ಯುರೋಪ್ ಜ್ಞಾನೋದಯ‌ ಮತ್ತು ಪೈಗಂಬರ್ ಮುಹಮ್ಮದ್(ಸ)

ಹದಿನಾರನೇ ಶತಮಾನದಲ್ಲಿ ಯುರೋಪ್‌ನಲ್ಲಿ ಖುರ್‌ಆನ್ ಅನುವಾದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವು ನೂರಾರು ತೊಡಕುಗಳನ್ನು ಎದುರಿಸಬೇಕಾದ ಒಂದು ಉದ್ಯಮವೇ ಆಗಿತ್ತು. ಕ್ರಿ.ಶ 1542 ರಲ್ಲಿ ಖುರ್‌ಆನಿನ ಲಾಟಿನ್ ಭಾಷೆಯ ಅನುವಾದವೊಂದನ್ನು ಪ್ರಕಟಿಸಲು ಮುಂದಾದ ಪ್ರಕಾಶಕನೊಬ್ಬನನ್ನು ಬಂಧಿಸಿ ಬೆಯ್‌ಸಲ್ ಪ್ರೊಟಸ್ಟಂಟ್‌ಸಿಟಿ ವಕ್ತಾರರು ಅಭಿಪ್ರಾಯ ಪಟ್ಟಿದ್ದೇನೆಂದರೆ; ಖುರ್‌ಆನ್ ಜನರನ್ನು ಗೊಂದಲಕ್ಕೀಡು ಮಾಡಬಹುದು ಎಂದು. ಕೊನೆಗೆ ತುರ್ಕಿಗಳನ್ನು ಎದುರಿಸಲು ಉತ್ತಮ ದಾರಿ ಖುರ್‌ಆನಿನ ಕೆಲವು ಸುಳ್ಳುಗಳನ್ನು ಬಹಿರಂಗಗೊಳಿಸುವುದು ಎಂದು ಪ್ರೊಟೆಸ್ಟಂಟ್ ಮೇಧಾವಿ ಮಾರ್ಟಿನ್ ಲೂಥರ್ ಘೋಷಿಸುವುದರೊಂದಿಗೆ ಖುರ್‌ಆನ್ ಅನುವಾದ ಪ್ರಕ್ರಿಯೆಯು ಮುಂದುವರಿಯುತ್ತದೆ.


ಮುಂದೆ ಕ್ರಿ.ಶ 1543 ರಲ್ಲಿ ಪ್ರಕಟವಾದ ಈ ಲ್ಯಾಟಿನ್ ಭಾಷೆಯ ಖುರ್‌ಆನ್ ಅನುವಾದವು ಯುರೋಪ್‌ನ ಬೌದ್ಧಿಕ ವಲಯವನ್ನು ತಲುಪಿತು ಮತ್ತು ಆ ಮೂಲಕ ಇಸ್ಲಾಮನ್ನು ಇನ್ನೂ ಹೆಚ್ಚು ಅರಿತುಕೊಂಡು ಪ್ರತಿರೋಧಿಸಲು ಸಾಧ್ಯವಾಯಿತು. ಅದೇವೇಳೆ ಈ ಗ್ರಂಥದ ಅಧ್ಯಯನಕ್ಕಿಳಿದ ಕೆಲವು ಮಂದಿ, ಕ್ರೈಸ್ತ ಧರ್ಮದ ನಂಬಿಕೆ ಮತ್ತು ಸಂಹಿತೆಗಳನ್ನು ಪ್ರಶ್ನಿಸಲು ಖುರ್‌ಆನನ್ನು ಆಧಾರವಾಗಿಟ್ಟುಕೊಂಡರು. ಕಾಟ್ಟೋಲೋನಿಯನ್ ದಾರ್ಶನಿಕನೂ, ದೇವಶಾಸ್ತ್ರಜ್ಞನೂ ಆಗಿದ್ದ ಮಿಶೇಲ್ ಸೆರ್ವಿಟ್ಟಸ್ ಬರೆದ Christianismi Restitutio (1553) ಎಂಬ ತ್ರಿಯೇಕತ್ವವನ್ನು ವಿಮರ್ಶಿಸುವ ಕೃತಿಯಲ್ಲಿ ಆತ ತನ್ನ ವಾದಗಳಿಗೆ ಪೂರಕವಾಗಿ ಖುರ್‌ಆನಿನ ಅನೇಕ ವಚನಗಳನ್ನು ಆಧಾರವಾಗಿ ಉಲ್ಲೇಖಿಸಿದ್ದ. ಮಿಶೇಲ್ ಈ ಪುಸ್ತಕದಲ್ಲಿ ಕ್ರೈಸ್ತ ದೇವಶಾಸ್ತ್ರಜ್ಞರು ಸೃಷ್ಟಿಸಿದ ಅಸಂಬದ್ಧವಾದ ತ್ರಿಯೇಕತ್ವವು ಕಳಂಕಗೊಳಿಸಿದ ದೇವನಂಬಿಕೆಯಿಂದ ಕಳಂಕರಹಿತ ಏಕದೇವೋಪಾಸನೆಯತ್ತ ದಾರಿತೋರಲು ಬಂದ ಸುಧಾರಕರೆಂದು ಪೈಗಂಬರ್ ಮುಹಮ್ಮದ (ಸ) ರನ್ನು ಪರಿಚಯಿಸುತ್ತಾರೆ. ಧರ್ಮವಿರೋಧಿ ವಿಚಾರವನ್ನು ಮಂಡಿಸಿದ ಗ್ರಂಥವನ್ನು ಹೊರತರುವುದರೊಂದಿಗೆ ಸರ್ವಿಟ್ಟಸ್ ವಿರುದ್ಧ ವಿಯೆನ್ನಾದಲ್ಲಿ ನಡೆದ ಕಾಥೋಲಿಕಾ ಇನ್‌ಕ್ವಿಸಿಷನ್‌ನಲ್ಲಿ ಧರ್ಮದ್ರೋಹದ ಆಪಾದನೆಯನ್ನು ಹೊರಿಸಿ ಆತನ ಗ್ರಂಥಗಳೊಂದಿಗೆ ಆತನನ್ನೂ ಅಮಾನುಷವಾಗಿ ಸುಟ್ಟು ಹಾಕಲಾಯಿತು.

Johann Wolfgang von Goethe


ಯುರೋಪ್‌ನ ಜ್ಞಾನೋದಯ ಕಾಲದಲ್ಲಿ ಅನೇಕ ಬರಹಗಾರರು ಇದೇರೀತಿ ಪೈಗಂಬರ್ ಮುಹಮ್ಮದ್ (ಸ)ರನ್ನು ಪೌರೋಹಿತ್ಯ ವಿರೋಧಿ ನಾಯಕನನ್ನಾಗಿ ಪ್ರತಿಪಾದಿಸಿದುದನ್ನು ಗಮನಿಸಬಹುದು. ಕೆಲವರು ಇಸ್ಲಾಮನ್ನು ತಾತ್ವಿಕ ದೈವಸಿದ್ಧಾಂತಕ್ಕೆ (philosophic deism) ಸಮಾನವಾದ ಏಕದೇವ ನಂಬಿಕೆಯಾಗಿ ಮತ್ತು ಖುರ್‌ಆನನ್ನು ಯುಕ್ತಿಪೂರ್ಣ ಗ್ರಂಥವಾಗಿ ಕಂಡರು. ಕ್ರಿ.ಶ 1734 ರಲ್ಲಿ ಜಾರ್ಜ್ ಸೆಯ್‌ಲ್ ಎಂಬಾತ ಖುರ್‌ಆನಿನ ಒಂದು ಹೊಸ ಇಂಗ್ಲೀಷ್ ಅನುವಾದವನ್ನು ಹೊರತಂದನು. ಅದರ ಮುನ್ನುಡಿಯಲ್ಲಿ ಆದ್ಯ ಕಾಲದ ಕ್ರೈಸ್ತರ ಅನಾಚಾರಗಳನ್ನೂ ಮೌಢ್ಯವನ್ನೂ ನಿರ್ಮೂಲನೆ ಮಾಡುವ, ಪೌರೋಹಿತ್ಯದ ವಿರುದ್ಧ ಹೋರಾಡುವ ಸುಧಾರಣಾವಾದಿಯಾಗಿ ಮತ್ತು ಮಾದರಿಯೋಗ್ಯ ಪುರುಷೋತ್ತಮನಂತೆ ಪೈಗಂಬರರನ್ನು ಚಿತ್ರಿಸಲಾಗಿತ್ತು. ಸೇಯ್ಲ್‌ನ ಈ ಖುರ್‌ಆನ್ ಅನುವಾದವು ಇಂಗೆಂಡಿನಾದ್ಯಂತ ವ್ಯಾಪಕ ಪ್ರಮಾಣದ ಓದುಗರನ್ನು ತಲುಪಿತು ಮತ್ತು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿತು. ಓದುಗರ ಪೈಕಿ ಹೆಚ್ಚಿನವರೂ ಪೈಗಂಬರ್(ಸ)ರನ್ನು ಪೌರೋಹಿತ್ಯ ವಿರೋಧಿ ಮತ್ತು ಪ್ರಜಾಪ್ರಭುತ್ವದ ಪ್ರತೀಕವಾಗಿ ಕಂಡರು. ಇಂಗ್ಲೆಂಡ್ ನ ಹೊರಗೂ ಈ ಕೃತಿಗೆ ದೊಡ್ಡ ಪ್ರಚಾರ ಲಭಿಸಿತು. ಅಮೇರಿಕಾದ ಸ್ಥಾಪಕ ಪಿತಾಮಹ ಥಾಮಸ್ ಜೆಫರ್ಸನ್ 1765 ರಲ್ಲಿ ವಿರ್ಜೀನಿಯಾದ ವಿಲಿಯಂ ಬರ್ಗ್‌ನ ಒಬ್ಬ ಪುಸ್ತಕ ವ್ಯಾಪಾರಿಯಿಂದ ಈ ಅನುವಾದದ ಪ್ರತಿಯೊಂದನ್ನು ಖರೀದಿಸಿದ್ದರು. ದೈವಶಾಸ್ತ್ರದ ಕುರಿತಾದ ತನ್ನ ನಿಲುವುಗಳನ್ನು ಬದಲಿಸಲು ಖುರ್‌ಆನ್ ಅವರಿಗೆ ನೆರವಾಗಿತ್ತು. (ಜೆಫರ್ಸನ್ ರ ಈ ಅನುವಾದದ ಪ್ರತಿಯನ್ನು ಈಗ ಅಮೇರಿಕಾದ ಕಾಂಗ್ರೆಸ್ ಲೈಬ್ರರಿಯಲ್ಲಿ ತೆಗೆದಿರಿಸಲಾಗಿದೆ. ಕಾಂಗ್ರೆಸ್‌ನಿಂದ ಚುನಾಯಿತರಾಗುವ ಮುಸ್ಲಿಂ ಪ್ರತಿನಿಧಿಗಳು ಈ ಕೃತಿಯನ್ನು ಬಳಸಿ ಪ್ರಮಾಣವಚನ ಸ್ವೀಕರಿಸುತ್ತಾರೆ. 2007ರಲ್ಲಿ ಕೇಥ್ ಎಲಿಸನ್ ಎಂಬಾತನು ಈ ಪರಂಪರೆಯನ್ನು ಆರಂಭಿಸಿದ್ದನು.) ಜರ್ಮನಿಯ ರೋಮ್ಯಾಂಟಿಕ್ ಕವಿಯಾಗಿದ್ದ ಗೋಥೆಯು ಸೆಯ್ಲ್‌‌ನ ಅನುವಾದವನ್ನು ಓದುವ ಸಂದರ್ಭವೊದಗಿದ ಕಾರಣದಿಂದ ಪೈಗಂಬರರ ಕುರಿತಾದ ತನ್ನ ಕಲ್ಪನೆಗಳಿಗೆ ಬಣ್ಣತುಂಬಲು ಸಹಾಯಕವಾಗಿದೆ. ಗೋಥೆಯ ಪಾಲಿಗೆ ಪೈಗಂಬರರು ಓರ್ವ ಮಾದರಿ ಕವಿಯೂ, ಪ್ರವಾದಿತ್ವಕ್ಕೆ ಉದಾತ್ತ ರೂಪಕವೂ ಆಗಿದ್ದರು.

W. Montgomery Watt

ಸೆಯ್ಲ್‌‌ನ ಖುರ್‌ಆನ್ ಅನುವಾದವನ್ನು ಅಧ್ಯಯನ ನಡೆಸಿದ ಫ್ರಾನ್ಸ್‌ನ ದಾರ್ಶನಿಕನಾಗಿದ್ದ ವಾಲ್ಟರ್ ತನ್ನ ಜಾಗತಿಕ ಚರಿತ್ರೆಯ ಕುರಿತಾದ ಕೃತಿಯಲ್ಲಿ (Essai sur les mœurs et l’esprit des nations) ಪೈಗಂಬರರನ್ನು ಅತ್ಯಂತ ಗೌರವದಿಂದ ಪರಾಮರ್ಶಿಸುತ್ತಾರೆ. ಕಳಂಕಿತ ಪೌರೋಹಿತ್ಯ ಶಕ್ತಿಗಳನ್ನು ಮಣಿಸಲು, ಮೌಢ್ಯ-ಅನಾಚಾರಗಳನ್ನು ತೊಡೆದು ಹಾಕಲು ಬಂದ ಒಬ್ಬ ಸುಧಾರಣಾವಾದಿಯಾಗಿ ಪೈಗಂಬರರನ್ನು ಬಣ್ಣಿಸುತ್ತಾನೆ. ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಸೆಯ್ಲ್ ಮತ್ತು ವಾಲ್ಟರ್‌ರ ಅನುವಾದವನ್ನು ಅಧ್ಯಯನ ನಡೆಸಿದ ಎಡ್ವರ್ಡ್ ಗಿಬ್ಬನ್ ತನ್ನ The History of the Decline and Fall of the Roman Empire ಎಂಬ ಗ್ರಂಥದಲ್ಲಿ ಪೈಗಂಬರರ ಕುರಿತು ಮನೋಜ್ಞವಾಗಿ ಬರೆಯುವುದು ಹೀಗೆ;
“ಪ್ರವಾದಿ ಮುಹಮ್ಮದರು ಪ್ರತಿಪಾದಿಸಿದ ತತ್ವಗಳು ಅಸ್ಪಷ್ಟತೆಗಳಿಂದ ಮತ್ತು ಸಂದೇಹಗಳಿಂದ ಮುಕ್ತವಾದವುಗಳು. ಅವರಿಗೆ ಅವತೀರ್ಣವಾದ ಖುರ್‌ಆನ್ ಸೃಷ್ಟಿಕರ್ತನು ಏಕತ್ವಕ್ಕಿರುವ ಬಲುದೊಡ್ಡ ಪುರಾವೆಯಾಗಿದೆ. ನಶಿಸುವುದೆಲ್ಲವೂ ಜೀರ್ಣಿಸುತ್ತದೆ, ಜನಿಸುವುದೆಲ್ಲವೂ ಮರಣ ಹೊಂದುತ್ತದೆ, ಉದಿಸುವುದೆಲ್ಲವೂ ಅಸ್ತಮಿಸುತ್ತದೆ ಮುಂತಾದ ಯುಕ್ತಿಬದ್ದ ಪ್ರತಿಪಾದನೆಗಳಿಂದ ವಿಗ್ರಹಗಳಿಗೂ, ಬಹುದೈವಗಳಿಗೂ ಆರಾಧಿಸುತ್ತಿದ್ದ ಮಕ್ಕಾದ ಜನರನ್ನು ತಡೆದರು. ಪ್ರಪಂಚದ ಸೃಷ್ಟಿಕರ್ತನಾದ ದೇವನು ಸ್ಥಳ ಕಾಲಗಳ ಅಗತ್ಯವಿಲ್ಲದ, ಪ್ರತಿಚ್ಛಾಯೆಯೋ ಪ್ರತಿಮೆಗಳೋ ಇಲ್ಲದ, ಅನಶ್ವರವಾದ ಒಂದು ಅಸ್ತಿತ್ವವಾಗಿತ್ತು. ಆ ಅಸ್ತಿತ್ವವು ಸ್ವಯಂ ಅನಿವಾರ್ಯತೆಯಲ್ಲೇ ನೆಲೆನಿಂತಿದೆ. ಆಸ್ತಿಕನಾದ ದಾರ್ಶನಿಕನು ನಮ್ಮ ಕಾಲಕ್ಕೆ ಹೊಂದುವ ಉದಾತ್ತವಾದ ಮುಹಮ್ಮದೀಯ ನಂಬಿಕೆಯನ್ನು ಅಪ್ಪಿಕೊಂಡಿದ್ದರು.”
-The History of the Decline and Fall of the Roman Empire

ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ.

ಆದರೆ 1783ರಲ್ಲಿ ಕ್ಲೋಡ್ ಎಟಿನೆ ಸಾವರಿ ಬರೆದ ಖುರ್‌ಆನಿನ ಫ್ರೆಂಚ್ ಅನುವಾದವನ್ನು ಓದಿಕೊಂಡ ನೆಪೋಲಿಯನ್ ಬೊನಪಾರ್ಟೆ ಅತ್ಯುತ್ಸಾಹದಿಂದ ಖುರ್‌ಆನ್‌ ನ್ನು ಆವಾಹಿಸಿಕೊಂಡು ಸ್ವಯಂ ತಾನೊಬ್ಬ ಹೊಸ ಪ್ರವಾದಿಯಾಗಿ ರೂಪಾಂತರಗೊಳ್ಳುವ ಸಾಹಸಕ್ಕಿಳಿದಿದ್ದನು. ಅರೇಬಿಕ್ ಸಾಹಿತ್ಯದ ಕಲರವ ತುಂಬಿದ್ದ ಈಜಿಪ್ಟ್‌ನಲ್ಲಿದ್ದುಕೊಂಡು ಖುರ್‌ಆನ್ ಅನುವಾದ ಬರೆದ ಸಾವರಿ ಅರೇಬಿಕ್ ಭಾಷೆಯ ಸಾಹಿತ್ಯ ಸಂಪುಷ್ಟಿಯನ್ನು ತನ್ನ ಬರೆಹದಲ್ಲಿ ಆವಾಹಿಸಿಕೊಳ್ಳಲು ಪ್ರಯತ್ನಿಸಿದ. ಸೆಯ್‌ಲ್‌ನಂತೆಯೇ ತನ್ನ ಕೃತಿಯ ಆರಂಭದಲ್ಲಿ ಸುದೀರ್ಘ ಮುನ್ನುಡಿಯನ್ನು ಬರೆದ ಸಾವರಿ, ಪೈಗಂಬರ್ (ಸ) ರನ್ನು ಒಬ್ಬ ಅಸಾಧಾರಣ ವ್ಯಕ್ತಿಯನ್ನಾಗಿಯೂ, ಯುದ್ಧರಂಗದ ಪ್ರತಿಭಾಶಾಲಿಯಾಗಿಯೂ, ಅನುಯಾಯಿಗಳ ನಡುವೆ ಪ್ರಭಾವ ಬೀರಲು ಸಮರ್ಥನಾದ ಒಬ್ಬ ನಾಯಕನನ್ನಾಗಿಯೂ ಚಿತ್ರಿಸಿದ್ದಾನೆ. 1798 ರಲ್ಲಿ ತನ್ನ ಹಡಗಿನಲ್ಲಿ ಕುಳಿತು ಈ ಅನುವಾದವನ್ನು ಓದುತ್ತಿದ್ದ ನೆಪೋಲಿಯನ್ ಬೊನಪಾರ್ಟೆ ತಕ್ಷಣ ಹಡಗನ್ನು ಈಜಿಪ್ಟ್‌ ನತ್ತ ತಿರುಗಿಸಿದನು. ಸಮರ್ಥನಾದ ಸಮರ ನಾಯಕ, ಕುಶಾಗ್ರನಾದ ನ್ಯಾಯತಜ್ಞ ಮುಂತಾದ ಪೈಗಂಬರರ ಕುರಿತಾದ ಸಾವೆರಿಯ ವರ್ಣನೆಗಳಿಗೆ ಪ್ರಚೋದಿತನಾದ ನೆಪೋಲಿಯನ್, ತನ್ನಲ್ಲೊಬ್ಬ ಹೊಸ ಮುಹಮ್ಮದನನ್ನು ಕಾಣುವ ಹುಚ್ಚು ಧಾವಂತಕ್ಕೆ ಬಿದ್ದ. ಕೈರೋದ ಮುಸ್ಲಿಂ ವಿದ್ವಾಂಸರು ತನ್ನನ್ನು ಅಂಗೀಕರಿಸಬಹುದೆಂದೂ, ಉಸ್ಮಾನಿಗಳ ಆಧಿಪತ್ಯದಿಂದ ಈಜಿಪ್ಟನ್ನು ವಿಮೋಚಿಸಲು ಬಂದ ಇಸ್ಲಾಮಿನ ಹಿಂಬಾಲಕರಂತೆ ತನ್ನ ಸೇನೆಯನ್ನು ಕೈರೋದ ಜನರು ಕಾಣಬಹುದೆಂದೂ ಆತ ಲೆಕ್ಕಹಾಕಿದ. ಈಜಿಪ್ಟ್‌ಗಿರುವ ತನ್ನ ಈ ಆಗಮನವನ್ನು ಖುರ್‌ಆನಿನಲ್ಲಿ ಪರಾಮರ್ಶಿಸಲ್ಪಟ್ಟಿದೆಯೆಂದೂ ಆತ ವಾದಿಸಿದ. ಜ್ಞಾನೋದಯ ಕಾಲದ ಇಸ್ಲಾಮಿನ ಕುರಿತಾದ ಪುಸ್ತಕಗಳನ್ನು ಕೇಂದ್ರೀಕರಿಸಿದ ಏಕದೇವ ನಂಬಿಕೆ ಎಂಬ ದೃಷ್ಟಿಕೋನಕ್ಕೆ ಸಮಾನವಾದ, ಅತ್ಯಂತ ಬಾಲಿಶವಾದ ಧೋರಣೆಗಳಷ್ಟೇ ನೆಪೋಲಿಯನ್‌ಗಿದ್ದವು. ಈಜಿಪ್ಟ್‌ನ ಮೇಲಿನ ಆತನ ದಂಡಯಾತ್ರೆಯ ಸೋಲಿಗೆ ಪ್ರಧಾನ ಕಾರಣವೂ ಇಸ್ಲಾಮಿನ ಕುರಿತಾದ ಸೀಮಿತ ಧೋರಣೆಗಳಾಗಿದ್ದವು. ಸ್ವತಃ ನೆಪೋಲಿಯನ್ ಮಾತ್ರವಲ್ಲ ಆತನನ್ನು ಮುಹಮ್ಮದ್ ಎಂದು ಕರೆಸಿಕೊಂಡದ್ದು. ಜರ್ಮನ್ ಕವಿ ಗೋಥೆ ಆತನನ್ನು ಜಗತ್ತಿನ ಮುಹಮ್ಮದ್ (Mahomet der Welt) ಎಂದು ಬಣ್ಣಿಸಿದರೆ, ಫ್ರೆಂಚ್ ಬರಹಗಾರನಾದ ವಿಕ್ಟರ್ ಹ್ಯೂಗೋ ಪಶ್ಚಿಮದ ಮುಹಮ್ಮದ್ (Mahomet d’occident) ಎಂದು ಕರೆದಿದ್ದ. ಆದರೆ ತನ್ನ ಕೊನೆಗಾಲದಲ್ಲಿ ಸೈಂಟ್ ಹೆಲೆನಾಗೆ ವಲಸೆ ಹೋದ ನೆಪೋಲಿಯನ್ ತನ್ನ ಸೋಲುಗಳನ್ನು ಮೆಲುಕು ಹಾಕುತ್ತ, ಪ್ರವಾದಿಯರನ್ನು ‘ಚರಿತ್ರೆಯ ದಿಕ್ಕು ಬದಲಿಸಿದ ಮಹಾನ್ ವ್ಯಕ್ತಿ’ ಎಂದು ಬರೆದ. ನೆಪೋಲಿಯನ್ನನ ಮನಸ್ಸಿನಲ್ಲಿದ್ದ ಪ್ರವಾದಿಯೆಂದರೆ ಆತನಂತೆಯೇ ಒಬ್ಬ ನಾಯಕನೂ, ನ್ಯಾಯ ಶಾಸ್ತ್ರಜ್ಞನೂ, ಪ್ರಭಾವಿಯೂ ಆಗಿರುವ ವ್ಯಕ್ತಿಯಷ್ಟೇ.

Louis Massignon

ಪ್ರವಾದಿ(ಸ)ಮರ ಕುರಿತು, ಜಗತ್ತಿನ ಅತ್ಯಂತ ಉತ್ಕೃಷ್ಟ ನ್ಯಾಯಾಂಗ ವ್ಯವಸ್ಥೆಯ ನಿರ್ಮಾತೃ ಎಂಬ ನೆಲೆಯಲ್ಲಿನ ಅಭಿಪ್ರಾಯವು 20ನೇ ಶತಮಾನದ ತನಕವೂ ಮುಂದುವರೆಯಿತು. 1935 ರಲ್ಲಿ ಅಡಾಲ್ಫ್ ಎ. ವೆಯಿನ್‌ಮೆನ್ ಎಂಬ ಶಿಲ್ಪಿಯೊಬ್ಬ ಅಮೇರಿಕಾದ ಸುಪ್ರೀಂ ಕೋರ್ಟ್‌ನ ಮುಖ್ಯ ಚೇಂಬರ್‌ನಲ್ಲಿ ಕೆತ್ತಿದ ಶಿಲ್ಪಗಳಲ್ಲಿ 18 ನ್ಯಾಯ ನಿರ್ಮಾತೃಗಳ ಪೈಕಿ ಪ್ರವಾದಿಯವರನ್ನೂ ಸೇರಿಸಿದ್ದ. ಮುಹಮ್ಮದ್ (ಸ) ರನ್ನು ಮುಸ್ಲಿಮರ ಪ್ರವಾದಿ ಎಂಬ ಪದವಿಯನ್ನು ಅಂಗೀಕರಿಸುವ ಸಲುವಾಗಿ ಯೂರೋಪಿನ ವಿವಿಧ ಕಡೆಗಳಲ್ಲಿ ಕ್ರೈಸ್ತರು ಅವರ ಚರ್ಚುಗಳಲ್ಲಿ ಸಭೆ ಸೇರಿದ್ದರೆಂದು ಚರಿತ್ರೆಯಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು. ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದ ಕಾಥೋಲಿಕ್ ವಿದ್ವಾಂಸನಾದ ಲೂಯಿ ಮಸೈನನ್, ಹಾನ್ಸ್ ಕುಂಗ್, ಸ್ಕಾಟಿಷ್ ಪ್ರೊಟೆಸ್ಟಂಟ್ ವಿದ್ವಾಂಸ ವಿಲಿಯಂ ಮೋಂಟ್‌ಗೋಮರಿ ವಾಟ್ಟ್ ಮುಂತಾದವರು, ಇಂಥ ಉಪಕ್ರಮಗಳು ಮುಸ್ಲಿಂ-ಕ್ರೈಸ್ತ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆ ಮತ್ತು ರಚನಾತ್ಮಕ ಸಂವಾದಗಳು ರೂಪುಗೊಳ್ಳಲು ಅನಿವಾರ್ಯವೆಂದು ವಾದಿಸಿದ್ದಾರೆ.
ಇಂದಿಗೂ ಮುಂದುವರೆಯುತ್ತಿರುವ ಇಂತಹ ಧಾರ್ಮಿಕ ಬಾಂಧವ್ಯಗಳು ಸಂಘರ್ಷದ ಕೋಲಾಹಲದಲ್ಲಿ ಗೋಚರಿಸದೇ ಹೋಗುತ್ತಿದೆ ಎಂಬುದು ವಾಸ್ತವ ಸಂಗತಿ. ಇಂದು ಯುರೋಪ್ ಮತ್ತು ಜಗತ್ತಿನ ಇತರ ಭಾಗದಲ್ಲಿರುವ ಉಗ್ರ ಬಲಬಂಥೀಯ ರಾಷ್ಟ್ರೀಯವಾದಿಗಳು ಮುಸ್ಲಿಂ ವಿರೋಧಿ ತತ್ವವನ್ನು ನ್ಯಾಯೀಕರಿಸಲು ಪೈಗಂಬರರನ್ನು ನಿಕೃಷ್ಟರನ್ನಾಗಿ ಚಿತ್ರೀಕರಿಸುತ್ತಿದ್ದಾರೆ. ರಾಷ್ಟ್ರೀಯವಾದಿಯಾಗಿದ್ದ ಗೀರ್ಟ್ ವಿಲ್‌ಡರ್ಸ್ ಎಂಬಾತ ಪೈಗಂಬರ್ (ಸ) ರನ್ನು ಮನೋರೋಗಿ, ಭಯೋತ್ಪಾದಕ ಮುಂತಾದ ಪದಗಳಿಂದ ಸಂಭೋಧಿಸಿದ್ದ. ಪ್ರವಾದಿಯವರ ಬೋಧನೆಗಳ ಎಲ್ಲ ಬಗೆಯ ಚಾರಿತ್ರಿಕ ಅಧ್ಯಯನವನ್ನೂ ನಿರಾಕರಿಸುವ ಮುಸ್ಲಿಂ ಮೂಲಭೂತವಾದಿಗಳೇ ಪ್ರವಾದಿಯವರ ಕುರಿತು ತಪ್ಪಾದ ಚಿತ್ರಣವನ್ನು ಸೃಷ್ಟಿಸುವುದು ಎಂಬುದು ಇಲ್ಲಿನ ವಿಪರ್ಯಾಸ. ಅದೇವೇಳೆ ಅಕ್ರಮಾಸಕ್ತ ಮೂಲಭೂತವಾದಿಗಳು ಇಸ್ಲಾಮನ್ನೂ ಪ್ರವಾದಿಯವರನ್ನೂ ನಿಂದನೆ ಮತ್ತು ಅಪಹಾಸ್ಯಗಳಿಂದ ಸಂರಕ್ಷಿಸಲು ಭಯೋತ್ಪಾದನೆಯ ಮತ್ತು ಹಿಂಸಾತ್ಮಕ ದಾರಿಯನ್ನು ತುಳಿಯುತ್ತಿದ್ದಾರೆ. ಇತಿಹಾಸಕ್ಕೆ ಇಣುಕಿ ನೋಡಿದರೆ ಪೈಗಂಬರ್ ಮುಹಮ್ಮದ್ (ಸ) ರ ಜೀವನದ ಕುರಿತು ವೈವಿಧ್ಯತೆಯಿಂದ ಕೂಡಿದ, ಅಚ್ಚರಿ ಮೂಡಿಸುವ ವೃತ್ತಾಂತಗಳು ಪಾಶ್ಚಾತ್ಯರ ವಿಶ್ಲೇಷಣೆಗಳಲ್ಲಿ ಕಾಣಬಹುದು.

ಮೂಲ: ಜಾನ್ ಥೋಲಾನ್
ಕನ್ನಡಕ್ಕೆ: ಅನ್ಸಾರ್ ಸ‌ಅದಿ ತಂಬಿನಮಕ್ಕಿ

Leave a Reply

*