ಸಾವಿನೊಡನೊಂದು ಮುಖಾಮುಖಿ

ಹೊಳೆವ ಸೂರ್ಯನು
ಮರೆಯಾದ, ಪರದೆಯೊಳಗಿಂದ
ಇಣುಕುತಿಹಳು ನಿಶೆಯು
ಭುವಿಯ ಹೆಗಲಿನ ಮೇಲೆ
ಹರಡುತಿದೆ ಇರುಳ ಕೇಶರಾಶಿ

ಅದಾವ ದುಃಖವನೆದುರಿಸಲೋ
ಈ ಕರಿಯ ಧಿರಿಸು
ಸೂರ್ಯನ ಸಾವಿನ ಸೂತಕಕೆ
ಪ್ರಕೃತಿಯ ಸಭೆಯೇ?

ಮಾಯಾ ತುಟಿಗಳ ಮೇಲೊಂದು
ಬಾನು ಪಠಿಸುತಿದೆ ಗುಪ್ತಮಂತ್ರ
ಎಚ್ಚೆತ್ತ ಕಂಗಳನು ಕಾಯುತಿಹ
ನಿಶೆಯ ಜಾದೂಗಾರ

ನೀರವತೆಯ ನದಿಯೊಳಗೆ
ಮುಳುಗಿಹುದು ಭಾವ ಪ್ರವಾಹಗಳು
ಅದೋ ಕೇಳಿ ಬರುತಿದೆ ಎಲ್ಲಿಂದಲೋ
ಸದಾ ಮಿಡಿಯುತಿಹ ಸದ್ದುಗಳು!

ಎದೆಯ ವಿವಶತೆಗಳಿಗೆ
ವಶವಾಗುತಿದೆ ಈ ಜಗವು
ಸೆಳೆದು ತಂದಿದೆ ಎನ್ನ
ಜಗದ ಜಂಜಡಗಳಿಂದ ಬಹುದೂರ!

ದುಃಖ ಸಾದೃಶ್ಯಗಳ
ಮೂಕ ಪ್ರೇಕ್ಷಕನಾಗಿರುವೆ
ಏಕಾಂತತೆಯ ಮುಸುಕಿನೊಳಗೆ
ಮಲಗಿರುವವರ ಒಡನಾಡಿಯಾಗಿರುವೆ!

ಓ ನನ್ನ ವಿವಶತೆಯೆ ಸ್ವಲ್ಪ
ವಿರಮಿಸಗೊಡು ನನ್ನ ಇಲ್ಲಿ
ಈ ಹೊಸ ಜಾಗವನ್ನೊಮ್ಮೆ ತೊಯ್ದು
ಬಿಡುವೆ ನಾಲ್ಕು ಹನಿ ಕಣ್ಣೀರಿನಲ್ಲಿ!

ಕತ್ತಲ ಲೋಕಕ್ಕೆ ಜಾರಿರುವವರೇ
ಓ ಎಲ್ಲಿರುವಿರಿ ನೀವು
ನೀವಿರುವ ಆ ಲೋಕದ ಬಗ್ಗೆ
ನನಗೊಂದಿಷ್ಟು ತಿಳಿಸಿಕೊಡಿ!

ಅದೊಂದು ಸಂತಸದ ಪರದೆಯೊಳಗೆ
ಅಡಗಿರುವ ಅಚ್ಚರಿಯೇ
ಜೀವ ಜಗತ್ತಿನ ಕೊನೆಮೊದಲಿಲ್ಲದ
ಹೋರಾಟದ ನಾಡೇ?

ಅಲ್ಲೂ ಕೂಡಾ ಮನುಷ್ಯನು
ದುಃಖದ ಚಿಪ್ಪಿನೊಳಗಿಹನೆ
ಆ ಪರಲೋಕದಲ್ಲಿಯೂ
ದಿಕ್ಕೆಟ್ಟ ಹೃದಯದಲ್ಲಿಹನೆ?

ಪ್ರೇಮದ ಮೊಂಬತ್ತಿಗೆ ಬೀಳುವ ಪತಂಗ
ಅಲ್ಲೂ ಸುಟ್ಟುಹೋಗಿದೆಯೇ
ಆ ಹೂವು ಮತ್ತು ಮೈನಾ ಹಕ್ಕಿಯ ಕತೆ
ಆ ತೋಟದಲ್ಲಿಯೂ ಕೇಳಿ ಬರುತಿದೆಯೇ?

ನೂಲಿನೆಳೆಯ ಅಂತರದಲ್ಲಿ
ಹರಿಯುವುದು ಹೃದಯ
ಕವಿಯ ನವಗಾನದಲಿ ಅಲ್ಲೂ
ಸಂಭ್ರಮಿಸುವುದೆ ಎದೆಯು?

ದುಃಖ ಸಂಗಾತಿಗಳೇ ಇಲ್ಲಿ
ಜೀವದೊಡನಾಡಿಗಳು
ಆ ತೋಟದಲ್ಲಿಯೂ ಈ
ಸಂಬಂಧಿಕರೆಂಬ ಮುಳ್ಳುಗಳಿವೆಯೇ?

ಒಂದು ರೊಟ್ಟಿಯ ಜೊತೆಗೆ
ನೂರಾರು ಉತ್ಪಾತಗಳಿಹುದಿಲ್ಲಿ
ಆ ಲೋಕದಲ್ಲಾದರೂ ಈ ಜೀವಕ್ಕೆ
ಜಂಜಡಗಳಿಂದ ಮುಕ್ತಿಯಿದೆಯೇ?

ಅಲ್ಲೂ ಮಿಂಚುಗಳಿವೆಯೇ
ರೈತನೂ, ಫಸಲುಗಳಿವೆಯೇ
ಸಾಗುತಿರುವ ಕಾರವಾನಗಳು
ದರೋಡೆಯಾಗುವ ಭಯವಿದೆಯೇ?

ಗೂಡು ಕಟ್ಟಲೆಂದು ಅಲ್ಲೂ
ಕಡ್ಡಿಗಳ ಆಯುತಿಹವೇ ಹಕ್ಕಿಗಳು
ಮನೆಕಟ್ಟಲೆಂದು ಇಟ್ಟಿಗೆ
ಮಣ್ಣುಗಳಿಗಾಗಿ ಪರದಾಡಲಿಹುದೇ?

ಅಲ್ಲೂ ಕೂಡಾ ಈ ಮನುಷ್ಯ
ತನ್ನ ನಿಜರೂಪವನು ಮರೆತಿಹನೇ
ದೇಶ, ಸಂಪ್ರದಾಯಗಳ
ತಾರತಮ್ಯದ ಹಿಂದೆ ಬಿದ್ದಿಹನೇ?

ಅಲ್ಲಿಯೂ ಕೋಗಿಲೆಯ ಆರ್ತನಾದಕ್ಕೆ
ಹೂದೋಟಗಳು ಮರುಗುವುದಿಲ್ಲವೇನು?
ಈ ಲೋಕದ ಹಾಗೆ ಅಲ್ಲಿಯೂ ಕೂಡ
ಮಿಡಿವ ಹೃದಯಗಳು ಇರುವುದಿಲ್ಲವೇನು?

ಆ ಸ್ವರ್ಗವೊಂದು ಹೂದೋಟವೇ
ವಿಶ್ರಮಿಸಲು ಕಟ್ಟಿರುವ ಮನೆಯೇ?
ಅಥವಾ ಪರದೆಯಿಲ್ಲದ
ನಿತ್ಯ ಸುಂದರಿಯ ಮೊಗವೇ?

ನರಕವೆಂದರೆ ಬರೀ
ಪಾಪಗಳ ಜ್ವಲಿಸುತಿಹ ಸ್ಥಳವೇ
ಅಥವಾ ಬೆಂಕಿಯೊಳಗೊಂದು
ಶಿಸ್ತನ್ನು ರೂಪಿಸುವ ಗುರಿಯೇ?

ನಡೆವ ವೇಗಕೆ ರೆಕ್ಕೆ ನೀಡಿದ
ಆ ಲೋಕದಲ್ಲಿ
ನಿಂತ ಜೀವಕೆ ಮರಣವೆಂದರು
ಏಕೆ ಈ ಲೋಕದಲ್ಲಿ

ಬದುಕು ಶಮನಗೊಳಿಸುವುದು
ಎದೆಯ ಗಾಯಗಳನಿಲ್ಲಿ
ಇಲ್ಲಿಯಂತೆ ಹರಿವ ಜ್ಞಾನಕೆ
ತಡೆಯೊಡ್ಡಿಹರೆ ಅಲ್ಲಿ?

ವಿರಹ ಬೇಗೆಯಲಿ
ಆತ್ಮ ವಿರಮಿಸುತಿಹುದೆ ಅಲ್ಲಿ
ಮೋಹಜಾಲಕೆ ಬಿದ್ದವನು
ಪಾಠ ಕಲಿಯುವನೆ ಅಲ್ಲಿ?

ಆ ಜಾಗವೂ ಕಗ್ಗತ್ತಲೆಯಲ್ಲಿ
ಮುಳುಗಿಹೋಗಿಹುದೇ
ಪ್ರೇಮದಾ ಬೆಳಕು
ಅಲ್ಲೂ ಜಗಮಗಿಸುತಿಹುದೇ?

ನೀನಾದರೂ ಹೇಳು ಆ ಸತ್ಯವನ್ನು
ಈ ದುಂಡನೆಯ ಭೂವೃತ್ತದಲ್ಲಿ
ಮರಣವೆಂದರೆ ಮನುಷ್ಯನ
ಹೃದಯವನು ಚುಚ್ಚುತಿಹ ಮುಳ್ಳಾಗಿಹುದೆ?

ಉರ್ದು ಮೂಲ: ಅಲ್ಲಾಮ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

Leave a Reply

*