ದೆಹಲಿ ಸುಲ್ತಾನರಿಗೆ ಶರಣಾಗದ ಸೂಫಿ ಶ್ರೇಷ್ಠರು

ದೆಹಲಿ ಸುಲ್ತಾನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನಲ್ಲಿ ಚಿಶ್ತಿ ಸೂಫಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದರು. ಅವರ ಅತೀಂದ್ರಿಯ ಚಟುವಟಿಕೆಗಳು ಮತ್ತು ಆಲೋಚನೆಗಳಲ್ಲಿ ‘ಅಲ್ಲಾಹನೇ ಕಾರಣ, ಸೃಷ್ಟಿಕರ್ತ ಮತ್ತು ಕೇಂದ್ರ’ ಎಂಬ ಬಲವಾದ ನಂಬಿಕೆ ಎದ್ದು ಕಾಣುತ್ತಿತ್ತು. ಅಲ್ಲಾಹನ ಸಾಮೀಪ್ಯ ಹೊಂದಲು ಸ್ವಯಂ ತರಬೇತಿಯ ಮೂಲಕ ತಮ್ಮನ್ನು ತಾವು ಪರಿವರ್ತಿಸುವ ಗುರಿಯೊಂದಿಗೆ ಅವರು ಆಧ್ಯಾತ್ಮಿಕ ವ್ಯಾಯಾಮಗಳು, ಉಪವಾಸ, ರಾತ್ರಿ ಹೊತ್ತಿನ ಸುದೀರ್ಘ ಪ್ರಾರ್ಥನೆಗಳಲ್ಲಿ ತಲ್ಲೀನರಾಗಿದ್ದರು.
ಚಿಶ್ತಿಗಳು ಒಂದರ್ಥದಲ್ಲಿ ಲೌಕಿಕ ವಿರಕ್ತಿಯನ್ನು ಮೂಡಿಸುವ ದೇವೋಪಾಸನೆಯಿಂದ ಉಂಟಾಗುವ ಸಂಕೀರ್ಣವಾದ ಅಸ್ಪಷ್ಟತೆಯನ್ನು ನಿವಾರಿಸಲು ಯತ್ನಿಸುತ್ತಿದ್ದರು. ಸರಳವಾಗಿ ಹೇಳುವುದಾದರೆ, ಅಲ್ಲಾಹನು ವಿಧಿಸಿದ ಕಠಿಣವಾದ ಏಕದೇವೋಪಾಸನೆ ಪ್ರಕಾರ, ಅದೃಶ್ಯ ದೇವರು ಈ ಭೌತಿಕ ಜಗತ್ತನ್ನು ಸೃಷ್ಟಿಸಿದ. ಅದೇ ಸಮಯದಲ್ಲಿ ಆತನು ಸೃಷ್ಟಿಸಿದ ಲೋಕದಿಂದ ಸಂಪೂರ್ಣವಾಗಿ ದೂರ ನಿಲ್ಲುತ್ತಾನೆ ಎನ್ನುವಾಗ ಓರ್ವ ಅನ್ವೇಷಕನು ಅಲ್ಲಾಹನ ಉಪಸ್ಥಿತಿಯನ್ನು ಹೇಗೆ ಅರ್ಥೈಸಿಕೊಳ್ಳಬಹುದು? ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವರು ಇದೇ ರೀತಿಯ ಸವಾಲುಗಳು ಬಂದಾಗ ಅವುಗಳಿಗೆ ಪರಿಹಾರವನ್ನೂ ಕಂಡುಕೊಂಡರು. ಜೀವನವೆಂದರೆ ಏನು? ಜೀವನದ ಅರ್ಥವೇನು? ಪ್ರೀತಿ ಎಂದರೇನು? ಕಲಾತ್ಮಕ ಸಂತೋಷ ಏನು? ಈ ಕಲ್ಪನೆಗಳು ದೈವಿಕ ಉಪಸ್ಥಿತಿ ಮತ್ತು ಸಾಕಾರದೊಂದಿಗೆ ಹೇಗೆ ಸಂಬಂಧ ಹೊಂದಿದೆ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡರು. ಉತ್ತರ ಭಾರತದಲ್ಲಿ ಹಲವಾರು ಧರ್ಮ ಪಂಥಗಳ ನಡುವೆ ಇಸ್ಲಾಮಿನ ನೈಜ ಅರ್ಥವಾದ ‘ಶರಣಾಗತಿ’ ಎಂಬುದನ್ನು ಸೂಫಿಗಳು ಒತ್ತಿ ಹೇಳಿದರು.
ಚಿಶ್ತಿ ಸೂಫಿಗಳು ತಾವೆದುರಿಸಿದ ಪ್ರಶ್ನೆಗಳಿಗೆ ಸಾಂಸ್ಕೃತಿಕವೂ ಆಧ್ಯಾತ್ಮಿಕವೂ ಆದ ಮಾರ್ಗಗಳ ಮೂಲಕ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆಸಿದರು. ಅಲ್ಲಾಹನ ಆಧ್ಯಾತ್ಮಿಕ ಸಾಮೀಪ್ಯ ಸಿಗುವ ರೀತಿಯಲ್ಲಿ ಇಂದ್ರಿಯಗಳನ್ನು ಪಳಗಿಸುವುದು, ಪ್ರಣಯ ಕವಿತೆಗಳನ್ನು ಆಲಿಸುವ ಮೂಲಕ ಆತ್ಮದ ಪರಿವರ್ತನೆ ಹೀಗೆ ಹಲವಾರು ರೀತಿಗಳಲ್ಲಿ ಉತ್ತರವನ್ನು ಕಂಡರು. ಚಿಶ್ತಿ ಸಮಾ ಅಥವಾ ಖವಾಲಿ ಮಜ್ಲಿಸುಗಳಲ್ಲಿದ್ದ ಸೂಫಿ ಸಂಗೀತವು ಆತ್ಮ ಪರಿವರ್ತನೆ ಮಾಡುತ್ತಿದ್ದವು. ನಕ್ಷಬಂದಿಯಂತಹ ಚಿಶ್ತಿಯೇತರ 8 ಸಿಲ್ಸಿಲಗಳು (ಪರಂಪರೆ) ‘ಸಮಾ’ ಎಂಬ ಕಾರ್ಯಕ್ರಮವನ್ನು ಸಂಘಟಿಸದಿದ್ದರೂ, ತಮ್ಮದೇ ಆದ ವಿಶಿಷ್ಟವಾದ ಆಧ್ಯಾತ್ಮಿಕ ತರಬೇತಿಗಳ ಮೂಲಕ ಜಾಗೃತಿ ಮೂಡಿಸಿದವು.

ಹದಿಮೂರು- ಹದಿನಾಲ್ಕನೆಯ ಶತಮಾನದ ದೆಹಲಿ ಸುಲ್ತಾನರು ಈ ಸೂಫಿ ಸಂತರ ಆಧ್ಯಾತ್ಮಿಕ ಕಾರ್ಯಸೂಚಿಗಳಿಗೆ ಬೆಂಬಲ ನೀಡಿದ್ದರು. ಕೆ.ಎ ನಿಝಾಮಿಯವರ ಭಾರತೀಯ ಸೂಫಿ ಚಿಂತನೆಗಳ ಬಗೆಗಿನ ಅಧ್ಯಯನವು ಈ ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತದೆ. ಹದಿಮೂರನೆಯ ಶತಮಾನದ ಭಾರತದಲ್ಲಿ ಧರ್ಮ ಮತ್ತು ರಾಜಕೀಯ ನಡುವಿನ ಸಂಬಂಧದ ಕೆಲವು ಅಂಶಗಳು, ವಿಶೇಷವಾಗಿ ಸೂಫಿಗಳು ಮತ್ತು ಆಡಳಿತಗಾರರ ನಡುವಿನ ಅಂತರದ ಕುರಿತು ವಿಶ್ಲೇಷಿಸಲಾಗಿದೆ. ಚಿಶ್ತಿಗಳ ನಂಬಿಕೆ ಮತ್ತು ಅಭ್ಯಾಸಗಳ ಬಗ್ಗೆ ಉಲ್ಲೇಖಗಳನ್ನು ನೀಡಿ, ಚಿಶ್ತಿಗಳಿಗೆ ಆಸ್ಥಾನ ರಾಜಕೀಯದ ಮೇಲೆ ಎಷ್ಟು ಅಸಹನೆ ಇತ್ತೆಂಬುದನ್ನು ವಿವರಿಸಿದ್ದಾರೆ. “ಅರ್ಧ ಡಜನ್ ಗಳಿಗೂ ಹೆಚ್ಚು ಸುಲ್ತಾನರನ್ನು ಕಂಡ ದೆಹಲಿ ಸುಲ್ತಾನೇಟ್ ನ ಅವಧಿಯಲ್ಲಿ ಬದುಕಿದ್ದ ಹಝ್ರತ್ ನಿಝಾಮುದ್ದೀನ್ ಔಲಿಯಾರವರು ಒಮ್ಮೆಯೂ ಕೂಡ ಆಸ್ಥಾನದಲ್ಲಿ ಸುಲ್ತಾನರನ್ನು ಭೇಟಿಯಾಗಿರಲಿಲ್ಲ. ಅವರನ್ನು ಸಂದರ್ಶಿಸಲೂ ಉತ್ಸುಕರಾಗಿರಲಿಲ್ಲ. ಸುಲ್ತಾನ ಎಷ್ಟೇ ಪ್ರಬಲನಾಗಿರಲಿ, ಅವನು ಎಷ್ಟೇ ವಿನಂತಿಸಿದರೂ ಹಝ್ರತ್ ಯಾವತ್ತೂ ತಮ್ಮ ತೀರ್ಮಾನದಿಂದ ಹಿಂದೆ ಸರಿದವರಲ್ಲ. ಸುಲ್ತಾನ್ ಅಲಾವುದ್ದೀನ್ ಖಿಲ್ಜಿಯವರನ್ನು ಕಾಣಲು ನಿರಾಕರಿಸಿದ ಹಝ್ರತ್, ಅವರು ಒತ್ತಾಯಿಸಿದಾಗ ಈ ರೀತಿ ಪ್ರತಿಕ್ರಿಯಿಸಿದರು: ‘ನನ್ನ ಮನೆಗೆ ಎರಡು ಬಾಗಿಲುಗಳಿವೆ. ಒಂದರ ಮೂಲಕ ಸುಲ್ತಾನನು ಪ್ರವೇಶಿಸಿದರೆ, ಇನ್ನೊಂದರ ಮೂಲಕ ನಾನು ಹೊರನಡೆಯುವೆನು’!

ಈ ಮನೋಭಾವವು ಕನಿಷ್ಟವೆಂದರೆ ಹದಿನೇಳನೆಯ ಶತಮಾನದ ಅಂತ್ಯದವರೆಗೂ ಚಿಶ್ತಿ ಸಿಲ್ಸಿಲದ ಒಂದು ಆದರ್ಶವಾಗಿ ಪ್ರಚಲಿತದಲ್ಲಿತ್ತು. ಕ್ರಮೇಣ ಚಿಶ್ತಿ ಸಿಲ್ಸಿಲ ಸಣ್ಣಪುಟ್ಟ ಮತ್ತು ದೊಡ್ಡ ದೊಡ್ಡ ಸ್ವಾಯತ್ತ ಸಂಘಗಳಾಗಿ ವಿಘಟಿಸಿತು. ಅವರಲ್ಲಿ ಹಲವರು ಆಡಳಿತಗಾರರು ನೀಡುತ್ತಿದ್ದ ಕಂದಾಯ ರಹಿತ ಭೂಮಿಗಳನ್ನು ಪಡೆದುಕೊಂಡರು. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೂಫಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಸೈಮನ್ ಡಿಗ್ಬಿಯವರು; ಸೂಫಿಗಳು ಮತ್ತು ಸುಲ್ತಾನರ ನಡುವೆ ಸಂಕೀರ್ಣವೂ ವೈವಿಧ್ಯಮಯವೂ ಆದ, ಅಷ್ಟೇ ವಿರೋಧಾತ್ಮಕವೂ ಆದ ಸಂಬಂಧವನ್ನು ಸಾರುವ ಅನೇಕ ಘಟನೆಗಳು ನಡೆದಿವೆ ಎನ್ನುತ್ತಾರೆ. ಒಂದೆಡೆ ಸೂಫಿಗಳು ತಾವು ರಾಜಕೀಯದ ಮೇಲೆ ಅವಲಂಬಿತರು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೊಂದೆಡೆ ತಾವು ರಾಜರಿಗಿಂತ ಶ್ರೇಷ್ಠರು, ತಮ್ಮ ಆಶೀರ್ವಾದದಿಂದ ಅವರು ಶಕ್ತಿ ಪಡೆದಿದ್ದಾರೆ ಅಂತಲೂ ಹೇಳುತ್ತಾರೆ. ತರ್ಕ್-ಎ-ದುನಿಯಾ ಅಥವಾ ಐಹಿಕ ವೈರಾಗ್ಯ ಎಂಬ ಆಶಯವು ಪ್ರಚಲಿತದಲ್ಲಿರುವಾಗಲೂ ಹಲವಾರು ಬಾರಿ ಆಡಳಿತ ಯಂತ್ರದ ಸಹಾಯವನ್ನು ಅವರು ಪಡೆದಿರುತ್ತಾರೆ. ಹಾಗೂ ಅಧಿಕಾರಿಗಳ ಆಯ್ಕೆಯಲ್ಲೂ ಮಹತ್ತರ ಪಾತ್ರ ವಹಿಸಿದ್ದರು ಎಂಬುದು ಕೂಡ ಆಗಿನ ಕಾಲದ ರಾಜಕೀಯ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಕೀರ್ಣವಾದ ಸಂಬಂಧದ ನಿದರ್ಶನವಷ್ಟೇ.
ದೆಹಲಿಯ ಸೂಫಿ ಶೇಖ್ ಗಳು ಮತ್ತು ಭಾರತದ ಪ್ರಾಂತೀಯ ವಿಲಾಯ (Territorial jurisdictions) ಗಳು ಪುರುಷ ಪ್ರಧಾನ ತಪಸ್ವಿ ಸಂಸ್ಕೃತಿಯನ್ನು (ascetic culture) ಸೃಷ್ಟಿಸಿದ್ದರು. ದೆಹಲಿ ಸುಲ್ತಾನರ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ಚಿಶ್ತಿ ಸೂಫಿಗಳು ತಮ್ಮ ಧರ್ಮಶಾಲೆಗಳನ್ನು (ಖಾನ್ ಖಾಹ್) ಸ್ಥಾಪಿಸಿ, ಅಲ್ಲಿ ಆಧ್ಯಾತ್ಮಿಕ ಬೋಧನೆ ಮತ್ತು ತರಬೇತಿ ಪಡೆದ ತಮ್ಮ ಶಿಷ್ಯಂದಿರನ್ನು ನೇಮಿಸಿದರು. ಚಿಶ್ತಿಗಳು ಕಾರ್ಯರೂಪಕ್ಕೆ ತಂದಿದ್ದ ಹಲವಾರು ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಸೂಚಿಗಳ ಅಂಶಗಳು ಗಮನಾರ್ಹ. ಆಡಳಿತಗಾರರೊಂದಿಗಿನ ಅವರ ಸಂಬಂಧಗಳು ಮತ್ತು ಭೌತಿಕ ಉಡುಗೊರೆಗಳ ಹರಿವು, ದೈವಪ್ರಜ್ಞೆಯನ್ನು ಬೆಳೆಸುವಲ್ಲಿ ಅವರಿಟ್ಟಿದ್ದ ಅಪಾರ ಶ್ರದ್ಧೆ, ಅಗೋಚರ ಲೋಕದ ಬಗೆಗಿನ ವಿಶ್ವಾಸ, ಪ್ರಾರ್ಥನೆ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಅಭಿವ್ಯಕ್ತಿಯನ್ನು ರೂಪುಗೊಳಿಸುವ ಸೂಫಿ ಸಂಗೀತಗಳು ಅವುಗಳಲ್ಲಿ ಪ್ರಧಾನವಾದವು.
ಈ ಅಂಶಗಳಲ್ಲಿ ಮೊದಲನೆಯದು, ಆಡಳಿತಗಾರರೊಂದಿಗೆ ಅವರ ಸಂಬಂಧ ಮತ್ತು ಹೊಸದಾಗಿ ಸೇರಿಸಲ್ಪಟ್ಟ ಪ್ರಾಂತ್ಯಗಳ ಶ್ರೀಮಂತ ವರ್ಗದವರೊಂದಿಗೆ ಅವರು ಬೆಳೆಸಿದ ಸಂಬಂಧವಾಗಿದೆ. ಸೂಫಿಗಳು ತಮ್ಮ ಆಧ್ಯಾತ್ಮಿಕ ಹಕ್ಕನ್ನು ಬಳಸಿ, ತಮ್ಮ ದಿವ್ಯ ನ್ಯಾಯವ್ಯಾಪ್ತಿಯನ್ನು ಬಳಸಿ ಆಡಳಿತಗಾರರ ಮೇಲೆ ಪ್ರಾಬಲ್ಯ ಸಾಧಿಸಿದ್ದುಂಟು. ಪುಣ್ಯ ವ್ಯಕ್ತಿಗಳ ಆಶೀರ್ವಾದವಿರುವುದರಿಂದ ನೀವು ಅಧಿಕಾರದಲ್ಲಿದ್ದೀರಿ ಎಂಬುದನ್ನು ಅವರಿಗೆ ಜ್ಞಾಪಿಸುತ್ತಿದ್ದರು. ದೃಶ್ಯ ಮತ್ತು ಅದೃಶ್ಯ ಎಂಬ ಎರಡು ಲೋಕದಲ್ಲೂ ಅವರು ಒಂದೇ ಸಮಯದಲ್ಲಿ ವಿಹರಿಸುತ್ತಾ, ಅದೃಶ್ಯಲೋಕದ ಸಂದೇಶಗಳನ್ನು ತಮ್ಮ ಆಯ್ದ ಶಿಷ್ಯರಿಗೆ ಮತ್ತು ಆಗಾಗ್ಗೆ ಬರುವ ಜನರಿಗಾಗಿ ವ್ಯಾಖ್ಯಾನಿಸಿ ಕೊಡುತ್ತಿದ್ದರು. “ಲೌಕಿಕ ಅಧಿಕಾರಸ್ಥರಿಗಿಂತ ಅತ್ಯುನ್ನತವಾದ ಶ್ರೇಣಿಯನ್ನು ಅಲೌಕಿಕ ಶಕ್ತಿ ಹೊಂದಿರುವವರಿಗೆ ನಿಗದಿಪಡಿಸಲಾಗಿದೆ. ವಿಶ್ವದ ಎಲ್ಲಾ ಪ್ರದೇಶಗಳ ಕಲ್ಯಾಣದ ಬಗ್ಗೆ ಗಮನ ಹರಿಸಬೇಕು. ಒಂದು ನಿರ್ದಿಷ್ಟ ಪ್ರದೇಶದ ವಿಲಾಯತ್ (ಅಧಿಕಾರ)ಗೆ ಸಂಬಂಧಿಸಿದ ಅಂತಹ ಹಕ್ಕುಮಂಡನೆಯನ್ನು ಖುರಾಸಾನಿನ ಶೇಖ್‌ಗಳು ತೀವ್ರವಾಗಿ ಮಾಡುತ್ತಿದ್ದರು. ಇದು ಹದಿನಾಲ್ಕನೆಯ ಶತಮಾನ ಹಾಗೂ ನಂತರದ ಭಾರತೀಯ ಸೂಫಿ ಸಾಹಿತ್ಯದಲ್ಲಿ ಸಾಮಾನ್ಯವಾಗಿದೆ.”
ಪ್ರಾದೇಶಿಕ ಅಧಿಕಾರದ (ವಿಲಾಯ) ಕಲ್ಪನೆ ಮತ್ತು ಸೂಫಿ ಸಂತರ ಇಹಲೋಕ (ದುನಿಯಾ) ದೊಂದಿಗಿನ ಸಂಬಂಧವು ಒಂದು ರೀತಿಯ ವಿರೋಧಾಭಾಸವಾಗಿತ್ತು. ಸೂಫಿ ಧರ್ಮಶಾಲೆಗಳ (ಖಾನ್ ಖಾಹ್) ಕಾರ್ಯ ನಿರ್ವಹಣೆಗೋಸ್ಕರ ಆಡಳಿತಗಾರರ ಆರ್ಥಿಕ ಸಹಾಯ ಮತ್ತು ಸರಕಾರವು ನೀಡುತ್ತಿದ್ದ ಕಂದಾಯ ರಹಿತ ಭೂಮಿ (ಮದದೇ ಮಆಷ್), ದಾನದ ರೂಪದಲ್ಲಿ ನೀಡುತ್ತಿದ್ದ ಸಹಾಯದ ಅಗತ್ಯತೆ ಅವರಿಗಿತ್ತು. ಇಂತಹ ಸಹಾಯಗಳನ್ನ ಚಿಶ್ತಿಗಳು ಪುನರ್ ವಿತರಣೆ ಎಂಬ ಆಧ್ಯಾತ್ಮಿಕ ವ್ಯವಸ್ಥೆ ಮೂಲಕ ನಿಭಾಯಿಸಿದರು. ಉದಾಹರಣೆಗೆ, ಭೌತಿಕ ವಸ್ತುಗಳ ಶೇಖರಣೆ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಹಝ್ರತ್ ನಿಝಾಮುದ್ದೀನ್ ಔಲಿಯಾ ಹೇಳುತ್ತಾರೆ:
“ಮಹಿಳೆಯರ ಮುಸುಕಿಗೆ ಸಮಾನವಾದಂತಹ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಭೌತಿಕ ವಸ್ತುಗಳನ್ನು ಶೇಖರಿಸಬಾರದು. ಆದರೆ ತನಗೆ ಲಭಿಸಿದ್ದಕ್ಕಿಂತ ಹೆಚ್ಚಾಗಿ ಲಭಿಸುವುದನ್ನೆಲ್ಲವನ್ನೂ ವಿತರಿಸಬೇಕು. ಓ ಮಗನೇ, ಚಿನ್ನವು ಇತರರಿಗೆ ನೀಡಲಿಕ್ಕೋಸ್ಕರ ಇರುವಂತದ್ದು. ಅದನ್ನು ಶೇಖರಿಸಿಟ್ಟರೆ ಕಲ್ಲಿಗೂ ಚಿನ್ನಕ್ಕೂ ವ್ಯತ್ಯಾಸವೇನು?.” – Amir Hasan sijzi, Favaid Al fuad

ಈ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಉನ್ನತಿ ಎಂಬುದು ಖಾನ್ ಖಾಹ್ ಗಳಿಗೆ ಬರುವ ಸಂಪತ್ತಿನ ಹರಿವಿನ ಮೇಲೆ ಅವಲಂಬಿಸಿದೆ. ಆರಾಧನೆ ಮತ್ತು ಆಧ್ಯಾತ್ಮಿಕ ತರಬೇತಿಗಳಿಗೆ ಸಂಪತ್ತು ಅಡ್ಡಿಯಾಗುತ್ತದೆ ಎಂಬುದು ಸೂಫಿ ಉಪದೇಶಗಳ ಸಾರ. ತಾನು ಮಾಡುವ ಕರ್ಮಗಳು ಧನ-ಕನಕಗಳಿಗೆ ಮರುಪಾವತಿ ಆಗಬಹುದೆನ್ನುವ ಕಾರಣಕ್ಕೆ ಅವುಗಳ ನಿರೀಕ್ಷೆಯು ಆಧ್ಯಾತ್ಮಿಕತೆಗೆ ಅಡಚಣೆಯಾಗುತ್ತದೆ. ಭೌತಿಕ ವಸ್ತುಗಳ ಈ ರೀತಿಯ ಅಪಮೌಲ್ಯೀಕರಣದ ಜೊತೆಗೆ, ಈ ಲೋಕದ ಬಗ್ಗೆ ಚಿಶ್ತಿಗಳು ವಿಶೇಷ ದೃಷ್ಟಿಕೋನವನ್ನು ಹೊಂದಿದ್ದರು. ಈ ಲೋಕವು ಅಗೋಚರಲೋಕದ ಮೇಲ್ಪದರ ಮಾತ್ರ. ಅಗೋಚರ ಲೋಕದ ಆಧ್ಯಾತ್ಮಿಕ ತತ್ವಗಳು ಈ ಲೋಕದಲ್ಲಿ ಎಲ್ಲರಿಗೂ ಗೋಚರವಾಗುತ್ತವೆ.
ಅಗೋಚರ ಲೋಕ ಮತ್ತು ಅದರಲ್ಲಿನ ಸಂತರ ಹಾಗೂ ಅವರ ಶಿಷ್ಯಂದಿರ ಶ್ರೇಣಿಯು, ಚಿಶ್ತಿ ಸೂಫಿಗಳಿಗೂ ಅವರ ಹಿಂಬಾಲಕರಿಗೂ ಮಾರ್ಗದರ್ಶನ ಹಾಗೂ ದೃಶ್ಯ ಜಗತ್ತಿನಲ್ಲಿ ನಡೆಯುವ ಘಟನೆಗಳ ವ್ಯಾಖ್ಯಾನಗಳಾಗಿದ್ದವು. ಅಗೋಚರ ಲೋಕದ ವ್ಯಕ್ತಿಗಳು (Mardan -E- Ghaib) ದೃಶ್ಯ ಜಗತ್ತಿನ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರೆಂಬುದಕ್ಕೆ ಹಲವು ಪುರಾವೆಗಳಿವೆ:
“ಸಂಭಾಷಣೆಯು ಅಗೋಚರ ಲೋಕದ ಜನರತ್ತ ಹೊರಳಿತು. ಅವರು ಪರಮ ಭಕ್ತಿ, ಒಳನೋಟ ಹೊಂದಿರುವವವರನ್ನು ಕಂಡರೆ ತಮ್ಮೊಡನೆ ಕರೆದೊಯ್ಯುತ್ತಿದ್ದರು. ಗುರುಗಳು ಬದಾಯೂನಿನ ನಾಸಿರ್ ಎಂಬ ಯುವಕನ ಬಗ್ಗೆ ಒಂದು ಕಥೆ ಹೇಳುತ್ತಾರೆ. ತನ್ನ ತಂದೆ ದೇವರೊಂದಿಗೆ ಲೀನವಾಗಿದ್ದರೆಂದು ಆತ ಹೇಳುತ್ತಿದ್ದುದನ್ನು ನಾನು ಕೇಳಿದ್ದೆ. ಒಂದು ರಾತ್ರಿ ಅವರು ತಂದೆಯವರನ್ನು ಬಾಗಿಲ ಬಳಿ ಬರಲು ಹೇಳಿದರು. ಅವರು ಹೊರಬಂದರು. ಅವರು ಅಲ್ಲಿ ಪರಸ್ಪರ ಕುಶಲತೆಯಿಂದ ಮಾತನಾಡುವುದಾಗಿ ಕೇಳಿಸಿತು. ಬಳಿಕ ನನ್ನ ತಂದೆಯವರು ‘ನಾನು ನನ್ನ ಮಗನಿಗೂ ಪರಿವಾರದವರಿಗೂ ವಿದಾಯ ಹೇಳುವೆ’ ಎಂದು ಹೇಳುವುದನ್ನು ಕೇಳಿಸಿಕೊಂಡೆನು. ‘ಸಮಯ ದಾಟುತ್ತಿದೆ’ ಎಂದು ಅವರು ಹೇಳಿದರು. ಅದಾದ ನಂತರ ಅವರು ಎಲ್ಲಿಗೆ ಹೋದರು ಎಂಬುದನ್ನು ನಾನರಿಯೆ!” – Favaid Ul fuad

Favaid Ul fuad- Nizamuddeen Aulia

ಈ ರೀತಿಯ ಕಥೆಗಳ ಕಾರಣದಿಂದ ಭೌತಿಕ ವಸ್ತುಗಳಿಗೆ, ಭಕ್ತಿ ಕಾರ್ಯಗಳಿಗೆ ಆಧ್ಯಾತ್ಮಿಕ ಮಹತ್ವಗಳನ್ನು ಚಿಶ್ತಿಗಳು ತಳಕು ಹಾಕಿದರು. ಅಗೋಚರ ಮತ್ತು ಗೋಚರ ಜಗತ್ತಿನ ಸಂಕೇತಗಳು ಒಳನೋಟ ಇರುವ ಜನರಿಗೆ ತಿಳಿಯುತ್ತದೆ. ಆದ್ದರಿಂದಲೇ ಅವರಿಗೆ ಒಂದು ವಿಶೇಷ ಸ್ಥಾನವಿರುವುದು. ಭೌತಿಕ ವಸ್ತುಗಳು ಮತ್ತು ಕಥೆಗಳಲ್ಲಿ ಅಡಕವಾಗಿರುವ ಆಧ್ಯಾತ್ಮಿಕ ರಹಸ್ಯಗಳನ್ನು ವಿವರಿಸುವ ನಿದರ್ಶನಗಳು ಮತ್ತು ರೂಪಕಗಳನ್ನು ಪರ್ಷಿಯನ್ ಮತ್ತು ಅರೇಬಕ್ ಭಾಷೆಗಳ ಸೂಫಿ ಸಾಹಿತ್ಯದಲ್ಲಿ ಹೇರಳವಾಗಿ ನೋಡಲು ಸಾಧ್ಯ. ಫರೀದುದ್ದೀನ್ ಅತ್ತಾರರ ‘ಮಂತಿಖು ತ್ತುಯೂರ್’ (ಪಕ್ಷಿಗಳ ಭಾಷೆ), ಜಲಾಲುದ್ದೀನ್ ರೂಮಿಯವರ ‘ಮಸ್ನವಿ’ ಎಂಬ ಕಾವ್ಯ ಸಂಕಲನಗಳಲ್ಲಿರುವ ನಿಗೂಢಾರ್ಥಗಳನ್ನು ವ್ಯಾಖ್ಯಾನಿಸುವ ಅನೇಕ ಕಥೆಗಳು, ಉದಾಹರಣೆಗಳು ಅವುಗಳಲ್ಲಿವೆ.

ಚಿಶ್ತಿಗಳ ಪ್ರಕಾರ, ಅಲ್ಲಾಹನ ಸದಾ ಸ್ಮರಣೆಯು (Mashghool -E- Haqq) ಉಳಿದೆಲ್ಲಾ ಕಾರ್ಯಗಳಿಗಿಂತ ಪ್ರಧಾನವಾಗಿದೆ.
“ನಂತರ ಸಂಭಾಷಣೆಯು ದೇವರ ಸದಾ ಸ್ಮರಣೆಯತ್ತ ಹೊರಳಿತು. ಅದು ಪ್ರಧಾನ ಕಾರ್ಯವಾಗಿದೆ. ಅದರ ಹೊರತಾಗಿ ಇತರ ಕಾರ್ಯಗಳು ಅಲ್ಲಾಹನ ಅನುಗ್ರಹಗಳಿಗೆ ಅಡಚಣೆಯಾಗಿವೆ. ಗುರುಗಳು ಹೇಳುತ್ತಾರೆ, ‘ಒಮ್ಮೆ ನನಗೆ ನಾನು ಓದಿದ ಪುಸ್ತಕಗಳ ಬಗ್ಗೆ ಭಯ ಮೂಡಿತು. ಆ ಓದಿನ ಮೂಲಕ ನಾನು ಏನಾಗಿದ್ದೇನೆ ಎಂದು ನನ್ನನ್ನು ನಾನೇ ಪ್ರಶ್ನಿಸಿದೆನು’. ಇದಕ್ಕೆ ಸಂಬಂಧಿಸಿದಂತೆ ಗುರುಗಳು ಒಂದು ಕಥೆಯನ್ನು ಕೂಡ ಹೇಳಿದರು. ‘ಶೈಖ್ ಅಬೂ ಸಈದ್ ಅಬುಲ್ ಖೈರ್ ಅವರು ಆಧ್ಯಾತ್ಮಿಕ ಉನ್ನತಿಯನ್ನು ತಲುಪಿದಾಗ, ಅವರು ಓದಿದ್ದ ಎಲ್ಲಾ ಪುಸ್ತಕಗಳನ್ನು ಒಂದು ಮೂಲೆಯಲ್ಲಿ ಇರಿಸಿದರು. ಅದರಲ್ಲಿನ ಬರಹಗಳನ್ನು ತೊಳೆದರು ಎಂದೂ ಕೆಲವರು ಹೇಳುತ್ತಾರೆ’. ಸಣ್ಣ ವಿರಾಮದ ಬಳಿಕ ಅವರು ಮುಂದುವರೆಸುತ್ತಾರೆ; ‘ಅವುಗಳೆಲ್ಲವನ್ನೂ ಅವರು ತೊಳೆದರು ಎನ್ನುವುದು ಸರಿಯಲ್ಲ. ಅವರು ಅವುಗಳನ್ನು ಒಂದು ಪ್ರತ್ಯೇಕ ಸ್ಥಳದಲ್ಲಿ ಇಟ್ಟರು. ಒಂದು ದಿನ ಆ ಪುಸ್ತಕಗಳಿಂದ ಕೆಲವು ಕಾರ್ಯಗಳನ್ನು ಕಲಿತರು. ಆಗ ಒಂದು ಅಶರೀರವಾಣಿ ಕೇಳಿಸಿತು. ‘ಓ ಅಬೂ ಸ’ಈದ್, ನಮ್ಮ ಒಪ್ಪಂದವನ್ನು ರದ್ದುಗೊಳಿಸೋಣ, ಏಕೆಂದರೆ ನೀವು ಬೇರೆ ವಿಷಯದಲ್ಲಿ ತಲ್ಲೀನರಾದಿರಿ!’. ಕಥೆಯ ಈ ಹಂತವನ್ನು ತಲುಪಿದಾಗ ಗುರುಗಳು ಅಳಲಾರಂಭಿಸಿದರು. ಮತ್ತು ಈ ಎರಡು ಸಾಲುಗಳನ್ನು ಹಾಡಿದರು;
‘ಓ ದ್ವೇಷದ ನೆರಳೇ,
ನಿನ್ನನ್ನು ಹೇಗೆ ಇಟ್ಟುಕೊಳ್ಳಬಹುದು,‌
ಇನಿಯನ ಆಲೋಚನೆ ಕೂಡಾ ಸಿಗದ ಕಡೆ’.
ಅಂದರೆ, ಸೂಫಿಗಳ ಬಗೆಗಿನ ಪುಸ್ತಕಗಳು ಕೂಡ ಆಧ್ಯಾತ್ಮಿಕತೆಗೆ ಅಡಚಣೆಯಾಗುವ ಕಡೆ, ಆತನ ಹೊರತು ಇತರ ಕಾರ್ಯಗಳಿಗೆ ಹೇಗೆ ಜಾಗ ಸಿಗಬಹುದು?.” – Favaid ul fuad

ಒಂದು ಅಶರೀರವಾಣಿಯು ಅಬೂ ಸ’ಈದರಿಗೆ ತಮ್ಮ ಪುಸ್ತಕಗಳನ್ನು ತ್ಯಜಿಸಲು ಪ್ರೇರೇಪಿಸಿತು. ಅದೂ ಕೂಡ ಪೂರ್ವಕಾಲದ ಸೂಫಿಗಳ ಬಗೆಗಿನ ಪುಸ್ತಕಗಳನ್ನು!. ಅಲ್ಲಾಹನ ಸ್ಮರಣೆಯಲ್ಲಿ ನಿರತರಾಗುವುದನ್ನು ಇಂತಹ ಆಲೋಚನೆಗಳು ತಡೆಯುವುದು ಎಂಬುದನ್ನು ಪರ್ಷಿಯನ್ ಸೂಫಿ ಗ್ರಂಥಗಳಲ್ಲಿ ಕಾಣಬಹುದು. ಅಂತಹ ಧ್ಯಾನಾಸಕ್ತ ಮನೋಭಾವವು ಲೈಂಗಿಕತೆ, ಹಸಿವು ಮುಂತಾದ ವಾಂಛೆಗಳನ್ನು ದೂರಮಾಡುತ್ತದೆ. ದೇವರಿಗೋಸ್ಕರ ಮಾತ್ರ ಬದುಕು ಎಂಬ ಚಿಶ್ತಿ ತತ್ವದ ಉದಾಹರಣೆಯಾಗಿ ನಿಝಾಮಿಯವರು ಉಲ್ಲೇಖಿಸಿದ ಒಂದು ಕಥೆಯಲ್ಲಿ ದೇವನ ಸ್ಮರಣೆಯಲ್ಲಿ ನಿರತರಾದ ಸೂಫಿಗಳ ಮನೋಭಾವವು ಜಗತ್ತಿನ ಜೀವನಾನುಭವವನ್ನು ಹೇಗೆ ಬದಲಾಯಿಸುತ್ತದೆ ಎಂದು ವಿವರಿಸಿದ್ದಾರೆ. “ಓರ್ವ ಸಂತರು ಒಂದು ನದಿ ದಡದಲ್ಲಿ ತಮ್ಮ ಬದುಕು ಕಂಡುಕೊಂಡಿದ್ದರು. ಒಂದು ದಿನ ಅವರು ನದಿಯ ಇನ್ನೊಂದು ದಡದಲ್ಲಿರುವ ದರ್ವೇಶರಿಗೆ ಆಹಾರ ನೀಡುವಂತೆ ತಮ್ಮ ಪತ್ನಿಗೆ ಆದೇಶಿಸಿದರು. ನದಿ ನೀರನ್ನು ದಾಟಲು ಅಸಾಧ್ಯ ಎಂದು ಪತ್ನಿ ನೆಪ ಹೇಳಿದರು. ಅವರು ಹೇಳಿದರು: ‘ನದಿ ತೀರವನ್ನು ತಲುಪಿದಾಗ, ನನ್ನ ಗಂಡನ ಮೇಲಿನ ಗೌರವದ ಕಾರಣ ದಾರಿತೋರಿಸಬೇಕು ಎಂದು ನದಿ ನೀರಿಗೆ ಹೇಳಬೇಕು’. ಇದನ್ನು ಕೇಳಿದ ಆಕೆ ಒಂದು ಕ್ಷಣ ಹೌಹಾರಿದರೂ, ತನ್ನ ಗಂಡನ ಆದೇಶವನ್ನು ಹೇಗೆ ಧಿಕ್ಕರಿಸಲಿ ಎಂದು ಹೊರಟಳು. ಆಕೆ ಆಹಾರದ ಜೊತೆ ನದಿ ತೀರಕ್ಕೆ ಬಂದು ತನ್ನ ಗಂಡನ ಸಂದೇಶವನ್ನು ವಿವರಿಸಿದಳು. ನದಿಯು ಆಕೆಗೆ ದಾರಿಮಾಡಿಕೊಟ್ಟಿತು. ನೀರನ್ನು ದಾಟಿದ ಮೇಲೆ ಆಕೆಯು ದರ್ವೇಶಿಯ ಎದುರು ಆಹಾರವನ್ನು ಇಟ್ಟಳು. ಬಳಿಕ ‘ನಾನು ಹೇಗೆ ನದಿ ದಾಟಲಿ’ ಎಂದು ದರ್ವೇಶರನ್ನು ಕೇಳಿದಾಗ, ‘ನೀವು ಹೇಗೆ ಬಂದಿರಿ?’ ಎಂದು ದರ್ವೇಶ್ ಕೇಳಿದರು. ಆಗ ಆಕೆ ತನ್ನ ಗಂಡನ ಮಾತುಗಳನ್ನು ವಿವರಿಸಿದಳು. ‘ಮೂವತ್ತು ವರ್ಷಗಳಿಂದ ಉಪವಾಸವಿದ್ದ ದರ್ವೇಶರ ಮೇಲಿನ ಗೌರವದಿಂದ ದಾರಿ ತೋರಿಸು’ ಎನ್ನಬೇಕೆಂದರು. ಈ ಮಾತನ್ನು ಕೇಳಿ ಹೌಹಾರಿದ ಆ ಮಹಿಳೆಯು ನದಿ ಹತ್ತಿರ ಬಂದು, ದರ್ವೇಶರ ಸಂದೇಶವನ್ನು ವಿವರಿಸಿದಳು. ತಕ್ಷಣ ನದಿ ದಾರಿಮಾಡಿಕೊಟ್ಟಿತು. ಮನೆಗೆ ತಲುಪಿದ ಆ ಮಹಿಳೆ ತನ್ನ ಗಂಡನ ಕಾಲಿಗೆರಗಿ, ಗಂಡ ಮತ್ತು ದರ್ವೇಶರ ಸಂದೇಶದ ರಹಸ್ಯವನ್ನು ವಿವರಿಸುವಂತೆ ಬಿನ್ನವಿಸಿಕೊಂಡಳು. ಆ ಸಂತರು ಹೇಳಿದರು, ‘ನೋಡು, ನನ್ನ ಉದ್ರೇಕಗಳನ್ನು ಪೂರೈಸಲು ನಾನೆಂದಿಗೂ ನಿನ್ನೊಂದಿಗೆ ಮಲಗಿರಲಿಲ್ಲ. ನಾನು ಕೇವಲ ನಿನ್ನ ಬಯಕೆಗಳನ್ನಷ್ಟೇ ಪೂರೈಸಿದ್ದೆ. ವಾಸ್ತವದಲ್ಲಿ ನಾನು ಎಂದಿಗೂ ನಿನ್ನೊಂದಿಗೆ ಮಲಗಿರಲಿಲ್ಲ. ಅದೇ ರೀತಿ ಆ ದರ್ವೇಶರು ಕೂಡಾ ಅವರ ಹಸಿವನ್ನು ನೀಗಿಸಲು ಅನ್ನಾಹಾರವನ್ನು ಮುಟ್ಟಿರಲಿಲ್ಲ. ದೇವಸ್ಮರಣೆಗೆ ಶಕ್ತಿ ಲಭಿಸಲಿಕ್ಕೋಸ್ಕರ ಮಾತ್ರ ಅವರು ಆಹಾರ ಸೇವಿಸುತ್ತಿದ್ದರು” – favaid ul fuad.

ಮೂಲ: ಆದಿತ್ಯ ಬೆಹ್ಲ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ


ಡಾ. ಆದಿತ್ಯ ಬೆಹಲ್ ಅವರು ತಮ್ಮ ಸೂಫೀ ಅಧ್ಯಯನ ಹಾಗೂ ದಕ್ಷಿಣ ಏಷ್ಯಾದ ಸಾಂಸ್ಕೃತಿಕ ಸಂಶೋಧನೆಗಳಿಂದ ಪ್ರಸಿದ್ಧರಾದವರು. ಅವರು ತಮ್ಮ ಬಿಎ ಪದವಿಯನ್ನು 1988 ರಲ್ಲಿ ಬೌಡಿನ್ ಕಾಲೇಜಿನಲ್ಲಿ, ಶಿಕಾಗೊ ಯುನಿವರ್ಸಿಟಿಯಲ್ಲಿ ರಿಲೀಜಿಯಸ್ ಸ್ಟಡೀಸ್ ನಲ್ಲಿ ಮಾಸ್ಟರ್ ಪದವಿ(1989) ಮತ್ತು ಪಿಹೆಚ್‌ಡಿ ಪದವಿಯನ್ನೂ (1995) ಪಡೆದರು. ಡಾ. ಬೆಹಲ್ ಉರ್ದು ಮತ್ತು ಹಿಂದಿ ಸಾಹಿತ್ಯ ಹಾಗೂ ದಕ್ಷಿಣ ಏಷ್ಯಾದ ಮಧ್ಯಕಾಲೀನ ಸಾಂಸ್ಕೃತಿಕ ಇತಿಹಾಸವನ್ನು ಪಾಠ ಮಾಡುತ್ತಿದ್ದರು. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅಧ್ಯಯನ ವಿಭಾಗದಲ್ಲಿ ಕಲಿಸುತ್ತಿದ್ದರು. ಮುಂದೆ 2001 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ರಿಲೀಜಿಯಸ್ ಸ್ಟಡೀಸ್ ವಿಭಾಗದಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ಮುಂದಿನ ವರ್ಷ ಅದೇ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕಗೊಂಡರು. ಅವರು ದಕ್ಷಿಣ ಏಷ್ಯಾದ ಇಂಡೋ ಮುಸ್ಲಿಂ ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ತೀವ್ರವಾದ ಆಸಕ್ತಿ ಹೊಂದಿದ್ದರು. ವಿಶೇಷವಾಗಿ ಸೂಫೀ ಅನುಭಾವ ಸಾಹಿತ್ಯದಲ್ಲಿ ಅವರಿಗೆ ಅಪಾರ ಒಲವು ಇತ್ತು.
ಆದಾಗ್ಯೂ ಅವರ ಪ್ರತಿಭೆಯು ಚರಿತ್ರೆ, ಧರ್ಮ, ಉಪಭೂಖಂಡದ ಸಾಹಿತ್ಯ, ಸಾಹಿತ್ಯ ಮತ್ತು ಧರ್ಮ ಮೀಮಾಂಸೆ ಮೊದಲಾದ ಹಲವಾರು ವಿಷಯಗಳನ್ನು ಆವರಿಸಿತ್ತು. ಭಾರತೀಯ ಸೂಫೀ ಅನುಭಾವ ಸಾಹಿತ್ಯ ಮತ್ತು ಸಂಸ್ಕೃತ ಭಾಷೆಯ ಕುರಿತು ಬಹಳಷ್ಟು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿರುವ ಇವರು ಹಿಂದೂಸ್ತಾನಿ ಸಂಗೀತ ಹಾಗೂ ಸೂಫೀ ಸಂಗೀತಗಳ ಆರಾಧಕರೂ ಆಗಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯದಿಂದ ತನ್ನ 43 ನೆಯ ವಯಸ್ಸಿನಲ್ಲಿ ನಿಧನರಾದರು.

1 Comment

Leave a Reply

*