ಮದೀನಾ ಮತ್ತು ಏಥೆನ್ಸ್:‌ ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ

ವಿದ್ಯಾವಂತ ಜನರಲ್ಲಿ ವಿದೃಶ ವಿಚಾರಗಳನ್ನು ಮತ್ತು ರೂಪಕಗಳನ್ನು ರೂಪಿಸುತ್ತಾ ಉದಾರ ಕಲೆ ಅಥವಾ ಲಿಬರಲ್‌ ಆರ್ಟ್ಸ್‌ ಎಂಬ ಪಾರಿಭಾಷಕ ಪದ ಇಂದು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಬರುತ್ತಿದೆ. ಸಂಜ್ಞೆಗಳನ್ನು ಸಮರ್ಪಕವಾಗಿ ವ್ಯಾಖ್ಯಾನ ಮಾಡುವಲ್ಲಿ ಮತ್ತು ವ್ಯತ್ಯಾಸಗಳನ್ನು ಸರಿಯಾಗಿ ವಿವರಿಸುವಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ ಎಡವುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಧ್ಯಕಾಲೀನ ದೇವತಾಶಾಸ್ತ್ರೀಯ ತತ್ವಚಿಂತಕರು(scholastic) ಈಯೆರಡು ವಿಷಯಗಳಲ್ಲಿ ವಹಿಸಿದ ಕಾಳಜಿ ಅಪಾರ ಮತ್ತು ಗಮನಾರ್ಹ. ಸರಿಯಾದ ವ್ಯಾಖ್ಯೆ ದೊರೆಯಬೇಕಾದರೆ ಸಂಜ್ಞೆಯ ‘ಕುಲ’ವನ್ನು (ಇಂಗ್ಲೀಷ್ ನ ಜೀನಸ್‌ ಅರಬಿಯ ಜಿನ್ಸ್)‌ ಅರ್ಥೈಸಬೇಕು ಮತ್ತು ಇತರ ಸದಸ್ಯರಿಂದ ಅದಕ್ಕಿರುವ ವ್ಯತ್ಯಾಸವೇನೆಂದು ತಿಳಿಯಬೇಕೆಂದು ತರ್ಕವಿಜ್ಞಾನದಲ್ಲಿ ಕಲಿಸಲಾಗುತ್ತದೆ. ಶಿಕ್ಷಣವೆ ಉದಾರ ಕಲೆಯ ಜೀನಸ್.‌ ಶಿಕ್ಷಣವೆಂಬ ಜೀನಸ್ ನಿಂದ ಉದಾರ ಶಿಕ್ಷಣವನ್ನು ಬೇರ್ಪಡಿಸುವ ಅರ್ಥಾತ್ ಅದರ ವ್ಯಾಖ್ಯೆ ಸಾಧ್ಯವಾಗಿಸುವ ಲಕ್ಷಣ ಯಾವುದು? ಈ ವ್ಯತ್ಯಾಸ ಹುದುಗಿರುವುದು ಲಿಬರಲ್‌ ಎಂಬ ಪದದಲ್ಲಿ. ಹೌದು, ದಾಸ್ಯ ಸ್ವಭಾವದ(servile) ವಿದ್ಯಾಭ್ಯಾಸಗಳಿಗಿಂತ ವ್ಯತಿರಿಕ್ತವಾಗಿ ನಿಲ್ಲುತ್ತದೆ ಉದಾರ ಶಿಕ್ಷಣ. ಈ ಸಂಜ್ಞೆಯ ವ್ಯುತ್ಪತ್ತಿ ನಡೆದಿರುವುದು ಸಮುದಾಯಗಳ ಕುರಿತ ಆಧುನಿಕಪೂರ್ವ ಗ್ರಹಿಕೆ ಮತ್ತು ಅವುಗಳ ಶ್ರೇಣೀಕೃತ ಸಂರಚನೆಯ ಆಧಾರದಲ್ಲಿ. ಅಂದು ಉದಾರ ಶಿಕ್ಷಣ ನೀಡಲಾಗುತ್ತಿದ್ದುದು ಸ್ವತಂತ್ರ ವ್ಯಕ್ತಿಗಳಿಗೆ. ಸೇವಕರಿಗೆ ಮತ್ತು ಗುಲಾಮರಿಗೆ ವೃತ್ತಿಜ್ಞಾನವನ್ನು ಕರಗತ ಮಾಡಲು ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿತ್ತು. ಹಾಗಾಗಿ ಸಮಾಜಕ್ಕೆ ಅಗತ್ಯವಿರುವ ಸರಕು ಸೇವೆಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಅಂಥ ಕಲೆ-ಕೌಶಲ್ಯಗಳನ್ನು ಕಲಿಯಲು ವೃತ್ತಿ ತರಬೇತಿಗಳೇ ಧಾರಾಳ. ಅದಕ್ಕಾಗಿ ಮಸ್ತಿಷ್ಕವನ್ನು ಪಳಗಿಸುವ ಕಠಿಣ ಶೈಕ್ಷಣಿಕ ತರಬೇತಿಯ ಅಗತ್ಯವಿಲ್ಲ.

ಅಧುನಿಕಪೂರ್ವ ಕಾಲದಲ್ಲಿ ಉದಾರ ಶಿಕ್ಷಣ ವಿದ್ಯಾರ್ಥಿಗಳನ್ನು ಮೂರು ಉದ್ಯೋಗಗಳಿಗೆ ಸಿದ್ಧಪಡಿಸುತ್ತಿತ್ತು; ದೇವತಾಶಾಸ್ತ್ರಜ್ಞ, ವಕೀಲ ಮತ್ತು ವೈದ್ಯ. ದೇವತಾಶಾಸ್ತ್ರಜ್ಞ ಅಭೌತಿಕ ಶರೀರದ ವ್ಯಾಧಿಗಳ ಚಿಕಿತ್ಸಕನಾದರೆ, ನ್ಯಾಯವಾದಿ ಮತ್ತು ವೈದ್ಯ ಅನುಕ್ರಮವಾಗಿ ಸಾಮಾಜಿಕ ಮತ್ತು ಭೌತಿಕ ಶರೀರಗಳಿಗೆ ವಕ್ಕರಿಸುವ ವ್ಯಾಧಿಗಳ ಚಿಕಿತ್ಸಕ. ಆದುದರಿಂದಲೇ ಉದಾರ ಶಿಕ್ಷಣ ದೊರೆತ ನಾಯಕರು ಮುನ್ನಡೆಸುವ ಸಮೂಹದಲ್ಲಿ ಭೂಲೋಕದಲ್ಲಿನ ಜೀವನದ ಮೂರು ಆಯಾಮಗಳ- ಮಾನವಾತ್ಮದ ನೈತಿಕ ಮತ್ತು ಆಧ್ಯಾತ್ಮಿಕ ಬದುಕು, ಕೂಡಿ ಬಾಳುವ ಮನುಷ್ಯರ ನಡುವಿನ ಸಾಮಾಜಿಕ, ವಾಣಿಜ್ಯ ಹಾಗೂ ರಾಜಕೀಯ ಜೀವನ; ಈಯೆರಡು ಆಯಾಮಗಳನ್ನು ಸಮರ್ಪಕವಾಗಿ ಆಸ್ವಾದಿಸಲೋಸುಗ ಅತ್ಯಗತ್ಯವಾದ ಭೌತಿಕ ದೇಹದ ಆರೋಗ್ಯಪೂರ್ಣ ಅವಸ್ಥೆ- ವ್ಯಾಧಿಗಳೊಂದಿಗೆ ಅನುಸಂಧಾನ ನಡೆಸಲು ಪರಿಣತವಾದ ಮೆದುಳುಗಳಿರುತ್ತವೆ.

ಏಳು ತರದ ಉದಾರ ಕಲೆಗಳು ಜಗತ್ತನ್ನು ಚೈತನ್ಯ ಮತ್ತು ಪದಾರ್ಥ,ಗುಣ ಮತ್ತು ಪರಿಮಾಣ, ದೇಹ ಮತ್ತು ಚೇತನ ಎಂಬಿತ್ಯಾದಿಯಾಗಿ ವಿಂಗಡಿಸುತ್ತದೆ. ಹಾಗಾಗಿ ವಿದ್ಯಾವಂತ ವ್ಯಕ್ತಿಗಳು ತನು-ಮನ ದ್ವಯಗಳ ಜೀವನದಲ್ಲೂ ಪರಿಣತಿ ಪಡೆದಿರುತ್ತಿದ್ದರು. ಗುಣಾತ್ಮಕ ಅಧ್ಯಯನ ವಿಭಾಗಗಳು ಸಾಹಿತ್ಯದ ಆಡುಭಾಷೆ, ಅದರಲ್ಲೂ ಪ್ರಮುಖವಾಗಿ ಕಾವ್ಯ; ಪರಿಕಲ್ಪನೆ, ತೀರ್ಪು, ತರ್ಕ ಸಮೇತ ಮನಸ್ಸಿನ ಆಲೋಚನಾ ಪ್ರಕ್ರಿಯೆ; ಪರಿಣಾಮಕಾರಿಯಾಗಿ ಪ್ರಭಾವ ಬೀರಲು, ಕೀರ್ತಿಸಲು,ಆರೋಪಿಸಲು ಇಲ್ಲವೇ ದೋಷಮುಕ್ತಿ ವಾದಿಸಲು ಅತ್ಯಗತ್ಯವಾಗಿರುವ ಅಲಂಕಾರ ಭಾವಗಳ ಪೋಷಣೆಗಳು ಮುಂತಾದವು ಒಳಗೊಳ್ಳುತ್ತದೆ. ಪರಿಮಾಣಾತ್ಮಕ ಅಧ್ಯಯನ ವಿಭಾಗಗಳು ಒತ್ತು ಕೊಡುವುದು ಅಂಕಗಣಿತ ಮತ್ತು ರೇಖಾಗಣಿತಗಳನ್ನು ಕರತಲಾಮಲಕಗೊಳಿಸುವ ಮೂಲಕ ಸಂಖ್ಯಾಲೋಕದ ಒಗಟುಗಳನ್ನು ಬಿಡಿಸುವಲ್ಲಿ. ಕಾಲದಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಸಂಗೀತದಲ್ಲಿ ಹಾಗೂ ಸ್ಥಳ-ಕಾಲಗಳೆರಡರಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಖಗೋಳದಲ್ಲಿ ಅಂಕಿಗಳನ್ನು ಒರೆಗೆ ಹಚ್ಚಲಾಗುತ್ತದೆಯಿಲ್ಲಿ.

ಶಿಕ್ಷಣದ ಕಡೆಗಿನ ಇಂಥಾ ಸಮಗ್ರವಾದ ನೋಟ ವಿಸ್ಮಯಗಳೆಡೆಗೆ ತೆರೆದುಕೊಂಡ, ಸೃಷ್ಟಿಲೋಕದ ಸಮತೋಲನವನ್ನು ಆರಾಧನಾತ್ಮಕವಾಗಿ ಹಿಂಬಾಲಿಸುವ ಉತ್ತಮ ಮನಸ್ಸುಗಳನ್ನು ರೂಪಿಸುತ್ತದೆ. ಈ ರೂಪದ ಶೈಕ್ಷಣಿಕ ವ್ಯವಸ್ಥೆಗಳ ಬೇರುಗಳು ಗ್ರೀಕ್‌, ಬ್ಯಾಬಿಲೋನಿಯ, ಈಜಿಪ್ತ್‌ ನಾಗರಿಕತೆಗಳ ಪೌರಾಣಿಕ ಧರ್ಮಗಳಲ್ಲಿ ಕಾಣಬಹುದು. ಆದರೆ ಇದು ತನ್ನ ಉಚ್ಪ್ರಾಯಕ್ಕೆ ತಲುಪಿದ್ದು ಯಹೂದಿ, ಕ್ರೈಸ್ತ ಮತ್ತು ಮುಸ್ಲಿಂ ನಾಗರಿಕತೆಗಳ ಕಾಲದಲ್ಲಿ. ಈ ನಾಗರಿಕತೆಗಳು ತಂತಮ್ಮ ಧಾರ್ಮಿಕ ಗ್ರಂಥಗಳನ್ನು ಮತ್ತು ತಮ್ಮ ಸುತ್ತಮುತ್ತಲಿನ ಭೌತಿಕ ಜಗತ್ತನ್ನು ಸಮರ್ಪಕವಾಗಿ ಅರ್ಥೈಸಲು ಈ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕಲೆಗಳನ್ನು ಬಳಸುತ್ತಿದ್ದರು. ಮುಸ್ಲಿಮರು ದೇವದತ್ತ ಗ್ರಂಥಗಳು ಎರಡು ರೂಪಗಳನ್ನು ಪಡೆದಿರುವುದಾಗಿ ಗ್ರಹಿಸುತ್ತಾರೆ. ತೌರಾತ್‌ (Torah), ಝಬೂರ್‌ (Psalms), ಇಂಜೀಲ್(‌Gospel), ಖುರ್‌ಆನ್ ಗ್ರಂಥಗಳಲ್ಲಿ‌ ಸಂಗ್ರಹಿತವಾದ ಯಥಾರ್ಥ ದೇವವಚನಗಳು ಒಂದಾದರೆ ಎರಡನೆಯದ್ದು ನಿಸರ್ಗವೆಂಬ ಪುಸ್ತಕ. ಟ್ರೈವಿಯಮ್ಮಿನ ಉಪಕರಣಗಳನ್ನು ಬಳಸಿ ಒಂದನೆಯದನ್ನು ಕಲಿಯಬಹುದು ಮತ್ತು ಕ್ವಾಡ್ರಿಯಮ್ಮನ್ನು ಉಪಯೋಗಿಸಿ ಎರಡನೆಯದನ್ನು ಕರಗತ ಮಾಡಬಹುದು.

ಉದಾರ ಶಿಕ್ಷಣವೆಂಬ ವಿವಾದಿತ ಸಂಜ್ಞೆಯ ವಿವಿಧ ವರ್ಗೀಕರಣಗಳ ಉಪಯುಕ್ತ ವಿವರಣೆಯನ್ನು ಡ್ಯಾನಿಯಲ್‌ ಆರ್‌ ಡೆ ನಿಕೋಲ ತಮ್ಮ ಉತ್ಕೃಷ್ಟ ಗ್ರಂಥವಾದ ‘ಲರ್ನಿಂಗ್‌ ಟು ಫ್ಲರಿಶ್:‌ ಎ ಫಿಲಾಸಫಿಕಲ್‌ ಎಕ್ಸ್‌ಪ್ಲೊರೇಶನ್‌ ಓಫ್‌ ಲಿಬರಲ್‌ ಎಜ್ಯುಕೇಶನ್‌’ ನಲ್ಲಿ ನೀಡಿದ್ದಾರೆ. ಅವರು ಅದರಲ್ಲಿ ಲಿಬರಲ್‌ ಶಿಕ್ಷಣ ವ್ಯವಸ್ಥೆಯ ಪಂಚಶೀಲ ಉದ್ದೇಶಗಳನ್ನು ಸಾದರಪಡಿಸಿದ್ದಾರೆ. ಅವುಗಳೆಂದರೆ; ಸಾಂಸ್ಕೃತಿಕ ಬಳುವಳಿಗಳ ತಲೆತಲಾಂತರ ವರ್ಗಾವಣೆ, ಪ್ರಮಾಣಕ(normative) ಪ್ರತ್ಯೇಕಾಸ್ತಿತ್ವದ ಕಡೆಗೆ ಕೊಂಡೊಯ್ಯುವ ಸ್ವಯಂ ವಾಸ್ತವೀಕರಣ (self actualization), ಜಗತ್ತಿನ ಹಾಗೂ ತನ್ನ ಜೀವನವನ್ನು ರೂಪಿಸುವ ಬಲಗಳ ಗ್ರಹಿಕೆ, ಜಗತ್ತಿನೊಂದಿಗೆ ಕ್ರಿಯಾಶೀಲ ಅನುಸಂಧಾನ, ಕಲಿಕಾ ಕೌಶಲ್ಯಗಳ ಸ್ವಾಧೀನ. ಉದಾರ ಕಲೆಗಳ ಬಲಿಷ್ಠ ಪರಿಕಲ್ಪನೆಗಳಲ್ಲೆಲ್ಲಾ ಈ ಐದು ಉದ್ದೇಶಗಳು ಒಂದೇ ವೇಳೆ ಮಿಳಿತವಾಗಿರುವುದನ್ನು ಕಾಣಬಹುದು ಎನ್ನುತ್ತಾರೆ ಡೆ ನಿಕೋಲ.

ಮೊಟ್ಟ ಮೊದಲಾಗಿ ಶಿಕ್ಞಣ ಮತ್ತು ಉದಾರ ಎಂಬೀ ಸಂಜ್ಞೆಗಳನ್ನು ನಿರ್ವಚಿಸಬೇಕಿದೆ. ಶಿಕ್ಷಣದ ಕುರಿತ ಪ್ರಯೋಜನಪ್ರದ ವ್ಯಾಖ್ಯೆಯನ್ನು ಹತ್ತೊಂಬತ್ತನೆ ಶತಮಾನದ ದೇವತಾಶಾಸ್ತ್ರಜ್ಞ ಕರ್ದಿನಾಲ್ ಜಾನ್‌ ಹೆನ್ರಿ ನ್ಯೂಮಾನ್‌ ನೀಡಿದ್ದಾರೆ. ವಿಶ್ವವಿದ್ಯಾಲಯದ ಪರಿಕಲ್ಪನೆಯ ಕುರಿತು ಅವರು ರಚಿಸಿರುವ ಡಿಸ್ಕೋರ್ಸ್‌ IV ಎಂಬ ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:

“ಶಿಕ್ಷಣ ಎಂಬುವುದು ಉನ್ನತವಾದ ಪದ; ಅದು ಜ್ಞಾನಾರ್ಜನೆಗಾಗಿ ಸಿದ್ಧಗೊಳಿಸುವ ಪ್ರಕ್ರಿಯೆ. ಪ್ರಸ್ತುತ ತಯಾರಿಗೆ ಅನುಗುಣವಾದ ಜ್ಞಾನ ಪ್ರದಾನಿಸುವ ಹಂತ”. ಈ ವ್ಯಾಖ್ಯೆಯು ‘ಜ್ಞಾನ ಎಂದರೇನು’ ಎಂಬ ಮತ್ತೊಂದು ಪ್ರಶ್ನೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪ್ರಶ್ನೆಗೆ ಉತ್ತರಿಸಲು ಆಳವಾದ ಚಿಂತನೆಯ ಅಗತ್ಯವಿದೆ. ಯಾವುದೇ ನಾಗರಿಕತೆಯ ಪಂಚಾಂಗದಲ್ಲಿರುವ ಅತಿಭೌತಶಾಸ್ತ್ರೀಯ(metaphysical) ಮೂಲಗ್ರಹಿಕೆಗಳು ಜ್ಞಾನದ ಪ್ರಮಾಣ ಮತ್ತು ಪ್ರಮೇಯಗಳ ನಿರ್ಣಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಜ್ಞಾನದ ವ್ಯಾಖ್ಯಾನ ಅಷ್ಟು ಸಲೀಸಾದ ಕಾರ್ಯವಲ್ಲ. ಎಂತಲೇ, ಸದ್ಯಕ್ಕೆ ಮೇಲ್ಕಾಣಿಸಿದ ಶಿಕ್ಷಣದ ವ್ಯಾಖ್ಯೆ ನೀಡುವ ಸಾಮಾನ್ಯ ಗ್ರಹಿಕೆಯೊಂದಿಗೆ ತೃಪ್ತರಾಗೋಣ. ಉದಾರ ಎಂಬ ಪದದ ಉತ್ತಮ ವ್ಯಾಖ್ಯೆಯನ್ನು ಅರಿಸ್ಟಾಟಲರ ರೆಟರಿಕ್‌ (ಅಲಂಕಾರ ಶಾಸ್ತ್ರ) ಎಂಬ ಗ್ರಂಥದಲ್ಲಿ ಕಾಣಬಹುದು. “ನಮ್ಮ ಒಡೆತನದಲ್ಲಿರುವ ಸಂಗತಿಗಳು ಒಂದೋ ಉತ್ತಮ ಫಲಿತಾಂಶ ನೀಡುವ ಉಪಯುಕ್ತ ಕಾರ್ಯಗಳು ಇಲ್ಲವೇ ರಂಜನೆಯನ್ನು ನೀಡುವ ಉದಾರ ಕಾರ್ಯಗಳಾಗಿವೆ. ಉಪಯುಕ್ತ ಸಂತಿಗಳು ಎಂಬುದರ ತಾತ್ಪರ್ಯ ಲಾಭಜನಕತೆಯಾಗಿದ್ದು ಉದಾರ ಎಂಬ ವಿಶೇಷಣದ ತಾತ್ಪರ್ಯ ಬಳಕೆಗೆ ಹೊರತಾದ ಬೇರೆ ಪರಿಣಾಮಗಳ ಅಭಾವವಾಗಿದೆ.”

ಹಾಗಾಗಿ, ಉದಾರ ಶಿಕ್ಷಣ ಎಂಬ ಪರಿಕಲ್ಪನೆಯು ವಿದ್ಯಾರ್ಥಿಯು ಜ್ಞಾನದ ಆವಾಹನೆಗೆ ಅಣಿಯಾಗುವ, ಶಿಕ್ಷಕ ಅದಕ್ಕಾಗಿ ವಿದ್ಯಾರ್ಥಿಯನ್ನು ಸಜ್ಜಾಗಿಸುವ, ಅದರ ವಿವಿಧ ಹಂತಗಳಿಗನುಗುಣವಾಗಿ ಅರಿವು ಪ್ರದಾನಿಸುವ, ಅದಕ್ಕೋಸ್ಕರ ಅನುಬೋಧೆಯ (apperception) ವಿಧಾನ ಮತ್ತು ವಿನ್ಯಾಸವನ್ನು ಬಳಸುವ, ಜೀವನೋಪಾಯದ ಬದಲು ಅರಿವೇ ಗುರಿಯಾಗಿರುವ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎನ್ನಬಹುದು. ಈ ಹಂತದಲ್ಲಿ ಉತ್ತೀರ್ಣರಾದರೆ ನೈಜ ಕಲಿಕೆಯನ್ನು ಆರಂಭಿಸಬಹುದು. ಉಪಾಧ್ಯಯನ (didactic) ಘಟ್ಟ ಮುಕ್ತಾಯವಾದರೆ ಭಾವ ಪ್ರಸೂತಿಕ (maieutic) ಅಧ್ಯಯನ ಆರಂಭವಾಗುವಂತೆ. ಈ ಮೂಲಕ ಜೀವನಾಧಾರಕ್ಕಾಗಿ ಶಿಕ್ಷಣ ಎಂಬ ಕಲ್ಪನೆಯಾಚೆಗೆ ಲಕ್ಷ್ಯಾಧಾರಿತ ಸಂತೃಪ್ತ ಜೀವನದ ಕಲೆಯನ್ನು ಕರಗತ ಮಾಡಲು ನಮಗೆ ಸಾಧ್ಯವಾಗುತ್ತದೆ.

ಸಜ್ಜುಗೊಳಿಸುವಿಕೆಯನ್ನು ವಿವರಿಸುವ ಇಸ್ಲಾಮಿಕ ಲೋಕದ ಅಕ್ವಿನಾಸ್‌ ಎಂದೇ ಖ್ಯಾತರಾದ ಏಳನೆಯ ಶತಮಾನದಲ್ಲಿ ಜೀವಿಸಿದ ಮಹೋನ್ನತ ತತ್ವಚಿಂತಕ ಇಮಾಂ ಗಝ್ಝಾಲಿಯವರ ಗುರುವರ್ಯ ‘ಇಮಾಂ ಅಲ್ ಜುವೈನಿ’ ಯವರ ಅಭಿವ್ಯಕ್ತಿಯೊಂದನ್ನು ಮುಂದಿಡಲು ಬಯಸುತ್ತೇನೆ. ಜುವೈನಿಯವರು ಹೇಳುತ್ತಾರೆ:

“ಆರು ಘಟಕಗಳ ಅಭಾವದಲ್ಲಿ ಜ್ಞಾನಾರ್ಜನೆ ಕೈಗೂಡದು. ಅದರ ಸಂಕ್ಷೇಪ ಹೀಗಿದೆ; ಕುಶಾಗ್ರ ಚಿತ್ತ, ಅದಮ್ಯ ಹುರುಪು, ಅನ್ಯ ದೇಶ, ಕಠಿಣ ಪ್ರಯತ್ನ, ಉಪನ್ಯಾಸಕರ ಪ್ರೋತ್ಸಾಹ, ದೀರ್ಘ ಕಾಲಾವಧಿ.”

ಆಸಕ್ತಿದಾಯಕ ವಿಷಯವೇನೆಂದರೆ, ಮುಸಲ್ಮಾನರ ಕೃತಿಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ದ್ವಿಪದಿಯ ಆಶಯ ಸ್ವಲ್ಪ ಬದಲಾವಣೆಗಳೊಂದಿಗೆ ಎಪ್ಪತ್ತು ಸಂವತ್ಸರಗಳ ಅನಂತರ ಲ್ಯಾಟಿನ್‌ ಭಾಷೆಯಲ್ಲಿಯೂ ಮೂಡಿಬಂತು. ಇದನ್ನು ಅನುವಾದಿಸಿದ ಚಾರ್ಟರ್ಸಿನ ಬರ್ನಾರ್ಡ್‌ ಬರೆದದ್ದು ಹೀಗೆ:

“Mens humilis, stadium quaerendi, vita quieta, Scrutinium tacitum, paupertas, terra aliena.
ವಿನಯಾನ್ವಿತ ಮನಸ್ಸು, ಕಲಿಕೆಯಲ್ಲಿ ಹುರುಪು, ಶಾಂತ ಜೀವನ, ಮೌನ ಅನ್ವೇಷಣೆ, ದಾರಿದ್ರ್ಯ, ವಿದೇಶಿ ಮಣ್ಣು.”

ನಾಗರಿಕತೆಗಳು ಹುಟ್ಟುವುದು ಮೂಲಗ್ರಂಥಗಳ ಸೆರಗಿನಲ್ಲಿ. ಹೋಮರ್‌ ಇಲ್ಲದಿದ್ದಲ್ಲಿ ಸೊಲೊನ್‌ ಪೆರಿಕಲ್ಸರ ಏಥೆನ್ಸ್‌ ಇರುತ್ತಿರಲಿಲ್ಲ. ಸಾಕ್ರೆಟಿಸ್‌, ಪ್ಲಾಟೊ, ಅರಿಸ್ಟೊಟಲರ ಏಥೆನ್ಸ್‌ ಕೂಡಾ ಕನ್ನಡಿಯ ಗಂಟಾಗುತ್ತಿತ್ತು. ಬೈಬಲ್‌ ಹಳೆಯ ಒಡಂಬಡಿಕೆ ಉನ್ನತ ಯಹೂದಿ ವಿದ್ವತ್‌ ಪರಂಪರೆ ಮೂಡಿ ಬರಲು ಕಾರಣವಾಯಿತು. ಲ್ಯಾಟಿನ್‌ ಭಾಷೆಗೆ ಅದು ಭಾಷಾಂತರಗೊಳ್ಳುವುದರೊಂದಿಗೆ ವೈಶಿಷ್ಟ್ಯಪೂರ್ಣವಾದ ಐರೋಪ್ಯ ಕ್ರಿಶ್ಚಿಯಾನಿಟಿಯ ಉದಯವಾಯಿತು. ಕ್ರೈಸ್ತರು ಏಥೆನ್ಸನ್ನು ಮಗದೊಮ್ಮೆ ಅಪ್ಪಿಕೊಂಡಾಗ ಏಥೆನ್ಸ್‌ ಮತ್ತು ಜೆರುಸಲೇಂ ಒಂದುಗೂಡಿ ಅಸಾಮಾನ್ಯ ಸಂಶ್ಲೇಷಣೆಯೊಂದು ಜರುಗಿತು. ಯವನ ತತ್ವಚಿಂತನೆ ಮತ್ತು ಕ್ರಿಶ್ಚಿಯಾನಿಟಿಯೆ ಪಾಶ್ಚಾತ್ಯ ನಾಗರಿಕತೆಯ ಆಧ್ಯಾತ್ಮಿಕ ತಳಹದಿ. ಈಯೆರಡು ಪರಂಪರೆಗಳು ಅಸಡ್ಡೆಯಿಂದ ಕೊಳೆತು ಅವನತಿಯ ಹಾದಿ ಹಿಡಿದಾಗ ಬುದ್ಧಿ ಮತ್ತು ದಿವ್ಯಬೋಧನೆಗಳ ಬೆಳಕು ಕ್ಷೀಣವಾಯಿತು. ಈ ಬೆಳಕಿನಿಂದ ವಂಚಿತರಾದ ತಲೆಮಾರು ವಿವಿಧ ಹಾನಿಗಳನ್ನು ಎದುರಿಸುತ್ತಿದ್ದು ಸಾಮಾಜಿಕ ಮೂಲರಚನೆಯನ್ನು ನೇಯ್ದ ಆಧ್ಯಾತ್ಮಿಕ ಬೆಸುಗೆಯ ಬಾಷ್ಪೀಕರಣ ನಡೆದಿದೆ.

ಎಂಟನೆಯ ಶತಮಾನದ ಹೊಸತರಲ್ಲಿ ಆರಂಭಗೊಂಡ ಇಸ್ಲಾಮೀ ನಾಗರಿಕತೆ ಕೂಡಾ ಪಾಶ್ಚಾತ್ಯ ನಾಗರಿಕತೆಗೆ ಸಮಾನಾಂತರವಾಗಿ ಪ್ರಯಾಣಿಸತೊಡಗಿತ್ತು. ಕೆಲವು ಸಂದರ್ಭಗಳಲ್ಲಿ ಎದುರುಬದುರಾಗಿದ್ದೂ ಇದೆ. ಕ್ರೈಸ್ತ ನಾಗರಿಕತೆಯ ಹಾಗೆ, ಇಸ್ಲಾಮೀ ನಾಗರಿಕತೆಯ ಬುನಾದಿಯಾಗಿ ಜ್ಞಾನ, ಕಲಿಕೆ ಮತ್ತು ಭಕ್ತಿಯೆಡೆಗಿನ ಕರೆಯನ್ನು ಎದೆಯಲ್ಲಿ ಹುದುಗಿಸಿಕೊಂಡಿರುವ ಗ್ರಂಥವೊಂದರ ಸಾನಿಧ್ಯವಿದೆ; ಖುರ್‌ಆನ್.‌ ಜ್ಞಾನ ಎಂಬ ಪದವನ್ನು ಖುರ್‌ಆನ್‌ ನೂರಕ್ಕಿಂತಲೂ ಹೆಚ್ಚು ಬಾರಿ ಪುನರಾವರ್ತಿಸಿದೆ. ಚಿಂತನೆಯ ಕುರಿತು ಅರುವತ್ತೆಂಟು ಸಲ ಪರಾಮರ್ಶಿಸಿದೆ. ಪ್ರವಾದಿ ಮುಹಮ್ಮದ(ಸ.ಅ)ರಿಗೆ ಅವತೀರ್ಣವಾದ ಪ್ರಥಮ ದಿವ್ಯ ವಚನ ‘ಓದಿರಿʼ ಎಂದಾಗಿತ್ತು. “ಪ್ರತಿ ಮುಸ್ಲಿಂ ಸ್ತ್ರೀಪುರುಷರಿಗೆ ಜ್ಞಾನಾರ್ಜನೆ ಕಡ್ಡಾಯವಾಗಿದೆ” ಎಂಬುದು ಅವರ ಉವಾಚ. ಚೀನಾಕ್ಕೆ ಹೋಗಿಯಾದರೂ ಕಲಿಯಿರೆಂದು ಅವರು ಮತ್ತೊಂದೆಡೆ ಹೇಳಿದ್ದಾರೆ.

ಏಥೆನ್ಸ್‌ ಮತ್ತು ಮದೀನಾದ ನಡುವಿನ ಸಂಶ್ಲೇಷಣಾ ಬೀಜವನ್ನು ಪೈಗಂಬರರ ಕಾಲದಲ್ಲೇ ಬಿತ್ತಲಾಗಿತ್ತು. ಬ್ರಿಟನ್ನಿನ ಆಂಗ್ಲೋ ಸ್ಯಾಕ್ಷನ್ ಜನತೆಯನ್ನು ಅಧಾರ್ಮಿಕತೆ ಮತ್ತು ಪ್ರಾಚೀನತೆಯ ಕೂಪದಿಂದ ಜಗತ್ತಿನ ಅತ್ಯಂತ ವಿದ್ಯಾಸಂಪನ್ನ ವಿಭಾಗವನ್ನಾಗಿ ಪರಿವರ್ತಿಸಿದ ಗ್ರೆಗೊರಿಯನ್‌ ದೌತ್ಯವನ್ನು ಜಾರಿ ಮಾಡಿದ ಯೂರೋಪಿನ ಖ್ಯಾತ ಪೋಪ್‌ ‘ಗ್ರೆಗರಿ ದ ಗ್ರೇಟ್’ ರ ಕಾಲವಾಗಿತ್ತದು. ಬೈಬಲ್‌ ಧರ್ಮೋಪದೇಶಕಾಂಡ ೧೮:೧೮ ರಲ್ಲಿ ಹೀಗಿದೆ, “ನಿಮ್ಮನ್ನು(ಮೂಸಾ,ಮೋಸಸ್) ಹೋಲುವ ಪೈಗಂಬರ್(ಮುಹಮ್ಮದ್)‌ ರನ್ನು ನಾವು ನಿಯೋಜಿಸಲಿದ್ದೇವೆ.” ಮೋಸಸ್‌ ಪರಂಪರೆಯ ವಾರಸುದಾರರೆಂಬಂತೆ ಮದೀನಾ ತಲುಪಿದ ಹೊಸತರಲ್ಲಿ ಪೈಗಂಬರ್ ಮುಹಮ್ಮದ(ಸ.ಅ)ರು ಯಹೂದಿಗಳೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸಿದ್ದರು. ಆರಂಭದಲ್ಲಿ ಸಕಾರಾತ್ಮಕ ಸ್ಪಂದನೆ ನೀಡಿದ್ದರೂ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅವರು ಕೊನೆವರೆಗೂ ಹಠಮಾರಿಗಳಾಗಿ ಉಳಿದರು ಎನ್ನಬಹುದು. ತಮ್ಮ ಗ್ರಂಥಗಳಲ್ಲೆ ಇರುವ ಪೈಗಂಬರರ ಕುರಿತಾದ ಭವಿಷ್ಯ ನುಡಿಗಳನ್ನು ಅರ್ಥಮಾಡುವ ಗೊಡವೆಗೆ ಅವರು ಹೋಗಲಿಲ್ಲ. ಪೈಗಂಬರರು ನಂತರ ಮೈತ್ರಿ ಮಾಡಲು ಮುಂದಾದದ್ದು ಕ್ರೈಸ್ತರೊಂದಿಗೆ. ಗ್ರೀಕ್‌ ಕ್ರೈಸ್ತರು ಮತ್ತು ಪರ್ಷಿಯನ್‌ ಪಾಗನ್‌ಗಳ ನಡುವೆ ಯುದ್ಧ ನಡೆದಾಗ ಪೈಗಂಬರರು ಗ್ರೀಕ್‌ ಪಕ್ಷಕ್ಕೆ ಬೆಂಬಲ ನೀಡಿದರು. (ಯಹೂದಿಗಳು ಪರ್ಶಿಯನ್‌ ಪಾಗನ್ನರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು ಎಂಬುದು ಗಮನಾರ್ಹ)

ಇಪ್ಪತ್ತನೆಯ ಶತಮಾನದ ಬ್ರಿಟಿಷ್‌ ವಿದ್ವಾಂಸ ಎ. ಜೆ ಆರ್ಬರಿ ಖುರ್‌ಆನಿನ ಮೂವತ್ತನೆಯ ಅಧ್ಯಾಯ “ರೂಮ” ನ್ನು ಗ್ರೀಕ್‌ ಎಂದು ಅನುವಾದಿಸಿದ್ದು ಸರಿಯಾಗಿಯೆ ಇದೆ. ಅವರು ಭಾಷಾಂತರಿಸಿದ ಆ ಅಧ್ಯಾಯದ ಪ್ರಾರಂಭ ಹೀಗಿದೆ:

“ಅಲಿಫ್‌ ಲಾಮ್‌ ಮೀಮ್‌,
ಗ್ರೀಕರು ಸೋಲನ್ನಪ್ಪಿದ್ದಾರೆ
ನಿಮ್ಮ ನೆರೆಯ ಭೂಮಿಯಲ್ಲಿ
ಸೋಲಿನ ತರುವಾಯ ಅವರು ಜಯಶಾಲಿಗಳಾಗಲಿದ್ದಾರೆ
ಆದೇಶ ಮಾಡುವ ಅಧಿಕಾರ ಅವನದ್ದು
ಹಿಂದೆ ಮತ್ತು ಮುಂದೆಯೂ
ಆ ದಿನ ವಿಶ್ವಾಸಿಗಳು ಆನಂದಿಸಲಿದ್ದಾರೆ
ದೇವರ ಸಹಾಯದಿಂದ
ಅವನು ಅವನಿಚ್ಛಿಸುವವರಿಗೆ ಸಹಾಯವನ್ನೀಯುವನು
ಅವನು ಸರ್ವಶಕ್ತನು, ಪರಮ ಕರುಣಾಮಯಿ.”

ಪಾಗನ್ ಪರ್ಶಿಯನ್ನರ ವಿರುದ್ಧ ಬೈಬಲ್‌ ಜಯಭೇರಿ ಬಾರಿಸಿದಾಗ ವಿಶ್ವಾಸಿಗಳು ಆನಂದ ತುಂದಿಲರಾದರು. ಕಂಝುಲ್‌ ಉಮ್ಮಾಲ್‌ ವರದಿ ಮಾಡಿದ ಹದೀಸೊಂದರಲ್ಲಿ ಪೈಗಂಬರ್‌ ಹೇಳತ್ತಾರೆ, “ಒಳಿತು ಲೋಕದಲ್ಲಿ ಉಳಿಯುವ ವರೆಗೆ ಗ್ರೀಕರು ನಿಮ್ಮ ಮಿತ್ರರಾಗಿರುತ್ತಾರೆ.” ಮತ್ತೊಂದೆಡೆ “ಹಿಕ್ಮತ್‌ ಅಥವಾ ತತ್ವಗಳು (ಗ್ರೀಕರ ಆಪ್ತ ವಿಷಯ) ಸತ್ಯ ವಿಶ್ವಾಸದ ಕಳೆದು ಹೋದ ವಾಹನ. ಎಲ್ಲಿ ಪತ್ತೆಯಾದರೂ ಅದನ್ನು ಸ್ವಾಧೀನಪಡಿಸುವ ಹಕ್ಕುಬಾಧ್ಯತೆ ಅವರಿಗೆ ಇದೆ” ಎಂದು ಹೇಳಿದ್ದಾರೆ.
ಪೈಗಂಬರರ ಕಾಲಾನಂತರದ ಮುಸಲ್ಮಾನರ ತಲೆಮಾರು ಗ್ರೀಕ್‌ ಚಿಂತನೆಗಳನ್ನು ಹೀರಿಕೊಂಡರು. ಗ್ರೀಕ್‌ ತತ್ವಚಿಂತನೆಗಳ ಪ್ರಭಾವ ಹೆಚ್ಚುತ್ತಾ ಬಂದು ಪೈಗಂಬರರು ಕಲಿಸಿದ ಸರಳ ಸೆಮಿಟಿಕ್‌ ಸತ್ಯಗಳನ್ನು ಕೂಡಾ ಸದೆಬಡಿದು ಮುನ್ನುಗ್ಗುವ ಹಂತಕ್ಕೆ ತಲುಪಿತ್ತು. ವಿಚಾರವಾದಿಗಳು ಮದೀನಾದ ಎದುರು ಏಥೆನ್ಸಿನ ಪರ ನಿಂತರು. ಆದಾಗ್ಯೂ, ಈ ಬೆಳವಣಿಗೆಯ ವಿರುದ್ಧ ಒಡಮೂಡಿದ ಸುನ್ನಿ ಪ್ರತಿಕ್ರಿಯೆ ಗೀಕ್‌ ಪ್ರಣೀತ ಅರಿವುಗಳ ಒಳಿತಾದ ಆಯಾಮಗಳನ್ನು ಒಳಗೊಳ್ಳಲು ಹಿಂದೆ ಮುಂದೆ ನೋಡಿರಲಿಲ್ಲ. ಅವರು ಉತ್ಪಾದಿಸಿದ ಕೂಲಂಕಷ ರೀತಿ ವಿಜ್ಞಾನ ದಿವ್ಯಬೋಧನೆಗೆ ಅದರ ವಿಚಾರ ವ್ಯಾಪ್ತಿಯಲ್ಲಿ ಇರುವ ಪರಮಾಧಿಕಾರವನ್ನು ಪುರಸ್ಕರಿಸಿತು ಮತ್ತು ಬುದ್ಧಿಗೆ ತಕ್ಕುದಾದ ಸ್ಥಾನಮಾನವನ್ನೂ ನೀಡಿತು. ಹಾಗೆ ಹೊರಹೊಮ್ಮಿದ ಸಂಶ್ಲೇಷಣಾತ್ಮಕ ಸುನ್ನಿ ವಿಧಾನಶಾಸ್ತ್ರ ಪ್ರಕೃತಿ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ದಿವ್ಯದರ್ಶನಾಧಾರಿತ ತಾತ್ವಿಕ ಸಿದ್ಧಾಂತ (metaphysics) ಕ್ಷೇತ್ರಗಳಲ್ಲಿ ಬುದ್ಧಿಯ ಪಾತ್ರವನ್ನು ಸಮರ್ಪಕವಾಗಿ ಗುರುತಿಸುವುದರೊಂದಿಗೆ ಬುದ್ಧಿಯ ವಿಚಾರ ವ್ಯಾಪ್ತಿಯ ಹೊರಗಿನ ವಿಷಯಗಳಲ್ಲಿ ದೇವದತ್ತ ತಥ್ಯಗಳ ಮಹತ್ವವನ್ನೂ ಸಮರ್ಥಿಸಿತು. ಮುಸ್ಲಿಂ ನಾಗರಿಕತೆ ಶತಮಾನಗಳ ಕಾಲ ಎತ್ತರಕ್ಕೆ ಹಾರುತ್ತಾ ಹೋಗಿದ್ದು ಈಯೆರಡು ರೆಕ್ಕೆಗಳನ್ನು ಬಳಸಿಕೊಂಡಾಗಿತ್ತು.

ಜ್ಞಾನದ ಹುಡುಕಾಟವು ಬಿಟ್ಟಿರಲಾಗದ ಹವ್ಯಾಸವಾಗಿ ಮುಸ್ಲಿಂ ಜಗತ್ತನ್ನು ಹಚ್ಚಿಕೊಂಡಿತ್ತು. ಇಸ್ಲಾಮಿ ನಾಗರಿಕತೆ ಜಾಗತಿಕ ಚರಿತ್ರೆಯಲ್ಲಿ ಅದ್ವಿತೀಯ ವೈಶಿಷ್ಟ್ಯತೆಯನ್ನು ಪಡೆಯಲು ಜ್ಞಾನದ ಆವಿಷ್ಕಾರ, ಸಂರಕ್ಷಣೆ ಮತ್ತು ಪ್ರಸಾರದ ವಿಷಯದಲ್ಲಿ ಅದು ವಹಿಸಿರುವ ಕಾಳಜಿಯೆ ಮುಖ್ಯ ಕಾರಣ ಎಂದು ಯಹೂದಿ ಇತಿಹಾಸಕಾರ ಫ್ರಾನ್ಝ್‌ ರೊಸೆಂತಲ್‌ ತಮ್ಮ ‘ನಾಲೆಜ್‌ ಟ್ರಯಂಫೆಂಟ್‌’ ಎಂಬ ಕೃತಿಯಲ್ಲಿ ವಾದಿಸಿದ್ದಾರೆ. ಆದರೆ ವಿಜ್ಞಾನದ ಪರಿಕಲ್ಪನೆ ಮನುಷ್ಯನ ವಿಶ್ವಾಸ, ಸರಿತಪ್ಪುಗಳ ಕುರಿತ ಅವನ ವಿವೇಚನೆ ಮತ್ತು ಅವನು ಜೀವನದಲ್ಲಿ ಪಾಲಿಸಲು ಬಯಸುವ ಆದರ್ಶಗಳು ಇವನ್ನೆಲ್ಲಾ ಒಳಗೊಳ್ಳುತ್ತವೆ. ಆದುದರಿಂದಲೇ, ಶಿಕ್ಷಣ ಎಂಬ ಕಲ್ಪನೆಯು ಮನುಷ್ಯನ ನೈತಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಅಡಕಗೊಳಿಸಿದ ವಿಚಾರವಾಗಿದೆ.

ಯುಗೇನ್‌ ಎ ಮೈಯರ್ಸ್‌ ತನ್ನ “ಅರಬಿಕ್‌ ಥಾಟ್‌ ಏಂಡ್‌ ವೆಸ್ಟೆರ್ನ್‌ ವರ್ಲ್ಡ್” ‌ಎಂಬ ಗ್ರಂಥದಲ್ಲಿ ಇಮಾಮ್‌ ಗಝ್ಝಾಲಿಯವರ ಕುರಿತು ಈ ಕೆಳಗಿನಂತೆ ವಿವರಿಸಿದ್ದಾರೆ:

“ಶಿಕ್ಷಣ ಮತ್ತು ಘನ ನೈತಿಕ ವ್ಯವಸ್ಥೆಯ ಮಧ್ಯೆ ಜೈವಿಕವಾದ ಬೆಸುಗೆ ಸಾಧಿಸಿದ್ದು ಇಮಾಮ್‌ ಗಝ್ಝಾಲಿಯವರು ಇಸ್ಲಾಮಿಗೆ ನೀಡಿದ ಉನ್ನತ ಕೊಡುಗೆ. ಆಧ್ಯಾತ್ಮಿಕ ಮತ್ತು ನೈತಿಕ ಪುನಶ್ಚೇತನವಿಲ್ಲದೆ ಕೇವಲ ಐಹಿಕ ಗಳಿಕೆಯಿಂದ ಸೌಖ್ಯ ದೊರೆಯದು ಎಂದು ಅವರು ಕಲಿಸಿದರು. ಹಾಗಾಗಿ ಶಿಕ್ಷಣ ಜ್ಞಾನ ಪ್ರಸಾರದಲ್ಲಿ ಮಾತ್ರ ನಿಯಮಿತವಾಗದೆ ವ್ಯಕ್ತಿಯ ನೈತಿಕ ಪ್ರಜ್ಞೆಯನ್ನು ಉತ್ತೇಜಿಸುವಂತಾಗಬೇಕು.”

ಮುಂದುವರಿದು ಅದೇ ಪುಸ್ತಕದಲ್ಲಿ ಮುಸಲ್ಮಾನರ ಮೇಲೆ ಏಥೆನ್ಸ್‌ ಬೀರಿದ ಪ್ರಭಾವವನ್ನು ಹೊರಗೆಡಹಿದ್ದಾರೆ ಮೈಯರ್ಸ್.‌ ಕ್ರಿಸ್ತ ಶಕ ೬೫೦-೧೦೦೦ ಇಸವಿಯ ನಡುವೆ ಗ್ರೀಕ್‌ ವಿಜ್ಞಾನ, ಗಣಿತಶಾಸ್ತ್ರ, ತರ್ಕಪದ್ಧತಿ ಮತ್ತು ತತ್ವಜ್ಞಾನ ರಂಗದ ಶ್ರೇಷ್ಠ ಕೃತಿಗಳು ಅರಬಿ ಭಾಷೆಗೆ ಭಾಷಾಂತರಗೊಂಡಿತ್ತಲ್ಲವೇ. ಬೈಝಾಂಟಿಯನ್ ಪರಂಪರೆಯಲ್ಲಿ ಜ್ಞಾನಾರ್ಜನೆ ಮಾಡಿದ್ದ ಅರೇಬ್ಯನ್‌ ಕ್ರೈಸ್ತರು ಕೂಡಾ ಪಾಲ್ಗೊಂಡಿದ್ದ ಬೃಹತ್ ಮಟ್ಟದ ಚಾರಿತ್ರಿಕ ಭಾಷಾಂತರ ಚಳುವಳಿಯು ಮುಸ್ಲಿಂ ಜಗತ್ತಿನಲ್ಲಿ ಪರಿವರ್ತನೆಯ ಗಾಳಿಯನ್ನು ಬೀಸಲು ಶಕ್ತಿಯಿರುವ ಹಲವಾರು ಮೇರುಗ್ರಂಥಗಳನ್ನು ಪರಿಚಯಿಸಿ ಕೊಟ್ಟಿದ್ದೇ ಅಲ್ಲದೆ ಬೌದ್ಧಿಕ ಬಿಕ್ಕಟ್ಟಿನ ಅಲೆಗಳನ್ನೂ ಎಬ್ಬಿಸಿತ್ತು.

ಖುರ್‌ಆನ್‌ ಮತ್ತು ಸುನ್ನತ್‌ (ಪೈಗಂಬರರ ಮಾತು, ಕೃತಿ ಮತ್ತು ಮೌನಾನುವಾದಗಳ ಲಿಖಿತ ಮತ್ತು ಶಾಬ್ಧಿಕ ಪರಂಪರೆ) ಗಳ ಮೇಲೆಯೆ ಹೆಚ್ಚು ನೆಚ್ಚಿಕೆ ಇದ್ದುದರಿಂದ ಭಾಷಾಧ್ಯಯನವು ಶೈಕ್ಷಣಿಕ ಕ್ರಮದ ಆದ್ಯಂತ ದಿಕ್ಕನ್ನು ನಿರ್ಣಯಿಸುತ್ತಿತ್ತು. ವ್ಯಾಕರಣ, ಕೋಶವಿಜ್ಞಾನ, ಇಸ್ಲಾಮ್‌ಪೂರ್ವದ ಸಾಹಿತ್ಯ ಸಂಪುಷ್ಟ ‘ಜಾಹಿಲಿಯ್ಯ’ ಕಾವ್ಯಗಳ ಅಧ್ಯಯನ ಮತ್ತು ಸಂರಕ್ಷಣೆ ಆದಿಕಾಲದ ಮುಸಲ್ಮಾನರ ಪಠ್ಯಕ್ರಮದ ಸಿಂಹಭಾಗವನ್ನು ವಶಪಡಿಸಿಕೊಂಡಿತ್ತು. ೧೦೩೭ರಲ್ಲಿ ಕೀರ್ತಿಶೇಷರಾದ ಅವಿಸೆನ್ನ ಯಾನೆ ಇಬ್ನು ಸೀನಾ, ಅರಿಸ್ಟಾಟಲನ ಅಷ್ಟೂ ವಾಙ್ಮಯವನ್ನು ಅರೆದು ಕುಡಿದು ‘ಕಿತಾಬು ಶಿಫಾ’ ಎಂಬ ಉದ್ಗ್ರಂಥವನ್ನೆ ಬರೆದರು. ಈ ಗ್ರಂಥದಲ್ಲಿ ಅವರು ಕೆಲವೆಡೆ ಅರಿಸ್ಟಾಟಲಿಯನ್‌ ನಿರ್ಣಯಗಳಿಂದ ದೂರ ಸರಿದಿದ್ದಾರೆ. ಇನ್ನೂ ಕೆಲವೆಡೆ ಸದ್ರಿ ಚಿಂತಕರ ವೀಕ್ಷಣೆಗಳನ್ನು ಪರಿಷ್ಕರಿಸಿದ್ದಾರೆ. ಆದುದರಿಂದ, ಶಿಫಾ ಗ್ರಂಥ ಅರಿಸ್ಟಾಟಲ್‌ ಬರೆದ “ದ ಆರ್ಗನನ್‌” ಗ್ರಂಥದ ಅವಿಸೆನ್ನನ್‌ ಆವೃತ್ತಿ ಎಂದರೆ ತಪ್ಪಿಲ್ಲ. ಶಿಫಾ ಒಂದು ಪ್ರಧಾನ ಗ್ರಂಥವೆನಿಸಿದ್ದು ಪೌರ್ವಾತ್ಯ ಮುಸಲ್ಮಾನರಿಗೆ ಮಾತ್ರವಲ್ಲ, ಲ್ಯಾಟಿನ್‌ ಅನುವಾದ ಹೊರಬಂದಾಗ ಪಶ್ಚಿಮ ಯೂರೋಪಿನ ಕ್ರೈಸ್ತರು ಕೂಡಾ ಅದನ್ನು ನೆಚ್ಚುವಂತಾಯಿತು. ಅಲ್‌ ಶಿಫಾದ ಚರ್ಚೆಯನ್ನೆ ಬೆಳೆಸಿಕೊಂಡು ಗಝ್ಝಾಲಿ ಇಮಾಮರು ಪ್ರಭಾವಶಾಲಿಯಾದ ಮತ್ತೊಂದು ಗ್ರಂಥವನ್ನು ರಚಿಸಿದರು, ‘ಮಖಾಸಿದುಲ್‌ ಫಲಾಸಿಫ’. ಈ ಗ್ರಂಥವು ಅರಿಸ್ಟಾಟಲ್‌ ಸ್ಥಾಪಿಸಿದ ಪರಿವ್ರಾಜಕ ಪರಂಪರೆಯನ್ನು (peripatetic tradition) ಸರಳ ಭಾಷೆಯಲ್ಲಿ ವಿವರಿಸಿತು. ಅಲ್‌ ಶಿಫಾ, ಕ್ರೈಸ್ತ ಮತ್ತು ಯಹೂದಿ ದೇವತಾಶಾಸ್ತ್ರೀಯ ತತ್ವಜ್ಞಾನ ಪರಂಪರೆಯನ್ನು ಪ್ರಭಾವಿಸಿದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ತರುವಾಯ ಇಮಾಂ ಗಝ್ಝಾಲಿ ರವರು ದೇವತಾಶಾಸ್ತ್ರ ಮತ್ತು ಕರ್ಮಶಾಸ್ತ್ರಗಳಿಗೆ ತರ್ಕಪದ್ಧತಿ ಪೂರ್ವಾಪೇಕ್ಷಿತ ಎಂದು ಸಮರ್ಥಿಸುತ್ತಾರೆ. ಮಧ್ಯ ಏಷ್ಯಾದಲ್ಲಿ ಅರೇಬಿಕ್‌ ಅಲಂಕಾರಶಾಸ್ತ್ರದ ಉದಯವಾಗಿ ಅದು ಕೂಡಾ ಇಸ್ಲಾಮಿಕ್‌ ಪರಂಪರೆಯ ಮೂಲಭೂತ ಪಠ್ಯವಿಷಯಗಳಾದ ವ್ಯಾಕರಣ ಮತ್ತು ತರ್ಕವಿಧಾನದೊಂದಿಗೆ ಸಂಕಲಿತವಾಗುತ್ತದೆ. ಈ ತ್ರಿಪಠ್ಯಗಳು ‘ನಿಮಿತ್ತ ಕಲೆ’ಗಳೆಂದು (ಅಲ್‌ ಉಲೂಮುಲ್‌ ಆಲಃ) ಖ್ಯಾತಿ ಪಡೆದಿದ್ದು ಕೆಲವೊಮ್ಮೆ ತ್ರಿಕಲೆಗಳು (ಅಲ್‌ ಸ್ವಿನಾಅತು ಸಲಾಸತ್)‌ ಎಂದೂ ಕರೆಯಲ್ಪಡುತ್ತದೆ. ಈ ರೀತಿ ಟ್ರೈವಿಯಂ ಮುಸ್ಲಿಂ ವಿದ್ವತ್‌ ಪರಂಪರೆಯಲ್ಲಿ ಸಂಪೂರ್ಣವಾಗಿ ನಿಗಮಿತಗೊಳ್ಳುತ್ತದೆ. ಅದಾಗ್ಯೂ ಕೇಂದ್ರಸ್ಥಾನ ವ್ಯಾಕರಣಕ್ಕೇ.

ಇಸ್ಲಾಮಿಕ್‌ ಲೋಕದ ವ್ಯಾಕರಣಜ್ಞರನ್ನು ಇಂದಿನ ಪರಿಭಾಷೆಯಲ್ಲಿ ಭಾಷಾವಿಜ್ಞಾನಿಗಳು(linguist) ಎಂದು ಕರೆಯಬೇಕಿದೆ ಎನ್ನುತ್ತಾರೆ ದ ಫೌಂಡೇಶನ್ಸ್‌ ಆಫ್‌ ಗ್ರ್ಯಾಮರ್‌ ಎಂಬ ಅದ್ವಿತೀಯ ಕೃತಿಯ ಕರ್ತೃ ಜೊನಾಥನ್‌ ಓವೆನ್ಸ್. ಭಾಷಾಸಂಬಂಧಿಯಾದ ತಾತ್ವಿಕ ಸಮಸ್ಯೆಗಳ ಸಹಿತ ಭಾಷೆಯ ಎಲ್ಲಾ ಆಯಾಮಗಳನ್ನು ಅವರು ಒರೆಗೆ ಹಚ್ಚಿದ್ದರು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದ ಅರಬಿವ್ಯಾಕರಣಜ್ಞರ ಗ್ರಂಥಗಳನ್ನು ಇಂದಿನ ಆಧುನಿಕ ಭಾಷಾವಿಜ್ಞಾನಿಗಳು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂಬುದು ಓವೆನ್ಸ್‌ ರವರ ಅಂಬೋಣ. ಆ ಮಧ್ಯಕಾಲೀನ ವಿದ್ವಾಂಸರು ಬರೆಯುತ್ತಿದ್ದಂತಹ ವಿಷಯಗಳನ್ನು ಅರ್ಥೈಸಲು ಬೇಕಾದ ವೈಚಾರಿಕ ಮಟ್ಟಕ್ಕೆ ಹತ್ತೊಂಬತ್ತನೆಯ ಶತಮಾನದ ಓರಿಯಂಟಲಿಸ್ಟ್‌ಗಳು ಇನ್ನೂ ತಲುಪಿಲ್ಲ ಎಂಬುದು ಓವೆನ್ಸ್‌ ವಾದ. ಯಾಕೆಂದರೆ, ಅವರ ಕೊಡುಗೆಗಳನ್ನು ಅರ್ಥೈಸಬಲ್ಲ ಭಾಷಾವಿಜ್ಞಾನ ಇನ್ನೂ ಹೊರಹೊಮ್ಮಿಲ್ಲವಷ್ಟೆ.

ಪಾಶ್ಚಿಮಾತ್ಯ ಪರಂಪರೆಗೆ ಸದೃಶವಾದ ವ್ಯಾಕರಣ ಶಾಲೆಗಳನ್ನು ಮುಸಲ್ಮಾನರು ಸ್ಥಾಪಿಸಿದ್ದರು. ಕಲಿಕೆಯ ಪ್ರಥಮ ಆರು- ಏಳು ವರ್ಷಗಳಲ್ಲಿ ವಿದ್ಯಾರ್ಥಿಗಳು ಖುರಆನ್‌ ಕಂಠಪಾಠ ಮತ್ತು ವ್ಯಾಕರಣ – ಪದಸಂಪತ್ತಿನ ಅಧ್ಯಯನ ಮಾಡುತ್ತಿದ್ದರು. ‘ಮಕಾಮಾತ್‌’ ಎಂದು ಕರೆಯಲಾಗುವ ವರ್ಣರಂಜಿತ ಕಾಲ್ಪನಿಕ ಕಥೆಗಳ ಮೂಲಕ ಪದಸಂಪತ್ತಿನ ಬೆಳವಣಿಗೆ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು ಕಥೆಗಳನ್ನು ಮತ್ತು ಪದದ ವ್ಯಾಖ್ಯೆಗಳನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡುತ್ತಿದ್ದರು. ಉದಾರ ಶಿಕ್ಷಣದ ಮತ್ತೊದು ಘಟಕವಾಗಿದೆ ಕ್ವಾಡ್ರಿಯಂ ಎಂದು ಕರೆಯಲಾಗುವ ವೈಚಾರಿಕ ಕಲೆಗಳು(ಅಲ್‌ ಉಲೂಮುಲ್‌ ಅಖ್‌ಲಿಯ್ಯ).
(ಮುಂದುವರಿಯುವುದು)‌

ಶೈಖ್‌ ಹಂಝ ಯೂಸುಫ್

ಕನ್ನಡಕ್ಕೆ: ನಝೀರ್‌ ಅಬ್ಬಾಸ್

1 Comment

Leave a Reply

*