ನವ ಮಂದಿರ

ಸತ್ಯವೊಂದನು ಹೇಳುವೇ ಓ ಬ್ರಾಹ್ಮಣನೇ,
ತಪ್ಪು ತಿಳಿಯದಿರು ಎನ್ನ
ಹಳತಾಗುತಿವೆ ಗರ್ಭಗುಡಿಯೊಳಿರುವ
ಆ ಮೂರ್ತಿಗಳು ನಿನ್ನ

ನಿನ್ನವರನೇ ದ್ವೇಷಿಸಲು
ಆ ಮೂರ್ತಿಗಳಿಂದ ನೀ ಕಲಿತಿರುವಾಗ
ವೈರತ್ವ ದ್ವೇಷಗಳನ್ನೇ ಕಕ್ಕಲು
ಎನ್ನ ಗುರುವಿಗೂ ಆ ಖುದಾನೇ ಕಲಿಸಿರಬೇಕು

ಅಯ್ಯೋ! ಈ ಮಂದಿರ ಮಸೀದಿಗಳಿಂದಲೇ
ನಾ ಬೇಸತ್ತು ಹೋದೆ
ಗುರುವಿನ ಧರ್ಮವೇ ಕಳೆದುಹೋಗಿದೆ
ನಿನ್ನ ಪುರಾಣಗಳೂ ಕಳೆದುಹೋಗಿವೆ

ಕಲ್ಲಿನಾ ಶಿಲ್ಪಗಳನ್ನು
ನೀ ದೇವರೆಂದು ಬಗೆದಿರುವೆ
ಈ ನಾಡಿನ ಮಣ್ಣ ಕಣಕಣಗಳೂ
ಎನಗೆ ದೇವತೆಗಳಾಗುತಿವೆ

ಬಾ ಇನ್ನೊಮ್ಮೆ ಈ ಪರಕೀಯತೆಯ
ಪರದೆಯನ್ನೊಮ್ಮೆ ಎತ್ತಿಬಿಡೋಣ
ಅಗಲಿದವರನೊಮ್ಮೆ ಒಂದಾಗಿಸೋಣ
ಗಡಿರೇಖೆಗಳ ಕಲೆಯ ಅಳಿಸೋಣ

ಶೂನ್ಯವಾಗಿದೆ ಎದೆಯ ಗೂಡು
ಹಕ್ಕಿಗಳ ಸುಳಿವಿಲ್ಲ
ಬಾ ಈ ನಮ್ಮ ದೇಶದಲ್ಲಿ
ನವ ಮಂದಿರವ ನಿರ್ಮಿಸೋಣ

ಸರ್ವ ತೀರ್ಥಗಳಿಗೆ ಮಿಗಿಲಾದ
ತೀರ್ಥವಿಹುದಿಲ್ಲಿ
ಬಾ ಸಗ್ಗದಾ ನೆತ್ತಿಯ ಮೇಲೆ
ಪ್ರೇಮ ಕಳಶವನಿಡೋಣ

ಆ ಮಧುರಮಂತ್ರಗಳನ್ನು
ದಿನವೆದ್ದು ಹಾಡೋಣ
ಆ ಭಕುತರ ಹೃದಯಕ್ಕೆ
ಪ್ರೇಮಮಧುವ ಸುರಿಯೋಣ

ಶಕ್ತಿ-ಶಾಂತಿಗಳೆರಡೂ ಅಡಗಿಹುದು
ಭಕುತರ ಮಧುರವಾಣಿಯಲ್ಲಿ
ಈ ಭುವಿಯ ಜೀವರಾಶಿಗಳೆಲ್ಲಾ
ಮುಕ್ತಿ ಕಾಣುವವು ಪ್ರೀತಿಯಲ್ಲಿ !

ಉರ್ದು ಮೂಲ : ಅಲ್ಲಾಮಾ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

Leave a Reply

*