಾಮಧ್ಯೆ ನನ್ನ ಪ್ರಾಯವಿರುವ ವ್ಯಕ್ತಿಗಳನ್ನು ಕಂಡರೆ ಅಮ್ಮ ನನ್ನನ್ನು ನೆನಪು ಮಾಡುತ್ತಿದ್ದರಂತೆ. ಅಷ್ಟಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನಗರಕ್ಕಿರುವ ಸೌಂದರ್ಯವಾದರೂ ಏನು!? ತಾನು ಕಾಣುವ ಜೊತೆಗೆ ಇತರರೂ ಕಣ್ತುಂಬಿಕೊಳ್ಳಬೇಕೆಂಬ ತೀರ್ಮಾನಕ್ಕೆ ನಮ್ಮನ್ನು ದೂಡುವ ಆ ಮದೀನಾದ ಮಣ್ಣು ಯಾವ ಸೌಂದರ್ಯವನ್ನು ತನ್ನ ಉದರದಲ್ಲಿ ಅಡಗಿಸಿಕೊಂಡಿದೆ? ಸಂದರ್ಶಕರಲ್ಲಿ ಆಹ್ಲಾದ ಹುಟ್ಟಿಸುವ ಯಾವ ಮಾಂತ್ರಿಕ ಶಕ್ತಿ ಈ ನಗರಕ್ಕಿರಬಹುದು? ಕೂಡಲೇ ನಾನು ಮಕ್ಕಾ-ಮದೀನಾ ಸಂದರ್ಶಿಸಬೇಕೆಂದು ತೀರ್ಮಾನಿಸಿಬಿಟ್ಟೆ.
“ನೀನು ಬರುವೆ, ನಿನ್ನನ್ನು ಇಲ್ಲಿಗೆ ತಲುಪಿಸಬೇಕೆಂಬ ಬಯಕೆಯಿಂದ ನಾನು ಕಣ್ಣೀರಿಟ್ಟು ಪ್ರಾರ್ಥಿಸಿದ್ದೇನೆ” ಎಂದು ಹೇಳುತ್ತ ಅಮ್ಮ ಗದ್ಗದಿತಳಾಗಿದ್ದಳು.

ನನ್ನ ಏಕಾಂತಗಳಿಗೆ ಸಹವರ್ತಿಯಾಗಿ ಒಂದು ಹಾಡು ಇತ್ತು. ವೈಯಕ್ತಿಕ ಕಾರಣದಿಂದ ನನಗದು ಆತ್ಮೀಯವಾಗಿತ್ತು. ವರ್ಷಗಳ ಹಿಂದೆ ನಡೆದ ಜಿಲ್ಲಾ ಮಟ್ಟದ ಮದ್ರಸಾ ಕಲಾ ಕಾರ್ಯಕ್ರಮದಲ್ಲಿ ಸಂಘಗೀತೆಯ ಸಹಸ್ಪರ್ಧಿಯಾಗಿದ್ದೆ. ನನ್ನ ಗೆಳೆಯನೂ, ಊರಿನವನೂ ಆದ ಜುನೈದ್ ಕೋವಿ, ಹಾಶಿಮ್ ಇವರಿಬ್ಬರೂ ನನ್ನೊಂದಿಗೆ ಧ್ವನಿಗೂಡಿಸಿದ್ದರು. ನಾವು ಹಾಡಿದ ಹಾಡನ್ನು ಎರಡನೇ ಸ್ಥಾನಿಯಾಗಿಸಿದ ಕಾರಣಕ್ಕಾಗಿತ್ತು ನಾನು ಹಾಡನ್ನು ಇಷ್ಟಪಟ್ಟದ್ದು ಹಾಗೂ ಹಾಡಿ ನೋಡಿದ್ದು. ನಂತರ ಸುಮ್ಮನೆ ಕುಳಿತುಕೊಳ್ಳುವಾಗೆಲ್ಲ ನಾನರಿಯದೆ ಗುನುಗುವ ಹಾಡಾಗಿ ಅದು ಬದಲಾವಣೆಯಾಯಿತು.

ಇವತ್ತಿಗೂ ಕೂಡ ಆ ಹಾಡು ಜೀವಂತವಾಗಿದೆ. ಸ್ಪರ್ಧೆಯಲ್ಲಿ ನಮ್ಮನ್ನು ಸೋಲಿಸಿದ ಕಾರಣದಿಂದ ಉಂಟಾದ ದ್ವೇಷವೋ, ಸಿಟ್ಟೋ ಯಾವಾಗಲೋ ಮಾಯವಾಗಿ ಹೋಗಿತ್ತು. ‘ಹಿಜ್ರಯಿಲ್ ನಬಿಯುಮ್ ಪಿನ್ ಸ್ವಹಾಬರುಮಾಯಿ ಚೇರ್ನು ಮದೀನಾ
ಅಣಯುವಾನ್ ಅಡುತ್ತಿಡುಂಬೋಲ್ ತಿರುನಬಿ ಕರಂಞಿಡುನ್ನೇ’
ಎಂದು ಪ್ರಾರಂಭವಾಗುವ ಈ ಹಾಡು, ನನ್ನನ್ನು ಕೇವಲ ಸಂಘಹಾಡು ಸ್ಪರ್ಧೆಯಲ್ಲಿ ಮಾತ್ರವಲ್ಲ ಸೋಲಿಸಿದ್ದು ಎಂದು ಮನವರಿಕೆಯಾದದ್ದು ನಾನು ವರ್ಷಗಳ ನಂತರ ಮದೀನಾಕೆ ಭೇಟಿಕೊಟ್ಟ ಸಂದರ್ಭದಲ್ಲಾಗಿತ್ತು. ಆ ಪುಣ್ಯ ಮದೀನಾವನ್ನು ದೂರದಿಂದ ನೋಡುವಾಗಲೇ ಯಾವೊಬ್ಬನ ಕಣ್ಣಾಲಿಗಳೂ ತುಂಬದಿರದು. ಮದೀನಾದೊಂದಿಗಿರುವ ಸ್ನೇಹ, ಪ್ರೀತಿಯು ನಮ್ಮ ಮನಸ್ಸುಗಳನ್ನು ಆರ್ದ್ರಗೊಳಿಸುವುದಂತೂ ಸತ್ಯ.

ಮದೀನಾದಿಂದ ಹಿಂದಿರುಗಿದ ಕೂಡಲೇ ಅಣ್ಣ ಹಬೀಬ್ ನನ್ನನ್ನು ಉಮ್ರಾ ಹಾಗೂ ಮದೀನಾಕ್ಕೆ ಕಳುಹಿಸುವ ತಯಾರಿಗಳನ್ನು ಮಾಡತೊಡಗಿದ. ಖತ್ತರಿನ ಐ.ಸಿ.ಎಫ್ ಆಫೀಸಿನಲ್ಲಿ ಹಜ್ಜ್ ಕೇಂದ್ರದಲ್ಲಿ ಹೆಸರು ಹಾಗೂ ವಿಳಾಸವನ್ನು ರಿಜಿಸ್ಟರ್ ಮಾಡಿಸಿಕೊಂಡ. ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ನಾನು ಖತ್ತರಿಗೆ ಹೋಗುವೆನೋ, ನನಗದು ಒದಗಿ ಬರಬಹುದೋ ಎಂಬ ಖಚಿತತೆಯಿಂದಲ್ಲ ಅವನು ಇಷ್ಟೆಲ್ಲಾ ಮಾಡಿದ್ದು. ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪುಣ್ಯ ಊರಲ್ಲಿ ಅನುಭವಿಸಿದ ಆನಂದಮಯ ಕ್ಷಣಗಳನ್ನು ಅವನ ತಮ್ಮ ತಿಳಿಯದೇ, ಅನುಭವಿಸದೇ ಹೋಗುವನೋ ಎಂಬ ಕಕ್ಕುಲಾತಿಯಿಂದ ಮಾತ್ರವಾಗಿತ್ತು.

ಮನೆಯವರ ನಿರೀಕ್ಷೆಗಳು ಹುಸಿಯಾಗಲಿಲ್ಲ. ಉದ್ದೇಶಿತ ಸಮಯಕ್ಕೆ ಖತ್ತರಿಗೆ ಹೋಗಿ ಮದೀನಾಕ್ಕೆ ಹೊರಟೇ ಬಿಟ್ಟೆ. ಖತ್ತರ್ ಐ.ಸಿ.ಎಫ್ ನ ಜನರಲ್ ಸೆಕ್ರಟರಿ ‘ಕರೀಮ್ ಹಾಜಿ ಮೆಮಂಡಾ’ ನಮ್ಮ ಯಾತ್ರಾ ಸಂಘದ ಅಮೀರ್ (ನಾಯಕ) ಆಗಿದ್ದರು. ಯಾತ್ರೆಯ ಪೂರ್ವತಯಾರಿಯಾಗಿ ನಡೆದ ಪಿ.ಕೆ ಅಹ್ಮದ್ ಫೈಝೀಯವರ ಅಧ್ಯಯನ ಶಿಬಿರವು ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನಗರಕ್ಕೆ ಬೇಗನೇ ತಲುಪಿಬಿಡಬೇಕೆಂದು ಆಸೆ ಹುಟ್ಟಿಸಿಬಿಟ್ಟಿತ್ತು. ಆಳ ಅರಿವು ಹಾಗೂ ಉತ್ತಮ ಅನುಭವವನ್ನು ಹೊಂದಿದ್ದ ಕರೀಮ್ ಹಾಜಿಯವರ ಚರಿತ್ರೆಯನ್ನು ಮೆಲುಕು ಹಾಕುವ ವಿವರಣೆ, ಅಲ್ಲಿನ ಸೌಂದರ್ಯ, ತಂಪೆರೆಯುವ ಗಾಳಿ ನನ್ನನ್ನು ವಿಚಿತ್ರ ಅನುಭವ ಲೋಕದಲ್ಲಿ ತೇಲಾಡಿಸಿತು.

ಮಕ್ಕಾದಲ್ಲಿ ತಂಗಿದ್ದಾಗ ನಮ್ಮ ಕೋಣೆಯಲ್ಲಿದ್ದ, ಹಿಂದೆ ಮಕ್ಕಾ-ಮದೀನಾಕ್ಕೆ ಬಂದು ಹೋಗುತ್ತಿದ್ದ ಮೂಸಾ ಅವರೊಂದಿಗೆ ಕೇಳಿದೆ,
“ಈ ಎರಡು ನಗರದಿಂದ ತಾವು ಕಂಡರಿತ ವಿಶೇಷತೆಯಾದರೂ ಏನು?”
ಮೂಸಾರವರ ಪ್ರತಿಕ್ರಿಯೆ ಅದ್ಭುತವಾಗಿತ್ತು;
“ಮಕ್ಕಾದ ಕಡೆ ಬರುವಾಗೆಲ್ಲ ನನಗೆ ಒಂದು ಕಾರ್ಯಕ್ರಮಕ್ಕೆ ಬರುವ ಅನುಭೂತಿಯಾಗುತ್ತದೆ. ‘ಬಾ’ ಎಂದು ಕರೆದ ಮನೆಯವರು ಮನೆಯಲ್ಲಿಲ್ಲದೇ ಕಾರ್ಯಕ್ರಮಕ್ಕೆ ಹೋದುದರ ಕೊರತೆಯಂತೆ ನನಗೆ ಭಾಸವಾಗುತ್ತಿತ್ತು. ಆದರೆ ಮದೀನಾಕ್ಕೆ ಹೋದಾಗ ಈ ಕೊರತೆ ಪರಿಹಾರವಾಗುವುದು”

ಒಂದು ಬುಧವಾರ ಬೆಳಗ್ಗಿನ ಜಾವ ಮಕ್ಕಾಗೆ ವಿದಾಯ ಹೇಳಿ ನಾವು ಮದೀನಾದ ಕಡೆಗೆ ಹೊರಟೆವು.
“ಖಿಬ್ಲಾದ ನಗರವಾಗಿದೆ ಮಕ್ಕಾ. ಮಕ್ಕಾದ ಖಿಬ್ಲಾವೇ ಮದೀನಾ. ಮಕ್ಕಾ ಅದರ ಮುಖವನ್ನು ತಿರುಗಿಸಿರುವುದು ಆ ನಗರದಿಂದ ಹೊರಟು ಹೋದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಊರಾದ ಮದೀನಾದ ಕಡೆಗೆ” ಎಂದರ್ಥ ಬರುವ ಅಹ್ಮದ್ ರಝಾಖಾನ್ ಬರೇಲ್ವಿಯವರ ಕವಿತೆಯನ್ನು ಕರೀಮ್ ಹಾಜಿಯವರು ನೆನಪಿಸಿಕೊಟ್ಟರು.

ಮಕ್ಕಾ ಪರ್ವತಗಳ ನಗರ. ಕ‌ಅಬಾದ ಕಾವಲುಗಾರರು ತಲೆಯೆತ್ತಿ ನಿಂತಿರುವಂತೆ ಕಾಣುವ ಪರ್ವತಗಳನ್ನು ದಾಟಿ ನಾವು ಮದೀನಾದೆಡೆಗೆ ಮುನ್ನಡೆದೆವು. ನನ್ನ ಬಳಿ ಕುಳಿತಿದ್ದ ಕಕ್ಕಾಡ್ ಪ್ರದೇಶದ ನಿಯಾಝ್ ಮತ್ತು ಮಜೀದ್ ಬುಖಾರಿ ಸೇರಿ ಅರಬಿ ಹಾಗೂ ಮಲಯಾಳಂ ಭಾಷೆಯಲ್ಲಿರುವ ಪ್ರವಾದಿ ಕಾವ್ಯವನ್ನು ತುಂಬಾ ಚೆನ್ನಾಗಿ, ಭಕ್ತಿಭಾವದಿಂದ ಹಾಡಿದರು. ಮನವು ಹಸಿರುಮಯವಾಗಲು ಯಾಕೋ ಈ ಯಾತ್ರೆ ಸಾಕ್ಷಿಯಾಗುವಂತಿದೆ ಎಂಬ ಅನುಭವವಾಗತೊಡಗಿತು. ಹೊರಗೂ ಕೂಡ ಅದೇ ಭಾವ. ಮರುಭೂಮಿ, ಪರ್ವತಗಳನ್ನು ಹಿಂದಿಕ್ಕಿ ಚಕ್ರಗಳು ಉರುಳುತ್ತಿರುವಂತೆ ಧಾನ್ಯಗಳನ್ನು ಬಿತ್ತನೆ ಮಾಡಲು ಸೂಕ್ತವಾದ ಮಣ್ಣು ಕಾಣತೊಡಗಿತು. ಕುಳಿತಲ್ಲಿಂದಲೇ ಮನಸ್ಸು ಏನೇನೋ ಯೋಚಿಸಿತೊಡಗಿತು. ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಚರರ ಸಂಘವು ಹೇಗೆ ಶತಮಾನಗಳ ಹಿಂದೆ ಈ ಮರುಭೂಮಿಯಲ್ಲಿ ಹೆಜ್ಜೆ ಹಾಕಿರಬಹುದು? ಅಷ್ಟಕ್ಕೂ ನೋವನ್ನುಂಡು ನಡೆಯುವಾಗ ಅವರೊಂದಿಗೆ ಕೈ ಜೋಡಿಸಿದ್ದು ಯಾರಿರಬಹುದು? ಎಲ್ಲಿ ಪ್ರಿಯ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಚರರು ದಾಹ ನೀಗಿಸಿದ್ದಿರಬಹುದು? ಯಾವ ಮರದಡಿಯಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದಿರಬಹುದು? ದಾರಿಯುದ್ದಕ್ಕೂ ಚಕ್ರವೊಮ್ಮೆ ಕೆಲಕಾಲದ ಹಿಂದಕ್ಕೋಡಿತು.

‘ಹಿಜ್‌ರಾ’ (ವಲಸೆ) ದ ನೋವಿನ ಆಳವನ್ನರಿಯಲು ಮಕ್ಕಾ ಮದೀನದ ದಾರಿಯಾಗಿ ಯಾತ್ರೆ ಹೊರಡಬೇಕು. ಟಾರು ಹಾಕಿದ ರಸ್ತೆಯಲ್ಲಿ ಎ.ಸಿ ಹಾಕಿದ ಬಸ್ಸಿನ ಒಳಗೆ ಕುಳಿತು ಮೆಲ್ಲಗೆ ಗ್ಲಾಸ್ ಸರಿಸಿ ಹೊರಗೊಮ್ಮೆ ಕಣ್ಣು ಹಾಯಿಸಿದೆ. ಮತ್ತೊಂದು ಕಾರಿನ ಆವಿಯ ಬಿಸಿಯು ಮುಖಕ್ಕೆ ಅಪ್ಪಳಿಸುವಾಗ ಯಾವೊಬ್ಬನ ಕಣ್ಣೂ ಮುಚ್ಚಲೇಬೇಕು. ಇಂತಹ ಶಕ್ತವಾದ ಬಿಸಿಗಾಳಿಯನ್ನೆದುರಿಸಿ ನಮ್ಮ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಸಮೂಹದ ಪುನರುತ್ಥಾನಕ್ಕೆ ಬೇಕಾಗಿ ಕಣ್ತೆರೆದು ನಡೆದದ್ದನ್ನು ನೆನೆಯುವಾಗ ಮನ ಭಾರವೆನಿಸುವುದು ಖಂಡಿತ.

ಸಹಯಾತ್ರಿಕ ನಿಯಾಝ್ ಒಂದು ಹದೀಸನ್ನು ಹೇಳಿಕೊಟ್ಟರು. ಹಜ್ಜ್ ನಿರ್ವಹಿಸಲೆಂದು ಬಂದ ಒಂದು ಸಂಘ ವಿದ್ವಾಂಸರು ಮಕ್ಕಾದಿಂದ ಮದೀನಾಕ್ಕೆ ಏಳು ಬಾರಿ ಯಾತ್ರೆಗೈದ ಒಂದು ಕಾಲದ ಹದೀಸಿನ ಕುರಿತು ಅವರು ವಿವರಿಸುತ್ತಿದ್ದರು. ಕ್ರಿ.ಶ ಆರುನೂರರ ಆರಂಭದಲ್ಲಿ ವಾರಗಳ ಕಾಲ ಮರಳುಗಾಡು ಮತ್ತು ಪರ್ವತಾವಳಿಗಳನ್ನು ದಾಟಿ, ಮರುಭೂಮಿಯ ಬಿಸಿಗಾಳಿಯನ್ನು ಅನುಭವಿಸಿ, ಹಸಿವು-ದಾಹವನ್ನು ಬೆನ್ನಟ್ಟಿದ ಆ ಕಾಲದಲ್ಲಿ! ಈ ವಿಷಯವನ್ನು ಕೇಳಿದ ಸ್ವಹಾಬಿಗಳು ಯಾರೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಮರುಮಾತಾಡಿರಲಿಲ್ಲ. ಕಾರಣ ಅಷ್ಟಕ್ಕೂ ಅವರು ಹಬೀಬರೊಂದಿಗೆ ವಿಶ್ವಾಸವಿರಿಸಿದ್ದರು.

ಹಬೀಬ್ ಸ್ವಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮಾಡಿದ ಮಸೀದಿ, ಹಜ್ಜಿಗಾಗಿ ಇಹ್ರಾಮ್ ಕಟ್ಟಿದ ಸ್ಥಳಗಳನ್ನೆಲ್ಲ ಗೈಡ್ ತೋರಿಸಿಕೊಟ್ಟರು. ಬದ್‌ರ್ ಯುದ್ಧ ಭೂಮಿಗೆ ಹೋಗಬೇಕೆಂಬ ಬಯಕೆಯಿಂದ ಬದ್ರ್ ಭೂಮಿಗೆ ಕರೆದುಕೊಂಡು ಹೋಗುವರೇ ಎಂದು ಚಾಲಕನ ಬಳಿ ಕೇಳಿದರೂ ಅಲ್ಲಿ ಅಪಾಯ ಹೆಚ್ಚಾಗಿರುವುದರಿಂದ ಹೋಗಿ ಬರಲು ಅಸಾಧ್ಯ ಎಂದರು. ನಾವು ಅಲ್ಲಿಂದ ನೇರ ಮದೀನಾದತ್ತ ಯಾತ್ರೆಯಾದೆವು.

ಬದ್ರ್ ಭೂಮಿ

ಪ್ರಯಾಣ ಮುಂದುವರಿಯಿತು.
ಮದೀನಾದ ಹತ್ತಿರ ತಲುಪುವ ಸೂಚನೆಗಳು ಕಾಣತೊಡಗಿದವು. ದೂರವನ್ನು ಸೂಚಿಸುವ ಮೈಲಿಗಲ್ಲು ಕಂಡಾಗ ಮದೀನಾ ಹತ್ತಿರವಾಗುತ್ತ ಬರುತ್ತಿದೆ ಎಂದು ತಿಳಿಯಿತು. ಬಸ್ಸು ಚಲಿಸುತ್ತಿದ್ದಂತೆ ಮದೀನಾದ ದೂರ ಕಡಿಮೆಯಾಗುತ್ತಾ ನಾನೂ ಮದೀನಾದತ್ತ ಹತ್ತಿರವಾಗತೊಡಗಿದೆ.
“ಹೋ.. ಮದೀನಾ ತಲುಪಿತು”
ಈ ಹಿಂದೆ ಯಾತ್ರೆಗೈದು ಅನುಭವವಿದ್ದ ಹಿರಿಯ ವ್ಯಕ್ತಿಯೊಬ್ಬರು ಕೂಗಿ ಹೇಳಿದರು. ಪುಣ್ಯ ನಗರಿ ತಲುಪಿದ್ದೇ ತಡ ಹೃದಯದಲ್ಲಿ ಯಾರೋ ಬಂದು ಬಾಗಿಲು ಬಡಿದಂತೆ ಅನುಭವವಾಯಿತು.

ಒಮ್ಮೆ ಕಣ್ಣು ಹಾಯಿಸಿದರೆ ಕಾಣುವಷ್ಟು ಹತ್ತಿರದಲ್ಲಿತ್ತು ಈಗ ಮದೀನ. ಹೃದಯ ಬಡಿತ ಇನ್ನೂ ಹೆಚ್ಚಾಗತೊಡಗಿತು.
ಹಬೀಬರು ಎಲ್ಲವನ್ನೂ ತ್ಯಜಿಸಿ ನಡೆದ ಪುಣ್ಯ ನಗರವೊಂದು ನನ್ನನ್ನು ಕೈಬೀಸಿ ಕರೆಯುತ್ತಿದೆ. ನೈಜ ಮುಸ್ಲಿಮನಿಗೆ ಇದಕ್ಕೂ ಮಿಗಿಲಾದ ಬೇರೆ ಸಂತೋಷವಿದೆಯೇ! ನಾನು ಈಗ ಮದೀನಾದ ಮುಂದೆ ಹಾಯಾಗಿ ನಿಂತು ಹಸಿರು ಗುಂಬದ್ ನೋಡಿ ಉಸಿರೆಳೆದುಕೊಂಡೆ.

ಮದೀನಾದ ಹಸಿರು ಗುಂಬದ್ ಪ್ರೀತಿ ಮತ್ತು ಸುಗಂಧವನ್ನು ಸಂಕೇತಿಸುತ್ತದೆ. ಹಸಿರಿಗಿಂತ ಹರಿತವಾದ ಬೇರೆ ಬಣ್ಣವಿದೆಯೇ?
“ಬನ್ನಿ.. ನನ್ನ ನೆರಳಲ್ಲಿ ಕುಳಿತುಕೊಳ್ಳಿರಿ” ಎಂದು ಯಾವೊಬ್ಬನನ್ನೂ ಆ ಹಸಿರು ಗುಂಬದ್ ಕರೆದುಬಿಡುತ್ತದೆ. ನೋಡುತ್ತಿದ್ದಂತೆ ಪ್ರೀತಿಯಲ್ಲಿ ಪರವಶನಾಗಿಸುತ್ತದೆ ಆ ಹಸಿರ ಗುಂಬದ್. ಅದಕ್ಕೂ ಒಂದು ಮಾಂತ್ರಿಕ ಶಕ್ತಿಯಿದೆ. ಕಾರಣ ಆ ಗುಂಬದಿನ ಕೆಳಗೆ ಮಲಗಿರುವುದು ಪ್ರಿಯ ಹಬೀಬರಲ್ಲವೇ? ಗುಂಬದಿನ ಕಡೆಗಿರುವ ನೋಟ ಹೃದಯವನ್ನು ಆರ್ದ್ರವಾಗಿಸಿ ಸ್ತಬ್ಧವಾಗಿಸುತ್ತದೆ. ಆಕಾಶ ಭೂಮಿಗಳ ಒಡೆಯ ಭೂಮಿಯಲ್ಲಿ ತನ್ನ ಹಕ್ಕನ್ನು ಹೇಗೆ ಸ್ವಾಧೀನಗೊಳಿಸಿದ್ದಾನೋ ಹಾಗೆಯೇ ಹಸಿರು ಗುಂಬದ್ ಹಬೀಬರ ಸಾನಿಧ್ಯವನ್ನು ಎತ್ತಿ ತೋರಿಸುತ್ತದೆ.

ಮದೀನಾ ನಗರಿಗೆ ನೋವುಗಳನ್ನು ನಂದಿಸಿ, ಶಮನಗೊಳಿಸುವ ಶಕ್ತಿ ಇದೆ. ಒಬ್ಬನಿಗೆ ಮದೀನಾ ತಲುಪಿಯೂ ಮನಸು ತಿಳಿಯಾಗದಿದ್ದರೆ ಹಸಿರುಮಯವಾಗದಿದ್ದರೆ ಇನ್ನೆಲ್ಲಿ ಆತ ಬದಲಾವಣೆಯ ಅನುಭವ ಪಡೆಯುವುದು? ಮತ್ತೆಲ್ಲಿಗೆ ಬದಲಾವಣೆಗಾಗಿ ಹೊರಡುವುದು. ಒಬ್ಬ ಸಾಮಾನ್ಯ ಮನುಷ್ಯನನ್ನು ಸರಿದಾರಿಯತ್ತ ಕೊಂಡೊಯ್ಯುವ ಗಾಂಭೀರ್ಯತೆಯು ಮದೀನಾ ಭೂಮಿಗಿದೆ ಎಂದು ಪ್ರಥಮ ನೋಟದಲ್ಲೇ ತಿಳಿಯುತ್ತದೆ. ಮದೀನಾದ ವಾತಾವರಣದಲ್ಲೇ ಬದಲಾವಣೆಯ ತೇವಾಂಶವಿದೆ. ಫಲವತ್ತತೆಯ ಮಣ್ಣ ಮೇಲೆ ನಡೆದಾಡುವವನಿಗೆ ಬದಲಾವಣೆಯನ್ನು ಆ ಮಣ್ಣೇ ನೀಡುತ್ತದೆ.

ಕಾಯ್ದಿರಿಸಿದ ಕೊಠಡಿಗೆ ತಲುಪಿದ ಅಮೀರ್ ಊಟಕ್ಕಾಗಿ ಆಜ್ಞೆ ಮಾಡಿದ. ಹಸಿವನ್ನು ಹೋಗಲಾಡಿಸುವ ಯಾವುದೋ ಕೂಗು ಒಳಗಿನಿಂದ ಚುರುಗುಟ್ಟುತ್ತಿತ್ತು. ಮದೀನಾದಲ್ಲಿರುವ ಹಸಿವು ಹೊಟ್ಟೆಗೆ ಸೀಮಿತವಾದದ್ದು ಅಲ್ಲ ಅಲ್ಲವೆ!
“ನಾವು ಮಸೀದಿಗೆ ಹೋಗೋಣ”
ಎಲ್ಲರೂ ಊಟ ಬಿಟ್ಟು ಗುಂಬದಿನತ್ತ ನಡೆದೆವು. ಈ ಮೊದಲು ಮದೀನಾಕ್ಕೆ ಹಲವು ಬಾರಿ ಭೇಟಿ ನೀಡಿದ್ದ ನಿಯಾಝನಿಗೆ ಮದೀನಾ ಬೀದಿಗಳ ಪರಿಚಯವಿತ್ತು. ಮಸೀದಿಯ ಕಡೆಗೆ ನಾವು ಅಕ್ಷರಶಃ ಓಡುತ್ತಿದ್ದೆವು. ಯಾರನ್ನೂ ತನ್ನ ಕೈಯೊಳಗಾಗಿಸುವ ಶಕ್ತಿ ಮದೀನಾಕ್ಕೆ ಇರುವುದಂತೂ ಖಚಿತ. ಅಲ್ಲದೆ ಇದೇನು ಈ ರೀತಿಯ ಒಂದು ಓಟ! ರಸ್ತೆ ಮಧ್ಯೆಯಿರುವ ಸಿಗ್ನಲ್‌ಗಳನ್ನು ನೋಡುವುದನ್ನೂ ಮರೆತುಬಿಟ್ಟು ಓಡುತ್ತಿದ್ದೆವು.
ನಾವೀಗ ಹೂವಿನ ಉದ್ಯಾನದಂತಿರುವ ಮದೀನಾದ ಅಂಗಳಕ್ಕೆ ತಲುಪಿದೆವು. ಹಸಿರು ಗುಂಬದ್ ಕಂಡದ್ದೇ ತಡ ಕಾಲುಗಳು ನಿಶ್ಚಲವಾದವು. ವುಝೂ (ಅಂಗಶುದ್ಧಿ) ಮಾಡಿ ನಮಾಝ್ ಮುಗಿಸಿ ‘ರೌಝಾ ಶರೀಫ್’ (ಪುಣ್ಯ ಸಮಾಧಿ) ನತ್ತ ಹೆಜ್ಜೆಯಿಟ್ಟೆ. ಸ್ವರ್ಗದ ಭಾಗವೆಂದು ವಿಶೇಷಿಸಲ್ಪಟ್ಟ ಏಕೈಕ ಸ್ಥಳ!
ಸೊಗಸಾಗಿ ಅಲಂಕರಿಸಿದ ಸಾಲುಗಳ ಮೂಲಕ ಹೊರಬಂದು ‘ಹುಜ್ಜತುಶ್ಶರೀಫ’ ಎದುರುಗಡೆ ಬಂದು ತಲುಪಿದೆವು. ನನ್ನ ಮರಣದ ನಂತರ ನನ್ನನ್ನು ನೋಡಲು ಬರುವವರು ನನ್ನ ಜೀವಿತಾವಧಿಯಲ್ಲಿ ನನ್ನ ಬಳಿ ಬಂದವರಂತೆ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದರಲ್ಲವೆ; ಮೊದಲ ಬಾರಿ ಹಬೀಬರೊಂದಿಗೆ ಮುಖಾಮುಖಿಯಾಗಿ ಸಂಭಾಷಣೆ ನಡೆಸುವಾಗಿನ ಅನುಭೂತಿ ಅನನ್ಯವಾದುದು. ನನ್ನನ್ನು ಭೇಟಿಯಾದ ನಿನಗೆ ಅಲ್ಲಾಹನ ರಕ್ಷೆ ಇರಲಿ ಎಂದು ಪ್ರಾರ್ಥಿಸಿರಬಹುದಲ್ಲವೇ? ಪ್ರಾರ್ಥನೆಗಿಂತ ಮಿಗಿಲಾದ ವಸ್ತು ವಿಶ್ವಾಸಿಯ ಪಾಲಿಗೆ ಬೇರೇನಿದೆ?
ಜೀವನದ ಮೇಲೆ ನಿರೀಕ್ಷೆಗಳು ಹಾಗೂ ಸ್ವರ್ಗ ಪ್ರವೇಶಿಸಬೇಕೆಂಬ ಆಸಕ್ತಿಗಳನ್ನು ಕೈಬಿಡಲು ಸಾಧ್ಯವಾಗುವುದು ಹೇಗೆ? ನಿರೀಕ್ಷೆಗಳ ನಗರವೆಂದು ಮದೀನಾವನ್ನು ಕರೆಯುವುದು ಬರೀ ಆಲಂಕಾರಿಕ ಪ್ರಯೋಗದಿಂದಲ್ಲ. ಮಕ್ಕಾದಿಂದ ಪ್ರವಾದಿಯರನ್ನು ಹಾಗೂ ಸ್ವಹಾಬಿಗಳನ್ನು ಓಡಿಸಿದಾಗ ಅವರಿಗೆ ಅಭಯ ನೀಡಿದ ನಗರಕ್ಕೆ ಬೆನ್ನು ತೋರಿಸಿ ನಿಲ್ಲಲು ಸಾಧ್ಯವಾಗುವುದಾದರೂ ಹೇಗೆ? ಮದೀನಾದ ಮೇಲಿರುವ ನಿರೀಕ್ಷೆಗಳು ಸುಳ್ಳಾಗದು. ನಿರೀಕ್ಷೆಗೆ ತಕ್ಕ ಫಲವುಣ್ಣುವುದು ಖಂಡಿತ.

ಮಗ್ರಿಬ್ ನಮಾಝಿನ ನಂತರ ಹೊರಬಂದು ಹಬೀಬರ ಮಸೀದಿಯನ್ನು ನೋಡಿ ಕಣ್ಣು ತುಂಬಿಕೊಂಡೆ. ಹೊರಗೆ ಬರುವಾಗೆಲ್ಲಾ ಒಳಗೆ ಹೋಗಬೇಕೆಂಬ ಭಾವನೆ. ಚಹಾ ಕುಡಿದು ಹೊರಬಂದು ರೌಝಾದ ಬಳಿ ಕುಳಿತುಕೊಂಡೆ. ಜಗತ್ತಿನ ನಾನಾ ಭಾಗದಿಂದ ಬಂದ ಜನರು ರೌಝಾದ ಸುತ್ತಲೂ ಕುಳಿತುಕೊಂಡಿದ್ದರು. ಅವರಿಗೆಲ್ಲರಿಗೂ ಒಂದೇ ಭಾವ. ಅವರ ಕಣ್ಣಂಚಲಿ ತೂಗಾಡುವ ನಿರೀಕ್ಷೆಗಳಿಗೆ ಉತ್ತರ ಕೊಡಲು ಮದೀನಾ ನಗರಿಗಲ್ಲದೆ ಬೇರೆಯಾವ ನಗರಿಗೂ ಸಾಧ್ಯವಾಗದು. ನಾನು ಬೆಳಗಿನವರೆಗೂ ಮದೀನಾದ ಬಳಿ ಕುಳಿತೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಮಾಜು ಮಾಡಿದ ಮಿಹ್ರಾಬ್, ಖುತುಬಾ ನಿರ್ವಹಿಸಿದ ಮಿಂಬರ್, ನಮಾಝಿನ ಬಳಿಕ ಕುಳಿತುಕೊಳ್ಳುತ್ತಿದ್ದ ಸ್ಥಳ, ಬೇರೆಯಾರೂ ಅಭಯವಿಲ್ಲದ ಸಮಯದಲ್ಲಿ ಹಬೀಬರು ಅಭಯ ನೀಡಿದ ‘ಸುಫ್ಫಾ’; ಇವೆಲ್ಲವನ್ನೂ ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆ.
‘ರೌಝಾ ಶರೀಫ್’ ಕಂಡಾಗ ಹಬೀಬರ ಕಾಲದಲ್ಲಿನ ಮದೀನಾ ಮಸೀದಿಯ ಚಿತ್ರಣವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ನೋಡಿದೆ. ಮನೋ ಚಿತ್ರ ಬಿಡಿಸಿದರೂ ಅದು ಪೂರ್ತಿಯಾಗದೆ ಒಂದು ಅಪೂರ್ಣ ಚಿತ್ರವಾಗಿ ಇಂದಿಗೂ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿದೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಅವತೀರ್ಣವಾದ ಗ್ರಂಥ ಖುರ್-ಆನ್. ಅಮ್ಮ ಹಬೀಬರ ಸನ್ನಿಧಿಯಲ್ಲಿ ಕುಳಿತು ಖುರ್-ಆನ್ ಪೂರ್ತಿ ಓದಿ ಮುಗಿಸಬೇಕೆಂದು ವಸಿಯ್ಯತ್ (ನಿರ್ದೇಶನ) ಮಾಡಿದ್ದರು. ಅಮ್ಮ ಹೇಳಿದುದರ ಗಂಭೀರತೆ ಅರಿವಾದದ್ದು ರೌಝಾ ಶರೀಫಿನ ಮಿಹ್‌ರಾಬ್ ಬಳಿ ಒರಗಿ ಕೂತು ಓದುವ ಸಂದರ್ಭದಲ್ಲಾಗಿತ್ತು. ಕಾರಣ, ಜಿಬ್ರೀಲ್ (ಅಲೈಹಿಸ್ಸಲಾಮ್) ಖುರ್-ಆನ್ ಓದಿ ಕೊಟ್ಟದ್ದು ಇದೇ ಪವಿತ್ರ ಜಾಗದಲ್ಲಿ ಅಲ್ಲವೆ? ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಖುರ್-ಆನ್ ಓದಿದ ಶಬ್ದವು ಇಂದಿಗೂ ಅಂತರಿಕ್ಷದಲ್ಲಿ ಹಸಿರಾಗಿರಬಹುದಲ್ಲವೇ?

ಗುರುವಾರ ಅಸರ್ ನಮಾಝಿನ ಬಳಿಕ ರೌಝಾ ಶರೀಫಿನ ಬಳಿ ನಾವೆಲ್ಲರೂ ಕುಳಿತುಕೊಂಡಿದ್ದೆವು. ಮದೀನಾ ನಿವಾಸಿಗಳಾದ ಅರಬಿಗಳು ಸುತ್ತಲೂ ಕುಳಿತಿದ್ದರು. ಸೆಕ್ಯುರಿಟಿ ಹಾಗೂ ಪೋಲೀಸರ ಹಾವ-ಭಾವವನ್ನು ಕಂಡು ಅವರು ಅರಬಿಗಳೆಂದು ತಿಳಿಯಿತು. ದೊಡ್ಡ ಪಾತ್ರೆಯಲ್ಲಿ ಚಹಾ ಹಾಗೂ ಖರ್ಜೂರ ನೀಡಲಾಯಿತು. ಉಪಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟರು. ಬಕ್ತುರ್ ಎಂಬ ವ್ಯಕ್ತಿ ಇವೆಲ್ಲದರ ನೇತೃತ್ವ ವಹಿಸಿ ನಿರ್ವಹಣೆ ಮಾಡುತ್ತಿದ್ದ. ಎಲ್ಲರಿಗೂ ಉಪಹಾರ ತಲುಪುವಂತೆ ನೋಡಿಕೊಳ್ಳುತ್ತಿದ್ದ. ರೊಟ್ಟಿ ಹಾಗೂ ಸ್ಯಾಂಡ್‌ವಿಚ್ ವಿತರಿಸಿದರು. ಮದೀನಾದ ಅರಬಿಗಳು ಅನ್ಸಾರಿಗಳ ಆತಿಥ್ಯದ ಮರ್ಯಾದೆಯನ್ನು ನೆನಪಿಸಿಕೊಟ್ಟರು.

ಇಶಾ (ರಾತ್ರಿಯ) ನಮಾಝಿನ ನಂತರ ಮಸೀದಿಯ ಸುತ್ತ ನಡೆದಾಡಿದೆ. ಹಲವು ಕಡೆಗಳಲ್ಲಿ ಸಣ್ಣಸಣ್ಣ ಗುಂಪುಗಳಾಗಿ ತಸ್ಬೀಹ್ ಹೇಳುವವರು, ದುಆ ಮಾಡುವವರು, ದರ್ಸ್ (ಅಧ್ಯಾಪನೆ) ನಡೆಸಿಕೊಡುವವರನ್ನು ಕಂಡೆವು. ನಡೆದಾಡುವಾಗ ಯುವಕರ ಒಂದು ಸಂಘವು ಕುಳಿತುಕೊಂಡು ಸ್ವಲಾತ್ ಹೇಳುವುದನ್ನು ಕೇಳಿಸಿ ನಾವು ಅವರೊಂದಿಗೆ ಮಾತಿಗಿಳಿದೆವು. ಸ್ವಲಾತ್ ಹೇಳುವುದರ ಮಧ್ಯೆ ನಮಗಾಗಿ ನೀರು ಹಾಗೂ ಖರ್ಜೂರವನ್ನು ತಿನ್ನಲು ಕೊಟ್ಟರು. ಅವರೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ವೃತ್ತವನ್ನು ದೊಡ್ಡದಾಗಿಸಿದರು. ನಂತರ ಒಂದು ದೀರ್ಘ ಪ್ರಾರ್ಥನೆ. ಎಲ್ಲರ ಕಣ್ಣಿನಂಚಲ್ಲಿ ಕಣ್ಣೀರು ಹರಿದು ನೆಲವನ್ನು ಒದ್ದೆಮಾಡುತ್ತಿತ್ತು. ಅವರು ತುರ್ಕಿಯಿಂದ ಜರ್ಮನಿಗೆ ವಲಸೆ ಹೋದ ನಖ್ಷಬಂದೀ ತ್ವರೀಖತಿನ (ಒಂದು ಸೂಫೀ ಪಂಥ) ವ್ಯಕ್ತಿಗಳೆಂದು ಅವರೊಂದಿಗಿನ ಮಾತುಕತೆಯಿಂದ ತಿಳಿದುಕೊಂಡೆ.

ಮರುದಿನ ಶುಕ್ರವಾರ. ಮದೀನಾಗೆ ವಿದಾಯ ಹೇಳಿ ಹೋಗಬೇಕಾದ ಕೊನೆಯ ದಿನ. ಸುಬಹ್ (ಪ್ರಭಾತ) ನಮಾಝಿಗೆ ‘ಸುಫ್ಫ’ದ ಬಳಿಯಲ್ಲಿ (ಪ್ರವಾದಿಗಳ ಕಾಲದಲ್ಲಿ ವಿದ್ಯಾರ್ಜನೆಯ ಉದ್ದೇಶದಿಂದ ಮಾತ್ರ ವಿದ್ಯಾದಾಹಿಗಳು ತಂಗುತ್ತಿದ್ದ ಸ್ಥಳ) ಸುಜೂದ್ ಬೀಳಲು ಸ್ಥಳವಕಾಶ ಸಿಕ್ಕಿತು.
ಹಗಲುರಾತ್ರಿ ಎನ್ನದೆ ಹಬೀಬರು ಮನೆಯಿಂದ ಹೊರಡುವುದನ್ನು ಸುಫ್ಫಾದಲ್ಲಿ ಕುಳಿತು ಕಾಯುತ್ತಿದ್ದ ಅನುಯಾಯಿಗಳ ಚಿತ್ರಣವನ್ನು ಮನಸ್ಸಿಗೆ ತಂದುಕೊಂಡೆ. ಅದು ಕೇವಲ ಒಂದು ಸ್ಥಳವಲ್ಲ; ಒಂದು ಸಮುದಾಯದ ಜತೆ, ಕಾಲದ ಜೊತೆ ಸಂಭಾಷಣೆಗೈದ ಸ್ಥಳವಾಗಿತ್ತು.

ಶುಕ್ರವಾರದ ಜುಮುಆ ನಮಾಝಿನ ನಂತರ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಂ ಹೇಳಿ ರೂಮಿಗೆ ಹಿಂದಿರುಗಬೇಕು ಎಂದು ಗೈಡ್ ಸೂಚನೆ ನೀಡಿದರು. ‘ಇದನ್ನು ಮದೀನಾದ ಕೊನೆಯ ಯಾತ್ರೆಯಾಗಿ ಮಾಡಬೇಡ’ ಎಂದೇ ಎಲ್ಲರೂ ಮನದಾಳದಿಂದ ಪ್ರಾರ್ಥನೆ ಮಾಡುವ ಸಮಯವದು. ಪ್ರಾರ್ಥನೆಯ ನಂತರ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಮು ಹೇಳಲು ರೌಝಾದ ಕಡೆ ಮುಖ ಮಾಡಿದೆವು. ಶುಕ್ರವಾರ ಬಿಡುವಿಲ್ಲದ ದಿನ. ಓರ್ವ ಸತ್ಯ ವಿಶ್ವಾಸಿ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಹೇಗೆ ವಿದಾಯ ಹೇಳುವುದು!? ‘ಉಮ್ಮತ್’ಗಾಗಿ ಸದಾ ಸಮಯವು ನೋಡುತ್ತಿರುವ ಪ್ರವಾದಿಯ ಹೊರತಾಗಿ ಸತ್ಯವಿಶ್ವಾಸಿಗೆ ಬೇರೆ ನಂಬಿಕೆಯುಳ್ಳ ವ್ಯಕ್ತಿಗಳಿದ್ದಾರೆಯೆ!?

ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸಲಾಮ್ ಹೇಳಿ ಹೊರಬಂದೆವು. ಮತ್ತೊಮ್ಮೆ ಹಸಿರು ಗುಂಬದನ್ನು ಸಂದರ್ಶಿಸಿ ಕಣ್ಣು ತುಂಬಿಕೊಂಡೆವು. ಪುನಃ ಬರದೇ ಇರಬೇಡಿ ಎಂದು ಅದು ಮಂದಸ್ಮಿತವಾಗಿ ನಮ್ಮೊಂದಿಗೆ ಹೇಳತ್ತಲೇ ಇತ್ತು. ತನ್ನನ್ನು ನೋಡಲು ಬರುವ ವಿಶ್ವಾಸಿಗಳನ್ನು ಸ್ವೀಕರಿಸಿದಾಗ ಮದೀನಾದ ಮನಸ್ಸು ಸಂತೋಷದಿಂದ ತುಂಬಿತುಳುಕುತ್ತದೆ. ಓರ್ವ ಸತ್ಯವಿಶ್ವಾಸಿಯು ಮದೀನಾಗೆ ವಿದಾಯ ಹೇಳುವಾಗ ಮದೀನಾದ‌ ಮನಸ್ಸು ಕೂಡ ಕಣ್ಣೀರಿಡುತ್ತದೆ. ಮದೀನಾದಲ್ಲಿ ಕಷ್ಟ-ಕಾರ್ಪಣ್ಯಗಳನ್ನು ಓರ್ವ ಸತ್ಯ ವಿಶ್ವಾಸಿ ತೋರಿಕೊಂಡರೆ ಹಬೀಬ್ ﷺರು ಆತನಿಗೆ ಕ್ಷಮಿಸುವ ಭರವಸೆಯನ್ನಿಡುತ್ತಾರೆ. ಸತ್ಯ ವಿಶ್ವಾಸಿಯ ಹೃದಯವು ಮದೀನಾಕ್ಕೆ ಮರಳುತ್ತದೆಯೆಂದು ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವರುಷಗಳ ಹಿಂದೆಯೇ ಸೂಚನೆಯನ್ನು ನೀಡಿದ್ದಾರೆ. ತಿರುಗಿ ಬರದ ಒಂದು ಯಾತ್ರೆಯನ್ನು ಒಡೆಯನು ಯಾವಾಗ ಕರುಣಿಸುವನೋ?

ಮದೀನಾ.. ವಿಶ್ವದ ಇತರೆ ಭಾಗದಲ್ಲಿದ್ದರೆ ಎಂದು ಸೋಜಿಗವೆನಿಸುತ್ತದೆ. ಮದೀನಾ ಎಲ್ಲಿಯಾದರೂ ಇರಬಹುದಾದ ನಗರವೇನು!? ಹಸಿರಿನ ಆಳ ಅಗಲವನ್ನು ಮನವರಿಕೆ ಮಾಡಲು ಮರುಭೂಮಿಯನ್ನು ತಲುಪಲು ಬೇರೆ ಏನಾದರೂ ಇದೆಯೇ.. ಮದೀನಾದ ಮೃದುಲತೆ ಮತ್ತು ಭಾವಪರವಶತೆ ಎಷ್ಟು ಆಳವಾಗಿದೆ ಎಂಬುವುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಮದೀನಾದಿಂದ ಹೊರಬರಬೇಕು. ಆಗ ಬೇರೆ ಯಾವ ನಗರವೂ ​​ಮದೀನಾ ಆಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪವಿತ್ರ ಪ್ರವಾದಿಯ ನಗರವನ್ನು ತೊರೆದು ಬರುವಾಗಿನ ನೋವು, ವೇದನೆ ದಾರಿಯುದ್ದಕ್ಕೂ ಕಾಡುತ್ತಿತ್ತು.


(ಡಾ. ನುಐಮಾನ್’ರವರು ಪ್ರಸ್ತುತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜರ್ಮನಿಯ ಫ್ರೈಬರ್ಗ್ ಯುನಿವರ್ಸಿಟಿಯಲ್ಲಿ ಸಂಶೋಧಕರಾಗಿದ್ದರು.ಮಲೇಷ್ಯಾದ ಕರ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದರು.ಯುವ ಚಿಂತಕರು, ಸಂಶೋಧನೆಗಾಗಿ ಹಲವು ರಾಷ್ಟ್ರಗಳಿಗೆ ಭೇಟಿನೀಡಿದ ಅನುಭವವೂ ಇವರಿಗಿದೆ.)

ಮಲಯಾಳಂ ಮೂಲ: ಡಾ. ನುಐಮಾನ್
ಭಾವಾನುವಾದ: ಸಲೀಂ ಇರುವಂಬಳ್ಳ

ಆ ನಾಯಕನನ್ನು ಹುಡುಕು

ನೆಲೆಯ ಆಚೆಗೊಂದು ನೆಲೆಯ ಹುಡುಕು
ಕಿನಾರೆ ಸಿಕ್ಕಿದೆಯಾದರೆ ಸಮುದ್ರವನ್ನು ಹುಡುಕು

ಕಲ್ಲೇಟಿಗೆ ಒಡೆದುಹೋಗದ ಶೀಷೆಗಳಿಲ್ಲ
ಕಲ್ಲೇ ಒಡೆದುಹೋಗುವಂತಹ ಶೀಷೆಯನ್ನು ಹುಡುಕು

ವರುಷಗಳೇ ಉರುಳಿಹೋದವು ನಿನ್ನ ಸುಜೂದಿನಲ್ಲಿ
ನಿನ್ನ ಬದುಕನ್ನೇ ಬದಲಿಸುವಂತಹಾ ಸುಜೂದನ್ನು ಹುಡುಕು

ನಿನ್ನ ಪಥಿಕನ ಕೈಯ್ಯಲ್ಲಿ ನಿನ್ನ ಅಸ್ಮಿತೆಯೇ ಕಳೆದುಹೋಯಿತು
ನಿನ್ನ ಅಸ್ಮಿತೆಯ ರಕ್ಷಿಸುವಂತಹ ಆ ಪಥವನ್ನು ಹುಡುಕು

ಹಮ್ಮುಬಿಮ್ಮಿನ ಬೆಂಕಿಯಲ್ಲಿ ನರಳದವರಿಲ್ಲ ಇಲ್ಲಿ
ಈ ಬೆಂಕಿಯನ್ನು ನಂದಿಸುವಂತಹ ನೀರನ್ನು ಹುಡುಕು

ತನ್ನ ಗುಲಾಮನನ್ನು ಒಂಟೆಯ ಮೇಲೆ ಕುಳ್ಳಿರಿಸಿ
ತಾ ಬರಿಗಾಲಿನಲ್ಲಿ ನಡೆದಂತಹ ಆ ನಾಯಕನನ್ನು ಹುಡುಕು!

ಉರ್ದು ಮೂಲ: ಅಲ್ಲಮಾ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

ಸಾವಿನೊಡನೊಂದು ಮುಖಾಮುಖಿ

ಹೊಳೆವ ಸೂರ್ಯನು
ಮರೆಯಾದ, ಪರದೆಯೊಳಗಿಂದ
ಇಣುಕುತಿಹಳು ನಿಶೆಯು
ಭುವಿಯ ಹೆಗಲಿನ ಮೇಲೆ
ಹರಡುತಿದೆ ಇರುಳ ಕೇಶರಾಶಿ

ಅದಾವ ದುಃಖವನೆದುರಿಸಲೋ
ಈ ಕರಿಯ ಧಿರಿಸು
ಸೂರ್ಯನ ಸಾವಿನ ಸೂತಕಕೆ
ಪ್ರಕೃತಿಯ ಸಭೆಯೇ?

ಮಾಯಾ ತುಟಿಗಳ ಮೇಲೊಂದು
ಬಾನು ಪಠಿಸುತಿದೆ ಗುಪ್ತಮಂತ್ರ
ಎಚ್ಚೆತ್ತ ಕಂಗಳನು ಕಾಯುತಿಹ
ನಿಶೆಯ ಜಾದೂಗಾರ

ನೀರವತೆಯ ನದಿಯೊಳಗೆ
ಮುಳುಗಿಹುದು ಭಾವ ಪ್ರವಾಹಗಳು
ಅದೋ ಕೇಳಿ ಬರುತಿದೆ ಎಲ್ಲಿಂದಲೋ
ಸದಾ ಮಿಡಿಯುತಿಹ ಸದ್ದುಗಳು!

ಎದೆಯ ವಿವಶತೆಗಳಿಗೆ
ವಶವಾಗುತಿದೆ ಈ ಜಗವು
ಸೆಳೆದು ತಂದಿದೆ ಎನ್ನ
ಜಗದ ಜಂಜಡಗಳಿಂದ ಬಹುದೂರ!

ದುಃಖ ಸಾದೃಶ್ಯಗಳ
ಮೂಕ ಪ್ರೇಕ್ಷಕನಾಗಿರುವೆ
ಏಕಾಂತತೆಯ ಮುಸುಕಿನೊಳಗೆ
ಮಲಗಿರುವವರ ಒಡನಾಡಿಯಾಗಿರುವೆ!

ಓ ನನ್ನ ವಿವಶತೆಯೆ ಸ್ವಲ್ಪ
ವಿರಮಿಸಗೊಡು ನನ್ನ ಇಲ್ಲಿ
ಈ ಹೊಸ ಜಾಗವನ್ನೊಮ್ಮೆ ತೊಯ್ದು
ಬಿಡುವೆ ನಾಲ್ಕು ಹನಿ ಕಣ್ಣೀರಿನಲ್ಲಿ!

ಕತ್ತಲ ಲೋಕಕ್ಕೆ ಜಾರಿರುವವರೇ
ಓ ಎಲ್ಲಿರುವಿರಿ ನೀವು
ನೀವಿರುವ ಆ ಲೋಕದ ಬಗ್ಗೆ
ನನಗೊಂದಿಷ್ಟು ತಿಳಿಸಿಕೊಡಿ!

ಅದೊಂದು ಸಂತಸದ ಪರದೆಯೊಳಗೆ
ಅಡಗಿರುವ ಅಚ್ಚರಿಯೇ
ಜೀವ ಜಗತ್ತಿನ ಕೊನೆಮೊದಲಿಲ್ಲದ
ಹೋರಾಟದ ನಾಡೇ?

ಅಲ್ಲೂ ಕೂಡಾ ಮನುಷ್ಯನು
ದುಃಖದ ಚಿಪ್ಪಿನೊಳಗಿಹನೆ
ಆ ಪರಲೋಕದಲ್ಲಿಯೂ
ದಿಕ್ಕೆಟ್ಟ ಹೃದಯದಲ್ಲಿಹನೆ?

ಪ್ರೇಮದ ಮೊಂಬತ್ತಿಗೆ ಬೀಳುವ ಪತಂಗ
ಅಲ್ಲೂ ಸುಟ್ಟುಹೋಗಿದೆಯೇ
ಆ ಹೂವು ಮತ್ತು ಮೈನಾ ಹಕ್ಕಿಯ ಕತೆ
ಆ ತೋಟದಲ್ಲಿಯೂ ಕೇಳಿ ಬರುತಿದೆಯೇ?

ನೂಲಿನೆಳೆಯ ಅಂತರದಲ್ಲಿ
ಹರಿಯುವುದು ಹೃದಯ
ಕವಿಯ ನವಗಾನದಲಿ ಅಲ್ಲೂ
ಸಂಭ್ರಮಿಸುವುದೆ ಎದೆಯು?

ದುಃಖ ಸಂಗಾತಿಗಳೇ ಇಲ್ಲಿ
ಜೀವದೊಡನಾಡಿಗಳು
ಆ ತೋಟದಲ್ಲಿಯೂ ಈ
ಸಂಬಂಧಿಕರೆಂಬ ಮುಳ್ಳುಗಳಿವೆಯೇ?

ಒಂದು ರೊಟ್ಟಿಯ ಜೊತೆಗೆ
ನೂರಾರು ಉತ್ಪಾತಗಳಿಹುದಿಲ್ಲಿ
ಆ ಲೋಕದಲ್ಲಾದರೂ ಈ ಜೀವಕ್ಕೆ
ಜಂಜಡಗಳಿಂದ ಮುಕ್ತಿಯಿದೆಯೇ?

ಅಲ್ಲೂ ಮಿಂಚುಗಳಿವೆಯೇ
ರೈತನೂ, ಫಸಲುಗಳಿವೆಯೇ
ಸಾಗುತಿರುವ ಕಾರವಾನಗಳು
ದರೋಡೆಯಾಗುವ ಭಯವಿದೆಯೇ?

ಗೂಡು ಕಟ್ಟಲೆಂದು ಅಲ್ಲೂ
ಕಡ್ಡಿಗಳ ಆಯುತಿಹವೇ ಹಕ್ಕಿಗಳು
ಮನೆಕಟ್ಟಲೆಂದು ಇಟ್ಟಿಗೆ
ಮಣ್ಣುಗಳಿಗಾಗಿ ಪರದಾಡಲಿಹುದೇ?

ಅಲ್ಲೂ ಕೂಡಾ ಈ ಮನುಷ್ಯ
ತನ್ನ ನಿಜರೂಪವನು ಮರೆತಿಹನೇ
ದೇಶ, ಸಂಪ್ರದಾಯಗಳ
ತಾರತಮ್ಯದ ಹಿಂದೆ ಬಿದ್ದಿಹನೇ?

ಅಲ್ಲಿಯೂ ಕೋಗಿಲೆಯ ಆರ್ತನಾದಕ್ಕೆ
ಹೂದೋಟಗಳು ಮರುಗುವುದಿಲ್ಲವೇನು?
ಈ ಲೋಕದ ಹಾಗೆ ಅಲ್ಲಿಯೂ ಕೂಡ
ಮಿಡಿವ ಹೃದಯಗಳು ಇರುವುದಿಲ್ಲವೇನು?

ಆ ಸ್ವರ್ಗವೊಂದು ಹೂದೋಟವೇ
ವಿಶ್ರಮಿಸಲು ಕಟ್ಟಿರುವ ಮನೆಯೇ?
ಅಥವಾ ಪರದೆಯಿಲ್ಲದ
ನಿತ್ಯ ಸುಂದರಿಯ ಮೊಗವೇ?

ನರಕವೆಂದರೆ ಬರೀ
ಪಾಪಗಳ ಜ್ವಲಿಸುತಿಹ ಸ್ಥಳವೇ
ಅಥವಾ ಬೆಂಕಿಯೊಳಗೊಂದು
ಶಿಸ್ತನ್ನು ರೂಪಿಸುವ ಗುರಿಯೇ?

ನಡೆವ ವೇಗಕೆ ರೆಕ್ಕೆ ನೀಡಿದ
ಆ ಲೋಕದಲ್ಲಿ
ನಿಂತ ಜೀವಕೆ ಮರಣವೆಂದರು
ಏಕೆ ಈ ಲೋಕದಲ್ಲಿ

ಬದುಕು ಶಮನಗೊಳಿಸುವುದು
ಎದೆಯ ಗಾಯಗಳನಿಲ್ಲಿ
ಇಲ್ಲಿಯಂತೆ ಹರಿವ ಜ್ಞಾನಕೆ
ತಡೆಯೊಡ್ಡಿಹರೆ ಅಲ್ಲಿ?

ವಿರಹ ಬೇಗೆಯಲಿ
ಆತ್ಮ ವಿರಮಿಸುತಿಹುದೆ ಅಲ್ಲಿ
ಮೋಹಜಾಲಕೆ ಬಿದ್ದವನು
ಪಾಠ ಕಲಿಯುವನೆ ಅಲ್ಲಿ?

ಆ ಜಾಗವೂ ಕಗ್ಗತ್ತಲೆಯಲ್ಲಿ
ಮುಳುಗಿಹೋಗಿಹುದೇ
ಪ್ರೇಮದಾ ಬೆಳಕು
ಅಲ್ಲೂ ಜಗಮಗಿಸುತಿಹುದೇ?

ನೀನಾದರೂ ಹೇಳು ಆ ಸತ್ಯವನ್ನು
ಈ ದುಂಡನೆಯ ಭೂವೃತ್ತದಲ್ಲಿ
ಮರಣವೆಂದರೆ ಮನುಷ್ಯನ
ಹೃದಯವನು ಚುಚ್ಚುತಿಹ ಮುಳ್ಳಾಗಿಹುದೆ?

ಉರ್ದು ಮೂಲ: ಅಲ್ಲಾಮ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

ಶಬ್ – ಏ – ಮೀರಾಜ್

ಆಗಸದಲ್ಲಿ ಉದಿಸುತಿಹ
ಸಂಜೆ ನಕ್ಷತ್ರದ ಕರೆಯಿದು
ಯಾವ ಮುಂಜಾವು
ಶರಣಾಗಿಹುದೋ ಆ ರಾತ್ರಿಯಿದು!

ದೈರ್ಯವಿದ್ದವನಿಗೆ ಇಹುದಿಲ್ಲಿ
ಸ್ವರ್ಗ ಗೇಣಿನಷ್ಟೇ ದೂರದಲ್ಲಿ
ಕೂಗಿ ಹೇಳುತಿದೆ ಅದೋ
ಮೀರಾಜಿನ ರಾತ್ರಿ ಮುಸಲ್ಮಾನನಲ್ಲಿ!

ಮೂಲ: ಅಲ್ಲಾಮ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

ಅಲೆ

ಈ ತಾಳ್ಮೆಗೆಟ್ಟ ಎದೆಯು
ಸದಾ ನನ್ನ ಪ್ರಕ್ಷುಬ್ಧಗೊಳಿಸಿದೆ
ಬದುಕಿನ ಅಸ್ತಿತ್ವವೇ
ಪಾದರಸದಂತೆ ವಿಚಲಿತಗೊಂಡಿದೆ!

ನಾನೊಂದು ಅಲೆಯಾಗಿರುವೆ
ಸಮುದ್ರವೇ ನನ್ನ ಗಮ್ಯವಾಗಿದೆ
ಈ ಸುತ್ತಿ ಸುಳಿಯುವ ತರಂಗಗಳೇ
ನನ್ನ ಬಂಧಿಸಲಾರದೆ ಹೋಗಿವೆ!

ಜಲಾದ್ರಿಯಲ್ಲಿ ತರಂಗರೂಪಿಯಾಗಿ
ನಡೆಯುತ್ತಿರುವೆ ನಾನು
ಧಾವಣಿಯು ಮೀನ್ಗಾರನ ಬಲೆಗೆ
ಸಿಲುಕದಂತೆ ಸಾಗುತಿಹೆ ನಾನು!

ಪೂರ್ಣ ಚಂದಿರನೆಡೆಗೆ ಉನ್ಮತ್ತೆಯಾಗಿ
ಹಾರುತಿಹೆ ನಾನು
ಕೆಲವೊಮ್ಮೆ ಹುಚ್ಚೆದ್ದು ತಲೆಯನು
ಕಿನಾರೆಗೆ ಚಚ್ಚಿಕೊಳ್ಳುವೆ ನಾನು!

ಕಾಲಯಾನದ ಪಯಣಿಗಳಾಗಿರುವೆ
ಪ್ರೇಮದೆಡೆಗಿಹುದು ನನ್ನ ಗುರಿಯು
ಯಾರಾದರೂ ನನ್ನ ಕೇಳಿ
ಅದೇಕೆ ವಿವಶಗೊಂಡಿದೆ ಎದೆಯು!

ಈ ಸಂಕುಚಿತ ನದಿ ಹರವಿನಿಂದ
ಹೈರಾಣಾಗಿ ಓಡುತಿಹೆನಿಲ್ಲಿ
ಆ ವಿಶಾಲ ಶರಧಿಯ ವಿರಹದಲಿ
ಬೆಂದು ಹೋಗುತಿಹೆನಿಲ್ಲಿ!

ಉರ್ದು ಕವಿತೆ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಇಬ್ನುರುಶ್ದ್: ಪಶ್ಚಿಮ ಮತ್ತು ಪೂರ್ವಗಳ ನಡುವೆ

ಇಸ್ಲಾಮಿಕ್ ಸುವರ್ಣಯುಗವು ಇಬ್ನುಸೀನಾರಿಂದ (ಅವಿಸೆನ್ನ) ಅಲ್-ಫರಾಬಿಯವರೆಗಿನ ಹಲವು ಜಗತ್ಪ್ರಸಿದ್ಧ ಚಿಂತಕರಿಗೆ ಜನ್ಮವಿತ್ತಿದೆ. ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದ ವಿಶ್ವವಿದ್ಯಾಲಯಗಳು ಅರಬ್ ಮತ್ತು ಪರ್ಷಿಯನ್ ತತ್ವಜ್ಞಾನಿಗಳ ಶೈಕ್ಷಣಿಕ ಆವಿಷ್ಕಾರಗಳನ್ನು ಕಲಿಸುತ್ತಿರುವುದರಿಂದ ಪಾಶ್ಚಾತ್ಯ ಮತ್ತು ಮುಸ್ಲಿಂ ದೇಶಗಳಲ್ಲಿ ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಆದಾಗ್ಯೂ, ಈ ಮಧ್ಯಕಾಲೀನ ನವೋದಯ ಪುರುಷರ ಪೈಕಿ ಮಧ್ಯಪ್ರಾಚ್ಯ ಮತ್ತು ಪಶ್ಚಿಮಗಳ ನಡುವಿನ ಬಲವಾದ ಸೇತುವೆಯಾಗಿ ವರ್ತಿಸುವಲ್ಲಿ ಸ್ಪೈನ್ ನ ಬಹುಮುಖ ಪ್ರತಿಭೆ ಅವೆರೋಸ್ -ಯಾನೆ ಇಬ್ನ್ ರುಶ್ದ್ ರಂತೆ ಪಾತ್ರ ವಹಿಸಿದ ಮಂದಿ ಗ್ಲೋಬಲ್ ಸೌತ್‌ನಲ್ಲಿ ಬಹಳ ಅಪರೂಪವಾಗಿ ಮಾತ್ರ ಕಂಡು ಬರುತ್ತಾರೆ. ವಾಸ್ತವದಲ್ಲಿ, ಅಂತಹ ಅಂತರ್ ಸಾಂಸ್ಕೃತಿಕ ಕೊಡುಕೊಳೆಗಳನ್ನು ಜಗತ್ತು ಇಂದು ಪೂರ್ವಾಧಿಕವಾಗಿ ಬಯಸುತ್ತಿದೆ.

ಮುಸ್ಲಿಂ ಪ್ರಾಬಲ್ಯದ ಐಬೇರಿಯನ್ ಪರ್ಯಾಯ ದ್ವೀಪದ ಕಾರ್ಡೋಬಾದಲ್ಲಿ ಕ್ರಿ.ಶ 1126 ರಲ್ಲಿ ಜನಿಸಿದ ಅವೆರೋಸ್(ಇಬ್ನು ರುಶ್ದ್) ಅಲ್- ಅಂದಲುಸ್ (ಸ್ಪೇನ್)ನ ಹೆಸರಾಂತ ನ್ಯಾಯಶಾಸ್ತ್ರಜ್ಞ, ದಾರ್ಶನಿಕ ಮತ್ತು ವೈದ್ಯರಾಗಿದ್ದರು. ಮುಸ್ಲಿಮರ ಆಳ್ವಿಕೆಯಲ್ಲಿದ್ದ ಈ ಜಾಗವನ್ನು ಮುಂದೆ ಕ್ರೈಸ್ತರು ವಶಪಡಿಸಿಕೊಂಡರು. ಮಧ್ಯಯುಗದ ಈ ಪ್ರತಿಭೆ ತನ್ನ ಜೀವನದ ಬಹುಭಾಗವನ್ನು ಅರಿಸ್ಟಾಟಲ್‌ನಂತಹ ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳ ಬರಹಗಳನ್ನು ಅಧ್ಯಯನ ಮಾಡುವುದರಲ್ಲಿ ತೊಡಗಿಸಿಕೊಂಡರು. ಆ ಸಮಯದ ಮುಸ್ಲಿಂ ಚಿಂತಕರೆಡೆಯಲ್ಲಿ ಅರಿಸ್ಟಾಟಲನ ವಿಚಾರಗಳು ವಿವಾದಾತ್ಮಕವೆಂದು ಪರಿಗಣಿಸಲ್ಪಟ್ಟಿದ್ದರೂ ಅಷ್ಟೇ ಜನಪ್ರಿಯತೆಯನ್ನು ಪಡೆದಿತ್ತು.

ಆತ್ಮದ ಅಮರತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವ, ತತ್ವಶಾಸ್ತ್ರವನ್ನು ಇಸ್ಲಾಮೇತರ ಸತ್ಯವೆಂದೂ ಜ್ಞಾನದ ಪರಮೋನ್ನತಿಯೆಂದೂ ಚಿತ್ರಿಸುವ ಅವರ ನಿಲುವುಗಳು ಬಹಳ ವಿವಾದಗಳನ್ನು ಎಳೆದು ತಂದಿತ್ತು. ಅದೇವೇಳೆ, ಇಬ್ನುರುಶ್ದರ ಈ ವಿಚಾರಗಳು ಕ್ರಿಶ್ಚಿಯನ್ ಮತ್ತು ಯಹೂದಿ ಚಿಂತಕರ ಕುತೂಹಲ ಕೆರಳಿಸಿತ್ತು. ತಮ್ಮ ಧರ್ಮಗಳು ತತ್ತ್ವಶಾಸ್ತ್ರದೊಂದಿಗೆ ತೋರಿಸುತ್ತಾ ಬಂದಿದ್ದ ಅನುಸಂಧಾನದ ರೀತಿಗಳನ್ನು ಬದಲಾಯಿಸಲು ಅವರಿಗೆ ಇದು ಪ್ರೇರಣೆ ನೀಡಿತು. ಆದರೆ ಇಬ್ನುರುಶ್ದರು ಹೊಂದಿದ್ದಾರೆನ್ನಲಾಗುವ ಸೂಕ್ಷ್ಮವಾದ ವಿಶ್ವಾಸ ವೈರುಧ್ಯಗಳ ಕಾರಣದಿಂದ ಅವರಿಗೆ ಮುಸ್ಲಿಂ ಸಾಂಪ್ರದಾಯಿಕ ವಿದ್ವಾಂಸರ ನಡುವೆ ತಕ್ಕ ಮನ್ನಣೆ ಸಿಗಲಿಲ್ಲ.

ಅರಿಸ್ಟಾಟಲ್ ಮತ್ತು ಅವನ ಪೂರ್ವಿಕರು ತಲುಪಿದ ತೀರ್ಮಾನಗಳನ್ನು ಆಧಾರವಾಗಿಟ್ಟುಕೊಂಡು ಹಡೆದ ಜಾತ್ಯತೀತ ವೈಚಾರಿಕತೆಯೊಂದಿಗೆ ಇಸ್ಲಾಂ ಧರ್ಮದ ನಂಬಿಕೆ ಆಧಾರಿತ ವಿಷಯಗಳನ್ನು ಇಬ್ನುರುಶ್ದ್ ಸಮನ್ವಯಗೊಳಿಸಲು ಪ್ರಯತ್ನಿಸಿದರು. ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಿಂದ ಅವರಿಗೆ ಸ್ನೇಹಿತರು ಮತ್ತು ವಿರೋಧಿಗಳು ಧಾರಾಳವಾಗಿ ಹುಟ್ಟಿಕೊಂಡರು. ಒಂದೆಡೆ, ಪ್ರಾಚೀನ ಗ್ರೀಕರ ಬರಹಗಳ ಬಗ್ಗೆ ಇಬ್ನುರುಶ್ದ್ ರ ಒಳನೋಟಗಳು ಅಲ್ ಮುಹಾದ್ ಆಳ್ವಿಕೆಯ ಸಂಶೋಧನಾ ಕೌತುಕದ ನಾಯಕ ಅಬು ಯಾಕೂಬ್ ಯೂಸುಫ್ ರನ್ನು ಆಕರ್ಷಿಸಿದವು. ಹಾಗೆ ಅವರು ದರ್ಬಾರಿನ ವೈದ್ಯರಾಗಿ ನೇಮಕಗೊಂಡರು. ಮತ್ತೊಂದೆಡೆ, ಈ ಪ್ರದೇಶದ ಸಂಪ್ರದಾಯವಾದಿಗಳು ಇಬ್ನುರುಶ್ದ್ ರ ಪಾಶ್ಚಾತ್ಯ-ಬಣ್ಣದ ವಿರೋಧಾಭಾಸದ ಆಶಯಗಳನ್ನು ವಿರೋಧಿಸಿದರು.

ಪರ್ಷಿಯಾದ ಇಬ್ನು ಸೀನಾ, ಮಧ್ಯ ಏಷ್ಯಾದ ಅಲ್-ಫರಾಬಿ, ಅದೇ ರೀತಿ ಇಬ್ನು ರುಶ್ದ್ ಗೂ ಹಿಂದಿನ ಹಲವು ದಾರ್ಶನಿಕರ ಚಿಂತನೆಗಳಿಗೆ ಕೂಡಾ ಇದೇ ರೀತಿಯ ಸವಾಲುಗಳನ್ನು ಎದುರಾಯಿತು. ಪರ್ಷಿಯನ್ ಧರ್ಮಶಾಸ್ತ್ರಜ್ಞ ಅಲ್-ಗಝಾಲಿ ಮತ್ತು ಇತರ ಸಮಕಾಲೀನರು ಅವಿಸೆನ್ನಾ, ಅಲ್-ಫರಾಬಿ ಮತ್ತವರ ಸಂಗಡಿಗರ ಬುದ್ಧಿಮತ್ತೆಯನ್ನು ಶ್ಲಾಘಿಸಿದ್ದರು. ಆದರೆ ಪ್ಲೇಟೋನಂತಹ ಮುಸ್ಲಿಮೇತರ ತತ್ವಜ್ಞಾನಿಗಳ ಮೇಲೆ ಅವರು ತೋರಿಸುತ್ತಿದ್ದ ಬೇಷರತ್ ಆಶ್ರಯ ಧಾರ್ಮಿಕವಾಗಿ ಸರಿಯಲ್ಲ ಎಂದು ಟೀಕಿಸಿದರು. ಈ ಖಂಡನೆಯು ಮುಂದಿನ ಶತಮಾನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅವಿಸೆನ್ನಾ ಮತ್ತು ಅಲ್-ಫರಾಬಿಯ ಪ್ರತಿಷ್ಠೆಯನ್ನು ಕಳಂಕಿತಗೊಳಿಸಿತು.

ಅವಿಸೆನ್ನಾ ಮತ್ತು ಅಲ್ ಫಾರಾಬಿ ತತ್ವಗಳಲ್ಲಿನ ಪ್ರತಿಯೊಂದು ಅಂಶಗಳ ಜನ್ಮ ಜಾಲಾಡುತ್ತ ಅಲ್ ಗಝಾಲಿ ಕ್ರಿ.ಶ 1111 ರಲ್ಲಿ ಅತ್ಯಂತ ಕಟುವಾದ ಟೀಕೆಗಳನ್ನು “ತಹಾ ಫುತುಲ್ ಫಲಾಸಿಫ” ಎಂಬ ಗ್ರಂಥದ ಮೂಲಕ ಮಂಡಿಸಿದರು. ಇದರ ಪರಿಣಾಮವಾಗಿ ಅವಿಸೆನ್ನಾ ಫಾರಾಬಿ ರಚನೆಗಳ ವರ್ಚಸ್ಸಿಗೆ ಉಂಟಾದ ಹಿನ್ನಡೆ ಸುಮಾರು ಒಂದು ಸಹಸ್ರಮಾನದಿಂದೀಚೆಗೂ ಮುಂದುವರಿಯುತ್ತಿದೆ. ಕ್ರಿ.ಶ 1989 ರಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿಯು ಸೋವಿಯತ್ ಒಕ್ಕೂಟಕ್ಕೆ ಬರೆದ ಪತ್ರದಲ್ಲಿ ಅವಿಸೆನ್ನಾರನ್ನು ಉಲ್ಲೇಖಿಸಿದ್ದಕ್ಕಾಗಿ ಇರಾನಿನ ವಿದ್ವಾಂಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಧ್ಯಯುಗದಲ್ಲಿ ಅವರೋಸ್ ತನ್ನದೇ ಆದ ಖಂಡನೆಯೊಂದಿಗೆ ಅಲ್-ಗಝಾಲಿಯ ಸವಾಲುಗಳು ಫಲ್ ಸಫದ ವಿರುದ್ಧ ಉಂಟುಮಾಡಿದ್ದ ಪರಿಣಾಮಗಳನ್ನು ತಗ್ಗಿಸಲು ಪ್ರಯತ್ನಿಸಿದರು: ಕ್ರಿ.ಶ 1180 ರಲ್ಲಿ ವಿರಚಿತವಾದ “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್,/ತಹಾಫತುಲ್ ತಹಾಫುತ್” ಪಠ್ಯವು ಇಸ್ಲಾಂ ಧರ್ಮವು ತತ್ತ್ವಶಾಸ್ತ್ರವನ್ನು ಪ್ರಮಾಣೀಕರಿಸುತ್ತದೆ ಎಂದು ವಾದಿಸುತ್ತದೆ. ಆದಾಗ್ಯೂ, “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್”, “ದ ಇನ್‌ಕೋಹೆರೆನ್ಸ್ ಆಫ್ ದಿ ಫಿಲಾಸಫರ್ಸ್” ನಂತೆ ಶಾಶ್ವತ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ಕ್ರಿ.ಶ 1195 ರಲ್ಲಿ, ಅಬೂ ಯಾಕೂಬ್ ಯೂಸುಫರ ಉತ್ತರಾಧಿಕಾರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದ ರಾಜನು ಅಸಹಿಷ್ಣುವಾಗಿದ್ದನು. ಆತ ಖಗೋಳ ವಿಜ್ಞಾನ, ಗಣಿತ ಮತ್ತು ವೈದ್ಯಕೀಯ ಸಂಬಂಧಿತ ಗ್ರಂಥಗಳನ್ನು ಹೊರತುಪಡಿಸಿ ಉಳಿದ ಇಬ್ನು ರುಶ್ದ್ ರ ತಾತ್ವಿಕ ಗ್ರಂಥಗಳನ್ನು ಸುಡಲು ಆಜ್ಞೆ ಹೊರಡಿಸಿದನು. ಮೂರು ವರ್ಷಗಳ ಬಳಿಕ ಮರಾಕೆಶ್ ಎಂಬಲ್ಲಿ ಅವರು ನಿಧನರಾದರು.
ಜೀವಿತಾವಧಿಯಲ್ಲಿ ತುಂಬಾ ದುಃಖವನ್ನು ಕೊಟ್ಟ ಇಬ್ನ ರುಶ್ದ್‌ರ ತಾತ್ವಿಕ ಗ್ರಂಥಗಳು ಅವರ ಮರಣಾನಂತರ ಉತ್ತಮ ಪರಿಣಾಮವನ್ನು ಕೊಡಲಾರಂಭಿಸಿದವು. ಪಾಶ್ಚಾತ್ಯ ದಾರ್ಶನಿಕರು ಇಬ್ನುರುಶ್ದ್ ರನ್ನು ಇಷ್ಟಪಡಲು ಅದೇ ಗ್ರಂಥಗಳು ಕಾರಣವಾದವು. ಅರೇಬಿಕ್‌ನಿಂದ ಲ್ಯಾಟಿನ್ ಭಾಷೆಗೆ ಅನುವಾದಿಸಲ್ಪಟ್ಟ ಅವರ ಬರಹಗಳು ಮಧ್ಯಯುಗದಲ್ಲಿ ಕ್ರೈಸ್ತಪ್ರಪಂಚದ ಬಹುಭಾಗವನ್ನು ಪ್ರಭಾವಿಸಿದವು.
ನ್ಯಾಯಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ, ಪಾಶ್ಚಿಮಾತ್ಯ ಚಿಂತನೆ ಮತ್ತು ಕ್ಯಾಥೊಲಿಕ್ ಚರ್ಚನ್ನು ರೂಪಿಸಿದ ಥಾಮಸ್ ಅಕ್ವಿನಾಸ್ ನಂತಹ ವ್ಯಕಿಗಳು ಇಬ್ನ್‌ ರುಶ್ದರ ಅಭಿಮಾನಿಗಳಾಗಿ ಮಾರ್ಪಟ್ಟರು. ಇಬ್ನುರುಶ್ದರ ಮುಸ್ಲಿಮೇತರ ವಿದ್ಯಾರ್ಥಿಗಳಲ್ಲಿ ಮತ್ತೊಬ್ಬನಾದ ಸ್ಪೇನ್ ನ ಮೈಮೋನೈಡ್ಸ್, ಅವೆರ್ರೋಸ್‌/ಇಬ್ನುರುಶ್ದ್ ಚಿಂತನೆಗಳನ್ನು ಯಹೂದಿ ತತ್ವಶಾಸ್ತ್ರಕ್ಕೆ ಸಂಯೋಜಿಸಿದ. ಇಂದು, ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ರಾಬರ್ಟ್ ಪಾಸ್ನೌ ಇಬ್ನುರುಶ್ದ್ ರನ್ನು “ನಮಗೆ ಆಧುನಿಕ ತತ್ವಶಾಸ್ತ್ರವನ್ನು ನೀಡಿದ ಇಸ್ಲಾಮಿಕ್ ವಿದ್ವಾಂಸ” ಎಂದು ಬಣ್ಣಿಸುತ್ತಾರೆ.

ಧಾರ್ಮಿಕ ಕಾನೂನಿನ ವಿದ್ವಾಂಸರೆಂಬ ನೆಲೆಯಲ್ಲಿ ಹೊರಹೊಮ್ಮಿದ ಅವೆರೋಸ್ ಸಾಧನೆಗಳು ಪಶ್ಚಿಮದಲ್ಲಿ ಗಮನ ಸೆಳೆದದ್ದು ಕಡಿಮೆ. ಕೊರ್ಡೋಬಾದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ಇಬ್ನುರುಶ್ದ್ ಸುನ್ನಿ ಇಸ್ಲಾಂ ನಲ್ಲಿರುವ ನಾಲ್ಕು ಸ್ಕೂಲ್ ಆಫ್ ಥಾಟ್ಸ್/ ಮದ್ಸ್ ಹಬ್ ಗಳನ್ನು ವಿವರಿಸುತ್ತಾ “The Distinguished Jurist’s Primer” (ಬಿದಾಯತುಲ್ ಮುಜ್ ತಹಿದ್) ಅನ್ನು ಬರೆಯುತ್ತಾರೆ. ಯುದ್ಧ, ಪಿತ್ರಾರ್ಜಿತ ಹಕ್ಕು, ವಿವಾಹ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿನ ಇಸ್ಲಾಂ ಧರ್ಮದ ವಿಭಿನ್ನ ಮಾರ್ಗಸೂಚಿಗಳನ್ನು ನ್ಯಾಯಾಧೀಶರು ಹೇಗೆ ಪ್ರಯೋಗಶೀಲಗೊಳಿಸಬಹುದು ಎಂಬುವುದರ ಕುರಿತು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಲಿಂ ಪ್ರಪಂಚ ಸದ್ರಿ ಗ್ರಂಥವನ್ನು ಅತ್ಯಂತ ಅಧಿಕೃತ ಕಾನೂನು ದಾಖಲೆಗಳಲ್ಲಿ ಒಂದಾಗಿ ಅಂಗೀಕರಿಸಿದೆ.

ಇಬ್ನುರುಶ್ದರ ಬಗೆಗಿನ ಮಧ್ಯಪ್ರಾಚ್ಯ ಮತ್ತು ಪಾಶ್ಚಿಮಾತ್ಯ ಗ್ರಹಿಕೆಗಳ ಅಂತರವನ್ನು ಎರಡೂ ಕಡೆಯ ವಿದ್ವಾಂಸರು ಎತ್ತಿ ತೋರಿಸುವ ಪುಸ್ತಕಗಳೇ ವಿವರಿಸಿ ಕೊಡುತ್ತವೆ. ಯುರೋಪ್ ಮತ್ತು ಉತ್ತರ ಅಮೆರಿಕದ ಶಿಕ್ಷಣ ತಜ್ಞರು “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್,”(ತಹಾಫತುಲ್ ತಹಾಫುತ್), “ದಿ ಡೆಸಿಸಿವ್ ಟ್ರೀಟೈಸ್”(ಫಸ್ಲುಲ್ ಮಖಾನ್) ನಂತಹ ತತ್ವಚಿಂತನೆಗಳನ್ನು ಉಣಬಡಿಸುವ ಕೃತಿಗಳನ್ನು ಕೇಂದ್ರೀಕರಿಸಿ ವಿಶ್ಲೇಷಿಸುತ್ತಾರೆ. ಆದರೆ “ದಿ ಡಿಸ್ಟಿಂಗ್ವಿಶ್ಡ್ ಜ್ಯೂರಿಸ್ಟ್ಸ್ ಪ್ರೈಮರ್” (ಬಿದಾಯತುಲ್ ಮುಜ್ ತಹಿದ್) ನ ಆಶ್ರಯಯೋಗ್ಯ ಇಂಗ್ಲಿಷ್ ಅನುವಾದ ಮೂಡಿಬಂದದ್ದು ಪಾಕಿಸ್ತಾನಿ ಪ್ರಾಧ್ಯಾಪಕರಿಂದ. ಪಶ್ಚಿಮವು ಅವೆರೋಸ್ ‌ರನ್ನು ಅರಿಸ್ಟಾಟಲಿಯನ್ ತತ್ವಜ್ಞಾನಿ ಎಂದು ಅರ್ಥೈಸಿದರೆ ಮುಸ್ಲಿಂ ಜಗತ್ತು ಅವರನ್ನು ಧಾರ್ಮಿಕ ಕಾನೂನಿನ ಪರಿಣಿತರಾಗಿ ನೋಡುತ್ತದೆ.

“ತಹಾಫತುಲ್ ಫಲಾಸಫ” ಮುಸ್ಲಿಮರೆಡೆಯಲ್ಲಿ ಇಬ್ನುರುಶ್ದರ ತಾತ್ವಿಕ ತೀರ್ಮಾನಗಳ ಬಗೆಗಿನ ಉಪೇಕ್ಷೆ ಉಂಟುಮಾಡಿದೆ ಮತ್ತು ಬೆರಳೆಣಿಕೆಯಷ್ಟು ಪಾಶ್ಚಿಮಾತ್ಯ ಮುಸ್ಲಿಮೇತರ ತತ್ತಜ್ಞಾನಿಗಳು ಮಾತ್ರ ಅವರ ನ್ಯಾಯಶಾಸ್ತ್ರದ ಬರಹಗಳಲ್ಲಿ ಆಸಕ್ತಿ ವಹಿಸಿದ್ದಾರೆ. ಅದೇನೇ ಇದ್ದರೂ ಪೂರ್ವ ಮತ್ತು ಪಶ್ಚಿಮಗಳ ನಡುವಿನ ವಿಭಜನೆಯನ್ನು ನಿವಾರಿಸಬೇಕೆನ್ನುವ ತನ್ನ ಜೀವನದಗುರಿಯನ್ನು ಸಾಧಿಸಲು ಇಬ್ನುರುಶ್ದರ ಕೃತಿಗಳಿಗೆ ಸಾಧ್ಯವಾಗಿದೆ ಎನ್ನುವುದು ಮಾತ್ರ ಸತ್ಯ. ಇಬ್ನುರುಶ್ದರಂತೆಯೇ, ಅಲ್-ಫರಾಬಿ ಮತ್ತು ಇಬ್ನುಸೀನಾ ಭೌತಶಾಸ್ತ್ರದಿಂದ ಸಂಗೀತದ ವರೆಗಿನ ವಿವಿಧ ಕ್ಷೇತ್ರಗಳಲ್ಲಿ ತಜ್ಞತೆ ಪಡೆದಿದ್ದಾರೆ. ಆದಾಗ್ಯೂ, ಇಮಾಂ ಗಝಾಲಿಯವರು ವೈರುಧ್ಯಾತ್ಮಕವೆಂದು ಬಗೆದ ಪಾಶ್ಚಿಮಾತ್ಯ ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಕಾನೂನು ವಿಷಯಗಳಲ್ಲಿ ಇಬ್ನು ರುಶ್ದ್‌ ರವರಿಗಿದ್ದ ವಿಶೇಷ ಪರಿಣತಿ ಅವರನ್ನು ಇತರರಿಗಿಂತ ವಿಭಿನ್ನಗೊಳಿಸುತ್ತದೆ. ಮಧ್ಯಪ್ರಾಚ್ಯ ಮತ್ತು ಪಶ್ಚಿಮದ ವಿದ್ವಾಂಸರು ವಿಭಿನ್ನ ಕಾರಣಗಳಿಗಾಗಿ ಇಬ್ನುರುಶ್ದರನ್ನು ಕೊಂಡಾಡುತ್ತಾರೆ. ಆದರೆ ಇಬ್ನುರುಶ್ದರ ಬುದ್ಧಿವಂತಿಕೆ ಮತ್ತು ಸಾಧನೆಗಳ ಬಗ್ಗೆ ಯಾರಿಗೂ ಎರಡು ಮಾತಿಲ್ಲ. ಎರಡು ನಾಗರಿಕತೆಗಳ ಎಡೆಯಲ್ಲಿ ಬೆಸುಗೆ ಸಾಧಿಸಲು ಅವರು ನಡೆಸಿದ ಪ್ರಯತ್ನವನ್ನು ಮಧ್ಯಪೌರಾತ್ಯ-ಪಾಶ್ಚಿಮಾತ್ಯ ಕಡೆಯವರೆಲ್ಲಾ ಶ್ಲಾಘಿಸಲೇಬೇಕು.

ಮುಂದಿನ ದಿನಗಳಲ್ಲಿ ಮೊರಾಕೊ ಮತ್ತು ಸ್ಪೇನ್ ಆಗಿ ವಿಕಾಸಗೊಂಡ ಹಳೆಯ ಮಗಾರಿಬಿನ ಭೂಮಿಯಲ್ಲಿ ವಾಸಿಸುತ್ತಿದ್ದ ಇಬ್ನುರುಶ್ದ್ ರ ಒಂದು ಕಾಲು ಪಶ್ಚಿಮದಲ್ಲಿ ಮತ್ತು ಮತ್ತೊಂದು ಕಾಲು ಮುಸ್ಲಿಂ ಜಗತ್ತಿನಲ್ಲಿ ಇಟ್ಟಂತಿತ್ತು. ಪಾಶ್ಚಿಮಾತ್ಯ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಸಂಘರ್ಷಗಳು ಮತ್ತು ಮಾನವೀಯತೆಯ ಹಿಂಜರಿತ ಬೆಳೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಅವೆರೋಸ್ ಶತಮಾನಗಳ ಹಿಂದೆ ನೇಯ್ದ ಬೌದ್ಧಿಕ ಕೊಡುಕೊಳೆಯ ಮಾದರಿಗಳಿಗೆ ಪೂರ್ವಾಧಿಕ ಪ್ರಾಮುಖ್ಯತೆಯಿದೆ.

ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ ಇರುವ ಬುದ್ಧಿಜೀವಿಗಳು ಮಾರ್ಗದರ್ಶನಕ್ಕಾಗಿ ಸುದೀರ್ಘ ಕಾಲ ಅವರೋಸ್‌ರನ್ನು ಅವಲಂಬಿಸಿದ್ದರು. ಇಂದು ಅವರ ಹೆಸರಿನಲ್ಲಿ ಕಾರ್ಡೋಬಾದಲ್ಲಿ ‘ನ್ಯೂ ಅವೆರೋಸ್ ಆಸ್ಪತ್ರೆ’ ಕಾರ್ಯಾಚರಿಸುತ್ತಿದೆ. ಜರ್ಮನಿಯ ಅರಬ್ ಬುದ್ಧಿಜೀವಿಗಳು ‘ಇಬ್ನ್ ರುಶ್ದ್ ಫಂಡ್ ಫಾರ್ ಫ್ರೀಡಮ್ ಆಫ್ ಥಾಟ್’ ಎಂಬ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಪಶ್ಚಿಮವನ್ನು ಮಧ್ಯಪ್ರಾಚ್ಯದಿಂದ ಬೇರ್ಪಡಿಸುವ ಸಾಂಸ್ಕೃತಿಕ ಮತ್ತು ಭೌಗೋಳಿಕ ರಾಜಕೀಯ ವಿಭಜನೆಗಳನ್ನು ನಿವಾರಿಸಲು ಯಾವುದೇ ಐತಿಹಾಸಿಕ ವ್ಯಕ್ತಿಯಿಂದ ಸಾಧ್ಯವಾಗದು. ಆದರೆ ಅವರೋಸ್‌ ರವರ ಶ್ರೀಮಂತ ಪರಂಪರೆ, ಅವರ ಮುಸ್ಲಿಂ ಮತ್ತು ಮುಸ್ಲಿಮೇತರ ಉತ್ತರಾಧಿಕಾರಿಗಳಿಗೆ, ಸೌಹಾರ್ದವನ್ನು ಸಾಧಿಸುವ ಬಾಗಿಲನ್ನು ತೆರೆದಿಡಬಲ್ಲದು.

ಇಂಗ್ಲಿಷ್ ಮೂಲ: Austin Bodetti
ಕನ್ನಡಕ್ಕೆ: ಎ.ಕೆ.ಫೈಸಲ್ ಗಾಳಿಮುಖ


ABOUT THE AUTHOR

Austin Bodetti


ಆಸ್ಟಿನ್‌ ಬೋಡೆಟ್ಟಿ ವಿಶಾಲ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಐದು ವರ್ಷಗಳ ಕಾಲ ಅಧ್ಯಯನಕ್ಕಾಗಿ ವಿನಿಯೋಗಿಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತನಾಗಿರುವ ಇವರು ಅಲ್‌ ಖಾಯ್ದಾ, ತಾಲಿಬಾನ್‌ ನ ಶಸ್ತ್ರಧಾರಿಗಳ ಸಂದರ್ಶನ ನಡೆಸಿದ್ದಾರೆ. ಇರಾಕ್‌ ಮತ್ತು ದಕ್ಷಿಣ ಸುಡಾನಿನಲ್ಲಿ ವರದಿಗಾರಿಕೆ ನಡೆಸಿದ್ದು ದ ಡೈಲಿ ಬೀಸ್ಟ್‌, ಯುಎಸ್‌ಎ ಟುಡೇ, ವೈಸ್‌, ವೈರ್ಡ್‌ ನಂಥಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಇತ್ತೀಚೆಗೆ, ಫುಲ್ ಬ್ರೈಟ್ ಸ್ಕಾಲರ್‌ ಆಗಿ ಮೊರೊಕ್ಕೊ ವಾಸ ಮಾಡಿದ್ದಾರೆ. ಅರೇಬಿಕ್‌ ಮತ್ತು ಪರ್ಶಿಯನ್‌ ಭಾಷೆಗಳಲ್ಲಿ ಜ್ಞಾನವನ್ನು ಹೊಂದಿದ್ದಾರೆ ಬೋಡೆಟ್ಟಿ.