ಆಧುನಿಕ ಅರ್ಥಶಾಸ್ತ್ರ ಮತ್ತು ಇಬ್ನು ಖಲ್ದೂನರ ದೃಷ್ಟಿಕೋನ

ಜ್ಞಾನದ ಪೂರ್ವಾಧುನಿಕ ಇತಿಹಾಸದಲ್ಲಿ ಆಧುನಿಕ ಜ್ಞಾನಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅನೇಕ ಅರಿವಿನ ಮೂಲಗಳು ಮತ್ತು ಸೈದ್ಧಾಂತಿಕ ವಿಧಾನಗಳು ಇದ್ದವು. ವಿಜ್ಞಾನ ಮತ್ತು ಜ್ಞಾನ ಸಂಪ್ರದಾಯಗಳನ್ನು ವಿರೋಧಿಸಿದ ಯುರೋಪ್ ಇತಿಹಾಸದ ಕರಾಳ ಕಾಲದಲ್ಲಿ, ಇಸ್ಲಾಮಿಕ್ ಜಗತ್ತಿನಲ್ಲಿ ಬೆಳೆದು ಬಂದ ಚಿಂತನೆಗಳು ನಂತರದ ದಿನಗಳಲ್ಲಿ ಮಾನವತಾವಾದ ಮತ್ತು ಇತಿಹಾಸಕ್ಕೆ ಹೊಸ ದಿಕ್ಕನ್ನು ನೀಡಿತು. ಆದರೆ ಆಧುನಿಕತೆಯು ಈ ಜ್ಞಾನ ಪರಂಪರೆಗಳನ್ನು ಮತ್ತು ಅದರ ಇತಿಹಾಸವನ್ನೇ ತಿರಸ್ಕರಿಸಿ, ಹತ್ತಿಕ್ಕುವ ಮೂಲಕ ತನ್ನ ಪಾರಮ್ಯವನ್ನು ಪ್ರತಿಪಾದಿಸಿತು. ಆಧುನಿಕತೆಯ ಈ ಪ್ರವೃತ್ತಿಯನ್ನು ಇಂದು ನಿಖರವಾಗಿ ಗ್ರಹಿಸಬಹುದಾಗಿದೆ. ಈ ಸಾಕ್ಷಾತ್ಕಾರವನ್ನು ತಿಳಿಸುವ ಮತ್ತು ಜ್ಞಾನದ ಇತಿಹಾಸದ ನೈಜ ಬೆಳವಣಿಗೆಯ ಸಾಮಾನ್ಯ ಪರಿಚಯವನ್ನು ಒದಗಿಸುವ ಸಣ್ಣ ಪ್ರಯತ್ನ ಇಲ್ಲಿದೆ.

ಇಬ್ನ್ ಖಲ್ದೂನ್ ಎಂಬ ಹೆಸರಿನಲ್ಲಿ ಜನಪ್ರಿಯರಾಗಿರುವ ಮುಹಮ್ಮದ್ ಬ್‍ನ್ ಖಲ್ದೂನ್ ಅಲ್ ಹಳ್‌ರಮೀ ತಮ್ಮ ಅಲ್ ಇಬರ್ ಎಂಬ ಗ್ರಂಥಕ್ಕೆ ಬರೆದ ಮುಖದ್ದಿಮ (ಮುನ್ನುಡಿ) ದಲ್ಲಿ ಜ್ಞಾನ ವಿವಿಧ ಶಾಖೆಗಳಿಗೆ ಸೂಕ್ತ ಅಡಿಪಾಯಗಳನ್ನು ಹಾಕಿದ್ದಾರೆ. ಸಮಾಜ ವಿಜ್ಞಾನದ ಹಲವು ಕ್ಷೇತ್ರಗಳ ಒಳಹೊಕ್ಕ ಸಮಗ್ರ ಸ್ಪರ್ಶೀಯ ಜ್ಞಾನ ವಿಚಾರಗಳಿರುವ ಮುಖದ್ದಿಮದಲ್ಲಿ ಅರ್ಥಶಾಸ್ತ್ರದ ತಳಹದಿಯ ಚರ್ಚೆಯು ಸ್ಥಳ ಹಿಡಿದಿರುವುದು ಸಹಜ. ಇತಿಹಾಸ ಸೇರಿದಂತೆ ಹಲವಾರು ಜ್ಞಾನ ಕ್ಷೇತ್ರಗಳಲ್ಲಿ ಪರಿಣತರಾಗಿರುವ ಇಬ್ನ್ ಖಲ್ದೂನ್ ಅದರೊಂದಿಗೆ ಒಬ್ಬ ಸಮರ್ಥ ಅರ್ಥಶಾಸ್ತ್ರಜ್ಞರೂ ಆಗಿದ್ದರು ಎಂಬುದು ವಾಸ್ತವ. ಆರ್ಥಿಕ ಚಿಂತನೆಯ ಮೂಲಕ ಗುರುತಿಸಲ್ಪಡದಿದ್ದರೂ ಇತಿಹಾಸದಲ್ಲಿ ಅರ್ಥಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆಡಂ ಸ್ಮಿತ್ ಅವರ ಅವಲೋಕನಗಳು ರಚಿಸಲ್ಪಡುವುದು ಖಲ್ದೂನರ ನಂತರ ಸುಮಾರು 300 ವರ್ಷಗಳು ಕಳೆದ ಬಳಿಕವಾಗಿತ್ತು. ಪ್ರಾಚೀನ ಮತ್ತು ಆಧುನಿಕ ಅರ್ಥಶಾಸ್ತ್ರದಲ್ಲಿನ ಎಲ್ಲಾ ಸ್ತರಗಳಲ್ಲಿಯೂ ಇಬ್ನ್ ಖಲ್ದೂನರ ಕೊಡುಗೆಗಳನ್ನು ಕಾಣಬಹುದು. ಉತ್ಪಾದನೆ, ವಿತರಣೆ ಮತ್ತು ವೆಚ್ಚದಂತಹ ಶಾಸ್ತ್ರೀಯ (classical) ಅರ್ಥಶಾಸ್ತ್ರದ ಪರಿಕಲ್ಪನೆಗಳನ್ನು ಹಾಗೂ ಬಳಕೆ ಮತ್ತು ಬೇಡಿಕೆಯಂತಹ ಆಧುನಿಕ ಅರ್ಥಶಾಸ್ತ್ರದ ಅಡಿಪಾಯಗಳನ್ನು ಪರಿಚಯಿಸುವಲ್ಲಿನ ಪೂರ್ಣ ಶ್ರಮ ಅವರದ್ದಾಗಿತ್ತು.

ಶ್ರಮವು ಮೌಲ್ಯದ ಮೂಲವಾಗಿದೆ ಎಂದು ಹೇಳುವ ಮೂಲಕ ಇತಿಹಾಸದಲ್ಲಿ ಕಾರ್ಮಿಕ ಮೌಲ್ಯವನ್ನು ಅವರು ಪ್ರಸ್ತುತಪಡಿಸಿದರು. ಈ ಪ್ರಮುಖ ಪರಿಕಲ್ಪನೆಯನ್ನು ಸ್ವತಃ ಸಿದ್ಧಾಂತವೆಂದು ಕರೆಯದಿದ್ದರೂ, ರೋಸಂತಲ್‌ನು ಖಲ್ದೂನರ ಮುಖದ್ದಿಮವನ್ನು ಅನುವಾದಿಸಿ, ಅವರ ಪ್ರಕ್ರಿಯೆಯ ವಿಶ್ಲೇಷಣೆ ಮತ್ತು ಅದರ ಸಾಧನೆಯ ಕುರಿತು ಉಲ್ಲೇಖಿಸಿದ್ದು ಗಮನಾರ್ಹ. ಇಬ್ನ್ ಖಲ್ದೂನರ ಆರ್ಥಿಕ ದೃಷ್ಟಿಕೋನಗಳ ಮೌಲ್ಯವನ್ನು ಕುರಿತು 1752 ರಲ್ಲಿ ಡೇವಿಡ್ ಹ್ಯೂಂ ಪ್ರಕಟಿಸಿದ Political Discourses ನಲ್ಲಿ “ಜಗತ್ತಿನ ಎಲ್ಲವನ್ನೂ ಕಡಿಮೆಯಿಂದ ಖರೀದಿಸಲಾಗುತ್ತದೆ ಎಂಬ ಅವರ ತರ್ಕಗಳನ್ನು ಆಡಂಸ್ಮಿತ್ ಸಮೀಕರಣವಾಗಿ ಬಳಸಿದರು” ಎಂಬುದು ಅವರ ಆರ್ಥಿಕ ಚಿಂತನೆಯ ಆಳವನ್ನು ತೋರಿಸುತ್ತದೆ.

ಯಾವುದೇ ಒಂದು ವಸ್ತುವಿನ ಮೌಲ್ಯವು ಸ್ವತಃ ಅದನ್ನು ಹೊಂದಿರುವ ಅಥವಾ ಬಳಸುವ ವ್ಯಕ್ತಿಯ ಆಸಕ್ತಿಯಿಂದ ನಿರ್ಧರಿಸಲ್ಪಡುವುದಿಲ್ಲ. ಬದಲಿಗೆ, ಇತರ ಸರಕುಗಳ ವಿನಿಮಯವು ಅವುಗಳನ್ನು ಖರೀದಿಸುವ ಅಥವಾ ಹೊಂದುವ ಸಾಮರ್ಥ್ಯವಿರುವ ಶ್ರಮದ ಪ್ರಯತ್ನದ ಪ್ರಮಾಣಕ್ಕನುಸಾರವಾಗಿರುತ್ತದೆ. ಆದ್ದರಿಂದ ಶ್ರಮವು ಎಲ್ಲಾ ಸರಕುಗಳ ವಿನಿಮಯ ಮೌಲ್ಯದ ನಿಜವಾದ ಅಳತೆಯ ಮಾಪನವಾಗಿದೆ. AD 1776 ರ ಆ್ಯಡಂ ಸ್ಮಿತ್ ನ ಪ್ರಮುಖ ಕೃತಿಯಾದ The Wealth of Nations ನ ಈ ಭಾಗವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಅದರ ಆಳದ ಬೇರುಗಳು ಇಬ್ನ್ ಖಲ್ದೂನರ ಮುಖದ್ದಿಮದ್ದು ಎಂಬುದು ಬೆಳಕಿಗೆ ಬರುತ್ತದೆ. ಶ್ರಮವು ಮೌಲ್ಯದ ಮೂಲವಾಗಿದೆಯೆಂದೂ, ಎಲ್ಲಾ ಆದಾಯ ಮತ್ತು ಬಂಡವಾಳ ಸಂಗ್ರಹಣೆಗೆ ಇದು ಅಗತ್ಯವಾಗಿದೆಯೆಂಬ ಇಬ್ನ್ ಖಲ್ದೂನರ ಅಭಿಪ್ರಾಯವನ್ನು ಮೇಲೆ ತಿಳಿಸಿದ ಗ್ರಂಥದಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.

ಖಲ್ದೂನರ ವಿಶಾಲ ದೃಷ್ಟಿಕೋನದ ಪ್ರಕಾರ, ಆದಾಯವು ಮಾನವ ಶ್ರಮದ ಮೌಲ್ಯವಾಗಿದೆ. ಏಕೆಂದರೆ, ಇದು ಮಾನವ ಪ್ರಯತ್ನದಿಂದ ಸಾಧಿಸಲ್ಪಡುವುದಾಗಿದೆ. ಕಚ್ಚಾ ಸರಕುಗಳು, ವೈಯಕ್ತಿಕ ಸಂಪನ್ಮೂಲಗಳು ಮತ್ತು ಇತರ ಹೂಡಿಕೆಗಳ ಬೆಲೆಯು ಸರಕುಗಳ ಮೌಲ್ಯದಲ್ಲಿ ಒಳಗೊಳ್ಳುತ್ತಿದೆಯಾದರೂ, ಮೌಲ್ಯವು ಮಾನವ ಶ್ರಮದ ಮೂಲಕವೇ ಹೆಚ್ಚಾಗುವುದು ಮತ್ತು ಸಂಪತ್ತು ವಿಸ್ತರಿಸುವುದು. ಮಾನವ ಶ್ರಮದಲ್ಲಿನ ಕಡಿತವು ವಿರುದ್ಧ ದಿಕ್ಕಿನಲ್ಲಿ ಅವನತಿಗೆ ಕಾರಣವಾಗಬಹುದು ಎಂದು ಗಮನಿಸಿ ಸಮಾಜ ಸುಧಾರಣೆಗಾಗಿ ಹೆಚ್ಚುವರಿ ಪ್ರಯತ್ನ (Extra Effort) ದ ಪರಿಕಲ್ಪನೆಗೆ ಅಡಿಪಾಯ ಹಾಕಿದರು. ನಾಗರಿಕತೆಯ ಕುರಿತಾದ ಅವರ ಕಾರ್ಮಿಕ ಸಿದ್ಧಾಂತವು ನಗರಗಳ ಅಭಿವೃದ್ಧಿಗೆ ಹೇತುವಾಯಿತು. ಆದಾಯದಲ್ಲಿನ ವ್ಯತ್ಯಾಸಗಳಿಗೆ ಸ್ಪಷ್ಟ ಕಾರಣಗಳನ್ನು 1817 ರಲ್ಲಿ ಡೇವಿಡ್ ರಿಕಾರ್ಡೋ ಗಮನಿಸುವುದಕ್ಕಿಂತ ಬಹಳ ಹಿಂದೆಯೇ ಖಲ್ದೂನ್ ವಿಶ್ಲೇಷಿಸಿದರು. ರಾಷ್ಟ್ರದ ಸಂಪತ್ತು ವ್ಯವಸ್ಥೆ, ತೆರಿಗೆಯ ತತ್ವದಲ್ಲಿನ ವ್ಯತ್ಯಾಸಗಳು, ಮಾರುಕಟ್ಟೆಗಳ ಗಾತ್ರ, ಸ್ಥಳ, ತಯಾರಿಕೆಯ ಪರಿಣತಿ, ಆಡಳಿತಗಾರರು ಮತ್ತು ಗವರ್ನರ್ ಗಳು ಉತ್ಪಾದನೆಯನ್ನು ಖರೀದಿಸುವ ಪ್ರಮಾಣವು ಕಾರ್ಮಿಕ ಆದಾಯದಲ್ಲಿನ ವ್ಯತ್ಯಾಸಗಳಿಗೆ ಕಾರಣವಾಗಿದೆ ಎಂದು ಇಬ್ನ್ ಖಲ್ದೂನರ ಚಿಂತನೆಗಳು ಸ್ಪಷ್ಟಪಡಿಸುತ್ತದೆ.

ಸರಕುಗಳ ಬೇಡಿಕೆಯು ಅದರ ಪೂರೈಕೆಗಿಂತ ಹೆಚ್ಚಿದ್ದರೆ ಅದರ ಆದಾಯವು ಹೆಚ್ಚಾಗುತ್ತದೆ ಎಂದು ಅವರು ಗಮನಿಸಿದರು. ಶ್ರಮ ಮತ್ತು ಉದ್ಯೋಗದ ಆರ್ಥಿಕ ಆಯಾಮಗಳಾಚೆಗೆ ಬೇಡಿಕೆ, ಪೂರೈಕೆ, ಬೆಳೆ, ಲಾಭ ಮುಂತಾದ ಆರ್ಥಿಕ ವಿಶ್ಲೇಷಣೆಯ ವಿವಿಧ ಹಂತಗಳ ಪರಸ್ಪರ ಸಂಬಂಧಗಳ ಕುರಿತಾದ ಅವರ ಆಲೋಚನೆಗಳು ಮತ್ತು ಅವಲೋಕನಗಳು ಅರ್ಥಶಾಸ್ತ್ರಕ್ಕೆ ವಿಶಾಲ ಒಳನೋಟವನ್ನು ನೀಡಿವೆ. ಬಹಳ ವಿವರಣಾತ್ಮಕವಾಗಿಯೇ ಈ ವಿಷಯಕ್ಕೆ ಸಂಬಂಧಿಸಿದ ವಿಶ್ಲೇಷಣೆಯನ್ನು ಇಬ್ನ್ ಖಲ್ದೂನ್ ವಿವರಿಸಿದ್ದಾರೆ. ಒಂದು ವಸ್ತುವಿನ ಬೇಡಿಕೆಯು ಅದರ ಅಗತ್ಯಕ್ಕಿಂತ ಹೆಚ್ಚಾಗಿ ಪಡೆಯುವ ಉಪಯುಕ್ತತೆಯನ್ನು ಆಧರಿಸಿವೆ. ಆದ್ದರಿಂದ ಉಪಯುಕ್ತತೆಯು ಅದರ ಹಿಂದಿನ ಪ್ರೇರಕ ಶಕ್ತಿಯಾಗಿದೆ ಮತ್ತು ಮಾರುಕಟ್ಟೆಯಲ್ಲಿ ಅದು ಗ್ರಾಹಕರ ಹೆಚ್ಚುವರಿ ಖರ್ಚಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ಗಮನಿಸಿದ ಖಲ್ದೂನ್ ಮೊದಲ ಬಾರಿಗೆ ಆಧುನಿಕ ಬೇಡಿಕೆ ಸಿದ್ಧಾಂತಕ್ಕೆ ಅಡಿಪಾಯ ಹಾಕಿದರು. ತದ ನಂತರವಾಗಿತ್ತು ಥಾಮಸ್ ರೋಬರ್ಟ್ ಮಾಲ್ತಾಸ್, ಆಲ್ಫೆರ್ಡ್ ಮಾರ್ಷಲ್, ಜಾನ್ ಹಿಕ್ಸ್ ಮೊದಲಾದವರು ಈ ಪರಿಕಲ್ಪನೆಯ ಅಭಿವೃದ್ಧಿಗೆ ಕೊಡುಗೆ ನೀಡುವುದು. ಒಂದು ನಿರ್ದಿಷ್ಟ ಸರಕುಗಳ ಬೇಡಿಕೆಯು ರಾಜ್ಯವು ಅದನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಡಳಿತ ವರ್ಗವು ಯಾವುದೇ ಖಾಸಗಿ ವ್ಯಕ್ತಿ ಖರೀದಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ ರಾಜ್ಯವು ಉತ್ಪನ್ನಗಳನ್ನು ಖರೀದಿಸುವಾಗ ಒಂದು ಕರಕುಶಲತೆಯು ಬೆಳೆಯುತ್ತದೆ. ಈ ಮೂಲಕ ಇಬ್ನ್ ಖಲ್ದೂನ್ ಆಧುನಿಕ ಆರ್ಥಿಕ ಸಾಹಿತ್ಯದಲ್ಲಿನ “Derived Demand “ನ್ನು ಪರಿಚಯಿಸಲು ಶ್ರಮಿಸಿದರು. ಬೇಡಿಕೆ ಹೆಚ್ಚಾದಂತೆ ಕರಕುಶಲ ವಸ್ತುಗಳು ಉತ್ತಮಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಒಬ್ಬ ಕರಕುಶಲ ಕರ್ಮಿಗೆ ಪ್ರಮುಖವಾದದ್ದು ತನ್ನ ಉತ್ಪಾದನೆಗೆ ಮಾರುಕಟ್ಟೆಯಲ್ಲಿ ಸಿಗುವ ಬೇಡಿಕೆಯ ಪ್ರಮಾಣವಾಗಿದೆ.

ಸಾಮಾನ್ಯವಾಗಿ ತಿಳಿದಿರುವಂತೆ, ಬೆಲೆ, ಪೂರೈಕೆ ಸಿದ್ಧಾಂತದ ಬೆನ್ನೆಲುಬು ಎಂದು ಆಧುನಿಕ ಬೆಳೆ ಸಿದ್ಧಾಂತವು ಹೇಳುತ್ತದೆ. ಆದರೆ ಪೂರೈಕೆ ಮತ್ತು ಬೆಲೆಯಲ್ಲಿ ಉತ್ಪಾದನಾ ವೆಚ್ಚದ ಪಾತ್ರವನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿದವರಾಗಿದ್ದಾರೆ ಇಬ್ನ್ ಖಲ್ದೂನ್. ಫಲವತ್ತಾದ ಭೂಮಿಯಲ್ಲಿ ಉತ್ಪಾದನೆಯಾಗುವ ಆಹಾರ ವಸ್ತುಗಳ ಬೆಲೆ ಮತ್ತು ಕಳಪೆ ಮಣ್ಣಿನಲ್ಲಿ ಉತ್ಪಾದನೆಯಾಗುವ ಬೆಳೆಗಳ ಮೌಲ್ಯದ ನಡುವಿನ ವ್ಯತ್ಯಾಸವನ್ನು ಗಮನಿಸಿದ ಅವರು ಮುಖ್ಯವಾಗಿ ಉತ್ಪಾದನಾ ವೆಚ್ಚದ ಅಸಮಾನತೆಯನ್ನು ಕಂಡುಕೊಂಡರು.

ಲಾಭದ ಪರಿಕಲ್ಪನೆಯನ್ನು ಆಧಾರವಾಗಿಸಿದ ಕೆಲವು ಅವಲೋಕನಗಳನ್ನು ಅವರು ಅಭಿವೃದ್ಧಿಪಡಿಸಿದರು. ಆರ್ಥಿಕ ಸಾಹಿತ್ಯದಲ್ಲಿ, ಭವಿಷ್ಯದ ಅನಿಶ್ಚಿತತೆಯ ಮೇಲೆ ಅಪಾಯ ಎಳೆದುಕೊಳ್ಳುವುದರ ಪ್ರತಿಫಲವಾದ ಲಾಭ ಸಿದ್ಧಾಂತವನ್ನು ಸಾಮಾನ್ಯವಾಗಿ ಫ್ರಾಂಕ್ ನೈಟ್‍ನ ಹೆಸರಿನಲ್ಲಿ ಆರೋಪಿಸಲಾಗುತ್ತದೆ. 1921ರಲ್ಲಿ ಪ್ರಕಟಿಸಿದ ತನ್ನ ಕೃತಿಗಳು ಲಾಭದ ಕುರಿತಾಗಿ ಉತ್ತಮ ಸಿದ್ಧಾಂತವನ್ನು ಮಂಡಿಸಿತು ಎಂಬುವುದರಲ್ಲಿ ಸಂದೇಹವಿಲ್ಲ ಅದಾಗಿಯೂ ಈ ಸಿದ್ಧಾಂತಕ್ಕೆ ಅಡಿಪಾಯ ಹಾಕಿದ್ದು ಇಬ್ನ್ ಖಲ್ದೂನರಾಗಿದ್ದಾರೆ. ವ್ಯಾಪಾರ ಎಂದರೆ ಸರಕು ಸಾಮಗ್ರಿಗಳನ್ನು ಖರೀಸುವುದು, ಅವುಗಳನ್ನು ಸಂಗ್ರಹಿಸುವುದು ಮತ್ತು ಮಾರುಕಟ್ಟೆಯಲ್ಲಿ ಏರಿಳಿತಗಳು ಸಂಭವಿಸುವವರೆಗೆ ಕಾಯುವುದು ಇದರಿಂದ ಬರುವ ಲಾಭವು ನಾಶವಾಗಬಹುದು ಅಥವಾ ಕಳೆದುಹೋಗಬಹುದು ಎಂದು ಖಲ್ದೂನ್ ಉಲ್ಲೇಖಿಸಿದರು. ಅದರಿಂದಲೇ ಲಾಭವು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಭವಿಷ್ಯದ ಅನಿಶ್ಚಿತತೆಗಳ ಹೊರತಾಗಿಯೂ ಅವನು ಲಾಭದ ಬದಲಿಗೆ ನಷ್ಟ ಅನುಭವಿಸಬೇಕಾಗಿ ಬರಬಹುದು. ಅದೇ ರೀತಿ, ಮಾರುಕಟ್ಟೆಯಲ್ಲಿ ಲಾಭಾನ್ವೇಷಕರು ಮಾಡುವ ಊಹಾಪೋಹಗಳಿಂದಲೂ ಅವನು ಲಾಭ ಅಥವಾ ನಷ್ಟ ಅನುಭವಿಸಬಹುದು ಇಂತಹ ಅನಿಶ್ಚಿತತೆಗಳನ್ನು ನಿವಾರಿಸಲು ಹಲವಾರು ಅನ್ಯಮಾರ್ಗಗಳನ್ನು ಖಲ್ದೂನ್ ಅಭಿವೃದ್ಧಿಪಡಿಸಿದರು.

ಬೆಲೆ ಮಟ್ಟದಲ್ಲಿ ನಿಯಂತ್ರಿತ ಪೂರೈಕೆಯ ಪ್ರಭಾವದ ಬಗ್ಗೆ ಇಬ್ನ್ ಖಲ್ದೂನ್ ಈ ರೀತಿ ಉಲ್ಲೇಖಿಸುತ್ತಾರೆ: “ಸರಕುಗಳು ಅತೀ ವಿರಳ ಮತ್ತು ಉತ್ತಮ ಗುಣಮಟ್ಟದ್ದಾದಂತೆ ಅವುಗಳ ಬೆಲೆಗಳು ಏರುತ್ತವೆ” ಈ ಮೂಲಕ ಹಣದುಬ್ಬರದ ಮೇಲೆ ಕಾಸ್ಟ್ ಪುಶ್- ಡಿಮಾಂಡ್ ಪುಲ್ ಪ್ರಕ್ರಿಯೆಗಳು ಬೀರುವ ಪರಿಣಾಮವನ್ನು ಇಬ್ನ್ ಖಲ್ದೂನ್ ವಿವರಣಾತ್ಮಕವಾಗಿ ವಿಶ್ಲೇಷಿಸಿರುವುದಾಗಿ ಕಂಡು ಬರುತ್ತದೆ.

ಅಂತರಾಷ್ಟ್ರಿಯ ಹಣಕಾಸು ಕ್ಷೇತ್ರಗಳಗಲ್ಲಿ ವಿದೇಶಿ ವ್ಯಾಪಾರ ಜಾಲಗಳಲ್ಲಿ ಇಬ್ನ್ ಖಲ್ದೂನರ ಕೊಡುಗೆಗಳು ಅಪಾರವಾಗಿದೆ. ರಾಷ್ಟ್ರಗಳ ನಡುವಿನ ವ್ಯಾಪಾರದ ಮೇಲೆ ಬೆಳಕು ಚೆಲ್ಲುವ ಅವಲೋಕನಗಳನ್ನು ಅವರು ಪ್ರಸ್ತುತಪಡಿಸಿದರು. ವಿದೇಶಿ ವ್ಯಾಪಾರದಲ್ಲಿನ ಜನರ ತೃಪ್ತಿ ಮತ್ತು ವ್ಯಾಪಾರಿಗಳ ಲಾಭವು ರಾಷ್ಟ್ರಗಳ ಸಂಪತ್ತು ವೃದ್ಧಿಸುವುದರ ಮೇಲೆ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು. ವಿದೇಶಿ ವ್ಯಾಪಾರದ ಮೇಲಿನ ವೀಕ್ಷಣೆ ಮತ್ತು ವಿಶ್ಲೇಷಣೆಯಲ್ಲಿ ಇಬ್ನ್ ಖಲ್ದೂನರ ದೃಷ್ಟಿಕೋನಗಳು ಅಂತರಾಷ್ಟ್ರಿಯ ಹಣಕಾಸು ಕ್ಷೇತ್ರದಲ್ಲಿ ಸಾಕಷ್ಟು ಮನ್ನಣೆಗೆ ಒಳಪಟ್ಟಿದೆ. 1752ರಲ್ಲಿ ಡೇವಿಡ್ ಹ್ಯೂಂ ತನ್ನ Political Discourses ನಲ್ಲಿ ಇಂತಹಾ ವಿದೇಶಿ ವ್ಯಾಪರದ ಲಾಭಗಳನ್ನು ಗಮನಾರ್ಹವಾಗಿ ವಿಸ್ತರಿಸಿ ವಿವಸಿದ್ದಾರೆ. ಆದರೆ ಈ ವಿಷಯದ ಕುರಿತಾದ ಮೊದಲ ಆವಿಷ್ಕಾರಗಳು ಮತ್ತು ಅವಲೋಕನಗಳನ್ನು ಸುಮಾರು ನಾಲ್ಕು ಶತಮಾನಗಳ ಹಿಂದೆ ಪ್ರಸ್ತುತಪಡಿಸಿದ್ದು ಇಬ್ನ್ ಖಲ್ದೂನ್ ಎಂಬುದನ್ನು ಚರಿತ್ರೆಯ ಪುಟಗಳಿಂದ ಅಳಿಸಲಸಾಧ್ಯ. ಮಾನವನ ಬಗ್ಗೆ ಮತ್ತು ವ್ಯತಿರಿಕ್ತ ಸ್ಥಳಗಳ ಬಗೆಗಿನ ತೀಕ್ಷ್ಣವಾದ ಅವಲೋಕನಗಳ ಜೊತೆಗೆ ಇತಿಹಾಸದಲ್ಲಿನ ಅವರ ಸೂಕ್ಷ್ಮ ಜ್ಞಾನದ ಮೂಲಕ, ಮೂಲ ಆರ್ಥಿಕ ಚಿಂತನೆಯನ್ನು ವಿಶ್ಲೇಷಿಸಲು ಮತ್ತು ಅಭಿವೃದ್ಧಿಪಡಿಸಲು ಆಳವಾದ ಅವಲೋಕನವನ್ನು ಅವರು ಮಾಡಿದರು. ಆಧುನಿಕ ಯುಗದಲ್ಲಿ ಅಭಿವೃದ್ಧಿ ಹೊಂದಿದ ಆರ್ಥಿಕ ಚಿಂತನೆಯ ಅಡಿಪಾಯಗಳನ್ನು ಮತ್ತು ಅವುಗಳನ್ನು ರೂಪಿಸುವಲ್ಲಿ ಕಾರ್ಯನಿರ್ವಹಿಸಿದ ಮೂಲಭೂತ ವಿಚಾರಗಳನ್ನು ಇತಿಹಾಸದಲ್ಲಿ ಪ್ರಥಮವಾಗಿ ಪರಿಚಯಿಸಿದರು ಎಂಬುವುದು ಕೂಡ ಇಬ್ನ್ ಖಲ್ದೂನರ ವಿಶೇಷತೆಗೆ ಹೊಸ ಮೆರುಗನ್ನು ನೀಡುತ್ತದೆ. ಇತಿಹಾಸವನ್ನು ಒಳಗೊಂಡಂತೆ ಸಮಾಜ ಶಾಸ್ತ್ರೀಯ ಜ್ಞಾನಕ್ಕೆ ಅಡಿಪಾಯವಾಗಿ ಇಬ್ನ್ ಖಲ್ದೂನರ ಮುಖದ್ದಿಮವನ್ನು ನೋಡಬೇಕಾಗುತ್ತದೆ. ಮೌಲ್ಯದ ವ್ಯಾಪ್ತಿ ಮತ್ತು ಪರಿಶ್ರಮದೊಂದಿಗಿನ ಅದರ ಒಡನಾಟದಲ್ಲಿಯೂ ಅವರ ಜ್ಞಾನದ ಆಳವನ್ನು ಕಾಣಬಹುದು. ಬಂಡವಾಳ ಕ್ರೋಢೀಕರಣದ ಕುರಿತಾದ ಅವರ ಸಿದ್ಧಾಂತಗಳು, ರಾಜವಂಶಗಳ ಉಗಮ ಮತ್ತು ಪತನ ಸಂಬಂಧಿತ ಅವಲೋಕನಗಳು, ಬೇಡಿಕೆ- ಪೂರೈಕೆ, ಬೆಲೆ ಮತ್ತು ಲಾಭ ಇತ್ಯಾದಿಗಳ ಕುರಿತಾದ ಅವರ ಧೋರಣೆಗಳು, ಹಣ ಮತ್ತು ಅದರ ಏರಿಳಿತವನ್ನು (ಮೌಲ್ಯ) ನಿರ್ಧರಿಸುವಲ್ಲಿ ಸರ್ಕಾರದ ಪಾತ್ರ ಕುರಿತಾದ ಅವರ ಅವಲೋಕನಗಳು ಇತ್ಯಾದಿಗಳೆಲ್ಲವೂ ಅರ್ಥಶಾಸ್ತ್ರಕ್ಕೆ ಭದ್ರ ಅಡಿಪಾಯವನ್ನು ಹಾಕುವಲ್ಲಿ ಸಮರ್ಥವಾಗಿದೆ. ಅವರ ಅವಲೋಕನಗಳು ಮತ್ತು ಒಟ್ಟಾರೆಯಾಗಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಳು ಅವರನ್ನು ಅರ್ಥಶಾಸ್ತ್ರದ ಪಿತಾಮಹಾನೆಂದು ಪರಿಚಯಿಸುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.

ಗ್ರಂಥ‌ ಋಣ :
1:Charles Issawi, An Arab Philosophy of History, Selections from the Prolegomena of Ibn Khaldun of Tunis (1332-1406) (London: John Murray, 1950)

2: Joseph A. Schumpeter, History of Economic Analysis, edited from manuscript by Elizabeth B. Schumpeter and published after his death (New York: Oxford University Press, 1954)

3:Joseph J. Spengler, “Economic Thought in Islam: Ibn Khaldun,” Comparative Studies in Society and History, vol. 6, no. 3 (April 1964).

4:Karl Marx, Zur Kritik der Politischen Ökonomie, p. 45, as quoted in Erik Roll, A History of Economic Thought, 4th ed. (London: Faber and Faber, 1978)

5: The Muqaddimah

6: Adam Smith, An Inquiry into the Nature and Causes of the Wealth of Nations, ed. by Edwin Cannan (New York: Random House, 1937)

7: Ibn Khaldun, An Arab Philosophy of History,

ಮೂಲ: ಕೆ.ಎಂ ಸುಹೈಲ್ ಏಲಾಂಬ್ರಾ
ಅನು: ಅಬ್ದುಸ್ಸಲಾಂ ಮಿತ್ತರಾಜೆ, ಸಾಲೆತ್ತೂರು

Leave a Reply

*