ಕಲೆಯ ನೀಲಾಕಾಶವನ್ನು ಹುಡುಕುತ್ತಾ ತೈಮೂರಿನ ನಾಡಿನಲ್ಲಿ

ಉಝ್ಬೇಕಿನತ್ತ ಯಾತ್ರೆ ಬೆಳಸಬೇಕೆಂಬ ಬಯಕೆ ಬಹುದಿನಗಳಿಂದಲೇ ಮನಸ್ಸಿನಲ್ಲಿತ್ತು. ಅಲ್ಲಿನ ಆರ್ಟ್, ಆರ್ಕಿಟೆಕ್ಚರ್ ಮತ್ತು ಆಧ್ಯಾತ್ಮಿಕತೆಯನ್ನು ಗ್ರಹಿಸುವುದು ನನ್ನ ಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು. ಹೀಗಿರುವಾಗ ತುರ್ಕಿ ಕೇಂದ್ರವಾಗಿ ಕಾರ್ಯಾಚರಿಸುವ ‘ದೀನ್ ಫೌಂಡೇಶನ್’ ಉಝ್ಬೇಕಿನಲ್ಲಿ ಜ್ಯಾಮೆಟ್ರಿ ಪ್ಯಾಟೇನ್ ವರ್ಕ್ ಶಾಪ್ ನಡೆಸುವ ವಿಷಯ ತಿಳಿದಾಗ, ದೀನ್ ಫೌಂಡೇಷನ್ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಸುವ ಕಾರ್ಯಚಟುವಟಿಕೆಗಳ ಕುರಿತು ನನಗೆ ಮೊದಲೇ ತಿಳಿದಿದ್ದ ಕಾರಣ ಕಾರ್ಯಕ್ರಮಕ್ಕೆ ನನ್ನ ಹೆಸರನ್ನು ನೊಂದಾಯಿಸಿದೆ. ಪ್ರಮುಖ ಆರ್ಟಿಸ್ಟ್ ಗಳಾದ ಫ್ರಾನ್ಸಿನ ಜೀನ್ ಮಾರ್ಕೆಸ್ ಮತ್ತು ತುರ್ಕಿಯ ಸರಾಪ್ಪಿ ಎಕ್ಸಿಲರ್ ಆಗಿದ್ದರು ಈ ಕಾರ್ಯಕ್ರಮದ ಆಯೋಜಕರು. ಜಗತ್ತಿನ ಪ್ರಮುಖ ಆರ್ಟಿಸ್ಟ್ ಗಳೊಂದಿಗೆ ಕ್ಯಾಲಿಗ್ರಫಿಯಿಂದ ಸಂಪನ್ನವಾದ ಭೂಮಿಯಲ್ಲಿ ಯಾತ್ರೆ ಮಾಡುವುದು ನನ್ನ ಯಾತ್ರೆಗೆ ಇನ್ನಷ್ಟು ಹುರುಪನ್ನು ನೀಡಿತು.

ಉಝ್ಬೇಕಿನನ ಮಣ್ಣು ತನ್ನ  ಒಡಲಾಳದಲ್ಲಿ ನೂರಾರು ವರ್ಷಗಳ ಇತಿಹಾಸವನ್ನು ಹುದುಗಿಸಿಕೊಂಡಿದೆ. ನೂರಾರು ವರ್ಷಗಳ ಇತಿಹಾಸದಲ್ಲಿ ಉಝ್ಬೇಕನ್ನು ಸ್ಪರ್ಶಿಸದ ಸಾಮ್ರಾಜ್ಯತ್ವಶಾಹಿಗಳೋ, ರಾಜಮನೆತನಗಳೋ ಇರುವುದು ಕಡಿಮೆ. ಮದ್ಯಪ್ರಾಚೀನ ಕಲೆಗಳಿಂದ ಸಂಪನ್ನಗೊಂಡಿರುವ ಉಝ್ಬೇಕ್ ಕ್ಯಾಲಿಗ್ರಾಫಿಗರ ಪಾಲಿಗಂತೂ ಸ್ವರ್ಗರಾಜ್ಯ. ನಿರಂತರವಾಗಿ ನಡೆದ ರಾಜಪ್ರಭುತ್ವ , ವಿವಿದ ದೇಶಗಳಿಂದ ಬಂದ ಹಲವು ಧರ್ಮಗಳು ಮತ್ತು ಸಂಸ್ಕೃತಿಗಳು ಅಲ್ಲಿನ ಪ್ರಮುಖ ಸಂಪತ್ತುಗಳಾಗಿವೆ. ಉಝ್ಬೇಕ್ ಪುರಾತನ ಸಿಲ್ಕ್ ರೂಟ್  ಆಗಿತ್ತು. ಕ್ರಿಸ್ತನಿಗಿಂತಲೂ 500 ವರ್ಷಗಳ ಮುಂಚೆ ಚೈನಾದಿಂದ ಸಿಲ್ಕ್ ಗಳನ್ನು ಯುರೋಪಿಗೆ ತಲುಪಿಸಲು ಉಪಯೋಗಿಸುತ್ತಿದ್ದ ಮಾರ್ಗಗಳನ್ನು ಸಿಲ್ಕ್ ರೂಟ್ ಎಂದು ಕರೆಯಲಾಗುತ್ತದೆ. ವಿವಿಧ ದೇಶಗಳಿಂದ ಬಂದ ವ್ಯಾಪಾರಿಗಳು ಉಝ್ಬೇಕಿನಲ್ಲಿ ಒಟ್ಟುಸೇರುವಾಗ ಪರಸ್ಪರ ಸಂಸ್ಕಾರಗಳನ್ನು, ಧರ್ಮಗಳನ್ನು ಮತ್ತು ನಾಣ್ಯಗಳನ್ನು  ಹಂಚಿಕೊಂಡರು. ಆಧುನಿಕವಾಗಿ ನಾವು ಕಾಣುತ್ತಿರುವ ಮನಿ ಎಕ್ಸ್ಚೇಂಜ್ ಗಳ ಪ್ರಾಚೀನ ವರ್ಷನನ್ನು ಉಝ್ಬೇಕ್ ನಲ್ಲಿ ದರ್ಶಿಸಬಹುದಾಗಿತ್ತು.

ಕಾರ್ಯಾಗಾರದಲ್ಲಿ ಶಿಕ್ಷಕ ಜೀನ್ ಮಾರ್ಕೆಸ್

ಆರ್ಥಿಕತೆ, ಸಂಸ್ಕೃ ತಿಯಲ್ಲಿ ಬೇರೆ ನಗರಗಳಿಗಿಂತಲೂ ಉಝ್ಬೇಕ್ ಸುಧೃಡವಾಗಿದ್ದ ಕಾರಣ ಅಲ್ಲಿ ಅತ್ಯಂತ  ಬೃಹತ್ತಾದ ಮನೋಹರವಾದ ಕಲಾಕೃತಿಗಳು ಮೂಡಿಬಂದವು. ಜಗತ್ತಿನ ವಿವಿಧ ಬಾಗಗಳಿಂದ ಬಂದ ಕಲಾಗಾರರು ಉಝ್ಬೇಕಿನ ಮಣ್ಣಿಗೆ ಇನ್ನಷ್ಟು ಮೆರುಗನ್ನು ನೀಡಿದರು. ಉಝ್ಬೇಕ್ ಆಳಿದ ದೊರೆಗಳು ಮತ್ತು ವಶಪಡಿಸಿಕೊಂಡ ಸಾಮ್ರಾಜ್ಯತ್ವಶಾಹಿಗಳು ಅಲ್ಲಿನ ಕಲಾಕೃತಿಗಳಿಗೆ ಯಾವುದೇ ಕೇಡುಂಟುಮಾಡದ ಪರಿಣಾಮ ಅದು ಇಂದಿಗೂ ಭವ್ಯವಾಗಿ ನೆಲೆನಿಂತಿದೆ. ಇಬ್ನ್ ಬತೂತ, ಮಾರ್ಕ್ ಪೋಲೋರಂತಹ ವಿಶ್ವಸಂಚಾರಿಗಳ ಬರಹಗಳಲ್ಲಿ  ಅಂದಿನ ಬಲಿಷ್ಠ ಉಝ್ಬೇಕಿನ ವಿವರಣೆಯಿದೆ.

ಭಾರತ ಮತ್ತು ಉಝ್ಬೇಕಿಗೂ ಅವಿನಾಭಾವ ಸಂಬಂಧವಿದೆ. ಭಾರತೀಯರೆಂದು ಗೊತ್ತಾದರೆ ಸಾಕು ಅವರೊಡನೆ ಸೆಲ್ಫಿತೆಗೆಯಲು ಜನರು ಮುಗಿಬೀಳುತ್ತಾರೆ. ಇಂತಹ ಅನುಭವಗಳು ನನಗೂ ಆಗಿದೆ. ಭಾರತೀಯನೆಂದು ತಿಳಿದಾಗ ನನ್ನನ್ನು ಅಪ್ಪಿಹಿಡಿದ ಶೆಹ್ರೀಸಾಬ್ಸಿನ ಹಿರಿಜೀವ, ಜೊತೆನಿಂತು ಸೆಲ್ಫಿತೆಗೆಯಲೇ ಎಂದು ಮುಗ್ದವಾಗಿ ಕೇಳಿದ ರಿಸ್ತಾನ್ ನ ಪುಟ್ಟಬಾಲಿಕೆ ಭಾರತೀಯರೊಂದಿಗೆ ಅವರು ತೋರುವ ಪ್ರೇಮದ ಪ್ರತೀಕಗಳೆಂದು ನಾನು ಭಾವಿಸುತ್ತೇನೆ. ಭಾರತೀಯರೊಂದಿಗೆ ಅವರು ತೋರುವ ಪ್ರೀತಿ ಕೆಲವೊಮ್ಮೆ ನನ್ನನ್ನು ಅಚ್ಚರಿಗೊಳಿಸುತ್ತಿತ್ತು. ರಿಗಿಸ್ತಾನಿನಲ್ಲಿ ನನ್ನೊಡನೆ ಸೆಲ್ಫಿತೆಗೆಯಲು ಬಂದ ಯುವಕನೊಡನೆ ಈ ಕುರಿತು ನಾ ಕೇಳಿದಾಗ ಆತನ ಉತ್ತರ “ಯು ಕೇಮ್ ಟು ರೀ ಬಿಲ್ಡ್ ಅಸ್” ಎಂದಾಗಿತ್ತು. ಆತ ಹೇಳಿದ್ದು ಸರಿಯೇ, ಅಲ್ಲಿ ನಡೆಯುವ ನಿರ್ಮಾಣಕಾರ್ಯಗಳಲ್ಲಿ ಉತ್ತರಭಾರತೀಯರ ಶ್ರಮ ಎದ್ದುಕಾಣುತ್ತಿದೆ. ನಿರ್ಮಾಣ ಕಾರ್ಯಗಳಿಗೆ ಬೇಕಾದ ಮಾರ್ಬಲ್ಗಳನ್ನು ರಾಜಸ್ತಾನಿನಿಂದ ಅವರು ಆಮದುಮಾಡಿಕೊಳ್ಳುತ್ತಾರೆ. ಅಲ್ಲಿನ ಪ್ರಸಿದ್ದ ಬೀಬಿ ಖಾನಿಂ ಮಸೀದಿಯ ನಿರ್ಮಾಣಕ್ಕೆ ಉಪಯೋಗಿಸಿದ ಬೃಹತ್ ಕಲ್ಲುಗಳನ್ನು ಭಾರತದಿಂದ ಆನೆಯ ಮೂಲಕ ಉಝ್ಬೇಕಿಸ್ತಾನಿಗೆ ತಲುಪಿಸಲಾಗಿತ್ತು. ಅವರ ಈ ಪ್ರೇಮಕ್ಕೆ ಕಾರಣ ಭಾರತದ ಹಿಂದಿನ ತಲೆಮಾರುಗಳು ಮತ್ತು ಸಂಸ್ಕಾರಗಳಾಗಿವೆ. ಹೊಸ ತಲೆಮಾರಿನ ಭಾರತಕ್ಕೆ ಅಥವಾ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಆ ಸ್ನೇಹ ದಹಿಸಿಕೊಳ್ಳಲು ಅಸಾಧ್ಯ.

ಭಾರತೀಯ ಸಿನಿಮಾಗಳೆಂದರೂ ಅವರಿಗೆ ಪ್ರೀತಿ ಅದರಲ್ಲಂತೂ ಬಾಲಿವುಡ್ ಎಂದರೆ ಇನ್ನೂ ಒಂದು ಹೆಜ್ಜೆ ಮುಂದೆಯೇ. ಅವರ ಪ್ರಕಾರ ಭಾರತವೆಂದರೆ ಬಾಲಿವುಡ್ ಸಿನಿಮಾಗಳು. ಭಾರತೀಯರು ಬಾಲಿವುಡ್ ಸ್ಟಾರ್ ಗಳಂತೆ ನೃತ್ಯಮಾಡುತ್ತಾ, ಹಾಡುಹಾಡುತ್ತಾ ಮೋಜುಮಸ್ತಿನಲ್ಲಿ ಕಳೆಯುವವರೆಂಬ ಭಾವನೆ ಅವರಲ್ಲಿ ಬಹುತೇಕರಿಗಿದೆ. ಭಾರತೀಯನೇ ಎಂದು ಕೇಳುವುದಕ್ಕೆ ಬದಲಾಗಿ ನೀನು ಶಾರುಖ್ ಖಾನೇ? ಎಂಬ ಟ್ಯಾಕ್ಸಿಯವನ ಪ್ರಶ್ನೆ ನನಗೆ ನಗುತರಿಸಿತು. ಅವರ ಇಂಡ್ಯನ್ ಪ್ರೇಮಕ್ಕೆ ಬಾಲಿವುಡ್ ಕೂಡಾ ಕಾರಣವಾಗಿದೆ. ಭಾರತದ ಕೆಲವೊಂದು ಒಪ್ಪಂದಗಳಿಗೂ ಉಝ್ಬೇಕಿನ ಮಣ್ಣು ಸಾಕ್ಷಿಯಾಗಿದೆ. ಭಾರತ-ಪಾಕ್ ಕರಾರುಗಳಿಗೆ ಉಝ್ಬೇಕ್ ಆತಿಥ್ಯವನ್ನು ನೀಡಿದೆ. ಭಾರತ -ಪಾಕ್ ಚರ್ಚೆಗೆ ಉಝ್ಬೇಕಿನ ತಾಷ್ಕೆಂಟಿಗೆಗೆ ಬಂದ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅಲ್ಲಿನ ಹೋಟೆಲೊಂದರಲ್ಲಿ ನಿಧನರಾದದ್ದು ಬಹುದೊಡ್ಡ ವಾರ್ತೆಯಾಗಿತ್ತು.

ಉಝ್ಬೇಕಿನ ಒಂದು ಕಲಾಕೃತಿ

ಉಝ್ಬೇಕಿನ ತಾಷ್ಕೆಂಟ್ ಏರ್ಪೋರ್ಟಿನಿಂದ ನಮ್ಮ ಯಾತ್ರೆ ಆರಂಭಗೊಂಡಿತು. ತಾಷ್ಕೆಂಟ್ ಉಝ್ಬೇಕಿನ ಪ್ರಮುಖ ನಗರಗಳಲ್ಲೊಂದು.1924 ರಿಂದ 1991 ತನಕ ತಾಷ್ಕೆಂಟ್ ರಷ್ಯಾದ ಅಧಿನದಲ್ಲಿದ್ದ ಪರಿಣಾಮ ಆ ನಗರಕ್ಕೆ ರಷ್ಯಾದ ಮುಖಛಾಯೆಯಿದೆ. ಬೆಳಿಗ್ಗೆ ವರ್ಕ್ ಶಾಪ್ ನಂತರ ಚರಿತ್ರೆ ಸ್ಮಾರಕಗಳ ಸಂದರ್ಶನವಾಗಿತ್ತು ನಮ್ಮ ಯಾತ್ರಾ ಪ್ಯಾಕೇಜ್. ಸ್ಮಾರಕವನ್ನು ವೀಕ್ಷಿಸಲು ಹೋಗುವುದಕ್ಕಿಂತ ಮುಂಚೆ ಅಲ್ಲಿನ ಸ್ಮಾರಕದ ಚಿತ್ರವನ್ನು ಬಿಡಿಸುವುದು, ನಂತರ ಅಲ್ಲಿಗೆ ಭೇಟಿನೀಡಿ ನಮ್ಮ ಚಿತ್ರ ಮತ್ತು ಸ್ಮಾರಕವನ್ನು  ಹೋಲಿಕೆ ಮಾಡುವುದು, ಪುನಹ ಅಲ್ಲೇ ನಿಂತು ಇನ್ನೊಮ್ಮೆ ಆ ಸ್ಮಾರಕದ ಚಿತ್ರಬಿಡಿಸುವುದು ನಮ್ಮ ವರ್ಕ್ ಶಾಪಿನ ರೀತಿಯಾಗಿತ್ತು.

ಪ್ರಥಮವಾಗಿ ನಾವು ತಾಷ್ಕೆಂಟ್ ನ ಪ್ರಮುಖ ಚಾರಿತ್ರಿಕ ಸ್ಮಾರಕ  ಹಸ್ತಿ ಇಮಾಂ ಸ್ಮಾರಕಕ್ಕೆ ಬೇಟಿನೀಡಿದೆವು. ಪ್ರಮುಖ ವಿದ್ವಾಂಸ, ಕವಿ ಹಝ್ರತ್ ಇಮಾಂ ಅಬೂಬಕರ್ ಮುಹಮ್ಮದ್ ಕಫಾಲ್ ಶಾಷಿಯ ಮಖ್ಬರ ಅಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಕೇವಲ ಮಖ್ಬರ ಮಾತ್ರವಲ್ಲದೆ ಸುತ್ತಮುತ್ತ ಮದ್ರಸ, ಮಸೀದಿ ಮತ್ತು ಬುಖಾರಿ ಇನ್ಸ್ಟಿಟ್ಯೂಟ್ ಗಳೂ ಅಲ್ಲಿ ಕಾರ್ಯಾಚರಿಸುತ್ತಿದೆ. ಪ್ರಮುಖ ಗ್ರಂಥಗಳ ಕೈರಬರಹ ಪ್ರತಿಗಳು ಅಲ್ಲಿನ ಗ್ರಂಥಶೇಖರಣೆಯಲ್ಲಿದೆ. ಉಸ್ಮಾನ್ (ರ) ರವರ ರಕ್ತದ ಕಲೆಗಳಿರುವ ಮುಸ್ಹಫ್ ಇಲ್ಲಿ ಸೂಕ್ಷಿಸಿಡಲಾಗಿದೆ. ಮದ್ರಸಗಳಲ್ಲಿ ಹಲವು ವಿಷಯಗಳನ್ನು ಬೋಧಿಸುವುದರೊಂದಿಗೆ ಕ್ಯಾಲಿಗ್ರಫಿ, ಆರ್ಟ್ ಗಳನ್ನು ಕಲಿಸಲಾಗುತ್ತದೆ. ಹಲವು ಸುಂದರವಾದ ಕೆತ್ತನೆಗಳನ್ನೂ ನಮಗೆ ಕಾಣಬಹುದು. ತಾಷ್ಕೆಂಟಿನಲ್ಲಿ ಕ್ಯಾಲಿಗ್ರಫಿಗಿಂತಲೂ ಅಲ್ಲಿ ಎದ್ದುಕಾಣುವುದು ಅಲ್ಲಿನ ಜ್ಯಾಮಿಟ್ರಿ ಶೇಪ್ ಕಲಾಕೃತಿಗಳಾಗಿವೆ.

ತಾಷ್ಕೆಂಟ್ ನ ಬೀದಿಗಳು ಕಲಾಗಾರರಿಂದ ನಿಭಿಡವಾಗಿದೆ. ಕೆಲವು ಕಡೆ ಆರ್ಟ್ ವರ್ಕ್ ಗಳನ್ನು ಮಾರಾಟಕ್ಕಿಟ್ಟರೆ ಇನ್ನೊಂದು ಕಡೆ ಪ್ರದರ್ಶನಕ್ಕಿಟ್ಟಿದ್ದಾರೆ. ಪ್ರತಿಯೊಂದು ಕಲಾಕೃತಿಯಲ್ಲೂ ಅಲ್ಲಿನ ಸಂಸ್ಕೃತಿ, ಚರಿತ್ರೆ ಬಹಳ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಒಳ್ಳೊಳ್ಳೆಯ ಕಲಾಕೃತಿಗಳನ್ನು ಕಾಣುವಾಗ ಹೇಗೆ ಖರೀದಿಸದಿರಲು ಸಾಧ್ಯ? ಪ್ರತಿಯೊಂದು ಯಾತ್ರೆಯಲ್ಲಿ ಏನಾದರೂ ಹೊಸತೊಂದನ್ನು ಖರೀದಿಸಿ ಅದನ್ನು ಊರವರಿಗೆ ತೋರಿಸುವುದೂ ಕೂಡಾ ನನ್ನ ಯಾತ್ರೆಗಳ ಪ್ರಮುಖ ಉದ್ದೇಶವಾಗಿತ್ತು.

ಪ್ರತಿ ಪ್ರವಾಸಿ ಕೇಂದ್ರಗಳಲ್ಲಿ ಮಾರ್ಕೆಟ್ ಗಳಿವೆ. ಎಲ್ಲಾ ತರದ ವಸ್ತುಗಳೂ ಅಲ್ಲಿ ಲಭ್ಯ. ಮಹಿಳಾ ವ್ಯಾಪಾರಿಗಳದ್ದೇ ಇಲ್ಲಿ ಮೇಲುಗೈ. ವಯಸ್ಸಾದ ತಾಯಿಗೆ ಮಗಳು ವ್ಯಾಪಾರದಲ್ಲಿ ಸಾಥ್ ನೀಡುತ್ತಾರೆ. ಸದಾ ಪ್ರಸನ್ನ ವದನಾಗಿರುವ ಇವರು ನಗುವಾಗ ಸ್ವರ್ಣಾಲಂಕೃವಾದ ಹಲ್ಲುಗಳು ಕಾಣುತ್ತವೆ. ಸ್ವರ್ಣಾಲಂಕೃತ ಹಲ್ಲುಗಳು ಇಲ್ಲಿನ ಜನತೆಯ ವಿಶೇಷತೆಯಾಗಿದೆ. ಯು.ಎಸ್.ಎಸ್.ಆರ್ ಅಧೀನದಲ್ಲಿರುವಾಗ ನಿಗದಿತ ಪ್ರಮಾಣಕ್ಕಿಂತ ಜಾಸ್ತಿಯಿರುವ ಚಿನ್ನಗಳಿಗೆ ತೆರಿಗೆ ವಿಧಿಸಲಾಗುವುದೆಂಬ ಕಾಯ್ದೆ ಬಂದಾಗ, ಕಾಯ್ದೆಯಿಂದ ರಕ್ಷಿಸಲೋಸುಗ ಜನರು ತಮ್ಮಲ್ಲಿರುವ ಹೆಚ್ಚುವರಿ ಚಿನ್ನವನ್ನು ಹಲ್ಲುಗಳಾಗಿ ಪರಿವರ್ತಿಸಿದ ಪರಿಣಾಮ ಇಲ್ಲಿನ ಬಹುತೇಕರ ಹಲ್ಲುಗಳು ಸ್ವರ್ಣಾಲಂಕೃತವಾಗಿದೆ.

ತೈಮೂರಿನ ಪ್ರತಿಮೆ

ಸಮರ್ಖಂದ್, ನಮ್ಮ ಎರಡನೇ ಗಮ್ಯ ಸ್ಥಾನ. ಇದು ತಾಷ್ಕೆಂಟ್ ಪಟ್ಟಣಕ್ಕಿಂತಲೂ ವಿಭಿನ್ನವಾಗಿ ಉಝ್ಬೇಕಿನ ನೈಜ ಪಾರಂಪರ್ಯೆಯನ್ನು ಸಾರುವ ಪಟ್ಟಣವಾಗಿದೆ. ಅಲೆಗ್ಸಾಂಡರ್ ದಿ ಗ್ರೇಟ್, ತೈಮೂರ್ ಚೆಂಗೀಸ್ ಖಾನ್ ರಂತಹ ಸಾಮ್ರಾಜ್ಯತ್ವ ಮೋಹಿಗಳ ಪಾದದಡಿಯಲ್ಲಿ ನಲುಗಿದ, ಉಮರ್ ಖಸ್ಸಾಮಿಯಂತಹ ದಿಗ್ಗಜರಿಗೆ ಜನ್ಮವಿತ್ತ ಸಮರ್ಖಂದ್ ಎರಡು ಸಾವಿರ ವರ್ಷಗಳ ಹಿಂದೆಯೇ ಜಗತ್ತಿನ ಸಾಂಸ್ಕಾರಿಕ ತಾಣವಾಗಿತ್ತೆಂದು ವಿಶ್ವಂಸಂಚಾರಿ ಮಾರ್ಕ್ ಪೋಲೋನ ವಿವರಣೆಯಲ್ಲಿ ಕಾಣಬಹುದು. ಇದು ಭುವಿಯ ಸ್ವರ್ಗವೆಂದಾಗಿದೆ ಜುವೈನಿಯವರ ಸರ್ಟಿಫಿಕೇಟ್. ತೈಮೂರ್ ಚಕ್ರವರ್ತಿಯ ಆಡಳಿತ ಕಾಲದಲ್ಲಿ ಸಮರ್ಖಂದ್ ರಾಜಧಾನಿಯಾಗಿತ್ತು. ನೀಲಗುಮ್ಮಟಗಳನ್ನು ಇಲ್ಲಿನ ಬಹುತೇಕ ಎಲ್ಲಾ ಕಟ್ಟಡಗಳಲ್ಲಿ ಕಾಣಬಹುದು. ಸಮರ್ಖಂದ್ ಪಟ್ಟಣವನ್ನು ಯುನೆಸ್ಕೋ ತನ್ನ ಚಾರಿತ್ರಿಕ ಸ್ಥಾನಗಳಲ್ಲಿ ಸೇರಿಸಿದೆ. ಸಮರ್ಖಂದ್ ಯಾತ್ರೆಯ ಪ್ರಮುಖ ತಾಣವಾಗಿದೆ ರಿಗಿಸ್ತಾನ್. ರಿಗಿಸ್ತಾನ್ ಜಗತ್ತಿನ ಅತ್ಯಂತ ದೊಡ್ಡ ಚೌಕಗಳಲ್ಲೊಂದು. ಸಮರ್ಖಂದಿನ ಹೃದಯವೆಂದು ಕರೆಯಲಾಗುವ ರಿಗಿಸ್ತಾನ್ ಚೌಕದ ಆಸುಪಾಸು ಮೂರು ಮದ್ರಸಗಳಿವೆ. ಉಲುಗ್ ಬೇಗ್ ಮದ್ರಸ, ಟಿಲ್ಯ ಕೋರಿ ಮದ್ರಸ ಮತ್ತು ಶೆರ್ ಡೋರ್ ಮದ್ರಸ. ಹದಿನಾಲ್ಕು ಶತಮಾನಕ್ಕಿಂತ ಮುಂಚಿನಿಂದಲೂ ವಿದ್ಯಾರ್ಜನೆಗಾಗಿ ಜನರು ಈ ಪಟ್ಟಣವನ್ನು ಆಶ್ರಯಿಸುತ್ತಿದ್ದರು. ಸುಂದರ ಪಟ್ಟಣವಾಗಿರುವ ರಿಗಿಸ್ತಾನ್ ರಾತ್ರಿಯಂತೂ ವರ್ಣಾಲಂಕೃತಗೊಂಡು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಶೆರ್ ಡೋರ್ ಮದ್ರಸದ ಗೋಡೆಯಲ್ಲಿದ್ದ “ಒಂದು ಹುಲಿ, ಅದರ ಮುಂದೆ ಜಿಂಕೆಗಳ ಹಿಂಡು, ನೇರಮೇಲೆ ಸೂರ್ಯಕಿರಣದಿಂದಾವೃತವಾದ ಮುಖವಿರುವ ಭಿತ್ತಿಚಿತ್ರ ನನ್ನನ್ನು ಬಹುವಾಗಿ ಆಕರ್ಷಿಸಿತು. ಅದರ ರಹಸ್ಯವೇನೆಂದು ಗೈಡ್ ನೊಡನೆ ಕೇಳಿದಾಗ “ಮದ್ರಸ ಎನ್ನುವಾಗ ಅಲ್ಲಿಗೆ ನಾನಾತರದ ಮಕ್ಕಳು ಬರುತ್ತಾರೆ. ಕೆಲವರದ್ದು ಮೃಗೀಯ ಸ್ವಭಾವ. ಅವರು ಕಲಿತು ಜಿಂಕೆಯ ಹಿಂಡಿನಂತೆ ಬಹಳ ಅನುಸರಣೆಯುಳ್ಳವರಾಗುತ್ತಾರೆ. ಸೂಕ್ತ ವಿಧ್ಯೆ ಲಭಿಸಿದಾಗ ಅವರು ಸೂರ್ಯಕಿರಣದಂತೆ ಜಗದಗಲ ಬೆಳಕ ಚೆಲ್ಲುವ ವ್ಯಕ್ತಿಗಳಾಗುವರು ಎಂಬ ಆತನ ವಿವರಣೆ ಬಹಳ ಹೃದಯಸ್ಪರ್ಷಿಯಾಗಿತ್ತು. ಮದ್ರಸಕ್ಕೆ ಸೂಕ್ತವಾದ ಭಿತ್ತಿಚಿತ್ರವಾಗಿತ್ತದು. ನಂತರ ನಾವು ಬೀಬಿ ಖಾನಿಂ  ಮಸೀದಿಗೆ ಭೇಟಿನೀಡಿದೆವು. ಖಾನಿಂ ಮಸೀದಿ ಮತ್ತು ಭಾರತಕ್ಕೂ ಐತಿಹಾಸಿಕ ಸಂಬಂಧವಿದೆ. 1399 ರಲ್ಲಿ ಭಾರತವನ್ನು ವಶಪಡಿಸಲು ಬಂದ ತೈಮೂರ್ ದೆಹಲಿಯ ಬೃಹತ್ ಕಟ್ಟಡಗಳನ್ನು, ಕೆತ್ತನೆಗಳನ್ನು ಕಂಡು ಅಚ್ಚರಿಗೊಳ್ಳುತ್ತಾನೆ. ನನ್ನ ರಾಜ್ಯದಲ್ಲೂ ಇದೇ ರೀತಿಯ  ಬೃಹತ್ತಾದ ಕಟ್ಟಡ ನಿರ್ಮಿಸಬೇಕೆಂಬ ಜಿದ್ದಿಗೆ ಬಿದ್ದ ತೈಮೂರ್ ಅದಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಂದ ಕಲಾಗಾರರನ್ನು ಒಟ್ಟುಸೇರಿಸಿ ಕಟ್ಟಡ ನಿರ್ಮಿಸುವಂತೆ ನಿರ್ದೇಶಿಸುತ್ತಾನೆ. ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಬೃಹತ್ ಕಲ್ಲುಗಳನ್ನು ಭಾರತದಿಂದ ಆನೆಗಳ ಮೂಲಕ ತರಿಸಿದನೆಂದು ಇತಿಹಾಸ ತಿಳಿಸುತ್ತದೆ.

ಸಹ ಪ್ರಯಾಣಿಕನ ಕಲಾಭ್ಯಾಸ

ಸಮರ್ಖಂದಿ ನ ಎಲ್ಲಾ ಚಾರಿತ್ರಿಕ ಕೇಂದ್ರಗಳನ್ನು ಸಂದರ್ಶಿಸುವುದು ಅಲ್ಪತ್ರಾಸದಾಯಕ. ನೂರಾರು ಶತಮಾನಗಳ ಚರಿತ್ರೆಯಿರುವ ಸಮರ್ಖಂದ್ ಸಂಚಾರಿಗಳ ಪಾಲಿಗೆ ಸ್ವರ್ಗ. ಸಮರ್ಖಂದ್ ಮತ್ತು ಬುಖಾರಾದ ನಡುವೆ ಗುರ್ ಐ ಅಮೀರ್ ಎಂಬ ಸ್ಥಳವಿದೆ. ಇದು ಉಝ್ಬೇಕಿಗರ ಆರಾಧ್ಯಪುರುಷನಾದ ತೈಮೂರ್ ನ ಸಮಾಧಿಯಿರುವ ಸ್ಥಳ. ಜಗತ್ತಿನ ವಿವಿಧ ರಾಜ್ಯಗಳಿಗೆ ತೈಮೂರ್ ಅಕ್ರಮಿಯಾಗಿದ್ದರೂ ಇಲ್ಲಿನವರಿಗೆ ಆತ ಆರಾಧ್ಯಪುರುಷ. ಇತರ ನಗರಗಳ ನಡುವೆ ಉಝ್ಬೇಕನ್ನು ಸುದೃಢವಾಗಿಸಿದ ಆಡಳಿತಾಧಿಕಾರಿ. ಭಾರತದ ಪ್ರಮುಖ ಐತಿಹಾಸಿಕ ತಾಣಗಳಾಗಿರುವ ಹುಮಾಯೂನ್‌ ಟೋಂಬ್, ತಾಜ್ ಮಹಲಿನ ನಿರ್ಮಾಣಗಳಲ್ಲಿ ಇಲ್ಲಿನ ವಾಸ್ತುಕಲೆಗಳನ್ನು ಬಳಸಲಾಗಿದೆ. ತೈಮೂರಿನ ಆದ್ಯಾತ್ಮಿಕ ಗುರುವಾಗಿದ್ದ ಸಯ್ಯಿದ್ ಬರಕರವರ ಸಮಾಧಿಯನ್ನು ಒಳಗೊಂಡಿರುವ ಈ ಪ್ರದೇಶ ಬಹಳ ಆದ್ಯಾತ್ಮಿಕ ಪ್ರಭೆಯನ್ನು ಸೂಸುತ್ತದೆ. ಬಸ್ಸಿನಿಂದಿಳಿದು ಆ ಸ್ಥಳಕ್ಕೆ ಸ್ವಲ್ಪ ನಡೆಯಲಿಕ್ಕಿದೆ. ಗೈಡ್ ಎಲ್ಲರನ್ನೂ ಇಳಿಸಿ ಅರ್ಧಗಂಟೆಯಲ್ಲಿ ಎಲ್ಲರೂ ಬಸ್ಸಿಗೆ ತಲುಪಬೇಕೆಂದು ನಿರ್ದೇಶಿಸಿದ. ಅಲ್ಲಿರುವ ಮಖ್ಬರಗಳನ್ನು ಸಂದರ್ಶಿಸುತ್ತಾ, ಕೆತ್ತನೆಗಳನ್ನು ವೀಕ್ಷಿಸುತ್ತಾ ನಾನೊಬ್ಬ ಸೋಲೋ(solo) ಯಾತ್ರಿಕನಂತೆ ಮುಂದೆ ನಡೆಯುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಾಗಲೇ ನಮ್ಮ ಸಮಯ ಮುಗಿದಿತ್ತು. ದಡಬಡಿಸಿ ತಿರುಗಿ ಓಡೋಡಿ ಬಂದೆನಾದರೂ ನಮ್ಮ ಬಸ್ಸು ಅಲ್ಲಿ ಕಾಣುತ್ತಿಲ್ಲ. ಬಸ್ಸು ನನ್ನನ್ನು ಬಿಟ್ಟುಹೋಗಿರಬಹುದೆಂದು ಭಾವಿಸಿದೆ. ಯಾರನ್ನು ಸಂಪರ್ಕಿಸಲಿ..?ಮೊಬೈಲ್ ನಲ್ಲಿ ನೆಟ್ವರ್ಕ್,ವೈಫೈ ಏನೂ ಇಲ್ಲ.ನನ್ನಲ್ಲಿದ್ದ ಸೋಲೋ ಯಾತ್ರಿಕನ ಆವೇಶ ಕ್ಷಣಮಾತ್ರ. ವ್ಯಕ್ತಿಯೊಡನೆ ವೈಫೈ ಕನೆಕ್ಟ್ ಮಾಡುವಂತೆ ವಿನಂತಿಸಿದೆ. ಆಗ ಪಕ್ಕದಲ್ಲಿದ್ದವ ಆಂಗ್ಯ ಭಾಷೆಯಲ್ಲಿ ಬಸ್ಸನ್ನು ಬೇರೆ ಕಡೆ ನಿಲ್ಲಿಸಿದ್ದಾರೆಂದು ತಿಳಿಸಿದ. ಸಿಕ್ಕಿದ ವಾಹನವನ್ನೇರಿ ಆ ಭಾಗದತ್ತ ದೌಢಾಯಿಸಿದೆ. ಅಲ್ಲಿಗೆ ತಲುಪಿದಾಗ ಬಸ್ಸು ಮತ್ತು ಯಾತ್ರಿಕರು ನನ್ನನೇ ಕಾಯುತ್ತಿದ್ದರು. ಅವರ ಮುಖದಲ್ಲಿ ಯಾರಿಗೋ ಕಾಯಬೇಕಾಗಿ ಬಂದುದರ ಕುರಿತು ಕೋಪವೋ, ಸಿಡುಕೋ ಇರಲಿಲ್ಲ. ಅವರ ಈ ವರ್ತನೆ ಸೆಕೆಂಡುಗಳು ತಡವಾದರೂ ಸಿಡುಕುವ ಜನತೆಗಳಲ್ಲೋರ್ವನಾಗಿರುವ ನನಗೆ ಬಹಳ ಅಚ್ಚರಿಯನ್ನುಂಟುಮಾಡಿತು.

ಬುಖಾರಾ ನಮ್ಮ ಯಾತ್ರೆಯ ಕೊನೆಯ ಸ್ಥಳ. ಇಮಾಂ ಬುಖಾರಿ, ಬಹಾವುದ್ದೀನ್ ನಕ್ಷಬಂದಿ ಶೈಖ್ ರವರ ಜನ್ಮಭೂಮಿ. ವಾಸ್ತುಕಲೆಗಳ ಕನ್ನಡಿಯಂತಿದೆ ಬುಖಾರ. ಆರನೇ ಶತಮಾನದ ಚರಿತ್ರೆಗಳನ್ನೂ ಅಲ್ಲಿ ಬರೆಯಲ್ಲಟ್ಟಿದೆ. ಅದಕ್ಕಿಂತ ಮುಂಚೆಯೇ ಬುಖಾರ ಉಝ್ಬೇಕಿನನ ಪ್ರಮುಖ ಪಟ್ಟಣವಾಗಿತ್ತು. ಬುಖಾರ ಎಂದರೆ ಭಾಗ್ಯಗಳ ನಗರ ಎಂದಾಗಿದೆ. ಹಲವು ರಾಜರುಗಳು ಆಡಳಿತನಡೆಸಿದರೂ, ಹಲವು ಸಾಮ್ರಾಜ್ಯಶಾಹಿಗಳು ವಶಪಡಿಸಿಕೊಂಡರೂ ಬುಖಾರ ಪಟ್ಟಣವನ್ನು ಅವರು ಚಿನ್ನದಂತೆ ಕಾಪಾಡಿದರು. ರಷ್ಯಾದ ಅಧೀನದಲ್ಲಿರುವಾಗಲೂ ಯಾವುದೇ ಬದಲಾವಣೆಗಳು ಅಲ್ಲಿ ಉಂಟುಮಾಡಲಿಲ್ಲ. ಒಂದರ್ಥದಲ್ಲಿ ಆರನೇ ಶತಮಾನದಲ್ಲಿ ಸ್ತಬ್ಧಗೊಂಡ ನಗರದಂತೆ ಬುಖಾರಾ ಕಾಣುತ್ತದೆ. ಬೇರೆ ಪಟ್ಟಣಗಳಂತೆ ಇಲ್ಲಿ ಬೃಹತ್ ಕಟ್ಟಡಗಳಿಲ್ಲ. ಮೇಲೆ ನೀಲಾಕಾಶ, ಕೆಳಗೆ ಹಚ್ಚಹಸುರಿನಿಂದ ಕೃಷಿಗಳಿಂದ ಕಂಗೊಳಿಸುವ ಗ್ರಾಮೀಣ ಪ್ರದೇಶ. ಗೆಳೆಯ ಸಹೀದ್ ರೂಮಿ ನನಗಾಗಿ ಕಾಯುತ್ತಿದ್ದ. ಮಲಪ್ಪುರಂ ಸ್ವದೇಶಿಯಾದ ಈತ ಬುಖಾರದಲ್ಲಿ ಬ್ಯುಸಿನೆಸ್ ನಡೆಸುತ್ತಿದ್ದಾನೆ. ನಂತರದ ದಿನಗಳಲ್ಲಿ ನನ್ನ ಯಾತ್ರೆ ಗೆಳೆಯ ರೂಮಿಯ ಜೊತೆಯಾಗಿತ್ತು. ಆತನ ಗೆಳೆಯನ ಮನೆಗೆ ಹೋದದ್ದು, ಆಪ್ರಿಕೋಟ್ ತೋಟದ ನಡುವೆ ಔತಣವುಂಡದ್ದು, ಅಪ್ರಿಕೋಟ್ ಕೊಯ್ದು ತಿಂದದ್ದು ಬುಖಾರಾದ ನನ್ನ ರಾತ್ರಿಗಳಿಗೆ ಇನ್ನಷ್ಟು ಕಳೆಯನ್ನು ನೀಡಿತು.

ಉಝ್ಬೇಕಿನ ಒಂದು ಕಲಾಕೃತಿಯ ಬಳಿ ಲೇಖಕ

ಆದ್ಯಾತ್ಮಿಕ ಪ್ರಭೆ ಬುಖಾರಾದ ವಿಶೇಷತೆಯಾಗಿದೆ. ಪ್ರಮುಖ ಸೂಫಿ ,ಬಹಾವುದ್ದೀನ್ ನಕ್ಷಬಂದಿರವರ ಮಖ್ಬರವಿದೆ. ನಕ್ಷಬಂದಿ ತ್ವರೀಕತ್ತಿನ ತವರೂರಾಗಿದೆ ಬುಖಾರಾ. ಸಾವಿರಾರು ಅನುಯಾಯಿವೃಂದಗಳು ಅವರ ಮಖ್ಬರದ ಬಳಿ ಬರುತ್ತಾರೆ. ಅವರಲ್ಲೊಬ್ಬನಾಗಿ ನಾನು ಮಖ್ಬರದ ಬಳಿ ತೆರಳಿ ಸಲಾಂ ಹೇಳಿ ಅಲ್ಪ ಸಮಯ ಪ್ರಾರ್ಥಿಸಿ ಹೊರಬಂದೆ. ಅಲ್ಲಿನ ಗೋಡೆಗಳ ಬರಹಗಳನ್ನು, ಕೆತ್ತನೆಗಳನ್ನು , ವಾಸ್ತುಕಲೆಗಳನ್ನು ವೀಕ್ಷಿಸುತ್ತಿದೆ. ಶೈಖ್ ರವರು ತನ್ನ ಶಿಷ್ಯರಿಗೆ ನೀಡುತ್ತಿದ್ದ ಉಪದೇಶಗಳನ್ನು ಗೋಡೆಗಳಲ್ಲಿ ಕೆತ್ತಲಾಗಿತ್ತು. “Occupy your herats with allah and your hands with work” ಎಂಬ ಬರಹ ನನ್ನನ್ನು ಬಹು ಆಕರ್ಷಿಸಿತು. ಇದು ಕೆಲಸಗಳಿಗೆ ಹೋಗದೆ ಬರೇ ದ್ಸಿಕ್ರ್ ಗಳಲ್ಲಿ, ನಮಾಝಿನಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದ ತನ್ನ ಅನುಚರರಿಗೆ ನೀಡಿದ ತಾಕೀತ್ ಆಗಿತ್ತು.

ಸಹಪ್ರಯಾಣಿಕರೊಂದಿಗೆ

ಆರ್ಕಿಟೆಕ್ಚರ್, ಕಲೆಗಳ,ಪಾಂಡಿತ್ಯದ ಮನೋಹರ ಭೂಮಿಯಾದ ಉಝ್ಬೇಕ್ ಗೆ ವಿದಾಯ ಹೇಳುವ ಸಮಯವಾಯಿತು. ಬುಖಾರಾದಿಂದ ಟ್ರೈನ್ ಮೂಲಕ ತಾಷ್ಕೆಂಟ್ ತಲುಪಿದೆ. ಹಲವು ಪ್ರದೇಶಗಳನ್ನು ನೋಡಿ ಇನ್ನೂ ಹಲವು ಪ್ರದೇಶಗಳನ್ನು ನೋಡದೆ ಬಾಕಿಯುಳಿಸಿ ತಾಷ್ಕೆಂಟ್ ನಿಂದ ನಾನು ವಿಮಾನವೇರಿದೆ. ಎಲ್ಲವನ್ನೂ ಒಮ್ಮೆಲೇ ನೋಡಿ ಮುಗಿಸದೆ ಇನ್ನೊಮ್ಮೆ ನೋಡಲು ಕೆಲವೊಂದನ್ನು ಬಾಕಿಯುಳಿಸಬೇಕೆಂದಲ್ಲವೇ. ನೋಡಲು ಇನ್ನಷ್ಟು ಪ್ರದೇಶಗಳನ್ನು ಬಾಕಿಯುಳಿಸುತ್ತಾ ಉಝ್ಬೇಕ್ ಗೆ ಗುಡ್ ಬೈ ಹೇಳಿದೆ.

ಮೂಲ ಬರಹ: ಕರೀಂ ಗ್ರಾಫಿ
ಅನುವಾದ: ಸ್ವಾದಿಖ್ ಮುಈನಿ ಗಡಿಯಾರ್
  

Leave a Reply

*