ಅಲಿಘರ್ ವಿದ್ಯಾಲಯದಲ್ಲಿರುವ ಸಯ್ಯದರ ಸಮಾಧಿಯ ನುಡಿಗಳು

ಓ ಇಹದ ಬದುಕಿನಲಿ
ಸಿಲುಕಿರುವ ಮನುಷ್ಯನೇ
ಓ ಬದುಕೆಂಬ ಪಂಜರದಲಿ
ಬಂಧಿಯಾಗಿಹ ಆತ್ಮವೇ

ಈ ತೋಟದೊಳು ನಲಿಯುತಿಹ
ಆ ಪಾದಗಳ ಸ್ವಾತಂತ್ರ್ಯವ ನೋಡು!
ಅಂದು ಕಂಗೆಟ್ಟಿದ್ದವರ
ಸಮೃದ್ಧತೆಯನೊಮ್ಮೆ ನೋಡು!

ಯಾವ ಭವಿಷ್ಯದ ಕನಸಿತ್ತೋ
ಆ ಮಹಾ ಪರ್ವವಿದು!
ಸಹನೆ ತಾಳ್ಮೆಗಳ ಹೊಲದಲ್ಲಿ
ಬೆಳೆದಿರುವ ಫಲವಿದು!

ನನ್ನ ಸಮಾಧಿಯ ಫಲಕಗಳು
ಮಾತನಾಡ ಬಯಸುತಿವೆ ನೋಡು
ಅಲ್ಲಿ ಕೆತ್ತಿರುವ ಭವಿಷ್ಯ
ವಾಣಿಯನ್ನು ನೋಡು !

ಮತ-ಪಂಥಗಳಿಗಾಗಿ ನಾಲಗೆಯ
ಹರಿಯಗೊಡದಿರು
ಪುನರುತ್ಥಾನದ ಸಂಭ್ರಮವು
ಇಲ್ಲಿ ಅಡಗಿಹುದು ಮೌನವಾಗಿ!

ಐಕ್ಯತೆಯ ದಾರಿಗಳು
ಜನ್ಮತಳೆಯಲಿ ನಿನ್ನ ಬರಹದಲ್ಲಿ
ಎಚ್ಚರ! ಹೃದಯಗಳು ನೋವುಣ್ಣದಿರಲಿ
ನಿನ್ನ ಲೇಖನಿಯಲ್ಲಿ!

ಹಾಡದಿರು ಹಳೆಯ
ರಾಗಗಳನ್ನು ನವ ಮಿಲನದಲ್ಲಿ
ಪುನರುಚ್ಚರಿಸದಿರು ಆ
ಉತ್ತರಗಳಿಲ್ಲದ ಸವಾಲುಗಳನ್ನು!

ಮುತ್ಸದ್ಧಿಯಾಗಿದ್ದರೆ ನೀನು
ನನ್ನ ಮಾತನೊಮ್ಮೆ ಕೇಳು
ಧೈರ್ಯವೇ ಸಾಧನವು
ಜನನಾಯಕನ ಹೃದಯದಲ್ಲಿ!

ಸಂಶಯವಿಲ್ಲದಿರಲಿ ನಿನ್ನ
ಆಶೋತ್ತರಗಳ ಅಭಿವ್ಯಕ್ತಿಯಲ್ಲಿ
ಭಯವಿಲ್ಲದಿರಲಿ
ಸದುದ್ದೇಶಗಳ ಹಾದಿಯಲ್ಲಿ

ಶರಣರ ಪರಿಶುದ್ಧ ಹೃದಯದಲ್ಲಿ
ದಗಾ ವಂಚನೆಗಳಿಗೆ ಜಾಗವಿಲ್ಲ
ಸರ್ವಾಧಿಕಾರದ ಭಯಗಳಿಗೆ
ಅಲ್ಲಿ ಅರ್ಥವಿಲ್ಲ!

ನಿನ್ನ ಕೈಗಳು ಮಾಯಾ ಲೇಖನಿಯ
ಎತ್ತಿ ಹಿಡಿಯಲಿ
ನಿನ್ನ ಹೃದಯವು ಜಮ್ ಶಾದನ*
ಮಧುಪಾತ್ರೆಯಾಗಲಿ!

ಓ ಅಲೌಖಿಕ ವಿದ್ಯಾರ್ಥಿಯೇ
ನಿನ್ನ ನಾಲಗೆಯು ನಿರ್ಮಲವಾಗಿರಲಿ
ನಿನ್ನ ಪ್ರಾರ್ಥನೆಯ ಕೂಗು
ನಿರುತ್ತರವಾಗದಿರಲಿ

ನಿನ್ನ ಮಾಯಾ ಕವಿತೆಗಳು
ಮಲಗಿರುವವರ ಎಚ್ಚರಿಸಲಿ
ನಿನ್ನ ಧ್ವನಿಯ ಕಿರಣಗಳು
ಅಂಧಕಾರಗಳ ಹುಟ್ಟಡಗಿಸಲಿ!!

ಅಲ್ಲಾಮ ಇಕ್ಬಾಲರ ಉರ್ದು ಕವಿತೆ
ಅನುವಾದ : ಪುನೀತ್ ಅಪ್ಪು

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ್ ಅಹ್ಮದ್ ಖಾನ್ ಇವರ ಸಮಾಧಿಗೆ ಬೇಟಿಕೊಟ್ಟ ಸಂದರ್ಭದಲ್ಲಿ ಕವಿ ಅಲ್ಲಾಮ ಇಕ್ಬಾಲರು ಬರೆದ ಕವಿತೆಯಿದು. ಸಯ್ಯದ್ ಅಹ್ಮದ್ ಖಾನ್ ಮುಸ್ಲಿಂ ಯುವಕರ ರಾಜಕೀಯ ಮುಂದಾಳುತ್ವದ ಬಗ್ಗೆ ಕಂಡಿದ್ದ ಕನಸನ್ನು ಇಕ್ಬಾಲರು ಕಾವ್ಯವಾಗಿಸಿದ್ದಾರೆ.
*ಜಮ್ ಶಾದನ ಮಧುಪಾತ್ರೆ (Jaam -O-jam) ಇಸ್ಲಾಂ ಪೂರ್ವದ ಪರ್ಶಿಯಾದ ದಂತಕಥೆಯಲ್ಲಿ ಬರುವ ಜಮ್ ಶಾದ್ ದೊರೆಯ ಕೈಯಲ್ಲಿದ್ದ ಭವಿಷ್ಯ ನೋಡಬಹುದಾದ ಮಧುಪಾತ್ರೆ, ಇಲ್ಲಿ ಕವಿ ಇಕ್ಬಾಲರು ಅದನ್ನು ರೂಪಕವಾಗಿ ಬಳಸಿದ್ದಾರೆ )

Leave a Reply

*