ದೇವರ ಜಾಡು ಹಿಡಿದು ಹೊರಟ ಮಹಿಳಾ ಯಾತ್ರಿಕರು

ನಾನು ಈ ಯಾತ್ರೆ ಆರಂಭಿಸಿದ್ದು ಧರ್ಮಭ್ರಷ್ಟತೆಯ ಮೂಲಕ. ಆಗ ನನಗೆ 15 ವರ್ಷ ವಯಸ್ಸಿರಬಹುದು. ಶಸ್ತ್ರಚಿಕಿತ್ಸೆಯೊಂದನ್ನ ಮುಗಿಸಿ ನಾನು ಪ್ಯಾರಿಸ್‍ನಲ್ಲಿ ಬೇಸಿಗೆ ದಿನಗಳನ್ನು ಕಳೆಯುತ್ತಿದೆ. ವಾಸ್ತವದಲ್ಲಿ ಈ ಶಸ್ತ್ರಚಿಕಿತ್ಸೆ ನನ್ನ ಆರೋಗ್ಯದ ಜತೆಗೆ ಜೀವನವನ್ನೂ ಬದಲಿಸಿತು. ಈ ಸಂತೋಷದ ದಿನಗಳಿಗಾಗಿ ನಾನು ಆ ಪರಮಾತ್ಮನಿಗೆ ಎಲ್ಲಾ ರೀತಿಯಲ್ಲೂ ಆಭಾರಿಯಾಗಿದ್ದೇನೆ. ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾದ ಪ್ರಾರ್ಥನೆಯನ್ನು ದಿನಕ್ಕೆ ಐದು ಬಾರಿ ನಿಖರವಾಗಿ ನಿರ್ವಹಿಸಿ ಆ ಭಗವಂತನಿಗೆ ಸ್ತುತಿ ಹಾಡುತ್ತಿದ್ದೆ. (ಓರ್ವ ಮುಸಲ್ಮಾನ ತಾನು ಸಂಪೂರ್ಣವಾಗಿ ಮುಸ್ಲಿಮನಾಗಬೇಕಿದ್ದರೆ 5 ನಂಬಿಕೆಗಳಲ್ಲಿ ಗಟ್ಟಿಗೊಂಡಿರಬೇಕು. ಅಲ್ಲಾಹನೊಬ್ಬನೇ, ಮುಹಮ್ಮದ್ ಅವನ ಸಂದೇಶವಾಹಕ ಎಂದು ನಂಬವುದು. ದಿನಕ್ಕೈದು ಬಾರಿ ಪ್ರಾರ್ಥನೆ ಸಲ್ಲಿಸುವುದು. ಝಕಾತ್ (ದಾನ) ನೀಡುವುದು. ಉಪವಾಸ ಮಾಡುವುದು ಹಾಗೂ ಹಜ್ಜ್ ಯಾತ್ರೆ (ಮೆಕ್ಕಾದಲ್ಲಿರುವ ಕಆಬಾ ಸಂದರ್ಶನ) ನಡೆಸುವುದು) ಅದು ಸೆಖೆ ಹೆಚ್ಚಿದ್ದ ದಿನವಾಗಿತ್ತು. ಖಿಬ್ಲಾ ಕಡೆ (ಮೆಕ್ಕಾದ ಕಅಬಾ ಇರುವ ದಿಕ್ಕು) ಮುಖಮಾಡಿ ಕುರುಆನಿನ ವಚನಗಳನ್ನು ಜಪಿಸುತ್ತಾ ಳುಹುರ್ (ಮಧ್ಯಾಹ್ನದ ಪ್ರಾರ್ಥನೆ) ನಮಾಜ್ ನಿರ್ವಹಿಸುವ ವೇಳೆಗೆ ಅದೊಂದು ಯೋಚನೆ ನನ್ನೊಳಗೆ ಅನೂಹ್ಯ ಅಲೆಗಳಂತೆ ಬಂದು ಅಪ್ಪಳಿಸಿತು. ವಾಸ್ತವದಲ್ಲಿ ಆ ಯೋಚನೆ ನನ್ನನ್ನು ಕಸಿವಿಸಿಗೊಳ್ಳುವಂತೆ ಮಾಡಿತು.

ನೀನು ಯಾರನ್ನು ಪೂಜಿಸುತ್ತಿದ್ದೆ..? ನಿನ್ನ ಪ್ರಾರ್ಥನೆ ಯಾರಿಗಾಗಿ..? ಎಂಬ ಯೋಚನೆಗಳವು. ಆದರೆ ಆ ಯೋಚನೆಗಳನ್ನೆಲ್ಲಾ ಗೆಲ್ಲುವ ಪ್ರಯತ್ನ ಮಾಡಿದೆ. ಆದರೆ ನಾನು ನಮಾಜ್ ನಿರ್ವಹಿಸುವಾಗ, ಕುರುಆನ್ ಪಠಿಸುವಾಗ ನನ್ನ ತಲೆಯಲ್ಲಿ ಆ ಪ್ರಶ್ನೆಗಳು ಪುನರಾವರ್ತನೆಗೊಳ್ಳಲು ಶುರುವಾಯ್ತು.

“ನಾನು ದೇವರನ್ನು ಪೂಜಿಸುತ್ತಿದ್ದೇನೆ.!!” ಆದರೆ ಯಾರವನು..? ಅವನೇನು..? ಆ ದೇವರು ಎಲ್ಲಿದ್ದಾನೆ..? ಎಂಬ ಪ್ರಶ್ನೆಗಳು ನನ್ನನ್ನು ಗಾಢವಾಗಿ ಆವರಿಸಿಬಿಟ್ಟಿತು. ನನ್ನೊಳಗೆ ಎಡೆಬಿಡದೆ ಅನೂಹ್ಯ ರೀತಿಯಲ್ಲಿ ಮತ್ತೆ ಮತ್ತೆ ಈ ಯೋಚನೆಗಳು ಪ್ರತಿಧ್ವನಿಸಲು ಆರಂಭವಾಯ್ತು. ನನ್ನ ದೇಹ ಯೋಚನೆಯಿಂದ ಬೇರ್ಪಟ್ಟು, ಇಬ್ಭಾಗವಾಯ್ತು. ದೇಹದ ಒಂದು ಭಾಗವನ್ನು ಯಾವುದೋ ಅಗೋಚರ ಶಕ್ತಿ ನಿಯಂತ್ರಿಸುತ್ತಿರುವಂತೆ ಭಾಸವಾಗಲು ಶುರುವಾಯ್ತು. ಮತ್ತೊಂದೆಡೆ ದೇಹದ ಉಳಿದರ್ದ ಭಾಗದಲ್ಲಿ ಬಿಡಿಸಲಾಗದ ಒಗಟಿನಂತೆ ಈ ಯೋಚನೆಗಳು ಬಳ್ಳಿಗಳಂತೆ ಸುತ್ತಿಕೊಂಡವು. ಆಗಲೂ ನಾನು ಪ್ರಾರ್ಥನೆಯನ್ನು ಕೈ ಬಿಡದೆ, ಆ ಸೃಷ್ಟಿಕರ್ತನ ಧ್ಯಾನದಲ್ಲಿದ್ದೆ. ಅನಗತ್ಯ ಯೋಚನೆಗಳನ್ನು ಒಳಗಿಂದ ತೊಡೆದು ಹಾಕುವ ಸಲುವಾಗಿ ನನ್ನ ಮುಂದಿದ್ದ ಬೀರುವಿನತ್ತ ನನ್ನ ಗಮನವನ್ನು ಹರಿಸಲು ಶುರುವಿಟ್ಟುಕೊಂಡೆ. ಆ ನನ್ನ ಪ್ರಯತ್ನ ಯಶ ಕಂಡಿತು. ನಾನು ಸುಜೂದ್ (ಅಲ್ಲಾಹನ ಮುಂದೆ ತಲೆಬಾಗುವುದು) ಮಾಡುವ ಹೊತ್ತಿಗೆ ನನ್ನೊಳಗಿದ್ದ ಆ ಯೋಚನೆಗಳೆಲ್ಲವೂ ಚದುರಿ ಹೋದವು. ಆದರೆ ಸೂಜೂದ್ ನಿಂದ ತಲೆ ಮೇಲೆಕ್ಕೆತ್ತಿ ನೋಡುವ ಹೊತ್ತು ಕಣ್ಣೆದುರಿದ್ದ ಬೀರು ನನಗೆ ಪ್ರತಿಮೆಯಂತೆ ಗೋಚರಿಸಿತು. ನಾನಿದ್ದ ಕೋಣೆ ದೇವಾಲಯದಂತೆಯೂ ಕಾಣಿಸಿತು. ನಾನು ನನ್ನ ಧರ್ಮಕ್ಕೆ ವಿರುದ್ಧವಾಗಿದ್ದೇನೆ ಎಂಬ ಯೋಚನೆಗಳು ನನ್ನನ್ನು ಅಪ್ಪಿಕೊಂಡವು. ಈ ವೇಳೆ ದಿಢೀರನೆ ನನ್ನ ಕಿವಿಗೆ ಬಿದ್ದ ಆ ಅಗೋಚರ ಶಬ್ಧ ನನ್ನಲ್ಲಿ ಉತ್ತರ ಕಂಡುಕೊಳ್ಳುವಂತೆ ಮಾಡಿತು.

“ನಿನಗೆ ಗೊತ್ತಿಲ್ಲದೆ ಇರುವುದನ್ನು ನೀನು ಪೂಜಿಸಲು ಅಥವಾ ವೈಭವೀಕರಿಸಲು ನಿನ್ನಿಂದ ಸಾಧ್ಯವಿಲ್ಲ” ಎಂಬುವುದು ನನ್ನೊಳಗೆ ಕೊರೆಯಲಾರಂಭಿಸಿತು. ಹೀಗೆ ನನ್ನೊಳಗೆ ಹುಟ್ಟಿಕೊಂಡ ಅಜ್ಞಾತ ಉತ್ತರದ ಕಾರಣಕ್ಕೆ ಪಾರ್ಥನೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಕೂದಲು ಮರೆಸಲು ಉಟ್ಟಿದ್ದ ತಟ್ಟದ (ಶಾಲು) ಜೊತೆಗೆ ನಮಾಜ್ ಬಟ್ಟೆ ಮಡಚಿಟ್ಟು ನಾನು ಕೋಣೆಯಿಂದ ಹೊರನಡೆದೆ. ಆಶ್ಚರ್ಯವೆಂಬಂತೆ ನನ್ನೊಳಗಾದ ಈ ಕ್ರಿಯೆಗಳು ಪಂಜರದಿಂದ ಹೊರಬಿಟ್ಟ ಹಕ್ಕಿಯಂತೆ ನನ್ನನ್ನು ಸ್ವತಂತ್ರಗೊಳಿಸಿದಂತೆ ಅನುಭವವಾಯ್ತು. ಆದರೆ ದೇವರನ್ನು ಹುಡುಕ ಹೊರಟವಳ ಆದಿ ಹೆಜ್ಜೆ ಅದು ಎಂದು ನನಗಾಗ ತಿಳಿದಿರಲಿಲ್ಲ. ಇಷ್ಟು ಆಳ ಮತ್ತು ಗಾಢವಾಗಿ ಒಂದು ಆಲೋಚನೆ ರೂಪುಗೊಳ್ಳುವುದು ಮತ್ತು ಅದರ ವಾಸ್ತವಿಕತೆಯನ್ನು ಹುಡುಕಿ ಹೊರಡುವುದು ಸಾಮಾನ್ಯ ಹದಿಹರೆಯದ ಒಬ್ಬಾಕೆ ಹೆಣ್ಣಿನ ಪಾಲಿಗೆ ಅಸಾಮಾನ್ಯವಾದ ನಡೆಯಾಗಿದೆ. ಈ ಘಟನೆ ನನ್ನೊಳಗೆ ನಡೆಯುತ್ತಿದ್ದ `ಸಾಂಸ್ಕೃತಿಕ ಸಂಘರ್ಷ’ದ ಪ್ರತಿಬಿಂಬವೂ ಆಗಿತ್ತು.

ನಾನು ಸೆನಗಲ್ ಮೂಲದ ಮಹಿಳೆ. (ಸೆನಗಲ್ ಪಶ್ಚಿಮ ಆಫ್ರಿಕಾದಲ್ಲಿರುವ ಒಂದು ರಾಜ್ಯ. ಇಲ್ಲಿ ಬಹುಕಾಲ ಫ್ರೆಂಚ್ ವಸಾಹತುಶಾಹಿ ಆಡಳಿತ ಇದ್ದ ಕಾರಣ, ಇಲ್ಲಿಯ ಅಧಿಕೃತ ಭಾಷೆ ಫ್ರೆಂಚ್). ನಾನು ಹುಟ್ಟಿದ್ದು ಮತ್ತು ಬದುಕಿನ ಆರಂಭದ 14 ವರ್ಷಗಳ ಸವೆಸಿದ್ದು ಸೆನಗಲ್ ಎಂಬ ಒಂದು ಆಫ್ರಿಕನ್ ರಾಜ್ಯದಲ್ಲಿ. ವಾರದ ಮೊದಲ ಐದು ದಿನ ಫ್ರೆಂಚ್ ಶಾಲೆಗಳಿಗೆ ಹಾಗೂ ವಾರಾಂತ್ಯದ ಎರಡು ದಿನಗಳಲ್ಲಿ ಮದರಸ (ಕುರುಆನ್ ಪಾಠಶಾಲೆ) ಶಿಕ್ಷಣ ಪಡೆದು ಬೆಳೆದವಳು ನಾನು. ಫ್ರೆಂಚ್ ಶಾಲೆಯಿಂದ ನೇರವಾಗಿ ವರ್ಣಬೇಧ ಚಳುವಳಿ ರೂಪಿಸುವ ಹೋರಾಟಗಾರರ ಬಳಿ ತೆರಳುತ್ತಿದ್ದೆ. ಅವರಿಂದ ನನ್ನ ಅಸ್ತಿತ್ವದ ಭಾಗವಾದ ಆಫ್ರಿಕಾದ ಜನತೆಯ ಮೂಲ ಮೌಲ್ಯಗಳನ್ನು ಕಲಿತುಕೊಳ್ಳುತ್ತಿದ್ದೆ. ಈ ಮೂಲಕ ಕಪ್ಪು ವರ್ಣೀಯರ ಮೌಲ್ಯಗಳನ್ನು ಕಾಪಾಡಲು ಕಟ್ಟಿದ್ದ ಚಳುವಳಿಯ ಒಂದು ಭಾಗವಾಗಿದ್ದೆ.

ನಾವು ಹಬ್ಬವನ್ನು ಆಚರಿಸುತ್ತಿದ್ದೆವು. ಕ್ರಿಸ್‍ಮಸ್ ಉಡುಗೊರೆಗಳನ್ನು ಪಡೆದುಕೊಳ್ಳುತ್ತಿದ್ದೆವು. ಮಕ್ಕಳು ಮುಹರ್ರಮ್ (ಇಸ್ಲಾಮಿಕ್ ಹೊಸ ವರ್ಷ) ದಿನಗಳಲ್ಲಿ ಹೊಸ ಬಗೆಯ ಬಟ್ಟೆ ಧರಿಸಿ ತಮ್ಮ ವಾರಿಗೆಯಲ್ಲಿದ್ದ ಹಿರಿಯ ಜೀವಗಳ ಬಳಿ ಹಣ ಪಡೆದು ಬೇಸಿಗೆ ರಜೆಯ ದಿನಗಳಲ್ಲಿ ಫೈರ್ ಕ್ಯಾಂಪ್ ನಡೆಸಿದ್ದು ನನ್ನ ಬದುಕಿಗೆ ಸದಾ ವಸಂತ ತುಂಬಿಕೊಡುವ ಮಾಸದ ನೆನಪುಗಳು. ಇಂಥಾ ಫೈರ್ ಕ್ಯಾಂಪ್‍ಗಳಲ್ಲಿ ಹೇಳಲಾಗುತ್ತಿದ್ದ ಕತೆಗಳ ಮೂಲಕ ನನಗೆ ಸರಿ ಮತ್ತು ತಪ್ಪುಗಳನ್ನು ಅರ್ಥ ಮಾಡಿಸಿದ ನನ್ನ `ಸೆನಗಲ್ ಕಥೆ’ಗಳನ್ನು ನಾನು ಮೊದ ಮೊದಲು ಕೇಳಲಾರಂಭಿಸಿದ್ದು. ನನಗೆ 13 ವರ್ಷ ವಯಸ್ಸಿರುವಾಗ ನನ್ನ ತಂದೆಗೆ ಗ್ರೀನ್ ಕಾರ್ಡ್ ಲಾಟರಿ ಅದೃಷ್ಟ ಖುಲಾಯಿಸಿತು. ಇದಾದ ಮುಂದಿನ ವರ್ಷವೇ ನನ್ನ ಕನಸುಗಳಲ್ಲೊಂದಾಗಿದ್ದ ಅಮೆರಿಕಾ ನೋಡುವ ಆಸೆ ಈಡೇರಿತು. ಅಮೆರಿಕಾದ ಸಾಂಸ್ಕೃತಿಕ ವೈವಿಧ್ಯತೆ ನನಗೆ ಬಹಳ ಹಿಡಿಸಿತು. ಅಮೆರಿಕಾ ತಲುಪಿದ ಬಹುಬೇಗನೆ ನಾನು ಇಂಗ್ಲೀಷ್ ಭಾಷೆಯನ್ನೂ ಕರಗತ ಮಾಡಿಕೊಂಡೆ. ಸುಮಾರು ಎರಡು ವರ್ಷಗಳ ಅಮೆರಿಕಾ ವಾಸ್ತವ್ಯದ ಬಳಿಕ ನಾನು ಸೆನಗಲ್‍ಗೆ ವಾಪಾಸ್ ಆದೆ. ತದನಂತರ ಇಂಗ್ಲೀಷ್, ಫ್ರೆಂಚ್ ಉಭಯ ಭಾಷೆಗಳಲ್ಲೂ ಭೋದಿಸುತ್ತಿದ್ದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಾನು ನನ್ನ ಶಿಕ್ಷಣ ಮುಂದುವರೆಸಿದೆ. ಅಲ್ಲಿ ಅಮೆರಿಕಾ ಮೂಲದ ಪ್ರೊಫೆಸರ್‌ಗಳ ಜೊತೆಗೆ ಫ್ರೆಂಚ್ ಮಾತನಾಡಬಲ್ಲ ಸೆನಗಲ್ ಮೂಲದ ಪ್ರೊಫೆಸರ್‌ಗಳೂ ಇದ್ದರು. ನಾನು 15 ವರ್ಷ ವಯಸ್ಸು ಇರುವಾಗಲೇ ಆಫ್ರಿಕನ್ ಸಂಸ್ಕೃತಿಯ ಜೊತೆಗೆ ಮಧ್ಯ ಏಷ್ಯಾ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳು ನನ್ನ ಬದುಕಿನ ಭಾಗವಾಗಿ ಹೋದವು.

ಆಸ್ತಿಕತೆ ಮತ್ತು ನಾಸ್ತಿಕತೆ ಇವರೆಡರ ನಡುವಣ ಸೇತುವಲ್ಲಿಯೇ ನನ್ನ ಬದುಕಿನ ಅಮೂಲ್ಯ ಮೂರು ವಸಂತಗಳು ಕಳೆದು ಹೋದವು. ಅದೊಂದು ದಿನ ಮಧ್ಯಾಹ್ನದ ಹೊತ್ತಿನ ಊಟಕ್ಕಾಗಿ ನನ್ನ ಇಡೀ ಕುಟುಂಬ ತಟ್ಟೆಯ ಸುತ್ತ ಕುಳಿತುಕೊಂಡಿದ್ದೆವು. ಈ ವೇಳೆ ನನ್ನ ಅಣ್ಣ ತಟ್ಟೆಯನ್ನು ನೋಡುತ್ತಾ ಹೇಳಿದನು;

“ಇದು ದೇವರು..
ನೀವು ದೇವರು..
ಅವರು ದೇವರು.. ಇಲ್ಲಿ ಎಲ್ಲರೂ ದೇವರು..”

ಇದ ಕೇಳಿದ ಎಲ್ಲರೂ ಅತೃಪ್ತರಾದರು. ಕೆಲವರು ಕೂತಲ್ಲಿಂದ ತೆರಳಲು ಮೇಲೆದ್ದರು. ಇನ್ನೂ ಕೆಲವರು ಅಣ್ಣನನ್ನು ದೂಷಿಸಿದರು. ಆದರೆ ಅಣ್ಣನ ಆ ಮಾತುಗಳನ್ನು ನಾನು ತಮಾಷೆಯಾಗಿಯೂ, ಗೊಂದಲದಂತೆಯೂ ಕಂಡುಕೊಂಡೆ. ಅಣ್ಣ ಅರ್ಧ ನಿದ್ರೆಯಲ್ಲಿದ್ದರೂ ಆ ಸಾಲುಗಳನ್ನು ಮತ್ತೆ ಮತ್ತೆ ಹೇಳುತ್ತಲೇ ಇದ್ದನು. ಅಣ್ಣ ಪ್ರಜ್ಞಾಹೀನನಾಗಿದ್ದಾನೆ ಎಂದು ನನಗನಿಸಿತು. ಸ್ವಲ್ಪ ಸಮಯದ ಬಳಿಕ ಅವನ ಹುಚ್ಚುವರ್ತನೆಯ ಕುರಿತು ಅಣ್ಣನಲ್ಲಿಯೇ ಕೇಳಿದೆ. ಈ ವೇಳೆ ನನ್ನ ಕಿವಿಗೆ ವಾಲುತ್ತಾ, ನೀನು ಮಂಡಿಯೂರಿ ಪ್ರಾರ್ಥಿಸುವುದು ಯಾರಿಗೆ..? ಏನೇನು ಬೇಡಿಕೊಳ್ಳುತ್ತಿ..? ಯಾರೀ ದೇವರು..? ಆ ದೇವರು ಇರುವುದಾದರು ಎಲ್ಲಿ..? ಎಂದು ಕೇಳಿದ.

ವಾಸ್ತವದಲ್ಲಿ ಆ ದೇವರು ನನ್ನೊಳಗಿದ್ದ ದೈವಿಕ ಸಂಘರ್ಷ'ಗಳನ್ನು ಬಗೆಹರಿಸುತ್ತಿದ್ದನು. ಕಿವಿಗೆ ವಾಲಿ ಪ್ರಶ್ನೆಗಳನ್ನು ಕೇಳಿದ ಅಣ್ಣನಿಗೆ ನಿನಗೆಲ್ಲಿಂದ ಈ ಪ್ರಶ್ನೆಗಳು ಸಿಕ್ಕಿತು..? ಹೇಗೆ ಸಿಕ್ಕಿತು..? ಎಂದು ಮರು ಪ್ರಶ್ನೆ ಹಾಕಿದೆ. ಆಗವನು ನನಗೆ ಸೂಫಿ ಗುಂಪೊಂದರ ಪರಿಚಯವಿತ್ತನು. ಅದು ಫಾಯಿದಾ ತಿಜಾನಿಯಾ’. ಕೊನೆಯಲ್ಲಿ ನಾನು ನನ್ನ ಗುರುವನ್ನು ಭೇಟಿಯಾದೆ. ಅವರು ಮಾಜಿ ಸರ್ಕಾರಿ ಅಧಿಕಾರಿ ಮಹಿಳೆ. ಅವರು ದೇಶ ಸುತ್ತಿ ಕೋಶ ಓದಿದವರಾಗಿದ್ದರು. ಜೊತೆಗೆ ಹೆಸರಾಂತ ಸಾಹಿತಿಯೂ ಆಗಿದ್ದರು. ನನಗೆ ಬೇಕಿದ್ದಿದ್ದೂ ಅದೇ. ನಾಲ್ಕು ಸಂಸ್ಕೃತಿಗಳನ್ನು ಒಗ್ಗೂಡಿಸಿ, ನನ್ನ ಅಲೋಚನೆಗಳನ್ನು ಅರ್ಥೈಸಿಕೊಳ್ಳಬಲ್ಲ ಒಂದು ವೈಚಾರಿಕ ಸಾಂಗತ್ಯ. ಆ ಪಂಡಿತ ಮಹಿಳೆ ಎಂದೂ ನನ್ನ ಯೋಚನೆಯ ಬಗ್ಗೆಯಾಗಲಿ ಚಟುವಟಿಕೆಯ ಬಗ್ಗೆಯಾಗಲಿ ಆಕ್ಷೇಪ ಎತ್ತಿದವರಲ್ಲ. ಸತ್ಯಾನ್ವೇಷಣೆಯ ಕುರಿತು ನಾನು ನನ್ನ ವಾದ ಮಂಡಿಸಿದಾಗ ಆ ಮಹಿಳೆ ಕೇಳಿಕೊಂಡಿದ್ದಿಷ್ಟೇ, ನನ್ನ ಧರ್ಮದ ಭೋದನೆಗಳನ್ನು ಪಾಲಿಸುವುದು ಮತ್ತು ನಾನು ನಂಬಿದ್ದ ಆ ಅಗೋಚರ ಶಕ್ತಿಯ ಬಳಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೇಳಿ ತಿಳಿಯಲು ಸೂಚಿಸಿದರು. ಅಲ್ಲದೆ ಆ ಮಹಾನ್ ಶಕ್ತಿಯ ಬಗ್ಗೆ ಇನ್ನಷ್ಟು ತಿಳಿಯಲು ಮತ್ತು ಆ ಶಕ್ತಿಯ ಏಕತೆಯ ಬಗ್ಗೆ ವಿಶಾಲವಾದ ಅಧ್ಯಯನಕ್ಕೆ ತೆರೆದುಕೊಳಲು ನಿರ್ದೇಶಿಸಿದರು.

ಅಂಥಾ ದೈವಿಕ ಸಂಘರ್ಷಕ್ಕೆ ಒಳಗಾಗಿದ್ದ ನಾನು, ಅವರ ಮಾತಿನಿಂದ ಮತ್ತೆ ನನ್ನ ಸಂಪ್ರದಾಯಕ್ಕೆ ಮರಳಿದೆ. ಆ ಸೃಷ್ಟಿಕರ್ತನ ಬಗ್ಗೆ ಮತ್ತು ನನ್ನ ವಾಸ್ತವತೆಯ ಉದ್ದೇಶದ ಕುರಿತಾಗಿ ಆಳವಾದ ಯೋಚನೆಗೆ ಬಿದ್ದೆ. ಇದರ ಕೊನೆಯಲ್ಲಿ ನನ್ನ ಬಳಿ ಇದ್ದ ಅಷ್ಟೂ ಪ್ರಶ್ನೆಗಳಿಗೆ ನನ್ನಲ್ಲಿಯೇ ನಾನು ಉತ್ತರಗಳನ್ನು ಕಂಡುಕೊಳ್ಳಲು ಶುರುಮಾಡಿದೆ. ಈ ಭೂಮಿ ಮೇಲಿನ ಅಷ್ಟೂ ವಸ್ತುಗಳು, ಜೀವಿಗಳು ಸರ್ವ ಜೀವಜಂತುಗಳ ಅಸ್ತಿತ್ವ ಇರುವುದೇ ಒಂದು ದೊಡ್ಡ ಶಕ್ತಿಯ ಕ್ರಿಯೆಯಲ್ಲಿ. ಮತ್ತು ಆ ಶಕ್ತಿಯ ಉದ್ದೇಶವೂ ಆದೇ ಆಗಿರುತ್ತದೆ. ಹೀಗೆ ಗೋಜಲು ಮನಸ್ಥಿತಿಯಿಂದ ಹೊರಬಂದು ನನ್ನ ನಂಬಿಕೆಗಳಿಗೆ ಒಂದು ಗಟ್ಟಿ ಅಡಿಪಾಯ ಹಾಕಿದೆ. ಈ ಮೂಲಕ ಆ ಶಕ್ತಿಯ ಮೇಲೆ ಏಕತೆ (ತೌಹೀದ್) ಸಾಧಿಸಲು ಮುಂದಾದೆ. ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ಸಂಬಂಧಗಳು ಹೇಗೆ ಒಬ್ಬರಿಂದ ಒಬ್ಬರಿಗೆ ಬೆಸೆದುಕೊಂಡಿದೆ ಮತ್ತು ಇಲ್ಲಿನ ಪ್ರತಿ ಸೃಷ್ಟಿಯೂ ಹೇಗೆ ತನ್ನ ಅಸ್ತಿತ್ವ ರೂಪಿಸಿಕೊಂಡಿದೆ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದೆ. ಹೀಗೆ ನನ್ನ ದೇವರನ್ನು ನಾನು ಕಂಡುಕೊಂಡ ಮೇಲೆ ಕಳೆದ ಎಂಟು ವರ್ಷಗಳಿಂದ ನನ್ನ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳನ್ನು ದೃಢೀಕರಿಸಿಕೊಳ್ಳುತ್ತಿದ್ದೇನೆ.

ಆ ದೇವರು ಎಲ್ಲರನ್ನೂ ಪ್ರೀತಿಸುವವನಾಗಿದ್ದಾನೆ. ನಿಮ್ಮ ಎಲ್ಲಾ ನ್ಯೂನ್ಯತೆಗಳನ್ನೂ ಮೀರಿ ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮಂತೆಯೇ ಎಲ್ಲಾ ಜೀವಚರಗಳನ್ನೂ ಅವನು ಪ್ರೀತಿಸುತ್ತಾನೆ. ಹೃದಯ ಬಡಿತದಿಂದ ಹಿಡಿದು ಅದರ ಸ್ಥಬ್ಧತೆವರೆಗೂ, ತಂಗಾಳಿಯಿಂದ ಹಿಡಿದು ಚಂಡಮಾರುತದ ನಿಯಂತ್ರಣದ ಎಲ್ಲಾ ಅಧಿಕಾರವೂ, ಶಕ್ತಿಯೂ ಅವನಿಗಿದೆ. ಈ ವಾಸ್ತವತೆಯನ್ನು ನಾವು ಹೇಗೆ ಮತ್ತು ಯಾವ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತೇವೆ ಎಂಬುವುದರ ಮೇಲೆ ಇದರ ಒಳಹುರುಳು ಹುದುಗಿದೆ. ಇಂದು ಪ್ಯಾನ್ ಆಫ್ರಿಕನ್ ಮುಸ್ಲಿಂ ಮಹಿಳೆಯಾಗಿ ನಾನು ನನ್ನನ್ನು ಸಂಬೋಧಿಸುತ್ತೇನೆ. ನನ್ನಲ್ಲಿರುವ, ನನ್ನ ಸುತ್ತಲಿರುವ ಹಾಗೂ ಮುನ್ನೆಲೆಗೆ ಬಾರದೆ ಮಾಸಿಹೋದ ಅಸಂಖ್ಯಾತ ಗೆಲುವಿನ ಮತ್ತು ಸೋಲಿನ ಕತೆಗಳನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ ಆ ಮಹಾನ್ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಎಂದರೆ ಈಗಲೂ ಒಂದು ಸಂಕೀರ್ಣವಾದ ವಿಷಯವಾಗಿಯೇ ಉಳಿದಿದೆ. ಆ ಪರಮಾತ್ಮನನ್ನು ಹುಡುಕುವುದು ಎಂದರೆ ಸರಿಯಾದ ಪ್ರಶ್ನೆಗಳನ್ನು ಕೇಳುವುದು. ಹೀಗೆ ಪ್ರಶ್ನೆಗಳು ನಿಮ್ಮೊಳಗೆ ಹುಟ್ಟಿಕೊಳ್ಳುವಾಗ ಉತ್ತರಗಳೂ ನಿಮ್ಮಲ್ಲಿಯೇ ಹುಟ್ಟಿಕೊಳ್ಳುತ್ತದೆ. ಈ ಕ್ರಿಯೆ ನಿಮಗೆ ನೀವೇ ತಂದುಕೊಂಡಿರುವ ಬಂಧನದಿಂದ ಮುಕ್ತಿ ದೊರಕಿಸಿಕೊಡುತ್ತದೆ.

ನನ್ನನ್ನು ಓರ್ವ ಶ್ರದ್ಧೆ ಇರುವ ದೇವದಾಸಿಯಾಗಿಸು (ಇಲ್ಲಿ ದೇವದಾಸಿ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಚಾಲ್ತಿಯಲ್ಲಿರುವ ಅನಿಷ್ಟ ಪದ್ಧತಿಯ ಕುರಿತಾಗಿ ಉಲ್ಲೇಖಿಸಿದ್ದಲ್ಲ. ತಪ್ಪು ಗ್ರಹಿಕೆ ಬೇಡ) ಎಂದಷ್ಟೇ ನಾನು ನನ್ನ ಭಗವಂತನಲ್ಲಿ ಬೇಡಿಕೊಳ್ಳುವುದು. ನನ್ನ ಪ್ರಾರ್ಥನೆಯನ್ನು ಒಪ್ಪಿಕೊಳ್ಳುವವನೂ, ಅವನ ಮೇಲೆ ನನಗಿರುವ ಭಕ್ತಿ ಪರಕಾಷ್ಠೆಯ ಆಳ ಅವನಿಗೆ ತಿಳಿಯಲು, ಗೊತ್ತಿದ್ದು, ಗೊತ್ತಿಲ್ಲದೆಯೂ ನಾನು ಮಾಡಿದ ಪ್ರಮಾದಗಳನ್ನು ಮನ್ನಿಸಿಕೊಡುವವನು, ನನ್ನ ಪಾಲಿಗೆ ಏಕೈಕ ಸಂರಕ್ಷಕನೂ ಹೀಗೆ ಆ ಪರಮದಯಾಳು ನನ್ನ ಸರ್ವಸ್ವವೇ ಆಗಲೆಂದು ನಾನು ಬೇಡಿಕೊಂಡೆ. ಈ ರೀತಿ ಅವನೊಂದಿಗಿನ ಆಧ್ಯಾತ್ಮಿಕ ಸಂವಹನದಲ್ಲಿ ನಾನು ನನ್ನನ್ನೇ ಕಳೆದುಕೊಂಡೆ. ಈ ಹಂತದಲ್ಲಿ ನೀನು, ನಾನು, ಅವನು, ಅವಳು, ಅದು ಇದು ಮುಂತಾದ ಸ್ವಾರ್ಥ ಭಾವನೆಗಳನ್ನು ನನ್ನಿಂದ ಬೇರ್ಪಡಿಸಿ ಕಾಣಲು ಸಾಧ್ಯವಾಗಲಿಲ್ಲ. ಕೆಲವರು ಇದನ್ನು ದೈವ ನಿಂದನೆ ಎಂದರು. ಇನ್ನೂ ಕೆಲವರು ಇದನ್ನು ಇಹ್ಸಾನ್ (ಪರಿಪೂರ್ಣತೆ) ಎಂದರು. ಅದೇನೇ ಇರಲಿ. ಸ್ವಚ್ಛಂಧವಾಗಿ ಅರಳಿರುವ ಗುಲಾಬಿ ಅದರ ಸುಗಂಧವನ್ನು ಹರಡದೇ ಇದ್ದೀತೆ..? ಅದು ಅದರ ಮನಮೋಹಕ ಸ್ವಭಾವ. ಸುಗಂಧ ಹರಡದೇ ಇರದು.

ಆಮಿನಾಟ್ಟ ದಿಯೋಫ್
ಅನುವಾದ : ಆಶಿಕ್ ಮುಲ್ಕಿ

Leave a Reply

*