ರಾವಿ ನದಿಯ ದಂಡೆಯಲ್ಲಿ

ಶಾಂತ ಸಂಜೆಯಲ್ಲಿ ಹರಿಯುತ್ತಿದೆ
ಮಧುರವಾಗಿ ರಾವಿ,
ನನ್ನೆದೆಯ ನೋವನ್ನು ಮಾತ್ರ
ಕೇಳದಿರಿ ಇಲ್ಲಿ

ಸುಜೂದಿನ ಮೇಲುಕೀಳುಗಳ
ಸಂದೇಶ ದೊರೆಯುತ್ತಿದೆಯಿಲ್ಲಿ
ಜಗವೆಲ್ಲವೂ ‘ಹರಂ’ ನ
ಹಿತ್ತಿಲಾಗಿದೆಯಿಲ್ಲಿ!

ರಾವಿಯ ಅನಂತ ಹರಿವಿನ ದಂಡೆಯಲಿ
ನಿಂತಿಹೆನು ನಾನು
ಆದರೂ ತಿಳಿಯದಾಗಿಹೆ
ಎಲ್ಲಿ ನಿಂತಿರುವೆ ನಾನು!

ವೃದ್ಧಗುರು ಮಧುಬಟ್ಟಲನು ಹಿಡಿದು
ನಿಂತಿಹನು ನಡುಗುತಿಹ ಕೈಗಳಲ್ಲಿ
ರಕ್ತವರ್ಣದ ಮದ್ಯ ಚೆಲ್ಲಿದೆ
ಸಂಜೆ ಬಾನಿನ ಸೆರಗಿನಲ್ಲಿ!

ಈ ಕಾರವಾನವೂ ಕೊನೆಯಾಗುತ್ತಲಿದೆ
ದಿನದ ಆವರ್ತನೆಯಂತೆ
ಮುಸ್ಸಂಜೆಯಾಗುತ್ತಿದೆ, ಅಚ್ಚರಿಯೇಕೆ
ಬದುಕು ಸೂರ್ಯಕಾಂತಿ ಹೂವಿನಂತೆ!

ನಿಂತುಕೊಂಡಿವೆ ಒಂಟಿತನವ ಸಾರುತ್ತ
ಎತ್ತರೆತ್ತರದ ಮಿನಾರಗಳು
ಒಂದು ಕಾಲದಲ್ಲಿ ಮೆರೆದಿದ್ದ
ಮೊಘಲ್ ದೊರೆಗಳ ಗೋರಿಗಳು!

ವಿದ್ರೋಹದ ಕಥೆಗಳನು
ಸಾರುತಿಹುದೀ ನೆಲವು
ಅಳಿದು ಹೋದ ಜಗತ್ತಿನ
ತೆರೆದ ಹೊತ್ತಗೆಗಳಾಗಿ!

ಸಾಗುತಿದೆ ನೋಡಿ ಮೌನ ಡಂಗುರ
ಆ ನದಿಯ ದಂಡೆಯಲ್ಲಿ
ಮರಗಿಡಗಳಿಲ್ಲದ ಮೌನ ಮರ್ಮರ
ಗೋಷ್ಠಿಯನ್ನೊಮ್ಮೆ ನೋಡಿ!

ಅಲೆಗಳೆದೆಯನ್ನು ಸೀಳುತ್ತ
ಸಾಗುತಿದೆ ಆ ಹಾಯಿದೋಣಿ
ಅಲೆಗಳೊಂದಿಗೆ ಗುದ್ದಾಡುತಿಹ
ನಾವಿಕನ ನೋಡಿ!

ಕಣ್ಮಿಂಚಿನಂತೆ ಚಿಮ್ಮುತಿದೆ
ಆ ನಾವೆಯು ರಾವಿಯಲ್ಲಿ
ಕಣ್ಮುಚ್ಚಿ ತೆರೆಯುವುದರೊಳಗೆ
ಮಿಂಚಿ ಮಾಯಾವಾಗುತಿದೆಯಲ್ಲಿ!

ಅಸ್ತಿತ್ವದ ಅನಂತ ತೆರೆಗಳ ಮೇಲೆ
ಹುಟ್ಟುತ್ತ ಸಾಯುತ್ತಾ,
ಹೀಗೆಯೇ ಸಾಗುತಿವೆ
ಮನುಷ್ಯರ ಜೀವದೋಣಿಗಳು!

ಧೃತಿಗೆಡದು ಎಂದೆಂದಿಗೂ
ಸೋಲಿನಲೆಗಳೇ ಮೇಲೆ ಹರಿಯೇ
ಕಣ್ಣೋಟದಿಂದ ದೂರವಾಗಿರಬಹುದು
ಆದರೂ, ನಾಶವಾಗದು ಮನುಜ ಯಾತ್ರೆ!

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

Leave a Reply

*