ಸೌಂದರ್ಯಶಾಸ್ತ್ರ : ಇಸ್ಲಾಮಿಕ್ ಕಲೆಯಲ್ಲಿ ಸೌಂದರ್ಯದ‌ ಅನ್ವೇಷಣೆ

16ನೇ ಶತಮಾನದ ಪ್ರಾರಂಭದಿಂದ 19ನೇ ಶತಮಾನದ ಪೂರ್ವಾರ್ಧದ ತನಕ ಅಟೋಮನ್ ಸಾಹಿತ್ಯಗಳ ಪೈಕಿ ಕ್ಲಾಸಿಕಲ್ ಕಾವ್ಯ ಪರಂಪರೆಯಾದ ‘ದಿವಾನ್ ಸಾಹಿತ್ಯ’ವು ತನ್ನ ಉತ್ತುಂಗತೆಯನ್ನು ತಲುಪಿತ್ತು. ಈ ಸುದೀರ್ಘ ಅವಧಿಯು ತನ್ನದೇ ಆದ ತತ್ವಗಳ ಆಧಾರದ ಮೇಲೆ ಸಾಂಪ್ರದಾಯಿಕ ರಚನೆಯನ್ನು ಹೊಂದಿದೆ. ಅರೇಬಿಯನ್ ಕಾವ್ಯ ರಚನಾ ಶಾಸ್ತ್ರ, ಮಳ್ಮೂನ್, ದ್ವೈಯಾರ್ಥವಿರುವ ಪದಗಳು ಮತ್ತು ಭಾವನೆಗಳು ಮುಂತಾದ ಪಾರಂಪರಿಕ ರೂಪಕಗಳು ಅಟೋಮನ್ ಕವಿಗಳ ಅವಲಂಬನೆಗಳಾಗಿದ್ದವು. ಕವಿಗಳನ್ನು ಪುನರಾವರ್ತನೆಯ ವಿಷವರ್ತುಲಕ್ಕೆ ತಳ್ಳುವ ಬದಲು, ಈ ಸ್ಥಿರವಾದ ವಸ್ತುಗಳು ಕವಿಗಳಿಗೆ ತಮ್ಮನ್ನು ವ್ಯಕ್ತಪಡಿಸಲು ಆಳವಾದ ಸಾಮರ್ಥ್ಯವನ್ನು ನೀಡಿತು. ಮತ್ತು ಸೃಜನಶೀಲ ಕವಿತೆಗಳ ಹುಟ್ಟಿಗೆ ಹೇತುವಾಯಿತು.

ಸೌಂದರ್ಯ ಶಾಸ್ತ್ರ ತತ್ವಗಳಿಂದ ರೂಪುಗೊಂಡ ಪದ ಅರ್ಥಗಳ ಮಿತಿ ಸಂಬಂಧಿತ ನಿಯಮಗಳು ನೂತನ ಕಾವ್ಯ ಶೈಲಿಗೆ ಜನ್ಮ ನೀಡಿದವು. ಮತ್ತು ಇದೇ ತತ್ವಗಳ ಬಳಕೆಯು ಇನ್ನಿತರ ಕ್ಷೇತ್ರಗಳಿಗೂ ವ್ಯಾಪಿಸಿದವು. ಪ್ರಸ್ತುತ ಬರಹದಲ್ಲಿ ಅಟೋಮನ್ ಸಾಮ್ರಾಜ್ಯದ ಹಾಗೂ ಇಸ್ಲಾಮಿನ ಸೌಂದರ್ಯ ಶಾಸ್ತ್ರದ ಮಾನದಂಡಗಳನ್ನು ಚರ್ಚಿಸಲಾಗುತ್ತಿದೆ.

ಸೈದ್ಧಾಂತಿಕ ಪರಿಕಲ್ಪನೆಗಳು:

Aesthetics ಎಂಬ ಪದದ ಮೂಲ Aesthesis ಎಂಬ ಗ್ರೀಕ್ ಪದವೆನ್ನಬಹುದು. ಇಂದ್ರಿಯ ಜ್ಞಾನ ಎಂದಾಗಿದೆ ಇದರರ್ಥ. ಪುರಾತನ ಕಾಲದಲ್ಲಿ ಇಂದು ಕಾಣುವ ಅರ್ಥ Aesthetics ಎಂಬ ಪದಕ್ಕಿರಲಿಲ್ಲ. ಅಥೆನ್ಸಿನ ತತ್ವಜ್ಞಾನಿ ಪ್ಲೇಟೋನ ಕಾಲದಿಂದ 18ನೇ ಶತಮಾನದ ತನಕ Aesthetics ನ್ನು ಸಾಧಾರಣ ಪದವೆಂಬಂತೆ ಬಳಸಲಾಗುತ್ತಿತ್ತು. Aesthetics ನ್ನು ಒಂದು ಅಧ್ಯಯನ ಕ್ಷೇತ್ರವನ್ನಾಗಿ ಪರಿವರ್ತಿಸಿದ ಹೆಚ್ಚುಗಾರಿಕೆ ಜರ್ಮನ್ ತತ್ವಜ್ಞಾನಿ ಗೋಟ್ಫ್ರಡ್ ವಿಲ್ಹಮ್ ಲೀಬ್ನೀಸ್ ರ ಶಿಷ್ಯ ಅಲೆಕ್ಸಾಂಡರ್ ಗೋಟ್ಲಿಬ್ ಬೌಗಾರ್ಟರಿಗೆ ಸಲ್ಲುತ್ತದೆ. ಇವರು ತನ್ನ ‘ಎಸ್ತೆಟಿಕ’ ಎಂಬ ಕೃತಿಯಲ್ಲಿ ಈ ಚರ್ಚೆಯನ್ನು ಪ್ರಥಮವಾಗಿ ಮುನ್ನೆಲೆಗೆ ತಂದರು. 19ನೇ ಶತಮಾನದ ಕೊನೆಯಲ್ಲಿ ಅಟೋಮನ್ ಸಾಮ್ರಾಜ್ಯದ ಪಾಶ್ಚ್ಯಾತೀಕರಣದ ಪ್ರಕ್ರಿಯೆಗಳ ಭಾಗವಾಗಿ ಈ ಕೃತಿಯನ್ನೂ ಕೂಡಾ ತುರ್ಕಿಶ್ ಭಾಷೆಗೆ ಅನುವಾದಿಸಲಾಯಿತು. ಗ್ರೀಕೋ-ಲ್ಯಾಟಿನ್ ಸಂಸ್ಕೃತಿಯಿಂದ ಹೊರಹೊಮ್ಮಿದ ದೃಷ್ಟಿಕೋನದಿಂದ ರೂಪುಗೊಂಡ ಸೌಂದರ್ಯಶಾಸ್ತ್ರ ಪದವು ಪಾಶ್ಚಿಮಾತ್ಯೇತರ ಸಂಸ್ಕೃತಿಗಳಲ್ಲಿ ಕಲೆ ಮತ್ತು ಸೌಂದರ್ಯದ ತಿಳುವಳಿಕೆಯನ್ನು ವಿವರಿಸಲು ಸಾಕಾಗಲಿಲ್ಲ

ಅಟೋಮನ್ ಕಲೆಯನ್ನು ಸೂಚಿಸುವ ಎಸ್ತೆಟಿಕ್ಸ್ ಎಂಬ ಎಂಬ ಆಶಯಕ್ಕೆ ಸಮಾನವಾಗಿ ಅರಬಿ ಭಾಷೆಯಲ್ಲಿ “ಜಮಾಲ್” ಎಂಬ ಪದವನ್ನು ಬಳಸಲಾಗುತ್ತದೆ. ಇಲ್ಮುಲ್ ಜಮಾಲ್ ಎಂದಾಗಿದೆ ಸೌಂದರ್ಯ ಶಾಸ್ತ್ರದ ಅರಬಿ ಪದ. ಈ ಕಲ್ಪನೆಯಿಂದ ಸೌಂದರ್ಯ ತತ್ವಗಳು, ಪ್ರಕೃತಿ, ಕಲೆಯ ಮೌಲ್ಯ ಇತ್ಯಾದಿ ಸೌಂದರ್ಯ ಸಿದ್ಧಾಂತಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಅಟೋಮನ್ ಕಾಲದ ದಾರ್ಶನಿಕರು ಎಸ್ತೆಟಿಕ್ಸ್ ನ್ನು ಸೌಂದರ್ಯಶಾಸ್ತ್ರ ಎಂಬ ನಿಟ್ಟಿನಲ್ಲಿ ಇಲ್ಮುಲ್ ಹುಸ್ನ್ ಎಂದು ವಿಶ್ಲೇಷಿಸಿದರು. ಎಸ್ತೆಟಿಕ್ಸ್ Fine arts (ಲಲಿತ ಕಲೆ) ನ ತತ್ವಜ್ಞಾನ ಪದ್ಧತಿಯೆಂದು ಪರಿಗಣಿಸಿ ಇಲ್ಮುಲ್ ಬದಾಯಿ ಎಂದೂ ಕರೆಯಲಾಯಿತು. ಬದೀಅ ಎಂಬ ಪದದ ಮೂಲ ಅತುಲ್ಯವಾದ ಅಲ್ಲಾಹನ ಸೃಷ್ಟಿ ವೈಭವವನ್ನು ಸೂಚಿಸುವ ಬದೀಅ ಎಂಬ ಖುರ್‌ಆನಿನ ಪದದಿಂದಾಗಿದೆ. ಹೀಗೆ ಕ್ರಮೇಣ ಎಸ್ತೆಟಿಕ್ಸ್ ತುರ್ಕಿಶ್ ಭಾಷೆಯಲ್ಲಿ ಸ್ಥಾಯಿಯಾಯಿತು.

ಇಮಾಂ ಗಝಾಲಿಯವರ ಕೊಡುಗೆಗಳು:

ಪ್ರಖ್ಯಾತ ತತ್ವಜ್ಞಾನಿ ಅಲ್ ಫಾರಾಬಿ ಹೇಳುತ್ತಾರೆ : “ಪರಿಪೂರ್ಣ ಸೌಂದರ್ಯವೆಂದರೆ ಅದು ಅಲ್ಲಾಹನ ಸೌಂದರ್ಯ ಮಾತ್ರ. ಅದು ನೈಜ ಸೌಂದರ್ಯವಾಗಿದ್ದರೆ, ಸೃಷ್ಟಿಗಳ ಸೌಂದರ್ಯವು ಇಲಾಹೀ (ದೈವಿಕ) ಸೌಂದರ್ಯದ ಸಂಕೇತಗಳಷ್ಟೇ”. ಇಬ್ನು ಸೀನಾ ಅವರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ” ಸೌಂದರ್ಯವಿರುವುದು ಸೃಷ್ಟಿಕರ್ತನಲ್ಲಾಗಿದೆ. ಆತನ ಮೂಲಕ ಸೌಂದರ್ಯವು ಪ್ರಪಂಚದಾದ್ಯಂತ ವ್ಯಾಪಿಸಿದೆ.”

ಪ್ರಾಥಮಿಕ ಆಶಯಗಳನ್ನು ಪರಿಗಣಿಸಿದರೆ, ಇಸ್ಲಾಮಿನ ಬೌದ್ಧಿಕ ಚರಿತ್ರೆಯ ಇನ್ನಿತರ ದಾರ್ಶನಿಕ ಸಮಸ್ಯೆಗಳಂತೆ ಸೌಂದರ್ಯ ಶಾಸ್ತ್ರ ಸಮಸ್ಯೆಗಳು ಕೂಡಾ ಚರ್ಚಿತವಾಗಿರಲಿಲ್ಲ. ಇನ್ನಿತರ ದಾರ್ಶನಿಕ ವಿಷಯಗಳಲ್ಲೆಂಬಂತೆ ಸೌಂದರ್ಯ ಶಾಸ್ತ್ರದ ಕುರಿತಾದ ಇಸ್ಲಾಮಿನ ಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಹೆಗ್ಗಳಿಕೆ ಇಮಾಂ ಗಝಾಲಿ ಅವರದ್ದು. ಇಮಾಂ ಗಝಾಲಿ ಅವರ ಇಹ್ಯಾ ಉಲೂಮುದ್ದೀನ್ ನಲ್ಲಿ ಸೌಂದರ್ಯ ಶಾಸ್ತ್ರದ ಕುರಿತಾದ ವಿವರಣೆಗಳನ್ನು ಕಾಣಬಹುದು. ಪ್ರತಿಯೊಂದು ವಸ್ತುವನ್ನು ಕೂಡ ಸೌಂದರ್ಯದ ದೃಷ್ಟಿಕೋನದಿಂದ ವೀಕ್ಷಿಸುವಾಗ ಮಾತ್ರ ಅದರ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗುವುದು ಮತ್ತು ಸೌಂದರ್ಯ ಆನಂದದಾಯಕ ಹಾಗೂ ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಸೌಂದರ್ಯ ತಾತ್ಪರ್ಯಗಳು ಕೇವಲ ಶಾರೀರಿಕ ಹಾಗೂ ಲೈಂಗಿಕ ಸಂಕಲ್ಪಗಳಿಗೆ ಸೀಮಿತವಾಗಿರದೆ, ಅದು ನೀಡುವ ಆನಂದ ವಿಪರೀತವೆನ್ನುತ್ತಾರೆ ಇಮಾಂ ಗಝಾಲಿ. ಸೌಂದರ್ಯವು ಆಕರ್ಷಣೀಯ ಎಂದು ತಿಳಿಸುತ್ತಾ ನೈಸರ್ಗಿಕ ಸೌಂದರ್ಯದ ಉಪಮೆಗಳನ್ನು ಗಝಾಲಿಯವರು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಸೌಂದರ್ಯವನ್ನು ಅನುಪಾತ ಮತ್ತು ಐಕ್ಯವಾಗಿ ವೀಕ್ಷಿಸುವ ಕಲ್ಪನೆಯನ್ನು ಗಝಾಲಿಯವರು ಸ್ವೀಕರಿಸಿದರು. ನಂತರದಲ್ಲಿ ಈ ಕಲ್ಪನೆಯ ಜಾಡು ಹಿಡಿದು ವಿವಿಧ ತೆರನಾದ ಸೂಫಿ ಚಿಂತನೆಗಳು ಬೆಳಕಿಗೆ ಬಂದವು. ಜಲಾಲುದ್ದೀನ್ ರೂಮಿ, ಇಬ್ನು ಅರಬಿ ಮುಂತಾದವರು ಇವರ ಪೈಕಿ ಪ್ರಮುಖ ರಾಗಿದ್ದಾರೆ. ಈ ಎಲ್ಲಾ ಚಿಂತನೆಗಳು ವಿವಿಧ ಸಂಸ್ಕೃತಿಗಳಿಂದ ಜನ್ಮ ತಾಳಿದವುಗಳಾಗಿದ್ದರೂ, ಇಸ್ಲಾಮಿನ ನಂಬಿಕೆ, ಚಿಂತನೆ, ದರ್ಶನಗಳ ಲಾಂಛನಗಳು ಇವುಗಳಲ್ಲಿ ದರ್ಶಿಸಬಹುದು. ಆದ್ದರಿಂದಲೇ ಇಸ್ಲಾಮಿಕ್ ಕಲೆಯ ಸೌಂದರ್ಯ ಶಾಸ್ತ್ರದ ಮೂಲ ಇಮಾಂ ಗಝಾಲಿಯವರ ವಿವರಣೆಗಳೇ ಆಗಿವೆ ಎನ್ನಬಹುದು.

ಪರಸ್ಪರ ಭಿನ್ನತೆಗಳಿದ್ದರೂ ಇಸ್ಲಾಮಿಕ್ ಕಲೆಯ ನಿರ್ಮಾಣಗಳಲ್ಲಿಯೂ ಇಸ್ಲಾಮಿಕ್ ತತ್ವಗಳ ಕುರುಹುಗಳನ್ನು ಕಾಣಬಹುದು. ಪಾಶ್ಚಿಮಾತ್ಯ ದೇಶಗಳಂತೆ ಶೈಕ್ಷಣಿಕ ಪರಿಭಾಷೆಯಲ್ಲಿ ವಿವಿಧ ಸೌಂದರ್ಯದ ಸಿದ್ಧಾಂತಗಳು ಹೊರಹೊಮ್ಮಲಿಲ್ಲ ಎಂಬುದು ಮುಸ್ಲಿಂ ಕಲಾವಿದರು ಮತ್ತು ಚಿಂತಕರ ಕಲೆಯ ವಿಧಾನಗಳ ಪರಿಣಾಮವಾಗಿದೆ. ಇಂದ್ರಿಯ ಗೋಚರವಾದ ವಸ್ತುಗಳ ವರ್ಣನೆ ಮಾತ್ರ ಸಾಧ್ಯ ಎಂಬುವುದು ಪುರಾತನ ಕಾಲದಲ್ಲಿ ಸೌಂದರ್ಯಶಾಸ್ತ್ರ ತತ್ವಗಳ ಪರಿಣಾಮವಾಗಿ ರೂಪುಗೊಂಡ ಅಭಿಪ್ರಾಯ. ಕ್ರೈಸ್ತ ಧರ್ಮದಲ್ಲಿ ಈ ಆಶಯಗಳ ಸುಧಾರಣೆಗಾಗಿ ಶ್ರಮಗಳು ಉಂಟಾದರೂ ಅವು ಫಲ ಕಾಣಲಿಲ್ಲ. ಜಗತ್ತನ್ನು ಕೇವಲ ಇಂದ್ರಿಯ ಜ್ಞಾನದೊಂದಿಗೆ ಮಾತ್ರ ನಿರೀಕ್ಷಿಸಲ್ಪಡುವ ಕಲ್ಪನೆಯಾಗಿ ಯಾವುದೇ ಧರ್ಮವು ಕೂಡಾ ಪರಿಚಯಿಸಲಿಲ್ಲ ಎಂಬುದು ವಾಸ್ತವ.


ಇಂದು ವಾಸ್ತವಿಕತೆ ಎಂಬ ನಿಟ್ಟಿನಲ್ಲಿ, ಇಂದ್ರಿಯ ಜ್ಞಾನ ಮೂಲಕ ಜಗತ್ತನ್ನು ಮನಗಾಣುವ ಸೌಂದರ್ಯ ಶಾಸ್ತ್ರ ಕಲ್ಪನೆಗಳು ಬಹಳ ಉದಾರವಾದ ಅರ್ಥ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಆದರೆ ಮೌಲಿಕವಾದ ಮನಶಾಸ್ತ್ರ ಪ್ರವೃತ್ತಿಗಳನ್ನು ಪಾಲಿಸುವವರಾಗಿರಲಿಲ್ಲ ಮುಸ್ಲಿಂ ಕಲಾಕಾರರು. ಒಂದು ವಸ್ತುವಿನ ಒಳ ಸ್ವರೂಪವನ್ನು ಕಂಡುಕೊಳ್ಳುವುದಾಗಿತ್ತು ಅವರ ಸೌಂದರ್ಯಶಾಸ್ತ್ರ ನಿಲುವು. “ಮುಸ್ಲಿಂ ಕಲಾಕಾರರು ಉದ್ದೇಶಪೂರ್ವಕವಾಗಿ ‘ಸರ್ ರಿಯಲಿಸಂ’ ನತ್ತ ಗಮನಹರಿಸುತ್ತಿದ್ದಾರ” ಎಂದಾಗಿದೆ ಲೂಯಿ ಹುಸೈನ್ ಹಾಗೂ ಇನ್ನಿತರರು ಅಭಿಪ್ರಾಯಪಟ್ಟಿರುವುದು. ಇಸ್ಲಾಮಿ ಸೌಂದರ್ಯ ಶಾಸ್ತ್ರವು ಕೇವಲ ಶೂನ್ಯತೆಯಿಂದ ಪ್ರಾರಂಭವಾದುದಲ್ಲ. ಹೊರತಾಗಿ ಒಂದು ವಸ್ತುವಿನಲ್ಲಿರುವ ಸೌಂದರ್ಯ ಮತ್ತು ಗುಣವನ್ನು ಹುಡುಕಿ ಅದನ್ನು ಆವಿಷ್ಕರಿಸುವುದಾಗಿದೆ. ಕಲಾಕಾರರು ಸೌಂದರ್ಯವನ್ನು ಸೃಷ್ಟಿಸುವವರಾಗಿರದೆ, ಸೌಂದರ್ಯವನ್ನು ಕಂಡುಕೊಳ್ಳುವವರಾಗಿದ್ದಾರೆ. ಖುರ್ ಆನಿನಲ್ಲಿ ಇಂತಿದೆ : ” ಎಲ್ಲರಿಗೂ ಬಣ್ಣ ಬಳಿಯುವವನು ಅಲ್ಲಾಹನಾಗಿರುವನು, ಅವನಿಗಿಂತ ಉತ್ತಮರು ಇನ್ಯಾರಿಲ್ಲ.” (ಬಕರ – 138)


ಇತ್ತೀಚಿಗೆ ಇಸ್ಲಾಮಿನಲ್ಲಿ Fine Arts ಎಂಬ ಕಲ್ಪನೆಯು ಜಾರಿಗೆ ಬಂದಿತು. ಕಾವ್ಯ ಶಾಸ್ತ್ರ, ಸಂಗೀತ ಶಾಸ್ತ್ರ ಮುಂತಾದವುಗಳನ್ನು ಕಲೆಯ ವಿವಿಧ ಸ್ವರೂಪಗಳಾಗಿ ಪರಿಗಣಿಸಲಾಗುತ್ತಿತ್ತು. ಮಾತ್ರವಲ್ಲದೆ, ಕಲೆ ಹಾಗೂ ಕರಕುಶಲವು ಪರಸ್ಪರ ಭಿನ್ನವಾಗಿರಲಿಲ್ಲ. ಆದ್ದರಿಂದಲೇ ಇಸ್ಲಾಮಿಕ್ ಕಲೆಯಲ್ಲಿ ಕಾರ್ಯಾಚರಣೆಗೆ ಹೆಚ್ಚು ಸಾಧ್ಯತೆಗಳಿವೆ. ಅಮೂರ್ತತೆಯತ್ತ ಗಮನಹರಿಸಿದ ಮುಸ್ಲಿಂ ಕಲಾಕಾರರೆಲ್ಲರೂ ” ವಹ್ದತುಲ್ ವುಜೂದ್” ಎಂಬ ಸಿದ್ಧಾಂತದಿಂದ ಸ್ಫೂರ್ತಿ ಪಡೆದರು. ಒಟ್ಟಿನಲ್ಲಿ ಇಸ್ಲಾಮಿಕ್ ಕಲೆಯ ಆಂತರಿಕ ಗುರಿ ವಸ್ತುವಿನಲ್ಲಡಗಿರುವ ಅದೃಶ್ಯತೆಯನ್ನು ಕಂಡುಕೊಳ್ಳುವುದಾದರೆ ಬಾಹ್ಯ ಲಕ್ಷ್ಯವು ಪ್ರಕೃತಿಯನ್ನು ಸುಂದರಗೊಳಿಸುವುದಾಗಿದೆ. ಮೆಟಾಫಿಸಿಕಲ್ ಸಂದರ್ಭಗಳಿದ್ದೂ ಇಸ್ಲಾಮಿನ ಕಲೆ ಇಂದಿಗೂ ಜೀವಂತವಾಗಿದೆ. ಕಲೆಯೆಂದರೆ ಕೇವಲ ಕಾಣುವುದಲ್ಲ, ಅನುಭವಿಸುವುದು ಕೂಡಾ ಆಗಿದೆ.

ಮೂಲ: ಡಾ. ಅಲೀ ತುಫಕ್ಚಿ
ಅನು: ಆಶಿಕ್ ಅಲಿ ಕೈಕಂಬ

ಗುಲಾಮರ ಬಗ್ಗೆ ಇದ್ದ ತಥಾಕಥಿತ ಧೋರಣೆಯನ್ನು ಬದಲಾಯಿಸಿದ ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ ಅಮೆರಿಕಾಗೆ ಸಾಗಿಸುವ ಮೊದಲು ಒಂದು ಜಗತ್ತು ಇತ್ತು.
ಒಮರ್ ಬಿನ್ ಸೈದ್ ರಂಥಹ ಪಂಡಿತರು, ಇಬ್ರಾಹಿಂ ಸೋರಿ ಅವರಂತಹ ರಾಜಕುಮಾರರು ತಮ್ಮ ವಿಚಾರಗಳನ್ನು ತಮ್ಮದೇ ಭಾಷೆಗಳಲ್ಲಿ ಬರೆದು ತಮ್ಮ ಇತಿಹಾಸಗಳನ್ನು ಜಗತ್ತಿನ ಮುಂದೆ ಇರಿಸಿದ್ದರು. ಹನ್ನೊಂದನೇ ಶತಮಾನದ್ದು ಎಂದು ಹೇಳಲಾಗುವ ಅಂತಹ 40,000 ಕ್ಕೂ ಹೆಚ್ಚು ಬರುವ ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳನ್ನು ಸಾರ್ವಜನಿಕ ಡಿಜಿಟಲ್ ಪ್ರದರ್ಶನದ ಮೂಲಕ ಮೊದಲ ಬಾರಿಗೆ ಹೊರತರಲಾಯಿತು. ಕಪ್ಪು ಜನಾಂಗೀಯ ಮುಸ್ಲಿಂ ಪಾರಂಪರಿಕ ಆರ್ಕೈವ್ ಗಳಿಗೋಸ್ಕರ ದುಡಿಯುವ ನನ್ನಂತಹ ಕಲಾವಿದೆಗೆ ಇದೊಂದು ರೋಮಾಂಚನಕಾರಿ ಅನುಭವವಾಗಿದೆ.

ಅಮೆರಿಕದಲ್ಲಿ ಗುಲಾಮರಾಗಿದ್ದ ಒಮರ್ ಬಿನ್ ಸೈದ್ ಮತ್ತು ಇಬ್ರಾಹಿಂ ಸೋರಿ ಬರೆದ ಟಿಂಬಕ್ಟು ಹಸ್ತಪ್ರತಿಗಳು ನನ್ನ ಕಲಾ ಚಟುವಟಿಕೆಗೆ ಹೇಗೆ ಪ್ರಧಾನವಾಗಿದೆ ಹಾಗೂ ಕಪ್ಪು ಜನಾಂಗೀಯ ಮುಸ್ಲಿಮರ ಬಗ್ಗೆ ತಿಳಿಯಲು ಹೇಗೆ ಸಹಕಾರಿಯಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಲು ಬಯಸುತ್ತೇನೆ.

ಒಂದು ಅಂದಾಜಿನ ಪ್ರಕಾರ, ಅಮೆರಿಕದಲ್ಲಿ ಗುಲಾಮಗಿರಿಗೆ ತಳ್ಳಲ್ಪಟ್ಟ ಕಪ್ಪು ಜನಾಂಗೀಯರ ಪೈಕಿ 30% ಜನರು ಮುಸ್ಲಿಮರಾಗಿದ್ದರು. ಕ್ರಿ.ಶ. 1770 ರಲ್ಲಿ ಸೆನೆಗಲ್ ನದಿಯ ದಂಡೆಯ ಫುಟಾಟೊರೊ (Futa Toro)ನ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಒಮರ್ ಬಿನ್ ಸೈದ್ ಅವರು ಕುರ್‌ಆನ್ ಮತ್ತು ಇಸ್ಲಾಮಿಕ್ ಧರ್ಮಶಾಸ್ತ್ರದ ಪಾರಂಗತರಾಗಿದ್ದರು. 40 ನೇ ವರ್ಷ ವಯಸ್ಸಿನಲ್ಲಿ ಅಪಹರಣಕ್ಕೊಳಗಾಗಿ ಅಮೆರಿಕ ಸೇರುವ ಮೊದಲು ಗೃಹಸ್ಥರಾಗಿದ್ದರು, ಮಕ್ಕ ತೀರ್ಥಯಾತ್ರೆಗೂ ತೆರಳಿದ್ದರು. ‘ಸರ್ವೆಂಟ್ ಆಫ್ ಅಲ್ಲಾಹ್’ ಗ್ರಂಥದ ಕರ್ತೃ ಸಿಲ್ವೈನ್ ಡಿಯೋಫ್ (Sylvaine Diouf) ಪ್ರಕಾರ “ಗುಲಾಮನಾಗಿ ಜೀತಕ್ಕಿದ್ದು ಆತ್ಮಕಥೆ ಬರೆದ ಏಕೈಕ ವ್ಯಕ್ತಿ ಎಂದರೆ ಅದು ಒಮರ್ ಬಿನ್ ಸೈದ್ ಆಗಿದ್ದಾರೆ”. ಅವರ ಆತ್ಮಕಥೆಯು ಅರೆಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಅಮೇರಿಕಾದ ಗುಲಾಮನ‌ ಏಕೈಕ ಗ್ರಂಥವಾಗಿದೆ.

ಪಶ್ಚಿಮ ಆಫ್ರಿಕಾದ ಗಿನಿಯ ಫೂಟ ಜಲೋನ್ (Fouta Djallon) ಪ್ರಾಂತ್ಯದಲ್ಲಿ ಅಮೀರರಾಗಿದ್ದ ಇಬ್ರಾಹಿಂ ಸೋರಿ ಅವರು ಅಲ್ಲಿನ ಅಶ್ವದಳದ ಮುಂದಾಳುವೂ ಆಗಿದ್ದರು. ಕ್ರಿ.ಶ 1788ರಲ್ಲಿ ಅನಿರೀಕ್ಷಿತವಾಗಿ ಸೋಲುವುದಕ್ಕೂ ಮುನ್ನ ಅವರು ಗೃಹಸ್ಥರಾಗಿದ್ದರು. 26ನೇ ವಯಸ್ಸಿನಲ್ಲಿ ಬಂಧಿಸಲ್ಪಟ್ಟು ಅಮೆರಿಕಾಗೆ ತಲುಪಿದ ಅವರು 40 ವರ್ಷಗಳ ಕಾಲ ಗುಲಾಮರಾಗಿದ್ದರು. ಅವರು ಗುಲಾಮನಾಗಿದ್ದರೂ ಕೂಡ ಅವರ ಧಣಿ ಅವರನ್ನು ‘ಪ್ರಿನ್ಸ್’ ಎಂದೇ ಕರೆಯುತ್ತಿದ್ದರು. ಬಹುಶಃ ಆತನಿಗೆ ಸೋರಿಯವರು ನೈಜ ಆಫ್ರಿಕನ್ ಎಂದು ತಿಳಿದಿರಲಿಲ್ಲವೇನೋ?. ರಾಜಕುಮಾರ ಇಬ್ರಾಹಿಂ ಸೋರಿ ಅವರು ತಾಳ್ಮೆ, ವಿನಯವಂತಿಕೆ, ಉತ್ತಮ ನಿಲುವುಗಳಿಗೆ ಖ್ಯಾತಿವೆತ್ತ ವ್ಯಕ್ತಿಯಾಗಿದ್ದರು. ಸೋರಿಯವರು 40 ವರ್ಷಗಳ ಬಳಿಕ ಗುಲಾಮಗಿರಿಯಿಂದ ಬಿಡುಗಡೆಗೊಂಡರು. ಅವರು ಆಫ್ರಿಕನ್ ರಾಜಕುಮಾರ ಎಂದು ತಿಳಿದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಒಮರ್ ಬಿನ್ ಸೈದ್ ಪ್ರಕಾರ, ಇಬ್ರಾಹಿಂ ಸೋರಿ ಅವರು ಓರ್ವ ಭಕ್ತನೂ, ಇಂಗ್ಲಿಷ್ ಮತ್ತು ಅರೆಬಿಕ್ ಭಾಷೆಯಲ್ಲಿ ನಿಪುಣರೂ ಆಗಿದ್ದರು.

ಮೇಲೆ ಕಾಣುತ್ತಿರುವ ಚಿತ್ರವು 2010 ರಲ್ಲಿ ರಚಿಸಿದ ಒಂದು ಆರ್ಟ್ ವರ್ಕ್ ಆಗಿದೆ. ‘ಲಾರ್ಡ್ಸ್ ಪ್ರೇಯರ್, ಟೇಕ್ ಮೈ ವರ್ಡ್ ಫಾರ್ ಇಟ್’ ಎಂಬ ಹೆಸರಿರುವ ಈ ಆರ್ಟ್ ವರ್ಕ್, ಒಮರ್ ಮತ್ತು ಇಬ್ರಾಹಿಂ ಸೋರಿ ಅವರ ಬರಹಗಳ ಮೇಲೆ ಮಾಡಿದ್ದೇನೆ. ಎಡಭಾಗದಲ್ಲಿ ಇರುವುದು ಒಮರ್ ಬಿನ್ ಸೈದ್ ಅವರು ತಮ್ಮ ಧಣಿಗೆ ಬರೆದ ಪತ್ರಗಳು, ಅವು ‘ಲಾರ್ಡ್ಸ್ ಪ್ರೇಯರ್’ ಎಂಬ ಹೆಸರಿನಲ್ಲಿದೆ. ಒಮರ್ ಹಾಗೂ ಅವರ ಸಾಕ್ಷಿಯ ಸಹಿ ಅದರಲ್ಲಿದೆ. ಬಲಭಾಗದಲ್ಲಿ ಇರುವುದು ಇಬ್ರಾಹಿಂ ಸೋರಿ ಅವರು ಬಿಡುಗಡೆಯಾದ ನಂತರ ಬರೆದ ಸೂರ ಅಲ್ ಫಾತಿಹದ ಪ್ರತಿಯಾಗಿದೆ. ಅದರಲ್ಲಿ ಸಾಕ್ಷಿಯಾಗಿ ಸಹಿ ಮಾಡಿದವರು ಒಮರ್ ಬಿನ್ ಸೈದ್ ಆಗಿದ್ದಾರೆ. ವಿಭಿನ್ನ ಸಮಯದಲ್ಲಿ, ಬೇರೆಬೇರೆ ಸಂದರ್ಭದಲ್ಲಿ ಲಾರ್ಡ್ಸ್ ಪ್ರೇಯರ್ ಎಂಬ ಹೆಸರಿನಲ್ಲಿ ಈ ಎರಡು ಡಾಕ್ಯುಮೆಂಟ್ ಗಳು ಬಂದಿವೆ. ಹಾಗೂ ಇದು ಒಂದಕ್ಕೊಂದು ಹೆಣೆದುಕೊಂಡಿವೆ. ಇದನ್ನು ಕಾಣುವವರಿಗೆ ಇಲ್ಲೊಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ, ಆ ಬರೆಯಲಾದ ಭಾಷೆಯನ್ನು ಅಮೆರಿಕನ್ನರು ಅರ್ಥೈಸುತ್ತಿದ್ದರೇ?. ಗುಲಾಮರ ಸಾಕ್ಷಿಯನ್ನು ಆಂಟೆಬೆಲ್ಲಮ್ ಅಮೆರಿಕ ಸ್ವೀಕರಿಸುತ್ತಿತ್ತೇ? ಎಂಬುದು.

ಆಫ್ರಿಕನ್ನರು, ಮುಸ್ಲಿಮರು, ಕಪ್ಪು ಜನಾಂಗೀಯರು ಹಾಗೂ ಅಮೆರಿಕನ್ನರು ಮತ್ತು ಬಿಳಿಯರ ಬಗ್ಗೆಯೂ ಸಾಂಸ್ಕೃತಿಕ ಸ್ಟೀರಿಯೋಟೈಪ್ ಗಳಿವೆ. ಆಂಟೆಬೆಲ್ಲಮ್ ಅಮೆರಿಕದಲ್ಲಿರುವ ಆಫ್ರಿಕನ್ ಕಪ್ಪು ಜನಾಂಗೀಯ ಸ್ವತಂತ್ರ- ಗುಲಾಮರ ವೈವಿಧ್ಯತೆ ಬಗ್ಗೆ ಮಾತನಾಡುವಾಗ ಅದು ಸಂಘರ್ಷವನ್ನು ಸೃಷ್ಟಿಸುತ್ತದೆ. ಒಮರ್ ಬಿನ್ ಸೈದ್ ಅವರ ಆತ್ಮಕಥೆಯನ್ನು ಓದುವಾಗ ಪಶ್ಚಿಮ ಆಫ್ರಿಕಾದ ಶ್ರೀಮಂತ ಇಸ್ಲಾಮಿಕ್ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆ, ಅವರನ್ನು ಗುಲಾಮಗಿರಿಗೆ ತಳ್ಳಿದ ರಾಜಕೀಯ ವ್ಯವಸ್ಥೆ, ಇಸ್ಲಾಮಿನ ಬಗ್ಗೆ ನಡೆಸಿದ ಅಧ್ಯಯನದ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ‌. ದಶಕಗಳ ಗುಲಾಮಗಿರಿಯ ಹೊರತಾಗಿಯೂ ಆಫ್ರಿಕನ್ ಮುಸ್ಲಿಮರು ಇಸ್ಲಾಮಿಕ್ ಚಿಹ್ನೆಗಳು ಮತ್ತು ಧಾರ್ಮಿಕ ಜ್ಞಾನದ ಅಂಶಗಳನ್ನು ಬರಹಗಳ ಮೂಲಕ ಸಂರಕ್ಷಿಸುವಲ್ಲಿ ಹಾಗೂ ರವಾನಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದನ್ನು ಇಬ್ರಾಹಿಂ ಸೋರಿ ಅವರ ಸೂರ ಅಲ್ ಫಾತಿಹ ಬರಹವು ಸಾದರಪಡಿಸುತ್ತದೆ.

ಧಣಿಗಳಿಗೆ ತೀರಾ ಅರ್ಥವಾಗದ ಅರೆಬಿಕ್ ನಲ್ಲಿ ಓರ್ವ ಆಫ್ರಿಕನ್ ಬರೆದ ಬರಹ ಎಂಬ ನಿಟ್ಟಿನಲ್ಲಿ ಒಮರ್ ಬಿನ್ ಸೈದ್ ಅವರ ಬರಹವು ಬಹಳ ಪ್ರಧಾನವೆನಿಸುತ್ತದೆ. ಯಾಕೆಂದರೆ ಧಣಿಗಳಿಗೂ, ಗುಲಾಮಗಿರಿಯ ಪ್ರತಿಪಾದಕರಿಗೂ, ಅದರ ನಿರ್ಮೂಲನೆಗೆ ಪಣ ತೊಟ್ಟವರಿಗೂ ಅರ್ಥವಾಗದ ಅರೆಬಿಕ್ ಭಾಷೆಯಲ್ಲಿ ಬರೆಯಲಾದ ಈ ಬರಹಗಳನ್ನು ತಮ್ಮ ಅಜೆಂಡಾಗಳಿಗೆ ವಿರುದ್ಧವಾಗಿದೆ ಎಂದು ಯಾರೂ ತಿದ್ದಲಿಲ್ಲ ಎನ್ನುವುದಂತೂ ದಿಟ.

ನಾನು ಸೇರಿದಂತೆ ನಮ್ಮ ತಲೆಮಾರಿನ ವಿದ್ಯಾರ್ಥಿಗಳು ಗುಲಾಮರ ಬಗ್ಗೆ ಅವರು ನಿರಕ್ಷರ ಕುಕ್ಷಿಗಳು ಎಂದು ತಿಳಿದುಕೊಂಡಿದ್ದೆವು. ಈ ಒಂದು ಧೋರಣೆಯನ್ನು ಆಫ್ರಿಕನ್ ಮುಸ್ಲಿಂ ಗುಲಾಮರ ಈ ಬರವಣಿಗೆಗಳು ಬದಲಾಯಿಸಿದವು ಎಂದರೆ ತಪ್ಪಾಗಲಾರದು. ಆಫ್ರಿಕನ್ನರು ಬರವಣಿಗೆಗೆ ಒಗ್ಗದೆ ಮೌಖಿಕ ಸಂಸ್ಕೃತಿಯನ್ನು ಪಾಲಿಸುತ್ತಿದ್ದರು ಎಂದು ನಮಗೆ ಕಲಿಸಲಾಗಿತ್ತು. ಆದರೆ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದಾಗ ಗುಲಾಮರಾಗಿದ್ದ ಆಫ್ರಿಕನ್ನರು ತಮ್ಮ ಆತ್ಮಕಥೆ ಗಳನ್ನು ಸ್ವಂತ ಭಾಷೆಯಲ್ಲಿ ಬರೆದಿದ್ದರು ಎಂದು ತಿಳಿಯುತ್ತದೆ. ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿರುವ ಪ್ರಸಿದ್ಧ ನಗರವಾಗಿದೆ ಟಿಂಬಕ್ಟು. ಕ್ರಿ.ಶ 13 & 14 ನೇ ಶತಮಾನದಲ್ಲಿ ಅತ್ಯಂತ ಪ್ರಮುಖ ಗ್ರಂಥಾಲಯಗಳನ್ನು ಹೊಂದಿದ್ದು, ವಿವಿಧ ಕಡೆಗಳಿಂದ ಜನರು ವಾಚನಕ್ಕಾಗಿ ಅಲ್ಲಿಗೆ ಬರುತ್ತಿದ್ದರು!. ಕ್ರಿ.ಶ 15ನೇ ಶತಮಾನದಲ್ಲಿ ಟಿಂಬಕ್ಟುವಿನ ಸಂಕೋರ್ (Sankore) ವಿವಿಯಲ್ಲಿ ಖಗೋಳಶಾಸ್ತ್ರ, ಗಣಿತ, ಇಸ್ಲಾಂ, ಸಾಹಿತ್ಯ ಹಾಗೂ ಜೀವಶಾಸ್ತ್ರದಂತಹ ವಿವಿಧ ವಿಷಯಗಳನ್ನು ಅಧ್ಯಯನ ಮಾಡಲು ಸುಮಾರು 25,000 ವಿದ್ಯಾರ್ಥಿಗಳ ದಾಖಲಾತಿ ಇತ್ತು!. ಅಲ್ಲಿ 400 ಮಿಲಿಯನ್‌ಗೂ ಮಿಕ್ಕ ಟಿಂಬಕ್ಟು ಹಸ್ತಪ್ರತಿಗಳಿವೆ. ಅವುಗಳಲ್ಲಿ ಅತಿ ಹಳೆಯದು ಕ್ರಿ‌‌.ಶ 11ನೇ ಶತಮಾನದಲ್ಲಿ ಬರೆಯಲ್ಪಟ್ಟಿದೆ.

ಟಿಂಬಕ್ಟುವಿನ ಹಸ್ತಪ್ರತಿಗಳ ಪೈಕಿ ಬಹುತೇಕ ಪ್ರತಿಗಳು ಸ್ಥಳೀಯ ನಿವಾಸಿಗಳ ಮನೆಯಲ್ಲಿ ಸಂರಕ್ಷಿಸಲಾಗಿತ್ತು. ಆದ್ದರಿಂದ ಅವುಗಳ ತರ್ಜುಮೆಯಾಗಲಿ, ಅಕಾಡೆಮಿಕ್ ಪ್ರದರ್ಶನವಾಗಲೀ ಸಾಧ್ಯವಾಗಲಿಲ್ಲ. ಅಮೆರಿಕದಲ್ಲಿ ಗುಲಾಮರಾಗಿದ್ದ ಕಪ್ಪು ಜನಾಂಗೀಯ ಮುಸ್ಲಿಮರ ಅರೆಬಿಕ್ ಬರಹಗಳ ಮೇಲೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ವಿದ್ವಾಂಸರ ಬಗ್ಗೆ ನನಗೆ ಗೊತ್ತು. ಒಂದು ವೇಳೆ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಕಪ್ಪು ಜನಾಂಗ ಗುಲಾಮ ಹಣೆಪಟ್ಟಿಯನ್ನು ಹೊಂದಿರುತ್ತಿದ್ದರು. ಆದರೆ ಹಲವಾರು ವರ್ಷಗಳಿಂದ ನಾನು ತಿಳಿದಿರುವ ಒಂದು ಸಂಗತಿ ಇದೆ. ಅದೇನೆಂದರೆ, ಕಪ್ಪು ಜನಾಂಗೀಯರು, ಅವರ ಸಂಪ್ರದಾಯ, ಅವರ ಜ್ಞಾನದ ಸಂಪನ್ಮೂಲ, ಅವರ ನಡುವೆ ಇದ್ದ ಬುದ್ಧಿಜೀವಿಗಳ ಬಗ್ಗೆ ಇರುವ ಧೋರಣೆಯನ್ನು ಇತ್ತೀಚೆಗೆ ಲಭ್ಯವಾದ ಟಿಂಬಕ್ಟು ಹಸ್ತಪ್ರತಿಗಳು, ಒಮರ್ ಬಿನ್ ಸೈದ್ ಮತ್ತು ಇಬ್ರಾಹಿಂ ಸೋರಿ ಯವರ ಬರಹಗಳು ಬದಲಾಯಿಸಿವೆ ಎಂಬುದು.

ಟಿಂಬಕ್ಟು ಪ್ರಾಂತ್ಯದವರಲ್ಲದಿದ್ದರೂ ಇಬ್ರಾಹಿಂ ಸೋರಿ ಹಾಗೂ ಒಮರ್ ಬಿನ್ ಸೈದ್ ಅವರು ಕೂಡ ಸಾಕ್ಷರ ಆಫ್ರಿಕನ್ ಸಮುದಾಯದಿಂದ ಬಂದವರಾಗಿದ್ದು, ಉನ್ನತ ಶಿಕ್ಷಣವನ್ನೂ ಪಡೆದಿದ್ದರು. ಲಿಯೋ ಆಫ್ರಿಕನ್ ಎಂದು ಪ್ರಸಿದ್ಧರಾಗಿರುವ
ಹಸ್ಸಾನ್ ಅಲ್ ವಝ್ಝಾನ್ ( Hassan al-Wazzan) ಅವರು ಪ್ರಸಿದ್ಧ ಟಿಂಬಕ್ಟುವಿನ ಬುಕ್ ವ್ಯಾಪಾರದ ಬಗ್ಗೆ ಹೇಳುತ್ತಾ “ನಾವು ಉತ್ತರ ಆಫ್ರಿಕನ್ ದೇಶಗಳಿಂದ ಪುಸ್ತಕಗಳನ್ನು ತರಿಸುವೆವು. ಎಲ್ಲಾ ವ್ಯಾಪಾರಗಳಿಗಿಂತ ಹೆಚ್ಚು ಲಾಭವನ್ನು ಪುಸ್ತಕ ವ್ಯಾಪಾರ ತಂದು ಕೊಡುತ್ತಿತ್ತು” ಎಂದಿದ್ದಾರೆ. ಇಂತಹ ಹಸ್ತಪ್ರತಿಗಳ ಮುದ್ರಣಕ್ಕೆ ಒಳ್ಳೆಯ ತಾಂತ್ರಿಕ ಜ್ಞಾನ, ನೈಪುಣ್ಯತೆ ಅಗತ್ಯವಿದೆ.

ಕ್ರಿ.ಶ 11ನೇ ಶತಮಾನದಿಂದ ಟಿಂಬಕ್ಟುವಿನ ಜನರು ಜ್ಞಾನಾರ್ಜನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಂದಿಗೂ ಅವರು ಆಫ್ರಿಕನ್ ಬೌದ್ಧಿಕ ಆಸ್ತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಡಾ. ಆದಿಲ್ ಹದೆರ ಖದೆರ ಅವರಂತಹ ಗ್ರಂಥಪಾಲಕರು ವಿಧ್ವಂಸಕರಿಂದ ತಪ್ಪಿಸಿಕೊಳ್ಳಲು ಪುಸ್ತಕಗಳು ಮತ್ತು ಹಸ್ತಪ್ರತಿಗಳ ಕಳ್ಳಸಾಗಣೆಗಾಗಿ ಜೀವ ಪಣಕ್ಕಿಟ್ಟಿದ್ದರು. ಟಿಂಬಕ್ಟುವಿನ ಜನರು ಪುಸ್ತಕಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಪುಸ್ತಕದ ಮೂಲಕ ಕೇವಲ ಜ್ಞಾನಾರ್ಜನೆ ಮಾಡದೆ , ವ್ಯಾಪಾರಕ್ಕೂ ಕೈ ಹಾಕಿ ಕೈ ತುಂಬಾ ಲಾಭ ಗಳಿಸಿದ್ದಾರೆ. ಅವರು ಪುಸ್ತಕಗಳಿಗೆ ನೀಡಿದ ಮಹತ್ವವನ್ನು ಅಲ್ಲಗಳೆಯಲಾಗದು. ಈ ಟಿಂಬಕ್ಟು ಹಸ್ತಪ್ರತಿಗಳು ಜ್ಞಾನದ ಲಿಖಿತ ರೂಪ ಮತ್ತು ಆಫ್ರಿಕಾದ ಉತ್ಕೃಷ್ಟ ಶಿಕ್ಷಣದ ಪ್ರತಿನಿಧಿಯಾಗಿದೆ ಎಂದು ಟಿಂಬಕ್ಟು ಗ್ರಂಥಪಾಲಕರಾದ ಡಾ. ಅಬ್ದುಲ್ ಖಾದಿರ್ ಹೈದರ ಅವರು ಹೇಳುತ್ತಾರೆ.

ಕಪ್ಪು ಜ‌ನಾಂಗೀಯರು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ವ್ಯಕ್ತಪಡಿಸುವಾಗ ಬಹಳ ಜಾಗರೂಕರಾಗಿದ್ದರು. “ಒಮರ್ ಬಿನ್ ಸೈದ್ ಅವರ ಆತ್ಮಕಥೆ ಓದುವಾಗ, ಅವರು ಪ್ರತಿಯೊಂದು ಪದ ಪ್ರಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಿದ್ದಾರೆ ಎಂದು ನನಗೆ ತಿಳಿಯಿತು” ಎಂದು ‘ಒಮರ್’ ನಾಟಕದ ಕರ್ತೃ ಮಿಖಾಯಿಲ್ ಆಬೆಲ್ಸ್ ಹೇಳುತ್ತಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳನ್ನು ವ್ಯಕ್ತಪಡಿಸುವಾಗ ಇತರರ ಮಂದೆ ‘ಅನ್ಯ’ನಾಗದಿರಲು, ವಿಲಕ್ಷಣವಾಗಿ ಕಾಣದಿರಲು, ಕಿರುಕುಳಕ್ಕೆ ಒಳಗಾಗದಿರಲು ಜಾಗ್ರತೆ ವಹಿಸಬೇಕು ಎಂದು ನಮ್ಮಲ್ಲಿ ಹಲವರು ಭಾವಿಸಿದ್ದಾರೆ.

ಕಪ್ಪು ಜನಾಂಗದಲ್ಲಿ ನನ್ನಂತೆಯೇ ಓದು- ಬರಹದ ಮೇಲೆ ಒಲವು ಇರುವ ಅನೇಕರು ಇತರರ ಮುಂದೆ ಉತ್ತಮರು ಎಂಬ ಭಾವನೆ ಬಾರದಿರಲು ತಮ್ಮ ವಿಚಾರಗಳನ್ನು ಮುಚ್ಚಿಡುತ್ತಾರೆ. ಸ್ವಂತ ಭಾಷೆಯಲ್ಲಿ ಮಾತನಾಡಲಾಗದೆ, ಇನ್ನೊಂದು ಭಾಷೆಯಲ್ಲಿ ಮಾತನಾಡಬೇಕಾದ ಬಲವಂತದ ಪರಿಸ್ಥಿತಿ ಇದ್ದರೂ, ಹೊಸ ಭಾಷೆಯಲ್ಲಿ ಬರೆಯಲು ಸಾಧ್ಯವಾಗದೆ, ಸ್ವಂತ ಭಾಷೆಯಲ್ಲಿ ಬರೆದಿದ್ದನ್ನು ಓದುವ ಜನರಿಲ್ಲದಿದ್ದರೂ ತಮ್ಮದೇ ಭಾಷೆಯಲ್ಲಿ ವಿಚಾರಗಳನ್ನು ಬರೆದಿಟ್ಟ ಒಮರ್ ಬಿನ್ ಸೈದ್, ಇಬ್ರಾಹಿಂ ಸೋರಿಯಂತಹ ಜನರ ಬಗ್ಗೆ ಒಂದು ಕ್ಷಣ ಚಿಂತಿಸಿ ನೋಡಿ. ಅಲ್ಲಿ ಪವಿತ್ರ ಗ್ರಂಥವನ್ನು ಓದುವವರು ಯಾರೂ ಇಲ್ಲದಿದ್ದರೂ ಅದನ್ನು ಹೃದಯದಲ್ಲಿ ಇಟ್ಟುಕೊಂಡಿದ್ದರು!.

ಮೇಲೆ ಕಾಣುವ ಚಿತ್ರವು 2009 ರಲ್ಲಿ ನಾನು ಮಾಡಿದ ಒಂದು ಪೇಂಟಿಂಗ್ ಆರ್ಟ್ ವರ್ಕ್ ಆಗಿದೆ. ಅದರಲ್ಲಿ ಇಬ್ರಾಹಿಂ ಸೋರಿ ಅವರ ಆತ್ಮಕಥೆಯ ಒಂದು ಪುಟವನ್ನು ಲಗತ್ತಿಸಿದ್ದೇನೆ. ಅದೇ ರೀತಿ ಅವರು ಅಪಹರಿಸಲ್ಪಟ್ಟು ಅಮೆರಿಕ ತಲುಪಿ, ಅಲ್ಲಿ ಗುಲಾಮನಾಗಿ ಬದುಕಿ ಕೊನೆಗೆ ಸ್ವತಂತ್ರಗೊಂಡ ಅನುಭವಗಳನ್ನು ಬರೆದ ಡಾಕ್ಯುಮೆಂಟ್ ಕೂಡ ಹೆಣೆದಿದ್ದೇನೆ. ಇಬ್ರಾಹಿಂ ಸೋರಿ ಅವರ ಕೈ ಬರೆಹದಲ್ಲಿ ಇರುವ ‘ನನ್ನನ್ನು ಅವರು ಕರೆದೊಯ್ದರು’ ಎಂಬ ವಾಕ್ಯವನ್ನು ನಾನು ಗುರ್ತಿಸಿದ್ದೇನೆ. ಅವರ ಜೀವನ ಚರಿತ್ರೆ ಓದುವಾಗಲೆಲ್ಲಾ ಆಫ್ರಿಕಾದಿಂದ ಅಪಹರಿಸಲ್ಪಟ್ಟು ಅಮೆರಿಕದಲ್ಲಿ ಗುಲಾಮರಾಗಿ ಬಾಳಿ, ಸ್ವಂತ ಜನ-ಸಮಾಜದಿಂದ ದೂರ ತಳ್ಳಲ್ಪಟ್ಟು ಯೌವನವನ್ನೆಲ್ಲಾ ದಾಸ್ಯದಲ್ಲೇ ಕಳೆದ ನನ್ನ ಪೂರ್ವಜರನ್ನು ನೆನೆಯುತ್ತೇನೆ.

ನಾನು ಕಪ್ಪು ಜನಾಂಗೀಯರಿಗೆ ಸಂಬಂಧಿಸಿದ ಆರ್ಕೈವ್ ಗಳನ್ನು ಸಂಶೋಧಿಸುವಾಗ ಕಪ್ಪು ಜನಾಂಗೀಯರು ಹಾಗೂ ಮುಸ್ಲಿಮರ ವಿರುದ್ಧ ಹೆಣೆಯಲಾದ ಕೆಲ ತಥಾಕಥಿತ ಪೂರ್ವಗ್ರಹ ನಿರೂಪಣೆಗಳಿಗೆ ವಿರುದ್ಧವಾದ ಸಾಕ್ಷ್ಯಗಳನ್ನು ಕಂಡೆನು. ನಮ್ಮ ವಿರುದ್ಧ ಇರುವ ಪೂರ್ವಗ್ರಹಗಳನ್ನು ಹುಸಿಗೊಳಿಸುವ ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳಂತಹ ಯಾವುದೇ ದಾಖಲೆಗಳನ್ನು ಕಂಡರೂ ಅವುಗಳನ್ನು ನಾನು ನನ್ನ ಲೇಖನಗಳಲ್ಲಿ, ಸಂಭಾಷಣೆಗಳಲ್ಲಿ, ಪ್ರಬಂಧಗಳಲ್ಲಿ ವಿಶೇಷವಾಗಿ ನನ್ನ ಕಲಾಕೃತಿಗಳಲ್ಲಿ ಬಳಸುತ್ತೇನೆ. ನಮ್ಮ ಸಾಮೂಹಿಕ ಕಲ್ಪನೆಗಳನ್ನು ವಿಸ್ತರಿಸುವ ಹೊಸ ಹೊಸ ರಚನೆಗಳನ್ನು ನಾವೆಲ್ಲರೂ ಒಟ್ಟಾಗಿ ರಚಿಸಬೇಕು ಎಂಬುದು ನನ್ನ ಅಭಿಮತ.

ಸುಮಾರು ಒಂಭತ್ತು ಶತಮಾನಗಳ ಕಾಲ ಪಶ್ಚಿಮ ಆಫ್ರಿಕಾದ ಇಸ್ಲಾಮಿಕ್ ಜ್ಞಾನ ಭಂಡಾರವು ಜಾಗತಿಕ ಇಸ್ಲಾಮಿಕ್ ಸಂವಾದಗಳಿಂದ ಹೇಗೆ ದೂರವುಳಿದವು ಎಂದು ನಾವು ಆಲೋಚಿಸಬೇಕಿದೆ. ಟಿಂಬಕ್ಟು ಆಫ್ರಿಕನ್ ಹಸ್ತಪ್ರತಿಗಳು ಆ ಪ್ರದೇಶದ ಬೌದ್ಧಿಕ, ಧಾರ್ಮಿಕ, ಆರ್ಥಿಕ, ವೈಜ್ಞಾನಿಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ. ಧರ್ಮದ ವಿಷಯದಲ್ಲಿ ಆ ಪ್ರದೇಶದ ಜನರು ಶಾಂತಿಯುತ, ಮುಕ್ತದೃಷ್ಟಿಯ, ಮಧ್ಯಮ ರೀತಿಯ ಇಸ್ಲಾಂ ಧರ್ಮವನ್ನು ಜಾಹೀರುಗೊಳಿಸುತ್ತಾರೆ. ಇತರ ಕ್ಷೇತ್ರಗಳಲ್ಲೂ ಅವರು ತಮ್ಮ ಕುರುಹುಗಳನ್ನು ಉಳಿಸಿದ್ದಾರೆ. ಅವರು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದ್ದರು. ಮುಸ್ಲಿಂ ಜಗತ್ತು ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಭಯೋತ್ಪಾದನೆಯ ಕರಿನೆರಳಿನಲ್ಲಿ ಇರುವಾಗ, ಟಿಂಬಕ್ಟು ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು ಅಪಾರವಾದ ಜ್ಞಾನದ ಸಂಪನ್ಮೂಲ ಹಾಗೂ ಸಮಸ್ಯೆಗಳ ಪರಿಹಾರವನ್ನೂ ತೋರಿಸುತ್ತವೆ.

ಓರ್ವ ಕಲಾವಿದೆಯಾಗಿ, ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳ ನಿರಂತರ ಸಂಶೋಧನೆ ಮೂಲಕ ಅಮೆರಿಕದಲ್ಲಿ ಗುಲಾಮರಾಗಿದ್ದ ನಮ್ಮ ಪೂರ್ವಜರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಸತ್ಯ ತಿಳಿಯದೆ, ಪರಾಂಬರಿಸದೆ ಜಗತ್ತನ್ನು ನೋಡುವ ಪರಿಪಾಠ ನಮ್ಮದು. ಇತಿಹಾಸ ಎಂಬುದು ನನ್ನ ಪಾಲಿಗೆ ಅಮೂರ್ತವಾದುದು. ಈ ಹಸ್ತಪ್ರತಿಗಳು ನಮಗೆ ದೊರಕುವಾಗ ನಾವು ನಮ್ಮ ಬಗ್ಗೆ, ನಮ್ಮ ಸುತ್ತಮುತ್ತಲಿನವರ ಬಗ್ಗೆ ನಮಗೆ ತಿಳಿದಿರುವ ವಿಚಾರಗಳನ್ನು ಮರು ಮೌಲ್ಯಮಾಪನ ಮಾಡಲು ಪರಾಮರ್ಶಿಸಲು ಅವಕಾಶ ದೊರಕುತ್ತದೆ. ಮತ್ತು ಈ ಸಂಪನ್ಮೂಲಗಳಿಂದ ಮೌಲ್ಯಗಳನ್ನು ಹೆಕ್ಕಿ ಹಂಚುವುದು ಕೂಡ ಒಂದು ಘನಕಾರ್ಯವಾಗಿದೆ.

ನೈಜ ಶಿಕ್ಷಣವು ಪುಸ್ತಕ ಮತ್ತು ಕಲೆಗಳಲ್ಲಿ ಅಡಕವಾಗಿದೆ. ಖಂಡಿತವಾಗಿಯೂ ಹಸ್ತಪ್ರತಿಗಳು ಮತ್ತು ಟಿಂಬಕ್ಟು ಪುಸ್ತಕಗಳು ಒಂದು ಕಲಾಕೃತಿಗಳಾಗಿವೆ. ವರ್ಷಗಳ ಗುಲಾಮಗಿರಿಯ ಹೊರತಾಗಿಯೂ ಇಬ್ರಾಹಿಂ ಸೋರಿ ಹಾಗೂ ಒಮರ್ ಬಿನ್ ಸೈದ್ ರಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೆ, ಆ. ಅಬ್ದುಲ್ ಖಾದಿರ್ ಹೈದರ ಹಾಗೂ ಟಿಂಬಕ್ಟು ಜನರಿಗೆ ಯುದ್ಧ ಮತ್ತು ಭಯೋತ್ಪಾದಕರ ದಾಳಿ ನಡುವೆ 1200 ವರ್ಷಗಳ ಇತಿಹಾಸ ಇರುವ ಹಸ್ತಪ್ರತಿಗಳ ಸಂರಕ್ಷಣೆ ಸಾಧ್ಯವಾಗಿದ್ದರೆ, ನಮ್ಮ ಮುಂದಿನ ಪೀಳಿಗೆಗೆ ಮೌಲ್ಯಗಳ ಪ್ರಾಧಾನ್ಯತೆಯನ್ನು ಹಸ್ತಾಂತರಿಸುವ ಏನನ್ನು ನಾವು ಸಾಧಿಸಿದ್ದೇವೆ ಎಂದು ಆಲೋಚಿಸಬೇಕಾಗಿದೆ.

ಮೂಲ: ನ್ಸೆಂಗ ನೈಟ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

ಸೂಫಿ ಚಿಂತನೆಯಲ್ಲಿ ಯಾತ್ರೆಗಳ ಭಿನ್ನ ಆಯಾಮಗಳು

ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ ‘ಸಫರ್’ ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.’ಯಾತ್ರೆ’ ಎಂಬುವುದನ್ನು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಲ್ಲಟಗೊಳ್ಳುವುದನ್ನು ಸೂಚಿಸಲಾಗಿ ಬಳಸಲಾದರೆ, ಸೂಫಿ ಪಂಥದಲ್ಲಿ ಪ್ರಸ್ತುತ ಪದವನ್ನು ವ್ಯಕ್ತಿಯಲ್ಲುಂಟಾದ ತಕ್ಷಣದ ಬದಲಾವಣೆ, ಬದುಕಿನ ಕ್ಷಣಿಕತೆ ಮತ್ತು ವಿಯೋಗ ಎಂಬ ನೆಲೆಗಟ್ಟಿನಲ್ಲಿ ರೂಪಕಗಳಾಗಿಯೂ ಬಳಸುವುದುಂಟು. ಈ ವಿಶಾಲಾರ್ಥದ ಸಾಂಕೇತಿಕ ಪದಪ್ರಯೋಗವು ಸೂಫಿಗಳಿಗೆ ಆತ್ಮಜ್ಞಾನದ ಹಾದಿಯಲ್ಲಿನ ವಿವಿಧ ಹಂತಗಳನ್ನು ಸೂಚಿಸಲು ಸಹಾಯವನ್ನು ಮಾಡಿತು.

ಅರೆಬಿಕ್ ನಿಘಂಟಿನಲ್ಲಿನ ಈ ಪದವು ಶುಚಿಗೊಳಿಸುವುದು, ಬೆಳಗಿಸುವುದು, ಗಾಳಿಯು ಮೋಡವನ್ನು ಚದುರಿಸುವುದು, ಹೊಸತನ್ನು ಅರಿತುಕೊಳ್ಳುವುದು ಮತ್ತು ಮುಖವಾಡ ಕಳಚುವುದು ಮುಂತಾದ ಅನೇಕ ಅರ್ಥವನ್ನು ನೀಡುತ್ತದೆ. ಈ ರೀತಿಯಲ್ಲಿ ‘ಸಫರ್’ ಪದವು ಕೇವಲ ಪ್ರಯಾಣದ ತಾತ್ಪರ್ಯದಾಚೆಗೆ ವ್ಯಕ್ತಿತ್ವ ಮತ್ತು ಗುಪ್ತ ಸತ್ಯದ ಸ್ವಭಾವವನ್ನು ಅನಾವರಣಗೊಳಿಸುತ್ತದೆ. ಆಧುನಿಕ ಕಾಲದಲ್ಲಿ ಯಾತ್ರೆಯು ಒದಗಿಬರುವ ಹೊಸ ಅನುಭವದ ಆವಿಷ್ಕಾರವಾಗಿ ಕಂಡರೂ, ಪೂರ್ವಕಾಲದಲ್ಲಿ ಅದೊಂದು ಅಭದ್ರತೆ, ಲೂಟಿ, ಮತ್ತು ಪ್ರಯಾಸಗಳ ಅನುಭವವನ್ನು ಕೊಡಮಾಡಬಲ್ಲ ಸಾಹಸಮಯ ಕಾರ್ಯವಾಗಿತ್ತು ಎಂಬುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಖುರ್‌ಆನಿನಲ್ಲಿ ಯಾತ್ರೆಯ ಉಲ್ಲೇಖ

ಕುರಾನಿನಲ್ಲಿ ಯಾತ್ರೆಗಳನ್ನು ಭಿನ್ನ ಆಯಾಮದಲ್ಲಿ ಉಲ್ಲೇಖಿಸಿದ್ದನ್ನು ಕಾಣಬಹದು.
ದೇವರ ಆಜ್ಞೆಗಳನ್ನು ತಿರಸ್ಕರಿಸಿದರ ಪರಿಣಾಮ, ಪಾಪವೆಸಗಿದವರ ಅಂತ್ಯ, ಪುನರುಜ್ಜೀವನದ ಸಾಧ್ಯತೆ ಮತ್ತು ಸೃಷ್ಟಿಕರ್ತನ ಶ್ರೇಷ್ಠತೆಯನ್ನು ಅರಿಯಲು ನೀವು ಯಾತ್ರೆಗಳನ್ನು ಮಾಡಿರಿ ಎಂದು ಕುರ್‌ಆನ್ ಸೂಚಿಸುತ್ತದೆ. ಕುರಾನಿನ ಅನೇಕ ವಾಕ್ಯಗಳು ಮಾನವನ ಹೃದಯಗಳನ್ನು ಬೆಳಗಿಸಲು ಯಾತ್ರೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಸಂಚಾರಗಳನ್ನು ಜೀವನೋಪಾಯದ ಮಾರ್ಗವಾಗಿ ಮತ್ತು ತಮ್ಮ ದೈವಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ನಡೆಸುವ ದೀರ್ಘ ಪ್ರಯಾಣ ಅಥವಾ ವಲಸೆಗಳಾಗಿಯೂ ಕುರಾನ್ ಮುಂದಿಡುತ್ತದೆ. ಇದಲ್ಲದೆ, ತೀರ್ಥಯಾತ್ರೆಗೆ ಸಂಬಂಧಿಸಿದಂತೆ ನಡೆಸಲಾಗುವ ಹಜ್ ಯಾತ್ರೆಗಳು ಇಸ್ಲಾಮಿನಲ್ಲಿ ಪ್ರಯಾಣದ ಮತ್ತೊಂದು ಪ್ರಮುಖ ಸಂದರ್ಭವನ್ನು ಸೂಚಿಸುತ್ತದೆ. ಸೂಫಿಗಳು ಪ್ರಯಾಣದ ವಿವಿಧ ಆಯಾಮಗಳನ್ನು ಈ ರೀತಿಯ ವಿಶಾಲಾರ್ಥದಲ್ಲಿ ಉಪಯೋಗಿಸುತ್ತಿದ್ದರು.

ಸೂಫಿ ಮಹಾತ್ಮರ ಸಂಚಾರಗಳು

ಪರ್ಷಿಯನ್ ಸೂಫಿ ವಿದ್ವಾಂಸ ಮತ್ತು ಲೇಖಕ ಅಬೂ ಬಕರ್ ಅಲ್-ಕಾಲಾಬಾದಿ ಯಾತ್ರೆಗಳನ್ನು ಆಧ್ಯಾತ್ಮಿಕತೆಯ ಹತ್ತು ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಸೂಫಿಗಳು ಸಾಮಾನ್ಯವಾಗಿ ಎರಡು ಅಂಶಗಳನ್ನು ಸಂಯೋಜಿಸುವ ಮೂಲಕ ಪ್ರಯಾಣದ ಪರಿಕಲ್ಪನೆಯನ್ನು ಮುಂದಿಡುತ್ತಾರೆ.
೧. ಯಾತ್ರೆಯ ಉದ್ದೇಶ, ೨. ಯಾತ್ರೆಯ ಪ್ರಯೋಜನಗಳು. ತೀರ್ಥಯಾತ್ರೆಗಳನ್ನು ಮಾಡುವುದು, ಆತ್ಮೀಯರನ್ನು ಭೇಟಿಯಾಗುವುದು, ಆಧ್ಯಾತ್ಮಿಕ ಗುರುವನ್ನು ಸೇರುವುದು ಮುಂತಾದ ಲಕ್ಷ್ಯಕ್ಕಾಗಿ ಯಾತ್ರೆಗಳನ್ನು ಕೈಗೊಳ್ಳಬೇಕೆಂದು ಇವರು ಹೇಳುತ್ತಾರೆ. ಸೂಫಿಗಳು ಆ ಕಾಲದಿಂದಲೂ ಜ್ಞಾನ ಸಂಪಾದನೆ ಮತ್ತು ಶ್ರೇಷ್ಠ ಗುರುವನ್ನು ಅರಸಿಕೊಂಡು ಪ್ರಪಂಚದ ಉದ್ದಗಲಕ್ಕೂ ಸಂಚಾರವನ್ನು ಬೆಳೆಸಿದವರಾಗಿದ್ದರು.

ಸೂಫಿಗಳಿಗೆ, ಪ್ರಯಾಣದ ಉದ್ದೇಶದ ಹೊರತಾಗಿ, ಸ್ವತಃ ಯಾತ್ರೆಯ ಅನುಭವವೂ ಸಹ ಮುಖ್ಯವಾಗಿದೆ. ಒಬ್ಬ ಯಾತ್ರಿಕನು ದಾರಿಹೋಕನಂತೆ ಕಾಲ್ನಡಿಗೆಯಲ್ಲಿ ಅಲೆದಾಡದ ಹೊರತು ಯಾತ್ರೆಯ ಉದ್ದೇಶಗಳನ್ನು ತಲುಪಲೋ, ಪ್ರಯಾಣದ ಗಂಧವನ್ನು ಸವಿಯಲೋ ಸಾಧ್ಯವಿಲ್ಲ ಎಂದು ಸೂಫಿ ಮಹಾತ್ಮರು ಅಭಿಪ್ರಾಯಿಸುತ್ತಾರೆ. ಸೂಫಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಒಲಿಸಿಕೊಳ್ಳುವಲ್ಲಿ ಯಾತ್ರೆಯ ಪ್ರಾಧಾನ್ಯತೆಯನ್ನು ಅಬು ತಾಲಿಬ್ ಅಲ್ – ಮಕ್ಕಿ ಆತ್ಮ ಶುದ್ಧೀಕರಣದ ತಕ್ಕಡಿಯಲ್ಲಿಟ್ಟು ಚರ್ಚಿಸುತ್ತಾರೆ. ‘ಸಫರ್’ ಎಂಬ ಪದದ ವಿಶಾಲಾರ್ಥದಲ್ಲಿ ಒಳಗೊಳ್ಳುವ ಹೊಸತನ್ನು ಅರಿತುಕೊಳ್ಳು, ತನ್ನೊಳಗಿನ ಪರಿಮಳವನ್ನು ಆಘ್ರಾಣಿಸು, ಆತ್ಯಂತಿಕ ಗುರಿಯನ್ನು ಕಂಡುಕೊಳ್ಳು ಎಂಬಿತ್ಯಾದಿ ಉದ್ದೇಶ ಲಕ್ಷ್ಯವನ್ನು ತಲುಪುವುದೇ ಬಹುಮುಖ್ಯವೆಂದು ಅಬು ತಾಲಿಬ್ ಪ್ರತಿಪಾದಿಸಿದರು. ಸಮರ್ಪಣೆ (ತವಕ್ಕುಲ್) ಸಂತೃಪ್ತಿ (ರಿಳಾ)ವಿಧೇಯತೆ (ತಸ್ಮೀಮ್)ಯಂತಹಾ ಆತ್ಮದ ಪ್ರಶಾಂತವೂ ಉದಾತ್ತವೂ ಆದ ಗುಣಲಕ್ಷಣಗಳೊಂದಿಗೆ ಯಾತ್ರೆ ಹೊರಟ ವ್ಯಕ್ತಿಯಲ್ಲಿ ತಕ್ಷಣಕ್ಕೆ ಉಂಟಾಗುವ ಸಂಕಟ ಮತ್ತು ಗೃಹವಿರಹವು ನಡೆಸುವ ಮುಖಾಮುಖಿ ಯಾತ್ರಿಕನ ನಿಜವಾದ ಆಧ್ಯಾತ್ಮಿಕ ಮಟ್ಟವನ್ನು ಸ್ಪಷ್ಟಗೊಳಿಸುತ್ತದೆ. ಆ ಮೂಲಕ ಮನಸ್ಸು ದೃಢಗೊಳಿಸುವ ಕಾಯಕದಲ್ಲಿ ಉಂಟಾದ ಲೋಪದೋಷಗಳನ್ನು ತಿದ್ದುಪಡಿಗೆ ಒಳಪಡಿಸಿ ಇನ್ನಷ್ಟು ಪಕ್ವಗೊಳ್ಳಲು ಮತ್ತು ಸೂಫಿ ಮಾರ್ಗದಲ್ಲಿ ಪಳಗಲು ಯಾತ್ರೆಗಳು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

ಗುರಿಯನ್ನು ಸಾಧಿಸುವ ಸಲುವಾಗಿ ಯಾತ್ರಿಕನೊಬ್ಬನು ನಡೆಸುವ ಸಂಚಾರವು ಆತ್ಮಸಂಸ್ಕರಣೆ ಮತ್ತು ಸ್ವಯಂ-ಜಾಗೃತಿಗೆ ಬಾಗಿಲುಗಳನ್ನು ತೆರೆದಿಡುತ್ತದೆ. ಈ ನಿಟ್ಟಿನಲ್ಲಿ ಯಾತ್ರೆಗಳನ್ನು ಕೈಗೊಂಡ ಪ್ರವಾದಿಗಳ ಯಾತ್ರಾ ವಿವರಣೆಯನ್ನು ಮತ್ತು ಆ ಮೂಲಕ ಅವರು ಸಾಧಿಸಿದ ಬದುಕಿನ ಶಿಸ್ತು ಮತ್ತು ಅದರ ಪರಿಣಾಮಗಳ ಕುರಿತು ಮುಸ್ತಾಂಬ್ಲಿ ಬುಖಾರಿ ದೀರ್ಘವಾಗಿ ಬರೆಯುತ್ತಾರೆ. ಮೊದಲ ಪ್ರವಾದಿಗಳಾದ ಆದಂ ನಬಿ (ಅ.ಸ)ಮರಿಂದ ಆರಂಭಗೊಂಡು ಕೊನೆಯ ಪ್ರವಾದಿವರ್ಯರಾದ ಮುಹಮ್ಮದ್ ಮುಸ್ತಫಾ( ಸ.ಅ)ಮರವರೆಗಿನ ಪ್ರವಾದಿಗಳ ಯಾತ್ರೆಗಳ ಬಗ್ಗೆ ಇಲ್ಲಿ ಉಲ್ಲೇಖಿಸುತ್ತಾರೆ. ಅದೇ ರೀತಿ, ಸೂಫಿ ವಿದ್ವಾಂಸರಾದ ಇಮಾಮ್ ಖುಶೈರಿ ಅವರು ದೇಹಿಚ್ಛೆಗಳಿಂದ ಮುಕ್ತಿ ( ನಫ್ಸ್ ಅಲ್ – ಅಮ್ಮಾರ) ಹೊಂದಲು ಮತ್ತು ದುಷ್ಕೃತ್ಯಗಳಿಂದ ಸ್ವಚ್ಛಗೊಳ್ಳಲು ಯಾತ್ರೆಗಳು ಅತ್ಯಂತ ಸಹಕಾರಿಯೆಂದು ನಂಬಿದರು‌. ಬದುಕಿಗೆ ಅಳವಡಿಸಿಕೊಳ್ಳಬೇಕಾದ ನೀತಿಪಾಠಗಳನ್ನು ಗ್ರಹಿಸುವ ಶಕ್ತಿಯನ್ನು ಯಾತ್ರೆಗಳು ನೀಡುತ್ತದೆ. ದೇವರ ಆಜ್ಞೆಗಳನ್ನು ಧಿಕ್ಕರಿಸಿದ ಜನರು ಅನುಭವಿಸುವ ಸಂಕಷ್ಟಗಳನ್ನು ಮತ್ತು ವಿಧೇಯರಾಗಿರುವ ಜನರು ಆ ಸಂಕಷ್ಟಗಳೊಂದಿಗೂ ನಗುತ್ತಾ ಬದುಕುತ್ತಿರುವ ಹಿಂದಿನ ಸೂತ್ರವನ್ನು ತಮ್ಮ ತಮ್ಮ ಆತ್ಮಗಳಿಗೆ ಬೋಧಿಸಲು ಯಾತ್ರಿಕರಿಗೆ ಸಾಧ್ಯವಾಗುತ್ತದೆ. ತೀರ್ಥಯಾತ್ರೆ ಹಾಗೂ ಹಿಜ್ರಾ ಯಾತ್ರೆಗಳಂತಹಾ ಧಾರ್ಮಿಕ ಪರಿಕಲ್ಪನೆಯ ಸಂಚಾರಗಳು ಯಾತ್ರಿಕರಿಗೆ ದೇವರೊಂದಿಗೆ ಹೊಸ ಆತ್ಮಬಂಧವನ್ನು ಸ್ಥಾಪಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ ಎಂಬುವುದೆಲ್ಲವೂ ಸೂಫಿ ಪಂಥದ ಬೋಧನೆಗಳಲ್ಲಿ ಪ್ರಮುಖವಾದದ್ದಾಗಿದೆ.

ಸೂಫಿ ಪರಂಪರೆಗಳಲ್ಲಿ ಯಾತ್ರೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ಹೆಚ್ಚು ಪ್ರಾಧಾನ್ಯತೆಯಿಂದ ಕಾಣಲಾಗುತ್ತದೆ. ಸೂಫಿ ಚಿಂತನೆಗಳ ಬಗೆಗೆ ರಚಿಸಲ್ಪಟ್ಟ ಆರಂಭಿಕ ಕೃತಿಗಳಲ್ಲಿ ಈ ಕುರಿತ ಹೆಚ್ಚಿನ ವಿವರಗಳು ಕಾಣಬಹುದು. ಸೃಷ್ಟಿಕರ್ತನ ಸಂತೃಪ್ತಿಗಾಗಿ ಯಾತ್ರೆ ಕೈಗೊಳ್ಳುವುದು, ಶುಚಿತ್ವವನ್ನು ಕಾಪಾಡುವುದು, ಪ್ರವಾದಿಗಳ ಬದುಕನ್ನು ಅನುಸರಿಸುವುದು, ಆ ಊರಿನ ಜನರನ್ನು ಗೌರವಿಸುವುದು, ಸಹ ಯಾತ್ರಿಕನೊಂದಿಗೆ ಉತ್ತಮ ಬಾಂಧವ್ಯ ಸ್ಥಾಪಿಸುವುದು, ಜೊತೆಗೆ ಇರುವವರಿಗೆ ಯಾತ್ರೆಯಲ್ಲಿ ಸಹಾಯ ಅಸ್ತವನ್ನು ಚಾಚುವುದು, ಇತರರನ್ನು ನಿಂದಿಸದಿರುವುದು ಇವು ಆ ಶಿಷ್ಟಾಚಾರದ ಪಟ್ಟಿಯಲ್ಲಿ ಪ್ರಮುಖವಾದದ್ದಾಗಿದೆ.

ಸೂಫಿ ಪಂಥದಲ್ಲಿ ಯಾತ್ರೆಯೆಂಬ ರೂಪಕ

ಸೂಫಿ ಪರಂಪರೆಯಲ್ಲಿ ‘ಯಾತ್ರೆ’ ಎಂಬ ಪದವನ್ನು ಭಾಷಿಕವಾದ ವಿಭಿನ್ನ ಅಂಶಗಳೊಂದಿಗೆ ತುಲನೆಗೊಳಿಸಿ ವೈವಿಧ್ಯಮಯ ವಿಚಾರಗಳನ್ನು ಸೂಚಿಸಲು ರೂಪಕಗಳಾಗಿ ಬಳಕೆಮಾಡುವ ವಾಡಿಕೆಯಿದೆ. ಮರಣ ಅಥವಾ ಬದುಕಿನ ವಿವಿಧ ಹಂತಗಳನ್ನು ಸೂಚಿಸಲಾಗಿಯೂ ಸೂಫಿಗಳು ಇದನ್ನು ಬಳಸಿದರು. ಧಾರ್ಮಿಕ ಬೋಧನೆಗಳಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವಿಯೋಗವನ್ನು ಒಂದು ಸುದೀರ್ಘವಾದ ಯಾತ್ರೆ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸುವುದು ಈ ರೂಪಕಾತ್ಮಕವಾದ ಹೋಲಿಕೆಯೇ ಆಗಿದೆ. ಸೂಫಿಗಳ ಪ್ರಕಾರ ಸಾವು ಈ ಪ್ರಪಂಚದಿಂದ ಮತ್ತೊಂದು ಪ್ರಪಂಚದೆಡೆಗಿನ ಒಂದು ಯಾತ್ರೆಯಾಗಿದೆ. ನಿಖರವಾದ ಸಮಯ ಸಂದರ್ಭ ಅಜ್ಞಾತವಾಗಿರುವ ಈ ಯಾತ್ರೆಯೂ ದೀರ್ಘ ಮತ್ತು ಕ್ಷೇಶದಾಯಕವಾದ ಯಾತ್ರೆಯೆಂದೂ ಇದಕ್ಕಾಗಿ ಸದಾ ಸಿದ್ಧರಾಗುವ ಎಚ್ಚರಿಕೆಯೊಂದಿಗೆ ಅಗತ್ಯ ರೂಪುರೇಷೆಗಳನ್ನು ಹಾಕಿಕೊಂಡಿರಬೇಕೆಂದು ಸೂಫಿಗಳು ಬೋಧಿಸಿದರು. ಪ್ರಸ್ತುತ ಯಾತ್ರೆಗಳಿಗೆ ಸಿದ್ಧಗೊಳ್ಳುವವನು ತನ್ನಿಂದಾಗುವ ಒಳಿತನ್ನು ಸಂಪಾದಿಸುವುದು, ನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಗತ್ಯವೆಂದು ಸೂಫಿಗಳು ಪ್ರತಿಪಾದಿಸಿದರು.

ಜೀವನದಲ್ಲಿ ಸಂಭವಿಸುವ ಬದಲಾವಣೆಗಳು ಮತ್ತು ವಿಕಸನಗಳನ್ನು ಒಳಗೊಳ್ಳುವಂತೆ ಯಾತ್ರೆಯ ಅರ್ಥವನ್ನು ವಿಸ್ತರಿಸುತ್ತಾ ಹೋಗಬೇಕಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವ ಎಂಬ ಪ್ರಾಥಮಿಕ ಅರ್ಥದ ಈ ಯಾತ್ರೆಯು ನಿಜದಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಪ್ರಾರಂಭಗೊಂಡು ಸಾವಿನ ಮೂಲಕ ಕೊನೆಗೊಳ್ಳುವ ರಾತ್ರಿ ಹಗಲುಗಳೆಂಬ ಮಜಲುಗಳನ್ನು ಒಳಗೊಂಡಿರುವ ಪ್ರಯಾಣವಾಗಿದೆ. ರಾತ್ರಿ ಹಗಲುಗಳಿಂದ ಪೂರ್ಣಗೊಳ್ಳುವ ಈ ಯಾತ್ರೆಗೆ ಬೇಕಾದ ತಯಾರಿಯ ಮೂಲ ಸಮಯವಾಗಿದೆ. ತನ್ನ ಸಮಯವನ್ನು ಅಂತಿಮ‌ ಯಾತ್ರೆಗಾಗಿ ಮೀಸಲಿಡುವ ವ್ಯಕ್ತಿಯು ಉದ್ಧೇಶಿತ ಗುರಿಯನ್ನು ತಲುಪುವುದರಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಶಾರೀರಿಕ ಇಚ್ಛೆ ಮತ್ತು ಇಂದ್ರಿಯ ಇಚ್ಛೆಗಳು ಮನುಷ್ಯನನ್ನು ಮುಕ್ತಿಯ ಮಾರ್ಗದಿಂದ ತಡೆದು ನಿಲ್ಲಿಸುತ್ತದೆ. ಈ ಯಾತ್ರೆಯ ಮೂಲಧನವಾದ ಸಮಯವನ್ನು ಕೊಲ್ಲುತ್ತದೆ. ಆ ಮೂಲಕ ಅವನ ನಾಶಕ್ಕೆ ಇವುಗಳು ಕಾರಣವಾಗುತ್ತದೆ ಎನ್ನುವುದು ಸೂಫಿ ಪಥದ ಬೋಧನೆಗಳಾಗಿವೆ. ಪ್ರತಿಯೊಂದು ಯಾತ್ರೆಗಳಿಗೂ ಅಂತ್ಯವಿರುವಂತೆ ಈ ಬದುಕಿಗೂ ಅಂತ್ಯವಿದೆ, ಆ ಕಾರಣದಿಂದಲೇ ಅಂತ್ಯವಿರುವ ಈ ಬದುಕನ್ನು ಒಂದು ಪ್ರಯಾಣವಾಗಿ ಸೂಫಿಗಳು ಪರಿಗಣಿಸಿರುವುದು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ ಒಬ್ಬ ಯಾತ್ರಿಕನ ಶ್ರದ್ಧೆ ಅವನ ಸುತ್ತಲಿನ ಸೌಂದರ್ಯಕ್ಕೆ ಒಳಗಾಗಿ ಆ ಮೋಡಿಯಲ್ಲಿ ಮುಳುಗುವ ಬದಲು ಉದ್ದೇಶಿತ ಪರಲೋಕವೆಂಬ ಗಮ್ಯಸ್ಥಾನದ ಬಗ್ಗೆ ಇರಬೇಕು. ಈ ಕ್ಷಣಿಕ ಪ್ರಪಂಚದೊಂದಿಗಿನ ವ್ಯಾಮೋಹದಿಂದ ಕಳಚಿಕೊಂಡು ಆತ್ಯಂತಿಕ ಗುರಿಯನ್ನು ಕಂಡುಕೊಳ್ಳಲು ಯಾತ್ರಿಕನು ತಯಾರಿ ನಡೆಸಬೇಕಾಗುತ್ತದೆ ಎನ್ನುತ್ತಾರೆ ಸೂಫಿಗಳು.

ಮಾನವನು ಕೈಗೊಳ್ಳುವ ಯಾತ್ರೆಯ ಕ್ಷಣಿಕ ಸ್ವಭಾವದ ಹೊರತಾಗಿ ಯಾತ್ರೆಯೂ ಅವನಲ್ಲಿ ಉಂಟುಮಾಡುವ ಮಾನಸಿಕ, ಆಧ್ಯಾತ್ಮಿಕ, ನೈತಿಕ ಮತ್ತು ಜ್ಞಾನದ ಪರಿಸ್ಥಿತಿಗಳಲ್ಲಿ ಸಂಭವಿಸುವ ರೂಪಾಂತರಗಳನ್ನು ಸೂಚಿಸುವ ಉಪಮೆಗಳಾಗಿಯೂ ಯಾತ್ರೆಯು ಬಳಕೆಯಾಗಿದೆ. ಪ್ರಮುಖ ಸೂಫಿ ವಿದ್ವಾಂಸರಾದ ಶೇಖ್ ಅಲಿ ಹುಜ್ವೇರಿ, ಸೃಷ್ಟಿಕರ್ತನ ತೃಪ್ತಿಯನ್ನು ಗುರಿಯಾಗಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ವ್ಯಕ್ತಿಯು ತನ್ನ ಆತ್ಮದ ಬಯಕೆಗಳಿಂದ ದೂರ ಉಳಿಯಬೇಕು ಎನ್ನುತ್ತಾರೆ. ಸೂಫಿ ಸಂತರಲ್ಲಿ ಪ್ರಮುಖರಾಗಿರುವ ಅಬೂ ಉಸ್ಮಾನ್ ಹೇಳುವ ಪ್ರಕಾರ, ನಿಜವಾದ ಆಧ್ಯಾತ್ಮಿಕ ಯಾತ್ರೆಯನ್ನು ನಡೆಸುವವನು ಇಂದ್ರಿಯ ಬಯಕೆಗಳಿಂದ ದೂರ ಸರಿದಿರುತ್ತಾನೆ. ಈ ವಿಚಾರಧಾರೆಯು ನೈತಿಕತೆ ಮತ್ತು ಸೂಫಿ ಪಂಥದ ತಿರುಳಿನೊಂದಿಗೆ ಬಲವಾಗಿ ಹೊಂದಿಕೊಂಡಿದೆ, ಇದು ವ್ಯಕ್ತಿಯ ನಡವಳಿಕೆ, ಆಧ್ಯಾತ್ಮಿಕ ಪರಿಸ್ಥಿತಿಗಳು ಮತ್ತು ನಂಬಿಕೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಯಾತ್ರೆಯ ರೂಪಕ ಅರ್ಥವು ಸೂಫಿ ಪರಿಕಲ್ಪನೆಯೊಂದಿಗೆ ಸಹಸಂಬಂಧವನ್ನು ಹೊಂದಿದೆ. ಇದು ಬದುಕಿನ ಘಟ್ಟಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುವ (ಇಸ್ತಿಕ್ಮಾಲ್) ಪಕ್ರಿಯೆಯನ್ನು ಸೂಚಿಸುತ್ತದೆ.

ಶೇಖ್ ಮುಸ್ತಾಮ್ಮಿ ಬುಖಾರಿ ಅವರು ಯಾತ್ರೆಯನ್ನು ಆಂತರಿಕ ಮತ್ತು ಬಾಹ್ಯ ಎಂದು ವರ್ಗಿಕರಿಸಿದ ಸೂಫಿಗಳಲ್ಲಿ ಮೊದಲಿಗರು‌. ಅದನ್ನು ಯಾತ್ರೆಯ ಅತೀಂದ್ರಿಯ ಸತ್ಯವೆಂದು ನಾವು ಅರ್ಥೈಸಿಕೊಳ್ಳುವ. ಆತ್ಮಶುದ್ಧಿಗಾಗಿ ಲೌಕಿಕ (ಬಾಹ್ಯ) ಪ್ರಪಂಚದಲ್ಲಿ ಯಾತ್ರೆಗೆಯ್ಯುವುದರ ಅನಿವಾರ್ಯತೆಯನ್ನು ಇಮಾಮ್ ಬುಖಾರಿ ಒತ್ತಿ ಹೇಳಿದರು. ಜೊತೆಗೆ ಆಂತರಿಕ ಪ್ರಯಾಣದ ಮಹತ್ವವನ್ನೂ ಅವರು ವಿವರಿಸಿದರು.ಅವರ ಪ್ರಕಾರ ಆಂತರಿಕ ಪ್ರಯಾಣವು ಸ್ವಯಂ-ಪ್ರತಿಫಲನ ಮತ್ತು ಧ್ಯಾನವಾಗಿದೆ.ಇಲ್ಲಿ ಪ್ರಯಾಣದ ಅವಧಿಯು ಪೂರ್ವ-ಎಟರ್ನಿಟಿನಿಂದ ಪೋಸ್ಟ್ ಎಟರ್ನಿಟಿಯವರೆಗೆ ಇರುತ್ತದೆ. ಯಾತ್ರಿಕನು ಬಾಹ್ಯ ಪ್ರಯಾಣದಲ್ಲಿ ವಿವಿಧ ಹಂತಗಳನ್ನು ದಾಟಿಹೋದರೆ, ಸೂಫಿಗಳು ತಮ್ಮದೇ ಆದ ಪ್ರಯತ್ನಗಳ ಮೂಲಕ ವಿವಿಧ ಹಂತಗಳನ್ನು ಜಯಿಸುತ್ತಾ ಸಾಗುತ್ತಾರೆ. ಬಾಹ್ಯ ಪ್ರಯಾಣವು ಸ್ಥಳ-ಸಮಯದ ನಿರ್ಬಂಧಗಳಿಂದ ಬಂಧಿಸಲ್ಪಟ್ಟರೆ, ಆಂತರಿಕ ಪ್ರಯಾಣದಲ್ಲಿ ಅಂತಹ ಗೋಜಲುಗಳಿಲ್ಲ. ಆದ್ದರಿಂದ ಸೂಫಿಗಳು ಕ್ಷಣಾರ್ಧದಲ್ಲಿ ಪ್ರಪಂಚದಾದ್ಯಂತ ಸಂಚರಿಸಬಹುದು. ಆಂತರಿಕವಾದ ರೂಪಾಂತರವು ಸಂಭವಿಸಿರುವುದರಿಂದಾಗಿ ಸೂಫಿಗಳು ಹೆಚ್ಚು ಯಾತ್ರೆಗಳನ್ನು ನಡೆಸುತ್ತಾರೆಂದು ಬುಖಾರಿ ಪ್ರತಿಪಾದಿಸಿದರು. ಅವರ ಪ್ರಕಾರ, ಸೂಫಿಯೇತರರ ಆಂತರಿಕ ಸ್ಥಿತಿಯು ಬಾಹ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಯಾವಾಗ ಅವರ ಬಾಹ್ಯವು ಶಾಂತವಾಗುತ್ತದೆಯೋ ಆಗ, ಅಂತರಂಗವೂ ಶಾಂತವಾಗುತ್ತದೆ. ಸೂಫಿಗಳಿಗೆ ಸಂಬಂಧಿಸಿದಂತೆ, ಅವರ ಆಂತರಿಕ ಸ್ಥಿತಿಯೇ ಮುಖ್ಯವೆನಿಸುತ್ತದೆ. ಬಾಹ್ಯವು ಆಂತರಿಕ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಇಮಾಮ್ ಖುಶೈರಿ ಎರಡು ರೀತಿಯ ಯಾತ್ರೆಗಳ ಬಗ್ಗೆಯೂ ಮಾತನಾಡುತ್ತಾರೆ. ಒಂದು ದೇಹದೊಂದಿಗಿನ ಪ್ರಯಾಣ, ಇದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕಿರುವ ಚಲನೆಯನ್ನು ಸೂಚಿಸುತ್ತದೆ. ಎರಡನೆಯದು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ವಿಕಸನವನ್ನು ಸೂಚಿಸುವ ಆತ್ಮದೊಂದಿಗಿನ ಪ್ರಯಾಣವಾಗಿದೆ. ಅವರ ಪ್ರಕಾರ ಹೃದಯದೊಂದಿಗೆ ಪಯಣಿಸುವ ಯಾತ್ರಿಕರು ವಿರಳವಾಗಿರುತ್ತಾರೆ. ಅವರು ಈ ಎರಡು ವಿಧಗಳನ್ನು ಲೌಕಿಕ ಮತ್ತು ಸ್ವರ್ಗೀಯ ಎಂದು ವರ್ಗೀಕರಿಸಿದ್ದಾರೆ. ಖುಶೈರಿಯ ಪ್ರಕಾರ ದೇವರನ್ನು ಸೇರುವುದೇ ಯಾತ್ರೆಯ ಬಹುಮುಖ್ಯ ಉದ್ಧೇಶವಾಗಿದೆ, ಈ ಉದ್ಧೇಶದ ಸಾಕ್ಷಾತ್ಕಾರ ಸ್ವಯಂ- ಸಂಸ್ಕರಣೆ ಅಥವಾ ಆಧ್ಯಾತ್ಮಿಕ ಚಿಂತನೆಗಳಿಂದ ಮಾತ್ರ ಸಾಧ್ಯ. ಪ್ರಶಸ್ತ ಇಹ್ಯಾ ಉಲೂಮುದ್ದೀನ್ ಎಂಬ ಕೃತಿಯಲ್ಲಿ ಅಬು ಹಾಮಿದ್ ಅಲ್ ಗಝ್ಝಾಲಿ ಯಾತ್ರೆಯನ್ನು ಅದರ ಸಾಂಕೇತಿಕ ಅರ್ಥಗಳಾಚೆ ಆಧ್ಯಾತ್ಮಿಕ ಸ್ಥಿತಿಗೆ ತಮ್ಮನ್ನು ತೆರೆದುಕೊಳ್ಳಲು ಲಭ್ಯವಾಗುವ ತಿರುವು ಎಂಬಂತೆ ಬಣ್ಣಿಸಿದರು. ಆರಂಭಿಕ ಸೂಫಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಅವರು ಯಾತ್ರೆಗೆ ಹೊಸತೊಂದು ಭಾಷ್ಯವನ್ನು ಬರೆದರು. ಗಝ್ಝಾಲಿ ಇಮಾಮರ ಪ್ರಕಾರ “ಪ್ರಯಾಣವು ಮನುಷ್ಯನನ್ನು ಅವನು ಕೊಡವಿಕೊಳ್ಳಲು ಬಯಸುವುದರಿಂದ ಮುಕ್ತಗೊಳಿಸುವ ಮತ್ತು ಸಾಧಿಸ ಹೊರಟ ಗುರಿಯೊಂದರ ದಾರಿಗಳನ್ನು ತೆರೆದಿಡುವುದಾಗಿದೆ. “ಈ ವ್ಯಾಖ್ಯಾನವು ಭೌತಿಕ ಆಯಾಮಗಳಿಗೆ ಮಾತ್ರ ಸೀಮಿತವಾಗಿರದೆ ಆಂತರಿಕ ಮತ್ತು ಬಾಹ್ಯ ಪ್ರಯಾಣಗಳ ಅರ್ಥಗಳನ್ನೂ ಸ್ಪುರಿಸುತ್ತದೆ.

ಇಮಾಮ್‌ ಗಝ್ಝಾಲಿಯವರ ಪ್ರಕಾರ,ಗುರಿಯನ್ನು ಸಾಧಿಸುವ ಮಾರ್ಗವಾಗಿರುವ ಯಾತ್ರೆಗಳು ಮೌಲ್ಯವನ್ನು ಹೊಂದಿರುತ್ತದೆ. ಈ ವ್ಯಾಖ್ಯಾನದಲ್ಲಿ ಅವರು ಎರಡು ಗುರಿಗಳನ್ನು ಮುಂದಿಡುತ್ತಾರೆ. ವ್ಯಕ್ತಿಯ ಯೋಗಕ್ಷೇಮಕ್ಕೆ ಪೂರಕವಲ್ಲದ ಮತ್ತು ಆನಂದ, ಸಮೃದ್ಧಿಗೆ ಹೊಂದಿಕೆಯಾಗದ ನೋವಿನ ಮತ್ತು ಕಠಿಣ ಸ್ಥಿತಿಯಿಂದ ತನ್ನನ್ನು ತಾನು ಮುಕ್ತಗೊಳಿಸುವುದು ಒಂದು ಗುರಿಯಾದರೆ, ಅಪೇಕ್ಷಣೀಯವಾದುದನ್ನು ತಲುಪುವುದು ಮತ್ತೊಂದು ಗುರಿಯಾಗಿದೆ, ಅಂದರೆ ಆಹ್ಲಾದಕರವಾದ, ಹೊಂದಿಕೊಳ್ಳುವ, ವ್ಯಕ್ತಿಯ ಯೋಗಕ್ಷೇಮಕ್ಕೆ ಅನುಗುಣವಾಗಿರುವ ಮತ್ತು ನೆಮ್ಮದಿಯನ್ನು ತರುವ ಸ್ಥಿತಿಯನ್ನು ತಲುಪುವುದು. ಈ ವ್ಯಾಖ್ಯಾನವು ಕುರ್‌ಆನಿನಲ್ಲಿರುವ ವಲಸೆಯ ಪರಿಕಲ್ಪನೆಗೆ ಮಾತ್ರವಲ್ಲದೆ, ವಿಮೋಚನೆ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗೂ ಸಂಬಂಧಿಸಿದೆ. ಏಕೆಂದರೆ ಈ ವಿಮೋಚನೆಯು ಅನಪೇಕ್ಷಿತ ಸನ್ನಿವೇಶಗಳಿಂದ ಅಪೇಕ್ಷಣೀಯವಾದುದ್ದಕ್ಕೆ ತಲುಪುವುದಾಗಿದೆ. ಇದು ಧರ್ಮದ ಮುಖ್ಯ ಪರಿಕಲ್ಪನೆಗಳಲ್ಲಿ ಒಂದಾಗಿದೆ. ಜ್ವಾನ್ ಹಿಕ್, ಧರ್ಮವು ಮನುಷ್ಯನಿಗೆ ಮೋಕ್ಷ ಮತ್ತು ವಿಮೋಚನೆಯಾಗಿದೆ ಎನ್ನುತ್ತಾನೆ. ಗಝ್ಝಾಲಿ ಇಮಾಮರರ ವ್ಯಾಖ್ಯಾನವನ್ನು ನಂತರದ ಶತಮಾನಗಳಲ್ಲಿ ಅನೇಕ ಸೂಫಿಗಳು ಬಳಸಿದ್ದಾರೆ. ಮುಹಮ್ಮದ್ ರಿಲಾ ಕುಂಶಾಹಿ ‘ಯಾತ್ರೆ’ಯನ್ನು ಒಬ್ಬರು ತಾಯ್ನಾಡಿನಿಂದ ನಿರ್ಗಮಿಸುವುದು ಅಥವಾ ವಿವಿಧ ಹಂತಗಳನ್ನು ಹಾದುಹೋಗುವ ಮೂಲಕ ಗುರಿಗಳ ಕಡೆಗೆ ಸಾಗುವುದು ಎಂದು ಹೇಳಿದರು. ಒಬ್ಬರು ತಮ್ಮ ಹುಟ್ಟೂರಿನಿಂದ ಗಮ್ಯಸ್ಥಾನವನ್ನು ಹರಸಿ ಹೊರಡುವ ಪ್ರಯಾಣವೆಂದು ಸಯ್ಯದ್ ಜಲಾಲುದ್ದೀನ್ ವ್ಯಾಖ್ಯಾನಿಸಿದರು.

‘ಯಾತ್ರೆ’ಗೆ ಸಮಗ್ರವಾದ ವ್ಯಾಖ್ಯಾನವನ್ನು ನೀಡಿದ ಬಳಿಕ, ಗಝ್ಝಾಲಿ ಇಮಾಮರರು ಅದನ್ನು ಎರಡಾಗಿ ವಿಂಗಡಿಸುತ್ತಾರೆ. ಅವುಗಳಲ್ಲಿ ಒಂದು ವಾಸಸ್ಥಾನದಿಂದ ಗಮ್ಯದೆಡೆಗೆ ಹೊರಡುವ ಭೌತಿಕ ಪ್ರಯಾಣ ಮತ್ತು ಇನ್ನೊಂದು ಆಧ್ಯಾತ್ಮಿಕವಾದ ಆಂತರಿಕ ಹೃದಯದ ಪ್ರಯಾಣ. ಆತ್ಮವು ಅತ್ಯಂತ ಕೆಳಮಟ್ಟದ ಸ್ಥಿತಿಯಿಂದ ಅತ್ಯುನ್ನತ ಸ್ಥಿತಿಗೆ ಸಾಗುವ ಸಂಚಾರವಾಗಿದೆ. ಅವರ ಪ್ರಕಾರ, ಬಾಹ್ಯ ಸಂಚಾರಕ್ಕಿಂತಲೂ ಆಂತರಿಕವಾದ ಪ್ರಯಾಣ ಶ್ರೇಷ್ಠವಾದದ್ದಾಗಿದೆ. ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭೌತಿಕ ಪ್ರಯಾಣವನ್ನು ಮಾಡುವವನು ಮತ್ತು ಹೃದಯದ ಮಾರ್ಗದ ಮೂಲಕ ಆಂತರಿಕವಾಗಿ ಪ್ರಯಾಣಿಸುವ ಇಬ್ಬರನ್ನೂ ಯಾತ್ರಿಕರಂತೆ ಇಮಾಮರು ಕಾಣುತ್ತಾರೆ. ಒಬ್ಬನು,ತೀರ್ಥಯಾತ್ರೆಯ(ಹಜ್ಜ್) ಬಳಿಕ ಮನೆಗೆ ಮರಳುವವನು ಮತ್ತು ಇನ್ನೋರ್ವನು ಬಳಿಕವೂ ಆ ಯಾತ್ರೆಯ ಫಲಶ್ರುತಿಯಂತೆ ಆಧ್ಯಾತ್ಮಿಕ ರಹಸ್ಯಗಳಿಗೆ ತೆರೆದುಕೊಳ್ಳುವವನಾಗಿದ್ದಾನೆ. ಯಾತ್ರೆಯು ಮನುಷ್ಯನಿಗೆ ಅಸಂಖ್ಯಾತ ಜನರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಮತ್ತು ವಿವಿಧ ಪ್ರಪಂಚಗಳಿಗೆ ಪ್ರಯಾಣಿಸುವ ಅವಕಾಶವನ್ನು ನೀಡುತ್ತದೆ. ಈ ಪ್ರಯಾಣವು ಹೃದಯ ವೈಶಾಲ್ಯತೆಗೆ ಪುಷ್ಟಿ ನೀಡುತ್ತದೆ. ಯಾತ್ರೆಗಳಿಗೆ ಭಿನ್ನ ಅವಕಾಶಗಳಿರುವ ಮನುಷ್ಯನ ಬದುಕು ಈ ಕಾರಣಕ್ಕೆ ಅನನ್ಯವೂ ಗೌರವಯುತವೂ ಆಗಿರುತ್ತದೆ.

ಅಕ್ಬರಿಯನ್ ಯಾತ್ರೆಗಳು

ಶೈಕ್ ಇಬ್ನು ಅರಬಿ (ರ) ಯಾತ್ರೆಯನ್ನು ದೇವರೆಡೆಗೆ ಸೇರುವ ಏಕಾಗ್ರತೆಯಾಗಿದೆ ಎಂದು ಪ್ರಸ್ತಾಪಿಸಿದರು. ಮಾನವನು ಸರಿಯಾದ ವಾಸ್ತವತೆಯ ಕಡೆಗೆ (ಅಲ್ ಹಕ್ಕ್/ದೇವರು) ಚಲಿಸುತ್ತಿದ್ದಾನೆ ಮತ್ತು ನಿಜದಲ್ಲಿ ಮಾನವ ಅಸ್ಥಿತ್ವದ ಪ್ರತಿಯೊಂದು ಕ್ಷಣವೂ ದೇವನ ಮಾರ್ಗಕ್ಕೆ ಮರಳುವುದೇ ಆಗಿದೆ ಎಂದು ವಿವರಿಸಿದರು. ಅವರ ಪ್ರಕಾರ ದೇವರಿಂದ ಮತ್ತು ತನ್ನತನದಿಂದ ಕಳಚಿಕೊಳ್ಳಲು ಕೈಗೊಳ್ಳುವ ಯಾತ್ರೆಗಳ‌ ಆತ್ಯಂತಿಕ ಗುರಿ ದೇವರನ್ನು ಸೇರುವುದೇ ಆಗಿದೆ.

ಕುರ್ಆನಿನಲ್ಲಿ ಪರಾಮರ್ಶಿಸಲಾದ ಯಾತ್ರೆಗಳ ಕುರಿತ ಸುಮಾರು ಹದಿನಾರು ಉಲ್ಲೇಖಗಳು, ಆಧ್ಯಾತ್ಮಿಕ ಯಾತ್ರೆಯ ನೆಲೆಗಟ್ಟಿನಲ್ಲಿ ಪಡೆದುಕೊಳ್ಳುವ ಸಾಕ್ಷಾತ್ಕಾರ ಮಾರ್ಗಗಳಾಗಿದೆ ಎಂದು ಇಬ್ನು ಅರಬಿ ಹೇಳುತ್ತಾರೆ. ಅವರು ಮುಖ್ಯವಾಗಿ ಯಾತ್ರೆಯನ್ನು
ವಾಸ್ತವದಿಂದ
ವಾಸ್ತವದ ಕಡೆಗೆ
ವಾಸ್ತವದ ಮೂಲಕ
ಎಂದು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ. ಎಲ್ಲಾ ಯಾತ್ರೆಗಳು ಮೂಲದಲ್ಲಿ ಸಮಸ್ಯೆಗಳಿಂದ ಕೂಡಿರುತ್ತದಾದರೂ ಆಧ್ಯಾತ್ಮಿಕ ಪ್ರಮಾಣಗಳಲ್ಲಿ ಎದುರಾಗುವ ಸಮಸ್ಯೆಗಳಿಂದ ಸೃಷ್ಟಿಕರ್ತನು ಯಾತ್ರಿಕನನ್ನು ರಕ್ಷಿಸುತ್ತಾನೆ ಎಂದು ಇವರು ಹೇಳಿದರು. ಕೇವಲ ತೀರ್ಥಯಾತ್ರೆಗಳಲ್ಲದೆ ವಾಸ್ತವದಿಂದ, ವಾಸ್ತವದ ಮೂಲಕ, ವಾಸ್ತವದ ಕಡೆಗೆ ತಲುಪುವ ಎಲ್ಲಾ ಪ್ರಯಾಣಗಳಲ್ಲಿಯೂ ಈ ರಕ್ಷಣೆ ಇರುತ್ತದೆಂದು ಇಬ್ನು ಅರಬಿ ಸೇರಿಸಿದರು.

ಸೂಫಿ ಪಂಥಗಳಲ್ಲಿ ತಮ್ಮ ಪ್ರೀತಿಪಾತ್ರರ (ದೇವರ)ಕಡೆಗೆ ನಡೆಸುವ ಸುದೀರ್ಘ ಪ್ರಯಾಣದಲ್ಲಿ, ಅವರು ಆತ್ಮದ ಸದ್ಗುಣಗಳು, ಚಾರಿತ್ಯ್ರ ಮತ್ತು ಪರಿಪೂರ್ಣತೆಯನ್ನು ಪಡೆದುಕೊಂಡು ಹಲವು ಹಂತಗಳನ್ನು ದಾಟಿ ತಿಳಿಗೊಳ್ಳುತ್ತಾ ಸಾಗುತ್ತಾರೆ. ಈ ನಿಟ್ಟಿನಲ್ಲಿರುವ ಇಬ್ನು ಅರಬಿಯ ಯಾತ್ರೆಯ ಕುರಿತಿರುವ ವ್ಯಾಖ್ಯಾನಗಳು ಮುಂದಕ್ಕೆ ವಿವಿಧ ಅಧ್ಯಯನಗಳಿಗೆ ಅವಕಾಶವನ್ನು ಮಾಡಿಕೊಟ್ಟಿತು. ಇವುಗಳ ಆಧಾರದಲ್ಲಿ ಯಾತ್ರೆಯನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಯಿತು. ಈ ನಾಲ್ಕು ಯಾತ್ರೆಯ ಪರಿಕಲ್ಪನೆಯನ್ನು (,ಅಲ್ – ಅಸ್ಫರ್ ಅಲ್ – ಅರ್ಬ) ಅಫೀಫುದ್ದೀನ್ ಅಲ್ ತಿಲಿಮ್ಸಾನಿ ಅವರು ತಮ್ಮ ಗ್ರಂಥವಾದ ಮನಾಸಿಲ್ ಅಲ್ – ಸೌರೀನ್‌ನಲ್ಲಿ ಉಲ್ಲೇಖಿಸಿರುವುದು ಕಾಣಬಹುದು. ಅವು ಈ ಕೆಳಗಿನಂತಿವೆ; ದೇವರೆಡೆಗಿನ ಯಾತ್ರೆ, ದೇವರೊಂದಿಗಿನ ಯಾತ್ರೆ, ಸೃಷ್ಟಿಗಳ ಮೂಲಕ ದೇವರೆಡೆಗಿನ ಯಾತ್ರೆ, ವಾಸ್ತವದೆಡೆಗೆ ವಾಸ್ತವದ ಮೂಲಕವಿರುವ ಯಾತ್ರೆ. ಇಬ್ನು ಅರಬಿಯ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡು ಅನೇಕ‌ ವಿದ್ವಾಂಸರು ಆಧ್ಯಾತ್ಮಿಕ ಯಾತ್ರೆಗಳನ್ನು ವಿವರಿಸಿದರು. ದಾವೂದ್ ಅಲ್ – ಖೈಸರಿ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ರೂಪಾಂತರಗಳನ್ನು ವಿವರಿಸಿ ಅವುಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತಗೊಳಿಸಿದರು:

೧.ಸೃಷ್ಟಿಗಳ ಮೂಲಕ ವಾಸ್ತವಿಕತೆಯೆಡೆಗಿನ ಯಾತ್ರೆ.
೨.ವಾಸ್ತವದೊಂದಿಗೆ ವಾಸ್ತವಿಕತೆಯೆಡೆಗಿನ ಯಾತ್ರೆ.
೩.ವಾಸ್ತವದಿಂದ,ವಾಸ್ತವದ ಮೂಲಕ‌ ಸೃಷ್ಟಿಗಳೆಡೆಗಿನ ಯಾತ್ರೆ.
೪.ವಾಸ್ತವಿಕತೆಯಿಂದ ಸೃಪ್ಟಿಗಳ ಕಡೆಗೆ ಯಾತ್ರೆ.

ಹೀಗೆ ಯಾತ್ರೆ, ಸಂಚಾರ, ಪ್ರಯಾಣ ಎಂಬುವುದನ್ನು ಭಿನ್ನ ಆಯಾಮಗಳಲ್ಲಿ ಸೂಫಿಗಳು ಕಂಡುಕೊಂಡರು. ಸೂಫಿ ಪಂಥಗಳು ಯಾತ್ರೆಯನ್ನು ಮೋಕ್ಷದ ಕೀಲಿಕೈಯಾಗಿ ಕಂಡು ಆ ಮೂಲಕ ಆಧ್ಯಾತ್ಮಿಕ ಉನ್ನತಿಯನ್ನು ಪಡೆದುಕೊಂಡರು.

ಮೂಲ ಲೇಖಕ: ಹಸನ್‌ ಆರಿಫ್‌
ಕನ್ನಡಕ್ಕೆ: ಝುಬೈರ್‌ ಅಹ್ಮದ್‌ ಪರಪ್ಪು

ಉರ್ದು


ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು
ಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ , ಗಾಲಿಬ್‌ನ ಗೆಳತಿ

ದಖ್ಖನಿನ ವಲಿಯು ಕೈ ತುತ್ತು ತಿನ್ನಿಸಿದ
ಸೌದಾನ ಕವಿತೆಗಳು ಹೆಚ್ಚಿಸಿದೆ ಅಂದ
ಮೀರ್ ನ ಮಹಿಮೆ ನಡೆಯಲು ಕಲಿತೆ
ದಾಗ್ ನ ಅಂಗಳದಲ್ಲಿ ಅರಳಿದ ಹೂ ನಾನು
ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು

ಗಾಲಿಬ್ ಉನ್ನತ ಶಿಖರಕ್ಕೆ ತಲುಪಿಸಿದ
ಹಾಲಿಯು ಸಭ್ಯತೆಯ ಪಾಠ ನೆನಪಿಸಿದ
ಇಕ್ಬಾಲ್ ನ್ಯಾಯದ ಕನ್ನಡಿ ತೋರಿದ
ಮೋಮಿನ್ ಕನಸಿನ ಅರಮನೆಗೆ ಕೊಂಡೊಯ್ದ
ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು

ಜೌಖರ ಬೆಂಬಲ ದೊರೆಯಿತು ಎನಗೆ
ಚಕ್ಬ್ ಸ್ತರ ಪ್ರೀತಿಯ ಕನಸುಗಳು ಜೊತೆಗೆ
ಫಾನಿಯು ಅಲಂಕರಿಸಿದ ರೆಪ್ಪೆ ತಾರೆಗಳಿಂದ
ಅಕ್ಬರ್ ತುಂಬಿದ ರಂಗನು ಕೈಗೆ
ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು

ಏಕೆ ಗುರುತಿಸುವಿರಿ? ಧರ್ಮದ ಹೆಸರಿನಿಂದ ನನ್ನ
ಮುಸಲ್ಮಾನ ಅಂದಿಲ್ಲ ನಾನು ನನ್ನ ಹೆಸರು
ಸಂತಸದ ಕ್ಷಣಗಳು ಕಳೆದಿರುವ ಅಂದು
ಒಬ್ಬೊಂಟಿ ನಾನೀಗ
ನನ್ನದೇ ನೆಲದಲ್ಲಿ ಇಂದು

ನನ್ನ ಹೆಸರು ಉರ್ದು, ನಾನು ಖುಸ್ರೋನ ಒಗಟು
ಮೀರ್ ನ ಗುಟ್ಟು ಬಚ್ಚಿಟ್ಟ ವಿಶ್ವಾಸಿ, ಗಾಲಿಬ್‌ನ ಗೆಳತಿ

ಉರ್ದು: ಇಕ್ಬಾಲ್ ಅಶ್ಹಾರ್
ಕನ್ನಡಕ್ಕೆ: ಸೈಯದ್ ಗೈಬ್ ಷಾ

ವಂಶಾವಳಿಯ ಜಾಡು ಹುಡುಕುತ್ತಾ ಗೀಲಾನ್ ಗ್ರಾಮದ ಸಂದರ್ಶನ

ಈ ಕಥೆಯು ಕ್ರಿ.ಶ. 1095 ರಲ್ಲಿ ಪ್ರಾರಂಭವಾಗುತ್ತದೆ. ಅಂದು ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಸಂತರೂ ಆದ ಶೈಖ್ ಅಬ್ದುಲ್ ಖಾದಿರ್ ಅಲ್ ಗೀಲಾನಿ (ಜೀಲಾನಿ) ಅವರು ಪರ್ಷಿಯಾದ ಗೀಲಾನ್ ಪ್ರಾಂತ್ಯದ ತಮ್ಮ ತವರೂರನ್ನು ತೊರೆದು ವಿದ್ಯಾರ್ಜನೆಗಾಗಿ ಬಗ್ದಾದ್ ಪಟ್ಟಣಕ್ಕೆ ತೆರಳಿದ್ದರು.

ಶೈಖ್ ಗೀಲಾನಿ ಅವರು ‘ಜಂಗಿದೋಸ್ತ್’ ಎಂದು ನಾಮಾಂಕಿತರಾಗಿದ್ದ ಅಬೂ ಸ್ವಾಲಿಹ್ ಮೂಸ ಅಲ್ ಹಸನಿ ಎಂಬ ಸಾತ್ವಿಕ ವ್ಯಕ್ತಿಯ ಪುತ್ರ. ಗೀಲಾನಿ ಅವರ ತಾಯಿ ಬೀಬಿ ನಿಸಾ/ ಉಮ್ಮುಲ್ ಖೈರ್ ಫಾತಿಮ ಅವರು ಪ್ರವಾದಿ ಪರಂಪರೆಯಲ್ಲಿ ಜನಿಸಿದ ಸಾತ್ವಿಕ ವ್ಯಕ್ತಿಯಾಗಿದ್ದರು. ಸೆಲ್ಜುಕ್ ಸುಲ್ತಾನರ ಆಡಳಿತದ ಅವಧಿಯಲ್ಲಿ ಜ್ಞಾನದ ನಗರವಾಗಿದ್ದ ಬಗ್ದಾದ್ ಪಟ್ಟಣದಲ್ಲಿ ಶೈಖ್ ಗೀಲಾನಿ ಅವರು ತಂಗುತ್ತಾರೆ. ಅವರು ‘ಖಾದಿರಿ’ ಸೂಫಿ ತ್ವರೀಖತಿನ ಸ್ಥಾಪಕರು. ಇಂದಿಗೂ ಲಕ್ಷಾಂತರ ಮುಸ್ಲಿಮರು ಅವರನ್ನು ಸ್ಮರಿಸುತ್ತಲೇ ಇದ್ದಾರೆ.

ಶೈಖ್ ಗೀಲಾನಿ ಅವರಿಗೆ ಅನೇಕ ಗಂಡು ಮಕ್ಕಳಿದ್ದರು. ಅವರು ತಮ್ಮ ಜ್ಞಾನವನ್ನು ಪಸರಿಸಲು ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದರು. ಹೋದಲ್ಲೆಲ್ಲ ಅವರು ಗೌರವಾನ್ವಿತ ಹಾಗೂ ಪ್ರಭಾವಿ ವ್ಯಕ್ತಿಗಳಾಗಿ‌ ಗುರುತಿಸಲ್ಪಟ್ಟರು.

ನನ್ನ ಪೂರ್ವಿಕರಾದ ಮೂಸಾ ಪಾಕ್ ಶಹೀದ್ ಅವರು ಗೀಲಾನಿ ಅವರ ಮಗನ ವಂಶ ಪರಂಪರೆಯವರು. ಸಿರಿಯಾ, ಇರಾನ್, ಆಫ್ಘಾನ್ ಮೂಲಕ ದೀರ್ಘ ಪ್ರಯಾಣ ನಡೆಸಿ ಷಹಜಹಾನರ ಕಾಲದಲ್ಲಿ ಅವರು ಅಖಂಡ ಭಾರತದ ಮುಲ್ತಾನ್ ತಲುಪುತ್ತಾರೆ. ನನ್ನ ತಂದೆಯವರ ಕುಟುಂಬವು ಇಂದಿಗೂ ಇಂದಿನ ಪಾಕಿಸ್ತಾನದಲ್ಲಿ ನೆಲೆಸಿದೆ. ಮಧ್ಯ ಪ್ರಾಚ್ಯ ಮತ್ತು ಪರ್ಷಿಯಕ್ಕೆ ಇರುವ ನಮ್ಮ ಕುಟುಂಬದ ಕೊಂಡಿ ಎಲ್ಲೋ ಕಳಚಿ ಹೋಗಿತ್ತು.

ಈ ಮುರಿದು ಹೋದ ವಂಶಾವಳಿಯ ಜಾಡನ್ನು ಅರಸುತ್ತಾ ನಾನು ಪ್ರಯಾಣ ಬೆಳೆಸಿದೆ. ನನ್ನ ಗಂಡ ಅಬ್ದುಲ್ ಹಾದಿ ಅವರೊಂದಿಗೆ ನಾನು ಇರಾನ್‌ಗೆ ತೆರಳಿದೆನು. ಶೈಖ್ ಗೀಲಾನಿ ಅವರ ತಾಯಂದಿರ ಸಮಾಧಿ ದರ್ಶನಕ್ಕಾಗಿ ನಾವು ನಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟೆವು.

ಗೀಲಾನ್ ಎಂಬುದು ವಾಯುವ್ಯ ಇರಾನಿನ ಒಂದು ಗ್ರಾಮ. ಉತ್ತರ ದಿಕ್ಕಿನಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ಅದು ವಿಭಿನ್ನವಾದ ಪಾಕ ಪದ್ಧತಿ, ಸಂಸ್ಕೃತಿ, ಮಳೆ ಮತ್ತು ಆಶ್ಚರ್ಯಕರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಗ್ರಾಮ. ಗೀಲಾನಿನ ಭೂಮಿಯು ಸೊಂಪಾಗಿ ಹಸುರಾಗಿ ಭಾರಿ ಫಲವತ್ತತೆಯಿಂದ ಕೂಡಿದ ಭೂಮಿ. ಪರ್ವತಗಳಿಂದ ಆವೃತವಾದ ಈ ಪ್ರದೇಶವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನಮ್ಮ ಗೈಡ್ ಆಗಿದ್ದ ನಕ್ಷಬಂದಿ ಅವರು ಆಸ್ಟ್ರೇಲಿಯನ್ ವಿವಿಯಲ್ಲಿದ್ದ ನನ್ನ ಸಹಪಾಠಿಯ ತಂದೆ. ಕಾಕತಾಳೀಯ ಎಂಬಂತೆ ಅವರು ಕೂಡ ನಮ್ಮಂತೆಯೇ ರಜಾದಿನಗಳನ್ನು ಕಳೆಯಲು ಅಲ್ಲಿಗೆ ಬಂದಿದ್ದರು. ನಮ್ಮ ಪ್ರಯಾಣದ ಉದ್ದಕ್ಕೂ ಅವರು ನಮ್ಮ ಜೊತೆಗಿದ್ದರು. ನಾವು ಮುಂಜಾನೆ ಬೇಗನೇ ಎದ್ದೆವು. ನಕ್ಷಬಂದಿ ಅವರು ನಾವು ತಂಗಿದ್ದ ಹೋಟೆಲ್ ಬಳಿ ಬಂದರು. ಗೀಲಾನ್ ಸಮೀಪದ ಮೌಸೂಲ ಎಂಬ ಪ್ರದೇಶಕ್ಕೆ ನಮ್ಮ ಮೊದಲ ಭೇಟಿ ನೀಡಲು ಹೊರಟೆವು.

ನಗರದಿಂದ ಹೊರಹೋಗುತ್ತಿದ್ದಂತೆ ಪ್ರಾಚೀನವಾದ ನೈಸರ್ಗಿಕ ಸೌಂದರ್ಯದಿಂದ ಕೂಡಿದ ದಾರಿಯಲ್ಲಿ ನಾವು ಹೊರಟೆವು. ನಮ್ಮ ಜೀವನದಲ್ಲಿ ನಾವು ನೋಡಿದ ಸ್ವರ್ಗೀಯ ಭೂಮಿ ಎಂದು ನನ್ನ ಹಾಗೆ ಅಬ್ದುಲ್ ಹಾದಿ ಅವರಿಗೂ ಅನ್ನಿಸಿತು. ನೀಲಾಕಾಶವು ಸುತ್ತುವರಿದು, ಹಚ್ಚಹಸುರಿನಿಂದ ಹೊದ್ದ ರಸ್ತೆಯ ಇಕ್ಕೆಲಗಳು ಕಂಗೊಳಿಸುತ್ತಿದ್ದವು. ಗಗನಚುಂಬಿ ಬೆಟ್ಟಗಳು, ಅದರ ಮೇಲಿದ್ದ ಮಂಜಿನ ಹನಿಗಳು ನೋಡುಗರನ್ನು ಬೆರಗುಗೊಳಿಸುವಂತಿತ್ತು.

ಗಿರಿ ಶಿಖರಗಳಿಂದಾವೃತವಾದ ಸುಮಾರು 1000 ವರ್ಷಗಳ ಇತಿಹಾಸವಿರುವ ಮೌಸೂಲ ನಗರವು ಅಸಾಮಾನ್ಯ ರೀತಿಯ ಕಟ್ಟಡ ನಿರ್ಮಾಣದಿಂದ ಬಹು ಸುಂದರವಾಗಿ ಕಣ್ಣಿಗೆ ಕಾಣುತ್ತಿತ್ತು. ಅಷ್ಟೇ ಆಕರ್ಷಣೀಯ ಕೂಡ ಹೌದು. ಒಂದು ಮನೆಯ ಮೇಲೆ ಇನ್ನೊಂದು ಮನೆ ಇದೆ. ಒಂದು ಮನೆಯ ಅಂಗಳವು ಇನ್ನೊಂದು ಮನೆಯ ಛಾವಣಿಯಾಗಿದೆ. ಬಣ್ಣಬಣ್ಣದ ಮತ್ತು ಗುಮ್ಮಟಗಳಿಂದ ನಿರ್ಮಿಸಲ್ಪಟ್ಟ ಮಸೀದಿಯು ಕೂಡ ಕಣ್ಣುಗಳನ್ನು ಆಕರ್ಷಿಸುತ್ತಿದ್ದವು.

ನಾವು ನಗರದ ಹಾದಿ ಬೀದಿಗಳಲ್ಲಿ ನಡೆದೆವು. ಯಾತ್ರಿಕರಿಂದ ತುಂಬಿದ್ದ‌ ಚಹಾದಂಗಡಿ, ಕೆಫೆಗಳನ್ನು ದಾಟುತ್ತಾ ನಡೆದೆವು. ಅಲ್ಲಿ ಯಾತ್ರಿಕರು ಕುಳಿತು ಹುಕ್ಕ (qalian) ಸೇದುತ್ತಾ ಚಹಾದ ರುಚಿಯನ್ನು ಸವಿಯುತ್ತಿದ್ದರು.

ನಕ್ಷಬಂದಿ ಅವರು ಆ ನಗರದ‌ ಕುರಿತು ವಿವರಿಸಿದರು. ಅವರು ಬೆಳೆದ ಇರಾನಿನ ಗ್ರಾಮದ ಬಗ್ಗೆ ಮಾಹಿತಿ ಹಂಚಿದರು. ಇರಾನ್- ಇರಾಕ್ ಯುದ್ಧದ ಬಗ್ಗೆಯೂ ಮಾತನಾಡಿದರು. ಸೂಫಿ ತ್ವರೀಖತ್ ಗಳ ಬಗ್ಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ನೀಡಿದರು. ನನ್ನ ಪತಿ ಅಬ್ದುಲ್ ಹಾದಿ ಅವರು ಕೂಡ ಅವರ ತ್ವರೀಖತ್‌ನ ಹಿಂಬಾಲಕರಾಗಿದ್ದಿದು ವಿಶೇಷವಾಗಿತ್ತು. ಅಬ್ದುಲ್ ಹಾದಿಯವರಿಗೆ ನಕ್ಷಬಂದಿ ಅವರ ಮಾವ ಶೈಖ್ ಉಸ್ಮಾನ್ ಸಿರಾಜುದ್ದೀನ್ ಅವರು ಪರಿಚಿತರು. ಅವರ ಕುಲೀನ ಮನೆತನದ ಚರಿತ್ರೆ, ನಕ್ಷಬಂದಿ ಅವರ ಬಾಲ್ಯ, ತ್ವರೀಖತ್‌‌ ದೀಕ್ಷೆ, ಹಾಗೂ ಅಗಲಿದ ಅವರ ತಾಯಿಯ ಸ್ಪೂರ್ತಿದಾಯಕ ಚರಿತ್ರೆಗಳನ್ನು ಕೇಳುವ ಭಾಗ್ಯ ನಮ್ಮದಾಯಿತು.

ಹಳ್ಳಿಗಳ ಮೂಲಕ ಮೆಲ್ಲನೆ ಸಾಗುತ್ತಾ ತೋಟಗಳು, ಕೆಂಪು ಛಾವಣಿಯ ಮನೆಗಳನ್ನು ಹಾದು ಶೈಖ್ ಅಬ್ದುಲ್ ಖಾದಿರ್ ಗೀಲಾನಿ ಅವರ ತಾಯಿ ಬೀಬಿ ನಿಸಾ ಅವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಸೌಮ್- ಎ- ಸರಾವನ್ನು ತಲುಪಿದೆವು. ಸ್ಥಳೀಯ ನಿವಾಸಿಗಳ ಬಳಿ ದಾರಿ ಅನ್ವೇಷಿಸಿ ಅಲ್ಲಿಗೆ ತಲುಪಿದೆವು.

ನಾನು ಮಾಡುತ್ತಿದ್ದ ಕೆಲಸದ ಮಹತ್ವವು ನನಗ ತಕ್ಷಣ ಅರಿವಾಗಲಿಲ್ಲ. ಮಖಾಮಿನ ವೈಢೂರ್ಯ ಖಚಿತ ಗೇಟ್ ಮೂಲಕ ಒಳ ಹೊಕ್ಕೆವು. ಗ್ರಾಮದ ಇತರ ಮನೆಗಳಂತೆ ಇರುವ ಒಂದು ಮನೆ. ಅದರ ಒಂದು ಕೋಣೆಯಲ್ಲಿ ಸಮಾಧಿ ಇದೆ. ಸಮಾಧಿಯ ಸುತ್ತಲೂ ಹಿರಿಯ ಹೆಂಗಸರು ಕುಳಿತಿದ್ದರು. ನಾನು ಒಳ ಪ್ರವೇಶಿಸುತ್ತಿದ್ದಂತೆ ಅವರು ಉಚ್ಛರಿಸುತ್ತಿದ್ದ ದ್ಸಿಕ್ರ್‌ನ ದನಿ ಏರಿತು. ಈ ಆಗಂತುಕರು ಯಾರೆಂಬ ನಿಟ್ಟಿನಲ್ಲಿ ಅವರು ದಿಟ್ಟಿಸಿ ನೋಡುತ್ತಿದ್ದ ಕಾರಣ ನಾನು ಸ್ವಲ್ಪ ವಿಚಲಿತಳಾದೆ. ಇಂತಹ ಒಂದುಗೂಡುವಿಕೆ ಅವರ ಮಖಾಮಿನಲ್ಲಿ ಸಾಮಾನ್ಯವಾಗಿತ್ತು.

ಅದಾಗ್ಯೂ ಆ ಮಹಿಳೆಯರು ಏನು ಹಾಡುತ್ತಿದ್ದರು ಎಂದು ನನಗೆ ಅರ್ಥವಾಗಲಿಲ್ಲ. ಆದರೂ ನಾನು ನನ್ನ ಹೃದಯಾಂತರಾಳದಿಂದ ಪ್ರಾರ್ಥಿಸಿದೆನು.ಪುರುಷರು ಹೊರಗಡೆ ನಿಂತಿದ್ದರು. ಮಹಿಳೆಯರು ಹಾಡುವುದನ್ನು ನಿಲ್ಲಿಸಿದಾಗ ಪುರುಷರು ಝಿಯಾರತ್‌ಗೆ ಒಳ ಬಂದರು.

ಬೀಬಿ ನಿಸಾ ಅವರ ಸಮಾಧಿಯ ಸ್ವರ್ಣ ಕವಾಟದ ಒಳ ಪ್ರವೇಶಿಸುತ್ತಿದ್ದಂತೆ ಆ ಸ್ಥಳದಲ್ಲಿ ಅವರಿಗೆ ಆದ ಬದಲಾವಣೆ ಬಗ್ಗೆ ಆಲೋಚಿಸಿದೆ. ಕೆಲ ಶತಮಾನಗಳ ಹಿಂದೆ ಆ ಸಮಾಧಿ ಇರುವ ಪ್ರದೇಶ ಹೇಗಿತ್ತೇನೋ? ಅವರು ಯಾವ ರೀತಿಯ ವ್ಯಕ್ತಿಯಾಗಿದ್ದರು? ಪರಿಚಿತರಲ್ಲದ ಕುಟುಂಬಿಕರು ಆಕೆಯನ್ನು ಸಂದರ್ಶಿಸಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಹೀಗೆಲ್ಲಾ ಯೋಚಿಸುತ್ತಲೇ ಇದ್ದೆ.

ಕೊಂಡಿ ಕಳಚಿದ ನನ್ನ ವಂಶಾವಳಿಯ ಭಾಗ ನನಗೆ ಮರಳಿ ದೊರೆತಂತೆ ಭಾಸವಾಯಿತು. ಪ್ರಪಂಚದಲ್ಲಿ ಯಾವುದೇ ತಾಯಿಯು ಮಗಳನ್ನು ಕಂಡಾಗ ಸ್ವೀಕರಿಸುವಂತೆ ನಿಶ್ಶರ್ತವಾಗಿ ಅವರು ನನ್ನನ್ನು ಸ್ವೀಕರಿಸಬಹುದು ಎಂಬುದು ನನ್ನ ಆಶಾವಾದ.

ಬೀಬಿ ನಿಸಾ ಅವರು ಭಕ್ತೆಯಾಗಿದ್ದರು. ಇಳಿವಯಸ್ಸಿನಲ್ಲೂ ಅವರು ತಮ್ಮ ಪುತ್ರ ಗೀಲಾನಿ ಅವರಿಗೆ ವಿದ್ಯಾರ್ಜನೆಗೈಯ್ಯಲು ಬಾಗ್ದಾದ್‌ಗೆ ತೆರಳಲು ಅನುಮತಿ ನೀಡಿದ್ದರು. ಮುಂದಿನ ದಿನಗಳಲ್ಲಿ ತನ್ನ ಮಗನನ್ನು ಕಾಣಲು ಸಾಧ್ಯವಾಗದು ಎಂದು ಖಚಿತವಾಗಿದ್ದರಿಂದ ತಮ್ಮ ಮಗನನ್ನು ಬಳಿಗೆ ಕರೆದು “ಮಗನೇ, ನಾನು ನಿನಗೊಂದು ಸಲಹೆ ನೀಡುವೆ. ಜೀವನದಲ್ಲಿ ಒಮ್ಮೆಯೂ ಸುಳ್ಳು ಹೇಳಬಾರದು” ಎಂದು ಬುದ್ಧಿ ಹೇಳುತ್ತಾರೆ. ಬಾಲಕ ಗೀಲಾನಿ ಅವರು “ಅಮ್ಮ, ನಿಮ್ಮ ಸಲಹೆಗೆ ವಿರುದ್ಧವಾಗಿ ಯಾವತ್ತೂ ನಡೆಯಲಾರೆ” ಎಂದು ಮಾತು ಕೊಟ್ಟರು. ಬೀಬಿ ನಿಸಾ ಅವರು ಮಗನನ್ನು ತಬ್ಬಿ ಹಿಡಿದು “ಅಲ್ಲಾಹನ ರಕ್ಷೆ ಸದಾ ನಿನ್ನ‌ ಮೇಲಿರಲಿ” ಎಂದು ಪ್ರಾರ್ಥಿಸಿ ಬೀಳ್ಕೊಟ್ಟರು.

ಬೀಬಿ ನಿಸಾ ಅವರ ಸಮಾಧಿಯಿಂದ ನಾವು ಹೊರಟು, ನಕ್ಷಬಂದಿ ಅವರ ಸಂಬಂಧಿಕರ ಮನೆಗೆ ಊಟಕ್ಕೆಂದು ಹೋದೆವು. ಊಟದ ನಂತರ ಶೈಖ್ ಗೀಲಾನಿ ಅವರ ತಂದೆ ಶೈಖ್ ಅಬೂಸ್ವಾಲಿಹ್ ಅವರ ಸಮಾಧಿಗೆ ಭೇಟಿ ನೀಡುವ ಬಗ್ಗೆ ಆಲೋಚಿಸಿದೆವು. ಅಲ್ಲಿಗೆ ಹೋಗಬೇಕಾದ ದಾರಿ ದುರ್ಗಮವಾಗಿದೆ , ಬೆಟ್ಟ ಗುಡ್ಡಗಳನ್ನು ದಾಟಿ ಕೆಟ್ಟ ಬೆಳಕಿನ ಮೂಲಕ‌ ಸಾಗಬೇಕಾದ ಪರಿಸ್ಥಿತಿ ಇದೆ ಎಂದು ಆ ಮನೆಯವರು ಹೇಳಿದರು. ಅಲ್ಲಿಗೆ ಭೇಟಿ ನೀಡುವುದು ಕಷ್ಟ ಸಾಧ್ಯವಾಗಿದ್ದರಿಂದ ನಾವು ಮರಳಿ ‘ರಶ್ಟ್ (Rasht)ನ‌ ನಮ್ಮ ರೂಮ್‌ಗೆ ಮರಳಿದೆವು.

ನಮಗೆ ನಿರಾಶೆಯಾಗಿತ್ತು. ನಕ್ಷಬಂದಿ ಅವರಿಗೆ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ ಎಂದು ಭಾವಿಸಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗದಿರಲು ತೀರ್ಮಾನಿಸಿದೆವು. ಗೀಲಾನ್ ಗ್ರಾಮದ ಯಾತ್ರೆಯಲ್ಲಿ ನಮ್ಮ ಪ್ರಧಾನ ಗಮ್ಯ ಸ್ಥಾನದ ಸಂದರ್ಶನ ಸಾಧ್ಯವಾಗಲಿಲ್ಲ ಎಂಬ ಒಂದು ಬೇಸರ ಇತ್ತು. ಎಲ್ಲವೂ ಅಲ್ಲಾಹನ ವಿಧಿ ಎಂದು ಭಾವಿಸಿ ಹಿಂತಿರುಗಬೇಕಾಯಿತು. ಮನಸ್ಸಿನಲ್ಲಿ ಹಲವಾರು ಚಿಂತನೆಗಳನ್ನು ಹೊತ್ತು ಸಾಗುತ್ತಿರಬೇಕಾದರೆ “ಸೈಯದ್ ಅಬೂಸ್ವಾಲಿಹ್ ಮಖಾಮ್‌ಗೆ ದಾರಿ” ಎಂದು ಬರೆಯಲಾದ ಒಂದು ಫಲಕ ಕಣ್ಣಿಗೆ ಬಿತ್ತು.

ನಕ್ಷಬಂದಿ ಅವರು ಇದನ್ನು ನಮ್ಮ ಗಮನಕ್ಕೆ ತಂದರು. ಫೋಟೋ ತೆಗೆಯುವ ಸಲುವಾಗಿ ಗಾಡಿ ನಿಲ್ಲಿಸಿದೆವು. ಸ್ಥಳೀಯ ನಿವಾಸಿಗಳೊಂದಿಗೆ ಸ್ವಲ್ಪ ಹೊತ್ತು ಹರಟೆ ನಡೆಸಿದೆವು. ಅಲ್ಲಿಯವರೆಗೆ ತಲುಪಿದೆವಲ್ಲಾ ಎಂದು ಒಳಗೊಳಗೆ ಖುಷಿಪಟ್ಟೆನು. ಬೇಗನೆ ಹೋಟೆಲ್ ಮುಟ್ಟುವ ಅಂದಾಜು ಹಾಕಿಕೊಂಡಿದ್ದ ನಮ್ಮೆಡೆಗೆ ನಕ್ಷಬಂದಿ ಅವರು ತಿರುಗಿ ನಿಂತು ” ಈ ಝಿಯಾರತ್ ಪೂರ್ತಿಗೊಳಿಸಲು ಬಯಸುವಿರೇನು?” ಎಂದು ಕೇಳಿದರು. ಕತ್ತಲೆಯಲ್ಲಿ ಪ್ರಯಾಣ ಕಷ್ಟಸಾಧ್ಯ ಎಂದಾಗ “ಇನ್‌ಶಾ ಅಲ್ಲಾಹ್, ಎಲ್ಲವೂ ಸರಿ ಹೋಗಲಿದೆ” ಎಂದು ಧೈರ್ಯ ತುಂಬಿದರು.

ನನಗೆ ಯಾವುದೇ ಖಾತರಿ ಇರಲಿಲ್ಲ. ಅಬ್ದುಲ್ ಹಾದಿ ಅವರು ಆತ್ಮವಿಶ್ವಾಸ ಹೊಂದಿದ್ದಂತೆ ಕಾಣಿಸುತ್ತಿದ್ದರು. ಬಹುಶಃ ಇನ್ನೊಮ್ಮೆ ಇಂತಹ ಅವಕಾಶ ಸಿಗದು ಎಂದು ಅಂತರಾಳ ಮಂತ್ರಿಸುತ್ತಿತ್ತು. ಮುಸ್ಸಂಜೆ ಸಮಯದಲ್ಲಿ ಸೆಡಾನ್ ಕಾರಿನಲ್ಲಿ ಫೂಮಾನ್ ನಗರದಲ್ಲಿ ಇರುವ ಅಬೂಸ್ವಾಲಿಹ್ ಅವರ ಮಖಾಮ್‌ಗೆ ತಲುಪಿದೆವು. ಸೂರ್ಯನ ಕೊನೆಯ ರಶ್ಮಿಗಳು ಭೂಮಿ ಮೇಲೆ ಬೀಳುತ್ತಿದ್ದ ಆ ಸಮಯದಲ್ಲಿ ಕಾರಿನ ಗ್ಲಾಸ್ ಸರಿಸಿ ಪ್ರಕೃತಿಯ ಸೊಬಗನ್ನು ಸವಿಯತೊಡಗಿದೆವು. ಶೈಖ್ ಅಬೂಸ್ವಾಲಿಹ್ ಅವರ ವಿಶ್ರಾಂತಿ ಧಾಮಕ್ಕೆ ಸಾಕ್ಷಾತ್ ಪ್ರಕೃತಿಯೇ ನಮ್ಮನ್ನು ಸ್ವಾಗತಿಸಿದಂತೆ ತೋರಿತು. ಈ ಕಲಹಪೀಡಿತ ಯುಗದಲ್ಲಿ ಶಾಂತಿಯುತ ವಿಶ್ರಾಂತಿ ಧಾಮ ಅವರಿಗೆ ದೊರೆತಿದ್ದು ಅಲ್ಲಾಹನು ಅವರಿಗೆ ನೀಡಿದ ಗೌರವವೆಂದೇ ಭಾವಿಸಿದೆನು.

ಈ ಎಲ್ಲಾ ಆಲೋಚನೆಗಳ ನಡುವೆ ನಾನು ನಕ್ಷಬಂದಿ ಅವರೊಂದಿಗೆ ಕೇಳಿಯೇ ಬಿಟ್ಟೆನು: “ಪತ್ನಿ ಬೀಬಿ ನಿಸಾ ಇರುವ ಸ್ಥಳದಿಂದ ದೂರದಲ್ಲಿ ಅಬೂಸ್ವಾಲಿಹ್ ಅವರನ್ನು ಯಾಕೆ ದಫನ ಮಾಡಲಾಗಿದೆ?”. ” ಸೂಫಿಗಳು ಲೌಕಿಕ ಜಂಜಾಟಗಳಿಂದ ದೂರವಿರಲು ಜನಸಾಂದ್ರತೆ ಇರುವ ಸ್ಥಳಗಳಿಗೆ ವಿದಾಯ ಹೇಳಿ ಇಂತಹ ಕುಗ್ರಾಮಗಳನ್ನು ಅರಸುತ್ತಾರೆ” ಎಂದು ಅವರು ಉತ್ತರಿಸಿದರು. ನಾವು ಏರಿದ್ದ ಆ ಬೆಟ್ಟವು ಅಕ್ಷರಶಃ ಹಾಗೆಯೇ ಇತ್ತು. ಲೌಕಿಕ ಜಂಜಾಟ, ಅಕ್ರಮಗಳು ಸೋಕದಂತಹ ಒಂದು ಲೋಕವಾಗಿತ್ತು ಅದು.

ಬೆಟ್ಟದ ದಾರಿಯಲ್ಲಿ ಅಲ್ಲಲ್ಲಿ ಜನಜೀವನದ ಕುರುಹುಗಳು ಕಾಣಿಸುತ್ತಿದ್ದವು. ಸಾಧಾರಣ ಮನೆಗಳು, ಮೇಯುತ್ತಿದ್ದ ದನಕರುಗಳ ನಡುವೆ ನಮ್ಮ ಕಾರು ಚಲಿಸಿತು. ಇಂತಹ ದಾರಿಯಲ್ಲಿ ಸಾಗುವ ಇವರಿಗೇನು ಹುಚ್ಚೇ?! ಎಂದು ಒಂದುವೇಳೆ ಅಲ್ಲಿನ ನಿವಾಸಿಗಳಿಗೆ ಅನಿಸಿರಬೇಕು. ಮೇಲೆ ಹತ್ತುತ್ತಿದ್ದಂತೆ ಇರುಳು ಗಾಢವಾಯಿತು. ದಾರಿಯಲ್ಲಿ ದೊಡ್ಡ ಪ್ರಮಾಣದ ಕಲ್ಲುಗಳು ಎದುರಾಗುತ್ತಿದ್ದರೂ ನನ್ನ ಉತ್ಸಾಹ ಕುತೂಹಲ ಹೆಚ್ಚುತ್ತಲೇ ಇತ್ತು. ಪ್ರಯಾಣದಲ್ಲಿ ಉತ್ಸಾಹಿಯಂತೆ ಕಂಡ ನಕ್ಷಬಂದಿ ಅವರಿಗೆ ನಮ್ಮಿಂದಾಗಿ ತೊಂದರೆಯಾಗಿರಬಹುದೇನೋ ಎಂದು ಒಂದು ಕ್ಷಣ ಸಂದೇಹಿಸಿದೆ.

ಕೊನೆಗೂ ದೂರದಿಂದ ಒಂದು ಹಸಿರು ಬಣ್ಣದ ಬೆಳಕು ಕಾಣತೊಡಗಿತು. ಅದು ಮಗ್ರಿಬ್ ನಮಾಝ್‌ನ ಹೊತ್ತಾಗಿದ್ದರಿಂದ ಮಖಾಮಿನ ಬಾಗಿಲು ಮುಚ್ಚಲಾಗಿತ್ತು. ನಮಗೆ ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ನನಗೆ ಯಾವುದೇ ತಕರಾರು ಇರಲಿಲ್ಲ. ಅದಾಗಲೇ ಮನೆಗೆ ಹೊರಡಲು ನಿಂತಿದ್ದ ಅಲ್ಲಿನ ಸಿಬ್ಬಂದಿಗಳಿಗೆ ತೊಂದರೆ ಕೊಡುವುದೂ ನಮಗೆ ಇಷ್ಟವಿರಲಿಲ್ಲ.

ಶೈಖ್ ಅಬ್ದುಲ್ ಖಾದಿರ್ ಅವರು ಸಣ್ಣ ಮಗುವಾಗಿದ್ದಾಗ ಶೈಖ್ ಅಬೂಸ್ವಾಲಿಹ್ ಅವರು ಇಹಲೋಕ ತ್ಯಜಿಸಿದ್ದರು. ಒಂದು ವರದಿ ಹೀಗಿದೆ: ಒಂದು ರಾತ್ರಿ ಅಬೂಸ್ವಾಲಿಹ್ ಅವರು ಕನಸಿನಲ್ಲಿ ತಮ್ಮ ಮುತ್ತಾತ ಪ್ರವಾದಿ ಮುಹಮ್ಮದ್ ಅವರು ಬಂದು, “ಮಗನೇ! ಅಲ್ಲಾಹನು ನಿನಗೆ ಮಗುವನ್ನು ದಯಪಾಲಿಸುವನು. ಆ ಮಗು ನನಗೂ ಪ್ರೀತಿಪಾತ್ರನಾಗುವನು. ಮಾತ್ರವಲ್ಲದೆ ಇಡೀ ಔಲಿಯಾಗಳ ಪೈಕಿ ಆತ ಶ್ರೇಷ್ಠನು” ಎಂದು ಸಿಹಿಸುದ್ದಿ ನೀಡುವರು.

ನಾವು ಬಾಗಿಲಿನ ಬಳಿ ಹೋಗಿ ಅಲ್ಲಿಂದಲೇ ಸಲಾಂ ಹೇಳಿ ಪ್ರಾರ್ಥಿಸಿದೆವು. ಒಂದು ಹೃಸ್ವ ಸಮಯದಲ್ಲಿ ಪ್ರಾರ್ಥನೆ ನಡೆಸಿದೆವು. ನಾವು ಬೇಗ ಕಾರು ಹತ್ತಿ ಬೆಟ್ಟ ಇಳಿದೆವು.

“ಝಿಯಾರ ಖಬೂಲ್! ಇನ್ಶಾ ಅಲ್ಲಾಹ್!” ಎಂದು ಹೇಳುತ್ತಾ ನಕ್ಷಬಂದಿ ಅವರು ನಿರಾಳರಾದರು. ಮಹಾತ್ಮರ ಖಬರ್ ಸಂದರ್ಶನವು ಒಂದು ಮಹತ್ಕಾರ್ಯ. ನನ್ನ ಪರಂಪರೆಯನ್ನು ಹುಡುಕಿ ಹೋಗಿದ್ದು ನನ್ನ ಪಾಲಿಗೆ ಅದ್ಭುತ ಅನುಭವ. ನಾನು ತುಂಬಾ ಸಂತುಷ್ಟಳಾಗಿದ್ದೆ. ವರ್ಷಗಳ ಹಿಂದೆ ನಮ್ಮೊಂದಿಗೆ ವಿವಿಯಲ್ಲಿ ಓದಿದ ಸಹಪಾಠಿಯ ತಂದೆ ನಮ್ಮ ಗೈಡ್ ಆಗಿ ಸಿಕ್ಕಿದ್ದು ನಮ್ಮ ಭಾಗ್ಯವಾಗಿತ್ತು. ಅವರಿಲ್ಲದೇ ಹೋಗಿದ್ದರೆ ಪ್ರಯಾಣ ಇಷ್ಟು ಯಶಸ್ವಿಯಾಗಿ ನಡೆಯುತ್ತಿರಲಿಲ್ಲ. ಅವರಿಂದ ನಾವು ಹಲವಾರು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.

ಪ್ರಯಾಣ ಆರಂಭಿಸಿದ ರಶ್ಟ್ ಎಂಬಲ್ಲಿಗೆ ನಕ್ಷಬಂದಿ ಅವರು ನಮ್ಮನ್ನು ತಲುಪಿಸಿದರು. ಗೈಡ್ ಆಗಿ ನಮ್ಮನ್ನು ಯಶಸ್ವಿಯಾಗಿ ಮುನ್ನಡೆಸಿದ ಅವರಿಗೆ ಕೃತಜ್ಞತೆ ಸಲ್ಲಿಸಿದೆವು. ಮುಂದಿನ ದಿನಗಳಲ್ಲಿ ಭೇಟಿಯಾಗೋಣ ಎಂದು ಹೇಳಿ ಅಲ್ಲಿ ವಿದಾಯ ಹೇಳಿದೆವು. ಭೇಟಿ ನೀಡಬೇಕಾದ ಹಲವಾರು ಪ್ರದೇಶಗಳು ಇನ್ನೂ ಇರಾನಿನಲ್ಲಿ ಇವೆ ಎಂದು ನನಗೆ ತಿಳಿಯಿತು.

ಮೂಲ: ಸನಾ ಗೀಲಾನಿ
ಅನುವಾದ: ಮುಹಮ್ಮದ್ ಶಮೀರ್ ಪೆರುವಾಜೆ

ರಾಜಕೀಯ ಪ್ರಕ್ಷುಬ್ಧತೆ ಮತ್ತು ಮುಸ್ಲಿಂ ಜಗತ್ತು

ಮುಸ್ಲಿಂ ಜಗತ್ತು ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿದೆ. ನೀತಿ-ನ್ಯಾಯ ರಹಿತ ಜಾಗತಿಕ ಕ್ರಮ, ನೆರಳು ಯುದ್ಧಗಳು, ಆಂತರಿಕ ಸಂಘರ್ಷಗಳು, ಪಂಥೀಯತೆ, ಸಾಮಾಜಿಕ ಬದಲಾವಣೆ, ಆರ್ಥಿಕ ಸಮಸ್ಯೆಗಳು ರಾಜಕೀಯ ಬಿಕ್ಕಟ್ಟುಗಳನ್ನು ತಂದಿಟ್ಟಿದ್ದೇ ಅಲ್ಲದೆ ಮುಸ್ಲಿಂ ಜಗತ್ತಿನ ಬೌದ್ಧಿಕ ಹಾಗೂ ಆಧ್ಯಾತ್ಮಿಕ ವಿಕಾಸದ ಮೇಲೂ ವಿಪರೀತ ಪರಿಣಾಮವನ್ನು ಬೀರಿದೆ. ಪರಿಣಾಮವಾಗಿ ಮುಸ್ಲಿಂ ವಿದ್ವಾಂಸರು, ವಿಜ್ಞಾನಿಗಳು ಹಾಗೂ ಕಲಾವಿದರೆಲ್ಲರೂ ಜಾಗತಿಕ ಗುಣಮಟ್ಟತೆಯ ಪಾತಳಿಯಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಜಗತ್ತಿನ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಸಾಬೀತುಪಡಿಸುತ್ತಲೇ ಇರಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಈ ಸಂಕುಚಿತ ಸನ್ನಿವೇಶದಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಉತ್ತುಂಗತೆಯನ್ನು ಮರಳಿ ಪಡೆಯುವುದು ಸಾಧ್ಯವೇ? ಮುಸ್ಲಿಂ ಜಗತ್ತು ಮತ್ತು ಅದು ಕಂಡಿರುವ ರಾಜಕೀಯ ಏಳಿಬೀಳುಗಳ ಇತಿಹಾಸವನ್ನು ಅವಲೋಕಿಸುವಾಗ ಅದು ಸಾಧ್ಯ ಎನ್ನುವ ಉತ್ತರ ನಮಗೆ ದೊರೆಯುತ್ತದೆ ಮತ್ತು ವಿಸ್ತೃತ ಸಾಧ್ಯತೆಗಳನ್ನು ಅದು ತೆರೆದಿಡುತ್ತಿದೆ.

ಇಸ್ಲಾಮಿನ ಬೌದ್ಧಿಕ ಪರಂಪರೆಯ ಬಹುತೇಕ ವಿದ್ವಾಂಸರು ಸವಿಶೇಷವಾದ ರಾಜಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವವರು. ಇಸ್ಲಾಮಿನ ಪ್ರಾಥಮಿಕ ಹಂತದ ನ್ಯಾಯಶಾಸ್ತ್ರಜ್ಞರು ಮತ್ತು ದೇವತಾ ಶಾಸ್ತ್ರಜ್ಞರು ಭಾರಿ ಪ್ರಮಾಣದ ಸಾಮಾಜಿಕ, ರಾಜಕೀಯ ಮತ್ತು ವಿಶ್ವಾಸ ಪರಿವರ್ತನೆಗಳನ್ನು ಕಾಣಬೇಕಾಯಿತು. ಹಿಜರಿ 632 ಪ್ರವಾದಿವರ್ಯರ ವಿಯೋಗಾನಂತರ ದೇವತಾ ಶಾಸ್ತ್ರದ ಪ್ರಧಾನ ಚರ್ಚೆಗಳು ರಾಷ್ಟ್ರ ಸ್ಥಾನಾರೋಹನ ವಿಷಯಗಳ ಕುರಿತಾಗಿತ್ತು. ಮಿಹ್ನಾ, ಅಥವಾ ಖಿಲಾಫತ್ ರಾಜಾಡಳಿತಕ್ಕೆ ಸರಿದಾಗ ಉಂಟಾದ ನೇತ್ಯಾತ್ಮಕ ರಾಜಕೀಯ ಉತ್ಪಾತಗಳನ್ನು ಬಗೆಹರಿಸುತ್ತಾ ವಿದ್ವಾಂಸರು ಜ್ಞಾನ ಪ್ರಸಾರಕ್ಕೆ ಒತ್ತು ನೀಡಿದರು.

ಇಸ್ಲಾಮಿನ ಆರಂಭಿಕ ಕಾಲದ ದಾರ್ಶನಿಕ ಹಾಗೂ ವೈಜ್ಞಾನಿಕ ಪರಂಪರೆ ಮೊಳಕೆಯೊಡೆದದ್ದು ಮುಸ್ಲಿಂ ರಾಜವಂಶಗಳ ಸಂಸ್ಥಾಪನೆಯ ಹಿನ್ನೆಲೆಯಲ್ಲಿ ರೂಪುಗೊಂಡ ಉದ್ವಿಗ್ನವಾದ ರಾಜಕೀಯ ವಾತಾವರಣದಲ್ಲಾಗಿತ್ತು . ಕಾಲಾಂತರದಲ್ಲಿ ಉಮವಿಯ್ಯಾದಿಂದ ಅಬ್ಬಾಸಿಯ್ಯಾ ಆಡಳಿತದ ಕಡೆಗಿನ ಪಲ್ಲಟಗಳು ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಹೊಸತಾಗಿ ಚಾಲ್ತಿಗೆ ಬಂದ ಎಮಿರೇಟ್‌ಗಳ ಉದಯ ಮುಂತಾದ ಯಾವುದೇ ರಾಜಕೀಯ ಬದಲಾವಣೆಗಳು ಮುಸ್ಲಿಂ ವಿದ್ವಾಂಸರ ಜ್ಞಾನ ಸಂಪಾದನೆಗೆ ಅಡಚಣೆಯಾಗಲಿಲ್ಲ. ಜ್ಞಾನ ಮತ್ತು ಸತ್ಯದೊಂದಿಗಿನ ಮುಸ್ಲಿಂ ವಿದ್ವಾಂಸರ ಅರ್ಪಣಾಮನೋಭಾವವು ಇಸ್ಲಾಮಿಕ್ ನಾಗರಿಕತೆಯು ಮಧ್ಯೇಷ್ಯಾದಿಂದ ಏಷ್ಯಾ ಮೈನರ್, ಮೆಸೇಪಟೋಮಿಯ, ಉತ್ತರ ಆಫ್ರಿಕಾ, ಅಂದಲೂಸ್ ಆದಿಯಾಗಿ ಜಗತ್ತಿನಾದ್ಯಂತ ವ್ಯಾಪಿಸಲು ಹೇತುವಾಯಿತು.

ಅಲ್ ಕಿಂದಿ, ಫಾರಾಬಿ, ಇಬ್ನ್ ಸೀನಾ ಮುಂತಾದ ಪ್ರಸಿದ್ಧ ತತ್ವಜ್ಞಾನಿಗಳು ತತ್ತ್ವಜ್ಞಾನ, ತರ್ಕವಿಜ್ಞಾನ, ವೈದ್ಯಕೀಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಂದಿನ ರಾಜಕೀಯ ಅನಿಶ್ಚಿತತೆ, ಸೈನಿಕ ಸಿದ್ಧತೆಗಳು ಮುಂತಾದ ಬಿಕ್ಕಟ್ಟುಗಳನ್ನು ಲೆಕ್ಕಿಸದೆ ಗ್ರಂಥ ರಚನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 12ನೇ ಶತಮಾನದಿಂದ 14ನೇ ಶತಮಾನದವರೆಗೆ ಮುಸ್ಲಿಂ ಭೂಪ್ರದೇಶಗಳು ಪಶ್ಚಿಮದಿಂದ ಮತ್ತು ಪೂರ್ವದಿಂದ ಅನುಕ್ರಮವಾಗಿ ಶಿಲುಬೆಗಾರರ ಮತ್ತು ಮಂಗೋಲಿಯನ್ನರ ನಿರಂತರ ಆಕ್ರಮಣಕ್ಕೆ ಗುರಿಯಾಯಿತು. ಪರಿಣಾಮವಾಗಿ ನಾಗರಿಕರು ಸಹಿಸಿದ ಯಾತನೆಗಳ ಸಾಕ್ಷಿಗಳು ಇತಿಹಾಸ ಪುಟಗಳಲ್ಲಿ ಇಂದಿಗೂ ಓದಿ ನೋಡಬಹದು. ಅದಾಗ್ಯೂ ಈ ಕಾಲದಲ್ಲಿ ಇಸ್ಲಾಮಿನ ಸಂಸ್ಕೃತಿ ಹಾಗೂ ನಾಗರಿಕತೆಗಳ ಕುರಿತಾದ ಅಮೂಲ್ಯ ಗ್ರಂಥಗಳು ಬೆಳಕು ಕಂಡವು.1187ರಲ್ಲಿ ಶಿಲುಬೆಗಾರರಿಂದ ಜೆರುಸಲೇಮನ್ನು ಹಿಂಪಡೆದ ಸ್ವಲಾಹುದ್ದೀನ್ ಅಯೂಬಿಯ ಸಮಕಾಲೀನನಾದ ಉಸಾಮ ಬಿನ್ ಮುಂಕಿಸ್ ಅಂದಿನ ರಾಜಕೀಯ ಸಂದಿಗ್ಧತೆಗಳಿಗೆ ಧೃತಿಗೆಡದೆ ಸರ್ವ ಸಂಭವಗಳನ್ನು ಸವಿಸ್ತಾರವಾಗಿ ತನ್ನ ಕಿತಾಬ್ ಎತ್ತಿಬಾರ್ ನಲ್ಲಿ ಉಲ್ಲೇಖಿಸಿದ್ದಾರೆ. ಶಿಲುಬೆಗಾರರ ಮತ್ತು ಮಂಗೋಲಿಯನ್ನರ ಮಿತಿ ಮೀರಿದ ಕ್ರೂರತೆಗಳು ಇಬ್ನ್ ಅರಬಿ ಮತ್ತು ಮೌಲಾನಾ ಜಲಾಲುದ್ದೀನ್ ರೂಮಿಯಂತಹ ಚಿಂತಕರನ್ನು ಗ್ರಂಥ ರಚನೆಯಿಂದ ಹಿಮ್ಮೆಟ್ಟಿಸಲಿಲ್ಲ.

ಇಬ್ನ್ ಅರಬಿ ಅಂದಲೂಸಿಯನ್ ಮುಸ್ಲಿಮರು ಅನುಭವಿಸಿದ ನೋವುಗಳಿಗೆ, ಯಾತನೆಗಳಿಗೆ ಕಣ್ಣಾದರು. ಮೌಲಾನಾ ರೂಮಿ ಮಂಗೋಲಿಯನ್ನರ ಉಪಟಳವನ್ನು ತಾಳಲಾರದೆ ಕೊನ್ಯಾದತ್ತ ಗುಳೆ ಹೊರಟರು. ಕೊನೆಗೆ ರೂಮಿಯವರ ಕೊನ್ಯಾದಲ್ಲೆ ಕೊನೆಯ ವಿಶ್ರಮ ಪಡೆದರು. ಜ್ಞಾನ ಸಂಪಾದಿಸುವ ಉತ್ಸಾಹದಿಂದ ಇಮಾಂ ಗಝಾಲಿ, ಸುಹ್ರವರ್ದಿ, ನಾಸಿರುದ್ದೀನ್ ತೂಸಿ, ಫಖ್ರುದ್ದೀನ್ ರಾಝಿ, ಮುಲ್ಲಾ ಸದ್ರ್, ಇಬ್ನು ಕಮಾಲ್, ತಖಿಯುದ್ದೀನ್, ಇಮಾಂ ರಬ್ಬಾನಿ, ಶಾಹ್ ವಲಿಯುಲ್ಲಾಹಿ ದ್ದಹ್ಲವಿ ಮುಂತಾದ ಮುಸ್ಲಿಂ ಜಗತ್ತಿನ ಸರ್ವ ವಿದ್ವಾಂಸರು, ತತ್ವಜ್ಞಾನಿಗಳು, ವಿಜ್ಞಾನಿಗಳು, ಕಲಾವಿದರೆಲ್ಲರೂ ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತಲ್ಲೀನರಾದರು. ಪ್ರಖ್ಯಾತ ವಾಸ್ತುಶಿಲ್ಪಿ ಮಿಮರ್ ಸಿನಾನ್ ರಾಜಕೀಯ ಬಿಕ್ಕಟ್ಟುಗಳಿಂದ ವಿಚಲಿತನಾಗದೆ ತನ್ನ ಯತ್ನವನ್ನು ಮುಂದುವರಿಸಿ ಉತ್ತುಂಗಕ್ಕೇರಿದರು. ಶಾಜಹಾನ್ ತಾಜ್ ಮಹಲನ್ನು ನಿರ್ಮಿಸಿದ್ದು, ಇಸ್ಲಾಮಿಕ್ ಕ್ಯಾಲಿಗ್ರಫಿ, ಮಿನಿಯೇಚರ್ (ಕಿರುಚಿತ್ರ ) ಮಾರ್ಬಿಲಿಂಗಿನ ಅಭೂತಪೂರ್ವ ಕಲಾಕೃತಿಗಳು ಜಗತ್ತಿಗೆ ಪರಿಚಯವಾದುದು, ಮುಸ್ಲಿಂ ಜಗತ್ತಿನಲ್ಲಿ ರಾಜಕೀಯ ಸಮಸ್ಯೆಗಳು ತಾರಕಕ್ಕೇರಿದ್ದ 17ನೇ ಶತಮಾನದಲ್ಲಾಗಿತ್ತು.

ಸಾಮಾಜಿಕ, ರಾಜಕೀಯ ಆರ್ಥಿಕ ವಿದ್ವಾಂಸರ ಜೀವನದಲ್ಲಿ ಅಡ್ಡ ಪರಿಣಾಮವನ್ನುಂಟು ಮಾಡಿರಬಹುದು. ಆದರೆ ಜ್ಞಾನಕ್ಕಾಗಿ ಆಧ್ಯಾತ್ಮಿಕತೆಗಾಗಿ ತನ್ನೆಲ್ಲವನ್ನೂ ಮುಡಿಪಾಗಿಟ್ಟವರಿಗೆ ಲೌಕಿಕ ಜಗತ್ತಿನ ಜಟಿಲ ಸಮಸ್ಯೆಗಳೆಲ್ಲವೂ ನಗಣ್ಯವಾಗಿದ್ದವು. ಎಲ್ಲಾ ರೀತಿಯ ಅನನುಕೂಲ ವಾತಾವರಣದಲ್ಲೂ ಜ್ಞಾನರ್ಜನೆಗಾಗಿ, ಜ್ಞಾನ ಪ್ರಸಾರಕ್ಕಾಗಿ ವಿದ್ವಾಂಸರು ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಅಮರವಾಗಿದೆ.

ಆಧುನಿಕ ಮುಸ್ಲಿಂ ಜಗತ್ತು ಚರಿತ್ರೆ ಪುಟಗಳಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಮೊದಲನೆಯದಾಗಿ, ರಾಜಕೀಯ ಸಮಸ್ಯೆಗಳಿಗಿರುವ ಪರಿಹಾರ ಕೇವಲ ರಾಜಕೀಯ ಮಾರ್ಗಗಳ ಮುಖಾಂತರವಲ್ಲದೆ, ಬೌದ್ಧಿಕ ಹಾಗೂ ಶೈಕ್ಷಣಿಕ ಪರಿಶ್ರಮಗಳು ಮತ್ತು ಅರ್ಪಣಾ ಮನೋಭಾವಗಳಿಂದಲೂ ಕಂಡುಕೊಳ್ಳಬಹುದಾಗಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ರಂಗಗಳಲ್ಲಿನ ಕಾರ್ಯ ಸಾಧನೆಗೆ ರಾಜಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುವುದು ಮೂರ್ಖತನವೆನ್ನಬಹುದು. ಅಂತೆಯೇ ವೈಜ್ಞಾನಿಕ ಹಾಗೂ ಬೌದ್ಧಿಕ ಕಾರ್ಯಾಚರಣೆಗಳಿಗೆ ಆಡಳಿತಗಾರರ ಮತ್ತು ವಿದ್ಯಾವಂತ ಸಮಾಜದ ಬೆಂಬಲ ಅತ್ಯಗತ್ಯವಾಗಿದೆ.

ಎರಡನೆಯದಾಗಿ ರಾಜಕೀಯ ಕಲಹಗಳು ವ್ಯಕ್ತಿ ಮತ್ತು ಸಮಾಜದ ಬೌದ್ಧಿಕ ಜೀವನಕ್ಕೆ ಕುತ್ತು ತರುವಂತೆಯೇ ಹುರುಪು ಮತ್ತು ಹುಮ್ಮಸ್ಸನ್ನು ನೀಡಬಲ್ಲದು. ಆದ್ದರಿಂದಲೇ ಜಿಜ್ಞಾಸುಗಳಿಗೆ ಸಂಧಿಗ್ಧತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿರುವ ಪ್ರಯತ್ನಗಳು ತ್ರಾಸದಾಯಕವಾದರೂ ಆಶಾದಾಯಕವೆನ್ನಬಹುದು.

ಮೂರನೆಯದಾಗಿ ಆಧುನಿಕ ಮುಸ್ಲಿಮರು ತಮ್ಮ ಉತ್ಕೃಷ್ಟವಾದ ಮುಸ್ಲಿಂ ಬೌದ್ಧಿಕ ಪರಂಪರೆಯನ್ನು ಇನ್ನೂ ಸರಿಯಾಗಿ ತಲುಪಿಲ್ಲ. ಪೂರ್ವಜರಾದ ಮುಸ್ಲಿಂ ವಿದ್ವಾಂಸರ ಸಹಸ್ರಾರು ವರ್ಷಗಳ ತಪಸ್ಸಿನ ಮೂಲಕ ಕಟ್ಟಿಕೊಟ್ಟ ವೈಜ್ಞಾನಿಕ, ಶೈಕ್ಷಣಿಕ ಮತ್ತು ಕಲಾವೈಭವದ ಕೊಡುಗೆಗಳ ಪೈಕಿ ಇಂದು ಬೆಳಕಿಗೆ ಬಂದಿರುವುದು ನೂರರಲ್ಲೊಂದರಷ್ಟು ಮಾತ್ರ. ನೂರಾರು ಸಂಗತಿಗಳು ಇಂದಿಗೂ ವಿಸ್ಮೃತಿಯಲ್ಲಡಗಿದೆ. ಆಧುನಿಕ ಯುಗದ ವಾಸ್ತವಿಕತೆಗೆ ಒಗ್ಗಿಕೊಂಡ ನೂತನ ಪಠ್ಯಕ್ರಮ ರೂಪಿಸುವುದು ಇವುಗಳನ್ನು ವಿಸ್ಮೃತಿಯಿಂದ ಹೊರತರಲು ಸಹಾಯ ಮಾಡಬಲ್ಲದು. ಇಂದು ಪರಂಪರೆಯ ಪಹರೆಯಲ್ಲಿ ಉಳಿದುಕೊಂಡು ಜಗತ್ತಿನ ಕುರಿತಾದ ಅಭಿಪ್ರಾಯಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ. ಸದ್ಯ ಮುಸ್ಲಿಂ ರಾಷ್ಟ್ರಗಳು ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಕಡೆಗಣಿಸದೆ ಮುಸ್ಲಿಂ ಜಗತ್ತಿನಲ್ಲಿ ಸುದೀರ್ಘವಾದ ಬೌದ್ಧಿಕ ಹಾಗೂ ಕಲಾಸಾಧನೆಗಳು ಮರುಕಳಿಸಬೇಕಿದೆ.

ಮೂಲ: ಡಾ. ಇಬ್ರಾಹಿಂ ಕಾಲಿನ್
ಅನು: ಆಶಿಕ್ ಅಲಿ ಕೈಕಂಬ

ಡಾ. ಇಬ್ರಾಹಿಂ ಕಾಲಿನ್

Deputy Head of the Security and Foreign Policy Council of the Turkish Presidency. Graduate of Istanbul University, he received his PhD from George Washington University. His books include; Islam and The West, Mulla Sadra, Reason and Virtue: Turkey’s Social Imagination, Self, Other and Beyond: Introduction to the History of Islam-West Relations, Barbar Modern Civilized, The Veil and The Meaning.

ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ ಶತಮಾನದ ಬಗ್ಗೆ ಬಹುಶಃ ಯಾರೂ ತಿಳಿದಿರಲಾರರು.

ಕ್ರಿ.ಶ. 1232 ರಲ್ಲಿ ಅಸ್ತಿತ್ವಕ್ಕೆ ಬಂದ ನಸ್ರಿದ್ ಸಾಮ್ರಾಜ್ಯವು ಕ್ರಿ.ಶ. 1492 ರಲ್ಲಿ ಕಿಂಗ್ ಫರ್ಡಿನ್ಯಾಂಡ್ ಮತ್ತು ಕ್ವೀನ್ ಇಸಬೆಲ್ಲ ನೇತೃತ್ವದ ಕ್ಯಾಥೊಲಿಕ್ ಕ್ರೈಸ್ತರ ದಾಳಿಗೆ ತುತ್ತಾಗಿ ಸ್ವಾಧೀನ ಕಳೆದುಕೊಂಡಿತು. ನಂತರ ರಾಜನ ಆಜ್ಞೆಯಂತೆ ಐಬೀರಿಯನ್ ಪರ್ಯಾಯ ದ್ವೀಪದಿಂದ ಯಹೂದಿಗಳನ್ನು ಸಂಪೂರ್ಣವಾಗಿ ಹೊರದೂಡಲಾಯಿತು. ಆಟೋಮನ್ ಬಾಯಝೀದರು ನೌಕಾ ಸೇನೆಯನ್ನು ಕಳುಹಿಸಿ ಯಹೂದಿಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಕರೆತಂದು ಪೌರತ್ವವನ್ನು ನೀಡಿದರು. ಸಾವಿರಾರು ಮುಸ್ಲಿಮರು ಆಶ್ರಯತಾಣಗಳನ್ನು ಅರಸುತ್ತಾ ಮೆಡಿಟರೇನಿಯನ್ ಹಾಗೂ ಇತರ ಪ್ರದೇಶಗಳತ್ತ ಗುಳೆ ಹೊರಟರು. ಕ್ರಿ.ಶ. 1492 ರಲ್ಲಿ ಐದು ಲಕ್ಷಗಳಷ್ಟು ಇದ್ದ ಮುಸ್ಲಿಮರಲ್ಲಿ ಸುಮಾರು ಎರಡು ಲಕ್ಷ ಜನರು ಆಫ್ರಿಕಾದತ್ತ ವಲಸೆ ಹೋದರು.

ಆರಂಭದಲ್ಲಿ ಮುಸ್ಲಿಮರು ಕ್ರೈಸ್ತರ ಆಡಳಿತದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮಹತ್ವದ ಪಾತ್ರ ಹೊಂದಿದ್ದರು. ನಂತರ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಬಂತು. ಕ್ಯಾಥೊಲಿಕ್ ಚರ್ಚ್‌ಗಳು ಎಲ್ಲಾ ಮುಸ್ಲಿಮರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಶುರು ಮಾಡಿದವು. ಆದ್ದರಿಂದ ಮುಸ್ಲಿಮರು ಅಲ್ಲಿ ಅತಂತ್ರರಾದರು. ಸ್ಪಾನಿಷ್ ಸರಕಾರವು ಹಣದ ಆಮಿಷ ಒಡ್ಡಿ ಮುಸ್ಲಿಮರನ್ನು ಮತಾಂತರಿಸುವ ಮೊದಲ ಪ್ರಯತ್ನ ಮಾಡಿತು. ಮತಾಂತರಗೊಂಡ ಜನರಿಗೆ ಅಪಾರ ಪ್ರಮಾಣದ ಧನ-ಕನಕ, ಭೂಮಿ ನೀಡಿ ಉಪಚರಿಸಲಾಯಿತು. ಮತಾಂತರಗೊಂಡ ಜನರು ಅವುಗಳನ್ನು ಸ್ವೀಕರಿಸಿ ಪುನಃ ಇಸ್ಲಾಂ ಧರ್ಮಕ್ಕೆ ಮರಳಿದ್ದರಿಂದ ಈ ಪ್ರಯತ್ನವು ವಿಫಲವಾಯಿತು ಎಂದೇ ಹೇಳಬಹುದು.

ಕ್ರಿ.ಶ 15ನೆಯ ಶತಮಾನದ ಅಂತ್ಯದ ವೇಳೆಗೆ ಸ್ಪೇನ್‌ನ ಮುಸ್ಲಿಮರು ಇಸ್ಲಾಂ ಧರ್ಮದ ಕಡೆಗೆ ಉತ್ಸಾಹ ತೋರಿದರು. ಹಾಗೂ ಸಂಪತ್ತಿಗಿಂತ ತಮ್ಮ ನಂಬಿಕೆಗಳಿಗೆ ಬದ್ಧರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ವಿಚಾರ ಸ್ಪಾನಿಷ್ ಸರಕಾರವು ಹೊಸ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಿತು. ಕ್ರಿ.ಶ. 1499 ರಲ್ಲಿ ಬಲವಂತದ ಮತಾಂತರವನ್ನು ತ್ವರಿತವಾಗಿ ಜಾರಿಗೊಳಿಸಲು ಫ್ರಾನ್ಸಿಸ್ಕೋ ಜೆಮೆನಝ್ ಡಿ ಸಿಸ್ನೆರೋಸ್ ಎಂಬ ಕ್ಯಾಥೊಲಿಕ್ ಕಾರ್ಡಿನಲ್‌ನನ್ನು ಸ್ಪೇನಿಗೆ ಕರೆತರಲಾಯಿತು. “ಅನ್ಯಧರ್ಮೀಯರನ್ನು ಮೋಕ್ಷದ ದಾರಿಗೆ ಆಕರ್ಷಿಸಲು ಸಾಧ್ಯವಾಗದೇ ಹೋದರೆ ಅವರನ್ನು ಬಲವಂತವಾಗಿ ಕರೆತರಬೇಕು” ಎಂದು ಆತ ಆಜ್ಞೆ ಇತ್ತನು. ಕಾರ್ಡಿನಲ್ ಫ್ರಾನ್ಸಿಸ್ಕೋ ಸ್ಪೇನಿನ ಮುಸ್ಲಿಮರ ಸಕಲ ಕುರುಹುಗಳನ್ನು ಅಳಿಸುವ ದೃಢ ನಿಶ್ಚಯ ಮಾಡಿದನು. ಕ್ರಿ.ಶ. 1501 ಅಕ್ಟೋಬರ್ ತಿಂಗಳಲ್ಲಿ ಅರೇಬಿಕ್ ಧಾರ್ಮಿಕ ಗ್ರಂಥಗಳನ್ನು ಸುಡಲು ಆತ ರಾಜಕೀಯ ಅನುಮೋದನೆ ಪಡೆದನು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಮುಸ್ಲಿಮರನ್ನು ಜೈಲಿಗೆ ಕಳುಹಿಸಲಾಯಿತು. ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಮತ್ತು ಮತಾಂತರಗೊಳ್ಳಲು ಮನವೊಲಿಸುವ ಸಲುವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಕ್ರಿ.ಶ. 1499ರ ಡಿಸೆಂಬರ್ 18-25 ರ ನಡುವೆ ಸುಮಾರು 3000 ಮುಸ್ಲಿಮರಿಗೆ ದೀಕ್ಷಾಸ್ನಾನ (Baptism) ಮಾಡಿಸಿ ಮತಾಂತರಿಸಲಾಯಿತು.

This image has an empty alt attribute; its file name is islamic-spain-c-1024x683.jpg

ಕಿರುಕುಳ ಮತ್ತು ದಬ್ಬಾಳಿಕೆ ಮೂಲಕ ಸ್ಪಾನಿಷ್ ಸರಕಾರವು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿತು. ಅದು ದಂಗೆಗೆ ಕಾರಣವಾಗುತ್ತಿತ್ತು. ದಂಗೆಯನ್ನು ಹಿಂಸಾತ್ಮಕವಾಗಿ ನಿಗ್ರಹಿಸಲು ಸೇನೆಯನ್ನು ಬಳಸಲಾಗುತ್ತಿತ್ತು. ಗ್ರನಡಾದ ಮುಸ್ಲಿಮರು ಬೀದಿಗಳಲ್ಲಿ ಪ್ರತಿಭಟಿಸಿದರು. ಡಿ ಸಿಸ್ನೆರೋಸ್‌ನ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದರು. ಆತನನ್ನು ಪದಚ್ಯುತಗೊಳಿಸುವ ಬೆದರಿಕೆಯನ್ನು ಒಡ್ಡಿದರು. ಈ ಬಂಡಾಯವನ್ನು ಹತ್ತಿಕ್ಕಲು ಮುಸ್ಲಿಮರ ಬಾಹುಳ್ಯವಿರುವ ನಗರಗಳಿಗೆ ಸೇನೆಯನ್ನು ನುಗ್ಗಿಸಲಾಯಿತು. ಅಲ್ಲಿ ಸೇನೆಯು ನರಮೇಧವನ್ನು ನಡೆಸಿತು. ಮತ್ತು ಅಲ್ಲಿನ ಜನರನ್ನು ಸಾಮೂಹಿಕವಾಗಿ ಮತಾಂತರಿಸಲಾಯಿತು.

ಕ್ರಿ.ಶ. 1502 ಫೆಬ್ರವರಿ 12 ರಂದು ಕ್ಯಾಥಲಿಕನ್ನರು ಕ್ಯಾಸ್ಟಲ್ ಮತ್ತು ಲಿಯೋನ್ ಪ್ರಾಂತ್ಯದ ಮುಸ್ಲಿಮರ ವಿರುದ್ಧ ಮತಾಂತರ ಇಲ್ಲವೇ ಗಡಿಪಾರಿನ ಆದೇಶವನ್ನು ಶಾಸನದ ಮೂಲಕ ಹೊರಡಿಸಿದರು. ಶಾಸನದ ಮೂಲಕ ಇಸ್ಲಾಂ ಧರ್ಮವನ್ನು ಕಾನೂನು ಬಾಹಿರಗೊಳಿಸಲಾಯಿತು. ಶಾಸನದ ಪ್ರಕಾರ 14 ವರ್ಷದ ಕೆಳಗಿನ ಬಾಲಕರು 12 ವರ್ಷದ ಕೆಳಗಿನ ಬಾಲಕಿಯರು ಆಧ್ಯಾತ್ಮಿಕ ಮೋಕ್ಷ (Spiritual Salvation) ಹೊಂದುವ ಅವಕಾಶದಿಂದ ವಂಚಿತರಾಗಬೇಕಾಯಿತು. ಶಾಸನದ ಪ್ರತಿಯು ಮತಾಂತರಕ್ಕಿಂತ ಗಡಿಪಾರಿಗೆ ಒತ್ತು ನೀಡಿತು. ವಾಸ್ತವದಲ್ಲಿ ಕ್ಯಾಸ್ಟಿಲಿಯನ್ ಪ್ರಾಧಿಕಾರವು ಮತಾಂತರಕ್ಕೆ ಪ್ರಾಧಾನ್ಯತೆ ನೀಡಿತು. ಅರಗಾನ್ ಮತ್ತು ವೇಲೆನ್ಸಿಯಾ ಪ್ರಾಂತ್ಯದ ಮುದೈಹರ್ (Mudejars) ಗಳು ಒತ್ತಾಯಪೂರ್ವಕ ಮತಾಂತರಕ್ಕೆ ಒಳಗಾಗದೆ ಉಳಿದಿದ್ದರಿಂದ ಆ ಪ್ರಾಂತ್ಯಗಳಿಗೆ ವಲಸೆ ಹೋಗದಂತೆ ತಡೆಯಲಾಯಿತು. ಉತ್ತರ ಆಫ್ರಿಕಾ, ಆಟೋಮನ್ ಸಾಮ್ರಾಜ್ಯದಂತಹ ಸಾಗರೋತ್ತರ ದೇಶಗಳಿಗೂ ವಲಸೆಯನ್ನು ತಡೆದರು. ಕೊನೆಗೆ ಉಳಿದ ಒಂದು ದಾರಿ ಅಂದರೆ ಅಟ್ಲಾಂಟಿಕ್ ಬಂದರಿನ ಮೂಲಕ ಸಾಗುವುದು. ಅದು ದುರ್ಗಮ ಮತ್ತು ಪ್ರಯಾಸದ ದಾರಿಯಾಗಿದ್ದರಿಂದ ಹಲವರು ಹಿಂಜರಿದರು.

ಕ್ರಿ.ಶ. 1526ರಲ್ಲಿ ಅರಗಾನ್ ಮತ್ತು ವೆಲೆನ್ಸಿಯಾ ಗಳಲ್ಲೂ ಮತಾಂತರದ ಕಾನೂನನ್ನು ಜಾರಿಗೆ ತರಲಾಯಿತು. ಬಹುತೇಕ ಮುಸಲ್ಮಾನರು ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಆದರೆ ಅವರು ರಹಸ್ಯವಾಗಿ ಮುಸ್ಲಿಮರ ಆಚಾರಗಳನ್ನು ಪಾಲಿಸುತ್ತಿದ್ದರು. ಈ ಒಂದು ಸಮುದಾಯವನ್ನು ‘ಮೋರಿಸ್ಕೋಸ್’ (Moriscos) ಗಳೆಂದು ಕರೆಯಲಾಗುತ್ತದೆ.

ರಹಸ್ಯವಾಗಿ ಇಸ್ಲಾಂ ಧರ್ಮೀಯರಾಗಿದ್ದವರನ್ನು ನಿಯಂತ್ರಿಸಲು ನಂತರದ ದಿನಗಳಲ್ಲಿ ದಮನಕಾರಿ ಧೋರಣೆಯನ್ನು ಸ್ಪಾನಿಷ್ ಸರಕಾರವು ತಳೆಯಿತು. ಇಸ್ಲಾಮಿಕ್ ನಂಬಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಇಸ್ಲಾಮಿಕ್ ಕರ್ಮಶಾಸ್ತ್ರದ ಪ್ರಕಾರ ನಡೆಸುವ ಪ್ರಾಣಿವಧೆ (ಹಲಾಲ್) ಯನ್ನು ಕ್ರಿ.ಶ. 1511 ರಲ್ಲಿ ಕಾನೂನು ಬಾಹಿರಗೊಳಿಸಲಾಯಿತು. ಕ್ರಿ.ಶ. 1523 ರಲ್ಲಿ ಖುರ್‌ಆನ್ ಪಠಣ ಮತ್ತು ಇಸ್ಲಾಮಿಕ್ ವಸ್ತ್ರಧಾರಣೆಯನ್ನು ನಿಷೇಧಿಸಲಾಯಿತು. ಕ್ರಿ.ಶ. 1526 ರಲ್ಲಿ ವಿಶೇಷ ದಿನಗಳಲ್ಲಿನ ಸ್ನಾನ ಮತ್ತು ಅರೆಬಿಕ್ ಭಾಷೆಯ ಓದು ಮತ್ತು ಬರಹದ ಮೇಲೂ ನಿರ್ಬಂಧ ಹೇರಲಾಯಿತು. ಸೈನಿಕರು ಯಾವುದೇ ಹೊತ್ತಿನಲ್ಲಿ ಹತ್ತಿಳಿಯಲು ಅನುವಾಗುವಂತೆ ಶಂಕಿತ ಮುಸ್ಲಿಮರ ಮನೆಯ ಬಾಗಿಲನ್ನು ಸದಾ ತೆರೆದಿಡಬೇಕೆಂದು ಆದೇಶಿಸಲಾಯಿತು. ಇಸ್ಲಾಂ ಧರ್ಮವನ್ನು ಅನುಸರಿಸಿ ತಪ್ಪಿತಸ್ಥನೆಂದು ರುಜುವಾತು ಆದರೆ ನಿರ್ದಯವಾಗಿ ಕೊಲ್ಲಲಾಗುತ್ತಿತ್ತು. ಇದೊಂದು ಧಾರ್ಮಿಕ ಭಯೋತ್ಪಾದನೆಯೆಂದೇ ಹೇಳಬಹುದು. ಮೋರಿಸ್ಕೋಸ್‌ಗಳ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ನಿರಂತರ ದಾಳಿಯು ಅವರನ್ನು ಭೂಗತರಾಗುವಂತೆ ಮಾಡಿತು. ಹಾಗೂ ತಮ್ಮ ನಂಬಿಕೆಗಳಲ್ಲಿ ಅಚಲವಾಗುವಂತೆ ಮಾಡಿತು.

ತೀವ್ರವಾದ ನಿರ್ಬಂಧ ಮತ್ತು ದಾಳಿಗಳ ನಡುವೆಯೂ ಸುಮಾರು ನೂರು ವರ್ಷಗಳಷ್ಟು ಕಾಲ ಮೋರಿಸ್ಕೋಸ್‌ಗಳು ತಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಅಚಲರಾಗಿದ್ದರು. ಈ ಸಂದರ್ಭದಲ್ಲಿ ಹಲವಾರು ಇಸ್ಲಾಮಿಕ್ ಕೃತಿಗಳೂ ರಚಿಸಲ್ಪಟ್ಟವು. ಈ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸಬೇಕೆಂಬ ನಿಟ್ಟಿನಲ್ಲಿ ಕ್ರೈಸ್ತರ ಸಭೆಗಳಲ್ಲಿ ಚರ್ಚೆಗಳು ನಡೆದವು. ಕೆಲವರು ಸೌಜನ್ಯಯುತವಾಗಿ ಕಾರ್ಯಾಚರಣೆ ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಮೂಲೋತ್ಪಾಟನೆಯೇ ಪರಿಹಾರ ಎಂದು ವಾದಿಸಿದರು. ಕ್ರೈಸ್ತರೇ ಈ ಭೂಮಿಯ ವಾರಸುದಾರರು ಎಂಬುದು ಅವರ ಧೋರಣೆಯಾಗಿತ್ತು.

ಕೊನೆಗೂ, ಮೋರಿಸ್ಕೋಸ್‌ಗಳನ್ನು ಹೊರಹಾಕಬೇಕೆಂಬ ಅಭಿಪ್ರಾಯಕ್ಕೆ ಬಲ ಬಂದು, ಕ್ರಿ.ಶ. 1609 ರ ಎಪ್ರಿಲ್‌ನಲ್ಲಿ ಮೂರನೇ ಫಿಲಿಪ್ ರಾಜನು ಸ್ಪೇನಿನಲ್ಲಿದ್ದ ಎಲ್ಲಾ ಮೋರಿಸ್ಕೋಸ್‌ಗಳನ್ನು ಗಡೀಪಾರು ಮಾಡಲು ಆದೇಶವಿತ್ತನು. ಅವರ ಮೇಲೆ ಧರ್ಮದ್ರೋಹ ಮತ್ತು ದೇಶದ್ರೋಹದ ಆರೋಪ ಹೊರಿಸಲಾಯಿತು. ತಮ್ಮ ನಾಡಿನ ಭದ್ರತೆಯ ಕಾರಣ ಈ ಆದೇಶ ಹೊರಡಿಸಿದ್ದೇವೆ ಎಂದು ರಾಜನು ಸಾರಿದನು. ಸಾಮಗ್ರಿಗಳನ್ನು ಶೇಖರಿಸಲು ಮತ್ತು ಉತ್ತರ ಆಫ್ರಿಕಾ ಮತ್ತು ಯುರೋಪ್ ಕಡೆಗಿನ ಹಡಗನ್ನು ಗೊತ್ತುಪಡಿಸಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಲಾಯಿತು.

ಸ್ಪಾನಿಷ್ ಕಡಲತೀರವನ್ನು ತಲುಪುವ ಮುನ್ನವೇ ಹಲವಾರು ಮೋರಿಸ್ಕೋಗಳನ್ನು ಸೈನಿಕರು ಮತ್ತು ಕ್ರೈಸ್ತರು ದರೋಡೆಗೈದು ಕೊಂದು ಹಾಕಿದರು. ಹಡಗಿನಲ್ಲಿ ಹೊರಟ ಯಾತ್ರಿಕರಿಗೆ ತಮ್ಮ ಖರ್ಚನ್ನು ತಾವೇ ಭರಿಸಬೇಕಾಗಿತ್ತು. ನಾವಿಕರು ಆ ಯಾತ್ರಿಕರನ್ನು ಲೂಟಿ ಮಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಕೆಲವರನ್ನು ಕೊಲೆಗೈದರು. ಕೆಲದಿನಗಳಲ್ಲೇ ಫಿಲಿಪ್ ರಾಜನು ಸಂಪುಟ ಸಭೆಯಲ್ಲಿ ಗಡಿಪಾರಿನ ಆಜ್ಞೆಯನ್ನು ಕ್ಯಾಸ್ಟಲ್, ಅಂದಲೂಸಿಯ ಮತ್ತು ಅರಗಾನಿಗೂ ವಿಸ್ತರಿಸಿದನು. ಐದು ವರ್ಷಗಳಲ್ಲಿ ಸುಮಾರು 3 ಲಕ್ಷ (ಒಟ್ಟು ಜನಸಂಖ್ಯೆಯ 5%) ಮುಸ್ಲಿಮರನ್ನು ಹೆಂಗಸರು, ಮಕ್ಕಳು ಎಂಬ ಬೇಧವಿಲ್ಲದೆ ಹೊರದಬ್ಬಲಾಯಿತು. ಕ್ರಿ.ಶ‌ 1614 ರಲ್ಲಿ ಸ್ಪೇನ್ ಸರಕಾರವು ಮೋರಿಸ್ಕೋಗಳ ಸಾಮೂಹಿಕ ಹತ್ಯಾಕಾಂಡ ನಡೆಸಿತು. ಡಾಮಿಯನ್ ಫೊನ್ಸೇಕ (Damian Fonseca) ಎಂಬ ಡೊಮಿನಿಕನ್ ಪಾದ್ರಿಯು ಇದನ್ನು ‘ಒಪ್ಪಿಗೆಯ ಹತ್ಯಾಕಾಂಡ’ ಎಂದು ಕರೆದನು.

ಗಡಿಪಾರಿನ ನಂತರ ಹಲವಾರು ಮೋರಿಸ್ಕೋಗಳು ಮರಳಿ ಸ್ಪೇನ್‌ಗೆ ಮರಳುವ ವಿಫಲ ಯತ್ನ ನಡೆಸಿದರು. ಅವರನ್ನು ಥಳಿಸಿ ಓಡಿಸಲಾಯಿತು. ಕೆಲವರು ಉತ್ತರ ಆಫ್ರಿಕಾದಲ್ಲಿ ಆಶ್ರಯ ಕಂಡುಕೊಂಡರು. ಅಲ್ಲಿ ಅವರು ಅಂದಲೂಸಿಯನ್ ಅಸ್ಮಿತೆಯನ್ನು ಜೀವಂತವಾಗಿಸಿ, ಅಲ್ಲಿನ ಜನರೊಂದಿಗೆ ಬೆರೆತರು. ಡೀಗೋ ಲೂಯಿಸ್ ಮೋರ್ಲೆಮ್ ಎಂಬ ಮೋರಿಸ್ಕೋ ಓರ್ವನು ತನ್ನ ಮಾಜಿ ದೊರೆಗೆ ಬರೆದ ಪತ್ರದಲ್ಲಿ ” ಸ್ವಂತ ನಾಡನ್ನು ಕಳೆದುಕೊಂಡ ನಾವು ಕಣ್ಣೀರಿನಲ್ಲೇ ಕಳೆದಿದ್ದೇವೆ. ನಮ್ಮನ್ನು ನೀವು ಗಲ್ಲಿಗೇರಿಸುವುದಾದರೂ ಸರಿ, ನಾವು ಆ ಮಣ್ಣಿಗೆ ಕಾಲಿಡುತ್ತೇವೆ” ಎಂದು ಬರೆದಿದ್ದನು.

ಟ್ಯುನೀಶಿಯಾ ಪ್ರಾಂತ್ಯದ ಆಟೋಮನ್ ಪ್ರಾಧಿಕಾರವು ಅವರನ್ನು ಬರಮಾಡಿಕೊಂಡಿತು. ಸುಮಾರು 80 ಸಾವಿರದಷ್ಟು ಮೋರಿಸ್ಕೋಗಳು ಟ್ಯುನೀಶಿಯಾಗೆ ವಲಸೆ ಹೋದರು. ಸಿದಿ ಬುಲ್ಗೇಝ್ ಎಂಬ ಅಲ್ಲಿನ ಗವರ್ನರ್ ಅವರಿಗೆ ಬೇಕಾದ ವಲಸೆ ಸೌಲಭ್ಯಗಳನ್ನು ಒದಗಿಸಿದನು. ಮಸೀದಿ ಹಾಗೂ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ತಾತ್ಕಾಲಿಕ ಆಶ್ರಯತಾಣವಾಗಿ ಮಾರ್ಪಡಿಸಿದನು. ಯಾವುದೇ ಸರಂಜಾಮುಗಳಿಲ್ಲದೆ ಬರಿಗೈನಲ್ಲಿ ಬಂದ ವಲಸಿಗರಿಗೆ ಮೊದಲ ಒಂದು ವರ್ಷಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು. ಹಲವು ತಿಂಗಳುಗಳ ಕಾಲ ಅವರಿಗೆ ಬೇಕಾದ ಬಟ್ಟೆ-ಬರೆ ಮತ್ತು ಆಹಾರವನ್ನು ಕೂಡ ನೀಡಲಾಯಿತು.

ಉತ್ತರ ಆಫ್ರಿಕಾದಲ್ಲಿ ನೆಲೆ ಕಂಡುಕೊಂಡ ಮೋರಿಸ್ಕೋಗಳ ಮೂಲಕ ಹಳೆಯ ಮುಸ್ಲಿಂ ಸ್ಪೇನಿನ ಗತ ವೈಭವವು ಜೀವಂತವಾಗಿದೆ. ಐಬೀರಿಯನ್ ಪರ್ಯಾಯ ದ್ವೀಪದ ಶ್ರೀಮಂತ ಚರಿತ್ರೆಯನ್ನು ಅವರು ಇಂದಿಗೂ ಪ್ರಸ್ತುತ ಪಡಿಸಿದ್ದಾರೆ. ಅವರ ದುರಂತಮಯ ಗಡಿಪಾರು ಇಂದಿಗೂ ಯುರೋಪ್ ಕಂಡ ಅತಿ ದೊಡ್ಡ ಹತ್ಯಾಕಾಂಡವಾಗಿ ಗುರುತಿಸಲ್ಪಡುತ್ತಿದೆ.

ಮೂಲ: ಫಿರಾಸ್ ಅಲ್ ಖತೀಬ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

ಜಿದ್ದಾ : ಯಾತ್ರಿಕರಿಂದ ನಿರ್ಮಿತವಾದ ಜಾಗತಿಕ ನಗರ

ಜನರಿಂದ ತುಂಬಿ ತುಳುಕುತ್ತಿರುವ
ಬಾಬೆಲ್‌ನ ಮೋಡಿಯೇ
ಓ ಜನರೇ..
ಮೆಕ್ಕಾದ ಬಾಗಿಲೇ

ಖಂಡಿತವಾಗಿಯೂ
ಜಿದ್ದಾವೇ ಮೊದಲು
ಜಿದ್ದಾವೇ ಕೊನೆಯೂ

ತಲಾಲ್  ಹಂಝರ ‘ಜಿದ್ದಾ ಗೈರ್’ ಎಂಬ ಕವಿತೆಯ ಆಯ್ದ ಸಾಲುಗಳಿವು. ಜಿದ್ದಾ ನಗರವು ಕೈರೋ,ಬೈರೂತ್, ಕಾಸಾಬ್ಲಾಂಕಾ ಹಾಗೂ ಇನ್ನಿತರ ಅರಬ್ ನಗರಗಳಿಗಿಂತ ಶ್ರೇಷ್ಠವೆಂಬುದು ಕವಿಯ ಅಭಿಮತ. ಜಿದ್ದಾ ವಿಭಿನ್ನವಾದ  ನಗರವೆಂದು ತಬೂಕ್ ನಿವಾಸಿಯಾದ ಕವಿ ಸೇರಿದಂತೆ ಮೂಲನಿವಾಸಿಗಳು ಹಾಗೂ ಇನ್ನಿತರರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ಇವರೆಲ್ಲರೂ  ಹೇಳುವ  ಕಾರಣಗಳೂ  ವಿಭಿನ್ನವಾಗಿವೆ. ಸೌದಿ ಟೂರಿಸಂ ಏಜೆನ್ಸಿ ಒದಗಿಸುವ ಶಾಂತಿಯುತವಾದ ಜೀವನಶೈಲಿ, ಜಿದ್ದಾ ಸಮ್ಮರ್ ಫೆಸ್ಟಿವಲ್ ಇವೆಲ್ಲವೂ ಜಿದ್ದಾ ನಗರವನ್ನು ಭಿನ್ನವಾಗಿಸುತ್ತದೆ. ತುಲನಾತ್ಮಕವಾಗಿ, ಇತರ ಅರೇಬಿಯನ್ ನಗರಗಳಿಗಿಂತ ಜಿದ್ದಾ ನಗರದಲ್ಲಿ ನಗರ ಯೋಜನೆಯ ಕೊರತೆಗಳು ಎದ್ದು ಕಾಣುತ್ತವೆ.

ಜಿದ್ದಾ ನಗರದ ಕುರಿತು ನನ್ನ ವ್ಯಕ್ತಿಗತ ನಿಲುವನ್ನು ರೂಪಿಸುವಲ್ಲಿ, 2000 ಇಸವಿಯಲ್ಲಿ ಪ್ರಥಮ ಬಾರಿಗೆ ಜಿದ್ದಾಗೆ ಭೇಟಿ ಕೊಟ್ಟಾಗ ಅನುಭವಕ್ಕೆ ಬಂದ ಜಿದ್ದಾದ ವೈವಿಧ್ಯತೆಯು ಮುಖ್ಯ ಕಾರಣವಾಗಿದೆ. ಸುಮಾರು ನಾಲ್ಕು ದಶಲಕ್ಷದಷ್ಟು ಜನಸಂಖ್ಯೆಯಿರುವ ಜಿದ್ದಾ ನಗರ ನೆಲೆನಿಂತಿರುವುದು, ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾವನ್ನು ಒಳಗೊಂಡಿರುವ ಹಿಜಾಝ್ ಪ್ರಾಂತ್ಯದಲ್ಲಾಗಿದೆ. ಸೌದಿ ಅರೇಬಿಯಾದ ಆಧುನೀಕರಣಗೊಂಡ ಇನ್ನಿತರ ನಗರಗಳಿಗೆ ಅಪವಾದವೆಂಬಂತೆ ಜಿದ್ದಾ ಇಂದಿಗೂ ಪುರಾತನ ಗರಿಮೆಯೊಂದಿಗೆ ನೆಲೆನಿಂತಿದೆ. ಲಾಗಾಯ್ತಿನಿಂದಲೂ ಓಲ್ಡ್ ಮಾರ್ಕೆಟ್ ಸ್ಟ್ರೀಟ್ (ಸೂಕ್) ನಗರದ ಪ್ರಧಾನ ಜವಳಿ ಕೇಂದ್ರ. ಪೂರ್ವಜರ ಸಿರಿತನದ ದ್ಯೋತಕವೆಂಬಂತೆ, ಹವಳ ನಿರ್ಮಿತ ಕಟ್ಟಡ ಸಮುಚ್ಚಯಗಳು ಹಾಗೂ ಅವುಗಳಲ್ಲಿನ ಸಂಕೀರ್ಣವಾದ ಕೆತ್ತನೆಗಳನ್ನು ಇಂದಿಗೂ ಕಾಣಬಹುದು. ಓಲ್ಡ್ ಸಿಟಿ, ಮಾಲ್, ಬೀಚ್ ಹಾಗೂ ನಗರದ ಇತರ ಮೂಲೆಗಳಲ್ಲೂ ಅತ್ಯಧಿಕ ಸಂಖ್ಯೆಯಲ್ಲಿ ಜಗತ್ತಿನ ನಾನಾ ಕಡೆಗಳಲ್ಲಿನ  ಜನರನ್ನು  ದರ್ಶಿಸಬಹುದು. ಹಜ್ಜ್ ವೇಳೆಗಳಲ್ಲಿ  ಈ  ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯುಂಟಾಗುತ್ತದೆ.

“ಕೆಂಪು ಸಮುದ್ರದ  ಮದುಮಗಳು” ಎಂದು ಮೂಲನಿವಾಸಿಗಳು ಹೆಸರೆತ್ತಿ ಕರೆಯುವ ಜಿದ್ದಾ ನಗರವು ಹಲವಾರು ಬದಲಾವಣೆಗಳನ್ನು ಕಂಡಿದೆ. ಆದರೂ 1814ರಲ್ಲಿ ಜಿದ್ದಾಗೆ ಭೇಟಿ ಕೊಟ್ಟ ಲೂಯಿಸ್ ಬರ್ಕ್ ಹಾರ್ಟರ ಯಾತ್ರಾ ಕಥನದಲ್ಲಿರುವ ಜಿದ್ದಾ ನಗರವನ್ನು 21ನೇ ಶತಮಾನದ ತಲಾಲ್ ಹಂಝರ ಕವನದಲ್ಲೂ ಕಾಣಬಹುದು. ವಂಶನಾಶ ಉಂಟಾಗುವ ಮತ್ತು ಗುಳೆ ಹೊರಡುವ ಮೂಲಕ ಮೂಲನಿವಾಸಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯುಂಟಾಯಿತು.ಆದ್ದರಿಂದಲೇ ಪ್ರವಾದಿ ಕುಟುಂಬ ಪರಂಪರೆಯವರನ್ನು ಹೊರತುಪಡಿಸಿದರೆ ನಗರದ ಬಹುತೇಕರು ಜಗತ್ತಿನ ನಾನಾ ಕಡೆಗಳಿಂದ ವಲಸೆ ಬಂದ ವಿದೇಶಿಗಳು ಹಾಗೂ ಅವರ ಮಕ್ಕಳಾಗಿರುತ್ತಾರೆ ಎಂದು ಲೂಯಿಸ್ ಬರ್ಕ್ ಹಾರ್ಟರು ಸ್ಪಷ್ಟಪಡಿಸುತ್ತಾರೆ. ಹಳ್ರಮಿಗಳು, ಯಮನಿಗರು, ಭಾರತೀಯರು, ಉತ್ತರ ಆಫ್ರಿಕ ಮೂಲದವರು, ಮಿಸ್ರ್ ಮತ್ತು ಸಿರಿಯನ್ ವಂಶಜರು, ಉಸ್ಮಾನಿಯ್ಯ ಖಿಲಾಫತ್ ಅಧೀನದ  ಯುರೋಪ್, ಅನಾಟೋಲಿಯ, ಹೀಗೆ ಜಗತ್ತಿನ ವಿವಿಧ  ದಿಕ್ಕಿನಲ್ಲಿರುವವರನ್ನು ತಾನು ಜಿದ್ದಾದಲ್ಲಿ ಕಂಡಿರುವುದಾಗಿ ಇವರು ತಿಳಿಸಿದ್ದಾರೆ. ಭಾರತೀಯರನ್ನು ಹೊರತುಪಡಿಸಿ ಉಳಿದೆಲ್ಲ ಜನಸಮೂಹಗಳ ವಸ್ತ್ರಧಾರಣೆ ಮತ್ತು ಜೀವನಶೈಲಿಯಲ್ಲಿ ಅರಬ್ ಸ್ವಾಧೀನವು ಎದ್ದು ಕಂಡುಬರುತ್ತದೆ. ಜಿದ್ದಾದ ಜನರಲ್ಲಿನ ವೈವಿಧ್ಯತೆಯು ಹೊಸದೇನಲ್ಲ. ತಲಾಂತರಗಳಿಂದಲೂ ಜಿದ್ದಾ ನಗರವು ವೈವಿಧ್ಯತೆಯನ್ನು ಕಾಪಿಟ್ಟು ಕೊಂಡಿದೆ. ಇಲ್ಲಿನ ಪುರಾತನ ಮನೆತನದ ಹೆಸರುಗಳು ಈ ನಿಟ್ಟಿನಲ್ಲಿ ಬಹಳ ಗಮನಾರ್ಹವಾಗಿದೆ.  ಅವುಗಳ ಪೈಕಿ ಬಗ್ದಾದಿ, ಇಸ್ಫಹಾನಿ, ಬುಖಾರಿ, ತಕ್ರೂನಿ ಎಂಬೀ ಹೆಸರುಗಳು  ಸದ್ಯದ ಇರಾಕ್, ಇರಾನ್, ಉಝ್ಬೆಕಿಸ್ಥಾನ್, ಪಶ್ಚಿಮ  ಆಫ್ರಿಕದ ತೀರ ಪ್ರದೇಶಗಳತ್ತ ಮತ್ತು ಬಾಖಶೈನ್  ಯಮನಿನ ಹಳರಮೌತಿನತ್ತ  ಬೊಟ್ಟು ಮಾಡುತ್ತಿವೆ. ಮುಹರಂ ತಿಂಗಳಲ್ಲಿ ಆಯೋಜಿಸಲ್ಪಡುವ ಆಧ್ಯಾತ್ಮಿಕ ಸಂಗಮಗಳಿಗೆ ಮಕ್ಕಾದತ್ತ ತೆರಳಲು ಜಿದ್ದಾ ದಾರಿಯಾಗಿರುವುದೇ ಇಲ್ಲಿನ ಜನರ ವೈವಿಧ್ಯತೆಗೆ ಪ್ರಧಾನ ಕಾರಣ ಎನ್ನುತ್ತಾರೆ ಲೂಯಿಸ್ ಬರ್ಕ್ ಹಾರ್ಟ್. 19ನೇ ಶತಮಾನದಲ್ಲಿ ಉದ್ಯೋಗ ಅರಸಿ ಬಂದವರು, ವ್ಯಾಪಾರಿಗಳು, ಈಜಿಪ್ಟ್ ಸೇನೆ ಇವೆಲ್ಲಕ್ಕೂ ಹೆಚ್ಚಾಗಿ ಉಸ್ಮಾನಿಯ ಸಾಮ್ರಾಜ್ಯವು  ನಗರದ ವಿದೇಶಿಯರ ಸಂಖ್ಯೆ ಏರಿಕೆಯಾಗಲು ಹೇತುವಾದವು.

ಯಾತ್ರಿಕರ ತಂಗುದಾಣವೆಂಬಂತೆ, ಜಿದ್ದಾ ಹಿಂದೂ ಮಹಾಸಾಗರ ಮತ್ತು ಮೆಡಿಟೇರೇನಿಯನ್ ಸಮುದ್ರಗಳ ನಡುವಿನ  ಉಗ್ರಾಣವೆಂಬುವುದು ಜಿದ್ದಾದ  ಜನತೆಯ  ವೈವಿಧ್ಯತೆಯ ಪ್ರಧಾನ ಕಾರಣಗಳಲ್ಲೊಂದಾಗಿದೆ. 19ನೇ ಶತಮಾನದಲ್ಲಿ ಜಿದ್ದಾದ ಜನಸಂಖ್ಯೆ ಕೇವಲ ಹತ್ತು ಅಥವಾ ಇಪ್ಪತ್ತು ಸಾವಿರದಷ್ಟಿತ್ತು. ಹಜ್ಜ್ ವೇಳೆಯಲ್ಲಿ ಈ ಸಂಖ್ಯೆಯು ದುಪ್ಪಟ್ಟಾಗುತ್ತಿತ್ತು. ಹವಾಮಾನ ಬದಲಾವಣೆಯನ್ನು ಪರಿಗಣಿಸಿ ಕಡಲ ಮಾರ್ಗವಾಗಿ ಯಾತ್ರೆ ಹೊರಡುತ್ತಿದ್ದ ಯಾತ್ರಿಕರು, ಹಜ್ಜ್ ಗಾಗಿ ಹೊರಡುವಾಗ ಮತ್ತು ಮರಳುವಾಗ ಮಕ್ಕಾ, ಮದೀನಾ, ಜಿದ್ದಾಗಳಲ್ಲಿ ತಂಗುತ್ತಿದ್ದರು. 1870 ಮತ್ತು 80ಗಳಲ್ಲಿಯೂ ಈ ಪ್ರಕ್ರಿಯೆ ಮುಂದುವರಿಯಿತು. ಆದ್ದರಿಂದಲೇ ಜಿದ್ದಾಗೆ ಹೊರಟವರಲ್ಲಿ ತೀರ್ಥ ಯಾತ್ರಿಕರನ್ನು ಮತ್ತು ಉದ್ಯೋಗ ಅರಸಿ ಬಂದವರನ್ನು  ಬೇರ್ಪಡಿಸುವುದು ಕಷ್ಟ ಸಾಧ್ಯವಾಗಿತ್ತು. ಹಜ್ ಮುಗಿಸಿ ಮರಳುವ ಹೊತ್ತಿಗೆ ಜಿದ್ದಾದಲ್ಲಿ ತನ್ನ ವ್ಯಾಪಾರಗಳಲ್ಲಿ ತೊಡಗಿ ಖಾಯಂ ಆಗಿ ವಾಸ್ತವ್ಯ ಹೂಡಿದವರೂ, ಕೆಲಸದ ನಿಮಿತ್ತ ಜಿದ್ದಾ ತಲುಪಿ ಅನನುಕೂಲತೆಗಳ ಕಾರಣ ಸ್ವದೇಶಕ್ಕೆ ಮರಳಿದವರೂ ಇದ್ದಾರೆ. ಜಿದ್ದಾ ನಗರದ ಪ್ರಮುಖ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದದ್ದು ಹಜ್ಜ್  ವೇಳೆಯಲ್ಲಾಗಿತ್ತು. ತೀರ್ಥ  ಯಾತ್ರೆಗೆ ಹೊರಟವರ ಹಡಗುಗಳಲ್ಲಿ ವ್ಯಾಪಾರ ಸರಕುಗಳೂ ಜೊತೆಗಿರುತ್ತಿದ್ದವು. ಹೀಗೆ  ಹಜ್ಜ್ ಮೂಲಕ ವ್ಯಾಪಾರಗಳು ಚಾಲ್ತಿಗೆ ಬಂದವು. 1840ರಲ್ಲಿ ಉಸ್ಮಾನಿಯಾ ಸಾಮ್ರಾಜ್ಯದ ಸ್ವತಂತ್ರ ಗವರ್ನರ್ ಆಗಿದ್ದ ಮುಹಮ್ಮದ್ ಅಲಿ ಜಿದ್ದಾ ನಗರದ ಅಧಿಕಾರವನ್ನು ಇಸ್ತಾಂಬುಲ್ ಕೇಂದ್ರ ಆಡಳಿತಗಾರರಿಗೆ  ಮರಳಿ ಹಸ್ತಾಂತರಿಸಬೇಕಾಯಿತು. 1838ರಲ್ಲಿ ಪ್ರಾರಂಭಿಸಿದ  ಅಭಿವೃದ್ಧಿ ಯೋಜನೆಗಳು ಜಿದ್ದಾದ ಮೇಲೆ ಬಲುದೊಡ್ಡ ಪರಿಣಾಮ ಬೀರಿತು. 1840ರಲ್ಲಿ ಹಾಯಿ ದೋಣಿಗಳ ಬಳಕೆ, ತಂತ್ರಜ್ಞಾನ ಮತ್ತು ಭೌಗೋಳಿಕ ಕ್ಷೇತ್ರಗಳಲ್ಲಿ ಉಂಟಾದ  ಸಕಾರಾತ್ಮಕ ಬದಲಾವಣೆಗಳು ಜಿದ್ದಾದ ಆರ್ಥಿಕತೆಯನ್ನು ಸುಸ್ಥಿರಗೊಳಿಸಿತು. 1947 ಇಸವಿಯಲ್ಲಿ ಸಿಟಿ ವಾಲ್ ಧ್ವಂಸಗೊಂಡ ಪರಿಣಾಮವಾಗಿ ಹೊರಗಿನ ವ್ಯಾಪಾರಿಗಳೊಂದಿಗೆ ಸೂಕಿಗೆ ಸುಲಭ ಸಂಪರ್ಕ ಸಾಧ್ಯವಾಯಿತು. ವಿಶ್ವ ಮಹಾಯುದ್ಧ ಕಾರಣ ಸ್ಥಗಿತಗೊಂಡಿದ್ದ ಸೌದಿ ಅರೇಬಿಯದ ಎಣ್ಣೆ ಉತ್ಪಾದನೆ 1950ರಲ್ಲಿ ಪುನರಾರಂಭಿಸಲಾಯಿತು. ವಲಸಿಗರಾದ  ಗ್ರಾಮೀಣರು ನಗರ ಪ್ರದೇಶಗಳತ್ತ ತೆರಳಿದರು. ನಗರ ನಿವಾಸಿಗಳ ಬಾಹುಳ್ಯ ಮತ್ತು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದೇಶಗಳ ನಾಗರಿಕರಾದ ಕಾರಣ ಅಂದಿನ ಜಿದ್ದಾ ವೈವಿಧ್ಯಮಯವಾಗಿತ್ತು. 1950ರಲ್ಲಿ ವಿಮಾನ ಯಾನ ಪ್ರಾರಂಭವಾದಂದಿನಿಂದ ಹಜ್ಜ್ ಯಾತ್ರಿಕರ ಪೈಕಿ ಜಿದ್ದಾದಲ್ಲಿ ತಂಗುವ ಜನರ ಸಂಖ್ಯೆಯಲ್ಲಿ ಇಳಿಕೆ ಉಂಟಾಯಿತು. 1981ರಲ್ಲಿ ಮಕ್ಕಾದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾದ ಬಳಿಕ ಜಿದ್ದಾದ ಪ್ರಾಮುಖ್ಯತೆಯು ಕುಂಠಿತವಾಯಿತು.

ಜಿದ್ದಾದ  ಬಹುತ್ವ, ಪ್ರಾದೇಶಿಕ  ದೃಷ್ಟಿಕೋನ

ಜಿದ್ದಾದ ಸ್ಥಳೀಯ ನಿವಾಸಿಗಳು ಅನ್ಯದೇಶಿಯರು ಎಂದು ಕಡೆಗಣಿಸಲ್ಪಟ್ಟವರಲ್ಲ. ಬದಲಾಗಿ ಅವರು ಕೂಡ ಜಿದ್ದಾದ ಅವಿಭಾಜ್ಯ ಅಂಗವೇ ಆಗಿದ್ದಾರೆ. ಪ್ರತಿವರ್ಷದ ಕರ್ಮಗಳು ಜಿದ್ದಾದ‌ ಭಾಗವಾಗಿದೆ. ಜಿದ್ದಾದ ಲಿಖಿತ ಮತ್ತು ಮೌಖಿಕ ಚರಿತ್ರೆಗಳಲ್ಲಿ ಹಾಗೂ  ಇನ್ನಿತರ ಸಾಹಿತ್ಯ ಗ್ರಂಥಗಳಲ್ಲಿಯೂ ಹಜ್ಜ್ ಮತ್ತು ಯಾತ್ರಿಕರಾದ ವಿದೇಶಗಳೊಂದಿಗಿನ ಅತಿಥಿ ಸತ್ಕಾರ ಗಳ ಬಗೆಗಿನ ಪ್ರಾದೇಶಿಕ ಸಂಕಲ್ಪಗಳ ಕುರಿತಾದ ವಿವರಣೆಗಳಿವೆ.

ಇಲಾಹೀ  ಅತಿಥಿಗಳು  ಮತ್ತು ಅತಿಥಿ ಸತ್ಕಾರ

ಜಿದ್ದಾದ ಮೌಖಿಕ ಚರಿತ್ರೆಗಳ ಪ್ರಧಾನ ಪ್ರತಿಪಾದನೆ ಹಜ್ಜ್ ಯಾತ್ರಿಕರಿಗೆ ನೀಡುವ ಸತ್ಕಾರಗಳ ಕುರಿತಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಕ್ಷಮತೆಯಿರುವ ವಿಶ್ವಾಸಿ ಕಡ್ಡಾಯವಾಗಿ ನಿರ್ವಹಿಸಬೇಕಾದ ಪುಣ್ಯ ಕರ್ಮವಾಗಿದೆ ಹಜ್ಜ್. ಆ ಪುಣ್ಯ ಕರ್ಮ ನಿರ್ವಹಣೆಗಾಗಿ ಆಗಮಿಸುವ ಹಜ್ಜಾಜ್‌ ಗಳು ಅಲ್ಲಾಹನ ಅತಿಥಿಗಳು ಎಂದಾಗಿದೆ ಆತಿಥೇಯರಾದ ಅರೇಬಿಯನ್ನರ ನಂಬಿಕೆ. ಮಕ್ಕಾದ ಸಮೀಪವಿರುವ ಕಾರಣ ಅಲ್ಲಾಹನ ಅತಿಥಿಗಳನ್ನು ಸತ್ಕರಿಸುವ ಮಹತ್ಕಾರ್ಯವು ಜಿದ್ದಾದ  ನಿವಾಸಿಗಳಿಗೂ ಒದಗಿ ಬಂತು.

ಹಜ್ಜ್ ಗಾಗಿ ಆಗಮಿಸುವವರನ್ನು ಬರಮಾಡಿಕೊಳ್ಳುವ ಸಲುವಾಗಿ ನಗರದ ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿಯುಂಟಾಯಿತು. ಸರಕಾರ ಸುರಕ್ಷತೆ ಮತ್ತು ಆಹಾರವನ್ನು ಒದಗಿಸಿದರೆ, ವಸತಿ ಮತ್ತು ಯಾತ್ರಾ ಸೌಲಭ್ಯಗಳನ್ನು ದೊರಕಿಸುವ ಜವಾಬ್ದಾರಿಯು ಸ್ಥಳೀಯರದ್ದಾಗಿತ್ತು. ಅವರು ಸ್ವಂತ ಮನೆಗಳನ್ನು ಬಾಡಿಗೆಗೆ ನೀಡಿದರು. ಆಧುನಿಕ ಕಾಲದಲ್ಲಿ ಹಜ್ಜ್ ನ  ಕಾರ್ಯನಿರ್ವಹಣೆಯು ಸೌದಿ ಅರೇಬಿಯದ ಸರಕಾರಕ್ಕೆ ಬಹಳ ಗರ್ವದ ಸಂಗತಿ. 1986ರಲ್ಲಿ “ಎರಡು  ಹರಮ್‌ ಗಳ ಪರಿಚಾರಕ” ನೆಂಬ  ಪಟ್ಟವನ್ನು  ಸೌದಿ ಆಡಳಿತಗಾರರು ಸ್ವೀಕರಿಸಿರುವುದು ಈ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ. ಉಸ್ಮಾನಿಯ ಖಿಲಾಫತ್ ಕಾಲದಲ್ಲಿ, ಅಲ್ಪಕಾಲದ ಶರೀಫಿಯನ್ ಆಡಳಿತ ಕಾಲದಲ್ಲಿ ಮತ್ತು ಸೌದಿ ಅರೇಬಿಯದ ಪ್ರಥಮ ರಾಜರಾದ ಅಬ್ದುಲ್ ಅಝೀಝ್ ಆಲು ಸಊದರ  ಹಜ್ ಯಾತ್ರಿಕರ ಅಗತ್ಯ ನಿರ್ವಹಣೆಯು ಉತ್ತಮ ಆಡಳಿತದ ಸಂಕೇತವಾಗಿತ್ತು. ಅರೇಬಿಯದ ಆರ್ಥಿಕತೆಯ ಬೆನ್ನೆಲುಬಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಲ್ಲದ ಕಾಲದಲ್ಲಿ, ಹಜ್ ಯಾತ್ರಿಕರಿಗೆ ಇರುವ ಸೌಲಭ್ಯಗಳನ್ನು ಸ್ಥಳೀಯ ನಿವಾಸಿಗಳು ಒದಗಿಸುತ್ತಿದ್ದರು.

ಅತಿಥಿ ಸತ್ಕಾರ ಅರಬ್ ಮುಸ್ಲಿಮ್ ಸಂಸ್ಕೃತಿಯ ಭಾಗವಾಗಿದೆ.1777ರಲ್ಲಿ ಕ್ರಿಸ್ಟಿಯನ್ ಹೀರ್ಶ್ ಫೀಲ್ಡ್  ಪ್ರಕಟಿಸಿದ ಅತಿಥಿ ಸತ್ಕಾರದ ಕುರಿತಾದ ಕಿರು ಲೇಖನವೊಂದರಲ್ಲಿ “ಅತಿಥಿ ಸತ್ಕಾರವೆಂಬುದು ಸಾರ್ವಲೌಕಿಕವಾದ ಸತ್ಕರ್ಮವೆಂದು ಹಾಗೂ ಮಧ್ಯೆಷ್ಯಾದಲ್ಲಿ  (ಬರಹಗಾರರ ಪ್ರಕಾರ ಅರಬ್, ತುರ್ಕಿ, ಪರ್ಷಿಯನ್) ಈ ಕರ್ಮವು ಬಹಳ  ಗಾಢವಾಗಿದೆ ಮತ್ತು ವ್ಯಾಪಕವಾಗಿದೆ ಎಂದು ಹೀರ್ಶ್ಫೀಲ್ಡ್ ಅಭಿಪ್ರಾಯಪಡುತ್ತಾರೆ. ಕಾಲ ಕ್ರಮೇಣ  ಅತಿಥಿ ಸತ್ಕಾರವೆಂಬ ಸಂಕಲ್ಪ ಮತ್ತು ಅದರ  ರೀತಿಗಳಲ್ಲಿ  ಬದಲಾವಣೆ ಉಂಟಾಗಿವೆ. ಪರಂಪರಾಗತ ಅತಿಥಿ ಸತ್ಕಾರವು ಬದವೀ ಸಂಕಲ್ಪದ  “ನಂಬಿಕೆ, ಸಂರಕ್ಷಣೆ, ಗೌರವ” ಎಂಬೀ ರೂಪಕಗಳು  ಒಟ್ಟುಸೇರಿದವುಗಳಾಗಿದ್ದವು.

ಹರಮ್ ಗಳಂತೆಯೇ  ಅರಬ್ ದೇಶಗಳಲ್ಲಿರುವ ಪವಿತ್ರ ಸ್ಥಳಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಜನರಿಗೆ ಸೇರಬಹುದಾದ ಸುರಕ್ಷಿತ ತಾಣಗಳಾಗಿವೆ. ಇಸ್ಲಾಮಿನ ಆಗಮನ ಪೂರ್ವದಲ್ಲೂ ಮಕ್ಕ ಪವಿತ್ರ ಕೇಂದ್ರವಾಗಿತ್ತು. ಮಕ್ಕ ಹೊರತಾದ ಇನ್ನಿತರ ಸ್ಥಳಗಳಲ್ಲಿ ಆತಿಥೇಯರಾದ ಸ್ಥಳೀಯರ ಪಾಲನೆಯಲ್ಲಾಗಿತ್ತು ಸಂದರ್ಶಕರ ವಾಸ್ತವ್ಯ. ಸ್ವದೇಶಿಯರು ಅತಿಥಿಗಳನ್ನು ಅಪರಿಚಿತರೆಂದು ಕಡೆಗಣಿಸದೆ ಅವರಿಗಾಗಿ ತಮ್ಮ ಸ್ವಗೃಹಗಳನ್ನು ತೆರೆದಿಡುತ್ತಿದ್ದರು. ಅತಿಥಿ ಸತ್ಕಾರ ಧಾರ್ಮಿಕ ಹಕ್ಕು ಎಂಬ ನಿಟ್ಟಿನಲ್ಲೂ ಪ್ರಾಮುಖ್ಯತೆಯನ್ನು ಪಡೆಯಿತು. ಈ ಮೂಲಕ ಯಹೂದರು ಮತ್ತು ಕ್ರೈಸ್ತರಿಂದ ಬಳುವಳಿಯಾಗಿ ಬಂದ ಅತಿಥಿ ಸತ್ಕಾರದ  ಸಂಕಲ್ಪಗಳನ್ನು ಇನ್ನಷ್ಟು ಸುದೃಢಗೊಳಿಸುವಲ್ಲಿ ಇಸ್ಲಾಮ್ ಯಶಸ್ವಿಯಾಯಿತು.

ಈ ಧಾರ್ಮಿಕ ಹಕ್ಕು ಅತಿಥಿ ಮತ್ತು ಆತಿಥೇಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಿತು. ಸ್ವಗೃಹಗಳಿಗೆ ಅಪರಿಚಿತರನ್ನು ಬರಮಾಡಿಕೊಳ್ಳುವ ಉದಾತ್ತ ಪ್ರಕ್ರಿಯೆಯನ್ನು ಇನ್ನಿತರ ಧರ್ಮಗಳಲ್ಲೂ  ದರ್ಶಿಸಬಹುದು  ಮತ್ತು ಇದು ಸ್ವತಃ ರೂಪುಗೊಳ್ಳುವ ಸರ್ವ ರಾಷ್ಟ್ರೀಯತೆ (voluntaristic cosmopolitanism) ಎಂದು ಶೆಲ್ಡನ್ ಪೊಲ್ಲಾಕ್ ವ್ಯಕ್ತಪಡಿಸಿದ್ದಾರೆ. ಪ್ರಾಯೋಗಿಕ ನೈತಿಕತೆ ಎಂಬ ನಿಟ್ಟಿನಲ್ಲಿ ಧರ್ಮಗಳು ಅತಿಥಿ ಸತ್ಕಾರವನ್ನು ಹುರಿದುಂಬಿಸಿದರೂ ಪ್ರಾಥಮಿಕವಾಗಿ ಈ ಸತ್ಕರ್ಮವು ಮಾನವೀಯ ಮೌಲ್ಯಗಳ ಭಾಗವಾಗಿರಬೇಕು, ಮತ್ತು ಅತಿಥಿ ಸತ್ಕಾರವು ಮಾನವ ಹೃದಯಗಳಲ್ಲಿ ದೈವಿಕತೆಯನ್ನು ಜೀವಂತವಾಗಿರಿಸಿದೆ ಎನ್ನುತ್ತಾರೆ ಮೋನ ಸಿದ್ಧಿಕಿ. ಯಾತ್ರಿಕರು ಜಿದ್ದಾದಲ್ಲಿ ತಂಗುವಾಗ ಕರ್ಮಗಳಿಗೆ ಧರಿಸಬೇಕಾದ ಧಿರಿಸನ್ನೇ ಧರಿಸುತ್ತಿದ್ದರು. ಮಕ್ಕಾಗೆ ತೆರಳುವಾಗ ಜಿದ್ದಾ ನಿವಾಸಿಗಳು ಕೂಡ ಅವರಿಗೆ ಜೊತೆಯಾಗುತ್ತಿದ್ದರು.

ಯಾತ್ರಿಕರ ಜೊತೆಗಿನ ಈ ಸಂಬಂಧವು ಅರಬರ ವೈವಾಹಿಕ ಸಂಬಂಧಗಳಲ್ಲೂ ಪರಿಣಾಮ ಬೀರಿದೆ. ಇತರ ಗೋತ್ರಗಳಲ್ಲಿರುವವರೊಂದಿಗೆ ವೈವಾಹಿಕ  ಸಂಬಂಧ ಸಾಧ್ಯವಾಗಿದ್ದರೂ ಇತರ ಕುಟುಂಬದವರೊಂದಿಗಿನ ಸಂಬಂಧವು ಜಾರಿಯಲ್ಲಿತ್ತು. ಜಿದ್ದಾ ನಿವಾಸಿಗಳು ವಲಸಿಗರೊಂದಿಗೆ ವೈವಾಹಿಕ ಸಂಬಂಧ ಇಟ್ಟುಕೊಂಡಿರುವುದನ್ನು  ಚರಿತ್ರೆಗಳಲ್ಲಿ ದಾಖಲಾಗಿವೆ. ಒಟ್ಟಿನಲ್ಲಿ ಲೂಯಿಸ್ ಬರ್ಕ್ ಹಾರ್ಟ್ ಪ್ರತಿಪಾದಿಸಿದ ಜಿದ್ದಾ ಜನರ ನಡುವಿನ  ಕೊಡು ಕೊಳ್ಳುವಿಕೆ ಕೇವಲ ಭಾಷೆ ಮತ್ತು ವೇಷಗಳಿಗೆ ಸೀಮಿತವಾಗಿರಲಿಲ್ಲ.

ಮೂಲ: ಉಲ್ರೈಕ್ ಫ್ರೈಟಾಗ್
ಅನು: ಆಶಿಕ್ ಅಲಿ ಕೈಕಂಬ

1 3 4 5 6 7 16