ನೈಲಾನ್ ಕೊಡೆ

ಪ್ರಿಯ ವೈಕಂ ಚಂದ್ರಶೇಖರ್ ನಾಯರ್,
ತಮ್ಮ ವಾರ ಪತ್ರಿಕೆ ‘ಚಿತ್ರ ಕಾರ್ತಿಕ’ ಸೊಗಸಾಗಿದೆ. ಅದರ ಪುಟಗಳನ್ನು ಅತ್ಯುತ್ಸಾಹದಿಂದಲೇ ತಿರುವಿ ಹಾಕುತ್ತಿದ್ದೇನೆ. ನಿಧಾನಕ್ಕೆ ಜ್ಞಾನಿಯಾಗುತ್ತಿದ್ದೇನೆ. ಸಂತೋಷವಾಗುತ್ತಿದೆ.
ತಮಾಷೆಯೆಂದರೆ, ಚಿತ್ರಕಾರ್ತಿಕ ಎಂಬ ಹೆಸರನ್ನು ಮೊದಲು ಕೇಳಿದಾಗ ಹಿಂದೂಗಳ ಯಾವುದೋ ಪುರಾಣಕ್ಕೆ ಸಂಬಂಧಿಸಿದ ಸಿನಿಮಾವಾಗಿರಬೇಕೆಂದು ಭಾವಿಸಿದ್ದೆ. ಮೊದಲ ಪುಟ ತೆರೆದಾಗಲೇ ಇದರಲ್ಲಿ ಕ್ರಾಂತಿಯಿದೆ ಎಂದು ತಿಳಿಯಿತು. ಹೇಗೆ ಗೊತ್ತಾ? ಕೆ.ಟಿ. ಮುಹಮ್ಮದ್, ಸಿ. ಚೆರಿಯಾನ್, ವೈಕಂ ಚಂದ್ರ ಶೇಖರ್ ನಾಯರ್ ಮೊದಲಾದ ಪತ್ರಕರ್ತರ ಹೆಸರು ಇದ್ದಲ್ಲಿ; ಕ್ರಾಂತಿ ಕಡ್ಡಾಯವಲ್ಲವೇ. ನಮ್ಮಲ್ಲಿ ಕೇವಲ ಕೋಮು ಆಧಾರಿತ ಪತ್ರಿಕೆಗಳಷ್ಟೇ ಇವೆ. ಚಿತ್ರಕಾರ್ತಿಕ ಜನಪರ ಪತ್ರಿಕೆ. ಆದ್ದರಿಂದ ಹಿಂದೂ, ಮುಸ್ಲಿಮ್, ಕ್ರೈಸ್ತರನ್ನು ಒಗ್ಗೂಡಿಸಿ ಮುನ್ನಡೆಯಿರಿ ಎಂದು ಹಾರೈಸುತ್ತೇನೆ.
ಇಷ್ಟನ್ನು ಅತ್ಯುತ್ಸಾಹದಿಂದಲೇ ಬರೆದಿರೋದು ನಿಜ. ಹಾಗಂತ, ಹಿಂದೂಗಳು ಮುಸ್ಲಿಮರನ್ನು ವಂಚಿಸುತ್ತಿರುವುದನ್ನು ಅಲ್ಲಗಳೆಯುವುದು ಸಾಧ್ಯವೇ? ನಮ್ಮನ್ನು ಬಹಳ ಕ್ರೂರವಾಗಿ ನೋಯಿಸುತ್ತಿದ್ದಾರೆ. ಅಯ್ಯೋ ಇದೇನು ಹೇಳುತ್ತಿರುವಿರಿ? ಯಾವ ಮುಸಲ್ಮಾನನಿಗೆ ಹಿಂದುಗಳು ತೊಂದರೆ ಕೊಟ್ಟಿದ್ದಾರೆ? ಎನ್ನುತ್ತೀರಾ. ಹಾಗಾದರೆ ಕೇಳಿಲ್ಲಿ; ವೈಕಂ ಮುಹಮ್ಮದ್ ಬಶೀರ್ ಎಂಬ ನನ್ನನ್ನು ಹಿಂದೂಗಳು ನೋಯಿಸಿದ್ದಾರೆ. ನನ್ನನ್ನು ನೋಯಿಸಿದ ಹಿಂದೂಗಳ ಹೆಸರು ತಮಗೆ ತಿಳಿದಿರಬೇಕಲ್ಲವೆ? ಗೌರವಾನ್ವಿತ ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಪಿ. ಕೇಶವ ದೇವ್, ವೈಕಂ ಚಂದ್ರಶೇಖರ್ ನಾಯರ್ ಇವರೇ ಅವರು. ಈಗ ಮಳೆಗಾಲ ಬೇರೆ. ನಿಮಗೆ ತಿಳಿದಿದೆ; ಮನೆಯೊಳಗೆ ಕುಳಿತುಕೊಳ್ಳುವ ಅಸಾಮಿ ನಾನಲ್ಲ; ಹೊರಗಿಳಿದು ನಡೆಯದಿದ್ದರೆ ನನಗೆ ಆಗೋದೂ ಇಲ್ಲ. ಕೊಡೆಯಿಲ್ಲದ ಕಾರಣ, ನನ್ನ ಬೋಳು ತಲೆಗೆ ಮಳೆನೀರು ಬಿದ್ದು, ಜ್ವರ ಬಾಧಿತನಾಗಿ ಮಲಗಿ ನರಳಿ ನರಳಿ ಸತ್ತರೆ ಅದಕ್ಕೆ ಹೊಣೆ ಯಾರು? ಇಂಥ ಸಂದರ್ಭದಲ್ಲಿ ಮೊದಲೇ ಸೂಚಿಸಿದ ಹಾಗೆ ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಪಿ. ಕೇಶವದೇವ್, ವೈಕಂ ಚಂದ್ರಶೇಖರ್ ನಾಯರ್ ಮುಂತಾದವರ ಹೆಸರು ಹೇಳದಿರಲಾಗುವುದೇ? ಈ ಮೂವರು ಹಿಂದೂಗಳು ಮುಸಲ್ಮಾನನಾದ ನನ್ನ ಮರಣಕ್ಕೆ ಕಾರಣ ಅಲ್ಲವೆಂದು ಹೇಗೆ ಹೇಳಲಿ? ಬಹಳವೇ ಗಂಭೀರವಾದ ವಿಷಯ ಇದು. ಇದನ್ನೊಂದು ದುರಂತ ಕಥೆಯಾಗಿ ಹೇಳುವುದಿದ್ದರೆ ಅದರ ಶೀರ್ಷಿಕೆ; ನನ್ನ ಪ್ರೀತಿಯ ನೈಲಾನ್ ಕೊಡೆ! ಎಂದಲ್ಲದೆ ಬೇರೆ ಶೀರ್ಷಿಕೆ ಕೊಡಲಾದೀತೇ?
ಅಂದಹಾಗೆ, ಕೊಡೆ ಎಲ್ಲಿ ಹೋಯಿತು? ಮೇಲೆ ತಿಳಿಸಿದ ಮೂವರು ಹಿಂದೂಗಳು ಕದ್ದರೆ? ನೋ.. ನೋ.. ಯಾರೂ ಕದ್ದಿಲ್ಲ ಅಂತನೇ ಹೇಳಬಹುದು. ಹಾಗಾದರೆ, ಕೊಡೆ ಎಲ್ಲಿ ಕಣ್ಮರೆಯಾಯಿತು? ದುಃಖಭರಿತವಾದ ಕಥೆಯನ್ನು ಆಮೇಲೆ ಹೇಳುತ್ತೇನೆ. ಅದಕ್ಕೆ ಮೊದಲು ನನ್ನ ಪ್ರೀತಿಯ ನೈಲಾನ್ ಕೊಡೆಯ ಬಗ್ಗೆ ಎರಡು ಮಾತು. ಅದೆಂತಹ ಕೊಡೆ ಎಂದರೆ, ಆ ಜಾತಿಯ ಒಂದೇ ಒಂದು ಕೊಡೆಯಷ್ಟೇ ಈಗ ನಮ್ಮ ದೇಶದಲ್ಲಿ ಬಾಕಿ ಉಳಿದಿದೆ. ಅದು ಕೂಡ ಘನವೆತ್ತ ರಾಷ್ಟ್ರಪತಿಯವರ ಕೈಯಲ್ಲಿ! ನಿಜ ಹೇಳಬೇಕೆಂದರೆ, ಆ ಜಾತಿಯ ಎರಡೇ ಎರಡು ಕೊಡೆಗಳಷ್ಟೇ ಭಾರತಕ್ಕೆ ಬಂದಿರೋದು; ಗೌರವಾನ್ವಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲ್ಲೋ ಆಗಿರುವುದರಿಂದ ಮೊದಲ ಕೊಡೆ ನನಗೆ ಸಿಕ್ಕಿರಬಹುದು ಅಂತ ನೀವು ಭಾವಿಸಿದರೆ ನನ್ನ ಅಭ್ಯಂತರವಿಲ್ಲ. ನನಗೆ ಸಿಕ್ಕಿರುವ ಸುಂದರವಾದ ಆ ಕೊಡೆಯನ್ನು ಪ್ರೊಫೆಸರ್ ಸುಕುಮಾರ್ ನೋಡಿದ್ದಾರೆ. ಕೇಶದೇವ್ ಕೂಡ ಅದನ್ನು ನೋಡಿದ್ದಾರೆ. ವೈಕಂ ಚಂದ್ರಶೇಖರ ರವರೇ, ತಾವು ಕೂಡ ನೋಡಿರಬಹುದು. ಸುಮ್ಮನೆ ನೋಡಿಲ್ಲ; ಅಸೂಯೆ ಪೀಡಿತ ನಯನ ಮನೋಹರ ಕಣ್ಣುಗಳಿಂದ ಎಂದು ಒತ್ತಿ ಹೇಳಲೇಬೇಕು. ತಾವು ಸೇರಿದಂತೆ ಇನ್ನಿಬ್ಬರು ಹಿಂದೂಗಳು ನನ್ನ ಕೊಡೆಯ ಮೇಲೆ ಕಣ್ಣು ಹಾಕಿದ್ದರು ಎಂದು ಸಂಕ್ಷಿಪ್ತವಾಗಿ ಹೇಳಬಹುದು.


ಆಮೇಲೆ ಏನಾಯಿತು? ಹಿಂದೂಗಳು ಏನು ಮಾಡಿದರು? ಮುಂದೆ ನಡೆದ ಆ ಘೋರ ಅತಿ ಘೋರ ಘಟನೆಯನ್ನೇ ಹೇಳಲಿದ್ದೇನೆ.
ಸಮಯ ರಾತ್ರಿಯ ಎರಡನೇ ಯಾಮ. ಈ ಯಾಮ ಎಂದರೇನೆಂದು ದೇವರಾಣೆ ನನಗೆ ತಿಳಿದಿಲ್ಲ. ಗಂಟೆ ಎಂಬ ಅರ್ಥದಲ್ಲಿ ಬಳಸಿದ್ದೇನೆ. ಘಟನೆ ನಡೆದ ಸ್ಥಳವಾದ ಬೇಪೂರು, ಕೇರಳ, ಭಾರತ ಉಪಖಂಡ ಎಲ್ಲವೂ ಘೋರ ಇರುಳಿನಲ್ಲಿ ಬಂಧಿಯಾಗಿದೆ. ಅಂದರೆ, ಕಳ್ಳಕಾಕರು, ದರೋಡೆಕೋರರು, ಖೋಟಾ ನೋಟಿನ ದಂಧೆಯವರನ್ನು ಹೊರತುಪಡಿಸಿ ಉಳಿದವರೆಲ್ಲ ಗಾಢ ನಿದ್ರೆಯಲ್ಲಿದ್ದಾರೆ ಎಂದರ್ಥ. ಕರಿನಾಗರ, ಕಾಳಿಂಗ, ಘಟಸರ್ಪ, ನರಿಗಳು ಆಹಾರ ಹುಡುಕಿ ಅಲೆಯುವ ಸಮಯ. ಈ ಶುಭ ಮುಹೂರ್ತದಲ್ಲಿ ಕೋಳಿಗಳ ಕೊಕ್ಕೊಕ್ಕೋಕೋ ಎಂಬ ಕೂಗಿನ ನಡುವೆ ನಮ್ಮ ಷಾನ್ ಎಂಬ ಹೆಸರಿನ ಮಹಾನ್ ಶ್ವಾನ ವಂಶಸ್ಥನಾದ ನಾಯಿ ಬೊಗಳುವುದು ಕೇಳಿಸಿತು. ಸಪತ್ನಿ ಸಮೇತ ನನಗೆ ಎಚ್ಚರವಾಯಿತು. ಮನೆಯ ಒಳ ಹೊರಗಿನ ಬೆಳಕುಗಳನ್ನು ನನ್ನ ಪತ್ನಿ ಟಪ್ ಟಪ್ಪೆಂದು ಬೆಳಗಿಸಿದಳು. ನಾನು ದೊಣ್ಣೆ, ಕತ್ತಿ, ಕಠಾರಿ, ಮಚ್ಚು ಹಾಗೂ ಒಂದು ಟಾರ್ಚ್ ಕೈಗೆತ್ತಿ ಹೆಂಡತಿಯನ್ನು ಮುಂದೆ ನಡೆಯಲು ಹೇಳಿದೆ. ಯುದ್ಧದಲ್ಲಿ ಮುಂದಿನ ಸಾಲಿನಲ್ಲಿ ನಡೆಯಬೇಕಾದವನು ಪುರುಷನೆಂಬ ಸತ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಕೋಳಿಗಳು ನನ್ನ ಹೆಂಡತಿಯ ಸೊತ್ತು. ಅದು ಅವಳ ತವರು ಮನೆಯ ಉಡುಗೊರೆ. ಆದ್ದರಿಂದ ನನಗೆ ಸಮ ಪ್ರಮಾಣದಲ್ಲಿ ಅದರ ಮೊಟ್ಟೆಗಳೂ ಸಿಗುತ್ತಿಲ್ಲ. ನಿಮಗೆ ವಯಸಾಯ್ತು, ಮೊಟ್ಟೆ ತಿಂದರೆ ಜೀರ್ಣವಾಗುವುದಿಲ್ಲ ಎನ್ನುತ್ತಾಳೆ ನನ್ನ ಹೆಂಡತಿ. ಅಂದಮೇಲೆ, ಮುದುಕನಾದ ನಾನು ಮುಂದೆ ನಡೆಯುವುದು ಸರಿಯೇ? ಅದು ಅವಳಿಗೂ ಅವಳ ಕೋಳಿಗೂ, ಅವಳ ಕೋಳಿ ಮೊಟ್ಟೆಗೂ ಮಾಡುವ ಅನ್ಯಾಯವಲ್ಲವೇ? ಆ ಘನಘೋರ ಅನ್ಯಾಯ ಮಾಡಲಾಗದೆ ಹೆಂಡತಿಯನ್ನೇ ಮುಂದೆ ನಡೆಯಲು ಹೇಳಿದೆ. ಬಾಗಿಲು ತೆರೆದು ದಾರಿ ಮಾಡಿಕೊಟ್ಟು ‘ನಡಿ ಮುಂದೆ ಸಖಿ’ ಎಂದು ಟಾರ್ಚ್ ಅನ್ನು ಅವಳ ಕೈಗೆ ಕೊಟ್ಟೆ. ಅವಳು ಆ ಕತ್ತಲಲ್ಲಿ ನಡೆದು ಕೋಳಿಗೂಡಿನ ಸಮೀಪಕ್ಕೆ ಹೋದಳು. ಹಿತ್ತಿಲಿಗೆ ಟಾರ್ಚ್ ಲೈಟು ಬಿಟ್ಟು ನೋಡಿ; ‘ಸ್ಟೇಟಿನವರು!’ ಎಂದು ಕಿರುಚಿದಳು.
ನಾನು ತಿರುವಿತಾಂಕೂರು ಸ್ಟೇಟಿನವನು. ಅವಳು ಮಲಬಾರಿನವಳು. ಸ್ಟೇಟಿನವರ ಬಗ್ಗೆ ಅವಳಿಗೆ ಎಲ್ಲಿಲ್ಲದ ಮರ್ಯಾದೆ. ಸ್ಟೇಟಿನ ಜನರಿಗೆ ಬುದ್ಧಿ ಹೆಚ್ಚೆಂದು!
‘ಒಟ್ಟು ನಾಲ್ಕು ಮಂದಿ ಕಾಮ್ರೇಡರಿದ್ದಾರೆ’
‘ಯಾರವರು?’
‘ಇನ್ಯಾರು? ನರಿಗಳು. ಇಬ್ಬರು ಪಶ್ಚಿಮ ಭಾಗದಲ್ಲಿ ನಿಂತಿದ್ದಾರೆ. ಇನ್ನಿಬ್ಬರು ಪೂರ್ವದಲ್ಲಿರುವ ಗೇಟಿನ ಬಳಿ ನಿಂತು ಹೊಂಚು ಹಾಕುತ್ತಿದ್ದಾರೆ. ನಮ್ಮ ಮಹಾನ್ ಶ್ವಾನ ವಂಶಜ ಪೂರ್ವದಲ್ಲಿರುವವರ ಜೊತೆಗೆ ಯುದ್ಧದಲ್ಲಿ ಮಗ್ನನಾಗಿರಬೇಕಾದರೆ, ಪಶ್ಚಿಮದಲ್ಲಿರುವ ಕಾಮ್ರೇಡರು ಕುಕ್ಕುಟಾಕ್ರಮಣ ನಡೆಸುವ ಸನ್ನಾಹದಲ್ಲಿರುವರು.
‘ಷಾನು ಬಾ ಇಲ್ಲಿ’ ಹೆಂಡತಿ ಕರೆದಳು.
ಷಾನು ಟುಕು ಟುಕು ಟುಕು ಎಂದು ಅವಳ ಕಡೆಗೆ ಓಡಿದ. ಅವನನ್ನು ಅವನ ಸರಪಳಿಯಿಂದ ಎಳೆದೊಯ್ದು, ಕುತ್ತಿಗೆಗೆ ಉದ್ದದ ಹಗ್ಗ ಕಟ್ಟಿ, ಕೋಳಿ ಗೂಡಿನ ಬಳಿ ಬಂಧಿಸಿದಳು.
ಆ ವೇಳೆ ಅಪಶಕುನವೆಂಬಂತೆ ಇರುಳೊಳಗೆ ಅಡಗಿದ್ದ ತೆಂಗಿನ ಮರಗಳ ಸುತ್ತ ವೃತ್ತಾಕಾರಕ್ಕೆ ಬೆಳಕೊಂದು ಚಲಿಸುತ್ತಾ ಹೋಯಿತು.
‘ಎಲ್ಲಿಂದ ಬಂತು ಅದು?’ ಗಾಬರಿಯಾಗಿ ಕೇಳಿದೆ.
‘ಅದು ಸರ್ಕಸ್ಸಿನವರ ಸರ್ಚ್ ಲೈಟಾಗಿರಬಹುದು’ ಎಂದು ನನ್ನ ಹೆಂಡತಿ ಹೇಳಿದಳು. ಸತ್ಯ ತಿಳಿದಿದ್ದ ನನಗೆ ಸಿಟ್ಟು ಬಂತು;
‘ದಡ್ಡಿ, ಅದು ಸರ್ಕಸ್ಸಿನವರ ಲೈಟಲ್ಲ; ಕಾರ್ಪೊರೇಷನ್ ನವರ ಸರ್ಚ್ ಲೈಟ್. ಈಗ ತಿರುವನಂತಪುರಂ, ಕೊಲ್ಲಂ, ಎರ್ನಾಕುಳಂಗಳಲ್ಲಿ ಇಂತಹ ಸರ್ಚ್ ಲೈಟುಗಳು ಸಾಮಾನ್ಯವಾಗಿದೆ; ಅದರ ಉದ್ದೇಶ ಮುನ್ನೆಚ್ಚರಿಕೆ ನೀಡುವುದು; ಪ್ರೊಫೆಸರ್ ಸುಕುಮಾರ್ ಅಯಿಕ್ಕೋಡ್, ಕೇಶವದೇವ್, ವೈಕಂ ಚಂದ್ರಶೇಖರ್ ಮೊದಲಾದ ಕುಖ್ಯಾತ ಪ್ರಖ್ಯಾತರು ಮನೆಯಿಂದ ಹೊರಗೆ ಬಂದಿದ್ದಾರೆ. ಜನರೇ ಜೋಕೆ! ದೂರ ಸರಿಯಿರಿ’
‘ಅವರು ಹೊರಗೆ ಬಂದರೆ ಸರ್ಚ್ ಲೈಟ್ ಯಾಕೆ?’
‘ದಡ್ಡಿ, ಸರ್ಚ್ ಲೈಟ್ ರಾತ್ರಿ ಮಾತ್ರ! ಹಗಲು ಹೊತ್ತು ಭಯಾನಕ ಸೈರನ್ ಮೊಳಗುತ್ತದೆ. ತಿರುವನಂತಪುರದಿಂದ ವೈಕಂ ಚಂದ್ರಶೇಖರ್ ನಾಯರ್ ಅಥವಾ ಕೇಶವದಾಸ್ ಕಾರಿನಲ್ಲಿ ಹೊರಟರೆ ಕಿವಿಗಡಚಿಕ್ಕುವ ಸೈರನ್ ಮೊಳಗುತ್ತದೆ. ಅದು ಹೇಗೆಂದರೆ, ಕೊಲ್ಲಂ, ಕೋಟ್ಟಯಂ, ಆಲಪುಯ, ಎರ್ನಾಕುಲಂ, ತೃಶೂರ್, ಕೋಯಿಕ್ಕೋಡ್, ಕಣ್ಣೂರ್, ಕಾಸರಗೋಡ್ ಹೀಗೆ ಒಂದರ ಹಿಂದೆ ಒಂದರಂತೆ ಮೊಳಗುತ್ತಲೇ ಇರುತ್ತದೆ. ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ತನ್ನ ಕಾರು ಹತ್ತಿದರೂ, ಸರ್ಚ್ ಲೈಟ್ ಕಂಡರೂ, ಸೈರನ್ ಕೇಳಿಸಿಕೊಂಡರೂ ಜನರು ಎದ್ದೆವೋ ಬಿದ್ದೆವೋ ಎಂದು ರಸ್ತೆಯಿಂದ ಓಡಿ ತೆಂಗಿನ ಮರ ಹತ್ತುತ್ತಾರೆ. ಇವರನ್ನು ಕಂಡರೆ ಓಡಬೇಕು ಎಂಬುದೇ ಸರಕಾರದ ಕಾನೂನು! ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕೇಶವದಾಸ್, ವೈಕಂ ಚಂದ್ರಶೇಖರನ್ ನಾಯರ್ ಇವರಿಗೆಲ್ಲಾ ಜನರು ಹೆದರಬೇಕೇ? ಹೆದರಬೇಕು. ಇವರೆಲ್ಲ ಸಾಹಿತಿಗಳು. ಲಂಗು ಲಗಾಮಿರುವ ವರ್ಗವಲ್ಲ; ಅವರೆಲ್ಲಾ ಕಾರುಗಳಲ್ಲಿ ಓಡಾಡುವವರು. ಕಾರುಗಳಿರುವ ಸಾಹಿತಿಗಳು ಬರುತ್ತಿದ್ದಾರೆ ದಾರಿಬಿಡಿ ಎಂದು ಸೂಚಿಸಲೇ ಈ ಸರ್ಚ್ ಲೈಟ್? ಹೌದು. ಹೇಳಿದೆನಲ್ಲಾ, ಹಗಲು ಹೊತ್ತು ಸೈರನ್ ಮೊಳಗುತ್ತದೆ. ಈ ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ಕೇಶವದಾಸ್, ವೈಕಂ ಚಂದ್ರಶೇಖರ್ ರ ಕಾರುಗಳಿಗೆ ಮಾತ್ರವೇ ಸೈರನ್ ಭಾಗ್ಯ! ಹೌದು. ಅದೇನು ಹಾಗೆ? ಕಾರುಗಳಿರುವ ಸಾಹಿತಿಗಳಿಗೆ ನೀಡಲಾದ ಸೌಲಭ್ಯ ಅದು. ಈಗಿನ ಕೇರಳದ ಕಮ್ಯೂನಿಸ್ಟ್ ಮುಖ್ಯಮಂತ್ರಿ ಒಬ್ಬ ಸಾಹಿತಿ! ಭಾರತವನ್ನು ಆಳುತ್ತಿರುವ ಇಂದಿರಾಗಾಂಧಿ ಸಾಹಿತಿ! ಅವರಿಗೆ ಕಾರುಗಳಿರುವ ಸಾಹಿತಿಗಳೆಂದರೆ ಗೌರವ. ಆದ್ದರಿಂದ ಸರ್ಚ್ ಲೈಟ್, ಸೈರನ್ ಇಟ್ಟುಕೊಳ್ಳಲು ಅನುಮತಿ ನೀಡಿದ್ದಾರೆ. ‘ಜನರೇ, ಬದುಕಿ ಉಳಿಯಬೇಕಾದರೆ ಓಡಿ ಅಡಗಿಕೊಳ್ಳಿ’ ಎಂದು ಕೂಗುವ ಸೈರನ್!


‘ಇಂದಿರಾಗಾಂಧಿ ಸಾಹಿತಿಯೇ? ಅವರು ಪುಸ್ತಕ ಬರೆದಿರುವ ಬಗ್ಗೆ ನಾನು ಕೇಳಿಲ್ಲ. ಮತ್ತೆ ಅವರು ಹೇಗೆ ಸಾಹಿತಿಯಾದರು?’
‘ಹುಚ್ಚಿ, ಇಂದಿರಾಗಾಂಧಿ ಪುಸ್ತಕ ಬರೆದಿದ್ದಾರೆ. ಅಷ್ಟೇ ಅಲ್ಲ; ಇಂದಿರಾಗಾಂಧಿಯ ಅಪ್ಪ ಜವಾಹರಲಾಲ್ ನೆಹರೂ ಕೂಡ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ’ ಎಂದೆ. ಹೆಂಡತಿ ಏನೂ ಮಾತನಾಡಲಿಲ್ಲ.
‘ನೀನು ಸಾರಿ ಸುತ್ತಿಕೊಂಡು ನಿನ್ನ ಗೆಳತಿಯರ ಮನೆಗೆ ಹೋಗುವಾಗ ಸೈರನ್ ಕೇಳಿದರೆ ಆ ಕ್ಷಣವೇ ಹಾರಿ ತೆಂಗಿನ ಮರಕ್ಕೆ ಹತ್ತಿ ಬಚಾವಾಗುವ ದಾರಿ ನೋಡಬೇಕು’ ಎಂದು ನಾನು ಹೇಳಿದೆ.
‘ಮರ ಹತ್ತಲು ನನಗೆ ತಿಳಿಯದು’
‘ಮತ್ತೆ ಸ್ತ್ರೀ ಸ್ವಾತಂತ್ರ‍್ಯಕ್ಕಾಗಿ ಕೂಗುವುದರ ರಹಸ್ಯವೇನು?’
‘ಮರ ಹತ್ತಲಾಗದಿದ್ದರೆ ನೀರಿಗೆ ಹಾರಿ ಜೀವ ರಕ್ಷಿಸಿಕೊಳ್ಳಬೇಕು’
‘ಈಜು ತಿಳಿದಿಲ್ಲ’
‘ಹಾಗಾದರೆ, ನೀನು ಮನೆಯ ಹೊಸ್ತಿಲು ದಾಟಬಾರದು. ರಸ್ತೆ ನಿನಗೆ ನಿಷಿದ್ಧ’
‘ಬಾಗಿಲು ಭದ್ರಪಡಿಸಿ, ಲೈಟ್ ಆಫ್ ಮಾಡಿ ಮಲಗಿದಾಗ ಅಶರೀರವಾಣಿಯಂತೆ ಹೆಂಡತಿ ಹೇಳಿದಳು; ಧೀರನಾದ ಗಂಡ ಮುಂದೆ ನಡೆಯುತ್ತಾನೆಯೇ ವಿನಾ ಉಗ್ರರಾದ ಸ್ಟೇಟ್ ನರಿಗಳ ಮುಂದೆ ಕಳುಹಿಸಿ ಹಿಂದೆ ಅಡಗಿಕೊಳ್ಳುವುದಿಲ್ಲ.
‘ಧೀರರಾಗಬೇಕಾದರೆ ಧಾರಾಳ ಕೋಳಿಮೊಟ್ಟೆ ಸೇವಿಸಬೇಕು’ ಎಂದು ಅಶರೀರವಾಣಿಯಂತೆ ನಾನು ಹೇಳಿದೆ.
‘ಕೋಳಿಮೊಟ್ಟೆ ಮಾರಿ ಸಿಗುವ ಹಣ ಯಾರ ಪಾಕೀಟು ಸೇರುತ್ತದೆ?’
ಇದಕ್ಕೆಲ್ಲಾ ಏನು ಉತ್ತರಿಸುವುದು ಎಂದು ನಾನು ನಿದ್ರೆಗೆ ಜಾರಿದೆ. ಆಗೊಂದು ಭಯಾನಕವಾದ ಕನಸು ಬಿತ್ತು. ಮೂವರು ಹಿಂದೂಗಳು ಘೋರ ಅಟ್ಟಹಾಸದೊಂದಿಗೆ ನನ್ನ ಬೆನ್ನಟ್ಟುತ್ತಿದ್ದಾರೆ! ಮೂರು ಕಾರುಗಳಲ್ಲಿ! ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್, ವೈಕಂ ಚಂದ್ರಶೇಖರನ್ ನಾಯರ್, ಕೇಶವದೇವ್ ಈ ಮೂವರು ನನ್ನನ್ನು ಬೆನ್ನಟ್ಟಿ ಒಂದು ಮೈದಾನದಲ್ಲಿ ನಿಲ್ಲಿಸಿದ್ದಾರೆ. ಮೂರು ಭಾಗದಲ್ಲಿ ಮೂರು ಕಾರುಗಳು ನಿಂತಿವೆ. ಅವರ
ನಡುವೆ ನೈಲಾನ್ ಕೊಡೆಯೊಂದಿಗೆ ನಾನು ನಿಂತಿದ್ದೇನೆ. ಮೂವರೂ ಬೇಕಾಬಿಟ್ಟಿ ಹಾರ್ನ್ ಹೊಡೆಯುತ್ತಿದ್ದಾರೆ. ಭಯಭೀತರಾದ ಜನರು ಚಕಚಕನೇ ಮರಗಳನ್ನು ಹತ್ತಿ, ಅಂಟಿಕೊಂಡಂತೆ ಕುಳಿತಿದ್ದಾರೆ. ನನ್ನನ್ನು ಸುತ್ತುಹಾಕಿರುವ ಮೂವರೂ ಗಹಗಹಿಸಿ ನಗುತ್ತಿದ್ದಾರೆ. ಕೇಶವದೇವ್ ತೆಂಗಿನಕಾಯಿಯ ಚರಟೆಯನ್ನು ಬಂಡೆಗಲ್ಲಿಗೆ ಉಜ್ಜಿದಂತೆ ನಗುತ್ತಿದ್ದಾರೆ. ಅಷ್ಟರಲ್ಲಿ ನನಗೆ ಎಚ್ಚರವಾಯಿತು. ವಿಶೇಷವೇನಿಲ್ಲ. ಲೋಕ ಎಂದಿನಂತೆಯೇ ಇತ್ತು. ಪ್ರಾತಃ ವಿಧಿಗಳೆಲ್ಲಾ ಮುಗಿಸಿದೆ. ಸ್ನಾನ ಮುಗಿದ ಮೇಲೆ ದೇಹಕ್ಕೆ ಯುಟಿಕ್ಲೇನ್ ಹಚ್ಚಿದೆ. ಪೌಡರ್ ಹಚ್ಚಿ, ಕೂದಲನ್ನು ನೀಟಾಗಿ ಬಾಚಿ, ಬಟ್ಟೆ ಧರಿಸಿದೆ. ಬೇಯಿಸಿದ ಆರು ಮೊಟ್ಟೆ, ಪುಟ್ಟು, ತುಪ್ಪ, ಹಪ್ಪಳ, ಕಡಲೆ ಇತ್ಯಾದಿ ಭಕ್ಷ್ಯ ಭೋಜನದೊಂದಿಗೆ ಒಂದು ಟೀ ಕುಡಿದು ಸಿಗರೇಟ್ ಹಚ್ಚಿ ಆರಾಮ ಕುರ್ಚಿಗೆ ಮೈಪವಡಿಸಿದೆ…!
ಇದರಲ್ಲಿ ಸಿಗರೇಟ್ ಸೇದಿರುವುದು ಮಾತ್ರ ಸತ್ಯ! ಉಳಿದುದೆಲ್ಲಾ ಆಸೆಗಳಷ್ಟೇ. ನನ್ನ ಸಮಸ್ಯೆ; ಬೆಲೆ ಏರಿಕೆ ಹಾಗೂ ದಾರಿದ್ರ‍್ಯ! ಇಂತಿಪ್ಪ ನಾನು ಸ್ನಾನ ಮುಗಿಸಿ ಒಂದು ಸಿಂಗಲ್ ಬ್ಲಾಕ್ ಟಿ ಹಾಗೂ ಸಿಗರೇಟು ಸೇದಲಷ್ಟೇ ಸಾಧ್ಯ. ಕೋಳಿ ಮೊಟ್ಟೆ ಮಾರಿ ಸಂತೆಯಿಂದ ಅಕ್ಕಿ ಖರೀದಿಸಿ ಗಂಜಿ ಬೇಯಿಸಬೇಕು. ಗಂಜಿಯ ಜೊತೆಗೆ ನಂಜಿಕೊಳ್ಳಲು ಏನಾದರು ಬೇಕಲ್ಲವೇ. ಬದನೆಕಾಯಿ ಏನಾದರು ಸಿಗಬಹುದೇ ಎಂದು ನೋಡಲು ಇಂಪಾಲ ಕಾರಿನಲ್ಲಿ ಪ್ರಯಾಣಿಸುವ ಅನುಭೂತಿಯೊಂದಿಗೆ ನನ್ನ ನೈಲಾನ್ ಕೊಡೆಯನ್ನು ಬೆನ್ನಿಗೆ ತೂಗು ಹಾಕಿಕೊಂಡು ಮಾಸ್ತರ್ ಗಿರಿ ಮಾಡುತ್ತಾ ಹೊರಟೆ.
ಮನೆಯಿಂದ ಹೊರಡಬೇಕಾದರೆ ನಾನು ನನ್ನ ಕೇರಳೀಯತೆಯನ್ನು ಪಾಲಿಸಲಿಲ್ಲ. ಮರೆತು ಬಿಟ್ಟೆ. ಅಂದರೆ, ಕೇರಳೀಯ ಪತಿ ಹೊರಗೆ ಹೋಗುವಾಗ ಪತ್ನಿಯೊಂದಿಗೆ ಹೇಳುವುದು ರೂಢಿ. ರಾತ್ರಿಯಾದರೆ ಇವಳೇ, ಸರ್ಚ್ ಲೈಟ್ ನೋಡಿದೆಯಾ? ಹಗಲಾದರೆ ಸೈರನ್ ಕೇಳಿಸಿತಾ? ಈ ರೀತಿಯ ಕುಶಲ ಮಾತುಕತೆಗಳಿಲ್ಲದೆಯೇ ನಾನು ಹೊರಟಿದ್ದೆ.
ರಸ್ತೆಯ ಮೇಲೆ ಒಂದೇ ಒಂದು ವಾಹನವಿಲ್ಲ. ಎಲ್ಲೆಲ್ಲೂ ವಿಚಿತ್ರ ಶೂನ್ಯತೆ ಆವರಿಸಿದೆ. ಅಂಗಡಿಗಳ ಬಾಗಿಲು ಮುಚ್ಚಿ ಬೀದಿಗಳು ಬಿಕೋ ಎನ್ನುತ್ತಿತ್ತು. ಜನರು ತೆಂಗಿನ ಮರವನ್ನು ಅರ್ಧ ಏರಿ ತಟಸ್ಥರಾಗಿ ಕುಳಿತಿದ್ದರು. ಮಹಿಳೆಯರು ನೀರಿಗಿಳಿದು, ಕತ್ತು ಮಾತ್ರ ಹೊರ ಚಾಚಿ ಕೋಳಿಗಳಂತೆ ಇಣುಕುತ್ತಿದ್ದರು. ರಸ್ತೆಯ ಮೇಲೆ ಹಸುಗಳು, ಕೋಳಿಗಳು, ನಾಯಿಗಳು ಓಡಾಡುತ್ತಿತ್ತು. ಅವುಗಳ ನಡುವೆ ಒಬ್ಬನಾಗಿ ನಾನು ಸುಮ್ಮನೆ ನಡೆದೆ.
ತೆಂಗಿನ ಮರವನ್ನು ಅರ್ಧ ಏರಿ ಕುಳಿತಿದ್ದ ಲಕ್ಷ್ಮಿ ಕುಟ್ಟಿ ನನ್ನನ್ನು ನೋಡಿ ಗಾಬರಿಯಿಂದ; ‘ಸಾರ್, ಸೈರನ್ ಕೇಳಿಸಿಲ್ಲವೇ? ಅವರು ಬರುತ್ತಿದ್ದಾರೆ, ಓಡಿ. ಜೀವ ಉಳಿಸಿಕೊಳ್ಳಿ. ಅವರೇ ಅವರು, ಸಾಹಿತಿಗಳು ಬರುತ್ತಿದ್ದಾರೆ. ಓಡಿ ಅಡಗಿಕೊಳ್ಳಿ’ ಎಂದು ಕೂಗಿದಳು.
ನಾನು ಮೇಲೆ ನೋಡಿದಾಗ ಎಲ್ಲಾ ತೆಂಗುಗಳಲ್ಲೂ ಜನರಿದ್ದರು. ನಾನು ಕೊಡೆಯನ್ನು ಒಂದು ತೆಂಗಿಗಾನಿಸಿ ನಿಲ್ಲಿಸಿ, ಲಕ್ಷ್ಮೀ ಕುಟ್ಟಿಗೆ ‘ದೀರ್ಘ ಸುಮಂಗಲೀಭವ!’ ಎಂದು ಆಶಿರ್ವಾದ ಮಾಡಿದೆ. ನಂತರ ತೆಂಗಿನ ಮರಕ್ಕೆ ಚಕಚಕನೇ ಹತ್ತಿ ಕುಳಿತೆ.
‘ಸಾರ್, ನಿಮಗೊಂದು ವಿಷಯ ತಿಳಿದಿದೆಯೇ’? ಎಂದು ಲಕ್ಷ್ಮೀ ಕುಟ್ಟಿ ನನ್ನೊಂದಿಗೆ ಗುಟ್ಟು ಹೇಳುವಂತೆ ಕೇಳಿದಳು.
‘ನನ್ನನ್ನು ಇದುವರೆಗೆ ಯಾರೂ ಮದುವೆಯಾಗಿಲ್ಲ’
‘ಹೌದೇ? ಬಹಳ ಕಷ್ಟ ಆಯಿತು. ಈಗೇನು ಮಾಡುವುದು? ನಾನು ಮದುವೆಯಾಗುತ್ತೇನೆ ಎಂದು ಹೇಳಬಹುದು!
ಆದರೆ, ವಯಸಿಗೇನು ಮಾಡೋಣ. ಜನರು ಮುದುಕ ಅನ್ನುತ್ತಾರೆ. ನನ್ನನ್ನು ಬಿಡಿ. ಊರಿನ ಯುವಕರೆಲ್ಲ ಏನು ಕಿಸಿಯುತ್ತಿದ್ದಾರೆ? ಉದ್ದಕೆ ಕೂದಲು ಬೆಳೆಸಿ, ಥರೇವಾರಿ ಶೈಲಿಯ ಮೀಸೆ ಬಿಟ್ಟು ಸ್ನಾನ ಮಾಡದೆ, ಹಲ್ಲುಜ್ಜದೆ ಓಡಾಡುವ ಬದಲು ಈ ಹುಡುಗಿಯನ್ನು ಮದುವೆಯಾಗಬಾರದೇ? ಓಯ್, ಯಾರಾದರು ಬಂದು ಬೇಗ ನಮ್ಮ ಲಕ್ಷ್ಮಿ ಕುಟ್ಟಿಯನ್ನು ಮದುವೆಯಾಗಿ’ ಎಂಬಿತ್ಯಾದಿಯಾಗಿ ಮನಸಿನಲ್ಲೇ ಮಂಡಿಗೆ ತಿಂದು ‘ಯಾರು ಬರುತ್ತಿರುವುದು?’ ಎಂದು ಲಕ್ಷ್ಮಿ ಕುಟ್ಟಿಯೊಂದಿಗೆ ಕೇಳಿದೆ.
‘ನನಗೆ ತಿಳಿದಿಲ್ಲ ಸರ್’
‘ಸೈರನ್ ರಿಲೇ ಮಾಡಿದ್ದೇ?’
‘ತಿಳಿದಿಲ್ಲ’
ಅಷ್ಟರಲ್ಲಿ ಭಯಾನಕವಾದ ಒಂದು ಹಾರನ್ ಕೇಳಿಸಿತು. ಮೂರು ದನ, ಎರಡು ನಾಯಿ, ಒಂಬತ್ತು ಕೋಳಿ ಇಷ್ಟು ಜೀವಿಗಳನ್ನು ಕೊಂದು ಸುರ್ರೆಂದು ಬಂದ ಒಂದು ಕಾರು ರಸ್ತೆ ಬಿಟ್ಟು ತೆಂಗಿನ ಬುಡಕ್ಕೆ ಗುದ್ದಿ; ನನ್ನ ನೈಲಾನ್ ಕೊಡೆಯನ್ನು ಚಿಂದಿ ಉಡಾಯಿಸಿತು. ಕೊಡೆಯ ದಾರುಣ ಸ್ಥಿತಿಯ ಬಗ್ಗೆ ನಾನು ಯೋಚಿಸುತ್ತಿರಬೇಕಾದರೆ, ‘ಅದು ದೇವ್ ಸಾರ್’ ಎಂದು ಲಕ್ಷ್ಮೀ ಕುಟ್ಟಿ ಹೇಳಿದಳು.
‘ಅಲ್ಲ’ ಪಕ್ಕದ ಮರದಲ್ಲಿ ಕುಳಿತು ನಾಣುಕುಟ್ಟನ್ ಹೇಳಿದ.
‘ಅದು ವೈಕಂ ಚಂದ್ರಶೇಖರನ್ ಸರ್’ ಎಂಬುದು ಅವನ ಅಭಿಪ್ರಾಯ.
‘ಅಲ್ಲ ಅಲ್ಲ. ಅದು ಪ್ರೊಫೆಸರ್ ಸುಕುಮಾರನ್ ಅಯಿಕ್ಕೋಡ್’ ಎಂದು ಮರದಿಂದ ಇಳಿದು ಚೆಲ್ಲಾಪಿಲ್ಲಿಯಾಗಿದ್ದ ಕೊಡೆಯನ್ನು ನೋಡಿ ಮರುಗುತ್ತಾ ಪದ್ಮನಾಭನ್ ಹೇಳಿದ.
‘ಯಾರಾದರೇನು? ಕೊಡೆ ಹೋಯಿತು. ಇನ್ನು ಬೋಳು ತಲೆಗೆ ಮಳೆ ಹನಿಬಿದ್ದು ಜ್ವರ ಬಿದ್ದು ಸಾಯಬೇಕು’ ಎಂದು ಕಳವಳಿಸುವ ಗತಿಗೇಡು ನನ್ನದು.
ಹಿಂದೂಗಳೇ! ನೀವೇಕೆ ಹೀಗೆ ಮಾಡಿದಿರಿ. ಮುಸ್ಲಿಮ್ ಸಮುದಾಯದೊಂದಿಗೆ ನೀವು ತೋರಿಸಿದ ಈ ಮಹಾ ಅನ್ಯಾಯಕ್ಕೆ ಎಲ್ಲಿದೆ ನ್ಯಾಯ! ನೀವು ಮೂವರು ಸೇರಿದರೂ ಈ ಅಮೂಲ್ಯವಾದ ಕೊಡೆಯನ್ನು ಮತ್ತೆ ಮರಳಿಸಲಾರಿರಿ. ಆದ್ದರಿಂದ ನೀವು ಮೂವರು ಸೇರಿ ನನಗೊಂದು ಕಾರು ತೆಗೆದುಕೊಡಿ. ಒಂದು ಜೀಪ್ ತೆಗೆದುಕೊಟ್ಟರೂ ಪರವಾಗಿಲ್ಲ. ಆ ಮೂಲಕ ಹಿಂದೂಗಳ ಮಾನ ಕಾಪಾಡಿ. ಅದು ಸಾಧ್ಯವಿಲ್ಲದಿದ್ದರೆ, ನನಗೆ ಹತ್ತೋ ಐವತ್ತೋ ನೂರೋ ರುಪಾಯಿ ಕಳುಹಿಸಿಕೊಟ್ಟು ಸಹಾಯ ಮಾಡಲು ಜನರಿಗೆ ಮನವಿ ಮಾಡಿ. ನಿಮಗೂ ಚಿತ್ರಕಾರ್ತಿಕಕ್ಕೂ, ಇನ್ನಿತರ ಪತ್ರಕರ್ತರಿಗೂ ಹಾರೈಸುವೆನು. ಸರ್ವ ಜನರಿಗೂ ಶುಭವಾಗಲಿ

ವೈಕಂ ಮುಹಮ್ಮದ್ ಬಶೀರ್
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

Leave a Reply

*