ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಮತ್ತು ಅಜ್ಮಲ್ ಖಾನ್‌‌ ಕವಿತೆಗಳು

ಬಿಡುಗಡೆಗೊಂಡು ಒಂದು ವಾರ ಪೂರ್ತಿಯಾಗುವುದರೊಳಗೆ ಆಮೆಝಾನ್‌ ಇ-ಪುಸ್ತಕ ಮಳಿಗೆಯ ಇಂಡಿಯನ್‌ ಮತ್ತು ಏಷ್ಯನ್‌ ಸಾಹಿತ್ಯ ವಿಭಾಗದ ಹಾಟ್ ನ್ಯೂ ರಿಲೀಸ್‌ ಪಟ್ಟಿಗೆ ಸೇರ್ಪಡೆಗೊಂಡಿರುವ The Mappila Verses ಎಂಬ ಇಂಗ್ಲಿಷ್‌ ಕವಿತಾ ಸಂಕಲನದ ಕರ್ತೃ ಹಾಗೂ ಅಶೋಕ ಯೂನಿವರ್ಸಿಟಿಯ ಪ್ರೊಫೆಸರ್ ಕೂಡಾ ಆಗಿರುವ ಅಜ್‌ಮಲ್‌ ಖಾನ್‌ ʼತಿಜೋರಿʼಯೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಶ್‌ಕೂರ್ ಖಲೀಲ್ ತಿಜೋರಿಗಾಗಿ ಸಂದರ್ಶನ ನಡೆಸಿಕೊಟ್ಟಿದ್ದಾರೆ.

ಮಶ್‌ಕೂರ್ ಖಲೀಲ್: ಶೈಕ್ಷಣಿಕ ಹಿನ್ನೆಲೆಯಿಂದ ಆರಂಭಿಸೋಣ. ಕೇರಳದ ಮಲಪ್ಪುರದಿಂದ ಹಿಡಿದು ಮುಂಬೈ ಟಾಟಾ ಇನ್ಶ್ಟಿಟ್ಯೂಟ್‌ ನಲ್ಲಿ ಡಾಕ್ಟರೇಟ್‌ ಮುಗಿಸುವ ತನಕ ಸವೆಸಿದ ಹಾದಿ ಹೇಗಿತ್ತು? ಸವಾಲುಗಳಿಂದ ತುಂಬಿತ್ತೇ?

ಅಜ್‌ಮಲ್ ಖಾನ್:‌ ಮಂಬಾಡ್‌ ಎಂಇಎಸ್ ನಲ್ಲಿ‌ ನಾನು ಇಂಗ್ಲಿಷ್‌ ಭಾಷೆ ಕಲಿಯಲು ಆರಂಭಿಸುವಾಗ ನನ್ನ ಸಾಮಾಜಿಕ ವಾತಾವರಣದಲ್ಲಿ ಇಂಗ್ಲಿಷ್‌ ಭಾಷೆಗೆ ಅಷ್ಟು ಮನ್ನಣೆ ಸಿಗುತ್ತಿರಲಿಲ್ಲ. ಆ ದಿನಗಳಲ್ಲಿ ಮಲಯಾಳಂ ಭಾಷೆಯಲ್ಲಿ ಕವನ ರಚಿಸುತ್ತಿದ್ದೆ. ಇಂಗ್ಲಿಷ್‌ ನಲ್ಲಿ ಕವನ ರಚಿಸುವ ಆಲೋಚನೆಯೇ ನನ್ನಲ್ಲಿ ಹೊಳೆದಿರಲಿಲ್ಲ. ನಾನು ಮತ್ತು ನನ್ನ ತಲೆಮಾರಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೂರದ ಕೇಂದ್ರಗಳಿಗೆ ತಲುಪಿದ್ದು ಮಲಬಾರ್ ಮುಸ್ಲಿಮರ ನಡುವೆ ಉಂಟಾದ ಶೈಕ್ಷಣಿಕ ಜಾಗೃತಿಯ ಪರಿಣಾಮ. ಬಹುಶಃ ಕೇರಳದಿಂದ ಟಾಟಾ ಇನ್ಶಟಿಟ್ಯೂಟ್‌ ತಲುಪಿದ ಪ್ರಥಮ ಮುಸ್ಲಿಂ ವಿದ್ಯಾರ್ಥಿ ನಾನೇ ಇರಬೇಕು.
ಮಲಬಾರಿನಲ್ಲಿ ಘಟಿಸಿದ ಸಾಮಾಜಿಕ ಪಲ್ಲಟದ ಪ್ರಥಮ ಪೀಳಿಗೆಯಲ್ಲಿ ಹಲವರು ಸ್ನಾತಕೋತ್ತರ ಶಿಕ್ಷಣವನ್ನು ಅರಸಿ ದೆಹಲಿ, ಚೆನ್ನೈ, ಮುಂಬೈ ಮುಂತಾದ ನಗರಗಳಿಗೆ ತಲುಪಿದ್ದಾರೆ. ಕೇಂದ್ರೀಯ ವಿವಿಗಳಲ್ಲಿ ಕಾಣುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳ ಅಭಾವ ಆ ವೇಳೆಯಲ್ಲಿ ಕಡಿಮೆಯಾಗಲು ಆರಂಭಿಸಿತ್ತು. ನಾನೂ ಮಂಬೈ ತಲುಪಿದ್ದು ಅಂತಹಾ ಶೈಕ್ಷಣಿಕ ವಲಸೆಯ ಪರಿಣಾಮವಾಗಿಯೇ. ಮುಸ್ಲಿಂ ನಾಮದೊಂದಿಗೆ ಮುಂಬೈಯಂತಹ ಶಹರದಲ್ಲಿ ಟಾಟಾ ಇನ್ಶ್ಟಿಟ್ಯೂಟ್ನಂಥಾ ಸಂಸ್ಥೆಯಲ್ಲಿ ಕಲಿಯುವುವಾಗ ಉಂಟಾದ ಪ್ರಯಾಸಗಳೇ ಆ ಕಾಲದಲ್ಲಿ ಎದುರಿಸಿದ ಸವಾಲುಗಳು ಆಗಿದ್ದವು. ದಲಿತ, ಮುಸ್ಲಿಂ, ಬುಡಕಟ್ಟು ಜನಾಂಗದ ರಾಜಕೀಯ ಸಮಸ್ಯೆಗಳನ್ನು ತಲೆಗೇರಿಸಿಕೊಂಡು ಮುಸ್ಲಿಂ ಹೆಸರಿನಲ್ಲೇ ಪ್ರಗತಿಪರ ರಾಜಕೀಯದ ಭಾಗವಾಗುವುದು ಬಹಳ ತ್ರಾಸದಾಯಕವಾದ ಸಂಗತಿಯಾಗಿತ್ತು. ಅದೇವೇಳೆ, ಇಂತಹ ಅನುಭವಗಳು ಬರವಣಿಗೆಯನ್ನು ಮುಂದುವರಿಸಲು ಸಾಕಷ್ಟು ಸಹಾಯ ಮಾಡಿತು ಎಂಬುವುದು ಸುಳ್ಳಲ್ಲ.

Ajmal Khan

ಮಶ್ ಕೂರ್ ಖಲೀಲ್: ಕಾವ್ಯ ರಚನೆಗೆ ಇಳಿಯಲು ಪ್ರೇರಣೆ?

ಅಜ್ ಮಲ್ ಖಾನ್: ಮಹ್ಮೂದ್‌ ದರ್ವೇಶ್‌, ಆಕಾ ಶಾಹಿದ್‌ ಅಲಿ, ಖಲೀಲ್‌ ಗಿಬ್ರಾನ್‌, ಅಡೋನಿಸ್ ಮುಂತಾದವರ ಕಾವ್ಯಗಳನ್ನು ಓದುವ ಹವ್ಯಾಸ ಮೊದಲೇ ಇತ್ತು. ನಂತರ ಪದವಿ, ಸ್ನಾತಕೋತ್ತರ ಅಧ್ಯಯನಕ್ಕಾಗಿ ಮುಂಬೈ ತಲುಪಿದಾಗ ದಲಿತ, ಉಗ್ರ ಎಡಪಂಥೀಯ ಚಳುವಳಿಗಾರರ ಓರಗೆಯಲ್ಲಿ ಸರಿಸುಮಾರು ಒಂದು ದಶಕಗಳ ಕಾಲ ಜೀವಿಸುವ ಅವಕಾಶ ಸಿಕ್ಕಿತ್ತು. ಆ ಕಾಲದ ಜೀವನ ನನ್ನ ಲೋಕದೃಷ್ಟಿಯನ್ನು ಬದಲಿಸಿತು ಮತ್ತು ಕಾವ್ಯ ಬರವಣಿಗೆಯ ಕಡೆಗೆ ಸೆಳೆಯಿತು. ಅಂಬೇಡ್ಕರ್‌ ಬರಹಗಳು, ಅವರು ಹಾಕಿಕೊಟ್ಟ ವೈಚಾರಿಕ ತಳಹದಿಯಲ್ಲಿ ಜನ್ಮ ತಾಳಿದ ದಲಿತ ಚಳುವಳಿಗಳ ಪರಿಣಾಮವಾಗಿ ಬೆಳೆದಿರುವ ಮಹಾರಾಷ್ಟ್ರದ ವಿಶೇಷ ಸಾಮಾಜಿಕ ವಾತಾವರಣವು ನನ್ನ ಬರವಣಿಗೆ ಮತ್ತು ರಾಜಕೀಯ ನಿಲುವುಗಳನ್ನು ಪ್ರಭಾವಿಸಿದೆ. ಅಣ್ಣಾ ಬಾವು ಸಾಥೆ, ವಿಲಾಸ್‌ ಗೋಖರೆ, ನಾಂ ದೇವ್‌ ದಸಾಲ್‌ ನನ್ನನ್ನು ಪ್ರಭಾವಿಸಿದ ಪ್ರಮುಖ ಸಾಹಿತಿಗಳು.
ಮುಂಬೈಯಲ್ಲಿ ಕಲಿಯುವ ಕಾಲದಲ್ಲಾಗಲೇ ಸಮಕಾಲೀನ ಅಮೇರಿಕನ್‌ ಕಪ್ಪು ವರ್ಗದವರ ಸಾಹಿತ್ಯ ಮತ್ತು ಬರವಣಿಗೆಯ ಶೈಲಿಗಳ ಪರಿಚಯವಾಗಿತ್ತು. ತರುವಾಯ ಅಮೇರಿಕಾ ಹಾಗೂ ಯುಕೆಯಲ್ಲಿ ವಾಸಿಸುತ್ತಿರುವ ವಲಸಿಗ ಕವಿಗಳ ಕಾವ್ಯಗಳನ್ನು ಓದುವ ಅವಕಾಶ ದೊರಕಿತು. ಅದರೊಂದಿಗೆ ದರ್ವೇಶ್‌, ಜೇಮ್ಸ್‌ ಬೋಲ್ಡ್ ವಿನ್‌, ಮಿಲನ್‌ ಕಂದೇರ, ಆಖಾ ಶಾಹಿದಲಿ ಮೊದಲಾದ ಬರಹಗಾರರ ವಿಚಾರಗಳು ಹಾಗೂ ದಲಿತ ಮತ್ತು ಕಪ್ಪುವರ್ಗದ ಕವಿಗಳು ವಿವರಿಸುವ ರಾಜಕೀಯ ಸಂದರ್ಭಗಳಿಗೆ ಹೋಲುವ ವಿಶೇಷ ಸ್ಥಿತಿಯನ್ನು ಭಾರತೀಯ ಮುಸಲ್ಮಾನರು ಕೂಡಾ ಎದುರಿಸುತ್ತಿದ್ದಾರೆನ್ನುವುದು ಮನವರಿಕೆಯಾಯಿತು. ಈ ಪ್ರಜ್ಞೆ ನನ್ನನ್ನು ಕಾವ್ಯರಚನೆಗೆ ಇಳಿಯಲು ಪ್ರಚೋದನೆ ನೀಡಿತು. ಮಲಪ್ಪುರಂ ಜಿಲ್ಲೆಯ ಪುಟ್ಟ ಗ್ರಾಮದಿಂದ ಬರುವ ವ್ಯಕ್ತಿ ಎಂಬ ನೆಲೆಯಲ್ಲಿ ನಮ್ಮ ಗ್ರಾಮೀಣ ಬದುಕು, ಕಲೆ, ಆಹಾರಕ್ರಮ, ಭೂವಿಜ್ಞಾನ, ಸಾಹಿತ್ಯ ಮುಂತಾದವೆಲ್ಲಾ ಮಾಪಿಳ ಕಲೆ ಮತ್ತು ಸಾಹಿತ್ಯದಲ್ಲಿ ಪ್ರತಿಫಲಿಸಿದೆ. ಅವುಗಳು ಹೊಸತರಲ್ಲಿ ಅರಬಿ ಮಲಯಾಳದಲ್ಲೂ ನಂತರ ಮಲಯಾಳಂ ನಲ್ಲೂ ಅಭಿವ್ಯಕ್ತಗೊಂಡಿದೆ. ನನ್ನ ಕಾವ್ಯ ಸಂಕಲನ ಇಂಗ್ಲಿಷ್‌ ಭಾಷೆಯ ಮಾಪಿಳ ಸಾಹಿತ್ಯದ ಪ್ರಥಮ ಕೊಡುಗೆಯಾಗಿರಬಹುದು. ಕಥೆಗಳಾಗಲಿ ಅಥವಾ ಕಾವ್ಯಗಳಾಗಲಿ ಇಂಗ್ಲಿಷ್‌ ಭಾಷೆಯಲ್ಲಿ ಮಾಪಿಳ ಬರಹಗಳು ಬಂದಿಲ್ಲ ಎಂಬುವುದು ನಿಜ. ಈ ಕೊರತೆಯನ್ನು ನೀಗಿಸಲು ಹೆಚ್ಚು ಜನರು ಮುಂದೆ ಬರಬೇಕಿದೆ.

ಮಶ್‌ಕೂರ್ ಖಲೀಲ್: ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಮುಸ್ಲಿಂ ಸದ್ದುಗಳ ಕೊರತೆಯಿಂದ ಉಂಟಾದ ಶೂನ್ಯತೆಯನ್ನು ತುಂಬಲು ಅಜ್‌ಮಲ್‌ ಖಾನ್‌ ಕವಿತೆಗಳು ಸಹಾಯಕವಾದೀತು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ‌ ಸಿ ಚಂದ್ರಮೋಹನ್.‌ ಮಾಪಿಳ ವರ್ಸಸ್‌ ಕೃತಿಯ ಬ್ಲರ್ಬ್‌ ನಲ್ಲಿ ಹೀಗಂದಿರುವ ಅವರು ಕವಿತೆಗಳು ವಿವಿಧ ಧ್ವನಿಗಳನ್ನು ಹೊರಡಿಸುವ ನವಯುಗವನ್ನು ಪ್ರಸ್ತುತ ಕಾವ್ಯ ಸಂಕಲನ ಯಶಸ್ವಿಯಾಗಿ ಪ್ರತಿನಿಧಿಸುತ್ತಿದೆಯೆಂದು ಅಭಿಪ್ರಾಯಿಸಿದ್ದಾರೆ. ಮಾಪಿಳ ಜೀವನವನ್ನು ಅಭಿವ್ಯಕ್ತಿಸುವ ಕಾವ್ಯವೊಂದು ಭಾರತದ ಒಟ್ಟು ಜನಸಂಖ್ಯೆಯ ಅತ್ಯಂತ ಸಣ್ಣ ಗುಂಪು ಮಾತ್ರ ಕೈಯಾಡಿಸುತ್ತಿದ್ದ ಭಾರತೀಯ ಇಂಗ್ಲಿಷ್‌ ಕಾವ್ಯ ಸಾಹಿತ್ಯ ಕ್ಷೇತ್ರಕ್ಕೆ ಸಾಗಿ ಬಂದಿದೆ. ಇಂಗ್ಲಿಷ್‌ ಕಾವ್ಯ ಸಾಹಿತ್ಯ ಮತ್ತು ಮಲಬಾರಿನ ಮುಸ್ಲಿಮರ ಸಾಂಸ್ಕೃತಿಕ ಬದುಕಿನಲ್ಲಿ ಏಕಕಾಲದಲ್ಲಿ ಘಟಿಸುತ್ತಿರುವ ಹೊಸ ಪಲ್ಲಟಗಳ ಕುರಿತು ತಮ್ಮ ಕವಿತೆಗಳು ಯಾವ ನೆಲೆಯಲ್ಲಿ ಪ್ರತಿಪಾದಿಸುತ್ತಿದೆ?

ಅಜ್ ಮಲ್ ಖಾನ್: ಭಾರತೀಯ ಇಂಗ್ಲಿಷ್‌ ಸಾಹಿತ್ಯ ಒಂದು ಕಾಲದಲ್ಲಿ ಮುಂಬೈ, ಕಲ್ಕತ್ತಾ, ದೆಹಲಿ, ಬೆಂಗಳೂರಿನಂತಹ ನಗರದಲ್ಲಿ ವಾಸ್ತವ್ಯ ಮಾಡುವ ಸವರ್ಣೀಯರಿಗೆ ಮಾತ್ರ ಮೀಸಲಾಗಿತ್ತು. ನಗರ ಕೇಂದ್ರಿತವಾದ ರೀತಿಯಲ್ಲಿ ಜಾತಿ ವರ್ಗ ವಿಭಜನೆಗಳಿಗೆ ವಿಧೇಯವಾಗಿ ಮುಂದುವರಿಯುತ್ತಿದ್ದ ಬಾರತೀಯ ಇಂಗ್ಲಿಷ್‌ ಸಾಹಿತ್ಯ ಕ್ಷೇತ್ರ ಹತ್ತು ವರ್ಷಗಳಿಂದೀಚೆಗೆ ಪ್ರಜಾಸತ್ತಾತ್ಮಕ ಹಾದಿಗೆ ಕಾಲಿಟ್ಟಂತೆ ಭಾಸವಾಗುತ್ತಿದೆ. ಜಾರ್ಖಂಡಿನ ಸಾಂತಾಲ್‌ ಪರ್ಗಾನದ ಪಾಂಗೂರಿನಲ್ಲಿ ಕೂತು ಬರೆಯುವ ಹಸ್ಸ ಝುವಾನ್‌ ಶೇಖರ್‌ ಎಂಬ ಆದಿವಾಸಿ ಕವಿಗೆ ಇಂದು ಇಂಗ್ಲಿಷ್‌ ಸಾಹಿತ್ಯದಲ್ಲಿ ಖ್ಯಾತನಾಮ ಎನಿಸಿಕೊಳ್ಳಲು ಸಾಧ್ಯವಾಗಿದೆ. ಕೇರಳದ ಚಂದ್ರಮೋಹನ್‌ ಸತ್ಯಾನಂದ ದಲಿತ ಕವಿಯಾಗಿ ಮೂಡಿ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಈ ರೀತಿ ಮುನ್ನೆಲೆಗೆ ಬಂದವರಿದ್ದಾರೆ. ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಘಟಿಸುತ್ತಿರುವ ಸದ್ರಿ ಪರಿವರ್ತನೆಯ ಕಾರಣದಿಂದಲೇ ಇರಬೇಕು ಮಾಪಿಳ ಕವಿ ಎಂಬ ನೆಲೆಗಟ್ಟಿನಲ್ಲಿ ನನ್ನ ಬರಹವೂ ಸ್ವೀಕೃತವಾಗುತ್ತಿದೆ. ಭಾರತೀಯ ಇಂಗ್ಲಿಷ್‌ ಸಾಹಿತ್ಯದ ವಸ್ತುಗಳು ದಲಿತ, ಮುಸ್ಲಿಂ, ಆದಿವಾಸಿ ಬದುಕಿನ ತಲ್ಲಣಗಳ ಕಥನ ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲೂ ಒಂದು ಬದಲಾವಣೆ ನಾವು ಕಾಣುತ್ತಿದ್ದೇವೆ.
ಭಾರತೀಯ ಇಂಗ್ಲಿಷ್‌ ಕಾವ್ಯ ಕ್ಷೇತ್ರದಲ್ಲಿನ ಈ ಪಲ್ಲಟಗಳು ಪ್ರಾಯಶಃ ಭಾರತದ ಹೊರಗಿನ ಅದರಲ್ಲೂ ವಿಶೇಷವಾಗಿ ಅಮೇರಿಕನ್‌ ಕವಿತೆಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ಸ್ಫೂರ್ತಿಗೊಂಡಿದೆ ಎಂದು ತೋರುತ್ತದೆ. ಅಮೇರಿಕಾ ಮತ್ತು ಯುಕೆಯ ಕಡೆಗೆ ವಾಸ ಬದಲಾಯಿಸಿದ ವಲಸಿಗ ಸಮುದಾಯದ ಎರಡನೆಯ ಮತ್ತು ಮೂರನೆಯ ತಲೆಮಾರು ತಾವು ಅನುಭವಿಸುತ್ತಿರುವ ಅನ್ಯತಾಭಾವನೆ ಹಾಗೂ ತಾತ್ಸಾರವನ್ನು ಧ್ವನಿಪೂರ್ಣವಾಗಿ ಬಹಿರಂಗ ಮಾಡಲೋಸುಗ ಬರೆದ ಕೃತಿಗಳು ಇಂದು ಇಂಗ್ಲಿಷ್‌ ಸಾಹಿತ್ಯದ ಪ್ರಧಾನ ಭಾಗವಾಗಿ ಮಾರ್ಪಡುತ್ತಿದೆ. ಈ ಕಾರಣದಿಂದಲೇ ಇರಬೇಕು ಭಾರತೀಯ ಸಾಹಿತ್ಯದಲ್ಲಿ ತತ್ಸಮಾನ ಬೆಳವಣಿಗೆ ಉಂಟಾಗುತ್ತಿರುವುದು. ಈ ಬದಲಾವಣೆ ಮುಸ್ಲಿಮರ ಅಭಾವದಿಂದ ಸದ್ಯ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಉಂಟಾಗಿರುವ ಗುರುತಿನ ಬಿಕ್ಕಟ್ಟನ್ನು ಕೂಡಾ ಪರಿಹರಿಸಲು ಶಕ್ತವಾಗಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ವ್ಯಾಪಕವಾಗಿದ್ದ ಇಸ್ಲಾಮೋಫೋಬಿಯಾಗೆ ಸೆಡ್ಡು ಹೊಡೆಯಲು ಮುಸ್ಲಿಂ ಸಿನಿಮಾ ಪ್ರಾತಿನಿಧ್ಯದ ವರ್ಧನೆಯಿಂದ ಸಾಧ್ಯವಾಗಿದೆ ಎನ್ನವುದು ಒಂದು ಸತ್ಯ. ಅಂತಹಾ ಒಂದು ಪಲ್ಲಟ ಭಾರತೀಯ ಇಂಗ್ಲಿಷ್‌ ಸಾಹಿತ್ಯ ರಂಗದಲ್ಲೂ ನಡೆಯಬೇಕಿದೆ.
ಕೇರಳೀಯ ಮುಸಲ್ಮಾನರು ಸಾಂಸ್ಕೃತಿಕ ರಂಗದಲ್ಲಿ ಹಲವಾರು ಮುನ್ನಡೆಗಳನ್ನು ಸಾಧಿಸಿದ್ದಾರೆ. ಅದೇ ವೇಳೆ ಅವರ ಕೊಡುಗೆಗಳೇನಿದ್ದರೂ ಅರಬಿ-ಮಲಯಾಳಂ, ಅರಬಿ, ಮಲಯಾಳಂ ಭಾಷೆಗಳಾಚೆಗೆ ಹೋಗುತ್ತಿಲ್ಲ ಎನ್ನುವುದು ನಿಜ. ಕೇರಳದಿಂದ ಮೂಡಿ ಬಂದ ಆರುಂಧತಿ ರಾಯ್‌ ರಂತಹ ಒಂದು ವ್ಯಕ್ತಿ ಮುಸ್ಲಿಂ ವಿಭಾಗದಿಂದ ಮೂಡಿ ಬರುತ್ತಿಲ್ಲ. “ನಾನು ಓದಿದ ಕಥೆಗಳಲ್ಲಿ ಮುಸ್ಲಿಂ ಪಾತ್ರಗಳು ಪ್ರತ್ಯಕ್ಷವಾಗುತ್ತಿದ್ದದ್ದು ಕಳ್ಳಕಾಕರ, ಗೂಂಡಾಗಳ ರೂಪದಲ್ಲಾಗಿತ್ತು. ಆದರೆ, ಅಂಥಾ ವ್ಯಕ್ತಿಗಳನ್ನು ನಾನೆಲ್ಲೂ ನೋಡಿಲ್ಲ. ಈ ಕಾರಣದಿಂದಲೇ ನಾನು ಬರವಣಿಗೆ ಆರಂಭಿಸಿದೆ” ಎಂದು ವೈಕಂ ಬಷೀರ್‌ ಒಂದೆಡೆ ಹೇಳಿದ್ದಾರೆ. ಅನೀಸ್‌ ಸಲೀಂ ಬರೆದ “ದ ಸ್ಮಾಲ್‌ ಟೌನ್‌ ಸೀ” ಈ ನಿಟ್ಟಿನಲ್ಲಿ ಗಮನಾರ್ಹ. ಅವರು ವಾಪ್ಪ, ವಲಿಯುಮ್ಮ, ವಾಪ್ಪುಮ್ಮ ಮುಂತಾದ ಮಾಪಿಳ ಮುಸ್ಲಿಮರ ಕಡೆಯಿಂದ ಕೇಳಿ ಬರುವ ಪದಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇಂತಹ ಕವಿತೆಗಳ ಗುಂಪಿನಲ್ಲೆ ಇರಬೇಕು ನನ್ನ ಕವಿತೆಗಳಿಗೆ ಕೂಡಾ ಈ ಅನುಮೋದನೆ ದೊರಕಿದ್ದು.

Mashkoor Khaleel

ಮಶ್ ಕೂರ್ ಖಲೀಲ್: ಇಂಗ್ಲಿಷ್‌ ಸಾಹಿತ್ಯದಲ್ಲಿ ಮಾಪಿಳ ಮುಸ್ಲಿಂ ಕಥನಗಳ ಉಪಸ್ಥಿತಿಯನ್ನು ಖಚಿತಪಡಿಸಿದ್ದೇ ಅಲ್ಲದೆ ಮಾಪಿಳಗಳ ವಿಶೇಷ ಸಾಹಿತ್ಯ ಅಭಿವ್ಯಕ್ತಿಗಳಾದ ಮಾಲೆಪಾಟ್ಟುಗಳು ಕೂಡಾ ಈ ಕೃತಿಯ ಮೂಲಕ ವಿಸ್ತೃತ ಓದುಗ ವೃಂದಕ್ಕೆ ನಿಮ್ಮ ಸಂಕಲನ ತಲುಪಿಸಿ ಕೊಡುತ್ತಿದೆ. ಅದು ಕೂಡಾ ಸಮಕಾಲೀನ ರಾಜಕೀಯ ಪರಿಸ್ಥಿತಿಯ ತಲೆ ನೇವರಿಸುವ ಕ್ಷಮಾಪಣೆಯ ಸ್ವರದಲ್ಲಲ್ಲ ಎಂಬುದು ಗಮನಾರ್ಹ. ತಮ್ಮ ಸಂಕಲನದ ಕವಿತೆಗಳ ಮೇಲೆ ಪ್ರಭಾವ ಬೀರಿರುವ ಅಂಶಗಳು ಯಾವೆಲ್ಲಾ?

ಅಜ್ ಮಲ್ ಖಾನ್: ಸಂಕಲನದಲ್ಲಿನ ಮಿಕ್ಕ ಕವಿತೆಗಳು ಮಾಪಿಳ ಇತಿಹಾಸದ ಸುತ್ತಮುತ್ತ ಗಿರಕಿ ಹೊಡೆಯುತ್ತದೆ. ವಾರಿಯಂ ಕುನ್ನತ್‌ ರವರ ಜೀವನ ಮಾಲೆಪ್ಪಾಟ್ಟಿನ ರೂಪದಲ್ಲಿ ಕವಿತೆಯಾಗಿ ಮೂಡಿ ಬಂದಿದೆ. ವಾರಿಯಂ ಕುನ್ನತ್‌ ರವರ ಚರಿತ್ರೆ ವಿವಾದಕ್ಕೀಡಾಗಿರುವ ಕಾಲಸಂಧಿಯಬಲ್ಲಿ ಇಂತಹ ಕವಿತೆ ಬರುತ್ತಿದೆ ಎನ್ನುವುದನ್ನು ಗಮನಿಸಬೇಕು. ವಾರಿಯಂ ಕುನ್ನತ್‌ ರವರು ನಡೆಸಿದ ವಸಾಹತೀಕರಣ ವಿರುದ್ಧ ಹೋರಾಟಕ್ಕೆ ಜಾಗತಿಕ ಇತಿಹಾಸದಲ್ಲಿ ಸಮಾನ ಉದಾಹರಣೆಗಳೇ ಇಲ್ಲ. ಆ ಚರಿತ್ರೆಯನ್ನು ಮಾಪಿಳ ಸಾಹಿತ್ಯ, ಇತಿಹಾಸ ಅಥವಾ ರಾಜಕೀಯವು ಸಮರ್ಪಕವಾದ ರೀತಿಯಲ್ಲಿ ಗುರುತಿಸಿಲ್ಲ ಎಂಬುದು ನಿಜ. ಆ ಶೂನ್ಯತೆಯನ್ನು ತುಂಬುವ ಇರಾದೆಯಿಂದ ವಾರಿಯಂ ಕುನ್ನತ್‌ ರನ್ನು ನನ್ನ ಕವಿತೆಯಲ್ಲಿ ವಸ್ತುವಾಗಿಸಿದ್ದೇನೆ.
ಮಾಪಿಳ ರಾಮಾಯಣ, ಪೌರತ್ವ ಮಸೂದೆಯ ತರುವಾಯ ಉಂಟಾದ ವಿಶೇಷ ಅವಸ್ಥೆ, ವಾರಿಯಂ ಕುನ್ನತ್‌ ಚರಿತ್ರೆ, “The first step in liquidating a people is to erase its memory. Destroy its books, its culture, its history. Then have someone write new books, manufacture a new culture, invent a new history. Before long the nation will begin to forget what it is and what it was” ಎಂಬ ಮಿಲನ್‌ ಕಂದೇರ ರವರ ಸುಪ್ರಸಿದ್ಧ ಸಾಲುಗಳ ಜಾಡು ಹಿಡಿದು ಮಾಪಿಳ ಚರಿತ್ರೆಯ ಬಗೆಗಿನ ಕವಿತೆಗಳು ಈ ಸಂಕಲನದ ಮುಖ್ಯ ಭಾಗ. ಅದರೊಂದಿಗೆ ‘Write Me Down’ ಕವಿತೆ, ಬಾಬರಿ ಮಸೀದಿಯ ಕುರಿತು ಬರೆದ “ಅದು ಬರಿ ಮಸೀದಿಯಲ್ಲವೆ, ಬಿಟ್ಟು ಬಿಡಿ” ಎಂಬ ಪುಕ್ಕಟೆ ಸಲಹೆಗಳನ್ನು ಸಂಬೋಧಿಸುವ ಕವಿತೆ, ಹಲವು ರೀತಿಯಲ್ಲಿ ಅವಕಾಶ ವಂಚಿತರಾಗಿ ಮರಳಿ ಮನೆಗೆ ಹೋಗಬೇಕಾಗಿ ಬರುವ ಅದರಲ್ಲೂ ಕೆಲವೊಮ್ಮೆ ಜೀವನವನ್ನೇ ಮರಳಿಸಬೇಕಾಗಿ ಬರುವ ದಲಿತ, ಮುಸ್ಲಿಂ, ಆದಿವಾಸಿ ವಿದ್ಯಾರ್ಥಿಗಳ ದುಸ್ಥಿತಿಯ ಬಗೆಗಿನ ‘On The Way Back’ ಎಂಬ ಕವಿತೆಯೂ ಈ ಪುಸ್ತಕದಲ್ಲಿದೆ. ಜೇಮ್ಸ್‌ ಬಾಲ್ಡ್ ವಿನ್‌ ರ “ನಾನು ನಿಮ್ಮ ನೀಗ್ರೋ ಅಲ್ಲ” ಎಂಬ ಘೋಷಣೆಯಿಂದ ಪ್ರಚೋದಿತವಾಗಿ ಭಾರತದಲ್ಲಿ ನಡೆದ ಕೋಮು ದಳ್ಳುರಿಗಳ ಕುರಿತು ಬರೆದ ‘Not your mia’ ಕವಿತೆ ಕೂಡಾ ಇದರಲ್ಲಿದೆ. “Where should we go after the last frontiers? Where should the birds fly after the last sky ? Where should the plants sleep after the last breath of air?” ಮಹ್ಮೂದ್‌ ದರ್ವೇಶ್‌ ಒಂದೆಡೆ ಈ ರೀತಿಯಾಗಿ ಪ್ರಶ್ನಿಸಿದ್ದಾರೆ. ಸಿಎಎ ವಿರುದ್ಧ ಹೋರಾಟ ನಡೆಯುತ್ತಿದ್ದ ದಿನಗಳಲ್ಲಿ ಒಮ್ಮೆ, ʼನಮ್ಮ ಹೆಸರು ಪಟ್ಟಿಯಲ್ಲಿ ಬರದಿದ್ದಲ್ಲಿ ನಾವು ಹೋಗುವುದಾದರೂ ಎಲ್ಲಿಗೆ?ʼ ಎಂದು ಪ್ರಶ್ನಿಸಿದ್ದರು ನನ್ನ ಉಮ್ಮಾ. ಆ ಪ್ರಶ್ನೆಯ ತರುವಾಯ ನಡೆದ ಸಂಭಾಷಣೆ ‘Where should we go if our names are not in the list’ ಎಂಬ ಕವಿತೆಯಾಗಿ ಮಾರ್ಪಟ್ಟಿತು. ʼಪೋರ್ಟ್ರೈಟ್‌ ಆಫ್‌ ದ ಬಸ್ಟಾರ್ಡ್‌ʼ ಎಂಬ ಕವಿತೆಯಲ್ಲಿ ಮಾಪಿಳ ಮುಸ್ಲಿಮರ ಬೇರುಗಳ ಬಗ್ಗೆ ಮಾತಾಡಿದ್ದೇನೆ. ಬಿರಿಯಾಣಿ, ರಿಜೆಕ್ಟೆಡ್‌ ಪೋಯಂ, ಗುಲ್ಬರ್ಗ್‌ ಸೊಸೈಟಿ, ಪೀಸ್‌ ಬಿ ಅಪಾನ್‌ ಯೂ ಇನ್‌ ಡೆಲ್ಲಿ ಮೆಟ್ರೊ, ಮೈ ರೈಡ್‌ ಟು ಬಾಂದ್ರ ಕವಿತೆಗಳು ಭಾರತೀಯ ಮುಸಲ್ಮಾನರು ಎದುರಿಸುತ್ತಿರುವ ಅಭದ್ರತೆಯನ್ನು ಚಿತ್ರಿಸುತ್ತದೆ.

ಮಶ್ ಕೂರ್ ಖಲೀಲ್: ವಾರಿಯಂ ಕುನ್ನತ್‌ ಕುಂಞಹ್ಮದ್‌ ಹಾಜಿಯ ಕುರಿತು ಬರೆದ ಕವಿತೆಯಲ್ಲಿ ʼಮಾಪಿಳ ದಂಗೆʼ ಮತ್ತು ʼವ್ಯಾಗನ್ ಟ್ರಾಜೆಡಿʼ ಎಂಬ ಪ್ರಯೋಗಗಳ ಬದಲು ಅನುಕ್ರಮವಾಗಿ ʼಆಂಗ್ಲೋ-ಮಾಪಿಳ ಯುದ್ಧʼ ಮತ್ತು ʼವ್ಯಾಗನ್ ನರಹತ್ಯೆʼ ಎಂದು ಬಳಸಿದ್ದೀರಿ. ಇಂಥಾ ʼತಿದ್ದುಪಡಿʼಗಳಿಗೆ ಇರುವ ಪ್ರಾಧಾನ್ಯವೇನು?

ಅಜ್ ಮಲ್ ಖಾನ್: ಮಾಪಿಳ ದಂಗೆ ಎನ್ನುವುದು ಬ್ರಿಟಿಷ್‌ ದಾಖಲೆಗಳಲ್ಲಿ ಬಳಸಲಾದ ಹೆಸರು. ಮಲಬಾರಿನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ಇಟ್ಟ ಹೆಸರಾಗಿದೆ ʼಮಲಬಾರ್/ಮೋಪ್ಲ ರೆಬೆಲಿಯನ್‌ʼ ಎನ್ನುವುದು. ನಾವು ಈವತ್ತಿಗೂ ಅದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯದೆ ದಂಗೆ ಎಂದೇ ಕರೆಯುತ್ತಿದ್ದೇವೆ. ಆ ಸಂಗ್ರಾಮದಲ್ಲಿ ಮುಸ್ಲಿಮರು, ಹಿಂದುಗಳು, ದಲಿತರು ಎಲ್ಲರೂ ಭಾಗವಹಿಸಿದ್ದರು. ಆ ಕ್ರಾಂತಿಯನ್ನು ಮಾಪಿಳಗಳಿಗೆ ಮಾತ್ರ ಸೀಮಿತಗೊಳಿಸಿ ‘ಮಾಪಿಳ ದಂಗೆ’ ಎಂದು ಕರೆಯುವುದರಲ್ಲೇ ಸಮಸ್ಯೆಯಿದೆ ಎನ್ನುವುದು ನನ್ನ ಅನಿಸಿಕೆ. ಮಾಪಿಳಗಳನ್ನು ʼಮತಾಂಧರು, ದಂಗೆಕೋರರುʼ ಮೊದಲಾದ ಆರೋಪಗಳಿಂದ ಮುಕ್ತಿ ಪಡೆಯಲು ಮಾಡಿದ ಒಂದು ಪ್ರಯತ್ನವಿದು. ಹಾಗಾಗಿಯೇ ʼಮಾಪಿಳ‌ ದಂಗೆʼ ಎಂಬ ಪದದ ಬದಲು ʼಮಲಬಾರ್‌ ಕ್ರಾಂತಿʼ ಎಂದು ಕರೆಯುವುದು ನನಗಿಷ್ಟ. ಅದೇ ರೀತಿ ವ್ಯಾಗನ್ ಟ್ರ್ಯಾಜಡಿ ಅನ್ನುವುದು ಕೇವಲ ಒಂದು ʼಟ್ರ್ಯಾಜಡಿʼಯಾಗಿರಲಿಲ್ಲ, ಬದಲಾಗಿ ಅದೊಂದು ಸಾಮೂಹಿಕ ನರಹತ್ಯೆಯಾಗಿತ್ತು. ಇತಿಹಾಸದ ಪುನರಾವಲೋಕನ ವನ್ನು ಉದ್ದೇಶಿಸಿ ಈ ಪದಗಳನ್ನು ನಾನು ಬಳಸಿದ್ದೇನೆ. ಈ ರಾಷ್ಟ್ರದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿರುವ ಒಂದು ಸಮುದಾಯವನ್ನು ಬ್ರಿಟಿಷ್‌ ದಾಖಲೆಗಳಲ್ಲಿ ಕೂಡಿ ಹಾಕುವ ಪ್ರವೃತ್ತಿಯಿಂದ ಹೊರಬರಲು ಮಾಡಿದ ಪ್ರಯತ್ನವಿದು.

ಮಶ್ ಕೂರ್ ಖಲೀಲ್: ಸಮಕಾಲೀನ ಭಾರತೀಯ ಸಂದರ್ಭದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಭಾಷಾ ಸಮಸ್ಯೆಯೇ ಅಜ್‌ಮಲ್‌ ಕವಿತೆಗಳಿಗೂ ಎಡತಾಕಿದೆ ಎಂದು ನನಗನಿಸುತ್ತಿದೆ. ಅಮೀರ್‌ ಅಝೀಝ್‌ ರವರ ʼಸಬ್‌ ಯಾದ್‌ ರಖಾ ಜಾಯೇಗಾʼ ಎಂಬ ಕವಿತೆಯಲ್ಲಿ ಮತ್ತು ಅಜ್‌ಮಲ್‌ ರವರ ಬಹುತೇಕ ಕವಿತೆಗಳಲ್ಲಿ ವಿಶೇಷತಃ ʼWrite me down’ ಕವಿತೆಯಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಅಂದರೆ ಜಾತ್ಯತೀತ ರಾಜಕಾರಣದ ಅವನತಿಯೊಂದಿಗೆ ಭಾರತದಲ್ಲಿನ ವೈವಿಧ್ಯತೆ ತುಂಬಿದ ಸಮುದಾಯಗಳು ಪರಸ್ಪರ ಸಂಭಾಷಣೆ ಮಾಡಲು, ತಮ್ಮ ವಾದಗಳನ್ನು ಹಾಗೂ ಹಕ್ಕುಗಳನ್ನು ಮುಂದಿಡಲು ಬಳಸುತ್ತಿದ್ದ ಭಾಷೆಯೂ ನಶಿಸುತ್ತಿದೆ ಎನಿಸುತ್ತದೆ. ಈ ಭಾಷಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತುಕೊಂಡು ಒಂದು ಸಮುದಾಯ ಎಂಬ ನೆಲೆಗಟ್ಟಿನಲ್ಲಿ ಆಧಿಪತ್ಯದೊಂದಿಗೆ ನೇರವಾಗಿ ಮಾತಾಡಲು, ಒಂದು ಹೊಸ ಸಂವೇದನಾ ಮಾರ್ಗವನ್ನು ಬೆಳೆಸಲು ಮುಸಲ್ಮಾನರು ಕವಿತೆಯ ಮಾರ್ಗವನ್ನು ಬಳಸುತ್ತಿದ್ದಾರೆಯೇ?

ಅಜ್ ಮಲ್ ಖಾನ್: ನಾವಿಂದು ಎದುರಿಸುತ್ತಿರುವ ಮುಸ್ಲಿಂ ಸಮಸ್ಯೆಗಳು ಈ ಸಂಕಲನದ ಎಲ್ಲಾ ಕವಿತೆಗಳಲ್ಲಿ ಹಾದು ಹೋಗುವ ಸಮಾನತೆಯ ಅಂಶ. ಮುಸ್ಲಿಮರ ಆಳವಾದ ರಾಷ್ಟ್ರ ಬದ್ಧತೆಯ ಬಗ್ಗೆ ಸಂಶಯವನ್ನು ಎತ್ತುತ್ತಿರುವುದು ಭಾರತ ಎಂಬ ಸಂಕಲ್ಪದೊಂದಿಗೆ ಆಳವಾದ ಸಂಬಂಧವಿಲ್ಲದ, ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಯಾವುದೇ ನಂಬಿಕೆಯಿಲ್ಲದ ಸಂಘ ಪರಿವಾರದ ರಾಜಕಾರಣವಲ್ಲವೇ? ಈ ಸಂದರ್ಭದಲ್ಲಿ ಮುಸ್ಲಿಮರು ಬಳಸುತ್ತಿರುವ ಸಶಕ್ತ ಭಾಷಾಪರವಾದ ಮಾರ್ಗವಾಗಿದೆ ಕವಿತೆಗಳು. ಇಂತಹ ಪ್ರಯತ್ನಗಳು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅಮೀರ್‌ ಅಝೀಝ್ ರವರ ಹಾದಿ ಹಿಡಿದು ಹಿಂದುಸ್ಥಾನಿ ಮುಸಲ್ಮಾನ್‌ ಎಂಬ ಕವಿತೆ ಬರೆದ ಹುಸೈನ್‌ ಹೈದರಿ, ಅಸ್ಸಾಮಿನ ಮಿಯಾ ಕವಿಗಳು ಈ ಕ್ಷೇತ್ರದಲ್ಲಿ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ದಲಿತ ದೌರ್ಜನ್ಯ ನಡೆದಾಗ ಅದರ ವಿರುದ್ಧ ಪ್ರಮುಖವಾಗಿ ದನಿಯೆತ್ತಿದವರು ದಲಿತ ಕವಿಗಳು. ನಾ ದೇವ್‌ ದಾಸಾಲ್‌ ರವರ ಗೋಲ್‌ಪಿಟ್ಟ ಎಂಬ ಕಾವ್ಯ ಸಂಕಲನದ ಪ್ರಧಾನ ಕವಿತೆಗಳಲ್ಲೊಂದು ‘Man, You Should Explode’. ಅಂತಹ ಶಕ್ತಿಯುತ ಬಂಡಾಯ ಕಾವ್ಯಗಳ ಜಾಡು ಹಿಡಿದು ಹೊಸ ಕಾಲದ ತಲ್ಲಣಗಳನ್ನು ಎದುರಿಸುವ ಕವಿತೆಗಳು ಹಾಗೂ ವಿಶೇಷವಾದ ಭಾಷೆ ರೂಪು ತಳೆದಿದೆ ಎನ್ನಬಹುದು. ಸಿಎಎ ಬರುವ ಮೊದಲೇ ಜನಸಂಖ್ಯಾ ಅನುಪಾತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದಾರೆ ಅರ್ಥಾತ್ ಅಭದ್ರತೆಯ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಆದರೆ ಬದಲಾದ ರಾಜಕೀಯ, ಸಾಮಾಜಿಕ ಸನ್ನಿವೇಶದಲ್ಲಿ ಸಂವಾದ ಸಂಭಾಷಣೆಗಳು ಅಸಾಧ್ಯವೆನಿಸಿದೆ ಮತ್ತು ನಮ್ಮ ಅಸ್ತಿತ್ವವೇ ಪ್ರಶ್ನಾರ್ಥಕವಾಗಿದೆ. ತಮ್ಮ ಬೇರುಗಳನ್ನು ಮತ್ತು ಬದ್ಧತೆಗಳನ್ನು ಕಾನೂನಾತ್ಮಕವಾಗಿ ಸಾಬೀತು ಮಾಡಬೇಕಾದ ಜರೂರತ್ತುನ್ನು ಅವರ ಮೇಲೆ ಹೇರಲಾಗುತ್ತಿದೆ. ಪ್ರಸ್ತುತ ಅಭದ್ರತಾ ಭಾವನೆಯ ಸುತ್ತಮುತ್ತ ಈ ಕಾವ್ಯ ಸಂಕಲನವನ್ನು ಹೆಣೆಯಲಾಗಿದೆ. ಕೇರಳೀಯ ಮುಸಲ್ಮಾನರಿಗೆ ತಮ್ಮ ನಾಡಿನೊಂದಿಗೆ ಇರುವ ಚಾರಿತ್ರಿಕ ಕೊಂಡಿ ಇಂಥಾ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡಲಿದೆ.

ಮಶ್ ಕೂರ್ ಖಲೀಲ್: ಮಲಬಾರಿನ ಮುಸಲ್ಮಾನರ ಬೇರುಗಳನ್ನು ಹುಡುಕಿಕೊಂಡು ನೀವು ಮಾಡುತ್ತಿರುವ ಪ್ರಯಾಣ ಏಕಕಾಲದಲ್ಲಿ ಮುಸ್ಲಿಮರ ಚರಿತ್ರೆಯನ್ನು ಮತ್ತು ವರ್ತಮಾನವನ್ನು ಸ್ಪರ್ಶಿಸುತ್ತಿದೆ. ಪೋರ್ಟ್ರೈಟ್‌ ಓಫ್‌ ಬಸ್ಟಾರ್ಡ್‌ ನಲ್ಲಿ ಮಾಪಿಳಗಳ ಪ್ರಾದೇಶಿಕ ಬೇರುಗಳು ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳು ಚರ್ಚೆಗೆ ಗ್ರಾಸವಾಗಿದೆ. ಮಾಪಿಳಗಳ ಅಸ್ಮಿತೆಯ ರೂಪೀಕರಣದಲ್ಲಿ ಮಲಬಾರಿನ ಮಣ್ಣು ಮತ್ತು ಅರೇಬಿಯಾದ ಮರಳು ಏಕಕಾಲದಲ್ಲಿ ಪ್ರಧಾನವೆನಿಸುವುದು ಹೇಗೆ?

ಅಜ್ ಮಲ್ ಖಾನ್: ಮಣ್ಣಿನ ವಾಸನೆಯೇ ಮಾಪಿಳಗಳ ಅಸ್ಮಿತೆಯನ್ನು ನಿರ್ಧರಿಸಿದೆ. ನಮ್ಮ ಪೂರ್ವಜರು ಬದುಕು ಕಟ್ಟಿಕೊಂಡದ್ದು ಮಣ್ಣಿನಲ್ಲಿ ಕೆಲಸ ಮಾಡಿಕೊಂಡಾಗಿತ್ತು. ತರುವಾಯ ನಾವು ಬದುಕನ್ನು ಹುಡುಕಿಕೊಂಡು ಹೊರಟದ್ದು ಕೊಲ್ಲಿ ರಾಷ್ಟ್ರಕ್ಕೆ. ಈ ಚರಿತ್ರೆಗೆ ನಮ್ಮಲ್ಲಿ ಸಮಾನ ಪ್ರಾಧಾನ್ಯತೆ ಇರುವುದರಿಂದ ಕವಿತೆಯಲ್ಲಿ ಎರಡು ಚಿತ್ರಣಗಳೂ ಮೂಡಿಬಂದಿದೆ. ಮಾಪಿಳ ಮುಸಲ್ಮಾನರ ಚರಿತ್ರಾನ್ವೇಷಣೆಯ ಸಂದರ್ಭ ಗಮನಕೊಡಬೇಕಾದ ಒಂದು ಪ್ರಧಾನ ವಿಚಾರ ಜಾತಿಗೆ ಸಂಬಂಧಿಸಿದ್ದು. ಮಾಪಿಳ ಮುಸ್ಲಿಮರು ಸಾಮಾನ್ಯವಾಗಿ ಕೀಳುಜಾತಿಯಿಂದ ಮತಾಂತರ ಗೊಂಡು ಬಂದವರಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ನನ್ನ ಪೂರ್ವಜರು ಇಸ್ಲಾಮಿಗೆ ಬಂದದ್ದು ಮನುವಿಗೆ ಕಪಾಳಮೋಕ್ಷ ಮಾಡಿಕೊಂಡಾಗಿತ್ತು ಎಂದು ‘write me down’ ಕವಿತೆಯಲ್ಲಿ ಬರುತ್ತದೆ. ಜಾತಿಯ ಹಿನ್ನೆಲೆಯ ಬಗ್ಗೆ ಇಂಥಾ ಬಹಿರಂಗ ಘೋಷಣೆಗಳು ಮುಸ್ಲಿಮರ ಕಡೆಯಿಂದ ಅಷ್ಟೇನೂ ಮೂಡಿಬಂದಿಲ್ಲ. ಮುಸ್ಲಿಂ ಪಾತಳಿಯಲ್ಲಿ ನಿಂತುಕೊಂಡು ಕೀಳು ಜಾತಿಯ ಹಿನ್ನಲೆಯಲ್ಲಿ ಗುರುತಿಸುವ ಪ್ರಥಮ ಸಾಹಿತ್ಯ ತೆಲುಗು ಬಾಷೆಯಲ್ಲಿ ಬಂದ ಸ್ಕೈ ಬಾಬರ ಕಿರುಗತೆಗಳು ಇರಬಹುದು ಎಂದು ನನಗನಿಸುತ್ತಿದೆ. ಆದರೆ, ಮುಸ್ಲಿಂ ಇಂಗ್ಲಿಷ್‌ ಕವಿತೆಗಳಲ್ಲಿ ಅಂಥಾ ಪ್ರಯೋಗಗಳು ಈ ಹಿಂದೆ ಉಂಟಾಗಿಲ್ಲ.
ಅಸ್ಸಾಮಿನಲ್ಲಿ ರಚಿತವಾದ ಮಿಯಾ ಕವಿತೆಗಳಲ್ಲಿ ಬಾಂಗ್ಲಾದೇಶದಿಂದ ನಡೆಸಿದ ವಲಸೆಯ ಅನುಭವಕ್ಕೆ ಸಂಬಂಧಿಸಿ ಜಾತಿ, ವರ್ಗಗಳು ಕಂಡುಬರುತ್ತಿದ್ದು ಆದಾಗ್ಯೂ ಅಲ್ಲಿ ಜಾತಿಯೇ ಮುಖ್ಯ ಪ್ರಮೇಯವಲ್ಲ. ಮುಂಬೈ, ದೆಹಲಿಯಂತ ನಗರ ಪ್ರದೇಶಗಳ ಮೂಲಗಳಿಂದ ಬರುವ ಇಂಗ್ಲಿಷ್‌ ಮುಸ್ಲಿಂ ಕವಿಗಳು ಇಂತಹ ವಿಷಯಗಳನ್ನು ಸ್ಪರ್ಶಿಸುವುದಿಲ್ಲ. ಜಾತಿಯ ಅನುಭವ ಅವರಿಗೆ ಉಂಟಾಗದಿರುವುದು ಈ ಪ್ರವೃತ್ತಿಗೆ ಕಾರಣ ಎಂದು ನಾನು ಭಾವಿಸುತ್ತೇನೆ. ಭಾರತದ ಜಾತಿ ವಿರುದ್ಧ ಹೋರಾಟಗಳಲ್ಲಿ ಬಾಗವಹಿಸುವ ವ್ಯಕ್ತಿ ಎಂಬ ನೆಲೆಯಲ್ಲಿ ಜಾತಿಯ ರಾಜಕೀಯವನ್ನು ಮುಸ್ಲಿಂ ಸಾಮಾಜಿಕ ಜೀವನಕ್ಕೆ ಅನ್ವಯಿಸುವ ಪ್ರಯತ್ನದ ಭಾಗವಾಗಿ ಕೂಡಾ ಜಾತಿ ನನ್ನ ಕವಿತೆಗಳಲ್ಲಿ ಸದ್ದು ಮಾಡಿದೆ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಇಸ್ಲಾಮೋಫೋಬಿಯ ಮತ್ತು ಫ್ಯಾಸಿಸಂ ವಿರುದ್ಧ ಆಕ್ರಮಣ ಮಾಡುವ ವೇಳೆ ಜಾತಿಯೂ ಮೂಡಿ ಬರುವ ಮೂಲಕ ನಮ್ಮ ಪ್ರಜ್ಞೆಗಳು ಪ್ರಬುದ್ಧವಾಗಬೇಕು ಎಂಬುದು ನನ್ನ ಗ್ರಹೀತ.

The Mappila Verses ನಲ್ಲಿ ಬಂದ ಒಂದು ಕವಿತೆ:
Where Do We Go?
Where should we go after the last frontiers?
Where should the birds fly after the last sky?
Where should the plants sleep after the last breath of air?
– Mahmoud Darwish

After the Isha Namaz
Chanting prayers sitting in her Musalla Keeping her copy of Quran aside with the Thasbeeh, she asks
Where do we go if our names are not in the list?

Where do coconut trees go
when their roots are declared illegal?
How does Hibiscus flower if you ask them
go back where they come from?
Can you ask Tapioca to go back to Brazil?
Do you ask tea and coffee to go back where they come from?
Where do Great Pied Hornbills go
when you tell monsoons are illegal to them?
Where do Mackerels and Sardines go
when you inform them, they are illegal in the water
………
Where do we go?
The sword breaks my silence, she asks again
Where?
I reminded
“For your father,
Adam was created with dirt from the surface of the earth.
You also will be returned to
the earth”
We came from soil
We go to soil, until then

We live here.

Write Me Down, I Am An Indian ಎಂಬ ಅಜ್‌ಮಲ್‌ ಖಾನ್‌ ಕವಿತೆಯನ್ನು ಪ್ರಮುಖ ಹಿಂದಿ ಚಿತ್ರ ಕಥೆಗಾರ ವರುಣ್‌ ಗ್ರೋವರ್‌ ಹಿಂದಿಗೆ ಅನುವಾದಿಸಿದ್ದು ಕಾರವಾನ್ ಎ ಮೊಹಬ್ಬತ್‌ ಅದನ್ನು ವೀಡಿಯೋ ಮಾಡಿ ಬಿಡುಗಡೆಗೊಳಿಸಿತ್ತು.

ಎಲ್ಲಿ ಹೋಗುವುದು ನಾವು ?

(ಎಲ್ಲಿ ಹೋಗಬೇಕು ನಾವು,
ಗಡಿಗಳ ಕಟ್ಟ ಕಡೆಯ ರೇಖೆಗಳ ತಲುಪಿದ ಬಳಿಕ?
ಎಲ್ಲಿ ಹಾರಬೇಕು ಹಕ್ಕಿಗಳು,
ಆಕಾಶದ ಕಟ್ಟ ಕಡೆಯ ಮುಟ್ಟಿದ ಬಳಿಕ?
ಎಲ್ಲಿ ಮಲಗಬೇಕು ಮರಗಳು
ಗಾಳಿಯ ಕೊನೆಯ ಉಸಿರು ಮುಗಿದ ಬಳಿಕ? – ಮಹ್ಮೂದ್ ದರ್ವೇಶ್)

ರಾತ್ರಿಯ ಕಡೆಯ ನಮಾಝಿನ ಬಳಿಕ,
ಜಪಮಣಿಗಳು ಕುರ್’ಆನನ್ನು ಪಕ್ಕದಲ್ಲಿಟ್ಟುಕೊಂಡು,
ಮುಸಲ್ಲಾದಲ್ಲಿ ಕುಳಿತ ಅವಳು ಕೇಳುತ್ತಾಳೆ,
ಎಲ್ಲಿ ಹೋಗಬೇಕು ನಾವು ?
ನಮ್ಮ ಹೆಸರುಗಳನೇದಾರೂ
ಪಟ್ಟಿಯಲ್ಲಿ ಇಲ್ಲದೇ ಹೋದರೆ ?

ಎಲ್ಲಿ ಹೋಗುವುದು ತೆಂಗಿನ ಮರಗಳು,
ಅವುಗಳ ಬೇರುಗಳೇ
ಅಕ್ರಮವೆಂದು ಘೋಷಿಸಲ್ಪಟ್ಟರೆ?
ಹೇಗೆ ಅರಳುವುದು ಪಾರಿಜಾತ
ನೀವು ಅವುಗಳನ್ನು ಬಂದಲ್ಲಿಗೇ
ಹಿಂತಿರುಗಿರಿ ಎಂದುಬಿಟ್ಟರೆ?

ಕೇಳಬಹುದೇ ನೀವು
ಮರಗೆಣಸನ್ನು ಮರಳಿ ಹೋಗಲು
ಬ್ರೆಝಿಲ್ಲಿನ ಕಡೆಗೆ ?
ನಿಮ್ಮ ಕಾಫಿ ಚಹಾದ ಗಿಡಗಳನ್ನೆಂದಾದರೂ
ಕೇಳಿಕೊಳ್ಳುತ್ತೀರೋ
ಬಂದಲ್ಲಿಗೇ ಹಿಂತಿರುಗಲು?

ಎಲ್ಲಿ ಹೋಗಬೇಕು ಮಂಗಟ್ಟೆ ಹಕ್ಕಿಗಳು
ನೀವು ಅವುಗಳಿಗೆ ಮುಂಗಾರನ್ನೇ
ಅಕ್ರಮವೆಂದು ಘೋಷಿಸಿದರೆ?
ಎಲ್ಲಿ ಹೋಗುಬೇಕು ಬಂಗುಡೆ ಬೂತಾಯಿಗಳು,
ಕಡಲಿನಲ್ಲಿ ನಿಮ್ಮ ವಾಸವೇ
ಅಕ್ರಮವೆಂದು ಹೇಳಿಬಿಟ್ಟರೆ ?

“ಎಲ್ಲಿ ಹೋಗುವುದು ನಾವು “?

ಅವಳ ಪ್ರಶ್ನೆಯ ಖಡ್ಗ ನನ್ನ ಮೌನವನ್ನು ಸೀಳುತ್ತಿರುವಾಗಲೇ,
ಅವಳು ಮತ್ತೆ ಮತ್ತೆ ಕೇಳುತ್ತಾಳೆ,
ಎಲ್ಲಿಗೆ? ಎಲ್ಲಿಗೆ??

ನಾನು ನೆನಪಿಸುತ್ತೇನೆ,

ಭುವಿಯ ಮೇಲಿನ ಮಣ್ಣಿನಿಂದ
ಸೃಷ್ಟಿಸಲ್ಪಟ್ಟ
ನಿನ್ನ ತಂದೆ ಆದಮರ ಬಳಿಗೆ

ನಾವು ಮಣ್ಣಿನಿಂದ ಬಂದವರು!
ನಾವು ಮಣ್ಣಿನಿಂದ ಬಂದವರು!
ಅಲ್ಲಿಗೇ ಮರಳುವೆವು.
ಅಲ್ಲಿಯವರೆಗೆ,
ನಾವಿಲ್ಲಿಯೇ ಬದುಕುವೆವು!!

ಇಂಗ್ಲೀಷ್‌ ಮೂಲ:ಅಜ್ಮಲ್ ಖಾನ್
ಭಾವಾನುವಾದ: ತಿಜೋರಿ

ಗುಜರಾತ್; ಮರೆತುಹೋದ ಇಸ್ಲಾಮಿಕ್ ಚಿತ್ರಗಳು

ಭಾರತದಲ್ಲಿನ ಇಸ್ಲಾಂ ಧರ್ಮವನ್ನು 16ನೇ ಶತಮಾನದ ಪರ್ಷಿಯನ್ ಮೊಘಲ್ ಸಾಮ್ರಾಜ್ಯದ ಉಪ-ಉತ್ಪನ್ನವೆಂದು ಅನೇಕರು ಪರಿಗಣಿಸಿದ್ದಾರೆ. ಆದರೆ ಆಗ್ರಾದಲ್ಲಿನ ತಾಜ್ ಮಹಲ್ ಮತ್ತು ದೆಹಲಿ ಜುಮಾ ಮಸೀದಿಯ ಹಿಂದಿನ ಗತಕಾಲ ಇತಿಹಾಸವನ್ನು ಪರಿಶೋಧಿಸಿದರೆ ಇಸ್ಲಾಂ ಧರ್ಮವು ಭಾರತದ ಇತರ ಎಲ್ಲ ಭಾಗಗಳಲ್ಲೂ ಬೇರುಗಳನ್ನು ಹೊಂದಿತ್ತು ಎಂಬುದು ಸಾಬೀತಾಗುತ್ತದೆ.
ಭಾರತದಲ್ಲಿ ಇಸ್ಲಾಂ ಧರ್ಮ ಹರಡುವಿಕೆಯ ಹಿಂದೆ ಮೊಘಲರು ಇದ್ದಾರೆ ಎಂಬ ವಾದವು ತೀವ್ರ ಬಲಪಂಥೀಯ ಸೃಷ್ಠಿಯಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಇಸ್ಲಾಂ ಧರ್ಮವು ಒಂದು ಹೊಸ ವಿದ್ಯಮಾನವಾಗಿದೆ ಮತ್ತು ದೇಶದ ಉತ್ತರದಿಂದ ಪೂರ್ವಕ್ಕೆ ಹರಡಿದೆ ಎಂಬ ವ್ಯಾಪಕ ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ.
7ನೇ ಶತಮಾನದಲ್ಲಿ ಹಿಂದೂ ಮಹಾಸಾಗರ ಮಾರ್ಗ ಮೂಲಕ ವ್ಯಾಪಾರ ವಹಿವಾಟಿನಿಂದಾಗಿ ಇಸ್ಲಾಂ, ಗುಜರಾತ್-ಕೊಂಕಣ ಕರಾವಳಿ ಮತ್ತು ಮಲಬಾರ್ ಕರಾವಳಿಯನ್ನು ತಲುಪಿತೆಂಬ ಪುರಾವೆಗಳು ಲಭ್ಯವಿದೆ. ದೇಶದ ದಕ್ಷಿಣ ಭಾಗದಲ್ಲಿರುವ ಕೇರಳದ ಚೇರಮಾನ್ ಜುಮಾ ಮಸೀದಿ ವಿಶ್ವದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದೆ. ಈ ಮಸೀದಿಯು ಕ್ರಿ.ಶ 629 ರಲ್ಲಿ ನಿರ್ಮಿಸಲ್ಪಟ್ಟಿತು. ಇದಾದ
ಕೆಲವು ವರ್ಷಗಳ ನಂತರ ತಮಿಳುನಾಡಿನಲ್ಲಿ ಮತ್ತೊಂದು ಮಸೀದಿಯನ್ನು ನಿರ್ಮಿಸಲಾಯಿತು ಎಂದು ಇಬ್ನು ಬತೂತಾ ಹೇಳುತ್ತಾರೆ. ಇದು ಪಾಲಿಯಾ ಜುಮಾ ಮಸೀದಿಯಾಗಿದೆ.
ಇಬ್ನು ಬತೂತಾ ಮುಸ್ಲಿಂ ಆಗಿದ್ದು, ಅವರು ಭಾರತದಾದ್ಯಂತ ಪ್ರವಾಸ ಮಾಡಿ ದೆಹಲಿ ಸುಲ್ತಾನರಲ್ಲಿ ಖಾಝಿಯಾಗಿ (ನ್ಯಾಯಾಧೀಶರಾಗಿ) ಸೇವೆ ಸಲ್ಲಿಸಿದವರಾಗಿದ್ದಾರೆ.
ಈ ಲೇಖನವು ಭಾರತದ ಇಸ್ಲಾಮಿಕ್ ಚರಿತ್ರೆಗಳಲ್ಲಿ ಪರಾಮರ್ಶಿಸದೆ ಹೋದ ಗುಜರಾತಿನ ಕೆಲವು ಭಾಗಗಳನ್ನು ತೆರೆದಿಡುತ್ತದೆ. ಗುಜರಾತ್ ಎಂಬುದು ಭಾರತದ ಪಶ್ಚಿಮ ಭಾಗದಲ್ಲಿರುವ ಅರೇಬಿಯನ್ ಸಮುದ್ರದ ಗಡಿಯಲ್ಲಿರುವ ಒಂದು ರಾಜ್ಯವಾಗಿದೆ. ಶತಮಾನಗಳ ವಲಸೆ ಪ್ರಕ್ರಿಯೆಯು ಈ ಪ್ರದೇಶವನ್ನು ವಿವಿಧ ಸಂಸ್ಕೃತಿಗಳ ಸಂಗಮ ಭೂಮಿಯನ್ನಾಗಿ ಮಾಡಿದೆ. ಅಲ್ಲಿನ ವಾಸ್ತುಶಿಲ್ಪದಲ್ಲಿ ಜನಾಂಗೀಯ ಮತ್ತು ಭಾಷಾ ವ್ಯತ್ಯಾಸಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇದರ ಭಾಷಾ ಸಂಸ್ಕೃತಿ ಪರ್ಷಿಯನ್, ಅರೇಬಿಕ್, ಸ್ವಾಹಿಲಿ ಮತ್ತು ಸಂಸ್ಕೃತದೊಂದಿಗೆ ಹೆಣೆದುಕೊಂಡಿದೆ.
ಹಿಂದೆ, ಗುಜರಾತಿಗಳಿಗೆ ಹಿಂದೂ ಮಹಾಸಾಗರ ಮಾರ್ಗವಾಗಿ ನಡೆಯುವ ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪ್ರಾಬಲ್ಯವಿತ್ತು. ಈಸ್ಟ್ ಇಂಡಿಯಾ ಕಂಪನಿಯ ಉದಯದ ಮೊದಲು, ಗುಜರಾತಿಗಳು ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರದಲ್ಲಿ ಪ್ರಮುಖ ಕೊಂಡಿಗಳಾಗಿದ್ದರು. ಅವರು ಅಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.
ಗುಜರಾತ್‌ನ ವ್ಯಾಪಾರ ಸಂಸ್ಕೃತಿಯ ಬಗ್ಗೆ ಹೆಚ್ಚು ವಿಸ್ತಾರವಾದ ಲಿಖಿತ ದಾಖಲೆಯ ಕೊರತೆಗೆ ಕಾರಣ ಅವರ ವ್ಯಾಪಾರ ರಹಸ್ಯಗಳನ್ನು ಇತರ ಸ್ಥಳೀಯರು ಅರ್ಥಮಾಡಿಕೊಳ್ಳದಂತೆ ತಡೆಯುವ ಗುರಿಯಾಗಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ.

ಯಮನಿನ ಹಡಗು ನಿರ್ಮಾಣಕಾರರಾದ ಝೊರಾಷ್ಟ್ರಿಯನ್ ಪಾರ್ಸಿಗಳು ಹಾಗು ಇಸ್ಮಾಯಿಲಿ ಶಿಯಾಗಳು ಗುಜರಾತ್‌ನ ನಿಯಮಿತ ಉದ್ಯೋಗಿಗಳಾಗಿದ್ದರು. ಇದರ ಪರಿಣಾಮವನ್ನು ಗುಜರಾತ್ ಸಂಸ್ಕೃತಿಯಲ್ಲಿ ಸ್ಪಷ್ಟವಾಗಿ ಕಾಣಲೂಬಹುದು.
ಅರೇಬಿಕ್ ಭೂವಿಜ್ಞಾನಿ ಇಬ್ನು ಹೌಕಲ್ ಅವರ ಪ್ರಕಾರ, ಹಿಂದೂ ರಾಜರಾದ ಕಂಪೈ, ಕಚ್, ಸೈಮೂರ್ ಮತ್ತು ಪಠಾಣ್ ಅವರ ಅಡಳಿತದಡಿಯಲ್ಲಿ ಗುಜರಾತ್‌ನ ನಾಲ್ಕು ಪ್ರಮುಖ ನಗರಗಳಲ್ಲಿ ಮಸೀದಿಗಳಿದ್ದವು.
ವಿಭಜನೆ – ವಿಭಜನಾನಂತರದ ಅವಧಿಯಲ್ಲಿ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರ ಇಲ್ಲಿ ಭುಗಿಲೆದ್ದಿತು. 1950 ರಿಂದ ಹಿಂದೂ-ಮುಸ್ಲಿಂ ಕೋಮು ಗಲಭೆಯಲ್ಲಿ ಹತ್ತಾರು ಸಾವಿರ ಜನರು ಸಾವನ್ನಪ್ಪಿದ್ದಾರೆ.
1992ರ ಬಾಂಬೆ ಗಲಭೆ ಮತ್ತು 2002ರ ಗುಜರಾತ್ ಗಲಭೆಗಳ ಭೀಕರ ಚಿತ್ರಗಳು ಇಂದಿಗೂ ಭಾರತೀಯ ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. ಒಂದೇ ದೇಶದಲ್ಲಿ ವಾಸಿಸುವ ವಿವಿಧ ಜನಾಂಗಗಳೇ ಈ ಅನಾನುಕೂಲತೆಗಳಿಗೆ ಮತ್ತು ವಿಪತ್ತುಗಳಿಗೆಲ್ಲಾ ಹೇತುವಾಗಿದೆ.
ಧಾರ್ಮಿಕ ವಿಷಯಗಳನ್ನು ಎತ್ತಿ ತೋರಿಸುವ ಮೂಲಕ ಜನರಲ್ಲಿ ಕೋಮು ಧ್ರುವೀಕರಣವನ್ನು ಉಂಟುಮಾಡುವಲ್ಲಿ ವಸಾಹತುಶಾಹಿಗೆ ಮಾತ್ರವಲ್ಲ ಪಾತ್ರವಿರುವುದು ಎಂದು ಗುಜರಾತ್ ಇತಿಹಾಸವು ಸಾಬೀತುಪಡಿಸುತ್ತದೆ . ವಸಾಹತುಶಾಹಿ ಪೂರ್ವದಲ್ಲಿ ಘರ್ಷಣೆಗಳು ಇರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಇತಿಹಾಸಕಾರರು ಧಾರ್ಮಿಕ ಆಯಾಮಗಳನ್ನು ಇತಿಹಾಸದ ಅನೇಕ ಭಾಗಗಳಲ್ಲಿ ಅಸ್ಪಷ್ಟವೆಂದು ವ್ಯಾಖ್ಯಾನಿಸುತ್ತಾರೆ. ಆದಾಗ್ಯೂ, ಹಿಂದುತ್ವ ಸಾರ್ವಜನಿಕ ಪ್ರಜ್ಞೆಯ ಜಾಗೃತಿ ಮತ್ತು ಕೇಸರೀಕರಣದಲ್ಲಿ ವಸಾಹತುಶಾಹಿ ಸಂಪ್ರದಾಯವು ಪ್ರಮುಖ ಪಾತ್ರ ವಹಿಸಿದೆ ಎಂಬುದು ನಿಜ.
ಹೀಗೆ ಇಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಹಿಂಸೆ ಮತ್ತು ಕ್ರೌರ್ಯಕ್ಕೆ ಬಲಿಯಾಗಲು ಪ್ರಾರಂಭಿಸುತ್ತಾರೆ. ‘ಅಪರಿಚಿತರು’ ಮತ್ತು ‘ವಲಸಿಗರು’ ಮುಂತಾದ ವಿಳಾಸಗಳನ್ನು ನೀಡುವ ಮೂಲಕ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಲಪಡಿಸಲಾಯಿತು.
ಈ ಸಿದ್ಧಾಂತವು ಶತಮಾನಗಳಷ್ಟು ಹಳೆಯದಾದ ಮುಸ್ಲಿಂ ಅಸ್ತಿತ್ವ ಮತ್ತು ಗುರುತುಗಳನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದರೂ, ಈ ಅಸ್ತಿತ್ವ ಮತ್ತು ಕೊಡುಗೆಯನ್ನು ಸ್ಥಾಪಿಸುವುದು ಕಷ್ಟವೇನಲ್ಲ.
ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅವಶೇಷಗಳಿನ್ನೂ ಜೀವಂತವಾಗಿವೆ. (ನಾವು ತಿನ್ನುವ ಬಿರಿಯಾನಿ ಕೇವಲ ಒಂದು ಉದಾಹರಣೆಯಾಗಿದೆ. ಇದನ್ನು ಇರಾನ್‌ನಿಂದ ವಲಸೆ ಬಂದವರಾಗಿದ್ದಾರೆ ತಂದವರು). ವಾಸ್ತುಶಿಲ್ಪವನ್ನು ಮಾತ್ರ ಪರಿಗಣಿಸುವುದಾದರೆ, ಇತ್ತೀಚಿನ ದಿನಗಳಲ್ಲಿ ಬಲಪಂಥೀಯರು ತಮ್ಮದೆಂದು ಹಕ್ಕು ಮಂಡಿಸುವ ಅನೇಕ ಐತಿಹಾಸಿಕ ಸ್ಮಾರಕಗಳು ಇದಕ್ಕೆ ಉದಾಹರಣೆಯಾಗಿದೆ. ಮೊಘಲ್ ಆಡಳಿತ ಮತ್ತು ಅದಕ್ಕೂ ಮೊದಲು ಗುಜರಾತ್‌ನಲ್ಲಿ ಇಸ್ಲಾಂ ಧರ್ಮ ಅಸ್ತಿತ್ವದಲ್ಲಿತ್ತು ಎಂದು ದೃಢೀಕರಿಸುವ ಕೆಲವು ಐತಿಹಾಸಿಕ ಸ್ಮಾರಕಗಳ ಕುರಿತು ತಿಳಿಯೋಣ.

ಚಾಂಪನೀರ್-ಪಾವಗಡ್ ಪುರಾತತ್ವ ಉದ್ಯಾನವನ

ಚಾಂಪನೀರ್ ಪಾವಗಡ್ ಪುರಾತತ್ವ ಉದ್ಯಾನವನವು ಗುಜರಾತ್‌ನ ಬರೋಡಾದಿಂದ 47 ಕಿ.ಮೀ ದೂರದಲ್ಲಿದೆ. ಈ ಉದ್ಯಾನವನವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಐತಿಹಾಸಿಕ ನಗರದ ಹೃದಯ ಭಾಗದಲ್ಲಿ ಚಾಂಪನೀರನ್ನು
ಸುಲ್ತಾನ್ ಮುಹಮ್ಮದ್ ಬಾಗೋಡ ಎಂಬುವನು 16ನೇ ಶತಮಾನದಲ್ಲಿ ನಿರ್ಮಿಸಿದ್ದಾಗಿದೆ . ಇದರ ಸುತ್ತಮುತ್ತಲಿನ ಬೆಟ್ಟಗಳ ಮೇಲೆ ನಿರ್ಮಿಸಲಾದ ಕೋಟೆಯಾಗಿದೆ ಪಾವಗಡ್.
ಗುಜರಾತ್ ಸುಲ್ತಾನರು ತಮ್ಮ ರಾಜಧಾನಿಯನ್ನು ಅಹಮದಾಬಾದ್‌ಗೆ ಸ್ಥಳಾಂತರಿಸುವ ಮೊದಲು, ಚಾಂಪನಿರಾಗಿತ್ತು ಸರ್ಕಾರದ ಕೇಂದ್ರ ಸ್ಥಾನ. ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಅರಮನೆಗಳು, ಮಸೀದಿ ಮಂದಿರಗಳಾಗಿದ್ದವು ಈ ಸ್ಥಳವನ್ನು ಪ್ರಸಿದ್ಧಿಗೂಳಿಸಿದ್ದು.

ಚಾಂಪನೀರ್-ಪಾವಗಡ್ ಪುರಾತತ್ವ ಉದ್ಯಾನವನ

ಯಾವುದೇ ಬದಲಾವಣೆಯಿಲ್ಲದೆ ಇಂದಿಗೂ ನೆಲೆನಿಂತಿರುವ ಇಸ್ಲಾಮಿಕ್ ನಗರವೆಂದರೆ ಅದು ಚಾಂಪನೀರ್ ಪಾವಗಡಾಗಿದೆ. ಮೊಘಲರ ಆಗಮನಕ್ಕಿಂತ ಮುಂಚೆಯೇ ನಿರ್ಮಿಸಲಾದ ಈ ನಗರದ ನಿರ್ಮಾಣದ ಹಿಂದೆ ಹಿಂದೂ-ಮುಸ್ಲಿಂ ವಾಸ್ತುಶಿಲ್ಪಿ ಗಳ ಸಂಯೋಜನೆಯನ್ನು ಕಾಣಬಹುದು.
ಐತಿಹಾಸಿಕ ಕಟ್ಟಡದ ಗುಮ್ಮಟಗಳು ಮತ್ತು ಕಮಾನುಗಳಲ್ಲಿ ಈ ಸಂಯೋಜನೆಯು ಬಹಳ ಸ್ಪಷ್ಟವಾಗಿದೆ. ಸಾಮ್ರಾಜ್ಯಗಳ ಆಕ್ರಮಣಕ್ಕೆ ಮುಂಚಿತವಾಗಿ ಭಾರತೀಯ ಪರಿಸ್ಥಿತಿಗಳ ಸಣ್ಣ ಚಿತ್ರಣವನ್ನು ಇಲ್ಲಿ ಚಿತ್ರಿಸಲಾಗಿದೆ.
ಪ್ರತಿ ಸಂಸ್ಕೃತಿಯು ತನ್ನದೇ ಆದ ಭೂಪ್ರದೇಶದಲ್ಲಿ ಒಳಗೂಂಡಿರುವ ಎಲ್ಲಾ ಪ್ರಮುಖ ಧಾರ್ಮಿಕ ಆಯಾಮಗಳ ಪ್ರಕಾರ ವ್ಯಾಖ್ಯಾನಿಸುವ ಸಮಯ. ಚಾಂಪನೀರ್ ಪಾವಗಡ್ ಇಂದಿಗೂ ಒಂದು ತೀರ್ಥಯಾತ್ರಾ ಸ್ಥಳವಾಗಿದೆ.
ಹಿಂದೂಗಳು, ಮುಸ್ಲಿಮರು ಹಾಗು ಇತರ ಧರ್ಮದವರೂ ಇಲ್ಲಿಗೆ ಬರುತ್ತಾರೆ.

ಹಾಸಿರ ಸಮಾಧಿ

ಹಾಸಿರ ಸಮಾಧಿಯು ಕಾರ್ಯನಿರತ ಪ್ರಾಚೀನ ನಗರವಾದ ವಡೋದರಾದಿಂದ ಸ್ವಲ್ಪ ದೂರದಲ್ಲಿದೆ.
ಗುಜರಾತ್‌ನ ಐತಿಹಾಸಿಕ ಸ್ಮಾರಕಗಳನ್ನು ಹೇಗೆ ನಿರ್ಲಕ್ಷಿಸಲಾಯಿತು ಎಂಬುದನ್ನು ಈ ಸಮಾಧಿಯು ಹೇಳುತ್ತದೆ. 1586ರಲ್ಲಿ ಇದನ್ನು ನಿರ್ಮಿಸಲಾಯಿತು.

ಹಾಸಿರ ಸಮಾಧಿ

ಈ ಸ್ಮಾರಕದಲ್ಲಿ ಕುತುಬುದ್ದೀನ್ ಮುಹಮ್ಮದ್ ಖಾನ್ ರವರ ಸಮಾಧಿ ಇದೆ.ಇವರು ಜಹಾಂಗೀರ್‌ನ ಗುರು ಮತ್ತು ಅಕ್ಬರ್‌ನ ಹಿಂಬಾಲಕರಾಗಿದ್ದರು.
ಇತಿಹಾಸದಲ್ಲಿ ಹೆಸರು ಪಡೆದ ಮೊಘಲ್ ಚಕ್ರವರ್ತಿಯ ಏಕೈಕ ಗುರು ಎಂಬ ಪರಿಗಣನೆ ಮಾತ್ರ ಈ ಐತಿಹಾಸಿಕ ಭವನಕ್ಕಿದೆ. ಈ ಸಮಾಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಒದಗಿಸುವ ಮನಸ್ಸಿನ ಶಾಂತಿಯ ಹಿಂದೆ ಅವನು ತನ್ನ ಜೀವಿತಾವಧಿಯಲ್ಲಿ ನಡೆಸಿದ ಜ್ಞಾನ ಮತ್ತು ಸದ್ಗುಣಗಳ ಪ್ರಸರಣವಾಗಿರಬೇಕು.

ಹಾಸಿರ ಸಮಾಧಿ

ಇಂದು, ಈ ಸ್ಮಾರಕವನ್ನು ನಿರ್ವಹಿಸುತ್ತಿರುವವರು ಬರೋಡಾದ ಇಸ್ಮಾಯಿಲಿ ಶಿಯಾಗಳಾಗಿದ್ದಾರೆ. ಈ ಸ್ಥಳದ ಸೌಂದರ್ಯದಿಂದ ಆಕರ್ಷಿತರಾಗಿ ತಲುಪುವ ಪ್ರವಾಸಿಗರಿಗೆ ಇಲ್ಲಿ ಒಬ್ಬ ಅಥವಾ ಇಬ್ಬರು ಮಾರ್ಗದರ್ಶಿಗಳಿದ್ದಾರೆ. ವಿಪರ್ಯಾಸವೆಂದರೆ, ಮೊಘಲ್ ಸಾಮ್ರಾಜ್ಯವನ್ನು ಅಧ್ಯಯನ ಮಾಡುವವರಿಗೂ ಈ ಐತಿಹಾಸಿಕ ಅವಶೇಷದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ.

ಲಕ್ಷ್ಮಿ ವಿಲ್ಲಾಸ್ ಅರಮನೆ

ಲಕ್ಷ್ಮಿ ವಿಲ್ಲಾ ಬರೋಡಾದ ಗೈಕ್ವಾಡ್ ಪಂಥದ ಹಿಂದಿನ ಅರಮನೆಯಾಗಿದೆ. ಈ ರಾಜ ಭೂಮಿಯನ್ನು 18ನೇ ಶತಮಾನದಿಂದ 1945ರ ವರೆಗೆ ಹಿಂದೂ ಗೈಕ್ವಾಡ್ ಪಂಥವು ಆಳಿತು.
ಗೈಕ್ವಾಡ್ ರಾಜ ಸಯೋಜಿ ರಾವ್ ನೇತೃತ್ವದಲ್ಲಿ ಈ ಭೂಮಿ ಯು ಭಾರತದಲ್ಲಿ ವೇಗವಾಗಿ ಅಭಿವೃದ್ದಿಗೊಳ್ಳುತ್ತಿರುವ ಭೂಮಿಗಳಲ್ಲಿ ಒಂದಾಗಿತ್ತು. 1890 ರಲ್ಲಿ ನಿರ್ಮಿಸಲಾದ ಲಕ್ಷ್ಮಿ ವಿಲ್ಲಾ ಇಂಡೋ-ಸೊರಾಷ್ಟ್ರಿಯನ್ ವಾಸ್ತುಶಿಲ್ಪದ ಅತ್ಯುತ್ತಮ ವರ್ಣಚಿತ್ರಗಳಲ್ಲಿ ಒಂದಾಗಿದೆ.

ಲಕ್ಷ್ಮಿ ವಿಲ್ಲಾಸ್ ಅರಮನೆ

ಇಂಡೋ-ಇಸ್ಲಾಮಿಕ್ ಸಾಂಪ್ರದಾಯಿಕ ನಿರ್ಮಾಣ ವಿಧಾನಗಳನ್ನು ಪರಸ್ಪರ ಸಂಯೋಜಿಸುವ ಮೂಲಕ ವಸಾಹತುಶಾಹಿ ಶಿಲ್ಪಿಗಳು ಇಂತಹ ವಿಧಾನವನ್ನು ಅಭಿವೃದ್ಧಿಪಡಿಸಿದರು.
ಹೂವಿನಿಂದ ಅಲಂಕೃತವಾದ ಕಿಟಕಿ ಚೌಕಟ್ಟುಗಳು, ಸ್ವರ್ಣದ ಹಾಗೆ ಹೊಳೆಯುವ ಮೊಸಾಯಿಕ್ಸ್, ದೂಡ್ಡ ದರ್ಬಾರ್ ಮತ್ತು ಹಾತಿ ಹಾಲ್ (ಹಾತಿ-ಆನೆ) ಈ ಅರಮನೆಯ ಆಕರ್ಷಣೆಯಾಗಿದೆ. ವಿಲಿಯಂ ಗೋಲ್ಡ್ಮೋರ್ ವಿನ್ಯಾಸಗೊಳಿಸಿದ ಉದ್ಯಾನವು ಇದರ ಭಾಗವಾಗಿದೆ.
ಇವರು ಲಂಡನ್‌ನ ಕ್ಯೂ ಗಾರ್ಡನ್‌ನಲ್ಲಿ ಪರಿಣತರಾಗಿದ್ದರು. ಲಕ್ಷ್ಮಿ ಅರಮನೆಯು ಭಾರತದ ಗಣ್ಯರ ಸಂಕೇತವಾಗಿರುವಂತೆಯೇ, ಇದು ಮುಸ್ಲಿಂ ಮಾದರಿಗಳನ್ನು ಒಳಗೊಂಡಿರುವ ಮೂಲಕ ಇಸ್ಲಾಂ ಧರ್ಮವನ್ನೂ ಪ್ರತಿನಿಧಿಸುತ್ತದೆ.

ಮೇಲೆ ತಿಳಿಸಲಾದ ಮೂರೂ ಸ್ಥಳಗಳು ಗುಜರಾತ್‌ನಲ್ಲಿ ಇಸ್ಲಾಂ ಧರ್ಮವು ದೀರ್ಘಕಾಲದ ಉಪಸ್ಥಿತಿಯನ್ನು ಹೊಂದಿತ್ತು ಎಂಬುದನ್ನು ಹಲವು ವಿಧಗಳಲ್ಲಿ ತಿಳಿಸಿಕೊಡುತ್ತದೆ.

ನಿರ್ದಿಷ್ಟ ಇತಿಹಾಸಗಳನ್ನು ವಿರೂಪಗೊಳಿಸುವ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅಸ್ತಿತ್ವವನ್ನು ಪ್ರಶ್ನಿಸಲಾಗುತ್ತಿರುವ ಹೊಸ ತಲೆಮಾರಿಗೆ ಮೊಘಲರ ಬಗ್ಗೆ ಮತ್ತು ಅವರ ಕೊಡುಗೆಗಳ ಬಗ್ಗೆ ಇಂದು ಇರುವ ವಿಕೃತ ಮತ್ತು ಸೋಮಾರಿತನದ ಆರೋಪಗಳು ಕಟ್ಟುಕಥೆ ಎಂದು ಮನವರಿಕೆ ಮಾಡಬೇಕಾಗಿದೆ.

ಮೂಲ: ಶಾಷಾ ಪಟೇಲ್
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ

ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ!

ನಕ್ಷತ್ರಗಳಾಚೆಯೂ ಜಗವಿಹುದು
ಪ್ರೀತಿಗಿನ್ನೂ ಪರೀಕ್ಷೆಗಳು ಹಲವಿಹುದು

ಈ ಲೋಕದಲ್ಲಿ ಪ್ರೀತಿಸುವ ಜೀವಿಗಳಿಗೆ ಬರವಿಲ್ಲ
ನೂರಾರು ಕಾರವಾನಗಳು ಇನ್ನೂ ಹಲವಿಹುದು

ಇಲ್ಲಿಯ ಸುಗಂಧ – ಕಾಮನೆಗಳಲ್ಲಿ ಕಳೆದುಹೋಗದಿರು
ಹೂದೋಟಗಳು – ಗೂಡುಗಳು ಇನ್ನೂ ಹಲವಿಹುದು

ಒಂದು ನೆಲೆ ಕಳೆದುಕೊಂಡೆಯೆಂದು ಇಲ್ಲಿ ಅಳುವಿಯೇಕೆ
ಅತ್ತು ಗೋಗರೆಯಲು ಜಾಗವಿನ್ನೂ ಹಲವಿಹುದು

ಗಿಡುಗನಾಗಿರುವೆ ನೀನು ಹಾರುವುದಷ್ಟೇ ನಿನ್ನ ಕೆಲಸ
ತೆರೆದುಕೊಂಡಿರುವ ಆಗಸವು ನಿನ್ನ ಮುಂದೆ ಹಲವಿಹುದು

ಹಗಲು ಇರುಳಗಳ ನಡುವೆ ಬಂಧಿಯಾಗದಿರು
ನಿನಗಾಗಿ ಕಾಲ ದೇಶಗಳಿನ್ನೂ ಹಲವಿಹುದು

ನಿನ್ನ ಏಕಾಂತತೆಯ ದಿನಗಳೆಲ್ಲಾ ಕಳೆದುಹೋದವು
ನಿನಗಾಗಿ ಕಾಯುತಿಹ ನಿನ್ನವರ ಸಂಖ್ಯೆ ಹಲವಿಹುದು !

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

ಪ್ರಜಾಸತ್ತೇ..

ಬಿಸಿಲ ಬೇಗೆಗೆ ನಲುಗಿ
ಸೋತ ಹಗರೆಯ ಮಗು
ನೆಲಕ್ಕೊದ್ದಾಗ
ಮರಳುಗಾಡಿನಲ್ಲಿ
ಉಕ್ಕಿದ ಸಿಹಿನೀರ ಬುಗ್ಗೆ
ಚಿನ್ನದ ಹೆದ್ದಾರಿಗಳಲ್ಲಿ
ಉಕ್ಕುವುದಿಲ್ಲ

ಜೀತದಾಳುಗಳೊಡನೆ
ಮೋಸೆಸನು
ಬಂಧ ವಿಮುಕ್ತಿಯತ್ತ ನಡೆದಾಗ
ಸಾಗರವೇ ಬಿರಿದು ದಾರಿ ತೋರಿದ ಗಳಿಗೆ
ಇನ್ನೊಮ್ಮೆ ಬರುವುದಿಲ್ಲ

ವಿಶ್ವಾಸಿಗರೇ ಕೇಳಿ
‘ಸಿರಿವಂತನಿಗೆ ಸ್ವರ್ಗದ ದಾರಿ
ಒಂಟೆಯನ್ನು ಸೂಜಿಯ ಕಣ್ಣೊಳಗೆ
ತುರುಕಿದಷ್ಟೇ ಸುಲಭ’
ಆದರೂ ಬಡವರ ಕಡೆಗೆ
ರೈಲುಗಳು ಧಾವಿಸುವುದಿಲ್ಲ
ವಂದೇ ಭಾರತ – ಹಳಿಯಲ್ಲಿ
ಸಂಚರಿಸುವುದಿಲ್ಲ
ಗಾಳಿಯಲ್ಲಿ ಮುಕ್ತವಾಗಿ ಹಾರುತ್ತದೆ

ಪ್ರಜಾಸತ್ತೆಯ ಅವಗಢಗಳ ಮೇಲೆ
ಪವಾಡಗಳು ಘಟಿಸುವುದಿಲ್ಲ

ಫೆರೋವನ ಶಪಿಸುತ್ತಾ
ಸಾಗುತ್ತಿದೆ ಗುಲಾಮರ ದಂಡು
ಅವರ ನಿಟ್ಟುಸಿರಿಗೆ
ಬಿರುಗಾಳಿ ಏಳುವುದಿಲ್ಲ
ನೆಟಿಕೆ ಮುರಿದಾಗಲೆಲ್ಲಾ
ಸೌಧಗಳು ನೆಲಕ್ಕುರುಳುವುದಿಲ್ಲ

ಹಾದಿಯಲಿಯೇ ಮದುವೆ
ಬೀದಿಯಲ್ಲಿಯೇ ಪ್ರಸ್ಥ
ಬಯಕೆಗಳ ಹಂಗಿಲ್ಲದೆ
ಬಾಣಂತನದ ಬಲವಿಲ್ಲದೆ
ದಾರಿಯಲ್ಲಿಯೇ ಹೊತ್ತು
ದಾರಿಯಲ್ಲಿಯೇ ಹೆತ್ತು
ಹೊಕ್ಕಳಬಳ್ಳಿಯನ್ನು
ಕಲ್ಲಿಂದ ಕಡಿದು
ಮುಂದೆ ಸಾಗುವ ತಾಯಿ
ಹಾಲು ಬತ್ತಿದೆದೆಯ ಬಗೆಯುತ್ತಾ
ಕಿರುಚುವಳು
ಓ ಪ್ರಜಾಸತ್ತೇ.. ನೀನೆಲ್ಲಿ ಸತ್ತೆ..

ನೋಹನ ದೋಣಿಯತ್ತ
ಮಗುವನ್ನೆತ್ತಿ ಎಸೆದು
ಮನುಜ ಕುಲ ಉಳಿಸಲು
ಹೆಣಗುತ್ತಿರುವ ತಾಯಿ
ಕೂಗುವಳು..
ಓ ಪ್ರಜಾಸತ್ತೇ.. ನೀನೆಲ್ಲಿ ಸತ್ತೇ..

ಅನಂತದೆಡೆಗೆ
ಸಾಗುತಿಹ ಸರಹಪಾದರು
ಸಹಸ್ರಪದಿಗಳಾಗುವರು
ಒಡೆದ ಕಾಲುಗಳ
ನಡುವೆ ತೊಟ್ಟಿಕ್ಕುವ
ರಕ್ತವರ್ಣದ ಹೆದ್ದಾರಿಗಳ ಮೇಲೆ
ನಿಡುಸುಯ್ಯುವ ನಿಟ್ಟುಸಿರಿನ
ಸುರಿವ ಬೆವರಿನ ಉಗ್ರಗಂಧದ
ಸುಳಿಗಾಳಿಯೆಬ್ಬಿಸಿ
ಮನುಜ ವೇದನೆಯ
ಹಿಮ್ಮೇಳದೊಂದಿಗೆ
ಪ್ರೇತಾತ್ಮದಂತೆ
ರುದ್ರನರ್ತನಗೈಯ್ಯುವುದು
ಪ್ರಜಾಸತ್ತೇ!

— ಪುನೀತ್ ಅಪ್ಪು

ಜಾವೆದ್ ನಾಮಾ

ನಿನ್ನ ಹೃದಯದೊಳಗೊಂದು
ಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆ
ಆ ಹೂವುಗಳ ಮೌನಗಳಿಗೆ ಮಾತಾಗು
ಪ್ರೀತಿಯ ಒಂದಿಷ್ಟು ಪದಗಳಾಗು

ಈ ಪ್ರೀತಿಯೆಂಬ ಜಗದಲ್ಲಿ
ಪುಟ್ಟ ತಾವು ಹುಡುಕು
ಈ ನವ್ಯ ಯುಗದಲ್ಲಿ
ರಮ್ಯ ಹಗಲಿರುಳ ಹುಡುಕು

ಪಶ್ಚಿಮದ ಕಲೆಗಾರರ
ಮನೆಯ ಪರಿಚಾರಕನಾಗಬೇಡ
ಭಾರತದ ನೆಲದಲ್ಲಿ
ಮಧುಶಾಲೆಯ ಸುಧೆಯ ಹರಿಸು

ಸಾಹಿತ್ಯವೃಕ್ಷದ ರೆಂಬೆಕೊಂಬೆಯಾಗಿರುವೆ
ಕವಿತಾಸಾರ ಹರಿಯುತಿದೆ ನಿನ್ನ ನರನರಗಳಲ್ಲಿ
ಆ ಸತ್ತ್ವ ಸಾರದಿಂದಲೇ
ನವ ಮಧುವ ತಯಾರಿಸು!

ನಿನ್ನ ಲಕ್ಷ್ಯ ಸಿರಿವಂತಿಕೆಯಲ್ಲ,
ಬಡತನದ ಕಡೆಗಿರಲಿ,
ಸ್ವಾಭಿಮಾನವ ಬಿಕರಿಗಿಡದೆ
ಬಡವರೊಳು ಅಭಿಮಾನಿಯಾಗು!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಕನ್ನಡಕ್ಕೆ : ಪುನೀತ್ ಅಪ್ಪು
(ತನ್ನ ಮಗ ಜಾವೇದ್ ರವರ ಜನ್ಮದಿನದಂದು ಇಕ್ಬಾಲರು ಬರೆದ ಪತ್ರದಲ್ಲಿ)

ಅಲ್ಲಾಮ ಇಕ್ಬಾಲರು ಇಂಗ್ಲೇಂಡಿನಲ್ಲಿರುವಾಗ ಅವರ ಮಗ ಜಾವೇದ್ ತಮ್ಮ ತಂದೆಯವರಿಗೆ ಪತ್ರ ಬರೆದು ಇಂಗ್ಲೇಂಡಿನಿಂದ ಭಾರತಕ್ಕೆ ಬರುವಾಗ ತನಗೊಂದು ‘ಗ್ರಾಮಾಫೋನ್'( ಹಿಸ್ ಮಾಸ್ಟರ್ಸ್ ವಾಯ್ಸ್ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಪ್ರಸಿದ್ಧ ಗ್ರಾಮಾಫೋನ್) ತರುವಂತೆ ಕೇಳಿಕೊಂಡಿದ್ದರು. ಆದರೆ ಅಲ್ಲಾಮ ಇಕ್ಬಾಲರು ಈ ಸಂದರ್ಭವನ್ನು ತಮ್ಮ ಮಗನಿಗೆ ಭವಿಷ್ಯದ ಕನಸನ್ನು ರೂಪಿಸುವ ಉದಾಹರಣೆಯನ್ನಾಗಿ ಬಳಸಿಕೊಂಡು ಒಂದು ಸುಂದರವಾದ ಕವಿತೆಯನ್ನು ಬರೆಯುತ್ತಾರೆ. ಅದೇ ‘ಜಾವೇದ್ ಕೆ ನಾಮ್’ ಅದರಲ್ಲಿ ಬರುವ ಕೊನೆಯ ಸಾಲುಗಳು ” ಮೇರಾ ತರೀಖ್ ಅಮೀರೀ ನಹೀ ಫಕೀರೀ ಹೈ
ಖುದೀ ನ ಬೇಜ್ ಗರೀಬೀ ಮೇ ನಾಮ್ ಫೈದಾ ಕರ್ ” ಇವತ್ತಿಗೂ ಮನುಷ್ಯನ ಬದುಕಿನ ಉದ್ದೇಶವೇನು ಎಂಬುದನ್ನು ನೆನಪಿಸುತ್ತವೆ.
ಕವಿ ಇಕ್ಬಾಲರು ಕೂಡಾ ಕೊನೆಯವರೆಗೂ ಅವರ ಮಾತಿನಂತೆ ಬಡತನದಲ್ಲಿಯೇ ಬದುಕಿದರು.

ತಸ್ಬೀಹ್ ಮಾಲೆ: ಮನಃಶಾಸ್ತ್ರ ಮತ್ತು ಸೌಂದರ್ಯ ಶಾಸ್ತ್ರ

ನೀವು ತುರ್ಕಿ ರಾಷ್ಟ್ರಕ್ಕೆ ಭೇಟಿ ನೀಡಿದರೆ, ಅಲ್ಲಿನ ಜನರ ಕೈಯಲ್ಲಿ ಮಣಿಗಳಿಂದ ಪೋಣಿಸಿದ ದಾರವನ್ನು ಕಾಣಲು ಸಾಧ್ಯ. ಅವು ವಿಭಿನ್ನ ಆಕಾರ ಮತ್ತು ಬಣ್ಣಗಳಿಂದ ಕಂಗೊಳಿಸುತ್ತಿರುತ್ತವೆ. ಕೆಲವೊಂದು ವಿನ್ಯಾಸದಲ್ಲಿ ಸರಳ ಮತ್ತು ವಿಭಿನ್ನವಾಗಿದ್ದರೆ, ಇನ್ನು ಕೆಲವು ಅದ್ದೂರಿ ಮತ್ತು ದುಬಾರಿ ಬೆಲೆಯುಳ್ಳವುಗಳಾಗಿವೆ.

ತಸ್ಬೀಹ್ ಮಾಲೆ : ಇಸ್ಲಾಮಿಕ್ ಜಪಮಾಲೆ
ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಯಹೂದಿ, ಸಿಖ್ ಮುಂತಾದ ಧರ್ಮಗಳಲ್ಲಿ ಜಪಮಾಲೆಗಳಿಗೆ ಅದರದ್ದೇ ಆದ ಸಂಪ್ರದಾಯ, ಪ್ರಾಮುಖ್ಯತೆಯಿದೆ. ಬೌದ್ಧ ಧರ್ಮದಲ್ಲಿ ಇದು ‘ಮಾಲೆ’, ಕ್ರಿಶ್ಚಿಯನ್ ಕ್ಯಾಥೋಲಿಕ್ ವಿಭಾಗದಲ್ಲಿ ‘ಜಪಮಾಲೆ’, ಹಾಗೂ ಇಸ್ಲಾಂ ಧರ್ಮದಲ್ಲಿ ‘ತಸ್ಬೀಹ್’ ಅಥವಾ ‘ಮಿಸ್‌ಬಹ್’ ಮುಂತಾದ ನಾಮಗಳಿಂದ ಗುರುತಿಸಲ್ಪಡುತ್ತವೆ. ಈ ಮಾಲೆ ಮುಖ್ಯವಾಗಿ ಪ್ರಾರ್ಥನೆಯ ಪುನರಾವರ್ತನೆಯನ್ನು ಗುರುತಿಸಲು ಹಾಗೂ ಇತರ ಧಾರ್ಮಿಕ ಮಂತ್ರಗಳನ್ನು ಪಠಿಸಿ ಲೆಕ್ಕವಿಡಲು ಸಹಾಯಕವಾಗಿದೆ.
ಸಾಮಾನ್ಯವಾಗಿ ಮುಸ್ಲಿಮರು ಬಳಸುವ ತಸ್ಬೀಹ್ ನಲ್ಲಿ 99 ಮಣಿಗಳಿರುತ್ತವೆ. ಅದು ಅಲ್ಲಾಹನ 99 ನಾಮಗಳ ಸಂಕೇತವಾಗಿದೆ. ಆದರೆ ಬೌದ್ಧ ಧರ್ಮದ ಮಾಲೆಯಲ್ಲಿ 108 ಮಣಿಗಳನ್ನು ಕಾಣಬಹುದು.

ಪೈಗಂಬರ್ ಮುಹಮ್ಮದ್ (ಸ) ರವರು ತಮ್ಮ ಮಗಳಿಗೆ ಉಡುಗೊರೆಯಾಗಿ ಅರ್ಪಿಸಿದ ಪ್ರಾರ್ಥನೆಯಾಗಿದೆ ‘ಫಾತಿಮಾ ತಸ್ಬೀಹ್’. ಇದನ್ನು ಪ್ರತಿ ದಿನ 5 ಬಾರಿ ನಿರ್ವಹಿಸುವ ನಮಾಝ್ ಬಳಿಕ “ಸುಬ್ ಹಾನಲ್ಲಾಹ್ (ಅರ್ಥ: ಅಲ್ಲಾಹನಿಗೆ ಮಹಿಮೆ), ಅಲ್ ಹಂದುಲಿಲ್ಲಾಹ್ (ಅರ್ಥ: ಅಲ್ಲಾಹನಿಗೆ ಸ್ತುತಿ), ಅಲ್ಲಾಹು ಅಕ್ಬರ್(ಅರ್ಥ: ಅಲ್ಲಾಹನು ಶ್ರೇಷ್ಠ) ಎಂಬ ಕ್ರಮದಲ್ಲಿ 33 ಬಾರಿ ಪಠಿಸಲಾಗುವುದು
ಮುಸ್ಲಿಮರು ಮಂತ್ರ ಹೇಳಿ ಎಣಿಸುವಾಗ ತಮ್ಮ ಹೆಬ್ಬೆರಳು ಮತ್ತು ಇತರ ಬೆರಳುಗಳನ್ನು ತಸ್ಬೀಹ್ ಮಣಿಯ ಮೇಲೆ ಇಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ 33 ಮಣಿಗಳನ್ನು ಹೊಂದಿರುವ ತಸ್ಬೀಹ್ ಬಳಸಲಾಗುತ್ತಿದೆ ಹಾಗು ಅವುಗಳನ್ನು 3 ಬಾರಿ ಎಣಿಕೆ ಮಾಡಲಾಗುತ್ತಿದೆ.

ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಜಪಮಾಲೆ ಸಹಕಾರಿ
ಮಾನಸಿಕ ಒತ್ತಡದ ನಿವಾರಣೆಗೆ ತಸ್ಬೀಹ್ ಸಹಾಯಕವಾಗಿದೆ. ಪ್ರಾಚೀನ ಕಾಲದಿಂದಲೂ ತುರ್ಕಿಯಲ್ಲಿ ಇದನ್ನು ಬಳಸಲಾಗುತ್ತಿತ್ತು. 7ನೇ ಆಟೊಮಾನ್ ಸುಲ್ತಾನ್ ಫಾತಿಹ್ ಮುಹಮ್ಮದ್ ತನ್ನ ಪ್ರಸಿದ್ಧ ಕಾನ್‌ಸ್ಟಾಂಟಿನೋಪಲ್ ನ್ನು ವಶಪಡಿಸಲು ಬೇಕಾದ ತಂತ್ರವನ್ನು ರೂಪಿಸಲು ತಸ್ಬೀಹ್ ಮಣಿಗಳು ಸಹಾಯಕವಾಯಿತು ಎಂದು ಹೇಳಲಾಗುತ್ತದೆ. (ಯುದ್ಧದ ಮಧ್ಯೆ ತನ್ನ ಎಲ್ಲಾ ತಂತ್ರಗಳು ವಿಫಲವಾಗಿ, ಯುದ್ಧ ನೌಕೆಗಳನ್ನು ಮುನ್ನಡೆಸಲಾಗದೆ ತಮ್ಮ ಶಿಬಿರಗಳಿಗೆ (commanding tent) ಹಿಂತಿರುಗಿದರು. ಆ ರಾತ್ರಿ ತನ್ನ ಚಿರಕಾಲ ಅಭಿಲಾಷೆಯಾಗಿದ್ದ ಕಾನ್‌ಸ್ಟಾಂಟಿನೋಪಲ್ ವಶಪಡಿಸುವ ಎಲ್ಲಾ ತಂತ್ರಗಳು ವಿಫಲವಾಗಿ, ಹೊಸ ಸಂಚನ್ನು ರೂಪಿಸಲು ಸಾಧ್ಯವಾಗದೆ ಮಾನಸಿಕ ಖಿನ್ನತೆಗೆ ಒಳಗಾದರು. ಇದರಿಂದ ಹೊರಬರಲು ತಸ್ಬೀಹ್ ಮಾಲೆಯನ್ನು ಕೈಗೆತ್ತಿ ಬೆರಳಿನಿಂದ ಒಂದೊಂದು ಮಣಿಗಳನ್ನು ಎಣಿಸುತ್ತಿದ್ದಾಗ ಹೊಸ ಯುದ್ಧತಂತ್ರವೊಂದು ಅವರ ಮನಸ್ಸಿನಲ್ಲಿ ಉದಯವಾಯಿತು. ನಂತರ ತಸ್ಬೀಹ್ ಮಣಿಗಳನ್ನು ನೆಲದ ಮೇಲೆ ಹಾಕಿದರು. ಅದರ ಮೇಲೆ ಯಾರಾದರೂ ಕಾಲಿಟ್ಟರೆ ಉರುಳಿ ಬೀಳುವುದನ್ನು ಕಂಡ ಸುಲ್ತಾನ್ ಆ ನಗರದ ಗೆಲುವಿಗೆ ಸಂಚು ರೂಪಿಸಿದರು.
ಸಮುದ್ರದಲ್ಲಿ ಹಡಗನ್ನು ಮುನ್ನಡೆಸಲಾಗದ ಈ ಸಂದರ್ಭದಲ್ಲಿ ಇದೊಂದು ದೊಡ್ಡ ತಂತ್ರವೇ ಆಗಿತ್ತು. ಸಮುದ್ರದಲ್ಲಿ ಹಡಗನ್ನು ಚಲಾಯಿಸುವುದಕ್ಕೆ ಬದಲಾಗಿ ಬೆಟ್ಟಗಳಲ್ಲಿ ಚಲಾಯಿಸಿದರು. ಅದಕ್ಕಾಗಿ ಮುತ್ತಿನಾಕೃತಿಯ ಸೌದೆಗಳನ್ನು ನೆಲದ ಮೇಲಿಟ್ಟು ಅದಕ್ಕೆ ಎಣ್ಣೆಯನ್ನು ಸವರಿ ಅದರ ಮೇಲೆ ಯುದ್ಧನೌಕೆಗಳನ್ನು ಚಲಾಯಿಸಿ ಕೋಟೆಗಳ ಸಮೀಪಕ್ಕೆ ಬಂದು ಕಾನ್ಸ್ ಸ್ಟಾಂಟಿನೋಪಲ್ ವಶಪಡಿಸಿಕೊಂಡರು.)
ಬೆರಳುಗಳ ಮೂಲಕ ಮಣಿಗಳನ್ನು ಜಾರಿಸುವ ವಿಧಾನವು ಒಂದು ರೀತಿಯ ಲಯಬದ್ಧ ಮತ್ತು ಶಾಂತ ಪರಿಣಾಮವನ್ನು ಮನದಲ್ಲಿ ಬೀರುತ್ತವೆ.

ಟ್ರೀ ರೆಸಿನ್ ಅಂಬರ್

ಪ್ರಾರ್ಥನಾ ಮಣಿಗಳನ್ನು ತಯಾರಿಸಲು ಬಳಸುವ ವಸ್ತುಗಳು ಕೂಡ ವಿಭಿನ್ನವಾಗಿದೆ. ಮರ, ಎಲುಬು, ಅಂಬರ್, ಚಿನ್ನ, ಬೆಳ್ಳಿ ಹಾಗೂ ವಿಭಿನ್ನ ರೀತಿಯ ಅಮೂಲ್ಯವಾದ ಕಲ್ಲುಗಳನ್ನು ಬಳಸಲಾಗುತ್ತದೆ.
ಕರಕುಶಲ ಕರ್ಮಿಗಳ ಪ್ರಕಾರ ಹೆಚ್ಚು ಆದ್ಯತೆ ಇರುವ ವಸ್ತು ಶಿಲಾರೂಪದಲ್ಲಿರುವ “ಟ್ರೀ ರೆಸಿನ್” ಅಂಬರ್ ಆಗಿದೆ. ಇವುಗಳು ರೋಗವನ್ನು ಗುಣಪಡಿಸವ ಶಕ್ತಿಯನ್ನೂ ಹೊಂದಿದೆ ಮತ್ತು ಅದು ಕಿತ್ತಳೆ ಬಣ್ಣದ ಮೃದುವಾದ ಮೇಲ್ಮೈಯನ್ನು ಹೊಂದಿರುವುದರಿಂದ ಪ್ರೀತಿಯನ್ನು ಹುಟ್ಟಿಸುವ ಶಕ್ತಿ ಕೂಡ ಇದಕ್ಕಿದೆ ಎಂಬ ನಂಬಿಕೆಯು ಜನರೆಡೆಯಲ್ಲಿದೆ. ಎಂತಲೇ ಅವುಗಳಿಗೆ ಬೇಡಿಕೆ ಹೆಚ್ಚಿದೆ. ಮಾನಸಿಕ ಒತ್ತಡವನ್ನು ನಿಭಾಯಿಸಲು “ಎಬೋನಿ(ಕಪ್ಪುಮರ)” ಯಿಂದ ತಯಾರಿಸಿದ ತಸ್ಬೀಹನ್ನು ಶಿಫಾರಸು ಮಾಡಲಾಗಿದೆ. ಅದೇ ರೀತಿ ‘ಅಗರ್‌ವುಡ್’ (ಒಂದು ಸುಗಂಧಭರಿತ ಮರ) ನಿಂದ ತಯಾರಿಸಿದ ಮಣಿಗಳು ಅವುಗಳ ಸುವಾಸನೆಯಿಂದ ಜನಪ್ರಿಯವಾಗಿದೆ.

ತಸ್ಬೀಹ್ ಮಾಲೆಗಳ ತಯಾರಿ
ತಸ್ಬೀಹ್ ಮಣಿಗಳನ್ನು ಸಣ್ಣದಾದ ಚರಕಿಯಂತ್ರ (lathe)ದ ಸಹಾಯದಿಂದ ತಯಾರಿಸಲಾಗುತ್ತದೆ. ಆ ಯಂತ್ರಗಳು ಸರಳ ಹಾಗೂ ತೆಳುವಾದ ವಸ್ತುಗಳನ್ನು ಅಗತ್ಯವಾದ ರೀತಿಯಲ್ಲಿ ಕ್ರಮಬದ್ಧವಾಗಿ ನಿರ್ಮಿಸಲು ಹೆಚ್ಚು ಸಮರ್ಥವಾಗಿದೆ. ಸಾಮಾನ್ಯವಾಗಿ ಈ ಯಂತ್ರಗಳನ್ನು ಸಣ್ಣ ಗುಡಿಕೈಗಾರಿಕೆ ಕಾರ್ಮಿಕರು ತಯಾರಿಸುತ್ತಾರೆ. ನಿರ್ಮಾಣಕ್ಕಾಗಿ ಆಯ್ಕೆ ಮಾಡಿದ ವಸ್ತುಗಳಿಗೆ ಮೊದಲು ರಂಧ್ರಗಳನ್ನು ಕೊರೆದು, ಬೇಕಾದ ಆಕಾರಕ್ಕೆ ಕತ್ತರಿಸಲಾಗುತ್ತದೆ. ನಂತರ ಗೋಳಾಕಾರ, ಸಮತಟ್ಟಾದ ಗೋಳಾಕಾರ, ರತ್ನಗಳ ಆಕಾರಗಳಲ್ಲಿ ಮಣಿಗಳನ್ನು ತಯಾರಿಸುತ್ತಾರೆ.
99 ಮಣಿಗಳಿರುವ ತಸ್ಬೀಹ್ ಮಾಲೆಗಾಗಿ ಕುಶಲಕರ್ಮಿಗಳು 110 ರಿಂದ120 ವರೆಗೆ ಇರುವ ಮಣಿಗಳನ್ನು ತಯಾರಿಸುತ್ತಾರೆ. ನಂತರ ಹೊಂದಿಕೆ ಆಗುವುದನ್ನು ಆಯ್ಕೆ ಮಾಡಿ ಉಳಿದ ಮಣಿಗಳನ್ನು 33 ಮಣಿಗಳ ತಸ್ಬೀಹ್ ತಯಾರಿಕೆಗೆ ಮೀಸಲಿಡುತ್ತಾರೆ. ನಂತರ ಇತರ ಭಾಗಗಳನ್ನು ತಯಾರಿಸುತ್ತಾರೆ. ನಂತರ ಜಪಮಣಿಯ ಇತರ ಭಾಗಗಳನ್ನು ನಿರ್ಮಿಸಲಾಗುತ್ತದೆ(nisane). ಪ್ರತೀ 33 ಮಣಿಗಳನ್ನು ಗುರುತಿಸಲು ಒಂದು disc, ಹಾಗೂ 7ನೇ ಸ್ಥಾನವನ್ನು ಗುರುತಿಸಲು ತೆಳುವಾದ ಮಣಿಯನ್ನು (the pul) ಮಾಲೆಯ ಆರಂಭದಲ್ಲಿ ಕೊಂಚ ಉದ್ದದ ತುಂಡು (imame), ತುದಿಯಲ್ಲಿ ತಲೆಹೂವು (the tepelik) ಇರುತ್ತದೆ. ಇವೆಲ್ಲವೂ ಮಾಲೆಯ ರಚನೆಗಳು. ನಂತರ ಅದನ್ನು ಸುಂದರವಾಗಿ ಜೋಡಿಸಲಾಗುತ್ತದೆ.
ಅತ್ಯಂತ ಉತ್ತಮವಾದ ತಸ್ಬೀಹ್ ಸಮಾನ ಗಾತ್ರದ ಮಣಿಗಳನ್ನು ಹೊಂದಿರುತ್ತದೆ. ಕೆಲವು ಮಣಿಗಳನ್ನು ದೊಡ್ಡ ಮಣಿಯಿಂದ ಚಿಕ್ಕ ಮಣಿಯವರೆಗೆ ಜೋಡಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಅವುಗಳನ್ನು ರೇಷ್ಮೆ ದಾರದಲ್ಲಿ ಕಟ್ಟಲಾಗುತ್ತಿತ್ತು. ಆದರೆ ಈ ಕಾಲದಲ್ಲಿ ಬಣ್ಣ ಬಳಿದ ನೈಲಾನ್ ದಾರಗಳನ್ನು ಉಪಯೋಗಿಸಲಾಗುತ್ತದೆ. ಕೊನೆಯದಾಗಿ ಮಣಿಗಳನ್ನು ಕೆತ್ತನೆ ಮಾಡಿ, ಬರಹಗಳಿಂದ ಅಲಂಕರಿಸಿದ ದಾರದಲ್ಲಿ ಪೋಣಿಸಲಾಗುತ್ತದೆ.

ಚರಕಿಯಂತ್ರ (lathe)

ಕೈಯಿಂದ ತಯಾರಿಸಲ್ಪಡುವ ತಸ್ಬೀಹ್ ಮಾಲೆಗಳನ್ನು ಪೂರ್ಣಗೊಳಿಸಲು ಕನಿಷ್ಠ 3 ದಿನಗಳು ಬೇಕಾಗುತ್ತದೆ. ಕೆಲವು ಮಾದರಿಗಳನ್ನು (design) ಮುಗಿಸಲು ತಿಂಗಳುಗಳೇ ಬೇಕಾಗಬಹುದು. ಈ ಪ್ರಕ್ರಿಯೆಯ ನಡುವೆ ಕಾರ್ಮಿಕರ ಏಕಾಗ್ರತೆ ಮುಖ್ಯ ಎಂಬುದು ತಸ್ಬೀಹ್ ಉತ್ಪಾದಕರ ಅಭಿಪ್ರಾಯ. ಕಾರ್ಮಿಕರ ಪ್ರೀತಿ ಮತ್ತು ಅವರು ನೀಡುವ ಪ್ರಾಮುಖ್ಯತೆ ಅವುಗಳನ್ನು ಇನ್ನೂ ವಿಶೇಷವಾಗಿಸುತ್ತದೆ.
ತಸ್ಬೀಹ್ ನಿರ್ಮಾಣ ತುಂಬ ತಾಳ್ಮೆ ಬೇಡುವ ಕೆಲಸ. ಆದ್ದರಿಂದಲೇ 50 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಕುಶಲಕರ್ಮಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಈ ವ್ಯವಹಾರವನ್ನು ಮುಂದುವರಿಸುವ ಸಲುವಾಗಿ ಕರಕುಶಲ ತಸ್ಬೀಹ್ ಗಳಿಗೆ ಬದಲಾಗಿ ಪ್ಲಾಸ್ಟಿಕ್ ನಿಂದ ತಯಾರಿಸಲಾದ ತಸ್ಬೀಹಿಗೆ ಆದ್ಯತೆ ನೀಡಲಾಗುತ್ತಿದೆ. ಬಹುಶಃ ಆಶ್ಚರ್ಯಕರವಾದ ವಿಷಯವೇನೆಂದರೆ, ಬೆಲೆಬಾಳುವ ಹಾಗೂ ಅಮೂಲ್ಯವಾದ ತಸ್ಬೀಹ್ ಬಹಳ ಸರಳವಾಗಿರುತ್ತದೆ. ತಸ್ಬೀಹ್ ಮಾಲೆಯನ್ನು ಕಣ್ಣುಕೋರೈಸುವ ಆಭರಣವಾಗಿಸದೆ ಜೀವನ ಸಂಗಾತಿಯಾಗಿ ಪರಿಗಣಿಸಲಾಗುತ್ತದೆ.
ಆಟೊಮಾನ್ ಟರ್ಕರ ಆಡಳಿತದಲ್ಲಿ ಕರಕುಶಲ ಕಲೆಯಲ್ಲಿ ತಸ್ಬೀಹ್ ತಯಾರಿಗೆ ಪ್ರಾಮುಖ್ಯತೆ ಇತ್ತು. ಸುಂದರವಾದ ತಸ್ಬೀಹ್ ತಯಾರಿಸುವ ದೇಶ ಈಗಲೂ ತುರ್ಕಿ ದೇಶವಾಗಿದೆ. ಅವರು kamane ಎಂಬ ಚರಕಿ ಯಂತ್ರದ ಸಹಾಯದಿಂದ ತಸ್ಬೀಹ್ ಮಾಲೆ ತಯಾರಿಸುತ್ತಾರೆ. ಆದರೆ 1965 ರ ಆಧುನೀಕರಣದ ಪರಿಣಾಮವಾಗಿ ಎಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರೈಸ್ಡ್ ಯಂತ್ರಗಳು ಹೆಚ್ಚಾದ ಕಾರಣ ಕರಕುಶಲ ಕಾರ್ಖಾನೆಗಳು ಕಡಿಮೆಯಾದವು.
ನೀವು ನಿಮ್ಮ ಪ್ರೀತಿಪಾತ್ರರಿಗೆ ಅರ್ಥಪೂರ್ಣವಾದ ಉಡುಗೊರೆಯನ್ನು ಕೊಡುವುದಾದರೆ, ಕೈಯಿಂದ ತಯಾರಿಸಲ್ಪಡುವ ತಸ್ಬೀಹ್ ಮಾಲೆ ಬಹಳ ಉತ್ತಮವಾದುದು.

ಮೂಲ: ಲಿನ್ ವಾರ್ಡ್
ಕನ್ನಡಕ್ಕೆ: ಎಂ. ಜೆ. ಯಾಸೀನ್ ಸಿದ್ಧಾಪುರ

ರೂಮಿ, ಧರ್ಮ ಮತ್ತು ಪಾಶ್ಚಾತ್ಯ ಅನುವಾದಕರು

ಕೆಲವು ವರ್ಷಗಳ ಹಿಂದೆ; ನಟಿ ಗ್ಲೇನತ್ ಪಾಲ್ಟ್ರೋ ಗೆ ವಿಚ್ಛೇದನ ನೀಡಿದ ಬಳಿಕ ಕೋಲ್ಡ್ ಪ್ಲೇ ಗಾಯಕ ಕ್ರಿಸ್ ಮಾರ್ಟಿನ್ ಖಿನ್ನತೆಗೆ ಒಳಗಾಗಿದ್ದರು. ಕ್ರಿಸ್ ಮಾರ್ಟಿನ್ ಗೆ ಒಬ್ಬ ಗೆಳೆಯನಿದ್ದ. ಆತ ಮಾರ್ಟಿನ್ ನನ್ನು ಖಿನ್ನತೆಯಿಂದ ಹೊರತರಲು ಒಂದು ಪುಸ್ತಕ ತಂದು ಕೊಡುತ್ತಾನೆ. ಅದು ಹದಿಮೂರನೇ ಶತಮಾನದ ಪರ್ಷಿಯನ್ ಸೂಫಿ ಕವಿ ಜಲಾಲುದ್ದೀನ್ ರೂಮಿಯ ಕಾವ್ಯ ಸಂಕಲನ. ಕೋಲ್ಮನ್ ಬಾರ್ಕ್ಸ್ ಅದನ್ನು ಅಮೆರಿಕನ್ ಇಂಗ್ಲೀಷ್ ಗೆ ರೂಪಾಂತರಿಸಿದ್ದ. ರೂಮಿಯ ಈ ಕವಿತೆಗಳು ತನ್ನ ಬದುಕನ್ನೇ ಬದಲಾಯಿಸಿದವು ಎಂದು ಒಂದು ಸಂದರ್ಶನದಲ್ಲಿ ಮಾರ್ಟಿನ್ ಹೇಳುತ್ತಾನೆ. ಕೋಲ್ಡ್ ಪ್ಲೇಯ ಹೊಸ ಆಲ್ಬಂ ಟ್ರಾಕ್ ನಲ್ಲಿ ರೂಮಿಯ ಕವಿತೆಗಳಲ್ಲಿ ಒಂದು ಕವಿತೆಯನ್ನು ಮಾರ್ಟಿನ್ ಹಾಡುತ್ತಾನೆ;

‘ಮನುಷ್ಯ ಜೀವನ
ಅತಿಥಿ ಭವನ
ಪ್ರತೀ ಪ್ರಭಾತಕೂ
ಬರುವನು ಒಬ್ಬ
ಹೊಸ ಅತಿಥಿ
ಸಂತೋಷ, ದುಃಖ
ನೀಚತನ
ಕೆಲವೊಮ್ಮೆ ವಿವೇಕ
ಅಲ್ಲಿಯ
ಅನಿರೀಕ್ಷಿತ ಅತಿಥಿ’
ಮಡೋನ್ನ, ಟಿಲ್ಡಾ ಸ್ವಿಂಟನ್ ಮೊದಲಾದ ಸೆಲೆಬ್ರಿಟಿಗಳ ಆಧ್ಯಾತ್ಮಿಕ ಪಯಣಕ್ಕೆ ರೂಮಿ ಸಹಾಯ ಮಾಡಿದ್ದಾರೆ. ಇವರಲ್ಲಿ‌ ಹೆಚ್ಚಿನವರು ತಮ್ಮ ಕಲಾ ಸಾಧನೆಗೆ ರೂಮಿಯ ಕವಿತೆಗಳನ್ನು ಬಳಸಿಕೊಂಡಿದ್ದಾರೆ.
ರೂಮಿಯ ಕವಿತೆಗಳಲ್ಲಿ ಕೆಲವು ಸಾಲುಗಳು ಜನರನ್ನು ಮೋಟಿವೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ. ಮುಖ್ಯವಾಗಿ ಇವು;

‘ಪ್ರತೀ ಹೊಡೆತಕ್ಕೂ
ತಾಳ್ಮೆಗೆಟ್ಟರೆ
ಹೊಳಪು ಮೂಡುವುದೆಂದು?’

‘ಉಳಿ ಬಳಸಿ
ಪ್ರತೀ ಕ್ಷಣವೂ
ನನ್ನ ವಿಧಿಯ ನಾನೇ ರೂಪಿಸಿದೆ
ನಾನೇ
ನನ್ನ ಆತ್ಮದ ಅಕ್ಕಸಾಲಿಗ’

ಬಾರ್ಕ್ಸ್ ನ ಅನುವಾದದಲ್ಲಿ ಇಂಗ್ಲೀಷ್ ಜಗತ್ತನ್ನು ಪ್ರವೇಶಿಸಿದ ರೂಮಿಯ ಈ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಲ್ಲಿನ ಒಂದು ಸಾಲನ್ನು ಅಮೆರಿಕದ ಪುಸ್ತಕದ ಅಂಗಡಿಯ ಕಪಾಟಿನಲ್ಲಿ ಕೆತ್ತಲಾಗಿದೆ. ಅಲ್ಲಿನ ವಿವಾಹ ಸಮಾರಂಭಗಳಲ್ಲೂ ರೂಮಿಯ ಈ ಹಾಡುಗಳನ್ನು ಹಾಡಲಾಗುತ್ತದೆ. ಅಮೆರಿಕದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಕವಿ ರೂಮಿಯಂತೆ! ಅನುಭಾವಿ, ಸಂತ, ಸೂಫಿ, ಜ್ಞಾನಿ ಎಂಬೀ ವಿಶೇಷಣಗಳು ರೂಮಿಗಿವೆ.

ರೂಮಿಯ ಧರ್ಮಗ್ರಂಥ:
ಆಶ್ಚರ್ಯದ ಸಂಗತಿ ಎಂದರೆ, ಜೀವನುದ್ದಕ್ಕೂ ಕುರ್ ಆನ್ ಹಾಗೂ ಇಸ್ಲಾಮಿನ ಪ್ರತಿಪಾದಕರಾಗಿದ್ದರೂ ಪಾಶ್ಚಾತ್ಯರು ರೂಮಿಯನ್ನು ಮುಸ್ಲಿಮ್ ಎಂದು ಗುರುತಿಸುವುದು ಬಹಳ ಕಡಿಮೆ. ರೂಮಿ ತನ್ನ ಜೀವನದ ಕೊನೆಯ ಕಾಲಘಟ್ಟದಲ್ಲಿ ರಚಿಸಿದ ಮಸ್ನವಿಯ ಕವನಗಳನ್ನೇ ಮಾರ್ಟಿನ್ ತನ್ನ ಆಲ್ಬಂಗೆ ಬಳಸಿಕೊಂಡಿದ್ದಾರೆ. ಮಸ್ನವಿ ಆರು ಭಾಗಗಳನ್ನೊಳಗೊಂಡ, ಐವತ್ತು ಸಾವಿರಕ್ಕೂ‌ ಮಿಕ್ಕ ದ್ವಿಪದಿಗಳಿರುವ ಕವನಗಳ ಸಂಗ್ರಹ. ಇದು ಪರ್ಷಿಯನ್ ಭಾಷೆಯಲ್ಲಿ ರಚನೆಗೊಂಡಿದೆಯಾದರೂ ಇದರಲ್ಲಿ‌ ಪ್ರಮುಖ ಮುಸ್ಲಿಮ್ ಗ್ರಂಥಗಳ ಅರಬಿ ಉಲ್ಲೇಖಗಳು ಧಾರಾಳ ಇವೆ. ಜೊತೆಗೆ ಕುರ್ ಆನ್ ನ ನೀತಿಕಥೆಗಳೂ ಸಹ ಸಾಕಷ್ಟಿವೆ. ಎಷ್ಟರಮಟ್ಟಿಗೆ ಎಂದರೆ, ಇದನ್ನು ಕೆಲವರು ಅತಿರೇಕಕ್ಕೆ ಹೋಗಿ‌ ‘ಪರ್ಷಿಯನ್ ಕುರ್ ಆನ್’ ಎಂದೂ ಕರೆಯುತ್ತಾರೆ.
ಮೇರಿಲ್ಯಾಂಡ್ ಯುನಿವರ್ಸಿಟಿಯ ಪರ್ಷಿಯನ್ ಸ್ಟಡೀಸ್ ನ ಪ್ರೊಫೆಸರ್ ಫೇಠ್ ಮೆಹ್ ಕೇಶವಾರ್ಝ್ ಒಮ್ಮೆ ನನ್ನೊಂದಿಗೆ ಹೇಳಿದರು; ‘ತನ್ನ ಕವಿತೆಗಳಲ್ಲಿ ರೂಮಿ ಅಷ್ಟೊಂದು ಸುಂದರವಾಗಿ ಕುರ್ ಆನ್ ಸೂಕ್ತಗಳನ್ನು ಬಳಸಿಕೊಳ್ಳುವುದನ್ನು ನೋಡಿದರೆ ಅವರಿಗೆ ಕುರ್ ಆನ್ ಕಂಠಪಾಠವಾಗಿರಬೇಕು ಅನಿಸುತ್ತದೆ’.

ಇಸ್ಲಾಮ್ ಮತ್ತು ಕುರ್ ಆನ್ ಮಸ್ನವಿಯ ಬೇರುಗಳ ಬೇರು ಎಂದು ಸ್ವತಃ ರೂಮಿಯೇ ಹೇಳಿಕೊಂಡಿದ್ದಾರೆ. ಆದರೆ, ಅಮೆರಿಕದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಅನುವಾದ ಕೃತಿಗಳಲ್ಲಿ‌ ರೂಮಿಗೂ ಇಸ್ಲಾಮ್ ಗೂ ನಡುವೆ ಸಂಬಂಧವೇ ಕಾಣುವುದಿಲ್ಲ. ‘ರೂಮಿಯ ಮೇಲಿನ ಪಾಶ್ಚಾತ್ಯರ ಪ್ರೀತಿ ಅನನ್ಯವಾದುದೇನೋ ನಿಜ. ಆದರೆ, ಧರ್ಮ ಮತ್ತು ಸಂಸ್ಕೃತಿಯನ್ನು ಬೇರ್ಪಡಿಸಿ ರೂಮಿಯನ್ನು ಅವರು ಪ್ರಸ್ತುತಪಡಿಸುತ್ತಿರುವುದೇ ನೀವು ತೆರಬೇಕಾದ‌ ಬೆಲೆ’ ಎಂದು ರುಟ್ಗರ್ಸ್ ನಲ್ಲಿ ಪರಂಪರಾಗತ ಸೂಫಿಸಂ ಬಗ್ಗೆ ಅಧ್ಯಯನ ಮಾಡುತ್ತಿರುವ ಜಾವಿದ್ ಮೊಜದ್ದಿದ್ ಒಮ್ಮೆ ನನ್ನೊಂದಿಗೆ ಆತಂಕ ವ್ಯಕ್ತಪಡಿಸಿದ್ದರು
ಹದಿಮೂರನೇ ಶತಮಾನದ ಆರಂಭದಲ್ಲಿ ಇಂದಿನ ಅಫ್ಘಾನಿಸ್ತಾನದಲ್ಲಿ ರೂಮಿ ಜನಿಸುತ್ತಾರೆ. ಇಂದಿನ ತುರ್ಕಿಯಲ್ಲಿರುವ ಖೋನ್ ಯಗೆ ಅವರು ಮುಂದೆ ಕುಟುಂಬದೊಂದಿಗೆ ಸ್ಥಳಾಂತರಗೊಳ್ಳುತ್ತಾರೆ. ಅವರ ತಂದೆ ಒಬ್ಬ ವಿದ್ವಾಂಸರೂ, ಪ್ರವಚನಗಾರರೂ ಆಗಿದ್ದರು. ಸೂಫಿಸಂ ಅನ್ನು ರೂಮಿಗೆ ಪರಿಚಯಿಸಿದ್ದೇ ಅವರ ತಂದೆ. ನಂತರ ರೂಮಿ ಸಿರಿಯಕ್ಕೆ ಹೋಗಿ ಧರ್ಮಶಾಸ್ತ್ರ ಕಲಿಯುತ್ತಾರೆ. ಅಲ್ಲೇ ಅವರು ಪರಂಪರಾಗತ ನೀತಿಸಂಹಿತೆಯನ್ನು ಕೂಡ ವ್ಯಾಸಂಗ ಮಾಡುತ್ತಾರೆ. ಮುಂದೆ ಖೋನ್‌ಯ ದಲ್ಲೇ ಧರ್ಮಗುರುವಾಗಿ ನೇಮಕಗೊಳ್ಳುತ್ತಾರೆ. ತಮ್ಮ ಆತ್ಮೀಯ ಗುರು ‘ಶಂಸ್ ಎ ತಬ್ರೀಝ್’ ರನ್ನು ಅವರು ಭೇಟಿಯಾಗುವುದು ಇಲ್ಲಿರುವಾಗಲೇ. ಅವರಿಬ್ಬರ ನಡುವಿನ ಆತ್ಮಬಂಧ ಬಹುಚರ್ಚಿತ ವಿಷಯ.

ರೂಮೀಸ್ ಸಿಕ್ರೇಟ್:
ರೂಮಿಯ ಧರ್ಮಾಚರಣೆ ಹಾಗೂ ಕವಿತೆಗಳ ಮೇಲೆ ಶಂಸ್ ಅಲ್ ತಬ್ರೀಝ್ ಬೀರಿರುವ ಪ್ರಭಾವ ತರ್ಕಾತೀತವಾದುದು. ಏಕದೇವ ವಿಶ್ವಾಸ, ಕುರ್ ಆನ್ ಮೊದಲಾದ ವಿಷಯಗಳ ಬಗ್ಗೆ ಇಬ್ಬರ ನಡುವೆ ಚರ್ಚೆಗಳು ನಡೆದಿದೆ ಎಂದು ಬ್ರಾಡ್ ಗ್ರೂಚ್ ರೂಮಿಯ ಜೀವನ ಚರಿತ್ರೆಯಾದ ‘ರೂಮೀಸ್ ಸೀಕ್ರೆಟ್’ ಎಂಬ ಕೃತಿಯಲ್ಲಿ ಹೇಳಿದ್ದಾರೆ. ಸೂಫಿಸಂನಿಂದ ಲಭಿಸಿದ ಆತ್ಮಜ್ಞಾನದ ಲಹರಿಯಲ್ಲಿ ಉಂಟಾದ ದೈವಿಕ ಪ್ರೇಮವನ್ನು ಇಸ್ಲಾಮಿನ ನೀತಿ ಸಂಹಿತೆಗಳೊಂದಿಗೆ ಹಾಗೂ ಶಂಸ್ ನಿಂದ ಲಭಿಸಿದ ಚಿಂತನೆಗಳೊಂದಿಗೆ ಬೆರೆಸಿ, ರೂಮಿ ಕಾವ್ಯ ಕಟ್ಟುತ್ತಾರೆ.

ಒಮ್ಮೆ ಕೇಶವಾರ್ಝ್ ನನ್ನೊಂದಿಗೆ ಹೇಳಿದರು; ‘ರೂಮಿಯ ಮೇಲಿನ ಈ ಅಸಾಧಾರಣ ಪ್ರಭಾವವು ಅವರನ್ನು ಸಮಕಾಲೀನ ಕವಿಗಳಿಂದ ಅನನ್ಯಗೊಳಿಸಿತು. ಸುನ್ನಿಗಳಾದ ಸಲ್ಜೂಕ್ ಗಳು, ಕ್ರೈಸ್ತರು, ಮುಸ್ಲಿಮ್ ವಿದ್ವಾಂಸರು ಹಾಗೂ ಸೂಫಿಗಳನ್ನೊಳಗೊಂಡ ಕಾಸ್ಮೋಪಾಲಿಟನ್ ಖೋನ್‌ಯಾ ದಲ್ಲಿ ತನ್ನನ್ನು‌ ಅನುಸರಿಸುವ ದೊಡ್ಡದೊಂದು ಸಮೂಹವನ್ನು ಸೃಷ್ಟಿಸಲು ರೂಮಿಗೆ ಸಾಧ್ಯವಾಯಿತು. ರೂಮಿಯ ಮೇಲೆ ಪ್ರಭಾವ ಬೀರಿರುವ ರಾಜಕೀಯ ಸಂದರ್ಭಗಳು ಹಾಗೂ ಧಾರ್ಮಿಕ ಪಠ್ಯಗಳನ್ನು ಗ್ರೂಚ್ ತನ್ನ ‘ರೂಮಿಯ ರಹಸ್ಯ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ರೂಮಿ ಧಾರ್ಮಿಕ ಹಿನ್ನೆಲೆಯ ಕುಟುಂಬದಿಂದ ಬಂದವರು. ತಮ್ಮ‌ ಜೀವನದುದ್ದಕ್ಕೂ‌ ದೈನಂದಿನ ಪ್ರಾರ್ಥನೆ, ಉಪವಾಸಗಳನ್ನು ಎಂದೂ ಕೈಬಿಟ್ಟವರಲ್ಲ ಎಂದು ಗ್ರೂಚ್ ಬರೆದಿದ್ದಾರೆ. ಆದರೆ, ಗ್ರೂಚ್ ನ ಪುಸ್ತಕದಲ್ಲಿ ಕೆಲವು ಗೊಂದಲಗಳೂ ಇವೆ. ರೂಮಿಯ ಮುಸ್ಲಿಮ್ ಐಡೆಂಟಿಟಿಯನ್ನು ಮಂಕಾಗಿಸುವ ಪ್ರಯತ್ನವನ್ನು ಗ್ರೂಚ್ ಮಾಡುತ್ತಾರೆ. ಈ ರೀತಿಯ ಪ್ರಯತ್ನಗಳ ಮೂಲಕ ರೂಮಿಯ ಇಸ್ಲಾಮಿಕ್ ಚಿಂತನೆಗಳನ್ನು ನಿರಾಕರಿಸಲಾಗುತ್ತಿದೆ. ಯಹೂದಿಗಳು ಹಾಗೂ ಕ್ರೈಸ್ತರನ್ನು ಕುರ್ ಆನ್ ‘ಗ್ರಂಥದ ಜನರು(ಅಹ್ಲ್ ಕಿತಾಬ್)’ ಎಂದು ಕರೆಯುತ್ತದೆ. ಈ ಮೂಲಕ ಕುರ್ ಆನ್ ವಿಶ್ವೈಕ್ಯತೆಗೆ ನಾಂದಿ ಹಾಡುತ್ತದೆ ಎಂದು ಮುಜದ್ದಿದ್ ಹೇಳುತ್ತಾರೆ. ಎಲ್ಲರೂ ಮೆಚ್ಚುವ ರೂಮಿಯ ವಿಶ್ವೈಕ್ಯತೆಯ ಮೂಲ‌ ಇದೇ ಆಗಿದೆ.

ಮರುಭೂಮಿಯ ಧರ್ಮ ಮತ್ತು ರೂಮಿ:
ಕೋಲ್ಡ್ ಪ್ಲೇಯಲ್ಲಿ ಬರುವುದಕ್ಕೂ ಮೊದಲೇ ಪಾಶ್ಚಾತ್ಯರು ರೂಮಿಯ ಕವಿತೆಗಳಿಂದ ‘ಇಸ್ಲಾಮ’ನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿದ್ದಾರೆ. ವಿಕ್ಟೋರಿಯನ್ ಕಾಲಘಟ್ಟದಿಂದಲೇ ಪಾಶ್ಚಾತ್ಯರು ರೂಮಿಯ ಕವಿತೆಗಳಿಂದ ಇಸ್ಲಾಮಿನ ಬೇರುಗಳನ್ನು ಬೇರ್ಪಡಿಸಲು ಆರಂಭಿಸಿದರೆಂದು ಡ್ಯೂಕ್ ಯುನಿವರ್ಸಿಟಿಯ ಇಸ್ಲಾಮಿಕ್ ಸ್ಟಡೀಸ್ ಆ್ಯಂಡ್ ಮಿಡ್ಲ್ ಈಸ್ಟರ್ನ್ ಪ್ರೋಪೆಸರ್ ಹಾಮಿದ್ ಸಫಿ ಹೇಳುತ್ತಾರೆ.
ಪಾಶ್ಚಾತ್ಯ ಅನುವಾದಕರಿಗೆ ಹಾಗೂ ಅಲ್ಲಿಯ ಧರ್ಮ ವಿದ್ವಾಂಸರಿಗೆ ಅಸಾಧಾರಣ ಧಾರ್ಮಿಕತೆ ಹಾಗೂ ನೀತಿ ಸಂಹಿತೆಯನ್ನೊಳಗೊಂಡ ‘ಮರುಭೂಮಿಯ ಧರ್ಮ’ ದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ರೂಮಿ, ಹಾಫಿಝ್ ಮೊದಲಾದ ಕವಿಗಳ ಕೃತಿಗಳಲ್ಲಿನ ‘ಧಾರ್ಮಿಕತೆಯ’ ಜೊತೆಗೂ ಅವರಿಗೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಸಫಿ ಹೇಳುತ್ತಾರೆ; ‘ಇಸ್ಲಾಮಿನ ಕಾರಣದಿಂದಲ್ಲ; ಅದರೊಂದಿಗಿನ ಶತ್ರುತ್ವದಿಂದ ಇವರು ಆಧ್ಯಾತ್ಮಿಕತೆಗೆ ಬಂದರು’.
ಇಂತಹ ಸಂದರ್ಭದಲ್ಲಿ ಕಾನೂನಾತ್ಮಕ ತಾರತಮ್ಯದಿಂದ ಮುಸ್ಲಿಮರು ಏಕಾಂಗಿಯಾದರು. 1760ರ ಕಾನೂನಿನ ಅನುಸಾರ ಯುಎಸ್ ಗೆ ಬರುತ್ತಿದ್ದ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು.
ಇದಾಗಿ ಒಂದು ಶತಮಾನದ ಬಳಿಕ ಅಮೆರಿಕದ ಸುಪ್ರೀಂ ಕೋರ್ಟ್ ಹೇಳಿತು; ಮುಸ್ಲಿಮರು ಎದುರಾಳಿಗಳೊಂದಿಗೆ ವಿಶೇಷವಾಗಿ ಕ್ರೈಸ್ತರೊಂದಿಗೆ ವಿಪರೀತ ಧ್ವೇಷ ಸಾಧಿಸುತ್ತಾರೆ’.
ಇಹಲೋಕದ ಮೋಹ ತ್ಯಜಿಸಿ, ದೇವನನ್ನು ತಿಳಿಯಲು ಹಾಗೂ ಅವನೊಂದಿಗೆ‌ ಸೇರಲು ಪ್ರಯತ್ನಿಸುವ, ಇತರರನ್ನು ಗಮನಿಸದೆ ಆಧ್ಯಾತ್ಮಿಕ ಚಿಂತನೆಗಳಿಗೆ ಸ್ವಯಂ ಅರ್ಪಿಸಿಕೊಳ್ಳುವರೊಂದಿಗೆ ಮಸ್ನವಿ ಮಾತನಾಡುತ್ತದೆ ಎಂದು ಜೇಮ್ಸ್ ರೆಡ್ ಹೇಸ್ ತನ್ನ ಮಸ್ನವಿಯ ಅನುವಾದದ ಮುನ್ನುಡಿಯಲ್ಲಿ ಬರದಿದ್ದಾರೆ. ಆದರೆ, ಇಂದಿಗೂ ಪಶ್ಚಿಮ ದೇಶಗಳಿಗೆ ಮಾತ್ರ ರೂಮಿ ಬೇರೆ, ಇಸ್ಲಾಮ್ ಬೇರೆ.
ಇಪ್ಪತ್ತನೇ ಶತಮಾನದಲ್ಲಿ ಆರ್.ಎ.ನಿಕಲ್ ಸನ್, ಎ.ಜೆ.ಆರ್ಬರಿ ಹಾಗೂ ಆ್ಯನ್ ಮೇರಿ ಶಿಮ್ಮಲ್ ಮೊದಲಾದ ರೂಮಿಯ ಅನುವಾದಕರು ಇಂಗ್ಲೀಷ್ ಭಾಷೆಯಲ್ಲಿ‌ ರೂಮಿಯ ಅಸ್ತಿತ್ವವನ್ನು ಗಟ್ಟಿಗೊಳಿಸಿದರು. ಆದರೆ, ಒಬ್ಬ ಬಾರ್ಕ್ಸ್ ಮಾತ್ರ ರೂಮಿಗೆ ಅಪಾರ ಸಂಖ್ಯೆಯ ಓದುಗರನ್ನು ದೊರಕಿಸಿಕೊಟ್ಟ. ಬಾರ್ಕ್ಸ್ ಅನುವಾದಕನೋ, ವ್ಯಾಖ್ಯಾನಕಾರನೋ ಅಲ್ಲ. ಕೊನೆಯ ಪಕ್ಷ ಆತನಿಗೆ ಪರ್ಷಿಯನ್ ಭಾಷೆ ಕೂಡ ತಿಳಿದಿರಲಿಲ್ಲ. ಆದರೆ, ಅವನು 19ನೇ ಶತಮಾನದ ಅನುವಾದವನ್ನು ಅಮೆರಿಕನ್ ಇಂಗ್ಲಿಷ್ ಆವೃತ್ತಿಗೆ ರೂಪಾಂತರಿಸಿದನಷ್ಟೇ.

ರೂಮಿಯ ಇಂಗ್ಲಿಷ್ ಅನುವಾದಗಳು:
ಬಾರ್ಕ್ಸ್ 1937ರ ಇಸವಿಯಲ್ಲಿ ಜನಿಸುತ್ತಾನೆ. ಅವನು ಬೆಳೆದದ್ದು ಟೆನೆಸ್ಸಿಯ ಚತ್ತನೂಗಾದಲ್ಲಿ. ಇಂಗ್ಲೀಷ್ ಸಾಹಿತ್ಯ‌ದಲ್ಲಿ ಪಿಎಚ್ ಡಿ ಮಾಡಿರುವ ಅವನ ಮೊದಲ ಕೃತಿ ‘ ದಿ ಜ್ಯೂಸ್’ 1971ರಲ್ಲಿ ಪ್ರಕಟವಾಗುತ್ತದೆ. ಅದೇ ದಶಕದಲ್ಲಿ‌ ಅವನಿಗೆ ಕವಿ ರಾಬರ್ಟ್ ಬ್ಲೇ ಯ ಮೂಲಕ ರೂಮಿಯ ಪರಿಚಯವಾಗುತ್ತದೆ. ‘ಇದನ್ನು ಅಮೆರಿಕನ್ ಇಂಗ್ಲೀಷ್ ಗೆ ರೂಪಾಂತರಿಸು’ ಎಂದು ಹೇಳಿ ಆರ್ಬರಿ ಅನುವಾದಿಸಿದ ರೂಮಿಯ ಕಾವ್ಯಗಳ ಒಂದು ಪ್ರತಿಯನ್ನು ರಾಬರ್ಟ್ ಬ್ಲೇ ಅವನಿಗೆ ಕೊಡುತ್ತಾನೆ. ಬಾರ್ಕ್ಸ್ ಇಸ್ಲಾಮಿಕ್ ಸಾಹಿತ್ಯವನ್ನು ಒಮ್ಮೆಯೂ ಅಧ್ಯಯನ ಮಾಡಿದವನಲ್ಲ. ಇತ್ತೀಚೆಗೆ ತನ್ನ ಮನೆಯಿರುವ ಜಾರ್ಜಿಯಾದಿಂದ ನನಗೆ ಕರೆ ಮಾಡಿ ಬಾರ್ಕ್ಸ್ ತನಗೊಂದು ಕನಸು ಬಿದ್ದಿರುವುದಾಗಿ ಹೇಳಿದ. ಕನಸಿನಲ್ಲಿ ಆತ ಒಂದು ನದಿಯ ಸಮೀಪದ ಕಡಿದಾದ ಬಂಡೆಯ ಮೇಲೆ ಮಲಗಿರುತ್ತಾನೆ. ಈ ವೇಳೆ ಬೆಳಕಿನ ವರ್ತುಲದಲ್ಲಿ ಆಗಂತುಕನೊಬ್ಬ ಪ್ರತ್ಯಕ್ಷನಾಗಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎನ್ನುತ್ತಾನೆ. ಆ ವ್ಯಕ್ತಿಯನ್ನು ಬಾರ್ಕ್ಸ್ ಹಿಂದೆಂದೂ ಕಂಡಿರುವುದಿಲ್ಲ. ಆದರೆ, ಮುಂದಿನ ವರ್ಷ ಆತನನ್ನು ಫಿಲಾಡೆಲ್ಪಿಯಾದ ಸಮೀಪದ‌ ಸೂಫಿ ಸಭೆಯಲ್ಲಿ ಭೇಟಿಯಾಗುತ್ತಾನೆ. ಆತ ಸಭೆಯ ನಾಯಕ. ಬ್ಲೇ ತನಗೆ ಕೊಟ್ಟ ವಿಕ್ಟೋರಿಯನ್ ಅನುವಾದವನ್ನು ಅಧ್ಯಯನ ಮಾಡಲು ಹಾಗೂ ರೂಪಾಂತರಿಸಲು ಬಾರ್ಕ್ಸ್ ಆರಂಭಿಸುತ್ತಾನೆ. ಆ ನಂತರ ಆತ ಹನ್ನೆರಡಕ್ಕೂ ಹೆಚ್ಚು ರೂಮಿ ಪುಸ್ತಕಗಳನ್ನು ಪ್ರಕಟಿಸುತ್ತಾನೆ.

ಬಾರ್ಕ್ಸ್ ತೆಗೆದುಕೊಂಡ ಸ್ವಾತಂತ್ರ್ಯ:
ನಮ್ಮ ಮಾತುಕತೆಯ ನಡುವೆ ಬಾರ್ಕ್ಸ್, “ರೂಮಿಯ ಕಾವ್ಯವೆಂದರೆ ಅದು ‘ಹೃದಯ ಭಂಡಾರದ ರಹಸ್ಯ ಕೀಲಿ ಕೈ. ಅದು ಅವರ್ಣನೀಯ” ಎಂದು ಹೇಳುತ್ತಾನೆ. ಈ ಅವರ್ಣನೀಯ ಸಂಗತಿಗಳನ್ನು ಹೇಳಲು ಬಾರ್ಕ್ಸ್ ರೂಮಿಯ ಕಾವ್ಯಗಳನ್ನು ರೂಪಾಂತರಿಸುವಾಗ ವಿಪರೀತ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಉದಾಹರಣೆಗೆ, ಇಸ್ಲಾಮಿನ ಉಲ್ಲೇಖಗಳನ್ನು ಅವನು ಸಂಪೂರ್ಣವಾಗಿ ಕೈಬಿಡುತ್ತಾನೆ. ಇಲ್ಲಿ ರೂಮಿಯ ‘ಲೈಕ್ ದಿಸ್‌’ ಎಂಬ ಪ್ರಸಿದ್ಧ ಕವಿತೆಯನ್ನು ಪರಾಮರ್ಶಿಸಬಹುದು. ಈ ಕವಿತೆಯ ಒಂದು ಸಾಲನ್ನು ಆರ್ಬರಿ ಮೂಲಕ್ಕೆ ನಿಷ್ಠನಾಗಿ ‘ಹೂರಿಗಳ ಬಗ್ಗೆ ನಿನ್ನಲ್ಲಿ ಯಾರಾದರು ಕೇಳುವುದಾದರೆ, ಮುಖಕ್ಕೆ ಮುಖ ಕೊಟ್ಟು ಹೇಳು, ಇದರಂತೆ’ ಎಂದು ಅನುವಾದಿಸುತ್ತಾನೆ. ಹೂರಿಗಳೆಂದರೆ, ಇಸ್ಲಾಮ್ ವಾಗ್ದಾನ ಮಾಡಿದ ಸ್ವರ್ಗದ ಕನ್ಯೆಯರು. ಬಾರ್ಕ್ಸ್ ತನ್ನ ರೂಪಾಂತರದಲ್ಲಿ ಈ ಪದವನ್ನು ಕೈಬಿಡುತ್ತಾನೆ, ಮಾತ್ರವಲ್ಲದೆ ಅದರ ಅಕ್ಷರಶಃ ಅನುವಾದವನ್ನು ಸಹ ಮಾಡುವುದಿಲ್ಲ. ಅವನು ರೂಪಾಂತರಿಸಿದ ಸಾಲು ಹೀಗಿದೆ. ‘ನಿನ್ನೊಂದಿಗೆ ಯಾರಾದರು ನಿನ್ನ ಲೈಂಗಿಕ ಇಚ್ಛೆಗಳ ಪರಿಪೂರ್ಣ ತೃಪ್ತಿ ಹೇಗಿರುತ್ತದೆ ಎಂದು ಕೇಳಿದರೆ ಮುಖ‌ ಎತ್ತಿ ಹೇಳು, ಇದರಂತೆ’ ಇಲ್ಲಿ‌ರುವ ಧಾರ್ಮಿಕ‌ ಉಲ್ಲೇಖ ನಾಪತ್ತೆಯಾಗಿದೆ. ಆದರೆ, ಇದೇ ಕವನದಲ್ಲಿರುವ ಜೀಸಸ್ ಮತ್ತು ಜೋಸೆಫ್ ಗೆ ಸಂಬಂಧಿಸಿದ‌ ಉಲ್ಲೇಖಗಳು ಹಾಗೆಯೇ ಉಳಿದಿವೆ. ನಾನು ಇದರ ಬಗ್ಗೆ ಕೇಳಿದಾಗ ಆತ ‘ನಾನು ಇಸ್ಲಾಮಿಕ್ ಉಲ್ಲೇಖಗಳನ್ನು‌ ತೆಗೆದು ಹಾಕಿದ್ದು ಉದ್ದೇಶಪೂರ್ವಕವಾಗಿಯೇ ಎಂಬುದು ನೆನಪಿಲ್ಲ’ ಎಂದ. ‘ನಾನು ಪ್ರೆಸ್ಬಿಟೇರಿಯನ್. ನನಗೆ ಬೈಬಲ್ ಚೆನ್ನಾಗಿಯೇ ನೆನಪಿರುತ್ತವೆ. ನನಗೆ ಕುರಾನ್ ಗಿಂತಲೂ ಹೊಸ ಒಡಂಬಡಿಕೆಯೇ ಹೆಚ್ಚು ತಿಳಿದಿದೆ. ಕುರಾನ್ ಓದುವುದು ಬಹಳ ಕಷ್ಟ’ ಎಂದ.

‘ರೂಮಿಯ ಪದಗಳಲ್ಲ’
ಅಮೆರಿಕನ್ ಆವೃತ್ತಿಗೆ ರೂಪಾಂತರಿಸುವ ಮೂಲಕ ರೂಮಿಯನ್ನು ಅಮೆರಿಕದ ಮಿಲಿಯನ್ ಗಟ್ಟಲೆ ಓದುಗರಿಗೆ ಪರಿಚಯಿಸಿದ‌ ಶ್ರೇಯಸ್ಸು ಬಾರ್ಕ್ಸ್ ಗೆ ಸಲ್ಲಬೇಕು ಎಂದು ಒಮಿದ್ ಸಫಿ ಹೇಳುತ್ತಾರೆ. ಬಾರ್ಕ್ಸ್ ತನ್ನ ಬದುಕಿನ ಗಣನೀಯ ಪ್ರಮಾಣದ ಸಮಯ ಹಾಗೂ ಒಲವನ್ನು ರೂಮಿಯ ಕಾವ್ಯಗಳನ್ನು ಅಮೇರಿಕನ್ ಆವೃತ್ತಿಗೆ ರೂಪಾಂತರಿಸುವ ಕಾಯಕಕ್ಕಾಗಿ ಅರ್ಪಿಸಿದ್ದಾರೆ. ಮೂಲಕ್ಕೆ ಸಂಬಂಧವೇ ಇಲ್ಲದ ಇನ್ನೂ ಕೆಲವು ರೂಮಿಯ ಆವೃತ್ತಿಗಳಿವೆ. ಹೊಸ ತಲೆಮಾರಿನ ದೀಪಕ್ ಚೋಪ್ರ ಹಾಗೂ ಡ್ಯಾನಿಯಲ್ ಲ್ಯಾಟಿನ್ ಸ್ಕಿ ಅವರ ಕೃತಿಗಳು ಈ ಬಗೆಯದ್ದು. ಈ ಕೃತಿಗಳು ರೂಮಿ ಹೆಸರಲ್ಲಿ ಪ್ರಚಾರ ಪಡೆಯುತ್ತಿವೆ. ಆದರೆ, ಇವುಗಳಲ್ಲಿ ರೂಮಿಯ ಬರವಣಿಗೆಗಳು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ.‌ ಅಧ್ಯಾತ್ಮಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಬರೆದಿರುವ ಹಾಗೂ‌ ಪರ್ಯಾಯ ಔಷಧಗಳ ಬಗ್ಗೆ ಆಸಕ್ತಿಯನ್ನು ಹೊಂದಿರುವ ದೀಪಕ್ ಚೋಪ್ರ ತನ್ನ ಕವನಗಳು ‘ರೂಮಿಯ ಪದಗಳಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ. ಬದಲಾಗಿ, ಅದು ಪರ್ಷಿಯನ್ ಮೂಲದ ಕವಿತೆಗಳನ್ನು ಓದುವಾಗ ಉದಯಿಸಿದ ಭಾವಗಳು. ಹೊಸ ಸೃಷ್ಟಿಗಳಾಗಿದ್ದರೂ, ಮೂಲದ ಸಾರವನ್ನು ಉಳಿಸಿಕೊಂಡಿದೆ.

ಕುರ್ ಆನ್ ಮತ್ತು ರೂಮಿ:
‘ಇದೊಂದು ರೀತಿಯ ಆಧ್ಯಾತ್ಮಿಕ‌ ವಸಾಹತುಶಾಹಿಯಾಗಿದೆ’ ಎಂದು ಈ ಹೊಸ ತಲೆಮಾರಿನ ಅನುವಾದಗಳ ಮೇಲೆ ಚರ್ಚೆ ಮಾಡುತ್ತಾ ಸಫಿ‌ ಹೇಳುತ್ತಾರೆ. ‘ಈ ವಸಾಹತುಶಾಹಿಯು ಬೋಸ್ನಿಯ ಮತ್ತು‌ ಇಸ್ತಂಬೂಲ್ ನಿಂದ ಕೊನ್ಯಾದವರೆಗಿನ ಹಾಗೂ ಇರಾನ್ ನಿಂದ ಮಧ್ಯ ಹಾಗೂ ದಕ್ಷಿಣ ಏಷ್ಯಾದವರೆಗಿನ ಮುಸ್ಲಿಮರು ಜೀವಿಸುತ್ತಿರುವ ಹಾಗೂ‌ ಉಸಿರಾಡುತ್ತಿರುವ ಆಧ್ಯಾತ್ಮಿಕ ಭೂಭಾಗವನ್ನು ಅಳಿಸಿ ಹಾಕುತ್ತಿದೆ ಅಥವಾ ಕಬಳಿಸುತ್ತಿದೆ’ ಎಂದು ಅವರು ಹೇಳುತ್ತಾರೆ. ಧಾರ್ಮಿಕ ಪಠ್ಯದಿಂದ ಆಧ್ಯಾತ್ಮವನ್ನು ಹೊರ ತೆಗೆಯುವುದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ರಾಷ್ಟ್ರೀಯ ಸಲಹೆಗಾರರಾದ ಜನರಲ್ ಮೈಕಲ್ ಫ್ಲಿನ್ ರಂತಹವರು ಇಸ್ಲಾಮ್ ಅನ್ನು ‘ಕ್ಯಾನ್ಸರ್’ ಎಂದು ಕರೆಯುವ ಮನಸ್ಥಿತಿಗೆ ತಲುಪಿದ್ದಾರೆ. ಇವತ್ತಿಗೂ ಅಮೆರಿಕದ ನೀತಿ ನಿರೂಪಕರು ಪಾಶ್ಚಾತ್ಯೇತರರು ಹಾಗೂ ಬಿಳಿಯೇತರರು ವಿಶ್ವ ನಾಗರಿಕತೆಗೆ ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ವಾದವನ್ನು ಎತ್ತಿ ಹಿಡಿಯುತ್ತಿದ್ದಾರೆ.
ಬಾರ್ಕ್ಸ್ ನ ಪ್ರಕಾರ ರೂಮಿಗೆ ಧಾರ್ಮಿಕತೆಯು ಅಷ್ಟೇನೂ ಪ್ರಮುಖವಾದ ವಿಷಯವಲ್ಲ. ‘ಜಗತ್ತಿಗೆ ಧಾರ್ಮಿಕತೆಯು ಅಂತಹ ಒಂದು ವಿವಾದಿತ ವಿಷಯವೇ’ ಎಂದು ಬಾರ್ಕ್ಸ್ ನನ್ನೊಂದಿಗೆ ಹೇಳುತ್ತಾನೆ. ‘ನಾನು ನನ್ನ ಸತ್ಯವನ್ನು ಪಡೆದೆ. ನೀನು ನಿನ್ನ ಸತ್ಯವನ್ನು ಪಡೆದೆ. ಇದು ಅಸಂಬದ್ಧ. ಈ ವಿಷಯದಲ್ಲಿ ನಾವೆಲ್ಲಾ ಒಂದೇ. ನಾನು ನನ್ನ ಹೃದಯವನ್ನು ತೆರೆಯಲು ಪ್ರಯತ್ನಿಸಿದೆ. ಇದಕ್ಕೆ ರೂಮಿಯ ಕಾವ್ಯ ನನಗೆ ನೆರವಾಯಿತು’ ಎಂದು ಅವನು ಹೇಳುತ್ತಾನೆ. ಈ ತತ್ವಶಾಸ್ತ್ರದ ಮೂಲಕವೇ ಒಬ್ಬನಿಗೆ ರೂಮಿಯ ಕಾವ್ಯ ವಿಧಾನವನ್ನು ಪತ್ತೆಹಚ್ಚಬಹುದು. ರೂಮಿ ಪರ್ಷಿಯನ್ ಆವೃತ್ತಿಗೆ‌ ಹೊಂದಿಕೊಳ್ಳುವಂತೆ ಹಾಗೂ ಸಾಹಿತ್ಯಿಕ ಪ್ರಾಸ ಸಾಧ್ಯವಾಗುವಂತೆ ಕುರಾನ್ ನಿಂದ ಪಠ್ಯಗಳನ್ನು ಎತ್ತಿಕೊಳ್ಳುತ್ತಾರೆ. ರೂಮಿಯ ಪರ್ಷಿಯನ್ ಓದುಗರು ಈ ತಂತ್ರವನ್ನು ಗುರುತಿಸುತ್ತಾರೆ. ಆದರೆ, ಹೆಚ್ಚಿನ ಅಮೆರಿಕನ್ ಓದುಗರಿಗೆ ಇಸ್ಲಾಮಿನ ಈ ನೀಲನಕ್ಷೆಯ ಅರಿವಿಲ್ಲ. ‘ಕುರಾನ್ ಅನ್ನು ಹೊರಗಿಟ್ಟು ರೂಮಿಯನ್ನು ಓದುವುದು, ಬೈಬಲ್ ಬಿಟ್ಟು ಮಿಲ್ಟನ್ ಅನ್ನು ಓದುವುದು ಎರಡೂ ಒಂದೇ’ ಎಂದು ಸಫಿ ಹೋಲಿಸುತ್ತಾರೆ. ಒಂದು ವೇಳೆ ರೂಮಿ ಸಂಪ್ರದಾಯ ವಿರೋಧಿ ಎಂದುಕೊಂಡರೂ ಸಹ ಅವರನ್ನು ಮುಸ್ಲಿಮ್ ಚೌಕಟ್ಟಿನ ಹಿನ್ನೆಲೆಯಲ್ಲಿಯೇ ನೋಡಬೇಕಾಗಿದೆ. ಅಂತೆಯೇ ಶತಮಾನಗಳ ಹಿಂದೆಯೇ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಆ ರೀತಿಯ ಅಸಾಂಪ್ರದಾಯಿಕತೆಗೆ ಅವಕಾಶವಿತ್ತು ಎಂಬುದನ್ನೂ ಗುರುತಿಸಬೇಕಿದೆ. ರೂಮಿಯ ಕಾವ್ಯಗಳು ಕೇವಲ ‘ಧಾರ್ಮಿಕತೆ’ಯಲ್ಲ; ಅದು ಇಸ್ಲಾಮಿಕ್ ವಿದ್ವತ್ ವಲಯದೊಳಗಿನ ಐತಿಹಾಸಿಕ ಚೈತನ್ಯವನ್ನು ಪ್ರತಿನಿಧಿಸುತ್ತದೆ.
ರೂಮಿ ಕುರಾನ್, ಹದೀಸ್ ಮತ್ತು ಧಾರ್ಮಿಕತೆಯನ್ನು ಸಾಂಪ್ರದಾಯಿಕ ಓದಿಗೆ ಸವಾಲೆಸೆಯುವ ರೀತಿಯಲ್ಲಿ ಶೋಧನಾತ್ಮಕವಾಗಿ ಬಳಸಿದ್ದಾರೆ. ಬಾರ್ಕ್ಸ್ ನ ಒಂದು ರೂಪಾಂತರ ಹೀಗಿದೆ; ‘ಒಳಿತು ಕೆಡುಕುಗಳಾಚೆಗೂ ಒಂದು ಸ್ಥಳವಿದೆ; ಅಲ್ಲಿ ಭೇಟಿಯಾಗೋಣ’ (ಈ ಸರಿತಪ್ಪುಗಳಾಚೆಗೆ ಒಂದು ಬಯಲಿದೆ, ಅಲ್ಲಿ ಸಂಧಿಸೋಣ). ಮೂಲ ಕವಿತೆಯಲ್ಲಿ ಒಳಿತು-ಕೆಡುಗಳ ಪ್ರಸ್ತಾಪವೇ ಇಲ್ಲ. ಅಲ್ಲಿರುವುದು ಈಮಾನ್(ಸತ್ಯವಿಶ್ವಾಸ) ಮತ್ತು ಕುಫ್ರ್(ಸತ್ಯನಿಷೇಧ) ಎಂಬ ಪದಗಳು. ಸತ್ಯವಿಶ್ವಾಸದ ಮೂಲವಿರುವುದು ಧಾರ್ಮಿಕ ನೀತಿ ಸಂಹಿತೆಯಲ್ಲಲ್ಲ; ಬದಲಾಗಿ‌ ಉದಾತ್ತವಾದ ದಯೆ ಮತ್ತು ಪ್ರೀತಿಯಲ್ಲಿ ಎಂದು ಮುಸ್ಲಿಮ್ ವಿದ್ವಾಂಸನೊಬ್ಬ ಹೇಳುವುದನ್ನು ಊಹಿಸಿ‌ನೋಡಿ. ಇಂದು ಯಾವುದನ್ನು ನಾವು ಹಾಗೂ ಬಹುತೇಕ ಮುಸ್ಲಿಮ್ ವಿದ್ವಾಂಸರು ಮೂಲಭೂತವಾದ ಎಂದು ಭಾವಿಸುತ್ತಾರೋ ಅದನ್ನು ಏಳುನೂರು ವರ್ಷಗಳ ಹಿಂದೆಯೇ ರೂಮಿ ಗುರುತಿಸಿದ್ದರು.
ಇಂತಹ ಓದುವಿಕೆಯೂ ಸಂಪೂರ್ಣವಾಗಿ ಅನನ್ಯವಾದುದೇನೂ ಅಲ್ಲ. ರೂಮಿಯ ರಚನೆಗಳು ಧಾರ್ಮಿಕ ಆಧ್ಯಾತ್ಮಿಕತೆ ಮತ್ತು ಸಾಂಸ್ಥಿಕ ನಂಬಿಕೆಗಳ ನಡುವಿನ ತಳ್ಳಾಟಗಳನ್ನು ವಿಶಾಲವಾಗಿ ಪ್ರತಿಬಿಂಬಿಸುತ್ತದೆ. ‘ಐತಿಹಾಸಿಕವಾಗಿ ಹೇಳುವುದಾದರೆ, ಕುರಾನ್ ಹೊರತುಪಡಿಸಿ ರೂಮಿ ಮತ್ತು ಹಾಫಿಝ್ ಕವಿತೆಗಳಂತೆ ಯಾವ ಪಠ್ಯಗಳೂ ಕೂಡ ಮುಸ್ಲಿಮ್ ಭಾವನಾಶಕ್ತಿಯನ್ನು ರೂಪಿಸಿಲ್ಲ’ ಎಂದು ಸಫಿ ಹೇಳುತ್ತಾರೆ. ಈ ಕಾರಣದಿಂದಲೇ ಲೇಖಕರು ಬರೆದುದನ್ನು ಕೈಯಿಂದಲೇ ನಕಲು ಮಾಡಿ ಪ್ರಕಟಿಸುತ್ತಿದ್ದ ಕಾಲದಲ್ಲಿ ಸೃಷ್ಟಿಯಾದ ಬೃಹತ್ ಗಾತ್ರದ ರೂಮಿಯ ರಚನೆಗಳು ಇನ್ನೂ ಜೀವಂತವಾಗಿ ಉಳಿದಿವೆ.
‘ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಸ್ಮೃತಿ, ಸಂಸ್ಕೃತಿ ಮತ್ತು ಪರಂಪರೆಯ ದಾಸ್ತಾನು ಕೂಡ ಹೌದು’ ಎಂದು ಬರಹಗಾರ ಹಾಗೂ ಅನುವಾದಕ ಸಿನಾನ್ ಅಂತೂನ್ ಹೇಳುತ್ತಾರೆ. ಎರಡು ಸಂಸ್ಕೃತಿಗಳ ನಡುವಿನ ವಾಹಕನೆಂಬ ನೆಲೆಯಲ್ಲಿ ಅನುವಾದಕನು ಸಹಜವಾಗಿಯೇ ರಾಜಕೀಯ ನಿಲುವು ತಾಳುತ್ತಾನೆ. ಹದಿಮೂರನೇ ಶತಮಾನದ ಪರ್ಷಿಯನ್ ಕವಿಯನ್ನು ಸಮಕಾಲೀನ ಅಮೆರಿಕನ್ ಓದುಗರು ಗ್ರಹಿಸುವಂತೆ ಮಾಡುವುದು‌ ಹೇಗೆ ಎಂದು ಅವರು ಯೋಚಿಸುತ್ತಾರೆ. ಆದರೂ, ಮೂಲಪಠ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆ ಅವರ ಮೇಲಿದೆ. ರೂಮಿಯ ವಿಷಯದಲ್ಲಿ‌ ಈ ರೀತಿ ನಡೆದಿದ್ದರೆ, ಶರೀಅತ್ ಬೋಧಿಸುವ ಪ್ರೊಫೆಸರ್ ಒಬ್ಬರು ಜಗತ್ತಿನಲ್ಲೇ ಅತೀ ಹೆಚ್ಚು ಓದಲ್ಪಡುವ ಪ್ರೇಮ ಕಾವ್ಯವನ್ನೂ ಸಹ ಬರೆಯಬಲ್ಲರು ಎಂದು ಓದುಗರು ತಿಳಿಯಲು ಸಹಾಯವಾಗುತ್ತಿತ್ತು.
‘ಜಾವಿದ್ ಮೊಜದ್ದಿದ್’ ಎಂಬವರು ಮಸ್ನವಿಯ ಎಲ್ಲಾ ಆರು ಕೃತಿಗಳನ್ನು ಅನುವಾದ ಮಾಡುವ ದೀರ್ಘಕಾಲೀನ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಅವರು ಅದರ ಮೂರು ಭಾಗಗಳನ್ನು ಪ್ರಕಟಿಸಿದ್ದಾರೆ. ನಾಲ್ಕನೇ ಭಾಗ ಇನ್ನೇನು ಪ್ರಕಟವಾಗಲಿದೆ.
ಅವರು ತಮ್ಮ ಅನುವಾದದಲ್ಲಿ ರೂಮಿ ಬಳಸಿರುವ ಇಸ್ಲಾಮಿಕ್ ಮತ್ತು ಕುರಾನ್ ನ ಅರಬಿಕ್ ಪಠ್ಯಗಳನ್ನು ಅದರ ಮೂಲ ಸ್ವರೂಪದಲ್ಲೇ ತೆಗೆದುಕೊಂಡು, ಇಟಾಲಿಕ್ ಫಾಂಟಲ್ಲಿ ಸೂಚಿಸುತ್ತಾರೆ. ಅವರ ಕೃತಿಗಳು ಅಡಿಟಿಪ್ಪಣಿಗಳಿಂದ ತುಂಬಿವೆ. ಅವುಗಳನ್ನು ಓದಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಮತ್ತು ಪೂರ್ವಾಗ್ರಹ ಪೀಡಿತ ಮನಸಿನಿಂದ ಹೊರಬರಬೇಕಾಗುತ್ತದೆ. ಒಟ್ಟಿನಲ್ಲಿ ಈ ಅನುವಾದವು ವಿದೇಶೀಯರಿಗೆ ರೂಮಿಯನ್ನು ಅರ್ಥ ಮಾಡಿಸುವ ಪ್ರಯತ್ನವಷ್ಟೆ. ಕೇಶವಾರ್ಝ್ ಹೇಳಿರುವಂತೆ, “ಪ್ರತಿಯೊಂದು ವಿಷಯವೂ ತನ್ನದೇ ಆದ ಸಂರಚನೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊಂದಿದೆ. ಒಬ್ಬ ಮುಸ್ಲಿಮ್ ಕೂಡ ಹೀಗಿರಬಲ್ಲ” ಎಂಬುದರ ಸೂಚನೆಯಾಗಲಿದೆ ಈ ಅನುವಾದ.

ಮೂಲ: ರೋಝಿನಾ ಅಲಿ
ಅನುವಾದ: ಸ್ವಾಲಿಹ್ ತೋಡಾರ್
ಕೃಪೆ: ನ್ಯೂಯೋರ್ಕರ್‌ ಮ್ಯಾಗಝಿನ್

ಮಾಪ್ಪಿಳ ಸಾಹಿತ್ಯದ ಮಹತ್ವ, ಇತಿಹಾಸ ಹಾಗೂ ವರ್ತಮಾನದ ಸವಾಲುಗಳು

ಹಳೆಯ ಮಲಬಾರ್ ನ ಭಾಗವಾಗಿದ್ದ ಮಂಗಳೂರು, ಉಡುಪಿ, ಕೊಡಗು ಮತ್ತು ಆಸುಪಾಸಿನಲ್ಲಿ ಹಾಸುಹೊಕ್ಕಾಗಿರುವ ಮಾಪ್ಪಿಳ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನವಿದು. ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಮಾಲೆ, ಮೌಲಿದ್, ಬ್ಯಾರಿ ಜನಪದ ಹಾಡುಗಳು, ಜನಪದ ಸಂಸ್ಕೃತಿಗಳ ಮೂಲಬೇರು ಕೇರಳದ ಮಲಬಾರಿನಲ್ಲಿದೆ. ಮಾಪ್ಪಿಳ ಸಂಸ್ಕೃತಿಯು ಹೆಚ್ಚುಕಡಿಮೆ ಹಾಗೆಯೇ ಈ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ ಎಂಬುದು ಗಮನಾರ್ಹ. ಆ ದಿಕ್ಕಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯಗಳು ನಡೆಯಬೇಕಿದೆ.

(ತನ್ನ ಸಂಶೋಧನೆಯಿಂದ ಹಾಗೂ ಲೇಖನಗಳಿಂದ ಮಲಯಾಳಂ ಸಾಂಸ್ಕೃತಿಕ ಸಾಹಿತ್ಯಲೋಕದಲ್ಲಿ ಸಾಕಷ್ಟು ಚಿರಪರಿಚಿತರಾಗಿರುವ ಅಬೂಬಕ್ಕರ್ ಮಾಸ್ಟರ್ ಮೂಲತಃ ಮಲಯಾಳಂ ಶಿಕ್ಷಕರು. ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ರಾಜಕಾರಣದ ನಡುವಿನ ಕೊಂಡಿಯಾಗುವಂತೆ ಮಾಪ್ಪಿಳ ಸಾಂಸ್ಕೃತಿಕ, ಸಂಪ್ರದಾಯಗಳಲ್ಲಿ ಆಳವಾದ ಸಂಶೋಧನೆ ನಡೆಸಿರುವ ಇವರು ಮಲಯಾಳಂ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಬಿ.ಎಡ್ ಮುಗಿಸಿ, ಪಟಿಯಾಲಾದ Northern Regional Language Centre ನಿಂದ ದ್ವಿತೀಯ ಭಾಷಾ ಬೋಧನೆಯಲ್ಲಿ ಒಂದು ವರ್ಷದ ತರಬೇತಿ ಪಡೆದಿದ್ದಾರೆ. ಸದ್ಯ ಕೇರಳದ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮಲಯಾಳಂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಮಾಸ್ಟರ್ ಹುಟ್ಟಿದ್ದು ಕೋಝಿಕೋಡ್ ಜಿಲ್ಲೆಯ ಕಿಝಕೋತ್ ಗ್ರಾಮದ ಕತ್ತರಮಲ್ ಎಂಬಲ್ಲಿ.

ಅಬೂಬಕ್ಕರ್ ಮಾಸ್ಟರ್

ಈಗಾಗಲೇ, ಕೇರಳದ ಭವಿಷ್ಯದ ಸಾಂಸ್ಕೃತಿಕ ಸಂರಚನೆಯಲ್ಲಿ ನಿರ್ಣಾಯಕವಾಗುವಂತಿರುವ ವಿಷಯಗಳನ್ನು ವಿಮರ್ಶೆಗೊಳಪಡಿಸುವ ಪುಸ್ತಕಗಳ ಸರಣಿಯನ್ನು ತನ್ನ ʼಫ್ಯೂಚರ್ ಫಾರ್ಮ್ ಬುಕ್ಸ್ʼನ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಇಶಲ್ ಧಾರ, ಟಿ ಉಬೈದ್(Biography), ವೈದ್ಯರುಡೆ ಕಾವ್ಯ ಲೋಗಂ, ಉಮರ್ ಕಾಝಿ(Biography) ಮುಂತಾದ ಪುಸ್ತಕಗಳನ್ನು ರಚಿಸಿರುವ ಮಾಸ್ಟರ್‌, ಮಾಪ್ಪಿಳ ಸಾಂಸ್ಕೃತಿಕ ಲೋಕಕ್ಕೆ ಸಂಬಂಧಿಸಿದ ಪ್ರಬಂಧಗಳನ್ನೂ, ವಿಚಾರಗೋಷ್ಠಿಗಳನ್ನೂ ನಡೆಸುತ್ತಿದ್ದಾರೆ. ಅಲ್ಲದೆ ಅವರ ಮುಸ್ಲಿಂ ಸಾರ್ವಜನಿಕ ವಲಯ ಎದುರಿಸುತ್ತಿರುವ ಸಾಂಸ್ಕೃತಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಅಧ್ಯಯನಾತ್ಮಕ ಲೇಖನಗಳು ಹಲವು ಮಲಯಾಳಂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಸಾಕಷ್ಟು ಚರ್ಚೆಗೊಳಗಾಗಿವೆ.
ಮಾಪಿಳ ಸಾಂಸ್ಕೃತಿಕ ಚಟುವಟಿಕೆಗಳು ಸೂಫಿಸಮ್ಮಿನೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುವುದರ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಅಬೂಬಕ್ಕರ್ ಮಾಸ್ಟರ್ ಅವರು ಸೂಫಿಸಂ ಹಾಗೂ ಮಾಪ್ಪಿಳ ಸಾಂಸ್ಕೃತಿಕ ಚಟುವಟಿಕೆಗಳ ನಡುವಿನ ಸಂಬಂಧವನ್ನು ಸರಳವಾಗಿ ವಿಶ್ಲೇಷಿಸುತ್ತಾರೆ. ಅವರೊಂದಿಗೆ ನಡೆದ ಸಂವಾದದ ಆಯ್ದ ಭಾಗವನ್ನು ಕೆಳಗೆ ನೀಡಲಾಗಿದೆ.)

ಪ್ರಶ್ನೆ: ಅಲೌಕಿಕ ಅಥವಾ ಅತೀಂದ್ರಿಯ ಪ್ರೇಮದ ಕವಿತೆಗಳನ್ನು ಸೂಫಿಗಳು ಬರೆದಿದ್ದಾರೆ. ಇದೇ ಪ್ರಭಾವ ಮಾಪ್ಪಿಳ ಸಾಹಿತ್ಯದ ಮೇಲೂ ಬಿದ್ದಿದೆ, ಮಲಬಾರ್ ಸಂಪ್ರದಾಯಗಳಲ್ಲಿ ಇದು ಸ್ಪಷ್ಟವಾಗಿದೆ. ಇದನ್ನು ನೀವು ಹೇಗೆ ವಿವರಿಸುತ್ತೀರಿ?

ಸೆರೆಮನೆಯಲ್ಲಿ ಬಂಧಿಯಾಗಿ ತನ್ನ ಪ್ರಿಯತಮೆಯ ವಿರಹದಲ್ಲಿರುವ ಓರ್ವ ಅದಮ್ಯ ಪ್ರೇಮಿಯ ಭಾವತೀವ್ರತೆಯಂತೆಯೇ ದೇವನನ್ನು ಹುಡುಕುವ ಸೂಫಿಗಳ ಭಾವತೀವ್ರತೆಯು ಇರಬಲ್ಲದು. ಆ ಸೂಫಿಗಳಿಗೆ ಇಡೀ ವಿಶ್ವವು, ಅದೃಶ್ಯನಾಗಿರುವ ಅವರ ಪ್ರೇಮಿಯ(ದೇವನ) ಚಿಹ್ನೆಗಳ ಬೃಹತ್ ವಸ್ತುಸಂಗ್ರಹಾಲಯದಂತೆ ಕಾಣಿಸುತ್ತದೆ. ಹಾಗೂ ಆ ಪ್ರತೀ ಚಿಹ್ನೆಗಳೂ ಅವರ ಪ್ರಿಯತಮೆಯ ಕುರಿತು ಪ್ರೇಮಿಗೆ(ಸೂಫಿಗೆ) ಸೂಚನೆಗಳನ್ನು ನೀಡುತ್ತಲೇ ಇರುತ್ತದೆ. ಇದು ಅವರ ಹೃದಯದಲ್ಲಿ ಪ್ರೇಮದ ಕಿಡಿಯನ್ನು ಹೊತ್ತಿಸುತ್ತದೆ. ಕವಿತೆ ಅಥವಾ ಕಾವ್ಯದ ಸಾಂಕೇತಿಕ ಭಾಷೆಯ ಹೊರತಾಗಿ ಬೇರೆ ಯಾವ ಭಾಷೆಯಿಂದಲೂ ಅವರ ಎದೆಯಲ್ಲಿರುವ ಬೆಂಕಿಯನ್ನು ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆಗ ಅವರು ಕವಿತೆಯ ಮೊರೆಯೇ ಹೋಗಬೇಕಾಗುತ್ತದೆ. ಒಂದರ್ಥದಲ್ಲಿ ಕಾವ್ಯವೇ ಸೂಫಿಗಳ ಭಾಷೆ ಎನ್ನಬಹುದು. ಅವರು ಕಾವ್ಯದ ಸಹಾಯವಿಲ್ಲದೆ ಸಂವಹಿಸಲು ಸಾಧ್ಯವಾಗದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಹಾಗಾಗಿಯೇ ಮುಸ್ಲಿಂ ಜಗತ್ತಿನಲ್ಲಿ ಸೂಫಿಗಳದ್ದು ಕಾವ್ಯದ ಹಾದಿ.

ಮಾಪ್ಪಿಳ ಸಾಹಿತ್ಯದ ಸೃಜನಶೀಲತೆಯ ಮಾರ್ಗವೂ ಇದುವೇ. ಸೂಫೀ ಕ್ರಿಯಾಶೀಲತೆಯ ಒಟ್ಟು ಪರಿಣಾಮವೇ ‘ಅರಬ್ಬಿ ಮಲಯಾಳಂ’1. ಸ್ಥಳೀಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಸಂವಹನ ನಡೆಸಲು ಸೂಫಿಗಳಿಗಿದ್ದ ಉತ್ಸಾಹ ಅವರನ್ನು ಮಲಯಾಳಂ ಭಾಷೆಯಲ್ಲಿ ಸಂವಹಿಸಲು ಅರೇಬಿಕ್ ಲಿಪಿಯನ್ನು ಹುಟ್ಟುಹಾಕುವಂತೆ ಮಾಡಿತು. ಮಲಯಾಳಂ ಉಚ್ಛಾರಣೆಗೆ ಸರಳವಾಗುವಂತೆ ಅರಬಿ ಲಿಪಿಗಳನ್ನು ಮಾರ್ಪಡಿಸಿಕೊಂಡರು. ಸೂಫಿಸಂ ಸ್ಥಳೀಯ ಭಾಷೆಗೆ ಸೃಜನಶೀಲ ಆಯಾಮವನ್ನು ನೀಡಿದೆ. ಹಾಗೆ ಹುಟ್ಟಿಕೊಂಡಿದ್ದರಲ್ಲಿ ಅರಬ್ಬಿ ಮಲಯಾಳಂ ಒಂದು. ಅರಬ್ಬಿ ಮಲಯಾಳಂನ ಇತಿಹಾಸದಲ್ಲಿ ಅತ್ಯಂತ ಹಳೆಯ ಕಾವ್ಯಗ್ರಂಥ ʼಮುಹಿಯುದ್ದೀನ್ ಮಾಲಾʼ. ಇದು ಐತಿಹಾಸಿಕವಾಗಿ ಬಹುಮುಖ್ಯ ಕೃತಿ. ತದನಂತರ ಬಂದ ಕುಞಾಯಿನ್ ಮುಸ್ಲಿಯಾರ್ ಅವರ ಕೃತಿಗಳು ಕೂಡಾ ಸೂಫೀ ಪರಂಪರೆಯದ್ದು. ‘ಮುಹಿಯುದ್ದೀನ್ ಶೇಖ್’ 2. ಹಾಗೂ ಪ್ರವಾದಿಯವರನ್ನು ರೂಪಕವಾಗಿಸಿರುವುದೇ ನೂಲ್ ಮಾಲ, ನೂಲ್ ಮದ್ಹ್, ಕಪ್ಪ ಪಾಟ್ಟು ಮುಂತಾದ ಕುಞಾಯಿನ್ ಮುಸ್ಲಿಯಾರ್ ಕವಿತೆಗಳ ಒಟ್ಟು ಮೂಲಾಧಾರ. ಇದೆಲ್ಲವೂ ‘ತಸವ್ವುಫ್’* 3. ನ ಸಾಂಕೇತಿಕ ನಿರೂಪಣೆ. ಅಲ್ಲದೆ ಈ ಕಾವ್ಯಗಳೆಲ್ಲವೂ ಸೂಫಿಸಂ ಹಾದಿಯಲ್ಲಿಯೇ ಸಂಚರಿಸುತ್ತದೆ. ಹಾಗಾಗಿ ಸೃಜನಶೀಲ ಮಾಪ್ಪಿಳ ಸಾಹಿತ್ಯದಲ್ಲಿ ಸೂಫಿ ಪ್ರಭಾವ ಹೇರಳವಾಗಿ ಕಾಣಬಹುದು.

ಪ್ರಶ್ನೆ: ಅರಬ್ಬಿ ಮಲಯಾಳಂ ಭಾಷೆಯಲ್ಲಿ ಕಂಡುಬಂದ ಅತ್ಯಂತ ಹಳೆಯ ಕಾವ್ಯ ʼಮುಹಿಯುದ್ದೀನ್ ಮಾಲಾʼ ಮಲಬಾರ್ ಮುಸ್ಲಿಮರ ಮೇಲೆ ಬೀರಿದ ಪ್ರಭಾವವನ್ನು ವಿವರಿಸಬಹುದೇ?

ಲಭ್ಯವಿರುವ ಮಾಹಿತಿ ಪ್ರಕಾರ ಮುಹಿಯುದ್ದೀನ್ ಮಾಲಾವನ್ನು ಕ್ರಿ.ಶ 1607 ರಲ್ಲಿ ರಚಿಸಲಾಗಿದೆ. ಇದು ಮಾಪ್ಪಿಳ ಸೃಜನಶೀಲತೆಯ ಬಹುಮುಖ್ಯ ಅಂಗ. ಅರಬ್ಬಿ ಮಲಯಾಳಮನ್ನು ಅಭಿವ್ಯಕ್ತಿ ಸಾಧನವಾಗಿ ಸ್ಥಾಪಿಸಿದ ಈ ಕೃತಿ ಇಪ್ಪತ್ತನೆಯ ಶತಮಾನದ ಅಂತ್ಯದವರೆಗೂ ಮಾಪ್ಪಿಳ ಸಾಹಿತ್ಯದ ಆಶಯನ್ನು ಆಳವಾಗಿ ಪ್ರಭಾವಿಸಿತ್ತು. ಈ ಕಾವ್ಯ ಸೂಫೀ ಸಂತರ ಮೇಲಿನ ಗೌರವಾದರವನ್ನು ಮುಸ್ಲಿಮರ ಮನೋಭಾವದಲ್ಲಿ ಅಚ್ಚೊತ್ತಿಸಿತು. ಅಷ್ಟೇ ಅಲ್ಲದೇ ಸಂಸ್ಕೃತ ಸಾಂಸ್ಕೃತಿಕ ಹರಿವಿನಲ್ಲಿ ಕಡೆಗಣಿಸಲ್ಪಟ್ಟ, ಅವಗಣಿಸಲ್ಪಟ್ಟ ಹಿಂದುಳಿದ ವರ್ಗದವರಿಗೆ ಜ್ಞಾನ ನೀಡಿದ ಕಾವ್ಯ ಇದು. ‘ಜ್ಞಾನ ಮತ್ತು ಸ್ಥಾನಮಾನವಿಲ್ಲದವರಿಗೆ ಜ್ಞಾನ ಮತ್ತು ಸ್ಥಾನಮಾನವನ್ನು ನೀಡುವʼ ರಾಜಕೀಯ ನೆಲೆಯಲ್ಲಿ (ಇಸ್ಲಾಮಿನ ಜೊತೆಗೆ) ನಿಲ್ಲುವಂತೆ ಪ್ರೇರೇಪಿಸಿತು. ಹಾಗೂ ಜೀವನದ ಪ್ರಾಪಂಚಿಕತೆಯನ್ನು ಆಧ್ಯಾತ್ಮಿಕವಾಗಿ ನೋಡಲು ಕಲಿಸಿತು. ಈ ಕಾವ್ಯ ಮಾಪ್ಪಿಳಗಳ ಜೀವನದ ಲಯ ಮತ್ತು ತಾಳವಾಗಿ ಲೀನವಾಗಿಬಿಟ್ಟಿತು. ತಮ್ಮ ನೋವುಗಳಿಗೆ ಶಮನದಂತೆ ಬೆನ್ನಿಗೆ ನಿಂತಿತು. ಹಾಗೂ ಬೇರೆಬೇರೆ ಕಾರಣಗಳಿಂದ ಮಾಪ್ಪಿಳ ಬದುಕಿನ ಅವಿಭಾಜ್ಯ ಅಂಗವಾಗಿ ಈ ಕೃತಿ ಆವರಿಸಿಕೊಂಡಿತು.

ಪ್ರಶ್ನೆ: ಸೂಫಿ ಮಹಾತ್ಮರು ಮತ್ತು ವೀರರ ಸ್ಮರಣೆಯನ್ನು ಅಮರಗೊಳಿಸುವಲ್ಲಿ ಮಾಲಾ ಮೌಲಿದುಗಳು ವಹಿಸಿದ ಪಾತ್ರವೇನು?

ಅರಬ್ಬಿ ಮಲಯಾಳಂ ಸಾಹಿತ್ಯವನ್ನು ಸೂಫಿಸಂನ ವಿಕಾಸದ ಜೊತೆಯಲ್ಲಿಯೇ ಇಟ್ಟು ಓದಬೇಕು. ‘ತ್ವರೀಕತ್’*4 ಗಳು ರೂಪುಗೊಂಡು ಬಲಗೊಂಡಿದ್ದರೂ, ಆ ದಿಕ್ಕಿನಲ್ಲಿ (ತ್ವರೀಕತ್ ಹಾದಿಯಲ್ಲಿ) ತಾಂತ್ರಿಕವಾಗಿ ಚಲಿಸದೆ ಜೀವಂತ ಅಥವಾ ಮರಣಹೊಂದಿದ ಸಂತರಿಂದ ಆಶೀರ್ವಾದ ಪಡೆಯುವುದು ಜನಪ್ರಿಯಗೊಂಡ ಅಥವಾ ಆಶೀರ್ವಾದ ಪಡೆಯುವುದನ್ನು ಬಯಸುವ ಜನರ ಸಂಖ್ಯೆಯು ವಿಸ್ತರಿಸುತ್ತಿದ್ದ ಸಮಯದಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಸಂತರ ಪವಾಡಗಳನ್ನು ಸ್ತುತಿಸುವ ಕೃತಿಗಳು ಬರೆಯಲ್ಪಟ್ಟವು. ಆ ಕಾಲವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾಲಾಗಳನ್ನು ಗಮನಿಸಬೇಕು. ಮುಹಿಯುದ್ದೀನ್ ಮಾಲಾ, ರಿಫಾಯಿ ಮಾಲಾ ಮತ್ತು ನಫೀಸತು ಮಾಲಾದಲ್ಲಿ ಸಂತರ ಕರಾಮತ್ತು(ಪವಾಡ)ಗಳು ಯಥೇಚ್ಚವಾಗಿ ಉಲ್ಲೇಖಗೊಂಡವು. ಸಂತರ ಹೆಸರಿನಲ್ಲಿ ಜನಪ್ರಿಯವಾಗಿರುವ ಪವಾಡಗಳನ್ನು ಎತ್ತಿ ತೋರಿಸಿ ಈ ಕಾವ್ಯಗಳನ್ನು ರಚಿಸಲಾಯಿತು. ಸಾಧಾರಣವಾಗಿ ಇದು ಉತ್ಪ್ರೇಕ್ಷಿತ ಪವಾಡಗಳ ಕಥೆಯಂತೆ ಭಾಸವಾಗುತ್ತದೆ. ಅದಾಗ್ಯೂ ಈ ಕಾವ್ಯಗಳಲ್ಲಿ ವಸ್ತುನಿಷ್ಟತೆಗಿಂತ ಇದರೊಳಗೆ ಅಂತರ್ಗತವಾಗಿರುವ ಭಕ್ತಿಯೇ ಇದರ ವಿಶಿಷ್ಟ ಲಕ್ಷಣ ಅಥವಾ ಇದರ ಕಾವ್ಯಾತ್ಮ.

ಈ ಕಾವ್ಯಗಳು ಓದುಗರಲ್ಲಿ ಭಕ್ತಿಯನ್ನು ಹುಟ್ಟಿಸುತ್ತದೆ. ಸೂಫಿಗಳ ಮೇಲಿದ್ದ ಪ್ರೀತ್ಯಾದರಗಳಿಂದಾಗಿ, ಈ ಕೃತಿಯನ್ನು ಓದುವುದು, ರಾಗವಾಗಿ ಹಾಡುವುದು ಪವಿತ್ರ ಕಾರ್ಯದಂತೆ ಜನಜನಿತವಾಯಿತು. ಅಲ್ಲದೆ ಈ ಕಾವ್ಯಗಳು ಯಾವುದೇ ಅಡೆತಡೆಯಿಲ್ಲದ ಸುಂದರವಾದ ಸಾಲುಗಳಿಂದ ಅನಕ್ಷರಸ್ಥರಿಗೂ ಅರ್ಥವಾಗುವಷ್ಟು ಸರಳವಾಗಿತ್ತು. ಕಾವ್ಯದ ಹಾಡುಗಳು ಜನಪ್ರಿಯಗೊಳ್ಳಲು ಇದೂ ಕೂಡ ಒಂದು ಕಾರಣ. ಕಾವ್ಯದ ಪಾತ್ರಗಳು ಮತ್ತು ಚಿತ್ರಣಗಳು ಹಾಗೂ ಬಳಸಲ್ಪಟ್ಟ ರೂಪಕಗಳು ಸಾಮಾನ್ಯ ಜನರ ಅರಿವಿನ ಮಿತಿಯಲ್ಲಿಯೇ ನಿಲುಕಬಲ್ಲಂತಹವು. ಈ ಕಾವ್ಯಗಳ ಓದು ಪವಿತ್ರ ಕಾರ್ಯವೆಂಬ ನಂಬಿಕೆಯಿದ್ದುದರಿಂದ ಈ ಕಾವ್ಯಗಳ ಓದು ನಿರಂತರವಾಗಿ ಪುನರಾವರ್ತನೆಯಾಗುತ್ತಿತ್ತು. ಜನರು ನಿರಂತರ ಓದುವಿಕೆ, ಕೇಳುವಿಕೆಯಿಂದಲೇ ಕಂಠಪಾಠ ಮಾಡಿಕೊಂಡರು. ಕಾವ್ಯಗಳಲ್ಲಿ ಬರುವ ಪಾತ್ರಗಳು, ವ್ಯಕ್ತಿತ್ವಗಳು ತಮ್ಮ ಕುಟುಂಬ ಸದಸ್ಯರಿಗಿಂತ ಹೆಚ್ಚು ಆಪ್ತವಾಗಿಬಿಟ್ಟವು. ಕಾವ್ಯದ ನಾಯಕರು ಅನಿರೀಕ್ಷಿತ ಬೀಳುವಿಕೆಯಲ್ಲಿ, ಬಿಕ್ಕಟ್ಟುಗಳಲ್ಲಿ, ಅಪ್ರಜ್ಞಾಪೂರ್ವಕವಾಗಿ ರಕ್ಷಣೆಗೆ ಕರೆಯುವ ಹೆಸರುಗಳಾದವು. ಉದಾಹರಣೆಗೆ ಬೀಳುವ ಮಗು ʼಅಮ್ಮಾʼ ಎಂದು ಕೂಗುವಂತೆ ʼಯಾ ಮುಹಿಯುದ್ದೀನ್ʼ ಎಂದು ಕರೆಯುವುದು ಜನಸಾಮಾನ್ಯರ ನಡುವೆ ಸಾಧಾರಣವಾಗಿಬಿಟ್ಟಿತು. ಮಾಲಾಗಳು ಸಂತರಿಗೆ ನೀಡಿರುವ ಜನಪ್ರಿಯತೆಯು ಅಂತಹದ್ದು.

ಪ್ರಶ್ನೆ: ಜನಪದದ ಕುತೂಹಲವನ್ನು ಮೀರಿ, ಮಾಪ್ಪಿಳ ಕಲಾ ಅಭಿವ್ಯಕ್ತಿಗಳು ಸಾರ್ವಜನಿಕ ಸಾಹಿತ್ಯ ಇತಿಹಾಸದಲ್ಲಿ ಇನ್ನೂ ಸಾಕಷ್ಟು ಸ್ವೀಕಾರವನ್ನು ಗಳಿಸಲಿಲ್ಲ ಯಾಕೆ?

ಇತ್ತೀಚಿನವರೆಗೂ ಅರಬ್ಬಿ ಮಲಯಾಳಂ ಮತ್ತು ಅದರ ಸಾಹಿತ್ಯದ ಬಗ್ಗೆ ತೀರಾ ಸಂಕುಚಿತ ದೃಷ್ಟಿಕೋನವಿತ್ತು. ‘ಅಬೂ ಸಾಹಿಬ್’*5 ಕೂಡಾ, ಮಾಪ್ಪಿಳ ಸಂಸ್ಕೃತಿಯೆಂದರೆ ಚಾವಕ್ಕಾಡ್ ಹಾಗೂ ಮಂಗಳೂರು ನಡುವಿನ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಯೆಂದಷ್ಟೇ ಭಾವಿಸಿದ್ದರು. ಅದರಾಚೆಗಿನ ಜಗತ್ತಿನೊಂದಿಗೆ ಇದಕ್ಕೆ ಯಾವುದೇ ಮಹತ್ವದ ಸ್ಥಾನವಿಲ್ಲವೆಂದು ನಿಲುವು ತಾಳಿದ್ದರು. ಅಲ್ಲದೆ ಅರಬ್ಬಿ ಮಲಯಾಳಂ ಕೇವಲ ಒಂದು ಲಿಪಿ ಎಂದಷ್ಟೇ ಭಾವಿಸಿದ್ದರು. ಅದನ್ನು ಮೀರಿ, ಅರೇಬಿಕ್ ಮಲಯಾಳಂನ ಸಾಂಸ್ಕೃತಿಕ ಪ್ರಾಮುಖ್ಯತೆಯ ಕುರಿತಂತೆ ಸಮರ್ಪಕವಾಗಿ ಸಂಶೋಧನೆಗಳು ನಡೆದಿರಲಿಲ್ಲ. ಮಾಪ್ಪಿಳ ಕೃತಿಗಳು ಪ್ರತಿಪಾದಿಸುವ ಆಶಯವನ್ನು ಗಹನವಾಗಿ ಗಮನಿಸುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಮಲಯಾಳಂ ಅನ್ನು ತಪ್ಪಾಗಿ ಉಚ್ಚರಿಸಿ ಅಪಭ್ರಂಶಗೊಳಿಸಲಾಗುತ್ತಿದೆ ಎಂದಷ್ಟೇ ಸಾಮಾನ್ಯ ಅಭಿಪ್ರಾಯವಾಗಿತ್ತು. ಹಾಗಾಗಿ ಅರಬ್ಬಿ ಸಾಹಿತ್ಯ ಲೋಕದೊಳಗೆ ಆಳವಾಗಿ ಧುಮುಕಲು ಸಾಕಷ್ಟು ಆಸಕ್ತಿ ತೋರಿರಲಿಲ್ಲ. ಎಲ್ಲರಿಗೂ ಅರಬ್ಬಿ ಮಲಯಾಳಂನ ಸಾಂಸ್ಕೃತಿಕ ಸ್ಥಾನವನ್ನು ತಳ್ಳಿಹಾಕುವುದರಲ್ಲೇ ಅತೀ ಉತ್ಸಾಹ ಇದ್ದಂತಿತ್ತು.


ಹೀಗೆ ಸ್ವಂತ ಸಮುದಾಯದ ಸಾಹಿತಿ, ಇತಿಹಾಸಕಾರರಿಂದ ಅವಗಣನೆಗೆ ಒಳಗಾದ ಮಾಪ್ಪಿಳ ಸಾಂಸ್ಕೃತಿಕ ಲೋಕವು ಸಾಧಾರಣ ಜನಪದ ಎಂದು ವರ್ಗೀಕರಣಗೊಂಡು ಅವಗಣನೆಯಾದದ್ದರಲ್ಲಿ ಅಂತಹ ಆಶ್ಚರ್ಯವೇನಿಲ್ಲ. ಅದೂ ಅಲ್ಲದೆ, ಅರಬ್ಬಿ ಮಲಯಾಳಂನ ಉಚ್ಚಾರಣೆ ಹಾಗೂ ವ್ಯಾಕರಣ ವಿಭಾಗದಲ್ಲಿ ತೋರಿದ ಉದಾಸೀನತೆಯು ಮೇಲ್ನೋಟದಲ್ಲಿಯೇ ಇದನ್ನು ಇನ್ನೊಂದು ʼಜನಪದʼ ಎಂದಷ್ಟೇ ಬಿಂಬಿಸಲು ಕಾರಣವಾಯಿತು. ಆಧುನಿಕೋತ್ತರ ಯುಗದಲ್ಲಿ, ಹೊಸ ತಲೆಮಾರಿನ ಜನಾಂಗ ತಮ್ಮ ಮೂಲಗಳನ್ನು ಕುತೂಹಲದಿಂದ ಹುಡುಕುತ್ತಾ, ಅರೇಬಿಕ್ ಮಲಯಾಳಂನ ಆಳವನ್ನು ನಿಧಾನವಾಗಿ ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಅವರು ಟಿ. ಉಬೈದ್, ಅಬು ಮತ್ತು ಪುನ್ನಯೂರ್ಕುಲಂ ಮುಂತಾದವರನ್ನು ಓದಲು ಪ್ರಾರಂಭಿಸಿದ್ದಾರೆ. ಸ್ವಂತವಾಗಿ ಪರಿಶೋಧಿಸಿ, ಅಧ್ಯಯನ ಮಾಡುತ್ತಿದ್ದಾರೆ. ಆಧುನಿಕೋತ್ತರ ಬೌದ್ಧಿಕ ವಾತಾವರಣವು ಮಾಪ್ಪಿಳಾಗಳಲ್ಲದ ವಿದ್ವಾಂಸರನ್ನು ಕೂಡಾ ಅರಬ್ಬಿ ಮಲಯಾಳಂ ಸಾಹಿತ್ಯದೆಡೆಗೆ ಆಕರ್ಷಿಸುವಂತೆ ಮಾಡಿದೆ. ಸಂಶೋಧನೆಗಳು ಸಂಪೂರ್ಣ ದೃಷ್ಟಿಕೋನಗಳಿಗೆ ಬಂದು ತಲುಪದಿದ್ದರೂ ಕೂಡಾ ಆ ದಿಕ್ಕಿನಲ್ಲಿ ಸಂಶೋಧನೆಗಳು ಚಲಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ.

ಪ್ರಶ್ನೆ: ಅರಬ್ಬಿ ಮಲಯಾಳಂ ಭಾಷೆಯಲ್ಲಿ ಅಲೌಕಿಕ ಕವನಗಳು ಎಂದು ಪರಿಗಣಿಸಬಹುದಾದ ಕೃತಿಗಳ ಸಾಮಾನ್ಯ ವಿಶ್ಲೇಷಣೆಯನ್ನು ನೀಡಬಹುದೇ?

ಮೊದಲೇ ಹೇಳಿದಂತೆ, ಪವಿತ್ರಾತ್ಮಗಳ(ಸೂಫಿಗಳ) ಮಹಿಮೆಯಿಂದ ಆಶೀರ್ವಾದ ಪಡೆಯುವುದು ಜನಪ್ರಿಯಗೊಳ್ಳುತ್ತಿರುವ ಸಮಯದಲ್ಲಿ ಅರಬ್ಬಿ ಮಲಯಾಳಂ ರೂಪುಗೊಂಡಿತು. ಆ ಸಮಯದಲ್ಲಿ ಸಮಾಜವು ಸಾಮಾನ್ಯವಾಗಿ ಸೂಫಿಸಂನ ಗಾಢ ಪ್ರಭಾವದಲ್ಲಿತ್ತು. ಆದರೆ ತಸವ್ವುಫ್ ಅನ್ನು ಸ್ವಂತವಾಗಿ ಅಳವಡಿಸಿಕೊಂಡವರು ತೀರಾ ಅಪರೂಪವಾಗಿದ್ದರು. ಹಾಗಾಗಿ, ಅತೀಂದ್ರಿಯ ಅನುಭವಗಳನ್ನು ವ್ಯಕ್ತಪಡಿಸುವ ಕೃತಿಗಳು ಅರಬ್ಬಿ ಮಲಯಾಳಂನಲ್ಲಿ ಕಡಿಮೆ. ಆದರೆ ಇಚ್ಚಮಸ್ತಾನ್ ಮತ್ತು ಕಡಾಯಿಕ್ಕಲ್ ಮೊಯಿದೀನ್ ಕುಟ್ಟಿ ಮುಸ್ಲಿಯಾರ್ ಕೃತಿಗಳು ಅಂತಹವುಗಳಲ್ಲಿ ಸೇರುತ್ತವೆ. ಸಾಮಾನ್ಯವಾಗಿ ಅವುಗಳು ತೀರಾ ಕ್ಲಿಷ್ಟಕರ ರೂಪದಲ್ಲಿವೆ. ನಿಗೂಢವಾದ ಸೂಫಿ ಪರಿಕಲ್ಪನೆಗಳು ಹಾಗೂ ತಂತ್ರಗಾರಿಕೆಯ ರೂಪಕಗಳು ಅವುಗಳನ್ನು ಇನ್ನಷ್ಟು ಕ್ಲಿಷ್ಟಕರವೆನಿಸುವಂತೆ ಮಾಡಿದೆ. ಆದಾಗ್ಯೂ, ಅರಬ್ಬಿ ಮಲಯಾಳಂ ಭಾಷೆಯ ಹೆಚ್ಚಿನ ಕೃತಿಗಳು ಸೂಫಿಸಮ್ಮಿನ ಮೇಲೆ ಬಗ್ಗೆ ಬೆಳಕು ಚೆಲ್ಲುತ್ತವೆ. ಸೂಫಿಸಮ್ಮಿನ ಪ್ರಭಾವಳಿಯ ಸುತ್ತಲೇ ರಚಿತವಾಗಿವೆ. ಜೀವನದ ವಿಧಾನ, ವಿಶ್ವ ದೃಷ್ಟಿಕೋನ ಮತ್ತು ಇತಿಹಾಸದ ದೃಷ್ಟಿಕೋನದಲ್ಲಿ ಅದನ್ನು ಧಾರಾಳವಾಗಿ ಕಾಣಬಹುದು.

ಪ್ರಶ್ನೆ: ಮಹಾನ್ ಕವಿ ಮೊಯಿನ್ ಕುಟ್ಟಿ ವೈದ್ಯರ ಕವಿತೆಗಳಲ್ಲಿರುವ ಅಲೌಕಿಕತೆಯನ್ನು ವಿವರಿಸುತ್ತೀರ?

ಮೊಯಿನ್ ಕುಟ್ಟಿಯವರ ಪ್ರಸಿದ್ಧ ಪ್ರೇಮಕಾವ್ಯ ‘ಹುಸ್ನುಲ್ ಜಮಾಲ್-ಬದ್ರುಲ್ ಮುನೀರ್’ ನಲ್ಲಿ ಅದಮ್ಯ ಪ್ರೇಮಿಗಳಾದ ಹುಸ್ನುಲ್ ಜಮಾಲ್ ಹಾಗೂ ಬದ್ರುಲ್ ಮುನೀರ್ ಹಲವು ಎಡರುತೊಡರುಗಳನ್ನು ಎದುರಿಸುತ್ತಾರೆ. ಕೊನೆಗೂ ಅದನ್ನೆಲ್ಲಾ ನಿವಾರಿಸಿ ಸತಿ-ಪತಿಯರಾಗುತ್ತಾರೆ. ಆದರೆ ಕಾವ್ಯ ಅಲ್ಲಿಗೆ ಮುಕ್ತಾಯಗೊಳ್ಳುವುದಿಲ್ಲ. ನವದಂಪತಿಗಳ ಮಧುಚಂದ್ರವನ್ನು ವಿವರಿಸಿಯೇ ಕಾವ್ಯದಲ್ಲಿರುವ ಕಥೆ ಕೊನೆಗೊಳ್ಳುತ್ತದೆ. ವಿವಾಹಿತ ಹುಸ್ನುಲ್ ಜಮಾಲ್ ಮತ್ತು ಬದ್ರುಲ್ ಮುನೀರ್ ಹಾರುವ ರಥದಲ್ಲಿ ಮಧುಚಂದ್ರದ ಸವಾರಿ ಮಾಡುತ್ತಾರೆ. ಅವರ ಮಧುಚಂದ್ರದ ಪ್ರವಾಸದ ಗುರಿ ಇನ್ನಷ್ಟು ಕುತೂಹಲಕಾರಿಯಾಗಿದೆ. ಬದ್ರುಲ್ ಮುನೀರ್ ತನ್ನ ಪ್ರೀತಿಯನ್ನು ಪಡೆಯಲು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಮುನೀರ್ ನನ್ನು ಮೂವರು ಸುಂದರಿಯರು ಏಕಮುಖವಾಗಿ ಪ್ರೀತಿಸುತ್ತಿದ್ದರು. ಆ ಮೂವರು ಸುಂದರಿಯರನ್ನು ಮದುವೆಯಾಗುವ ಪ್ರಸಂಗವೇ ಆ ಪ್ರಯಾಣ. ಅಲ್ಲಿಯವರೆಗೂ ಸಾಧಾರಣ ಹೆಣ್ಣು-ಗಂಡುವಿನ ನಡುವಿನ ಪ್ರೇಮಕಾವ್ಯದಂತೆ ಕಾಣುವ ಈ ಕೃತಿ ಇಲ್ಲಿ ಲೌಕಿಕ ಪ್ರೇಮದ ಘನತೆಯನ್ನು ಮೀರಿ ಬೇರೆಯದ್ದೇ ಆಯಾಮವನ್ನು ತಲುಪುತ್ತದೆ. ಕಾವ್ಯದಲ್ಲಿ ಬರುವ ಈ ಮೂವರು ಪ್ರೇಯಸಿಯರು ʼಪರಮಾತ್ಮನನ್ನು ಪ್ರೀತಿಸುವ ಮಾನವ ಆತ್ಮಗಳನ್ನು ಪ್ರತಿನಿಧಿಸುತ್ತಾರೆʼ. ಇದು ಸೂಫೀ ಕವಿತೆಗಳ ರೂಪಕಗಳನ್ನು ಅರಿತವರಷ್ಟೇ ಅರ್ಥ ಮಾಡಿಕೊಳ್ಳಬಲ್ಲರು.

ಅದು ಮೊಯಿನ್ ಕುಟ್ಟಿ ವೈದ್ಯರ ಬರವಣಿಗೆಯ ಶೈಲಿ. ಹಾಗೂ ಸೂಫೀ ರೂಪಕಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು ಇಲ್ಲಿ ಕಾವ್ಯದ ಆತ್ಮವನ್ನು ಮುಟ್ಟಿಕೊಳ್ಳಲು ವಿಫಲರಾಗುತ್ತಾರೆ. ಅವರ ‘ಪಡಪ್ಪಾಟ್’ ಗಳನ್ನು (ಯುದ್ಧಗಾನ) ಗಮನಿಸುವುದಾದರೆ, ಅದು ಆಕ್ರಮಣದ ವಿರುದ್ಧ ಪ್ರತಿರೋಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದ ವೀರರ ಬಗೆಗಿನ ಚರಿತ್ರೆಯನ್ನು ತೆರೆದುಕೊಡುತ್ತದೆ. ಆ ವೀರರು, ಹುತಾತ್ಮತೆಗೆ ಅಭಿಮುಖವಾಗುವಾಗಿನ ಅವರ ಧೃಢಸಂಕಲ್ಪ, ಅದಮ್ಯ ವಿಶ್ವಾಸವನ್ನು ಇಡೀ ಕಾವ್ಯದಲ್ಲಿ ಚರ್ಚಿಸಲಾಗಿದೆ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೀವನ್ಮರಣ ಹೋರಾಟ ನಡೆಸಿದ ಐತಿಹಾಸಿಕ ವ್ಯಕ್ತಿತ್ವಗಳ ಕುರಿತಂತೆ ಪಾತ್ರಗಳನ್ನು ಪುನರಾವಿಷ್ಕರಿಸುವುದನ್ನು ಈ ಕಾವ್ಯಗಳಲ್ಲಿ ಕಾಣಬಹುದು.

ಪ್ರಶ್ನೆ: ವೈದ್ಯರ ಕಾವ್ಯದಲ್ಲಿ ಬರುವ ಪ್ರವಾದಿಯ ಚಿತ್ರಣವನ್ನು ವಿವರಿಸಬಹುದೇ?

ವೈದ್ಯರ ಕಾವ್ಯಗಳಲ್ಲಿ ʼಆರಾಮುತೋಲಿ ಓದಿ ಸತ್ಯಂʼ*8 ಒಂದು ಪ್ರಸಿದ್ಧ ಕಾವ್ಯ. ಪ್ರವಾದಿಯ ನೂರನ್ನು(ಬೆಳಕು) ಆತ್ಮಗಳ ಮೂಲವಾಗಿ ಕಾಣುವುದೇ ಹಳೆಯ ಮಾಪ್ಪಿಳ ಕಾವ್ಯದ ಸಾಮಾನ್ಯ ನಿಲುವು. ವೈದ್ಯರ ಕಾವ್ಯಗಳಲ್ಲಿಯೂ ಇದನ್ನು ಕಾಣಬಹುದು. ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಆಧ್ಯಾತ್ಮಿಕ ಬೆಳಕಿನ ದಾರಿದೀಪವೇ ಪ್ರವಾದಿಚರ್ಯೆ. ಸೂಫೀ ಕವಿಗಳು ಯಾವುದೇ ಸಮಸ್ಯೆಗಳಿಗೆ ಪ್ರವಾದಿಯವರ ಜೀವನದಲ್ಲಿ ಪರಿಹಾರವನ್ನು ಹುಡುಕುತ್ತಾರೆ. ಅದು ಆಧ್ಯಾತ್ಮಿಕ, ರಾಜಕೀಯ ಅಥವಾ ಬರವಣಿಗೆಯದ್ದೇ ಬಿಕ್ಕಟ್ಟಾಗಿರಬಹುದು. ಪರಿಹಾರವನ್ನು ಪ್ರವಾದಿ ಜೀವನದಿಂದಲೇ ಹುಡುಕುತ್ತಾರೆ. ಪ್ರವಾದಿಯವರ ಜೀವನವನ್ನು ಹಾಡುವ ವೈದ್ಯರ ತೀವ್ರ ಬಯಕೆಯೇ ‘ಹಿಜ್ರಾʼ ಕೃತಿಯನ್ನು ಸಂಯೋಜಿಸಲು ಕಾರಣವಾಯಿತು. ಅವರ ಬದರ್, ಉಹ್ದ್ ಮತ್ತು ಮಲಪ್ಪುರಂ ಪಡಪ್ಪಾಟುಗಳಲ್ಲಿ ಪ್ರವಾದಿ ಅತೀಂದ್ರಿಯ, ಅಲೌಕಿಕ ಶಕ್ತಿಗಳಿಂದ ರೂಪುಗೊಂಡಿದ್ದಾರೆ.


ಪ್ರವಾದಿಯವರ ಮೇಲೆ ಉಕ್ಕಿ ಹರಿಯುವ ಪ್ರೀತಿಯೇ ಅವರ ಕಾವ್ಯದ ವಿಶಿಷ್ಟ ಲಕ್ಷಣ. ಬದರ್ ಯುದ್ಧ ಕಾವ್ಯದಲ್ಲಿ ʼಉರತ್ತ್ ಯಾ ಮೌಲಲ್ ಉರೂಬಾʼ ಮತ್ತು ʼನೈನಾರ್ ನಬೀತ್ ವಹಾʼ ಹಾಡುಗಳನ್ನೇ ಗಮನಿಸಿ. ಈ ಘಟನೆಯು ಯುದ್ಧಕ್ಕೆ ಸನ್ನಧ್ಧರಾಗಿ ನಿಂತ ಸಾಲಿನಲ್ಲಿರುವ ಸವಾದ್ ರ ಪ್ರವಾದಿ ಪ್ರೇಮದ ಉತ್ಕಟ ಪ್ರಕಟನೆಯನ್ನು ಇಲ್ಲಿ ಕಾಣಬಹುದು. ಯುದ್ಧಕಾವ್ಯದಲ್ಲಿ ಬರುವ ಈ ಭಾಗಗಳಿಗೆ ಯುದ್ಧಕ್ಕೆ ಸಂಬಂಧಿಸಿದಂತೆ ಯಾವುದೇ ಸಂಬಂಧವೂ ಇಲ್ಲ. ಅಗತ್ಯವಿದ್ದರೆ ಅದನ್ನು ಕೈ ಬಿಡಬಹುದಿತ್ತು. ಆದರೆ ಅದನ್ನು ಕೈ ಬಿಟ್ಟಿಲ್ಲ, ಬದಲಾಗಿ ಇಡೀ ಕಾವ್ಯದಲ್ಲಿ ಇದು ಬಹಳ ಮುಖ್ಯವಾದ ಉಪ-ಸಂಚಿಕೆಯಾಗಿ ಮೂಡಿ ಬಂತು. ಕವಿತೆಯಲ್ಲಿ ಪ್ರೇಮದ ಪ್ರಕಟನೆ ಎಷ್ಟು ಪ್ರಾಮಾಣಿಕವಾಗಿದೆಯೆಂದರೆ, ಆ ಭಾಗವನ್ನು ಹಾಡುವಾಗ ವೈದ್ಯರು ಸವಾದ್ ರ ಸ್ಥಾನದಲ್ಲಿಯೇ ನಿಂತು ಕವಿತೆ ಬರೆದಿದ್ದಾರೆ ಎಂದು ತೋರುತ್ತದೆ. ಇದು ವೈದ್ಯರ ಕಾವ್ಯದ ಗುಣ. ಇದು ವೈದ್ಯರ ಕವಿತೆಯಲ್ಲಿ ಅಭಿವ್ಯಕ್ತಿಗೊಂಡ ಪ್ರವಾದಿ ಪ್ರೇಮ.

ಟಿಪ್ಪಣಿಗಳು:

  1. ಅರಬ್ಬೀ ಮಲಯಾಳಂ: ಮಲಯಾಳಂ ಭಾಷೆಯ ಈಗಿನ ಲಿಪಿ ತಯಾರಾಗುವ ಎಷ್ಟೋ ವರ್ಷಗಳ ಹಿಂದೆ ಮುಸ್ಲಿಂ ವಿದ್ವಾಂಸರು ಅರೇಬಿಕ್ ಲಿಪಿಯಲ್ಲಿ ಬರೆದು ಅಭಿವೃದ್ಧಿಪಡಿಸಿದ ಒಂದು ಬರೆವಣಿಗೆಯ ಪ್ರಕಾರ. ಮಲಯಾಳಂ ಭಾಷೆಗೆ ಸಹಜವಾಗುವಂತೆ ಕೆಲವು ಹೊಸ ಅಕ್ಷರಗಳನ್ನು ಅರಬ್ಬಿ ಮಲಯಾಳಂ ಲಿಪಿಗೆ ಸೇರಿಸಲಾಗಿದೆ. ಮಲಬಾರ್ ಪ್ರಾಂತ್ಯದ ವ್ಯಾಪ್ತಿಗೆ ಸೇರಿದ್ದ ಕರ್ನಾಟಕದ ಕೊಡಗು, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಆಸುಪಾಸಿನ ಮುಸ್ಲಿಮರಿಗೆ ಒಂದು ಕಾಲದಲ್ಲಿ ಅರಬ್ಬಿ ಮಲಯಾಳಂ ಅಧಿಕೃತ ಲಿಪಿಯಾಗಿತ್ತು. ಭಾಷವಾರು ವಿಂಗಡನೆ ಹಾಗೂ ಪ್ರಾಂತ್ಯಗಳಿಂದ ರಾಜಕೀಯ ಸ್ಥಿತ್ಯಂತರ ಪಡೆದ ಬಳಿಕ ಅರಬ್ಬಿ ಮಲಯಾಳಂ ಪ್ರಭಾವ ಈ ಭಾಗದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
  2. ಮುಹಿಯುದ್ದೀನ್ ಶೇಖ್: ಶೈಖ್ ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಅಲ್ ಜೀಲಾನೀ ಪೂರ್ಣ ಹೆಸರು. ಹನ್ನೊಂದನೇ ಶತಮಾನದಲ್ಲಿ ಬಾಗ್ದಾದಿನಲ್ಲಿ ಬದುಕಿದ್ದ ಪ್ರಸಿದ್ಧ ವಿದ್ವಾಂಸ. ಸೂಫೀ ಪರಪಂಪರೆಗಳಲ್ಲಿ ಪ್ರಮುಖವಾಗಿರುವ ಖಾದಿರೀ ಪಂಗಡವು ಇವರ ಶಿಷ್ಯ ಶೃಂಖಲೆಯನ್ನು ಅವಲಂಬಿಸಿದೆ. ಪೂರ್ವ ದೇಶಗಳಲ್ಲಿ, ವಿಶೇಷವಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ದಂತಹ ರಾಷ್ಟ್ರಗಳಲ್ಲಿ ಇವರ ಖ್ಯಾತಿ ಅನನ್ಯವಾದುದು. ‘ಮುಹಿಯುದ್ದೀನ್ ಮಾಲಾ’ ಇದೇ ಸಂತರನ್ನು ಕುರಿತಂತೆ ಕಟ್ಟಿರುವ ಕಾವ್ಯ. ಇದರಲ್ಲಿ ಅವರ ಜೀವನ, ಪವಾಡಗಳನ್ನು ಸ್ತುತಿಸಲಾಗಿದೆ.
  3. ತಸವ್ವುಫ್: ಸೂಫಿಸಂ ನ ಅರೇಬಿಕ್ ಪದ.
  4. ತ್ವರೀಕತ್: ಸೂಫಿ ಮಾರ್ಗ. ವಿಶ್ವದಾದ್ಯಂತ ಹಲವು ಸೂಫೀ ಮಾರ್ಗಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು ಖಾದಿರೀ, ಚಿಶ್ತಿ, ನಕ್ಷಬಂದಿ, ಸುಹ್ರವರ್ದಿ.
  5. ಅಬೂ ಸಾಹಿಬ್: ಮಾಪ್ಪಿಳ ಸಮುದಾಯದಿಂದ ಬಂದಂತಹ ಸೂಫಿ ಬರಹಗಾರ ಹಾಗೂ ಇತಿಹಾಸಕಾರ. ಕೇರಳದ ತಲಶ್ಶೇರಿಯವರಾದ ಇವರು ಶೈಖ್ ಅಬ್ದುಲ್ ಖಾದಿರ್ ಜೀಲಾನಿಯವರ ‘ಫುತೂಹುಲ್ ಗೈಬ್’ ಗ್ರಂಥದ ಅನುವಾದ, ದಾರ್ಶನಿಕ ಕವಿ ‘ಇಚ್ಚ ಮಸ್ತಾನ್’ ರ ವಚನಗಳ ಸಂಪಾದನೆ; ಇನ್ನೂ ಅನೇಕ ಮಹತ್ವದ ಕೆಲಸವನ್ನು ಮಾಡಿದ್ದಾರೆ. ಸುಮಾರು ಅರವತ್ತರ ದಶಕದಲ್ಲಿ ನಿಧನರಾದ ಇವರು ಸೂಫೀ ಅನುಭಾವ ಸಾಹಿತ್ಯ ಮತ್ತು ಇತಿಹಾಸದ ಕುರಿತು ಅಪಾರವಾದ ಆಸಕ್ತಿಯಿಂದ ಅಧ್ಯಯನ ಮಾಡಿ ಸಾಧನೆ ಮೆರೆದಿದ್ದಾರೆ.
  6. ಬದ್‌ರುಲ್ ಮುನೀರ್ ಹುಸ್ನುಲ್ ಜಮಾಲ್: ಮಾಪ್ಪಿಳ ಮಹಾಕವಿ ಮೊಯಿನ್ ಕುಟ್ಟಿ ವೈದ್ಯರ್ ವಿರಚಿತ ಪ್ರೇಮಕಾವ್ಯ. ಇದನ್ನು ಪ್ರೊ. ಬಿ ಎಂ ಇಚ್ಲಂಗೋಡು ಅವರು ಕನ್ನಡಕ್ಕೆ ಬಹಳ ಅಂದವಾಗಿ ಅನುವಾದಿಸಿದ್ದಾರೆ.
  7. ಪಡಪ್ಪಾಟ್- ಯುದ್ಧಗಾನ. ಬ್ರಿಟೀಷರ ವಿರುದ್ಧ ಹೋರಾಡಲು ಬದ್ರ್ ಪಾಟು, ಉಹ್ದು ಪಾಟು ಮುಂತಾದ ಪಡಪ್ಪಾಟುಗಳು ಕ್ರಾಂತಿಗೀತೆಗಳಾಗಿದ್ದವು. ಬಳಿಕ ಬ್ರಿಟೀಷರು ಈ ಕಾವ್ಯಗಳನ್ನು ನಿಷೇಧಿಸಿದರು. ಅರಬ್ಬಿ ಮಲಯಾಳಂ ಸಾಹಿತ್ಯದಲ್ಲಿ ಬಂದ ಹಲವಾರು ಕೃತಿಗಳ ನಾಶಕ್ಕೆ ಇದು ಕೂಡಾ ಹೇತುವಾಯಿತು. ತಮ್ಮ ವಿರುದ್ಧ ಬಳಸಲ್ಪಡುವ ಸಾಹಿತ್ಯ ಕೃತಿಗಳನ್ನು ಬ್ರಿಟೀಷರು ಆ ವೇಳೆಯಲ್ಲಿ ನಾಶಪಡಿಸಿದ್ದರು. ಹಾಗಾಗಿ ಹಲವಾರು ಸಾಹಿತ್ಯ ಕೃತಿಗಳು ಶಾಶ್ವತವಾಗಿ ಇಲ್ಲವಾಯಿತು ಎಂದು ಅಧ್ಯಯನಕಾರರು ಖೇದ ವ್ಯಕ್ತಪಡಿಸುತ್ತಾರೆ.
  8. ಆರಮುತ್ತೊಳಿ ಓದಿ ಸತ್ತಿಯಂ- ಮಹಾಕವಿ ಮೊಯಿನ್ ಕುಟ್ಟಿ ವೈದ್ಯರು ಬರೆದ ಪ್ರಸಿದ್ಧವಾದ ಒಂದು ಮಾಪ್ಪಿಳ ಹಾಡಾಗಿದೆ. ಇಲ್ಲಿ ‘ಪೈಗಂಬರರ ಪ್ರೇಮ’ ವಸ್ತುವಾಗಿದೆ.

ಕೆ. ಅಬೂಬಕ್ಕರ್ ಮಾಸ್ಟರ್ ಅವರ ಸಂದರ್ಶನ ನಡೆಸಿರುವುದು ‘ಅಗಮೀಯಂ’ ವೆಬ್ ಮ್ಯಾಗಜೀನ್
ಕನ್ನಡಕ್ಕೆ: ಫೈಝ್ ವಿಟ್ಲ

ಝಹರಾ, ಬೆಳಗಿನ ತಾರೆ(ವೀನಸ್ -ಶುಕ್ರ)

ಈ ಸೂರ್ಯ ಚಂದ್ರರ ಒಡನಾಟದ
ಸುಖವನ್ನು ಬಿಟ್ಟು ಬಿಡಲೇ
ಬೆಳಗಿನ ಸಂದೇಶವ ಸಾರುವ
ಈ ಸೇವೆಯನು ತ್ಯಜಿಸಿ ಬಿಡಲೇ

ಈ ನಕ್ಷತ್ರಗಳ ಲೋಕದಲ್ಲಿ
ಬದುಕುವುದು ನನಗೆ ಹೇಳಿದ್ದಲ್ಲ
ಈ ಶಿರವನೇರುವುದಕ್ಕಿಂತ
ಭುವಿಯ ಪಾದಕ್ಕಿಳಿಯುವುದೆ ಒಳಿತು

ಈ ಆಗಸವಿದೇನು? ಯಾರೊಬ್ಬರೂ
ಬದುಕಲಾರದ ನಾಡು
ಮುಂಜಾವಿನ ಬಿಳಿ ಬೆಳಕಿನಾ ದಾವಣಿಯೇ
ಶವ ವಸ್ತ್ರವಾಗುತಿದೆಯೆನಗೆ !

ಪ್ರತೀ ಮುಂಜಾನೆಯೂ ಹುಟ್ಟಿ –
ಸಾಯುವುದೇ ನನ್ನ ಹಣೆಬರಹ
ಮರಣವೆಂಬ ಮಧುಸುರಿಯುವವನಿಂದ
ಬೆಳಗಿನ ಮಧು ಕುಡಿಯುವ ಕರ್ಮ!

ಈ ಸೇವೆ ಈ ಪದವಿ ಈ ಔನ್ನತ್ಯವೇ
ಒತ್ತಟ್ಟಿಗಿರಲಿ
ಈ ಮಿನುಗುವ ಭ್ರಮೆಗಿಂತ
ಕತ್ತಲೆಯೇ ಅದೆಷ್ಟೋ ವಾಸಿ!

ವಿಧಿಲಿಖಿತವೊಂದು ಕೈಯಲ್ಲಿರುತ್ತಿದ್ದರೆ
ಈ ಗ್ರಹವಾಗಿ ತಿರುಗುತಿರಲಿಲ್ಲ
ಸಮುದ್ರದಾಳದಲ್ಲೊಂದು
ಮಿನುಗುವ ಮುತ್ತಾಗುತ್ತಿದ್ದೆ!

ಅಲ್ಲಿಯೂ ಅಲೆಗಳ ತುಯ್ದಾಟಕ್ಕೆ
ಮನಕೆ ಭಯವಾಗುತಿದ್ದರೆ
ಯಾವುದಾದರು ಸರವೊಂದಕ್ಕೆ
ಸೇರಿಕೊಂಡು ಪದಕವಾಗುತ್ತಿದ್ದೆ!

ಹಾ! ಆ ಸುಂದರಿಯೊಬ್ಬಳ ಕೊರಳಲ್ಲಿ
ಆಭರಣವಾಗಿ ಮಿನುಗುವುದೆಂದರೇನು
ಸೀಸರನ ರಾಣಿಯ ಮುಕುಟದಲಿ
ವಜ್ರದಂತೆ ಹೊಳೆಯುವುದೆಂದರೇನು!

ಸಣ್ಣ ಕಲ್ಲೊಂದರ ಅದೃಷ್ಟವೊಂದು
ತುಸು ಬದಲಾದರೆ ಸಾಕು
ಸುಲೈಮಾನರ ಉಂಗುರದ
ನತ್ತಾಗಲು ಅಷ್ಟೇ ಸಾಕು!

ಅದರೂ ಈ ಜಗದಲ್ಲಿ ಯಾವುದೂ
ಒಡೆದು ಹೋದರೆ ಮುಗಿದೇ ಹೋಯಿತು
ಭಗ್ನವಾಗುವುದೇ ಈ ಮುತ್ತುಗಳ
ನಿಜವಾದ ಸಾವು!

ಸಾವನರಿಯದೆ ಬದುಕುವುದೇ
ನಿಜವಾದ ಬದುಕು
ಅದೊಂದು ಜೀವನವೇ ಅಲ್ಲಿ
ಬರೀ ಸಾವೇ ಒಂದು ಬದುಕು!

ಇದೊಂದು ಈ ಭುವಿಯ
ಅಂತಿಮ ಅಲಂಕಾರವಾಗಿದ್ದರೆ
ಅಲ್ಲಿ ಕೆಲವು ಕುಸುಮಗಳ ಮೇಲೆ
ನಾ ಇಬ್ಬನಿಯಾಗಿ ಸುರಿಯಬಾರದೇಕೆ!

ಶ್ರಮಿಕರ ಹಣೆಯಲ್ಲಿ
ಹೊಳೆಯುವ ಬೆವರ ಹನಿಯಾಗಲೇ
ದಲಿತ ದಮನಿತರ ನಿಟ್ಟುಸಿರಿನಲಿ
ಹೊರಹೊಮ್ಮುವ ಕಿಡಿಯಾಗಲೇ!

ಯಾರದೋ ಕಣ್ರೆಪ್ಪೆಗಳಲಿ
ಬಂಧಿಯಾಗುವ ಹನಿಯಾಗಲೇ
ಆ ನಾರಿಯ ಕಣ್ಣಿಂದ ಹನಿ ಹನಿಯಾಗಿ
ತೊಟ್ಟಿಕ್ಕಿ ಬಿಡಲೇ!

ಯುದ್ಧ ಸನ್ನದ್ಧನಾಗಿ ಹೊರಟಿರುವ
ಆಕೆಯ ಗಂಡನನ್ನು
ದೇಶಸೇವೆಯ ಕರ್ತವ್ಯದಲಿ
ಹೊರಡುತಿಹ ದೇಶಪ್ರೇಮಿಯನ್ನು

ಕಠಿಣತೆಯಲ್ಲೂ
ಕೆಚ್ಚೆದೆಯಿಂದ ಹೋರಾಡುವವನ
ತನ್ನ ಮೌನದಲ್ಲೇ
ಮಾತನ್ನು ನಾಚಿಸುವವನ!

ಅಗಲಿಕೆಯ ಕ್ಷಣದಲ್ಲಿ
ನೋವಿನಿಂದಲೆ ಬಾಡುತಿರುವ ಮುಖವನ್ನು
ವಿರಹದ ನೋವಿನಲೂ
ಆತನನು ಸೆಳೆಯುತಿಹ ಸೌಂದರ್ಯದಲ್ಲಿ

ಎಷ್ಟೇ ತಡೆದುಕೊಂಡರೂ ಆಕೆ
ನಾ ಹರಿದುಬಿಡುವೆ
ಆ ಪೌರ್ಣಮಿಯ ಕಂಗಳಿಂದ
ನಾನೊಮ್ಮೆ ಚಿಮ್ಮಿಬಿಡುವೆ!

ಭುವಿಯ ಮಣ್ಣಿನಲಿ ಕಲೆತು
ಬದುಕಿನ ಅನಂತತೆಯಲಿ ಒಂದಾಗುವೆ
ಹೋಗುತ್ತಾ ಈ ಪ್ರೇಮದ ಸಂದೇಶವನು
ಜಗದಗಲ ಸಾರಿಬಿಡುವೆ!!

ಉರ್ದು ಮೂಲ: ಅಲ್ಲಾಮಾ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

ಸದಾ – ಏ – ದರ್ದ್

ದ್ವೇಷ ಬೇಗೆಯಲಿ ದಹಿಸುತಿರುವೆ
ಬರಿದಾಗಿದೆ ಬದುಕುವಾಸೆಯಿಲ್ಲಿ,
ಮುಳುಗಿಸಿಬಿಡು ಓ ಗಂಗಾ ನದಿಯೆ
ಆ ನಿನ್ನ ಪ್ರಕ್ಷುಬ್ದ ತರಂಗಗಳಲ್ಲಿ!

ರಣರಂಗವಾಗಿಹುದು
ಜನ್ಮ ಭೂಮಿಯಿಲ್ಲಿ
ಅದೆಂತಹಾ ಬಾಂಧವ್ಯ!
ವಿರಹ ಬಂದು ಕುಳಿತಿಹುದು
ಪ್ರೇಮದಂಗಳದಲ್ಲಿ!

ಪ್ರೀತಿಯೇ ಸಿಡಿದೆದ್ದಿಹುದು
ದ್ವೇಷಕ್ಕೆ ಎದುರಾಗಿ
ಒಂದೇ ಹೊಲದೊಳಗೆ
ಫಸಲುಗಳು ಕಾದಾಡುತಿಹವು

ಸ್ನೇಹ ತಂಗಾಳಿ ಬೀಸಲಿಲ್ಲವೆಂದೂ
ಆ ಹೂದೋಟದಲ್ಲಿ
ಮೈನಾ ಹಕ್ಕಿಯ ಹಾಡೂ
ಕೇಳಿ ಬರುವುದೆಂತು ಈ ನಾಡಿನಲ್ಲಿ

ಸನಿಹ ಸುಖದಿ ಮಿಂದೇಳುವವನು
ನನ್ನೊಳಗೆ ಕಳೆದು ಹೋಗುತಿಹೆನು,
ಭೊರ್ಗರೆವ ಅಲೆಗಳೊಳಗೆ
ಕಳೆದು ಹೋಗುತಿರುವ ಕಿನಾರೆಯಲಿ
ಭಯಭೀತನಾಗಿಹೆನು

ಕವಿ ಹೃದಯವರಳುವುದು
ಫಸಲುದಿಸುವಂತೆ ಹೊಲದಲ್ಲಿ
ಕಳೆದು ಹೋಗುತಿದೆ ನೆಲವು
ಫಸಲೊಡೆಯುವ ತಾಣವೆಲ್ಲಿ

ಮುಕ್ತ ಸೌಂದರ್ಯದ ರತಿಯ ಕೇಳುವವರಾರು
ಮಿಲನ ಕಾತರದ ಮನ್ಮಥನೆ ಇರದಲ್ಲಿ,
ಎಷ್ಟು ಬೆಳಗಿದರೇನು ಈ ದೀಪ
ಸಂಭ್ರಮಿಸುವ ಜನರಿಲ್ಲದ ಊರಿನಲ್ಲಿ

ಮಾತುಗಳೆಲ್ಲವೂ ಮೌನವಾಗಿ
ಬದಲಾಗುತ್ತಿಲ್ಲವೇಕೆ,
ಈ ಹೆಮ್ಮೆಯೊಂದು ಕನ್ನಡಿಯೊಳಗಿಂದ
ಮರೆಯಾಗುವುದಿಲ್ಲವೇಕೆ?

ಅದೋ! ದಗ್ಧವಾಗುತಿವೆ ಹೂದೋಟ
ರಣರಂಗದ ಬೆಂಕಿಯಲ್ಲಿ
ಭಸ್ಮವಾಗುತಿವೆ ಕವಿತೆಗಳು
ನನ್ನ ಹೃದಯದಲ್ಲಿ !

ಉರ್ದು ಮೂಲ: ಅಲ್ಲಾಮಾ ಇಕ್ಬಾಲ್
ಅನುವಾದ: ಪುನೀತ್ ಅಪ್ಪು