ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು

ಇಹ್ಸಾನಿಗೆ ಪ್ರತಿಫಲವಾಗಿ ಇಹ್ಸಾನಲ್ಲದೆ ಬೇರೇನು?
ಖುರ್‌ಆನ್ (55:60)

“ಸಕಲ ವಸ್ತುಗಳಲ್ಲಿ ದೇವರು ಸೌಂದರ್ಯ ಸ್ಥಾಪಿಸಿದ್ದಾನೆ”.
ಹದೀಸ್‌

“ಸೌಂದರ್ಯವೆಂಬುದು ಸತ್ಯದ ಉಜ್ವಲ ಶೋಭೆಯಾಗಿದೆ.”
ಪ್ಲಾಟೊ

“ತತ್ವ ವಿಚಾರಗಳಂತ ಕಾಲ್ಪನಿಕ ಸ್ವರೂಪಗಳು ಪರಿಮಿತವಾದ ರೂಪದಲ್ಲಾದರೂ ಹೇಗೆ ಪಾರಮಾರ್ಥಿಕ ಸತ್ಯಗಳನ್ನು ಸಮಂಜಸವಾಗಿ ಪ್ರತಿಬಿಂಬಿಸುವುದೋ ಹಾಗೆಯೇ ಇಂದ್ರಿಯಗ್ರಹೀತ ರೂಪಗಳು ಚಿಂತನೆ ಮತ್ತು ಇಂದ್ರಿಯ ಗ್ರಹಣ ಶಕ್ತಿಗಳಿಗೆ ಅತೀತವಾದ ಸತ್ಯ ಅಥವಾ ವಾಸ್ತವ ಸಂಗತಿಗಳನ್ನು ಅಭಿವ್ಯಕ್ತಗೊಳಿಸಲು ಸಮರ್ಥವಾಗಿದೆ.”
ಟಿಟಸ್‌ ಬರ್ಕ್ಹಾರ್ಟ್‌

ಧರ್ಮದ ಕುರಿತು ಯಾವುದೇ ಪೂರ್ವತಿಳಿವು ಇಲ್ಲದ ಜನರಿಗೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಪ್ರಸಂಗ ಬಂದರೆ, ಖುರಾನಿನ ಅನುವಾದವನ್ನೋ ಅಥವ ಇನ್ನಿತರ ಇಸ್ಲಾಮೀ ಕಾನೂನು, ತತ್ವ ಚಿಂತನೆ ಸಂಬಂಧಿತ ಗ್ರಂಥಗಳನ್ನೋ ಅಥವಾ ಪಾಶ್ಚಾತ್ಯರಿಗೆ ಇಸ್ಲಾಮನ್ನು ಪರಿಚಯಿಸಿಕೊಡುವ ಜನಪ್ರಿಯ ಪುಸ್ತಕಗಳನ್ನೋ ಓದಲು ನಾನು ಖಂಡಿತ ಸಲಹೆ ನೀಡಲಾರೆ. ಹೊರತು, ಅರಬಿಕ್‌ ಮಖಾಂ (ಸ್ವರಲಯ ಬದ್ಧ ರೀತಿ) ಒಂದರಲ್ಲಿ ಮಾಡಲಾದ, ಅನುವಾದವೇನೂ ನೀಡದ ಸುಮಧುರ ಖುರಾನ್‌ ಪಾರಾಯಣವೊಂದನ್ನು ಆಲಿಸಲು; ತುಲುತ್‌ ಅಥವಾ ಕೂಫೀ ಕಾಲಿಗ್ರಫಿಯಲ್ಲಿ ಬರೆಯಲಾದ ಪವಿತ್ರ ಗ್ರಂಥದ ಸುಂದರ ಒಟೋಮನ್‌ ಪ್ರತಿಯೊಂದರ ಮೇಲೆ ಧ್ಯಾನಿಸಲು; ಫೆಸ್‌ ನಲ್ಲಿರುವ ಖರಾವಿಯ್ಯೀನ್‌, ಇಸ್ಫಹಾನಿನ ಶೈಖ್‌ ಲುತ್ಫುಲ್ಲಾಹ್‌ ಅಥವಾ ಕೈರೋದ ಇಬ್ನು ತುಲೂನ್‌ ಇತ್ಯಾದಿ ವಿಸ್ಮಯಕರ ಮಸೀದಿಗಳನ್ನು ಕಂಡು ಮನತಣಿಸಲು; ಹಾಫಿಝ್‌, ಅಮೀರ್‌ ಖುಸ್ರು ಅಥವಾ ಇಬ್ನು ಫರೀದ್ ರಂಥ ಶ್ರೇಷ್ಠರ ಕಾವ್ಯಗಳ ಸಂಗೀತ ಲಯವನ್ನು ಆಲಿಸಲು, ಇತ್ಯಾದಿ ಚಟುವಟಿಕೆಗಳನ್ನು ಮಾಡಲು ನಾನು ಸಲಹೆ ನೀಡುವೆ.

ಪ್ರಸ್ತುತ ಇಸ್ಲಾಮೀ ನಾಗರಿಕತೆಯ ಉತ್ಕೃಷ್ಟ ಉಳಿಕೆಗಳು ಯಾವುದೇ ಗ್ರಂಥಗಳಿಗೆ ಸರಿಸಾಟಿಯಾಗದಂತೆ ಧರ್ಮತಿರುಳಿನ ಸತ್ಯತೆ ಮತ್ತು ಸೌಂದರ್ಯವನ್ನು ಸಂವಹನ ಮಾಡಲು ಸಮರ್ಥವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಪ್ರಚಲಿತ ಕಾಲದ ಅತ್ಯಂತ ಆಸಕ್ತಿಕರ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ ಒದಗಿಸಬಲ್ಲದು. ಪಾಶ್ಚಾತ್ಯ ಜಗತ್ತಿನಲ್ಲಿ ಇಸ್ಲಾಂ ವಿರುದ್ದ ತೀವ್ರತರ ಕುಪ್ರಚಾರಗಳಿದ್ದರೂ ಕೂಡ, ಸ್ಪೈನಿನ ಅಲ್ ಹಂಬ್ರಾ ಮತ್ತು ಭಾರತದ ತಾಜ್‌ ಮಹಲಿನ ವಾಸ್ತುಶಿಲ್ಪ ವೈಭವವನ್ನು ಮತ್ತು ಇಸ್ಲಾಮಿಕ್‌ ಕಾಲಿಗ್ರಫಿ, ಚಿತ್ರಕಲೆಗಳ ಚಿತ್ತಾಕರ್ಷಕ ಬೆಡಗನ್ನು ಕಣ್ತುಂಬಿಸಿಕೊಳ್ಳಲು ಹಾಗೂ ಇಸ್ಲಾಮೀ ಪರಂಪರಾಗತ ಸಂಗೀತ ಮೇಳಗಳಲ್ಲಿ ಪಾಲ್ಗೊಳ್ಳಲು ಜನರು ಇಂದು ಸಾಲು ಸಾಲಾಗಿ ಹರಿಯುತ್ತಿರುವುದು ನಿಜಕ್ಕೂ ಅಚ್ಚರಿದಾಯಕ ಸಂಗತಿ. ಇಸ್ಲಾಮೀ ಪರಂಪರೆಯ ಬಾಹ್ಯ ಅಭಿವ್ಯಕ್ಯಿಗಳಾದ ಪ್ರಸ್ತುತ ಮೂರ್ತ ವಸ್ತುಗಳು ಅದರ ಒಳಾಂತರ ಸತ್ಯಗಳನ್ನು ಪ್ರತಿನಿಧಿಸುತ್ತದೆಯೆಂಬುದು ಕಗ್ಗಂಟಾಗಿ ಉಳಿಯುವ ವಿಪರ್ಯಾಸವೇ ಸರಿ.

ಹಲವು ವಿದ್ವಾಂಸರ ಪ್ರಕಾರ, ಇಸ್ಲಾಮೀ ಕಲೆಯು ಯಾವುದೇ ತರದ ಮೇರು ಕೃತಿಗಳಿಗಿಂತ ಹೆಚ್ಚು ಗಹನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಬಲ್ಲದು. ಅದರ ಸೊಡಗು, ಸುಭಧ್ರ ವಾದಸರಣಿಗಿಂತ ಪ್ರಬಲವಾಗಿ ಮನಸೂರೆಗೊಳಿಸುವಂತದ್ದು. ಕೆಲವು ತರ್ಕಸರಣಿ ಮತ್ತು ವೈಚಾರಿಕ ಸಾಕ್ಷ್ಯಗಳಿಂದ ಕೂಡಿದ ಗದ್ಯರೂಪದ ಗ್ರಂಥವಲ್ಲ ಖುರ್‌ಆನ್. ಹೊರತು,ಅನುಪಮ ಭಾಷಾ ಸೌಂದರ್ಯ, ಉಪಮೆಗಳು ಮತ್ತು ಸಂಕೇತಗಳನ್ನು ಮೇಳೈಸಿದ ಕಾವ್ಯಾತ್ಮಕ ಶೈಲಿಯಲ್ಲಿರುವ ಸುಮಧುರ ಆಲಾಪನೆಯದು. ಎಂದಲೇ, ಅದರ ಸಾರಭೂತ ಲಾವಣ್ಯ ಪೂರ್ವಜರನೇಕರನ್ನು ಇಸ್ಲಾಮಿನತ್ತ ಸೆಳೆಯಿತು. ಫಿಕ್ಹ್ (ಇಸ್ಲಾಮೀ ಕಾನೂನು) ಮತ್ತು ಕಲಾಮಿನ (ದೇವತಾಶಾಸ್ತ್ರ) ಗ್ರಂಥಗಳು ಬರುವುದಕ್ಕಿಂತ ಮುಂಚೆ, ಮುಸ್ಲಿಮರ ಪ್ರಥಮ ತಲೆಮಾರು ವಾಸ್ತುಶಿಲ್ಪದ ಅನೇಕ ಮೇರು ಕಲಾಕೃತಿಗಳನ್ನು ರೂಪಿಸಿದ್ದರು. ಟುನಿಷ್ಯಾದ ಖೈರುವಾನ್‌ ಮಸ್ಜಿದ್‌, ಜೆರೂಸಲೇಮಿನ ಶಿಲಾಗುಮ್ಮಟ, ಅನುಪಮ ಕ್ಯಾಲಿಗ್ರಫಿ ಕಸೂತಿ ಮತ್ತು ನವ ಸಾಹಿತ್ಯ ಕೃತಿಗಳು ಇವೆಲ್ಲ ಸ್ಪಷ್ಟ ನಿದರ್ಶನಗಳು. ಇಸ್ಲಾಮೀ ಕಾನೂನು ಮತ್ತು ತತ್ವ ಚಿಂತನೆಯಷ್ಟೇ ಪ್ರಾಧಾನ್ಯತೆ ಇಸ್ಲಾಮೀ ಕಲಾಕೃತಿಗಳಿಗೆ ಇದ್ದರೂ ಕೂಡ, ಸಮಕಾಲೀನ ಸಂದರ್ಭದಲ್ಲಿ ಅವುಗಳ ಮಹತ್ವ ಕಳೆಗುಂದುತ್ತಿರುವುದು ವಿಷಾದಕರ ಸಂಗತಿ.( ಶತಮಾನಗಳ ಪ್ರಯತ್ನದಿಂದ ವಿಶೇಷ ಸೌಂದರ್ಯಪ್ರಜ್ಞೆ ಇಸ್ಲಾಮೀ ನಾಗರಿಕತೆಯಲ್ಲಿ ಬೆಳೆದು ಬಂದದ್ದನ್ನು ಇಲ್ಲಿ ಮರೆಯಲಾಗದು). ಪ್ರಸ್ತುತ ವಿದ್ಯಮಾನ ಇಡೀ ಮನುಕುಲಕ್ಕೇ ಮಹಾನಷ್ಟವಾಗುವುದರೊಂದಿಗೆ, ವಿಶೇಷವಾಗಿ ಮುಸ್ಲಿಮರಿಗೆ ಮಹಾ ದುರಂತವೇ ಸರಿ. “ದೇವರು ಸೌಂದರ್ಯವಂತನು ಹಾಗೂ ಸೌಂದರ್ಯವನ್ನು ಇಷ್ಟಪಡುವವನು” ಎಂದು ಪ್ರವಾದಿ ನುಡಿಯೊಂದು ಸಾರುವಾಗ, ಸೌಂದರ್ಯದೊಂದಿಗಿನ ಉಡಾಫೆ ಭಾವ ದೇವರನ್ನೇ ಕಡೆಗಣಿಸಿದಂತೆ.

ಅದೃಶ್ಯಲೋಕದ ದೃಶ್ಯೀಕರಣ

ಇಸ್ಲಾಮೀ ಪರಂಪರೆಯಲ್ಲಿ, ವೈಚಾರಿಕ, ನೈತಿಕ ಮತ್ತು ಆಧ್ಯಾತ್ಮಿಕ ಸಂಬಂಧಿತ ಸೌಂದರ್ಯಪ್ರಜ್ಞೆಯು ಅನುವಾದಕ್ಕೆ ಒಗ್ಗದ “ಇಹ್ಸಾನ್”‌ ಎಂಬ ಪದದಲ್ಲಿ ಅಡಕಗೊಂಡಿದೆ. ʼಇಹ್ಸಾನ್‌ʼನ ರೂಢಿಗತ ವ್ಯಾಖ್ಯೆಯು ಪ್ರಸಿದ್ದ ಜಿಬ್ರೀಲ್‌ ಹದೀಸಿನಿಂದ ರೂಪಿತಗೊಂಡಿದೆ. ಅದರಲ್ಲಿ ಪ್ರವಾದಿ (ಸ) ಹೀಗೆ ವಿವರಿಸುತ್ತಾರೆ: “ಕಣ್ಣಾರೆ ಕಾಣುವಂತೆ ದೇವರನ್ನು ಆರಾಧಿಸುವುದು, ಕಾರಣ ನೀವು ಆತನನ್ನು ಕಾಣದಿದ್ದರೂ, ಆತ ನಿಮ್ಮನ್ನು ದರ್ಶಿಸುವನು”. ಸರಳವಾಗಿ ಹೇಳುವುದಾದರೆ, ಇಸ್ಲಾಮೀ ಕಲಾಕೃತಿಗಳು ಇಹ್ಸಾನನ್ನು ಪ್ರಚೋದಿಸುತ್ತದೆ. ಕಾರಣ, ಸಾಂಪ್ರದಾಯಿಕ ಪ್ರಾರ್ಥನಾ ಹಾಸುಗಳ ಮೇಲೆ ರಚಿಸುವ ಕಲಾ ಚಿತ್ತಾರಗಳು, ಮಸೀದಿ ಮತ್ತು ಮನೆಗಳನ್ನು ಅಲಂಕರಿಸಲು ಮಾಡುವ ರೇಖಾಕಾರ ವಿನ್ಯಾಸಗಳು ಮತ್ತು ಕಾಲಿಗ್ರಫಿ, ಕಟ್ಟಡಗಳ ಹೃದಯಂಗಮ ವಾಸ್ತುಶಿಲ್ಪಾಕೃತಿಗಳು, ಇಂತ ಸೌಂದರ್ಯ ಪ್ರದರ್ಶಕ ವಸ್ತುಗಳು ದೇವರನ್ನು ದರ್ಶನ ಭಾವದೊಂದಿಗೆ ಆರಾಧಿಸಲು ಸಹಕಾರಿಯಾಗುತ್ತವೆ. ಕಂಡಂತೆ ಭಾಸವಾಗುವ ಪ್ರಸ್ತುತ ದರ್ಶನ, “ಭಾವನೆ” (ಖಯಾಲ್)‌ –ಸಾಮಾನ್ಯಕ್ಕಿಂತ ವಿಶೇಷ ಅರ್ಥವನ್ನೊಳಗೊಂಡ ಇಸ್ಲಾಮಿ ಪಾರಿಭಾಷಿಕ ಪದವಿದು- ಮೂಲಕ ಸಾಧ್ಯವಾಗುತ್ತದೆ.
ಇಬ್ನು ಅರಬಿ ಮತ್ತು ಇತರ ಸೂಫಿ ತಾತ್ವಿಕರ ಕೃತಿಗಳಲ್ಲಿ ಕಂಡು ಬರುವಂತೆ, ಕಲ್ಪನಾಶಕ್ತಿ (ಖಯಾಲ್)‌ ಎಂಬುದು ಅವಾಸ್ತವಿಕ,ಕಾಲ್ಪನಿಕ ಸಂಗತಿಗಳನ್ನು ಒಳಗೊಳ್ಳುವಂತದ್ದಲ್ಲ. ಹೊರತಾಗಿ, ಅಮೂರ್ತ ವಿಚಾರಗಳನ್ನು ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ಇಂದ್ರಿಯಗ್ರಹೀತ ರೂಪಕ್ಕಿಳಿಸುವ ಹಾಗೂ ಇಂದ್ರಿಯಾಧೀನ ಸ್ವರೂಪಗಳಲ್ಲಿ ಅಡಕಗೊಂಡಿರುವ ನಿಗೂಢಾರ್ಥಗಳನ್ನು ಗ್ರಹಿಸುವ ಸೃಜನಾತ್ಮಕ ಸಾಮರ್ಥ್ಯವಾಗಿದೆ ಅದು. ವಾಸ್ತವಿಕ ಕನಸುಗಳು, ದೃಶ್ಯಾನುಭವಗಳು ಮತ್ತು ಅವುಗಳ ವ್ಯಾಖ್ಯಾನಕ್ಕೆ ಸಹಾಯಕವಾಗುವ ಸಾಮರ್ಥ್ಯವೂ ಕೂಡ ಇದೇ. ಪ್ರವಾದೀ (ಸ) ಜೀವನದ ಪ್ರಕರಣವೊಂದರಲ್ಲಿ ಇದನ್ನು ಕಾಣಬಹುದು. ಒಮ್ಮೆ ಕನಸಿನಲ್ಲಿ ಹಾಲನ್ನು ಕಂಡರು ಹಾಗೂ ಅದನ್ನು ಅತೀಂದ್ರಿಯ ಜ್ಞಾನದ ಐಂದ್ರಿಕ ಸಂಕೇತವಾಗಿ ಅರ್ಥೈಸಿದರು. ಭಾವನಾಶಕ್ತಿ ಅಗೋಚರ ಜಗತ್ತನ್ನು ಗೋಚರಗೊಳಿಸಲು ಹಾಗೂ ದೃಶ್ಯ ಆಕೃತಿಗಳ ಅಮೂರ್ತ ತಾತ್ಪರ್ಯಗಳನ್ನು ಜಾಡು ಹಿಡಿಯಲು ನೆರವಾಗುವುದು. ಈ ನಿಟ್ಟಿನಲ್ಲಿ, ಕಲ್ಪನೆಯೆಂಬುದು ದೃಶ್ಯ ಅದೃಶ್ಯಗಳ ನಡುವಿನ, ಪದಾರ್ಥ ಮತ್ತು ಚೈತನ್ಯ ಲೋಕಗಳ ನಡುವಿನ, ಹಾಗೂ ಇಂದ್ರಿಯ ಗ್ರಾಹ್ಯ ಮತ್ತು ಬುದ್ಧಿ ಗ್ರಾಹ್ಯ ಸ್ವರೂಪಗಳ ನಡುವಿನ ಬರ್ಝಖ್‌ ( ತಾನು ಭಾಗಿಯಾಗುವುದರೊಂದಿಗೆ, ಎರಡು ಬಗೆಯ ಅಸ್ತಿತ್ವಗಳನ್ನು ಪರಸ್ಪರ ಬೇರ್ಪಡಿಸುವ ಮಾಧ್ಯಮಿಕ ಅಸ್ತಿತ್ವ) ಎಂದು ಪರಿಗಣಿಸಬಹುದು.

Oludamini Ogunnaike (College of William and Mary)

ಅನೇಕ ಸೂಫಿ ಸಿದ್ದಾಂತಿಗಳ ಪ್ರಕಾರ, ದೇವರ ಅಸ್ತಿತ್ವದ ಹೊರತು ಇತರ ಎಲ್ಲಾ ವಸ್ತುಗಳು ಕಲ್ಪನೆ ಮಾತ್ರವಾಗಿದೆ. ಆದ್ದರಿಂದ, ಅವುಗಳನ್ನು ವ್ಯಾಖ್ಯಾನಕ್ಕೊಳಪಡಿಸಬೇಕಾದ ಕನಸಿನ ಒಂದು ಬಗೆಯಾಗಿ ಕಾಣಬೇಕಾಗುತ್ತದೆ. ಇಬ್ನು ಅರಬಿ (ರ) ಬರೆಯುತ್ತಾರೆ: “ ನೀನೇ ಒಂದು ಕಲ್ಪನೆಯೆಂದು ತಿಳಿಯಬೇಕು. “ ಇದು ನಾನಲ್ಲ” ಎಂದು ನೀ ಸ್ವತಃ ಹೇಳಿಕೊಳ್ಳುವ, ನಿನ್ನ ಅನುಭವಕ್ಕೆ ದಕ್ಕುವ ವಸ್ತುಗಳೂ ಕೂಡ ಕಲ್ಪನೆಗಳಾಗಿವೆ. ಆದ್ದರಿಂದ, ಇಡೀ ಜಗತ್ತಿನ ಇರವು ಕಲ್ಪನೆಯೊಳಗಿನ ಕಲ್ಪನೆಯಾಗಿದೆ.” ಕನಸುಗಳು ನಮ್ಮ ಅಂತರ್ಪ್ರಜ್ಞೆಯ ವಿಭಿನ್ನ ಆಯಾಮಗಳನ್ನು ಅಭಿವ್ಯಕ್ತಗೊಳಿಸುವಂತೆಯೇ ದೇವನ ಹೊರತಾದ ವಸ್ತುಗಳ (ಮಾ ಸಿವಲ್ಲಾಹ್)‌ ಆಯಾಮ ರಹಿತವಾದ ದೇವನ ಏಕತ್ವದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತದೆ. ದೇವರು ಆತ್ಯಂತಿಕ ಏಕತ್ವವನ್ನು ಹೊಂದಿರುವುದರಿಂದ ಆತನ ಮೇಲೆ ನೇರವಾಗಿ ಧ್ಯಾನಿಸುವುದು ಅಸಾಧ್ಯ. ಆದ್ದರಿಂದ, ಅದೃಶ್ಯ ದೇವರ ಆಯಾಮಗಳನ್ನು “ದರ್ಶಿಸಲು”, ಆತನ ಮೇಲೆ ಆಳಚಿಂತನೆ ಮತ್ತು ಧ್ಯಾನ ನಡೆಸಲು ಸಂಕೇತ ಮತ್ತು ದೃಷ್ಟಾಂತ (ಆಯಾತ್)‌ ಗಳನ್ನೊಳಗೊಂಡ ಕನಸು ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿಯೇ, ನಮ್ಮನ್ನೊಳಗೊಂಡ ಪ್ರಾಪಂಚಿಕ ವಿದ್ಯಮಾನಗಳನ್ನು ಗಂಭೀರ ಆಲೋಚನೆ ಮತ್ತು ಧ್ಯಾನಕ್ಕೆ ಒಳಪಡಿಸಲು ಖುರಾನಿನ ಹಲವಾರು ಸೂಕ್ತಗಳಲ್ಲಿ ಪ್ರೇರಣೆ ಬಂದಿರುವುದು. ಅಬುಲ್‌ ಅತಾಇಯ ರವರ ಪ್ರಸಿದ್ದ ಸಾಲುಗಳು ಇದನ್ನೇ ತಿಳಿಸಿಕೊಡುತ್ತದೆ “ಆತನು ಏಕನಾಗಿದ್ದಾನೆ ಎಂಬುವುದಕ್ಕೆ ಎಲ್ಲಾ ವಸ್ತುಗಳಲ್ಲಿ ನಿದರ್ಶನವಿದೆ”. ಸೂರಃ ಫುಸ್ಸಿಲತಿನಲ್ಲಿ ಇನ್ನೂ ಸ್ಪಷ್ಟವಾಗಿ ಕಾಣಬಹುದು:” ಇದು ಪರಮ ಸತ್ಯವೆಂದು ಅವರಿಗೆ ಸುಸ್ಪಷ್ಟವಾಗುವ ತನಕ ನಾವು ದಿಗಂತಗಳಲ್ಲಿ ಹಾಗೂ ಅವರಲ್ಲೇ ನಮ್ಮ ದೃಷ್ಟಾಂತಗಳನ್ನು ತೋರಿಸುತ್ತಿರುವೆವು” (41:53)

ಸೃಷ್ಟಿಗಳ ನಿದರ್ಶನಗಳು ಬೆಳಕಿಗೆ ಬರುವುದು ಕಲ್ಪನೆಯ ಮೂಲಕವಾದುದರಿಂದ, ಅದರ ಮೂಲಕವೇ ದೃಷ್ಟಾಂತಗಳ ಮೂಲಾರ್ಥಗಳನ್ನು ಅನ್ವೇಷಿಸಬೇಕಾಗುತ್ತದೆ ಹಾಗೂ ಅವು ಪ್ರದರ್ಶಿಸುವ ದೈವಿಕ ಆಯಾಮಗಳನ್ನು ಪರಿಗಣಿಸಿ ಅವುಗಳನ್ನು ವ್ಯಾಖ್ಯಾನಿಸಬೇಕಾಗುವುದು. ನಮ್ಮ ಪರಿಸರದಲ್ಲಿರುವ ಬೆಳಕು,ನೆರಳು,ಸ್ಥಳ, ಕಾಲ, ಬಣ್ಣ, ಶಬ್ಧ ಮತ್ತು ಪರಿಮಳ ಮುಂತಾದ ಮೂಲ ಘಟಕಗಳಲ್ಲಿ ಅಡಕಗೊಂಡಿರುವ ರೇಖಾತ್ಮಕ ಮತ್ತು ಮೂಲಮಾದರಿಯ ಸತ್ಯಗಳನ್ನು ಹೊರತರುವಲ್ಲಿ ಇಸ್ಲಾಮೀ ಕಲಾಕೃತಿಗಳು ಮುಖ್ಯ ಪಾತ್ರ ವಹಿಸಿದೆ. ಇದೇ ಕಾರಣದಿಂದಾಗಿ ಇಸ್ಲಾಮೀ ನಾಗರಿಕತೆ ಮತ್ತು ಅದರ ಕಲಾಕೃತಿಗಳು ರೇಖಾಗಣಿತದ ಮೇಲೆ ಹೆಚ್ಚು ಗಮನ ನೀಡಿದ್ದಾಗಿ ಕಂಡು ಬರುತ್ತದೆ. ಅವು ವರ್ಣರಂಜಿತ ಗಾಜಿನ ಕಿಟಕಿಗಳಂತೆ ಕಾರ್ಯಾಚರಿಸಿ ನಮಗೆ ದೇವರ ಬೆಳಕನ್ನು ದರ್ಶನವುಂಟುಮಾಡಿಕೊಡುತ್ತದೆ. ಇಸ್ಲಾಮೀ ಕಲೆಗಳು ಅದೃಶ್ಯವನ್ನು ದೃಶ್ಯೀಕರಿಸುವುದು ಮತ್ತು ಇಂದ್ರಿಯ ಗ್ರಾಹ್ಯ ವಸ್ತುಗಳಲ್ಲಿ ಅಂತರ್ಗತವಾದ ಪಾರಮಾರ್ಥಿಕ ರಹಸ್ಯಗಳನ್ನು ನಾವು ಅರ್ಥ ಮಾಡಿ ಕೊಳ್ಳುವುದು ಎರಡೂ ಕೂಡ ಕಲ್ಪನಾಶಕ್ತಿಯ (ಖಯಾಲ್) ಮೂಲಕವೇ ಆಗಿದೆ.‌

ಸಾಮಾನ್ಯವಾಗಿ, ಖಯಾಲ್‌ (ಕಲ್ಪನಾ ಶಕ್ತಿ) ಮತ್ತು ಅಖ್‌ಲ್ (ವಿವೇಚನಾಶಕ್ತಿ) ಇವೆರಡರ ನಡುವೆ ವ್ಯತ್ಯಾಸ ತೋರಿಸುವುದುಂಟು. ಖಯಾಲ್‌ ಸಂಯೋಜಕ ಗುಣ ಹೊಂದಿದ್ದರೆ ಅಖ್‌ಲ್ ವಿಭಜಕ ಗುಣವನ್ನು ಹೊಂದಿದೆ. ಖಯಾಲ್‌ ಪರಸ್ಪರ ಸಂಬಂಧಗಳನ್ನು ಮತ್ತು ಸಾದೃಶ್ಯಗಳನ್ನು ಎತ್ತಿ ತೋರಿಸುತ್ತದೆ. ಅಖ್‌ಲ್ ವಿಭಿನ್ನತೆ ಮತ್ತು ವೈದೃಶ್ಯಗಳೆಡೆಗೆ ಬೊಟ್ಟು ಮಾಡುತ್ತದೆ. ವಿಲಿಯಂ ಚಿಟ್ಟಿಕ್‌ ವಿವರಿಸುದನ್ನು ನೋಡಿ: ” ವಿವೇಚನಾಶಕ್ತಿಗೆ ಪರಕೀಯವಾದ ವಿಧಾನದ ಮೂಲಕವಾಗಿದೆ ಕಲ್ಪನಾಶಕ್ತಿ ಅರ್ಥ ಮಾಡುವುದು. ಚೈತನ್ಯ ಮತ್ತು ಪದಾರ್ಥಗಳ ನಡುವೆ ಮಾಧ್ಯಮಿಕ ಅಸ್ತಿತ್ವ ಹೊಂದಿದ ಕಲ್ಪನಾಶಕ್ತಿ, ಅಮೂರ್ತ ವಿಚಾರ ಮತ್ತು ಭೌತಿಕಾತೀತ ವಿಷಯಗಳನ್ನು ಮೂರ್ತ ರೂಪಗಳಲ್ಲಿ ಸಂವೇದನೆ ಮಾಡಿಕೊಳ್ಳುವುದು. ಹೌದು/ಅಲ್ಲ ಎಂದು ಕರಾರುವಕ್ಕಾದ ರೂಪದಲ್ಲಿ ಅರಿಯಲು ವಿವೇಕ ಬಯಸುತ್ತದೆ. ತದ್ವಿರುದ್ದವಾಗಿ, ಭಾವನೆ, ಅಪರಿಚಿತ ಅಸ್ತಿತ್ವವೊಂದನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬ ಕಾರಣದಿಂದ ದೇವರ ಸ್ವಾಭಿವ್ಯಕ್ತಿಗಳನ್ನು ನಿಖರವಾಗಿ ತಿಳಿಯಲು ಸಾಧ್ಯವಿಲ್ಲವೆಂಬ ಸತ್ಯವನ್ನು ಮನಗಾಣುತ್ತದೆ.”
ಪ್ರಸ್ತುತ ಗ್ರಹಿಕೆಯ ಪ್ರಕಾರ, ಬಹುರೂಪೀ ಅಭಿವ್ಯಕ್ತಿಗಳ ಸಂಕೀರ್ಣತೆಯನ್ನು ಮತ್ತು ಮೂಲಸ್ವರೂಪಿ ಏಕತ್ವವನ್ನು ಸಮಂಜಸವಾಗಿ ಅರ್ಥೈಸುವ ಸಾಮರ್ಥ್ಯ ಹೊಂದಿರುವುದು ಕಲ್ಪನಾಶಕ್ತಿ ಮಾತ್ರ. ಪ್ರತ್ಯಕ್ಷದಲ್ಲಿ ವಿರೋಧಾತ್ಮಕವೆಂದು ತೋರುವ ಹೇಳಿಕೆ ಮತ್ತು ವಿದ್ಯಮಾನಗಳ ಭೌತಿಕ ವೈಶಿಶ್ಠೈತೆಯನ್ನು ಪರಿಗಣಿಸುವುದರ ಜತೆಗೇ, ಅವುಗಳನ್ನು ಸಂಯೋಜಿಸುವ ಸಾಮಾನ್ಯ ಮೂಲವನ್ನು ಅರಸುವ ಶಕ್ತಿ ಖಯಾಲ್‌ಗೆ ಮಾತ್ರವಿರುವುದು. ಬಾಹ್ಯದಲ್ಲಿ ವ್ಯತ್ಯಾಸಗಳಿದ್ದಾಗ್ಯೂ, ಮರ, ಕಾಲಿಗ್ರಫಿಯ ಕಲಾಕೃತಿ, ಜ್ಯಾಮಿತೀಯ ಮಾದರಿ, ಕಾವ್ಯ ಸಾಲುಗಳು ಇತ್ಯಾದಿಗಳಲ್ಲಿ ಸಮಾನವಾದ ಸತ್ಯವೊಂದನ್ನು ಕಂಡರಿಸಲು ಭಾವನಾ ಶಕ್ತಿಗೆ ಸಾಧ್ಯ. ಈ ನಿಟ್ಟಿನಲ್ಲಿ ಅವಲೋಕನ ಮಾಡುವಾಗ, ಇಸ್ಲಾಮೀ ಕಲಾಕೃತಿಗಳ ಸೃಷ್ಠಿ ಮತ್ತು ಪ್ರೋತ್ಸಾಹದ ವಿಚಾರದಲ್ಲಿ ಗಮನೀಯ ಪ್ರಮಾಣದ ಅವನತಿಯನ್ನು ಕಂಡಿರುವ ಮುಸ್ಲಿಮರ ನಡುವೆ, ಉಗ್ರ ಪಂಥೀಯತೆ ಮತ್ತು ಪರಸ್ಪರ ತಪ್ಪುತಿಳುವಳಿಕೆಗಳು ಹೆಚ್ಚುತ್ತಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಭಾವನಾ ಸಾಮರ್ಥ್ಯದ ಕಡೆಗಣನೆ ಮತ್ತು ಇಸ್ಲಾಮೀ ಪರಂಪರೆಯ ಒಳ ಹರಿವಿನ ಕುರಿತ ಪರಿಜ್ಞಾನದ ಕೊರತೆಯಿಂದಾಗಿ ಪ್ರಸ್ತುತ ವಿದ್ಯಮಾನಗಳು ಘಟಿಸುತ್ತಿವೆ.

ಪವಿತ್ರ ದೇವ ಗ್ರಂಥಗಳಲ್ಲೂ ಹಾಗೂ ಪ್ರಪಂಚದಲ್ಲೂ ಕಾಣಸಿಗುವ ಅಲ್ಲಾಹನ ದೃಷ್ಠಾಂತಗಳನ್ನು ಅರ್ಥೈಸಲು ಮತ್ತು ಅವುಗಳಿಗೆ ಸೂಕ್ತ ವ್ಯಾಖ್ಯಾನ ನೀಡಲು ಖಯಾಲ್‌ (ಭಾವನಾ ಶಕ್ತಿ) ಮತ್ತು ಅಖ್‌ಲ್ (ವಿವೇಚನಾ ಶಕ್ತಿ) ಎರಡೂ ಜತೆ ಜತೆಗೇ ಕಾರ್ಯಾಚರಿಸಬೇಕೆಂದಾಗಿದೆ ಇಬ್ನು ಅರಬಿ (ರ), ಗಝಾಲಿ (ರ) ರಂತ ಖ್ಯಾತನಾಮರು ಅಭಿಪ್ರಾಯಪಟ್ಟಿರುವುದು. ಇದರ ಸ್ಪಷ್ಟ ವಿವರಣೆ ಅತ್ಯಂತ ವೈರುಧ್ಯಾತ್ಮಕವೆನಿಸುವ ಖುರಾನೀ ಸೂಕ್ತವೊಂದರಲ್ಲಿ ಕಾಣಬಹುದು. “ ಅವನಿಗೆ ಸರಿಸಮಾನವಾದ ಯಾವುದೇ ಇಲ್ಲ, ಆದರೂ ಅವನು ಕೇಳುವವನು ಮತ್ತು ಕಾಣುವವನು” (42:11). ಪ್ರಸ್ತುತ ಆಯತಿನ ಮೊದಲ ಅರ್ಧಭಾಗದಲ್ಲಿ ಅಲ್ಲಾಹನ ಅನುಪಮತೆ ಮತ್ತು ಪರಮಾತೀತತೆಯನ್ನು ಘೋಷಿಸಲಾಗಿದೆ. ಇಬ್ನು ಅರಬಿ ಪ್ರಕಾರ ಅದು ವಿವೇಕಕ್ಕೆ ನೀಡಿದ ಸಂದೇಶ. ಎರಡನೆಯ ಅರ್ಧಭಾಗ ಆತನ ಸಮಾನತೆ ಮತ್ತು ಅಂತರ್ಗತತ್ವವನ್ನು (ನಾವು ಕೂಡ ಕಾಣುತ್ತೇವೆ, ಕೇಳುತ್ತೇವೆ ಎಂಬಂತಿದೆ ಹೇಳಿಕೆ) ಸಾರುವಂತದ್ದು. ಆದ್ದರಿಂದಲೇ ಅದು ನಮ್ಮ ಕಲ್ಪನೆಯೊಂದಿಗಿರುವ ಸಂಭಾಷಣೆ. ಸೂಕ್ತದ ಉಭಯ ಭಾಗಗಳನ್ನು ದ್ವಿನೇತ್ರಗಳಿಂದ (ಖಯಾಲ್‌ ಮತ್ತು ಅಖ್‌ಲ್) ನೋಡುವ ಮೂಲಕ ಅರ್ಥ ಮಾಡುವಾಗ ಮಾತ್ರ ಅಲ್ಲಾಹನನ್ನು ಆತನ ನಿದರ್ಶನಗಳ ಮುಖಾಂತರ ಅರಿತಂತಾಗುವುದು.
ತನ್ನದೇ ಸಾಮಾಗ್ರಿಗಳ ಮುಖಾಂತರ ವಿವೇಕಕ್ಕೆ ದೇವರು ನಮ್ಮ ಅನುಭವಗಳಿಗೆ ಅತೀತನೂ ಎಲ್ಲಕ್ಕಿಂತ ಭಿನ್ನನೂ ಆಗಿದ್ದಾನೆಂದು ತಿಳಿಯಲು ಸಾಧ್ಯ. ಆದರೆ, ವಿದ್ಯಮಾನಗಳಲ್ಲಿ ದೇವರ ಸಾನ್ನಿಧ್ಯವನ್ನು ದರ್ಶಿಸಲು ಹಾಗೂ ಆತನ ಅಸ್ತಿತ್ವದ ನೈಜತೆಯ ಕುರಿತು ಧನಾತ್ಮಕವಾದ ಯಾವುದೇ ವಿಚಾರವನ್ನು ಮುಂದಿಡಲು ಅದು ಅಸಮರ್ಥವಾಗಿದೆ. ಪ್ರವಾದಿಗಳಿಗೆ ಸಿಕ್ಕ ಕಾವ್ಯಾತ್ಮಕ ದಿವ್ಯ ಸಂದೇಶಗಳಿಂದ ಮತ್ತು ಭಾವನಾ ಸಾಮರ್ಥ್ಯ ಬಳಸಿ ಮಾಡುವ ದಿವ್ಯ ದೃಷ್ಠಾಂತಗಳ ಮೇಲಿನ ಧ್ಯಾನದಿಂದ ಮಾತ್ರ ನಮಗೆ ದೇವರ ಸಕಾರಾತ್ಮಕ ಗುಣಗಳನ್ನು ಮನಗಾಣಲು ಸಾಧ್ಯ. ದೇವರು, ತತ್ವ ಚಿಂತನೆಯ ತರ್ಕ ಸರಣಿಯಲಲ್ಲಿ ಹೇಳಲಾಗುವ ಅನಿವಾರ್ಯ ಅಸ್ತಿತ್ವ (ವಾಜಿಬುಲ್‌ ವುಜೂದ್)‌ ಹೊಂದಿದವನು ಮಾತ್ರವಾಗಿದ್ದರೆ, ಬಿಗ್‌ ಬ್ಯಾಂಗ್‌ ತಿಯರಿಗಿಂತ ಹೆಚ್ಚಾಗಿ ಆತನನ್ನು ಜನರು ಪ್ರೀತಿಸುತ್ತಿರಲಿಲ್ಲ.
ಮತ್ತೊಂದು ಬಗೆಯಲ್ಲಿ ಹೇಳುವುದಾದರೆ, ಧರ್ಮ ಸಂಬಂಧಿತ ಸೃಜನಾತೃಕ ರಚನೆಗಳು ಸತ್ಯತೆ (حق,Truth) ಮತ್ತು ಸಾನಿಧ್ಯ (حضور presence) ಎಂಬೀ ಸಂಗತಿಗಳನ್ನು ಒಳಗೊಂಡಿರಬೇಕು. ಸಾನಿಧ್ಯವಿಲ್ಲದೆ, ಸತ್ಯ ಅಮೂರ್ತ ಮತ್ತು ಅಪ್ರಚೋದಕವಾಗಿ ಉಳಿಯುತ್ತದೆ; ಶಾಲೆಯಲ್ಲಿ ಕಲಿತ ಅರ್ಧ ನೆನಪಿರುವ ರೇಖಾಗಣಿತದ ವಿಚಾರದಂತೆ. ಹಾಗೆಯೇ, ಸತ್ಯತೆ ರಹಿತವಾದರೆ ಸಾನಿಧ್ಯ ಶುಷ್ಕವೂ ಅರ್ಥಹೀನವೂ ಆಗಬಹುದು. ದ್ವಿಮುಖ ಹೊಂದಿರುವ ಇಸ್ಲಾಮೀ ಕಲೆಯ ಅಧ್ಭುತವೇನೆಂದರೆ ಪಾರಮಾರ್ಥಿಕ ಸತ್ಯವನ್ನೂ ಹಾಗೂ ದಿವ್ಯ ಸಂದೇಶಗಳ ವಾಸ್ತವಿಕತೆಯನ್ನು ನಮ್ಮ ಕಣ್ಮುಂದೆ ತರುತ್ತದೆ, ನಮ್ಮ ಇಂದ್ರಿಯಾನುಭವಕ್ಕೆ ಇಳಿಸುತ್ತದೆ. ಅಂದರೆ, ನಮ್ಮ ಭೌತಿಕ ಆವರಣವನ್ನು ದಿವ್ಯ ಸತ್ಯ ಸೌಂದರ್ಯಗಳಿಂದ ಸಮೃದ್ಧಗೊಳಿಸುತ್ತದೆ. ಒಂದು ನಿಟ್ಟಿನಲ್ಲಿ, ಜಲಾಲ್‌ (ದಿವ್ಯ ಘನ ಗಾಂಭಿರ್ಯತೆ) ಎಂಬುದು ಸತ್ಯದ ಧ್ರುವದೊಂದಿಗೆ ಅನುರೂಪತೆ ಹೊಂದಿದ್ದು. ಜಮಾಲ್‌ (ದಿವ್ಯ ಸೌಂದರ್ಯ) ಸಾನಿಧ್ಯದ ಧ್ರುವದೊಂದಿಗೆ ಹೊಂದಾಣಿಕೆ ಇರುವಂತದ್ದು. ಎರಡೂ ಪರಸ್ಪರ ಪೂರಕವಾಗಿದೆ. ಒಂದಿಲ್ಲದೆ ಮತ್ತೊಂದಕ್ಕೆ ಅಸ್ತಿತ್ವವಿಲ್ಲ. ಆದರೆ, ಸೌಂದರ್ಯ ಮತ್ತು ಸಾನಿಧ್ಯದ ಧ್ರುವವೇ ಆಗಿದೆ ಪವಿತ್ರ ದಿವ್ಯಪ್ರೇಮವನ್ನು ಪ್ರೇರೇಪಿಸುವುದು. ನಮ್ಮ ಆತ್ಮ ಒಳಗೊಂಡಂತೆ ಎಲ್ಲಾ ಪ್ರಾಪಂಚಿಕ ವಸ್ತುಗಳನ್ನು ದೇವ ಮೂಲದೆಡೆಗೆ ನಡೆಸುವ ಶಕ್ತಿಯೂ ಕೂಡ ಇದೇ ಆಗಿದೆ.
(ಸಶೇಷ)

ಇಂಗ್ಲೀಷ್‌ ಮೂಲ: ಒಲುಡಾಮಿನಿ ಒಗುನ್ನೈಕೆ

ಅನುವಾದ: ಎಂ.ಎಂ. ಸುರೈಜಿ ಬಾಳೆಹೊಳೆ

Leave a Reply

*