ಶಾಂತಿಯ ಭಂಜಕರು: ಫೆಲಸ್ತೀನಿನ ಕುರಿತು ಫ್ರೆಂಚ್ ದಾರ್ಶನಿಕ ಡೆಲೂಝ್

1978 ಎಪ್ರಿಲ್ 7ರ Le Monde ಎಂಬ ಫ್ರೆಂಚ್ ಪತ್ರಿಕೆಗೆ ಪ್ರಮುಖ ಸಮಕಾಲೀನ ತತ್ವ ಚಿಂತಕ ಗಿಲ್ಸ್ ಡೆಲೂಝ್ ಬರೆದ ಲೇಖನವಿದು. ಅವರ Two Regimes of Madness ಎಂಬ ಪುಸ್ತಕದಲ್ಲೂ ಇದನ್ನು ಸೇರಿಸಲಾಗಿದೆ)

ಸ್ವಂತವಾಗಿ ಒಂದು ರಾಷ್ಟ್ರವಿಲ್ಲದ ಫೇಲಸ್ತೀನಿಯರಿಗೆ ಶಾಂತಿ ಮಾತುಕತೆಗಳಲ್ಲಿ ಶುದ್ಧ ಪಾಲುದಾರಿಕೆ ವಹಿಸಲು ಸಾಧ್ಯವೇ? ಅವರ ರಾಷ್ಟ್ರವನ್ನೇ ಅವರಿಂದ ಕಸಿಯಲಾಗಿರುವಾಗ ಹೇಗೆ ಅವರನ್ನು ಸ್ವಂತ ರಾಷ್ಟ್ರವುಳ್ಳವರಾಗಿ ಪರಿಗಣಿಸಬಹುದು? ಬೇಷರತ್ತಾಗಿ ಶರಣಾಗುವುದಲ್ಲದೆ ಫೆಲಸ್ತೀನಿನ ಮುಂದೆ ಅನ್ಯ ಮಾರ್ಗವಿರಲಿಲ್ಲ. ಮರಣ ಮಾತ್ರವಾಗಿತ್ತು ಅವರ ಮುಂದಿದ್ದ ಏಕೈಕ ಮಾರ್ಗ. ಇಸ್ರೇಲ್-ಫೆಲಸ್ತೀನ್ ಸಂಘರ್ಷದಲ್ಲಿ ಇಸ್ರೇಲ್‌ನ ಆಕ್ರಮಣಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಕೂಡ ಅದು ನ್ಯಾಯಬದ್ಧ ಪ್ರತ್ಯಾಕ್ರಮಣವಾಗಿ ಮಾತ್ರ ಪರಿಗಣಿಸಲ್ಪಟ್ಟಿದೆ ಮತ್ತು ಫೆಲಸ್ತೀನಿನದ್ದು ನಿಸ್ಸಂದೇಹವಾಗಿ ಭಯೋತ್ಪಾದಕ ಕೃತ್ಯವೆಂದು ಪ್ರಚುರಪಡಿಸಲಾಗಿದೆ. ಒಬ್ಬ ಇಸ್ರೇಲ್ ಪೌರನ ಸಾವಿಗೆ ಸಿಗುವ ಪ್ರಾಮುಖ್ಯತೆ ಮತ್ತು ಸಂತಾಪ ಯಾವುದೇ ಫೆಲಸ್ತೀನಿಯನ ಸಾವಿಗೂ ಲಭಿಸುವುದಿಲ್ಲ.

ದಕ್ಷಿಣ ಲೆಬನಾನಿನಲ್ಲಿ 1969ರಿಂದ ಇಸ್ರೇಲ್ ಸೈನ್ಯವು ನಿರ್ದಯವಾಗಿ ಬಾಂಬ್ ಮಳೆ ಸುರಿಸುತ್ತಿದೆ. ಸಮೀಪ ಕಾಲದಲ್ಲಿ ನಾವು ನಡೆಸಿದ ದಾಳಿ ಟೆಲ್-ಅವೀವ್ ಭಯೋತ್ಪಾದಕ ಆಕ್ರಮಣ ವಿರುದ್ಧದ ಪ್ರತಿದಾಳಿ ಆಗಿರಲಿಲ್ಲವೆಂದು ಸ್ವತಃ ಇಸ್ರೇಲೇ ಒಪ್ಪಿಕೊಂಡಿದೆ. ಅದು ಇಸ್ರೇಲಿ‌ನ ನಿರ್ಣಯಾಧಿಕಾರದ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುವ ಮಿಲಿಟರಿ ಆಕ್ರಮಣ ಸರಣಿಯ ಪರಾಕಾಷ್ಠೆಯಾಗಿತ್ತು. ಫೆಲಸ್ತೀನ್ ಸಮಸ್ಯೆಗೆ ‘ಅಂತಿಮ ಪರಿಹಾರ’ ಕಂಡುಕೊಳ್ಳಲು ಇತರ ರಾಷ್ಟ್ರಗಳಿಂದ ತಮ್ಮ ಪರವಾಗಿ ಒಕ್ಕೊರಲ ಬೆಂಬಲವನ್ನು ನಿರೀಕ್ಷಿಸಲು ಇಸ್ರೇಲ್‌‌ಗೆ ಸಾಧ್ಯವಿದೆ. ಕಾರಣ ಒಂದು ರಾಷ್ಟ್ರವಾಗಲೀ ಭೂಮಿಯಾಗಲೀ ಏನೂ ಇಲ್ಲದ ಫೆಲಸ್ತೀನಿಯರು ಆ ರಾಷ್ಟ್ರಗಳ ದೃಷ್ಟಿಯಲ್ಲಿ ‘ಶಾಂತಿಯ ಭಂಜಕರು’ (Spoilers of Peace) ಆಗಿದ್ದಾರೆ. ಕೆಲ ದೇಶಗಳಿಂದ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯಗಳು ಲಭಿಸಿದ್ದರೂ ಅದೆಲ್ಲವೂ ವ್ಯರ್ಥವಾಗಿತ್ತು. ನಾವು ಏಕಾಂಗಿಗಳೆಂದು ಫೆಲಸ್ತೀನಿಯರು ಹೇಳುವಾಗ ಅವರು ಅದರ ಕುರಿತು ಸ್ಪಷ್ಟವಾದ ನಿಲುವು ಮತ್ತು ಪ್ರಜ್ಞೆಯನ್ನು ಖಂಡಿತವಾಗಿಯೂ ಹೊಂದಿದ್ದಾರೆ.

ಒಂದು ರೀತಿಯಲ್ಲಿ ಸಣ್ಣ ಗೆಲುವನ್ನು ಪಡೆಯಲು ತಮ್ಮಿಂದ ಸಾಧ್ಯವಾಗಿದೆಯೆಂದು ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರು ಹೇಳಿಕೊಳ್ಳುತ್ತಿದ್ದಾರೆ. ಇಸ್ರೇಲ್ ಆಕ್ರಮಣವನ್ನು ಮೆಟ್ಟಿ ನಿಂತ ರಕ್ಷಣಾ ಪಡೆಗಳು ಮಾತ್ರವಾಗಿತ್ತು ದಕ್ಷಿಣ ಲೆಬನಾನಿನಲ್ಲಿ ಬಾಕಿಯುಳಿದಿದ್ದು. ಇದ್ದ ಭೂಮಿಯನ್ನೂ ಕಳೆದುಕೊಂಡು ಬದುಕುವ ಫೆಲಸ್ತೀನಿಯನ್ ನಿರಾಶ್ರಿತರನ್ನು ಮತ್ತು ಲೆಬನೀಸ್ ಕೃಷಿಕರನ್ನಾಗಿದೆ ಇಸ್ರೇಲ್ ದಾಳಿ ಭೀಕರವಾಗಿ ಬೇಟೆಯಾಡಿದ್ದು. ಹಳ್ಳಿಗಳು ಮತ್ತು ನಗರಗಳನ್ನು ಧ್ವಂಸಗೈದಿದ್ದು, ಅಮಾಯಕ ನಾಗರಿಕರನ್ನು ಸಾಮೂಹಿಕ ಕಗ್ಗೊಲೆಗೈದಿದ್ದೆಲ್ಲವೂ ಧೃಢೀಕರಿಸಲ್ಪಟ್ಟ ಮಾಹಿತಿಗಳಾಗಿವೆ. ಕ್ಲಸ್ಟರ್ ಬಾಂಬುಗಳು ಪ್ರಯೋಗಿಸಲ್ಪಟ್ಟಿವೆಯೆಂದು ವಿವಿಧ ವರದಿಗಳು ಹೇಳುತ್ತಿದೆ. ಭಯೋತ್ಪಾದಕ ದಾಳಿಗಿಂತ ಯಾವುದೇ ಭಿನ್ನವಲ್ಲದ ಇಸ್ರೇಲ್ ಮಿಲಿಟರಿ ದಾಳಿಯಿಂದಾಗಿ ಗಟ್ಟಿಯಾದ ನೆಲೆಯಿಲ್ಲದೆ ಪದೇ ಪದೇ ಪಲಾಯನಗೈದು ಬದುಕುವ ದಯನೀಯ ಗತಿ ಲೆಬನಾನ್ ಜನತೆಯದ್ದು. ಕೊನೆಯದಾಗಿ ನಡೆದ ಆಕ್ರಮಣದಲ್ಲಿ 2 ಲಕ್ಷಕ್ಕೂ ಮಿಕ್ಕ ಜನರು ತಮ್ಮ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ. 1948ರಲ್ಲಿ ಗಲೀಲಿಯಾ ಮತ್ತು ಇತರ ಹಲವೆಡೆಗಳಲ್ಲಿ ಫಲಪ್ರದವೆಂದು ಸಾಬೀತಾದ ತಂತ್ರವನ್ನಾಗಿದೆ ದಕ್ಷಿಣ ಲೆಬನಾನಿನಲ್ಲಿ ಇಸ್ರೇಲ್ ಈಗ ಪ್ರಯೋಗಿಸುತ್ತಿರುವುದು. ದಕ್ಷಿಣ ಲೆಬನಾನಿನ ‘ಫೇಲಸ್ತೀನೀಕರಣ’ವೆಂದು ಇದನ್ನು ಹೇಳಬಹುದು.

Gilles Deleuze

ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರಲ್ಲಿ ಅಧಿಕವೂ ಈ ನಿರಾಶ್ರಿತರಾದ ಜನರಾಗಿದ್ದಾರೆ. ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ನಿರಾಶ್ರಿತರನ್ನಾಗಿಸುವುದು ಮತ್ತು ಆ ಮೂಲಕ ಅವರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸಿ ಪರಾಜಿತಗೊಳಿಸುವುದಾಗಿದೆ ಇಸ್ರೇಲಿನ ಗೂಢ ತಂತ್ರ.

ಬಹಳ ಸಂಕೀರ್ಣವೂ ದುರ್ಬಲವೂ ಆದ ಒಂದು ರಾಷ್ಟ್ರದಲ್ಲಿ ಇಸ್ರೇಲ್ ಸಾಮೂಹಿಕ ನರಮೇಧ ನಡೆಸುತ್ತಿದೆಯೆಂದು ನಾವು ಹೇಳುತ್ತಿರುವುದು ಲೆಬನಾನಿನೊಂದಿಗೆ ನಮಗಿರುವ ಬಾಂಧವ್ಯದ ದೆಸೆಯಿಂದ ಮಾತ್ರವಲ್ಲ. ಅದಕ್ಕೆ ಮತ್ತೊಂದು ಕಾರಣವೂ ಇದೆ. ಯುರೋಪ್ ಸಹಿತ ಮತ್ತಿತರೆಡೆ ಉಗ್ರವಾದದ ಸಮಸ್ಯೆಯನ್ನು ಭವಿಷ್ಯದಲ್ಲಿ ಹೇಗೆ ಎದುರಿಸಬಹುದೆಂಬ ವಿಷಯವನ್ನು ನಿರ್ಧರಿಸುವ ಒಂದು ಮಾದರಿಯಾಗಿದೆ ಇಸ್ರೇಲ್-ಫೆಲಸ್ತೀನ್ ಸಂಘರ್ಷ. ಹೆಚ್ಚೆಚ್ಚು ಜನರನ್ನು ಭಯೋತ್ಪಾದಕರಾಗಿ ಕಾಣುವ ಒಂದು ವರ್ಗೀಕರಣದತ್ತ ಜಗತ್ತಿನಾದ್ಯಂತವಿರುವ ರಾಷ್ಟ್ರಗಳ ಒಕ್ಕೂಟಗಳು ಮತ್ತು ಜಾಗತಿಕ ಪೋಲೀಸ್-ಕ್ರಿಮಿನಲ್ ವಿಚಾರಣಾ ಸಂಸ್ಥೆಗಳು ಸಾಗಬೇಕಾದ ಅನಿವಾರ್ಯತೆ ಕೊನೆಗೆ ಸೃಷ್ಟಿಯಾಗುತ್ತದೆ. ಭಯಾನಕವಾದ ಒಂದು ಭವಿಷ್ಯದ ಪ್ರಯೋಗಾಲಯವಾಗಿ ಸ್ಪೈನನ್ನು ಬದಲಾಯಿಸಿದ ಸ್ಪಾನಿಷ್ ಅಂತರ್ಯುದ್ಧಕ್ಕೆ ಸಮಾನವಾದ ಸನ್ನಿವೇಶವಾಗಿದೆ ಇದು.

ಸದ್ಯ ಇಸ್ರೇಲ್ ಒಂದು ಪ್ರಯೋಗ ನಡೆಸುತ್ತಿದೆ. ಒಮ್ಮೆ ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ಇತರ ರಾಷ್ಟ್ರಗಳಿಗೂ ಅದರ ಅನುಕರಣೆ ಮಾಡಿ ಲಾಭ ಪಡೆಯಬಹುದು. ಅಂಥ ದಬ್ಬಾಳಿಕೆ ಮಾದರಿಯೊಂದನ್ನು ಇಸ್ರೇಲ್ ಇಂದು ಕಂಡು ಹಿಡಿದಿದೆ . ಇಸ್ರೇಲಿನ ಈ ರಾಜಕೀಯ ತಂತ್ರಕ್ಕೆ ಬಹಳ ಬಾಳಿಕೆ ಇದೆ. ತಮ್ಮನ್ನು ಖಂಡಿಸುವ ವಿಶ್ವಸಂಸ್ಥೆಯ ಠರಾವುಗಳು ವಾಸ್ತವದಲ್ಲಿ ತಮ್ಮ ಬೆನ್ನುತಟ್ಟುತ್ತಿದೆ ಎಂಬ ನಂಬಿಕೆ ಇಸ್ರೇಲಿಗಿದೆ. ಆಕ್ರಮಿತ ಪ್ರದೇಶಗಳನ್ನು ಬಿಟ್ಟು ಹೋಗಲು ನೀಡುವ ಆಹ್ವಾನಗಳನ್ನು ಅಲ್ಲಿ ವಸಾಹತು ಸ್ಥಾಪಿಸುವ ಹಕ್ಕುಗಳನ್ನಾಗಿ ಇಸ್ರೇಲ್ ಪರಿವರ್ತಿಸುತ್ತಿದೆ. ದಕ್ಷಿಣ ಲೆಬನಾನಿಗೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವುದನ್ನು ಒಂದು ಉತ್ತಮ ನಿರ್ಧಾರವಾಗಿ ಇಸ್ರೇಲ್ ಪರಿಗಣಿಸುತ್ತದೆ. ಇಸ್ರೇಲ್ ಸೈನ್ಯದ ಸ್ಥಾನದಲ್ಲಿ ಶಾಂತಿಪಾಲನಾ ಪಡೆಯು ಪ್ರಸ್ತುತ ಪ್ರದೇಶವನ್ನು ಪೋಲೀಸ್ ವಲಯ ಅಥವಾ ಭದ್ರತಾ ಮರುಭೂಮಿಯಾಗಿ ಮಾರ್ಪಡಿಸುತ್ತದೆ. ಅವರಿಗೆ ಬಹಳ ಆಸಕ್ತಿದಾಯಕ ದರೋಡೆಯಾಗಿದೆ ಈ ಸಂಘರ್ಷ. ಫೆಲಸ್ತೀನಿಯರನ್ನು ಶಾಂತಿ ಮಾತುಕತೆಗಳಲ್ಲಿ ‘ಶುದ್ಧ ಪಾಲುದಾರ’ ಎಂದು ಒಪ್ಪಿಕೊಳ್ಳಲು ಪ್ರಯತ್ನಿಸದೆ ಇಡೀ ಜಗತ್ತು ಈ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರು ಯುದ್ಧದಲ್ಲಿದ್ದಾರೆ, ಅವರಿಗೂ ಇಷ್ಟವಿಲ್ಲದ ಯುದ್ದದಲ್ಲಿ.

ಅನುವಾದ- ಶಂಸ್ ಗಡಿಯಾರ್

Leave a Reply

*