ಹೊಸ ಯುಗದ ರೂಮಿ ಓದು : ಕೋಲ್ಮನ್ ಬಾರ್ಕ್ಸ್ ಮತ್ತು ಜನಪ್ರಿಯ ಅನುವಾದದ ಸಮಸ್ಯೆಗಳು.

ತಿಂಗಳುಗಳ ಹಿಂದೆ ‘Boise public library’ಯು ಆಯೋಜಿಸಿದ್ದ ‘ರೂಮಿ ನೈಟ್’ ಎಂಬ ಕಾರ್ಯಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೆವು. ನಾನು ಆ ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ನನ್ನಲ್ಲಿ ಗೆಳೆಯನ ತಾಯಿ ತನ್ನ ಅಸಮಾಧಾನವನ್ನು ತೋಡಿಕೊಂಡರು. ರೂಮಿಯ ಬಗ್ಗೆ ಮಾತನಾಡುತ್ತಾ ಆ ತಾಯಿ ಮತ್ತಷ್ಟು ಉಲ್ಲಸಿತರಾಗುತ್ತಿರುವುದನ್ನು ನಾನು ಗಮನಿಸಿದೆ.ಮೂಲತಃ ಇರಾನಿನವರಾಗಿದ್ದ ಆ ಕುಟುಂಬ ಇತ್ತೀಚಿಗೆ ಇದಾಹೋ ಪಟ್ಟಣದಲ್ಲಿ ವಾಸವಾಗಿದ್ದರು. ನಮ್ಮ ಚರ್ಚೆ ಮುಂದುವರಿಯುತ್ತಿರಬೇಕಾದರೆ ಯುವಕನೊಬ್ಬ ನಮ್ಮತ್ತ ನಡೆದುಬರುತ್ತಿರುವುದು ಕಾಣಿಸಿತು. ಆ ಯುವಕನನ್ನು ಕಂಡದ್ದೇ ಗೆಳೆಯನ ತಾಯಿ ಆತ ‘ರೂಮಿ ನೈಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವರ್ತಮಾನವನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಹೊಸತಲೆಮಾರಿನ ಯುವಕರೆಲ್ಲ ರೂಮಿಯನ್ನು ಓದಬಹುದೆಂದು ಅವರು ಊಹಿಸಿಯೂ ಇರಲಿಲ್ಲವೆನಿಸುತ್ತದೆ. ಆಕೆ ಮಾತು ಮುಂದುವರಿಸಿದರು.

“ಅವನ ಸೊಂಟದಲ್ಲಿ ಅಮೇರಿಕಾದ ‘Cow Boy’ಗಳ ಸೊಂಟಪಟ್ಟಿಯಂತಹ ದೊಡ್ಡದಾದ ಬೆಲ್ಟ್ ಇರುತ್ತಿತ್ತು. ರೂಮಿಯನ್ನು ಓದಲು ಪ್ರಾರಂಭಿಸಿದ ಬಳಿಕವಷ್ಟೇ ಅವರ ಬದುಕಿನಲ್ಲಿ ಬದಲಾವಣೆಗಳು ಪ್ರಾರಂಭಗೊಂಡದ್ದು”. ಆ ತಾಯಿಯ ಮಾತುಗಳು ನಮ್ಮ ಗಹನವಾದ ಚರ್ಚೆಯಿಂದ ಸರಿದು ಆ ಯುವಕನ ಬಗೆಗೆ ಮಾತ್ರ ಸೀಮಿತವಾಗತೊಡಗಿತ್ತು. ಒಬ್ಬ ಅತೀ ಸಾಮಾನ್ಯ ಯುವಕ ಅದರಲ್ಲೂ ಅಮೇರಿಕ್ಕನ್ನರು ರೂಮಿಯನ್ನು ಓದಲು ತೊಡಗಿದರೇ ..!ಅನ್ನುವ ಅಚ್ಚರಿಯಿಂದ ಮೆಲ್ಲಗೆ ಆ ತಾಯಿ ಹೊರಬರತೊಡಗಿದ್ದಳಷ್ಟೇ.

ಪಾಶ್ಚಿಮಾತ್ಯರೆಡೆಯಲ್ಲಿ ‘ರೂಮಿ’ ಎಂದೇ ಜನಪ್ರಿಯರಾದ ಮೌಲಾನ ಜಲಾಲುದ್ದೀನ್ ಬಲ್ಕಿಯವರನ್ನು ಅಮೇರಿಕನ್ನರು ಓದಬೇಕಾದರೆ ಅದೊಂದು ಅನುವಾದವಾಗಿರಬೇಕು ಮತ್ತು ಅದು ಕೋಲ್ಮನ್ ಬಾರ್ಕ್ಸ್ ಅವರದ್ದಾಗಿರುವ ಸಾಧ್ಯತೆಯೇ ಹೆಚ್ಚು. ಸಾಹಿತ್ಯ ಪುಸ್ತಕಗಳ ಭಾಷಾಂತರ ಕೃಷಿ ದೊಡ್ಡ ಪ್ರಮಾಣದಲ್ಲಿ ಇತ್ತೀಚೆಗೆ ನಡೆಯುತ್ತಿದೆಯಾದರೂ ಕೋಲ್ಮನ್ ಬಾರ್ಕ್ಸ್ ರವರಿಗೆ ದೊರೆತ ಮನ್ನಣೆ ಮತ್ತು ಸ್ವಾಗತ ಯಾರಿಗೂ ದೊರೆತಿಲ್ಲವೆಂದೇ ಹೇಳಬೇಕು. ಇದರ ಪರಿಣಾಮವೆಂಬಂತೆ ಹಲವಾರು ಗೋಷ್ಠಿಗಳು, ವಿಭಿನ್ನ ಕಾರ್ಯಕ್ರಮಗಳು ,ಇರಾನ್ ಮತ್ತು ಅಫ್ಘಾನ್ ದೇಶಗಳಿಗೆ ಔಪಚಾರಿಕವಾಗಿ ಭೇಟಿ ನೀಡುವ ಸೌಭಾಗ್ಯವೂ ಬಾರ್ಕ್ಸಿಗೆ ಒದಗಿಬಂತು. ವಿಶೇಷವಾಗಿ ಟೆಹ್ರಾನ್ ವಿಶ್ವವಿದ್ಯಾಲಯದಿಂದ ರೂಮಿ ಕವಿತೆಗಳ ಮೂವತ್ತು ವರ್ಷದ ಅಧ್ಯಯನಕ್ಕಾಗಿ ಗೌರವ ಡಾಕ್ಟರೇಟ್ ಪದವಿಯು ಮುಡಿಗೇರಿತು. ಜಾರ್ಜಿಯಾ ವಿಶ್ವವಿದ್ಯಾಲಯದ ಕುಲಪತಿಗಳಾದ ಬಾರ್ಕ್ಸರ ಜನಪ್ರಿಯತೆ ರೂಮಿಯ ತರ್ಜುಮೆಯಿಂದ ರಾತ್ರಿಬೆಳಗಾಗುವುದರಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿತು.

ದೊಡ್ಡ ಮಟ್ಟದಲ್ಲಿ ಜನರೆಡೆಯಲ್ಲಿ ಒಪ್ಪಿಗೆಯನ್ನು ಪಡೆದ ಕೋಲ್ಮನ್ ಬಾರ್ಕ್ಸ್‌ರ ಕೃತಿಗಳು ಸಾಮಾನ್ಯ ಓದುಗರನ್ನು ಮೀರಿ ಅದಾಗಲೇ ಸಾಹಿತಿಗಳನ್ನೂ ತಲುಪತೊಡಗಿದ್ದವು. ಈ ಕಾರಣಕ್ಕಾಗಿಯೇ ಹತ್ತು ಸಾವಿರ ಪ್ರತಿಗಳೂ ಮಾರಟವಾಗದೆ ಮೂಲೆಸೇರುತ್ತಿದ್ದ ಇತರ ತರ್ಜುಮೆಗಳೆಡೆಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಕೃತಿಯು ಐದು ಲಕ್ಷ ಪ್ರತಿಗಳು ಮುದ್ರಣಗೊಂಡು, ಅದೇ ವೇಗದಲ್ಲಿ ಮಾರಾಟವೂ ಆಗಿ ಹೊಸ ಇತಿಹಾಸವನ್ನೇ ಬರೆಯಿತು. ಮಾತ್ರವಲ್ಲದೆ ರೂಮಿಯದ್ದೆಂದು ಹೇಳಲಾಗುವ ಅನೇಕ ‘ಸಾಲುಗಳು'(quotes) ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡತೊಡಗಿದವು.

ಹೊಸ ತಲೆಮಾರಿನ ಓದುಗರ ಅಭಿರುಚಿಯನ್ನು ಪೂರೈಸುವ ರೀತಿಯ ತರ್ಜುಮೆಗಳಾಗಿದ್ದರೂ ರೂಮಿಯ ಮೂಲ ಕಾವ್ಯದ ಸತ್ವವು ನಷ್ಟಹೊಂದದ ತರ್ಜುಮೆಗಳಾಗಿದೆ ನನ್ನದು ಎಂದು ಕೋಲ್ಮನ್ ಬಾರ್ಕ್ಸ್ ಅಭಿಪ್ರಾಯ ಪಡುತ್ತಾರೆ. ಅದಾಗ್ಯೂ ಈ ಹೊಸತನ ಎಷ್ಟರಮಟ್ಟಿಗೆ ಮೌಲಾನ ರೂಮಿಯವರದ್ದು ಅನ್ನುವ ಅನುಮಾನದ ಕಿಡಿಯೊಂದು ಹಾಗೆಯೇ ಬಾಕಿಯಾಗುತ್ತದೆ.

1990ದಶಕ ಅಮೇರಿಕಾದಲ್ಲಿ ಅತೀ ಹೆಚ್ಚು ಓದಲ್ಪಡುವ ಕವಿಯಾಗಿ ರೂಮಿಯವರ ಕೃತಿಗಳು ಮುನ್ನಲೆಗೆ ಬಂದವು.ವಾಸ್ತವದಲ್ಲಿ ರೂಮಿಯವರ ಮೂಲ ಕವಿತೆಗಳ ಉದ್ದೇಶ,ಆಶಯ, ಒಳಾರ್ಥ ಇವುಗಳೊಂದಿಗೆ ಈ ತರ್ಜುಮೆಗಳಿಗೆ ಯಾವ ಸಂಬಂಧವೂ ಇರುತ್ತಿರಲಿಲ್ಲ. ಮುಖ್ಯವಾಹಿನಿಯ ಓದುಗರನ್ನು ಸೆಳೆಯಲೋಸುಗ ಮೂಲ ಕವಿತೆಗಳ ಆಶಯಗಳಿಗೆ ಧಕ್ಕೆ ಉಂಟುಮಾಡುವ ನಿರೂಪಣೆಗಳು ಧಾರಾಳವಾಗಿ ಅನುವಾದಗಳಲ್ಲಿ ನುಸುಳಿಕೊಂಡಿದ್ದವು. ನಿಖರವಾದ ಅನುವಾದಗಳಿಗೆ ಒತ್ತು ನೀಡುವುದನ್ನು ಕೋಲ್ಮನ್ ಬಾರ್ಕ್ಸ್‌ರು ಮರೆತೇ ಬಿಟ್ಟಿದ್ದರು.

ಅಮೆರಿಕಾದ ಸಾರ್ವಜನಿಕ ಪ್ರಜ್ಞೆಯು ಈ ಹಿನ್ನೆಲೆಯ ಅನುವಾದಗಳನ್ನೇ ಬಯಸಿದ್ದವು. ಇದು ನಿರಂತರ ಪ್ರಯತ್ನದ ಫಲಶ್ರುತಿಯಾದ ಆಧ್ಯಾತ್ಮಿಕತೆಯನ್ನು ಮೀರಿ ತಕ್ಷಣದ ಆಧ್ಯಾತ್ಮಿಕ ಸಮಾಧಾನವನ್ನು ಓದುಗರಿಗೆ ನೀಡತೊಡಗಿತ್ತು. ಬಾರ್ಕ್ಸ್‌ನ ಅನುವಾದಗಳು ಅಮೆರಿಕದ “ಆಧ್ಯಾತ್ಮಿಕ ಹಸಿವಿಗೆ” ತ್ವರಿತ ಆಧ್ಯಾತ್ಮಿಕ ಪರಿಹಾರವನ್ನು ನೀಡಿತ್ತು.ಆ ಕಾರಣಕ್ಕಾಗಿಯೇ ಅಮೇರಿಕಾದ ಜನತೆ ಈ ಸುಧಾರಿತ ಆಧ್ಯಾತ್ಮಿಕತೆಗೆ ಮಾರುಹೋದರು.ರೂಮಿಯ ಸಾಲುಗಳಲ್ಲಿ ಧಾರಾಳವಾಗಿದ್ದ ದೈವ ಭಕ್ತಿ ಮತ್ತು ಪರ್ಶಿಯನ್ ಸಾಹಿತ್ಯದ ಸೌಂದರ್ಯವು ಈ ಅನುವಾದಗಳಿಗೆ ಅನ್ಯವಾಗಿಯೇ ಉಳಿದುಬಿಟ್ಟವು.
2010 ರಲ್ಲಿ ಬಾರ್ಕ್ಸ್‌ರ ಅನುವಾದಗಳ ಬಗ್ಗೆ ವಿಮರ್ಶೆ ಬರೆದ ಅಬು ಅಲ್-ಫಝಲ್ ಹೊರ್ರಿ, ನಾವು ಬಾರ್ಕ್ಸ್‌ನ ಅನುವಾದಗಳನ್ನು “ರೂಪಾಂತರಗಳು” ಎಂದು ಮಾತ್ರವೇ ಕರೆಯಬೇಕೆಂದು ಸೂಚಿಸಿದರು.

ಶೈಕ್ಷಣಿಕ ಮಾನದಂಡಗಳನ್ನು ಆಧರಿಸಿ ನನ್ನ ಅನುವಾದಗಳನ್ನು ವಿಶ್ಲೇಷಣೆ ಮಾಡಬಾರದೆಂದು ಹೇಳಿಕೊಂಡ ಬಾರ್ಕ್ಸ್‌ರ ಬರಹಗಳನ್ನು ಶೈಕ್ಷಣಿಕವಾಗಿ ಎಷ್ಟು ಮಹತ್ವದ್ದು ಅನ್ನುವ ನಿಟ್ಟಿನಲ್ಲಿ ಟೀಕಿಸುವುದು ವ್ಯರ್ಥವಾಗುತ್ತದೆ.ಮಾತ್ರವಲ್ಲದೆ ‘Rumi: bridge to the soul’ ಎಂಬ ತನ್ನ ಕೃತಿಯ ಮುನ್ನುಡಿಯಲ್ಲಿ, ನನ್ನ ಅನುವಾದಗಳು ಶೈಕ್ಷಣಿಕ ಉದ್ದೇಶಗಳಿಗೆ ಬರೆಯಲ್ಪಟ್ಟದಲ್ಲ ಮತ್ತು ಅದು ಶೈಕ್ಷಣಿಕವಾಗಿ ಮೂಡಿಬಂದ ನಿರೂಪಣೆಗಳೂ ಅಲ್ಲ,ಬದಲಾಗಿ ಇವು ಅದನ್ನೆಲ್ಲಾ ಮೀರಿದ ಸ್ವತಂತ್ರ ನಿರೂಪಣೆಗಳಾಗಿದೆ ಎಂದರು.ಅದಾಗ್ಯೂ ಬಾರ್ಕ್ಸ್, ತನ್ನನ್ನು ಪುಸ್ತಕದ ಹೊರ ಕವಚದಲ್ಲಿ ‘ರೂಮಿಯನ್ನು ಅಮೇರಿಕಾಕ್ಕೆ ಪರಿಚಯಿಸಿದ ವ್ಯಕ್ತಿ’ ಎಂದು ಸ್ವತಃ ತಾನೇ ಪರಿಚಯಿಸಿಕೊಳ್ಳುವುದರ ಹಿಂದಿನ ಮರ್ಮವೇನೆಂದು ಅರ್ಥವಾಗುವುದಿಲ್ಲ.

ಹಲವು ಅನುವಾದಕರು ತಮ್ಮ ಕೃತಿಗಳ ಮುನ್ನುಡಿಯಲ್ಲಿ ಕೋಲ್ಮನ್ ಬಾರ್ಕ್ಸ್‌ರ ಬಗ್ಗೆ ಅಸಂತೃಪ್ತಿಯ ಹೇಳಿಕೆಗಳನ್ನು ‌ನೀಡಿದರಾದರೂ ಅದು ಚರ್ಚೆಗೆ ಗ್ರಾಸವಾಗಲೇ ಇಲ್ಲ.ಬಾರ್ಕ್ಸ್‌ರ ಕೃತಿಗಳು ತಲುಪಿದಂತೆ ಈ ವಿಮರ್ಶೆಗಳು, ಟೀಕೆಗಳು ಓದುಗರನ್ನು ತಲುಪುವಲ್ಲಿ ವಿಫಲಗೊಂಡಿತು.ಬೆರಳೆಣಿಕೆಯ ಒಂದಿಷ್ಟು ವಿಮರ್ಶೆಗಳು ಬಿಟ್ಟರೆ ಉಳಿದವುಗಳು ಸದ್ದಿಲ್ಲದೆ ಮಾಯವಾದವು.

ರೂಮಿಯ ಮೂಲ ಕವಿತೆಯ ಸಾಲುಗಳನ್ನು ಯಥಾವತ್ತಾಗಿ ಬಾರ್ಕ್ಸ್ ಅನುವಾದಿಸಲೇ ಇಲ್ಲ.ಆದರೂ ಈ ಹಿಂದೆ ಜನಪ್ರಿಯತೆ ಗಳಿಸಿದ್ದ ಹಾಫಿಝ್,ಉಮರ್ ಖಯ್ಯಾಮ್ ರಂತಹಾ ಶಾಸ್ತ್ರೀಯ ಪರ್ಶಿಯನ್ ಕಾವ್ಯಗಳ ಅನುವಾದಗಳಿಗೆ ಹೋಲಿಕೆ ಮಾಡಿದರೆ ಬಾರ್ಕ್ಸ್‌ರ ಅನುವಾದದಲ್ಲಿ ಕಂಡುಬಂದ ವಿಶೇಷ ಗುಣವೆಂದರೆ ಅದರ ಸರಳತೆ.ಸರಾಗವಾಗಿ ಓದಿಸಿಕೊಳ್ಳುವ ನವಿರಾದ ಭಾಷೆಯ ಸೊಬಗು.ಇತರ ಅನುವಾದಕರು ವೈಭವೀಕರಿಸಿ ಹೇಳ ಹೊರಟ ವಿಷಯಗಳನ್ನು ಬಾರ್ಕ್ಸ್ ಬಹಳ ಲಾಲಿತ್ಯದೊಂದಿಗೆ ತೆರೆದಿಟ್ಟರು.ಆದಾಗ್ಯೂ ಇದನ್ನೊಂದು ಉತೃಷ್ಟವಾದ ಅನುವಾದವೆನ್ನಲೂ ಆಗದ ಅನುವಾದದ ಅನುವಾದವೆಂದು ಮಾತ್ರವೇ ಕರೆಯಬಹುದು. ಪರ್ಶಿಯನ್ ಭಾಷೆ ಗೊತ್ತಿಲ್ಲದ ಬಾರ್ಕ್ಸ್ ಇಂಗ್ಲೀಷ್ ಭಾಷೆಗಳಲ್ಲಿ ಅದಾಗಲೇ ಪ್ರಕಟಗೊಂಡಿದ್ದ ಕವಿತೆಗಳಿಗೆ ತನ್ನತನವನ್ನು ಬೆರೆಸಿ ಓದುಗರ ಮುಂದಿಟ್ಟರು ಎನ್ನುವುದಾಗಿದೆ ಸತ್ಯ.

ಅಕಾಡೆಮಿಕ್ ಅನುವಾದಗಳ ಆಚೆಗೆ ಈ ರೀತಿ ಅನುವಾದಗಳ ಮೂಲಕ ಓದುಗರನ್ನು ತಲುಪುವುದು ಉತ್ತಮವೆಂದು ಕೊಲೊಮನ್ ಬಾರ್ಕ್ಸ್‌ ಅಭಿಪ್ರಯಿಸುತ್ತಾರೆ.ಜೊತೆಗೆ, ನಿಗೂಢಾರ್ಥವಿರುವ ಸಾಲುಗಳನ್ನು ಕೈ ಬಿಡುವುದು ಒಂದರ್ಥದಲ್ಲಿ ಜಾಣತನವೆನ್ನುವ ಬಾರ್ಕ್ಸ್ ಈ ಎಲ್ಲಾ ಸಮಸ್ಯಾತ್ಮಕ ಬರಹಗಳ ಹೊರತಾಗಿಯೂ,ರೂಮಿಯ ಹೆಸರಿನ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮುಂದುವರಿಸುತ್ತಾರೆ.

1976 ರ ಆಸುಪಾಸಿನಲ್ಲಾಗಿದೆ ಬಾರ್ಕ್ಸ್ ರೂಮಿಯ ಕಾವ್ಯಗಳೊಂದಿಗೆ ಆಪ್ತವಾಗಿ ವ್ಯವಹರಿಸಲು ಪ್ರಾರಂಭಿಸುವುದು.ರಾಬರ್ಟ್ ಬ್ಲೈ ಎಂಬ ಕವಿ ಮಿತ್ರರಾಗಿದ್ದಾರೆ ಬಾರ್ಕ್ಸ್‌ರವರಿಗೆ ರೂಮಿಯ ಕೃತಿಗಳ ಬಗ್ಗೆ ಪರಿಚಯಿಸುವುದು.ಆರ್ಥರ್ ಜಾನ್ ಆರ್ಬೆರ್ರಿಯ ಒಂದು ರೂಮಿ ಕವಿತೆಗಳ ತರ್ಜುಮೆಯನ್ನು ಹಸ್ತಾಂತರಿಸಿ, ‘ಈ ಕವಿತೆಗಳನ್ನು’ ಕಾರಾಗೃಹದಿಂದ ಬಿಡುಗಡೆಗೊಳಿಸಬೇಕೆಂದು’ ಬಾರ್ಕ್ಸ್‌ರವರಲ್ಲಿ ಅವರು ಕೇಳಿಕೊಳ್ಳುವುದು.ತೀರಾ ರೂಮಿಯ ಹೆಸರನ್ನೇ ಕೇಳಿರದ ಬಾರ್ಕ್ಸ್‌ರ ಮುಂದೆ ಹೊಸ ಅವಕಾಶಗಳ ದಾರಿಗಳನ್ನು ರಾಬರ್ಟ್ ಬ್ಲೈ ತೆರೆದಿಟ್ಟರು.ತನ್ನ ಎಂದಿನ ತರಗತಿಗಳ ಬಳಿಕ ಬಿಡುವು ಮಾಡಿಕೊಂಡ ಬಾರ್ಕ್ಸ್ ಆರ್ಬೇರ್ರಿಯ ತರ್ಜುಮೆಗಳನ್ನು ಶೃಂಗರಿಸಿ ಸೃಜನಶೀಲ ಭಾಷೆಗೆ ಅನುವಾದಿಸಲು ಅಂದಿನಿಂದಲೇ ಪ್ರಾರಂಭಿಸಿದರು.

ಬಾರ್ಕ್ಸ್ ವಿವರಿಸುವಂತೆ ಈ ಸಂದರ್ಭದಲ್ಲಾಗಿತ್ತು ಅವರ ಕನಸಿನಲ್ಲಿ ಸೂಫಿ ಸಂತರೋರ್ವರು ಪ್ರತ್ಯಕ್ಷಗೊಂಡು ತಾನು ಕೈಗೆತ್ತಿಕೊಂಡ ಈ ಅನುವಾದ ಯೋಜನೆಯನ್ನು ಶೀಘ್ರದಲ್ಲೇ ಪೂರ್ತಿಗೊಳಿಸಬೇಕಾಗಿ ವಿನಂತಿಸಿಕೊಳ್ಳುವುದು‌.ಸುಮಾರು ಎರಡು ವರ್ಷದ ಬಳಿಕ ತಾನು ಕನಸಿನಲ್ಲಿ ದರ್ಶಿಸಿದ ಅದೇ ಸೂಫಿವರ್ಯರನ್ನು ಬಾರ್ಕ್ಸ್ ಮುಖತಃ ಭೇಟಿಯಾದರು.ಫಿಲಡೆಲ್ಫಿಯಾದಲ್ಲಿ ವಾಸಿಸುತ್ತಿದ್ದ ಮೂಲತಃ ಶ್ರೀಲಂಕಾ ನಿವಾಸಿಯಾದ ಬಾವಾ ಮುಹಿಯದ್ದೀನ್ ಎಂಬವರಾಗಿದ್ದರು ಅವರು.ತನಗೆ ಸೂಫಿ ಅನುವಾದಗಳಿಗೆ ಸ್ಪೂರ್ತಿ ನೀಡಿದ ಬಹುಮುಖ್ಯ ವಿಷಯವಾಗಿತ್ತು ಇದೆಂದು ಸ್ವತಃ ಬಾರ್ಕ್ಸ್ ಹಂಚಿಕೊಂಡಿದ್ದಾರೆ.ಆ ಭೇಟಿಯ ನಂತರ, ಅವರು 1986 ರಿಂದ ಬಾವಾ ಮುಹಿಯದ್ದೀನ್ ಅವರ ಮರಣದ ವರೆಗೆ ವರ್ಷಕ್ಕೆ ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ಭೇಟಿಯಾಗುತ್ತಿದ್ದರು. ಬಾರ್ಕ್ಸ್ ಮತ್ತು ಮುಹಿಯದ್ದೀನ್ ನಡುವೆ ಬೆಳೆದ ಈ ಸ್ನೇಹವನ್ನು ರೂಮಿ ಮತ್ತು ಶಮ್ಸ್ ತಬ್ರೇಝರ ಆತ್ಮೀಯ ಒಡನಾಟದೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಕೆಲವರು ಮಾಡಿರುವುದು ಖೇದಕರ.

ನಂತರ ಅವರು ನ್ಯೂಯಾರ್ಕ್ ನಗರ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಮುಖ್ಯಸ್ಥ ಜಾನ್ ಮೊಯ್ನ್ ಅವರೊಂದಿಗೆ ಕೆಲಕಾಲ ಕೆಲಸ ಮಾಡಿದರು.ಮೊಯ್ನ್ ಅವರ ಕೆಲವೊಂದು ಅಪ್ರಕಟಿತ ರೂಮಿ ಕವಿತೆಗಳನ್ನು ತನ್ನದೇ ಭಾಷೆಗೆ ಅನುವಾದಿಸುವುದು ಬಾರ್ಕ್ಸ್‌ರ ಪ್ರಧಾನ ಉದ್ದೇಶವಾಗಿತ್ತು.

ಲೇಗ್ ಎರಿಕ್ ಶ್ಮಿಡ್ ತನ್ನ ಅಮೇರಿಕಾದ ಆಧ್ಯಾತ್ಮಿಕ ಚರಿತ್ರೆಯನ್ನು ಹೇಳುವ ‘ರೆಸ್ಟ್ಲೆಸ್ ಸೋಲ್ಸ್’ ಕೃತಿಯಲ್ಲಿ ಬಾರ್ಕ್ಸ್‌ರ ನಿರೂಪಣೆಗಳನ್ನು ಪ್ರೊಟೆಸ್ಟಂಟ್ ಮತ್ತು ಅತೀಂದ್ರಿಯವಾದಿಗಳ ರೀತಿಯದ್ದಾಗಿದೆಯೆಂದು ಪರಿಚಯಿಸಿದ್ದು ಕಾಣಬಹುದು.
ಹತ್ತೊಂಬತ್ತನೆಯ ಶತಮಾನದ ಯಾವುದೇ ಕವಿಗಳಿಗಿಂತ ಹೆಚ್ಚು ಓದುಗರು ರೂಮಿಗೆ ಒಲಿದು ಬಂದಿರುವುದು ಬಾರ್ಕ್ಸ್‌ರ ತರ್ಜುಮೆಗಳಿಂದ ಮತ್ತು ನಿರೂಪಣೆಯಿಂದ ಮಾತ್ರವಾಗಿತ್ತೆಂದು ಎರಿಕ್ ಉಲ್ಲೇಖಿಸಿದ್ದು ಇಲ್ಲಿ ಗಮನಾರ್ಹ.

ಬಾರ್ಕ್ಸ್‌ರು ಹಲವು ಕವಿತೆಗಳನ್ನು ಗಮನಿಸಿದರೆ ಮೂಲ ಕವಿತೆಗಳಲ್ಲಿ ಹೇಳಲಾದ ಬಹುಮುಖ್ಯ ರೂಪಕಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟದ್ದು ಮನದಟ್ಟಾಗುತ್ತದೆ.ನಿರೂಪಣೆಯ ಶೈಲಿಯೂ ಪ್ರಮುಖ ಬದಲಾವಣೆಗಳಿಗೆ ಒಳಗಾಗಿರುವುದು ಗಮನಿಸಬಹುದು.ಇದಲ್ಲದೆ,ರೂಮಿಯ ಕವಿತೆಗಳಲ್ಲಿನ ಸಾಲುಗಳಿಗಿಂತ ಬಾರ್ಕ್ಸ್‌ರ ಸಾಲುಗಳು ಚಿಕ್ಕದಾಗಿಯೂ ಇದೆ.ಒಂದು ಸಣ್ಣ ಉದಾಹರಣೆಯನ್ನು ಗಮನಿಸಿ.

ರೂಮಿಯ ಹದಿನಾಲ್ಕು ಸಾಲುಗಳ ‘ಮಿಸ್ರಾಸ್‌’ನಲ್ಲಿ (ಕಾವ್ಯದ ಒಂದು ತುಣುಕು),ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸುವ ‘Howlessness’ ಎಂಬ ಸೂಕ್ತ ಪದದ ಬದಲಿಗೆ ‘How are you’ಎಂಬ ಸಾಮಾನ್ಯ ಪದವಾಗಿ ಸಂಪೂರ್ಣವಾಗಿ ಬದಲಿಸುವ ಮೂಲಕ ದೇವರ ಪರಿಕಲ್ಪನೆಯ ಮೂಲತತ್ವವನ್ನು ಪ್ರಶ್ನಿಸಿ,ಸೃಷ್ಟಿಕರ್ತನ ಗುಣಲಕ್ಷಣಗಳ ಶಾಶ್ವತತೆಗೆ ಸವಾಲೆಸೆಯುವ ಪ್ರಯತ್ನವನ್ನು ಬಾರ್ಕ್ಸ್ ಮಾಡುತ್ತಾರೆ.

ಮೇಲಿನವು ಋಣಾತ್ಮಕ ಅನುವಾದದ ಒಂದು ಸಣ್ಣ ರೂಪವಾಗಿದ್ದು,ಇದು ರೂಮಿಯ ಅನುವಾದಗಳಲ್ಲಿ, ನಿರೂಪಣೆಗಳಲ್ಲಿ ಪಾಶ್ಚಿಮಾತ್ಯರು ಸಾಮಾನ್ಯವಾಗಿ ಸ್ವೀಕರಿಸುವ ರೀತಿಯಾಗಿದೆ.ಹೀಗೆ ಬಾರ್ಕ್ಸ್‌ನಂತವರ ನಿರೂಪಣೆಗಳು ರೂಮಿ ಪ್ರತಿನಿಧಿಸುವ ಇಸ್ಲಾಮಿಕ್ ಚಿಂತನೆಯಿಂದ ರೂಮಿಯನ್ನು ನಿಧಾನವಾಗಿ ಹೊರಹಾಕುವ ಮತ್ತು ರೂಮಿಗೆ ಮಾತ್ರ ಇರಬಹುದಾದ ನಿರೂಪಣೆಯ ಸೌಂದರ್ಯವನ್ನು ನಾಶಪಡಿಸುವತ್ತ ತಲುಪಿಸಿಬಿಡುತ್ತದೆ.

ರೂಮಿ ಅವರ ನಿರೂಪಣೆಗಳನ್ನು ಶೈಕ್ಷಣಿಕ ದೃಷ್ಟಿಕೋನದಿಂದ ನೋಡಿದ್ದಕ್ಕಾಗಿ ಫ್ರಾಂಕ್ಲಿನ್ ಲೆವಿಸ್  ಅವರನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು.ಆದಾಗ್ಯೂ, ಅವರು ತಮ್ಮ ‘,Swallowing the Sun’ ಎಂಬ ಕವಿತೆಯಲ್ಲಿ ಹೆಚ್ಚು ಸರಳವಾದ ಅನುವಾದಕ್ಕೆ ಮುಂದಾಗುತ್ತಾರೆ.ಈ ಅರ್ಥದಲ್ಲಿ,ಲೆವಿಸ್ ಕೆಲವೊಮ್ಮೆ ಬಾರ್ಕ್ಸ್‌ರ ಹೆಜ್ಜೆಗಳನ್ನು ಅನುಸರಿಸುತ್ತಿದ್ದರು.ಆದರೆ ಬಾರ್ಕ್ಸ್‌ ಮತ್ತು ಲೆವಿಸರ ನಡುವಿನ ಪ್ರಮುಖ ವ್ಯತ್ಯಾಸವೊಂದಿದೆ.ರೂಮಿಯ ಸಾಲುಗಳಿಗೆ ಅನುಗುಣವಾಗಿ ನಿಖರವಾದ ಅನುವಾದಗಳಿಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿದ್ದರು.ಅತ್ಯಂತ ಶ್ರೀಮಂತ ಮತ್ತು ಸ್ಪಷ್ಟವಾದ ಭಾಷೆ,ಹಾಗೆಯೇ ಅನೇಕ ಸಾಲುಗಳ ಅಡಿಟಿಪ್ಪಣಿಗಳು ಮತ್ತು ಅವುಗಳಲ್ಲಿನ ಕುರಾನಿನ ವಚನಗಳ ಉಲ್ಲೇಖ ಆ ಕವಿತೆಗಳ ಇಸ್ಲಾಮಿಕ್ ಮಹತ್ವವನ್ನು ಪರಿಗಣಿಸಿವೆ ಎಂಬುದನ್ನು ಸಾಬೀತುಪಡಿಸುತ್ತದೆ,ಆದರೆ ಬಾರ್ಕ್ಸ್‌ ಅವರ ಅನುವಾದಗಳು ಅಕ್ಷರಶಃ ಮೂಲತತ್ವವನ್ನು ಕಡೆಗಣಿಸಿ ಮಾಡಿದ್ದಾಗಿದ್ದವು.

ರೂಮಿ ಅನುವಾದಕರ ಅಥವಾ ಅನುವಾದಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಿರುವ ಉದ್ದೇಶ ಇದುವರೆಗೆ ನಡೆಸಲಾದ ತರ್ಜುಮೆಗಳನ್ನು ಸಾರಾಸಗಟಾಗಿ ಅಲ್ಲಗಳೆಯುವ ಉದ್ದೇಶಲ್ಲ.ಇದುವರೆಗೆ ಪ್ರಕಟಗೊಂಡ ಅನುವಾದಗಳಲ್ಲಿ ಯಾವುದೂ ಉತೃಷ್ಟವಾದ ನಿರೂಪಣೆಗಳೇ ಅಲ್ಲವೆಂದು ಸಾಬೀತು ಪಡಿಸುವುದೂ ಅಲ್ಲ.ಬದಲಾಗಿ,ಇದಾಹೊದಲ್ಲಿರುವ ನನ್ನ ಸ್ನೇಹಿತನ ತಾಯಿ ಹೇಳಿದಂತೆ,ಎರಡು ಭಾಷೆಗಳೂ ಚೆನ್ನಾಗಿ ಬಲ್ಲವರಿಗೆ ಉಂಟಾಗುವ ದ್ವಂದ್ವಗಳು ಹೇಗಿರಬಹುದು ಅನ್ನುವ ವಿವರಣೆಯಾಗಿದೆ.ಪರ್ಶಿಯನ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ,ಇಂಗ್ಲಿಷ್‌ನಲ್ಲಿ ಬರೆಯುವ ಒಬ್ಬ ಒಳ್ಳೆಯ ಕವಿ ಕೇವಲ ಸಾಲುಗಳನ್ನು ಶೃಂಗರಿಸುವುದನ್ನು ಮೀರಿ ರೂಮಿಯ ವಿಚಾರಗಳನ್ನು ಘಾಸಿಗೊಳಿಸದೆ ಕವಿತೆಗಳನ್ನು ಬರೆಯಬೇಕೆಂಬ ಬಯಕೆಯಿಂದ ಇವೆಲ್ಲವನ್ನೂ ಹೇಳಬೇಕಾಯಿತು.

ಇತರ ಅನುವಾದಕರಂತೆ,ಬಾರ್ಕ್ಸರೂ ಸರಳ ಅನುವಾದವನ್ನು ಮಾಡಿದರು,ಅದು ಅಮೆರಿಕದ ಮುಖ್ಯವಾಹಿನಿಯ ಓದುಗರಿಗೆ ಅರ್ಥವಾಗುವಂತಹದ್ದಾಗಿತ್ತು.ಕಾವ್ಯಾತ್ಮಕ ಅಭಿವ್ಯಕ್ತಿಯ ಶಕ್ತಿ ಯಾವತ್ತಿಗೂ ಎರಡು ಪಟ್ಟು ಹೆಚ್ಚು.ಹೊಸ ಚಿಂತನೆಯ ಬೆಳಕಿಂಡಿಗಳನ್ನು ತೆರೆಯಲು ಮತ್ತು ನಮ್ಮೆಲ್ಲರಲ್ಲೂ ಇರುವುದನ್ನು,ನಾವು ಗುರುತಿಸದ ಯಾವುದನ್ನಾದರೂ ನಮ್ಮ ಮುಂದೆ ತೆರೆದಿಡಲು ಕಾವ್ಯಗಳಿಗೆ ವಿಶೇಷವಾದ ಸಾಮರ್ಥ್ಯವಿದೆ ಎನ್ನುವುದು ಇಲ್ಲಿ ಮತ್ತೆಮತ್ತೆ ಸಾಬೀತಾಗುತ್ತದೆ.ಕಾವ್ಯಗಳ ಅನುವಾದಗಳು ತನ್ನ ಇತಿಮಿತಿಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡೇ ಹುಟ್ಟುತ್ತದೆ ಎನ್ನುವುದು ಸಾರ್ವಕಾಲಿಕ ಸತ್ಯವಾಗಿ ಉಳಿದುಬಿಡುತ್ತದೆ.

ಕನ್ನಡಕ್ಕೆ : ಝುಬೈರ್ ಹಿಮಮಿ ಪರಪ್ಪು

ಮೂಲ : ಕೇಟ್ ಥೋರ್ಟನ್
Masters candidate in Journalism and Near Eastern Studies at NYU focusing on 19th and 20th-century Persian poetry.

7 Comments

  1. ♥️ ಚಿಂತನಾರ್ಹ ಬರಹ. ಧನ್ಯವಾದಗಳು ಅನುವಾದಕರಿಗೆ

    1. ಒಂದಿಷ್ಟು ದಾಹ ನೀಗಿಸುವ ಬರಹ ಧನ್ಯವಾದಗಳು……

    2. ಗೊಂದಲಕ್ಕೆ ತೆರೆ. ಒಳ್ಳೆಯ ಮಾಹಿತಿ. ಮುಂದುರೆಸಿ..❤️💐👌🏼

  2. ಗೊಂದಲಕ್ಕೆ ತೆರೆ. ಒಳ್ಳೆಯ ಮಾಹಿತಿ. ಮುಂದುರೆಸಿ..❤️💐👌🏼

Leave a Reply

*