ಬದುಕಿನ ನಾಡಿಮಿಡಿತದಲ್ಲಿ ಕಾವ್ಯದ ಎದೆಬಡಿತ ಆಲಿಸಿದ ಕವಿ: ಮಹಮೂದ್ ದರ್ವೇಶ್

ಮಹಮೂದ್ ದರ್ವೇಶ್!
ಇತ್ತೀಚಿನ ದಿನಗಳಲ್ಲಿ ನನಗೆ ಓದಿನ ಸುಖ ದಯಪಾಲಿಸಿದ ಫೆಲೆಸ್ತೀನಿನ ಶಕ್ತಿಶಾಲಿ ಕವಿ. ಪತ್ರಿಕಾ ಕೆಲಸಗಳಲ್ಲಿ ಜಡ್ಡುಗಟ್ಟಿ, ದಿನ ನಿತ್ಯದ ಹೊರೆಯಿಂದ ಸಂವೇದನಾ ಶಕ್ತಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದ ನನ್ನನ್ನು ಹೃದಯ ಹಿಂಡಿ ಎಬ್ಬಿಸಿದ ಕವಿ ಮಹಮೂದ್ ದರ್ವೇಶ್. ನನ್ನ ಬದುಕಿನ ಯೋಗ್ಯತೆ ಇರುವುದು ನಾನು ಸಾಯುವಾಗ ನನ್ನ ತಾಯಿಯ ಕಣ್ಣಲ್ಲಿ ಸುರಿಯುವ ಕಣ್ಣೀರಿನಲ್ಲಿ’’ ಎನ್ನುವಂತಹ ಸಾಲುಗಳು ಯಾವ ಸತ್ತ ಹೃದಯವನ್ನು ತಾನೆ ಬಡಿದೆಬ್ಬಿಸಲಾರದು ಹೇಳಿ? ಇಲ್ಲಿ ತಾಯಿ ಎಂದರೆ ಮಾತೃಭೂಮಿ ಫೆಲೆಸ್ತೀನ್. ತನ್ನ ದೇಶವಾಸಿಗಳ ನಡುವೆ ತಾನೊಬ್ಬ ಯೋಗ್ಯ ವ್ಯಕ್ತಿಯಾಗಿ ಬಾಳಿಬದುಕಬೇಕೆಂಬ ಪ್ರಬಲ ಇಚ್ಛೆ ಈ ಕವಿಗಿದ್ದಿರಬೇಕು. ಅದಕ್ಕಾಗಿ ಆತ ತನ್ನ ತಾಯಿನಾಡನ್ನು ಶಕ್ತಿಮೀರಿ ಪ್ರೀತಿಸಿದ. ತಾಯಿನಾಡಿಗಾಗಿ ವಿಧವಿಧದ ಶಿಕ್ಷೆಗೊಳಗಾದ. ಹಲವಾರು ವರ್ಷ ಗೃಹಬಂಧನದಲ್ಲಿ ಕಳೆದ. ವರ್ಷಗಟ್ಟಲೆ ತಾನು ಪ್ರೀತಿಸುತ್ತಿದ್ದ ತನ್ನ ತಾಯಿನಾಡನ್ನು ಬಿಟ್ಟು ಯಾವುದೋ ಪರದೇಶದಲ್ಲಿ ಅಬ್ಬೇಪಾರಿಯಂತೆ ಬದುಕುವ ಕ್ರೂರಶಿಕ್ಷೆಗೊಳಗಾದಾಗಲೂ ಈ ಕವಿ ತನ್ನ ಜನರನ್ನು, ಅವರನ್ನೆಲ್ಲಾ ಹೊತ್ತುಕೊಂಡು ಪೋಷಿಸುತ್ತಿದ್ದ ತಾಯಿನಾಡನ್ನು ಎಂದೂ ಮರೆಯಲಿಲ್ಲ. ಅದು ಆತನ ಕಾವ್ಯದಲ್ಲಿ ಜೀವಂತವಾಗಿತ್ತು. ತನ್ನೊಳಗೆ ಯಾವುದು ಜೀವಂತವಾಗಿರುತ್ತೋ ಅದು ಕಾವ್ಯದಲ್ಲೂ ಜೀವಂತವಾಗಿರುತ್ತದೆ. ಹಾಗಿದ್ದಲ್ಲಿ ಮಾತ್ರ ಕಾವ್ಯವೊಂದು ಕಾವ್ಯಾಸಕ್ತರನ್ನು ಮುಟ್ಟಬಲ್ಲುದು.

ದರ್ವೇಶ್ ಕವಿಯ ಕಾವ್ಯದ ಎದೆಬಡಿತವೂ ಆತನ ಬದುಕಿನ ನಾಡಿಮಿಡಿತದಲ್ಲಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಹಾಗೆ ನೋಡಿದರೆ ಈ ಕವಿಯ ಕಾವ್ಯದ ಜೀವಾಳ ಫೆಲೆಸ್ತೀನ್ ಎಂಬ ಹೋರಾಟ ಭೂಮಿ ಎನ್ನಬೇಕು. ತನ್ನ ಮಾತೃಭೂಮಿಯ ಸಮಸ್ತ ಚರಿತ್ರೆಯನ್ನೂ, ನೋವು ನಲಿವನ್ನು ಕೆಲವೇ ಪದಗಳಲ್ಲಿ ಹಿಡಿದು ಕಾವ್ಯಾಸ್ತಕರಿಗೆ ಅಷ್ಟೇ ತೀವ್ರತೆಯಿಂದ ದಾಟಿಸುವ ಸಾಮರ್ಥ್ಯ ಈ ಕವಿಗಿತ್ತು. ಈತನ ಯಾವ ಕವಿತೆಯೂ ಕಾವ್ಯಾಸಕ್ತರಿಂದ ತಿರಸ್ಕೃತವಾಗಿಲ್ಲ. ಓದುಗರನ್ನು ತಲ್ಲಣಿಸದ, ಅವರ ಸಂವೇದನಾ ಶಕ್ತಿಯನ್ನು ಎಚ್ಚರಿಸದ ಒಂದೇ ಒಂದು ತುಣುಕನ್ನೂ ಈ ಕವಿ ಬರೆದಿಲ್ಲ. ಈತ ಏನೇ ಬರೆದರೂ ಅದು ತನ್ನ ಮಾತೃಭೂಮಿಯ ಕುರಿತೇ ಆಗಿರುತ್ತದೆ. ಈತ ಕವಿಯಾಗಿ ಹುಟ್ಟಿರುವುದೇ ತನ್ನ ಮಾತೃಭೂಮಿಯ ಯಾತನೆಯ ಕೊರಳಿಗೆ ಧ್ವನಿಯಾಗಳೆಂದೇ ಇರಬೇಕು. ಆ ಧ್ವನಿ ಫೆಲೆಸ್ತೀನ್ ಎಂಬ ಹೋರಾಟ ಭೂಮಿಯ ನೋವನ್ನೂ, ಆ ನೋವೊಳಗೂ ಅದು ತನ್ನಷ್ಟಕ್ಕೆ ತಾನೇ ಉದ್ದೀಪಿಸುತ್ತಿದ್ದ ಅಪರಿಮಿತ ಶಕ್ತಿ ಸಂಚಯವನ್ನೂ ಜಗತ್ತಿಗೆ ಸಾರಿತು. ಕವಿಯ ಕಣ್ಣಿನಲ್ಲಿ ಫೆಲೆಸ್ತೀನ್ ಸ್ವಾತಂತ್ರ್ಯದ ಅಂತಿಮ ಭೂಮಿಯಾಗಿತ್ತು. ಅಂತಿಮ ಆವಾಸ ಸ್ಥಾನವಾಗಿತ್ತು. ಅಂತಿಮ ಮನೆಯಾಗಿತ್ತು. ಅದಿಲ್ಲದಿದ್ದರೆ ಈ ನಶ್ವರ ಜಗತ್ತಿನಲ್ಲಿ ತನಗೆ ಇನ್ನೊಂದಿಲ್ಲ ಎಂಬಂತೆ ಆರ್ತವಾಗಿ ಈ ಜಗತ್ತಿನ ಮುಂದೆ ಕವಿ ಹಾಡಿದ.

ಆದ್ದರಿಂದ ಈ ಕವಿ ಒಂದು ತುಂಡು ಬ್ರೆಡ್ಡಿನ ಕುರಿತು ಬರೆದರೂ ಅದು ಅಂತಿಮವಾಗಿ ತನ್ನ ಮಾತೃಭೂಮಿಯ ವಿವಿಧ ಹಸಿವನ್ನು (ಹೊಟ್ಟೆ ಹಸಿವು, ಸ್ವಾತಂತ್ರ್ಯದ ಹಸಿವು ಇತ್ಯಾದಿ) ಧ್ವನಿಸುತ್ತಿದ್ದುದು ಅಸಹಜವೇನಾಗಿರಲಿಲ್ಲ. ಆ ಹಸಿವು ಎಂದಾದರೂ ಒಮ್ಮೆ ತನ್ನ ಜನರಿಗೆ ದಕ್ಕುವ ವಾಸ್ತವ ಎಂಬ ಅರಿವು ಮತ್ತು ಭರವಸೆ ಈ ಕವಿಯದ್ದಾಗಿತ್ತು. ದರ್ವೇಶ್ ಕವಿ ಮೂಲತಃ ಜನಸಾಮಾನ್ಯರ ಕವಿ. ಜನಸಾಮಾನ್ಯರಿಗೆ ಅರ್ಥವಾಗದ ಒಂದೇ ಒಂದು ತುಣುಕನ್ನೂ ಈ ಕವಿ ರಚಿಸಿಲ್ಲ. ಜನರ ಭಾಷೆಯಲ್ಲಿ, ಅವರ ದಿನನಿತ್ಯ ಬಳಕೆಯ ವಸ್ತುಗಳನ್ನೇ ರೂಪಕವಾಗಿಟ್ಟುಕೊಂಡು ಬರೆವ ಈ ಕವಿ ಸಾಧಾರಣವಾದುದರಲ್ಲಿ ಅಸಾಧಾರಣತ್ವವನ್ನು ಕಂಡುಕೊಳ್ಳುತ್ತಿದ್ದ ಅಥವಾ ಸೃಷ್ಟಿಸುತ್ತಿದ್ದ ಪರಿ ಬೆರಗಿನದ್ದು. ಬ್ರೆಡ್ಡು, ಬೆಂಕಿ, ಕಾಫಿ, ಬಾಲ್ಯಕಾಲದ ನೆನಪುಗಳು ಇತ್ಯಾದಿ ಜನಸಾಮಾನ್ಯರ ಸಾಮಾನ್ಯ ಸಂಗತಿಗಳನ್ನು ರೂಪಕವಾಗಿಟ್ಟುಕೊಂಡು ರಚಿತವಾಗಿರುವ ದರ್ವೇಶ್ ಕಾವ್ಯಗಳು ಫೆಲೆಸ್ತೀನ್ ಎಂಬ ಪುಟ್ಟ ಲೋಕವನ್ನು ಅದರೆಲ್ಲಾ ಚೆಲುವಿನೊಂದಿಗೆ ಕಟ್ಟಿಕೊಡುತ್ತವೆ. ಮಿಸೆಲ್, ರಾಕೆಟ್, ಯುದ್ಧ ಟ್ಯಾಂಕ್‌ಗಳ ದುಸ್ವಪ್ನ ಜೊತೆಗೆ ದಿನಗಳನ್ನು ಎಣಿಸುವ ಅಲ್ಲಿಯ ನಾಗರಿಕರ ದಿನನಿತ್ಯದ ತಲ್ಲಣಗಳ ಬಗೆಗೆ ಅದ್ಭುತ ಒಳನೋಟ ಬೀರುತ್ತವೆ. ದರ್ವೇಶ್ ಕಾವ್ಯವನ್ನು ಅಭ್ಯಾಸ ಮಾಡುವ ಯಾರೇ ಆದರೂ ಫೆಲೆಸ್ತೀನಿನ ಸಂಕ್ಷಿಪ್ತ ಇತಿಹಾಸವನ್ನಾದರೂ ಅರಿತಿರಲೇಬೇಕು. ಇಲ್ಲದಿದ್ದರೆ ಆತನ ಕಾವ್ಯ ಅರ್ಥವಾಗುವುದು ಕಷ್ಟ.

ಆಧುನಿಕ ಫೆಲೆಸ್ತೀನಿನ ಪ್ರತಿಯೊಂದು ಎಪಿಸೋಡನ್ನೂ ಜೀವಂತವಾಗಿ ಬದುಕಿದ ದರ್ವೇಶ್ ಹುಟ್ಟಿದ್ದು, 1942ರಲ್ಲಿ ಪಶ್ಚಿಮ ಗಲಿಲಿಯದ ಅಲ್-ಬರ‍್ವೆ ಎಂಬಲ್ಲಿ. ಭೂಮಾಲಿಕ ಕುಟುಂಬದ ಸಲೀಮ್ ಮತ್ತು ಹೌರಿಯಾ ದರ್ವೇಶ್ ದಂಪತಿಗಳ ದ್ವಿತೀಯ ಪುತ್ರ ರಾಗಿರುವ ಮಹಮೂದ್ ದರ್ವೇಶ್ ಬಾಲ್ಯದಲ್ಲಿ ಅಜ್ಜನೊಂದಿಗೆ ಸೇರಿ ಬರವಣಿಗೆಯನ್ನು ಅಭ್ಯಾಸ ಮಾಡಿದರು. 1948ರಲ್ಲಿ ಜೂನ್ ತಿಂಗಳಲ್ಲಿ ಇಸ್ರೇಲ್ ಪಡೆಗಳು ಅಲ್ ಬರ‍್ವಾ ಪಟ್ಟಣದ ಮೇಲೆ ದಾಳಿ ನಡೆಸಿ, ಹಲವಾರು ನಾಗರಿಕರು ನಿರಾಶ್ರಿತರಾಗಿ ಲೆಬನಾನಿನ ಶಿಬಿರವೊಂದರಲ್ಲಿ ಆಶ್ರಯ ಪಡೆದರು. ಆ ನಿರಾಶ್ರಿತರಲ್ಲಿ ದರ್ವೇಶ್ ಕುಟುಂಬವೂ ಒಂದಾಗಿತ್ತು. ಮುಂದೆ 1949 ಇಸ್ರೇಲ್ ಲೆಬನಾನಿನ ಮೇಲೆ ಆಕ್ರಮಣಗೈದಾಗ ದರ್ವೇಶ್ ಕುಟುಂಬ ತಾಯಿ ನಾಡಿಗೆ ಮರಳಿತು. ಹಲವಾರು ವರ್ಷಗಳ ಕಾಲ ತನ್ನ ಯೌವ್ವನವನ್ನು ಇಸ್ರೇಲ್‌ನ ಕಪಿಮುಷ್ಠಿಯಲ್ಲಿದ್ದ ಫೆಲೆಸ್ತೀನಿನ ಅಕ್ರಾದಲ್ಲಿ ಕಳೆದ ಕವಿ ದರ್ವೇಶ್ ಹೈಸ್ಕೂಲ್ ಶಿಕ್ಷಣವನ್ನು ಕಫ್ರ್ ಯಾಸಿಫ್ ಎಂಬಲ್ಲಿ ಪೂರೈಸಿದರು. ನಂತರ ಹೈಫಾ ಪ್ರದೇಶಕ್ಕೆ ಸ್ಥಳಾಂತರಗೊಂಡರು. ನಿರಂತರವಾಗಿ ಅಲೆಮಾರಿ ಜೀವನವನ್ನು ನಡೆಸಿದ ಈ ಕವಿ ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಥಮ ಕವನ ಸಂಕಲನ `ಅಸಫಿರ್ ಬಿಲ ಅಜ್ನಿಹಾ ಅಥವಾ `ರೆಕ್ಕೆಯಿಲ್ಲದ ಹಕ್ಕಿ’ಯನ್ನು ಪ್ರಕಟಿಸಿದರು. ಇವರ ಆರಂಭದ ಕವನಗಳು ಇಸ್ರೇಲ್ ಕಮ್ಯುನಿಸ್ಟ್ ಪಾರ್ಟಿಯ ನಿಯತಕಾಲಿಕ ಅಲ್ ಜದೀದ್‌ನಲ್ಲಿ ಪ್ರಕಟವಾಯಿತು. ನಂತರ ಅಲ್ ಜದೀದ್ ನಿಯತಕಾಲಿಕದ ಸಂಪಾದಕರಾದ ಇವರು, ಮುಂದೆ ಅಲ್ ಫಜಿರ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. 1965ರ ಮೇ ತಿಂಗಳಲ್ಲಿ ನಜರತ್ ಮೂವಿ ಹೌಸಲ್ಲಿ ದರ್ವೇಶ್ ವಾಚಿಸಿದಬಿತಾಕತ್ ಹುವಿಯ್ಯಾ’’ (ಐಡೆಂಟಿಟಿ ಕಾರ್ಡ್) ಕವನ ರಿಗೆ ಅರಬ್ ಜಗತ್ತಿನಾದ್ಯಂತ ಪ್ರಸಿದ್ಧಿ ತಂದುಕೊಟ್ಟಿತು. ಈ ಕವನದಲ್ಲಿ ಇಸ್ರೇಲ್ ಸೈನಿಕರ ಮುಂದೆ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಹೋಗುವ ಕವಿ ಕವನವನ್ನು ಆರಂಭಿಸುವುದು, ಬರೆಯಿರಿ, ನಾನೊಬ್ಬ ಅರಬ್, ನನ್ನ ಐಡೆಂಟಿಟಿ ಕಾರ್ಡ್ ನಂಬರ್ ಐವತ್ತು ಸಾವಿರ, ನನಗೆ ಎಂಟು ಮಂದಿ ಮಕ್ಕಳಿದ್ದಾರೆ. ಈ ಬೇಸಿಗೆಯ ನಂತರ ಒಂಬತ್ತನೇ ಮಗನೂ ಹುಟ್ಟಬಹುದು, ನಿಮಗೆ ಸಿಟ್ಟೇ?’’ ಎಂದು ಕೇಳುತ್ತಾನೆ. ಕವನದುದ್ದಕ್ಕೂ ಕವಿ ತನ್ನ ಮೂಲಕ ತನ್ನ ಜನತೆಯನ್ನು ಪರಿಚಯಿಸುತ್ತಾ ಹೋಗುತ್ತಾನೆ.ಬಿಕ್ಷೆಗಾಗಿ ನಿಮ್ಮ ಬಾಗಿಲ ಮುಂದೆ ನಿಂತು ದೇಹಿ’’ ಎನ್ನದ ತನ್ನ ಜನರನ್ನು ಆತ್ಮಾಭಿಮಾನದಿಂದ ಪರಿಚಯಿಸುತ್ತಾನೆ.

ಯಾವುದೇ ಟೈಟಲ್‌ಗಳಿಲ್ಲದ ಒಬ್ಬ ಸಾಮಾನ್ಯ ಅರಬ್ ಪ್ರಜೆ ತಾನು ಎಂದು ಹೇಳುವ ಕವಿ, ತನ್ನ ಪೂರ್ವಜರ ಕಥೆ ಹೇಳುವ ಮೂಲಕ ಫೆಲೆಸ್ತೀನ್ ಎಂಬ ರಾಷ್ಟ್ರದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಾನೆ. ಹುಟ್ಟಾ ಅಸುಖಿಯೂ, ಬಡವನೂ ಆಗಿರುವ ತನ್ನ ಅಜ್ಜ ಓರ್ವ ರೈತನಾಗಿದ್ದು, ತನಗೆ ಹೇಗೆ ಓದುವುದು ಎಂಬುದನ್ನು ಕಲಿಸುವ ಮೊದಲೇ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದ್ದಾನೆ ಎನ್ನುತ್ತಾನೆ. ತನ್ನ ಪೂವರ್ಜರ ಅಪೂರ್ವ ಸಂಪತ್ತನ್ನೂ, ಭೂಮಿಯನ್ನೂ, ತನ್ನ ಮಕ್ಕಳನ್ನು ಕಸಿದುಕೊಂಡಿರುವ ನೀವು ಈ ಕಲ್ಲುಗಳ ಹೊರತಾಗಿ ಬೇರೇನನ್ನೂ ಉಳಿಸಿಲ್ಲ’’ ಎಂದು ಹೇಳಿಕೊಳ್ಳುವ ಕವಿ ಆ ಕಲ್ಲುಗಳನ್ನೇ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ತಮ್ಮ ಆಯುಧವನ್ನಾಗಿ ಬಳಸಿಕೊಂಡಿರುವ ಫೆಲೆಸ್ತೀನ್ ಪ್ರಜೆಗಳ ಯಶೋಗಾಥೆಯನ್ನು ಪರೋಕ್ಷವಾಗಿ ವಿವರಿಸುತ್ತಾನೆ. ಕವಿ ತನ್ನ ಐಡೆಂಟಿಟಿಯನ್ನು ಹೇಳುತ್ತಾ ಕವನವನ್ನು ಹೀಗೆ ಕೊನೆಗೊಳಿಸುತ್ತಾರೆ,ಆದ್ದರಿಂದ, ಮೊದಲ ಪುಟದ ಆರಂಭದಲ್ಲೇ ಬರೆಯಿರಿ, ನಾನು ಜನರನ್ನು ಧ್ವೇಷಿಸಲಾರೆ. ಅತಿಕ್ರಮಣ ಮಾಡಲಾರೆ. ಆದರೆ, ನಾನು ಹಸಿವಿನಿಂದ ನರಳಿದರೆ, ಆಕ್ರಮಣಕಾರರ ಮಾಂಸ ನನ್ನ ಆಹಾರವಾಗಬಹುದು, ಎಚ್ಚರವಿರಲಿ ಎಚ್ಚರವಿರಲಿ, ನನ್ನ ಹಸಿವು, ಸಿಟ್ಟಿನ ಬಗ್ಗೆ’’ ವಸಾಹತುಶಾಹಿ ಪ್ರಭೃತಿಗಳಿಗೆ ಇದು ತನ್ನ ಜನರ ಪರವಾಗಿ ಕವಿ ನೀಡುವ ಎಚ್ಚರಿಕೆ.


ದರ್ವೇಶ್ ಯುರೋಪಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಫೆಲೆಸ್ತೀನ್ ನಿರಾಶ್ರಿತರ ಜೊತೆಗೂಡಿ 1970ರಲ್ಲಿ ಹೆಚ್ಚಿನ ಓದಿಗಾಗಿ ಸೋವಿಯತ್ ರಷ್ಯಾದೆಡೆಗೆ ಪ್ರಯಾಣ ಬೆಳೆಸಿದರು. ತನ್ನ ಗುಪ್ತ ರಾಜಕೀಯ ಚಟುವಟಿಕೆಗಳಿಂದಾಗಿ ಇಸ್ರೇಲ್ ನೀಡಿದ್ದ ಎರಡನೇ ದರ್ಜೆಯ ಪೌರತ್ವವನ್ನೂ ಕಳೆದುಕೊಂಡು ಫೆಲೆಸ್ತೀನ್ ನಿರಾಶ್ರಿತರ ಬೆನ್ನು ಹಿಡಿದು ಈಜಿಪ್ಟ್, ಲೆಬನಾನ್, ಜೋರ್ಡನ್ ಇತ್ಯಾದಿ ಅರಬ್ ಜಗತ್ತನ್ನು ಅಂಡಲೆಯುತ್ತಾ ಅಪಾರ ಅನುಭವ ಕರಗತ ಮಾಡಿಕೊಂಡರು. ಸ್ವಂತ ಮನೆಯಿಂದ ಹೊರಹಾಕಲ್ಪಟ್ಟ ನಿರಾಶ್ರಿತ ಫೆಲೆಸ್ತೀನ್ ನಾಗರಿಕರ ಯಾತನೆಯನ್ನು ನೇರವಾಗಿ ಕಂಡುಕೊಂಡ ದರ್ವೇಶ್, ಕಾವ್ಯವನ್ನೇ ಖಡ್ಗವಾಗಿಸಿ ಫೆಲೆಸ್ತೀನಿನ ವಾಸ್ತವನ್ನು ಜಗತ್ತಿನ ಮುಂದಿಟ್ಟರು. 1973ರಲ್ಲಿ ಪಿಎಲ್‌ಒ ಸೇರಿದ ಇವರು ನೇರವಾಗಿಯೇ ಹೋರಾಟಕ್ಕೆ ಧುಮುಕಿ ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾದರು. ಇದರ ಪರಿಣಾಮ ಫೆಲೆಸ್ತೀನ್ ಪ್ರವೇಶಿಸದಂತೆ ಇವರಿಗೆ ನಿರ್ಬಂಧ ವಿಧಿಸಲಾಯಿತು.
ದರ್ವೆಶ್ ಮೂವತ್ತಕ್ಕೂ ಹೆಚ್ಚು ಕವನ ಸಂಕಲನ ಮತ್ತು ಎಂಟು ಗದ್ಯ ಸಂಕಲಗಳನ್ನು ಪ್ರಕಟಿಸಿದ್ದಾರೆ.

1982ರ ಲೆಬನಾನಿನ ಮೇಲಿನ ಅಮಾನುಷ ದಾಳಿಯನ್ನು ದರ್ವೇಶ್ ನೇರವಾಗಿ ಕಂಡಿದ್ದರು. ಈ ಘಟನೆ ಅವರ ಜೀವನದ, ಕಾವ್ಯದ ಗತಿಯನ್ನೇ ಬದಲಾಯಿಸಿತ್ತು. ಲೆಬನಾನಿನ ಮೇಲೆ ಇಸ್ರೇಲ್ ನಡೆಸಿದ ಈ ಅಮಾನುಷ ದಾಳಿಯನ್ನು ಇತಿಹಾಸದ ಅತ್ಯಂತ ಪ್ರಮುಖ ಘಟನೆಯಾಗಿ ಇತಿಹಾಸಕಾರರು ಇಂದಿಗೂ ಗುರುತಿಸುತ್ತಾರೆ. ಆ ನಂತರ ಫೆಲೆಸ್ತೀನ್ ಪ್ರತಿರೋಧ ಪಡೆಯೊಂದಿಗೆ ಟ್ಯೂನಿಶೀಯಾಕ್ಕೆ ಪ್ರಯಾಣ ಬೆಳೆಸಿದ ದರ್ವೇಶ್ ಅಕ್ಷರಶಃ ಹೋರಾಟಗಾರನಂತೆಯೇ ಬದುಕಿದರು. ಗೊತ್ತು ಗುರಿ ಇಲ್ಲದಂತೆ ಜಗತ್ತಿನಾದ್ಯಂತ ಅಲೆದರು. ದರ್ವೇಶರ ಅತ್ಯುತ್ತಮ ಕಾವ್ಯಗಳೆಲ್ಲವೂ ಅವರು ತಾಯಿನಾಡಿನಿಂದ ಹೊರಗಡೆ ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದಾಗಲೇ ಹುಟ್ಟಿಕೊಂಡಿರುವುದು ವಿಶೇಷ ಮತ್ತು ಆ ಕಾವ್ಯಗಳೆಲ್ಲವೂ ತನ್ನ ತಾಯಿನಾಡಿನ ಕುರಿತೇ ಇರುವುದು ಮತ್ತೊಂದು ವಿಶೇಷ. 1995ರಲ್ಲಿ ಫೆಲೆಸ್ತೀನ್ ಲಿಬರೇಷನ್ ಆರ್ಗನೈಶೇಷನ್ ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದಾಗ ದರ್ವೇಶ್ ತಾಯಿ ನಾಡಿಗೆ ಹಿಂದಿರುಗಿದರು. ಮಾತೃಭೂಮಿಯಲ್ಲಿ ಸಹಜ ಜೀವನವನ್ನು ನಡೆಸುವ ಯತ್ನ ಮಾಡಿದರು. ಆದರೆ, ಇಸ್ರೇಲ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. 2002ರಲ್ಲಿ ರಾಮಲಲ್ಲಾದಲ್ಲಿ ಇಸ್ರೇಲ್ ನಡೆಸಿದ ಮಾನವ ಇತಿಹಾಸದ ಮತ್ತೊಂದು ಮಹಾ ದುರಂತಕ್ಕೆ ಅವರು ಸಾಕ್ಷಿಯಾದರು. ಈ ಘಟನೆ ಅವರ ಪ್ರಸಿದ್ಧ ಹಾಲತ್ ಹಿಶಾರ್’ ಕಾವ್ಯಸಂಕಲನದ ಉದಯಕ್ಕೆ ಕಾರಣವಾಯಿತು.

ಮಹಾ ಮಾನವತಾವಾದಿಯಾಗಿದ್ದ ದರ್ವೇಶ್ ಶತ್ರುಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲವರಾಗಿದ್ದರು. ತನ್ನ ಮಾತೃಭೂಮಿಯ ದುರವಸ್ಥೆಗೆ ಕಾರಣಕರ್ತರಾಗಿದ್ದ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ ನಾಗರಿಕರಾದ ಸಾಮಾನ್ಯ ಯಹೂದಿ ಗಳನ್ನು ಅವರೆಂದೂ ಧ್ವೇಷಿಸುತ್ತಿರಲಿಲ್ಲ. ಅವರ ವಿರೋಧವೇನಿದ್ದರೂ ವಸಾಹತುಶಾಹಿ ಶಕ್ತಿಗಳ ಪರದೆಯ ಹಿಂದೆ ನಿಂತು ಇಸ್ರೇಲ್ ಹೇರುತ್ತಿದ್ದ ನಿಯಮಗಳಿಗೆ, ಝಿಯೋನಿಸ್ಟ್ ಪಿತೂರಿಗಳಿಗೆದುರಾ ಗಿತ್ತು. ಎಷ್ಟೋ ಮಂದಿ ಯಹೂದಿಗಳೂ ಫೆಲೆಸ್ತೀನ್ ಪ್ರಜೆಗಳ ಕುರಿತು ಸಹಾನುಭೂತಿ ಹೊಂದಿರುವುದನ್ನು ಅವರು ಕಂಡುಕೊಂಡಿದ್ದರು. ಫೆಲೆಸ್ತೀನ್ ಎಂಬ ಸ್ವತಂತ್ರ ರಾಷ್ಟ್ರಕ್ಕಾಗಿ ಧ್ವನಿ ಎತ್ತುತ್ತಿದ್ದ ಯಹೂದಿಗಳೂ ಇದ್ದರೆಂಬುದನ್ನು ಅವರು ಅರಿತಿದ್ದರು. 1998ರಲ್ಲಿ ಹಾರ್ಟ್ ಸರ್ಜರಿಗೊಳಗಾದ ದರ್ವೇಶ್, ಅದೇ ಅನುಭವನ್ನಿಟ್ಟುಕೊಂಡುಜಿದಾರಿಯ್ಯಾ’ ಎಂಬ ಅದ್ಭುತ ಕಾವ್ಯ ಸಂಕಲನವನ್ನೇ ಹೊರತಂದರು.
2008ರಲ್ಲಿ ಮತ್ತೆ ಹೃದಯಾಘಾತಕ್ಕೊಳಗಾದ ಅವರು ಶಾಶ್ವತವಾಗಿ ಭೂಲೋಕಕ್ಕೆ ವಿದಾಯ ಹೇಳಿದರು.

ಸ್ವಾಲಿಹ್ ತೋಡಾರ್

6 Comments

Leave a Reply

*