ಚರಿತ್ರೆ ಮತ್ತು ವರ್ತಮಾನಗಳ ನಡುವೆ ದೆಹಲಿಯ ಸಾಂಸ್ಕೃತಿಕ ಸೊಬಗು

ದೆಹಲಿಯ ಸುಡು ಬಿಸಿಲಿನಲ್ಲಿ, ಹೇಗಾದರೂ ರೂಮನ್ನು ತಲುಪಿ ಬಿಡುವ ತರಾತುರಿಯಲ್ಲಿ ನಾನಿದ್ದೆ. ಹಳೆಯ ಟ್ಯಾಕ್ಸಿಯೊಂದರಲ್ಲಿ ಮಡದಿ ಮತ್ತು ಮಗು ನನ್ನ ಜೊತೆಗಿದ್ದರು. ಟ್ಯಾಕ್ಸಿಯು ಗಲ್ಲಿಯೊಂದರ ಸವೆದ ರಸ್ತೆಯ ಮೂಲಕ ಮುಂದೆ ಸಾಗುತ್ತಿತ್ತು. ನಗರದ ತಾಪಮಾನ ನೂರರ ಗಡಿ ದಾಟಿದಂತಿತ್ತು. ಜನನಿಬಿಡವಾಗಿದ್ದ ಹಾದಿಯು ಧೂಳು ಮತ್ತು ಹೊಗೆಯಿಂದ ಆವೃತವಾಗಿತ್ತು.

ರಸ್ತೆ ಇಕ್ಕೆಲಗಳಲ್ಲಿಯೂ ಊಟ ಮಾಡುವವರು, ಬಟ್ಟೆ ಒಗೆಯುವವರು, ನಿದ್ದೆಗೆ ಜಾರಿದವರು ಪಯಣಿಗರು ಹೀಗೆ ವಿವಿಧ ತೆರನಾದ ಜನರನ್ನು ಕಾಣಬಹುದಿತ್ತು. ಆ ಮಧ್ಯೆ ಭಿಕ್ಷುಕನೊಬ್ಬ ನಮ್ಮೆಡೆಗೆ ಕೈ ಚಾಚಿದನು. ಸಾರ್ವಜನಿಕವಾಗಿ ಉಚ್ಚೆ ಹೊಯ್ಯುವವರು, ಬಸ್ಸುಗಳಲ್ಲಿ ನೇತಾಡುತ್ತಿರುವವರು, ಪ್ರಾಣಿಗಳನ್ನು ಮೇಯಿಸುವವರು, ಅತ್ತಿತ್ತ ಓಡಾಡುತ್ತಿರುವವರು, ವಾಹನಗಳ ಹಾರ್ನ್, ಧೂಳು, ಸುಡು ಬಿಸಿಲು, ಸದ್ದು-ಗದ್ದಲ, ಬೀದಿಬದಿ ಅಡುಗೆಯ ಬೆಂಕಿ.. ಒಟ್ಟಾರೆ ಸುತ್ತಮುತ್ತಲೂ ಉಸಿರುಗಟ್ಟಿಸುವ, ಭಯಭೀತಗೊಳಿಸುವ ವಾತಾವರಣವಿತ್ತು. ಏನಾದರೂ ಅಹಿತಕರವಾದ ಘಟನೆಗಳು ನಡೆಯಬಹುದೆಂಬ ದಿಗಿಲುಂಟಾಯಿತು. ಆದರೆ ಅಂತಹದ್ದು ಏನೂ ಘಟಿಸಲಿಲ್ಲ. ನಮ್ಮ ದಿಗ್ಭ್ರಮೆ ಕಂಡರೆ ನಗು ಬರಿಸುವಂತಿತ್ತು. ಆದರೆ ದೆಹಲಿಗೆ ಪ್ರಥಮ ಬಾರಿಗೆ ಭೇಟಿ ನೀಡುವ ಯಾವುದೇ ವಿದೇಶಿ ಯಾತ್ರಿಕನಿಗೆ ಇವೆಲ್ಲವೂ ಭಯಾನಕವಾಗಿ ತೋರುವುದು ಸಹಜ.”

ಚಾಂದಿನಿ ಚೌಕ್

60ರ ದಶಕದಲ್ಲಿ ತನ್ನ ಮೊಟ್ಟ ಮೊದಲ ದೆಹಲಿ ಭೇಟಿಯ ಕುರಿತು “ಜನಸಂಖ್ಯಾ ಸ್ಫೋಟ (The Population Bomb)” ಎಂಬ ಕೃತಿಯಲ್ಲಿ ಪೋಲ್ ಎಲ್ರಿಕ್ (Paul R. Ehrlich) ನೀಡಿದ ನಾಟಕೀಯ ವಿವರಣೆಗಳಿವು. ಜಗತ್ತು ಎದುರಿಸಲಿರುವ ಭೀಕರ ಬಡತನದ ಬಗ್ಗೆ ನಾನು ಈಗಾಗಲೇ ಶೈಕ್ಷಣಿಕ ತಿಳುವಳಿಕೆಯನ್ನು ಹೊಂದಿದ್ದರೂ, ಅದು ಎಷ್ಟು ಭೀಕರವಾಗಿರುತ್ತದೆ ಎಂದು ನಾನು ಮೊದಲ ಬಾರಿಗೆ ಅನುಭವಿಸಿದೆ ಎಂದು ಅವರು ದೆಹಲಿ ಅನುಭವದ ಬಗ್ಗೆ ಹೇಳಿದ್ದರು. ಜನಸಂಖ್ಯೆ ಏರಿಕೆ ಕಾರಣದಿಂದಾಗಿ ಹಸಿವಿನಿಂದ ಸಾಯುವವರ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆ ಉಂಟಾಗುತ್ತದೆ ಎಂಬ ‘ಸ್ಫೋಟಕ ಮಾಹಿತಿ’ಯನ್ನು ಬಹಿರಂಗಪಡಿಸುತ್ತಾ ಪ್ರಕಟಗೊಂಡ “ಜನಸಂಖ್ಯಾ ಸ್ಫೋಟ” ಅಧಿಕ ಸಂಖ್ಯೆಯಲ್ಲಿ ಬಿಕರಿಯಾಯಿತು. ಮುಂದಿನ ದಶಕದಲ್ಲಿ ಕೋಟಿಗಟ್ಟಲೆ ಜನರು ಹಸಿವಿನಿಂದ ಸಾವಿಗೆ ಶರಣಾಗುವರು ಎನ್ನುತ್ತಾ ಎಲ್ರಿಕ್ ತನ್ನ ಪುಸ್ತಕವನ್ನು ಪ್ರಾರಂಭಿಸುತ್ತಾರೆ. ಆದರೆ ಜನಸಂಖ್ಯಾ ಸ್ಫೋಟ ಘೋಷಿಸಿದ ಬಿಕ್ಕಟ್ಟನ್ನು ಹಸಿರು ಕ್ರಾಂತಿಯ ಮೂಲಕ ನಿವಾರಿಸಲಾಯಿತು. 2000 ಇಸವಿಗೆ ಅದೃಶ್ಯವಾಗುವುದೆಂದು ಎಲ್ರಿಕ್ ಮುನ್ಸೂಚನೆ ನೀಡಿದ್ದ ಇಂಗ್ಲೆಂಡ್ ಹಾಗೂ ಭಾರತ ಇಂದಿಗೂ ಅಸ್ತಿತ್ವದಲ್ಲಿದೆ; ಇಂದು ಜನಸಂಖ್ಯೆ ದುಪ್ಪಟ್ಟಾಗಿದೆ. ಭೂಮಿಯ ಸಾಮರ್ಥ್ಯ ಬಗೆಗಿನ ಸಮಸ್ಯೆಗಳಿಗೆ ತಾಂತ್ರಿಕತೆಯ ಮುಖಾಂತರ ಪರಿಹಾರ ಕಂಡುಕೊಳ್ಳಲಾಗಿದೆ. ಮಾಲ್ತೂಸಿಯನ್ ಮಹಾದುರಂತದ ಎಚ್ಚರಿಕೆಗಳನ್ನು ಮೀರಿ ಉತ್ಪಾದನಾ ವಲಯವು ಅಭಿವೃದ್ಧಿಗೊಂಡಿದೆ ಎಂಬುದು ಇತ್ತೀಚಿನ ಇತಿಹಾಸ.

ನಾನು ಪ್ರಥಮವಾಗಿ ದೆಹಲಿ ತಲುಪಿದಾಗ ತುಂತುರು ಮಳೆಯು ಸುರಿಯುತ್ತಿತ್ತು. ಸ್ಟೇಷನ್ ನಲ್ಲಿ ಕೆಲವರು ನಿದ್ರಿಸಲು ಸೂಕ್ತವಾದ, ಮಳೆ ಹನಿಗಳು ಬೀಳದ ಜಾಗವನ್ನು ಹುಡುಕುತ್ತಿದ್ದರೆ, ಬೀದಿ ನಾಯಿಗಳು ಯಾರನ್ನೋ ಕಾಯುತ್ತಿರುವಂತಿತ್ತು. ಪರದಾಟಗಳ ಬಳಿಕ ಯಾತ್ರಿಕರಿಂದ ತುಂಬಿದ್ದ ರೈಲು ನಿಲ್ದಾಣದಿಂದ ನಾನು ಹೊರ ಬಿದ್ದೆ. ಲಗೇಜ್ ಕೈಗೆತ್ತಿ, ರಿಕ್ಷಾದಲ್ಲಿ ದೆಹಲಿ ಮರ್ಕಝಿನತ್ತ ಹೊರಟೆ. ಮನದಾಳದಲ್ಲಿ ಎಲ್ರಿಕರ ದೆಹಲಿ ಯಾತ್ರಾ ಕಥನವೇ ತುಂಬಿತ್ತು. ಓಲ್ಡ್‌ ದಿಲ್ಲಿಯ ರಸ್ತೆ ಇಕ್ಕೆಲಗಳ ಅಸಹಾಯಕ ಮುಖಗಳು, ಬಡತನಗಳನ್ನು ಕಂಡು ನನ್ನ ಕಲ್ಪನೆಯಲ್ಲಿನ ಭವ್ಯ ದೆಹಲಿಯು ನುಚ್ಚು ನೂರಾದವು. “ಈ ಆರಾಮದ ಕುರಿತು ಅರಿತರೆ, ಮಕ್ಕಾ ನಗರವು ಹಿಂದೂಸ್ತಾನದತ್ತ ತೀರ್ಥಯಾತ್ರೆ ನಡೆಸುತ್ತಿತ್ತು” ಎಂದು ಅಮೀರ್ ಖುಸ್ರು ಹಾಡಿ ಹೊಗಳಿದ ದೆಹಲಿ ನಗರವೇ ಇದು ಎಂಬ ಸಂದೇಹ ನನಗುಂಟಾಯಿತು.

“ದೆಹಲಿ ಒಂದು ಕಾಲದಲ್ಲಿ ಸ್ವರ್ಗವಾಗಿತ್ತು.
ಅಲ್ಲಿ ಪ್ರೀತಿ ಸರ್ವೋಚ್ಚ ಆಳ್ವಿಕೆ ನಡೆಸಿತ್ತು.
ಆ ಮೋಹಕ ಶಕ್ತಿ ಇಂದು ಅನ್ಯವಾಗಿದೆ.
ಅವಶೇಷಗಳು ಮಾತ್ರ ಉಳಿದಿವೆ. “
ಎಂಬ ಬಹದ್ದೂರ್ ಶಾ ಝಫರರ ಸಾಲುಗಳು ತೀವ್ರವಾಗಿ ನನ್ನನ್ನು ಕಾಡಿದವು.

ಅಮಿತಾಭ್ ಘೋಷ್ ತನ್ನ “ಇನ್‌ ಆನ್ ಆ್ಯಂಟಿಕ್ ಲ್ಯಾಂಡ್ ” (In an antique land ) ಎಂಬ ಕೃತಿಯಲ್ಲಿ ಕೈರೋ ಈಜಿಪ್ಟ್ ನ ರೂಪಕ, ಕೈರೋ (ನಗರವೇ) ಈಜಿಪ್ಟ್‌ ಎಂದು ಹೇಳುತ್ತಾರೆ. ದೆಹಲಿಯು ಇದಕ್ಕೆ ಹೊರತೇನಲ್ಲ, ದೆಹಲಿಯೇ ಭಾರತದ ಪರಿಪೂರ್ಣ ರೂಪಕ. ಸ್ವಾತಂತ್ರ್ಯದ ಏಳೂವರೆ ದಶಕಗಳ ಬಳಿಕವೂ ಅಂಬಾನಿಗಳಂತಹ ಕೇವಲ ಕಾರ್ಪೊರೇಟ್ ಗಳಿಗೆ ಪ್ರಯೋಜನವಾಗುವ ಅಭಿವೃದ್ಧಿ ಯೋಜನೆಗಳು ಹಾಗೂ ಕಡೆಗಣಿಸಲ್ಪಟ್ಟ ಮಧ್ಯಮ, ಬಡವರ್ಗಗಳನ್ನು ಹೊಂದಿರುವ ಭಾರತಕ್ಕೆ, ʼನ್ಯೂಡೆಲ್ಲಿʼ ಮತ್ತು ʼಓಲ್ಡ್‌ ಡೆಲ್ಲಿʼ ಯನ್ನು ಒಳಗೊಂಡಿರುವ ದೆಹಲಿಗಿಂತ ಪರಿಪೂರ್ಣವಾದ ರೂಪಕ ಇನ್ನೇನಿದೆ?.

ಮೌಲಾನಾ ಅಲ್ತಾಫ್ ಹುಸೇನ್ ಅಲಿ

ಇಸ್ಲಾಂ ಮತ್ತು ದೆಹಲಿ ನಡುವಿನ ಕೊಡು ಕೊಳ್ಳುವಿಕೆಯ ಸಂಬಂಧ ನಿರ್ಧರಿಸುವುದರಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಪ್ರಧಾನ ಪಾತ್ರ ವಹಿಸಿದೆ. ಈ ಸಂಗ್ರಾಮದೊಂದಿಗೆ ಮೊಘಲರ ಆಡಳಿತ ಕೊನೆಗೊಂಡಿತಲ್ಲದೆ, ಭಾರತೀಯ ಮುಸಲ್ಮಾನರಿಗೆ ಹೊಸ ಪರಿಯ ಆಡಳಿತಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯ ರಾಜಕೀಯ ಸಂದಿಗ್ಧತೆಯು ರೂಪುಗೊಂಡಿತು. ದೆಹಲಿ ನಗರದಲ್ಲಿ ಅಧಿಕಾರಿಗಳಾಗಿಯೂ, ಕುಲೀನರಾಗಿಯೂ ಸುಖಲೋಲುಪ ಜೀವನ ನಡೆಸಿದವರು ಒಂದು ಬೆಳಗಿನ ಜಾವದಲ್ಲಿ ಆಡಳಿತದ ಭಾಷೆಯಲ್ಲಿ ರಾಜದ್ರೋಹಿ ಪಟ್ಟ ಅಲಂಕರಿಸಬೇಕಾಯಿತು. ದೆಹಲಿ ಜಾಮಿಯಾ ಮಸೀದಿ ನಿರಾಶ್ರಿತ ತಾಣವಾಗಿ ಬದಲಾಯಿತು. ಗಲಭೆಗಳು, ಸಂಘರ್ಷಗಳು ಹಾಗೂ ಆಡಳಿತಗಾರರ ಕ್ರೂರ ಕೃತ್ಯಗಳಿಗೆ ಸಾವಿರಾರು ಜನರು ಬಲಿಯಾದರು. ನಗರದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸ ನಿರ್ಮಾಣಕ್ಕಾಗಿ ಶತಮಾನಗಳಿಂದ ಪ್ರಯತ್ನಿಸಿದ ಸಮುದಾಯವೊಂದನ್ನು ಮೂಲೆಗುಂಪು ಮಾಡಲಾಯಿತು. ಅವರು ನುಸುಳುಕೋರರಾಗಿಯೂ ನಿರಾಶ್ರಿತರಾಗಿಯೂ ಜೀವನ ಸವೆಸಬೇಕಾದ ಪರಿಸ್ಥಿತಿ ಬಂದೊದಗಿತು. ಮೌಲಾನಾ ಅಲ್ತಾಫ್ ಹುಸೈನ್ ಅಲಿ ಭಾರತೀಯ ಮುಸಲ್ಮಾನರಿಗೂ ದೆಹಲಿ ನಗರಕ್ಕೂ ಹಲವಾರು ಸಾಮ್ಯತೆಗಳಿರುವುದಾಗಿ ಹೇಳಿದ್ದಾರೆ. 1857ರಲ್ಲಿ ಬಹದ್ದೂರ್ ಶಾ ಝಫರರನ್ನು ಗಡಿಪಾರು ಮಾಡಿದ ಬಳಿಕ ದೆಹಲಿ ಕೇಂದ್ರವಾಗಿ ವಸಾಹತುಶಾಹಿಗಳು ಆಡಳಿತ ಪ್ರಾರಂಭಿಸಿದಂದಿನಿಂದ ಹಳೆಯ ದೆಹಲಿ (Old Delhi) ಯನ್ನು ಹಾಗೂ ಮುಸ್ಲಿಂ ಸಮುದಾಯವನ್ನೂ ಕಡೆಗಣಿಸಲಾಗುತ್ತಿದೆ.

ಮೌಲಾನಾ ಆಝಾದ್ ಅವರು ಸ್ವಾತಂತ್ರ್ಯದ ನಂತರ ಜಾಮಿಯ ಮಸೀದಿಯಲ್ಲಿ ಮಾಡಿದ ತಮ್ಮ ಭಾವೋದ್ರಿಕ್ತ ಭಾಷಣದಲ್ಲಿ, ಸಮುದಾಯದ ವೈಫಲ್ಯಕ್ಕೆ ಮುಸ್ಲಿಮರು ಒಂದು ಸಮುದಾಯವಾಗಿ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣ ಎಂದು ಪುನರುಚ್ಚರಿಸಿದರು.

“ಒಂದು ಕ್ಷಣ ನೀವು ಯೋಚಿಸಿ ನೋಡಿ. ನಿಮ್ಮ ನಿರ್ಧಾರಗಳೇನಾಗಿತ್ತು ಎಂದು ನೀವೇ ಯೋಚಿಸಿ? ಸದ್ಯ ನಿಮ್ಮ ಗತಿ ಏನೆಂದು ನೀವು ಚಿಂತಿಸುತ್ತಿಲ್ಲವೇ? ನಿಮ್ಮನ್ನು ಶಾಶ್ವತವಾಗಿ ಹೆದರಿ ಬದುಕಬೇಕಾದ ಸಂಕಷ್ಟಕ್ಕೆ ತಳ್ಳಿದವರು ಯಾರು? ನಿಮ್ಮ ನಿರ್ಧಾರದ ಫಲವೇ ಆಗಿದೆ ನಿಮ್ಮ ಇಂದಿನ ಪರಿಸ್ಥಿತಿಗೆ ಕಾರಣ. ನಿಮ್ಮ ಇತಿಹಾಸದ ಸುವರ್ಣ ಯುಗಗಳನ್ನು ನೀವು ಕಳೆದುಕೊಂಡದ್ದು ಎಲ್ಲಿ ಎಂದು ಜಾಮಿಯ ಮಸೀದಿ ಅದರ ಕುರಿತು ನಿಮ್ಮೊಂದಿಗೆ ಪ್ರಶ್ನಿಸುತ್ತಿದೆ.” ಮೌಲಾನಾ ಆಝಾದ್ ಅವರ ಈ ಪ್ರಶ್ನೆಗಳಿಗೆ ಉತ್ತರಿಸುವ ಸಮರ್ಥ ನಾಯಕನೂ ಇಲ್ಲದೆ ಅಕ್ಬರನ ಉತ್ತರಾಧಿಕಾರಿಗಳು ಅನಾಥರಾಗಿ ಉಳಿದರು ಎಂಬುವುದು ಇತಿಹಾಸದ ಕ್ರೂರ ಸತ್ಯಗಳಲ್ಲೊಂದು. ದೇಶ ವಿಭಜನೆಯಾಗದಿದ್ದರೆ ಭಾರತೀಯ ಮುಸಲ್ಮಾನರ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಬಲ್ಲವರು ಯಾರು? ದೆಹಲಿ ನಗರದ ಏರುಪೇರುಗಳಿಗೆ ಮೂಕ ಸಾಕ್ಷಿಯಾದ ಜಾಮಿಯ ಮಸೀದಿ ಸದ್ಯದ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬಹುದೇನೋ?

ಖುರೈಶಿ ಕಬಾಬ್ ಕಾರ್ನರ್

1857ರಲ್ಲಿ ಮುಸ್ಲಿಮರ ಹೊರದಬ್ಬುವಿಕೆ, 1947ರ ವಲಸೆ ಮತ್ತು 80 ಹಾಗೂ 90ರ ದಶಕಗಳಲ್ಲಿ ಘಟಿಸಿದ ಗಲಭೆಗಳು ದೆಹಲಿಯ ಜನರ ಬದುಕಿನಲ್ಲಿ ವಿಪರೀತ ಪರಿಣಾಮವನ್ನು ಬೀರಿರುವುದು ನಮಗೆ ಇಂದಿಗೂ ಕಾಣಬಹುದು. ಅಜಯ್ ಗಾಂಧಿ ತನ್ನ “ದೆಹಲಿಯ ಬಿರುಕು ಬಿದ್ದ ಗಡಿಗಳು” (porous boundaries in delhi) ಎಂಬ ಅಧ್ಯಯನದಲ್ಲಿ “ಓಲ್ಡ್ ಡೆಲ್ಲಿ ಗುರಿಯಾಗಿಟ್ಟುಕೊಂಡು ನಡೆದ ಗಲಭೆಗಳು ಮತ್ತು ಸಂಘರ್ಷಗಳು ಜನರ ಸಾಮರಸ್ಯಕ್ಕೆ ಹೇಗೆ ಧಕ್ಕೆಯುಂಟುಮಾಡಿತೆಂದೂ, ನಿತ್ಯ ಜೀವನದ ವ್ಯಾಪಾರ ವಹಿವಾಟುಗಳು ಅನ್ಯತಾ ಮನೋಭಾವ ಎಂಬ ಗೋಡೆಗಳಲ್ಲಿ ಬಿರುಕನ್ನುಂಟು ಮಾಡುವಲ್ಲಿ ಸಫಲವಾಗುತ್ತಿದೆಯೆಂದೂ ಬಹಳ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯ ಬಳಿಕ ಭಿನ್ನ ಕೋಮಿನವರು ಒಂದಾಗಿ ಕೂಡಿಬಾಳುವುದು ಸಂಪೂರ್ಣವಾಗಿ ಕೊನೆಗೊಂಡಿತು. ಬಳಿಕ ಉಂಟಾದ ಘರ್ಷಣೆಗಳು ಧ್ರುವೀಕರಣಕ್ಕೆ ಇನ್ನಷ್ಟು ಪುಷ್ಠಿ ನೀಡಿದವು. ಆದರೆ ಇಂದಿಗೂ ಹಿಂದೂಗಳು ಕ್ಷೌರಿಕರನ್ನು ಮತ್ತು ಮಾಂಸಹಾರವನ್ನು ಹುಡುಕುತ್ತಾ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಮತ್ತು ಹಬೀಬ್, ಶಹನಾಝ್ ಮುಂತಾದ ಮುಸ್ಲಿಂ ಕುಟುಂಬಗಳನ್ನು ತಲುಪುವುದು ಸಾಧಾರಣವಾಗಿದೆ. ಇಂತಹ ನಿತ್ಯ ಜೀವನದ ವಹಿವಾಟುಗಳು ಜನರೆಡೆಯಲ್ಲಿ ನಿರ್ಮಾಣವಾಗಿರುವ ಗೋಡೆಗಳನ್ನು ಹೊಡೆಯುವ ಮತ್ತು ಗತಕಾಲದ ಗಾಯಗಳಿಗೆ ಮುಲಾಮು ಹಚ್ಚುವ ಕಾಯಕವನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿರುವೆನೆಂಬ ಫೇಸ್ಬುಕ್ ಪೋಸ್ಟನ್ನು ಕಂಡ ಕೂಡಲೇ ಬಾಂಬೆಯಲ್ಲಿ ನನ್ನ ಸಹಪಾಠಿಯಾಗಿದ್ದ ನಿವೇದಿತ್ ನನ್ನನ್ನು ಸಂಪರ್ಕಿಸಿದ. ಮೂಲತಃ ಕೊಲ್ಕತ್ತಾ ನಿವಾಸಿಯಾದ ಆತನ ಕೆಲಸ ಮತ್ತು ವಾಸ ಕಾರ್ಪೊರೇಟ್ ಕಂಪೆನಿಗಳ ಕೇಂದ್ರವಾದ ಗುರ್ಗಾಂವಿನಲ್ಲಿತ್ತು. ನಾನು ದರಿಯಾಗಂಜಿನಲ್ಲಿರುವುದನ್ನು ತಿಳಿದ ಕೂಡಲೇ, “ನಾನು ಅತ್ತ ಬರುವೆನೆಂದೂ ನಾನು ಆಗಾಗ ಜಾಮಿಯ ಮಸೀದಿ ಬಳಿಯಿರುವ ಖುರೇಶಿ ಕಬಾಬ್, ಕರೀಮ್ಸ್ ಬಟರ್ ಚಿಕನ್ ತಿನ್ನಲು ಬರುತ್ತಿದ್ದೆ” ಎಂದನು. ಮಾರನೇ ದಿನವೇ ಆತ ನನ್ನನ್ನು ಮತ್ತು ಕಬಾಬನ್ನು ಅರಸುತ್ತಾ ದರಿಯಾಗಂಜ್ ತಲುಪಿದ. ನಾವಿಬ್ಬರೂ ಜೊತೆಯಾಗಿ ದರಿಯಾಗಂಜ್ ಜಂಕ್ಷನ್ ದಾಟಿ ಜಾಮಿಯ ಮಸೀದಿ ರೋಡಿನ ಬಳಿ ತಲುಪಿದಾಗ “ದೆಹಲಿಯಲ್ಲಿ ರುಚಿಕರವಾದ ಆಹಾರ ಸಿಗಬೇಕಾದರೆ ಇಲ್ಲಿಗೆ ಬರಬೇಕು” ಎಂದ. ಮೆಟ್ರೋ ರೈಲು ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ರಸ್ತೆಯು ಕೊಳಚೆ ಮತ್ತು ಧೂಳಿನಿಂದ ಕೂಡಿತ್ತು. “ಮಶ್ಕೂರ್, ನೀನು ಆದಮರ ಸೇಬಿನ ಕುರಿತು ಕೇಳಿದ್ದೀಯಾ?” ಪ್ರವಾದಿ ಆದಮರು ತಿಂದ ಸೇಬು ಹಣ್ಣಿನ ಕುರಿತೇ ಎಂಬ ಆಲೋಚನೆಗೂ ಬಿಡುವು ಕೊಡದೆ “ಆದಮರ ಮತ್ತು ನ್ಯೂಟನರ ಸೇಬು ಹಣ್ಣುಗಳು ನಮ್ಮ ಜೀವನದಲ್ಲೂ ಪರಿಣಾಮ ಬೀರುವುದರ ಬಗ್ಗೆ ಗೊತ್ತಿದೆಯೇ?” ಎಂದು ತಾತ್ವಿಕ ಸವಾಲನ್ನು ಮುಂದಿಟ್ಟನು.

ಅಷ್ಟೊತ್ತಿಗಾಗಲೇ ನಾವು ‘ಕುರೇಶಿ ಕಬಾಬ್’ ಗೆ ತಲುಪಿದ್ದೆವು. ನಾನು ಸ್ವಲ್ಪ ಯೋಚಿಸಿದ ಹಾಗೆ ನಟಿಸಿ ʼನನಗೆ ಗೊತ್ತಿಲ್ಲ, ನೀನು ಹೇಳುʼ ಎಂದು ಕಬಾಬ್ ಆರ್ಡರ್ ಮಾಡಿದೆ.

“ನಮ್ಮ ಜೀವನವನ್ನು ನಿರ್ಧರಿಸುವುದೇ ಈ ಎರಡು ಸೇಬು ಹಣ್ಣುಗಳು. ಯಾರು ನಮ್ಮನ್ನು ತಡೆದರೂ ಅಥವಾ ನಾವು ನಿರಾಕರಿಸಿದರೂ ಆದಮ್‌ ರ ಸೇಬು ನಮ್ಮನ್ನು ಪ್ರಲೋಭಿಸುತ್ತಲೇ ಇರುತ್ತದೆ. ಅಂತಿಮವಾಗಿ ನಾವು ಆ ಪ್ರಲೋಭನೆಗೆ ಒಳಗಾಗಿ ಅವನ್ನು ಹುಡುಕಿ ಹೋಗುತ್ತೇವೆ. ಆದರೆ ನ್ಯೂಟನರ ಸೇಬು ಹಣ್ಣು ತದ್ವಿರುದ್ಧವಾಗಿ ನಮ್ಮನ್ನು ಹುಡುಕಿ ಬರುತ್ತವೆ. ನಾವೆಷ್ಟೇ ಪ್ರಯತ್ನಿಸಿದರೂ ಕೊನೆಗೆ ಆ ಸೇಬು ಹಣ್ಣುಗಳು ಬೀಳುವುದು ನಮ್ಮ ತಲೆಯ ಮೇಲೆಯೇ ಆಗಿರುತ್ತದೆ. ಓಲ್ಡ್‌ ದಿಲ್ಲಿಯ ಕಬಾಬ್ ಮಾರುವ ಅಂಗಡಿಗಳು ಆದಮರ ಸೇಬು ಹಣ್ಣಾಗಿದ್ದರೆ, ಇಲ್ಲಿನ ಅಶುಚಿತ್ವ, ಜನಸಂದಣಿ, ಭಿಕ್ಷುಕರು, ಕ್ರಿಮಿನಲ್ ಗಳ ಕಥೆಗಳು ನ್ಯೂಟನ್ ರ ಸೇಬುಹಣ್ಣುಗಳು. ಇವು ನಮ್ಮನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ಇಲ್ಲಿನ ಕಬಾಬ್‌ಗಳು ನಮ್ಮನ್ನು ವಶೀಕರಣಗೊಳಿಸುತ್ತಲೇ ಇರುತ್ತವೆ” ನಿವೇದಿತ್ ವಿವರಿಸಿದ.

ಹಿಂದೂಗಳೂ ಮುಸ್ಲಿಮರು ಒಟ್ಟಿಗೆ ಜೀವಿಸುತ್ತಿದ್ದ ದಿಲ್ಲಿಯ ನಿನ್ನೆಗಳು ಕಣ್ಮರೆಯಾಗುತ್ತಿದ್ದರೂ, ಮೊಘಲ್‌ ಇತಿಹಾಸದ ಅಡುಗೆಮನೆಗಳಿಂದ ಇಳಿದು ಬಂದು, ವರ್ಷಗಳ ಬಳಿಕ ಸಮುದಾಯಗಳ ನಡುವೆ ಯಾರೋ ಕಟ್ಟುತ್ತಿರುವ ಗೋಡೆಗಳನ್ನು ಒಡೆದು ಹಾಕುತ್ತಿರುವ ಕಬಾಬುಗಳನ್ನು ಮನಸ್ಸಿನಲ್ಲಿಯೇ ಚಿತ್ರಿಸುವಲ್ಲಿ ನಾನು ಶ್ರಮಿಸುತ್ತಿದ್ದೆ.

ಮೂಲ: ಮಶ್ಕೂರ್ ಖಲೀಲ್
ಅನುವಾದ: ಆಶಿಕ್ ಅಲಿ ಕೈಕಂಬ


Mashkoor Khaleel

Mashkoor khaleel holds an MPhil in population studies from international institute of population studies, Mumbai. He currently works as the chief editor of the Malayalam portal Tibaq Cosmo Magazine (tibaq.in). At present he resides in the UK.

Leave a Reply

*