ಮಿನಾರಗಳು ಮಸೀದಿಗಳ ಉಪಸ್ಥಿತಿಯನ್ನು ಉತ್ತಮವಾಗಿ ಸೂಚಿಸುವ ವಾಸ್ತುಶಿಲ್ಪ ಕಲೆಯಾಗಿದೆ. ಶತಮಾನಗಳಿಂದ ಮಸೀದಿಗಳು ಸಾಮಾಜಿಕ ಕೇಂದ್ರ, ಆರಾಧನಾ ಸ್ಥಳ, ಬೋಧನೆಯ ಕೇಂದ್ರ, ನ್ಯಾಯಾಲಯ, ಹಣಕಾಸು ವಹಿವಾಟಿನ ಸ್ಥಳ, ಆಡಳಿತಾತ್ಮಕ ಕೇಂದ್ರಗಳಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ. ಮಿನಾರಗಳ ಆಕೃತಿ ಮತ್ತು ಅದರ ಕಾರ್ಯಗಳು ಅದರ ಹಿಂದೆ ಅಡಗಿರುವ ತತ್ವಶಾಸ್ತ್ರದ ಅನ್ವೇಷಣೆಗೆ ಸ್ಪೂರ್ತಿಯಾಗಿವೆ.
ಸಾಂಪ್ರದಾಯಿಕವಾಗಿ ಪಾಶ್ಚಾತ್ಯ ಸಂಸ್ಕೃತಿಯು ಇಸ್ಲಾಮಿನ ಭೌತಿಕ ಮತ್ತು ವಾಸ್ತವಿಕ ಮೌಲ್ಯಗಳನ್ನು ಅಮೂರ್ತ ಭಾಷೆಯ ಮೂಲಕ ಅರ್ಥೈಸುವಲ್ಲಿ ಎಡವಿದೆ. ಆದ್ದರಿಂದ ಮಾನವತಾವಾದಿಗಳು ಮತ್ತು ಇಸ್ಲಾಮನ್ನು ತಿಳಿದವರ ದೃಷ್ಟಿಕೋನದಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚುವೆನು. ಸೆಮಿಯೋಟಿಕ್ಸ್ (ಸಂಕೇತ ಶಾಸ್ತ್ರ) ನ ಅಧ್ಯಯನವು ಅಸ್ಪಷ್ಟ ಮತ್ತು ಸಂಕೀರ್ಣವಾಗಿದೆ. ಸಂಕೇತಗಳ ಗುಣಲಕ್ಷಣಗಳು ಅಸ್ಥಿರ. ವೀಕ್ಷಕರ ಭಾವನೆಗಳು ಮತ್ತು ವರ್ತನೆಗಳಿಗೆ ಅನುಗುಣವಾಗಿ ಅವುಗಳಿಗೆ ಬದಲಾವಣೆ ಸಂಭವಿಸಬಹುದು.
Babel Tower
ಏನೇ ಆದರೂ, ನಮ್ಮ ದೈನಂದಿನ ಜೀವನ ಸಂಕೇತಗಳಿಂದ ಕೂಡಿದೆ. ಸಂಕೇತಗಳು ನಮ್ಮ ಚಿಂತನೆ, ಜೀವನ ವಿಧಾನಗಳು ಸೇರಿರುವ ಒಂದು ಅಮೂರ್ತ ರಚನೆಯಾಗಿರಯವುದರಿಂದ ಅವುಗಳ ಅಧ್ಯಯನ ಅನಿವಾರ್ಯ. ಬಾನೆತ್ತರಕ್ಕೆ ಬೆಳೆದು ನಿಂತಿರುವ ಗೋಪುರಗಳು ಮತ್ತು ಅರಮನೆಗಳು ಅಧಿಕಾರ ಮತ್ತು ಅಧಿಪತ್ಯದ ಸಂಕೇತಗಳಾಗಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಮಾನವಕುಲದ ಸಾಮೂಹಿಕ ಸುಪ್ತಾವಸ್ಥೆಯಲ್ಲಿ (collective unconscious), ಸಮಯದ ಆರಂಭದಿಂದಲೂ ಔನ್ನತ್ಯ ಮತ್ತು ಶ್ರೇಷ್ಠತೆಯ ಮಾಪಕಗಳಾಗಿ ದಿವ್ಯತ್ವ, ಮೇಧಾವಿತ್ವ, ಅಧಿಕಾರ ಗಳನ್ನು ಪರಿಗಣಿಸಲಾಗಿದೆ. ಪಟ್ಟಣಗಳು, ಬಂದರುಗಳು, ದೇಶಗಳು ಮತ್ತು ನಾಗರಿಕತೆಗಳು ಅವುಗಳ ಗೋಪುರಗಳನ್ನು ಅಭಿಮಾನದಿಂದಲೇ ಪ್ರದರ್ಶಿಸುತ್ತವೆ. ಅವುಗಳ ಮೂಲಕ ಇತಿಹಾಸದ ಅಧ್ಯಯನ ನಮಗೆ ಸಾಧ್ಯ. ಬಾಬೆಲ್ (Babel) ಭಾಷೆಗಳ ಗೊಂದಲಗಳ ಸಂಕೇತವಾದರೆ, ಮೆಸೊಪಟ್ಯಾಮಿಯಾದ ಝಿಗಾರೆಟ್ ಗೋಪುರ ಜ್ಞಾನದ ಪ್ರತೀಕ. ಇಟಾಲಿಯನ್ ನಗರಗಳು ನಗರಗಳ ನಡುವಿನ ವೈರತ್ವದ ಪ್ರತೀಕಗಳು, ಐಫೆಲ್ ಟವರ್ ಮತ್ತು ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡಗಳು ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇವು ಮನುಕುಲದ ಅತೀವ ಶ್ರದ್ಧೆಯ ಸ್ಮರಣೆಯನ್ನು ನೀಡುತ್ತವೆ. ಇಸ್ಲಾಮಿನ ನಾಗರಿಕತೆಗೆ ಸಂಬಂಧಿಸಿದಂತೆ, ಮಿನಾರಗಳು ಇಸ್ಲಾಮಿನ ಇರುವಿಕೆಯನ್ನು ಸಮಗ್ರವಾಗಿ, ಪರಿಣಾಮಕಾರಿಯಾಗಿ ಸೂಚಿಸುವ ಆಕಾರಗಳಾಗಿವೆ.
ಮಿನಾರಗಳ ವಿಷಯದಲ್ಲಿ ನಾವು ಎದುರಿಸುವ ಮುಖ್ಯ ಸಮಸ್ಯೆ ಎಂದರೆ, ಪ್ರವಾದಿಯವರು ಜೀವಿಸಿದ್ದ ಮದೀನಾದಲ್ಲಿ ವಿಶ್ವಾಸಿಗಳನ್ನು ನಮಾಝ್ ಗೆ ಎತ್ತರದ ಗೋಡೆಗಳ ಮೇಲೆ ನಿಂತು ಆಹ್ವಾನಿಸಲಾಗುತ್ತಿದ್ದಂತೆ (ಮೂಲತಃ ಬೀದಿಗಳಲ್ಲಿ ನಿಂತು ಕರೆಯಲಾಗುತ್ತಿತ್ತು), ಹೇಗೆ ಮತ್ತು ಯಾವಾಗ ಅವುಗಳಿಗೆ ಗೋಪುರದ ರೂಪ ಬಂತು? ಎಂಬುದಾಗಿದೆ. ಇಸ್ಲಾಮಿನ ಹುಟ್ಟು, ಬೆಳವಣಿಗೆ, ವಿಕಾಸ ಒಂದು ಉಮ್ಮತ್ (ಸಮುದಾಯ) ನೊಂದಿಗೆ ಆಗಿದೆ. ಅಗತ್ಯ ಬಂದಾಗ ಸಮುದಾಯಕ್ಕೆ ಸೇವೆ ಸಲ್ಲಿಸುವ ಒಂದು ವರ್ತನೆ ಇಸ್ಲಾಮಿನ ವೈಶಿಷ್ಟ್ಯಗಳಲ್ಲೊಂದಾಗಿದೆ. ‘ನೀವು ಎಲ್ಲೇ ಇರಿ, ಪ್ರಾರ್ಥನೆಯ ಸಮಯವಾದರೆ ನಿಮಗೆ ಪ್ರಾರ್ಥಿಸಲು ಸೂಕ್ತ ಸ್ಥಳ ಮಸೀದಿಯಾಗಿದೆ ಎಂಬುದು ಸಂಪ್ರದಾಯ. ಮಸೀದಿಗೆ ಅದರ ರೂಪ ಮತ್ತು ಶೈಲಿ ಇಲ್ಲದಿದ್ದರೂ, ಸಮುದಾಯದ ಅಗತ್ಯಗಳನ್ನು ಭೌತಿಕವಾಗಿ ಪೂರೈಸುವ ಸ್ಥಳಾವಕಾಶ ಇದ್ದರೆ ಸಾಕು. ಸಂದರ್ಭಾನುಸಾರ ಅಲ್ಲಿ ಅದು ಹೊಂದಿಕೊಳ್ಳುತ್ತದೆ.
ಅದರಂತೆ ಮಸೀದಿಯು ಸಾಮಾಜಿಕ ಕೇಂದ್ರ, ಪ್ರಾರ್ಥನೆ ಮತ್ತು ಬೋಧನೆಯ ಸ್ಥಳ, ನ್ಯಾಯಾಲಯ, ಹಣಕಾಸು ವಹಿವಾಟಿಗಾಗಿ, ಆಡಳಿತಾತ್ಮಕ ಕಾರ್ಯಗಳಿಗಾಗಿ ಇರುವ ಒಂದು ಪ್ರದೇಶ . ಈ ತತ್ವದ ಅನುಸಾರವಾಗಿ ಸಮುದಾಯದ ಅಗತ್ಯಕ್ಕೋಸ್ಕರ ಜನರನ್ನು ಒಂದುಗೂಡಿಸುವ ಸಲುವಾಗಿ ಆಝಾನ್ ಎಂಬ ವಿಧಾನವು ಹುಟ್ಟಿಕೊಂಡಿತು. ಈ ಉದ್ದೇಶಗಳಿಗಾಗಿ ಮಿನಾರಗಳು ನೆಲೆ ನಿಂತವು. ಈ ಸಂಕೇತವು ಹಲವಾರು ತತ್ವಗಳ, ಜ್ಞಾನ, ಸಂಪ್ರದಾಯದ ಮೌಲ್ಯಗಳ ಪ್ರತೀಕಗಳಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನು ಗಮನಿಸಿದ್ದೇವೆ. ಇತರ ನಾಗರಿಕತೆಗಳಂತೆಯೇ ಇಸ್ಲಾಂ ನಾಗರಿಕತೆಯು ಅದರ ಬುನಾದಿಯನ್ನು ಭದ್ರ ಪಡಿಸಲು ಸಾಕಷ್ಟು ಹೆಣಗಾಡಿತ್ತು. ಅದೇ ರೀತಿ ಒಂದು ನಿರ್ದಿಷ್ಟ ಆಕಾರವನ್ನು ಅಳವಡಿಸಿಕೊಳ್ಳಲು ಅದರ ಶಿಲ್ಪಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸುಂದರವಾದ, ಉದ್ದನೆಯ ಮಿನಾರಗಳ ಉದಯವುಂಟಾಯಿತು.
ಈ ತಾರ್ಕಿಕ ವಿಕಸನ ಪ್ರಕ್ರಿಯೆಯ ಭಾಗವಾಗಿ ಮಸೀದಿಗಳಿಗೆ ಸಮಾಂತರವಾಗಿ ಮಿನಾರಗಳು ಜಗತ್ತಿನಾದ್ಯಂತ ಬೆಳೆದು ಬಂದವು. ಇಸ್ಲಾಮಿನ ಐಕ್ಯತೆಗಾಗಿ ವಿವಿಧ ಸಾಮಾಜಿಕ, ರಾಜಕೀಯ, ಧಾರ್ಮಿಕ ಅಂಶಗಳನ್ನು ಮಿನಾರಗಳು ಏಕೀಕರಿಸಿದವು. ಸಮುದಾಯದ ಸದಸ್ಯರನ್ನು ಒಂದುಗೂಡಿಸುವ ತಮ್ಮ ಪ್ರಾಥಮಿಕ ಕಾರ್ಯದಿಂದ ಮಿನಾರಗಳು ಹಿಂದೆ.ಸರಿದಿಲ್ಲ.
ಶಿಲ್ಪಕಲೆಯಾಗಲಿ ಅಥವಾ ಇನ್ನು ಯಾವುದೇ ಇರಲಿ, ಯಾವುದೇ ಚಿಹ್ನೆಗಳಿಗೂ ಅವುಗಳ ಮೌಲ್ಯಗಳನ್ನು ನೆನಪಿಸುವ ಅದ್ಭುತ ಸಾಮರ್ಥ್ಯವಿದೆ. ಅವುಗಳು ಇರುವಷ್ಟು ಕಾಲ ಅವುಗಳ ತತ್ವಗಳು ಪ್ರಸ್ತುತ ವಾಗಿರುತ್ತವೆ. ನಮ್ಮ ಅಂತಿಮ ಲಕ್ಷ್ಯವು ಜ್ಞಾನಾರ್ಜನೆಯಾಗಿರುವುದರಿಂದ, ಇವುಗಳೆಲ್ಲವೂ ನಮ್ಮನ್ನು ಒಂದು ವಿಚಾರ ಮಂಥನಕ್ಕೆ ಒಡ್ಡುತ್ತವೆ. ಆ ವಿಚಾರ ಮಂಥನವು ಮುಂದಿನ ಪೀಳಿಗೆಗೆ ಸಹಕಾರಿಯಾಗಬಲ್ಲದು. ಅಲ್ಲದೇ ಹೋದರೆ ನಮ್ಮ ಪ್ರಯತ್ನಗಳ ಫಲ ಶೂನ್ಯವಾಗಿರುವುದು.
ಮಿನಾರಗಳಲ್ಲಿ ಸುಪ್ತವಾಗಿರುವ ವಿಚಾರಗಳಿಗೆ ಮುಸ್ಲಿಂ ಜಗತ್ತು ಬದ್ಧತೆ ತೋರಬೇಕು. ಇಂದು ಮನು ಕುಲವು ಎದುರಿಸುತ್ತಿರುವ ಸಮಸ್ಯೆಗಳು, ಎದುರಿಸಲಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಪರಸ್ಪರ ಸಹಕಾರ ಮತ್ತು ಐಕ್ಯತಾ ಮನೋಭಾವದ ಮಹತ್ವಗಳು ಮಿನಾರಗಳ ಮೂಲಕ ಹೊರಬರಬೇಕು. ವಿಭಿನ್ನ ಸಂದರ್ಭಗಳಲ್ಲಿ, ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಇಸ್ಲಾಂ ಸಾಬೀತು ಪಡಿಸಿದೆ. ಇಂದಿನ ಇಸ್ಲಾಮಿಕ್ ಜಗತ್ತು ಸಾಂಪ್ರದಾಯಿಕ ಮೌಲ್ಯಗಳು ಮತ್ತು ಅದರ ನೈಜ ಸಮತೋಲನವನ್ನು ಕಳೆದುಕೊಳ್ಳದೆ, ಒಗ್ಗಟ್ಟಿನ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ.
ಮಾನವೀಯತೆಯ ಅಭಿವೃದ್ಧಿ ಮತ್ತು ಜ್ಞಾನಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಅಲ್ ಮುವಹ್ಹಿದೂನ್ (Al mohad caliphate) ನಾಗರಿಕತೆಯ ಪ್ರತೀಕವಾಗಿದೆ ಟಿನ್ಮಲ್ ಮಸೀದಿಯ ಖುತುಬಿಯ್ಯ ಮಿನಾರ್. ಯೂರೋ ಇಸ್ಲಾಮಿಕ್ ಸಂವಾದಕ್ಕೆ ನಾವು ನೀಡುವ ಸಣ್ಣ ಕೊಡುಗೆಯೂ ಗೌರವಾರ್ಹ. ವಿನೀತನಾದ ನಾನು ಮುನ್ನಡೆಸುತ್ತಿರುವ ‘ವೆಸ್ಟರ್ನ್ ಇನ್ಸ್ಟಿಟ್ಯೂಟ್ ಫಾರ್ ಇಸ್ಲಾಮಿಕ್ ಕಲ್ಚರ್’ ಇಸ್ಲಾಮ್ ಬೋಧಿಸುವ ಮತ್ತು ರವಾನಿಸುವ ಸಂಪ್ರದಾಯಗಳಿಂದ ಸ್ಪೂರ್ತಿ ಪಡೆದು, ಅಪಾರ ಗೌರವಗಳೊಂದಿಗೆ , ಮುಸ್ಲಿಂ ಜಗತ್ತು ಮತ್ತು ಪಾಶ್ಚಾತ್ಯ ಜಗತ್ತು ಹಾಗೂ ಮತಾಂಧತೆ ಮತ್ತು ನಿರ್ಲಕ್ಷ್ಯದ ಬಲಿಪಶುಗಳನ್ನು ಒಂದುಗೂಡಿಸಲು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ.
ಕಳೆದ ಮೇ ತಿಂಗಳಲ್ಲಿ ಉನ್ನತ ಸಂಸ್ಥೆಯಾದ The council of Europe ನಮ್ಮ ಸಂಸ್ಥೆಯೊಂದಿಗೆ ಜಂಟಿಯಾಗಿ ಆಯೋಜಿಸಿದ ‘ಇಸ್ಲಾಂ ಧರ್ಮವು ಯುರೋಪ್‌ಗೆ ನೀಡಿದ ಕೊಡುಗೆ’ ಎಂಬ ವಿಷಯದ ಬಗ್ಗೆ ಒಂದು ಸೆಮಿನಾರ್ ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಛೇರಿಯಲ್ಲಿ ನಡೆಯಿತು. Council of Europe ನಲ್ಲಿ ನಡೆದ ಚರ್ಚೆಗಳು ಮತ್ತು ಅವುಗಳ ಮುಂದುವರೆದ ಭಾಗ ಎಂಬಂತೆ ಸೆಪ್ಟೆಂಬರ್ 19 ರ ಅಧಿವೇಶನದಲ್ಲಿ ಶಿಫಾರಸು 1162 ರನ್ನು ಅನುನೋದಿಸಲಾಯಿತು. ಅಂತರ್ ಸಾಂಸ್ಕೃತಿಕ ಪ್ರದೇಶಗಳ ಸಮಸ್ಯೆ ನಿವಾರಣೆಗೆ ಸಮರ್ಥವಾದ ಕ್ರಮಗಳನ್ನು ಕೈಗೊಳ್ಳುವುದಾಗಿತ್ತು ನಮ್ಮ ಉದ್ದೇಶ. ಯಾವುದೇ ಸಂಕೀರ್ಣತೆ ಇಲ್ಲದೆ ಸಾಂಸ್ಕೃತಿಕ, ರಾಜಕೀಯ ವ್ಯವಹಾರವನ್ನು ಮೆಡಿಟರೇನಿಯನ್‌ನ ಎರಡು ತೀರಗಳಿಗೂ ವಿಸ್ತರಿಸುವ ಇರಾದೆ ಇದೆ.
ಕೊನೆಯದಾಗಿ, ಅಲ್ ಮುವಹ್ಹಿದ್ ಖಿಲಾಫತ್ ನ ರಾಜಧಾನಿಗಳನ್ನು ಪ್ರತಿನಿಧಿಸುವ ಖುತುಬಿಯ್ಯ ಮತ್ತು ಗಿರಾಲ್ಡ ಮಿನಾರದಂತೆ ಸುಂದರವೂ ಸೂಚಕವೂ ಆದ ಚಿಹ್ನೆಗಳು ಜೀವಂತವಾಗಿರಲಿ, ಅದೇ ರೀತಿ ಇಂತಹ ಕಾರ್ಯಗಳು ದ್ವಿಗುಣಗೊಳ್ಳಲಿ ಎಂಬುದು ನನ್ನಾಸೆ.
ಅದು ಶರತ್ಕಾಲದ ಒಂದು ಕಗ್ಗತ್ತಲ ರಾತ್ರಿ. ಆ ಬಡ್ಡಿ ವ್ಯಾಪಾರಿ ಮುದುಕ ತನ್ನ ಓದಿನ ಕೊಠಡಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದಿಟ್ಟಿ ಹಾಯಿಸುತ್ತಾ ಹದಿನೈದು ವರ್ಷಗಳ ಹಿಂದೆ ಇದೇ ಶರತ್ಕಾಲದಲ್ಲಿ ತಾನು ನೀಡಿದ್ದ ಔತಣ ಕೂಟವನ್ನು ನೆನಪಿಸಿಕೊಳ್ಳುತ್ತಿದ್ದ. ಅಂದು ಹಲವು ಜನ ಮಹನೀಯರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು ಮತ್ತು ಅತೀ ಆಸಕ್ತಿದಾಯಕ ವಿಷಯಗಳ ಬಗ್ಗೆ ಅಲ್ಲಿ ಚರ್ಚೆಯಾಗಿತ್ತು. ಹಲವು ವಿಷಯಗಳ ಜೊತೆಗೆ ಅವರು ಮರಣ ದಂಡನಾ ಶಿಕ್ಷೆಯನ್ನೂ ಖಂಡಿಸಿದ್ದರು. ಅವರು ಅದೊಂದು ಹಳೆಯ ಪದ್ಧತಿಯೆಂದೂ, ಕ್ರೈಸ್ತನಾಡಿಗೆ ಹೇಳಿಸಿದ್ದಲ್ಲವೆಂದೂ, ಅನೈತಿಕವೆಂದೂ ಬಗೆದಿದ್ದರು. ಇನ್ನು ಕೆಲವರು ಮರಣದಂಡನೆಯಂತಹ ಶಿಕ್ಷೆಯ ಬದಲಿಗೆ ವಿಶ್ವದಾದ್ಯಂತ ಜೀವಾವಧಿ ಶಿಕ್ಷೆಯನ್ನೇ ಜಾರಿಗೆ ತರಬೇಕು ಎಂದೂ ಚಿಂತನೆ ನಡೆಸಿದ್ದರು.
“ನಾನು ನಿಮ್ಮ ವಾದವನ್ನು ಒಪ್ಪಲಾರೆ”, ಆತಿಥೇಯ ನುಡಿದಿದ್ದ. ನಾನು ಸ್ವತಃ ಮರಣದಂಡನಾ ಶಿಕ್ಷೆಯನ್ನಾಗಲೀ ಜೀವಾವಧಿ ಶಿಕ್ಷೆಯನ್ನಾಗಲೀ ಅನುಭವಿಸಿದವನಲ್ಲ. ಆದರೆ ಯಾರಾದರೂ ಈ ಬಗ್ಗೆ ತೀರ್ಪು ಕೇಳಿದ್ದರೆ ನನ್ನ ಅಭಿಪ್ರಾಯ ಮಾತ್ರ ಈ ಮರಣ ದಂಡನಾ ಶಿಕ್ಷೆಯೆಂಬುದು ಜೀವಾವಧಿ ಶಿಕ್ಷೆಗಿಂತ ಹೆಚ್ಚು ಮಾನವೀಯವೂ, ನೈತಿಕವೂ ಆಗಿರುತ್ತದೆ ಎಂಬುದಾಗಿಯೇ ಇರುತ್ತದೆ. ಮರಣದಂಡನಾ ಶಿಕ್ಷೆ ವ್ಯಕ್ತಿಯನ್ನು ಕ್ಷಿಪ್ರವಾಗಿ ಸಾಯಿಸಿಬಿಡುತ್ತದೆ, ಜೀವಾವಧಿ ಶಿಕ್ಷೆ ಅನುಕ್ರಮವಾಗಿ ಸಾಯಿಸುತ್ತದೆ. ಹೆಚ್ಚು ಮಾನವೀಯ ಕೊಲೆಗಾರ ಯಾರು, ನಿಮ್ಮನ್ನು ಕೆಲವೇ ಕ್ಷಣಗಳಲ್ಲಿ ಕೊಲ್ಲುವವನೇ ಅಥವಾ ನಿಮ್ಮ ಜೀವವನ್ನು ಹಲವು ವರ್ಷಗಳ ಕಾಲ ಹಿಂಡುವವನೇ?”
“ಅವೆರಡೂ ಅನೈತಿಕವೇ”, ಒಬ್ಬ ಅತಿಥಿ ಹೇಳಿದ. “ಏಕೆಂದರೆ ಅವೆರಡರ ಉದ್ದೇಶಗಳು ಒಂದೇ ಆಗಿವೆ- ಜೀವ ತೆಗೆಯುವುದು! ದೇಶವೆಂದರೆ ದೇವರಲ್ಲ, ತಾನು ನೀಡಬೇಕೆಂದು ಬಯಸಿದರೂ ವಾಪಾಸು ನೀಡಲಾಗದ ಪ್ರಾಣವನ್ನು ತೆಗೆದುಕೊಳ್ಳಲು ಅದಕ್ಕೆ ಯಾವುದೇ ಹಕ್ಕಿಲ್ಲ.”
ಆ ಗುಂಪಿನಲ್ಲಿ ಒಬ್ಬ ವಕೀಲನಿದ್ದ. ಸುಮಾರು ಇಪ್ಪತ್ತೈದರ ತರುಣ. ಯಾರೋ ಆತನ ಅಭಿಪ್ರಾಯವನ್ನು ಕೇಳಿದುದರಿಂದ ಆತ ನುಡಿದ, “ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆಗಳೆರಡೂ ಅನೈತಿಕವೇ, ಆದರೆ ನನಗೇನಾದರೂ ಆಯ್ಕೆ ನೀಡಿದಲ್ಲಿ ನಾನು ಖಂಡಿತವಾಗಿಯೂ ಎರಡನೆಯದ್ದನ್ನೇ ಆಯ್ಕೆ ಮಾಡುವೆ. ಬದುಕದೇ ಇರುವುದಕ್ಕಿಂತ ಹೇಗಾದರೂ ಬದುಕಿಯೇ ಬಿಡುವುದು ಒಳ್ಳೆಯದೇ ಅಲ್ಲವೇ?”.
ಚರ್ಚೆ ಹೀಗೆ ಜೀವಕಳೆ ಪಡೆದುಕೊಂಡಿತು. ಬಡ್ಡಿ ವ್ಯಾಪಾರಿ ಆಗ ವಯಸ್ಕನಾಗಿದ್ದ ಮತ್ತು ಅಧೀರನಾಗಿದ್ದರಿಂದಲೋ ಏನೋ ತಕ್ಷಣ ತಾಳ್ಮೆ ಕಳೆದುಕೊಂಡನು, ತನ್ನ ಮುಷ್ಠಿಯನ್ನು ಮೇಜಿಗೆ ಗುದ್ದುತ್ತಾ ವಕೀಲನ ಕಡೆಗೆ ನೋಡುತ್ತಾ ಕಿರುಚಿದ. “ಇದು ಸುಳ್ಳು, ಬೇಕಾದರೆ ಎರಡು ಮಿಲಿಯನ್ ಬಾಜಿ ಕಟ್ಟುತ್ತೇನೆ, ನೀನು ಐದು ವರ್ಷ ಕೂಡಾ ಸೆರೆಮನೆಯೊಳಗೆ ಇರಲಾರೆ”.
“ನೀನು ಇದನ್ನು ಅಷ್ಟೊಂದು ಗಂಭೀರವಾಗಿ ಸ್ವೀಕರಿಸಿರುವಿಯೆಂದಾದರೆ..” ವಕೀಲ ಉತ್ತರಿಸಿದ. “.. ನಾನು ನಿನ್ನ ಬಾಜಿಯನ್ನು ಸ್ವೀಕರಿಸಿರುವೆ, ನಾನು ಐದಲ್ಲ ಹದಿನೈದು ವರ್ಷಗಳವರೆಗೆ ಸೆರೆಮನೆಯಲ್ಲಿರಲು ಸಿದ್ಧ!”.
“ಹದಿನೈದು ! ಸರಿ ಒಪ್ಪಿದೆ” ಬಡ್ಡಿ ವ್ಯಾಪಾರಿ ಕೂಗಿದ. “ಮಾನ್ಯರೇ ನಾನು ಎರಡು ಮಿಲಿಯನ್ ಬಾಜಿಯಲ್ಲಿ ತೊಡಗಿಸಲು ಸಿದ್ಧ”.
“ಒಪ್ಪಿದೆ. ನೀನು ಎರಡು ಮಿಲಿಯನ್ ತೊಡಗಿಸು ನಾನು ನನ್ನ ಸ್ವಾತಂತ್ರ್ಯವನ್ನು ತೊಡಗಿಸುವೆ” ಯುವ ವಕೀಲ ಹೇಳಿದ.
ಹೀಗೆ ಕ್ರೂರವೂ, ಅಸಂಬದ್ಧವೂ ಆದ ಬಾಜಿಯೊಂದು ಜರುಗಿತು.
ಬಡ್ಡಿ ವ್ಯಾಪಾರಿ ಹಲವು ಮಿಲಿಯನ್ಗಳ ಒಡೆಯನಾಗಿದ್ದು, ಜೊತೆಗೆ ಪರಮ ಸ್ವಾರ್ಥಿಯೂ ಕಪಟಿಯೂ ಆಗಿದ್ದ. ರಾತ್ರಿ ಔತಣಕೂಟದ ಸಮಯದಲ್ಲಿ ಆತ ಯುವ ವಕೀಲನನ್ನು ಹಂಗಿಸುವಂತೆ ಹೀಗೆ ಹೇಳಿದ. “ಯೋಚಿಸಿ ನೋಡು ಹುಡುಗ ಇನ್ನೂ ಸಮಯವಿದೆ. ಎರಡು ಮಿಲಿಯನ್ ನನಗೆ ದೊಡ್ಡ ಮೊತ್ತವೇ ಅಲ್ಲ. ಆದರೆ ನೀನು ಮಾತ್ರ ನಿನ್ನ ಬದುಕಿನ ಅಮೂಲ್ಯ ಮೂರ್ನಾಲ್ಕು ವರ್ಷಗಳನ್ನು ಕಳೆದುಕೊಳ್ಳಲಿರುವೆ. ನಾನು ಮೂರ್ನಾಲ್ಕು ವರ್ಷಗಳೆಂದೆ, ಯಾಕೆಂದರೆ ಅದಕ್ಕಿಂತ ಹೆಚ್ಚು ದಿನ ಒಳಗಿರಲು ನಿನಗೆ ಸಾಧ್ಯವೇ ಇಲ್ಲ. ಇದನ್ನು ಕೂಡಾ ಯೋಚಿಸು, ಸ್ವಇಚ್ಛಾ ಸೆರೆವಾಸ, ಸೆರೆಮನೆ ಶಿಕ್ಷೆಗಿಂತಲೂ ಕೆಟ್ಟದು. ನೀನು ಯಾವಾಗ ಬೇಕಾದರೂ ಮುಕ್ತನಾಗಬಹುದು ಎಂಬ ಯೋಚನೆಯೇ ನಿನ್ನ ಸೆರೆಮನೆವಾಸದ ಇಡೀ ಬದುಕನ್ನೇ ವಿಷಮಯಗೊಳಿಸುವುದು. ನಿನ್ನ ಮೇಲೆ ಅನುಕಂಪವಿದೆ”.
ಮತ್ತು ಈಗ ಅದೇ ಬಡ್ಡಿ ವ್ಯಾಪಾರಿ ಕೊಠಡಿಯ ಮೂಲೆಯಿಂದ ಮೂಲೆಗೆ ಶತಪಥ ಹಾಕುತ್ತಾ ಎಲ್ಲವನ್ನೂ ಜ್ಞಾಪಿಸುತ್ತಾ ತನಗೆ ತಾನೇ ಕೇಳಿಕೊಳ್ಳುತ್ತಿದ್ದ. ‘ನಾನು ಯಾಕಾಗಿ ಈ ಬಾಜಿ ಕಟ್ಟಿದೆ? ಏನು ಸಿಕ್ಕಿತು?’
ಆ ವಕೀಲನಾದರೋ ತನ್ನ ಹದಿನೈದು ವರ್ಷಗಳನ್ನು ಕಳೆದುಕೊಳ್ಳುವನು ಮತ್ತು ನಾನು ಎರಡು ಮಿಲಿಯ ಹಣವನ್ನು ಬಿಸಾಕಿಬಿಡುವೆ. ಆದರೆ ಇದು ಮರಣದಂಡನಾ ಶಿಕ್ಷೆ ಜೀವಾವಧಿ ಶಿಕ್ಷೆಗಿಂತ ಒಳ್ಳೆಯದೇ ಅಥವಾ ಕೆಟ್ಟದೇ ಎಂದು ಜನರಿಗೆ ಅರಿವು ಮೂಡಿಸುವುದೇ? ಇಲ್ಲ ಇಲ್ಲ! ಇವೆಲ್ಲಾ ಬರೀ ಓಳು! ಇದು ತನ್ನಂತಹ ಹೊಟ್ಟೆತುಂಬಿದ ಸಿರಿವಂತರ ಆಷಾಡಭೂತಿತನ ಮತ್ತು ಆ ವಕೀಲನಂತಹವರ ಹಣಗಳಿಸುವ ದುರಾಸೆ.
ಆ ದಿನ ಮುಸ್ಸಂಜೆಯ ಔತಣ ಕೂಟದ ನಂತರ ನಡೆದ ಘಟನೆಗಳ ಬಗ್ಗೆ ಆತ ಜ್ಞಾಪಿಸಿಕೊಂಡನು. ಅಂದು ಯುವ ವಕೀಲನು ಕಟ್ಟುನಿಟ್ಟಿನ ನಿಗಾವಣೆಯ ಅಡಿಯಲ್ಲಿ ಬಡ್ಡಿ ವ್ಯಾಪಾರಿಯ ಮನೆಯ ತೋಟದ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ಸೆರೆಮನೆವಾಸ ಅನುಭವಿಸಬೇಕೆಂದು ತೀರ್ಮಾನಿಸಲಾಯಿತು. ಸೆರೆಮನೆವಾಸದ ಅವಧಿಯಲ್ಲಿ ಆತ ಮನೆಯ ಆವರಣದ ಗೋಡೆಯನ್ನು ದಾಟಬಾರದಾಗಿಯೂ ಯಾವುದೇ ಮನುಷ್ಯರನ್ನು ನೋಡುವುದಾಗಲೀ ಮಾತುಗಳನ್ನು ಆಲಿಸುವುದಾಗಲೀ ಪತ್ರಗಳನ್ನು ಮತ್ತು ದಿನ ಪತ್ರಿಕೆಗಳನ್ನು ಸ್ವೀಕರಿಸುವುದಾಗಲೀ ಮಾಡಬಾರದೆಂದು ತೀರ್ಮಾನಿಸಲಾಯಿತು.
ಆದರೆ ಆತನಿಗೆ ಸಂಗೀತ ಉಪಕರಣಗಳನ್ನು ನುಡಿಸಲು, ಓದಲು ಮತ್ತು ಪತ್ರಗಳನ್ನು ಬರೆಯಲು, ವೈನ್ ಕುಡಿಯಲು ಮತ್ತು ತಂಬಾಕು ಸೇದಲು ಅನುಮತಿ ನೀಡಲಾಯಿತು.
ಒಪ್ಪಂದದ ಪ್ರಕಾರ ಆತ ಯಾರನ್ನಾದರೂ ಸಂಪರ್ಕಿಸಬಹುದು. ಆದರೆ ಕೇವಲ ಗೋಡೆಯಲ್ಲಿರುವ, ಸದರಿ ಉದ್ದೇಶಕ್ಕೆಂದೇ ರಚಿಸಲಾದ ಒಂದು ಸಣ್ಣ ಕಿಂಡಿಯ ಮೂಲಕ ಮಾತ್ರ. ಆತನಿಗೆ ಅವಶ್ಯವಿರುವ ವೈನ್, ಹೊಗೆಸೊಪ್ಪು, ಪುಸ್ತಕಗಳು, ಸಂಗೀತ ಉಪಕರಣ ಇತ್ಯಾದಿಗಳನ್ನು ಎಷ್ಟೇ ಸಂಖ್ಯೆಯಲ್ಲಿ ಪಡೆಯಬಹುದು. ಆದರೆ ಕೇವಲ ಆ ಪುಟ್ಟ ಕಿಂಡಿಯಲ್ಲಿ ಒಂದು ಕಾಗದದಲ್ಲಿ ಕೋರಿಕೆ ಸಲ್ಲಿಸುವ ಮೂಲಕ ಮಾತ್ರ. ಒಪ್ಪಂದ ಪತ್ರದಲ್ಲಿ ಎಲ್ಲವನ್ನೂ ವಿಷದವಾಗಿ ಬರೆಯಲಾಗಿತ್ತು ಮತ್ತು ಆ ಪ್ರಕಾರ ಸೆರೆಮನೆವಾಸವನ್ನು ಏಕಾಂತವಾಗಿ ಕಳೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿತ್ತು. ಆ ವಕೀಲ 1870 ನೇ ಇಸವಿಯ ನವೆಂಬರ ತಿಂಗಳ 14ರ ರಾತ್ರಿ ಹನ್ನೆರಡು ಗಂಟೆಯಿಂದ 1885ರ ನವೆಂಬರ ತಿಂಗಳ 14 ನೇ ತಾರೀಖು ರಾತ್ರಿ ಹನ್ನೆರಡು ಗಂಟೆಯವರೆಗೆ ಸೆರೆಮನೆವಾಸ ಅನುಭವಿಸತಕ್ಕದ್ದೆಂದು ಒಪ್ಪಿ ತಯಾರಿಸಿದ ಕರಾರಾಗಿತ್ತು. ಒಂದು ವೇಳೆ ನಿಗದಿತ ಸಮಯದಿಂದ ಕೇವಲ ಎರಡು ನಿಮಿಷಗಳ ಮುಂಚೆ ಆತ ತಪ್ಪಿಸಲು ಪ್ರಯತ್ನಿಸಿದರೂ ಆ ಬಡ್ಡಿ ವ್ಯಾಪಾರಿ ತನ್ನ ಬಾಜಿಯಿಂದ ಮುಕ್ತನಾಗುತ್ತಿದ್ದ ಮತ್ತು ಆತ ಆ ವಕೀಲನಿಗೆ ಎರಡು ಮಿಲಿಯನ್ ಹಣವನ್ನು ನೀಡುವ ಭಾದ್ಯತೆಯಿಂದ ವಿರಹಿತಗೊಳ್ಳುತ್ತಿದ್ದನು.
ಮೊದಲ ವರ್ಷದ ಸೆರೆವಾಸದ ಸಮಯದಲ್ಲಿ ಆ ವಕೀಲ ಬರೆದಿದ್ದ ಕೆಲವು ಕಿರು ಟಿಪ್ಪಣಿಗಳಿಂದ, ಆತ ಭಯಂಕರವಾದ ಏಕಾಂತತೆಯನ್ನೂ, ಬೇಸರವನ್ನೂ ಅನುಭವಿಸಿದ್ದನೆಂದು ತಿಳಿದುಬಂದಿತ್ತು. ಸೆರೆಮನೆಯ ಬದಿಯಿಂದ ರಾತ್ರಿ-ಹಗಲು ಪಿಯಾನೋ ಧ್ವನಿ ಕೇಳಿಬರುತ್ತಿತ್ತು. ಆತ ವೈನ್ ಮತ್ತು ಹೊಗೆಸೊಪ್ಪನ್ನು ತಿರಸ್ಕರಿಸಿದ್ದ. “ವೈನು” ಆತ ಬರೆದಿದ್ದ “ಅದು ಆಸೆಯನ್ನು ಹೆಚ್ಚಿಸುತ್ತದೆ ಮತ್ತು ಆಸೆಯೆಂಬುದು ಕೈದಿಯ ಎಲ್ಲಾ ತರಹದ ಕಷ್ಟಗಳ ಮೂಲ. ಅಷ್ಟುಮಾತ್ರವಲ್ಲದೆ ಒಬ್ಬನೇ ಕುಳಿತು ಒಂದೊಳ್ಳೆಯ ವೈನ್ ಹೀರುವುದಕ್ಕಿಂತ ದೊಡ್ಡ ಬೇಸರದ ಕೆಲಸ ಇನ್ನೊಂದಿಲ್ಲ, ಮತ್ತು ಹೊಗೆಸೊಪ್ಪು ಕೋಣೆಯ ಗಾಳಿಯನ್ನು ಕಲುಷಿತಗೊಳಿಸುತ್ತದೆ”.
ಮೊದಲ ವರ್ಷದಲ್ಲಿ ಆ ವಕೀಲನಿಗೆ ಕೆಲವು ಲಘು ಸಾಹಿತ್ಯವಿರುವ ಪುಸ್ತಕಗಳನ್ನೂ, ಕ್ಲಿಷ್ಟ ಪ್ರೇಮ ಪ್ರಕರಣದ ಕಾದಂಬರಿಗಳು, ಅಪರಾಧ ಮತ್ತು ಭಾವುಕತೆಯ ಕಥೆಗಳನ್ನು , ಹಾಸ್ಯ ಸಾಹಿತ್ಯಗಳನ್ನು ಕಳುಹಿಸಲಾಯಿತು.
ಆರನೇ ವರ್ಷದ ಉತ್ತರಾರ್ಧದಲ್ಲಿ ಕೈದಿಯು ಸಂಭ್ರಮದಿಂದ ಭಾಷೆಗಳನ್ನು, ತತ್ತ್ವಶಾಸ್ತ್ರವನ್ನು ಮತ್ತು ಇತಿಹಾಸವನ್ನು ಓದಲು ತೊಡಗಿದನು. ಆತನು ಈ ವಿಷಯಗಳಲ್ಲಿ ಎಷ್ಟು ಉತ್ಸುಕನಾದನೆಂದರೆ ಬಡ್ಡಿ ವ್ಯಾಪಾರಿಗೆ ಆತನಿಗೆ ಸಾಕಾಗುವಷ್ಟು ಪುಸ್ತಕಗಳನ್ನು ಒದಗಿಸಲು ಸಮಯ ಹೊಂದಿಸುವುದೇ ದುಸ್ತರವಾಗಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಆರುನೂರು ಸಂಪುಟಗಳಷ್ಟು ಪುಸ್ತಕಗಳನ್ನು ಖರೀದಿಸಿ ಆತನಿಗೆ ನೀಡಲಾಯಿತು.
ಬಡ್ಡಿ ವ್ಯಾಪಾರಿಯ ಉತ್ಸಾಹ ಸೋರಿಹೋಗುತ್ತಿರುವ ಸಮಯದಲ್ಲಿಯೇ ಒಂದು ದಿನ ಕೈದಿಯಿಂದ ಒಂದು ಪತ್ರ ಬಂದಿತು. “ನನ್ನ ಪ್ರೀತಿಯ ಕೈದುಗಾರನೇ, ನಾನು ಈ ಸಾಲುಗಳನ್ನು ಆರು ಭಾಷೆಗಳಲ್ಲಿ ಬರೆಯುತ್ತಿರುವೆ. ಇವನ್ನು ತಜ್ಞರಿಗೆ ತೋರಿಸು. ಅವರು ಇವುಗಳನ್ನು ಓದಲಿ. ಅವರಿಗೆ ಈ ಸಾಲುಗಳಲ್ಲಿ ಒಂದು ತಪ್ಪಾದರೂ ಗೋಚರಿಸದಿದ್ದರೆ ನಿನ್ನಲ್ಲಿ ನನ್ನದೊಂದು ವಿನಂತಿಯಿದೆ, ತೋಟದ ಮೂಲೆಯಲ್ಲಿ ತುಪಾಕಿಯಿಂದ ಗುಂಡೊಂದನ್ನು ಹಾರಿಸಲು ಆದೇಶ ನೀಡು. ಆ ಗುಂಡಿನ ಸದ್ದಿನಿಂದ ನನ್ನ ಪ್ರಯತ್ನಗಳು ವಿಫಲವಾಗಲಿಲ್ಲ ಎಂದು ತಿಳಿಯುವೆ. ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ದೇಶಗಳ ಜಾಣರು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದರು. ಆದರೆ ಅವರೆಲ್ಲರ ಒಳಗೆ ಒಂದೇ ಜ್ವಾಲೆ ಉರಿಯುತ್ತಿದೆ. ನಿನಗೆ ಗೊತ್ತೆ? ನಾನೀಗ ಆ ಸ್ವರ್ಗಸುಖವನ್ನು ಅನುಭವಿಸುತ್ತಿರುವೆ!”.
ಕೈದಿಯ ಆಸೆಯನ್ನು ಪೂರೈಸಲಾಯಿತು. ಬಡ್ಡಿ ವ್ಯಾಪಾರಿಯ ಆದೇಶದಂತೆ ಎರಡು ಗುಂಡುಗಳನ್ನು ತೋಟದಲ್ಲಿ ಹಾರಿಸಲಾಯಿತು.
ಬಳಿಕ, ಹತ್ತನೆಯ ವರ್ಷದ ನಂತರ, ವಕೀಲ ನಿಶ್ಚಲನಾಗಿ ತನ್ನ ಮೇಜಿನ ಮುಂದೆ ಕುಳಿತುಕೊಂಡು ಬೈಬಲಿನ ಹೊಸ ಒಡಂಬಡಿಕೆಯನ್ನು ಓದುತ್ತಿದ್ದ. ಬಡ್ಡಿ ವ್ಯಾಪಾರಿಗೆ ಇದು ಅಚ್ಚರಿಯೆನಿಸಿತ್ತು. ಒಬ್ಬ ಮನುಷ್ಯ ಕೇವಲ ನಾಲ್ಕು ವರ್ಷಗಳಲ್ಲಿ ಆರುನೂರು ಸಂಪುಟಗಳನ್ನಷ್ಟನ್ನು ತನ್ನದಾಗಿಸಿಕೊಂಡವನು, ಈಗ ಸರಳ ಪುಸ್ತಕವೊಂದನ್ನು ಓದಲು ಒಂದು ವರ್ಷ ತೆಗೆದುಕೊಳ್ಳುವುದೆಂದರೆ ! ಹೊಸ ಒಡಂಬಡಿಕೆಯ ನಂತರ ಧರ್ಮಗಳ ಇತಿಹಾಸ ಮತ್ತು ಧರ್ಮಶಾಸ್ತ್ರಗಳು ಸ್ಥಾನ ಪಡೆದುಕೊಂಡವು.
ಕೊನೆಯ ಎರಡು ವರ್ಷಗಳ ಸೆರೆವಾಸದಲ್ಲಿ ಕೈದಿಯು ಅಸಾಮಾನ್ಯ ಸಂಖ್ಯೆಯಲ್ಲಿ ಮತ್ತು ಅಷ್ಟೇ ಅಸಂಬದ್ಧವಾಗಿ ಓದಿದ. ಈಗ ಆತ ತನ್ನನ್ನು ಪ್ರಕೃತಿ ವಿಜ್ಞಾನದಲ್ಲಿ ತೊಡಗಿಸಿದ್ದ. ಆನಂತರ ಬೈರನ್, ಶೇಕ್ಸ್ ಪಿಯರ್ ಓದುತ್ತಿದ್ದ. ಆತನಿಂದ ಆಗಾಗ ಕಿರುಪತ್ರಗಳು ಬರುತ್ತಿದ್ದವು. ಒಮ್ಮೆಲೆ ರಸಾಯನ ಶಾಸ್ತ್ರ, ಔಷದ ಶಾಸ್ತ್ರದ ಪುಸ್ತಕ, ಒಂದು ಕಾದಂಬರಿ, ತತ್ತ್ವಶಾಸ್ತ್ರದ ಮೇಲಿನ ಟೀಕೆ, ಅಥವಾ ಧರ್ಮಶಾಸ್ತ್ರದ ಬಗೆಗಿನ ಪುಸ್ತಕಗಳ ಬೇಡಿಕೆಯಿಡುತ್ತಿದ್ದ. ಮುರಿದುಹೋದ ಹಡಗುಗಳ ಚೂರು ಚೂರುಗಳ ನಡುವೆ ಸಮುದ್ರದಲ್ಲಿ ಈಜುತ್ತಿರುವವನಂತೆ ಆತ ಓದುತ್ತಿದ್ದ. ಆತನ ಓದುವ ಆಸೆ ಬದುಕುಳಿಯಲು ಒಂದು ಚೂರಿನಿಂದ ಇನ್ನೊಂದು ಚೂರಿನತ್ತ ಏದುಸಿರು ಬಿಡುವವನಂತೆ ಭಾಸವಾಗುತ್ತಿತ್ತು.
ಬಡ್ಡಿ ವ್ಯಾಪಾರಿ ಇವೆಲ್ಲವುಗಳನ್ನೂ ಜ್ಞಾಪಿಸಿಕೊಂಡನು. ಮತ್ತು ಯೋಚಿಸಿದನು, “ನಾಳೆ ಹನ್ನೆರಡು ಗಂಟೆಯ ಸರಿ ಸುಮಾರಿಗೆ ಆತ ತನ್ನ ಸ್ವಾತಂತ್ರ್ಯವನ್ನು ಪಡೆಯಲಿದ್ದಾನೆ. ಒಪ್ಪಂದದ ಪ್ರಕಾರ ನಾನು ಆತನಿಗೆ ಎರಡು ಮಿಲಿಯನ್ ಹಣವನ್ನು ನೀಡಬೇಕು. ನಾನು ಅದನ್ನು ಪಾವತಿಸಿದರೆ ಅಲ್ಲಿಗೆ ಮುಗಿಯಿತು. ನಾನು ಎಂದೆಂದಿಗೂ ಕಳೆದುಕೊಳ್ಳುವೆ.
ಹದಿನೈದು ವರ್ಷಗಳ ಹಿಂದೆ ಆತನ ಬಳಿ ಹಲವು ಮಿಲಿಯನ್ ಹಣವಿತ್ತು. ಆದರೆ ಈಗ ಆತನ ಬಳಿ ಹಣ ಹೆಚ್ಚಿರುವುದೋ ಅಥವಾ ಸಾಲದ ಮೊತ್ತವೋ ಎಂದು ಸ್ವತಃ ಕೇಳಿಕೊಳ್ಳಲು ಭಯವೆನಿಸುವ ಹಾಗಿತ್ತು. ಶೇರು ಮಾರುಕಟ್ಟೆಯಲ್ಲಿ ಜುಗಾರಿ, ಅಪಾಯಕಾರಿ ದೂರದರ್ಶಿತ್ವ ಮತ್ತು ಅಜಾಗರೂಕ ನಡೆಯಿಂದ ಆತನಿಗೆ ಹಿನ್ನಡೆಯಾಗಿತ್ತು. ಇಳೀ ವಯಸ್ಸು ಕೂಡಾ ಆತನ ವ್ಯವಹಾರವನ್ನು ನಾಶ ಮಾಡುತ್ತಿತ್ತು. ನಿರ್ಭೀತ, ಆತ್ಮವಿಶ್ವಾಸವುಳ್ಳ, ಹೆಮ್ಮೆಯ ವ್ಯವಹಾರಸ್ಥ ಮನುಷ್ಯ ಈಗ ಮಾರುಕಟ್ಟೆಯ ಏರಿಳಿತಕ್ಕೆ ನಡುಗುವ ಸಾಮಾನ್ಯ ಹೂಡಿಕೆದಾರನಾಗಿದ್ದ.
“ಆ ಹಾಳಾದ ಬಾಜಿ!” ನಿರಾಶೆಯಿಂದ ತಲೆ ಕೊಡವಿಕೊಳ್ಳುತ್ತಾ ಆ ವೃದ್ಧ ಬಡಬಡಿಸಿದ. “ಆ ಮನುಷ್ಯ ಸತ್ತಾದರೂ ಯಾಕೆ ಹೋಗಲಿಲ್ಲ? ಆತನಿಗೆ ಈಗ ಕೇವಲ 40 ವರ್ಷ, ಆತ ನನ್ನೆಲ್ಲಾ ದುಡಿಮೆಯನ್ನು ಕಸಿದುಕೊಳ್ಳುವನು, ಮದುವೆಯಾಗಿ, ಬದುಕನ್ನು ಅನುಭವಿಸುತ್ತಾ, ಶೇರು ಮಾರುಕಟ್ಟೆಯಲ್ಲಿ ಜುಗಾರಿ ಆಡುವನು. ನಾನು ಮಾತ್ರ ಒಬ್ಬ ಹೊಟ್ಟೆಕಿಚ್ಜಿನ ಬಿಕ್ಷುಕನಂತೆ ಪ್ರತೀ ದಿನ ಆತನ ಬಾಯಿಯಿಂದ ಒಂದೇ ಮಾತನ್ನು ಕೇಳುವಂತಾಯಿತು. — ‘ ನಾನು ನನ್ನ ಜೀವನದ ಸಂತೋಷಕ್ಕಾಗಿ ಈ ಬಾಜಿಗೆ ಒಪ್ಪಿದೆ., ಈಗ ನಿನಗೆ ನಾನು ಸಹಾಯ ಮಾಡಲೇ? ‘ — ಇಲ್ಲ ! ಇದು ಬಹಳವಾಯಿತು, ಈ ಅವಮಾನದಿಂದ ಮತ್ತು ದಿವಾಳಿತನದಿಂದ ಪಾರಾಗಲು ಒಂದೇ ದಾರಿ, ಅದೇನೆಂದರೆ –ಆತ ಸಾಯಬೇಕು!”
ಗಡಿಯಾರ ಮೂರು ಸಲ ಸದ್ದು ಮಾಡಿತು. ಬಡ್ಡಿ ವ್ಯಾಪಾರಿ ಆಲಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿಗಳಾಚೆ ಹಿಮದಿಂದ ಹೆಪ್ಪುಗಟ್ಟಿದ ಮರಗಳ ನರಳಾಟ ಕೇಳಿ ಬರುತ್ತಿತ್ತು. ಮೇಲಂಗಿಯನ್ನು ಧರಿಸಿ, ಹದಿನೈದು ವರ್ಷಗಳಿಂದ ಒಮ್ಮೆಯೂ ತೆರೆದಿರದಿದ್ದ ಸೆರೆಮನೆಯ ಬಾಗಿಲುಗಳ ಕೀಲಿ ಕೈಯನ್ನು ಹಿಡಿದುಕೊಂಡು ಆತ ಸದ್ದಿಲ್ಲದೆ ಹೊರನಡೆದನು.
ತೋಟದಲ್ಲಿ ಕತ್ತಲಿತ್ತು, ಚಳಿಯು ಬಹಳವಿತ್ತು, ಮಳೆಯೂ ಸುರಿಯುತ್ತಿತ್ತು. ಮರಗಳ ನಡುವೆ ನುಸುಳಿ ಬೀಸುತ್ತಿದ್ದ ಗಾಳಿಗೆ ಮರಗಿಡಗಳು ಎಡೆಬಿಡದೆ ತುಯ್ದಾಡುತ್ತಿದ್ದವು. ಕಣ್ಣುಗಳನ್ನು ಎಷ್ಟು ದಂಡಿಸಿದರೂ ಆತನಿಗೆ ನೆಲವಾಗಲಿ, ಬಿಳಿಯ ಪ್ರತಿಮೆಗಳಾಗಲಿ, ತೋಟದ ಆವರಣವಾಗಲೀ, ಮರಗಳಾಗಲಿ ಕಾಣಿಸುತ್ತಲೇ ಇರಲಿಲ್ಲ. ಸೆರೆಮನೆಯ ಗೋಡೆಯತ್ತ ಬರುತ್ತಲೇ ಆತ ಕಾವಲುಗಾರರನ್ನು ಕೂಗಿದ. ಆದರೆ ಆತನಿಂದ ಉತ್ತರವಿಲ್ಲ. ಕಾವಲುಗಾರ ಆ ಕೆಟ್ಟ ಹವಾಮಾನದಿಂದ ತಪ್ಪಿಸಿಕೊಳ್ಳಲು ಅಡುಗೆ ಕೋಣೆಯಲ್ಲೋ ಹಸಿರುಮನೆಯಲ್ಲೋ ಹೋಗಿ ಮಲಗಿರಬೇಕು.
“ನನಗೇನಾದರೂ ನನ್ನ ಇಚ್ಛೆಯನ್ನು ಪೂರೈಸುವ ಧೈರ್ಯವಿದ್ದರೆ ” ಆ ವೃದ್ಧ ಬಡ್ಡಿ ವ್ಯಾಪಾರಿ ಯೋಚಿಸಿದ, “ಮೊದಲು ಸಂಶಯ ಬರುವುದು ಮಾತ್ರ ಆ ಕಾವಲುಗಾರನ ಮೇಲೆಯೇ”.
ಕಗ್ಗತ್ತಲಿನಲ್ಲಿಯೇ ಆತ ಮೆಟ್ಟಿಲುಗಳಿಗೆ ತಡಕಾಡಿದ. ಮತ್ತು ಗೇಟು ತೆರೆದು ತೋಟದ ಒಳ ನಡೆದ. ಓಣಿಯೊಂದರಲ್ಲಿ ಸಾಗುತ್ತಾ ಬೆಂಕಿಕಡ್ಡಿಯನ್ನು ಗೀರಿದ. ಮುಂದೆ ಕೈದಿಯ ಕೋಣೆಯಿತ್ತು. ಬಾಗಿಲಿಗೆ ಹಾಕಿದ ಸೀಲು ಹಾಗೆಯೇ ಇತ್ತು.
ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಕೆಳಗೆ ಬೆಡ್ ಶೀಟುಗಳಿಲ್ಲದ ಒಂದು ಹಾಸಿಗೆ ಬಿದ್ದುಕೊಂಡಿತ್ತು ಬಳಿಯಲ್ಲಿಯೇ ಒಂದು ಎಣ್ಣೆಒಲೆಯಿತ್ತು. ಕೈದಿಯ ಕೋಣೆಗೆ ಸಾಗುವ ಬಾಗಿಲಿನ ಬೀಗ ಭದ್ರವಾಗಿತ್ತು. ಕಡ್ಡಿ ಉರಿದು ಖಾಲಿಯಾಗಿ ಆರಿಹೋದಾಗ ಆ ವೃದ್ಧ ಥರ ಥರ ನಡುಗುತ್ತಾ ಆ ಸಣ್ಣ ಕಿಂಡಿಯ ಮೂಲಕ ಆ ಕೋಣೆಯೊಳಗೆ ಇಣುಕಿದ. ಕೈದಿಯ ಕೋಣೆಯೊಳಗೆ ಕ್ಯಾಂಡಲೊಂದು ಮಂದವಾಗಿ ಉರಿಯುತ್ತಿತ್ತು. ಕೈದಿಯು ಮೇಜಿನ ಮುಂದೆ ಕುಳಿತಿದ್ದ. ಅವನ ಬೆನ್ನು ತಲೆಯ ಕೂದಲು ಮತ್ತು ಕೈಗಳು ಕಾಣಿಸುತ್ತಿದ್ದವು. ತೆರೆದ ಪುಸ್ತಕಗಳು ಮೇಜಿನ ಮೇಲೆ ಹರಡಿಕೊಂಡಿದ್ದವು. ಎರಡು ಕುರ್ಚಿಗಳು ಮೇಜಿನ ಬಳಿಯಲ್ಲಿ ಮತ್ತು ನೆಲಹಾಸು ನೆಲದಲ್ಲಿದ್ದವು.
ಐದು ನಿಮಿಷಗಳುರುಳಿದವು. ಕೈದಿಯು ಒಂದಿಂಚೂ ಕದಲಿಲ್ಲ. ಹದಿನೈದು ವರ್ಷಗಳ ಸೆರೆವಾಸ ಆತನಿಗೆ ಅಚಲವಾಗಿ ಕುಳಿತುಕೊಳ್ಳಲು ಕಲಿಸಿತ್ತು. ಬಡ್ಡಿ ವ್ಯಾಪಾರಿ ಬೆರಳುಗಳಿಂದ ಕಿಟಕಿಯ ಮೇಲೆ ತಟ್ಟಿದ. ಆದರೆ ಕೈದಿಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನಂತರ ಆತ ಮೆಲ್ಲನೆ ಬೀಗದ ಮೇಲಿನ ಸೀಲುಗಳನ್ನು ಹರಿದು ಕೀಲಿಕೈಯನ್ನು ಬೀಗಕ್ಕೆ ಸೇರಿಸಿದ. ತುಕ್ಕು ಹಿಡಿದಿದ್ದ ಬೀಗವು ಕರ ಕರ ಸದ್ದು ಮಾಡುತ್ತಾ ತೆರೆದುಕೊಂಡಿತು. ಬಾಗಿಲುಗಳು ಕಿರಗುಟ್ಟಿದವು. ಬಡ್ಡಿ ವ್ಯಾಪಾರಿ ತಕ್ಷಣ ದೊಡ್ಡ ಅಚ್ಚರಿಯ ಧ್ವನಿಗಳೂ, ಹೆಜ್ಜೆಗಳ ಸಪ್ಪಳವೂ ಕೇಳಿಸಬಹುದೆಂದುಕೊಂಡ. ಮೂರು ನಿಮಿಷಗಳು ಕಳೆದವು. ಹೊರಗಿದ್ದಂತೆ ಒಳಗೂ ನಿಶ್ಶಬ್ದವೇ ಮನೆಮಾಡಿತ್ತು.
ಆತ ಒಳನುಗ್ಗಲು ಮಾನಸಿಕವಾಗಿ ಸಿದ್ಧಗೊಂಡನು. ಒಳಗೆ ಮೇಜಿನ ಮುಂದೆ ಸಾಮಾನ್ಯ ಮನುಷ್ಯನಂತಿಲ್ಲದ ವ್ಯಕ್ತಿ ಕುಳಿತಿದ್ದ. ಮೂಳೆಗಳಿಗೆ ಗಟ್ಟಿಯಾಗಿ ಅಂಟಿದ ಚರ್ಮಗಳುಳ್ಳ ಅಸ್ಥಿ ಪಂಜರ. ಹೆಂಗಸರಂತೆ ನೀಳವಾಗಿರುವ ತಲೆಗೂದಲು, ಜೋತು ಬಿದ್ದಿರುವ ಗಡ್ಡ. ಮುಖವು ಮಣ್ಣಿನಂತೆ ಹಳದಿಗುಟ್ಟಿತ್ತು. ಕೂದಲುಗಳಿಂದ ತುಂಬಿಹೋದ ಆತನ ತಲೆ ಮುಂದಕ್ಕೆ ಬಾಗಿಕೊಂಡಿತ್ತು, ಕೆನ್ನೆಗಳು ಆಳ ಮತ್ತು ವಕ್ರವಾಗಿ ಹೂತುಹೋಗಿದ್ದು, ಆತನೆಡೆಗೆ ದೃಷ್ಠಿಹಾಯಿಸುವುದೇ ನೋವಿನ ಸಂಗತಿಯಾಗಿತ್ತು. ಆತನ ಕೂದಲುಗಳು ಆಗಲೇ ಬೆಳ್ಳಗಾಗತೊಡಗಿದ್ದವು. ಆತನ ಕಳೆಗುಂದಿದ ಆ ಮುಖವನ್ನು ನೋಡಿದ ಯಾರಿಗಾದರೂ ಆತನಿಗಿನ್ನೂ ಬರೇ 40 ವರ್ಷ ವಯಸ್ಸೆಂದರೆ ನಂಬಲು ಸಾಧ್ಯವೇ ಇರಲಿಲ್ಲ. ಆತ ತಲೆ ಬಾಗಿಸಿ ಕುಳಿತಿದ್ದ ಆ ಮೇಜವಾನಿಯ ಮೇಲೆ ಸಣ್ಣ ಅಕ್ಷರಗಳಿಂದ ಬರೆದಿರುವ ಒಂದು ಕಾಗದದ ಹಾಳೆಯಿತ್ತು.
“ಬಡಪಾಯಿ ಪಾಪಿ”, ಬಡ್ಡಿ ವ್ಯಾಪಾರಿ ಯೋಚಿಸಿದ, “ಹೇಗೆ ನಿದ್ರಿಸುತ್ತಿದ್ದಾನೆ! ಬಹುಶಃ ನಾಳೆ ಸಿಗಲಿರುವ ಮೊತ್ತದ ಬಗ್ಗೆ ಕನಸು ಕಾಣುತ್ತಿರಬಹುದು. ಒಂದೊಮ್ಮೆ ಈ ಅರೆಜೀವವನ್ನು ಹಾಸಿಗೆಯ ಮೇಲೆ ಒದ್ದುರುಳಿಸಿ ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಬಿಟ್ಟರೆ ಮುಗಿಯಿತು, ಎಂತಹ ತನಿಖೆಯಲ್ಲಿಯೂ ಈತನ ಅಸಹಜ ಸಾವು ಪತ್ತೆಯಾಗಲಿಕ್ಕಿಲ್ಲ! ಅದರೂ ಮೊದಲೊಮ್ಮೆ ಈತ ಆ ಹಾಳೆಯಲ್ಲಿ ಏನು ಬರೆದಿದ್ದಾನೆಂದು ಒಮ್ಮೆ ಓದಿ ಬಿಡೋಣ”.
ಬಡ್ಡಿ ವ್ಯಾಪಾರಿ ಆ ಪತ್ರವನ್ನು ಕೈಗೆತ್ತಿಕೊಂಡು ಓದತೊಡಗಿದ.
“ನಾಳೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಾನು ನನ್ನ ಸ್ವಾತಂತ್ರ್ಯವನ್ನು ಮತ್ತು ಹೊರಗಿನ ಜನರೊಂದಿಗೆ ಬೆರೆಯುವ ಹಕ್ಕನ್ನು ಮರು ಪಡೆಯಲಿದ್ದೇನೆ. ಆದರೆ ನಾನು ಇಲ್ಲಿಂದ ಹೊರ ಹೋಗಿ ಸೂರ್ಯನನ್ನು ನೋಡುವುದಕ್ಕಿಂತ ಮೊದಲು ನಿನಗೆ ಕೆಲವು ಮಾತುಗಳನ್ನು ಹೇಳಿ ಬಿಡುವುದು ಒಳ್ಳೆಯದು. ಪ್ರಜ್ಞಾಪೂರ್ವಕವಾಗಿ ಮತ್ತು ದೇವರ ಸಾಕ್ಷಿಯಾಗಿ ನಾನು ನಿನಗೆ ಹೇಳ ಬಯಸುವುದೇನೆಂದರೆ, ನಾನು ನನ್ನ ಸ್ವಾತಂತ್ರ್ಯ, ಆರೋಗ್ಯ ಮತ್ತು ಆ ನಿನ್ನ ಗ್ರಂಥಗಳು ಹೇಳುವ ಐಹಿಕ ಭೋಗಗಳೆಲ್ಲವನ್ನೂ ತ್ಯಜಿಸಿದೆ. ಹದಿನೈದು ವರ್ಷಗಳವರೆಗೆ ಇಹದ ಜೀವನದ ಬಗ್ಗೆ ಅತಿ ಆಸಕ್ತಿಯಿಂದ ಅಧ್ಯಯನ ಮಾಡಿದೆ. ಸತ್ಯ, ನಾನು ಹೊರಗಿನ ನೆಲವನ್ನಾಗಲೀ ಜನರನ್ನಾಗಲೀ ನೋಡಲಿಲ್ಲ ಆದರೆ ಆ ನಿನ್ನ ಪುಸ್ತಕಗಳ ಮೂಲಕ ನಾನು ಪರಿಮಳಯುಕ್ತ ವೈನನ್ನು ಕುಡಿದೆ, ಹಾಡುಗಳನ್ನು ಹಾಡಿದೆ, ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿದೆ, ಆ ನಿನ್ನ ಕವಿಗಳು ಕೈಚಳಕದಿಂದ ಸೃಷ್ಟಿಸಿದ ಸ್ನಿಗ್ಧ ಮೇಘ ಸುಂದರಿಯರೊಂದಿಗೆ.. ರೂಪಸಿಯರೊಂದಿಗೆ ರಮಿಸಿದೆ, ನನ್ನ ರಾತ್ರಿಗಳನ್ನು ಸುತ್ತುವರಿದು ಕಿವಿಯಲ್ಲಿ ಪಿಸುಗುಟ್ಟಿದ ರಮ್ಯ ಕಥೆಗಳನ್ನು ಆಲಿಸುತ್ತಾ ಉನ್ಮತ್ತನಾದೆ. ನಿನ್ನ ಪುಸ್ತಕಗಳಲ್ಲಿ ನಾನು ಎಲ್ಬ್ರೂಝ್ ಮತ್ತು ಮೌಂಟ್ ಬ್ಲಾಂಕ್ ಪರ್ವತಗಳ ಶಿಖರಾಗ್ರವನ್ನು ಏರಿ ಅಲ್ಲಿ ಬೆಳಗಿನ ಸೂರ್ಯೋದಯವನ್ನೂ, ಸಂಜೆ ಬಾನು ಸಮುದ್ರದಲ್ಲಿ ಕರಗಿ ಹೇಮವರ್ಣಕ್ಕೆ ತಿರುಗುವ ಪರ್ವತಗಳನ್ನು ಕಂಡೆ. ಆ ಶಿಖರಾಗ್ರದಿಂದ ಮೋಡಗಳನ್ನು ಸೀಳುತ್ತಾ ಕೋರೈಸುವ ಮಿಂಚುಗಳ ಕಂಡೆ, ಹಸಿರು ಬೆಟ್ಟ ಗುಡ್ಡಗಳನ್ನೂ, ಹೊಲಗಳನ್ನೂ, ನದಿಗಳನ್ನೂ, ಕೆರೆಗಳನ್ನೂ, ಪಟ್ಟಣಗಳನ್ನೂ ನೋಡಿದೆ.
ವಿವಿಧ ಕೂಗುಗಳನ್ನೂ, ಮಧುರ ಕೊಳಲಿನ ನಿನಾದವನ್ನೂ ಆಲಿಸಿದೆ, ನನ್ನೆಡೆಗೆ ದೇವರ ಸಂದೇಶವನ್ನು ಹೊತ್ತು ತಂದ ದೇವತೆಗಳ ರೆಕ್ಕೆಗಳನ್ನು ಸ್ಪರ್ಷಿಸಿದೆ.. ಆ ನಿನ್ನ ಪುಸ್ತಕಗಳಲ್ಲಿ ನಾನು ತಳವಿಲ್ಲದ ಕಾಲಗರ್ಭದಲ್ಲಿ ಪಯಣಿಸಿದೆ. ನಿಜವಾದ ಪವಾಡಗಳನ್ನೂ, ಸುಟ್ಟು ಧರೆಗುರುಳಿದ ನಗರಗಳನ್ನೂ, ಭೋದಿಸಿದ ಹೊಸ ಧರ್ಮಗಳನ್ನೂ, ದಂಡೆತ್ತಿ ಹೋದ ದೇಶಗಳನ್ನೂ ನೋಡಿದೆ.
ನಿನ್ನ ಪುಸ್ತಕಗಳು ನನಗೆ ಜ್ಞಾನವನ್ನು ನೀಡಿದವು. ಶತಮಾನಗಳಿಂದ ಸೃಷ್ಠಿಯಾದ ಮಾನವನ ಅದಮ್ಯ ಚಿಂತನೆಗಳೆಲ್ಲವೂ ನನ್ನ ತಲೆಯಲ್ಲಿ ಪುಟ್ಟ ಗುಳ್ಳಿಯಂತೆ ಸೇರಿಕೊಂಡಿವೆ. ಇವತ್ತು ನಾನು ನಿಮ್ಮೆಲ್ಲರಿಗಿಂತ ಜಾಣನಾಗಿರುವೆ ಎಂದು ತಿಳಿದಿದೆ. ಮತ್ತು ನಾನು ನಿನ್ನೆಲ್ಲಾ ಪುಸ್ತಕಗಳನ್ನು ತ್ಯಜಿಸಿರುವೆ, ಎಲ್ಲಾ ಪುಣ್ಯಗಳ ಸರಕುಗಳನ್ನು ಮತ್ತು ಜ್ಞಾನವನ್ನು ಕೂಡಾ. ಎಲ್ಲವೂ ಶೂನ್ಯ, ನಶ್ವರ ಮತ್ತು ಮರೀಚಿಕೆಗಳನ್ನು ಹುಟ್ಟಿಸುವ ಮತಿಭ್ರಾಂತಿ. ನೀನು ಅದೆಷ್ಟು ಗರ್ವದಿಂದಲೂ, ಜಾಣತನದಿಂದಲೂ, ಸುಂದರವಾಗಿಯೂ ಬದುಕಿದರು ಕೂಡಾ ಮೃತ್ಯು ನಿನ್ನನ್ನು ಬಿಲದೊಳಗಿನ ಇಲಿಯನ್ನು ಹೊರಗೆಳೆದು ಕೊಲ್ಲುವಂತೆ ಈ ಭೂಮಿಯ ಮೇಲಿಂದ ಒರೆಸಿ ಹಾಕಬಲ್ಲದು. ಮತ್ತು ನಿನ್ನ ಸಮೃದ್ಧತೆ, ನಿನ್ನ ಇತಿಹಾಸ, ನಿನ್ನ ಮಹಾಪುರುಷರ ಅಮರ ಜ್ಞಾನಗಳೆಲ್ಲವೂ ಮಂಜಿನ ಹನಿಗಳಂತೆ ಈ ವಿಶ್ವದಿಂದ ಕರಗಿ ಹೋಗಬಲ್ಲವು. ನೀನೊಬ್ಬ ಹುಚ್ಚ ಮತ್ತು ತಪ್ಪು ಹಾದಿಯಲ್ಲಿ ಕ್ರಮಿಸಿದೆ. ಸತ್ಯದ ಬದಲಿಗೆ ಸುಳ್ಳನ್ನೂ, ಸೌಂದರ್ಯದ ಬದಲಿಗೆ ಕುರೂಪವನ್ನೂ ಆರಿಸಿಕೊಂಡೆ. ಸೇಬು ಮತ್ತು ಕಿತ್ತಳೆ ಮರಗಳಿಂದ ಹಣ್ಣುಗಳ ಬದಲಿಗೆ ಒಮ್ಮೆಲೇ ಹಲ್ಲಿಗಳು ಮತ್ತು ಕಪ್ಪೆಗಳು ಉದುರಿದರೆ ನಿನಗೆ ಅಚ್ಚರಿಯಾಗಬಹುದು. ಗುಲಾಬಿ ಹೂಗಳು ಒಮ್ಮೆಲೆ ಕುದುರೆಯ ಬೆವರಿನಂತೆ ದುರ್ನಾತ ಬೀರತೊಡಗಿದರೆ ನಿನಗೆ ಅಚ್ಚರಿಯಾಗಬಹುದು. ಸ್ವರ್ಗದ ಬದಲಿಗೆ ಭೂಮಿಯನ್ನು ಬಯಸಿ ಚೌಕಾಸಿಗಿಳಿದ ನಿನ್ನನ್ನು ನಾನು ಅದೇ ಅಚ್ಚರಿಯಿಂದ ನೋಡುತ್ತಿರುವೆ.
ನಾನು ನಿನ್ನನ್ನು ಅರ್ಥೈಸಲು ಬಯಸುವುದಿಲ್ಲ. ಮತ್ತು ನೀನು ನನಗೆ ಕೊಡಲಿರುವ ಆ ಎರಡು ಮಿಲಿಯ ಹಣವನ್ನು ತಿರಸ್ಕರಿಸುವ ಮೂಲಕ ನಿನ್ನನ್ನು ಋಣಮುಕ್ತಗೊಳಿಸುತ್ತಿರುವೆ. ಒಂದೊಮ್ಮೆ ಆ ಹಣದ ಮೂಲಕ ಸ್ವರ್ಗದ ಕನಸು ಕಾಣುತ್ತಿದ್ದ ನಾನು ಇಂದು ಅದನ್ನು ತಿರಸ್ಕರಿಸುತ್ತಿರುವೆ, ಮತ್ತು ನನಗೆ ಅದರ ಮೇಲಿರುವ ಸಂಪೂರ್ಣ ಹಕ್ಕಿನಿಂದ ವಿರಹಿತಗೊಂಡಿರುವೆ. ನಿಗದಿತ ಸಮಯದಿಂದ ಐದು ನಿಮಿಷಗಳ ಮುಂಚೆಯೇ ಇಲ್ಲಿಂದ ಹೊರ ಹಾರಿ ನಿನ್ನ ಒಪ್ಪಂದವನ್ನೇ ಮುರಿಯುವೆ”.
ಅಷ್ಟನ್ನೂ ಓದಿ ಮುಗಿಸಿದ ಆ ಬಡ್ಡಿವ್ಯಾಪಾರಿ ಆ ಪತ್ರವನ್ನು ಮೆಲ್ಲನೆ ಮೇಜಿನ ಮೇಲಿರಿಸಿ, ಆ ಅಪರೂಪದ ವ್ಯಕ್ತಿಯ ತಲೆಯನ್ನೊಮ್ಮೆ ಚುಂಬಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದ. ಆತನ ಜಂಘಾಬಲವೇ ಉಡುಗಿಹೋಗಿತ್ತು. ಆತ ಹಿಂದೆಂದೂ ಇಷ್ಟು ದುರ್ಬಲನಾಗಿರಲಿಲ್ಲ. ಶೇರುಮಾರುಕಟ್ಟೆಯ ಮಹಾಕುಸಿತದ ಸಮಯದಲ್ಲಿಯೂ ಇಂತಹ ನಿಕೃಷ್ಟ ಸ್ಥಿತಿಗಿಳಿದಿರಲಿಲ್ಲ.
ಮನೆಗೆ ಬಂದವನೇ ಹಾಸಿಗೆಯ ಮೇಲೆ ಬಿದ್ದುಕೊಂಡನು. ಬಿಕ್ಕಳಿಕೆಗಳು ಮತ್ತು ಕಣ್ಣೀರುಗಳು ನಿದ್ರೆಯನ್ನು ಆತನಿಂದ ತುಂಬಾ ಹೊತ್ತು ತಡೆಹಿಡಿದವು.
ಮಾರನೇ ದಿನ ಬೆಳಿಗ್ಗೆ ಬಡಪಾಯಿ ಕಾವಲುಗಾರ ಆತನ ಬಳಿ ಓಡೋಡುತ್ತ ಬಂದು ಆತ ಕಂಡುದನ್ನು ಹೇಳಿದ. ಕೈದಿಯು ಕೋಣೆಯ ಕಿಟಕಿಯ ಮೇಲೆ ಹತ್ತಿ ತೋಟದೊಳಕ್ಕೆ ಇಳಿದು ಅಲ್ಲಿಂದ ಗೇಟಿನ ಮೂಲಕ ಹೊರಹೋಗಿ ಕಾಣದಾಗಿದ್ದ.
ಬಡ್ಡಿವ್ಯಾಪಾರಿ ಕೂಡಲೇ ಕಾವಲುಗಾರನೊಡನೆ ತೋಟದ ಕೋಣೆಗೆ ಹೋಗಿ ಕೈದಿ ಪರಾರಿಯಾದುದನ್ನು ಖಚಿತಪಡಿಸಿದ.
ಅನಗತ್ಯ ಗಾಳಿಸುದ್ದಿಗಳು ಹರಡದಂತೆ ತಡೆಯಲು ಆತ ಆ ಕರಾರುಭಂಗ ಪತ್ರವನ್ನು ಮೇಜಿನಿಂದ ತೆಗೆದುಕೊಂಡ. ಮನೆಗೆ ಬಂದವನೇ ಅದನ್ನು ಪೆಟ್ಟಿಗೆಯೊಳಗೆ ಭದ್ರವಾಗಿಟ್ಟುಕೊಂಡು ಬೀಗಜಡಿದ.
ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇದೆ ಎನ್ನಬಹುದಾದ ವಸ್ತುವಾದರೂ ಯಾವುದು? ವಾಸ್ತವದಲ್ಲಿ ಇಲ್ಲೇನಿದೆ? ನಮ್ಮ ಸುತ್ತಮುತ್ತ ಕಣ್ಣಾಡಿಸುವಾಗ ಹಾಗೂ ಇಂದ್ರಿಯಗಳ ಮೂಲಕ ಅನುಭವಿಸುವಾಗ ಅನೇಕ ವಸ್ತುಗಳು ಅಸ್ತಿತ್ವದಲ್ಲಿರುವುದು ಸ್ವಯಂವೇದ್ಯ ಸತ್ಯವಾಗಿ ತೋರುತ್ತದೆ. ಆದರೆ, ಇವೆಲ್ಲ ಇಲ್ಲಿ ಇರಲೇಬೇಕೆಂಬ ಅನಿವಾರ್ಯತೆಯಿಲ್ಲ ಎಂಬ ಅಂಶವೂ ಕೂಡ ಅಷ್ಟೇ ಸತ್ಯ. ಇಸ್ಲಾಮೀ ತತ್ವಚಿಂತನೆ ಪ್ರಕಾರ ಮನುಷ್ಯರಾದಿ ಎಲ್ಲಾ ಸೃಷ್ಟಿಗಳು ಸಾಧ್ಯತಾ ಅಸ್ತಿತ್ವವನ್ನು(contingent being) ಹೊಂದಿದೆ. ಅಂದರೆ ನಾವೆಲ್ಲ ಅನಿವಾರ್ಯವಾಗಿ ಇರಬೇಕಾದವರಲ್ಲ; ನಮ್ಮ ಇರವು ದೇವರನ್ನು ಅವಲಂಬಿಸಿಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ದೇವರು ಅನಿವಾರ್ಯ ಅಸ್ತಿತ್ವ(necessary existence) ಹೊಂದಿದವನು ಮತ್ತು ಆತನ ಅಸ್ತಿತ್ವ ಖಂಡಿತವಾಗಿ ಇರಬೇಕಾದದ್ದು.
ಆದಾಗ್ಯೂ, ಇರುವಿಕೆ ಎನ್ನುವುದು ದೇವರ ಸತ್ತುವಿನ (ದ್ಸಾತ್, ಅಸ್ತಿತ್ವದ ಯಥಾರ್ಥತೆ) ಅವಿಭಾಜ್ಯ ಗುಣವಾಗಿರುವಾಗ(ಅಂದರೆ ದೇವರು ಇಲ್ಲದಿರುವುದು ಅಸಾಧ್ಯ) ಇತರ ವಸ್ತುಗಳೂ ಕೂಡ ʼಇದೆʼ ಎನ್ನಬಹುದೇ? ಅಸ್ತಿತ್ವವೆಂಬ ಗುಣವನ್ನು ದೇವರಿಗೂ ಸೃಷ್ಟಿಗಳಿಗೂ ಆರೋಪಿಸಬಹುದೇ? ಹಾಗೆ ಮಾಡಬಹುದಾದರೆ, ಅಸ್ತಿತ್ವವೆಂಬ ಪರಿಕಲ್ಪನೆಯನ್ನೇ ದೃಢಪಡಿಸದೆ ಮಾಡುವುದಾದರೂ ಹೇಗೆ? ಹಲವಾರು ಶತಮಾನಗಳಿಂದೀಚಿಗೆ ಇಸ್ಲಾಮೀ ತತ್ವಜ್ಞರು, ದೇವತಾಶಾಸ್ತ್ರಜ್ಞರು ಮತ್ತು ಅನುಭಾವಿ ತಾತ್ವಿಕರನ್ನು ಗಾಢ ಚಿಂತನೆಗೆ ಪ್ರೇರೇಪಿಸಿದ ಪ್ರಶ್ನೆಗಳಿವು. ಪರಿಣಾಮವಾಗಿ, ಕೆಲವು ತತ್ವಜ್ಞಾನಿಗಳು ಅಸ್ತಿತ್ವದಲ್ಲಿರುವುದು ದೇವರು ಮಾತ್ರ, ಆತನ ಹೊರತು ಯಾವುದೂ ಇಲ್ಲ ಎಂಬ ವಾದವನ್ನೂ ಹೂಡಿದ್ದಾರೆ. ಮತ್ತೊಮ್ಮೆ ನೀವು ಸುತ್ತಲೂ ನೋಟ ಬೀರಿದರೆ ನೀವೊಳಪಟ್ಟಂತೆ ಯಾವುದೂ ಕೂಡ ನಿಜದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ತೋರಬಹುದು. ವಹ್‌ದತುಲ್ ವುಜೂದ್ (ಅಸ್ತಿತ್ವದ ಏಕತ್ವ) ಎನ್ನಲಾಗುವ ಪ್ರಸ್ತುತ ಸಿದ್ದಾಂತ, ಮೂಲತಃ ಸತ್ಯದ ಅನುಭವಾತ್ಮಕ ಅನಾವರಣಗಳ ಮೇಲೆ ಆಧಾರಿತಗೊಂಡಿದೆಯೆಂದು ಹೇಳಬಹುದಾದರೂ, ತಾರ್ಕಿಕವಾಗಿ ಸಾದರಪಡಿಸಬಹುದಾದ ತಾತ್ವಿಕ ಸಿದ್ದಾಂತವಾಗಿಯೂ ಇದನ್ನು ತೆಗೆದುಕೊಳ್ಳಬಹುದು.
ಈ ನಿಟ್ಟಿನಲ್ಲಿ ಮಂಡಿಸಲಾದ ತಾರ್ಕಿಕ ವಿಚಾರ ಸರಣಿಯನ್ನೊಮ್ಮೆ ಅವಲೋಕಿಸೋಣ. ಅಸ್ತಿತ್ವವೆಂಬುದು ದೇವರ ನೈಜಸತ್ತುವೇ(essence) ಆಗಿದೆ. ಆದ್ದರಿಂದ ಇತರ ವಸ್ತುಗಳನ್ನು ಆತನ ಅಂಶಗಳು ಎಂದರೆ ಮಾತ್ರ ಅವುಗಳಿಗೆ ಅಸ್ತಿತ್ವವನ್ನು ಆರೋಪಿಸಲು ಸಾಧ್ಯ. ಪ್ರಸ್ತುತ ವಾದಸರಣಿಯನ್ನು ಇನ್ನೂ ಸರಳವಾಗಿ ಹೀಗೆ ಮಂಡಿಸಬಹುದು. ದೇವರು ಅನಿವಾರ್ಯ ಅಸ್ತಿತ್ವ ಉಳ್ಳವನು ಅಥವ ನಿರ್ಮಲ ಇರವನ್ನು(pure existence) ಹೊಂದಿದವನು. ವಹ್‌ದತುಲ್ ವುಜೂದಿನ ವಕ್ತಾರರ ಪ್ರಕಾರ ದೇವರ ಹೊರತಾಗಿರುವ ವಸ್ತುಗಳು ಅಸ್ತಿತ್ವದಲ್ಲಿದೆಯೆಂದು ಅಲಂಕಾರಿಕವಾಗಿ ಮಾತ್ರ ಹೇಳಬಹುದು. ವಾಸ್ತವಿಕವಾಗಿ ತೆಗೆದುಕೊಂಡರೆ, ಎಲ್ಲ ವಸ್ತುಗಳಲ್ಲಿ ದೇವರು ಅಡಕಗೊಂಡಿದ್ದಾನೆಂದು ತರ್ಕಿಸುವ ವಿಶ್ವ ದೇವತಾವಾದದಲ್ಲಿ(ಪ್ಯಾಂಥಿಯಿಸಂ) ಸಿಲುಕಿದಂತಾಗುವುದು. ಇವರ ಪ್ರಕಾರ ತೌಹೀದ್‌ನ ಮೂಲಾರ್ಥ ನೈಜ ಅಸ್ತಿತ್ವವು ದೇವರಿಗೆ ಮಾತ್ರ ಸಲ್ಲುವಂತದ್ದು ಎಂದಾಗಿದೆ. ಜತೆಗೆ, ಅನೇಕ ವಸ್ತುಗಳು ಇವೆ ಎನ್ನುವಾಗ ಇರುವಿಕೆ ಎಂಬುದು ದೇವರಿಗಿಂತ ಪೂರ್ವಭಾವಿಯಾಗಿರುವ ಹಾಗೂ ಆತನಿಗಿಂತ ಉನ್ನತವಾದ ಒಂದು ಸಂಗತಿಯಾಗುವುದು. ಆಗ ದೇವರು ಮತ್ತು ಸೃಷ್ಟಿಗಳನ್ನು ಇರುವಿಕೆ ಎಂಬ ಅತ್ಯುನ್ನತ ವರ್ಗದ ವಿಭಿನ್ನ ಉಪಾಂಗಗಳಾಗಿ ಪರಿಗಣಿಸಬೇಕಾಗುತ್ತದೆ.
ಇರುವಿಕೆ ಎಂಬುವುದು ದೇವರಿಗಿಂತ ಮೇಲೆಯಾದ ಸಂಗತಿಯೋ ಅಥವಾ ವರ್ಗವೋ ಆಗುವ ತಾತ್ವಿಕ ಸಮಸ್ಯೆಯನ್ನು ಪರಿಹರಿಸಲು ಹಾಗೂ ದೇವರನ್ನು ವಿಶ್ವದ ಭಾಗವಾಗಿ ಪರಿಗಣಿಸುವ ಸರ್ವದೇವತಾವಾದದಿಂದ ಮುಕ್ತಿ ಹೊಂದಲು ವಹ್‌ದತುಲ್ ವುಜೂದಿನ ವಕ್ತಾರರು ದೇವರು ಮಾತ್ರ ವಾಸ್ತವಿಕವಾಗಿ ಅಸ್ತಿತ್ವದಲ್ಲಿರುವುದು ಎಂಬ ಪ್ರತಿಪಾದನೆಯನ್ನು ಸಾರಿದರು. ಇಂತ ಪ್ರತಿಪಾದಕರ ಪೈಕಿ ಸದ್ರುದ್ದೀನ್ ಅಲ್-ಖೂನವೀ(d.673AH/1274CE) ಮತ್ತು ದಾವೂದುಲ್ ಖೈಸರಿ(d.751AH/1350CE) ಯಂತಹ ಹಲವು ವಿದ್ವಾಂಸರು ಮತ್ತು ಸಂತರು ಇದ್ದಾರೆ. ಶೈಖುಲ್ ಅಕ್ಬರ್ ಮುಹ್ಯುದ್ದೀನ್ ಇಬ್ನ್ ಅರಬಿ (d.638AH/1240CE) ಯವರ ಮುಖ್ಯಶಿಷ್ಯನೂ ಅಳಿಯನೂ ಆಗಿದ್ದ ಖೂನವೀ, ಶ್ರೇಷ್ಠ ಸಂತ ಜಲಾಲುದ್ದೀನ್ ರೂಮಿ(d.672AH/1273CE) ಯವರ ಸಹವರ್ತಿಯೂ ಆಗಿದ್ದರು. ಖೈಸರಿ ಎಂಬವರು ಇಝನಿಕ್ ಎಂಬಲ್ಲಿ ನೆಲೆನಿಂತಿದ್ದ ಪ್ರಪಥಮ ಒಟ್ಟೋಮನ್ ವಿದ್ಯಾಲಯದ ಮುಖ್ಯಾಧಿಕಾರಿಯಾಗಿ ಪ್ರಸಿದ್ಧರಾದವರು.
ಖೂನವೀ ಮತ್ತು ಖೈಸರಿ ಎಂಬೀ ಉಭಯ ಮಹಾತ್ಮರು ಸೃಷ್ಟಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲವೆಂದೂ, ಅವು ಯಥಾರ್ಥ ಇರವು ಆಗಿರುವ ದೇವರೊಂದಿಗೆ ಸಂಬಂಧ(ನಿಸ್‌ಬ) ವನ್ನು ಮಾತ್ರ ಹೊಂದಿದೆಯೆಂದು ಪ್ರತಿಪಾದಿಸಿದರು. ಇಂಥ ಒಂದು ತತ್ವವನ್ನು ಒಪ್ಪಿಕೊಂಡು ನಿಜಾರ್ಥದಲ್ಲಿ ಸೃಷ್ಟಿಗಳು ಇವೆ ಎನ್ನಲಾಗದೆಂದು ಬಗೆದುಕೊಂಡರೆ ಇನ್ನಷ್ಟು ಸಮಸ್ಯೆಗಳು ಕಾಡುತ್ತವೆ. ಕಡೇಪಕ್ಷ ನಮ್ಮ ಮತ್ತು ಸುತ್ತಮುತ್ತಲಿರುವ ವಸ್ತುಗಳ ಇರವನ್ನು ನಾವು ಅನುಭವಿಸುತ್ತಿದ್ದೇವೆಂಬ ಭಾವವನ್ನು ಅಲ್ಲಗಳೆಯಲಾಗದು. ನಿಜದಲ್ಲಿ ಇಲ್ಲದಿದ್ದರೆ ಅವುಗಳ ಸಂವೇದನೆಯಾದರೂ ಹೇಗುಂಟಾಗುತ್ತದೆ?. ಸೃಷ್ಟಿಗಳು ʼಇವೆʼ ಎನ್ನಲಾಗದಿದ್ದರೂ ಕೂಡ, ನಾವು ಅನುಭವಿಸುವ ಅವುಗಳ ಉಪಸ್ಥಿತಿಯನ್ನು ವಿವರಿಸಲು ಬೇರೊಂದು ವಿಧಾನ ಕಂಡುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವಹ್ದತುಲ್ ವುಜೂದಿನ ಪ್ರವರ್ತಕರು ಸೃಷ್ಟಿಗಳನ್ನು ದೇವರ ಜ್ಞಾನದಲ್ಲಿರುವ ಸ್ಥಿರ ಘಟಕಗಳೆಂದು (ಅಲ್ ಅಯ್‌ನು ತ್ಸಾಬಿತಃ) ನಿರೂಪಿಸಿದ್ದಾರೆ. ಅವು ವಾಸ್ತವಿಕ ಅಸ್ತಿತ್ವ ಹೊಂದಿಲ್ಲ; ಹೊರತು, ದೇವರ ಜ್ಞಾನದ ಮೂಲಕ ಆತನ ಅಸ್ತಿತ್ವದೊಂದಿಗೆ ನಂಟನ್ನು ಹೊಂದಿ, ಅವು ಆತನ ಅರಿಯುವಿಕೆಯ ಒಳಗೆ ಅಂತರ್ಗತಗೊಂಡಿದೆ. ಪ್ರಸ್ತುತ ತಾತ್ವಿಕ ಸಾಮಾಗ್ರಿ ಆಧಾರಿತ ವಿಶ್ಲೇಷಣೆಯ ಹಿನ್ನಲೆಯಲ್ಲಿ, ಮತ್ತೊಮ್ಮೆ ಸುತ್ತಮುತ್ತಲ ವಸ್ತುಗಳನ್ನು ಸರ್ವೇಕ್ಷಣೆ ಮಾಡಿದರೆ ತಮ್ಮ ಇಂದ್ರಿಯಗಳ ಮೂಲಕ ಸತ್ಯವಾದ ಯಾವೊಂದನ್ನೂ ಅನುಭವಿಸುತ್ತಿಲ್ಲ ಎಂದು ಹೇಳಬಹುದು. ಒಟ್ಟಾರೆ ಸೃಷ್ಟಿಗಳ ಅಸ್ತಿತ್ವವೆಂದರೆ ಇಷ್ಟೆ, ಅವುಗಳ ಕುರಿತು ದೇವರಿಗೆ ಅರಿವಿದೆ ಹಾಗೂ ಪ್ರಸ್ತುತ ಅರಿವು ಸೃಷ್ಟಿಗಳ ಸಂಯೋಜನೆಗೆ ಹೇತುವಾಗುವುದು.
ಪ್ರಸ್ತುತ ವೈಚಾರಿಕ ಚಿಂತನೆಯ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ತಮ್ಮನ್ನು ಬಹುವಾಗಿ ಕಾಡಬಹುದು. ದೇವರನ್ನು ಬಿಟ್ಟು ಯಾವುದಕ್ಕೂ ವಾಸ್ತವಿಕ ಸತ್ ಇಲ್ಲವೆಂದೂ ಹಾಗೂ ನಾವು ಅನುಭವಿಸುವ ವಸ್ತುಗಳೆಲ್ಲ ದೇವರ ಜ್ಞಾನದಲ್ಲಿರುವ ಘಟಕಗಳು ಮಾತ್ರವೆಂದು ನಿರೂಪಿಸುವುದರಿಂದ ಪ್ರಯೋಜನವಾದರೂ ಏನು? ನಾವಿಲ್ಲಿ ಸುಖಾಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಿದ್ದೇವೆಂದು ತೋರಬಹುದು. ಕಾರಣ, ಸೃಷ್ಟಿಗಳಿಗೆ ಅಸ್ತಿತ್ವವೆಂಬ ಗುಣಲಕ್ಷಣ ಇದೆ ಎಂದರೂ ಇಲ್ಲ ಅಂದರೂ ದೇವತಾಶಾಸ್ತ್ರ ನಿಲುವಿನ ಪ್ರಕಾರ ಅವೆಲ್ಲ ದೈವಿಕ ಪರಮ ಇಚ್ಛೆಯ ಪ್ರಭಾವಶಾಲಿ ಪರಿಧಿಯೊಳಗೇ ಬರುತ್ತವೆ. ಈ ಹಿನ್ನಲೆಯಲ್ಲಿ, ಸೃಷ್ಟಿಗಳನ್ನು ಅಸ್ತಿತ್ವದಲ್ಲಿರುವ ಮೂರ್ತ ವಸ್ತುಗಳೆಂದು ಕರೆಯುವುದಕ್ಕೆ ಬದಲಾಗಿ ದೇವರ ಜ್ಞಾನದ ಅಪರಿವರ್ತನೀಯ ಘಟಕಗಳೆಂದು ಬಣ್ಣಿಸುವುದು ಪದಗಳ ಆಟಾಟೋಪವಲ್ಲದೆ ಬೇರೇನೂ ಅಲ್ಲವೆಂದು ಭಾಸವಾದರೆ ಅಚ್ಚರಿಯೇನೂ ಇಲ್ಲ.
ಆದಾಗ್ಯೂ, ಪದಗಳಲ್ಲಿ ಅಗಾಧ ಶಕ್ತಿ ಅಂತರ್ಲೀನಗೊಂಡಿದೆ ಹಾಗೂ ಅವುಗಳನ್ನು ಅರ್ಥೈಸುವ ರೀತಿಗೂ ಪ್ರಾಮುಖ್ಯತೆ ಇದೆ. “ಇರುವುದು” ಎಂಬ ಸಂಜ್ಞೆ ಪೌರಾಣಿಕ ಕಾಲದಿಂದಲೇ ಚರ್ವಿತ ಚರ್ವಣಗೊಂಡಿರುವಂತದ್ದು. ಇಸ್ಲಾಮಿನ ಆಗಮನದೊಂದಿಗೆ ದೈವೇತರ ವಸ್ತುಗಳಿಗೆ ಇರುವಿಕೆ ಎಂಬ ಗುಣ ಆರೋಪಿಸುವುದರ ಒಳತಿರುಳೇನು ಎಂಬ ಚರ್ಚೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡಿತು. ನಿರ್ದಿಷ್ಟ ವಸ್ತುವೊಂದು ಇದೆ ಎನ್ನುವುದು ತತ್ವಮೀಮಾಂಸಕರ ನಿಟ್ಟಿನಲ್ಲಿ ಆ ವಸ್ತುವಿನ ಕುರಿತ ಗಂಭೀರ ಚಿಂತನೆಗೆ ಎಡೆಮಾಡಿಕೊಡುತ್ತದೆ. ನಿಜದಲ್ಲಿ, ದೇವರ ಹೊರತುಪಡಿಸಿ ಏನಾದರೂ ಇದೆ ಎನ್ನಲು ಸಾಧ್ಯವೇ?. ಖುರಾನಿನ ಅರ್ರಹ್ಮಾನ್ ಎಂಬ ಅಧ್ಯಾಯದಲ್ಲಿ ಬರುವ ಸೂಕ್ತ ಹೀಗಿದೆ: “ಭೂಮಿಯಲ್ಲಿರುವುದೆಲ್ಲಾ ನಾಶ ಹೊಂದುವುದು, ಆದರೆ ಪರಮ ಸಾರ್ವಭೌಮತೆಯನ್ನೂ ಅಪಾರ ಕರುಣೆಯನ್ನೂ ಹೊಂದಿದ ನಿಮ್ಮ ಪಾಲಕನು ಚಿರಂತನಾಗಿರುವನು”.(55:26-27).
ಕೆಲವೊಂದು ವ್ಯಾಖ್ಯಾನ ಸರಣಿ ಪ್ರಸ್ತುತ ಸೂಕ್ತವನ್ನು, ಸಂಪೂರ್ಣ ನಾಶವಾಗುವ ಕಾರಣದಿಂದ, ದೇವರ ಹೊರತು ಯಾವುದೂ ಕೂಡ ಇದೆ ಎನ್ನಲಾಗದು ಎಂಬರ್ಥದಲ್ಲಿ ವ್ಯಾಖ್ಯಾನಿಸಿದೆ. “ನಾಶವಾಗುತ್ತದೆ” ಎಂಬುವುದರ ಅರಬಿಕ್ ಸಂವಾದೀ ಪದ “ಫಾನ್” ಎಂದಾಗಿದೆ. ನಾಶವಾಗುವ ಸ್ಥಿತಿಯಲ್ಲಿರುವಂತದ್ದು ಎಂಬರ್ಥ ಬರುವ ಕರ್ತೃಪದವಾಗಿದೆ ಇದು. ಪ್ರಸ್ತುತ ಅಂಶವನ್ನು ಗಣನೆಗೆ ತೆಗೆದುಕೊಳ್ಳುವಾಗ ದೇವರು ಮತ್ತು ಸೃಷ್ಟಿಗಳಿಗಿರುವ ಅಸ್ತಿತ್ವ ಸಮಾನ ಸ್ವರೂಪವನ್ನು ಹೊಂದಿದೆಯೇ, ಅಲ್ಲ ತಾರತಮ್ಯದಿಂದ ಕೂಡಿದೆಯೇ ಎಂಬ ಜಿಜ್ಞಾಸೆಯೂ ಮೂಡುತ್ತದೆ. ಜಗತ್ತಿನ ಕುರಿತ ನಮ್ಮ ನಂಬಿಕೆಗಳಿಗೆ ಸಂಕೀರ್ಣವಾದ ಸವಾಲೊಡ್ಡಬಹುದಾದ ತೀವ್ರತರ ಪ್ರಭಾವವು ಪದಗಳ ಅರ್ಥಗಳಿಗಿವೆ ಎಂದರೆ ಉತ್ಪ್ರೇಕ್ಷೆಯ ಮಾತಾಗದು.
ಇನ್ನೂ ಮುಂದುವರಿದು ಆಲೋಚಿಸುವಾಗ, ಮನುಷ್ಯರ ಸಮೇತ ಸೃಷ್ಟಿಗಳಿಗೆ ಅಸ್ತಿತ್ವವಿದೆಯೆಂಬ ನಂಬಿಕೆ ಆತ್ಮ ಶುದ್ಧೀಕರಣ (ತಝ್‌ಕಿಯತುನ್ನಫ್‌ಸ್) ಪಥದಲ್ಲಿ ಕೆಲವೊಂದು ಪ್ರತಿಬಂಧಕಗಳನ್ನು ಒಡ್ಡುತ್ತವೆ ಎಂಬ ವಿಚಾರವನ್ನು ಮನಗಾಣಬಹುದು. ಅಹಂ ಭಾವವನ್ನು ನಿರ್ಮೂಲನೆ ಮಾಡುವುದು ಅಧ್ಯಾತ್ಮದ ಅಡಿಪಾಯವಾಗಿರುವಾಗ ದೇವರ ಜತೆಗೆ ನಾವೂ ಇದ್ದೇವೆಂದು ಭಾವಿಸುವುದು ಸಮಸ್ಯತ್ಮಾಕವೇ ಸರಿ. ಆದ್ದರಿಂದ, ನಾವು ಈಗಾಗಲೇ ವಿವರಿಸಿದ ಸೈದ್ಧಾಂತಿಕ ನೆಲೆಗಟ್ಟಿಗಿಂತ ಮಿಗಿಲಾಗಿ ವಹ್ದತುಲ್ ವುಜೂದಿನ ರೂವಾರಿಗಳಿಗೆ ಪ್ರಾಯೋಗಿಕ ನೆಲೆಗಟ್ಟಿನಲ್ಲೇ ನಾವೆಲ್ಲ ಅಸ್ತಿತ್ವವಿಲ್ಲದವರು ಹಾಗೂ ದೇವರ ಸತ್ತುವಿನಲ್ಲಿ ಲೀನವಾಗುವಂತವರು. ಪ್ರಸ್ತುತ ಮಾರ್ಗದಲ್ಲಿ ದೇವರ ಹೊರತಾದ ಆತ್ಮ ಮತ್ತು ಅಸ್ತಿತ್ವದ ಕಲ್ಪನೆ ನಿರರ್ಥಕವಾದುದು.
ಇಸ್ಲಾಮೀ ಚಿಂತನಾ ಧಾರೆಯಲ್ಲಿ, ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆಯು ಆಧ್ಯಾತ್ಮಿಕ, ಖುರಾನ್ ವ್ಯಾಖ್ಯಾನ ಹಾಗೂ ನೀತಿಶಾಸ್ತ್ರ ಗ್ರಂಥಗಳಲ್ಲಿ ಕಂಡುಬರುವಂತೆ ಹಲವಾರು ದಾರ್ಶನಿಕ ವಿಶ್ಲೇಷಣೆಗಳ ಮುಖಾಂತರ ಸಮೃದ್ಧಗೊಡಿದೆ. ಹಾಗೆಯೇ ಪ್ರಸ್ತುತ ತತ್ವವನ್ನು ಖಂಡಿಸುವ ಧಾರೆಗಳಿಗೂ ಭದ್ರ ತಾತ್ವಿಕ ಬುನಾದಿಯಿದೆ. ಅತ್ಯಂತ ಮುಖ್ಯ ಟೀಕೆ ಕಂಡುಬರುವುದು ಪ್ರಸಿದ್ದ ದೇವತಾಶಾಸ್ತ್ರಜ್ಞ ಸಅದುದ್ದೀನ್ ತಫ್‌ತಾಝಾನಿ (d.791AH/1390CE)ಯವರ ಶರ್ಹುಲ್ ಮಖಾಸಿದ್‌ನಲ್ಲಿ. ಅವರ ಪ್ರಕಾರ ʼಅಸ್ತಿತ್ವʼ ಎಂಬಂತ ಒಂದು ಸಂಗಂತಿಯೇ ಇಲ್ಲ. ದೇವರು ಮತ್ತು ಸೃಷ್ಟಿಗಳೆಂಬ ವಿಭಿನ್ನ ವಸ್ತುಗಳಿಗೆ ಪ್ರಯೋಗಿಸಬಹುದಾದ ಕೇವಲ ಕಾಲ್ಪನಿಕ ಪದ ಅದು. ಆದ್ದರಿಂದ ಅದು ದ್ವಂದ್ವಾರ್ಥವುಳ್ಳ ಪದ. ಸ್ಪಷ್ಟವಾಗಿ ಹೇಳುವುದಾದರೆ, ಅಸ್ತಿತ್ವ ಪ್ರಾಥಮಿಕವಾಗಿ ದೇವರಿಗೆ ಹಾಗೂ ಎರಡನೆಯದಾಗಿ ಸೃಷ್ಟಿಗಳಿಗೆ ಅನ್ವವಾಗುತ್ತದೆ. ಅದು ಮನಸ್ಸು ಆಧಾರಿತ ಕಲ್ಪನೆಯಾದ ಕಾರಣದಿಂದ, ಎಲ್ಲ ವಸ್ತುಗಳಿಗೆ ಅಸ್ತಿತ್ವ ಇದೆ ಎನ್ನುವುದು ವಿಶ್ವದೇವತಾವಾದವಾಗಿ ಪರಿಣಮಿಸುವ ಸಮಸ್ಯೆ ಬರದು. ನಿಜದಲ್ಲಿ, ತಫ್‌ತಾಝಾನಿ ಅವರು ವಹ್ದತುಲ್ ವುಜೂದ್ ಪಂಥೀಯರನ್ನು ಸರ್ವದೇವತಾವಾದಿಗಳೆಂದು ಆರೋಪಿಸುತ್ತಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತಲ ವಸ್ತುಗಳ ಇರವನ್ನು ಅಲ್ಲಗಳೆಯಲಾಗದು. ದೇವರೆಂಬ ಸತ್ ಮಾತ್ರ ಇರುವುದೆಂದು ವಾದ ಮಾಡಿದರೆ ಅನಿವಾರ್ಯವಾಗಿ ಮಿಕ್ಕಿದ್ದೆಲ್ಲವೂ ದೇವರೇ ಆಗಬೇಕಾಗುವುದು. ಆದ್ದರಿಂದ, ಇಂದ್ರಿಯಾನುಭವಕ್ಕೆ ದಕ್ಕುವ ವಸ್ತುಗಳು ಮಿಥ್ಯೆ ಗಳು ಎನ್ನಲು ಯಾವುದೇ ಅವಕಾಶವಿಲ್ಲ. ಒಟ್ಟಾರೆ, ಪ್ರಸ್ತುತ ವಿವಾದ ಎಷ್ಟರ ಮಟ್ಟಿಗೆ ಇಂದ್ರಿಯಾನುಭವಗಳ ಮೇಲೆ ನಮಗೆ ವಿಶ್ವಾಸವಿದೆ ಎಂಬ ಅಂಶದ ಸುತ್ತ ಕೇಂದ್ರೀಕರಿಸಿದೆಯೆಂದು ತೋರುತ್ತದೆ. ನಾವು ಅನುಭವಿಸುತ್ತಿದ್ದೇವೆ ಎಂದ ಮಾತ್ರಕ್ಕೆ ಇಂದ್ರಿಯ ಗ್ರಾಹ್ಯ ವಸ್ತುಗಳಿಗೆ ಅಸ್ತಿತ್ವವಿದೆ ಎನ್ನಲಾದೀತೇ?
ನಮ್ಮ ಪ್ರಜ್ಞೆ ಮತ್ತು ಇಂದ್ರಿಯ ಗ್ರಹೀತ ಜ್ಞಾನಗಳಲ್ಲಿ ಗೊಂದಲವುಂಟು ಮಾಡುತ್ತದೆ ಎಂಬ ಕಾರಣದಿಂದ ಅನೇಕರಿಗೆ ಇಂದ್ರಿಯಾನುಭವಗಳಿಗೆ ನಿಲುಕುವ ವಸ್ತುಗಳಿಗೆ ಅಸ್ತಿತ್ವವಿಲ್ಲ ಎಂಬ ಸಿದ್ದಾಂತವನ್ನು ಒಪ್ಪುವುದು ಕಷ್ಟವೆನಿಸುತ್ತದೆ. ದೇವರು ಮತ್ತು ಸೃಷ್ಟಿಗಳ ನಡುವೆ ವ್ಯತ್ಯಾಸವನ್ನು ಪರಿಗಣಿಸುವುದರ ಜತೆಗೆ, ಅಸ್ತಿತ್ವದ ವಿಭಿನ್ನ ದರ್ಜೆಗಳು (ಮರಾತಿಬ್-ಉಲ್-ವುಜೂದ್) ಎಂಬ ತತ್ವದ ಮೂಲಕ ಅಸ್ತಿತ್ವದ ಅನೇಕತ್ವಕ್ಕೊಂದು ಸ್ಪಷ್ಟೀಕರಣ ನೀಡಬಹುದಾಗಿದೆ. ಹಲವು ದೇವತಾಶಾಸ್ತ್ರಜ್ಞರು, ಅನುಭಾವಿಗಳು ಮತ್ತು ದಾರ್ಶನಿಕರ ವಿಶ್ಲೇಷಣೆಗೀಡಾದ ಪ್ರಸ್ತುತ ಸಿದ್ದಾಂತವು ಸೃಷ್ಟಿಗಳಿಗೆ ಅಸ್ತಿತ್ವಗುಣವನ್ನು ಆರೋಪಿಸಲು ವಿವಿಧ ಸ್ತರಗಳಿಂದ ಕೂಡಿದ ಶ್ರೇಣೀಕೃತ ವಿಧಾನವೊಂದನ್ನು ಮುಂದಿಡುತ್ತದೆ. ಪ್ರಸ್ತುತ ಸಿದ್ಧಾಂತದ ಪ್ರಕಾರ, ಅಸ್ತಿತ್ವಕ್ಕೆ ಮೂರು ಶ್ರೇಣಿಗಳಿವೆ. (1) ವಾಸ್ತವಿಕ. ಮನಸ್ಸಿನಲ್ಲಿರುವುದಕ್ಕಿಂತ ಹೆಚ್ಚುವರಿಯಾಗಿ ಬಾಹ್ಯದಲ್ಲಿ ಇರುವಂತದ್ದು ಹಾಗೂ ಇದನ್ನು ಸತ್ಯಕ್ಕೆ ಆರೋಪಿಸಲಾಗುತ್ತದೆ. (2) ಮಾನಸಿಕ ಅಸ್ತಿತ್ವ. ಇದನ್ನು ಮನಸ್ಸಿನಲ್ಲಿ ಮಾತ್ರವಿರುವ ಕಾರ್ಯಗಳಿಗೆ ಬಳಸಲಾಗುತ್ತದೆ. (3) ಭಾಷೀಯ ಅಸ್ತಿತ್ವ. ಇದನ್ನು ನಮ್ಮ ಮಾತು ಬರೆಹಗಳಲ್ಲಿ ಬರುವ ಕಾರ್ಯಗಳಿಗೆ ನೀಡಲಾಗುತ್ತದೆ.
ಮರಾತಿಬುಲ್ ವುಜೂದ್ ಎಂಬ ಸಿದ್ಧಾಂತವು ನಾವು ಚರ್ಚೆ ಮಾಡಿದ ಗೊಂದಲಕ್ಕೆ ಪೂರ್ಣತೆರೆ ಎಳೆಯಲು ಅಸಮರ್ಥವಾಗಿದೆ. ಕಾರಣ, ಯಥಾರ್ಥದಲ್ಲಿ ಅಥವಾ ಮನಸ್ಸಿನ ಹೊರಗೆ ಅಸ್ತಿತ್ವದಲ್ಲಿರುವಂತದ್ದೆಂಬ ವಿಂಗಡನೆಯನ್ನು ಅದು ಮುಂದಿಟ್ಟಿದೆ. ಆದರೆ ಸಮಸ್ಯೆಯ ಪರಿಹಾರಕ್ಕೆ ಮತ್ತೊಂದು ಆಯಾಮವನ್ನು ಹೆಚ್ಚಿಸಿದೆ ಎನ್ನಬಹುದು. ಅಸ್ತಿತ್ವಕ್ಕೆ ಬಹುಸ್ತರಗಳನ್ನು ದೃಢಪಡಿಸುವ ಮೂಲಕ, ವಿದ್ವಾಂಸರು ಅಸ್ತಿತ್ವದ ಭೇದರಾಹಿತ್ಯವನ್ನು ಹಾಗೂ ಒಂದೇ ವೇಳೆಯಲ್ಲಿ ಇರುವಿಕೆ-ಇಲ್ಲದಿರುವಿಕೆ ಒಂದುಗೂಡುತ್ತದೆಯೆಂಬ ಅಭಿಮತವನ್ನು ನಿರಾಕರಿಸಿದರು. ಇರುವಿಕೆಗೆ ವಿವಿಧ ಆಯಾಮಗಳಿವೆ ಮತ್ತು ಅವುಗಳ ವಿಭಿನ್ನ ಶ್ರೇಣಿಗಳಿಂದ ಅರ್ಥಮಾಡುವುದು ತಾತ್ವಿಕ ಪ್ರಶ್ನೆಗಳಿಗಿರುವ ನಮ್ಮ ಉತ್ತರಗಳು, ನಾವು ಕಾರ್ಯಾಚರಿಸುವ ಅಸ್ತಿತ್ವದ ಧಾರೆ ಅಥವಾ ಸ್ತರಕ್ಕನುಗುಣವಾಗಿ ಬದಲಾಗಬಹುದು ಎಂದಾಗಿದೆ.
ಖಂಡಿತವಾಗಿಯೂ, ಪ್ರಸ್ತುತ ಲೇಖನ ಒಂದು ನಿರ್ದಿಷ್ಠ ನಿಲುವಿನ ಪರವಾಗಿ ಬರೆದದ್ದಲ್ಲ. ಹೊರತು ವಹ್ದತುಲ್ ವುಜೂದಿನ ತಾತ್ವಿಕ ಆಧಾರ ಮತ್ತು ದೃಷ್ಟಿಕೋನಗಳ ಮೇಲೆ ಬೆಳಕು ಚೆಲ್ಲುವ ಉದೇಶವನ್ನು ಮಾತ್ರ ಹೊಂದಿದೆ. ವಹ್ದತುಲ್ ವುಜೂದಿನ ಮೇಲೆ ಯಾವುದೇ ನಿಲುವನ್ನು ತಾಳಿದರೂ ಕೂಡ, ಅಸ್ತಿತ್ವಕ್ಕೆ ಅನೇಕ ಆಯಾಮಗಳಿವೆಯೆಂಬ ತತ್ವವು ದೇವರು ನಮ್ಮ ಜಗತ್ತಿನೊಂದಿಗೆ ಎಂತಹ ಸಂಬಂಧವನ್ನು ಹೊಂದಿದ್ದಾನೆ ಎಂಬುದರ ಕುರಿತ ನಮ್ಮ ಗ್ರಹಿಕೆಯನ್ನು ಉಜ್ವಲಗೊಳಿಸಲು ಸಮರ್ಥವಾಗಿದೆ. ಇನ್ನೂ ಹೆಚ್ಚಿನ ಚಿಂತನೆ ನಡೆಸಿದರೆ, ಅಸ್ತಿತ್ವದ ಅನೇಕತ್ವವೆಂಬ ಸಿದ್ದಾಂತಕ್ಕೆ ಸಮಕಾಲೀನ ತತ್ವಶಾಸ್ತ್ರೀಯ ಚರ್ಚೆಗಳಲ್ಲಿ ಮಹತ್ವದ ಕೊಡುಗೆ ನೀಡಲು ಶಕ್ಯವಿದೆ.
ಇಸ್ಲಾಮಿಕ್ ಥಿಯಾಲಜಿಯಲ್ಲಿ ಮುಖ್ಯವಾಗಿ ಮೂರು ವಿಂಗಡನೆಗಳು ಕಂಡುಬರುತ್ತದೆ. ಒಂದು: ಇಲಾಹಿಯ್ಯಾತ್. ಇದು ದೇವರ ಮೇಲಿನ ನಂಬಿಕೆಯ ಕುರಿತ ಚರ್ಚೆಯನ್ನು ಮಾಡುವಂತದ್ದು. ಎರಡು: ನುಬುವ್ವತ್; ಪ್ರವಾದಿತ್ವ ಸಂಬಂಧಿತ ವಿವರಣೆಗಳು. ಮೂರು; ಸಮ್‌ಇಯ್ಯಾತ್, ದೇವಸಂದೇಶ ಮೂಲಕ ಮಾತ್ರ ತಿಳಿಯಬಹುದಾದ ವಿಚಾರಗಳ ಮೇಲಿನ ನಂಬಿಕೆಗಳು. ಮೂರನೆ ಕ್ಯಾಟಗರಿಯ ವಿಶೇಷತೆಯೇನೆಂದರೆ, ಅದು ಮುಸ್ಲಿಮರು ಖುರಾನ್ ಅಥವಾ ಹದೀಸಿನಲ್ಲಿ ಬಂದಿರುವ ಏಕೈಕ ಕಾರಣದಿಂದ ನಂಬಬೇಕಾದ ವಿಚಾರಗಳ ಕುರಿತು ಮಾತನಾಡುತ್ತದೆ. ನರಕ, ಸ್ವರ್ಗ, ಜಿನ್ನ್ ಇವೆಲ್ಲ ಪ್ರಸ್ತುತ ಕ್ಯಾಟಗರಿಯ ಉದಾಹರಣೆಗಳು. ಚರಿತ್ರೆ ಅಥವಾ ಪ್ರತ್ಯಕ್ಷ ಪ್ರಮಾಣದ ಮೂಲಕ ಸಾಬೀತುಪಡಿಸಲಾಗದ ಐತಿಹಾಸಿಕ ವಿವರಣೆಗಳು ಕೂಡ ಇದರಲ್ಲೇ ಒಳಪಡುವಂಥದ್ದು. ಇವುಗಳನ್ನು “ಗೈಬ್” ಅಥವ ಅತೀಂದ್ರಿಯ ವಿಚಾರಗಳೆಂದು ಹೆಸರಿಸಲಾಗಿದೆ. ಕಾರಣ ಪ್ರತ್ಯಕ್ಷ ಅನುಭವಗಳಿಂದಲೋ ಯಾ ವೈಚಾರಿಕತೆಯಿಂದಲೋ ಅವುಗಳನ್ನು ಸಾಬೀತುಪಡಿಸಲಾಗದು. ಆದ್ದರಿಂದ ಅವುಗಳ ಕುರಿತಾಗಿ ಸಿಕ್ಕಿದಂತಹ ವಿವರಣೆಗಳನ್ನು ಮನುಷ್ಯ ಜ್ಞಾನಕ್ಕೆ ಅತೀತವೆಂದೇ ಪರಿಗಣಿಸಬೇಕಾಗುತ್ತದೆ.
ಆದಂ (ಅ) ಮತ್ತು ಹವ್ವಾ (ರ) ರವರ ಸೃಷ್ಟಿಯ ಕುರಿತ ವಿವರಣೆ ಇಸ್ಲಾಮಿಕ್ ಥಿಯಾಲಜಿಯಲ್ಲಿ ಸಮ್‌ಇಯ್ಯಾತ್ (ದೇವವಾಣಿ ಮೂಲಕ ಮಾತ್ರ ಸಿಗುವ ಅತೀಂದ್ರಿಯ ಮಾಹಿತಿಗಳು) ಎಂಬ ಕ್ಯಾಟಗರಿಯಲ್ಲಿ ಬರುವಂಥದ್ದು. ಇಸ್ಲಾಮೀ ಮೂಲಗ್ರಂಥಗಳಿಂದ ಮಾತ್ರ ದೊರಕಲು ಸಾಧ್ಯವಿರುವ ಇಂತಹ ಮಾಹಿತಿಗಳ ಕುರಿತಾಗಿ ವಿದ್ವಾಂಸರ ನಿಲುವೇನೆಂದರೆ, ಗ್ರಂಥ ಎಷ್ಟರ ಮಟ್ಟಿಗೆ ತಿಳಿಸಿಕೊಟ್ಟಿದೆಯೋ ಅವನ್ನು ಮಾತ್ರ ದೃಢಪಡಿಸಿಕೊಳ್ಳುವುದು ಹಾಗೂ ಅದಕ್ಕೆ ಹೊರತಾದ ಕಾರ್ಯಗಳಲ್ಲಿ ಏನೂ ಮಾತನಾಡದೇ ಇರುವುದು (ಅಂದರೆ ಸ್ವೀಕೃತಿಯೂ ನಿರಾಕರಣೆಯೂ ಸಲ್ಲದು). ಇಲ್ಲಿ ಗಮನಿಸಬೇಕಾದ ಅಂಶ, ಗ್ರಂಥ ಹೇಳಿದಕ್ಕಿಂತ ಆಚೆ ಯಾವ ತರದ ಸಂಶೋಧನೆ ಮಾಡಬಾರದು ಎಂದಿಲ್ಲ. ಹೊರತು ಧಾರ್ಮಿಕ ನಂಬಿಕೆ ಎಂಬ ನೆಲೆಗಟ್ಟಲ್ಲಿ ಅದಕ್ಕಿಂತ ಆಚೆ ಏನೂ ಹೇಳದಿರುವುದೇ ಸರಿ. ಇಂಥ ನಿಲುವನ್ನು ತವಖ್ಖುಫ್ ಅಥವಾ ತಟಸ್ಥ ನಿಲುವು ಎಂದು ಕರೆಯಲಾಗಿದೆ.
ಖುರಾನ್ ಮತ್ತು ಹದೀಸ್ ಮೌನ ತಾಳಿದ ವಿಚಾರಗಳಲ್ಲಿ ಒಬ್ಬ ಥಿಯಾಲಜಿಯನ್ ಅಲಿಪ್ತ ಧೋರಣೆ (non commitment) ತಾಳಬೇಕಾಗುವುದು. ಆದಂ ಮತ್ತು ಹವ್ವಾ ಎಂಬೆರೆಡು ವ್ಯಕ್ತಿಗಳ ಕುರಿತು ಪುರಾತತ್ವ ಮತ್ತು ಪಳೆಯುಳಿಕೆ ಆಧಾರಿತ ಯಾವುದೇ ದಾಖಲೆ ಸಿಗದು. ಇವರ ಕುರಿತ ಮಾಹಿತಿ ನೀಡುವ ಏಕೈಕ ಮೂಲ ಧರ್ಮಗ್ರಂಥ. ಮುಖ್ಯವಾಗಿ ಮೂರು ಅಂಶಗಳೆಡೆಗೆ ಖುರಾನ್ ಬೊಟ್ಟುಮಾಡುತ್ತದೆ.
ಆದಂ (ಅ) ಮತ್ತು ಹವ್ವಾ (ರ) ರನ್ನು ದೇವರೇ ನೇರವಾಗಿ ಸೃಷ್ಟಿ ಮಾಡಿದನು.
ಅವರನ್ನು ನೇರವಾಗಿ ಮಣ್ಣಿನಿಂದ ಸೃಷ್ಟಿಸಲಾಯಿತು.
ಇಂದು ಜಗತ್ತಿನಲ್ಲಿ ಬದುಕುತ್ತಿರುವ ಮಾನವರೆಲ್ಲ ಉಭಯ ವ್ಯಕ್ತಿಗಳ ಸಂತತಿಗಳು.
ಪ್ರಸ್ತುತ ಅಂಶಗಳು ಪೂರ್ಣವಾಗಿ ಅಭೌತಿಕ (metaphysical) ಲಕ್ಷಣ ಹೊಂದಿರುವುದರಿಂದ ವಿಜ್ಞಾನಕ್ಕೆ ಈ ಕುರಿತಾಗಿ ಏನೂ ಹೇಳಲಿಕ್ಕಾಗದು (ಅಂದರೆ ಸರಿ ಎನ್ನಲೂ ತಪ್ಪು ಎನ್ನಲೂ ಆಗದು). ಕಾರಣ, ವಿಜ್ಞಾನದ ಅಧ್ಯಯನ ವ್ಯಾಪ್ತಿ ಭೌತಿಕ (ಪಂಚೇಂದ್ರಿಯಗಳಿಗೆ ನಿಲುಕುವ) ವಿಚಾರಗಳಲ್ಲಿ ಸೀಮಿತವಾಗಿದೆ. ವಿಜ್ಞಾನ ಮಾತನಾಡುವುದು ಮನುಷ್ಯನ ಜೈವಿಕ ಮೂಲದ (biological origin) ಬಗ್ಗೆ. ಈ ನಿಟ್ಟಿನಲ್ಲಿ ಥಿಯಾಲಜಿ ಏನೂ ಹೇಳುವುದಿಲ್ಲ. ಅಂದರೆ ಆದಂ ರವರ ಪೂರ್ವದಲ್ಲಿ ಅಥವಾ ಅವರ ಕಾಲದಲ್ಲಿ ಭೂಮಿಯಲ್ಲಿ ಯಾವುದಾದರೂ ಜೀವಿಗಳಿತ್ತೇ ಎಂಬ ವಿಚಾರದಲ್ಲಿ ಥಿಯಾಲಜಿ ಮೌನ ತಾಳಿದೆ (ಇದೆ ಎನ್ನುವುದಿಲ್ಲ ಇಲ್ಲ ಎನ್ನುವುದೂ ಇಲ್ಲ). ಆದ್ದರಿಂದ ಮುಸ್ಲಿಮರಿಗೆ ಪ್ರಸ್ತುತ ವಿಚಾರದಲ್ಲಿ ಯಾವುದೇ ತರದ ಧಾರ್ಮಿಕ ನಂಬಿಕೆ ತಾಳಬೇಕಿಲ್ಲ. ತಟಸ್ಥ ಭಾವನೆ ಹೊಂದಿದರೆ ಸಾಕು. ಈ ನಿಟ್ಟಿನಲ್ಲಿ, ಜೀವವಿಜ್ಞಾನಿಗಳು ಕೆಲವು ಶರೀರಶಾಸ್ತ್ರೀಯ ಮತ್ತು ಪಳೆಯುಳಿಕೆಶಾಸ್ತ್ರ ಸಂಜ್ಞೆಗಳ ಆಧಾರದಲ್ಲಿ ಬಣ್ಣಿಸುವ ಹೋಮೋಸೇಪಿಯನ್ಸ್‌ಗಳು ಆದಮ್ (ಅ) ರ ಕಾಲದಲ್ಲೋ ಅಥವಾ ಅವರ ಮುಂಚೆಯೋ ಇದ್ದರೋ ಇಲ್ಲವೋ ಎಂಬ ವಿಚಾರದಲ್ಲಿ ಮುಸ್ಲಿಮರಿಗೆ ಯಾವುದರ ಪರವಾಗಿಯೂ ನಿಲ್ಲಲಾಗದು. (ವಿ.ಸೂ: ಪ್ರಸ್ತುತ ಅಲಿಪ್ತ ಧೋರಣೆ ಧಾರ್ಮಿಕ ನೆಲೆಗಟ್ಟಿನಲ್ಲಾಗಿದೆ. ವೈಜ್ಞಾನಿಕ ನಲೆಗಟ್ಟಿನಲ್ಲಿ ಒಬ್ಬ ಮುಸ್ಲಿಮನಿಗೆ ಒಪ್ಪಬಹುದು, ಒಪ್ಪದೇ ಇರಬಹುದು).
ಇಲ್ಲಿ ಮಾನವನ ಕುರಿತ ಡೆಫಿನಿಷನ್ ಬಹಳ ಮುಖ್ಯವೆನಿಸತ್ತದೆ. ಇಸ್ಲಾಂ ಮನುಷ್ಯನನ್ನು ಕೇವಲ ಒಂದು ಭೌತಿಕ ವಸ್ತುವೆಂದು ಪರಿಗಣಿಸುವುದಿಲ್ಲ. ಅದು ಮನುಷ್ಯ (ಇನ್ಸಾನ್) ಎಂಬ ಪರಿಕಲ್ಪನೆಗೆ ಕೆಲವು ಐತಿಹಾಸಿಕ, ಧಾರ್ಮಿಕ, ತಾತ್ವಿಕ ಮತ್ತು ಆಭೌತಿಕ ಆಯಾಮಗಳನ್ನು ಒದಗಿಸುತ್ತದೆ. ಆದರೆ ಜೀವವಿಜ್ಞಾನಿಗಳು ಹೋಮೋ ಸೇಪಿಯನ್ಸ್ ಎಂಬ ವರ್ಗಕ್ಕೆ ಮೇಲೆ ಹೇಳಿದ ಧಾರ್ಮಿಕ ಅಂಶಗಳನ್ನು ಆರೋಪಿಸುವುದಿಲ್ಲ. ಹೊರತು, ಕೆಲವು ಜೈವಿಕ ಗುಣಗಳನ್ನು ಮಾತ್ರ ಪರಿಗಣಿಸುತ್ತಾರೆ. ಆದ್ದರಿಂದ ಧರ್ಮ ಮುಂದಿಡುವ ಮನುಷ್ಯನೇ ಬೇರೆ, ವಿಜ್ಞಾನ ಹೇಳುವ ಮನುಷ್ಯನೇ ಬೇರೆ. ಒಟ್ಟಾರೆ, ಪ್ರಾಣಿ ಪ್ರಪಂಚದಲ್ಲಿ ಕೆಲವು ವಿಶೇಷ ಜೈವಿಕ ವೈಶಿಷ್ಟ್ಯತೆಗಳನ್ನು ಹೊಂದಿದ ಜೀವಿವರ್ಗದ ಆರಂಭ ಮತ್ತು ವಿಕಾಸದ ಕುರಿತ ವಿಚಾರಗಳು ಜೀವವಿಜ್ಞಾನದ ವಿಷಯವಾಗುತ್ತದೆ, ಆ ಕುರಿತಾಗಿ ಧರ್ಮ ಏನೂ ಹೇಳುವುದಿಲ್ಲ. ಹಾಗೆಯೇ ಆದಂ (ಅ) ರವರ ಸೃಷ್ಟಿ ಮತ್ತು ಈಗಿನ ಮನುಷ್ಯರೆಲ್ಲ ಅವರ ಸಂತತಿಗಳೆಂಬುವುದು ನಂಬಿಕೆಯ ವಿಚಾರ. ಆ ಕುರಿತಾಗಿ ವಿಜ್ಞಾನಕ್ಕೂ ಏನೂ ಹೇಳಲಾಗದು.
ಜೀವ ವಿಜ್ಞಾನಿಗಳು ಮನುಷ್ಯನ ಭೌತಿಕ ಗುಣಗಳ ಮೇಲೆ ಗಮನವಿರಿಸುತ್ತಾರೆ. ಇತರ ಹೋಮಿನಿಡ್ ಸಸ್ತನಿ ವರ್ಗದಿಂದ ಮನುಷ್ಯರು ವಿಕಾಸ ಹೊಂದಿದ್ದಾರೆ ಎಂದು ಜೀವವಿಜ್ಞಾನಿಗಳು ವಾದ ಮಂಡಿಸುವಾಗ, ಅವರು ಹೋಮೋ ಎಂಬ ವರ್ಗವನ್ನು ಇತರ ವರ್ಗಗಳಿಂದ ಭಿನ್ನಗೊಳಿಸುವ ವಿಶೇಷ ಶಾರೀರಿಕ ಮತ್ತು ಜೆನೆಟಿಕ್ ರಚನೆ ಹೊಂದಿದ ಜೀವಿಗಳೆಡೆಗೇ ಬೊಟ್ಟು ಮಾಡುತ್ತಾರೆಯೇ ಹೊರತು ತಾತ್ವಿಕ, ಅಭೌತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿರುವ ಮನುಷ್ಯರ ಕುರಿತು ಹೇಳುತ್ತಿಲ್ಲ. ಹೋಮೋಸೇಪಿಯನ್ಸ್ ಕುರಿತು ಅವರು ಹೇಳುವಾಗ ಇದೇ ವಿಚಾರ ಅನ್ವಯವಾಗುತ್ತದೆ. ಇಸ್ಲಾಮಿಕ್ ದೇವತಾಶಾಸ್ತ್ರಜ್ಞರು ಇಂದು ಬದುಕುತ್ತಿರುವ ಹೋಮೋಸೇಪಿಯನ್ಸಿನ ಪ್ರತಿಯೊಬ್ಬರೂ ಆದಮ(ಅ)ರ ಮಕ್ಕಳೆಂದು ಹೇಳುತಿದ್ದರೂ, ಹೋಮೋಸೆಪಿಯನ್ಸಿನ ಜೈವಿಕ ಲಕ್ಷಣಗಳೊಂದಿಗೆ ಸಾಮ್ಯತೆ ಹೊಂದಿದ ಜೀವಿಗಳು ಆದಮ (ಅ) ರಿಗಿಂತ ಮುಂಚೆ ಇದ್ದರೇ ಎನ್ನುವ ವಿಚಾರದಲ್ಲಿ ಯಾವ ನಿಲುವನ್ನೂ ವ್ಯಕ್ತಪಡಿಸುವುದಿಲ್ಲ. ಪರಿಣಾಮವಾಗಿ, ಏಕಜೀವಕೋಶದಿಂದ ಆರಂಭಗೊಂಡು ವಿಕಾಸದ ವಿವಿಧ ಹಂತಗಳನ್ನು ದಾಟಿ ಕಡೆಗೆ ಹೋಮೋಸೇಪಿಯನ್ಸ್ ಎಂಬ ವರ್ಗವುಂಟಾಯಿತು ಎಂಬ ವಿಕಾಸವಾದೀ ತತ್ವವನ್ನು ದೇವತಾಶಾಸ್ತ್ರಜ್ಞರಿಗೆ ಅಲ್ಲಗಳೆಯಲಾಗದು. ಅವರಿಗೆ ತಟಸ್ಥ ನಿಲುವನ್ನು ಹೊಂದಲು ಮಾತ್ರ ಸಾಧ್ಯ. ಥಿಯಾಲಜಿ ನೆಲೆಗಟ್ಟಿನಲ್ಲಿ ಅವರಿಗೆ, ವಿಕಾಸ ತತ್ವವನ್ನು ಸರಿ ಎನ್ನಲೂ ಆಗದು, ಸುಳ್ಳು ಎನ್ನಲೂ ಆಗದು. ವಿಜ್ಞಾನದ ಆಧಾರದಲ್ಲಿ ಅದನ್ನು ಒಪ್ಪುವುದು ಬಿಡುವುದು ಅವರಿಗೆ ಬಿಟ್ಟದ್ದು. ಕಾರಣ ಅದು ವ್ಯೆಯಕ್ತಿಕ ಮತ್ತು ನಂಬಿಕೆಗೆ ಹೊರತಾದ ವಿಚಾರ. ಒಟ್ಟಾರೆಯಾಗಿ. ಆದಂ (ಅ) ರ ವಿಶೇಷ ಸೃಷ್ಟಿಯ ಕುರಿತ ವಿವರಣೆ ನಂಬಿಕೆಯ ವಿಚಾರವಾಗಿಯೇ ಉಳಿಯುತ್ತದೆಯೇ ವಿನಃ ಹೋಮೋಸೇಪಿಯನ್ಸ್ ಎಂಬ ವರ್ಗದ ಜೈವಿಕ ಮೂಲದ ಕುರಿತು ಮಾಹಿತಿ ನೀಡುವ ವಿವರಣೆಯಾಗುವುದಿಲ್ಲ. ಹಾಗೆಯೇ ಪ್ರಸ್ತುತ ಸೃಷ್ಟಿಯನ್ನು ಪ್ರಾಕೃತಿಕ ವಿದ್ಯಮಾನವಾಗಿ ಪರಿಗಣಿಸಲಾಗದು. ಬದಲಾಗಿ ಅದೊಂದು ಅಲೌಕಿಕ ವಿಷಯವಾಗಿದೆ. ಆದಮರನ್ನು ಮತ್ತು ಅವರ ಸಂತತಿಗಳನ್ನು ಗೌರವಿಸಲು ದೇವರು ಇಂತ ವಿಶಿಷ್ಟ ಸೃಷ್ಟಿ ಪ್ರಕ್ರಿಯೆಯನ್ನು (ಯಾವುದೇ ಕಾರಣಗಳಿಲ್ಲದೆ ನೇರವಾಗಿ ಸೃಷ್ಟಿಸಿದ್ದು) ನಡೆಸಿದನು ಎಂದು ಹೇಳಬಹುದೇ ಹೊರತು ಇತರ ಎಲ್ಲಾ ಪ್ರಾಣಿಗಳನ್ನೂ ಹಾಗೇ ನೇರವಾಗಿ ಸೃಷ್ಟಿ ಮಾಡಿದನು ಎನ್ನಲಾಗದು. ಆದ್ದರಿಂದ, ಮುಸ್ಲಿಮರಿಗೆ ತಮ್ಮ ನಂಬಿಕೆಗೆ ಪೂರ್ಣವಾಗಿ ಬದ್ಧವಾಗಲು ವಿಕಾಸವಾದವನ್ನು ವಿರೋಧ ಮಾಡಬೇಕಾಗಿಲ್ಲ. ಆದಂ (ಅ) ರನ್ನು ದೇವರು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಿದನು ಹಾಗೂ ಇಂದು ಬದುಕುತ್ತಿರುವ ಮನುಷ್ಯರೆಲ್ಲ ಅವರ ಸಂತತಿಗಳೆಂದು ನಂಬುವುದರ ಜತೆಗೇ ವಿಕಾಸವಾದ ತತ್ವಗಳನ್ನು ಒಪ್ಪಲು ಅವಕಾಶವಿದೆ.
“ಸಕಲ ವಸ್ತುಗಳಲ್ಲಿ ದೇವರು ಸೌಂದರ್ಯ ಸ್ಥಾಪಿಸಿದ್ದಾನೆ”. ಹದೀಸ್
“ಸೌಂದರ್ಯವೆಂಬುದು ಸತ್ಯದ ಉಜ್ವಲ ಶೋಭೆಯಾಗಿದೆ.” ಪ್ಲಾಟೊ
“ತತ್ವ ವಿಚಾರಗಳಂತ ಕಾಲ್ಪನಿಕ ಸ್ವರೂಪಗಳು ಪರಿಮಿತವಾದ ರೂಪದಲ್ಲಾದರೂ ಹೇಗೆ ಪಾರಮಾರ್ಥಿಕ ಸತ್ಯಗಳನ್ನು ಸಮಂಜಸವಾಗಿ ಪ್ರತಿಬಿಂಬಿಸುವುದೋ ಹಾಗೆಯೇ ಇಂದ್ರಿಯಗ್ರಹೀತ ರೂಪಗಳು ಚಿಂತನೆ ಮತ್ತು ಇಂದ್ರಿಯ ಗ್ರಹಣ ಶಕ್ತಿಗಳಿಗೆ ಅತೀತವಾದ ಸತ್ಯ ಅಥವಾ ವಾಸ್ತವ ಸಂಗತಿಗಳನ್ನು ಅಭಿವ್ಯಕ್ತಗೊಳಿಸಲು ಸಮರ್ಥವಾಗಿದೆ.” ಟಿಟಸ್ ಬರ್ಕ್ಹಾರ್ಟ್
ಧರ್ಮದ ಕುರಿತು ಯಾವುದೇ ಪೂರ್ವತಿಳಿವು ಇಲ್ಲದ ಜನರಿಗೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಪ್ರಸಂಗ ಬಂದರೆ, ಖುರಾನಿನ ಅನುವಾದವನ್ನೋ ಅಥವ ಇನ್ನಿತರ ಇಸ್ಲಾಮೀ ಕಾನೂನು, ತತ್ವ ಚಿಂತನೆ ಸಂಬಂಧಿತ ಗ್ರಂಥಗಳನ್ನೋ ಅಥವಾ ಪಾಶ್ಚಾತ್ಯರಿಗೆ ಇಸ್ಲಾಮನ್ನು ಪರಿಚಯಿಸಿಕೊಡುವ ಜನಪ್ರಿಯ ಪುಸ್ತಕಗಳನ್ನೋ ಓದಲು ನಾನು ಖಂಡಿತ ಸಲಹೆ ನೀಡಲಾರೆ. ಹೊರತು, ಅರಬಿಕ್ ಮಖಾಂ (ಸ್ವರಲಯ ಬದ್ಧ ರೀತಿ) ಒಂದರಲ್ಲಿ ಮಾಡಲಾದ, ಅನುವಾದವೇನೂ ನೀಡದ ಸುಮಧುರ ಖುರಾನ್ ಪಾರಾಯಣವೊಂದನ್ನು ಆಲಿಸಲು; ತುಲುತ್ ಅಥವಾ ಕೂಫೀ ಕಾಲಿಗ್ರಫಿಯಲ್ಲಿ ಬರೆಯಲಾದ ಪವಿತ್ರ ಗ್ರಂಥದ ಸುಂದರ ಒಟೋಮನ್ ಪ್ರತಿಯೊಂದರ ಮೇಲೆ ಧ್ಯಾನಿಸಲು; ಫೆಸ್ ನಲ್ಲಿರುವ ಖರಾವಿಯ್ಯೀನ್, ಇಸ್ಫಹಾನಿನ ಶೈಖ್ ಲುತ್ಫುಲ್ಲಾಹ್ ಅಥವಾ ಕೈರೋದ ಇಬ್ನು ತುಲೂನ್ ಇತ್ಯಾದಿ ವಿಸ್ಮಯಕರ ಮಸೀದಿಗಳನ್ನು ಕಂಡು ಮನತಣಿಸಲು; ಹಾಫಿಝ್, ಅಮೀರ್ ಖುಸ್ರು ಅಥವಾ ಇಬ್ನು ಫರೀದ್ ರಂಥ ಶ್ರೇಷ್ಠರ ಕಾವ್ಯಗಳ ಸಂಗೀತ ಲಯವನ್ನು ಆಲಿಸಲು, ಇತ್ಯಾದಿ ಚಟುವಟಿಕೆಗಳನ್ನು ಮಾಡಲು ನಾನು ಸಲಹೆ ನೀಡುವೆ.
ಪ್ರಸ್ತುತ ಇಸ್ಲಾಮೀ ನಾಗರಿಕತೆಯ ಉತ್ಕೃಷ್ಟ ಉಳಿಕೆಗಳು ಯಾವುದೇ ಗ್ರಂಥಗಳಿಗೆ ಸರಿಸಾಟಿಯಾಗದಂತೆ ಧರ್ಮತಿರುಳಿನ ಸತ್ಯತೆ ಮತ್ತು ಸೌಂದರ್ಯವನ್ನು ಸಂವಹನ ಮಾಡಲು ಸಮರ್ಥವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಪ್ರಚಲಿತ ಕಾಲದ ಅತ್ಯಂತ ಆಸಕ್ತಿಕರ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ ಒದಗಿಸಬಲ್ಲದು. ಪಾಶ್ಚಾತ್ಯ ಜಗತ್ತಿನಲ್ಲಿ ಇಸ್ಲಾಂ ವಿರುದ್ದ ತೀವ್ರತರ ಕುಪ್ರಚಾರಗಳಿದ್ದರೂ ಕೂಡ, ಸ್ಪೈನಿನ ಅಲ್ ಹಂಬ್ರಾ ಮತ್ತು ಭಾರತದ ತಾಜ್ ಮಹಲಿನ ವಾಸ್ತುಶಿಲ್ಪ ವೈಭವವನ್ನು ಮತ್ತು ಇಸ್ಲಾಮಿಕ್ ಕಾಲಿಗ್ರಫಿ, ಚಿತ್ರಕಲೆಗಳ ಚಿತ್ತಾಕರ್ಷಕ ಬೆಡಗನ್ನು ಕಣ್ತುಂಬಿಸಿಕೊಳ್ಳಲು ಹಾಗೂ ಇಸ್ಲಾಮೀ ಪರಂಪರಾಗತ ಸಂಗೀತ ಮೇಳಗಳಲ್ಲಿ ಪಾಲ್ಗೊಳ್ಳಲು ಜನರು ಇಂದು ಸಾಲು ಸಾಲಾಗಿ ಹರಿಯುತ್ತಿರುವುದು ನಿಜಕ್ಕೂ ಅಚ್ಚರಿದಾಯಕ ಸಂಗತಿ. ಇಸ್ಲಾಮೀ ಪರಂಪರೆಯ ಬಾಹ್ಯ ಅಭಿವ್ಯಕ್ಯಿಗಳಾದ ಪ್ರಸ್ತುತ ಮೂರ್ತ ವಸ್ತುಗಳು ಅದರ ಒಳಾಂತರ ಸತ್ಯಗಳನ್ನು ಪ್ರತಿನಿಧಿಸುತ್ತದೆಯೆಂಬುದು ಕಗ್ಗಂಟಾಗಿ ಉಳಿಯುವ ವಿಪರ್ಯಾಸವೇ ಸರಿ.
ಹಲವು ವಿದ್ವಾಂಸರ ಪ್ರಕಾರ, ಇಸ್ಲಾಮೀ ಕಲೆಯು ಯಾವುದೇ ತರದ ಮೇರು ಕೃತಿಗಳಿಗಿಂತ ಹೆಚ್ಚು ಗಹನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಬಲ್ಲದು. ಅದರ ಸೊಡಗು, ಸುಭಧ್ರ ವಾದಸರಣಿಗಿಂತ ಪ್ರಬಲವಾಗಿ ಮನಸೂರೆಗೊಳಿಸುವಂತದ್ದು. ಕೆಲವು ತರ್ಕಸರಣಿ ಮತ್ತು ವೈಚಾರಿಕ ಸಾಕ್ಷ್ಯಗಳಿಂದ ಕೂಡಿದ ಗದ್ಯರೂಪದ ಗ್ರಂಥವಲ್ಲ ಖುರ್‌ಆನ್. ಹೊರತು,ಅನುಪಮ ಭಾಷಾ ಸೌಂದರ್ಯ, ಉಪಮೆಗಳು ಮತ್ತು ಸಂಕೇತಗಳನ್ನು ಮೇಳೈಸಿದ ಕಾವ್ಯಾತ್ಮಕ ಶೈಲಿಯಲ್ಲಿರುವ ಸುಮಧುರ ಆಲಾಪನೆಯದು. ಎಂದಲೇ, ಅದರ ಸಾರಭೂತ ಲಾವಣ್ಯ ಪೂರ್ವಜರನೇಕರನ್ನು ಇಸ್ಲಾಮಿನತ್ತ ಸೆಳೆಯಿತು. ಫಿಕ್ಹ್ (ಇಸ್ಲಾಮೀ ಕಾನೂನು) ಮತ್ತು ಕಲಾಮಿನ (ದೇವತಾಶಾಸ್ತ್ರ) ಗ್ರಂಥಗಳು ಬರುವುದಕ್ಕಿಂತ ಮುಂಚೆ, ಮುಸ್ಲಿಮರ ಪ್ರಥಮ ತಲೆಮಾರು ವಾಸ್ತುಶಿಲ್ಪದ ಅನೇಕ ಮೇರು ಕಲಾಕೃತಿಗಳನ್ನು ರೂಪಿಸಿದ್ದರು. ಟುನಿಷ್ಯಾದ ಖೈರುವಾನ್ ಮಸ್ಜಿದ್, ಜೆರೂಸಲೇಮಿನ ಶಿಲಾಗುಮ್ಮಟ, ಅನುಪಮ ಕ್ಯಾಲಿಗ್ರಫಿ ಕಸೂತಿ ಮತ್ತು ನವ ಸಾಹಿತ್ಯ ಕೃತಿಗಳು ಇವೆಲ್ಲ ಸ್ಪಷ್ಟ ನಿದರ್ಶನಗಳು. ಇಸ್ಲಾಮೀ ಕಾನೂನು ಮತ್ತು ತತ್ವ ಚಿಂತನೆಯಷ್ಟೇ ಪ್ರಾಧಾನ್ಯತೆ ಇಸ್ಲಾಮೀ ಕಲಾಕೃತಿಗಳಿಗೆ ಇದ್ದರೂ ಕೂಡ, ಸಮಕಾಲೀನ ಸಂದರ್ಭದಲ್ಲಿ ಅವುಗಳ ಮಹತ್ವ ಕಳೆಗುಂದುತ್ತಿರುವುದು ವಿಷಾದಕರ ಸಂಗತಿ.( ಶತಮಾನಗಳ ಪ್ರಯತ್ನದಿಂದ ವಿಶೇಷ ಸೌಂದರ್ಯಪ್ರಜ್ಞೆ ಇಸ್ಲಾಮೀ ನಾಗರಿಕತೆಯಲ್ಲಿ ಬೆಳೆದು ಬಂದದ್ದನ್ನು ಇಲ್ಲಿ ಮರೆಯಲಾಗದು). ಪ್ರಸ್ತುತ ವಿದ್ಯಮಾನ ಇಡೀ ಮನುಕುಲಕ್ಕೇ ಮಹಾನಷ್ಟವಾಗುವುದರೊಂದಿಗೆ, ವಿಶೇಷವಾಗಿ ಮುಸ್ಲಿಮರಿಗೆ ಮಹಾ ದುರಂತವೇ ಸರಿ. “ದೇವರು ಸೌಂದರ್ಯವಂತನು ಹಾಗೂ ಸೌಂದರ್ಯವನ್ನು ಇಷ್ಟಪಡುವವನು” ಎಂದು ಪ್ರವಾದಿ ನುಡಿಯೊಂದು ಸಾರುವಾಗ, ಸೌಂದರ್ಯದೊಂದಿಗಿನ ಉಡಾಫೆ ಭಾವ ದೇವರನ್ನೇ ಕಡೆಗಣಿಸಿದಂತೆ.
ಅದೃಶ್ಯಲೋಕದ ದೃಶ್ಯೀಕರಣ
ಇಸ್ಲಾಮೀ ಪರಂಪರೆಯಲ್ಲಿ, ವೈಚಾರಿಕ, ನೈತಿಕ ಮತ್ತು ಆಧ್ಯಾತ್ಮಿಕ ಸಂಬಂಧಿತ ಸೌಂದರ್ಯಪ್ರಜ್ಞೆಯು ಅನುವಾದಕ್ಕೆ ಒಗ್ಗದ “ಇಹ್ಸಾನ್” ಎಂಬ ಪದದಲ್ಲಿ ಅಡಕಗೊಂಡಿದೆ. ʼಇಹ್ಸಾನ್ʼನ ರೂಢಿಗತ ವ್ಯಾಖ್ಯೆಯು ಪ್ರಸಿದ್ದ ಜಿಬ್ರೀಲ್ ಹದೀಸಿನಿಂದ ರೂಪಿತಗೊಂಡಿದೆ. ಅದರಲ್ಲಿ ಪ್ರವಾದಿ (ಸ) ಹೀಗೆ ವಿವರಿಸುತ್ತಾರೆ: “ಕಣ್ಣಾರೆ ಕಾಣುವಂತೆ ದೇವರನ್ನು ಆರಾಧಿಸುವುದು, ಕಾರಣ ನೀವು ಆತನನ್ನು ಕಾಣದಿದ್ದರೂ, ಆತ ನಿಮ್ಮನ್ನು ದರ್ಶಿಸುವನು”. ಸರಳವಾಗಿ ಹೇಳುವುದಾದರೆ, ಇಸ್ಲಾಮೀ ಕಲಾಕೃತಿಗಳು ಇಹ್ಸಾನನ್ನು ಪ್ರಚೋದಿಸುತ್ತದೆ. ಕಾರಣ, ಸಾಂಪ್ರದಾಯಿಕ ಪ್ರಾರ್ಥನಾ ಹಾಸುಗಳ ಮೇಲೆ ರಚಿಸುವ ಕಲಾ ಚಿತ್ತಾರಗಳು, ಮಸೀದಿ ಮತ್ತು ಮನೆಗಳನ್ನು ಅಲಂಕರಿಸಲು ಮಾಡುವ ರೇಖಾಕಾರ ವಿನ್ಯಾಸಗಳು ಮತ್ತು ಕಾಲಿಗ್ರಫಿ, ಕಟ್ಟಡಗಳ ಹೃದಯಂಗಮ ವಾಸ್ತುಶಿಲ್ಪಾಕೃತಿಗಳು, ಇಂತ ಸೌಂದರ್ಯ ಪ್ರದರ್ಶಕ ವಸ್ತುಗಳು ದೇವರನ್ನು ದರ್ಶನ ಭಾವದೊಂದಿಗೆ ಆರಾಧಿಸಲು ಸಹಕಾರಿಯಾಗುತ್ತವೆ. ಕಂಡಂತೆ ಭಾಸವಾಗುವ ಪ್ರಸ್ತುತ ದರ್ಶನ, “ಭಾವನೆ” (ಖಯಾಲ್) –ಸಾಮಾನ್ಯಕ್ಕಿಂತ ವಿಶೇಷ ಅರ್ಥವನ್ನೊಳಗೊಂಡ ಇಸ್ಲಾಮಿ ಪಾರಿಭಾಷಿಕ ಪದವಿದು- ಮೂಲಕ ಸಾಧ್ಯವಾಗುತ್ತದೆ. ಇಬ್ನು ಅರಬಿ ಮತ್ತು ಇತರ ಸೂಫಿ ತಾತ್ವಿಕರ ಕೃತಿಗಳಲ್ಲಿ ಕಂಡು ಬರುವಂತೆ, ಕಲ್ಪನಾಶಕ್ತಿ (ಖಯಾಲ್) ಎಂಬುದು ಅವಾಸ್ತವಿಕ,ಕಾಲ್ಪನಿಕ ಸಂಗತಿಗಳನ್ನು ಒಳಗೊಳ್ಳುವಂತದ್ದಲ್ಲ. ಹೊರತಾಗಿ, ಅಮೂರ್ತ ವಿಚಾರಗಳನ್ನು ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ಇಂದ್ರಿಯಗ್ರಹೀತ ರೂಪಕ್ಕಿಳಿಸುವ ಹಾಗೂ ಇಂದ್ರಿಯಾಧೀನ ಸ್ವರೂಪಗಳಲ್ಲಿ ಅಡಕಗೊಂಡಿರುವ ನಿಗೂಢಾರ್ಥಗಳನ್ನು ಗ್ರಹಿಸುವ ಸೃಜನಾತ್ಮಕ ಸಾಮರ್ಥ್ಯವಾಗಿದೆ ಅದು. ವಾಸ್ತವಿಕ ಕನಸುಗಳು, ದೃಶ್ಯಾನುಭವಗಳು ಮತ್ತು ಅವುಗಳ ವ್ಯಾಖ್ಯಾನಕ್ಕೆ ಸಹಾಯಕವಾಗುವ ಸಾಮರ್ಥ್ಯವೂ ಕೂಡ ಇದೇ. ಪ್ರವಾದೀ (ಸ) ಜೀವನದ ಪ್ರಕರಣವೊಂದರಲ್ಲಿ ಇದನ್ನು ಕಾಣಬಹುದು. ಒಮ್ಮೆ ಕನಸಿನಲ್ಲಿ ಹಾಲನ್ನು ಕಂಡರು ಹಾಗೂ ಅದನ್ನು ಅತೀಂದ್ರಿಯ ಜ್ಞಾನದ ಐಂದ್ರಿಕ ಸಂಕೇತವಾಗಿ ಅರ್ಥೈಸಿದರು. ಭಾವನಾಶಕ್ತಿ ಅಗೋಚರ ಜಗತ್ತನ್ನು ಗೋಚರಗೊಳಿಸಲು ಹಾಗೂ ದೃಶ್ಯ ಆಕೃತಿಗಳ ಅಮೂರ್ತ ತಾತ್ಪರ್ಯಗಳನ್ನು ಜಾಡು ಹಿಡಿಯಲು ನೆರವಾಗುವುದು. ಈ ನಿಟ್ಟಿನಲ್ಲಿ, ಕಲ್ಪನೆಯೆಂಬುದು ದೃಶ್ಯ ಅದೃಶ್ಯಗಳ ನಡುವಿನ, ಪದಾರ್ಥ ಮತ್ತು ಚೈತನ್ಯ ಲೋಕಗಳ ನಡುವಿನ, ಹಾಗೂ ಇಂದ್ರಿಯ ಗ್ರಾಹ್ಯ ಮತ್ತು ಬುದ್ಧಿ ಗ್ರಾಹ್ಯ ಸ್ವರೂಪಗಳ ನಡುವಿನ ಬರ್ಝಖ್ ( ತಾನು ಭಾಗಿಯಾಗುವುದರೊಂದಿಗೆ, ಎರಡು ಬಗೆಯ ಅಸ್ತಿತ್ವಗಳನ್ನು ಪರಸ್ಪರ ಬೇರ್ಪಡಿಸುವ ಮಾಧ್ಯಮಿಕ ಅಸ್ತಿತ್ವ) ಎಂದು ಪರಿಗಣಿಸಬಹುದು.
Oludamini Ogunnaike (College of William and Mary)
ಅನೇಕ ಸೂಫಿ ಸಿದ್ದಾಂತಿಗಳ ಪ್ರಕಾರ, ದೇವರ ಅಸ್ತಿತ್ವದ ಹೊರತು ಇತರ ಎಲ್ಲಾ ವಸ್ತುಗಳು ಕಲ್ಪನೆ ಮಾತ್ರವಾಗಿದೆ. ಆದ್ದರಿಂದ, ಅವುಗಳನ್ನು ವ್ಯಾಖ್ಯಾನಕ್ಕೊಳಪಡಿಸಬೇಕಾದ ಕನಸಿನ ಒಂದು ಬಗೆಯಾಗಿ ಕಾಣಬೇಕಾಗುತ್ತದೆ. ಇಬ್ನು ಅರಬಿ (ರ) ಬರೆಯುತ್ತಾರೆ: “ ನೀನೇ ಒಂದು ಕಲ್ಪನೆಯೆಂದು ತಿಳಿಯಬೇಕು. “ ಇದು ನಾನಲ್ಲ” ಎಂದು ನೀ ಸ್ವತಃ ಹೇಳಿಕೊಳ್ಳುವ, ನಿನ್ನ ಅನುಭವಕ್ಕೆ ದಕ್ಕುವ ವಸ್ತುಗಳೂ ಕೂಡ ಕಲ್ಪನೆಗಳಾಗಿವೆ. ಆದ್ದರಿಂದ, ಇಡೀ ಜಗತ್ತಿನ ಇರವು ಕಲ್ಪನೆಯೊಳಗಿನ ಕಲ್ಪನೆಯಾಗಿದೆ.” ಕನಸುಗಳು ನಮ್ಮ ಅಂತರ್ಪ್ರಜ್ಞೆಯ ವಿಭಿನ್ನ ಆಯಾಮಗಳನ್ನು ಅಭಿವ್ಯಕ್ತಗೊಳಿಸುವಂತೆಯೇ ದೇವನ ಹೊರತಾದ ವಸ್ತುಗಳ (ಮಾ ಸಿವಲ್ಲಾಹ್) ಆಯಾಮ ರಹಿತವಾದ ದೇವನ ಏಕತ್ವದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತದೆ. ದೇವರು ಆತ್ಯಂತಿಕ ಏಕತ್ವವನ್ನು ಹೊಂದಿರುವುದರಿಂದ ಆತನ ಮೇಲೆ ನೇರವಾಗಿ ಧ್ಯಾನಿಸುವುದು ಅಸಾಧ್ಯ. ಆದ್ದರಿಂದ, ಅದೃಶ್ಯ ದೇವರ ಆಯಾಮಗಳನ್ನು “ದರ್ಶಿಸಲು”, ಆತನ ಮೇಲೆ ಆಳಚಿಂತನೆ ಮತ್ತು ಧ್ಯಾನ ನಡೆಸಲು ಸಂಕೇತ ಮತ್ತು ದೃಷ್ಟಾಂತ (ಆಯಾತ್) ಗಳನ್ನೊಳಗೊಂಡ ಕನಸು ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿಯೇ, ನಮ್ಮನ್ನೊಳಗೊಂಡ ಪ್ರಾಪಂಚಿಕ ವಿದ್ಯಮಾನಗಳನ್ನು ಗಂಭೀರ ಆಲೋಚನೆ ಮತ್ತು ಧ್ಯಾನಕ್ಕೆ ಒಳಪಡಿಸಲು ಖುರಾನಿನ ಹಲವಾರು ಸೂಕ್ತಗಳಲ್ಲಿ ಪ್ರೇರಣೆ ಬಂದಿರುವುದು. ಅಬುಲ್ ಅತಾಇಯ ರವರ ಪ್ರಸಿದ್ದ ಸಾಲುಗಳು ಇದನ್ನೇ ತಿಳಿಸಿಕೊಡುತ್ತದೆ “ಆತನು ಏಕನಾಗಿದ್ದಾನೆ ಎಂಬುವುದಕ್ಕೆ ಎಲ್ಲಾ ವಸ್ತುಗಳಲ್ಲಿ ನಿದರ್ಶನವಿದೆ”. ಸೂರಃ ಫುಸ್ಸಿಲತಿನಲ್ಲಿ ಇನ್ನೂ ಸ್ಪಷ್ಟವಾಗಿ ಕಾಣಬಹುದು:” ಇದು ಪರಮ ಸತ್ಯವೆಂದು ಅವರಿಗೆ ಸುಸ್ಪಷ್ಟವಾಗುವ ತನಕ ನಾವು ದಿಗಂತಗಳಲ್ಲಿ ಹಾಗೂ ಅವರಲ್ಲೇ ನಮ್ಮ ದೃಷ್ಟಾಂತಗಳನ್ನು ತೋರಿಸುತ್ತಿರುವೆವು” (41:53)
ಸೃಷ್ಟಿಗಳ ನಿದರ್ಶನಗಳು ಬೆಳಕಿಗೆ ಬರುವುದು ಕಲ್ಪನೆಯ ಮೂಲಕವಾದುದರಿಂದ, ಅದರ ಮೂಲಕವೇ ದೃಷ್ಟಾಂತಗಳ ಮೂಲಾರ್ಥಗಳನ್ನು ಅನ್ವೇಷಿಸಬೇಕಾಗುತ್ತದೆ ಹಾಗೂ ಅವು ಪ್ರದರ್ಶಿಸುವ ದೈವಿಕ ಆಯಾಮಗಳನ್ನು ಪರಿಗಣಿಸಿ ಅವುಗಳನ್ನು ವ್ಯಾಖ್ಯಾನಿಸಬೇಕಾಗುವುದು. ನಮ್ಮ ಪರಿಸರದಲ್ಲಿರುವ ಬೆಳಕು,ನೆರಳು,ಸ್ಥಳ, ಕಾಲ, ಬಣ್ಣ, ಶಬ್ಧ ಮತ್ತು ಪರಿಮಳ ಮುಂತಾದ ಮೂಲ ಘಟಕಗಳಲ್ಲಿ ಅಡಕಗೊಂಡಿರುವ ರೇಖಾತ್ಮಕ ಮತ್ತು ಮೂಲಮಾದರಿಯ ಸತ್ಯಗಳನ್ನು ಹೊರತರುವಲ್ಲಿ ಇಸ್ಲಾಮೀ ಕಲಾಕೃತಿಗಳು ಮುಖ್ಯ ಪಾತ್ರ ವಹಿಸಿದೆ. ಇದೇ ಕಾರಣದಿಂದಾಗಿ ಇಸ್ಲಾಮೀ ನಾಗರಿಕತೆ ಮತ್ತು ಅದರ ಕಲಾಕೃತಿಗಳು ರೇಖಾಗಣಿತದ ಮೇಲೆ ಹೆಚ್ಚು ಗಮನ ನೀಡಿದ್ದಾಗಿ ಕಂಡು ಬರುತ್ತದೆ. ಅವು ವರ್ಣರಂಜಿತ ಗಾಜಿನ ಕಿಟಕಿಗಳಂತೆ ಕಾರ್ಯಾಚರಿಸಿ ನಮಗೆ ದೇವರ ಬೆಳಕನ್ನು ದರ್ಶನವುಂಟುಮಾಡಿಕೊಡುತ್ತದೆ. ಇಸ್ಲಾಮೀ ಕಲೆಗಳು ಅದೃಶ್ಯವನ್ನು ದೃಶ್ಯೀಕರಿಸುವುದು ಮತ್ತು ಇಂದ್ರಿಯ ಗ್ರಾಹ್ಯ ವಸ್ತುಗಳಲ್ಲಿ ಅಂತರ್ಗತವಾದ ಪಾರಮಾರ್ಥಿಕ ರಹಸ್ಯಗಳನ್ನು ನಾವು ಅರ್ಥ ಮಾಡಿ ಕೊಳ್ಳುವುದು ಎರಡೂ ಕೂಡ ಕಲ್ಪನಾಶಕ್ತಿಯ (ಖಯಾಲ್) ಮೂಲಕವೇ ಆಗಿದೆ.
ಸಾಮಾನ್ಯವಾಗಿ, ಖಯಾಲ್ (ಕಲ್ಪನಾ ಶಕ್ತಿ) ಮತ್ತು ಅಖ್‌ಲ್ (ವಿವೇಚನಾಶಕ್ತಿ) ಇವೆರಡರ ನಡುವೆ ವ್ಯತ್ಯಾಸ ತೋರಿಸುವುದುಂಟು. ಖಯಾಲ್ ಸಂಯೋಜಕ ಗುಣ ಹೊಂದಿದ್ದರೆ ಅಖ್‌ಲ್ ವಿಭಜಕ ಗುಣವನ್ನು ಹೊಂದಿದೆ. ಖಯಾಲ್ ಪರಸ್ಪರ ಸಂಬಂಧಗಳನ್ನು ಮತ್ತು ಸಾದೃಶ್ಯಗಳನ್ನು ಎತ್ತಿ ತೋರಿಸುತ್ತದೆ. ಅಖ್‌ಲ್ ವಿಭಿನ್ನತೆ ಮತ್ತು ವೈದೃಶ್ಯಗಳೆಡೆಗೆ ಬೊಟ್ಟು ಮಾಡುತ್ತದೆ. ವಿಲಿಯಂ ಚಿಟ್ಟಿಕ್ ವಿವರಿಸುದನ್ನು ನೋಡಿ: ” ವಿವೇಚನಾಶಕ್ತಿಗೆ ಪರಕೀಯವಾದ ವಿಧಾನದ ಮೂಲಕವಾಗಿದೆ ಕಲ್ಪನಾಶಕ್ತಿ ಅರ್ಥ ಮಾಡುವುದು. ಚೈತನ್ಯ ಮತ್ತು ಪದಾರ್ಥಗಳ ನಡುವೆ ಮಾಧ್ಯಮಿಕ ಅಸ್ತಿತ್ವ ಹೊಂದಿದ ಕಲ್ಪನಾಶಕ್ತಿ, ಅಮೂರ್ತ ವಿಚಾರ ಮತ್ತು ಭೌತಿಕಾತೀತ ವಿಷಯಗಳನ್ನು ಮೂರ್ತ ರೂಪಗಳಲ್ಲಿ ಸಂವೇದನೆ ಮಾಡಿಕೊಳ್ಳುವುದು. ಹೌದು/ಅಲ್ಲ ಎಂದು ಕರಾರುವಕ್ಕಾದ ರೂಪದಲ್ಲಿ ಅರಿಯಲು ವಿವೇಕ ಬಯಸುತ್ತದೆ. ತದ್ವಿರುದ್ದವಾಗಿ, ಭಾವನೆ, ಅಪರಿಚಿತ ಅಸ್ತಿತ್ವವೊಂದನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬ ಕಾರಣದಿಂದ ದೇವರ ಸ್ವಾಭಿವ್ಯಕ್ತಿಗಳನ್ನು ನಿಖರವಾಗಿ ತಿಳಿಯಲು ಸಾಧ್ಯವಿಲ್ಲವೆಂಬ ಸತ್ಯವನ್ನು ಮನಗಾಣುತ್ತದೆ.” ಪ್ರಸ್ತುತ ಗ್ರಹಿಕೆಯ ಪ್ರಕಾರ, ಬಹುರೂಪೀ ಅಭಿವ್ಯಕ್ತಿಗಳ ಸಂಕೀರ್ಣತೆಯನ್ನು ಮತ್ತು ಮೂಲಸ್ವರೂಪಿ ಏಕತ್ವವನ್ನು ಸಮಂಜಸವಾಗಿ ಅರ್ಥೈಸುವ ಸಾಮರ್ಥ್ಯ ಹೊಂದಿರುವುದು ಕಲ್ಪನಾಶಕ್ತಿ ಮಾತ್ರ. ಪ್ರತ್ಯಕ್ಷದಲ್ಲಿ ವಿರೋಧಾತ್ಮಕವೆಂದು ತೋರುವ ಹೇಳಿಕೆ ಮತ್ತು ವಿದ್ಯಮಾನಗಳ ಭೌತಿಕ ವೈಶಿಶ್ಠೈತೆಯನ್ನು ಪರಿಗಣಿಸುವುದರ ಜತೆಗೇ, ಅವುಗಳನ್ನು ಸಂಯೋಜಿಸುವ ಸಾಮಾನ್ಯ ಮೂಲವನ್ನು ಅರಸುವ ಶಕ್ತಿ ಖಯಾಲ್‌ಗೆ ಮಾತ್ರವಿರುವುದು. ಬಾಹ್ಯದಲ್ಲಿ ವ್ಯತ್ಯಾಸಗಳಿದ್ದಾಗ್ಯೂ, ಮರ, ಕಾಲಿಗ್ರಫಿಯ ಕಲಾಕೃತಿ, ಜ್ಯಾಮಿತೀಯ ಮಾದರಿ, ಕಾವ್ಯ ಸಾಲುಗಳು ಇತ್ಯಾದಿಗಳಲ್ಲಿ ಸಮಾನವಾದ ಸತ್ಯವೊಂದನ್ನು ಕಂಡರಿಸಲು ಭಾವನಾ ಶಕ್ತಿಗೆ ಸಾಧ್ಯ. ಈ ನಿಟ್ಟಿನಲ್ಲಿ ಅವಲೋಕನ ಮಾಡುವಾಗ, ಇಸ್ಲಾಮೀ ಕಲಾಕೃತಿಗಳ ಸೃಷ್ಠಿ ಮತ್ತು ಪ್ರೋತ್ಸಾಹದ ವಿಚಾರದಲ್ಲಿ ಗಮನೀಯ ಪ್ರಮಾಣದ ಅವನತಿಯನ್ನು ಕಂಡಿರುವ ಮುಸ್ಲಿಮರ ನಡುವೆ, ಉಗ್ರ ಪಂಥೀಯತೆ ಮತ್ತು ಪರಸ್ಪರ ತಪ್ಪುತಿಳುವಳಿಕೆಗಳು ಹೆಚ್ಚುತ್ತಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಭಾವನಾ ಸಾಮರ್ಥ್ಯದ ಕಡೆಗಣನೆ ಮತ್ತು ಇಸ್ಲಾಮೀ ಪರಂಪರೆಯ ಒಳ ಹರಿವಿನ ಕುರಿತ ಪರಿಜ್ಞಾನದ ಕೊರತೆಯಿಂದಾಗಿ ಪ್ರಸ್ತುತ ವಿದ್ಯಮಾನಗಳು ಘಟಿಸುತ್ತಿವೆ.
ಪವಿತ್ರ ದೇವ ಗ್ರಂಥಗಳಲ್ಲೂ ಹಾಗೂ ಪ್ರಪಂಚದಲ್ಲೂ ಕಾಣಸಿಗುವ ಅಲ್ಲಾಹನ ದೃಷ್ಠಾಂತಗಳನ್ನು ಅರ್ಥೈಸಲು ಮತ್ತು ಅವುಗಳಿಗೆ ಸೂಕ್ತ ವ್ಯಾಖ್ಯಾನ ನೀಡಲು ಖಯಾಲ್ (ಭಾವನಾ ಶಕ್ತಿ) ಮತ್ತು ಅಖ್‌ಲ್ (ವಿವೇಚನಾ ಶಕ್ತಿ) ಎರಡೂ ಜತೆ ಜತೆಗೇ ಕಾರ್ಯಾಚರಿಸಬೇಕೆಂದಾಗಿದೆ ಇಬ್ನು ಅರಬಿ (ರ), ಗಝಾಲಿ (ರ) ರಂತ ಖ್ಯಾತನಾಮರು ಅಭಿಪ್ರಾಯಪಟ್ಟಿರುವುದು. ಇದರ ಸ್ಪಷ್ಟ ವಿವರಣೆ ಅತ್ಯಂತ ವೈರುಧ್ಯಾತ್ಮಕವೆನಿಸುವ ಖುರಾನೀ ಸೂಕ್ತವೊಂದರಲ್ಲಿ ಕಾಣಬಹುದು. “ ಅವನಿಗೆ ಸರಿಸಮಾನವಾದ ಯಾವುದೇ ಇಲ್ಲ, ಆದರೂ ಅವನು ಕೇಳುವವನು ಮತ್ತು ಕಾಣುವವನು” (42:11). ಪ್ರಸ್ತುತ ಆಯತಿನ ಮೊದಲ ಅರ್ಧಭಾಗದಲ್ಲಿ ಅಲ್ಲಾಹನ ಅನುಪಮತೆ ಮತ್ತು ಪರಮಾತೀತತೆಯನ್ನು ಘೋಷಿಸಲಾಗಿದೆ. ಇಬ್ನು ಅರಬಿ ಪ್ರಕಾರ ಅದು ವಿವೇಕಕ್ಕೆ ನೀಡಿದ ಸಂದೇಶ. ಎರಡನೆಯ ಅರ್ಧಭಾಗ ಆತನ ಸಮಾನತೆ ಮತ್ತು ಅಂತರ್ಗತತ್ವವನ್ನು (ನಾವು ಕೂಡ ಕಾಣುತ್ತೇವೆ, ಕೇಳುತ್ತೇವೆ ಎಂಬಂತಿದೆ ಹೇಳಿಕೆ) ಸಾರುವಂತದ್ದು. ಆದ್ದರಿಂದಲೇ ಅದು ನಮ್ಮ ಕಲ್ಪನೆಯೊಂದಿಗಿರುವ ಸಂಭಾಷಣೆ. ಸೂಕ್ತದ ಉಭಯ ಭಾಗಗಳನ್ನು ದ್ವಿನೇತ್ರಗಳಿಂದ (ಖಯಾಲ್ ಮತ್ತು ಅಖ್‌ಲ್) ನೋಡುವ ಮೂಲಕ ಅರ್ಥ ಮಾಡುವಾಗ ಮಾತ್ರ ಅಲ್ಲಾಹನನ್ನು ಆತನ ನಿದರ್ಶನಗಳ ಮುಖಾಂತರ ಅರಿತಂತಾಗುವುದು. ತನ್ನದೇ ಸಾಮಾಗ್ರಿಗಳ ಮುಖಾಂತರ ವಿವೇಕಕ್ಕೆ ದೇವರು ನಮ್ಮ ಅನುಭವಗಳಿಗೆ ಅತೀತನೂ ಎಲ್ಲಕ್ಕಿಂತ ಭಿನ್ನನೂ ಆಗಿದ್ದಾನೆಂದು ತಿಳಿಯಲು ಸಾಧ್ಯ. ಆದರೆ, ವಿದ್ಯಮಾನಗಳಲ್ಲಿ ದೇವರ ಸಾನ್ನಿಧ್ಯವನ್ನು ದರ್ಶಿಸಲು ಹಾಗೂ ಆತನ ಅಸ್ತಿತ್ವದ ನೈಜತೆಯ ಕುರಿತು ಧನಾತ್ಮಕವಾದ ಯಾವುದೇ ವಿಚಾರವನ್ನು ಮುಂದಿಡಲು ಅದು ಅಸಮರ್ಥವಾಗಿದೆ. ಪ್ರವಾದಿಗಳಿಗೆ ಸಿಕ್ಕ ಕಾವ್ಯಾತ್ಮಕ ದಿವ್ಯ ಸಂದೇಶಗಳಿಂದ ಮತ್ತು ಭಾವನಾ ಸಾಮರ್ಥ್ಯ ಬಳಸಿ ಮಾಡುವ ದಿವ್ಯ ದೃಷ್ಠಾಂತಗಳ ಮೇಲಿನ ಧ್ಯಾನದಿಂದ ಮಾತ್ರ ನಮಗೆ ದೇವರ ಸಕಾರಾತ್ಮಕ ಗುಣಗಳನ್ನು ಮನಗಾಣಲು ಸಾಧ್ಯ. ದೇವರು, ತತ್ವ ಚಿಂತನೆಯ ತರ್ಕ ಸರಣಿಯಲಲ್ಲಿ ಹೇಳಲಾಗುವ ಅನಿವಾರ್ಯ ಅಸ್ತಿತ್ವ (ವಾಜಿಬುಲ್ ವುಜೂದ್) ಹೊಂದಿದವನು ಮಾತ್ರವಾಗಿದ್ದರೆ, ಬಿಗ್ ಬ್ಯಾಂಗ್ ತಿಯರಿಗಿಂತ ಹೆಚ್ಚಾಗಿ ಆತನನ್ನು ಜನರು ಪ್ರೀತಿಸುತ್ತಿರಲಿಲ್ಲ. ಮತ್ತೊಂದು ಬಗೆಯಲ್ಲಿ ಹೇಳುವುದಾದರೆ, ಧರ್ಮ ಸಂಬಂಧಿತ ಸೃಜನಾತೃಕ ರಚನೆಗಳು ಸತ್ಯತೆ (حق,Truth) ಮತ್ತು ಸಾನಿಧ್ಯ (حضور presence) ಎಂಬೀ ಸಂಗತಿಗಳನ್ನು ಒಳಗೊಂಡಿರಬೇಕು. ಸಾನಿಧ್ಯವಿಲ್ಲದೆ, ಸತ್ಯ ಅಮೂರ್ತ ಮತ್ತು ಅಪ್ರಚೋದಕವಾಗಿ ಉಳಿಯುತ್ತದೆ; ಶಾಲೆಯಲ್ಲಿ ಕಲಿತ ಅರ್ಧ ನೆನಪಿರುವ ರೇಖಾಗಣಿತದ ವಿಚಾರದಂತೆ. ಹಾಗೆಯೇ, ಸತ್ಯತೆ ರಹಿತವಾದರೆ ಸಾನಿಧ್ಯ ಶುಷ್ಕವೂ ಅರ್ಥಹೀನವೂ ಆಗಬಹುದು. ದ್ವಿಮುಖ ಹೊಂದಿರುವ ಇಸ್ಲಾಮೀ ಕಲೆಯ ಅಧ್ಭುತವೇನೆಂದರೆ ಪಾರಮಾರ್ಥಿಕ ಸತ್ಯವನ್ನೂ ಹಾಗೂ ದಿವ್ಯ ಸಂದೇಶಗಳ ವಾಸ್ತವಿಕತೆಯನ್ನು ನಮ್ಮ ಕಣ್ಮುಂದೆ ತರುತ್ತದೆ, ನಮ್ಮ ಇಂದ್ರಿಯಾನುಭವಕ್ಕೆ ಇಳಿಸುತ್ತದೆ. ಅಂದರೆ, ನಮ್ಮ ಭೌತಿಕ ಆವರಣವನ್ನು ದಿವ್ಯ ಸತ್ಯ ಸೌಂದರ್ಯಗಳಿಂದ ಸಮೃದ್ಧಗೊಳಿಸುತ್ತದೆ. ಒಂದು ನಿಟ್ಟಿನಲ್ಲಿ, ಜಲಾಲ್ (ದಿವ್ಯ ಘನ ಗಾಂಭಿರ್ಯತೆ) ಎಂಬುದು ಸತ್ಯದ ಧ್ರುವದೊಂದಿಗೆ ಅನುರೂಪತೆ ಹೊಂದಿದ್ದು. ಜಮಾಲ್ (ದಿವ್ಯ ಸೌಂದರ್ಯ) ಸಾನಿಧ್ಯದ ಧ್ರುವದೊಂದಿಗೆ ಹೊಂದಾಣಿಕೆ ಇರುವಂತದ್ದು. ಎರಡೂ ಪರಸ್ಪರ ಪೂರಕವಾಗಿದೆ. ಒಂದಿಲ್ಲದೆ ಮತ್ತೊಂದಕ್ಕೆ ಅಸ್ತಿತ್ವವಿಲ್ಲ. ಆದರೆ, ಸೌಂದರ್ಯ ಮತ್ತು ಸಾನಿಧ್ಯದ ಧ್ರುವವೇ ಆಗಿದೆ ಪವಿತ್ರ ದಿವ್ಯಪ್ರೇಮವನ್ನು ಪ್ರೇರೇಪಿಸುವುದು. ನಮ್ಮ ಆತ್ಮ ಒಳಗೊಂಡಂತೆ ಎಲ್ಲಾ ಪ್ರಾಪಂಚಿಕ ವಸ್ತುಗಳನ್ನು ದೇವ ಮೂಲದೆಡೆಗೆ ನಡೆಸುವ ಶಕ್ತಿಯೂ ಕೂಡ ಇದೇ ಆಗಿದೆ. (ಸಶೇಷ)
ವಿಶ್ವ ಸಂಸ್ಕೃತಿಗೆ ಪರ್ಷಿಯನ್ ಭಾಷೆಯು ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆಧುನಿಕ ಇರಾನಿನ ಬೆಳವಣಿಗೆಯ ಹಿಂದೆ ಪರ್ಷಿಯನ್ ಭಾಷೆಯ ಪಾತ್ರ ಹಿರಿದು. ಪರ್ಷಿಯನ್ ಮಹಾ ಕವಿಗಳಿಂದ ಪ್ರಭಾವಿತರಾಗದ ಸಾಹಿತಿಗಳು ಬಹಳ ಕಡಿಮೆ. ಪೂರ್ವದ ಹಾಗೂ ಪಶ್ಚಿಮದ ಅನೇಕ ವಿದ್ವಾಂಸರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಫಿರ್ದೌಸಿ, ಅನ್ವರಿ, ಖಾಖಾನಿ, ಹಕೀಂ ಸನಾಈ, ಉಮರ್ ಖಯ್ಯಾಂ, ಶೈಖ್ ಫೈಝಿ, ನಿಝಾಮಿ, ಅಮೀರ್ ಖುಸ್ರು, ಫರೀದುದ್ದೀನ್ ಅತ್ವಾರ್, ಮೌಲಾನ ಜಲಾಲುದ್ದೀನ್ ರೂಮಿ, ಇಮಾಮ್ ಸಅದಿ, ಖಾಜಾ ಹಾಫಿಝ್, ಮೌಲಾನಾ ಜಾಮಿ, ಅಲ್ಲಾಮಾ ಇಕ್ಬಾಲ್ ಮೊದಲಾದವರು ಶ್ರೇಷ್ಠ ಪರ್ಷಿಯನ್ ಕವಿಗಳು. ಈ ಕವಿಗಳು ಕ್ರಿ.ಶ.೯೩೫ರಿಂದ ಹಿಡಿದು ೧೯೩೫ವರೆಗಿನ ವಿವಿಧ ಕಾಲಘಟ್ಟಗಳಲ್ಲಿ ಜೀವಿಸಿದ್ದವರು. ಪುರಾತನ ಪರ್ಷಿಯದಲ್ಲಿ ಝೊರಾಸ್ಟ್ರೀಯನ್ ಪವಿತ್ರ ಗ್ರಂಥವಾದ ಜೆಂಡ್ ಅವೆಸ್ತ ಬಿಟ್ಟರೆ ಬೇರೆ ಗಮನಾರ್ಹ ಸಾಹಿತ್ಯ ಕೃತಿ ಕಂಡು ಬಂದಿಲ್ಲ. ಪರ್ಷಿಯಾದ ವಿವಿಧ ಭಾಗಗಳಲ್ಲಿ ಅಲೆಮಾರಿ ಕವಿಗಳು ಜೀವಿಸಿದ್ದರೂ ಹೇಳತಕ್ಕ ಸಾಹಿತ್ಯ ಕೃಷಿ ನಡೆದಿಲ್ಲ. ಕ್ರಿ.ಶ.೪೨೦-೪೩೬ರಲ್ಲಿ ಜೀವಿಸಿದ್ದ ನುರಿತ ಬೇಟೆಗಾರನೆಂದು ಹೆಸರು ಪಡೆದಿದ್ದ ರಾಜ ಬಹ್ರಾಮ್ ಗೋರ್ ಪರ್ಷಿಯನ್ ಛಂದಸ್ಸನ್ನು ಪರಿಚಯಿಸಿರುವುದಾಗಿ ಪರ್ಷಿಯನ್ ಸಂಶೋಧಕನೊಬ್ಬ ಹೇಳಿದ್ದಾನೆ. ಮೊತ್ತ ಮೊದಲು ಪರ್ಷಿಯನ್ ಭಾಷೆಯಲ್ಲಿ ಹಾಡು ರಚಿಸಿದವನು ಸಮರ್ ಕಂದ್ ನ ಸೋಕ್ತ್ ಎಂಬ ಪ್ರದೇಶದ ಅಬೂಹಫ್ಸ್ ಎಂಬ ವೈದ್ಯ ಎಂದು ಹೇಳಲಾಗುತ್ತದೆ. ಕ್ರಿ.ಶ. ೫೯೦-೬೨೮ರಲ್ಲಿ ಜೀವಿಸಿದ್ದ ಷೀರೀನ್ ನ ಅರಮನೆಯ ಗೋಡೆಯಲ್ಲಿ ಬರೆದಿದ್ದ ಪದ್ಯ ಮೊತ್ತಮೊದಲ ಪರ್ಷಿಯನ್ ಪದ್ಯ ಎಂದು ಹೇಳುವವರೂ ಇದ್ದಾರೆ. ಅದೇನಿದ್ದರೂ ಮುಸ್ಲಿಮ್ ಪೂರ್ವ ಪರ್ಷಿಯದಲ್ಲಿ ಗಮನಾರ್ಹ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ ಎಂಬುದು ಚರ್ಚಾರ್ಹವಾಗಿದೆ. “ಪರ್ಷಿಯನ್ ಭಾಷೆಗೆ ಸಂಬಂಧಿಸಿದಂತೆ ಮುಸ್ಲಿಮ್ ಆಕ್ರಮಣವು ಒಂದು ಅನುಗ್ರಹವಾಗಿತ್ತು” ಎಂದು ಪ್ರೊ. ವೈಸ್ಲಾಲ್ ಹೇಳುತ್ತಾರೆ. ಆ ಯುದ್ಧವೀರರು ಜ್ಞಾನದಾಹಿಗಳಾಗಿದ್ದರು. ಪ್ರವಾದಿಯ ಕಾಲದಿಂದಲೇ ಅರಬಿ ಭಾಷೆ ಪ್ರೋತ್ಸಾಹವನ್ನು ಪಡೆಯುತ್ತಾ ಬಂದಿತು. ಪರಿಣಾಮ ಹಲವು ವಿಧದ ಜ್ಞಾನ ಶಾಖೆಗಳು ಆ ಭಾಷೆಯಲ್ಲಿ ರೂಪು ತಾಳಿದವು. ತನ್ಮೂಲಕ ಆ ಭಾಷೆಯ ಜ್ಞಾನ ಸಂಪತ್ತು ಆ ಭಾಷೆಯೊಂದಿಗೆ ಸಂಪರ್ಕ ಸಾಧಿಸಿದ ಇತರ ಭಾಷೆಗಳ ಮೇಲೂ ಪ್ರಭಾವ ಬೀರಿತು. ಸಾಂಸ್ಕೃತಿಕ ಶ್ರೀಮಂತಿಕೆಯ ಉತ್ಕೃಷ್ಟ ಭಾಷೆಯೊಂದು ಇನ್ನೊಂದು ಭಾಷೆಯೊಂದಿಗೆ ಸಂಗಮ ಸಾಧಿಸುವಾಗ ಕ್ರಾಂತಿಕಾರಕವಾದ ಅನೇಕ ಪರಿವರ್ತನೆಗಳು ಸಂಭವಿಸುತ್ತವೆ. ಅದು ಸಹಜವಾದುದೂ ಕೂಡ. ಹದಿನಾರನೇ ಶತಮಾನದಲ್ಲಿ ಗ್ರೀಕ್ ಭಾಷೆ ಆಂಗ್ಲ ಭಾಷೆಯ ಜೊತೆಗೆ ಬೆರೆತುಕೊಂಡಾಗ ಅಲ್ಲಿ ಅದ್ಭುತಗಳು ಸೃಷ್ಟಿಯಾದವು. ಶೇಕ್ಸ್ಪಿಯರ್, ಮಿಲ್ಟನ್ ಮೊದಲಾದ ಮಹಾನ್ ಸಾಹಿತಿಗಳು ಹುಟ್ಟಿಕೊಂಡರು. ಇದೇ ರೀತಿ ಅರೇಬಿಕ್ ಭಾಷೆಯು ಪರ್ಷಿಯನ್ ಭಾಷೆಯೊಂದಿಗೆ ಸಂಗಮ ಸಾಧಿಸಿದಾಗ ಪರ್ಷಿಯನ್ ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಸೃಷ್ಟಿಯಾಯಿತು. ಹೀಗೆ ವಿಶ್ವ ಸಾಹಿತ್ಯದಲ್ಲಿ ಪರ್ಷಿಯನ್ ಭಾಷೆ ಉನ್ನತ ಸ್ಥಾನಕ್ಕೇರಲು ಅರೇಬಿಕ್ ಭಾಷೆ ಸಹಾಯಕವಾಯಿತು. ನಂತರದ ಕಾಲಘಟ್ಟಗಳಲ್ಲಿ ಅರಬಿ ಹಾಗೂ ಪರ್ಷಿಯನ್ ಭಾಷೆಗಳು ಅವಳಿ ಸಹೋದರಿಯರಂತೆ ವಿಶ್ವ ಸಾಹಿತ್ಯದಲ್ಲಿ ವಿಜೃಂಭಿಸಿದವು.
ಪರ್ಷಿಯಾದ ಮೇಲೆ ಅರಬಿಗಳು ದಿಗ್ವಿಜಯ ಸಾಧಿಸುವುದರೊಂದಿಗೆ ಪರ್ಷಿಯನ್ನರಲ್ಲಿ ಬಹುತೇಕ ಮಂದಿ ಇಸ್ಲಾಮ್ ಸ್ವೀಕರಿಸಿದರು. ಅವರ ಹೃದಯಗಳಲ್ಲಿ ಪವಿತ್ರ ಕುರ್‌ಆನ್ ಬಹಳಷ್ಟು ಪರಿಣಾಮ ಬೀರಿತು. ಕುರ್‌ಆನ್ ಅವರ ಖಾಸಗಿ ಹಾಗೂ ಸಾಮಾಜಿಕ ಜೀವನದಲ್ಲಿ ಪ್ರತಿಬಿಂಬಿಸತೊಡಗಿತು. ಪ್ರತಿಯೊಂದಕ್ಕೂ ಅವರು ಪವಿತ್ರ ಕುರ್‌ಆನಿನ ಆಧಾರದಲ್ಲಿ ತೀರ್ಪು ನೀಡತೊಡಗಿದರು. ಈ ಮೂಲಕ ಅವರು ಉನ್ನತ ಸಂಸ್ಕೃತಿಯೊಂದರ ಭಾಗವಾದರು. ಈ ನಡುವೆ ಪರ್ಷಿಯನ್ ಸಾಹಿತ್ಯ ವೃಕ್ಷವು ಫಲವತ್ತಾಗಿ ಬೆಳೆಯುವುದರೊಂದಿಗೆ ವ್ಯಾಪಕ ಜನಮನ್ನಣೆ ಪಡೆಯಿತು. ಕೇವಲ ಒಂದು ಶತಮಾನದಲ್ಲಿ ಪಾರ್ಸಿ ವಿಶ್ವದ ಉತ್ಕೃಷ್ಟ ಸಂಸ್ಕೃತಿಯಾಗಿ ಬೆಳೆಯಿತು. ಅಲ್ಲಿ ಉತ್ಕೃಷ್ಟ ಸಾಹಿತ್ಯಗಳು ಒಂದರ ಹಿಂದೆ ಒಂದರಂತೆ ಬೆಳಕು ಕಂಡವು. ಇದರ ಹಿಂದಿರುವ ಪರ್ಷಿಯನ್ ಮಹಾಜ್ಞಾನಿಗಳ ಶ್ರಮ ಪ್ರಶಂಸನೀಯ. ಪರ್ಷಿಯನ್ ಮಹಾಕವಿಗಳು ವಿಶ್ವ ಕಾವ್ಯ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪರ್ಷಿಯನ್ ಭಾಷೆಯನ್ನು ಜೀವಂತ ಭಾಷೆಯಾಗಿ ರೂಪಿಸಿದ ಕೀರ್ತಿ ಅರೇಬಿಕ್ ಭಾಷೆಗೆ ಸಲ್ಲುತ್ತದೆ. ಸೆಮೆಟಿಕ್ ಭಾಷೆ ಹಾಗೂ ಆರ್ಯನ್ ಭಾಷೆ ಪರಸ್ಪರ ಸಂಧಿಸಿದ ಬಳಿಕ ನಡೆದ ಕ್ರಾಂತಿಯಿದು. ಹಂತಹಂತವಾಗಿ ಹಲವು ಶತಮಾನಗಳ ಕಾಲ ಈ ಕ್ರಾಂತಿ ಮುಂದುವರಿಯಿತು. ಅಬ್ಬಾಸಿಯ ಕಾಲಘಟ್ಟದಲ್ಲಿ ಪರ್ಷಿಯನ್ನರು ಹಲವು ಪ್ರಮುಖ ಸ್ಥಾನಗಳಲ್ಲಿ ಕಾಣಿಸಿಕೊಂಡರು. ಅವರ ಪರಾಕ್ರಮ ವಿವಿಧ ಕಡೆಗಳಲ್ಲಿ ಕಾಣಿಸಿಕೊಂಡಿತು. ಕೇವಲ ಯುದ್ಧರಂಗದಲ್ಲಿ ಮಾತ್ರವಲ್ಲ; ಸಾಹಿತ್ಯ, ಆಡಳಿತ ಮೊದಲಾದ ಕ್ಷೇತ್ರಗಳಲ್ಲೂ ಅವರು ಮೇಲುಗೈ ಸಾಧಿಸಿದರು. ಈ ಕ್ಷೇತ್ರಗಳಲ್ಲಿ ಅವರು ಅರಬಿಗಳನ್ನೂ ಹಿಂದಿಕ್ಕುವ ಅದ್ಭುತ ಬೆಳವಣಿಗೆಯನ್ನು ಸಾಧಿಸಿರುವುದನ್ನು ಆನಂತರದ ಕಾಲಘಟ್ಟದಲ್ಲಿ ಕಾಣಬಹುದು. ಅಬ್ಬಾಸೀ ಖಲೀಫರ ಆಡಳಿತ ಶಿಥಿಲಗೊಳ್ಳುತ್ತಿದ್ದಂತೆಯೇ ಅವರ ಜೊತೆಗಿದ್ದ ತುರ್ಕಿ ಯೋಧರು ಬಂಡಾಯ ಎದ್ದರಲ್ಲದೆ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ರಾಜ್ಯಗಳನ್ನು ಸೃಷ್ಟಿಸಿದರು. ಆದರೂ, ಪರ್ಷಿಯಾದ ಪೂರ್ವ ಭಾಗಗಳು ಬಹಳಷ್ಟು ವರ್ಷ ಖಲೀಫರ ಅಧೀನದಲ್ಲೇ ಇದ್ದವು. ನಾಡ ದೊರೆಗಳು, ಖಲೀಫರು ಪರ್ಷಿಯನ್ ಭಾಷೆಯ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪರ್ಷಿಯಾವನ್ನು ಆಳಿರುವ ಮುಸ್ಲಿಮ್ ರಾಜರು ತಮ್ಮ ಸಮಕಾಲೀನರಾದ ಮಹಾಕವಿಗಳನ್ನು ಗೌರವಿಸಿ, ಅವರ ಕೃತಿಗಳಿಗೆ ಸಾಕಷ್ಟು ಪ್ರಚಾರ ನೀಡಿದ್ದಾರೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಖಲೀಫಾ ಹಾರೂನ್ ರಶೀದ್.
ಮುಸ್ಲಿಮ್ ಪರ್ಷಿಯದ ಮೊದಲ ಕವಿ ಯಾರು? ಎಂಬ ವಿಷಯದಲ್ಲಿ ವಿದ್ವಾಂಸರ ನಡುವೆ ಒಮ್ಮತವಿಲ್ಲ. ಪರ್ಷಿಯನ್ ಕವಿಗಳ ಚರಿತ್ರೆ ಬರೆದಿರುವ ೧೩ನೇ ಶತಮಾನದ ಇತಿಹಾಸ ತಜ್ಞ ಮುಹಮ್ಮದ್ ಔಫಿ ತಮ್ಮ ಲುಬಾಬುಲ್ ಅಲ್ ಬಾಬ್’ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಖಲೀಫಾ ಮಹ್ಮೂರ್‌ರ ದಿಗ್ವಿಜಯವನ್ನು ಘೋಷಿಸಲು ಕವಿ ಅಬ್ಬಾಸ್ ಎಂಬವರು ರಚಿಸಿದ ಕವಿತೆಯೇ ಮುಸ್ಲಿಮ್ ಪರ್ಷಿಯಾದ ಮೊದಲ ಕವಿತೆ. ಆದರೆ, ಇದನ್ನು ಇತರ ಚರಿತ್ರೆಕಾರರು ವಿರೋಧಿಸುತ್ತಾರೆ. ಈ ಕವಿತೆ ನಕಲಿ ಎಂಬುದು ಅವರ ವಾದ. ನಿಝಾಮಿ ಅರುಜಿ ಎಂಬ ವಿದ್ವಾಂಸರು ಚಹರ್ ಮಾಘಲೆಹ್’ ಎಂಬ ತಮ್ಮ ಕೃತಿಯಲ್ಲಿ ಹೇಳುವ ವಿಚಾರ ಗಮನಾರ್ಹವಾಗಿದೆ. ಹಿಜ್‌ರ ೨೬೨(ಕ್ರಿ.ಶ.೮೭೫-೭೬)ರಲ್ಲಿ ಸಫವಿ ವಂಶದ ವಿರುದ್ಧ ಬಂಡಾಯ ಎಬ್ಬಿಸಲು ಅಹ್ಮದ್ ಎಂಬ ಕವಿ ಕವಿತೆ ಬರೆದನು. ಇದುವೇ ಮುಸ್ಲಿಮ್ ಪರ್ಷಿಯಾದ ಮೊದಲ ಕವಿತೆ ಎಂದು ನಿಝಾಮಿ ಅರುಜಿ ಪ್ರತಿಪಾದಿಸುತ್ತಾರೆ. ಸಫವಿ ರಾಜ ವಂಶಸ್ಥರ ಕಾಲಘಟ್ಟ ಕ್ರಿಸ್ತ ಶಕ ೮೬೭-೯೦೩ರವರೆಗೆ. ಇವರ ಕಾಲಘಟ್ಟದಲ್ಲಿ ಪರ್ಷಿಯಾದ ಇತರ ಭಾಗಗಳನ್ನು ಸಮನ್ ವಂಶದ ರಾಜರು, ಝಿಯಾರಿಗಳು, ಬುವೈಹಿಗಳು ಆಳುತ್ತಿದ್ದರು. ಈ ವಂಶದ ರಾಜರುಗಳಲ್ಲಿ ಅನೇಕರು ಕವಿಗಳಾಗಿದ್ದರು. ಇವರು ತಮ್ಮ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಪರ್ಷಿಯನ್ ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪರ್ಷಿಯಾದ ಮುಸ್ಲಿಮ್ ಸಾಹಿತ್ಯದ ಬೆಳವಣಿಗೆಯು ಸಾವಿರದ ನೂರು ವರ್ಷ ಹಳೆಯದು. ಕಾಲ ಪ್ರವಾಹವು ಇಷ್ಟು ವರ್ಷಗಳನ್ನು ದಾಟಿ ಬಂದಿದ್ದರೂ ಪರ್ಷಿಯನ್ ಭಾಷೆಯ ಆದಿಮ ಸಾಂಸ್ಕೃತಿಕ ಗುಣಲಕ್ಷಣಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪರ್ಷಿಯನ್ ಭಾಷೆಯ ಗಾಂಭೀರ್ಯ ಹಾಗೂ ಮೂಲಭೂತ ಸ್ವಭಾವಗಳು ಈಗಲೂ ಬದಲಾಗದೆ ಉಳಿದಿವೆ. ಹಳೆಯ ಕೃತಿಗಳನ್ನು ಓದುವಾಗಲೂ ಹೊಸತನ' ದ ಅನುಭವವಾಗುತ್ತದೆ. ಇದು ಪರ್ಷಿಯನ್ ಭಾಷೆಯ ವಿಶಿಷ್ಟ ಗುಣ. ಪರ್ಷಿಯನ್ ಭಾಷೆಯ ಮೊದಲ ಕಾವ್ಯಗಳು ಹಾಡು ಹಾಗೂ ರುಬಾಈ(ಚತುಷ್ಪದಿ) ಶೈಲಿಯಲ್ಲಿದೆ. ಆ ನಂತರ ಮಸ್ನವಿ(ದ್ವಿಪದಿ) ಕಾಣಿಸಿಕೊಂಡಿತು. ಇದು ಪ್ರಾಸಬದ್ಧವಾದ ಶೈಲಿ. ಚರಿತ್ರೆ ಹಾಗೂ ಕಥೆಗಳನ್ನು ಹೇಳಲು ಈ ಶೈಲಿ ಅನುಕೂಲಕರವಾಗಿದೆ. ಇದರ ಕರ್ತೃ ದಖೀಖ್. ಮಸ್ನವಿಯ ಬಳಿಕ ಖಸ್ವೀದ, ಗಝಲ್, ಗೀತೆ ಮೊದಲಾದ ಕಾವ್ಯ ಶೈಲಿಗಳು ರೂಪು ಪಡೆದವು. ಇವುಗಳು ಪರ್ಷಿಯನ್ ಕಾವ್ಯ ಸಾಹಿತ್ಯದ ಮುಖ್ಯ ಛಂದಸ್ಸುಗಳು. ಕೆಲವು ವಿದ್ವಾಂಸರ ಪ್ರಕಾರ, ಪರ್ಷಿಯನ್ ಭಾಷೆಯಲ್ಲಿ ಮೊದಲು ಕಾವ್ಯ ರಚನೆ ಮಾಡಿದವರು ತ್ವಾಹಿರಿ ವಂಶದ ಆಳ್ವಿಕೆ(ಕ್ರಿ.ಶ.೮೪೧ಕ್ಕೂ ಮೊದಲು)ಯ ಕಾಲದಲ್ಲಿ ಜೀವಿಸಿದ್ದ ಹನ್ಸಾ ಎಂಬ ಕವಿ. ಹನ್ಸಾರ ಬಳಿಕ ವರ್ರಾಖ್, ಫಿರೋಝ್ ಮಶ್‌ರಿಖಿ ಎಂಬೀ ಇಬ್ಬರು ಕವಿಗಳು ಕಾವ್ಯ ರಚನೆಯಲ್ಲಿ ತೊಡಗಿದ್ದರು. ಸಮಾನ್ ವಂಶದ ರಾಜರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ಆಶ್ರಯದಲ್ಲಿ ಅನೇಕ ಕವಿಗಳಿದ್ದರು. ಅಬೂಅಬ್ದುಲ್ಲಾ ಫರಲಾಹಿ, ಶಹೀದ್ ಬಲ್ಖಿ, ಅಬೂಶುಕೂರ್ ಬಲ್ಖಿ, ಅಬುಲ್ ಅಬ್ಬಾಸ್ ಬುಖಾರಿ, ಅಬುಲ್ ಮುಸ್ತಫಾ ನಿಷಾಪೂರಿ, ಅಬೂ ಶುಹೈಬ್ ಷಾ ಅಲಿಫ್, ರುದಾಖಿ, ದಖೀಖಿ, ಅಬ್ದುಲ್ ಫತಹ್‌ಬುಸ್ತಿ, ಉಮರಾಹ್ ಮರ್ವಾಸಿ, ಅಬುಲ್ ಹಸನ್ ಕಿಸೈ ಮೊದಲಾದವರು. ರುದಾಖಿ ಅಂಧರಾಗಿದ್ದರು. ಜೀವಿಸಿರುವಾಗಲೇ ಪ್ರಸಿದ್ಧಿಯ ತುತ್ತತುದಿಯೇರಿದ್ದ ಭಾಗ್ಯವಂತ ಕವಿ. ಇವರು ಕಥನ ಕವಿತೆ ಬರೆಯುವುದರಲ್ಲಿ ನಿಸ್ಸೀಮರು. ಪಂಚತಂತ್ರ ಕಥೆಗಳನ್ನು ಪರ್ಷಿಯನ್ ಭಾಷೆಯ ಕಾವ್ಯಕ್ಕೆ ಒಗ್ಗಿಸಿ ಕಥನ ಕಾವ್ಯ ಬರೆಯುತ್ತಿದ್ದರು.ಕಲೀಲಾವದಿಂನಾ’ ಎಂಬ ಹೆಸರಿನಲ್ಲಿ ಪಂಚತಂತ್ರ ಕಥೆಗಳ ಪರ್ಷಿಯನ್ ಕವಿತೆಗಳನ್ನು ರಚಿಸಿ, ಸೈ ಎನಿಸಿಕೊಂಡಿದ್ದರು. ಒಂದು ರೀತಿಯ ವೇಗದ ಹಾಗೂ ರಮ್ಯ ಶೈಲಿ ಇವರದ್ದಾಗಿತ್ತು. ಉಚಿತವೆನಿಸಿದ ಕಡೆಗಳಲ್ಲಿ ಅರಬಿ ಪದಗಳನ್ನು ಬಳಸಲು ರುದಾಖಿ ಹಿಂಜರಿಯಲಿಲ್ಲ. ಇವರು ಶೋಕ, ಹಾಸ್ಯ, ಸ್ತುತಿಗೀತೆಗಳನ್ನು ಬರೆದು ಪ್ರಸಿದ್ಧರಾಗಿದ್ದರು. ರುದಾಖಿಯಂತೆಯೇ ದಾಖಿಖಿ ಕೂಡ ಪ್ರಸಿದ್ಧ ಕವಿಯೇ. ಸಾಮಾನೀ ರಾಜ ನೂಹ್ ಇಬ್ನ್ ಮನ್ಸೂರ್ ಇವರನ್ನು ಗೌರವಿಸಿ, ಅರಮನೆಯಲ್ಲಿ ಹುದ್ದೆಯನ್ನು ನೀಡಿದ್ದರು. ಪ್ರೇಮ, ಮದ್ಯ ಮೊದಲಾದ ವಿಷಯಗಳಲ್ಲಿ ಇವರು ಹಾಡು, ರುಬಾಇಗಳನ್ನು ರಚಿಸಿದ್ದಾರೆ. ಪ್ರಕೃತಿ ವರ್ಣನೆಯಲ್ಲಿ ಇವರದ್ದು ಅಸಾಧಾರಣ ಪ್ರತಿಭೆ. ಕ್ರಿ.ಶ. ೯೭೭ರಲ್ಲಿ ಮರಣ ಹೊಂದಿದರು. ಒಂಬತ್ತನೇ ಶತಮಾನದ ಕೊನೆಯಲ್ಲಿ ಜೀವಿಸಿದ್ದ ರಾಬಿಅಃ ಪರ್ವಾರಿ ಎಂಬ ಕವಯತ್ರಿ ಪರ್ಷಿಯನ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ರಾಬಿಅಃ ಆ ಕಾಲದ ಪರಮ ಸುಂದರಿಯಾಗಿದ್ದರು. ಜೊತೆಗೆ ಪಾಂಡಿತ್ಯದಲ್ಲೂ ಮೇಲುಗೈ ಸಾಧಿಸಿದ್ದರು. ತನ್ನ ಸೇವಕ ಯಖ್‌ದಾಸ್‌ನೊಂದಿಗೆ ಅವರಿಗೆ ಪ್ರೇಮಾಂಕುರವಾಯಿತು. ಯಖ್‌ದಾಸ್ ತುರ್ಕಿಯ ಸುಂದರ ಯುವಕ. ಆದರೆ, ರಾಬಿಅಃರ ಬಂಧುಗಳಿಗೆ ಈ ಪ್ರೇಮ ಸಂಬಂಧ ಇಷ್ಟವಾಗಲಿಲ್ಲ. ಇಬ್ಬರನ್ನೂ ಬೇರ್ಪಡಿಸಿದರು. ರಾಬಿಅಃ ತಮ್ಮ ವಿರಹ ದುಃಖವನ್ನು ಅಕ್ಷರ ರೂಪಕ್ಕಿಳಿಸಿದರು. ಆ ಅಕ್ಷರಗಳು ಅತಿ ಸುಂದರ ಕವಿತೆಗಳಾಗಿ ರೂಪು ತಾಳಿದವು. ರಮ್ಯ ಶೈಲಿಯ ರಾಬಿಅಃರ ಕವಿತೆಗಳು ಭಾವ ತೀವ್ರತೆಯ ಕಾರಣದಿಂದ ಗಮನ ಸೆಳೆಯುತ್ತವೆ. ಈ ಕವಿತೆಗಳು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಅಂದಿನ ಸಮಾಜವು ಅವರಿಗೆ ಗಲ್ಲು ಶಿಕ್ಷೆ ನೀಡಿತು. ಆದರೆ, ಅವರ ಕವಿತೆಗಳಲ್ಲಿನ ದಿವ್ಯ ಪ್ರೇಮದ ಅನನ್ಯ ಭಾವಗಳನ್ನು ಆ ಜನರು ಗಮನಿಸಲಿಲ್ಲ. ಕಣ್ಣೋಟಕ್ಕೆ ತೃಪ್ತಿಗೊಳ್ಳದ ಆತ್ಮ, ದಿವ್ಯ ಪ್ರೇಮಕ್ಕೆ ತುಡಿಯುವ ಅನುಭೂತಿ ರಾಬಿಅಃರ ಕವಿತೆಗಳಿಗೆ ಜೀವ ನೀಡಿತು. ದೈವಿಕ ಪ್ರೇಮದ ತಹತಹವೇ ಸೂಫಿ ಕವಿತೆಗಳ ಮೂಲ ಎಂಬುದರಲ್ಲಿ ಸಂಶಯವಿಲ್ಲ. ಪರ್ಷಿಯನ್ ಸೂಫಿ ಕವಿತೆಗಳ ಆರಂಭವೇ ರಾಬಿಅಃ ಪರ್ವಾರಿಯ ದಿವ್ಯ ಪ್ರೇಮದ ಸಾಲುಗಳ ಮೂಲಕ ಆಯಿತು ಎಂದರೆ ಉತ್ಪ್ರೇಕ್ಷೆ ಎನಿಸದು.
ರಾಬಿಅಃರ ಕಾಲಘಟ್ಟದಲ್ಲಿ ತಬರಿಸ್ತಾನ್ ಆಳಿದ ಬುವೈಹಿ, ಝಿಯಾರಿ ವಂಶದ ರಾಜರ ಆಶ್ರಯದಲ್ಲಿ ಅನೇಕ ಕವಿಗಳಿದ್ದರು. ಮನ್ಸೂರ್ ಮಂತಿಖಿ, ರಾಝಿ ಸರಕ್ಷಿ, ಅಬುಲ್ ಖಾಸಿಂ ಝಿಯಾದ್ ಖುರ್‌ಕಾನಿ ಮೊದಲಾದವರು. ಕ್ರಿಸ್ತ ಶಕ ೯೬೧-೯೭೫ರಲ್ಲಿ ಜೀವಿಸಿದ್ದ ಬಲಾಮಿ ಎಂಬ ಕವಿ ಸಾಮಾನಿ ರಾಜವಂಶದ ಮೊದಲ ರಾಜನಾದ ಮನ್ಸೂರ್‌ರ ಮಂತ್ರಿಯಾಗಿದ್ದರು. ಇವರನ್ನು ಪರ್ಷಿಯನ್ ಗದ್ಯ ಸಾಹಿತ್ಯದ ಪಿತಾಮಹರೆಂದು ಗುರುತಿಸಲಾಗುತ್ತದೆ. ತ್ವಬರಿ ಎಂಬ ಅರಬಿ ವಿದ್ವಾಂಸನ ಕೃತಿಗಳನ್ನು ಇವರು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದ್ದರು.
ಗಝ್‌ನವಿಯ ಕೊಡುಗೆ: ಕ್ರಿ.ಶ.೯೯೮ರಲ್ಲಿ ಸುಲ್ತಾನ್ ಮಹ್ಮೂದ್ ಗಝ್‌ನವಿಯ ಆಡಳಿತ ಆರಂಭಗೊಂಡಿತು. ತ್ವಬರಿಸ್ತಾನ್, ಶೀಸ್ತಾನ್, ಟ್ರಾನ್‌ಸ್ಸೋಕ್‌ಸಿಯಾನಾ, ಖುರಾಸಾನ್, ಅಫ್ಘಾನಿಸ್ತಾನ್, ಕಾಶ್ಮೀರ್, ಪಂಜಾಬ್, ಉತ್ತರ ಭಾರತದ ಹಲವು ಭಾಗಗಳು ಮೊದಲಾದವು ಮಹ್ಮೂದ್ ಗಝ್‌ನವಿಯ ಸಾಮ್ರಾಜ್ಯಕ್ಕೊಳಪಟ್ಟಿತ್ತು. ಪರ್ಷಿಯನ್ ಭಾಷೆಯ ಬೆಳವಣಿಗೆಗೆ ಮಹ್ಮೂದ್ ಗಝ್‌ನವಿ ನೀಡಿದ ಕೊಡುಗೆ, ಪ್ರೋತ್ಸಾಹ ಅಪಾರವಾದುದು. ಅನ್ಸಾರಿ, ಫಾರೂಖಿ, ಆಝಾದಿ, ಅಸ್‌ಜಾದಿ, ಗಾಝಾನಿ, ಮನುಷಹ್‌ರಿ ಮೊದಲಾದ ಮಹಾಕವಿಗಳು ಮಹ್ಮೂದ್ ಗಝ್‌ನವಿಯ ಸಹಾಯ ಪಡೆದಿದ್ದರು. ಪರ್ಷಿಯನ್ ಸಾಹಿತ್ಯದ ಪ್ರಥಮ ಮಹಾಕಾವ್ಯ ರಚಿಸಿರುವ ಫಿರ್ದೌಸಿ ಮಹ್ಮೂದ್ ಗಝ್‌ನವಿಯ ಸಮಕಾಲೀನರು. ಕ್ರಿ.ಶ. ೯೬೭-೧೦೪೯ರಲ್ಲಿ ಜೀವಿಸಿದ್ದ ಅಬೂ ಸೈಯದ್ ಇಬ್‌ನು ಅಬುಲ್ ಖೈರ್ ಪರ್ಷಿಯನ್ ಭಾಷೆಯಲ್ಲಿ ಆಧ್ಯಾತ್ಮಿಕ ಕವಿತೆ ಬರೆದ ಮೊದಲ ಕವಿ. ಪರ್ಷಿಯನ್ ಸಾಹಿತ್ಯದಲ್ಲಿ ಸೂಫಿ ಸಿದ್ಧಾಂತವನ್ನು ಆಮೂಲಾಗ್ರವಾಗಿ ಮಂಡಿಸಿದ ಪ್ರಥಮ ಕವಿಯೆಂದು ಇವರನ್ನು ಗೌರವಿಸಲಾಗುತ್ತದೆ. ಆದರೆ, ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು; ಈ ಮೊದಲು ಸೂಚಿಸಿದ ರಾಬಿಅಃ ಪರ್ವಾರಿಯ ನಂತರ ಇವರು ಸೂಫಿ ಕವಿತೆಗಳನ್ನು ಬರೆದರು. ಅಬೂ ಸಯ್ಯಿದ್, ತತ್ವಚಿಂತಕ, ವೈದ್ಯ ವಿಜ್ಞಾನದ ಪಿತಾಮಹರಾದ ಇಬ್ನ್ ಸೀನರ ಸಮಕಾಲೀನರು. ಇವರು ವೈಜ್ಞಾನಿಕ ಸಂಗತಿಗಳನ್ನು ಹಾಗೂ ತತ್ವ ಚಿಂತನೆಗಳನ್ನು ತಮ್ಮ ರುಬಾಇ’ಯಲ್ಲಿ ಪ್ರಸ್ತಾಪಿಸಿದ್ದಾರೆ. ಇಬ್ನ್ ಸೀನಾ ಪರ್ಷಿಯನ್ನರಾದರೂ, ಅವರು ಸಂಶೋಧನೆ ನಡೆಸಿರುವುದು ಅರೇಬಿಕ್ ಭಾಷೆಯಲ್ಲಿ. ಮಹ್ಮೂದ್ ಗಝ್‌ನವಿಯ ಮರಣಾನಂತರ ಅವರು ಕಟ್ಟಿ ಬೆಳೆಸಿದ ಸಾಮ್ರಾಜ್ಯ ಛಿದ್ರಗೊಂಡಿತು. ಅವರ ಮೊಮ್ಮಗ ನಿಷಾಪೂರ್‌ನಲ್ಲಿ ಆಡಳಿತ ನಡೆಸುತ್ತಿದ್ದನು. ೧೦೩೮ರಲ್ಲಿ ಸಲ್ಜೂಖ್ ರಾಜ 'ತುಗ್‌ರುಲ್ ಬೈಕ್' ಆಡಳಿತವನ್ನು ವಶಪಡಿಸಿಕೊಂಡನು. ಆ ನಂತರ ಮಹ್ಮೂದ್ ಗಝ್‌ನವಿಯ ಪುತ್ರ ಮೌದೂದಿಯನ್ನು ಸೋಲಿಸಿ ತುಗ್‌ರಲ್ ಬೈಕ್ ಇಡೀ ಪರ್ಷಿಯಾದ ಅಧಿಪತಿಯಾದನು. ತುಗ್‌ರಲ್ ಬೈಕ್‌ನ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಅಲ್ ಅರ್ಸಲಾನ್, ಮಾಲಿಕ್ ಷಾ, ಸಂಜರ್ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು. ಮಹಾಕವಿ ಉಮರ್ ಖಯ್ಯಾಂ ಮಾಲಿಕ್ ಷಾರ ಕಾಲದವರು. ಮಾಲಿಕ್ ಷಾರಿಂದ ಅವರು ಸಾಕಷ್ಟು ಸಹಾಯ ಪಡೆದಿದ್ದಾರೆ. ಇದೇ ಕಾಲದಲ್ಲಿ ಜೀವಿಸಿದ್ದ ಅಬ್ದುಲ್ಲಾ ಅನ್ಸಾರ್(೧೦೦೬-೧೦೮೮) ಅನೇಕ ಕೃತಿಗಳನ್ನು ರಚಿಸಿದರು. ಈ ಕಾಲದಲ್ಲಿಯೇ ಅಬೂ ಮುಹ್‌ಯದ್ದೀನ್ ನಸೀರ್ ಖುಸ್ರೂ ಎಂಬ ಶಿಯಾ ಕವಿ ಜೀವಿಸಿದ್ದರು. ಖುಸ್ರೂ ಕಾವ್ಯ ರಚನೆ ಹಾಗೂ ಸಂಭಾಷಣೆ ಬರೆಯುವುದರಲ್ಲಿ ನಿಪುಣರಾಗಿದ್ದರು. ಅಲಿ(ರ)ರವರ ಕುರಿತು ಇವರು ರಚಿಸಿದ ಕವಿತೆಗಳು ಬಹಳ ಪ್ರಸಿದ್ಧವಾಗಿವೆ. ರೋಷನಿನಾಮ, ಸಅ್‌ದಾದ್ ನಾಮ ಎಂಬೀ ಮಸ್‌ನವಿಗಳು ಹಾಗೂ ಕಾವ್ಯ ಸಂಗ್ರಹವಾದದಿವಾನ್’ ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಸಫರ್‌ನಾಮ ಎಂಬ ಇವರದೇ ಪ್ರವಾಸ ಕಥನ ಗದ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹುದೊಡ್ಡದು. `ನಿಝಾಮುಲ್ ಮುಲ್ಕ್’ ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪ್ರಧಾನಮಂತ್ರಿಯು ಅನೇಕ ಗದ್ಯ ಕೃತಿಗಳನ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿದ್ದಾರೆ. ಒಂಬತ್ತನೇ ಶತಮಾನದ ಕೊನೆಗೆ ಷಾ ಮರ್ದಂಬಿನ್ ಅಬುಲ್ ಖೈರ್ ಎಂಬ ಶ್ರೇಷ್ಟ ವ್ಯಕ್ತಿಯೊಬ್ಬರು ಪಾರ್ಸಿ ಭಾಷೆಯಲ್ಲಿ ಕ್ರಾಂತಿಯ ಅಲೆಯೆಬ್ಬಿಸಿದರು. ವಿವಿಧ ವೈಜ್ಞಾನಿಕ ಶಾಖೆಗಳನ್ನು ಪರ್ಷಿಯನ್ ಸಾಹಿತ್ಯಕ್ಕೆ ಪರಿಚಯಿಸಿದ್ದು ಇವರು.
ಸುಲ್ತಾನ್ ಸಂಜರ್ ಮಹಾಕವಿ ನಿಝಾಮಿ ಅರೂಸಿ ಸಮರ್‌ಖಂದಿ ಸುಲ್ತಾನ್ ಸಂಜರ್‌ರ ಅರಮನೆಯಲ್ಲಿದ್ದುಕೊಂಡು ಕಾವ್ಯ ಕೃಷಿ ಮಾಡುತ್ತಿದ್ದರು. ಇವರು ಅಮೀರ್ ಮುಇಸ್ಸಿಯ ಶಿಷ್ಯರು. ಪರ್ಷಿಯಾದ ಹಲವು ಕಡೆಗಳಿಗೆ ಪ್ರವಾಸ ಮಾಡಿದ ಇವರು ಅಪೂರ್ವ ದಾಖಲೆಗಳನ್ನು ಸಂಗ್ರಹಿಸಿ, ದಾಖಲಿಸಿದರು. ಈ ಇತಿಹಾಸ ಗ್ರಂಥದ ಹೆಸರು ಚಹರ್ ಮಘಾಲೆ’. ಈ ಅಮೂಲ್ಯ ಗ್ರಂಥದಲ್ಲಿ ತತ್ವಜ್ಞಾನಿಗಳು, ವಿಜ್ಞಾನಿಗಳು ಹಾಗೂ ಕವಿಗಳು ಮೊದಲಾದವರ ಚರಿತ್ರೆಗಳಿವೆ. ಪರ್ಷಿಯನ್ ಸಾಹಿತ್ಯ ಭಂಡಾರವಾದಚಹರ್ ಮಘಾಲೆ’ ವಸ್ತುನಿಷ್ಠ ವಿವರಗಳನ್ನೊಳಗೊಂಡ ಬೃಹತ್ ಗ್ರಂಥವಾಗಿದೆ. ಚಹರ್‌ಮಘಾಲೆಯ ಕಾಲಘಟ್ಟದಲ್ಲಿಯೇ ಮಹಾಜ್ಞಾನಿ ಇಮಾಮ್ ಗಝ್ಝಾಲಿ(ರ) ಪರ್ಷಿಯದಲ್ಲಿ ಜೀವಿಸಿದ್ದರು. ಆದರೆ, ಇಮಾಮ್ ಗಝ್ಝಾಲಿ(ರ) ತಮ್ಮ ನೂರಾರು ಗ್ರಂಥಗಳನ್ನು ಅರಬಿ ಭಾಷೆಯಲ್ಲಿ ರಚಿಸಿದ್ದಾರೆ. ಹುಜ್ಜತುಲ್ ಇಸ್ಲಾಮ್ ಅಬೂಹಾಮಿದುಲ್ ಗಝ್ಝಾಲಿ(ರ) ಪರ್ಷಿಯಾ ಭಾಷೆಯಲ್ಲಿ ರಚಿಸಿರುವ ಕೀಮಿಯಾ ಸಆದಃ, ಮಿನ್‌ಹಾಜುಲ್ ಇಬಾದ್ ಮೊದಲಾದ ಕೃತಿಗಳು ಪ್ರಸಿದ್ಧವಾಗಿವೆ. ಸೂಫಿ ಕವಿ ಅಬ್ದುಲ್ ಮಜ್‌ದೂದ್ ಸನಾಈ ಇದೇ ಕಾಲದಲ್ಲಿ ಕಾವ್ಯ ರಚನೆಯಲ್ಲಿ ನಿರತರಾಗಿದ್ದರು. ಫಖ್‌ರುದ್ದೀನ್ ಆಝಾದ್ ಕುರ್ಗಾನಿ ಆನಂತರದ ಕವಿ. ವಿಸ್-ವ-ರಮೀನ್ ಎಂಬ ಪ್ರೇಮಕಾವ್ಯ ಇವರ ಸುಪ್ರಸಿದ್ಧ ಕೃತಿ. ಪ್ರೇಮ ಕಾವ್ಯ ರಚನೆಯಲ್ಲಿ ಇವರು ಮಹಾಕವಿ ನಿಝಾಮಿಯವರಿಗೆ ಪ್ರೇರಣೆ. ವಿಸ್-ವ-ರಮೀನ್ ಕಾವ್ಯವು ನಿಝಾಮಿಯವರ ವಿಶ್ವ ಪ್ರಸಿದ್ಧ ಕೃತಿ ಲೈಲಾವಮಜ್‌ನೂನ್’ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಅಮೀರ್ ಮುಇಸ್ಸಿ ಹಾಗೂ ಅಲಿ ಔಹಾದುದ್ದೀನ್ ಅನ್‌ವರಿ ಸುಲ್ತಾನ್ ಸಂಜರಿಯ ಆಸ್ಥಾನ ಕವಿಗಳಾಗಿದ್ದರು. ಅಮೀರ್ ಮುಇಸ್ಸಿಯವರ ಮೇಲೆ ಸುಲ್ತಾನ್‌ಗೆ ಅಗಾಧ ಸ್ನೇಹವಿತ್ತು. ಒಮ್ಮೆ ಸಂಜರ್ ಬಿಟ್ಟ ಬಾಣವೊಂದು ಗುರಿ ತಪ್ಪಿ ಆ ದಾರಿಯಲ್ಲಿ ಬರುತ್ತಿದ್ದ ಮುಇಸ್ಸಿಯನ್ನು ಇರಿಯಿತು. ಇದರಿಂದ ತೀವ್ರ ರೀತಿಯಲ್ಲಿ ಗಾಯಗೊಂಡ ಮುಇಸ್ಸಿ ೧೧೪೮ರಲ್ಲಿ ಮರಣ ಹೊಂದಿದರು. ಇವರ ದಿವಾನ್(ಕಾವ್ಯ ಸಂಕಲನ) ಹತ್ತು ಸಾವಿರದಷ್ಟು ಹಾಡುಗಳನ್ನು ಒಳಗೊಂಡಿದೆ. ಸಂಜರ್‌ರ ಕಾಲಘಟ್ಟದಲ್ಲಿ ಮಿಹಸ್ತಿ ಎಂಬ ಹೆಸರಿನ ಪ್ರಸಿದ್ಧ ಕವಯತ್ರಿಯೂ ಜೀವಿಸಿದ್ದರು. ಮಿಹಸ್ತಿಯ ಕಾವ್ಯಗಳು ಆಮೋದ ಪ್ರಮೋದ, ನೈತಿಕ ಪ್ರಜ್ಞೆ, ವಾಚಾಳಿತನ ಹೀಗೆ ಅನೇಕ ಭಾವಗಳನ್ನು ಒಳಗೊಂಡಿದೆ. ಇವರು ಸುಲ್ತಾನ್ ಸಂಜರ್ ನ ಪ್ರೇಯಸಿ ಎಂದು ದೌಲತ್ ಷಾ ದಾಖಲಿಸಿದ್ದಾರೆ. ಮಿಹಸ್ತಿಯ ಪ್ರಸಿದ್ಧರುಬಾಇಯ್ಯಾತ್’ ಕಾವ್ಯ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚಕ್ರವರ್ತಿಗಳನ್ನು ಸ್ತುತಿಸಿ ಬರೆಯುವ ಕಾವ್ಯ ಸಂಪ್ರದಾಯವೊಂದು ಪರ್ಷಿಯನ್ ಭಾಷೆಯಲ್ಲೂ ಇತ್ತು. ಈ ಕಾರಣದಿಂದ ಅನೇಕ ಸ್ತ್ರೀಯರು ಕಾವ್ಯ ರಚನೆಯಲ್ಲಿ ತೊಡಗಿಕೊಂಡಿದ್ದರು. ಇವರು ತಮ್ಮ ಇಷ್ಟದ ಚಕ್ರವರ್ತಿಗಳನ್ನು, ವ್ಯಕ್ತಿಗಳನ್ನು ಹಾಡಿಹೊಗಳಿ ಕವನಗಳನ್ನು ಬರೆದರು. ಕೆಲವು ಕವಯತ್ರಿಯರು ಪುರುಷ ಕವಿಗಳಿಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡುವಷ್ಟು ಭಾವ ತೀವ್ರತೆಯಿಂದ ಬರೆಯುತ್ತಿದ್ದರು. ಮಿಹಸ್ತಿ ಇವರಲ್ಲೊಬ್ಬರು. ಇವರಂತೆಯೇ ಇನ್ನೂ ಅನೇಕ ಕವಯತ್ರಿಯರು ಪರ್ಷಿಯನ್ ಸಾಹಿತ್ಯ ದಿಗಂತದಲ್ಲಿ ಮಿಂಚಿ ಮರೆಯಾಗಿದ್ದಾರೆ. ಶಿಹಾಬುದ್ದೀನ್ ಆದಿಬಿ ಸಫೀರ್ ಎಂಬ ಕವಿಯನ್ನು ಖವಾರಿ ಸಾಂಷವಂಶದ ರಾಜನಾದ ಅದ್‌ಸೀಸ್‌ನ ಆಜ್ಞೆಯ ಪ್ರಕಾರ ೧೧೪೫ರಲ್ಲಿ ಆಕ್ಸಸ್ ನದಿಯಲ್ಲಿ ಮುಳುಗಿಸಿ ಕೊಲ್ಲಲಾಯಿತು. ಬುಖಾರದ ಅಮಾಲ್ ರಚಿಸಿದ `ಯುಸೂಫ್ ವ ಝುಲೈಖಾ’ ಎಂಬ ಪ್ರೇಮಕಾವ್ಯ ಜನಪ್ರಿಯವಾಗಿದೆ. ೧೧೪೯ರಲ್ಲಿ ಅವರು ಇಹಲೋಕ ತ್ಯಜಿಸಿದರು. ಅಮೀರ್ ಖುದ್‌ರಾನ್, ಜೌಹರಿ ಸರ್ಕಾರ್, ಅಬ್ದುಲ್‌ವಾಸಿ ಜಬಲಿ, ಹಸನ್ ಗಝ್‌ನವಿ, ಅಬೂಬಕರ್ ಅಶ್‌ರಖಿ, ಸೌಸಾನಿ, ಅಬುಲ್‌ಮುಫಕ್ಕಿರ್ ರಾಝಿ, ಸೋಸಾನಿ, ಮಲಾಮಿ ಮೊದಲಾದ ಕವಿಗಳು ಈ ಕಾಲದಲ್ಲಿ ಕಾವ್ಯೋಪಾಸನೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ, ಷತ್ವ್ರಂಜಿ ಎಂಬ ಕವಿ ಹಾಸ್ಯ ಕವನಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.
ಚಂಗೀಸ್‌ಖಾನನ ದಿಗ್ವಿಜಯ ೧೦೭೭ರಲ್ಲಿ ನಡೆದ ಚೆಂಗೀಸ್‌ಖಾನನ ದಿಗ್ವಿಜಯದೊಂದಿಗೆ ಖವಾರಿಝ್ ಷಾಹಿಗಳ ಅಧಿಪತ್ಯವು ಕೊನೆಗೊಂಡಿತು. ತಾರ್‌ತ್ತಾರಿಗಳ ಆಕ್ರಮಣವು ಪರ್ಷಿಯಾವನ್ನು ನಾಶ ಮಾಡಿತು. ಚೆಂಗೀಸ್‌ಖಾನನ ಮೊಮ್ಮಗ ಹುಲಾಕುಖಾನ್ ೧೨೫೮ರಲ್ಲಿ ಬಾಗ್ದಾದನ್ನು ವಶಪಡಿಸಿಕೊಂಡನು. ಖಲೀಫ ಮುಸ್‌ತಅ‌್‌ಸಿಮ್ ಸೇರಿದಂತೆ ಬಾಗ್ದಾದ್ ನಗರದ ಎಂಟು ಲಕ್ಷ ಜನರನ್ನು ಆತ ವಧಿಸಿದನು. ಖಲೀಫಾ ಮುಸ್ತಅ್‌ಸಿಮ್ ಹತ್ಯೆಯೊಂದಿಗೆ ಅಬ್ಬಾಸಿಯ್ಯಾ ಆಡಳಿತವು ಕೊನೆಗೊಂಡಿತು. ಹೆಸರಿಗೆ ಮಾತ್ರ ಅಲ್ಲಲ್ಲಿ ಕೆಲವು ರಾಜರುಗಳಿದ್ದರು. ಅವರನ್ನು ತಾರ್‌ತ್ತಾರಿಗಳು ಬಹಳ ಬೇಗನೇ ಮುಗಿಸಿಬಿಟ್ಟರು. ಶ್ರೀಮಂತ ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದ್ದ ಬಾಗ್ದಾದ್ ನಗರದಲ್ಲಿ ಅತ್ಯದ್ಭುತ ಗ್ರಂಥಾಲಯಗಳಿದ್ದವು. ತಾರ್‌ತ್ತಾರಿಗಳು ಈ ಎಲ್ಲಾ ಗ್ರಂಥಾಲಯಗಳನ್ನು ನಾಶ ಮಾಡಿದರು. ಇದರಿಂದ ಲಕ್ಷಕ್ಕೂ ಮಿಕ್ಕ ಗ್ರಂಥಗಳು, ಹಸ್ತಪ್ರತಿಗಳು ನಾಶವಾದವು. ಸರಿಸುಮಾರು ಇದೇ ಕಾಲದಲ್ಲಿ ಮಹಾಕವಿ ಖಾಖಾನಿ ಜೀವಿಸಿದ್ದರು. ಅವರ ನಂತರ ನಿಝಾಮೀ ಕಾವ್ಯ ರಚನೆಯಲ್ಲಿ ತೊಡಿಕೊಂಡಿದ್ದರು. ಇದೇ ಕಾಲದಲ್ಲಿ ಪ್ರಸಿದ್ಧಿ ಪಡೆದ ಇನ್ನೋರ್ವ ಕವಿ ಸಾಹಿರುದ್ದೀನ್ ತಾಹಿರ್ ಬಿನ್ ಮುಹಮ್ಮದ್ ಫರ್ಯಾಬಿಯಾರ್(೧೧೫೫-೧೨೦೨) ಕವಿತೆ ರಚನೆ ಮಾಡುತ್ತಿದ್ದರು. ಇವರಿಗೆ ಅತಾಬೆಕ್ ನಸ್‌ರುದ್ದೀನ್ ಅಬೂಬಕರ್ ರಾಜ ಆಶ್ರಯ ನೀಡಿದ್ದನು. ಮುಜ್‌ರುದ್ದೀನ್ ಫೈಲಖಾನಿ, ಷಾಫರ್, ಖಿರ್‌ಮಾಜ್ ಇಸ್‌ಫಹಾನಿ ಮೊದಲಾದವರು ಮಹಾಕವಿಗಳಾದ ಖಾಖಾನಿ, ಅನ್ವರಿ, ನಿಝಾಮಿಯಂತಹವರ ಸಮಕಾಲೀನರಾಗಿದ್ದರು. ಇವರ ಬಳಿಕ ಫರೀದುದ್ದೀನ್ ಅತ್ತಾರ್, ಇಮಾಮ್ ಸಾಅದ್, ಮೌಲಾನ ರೂಮಿ ಕಾವ್ಯೋಪಾಸನೆಯಲ್ಲಿ ತೊಡಗಿಕೊಂಡರು. ಈ ಕಾಲದಲ್ಲಿ ಗಝಲ್‌ಗಳಿಗೆ ಪ್ರಸಿದ್ಧರಾದ ಜಮಾಲುದ್ದೀನ್ ಅಬ್ದರ‍್ರಝಾಕ್, ಷರಫುದ್ದೀನ್, ಷಾಫರ್‌ವಿ ಎಂಬಿವರು, ಹಾಗೆಯೇ ಹಾಸ್ಯಕವಿತೆಗಳಿಗೆ ಪ್ರಸಿದ್ಧರಾದ ಕಮಾಲುದ್ದೀನ್, ಇಸ್ಮಾಈಲ್ ಷಾಫುರ್ ನಿಷಾಪುರಿ, ಝುಲ್ಫಿಕಾರ್ ಷಿರ್‌ವಾನಿ ಎಂಬಿವರು, ಅಸೀರುದ್ದೀನ್ ಅಕ್‌ಸಿಕಿ, ಫಲಖಿ, ಸೈಫುದ್ದೀನ್ ಅಸ್‌ಫರಂಕಿ ಮೊದಲಾದ ದಿವಾನ್ ಕವಿಗಳು, ಮೌಲಾನ ಇಮಾಮಿ ಹಿರತಿ ಮೊದಲಾದ ತತ್ವಚಿಂತಕರಾದ ಕವಿಗಳು ಜೀವಿಸಿದ್ದರು. ನೀತಿ ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಕೃತಿಗಳು ಈ ಕಾಲದಲ್ಲಿ ರಚಿಸಲ್ಪಟ್ಟವು. ಖಸ್ವೀದ, ಗಝಲ್‌ಗಳನ್ನು ರಚಿಸಿ ಹೆಸರುವಾಸಿಯಾದ ಅನೇಕ ಕವಿಗಳು ಆ ಕಾಲದ ಕೊಡುಗೆಯಾಗಿದ್ದರು. ಪರ್ಷಿಯನ್ ಕವಿಗಳಿಗೆ ಸಂಬಂಧಿಸಿದ ವಿವರಗಳಿರುವ ‘ಲುಬಾಬುಲ್ ಅಲ್‌ಬಾಬ್’ ಈ ಕಾಲದಲ್ಲೇ ಪ್ರಕಟಗೊಂಡಿತ್ತು.
ಮಂಗೋಲಿಯನ್ನರ ಪ್ರಭಾವ ನಂತರ ಮಂಗೋಲಿಯನ್ನರು ದಾಳಿ ನಡೆಸಿದರು. ಮಂಗೋಲಿಯನ್ನರ ಪ್ರಥಮ ಚಕ್ರವರ್ತಿ ಹುಲಾಕುಖಾನ್ ಆಝರ್‌ಬೈಜಾನ್‌ನ ಮರಗವನ್ನು ತನ್ನ ರಾಜಧಾನಿಯಾಗಿ ಘೋಷಿಸಿದನು. ಹುಲಾಕುಖಾನ್‌ನ ನಂತರ ಅವನ ಪುತ್ರ ಅಬಾಕಾಖಾನ್ ೧೨೬೫ರಲ್ಲಿ ಅಧಿಕಾರ ವಹಿಸಿಕೊಂಡನು. ಅಬಾಕಾಖಾನ್‌ನ ತಮ್ಮ ನಿಕೋತಾರ್ ಅಹ್ಮದ್ ಇಸ್ಲಾಮ್ ಧರ್ಮ ಸ್ವೀಕರಿಸಿದನು. ಅಬಾಕಾಖಾನ್ ನ ನಂತರ ಅಧಿಕಾರ ಹಿಡಿದ ನಿಕೋತಾರ್ ಅಹ್ಮದ್ ಇಸ್ಲಾಮಿನ ಆದರ್ಶಗಳಿಗೆ ತಕ್ಕಂತೆ ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದನು. ೧೨೮೪ರಲ್ಲಿ ನಿಕೋತಾರ್ ಕೊಲೆಯಾದನು. ಆ ನಂತರ ಅವನ ಪುತ್ರ ಅರ್ಕುನ್ ಖಾನ್ ಹಾಗೂ ಕೈಕಾತುಖಾನ್ ಪರ್ಷಿಯವನ್ನು ಆಳಿದರು. ಅರ್ಕುನ್‌ಖಾನ್‌ನ ನಂತರ ಅವನ ಪುತ್ರ ಖಾಸಾನ್ ಮುಹಮ್ಮದ್ ಅಧಿಕಾರಕ್ಕೇರಿದನು. ಖಾಸಾನ್ ಮುಹಮ್ಮದ್ ಇಸ್ಲಾಮ್ ಧರ್ಮವನ್ನು ತನ್ನ ಸಾಮ್ರಾಜ್ಯದ ಅಧಿಕೃತ ಧರ್ಮವಾಗಿ ಅಂಗೀಕರಿಸಿದ ಮೊದಲ ಮಂಗೋಲಿಯನ್ ಅರಸ. ಈತನ ಕಾರಣದಿಂದ ಸಾವಿರಾರು ಮಂಗೋಲಿಯನ್ನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ೧೩೦೪ರಲ್ಲಿ ಈತ ಮರಣ ಹೊಂದಿದನು. ಅದರೊಂದಿಗೆ ಹುಲಾಕುಖಾನ್ ವಂಶದ ಅಧಿಪತ್ಯವೂ ಕೊನೆಗೊಂಡಿತು. ಮಂಗೋಲಿಯನ್ನರು ಪರ್ಷಿಯವನ್ನು ಆಳುತ್ತಿದ್ದ ಸಂದರ್ಭದಲ್ಲಿ ಮಹಾಕವಿಗಳಾದ ಹಕೀಂ ನಸಾಈ, ಫರೀದುದ್ದೀನ್ ಅತ್ತಾರ್, ಸುಹ್‌ರವರ್ದಿ, ರೂಮಿ, ನಝೀರ್, ಖುಸ್ರೂ ಮೊದಲಾದ ವರ `ಆತ್ಮಜ್ಞಾನ’ಕ್ಕೆ ಸಂಬಂಧಿಸಿದ ಕೃತಿಗಳು ಪರ್ಷಿಯದಾದ್ಯಂತ ವ್ಯಾಪಕ ಪ್ರಚಾರ ಪಡೆದವು. ಸೂಫಿ ಚಿಂತನೆಗಳು ಹಾಗೂ ಇನ್ನಿತರ ಜ್ಞಾನಗಳನ್ನೊಳಗೊಂಡ ಗದ್ಯ ಕೃತಿಗಳು ಈ ಕಾಲದಲ್ಲಿ ಬೆಳಕು ಕಂಡವು. ಅಮೀರ್ ಖುಸ್ರೂ ಈ ಕಾಲದಲ್ಲಿ ಭಾರತದಲ್ಲಿ ಜೀವಿಸಿದ್ದರು. ಅಲ್ಲಾಮಾ ಕುತುಬುದ್ದೀನ್ ತಬ್‌ರೀಸಿ, ಅವ್‌ಹದಿ, ಸಲ್ಮಾನ್ ಸಾವಾಜಿ, ಮೌಲಾನಾ ನಸೀರಿ ಬುಖಾರಿ, ಉಬೈದ್ ಸಖಾನಿ ಮೊದಲಾದವರು ಈ ಕಾಲದ ಪ್ರಮುಖ ಕವಿಗಳಾಗಿದ್ದರು. ಆ ನಂತರ ಮಹಾಕವಿ ಹಾಫಿಝ್ ರಂಗಪ್ರವೇಶಿಸಿದರು. ಕಮಾಲುದ್ದೀನ್ ಖುಸಾಂತಿ, ರಫಿಉದ್ದೀನ್ ಲುಬ್‌ನಾನಿ, ಫರೀದಿ ಅಹ್‌ವಾಲ್, ಅಸೂರುದ್ದೀನ್ ಅಯ್‌ದಾನಿ, ಬುರ್‌ಬಹಾವ್ ಜಾಮಿ, ಅವ್‌ಹಾರುದ್ದೀನ್ ಕಿರ್ಮಾನಿ, ಅಬೂಸೈಯದ್ ಫೈಝಾಲಿ, ಕುತುಬುದ್ದೀನ್ ಶೀರಾಸಿ, ಹಸನ್ ಸಂಜರಿ, ಮರ್ಗಾ ಔಹಾದುದ್ದೀನ್, ಅಮೀರ್ ಮಹ್‌ಮೂದ್ ಇಬ್‌ನುಯಾಮೀನ್, ಇಮಾದ್ ಬಾಖಿಹ್, ಬುರಂತಾಖ್ ಅಸ್ಮತುಲ್ಲಾ ಬುಖಾರಿ, ನಿಝಾರಿ, ಮಹ್‌ಮೂದ್ ಷಬಿಸ್ತಾರಿ, ಅಝ್ಝಾರ್, ಹಕೀಂ ಜಲಾಲ್ ಷಿರ್‌ವಾನಿ, ಕಾಷಿಮುಲ್ಲಾ, ಮಹ್‌ದಿಖಾನ್ ಮಿರ್ಝಾ ಎಂಬೀ ಕವಿಗಳು ಸಹ ಪರ್ಷಿಯನ್ ಕಾವ್ಯ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ತಿಮೂರ್‌ನ ಆಗಮನ: ಕ್ರಿ.ಶ.೧೩೯೫ರಲ್ಲಿ ಪರ್ಷಿಯ ತಿಮೂರ್‌ನ ಅಧಿಪತ್ಯಕ್ಕೊಳಪಟ್ಟಿತು. ತಿಮೂರ್‌ನ ಪುತ್ರ ಷಾರುಖ್(೧೪೦೮) ಶೈಕ್ಷಣಿಕ ಅಭಿವೃದ್ಧಿಗೆ ಗಮನಹರಿಸಿದ್ದನು. ಷಾರುಖ್‌ನ ನಂತರ ಆತನ ಪುತ್ರ ಉಲೂಗ್‌ಬೇಕ್, ನಂತರ ಮೊಮ್ಮಗ ಅಬ್ದುಲ್ ಲತ್ವೀಫ್ ನಂತರ ಬಾಬರ್(೧೪೫೦-೧೪೫೭) ಅಧಿಕಾರ ನಡೆಸಿದ ನಂತರ ಅಧಿಪತ್ಯವು ಉಮರ್ ಶೈಖ್ ಕೈವಶವಾಯಿತು. ಈತನ ಹನ್ನೊಂದನೇ ಪುತ್ರನೇ ಭಾರತದ ಮೇಲೆ ಆಕ್ರಮಣ ನಡೆಸಿ ವಶಪಡಿಸಿಕೊಂಡ ಬಾಬರನ ತಂದೆ. ಬಾಬರ್‌ನ ತಂದೆಯ ಸಮಕಾಲೀನರಾದ ಕವಿಗಳಲ್ಲಿ ಅಮೀರ್ ಅಲಿ ಷಾ ನಿಝಾಮುದ್ದೀನ್ ಪ್ರಸಿದ್ಧರು. ಪರ್ಷಿಯನ್ ಭಾಷೆಯಲ್ಲಿ ಇಪ್ಪತ್ತು ಕೃತಿಗಳನ್ನು ರಚಿಸಿರುವ ನಿಝಾಮುದ್ದೀನ್ ತುರ್ಕಿ ಭಾಷೆಯಲ್ಲೂ ಕಾವ್ಯ ರಚನೆ ಮಾಡಿದ್ದಾರೆ. ಆನಂತರ ಬಂದ ಮುಹಮ್ಮದ್ ಬಿನ್ ಕವಂದ್‌ಷಾ(೧೪೩೩-೧೪೫೭) ಪ್ರಮುಖ ಬರಹಗಾರರಾಗಿದ್ದರು. ಇವರ ಉತ್ಕೃಷ್ಟ ಕೃತಿಯಾದ ‘ರೌಝತ್ತುಸ್ಸಫಾ’ ಲೋಕ ಚರಿತ್ರೆ ಗ್ರಂಥವಾಗಿದೆ. ಏಳು ಭಾಗಗಳನ್ನು ಹೊಂದಿರುವ ಈ ಕೃತಿಯು ವಸ್ತುನಿಷ್ಠವೂ, ಅಧಿಕೃತವೂ ಆಗಿದೆ. ಈ ಕಾಲದಲ್ಲೇ ಪ್ರಸಿದ್ಧ ಪರ್ಷಿಯನ್ ಸಾಹಿತ್ಯ ಸಂಶೋಧಕ ದೌಲತ್ತ್ ಷಾ ಜೀವಿಸಿದ್ದರು. ಇವರು ಬರೆದಿರುವ ‘ತದ್ಸ್ಕಿರಾಯೇ ದೌಲತ್ ಷಾ’ ಕೃತಿಯಲ್ಲಿ ಹತ್ತು ಅರಬಿ ಕವಿಗಳ ಹಾಗೂ ನೂರ ಮೂವತ್ತು ಪರ್ಷಿಯನ್ ಕವಿಗಳ ಚರಿತ್ರೆ ಇದೆ. ೧೪೮೫ರಲ್ಲಿ ದೌಲತ್ ಷಾ ನಿಧನ ಹೊಂದಿದರು. ೧೪೧೪ರಲ್ಲಿ ಪರ್ಷಿಯನ್ ಕಾವ್ಯ ಸಾಹಿತ್ಯ ಅತ್ಯುನ್ನತ ಮಟ್ಟಕ್ಕೆ ಬೆಳೆಯಿತು. ಸಾಹಿತ್ಯ ರಂಗಕ್ಕೆ ಮಹಾಕವಿ ಜಾಮಿಯ ಪ್ರವೇಶದೊಂದಿಗೆ ಅದು ಇನ್ನಷ್ಟು ಸ್ಪಷ್ಟವಾಯಿತು. ಅಮೀರ್ ಅತಾಉಲ್ಲಾ(ಜಮಾಲ್ ಹುಸೈನಿ), ಸುಲ್ತಾನ್ ಮೀರ್‌ಸಾ(ಅಬ್ದುಲ್ ಖಾಝಿ), ಮೌಲಾನ ಹುಸೈನ್‌ವೈಸ್ ಕಾಶಿಫಿ, ಷರಫುದ್ದೀನ್ ಅಲಿಯಸ್‌ದಿ, ಮುಲ್ಲಾ ಜಲಾಲುದ್ದೀನ್ ತವ್ವಾನಿ, ಅಬ್ದರ‍್ರಝಾಕ್, ಸೈಫುದ್ದೀನ್‌ಹಾಜಿ ಬಿನ್ ನಿಝಾಮುಲ್ ಫಝ್‌ಲಿ, ಶಂಸುದ್ದೀನ್ ಕಾತ್ತಿಬಿ, ಖಾಸಿಂ ಅನ್‌ವರ್, ಅಮೀನ್ ಯಾಮಿನುದ್ದೀನ್ ಯಹ್ಯಾ ನೈಷಾಪೂರಿ, ರಿಯಾಸಿ, ಹಿರತಿ, ಖಾಜಾಮಸ್‌ಊದ್, ಮೌಲಾನ ಹೈರಾನಾ ಮೊದಲಾದ ಪ್ರಬುದ್ಧ ಕವಿಗಳು ಹಾಗೂ ಗ್ರಂಥ ರಚನೆಕಾರರು ಪರ್ಷಿಯನ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಭಾರತದಲ್ಲಿ ಮುಸ್ಲಿಮ್ ಅರಸರ ಆಡಳಿತ ಕಾಲದಲ್ಲಿ ಪರ್ಷಿಯನ್ ಭಾಷೆ ಪ್ರಮುಖ ಪಟ್ಟ ಅಲಂಕರಿಸಿತ್ತು. ಭಾಷೆಗಳಲ್ಲೇ ರಾಜನಾಗಿ ಮೆರೆಯಿತು. ತಕ್ಕ ಗೌರವಾದರಗಳನ್ನು ಪಡೆಯಿತು. ಅತ್ಯಂತ ಸುಂದರವಾದ ಈ ಭಾಷೆ ಭಾರತದ ಅಧಿಕೃತ ಭಾಷೆಯಾಗಿ ಮಾರ್ಪಟ್ಟಿತು. ಮುಸ್ಲಿಮ್ ರಾಜರುಗಳ ಆಸ್ಥಾನಗಳಲ್ಲಿ ಅನೇಕ ಕವಿಗಳಿರುತ್ತಿದ್ದರು. ಆ ಕಾಲದಲ್ಲಿ ಬಳಕೆಯಲ್ಲಿದ್ದ ಉರ್ದು ಭಾಷೆಯನ್ನು ರೆಕ್ತಾ’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಪಾರ್ಸಿ ಹಾಗೂ ರೆಕ್ತಾ ಭಾಷೆಯನ್ನು ಮಿಶ್ರಣಗೊಳಿಸಿ ಗ್ರಂಥಗಳನ್ನು ರಚಿಸಿದ ಅನೇಕ ಸಾಹಿತಿಗಳು ಭಾರತದಲ್ಲಿದ್ದಾರೆ. ಪರ್ಷಿಯನ್ ಭಾಷೆಯ ಬೆಳವಣಿಗೆಗೆ ದೆಹಲಿ ಸುಲ್ತಾನರಂತೆಯೇ ಇತರ ಪ್ರಾಂತೀಯ ರಾಜರುಗಳು ಸಹ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬದಾಯೂನಿ, ಮುಲ್ಲಾಸಾಹೂರಿ, ದರ್ಷಿಸಿ, ಅಬುಲ್ ಫರಜ್‌ರೂನಿ, ಮಾಸೂದ್ ಸಅದ್, ಅಮೀರ್ ರುಹಾನಿ, ಶಿಹಾಬೇ ಮುದ್‌ಮಿರಾ, ಅಮೀರ್ ಅರ್ಸಲಾನ್ ಕಾತಿಬ್, ಶಂಸುದ್ದೀನ್ ತಬೀರ್, ಅಮೀರ್ ಹಸನ್ ಮುಅಯ್ಯದ್ ಜಾಮಿ, ಹಾಜಿ ಮುಖೀತ್ತ್ ಹಾನ್‌ಸವಿ, ಬಾಖಿಕಾತಿಬ್, ಸಅದ್‌ಮಂತಿಖಿ, ಜಮಾಲುದ್ದೀನ್ ಉರ್‌ಫಿ ಮೊದಲಾದವರು ಭಾರತದಲ್ಲಿದ್ದ ಪರ್ಷಿಯನ್ ಕವಿಗಳಲ್ಲಿ ಪ್ರಮುಖರು. ಅಮೀರ್ ಖುಸ್ರೂ, ಶೈಖ್ ಫೈಝಿ- ಮೊದಲಾದ ಭಾರತೀಯರಾದ ಪರ್ಷಿಯನ್ ಮಹಾಕವಿಗಳ ಬಗ್ಗೆ ಈ ಕೃತಿಯಲ್ಲಿ ಅಧ್ಯಾಯಗಳಿವೆ. ಭಾರತದ ಪರ್ಷಿಯನ್ ಸಾಹಿತಿಗಳು ಆ ಭಾಷೆಗೆ ನೀಡಿದ ಕೊಡುಗೆಗಳು ಪ್ರಶಂಸಾರ್ಹವಾಗಿದೆ. ಬದಾಯೂನಿಯಮುಂತಖಬುತ್ತವಾರೀಖ್ ಲುಥ್‌ಫ್’, ಅಲಿಬೋಗ್‌ನ ಅದಿಸ್ಕತ್ತಾಯೇ ಅಸರ್’, ಅಮೀನೇರಾಝಿಯಪಫ್‌ತೇ ಇಕ್‌ಲಂ’, ಹಾಲಿಯ ತದ್‌ಕೀರತುಲ್ ಮುಆಸಿರೀನ್’, ಷೇರ್‌ಖಾನ್ ಲೋದಿಯಮಿರಾದುಲ್‌ಖಯಾಲ್’ ಮೊದಲಾದ ಕೃತಿಗಳು ಭಾರತದ ಪರ್ಷಿಯನ್ ಮಹಾಕವಿಗಳು ಲೋಕಕ್ಕೆ ನೀಡಿದ ಕೊಡುಗೆಗಳಾಗಿವೆ. ಮಹಾಕವಿ ಜಾಮಿಯ ಕಾಲದ ನಂತರ ಪರ್ಷಿಯನ್ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡಿತು ಎನ್ನಬಹುದು. ಆನಂತರ ಪರ್ಷಿಯನ್ ಸಾಹಿತ್ಯವೆಂಬ ಮಹಾನದಿಯಲ್ಲಿ ಹೊಸ ನೀರು ಹರಿಯಲಿಲ್ಲ. ಸಾವಿರ ವರ್ಷಗಳ ಕಾಲ ಅತ್ಯುದ್ಭುತ ಸಾಹಿತ್ಯ ಕೃತಿಗಳಿಂದ ಶ್ರೀಮಂತಗೊಂಡಿದ್ದ ಪರ್ಷಿಯನ್ ಭಾಷೆಯ ಬೆಳವಣಿಗೆ ನಿಂತ ನೀರಿನಂತಾಯಿತು. ಆದರೆ, ನಮ್ಮ ಕಾಲದಲ್ಲಿ ಒಂದು ಅಪವಾದವಿತ್ತು. ಈ ಕಾಲದಲ್ಲಿ ಪರ್ಷಿಯನ್ ಸಾಹಿತ್ಯವನ್ನು ವಿಶ್ವ ಸಾಹಿತ್ಯದೆಡೆಗೆ ಕೈಹಿಡಿದು ನಡೆಸಿದ ಮಹಾಕವಿ ಅಲ್ಲಾಮ ಇಕ್ಬಾಲ್ ಇದ್ದರು. ಇಕ್ಬಾಲ್‌ರ ಶ್ರೇಷ್ಠ ಕೃತಿಗಳು ಪರ್ಷಿಯನ್ ಸಾಹಿತ್ಯಕ್ಕೆ ಗತವೈಭವವನ್ನು ಮರಳಿ ತಂದುಕೊಟ್ಟಿತು. ಇಕ್ಬಾಲ್‌ರ ನಂತರ ಅಂತಹ ಇನ್ನೋರ್ವ ಕವಿ ಪರ್ಷಿಯನ್ ಭಾಷೆಯಲ್ಲಿ ಹುಟ್ಟಿಲ್ಲ. ಪರ್ಷಿಯನ್ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡರೂ, ಅದರ ಗತವೈಭವ ಇನ್ನೂ ಹಾಗೆಯೇ ಇದೆ. ಆ ಭಾಷೆಯ ಶ್ರೇಷ್ಠ ಸಾಹಿತ್ಯದೆಡೆಗೆ ಆಕರ್ಷಿತರಾಗಿ, ಆಮೂಲಾಗ್ರ ಅಧ್ಯಯನ ಮಾಡಿ, ವಿಶ್ವದಾದ್ಯಂತ ಆ ಭಾಷೆಗೆ ತಕ್ಕ ಮನ್ನಣೆ ದೊರಕಿಸಿಕೊಟ್ಟ ಅನೇಕ ಪಾಶ್ಚಾತ್ಯ ಸಾಹಿತಿಗಳಿದ್ದಾರೆ. ಪ್ರೊಫೆಸರ್ ನಿಕಲ್‌ಸನ್, ಇ.ಜಿ.ಬ್ರೌನ್, ಆರ್ಬರಿ ಮೊದಲಾದವರು ಪರ್ಷಿಯನ್ ಭಾಷೆಯನ್ನು ಕಲಿತು, ಅದರ ಸಾಹಿತ್ಯಿಕ ಸಾರ್ವಭೌಮತೆಯನ್ನು ಪಾಶ್ಚಾತ್ಯರಿಗೆ ಪರಿಚಯಿಸಿದರು. ಅಲ್ಲಿಯ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಪೌರಸ್ತ್ಯ ಸಾಹಿತಿಗಳು ಸಹ ಪರ್ಷಿಯನ್ ಸಾಹಿತ್ಯದೆಡೆಗೆ ಆಕರ್ಷಿತರಾಗಿ, ಉರ್ದು ಹಾಗೂ ಇಂಗ್ಲೀಷಿನ ಸಹಾಯದೊಂದಿಗೆ ಅಲ್ಲಿಯ ಶ್ರೇಷ್ಠ ಕೃತಿಗಳನ್ನು ತಮ್ಮ ಭಾಷೆಗೆ ಅನುವಾದಿಸುತ್ತಿದ್ದಾರೆ. ಪರ್ಷಿಯಾದ ಹೆಚ್ಚಿನ ಮಹಾಕವಿಗಳು ರಾಜಾಶ್ರಯದಲ್ಲಿ ಬೆಳೆದವರು. ಆದರೆ, ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಹೊಸ ಸಾಹಿತ್ಯ ಕ್ರಾಂತಿ ಆಯಿತು. ಧಾರ್ಮಿಕ ಸಾಹಿತ್ಯಗಳ ಪ್ರಕಟನೆಯಲ್ಲಿ ಮುಂಚೂಣಿಯಲ್ಲಿದ್ದ ಇರಾನ್‌ನಲ್ಲಿ ಖುಮೈನಿಯ ಇಸ್ಲಾಮಿಕ್ ಕ್ರಾಂತಿಯು ಇತರ ಎಲ್ಲಾ ಕ್ಷೇತ್ರಗಳಂತೆಯೇ ಸಾಹಿತ್ಯದಲ್ಲೂ ಶುದ್ಧೀಕರಣ ಚಳವಳಿಯನ್ನು ಆರಂಭಿಸಿತು. ಅರೇಬಿಕ್ ಸಾಹಿತ್ಯದೊಂದಿಗೆ ಸ್ಪರ್ಧೆಗೆ ಇಳಿಯುವಷ್ಟು ಅನೇಕ ಶ್ರೇಷ್ಠ ಇಸ್ಲಾಮಿಕ್ ಸಾಹಿತ್ಯವನ್ನು ಲೋಕಕ್ಕೆ ಅರ್ಪಿಸಿದ ಕೀರ್ತಿ ಪರ್ಷಿಯನ್ ಭಾಷೆಯದ್ದಾಗಿದೆ. ಇಸ್ಲಾಮಿನ ಬೆಳವಣಿಗೆಯೊಂದಿಗೆ ಪರ್ಷಿಯನ್ ಭಾಷಾ ಸಾಹಿತ್ಯದಲ್ಲಿ ಆದ ಅಪೂರ್ವ ಬದಲಾವಣೆಯನ್ನು ಮೊದಲೇ ಸೂಚಿಸಿದ್ದೇನೆ. ಇಸ್ಲಾಮಿನ ಮಾರ್ಗದಲ್ಲಿಯೇ ಅಲ್ಲಿ ಅನೇಕ ಅತಿರಥ ಮಹಾರಥ ಸಾಹಿತಿಗಳು ಭಾಷೆಯ ಬೀಜವನ್ನು ಬಿತ್ತಿದರು. ಅದು ಬೆಳೆದು ಹೆಮ್ಮರವಾಯಿತು. ಆದ್ದರಿಂದ ಪರ್ಷಿಯದಾದ್ಯಂತ ಹರಡಿದ್ದ ಇಸ್ಲಾಮಿನ ತಿರುಳನ್ನು ಆ ನಾಡನ್ನು ಆಳಿದ ಯಾವುದೇ ರಾಜನಿಗೂ ನಾಶ ಮಾಡಲು ಸಾಧ್ಯವಾಗಲಿಲ್ಲ. ಆ ವಾಸ್ತವವನ್ನು ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿ ಸ್ಪಷ್ಟಪಡಿಸಿತು.
ಮಲಯಾಳಂ ಮೂಲ: ಪೋಕರ್ ಕಡಲುಂಡಿ ಕನ್ನಡಕ್ಕೆ: ಸ್ವಾಲಿಹ್ ತೋಡಾರು
ಕ್ರೀಡಾ ಲೋಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರತಿಭೆಯಾಗಿದ್ದರು ಮುಹಮ್ಮದ್ ಅಲಿ ಯವರು. ಅಂದಿನ ಅಜೇಯ ಬಾಕ್ಸರ್ ಆಗಿದ್ದ ಸೋನಿ ಲಿಸ್ಟನ್ ನನ್ನು 1964 ರಲ್ಲಿ ಸೋಲಿಸಿ ರಿಂಗ್ ನೊಳಗೆ ಭರ್ಜರಿ ಎಂಟ್ರಿ ಕೊಟ್ಟರು. ಆ ಮೂಲಕ ಹಾಲಿ ಹೆವಿವೇಟ್ ಚಾಂಪಿಯನ್ ನನ್ನು ಸೋಲಿಸಿದ ಅತಿ ಕಿರಿಯ ಬಾಕ್ಸರ್ ಎಂಬ ಗರಿಮೆಗೆ ಪಾತ್ರರಾದರು. ಜೋ ಲೂಯಿಸ್ ಮತ್ತು ಸುಗರ್ ರೇ ರಾಬಿನ್ಸನ್ ಅವರ ಸಾಲಿನಲ್ಲಿ ‘ಯಶಸ್ವಿ ಬಾಕ್ಸರ್’ ಎಂದು ಕ್ರೀಡಾ ಕ್ಷೇತ್ರವು ಅವರನ್ನು ಗುರುತಿಸಿತು. ಮೂರು ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಪಡೆಯುವ ಮೂಲಕ ಅವರು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು.
ಆಗಿನ ಕಾಲದ ಅವರ ಬಾಕ್ಸಿಂಗ್ ಶೈಲಿಯು ತೀರ ಅಸಾಂಪ್ರದಾಯಿಕ (Unorthodox) ಹಾಗೂ ಒಂದು ರೀತಿಯಲ್ಲಿ ಅಪ್ಪಟ ಬಾಕ್ಸರ್ ಗಳ ಅವಹೇಳನದಂತಿತ್ತು. ಆದಾಗ್ಯೂ ಅವರ ವೇಗ ಮತ್ತು ಶಕ್ತಿಯುತ ಪಂಚ್ ಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು. ಆದ್ದರಿಂದಲೇ ಕ್ರೀಡಾ ವಿಶ್ಲೇಷಕರು ಅಲಿಯವರನ್ನು ‘ಸಾರ್ವಕಾಲಿಕ ಬಾಕ್ಸರ್’ ಎಂದು ಬಣ್ಣಿಸಿದ್ದರು. ರಿಂಗ್ ಒಳಗೆ ಅವರು ತೋರಿದ ಪ್ರದರ್ಶನದ ಕಾರಣದಿಂದಾಗಿ ‘ಸ್ಪೋರ್ಟ್ಸ್ ಇಲಸ್ಟ್ರೇಟೆಡ್’ (Sports Illustrated) ಎಂಬ ಮ್ಯಾಗಝೀನ್ ‘ಶತಮಾನದ ಕ್ರೀಡಾಪಟು’ ಎಂದು ವಿಶ್ಲೇಷಿಸಿತ್ತು. ಆಫ್ ಫೀಲ್ಡ್ ನಲ್ಲಿ ಅವರ ಆಕರ್ಷಕ ವ್ಯಕ್ತಿತ್ವವು ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಿತು ಎಂದೇ ಹೇಳಬಹುದು.
ಅವರು ಕೊಡುತ್ತಿದ್ದ ಮುಷ್ಟಿ ಪ್ರಹಾರಗಳಿಗಿಂತ ಹೆಚ್ಚಿನ ವೇಗವು ಅವರ ನಾಲಿಗೆ ಮತ್ತು ಮನಸ್ಸಿಗಿತ್ತು. ಅಮೆರಿಕದ ಮುಖ್ಯವಾಹಿನಿಗೆ ಕಹಿಯಾಗಿದ್ದ ಕೆಲವು ಸತ್ಯಗಳು ಓರ್ವ ಕರಿಯ ಯುವಕನ ಬಾಯಿಯಿಂದ ಹೊರಬೀಳುವುದನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ವೀಕ್ಷಿಸಿತು. ಆಫ್ರೋ- ಅಮೆರಿಕನ್ನರ ಅಭಿಮಾನದ ಸಂಕೇತವಾಗಿ ಅಲಿಯವರು ಬದಲಾದರು. ಮಾತ್ರವಲ್ಲದೆ, ಅವರು ಜನರ ನಡುವೆ ‘ಪೀಪಲ್ಸ್ ಚಾಂಪಿಯನ್’ ಎಂದು ಪ್ರಸಿದ್ಧರಾದರು. ಏಕಕಾಲದಲ್ಲಿ ಇಸ್ಲಾಮಿನ ಆದರ್ಶ ಮತ್ತು ಕಪ್ಪು ವರ್ಣದ ಶಕ್ತಿಯನ್ನು ಅಮೆರಿಕ ಹಾಗೂ ಇಡೀ ವಿಶ್ವಕ್ಕೆ ತಿಳಿಸಿದ ದಂತಕಥೆಯಾಗಿದ್ದರು ಅವರು.
1964 ರ ಫೆಬ್ರವರಿ 25 ರಂದು ಲಿಸ್ಟನ್ ನನ್ನು ಸೋಲಿಸಿದ ನಂತರ ಕಾಷಿಯಸ್ ಕ್ಲೇ ಎಂಬ ತನ್ನ ಹೆಸರನ್ನು ‘ಮುಹಮ್ಮದ್ ಅಲಿ’ ಎಂದು ಬದಲಾಯಿಸಿದ್ದಾಗಿ ಘೋಷಿಸಿದರು. ಆದರೆ ಬಹುತೇಕ ಕ್ರೀಡಾ ವರದಿಗಾರರು, ಅವರ ಪ್ರತಿಸ್ಪರ್ಧಿಗಳು ಅವರನ್ನು ಹೊಸ ಹೆಸರಿನಿಂದ ಕರೆಯಲು ಇಷ್ಟಪಡಲಿಲ್ಲ. ಅವರು ಕಾಷಿಯಸ್ ಕ್ಲೇ ಎಂದೇ ಕರೆಯುತ್ತಿದ್ದರು. “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಅರಿವು ನನಗಿದೆ. ಸತ್ಯ ಏನೆಂದು ನನಗೆ ತಿಳಿದಿದೆ. ನಿಮ್ಮ ಹಾದಿ ನನಗೆ ಬೇಕಾಗಿಲ್ಲ. ನನಗಿಷ್ಟ ಬಂದ ಹಾಗೆ ಬದುಕುವ ಸ್ವಾತಂತ್ರ್ಯ ನನಗಿದೆ”- ಇದು ಅವರು ಮೊದಲ ಚಾಂಪಿಯನ್‌ಶಿಪ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಮಾತುಗಳು.
ಮುಂದಿನ ದಿನಗಳಲ್ಲಿ ಕೇವಲ ಓರ್ವ ಬಾಕ್ಸರ್ ಎಂಬುದರ ಹೊರತಾಗಿ, ಜನರ ನಡುವೆ ಬೆರೆತು ಜನನಾಯಕರಾಗಿ ರೂಪಾಂತರಗೊಂಡರು. ಅನ್ಯಾಯ, ಜನಾಂಗೀಯ ಅಸಮಾನತೆ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದರು. ತರುವಾಯ, ತಮ್ಮ ಜೀವನದ ಬಹುಭಾಗವನ್ನು ಜನಸೇವೆಗಾಗಿ ಮುಡಿಪಾಗಿಟ್ಟರು. ಅಲಿಯವರು ನೇಷನ್ ಆಫ್ ಇಸ್ಲಾಂನ್ನು ತ್ಯಜಿಸಿ ಮುಖ್ಯವಾಹಿನಿ ಇಸ್ಲಾಂ ಸೇರಿಕೊಂಡರು. 9/11 ರ ದಾಳಿ ನಡೆದಾಗ ಭಯೋತ್ಪಾದನಾ ಕೃತ್ಯಗಳನ್ನು ತೀವ್ರವಾಗಿ ಖಂಡಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. “ಇದರಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಇಸ್ಲಾಂ ಅಂದರೆ ಶಾಂತಿಯೇ ಹೊರತು ಹಿಂಸೆಯಲ್ಲ. ಕೆಲವರ ದುಷ್ಕೃತ್ಯಗಳು ಇಡೀ ಒಂದು ಧರ್ಮವನ್ನು ಕೆಟ್ಟದಾಗಿ ಚಿತ್ರಿಸಲು ಕಾರಣವಾಗುತ್ತವೆ” ಎಂದು ಅವರು ಹೇಳಿದ್ದರು.
1966ರ ಮಾರ್ಚ್‌ನಲ್ಲಿ ಸೇನೆಗೆ ಸೇರಲು ಅರ್ಹತೆ ಗಿಟ್ಟಿಸಿದ ಬಳಿಕ, ಅಮೆರಿಕದ ಸಶಸ್ತ್ರ ಸೈನ್ಯದಲ್ಲಿ ಕಡ್ಡಾಯ ಸೇವೆ ಸಲ್ಲಿಸಲು ನಿರಾಕರಿಸಿದ್ದರಿಂದ ಪುನಃ ಮಾಧ್ಯಮಗಳ ಗಮನದ ಕೇಂದ್ರಬಿಂದುವಾದರು. ಸೇವೆ ಸಲ್ಲಿಸದಿರುವ ಸ್ವಾತಂತ್ರ್ಯ ನನಗೆ ಬೇಕೆಂದು ಸರಕಾರವನ್ನು ವಿನಂತಿಸಿದರು. ವಿಯಟ್ನಾಂ ಯುದ್ಧವನ್ನು ಅಂದಿನ ಬಹುತೇಕ ಅಮೆರಿಕನ್ನರು ಬೆಂಬಲಿಸಿದರು. ಯುದ್ಧದ ವಿರುದ್ಧ ದನಿಯೆತ್ತುವ ಅಲಿಯವರ ತೀರ್ಮಾನವು ವಿವಾದದ ಕಿಡಿ ಹೊತ್ತಿಸಿತು. ಅವರನ್ನು ಹೇಡಿ, ದೇಶದ್ರೋಹಿಯೆಂದು ಚಿತ್ರಿಸಲು ರಾಜಕಾರಣಿಗಳು, ಇಸ್ಲಾಮೋಫೋಬಿಕ್ ಮಾಧ್ಯಮಗಳು ದಿನವಿಡೀ ದುಡಿದವು. ಆದರೆ ಅಲಿಯವರ ಪ್ರತಿಕ್ರಿಯೆ ಹೀಗಿತ್ತು; “ಆ ಅಮಾಯಕರ ವಿರುದ್ಧ ಬಂದೂಕು ಹಿಡಿಯಲು ನನಗೆ ಸಾಧ್ಯವಿಲ್ಲ, ಅದರ ಬದಲಾಗಿ ನನ್ನನ್ನು ಜೈಲಿಗಟ್ಟಿರಿ”.
ತಮ್ಮ ಧೃಡಚಿತ್ತದ ಸಹಾಯದಿಂದ ಅಲಿಯವರು ಮುಂದೆ ಸಾಗಿದರು. ಆದರೆ ತಮ್ಮ ಕೆಲವು ತೀರ್ಮಾನಗಳು ಮುಂದೆ ಅವರು ಬೆಲೆ ತೆರುವಂತೆ ಮಾಡಿದವು. 1967 ರ ಮಾರ್ಚ್‌ನಲ್ಲಿ ಹೆವಿವೇಟ್ ನಿಂದ ಹೊರದಬ್ಬಲ್ಪಟ್ಟರು. ಜೂನ್ ತಿಂಗಳಲ್ಲಿ ಸೇವೆಗೆ ನಿಯೋಜಿಸಿದ ಡ್ರಾಫ್ಟ್ ನ್ನು ತಿರಸ್ಕರಿಸಿದ್ದಕ್ಕಾಗಿ 5 ವರ್ಷಗಳ ಸೆರೆಮನೆ ವಾಸ ಅನುಭವಿಸುವಂತಾಯಿತು. ಬಾಕ್ಸಿಂಗ್ ನಿಂದ ನಿಷೇಧಕ್ಕೊಳಗಾಗಿ ಪಾಸ್ ಪೋರ್ಟ್ ಜಪ್ತಿ ಮಾಡಲ್ಪಟ್ಟಿತು. ದೇಶದ ಯಾವುದೇ ಸಂಸ್ಥಾನದಲ್ಲೂ ಬಾಕ್ಸಿಂಗ್ ನಲ್ಲಿ ಭಾಗವಹಿಸಲು ಲೈಸೆನ್ಸ್ ನೀಡಲಿಲ್ಲ. ವೃತ್ತಿ ಜೀವನದ ಪ್ರಮುಖ ಐದು ವರ್ಷಗಳಲ್ಲಿ ವೃತ್ತಿಯಿಂದ ದೂರಸರಿದ ಕಾರಣ ಸಾಲದ ಸುಳಿಗೆ ಸಿಲುಕಿದರು. ನಂತರ ಬದುಕಿನ ಕೊನೆಯ ಮೂರು ದಶಕಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದರು.
ಆದರೆ ಅಲಿಯವರ ಇಸ್ಲಾಮಿಕ್ ವೀಕ್ಷಣೆಗಳು 60ರ ದಶಕದ ಯುದ್ಧ ವಿರೋಧಿ ಸಂಘಟನೆಗಳಿಗೆ ಶಕ್ತಿ ನೀಡಿದವು. 1967ರ ಎಪ್ರಿಲ್ ನಲ್ಲಿ ನಡೆದ ವಿಯಟ್ನಾಂ ಯುದ್ಧದ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ರಂಗಕ್ಕಿಳಿಯಲು ಅಲಿಯವರ ನಿಲುವು ಪ್ರೋತ್ಸಾಹ ನೀಡಿತು. ಬಾಕ್ಸಿಂಗ್ ನಿಂದ ನಿರ್ಬಂಧ ಹೇರಲ್ಪಟ್ಟ ಆ ದಿನಗಳಲ್ಲಿ ಕ್ಯಾಂಪಸ್ ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. ಅವರೋರ್ವ ಪ್ರಚಂಡ ವಾಗ್ಮಿಯಾಗಿದ್ದರು.
ತಮ್ಮ ನಂಬಿಕೆ- ಆದರ್ಶದ ವಿಷಯದಲ್ಲಿ ಅವರಿಗೆ ಬದ್ಧತೆ ಇತ್ತು. “ಬಾಕ್ಸಿಂಗ್ ರಿಂಗಿನೊಳಗಿನ ನನ್ನ ಕಾದಾಟದಿಂದ ಕೇವಲ ನನಗೆ ಮಾತ್ರ ಜನಪ್ರಿಯತೆ ಸಿಕ್ಕಿತು. ನಾನು ಬಾಕ್ಸಿಂಗ್ ನ್ನು ಯಾವತ್ತೂ ಎಂಜಾಯ್ ಮಾಡುವುದಿಲ್ಲ. ಜನರನ್ನು ನೋಯಿಸುವುದು, ವೇಗವಾದ ಪಂಚ್ ಗಳ ಮೂಲಕ ಹೊಡೆದುರುಳಿಸುವುದನ್ನು ನಾನು ಸಂಭ್ರಮಿಸುವುದಿಲ್ಲ. ಆದರೆ ಈ ಜಗತ್ತು ಅಧಿಕಾರ, ಸಂಪತ್ತು, ಪ್ರಶಸ್ತಿಗಳನ್ನು ಮಾತ್ರವೇ ಗುರುತಿಸುತ್ತದೆ. ಆದರೆ, ಇಸ್ಲಾಮಿನ ಸುಂದರ ಆಶಯಗಳು, ಮುಸ್ಲಿಮರ ಐಕ್ಯತೆ, ಏಕತೆಯು ನನ್ನ ಮೇಲೆ ಪ್ರಭಾವ ಬೀರಿದವು. ಅವರು ಮಕ್ಕಳನ್ನು ಬೆಳೆಸುವ ರೀತಿ, ಇಸ್ಲಾಮಿಕ್ ಆಚಾರ-ಅನುಷ್ಠಾನಗಳ ಸೌಂದರ್ಯ, ಅವರ ಭಕ್ಷ್ಯ ರೀತಿ, ವಸ್ತ್ರಧಾರಣೆ ಸೊಗಸಾಗಿವೆ. ಇದನ್ನು ಎಲ್ಲರಿಗೂ ತಲುಪಿಸಲು ನಾನು ಉತ್ಸುಕನಾಗಿದ್ದೇನೆ. ಜನರು ಸತ್ಯವನ್ನು ಅರಿತರೆ, ಅದನ್ನು ಅಂಗೀಕರಿಸಿ, ಇಸ್ಲಾಮಿಗೆ ಆಕರ್ಷಿತರಾಗುತ್ತಾರೆ. ವರ್ಣ ಕಪ್ಪಾಗಲಿ, ಬಿಳುಪಾಗಿರಲಿ, ಕೆಂಪೇ ಆಗಿರಲಿ, ಕ್ರೈಸ್ತ, ಹಿಂದೂ, ಬೌದ್ಧ, ನಾಸ್ತಿಕ ಯಾರೇ ಆಗಲಿ ಖುರಾನ್ ಆಲಿಸಿದರೆ, ಪ್ರವಾದಿಯವರ ಬಗ್ಗೆ ತಿಳಿದರೆ, ಖಂಡಿತವಾಗಿಯೂ ಅದು ಆತನ ಮೇಲೆ ಪ್ರಭಾವ ಬೀರುತ್ತದೆ” ಎಂದು ಅವರೊಮ್ಮೆ ಹೇಳಿದ್ದರು.
ತಮ್ಮ ಪೂರ್ವಜರು ಅಮೆರಿಕಾಗೆ ಬಯಸಿ ಬಂದವರಲ್ಲ. ಗುಲಾಮಗಿರಿಗಾಗಿ ಹಡಗುಗಳ ಮೂಲಕ ದೂರದಿಂದ ಅವರನ್ನು ಅಮೆರಿಕದಲ್ಲಿ ತಂದು ಇಳಿಸಲಾಯಿತು ಎಂಬುದು ಅವರಿಗೆ ಗೊತ್ತಿದ್ದರೂ, ಅಮೆರಿಕವನ್ನು ಅವರು ಅತಿಯಾಗಿ ಪ್ರೀತಿಸಿದರು. ವರ್ಣಬೇಧ ವ್ಯವಸ್ಥೆಯ ಕೇಂದ್ರಗಳಾಗಿದ್ದ ಶಾಲೆಗಳಿಗೆ ಕರಿಯರು ಕಡ್ಡಾಯವಾಗಿ ಹೋಗಬೇಕಾಗಿದ್ದರೂ ಕೂಡಾ ಅವರು ತಾವಿರುವ ಮಣ್ಣನ್ನು ಗೌರವಿಸಿದರು. ಸರಕಾರವೇ ನಿರ್ಲಕ್ಷಿಸಿದರೂ ಅವರು ನಾಡನ್ನು ಅಭಿಮಾನದಿಂದ ಕಂಡರು. ಡ್ರಾಫ್ಟ್ ನ್ನು ನಿರ್ಲಕ್ಷಿಸಿದ ಕಾರಣ ಬಾಕ್ಸಿಂಗ್ ನಿಂದ ನಿಷೇಧಿಸ್ಪಟ್ಟಿದ್ದರೂ ದೇಶದ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ತನ್ನನ್ನು ಹೋರಾಟಗಾರನಾಗಿ ಬೆಳೆಸಿದ ಮಣ್ಣು ಎಂಬ ಕಾರಣಕ್ಕಾಗಿ ಅಮೆರಿಕಾವನ್ನು ಅವರು ಪ್ರೀತಿಸಿದರು.
ಮುಸ್ಲಿಂ ಜಗತ್ತಿನಲ್ಲಿ ಒಳ್ಳೆಯ ಹೆಸರಿದ್ದ ವ್ಯಕ್ತಿಯಾಗಿದ್ದರು ಅಲಿಯವರು. ಮುಸ್ಲಿಂ ದೇಶಗಳಿಂದ ಹೋಗಿ ಅಮೆರಿಕದಲ್ಲಿ ನಿರಾಶ್ರಿತರಾಗಿದ್ದವರು, ವಿವಿಧ ದೇಶಗಳಿಂದ ವಲಸೆ ಹೋದ ಜನರೊಂದಿಗೆ ಬಾಂಧವ್ಯ ಹೊಂದಿದ್ದರು. ವರ್ಷಗಳ ಕಾಲ ಸರ್ಕಾರದೊಂದಿಗೆ ಹೋರಾಟ ನಡೆಸಿದ್ದರೂ, ವರ್ಣ-ಧರ್ಮದ ವಿಚಾರದಲ್ಲಿ ವೈಯಕ್ತಿಕವಾಗಿ ನೋವನ್ನನುಭವಿಸಿದರೂ ಕ್ರೀಡಾಭಿಮಾನಿಗಳ ಎದುರು ದೇಶಪ್ರೇಮವನ್ನು ಪ್ರಕಟಿಸಲು ಸನ್ನದ್ಧರಾಗಿದ್ದರು.
ಬಾಲ್ಯದಿಂದಲೇ ಅವರೊಬ್ಬ ‘ರೆಬೆಲ್’ ಆಗಿದ್ದರು. ಅಧಿಕಾರ ಪ್ರಜೆಗಳದ್ದಾಗಿರಬೇಕೆಂಬ ತತ್ವದಲ್ಲಿ ಬಲವಾದ ನಂಬಿಕೆ ಇಟ್ಟಿದ್ದರು. ವಿವಿಧ ಜನಾಂಗ, ಪ್ರದೇಶ, ನಂಬಿಕೆಯ ಜನರು ಸೇರಿದಾಗ ಮಾತ್ರ ಒಂದು ದೇಶವು ತನ್ನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಅರಿತಿದ್ದರು. ಗುಲಾಮರು, ವಲಸಿಗರು, ಉಗ್ರವಾದಿಗಳು, ಸೈನಿಕರು ಮುಂತಾದವರೆಲ್ಲರೂ ಸೇರಿ ನಿರ್ಮಾಣವಾದ ರಾಷ್ಟ್ರವಾಗಿದೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು.
ಅವರ ವಿರುದ್ಧ ದಾಖಲಾಗಿದ್ದ ದೋಷಾರೋಪ ಪಟ್ಟಿಯನ್ನು 1971 ರಲ್ಲಿ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಅಸಿಂಧುಗೊಳಿಸಿತು. ಅಂತಃಕರಣಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಅವರ ಗುಣ ಓರ್ವ ರಾಜಕೀಯ ಪರಿಕಲ್ಪನೆ ಇರುವ ಕ್ರೀಡಾಪಟುಗಳಿಗೆ ಮಾದರಿ. ಸಾರ್ವಜನಿಕ ಅಭಿಪ್ರಾಯಗಳನ್ನು ದಾಟಿ, ಅಂತಃಕರಣಕ್ಕನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಅಲಿಯವರು ಇಂದಿಗೂ ಆದರ್ಶಪ್ರಾಯರಾಗಿರುತ್ತಾರೆ.
ಇಬ್ರಾಹೀಮ್ (ಅ.ಸ) ಹಾಗೂ ಮುಹಮ್ಮದ್ (ಸ.ಅ) ರ ಪ್ರದೇಶವಾದ ಈ ಪವಿತ್ರ ನಗರದಲ್ಲಿ, ವಿವಿಧ ವರ್ಣದ ಜನರೊಂದಿಗಿನ ಸಹೋದರತೆಯ ಅದಮ್ಯ ಬಂಧವನ್ನೂ, ಉದಾರ ಹೃದಯದ ಆತಿಥ್ಯವನ್ನೂ ನಾನು ಇಂದಿನವರೆಗೂ ಅನುಭವಿಸಿರಲಿಲ್ಲ. ಕಳೆದ ವಾರ ಅವರೊಡನೆ ಕೆಲ ದಿನಗಳನ್ನು ಕಳೆದಾಗ ಅವರ ಅಪಾರ ಪ್ರೀತಿ, ವಿಶ್ವಾಸಕ್ಕೆ ನಾನು ಮೂಕವಿಸ್ಮಿತನಾಗಿದ್ದೆ. ನನಗೆ ಪವಿತ್ರ ನಗರ ಮಕ್ಕಾವನ್ನು ಸಂದರ್ಶಿಸುವ ಸೌಭಾಗ್ಯ ಒದಗಿಬಂತು. ಮುಹಮ್ಮದ್ ಎಂಬ ಯುವ ಮುತವ್ವಫ್ಫಿನ ಜೊತೆ ಕಅ್‌ಬಾಲಯವನ್ನು ಏಳು ಸಲ ಸುತ್ತಿದೆ. ಝಮ್ ಝಮ್ ಬಾವಿಯಿಂದ ದಾಹ ನೀಗಿಸಿಕೊಂಡೆ. ಸಫಾ-ಮರ್‌ವಾ ಬೆಟ್ಟಗಳ ನಡುವಿನ ದಾರಿಯಲ್ಲಿ ಏಳು ಸಲ ನಡೆದಾಡಿದೆ. ಪುರಾತನ ನಗರ ಮಿನಾದಲ್ಲಿ ಪ್ರಾರ್ಥಿಸಿದೆ. ಅರಫಾದಲ್ಲೂ ಪ್ರಾರ್ಥಿಸಿದೆ. ವಿವಿಧ ದಿಕ್ಕುಗಳಿಂದ ಹರಿದು ಬಂದ ಹದಿನಾರು ಸಾವಿರದಷ್ಟು ಜನಸಾಗರ ಅಲ್ಲಿ ಜಮಾಯಿಸಿತ್ತು. ನೀಲಿ ಕಣ್ಣಿನ ಬಿಳಿಯರಿಂದ ಹಿಡಿದು ಕಪ್ಪು ಬಣ್ಣದ ಆಫ್ರಿಕನ್ ಜನತೆಯೂ ಸೇರಿ ಹಲವು ವರ್ಣದವರು ನೆರೆದಿದ್ದರು. ಐಕ್ಯದ, ಸಹೋದರತೆಯ ಭಾವದಲ್ಲಿ ನಾವು ಒಂದೇ ಆಚಾರವನ್ನು ನಿರ್ವಹಿಸುತ್ತಿದ್ದೆವು. ಇಲ್ಲಿ ಬಿಳಿಯರ ಮತ್ತು ಕರಿಯರ ನಡುವೆ ಯಾವ ತಾರತಮ್ಯವೂ ಇಲ್ಲವೆಂದು ಅಮೇರಿಕಾದ ಅನುಭವಗಳಿಂದ ನಾನು ಕಲಿತುಕೊಂಡಿದ್ದೆ. ಇಸ್ಲಾಮಿನ ಕುರಿತು ಅಮೆರಿಕಾದವರು ಕಲಿಯಬೇಕಾಗಿದೆ. ಸಮಾಜದಲ್ಲಿನ ವರ್ಣಬೇಧವನ್ನು ನಿರ್ಮೂಲನೆ ಮಾಡಿದ್ದು ಈ ಒಂದು ಧರ್ಮವಾಗಿದೆ.
ಮುಸ್ಲಿಮ್ ರಾಷ್ಟ್ರದ ಮೂಲಕ ನಡೆಸಿದ ಯಾತ್ರೆಗಳಲ್ಲಿ ಅಮೆರಿಕಾದ ಬಿಳಿಯರನ್ನು ಕಾಣಲು ಸಾಧ್ಯವಾಯಿತು. ಅವರೊಂದಿಗೆ ಮಾತನಾಡಿ, ಜೊತೆಯಲ್ಲಿ ಊಟ ಮಾಡಿದೆನು. ಇಸ್ಲಾಮೆಂಬ ಧರ್ಮ ‘ನಾನು ಬಿಳಿಯನು’ ಎಂಬ ಭಾವನೆಯನ್ನು ಅವರ ಮನಸ್ಸಿನಿಂದ ತೆಗೆದುಹಾಕಿತ್ತು. ನಿಷ್ಕಳಂಕ ಮತ್ತು ಭಕ್ತಿಯ ಭಾವದೊಂದಿಗೆ ವಿವಿಧ ವರ್ಣದವರು ಜೊತೆಯಾಗಿ ಆರಾಧನೆಗಳನ್ನು ನಿರ್ವಹಿಸಿದ್ದನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ನನ್ನ ಮಾತುಗಳು ಕೇಳಿ ನಿಮಗೆ ಉತ್ಪ್ರೇಕ್ಷೆಯೆನಿಸಬಹುದು. ಆದರೆ ಈ ಯಾತ್ರೆಯ ಅನುಭವಗಳು ನನ್ನ ಹಿಂದಿನ ಧೋರಣೆ- ಆಲೋಚನೆಗಳನ್ನು ಬದಲಾಯಿಸಿತು. ಇದು ಅಷ್ಟೊಂದು ಪ್ರಯಾಸಕರವಾದ ಕಾರ್ಯವೇನಲ್ಲ. ನನ್ನ ಎಲ್ಲಾ ದೃಢ ತೀರ್ಮಾನಕ್ಕಿಂತಲೂ ನಾನು ವಾಸ್ತವವನ್ನು ಕಾಣಲು ಶ್ರಮಿಸುತಿದ್ದೆನು. ಹೊಸ ಅರಿವನ್ನು ಸಂಪಾದಿಸಿ, ನವಿರಾದ ಅನುಭವದಿಂದ ನೈಜ ಜೀವನವನ್ನು ಕಟ್ಟಲು ಸನ್ನದ್ಧನಾಗಿರುತಿದ್ದೆನು. ಯಾವಾಗಲೂ ನನ್ನದು ತೆರೆದ ಮನಸ್ಸಾಗಿತ್ತು. ಪ್ರತಿಯೊಬ್ಬರ ಜೊತೆ ಕೈ ಜೋಡಿಸಿ ಸತ್ಯವನ್ನು ಅನ್ವೇಷಿಸಲು ಇದು ಅನಿವಾರ್ಯವಾಗಿತ್ತು. ಮುಸ್ಲಿಮರ ಜೊತೆ ಸೇರಿ ಹನ್ನೊಂದು ದಿನ ಏಕದೇವನಲ್ಲಿ ಪ್ರಾರ್ಥಿಸುವ ಸಂದರ್ಭ; ಒಂದೇ ಪಾತ್ರೆಯಲ್ಲಿ ತಿನ್ನುತ್ತಿದ್ದೆ. ಒಂದೇ ಗ್ಲಾಸಿನಲ್ಲಿ ಕುಡಿಯುತ್ತಿದ್ದೆ. ಅವರೊಂದಿಗೆ ಹಾಸಿಗೆಯಲ್ಲಿ ಮಲಗುತ್ತಿದ್ದೆ. ಅವರಲ್ಲಿರುವ ಕೆಲವರ ಕಣ್ಣು ನೀಲಿಯಾಗಿತ್ತು. ಅವರ ಕೂದಲು ಕಂದು ಬಣ್ಣವುಳ್ಳದಾಗಿತ್ತು. ಇವೆಲ್ಲಕ್ಕಿಂತಲೂ ಅವರ ಚರ್ಮ ಬಿಳಿಯಾಗಿ ಕಾಣುತ್ತಿತ್ತು. ನೈಜೀರಿಯಾ, ಸುಡಾನ್, ಘಾನಾ ಮುಂತಾದ ಕಪ್ಪು ಬಣ್ಣದ ಮುಸ್ಲಿಮರಲ್ಲಿ ಅನುಭವಿಸಿದ ಅದೇ ಭಕ್ತಿಯನ್ನು ಇಲ್ಲಿನ ಬಿಳಿ ಮುಸ್ಲಿಮರ ಒಡನಾಟದಿಂದ ಕಂಡುಕೊಂಡೆ. ಕಾರಣ, ಏಕದೈವ ನಂಬಿಕೆಯು ಅವರಲ್ಲಿದ್ದ ಬಿಳಿಯನೆಂಬ ಮನೋಧರ್ಮವನ್ನು ಮತ್ತು ಸ್ವಭಾವ ನಡವಳಿಕೆಯನ್ನು ಇಲ್ಲವಾಗಿಸಿತ್ತು. ಬಹುಶಃ ನನಗೆ ಅನಿಸುವುದೆಂದರೆ, ಬಿಳಿಯರಾದ ಅಮೇರಿಕನ್ಸ್ ಏಕದೈವ ವಿಶ್ವಾಸವನ್ನು ಸ್ವೀಕರಿಸುವುದಾದರೆ ಏಕತೆಯೆಂಬ ವಾಸ್ತವವನ್ನು ಒಪ್ಪಿಕೊಳ್ಳಬಹುದು ಹಾಗೂ ವರ್ಣಭೇದವನ್ನು ಕೊನೆಗಾಣಿಸಲು ಸಾಧ್ಯವಾಗಬಹುದು. ವರ್ಣಭೇದವೆಂಬ ವಾಸಿಯಾಗದ ಕ್ಯಾನ್ಸರಿನಂತಹ ಭೀಕರ ಅಪಾಯಗಳಿಗೆ ಸಿಲುಕಿದ “ಕ್ರಿಶ್ಚಿಯನ್” ಎಂದು ಕರೆಯಲ್ಪಡುವ ವೈಟ್ ಅಮೇರಿಕಾದವರ ಹೃದಯಕ್ಕೆ ಇದೊಂದು ದಿವ್ಯ ಪರಿಹಾರವಾಗಬಹುದು. ಜರ್ಮನಿಯಲ್ಲಿ ವ್ಯಾಪಕವಾಗಿದ್ದ ವರ್ಣಭೇದವು ಅವರನ್ನೇ ನಾಶದಂಚಿಗೆ ತಲುಪಿಸಿದಂತೆ ಅಮೇರಿಕವು ನಾಶಕ್ಕೀಡಾಗಬಹುದು.
ಪವಿತ್ರ ನಗರವಾದ ಈ ಮಣ್ಣಿನಲ್ಲಿ ಕಳೆದ ಒಂದೊಂದು ತಾಸುಗಳೂ ಅಮೇರಿಕಾದಲ್ಲಿ ಬಿಳಿಯರು ಮತ್ತು ಕರಿಯರ ನಡುವೆ ಏನು ಸಂಭವಿಸುತ್ತದೆ ಎಂಬುವುದರ ಅಂಶಗಳನ್ನು ವೇದ್ಯ ಮಾಡಿಕೊಳ್ಳಲು ಸಾಧ್ಯವಾಯಿತು. ವರ್ಣಬೇಧದ ಹೆಸರಿನಲ್ಲಿ ಅಮೇರಿಕಾದ ನೀಗ್ರೋಗಳನ್ನು ಕಡೆಗಣಿಸಬಾರದು. ಅವರು ಬಿಳಿಯರ ಪ್ರಜ್ಞಾಪೂರ್ವಕ ವರ್ಣಬೇಧದ ವಿರುದ್ದ ನಾಲ್ಕು ನೂರು ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತಿದ್ದಾರೆ. ಅತಿಯಾದ ವರ್ಣಭೇಧ ನೀತಿಯು ಅಮೆರಿಕವನ್ನು ಆತ್ಮಹತ್ಯೆಗೆ ತಳ್ಳುತ್ತದೆ. ಕಪ್ಪು ಬಣ್ಣದ ಅಮೇರಿಕಾದವರೊಂದಿಗಿನ ನನ್ನ ಅನುಭವ ಹೇಳುವುದೇನೆಂದರೆ; ಯುನಿವರ್ಸಿಟಿ, ಕಾಲೇಜುಗಳಲ್ಲಿ ಕಲಿಯುವ ಯುವ ಪೀಳಿಗೆಯ ಬಿಳಿಯರಲ್ಲಿ ಗೋಡೆಬರಹವನ್ನು ನೋಡಿದ ಹೆಚ್ಚಿನವರೂ ಸತ್ಯಮಾರ್ಗಕ್ಕೆ ಸರಿಯಬಹುದು ಎಂದಾಗಿದೆ. ವರ್ಣಬೇಧದ ದುರಂತವನ್ನು ಪ್ರತಿರೋಧಿಸಲು ಅಮೇರಿಕಾಗಿರುವುದು ಇದೊಂದೇ ದಾರಿ.
ಈ ರೀತಿಯ ಗೌರವ ನನಗೆಂದೂ ಸಿಕ್ಕಿರಲಿಲ್ಲ. ಇದಕ್ಕಿಂತ ಮೊದಲು ಇಷ್ಟೊಂದು ಗೌರವಿಸಲ್ಪಡುವ ವ್ಯಕ್ತಿಯಾಗಿ ಸಮಾಜದಲ್ಲಿ ಹೆಸರುವಾಸಿಯಾಗಿದ್ದಿಲ್ಲ. ಅಮೆರಿಕಾದ ನೀಗ್ರೋಗೆ ಇಷ್ಟೊಂದು ಆಶೀರ್ವಾದಗಳು ಸಿಗುತ್ತದೆಯೆಂಬುವುದನ್ನು ಯಾರು ತಾನೇ ನಂಬಲು ಸಾಧ್ಯ. ಸ್ವಲ್ಪ ದಿನಗಳ ಮುಂಚೆ, ಅಮೆರಿಕಾದಲ್ಲಿ “ವೈಟ್ ಮ್ಯಾನ್” ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ರಾಯಭಾರಿಯೊಬ್ಬರು ಅವರ ಹೋಟೆಲ್ ರೂಮನ್ನು ನನಗೆ ನೀಡಿದ್ದರು. ಇವರು ಅಲ್ಲಿನ ಅಂಬಾಸಿಡರ್ ಹಾಗೂ ರಾಜರೊಂದಿಗೆ ಒಳ್ಳೆಯ ಸ್ನೇಹಬಂಧವಿರುವ ವ್ಯಕ್ಯಿಯಾಗಿದ್ದರು. ಇವರ ಮುಖಾಂತರ ಪವಿತ್ರ ನಗರದ ರಾಜಕುಮಾರನಾದ ಫೈಝಲ್ ಎಂಬುವವರು, ನನ್ನ ಜಿದ್ದಾದ ಇರವನ್ನು ಅರಿತುಕೊಂಡರು. ಮುಂದಿನ ದಿನದ ಮುಂಜಾನೆಯಲ್ಲಿ ಫೈಝಲ್ ರಾಜಕುಮಾರನ ಮಗ ತಂದೆಯ ಆಗ್ರಹದಲ್ಲಿ, “ನೀವು ಸ್ಟೇಟ್ ಗೆಷ್ಟ್” ಎಂದು ನನಗೆ ತಿಳಿಸಿದರು. ಅಲ್ಲಿನ ಪ್ರೋಟೊಕಾಲ್ ಡೆಪ್ಯುಟಿ ಚೀಫ್ ನನ್ನನು ಹಜ್ಜ್ ಕೋರ್ಟಿನಲ್ಲಿ ಹಾಜರುಪಡಿಸಿದರು. ಅಲ್ಲಿಂದ ಶೈಖ್ ಮುಹಮ್ಮದ್ ಹಾರ್ಕೊನ್ ಮಕ್ಕಾವನ್ನು ಸಂದರ್ಶಿಸಲು ಅನುಮತಿ ನೀಡಿದರು. ನನಗೆ ಅವರ ಹಸ್ತಾಕ್ಷರವಿರುವ ಇಸ್ಲಾಮಿನ ಕುರಿತಾದ ಎರಡು ಪುಸ್ತಕವನ್ನು ನೀಡಿ “ನಿಮ್ಮನ್ನು ಅಮೆರಿಕಾದ ಇಸ್ಲಾಮಿನ ಪ್ರಭೋಧಕನನ್ನಾಗಿ ಮಾಡಲಿ” ಎಂದು ಪ್ರಾರ್ಥಿಸಿದರು. ಈ ಪವಿತ್ರ ನಗರದಲ್ಲಿ ನನಗೆ ಬೇಕಾದ್ದಲ್ಲಿಗೆ ಸಂಚರಿಸಲು ಕಾರು, ಡ್ರೈವರ್ ಮತ್ತು ಗೈಡನ್ನು ನೀಡಿದ್ದರು. ನನಗೆ ಸಂದರ್ಶನವಿದ್ದ ಒಂದೊಂದು ನಗರದ ಸರ್ಕಾರವೂ ನನಗಾಗಿ ಕೊಠಡಿಗಳು, ಸಹಾಯಕರನ್ನು ಸಜ್ಜುಗೊಳಿಸಿತ್ತು. ಅಮೇರಿಕಾದ ರಾಜರಿಗೆ ಮಾತ್ರ ಸಿಗುವ ಗೌರವಕ್ಕೆ ನಾನು ಅರ್ಹನಾಗುವೆನೆಂದು ಕನಸಿನಲ್ಲೂ ಚಿಂತಿಸಿರಲಿಲ್ಲ.
ಈ ಲೋಕದ ಎಲ್ಲಾ ವಸ್ತುವಿನ ಪರಮಾಧಿಕಾರಿಯಾಗಿರುವ ಅಲ್ಲಾಹನಿಗೆ ಸರ್ವಸ್ತುತಿ.
ಮಾಲ್ಕಮ್ ಎಕ್ಸ್ ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್ ಗುಂಡಿಕೆರೆ, ಕೊಡಗು.
ವಿದ್ಯಾವಂತ ಜನರಲ್ಲಿ ವಿದೃಶ ವಿಚಾರಗಳನ್ನು ಮತ್ತು ರೂಪಕಗಳನ್ನು ರೂಪಿಸುತ್ತಾ ಉದಾರ ಕಲೆ ಅಥವಾ ಲಿಬರಲ್ ಆರ್ಟ್ಸ್ ಎಂಬ ಪಾರಿಭಾಷಕ ಪದ ಇಂದು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಬರುತ್ತಿದೆ. ಸಂಜ್ಞೆಗಳನ್ನು ಸಮರ್ಪಕವಾಗಿ ವ್ಯಾಖ್ಯಾನ ಮಾಡುವಲ್ಲಿ ಮತ್ತು ವ್ಯತ್ಯಾಸಗಳನ್ನು ಸರಿಯಾಗಿ ವಿವರಿಸುವಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ ಎಡವುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಧ್ಯಕಾಲೀನ ದೇವತಾಶಾಸ್ತ್ರೀಯ ತತ್ವಚಿಂತಕರು(scholastic) ಈಯೆರಡು ವಿಷಯಗಳಲ್ಲಿ ವಹಿಸಿದ ಕಾಳಜಿ ಅಪಾರ ಮತ್ತು ಗಮನಾರ್ಹ. ಸರಿಯಾದ ವ್ಯಾಖ್ಯೆ ದೊರೆಯಬೇಕಾದರೆ ಸಂಜ್ಞೆಯ ‘ಕುಲ’ವನ್ನು (ಇಂಗ್ಲೀಷ್ ನ ಜೀನಸ್ ಅರಬಿಯ ಜಿನ್ಸ್) ಅರ್ಥೈಸಬೇಕು ಮತ್ತು ಇತರ ಸದಸ್ಯರಿಂದ ಅದಕ್ಕಿರುವ ವ್ಯತ್ಯಾಸವೇನೆಂದು ತಿಳಿಯಬೇಕೆಂದು ತರ್ಕವಿಜ್ಞಾನದಲ್ಲಿ ಕಲಿಸಲಾಗುತ್ತದೆ. ಶಿಕ್ಷಣವೆ ಉದಾರ ಕಲೆಯ ಜೀನಸ್. ಶಿಕ್ಷಣವೆಂಬ ಜೀನಸ್ ನಿಂದ ಉದಾರ ಶಿಕ್ಷಣವನ್ನು ಬೇರ್ಪಡಿಸುವ ಅರ್ಥಾತ್ ಅದರ ವ್ಯಾಖ್ಯೆ ಸಾಧ್ಯವಾಗಿಸುವ ಲಕ್ಷಣ ಯಾವುದು? ಈ ವ್ಯತ್ಯಾಸ ಹುದುಗಿರುವುದು ಲಿಬರಲ್ ಎಂಬ ಪದದಲ್ಲಿ. ಹೌದು, ದಾಸ್ಯ ಸ್ವಭಾವದ(servile) ವಿದ್ಯಾಭ್ಯಾಸಗಳಿಗಿಂತ ವ್ಯತಿರಿಕ್ತವಾಗಿ ನಿಲ್ಲುತ್ತದೆ ಉದಾರ ಶಿಕ್ಷಣ. ಈ ಸಂಜ್ಞೆಯ ವ್ಯುತ್ಪತ್ತಿ ನಡೆದಿರುವುದು ಸಮುದಾಯಗಳ ಕುರಿತ ಆಧುನಿಕಪೂರ್ವ ಗ್ರಹಿಕೆ ಮತ್ತು ಅವುಗಳ ಶ್ರೇಣೀಕೃತ ಸಂರಚನೆಯ ಆಧಾರದಲ್ಲಿ. ಅಂದು ಉದಾರ ಶಿಕ್ಷಣ ನೀಡಲಾಗುತ್ತಿದ್ದುದು ಸ್ವತಂತ್ರ ವ್ಯಕ್ತಿಗಳಿಗೆ. ಸೇವಕರಿಗೆ ಮತ್ತು ಗುಲಾಮರಿಗೆ ವೃತ್ತಿಜ್ಞಾನವನ್ನು ಕರಗತ ಮಾಡಲು ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿತ್ತು. ಹಾಗಾಗಿ ಸಮಾಜಕ್ಕೆ ಅಗತ್ಯವಿರುವ ಸರಕು ಸೇವೆಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಅಂಥ ಕಲೆ-ಕೌಶಲ್ಯಗಳನ್ನು ಕಲಿಯಲು ವೃತ್ತಿ ತರಬೇತಿಗಳೇ ಧಾರಾಳ. ಅದಕ್ಕಾಗಿ ಮಸ್ತಿಷ್ಕವನ್ನು ಪಳಗಿಸುವ ಕಠಿಣ ಶೈಕ್ಷಣಿಕ ತರಬೇತಿಯ ಅಗತ್ಯವಿಲ್ಲ.
ಅಧುನಿಕಪೂರ್ವ ಕಾಲದಲ್ಲಿ ಉದಾರ ಶಿಕ್ಷಣ ವಿದ್ಯಾರ್ಥಿಗಳನ್ನು ಮೂರು ಉದ್ಯೋಗಗಳಿಗೆ ಸಿದ್ಧಪಡಿಸುತ್ತಿತ್ತು; ದೇವತಾಶಾಸ್ತ್ರಜ್ಞ, ವಕೀಲ ಮತ್ತು ವೈದ್ಯ. ದೇವತಾಶಾಸ್ತ್ರಜ್ಞ ಅಭೌತಿಕ ಶರೀರದ ವ್ಯಾಧಿಗಳ ಚಿಕಿತ್ಸಕನಾದರೆ, ನ್ಯಾಯವಾದಿ ಮತ್ತು ವೈದ್ಯ ಅನುಕ್ರಮವಾಗಿ ಸಾಮಾಜಿಕ ಮತ್ತು ಭೌತಿಕ ಶರೀರಗಳಿಗೆ ವಕ್ಕರಿಸುವ ವ್ಯಾಧಿಗಳ ಚಿಕಿತ್ಸಕ. ಆದುದರಿಂದಲೇ ಉದಾರ ಶಿಕ್ಷಣ ದೊರೆತ ನಾಯಕರು ಮುನ್ನಡೆಸುವ ಸಮೂಹದಲ್ಲಿ ಭೂಲೋಕದಲ್ಲಿನ ಜೀವನದ ಮೂರು ಆಯಾಮಗಳ- ಮಾನವಾತ್ಮದ ನೈತಿಕ ಮತ್ತು ಆಧ್ಯಾತ್ಮಿಕ ಬದುಕು, ಕೂಡಿ ಬಾಳುವ ಮನುಷ್ಯರ ನಡುವಿನ ಸಾಮಾಜಿಕ, ವಾಣಿಜ್ಯ ಹಾಗೂ ರಾಜಕೀಯ ಜೀವನ; ಈಯೆರಡು ಆಯಾಮಗಳನ್ನು ಸಮರ್ಪಕವಾಗಿ ಆಸ್ವಾದಿಸಲೋಸುಗ ಅತ್ಯಗತ್ಯವಾದ ಭೌತಿಕ ದೇಹದ ಆರೋಗ್ಯಪೂರ್ಣ ಅವಸ್ಥೆ- ವ್ಯಾಧಿಗಳೊಂದಿಗೆ ಅನುಸಂಧಾನ ನಡೆಸಲು ಪರಿಣತವಾದ ಮೆದುಳುಗಳಿರುತ್ತವೆ.
ಏಳು ತರದ ಉದಾರ ಕಲೆಗಳು ಜಗತ್ತನ್ನು ಚೈತನ್ಯ ಮತ್ತು ಪದಾರ್ಥ,ಗುಣ ಮತ್ತು ಪರಿಮಾಣ, ದೇಹ ಮತ್ತು ಚೇತನ ಎಂಬಿತ್ಯಾದಿಯಾಗಿ ವಿಂಗಡಿಸುತ್ತದೆ. ಹಾಗಾಗಿ ವಿದ್ಯಾವಂತ ವ್ಯಕ್ತಿಗಳು ತನು-ಮನ ದ್ವಯಗಳ ಜೀವನದಲ್ಲೂ ಪರಿಣತಿ ಪಡೆದಿರುತ್ತಿದ್ದರು. ಗುಣಾತ್ಮಕ ಅಧ್ಯಯನ ವಿಭಾಗಗಳು ಸಾಹಿತ್ಯದ ಆಡುಭಾಷೆ, ಅದರಲ್ಲೂ ಪ್ರಮುಖವಾಗಿ ಕಾವ್ಯ; ಪರಿಕಲ್ಪನೆ, ತೀರ್ಪು, ತರ್ಕ ಸಮೇತ ಮನಸ್ಸಿನ ಆಲೋಚನಾ ಪ್ರಕ್ರಿಯೆ; ಪರಿಣಾಮಕಾರಿಯಾಗಿ ಪ್ರಭಾವ ಬೀರಲು, ಕೀರ್ತಿಸಲು,ಆರೋಪಿಸಲು ಇಲ್ಲವೇ ದೋಷಮುಕ್ತಿ ವಾದಿಸಲು ಅತ್ಯಗತ್ಯವಾಗಿರುವ ಅಲಂಕಾರ ಭಾವಗಳ ಪೋಷಣೆಗಳು ಮುಂತಾದವು ಒಳಗೊಳ್ಳುತ್ತದೆ. ಪರಿಮಾಣಾತ್ಮಕ ಅಧ್ಯಯನ ವಿಭಾಗಗಳು ಒತ್ತು ಕೊಡುವುದು ಅಂಕಗಣಿತ ಮತ್ತು ರೇಖಾಗಣಿತಗಳನ್ನು ಕರತಲಾಮಲಕಗೊಳಿಸುವ ಮೂಲಕ ಸಂಖ್ಯಾಲೋಕದ ಒಗಟುಗಳನ್ನು ಬಿಡಿಸುವಲ್ಲಿ. ಕಾಲದಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಸಂಗೀತದಲ್ಲಿ ಹಾಗೂ ಸ್ಥಳ-ಕಾಲಗಳೆರಡರಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಖಗೋಳದಲ್ಲಿ ಅಂಕಿಗಳನ್ನು ಒರೆಗೆ ಹಚ್ಚಲಾಗುತ್ತದೆಯಿಲ್ಲಿ.
ಶಿಕ್ಷಣದ ಕಡೆಗಿನ ಇಂಥಾ ಸಮಗ್ರವಾದ ನೋಟ ವಿಸ್ಮಯಗಳೆಡೆಗೆ ತೆರೆದುಕೊಂಡ, ಸೃಷ್ಟಿಲೋಕದ ಸಮತೋಲನವನ್ನು ಆರಾಧನಾತ್ಮಕವಾಗಿ ಹಿಂಬಾಲಿಸುವ ಉತ್ತಮ ಮನಸ್ಸುಗಳನ್ನು ರೂಪಿಸುತ್ತದೆ. ಈ ರೂಪದ ಶೈಕ್ಷಣಿಕ ವ್ಯವಸ್ಥೆಗಳ ಬೇರುಗಳು ಗ್ರೀಕ್, ಬ್ಯಾಬಿಲೋನಿಯ, ಈಜಿಪ್ತ್ ನಾಗರಿಕತೆಗಳ ಪೌರಾಣಿಕ ಧರ್ಮಗಳಲ್ಲಿ ಕಾಣಬಹುದು. ಆದರೆ ಇದು ತನ್ನ ಉಚ್ಪ್ರಾಯಕ್ಕೆ ತಲುಪಿದ್ದು ಯಹೂದಿ, ಕ್ರೈಸ್ತ ಮತ್ತು ಮುಸ್ಲಿಂ ನಾಗರಿಕತೆಗಳ ಕಾಲದಲ್ಲಿ. ಈ ನಾಗರಿಕತೆಗಳು ತಂತಮ್ಮ ಧಾರ್ಮಿಕ ಗ್ರಂಥಗಳನ್ನು ಮತ್ತು ತಮ್ಮ ಸುತ್ತಮುತ್ತಲಿನ ಭೌತಿಕ ಜಗತ್ತನ್ನು ಸಮರ್ಪಕವಾಗಿ ಅರ್ಥೈಸಲು ಈ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕಲೆಗಳನ್ನು ಬಳಸುತ್ತಿದ್ದರು. ಮುಸ್ಲಿಮರು ದೇವದತ್ತ ಗ್ರಂಥಗಳು ಎರಡು ರೂಪಗಳನ್ನು ಪಡೆದಿರುವುದಾಗಿ ಗ್ರಹಿಸುತ್ತಾರೆ. ತೌರಾತ್ (Torah), ಝಬೂರ್ (Psalms), ಇಂಜೀಲ್(Gospel), ಖುರ್‌ಆನ್ ಗ್ರಂಥಗಳಲ್ಲಿ ಸಂಗ್ರಹಿತವಾದ ಯಥಾರ್ಥ ದೇವವಚನಗಳು ಒಂದಾದರೆ ಎರಡನೆಯದ್ದು ನಿಸರ್ಗವೆಂಬ ಪುಸ್ತಕ. ಟ್ರೈವಿಯಮ್ಮಿನ ಉಪಕರಣಗಳನ್ನು ಬಳಸಿ ಒಂದನೆಯದನ್ನು ಕಲಿಯಬಹುದು ಮತ್ತು ಕ್ವಾಡ್ರಿಯಮ್ಮನ್ನು ಉಪಯೋಗಿಸಿ ಎರಡನೆಯದನ್ನು ಕರಗತ ಮಾಡಬಹುದು.
ಉದಾರ ಶಿಕ್ಷಣವೆಂಬ ವಿವಾದಿತ ಸಂಜ್ಞೆಯ ವಿವಿಧ ವರ್ಗೀಕರಣಗಳ ಉಪಯುಕ್ತ ವಿವರಣೆಯನ್ನು ಡ್ಯಾನಿಯಲ್ ಆರ್ ಡೆ ನಿಕೋಲ ತಮ್ಮ ಉತ್ಕೃಷ್ಟ ಗ್ರಂಥವಾದ ‘ಲರ್ನಿಂಗ್ ಟು ಫ್ಲರಿಶ್: ಎ ಫಿಲಾಸಫಿಕಲ್ ಎಕ್ಸ್‌ಪ್ಲೊರೇಶನ್ ಓಫ್ ಲಿಬರಲ್ ಎಜ್ಯುಕೇಶನ್’ ನಲ್ಲಿ ನೀಡಿದ್ದಾರೆ. ಅವರು ಅದರಲ್ಲಿ ಲಿಬರಲ್ ಶಿಕ್ಷಣ ವ್ಯವಸ್ಥೆಯ ಪಂಚಶೀಲ ಉದ್ದೇಶಗಳನ್ನು ಸಾದರಪಡಿಸಿದ್ದಾರೆ. ಅವುಗಳೆಂದರೆ; ಸಾಂಸ್ಕೃತಿಕ ಬಳುವಳಿಗಳ ತಲೆತಲಾಂತರ ವರ್ಗಾವಣೆ, ಪ್ರಮಾಣಕ(normative) ಪ್ರತ್ಯೇಕಾಸ್ತಿತ್ವದ ಕಡೆಗೆ ಕೊಂಡೊಯ್ಯುವ ಸ್ವಯಂ ವಾಸ್ತವೀಕರಣ (self actualization), ಜಗತ್ತಿನ ಹಾಗೂ ತನ್ನ ಜೀವನವನ್ನು ರೂಪಿಸುವ ಬಲಗಳ ಗ್ರಹಿಕೆ, ಜಗತ್ತಿನೊಂದಿಗೆ ಕ್ರಿಯಾಶೀಲ ಅನುಸಂಧಾನ, ಕಲಿಕಾ ಕೌಶಲ್ಯಗಳ ಸ್ವಾಧೀನ. ಉದಾರ ಕಲೆಗಳ ಬಲಿಷ್ಠ ಪರಿಕಲ್ಪನೆಗಳಲ್ಲೆಲ್ಲಾ ಈ ಐದು ಉದ್ದೇಶಗಳು ಒಂದೇ ವೇಳೆ ಮಿಳಿತವಾಗಿರುವುದನ್ನು ಕಾಣಬಹುದು ಎನ್ನುತ್ತಾರೆ ಡೆ ನಿಕೋಲ.
ಮೊಟ್ಟ ಮೊದಲಾಗಿ ಶಿಕ್ಞಣ ಮತ್ತು ಉದಾರ ಎಂಬೀ ಸಂಜ್ಞೆಗಳನ್ನು ನಿರ್ವಚಿಸಬೇಕಿದೆ. ಶಿಕ್ಷಣದ ಕುರಿತ ಪ್ರಯೋಜನಪ್ರದ ವ್ಯಾಖ್ಯೆಯನ್ನು ಹತ್ತೊಂಬತ್ತನೆ ಶತಮಾನದ ದೇವತಾಶಾಸ್ತ್ರಜ್ಞ ಕರ್ದಿನಾಲ್ ಜಾನ್ ಹೆನ್ರಿ ನ್ಯೂಮಾನ್ ನೀಡಿದ್ದಾರೆ. ವಿಶ್ವವಿದ್ಯಾಲಯದ ಪರಿಕಲ್ಪನೆಯ ಕುರಿತು ಅವರು ರಚಿಸಿರುವ ಡಿಸ್ಕೋರ್ಸ್ IV ಎಂಬ ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:
“ಶಿಕ್ಷಣ ಎಂಬುವುದು ಉನ್ನತವಾದ ಪದ; ಅದು ಜ್ಞಾನಾರ್ಜನೆಗಾಗಿ ಸಿದ್ಧಗೊಳಿಸುವ ಪ್ರಕ್ರಿಯೆ. ಪ್ರಸ್ತುತ ತಯಾರಿಗೆ ಅನುಗುಣವಾದ ಜ್ಞಾನ ಪ್ರದಾನಿಸುವ ಹಂತ”. ಈ ವ್ಯಾಖ್ಯೆಯು ‘ಜ್ಞಾನ ಎಂದರೇನು’ ಎಂಬ ಮತ್ತೊಂದು ಪ್ರಶ್ನೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪ್ರಶ್ನೆಗೆ ಉತ್ತರಿಸಲು ಆಳವಾದ ಚಿಂತನೆಯ ಅಗತ್ಯವಿದೆ. ಯಾವುದೇ ನಾಗರಿಕತೆಯ ಪಂಚಾಂಗದಲ್ಲಿರುವ ಅತಿಭೌತಶಾಸ್ತ್ರೀಯ(metaphysical) ಮೂಲಗ್ರಹಿಕೆಗಳು ಜ್ಞಾನದ ಪ್ರಮಾಣ ಮತ್ತು ಪ್ರಮೇಯಗಳ ನಿರ್ಣಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಜ್ಞಾನದ ವ್ಯಾಖ್ಯಾನ ಅಷ್ಟು ಸಲೀಸಾದ ಕಾರ್ಯವಲ್ಲ. ಎಂತಲೇ, ಸದ್ಯಕ್ಕೆ ಮೇಲ್ಕಾಣಿಸಿದ ಶಿಕ್ಷಣದ ವ್ಯಾಖ್ಯೆ ನೀಡುವ ಸಾಮಾನ್ಯ ಗ್ರಹಿಕೆಯೊಂದಿಗೆ ತೃಪ್ತರಾಗೋಣ. ಉದಾರ ಎಂಬ ಪದದ ಉತ್ತಮ ವ್ಯಾಖ್ಯೆಯನ್ನು ಅರಿಸ್ಟಾಟಲರ ರೆಟರಿಕ್ (ಅಲಂಕಾರ ಶಾಸ್ತ್ರ) ಎಂಬ ಗ್ರಂಥದಲ್ಲಿ ಕಾಣಬಹುದು. “ನಮ್ಮ ಒಡೆತನದಲ್ಲಿರುವ ಸಂಗತಿಗಳು ಒಂದೋ ಉತ್ತಮ ಫಲಿತಾಂಶ ನೀಡುವ ಉಪಯುಕ್ತ ಕಾರ್ಯಗಳು ಇಲ್ಲವೇ ರಂಜನೆಯನ್ನು ನೀಡುವ ಉದಾರ ಕಾರ್ಯಗಳಾಗಿವೆ. ಉಪಯುಕ್ತ ಸಂತಿಗಳು ಎಂಬುದರ ತಾತ್ಪರ್ಯ ಲಾಭಜನಕತೆಯಾಗಿದ್ದು ಉದಾರ ಎಂಬ ವಿಶೇಷಣದ ತಾತ್ಪರ್ಯ ಬಳಕೆಗೆ ಹೊರತಾದ ಬೇರೆ ಪರಿಣಾಮಗಳ ಅಭಾವವಾಗಿದೆ.”
ಹಾಗಾಗಿ, ಉದಾರ ಶಿಕ್ಷಣ ಎಂಬ ಪರಿಕಲ್ಪನೆಯು ವಿದ್ಯಾರ್ಥಿಯು ಜ್ಞಾನದ ಆವಾಹನೆಗೆ ಅಣಿಯಾಗುವ, ಶಿಕ್ಷಕ ಅದಕ್ಕಾಗಿ ವಿದ್ಯಾರ್ಥಿಯನ್ನು ಸಜ್ಜಾಗಿಸುವ, ಅದರ ವಿವಿಧ ಹಂತಗಳಿಗನುಗುಣವಾಗಿ ಅರಿವು ಪ್ರದಾನಿಸುವ, ಅದಕ್ಕೋಸ್ಕರ ಅನುಬೋಧೆಯ (apperception) ವಿಧಾನ ಮತ್ತು ವಿನ್ಯಾಸವನ್ನು ಬಳಸುವ, ಜೀವನೋಪಾಯದ ಬದಲು ಅರಿವೇ ಗುರಿಯಾಗಿರುವ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎನ್ನಬಹುದು. ಈ ಹಂತದಲ್ಲಿ ಉತ್ತೀರ್ಣರಾದರೆ ನೈಜ ಕಲಿಕೆಯನ್ನು ಆರಂಭಿಸಬಹುದು. ಉಪಾಧ್ಯಯನ (didactic) ಘಟ್ಟ ಮುಕ್ತಾಯವಾದರೆ ಭಾವ ಪ್ರಸೂತಿಕ (maieutic) ಅಧ್ಯಯನ ಆರಂಭವಾಗುವಂತೆ. ಈ ಮೂಲಕ ಜೀವನಾಧಾರಕ್ಕಾಗಿ ಶಿಕ್ಷಣ ಎಂಬ ಕಲ್ಪನೆಯಾಚೆಗೆ ಲಕ್ಷ್ಯಾಧಾರಿತ ಸಂತೃಪ್ತ ಜೀವನದ ಕಲೆಯನ್ನು ಕರಗತ ಮಾಡಲು ನಮಗೆ ಸಾಧ್ಯವಾಗುತ್ತದೆ.
ಸಜ್ಜುಗೊಳಿಸುವಿಕೆಯನ್ನು ವಿವರಿಸುವ ಇಸ್ಲಾಮಿಕ ಲೋಕದ ಅಕ್ವಿನಾಸ್ ಎಂದೇ ಖ್ಯಾತರಾದ ಏಳನೆಯ ಶತಮಾನದಲ್ಲಿ ಜೀವಿಸಿದ ಮಹೋನ್ನತ ತತ್ವಚಿಂತಕ ಇಮಾಂ ಗಝ್ಝಾಲಿಯವರ ಗುರುವರ್ಯ ‘ಇಮಾಂ ಅಲ್ ಜುವೈನಿ’ ಯವರ ಅಭಿವ್ಯಕ್ತಿಯೊಂದನ್ನು ಮುಂದಿಡಲು ಬಯಸುತ್ತೇನೆ. ಜುವೈನಿಯವರು ಹೇಳುತ್ತಾರೆ:
“ಆರು ಘಟಕಗಳ ಅಭಾವದಲ್ಲಿ ಜ್ಞಾನಾರ್ಜನೆ ಕೈಗೂಡದು. ಅದರ ಸಂಕ್ಷೇಪ ಹೀಗಿದೆ; ಕುಶಾಗ್ರ ಚಿತ್ತ, ಅದಮ್ಯ ಹುರುಪು, ಅನ್ಯ ದೇಶ, ಕಠಿಣ ಪ್ರಯತ್ನ, ಉಪನ್ಯಾಸಕರ ಪ್ರೋತ್ಸಾಹ, ದೀರ್ಘ ಕಾಲಾವಧಿ.”
ಆಸಕ್ತಿದಾಯಕ ವಿಷಯವೇನೆಂದರೆ, ಮುಸಲ್ಮಾನರ ಕೃತಿಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ದ್ವಿಪದಿಯ ಆಶಯ ಸ್ವಲ್ಪ ಬದಲಾವಣೆಗಳೊಂದಿಗೆ ಎಪ್ಪತ್ತು ಸಂವತ್ಸರಗಳ ಅನಂತರ ಲ್ಯಾಟಿನ್ ಭಾಷೆಯಲ್ಲಿಯೂ ಮೂಡಿಬಂತು. ಇದನ್ನು ಅನುವಾದಿಸಿದ ಚಾರ್ಟರ್ಸಿನ ಬರ್ನಾರ್ಡ್ ಬರೆದದ್ದು ಹೀಗೆ:
“Mens humilis, stadium quaerendi, vita quieta, Scrutinium tacitum, paupertas, terra aliena. ವಿನಯಾನ್ವಿತ ಮನಸ್ಸು, ಕಲಿಕೆಯಲ್ಲಿ ಹುರುಪು, ಶಾಂತ ಜೀವನ, ಮೌನ ಅನ್ವೇಷಣೆ, ದಾರಿದ್ರ್ಯ, ವಿದೇಶಿ ಮಣ್ಣು.”
ನಾಗರಿಕತೆಗಳು ಹುಟ್ಟುವುದು ಮೂಲಗ್ರಂಥಗಳ ಸೆರಗಿನಲ್ಲಿ. ಹೋಮರ್ ಇಲ್ಲದಿದ್ದಲ್ಲಿ ಸೊಲೊನ್ ಪೆರಿಕಲ್ಸರ ಏಥೆನ್ಸ್ ಇರುತ್ತಿರಲಿಲ್ಲ. ಸಾಕ್ರೆಟಿಸ್, ಪ್ಲಾಟೊ, ಅರಿಸ್ಟೊಟಲರ ಏಥೆನ್ಸ್ ಕೂಡಾ ಕನ್ನಡಿಯ ಗಂಟಾಗುತ್ತಿತ್ತು. ಬೈಬಲ್ ಹಳೆಯ ಒಡಂಬಡಿಕೆ ಉನ್ನತ ಯಹೂದಿ ವಿದ್ವತ್ ಪರಂಪರೆ ಮೂಡಿ ಬರಲು ಕಾರಣವಾಯಿತು. ಲ್ಯಾಟಿನ್ ಭಾಷೆಗೆ ಅದು ಭಾಷಾಂತರಗೊಳ್ಳುವುದರೊಂದಿಗೆ ವೈಶಿಷ್ಟ್ಯಪೂರ್ಣವಾದ ಐರೋಪ್ಯ ಕ್ರಿಶ್ಚಿಯಾನಿಟಿಯ ಉದಯವಾಯಿತು. ಕ್ರೈಸ್ತರು ಏಥೆನ್ಸನ್ನು ಮಗದೊಮ್ಮೆ ಅಪ್ಪಿಕೊಂಡಾಗ ಏಥೆನ್ಸ್ ಮತ್ತು ಜೆರುಸಲೇಂ ಒಂದುಗೂಡಿ ಅಸಾಮಾನ್ಯ ಸಂಶ್ಲೇಷಣೆಯೊಂದು ಜರುಗಿತು. ಯವನ ತತ್ವಚಿಂತನೆ ಮತ್ತು ಕ್ರಿಶ್ಚಿಯಾನಿಟಿಯೆ ಪಾಶ್ಚಾತ್ಯ ನಾಗರಿಕತೆಯ ಆಧ್ಯಾತ್ಮಿಕ ತಳಹದಿ. ಈಯೆರಡು ಪರಂಪರೆಗಳು ಅಸಡ್ಡೆಯಿಂದ ಕೊಳೆತು ಅವನತಿಯ ಹಾದಿ ಹಿಡಿದಾಗ ಬುದ್ಧಿ ಮತ್ತು ದಿವ್ಯಬೋಧನೆಗಳ ಬೆಳಕು ಕ್ಷೀಣವಾಯಿತು. ಈ ಬೆಳಕಿನಿಂದ ವಂಚಿತರಾದ ತಲೆಮಾರು ವಿವಿಧ ಹಾನಿಗಳನ್ನು ಎದುರಿಸುತ್ತಿದ್ದು ಸಾಮಾಜಿಕ ಮೂಲರಚನೆಯನ್ನು ನೇಯ್ದ ಆಧ್ಯಾತ್ಮಿಕ ಬೆಸುಗೆಯ ಬಾಷ್ಪೀಕರಣ ನಡೆದಿದೆ.
ಎಂಟನೆಯ ಶತಮಾನದ ಹೊಸತರಲ್ಲಿ ಆರಂಭಗೊಂಡ ಇಸ್ಲಾಮೀ ನಾಗರಿಕತೆ ಕೂಡಾ ಪಾಶ್ಚಾತ್ಯ ನಾಗರಿಕತೆಗೆ ಸಮಾನಾಂತರವಾಗಿ ಪ್ರಯಾಣಿಸತೊಡಗಿತ್ತು. ಕೆಲವು ಸಂದರ್ಭಗಳಲ್ಲಿ ಎದುರುಬದುರಾಗಿದ್ದೂ ಇದೆ. ಕ್ರೈಸ್ತ ನಾಗರಿಕತೆಯ ಹಾಗೆ, ಇಸ್ಲಾಮೀ ನಾಗರಿಕತೆಯ ಬುನಾದಿಯಾಗಿ ಜ್ಞಾನ, ಕಲಿಕೆ ಮತ್ತು ಭಕ್ತಿಯೆಡೆಗಿನ ಕರೆಯನ್ನು ಎದೆಯಲ್ಲಿ ಹುದುಗಿಸಿಕೊಂಡಿರುವ ಗ್ರಂಥವೊಂದರ ಸಾನಿಧ್ಯವಿದೆ; ಖುರ್‌ಆನ್. ಜ್ಞಾನ ಎಂಬ ಪದವನ್ನು ಖುರ್‌ಆನ್ ನೂರಕ್ಕಿಂತಲೂ ಹೆಚ್ಚು ಬಾರಿ ಪುನರಾವರ್ತಿಸಿದೆ. ಚಿಂತನೆಯ ಕುರಿತು ಅರುವತ್ತೆಂಟು ಸಲ ಪರಾಮರ್ಶಿಸಿದೆ. ಪ್ರವಾದಿ ಮುಹಮ್ಮದ(ಸ.ಅ)ರಿಗೆ ಅವತೀರ್ಣವಾದ ಪ್ರಥಮ ದಿವ್ಯ ವಚನ ‘ಓದಿರಿʼ ಎಂದಾಗಿತ್ತು. “ಪ್ರತಿ ಮುಸ್ಲಿಂ ಸ್ತ್ರೀಪುರುಷರಿಗೆ ಜ್ಞಾನಾರ್ಜನೆ ಕಡ್ಡಾಯವಾಗಿದೆ” ಎಂಬುದು ಅವರ ಉವಾಚ. ಚೀನಾಕ್ಕೆ ಹೋಗಿಯಾದರೂ ಕಲಿಯಿರೆಂದು ಅವರು ಮತ್ತೊಂದೆಡೆ ಹೇಳಿದ್ದಾರೆ.
ಏಥೆನ್ಸ್ ಮತ್ತು ಮದೀನಾದ ನಡುವಿನ ಸಂಶ್ಲೇಷಣಾ ಬೀಜವನ್ನು ಪೈಗಂಬರರ ಕಾಲದಲ್ಲೇ ಬಿತ್ತಲಾಗಿತ್ತು. ಬ್ರಿಟನ್ನಿನ ಆಂಗ್ಲೋ ಸ್ಯಾಕ್ಷನ್ ಜನತೆಯನ್ನು ಅಧಾರ್ಮಿಕತೆ ಮತ್ತು ಪ್ರಾಚೀನತೆಯ ಕೂಪದಿಂದ ಜಗತ್ತಿನ ಅತ್ಯಂತ ವಿದ್ಯಾಸಂಪನ್ನ ವಿಭಾಗವನ್ನಾಗಿ ಪರಿವರ್ತಿಸಿದ ಗ್ರೆಗೊರಿಯನ್ ದೌತ್ಯವನ್ನು ಜಾರಿ ಮಾಡಿದ ಯೂರೋಪಿನ ಖ್ಯಾತ ಪೋಪ್ ‘ಗ್ರೆಗರಿ ದ ಗ್ರೇಟ್’ ರ ಕಾಲವಾಗಿತ್ತದು. ಬೈಬಲ್ ಧರ್ಮೋಪದೇಶಕಾಂಡ ೧೮:೧೮ ರಲ್ಲಿ ಹೀಗಿದೆ, “ನಿಮ್ಮನ್ನು(ಮೂಸಾ,ಮೋಸಸ್) ಹೋಲುವ ಪೈಗಂಬರ್(ಮುಹಮ್ಮದ್) ರನ್ನು ನಾವು ನಿಯೋಜಿಸಲಿದ್ದೇವೆ.” ಮೋಸಸ್ ಪರಂಪರೆಯ ವಾರಸುದಾರರೆಂಬಂತೆ ಮದೀನಾ ತಲುಪಿದ ಹೊಸತರಲ್ಲಿ ಪೈಗಂಬರ್ ಮುಹಮ್ಮದ(ಸ.ಅ)ರು ಯಹೂದಿಗಳೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸಿದ್ದರು. ಆರಂಭದಲ್ಲಿ ಸಕಾರಾತ್ಮಕ ಸ್ಪಂದನೆ ನೀಡಿದ್ದರೂ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅವರು ಕೊನೆವರೆಗೂ ಹಠಮಾರಿಗಳಾಗಿ ಉಳಿದರು ಎನ್ನಬಹುದು. ತಮ್ಮ ಗ್ರಂಥಗಳಲ್ಲೆ ಇರುವ ಪೈಗಂಬರರ ಕುರಿತಾದ ಭವಿಷ್ಯ ನುಡಿಗಳನ್ನು ಅರ್ಥಮಾಡುವ ಗೊಡವೆಗೆ ಅವರು ಹೋಗಲಿಲ್ಲ. ಪೈಗಂಬರರು ನಂತರ ಮೈತ್ರಿ ಮಾಡಲು ಮುಂದಾದದ್ದು ಕ್ರೈಸ್ತರೊಂದಿಗೆ. ಗ್ರೀಕ್ ಕ್ರೈಸ್ತರು ಮತ್ತು ಪರ್ಷಿಯನ್ ಪಾಗನ್‌ಗಳ ನಡುವೆ ಯುದ್ಧ ನಡೆದಾಗ ಪೈಗಂಬರರು ಗ್ರೀಕ್ ಪಕ್ಷಕ್ಕೆ ಬೆಂಬಲ ನೀಡಿದರು. (ಯಹೂದಿಗಳು ಪರ್ಶಿಯನ್ ಪಾಗನ್ನರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು ಎಂಬುದು ಗಮನಾರ್ಹ)
ಇಪ್ಪತ್ತನೆಯ ಶತಮಾನದ ಬ್ರಿಟಿಷ್ ವಿದ್ವಾಂಸ ಎ. ಜೆ ಆರ್ಬರಿ ಖುರ್‌ಆನಿನ ಮೂವತ್ತನೆಯ ಅಧ್ಯಾಯ “ರೂಮ” ನ್ನು ಗ್ರೀಕ್ ಎಂದು ಅನುವಾದಿಸಿದ್ದು ಸರಿಯಾಗಿಯೆ ಇದೆ. ಅವರು ಭಾಷಾಂತರಿಸಿದ ಆ ಅಧ್ಯಾಯದ ಪ್ರಾರಂಭ ಹೀಗಿದೆ:
“ಅಲಿಫ್ ಲಾಮ್ ಮೀಮ್, ಗ್ರೀಕರು ಸೋಲನ್ನಪ್ಪಿದ್ದಾರೆ ನಿಮ್ಮ ನೆರೆಯ ಭೂಮಿಯಲ್ಲಿ ಸೋಲಿನ ತರುವಾಯ ಅವರು ಜಯಶಾಲಿಗಳಾಗಲಿದ್ದಾರೆ ಆದೇಶ ಮಾಡುವ ಅಧಿಕಾರ ಅವನದ್ದು ಹಿಂದೆ ಮತ್ತು ಮುಂದೆಯೂ ಆ ದಿನ ವಿಶ್ವಾಸಿಗಳು ಆನಂದಿಸಲಿದ್ದಾರೆ ದೇವರ ಸಹಾಯದಿಂದ ಅವನು ಅವನಿಚ್ಛಿಸುವವರಿಗೆ ಸಹಾಯವನ್ನೀಯುವನು ಅವನು ಸರ್ವಶಕ್ತನು, ಪರಮ ಕರುಣಾಮಯಿ.”
ಪಾಗನ್ ಪರ್ಶಿಯನ್ನರ ವಿರುದ್ಧ ಬೈಬಲ್ ಜಯಭೇರಿ ಬಾರಿಸಿದಾಗ ವಿಶ್ವಾಸಿಗಳು ಆನಂದ ತುಂದಿಲರಾದರು. ಕಂಝುಲ್ ಉಮ್ಮಾಲ್ ವರದಿ ಮಾಡಿದ ಹದೀಸೊಂದರಲ್ಲಿ ಪೈಗಂಬರ್ ಹೇಳತ್ತಾರೆ, “ಒಳಿತು ಲೋಕದಲ್ಲಿ ಉಳಿಯುವ ವರೆಗೆ ಗ್ರೀಕರು ನಿಮ್ಮ ಮಿತ್ರರಾಗಿರುತ್ತಾರೆ.” ಮತ್ತೊಂದೆಡೆ “ಹಿಕ್ಮತ್ ಅಥವಾ ತತ್ವಗಳು (ಗ್ರೀಕರ ಆಪ್ತ ವಿಷಯ) ಸತ್ಯ ವಿಶ್ವಾಸದ ಕಳೆದು ಹೋದ ವಾಹನ. ಎಲ್ಲಿ ಪತ್ತೆಯಾದರೂ ಅದನ್ನು ಸ್ವಾಧೀನಪಡಿಸುವ ಹಕ್ಕುಬಾಧ್ಯತೆ ಅವರಿಗೆ ಇದೆ” ಎಂದು ಹೇಳಿದ್ದಾರೆ. ಪೈಗಂಬರರ ಕಾಲಾನಂತರದ ಮುಸಲ್ಮಾನರ ತಲೆಮಾರು ಗ್ರೀಕ್ ಚಿಂತನೆಗಳನ್ನು ಹೀರಿಕೊಂಡರು. ಗ್ರೀಕ್ ತತ್ವಚಿಂತನೆಗಳ ಪ್ರಭಾವ ಹೆಚ್ಚುತ್ತಾ ಬಂದು ಪೈಗಂಬರರು ಕಲಿಸಿದ ಸರಳ ಸೆಮಿಟಿಕ್ ಸತ್ಯಗಳನ್ನು ಕೂಡಾ ಸದೆಬಡಿದು ಮುನ್ನುಗ್ಗುವ ಹಂತಕ್ಕೆ ತಲುಪಿತ್ತು. ವಿಚಾರವಾದಿಗಳು ಮದೀನಾದ ಎದುರು ಏಥೆನ್ಸಿನ ಪರ ನಿಂತರು. ಆದಾಗ್ಯೂ, ಈ ಬೆಳವಣಿಗೆಯ ವಿರುದ್ಧ ಒಡಮೂಡಿದ ಸುನ್ನಿ ಪ್ರತಿಕ್ರಿಯೆ ಗೀಕ್ ಪ್ರಣೀತ ಅರಿವುಗಳ ಒಳಿತಾದ ಆಯಾಮಗಳನ್ನು ಒಳಗೊಳ್ಳಲು ಹಿಂದೆ ಮುಂದೆ ನೋಡಿರಲಿಲ್ಲ. ಅವರು ಉತ್ಪಾದಿಸಿದ ಕೂಲಂಕಷ ರೀತಿ ವಿಜ್ಞಾನ ದಿವ್ಯಬೋಧನೆಗೆ ಅದರ ವಿಚಾರ ವ್ಯಾಪ್ತಿಯಲ್ಲಿ ಇರುವ ಪರಮಾಧಿಕಾರವನ್ನು ಪುರಸ್ಕರಿಸಿತು ಮತ್ತು ಬುದ್ಧಿಗೆ ತಕ್ಕುದಾದ ಸ್ಥಾನಮಾನವನ್ನೂ ನೀಡಿತು. ಹಾಗೆ ಹೊರಹೊಮ್ಮಿದ ಸಂಶ್ಲೇಷಣಾತ್ಮಕ ಸುನ್ನಿ ವಿಧಾನಶಾಸ್ತ್ರ ಪ್ರಕೃತಿ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ದಿವ್ಯದರ್ಶನಾಧಾರಿತ ತಾತ್ವಿಕ ಸಿದ್ಧಾಂತ (metaphysics) ಕ್ಷೇತ್ರಗಳಲ್ಲಿ ಬುದ್ಧಿಯ ಪಾತ್ರವನ್ನು ಸಮರ್ಪಕವಾಗಿ ಗುರುತಿಸುವುದರೊಂದಿಗೆ ಬುದ್ಧಿಯ ವಿಚಾರ ವ್ಯಾಪ್ತಿಯ ಹೊರಗಿನ ವಿಷಯಗಳಲ್ಲಿ ದೇವದತ್ತ ತಥ್ಯಗಳ ಮಹತ್ವವನ್ನೂ ಸಮರ್ಥಿಸಿತು. ಮುಸ್ಲಿಂ ನಾಗರಿಕತೆ ಶತಮಾನಗಳ ಕಾಲ ಎತ್ತರಕ್ಕೆ ಹಾರುತ್ತಾ ಹೋಗಿದ್ದು ಈಯೆರಡು ರೆಕ್ಕೆಗಳನ್ನು ಬಳಸಿಕೊಂಡಾಗಿತ್ತು.
ಜ್ಞಾನದ ಹುಡುಕಾಟವು ಬಿಟ್ಟಿರಲಾಗದ ಹವ್ಯಾಸವಾಗಿ ಮುಸ್ಲಿಂ ಜಗತ್ತನ್ನು ಹಚ್ಚಿಕೊಂಡಿತ್ತು. ಇಸ್ಲಾಮಿ ನಾಗರಿಕತೆ ಜಾಗತಿಕ ಚರಿತ್ರೆಯಲ್ಲಿ ಅದ್ವಿತೀಯ ವೈಶಿಷ್ಟ್ಯತೆಯನ್ನು ಪಡೆಯಲು ಜ್ಞಾನದ ಆವಿಷ್ಕಾರ, ಸಂರಕ್ಷಣೆ ಮತ್ತು ಪ್ರಸಾರದ ವಿಷಯದಲ್ಲಿ ಅದು ವಹಿಸಿರುವ ಕಾಳಜಿಯೆ ಮುಖ್ಯ ಕಾರಣ ಎಂದು ಯಹೂದಿ ಇತಿಹಾಸಕಾರ ಫ್ರಾನ್ಝ್ ರೊಸೆಂತಲ್ ತಮ್ಮ ‘ನಾಲೆಜ್ ಟ್ರಯಂಫೆಂಟ್’ ಎಂಬ ಕೃತಿಯಲ್ಲಿ ವಾದಿಸಿದ್ದಾರೆ. ಆದರೆ ವಿಜ್ಞಾನದ ಪರಿಕಲ್ಪನೆ ಮನುಷ್ಯನ ವಿಶ್ವಾಸ, ಸರಿತಪ್ಪುಗಳ ಕುರಿತ ಅವನ ವಿವೇಚನೆ ಮತ್ತು ಅವನು ಜೀವನದಲ್ಲಿ ಪಾಲಿಸಲು ಬಯಸುವ ಆದರ್ಶಗಳು ಇವನ್ನೆಲ್ಲಾ ಒಳಗೊಳ್ಳುತ್ತವೆ. ಆದುದರಿಂದಲೇ, ಶಿಕ್ಷಣ ಎಂಬ ಕಲ್ಪನೆಯು ಮನುಷ್ಯನ ನೈತಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಅಡಕಗೊಳಿಸಿದ ವಿಚಾರವಾಗಿದೆ.
ಯುಗೇನ್ ಎ ಮೈಯರ್ಸ್ ತನ್ನ “ಅರಬಿಕ್ ಥಾಟ್ ಏಂಡ್ ವೆಸ್ಟೆರ್ನ್ ವರ್ಲ್ಡ್” ಎಂಬ ಗ್ರಂಥದಲ್ಲಿ ಇಮಾಮ್ ಗಝ್ಝಾಲಿಯವರ ಕುರಿತು ಈ ಕೆಳಗಿನಂತೆ ವಿವರಿಸಿದ್ದಾರೆ:
“ಶಿಕ್ಷಣ ಮತ್ತು ಘನ ನೈತಿಕ ವ್ಯವಸ್ಥೆಯ ಮಧ್ಯೆ ಜೈವಿಕವಾದ ಬೆಸುಗೆ ಸಾಧಿಸಿದ್ದು ಇಮಾಮ್ ಗಝ್ಝಾಲಿಯವರು ಇಸ್ಲಾಮಿಗೆ ನೀಡಿದ ಉನ್ನತ ಕೊಡುಗೆ. ಆಧ್ಯಾತ್ಮಿಕ ಮತ್ತು ನೈತಿಕ ಪುನಶ್ಚೇತನವಿಲ್ಲದೆ ಕೇವಲ ಐಹಿಕ ಗಳಿಕೆಯಿಂದ ಸೌಖ್ಯ ದೊರೆಯದು ಎಂದು ಅವರು ಕಲಿಸಿದರು. ಹಾಗಾಗಿ ಶಿಕ್ಷಣ ಜ್ಞಾನ ಪ್ರಸಾರದಲ್ಲಿ ಮಾತ್ರ ನಿಯಮಿತವಾಗದೆ ವ್ಯಕ್ತಿಯ ನೈತಿಕ ಪ್ರಜ್ಞೆಯನ್ನು ಉತ್ತೇಜಿಸುವಂತಾಗಬೇಕು.”
ಮುಂದುವರಿದು ಅದೇ ಪುಸ್ತಕದಲ್ಲಿ ಮುಸಲ್ಮಾನರ ಮೇಲೆ ಏಥೆನ್ಸ್ ಬೀರಿದ ಪ್ರಭಾವವನ್ನು ಹೊರಗೆಡಹಿದ್ದಾರೆ ಮೈಯರ್ಸ್. ಕ್ರಿಸ್ತ ಶಕ ೬೫೦-೧೦೦೦ ಇಸವಿಯ ನಡುವೆ ಗ್ರೀಕ್ ವಿಜ್ಞಾನ, ಗಣಿತಶಾಸ್ತ್ರ, ತರ್ಕಪದ್ಧತಿ ಮತ್ತು ತತ್ವಜ್ಞಾನ ರಂಗದ ಶ್ರೇಷ್ಠ ಕೃತಿಗಳು ಅರಬಿ ಭಾಷೆಗೆ ಭಾಷಾಂತರಗೊಂಡಿತ್ತಲ್ಲವೇ. ಬೈಝಾಂಟಿಯನ್ ಪರಂಪರೆಯಲ್ಲಿ ಜ್ಞಾನಾರ್ಜನೆ ಮಾಡಿದ್ದ ಅರೇಬ್ಯನ್ ಕ್ರೈಸ್ತರು ಕೂಡಾ ಪಾಲ್ಗೊಂಡಿದ್ದ ಬೃಹತ್ ಮಟ್ಟದ ಚಾರಿತ್ರಿಕ ಭಾಷಾಂತರ ಚಳುವಳಿಯು ಮುಸ್ಲಿಂ ಜಗತ್ತಿನಲ್ಲಿ ಪರಿವರ್ತನೆಯ ಗಾಳಿಯನ್ನು ಬೀಸಲು ಶಕ್ತಿಯಿರುವ ಹಲವಾರು ಮೇರುಗ್ರಂಥಗಳನ್ನು ಪರಿಚಯಿಸಿ ಕೊಟ್ಟಿದ್ದೇ ಅಲ್ಲದೆ ಬೌದ್ಧಿಕ ಬಿಕ್ಕಟ್ಟಿನ ಅಲೆಗಳನ್ನೂ ಎಬ್ಬಿಸಿತ್ತು.
ಖುರ್‌ಆನ್ ಮತ್ತು ಸುನ್ನತ್ (ಪೈಗಂಬರರ ಮಾತು, ಕೃತಿ ಮತ್ತು ಮೌನಾನುವಾದಗಳ ಲಿಖಿತ ಮತ್ತು ಶಾಬ್ಧಿಕ ಪರಂಪರೆ) ಗಳ ಮೇಲೆಯೆ ಹೆಚ್ಚು ನೆಚ್ಚಿಕೆ ಇದ್ದುದರಿಂದ ಭಾಷಾಧ್ಯಯನವು ಶೈಕ್ಷಣಿಕ ಕ್ರಮದ ಆದ್ಯಂತ ದಿಕ್ಕನ್ನು ನಿರ್ಣಯಿಸುತ್ತಿತ್ತು. ವ್ಯಾಕರಣ, ಕೋಶವಿಜ್ಞಾನ, ಇಸ್ಲಾಮ್‌ಪೂರ್ವದ ಸಾಹಿತ್ಯ ಸಂಪುಷ್ಟ ‘ಜಾಹಿಲಿಯ್ಯ’ ಕಾವ್ಯಗಳ ಅಧ್ಯಯನ ಮತ್ತು ಸಂರಕ್ಷಣೆ ಆದಿಕಾಲದ ಮುಸಲ್ಮಾನರ ಪಠ್ಯಕ್ರಮದ ಸಿಂಹಭಾಗವನ್ನು ವಶಪಡಿಸಿಕೊಂಡಿತ್ತು. ೧೦೩೭ರಲ್ಲಿ ಕೀರ್ತಿಶೇಷರಾದ ಅವಿಸೆನ್ನ ಯಾನೆ ಇಬ್ನು ಸೀನಾ, ಅರಿಸ್ಟಾಟಲನ ಅಷ್ಟೂ ವಾಙ್ಮಯವನ್ನು ಅರೆದು ಕುಡಿದು ‘ಕಿತಾಬು ಶಿಫಾ’ ಎಂಬ ಉದ್ಗ್ರಂಥವನ್ನೆ ಬರೆದರು. ಈ ಗ್ರಂಥದಲ್ಲಿ ಅವರು ಕೆಲವೆಡೆ ಅರಿಸ್ಟಾಟಲಿಯನ್ ನಿರ್ಣಯಗಳಿಂದ ದೂರ ಸರಿದಿದ್ದಾರೆ. ಇನ್ನೂ ಕೆಲವೆಡೆ ಸದ್ರಿ ಚಿಂತಕರ ವೀಕ್ಷಣೆಗಳನ್ನು ಪರಿಷ್ಕರಿಸಿದ್ದಾರೆ. ಆದುದರಿಂದ, ಶಿಫಾ ಗ್ರಂಥ ಅರಿಸ್ಟಾಟಲ್ ಬರೆದ “ದ ಆರ್ಗನನ್” ಗ್ರಂಥದ ಅವಿಸೆನ್ನನ್ ಆವೃತ್ತಿ ಎಂದರೆ ತಪ್ಪಿಲ್ಲ. ಶಿಫಾ ಒಂದು ಪ್ರಧಾನ ಗ್ರಂಥವೆನಿಸಿದ್ದು ಪೌರ್ವಾತ್ಯ ಮುಸಲ್ಮಾನರಿಗೆ ಮಾತ್ರವಲ್ಲ, ಲ್ಯಾಟಿನ್ ಅನುವಾದ ಹೊರಬಂದಾಗ ಪಶ್ಚಿಮ ಯೂರೋಪಿನ ಕ್ರೈಸ್ತರು ಕೂಡಾ ಅದನ್ನು ನೆಚ್ಚುವಂತಾಯಿತು. ಅಲ್ ಶಿಫಾದ ಚರ್ಚೆಯನ್ನೆ ಬೆಳೆಸಿಕೊಂಡು ಗಝ್ಝಾಲಿ ಇಮಾಮರು ಪ್ರಭಾವಶಾಲಿಯಾದ ಮತ್ತೊಂದು ಗ್ರಂಥವನ್ನು ರಚಿಸಿದರು, ‘ಮಖಾಸಿದುಲ್ ಫಲಾಸಿಫ’. ಈ ಗ್ರಂಥವು ಅರಿಸ್ಟಾಟಲ್ ಸ್ಥಾಪಿಸಿದ ಪರಿವ್ರಾಜಕ ಪರಂಪರೆಯನ್ನು (peripatetic tradition) ಸರಳ ಭಾಷೆಯಲ್ಲಿ ವಿವರಿಸಿತು. ಅಲ್ ಶಿಫಾ, ಕ್ರೈಸ್ತ ಮತ್ತು ಯಹೂದಿ ದೇವತಾಶಾಸ್ತ್ರೀಯ ತತ್ವಜ್ಞಾನ ಪರಂಪರೆಯನ್ನು ಪ್ರಭಾವಿಸಿದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ತರುವಾಯ ಇಮಾಂ ಗಝ್ಝಾಲಿ ರವರು ದೇವತಾಶಾಸ್ತ್ರ ಮತ್ತು ಕರ್ಮಶಾಸ್ತ್ರಗಳಿಗೆ ತರ್ಕಪದ್ಧತಿ ಪೂರ್ವಾಪೇಕ್ಷಿತ ಎಂದು ಸಮರ್ಥಿಸುತ್ತಾರೆ. ಮಧ್ಯ ಏಷ್ಯಾದಲ್ಲಿ ಅರೇಬಿಕ್ ಅಲಂಕಾರಶಾಸ್ತ್ರದ ಉದಯವಾಗಿ ಅದು ಕೂಡಾ ಇಸ್ಲಾಮಿಕ್ ಪರಂಪರೆಯ ಮೂಲಭೂತ ಪಠ್ಯವಿಷಯಗಳಾದ ವ್ಯಾಕರಣ ಮತ್ತು ತರ್ಕವಿಧಾನದೊಂದಿಗೆ ಸಂಕಲಿತವಾಗುತ್ತದೆ. ಈ ತ್ರಿಪಠ್ಯಗಳು ‘ನಿಮಿತ್ತ ಕಲೆ’ಗಳೆಂದು (ಅಲ್ ಉಲೂಮುಲ್ ಆಲಃ) ಖ್ಯಾತಿ ಪಡೆದಿದ್ದು ಕೆಲವೊಮ್ಮೆ ತ್ರಿಕಲೆಗಳು (ಅಲ್ ಸ್ವಿನಾಅತು ಸಲಾಸತ್) ಎಂದೂ ಕರೆಯಲ್ಪಡುತ್ತದೆ. ಈ ರೀತಿ ಟ್ರೈವಿಯಂ ಮುಸ್ಲಿಂ ವಿದ್ವತ್ ಪರಂಪರೆಯಲ್ಲಿ ಸಂಪೂರ್ಣವಾಗಿ ನಿಗಮಿತಗೊಳ್ಳುತ್ತದೆ. ಅದಾಗ್ಯೂ ಕೇಂದ್ರಸ್ಥಾನ ವ್ಯಾಕರಣಕ್ಕೇ.
ಇಸ್ಲಾಮಿಕ್ ಲೋಕದ ವ್ಯಾಕರಣಜ್ಞರನ್ನು ಇಂದಿನ ಪರಿಭಾಷೆಯಲ್ಲಿ ಭಾಷಾವಿಜ್ಞಾನಿಗಳು(linguist) ಎಂದು ಕರೆಯಬೇಕಿದೆ ಎನ್ನುತ್ತಾರೆ ದ ಫೌಂಡೇಶನ್ಸ್ ಆಫ್ ಗ್ರ್ಯಾಮರ್ ಎಂಬ ಅದ್ವಿತೀಯ ಕೃತಿಯ ಕರ್ತೃ ಜೊನಾಥನ್ ಓವೆನ್ಸ್. ಭಾಷಾಸಂಬಂಧಿಯಾದ ತಾತ್ವಿಕ ಸಮಸ್ಯೆಗಳ ಸಹಿತ ಭಾಷೆಯ ಎಲ್ಲಾ ಆಯಾಮಗಳನ್ನು ಅವರು ಒರೆಗೆ ಹಚ್ಚಿದ್ದರು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದ ಅರಬಿವ್ಯಾಕರಣಜ್ಞರ ಗ್ರಂಥಗಳನ್ನು ಇಂದಿನ ಆಧುನಿಕ ಭಾಷಾವಿಜ್ಞಾನಿಗಳು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂಬುದು ಓವೆನ್ಸ್ ರವರ ಅಂಬೋಣ. ಆ ಮಧ್ಯಕಾಲೀನ ವಿದ್ವಾಂಸರು ಬರೆಯುತ್ತಿದ್ದಂತಹ ವಿಷಯಗಳನ್ನು ಅರ್ಥೈಸಲು ಬೇಕಾದ ವೈಚಾರಿಕ ಮಟ್ಟಕ್ಕೆ ಹತ್ತೊಂಬತ್ತನೆಯ ಶತಮಾನದ ಓರಿಯಂಟಲಿಸ್ಟ್‌ಗಳು ಇನ್ನೂ ತಲುಪಿಲ್ಲ ಎಂಬುದು ಓವೆನ್ಸ್ ವಾದ. ಯಾಕೆಂದರೆ, ಅವರ ಕೊಡುಗೆಗಳನ್ನು ಅರ್ಥೈಸಬಲ್ಲ ಭಾಷಾವಿಜ್ಞಾನ ಇನ್ನೂ ಹೊರಹೊಮ್ಮಿಲ್ಲವಷ್ಟೆ.
ಪಾಶ್ಚಿಮಾತ್ಯ ಪರಂಪರೆಗೆ ಸದೃಶವಾದ ವ್ಯಾಕರಣ ಶಾಲೆಗಳನ್ನು ಮುಸಲ್ಮಾನರು ಸ್ಥಾಪಿಸಿದ್ದರು. ಕಲಿಕೆಯ ಪ್ರಥಮ ಆರು- ಏಳು ವರ್ಷಗಳಲ್ಲಿ ವಿದ್ಯಾರ್ಥಿಗಳು ಖುರಆನ್ ಕಂಠಪಾಠ ಮತ್ತು ವ್ಯಾಕರಣ – ಪದಸಂಪತ್ತಿನ ಅಧ್ಯಯನ ಮಾಡುತ್ತಿದ್ದರು. ‘ಮಕಾಮಾತ್’ ಎಂದು ಕರೆಯಲಾಗುವ ವರ್ಣರಂಜಿತ ಕಾಲ್ಪನಿಕ ಕಥೆಗಳ ಮೂಲಕ ಪದಸಂಪತ್ತಿನ ಬೆಳವಣಿಗೆ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು ಕಥೆಗಳನ್ನು ಮತ್ತು ಪದದ ವ್ಯಾಖ್ಯೆಗಳನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡುತ್ತಿದ್ದರು. ಉದಾರ ಶಿಕ್ಷಣದ ಮತ್ತೊದು ಘಟಕವಾಗಿದೆ ಕ್ವಾಡ್ರಿಯಂ ಎಂದು ಕರೆಯಲಾಗುವ ವೈಚಾರಿಕ ಕಲೆಗಳು(ಅಲ್ ಉಲೂಮುಲ್ ಅಖ್‌ಲಿಯ್ಯ). (ಮುಂದುವರಿಯುವುದು)
ಈ ಟಿಪ್ಪಣಿಯನ್ನು ಬರೆದವನ ಹೆಸರು ನೋಡಿ ನಿಮಗೆ ಕುತೂಹಲವೆನಿಸಬಹುದು. ಬಾಲ್ಯದ ದಿನಗಳಲ್ಲಿ ಓದಿನ ನವಿರಾದ ಪ್ರಪಂಚಕ್ಕೆ ನನ್ನನ್ನು ಆಕರ್ಷಿಸಿ ಮಂತ್ರಮುಗ್ಧಗೊಳಿಸಿದವರು ಸಾಹಿತ್ಯಲೋಕದ ಸುಲ್ತಾನ ವೈಕಂ ಮೊಹಮ್ಮದ್ ಬಶೀರರು. ಅಂತಹಾ ಮೇರು ಪ್ರತಿಭೆಯ ಕುರಿತು ನೆನಪಿಸಿಕೊಳ್ಳದೆ ಇರುವುದು ಅಸಾಧ್ಯದ ಮಾತು. ಅದಕ್ಕೆ ಮನಸ್ಸು ಒಪ್ಪುವುದೂ ಇಲ್ಲ. ಬಶೀರರನ್ನು ನಾನೊಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಸಣ್ಣಪುಟ್ಟ ಅವಕಾಶಗಳು ದೊರೆತಾಗಲೆಲ್ಲಾ ಆ ದೊಡ್ಡ ಮನುಷ್ಯನ ಮುಂದೆ ನಿಂತುಕೊಳ್ಳುವುದು ಹೇಗೆಂಬ ಅಭಿಮಾನ ಮಿಶ್ರಿತ ಭಯದಿಂದ ದೂರವೇ ಉಳಿದುಬಿಡುತ್ತಿದ್ದೆ. ಎದೆಯಾಳದಲ್ಲಿ ಕೊಂಡಾಡುವ ಒಬ್ಬ ವ್ಯಕ್ತಿಯನ್ನು ದೂರದಿಂದಲೇ ನೋಡಿ ಆಸ್ವಾದಿಸುವ ಖುಷಿಯನ್ನು ಕೆಲವೊಮ್ಮೆ ಉಂಡಿದ್ದೆ ಕೂಡ. ಅದೊಂದು ಸೊಗಸಾದ ಅನುಭವ!
ಒಬ್ಬ ಬರಹಗಾರ ಮತ್ತು ಓದುಗನೆಡೆಯಲ್ಲಿ ಭೇಟಿಗೂ ಆಚೆಗೆ ಇರಬಹುದಾದ ಅವಿನಾಭಾವ ಸಂಬಂಧ ನಮ್ಮೆಡೆಯಲ್ಲೂ ರೂಪುಗೊಂಡಿತ್ತು. ಅಲ್ಲಾಹು ಮನುಷ್ಯರಿಗೆ ದಯಪಾಲಿಸಿದ ‘ಲೇಖನಿ’ ಎಂಬ ಸಶಕ್ತ ಆಯುಧವು ಅದೆಷ್ಟು ಮನಸ್ಸುಗಳನ್ನು ಒಂದೇ ದಾರದಲ್ಲಿ ಪೋಣಿಸಿಲ್ಲ ಹೇಳಿ! ಪವಿತ್ರ ಖುರ್‌ಆನಿನ ಮೊದಲ ಅಧ್ಯಾಯದಲ್ಲಿ ಅಲ್ಲಾಹನು ಪ್ರಸ್ತಾಪಿಸಿದಂತೆ ”ಲೇಖನಿಯ ಮೂಲಕ ಬರವಣಿಗೆಯನ್ನು ಭೋದಿಸಿದ ಅವನೆಷ್ಟು ಉತ್ಕೃಷ್ಟನು” ಅಲ್ಲವೇ!
ಮನ್ಸೂರ್ ಹಲ್ಲಾಜ್ ಅವರ ‘ಅನಲ್ ಹಕ್’ ಮತ್ತು ಶಂಕರಾಚಾರ್ಯರ ‘ಅಹಂ ಬ್ರಹ್ಮಾಸ್ಮಿ’ ಎರಡನ್ನೂ ಸಮಾನವೆಂದು ಹೇಳುತ್ತಾ, ‘ಅನರ್ಘ್ಯ ನಿಮಿಷಂ’ ನಂತಹ ರಚನೆಗಳಲ್ಲಿ ತೊಡಗಿಸಿಕೊಂಡ ಆ ವ್ಯಕ್ತಿಯೊಂದಿಗೆ ನನಗಾವ ಸಂಬಂಧ! ಸಿ. ಎನ್. ಅಹ್ಮದ್ ಮೌಲವಿಯಂತಹವರೊಂದಿಗೆ ಸಮಾಲೋಚಿಸಿ, ಕೇವಲ ಖುರ್‌ಆನಿನ ಕೆಲವೊಂದು ತರ್ಜುಮೆಗಳನ್ನು ಓದಿ, ಧರ್ಮದ ಸೂಕ್ಷ್ಮತೆಗಳನ್ನು ಅರ್ಥೈಸುವ ಗೋಜಿಗೆ ಹೋಗದೆ, ಮುಸ್ಲಿಮರ ಆಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಕಟುವಾಗಿ ಟೀಕಿಸಿ, ಲೇವಡಿಮಾಡಿದ ಆ ವ್ಯಕ್ತಿಯ ಮೇಲೆ ಯಾಕೆ ಇಷ್ಟೊಂದು ಅಭಿಮಾನ! ಕೇಶವ್‌ದೇವ್, ತಕಝಿ, ಪೊನ್‌ಕುನ್ನಂವರ್ಕಿ ಮುಂತಾದ ತನ್ನ ಸಮಕಾಲೀನ ಬರಹಗಾರರೊಂದಿಗೆ ಕುಡಿದು ಮದೋನ್ಮತ್ತನಾಗಿ, ಸದಾ ಮದುಬಟ್ಟಲಿನ ಬಗಲಲ್ಲೇ ಬಿದ್ದುಕೊಂಡಿದ್ದ ಬಶೀರರೊಂದಿಗೆ ನನಗೆ ಯಾವ ತೆರನಾದ ಅಭಿಮಾನ!
“ತನ್ನನ್ನು ಕಾಣಲು ಬರುತ್ತಿದ್ದವರನ್ನು ಬೈಗುಳಗಳ ಮಳೆಗರೆದು, ಅವನು ಎಷ್ಟೇ ದೊಡ್ಡ ಮಹಾನುಭಾವನಾಗಿದ್ದರೂ ಮನೆಯ ಮೆಟ್ಟಿಲು ಹತ್ತಲೂ ಬಿಡದೆ ಅವರು ಓಡಿಸುತ್ತಿದ್ದರು. ಕೆಲವೊಮ್ಮೆ ಆ ಬೈಗುಳಗಳಲ್ಲಿ ಅಶ್ಲೀಲ ಪದಗಳೂ ಇರುತ್ತಿದ್ದವು. ಆಗೆಲ್ಲಾ ಅವರು ಮಧ್ಯದ ನಶೆಯಲ್ಲಿರುತ್ತಿದ್ದರು” ಹೀಗೆಂದು ತನ್ನ ಶಿಷ್ಯ ಎಮ್ ಟಿ ವಾದುದೇವನ್ ನಾಯರರಿಂದ ಪರಿಚಯಿಸಲ್ಪಟ್ಟ ಒಬ್ಬ ಗುರು ಶ್ರೇಷ್ಠ!
ಯಾತ್ರೆಯ ಮಧ್ಯೆ ಕಾರು ಕೈಕೊಟ್ಟು ಒಂದೆಡೆ ಬಾಕಿಯಾದಾಗ, ಕಾಗದದಲ್ಲಿ ತಾನು ಸುರುಟಿ ತಂದಿದ್ದ ಮದ್ಯದ ಬಾಟಲಿಯನ್ನು ತೆರೆದು ಕುಡಿಯಲು ನೋಡಿ, ಬಾಟಲಿಯು ಖಾಲಿಯಿರುವುದನ್ನು ಗಮನಿಸಿ ಕೋಪಗೊಂಡು ‘ಹೋಗೋ ನನ್ನ ಸಂಗಾತಿಯನ್ನು ಕರೆದುಕೊಂಡು ಬಾ’ ಎಂದು ಹಾಸ್ಯ ಚಟಾಕಿ ಸಿಡಿಸಿ ಆ ಬಾಟಲಿಯನ್ನು ಹೊರಕ್ಕೆಸೆದ ಪೊನ್ನುಂವರ್ಕಿಯ ಒಬ್ಬ ಆತ್ಮೀಯ ಸ್ನೇಹಿತ!
ಸ್ನೇಹಿತರೊಂದಿಗೆ ಎರ್ನಾಕುಲಂನ ಪುಸ್ತಕದಂಗಡಿಯಲ್ಲಿ ಮಾತುಕತೆಗೆ ಕುಳಿತರೆ ಸೂರ್ಯ ಕ್ಷೀಣಿಸುತ್ತಿದ್ದಂತೆ, ಕುಡಿದು ಮತ್ತನಾಗಿ ದಿನವಿಡೀ ಪಟ್ಟಾಂಗ ಹೊಡೆಯುತ್ತಾ ನಿರ್ಲಜ್ಜನಾಗಿ ಇರುತ್ತಿದ್ದ ‘ತಕಝಿ’ಯ ಸನ್ಮಿತ್ರ ಗೆಳೆಯ! ಈ ಮನುಷ್ಯನೊಂದಿಗೆ ನನಗೆ ಎಲ್ಲಿಯ ನಂಟು! ಯಾವ ರೀತಿಯ ಸಂಬಂಧ! ಏನು ಅಭಿಮಾನ!
ಇದೆ. ಖಂಡಿತಾ ಇದೆ. ಅಭಿಮಾನ, ಸಂಬಂಧ, ನಂಟು ಎಲ್ಲವೂ ಇದೆ. ನಾನು ಹುಟ್ಟಿ ಬೆಳೆದ ಧರ್ಮದ ಭಾಗವಾಗಿರುವ ನನ್ನ ಸಹೋದರನೆಂಬ ಬಾಂಧವ್ಯದ ಬೆಸುಗೆ ಇದೆ. ನಾನೊಬ್ಬ ಮುಸ್ಲಿಂ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಿದ್ದ ಬಶೀರರಲ್ಲಿ ಅಭಿಮಾನವಿದೆ. ಮುಸ್ಲಿಮರ ಆಚಾರ ವಿಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಹೇಳಿದ ಕಥೆಗಾರ ಎಂಬ ಹೆಮ್ಮೆಯೂ ಇದೆ. ‘ಅಂಡಕಡಾಹತ್ತೇಯುಂ ಮಹಾ ಪ್ರಪಂಚತ್ತೇಯುಂ ಸೃಷ್ಟಿಚ್ಚಿ ಪರಿಪಾಲಿಕುನ್ನ ನಾದಾ'(ಅಖಿಲ ಬ್ರಹ್ಮಾಂಡಗಳನ್ನೂ ಮಹಾವಿಶ್ವವನ್ನೂ ಸೃಷ್ಟಿಸಿ ಪರಿಪಾಲಿಸುವ ಪ್ರಭೂ) ಎನ್ನುತ್ತಲೇ ತನ್ನ ಕಥೆಗಳುದ್ದಕ್ಕೂ ಖುರ್‌ಆನಿನ ಒಳತಿರುಳನ್ನು ಓದುಗರ ಚಿತ್ತಪಟಲಕ್ಕೆ ದಾಟಿಸಿದ ಮಾಂತ್ರಿಕ ಕಥೆಗಾರ. ಖುರ್‌ಆನ್, ಹದೀಸುಗಳನ್ನು ಸಾಹಿತ್ಯ ಲೋಕದ ಮುಂದೆ ತೆರೆದಿಟ್ಟ ಪ್ರತಿಭಾಶಾಲಿ. ಸರಳವಾದ ಆಡುನುಡಿಯಲ್ಲಿ ಮುಸ್ಲಿಮರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮತ್ತು ಮುಸ್ಲಿಂ ಮನೆಗಳ ಅಡುಗೆಮನೆಗಳಲ್ಲಿ ಹುಟ್ಟಿಕೊಂಡ ನುಡಿಗಟ್ಟುಗಳನ್ನು ಚಂದಗೆ ಕಟ್ಟಿಕೊಟ್ಟ ಗಾರುಡಿಗ. ಪೂರ್ವಗ್ರಹ ಪೀಡಿತರಾದ ಮನಸ್ಸುಗಳೂ ಒಪ್ಪಿಕೊಳ್ಳುವಂತೆ ಅಕ್ಷರ ಕ್ರಾಂತಿ ನಡೆಸಿದ ವೈಕಂ ಬಶೀರ್. ಅವರಿಗಲ್ಲದೆ ‘ಭಗವದ್ಗೀದೆಯುಂ ಕೊರೇ ಮೊಲೆಗಳುಂ'(ಭಗವದ್ಗೀತೆ ಮತ್ತು ಅನೇಕ ಮೊಲೆಗಳು) ಎಂದು ನಸುನಗುತ್ತಲೇ ಈ ಭವ್ಯ ಭಾರತದ ಮಣ್ಣಿನಲ್ಲಿ ಇದ್ದುಕೊಂಡು ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವರನ್ನು ಮತ್ತೊಬ್ಬರೊಂದಿಗೆ ತುಲನೆಮಾಡುವುದು ಸಾಧ್ಯವಿಲ್ಲ.
ಬಶೀರರ ಕಥೆಗಳನ್ನು ವಿಶ್ಲೇಷಿಸುವ ಯಾವ ಅರ್ಹತೆಯೂ ನನಗಿಲ್ಲ. ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲ ಬಶೀರರ ಕಥೆಗಳು ಭಾಷಾಂತರಗೊಂಡ ಎಲ್ಲಾ ಭಾಷೆಗಳ ಶ್ರೇಷ್ಠ ಕತೆಗಾರರು, ವಿಮರ್ಶಕರು, ಬಶೀರರ ಕಥೆಗಳ ಓಘಕ್ಕೆ ತಲೆದೂಗಿದವರೆ. ಸ್ವತಃ ಕಥೆಗಾರನೂ ಅಚ್ಚರಿಗೊಳ್ಳುವಂತೆ ವೈಕಂ ಬಶೀರರ ಕಥೆಗಳ ವ್ಯಾಪ್ತಿ, ಉದ್ದೇಶ, ಸಂವೇದನೆಗಳೆಲ್ಲವೂ ಓದುಗರು ಮತ್ತು ಕಥೆಗಳನ್ನು ಒರೆಗಲ್ಲಿಗೆ ಹಚ್ಚಿ ನೋಡಿದವರಿಗೆ ದಕ್ಕುತ್ತದೆ ಎನ್ನುವುದೇ ಒಬ್ಬ ಕಥೆಗಾರನ ಗೆಲುವು. ಆ ಗೆಲುವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಕಥೆಗಾರ ವೈಕಂ.
ಸೌಂದರ್ಯಪ್ರಜ್ಞೆಯೆಂದರೆ ಏನೆಂದರಿಯದ ‘ಬಾಲಮಂಗಳ ಅಮರ ಚಿತ್ರಕಥಾ’ ಓದುವ ಪುಟಾಣಿಗಳೂ ಬಶೀರರ ಸಾಹಿತ್ಯದ ಆಸ್ವಾದಕರಾಗಿರುತ್ತಾರೆ. ಆ ಕಾರಣದಿಂದಲೇ ನಾನು ಪಳ್ಳಿದರ್ಸ್ ಕಲಿಯುತ್ತಿರುವ ದಿನಗಳಲ್ಲಿಯೇ ಬಶೀರರ ಕಥೆಗಳನ್ನು ಓದುತ್ತಾ ಬೆಳೆದವನು. ನಾನು ಓದಿರುವ ಕೃತಿಗಳು ಕೆಲವೇ ಕೆಲವೆಂದೂ ಇನ್ನೂ ಹಲವು ಕೃತಿಗಳು ಓದಲು ಬಾಕಿಯಿದೆಯೆಂಬ ನಂಬಿಕೆಯಲ್ಲಿದ್ದೆ. ಆದರೆ ಬಶೀರರ ಅಗಲಿಕೆಯ ಬಳಿಕ ಅವರು ರಚಿಸಿದ ಕೃತಿಗಳು ಮತ್ತು ನಾನು ಓದಿದ ಅವರ ಕೃತಿಗಳನ್ನು ತಾಳೆ ಹಾಕಿ ನೋಡಿದೆ. 32 ಕೃತಿಗಳು. ‘ಬಶೀರರ ಸಮಗ್ರ ಬರಹಗಳು’ ಸಂಪುಟಗಳಲ್ಲದೆ ಉಳಿದೆಲ್ಲವೂ ಓದಿ ಮುಗಿದದ್ದು ಮತ್ತು ಕೆಲವು ಪುನರಾವರ್ತಿಸಿ ಓದಿದ್ದು. ಅಬ್ಬಾ ಎಷ್ಟು ತೂಕದ ಬರಹಗಳಾಗಿದ್ದವು ಅವು!
ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಾದ, ಶಾಲೆಯ ಮೆಟ್ಟಿಲುಗಳನ್ನೇ ಹತ್ತದ ಅಸಂಖ್ಯಾತ ಓದುಗ ವೃಂದವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಶೀರರಿಗೆ ಸಾಧ್ಯವಾಯಿತು. ವಿಭಿನ್ನ ತರಹದ ಓದುಗರು ಮತ್ತು ಅವರೆಲ್ಲರಿಗೂ ಭಿನ್ನವಾಗಿಯೇ ವೇದ್ಯವಾಗುತ್ತಿದ್ದ ಬಶೀರರ ಬರಹಗಳೇ ಒಂದು ಅಚ್ಚರಿ. ಅವರ ಹೊತ್ತಗೆಗಳು ಆವರ್ತಿಸಿ ಓದಿದಂತೆ ನಾನಾರ್ಥಗಳನ್ನು ಸ್ಪುರಿಸುವ ಕಲಾಕುಸುರಿಯಾಗಿತ್ತು. ಆ ಕುಸುರಿಯ ಒಡೆಯರಾಗಿದ್ದರು ಬೇಪೂರಿನ ಸುಲ್ತಾನ ಬಶೀರರು.
ಓ ಎನ್ ವಿ, ಎಮ್ ಟಿ, ಎನ್ ಪಿ ಮೊಹಮ್ಮದ್, ಟಿ ಪದ್ಮನಾಭನ್, ಎಮ್ ಎನ್ ವಿಜಯನ್, ಎಮ್ ಎಮ್ ಬಶೀರ್, ಯು ಎ ಖಾದರ್ ಹಾಗೂ ಇನ್ನಿತರ ಮಲಯಾಳಂ ಸಾಹಿತ್ಯ ಲೋಕದ ದಿಗ್ಗಜರು ತಮ್ಮ ಬರಹಗಳಲ್ಲಿ ತೀರಾ ಸ್ಪರ್ಶಿಸದ ಮತ್ತು ಮಲಯಾಳಂ ಸಾಹಿತ್ಯಕ್ಕೆ ಹೊಸತೆನಿಸುವ ಸಂವೇದನೆಯ ಬರಹಗಳನ್ನು ಹಾಸ್ಯದ ಕುಲುಮೆಯಲ್ಲಿ ಅದ್ದಿತೆಗೆದ ಬಶೀರರನ್ನು ಓದಿಕೊಂಡವರ ಮನಸ್ಸಿನಲ್ಲಿ ಅವರ ಕಥಾಪಾತ್ರಗಳು ಜೀವಂತವಾಗಿರುತ್ತವೆ. ಪುಟಾಣಿ ಮಕ್ಕಳಿಂದ ಹಿಡಿದು ತಾಂಬೂಲ ಜಗಿಯುವ ಅಜ್ಜಂದಿರಿಗೂ ಬಶೀರರ ಕತೆಗಳು ಅಪ್ಯಾಯಮಾನವೆನಿಸುವುದು ಈ ಕಾರಣಕ್ಕೆ.
ನಮ್ಮದೇ ಮನೆಯ ಕಥೆಗಳೆನಿಸುವ ‘ಪಾತುಮ್ಮಾಂಡೆ ಆಡ್’ ಎಂಬ ಕಾದಂಬರಿಯ ನಾಯಕಿ ಎಲ್ಲರ ಮನೆಯ ಪ್ರೀತಿಯ ‘ಪಾತು’ ಆಗಿ ಬದಲಾದದ್ದು ಮತ್ತೊಂದು ಸೋಜಿಗ. ಆಡು ಕರುಹಾಕುವುದನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಕರುವನ್ನು ಮೊದಲು ಕಂಡದ್ದು ನಾನೆಂದು ಕುಣಿದು ಕುಪ್ಪಳಿಸಿ ಕೇಕೆ ಹಾಕುವ ‘ಅಂಬಿ’ ‘ಪಾತುಕುಟ್ಟಿ’ಯಂತಹಾ ಮಕ್ಕಳು ನಮ್ಮ ಮನೆಯ ಮಕ್ಕಳಾಗದೇ ಉಳಿಯುವುದಾದರೂ ಹೇಗೆ! ಆನೆಯ ಬಾಲದ ಎರಡು ರೋಮಕ್ಕಾಗಿ ಅದರ ಬಾಲವನ್ನು ಕಡಿದೇ ಬಿಡುವ ಬಶೀರರ ತುಂಟಾಟ ನಮ್ಮ ಬಾಲ್ಯವನ್ನು, ನಮ್ಮಂಥ ಸಾವಿರಾರು ಮಕ್ಕಳ ಬಾಲ್ಯವನ್ನು ಮತ್ತೆಮತ್ತೆ ನೆನಪಿಸುತ್ತಾ ಸಾಗುತ್ತದೆ.
ಬಶೀರರ ಬರಹಗಳು ಓದಿಕೊಂಡ ಸರ್ವರಿಗೂ ಅವರದ್ದೊಂದು ಗುಣ ಸಹಜವಾಗಿಯೇ ಮನವರಿಕೆಯಾಗುತ್ತದೆ. ಅದು ಭೂಮಿಯಲ್ಲಿರುವ ಸಕಲ ಚರಾಚರಗಳೊಂದಿಗಿನ ಬಶೀರರ ಅಪಾರವಾದ ಪ್ರೀತಿ. ಪ್ರವಾದಿವರ್ಯರು ಒಂದು ಹದೀಸಿನಲ್ಲಿ ಹೀಗೆ ಹೇಳುತ್ತಾರೆ; “ಸಕಲ ಚರಾಚರಗಳೊಂದಿಗೂ ಕರುಣೆಯನ್ನು ತೋರಲು ಅಲ್ಲಾಹು ಅಜ್ಞಾಪಿಸಿದ್ದಾನೆ. ಆಹಾರಕ್ಕಾಗಿ ಮೃಗಗಳನ್ನು ದ್ಸಬಹ್ ಮಾಡುವಾಗಲೂ ನೀವು ದ್ಸಬಹಿನ ರೀತಿಯನ್ನು ಸರಳೀಕರಿಸಿ ಪ್ರಾಣಿಗಳೊಂದಿಗೆ ಕರುಣೆತೋರಿರಿ”(ಗ್ರಂಥ:ಮುಸ್ಲಿಂ) ಈ ಕರುಣೆ ತೋರುವ ಗುಣ ಬಶೀರರಿಗೆ ರಕ್ತಗತವಾಗಿತ್ತು. ಮನುಷ್ಯ, ಪ್ರಾಣಿ, ಪಕ್ಷಿಗಳಾಚೆಗೆ ನಿರ್ಜೀವ ವಸ್ತುಗಳನ್ನು ಕೂಡ ತುಚ್ಛವಾಗಿ ಕಾಣದ ಸ್ವಭಾವವಾಗಿತ್ತು ಬಶೀರರದ್ದು.
ಮೇಲೆ ಉಲ್ಲೇಖಿಸಿದಂತೆ ಬಶೀರರ ಬರಹಗಳ ತುಂಬೆಲ್ಲಾ ಹಾಸ್ಯದ ಪ್ರಭಾವ ಹಾಸುಹೊಕ್ಕಾಗಿ ಕಾಣಸಿಗುತ್ತದೆ. ಸಾಧಾರಣವಾಗಿ ಕೆಲವೊಂದು ಬರಹಗಳಲ್ಲಿನ ಹಾಸ್ಯಗಳು ಓದುಗರಲ್ಲಿ ತಕ್ಷಣದ ನಗುವಿಗೆ ಕಾರಣವಾದರೆ ಬಶೀರರು ಅದಕ್ಕೆ ವಿಪರೀತವೆನಿಸುವಂತಹವರು. ಅವರದು ಉತ್ಕೃಷ್ಟ ಮಟ್ಟದ ಹಾಸ್ಯ. ಮನುಷ್ಯನ ನೋವು ತಾಕಲಾಟಗಳನ್ನು ಹಾಸ್ಯದೊಂದಿಗೆ ಹೇಳುತ್ತಲೇ ಅದಕ್ಕೊಂದು ಗುಳಿಗೆಯನ್ನು ಕೊಡಮಾಡುವ ವಿಶಿಷ್ಟ ತೆರನಾದ ಔಷದೀಯ ಗುಣವುಳ್ಳ ಹಾಸ್ಯವಾಗಿರುವುದರಿಂದಲೇ ಅದನ್ನು’ಉತ್ಕೃಷ್ಟ’ವೆಂದು ಸರಾಗವಾಗಿ ಹೇಳಿಬಿಡಬಹುದು. ಈ ಹಾಸ್ಯದ ಬೆನ್ನುಬೆನ್ನಿಗೆ ಮಿಡಿಯುವ ಮನಸ್ಸು, ಆರ್ದ್ರಗೊಳ್ಳುವ ತಾಯ್ತನ ಎದ್ದುಕಾಣುತ್ತದೆ. ಕಾಂತೀಯ ಗುಣವುಳ್ಳ ಬರಹಗಳಾಗಿ ಬಶೀರರ ರಚನೆಗಳು ಅಚ್ಚರಿ ಹುಟ್ಟಿಸಿರುವುದಕ್ಕೆ ಇದನ್ನೊಂದು ಮುಖ್ಯ ಕಾರಣವಾಗಿ ನಿಸ್ಸಂದೇಹವಾಗಿ ಹೇಳಬಹುದು.
ವೈಕಂ ಮೊಹಮ್ಮದ್ ಬಶೀರರನ್ನು ಸ್ಮರಿಸುವಾಗಲೆಲ್ಲಾ ಜೊತೆಜೊತೆಗೆ ಸುಪ್ರಸಿದ್ಧ ಅರಬಿಕ್ ಸಾಹಿತ್ಯಗಾರರೊಬ್ಬರು ನೆನಪಾಗುತ್ತಾರೆ. ಅವರ ಹೆಸರು ಅಬೂ ನುವಾಸ್( ಹಿಜರಿ:145-195). ವಿಶ್ವವಿಖ್ಯಾತ ಅರಬ್ ನಿಮಿಷ ಕವಿ. ಕವಿಯಾಗಿಯೇ ಜನಿಸಿದವರೆಂದು ಜನಪ್ರಿಯರಾದವರು. ಶುದ್ಧ ಉಂಡಾಡಿಯಂತೆ ಬದುಕಿದ ಅಲೆಮಾರಿ. ನೈತಿಕತೆಯ ಎಲ್ಲೆ ಮೀರಿದ ನಡತೆ, ಮದ್ಯಪಾನ, ಎಲ್ಲಾ ವಿಧದ ಸುಖಲೋಲುಪತೆಯನ್ನು ಅನುಭವಿಸಿದ ವ್ಯಕ್ತಿ. ಬಶೀರರ ಕಥೆಯೊಂದರ ‘ಗಂಡು ವೇಶ್ಯೆ’ಯೊಂದಿಗೆ ಸಮಾನವೆನಿಸು ಸ್ವಭಾವದವರು. ಗೆಳೆಯರೊಂದಿಗೆ ಕುಡಿತದ ಚಟಕ್ಕೆ ಬಲಿಯಾದವರು. ತಾನು ಮದ್ಯಪಾನ ನಿಲ್ಲಿಸಿದೆನೆಂದು ಕೇಳಿ ಅಭಿನಂದಿಸಲು ಬಂದ ಆಗಂತುಕನನ್ನು ಮುಂದೆಯೇ ಕುಳ್ಳಿರಿಸಿ ಗಂಟಲು ಮಟ್ಟ ಕುಡಿದ ವಿಕ್ಷಿಪ್ತ ಜೀವಿ. ಕುಡಿತದ ಮತ್ತಿನಲ್ಲಿರುವಾಗಲೂ ಸರ್ವಶಕ್ತನಾದ ಅಲ್ಲಾಹನ ಕ್ಷಮೆಯನ್ನು ಬಯಸುತ್ತಿದ್ದ ವಿಚಿತ್ರ ವ್ಯಕ್ತಿ. ಅವರ ಒಂದು ಕವಿತೆಯ ಸಾಲುಗಳು ಹೀಗಿವೆ:
‘ಎಷ್ಟು ಪಾಪಗಳನು ಬೇಕಾದರೂ ಮಾಡು, ಕೊನೆಗೆ ತಲುಪಲಿರುವುದು ಪರಮ ದಯಾಮಯನೂ ಪಾಪಮೋಚಕನೂ ಆಗಿರುವ ಪ್ರಭುವಿನ ಸನ್ನಿಧಿಗೆ. ಅಲ್ಲಿ ತಲುಪಿದರೆ ನಿನ್ನ ಎಲ್ಲಾ ಪಾಪಗಳನ್ನೂ ಅವನು ಮನ್ನಿಸಿಬಿಡುವನು, ಕರುಣಾಮಯನಾದ ಮಹಾರಾಜನೂ ಒಡೆಯನೂ ಆಗಿರುವನವನು. ನರಕಕ್ಕಂಜಿ ಇಲ್ಲಿನ ಸುಖಜೀವನವನ್ನು ಕಳೆದುಕೊಂಡರೆ ಪರಮ ದಯಾಳುವಾದ ಅಲ್ಲಾಹನ ಬಳಿ ವಿಷಾದದಿಂದ ಬೆರಳು ಕಚ್ಚಬೇಕಾದೀತು!’
ನುವಾಸರು ಅಲೆಮಾರಿ ಜೀವನ ಸಾಗಿಸಿದವರು. ಅದಾಗ್ಯೂ ಅವರ ಕವಿತೆಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು, ಇಲಾಹಿ ಭೋದನೆಗಳು ಇರುತ್ತಿದ್ದವು. ಈ ಕಾರಣದಿಂದಲೇ ಆ ಕಾಲದ ಸಾಂಪ್ರದಾಯಿಕ ಮುಸ್ಲಿಮರಿಗೆ ಅವರ ವ್ಯಕ್ತಿಜೀವನದ ಬಗೆಗೆ ತಕರಾರು ಇದ್ದರೂ ನುವಾಸರ ಕವಿತೆಗಳಿಂದ ಆಕರ್ಷಿಸಲ್ಪಟ್ಟಿದ್ದರು. ಅಲ್ಲಾಹನ ಮೇಲಿನ ಅವರ ಚಾಂಚಲ್ಯವಿಲ್ಲದ ಅಪಾರವಾದ ನಂಬಿಕೆ, ಭಕ್ತಿ, ಶ್ರದ್ಧೆ ಕವಿತೆಗಳ ಸಾಲುಗಳಲ್ಲಿ ಮಾರ್ದನಿಸುತ್ತಿದ್ದವು. ಇವರ ಸಮಕಾಲೀನರಾಗಿದ್ದ ಸೂಫಿವರ್ಯರೂ, ಆಧ್ಯಾತ್ಮಿಕ ಗುರುಗಳೂ ಆದ ಅಬುಲ್ ಅತ್ವಾಹಿಯ್ಯ ಹೇಳಿದರು; “ಝುಹುದಿನ( ಸರ್ವಸಂಗ ಪರಿತ್ಯಾಗ) ಕುರಿತು ಇಪ್ಪತ್ತು ಸಾವಿರಕ್ಕೂ ಹೆಚ್ಚು ಚರಣಗಳನ್ನು ನಾನು ಹಾಡಿದ್ದೇನೆ. ಅದೆಲ್ಲವೂ ಅಬೂ ನುವಾಸರ ಕೇವಲ ಮೂರೇ ಮೂರು ಸಾಲುಗಳಿಗೂ ಸಮನಾಗಲಾರದು. ಒಮ್ಮೆಯೂ ಸಮನಾಗಲಾರದು” ನುವಾಸರ ಆ ಸಾಲುಗಳು ಹೀಗಿದ್ದವು: “ಓ ನುವಾಸ್, ನೀನು ಅಲ್ಲಾಹನನ್ನು ಭಯಪಡು! ನಿನ್ನ ದುಸ್ಥಿತಿಯಲ್ಲಿ ಮರುಕಪಡು! ಕ್ಷಮಾಶೀಲನಾಗು, ಬದುಕು ನಿನಗೆ ದುಃಖದ ಕೊಡುಗೆ ನೀಡಿದ್ದರೆ ನಿನಗದು ಸಂತೋಷಪಡುವ ಎಷ್ಟೋ ಅನರ್ಘ್ಯ ನಿಮಿಷಗಳನ್ನು ಕೊಟ್ಟಿರಬಹುದು! ಓ ಮಹಾಪಾಪಿ, ನಿನ್ನ ಪಾಪವನ್ನು ನೆನೆದು ಹಿಂಜರಿಯದಿರು, ಅಲ್ಲಾಹನ ಕ್ಷಮೆಯು ನಿನ್ನ ಪಾಪಕ್ಕಿಂತಲೂ ಅದೆಷ್ಟೋ ಮಿಗಿಲಾದದ್ದು”
ಆತ್ಮವಿಮರ್ಶೆಯಿಂದ ಕೂಡಿದ ಈ ಸಾಲುಗಳು ಅಲ್ಲಾಹನ ಕ್ಷಮೆಯಲ್ಲಿ ನಂಬಿಕೆಯಿರಿಸಿದ ಒಬ್ಬ ಭಕ್ತನಿಗಲ್ಲದೆ ಕಟ್ಟಲು ಸಾಧ್ಯವೇ! ನಿಜ, ಎಂಥಹಾ ಆರ್ದ್ರ ಸಾಲುಗಳು!
ಅಬುಲ್ ಅತ್ವಾಯಿಯವರು ನುವಾಸರಲ್ಲಿ ಕೆಡುಕುಗಳಿಂದ ದೂರವಾಗಿ ಸಜ್ಜನಿಕೆಯ ಬಾಳು ನಡೆಸುವಂತೆ ಆಗ್ಗಾಗ್ಗೆ ವಿನಂತಿಸಿಕೊಳ್ಳುತ್ತಿದ್ದರು. ಒಮ್ಮೆ ನುವಾಸರು ತನ್ನ ಗೆಳೆಯನಲ್ಲಿ ಆ ಕುರಿತು ಹೀಗೆ ಹೇಳಿದರಂತೆ: “ಓ ಅಬೂ ಅತ್ವಾಹಿಯ್ಯವರೇ; ನಾನು ಈ ಸುಖಭೋಗದ ಬದುಕಿನಿಂದ ವಿರಮಿಸುತ್ತೇನೆಂದು ನೀವು ಭಾವಿಸುತ್ತೀರಲ್ಲವೇ! ಆರಾಧನೆಯಲ್ಲಿ ಮುಳುಗಿ ನನ್ನ ಹೆಸರು ಮತ್ತು ಖ್ಯಾತಿಯನ್ನು ಕಳೆದುಕೊಳ್ಳುತ್ತೇನೆಂದು!”
ತನ್ನ ಮೇಲಿನ ಆರೋಪವು ಮತ್ತೂ ಗಂಭೀರವಾದಾಗ ಗೆಳೆಯನೊಡನೆ ಅಬು ನುವಾಸ್ ಹಾಡಿದರು: “ದೇಹವು ತನ್ನ ಆತ್ಮಸಾಕ್ಷಿಯ ಕರೆ ಇಲ್ಲದೆ ದುಷ್ಟ ಕಾರ್ಯಗಳಿಂದ ನಿವೃತ್ತಿಯಾಗುವುದಿಲ್ಲ.”
ಇದೇ ಅಬು ನುವಾಸರ ಬಗ್ಗೆ, ಮುಹಮ್ಮದ್ ಇಬ್ನ್ ನಾಫಿಯಾ(ರ) ಹೇಳುತ್ತಾರೆ: “ನುವಾಸರು ನನ್ನ ಆತ್ಮೀಯ ಗೆಳೆಯರಾಗಿದ್ದರು. ದುರಾದೃಷ್ಟವಶಾತ್ ನಮ್ಮ ನಡುವೆ ಸಣ್ಣ ಮನಸ್ತಾಪ ಉಂಟಾಯಿತು. ಈತನ್ಮದ್ಯೆ ಅವರ ಮರಣದ ವಾರ್ತೆ ಕೇಳಿ ದಿಗ್ಬ್ರಾಂತಗೊಂಡೆ. ಆ ದಿನವೆಲ್ಲಾ ನುವಾಸರ ನೆನಪೇ ಮರುಕಳಿಸತೊಡಗಿತ್ತು. ಹೀಗೆ ಅವರ ನೆನಪಲ್ಲಿರಬೇಕಾದರೆ ಸುಸ್ತಾದ ನನ್ನ ಕಣ್ಣುಗಳು ನಿದ್ದೆಯ ಮಂಪರಿಗೆಳೆಯತೊಡಗಿದವು.
ಅದೊಂದು ಪೂರ್ಣ ನಿದಿರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿ. ಅಬೂನುವಾಸರು ತಕ್ಷಣ ಪ್ರತ್ಯಕ್ಷಗೊಂಡರು. ನಾನು ಅವರ ಅಕ್ಕರೆಯ ಹೆಸರಿನಿಂದ ಕರೆದೆ. ‘ಓ ಅಬೂನುವಾಸರೇ!’ ಅವರು ಹೇಳಿದರು; “ಇಲ್ಲಿ ಯಾವುದೇ ಅಕ್ಕರೆಯ ಹೆಸರುಗಳಿಗೆ ಮಾನ್ಯತೆಗಳಿಲ್ಲ”. ಆಗ ನಾನು ಅವರ ‘ಹಸನಿಬ್‌ನ್ ಹಾನಿಅ್’ ಎಂಬ ಮೂಲ ಹೆಸರಿನಿಂದ ಸಂಭೋಧಿಸಿದೆ. ಅವರು ಪ್ರತಿಕ್ರಿಯಿಸಲು ತೊಡಗಿದರು. ನಾನು ಕುತೂಹಲಭರಿತನಾಗಿ ಕೇಳಿದೆ. “ನಿಮ್ಮ ಪರಲೋಕದ ಪರಿಸ್ಥಿತಿ ಹೇಗಿದೆ, ಅಲ್ಲಿಯ ಸ್ಥಿತಿಗತಿಗಳೇನು”. “ಮರಣದ ಕೆಲವು ದಿನಗಳ ಹಿಂದೆ ನಾನು ರೋಗಶಯ್ಯೆಯಲ್ಲಿದ್ದಾಗ ಹಾಡಿದ ಕವಿತೆಯ ಕಾರಣದಿಂದ ಅಲ್ಲಾಹನು ನನ್ನೆಲ್ಲಾ ಪಾಪಗಳನ್ನು ಮನ್ನಿಸಿದನು. ಆ ಕವಿತೆಯು ನಾನು ಮಲಗುತ್ತಿದ್ದ ಹಾಸಿಗೆಯಡಿಯಲ್ಲಿದೆ.” ನಾನು ಆಶ್ಚರ್ಯಗೊಂಡು ತಕ್ಷಣ ಎಚ್ಚೆತ್ತು ಅವರ ಮನೆಕಡೆಗೆ ಹೆಜ್ಜೆಹಾಕಿದೆ. ನನ್ನನ್ನು ಕಂಡು ಮನೆಯವರೆಲ್ಲರೂ ಕಣ್ಣೀರಿಡತೊಡಗಿದರು. ಅವರು ತಮ್ಮ ಆತ್ಮೀಯನ ವಿಯೋಗದ ವೇದನೆಯಿಂದ ತೊಯ್ದು ಹೋಗಿದ್ದರು. ನಾನು ಅವರ ಮನಸ್ಸು ಸ್ವಲ್ಪ ತಹಬದಿಗೆ ಬಂದ ಬಳಿಕ ವಿಚಾರಿಸಿದೆ. “ನುವಾಸರು ಮರಣದ ದಿನಗಳಲ್ಲಿ ಯಾವುದಾದರೂ ಕವಿತೆಗಳನ್ನು ಹಾಡುತ್ತಿರುವುದನ್ನು ಗಮನಿಸಿರುವಿರಾ?” “ಹಾಗೆ ಪ್ರತ್ಯೇಕವಾಗಿ ನಮಗೆ ಕಾಣಲು ಸಾಧ್ಯವಾಗಿರಲಿಲ್ಲ. ಆದರೂ ಮರಣದ ಹಾಸಿಗೆಯಲ್ಲಿರಲು ನನಗೊಂದು ಕಾಗದ ಮತ್ತು ಲೇಖನಿ ಬೇಕೆಂದು ಹೇಳಿ ಅದರಲ್ಲಿ ಏನನ್ನೋ ಗೀಚುತ್ತಿದ್ದರು.” “ಅವರ ಕೋಣೆಗೆ ಹೋಗಲು ನನಗೆ ಅನುಮತಿ ನೀಡಬಹುದೇ”? ನಾನು ಕೇಳಿದೆ. “ಧಾರಾಳವಾಗಿ ಹೋಗಬಹುದು” ಅವರೆಂದರು. ನಿಧಾನ ಹೆಜ್ಜೆಗಳನ್ನಿಡುತ್ತಾ ಉಸಿರು ಬಿಗಿ ಹಿಡಿದುಕೊಂಡು ಆ ಕೋಣೆಯ ಬಾಗಿಲಿನ ಬಳಿಗೆ ನಡೆದೆ. ಕೋಣೆಯಲ್ಲಿ ನುವಾಸರ ಉಡುಪುಗಳಿದ್ದವು. ಅದು ಇನ್ನೂ ಅವರದೇ ಕೋಣೆಯಂತೆ ನಿಶ್ಯಬ್ದವಾಗಿ ಇದ್ದಂತೆ ಕಂಡಿತು. ನನಗೆ ತಟ್ಟನೆ ಮಿತ್ರನ ಅನುಪಸ್ಥಿತಿ ಕಾಡತೊಡಗಿತು. ನಾನು ಬಂದ ಉದ್ದೇಶ ನೆನಪು ಮಾಡುತ್ತಾ ಅವರ ಹಾಸಿಗೆಯ ಹೊದಿಕೆಯೊಂದನ್ನು ಎತ್ತಿದೆ, ಅಲ್ಲೇನೂ ಇರಲಿಲ್ಲ. ಮತ್ತೊಂದು ಹೊದಿಕೆಯನ್ನು ಸರಿಸಿ ನೋಡಿದೆ, ‘ಮಡಚಿಟ್ಟ ಒಂದು ಕಾಗದದ ತುಂಡು’ ಹಾಸಿಗೆಯ ಭಾರಕ್ಕೆ ಮುದುಡಿಕೊಂಡು ಕುಳಿತಿತ್ತು. ಅದರಲ್ಲಿದ್ದ ಸಾಲುಗಳಿಗೆ ಕಣ್ಣಾಡಿಸಿದೆ. ಅಲ್ಲಿ ಈ ರೀತಿಯಾಗಿ ಬರೆಯಲಾಗಿತ್ತು: “ಓ ನನ್ನ ಪ್ರಭೂ! ನನ್ನ ಪಾಪದ ಮೂಟೆ ಭಾರೀ ದೊಡ್ಡದಾಗಿದ್ದರೂ, ನಿನ್ನ ಕ್ಷಮೆ ಮತ್ತು ಮಾಫಿ ಅದಕ್ಕಿಂತಲೂ ಭಾರ ಹೆಚ್ಚಿರುವುದೆಂದು ನಾನು ನಂಬಿರುವೆ; ಸದ್ಗುಣಶೀಲರಿಗೆ ಮಾತ್ರ ನಿನ್ನಲ್ಲಿ ಪ್ರಾರ್ಥಿಸಲು ಅರ್ಹತೆಯಿರುವುದೆಂದರೆ; ಪಾಪಿಗಳು ಯಾರಲ್ಲಿ ಪ್ರಾರ್ಥಿಸಬೇಕು! ಯಾರನ್ನು ಆಶ್ರಯಿಸಬೇಕು! ಓ ನನ್ನ ಖುದಾ! ನಿನ್ನ ಆಜ್ಞೆಯಂತೆ ಇದೋ ನಿನ್ನಲ್ಲಿ ಬೇಡುತ್ತಿದ್ದೇನೆ. ನನ್ನ ಬೇಡಿಕೆಯನ್ನು ತಿರಸ್ಕರಿಸುವುದಾದರೆ ನನಗೆ ಕರುಣೆ ತೋರಲು ಯಾರಿದ್ದಾರೆ? ಇದೋ ಪ್ರಭೂ ಈ ಗುಲಾಮನ ಕೈಯಲ್ಲಿ ನಿನಗೆ ಸಮರ್ಪಿಸತಕ್ಕ ಏನೂ ಇಲ್ಲ, ನಿನ್ನ ಕುರಿತು ಬದುಕಿನುದ್ದಕ್ಕೂ ನಾನು ಕಟ್ಟಿಕೊಂಡ ನಿರೀಕ್ಷೆ ಮತ್ತು ನಿನ್ನ ಕ್ಷಮಾಗುಣವಲ್ಲದೆ ಬೇರೇನೂ ಇಲ್ಲ! ಏನೆಂದರೂ ನಾನೋರ್ವ ಮುಸ್ಲಿಮನಲ್ಲವೆ”
ಇದನ್ನು ಓದುವಾಗಲೆಲ್ಲಾ ನನಗೆ ನಮ್ಮ ವೈಕಂ ಬಶೀರರು ನೆನಪಾಗುತ್ತಾರೆ. ನಮ್ಮ ಬಶೀರರೂ ಒಬ್ಬ ಮುಸ್ಲಿಮರಾಗಿದ್ದರು. ನಾನೊಬ್ಬ ಮುಸ್ಲಿಂ ಎಂದು ಯಾರ ಮುಂದೆಯೂ ಹೇಳಲು ಹೆಮ್ಮೆಪಡುತ್ತಿದ್ದ ಮುಸ್ಲಿಂ. ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮದ್ಯಪಾನವನ್ನು ತ್ಯಜಿಸಿದ ಮುಸ್ಲಿಂ. ತನ್ನ ಗುರುಗಳಾದ ಬಶೀರರ ಬಗ್ಗೆ ಪ್ರಿಯ ಶಿಷ್ಯರಾದ ಎಂಟಿ ವಾಸುದೇವನ್ ಹೇಳುವುದನ್ನು ನೋಡಿ.
“ವರ್ಷಗಳು ಕಳೆಯುತ್ತಿದ್ದಂತೆ ಬಶೀರರು ಹೆಚ್ಚು ಧಾರ್ಮಿಕರಾಗುತ್ತಾ ಹೋದರು. ಹಲವರು ಆಶ್ಚರ್ಯಗೊಂಡರು. ‘ಎನ್ಡುಪ್ಪಾಪ'(ನನ್ನಜ್ಜ) ದಂತಹಾ ಬರಹಗಳ ಒಡೆಯ ಧರ್ಮನಿಷ್ಠನಾಗುವುದೇ! ಅವರು ಸಂದರ್ಶನಗಳಲ್ಲಿ ‘ನಾನೊಬ್ಬ ಮುಸಲ್ಮಾನ’ ಎಂದು ಉತ್ಸಾಹದಿಂದ ಹೇಳುತ್ತಿದ್ದರು. ಅವರ ಜಿಪುಣತನದ ಕುರಿತು ಹಲವೊಮ್ಮೆ ನಾನು ಗೇಲಿಮಾಡಿ ನಗುತ್ತಿದ್ದೆನಾದರೂ ಯಾರ ಅರಿವಿಗೂ ಬಾರದಂತೆ ಹಲವರ ಕಷ್ಟಗಳಿಗೆ ಹೆಗಲಾಗುತ್ತಿದ್ದರು. ಅವರಿಂದ ಸಹಾಯ ಪಡೆದುಕೊಂಡ ಎಷ್ಟೋ ಜನರು ನನ್ನ ಬಳಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡು ನಿರಾಳಗಾಗಿ ಹೋಗುತ್ತಿದ್ದರು.”
ಬಶೀರರ ಕುರಿತು ಪೊನ್‌ಕುನ್ನುಂ ವರ್ಕಿ ಎಂಬ ಆತ್ಮೀಯ ಗೆಳೆಯ ಹೇಳುವುದನ್ನು ಕೇಳಿ. “ನನಗೆ ಇಬ್ಬರು ಬಶೀರರನ್ನು ನೆನಪಿದೆ. ಒಂದು ಕುಡಿಯುತ್ತಿದ್ದ ಬಶೀರ್ ಮತ್ತು ಕುಡಿತ ನಿಲ್ಲಿಸಿದ್ದ ಬಶೀರ್. ಎರಡನೇ ಬಶೀರ್ ಆತ್ಮವಿಮರ್ಶೆಗೆ ತನ್ನನ್ನು ಒಡ್ಡಿಕೊಂಡ ಬಶೀರ್. ಅವರು ಕೊನೆಯವರೆಗೂ ಎರಡನೇ ಬಶೀರರಾಗಿಯೇ ಇದ್ದರು. ನಮಾಝನ್ನು ಗೌರವಿಸುವ ಆದರೆ ಸರಿಯಾಗಿ ನಮಾಝ್ ಮಾಡದ ಬಶೀರರಾಗಿದ್ದರು” ಎಂದು ವರ್ಕಿಯವರು ಹೇಳುವಾಗ, ಒಂದು ಹೆಜ್ಜೆ ಮುಂದಿಟ್ಟು ಓ.ಎನ್.ವಿ ಬಶೀರರನ್ನು ತೆರೆದಿಟ್ಟದ್ದು ಹೀಗೆ: “ನಾವೆಲ್ಲರೂ ನಿದ್ರೆಗೆ ಜಾರಿದ ಬಳಿಕ ಹಜಾರದ ಮಧ್ಯದಲ್ಲಿ (ತ್ರಿಶೂರ್ ಸಾಹಿತ್ಯ ಅಕಾಡೆಮಿ ಅತಿಥಿ ಗೃಹದ) ತನ್ನ ಶಲ್ಯವನ್ನು ಹಾಸಿ ಬಶೀರರು ನಮಾಝಿನಲ್ಲಿ ಮಗ್ನರಾಗುತ್ತಿದ್ದರು. ಪರಮ ದಯಾಳುವಾದ ಸೃಷ್ಟಿಕರ್ತನ ಮುಂದೆ ತನ್ನ ಹಣೆಯನ್ನಿಟ್ಟು ಸಾಷ್ಟಾಂಗವೆರಗುತ್ತಿದ್ದರು. ಅವರ ಪ್ರಾರ್ಥನೆಗೆ ಯಾವುದೇ ರೀತಿಯ ಭಂಗವಾಗದಂತೆ ನಾವು ಅದನ್ನೆಲ್ಲಾ ನಸುಕಿನಲ್ಲಿ ಇಣುಕಿ ನೋಡುತ್ತಿದ್ದೆವು.”
ಈ ಎರಡನೇ ಬಶೀರರಾಗಿದ್ದಾರೆ ನೈಜವಾದ ಬಶೀರ್. ಎರಡು ಬಶೀರುಗಳು ಸೇರಿದ ಅವರೇ ಹೇಳಿದಹಾಗೆ ‘ಇಮ್ಮಿನಿ ಬೆಲ್ಯ’ ಬಶೀರ್.(ಎರಡು ಬಶೀರ್ ಸೇರಿದ ಒಂದಿಷ್ಟು ದೊಡ್ಡ ಬಶೀರ್). ಅಬುನುವಾಸರ ಅಂತ್ಯದ ಸಾಲುಗಳ ಹಾಗೆಯೇ ತನ್ನ ಕೊನೆಯ ಕಾಲದಲ್ಲಿ “ಅಂದಿಮ ಕಾಹಳಂ” (ಅಂತಿಮ ತುತ್ತೂರಿ) ಬರೆದು ತನ್ನ ಎಲ್ಲಾ ಕೃತಿಗಳಲ್ಲಿಯೂ ಹೇಳುವಂತೆ ವಿದಾಯ ಹೇಳಿ ಹೊರಟು ಹೋದ ಬಶೀರ್. ಆ ಬಶೀರರ ಪಾಪ ಮೋಕ್ಷಕ್ಕಾಗಿ, ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸೋಣ.
(ವೈಕ್ಕಂ ಮೊಹಮ್ಮದ್ ಬಶೀರರ ಕುರಿತು ಕೇರಳದ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಾದ ಮೌಲಾನಾ ನಜೀಬ್ ಉಸ್ತಾದರ ಬರಹ.ಇದು ಬುಲ್‌ಬುಲ್ ಮ್ಯಾಗಜೀನಿನಲ್ಲಿ 1994 ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)