ಮುಸಾಫಿರ್

ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆ
ಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ

ಹಾಗಾಗಿ, ಯಾತ್ರೆ ಹೊರಡು
ತೊರೆದು ನಿನ್ನ ವಿರಾಮದ ಮನೆಯ
ಸಿಕ್ಕೇ ಸಿಗುತ್ತದೆ
ನೀನು ತೊರೆದುದುದರ ಬದಲಿ ನಿವಾಸ

ಮತ್ತು ಸೆಣಸಾಡು
ದಿಕ್ಕಾಪಾಲಾದ ಯಾತ್ರೆಯುದ್ದಕ್ಕೂ
ಬದುಕಿನ ಮಾಧುರ್ಯವಿರುವುದೇ
ಕಷ್ಟ ಕೋಟಲೆಗಳಲ್ಲಿ
ಮತ್ತದರೆದುರು ಸೆಣಸುವುದರಲ್ಲಿ

ನಾನು ಕಂಡಿದ್ದೇನೆ,
ನಿಂತ ನೀರು ದುರ್ನಾತ ಬೀರುವುದನ್ನು
ಮತ್ತದೇ ನೀರು ಹರಿಯತೊಡಗಿದರೆ
ಶುದ್ಧತೆಯನ್ನು ಪಡೆದುಕೊಳ್ಳುವುದನ್ನೂ

ಗುಹೆಯ‌ ಬಿಟ್ಟು ಹೊರಬಾರದ ಸಿಂಹ
ಬೇಟೆಯಾಡುವಾದರೂ ಹೇಗೆ?
ಬಿಲ್ಲಿಂದ ನೆಗೆಯದ ಬಾಣ
ಗುರಿ ತಲುಪುವುದೆಂದಾರೂ ಇದೆಯೇ?

ನಿಶ್ಚಲನಾಗಿಬಿಟ್ಟರೆ ಸೂರ್ಯ
ಮನುಷ್ಯರೇನಾದಾರು?
ಅರಬನೋ, ಅರಬೇತರನೋ
ಹಾಗೆಯೇ ದಿಕ್ಕೆಟ್ಟು ಹೋದಾರು

ಚಿನ್ನವೂ ಮಣ್ಣಿನಂತೆಯೇ, ಅದು ಮಣ್ಣಿನೊಳಗಿದ್ದರೆ
ಸುಗಂಧ ಬೀರುವ ಊದ್‌ಗೂ ಕಟ್ಟಿಗೆಯದ್ದೇ ಬೆಲೆ
ಅದು ತನ್ನ ಸ್ಥಾನದಲ್ಲೇ ಬಂಧಿಯಾದರೆ

ಯಾವನಾದರೂ ತನ್ನ ನಿವಾಸದಿಂದ ಕಳಚಿಕೊಂಡರೆ
ಅವನು ಹುಡುಕುತ್ತಾನೆ, ಹುಡುಕಲ್ಪಡುತ್ತಾನೆ
ಯಾರಾದರೂ ತನ್ನ ವಿರಾಮದ ಮನೆಯ ತೊರೆದರೆ
ಅವನು ಚಿನ್ನದಂತೆ ಬೆಲೆ ಬಾಳುತ್ತಾನೆ

ಮೂಲ
ಮುಹಮ್ಮದ್ ಇಬ್ನ್ ಇದ್ರೀಸ್ ಅಲ್ ಶಾಫೀ (ರ.ಅ)
ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್

ಇಮಾಮ್ ಅಲ್ ಶಾಫೀ: ಪರಿಚಯ
ಮುಸ್ಲಿಂ ಜಗತ್ತಿನ ನ್ಯಾಯತತ್ವಗಳನ್ನು ನಿರೂಪಿಸಿದ ನಾಲ್ವರು ಮೇರು ಜ್ಞಾನಿಗಳ ಪೈಕಿ ಓರ್ವರಾಗಿದ್ದಾರೆ ಇಮಾಂ ಶಾಫಿ (ರ). ಇವರ ಪೂರ್ಣ ನಾಮ ಅಬೂ ಅಬ್ದಿಲ್ಲಾ ಮುಹಮ್ಮದ್ ಇಬ್ನು ಇದ್ರೀಸ್ ಅಲ್ ಶಾಫೀಈ. ಕ್ರಿ.ಶ 767ರಲ್ಲಿ ಫೆಲೆಸ್ತೀನ್‌ನ ಗಾಝಾದಲ್ಲಿ ಜನಿಸಿದರು. ಎರಡನೆಯ ವಯಸ್ಸಿನಲ್ಲಿ ತಾಯಿಯೊಂದಿಗೆ ಮಕ್ಕಾ ವಾಸ್ತವ್ಯ ಶುರು ಮಾಡಿದ ಇಮಾಮರ ಶಿಕ್ಷಣ ಮತ್ತು ಬೆಳವಣಿಗೆ ನಡೆದದ್ದು ಅಲ್ಲೇ. ಏಳನೆಯ ಮತ್ತು ಹತ್ತನೆಯ ವಯಸ್ಸಿನಲ್ಲಿ ಅನುಕ್ರಮವಾಗಿ ಪವಿತ್ರ ಖುರ್‌ಆನ್ ಹಾಗೂ “ಮುವತ್ತ” ಎಂಬ ಬೃಹತ್‌ ಹದೀಸ್‌ ಗ್ರಂಥವನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದರು.

ಇಮಾಂ ಮಾಲಿಕ್‌ ರವರ ಬಳಿ ಮದೀನಾದಲ್ಲಿ ಮತ್ತು ಇಮಾಂ ಶೈಬಾನಿಯವರ ಬಳಿ ಇರಾಕಿನಲ್ಲಿ ಜ್ಞಾನಾರ್ಜನೆ ಮಾಡಿರುವ ಅವರು ಜ್ಞಾನಕ್ಕಾಗಿ ಇನ್ನೂ ಹಲವು ದುರ್ಗಮ ದಾರಿಗಳನ್ನು ಸವೆಸಿದ್ದಾರೆ. ಕಿರಿಯ ಪ್ರಾಯದಲ್ಲೇ ಪ್ರಸಿದ್ಧ ವಿದ್ವಾಂಸರಾಗಿ ಜನಜನಿತರಾದ ಇಮಾಮರಿಗೆ ಹದಿನೈದನೇ ವಯಸ್ಸಿನಲ್ಲೇ ಫತ್ವಾ(ಧಾರ್ಮಿಕ ತೀರ್ಪು) ವಿಧಿಸಲು ಗುರುದೀಕ್ಷೆ ದೊರೆತಿತ್ತು.

ಧಾರ್ಮಿಕ ಶಿಸ್ತುಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದೇ ಅಲ್ಲದೆ ವೈದ್ಯಕೀಯ, ಭಾಷಾವಿಜ್ಞಾನ, ಖಗೋಳಶಾಸ್ತ್ರ ಸಾಹಿತ್ಯ ಹಾಗೂ ಕಾವ್ಯದಂತಹ ಉದಾರ ಕಲೆಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದರು ಇಮಾಂ. ಕರ್ಮಶಾಸ್ತ್ರದ ನ್ಯಾಯತತ್ವಗಳು ಹಾಗೂ ವಿಧಾನಶಾಸ್ತ್ರಗಳನ್ನು ಅನ್ವೇಷಿಸಲಾಗುವ ‘ಉಸೂಲುಲ್‌ ಫಿಖ್‌ಹ್‌’ ಎಂಬ ಬೌದ್ಧಿಕ-ಭಾಷಾವೈಜ್ಞಾನಿಕ ಜ್ಞಾನಕ್ಷೇತ್ರದ ಪಿತಾಮಹ ಕೂಡಾ ಇವರೆ. ಪೋಸ್ಟ್ ಕ್ಲಾಸಿಕಲ್ ಕಾಲದಲ್ಲಿ ಸಾಹಿತ್ಯ ಕೃಷಿ ನಡೆಸಿದವರ ಪೈಕಿ ಭಾಷಾ ವಿಜ್ಞಾನದ ಆಕರಗಳಾಗಿ ಸರ್ವಾಂಗೀಣ ಸ್ವೀಕೃತಿ ಲಭಿಸಿದ ಏಕೈಕ ವಿದ್ವಾಂಸರಾಗಿದ್ದಾರೆ ಈ ಮಹಾನುಭಾವರು. ಜಗತ್ಪ್ರಸಿದ್ಧ ಕವಿ ಕೂಡಾ ಆಗಿರುವ ಇಮಾಮರ ಕಾವ್ಯಗಳಲ್ಲಿ ಜ್ಞಾನ, ಪರಿತ್ಯಾಗ, ಅನುಭಾವ, ಮರಣ ಮುಂತಾದವುಗಳು ಮೇರು ಕಲ್ಪನಾಶೀಲತೆಯೊಂದಿಗೆ ಮೂಡಿ ಬಂದಿದೆ. ಅರೇಬಿಕ್ ಭಾಷೆಯ ಮೂಲಸೌಂದರ್ಯವನ್ನು ಕರತಲಾಮಲಕಗೊಳಿಸಲು ಇಮಾಮರು ಸಾಕ್ಷಾತ್‌ ಅರಬ್ ಬುಡಕಟ್ಟು ಜನಾಂಗಗಳ ನಡುವೆ ವರ್ಷಾನುಗಟ್ಟಲೆ ವಾಸ ಮಾಡಿದ್ದರು ಎನ್ನುವುದು ಸೋಜಿಗವೆ. ಬದುಕಿನ ಮೌಲ್ಯವನ್ನು ಸಾರುವ ಮತ್ತು ಜೀವನ ಸಾಫಲ್ಯತೆ ನೀಡುವ ಉಪದೇಶಗಳಾಗಿವೆ ಅವರ ಹೆಚ್ಚಿನ ಕವಿತೆಗಳ ಹೂರಣ. ಮಕ್ಕಾ, ಮದೀನಾ, ಯಮನ್, ಇರಾಕ್ ಮುಂತಾದೆಡೆ ಪ್ರಯಾಣ ಮಾಡಿ ಅರಿವನ್ನು ಸಂಪಾದಿಸಿದ್ದ ಆ ಮಹಾನ್ ಚೇತನ ಕ್ರಿ.ಶ 820ರಲ್ಲಿ ಈಜಿಪ್ಟ್‌ನಲ್ಲಿ ಕಾಲವಾದರು. ನೂರಕ್ಕೂ ಮಿಕ್ಕ ಪ್ರಸಿದ್ದ ಗ್ರಂಥಗಳನ್ನೂ, ಇಮಾಂ ಅಹ್ಮದ್ ಇಬ್ನು ಹಂಬಲ್‌ರಂಥ ಅತಿರಥ ಮಹಾರಥ ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸಿ 54ನೇ ವಯಸ್ಸಿನಲ್ಲಿ ತನ್ನ ಸಾರ್ಥಕ ಬದುಕನ್ನು ಮುಗಿಸಿದ್ದರು. ಈಜಿಪ್ಟಿನ ರಾಜಧಾನಿ ಕೈರೋ ದಲ್ಲಿ ಅವರನ್ನು ದಫನುಗೊಳಿಸಲಾಗಿದೆ.

ರೂಮಿ ಮಸ್ನವಿ ಮತ್ತು ಖುರ್ಆನ್; ತುಲನಾತ್ಮಕ ಅಧ್ಯಯನಕ್ಕೊಂದು ಪ್ರವೇಶಿಕೆ

ಜಲಾಲುದ್ದೀನ್ ರೂಮಿಯವರು ರಚಿಸಿದ ಜನಪ್ರಿಯ ದ್ವಿಪದಿ ಕಾವ್ಯವಾಗಿದೆ ‘ಮಸ್ನವಿ’ ಎಂಬುವುದು. ಮಸ್ನವಿಯನ್ನು ಆಧಾರವಾಗಿಟ್ಟುಕೊಂಡು ಹಲವಾರು ವ್ಯಾಖ್ಯಾನಗಳು ಬರೆಯಲ್ಪಟ್ಟಿದ್ದರೂ ಅವುಗಳಲ್ಲಿ ಹೆಚ್ಚಿನವು ಖುರ್ಆನ್ ಮತ್ತು ಮಸ್ನವಿಗಳೆಡೆಯಲ್ಲಿನ ಅವಿನಾಭಾವ ಸಂಬಂಧದ ಕುರಿತಾಗಿದೆಯೆಂಬುವುದು ಗಮನಾರ್ಹ ಸಂಗತಿಗಳಲ್ಲೊಂದು. ಮಸ್ನವಿಯ ಸಾಲುಗಳನ್ನು ಒರೆಗಲ್ಲಿಗೆ ಹಚ್ಚಿ ನೋಡುವುದಾದರೆ; ಅವುಗಳಲ್ಲಿ ಮಿಕ್ಕವೂ ಖುರ್ಆನಿನ ಒಳಾರ್ಥಗಳ ಬಗೆಗಿನದ್ದಾದರೆ ಮತ್ತು ಕೆಲವು ಖುರ್ಆನಿನಲ್ಲಿ ಬಳಸಲಾಗಿರುವ ನಿರ್ದಿಷ್ಟ ಸಂಕೇತಗಳ ವಿವರಣೆಗಳಾಗಿದೆ. ‘ಪರ್ಷಿಯನ್ ಖುರ್ಆನ್’ ಎಂದು ಅಬ್ದುರ್ರಹ್ಮಾನ್ ಜಾಮಿ ಮಸ್ನವಿಯನ್ನು ವಿಶ್ಲೇಷಿಸುವಾಗಲೂ ಖುರ್ಆನ್ ಮತ್ತು ಮಸ್ನವಿ‌ಗಳೆಡೆಗಿನ ನಂಟನ್ನು ಸೂಕ್ಷ್ಮವಾಗಿ ಅವಲೋಕಿಸಿ ಎಳೆಎಳೆಯಾಗಿ ಬಿಚ್ಚಿಡುವುದು ಅಧ್ಯಯನದ ದೃಷ್ಟಿಯಿಂದ ಅಗತ್ಯವೆನಿಸುತ್ತದೆ. “ನಾನೊಬ್ಬ ಪ್ರವಾದಿಯಲ್ಲದಿದ್ದರೂ ನನ್ನ ಬಳಿಯೊಂದು ದೈವಿಕ ಗ್ರಂಥವಿದೆ” ಎಂದು ಮೌಲಾನಾ ರೂಮಿ ಹೇಳಿರುವುದು ಈ ಮಸ್ನವಿಯನ್ನು ಕುರಿತಾಗಿತ್ತು. ಖುರ್ಆನಿನ ೫೨೮ ಸೂಕ್ತಗಳನ್ನು ಮಾತ್ರವೇ ಯಥಾವತ್ತಾಗಿ ಮಸ್ನವೀ ಕಾವ್ಯದಲ್ಲಿ ಬಳಸಲಾಗಿದ್ದರೂ ‘ಹಾದಿ ಹೆಯರಿ’ಯ ಅಧ್ಯಯನಗಳ ಪ್ರಕಾರ ಮಸ್ನವಿಯ ಸಾಲುಗಳಲ್ಲಿ ಸಿಂಹಪಾಲು ಖುರ್ಆನಿನ ಚಿಂತನೆಗಳು ಹರಡಿಕೊಂಡಿರುವುದು ಕಾಣಬಹುದಾಗಿದೆ. ಕೆಲವೊಂದು ನೇರ ತರ್ಜುಮೆಗಳಿದ್ದರೆ ಮತ್ತೆ ಕೆಲವು ಸೂಕ್ತಗಳ ಹೂರಣಗಳನ್ನು ಕಾವ್ಯಕ್ಕಿಳಿಸಲಾಗಿದೆ. ಒಟ್ಟಿನಲ್ಲಿ ಮಸ್ನವಿಯ ಸಾಲುಗಳನ್ನು ಮುಟ್ಟಿದಂತೆಲ್ಲಾ ಖುರ್ಆನಿನ ಚಿಂತನೆಗಳ ಹುಡಿ ಮೆತ್ತಿಕೊಂಡುಬಿಡುತ್ತದೆ ಎನ್ನುವುದು ಸಾರ. ಇದೇ ಕಾರಣಕ್ಕಾಗಿ ರೂಮಿ ಸಾಹಿತ್ಯದಲ್ಲಿ ಖುರ್ಆನಿನ ಪ್ರಭಾವ ಮತ್ತು ಅವಲಂಬನೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವುದು. ಮೌಲಾನಾರ ಕಾವ್ಯಾತ್ಮಕ ಭಾಷೆಯನ್ನು ಹೊರತುಪಡಿಸಿ ಮಸ್ನವಿಯನ್ನು ವಿಶ್ಲೇಷಣೆ ಮಾಡುವುದಾದರೆ ಅದೊಂದು ಶುದ್ಧ ಖುರ್ಆನ್ ಆಗಿ ಉಳಿದುಬಿಡುತ್ತದೆ ಎನ್ನಲಾಗಿದೆ. ಆಧ್ಯಾತ್ಮಿಕ ಭೋದನೆಗಳನ್ನು ಮುಂದಿಟ್ಟು ನೋಡುವುದಾದರೆ ಮಸ್ನವೀ ಕಾವ್ಯಗಳಿಗೆ ಖುರ್ಆನಿನೊಂದಿಗಿನ ಸಾಮ್ಯತೆಯನ್ನು ಸುಲಭದಲ್ಲಿ ಗ್ರಹಿಸಬಹುದಾಗಿದೆ.

ಖುರ್ಆನಿನ ಪದಗಳು, ಉಪಮೆಗಳು, ಭೋದನಾ ಶೈಲಿಗಳು ಬದುಕಿನ ಭಾಗವಾಗಿಯೇ ಹೋಗಿದ್ದ ರೂಮಿಯವರಿಗೆ ತಮ್ಮ ಅರಿವಿಗೂ ಬಾರದಂತೆ ಖುರ್ಆನಿನ ಶಬ್ದಗಳು ತಮ್ಮ ಕಾವ್ಯಗಳಲ್ಲಿ ನುಸುಳಿ ಬರುತ್ತಿದ್ದವು. ಇದೇ ಕಾರಣಕ್ಕೆ ಖುರ್ಆನಿನ ಸಂವೇದನೆಯನ್ನು ಒಳಗೊಂಡಿರುವ ಅವರ ಚಿಂತನೆಗಳನ್ನು ಢಾಳಾಗಿ ದರ್ಶಿಸಬಹುದಾಗಿದೆ.
‘ದೀವಾನೆ ತಬ್ರೀಝಿ’ನಲ್ಲಿ ರೂಮಿ ಹೇಳುವುದನ್ನು ಗಮನಿಸಿ;

“ಸದಾ ನನ್ನ ಕೈಯ್ಯಲ್ಲೊಂದು ಖುರ್ಆನ್ ಇರುತ್ತಿತ್ತು. ಆದರೆ, ಈಗ ನನ್ನ ಕೈಯಲ್ಲಿರುವುದು ಪ್ರಣಯದ ಮದುಬಟ್ಟಲು. ನನ್ನ ತುಟಿಗಳು ಸದಾ ದಿವ್ಯ ಪ್ರಕೀರ್ತನೆಯನ್ನು ಪಠಿಸುತ್ತಿತ್ತು. ಆದರೆ, ಈಗೀಗ ಕವಿತೆಗಳು ಮತ್ತು ಹಾಡುಗಳಲ್ಲಿಯೇ ಅದು ಅಂತರ್ಲೀನವಾಗಿದೆ”(ದೀವಾನ್)

ಮತ್ತೊಂದೆಡೆಯಲ್ಲಿ ರೂಮಿಯವರು ಖುರ್ಆನ್ ಹಾಗೂ ಮುಸಲ್ಲಾ(ನಮಾಜಿನ ಹಾಸು) ವನ್ನು ಪ್ರಣಯದೊಂದಿಗೆ ಹೋಲಿಕೆಮಾಡಿದ್ದಾರೆ.

“ಪ್ರಣಯವು ನನ್ನನ್ನು ಜ್ಞಾನಮೋಹದಿಂದ ಮತ್ತು ತೀರ್ಥಯಾತ್ರೆಗಳಿಂದ ವಿಮುಖನಾಗಿಸಿತು. ಅಂತಿಮವಾಗಿ ಉನ್ಮತ್ತನೂ ಪರವಶನೂ ಆಗಿ ಬದಲಾದೆನು. ಭಕ್ತಿಮಾರ್ಗವನ್ನು ಹರಸುತ್ತಾ ಮುಸಲ್ಲಾದ ಮೋಹಕ್ಕೆ ಬಲಿಯಾದೆನು. ವಿರಕ್ತನಾಗಿ ದೈವೀಸ್ಮರಣೆಯ ದಾರಿಯಲ್ಲಿ ಸಂಚರಿಸಿದೆನು. ಮುಸಲ್ಲಾದ ಬಳಿಗೆ ಬಂದ ಪ್ರೇಮವು ನನ್ನಲ್ಲಿ ಹೇಳಿತು. ‘ಇಹದ ಅಡೆತಡೆಗಳನ್ನು ಒಡೆದು ಹಾಕು, ಮುಸಲ್ಲಾದಲ್ಲಿ ಬಂಧಿಯಾಗಿ ಅದು ಯಾಕಾಗಿ ಬಾಳುವೆಯೋ ಹೇಳು!”(ದೀವಾನ್)

ಇಲಾಹೀ ಪ್ರೇಮದ ಸಲುವಾಗಿ ಧರ್ಮದ ಮೂಲ ಆರಾಧನೆ, ಪದ್ಧತಿಗಳನ್ನು ತಿರಸ್ಕರಿಸಲು ರೂಮಿ ತನ್ನ ಬರಹಗಳ ಮೂಲಕ ಓದುಗರನ್ನು ಮನವೊಲಿಸುತ್ತಾರೆ ಎಂದು ಕೆಲವರು ಆರೋಪಿಸುತ್ತಾರೆ.
ಆದಾಗ್ಯೂ, ಮಸ್ನವಿಯೆಂಬ ಸುಂದರ ಕಾವ್ಯ ಕುಸುರಿಯ ದಾರ ಮತ್ತು ಬಟ್ಟೆಯು ಸ್ವತಃ ಖುರ್ಆನ್ ಆಗಿದೆಯೆಂದು ತಿಳಿದಾಗ ಈ ಆರೋಪಗಳು ನೈಪಥ್ಯಕ್ಕೆ ಸರಿದು ನಿಲ್ಲುತ್ತದೆ.
ಪ್ರಣಯವು ರೂಮಿಯನ್ನು ಆವಾಹಿಸುವವರೆಗೂ ಅಥವಾ ಮಸ್ನವಿ ರೂಪುಗೊಳ್ಳುವವರೆಗೂ ಖುರ್ಆನಿನ ಬಾಹ್ಯಾರ್ಥಗಳನ್ನು ಮಾತ್ರವೇ ರೂಮಿ ಗ್ರಹಿಸಿದ್ದರು. ಆ ಕಾರಣದಿಂದಲೇ ಅವರ ಮಸ್ನವಿಯ ಸಾಲುಗಳಲ್ಲಿ ಮಾತ್ರವೇ ಖುರ್ಆನಿನ ಒಳಾರ್ಥಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನಗಳು ಯಥೇಚ್ಛವಾಗಿ ನಡೆದಿರುವುದು.

ಮಸ್ನವಿಯಲ್ಲಿನ ಖುರ್ಆನಿನ ಬಾಹ್ಯ ಮತ್ತು ಆಂತರಿಕ ಅರ್ಥಗಳ ನಡುವಿನ ಸಂಬಂಧವನ್ನು ರೂಮಿ ಈ ಕೆಳಗಿನಂತೆ ವಿವರಿಸುತ್ತಾರೆ;

“ಖುರ್ಆನಿನ ಪದಗಳ ಅರ್ಥಗಳು ಕೇವಲ ಬಾಹ್ಯಾರ್ಥ ಮಾತ್ರವಾಗಿದೆ, ಅದು ಮೊದಲ ಅರ್ಥವೂ ಹೌದು. ಎರಡನೆಯದು, ಅಂತರ್ಲೀನವಾದ ಮತ್ತೊಂದು ಅರ್ಥ. ಮೂರನೆಯದು ಆಳಕ್ಕೆ ಹೋದಂತೆ ಮಾತ್ರ ತೆರೆದುಕೊಳ್ಳುವ ಮಗದೊಂದು ಅರ್ಥ. ಸಾಮಾನ್ಯ ಮನುಷ್ಯನ ಬುದ್ದಿಗೆ ದಕ್ಕದ, ತರ್ಕಕ್ಕೆ ನಿಲುಕದ, ನಿಗೂಢವಾದ ನಾಲ್ಕನೆಯ ಅರ್ಥವೂ ಖುರ್ಆನಿಗಿದೆ. ಒಂದು ತೆಂಗಿನಕಾಯಿಯ ತಿರುಳನ್ನು ಸವಿಯಲೋಸುಗ ಎಷ್ಟು ಪದರಗಳನ್ನು ಸಿಗಿಯಬೇಕಾಗುತ್ತದೆಯೋ ಅದೇ ರೀತಿಯಾಗಿದೆ ಖುರ್ಆನಿನ ಅಂತರಾರ್ಥವನ್ನು ಅರಿಯುವುದು. ಅದು ಏಕಾಗ್ರತೆಯನ್ನು ಬೇಡುವ ಕಾರ್ಯವಾಗಿದೆ.”

ಇಷ್ಟೊಂದು ಗಹನಾರ್ಥವಿರುವ ಖುರ್ಆನಿನ ಚಿಂತನೆಯನ್ನು ಕೇವಲ ಮೇಲ್ಮೈಮೂಲಕ ಮಾತ್ರವೇ ಗ್ರಹಿಸುತ್ತೇವೆನ್ನುವುದು ಹಲವೊಮ್ಮೆ ಪರಿಪೂರ್ಣತೆಗೆ ತೊಡಕಾಗಿ ನಿಲ್ಲುತ್ತದೆ. ಜೇಡಿಮಣ್ಣಿನಿಂದ ಸೃಷ್ಟಿಸಲ್ಪಟ್ಟ ಹಝ್ರತ್ ಆದಂ(ಅ.ಸ)ರ ಶ್ರೇಷ್ಠತೆಯನ್ನು ಗುರುತಿಸಲಾಗದೆ ಅಹಂ ತೋರಿ ಶಪಿಸಲ್ಪಟ್ಟ ಇಬ್ಲೀಸನೊಂದಿಗೆ, ಅವನ ಹೊರನೋಟದೊಂದಿಗೆ ರೂಮಿ ಖುರ್ಆನನ್ನು ತರ್ಜುಮೆ, ಶಬ್ದಾರ್ಥದೊಂದಿಗೆ ಅರ್ಥೈಸುವವರಿಗೆ ಹೋಲಿಕೆಮಾಡುತ್ತಾರೆ. ಅಂದರೆ ಒಳನೋಟವಿಲ್ಲದೆ ಯಾವುದನ್ನೂ ಸರಳವಾಗಿ ಮನನ ಮಾಡಿಕೊಳ್ಳಲಾಗುವುದಿಲ್ಲ ಅದು ಅಸಾಧ್ಯವಾಗಿಯೂ ಇರುತ್ತದೆ‌.

ರೂಮಿ ಕಾವ್ಯದ ಒಂದು ಸಾಲು ಹೀಗಿದೆ;
“ಓ ಮನುಷ್ಯನೇ, ಖುರ್ಆನಿನ ಬಾಹ್ಯ ಅರ್ಥವನ್ನು ಮಾತ್ರ ನೋಡಬೇಡ. ಪ್ರವಾದಿ ಆದಂ (ಅ.ಸ) ರನ್ನು ಸೃಷ್ಟಿಸಿದ ಜೇಡಿಮಣ್ಣನ್ನು ಮಾತ್ರ ನೋಡಿದ ನತದೃಷ್ಟ ಇಬ್ಲೀಸನ ಹಾಗೆ. ಅದು ನಿನ್ನನ್ನು ಪಶ್ಚಾತಾಪಿಯೂ ಪರಾಜಿತನೂ ಆಗಿಸುತ್ತದೆ. “ಖುರ್ಆನಿನ ಪ್ರತ್ಯಕ್ಷಾರ್ಥ ಓರ್ವ ಮನುಷ್ಯನ ಗೋಚರ ವ್ಯಕ್ತಿತ್ವದಂತೆ. ಅವನೊಂದಿಗೆ ಪಳಗಿದರೆ ತೆರೆದುಕೊಳ್ಳುವ ನೈಜವಾದ ಸ್ವಭಾವ ಬೇರೆಯೇ ಆಗಿರುತ್ತದೆ. ಅಂತೆಯೇ ಖುರ್ಆನಿನ ಅಕ್ಷರಗಳ ಆಳದಲ್ಲಿರುವ ವಿಶಾಲಾರ್ಥವೂ ಒಂದೇ ನೋಟಕ್ಕೆ ನಿಲುಕಲಾರದು.”

ಖುರ್ಆನಿನ ಮುತ್ತುಗಳನ್ನು ಚಿಪ್ಪಿಯೊಳಗಿಂದ ಆರಿಸಿಕೊಳ್ಳುವವನಿಗೆ ಅದರೊಂದಿಗೆ ನಿಕಟವಾದ ಸಂಬಂಧ ಮತ್ತು ಅಷ್ಟೇ ತಾಳ್ಮೆಯೂ ಅಗತ್ಯವಿದೆ. ಅದರ ರೂಪ ಮತ್ತು ಅರ್ಥವನ್ನು ಎದೆಗಿಳಿಸಿಕೊಳ್ಳುವುದು ಈ ರೀತಿಯ ಆಪ್ತತೆಯಿಂದ ಮಾತ್ರವೇ ಸಾಧ್ಯವಾಗುತ್ತದೆ ಎಂದು ರೂಮಿ ಹೇಳುತ್ತಾರೆ.

ಮೌಲಾನರ ಮಾತುಗಳನ್ನು ಅರ್ಥೈಸಿಕೊಂಡು ಅವರ ಕಾವ್ಯಗಳಲ್ಲಿನ ರೂಪಕಗಳು, ಉದ್ದೇಶಗಳನ್ನು ತಿಳಿದುಕೊಂಡರೆ ಮಾತ್ರ ಮಸ್ನವಿಯ ಸಾಲುಗಳಲ್ಲಿ ಅಡಕವಾಗಿರುವ ಅಲೌಕಿಕ ಪ್ರಣಯದ ಬಾಗಿಲುಗಳು ತೆರೆದುಕೊಳ್ಳುತ್ತದೆ. ಪ್ರಾಪಂಚಿಕ ಪ್ರಣಯಕ್ಕೂ ಇಲಾಹೀ ಪ್ರೇಮಕ್ಕೂ ನಡುವೆಯಿರುವ ಸೂಕ್ಷ್ಮವಾದ ಅಂತರವು ಗೋಚರವಾಗುತ್ತದೆ. ಒಂದೆಡೆ ರೂಮಿ ಹೀಗೆ ಹೇಳುತ್ತಾರೆ; “ಖುರ್ಆನ್ ಪಾರಾಯಣದಿಂದ ಅವುಗಳ ಅಕ್ಷರಗಳು ಮಾತ್ರ ಕೇಳಿಸುವುದಾದರೆ ನೀನೊಬ್ಬ ಕಿವುಡನಾಗಿರುವೆ, ಗೌಪ್ಯವಾಗಿರುವ ಆಶಯಗಳು ಕಿವಿಯಿಂದ ಕೇಳುವಂತವುಗಳಲ್ಲ. ಅದೊಂದು ನಿರ್ಮಲ ಮನಸ್ಸಿಗೆ ಎಡೆಬಿಡದೆ ಬಡಿಯುವ ಪ್ರೇಮದ ಅಲೆಗಳಾಗಿವೆ.”
ಖುರ್ಆನನ್ನು ಕಂಠಪಾಠ ಮಾಡಿದ ಮಾತ್ರಕ್ಕೆ ಅದು ನಮ್ಮದಾಗಲಾರದು. ಆ ರೀತಿ ಮಾಡುವವನು, ಮೇಲೆ ಪ್ರಸ್ತಾಪಿಸಿದ ಕಿವುಡನ ಹಾಗೆಯೇ ಆಗಿರುತ್ತಾನೆ ಎಂದು ರೂಮಿ ತನ್ನ ಓದುಗರಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ಆದ್ದರಿಂದಲೇ ತಮ್ಮ ಬುದ್ಧಿಗೆ ನಿಲುಕುವ ವ್ಯಾಖ್ಯಾನವನ್ನು ನೀಡುವವನು ದ್ರೋಹಿಯೂ ಅವನು ಎಸಗುವುದು ದೊಡ್ಡ ಅನ್ಯಾಯವೂ ಆಗಿದೆಯೆಂದು ರೂಮಿ ಅಭಿಪ್ರಾಯಿಸುತ್ತಾರೆ. ತಮ್ಮದೇ ಅಭಿಪ್ರಾಯವನ್ನು ಖುರ್ಆನಿನ ಮೇಲೆ ಎತ್ತಿಕಟ್ಟುವವರ ಬಗ್ಗೆ ಅಸಮಾಧಾನವನ್ನು ತೀಕ್ಷ್ಣ ಸ್ವರದಲ್ಲಿ ಮೌಲಾನಾ ವ್ಯಕ್ತಪಡಿಸುವುದನ್ನು ಕಾಣಬಹುದು.

ಪ್ರತ್ಯಕ್ಷಾರ್ಥವನ್ನು ಮಾತ್ರ ಗ್ರಹಿಸಿದ ಖುರ್ಆನ್ ವ್ಯಾಖ್ಯಾನಗಾರರು ಅಂತರ್ಲೀನವಾದ ಅರ್ಥವ್ಯಾಪ್ತಿಯನ್ನು ತಲುಪಲಾರರು. ಅಂಥವರು ವಿಶಾಲವಾಗಿ ಹರಿಯುವ ಖುರ್ಆನಿನ ವೀಕ್ಷಣೆಗಳಿಗೆ ಕಟ್ಟೆಯನ್ನು ಕಟ್ಟುವ ಕೆಲಸವನ್ನಾಗಿದೆ ಮಾಡುವುದು. ಈ ರೀತಿಯ ವ್ಯಾಖ್ಯಾನಕಾರರು ಸ್ವತಃ ಸಂಕುಚಿತ ಮನೋಭಾವದವರೂ ಓದುಗರ ವಿಶಾಲ ಚಿಂತನಾ ಹರವನ್ನು ಕುಂಠಿತಗೊಳಿಸುವವರೂ ಆಗಿರುತ್ತಾರೆ. ಖುರ್ಆನ್ ಜೀವನ ಸಂಹಿತೆಯಾಗಿದ್ದು, ಈ ವ್ಯಾಖ್ಯಾನಗಳು ಮನುಷ್ಯ ಬದುಕನ್ನು ದಾರಿತಪ್ಪಿಸುವ ಸಾಧ್ಯತೆಯನ್ನು ರೂಮಿ ಎದುರು ನೋಡುತ್ತಾರೆ. ಇಂಥಹ ವ್ಯಾಖ್ಯಾನಗಳು ಪ್ರತ್ಯಕ್ಷದಲ್ಲಿ ಬದುಕಿಗೆ ಬೆಳಕಾಗಿರುವ ಖುರ್ಆನನ್ನು ಅನುಸರಿಸುವ ಬದಲು ಅದರ ಮೂಲವನ್ನು ಅಥವಾ ಆ ಬೆಳಕಿನ ದೀಪವನ್ನು ಹುಡುಕುವುದರಲ್ಲಿ ಸಮಯ ವ್ಯರ್ಥಗೊಳಿಸುವವರೊಂದಿಗೆ ರೂಮಿ ತುಲನೆ ಮಾಡುತ್ತಾರೆ.

Joseph Lumbard

ಖುರ್ಆನಿನ ಬಾಹ್ಯ ಅರ್ಥಗಳ ಮೂಲಕ ಜ್ಞಾನವನ್ನು ಬಯಸುವವರು ಪ್ರವಾದಿ ಮೂಸಾ(ಅ.ಸ)ರ ಬಡಿಗೆಯನ್ನು ಕದಿಯಲು ಪ್ರಯತ್ನಿಸಿದ ಮಾಂತ್ರಿಕರಂತೆ.
ರೂಮಿ ಆ ಬಗ್ಗೆ ಈ ರೀತಿ ಬರೆಯುತ್ತಾರೆ: ‘ಮಾಂತ್ರಿಕರು ಬಡಿಗೆಯನ್ನು ಕದಿಯಲು ಪ್ರಯತ್ನಿಸಿದಾಗ, ಅದು ಗಿಡುಗವಾಗಿ ಬದಲಾಯಿತು. ಆದ್ದರಿಂದ ಅವರು ಮೂಸಾ (ಅ.ಸ) ನಿಜವಾದ ಪ್ರವಾದಿ ಎಂದು ನಂಬಿದರು ಮತ್ತು ಅವರೊಂದಿಗೆ ಕ್ಷಮೆಯಾಚಿಸಿದರು.’
ಖುರ್ಆನನ್ನು ಪ್ರವಾದಿ ಮೂಸಾ (ಅ.ಸ)ರ ಬೆತ್ತದೊಂದಿಗೆ ರೂಮಿ ಹೋಲಿಸುವುದಕ್ಕೆ ಕೆಲವೊಂದು ಕಾರಣಗಳಿವೆ.
ಖುರ್ಆನ್ ಅಲ್ಪಸ್ವಲ್ಪ ಗ್ರಹಿಸಲು ಸಾಧ್ಯವಾದವರು ತಾವು ಅರ್ಥಮಾಡಿಕೊಂಡದ್ದು ಅಂತಿಮವೆಂದೂ ಖುರ್ಆನಿನ ನಿಜವಾದ ಸ್ವರೂಪ ಇದಾಗಿದೆಯೆಂದೂ ಭಾವಿಸಬಾರದು. ಅಂಥವರು ಮೂಸಾ(ಅ.ಸ) ರ ಬಡಿಗೆಯನ್ನು ಒಮ್ಮೆ ಅದೊಂದು ಬೆತ್ತವೆಂದೂ, ಮತ್ತೊಮ್ಮೆ ಹಾವೆಂದೂ, ಮಗದೊಮ್ಮೆ ಮತ್ತೊಂದೆಂದೂ ಅರ್ಥಮಾಡಿಕೊಂಡವರಂತೆಯೇ ಆಗುತ್ತದೆ. ವಾಸ್ತವದಲ್ಲಿ ಆ ಬಡಿಗೆಯು ಎಲ್ಲಾ ರೂಪವನ್ನು ತಾಳಲು ಸಾಮರ್ಥ್ಯವಿರುವ ಬಡಿಗೆಯೆಂಬುವುದನ್ನು ಅರ್ಥೈಸುವಲ್ಲಿ ಆ ಸಮೂಹ ವಿಫಲಗೊಂಡಿತು. ಖುರ್ಆನನ್ನು ಮನನ ಮಾಡಿಕೊಳ್ಳುವಾಗಲೂ ಈ ರೀತಿಯಲ್ಲಿ ನಾವು ಎಡವಬಾರದೆಂದು ಮೌಲಾನಾ ನೆನಪಿಸುತ್ತಾರೆ. ಖುರ್ಆನಿನ ನಿಜವಾದ ಅರ್ಥವನ್ನು ಅರಿಯುವುದಕ್ಕೆ ರೂಮಿಯು ತನ್ನ ‘ಫೀಹಿ ಮಾ ಫೀಹಿ’ ಗ್ರಂಥದಲ್ಲಿ ಒಂದಿಷ್ಟು ಉದಾಹರಣೆಯನ್ನು ನೀಡುತ್ತಾರೆ. ಅದು ಈ ಕೆಳಗಿನಂತಿವೆ;

  • ‌ಹಿಜಾಬನ್ನು ಧರಿಸಿದ ಮದುಮಗಳೊಂದಿಗೆ ರೂಮಿ ಖುರ್ಆನನ್ನು ತುಲನೆ ಮಾಡುತ್ತಾರೆ.”ನೀವು ಅವಳ ಹಿಜಾಬನ್ನು ಸರಿಸಿದ ಮಾತ್ರಕ್ಕೆ ನೈಜವಾದ ಚೆಲುವು ಅನಾವರಣಗೊಳ್ಳಬೇಕಿಲ್ಲ. ಅಂತೆಯೇ ಒಂದೇ ನೋಟಕ್ಕೆ ಖುರ್ಆನ್ ಅರ್ಥವಾಗಲಾರದು. ಅದರಲ್ಲಿನ ಆಧ್ಯಾತ್ಮಿಕತೆ ವೇದ್ಯಾವಾಗದೇ ಇರಲೂಬಹುದು. ಅದರರ್ಥ ಖುರ್ಆನನ್ನು ನಾವು ಓದುವಲ್ಲಿ, ಅರ್ಥೈಸುವಲ್ಲಿ ಎಡವಿದ್ದೇವೆಂದಾಗಿದೆ. ಕೆಲವೊಮ್ಮೆ ನಾವು ಎಸಗಿದ ಪಾಪಗಳ ಕಾರಣಕ್ಕೆ ಖುರ್ಆನ್ ನಮ್ಮನ್ನು ಅಲಕ್ಷಿಸಲೂಬಹುದು. ಖುರ್ಆನ್ ನನ್ನಲ್ಲಿ ವಿಶೇಷವಾದ ಚೆಲುವೇನೂ ಇಲ್ಲವೆಂದು, ನನ್ನಲ್ಲಿ ಯಾವುದೇ ಆಕರ್ಷಣೆ ಇಲ್ಲವೆಂದು ಹೇಳಲೂಬಹುದು. ಕಾರಣ ಖುರ್ಆನ್ ಆಪ್ತವಾಗುವುದು ಅದರೊಂದಿಗೆ ಆಪ್ತವಾಗುವ, ತನ್ನನ್ನು ಧ್ಯಾನಿಸುವ ಓದುಗರಿಗೆ ಮಾತ್ರವಾಗಿದೆ.(ಫೀಹಿ ಮಾ ಫೀಹಿ)
  • “ಖುರ್ಆನಿನ ಒಳದನಿಗಳನ್ನು ನಿಮ್ಮ ಸೀಮಿತ ಬುದ್ಧಿಯಿಂದ ಗ್ರಹಿಸುವ ಬದಲು ಸ್ವತಃ ಖುರ್ಆನಿನೊಂದಿಗೆ ಕೇಳಿ ತಿಳಿದುಕೊಳ್ಳಿ. ಅದನ್ನು ಧ್ಯಾನಿಸಿ ಪಠಿಸಿ. ಹೃದಯಕ್ಕೆ ಹತ್ತಿರವಾಗುವಂತೆ ಬಿಗಿಯಾಗಿ ಹಿಡಿದುಕೊಳ್ಳಿ. ಅದನ್ನು ಸೇರುವ ದಾರಿಯಲ್ಲಿ ಚಲಿಸಿ, ಖುರ್ಆನಿನ ಸೇವಕರಾಗಿ. ಅದು ನಿಮಗೆ ಒಲಿದು ಬರದಿದ್ದರೆ ಮತ್ತೆ ಕೇಳಿ”(ಫೀಹಿ ಮಾ ಫೀಹಿ)
  • “ಸೃಷ್ಟಿಕರ್ತ ಎಲ್ಲರೊಂದಿಗೂ ಮಾತನಾಡಬೇಕಿಲ್ಲ. ಭೌತಿಕ ಬದುಕಿನ ರಾಜರಿಗೂ ಸಹಾಯಕ್ಕೆಂದು ಮಂತ್ರಿ ಮಾಗದರು, ಸೇವಕರಿರುವಂತೆ ಅಲ್ಲಾಹನಿಗೂ ಭೂಮಿಯಲ್ಲಿ ದಾಸರಿದ್ದಾರೆ. ಆ ದಾಸರನ್ನು ಹುಡುಕುತ್ತಾ ಸಾಗಿ. ಅವರಲ್ಲಿ ನನ್ನನ್ನು ದರ್ಶಿಸಿ. ನಾನು ನಿಮ್ಮೆಡೆಗೆ ಕಳುಹಿಸಿದ ಪ್ರವಾದಿಗಳ ಹೆಜ್ಜೆಗಳನ್ನು ಅನುಸರಿಸಿ ಅವರೊಂದಿಗೆ ನನ್ನೆಡೆಗೆ ತಲುಪಿ”(ಫೀಹಿ ಮಾ ಫೀಹಿ)

(ಖುರ್ಆನಿನ ಭೋದನೆಗಳನ್ನು ತನ್ನ ಕಾವ್ಯದುದ್ದಕ್ಕೂ ವಿಶೇಷವಾಗಿ ಮಸ್ನವಿಯ ಸಾಲುಗಳಲ್ಲಿ ಪ್ರತಿಪಾದಿಸಿದವರು ಮೌಲಾನಾ ಜಲಾಲುದ್ದೀನ್ ರೂಮಿ. ‘ಪರ್ಷಿಯನ್ ಖುರ್ಆನ್’ ಎಂದು ಜನಪ್ರಿಯತೆ ಗಳಿಸಿದ ಮಸ್ನವಿಯ ಸಾರ-ಸತ್ವವನ್ನು ಸವಿಯುವಲ್ಲಿ, ಅದರ ಆಧ್ಯಾತ್ಮಿಕ ಚಿಂತನೆಗಳನ್ನು ಎದೆಗಿಳಿಸಿಕೊಳ್ಳುವಲ್ಲಿ ಓದುಗರು, ಅನುವಾದಕರು ಎಡವುತ್ತಿರುವುದು ಸದ್ಯದ ಪರಿಸ್ಥಿತಿಯಾದರೆ, ಅದನ್ನೆಲ್ಲಾ ಮೀರಿ ಮಸ್ನವಿ ಕನ್ನಡದ ಓದುಗರಿಗೂ ದಕ್ಕಲಿ ಎಂಬುವುದು ನಮ್ಮ ಅಭಿಲಾಷೆಯೂ, ಸದಾಶಯವೂ ಹೌದು.)

ಮೂಲ: ಜೋಸೆಫ್ ಲ್ಯಾಂಬೋಡ್
ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್

ಮರುಯಾತ್ರೆಗಿರುವ ಗಂಟುಮೂಟೆಗಳು : ಫರೀದುದ್ದೀನ್ ಅತ್ತಾರರ ಸೂಫೀ ಕಾವ್ಯ ಲೋಕ

ಫರೀದುದ್ದೀನ್ ಆತ್ತಾರ್ (ರ) ರ ಜನನ ಕ್ರಿ. ಶ 1150, ನಿಷಾಪೂರಿನ ಹತ್ತಿರ ಪ್ರದೇಶವಾದ ಕಟಕಿಲ್ ಎಂಬ ಗ್ರಾಮದಲ್ಲಾಗಿತ್ತು. ಖುರಾಸಾನ್ ಹಾಗೂ ನಿಷಾಪೂರ್ ಗಳೆರಡೂ ಆ ಕಾಲಘಟ್ಪದ ಸೂಫಿಗಳ ಕೇಂದ್ರವೆಂದು ಪ್ರಸಿದ್ಧಗೊಂಡ ಸ್ಥಳಗಳಾಗಿದ್ದವು. ಅಬೂ ಝೈದ್, ಅಬುಲ್ ಖೈರ್, ಅಲ್ ಗಝ್ಝಾಲೀ ಯಂತಹ ಹಲವು ಪ್ರಮುಖ ಸೂಫಿಗಳು ಈ ಪ್ರದೇಶದವರೇ. ‘ಅತ್ತಾರ್’ ಎಂದರೆ ಸುಗಂಧ ದ್ರವ್ಯ ಎಂದರ್ಥ. ಸೂಫಿವರ್ಯರಾದ ಫರೀದುದ್ದೀನ್ ಆತ್ತಾರ್ (ರ) ರವರ ತಂದೆ ಸುಗಂಧ ವ್ಯಾಪಾರಿಯಾಗಿದ್ದರು. ತದನಂತರ ಮಗನೂ ತಂದೆಯ ವೃತ್ತಿಯನ್ನೇ ಹಿಡಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಬದುಕಿನ ಸಿಂಹಪಾಲನ್ನು ಅವರು ತಾಯಿಯ ಜೊತೆಯಲ್ಲಿ ಕಳೆದರು. ತಾಯಿಯ ಜೊತೆಗಿದ್ದ ಸಮಯದ ಸಂತೋಷ, ಸಂತೃಪ್ತಿಯನ್ನು ನಂತರದ ತಮ್ಮ ಬರವಣಿಗೆಯಲ್ಲಿ ಅವರು ಉಲ್ಲೇಖಿಸಿದ್ದಾರೆ. ಅಧ್ಯಾತ್ಮದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ತಾಯಿಯಿಂದ ಆಧ್ಯಾತ್ಮಿಕತೆಯ ಪ್ರಭೆಯನ್ನು ಪಡೆದರು.
ಸುಗಂಧ ದ್ರವ್ಯದ ವ್ಯಾಪಾರದ ಜೊತೆಗೆ ರೋಗಿಗಳನ್ನು ಶುಶ್ರೂಷೆ ಮಾಡಿ ಔಷಧಿಗಳನ್ನು ನೀಡುತ್ತಾ ಬದುಕು ಸಾಗಿಸಿದರು. ತಮ್ಮ ಅಂಗಡಿಯಿಂದಲೇ ಅರ್ಥಗರ್ಭಿತವಾದ ಸೂಫಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಸುಗಂಧ ವ್ಯಾಪಾರದಲ್ಲಿ ಹೆಚ್ಚು ನಿರತರಾದ ಸಂದರ್ಭದಲ್ಲಾಗಿತ್ತು ತನ್ನ ಜೀವನದ ಅತಿ ಮಹತ್ವದ ಫಟನೆಯೊಂದು ನಡೆಯುವುದು. ಒಮ್ಮೆ ‘ದರ್ವೀಶ್ ಅಕ್ತಾರ್’ ಎಂಬವರು ಅವರ ಅಂಗಡಿಯ ಮುಂದೆ ಬಂದು ನಿಂತು ಅಲ್ಲಿದ್ದ ವಸ್ತುಗಳಿಗೆ ದಿಟ್ಟಿಸಿ ನೋಡುತ್ತಾ ಚಕಿತನಾಗಿ ನಿಂತರು. ತನ್ನ ಅಂಗಡಿಯ ಮುಂದೆ ನಿಂತು ಗ್ರಾಹಕರಿಗೆ ತೊಂದರೆಯಾಗುವುದನ್ನು ಅರಿತ ಅತ್ತಾರ್ ರವರು ಅವರೊಂದಿಗೆ ಅಲ್ಲಿಂದ ಹೊರಡಲು ಹೇಳಿದರು. ಅದಕ್ಕೆ ಉತ್ತರವಾಗಿ ದರ್ವೀಷ್,
“ಹೋಗಲು ನನಗೆ ಅಭ್ಯಂತರವೇನೂ ಇಲ್ಲ. ನನ್ನ ಮಾಲು ಅತೀ ವಿರಳವಾಗಿದೆ. ಈ ಚಿಂದಿ ಬಟ್ಟೆಯನ್ನಲ್ಲದೆ ಇನ್ನೇನನ್ನೂ ನನಗೆ ಒಯ್ಯಲಿಕ್ಕಿಲ್ಲ. ಆದರೆ ಇಷ್ಟೊಂದು ಭಾರೀ ಪ್ರಮಾಣದ ವಸ್ತುಗಳ ಒಡೆಯರಾದ ತಾವು, ತಮ್ಮ ಅಂತ್ಯದಲ್ಲಿ ಅವನ್ನೆಲ್ಲ ಹೇಗೆ ಒಯ್ಯುವಿರಿ? ನಾನಾದರೆ, ಈ ನಶ್ವರ ಲೋಕದ ಸಂತೆಯಿಂದ ಬಹಳ ಬೇಗನೇ ಹೋಗಬಲ್ಲವನಾಗಿದ್ದೇನೆ. ನೀವಾದರೆ ನಿಮ್ಮ ಮಾಲನ್ನು ಕಟ್ಟುವುದರಲ್ಲೇ ನಿರತರಾಗಬೇಕಾಗಬಹುದು. ಆದ್ದರಿಂದ ನಿಮ್ಮ ಅಂತ್ಯದ ಬಗ್ಗೆ ಸ್ವಲ್ಪ ಧ್ಯಾನಿಸುವುದು ಒಳಿತೆನಿಸುತ್ತದೆ”.
ಇಷ್ಟು ಹೇಳಿ ಅವರು ಅಲ್ಲಿಯೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು. ಈ ಫಟನೆ ಅತ್ತಾರರ ಮನವನ್ನು ಗಟ್ಟಿಯಾಗಿ ಕುಲುಕಿತು. ಅಲ್ಲಿಂದ ಅತ್ತಾರರು ತನ್ನೆಲ್ಲಾ ವ್ಯಾಪಾರ ವಹಿವಾಟನ್ನು ತ್ಯಜಿಸಿ ಸೂಫೀ ಲೋಕಕ್ಕೆ ಪ್ರವೇಶಿಸಿದರು.
ವಂದ್ಯ ಗುರು ರುಕ್ನುದ್ದೀನ್ ಅಕ್ಕಲರ ಶಿಕ್ಷಣದೊಂದಿಗೆ ಫರೀದುದ್ದೀನ್ ಅತ್ತಾರರು ಧ್ಯಾನ ನಿರತರಾದರು. ಜೀವನದ ದೃಷ್ಟಿಕೋನವನ್ನು ಬದಲಿಸಲು ಅವರಿಗದು ನೆರವಾಯಿತು. ತನ್ನ ಗುರುವರ್ಯರ ಇತರ ಶಿಷ್ಯಂದಿರೊಂದಿಗೆ ಕೆಲವು ಕಾಲ ಕಳೆದ ಅವರಿಗೆ ಪವಿತ್ರ ಮಕ್ಕಾಗೆ ತೆರಳುವ ಅವಕಾಶ ಒದಗಿ ಬಂತು. ಒಂದೇ ಸ್ಥಳದಲ್ಲಿ ಕೂತು ಬರೆಯುವ ಮತ್ತು ಕಲಿಸುವ ಮುನ್ನ ಹಲವು ಯಾತ್ರೆಗಳನ್ನು ಸೂಫಿಗಳು ಕೈಗೊಳ್ಳುತ್ತಾರೆ. ಅತ್ತಾರರೂ ಇದಕ್ಕೆ ಭಿನ್ನರಾಗಿರಲಿಲ್ಲ. ನಿಷಾಪೂರಿನಲ್ಲಿ ನೆಲೆಸುವುದಕ್ಕೂ ಮುನ್ನ ರಯ್ಯ್, ಕೂಫಾ, ಡಮಸ್ಕಾಸ್, ಈಜಿಪ್ತ್, ಭಾರತ, ತುರ್ಕಿಸ್ತಾನ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಏಕಾಂತ ವಾಸವನ್ನು ಅವರೇ ತಮ್ಮ ಬರವಣಿಗೆಯಲ್ಲಿ ತಿಳಿದ್ದಾರೆ: “ಹೃದಯ ದುಃಖದಿಂದ ನಾನು ಕರಗಿದೆ. ನನ್ನ ಅಕ್ಕಪಕ್ಕದವರು ನನ್ನನ್ನು ಪರಿಗಣಿಸಲಿಲ್ಲ. ನಾನು ಒಂಟಿಯಾಗಿ ದುಃಖಿತನಾದೆ. ಧಾರಾಕಾರವಾಗಿ ಕಣ್ಣೀರು ಹರಿಯಿತು. ಹಲವು ಬಾರಿ ನನ್ನ ಅತಿಥಿಯಾಗಿ ಜಿಬ್ರೀಲ್ (ಅ)ಬಂದಿದ್ದರು. ಅಲ್ಲಾಹನು ನನ್ನ ಬಳಿ ಇರುವಾಗ ಕ್ಷುಲ್ಲಕನಾದ ಇನ್ನೊಬ್ಬನೊಂದಿಗೆ ನಾನು ಯಾಕೆ ರೊಟ್ಟಿ ಹಂಚಿಕೊಳ್ಳಲಿ? ಈ ರೊಟ್ಟಿಯೇ ನನ್ನ ಪೋಷಕಾಹಾರ. ತೃಪ್ತಿಗೊಂಡ ಹೃದಯ ಆತ್ಮಕ್ಕೆ ಹೊಸ ಜೀವನವನ್ನೇ ಕೊಡುತ್ತಿದೆ. ನೀಚನಾದ ಒಬ್ಬನೊಂದಿಗೆ ನಾನೇಕೆ ಗುಲಾಮನಾಗಿರಲಿ? ಅಲ್ಲದಿದ್ದರೆ ನನ್ನ ಹೃದಯ ಅಧೀನಪಡಿಸಲು ಅವನನ್ನೇಕೆ ಸಂಪರ್ಕಿಸಲಿ? ನಾನು ಒಮ್ಮೆಯೂ ಒಬ್ಬ ಸರ್ವಾಧಿಕಾರಿಯ ಆಹಾರ ಉಂಡವನಲ್ಲ. ಅಂತಹ ಒಬ್ಬನಿಗೂ ನನ್ನ ಅಭಿಮಾನವನ್ನು ಮಾರಿದವನಲ್ಲ. ಆತ್ಮದ ಬಲವೇ ನನ್ನ ಶರೀರವನ್ನು ಉಳಿಸಿಕೊಳ್ಳುವುದು.”

ಅತ್ತಾರವರು ತನ್ನ ಪ್ರಯಾಣದ ಮಧ್ಯೆ ಆನೇಕ ಸೂಫಿ ಸಂತರನ್ನು ಕಂಡರು. 39 ವರ್ಷಗಳ ಕಾಲ ಸೂಫಿಗಳ ಮಾತು, ಕಾವ್ಯ ಸಂಗ್ರಹ, ಅವರ ಜೀವನ, ಆಚಾರ ವಿಚಾರಗಳ ಮಾಹಿತಿ ಸಂಗ್ರಹದಲ್ಲಿ ಸಮಯ ವ್ಯಯಿಸಿದರು. ಇದೇ ಕಾರಣದಿಂದ ಆ ಕಾಲಘಟ್ಟದ ಇತರ ಸೂಫಿಗಳಿಗಿಂತ, ಸೂಫೀ ಬರಹಗಾರರಿಗಿಂತ ಅವರ ತಾತ್ವಿಕ ಚಿಂತನೆಯು ಅತ್ಯದ್ಭುತವಾಗಿ ಮೂಡಿಬಂತು. ತಮ್ಮ ಜೀವನದ ಕೊನೆಯ ಕಾಲವನ್ನು ಏಕಾಂತದಿಂದ ಕಳೆಯಲಾರಂಭಿಸಿದರು. ಯಾರಿಗಾಗಿಯೂ ಬಾಗಿಲನ್ನು ತೆರೆದುಕೊಡುತ್ತಿರಲಿಲ್ಲ. ಆದರೆ, ಆಧ್ಯಾತ್ಮಿಕ ಸಲಹೆಯನ್ನು ಅರಸಿ ಬಂದವರನ್ನು ಬರಿಗೈಯ್ಯಲ್ಲಿ ಕಳುಹಿಸುತ್ತಿರಲಿಲ್ಲ.
ತಮ್ಮ ಏಕಾಂತದಲ್ಲಿ ಅಲ್ಲಾಹನ ಅಸ್ತಿತ್ವದ ಆಲೋಚನೆಯಲ್ಲಿ ಮುಳುಗಲಾರಂಭಿಸಿದರು.
ಅತ್ತಾರರ ಅಂತಿಮಯಾತ್ರೆಯು ಕ್ರಿ. ಶ 1229 -30 ರಲ್ಲಿ ನಿಷಾಪೂರಿನಲ್ಲಿ ನಡೆದ ಮಂಗೋಲಿಯನ್ನರ ಆಕ್ರಮಣದ ವೇಳೆಯಲ್ಲೆಂದು ಇತಿಹಾಸಕಾರರ ಅಭಿಪ್ರಾಯ. ಒಬ್ಬ ಮಂಗೋಲಿಯನ್ನನು ಅವರನ್ನು ಬಂಧಿಸಿ ಕೊಲ್ಲಲಣಿಯಾದಾಗ ಮತ್ತೊಬ್ಬ ಮಂಗೋಲಿಯನು ಅವರನ್ನು ಬಿಡುಗಡೆ ಮಾಡಿದರೆ 1000 ಬೆಳ್ಳಿನಾಣ್ಯ ಕೊಡುವೆನೆಂದು ಘೋಷಿಸಿದನು. ಆ ಘೋಷಣೆಯನ್ನು ಕೇಳಿ ಬೇರೆ ಯಾರಾದರು ಅದಕ್ಕಿಂತ ಹೆಚ್ಚು ಕೂಗಬಹುದೆಂದು ಬಿಟ್ಟು ಕೊಡದೆ ಅವನನ್ನು ಅಲ್ಲಿಂದ ಅಟ್ಟಿದನು. ಹಾಗೆ ಅವನು ಅಲ್ಲಿಂದ ಮರಳಿದನು. ಮತ್ತೊಮ್ಮೆ ಕೊಲ್ಲಲು ಮುಂದಾದಾಗ ದಾರಿಹೋಕನೊಬ್ಬ ಘೋಷಣೆ ಕೂಗಿದ. ಆದರೆ ಈ ಬಾರಿಯ ಘೋಷಣೆ ಒಂದು ಚೀಲ ಒಣಹುಲ್ಲು ಮಾತ್ರವಾಗಿತ್ತು. ‘ಅವರ ಘೋಷಣೆಯನ್ನು ಸ್ವೀಕರಿಸಿರಿ ಇದುವೇ ನನ್ನ ನೈಜ ಬೆಲೆ’ ಎಂದು ಅತ್ತಾರರು ಅವರನ್ನು ಬೇಡಿಕೊಂಡರು. ಕುಪಿತನಾದ ಮಂಗೋಲಿಯನ್ ಅವರನ್ನು ಕೊಂದೇ ಬಿಟ್ಟನು. ಶಾದ್ ಬಾಕ್ಕಿನ ಗೇಟಿನ ಹೊರಗೆ ಫರೀದುದ್ಧೀನ್ ಅತ್ತಾರರ ಸಮಾಧಿ ಇದೆ. ಕಾಲಾಂತರದಲ್ಲಿ ಅವರ ಸಮಾಧಿ ಧ್ವಂಸಗೊಳಿಸಲ್ಪಟ್ಟಿತ್ತು. ಆಮಿರ್ ಶಾಹ್ ಅದನ್ನು ಪುನರ್ ನಿರ್ಮಿಸಿ, ಮನೋಹರವಾದ ಒಂದು ಸ್ಮಾರಕವನ್ನು ಅಲ್ಲಿ ಕಟ್ಟಿದನು. ಅತ್ತಾರರ ಜೀವನದ ಸಿಂಹಪಾಲು ಸಾಹಿತ್ಯ ರಚನೆಗೆ ಮೀಸಲಾಗಿತ್ತು. 30ರಷ್ಟು ಮಹಾ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದರು. ಅದರಲ್ಲಿ ‘ತದ್ಕಿರತುಲ್ ಔಲಿಯಾ’ ಮಾತ್ರವಾಗಿದೆ ಗದ್ಯವಾಗಿ ಕಾಣಸಿಗುವುದು. ಹಲವಾರು ಸಣ್ಣ ಪುಟ್ಟ ಕವಿತೆಗಳನ್ನೂ ಅವರು ರಚಿಸಿದ್ದಾರೆ. ಕವಿಯಾಗಿದ್ದರೂ, ತತ್ವಜ್ಞಾನದಲ್ಲೂ ಅಧ್ಯಾತ್ಮ ಚಿಂತನೆಗಳಲ್ಲೂ ಖ್ಯಾತಿಪಡೆದರು. “ತದ್ಕಿರತುಲ್ ಔಲಿಯಾ’ ಗ್ರಂಥವು, ಸೂಫಿಗಳ ಜೀವನ ಮತ್ತು ಅವರ ಅಧ್ಯಾಪನೆಗಳ ಕುರಿತು ಅಮೂಲ್ಯವಾದ ಜ್ಞಾನವನ್ನು ವಿವರಿಸುತ್ತದೆ. ಅತ್ತಾರ್ (ರ) ಕವಿತೆಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಕವಿತೆ “ಮಂತಿಕುತ್ತುಯೂರ್” ಆಗಿದೆ.

ಮಂತಿಕುತ್ತುಯೂರ್ (ಪಕ್ಷಿಗಳ ಸಂಭಾಷಣೆ):
ಸೃಷ್ಟಿಕರ್ತನೆಡೆಗಿನ ತೊಡಕುಗಳು ತುಂಬಿದ ಮಾರ್ಗದಲ್ಲಿ ಸೂಫಿಯೊಬ್ಬನ ಕ್ಷಮಾಪೂರ್ಣ ಪ್ರಯಾಣದ ಅಭಿವ್ಯಕ್ತಿಯಾಗಿದೆ “ಪಕ್ಷಿ ಸಂಭಾಷಣೆ” ಎಂಬ ಕವಿತೆಯಲ್ಲಿ ಮೂಡಿರುವುದು. ದೇವಸನ್ನಿಧಿಗೆ ತಲುಪುವಾಗ ದೊರಕುವ ಆಧ್ಯಾತ್ಮಿಕ ವಿಜಯವನ್ನೂ ಕವಿತೆ ಪ್ರತಿಪಾದಿಸುತ್ತಿದೆ. ಸೃಷ್ಟಿ ಕರ್ತನ ಸಾನಿಧ್ಯವಿರುವ ಆ ಸಂಗಮದಲ್ಲಿ ಆವರು ಅನಶ್ವರತೆಯನ್ನು ಪಡೆಯುತ್ತಾರೆ. ಸೂಫಿಸಂ ಸಂಬಂಧಿತ ಹಲವು ಸ್ವತಂತ್ರ ಕತೆಗಳು ಈ ಯಾತ್ರಾ ವಿವರಣೆಯಲ್ಲಿ ಕಾಣಬಹುದು.

ಪಕ್ಷಿಗಳ ಒಂದು ಗುಂಪು ಒಟ್ಟುಗೂಡಿ ಹೊಸ ರಾಜನ ಆಯ್ಕೆ ಮಾಡುವ ವೇಳೆಯನ್ನು ವಿವರಿಸುತ್ತ ‘ಪಕ್ಷಿ ಸಂಭಾಷಣೆ’ ಎಂಬ ಕಾವ್ಯವನ್ನು ಆರಂಭಿಸಲಾಗುತ್ತದೆ. ಹುದ್ ಹುದ್ (Hoopoe) ಅವರಲ್ಲಿ ಹೆಸರುವಾಸಿಯಾದ ಪಕ್ಷಿಯಾಗಿತ್ತು. ಪ್ರವಾದಿ ಸುಲೈಮಾನ್ ನಬಿಯವರು ಸಂದೇಶ ದೂತನಾಗಿ ಆಯ್ಕೆಮಾಡಿದ ಪಕ್ಷಿಯಾಗಿದೆ ಹುದ್ ಹುದ್. ಅದರ ತಲೆಯಲ್ಲಿ ವೈಭವದ ಸಂಕೇತವಾದ ಕಿರೀಟವಿತ್ತು. ನಮಗೊಂದು ನಾಯಕನಿದ್ದಾನೆಂದು ಹಾಗೂ ನಾವೆಲ್ಲರೂ ಅವನಿಗೆ ಸೇರಿದವರೆಂದು ಹುದ್ ಹುದ್ ಅವರೊಂದಿಗೆ ಹೇಳಿತು. ‘ಸಿಮುರ್ಗ್’ ಎಂದು ಅದರ ಹೆಸರು. ಆ
ಎಲ್ಲಾ ಪಕ್ಷಿಗಳ ರಾಜನಾದ ಸಿಮುರ್ಗ್ ಅವರ ಹತ್ತಿರವಿದ್ದರೂ ಅವರು ಅವನಿಂದ ದೂರದಲ್ಲಿದ್ದರು. ಅವನು ಎಲ್ಲಾ ವಿವರಣೆಗಳ ಜ್ಞಾನಿ, ಅವನಿಲ್ಲದೆ ಬದುಕಲು ಸಾಧ್ಯವಿಲ್ಲ. ನಾವು ಅವನನ್ನು ಕಾಣಲು ಬಲುದೂರ ಪ್ರಯಾಣಿಸಬೇಕು. ಅವನನ್ನು ಕಾಣಲು ಸಾಧ್ಯವಿಲ್ಲ ಎಂದರೆ ನಮ್ನ ಜೀವನ ಅಷ್ಟಕ್ಕಷ್ಟೇ. ಆ ಪ್ರಯಾಣವನ್ನು ಪೂರ್ಣಗೊಳಿಸಲು ಅತೀದೊಡ್ಡ ಪ್ರಮಾಣದ ಧೈರ್ಯ ಪರಿತ್ಯಾಗಗಳ ಅವಶ್ಯಕತೆ ಇದೆ. ಅಪಫಾತಗಳಿಂದ ಕೂಡಿದ ಕಣಿವೆಗಳನ್ನು ದಾಟಬೇಕಿದೆ. ಇದನ್ನು ಕೇಳಿದ ಪಕ್ಷಿಗಳು ದೂರದ ‘ಕಾಫ್’ ಪರ್ವತದಲ್ಲಿ ವಾಸಿಸುವ ಸಿಮುರ್ಗನ್ನು ಹುಡುಕಿ ಹೊರಡುವ ಆಸಕ್ತಿಯನ್ನು ತೋರಿದವು. ಅಲ್ಲಿಗೆ ತೆರಳಿ ಆ ಪಕ್ಷಿಗೆ ವಂದಿಸಲು ತೀಮಾ೯ನಿಸಿದವು. ದೇವರ ಮಾರ್ಗದಲ್ಲಿ ಜ್ಞಾನಿಯೂ, ವಿವೇಕಿಯೂ ಆದ ಹುದ್ ಹುದ್ ನನ್ನು ಯಾತ್ರಾ ನಾಯಕನಾಗಿ ಆಯ್ಕೆಮಾಡಿದರು. ಆದರೆ ಯಾತ್ರಾ ಮಧ್ಯೆ ಸಹಿಸಬೇಕಾದ ಆಯಾಸವನ್ನು, ಅಪಾಯಗಳನ್ನು ಹುದ್ ಹುದ್ ವಿವರಿಸಿದಾಗ ಮೆಲ್ಲ ಮೆಲ್ಲನೆ ಒಂದೊಂದೆ ಪಕ್ಷಿಗಳು ನೆಪ ಹೂಡಿ ಹಿಂದೆ ಸರಿಯತೊಡಗಿದವು. ನೈಟಿಂಗೇಲ್ ಪಕ್ಷಿಯು, “ಗುಲಾಬಿಯನ್ನು ಅತಿಯಾಗಿ ಪ್ರೀತಿಸುವೆನೆಂದೂ ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ” ವೆಂದೂ ತಿಳಿಸಿತು. ನಶ್ವರವಾದ ಸೌಂದರ್ಯದಲ್ಲಿ ಆಕರ್ಷಣೆಗೊಳ್ಳದೆ ಅನಂತವಾದ ಸೌಂದರ್ಯವನ್ನು ಇಷ್ಣಪಡಲು ಹುದ್ ಹುದ್ ಅವರನ್ನು ಉಪದೇಶಿಸಿತು. ತಾನು ಪಂಜರದಲ್ಲಿ ಬಂಧಿಸಲ್ಪಟ್ಟಿದ್ದೇನೆಂದೂ ನನಗೆ ಹೊರಬರುವ ಸ್ವಾತಂತ್ರ್ಯ ಇಲ್ಲವೆಂದು ಗಿಳಿ ಹೇಳಿತು. ಅಷ್ಟು ದೊಡ್ದ ಹುಡುಕಾಟದ ಅಗತ್ಯವೇನಿದೆ ಎಂದು ನವಿಲು ವಾದಿಸಿತು. ಜಲವಿದ್ದರೆ ಮಾತ್ರ ನನಗೆ ಸಂತೋಷವೆಂದು ಬಾತುಕೋಳಿ ಹೇಳಿದರೆ, ನನಗೆ ಬೆಟ್ಟಗುಡ್ಡಗಳಿರಬೇಕೆಂದು ಗಿಳಿಯು ಹೇಳಿತು. ಕೊಕ್ಕರೆಯು ತಾನು ಬಳುಕುತ್ತ ನಡೆಯಲು ಕಲಿತ ಕೆರೆಯು ಬೇಕೆಂದು ಹೇಳಿತು. ಗೂಬೆಗೆ ತಾನು ನೆಲೆಸಿರುವ ನಿರ್ಜನ ಮನೆಗಳು ಬೇಕಿತ್ತು. ರಾಜನ ಜೊತೆಗೆ ಬೇಟೆಯಾಡುವಾಗ ಸಿಗುವ ಪ್ರತಾಪವನ್ನು ಕೈಚೆಲ್ಲಲು ಫಾಲ್ಕನ್ ತಯಾರಿರಲಿಲ್ಲ. ಈ ಎಲ್ಲಾ ಸಾಮರ್ಥ್ಯ, ಅಸಾಮರ್ಥ್ಯಗಳು ಸೃಷ್ಟಿಕರ್ತನ ಅನುಸರಣೆ ಮಾಡಬೇಕಾದ ಮನುಷ್ಯನ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ಕೆ ಸಮಯ ಕಳೆಯುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಹಲವು ಕತೆಗಳ ಮೂಲಕ ಹುದ್ ಹುದ್ ಅವರಿಗೆ ಮನದಟ್ಟುಮಾಡಿಕೊಟ್ಟಿತು.
ಹುದ್ ಹುದಿನ ಮಾರ್ಮಿಕ ಮಾತಿಗೆ ಅವರೆಲ್ಲರೂ ತಲೆದೂಗಿದರು. ತದನಂತರ ಸಿಮುರ್ಗ್ ನೊಂದಿಗಿನ ನಮ್ಮ ನೈಜ ಸಂಬಂಧವೇನೆಂದು ಅವರು ಕೇಳಿದರು. “ಒಮ್ಮೆ ಸಿಮುರ್ಗ್ ಗೆ ತನ್ನ ಮುಖದಲ್ಲಿ ಮರೆಯನ್ನು ತೆರೆಯುವ ಅವಕಾಶ ಬಂತು. ಆ ಸಮಯದಲ್ಲಿ ಮುಖದಿಂದ ಹೊರಚಿಮ್ಮಿದ ಪ್ರಕಾಶ ಕಿರಣಗಳು ನಂತರ ಪಕ್ಷಿಗಳಾಗಿ ಬದಲಾದವು” ಎಂದು ಹುದ್ ಹುದ್ ಹೇಳಿತು. ಆದ್ದರಿಂದಲೇ ನಾವೆಲ್ಲರೂ ಮೂಲಭೂತವಾಗಿ ಅವನಿಗೆ ಸೇರಿದವರು ಎಂದಿತು.

7 ಕಣಿವೆಯಲ್ಲಿ ಮೊದಲನೆಯದು ಹುಡುಕಾಟದ ಕಣಿವೆಯಾಗಿದೆ. ಆ ಹಂತದಲ್ಲಿ ನಿರಂತರ ಕಷ್ಟ ನಷ್ಟಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಈ ಹಂತದಲ್ಲಿ ಭೌತಿಕವಾದ ಎಲ್ಲವನ್ನೂ ತ್ಯಜಿಸಬೇಕಾಗಬಹುದು. ಲೌಕಿಕವಾದ ಎಲ್ಲದರಿಂದಲೂ ಮುಕ್ತಿ ಪಡೆಯಬೇಕು. ಹಾಗೆಯೇ ಸಕಲ ಲೌಕಿಕತೆಯಿಂದಲೂ ಮುಕ್ತಿ ಹೊಂದುವಾಗ, ಪೂರ್ಣವಾಗಿ ಸ್ವಂತಿಕೆ ನಶಿಸಿ ಹೋಗುವಾಗ ದಿವ್ಯ ಪ್ರಕಾಶದಿಂದ ಪ್ರಬುದ್ಧತೆ ಹೊಂದಬಹುದು. ಕೇವಲ ಒಂದಲ್ಲ ಸಾವಿರ ಪಟ್ಟು ಅನ್ವೇಷಣಾ ಗುಣಗಳು ತನ್ನಲ್ಲಿರಬೇಕೆಂದು ಅರಿಯುವನು. ಆದರೆ ಅನಶ್ವರತೆಯ ಒಡೆಯನು ಅವನಿಗೆ ಮರೆವಿನ ಪಾನೀಯ ನೀಡುವನು. ಹಾಗೆ ಅವನು ಬರುವ ಕಂಟಕವನ್ನು ನೆನೆಯದೆ ಮುಂದೆ ಸಾಗುವನು. ಎರಡನೆಯದು ಪ್ರೀತಿಯ ಕಣಿವೆಯಾಗಿದೆ. ಈ ಘಟ್ಟದಲ್ಲಿ ಪ್ರಯಾಣಿಕನ ಆತ್ಮವು ತನ್ನ ಪ್ರಿಯತಮೆಯನ್ನು ಕಾಣುವ ಅತಿಯಾದ ಮೋ‌ಹದಲ್ಲಿ ಸ್ವಯಂ ಇಲ್ಲದೇ ಆಗುವನು. ಅದರಿಂದ ಒಂದುವೇಳೆ ಅವನು ಶೂನ್ಯತೆಯನ್ನು ಎದುರಿಸಬೇಕಾಗುತ್ತದೆ. ಅವನು ಒಳಿತು ಕೆಡುಕು ಎಂಬುದೇನೆಂದು ಬಲ್ಲವನಲ್ಲ. ಇಲ್ಲಿ ಅವನ ವೈಚಾರಿಕ ಚಿಂತನೆ ನಷ್ಟ ಹೊಂದುವುದು. ಬೆಂಕಿಗೆ ಹೊಗೆ ಇದ್ದ ಹಾಗೆ ಸ್ನೇಹಕ್ಕೆ ವಿಚಾರ ಎಂಬುದು. ಅನಶ್ವರವಾದವನೊಂದಿಗಿನ ಪ್ರೀತಿ ಕಾರಣದಿಂದ, ಅಲ್ಲಿಯವರೆಗೆ ಅವನು ಅನುಭವಿಸಿದ ಸಾವಿರ ಪಟ್ಟು ಜೀವನಸುಖವನ್ನು ಕಿತ್ತೆಸೆಯುವ ಒತ್ತಡಕ್ಕೊಳಗಾಗುವನು.
ಮೂರನೇ ಕಣಿವೆ ಜ್ಞಾನದ ಕಣಿವೆ. ಅದಕ್ಕೆ ಪ್ರಾರಂಭವೋ ಅಂತ್ಯವೋ ಇಲ್ಲ. ಇಲ್ಲಿ ತತ್ವಜ್ಞಾನದ ಸೂರ್ಯ ಪ್ರಕಾಶಭರಿತವಾಗಿ ನಿಲ್ಲುವನು. ಆ ಪ್ರಕಾಶವನ್ನು ಸ್ವೀಕರಿಸಲು ಪ್ರಯಾಣಿಕನು ಆತ್ಮೀಯ ಜ್ಞಾನದ ಅನುಸಾರವಾಗಿ ಪ್ರಬುದ್ಧತೆ ಪಡೆಯುವನು. ಅಲ್ಲಿ ಎಲ್ಲಾ ರಹಸ್ಯಗಳು ಬೆಳಕು ಕಾಣುವುದು.
ನಿಗೂಢತೆಗಳ ಮರೆ ಸರಿಯುತ್ತದೆ. ಚಿಂತಾಮಗ್ನರಾದ ಅದೆಷ್ಟೋ ಜನರು ಎಲ್ಲಿಯೂ ನೆಲೆಯೂರದೆ ನಷ್ಟ ಹೊಂದುವುದೂ ಇಲ್ಲೇ ಆಗಿದೆ. ಪೂರ್ಣವಾಗಿ ಅರ್ಥವಾದವರಿಗೆ ಸ್ವಂತದ ಬಗ್ಗೆ ಚಿಂತೆಯಿಲ್ಲ. ಅವನು ಪ್ರಣಯವನ್ನಲ್ಲದೆ ಬೇರೇನೂ ಕಾಣನು. ಎತ್ತ ನೋಡಿದರೂ ಅವನು ಸೃಷ್ಟಿಕರ್ತನ ಮುಖವನ್ನೇ ಕಾಣುವನು.
ನಾಲ್ಕನೆಯದು ಅಗಲಿಕೆಯ ಕಣಿವೆಯಾಗಿದೆ. ಇಲ್ಲಿ ಯಾತ್ರಿಕನು ಸಕಲ ಸಂಬಂಧಗಳಿಂದ ಮುಕ್ತನಾಗುವನು. ದಿವ್ಯ ನಿಗೂಢತೆಯನ್ನು ತಿಳಿಯಲಿರುವ ಅಭಿಲಾಷೆಯನ್ನು ಕೂಡಾ ಅವನು ಉಪೇಕ್ಷಿಸುವನು. ಹಾಗೆ ಅವನು ದೈವಿಕ ಅನಂತತೆಯನ್ನು ತಿಳಿಯುವನು. ಎಲ್ಲವನ್ನೂ ಆವರಿಸುವ ದೈವಿಕ ಪ್ರಕಾಶವಮ್ನ ತಿಳಿದು ಅದರೊಂದಿಗೆ ಹೋಲಿಸುವಾಗ ಇತರ ಸಂಗತಿಗಳು ಏನೂ ಅಲ್ಲ ಎಂಬ ಪರಿಜ್ಞಾನ ಪಡೆದು ಮನಪರಿವರ್ತನೆಗೊಳ್ಳುವನು.

ಐದನೆಯದು ಏಕೀಕರಣದ ಕಣಿವೆ. ಅಲ್ಲಿಂದ ಎಲ್ಲವೂ ಒಂದಾಗಿ ಏಕತೆ ಪೂರ್ಣಗೂಳ್ಳುತ್ತದೆ. ನಂತರದ ಲೆಕ್ಕಕ್ಕೊ ವಿಶೇಷತೆಗೋ ಅಲ್ಲಿ ಬೆಲೆಯಿಲ್ಲ. ಜೀವನ ಮರಣ ಎಂಬೀ ವ್ಯತ್ಯಾಸವಿಲ್ಲ. ಕಾಲ, ಅನಶ್ವರತೆಗಳೆರಡೂ ಒಂದಾಗುತ್ತವೆ. ಇಲ್ಲಿ ನೈಜ ಅಸ್ತಿತ್ವ ಪ್ರಕಟಗೊಳ್ಳುತ್ತದೆ. ಸಕಲವನ್ನೂ ಆವರಿಸಿದ, ಪ್ರಾರಂಭವೋ ಕೊನೆಯೋ ಇಲ್ಲದ ಅವನು ಎಂದೆಂದಿಗೂ ಅನಶ್ವರನೂ, ನೆಲೆಯಿರುವವನೂ ಆಗಿದ್ದಾನೆ. ಎಲ್ಲವೂ ಒಂದಾಗಿ ಕೊನೆಗೊಳ್ಳುವಾಗ ಮತ್ತೊಂದರ ಕುರಿತ ಮಾತೇ ಬರದು. ಅಲ್ಲಿ ನಾನು ನೀನು ಎಂಬ ಭಾವವೇ ಇಲ್ಲ.
ಆರನೇಯದು ಸಂಭ್ರಮದ ಕಣಿವೆ. ಪರಿಪೂರ್ಣ ಏಕಾಂತವನ್ನು ಒಳಗೊಂಡ ಪ್ರಯಾಣಿಕನು ತನ್ನ ಕುರಿತ ಪ್ರಜ್ಞೆ ಇಲ್ಲದಾಗ ಸ್ವಂತಿಕೆ ಪೂರ್ಣವಾಗಿ ನಷ್ಟಹೊಂದುತ್ತದೆ. ಯಾರಾದರು ಅವರೊಂದಿಗೆ ನೀವು ನೆಲಗೂಳ್ಳುವರೋ ? ನೀವು ಒಳಗೋ ಹೊರಗೋ ? ನೀವು ಪ್ರತ್ಯಕ್ಷರೋ, ಪರೋಕ್ಷರೋ? ನೀವು ಜೀವಿಸುವವರೋ, ನಶಿಸುವವರೋ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರೆ ನನಗೆ ಏನೂ ತಿಳಿಯದು. ಯಾವುದರ ಕುರಿತೂ ತಿಳಿಯದು. ನನಗದು ಗೊತ್ತೋ ಇಲ್ಲವೋ ಎಂಬುವುದೂ ನನಗರಿಯದೆಂದು ಉತ್ತರಿಸುವರು. ಅವನು ಪ್ರೀತಿಸುತ್ತಿದ್ದಾನೋ ಇಲ್ಲವೋ ಎಂಬುದನು ಅವನು ಅರಿಯನು. ಒಂದೇ ಸಮಯಕ್ಕೆ ಅವನ ಹೃದಯವು ಪ್ರೀತಿಪೂರ್ಣವೂ, ಪ್ರೀತಿ ಶೂನ್ಯವೂ ಆಗಿ ಬದಲಾಗುವುದು.
ಏಳನೇ ಕಣಿವೆ ಎಲ್ಲಾ ರೀತಿಯ ವಿವರಣೆಗಳಾಚೆಗಿನ ನಿರ್ಮೂಲನೆಯದಾಗಿದೆ. ಅದು ಮರೆವು, ಕುರುಡುತನ, ಮೂಕತೆ, ಶ್ರವಣ ಶೂನ್ಯತೆ, ಪ್ರಜ್ಞಾಹೀನತೆಯನ್ನು ಸೂಚಿಸುತ್ತದೆ. ಅನಂತತೆಯ ಮಹಾಸಾಗರದಲ್ಲಿ ಈಜಾಡುವನು. ಸ್ವತಃ ನಿರ್ಮೂಲನೆಗೊಂಡು ಲೀನವಾಗಿ
ಶಾಂತಚಿತ್ತನಾಗುವನು. ಪ್ರಶಾಂತತೆಯ ನೀರವತೆಯಲ್ಲಿ ಅವನು ಶೂನ್ಯತೆ, ವಿಸ್ಮೃತಿಯನ್ನು ಕಂಡುಕೊಳ್ಳುವನು. ಆ ಮಹಾಸಾಗರದಲ್ಲಿ ಮುಳುಗುವವನು ಸ್ವಯಂ ಅಸ್ತಿತ್ವವನ್ನು ತೋರ್ಪಡಿಸುವುದಿಲ್ಲ. ಅವನಿದ್ದಾನೆ ಅಂದರೆ ಅವನಿಲ್ಲ.
ಸಿಮುರ್ಗನ್ನು ಹುಡುಕಿ ಹೊರಟ ಯಾತ್ರೆಯ ಕೊನೆಗೆ ಮೂವತ್ತು ಪಕ್ಷಿಗಳು ಮಾತ್ರ ಬಾಕಿ ಉಳಿದವು. ಅತೀ ಯಾತನೆ ತುಂಬಿದ ಯಾತ್ರಾಂತ್ಯದಲ್ಲಿ ಸಹಿಲಸಾಧ್ಯವಾದ ಗಾಯದಿಂದಲೂ, ಆಯಾಸದಿಂದಲೂ, ಹೃದಯನೋವಿನಿಂದಲೂ ರಾಜನ ಆಸ್ಧಾನಕ್ಕೆ ತಲುಪಿದರು. ಅರಮನೆಯ ಹತ್ತಿರ ಸಮೀಪಿಸಿದಾಗ, ನಾವು ಎಣ್ಣೆದೀಪದ ಸುತ್ತ ಹಾರುವ ಕ್ರಿಮಿ ಕೀಟಗಳೆಂದು ತಮ್ಮನ್ನು ಭಾವಿಸಿದರು. ಸಾಮಿಪ್ಯಕ್ಕನುಸಾರವಾಗಿ ಪ್ರಣಯದಿಂದ ಅವರು ಸ್ವತಃ ಇಲ್ಲದಾಗುವರು. ಕೊನೆಗೆ ತಾವು ಹುಡುಕಿ ಹೊರಟ ಸಿಮುರ್ಗ್ ತಾವು ಎಂದೇ ಅವುಗಳಿಗೆ ಅರಿವಾಗುತ್ತದೆ. “ಸಿ” ಎಂದರೆ ಮೂವತ್ತು ಹಾಗೂ “ಮುರ್ಗ್” ಎಂದರೆ ಪಕ್ಷಿಯೆಂದು ಅರ್ಥ. ಅವರು ಸ್ವಯಂ ಇಲ್ಲವಾಗಿ ಎಲ್ಲರೂ ಹುಡುಕಿ ಹೊರಟ ಸಿಮುರ್ಗ್ ಆಗಿ ಬಿಟ್ಟರು. ಸೃಷ್ಟಿಕರ್ತನೆಡೆಗೆ ಸಾಗುವ ಸೂಫಿ ಬರಲಿರುವ ದುರ್ಬಲ, ಕಠಿಣ ದಾರಿಯಲ್ಲಿ ಸ್ವಂತಿಕೆಯನ್ನು ನಿರ್ಮೂಲನೆ ಮಾಡಿ ದೇವರಲ್ಲಿ ಲೀನವಾಗಿ ಸಕಲದರ ಭಾಗವಾಗಿ ಮಾರ್ಪಾಡುವರು. ಕೊನೆಗೆ ಅವನು ಏನೂ ಅಲ್ಲದ ಎಲ್ಲವೂ ಆಗಿ ಬಿಡುವನು.

ಮೂಲ : ನವಾಲ್ ಅಬ್ದುಲ್ಲಾ
ಅನುವಾದ : ಅಕ್ಮಲುದ್ದೀನ್, ಮರ್ಕಝುಲ್ ಹಿದಾಯ ಕೊಟ್ಟಮುಡಿ, ಕೊಡಗು

ಸ್ಪೈನ್ – ಅಂದ್ಯುಲೂಸಿಯಾ

ಉರ್ದು ಕವಿ ಅಲ್ಲಾಮ ಇಕ್ಬಾಲರು 1933 ರಲ್ಲಿ ಸ್ಪೇನಿಗೆ ಬೇಟಿ ನೀಡಿದ್ದರು. ಆ ಸಮಯದಲ್ಲಿ ಬರೆದಿರುವ ಎರಡು ಕವಿತೆಗಳಲ್ಲಿ ಮಸ್ಜಿದೇ ಕುರ್ತುಬಾ ಮತ್ತು ಹಿಸ್ಪಾನಿಯಾ ಪ್ರಸಿದ್ಧ ಕವಿತೆಗಳಾಗಿವೆ. ಇಲ್ಲಿ ಪ್ರಕಟಿಸಲಾದ ಕನ್ನಡ ಭಾವಾನುವಾದವು ಇಕ್ಬಾಲರು ಸ್ಪೈನ್ ದೇಶದಿಂದ ವಾಪಾಸಾಗುವ ಸಂದರ್ಭದಲ್ಲಿ ಬರೆಯಲಾಗಿದ್ದು, ‘ಬಾಲ್ ಏ ಜಿಬ್ರೀಲ್’ (ಗೇಬ್ರಿಯಲ್ಲನ ರೆಕ್ಕೆ) ಸಂಕಲನದಲ್ಲಿ ಪ್ರಕಟವಾಯಿತು.

ಸ್ಪೈನ್ ಹೆಸರುವಾಸಿಯಾಗಿರುವುದು ಇಸ್ಲಾಮಿನ ಜ್ಞಾನನಗರಿ ಎಂದು. ಅಂದ್ಯುಲೂಸಿಯಾ ಅಥವಾ ಅಂದುಲುಸ್ ಎಂದು ಕರೆಯಲ್ಪಡುವ ಈ ನಗರದ ಉಲ್ಲೇಖ ಇಕ್ಬಾಲರ ಹಲವಾರು ಕವಿತೆಗಳಲ್ಲಿ ಬರುತ್ತದೆ. ಇಕ್ಬಾಲರು ಜ್ಞಾನವನ್ನು ದೇವತೆಗಳ ರೆಕ್ಕೆಗಳಿಗೆ ಹೋಲಿಸಿದ್ದಾರೆ. ‘ಇಲ್ಮ್’ ಅಥವಾ ಜ್ಞಾನ ದ ಬಗ್ಗೆ ಇಕ್ಬಾಲರು ಬರೆದಿರುವಷ್ಟು ಬೇರೆ ಯಾವುದೇ ಉರ್ದೂ ಕವಿ ಬರೆದಿರಲು ಸಾಧ್ಯವಿಲ್ಲ. ‘ದೂರ್ ದುನಿಯಾ ಕೆ ಮೇರೆ ದಮ್ ಸೆ ಅಂಧೇರಾ ಹೋಜಾಯೇ’ , ‘ಇಲ್ಮ್ ಕೆ ಶಮ್ಮಸೆ ಹೋ ಮುಜುಕೊ ಮುಹಾಬ್ಬತ್ ಯಾರಬ್’ ಮುಂತಾದ ಕವಿತೆಗಳು ಕವಿ ಇಕ್ಬಾಲರು ಜ್ಞಾನಾರ್ಜನೆಯ ಮಹತ್ವವನ್ನು ಸಾರಿದ ಕವಿತೆಗಳಾಗಿವೆ. ಹಾಗೆಯೇ ಅವರ ಕವಿತೆಗಳಾದ ‘ಜಾವೇದ್ ನಾಮಾ’ , ಸರ್ ಸಯ್ಯದ ರ ಸಮಾಧಿಯ ನುಡಿಗಳು’ ಜ್ಞಾನದ ಮಹತ್ವವನ್ನು ಮತ್ತೆ ಮತ್ತೆ ಸಾರುತ್ತವೆ.


ಓ ಅಂದ್ಯುಲೂಸಿಯಾ, ಮುಸಲ್ಮಾನರ
ರಕ್ತಸಾಕ್ಷಿಯಾಗಿರುವೆ ನೀನು
ಹರಮ್ಮಿನಿಂತೆ ನನಗೆ ಪರಮ
ಪವಿತ್ರವಾಗಿರುವೆ ನೀನು

ನಿನ್ನ ಧೂಳಿನೊಳು ನಮ್ಮ ಸುಜೂದಿನ
ಹಣೆಗುರುತುಗಳು ಹುದುಗಿಹೋಗಿವೆ
ನಿನ್ನ ಮುಂಜಾವಿನ ಕುಳಿರ್ಗಾಳಿಯಲ್ಲಿ
ಮೌನ ಅಝಾನಿನ ಕರೆ ತೇಲಿಬರುತ್ತಿದೆ

ನಕ್ಷತ್ರಗಳು ಹೊಳೆಯುತಿವೆ
ಅವರ ಆಯುಧಗಳ ತುದಿಗಳಲ್ಲಿ
ಆ ಬಿಡಾರಗಳು ಗೋಚರಿಸುತ್ತಿವೆ
ನಿನ್ನ ಗುಡ್ಡ ಬೆಟ್ಟಗಳ ತುದಿಗಳಲ್ಲಿ

ನಿನ್ನ ಸುಂದರಿಯರಿಗಿನ್ನೂ
ಮದರಂಗಿಯ ರಂಗು ಬೇಕೇ ?
ಹರಿಯುತಿಹುದಿನ್ನೂ ನನ್ನ ನರನಾಡಿಗಳಲ್ಲಿ
ಆ ನೆತ್ತರದು ಸಾಕೇ ?

ಈ ಕಂಗಳಿಂದಲೇ ಗ್ರನಾಡವನ್ನೂ
ಅಂದು ನೋಡಿದ್ದೆನಲ್ಲ
ಯಾತ್ರೆ – ವಿಶ್ರಾಂತಿಗಳೆರಡರಲ್ಲಿಯೇ
ಪ್ರವಾಸಿಯ ಸುಖವಿರುವುದಿಲ್ಲ

ನಾನೂ ನೋಡಿರುವೆ, ತೋರಿಸಿರುವೇ
ಹೇಳಿರುವೇ, ಕೇಳಿಸಿರುವೇ,
ಬರಿಯ ದೃಶ್ಯ – ಶ್ರವಣಗಳಿಂದ
ಹೃದಯಕ್ಕೆ ಶಾಂತಿ ಸಿಗುವುದಿಲ್ಲ !

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಸೂಫಿ ಕಥೆ ಹೇಳುವ ಹಕ್ಕಿಗಳು ಮತ್ತು ರೂಮಿ, ಅತ್ತಾರರ ರೂಪಕಗಳು

ಒಮ್ಮೆ ಪ್ರವಾದಿ ಇಬ್ರಾಹಿಂ (ಅ)ರು ಅಲ್ಲಾಹನ ಆಜ್ಞೆಯಂತೆ ನಾಲ್ಕು ಪಕ್ಷಿಗಳನ್ನು ದ್ಸಬಹ್ ಮಾಡಿ ಅವುಗಳ ಮಾಂಸಗಳನ್ನು ಪರಸ್ಪರ ಬೆರೆಸಿ ಸಣ್ಣ ಭಾಗವೊಂದನ್ನು ಪ್ರತ್ಯೇಕಿಸಿ ಅನತಿ ದೂರದಲ್ಲಿರುವ ಬೆಟ್ಟವೊಂದರ ಮೇಲಿರಿಸುತ್ತಾರೆ. ತುಸು ಹೊತ್ತಾದ ಬಳಿಕ, ಆ ಪೇರಿಸಿಟ್ಟ ಮಾಂಸದೆಡೆಗೆ ನೋಟವಿಟ್ಟು ಪಕ್ಷಿಗಳನ್ನು ಹಿಂದಕ್ಕೆ ಬರುವಂತೆ ಕರೆಯಲಾಗುತ್ತದೆ. ಆ ಕೂಡಲೇ ಪಕ್ಷಿಗಳು ಬೆರಗುಗೊಳಿಸುವಂತೆ ಮರುಹುಟ್ಟುಪಡೆದು ಇಬ್ರಾಹಿಮ್ (ಅ)ರ ಬಳಿಗೆ ಹಾರಿಕೊಂಡು ಬರುತ್ತದೆ. ಪ್ರಸ್ತುತ ಘಟನೆಯ ಉಲ್ಲೇಖವು ಖು‌ರ್‌ಆನಿನ ಎರಡನೇ ಅಧ್ಯಾಯ ‘ಅಲ್ ಬಕರಃ’ ದಲ್ಲಿ ಕಾಣಬಹುದು.
ಮತ್ತೊಂದೆಡೆ ಪ್ರವಾದಿ ಸುಲೈಮಾನ್(ಅ)ರು ಪಕ್ಷಿಗಳ ಮಾತನ್ನು ಬಲ್ಲವರಾಗಿದ್ದಾರೆಂದೂ ‘ಹುದ್‌ಹುದ್'(Hoopoe) ಹಕ್ಕಿಯೊಂದಿಗಿನ ಅವರ ಸಂಭಾಷಣೆ ಮತ್ತು ಆ ಘಟನೆಯ ವಿವರಗಳನ್ನೂ ನೋಡಬಹುದು.

ಮನುಷ್ಯನು ಪರಿಸರದ ಕೂಸಾಗಿರುವ ಕಾರಣಕ್ಕಾಗಿಯೇ ಖು‌ರ್‌ಆನಿನುದ್ದಕ್ಕೂ ಗಿಡ-ಮರ, ಬೆಟ್ಟ-ಗುಡ್ಡ, ತೊರೆ-ಝರಿ, ಆಕಾಶ- ಭೂಮಿ, ಸೂರ್ಯ-ಚಂದ್ರ, ಕತ್ತಲು-ಬೆಳಕು ಹಾಗೂ ಮನುಷ್ಯನ ಬದುಕು ಸದಾ ತಳುಕುಹಾಕಿಕೊಂಡಿರುವ ಪ್ರಕೃತಿಯ ಉಲ್ಲೇಖ ಧಾರಾಳವಾಗಿ ಕಾಣಸಿಗುತ್ತದೆ. ಅಂತೆಯೇ ಸೂಫಿ ದೃಷ್ಟಾಂತಗಳ ಬೋಧನೆಗಳಲ್ಲಿಯೂ ಹಕ್ಕಿಗಳನ್ನು ಉದಾಹರಣೆಯಾಗಿ, ಉಪಮೆಗಳಾಗಿ ಬಳಸಿಕೊಳ್ಳುವ ಪರಿಪಾಠವೂ ಇದೆ. ಭೌತಿಕ ಜೀವನದ ಸೀಮಿತ ಕಾಲಾವಧಿಯನ್ನು ಪಂಜರದಲ್ಲಿ ಸವೆಸುವ ಪಕ್ಷಿಗಳಂತೆಯೇ ಐಹಿಕ ಬದುಕನ್ನು ಸೆರೆಮನೆಯಂತೆ ಕಾಣುವ ಸೂಫಿಗಳಿಗೂ ‘ವೈರಾಗ್ಯ’ ಎಂಬ ನಂಟಿರುವುದು ಇದಕ್ಕೊಂದು ಕಾರಣವಾಗಿರಲೂಬಹುದು. ಸಾಧಾರಣವಾಗಿ ಸೂಫಿಗಳು ಸಾವನ್ನು ಪಂಜರದಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಪಡೆಯುವ ಹಕ್ಕಿಗಳಿಗೆ ಹೋಲಿಸುವುದುಂಟು. ಅವರು ಆ ಸ್ವಾತಂತ್ರ್ಯವನ್ನು “ಮದುವೆಯ ರಾತ್ರಿ” ಎಂದು ಸಂಭೋದಿಸುತ್ತಾರೆ. ವಾಸ್ತವದಲ್ಲಿ ಮರಣದ ಬಳಿಕವೇ ಆತ್ಮಗಳು ನಿಜವಾದ ಸಂತೃಪ್ತಿಯನ್ನು ಅನುಭವಿಸುತ್ತವೆ ಎಂಬುವುದೇ ಈ ಪ್ರಯೋಗದ ಹಿಂದಿನ ತಾತ್ಪರ್ಯ.

ಸೂಫಿಗಳಲ್ಲಿ “ಸಾವಿಗೆ ಮುನ್ನ ಸಾವು” ಎಂಬ ಪರಿಕಲ್ಪನೆಯನ್ನು ಕಾಣಬಹುದು ಅಥವಾ ಇದರರ್ಥ ಅಸೂಯೆ, ಬೂಟಾಟಿಕೆ ಮತ್ತು ಪ್ರಾಪಂಚಿಕ ಪ್ರೇಮದಂತಹ ಐಹಿಕವಾದ ಗೊಡವೆಗಳಿಂದ ಕಳಚಿಕೊಳ್ಳುವುದು. ಅಂದರೆ ಸಹಜಾನಂದದಿಂದ ಶಾಶ್ವತವಾಗಿ ಮುಕ್ತಿಪಡೆಯುವುದು ಎಂಬರ್ಥ. ಈ ಜಗತ್ತಿನಲ್ಲಿ ಮರಣಿಸಿದ ಆತ್ಮಗಳಿಗೆ ಮಾತ್ರ ಇಲ್ಲಿಯೇ ದೈವೀಪ್ರೇಮದ ಸುಖವನ್ನು ಅನುಭವಿಸಲು ಸಾಧ್ಯವಾಗಬಲ್ಲದು ಎನ್ನುತ್ತಾರೆ ಸೂಫಿ ಸಂತರು. ಮೌಲಾನಾ ಜಲಾಲುದ್ದೀನ್ ರೂಮಿಯವರು ತನ್ನ ಪ್ರಸಿದ್ಧ ಗ್ರಂಥ “ಮಸ್ನವಿ”ಯಲ್ಲಿ “ಗಿಳಿ ಮತ್ತು ವ್ಯಾಪಾರಿ” ಎಂಬ ತಲೆಬರಹದ ಕಥೆಯಲ್ಲಿ ಇದೇ ಆಶಯವನ್ನು ಪ್ರತಿಪಾದಿಸುತ್ತಾರೆ. ಆ ಕಥೆಯು ಹೀಗಿದೆ;
ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ ಪ್ರವಾಸ ಬೆಳೆಸಬೇಕಾಗಿ ಬಂತು. ತನ್ನ ಮನೆಯವರೊಂದಿಗೆ ದೂರದ ಭಾರತದ ದೇಶದಿಂದ ಏನಾದರೂ ಉಡುಗೊರೆ ಬೇಕೇ ಎಂದು ಕೇಳಿದ. ತಕ್ಷಣವೇ ತನ್ನ ಗಿಳಿಮರಿಯ ನೆನಪಾಗಿ “ನಿನಗೇನಾದರೂ ಬೇಕೇ? ನಾನು ನಿನ್ನ ತಾಯ್ನಾಡಿಗೆ ಹೊರಡುತ್ತಿದ್ದೇನೆ”ಎಂದ. ಪಂಜರದ ಬದುಕಿನಿಂದ ಅದಾಗಲೇ ಬೇಸತ್ತು ಹೋಗಿದ್ದ ಗಿಳಿಯು ತನ್ನ ಒಡೆಯನಲ್ಲಿ ಒಂದು ಮನವಿಯನ್ನು ಮುಂದಿಟ್ಟಿತ್ತು. “ಒಡೆಯಾ, ನೀವು ನನ್ನ ತವರಿಗೆ ಹೋಗುತ್ತಿದ್ದೀರಿ. ಅಲ್ಲಿ ನನ್ನವರು ಧಾರಾಳವಾಗಿ ಸ್ವಚ್ಛಂದ ವಾತಾವರಣದಲ್ಲಿ ವಿಹರಿಸುತ್ತಿರುವರು. ನೀವು ಖಂಡಿತಾ ಅವರನ್ನು ಭೇಟಿಯಾಗಬೇಕು ಮತ್ತು ಅವರಲ್ಲಿ ನನ್ನದೊಂದು ಸಲಾಮನ್ನು ಹೇಳಬೇಕು. ನಿಮ್ಮ ಸ್ನೇಹಿತನೊಬ್ಬ ಪಂಜರದಲ್ಲಿರುವಾಗ ಅದು ಹೇಗೆ ನಿಮಗೆ ಆರಾಮವಾಗಿರಲು ಸಾಧ್ಯ ಎಂಬ ಪ್ರಶ್ನೆ ನನಗಾಗಿ ಅವರಲ್ಲಿ ಕೇಳಬೇಕು. ನನ್ನ ಸ್ಥಿತಿಯೇನೆಂಬುವುದನ್ನು ಅವರಿಗೆ ತಲುಪಿಸಬೇಕು” ಎಂದಿತು ಗಿಳಿಮರಿ.
ವ್ಯಾಪಾರಿಯು ತನ್ನ ವಹಿವಾಟುಗಳೆಲ್ಲ ಮುಗಿದ ಬಳಿಕ ಗಿಳಿಯ ಕೋರಿಕೆಯಂತೆ ಅರಣ್ಯವೊಂದನ್ನು ಪ್ರವೇಶಿಸಿ ತನ್ನ ಗಿಳಿಮರಿಯ ಸಮಾಚಾರವನ್ನು ಅಲ್ಲಿರುವ ಹಕ್ಕಿಗಳೊಂದಿಗೆ ಹಂಚಿಕೊಂಡನು. ವಿಷಯ ಕೇಳುತ್ತಿದ್ದಂತೆ ಮರದ ಮೇಲಿದ್ದ ಹಕ್ಕಿಯೊಂದು ತೊಪ್ಪನೆ ಕುಸಿದುಬಿತ್ತು. ಪಂಜರದಲ್ಲಿರುವ ಗಿಳಿಮರಿಯ ಸಂಬಂಧಿ ಹಕ್ಕಿ ಇದಾಗಿರಬಹುದೇ? ಆ ಕಾರಣದಿಂದಲೇ ಈ ಹಕ್ಕಿಯು ಆಘಾತಗೊಂಡು ತನ್ನ ಪ್ರಾಣ ಕಳೆದುಕೊಂಡಿತೇ? ಹೀಗೆಂದು ಊಹಿಸಿಕೊಂಡ ವ್ಯಾಪಾರಿಯು ಸುಮ್ಮನಾದ. ಆ ಹಕ್ಕಿಯ ಸಾವು ಅವನನ್ನು ಕಾಡದಿರಲಿಲ್ಲ. ಅವನಲ್ಲಿ ಒಂದು ತೆರನಾದ ಶೂನ್ಯ ಭಾವನೆ ಆವರಿಸಿತು. ಆತ ಭಾರವಾದ ಎದೆಯೊಂದಿಗೆ ತನ್ನೂರಿಗೆ ಹಿಂದಿರುಗಿದ. ಸ್ವದೇಶಕ್ಕೆ ಮರಳಿದ ನಂತರ ಪಂಜರದ ಗಿಳಿಯು “ನನ್ನ ತಾಯ್ನಾಡಿನ ಶುಭವಾರ್ತೆಯೇನು? ನನ್ನ ಸಂಬಂಧಿಕರು ಏನೆಂದರು?” ಎಂಬಿತ್ಯಾದಿ ಪ್ರಶ್ನೆಗಳನ್ನು ಒಡೆಯನಲ್ಲಿ ಕೇಳಿತು.
ವ್ಯಾಪಾರಿ ತನ್ನ ಗಿಳಿಯಲ್ಲಿ ಮರದ ಮೇಲಿನಿಂದ ಬಿದ್ದು ಸತ್ತುಹೋದ ಹಕ್ಕಿಯ ಸಮಾಚಾರವನ್ನು ಅಲ್ಪ ಹಿಂಜರಿಕೆಯಿಂದಲೇ ತಿಳಿಸಿದ. ಇದನ್ನು ಕೇಳುತ್ತಲೇ ಆ ಗಿಳಿಮರಿಯೂ ಪಂಜರದಲ್ಲಿ ಪಟ್ಟನೆ ಕುಸಿದು ಬಿತ್ತು. ತನ್ನ ಸಂಬಂಧಿಯ ಅಕಾಲಿಕ ಮರಣವಾರ್ತೆಯನ್ನು ಕೇಳಿ ಈ ಗಿಳಿಯೂ ಸತ್ತುಹೋಯಿತೇ? ಎಂದು ವ್ಯಾಪಾರಿಯು ಖೇದಗೊಂಡ. ಗಿಳಿಯನ್ನು ತನ್ನ ಬೊಗಸೆಯಲ್ಲಿ ಎತ್ತಿಕೊಂಡವನು ಮೆತ್ತಗೆ ಪಂಜರದಿಂದ ಹೊರತೆಗೆದು ಮೇಜಿನ ಮೇಲಿರಿಸಿದ. ಹೊರಗಿಡುತ್ತಿದ್ದಂತೆ ಗಿಳಿಮರಿಯು ಥಟ್ಟನೆ ತನ್ನ ಪುಟಾಣಿ ರೆಕ್ಕೆಗಳನ್ನು ಹೊಡೆದುಕೊಂಡು ಕಿಟಕಿಯಿಂದ ಹೊರಕ್ಕೆ ಹಾರಿ ಮರದ ರೆಂಬೆಯೊಂದರಲ್ಲಿ ಕುಳಿತುಕೊಂಡಿತು.

ಆಶ್ಚರ್ಯಗೊಂಡ ವ್ಯಾಪಾರಿಯು ಗಿಳಿಯನ್ನೇ ನೋಡುತ್ತ ನಿಂತಿರುವಾಗ ಮರದ ಕೊಂಬೆಯೊಂದರ ಮೇಲೆ ಕುಳಿತ ಗಿಳಿಯು “ಓ ನನ್ನ ಒಡೆಯನೇ, ನಾನು ಪಂಜರದಲ್ಲಿದ್ದೇನೆ ಎಂಬ ಸಂದೇಶದಲ್ಲಿ ನನ್ನ ಬಿಡುಗಡೆಗೆ ದಾರಿ ಯಾವುದಾದರೂ ಇದೆಯೇ ಎನ್ನುವ ಪ್ರಶ್ನೆಯೂ ಅಡಕವಾಗಿತ್ತು. ಅದನ್ನು ಕೇಳಿದ ನನ್ನ ತವರಿನ ಹಕ್ಕಿಯು ಉಪಾಯವೊಂದನ್ನು ನಿನ್ನ ಮೂಲಕವೇ ಕಳುಹಿಸಿಕೊಟ್ಟಿತು! ಜೊತೆಗೆ, ನೀನು ವಯ್ಯಾರದ ಮಾತನ್ನು ನಿಲ್ಲಿಸಿಬಿಡು. ನಿನ್ನ ಶಬ್ಧವನ್ನು ಕರ್ಕಶಗೊಳಿಸಿಬಿಡು. ಮುದ್ದಾದ ಮಾತುಗಳೇ ನಿನ್ನ ಹಿತ ಶತ್ರುಗಳು. ಅವುಗಳನ್ನು ತ್ಯಜಿಸಿ ಬಂಧನ ಮುಕ್ತಿಯನ್ನು ಪಡೆಯಬೇಕು ಎಂಬುದೇ ಆ ನನ್ನ ಸಂಗಾತಿ ನಿನ್ನ ಮೂಲಕ ರವಾನಿಸಿದ ಉಪಾಯ.
ಇಷ್ಟು ದಿನ ಬಂಧನದಲ್ಲಿ ಇಟ್ಟಿದ್ದರೂ ಈ ನಿಗೂಢವಾದ ಉಪಾಯವನ್ನು ಹೊತ್ತು ತಂದ ಒಡೆಯನೇ ನಿನಗೆ ಅನಂತ ಧನ್ಯವಾದಗಳು”. ಆ ಬಳಿಕ ಗಿಳಿಯು ತನ್ನೊಡೆಯನಲ್ಲಿ ಹೀಗೆಂದು ಹೇಳುತ್ತದೆ; “ಒಡೆಯಾ, ನಶ್ವರ ಬದುಕಿನ ಕ್ಷಣಿಕ ಆನಂದವನ್ನು ತ್ಯಜಿಸಿಬಿಡು. ಐಹಿಕ ಬದುಕಿನ ಸೆರೆಮನೆಯಿಂದ ಪಲಾಯನಗೈದು ಸ್ವತಂತ್ರಗೊಳ್ಳು. ಇಲಾಹೀ ಪ್ರೇಮದಿಂದ ಮಾತ್ರವೇ ಮನವು ತನ್ನ ಅಭೀಷ್ಠೆಯನ್ನು ತಲುಪಲು ಸಾಧ್ಯ.”

ಅಂತಿಮವಾಗಿ ಗಿಳಿ ತನ್ನ ಮಾಲಿಕನಿಗೆ ಕೆಲವೊಂದು ಹಿತೋಪದೇಶವನ್ನು ನೀಡುತ್ತದೆ; “ನಿನ್ನ ದಾರಿಯು ಪರಮಾತ್ಮನನ್ನು ಸೇರುವ ಕಡೆಗಿರಬೇಕು. ನಾನೀಗ ನಿನ್ನಿಂದ ಸ್ವತಂತ್ರಗೊಂಡತೆ ನೀನೂ ಸ್ವತಂತ್ರಗೊಂಡು ಮುಂದಕ್ಕೆ ನೈಜ ಜಗತ್ತಿಗೆ ನಿನ್ನನ್ನು ನೀನು ಅನಾವರಣಗೊಳಿಸಬೇಕು. ರೇಷ್ಮೆ ಹುಳದಂತೆ ನಿನ್ನ ಸುತ್ತ ನೀನೇ ಚೌಕಟ್ಟನ್ನು ಕಟ್ಟಿಕೊಂಡಿರುವೆ. ಆ ಚೌಕಟ್ಟನ್ನು ಒದೆದು ಬದಿಗೆ ಸರಿಸಿಬಿಡಬೇಕು‌. ಬಿಡುಗಡೆಗಿರುವ ಏಕೈಕ ಮಾರ್ಗ ಇವುಗಳನ್ನೆಲ್ಲ ತೊರೆದು ಹೃದಯ ಮಂದಿರದಲ್ಲಿ ಪರಮಾತ್ಮನನ್ನು ಪ್ರತಿಷ್ಠಾಪಿಸಿ ಪ್ರೇಮದಾಹಿಯಾಗುವುದು. ಇದನ್ನು ಅನುಸರಿಸಿದರೆ‌ ಮಾತ್ರ ಇಹದ ಕಬಂಧ ಬಾಹುಗಳಿಂದ ಕಳಚಿಕೊಂಡು ಪಾರಾಗಬಹುದು.”
ಇಷ್ಟು ಹೇಳಿದ ಬಳಿಕ ಬಂಧಮುಕ್ತನಾದ ಆನಂದದಿಂದ ಗಿಳಿಮರಿಯು ನೀಲಾಕಾಶದತ್ತ ಹಾರುತ್ತಾ ಹೋಯಿತು. ಆ ಹಾರಾಟದಲ್ಲಿದ್ದ ಉತ್ಸಾಹವನ್ನು ನೋಡುತ್ತಾ ವ್ಯಾಪಾರಿಯು ಚಕಿತಗೊಂಡು ನಿಂತುಬಿಟ್ಟನು. ಆತ, ತನ್ನ ಸಾಕುಗಿಣಿಯಲ್ಲಿ “ನಿನ್ನ ಉಪದೇಶಗಳು ನನ್ನನ್ನು ದೇವರ ಬಳಿಗೆ ಹಿಂದಿರುಗಿಸಿದವು” ಎಂದು ಕೃತಜ್ಞತೆ ಸಲ್ಲಿಸಿದನು. ನಂತರ ವ್ಯಾಪಾರಿ ತನ್ನಲ್ಲೇ ಈ ರೀತಿಯಾಗಿ ಹೇಳಿಕೊಂಡನು; ‘ನನ್ನ ಗಿಳಿಯೂ ಎಷ್ಟೊಂದು ಒಳ್ಳೆಯ ಸಲಹೆಗಾರನಾಗಿತ್ತು, ಅಮೂಲ್ಯವಾದ ಉಪದೇಶಗಳನ್ನೇ ನೀಡಿತು. ನಾನು ಮುಂದಕ್ಕೆ ಆ ಗಿಳಿಯ ಮಾರ್ಗವನ್ನೇ ಅನುಸರಿಸಬೇಕು.’ ವ್ಯಾಪಾರಿಯ ಆ ತೀರ್ಮಾನದಲ್ಲಿ ದೃಡಸಂಕಲ್ಪವಿತ್ತು.

ವಾಸ್ತವದಲ್ಲಿ ನಿಜವಾದ ಬದುಕಿನ ಗುರಿಯು ಆ ಗಿಳಿಯ ಬೋಧನೆಯಾಗಿತ್ತು. ಮೌಲಾನಾ ರೂಮಿ ಆ ಗಿಳಿಯ ಮಾತುಗಳಲ್ಲಿ ತನ್ನ ಚಿಂತನೆಯನ್ನು ಜಗತ್ತಿನ ಮುಂದಿಟ್ಟರು. ಸೂಫಿಗಳು ಲೌಕಿಕ ಪ್ರೇಮ(ಇಶ್ಕೇ ಮಜಾಝಿ)ವನ್ನು ಮಾನವರ ಕೈಗಳಲ್ಲಿ ಬಂಧಿಯಾಗುವ ಗಿಳಿಮರಿಗಳಿಗೆ ಸಮನಾದುದೆಂದು ಪ್ರತಿಪಾದಿಸುತ್ತಾರೆ.
ಮತ್ತೊಂದೆಡೆ ರೂಮಿ ಹೀಗೆ ಹೇಳುತ್ತಾರೆ; ‘ಓ ನರಮನುಷ್ಯರೇ, ಸರಪಳಿಗಳನ್ನು ಮುರಿಯಿರಿ. ಮುಕ್ತರಾಗಿರಿ. ನಿಮಗೆ ಎಷ್ಟು ದಿನಗಳವರೆಗೆ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲು ಸಾಧ್ಯ?’

ಮನುಷ್ಯನು ಈ ಪ್ರಪಂಚದ ಸುಖಗಳಲ್ಲಿ ಸಿಕ್ಕಿಹಾಕಿಕೊಂಡ ಹಕ್ಕಿಯಂತೆ. ಅದರ ಎರಡು ಕಾಲುಗಳು ಘನವಾದ ತೈಲ ಅಥವಾ ಟಾರಿನಲ್ಲಿ ಸಿಲುಕಿಕೊಂಡಿವೆ. ಅದು ತನ್ನ ರೆಕ್ಕೆಗಳನ್ನು ಎಷ್ಟು ಬಡಿದರೂ ಅದರಿಂದ ಸ್ವಲ್ಪವೂ ಮಿಸುಕಾಡಲು ಸಾಧ್ಯವಿಲ್ಲ. ಟಾರು ಇನ್ನೂ ಬಿಸಿಯಾಗಿ ಕರಗಿದರೆ ಮಾತ್ರ ಪಕ್ಷಿ ಹಾರಬಲ್ಲದು, ಬದುಕಬಲ್ಲದು. ಅದೇ ರೀತಿಯಲ್ಲಿ, ‘ಇಲಾಹೀ ಪ್ರೇಮ’ ಮಾತ್ರ ಮನುಷ್ಯನನ್ನು ಲೌಕಿಕ ಚಿಂತನೆಯಿಂದ ಬಿಚ್ಚಿಸಿಕೊಳ್ಳಬಹುದು, ವಿಮುಕ್ತನಾಗಿಸಬಹುದೆಂದು ಮೌಲಾನಾರು ಹೇಳುತ್ತಾರೆ. ಪ್ರಸ್ತುತ ಆಶಯವನ್ನು
ಖ್ಯಾತ ಪರ್ಷಿಯನ್ ತತ್ವಜ್ಞಾನಿ ಇಬ್ನ್ ಸೀನ ಪಕ್ಷಿಗಳನ್ನು ರೂಪಕಗಳಾಗಿಟ್ಟುಕೊಂಡು ತನ್ನ ಗ್ರಂಥಗಳಲ್ಲಿಯೂ ಪ್ರತಿಪಾದಿಸಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಸಂಕೇತವಾಗಿಟ್ಟುಕೊಂಡು ತಮ್ಮ ಭೋದನೆಗಳನ್ನು ಸಾಮಾನ್ಯ ಜನರಿಗೆ ಸರಳವಾಗಿ ತಲುಪಿಸುವುದು ಸೂಫಿಗಳ ಮೂಲ ಉದ್ದೇಶವಾಗಿತ್ತು.

ಮತ್ತೋರ್ವ ಸೂಫಿ ಲೇಖಕ ಫರೀದುದ್ದೀನ್ ಅತ್ತಾರರು ಪಕ್ಷಿಗಳ ಸಂಭಾಷಣೆ ಹಾಗೂ ಸಾಹಸವನ್ನು ಪ್ರತಿಪಾದಿಸಿದ ತನ್ನ ಸುಪ್ರಸಿದ್ಧ ಫಾರಸಿ ಕೃತಿ ‘ಮಂತ್ವಿಖು ತ್ವೈಯ್‌ರ್'( منطق الطير )ನಲ್ಲಿ ಒಂದು ಕಥೆಯ ಮೂಲಕ ಸೂಫಿಸಂನ ಆರಂಭ, ಬೆಳವಣಿಗೆ ಮತ್ತು ಅಂತ್ಯವನ್ನು ಪ್ರತಿಬಿಂಬಿಸುವ ಪ್ರಯತ್ನವನ್ನು ಮಾಡುತ್ತಾರೆ. ಆ ನೀತಿಕಥೆ ಹೀಗಿದೆ;
ಒಮ್ಮೆ ಹಕ್ಕಿಗಳೆಲ್ಲವೂ ಒಂದೆಡೆ ಸಭೆ ಸೇರಿದವು. ಪ್ರತಿ ಊರಿಗೂ ಒಬ್ಬೊಬ್ಬ ರಾಜನಿದ್ದಾನೆ, ನಮ್ಮ ಪಕ್ಷಿ ಸಾಮ್ರಾಜ್ಯಕ್ಕೂ ಸಮರ್ಥ ನಾಯಕನೊಬ್ಬನ ಆವಶ್ಯಕತೆಯಿದೆಯೆಂಬ ಪ್ರಸ್ತಾಪವನ್ನು ಮುಂದಿಟ್ಟವು. ಎಲ್ಲಾ ಪಕ್ಷಿಗಳೂ ತಾವೇ ನಾಯಕರಾಗಲು ಯೋಗ್ಯರೆಂದು ಮನಸ್ಸಲ್ಲೇ ಚಿಂತಿಸುತ್ತಿದ್ದರೆ ಹುದ್‌ಹುದ್ ಪಕ್ಷಿಯೂ ಈಗಾಗಲೇ ನಮಗೊಬ್ಬ ಸೀಮುರ್ಘ್ (سيمورغ) ಎಂಬ ರಾಜನಿರುವುದಾಗಿ ಹೇಳಿತು. ಇದನ್ನು ಕೇಳಿದ ಪಕ್ಷಿ ಸಂಕುಲವು ಆ ರಾಜನನ್ನು ಹುಡುಕುವುದಾಗಿ ನಿರ್ಧರಿಸಿ ಹೊರಡಲು ಅಣಿಯಾದವು. ಎಲ್ಲಾ ಹಕ್ಕಿಗಳು ಹೊರಟವಾದರೂ ರಾಜನನ್ನು ತಲುಪುವ ದಾರಿಯು ತುಂಬಾ ಪ್ರಯಾಸಕರವಾಗಿತ್ತು. ಪ್ರಯಾಣವು ಕಷ್ಟಕರವೆನಿಸುತ್ತಿದ್ದಂತೆ ಕೆಲವು ಹಕ್ಕಿಗಳು ಉಪಾಯದಿಂದ ನುಣುಚಿಕೊಳ್ಳತೊಡಗಿದುವು. ಅವುಗಳಲ್ಲಿ ಮೊದಲು, ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಇರುತ್ತಿದ್ದ ಗಿಳಿಮರಿಯು ಮೊಂಡು ನೆಪವೊಂದನ್ನು ಹೇಳಿ ಗುಂಪಿನಿಂದ ಮರಳಿತು. ಬಳಿಕ ಒಂದೊಂದೇ ಹಕ್ಕಿಗಳು ಹಿಂದಿರುಗತೊಡಗಿದವು. ತನ್ನ ಗರಿಗಳ ಸೌಂದರ್ಯ ಕ್ಷೀಣಿಸಬಹುದೆಂದು ಅಹಂ ನುಡಿದು ನವಿಲು, ಹೂವಿನ ಮೇಲೆ ವ್ಯಾಮೋಹ ಉಕ್ಕಿಕೊಂಡ ಬುಲ್‌ಬುಲ್ ಹಕ್ಕಿಯೂ ಯಾತ್ರೆ ಮೊಟಕುಗೊಳಿಸಿದವು. ಆದರೆ
ಹುದ್‌ಹುದ್ ಹಕ್ಕಿ ತನ್ನ ಸಹಯಾತ್ರಿಕರಿಗೆ ಸಮಾಧಾನ ಹೇಳುತ್ತಿತ್ತು. ದಾರಿಯುದ್ದಕ್ಕೂ ಗಾದೆಗಳನ್ನು ಹೇಳುತ್ತಾ, ಬೋಧನೆಗಳನ್ನು ನೀಡುತ್ತಾ ಉಳಿದ ಹಕ್ಕಿಗಳಲ್ಲಿ ಹುರುಪನ್ನು ತುಂಬಿಸುತ್ತಿತ್ತು. ಆ ಪಾಠಗಳೆಲ್ಲ ಮುಖ್ಯವಾಗಿ ಐಷಾರಾಮಿ ಜೀವನ ನಡೆಸುವ, ಸ್ನೇಹವನ್ನು ತಿರಸ್ಕರಿಸುವ, ದೇಹದ ಸೌಂದರ್ಯಕ್ಕೆ ಒತ್ತನ್ನು ನೀಡುವ ಮತ್ತು ಲೌಕಿಕ ಪ್ರೇಮದ ದಾಸರಾಗಿ ಸೃಷ್ಟಿಕರ್ತನಿಂದ ದೂರವಾಗುವವರ ಕುರಿತಾಗಿತ್ತು. ಹುದ್‌ಹುದ್ ಹಕ್ಕಿಯ ಆ ಸಾರವತ್ತಾದ ಉಪದೇಶಗಳನ್ನು ಆಲಿಸಿದ ಹಕ್ಕಿಗಳು ಮಾರ್ಗದರ್ಶಕನ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹುದ್‌ಹುದ್‌ನಲ್ಲಿ ಕೋರಿಕೊಂಡವು. ಮೊದಲು ಒಲ್ಲೆನೆಂದು ಅಸಮ್ಮತಿಯನ್ನು ನೀಡಿದ ಹುದ್‌ಹುದ್‌‌, ಗೆಳೆಯರ
ಒತ್ತಾಯದ ಮೇರೆಗೆ ಅಂತಿಮವಾಗಿ ಒಪ್ಪಿಗೆಯನ್ನು ಸೂಚಿಸಿತು.
ನಾಯಕನಾದ ಬಳಿಕ ಹುದ್‌ಹುದ್ ತನ್ನ ಸಂಗಡಿಗರಿಗೆ
ಅನ್ವೇಷಣೆ(طلب), ಪ್ರೇಮ (عشق), ರಹಸ್ಯ ಜ್ಞಾನ (معرفة), ಸ್ವಾವಲಂಬನೆ (استغناء), ಏಕದೇವೋಪಾಸನೆ (توحيد), ಭೀತಿ(حيرة) ಮತ್ತು ಮೋಕ್ಷ(فقر والفناء) ಎಂಬ ಏಳು ಹಂತಗಳನ್ನು ಪರಿಚಯಿಸುತ್ತಾ ಸಾಗಿತು. ಒಂದೊಂದು ಹಂತಗಳನ್ನು ವಿವರಿಸುತ್ತಲೇ ಅವುಗಳನ್ನು ಕೇಳಿದ ಕೆಲವೊಂದು ಹಕ್ಕಿಗಳು ದೊಪ್ಪನೆ ಬಿದ್ದುಕೊಂಡವು, ಕೆಲವೊಂದು ಸತ್ತುಹೋದವು ಮತ್ತು ಕೆಲವು ಮೂರ್ಛೆಹೋದವು. ಅಂತಿಮವಾಗಿ ಕೇವಲ ಮೂವತ್ತು ಹಕ್ಕಿಗಳು ಮಾತ್ರ ಉಳಿದುಕೊಂಡವು.
ಹಾಗೆ ಉಳಿದಿರುವ ಹಕ್ಕಿಗಳು ರಾಜನ ಸನ್ನಿಧಿಗೆ ಪ್ರವೇಶಿಸಲೋಸುಗ ಅರಮನೆಯ ಅಂಗಳದೆಡೆಗೆ ಧಾವಿಸಿತು. ಆದರೆ ಅರಮನೆಯ ಕಾವಲುಗಾರ ಹಕ್ಕಿಗಳನ್ನು ಒಳ ಪ್ರವೇಶಿಸದಂತೆ ತಡೆದನು. ನಿರಾಶೆಗೊಂಡ ಹಕ್ಕಿಗಳು ಮತ್ತು ಅವುಗಳ ನಾಯಕ ಹುದ್‌ಹುದ್ ಸಮೀಪದ ಹೂಗಳ ಚಪ್ಪರದಂತಿರುವ ವಿಶಾಲವಾದ ಉದ್ಯಾನವೊಂದಕ್ಕೆ ನುಗ್ಗಿಬಿಟ್ಟವು. ಅಲ್ಲಿರುವ ಹೂವುಗಳನ್ನೆಲ್ಲಾ ಕಿತ್ತುಕೊಂಡು ಚೆಲ್ಲಾಡತೊಡಗಿದವು. ಅರೆ ಕ್ಷಣದಲ್ಲಿಯೇ ಉದ್ಯಾನವಿಡೀ ಶೂನ್ಯವಾಯಿತು. ತಕ್ಷಣವೇ ಹೂವುಗಳನ್ನು ಕೀಳುತ್ತಿದ್ದ ಹಕ್ಕಿಗಳಿಗೆ ತಮ್ಮ ರಾಜ ಸೀಮೂರ್ಘ್ (سيمورغ)ರನ್ನು ಭೇಟಿಯಾದಂತಹ ದಿವ್ಯಾನುಭವವಾಯಿತು.

ಪರ್ಷಿಯನ್ ಭಾಷೆಯಲ್ಲಿ ಸೀಮೂರ್ಘ್ ಎಂದರೆ ಮೂವತ್ತು ಹಕ್ಕಿಗಳೆಂದು, ಫೀನಿಕ್ಸ್ ಹಕ್ಕಿಯೆಂದೂ ಅಭಿಪ್ರಾಯಗಳಿವೆ. ಈ ಹಕ್ಕಿಗಳು ಹಾದುಹೋಗುವ ಏಳು ಹಂತಗಳನ್ನು ಆಧ್ಯಾತ್ಮಿಕತೆಯೆಡೆಗೆ ಪ್ರವೇಶಿಸುವ ಪ್ರತಿಯೊಬ್ಬ ಅನ್ವೇಷಕರಿಗೂ ಅಗತ್ಯವೆನ್ನುವುದೇ ಮೇಲಿನ ಕಥೆಯ ಒಳಾರ್ಥ. ಆ ಏಳು ಹಂತಗಳನ್ನು ದಾಟುವುದು ಸುಲಭಸಾಧ್ಯವಲ್ಲವೆನ್ನುವ ಎಚ್ಚರಿಕೆಯನ್ನು ನೀಡುವ ಕಥೆಯು ಮಾನಸಿಕವಾಗಿ ನಾವೆಷ್ಟು ಬಲಿಷ್ಠರಾಗಿರಬೇಕೆಂಬುವುದನ್ನು ತಿಳಿಸಿಕೊಡುತ್ತದೆ.

ಪಕ್ಷಿಗಳನ್ನು ಸಂಕೇತವಾಗಿಟ್ಟುಕೊಂಡು ಫರೀದುದ್ದೀನ್ ಅತ್ತಾರ್ ರಚಿಸಿದ ‘ಮಂತ್ವಿಖು ತ್ವೈಯ್ರ್’ ಎಂಬ ಕೃತಿಯಿಂದ ಪ್ರೇರಿತರಾಗಿ ಹತ್ತು ಪಕ್ಷಿಗಳು( ده مورغ )ಎಂಬ ಕವನಗಳನ್ನು ರಚಿಸಿ ದರ್ವೇಶ್ ಶಂಸುದ್ದೀನ್ ದಿವಾನ್ ಅವರು ‘ಸುಲ್ತಾನ್ ಉಸ್ಮಾನ್ ಯಾವಿಸ್ ಸಲೀಮ್’ ಗೆ ಉಡುಗೊರೆಯಾಗಿ ನೀಡಿರುವುದಾಗಿ ಕಾಣಬಹುದು. ಆದರೆ ಇಲ್ಲಿರುವುದು ಹತ್ತು ಪಕ್ಷಿಗಳ ಉಲ್ಲೇಖ ಮಾತ್ರವಾಗಿದೆ. ಆ ಹತ್ತು ಪಕ್ಷಿಗಳನ್ನು ಹತ್ತು ರೀತಿಯ ಜನರೊಂದಿಗೆ ಕವಿಯು ತುಲನೆ ಮಾಡುತ್ತಾನೆ. ಅವುಗಳೆಂದರೆ, ಗೂಬೆಯಾಗಿ ಸೂಫಿ, ಕಾಗೆಯಾಗಿ ಕವಿ, ಗಿಳಿಯಾಗಿ ವಿದ್ವಾಂಸ, ದಾರ್ಶನಿಕನಾಗಿ ಹದ್ದು, ಉದಾತ್ತನಾಗಿ ಬುಲ್‌ಬುಲ್, ಜ್ಞಾನಿಯಾಗಿ ಹುದ್‌ಹುದ್‌, ವ್ಯಾಪಾರಿಯಾಗಿ ನವಿಲು, ರೈತನಾಗಿ ಗಿಡುಗ, ಆಸ್ತಿಕನಾಗಿ ಕೊಕ್ಕರೆ ಮತ್ತು ಜ್ಯೋತಿಷಿಯಾಗಿ ಗುಬ್ಬಚ್ಚಿ ಹಕ್ಕಿಯನ್ನು ಹೋಲಿಕೆ ಮಾಡುತ್ತಾನೆ. ಆ ಕವಿತೆಗಳುದ್ದಕ್ಕೂ ಈ ಹತ್ತು ಹಕ್ಕಿಗಳು ಮೊದಲು ತಮ್ಮನ್ನು ಪರಿಚಯಿಸಿಕೊಳ್ಳುವಂತೆ ಮತ್ತು ಆ ನಂತರ ತಮ್ಮ ಮೊದಲು ಮಾತನಾಡಿದ ಹಕ್ಕಿಗಳ ತಪ್ಪುಗಳನ್ನು ಬೊಟ್ಟುಮಾಡುವುದಾಗಿ ಕಟ್ಟಿಕೊಡಲಾಗಿದೆ. ತಾನು ಹೇಳಿದ್ದೇ ಸರಿ ಎಂದು ದೃಢವಾಗಿ ನಂಬಿಕೊಂಡು ಅದನ್ನು ಸಮರ್ಥಿಸಿಕೊಳ್ಳಲು ಹಾತೊರೆಯುವ ಹಕ್ಕಿಗಳ ಉಲ್ಲೇಖಗಳು ಮನುಷ್ಯನ ಅಹಮಿಕೆಗೆ ಹಿಡಿದ ಕೈಗನ್ನಡಿಯಂತೆ ಎಂಬುವುದನ್ನು ಇಲ್ಲಿ ಗ್ರಹಿಸಬಹುದಾಗಿದೆ.

ಮೌಲಾನಾ ಜಲಾಲುದ್ದೀನ್ ರೂಮಿ ಪಕ್ಷಿಗಳ ಇಂಪಾದ ಶಬ್ದಗಳಿಗೆ ವಿಶಾಲ ಮತ್ತು ವಿಶೇಷವಾದ ಅರ್ಥವ್ಯಾಪ್ತಿಯನ್ನು ನೀಡಿ ಅತ್ಯಂತ ಸ್ವಾರಸ್ಯಕರವಾದ ವ್ಯಾಖ್ಯಾನವನ್ನು ನೀಡಿದ್ದಾರೆ. ಪರ್ಷಿಯನ್ ಭಾಷೆಯಲ್ಲಿ “ಎಲ್ಲಿದೆ ಎಲ್ಲಿದೆ” ಎಂಬ ಅರ್ಥಬರುವ ಚಂದ್ರಮುಕುಟ ಹಕ್ಕಿಯ “ಕುಕು.. ಕುಕು..” ಶಬ್ದವನ್ನು ಕೇಳಿದಾಗ ಅದು ತನ್ನ ಸ್ನೇಹಿತ ಎಲ್ಲಿಹನೆಂಬ ಹುಡುಕಾಟದಲ್ಲಿದೆಯೆಂದೂ
ಕೊಕ್ಕರೆಯ ‘ಲಕ ಲಕ'(لك لك )ಎಂಬ ಶಬ್ದವು ಅರೇಬಿಕ್ ಭಾಷೆಯಲ್ಲಿ ‘ನಿನಗೆ ನಿನಗೆ’ ಎಂಬರ್ಥವಿರುವುದರಿಂದ ಅದು ‘ಓ ಅಲ್ಲಾಹ್ ಇಲ್ಲಿರುವ ಸರ್ವವೂ ನಿನ್ನದಾಗಿದೆ. ನನ್ನದೆಲ್ಲವೂ ನಿನಗಾಗಿದೆ’ ಎಂಬ ಝಿಕ್ರ್ (ಸ್ಮರಣೆ)ಆಗಿದೆಯೆಂದೂ ಮೌಲಾನರು ವಿಶ್ಲೇಷಿಸುತ್ತಾರೆ.

ಕವಿ ಸಿನಾನ್ ಓಮಿಯವರ ಒಂದು ಕವಿತೆಯಲ್ಲಿ ಕೊಕ್ಕರೆ ಹಕ್ಕಿಯನ್ನು ಶೈಖ್ ಆಗಿಯೂ ಮಾರ್ಗದರ್ಶಿಯಾಗಿಯೂ ಚಿತ್ರಿಸಲಾಗಿದೆ. ಕೊಕ್ಕರೆ ಹಕ್ಕಿಯು ತನ್ನ ಶಂಕುವಿನಾಕಾರದ ಮೊನಚಾದ, ಕೊಕ್ಕಿನಿಂದ ಮಣ್ಣನ್ನು ಕುಕ್ಕಿ ಕುಕ್ಕಿ ಒಂದು ಅದ್ಭುತವಾದ ವಿನ್ಯಾಸದ ಗೂಡನ್ನು ಕಟ್ಟುತ್ತದೆ. ನಾವು ದೂರದಿಂದಲೇ ಅದರ ಬಾಹ್ಯ ಸೌಂದರ್ಯ ಕಂಡು ಆಸ್ವಾದಿಸಿ ಸುಮ್ಮನಿರುತ್ತೇವೆ. ಆದರೆ ಅದರ ಹಿಂದಿನ ಶ್ರಮವನ್ನು ಕಾಣುವಲ್ಲಿ ನಾವು ನೂರಕ್ಕೆ ನೂರು ಸೋತುಹೋಗುತ್ತೇವೆ. ವಾಸ್ತವದಲ್ಲಿ ಒಬ್ಬ ಸೂಫಿಯ ಕಥೆಯೂ ಇದಕ್ಕೆ ಭಿನ್ನವಾಗಿರುವುದಿಲ್ಲ. ಅವನು ಧರಿಸುವ ಉಡುಪು, ಆತನ ಮಾತುಗಳು, ಮುಂಡಾಸು ಹಾಗೂ ಬದುಕುವ ರೀತಿಯನ್ನು ಗಣನೆಗೆ ತೆಗೆದುಕೊಂಡು ಕುಹಕವಾಡುತ್ತೇವೆ. ನಿಜದಲ್ಲಿ ಒಳಾರ್ಥವಿರುವ ಆ ಹಿರಿಜೀವದ ಮಾತು, ನಡವಳಿಕೆಯ ಹೊಳಹುಗಳನ್ನು ಕಾಣಲಾಗದೆ ಹೋಗುತ್ತೇವೆ. ಕಣ್ಣಿನಿಂದ ಮಾತ್ರವೇ ಕಾಣಲಾಗುತ್ತದೆ ಎಂಬುದು ಶುದ್ಧ ಸುಳ್ಳು ಮತ್ತು ಒಳನೋಟವಿರಲು ಒಂದೊಳ್ಳೆ ಹೃದಯ ಬೇಕಾಗುತ್ತದೆಂದು ಮುಂದುವರಿದ ಸಾಲುಗಳಲ್ಲಿ ಕವಿ ಸಿನಾನ್ ಓಮಿಯವರು ತರ್ಕಿಸುತ್ತಾರೆ.

ತ್ವರೀಖತ್ ಶೈಖರಾಗಿರುವ ‘ಉಮರ್ ಫುವಾದ್ ಕಸ್ತಮೋನೊಲು’ ಒಮ್ಮೆ ರಾಜರಾಗಿರುವ ಪ್ರವಾದಿ ಸುಲೈಮಾನ್ (ಅ)ರಿಗೆ ಕಾವ್ಯಾತ್ಮಕ ಭಾಷೆಯಲ್ಲಿ ಒಂದು ಪತ್ರವನ್ನು ಬರೆಯುತ್ತಾರೆ.
ಗುಲಾಬಿ ಮತ್ತು ಅದರ ಸೌಂದರ್ಯದ ಬಗ್ಗೆ ಬುಲ್‌ಬುಲ್ ಹಕ್ಕಿಗಿರುವ ಮೋಹದ ಕುರಿತಾಗಿ ಅಸೂಯೆ ಪಟ್ಟುಕೊಂಡಿದ್ದ ಕಾಗೆ ಮತ್ತು ಅದರ ಸಹಚರರು ರೂಪಿಸಿದ ಒಂದು ಸುಳ್ಳಿನ ಕಂತೆಯ ವಿರುದ್ಧವಾಗಿತ್ತು ಆ ಪತ್ರದಲ್ಲಿ ಬರೆದಿರುವುದು. ಆರೋಪದ ವಿಚಾರಣೆಗಾಗಿ ಬುಲ್ಬುಲ್ ಹಕ್ಕಿಯನ್ನು ಸುಲೈಮಾನರ ಅರಮನೆಯಲ್ಲಿ‌ನ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶನಾದ ಗಿಡುಗ ಹೇಳಿತು, “ನಾನು ಇದೇ ಮೊದಲು ಈ ರೀತಿಯ ಮೊಕದ್ದಮೆಯನ್ನು ಎದುರಿಸುತ್ತಿದ್ದೇನೆ. ಇದರ ತೀರ್ಪಿಗಾಗಿ ಗೂಬೆಯನ್ನು ಆಹ್ವಾನಿಸುತ್ತೇನೆ. ಗೂಬೆ ಮಾತ್ರ ಇದನ್ನು ಸಮರ್ಪಕವಾಗಿ ಪರಿಹರಿಸಬಲ್ಲದು. ಅಲ್ಲಾಹನ ಆರಾಧನೆಯಲ್ಲಿ ಮಗ್ನನಾಗಿದ್ದ ಗೂಬೆಯನ್ನು ಕರೆಸಲಾಗುತ್ತದೆ. ಎರಡೂ ಕಡೆಯ ವಾದಗಳನ್ನು ಕೇಳಿದ ನಂತರ ಗೂಬೆ ಬುಲ್ಬುಲ್ ಪರವಾಗಿ ತೀರ್ಪು ನೀಡಿತು. ಬಳಿಕ ಅಲ್ಲಿ ನೆರೆದಿರುವವರಲ್ಲಿ ಈ ರೀತಿ ಹೇಳಿತು; ‘ಕೇವಲ‌ ಬಾಹ್ಯವನ್ನು ಅರ್ಥಮಾಡಿಕೊಳ್ಳುವವರಿಗೆ ಮತ್ತು ಅಸೂಯೆ ಪಟ್ಟುಕೊಳ್ಳುವವರಿಗೆ ಪ್ರೀತಿಯ ಮೌಲ್ಯ ಅರ್ಥವಾಗಲಾರದು. ಅಂಥವರ ಮಾತುಗಳಿಗೆ ಜಗತ್ತು ಕಿವಿಕೊಡುವ ಗೋಜಿಗೂ ಹೋಗಬಾರದು.’ ಇದಾದ ಬಳಿಕ ಆರೋಪದಿಂದ ಮುಕ್ತವಾದ ಬುಲ್‌ಬುಲ್ ನಿರಾಳಗೊಂಡು ಪ್ರವಾದಿ ಸುಲೈಮಾನರಿಗೆ ಕೃತಜ್ಞತೆಯನ್ನು ಸಲ್ಲಿಸಿ ಹೂವುಗಳನ್ನು ಅರಸುತ್ತಾ ಹಾರಿ ಹೋಯಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೂಫಿ ಚಿಂತನೆ, ಇಲಾಹಿ ಪ್ರೇಮ, ಇಹದ ನಶ್ವರತೆಗಳನ್ನು ಪ್ರಸ್ತುತಪಡಿಸಲು ಸೂಫಿ ಸಂತರುಗಳು ಅನೇಕ ಕಥೆಗಳು ಮತ್ತು ದೃಷ್ಟಾಂತಗಳನ್ನು ತರುವುದುಂಟು. ಆ ಕಥೆಗಳ ಸುಲಭ ಗ್ರಹಿಕೆಗಾಗಿ ಜೊತೆಗೆ ಕೇಳುಗರ ಹೃದಯಕ್ಕೆ ಪೂರ್ತಿಯಾಗಿ ಇಳಿದುಬಿಡಬೇಕು ಎಂಬ ಕಾರಣಕ್ಕೆ ಹಕ್ಕಿಗಳ ರೂಪಕಗಳನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ಹಕ್ಕಿಗಳನ್ನು ಉಪಮೆಗಳಾಗಿ, ರೂಪಕಗಳಾಗಿ ಹೇಳಿದ ನೀತಿ ಕತೆಗಳು ಜನಮನಸ್ಸುಗಳನ್ನು ಸುಲಭವಾಗಿ ತಲುಪುವುದರೊಂದಿಗೆ ಅಚ್ಚಳಿಯದೆ ಉಳಿದುಬಿಡುತ್ತವೆ. ಹಕ್ಕಿಗಳನ್ನು ತಮ್ಮ ಕಥೆ ಕಾವ್ಯಗಳಿಗೆ ಸಮರ್ಪಕವಾಗಿ ಬಳಸಿಕೊಂಡ ಸೂಫಿಗಳು ತಮ್ಮ ಹೆಸರುಗಳನ್ನು ಅಜರಾಮರಗೊಳಿಸಿ ಹೊರಟುಹೋದರು. ಮನೆಯಂಗಳದಲ್ಲಿ ಮುಂಜಾನೆಗೆ ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ ಕೇಳಿದರೆ ಅವರ ಕಥೆಗಳು, ಆ ಕಥೆಗಳ ಮೂಲಕ ಸೂಫಿ ಮಹಾತ್ಮರು ದಾಟಿಸಿದ ಪಾಠಗಳು ನೆನಪಾಗುವುದರಲ್ಲಿ ಈ ರೂಪಕಗಳ ಪಾತ್ರ ಅನನ್ಯವಾದದ್ದು ಮತ್ತು ಆ ರೂಪಕಗಳು ಉಂಟುಮಾಡುವ ಪರಿಣಾಮಗಳು ಕೂಡ ಅಷ್ಟೇ ಅಪಾರವಾದದ್ದು.


ಮೂಲ :ನಜ್‌ದತ್ ತೌಸೂನ್

ಅನು: ಝುಬೈರ್ ಹಿಮಮಿ ಪರಪ್ಪು

ಜಾಗತಿಕ ಮುಸ್ಲಿಮರ ಶಿರೋವಸ್ತ್ರ ಶೈಲಿಗಳು

ಇಸ್ಲಾಂ ಧರ್ಮದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ತಲೆ ಮುಚ್ಚಲು ಆದೇಶವಿದ್ದರೂ, ಇತರ ಧರ್ಮೀಯರು ಕೂಡ ಅದನ್ನು ಅನುಸರಿಸುತ್ತಾರೆ. ಶಿರೋವಸ್ತ್ರ ಧರಿಸುವ ರೀತಿ ನೋಡಿ ಓರ್ವ ವ್ಯಕ್ತಿಯ ಪ್ರದೇಶ, ಸ್ಥಿತಿ, ಆತನ  ಧರ್ಮ (ಉದಾಹರಣೆಗೆ: ಮುಸ್ಲಿಮನು ನಮಾಝ್ ಮಾಡುವಾಗ ಹಣೆ ನೆಲಕ್ಕೆ ತಾಗಲು ಅನುವಾಗುವಂತೆ ತಲೆ ಮರೆಸಿರುತ್ತಾನೆ) ವನ್ನು ತಿಳಿಯಬಹುದು.

ಸಾಮಾನ್ಯವಾಗಿ ಕಂಡುಬರುವ ಪುರುಷರ ಶಿರೋವಸ್ತ್ರ ಗಳು ಇವುಗಳಾಗಿವೆ:

ಟೋಪಿ (ತಖಿಯ, ಅರಖಿಯೆ), ಫೆಝ್ ಟೋಪಿ (ತಾರ್ಬುಷ್), ಪೇಟ (ಶಾಲು, ಇಮಾಮ/ ಇಹ್ರಾಂ), ಮುಚ್ಚಲಾದ ಶಿರೋವಸ್ತ್ರ ಮತ್ತು ವೃತ್ತಾಕಾರದ ಬ್ಯಾಂಡ್‌ (ಕೂಫಿಯ, ಕೆಫಿಜೆ). ಕೆಲವೊಮ್ಮೆ ಶಿರೋವಸ್ತ್ರ ಧರಿಸಿದವನಲ್ಲಿ ಒಂದು ಟೋಪಿ, ಒಂದು ಫೆಝ್ ಟೋಪಿ, ಪೇಟ ಇಲ್ಲದಿದ್ದರೆ ಹೆಡ್ ಸ್ಕಾರ್ಫ್ ಇರುವುದು. ಕೆಲವೊಮ್ಮೆ ಇವುಗಳು ಒಂದೋ ಎರಡೋ ಹೊಂದಿರುತ್ತಾನೆ. ಫೆಝ್ ಎಂಬ ಟೋಪಿಗೆ ಐತಿಹಾಸಿಕ ಹಿನ್ನೆಲೆಯಿದೆ. ಕೂಫಿಯ ಎಂಬುದು ಅರಬ್ಬರು ಮತ್ತು ಮರಳುಗಾಡಿನ ಅಲೆಮಾರಿಗಳೊಂದಿಗೆ  ತಳುಕು ಹಾಕಿಕೊಂಡಿದೆ. ಪೇಟವು ಉತ್ತರ ಆಫ್ರಿಕಾದ ಮೊರೊಕೊ, ಈಜಿಪ್ಟ್ ಎಂಬಲ್ಲಿ ಮತ್ತು ಇರಾನಿನ ನಾಯಕರಲ್ಲಿ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಸರ್ವೇಸಾಮಾನ್ಯವಾಗಿದೆ.

ತಖಿಯ (ಟೋಪಿ)

ಟೋಪಿಯನ್ನು ಹಿರಿಯ ನಾಗರಿಕರು ಧರಿಸುತ್ತಾರೆ. ಪ್ಯಾಲೆಸ್ಟೈನ್ ನಂತಹ ದೇಶದಲ್ಲಿ ಒಂದು ಸಮೂಹದ ಹುಡುಗರು ಸಾಮಾನ್ಯವಾಗಿ ಧರಿಸುವ ಶಿರೋವಸ್ತ್ರ ವಾಗಿದೆ ಇದು. ಪೇಟ ಧರಿಸುವಾಗ ಸಾಮಾನ್ಯವಾಗಿ ಟೋಪಿ ಧರಿಸಿರುತ್ತಾರೆ. ಪರಂಪರಾಗತವಾಗಿ ತಾರ್ಬುಷ್ ಅಥವಾ ಫೆಝ್ ನೊಂದಿಗೆ ಪೇಟ ಧರಿಸಲಾಗುತ್ತಿತ್ತು. ಕೆಲವೊಮ್ಮೆ ಮಹಿಳೆಯರೂ ಅವರ ಶಿರೋವಸ್ತ್ರಗಳ ಒಳಗೆ ಟೋಪಿ ಧರಿಸಿರುವರು. ಅದೇರೀತಿ ಶಿರೋವಸ್ತ್ರದ ಕೆಳಗೆ ಟೋಪಿ ಧರಿಸುವ ಶೈಲಿ ಅಫ್ಘಾನಿನಲ್ಲಿದೆ.

ಫೆಝ್ ಅಥವಾ ತಾರ್ಬುಷ್

ಮೊರೊಕೊದ ಫೆಝ್ ಎಂಬ ನಗರದ ಹೆಸರಿನಲ್ಲಿ  ಗುರುತಿಸಲ್ಪಡುವ  ತಾರ್ಬುಷ್ (ಚೆಚಿಯ ಮತ್ತು ಫೆಸಿ ಎಂಬ ಹೆಸರುಗಳು ಇವೆ) ಎನ್ನುವ ಈ ಶಿರೋವಸ್ತ್ರವು ಕೆಲವೊಮ್ಮೆ ಟೋಪಿಯ ಮೇಲೆ ಧರಿಸುವುದುಂಟು.  ಫೆಝ್ ಟೋಪಿಯ ನಿಜವಾದ ಆವೃತ್ತಿಯು ಮೃದುವಾಗಿದ್ದು, ದುಂಡಾಗಿರುತ್ತದೆ. ಆದರೆ ಫೆಝ್ ಟೋಪಿಯ ಟರ್ಕಿಶ್ ಆವೃತ್ತಿಯು ದೃಢವಾದ ಅಂಚನ್ನು ಹೊಂದಿರುತ್ತದೆ. ಅದರಲ್ಲಿ ತೂಗುಹಾಕಲಾದ ಕೆಂಪು ಬಣ್ಣದ ನೂಲುಗಳಿರುತ್ತವೆ. ಪ್ಯಾಲೆಸ್ಟೈನ್ ನಲ್ಲಿ ಈ ಎರಡೂ ಆವೃತ್ತಿಗಳು ‘ಟಾರ್ಬುಷ್ ಇಸ್ತಾಂಬುಲಿ’ ಮತ್ತು ‘ಟಾರ್ಬುಷ್ ಮಗ್ರಿಬಿ’ ಎಂಬ ಹೆಸರುಗಳ ಮೂಲಕ ಪ್ರಸಿದ್ಧವಾಗಿದೆ.  ಟರ್ಕಿಶ್ ಆವೃತ್ತಿಯು ಗ್ರಾಮೀಣ ಸೊಗಡನ್ನು ಹೊಂದಿದ್ದರೆ, ಮೊರೊಕೊ ಆವೃತ್ತಿಯು ನಗರದ ಪ್ರಭಾವವನ್ನು ಹೊಂದಿದೆ.

     ತುರ್ಕಿಯಲ್ಲಿ 19ನೇ ಶತಮಾನದ ಆರಂಭದಲ್ಲಿ ಫೆಝ್ ಟೋಪಿ ಧರಿಸುವುದು ಎಲ್ಲಾ ಪುರುಷರ ಔಪಚಾರಿಕ ವಸ್ತ್ರ ಧಾರಣೆಯ ಭಾಗವಾಗಿತ್ತು. ಆದರೆ ತುರ್ಕಿ ರಿಪಬ್ಲಿಕ್ ಸ್ಥಾಪನೆಯಾದ ಮೇಲೆ ಅಲ್ಲಿಗೆ ಪಾಶ್ಚಾತ್ಯ ಸಂಸ್ಕೃತಿ ಕಾಲಿಟ್ಟಿತು. ಅಟಾಟರ್ಕ್ ಕೆಮಾಲ್ ಪಾಷಾ ಫೆಝ್ ಟೋಪಿಯ ಮೇಲೆ ನಿರ್ಬಂಧ ಹೇರಿದನು. 1820 ರಲ್ಲಿ ಈಜಿಪ್ಟ್ ದೇಶವು ಇದನ್ನು ತಮ್ಮ ಸೇನೆಯ ಸಮವಸ್ತ್ರಕ್ಕೆ ಆಯ್ಕೆ ಮಾಡಿತು. ಈ ಟೋಪಿಯ ಪ್ರಮುಖ ಉತ್ಪಾದಕ ರಾಷ್ಟ್ರವಾಗಿ ಅದು ಬೆಳೆಯಿತು. ಈ ಟೋಪಿಯು ಆಟೋಮನ್ ಪ್ರಭಾವವನ್ನು ಹೊಂದಿರುವುದರಿಂದ, 1952ರ ಈಜಿಪ್ಟ್ ಕ್ರಾಂತಿಯ ನಂತರ ಈಜಿಪ್ಟಿನಲ್ಲೂ ನಿರ್ಬಂಧಿಸಲಾಯಿತು.

ಪೇಟ (ಡಲ್ ಬ್ಯಾಂಡ್, ಇಮಾಮ, ಲಫ್ಫೆ, ಮಸಾರ್, ಸಾರಿಕ್)

 ಪೇಟ ಅಂದರೆ ಅದೊಂದು ಉದ್ದ ಶಾಲು ಆಗಿರುತ್ತದೆ.  ಇದು 2 ರಿಂದ 16 ಮೀಟರ್ ವರೆಗೆ ಉದ್ದವಿರುತ್ತದೆ. ತಖಿಯ, ತಾರ್ಬುಷ್ ನ ಸುತ್ತ ಮತ್ತು ಅದರ ಮೇಲೂ ಧರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತಾರ್ಬುಷ್ ಹೊರಗೆ ಕಾಣುವಂತಿರುತ್ತದೆ. ಹಾಗೂ ಟೋಪಿಯ ಮೇಲಿನ ತೆನೆಯು ತೂಗುತ್ತಿರುತ್ತದೆ. ಯಮನ್ ನಲ್ಲಿ ಪೇಟದ ಒಳಗೆ ಧರಿಸುವ ಟೋಪಿಗೆ ‘ಕಲನ್ಸುವ’ ಎಂದು ಹೆಸರು. ಉತ್ತರ ಆಫ್ರಿಕಾದ ಮೊರೊಕೊ, ಈಜಿಪ್ಟ್ ಎಂಬಲ್ಲಿ, ಒಮಾನ್, ಇರಾನಿನ ನಾಯಕರ ನಡುವೆ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಪೇಟವು ಸಾಮಾನ್ಯ ಶಿರೋವಸ್ತ್ರವಾಗಿದೆ. ಲೆವೆನ್ಟ್ ಪ್ರಾಂತ್ಯದ ಸಾಮಾನ್ಯ ಶಿರೋವಸ್ತ್ರವಾಗಿದ್ದರೂ, ಪ್ಯಾಲೆಸ್ಟೈನ್ ನಲ್ಲಿ ಇದನ್ನು ತ್ಯಜಿಸಲಾಗಿತ್ತು.  ಅಲ್ಲಿ 1930 ರಲ್ಲಿ ರಾಷ್ಟ್ರೀಯತೆಯ  ಅಂಗವಾಗಿ ‘ಕೂಫಿಯ’ ಎಂಬ ಹೆಸರಿನ ಶಿರೋವಸ್ತ್ರವು ಜಾರಿಗೆ ಬಂದಿತು. ತೆನೆಗಳು ತೂಗುತ್ತಿರುವುದರಿಂದ ‘ಹಾರುವ ಪೇಟ’ ಎಂದು ಕುರ್ದಿಷ್ ಪುಟವನ್ನು ಕರೆಯಲಾಗುತ್ತದೆ.

ಕೂಫಿಯ

      ಇದು ಒಂದು ಚೌಕಾಕಾರದ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಚಿ, ಅದರ ಎರಡು ಅಂಚುಗಳನ್ನು ತೋಳಿನಲ್ಲಿಟ್ಟು, ಮೂರನೇ ಅಂಚನ್ನು ಹಿಮ್ಮುಖವಾಗಿ ಇಳಿಬಿಟ್ಟು ಕಟ್ಟುವ ಶಿರೋವಸ್ತ್ರವಾಗಿದೆ.  ‘ಇಕಲ್’ ಎಂಬ ಒಂಟೆಯ ರೋಮದಿಂದ ತಯಾರಿಸಲಾದ ವೃತ್ತಕವನ್ನು ಬಳಸಿ ಅದನ್ನು ದೃಢಗೊಳಿಸಲಾಗುತ್ತದೆ. ಇಕಲ್ ನ ಕೆಳಗಿರುವ ಚೌಕಾಕಾರದ ಬಟ್ಟೆಗೆ ‘ಗೌತ್ರ’ ಎಂದು ಹೆಸರು. ಗೌತ್ರದ ಕೆಳಗೆ ತಖಿಯವನ್ನು ಬಳಸಲಾಗುತ್ತದೆ. ಕೂಫಿಯ ಎಂಬುದು ಅರಬ್ಬರು ಮತ್ತು ಮರಳುಗಾಡಿನ ಅಲೆಮಾರಿಗಳೊಂದಿಗೆ ಸಂಬಂಧ ಹೊಂದಿದೆ. ಈಜಿಪ್ಟಿಯನ್ನರು, ಒಮಾನ್ ಪ್ರಜೆಗಳು ಇದನ್ನು ಧರಿಸುವುದಿಲ್ಲ. ಅವರು ಪ್ರತ್ಯೇಕ ಶೈಲಿಯ ಪೇಟವನ್ನು ಇಷ್ಟಪಡುತ್ತಾರೆ. 1930ರಲ್ಲಿ ಪ್ಯಾಲೆಸ್ಟೀನಿಯನ್ನರು ಕೂಫಿಯ ಶಿರೋವಸ್ತ್ರಕ್ಕೆ ಮಾರು ಹೋದರು.

1967 ರಲ್ಲಿ ಪ್ಯಾಲೆಸ್ಟೈನ್ ನಾಯಕ ಯಾಸಿರ್ ಅರಫಾತ್ ಅವರು ಧರಿಸುತ್ತಿದ್ದ ಕಪ್ಪು ಬಿಳುಪು ಗೆರೆಗಳಿದ್ದ ಕೂಫಿಯ ವ್ಯಾಪಕವಾಗಿತ್ತು. ಜೋರ್ಡಾನಿನ ಕೂಫಿಯ ಕೆಂಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇರಾಕಿನಲ್ಲಿ ನಸು ಕಪ್ಪು ನೇಯ್ಗೆ ಇದ್ದರೆ, ಸೌದಿ ಮತ್ತು ಕುವೈಟಿನ ಕೂಫಿಯ ಬಿಳಿ ಬಣ್ಣದಲ್ಲಿರುತ್ತದೆ. ಇನ್ನೂ ಕೆಲವು ಶೈಲಿಯ ಶಿರೋವಸ್ತ್ರವಿದ್ದರೂ ಅವುಗಳ ಬಳಕೆ ತೀರ ಅಪರೂಪ. ಮೊರೊಕೊದ ಬೆರ್ಬೆರರು ಸಾಮಾನ್ಯವಾಗಿ ನೀಳವಾದ ಜೆಲ್ಲಾಬಿಯನ್ನು ತಲೆಯಲ್ಲಿ ಧರಿಸಿರುತ್ತಾರೆ. ಡ್ರೂಝ್ ( ಸಿರಿಯ, ಲೆಬನಾನಿನ ಒಂದು ಜನಾಂಗ) ಜನಾಂಗದವರಿಗೆ ಅವರದ್ದೇ ಆದಂತಹ ಶಿರೋವಸ್ತ್ರ ಶೈಲಿಯಿದ್ದರೆ, ಇರಾನಿನ ಕುರ್ದಿಷ್ ಗಳು ಭಿನ್ನವಾದ ಖಾಷ್ಕಾಯ್ ಟೋಪಿಗಳನ್ನು ಬಳಸುತ್ತಾರೆ. ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣದ ಪುರುಷರು ಮತ್ತು ಮಹಿಳೆಯರು ಶಂಕುವಿನಾಕಾರದ ಒಣ ಹುಲ್ಲಿನಿಂದ ಮಾಡಿದ ಟೋಪಿಗಳನ್ನು ಧರಿಸುತ್ತಾರೆ.

ಮೂಲ: ಅಲೆಕ್ಸ್ ಬ್ರೆಸ್ಲರ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ

ಈದ್ಗಾಹ್

ರಮ್ಜಾನ್ ತಿಂಗಳ ಭರ್ತಿ ಮೂವತ್ತು ದಿನಗಳ ನಂತರ ಈದ್ ಬಂದಿತ್ತು. ಈದ್ ನ ಮುಂಜಾನೆ ಅದೆಷ್ಟು ಶುಭ್ರ ಮತ್ತು ಸುಂದರವಾಗಿತ್ತು! ಮರಗಳೆಲ್ಲಾ ಹಚ್ಚ ಹಸಿರು, ಹೊಲಗದ್ದೆಗಳಿಗೂ ಹಬ್ಬದ ಕಳೆ, ಆಕಾಶಕ್ಕೂ ಗುಲಾಬಿ ಸೊಬಗು ಬಂದಿತ್ತು. ಓಹ್ ಸೂರ್ಯನನ್ನು ನೋಡಿ! ಹಿಂದೆಂದಿಗಿಂತಲೂ ಶುಭ್ರ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತಾ ಲೋಕಕ್ಕೆ ಈದ್ ನ ಶುಭಾಷಯ ಹೇಳಲು ಬರುತ್ತಿದ್ದ. ಗ್ರಾಮದ ತುಂಬೆಲ್ಲಾ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಎಲ್ಲರೂ ಮುಂಜಾನೆಯೇ ಈದ್ಗಾ ಮಸೀದಿಯ ಕಡೆಗೆ ಹೊರಟಿದ್ದರು. ಒಬ್ಬನ ಅಂಗಿಯ ಬಟನ್ ಕಿತ್ತು ಬಂದಿದ್ದನ್ನು ಕಂಡು ಸೂಜಿ ಮತ್ತು ನೂಲು ತರಲೆಂದು ನೆರೆಮನೆಗೆ ಓಡುತ್ತಿದ್ದ. ಇನ್ನೊಬ್ಬನ ಬೂಟಿನ ಚರ್ಮ ಗಟ್ಟಿಯಾಗಿದ್ದಕ್ಕೆ ಎಣ್ಣೆ ತಿಕ್ಕಿ ಹದಮಾಡಲು ಎಣ್ಣೆಯನ್ನೋ , ಗ್ರೀಸನ್ನೋ ತರಲು ಪಕ್ಕದ ಕಿರಾಣಿ ಅಂಗಡಿಗೆ ಧಾವಿಸುತ್ತಿದ್ದ. ಕೆಲವರು ಎಮ್ಮೆಗಳಿಗೆ ಮೇವು ಹಾಕುತ್ತಿದ್ದರು, ಹೇಗಿದ್ದರೂ ಈದ್ಗಾ ದಿಂದ ಮರಳುವಾಗ ಮಧ್ಯಾಹ್ನವೇ ಕಳೆಯುತ್ತಿತ್ತು. ಅದು ಗ್ರಾಮದಿಂದ ಸುಮಾರು ಮೂರು ಮೈಲಿ ದೂರದಲ್ಲಿತ್ತು. ಅಲ್ಲಿ ನೂರಾರು ಜನರು ಶುಭಾಷಯ ಹೇಳಲೋ, ಹರಟೆ ಹೊಡೆಯಲೋ ಸಿಗುತ್ತಿದ್ದರು. ಎಷ್ಟೆಂದರೂ ಮಧ್ಯಾಹ್ನದವರೆಗೆ ಅದು ಮುಗಿಯುತ್ತಲೇ ಇರುತ್ತಿರಲಿಲ್ಲ.

ಹುಡುಗರಂತೂ ಎಲ್ಲರಿಗಿಂತಲೂ ಹೆಚ್ಚೇ ಉತ್ಸುಕರಾಗಿದ್ದರು. ಅವರಲ್ಲಿ ಕೆಲವರು ಕೇವಲ ಒಂದೇ ಒಂದು ಉಪವಾಸ ಹಿಡಿದಿದ್ದವರಾಗಿದ್ದರು. ಅದು ಕೂಡಾ ಮಧ್ಯಾಹ್ನದವರೆಗೆ ಮಾತ್ರವಾಗಿತ್ತು. ಇನ್ನು ಕೆಲವರು ಅಷ್ಟೂ ಮಾಡಿರಲಿಲ್ಲ. ಆದರೂ ಇಂದು ಈದ್ಗಾಕ್ಕೆ ಹೊರಡುವ ಅವರ ಉತ್ಸಾಹವನ್ನು ಯಾರೂ ತಡೆಯುವಂತಿರಲಿಲ್ಲ. ಉಪವಾಸ ಹಿಡಿಯುವುದು ಯುವಕರಿಗೆ ಮತ್ತು ಹಿರಿಯರಿಗೆ ಬಿಟ್ಟ ವಿಷಯವಾಗಿತ್ತು. ಹುಡುಗರಿಗೆ ಅದು ಈದ್ ನ ದಿನ ಅಷ್ಟೆ. ಅವರು ಯಾವಾಗಲೂ ಮಾತನಾಡುತಿದ್ದುದೂ ಆ ದಿನದ ಬಗ್ಗೆಯೇ. ಬಹಳ ದಿನಗಳ ನಂತರ ಆ ದಿನವು ಬಂದೇ ಬಿಟ್ಟಿತ್ತು. ಆದರೆ ಈಗ ಇನ್ನೂ ನಿಧಾನಿಸುತ್ತಿರುವ ಈ ದೊಡ್ಡವರನ್ನು ನೋಡಿದಾಗ ಹುಡುಗರಿಗೆ ತಾಳ್ಮೆ ತಪ್ಪುತ್ತಿತ್ತು. ಆ ದಿನ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹುಡುಗರಿಗೆ ಸ್ವಲ್ಪವೂ ಕಾಳಜಿ ಇರಲಿಲ್ಲ. ಅಂದಿನ ಸೀರ್ ಕುರ್ಮಾ ಮಾಡಲು ಬೇಕಾದಷ್ಟು ಹಾಲು ಮತ್ತು ಸಕ್ಕರೆ ಇದೆಯೇ ಎಂಬುದರ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿರಲಿಲ್ಲ. ಅವರ ತಲೆಯಲ್ಲಿದ್ದುದು ಸೀರ್ ಕುರ್ಮಾವನ್ನು ಸವಿಯುವುದು ಮಾತ್ರ. ಅಬ್ಬಾಜಾನ್ ದಮ್ಮು ಕಟ್ಟಿಕೊಂಡು ಚೌದರಿ ಕರೀಮ್ ಆಲಿಯ ಮನೆಗೆ ಏಕೆ ಓಡುತ್ತಿದ್ದರು ಎಂದೂ ಅವರಿಗೆ ತಿಳಿಯುತ್ತಿರಲಿಲ್ಲ. ಆ ಚೌದರಿ ಮನಸ್ಸು ಮಾಡಿದರೆ ಈದ್ ಹಬ್ಬದ ದಿನವನ್ನು ಶೋಕದ ದಿನವನ್ನಾಗಿ ತಿರುಗಿಸಬಲ್ಲವನೆಂದೂ ಅವರಿಗೆ ತಿಳಿಯುತ್ತಿರಲಿಲ್ಲ. ಅವರ ಜೇಬುಗಳು ನಾಣ್ಯಗಳನ್ನು ತುಂಬಿಕೊಂಡು ಕುಬೇರನ ಡೊಳ್ಳು ಹೊಟ್ಟೆಯಂತೆ ಕಾಣುತ್ತಿದ್ದವು. ಅವರು ಆಗಾಗ ಆ ನಾಣ್ಯಗಳನ್ನು ಎಣಿಸುತ್ತಲೇ ಇರುತ್ತಿದ್ದರು. ಜೇಬಿಗೇರಿಸುವುದಕ್ಕಿಂತ ಮುಂಚೆ ಇನ್ನೊಮ್ಮೆ ಮರು ಎಣಿಸಿಕೊಳ್ಳುತ್ತಿದ್ದರು. “ಒಂದು , ಎರಡು, …ಹತ್ತು, ಹನ್ನೆರಡು” ಹೀಗೆ ಮಹಮ್ಮೂದು ಎಣಿಸಿಕೊಳ್ಳುತ್ತಿದ್ದ. ಅವನ ಬಳಿ ಒಟ್ಟು ಹನ್ನೆರಡು ಪೈಸೆಗಳಿದ್ದವು. ಮೊಹಸಿನ್ ನ ಬಳಿ “ಒಂದು , ಎರಡು, ಮೂರು, ಎಂಟು, ಒಂಬತ್ತು, ಹದಿನೈದು..” ಪೈಸೆಗಳಿದ್ದವು. ಹೀಗೆ ಈ ಲೆಕ್ಕವಿಲ್ಲದ ಪೈಸೆಗಳಿಂದ ಅವರಿಗೆ ಲೆಕ್ಕವಿಲ್ಲದಷ್ಟು ಸಾಮಾನುಗಳನ್ನು ಕೊಂಡುಕೊಳ್ಳುವುದಿತ್ತು : ಆಟಿಕೆಗಳು, ಸಿಹಿ ತಿನಿಸುಗಳು, ಪೇಪರಿನ ಪೀಪಿ, ರಬ್ಬರ್ ಚೆಂಡು – ಇನ್ನೂ ಏನೇನೊ ಸಾಮಾನುಗಳು.

ಆ ಹುಡುಗರಲ್ಲಿ ಅತೀ ಹೆಚ್ಚು ಸಂತೋಷ ಪಟ್ಟವ ಎಂದರೆ ಹಮೀದ್. ಅವನಿಗೆ ಇನ್ನೂ ನಾಲ್ಕು ವರ್ಷ ಪ್ರಾಯ. ಸಾಧಾರಣವಾಗಿ ಉಡುಗೆ ಧರಿಸಿದ ಪೀಚಲು ದೇಹದ ಹುಡುಗ. ಅವನ ತಂದೆ ಕಳೆದ ವರ್ಷ ಕಾಲರಾ ರೋಗದಿಂದ ತೀರಿಕೊಂಡಿದ್ದರು. ಆನಂತರ ಅವನ ತಾಯಿಯೂ ಹಾಸಿಗೆ ಹಿಡಿದಿದ್ದಳು. ಅವಳಿಗೆ ಏನಾಯಿತೆಂದು ಯಾರಾದರೂ ತಿಳಿಯುವುದಕ್ಕೆ ಮೊದಲೇ ಅವಳು ಕೂಡಾ ತೀರಿಕೊಂಡಿದ್ದಳು. ಈಗ ಹಮೀದ್ ಮಲಗುವುದು ಅವನ ಅಜ್ಜಿ ಅಮಿನಾಳ ಮಡಿಲಿನಲ್ಲಿ. ಅದು ಹಮೀದ್ ನಿಗೆ ಅತ್ಯಂತ ಖುಷಿ ಕೊಡುವ ವಿಷಯ. ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ತಂದೆ ತುಂಬಾ ಹಣ ಸಂಪಾದಿಸಲು ಹೋಗಿದ್ದಾನೆ. ಒಂದು ದಿನ ಗೋಣಿ ಚೀಲದ ತುಂಬಾ ಬೆಳ್ಳಿ ನಾಣ್ಯಗಳನ್ನು ತುಂಬಿಕೊಂಡು ಮನೆಗೆ ವಾಪಾಸಾಗುತ್ತಾನೆ ಎಂದು. ಹಾಗೆಯೇ ಅವನ ತಾಯಿ ಕೂಡಾ ಅವನಿಗೆ ಬೇಕಾದಷ್ಟು ಉಡುಗೊರೆಗಳನ್ನು ಬೇಡಿ ತರಲು ಅಲ್ಲಾಹನ ಬಳಿಗೆ ಹೋಗಿದ್ದಾಳೆ ಎನ್ನುತ್ತಿದ್ದಳು. ಇದು ಹಮೀದ್ ನಿಗೆ ತುಂಬಾ ಖುಷಿ ಕೊಡುತಿತ್ತು. ಇಂತಹ ಆಸೆಯೊಂದಿಗೆ ಬದುಕುವುದು ದೊಡ್ಡ ವಿಷಯ. ಅದೂ ಆ ಮಗುವಿಗೆ, ಮಗುವಿನ ಕಲ್ಪನೆಯೇ ಅಂತಹುದು. ಅದು ಒಂದು ಸಣ್ಣ ಸಾಸಿವೆಯನ್ನೂ ಪರ್ವತದಷ್ಟು ದೊಡ್ಡದು ಮಾಡಬಹುದು. ಹಮೀದ್ ನ ಕಾಲುಗಳಲ್ಲಿ ಬೂಟುಗಳಿರಲಿಲ್ಲ: ತಲೆಯ ಮೇಲಿನ ಟೊಪ್ಪಿಗೆ ಹುಡಿಹುಡಿಯಾಗಿ ಕೊಳಕಾಗಿತ್ತು. ಅದರ ಸುತ್ತಲಿದ್ದ ಬಂಗಾರದ ಬಣ್ಣದ ನೂಲಿನ ಎಳೆಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೂ ಹಮೀದ್ ಹೆಚ್ಚು ಕಡಿಮೆ ಸಂತೋಷವಾಗಿಯೇ ಇದ್ದ. ಆದರೂ ಅವನ ತಂದೆ ಗೋಣಿಚೀಲದ ತುಂಬಾ ಬೆಳ್ಳಿ ಮತ್ತು ತಾಯಿ ಅಲ್ಲಾಹನ ಬಳಿಯಿಂದ ಉಡುಗೊರೆಗಳನ್ನು ತಂದಾಗ ತನ್ನ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳನ್ನು ಈಡೇರಿಸಬಹುದೆಂದು ಹಮೀದ್ ನಿಗೆ ಗೊತ್ತಿತ್ತು. ಆಗ ಅವನ ಬಳಿ ಮಹಮ್ಮೂದ್, ಮೊಹಸಿನ್, ನೂರಿ ಮತ್ತು ಸಮ್ಮಿ ಗಿಂತಲೂ ಹೆಚ್ಚು ಪೈಸೆ ಇರುತಿತ್ತು.

ತನ್ನ ಗುಡಿಸಲಿನ ಒಳಗೆ ಅಮೀನಾ ತನ್ನ ದುರಾದೃಷ್ಟವನ್ನು ನೆನೆದು ದುಃಖದ ಕಣ್ಣೀರು ಸುರಿಸುತ್ತಿದ್ದಳು. ಅಂದು ಈದ್ ಆದರೆ ಅವಳ ಬಳಿ ಒಂದು ಹಿಡಿಯಷ್ಟು ಧಾನ್ಯವೂ ಇರಲಿಲ್ಲ. ಒಂದು ವೇಳೆ ಅವಳ ಮಗ ಅಬೀದ್ ಇರುತ್ತಿದ್ದರೆ ಆ ಈದ್ ಹಬ್ಬದ ರೀತಿಯೇ ಬೇರೆ ಇರುತ್ತಿತ್ತು!

ಹಮೀದ್ ತನ್ನ ಅಜ್ಜಿಯ ಬಳಿ ಹೇಳುತ್ತಿದ್ದ. “ಅಜ್ಜಿ ನನಗೆ ಬೈಬೇಡಾ, ಎಲ್ಲರಿಗಿಂತ ಮೊದಲು ನಾನೇ ವಾಪಾಸು ಬರುತ್ತೇನೆ”.

ಅಮೀನಾ ದುಃಖಿತಳಾಗಿದ್ದಳು. ಇತರ ಹುಡುಗರು ತಮ್ಮ ತಮ್ಮ ತಂದೆಯಂದಿರ ಜೊತೆಯಲ್ಲಿ ಹೋಗುತ್ತಿದ್ದರು. ಆದರೆ ಹಮೀದ್ ನಿಗೆ ಅವಳೇ ಏಕೈಕ ‘ತಂದೆ’ಯಾಗಿದ್ದಳು. ಅವನನ್ನೊಬ್ಬನನ್ನೇ ಆ ಜಾತ್ರೆಗೆ ಅವಳು ಕಳುಹಿಸಿಕೊಡುವುದಾದರೂ ಹೇಗೆ? ಅವನು ಎಲ್ಲಿಯಾದರೂ ಆ ಜನಜಂಗುಳಿಯ ನಡುವೆ ಕಳೆದು ಹೋದರೆ? ಇಲ್ಲ. ತನ್ನ ಆ ಪುಟ್ಟ ಹೃದಯವನ್ನು ಕಳೆದುಕೊಳ್ಳಲು ಅವಳು ಸಿದ್ಧರಿರಲಿಲ್ಲ. ಅವನು ಆ ಮೂರು ಮೈಲಿ ಹೇಗೆ ನಡೆದಾನು? ಅವನ ಪುಟ್ಟ ಕಾಲುಗಳಿಗೆ ಒಂದು ಜೋಡಿ ಬೂಟುಗಳೂ ಇರಲಿಲ್ಲ. ಪುಟ್ಟ ಪಾದಗಳಲ್ಲಿ ಬೊಕ್ಕೆಗಳು ಬರುವಂತಿತ್ತು. ಒಂದು ವೇಳೆ ಅವಳು ಕೂಡಾ ಹೋಗುವಂತಿದ್ದರೆ , ಅವನನ್ನು ಎತ್ತಿಕೊಂಡು ಅಲ್ಲಿ ಇಲ್ಲಿ ಹೋಗಬಹುದಿತ್ತು. ಆದರೆ ಇಲ್ಲಿ ಶಾವಿಗೆ ಸೀರ್ ಕುರ್ಮಾ ಮಾಡುವವರು ಯಾರು? ಕೈಯಲ್ಲಿ ಹಣವಿದ್ದಿದ್ದರೆ ವಾಪಾಸು ಬರುತ್ತಾ ಎಲ್ಲಾ ಸಾಮಾನುಗಳನ್ನು ಕೊಂಡು ತಂದು ಸೀರ್ ಕುರ್ಮಾ ಮಾಡಬಹುದಿತ್ತು. ಆದರೆ ಈ ಹಳ್ಳಿಯಲ್ಲಿ ಒಂದೊಂದು ಮನೆಯಿಂದ ಒಂದೊಂದು ಸಾಮಾನುಗಳನ್ನು ಬೇಡಿ ತರುವಷ್ಟರಲ್ಲಿ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಬೇರೆಯವರಲ್ಲಿ ಬೇಡಿ ತರುವುದೊಂದೇ ಅವಳಿಗಿದ್ದ ದಾರಿ.

ಗ್ರಾಮದ ಜನರೆಲ್ಲಾ ಒಂದು ಗುಂಪಿನಲ್ಲಿ ಹೊರಟಿದ್ದರು. ಹುಡುಗರ ಗುಂಪಿನಲ್ಲಿ ಹಮೀದ್ ಇದ್ದನು. ಅವರು ಎಲ್ಲಾ ಹಿರಿಯರನ್ನು ದಾಟಿ ಮುಂದಕ್ಕೆ ಓಡಿ, ಒಂದು ಮರದ ಅಡಿಯಲ್ಲಿ ಅವರಿಗೋಸ್ಕರ ಕಾಯತೊಡಗಿದರು. ಈ ದೊಡ್ಡವರು ಯಾಕೆ ಹೀಗೆ ಕಾಲು ಎಳೆದುಕೊಂಡು ನಡಿತಾರಪ್ಪ? ಹಮೀದ್ ನಂತೂ ತನ್ನ ಕಾಲುಗಳಿಗೆ ರೆಕ್ಕೆಗಳಿವೆಯೋ ಎನ್ನುವಂತಿದ್ದ. ಅವನಿಗೆ ಆಯಾಸವಾಗುವುದೆಂದು ಅಲ್ಲಿರುವವರಿಗೆ ತಿಳಿಯುವುದಾದರೂ ಹೇಗೆ?

ಅವರು ಆ ಪಟ್ಟಣದ ಹೊರವಲಯವನ್ನು ತಲುಪಿದರು. ಅಲ್ಲಿನ ರಸ್ತೆಯ ಇಕ್ಕೆಲಗಳಲ್ಲಿಯೂ ಎತ್ತರವಾದ ಮತ್ತು ದಪ್ಪವಾದ ಆವರಣಗಳಿರುವ ಶ್ರೀಮಂತರ ದೊಡ್ಡ ದೊಡ್ಡ ಮನೆಗಳಿದ್ದವು. ತೋಟಗಳಲ್ಲಿ ಮಾವಿನ ಮತ್ತು ಲೀಚಿ ಹಣ್ಣಿನ ಮರಗಳು ಹಣ್ಣುಗಳಿಂದ ತುಂಬಿ ತೊನೆಯುತ್ತಿದ್ದವು. ಒಬ್ಬ ಹುಡುಗ ಕಲ್ಲೊಂದನ್ನು ಮಾವಿನ ಮರದತ್ತ ಬೀಸಿ ಎಸೆದಿದ್ದ. ತೋಟದ ಮಾಲಿ ಕಿರಿಚುತ್ತಾ ಓಡಿಕೊಂಡು ಬಂದ. ಆದರೆ ಅಷ್ಟರಲ್ಲೇ ಹುಡುಗರು ದೊಡ್ಡದಾಗಿ ಅರಚುತ್ತಾ ಬಿದ್ದು ಬಿದ್ದು ನಗುತ್ತಾ ಅವನಿಂದ ಫರ್ಲಾಂಗುಗಟ್ಟಲೆ ದೂರ ಓಡಿ ಬಂದಿದ್ದರು. ಆ ಮಾಲಿಯನ್ನು ಎಂತಹಾ ಪೆಕರನನ್ನಾಗಿಸಿದ್ದರು!

ಮುಂದೆ ದೊಡ್ಡ ದೊಡ್ಡ ಕಟ್ಟಡಗಳು ಕಾಣುತ್ತಿದ್ದವು. ನ್ಯಾಯಾಲಯಗಳು, ಕಾಲೇಜುಗಳು, ಕ್ಲಬ್ ಗಳು, ಆ ದೊಡ್ಡದಾದ ಕಾಲೇಜಿನಲ್ಲಿ ಅದೆಷ್ಟು ಹುಡುಗರಿರಬಹುದು, ಅಯ್ಯೋ ಅವರು ಹುಡುಗ್ರೇ ಅಲ್ಲ ರಿ! ಎಲ್ಲ ವಯಸ್ಕರೇ ಇದ್ದರು. ಎಲ್ಲರೂ ಹುರಿ ಮೀಸೆ ಕುಣಿಸುತ್ತಿದ್ದರು. ಇಷ್ಟು ವಯಸ್ಕರು ಯಾಕೆ ಕಾಲೇಜಿಗೆ ಹೋಗ್ತಾರಪ್ಪ. ಇನ್ನೆಷ್ಟು ದಿನ ಇವರು ಕಲೀತಾ ಇರಬಹುದು? ಇಷ್ಟೆಲ್ಲಾ ಕಲಿತು ಇವರೆಲ್ಲಾ ಅದೇನು ಮಾಡಬಹುದು? ಹಮೀದ್ ನ ತರಗತಿಯಲ್ಲಿ ಎರಡೋ ಮೂರೋ ಜನ ದೊಡ್ಡ ಹುಡುಗರಿದ್ದರು. ಅಬ್ಬಾ! ಭಯಂಕರ ದಡಿಯರಾಗಿದ್ದರು ಅವರು. ಅವರಿಗೆ ದಿನಾಲು ಏಟು ಸಿಗ್ತಾ ಇತ್ತು. ಅವರು ಮನೆಕೆಲಸ ಕೊಟ್ರೆ ಮಾಡ್ತಾನೇ ಇರಲಿಲ್ಲ.

ಈ ಕಾಲೇಜಿನ ಹುಡುಗರೂ ಅಂತಹವರೇ ಇರಬೇಕು. ಇಲ್ಲದಿದ್ದರೆ ಈ ಪ್ರಾಯದಲ್ಲಿ ಕೂಡಾ ಕಲಿಯಲಿಕ್ಕೆ ಏನು ರೋಗ ಇವರಿಗೆ.
ಅಲ್ಲೊಂದು ಮನೆಯಂತಹ ಕಟ್ಟಡವಿತ್ತು. ಅದರ ಒಳಗೆ ಜಾದೂ ಮಾಡುತ್ತಿದ್ದರು. ಅವರು ಮನುಷ್ಯನ ತಲೆ ಬುರುಡೆಯನ್ನು ಬೇಕಾದ ಕಡೆ ಹೋಗುವಂತೆ ಮಾಡಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಕೂಡಾ ಇತ್ತು. ಅವರು ಹೊರಗಿನವರನ್ನು ಒಳಗಡೆ ಹೋಗಲು ಬಿಡುತ್ತಿರಲಿಲ್ಲ ಎಂಬುದರಲ್ಲಿ ಆಶ್ಚರ್ಯವೇ ಇರಲಿಲ್ಲ! ಮತ್ತು ಬಿಳಿಯರು ಅಲ್ಲಿ ಆಟವಾಡುತ್ತಿದ್ದರು. ಕೆಲವು ದಡಿಯರು, ದೊಡ್ಡ ದೊಡ್ಡ ಗಡ್ಡ ಮೀಸೆ ಇರುವವರು ಕೂಡಾ ಆಟವಾಡುತ್ತಿದ್ದರು! ಅವರು ಮಾತ್ರವಲ್ಲ, ಅವರ ಮೇಮ್ ಸಾಹೀಬ್ ಗಳು ಕೂಡಾ ಆಟವಾಡುತ್ತಿದ್ದರು! ಸತ್ಯ ಹೇಳಬೇಕೆಂದರೆ ಅವರು ಬ್ಯಾಟಿನಲ್ಲಿ ಹಾರಿಸಿ ಹೊಡೆಯುತ್ತಿದ್ದ ರಾಕ್ಕೆಟ್ ಎಂಬ ತೆಳ್ಳನೆ ವಸ್ತುವನ್ನು ನನ್ನ ಅಜ್ಜಿ ಕೈಯಲ್ಲಿ ಕೊಟ್ಟರೆ ಅವಳಿಗೆ ಅದನ್ನು ಸರಿಯಾಗಿ ಹಿಡಿಯಲೂ ಬರಲಿಕ್ಕಿಲ್ಲ. ಇನ್ನು ಇವರು ಹಾರಿ ಹೊಡೆಯುವ ಹಾಗೆನಾದ್ರೂ ಮಾಡಿದ್ರೆ ಅಜ್ಜಿ ಬಿದ್ದು ಬಿಡೋದು ಖಂಡಿತ.

ಮಹಮ್ಮೂದು ಹೇಳುತ್ತಿದ್ದ, “ನನ್ನ ಅಮ್ಮನಿಗಾದ್ರೆ, ಅಲ್ಲಾಹಾನಾಣೆ , ಕೈ ನಡುಗುತ್ತಾ ಇತ್ತು”.
ಮೊಹಸಿನ್ ಹೇಳುತ್ತಿದ್ದ, “ನನ್ನ ಅಮ್ಮನ ಕೈ ರಾಶಿ ರಾಶಿ ಧಾನ್ಯಗಳನ್ನು ಬೀಸುತ್ತಿದ್ದ ಕೈ, ಅದು ಈ ದರಿದ್ರ ರಾಕ್ಕೆಟ್ಟನ್ನು ಹಿಡಿಯುವಾಗ ನಡುಗಲಿಕ್ಕೆ ಸಾಧ್ಯವೇ ಇಲ್ಲ. ಅವಳು ದಿನಾಲು ನೂರಾರು ಕೊಡ ನೀರನ್ನು ಬಾವಿಯಿಂದ ಸೇದುತ್ತಾಳೆ. ನಮ್ಮ ಎಮ್ಮೆ ಐದು ಕೊಡದಷ್ಟು ನೀರು ಕುಡಿಯುತ್ತೆ. ಇನ್ನು ಈ ಮೇಮ್ ಸಾಹಿಬಗಳ ಬಳಿ ಒಂದು ಕೊಡ ನೀರು ಸೇದಲಿಕ್ಕೆ ಹೇಳಿದ್ರೆ ಅವರ ಮುಖ ನೀಲಿಗಟ್ಟಿ ಬಿಡೋದು ಖಂಡಿತ!”.

ಅಷ್ಟರಲ್ಲಿ ಮಹಮ್ಮೂದ್ ಹೇಳಿದ, “ಆದ್ರೆ ನಿಮ್ಮಮ್ಮನಿಗೆ ಓಡಿ ಹೋಗಿ ಹಾರಲಿಕ್ಕೆ ಆಗ್ಲಿಕ್ಕಿಲ್ಲ ಅಲ್ವಾ?”.
“ಅದು ಸರಿ” ಮೊಹಸಿನ್ ಹೇಳಿದ, ” ಅವಳಿಗೆ ಹಾರಲಿಕ್ಕೆ ಮತ್ತು ಓಡ್ಲಿಕ್ಕೆ ಆಗ್ಲಿಕ್ಕಿಲ್ಲ, ಆದ್ರೆ ಒಂದು ಸಲ ನಮ್ಮ ದನ ಹಗ್ಗ ಬಿಡಿಸಿಕೊಂಡು ಚೌದರಿಯ ಹೊಲದಲ್ಲಿ ಮೇಯ್ತಾ ಇತ್ತು. ಆಗ ನನ್ನಮ್ಮ ಎಷ್ಟು ಜೋರಾಗಿ ಓಡಿದ್ದಳೆಂದರೆ, ದೇವರಾಣೆ ನನಗೆ ಅವಳ ಹಿಂದೆ ಓಡ್ಲಿಕ್ಕೆ ಆಗಿರ್ಲಿಲ್ಲ.”

ಹೀಗೆ ನಾವು ಸಿಹಿತಿನಿಸು ಮಾರುತ್ತಿದ್ದ ಸ್ಟಾಲುಗಳತ್ತ ಬಂದೆವು. ಅಬ್ಬಾ! ಎಷ್ಟು ಸುಂದರವಾಗಿ ಜೋಡಿಸಿಟ್ಟಿದ್ದರು ಎಲ್ಲವನ್ನು. ಇಷ್ಟೊಂದು ಸಿಹಿತಿಂಡಿಗಳನ್ನು ತಿನ್ನುವವರಾದರೂ ಯಾರು? ಎಲ್ಲಾ ಸ್ಟಾಲುಗಳಲ್ಲಿ ಬೆಟ್ಟದಂತೆ ರಾಶಿರಾಶಿ ಸಿಹಿತಿನಿಸುಗಳಿದ್ದವು.
ಕೆಲವರು ಮಾತನಾಡಿಕೊಳ್ಳುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಯಾದ ನಂತರ ಜಿನ್ನ್ ಗಳು ಬಂದು ಎಲ್ಲವನ್ನೂ ಕೊಂಡುಕೊಳ್ಳುತ್ತಿದ್ದರಂತೆ.
ಮೊಹಸಿನ್ ಹೇಳುತ್ತಿದ್ದ, “ನನ್ನ ಅಬ್ಬ ಹೇಳುತ್ತಿದ್ದರು, ರಾತ್ರಿ ಎಲ್ಲಾ ಸ್ಟಾಲುಗಳಿಗೆ ಕೂಡಾ ಒಬ್ಬೊಬ್ಬ ಜಿನ್ನ್ ಬಂದು ಎಲ್ಲಾ ಮಿಠಾಯಿಗಳನ್ನು ತೂಕ ಮಾಡಿ ಕೊಂಡುಕೊಳ್ಳುತ್ತಾನಂತೆ, ಅದು ಕೂಡಾ ನಿಜವಾದ ರೂಪಾಯಿಗಳನ್ನು ಕೊಟ್ಟು!, ನಮ್ಮ ಬಳಿ ಇರ್ತಾವಲ್ಲ ಅಂತಹುದೇ ರೂಪಾಯಿಗಳು.”

ಆದರೂ ಹಮೀದ್ ನಿಗೆ ಸಮಾಧಾನವಾಗಲಿಲ್ಲ. “ಜಿನ್ನ್ ಗಳಿಗೆ ರೂಪಾಯಿಗಳು ಎಲ್ಲಿಂದ ಬರಬೇಕು?”

“ಜಿನ್ನ್ ಗಳಿಗೆ ಯಾವತ್ತೂ ಹಣ ಕಡಿಮೆಯಾಗುವುದೇ ಇಲ್ಲ”, ಮೊಹಸಿನ್ ಹೇಳಿದ, “ಅವರು ಯಾವ ಖಜಾನೆಯ ನಿಧಿಯನ್ನೂ ಹೊಕ್ಕಾರು, ನಿಂಗೊತ್ತಿಲ್ವಾ, ಅವರಿಗೆ ಯಾವ ಕಬ್ಬಿಣದ ಕಂಬಿಗಳೂ ಎದುರಿಲ್ಲ, ಎಷ್ಟು ವಜ್ರಗಳು ಮತ್ತು ಹವಳಗಳನ್ನು ಕೂಡಾ ಅವರು ತೆಗೆದುಕೊಂಡು ಬಂದುಬಿಡ್ತಾರೆ. ಅವರಿಗೆ ಯಾರಾದರೂ ಇಷ್ಟವಾದರೆ ಅವರಿಗೆ ಬುಟ್ಟಿ ತುಂಬಾ ವಜ್ರಗಳನ್ನು ಕೊಟ್ಟು ಬಿಡುತ್ತಾರೆ. ಈ ಕ್ಷಣ ಇಲ್ಲಿದ್ದರೆ ಇನ್ನು ಐದು ನಿಮಿಷದಲ್ಲಿ ಕಲ್ಕತ್ತದಲ್ಲಿ ಇರ್ಲಿಕ್ಕೂ ಸಾಧ್ಯವುಂಟು ಅವರಿಗೆ.”

ಹಮೀದ್ ಇನ್ನೊಮ್ಮೆ ಕೇಳಿದ, “ಜಿನ್ನ್ ಗಳು ದೊಡ್ಡದಾಗಿರುತ್ತಾರಾ?”

“ಒಬ್ಬೊಬ್ಬರೂ ಆಕಾಶದಷ್ಟು ಎತ್ತರ ಇರ್ತಾರೆ”, ಮೊಹಸಿನ್ ಇನ್ನೂ ಬಿಡಿಸಿ ಹೇಳಿದ, “ಅವರ ಕಾಲುಗಳು ಭೂಮಿ ಮೇಲಿದ್ರೆ ತಲೆ ಆಕಾಶದಲ್ಲಿರುತ್ತೆ, ಆದ್ರೆ ಅವರು ಬಯಸಿದ್ರೆ ಪುಟ್ಟ ತಗಡಿನ ಡಬ್ಬದೊಳಕ್ಕೂ ಹೋಗಿ ಬಿಡುತ್ತಾರೆ.”

“ಜನ ಈ ಜಿನ್ನ್ ಗಳನ್ನು ಹೇಗೆ ಖುಷಿ ಪಡಿಸ್ತಾರೆ?” ಹಮೀದ್ ಕೇಳಿದ, “ಈ ಗುಟ್ಟನ್ನು ನನಗೆ ಯಾರಾದರೂ ಕಲಿಸಿದ್ದಿದ್ರೆ ನಾನು ಒಂದಾದರೂ ಜಿನ್ನ್ ನ್ನು ನನ್ನ ಬಳಿ ಸಂತೋಷವಾಗಿ ಇರೋವಂತೆ ಮಾಡ್ತಾ ಇದ್ದೆ”.

“ಅದು ನನಗೆ ತಿಳೀದು” ಮೊಹಸಿನ್ ಉತ್ತರಿಸಿದ, “ಆದ್ರೆ ಚೌದರಿ ಸಾಹೇಬನ ಬಳಿ ತುಂಬಾ ಜಿನ್ನ್ ಗಳು ನಿಯಂತ್ರಣದಲ್ಲಿದ್ದಾರೆ. ಏನಾದರೂ ಕದ್ದು ಹೋದ್ರೆ ಅವರು ಕಳ್ಳ ಯಾರೆಂದು ಹುಡುಕಿ, ಅವನ ಹೆಸರು ಕೂಡಾ ಹೇಳ್ತಾರಂತೆ ಗೊತ್ತಾ? ಈ ಲೋಕದಲ್ಲಿ ಏನಾಗುತ್ತೆ ಅದನ್ನೆಲ್ಲಾ ಜಿನ್ನ್ ಅವನ ಬಳಿ ಹೇಳುತ್ತಂತೆ ಗೊತ್ತಾ?”.

ಆ ಚೌದರಿ ಬಳಿ ಯಾಕೆ ಅಷ್ಟು ಸಂಪತ್ತಿದೆ ಮತ್ತು ಯಾಕೆ ಜನ ಅವನಿಗೆ ಅಷ್ಟು ಗೌರವ ಕೊಡುತ್ತಾರೆಂದು ಹಮೀದ್ ನಿಗೆ ತಿಳಿಯಿತು.
ಅಲ್ಲಿ ಜನದಟ್ಟಣಿ ಏರತೊಡಗಿತು. ಪಟ್ಟಣದ ಎಲ್ಲಾ ಕಡೆಗಳಿಂದಲೂ ಜನ ಈದ್ಗಾಹ್ ದತ್ತ ಬರತೊಡಗಿದರು – ಒಬ್ಬರಿಗಿಂತ ಒಬ್ಬರು ಒಳ್ಳೊಳ್ಳೆಯ ಧಿರಿಸುಗಳನ್ನು ಧರಿಸಿದ್ದರು. ಕೆಲವರು ಟಾಂಗಾದಲ್ಲಿದ್ದರೆ, ಕೆಲವರು ಬಂಡಿಯಲ್ಲಿ ಇನ್ನು ಕೆಲವರು ಮೋಟಾರು ಕಾರುಗಳಲ್ಲಿ. ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಉತ್ಸಾಹದಿಂದ ಬೀಗುತ್ತಿದ್ದರು.

ನಮ್ಮ ಹಳ್ಳಿ ಗಮಾರರ ಸಣ್ಣ ಗುಂಪು ಆ ಪಟ್ಟಣದವರ ವೈಯ್ಯಾರದ ಬಗ್ಗೆ ತಲೆಕೆಡಿಸಿ ಕೊಳ್ಳಲಿಲ್ಲ. ಅವರು ತಮ್ಮಲ್ಲಿರುವುದರಷ್ಟಕ್ಕೇ ಸಮಾಧಾನಪಟ್ಟುಕೊಳ್ಳುತ್ತಿದ್ದರು.

ಹಳ್ಳಿಯ ಹುಡುಗರಿಗೆ ಪಟ್ಟಣದ ಪ್ರತಿಯೊಂದೂ ಸೋಜಿಗವೇ. ಯಾವುದು ಅವರ ಕಣ್ಣಿಗೆ ಬೀಳುತ್ತಿತ್ತೋ ಅಲ್ಲಿಗೆ ಓಡಿ ಹೋಗಿ ಅಚ್ಚರಿಯಿಂದ ಇಣುಕುತ್ತಿದ್ದರು. ಕಾರುಗಳು ಹುಡುಗರನ್ನು ರಸ್ತೆಯ ಬದಿಗೆ ಹೋಗುವಂತೆ ಜೋರಾಗಿ ಶಬ್ದ ಮಾಡುತ್ತಿದ್ದವು. ಆದರೆ ಹುಡುಗರಿಗೆ ಅದರ ಪರಿವೆಯೇ ಇರಲಿಲ್ಲ. ಒಮ್ಮೆಯಂತೂ ಕಾರೊಂದು ಹಮೀದ್ ನ ಮೇಲೆಯೇ ಹೋಗುವುದರಲ್ಲಿತ್ತು.

ತುಂಬಾ ಸಮಯದ ನಂತರ ಅವರಿಗೆ ಈದ್ಗಾಹ್ ಕಾಣಿಸಿತು. ಅದರ ಮೇಲೆ ದೊಡ್ಡದಾದ ಹುಣೆಸೆ ಮರಗಳಿದ್ದವು. ಅವುಗಳ ವಿಶಾಲವಾದ ನೆರಳು ಸಿಮೆಂಟಿನ ಕಟ್ಟೆಯ ಮೇಲೆ ಹಾಸಿದ್ದ ಜಮಖಾನೆಗಳ ಮೇಲೆ ಹರಡಿಕೊಂಡಿತ್ತು. ಅಲ್ಲಿ ನಮಾಜು ಮಾಡಲು ಬಂದವರು ಸಾಲುಗಟ್ಟಿ ನಿಂತಿರುವುದು
ಕಾಣುತ್ತಿತ್ತು. ಜನರು ಮಸೀದಿಯ ಒಳಗೆ ತುಂಬಿಕೊಂಡು ಹೊರಗಿನವರೆಗೆ ಹಬ್ಬಿರುವುದು ಕಾಣುತ್ತಿತ್ತು. ಹೊಸದಾಗಿ ಬಂದವರು ದೊಡ್ಡವರ ಹಿಂದೆ ಸಾಲುಗಟ್ಟಿ ನಿಂತಿದ್ದರು. ಇಲ್ಲಿ ಯಾವುದೇ ದೊಡ್ಡಸ್ತಿಕೆ , ಮೇಲುಕೀಳು ನಡೆಯುತ್ತಿರಲಿಲ್ಲ. ಯಾಕೆಂದರೆ ಇಸ್ಲಾಮಿನಲ್ಲಿ ಎಲ್ಲರೂ ಸಮಾನರೆಂದು ಹೇಳುತ್ತಿದ್ದರು. ನಮ್ಮ ಹಳ್ಳಿಯ ತಂಡ ಕೂಡಾ ಕೈ ಕಾಲುಗಳನ್ನು ತೊಳೆದುಕೊಂಡು ಹಿಂದೆ ಅವರದೇ ಆದ ಒಂದು ಸಾಲಿನಲ್ಲಿ ನಿಂತುಕೊಂಡರು.

ಆಹಾ! ಎಂತಹಾ ಹೃದಯ ತಣಿಸುವಂತಹ ದೃಶ್ಯವಾಗಿತ್ತು ಅದು! ಎಲ್ಲರ ಎಂತಹ ಶಿಸ್ತಿನ ಚಲನೆ! ಸಾವಿರಾರು ತಲೆಗಳು ಒಮ್ಮೆಲೆ ಪ್ರಾರ್ಥನೆಗಾಗಿ ಬಾಗುತ್ತಿದ್ದವು. ಆಮೇಲೆ ಒಮ್ಮೆಲೆ ಎಲ್ಲರೂ ಎದ್ದು ನಿಲ್ಲುತ್ತಿದ್ದರು, ಬಾಗಿ ನಂತರ ತಮ್ಮ ಮೊಣಕಾಲುಗಳಲ್ಲಿ ಕುಳಿತುಕೊಳ್ಳುತ್ತಿದ್ದರು! ಹಲವು ಸಲ ಅವರು ಅದನ್ನೇ ಪುನರಾವರ್ತನೆ ಮಾಡಿದರು. ಸಾವಿರಾರು ವಿದ್ಯುತ್ತಿನ ದೀಪಗಳನ್ನು ಒಮ್ಮೆಲೆ ಉರಿಸಿ ಆರಿಸಿದಂತೆ ಕಾಣುತ್ತಿತ್ತು. ಅಬ್ಬಾ! ಎಂತಹ ಅದ್ಭುತ ದೃಶ್ಯವಾಗಿತ್ತು ಅದು!

ಪ್ರಾರ್ಥನೆ ಮುಗಿಯಿತು. ಗಂಡಸರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭಾಷಯ ಹೇಳಿಕೊಂಡರು. ನಂತರ ಒಮ್ಮೆಲೆ ಸೈನಿಕರು ಮುತ್ತಿಗೆ ಹಾಕುವಂತೆ ಸಿಹಿ ತಿನಿಸು ಮತ್ತು ಆಟಿಕೆಗಳ ಅಂಗಡಿಗಳತ್ತ ನುಗ್ಗಿದರು. ಈ ವಿಷಯದಲ್ಲಿ ಹಳ್ಳಿಯ ಜನ, ಹುಡುಗರಿಗಿಂತ ಕಡಿಮೆ ಉತ್ಸುಕರಾಗಿಯೇನೂ ಇರಲಿಲ್ಲ. ನೋಡು, ಇಲ್ಲೊಂದು ಉಯ್ಯಾಲೆ ಇದೆ! ಒಂದು ಪೈಸೆಗೆ ಒಮ್ಮೆಲೆ ಸ್ವರ್ಗಕ್ಕೆ ಹಾರಿ ಜಾರುತ್ತಾ ಭೂಮಿಗೆ ಇಳಿದು ಬಿಡಬಹುದು! ಮತ್ತು ಅಲ್ಲೊಂದು ದೊಡ್ಡ ಚಕ್ರವಿತ್ತು. ಅದರ ಮೇಲೆ ಮರದ ಆನೆಗಳು , ಕುದುರೆ, ಒಂಟೆ ಇತ್ಯಾದಿಗಳನ್ನು ಸಿಕ್ಕಿಸಿದ್ದರು. ಒಂದು ಪೈಸೆ ಕೊಟ್ಟರೆ ಇಪ್ಪತ್ತೈದು ಸುತ್ತು ಸುತ್ತುವ ಮಜಾ! ಮೊಹಸಿನ್, ಮಹಮ್ಮೂದು, ನೂರಿ ಮತ್ತು ಇತರ ಕೆಲವು ಹುಡುಗರು ಕುದುರೆ ಮತ್ತು ಒಂಟೆಗಳನ್ನೇರಿದರು.

ಹಮೀದ್ ದೂರದಲ್ಲಿ ನಿಂತು ಅವರನ್ನು ನೋಡುತ್ತಿದ್ದ. ಅವನಲ್ಲಿದ್ದುದು ಕೇವಲ ಮೂರು ಪೈಸೆ. ಆ ಕರ್ಮದ ಸುತ್ತುಗಳಿಗೆ ಅವನಲ್ಲಿರುವ ಪೈಸೆಗಳಿಂದ ಮುಕ್ಕಾಲನ್ನು ಕೂಡಾ ಖರ್ಚು ಮಾಡಲು ಸಾಧ್ಯವಿರಲಿಲ್ಲ.

ಅವರು ಸುತ್ತುವ ಆಟವನ್ನು ಮುಗಿಸಿದರು, ಈಗ ಆಟಿಕೆಗಳ ಸರದಿ. ಅಲ್ಲಿ ಒಂದು ಬದಿಯ ಸಾಲಿನ ತುಂಬಾ ಬಗೆಬಗೆಯ ಆಟಿಕೆಗಳ ಸ್ಟಾಲುಗಳಿದ್ದವು. ಅಲ್ಲಿ ಸೈನಿಕರು, ಹಾಲು ಮಾರುವವಳು, ರಾಜ ಮತ್ತು ಮಂತ್ರಿಗಳು, ನೀರು ಸಾಗಿಸುವವನು, ಬಟ್ಟೆ ಒಗೆಯುವವಳು, ಮತ್ತು ಸಾಧು ಸಂತರು ಹೀಗೆ ವಿವಿಧ ಗೊಂಬೆಗಳಿದ್ದವು. ಅಬ್ಬಾ ಎಂತಹ ದೃಶ್ಯ! ಎಲ್ಲವೂ ಜೀವಂತವಾಗಿರುವಂತೆ ಇದ್ದವು! ಕೇವಲ ಅವುಗಳಿಗೆ ಬೇಕಾಗಿದ್ದು ಮಾತನಾಡಲು ನಾಲಗೆಗಳು ಮಾತ್ರ. ಮಹಮ್ಮೂದು ಕೆಂಪು ಪೇಟ ಮತ್ತು ಹೆಗಲಿಗೆ ಕೋವಿಯೇರಿಸಿರುವ ಪೋಲಿಸನ ಗೊಂಬೆಯೊಂದನ್ನು ಖರೀದಿಸಿದ. ಅವನು ಪೆರೇಡಿನಲ್ಲಿ ಸಾಗುತ್ತಿರುವಂತೆ ಕಾಣುತಿತ್ತು. ಮೊಹಸಿನ್ ನೀರು ಸಾಗಿಸುವ ಗೊಂಬೆಯೊಂದನ್ನು ತೆಗೆದುಕೊಂಡ. ಅದರ ಬೆನ್ನು ನೀರಿನ ಬಾರಕ್ಕೆ ಬಾಗಿ ಹೋಗಿತ್ತು. ನೀರಿನ ಪಾತ್ರೆಯ ಹಿಡಿಯನ್ನು ಹಿಡಿದಿರುವ ಆತನ ಮುಖದಲ್ಲಿ ಸಂತೃಪ್ತಿಯಿತ್ತು. ಆತ ಯಾವುದೋ ಹಾಡು ಹಾಡುತ್ತಿರುವಂತೆ ಕಾಣುತಿತ್ತು. ನೀರು ಪಾತ್ರೆಯಿಂದ ಎಲ್ಲಿ ಚೆಲ್ಲುವುದೋ ಎಂಬಂತಿತ್ತು. ನೂರಿ ವಕೀಲನ ಗೊಂಬೆಯೊಂದಕ್ಕೆ ಮನಸೋತ. ಆತನ ಮುಖದಲ್ಲಿ ಎಂತಹ ಕಳೆ! ಎಲ್ಲವನ್ನು ಕಲಿತವನ ಹಾಗೆ! ಬಿಳಿ ಷರಾಯಿಯ ಮೇಲೆ ಉದ್ದನೆಯ ಕಪ್ಪು ಗವನು, ಬಂಗಾರದ ಬಣ್ಣದ ಕೈಗಡಿಯಾರದ ಚೈನು ಹೊರಗಿಣುಕುತಿತ್ತು. ದಪ್ಪನೆಯ ಕಾನೂನಿನ ಪುಸ್ತಕವೊಂದು ಕೈಯಲ್ಲಿತ್ತು. ಈಗಷ್ಟೇ ವಾದವೊಂದನ್ನು ಮುಗಿಸಿ ಕೋರ್ಟಿನಿಂದ ಹೊರಗೆ ಬರುತ್ತಿರುವಂತೆ ಕಾಣುತಿತ್ತು.

ಈ ಒಂದೊಂದು ಆಟಿಕೆಗಳಿಗೆ ಎರಡು ಪೈಸೆಯಷ್ಟಾಗುತಿತ್ತು. ಹಮೀದ ನಲ್ಲಿದ್ದುದೇ ಮೂರು ಪೈಸೆಗಳು. ಅಷ್ಟು ಬೆಲೆಬಾಳುವ ಆಟಿಕೆಗಳನ್ನು ಆತ ಕೊಂಡುಕೊಳ್ಳುವುದಾದರೂ ಹೇಗೇ? ಅದು ಕೂಡಾ ಒಂದು ವೇಳೆ ಕೆಳಗೆ ಬಿದ್ದು ಬಿಟ್ಟರೆ ಹುಡಿ ಹುಡಿಯಾಗುತ್ತಿದ್ದವು. ಒಂದು ಹನಿ ನೀರು ಬಿದ್ದರೂ ಅವುಗಳ ಬಣ್ಣ ಮಾಯವಾಗುತಿತ್ತು. ಇಂತಹ ಆಟಿಕೆಗಳನ್ನು ಕೊಂಡು ಅವನು ಏನು ಮಾಡಿಯಾನು? ಅವನಿಗೆ ಅವುಗಳು ಯಾವ ಉಪಯೋಗಕ್ಕೂ ಬಾರವು ಎನಿಸುತಿತ್ತು.

“ನನ್ನ ಈ ನೀರು ಹೊಯ್ಯುವ ಗೊಂಬೆ ದಿನಾಲು ಬೆಳಿಗ್ಗೆ ಮತ್ತು ಸಂಜೆ ನೀರು ಚಿಮುಕಿಸುವನು” ಎಂದು ಮೊಹಸಿನ್ ಹೇಳಿದ.

“ನನ್ನ ಈ ಪೋಲೀಸು ನನ್ನ ಮನೆಯನ್ನು ಕಾಯುತ್ತಾನೆ. ಯಾವನಾದರೂ ಕಳ್ಳ ಹತ್ತಿರ ಬಂದ್ರೆ, ಕೋವಿ ತಕ್ಕೊಂಡು ಉಡಾಯಿಸಿ ಬಿಡ್ತಾನೆ” ಎಂದು ಮೆಹಮ್ಮೂದು ಹೇಳಿದ.

“ನನ್ನ ವಕೀಲ ನನ್ನ ಕೇಸುಗಳನ್ನು ನಡೆಸುತ್ತಾನೆ” ಎಂದು ನೂರಿ ಹೇಳಿದ.

“ನನ್ನ ಬಟ್ಟೆ ಒಗೆಯುವ ಗೊಂಬೆ ಪ್ರತಿದಿನ ನನ್ನ ಬಟ್ಟೆ ಒಗೆಯುವಳು” ಎಂದು ಸಮ್ಮಿ ಹೇಳುತ್ತಿದ್ದ.

ಹಮೀದ್ ಆ ಬಿದ್ದು ಬಿಟ್ಟರೆ ಚೂರು ಚೂರಾಗಲಿರುವ ಮಣ್ಣಿನ ಗೊಂಬೆಗಳನ್ನು ತಮಾಷೆ ಮಾಡಿದ. ಆದರೂ ಅವನ ಕಣ್ಣುಗಳು ಅವನ್ನು ಆಸೆಯಿಂದ ನೋಡುತ್ತಿದ್ದುವು. ಒಂದೆರಡು ಕ್ಷಣ ಅವುಗಳನ್ನು ಕೈಯಲ್ಲಿ ಹಿಡಿದುಕೊಳ್ಳೋಣ ಎಂದು ಬಯಸುತ್ತಿದ್ದ. ಅವನಿಗರಿವಿಲ್ಲದಂತೆ ಅವನ ಕೈಗಳು ಅದರಷ್ಟಕ್ಕೆ ಗೊಂಬೆಗಳತ್ತ ಚಾಚಿಕೊಂಡವು. ಆದರೆ ಆ ಪುಟ್ಟ ಹುಡುಗರು ಅಷ್ಟು ಸುಲಭದಲ್ಲಿ ಗೊಂಬೆಗಳನ್ನು ಕೊಡುವವರಾಗಿರಲಿಲ್ಲ. ಅದು ಕೂಡಾ ಆ ಹೊಸ ಗೊಂಬೆಗಳನ್ನು. ಪಾಪ ಹಮೀದ್ ನಿಗೆ ಗೊಂಬೆಗಳು ಮುಟ್ಟಲೂ ಸಿಗಲಿಲ್ಲ.

ಆಟಿಕೆಗಳ ನಂತರ ಈಗ ಸಿಹಿತಿನಿಸುಗಳ ಸರದಿ. ಕೆಲವರು ಎಳ್ಳು ಕ್ಯಾಂಡಿಯನ್ನು ಕೊಂಡುಕೊಂಡರೆ ಇನ್ನು ಕೆಲವರು ಗುಲಾಬ್ ಜಾಮೂನುಗಳನ್ನು, ಹಲ್ವಾಗಳನ್ನು ಕೊಂಡುಕೊಂಡರು. ಬಾಯಿಗೆ ಹಾಕಿಕೊಂಡು ಚಪ್ಪರಿಸುತ್ತಿದ್ದರು. ಸುಮ್ಮನೆ ಉಳಿದವನು ಹಮೀದ್ ಮಾತ್ರ. ಆ ದುರಾದೃಷ್ಟದ ಹುಡುಗನ ಬಳಿ ಇದ್ದುದು ಮೂರು ಪೈಸೆಗಳು ಮಾತ್ರ. ಅವನಿಗೇನಾದರೂ ಕೊಂಡುಕೊಳ್ಳಲು ಏನು? ಸುಮ್ಮನೆ ಆಸೆಯ ಕಣ್ಣುಗಳಿಂದ ಇತರರು ತಿನ್ನುತ್ತಿರುವುದನ್ನು ನೋಡುತ್ತಿರುವನಲ್ಲ?

ಮೊಹಸಿನ್ ಹೇಳಿದ, “ಹಮೀದ್, ತಗೋ ಎಳ್ಳು ಕ್ಯಾಂಡಿ. ಹೇಗೆ ಘಮ ಘಮಾ ಅಂತಿದೆ ನೋಡು”?

ಹಮೀದ್ ನಿಗೆ ಇದು ಏನೋ ಕೆಟ್ಟ ತಮಾಷೆಯಾಗಿರಬೇಕು ಅನಿಸಿತು. ಮೊಹಸಿನ್ ನಿಗೆ ಅಷ್ಟು ಉದಾರ ಹೃದಯವಿರಲಿಲ್ಲ. ಆದರೆ ಇದು ಗೊತ್ತಿದ್ದರೂ ಹಮೀದ್ ಮೊಹಸಿನ್ ಬಳಿ ಹೋದನು. ಮೊಹಸಿನ್ ಕ್ಯಾಂಡಿಯ ಒಂದು ತುಂಡು ಕಿತ್ತು ಹಮೀದ್ ನತ್ತ ಹಿಡಿದನು. ಹಮೀದ್ ಕ್ಯಾಂಡಿಯತ್ತ ಕೈ ಚಾಚಿದ. ಮೊಹಸಿನ್ ಸರಕ್ಕನೆ ಕ್ಯಾಂಡಿಯನ್ನು ಬಾಯಿಗಿಟ್ಟುಕೊಂಡ. ಮಹಮ್ಮೂದು, ನೂರಿ ಮತ್ತು ಸಮ್ಮಿ ಜೋರಾಗಿ ಚಪ್ಪಾಳೆ ತಟ್ಟಿಕೊಂಡು ಬಿದ್ದು ಬಿದ್ದು ನಕ್ಕರು. ಹಮೀದ್ ಸೋತವನಂತೆ ತಲೆತಗ್ಗಿಸಿದ.

“ಈ ಸಲ ಖಂಡಿತಾ ಕೊಡುತ್ತೇನೆ. ಅಲ್ಲಾಹನಾಣೆ, ಬಾ ಕೈಚಾಚಿ ಪಡೆದು ಕೊ”, ಮೊಹಸಿನ್ ಅಣಕಿಸಿದ.

“ನಿನ್ನ ತಿಂಡಿಗಳನ್ನು ನೀನೇ ಇಟ್ಟುಕೋ, ನನ್ನ ಬಳಿಯೇನು ಹಣ ಇಲ್ವಾ”? ಹಮೀದ್ ಉತ್ತರಿಸಿದ.

“ಆದರೆ ನಿನ್ನ ಬಳಿ ಇರೋದು ಬರೀ ಮೂರು ಪೈಸೆ” ಸಮ್ಮಿ ಕೇಳಿದ , “ಮೂರು ಪೈಸೆಗೆ ಏನು ಸಿಗುತ್ತೆ ನಿಂಗೆ”.

ಮಹಮ್ಮೂದು ಹೇಳಿದ, “ಆ ಮೊಹಸಿನ್ ದುಷ್ಟ, ಹಮೀದ್ ನೀನು ಬಾ ಇಲ್ಲಿ ನಾನು ಗುಲಾಬ್ ಜಾಮೂನು ಕೊಡುತ್ತೇನೆ”.

“ಅಷ್ಟೋಂದು ಜೀವ ಬಿಡೋದಿಕ್ಕೆ ಏನಿದೆ ಆ ತಿಂಡಿಗಳಲ್ಲಿ, ಪುಸ್ತಕದಲ್ಲಿ ಆ ಸಿಹಿ ತಿನಿಸುಗಳು ತುಂಬಾ ಕೆಟ್ಟದ್ದು ಅಂತ ಬರೆದಿದೆ ಗೊತ್ತಾ”. ಹಮೀದ್ ಕೂಡಾ ಅಣಕಿಸಿದ.

“ಆದ್ರೆ ಮನಸ್ಸು ಹೇಳ್ತಾ ಇರಬೇಕು ಆಹಾ ಸಿಕ್ಕಿದ್ರೆ ನಾನು ಕೂಡಾ ಎಲ್ಲಾ ತಿನ್ನ್ತಾ ಇದ್ದೆ ಅಂತ ಅಲ್ವಾ”?, ಮೊಹಸಿನ್ ಚುಚ್ಚುತ್ತಿದ್ದ, “ನಿನ್ನ ಆ ಪೈಸೆಗಳನ್ನು ಯಾಕೆ ಜೇಬಿಂದ ಹೊರ ತೆಗೆಯುತ್ತಿಲ್ಲ ನೀನು”.

“ಇವನು ಎಂತಾ ಶಾಣ ಅಂತ ನಂಗೊತ್ತಿಲ್ವ?” ಮಹಮ್ಮೂದು ಹೇಳುತ್ತಿದ್ದ, “ನಮ್ಮ ಕೈಲಿರೊ ಎಲ್ಲಾ ಪೈಸೆಗಳು ಖಾಲಿ ಆದ ನಂತ್ರ ಇವ್ನು ಸಿಹಿ ತಿಂಡಿ ಕೊಂಡ್ಕೊಂಡು ನಮ್ಮನ್ನು ಗೇಲಿ ಮಾಡ್ಬೆಕೆಂದ್ಕೊಂಡಿದ್ದಾನೆ”.

ಸಿಹಿತಿನಿಸುಗಳ ಅಂಗಡಿಗಳ ನಂತರ ಮುಂದೆ ಕೆಲವು ಹಾರ್ಡ್ ವೇರ್ ಅಂಗಡಿಗಳು ಮತ್ತು ಕೆಲವು ಗಿಲೀಟು ಮತ್ತು ನಿಜವಾದ ಆಭರಣಗಳ ಅಂಗಡಿಗಳಿದ್ದವು. ಹುಡುಗರನ್ನು ಆಕರ್ಷಿಸುವಂತಹುದೇನೂ ಅಲ್ಲಿರಲಿಲ್ಲ. ಆದಕಾರಣ ಹುಡುಗರು ಮುಂದೆ ಸಾಗಿದರು. ಆದರೆ ಹಮೀದ್ ಮಾತ್ರ ಅಲ್ಲೇ ನಿಂತುಕೊಂಡ. ಅಲ್ಲಿ ರಾಶಿ ಹಾಕಿರುವ ಕಬ್ಬಿಣದ ಇಕ್ಕುಳಗಳನ್ನು ನೋಡಿಕೊಂಡು. ಕೂಡಲೇ ಹಮೀದ್ ನಿಗೆ ಆತನ ಅಜ್ಜಿಯ ಬಳಿ ಇಂತಹ ಜೋಡಿ ಇಕ್ಕುಳಗಳು ಇಲ್ಲ ಎಂದೆಣಿಸಿತು. ಪ್ರತೀ ಸಲ ಆಕೆ ಚಪಾತಿಗಳನ್ನು ಕಾಯಿಸುವಾಗಲೂ ಕಬ್ಬಿಣದ ಕಾವಲಿ ಆಕೆಯ ಕೈಗಳನ್ನು ಸುಡುತ್ತಿತ್ತು. ಆಕೆಗೊಂದು ಜೋಡಿ ಇಕ್ಕುಳಗಳನ್ನು ಕೊಂಡುಕೊಂಡರೆ ಆಕೆಗೆ ಸಂತೋಷವಾಗಬಹುದು ಎಂದು ಹಮೀದ್ ಯೋಚಿಸಿದ. ಆಕೆಯ ಕೈಗಳು ಕೂಡಾ ಪ್ರತೀದಿನ ಸುಡುವುದು ತಪ್ಪುತಿತ್ತು, ಅಲ್ಲದೆ ಇದೊಂದು ಮನೆಯಲ್ಲಿರಬೇಕಾದ ಉಪಯುಕ್ತ ವಸ್ತು ಎಂದು ಅನಿಸುತಿತ್ತು. ಆ ಆಟಿಕೆಗಳಿಂದ ಏನು ಉಪಯೋಗ, ಸುಮ್ಮನೆ ಹಣ ನಷ್ಟ ಅಷ್ಟೆ, ಸ್ವಲ್ಪ ಸಮಯ ಅವುಗಳ ಬಳಿ ಆಟವಾಡಬಹುದು ಆಮೇಲೆ ಎಲ್ಲವೂ ಮರೆತು ಹೋಗುತ್ತದೆ.

ಹಮೀದ್ ನ ಎಲ್ಲಾ ಮಿತ್ರರು ಮುಂದೆ ಹೋಗಿದ್ದರು. ಮುಂದೆ ಇದ್ದ ಸ್ಟಾಲೊಂದರಲ್ಲಿ ನಿಂತು ಶರಬತ್ತು ಕುಡಿಯುತ್ತಿದ್ದರು. ಅಬ್ಬಾ ! ಎಂತಹ ಸ್ವಾರ್ಥಿಗಳು?, ಎಷ್ಟೊಂದು ತಿಂಡಿಗಳನ್ನು ಕೊಂಡ್ಕೊಂಡಿದ್ದರು, ಆದರೂ ಹಮೀದ್ ನಿಗೆ ಒಂದು ಚೂರೂ ನೀಡಿರಲಿಲ್ಲ. ಆದರೂ ಅವರೊಡನೆ ಆಟವಾಡಲು ಆತ ಬೇಕಿತ್ತು. ಅವರು ಹೇಳಿದ ಚಪ್ರಾಸಿ ಕೆಲಸ ಆತ ಮಾಡಬೇಕಿತ್ತು. ಇನ್ನೊಂದ್ಸಲ ಕೆಲಸ ಮಾಡ್ಕೊಡು ಅಂತ ಬರ್ಲಿ ಅವರು , “ಹೋಗು ನಿನ್ನ ಲಾಲಿಪಾಪ್ ಚೀಪ್ಕೊಂಡು, ಅದು ನಿನ್ನ ಬಾಯಿ ಸುಟ್ಟು ಹಾಕುತ್ತೆ, ಬಾಯೊಳಗೆ ಎಲ್ಲಾ ಕಜ್ಜಿ ಆಗಿ ನಾಲಗೆ ಯಾವಾಗ್ಲೂ ಲಾಲಿ ಪಾಪ್, ಲಾಲಿ ಪಾಪ್ ಅಂತ ಕೇಳುತ್ತೆ, ಇನ್ನು ತಿಂಡಿ ಕೊಂಡ್ಕೊಬೇಕಾದ್ರೆ ನೀವು ಕಳ್ಳತನ ಮಾಡ್ಬೇಕು, ಚೌಕಾಸಿ ಮಾಡಿ ಪೆಟ್ಟು ತಿನ್ಬೇಕು,” ಪುಸ್ತಕದಲ್ಲಿ ಇಂತಹುದನ್ನೆಲ್ಲಾ ಬರೆದಿದೆ. ಆದ್ರೆ ನನ್ನ ಇಕ್ಕುಳಗಳಿಗೆ ಏನೂ ಆಗಲ್ಲ. ಅಜ್ಜಿ ನನ್ನ್ ಕೈಲಿ ಈ ಇಕ್ಕುಳ ನೀಡಿದ್ ಕೂಡ್ಲೇ ನನ್ ಕೈಯಿಂದ ಅದನ್ನು ಪಡೆದುಕೊಂಡು, “ನನ್ನ ಮಗು ನನಗೆ ಜೋಡಿ ಇಕ್ಕುಳಗಳನ್ನು ಕೊಂಡ್ಕೊಂಡಿದ್ದಾನೆ” ಅಂತ ಹೇಳ್ಕೊಂಡು ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸುತ್ತಾಳೆ. ಮತ್ತೆ ಅವಳು ಈ ಇಕ್ಕುಳಗಳನ್ನು ನೆರೆಹೊರೆಯ ಹೆಂಗಸರಿಗೆ ತೋರಿಸುತ್ತಾಳೆ. ಹಮೀದ್ ತನ್ನ ಅಜ್ಜಿಗೆ ಇಕ್ಕುಳಗಳನ್ನು ತಂದಿದ್ದಾನೆ, ಆತ ಎಷ್ಟು ಒಳ್ಳೆ ಹುಡುಗ ಅಂತ ಇಡೀ ಹಳ್ಳಿ ಹೇಳುತ್ತೆ. ಆದ್ರೆ ಕೇವಲ ತಮಗೆ ಅಂತ ಆಟಿಕೆಗಳನ್ನು ಕೊಂಡ್ಕೊಂಡ ಆ ಹುಡುಗರನ್ನು ಯಾರೂ ಹೊಗಳೊದಿಲ್ಲ.

ಹಿರಿಯರ ಆಶಿರ್ವಾದಗಳನ್ನು ಅಲ್ಲಾಹನ ಆಸ್ಥಾನದಲ್ಲಿ ಮೊದಲು ಕೇಳಲಾಗುತ್ತಂತೆ, ಮತ್ತು ಆ ಕೂಡಲೇ ಫಲವೂ ಸಿಗುತ್ತಂತೆ. ಈಗ ನನ್ ಕೈಲಿ ಹಣ ಇಲ್ಲ ಅಂತ ಮೊಹಸಿನ್ ಮತ್ತು ಮಹಮ್ಮೂದು ನನ್ನನ್ನು ಗೇಲಿ ಮಾಡ್ತಾ ಇದ್ದಾರೆ. ಅವರಿಗೆ ಪಾಠ ಕಲಿಸ್ಬೇಕು. ಅವರು ಎಷ್ಟು ತಿಂಡಿ ಬೇಕಾದ್ರೆ ತಿನ್ಲಿ, ಎಷ್ಟು ಆಟಿಕೆ ಬೇಕಾದ್ರೂ ತೆಗೆದುಕೊಳ್ಳಲಿ. ನಾನು ಮಾತ್ರ ಅವರ ಆಟಿಕೆಗಳ ಜೊತೆಗೆ ಆಟ ಆಡ್ಲಿಕ್ಕಿಲ್ಲ. ಇವರ ಹುಚ್ಚಾಟ ಇನ್ನು ಸಹಿಸೋದೇ ಇಲ್ಲ. ಒಮ್ಮೆ ನನ್ನ ತಂದೆ ವಾಪಾಸು ಬರ್ಲಿ ಹಾಗೆಯೇ ತಾಯಿ ಕೂಡಾ. ಆನಂತರ ಅವರ ಬಳಿ ಕೇಳ್ಬೇಕು, ನಿಮಗೆ ಆಟಿಕೆಗಳು ಬೇಕೇ, ಎಷ್ಟು ಬೇಕು, ಆಗ ಎಲ್ಲರಿಗೂ ಬುಟ್ಟಿ ತುಂಬಾ ಆಟಿಕೆಗಳನ್ನು ಕೊಟ್ಟು ಬಿಡಬೇಕು. ಸ್ನೇಹಿತರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಅವರಿಗೆ ಕಲಿಸಬೇಕು. ನಾನು ಒಂದು ಪೈಸೆ ಲಾಲಿಪಾಪ್ ಕೊಂಡ್ಕೊಂಡು ನೆಕ್ಕುತ್ತಾ ಇತರರನ್ನು ಗೇಲಿ ಮಾಡೋ ಜನ ಅಲ್ಲ ಅಂತ ಗೊತ್ತಾಗ್ಬೇಕು. ಗೊತ್ತು ಈ ಹಮೀದ್ ಇಕ್ಕುಳಗಳನ್ನು ಕೊಂಡ್ಕೊಂಡಿದ್ದಾನೆ ಅಂತ ಅವರೆಲ್ಲರೂ ನಗುತ್ತಾರೆ. ಶೈತಾನನ ಹತ್ತಿರ ಹೋಗಲಿ ನನಗೇನು”.

“ಈ ಇಕ್ಕುಳಗಳಿಗೆ ಎಷ್ಟು” ಹಮೀದ್ ಅಂಗಡಿಯಾತನ ಬಳಿ ಕೇಳಿದ.

ಅಂಗಡಿಯವನು ಅವನ್ನೊಮ್ಮೆ ನೋಡಿದ, ಜೊತೆಯಲ್ಲಿ ದೊಡ್ಡವರು ಯಾರೂ ಇರದುದನ್ನು ಕಂಡು ಹೇಳಿದ , “ಇದು ನಿನಗಾಗಿ ಅಲ್ಲ”.

“ಇದು ಮಾರಾಟಕ್ಕಿಟ್ಟಿರೋದಲ್ವಾ?”

“ಯಾಕಲ್ಲ?, ಇಲ್ಲದಿದ್ದರೆ ಇವನ್ನೆಲ್ಲಾ ಇಲ್ಲಿವರೆಗೆ ಯಾಕೆ ಹೊತ್ತು ತರುತ್ತಿದ್ದೆ?”
“ಹಾಗಾದ್ರೆ ಇದಕ್ಕೆ ಎಷ್ಟು ಬೆಲೆ ಅಂತ ಯಾಕೆ ಹೇಳ್ತಾ ಇಲ್ಲ ನೀನು?”

“ಇದಕ್ಕೆ ಆರು ಪೈಸೆಯಾಗುತ್ತೆ”

ಹಮೀದ್ ನ ಹೃದಯ ಕುಸಿಯಿತು, “ನನಗೆ ನಿಜವಾದ ಬೆಲೆ ಹೇಳು”.

“ಸರಿ ಇದಕ್ಕೆ ಕಡೆಯ ಬೆಲೆ ಐದು ಪೈಸೆಯಾಗುತ್ತೆ, ತಗೊ ಅಥವಾ ಬಿಡು”,

ಹಮೀದ್ ಮನಸ್ಸು ಗಟ್ಟಿ ಮಾಡಿಕೊಂಡು ಹೇಳಿದ, “ನನಗೆ ಮೂರು ಪೈಸೆಗೆ ಇದನ್ನ ಕೊಡ್ತಿಯಾ”, ಅಷ್ಟು ಕೇಳಿದ ಹಮೀದ್ ಈ ಅಂಗಡಿಯವ ಬೈಯ್ಯದಿರಲಿ ಎಂದುಕೊಂಡು ಮುಂದೆ ಸಾಗಿಬಿಟ್ಟ. ಆದರೆ ಅಂಗಡಿಯವ ಬೈಯಲಿಲ್ಲ ಬದಲಿಗೆ ಆತನೇ ಹಮೀದ್ ನನ್ನು ವಾಪಾಸು ಕರೆದು ಆ ಇಕ್ಕುಳಗಳನ್ನು ಅವನಿಗೆ ಕೊಟ್ಟನು. ಹಮೀದ್ ಇಕ್ಕುಳಗಳನ್ನು ಕೋವಿಯಂತೆ ಹೆಮ್ಮೆಯಿಂದ ಹೆಗಲ ಮೇಲೆ ಇರಿಸಿಕೊಂಡ, ನಂತರ ತನ್ನ ಗೆಳೆಯರಿಗೆ ತೋರಿಸೋಣ ಎಂದು ಮುಂದೆ ಹೊರಟನು. ಅವರು ಏನು ಹೇಳುತ್ತಾರೋ ನೋಡೋಣ.

“ಏಯ್ ನಿಂಗೇನು ಹುಚ್ಚಾ? ಆ ಇಕ್ಕುಳಗಳನಿಟ್ಟ್ಕೊಂಡು ಅದೇನು ಮಾಡ್ತಿಯಾ ನೀನು? ಮೊಹಸಿನ್ ನಗುತ್ತಾ ಹೇಳಿದ.
ಹಮೀದ್ ತನ್ನ ಇಕ್ಕುಳಗಳನ್ನು ನೆಲಕ್ಕೆಸೆದು ಹೇಳಿದ, “ಬೇಕಾದ್ರೆ ನಿನ್ನ ಆ ನೀರು ಸಾಗಿಸೋ ಗೊಂಬೆನ ಒಮ್ಮೆ ನೆಲಕ್ಕೆ ಎಸಿ ನೋಡೋಣ, ಅವನ ಮೈ ಮೂಳೆಗಳೆಲ್ಲಾ ಮುರಿದು ಬಿಡ್ತಾವೆ”.

“ಈ ಇಕ್ಕುಳಗಳು ಕೂಡಾ ಆಟಿಕೆಗಳಾ?” ಮಹಮ್ಮೂದು ಕೇಳಿದ.

“ಯಾಕಲ್ಲ”, ಹಮೀದ್ ಉತ್ತರಿಸಿದ, “ಹಿಂಗೆ ಹೆಗಲ ಮೇಲಿಟ್ಕೊಂಡ್ರೆ ಕೋವಿ ತರಾ ಇರುತ್ತೆ ಇದು. ಹಿಂಗೆ ಇಟ್ಕೊಂಡ್ರೆ ಹಾಡು ಹಾಡೋರ ಕೈಯಲ್ಲಿ ಇರುತ್ತಲ್ವ ಹಂಗೆ ಶಬ್ದಾನು ಮಾಡುತ್ತೆ. ಒಂದೇ ಪೆಟ್ಟಿಗೆ ನಿಮ್ಮ ಗೊಂಬೆಗಳನ್ನೆಲ್ಲಾ ಹುಡಿ ಹಾಕ್ಬಿಡುತ್ತೆ. ಆದ್ರೆ ನಿಮ್ ಗೊಂಬೆಗಳಿಗೆ ನನ್ನ ಇಕ್ಕುಳದ ಒಂದು ರೋಮಾನೂ ಅಲ್ಲಾಡ್ಸಕ್ಕಾಗಲ್ಲ ಗೊತ್ತಾ? ನನ್ನ ಇಕ್ಕುಳಗಳೆಂದರೆ ಹುಲಿ ಇದ್ದಂಗೆ”

ಪುಟ್ಟ ಡೊಳ್ಳೊಂದನ್ನು ಕೊಂಡುಕೊಂಡಿದ್ದ ಸಮ್ಮಿ ಹೇಳಿದ, “ಈ ಡೊಳ್ಳಿನ ಬದಲಿಗೆ ನನಗದನ್ನು ಕೊಡ್ತಿಯಾ, ಇದಕ್ಕೆ ಎಂಟು ಪೈಸೆ ಕೊಟ್ಟಿದ್ದೀನಿ”.

ಹಮೀದ್ ಅದರತ್ತ ನೋಡದೇ ಇರುವಂತೆ ನಟಿಸಿದ, “ನನ್ನ ಇಕ್ಕುಳಗಳು ಬಯಸಿದ್ರೆ ನಿನ್ನ ಡೊಳ್ಳನ್ನು ಹರಿದು ಹಾಕುತ್ತವೆ. ಅದಕ್ಕಿರೋದು ಬರೀ ಚರ್ಮದ ಹೊದಿಕೆ, ಬಾರಿಸಿದ್ರೆ ‘ಡುಬ್,ಡುಬ್’ ಅಂತಾ ಬಡ್ಕೋತ್ತಾವೆ, ಒಂದು ಹನಿ ನೀರು ಸಾಕು ಅದರ ಬಾಯಿ ಮುಚ್ಸೋಕೆ, ನನ್ನ ಇಕ್ಕುಳಗಳನ್ನ ನೋಡು ಯಾವ ನೀರಿಗೂ ಬಿರುಗಾಳಿಗೂ ಒಂದಿಂಚೂ ಬಗ್ಗೋದಿಲ್ಲ”.

ಎಲ್ಲರೆದುರಲ್ಲೂ ಇಕ್ಕುಳಗಳೇ ಗೆದ್ದವು. ಈಗ ಯಾರ ಬಳಿಯಲ್ಲೂ ಹಣ ಉಳಿದಿರಲಿಲ್ಲ. ಜಾತ್ರೆಯ ಸ್ಥಳವೂ ದೂರವಾಗಿತ್ತು. ಸಮಯ ಸುಮಾರು ಒಂಬತ್ತು ಗಂಟೆಯಾಗಿತ್ತು. ಸೂರ್ಯ ಪ್ರತಿ ನಿಮಿಷಕ್ಕೂ ಹೆಚ್ಚು ಹೆಚ್ಚು ಸುಡುತ್ತಿದ್ದ. ಎಲ್ಲರೂ ಮನೆ ತಲುಪುವ ತವಕದಲ್ಲಿದ್ದರು. ಈಗ ಅವರು ಅವರ ತಂದೆಯವರಲ್ಲಿ ಮಾತನಾಡಿದರೂ ಇಕ್ಕುಳಗಳು ಸಿಗುವ ಸಾಧ್ಯತೆಗಳು ಕಡಿಮೆ. ಈ ಹಮೀದ್ ದುಷ್ಟ, ಇಕ್ಕುಳಗಳನ್ನು ಕೊಳ್ಳಲೆಂದೇ ತನ್ನ ಪೈಸೆಗಳನ್ನು ಉಳಿಸಿಕೊಂಡಿರಬೇಕು.

ಹುಡುಗರು ಈಗ ಎರಡು ಗುಂಪುಗಳಾಗಿದ್ದರು. ಮೊಹಸಿನ್ , ಮಹಮ್ಮೂದು , ನೂರಿ ಮತ್ತು ಸಮ್ಮಿ ಒಂದು ಗುಂಪಾಗಿದ್ದರೆ, ಹಮೀದ್ ಒಬ್ಬನೇ ಇನ್ನೊಂದು ಗುಂಪಿನಲ್ಲಿದ್ದ.

ಬಿಸಿ ಬಿಸಿ ಚರ್ಚೆಗಳು ಆರಂಭವಾದವು. ಸಮ್ಮಿ ಪಕ್ಷಾಂತರ ಮಾಡಿಕೊಂಡ. ಆದರೆ ಮಹಮ್ಮೂದು, ಮೊಹಸಿನ್ ಮತ್ತು ನೂರಿ, ಹಮೀದ್ ನಿಗಿಂತ ಒಂದೆರಡು ವರುಷಗಳಷ್ಟು ದೊಡ್ಡವರಾದರೂ ಹಮೀದ್ ನನ್ನು ಎದುರಿಸಲಾರದೆ ಹೋದರು. ಒಂದು ಕಡೆ ನೈತಿಕತೆಯಿದ್ದರೆ ಇನ್ನೊಂದು ಕಡೆ ಮಣ್ಣಿನ ಆಟಿಕೆಗಳಿದ್ದವು. ಹಮೀದ್ ನ ಕೈಯಲ್ಲಿ ಸೋಲಿಸಲಾಗದ, ಅಪಾಯಕಾರಿಯಾದ ಕಬ್ಬಿಣದ ಇಕ್ಕುಳ ಈಗ ಉಕ್ಕಿನಂತಾಗಿತ್ತು. ಒಂದು ವೇಳೆ ಹುಲಿಯೊಂದು ಅಚಾನಕ್ಕಾಗಿ ಹಾರಿಬಿಟ್ಟರೆ ಆ ನೀರು ಸಾಗಿಸುವವನ ಸತ್ತೇ ಹೋದಾನು, ಪೋಲಿಸ್ ಪೇದೆ ಮಣ್ಣಿನ ಕೋವಿ ಬಿಸಾಕಿ ಪೇರಿ ಕಿತ್ತಾನು, ವಕೀಲನಂತೂ ತನ್ನ ಕರಿಗವನಿನೊಳಗೆ ಮುಖ ಅವಿತಿಟ್ಟು ಅಜ್ಜಿ ಸತ್ತೋರ ತರಾ ಅತ್ತು ಬಿಟ್ಟಾನು. ಆದರೆ ಈ ಇಕ್ಕುಳಗಳು ಭಾರತದ ಚಾಂಪಿಯನನಂತೆ ಆ ಹುಲಿಯ ಮೇಲೆ ಹಾರಿ ಗೋಣು ಮುರಿದು ಕಣ್ಣುಗಳಿಗೆ ಚುಚ್ಚಿ ಬಿಟ್ಟಾವು.

ಮೊಹಸಿನ್ ತನ್ನ ಎಲ್ಲಾ ಉಪಾಯಗಳನ್ನು ಒಗ್ಗೂಡಿಸಿ ಹೇಳಿದ, “ಆದ್ರೆ ಅವು ನೀರು ಹೊತ್ಕೊಂಡು ಬರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವಾ?”

ಹಮೀದ್ ತನ್ನ ಇಕ್ಕುಳಗಳನ್ನು ಕೈಯಲ್ಲೆತ್ತಿ ಹೇಳಿದ, “ಈ ಇಕ್ಕುಳ ಒಂದು ಆದೇಶ ಮಾಡಿದರೆ ಸಾಕು, ನಿನ್ನ ನೀರು ಸಾಗಿಸೋ ಗೊಂಬೆ ಓಡಿ ಹೋಗಿ ನೀರು ಹೊತ್ಕೊಂಡು ಬಂದು ಮನೆ ಬಾಗಿಲಿಗೆಲ್ಲಾ ನೀರು ಚಿಮುಕಿಸ್ತಾನೆ ಗೊತ್ತಾ.”

ಮೊಹಸಿನ್ ನ ಬಳಿ ಉತ್ತರವಿರಲಿಲ್ಲ. ಆಗ ಮಹಮ್ಮೂದು ಅವನ ರಕ್ಷಣೆಗೆ ಬಂದ, “ನಾವೇನಾದ್ರು ಸಿಕ್ಕಿ ಬಿದ್ರೆ, ನಮ್ಮನ್ನು ಕೋಳ ಹಾಕಿ ಕೋರ್ಟಿಗೆ ಕುಣಿಸ್ತಾರೆ, ಆಗ ನಾವೆಲ್ಲಾ ವಕೀಲನ ಕಾಲಿಗೆ ಬೀಳ್ಬೇಕಲ್ವಾ?”

ಈ ಬಲವಾದ ವಾದಕ್ಕೆ ಹಮೀದ್ ನ ಬಳಿ ಉತ್ತರವಿರಲಿಲ್ಲ. “ಆದ್ರೆ ನಮ್ಮನ್ನು ಯಾರು ಬಂಧಿಸೋರು?”

ನೂರಿ ಎದೆಯುಬ್ಬಿಸಿಕೊಂಡು ಹೇಳಿದ, “ಈ ಪೋಲಿಸು ಮತ್ತು ಅವನ ಕೋವಿ.”

ಹಮೀದ್ ಮಖದಲ್ಲಿ ವ್ಯಂಗ್ಯ ತುಂಬಿಕೊಂಡು ಹೇಳಿದ, “ಏನು ಈ ಪೋಲಿಸು ಭಾರತದ ಚಾಂಪಿಯನ್ ನನ್ನು ಬಂಧಿಸುವುದೇ !, ಸರಿ ಹಾಗಾದ್ರೆ ಒಂದು ಕುಸ್ತಿ ಪಂದ್ಯ ಇಡೋಣ, ಈ ಪೋಲಿಸು ಇಕ್ಕುಳಗಳನ್ನು ಹಿಡಿಯೋದಿರ್ಲಿ, ಕಣ್ಣುಗಳಿಂದ ನೋಡೋಕು ಹೆದರಿಬಿಟ್ಟಾನು.”

ಮೊಹಸಿನ್ ಇನ್ನೊಂದು ಉಪಾಯದ ಬಗ್ಗೆ ಯೋಚಿಸಿದ, “ನಿನ್ನ ಇಕ್ಕುಳಗಳ ಮೂತಿ ದಿನಾಲು ಸುಡುತ್ತೆ”, ಇದು ಹಮೀದ್ ನ ಬಾಯಿ ಮುಚ್ಚ್ಸುತ್ತೆ ಎಂದು ಕೊಂಡಿದ್ದ. ಆದರೆ ಹಮೀದ್ ಕೂಡಲೇ ತಯಾರಾಗಿದ್ದ, “ಏ ಈ ಇಕ್ಕುಳಗಳು ಬೆಂಕಿಗೆ ಹಾರೋ ಚಾಂಪಿಯನ್ ಕಣ್ರೋ, ನಿಮ್ಮ ಈ ದರಿದ್ರ ವಕೀಲ್ರು, ಪೋಲಿಸ್ರು, ನೀರು ಸಾಗಿಸೋರು ಎಲ್ಲಾ ಹೆಂಗಸ್ರ ತರಾ ಮನೆಯೊಳಗೆ ಓಡಿಬಿಡ್ತಾರೆ, ಕೇವಲ ಈ ಭಾರತದ ಚಾಂಪಿಯನ್ ಮಾತ್ರ ಬೆಂಕಿ ಒಳಗೆ ಹಾರೋ ಆಟ ಆಡ್ತಾನೆ ಗೊತ್ತಾ.”

ಮಹಮ್ಮೂದು ಇನ್ನೊಂದು ಪ್ರಯತ್ನ ಮಾಡಿದ, “ವಕೀಲನಿಗೆ ಕೂರೋಕೆ ಕುರ್ಚಿ, ಮತ್ತು ಎಲ್ಲಾ ವಸ್ತುಗಳನ್ನು ಇಡೋಕೆ ಮೇಜು ಎಲ್ಲಾ ಇರುತ್ತೆ, ನಿನ್ನ ಇಕ್ಕುಳಗಳು ಮಾತ್ರ ಅಡುಗೆ ಮನೇಲಿ ತೆಪ್ಪಗೆ ಬಿದ್ಕೊಂಡಿರುತ್ತೆ ಅಲ್ವಾ.”

ಹಮೀದ್ ನಿಗೆ ಇದಕ್ಕೆ ಸರಿಯಾದ ಉತ್ತರ ಹೊಳೆಯಲಿಲ್ಲ, ಕೊನೆಗೆ ಮನಸ್ಸಿಗೆ ತೋಚಿದ್ದು ಹೇಳಿ ಬಿಟ್ಟ, “ಇಕ್ಕುಳಗಳು ಅಡುಗೆ ಮನೇಲಿ ಕೂರೊಲ್ಲ, ನಿನ್ ವಕೀಲ ಕುರ್ಚಿ ಮೇಲೆ ಕೂತರೆ ಈ ಇಕ್ಕುಳ ಅವನನ್ನ ಜಾಡ್ಸಿ ನೆಲಕ್ಕೆ ದೂಡಿ ಹಾಕುತ್ತೆ ಗೊತ್ತಾ.”

ಇದರಲ್ಲಿ ತಲೆಬುಡ ಇಲ್ಲದಿದ್ದರೂ ಆ ಎದುರಾಳಿ ನಾಯಕರಂತೂ ಸಂಪೂರ್ಣವಾಗಿ ಅಪ್ಪಚ್ಚಿಯಾದರು. ಹಮೀದ್ ಪಂದ್ಯ ಗೆದ್ದು ಬಿಟ್ಟ, ಇಕ್ಕುಳಗಳು ಭಾರತದ ಚಾಂಪಿಯನ್ ಆಗಿದ್ದವು. ಮೊಹಸಿನ್, ಮಹಮ್ಮೂದು, ನೂರಿ, ಸಮ್ಮಿ ಯಾರಿಗೂ ಈ ಸತ್ಯವನ್ನು ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ.

ಗೆದ್ದವನಿಗೆ ನೀಡಲಾಗುವ ಗೌರವವನ್ನು ಹಮೀದ್ ನಿಗೆ ನೀಡಲಾಯಿತು. ಉಳಿದವರು ಒಬ್ಬೊಬ್ಬರೂ ಹನ್ನೆರಡರಿಂದ ಹದಿನಾರು ಪೈಸೆಗಳನ್ನು ಖರ್ಚು ಮಾಡಿದ್ದರೂ ಹೇಳಿಕೊಳ್ಳುವಂತದ್ದೇನನ್ನೂ ಖರೀದಿಸಿರಲಿಲ್ಲ. ಆದರೆ ಹಮೀದ್ ನ ಮೂರು ಪೈಸೆ ಬೆಲೆಬಾಳುವಂತಹುದು ಅಂದಿನ ದಿನವನ್ನು ಗೆದ್ದಿತ್ತು. ಆಟಿಕೆಗಳು ನಂಬಲರ್ಹವಲ್ಲವೆಂದು ಅವರ್ಯಾರಿಗೂ ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ, ಅವುಗಳು ಪುಡಿಯಾದಾವು. ಆದರೆ ಹಮೀದ್ ನ ಇಕ್ಕುಳಗಳು ವರ್ಷಗಳವರೆಗೆ ಬಾಳಿಕೆ ಬರುವಂತಹುದಾಗಿತ್ತು.

ಹುಡುಗರು ಶಾಂತಿ ಒಪ್ಪಂದಕ್ಕೆ ತಯಾರಾದರು. ಮೊಹಸಿನ್ ಹೇಳಿದ,” ನಿನ್ನ ಇಕ್ಕುಳಗಳನ್ನು ಸ್ವಲ್ಪ ಇಲ್ಲಿ ಕೊಡು, ಈ ನೀರು ಸಾಗಿಸೋ ಗೊಂಬೆ ತಗೋ”

ಹಾಗೆಯೇ ಮಹಮ್ಮೂದು ಮತ್ತು ನೂರಿ ಕೂಡಾ ತಮ್ಮ ತಮ್ಮ ಆಟಿಕೆಗಳನ್ನು ನೀಡಲು ಬಂದರು. ಹಮೀದ್ ನಿಗೆ ಈ ಒಪ್ಪಂದಗಳಿಗೆ ಒಪ್ಪಿಕೊಳ್ಳಲು ಯಾವ ಭಯವೂ ಇರಲಿಲ್ಲ. ಹಾಗೆಯೇ ಇಕ್ಕುಳಗಳು ಎಲ್ಲರ ಕೈಯಲ್ಲಿಯೂ ಹರಿದಾಡಿದವು. ಹಾಗೆಯೇ ಅವರ ಆಟಿಕೆಗಳು ಹಮೀದ್ ನ ಕೈಗಳಿಗೆ ಬಂದವು. ಅಬ್ಬಾ, ಎಷ್ಟೊಂದು ಸುಂದರವಾಗಿದ್ದವು ಆ ಆಟಿಕೆಗಳು!

ಹಮೀದ್ ಆ ಸೋತು ಹೋಗಿದ್ದ ವಿರೋಧಿಗಳ ಕಣ್ಣೀರೊರೆಸಲು ಪ್ರಯತ್ನಿಸಿದ. “ನಾನು ಸುಮ್ನೆ ತಮಾಷೆ ಮಾಡುತ್ತಿದ್ದೆ. ನಿಜವಾಗಿಯೂ, ಈ ಕಬ್ಬಿಣದ ಇಕ್ಕುಳಗಳೆಲ್ಲಿ, ನಿಮ್ಮ ಸುಂದರವಾದ ಆಟಿಕೆಗಳೆಲ್ಲಿ? ಆದರೆ ಅದು ಅವರಿಗೆ ಅನಿಸಲೇ ಇಲ್ಲ. ಇಕ್ಕುಳಗಳು ಗೆದ್ದಿದ್ದವು. ಮೊಹಸಿನ್ ಹೇಳಿದ, “ಈ ಆಟಿಕೆಗಳನ್ನು ಯಾರೂ ಹೊಗಳಲಾರರು. ನಮ್ಮನ್ನು ಯಾರೂ ಆಶಿರ್ವದಿಸಲಾರರು”.

“ನೀನು ಆಶಿರ್ವಾದದ ಬಗ್ಗೆ ಮಾತಾಡ್ತಿದ್ದೀಯಾ, ನಮ್ಗೆ ಬರೀ ಬೈಗುಳ ಸಿಗುತ್ತೆ ನೋಡು, ನನ್ನ ಅಮ್ಮನಂತೂ, ನಿಂಗೆ ಬರೀ ಮಣ್ಣಿನ ಆಟಿಕೆಗಳೇ ಸಿಗೋದು ಅಂತ ಬೈಯೋದು ಖಂಡಿತಾ”.

ತನ್ನ ಅಜ್ಜಿ ಈ ಇಕ್ಕುಳಗಳನ್ನು ನೋಡಿ ಸಂತೋಷ ಪಡುವಷ್ಟು ಯಾವ ತಾಯಿಯೂ ಆ ಆಟಿಕೆಗಳನ್ನು ನೋಡಿ ಸಂತೋಷ ಪಡಲಾರಳು ಎಂಬ ಸತ್ಯವನ್ನು ಹಮೀದ್ ಒಪ್ಪಲೇಬೇಕಾಯಿತು. ಅವನ ಬಳಿ ಇದ್ದುದೇ ಮೂರು ಪೈಸೆಗಳು. ಆದುದರಿಂದ ಆತ ಅದನ್ನು ಹೇಗೆ ಖರ್ಚು ಮಾಡಿದೆ ಎಂದು ದುಃಖ ಪಡುವುದರಲ್ಲಿ ಅರ್ಥವೇ ಇರಲಿಲ್ಲ. ಮತ್ತು ಈಗ ಅವನ ಇಕ್ಕುಳಗಳು ಭಾರತದ ಚಾಂಪಿಯನ್ನರಾಗಿದ್ದವು ಮತ್ತು ಎಲ್ಲಾ ಆಟಿಕೆಗಳ ರಾಜರಾಗಿದ್ದವು.

ಸುಮಾರು ಹನ್ನೊಂದು ಗಂಟೆಗೆ ಹಳ್ಳಿಯಲ್ಲಿ ಪುನಃ ಉತ್ಸಾಹ ಬುಗಿಲೆದ್ದಿತು. ಜಾತ್ರೆಗೆ ಹೋಗಿದ್ದ ಎಲ್ಲರೂ ತಮ್ಮ ತಮ್ಮ ಮನೆಗೆ ವಾಪಾಸ್ಸಾಗಿದ್ದರು. ಮೊಹಸಿನ್ ನ ಪುಟ್ಟ ತಂಗಿ ಅವನ ಕೈಯಿಂದ ನೀರು ಸಾಗಿಸೋ ಗೊಂಬೆಯನ್ನು ಕಿತ್ತುಕೊಂಡು ನಲಿದಾಡತೊಡಗಿದಳು. ಆ ಗೊಂಬೆ ಅವಳ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸ್ವರ್ಗವಾಸಿಯಾಯಿತು. ಇಬ್ಬರೂ ಜಗಳವಾಡ ತೊಡಗಿದರು ಮತ್ತು ಅಳತೊಡಗಿದರು. ಆ ಗಲಾಟೆಗೆ ಹೈರಾಣದ ಮೊಹಸಿನ್ ನ ತಾಯಿ ಇಬ್ಬರಿಗೂ ಎರಡೇಟು ಬಿಗಿದಳು.

ನೂರಿಯ ವಕೀಲ ಅವನ ಅಂತಸ್ತಿಗೆ ತಕ್ಕುದಾದ ಅಂತ್ಯವನ್ನೇ ಕಂಡನು. ವಕೀಲ ನೆಲದಲ್ಲಿ ಕೂರಲು ಸಾಧ್ಯವೇ? ಅವನ ಅಂತಸ್ತಿಗೆ ಗಮನ ಕೊಡ ಬೇಕಲ್ಲವೇ? ಹಾಗೆಯೇ ಎರಡು ಮೊಳೆಗಳನ್ನು ಗೋಡೆಗೆ ಹೊಡೆಯಲಾಯಿತು. ಅದರ ಮೇಲೆ ಒಂದು ಹಲಗೆಯನ್ನಿಟ್ಟು, ಕಾಗದದ ಜಮಖಾನೆ ಹಾಸಿದ ನಂತರ ಆ ವಕೀಲ ಅದರ ಮೇಲೆ ರಾಜನಂತೆ ವಿರಾಜಮಾನನಾದ. ನೂರಿ ಪಕ್ಕದಲ್ಲಿ ನಿಂತುಕೊಂಡು ಬೀಸಣಿಕೆಯಲ್ಲಿ ಗಾಳಿ ಬೀಸ ತೊಡಗಿದ. ಕೋರ್ಟುಗಳಲ್ಲಿ ಬೀಸು ಬಟ್ಟೆಗಳೂ , ವಿದ್ಯುತ್ತಿನ ಪಂಖಗಳೂ ಇರುವುದೆಂದು ಅವನಿಗೆ ಗೊತ್ತಿತ್ತು. ಕಡೇ ಪಕ್ಷ ಆತ ಬೀಸಣಿಕೆಯಲ್ಲಾದರೂ ಗಾಳಿ ಬೀಸೋಣ ವೆಂದುಕೊಂಡ. ಇಲ್ಲದಿದ್ದರೆ ಬಿಸಿಯಾದ ವಾದ ವಿವಾದಗಳಿಂದ ವಕೀಲನ ಮಿದುಳಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿತ್ತು.

ನೂರಿ ಬಿದಿರಿನ ಎಲೆಗಳಿಂದ ಮಾಡಿದ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದ. ಗಾಳಿ ತಾಗಿತೋ ಅಥವಾ ಬೀಸಣಿಕೆಯೋ ಒಟ್ಟಾರೆ ಪೀಠಾಸೀನನಾಗಿದ್ದ ವಕೀಲ ನೆಲದ ಮೇಲೆ ಬಿದ್ದು ಬಿಟ್ಟಿದ್ದ. ಕರಿಗವನು ಮಣ್ಣಿನಲ್ಲಿ ಸೇರಿ ಹೋಗಿತ್ತು. ನೂರಿ ಎದೆ ಬಡಿದುಕೊಳ್ಳುತ್ತಿದ್ದ. ವಕೀಲನ ಗೊಂಬೆ ಈಗ ಮಣ್ಣಿನ ರಾಶಿಯಾಗಿತ್ತು.

ಮಹಮ್ಮೂದ್ ನ ಪೋಲಿಸಪ್ಪ ಇನ್ನೂ ಇದ್ದ. ಅವನನ್ನು ಕೂಡಲೇ ಹಳ್ಳಿಯನ್ನು ಕಾಯುವ ಕರ್ತವ್ಯದಲ್ಲಿ ನಿಯೋಜಿಸಲಾಯಿತು. ಆದರೆ ಸಾಮಾನ್ಯರಂತೆ ನಡೆದು ಹೋಗಲು ಅವನೇನು ಜೀವ ಇರುವ ಮನುಷ್ಯನೇ? ಆದಕಾರಣ ಅವನಿಗೆ ಪಲ್ಲಕ್ಕಿ ಒದಗಿಸಲಾಯಿತು. ಅದನ್ನು ಕೆಂಪು ಬಣ್ಣದ ಚಿಂದಿ ಬಟ್ಟೆಗಳಿಂದ ಮಾಡಲಾಗಿತ್ತು. ಅದರಲ್ಲಿ ಪೋಲಿಸಪ್ಪ ಒರಗಿಕೊಂಡ. ಮಹಮ್ಮೂದು ಆ ಪಲ್ಲಕ್ಕಿ ಬುಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಹಳ್ಳಿ ಸುತ್ತಲು ತಯಾರಾದ. ಅವನ ಇಬ್ಬರು ಪುಟ್ಟ ತಮ್ಮಂದಿರು ಕೂಡಾ ಜೋರಾಗಿ ಗದ್ದಲ ಮಾಡುತ್ತಾ ಅವನನ್ನು ಹಿಂಬಾಲಿಸಿದರು. ಇನ್ನೂ ಕತ್ತಲಾಗಿರಲಿಲ್ಲ, ಆದರೂ “ಅಂಗಡಿಯವರೇ ಎಚ್ಚರ!, ಎಂದು ಕೂಗಿದರು ಅಷ್ಟೆ, ಮಹಮ್ಮೂದು ಕಾಲು ಎಡವಿ ಬುಟ್ಟಿಯನ್ನು ಬೀಳಿಸಿದ್ದ. ಹೊರಗೆ ದುಮುಕಿದ ಪೋಲಿಸಪ್ಪನ ಒಂದು ಕಾಲು ಮುರಿದಿತ್ತು.

ಮಹಮ್ಮೂದ್ ನಿಗೆ ಅಲ್ಪಸ್ವಲ್ಪ ವೈದ್ಯಕೀಯವೂ ತಿಳಿದಿತ್ತು. ಆತ ಪೋಲಿಸಪ್ಪನ ಕಾಲನ್ನು ಜೋಡಿಸಲು ಯತ್ನಿಸಿದ. ಅದಕ್ಕೆ ಆಲದ ಮರದ ಚಿಗುರುಗಳ ಹಾಲು ಬೇಕಾಗಿತ್ತು. ಅದನ್ನು ಕೂಡಾ ಒದಗಿಸಿ ಮುರಿದ ಕಾಲನ್ನು ಜೋಡಿಸಲಾಯಿತು.

ಆದರೆ ಪೋಲಿಸಪ್ಪನನ್ನು ನಿಲ್ಲಿಸಿದ ಕೂಡಲೇ ಕಾಲುಗಳು ಪುನಃ ಕಳಚಿದವು. ಒಂದು ಕಾಲಿನಿಂದಾಗಿ ನಿಲ್ಲಲೂ , ಕೂರಲೂ ಆಗದಂತಾಯಿತು. ಕೊನೆಗೆ ಮಹಮ್ಮೂದು ಓರ್ವ ಸರ್ಜನ್ ಆಗಿಯೇ ಬಿಟ್ಟ. ಇನ್ನೊಂದು ಕಾಲನ್ನು ಕೂಡಾ ತುಂಡು ಮಾಡಿ ತುಂಡಾಗಿದ್ದ ಕಾಲಿನ ಸೈಜಿಗೆ ಇಳಿಸಿದ. ಈಗ ಪೋಲಿಸಪ್ಪನಿಗೆ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಯಿತು.

ಆ ಪೋಲಿಸಪ್ಪನನ್ನು ಒಂದು ಸಾಧುವಿನಂತೆ ಒಂದು ಮೂಲೆಯಲ್ಲಿ ಕುಳ್ಳಿರಿಸಲಾಯಿತು. ಅವನು ಕುಳಿತುಕೊಂಡೇ ಆ ಹಳ್ಳಿಯನ್ನು ಕಾಯ ಬೇಕಾಯಿತು. ಕೆಲವೊಂದು ಸಲ ಅವನನ್ನೇ ದೇವರ ತರಹವೂ ಪೂಜಿಸಲಾಯಿತು. ಆಗ ಅವನ ತಲೆಗೆ ಕೆಂಪು ಮುಂಡಾಸು ಸುತ್ತಲಾಗುತಿತ್ತು. ಹೀಗೆ ಬೇಕಾದ ಹಾಗೆ ಅವನ ರೂಪ ಬದಲಾಯಿಸಬಹುದಿತ್ತು. ಕೆಲವೊಮ್ಮೆ ಬರೀ ಸಾಮಾನುಗಳನ್ನು ತೂಕ ಮಾಡಲು ತಕ್ಕಡಿಯ ಕಲ್ಲುಗಳಂತೆಯೂ ಉಪಯೋಗಿಸಲಾಯ್ತು.

ಇತ್ತ ಹಮೀದ್ ನ ಸ್ವರ ಕೇಳಿ ಅಜ್ಜಿ ಅಮೀನಾ ಗುಡಿಸಲಿನಿಂದ ಹೊರಗೆ ಓಡಿ ಬಂದಳು. ಅವನನ್ನು ಹಿಡಿದು ಮುತ್ತು ಕೊಟ್ಟಳು. ಒಮ್ಮೆಲೆ ಹಮೀದ್ ನ ಕೈಯಲ್ಲಿದ್ದ ಇಕ್ಕುಳ ಕಣ್ಣಿಗೆ ಬಿದ್ದಿತು. “ಇದೆಲ್ಲಿ ಸಿಕ್ಕಿತು ನಿನಗೆ ಮಗೂ .”

“ನಾನಿದನ್ನು ಕೊಂಡ್ಕೊಂಡೆ.”

“ಎಷ್ಟು ಕೊಟ್ಟೆ ಮಗೂ ಇದಕ್ಕೆ?”

“ಮೂರು ಪೈಸೆ.”

“ಅಯ್ಯಯ್ಯೋ”, ಅಮೀನಾ ಎದೆ ಬಡಿದುಕೊಂಡಳು, “ಮಧ್ಯಾಹ್ನವಾದರೂ ಈ ಮಗು ಏನೂ ತಿಂದಿಲ್ಲ ಕುಡಿದಿಲ್ಲ, ಈ ಕಬ್ಬಿಣದ ಇಕ್ಕುಳ ಹಿಡ್ಕೊಂಡು ಬಂದಿದಾನಲ್ಲಪ್ಪ, ಎಂತಹಾ ಪೆದ್ದು ಮಗೂ ಇವನೂ ..”

“ನೀನು ಯಾವಾಗ್ಲೂ ಕಾವಲಿ ಮೇಲೆ ಕೈ ಸುಟ್ಟ್ಕೋತೀಯಾ, ಅದಿಕ್ಕೆ ಈ ಇಕ್ಕುಳಗಳನ್ನು ಕೊಂಡ್ಕೊಂಡೆ”, ಹಮೀದ್ ಬೇಸರದ ಸ್ವರದಲ್ಲಿ ಹೇಳಿದ.

ಆ ಮುದುಕಿಯ ಕೋಪ ಸರ್ರನೆ ಪ್ರೀತಿಯಾಗಿ ಬದಲಾಯಿತು. ಶಬ್ದಗಳಲ್ಲಿ ಕೊಚ್ಚಿಹೋಗುವ ಅಂತಿಂಥಾ ಪ್ರೀತಿಯಲ್ಲ, ಮೌನವಾದ, ಗಟ್ಟಿಯಾದ, ಮೆದುವಾದ ಅಂತಃಕರಣವುಳ್ಳ ಮಮತೆ, ಎಂತಹಾ ನಿಸ್ವಾರ್ಥಿ ಮಗು! ಪರರ ಬಗೆಗೆ ಇಷ್ಟು ಕಾಳಜಿ! ಎಷ್ಟು ದೊಡ್ಡ ಮನಸ್ಸು ಈತನದು! ಇತರ ಮಕ್ಕಳು ಸಿಹಿತಿಂಡಿಗಳಿಗೆ ಮುಗಿಬಿದ್ದು ತಿನ್ನುವಾಗ ಈತ ಅದೆಷ್ಟು ನೊಂದಿರಬಹುದು! ಹೇಗೆ ತನ್ನ ಆಸೆಗಳನ್ನು ಹತ್ತಿಕ್ಕಿ ಕೊಂಡ! ಆ ಜಾತ್ರೆಯಲ್ಲಿಯೂ ತನ್ನ ಅಜ್ಜಿಯ ಬಗ್ಗೆ ಯೋಚಿಸಿದನಲ್ಲ!, ಅಮೀನಾಳ ಹೃದಯ ಮಾತುಗಳಿಂದ ತುಂಬಿಹೋಗಿತ್ತು.

ಹಮೀದ್ ದೊಡ್ಡ ವ್ಯಕ್ತಿಯಾಗಿದ್ದ, ಅಮೀನಾ ಅಜ್ಜಿ ಪುಟ್ಟ ಹುಡುಗಿಯಾಗಿದ್ದಳು. ಆಕೆ ಬಿಕ್ಕಿ ಬಿಕ್ಕಿ ಅತ್ತಳು. ಈ ಮಗುವನ್ನು ಹರಸು ತಂದೆ ಎಂದು ಅಲ್ಲಾಹನಲ್ಲಿ ಸೆರಗೊಡ್ಡಿ ಬೇಡಿದಳು. ದೊಡ್ಡ ದೊಡ್ಡ ಕಣ್ಣೀರ ಹನಿಗಳು ಆಕೆಯ ಕಣ್ಣುಗಳಿಂದ ಉರುಳುತ್ತಿದ್ದವು. ಅವಳೊಳಗೆ ಏನಾಗುತ್ತಿದೆಯೆಂದು ಪಾಪ ಹಮೀದ್ ನಿಗೆ ಹೇಗೆ ತಿಳಿಯಬೇಕು?.

ಉರ್ದು ಮೂಲ : ಮುನ್ಶಿ ಪ್ರೇಮ್ ಚಂದ್
ಕನ್ನಡಕ್ಕೆ : ಪುನೀತ್ ಅಪ್ಪು

ಮಿನಾರಗಳು: ನಾಗರಿಕತೆಯ ಕುರುಹುಗಳು

ಮಿನಾರಗಳು ಮಸೀದಿಗಳ ಉಪಸ್ಥಿತಿಯನ್ನು ಉತ್ತಮವಾಗಿ ಸೂಚಿಸುವ ವಾಸ್ತುಶಿಲ್ಪ ಕಲೆಯಾಗಿದೆ. ಶತಮಾನಗಳಿಂದ ಮಸೀದಿಗಳು ಸಾಮಾಜಿಕ ಕೇಂದ್ರ, ಆರಾಧನಾ ಸ್ಥಳ, ಬೋಧನೆಯ ಕೇಂದ್ರ, ನ್ಯಾಯಾಲಯ, ಹಣಕಾಸು ವಹಿವಾಟಿನ ಸ್ಥಳ, ಆಡಳಿತಾತ್ಮಕ ಕೇಂದ್ರಗಳಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ. ಮಿನಾರಗಳ ಆಕೃತಿ ಮತ್ತು ಅದರ ಕಾರ್ಯಗಳು ಅದರ ಹಿಂದೆ ಅಡಗಿರುವ ತತ್ವಶಾಸ್ತ್ರದ ಅನ್ವೇಷಣೆಗೆ ಸ್ಪೂರ್ತಿಯಾಗಿವೆ.

ಸಾಂಪ್ರದಾಯಿಕವಾಗಿ ಪಾಶ್ಚಾತ್ಯ ಸಂಸ್ಕೃತಿಯು ಇಸ್ಲಾಮಿನ ಭೌತಿಕ ಮತ್ತು ವಾಸ್ತವಿಕ ಮೌಲ್ಯಗಳನ್ನು ಅಮೂರ್ತ ಭಾಷೆಯ ಮೂಲಕ ಅರ್ಥೈಸುವಲ್ಲಿ ಎಡವಿದೆ. ಆದ್ದರಿಂದ ಮಾನವತಾವಾದಿಗಳು ಮತ್ತು ಇಸ್ಲಾಮನ್ನು ತಿಳಿದವರ ದೃಷ್ಟಿಕೋನದಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚುವೆನು. ಸೆಮಿಯೋಟಿಕ್ಸ್ (ಸಂಕೇತ ಶಾಸ್ತ್ರ) ನ ಅಧ್ಯಯನವು ಅಸ್ಪಷ್ಟ ಮತ್ತು ಸಂಕೀರ್ಣವಾಗಿದೆ. ಸಂಕೇತಗಳ ಗುಣಲಕ್ಷಣಗಳು ಅಸ್ಥಿರ. ವೀಕ್ಷಕರ ಭಾವನೆಗಳು ಮತ್ತು ವರ್ತನೆಗಳಿಗೆ ಅನುಗುಣವಾಗಿ ಅವುಗಳಿಗೆ ಬದಲಾವಣೆ ಸಂಭವಿಸಬಹುದು.

Babel Tower

ಏನೇ ಆದರೂ, ನಮ್ಮ ದೈನಂದಿನ ಜೀವನ ಸಂಕೇತಗಳಿಂದ ಕೂಡಿದೆ. ಸಂಕೇತಗಳು ನಮ್ಮ ಚಿಂತನೆ, ಜೀವನ ವಿಧಾನಗಳು ಸೇರಿರುವ ಒಂದು ಅಮೂರ್ತ ರಚನೆಯಾಗಿರಯವುದರಿಂದ ಅವುಗಳ ಅಧ್ಯಯನ ಅನಿವಾರ್ಯ. ಬಾನೆತ್ತರಕ್ಕೆ ಬೆಳೆದು ನಿಂತಿರುವ ಗೋಪುರಗಳು ಮತ್ತು ಅರಮನೆಗಳು ಅಧಿಕಾರ ಮತ್ತು ಅಧಿಪತ್ಯದ ಸಂಕೇತಗಳಾಗಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಮಾನವಕುಲದ ಸಾಮೂಹಿಕ ಸುಪ್ತಾವಸ್ಥೆಯಲ್ಲಿ (collective unconscious), ಸಮಯದ ಆರಂಭದಿಂದಲೂ ಔನ್ನತ್ಯ ಮತ್ತು ಶ್ರೇಷ್ಠತೆಯ ಮಾಪಕಗಳಾಗಿ ದಿವ್ಯತ್ವ, ಮೇಧಾವಿತ್ವ, ಅಧಿಕಾರ ಗಳನ್ನು ಪರಿಗಣಿಸಲಾಗಿದೆ. ಪಟ್ಟಣಗಳು, ಬಂದರುಗಳು, ದೇಶಗಳು ಮತ್ತು ನಾಗರಿಕತೆಗಳು ಅವುಗಳ ಗೋಪುರಗಳನ್ನು ಅಭಿಮಾನದಿಂದಲೇ ಪ್ರದರ್ಶಿಸುತ್ತವೆ. ಅವುಗಳ ಮೂಲಕ ಇತಿಹಾಸದ ಅಧ್ಯಯನ ನಮಗೆ ಸಾಧ್ಯ. ಬಾಬೆಲ್ (Babel) ಭಾಷೆಗಳ ಗೊಂದಲಗಳ ಸಂಕೇತವಾದರೆ, ಮೆಸೊಪಟ್ಯಾಮಿಯಾದ ಝಿಗಾರೆಟ್ ಗೋಪುರ ಜ್ಞಾನದ ಪ್ರತೀಕ. ಇಟಾಲಿಯನ್ ನಗರಗಳು ನಗರಗಳ ನಡುವಿನ ವೈರತ್ವದ ಪ್ರತೀಕಗಳು, ಐಫೆಲ್ ಟವರ್ ಮತ್ತು ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡಗಳು ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇವು ಮನುಕುಲದ ಅತೀವ ಶ್ರದ್ಧೆಯ ಸ್ಮರಣೆಯನ್ನು ನೀಡುತ್ತವೆ. ಇಸ್ಲಾಮಿನ ನಾಗರಿಕತೆಗೆ ಸಂಬಂಧಿಸಿದಂತೆ, ಮಿನಾರಗಳು ಇಸ್ಲಾಮಿನ ಇರುವಿಕೆಯನ್ನು ಸಮಗ್ರವಾಗಿ, ಪರಿಣಾಮಕಾರಿಯಾಗಿ ಸೂಚಿಸುವ ಆಕಾರಗಳಾಗಿವೆ.

ಮಿನಾರಗಳ ವಿಷಯದಲ್ಲಿ ನಾವು ಎದುರಿಸುವ ಮುಖ್ಯ ಸಮಸ್ಯೆ ಎಂದರೆ, ಪ್ರವಾದಿಯವರು ಜೀವಿಸಿದ್ದ ಮದೀನಾದಲ್ಲಿ ವಿಶ್ವಾಸಿಗಳನ್ನು ನಮಾಝ್ ಗೆ ಎತ್ತರದ ಗೋಡೆಗಳ ಮೇಲೆ ನಿಂತು ಆಹ್ವಾನಿಸಲಾಗುತ್ತಿದ್ದಂತೆ (ಮೂಲತಃ ಬೀದಿಗಳಲ್ಲಿ ನಿಂತು ಕರೆಯಲಾಗುತ್ತಿತ್ತು), ಹೇಗೆ ಮತ್ತು ಯಾವಾಗ ಅವುಗಳಿಗೆ ಗೋಪುರದ ರೂಪ ಬಂತು? ಎಂಬುದಾಗಿದೆ. ಇಸ್ಲಾಮಿನ ಹುಟ್ಟು, ಬೆಳವಣಿಗೆ, ವಿಕಾಸ ಒಂದು ಉಮ್ಮತ್ (ಸಮುದಾಯ) ನೊಂದಿಗೆ ಆಗಿದೆ.  ಅಗತ್ಯ ಬಂದಾಗ ಸಮುದಾಯಕ್ಕೆ ಸೇವೆ ಸಲ್ಲಿಸುವ ಒಂದು ವರ್ತನೆ ಇಸ್ಲಾಮಿನ ವೈಶಿಷ್ಟ್ಯಗಳಲ್ಲೊಂದಾಗಿದೆ. ‘ನೀವು ಎಲ್ಲೇ ಇರಿ, ಪ್ರಾರ್ಥನೆಯ ಸಮಯವಾದರೆ ನಿಮಗೆ ಪ್ರಾರ್ಥಿಸಲು ಸೂಕ್ತ ಸ್ಥಳ ಮಸೀದಿಯಾಗಿದೆ ಎಂಬುದು ಸಂಪ್ರದಾಯ. ಮಸೀದಿಗೆ ಅದರ ರೂಪ ಮತ್ತು ಶೈಲಿ ಇಲ್ಲದಿದ್ದರೂ, ಸಮುದಾಯದ ಅಗತ್ಯಗಳನ್ನು ಭೌತಿಕವಾಗಿ ಪೂರೈಸುವ ಸ್ಥಳಾವಕಾಶ ಇದ್ದರೆ ಸಾಕು. ಸಂದರ್ಭಾನುಸಾರ ಅಲ್ಲಿ ಅದು ಹೊಂದಿಕೊಳ್ಳುತ್ತದೆ.

ಅದರಂತೆ ಮಸೀದಿಯು ಸಾಮಾಜಿಕ ಕೇಂದ್ರ, ಪ್ರಾರ್ಥನೆ ಮತ್ತು ಬೋಧನೆಯ ಸ್ಥಳ, ನ್ಯಾಯಾಲಯ, ಹಣಕಾಸು ವಹಿವಾಟಿಗಾಗಿ, ಆಡಳಿತಾತ್ಮಕ ಕಾರ್ಯಗಳಿಗಾಗಿ ಇರುವ ಒಂದು ಪ್ರದೇಶ .  ಈ ತತ್ವದ ಅನುಸಾರವಾಗಿ ಸಮುದಾಯದ ಅಗತ್ಯಕ್ಕೋಸ್ಕರ ಜನರನ್ನು ಒಂದುಗೂಡಿಸುವ ಸಲುವಾಗಿ ಆಝಾನ್ ಎಂಬ ವಿಧಾನವು ಹುಟ್ಟಿಕೊಂಡಿತು. ಈ ಉದ್ದೇಶಗಳಿಗಾಗಿ ಮಿನಾರಗಳು ನೆಲೆ ನಿಂತವು. ಈ ಸಂಕೇತವು ಹಲವಾರು ತತ್ವಗಳ, ಜ್ಞಾನ, ಸಂಪ್ರದಾಯದ ಮೌಲ್ಯಗಳ ಪ್ರತೀಕಗಳಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನು ಗಮನಿಸಿದ್ದೇವೆ.  ಇತರ ನಾಗರಿಕತೆಗಳಂತೆಯೇ ಇಸ್ಲಾಂ ನಾಗರಿಕತೆಯು ಅದರ  ಬುನಾದಿಯನ್ನು ಭದ್ರ ಪಡಿಸಲು ಸಾಕಷ್ಟು ಹೆಣಗಾಡಿತ್ತು. ಅದೇ ರೀತಿ ಒಂದು ನಿರ್ದಿಷ್ಟ ಆಕಾರವನ್ನು ಅಳವಡಿಸಿಕೊಳ್ಳಲು ಅದರ ಶಿಲ್ಪಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸುಂದರವಾದ, ಉದ್ದನೆಯ ಮಿನಾರಗಳ ಉದಯವುಂಟಾಯಿತು.

ಈ ತಾರ್ಕಿಕ ವಿಕಸನ ಪ್ರಕ್ರಿಯೆಯ ಭಾಗವಾಗಿ ಮಸೀದಿಗಳಿಗೆ ಸಮಾಂತರವಾಗಿ ಮಿನಾರಗಳು ಜಗತ್ತಿನಾದ್ಯಂತ ಬೆಳೆದು ಬಂದವು. ಇಸ್ಲಾಮಿನ ಐಕ್ಯತೆಗಾಗಿ  ವಿವಿಧ ಸಾಮಾಜಿಕ, ರಾಜಕೀಯ, ಧಾರ್ಮಿಕ ಅಂಶಗಳನ್ನು ಮಿನಾರಗಳು ಏಕೀಕರಿಸಿದವು. ಸಮುದಾಯದ ಸದಸ್ಯರನ್ನು ಒಂದುಗೂಡಿಸುವ ತಮ್ಮ ಪ್ರಾಥಮಿಕ ಕಾರ್ಯದಿಂದ ಮಿನಾರಗಳು ಹಿಂದೆ.ಸರಿದಿಲ್ಲ.

 ಶಿಲ್ಪಕಲೆಯಾಗಲಿ ಅಥವಾ ಇನ್ನು ಯಾವುದೇ ಇರಲಿ, ಯಾವುದೇ ಚಿಹ್ನೆಗಳಿಗೂ ಅವುಗಳ ಮೌಲ್ಯಗಳನ್ನು ನೆನಪಿಸುವ ಅದ್ಭುತ ಸಾಮರ್ಥ್ಯವಿದೆ. ಅವುಗಳು ಇರುವಷ್ಟು ಕಾಲ ಅವುಗಳ ತತ್ವಗಳು ಪ್ರಸ್ತುತ ವಾಗಿರುತ್ತವೆ. ನಮ್ಮ ಅಂತಿಮ ಲಕ್ಷ್ಯವು ಜ್ಞಾನಾರ್ಜನೆಯಾಗಿರುವುದರಿಂದ, ಇವುಗಳೆಲ್ಲವೂ ನಮ್ಮನ್ನು ಒಂದು ವಿಚಾರ ಮಂಥನಕ್ಕೆ ಒಡ್ಡುತ್ತವೆ. ಆ ವಿಚಾರ ಮಂಥನವು ಮುಂದಿನ ಪೀಳಿಗೆಗೆ ಸಹಕಾರಿಯಾಗಬಲ್ಲದು. ಅಲ್ಲದೇ ಹೋದರೆ ನಮ್ಮ ಪ್ರಯತ್ನಗಳ ಫಲ ಶೂನ್ಯವಾಗಿರುವುದು.

ಮಿನಾರಗಳಲ್ಲಿ ಸುಪ್ತವಾಗಿರುವ ವಿಚಾರಗಳಿಗೆ ಮುಸ್ಲಿಂ ಜಗತ್ತು ಬದ್ಧತೆ ತೋರಬೇಕು. ಇಂದು ಮನು ಕುಲವು ಎದುರಿಸುತ್ತಿರುವ ಸಮಸ್ಯೆಗಳು, ಎದುರಿಸಲಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಪರಸ್ಪರ ಸಹಕಾರ ಮತ್ತು ಐಕ್ಯತಾ ಮನೋಭಾವದ ಮಹತ್ವಗಳು ಮಿನಾರಗಳ ಮೂಲಕ ಹೊರಬರಬೇಕು. ವಿಭಿನ್ನ ಸಂದರ್ಭಗಳಲ್ಲಿ, ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಇಸ್ಲಾಂ ಸಾಬೀತು ಪಡಿಸಿದೆ. ಇಂದಿನ ಇಸ್ಲಾಮಿಕ್‌ ಜಗತ್ತು ಸಾಂಪ್ರದಾಯಿಕ ಮೌಲ್ಯಗಳು ಮತ್ತು ಅದರ ನೈಜ ಸಮತೋಲನವನ್ನು ಕಳೆದುಕೊಳ್ಳದೆ, ಒಗ್ಗಟ್ಟಿನ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ.

ಮಾನವೀಯತೆಯ ಅಭಿವೃದ್ಧಿ ಮತ್ತು ಜ್ಞಾನಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಅಲ್ ಮುವಹ್ಹಿದೂನ್ (Al mohad caliphate) ನಾಗರಿಕತೆಯ ಪ್ರತೀಕವಾಗಿದೆ ಟಿನ್ಮಲ್ ಮಸೀದಿಯ ಖುತುಬಿಯ್ಯ ಮಿನಾರ್. ಯೂರೋ ಇಸ್ಲಾಮಿಕ್ ಸಂವಾದಕ್ಕೆ ನಾವು ನೀಡುವ ಸಣ್ಣ ಕೊಡುಗೆಯೂ ಗೌರವಾರ್ಹ.  ವಿನೀತನಾದ ನಾನು ಮುನ್ನಡೆಸುತ್ತಿರುವ ‘ವೆಸ್ಟರ್ನ್ ಇನ್ಸ್ಟಿಟ್ಯೂಟ್ ಫಾರ್ ಇಸ್ಲಾಮಿಕ್ ಕಲ್ಚರ್’ ಇಸ್ಲಾಮ್ ಬೋಧಿಸುವ ಮತ್ತು ರವಾನಿಸುವ ಸಂಪ್ರದಾಯಗಳಿಂದ ಸ್ಪೂರ್ತಿ ಪಡೆದು, ಅಪಾರ ಗೌರವಗಳೊಂದಿಗೆ , ಮುಸ್ಲಿಂ ಜಗತ್ತು ‌ಮತ್ತು ಪಾಶ್ಚಾತ್ಯ ಜಗತ್ತು ಹಾಗೂ ಮತಾಂಧತೆ ಮತ್ತು ನಿರ್ಲಕ್ಷ್ಯದ ಬಲಿಪಶುಗಳನ್ನು ಒಂದುಗೂಡಿಸಲು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ.

ಕಳೆದ ಮೇ ತಿಂಗಳಲ್ಲಿ ಉನ್ನತ ಸಂಸ್ಥೆಯಾದ The council of Europe ನಮ್ಮ ಸಂಸ್ಥೆಯೊಂದಿಗೆ ಜಂಟಿಯಾಗಿ ಆಯೋಜಿಸಿದ ‘ಇಸ್ಲಾಂ ಧರ್ಮವು ಯುರೋಪ್‌ಗೆ ನೀಡಿದ ಕೊಡುಗೆ’ ಎಂಬ ವಿಷಯದ ಬಗ್ಗೆ ಒಂದು ಸೆಮಿನಾರ್ ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಛೇರಿಯಲ್ಲಿ ನಡೆಯಿತು. Council of Europe ನಲ್ಲಿ ನಡೆದ ಚರ್ಚೆಗಳು ಮತ್ತು ಅವುಗಳ ಮುಂದುವರೆದ ಭಾಗ ಎಂಬಂತೆ ಸೆಪ್ಟೆಂಬರ್ 19 ರ ಅಧಿವೇಶನದಲ್ಲಿ ಶಿಫಾರಸು 1162 ರನ್ನು ಅನುನೋದಿಸಲಾಯಿತು. ಅಂತರ್ ಸಾಂಸ್ಕೃತಿಕ ಪ್ರದೇಶಗಳ ಸಮಸ್ಯೆ ನಿವಾರಣೆಗೆ ಸಮರ್ಥವಾದ ಕ್ರಮಗಳನ್ನು ಕೈಗೊಳ್ಳುವುದಾಗಿತ್ತು ನಮ್ಮ ಉದ್ದೇಶ. ಯಾವುದೇ ಸಂಕೀರ್ಣತೆ ಇಲ್ಲದೆ ಸಾಂಸ್ಕೃತಿಕ, ರಾಜಕೀಯ ವ್ಯವಹಾರವನ್ನು ಮೆಡಿಟರೇನಿಯನ್‌ನ ಎರಡು ತೀರಗಳಿಗೂ ವಿಸ್ತರಿಸುವ ಇರಾದೆ ಇದೆ.

ಕೊನೆಯದಾಗಿ, ಅಲ್ ಮುವಹ್ಹಿದ್ ಖಿಲಾಫತ್ ನ  ರಾಜಧಾನಿಗಳನ್ನು ಪ್ರತಿನಿಧಿಸುವ ಖುತುಬಿಯ್ಯ ಮತ್ತು ಗಿರಾಲ್ಡ  ಮಿನಾರದಂತೆ ಸುಂದರವೂ ಸೂಚಕವೂ ಆದ ಚಿಹ್ನೆಗಳು ಜೀವಂತವಾಗಿರಲಿ, ಅದೇ ರೀತಿ ಇಂತಹ ಕಾರ್ಯಗಳು ದ್ವಿಗುಣಗೊಳ್ಳಲಿ ಎಂಬುದು ನನ್ನಾಸೆ.

ಮೂಲ: ಶರೀಫ್ ಅಬ್ದುರ್ರಹ್ಮಾನ್ ಝಾ
ಅನು: ಮುಹಮ್ಮದ್ ಶಮೀರ್ ಪೆರುವಾಜೆ

ಬಾಜಿ:ಆಂಟನ್ ಚೆಕೋವ್

ಅದು ಶರತ್ಕಾಲದ ಒಂದು ಕಗ್ಗತ್ತಲ ರಾತ್ರಿ. ಆ ಬಡ್ಡಿ ವ್ಯಾಪಾರಿ ಮುದುಕ ತನ್ನ ಓದಿನ ಕೊಠಡಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದಿಟ್ಟಿ ಹಾಯಿಸುತ್ತಾ ಹದಿನೈದು ವರ್ಷಗಳ ಹಿಂದೆ ಇದೇ ಶರತ್ಕಾಲದಲ್ಲಿ ತಾನು ನೀಡಿದ್ದ ಔತಣ ಕೂಟವನ್ನು ನೆನಪಿಸಿಕೊಳ್ಳುತ್ತಿದ್ದ. ಅಂದು ಹಲವು ಜನ ಮಹನೀಯರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು ಮತ್ತು ಅತೀ ಆಸಕ್ತಿದಾಯಕ ವಿಷಯಗಳ ಬಗ್ಗೆ ಅಲ್ಲಿ ಚರ್ಚೆಯಾಗಿತ್ತು. ಹಲವು ವಿಷಯಗಳ ಜೊತೆಗೆ ಅವರು ಮರಣ ದಂಡನಾ ಶಿಕ್ಷೆಯನ್ನೂ ಖಂಡಿಸಿದ್ದರು. ಅವರು ಅದೊಂದು ಹಳೆಯ ಪದ್ಧತಿಯೆಂದೂ, ಕ್ರೈಸ್ತನಾಡಿಗೆ ಹೇಳಿಸಿದ್ದಲ್ಲವೆಂದೂ, ಅನೈತಿಕವೆಂದೂ ಬಗೆದಿದ್ದರು. ಇನ್ನು ಕೆಲವರು ಮರಣದಂಡನೆಯಂತಹ ಶಿಕ್ಷೆಯ ಬದಲಿಗೆ ವಿಶ್ವದಾದ್ಯಂತ ಜೀವಾವಧಿ ಶಿಕ್ಷೆಯನ್ನೇ ಜಾರಿಗೆ ತರಬೇಕು ಎಂದೂ ಚಿಂತನೆ ನಡೆಸಿದ್ದರು.

“ನಾನು ನಿಮ್ಮ ವಾದವನ್ನು ಒಪ್ಪಲಾರೆ”, ಆತಿಥೇಯ ನುಡಿದಿದ್ದ. ನಾನು ಸ್ವತಃ ಮರಣದಂಡನಾ ಶಿಕ್ಷೆಯನ್ನಾಗಲೀ ಜೀವಾವಧಿ ಶಿಕ್ಷೆಯನ್ನಾಗಲೀ ಅನುಭವಿಸಿದವನಲ್ಲ. ಆದರೆ ಯಾರಾದರೂ ಈ ಬಗ್ಗೆ ತೀರ್ಪು ಕೇಳಿದ್ದರೆ ನನ್ನ ಅಭಿಪ್ರಾಯ ಮಾತ್ರ ಈ ಮರಣ ದಂಡನಾ ಶಿಕ್ಷೆಯೆಂಬುದು ಜೀವಾವಧಿ ಶಿಕ್ಷೆಗಿಂತ ಹೆಚ್ಚು ಮಾನವೀಯವೂ, ನೈತಿಕವೂ ಆಗಿರುತ್ತದೆ ಎಂಬುದಾಗಿಯೇ ಇರುತ್ತದೆ. ಮರಣದಂಡನಾ ಶಿಕ್ಷೆ ವ್ಯಕ್ತಿಯನ್ನು ಕ್ಷಿಪ್ರವಾಗಿ ಸಾಯಿಸಿಬಿಡುತ್ತದೆ, ಜೀವಾವಧಿ ಶಿಕ್ಷೆ ಅನುಕ್ರಮವಾಗಿ ಸಾಯಿಸುತ್ತದೆ. ಹೆಚ್ಚು ಮಾನವೀಯ ಕೊಲೆಗಾರ ಯಾರು, ನಿಮ್ಮನ್ನು ಕೆಲವೇ ಕ್ಷಣಗಳಲ್ಲಿ ಕೊಲ್ಲುವವನೇ ಅಥವಾ ನಿಮ್ಮ ಜೀವವನ್ನು ಹಲವು ವರ್ಷಗಳ ಕಾಲ ಹಿಂಡುವವನೇ?”

“ಅವೆರಡೂ ಅನೈತಿಕವೇ”, ಒಬ್ಬ ಅತಿಥಿ ಹೇಳಿದ. “ಏಕೆಂದರೆ ಅವೆರಡರ ಉದ್ದೇಶಗಳು ಒಂದೇ ಆಗಿವೆ- ಜೀವ ತೆಗೆಯುವುದು! ದೇಶವೆಂದರೆ ದೇವರಲ್ಲ, ತಾನು ನೀಡಬೇಕೆಂದು ಬಯಸಿದರೂ ವಾಪಾಸು ನೀಡಲಾಗದ ಪ್ರಾಣವನ್ನು ತೆಗೆದುಕೊಳ್ಳಲು ಅದಕ್ಕೆ ಯಾವುದೇ ಹಕ್ಕಿಲ್ಲ.”

ಆ ಗುಂಪಿನಲ್ಲಿ ಒಬ್ಬ ವಕೀಲನಿದ್ದ. ಸುಮಾರು ಇಪ್ಪತ್ತೈದರ ತರುಣ. ಯಾರೋ ಆತನ ಅಭಿಪ್ರಾಯವನ್ನು ಕೇಳಿದುದರಿಂದ ಆತ ನುಡಿದ, “ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆಗಳೆರಡೂ ಅನೈತಿಕವೇ, ಆದರೆ ನನಗೇನಾದರೂ ಆಯ್ಕೆ ನೀಡಿದಲ್ಲಿ ನಾನು ಖಂಡಿತವಾಗಿಯೂ ಎರಡನೆಯದ್ದನ್ನೇ ಆಯ್ಕೆ ಮಾಡುವೆ. ಬದುಕದೇ ಇರುವುದಕ್ಕಿಂತ ಹೇಗಾದರೂ ಬದುಕಿಯೇ ಬಿಡುವುದು ಒಳ್ಳೆಯದೇ ಅಲ್ಲವೇ?”.

ಚರ್ಚೆ ಹೀಗೆ ಜೀವಕಳೆ ಪಡೆದುಕೊಂಡಿತು. ಬಡ್ಡಿ ವ್ಯಾಪಾರಿ ಆಗ ವಯಸ್ಕನಾಗಿದ್ದ ಮತ್ತು ಅಧೀರನಾಗಿದ್ದರಿಂದಲೋ ಏನೋ ತಕ್ಷಣ ತಾಳ್ಮೆ ಕಳೆದುಕೊಂಡನು, ತನ್ನ ಮುಷ್ಠಿಯನ್ನು ಮೇಜಿಗೆ ಗುದ್ದುತ್ತಾ ವಕೀಲನ ಕಡೆಗೆ ನೋಡುತ್ತಾ ಕಿರುಚಿದ. “ಇದು ಸುಳ್ಳು, ಬೇಕಾದರೆ ಎರಡು ಮಿಲಿಯನ್ ಬಾಜಿ ಕಟ್ಟುತ್ತೇನೆ, ನೀನು ಐದು ವರ್ಷ ಕೂಡಾ ಸೆರೆಮನೆಯೊಳಗೆ ಇರಲಾರೆ”.

“ನೀನು ಇದನ್ನು ಅಷ್ಟೊಂದು ಗಂಭೀರವಾಗಿ ಸ್ವೀಕರಿಸಿರುವಿಯೆಂದಾದರೆ..” ವಕೀಲ ಉತ್ತರಿಸಿದ. “.. ನಾನು ನಿನ್ನ ಬಾಜಿಯನ್ನು ಸ್ವೀಕರಿಸಿರುವೆ, ನಾನು ಐದಲ್ಲ ಹದಿನೈದು ವರ್ಷಗಳವರೆಗೆ ಸೆರೆಮನೆಯಲ್ಲಿರಲು ಸಿದ್ಧ!”.

“ಹದಿನೈದು ! ಸರಿ ಒಪ್ಪಿದೆ” ಬಡ್ಡಿ ವ್ಯಾಪಾರಿ ಕೂಗಿದ. “ಮಾನ್ಯರೇ ನಾನು ಎರಡು ಮಿಲಿಯನ್ ಬಾಜಿಯಲ್ಲಿ ತೊಡಗಿಸಲು ಸಿದ್ಧ”.

“ಒಪ್ಪಿದೆ. ನೀನು ಎರಡು ಮಿಲಿಯನ್ ತೊಡಗಿಸು ನಾನು ನನ್ನ ಸ್ವಾತಂತ್ರ್ಯವನ್ನು ತೊಡಗಿಸುವೆ” ಯುವ ವಕೀಲ ಹೇಳಿದ.

ಹೀಗೆ ಕ್ರೂರವೂ, ಅಸಂಬದ್ಧವೂ ಆದ ಬಾಜಿಯೊಂದು ಜರುಗಿತು.

ಬಡ್ಡಿ ವ್ಯಾಪಾರಿ ಹಲವು ಮಿಲಿಯನ್ಗಳ ಒಡೆಯನಾಗಿದ್ದು, ಜೊತೆಗೆ ಪರಮ ಸ್ವಾರ್ಥಿಯೂ ಕಪಟಿಯೂ ಆಗಿದ್ದ. ರಾತ್ರಿ ಔತಣಕೂಟದ ಸಮಯದಲ್ಲಿ ಆತ ಯುವ ವಕೀಲನನ್ನು ಹಂಗಿಸುವಂತೆ ಹೀಗೆ ಹೇಳಿದ. “ಯೋಚಿಸಿ ನೋಡು ಹುಡುಗ ಇನ್ನೂ ಸಮಯವಿದೆ. ಎರಡು ಮಿಲಿಯನ್ ನನಗೆ ದೊಡ್ಡ ಮೊತ್ತವೇ ಅಲ್ಲ. ಆದರೆ ನೀನು ಮಾತ್ರ ನಿನ್ನ ಬದುಕಿನ ಅಮೂಲ್ಯ ಮೂರ್ನಾಲ್ಕು ವರ್ಷಗಳನ್ನು ಕಳೆದುಕೊಳ್ಳಲಿರುವೆ. ನಾನು ಮೂರ್ನಾಲ್ಕು ವರ್ಷಗಳೆಂದೆ, ಯಾಕೆಂದರೆ ಅದಕ್ಕಿಂತ ಹೆಚ್ಚು ದಿನ ಒಳಗಿರಲು ನಿನಗೆ ಸಾಧ್ಯವೇ ಇಲ್ಲ. ಇದನ್ನು ಕೂಡಾ ಯೋಚಿಸು, ಸ್ವಇಚ್ಛಾ ಸೆರೆವಾಸ, ಸೆರೆಮನೆ ಶಿಕ್ಷೆಗಿಂತಲೂ ಕೆಟ್ಟದು. ನೀನು ಯಾವಾಗ ಬೇಕಾದರೂ ಮುಕ್ತನಾಗಬಹುದು ಎಂಬ ಯೋಚನೆಯೇ ನಿನ್ನ ಸೆರೆಮನೆವಾಸದ ಇಡೀ ಬದುಕನ್ನೇ ವಿಷಮಯಗೊಳಿಸುವುದು. ನಿನ್ನ ಮೇಲೆ ಅನುಕಂಪವಿದೆ”.

ಮತ್ತು ಈಗ ಅದೇ ಬಡ್ಡಿ ವ್ಯಾಪಾರಿ ಕೊಠಡಿಯ ಮೂಲೆಯಿಂದ ಮೂಲೆಗೆ ಶತಪಥ ಹಾಕುತ್ತಾ ಎಲ್ಲವನ್ನೂ ಜ್ಞಾಪಿಸುತ್ತಾ ತನಗೆ ತಾನೇ ಕೇಳಿಕೊಳ್ಳುತ್ತಿದ್ದ. ‘ನಾನು ಯಾಕಾಗಿ ಈ ಬಾಜಿ ಕಟ್ಟಿದೆ? ಏನು ಸಿಕ್ಕಿತು?’

ಆ ವಕೀಲನಾದರೋ ತನ್ನ ಹದಿನೈದು ವರ್ಷಗಳನ್ನು ಕಳೆದುಕೊಳ್ಳುವನು ಮತ್ತು ನಾನು ಎರಡು ಮಿಲಿಯ ಹಣವನ್ನು ಬಿಸಾಕಿಬಿಡುವೆ. ಆದರೆ ಇದು ಮರಣದಂಡನಾ ಶಿಕ್ಷೆ ಜೀವಾವಧಿ ಶಿಕ್ಷೆಗಿಂತ ಒಳ್ಳೆಯದೇ ಅಥವಾ ಕೆಟ್ಟದೇ ಎಂದು ಜನರಿಗೆ ಅರಿವು ಮೂಡಿಸುವುದೇ? ಇಲ್ಲ ಇಲ್ಲ! ಇವೆಲ್ಲಾ ಬರೀ ಓಳು! ಇದು ತನ್ನಂತಹ ಹೊಟ್ಟೆತುಂಬಿದ ಸಿರಿವಂತರ ಆಷಾಡಭೂತಿತನ ಮತ್ತು ಆ ವಕೀಲನಂತಹವರ ಹಣಗಳಿಸುವ ದುರಾಸೆ.

ಆ ದಿನ ಮುಸ್ಸಂಜೆಯ ಔತಣ ಕೂಟದ ನಂತರ ನಡೆದ ಘಟನೆಗಳ ಬಗ್ಗೆ ಆತ ಜ್ಞಾಪಿಸಿಕೊಂಡನು. ಅಂದು ಯುವ ವಕೀಲನು ಕಟ್ಟುನಿಟ್ಟಿನ ನಿಗಾವಣೆಯ ಅಡಿಯಲ್ಲಿ ಬಡ್ಡಿ ವ್ಯಾಪಾರಿಯ ಮನೆಯ ತೋಟದ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ಸೆರೆಮನೆವಾಸ ಅನುಭವಿಸಬೇಕೆಂದು ತೀರ್ಮಾನಿಸಲಾಯಿತು. ಸೆರೆಮನೆವಾಸದ ಅವಧಿಯಲ್ಲಿ ಆತ ಮನೆಯ ಆವರಣದ ಗೋಡೆಯನ್ನು ದಾಟಬಾರದಾಗಿಯೂ ಯಾವುದೇ ಮನುಷ್ಯರನ್ನು ನೋಡುವುದಾಗಲೀ ಮಾತುಗಳನ್ನು ಆಲಿಸುವುದಾಗಲೀ ಪತ್ರಗಳನ್ನು ಮತ್ತು ದಿನ ಪತ್ರಿಕೆಗಳನ್ನು ಸ್ವೀಕರಿಸುವುದಾಗಲೀ ಮಾಡಬಾರದೆಂದು ತೀರ್ಮಾನಿಸಲಾಯಿತು.

ಆದರೆ ಆತನಿಗೆ ಸಂಗೀತ ಉಪಕರಣಗಳನ್ನು ನುಡಿಸಲು, ಓದಲು ಮತ್ತು ಪತ್ರಗಳನ್ನು ಬರೆಯಲು, ವೈನ್ ಕುಡಿಯಲು ಮತ್ತು ತಂಬಾಕು ಸೇದಲು ಅನುಮತಿ ನೀಡಲಾಯಿತು.

ಒಪ್ಪಂದದ ಪ್ರಕಾರ ಆತ ಯಾರನ್ನಾದರೂ ಸಂಪರ್ಕಿಸಬಹುದು. ಆದರೆ ಕೇವಲ ಗೋಡೆಯಲ್ಲಿರುವ, ಸದರಿ ಉದ್ದೇಶಕ್ಕೆಂದೇ ರಚಿಸಲಾದ ಒಂದು ಸಣ್ಣ ಕಿಂಡಿಯ ಮೂಲಕ ಮಾತ್ರ. ಆತನಿಗೆ ಅವಶ್ಯವಿರುವ ವೈನ್, ಹೊಗೆಸೊಪ್ಪು, ಪುಸ್ತಕಗಳು, ಸಂಗೀತ ಉಪಕರಣ ಇತ್ಯಾದಿಗಳನ್ನು ಎಷ್ಟೇ ಸಂಖ್ಯೆಯಲ್ಲಿ ಪಡೆಯಬಹುದು. ಆದರೆ ಕೇವಲ ಆ ಪುಟ್ಟ ಕಿಂಡಿಯಲ್ಲಿ ಒಂದು ಕಾಗದದಲ್ಲಿ ಕೋರಿಕೆ ಸಲ್ಲಿಸುವ ಮೂಲಕ ಮಾತ್ರ. ಒಪ್ಪಂದ ಪತ್ರದಲ್ಲಿ ಎಲ್ಲವನ್ನೂ ವಿಷದವಾಗಿ ಬರೆಯಲಾಗಿತ್ತು ಮತ್ತು ಆ ಪ್ರಕಾರ ಸೆರೆಮನೆವಾಸವನ್ನು ಏಕಾಂತವಾಗಿ ಕಳೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿತ್ತು. ಆ ವಕೀಲ 1870 ನೇ ಇಸವಿಯ ನವೆಂಬರ ತಿಂಗಳ 14ರ ರಾತ್ರಿ ಹನ್ನೆರಡು ಗಂಟೆಯಿಂದ 1885ರ ನವೆಂಬರ ತಿಂಗಳ 14 ನೇ ತಾರೀಖು ರಾತ್ರಿ ಹನ್ನೆರಡು ಗಂಟೆಯವರೆಗೆ ಸೆರೆಮನೆವಾಸ ಅನುಭವಿಸತಕ್ಕದ್ದೆಂದು ಒಪ್ಪಿ ತಯಾರಿಸಿದ ಕರಾರಾಗಿತ್ತು. ಒಂದು ವೇಳೆ ನಿಗದಿತ ಸಮಯದಿಂದ ಕೇವಲ ಎರಡು ನಿಮಿಷಗಳ ಮುಂಚೆ ಆತ ತಪ್ಪಿಸಲು ಪ್ರಯತ್ನಿಸಿದರೂ ಆ ಬಡ್ಡಿ ವ್ಯಾಪಾರಿ ತನ್ನ ಬಾಜಿಯಿಂದ ಮುಕ್ತನಾಗುತ್ತಿದ್ದ ಮತ್ತು ಆತ ಆ ವಕೀಲನಿಗೆ ಎರಡು ಮಿಲಿಯನ್ ಹಣವನ್ನು ನೀಡುವ ಭಾದ್ಯತೆಯಿಂದ ವಿರಹಿತಗೊಳ್ಳುತ್ತಿದ್ದನು.

ಮೊದಲ ವರ್ಷದ ಸೆರೆವಾಸದ ಸಮಯದಲ್ಲಿ ಆ ವಕೀಲ ಬರೆದಿದ್ದ ಕೆಲವು ಕಿರು ಟಿಪ್ಪಣಿಗಳಿಂದ, ಆತ ಭಯಂಕರವಾದ ಏಕಾಂತತೆಯನ್ನೂ, ಬೇಸರವನ್ನೂ ಅನುಭವಿಸಿದ್ದನೆಂದು ತಿಳಿದುಬಂದಿತ್ತು. ಸೆರೆಮನೆಯ ಬದಿಯಿಂದ ರಾತ್ರಿ-ಹಗಲು ಪಿಯಾನೋ ಧ್ವನಿ ಕೇಳಿಬರುತ್ತಿತ್ತು. ಆತ ವೈನ್ ಮತ್ತು ಹೊಗೆಸೊಪ್ಪನ್ನು ತಿರಸ್ಕರಿಸಿದ್ದ. “ವೈನು” ಆತ ಬರೆದಿದ್ದ “ಅದು ಆಸೆಯನ್ನು ಹೆಚ್ಚಿಸುತ್ತದೆ ಮತ್ತು ಆಸೆಯೆಂಬುದು ಕೈದಿಯ ಎಲ್ಲಾ ತರಹದ ಕಷ್ಟಗಳ ಮೂಲ. ಅಷ್ಟುಮಾತ್ರವಲ್ಲದೆ ಒಬ್ಬನೇ ಕುಳಿತು ಒಂದೊಳ್ಳೆಯ ವೈನ್ ಹೀರುವುದಕ್ಕಿಂತ ದೊಡ್ಡ ಬೇಸರದ ಕೆಲಸ ಇನ್ನೊಂದಿಲ್ಲ, ಮತ್ತು ಹೊಗೆಸೊಪ್ಪು ಕೋಣೆಯ ಗಾಳಿಯನ್ನು ಕಲುಷಿತಗೊಳಿಸುತ್ತದೆ”.

ಮೊದಲ ವರ್ಷದಲ್ಲಿ ಆ ವಕೀಲನಿಗೆ ಕೆಲವು ಲಘು ಸಾಹಿತ್ಯವಿರುವ ಪುಸ್ತಕಗಳನ್ನೂ, ಕ್ಲಿಷ್ಟ ಪ್ರೇಮ ಪ್ರಕರಣದ ಕಾದಂಬರಿಗಳು, ಅಪರಾಧ ಮತ್ತು ಭಾವುಕತೆಯ ಕಥೆಗಳನ್ನು , ಹಾಸ್ಯ ಸಾಹಿತ್ಯಗಳನ್ನು ಕಳುಹಿಸಲಾಯಿತು.

ಆರನೇ ವರ್ಷದ ಉತ್ತರಾರ್ಧದಲ್ಲಿ ಕೈದಿಯು ಸಂಭ್ರಮದಿಂದ ಭಾಷೆಗಳನ್ನು, ತತ್ತ್ವಶಾಸ್ತ್ರವನ್ನು ಮತ್ತು ಇತಿಹಾಸವನ್ನು ಓದಲು ತೊಡಗಿದನು. ಆತನು ಈ ವಿಷಯಗಳಲ್ಲಿ ಎಷ್ಟು ಉತ್ಸುಕನಾದನೆಂದರೆ ಬಡ್ಡಿ ವ್ಯಾಪಾರಿಗೆ ಆತನಿಗೆ ಸಾಕಾಗುವಷ್ಟು ಪುಸ್ತಕಗಳನ್ನು ಒದಗಿಸಲು ಸಮಯ ಹೊಂದಿಸುವುದೇ ದುಸ್ತರವಾಗಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಆರುನೂರು ಸಂಪುಟಗಳಷ್ಟು ಪುಸ್ತಕಗಳನ್ನು ಖರೀದಿಸಿ ಆತನಿಗೆ ನೀಡಲಾಯಿತು.

ಬಡ್ಡಿ ವ್ಯಾಪಾರಿಯ ಉತ್ಸಾಹ ಸೋರಿಹೋಗುತ್ತಿರುವ ಸಮಯದಲ್ಲಿಯೇ ಒಂದು ದಿನ ಕೈದಿಯಿಂದ ಒಂದು ಪತ್ರ ಬಂದಿತು. “ನನ್ನ ಪ್ರೀತಿಯ ಕೈದುಗಾರನೇ, ನಾನು ಈ ಸಾಲುಗಳನ್ನು ಆರು ಭಾಷೆಗಳಲ್ಲಿ ಬರೆಯುತ್ತಿರುವೆ. ಇವನ್ನು ತಜ್ಞರಿಗೆ ತೋರಿಸು. ಅವರು ಇವುಗಳನ್ನು ಓದಲಿ. ಅವರಿಗೆ ಈ ಸಾಲುಗಳಲ್ಲಿ ಒಂದು ತಪ್ಪಾದರೂ ಗೋಚರಿಸದಿದ್ದರೆ ನಿನ್ನಲ್ಲಿ ನನ್ನದೊಂದು ವಿನಂತಿಯಿದೆ, ತೋಟದ ಮೂಲೆಯಲ್ಲಿ ತುಪಾಕಿಯಿಂದ ಗುಂಡೊಂದನ್ನು ಹಾರಿಸಲು ಆದೇಶ ನೀಡು. ಆ ಗುಂಡಿನ ಸದ್ದಿನಿಂದ ನನ್ನ ಪ್ರಯತ್ನಗಳು ವಿಫಲವಾಗಲಿಲ್ಲ ಎಂದು ತಿಳಿಯುವೆ. ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ದೇಶಗಳ ಜಾಣರು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದರು. ಆದರೆ ಅವರೆಲ್ಲರ ಒಳಗೆ ಒಂದೇ ಜ್ವಾಲೆ ಉರಿಯುತ್ತಿದೆ. ನಿನಗೆ ಗೊತ್ತೆ? ನಾನೀಗ ಆ ಸ್ವರ್ಗಸುಖವನ್ನು ಅನುಭವಿಸುತ್ತಿರುವೆ!”.

ಕೈದಿಯ ಆಸೆಯನ್ನು ಪೂರೈಸಲಾಯಿತು. ಬಡ್ಡಿ ವ್ಯಾಪಾರಿಯ ಆದೇಶದಂತೆ ಎರಡು ಗುಂಡುಗಳನ್ನು ತೋಟದಲ್ಲಿ ಹಾರಿಸಲಾಯಿತು.

ಬಳಿಕ, ಹತ್ತನೆಯ ವರ್ಷದ ನಂತರ, ವಕೀಲ ನಿಶ್ಚಲನಾಗಿ ತನ್ನ ಮೇಜಿನ ಮುಂದೆ ಕುಳಿತುಕೊಂಡು ಬೈಬಲಿನ ಹೊಸ ಒಡಂಬಡಿಕೆಯನ್ನು ಓದುತ್ತಿದ್ದ. ಬಡ್ಡಿ ವ್ಯಾಪಾರಿಗೆ ಇದು ಅಚ್ಚರಿಯೆನಿಸಿತ್ತು. ಒಬ್ಬ ಮನುಷ್ಯ ಕೇವಲ ನಾಲ್ಕು ವರ್ಷಗಳಲ್ಲಿ ಆರುನೂರು ಸಂಪುಟಗಳನ್ನಷ್ಟನ್ನು ತನ್ನದಾಗಿಸಿಕೊಂಡವನು, ಈಗ ಸರಳ ಪುಸ್ತಕವೊಂದನ್ನು ಓದಲು ಒಂದು ವರ್ಷ ತೆಗೆದುಕೊಳ್ಳುವುದೆಂದರೆ ! ಹೊಸ ಒಡಂಬಡಿಕೆಯ ನಂತರ ಧರ್ಮಗಳ ಇತಿಹಾಸ ಮತ್ತು ಧರ್ಮಶಾಸ್ತ್ರಗಳು ಸ್ಥಾನ ಪಡೆದುಕೊಂಡವು.

ಕೊನೆಯ ಎರಡು ವರ್ಷಗಳ ಸೆರೆವಾಸದಲ್ಲಿ ಕೈದಿಯು ಅಸಾಮಾನ್ಯ ಸಂಖ್ಯೆಯಲ್ಲಿ ಮತ್ತು ಅಷ್ಟೇ ಅಸಂಬದ್ಧವಾಗಿ ಓದಿದ. ಈಗ ಆತ ತನ್ನನ್ನು ಪ್ರಕೃತಿ ವಿಜ್ಞಾನದಲ್ಲಿ ತೊಡಗಿಸಿದ್ದ. ಆನಂತರ ಬೈರನ್, ಶೇಕ್ಸ್ ಪಿಯರ್ ಓದುತ್ತಿದ್ದ. ಆತನಿಂದ ಆಗಾಗ ಕಿರುಪತ್ರಗಳು ಬರುತ್ತಿದ್ದವು. ಒಮ್ಮೆಲೆ ರಸಾಯನ ಶಾಸ್ತ್ರ, ಔಷದ ಶಾಸ್ತ್ರದ ಪುಸ್ತಕ, ಒಂದು ಕಾದಂಬರಿ, ತತ್ತ್ವಶಾಸ್ತ್ರದ ಮೇಲಿನ ಟೀಕೆ, ಅಥವಾ ಧರ್ಮಶಾಸ್ತ್ರದ ಬಗೆಗಿನ ಪುಸ್ತಕಗಳ ಬೇಡಿಕೆಯಿಡುತ್ತಿದ್ದ. ಮುರಿದುಹೋದ ಹಡಗುಗಳ ಚೂರು ಚೂರುಗಳ ನಡುವೆ ಸಮುದ್ರದಲ್ಲಿ ಈಜುತ್ತಿರುವವನಂತೆ ಆತ ಓದುತ್ತಿದ್ದ. ಆತನ ಓದುವ ಆಸೆ ಬದುಕುಳಿಯಲು ಒಂದು ಚೂರಿನಿಂದ ಇನ್ನೊಂದು ಚೂರಿನತ್ತ ಏದುಸಿರು ಬಿಡುವವನಂತೆ ಭಾಸವಾಗುತ್ತಿತ್ತು.

ಬಡ್ಡಿ ವ್ಯಾಪಾರಿ ಇವೆಲ್ಲವುಗಳನ್ನೂ ಜ್ಞಾಪಿಸಿಕೊಂಡನು. ಮತ್ತು ಯೋಚಿಸಿದನು, “ನಾಳೆ ಹನ್ನೆರಡು ಗಂಟೆಯ ಸರಿ ಸುಮಾರಿಗೆ ಆತ ತನ್ನ ಸ್ವಾತಂತ್ರ್ಯವನ್ನು ಪಡೆಯಲಿದ್ದಾನೆ. ಒಪ್ಪಂದದ ಪ್ರಕಾರ ನಾನು ಆತನಿಗೆ ಎರಡು ಮಿಲಿಯನ್ ಹಣವನ್ನು ನೀಡಬೇಕು. ನಾನು ಅದನ್ನು ಪಾವತಿಸಿದರೆ ಅಲ್ಲಿಗೆ ಮುಗಿಯಿತು. ನಾನು ಎಂದೆಂದಿಗೂ ಕಳೆದುಕೊಳ್ಳುವೆ.

ಹದಿನೈದು ವರ್ಷಗಳ ಹಿಂದೆ ಆತನ ಬಳಿ ಹಲವು ಮಿಲಿಯನ್ ಹಣವಿತ್ತು. ಆದರೆ ಈಗ ಆತನ ಬಳಿ ಹಣ ಹೆಚ್ಚಿರುವುದೋ ಅಥವಾ ಸಾಲದ ಮೊತ್ತವೋ ಎಂದು ಸ್ವತಃ ಕೇಳಿಕೊಳ್ಳಲು ಭಯವೆನಿಸುವ ಹಾಗಿತ್ತು. ಶೇರು ಮಾರುಕಟ್ಟೆಯಲ್ಲಿ ಜುಗಾರಿ, ಅಪಾಯಕಾರಿ ದೂರದರ್ಶಿತ್ವ ಮತ್ತು ಅಜಾಗರೂಕ ನಡೆಯಿಂದ ಆತನಿಗೆ ಹಿನ್ನಡೆಯಾಗಿತ್ತು. ಇಳೀ ವಯಸ್ಸು ಕೂಡಾ ಆತನ ವ್ಯವಹಾರವನ್ನು ನಾಶ ಮಾಡುತ್ತಿತ್ತು. ನಿರ್ಭೀತ, ಆತ್ಮವಿಶ್ವಾಸವುಳ್ಳ, ಹೆಮ್ಮೆಯ ವ್ಯವಹಾರಸ್ಥ ಮನುಷ್ಯ ಈಗ ಮಾರುಕಟ್ಟೆಯ ಏರಿಳಿತಕ್ಕೆ ನಡುಗುವ ಸಾಮಾನ್ಯ ಹೂಡಿಕೆದಾರನಾಗಿದ್ದ.

“ಆ ಹಾಳಾದ ಬಾಜಿ!” ನಿರಾಶೆಯಿಂದ ತಲೆ ಕೊಡವಿಕೊಳ್ಳುತ್ತಾ ಆ ವೃದ್ಧ ಬಡಬಡಿಸಿದ. “ಆ ಮನುಷ್ಯ ಸತ್ತಾದರೂ ಯಾಕೆ ಹೋಗಲಿಲ್ಲ? ಆತನಿಗೆ ಈಗ ಕೇವಲ 40 ವರ್ಷ, ಆತ ನನ್ನೆಲ್ಲಾ ದುಡಿಮೆಯನ್ನು ಕಸಿದುಕೊಳ್ಳುವನು, ಮದುವೆಯಾಗಿ, ಬದುಕನ್ನು ಅನುಭವಿಸುತ್ತಾ, ಶೇರು ಮಾರುಕಟ್ಟೆಯಲ್ಲಿ ಜುಗಾರಿ ಆಡುವನು. ನಾನು ಮಾತ್ರ ಒಬ್ಬ ಹೊಟ್ಟೆಕಿಚ್ಜಿನ ಬಿಕ್ಷುಕನಂತೆ ಪ್ರತೀ ದಿನ ಆತನ ಬಾಯಿಯಿಂದ ಒಂದೇ ಮಾತನ್ನು ಕೇಳುವಂತಾಯಿತು. — ‘ ನಾನು ನನ್ನ ಜೀವನದ ಸಂತೋಷಕ್ಕಾಗಿ ಈ ಬಾಜಿಗೆ ಒಪ್ಪಿದೆ., ಈಗ ನಿನಗೆ ನಾನು ಸಹಾಯ ಮಾಡಲೇ? ‘ — ಇಲ್ಲ ! ಇದು ಬಹಳವಾಯಿತು, ಈ ಅವಮಾನದಿಂದ ಮತ್ತು ದಿವಾಳಿತನದಿಂದ ಪಾರಾಗಲು ಒಂದೇ ದಾರಿ, ಅದೇನೆಂದರೆ –ಆತ ಸಾಯಬೇಕು!”

ಗಡಿಯಾರ ಮೂರು ಸಲ ಸದ್ದು ಮಾಡಿತು. ಬಡ್ಡಿ ವ್ಯಾಪಾರಿ ಆಲಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿಗಳಾಚೆ ಹಿಮದಿಂದ ಹೆಪ್ಪುಗಟ್ಟಿದ ಮರಗಳ ನರಳಾಟ ಕೇಳಿ ಬರುತ್ತಿತ್ತು. ಮೇಲಂಗಿಯನ್ನು ಧರಿಸಿ, ಹದಿನೈದು ವರ್ಷಗಳಿಂದ ಒಮ್ಮೆಯೂ ತೆರೆದಿರದಿದ್ದ ಸೆರೆಮನೆಯ ಬಾಗಿಲುಗಳ ಕೀಲಿ ಕೈಯನ್ನು ಹಿಡಿದುಕೊಂಡು ಆತ ಸದ್ದಿಲ್ಲದೆ ಹೊರನಡೆದನು.

ತೋಟದಲ್ಲಿ ಕತ್ತಲಿತ್ತು, ಚಳಿಯು ಬಹಳವಿತ್ತು, ಮಳೆಯೂ ಸುರಿಯುತ್ತಿತ್ತು. ಮರಗಳ ನಡುವೆ ನುಸುಳಿ ಬೀಸುತ್ತಿದ್ದ ಗಾಳಿಗೆ ಮರಗಿಡಗಳು ಎಡೆಬಿಡದೆ ತುಯ್ದಾಡುತ್ತಿದ್ದವು. ಕಣ್ಣುಗಳನ್ನು ಎಷ್ಟು ದಂಡಿಸಿದರೂ ಆತನಿಗೆ ನೆಲವಾಗಲಿ, ಬಿಳಿಯ ಪ್ರತಿಮೆಗಳಾಗಲಿ, ತೋಟದ ಆವರಣವಾಗಲೀ, ಮರಗಳಾಗಲಿ ಕಾಣಿಸುತ್ತಲೇ ಇರಲಿಲ್ಲ. ಸೆರೆಮನೆಯ ಗೋಡೆಯತ್ತ ಬರುತ್ತಲೇ ಆತ ಕಾವಲುಗಾರರನ್ನು ಕೂಗಿದ. ಆದರೆ ಆತನಿಂದ ಉತ್ತರವಿಲ್ಲ. ಕಾವಲುಗಾರ ಆ ಕೆಟ್ಟ ಹವಾಮಾನದಿಂದ ತಪ್ಪಿಸಿಕೊಳ್ಳಲು ಅಡುಗೆ ಕೋಣೆಯಲ್ಲೋ ಹಸಿರುಮನೆಯಲ್ಲೋ ಹೋಗಿ ಮಲಗಿರಬೇಕು.

“ನನಗೇನಾದರೂ ನನ್ನ ಇಚ್ಛೆಯನ್ನು ಪೂರೈಸುವ ಧೈರ್ಯವಿದ್ದರೆ ” ಆ ವೃದ್ಧ ಬಡ್ಡಿ ವ್ಯಾಪಾರಿ ಯೋಚಿಸಿದ, “ಮೊದಲು ಸಂಶಯ ಬರುವುದು ಮಾತ್ರ ಆ ಕಾವಲುಗಾರನ ಮೇಲೆಯೇ”.

ಕಗ್ಗತ್ತಲಿನಲ್ಲಿಯೇ ಆತ ಮೆಟ್ಟಿಲುಗಳಿಗೆ ತಡಕಾಡಿದ. ಮತ್ತು ಗೇಟು ತೆರೆದು ತೋಟದ ಒಳ ನಡೆದ. ಓಣಿಯೊಂದರಲ್ಲಿ ಸಾಗುತ್ತಾ ಬೆಂಕಿಕಡ್ಡಿಯನ್ನು ಗೀರಿದ. ಮುಂದೆ ಕೈದಿಯ ಕೋಣೆಯಿತ್ತು. ಬಾಗಿಲಿಗೆ ಹಾಕಿದ ಸೀಲು ಹಾಗೆಯೇ ಇತ್ತು.

ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಕೆಳಗೆ ಬೆಡ್ ಶೀಟುಗಳಿಲ್ಲದ ಒಂದು ಹಾಸಿಗೆ ಬಿದ್ದುಕೊಂಡಿತ್ತು ಬಳಿಯಲ್ಲಿಯೇ ಒಂದು ಎಣ್ಣೆಒಲೆಯಿತ್ತು. ಕೈದಿಯ ಕೋಣೆಗೆ ಸಾಗುವ ಬಾಗಿಲಿನ ಬೀಗ ಭದ್ರವಾಗಿತ್ತು. ಕಡ್ಡಿ ಉರಿದು ಖಾಲಿಯಾಗಿ ಆರಿಹೋದಾಗ ಆ ವೃದ್ಧ ಥರ ಥರ ನಡುಗುತ್ತಾ ಆ ಸಣ್ಣ ಕಿಂಡಿಯ ಮೂಲಕ ಆ ಕೋಣೆಯೊಳಗೆ ಇಣುಕಿದ. ಕೈದಿಯ ಕೋಣೆಯೊಳಗೆ ಕ್ಯಾಂಡಲೊಂದು ಮಂದವಾಗಿ ಉರಿಯುತ್ತಿತ್ತು. ಕೈದಿಯು ಮೇಜಿನ ಮುಂದೆ ಕುಳಿತಿದ್ದ. ಅವನ ಬೆನ್ನು ತಲೆಯ ಕೂದಲು ಮತ್ತು ಕೈಗಳು ಕಾಣಿಸುತ್ತಿದ್ದವು. ತೆರೆದ ಪುಸ್ತಕಗಳು ಮೇಜಿನ ಮೇಲೆ ಹರಡಿಕೊಂಡಿದ್ದವು. ಎರಡು ಕುರ್ಚಿಗಳು ಮೇಜಿನ ಬಳಿಯಲ್ಲಿ ಮತ್ತು ನೆಲಹಾಸು ನೆಲದಲ್ಲಿದ್ದವು.

ಐದು ನಿಮಿಷಗಳುರುಳಿದವು. ಕೈದಿಯು ಒಂದಿಂಚೂ ಕದಲಿಲ್ಲ. ಹದಿನೈದು ವರ್ಷಗಳ ಸೆರೆವಾಸ ಆತನಿಗೆ ಅಚಲವಾಗಿ ಕುಳಿತುಕೊಳ್ಳಲು ಕಲಿಸಿತ್ತು. ಬಡ್ಡಿ ವ್ಯಾಪಾರಿ ಬೆರಳುಗಳಿಂದ ಕಿಟಕಿಯ ಮೇಲೆ ತಟ್ಟಿದ. ಆದರೆ ಕೈದಿಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನಂತರ ಆತ ಮೆಲ್ಲನೆ ಬೀಗದ ಮೇಲಿನ ಸೀಲುಗಳನ್ನು ಹರಿದು ಕೀಲಿಕೈಯನ್ನು ಬೀಗಕ್ಕೆ ಸೇರಿಸಿದ. ತುಕ್ಕು ಹಿಡಿದಿದ್ದ ಬೀಗವು ಕರ ಕರ ಸದ್ದು ಮಾಡುತ್ತಾ ತೆರೆದುಕೊಂಡಿತು. ಬಾಗಿಲುಗಳು ಕಿರಗುಟ್ಟಿದವು. ಬಡ್ಡಿ ವ್ಯಾಪಾರಿ ತಕ್ಷಣ ದೊಡ್ಡ ಅಚ್ಚರಿಯ ಧ್ವನಿಗಳೂ, ಹೆಜ್ಜೆಗಳ ಸಪ್ಪಳವೂ ಕೇಳಿಸಬಹುದೆಂದುಕೊಂಡ. ಮೂರು ನಿಮಿಷಗಳು ಕಳೆದವು. ಹೊರಗಿದ್ದಂತೆ ಒಳಗೂ ನಿಶ್ಶಬ್ದವೇ ಮನೆಮಾಡಿತ್ತು.

ಆತ ಒಳನುಗ್ಗಲು ಮಾನಸಿಕವಾಗಿ ಸಿದ್ಧಗೊಂಡನು. ಒಳಗೆ ಮೇಜಿನ ಮುಂದೆ ಸಾಮಾನ್ಯ ಮನುಷ್ಯನಂತಿಲ್ಲದ ವ್ಯಕ್ತಿ ಕುಳಿತಿದ್ದ. ಮೂಳೆಗಳಿಗೆ ಗಟ್ಟಿಯಾಗಿ ಅಂಟಿದ ಚರ್ಮಗಳುಳ್ಳ ಅಸ್ಥಿ ಪಂಜರ. ಹೆಂಗಸರಂತೆ ನೀಳವಾಗಿರುವ ತಲೆಗೂದಲು, ಜೋತು ಬಿದ್ದಿರುವ ಗಡ್ಡ. ಮುಖವು ಮಣ್ಣಿನಂತೆ ಹಳದಿಗುಟ್ಟಿತ್ತು. ಕೂದಲುಗಳಿಂದ ತುಂಬಿಹೋದ ಆತನ ತಲೆ ಮುಂದಕ್ಕೆ ಬಾಗಿಕೊಂಡಿತ್ತು, ಕೆನ್ನೆಗಳು ಆಳ ಮತ್ತು ವಕ್ರವಾಗಿ ಹೂತುಹೋಗಿದ್ದು, ಆತನೆಡೆಗೆ ದೃಷ್ಠಿಹಾಯಿಸುವುದೇ ನೋವಿನ ಸಂಗತಿಯಾಗಿತ್ತು. ಆತನ ಕೂದಲುಗಳು ಆಗಲೇ ಬೆಳ್ಳಗಾಗತೊಡಗಿದ್ದವು. ಆತನ ಕಳೆಗುಂದಿದ ಆ ಮುಖವನ್ನು ನೋಡಿದ ಯಾರಿಗಾದರೂ ಆತನಿಗಿನ್ನೂ ಬರೇ 40 ವರ್ಷ ವಯಸ್ಸೆಂದರೆ ನಂಬಲು ಸಾಧ್ಯವೇ ಇರಲಿಲ್ಲ. ಆತ ತಲೆ ಬಾಗಿಸಿ ಕುಳಿತಿದ್ದ ಆ ಮೇಜವಾನಿಯ ಮೇಲೆ ಸಣ್ಣ ಅಕ್ಷರಗಳಿಂದ ಬರೆದಿರುವ ಒಂದು ಕಾಗದದ ಹಾಳೆಯಿತ್ತು.

“ಬಡಪಾಯಿ ಪಾಪಿ”, ಬಡ್ಡಿ ವ್ಯಾಪಾರಿ ಯೋಚಿಸಿದ, “ಹೇಗೆ ನಿದ್ರಿಸುತ್ತಿದ್ದಾನೆ! ಬಹುಶಃ ನಾಳೆ ಸಿಗಲಿರುವ ಮೊತ್ತದ ಬಗ್ಗೆ ಕನಸು ಕಾಣುತ್ತಿರಬಹುದು. ಒಂದೊಮ್ಮೆ ಈ ಅರೆಜೀವವನ್ನು ಹಾಸಿಗೆಯ ಮೇಲೆ ಒದ್ದುರುಳಿಸಿ ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಬಿಟ್ಟರೆ ಮುಗಿಯಿತು, ಎಂತಹ ತನಿಖೆಯಲ್ಲಿಯೂ ಈತನ ಅಸಹಜ ಸಾವು ಪತ್ತೆಯಾಗಲಿಕ್ಕಿಲ್ಲ! ಅದರೂ ಮೊದಲೊಮ್ಮೆ ಈತ ಆ ಹಾಳೆಯಲ್ಲಿ ಏನು ಬರೆದಿದ್ದಾನೆಂದು ಒಮ್ಮೆ ಓದಿ ಬಿಡೋಣ”.

ಬಡ್ಡಿ ವ್ಯಾಪಾರಿ ಆ ಪತ್ರವನ್ನು ಕೈಗೆತ್ತಿಕೊಂಡು ಓದತೊಡಗಿದ.

“ನಾಳೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಾನು ನನ್ನ ಸ್ವಾತಂತ್ರ್ಯವನ್ನು ಮತ್ತು ಹೊರಗಿನ ಜನರೊಂದಿಗೆ ಬೆರೆಯುವ ಹಕ್ಕನ್ನು ಮರು ಪಡೆಯಲಿದ್ದೇನೆ. ಆದರೆ ನಾನು ಇಲ್ಲಿಂದ ಹೊರ ಹೋಗಿ ಸೂರ್ಯನನ್ನು ನೋಡುವುದಕ್ಕಿಂತ ಮೊದಲು ನಿನಗೆ ಕೆಲವು ಮಾತುಗಳನ್ನು ಹೇಳಿ ಬಿಡುವುದು ಒಳ್ಳೆಯದು. ಪ್ರಜ್ಞಾಪೂರ್ವಕವಾಗಿ ಮತ್ತು ದೇವರ ಸಾಕ್ಷಿಯಾಗಿ ನಾನು ನಿನಗೆ ಹೇಳ ಬಯಸುವುದೇನೆಂದರೆ, ನಾನು ನನ್ನ ಸ್ವಾತಂತ್ರ್ಯ, ಆರೋಗ್ಯ ಮತ್ತು ಆ ನಿನ್ನ ಗ್ರಂಥಗಳು ಹೇಳುವ ಐಹಿಕ ಭೋಗಗಳೆಲ್ಲವನ್ನೂ ತ್ಯಜಿಸಿದೆ. ಹದಿನೈದು ವರ್ಷಗಳವರೆಗೆ ಇಹದ ಜೀವನದ ಬಗ್ಗೆ ಅತಿ ಆಸಕ್ತಿಯಿಂದ ಅಧ್ಯಯನ ಮಾಡಿದೆ. ಸತ್ಯ, ನಾನು ಹೊರಗಿನ ನೆಲವನ್ನಾಗಲೀ ಜನರನ್ನಾಗಲೀ ನೋಡಲಿಲ್ಲ ಆದರೆ ಆ ನಿನ್ನ ಪುಸ್ತಕಗಳ ಮೂಲಕ ನಾನು ಪರಿಮಳಯುಕ್ತ ವೈನನ್ನು ಕುಡಿದೆ, ಹಾಡುಗಳನ್ನು ಹಾಡಿದೆ, ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿದೆ, ಆ ನಿನ್ನ ಕವಿಗಳು ಕೈಚಳಕದಿಂದ ಸೃಷ್ಟಿಸಿದ ಸ್ನಿಗ್ಧ ಮೇಘ ಸುಂದರಿಯರೊಂದಿಗೆ.. ರೂಪಸಿಯರೊಂದಿಗೆ ರಮಿಸಿದೆ, ನನ್ನ ರಾತ್ರಿಗಳನ್ನು ಸುತ್ತುವರಿದು ಕಿವಿಯಲ್ಲಿ ಪಿಸುಗುಟ್ಟಿದ ರಮ್ಯ ಕಥೆಗಳನ್ನು ಆಲಿಸುತ್ತಾ ಉನ್ಮತ್ತನಾದೆ. ನಿನ್ನ ಪುಸ್ತಕಗಳಲ್ಲಿ ನಾನು ಎಲ್ಬ್ರೂಝ್ ಮತ್ತು ಮೌಂಟ್ ಬ್ಲಾಂಕ್ ಪರ್ವತಗಳ ಶಿಖರಾಗ್ರವನ್ನು ಏರಿ ಅಲ್ಲಿ ಬೆಳಗಿನ ಸೂರ್ಯೋದಯವನ್ನೂ, ಸಂಜೆ ಬಾನು ಸಮುದ್ರದಲ್ಲಿ ಕರಗಿ ಹೇಮವರ್ಣಕ್ಕೆ ತಿರುಗುವ ಪರ್ವತಗಳನ್ನು ಕಂಡೆ. ಆ ಶಿಖರಾಗ್ರದಿಂದ ಮೋಡಗಳನ್ನು ಸೀಳುತ್ತಾ ಕೋರೈಸುವ ಮಿಂಚುಗಳ ಕಂಡೆ, ಹಸಿರು ಬೆಟ್ಟ ಗುಡ್ಡಗಳನ್ನೂ, ಹೊಲಗಳನ್ನೂ, ನದಿಗಳನ್ನೂ, ಕೆರೆಗಳನ್ನೂ, ಪಟ್ಟಣಗಳನ್ನೂ ನೋಡಿದೆ.

ವಿವಿಧ ಕೂಗುಗಳನ್ನೂ, ಮಧುರ ಕೊಳಲಿನ ನಿನಾದವನ್ನೂ ಆಲಿಸಿದೆ, ನನ್ನೆಡೆಗೆ ದೇವರ ಸಂದೇಶವನ್ನು ಹೊತ್ತು ತಂದ ದೇವತೆಗಳ ರೆಕ್ಕೆಗಳನ್ನು ಸ್ಪರ್ಷಿಸಿದೆ.. ಆ ನಿನ್ನ ಪುಸ್ತಕಗಳಲ್ಲಿ ನಾನು ತಳವಿಲ್ಲದ ಕಾಲಗರ್ಭದಲ್ಲಿ ಪಯಣಿಸಿದೆ. ನಿಜವಾದ ಪವಾಡಗಳನ್ನೂ, ಸುಟ್ಟು ಧರೆಗುರುಳಿದ ನಗರಗಳನ್ನೂ, ಭೋದಿಸಿದ ಹೊಸ ಧರ್ಮಗಳನ್ನೂ, ದಂಡೆತ್ತಿ ಹೋದ ದೇಶಗಳನ್ನೂ ನೋಡಿದೆ.

ನಿನ್ನ ಪುಸ್ತಕಗಳು ನನಗೆ ಜ್ಞಾನವನ್ನು ನೀಡಿದವು.
ಶತಮಾನಗಳಿಂದ ಸೃಷ್ಠಿಯಾದ ಮಾನವನ ಅದಮ್ಯ ಚಿಂತನೆಗಳೆಲ್ಲವೂ ನನ್ನ ತಲೆಯಲ್ಲಿ ಪುಟ್ಟ ಗುಳ್ಳಿಯಂತೆ ಸೇರಿಕೊಂಡಿವೆ. ಇವತ್ತು ನಾನು ನಿಮ್ಮೆಲ್ಲರಿಗಿಂತ ಜಾಣನಾಗಿರುವೆ ಎಂದು ತಿಳಿದಿದೆ. ಮತ್ತು ನಾನು ನಿನ್ನೆಲ್ಲಾ ಪುಸ್ತಕಗಳನ್ನು ತ್ಯಜಿಸಿರುವೆ, ಎಲ್ಲಾ ಪುಣ್ಯಗಳ ಸರಕುಗಳನ್ನು ಮತ್ತು ಜ್ಞಾನವನ್ನು ಕೂಡಾ. ಎಲ್ಲವೂ ಶೂನ್ಯ, ನಶ್ವರ ಮತ್ತು ಮರೀಚಿಕೆಗಳನ್ನು ಹುಟ್ಟಿಸುವ ಮತಿಭ್ರಾಂತಿ. ನೀನು ಅದೆಷ್ಟು ಗರ್ವದಿಂದಲೂ, ಜಾಣತನದಿಂದಲೂ, ಸುಂದರವಾಗಿಯೂ ಬದುಕಿದರು ಕೂಡಾ ಮೃತ್ಯು ನಿನ್ನನ್ನು ಬಿಲದೊಳಗಿನ ಇಲಿಯನ್ನು ಹೊರಗೆಳೆದು ಕೊಲ್ಲುವಂತೆ ಈ ಭೂಮಿಯ ಮೇಲಿಂದ ಒರೆಸಿ ಹಾಕಬಲ್ಲದು. ಮತ್ತು ನಿನ್ನ ಸಮೃದ್ಧತೆ, ನಿನ್ನ ಇತಿಹಾಸ, ನಿನ್ನ ಮಹಾಪುರುಷರ ಅಮರ ಜ್ಞಾನಗಳೆಲ್ಲವೂ ಮಂಜಿನ ಹನಿಗಳಂತೆ ಈ ವಿಶ್ವದಿಂದ ಕರಗಿ ಹೋಗಬಲ್ಲವು. ನೀನೊಬ್ಬ ಹುಚ್ಚ ಮತ್ತು ತಪ್ಪು ಹಾದಿಯಲ್ಲಿ ಕ್ರಮಿಸಿದೆ. ಸತ್ಯದ ಬದಲಿಗೆ ಸುಳ್ಳನ್ನೂ, ಸೌಂದರ್ಯದ ಬದಲಿಗೆ ಕುರೂಪವನ್ನೂ ಆರಿಸಿಕೊಂಡೆ. ಸೇಬು ಮತ್ತು ಕಿತ್ತಳೆ ಮರಗಳಿಂದ ಹಣ್ಣುಗಳ ಬದಲಿಗೆ ಒಮ್ಮೆಲೇ ಹಲ್ಲಿಗಳು ಮತ್ತು ಕಪ್ಪೆಗಳು ಉದುರಿದರೆ ನಿನಗೆ ಅಚ್ಚರಿಯಾಗಬಹುದು. ಗುಲಾಬಿ ಹೂಗಳು ಒಮ್ಮೆಲೆ ಕುದುರೆಯ ಬೆವರಿನಂತೆ ದುರ್ನಾತ ಬೀರತೊಡಗಿದರೆ ನಿನಗೆ ಅಚ್ಚರಿಯಾಗಬಹುದು. ಸ್ವರ್ಗದ ಬದಲಿಗೆ ಭೂಮಿಯನ್ನು ಬಯಸಿ ಚೌಕಾಸಿಗಿಳಿದ ನಿನ್ನನ್ನು ನಾನು ಅದೇ ಅಚ್ಚರಿಯಿಂದ ನೋಡುತ್ತಿರುವೆ.

ನಾನು ನಿನ್ನನ್ನು ಅರ್ಥೈಸಲು ಬಯಸುವುದಿಲ್ಲ. ಮತ್ತು ನೀನು ನನಗೆ ಕೊಡಲಿರುವ ಆ ಎರಡು ಮಿಲಿಯ ಹಣವನ್ನು ತಿರಸ್ಕರಿಸುವ ಮೂಲಕ ನಿನ್ನನ್ನು ಋಣಮುಕ್ತಗೊಳಿಸುತ್ತಿರುವೆ. ಒಂದೊಮ್ಮೆ ಆ ಹಣದ ಮೂಲಕ ಸ್ವರ್ಗದ ಕನಸು ಕಾಣುತ್ತಿದ್ದ ನಾನು ಇಂದು ಅದನ್ನು ತಿರಸ್ಕರಿಸುತ್ತಿರುವೆ, ಮತ್ತು ನನಗೆ ಅದರ ಮೇಲಿರುವ ಸಂಪೂರ್ಣ ಹಕ್ಕಿನಿಂದ ವಿರಹಿತಗೊಂಡಿರುವೆ. ನಿಗದಿತ ಸಮಯದಿಂದ ಐದು ನಿಮಿಷಗಳ ಮುಂಚೆಯೇ ಇಲ್ಲಿಂದ ಹೊರ ಹಾರಿ ನಿನ್ನ ಒಪ್ಪಂದವನ್ನೇ ಮುರಿಯುವೆ”.

ಅಷ್ಟನ್ನೂ ಓದಿ ಮುಗಿಸಿದ ಆ ಬಡ್ಡಿವ್ಯಾಪಾರಿ ಆ ಪತ್ರವನ್ನು ಮೆಲ್ಲನೆ ಮೇಜಿನ ಮೇಲಿರಿಸಿ, ಆ ಅಪರೂಪದ ವ್ಯಕ್ತಿಯ ತಲೆಯನ್ನೊಮ್ಮೆ ಚುಂಬಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದ. ಆತನ ಜಂಘಾಬಲವೇ ಉಡುಗಿಹೋಗಿತ್ತು. ಆತ ಹಿಂದೆಂದೂ ಇಷ್ಟು ದುರ್ಬಲನಾಗಿರಲಿಲ್ಲ. ಶೇರುಮಾರುಕಟ್ಟೆಯ ಮಹಾಕುಸಿತದ ಸಮಯದಲ್ಲಿಯೂ ಇಂತಹ ನಿಕೃಷ್ಟ ಸ್ಥಿತಿಗಿಳಿದಿರಲಿಲ್ಲ.

ಮನೆಗೆ ಬಂದವನೇ ಹಾಸಿಗೆಯ ಮೇಲೆ ಬಿದ್ದುಕೊಂಡನು. ಬಿಕ್ಕಳಿಕೆಗಳು ಮತ್ತು ಕಣ್ಣೀರುಗಳು ನಿದ್ರೆಯನ್ನು ಆತನಿಂದ ತುಂಬಾ ಹೊತ್ತು ತಡೆಹಿಡಿದವು.

ಮಾರನೇ ದಿನ ಬೆಳಿಗ್ಗೆ ಬಡಪಾಯಿ ಕಾವಲುಗಾರ ಆತನ ಬಳಿ ಓಡೋಡುತ್ತ ಬಂದು ಆತ ಕಂಡುದನ್ನು ಹೇಳಿದ. ಕೈದಿಯು ಕೋಣೆಯ ಕಿಟಕಿಯ ಮೇಲೆ ಹತ್ತಿ ತೋಟದೊಳಕ್ಕೆ ಇಳಿದು ಅಲ್ಲಿಂದ ಗೇಟಿನ ಮೂಲಕ ಹೊರಹೋಗಿ ಕಾಣದಾಗಿದ್ದ.

ಬಡ್ಡಿವ್ಯಾಪಾರಿ ಕೂಡಲೇ ಕಾವಲುಗಾರನೊಡನೆ ತೋಟದ ಕೋಣೆಗೆ ಹೋಗಿ ಕೈದಿ ಪರಾರಿಯಾದುದನ್ನು ಖಚಿತಪಡಿಸಿದ.

ಅನಗತ್ಯ ಗಾಳಿಸುದ್ದಿಗಳು ಹರಡದಂತೆ ತಡೆಯಲು ಆತ ಆ ಕರಾರುಭಂಗ ಪತ್ರವನ್ನು ಮೇಜಿನಿಂದ ತೆಗೆದುಕೊಂಡ. ಮನೆಗೆ ಬಂದವನೇ ಅದನ್ನು ಪೆಟ್ಟಿಗೆಯೊಳಗೆ ಭದ್ರವಾಗಿಟ್ಟುಕೊಂಡು ಬೀಗಜಡಿದ.

ಮುಗಿಯಿತು

ಆಂಟನ್ ಚೆಕೋವ್
ಕನ್ನಡಕ್ಕೆ : ಪುನೀತ್ ಅಪ್ಪು

ಅಸ್ತಿತ್ವದ ಏಕತ್ವ(ವಹ್ದತುಲ್‌ ವುಜೂದ್):‌ ಒಂದು ತಾತ್ವಿಕ ವಿಶ್ಲೇಷಣೆ

ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇದೆ ಎನ್ನಬಹುದಾದ ವಸ್ತುವಾದರೂ ಯಾವುದು? ವಾಸ್ತವದಲ್ಲಿ ಇಲ್ಲೇನಿದೆ? ನಮ್ಮ ಸುತ್ತಮುತ್ತ ಕಣ್ಣಾಡಿಸುವಾಗ ಹಾಗೂ ಇಂದ್ರಿಯಗಳ ಮೂಲಕ ಅನುಭವಿಸುವಾಗ ಅನೇಕ ವಸ್ತುಗಳು ಅಸ್ತಿತ್ವದಲ್ಲಿರುವುದು ಸ್ವಯಂವೇದ್ಯ ಸತ್ಯವಾಗಿ ತೋರುತ್ತದೆ. ಆದರೆ, ಇವೆಲ್ಲ ಇಲ್ಲಿ ಇರಲೇಬೇಕೆಂಬ ಅನಿವಾರ್ಯತೆಯಿಲ್ಲ ಎಂಬ ಅಂಶವೂ ಕೂಡ ಅಷ್ಟೇ ಸತ್ಯ. ಇಸ್ಲಾಮೀ ತತ್ವಚಿಂತನೆ ಪ್ರಕಾರ ಮನುಷ್ಯರಾದಿ ಎಲ್ಲಾ ಸೃಷ್ಟಿಗಳು ಸಾಧ್ಯತಾ ಅಸ್ತಿತ್ವವನ್ನು(contingent being) ಹೊಂದಿದೆ. ಅಂದರೆ ನಾವೆಲ್ಲ ಅನಿವಾರ್ಯವಾಗಿ ಇರಬೇಕಾದವರಲ್ಲ; ನಮ್ಮ ಇರವು ದೇವರನ್ನು ಅವಲಂಬಿಸಿಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ದೇವರು ಅನಿವಾರ್ಯ ಅಸ್ತಿತ್ವ(necessary existence) ಹೊಂದಿದವನು ಮತ್ತು ಆತನ ಅಸ್ತಿತ್ವ ಖಂಡಿತವಾಗಿ ಇರಬೇಕಾದದ್ದು.

ಆದಾಗ್ಯೂ, ಇರುವಿಕೆ ಎನ್ನುವುದು ದೇವರ ಸತ್ತುವಿನ (ದ್ಸಾತ್, ಅಸ್ತಿತ್ವದ ಯಥಾರ್ಥತೆ) ಅವಿಭಾಜ್ಯ ಗುಣವಾಗಿರುವಾಗ(ಅಂದರೆ ದೇವರು ಇಲ್ಲದಿರುವುದು ಅಸಾಧ್ಯ) ಇತರ ವಸ್ತುಗಳೂ ಕೂಡ ʼಇದೆʼ ಎನ್ನಬಹುದೇ? ಅಸ್ತಿತ್ವವೆಂಬ ಗುಣವನ್ನು ದೇವರಿಗೂ ಸೃಷ್ಟಿಗಳಿಗೂ ಆರೋಪಿಸಬಹುದೇ? ಹಾಗೆ ಮಾಡಬಹುದಾದರೆ, ಅಸ್ತಿತ್ವವೆಂಬ ಪರಿಕಲ್ಪನೆಯನ್ನೇ ದೃಢಪಡಿಸದೆ ಮಾಡುವುದಾದರೂ ಹೇಗೆ? ಹಲವಾರು ಶತಮಾನಗಳಿಂದೀಚಿಗೆ ಇಸ್ಲಾಮೀ ತತ್ವಜ್ಞರು, ದೇವತಾಶಾಸ್ತ್ರಜ್ಞರು ಮತ್ತು ಅನುಭಾವಿ ತಾತ್ವಿಕರನ್ನು ಗಾಢ ಚಿಂತನೆಗೆ ಪ್ರೇರೇಪಿಸಿದ ಪ್ರಶ್ನೆಗಳಿವು. ಪರಿಣಾಮವಾಗಿ, ಕೆಲವು ತತ್ವಜ್ಞಾನಿಗಳು ಅಸ್ತಿತ್ವದಲ್ಲಿರುವುದು ದೇವರು ಮಾತ್ರ, ಆತನ ಹೊರತು ಯಾವುದೂ ಇಲ್ಲ ಎಂಬ ವಾದವನ್ನೂ ಹೂಡಿದ್ದಾರೆ. ಮತ್ತೊಮ್ಮೆ ನೀವು ಸುತ್ತಲೂ ನೋಟ ಬೀರಿದರೆ ನೀವೊಳಪಟ್ಟಂತೆ ಯಾವುದೂ ಕೂಡ ನಿಜದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ತೋರಬಹುದು. ವಹ್‌ದತುಲ್‌ ವುಜೂದ್‌ (ಅಸ್ತಿತ್ವದ ಏಕತ್ವ) ಎನ್ನಲಾಗುವ ಪ್ರಸ್ತುತ ಸಿದ್ದಾಂತ, ಮೂಲತಃ ಸತ್ಯದ ಅನುಭವಾತ್ಮಕ ಅನಾವರಣಗಳ ಮೇಲೆ ಆಧಾರಿತಗೊಂಡಿದೆಯೆಂದು ಹೇಳಬಹುದಾದರೂ, ತಾರ್ಕಿಕವಾಗಿ ಸಾದರಪಡಿಸಬಹುದಾದ ತಾತ್ವಿಕ ಸಿದ್ದಾಂತವಾಗಿಯೂ ಇದನ್ನು ತೆಗೆದುಕೊಳ್ಳಬಹುದು.

ಈ ನಿಟ್ಟಿನಲ್ಲಿ ಮಂಡಿಸಲಾದ ತಾರ್ಕಿಕ ವಿಚಾರ ಸರಣಿಯನ್ನೊಮ್ಮೆ ಅವಲೋಕಿಸೋಣ. ಅಸ್ತಿತ್ವವೆಂಬುದು ದೇವರ ನೈಜಸತ್ತುವೇ(essence) ಆಗಿದೆ. ಆದ್ದರಿಂದ ಇತರ ವಸ್ತುಗಳನ್ನು ಆತನ ಅಂಶಗಳು ಎಂದರೆ ಮಾತ್ರ ಅವುಗಳಿಗೆ ಅಸ್ತಿತ್ವವನ್ನು ಆರೋಪಿಸಲು ಸಾಧ್ಯ. ಪ್ರಸ್ತುತ ವಾದಸರಣಿಯನ್ನು ಇನ್ನೂ ಸರಳವಾಗಿ ಹೀಗೆ ಮಂಡಿಸಬಹುದು. ದೇವರು ಅನಿವಾರ್ಯ ಅಸ್ತಿತ್ವ ಉಳ್ಳವನು ಅಥವ ನಿರ್ಮಲ ಇರವನ್ನು(pure existence) ಹೊಂದಿದವನು. ವಹ್‌ದತುಲ್ ವುಜೂದಿನ ವಕ್ತಾರರ ಪ್ರಕಾರ ದೇವರ ಹೊರತಾಗಿರುವ ವಸ್ತುಗಳು ಅಸ್ತಿತ್ವದಲ್ಲಿದೆಯೆಂದು ಅಲಂಕಾರಿಕವಾಗಿ ಮಾತ್ರ ಹೇಳಬಹುದು. ವಾಸ್ತವಿಕವಾಗಿ ತೆಗೆದುಕೊಂಡರೆ, ಎಲ್ಲ ವಸ್ತುಗಳಲ್ಲಿ ದೇವರು ಅಡಕಗೊಂಡಿದ್ದಾನೆಂದು ತರ್ಕಿಸುವ ವಿಶ್ವ ದೇವತಾವಾದದಲ್ಲಿ(ಪ್ಯಾಂಥಿಯಿಸಂ) ಸಿಲುಕಿದಂತಾಗುವುದು. ಇವರ ಪ್ರಕಾರ ತೌಹೀದ್‌ನ ಮೂಲಾರ್ಥ ನೈಜ ಅಸ್ತಿತ್ವವು ದೇವರಿಗೆ ಮಾತ್ರ ಸಲ್ಲುವಂತದ್ದು ಎಂದಾಗಿದೆ. ಜತೆಗೆ, ಅನೇಕ ವಸ್ತುಗಳು ಇವೆ ಎನ್ನುವಾಗ ಇರುವಿಕೆ ಎಂಬುದು ದೇವರಿಗಿಂತ ಪೂರ್ವಭಾವಿಯಾಗಿರುವ ಹಾಗೂ ಆತನಿಗಿಂತ ಉನ್ನತವಾದ ಒಂದು ಸಂಗತಿಯಾಗುವುದು. ಆಗ ದೇವರು ಮತ್ತು ಸೃಷ್ಟಿಗಳನ್ನು ಇರುವಿಕೆ ಎಂಬ ಅತ್ಯುನ್ನತ ವರ್ಗದ ವಿಭಿನ್ನ ಉಪಾಂಗಗಳಾಗಿ ಪರಿಗಣಿಸಬೇಕಾಗುತ್ತದೆ.

ಇರುವಿಕೆ ಎಂಬುವುದು ದೇವರಿಗಿಂತ ಮೇಲೆಯಾದ ಸಂಗತಿಯೋ ಅಥವಾ ವರ್ಗವೋ ಆಗುವ ತಾತ್ವಿಕ ಸಮಸ್ಯೆಯನ್ನು ಪರಿಹರಿಸಲು ಹಾಗೂ ದೇವರನ್ನು ವಿಶ್ವದ ಭಾಗವಾಗಿ ಪರಿಗಣಿಸುವ ಸರ್ವದೇವತಾವಾದದಿಂದ ಮುಕ್ತಿ ಹೊಂದಲು ವಹ್‌ದತುಲ್ ವುಜೂದಿನ ವಕ್ತಾರರು ದೇವರು ಮಾತ್ರ ವಾಸ್ತವಿಕವಾಗಿ ಅಸ್ತಿತ್ವದಲ್ಲಿರುವುದು ಎಂಬ ಪ್ರತಿಪಾದನೆಯನ್ನು ಸಾರಿದರು. ಇಂತ ಪ್ರತಿಪಾದಕರ ಪೈಕಿ ಸದ್ರುದ್ದೀನ್‌ ಅಲ್-ಖೂನವೀ(d.673AH/1274CE)‌ ಮತ್ತು ದಾವೂದುಲ್‌ ಖೈಸರಿ(d.751AH/1350CE) ಯಂತಹ ಹಲವು ವಿದ್ವಾಂಸರು ಮತ್ತು ಸಂತರು ಇದ್ದಾರೆ. ಶೈಖುಲ್‌ ಅಕ್ಬರ್‌ ಮುಹ್ಯುದ್ದೀನ್‌ ಇಬ್ನ್ ಅರಬಿ (d.638AH/1240CE) ಯವರ ಮುಖ್ಯಶಿಷ್ಯನೂ ಅಳಿಯನೂ ಆಗಿದ್ದ ಖೂನವೀ, ಶ್ರೇಷ್ಠ ಸಂತ ಜಲಾಲುದ್ದೀನ್‌ ರೂಮಿ(d.672AH/1273CE) ಯವರ ಸಹವರ್ತಿಯೂ ಆಗಿದ್ದರು. ಖೈಸರಿ ಎಂಬವರು ಇಝನಿಕ್‌ ಎಂಬಲ್ಲಿ ನೆಲೆನಿಂತಿದ್ದ ಪ್ರಪಥಮ ಒಟ್ಟೋಮನ್‌ ವಿದ್ಯಾಲಯದ ಮುಖ್ಯಾಧಿಕಾರಿಯಾಗಿ ಪ್ರಸಿದ್ಧರಾದವರು.

ಖೂನವೀ ಮತ್ತು ಖೈಸರಿ ಎಂಬೀ ಉಭಯ ಮಹಾತ್ಮರು ಸೃಷ್ಟಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲವೆಂದೂ, ಅವು ಯಥಾರ್ಥ ಇರವು ಆಗಿರುವ ದೇವರೊಂದಿಗೆ ಸಂಬಂಧ(ನಿಸ್‌ಬ) ವನ್ನು ಮಾತ್ರ ಹೊಂದಿದೆಯೆಂದು ಪ್ರತಿಪಾದಿಸಿದರು. ಇಂಥ ಒಂದು ತತ್ವವನ್ನು ಒಪ್ಪಿಕೊಂಡು ನಿಜಾರ್ಥದಲ್ಲಿ ಸೃಷ್ಟಿಗಳು ಇವೆ ಎನ್ನಲಾಗದೆಂದು ಬಗೆದುಕೊಂಡರೆ ಇನ್ನಷ್ಟು ಸಮಸ್ಯೆಗಳು ಕಾಡುತ್ತವೆ. ಕಡೇಪಕ್ಷ ನಮ್ಮ ಮತ್ತು ಸುತ್ತಮುತ್ತಲಿರುವ ವಸ್ತುಗಳ ಇರವನ್ನು ನಾವು ಅನುಭವಿಸುತ್ತಿದ್ದೇವೆಂಬ ಭಾವವನ್ನು ಅಲ್ಲಗಳೆಯಲಾಗದು. ನಿಜದಲ್ಲಿ ಇಲ್ಲದಿದ್ದರೆ ಅವುಗಳ ಸಂವೇದನೆಯಾದರೂ ಹೇಗುಂಟಾಗುತ್ತದೆ?. ಸೃಷ್ಟಿಗಳು ʼಇವೆʼ ಎನ್ನಲಾಗದಿದ್ದರೂ ಕೂಡ, ನಾವು ಅನುಭವಿಸುವ ಅವುಗಳ ಉಪಸ್ಥಿತಿಯನ್ನು ವಿವರಿಸಲು ಬೇರೊಂದು ವಿಧಾನ ಕಂಡುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವಹ್ದತುಲ್‌ ವುಜೂದಿನ ಪ್ರವರ್ತಕರು ಸೃಷ್ಟಿಗಳನ್ನು ದೇವರ ಜ್ಞಾನದಲ್ಲಿರುವ ಸ್ಥಿರ ಘಟಕಗಳೆಂದು (ಅಲ್‌ ಅಯ್‌ನು ತ್ಸಾಬಿತಃ) ನಿರೂಪಿಸಿದ್ದಾರೆ. ಅವು ವಾಸ್ತವಿಕ ಅಸ್ತಿತ್ವ ಹೊಂದಿಲ್ಲ; ಹೊರತು, ದೇವರ ಜ್ಞಾನದ ಮೂಲಕ ಆತನ ಅಸ್ತಿತ್ವದೊಂದಿಗೆ ನಂಟನ್ನು ಹೊಂದಿ, ಅವು ಆತನ ಅರಿಯುವಿಕೆಯ ಒಳಗೆ ಅಂತರ್ಗತಗೊಂಡಿದೆ. ಪ್ರಸ್ತುತ ತಾತ್ವಿಕ ಸಾಮಾಗ್ರಿ ಆಧಾರಿತ ವಿಶ್ಲೇಷಣೆಯ ಹಿನ್ನಲೆಯಲ್ಲಿ, ಮತ್ತೊಮ್ಮೆ ಸುತ್ತಮುತ್ತಲ ವಸ್ತುಗಳನ್ನು ಸರ್ವೇಕ್ಷಣೆ ಮಾಡಿದರೆ ತಮ್ಮ ಇಂದ್ರಿಯಗಳ ಮೂಲಕ ಸತ್ಯವಾದ ಯಾವೊಂದನ್ನೂ ಅನುಭವಿಸುತ್ತಿಲ್ಲ ಎಂದು ಹೇಳಬಹುದು. ಒಟ್ಟಾರೆ ಸೃಷ್ಟಿಗಳ ಅಸ್ತಿತ್ವವೆಂದರೆ ಇಷ್ಟೆ, ಅವುಗಳ ಕುರಿತು ದೇವರಿಗೆ ಅರಿವಿದೆ ಹಾಗೂ ಪ್ರಸ್ತುತ ಅರಿವು ಸೃಷ್ಟಿಗಳ ಸಂಯೋಜನೆಗೆ ಹೇತುವಾಗುವುದು.

ಪ್ರಸ್ತುತ ವೈಚಾರಿಕ ಚಿಂತನೆಯ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ತಮ್ಮನ್ನು ಬಹುವಾಗಿ ಕಾಡಬಹುದು. ದೇವರನ್ನು ಬಿಟ್ಟು ಯಾವುದಕ್ಕೂ ವಾಸ್ತವಿಕ ಸತ್‌ ಇಲ್ಲವೆಂದೂ ಹಾಗೂ ನಾವು ಅನುಭವಿಸುವ ವಸ್ತುಗಳೆಲ್ಲ ದೇವರ ಜ್ಞಾನದಲ್ಲಿರುವ ಘಟಕಗಳು ಮಾತ್ರವೆಂದು ನಿರೂಪಿಸುವುದರಿಂದ ಪ್ರಯೋಜನವಾದರೂ ಏನು? ನಾವಿಲ್ಲಿ ಸುಖಾಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಿದ್ದೇವೆಂದು ತೋರಬಹುದು. ಕಾರಣ, ಸೃಷ್ಟಿಗಳಿಗೆ ಅಸ್ತಿತ್ವವೆಂಬ ಗುಣಲಕ್ಷಣ ಇದೆ ಎಂದರೂ ಇಲ್ಲ ಅಂದರೂ ದೇವತಾಶಾಸ್ತ್ರ ನಿಲುವಿನ ಪ್ರಕಾರ ಅವೆಲ್ಲ ದೈವಿಕ ಪರಮ ಇಚ್ಛೆಯ ಪ್ರಭಾವಶಾಲಿ ಪರಿಧಿಯೊಳಗೇ ಬರುತ್ತವೆ. ಈ ಹಿನ್ನಲೆಯಲ್ಲಿ, ಸೃಷ್ಟಿಗಳನ್ನು ಅಸ್ತಿತ್ವದಲ್ಲಿರುವ ಮೂರ್ತ ವಸ್ತುಗಳೆಂದು ಕರೆಯುವುದಕ್ಕೆ ಬದಲಾಗಿ ದೇವರ ಜ್ಞಾನದ ಅಪರಿವರ್ತನೀಯ ಘಟಕಗಳೆಂದು ಬಣ್ಣಿಸುವುದು ಪದಗಳ ಆಟಾಟೋಪವಲ್ಲದೆ ಬೇರೇನೂ ಅಲ್ಲವೆಂದು ಭಾಸವಾದರೆ ಅಚ್ಚರಿಯೇನೂ ಇಲ್ಲ.

ಆದಾಗ್ಯೂ, ಪದಗಳಲ್ಲಿ ಅಗಾಧ ಶಕ್ತಿ ಅಂತರ್ಲೀನಗೊಂಡಿದೆ ಹಾಗೂ ಅವುಗಳನ್ನು ಅರ್ಥೈಸುವ ರೀತಿಗೂ ಪ್ರಾಮುಖ್ಯತೆ ಇದೆ. “ಇರುವುದು” ಎಂಬ ಸಂಜ್ಞೆ ಪೌರಾಣಿಕ ಕಾಲದಿಂದಲೇ ಚರ್ವಿತ ಚರ್ವಣಗೊಂಡಿರುವಂತದ್ದು. ಇಸ್ಲಾಮಿನ ಆಗಮನದೊಂದಿಗೆ ದೈವೇತರ ವಸ್ತುಗಳಿಗೆ ಇರುವಿಕೆ ಎಂಬ ಗುಣ ಆರೋಪಿಸುವುದರ ಒಳತಿರುಳೇನು ಎಂಬ ಚರ್ಚೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡಿತು. ನಿರ್ದಿಷ್ಟ ವಸ್ತುವೊಂದು ಇದೆ ಎನ್ನುವುದು ತತ್ವಮೀಮಾಂಸಕರ ನಿಟ್ಟಿನಲ್ಲಿ ಆ ವಸ್ತುವಿನ ಕುರಿತ ಗಂಭೀರ ಚಿಂತನೆಗೆ ಎಡೆಮಾಡಿಕೊಡುತ್ತದೆ. ನಿಜದಲ್ಲಿ, ದೇವರ ಹೊರತುಪಡಿಸಿ ಏನಾದರೂ ಇದೆ ಎನ್ನಲು ಸಾಧ್ಯವೇ?. ಖುರಾನಿನ ಅರ್ರಹ್ಮಾನ್‌ ಎಂಬ ಅಧ್ಯಾಯದಲ್ಲಿ ಬರುವ ಸೂಕ್ತ ಹೀಗಿದೆ: “ಭೂಮಿಯಲ್ಲಿರುವುದೆಲ್ಲಾ ನಾಶ ಹೊಂದುವುದು, ಆದರೆ ಪರಮ ಸಾರ್ವಭೌಮತೆಯನ್ನೂ ಅಪಾರ ಕರುಣೆಯನ್ನೂ ಹೊಂದಿದ ನಿಮ್ಮ ಪಾಲಕನು ಚಿರಂತನಾಗಿರುವನು”.(55:26-27).

ಕೆಲವೊಂದು ವ್ಯಾಖ್ಯಾನ ಸರಣಿ ಪ್ರಸ್ತುತ ಸೂಕ್ತವನ್ನು, ಸಂಪೂರ್ಣ ನಾಶವಾಗುವ ಕಾರಣದಿಂದ, ದೇವರ ಹೊರತು ಯಾವುದೂ ಕೂಡ ಇದೆ ಎನ್ನಲಾಗದು ಎಂಬರ್ಥದಲ್ಲಿ ವ್ಯಾಖ್ಯಾನಿಸಿದೆ. “ನಾಶವಾಗುತ್ತದೆ” ಎಂಬುವುದರ ಅರಬಿಕ್‌ ಸಂವಾದೀ ಪದ “ಫಾನ್” ಎಂದಾಗಿದೆ.‌ ನಾಶವಾಗುವ ಸ್ಥಿತಿಯಲ್ಲಿರುವಂತದ್ದು ಎಂಬರ್ಥ ಬರುವ ಕರ್ತೃಪದವಾಗಿದೆ ಇದು. ಪ್ರಸ್ತುತ ಅಂಶವನ್ನು ಗಣನೆಗೆ ತೆಗೆದುಕೊಳ್ಳುವಾಗ ದೇವರು ಮತ್ತು ಸೃಷ್ಟಿಗಳಿಗಿರುವ ಅಸ್ತಿತ್ವ ಸಮಾನ ಸ್ವರೂಪವನ್ನು ಹೊಂದಿದೆಯೇ, ಅಲ್ಲ ತಾರತಮ್ಯದಿಂದ ಕೂಡಿದೆಯೇ ಎಂಬ ಜಿಜ್ಞಾಸೆಯೂ ಮೂಡುತ್ತದೆ. ಜಗತ್ತಿನ ಕುರಿತ ನಮ್ಮ ನಂಬಿಕೆಗಳಿಗೆ ಸಂಕೀರ್ಣವಾದ ಸವಾಲೊಡ್ಡಬಹುದಾದ ತೀವ್ರತರ ಪ್ರಭಾವವು ಪದಗಳ ಅರ್ಥಗಳಿಗಿವೆ ಎಂದರೆ ಉತ್ಪ್ರೇಕ್ಷೆಯ ಮಾತಾಗದು.

ಇನ್ನೂ ಮುಂದುವರಿದು ಆಲೋಚಿಸುವಾಗ, ಮನುಷ್ಯರ ಸಮೇತ ಸೃಷ್ಟಿಗಳಿಗೆ ಅಸ್ತಿತ್ವವಿದೆಯೆಂಬ ನಂಬಿಕೆ ಆತ್ಮ ಶುದ್ಧೀಕರಣ (ತಝ್‌ಕಿಯತುನ್ನಫ್‌ಸ್‌) ಪಥದಲ್ಲಿ ಕೆಲವೊಂದು ಪ್ರತಿಬಂಧಕಗಳನ್ನು ಒಡ್ಡುತ್ತವೆ ಎಂಬ ವಿಚಾರವನ್ನು ಮನಗಾಣಬಹುದು. ಅಹಂ ಭಾವವನ್ನು ನಿರ್ಮೂಲನೆ ಮಾಡುವುದು ಅಧ್ಯಾತ್ಮದ ಅಡಿಪಾಯವಾಗಿರುವಾಗ ದೇವರ ಜತೆಗೆ ನಾವೂ ಇದ್ದೇವೆಂದು ಭಾವಿಸುವುದು ಸಮಸ್ಯತ್ಮಾಕವೇ ಸರಿ. ಆದ್ದರಿಂದ, ನಾವು ಈಗಾಗಲೇ ವಿವರಿಸಿದ ಸೈದ್ಧಾಂತಿಕ ನೆಲೆಗಟ್ಟಿಗಿಂತ ಮಿಗಿಲಾಗಿ ವಹ್ದತುಲ್‌ ವುಜೂದಿನ ರೂವಾರಿಗಳಿಗೆ ಪ್ರಾಯೋಗಿಕ ನೆಲೆಗಟ್ಟಿನಲ್ಲೇ ನಾವೆಲ್ಲ ಅಸ್ತಿತ್ವವಿಲ್ಲದವರು ಹಾಗೂ ದೇವರ ಸತ್ತುವಿನಲ್ಲಿ ಲೀನವಾಗುವಂತವರು. ಪ್ರಸ್ತುತ ಮಾರ್ಗದಲ್ಲಿ ದೇವರ ಹೊರತಾದ ಆತ್ಮ ಮತ್ತು ಅಸ್ತಿತ್ವದ ಕಲ್ಪನೆ ನಿರರ್ಥಕವಾದುದು.

ಇಸ್ಲಾಮೀ ಚಿಂತನಾ ಧಾರೆಯಲ್ಲಿ, ವಹ್ದತುಲ್‌ ವುಜೂದ್‌ ಎಂಬ ಪರಿಕಲ್ಪನೆಯು ಆಧ್ಯಾತ್ಮಿಕ, ಖುರಾನ್ ವ್ಯಾಖ್ಯಾನ ಹಾಗೂ ನೀತಿಶಾಸ್ತ್ರ ಗ್ರಂಥಗಳಲ್ಲಿ ಕಂಡುಬರುವಂತೆ ಹಲವಾರು ದಾರ್ಶನಿಕ ವಿಶ್ಲೇಷಣೆಗಳ ಮುಖಾಂತರ ಸಮೃದ್ಧಗೊಡಿದೆ. ಹಾಗೆಯೇ ಪ್ರಸ್ತುತ ತತ್ವವನ್ನು ಖಂಡಿಸುವ ಧಾರೆಗಳಿಗೂ ಭದ್ರ ತಾತ್ವಿಕ ಬುನಾದಿಯಿದೆ. ಅತ್ಯಂತ ಮುಖ್ಯ ಟೀಕೆ ಕಂಡುಬರುವುದು ಪ್ರಸಿದ್ದ ದೇವತಾಶಾಸ್ತ್ರಜ್ಞ ಸಅದುದ್ದೀನ್‌ ತಫ್‌ತಾಝಾನಿ (d.791AH/1390CE)ಯವರ ಶರ್ಹುಲ್‌ ಮಖಾಸಿದ್‌ನಲ್ಲಿ. ಅವರ ಪ್ರಕಾರ ʼಅಸ್ತಿತ್ವʼ ಎಂಬಂತ ಒಂದು ಸಂಗಂತಿಯೇ ಇಲ್ಲ. ದೇವರು ಮತ್ತು ಸೃಷ್ಟಿಗಳೆಂಬ ವಿಭಿನ್ನ ವಸ್ತುಗಳಿಗೆ ಪ್ರಯೋಗಿಸಬಹುದಾದ ಕೇವಲ ಕಾಲ್ಪನಿಕ ಪದ ಅದು. ಆದ್ದರಿಂದ ಅದು ದ್ವಂದ್ವಾರ್ಥವುಳ್ಳ ಪದ. ಸ್ಪಷ್ಟವಾಗಿ ಹೇಳುವುದಾದರೆ, ಅಸ್ತಿತ್ವ ಪ್ರಾಥಮಿಕವಾಗಿ ದೇವರಿಗೆ ಹಾಗೂ ಎರಡನೆಯದಾಗಿ ಸೃಷ್ಟಿಗಳಿಗೆ ಅನ್ವವಾಗುತ್ತದೆ. ಅದು ಮನಸ್ಸು ಆಧಾರಿತ ಕಲ್ಪನೆಯಾದ ಕಾರಣದಿಂದ, ಎಲ್ಲ ವಸ್ತುಗಳಿಗೆ ಅಸ್ತಿತ್ವ ಇದೆ ಎನ್ನುವುದು ವಿಶ್ವದೇವತಾವಾದವಾಗಿ ಪರಿಣಮಿಸುವ ಸಮಸ್ಯೆ ಬರದು. ನಿಜದಲ್ಲಿ, ತಫ್‌ತಾಝಾನಿ ಅವರು ವಹ್ದತುಲ್‌ ವುಜೂದ್ ಪಂಥೀಯರನ್ನು ಸರ್ವದೇವತಾವಾದಿಗಳೆಂದು ಆರೋಪಿಸುತ್ತಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತಲ ವಸ್ತುಗಳ ಇರವನ್ನು ಅಲ್ಲಗಳೆಯಲಾಗದು. ದೇವರೆಂಬ ಸತ್‌ ಮಾತ್ರ ಇರುವುದೆಂದು ವಾದ ಮಾಡಿದರೆ ಅನಿವಾರ್ಯವಾಗಿ ಮಿಕ್ಕಿದ್ದೆಲ್ಲವೂ ದೇವರೇ ಆಗಬೇಕಾಗುವುದು. ಆದ್ದರಿಂದ, ಇಂದ್ರಿಯಾನುಭವಕ್ಕೆ ದಕ್ಕುವ ವಸ್ತುಗಳು ಮಿಥ್ಯೆ ಗಳು ಎನ್ನಲು ಯಾವುದೇ ಅವಕಾಶವಿಲ್ಲ. ಒಟ್ಟಾರೆ, ಪ್ರಸ್ತುತ ವಿವಾದ ಎಷ್ಟರ ಮಟ್ಟಿಗೆ ಇಂದ್ರಿಯಾನುಭವಗಳ ಮೇಲೆ ನಮಗೆ ವಿಶ್ವಾಸವಿದೆ ಎಂಬ ಅಂಶದ ಸುತ್ತ ಕೇಂದ್ರೀಕರಿಸಿದೆಯೆಂದು ತೋರುತ್ತದೆ. ನಾವು ಅನುಭವಿಸುತ್ತಿದ್ದೇವೆ ಎಂದ ಮಾತ್ರಕ್ಕೆ ಇಂದ್ರಿಯ ಗ್ರಾಹ್ಯ ವಸ್ತುಗಳಿಗೆ ಅಸ್ತಿತ್ವವಿದೆ ಎನ್ನಲಾದೀತೇ?

ನಮ್ಮ ಪ್ರಜ್ಞೆ ಮತ್ತು ಇಂದ್ರಿಯ ಗ್ರಹೀತ ಜ್ಞಾನಗಳಲ್ಲಿ ಗೊಂದಲವುಂಟು ಮಾಡುತ್ತದೆ ಎಂಬ ಕಾರಣದಿಂದ ಅನೇಕರಿಗೆ ಇಂದ್ರಿಯಾನುಭವಗಳಿಗೆ ನಿಲುಕುವ ವಸ್ತುಗಳಿಗೆ ಅಸ್ತಿತ್ವವಿಲ್ಲ ಎಂಬ ಸಿದ್ದಾಂತವನ್ನು ಒಪ್ಪುವುದು ಕಷ್ಟವೆನಿಸುತ್ತದೆ. ದೇವರು ಮತ್ತು ಸೃಷ್ಟಿಗಳ ನಡುವೆ ವ್ಯತ್ಯಾಸವನ್ನು ಪರಿಗಣಿಸುವುದರ ಜತೆಗೆ, ಅಸ್ತಿತ್ವದ ವಿಭಿನ್ನ ದರ್ಜೆಗಳು (ಮರಾತಿಬ್‌-ಉಲ್-ವುಜೂದ್)‌ ಎಂಬ ತತ್ವದ ಮೂಲಕ ಅಸ್ತಿತ್ವದ ಅನೇಕತ್ವಕ್ಕೊಂದು ಸ್ಪಷ್ಟೀಕರಣ ನೀಡಬಹುದಾಗಿದೆ. ಹಲವು ದೇವತಾಶಾಸ್ತ್ರಜ್ಞರು, ಅನುಭಾವಿಗಳು ಮತ್ತು ದಾರ್ಶನಿಕರ ವಿಶ್ಲೇಷಣೆಗೀಡಾದ ಪ್ರಸ್ತುತ ಸಿದ್ದಾಂತವು ಸೃಷ್ಟಿಗಳಿಗೆ ಅಸ್ತಿತ್ವಗುಣವನ್ನು ಆರೋಪಿಸಲು ವಿವಿಧ ಸ್ತರಗಳಿಂದ ಕೂಡಿದ ಶ್ರೇಣೀಕೃತ ವಿಧಾನವೊಂದನ್ನು ಮುಂದಿಡುತ್ತದೆ. ಪ್ರಸ್ತುತ ಸಿದ್ಧಾಂತದ ಪ್ರಕಾರ, ಅಸ್ತಿತ್ವಕ್ಕೆ ಮೂರು ಶ್ರೇಣಿಗಳಿವೆ. (1) ವಾಸ್ತವಿಕ. ಮನಸ್ಸಿನಲ್ಲಿರುವುದಕ್ಕಿಂತ ಹೆಚ್ಚುವರಿಯಾಗಿ ಬಾಹ್ಯದಲ್ಲಿ ಇರುವಂತದ್ದು ಹಾಗೂ ಇದನ್ನು ಸತ್ಯಕ್ಕೆ ಆರೋಪಿಸಲಾಗುತ್ತದೆ. (2) ಮಾನಸಿಕ ಅಸ್ತಿತ್ವ. ಇದನ್ನು ಮನಸ್ಸಿನಲ್ಲಿ ಮಾತ್ರವಿರುವ ಕಾರ್ಯಗಳಿಗೆ ಬಳಸಲಾಗುತ್ತದೆ. (3) ಭಾಷೀಯ ಅಸ್ತಿತ್ವ. ಇದನ್ನು ನಮ್ಮ ಮಾತು ಬರೆಹಗಳಲ್ಲಿ ಬರುವ ಕಾರ್ಯಗಳಿಗೆ ನೀಡಲಾಗುತ್ತದೆ.

ಮರಾತಿಬುಲ್‌ ವುಜೂದ್‌ ಎಂಬ ಸಿದ್ಧಾಂತವು ನಾವು ಚರ್ಚೆ ಮಾಡಿದ ಗೊಂದಲಕ್ಕೆ ಪೂರ್ಣತೆರೆ ಎಳೆಯಲು ಅಸಮರ್ಥವಾಗಿದೆ. ಕಾರಣ, ಯಥಾರ್ಥದಲ್ಲಿ ಅಥವಾ ಮನಸ್ಸಿನ ಹೊರಗೆ ಅಸ್ತಿತ್ವದಲ್ಲಿರುವಂತದ್ದೆಂಬ ವಿಂಗಡನೆಯನ್ನು ಅದು ಮುಂದಿಟ್ಟಿದೆ. ಆದರೆ ಸಮಸ್ಯೆಯ ಪರಿಹಾರಕ್ಕೆ ಮತ್ತೊಂದು ಆಯಾಮವನ್ನು ಹೆಚ್ಚಿಸಿದೆ ಎನ್ನಬಹುದು. ಅಸ್ತಿತ್ವಕ್ಕೆ ಬಹುಸ್ತರಗಳನ್ನು ದೃಢಪಡಿಸುವ ಮೂಲಕ, ವಿದ್ವಾಂಸರು ಅಸ್ತಿತ್ವದ ಭೇದರಾಹಿತ್ಯವನ್ನು ಹಾಗೂ ಒಂದೇ ವೇಳೆಯಲ್ಲಿ ಇರುವಿಕೆ-ಇಲ್ಲದಿರುವಿಕೆ ಒಂದುಗೂಡುತ್ತದೆಯೆಂಬ ಅಭಿಮತವನ್ನು ನಿರಾಕರಿಸಿದರು. ಇರುವಿಕೆಗೆ ವಿವಿಧ ಆಯಾಮಗಳಿವೆ ಮತ್ತು ಅವುಗಳ ವಿಭಿನ್ನ ಶ್ರೇಣಿಗಳಿಂದ ಅರ್ಥಮಾಡುವುದು ತಾತ್ವಿಕ ಪ್ರಶ್ನೆಗಳಿಗಿರುವ ನಮ್ಮ ಉತ್ತರಗಳು, ನಾವು ಕಾರ್ಯಾಚರಿಸುವ ಅಸ್ತಿತ್ವದ ಧಾರೆ ಅಥವಾ ಸ್ತರಕ್ಕನುಗುಣವಾಗಿ ಬದಲಾಗಬಹುದು ಎಂದಾಗಿದೆ.

ಖಂಡಿತವಾಗಿಯೂ, ಪ್ರಸ್ತುತ ಲೇಖನ ಒಂದು ನಿರ್ದಿಷ್ಠ ನಿಲುವಿನ ಪರವಾಗಿ ಬರೆದದ್ದಲ್ಲ. ಹೊರತು ವಹ್ದತುಲ್‌ ವುಜೂದಿನ ತಾತ್ವಿಕ ಆಧಾರ ಮತ್ತು ದೃಷ್ಟಿಕೋನಗಳ ಮೇಲೆ ಬೆಳಕು ಚೆಲ್ಲುವ ಉದೇಶವನ್ನು ಮಾತ್ರ ಹೊಂದಿದೆ. ವಹ್ದತುಲ್‌ ವುಜೂದಿನ ಮೇಲೆ ಯಾವುದೇ ನಿಲುವನ್ನು ತಾಳಿದರೂ ಕೂಡ, ಅಸ್ತಿತ್ವಕ್ಕೆ ಅನೇಕ ಆಯಾಮಗಳಿವೆಯೆಂಬ ತತ್ವವು ದೇವರು ನಮ್ಮ ಜಗತ್ತಿನೊಂದಿಗೆ ಎಂತಹ ಸಂಬಂಧವನ್ನು ಹೊಂದಿದ್ದಾನೆ ಎಂಬುದರ ಕುರಿತ ನಮ್ಮ ಗ್ರಹಿಕೆಯನ್ನು ಉಜ್ವಲಗೊಳಿಸಲು ಸಮರ್ಥವಾಗಿದೆ. ಇನ್ನೂ ಹೆಚ್ಚಿನ ಚಿಂತನೆ ನಡೆಸಿದರೆ, ಅಸ್ತಿತ್ವದ ಅನೇಕತ್ವವೆಂಬ ಸಿದ್ದಾಂತಕ್ಕೆ ಸಮಕಾಲೀನ ತತ್ವಶಾಸ್ತ್ರೀಯ ಚರ್ಚೆಗಳಲ್ಲಿ ಮಹತ್ವದ ಕೊಡುಗೆ ನೀಡಲು ಶಕ್ಯವಿದೆ.

ಮೂಲ: ರೊಸಾಬೆಲ್ಅನ್ಸಾರಿ

ಅನುವಾದ : ಎಂ.ಎಂ. ಮಸ್ರೂರ್

ಕೃಪೆ: ರೆನೊವೇಶಿಯ ಮ್ಯಾಗಝಿನ್