ಶಿಂಖೀತ್ ನಾಡು, ಅಥವಾ ಆಂಗ್ಲ ಭಾಷಿಕರು ಸಾಮಾನ್ಯವಾಗಿ ಕರೆಯುವ ಮೌರಿತಾನಿಯ ಎಂಬ ಊರು ಸಾತ್ವಿಕ ವಿದ್ವಾಂಸರ, ಸಚ್ಚರಿತ ಸೂಫಿಗಳ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪಳಗಿದ ಅನೇಕ ಮಹಿಳಾಮಣಿಗಳ ಸಂಗಮ ಭೂಮಿ. ವಿದ್ವಾಂಸರ ಪ್ರಕಾರ, ಮೌರಿತಾನಿಯಾದ ಮಹಿಳೆಯರೂ ಕೂಡಾ ಅನೇಕ ಸಾಹಿತ್ಯ ಕೃತಿಗಳನ್ನು ಕಂಠಪಾಠ ಮಾಡುತ್ತಾರೆ. ಪದ್ಯ, ಗದ್ಯ, ಪ್ರವಾಸ ಕಥನ ಮುಂತಾದ ಪರಂಪರಾಗತ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಮೌರಿತಾನಿಯಾದ ಮಹಿಳೆಯರು ಅಗಾಧ ಪಾಂಡಿತ್ಯವುಳ್ಳವರಾಗಿದ್ದಾರೆ.
ಮರ್ಯಂ ಬಿಂತ್ ಬ್ವೈಬಾ ಎಂಬವರು ಅವರಲ್ಲೊಬ್ಬರು. ಈಗ ನಾನು ಹೇಳ ಹೊರಟಿರುವುದು ಆ ತಾಯಿಯ ಬಗ್ಗೆ. ಪರಿಶುದ್ಧ ಖುರ್ ಆನ್ ಮತ್ತು ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕೆಲವು ಪ್ರಧಾನ ಕೃತಿಗಳನ್ನು ಅವರು ಪೂರ್ತಿ ಕಂಠಪಾಠ ಮಾಡಿದ್ದಾರೆ.
ಶ್ರೇಷ್ಟ ವಿದ್ವಾಂಸರಾದ ಶೈಖ್ ಮುರಾಬಿತ್ ಅಲ್ ಹಾಜ್ಜರ ಧರ್ಮಪತ್ನಿಯಾದ ಇವರು ಅತಿಥಿಗಳನ್ನು ಅತ್ಯಂತ ಪ್ರೀತಿಪೂರ್ವಕವಾಗಿ ಬರಮಾಡುವ ಸ್ವಭಾವದವರು. ಸರಿಸುಮಾರು 35 ವರುಷಗಳ ಹಿಂದೆ ಮೌರಿತಾನಿಯಾದ ತುವಾಮಿರಃ ಸಮುದಾಯದ ಒಂದು ಸಣ್ಣ ಗುಡಿಸಲಿನಲ್ಲಾಗಿತ್ತು ಇವರೀರ್ವರನ್ನು ನಾನು ಮೊತ್ತ ಮೊದಲಾಗಿ ಭೇಟಿಯಾದದ್ದು.
ಈ ಭೇಟಿಗೆ ಕಾರಣವಾದ ಘಟನೆ ನಡೆದದ್ದು 1980ರಲ್ಲಿ. ಅದು ಅಬುದಾಬಿಯ ಒಂದು ಪುಸ್ತಕದಂಗಡಿಯಲ್ಲಿ ತಾಜಕಾನತ್ ಎಂಬ ಗೋತ್ರದ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖ್ ರೊಂದಿಗಿನ ಭೇಟಿಯಾಗಿತ್ತು. ದಿರಃ ಎಂಬ ಸವಿಶೇಷವಾದ ಪಶ್ಚಿಮ ಆಫ್ರಿಕಾದ ದಿರಿಸನ್ನು ಧರಿಸಿ, ತಲೆಗೆ ಮುಂಡಾಸು ಹಾಕಿದ್ದರಿಂದ ಒಂದೇ ನೋಟಕ್ಕೆ ಇವರು ಆಫ್ರಿಕಾದವರೆಂದು ಸುಲಭದಲ್ಲಿ ಮನದಟ್ಟಾಯಿತು. ಅಂದಿನ ಕಾಲದಲ್ಲಿ ಗಲ್ಫ್ ನಾಡುಗಳಲ್ಲಿ ಆ ವೇಷವಿಧಾನ ಬಹಳ ಅಪರೂಪವಾಗಿತ್ತು. ಎರಡು ವರುಷಗಳ ಹಿಂದೆ ಮಾಲಿಯಲ್ಲಿ ತಂಗಿದ್ದ ವೇಳೆ ಆಫ್ರಿಕಾದ ವಿದ್ವಾಂಸರನ್ನು ಭೇಟಿ ಮಾಡಿದ್ದಂದೇ ಅವರೊಂದಿಗೆ ಸೇರಿ ಜ್ಞಾನಾರ್ಜನೆಗೈಯಬೇಕೆಂಬ ಮಹದಾಸೆ ನನ್ನೊಳಗೆ ಚಿಗುರೊಡೆದಿತ್ತು. ಆದ್ದರಿಂದ ನಾನು ಶೈಖ್ ಅವರ ಬಳಿ ಮಾಲಿಕೀ ಕರ್ಮಶಾಸ್ತ್ರ ಧಾರೆಯ ಕ್ಲಾಸಿಕಲ್ ಗ್ರಂಥಗಳನ್ನು ಪರಂಪರಾಗತ ಶೈಲಿಯಲ್ಲಿ ಪಾಠ ಹೇಳಿಕೊಡುವ ಯಾರನ್ನಾದರೂ ಪರಿಚಯವಿದೆಯೇ ಎಂದು ಕೆದಕಿದಾಗ, ಶೈಖ್ ಅವರು ತಾವೇ ಖುದ್ದಾಗಿ ಪಾಠ ಹೇಳಿಕೊಡುತ್ತಿರುವುದಾಗಿಯೂ, ದರ್ಸ್ ಕಲಿಯಲು ತಮ್ಮ ಮನೆಗೆ ಹೋಗುವುದಾದರೆ ನನಗೆ ಮುಕ್ತ ಅವಕಾಶವಿದೆಯೆಂದೂ ಹೇಳಿದರು. ಅಂದಿನಿಂದ ಅಧಿಕೃತವಾಗಿ ನನ್ನ ಧಾರ್ಮಿಕ ವಿಧ್ಯಾಭ್ಯಾಸದ ಪರ್ಯಟನೆ ಪ್ರಾರಂಭವಾಯಿತು ಎಂದು ಹೇಳಬಹುದು.
ಅಲ್ ಐನಿನ ಇಸ್ಲಾಮಿಕ್ ಇನ್ಸ್ಟಿಟ್ಯೂಟಿನ ಅಧ್ಯಯನದೊಂದಿಗೆ ಇತ್ತ ಶೈಖ್ ಅಬ್ದುಲ್ಲಾ ಊದ್ ಸಿದ್ದೀಖರ ದರ್ಸಿನಲ್ಲೂ ಜ್ಞಾನಾರ್ಜನೆ ಭರಪೂರವಾಗಿ ಸಾಗಿತು. ಮೌರಿತಾನಿಯಾದ ಗುರುಗಳಂತೆ ಪಾಠ ಭಾಗಗಳನ್ನು ಕಂಠಪಾಠ ಮಾಡಲು ಮತ್ತು ‘ಲೌಹ್’ ಎಂದು ಕರೆಯಲ್ಪಡುವ ಮರದ ಹಲಗೆಯಲ್ಲಿ ಬರೆಯಲು ಅವರು ಒತ್ತಡ ಹೇರುತ್ತಲಿರಲಿಲ್ಲ. ಆದುದರಿಂದ ನಾನು ಕಿತಾಬುಗಳನ್ನು ನೋಡಿಯೇ ಅಭ್ಯಸಿಸುತ್ತಿದ್ದೆ. ಹೀಗೆ ಕೆಲವು ವರ್ಷಗಳ ಕಾಲ ಶೈಖ್ ಅಬ್ದುಲ್ಲಾ ಊದ್ ಹಾಗೂ ಮತ್ತಿಬ್ಬರು ಮಾಲಿಕೀ ಕರ್ಮಶಾಸ್ತ್ರ ವಿದ್ವಾಂಸರಾದ ಶೈಖ್ ಶೈಬಾನಿ, ಶೈಖ್ ಬಯ್ಯಾಹ್ ಊದ್ ಸಾಲಿಕ್ ಎಂಬವರ ಗರಡಿಯಲ್ಲಿ ಪಳಗುತ್ತಿದ್ದ ಸಮಯ ನನ್ನ ವಿದ್ಯಾರ್ಥಿ ಜೀವನದಲ್ಲಿ ಮಹಾ ತಿರುವೊಂದು ಸಂಭವಿಸಿತು. ಮಸ್ತೂಮ ಗೋತ್ರದ ಇಲೆಕ್ಟ್ರಿಷ್ಯನ್ ಯಹ್ಯಾ ಉದ್ಘಾತಿಯ ಭೇಟಿಯಾಗಿತ್ತು ಅದಕ್ಕೆ ಮೂಲ ಕಾರಣ. ಅವರು ನನ್ನನ್ನು ಮೌರಿತಾನಿಯಾದ ನಿರ್ಜನವಾದ, ಹೊರಪ್ರಪಂಚದೊಂದಿಗೆ ಸಂಪರ್ಕವಿಲ್ಲದ ಕುಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಶ್ರೇಷ್ಟ ವಿದ್ವಾಂಸರಾದ ಮುರಾಬಿತ್ ಅಲ್ ಹಾಜ್ಜ್ ಅವರ ಬಳಿಗೆ ಕರೆದೊಯ್ದರು. ಅವರ ಸುಪುತ್ರ ಶೈಖ್ ಅಬ್ದುಲ್ ರಹಿಮಾನ್ ಈಗ ಎಮಿರೇಟ್ಸಿನಲ್ಲಿದ್ದಾರೆಂದು ಯಹ್ಯಾ ನನಗೆ ಮಾಹಿತಿ ಕೊಟ್ಟರು.
ತದನಂತರ, ಮಸ್ತೂಮ ಗೋತ್ರದ ನಾಯಕರಾದ ಶೈಖ್ ಬಯ್ಯಾಹ್ ರ ಮನೆಯಲ್ಲಿ ಶೈಖ್ ಅಬ್ದುಲ್ ರಹಿಮಾನ್ ರವರನ್ನು ಭೇಟಿ ಮಾಡಲು ಸಾಧ್ಯವಾಯಿತು. ಐಹಿಕ ಜೀವನದೊಂದಿಗಿನ ಜಿಗುಪ್ಸೆ ಅವರ ಮುಖದಲ್ಲಿ ಪ್ರಕಟವಾಗುತಿತ್ತು. ಈ ಐಹಿಕ ಬದುಕಿನ ಗೊಡವೆಯಿಂದ ದೂರವಾಗುವುದು ಮೌರಿತಾನಿಯಾದ ವಿದ್ವಾಂಸರ ವೈಶಿಷ್ಟತೆಗಳಲ್ಲೊಂದು. ಅವರ ಆಪ್ತಮಿತ್ರ ಶೈಖ್ ಹಾಮಿದ್ ರವರ ದರ್ಸಿನಲ್ಲಾಗಿತ್ತು ನನ್ನ ಮುಂದಿನ ವ್ಯಾಸಂಗ.
ಶೈಖ್ ಹಾಮಿದರು ಕಂಠಪಾಠ ಮಾಡುವುದರ ಪ್ರಾಧಾನ್ಯತೆಯ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟರು. ಕಂಠಪಾಠ ಮಾಡುವುದಲ್ಲದೆ ವಿದ್ಯೆ ಕರಗತವಾಗಲು ಬೇರೆ ದಾರಿಯಿಲ್ಲ ಎಂದು ಅವರು ಬಲವಾಗಿ ನಂಬಿದ್ದರು. ಮೌರಿತಾನಿಯನ್ನರು ವಿದ್ವಾಂಸರನ್ನು ‘ಹಗಲು ವಿದ್ವಾಂಸರು’ ಹಾಗೂ ‘ರಾತ್ರಿ ವಿದ್ವಾಂಸರೆಂ’ದು ವರ್ಗೀಕರಿಸುವ ಬಗ್ಗೆಯೂ ಹೇಳಿಕೊಟ್ಟರು. ಹಗಲು ವಿದ್ವಾಂಸರಿಗೆ ರಾತ್ರಿ ಹೊತ್ತು ಜ್ಞಾನಾರ್ಜನೆಗೈಯಲು ಪುಸ್ತಕ ಮತ್ತು ಬೆಳಕು ಅನಿವಾರ್ಯವಾಗಿತ್ತು. ಆದರೆ ‘ರಾತ್ರಿ ವಿದ್ವಾಂಸರಿಗೆ’ ರಾತ್ರಿ ಹೊತ್ತು ಬೆಳಕಿನ ಅಭಾವದಲ್ಲೂ ತಮ್ಮ ನೆನಪಿನ ಶಕ್ತಿಯಿಂದ ಜ್ಞಾನಾರ್ಜನೆ ಸಾಧ್ಯವಾಗುತಿತ್ತು. ಈ ರೀತಿ ಎಲ್ಲಾ ಕಿತಾಬುಗಳನ್ನು ಬಾಯಿಪಾಠ ಮಾಡುವ ಪರಿಪಾಠ ರೂಢಿಸಬೇಕೆಂದು ನನ್ನಲ್ಲಿ ಶೈಖರು ನಿರ್ದೇಶಿಸಿದರು.
ಆ ದಿನಗಳಲ್ಲಿ ಇಬ್ನು ಆಶಿರ್, ಅಲ್ ರಿಸಾಲ, ಅಖ್ರಾಬ್ ಅಲ್ ಮಸಾಲಿಕ್ ಮುಂತಾದ ಗ್ರಂಥಗಳನ್ನೆಲ್ಲಾ ನಾನು ಓದಿದ್ದೆ. ಅದಲ್ಲದೆ ಇನ್ಸ್ಟಿಟ್ಯೂಟಿನಲ್ಲಿ ‘ಅಲ್ ಫಿಖ್ಹ್ ಅಲ್ ಮಾಲಿಕೀ ಫೀ ತೌಬಹೀ ಅಲ್ ಜದೀದಿ’ನ ಮೊದಲ ಆವೃತ್ತಿಗಳನ್ನೂ ಓದಿದ್ದೆ. ಸುಡಾನಿನ ಪ್ರಮುಖ ಹದೀಸ್ ವಿದ್ವಾಂಸರಾದ ಶೈಖ್ ಅಹ್ಮದ್ ಬದವಿಯರಿಂದ ಹದೀಸ್ ಗ್ರಂಥಗಳನ್ನು ಕಲಿತಿದ್ದೆ. ಆದರೆ ಅಂದೆಂದೂ ನಾನು ಕಂಠಪಾಠ ಮಾಡುತ್ತಿರಲಿಲ್ಲ. ಇದನ್ನರಿತ ಶೈಖರು ಪ್ರಧಾನವಾದ ಕೆಲವು ಕಿತಾಬುಗಳನ್ನು ಪುನಃ ಓದಿಕೊಟ್ಟು ಕಂಠಪಾಠ ಮಾಡಲು ನಿರ್ದೇಶಿಸಿದರು.
ನಂತರ ಅಲ್ಲಿನ ಸ್ಥಳೀಯ ಮಸೀದಿಯೊಂದರಲ್ಲಿ ಇಮಾಂ ಆಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಯಿತು. ಮಸೀದಿಗೆ ಬರುವವರ ಪೈಕಿ ಸಿಂಹಪಾಲು ಜನರು ಅಫ್ಘಾನಿಸ್ಥಾನದ ಕಾರ್ಮಿಕರಾಗಿದ್ದರು.
1984 ರಲ್ಲಾಗಿತ್ತು ಎಮಿರೇಟ್ಸ್ ನಿಂದ ಅಲ್ಜೀರಿಯಾದ ಮೂಲಕ ಮಾರಿತಾನಿಯಾಗೆ ನನ್ನ ಪ್ರಯಾಣ. ಪವಿತ್ರ ಖುರ್ ಆನ್ ಪೂರ್ತಿ ಕಂಠಪಾಠ ಮಾಡಬೇಕೆಂಬ ಅದಮ್ಯ ಬಯಕೆಯಾಗಿತ್ತು ಯಾತ್ರೆಯ ಪ್ರಧಾನ ಧ್ಯೇಯ. ಮಾರಿತಾನಿಯದಲ್ಲಿ ಬರಗಾಲವಿದೆಯೆಂದೂ ಅಲ್ಲಿನ ಬದುಕು ಸಹಿಸಲಸಾಧ್ಯವೆಂದೂ ನನ್ನ ಸ್ನೇಹಿತರು ಮುನ್ನೆಚ್ಚರಿಕೆ ಕೊಟ್ಟರೂ ನನ್ನ ದೃಡ ಸಂಕಲ್ಪ ಚಂಚಲಗೊಳ್ಳಲೇ ಇಲ್ಲ.
ಅಲ್ಜೀರಿಯಾದ ಸೀದಿ ವೋ ಝೈದರ ಮದ್ರಸಾದಲ್ಲಿ ಕೆಲವು ತಿಂಗಳುಗಳ ಕಾಲ ತಂಗಿದ ಬಳಿಕ ಅಲ್ಲಿಂದ ಟುನೀಷ್ಯಾಗೆ ತೆರಳಿ ಮಾರಿತಾನಿಯಾಗಿರುವ ವೀಸಾ ಗಿಟ್ಟಿಸಿಕೊಂಡು ವಿಮಾನ ಯಾನದ ಮೂಲಕ ನೇರವಾಗಿ ರಾಜಧಾನಿ ನಾಕ್ಚೋಟಿಗೆ ಬಂದಿಳಿದೆ.
ಮುರಾಬಿತುಲ್ ಹಾಜರನ್ನು ಭೇಟಿ ಮಾಡುವುದಾಗಿತ್ತು ಮುಂದಿನ ಗುರಿ. ನಾಕ್ಚೋಟ್ ಮರ‍್ಕೆಟಿನ ಒಂದು ಪುಟ್ಟ ಅಂಗಡಿಯಲ್ಲಿ ಮಸ್ತೂಮ ಗೋತ್ರದ ಅಬ್ದುಲ್ ಸಾಲಿಮರನ್ನು ಭೇಟಿ ಮಾಡಿದೆ. ಮುರಾಬಿತುಲ್ ಹಾಜರನ್ನು ಭೇಟಿ ಮಾಡಬೇಕೆಂಬ ಬಯಕೆಯನ್ನು ಅವರೊಂದಿಗೆ ಹಂಚಿದಾಗ ಅವರು ನನ್ನನ್ನು ಮುಖ್ತಾರುಲ್ ಹಬೀಬ್ ಎಂಬ ಮಸ್ತೂಮ ಗೋತ್ರದ ವಿದ್ವಾಂಸರ ಬಳಿಗೆ ಕರೆದೊಯ್ದರು. ತದನಂತರ ಮೌಲಾಯ್ ಅಲ್ ಮಖರಿ ಅಲ್ ಮಸ್ತೂಮರವರ ಮನೆಯಲ್ಲಾಗಿತ್ತು ನನ್ನ ವಾಸ್ತವ್ಯ. ಅತಿಥಿಗಳನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುವ, ಎಲ್ಲರಿಂದಲೂ ಪ್ರೀತಿಗೆ ಭಾಜನರಾದ ವ್ಯಕ್ತಿತ್ವವಾಗಿತ್ತು ಅವರದ್ದು.
ಆ ಸಂದರ್ಭಕ್ಕೆ ಸರಿಯಾಗಿಯೇ ತನ್ನ ತಂದೆ ತಾಯಿಯನ್ನು ಭೇಟಿ ಮಾಡಲು ಶೈಖ್ ಅಬ್ದುಲ್ ರಹಿಮಾನ್ ಎಮಿರೇಟ್ಸಿನಿಂದ ಊರಿಗೆ ಬಂದಿದ್ದರು. ಅವರು ಮೌಲಾಯ್ ಅಲ್ ಮಖರಿಯನ್ನು ಭೇಟಿಯಾಗಲು ಬಂದರು. ನಂತರ ತುವಾಮಿರತ್ ನಲ್ಲಿರುವ ಅವರ ಕುಟುಂಬದವರ ಶಾಲೆಯನ್ನು ಸಂದರ್ಶಿಸಲು ತೀರ್ಮಾನಿಸಿ ಅದಕ್ಕೆ ಬೇಕಾಗಿರುವ ತಯಾರಿಯಲ್ಲಿ ತೊಡಗಿದೆವು. ಒಂಟೆಗಳು ಸಿಗದಿದ್ದರಿಂದ ಒಂದು ಟ್ರಕ್ಕಿನಲ್ಲಾಗಿತ್ತು ನಮ್ಮ ಪ್ರಯಾಣ.
ಎರಡು ದಿನಗಳ ದೀರ್ಘ ಪ್ರಯಾಣದ ನಂತರ ಗೆರು ಎಂಬ ನಗರಕ್ಕೆ ನಾವು ತಲುಪಿದೆವು. ಆ ಕಾಲಕ್ಕೆ ಅಲ್ಲಿ ಟೆಕ್ನಾಲಜಿಯ ಗಂಧಗಾಳಿ ಇನ್ನೂ ಸೋಕಿರಲಿಲ್ಲ. ಅಲ್ಲಿನ ಕಟ್ಟಡಗಳು ಸುಂದರವಾಗಿ ಮನಸೊರೆಗೈಯುವಂತಿತ್ತು. ಮಹ್ದ್ಸರ ಎಂದು ಕರೆಯಲ್ಪಡುವ ಏಳು ಮದರಸಗಳಲ್ಲಿ ಸರಿಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅಲ್ಲಿ ರಾತ್ರಿಯಾದರೆ ಕ್ಯಾಂಡಲ್ ಮತ್ತು ದೀಪಗಳ ಮೊರೆ ಹೋಗಬೇಕಾಗಿತ್ತು. ಖುರ್ ಆನ್ ಮತ್ತು ಇತರ ಗ್ರಂಥಗಳನ್ನು ಓದುವ ಸುಶ್ರಾವ್ಯ ಧ್ವನಿಯು ಅಲ್ಲೆಲ್ಲಾ ಮಾರ್ದನಿಸುತ್ತಿತ್ತು.
ಅಲ್ ಹಾಜರ ಸಂಬಂಧಿಯಾದ ಶೈಖ್ ಖಾತ್ರಿಯವರ ಮನೆಯಲ್ಲಾಗಿತ್ತು ನಮ್ಮ ವಾಸ್ತವ್ಯ. ಅಲ್ಲಿ ಸೀದಿ ಮನ್ನ ಎಂಬ ಸಾತ್ವಿಕ ಸೂಫಿ ವಿದ್ವಾಂಸರೊಬ್ಬರನ್ನು ಪರಿಚಯ ಮಾಡಿಕೊಂಡೆ. ಇಮಾಂ ಅಲ್ ಜಝರಿಯವರ ‘ಹಿಸ್ನ್ ಅಲ್ ಹಾಸಿನ್’ ಎಂಬ ಗ್ರಂಥವನ್ನು ಪೂರ್ತಿಯಾಗಿ ಅವರು ಕಂಠಪಾಠ ಮಾಡಿಕೊಂಡಿದ್ದರು. ತಮ್ಮ ಎಲ್ಲಾ ಪ್ರಾರ್ಥನೆಗಳಲ್ಲೂ ಸಮುದಾಯದ ಎಲ್ಲಾ ಜನರಿಗೂ ಬೇಕಾಗಿ ದುಆ ಮಾಡುತ್ತಿದ್ದರು. ಒಂದು ದಿನ ಸಂಜೆ ನಾವೆಲ್ಲರೂ ಹರಟೆ ಹೊಡೆಯುತ್ತಿದ್ದಾಗ ಅವರು ತನ್ನ ಅಂಗೈಯಲ್ಲಿ ಒಂದು ಹಿಡಿ ಮಣ್ಣನ್ನೆತ್ತಿ ಹೇಳಿದರು, “ಭೂಮಿಯಿಂದ ಎಂದೂ ದೂರ ಹೋಗಬಾರದು. ಕಾರಣ ಇದು ನಮ್ಮ ತಾಯಿಯಾಗಿದೆ. ಜೀವನದಲ್ಲಿ ನಾನೆಂದೂ ಯಾವುದರ ಬಗ್ಗೆಯೂ ವ್ಯಥೆ ಪಟ್ಟಿಲ್ಲ. ನನ್ನಲ್ಲಿಲ್ಲದ್ದನ್ನು ನಾನು ಆಗ್ರಹಿಸಿಯೂ ಇಲ್ಲ. ಆದರೆ ನಾನೊಬ್ಬ ಯುವಕನಾಗಬೇಕೆಂದು ಈಗ ಆಸೆಯಾಗುತ್ತಿದೆ. ಯಾಕೆಂದರೆ ಅಲ್ಲಾಹನ ಮಾರ್ಗದಲ್ಲಿ ವಿದ್ಯೆಯನ್ನರಸಿ ನಿಮ್ಮೊಂದಿಗಿನ ಪಯಣದಲ್ಲಿ ನನಗೂ ಸೇರಬಹುದು”. ಅರಿವಿನ ಬಗೆಗೆ ಅವರಿಗಿದ್ದ ದಾಹ ನನ್ನನ್ನು ಅಚ್ಚರಿಗೊಳಿಸಿತ್ತು.
ಕೆಲವು ದಿನಗಳ ನಂತರ ನಾವು ಕಾಮೂರಿಗೆ ಹೊರಟೆವು. ಮಧ್ಯರಾತ್ರಿಯಾದಾಗ ಗಲಗ ಎಂಬ ಕಣಿವೆ ಪ್ರದೇಶಕ್ಕೆ ಬಂದು ತಲುಪಿದೆವು. ಮರುದಿನ ಬೆಳ್ಳಂಬೆಳಗ್ಗೆ ತಿಂಡಿ ತಿಂದು ಮುರಾಬಿತುಲ್ ಹಾಜ್ ಹಾಗೂ ಅವರ ಸಂಗಡಿಗರು ವಾಸಿಸುವ ತುವಾಮಿರತ್ ಗೆ ಹೊರಟು ನಿಂತೆವು. ಹಾಗೆ ಪ್ರಕೃತಿ ರಮಣೀಯವಾದ ತುವಾಮಿರತ್ ಗೆ ಬಂದು ತಲುಪಿದೆವು. ಮುರಾಬಿತುಲ್ ಹಾಜರನ್ನು ಮುಖಃತ ಭೇಟಿ ಮಾಡಬೇಕೆಂಬ ಬಹುದಿನಗಳ ಕನಸು ಅಂದು ಸಾಕ್ಷಾತ್ಕಾರವಾಯಿತು.
ನನ್ನ ಜೀವನದಲ್ಲಿ ಅಷ್ಟೊಂದು ತೇಜಸ್ಸು ಭರಿತ ಮುಖವನ್ನು ನಾನು ನೋಡಿಯೇ ಇರಲಿಲ್ಲ. ಅವರು ನನ್ನನ್ನು ಒಳಗೆ ಆಹ್ವಾನಿಸಿ ತೋಳಲ್ಲಿ ಕೈಯಿಟ್ಟು ಹೃದ್ಯವಾಗಿ ಸ್ವೀಕರಿಸಿದರು. ನಂತರ ಅವರು ತಮ್ಮ ದರ್ಸ್ ಬೋಧನೆಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಗಳಲ್ಲೊಬ್ಬರು ನನಗೆ ಕುಡಿಯಲು ನೀರು ತಂದುಕೊಟ್ಟರು.
ಮುರಾಬಿತುಲ್ ಹಾಜರು ಕೆಲವು ದಿನಗಳ ಕಾಲ ತಂಗಲು ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ನಾನಲ್ಲಿ ಅವರ ಧರ್ಮಪತ್ನಿ ಮರ್ಯಂ ಬಿನ್ತ್ ಬ್ವೈಬಾರನ್ನು ಪರಿಚಯ ಮಾಡಿಕೊಂಡೆ. ಅವರು ನನಗೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟರು. ನನ್ನ ಜೀವನದಲ್ಲಿ ಅವರಷ್ಟು ನಿಸ್ವಾರ್ಥ ಮಹಿಳೆಯನ್ನು ನಾನು ನೋಡಿಯೇ ಇರಲಿಲ್ಲ. ಮಿಕ್ಕ ದಿನಗಳಲ್ಲೂ ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಂದರ್ಶಕರಿಗೆ ಅವರು ಹಾಲು ಕಾಯಿಸಿ ಕೊಡುತ್ತಿದ್ದರು. ಚಿಕ್ಕಂದಿನಲ್ಲೇ ಅವರ ಜೊತೆಗಿದ್ದ ಖಬೂಲಃ ಎಂಬ ಮನೆಗೆಲಸದಾಕೆ ಅವರನ್ನು ಸಹಾಯ ಮಾಡುತ್ತಿದ್ದರು
ಮರ್ಯಮರ ಆತಿಥೇಯತ್ವವು ನನ್ನನ್ನು ವಿಸ್ಮಯಗೊಳಿಸಿತು. ಎಲ್ಲರೊಂದಿಗೆ ಮುಗುಳ್ನಗೆಯೊಂದಿಗೆಯಾಗಿತ್ತು ಅವರ ಒಡನಾಟ. ಒಮ್ಮೆ ಮೌರಿತಾನಿಯದೆಲ್ಲೆಡೆ ಹರಡಿದ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಾನು ಹಾಸಿಗೆ ಹಿಡಿದಾಗ ಅವರು ಬಹಳ ಶ್ರದ್ಧೆ ಮತ್ತು ವಾತ್ಸಲ್ಯದಿಂದ ನನ್ನನ್ನು ಶುಶ್ರೂಷೆ ಮಾಡಿದರು. ಒಬ್ಬ ಮಗನೊಂದಿಗೆ ತೋರುವ ಪ್ರೀತಿಯಾಗಿತ್ತು ಅವರು ನನ್ನಲ್ಲಿ ತೋರಿದ್ದು. ನಾನು ತರಕಾರಿ ಮಾತ್ರ ತಿನ್ನುವವನು ಎಂದು ತಿಳಿಸಿದಾಗ ಎಲ್ಲಾ ದಿನ ಆಹಾರದ ಮೊದಲು ನನಗೆ ವಿಶೇಷವಾಗಿ ಕ್ಯಾರೆಟ್ ಮತ್ತು ಖರ್ಜೂರವನ್ನು ತಂದುಕೊಡುತ್ತಿದ್ದರು.
ಸದಾ ಸಮಯ ಏಕದೇವನ ಸ್ಮರಣೆಯಲ್ಲೇ ತನ್ಮಯರಾಗುವುದು ಅವರ ಪರಿಪಾಠವಾಗಿತ್ತು. ಅವರ ಪೂರ್ಣನಾಮ ಮರ್ಯಂ ಬಿಂತ್ ಮುಹಮ್ಮದ್ ಅಲ್ ಅಮೀನ್ ಉದ್ ಮುಹಮ್ಮದ್ ಅಹಮದ್ ಬ್ವಯ್ಬಾ. ಎಳೆಯ ವಯಸ್ಸಿನಲ್ಲೇ ಮುರಾಬಿತುಲ್ ಹಾಜರೊಂದಿಗೆ ಅವರ ವಿವಾಹ ನಡೆದಿತ್ತು. ತುವಾಮಿರತಿನ ಇಸ್ಲಾಮಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವರು ಸಲ್ಲಿಸಿದ ಸೇವೆ ಅನಿರ್ವಚನೀಯ. ಕಡುಬಡತನದಲ್ಲಾಗಿತ್ತು ಮರ್ಯಮರು ಬೆಳೆದು ಬಂದದ್ದು. ಅವರ ಬಾಲ್ಯಕಾಲದಲ್ಲಿ ಮೈಮುಚ್ಚಲು ತೆಳುವಾದ ಒಂದೇ ಒಂದು ಬಟ್ಟೆ ಮಾತ್ರ ಹೊಂದಿದ್ದರಂತೆ. ಅವರ ತಂದೆ ಮುಹಮ್ಮದ್ ಅಲ್ ಅಮೀನ್ ಲಮಾನ ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ಮಹಾ ಜ್ಞಾನಿಯಾಗಿದ್ದ ಅವರ ಬಗ್ಗೆ ಮರ್ಯಮರು ಯಾವಾಗಲೂ ತುಂಬು ಮಾತುಗಳಲ್ಲಿ ಕೊಂಡಾಡುತ್ತಿದ್ದರು.
ಮರ್ಯಮರೊಂದಿಗಿನ ವಿವಾಹವಾದ ಬಳಿಕ ಮುರಾಬಿತುಲ್ ಹಾಜರ ತಂದೆ ಮರ್ಯಮರೊಂದಿಗೆ ಹೀಗೆ ಹೇಳಿದರು. “ನಿಮ್ಮ ಉಪಜೀವನ ಮಾರ್ಗಕ್ಕಾಗಿ ಒಳ್ಳೆಯ ಸಂಪಾದನೆ ಸಿಗುವ ಕೆಲಸದ ಬಗ್ಗೆ ಇನ್ನು ನೀನು ಚಿಂತಿಸಬೇಕಾಗಿದೆ”. ಇದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ. “ಜೀವನೋಪಾಯಕ್ಕಾಗಿ ಕೆಲಸ ಮಾಡಬೇಕಾದರೆ ನನ್ನ ಮುಂದೆ ಅಸಂಖ್ಯಾತ ಅವಕಾಶಗಳಿವೆ. ಆದರೆ ಅವುಗಳ ಬೆನ್ನಟ್ಟಿ ನಾನು ನನ್ನ ಆತ್ಮವನ್ನು ಮಲಿನಗೊಳಿಸಲು ಇಚ್ಛಿಸುವುದಿಲ್ಲ.
ಮುರಾಬಿತುಲ್ ಹಾಜರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ ಪ್ರಾರಂಭದ ದಿನಗಳಿಂದಲೇ ಮರ್ಯಮರು ಮುರಾಬಿತುಲ್ ಹಾಜರಿಂದ ಕಿತಾಬುಗಳನ್ನು ಅಭ್ಯಸಿಸತೊಡಗಿದರು. ಮಾಲಿಕೀ ಕರ್ಮಶಾಸ್ತ್ರದ ಪ್ರಧಾನ ಕಿತಾಬುಗಳೊಂದಿಗೆ ಪವಿತ್ರ ಖುರ್ ಆನ್ ನನ್ನೂ ಪೂರ್ತಿಯಾಗಿ ಕಂಠಪಾಠ ಮಾಡಿದರು. ಅದಲ್ಲದೆ ಇಮಾಂ ಅನ್ನವವಿಯವರ ಪ್ರಾರ್ಥನೆಗಳ ಕುರಿತು ಬರೆದ ‘ಅಲ್ ಅದ್ಸ್ ಕಾರ್’ ಎಂಬ ಪ್ರಸಿದ್ಧ ಗ್ರಂಥವನ್ನೂ ಕಂಠಪಾಠ ಮಾಡಿದರು. ಹೊಸದಾಗಿ ಬರುವ ವಿಧ್ಯಾರ್ಥಿಗಳೊಂದಿಗೆ ಮರ್ಯಮರು ಅವರ ಮನೆಯವರ ಬಗ್ಗೆ ಕುಶಲೋಪರಿ ಮಾಡುವುದನ್ನು ರೂಢಿಸಿಕೊಂಡಿದ್ದರು. ಮೌರಿತಾನಿಯದಲ್ಲಿ ವ್ಯಾಸಂಗ ಮಾಡಿದ ಎಲ್ಲರೂ ಅವರ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದ್ದರು. ಸುಮಾರು ವರುಷಗಳ ನಂತರ ಭೇಟಿ ಮಾಡುವವರ ಹೆಸರನ್ನೂ ಸುಲಭವಾಗಿ ಗುರುತಿಸುತ್ತಿದ್ದರು. ನಾನು ಮೊದಲು ಅವರನ್ನು ಭೇಟಿ ಮಾಡಿದಾಗ ನನ್ನ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕೇಳಿ ಅರಿತಿದ್ದರು. ತದನಂತರ ಸುಮಾರು ವರ್ಷಗಳ ಬಳಿಕ ಮತ್ತೆ ಭೇಟಿ ನೀಡಿದಾಗ ಅವರ ಹೆಸರುಗಳನ್ನು ನೆನೆದು ಅವರ ಕುಶಲೋಪರಿ ಮಾಡಿದರು. ಕೇವಲ ಒಂದೇ ಬಾರಿ ಅವರ ಹೆಸರುಗಳನ್ನು ಹೇಳಿಕೊಟ್ಟಿದ್ದ ನಾನು ಮರ್ಯಮರ ಅಪಾರ ನೆನಪಿನ ಶಕ್ತಿಯನ್ನು ಕಂಡು ಸ್ಥಬ್ಧನಾಗಿ ಬಿಟ್ಟಿದ್ದೆ.
ಮರ್ಯಮರನ್ನು ಮುಖಃತವಾಗಿ ಭೇಟಿ ಮಾಡುವ ಒಂದು ವರುಷದ ಮುಂಚೆ 1983 ರಲ್ಲಿ ನಾನು ಅವರನ್ನು ಕನಸಿನಲ್ಲಿ ಕಂಡಿದ್ದೆ. ಮುರಾಬಿತುಲ್ ಹಾಜರೊಂದಿಗೆ ಅವರ ಬಿಡಾರದಲ್ಲಿ ಕುಳಿತು ಮಾತನಾಡುವ ವೇಳೆಯಲ್ಲಾಗಿತ್ತು ನಾನು ಅವರನ್ನು ಮೊತ್ತ ಮೊದಲ ಬಾರಿ ಕಂಡದ್ದು. ಕನಸಿನಲ್ಲಿ ಕಂಡ ಮಹಾತಾಯಿ ಇವರೇ ಎಂದು ಆಗ ನನಗೆ ಮನದಟ್ಟಾಯಿತು. ಪರಂಪರಾಗತ ವೇಷವಿಧಾನವನ್ನು ರೂಢಿಸಿದ್ದ ಅವರು, ತಮ್ಮ ಬದುಕಿನುದ್ದಕ್ಕೂ ಹಲವಾರು ಸಂಕಷ್ಟಗಳ ಒಡನಾಡಿಯಾಗಿದ್ದರೂ ಕೂಡಾ ಅರಳಿದ ಮೊಗದೊಂದಿಗೆ ಸದಾ ಉತ್ಸುಕರಾಗಿ ಇರುತ್ತಿದ್ದರು.
ಒಂದು ಬಾರಿಯಾದರೂ ಹಜ್ಜ್ ಯಾತ್ರೆ ನಿರ್ವಹಿಸಬೇಕೆಂಬ ಅದಮ್ಯ ಬಯಕೆ ಅವರಿಗಿತ್ತು. ಆದರೆ ತನ್ನ ಕುಟುಂಬದ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಕಿಂಚಿತ್ತೂ ಚ್ಯುತಿ ಬರಬಾರದೆಂಬ ಬದ್ಧತೆಯು ಅವರಿಗಿತ್ತು. ಮುರಾಬಿತುಲ್ ಹಾಜರನ್ನು ಸಂದರ್ಶಿಸಲು ಬರುತ್ತಿದ್ದ ಅತಿಥಿಗಳೆಲ್ಲರನ್ನೂ ಹೃದ್ಯವಾಗಿ ಸತ್ಕರಿಸುತ್ತಿದ್ದರು. ಒಮ್ಮೆ ಮುರಾಬಿತುಲ್ ಹಾಜರನ್ನು ಕಾಣಲು ಬಂದ ವಿದ್ಯಾರ್ಥಿಗಳು ಅವರಲ್ಲಿ ದುಆ ಮಾಡಲು ಅಪೇಕ್ಷಿಸಿದಾಗ, “ನೀವು ಮರ್ಯರೊಂದಿಗೆ ಕೂಡಾ ಅಪೇಕ್ಷಿಸಿರಿ” ಎಂದು ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಮರ್ಯಮರ ಪ್ರಾರ್ಥನೆಗೆ ಅಲ್ಲಾಹನ ಉತ್ತರವಿದೆಯೆಂದಾಗಿತ್ತು ಅವರ ಅಂಬೋಣ.
ಮರ್ಯಮರ ಮಗನು ಒಮ್ಮೆ ನನ್ನ ಬಳಿ ಹೇಳಿದ್ದು, “ಮರ್ಯಮರು ಅಪಾರ ಜ್ಞಾನವುಳ್ಳ ಎಲೆಮರೆಕಾಯಿ” ಎಂದಾಗಿತ್ತು. ಮರ್ಯಮರ ಸಹೋದರರೊಬ್ಬರ ಒಮ್ಮೆ ಹೀಗೆ ಹೇಳಿದರು “ಅವರು ನನಗೆ ತಾಯಿ ಸಮಾನ.ಅವರು ಎಲ್ಲಾ ಸತ್ಯ ವಿಶ್ವಾಸಿಗಳ ಮಹಾ ಮಾತೆ”
ಮೂಲ: ಶೈಖ್ ಹಂಝ ಯೂಸುಫ್
ಭಾಷಾಂತರ: ಹಸನ್ ಮುಈನುದ್ದೀನ್ ನೂರಾನಿ