ಬಾಜಿ:ಆಂಟನ್ ಚೆಕೋವ್

ಅದು ಶರತ್ಕಾಲದ ಒಂದು ಕಗ್ಗತ್ತಲ ರಾತ್ರಿ. ಆ ಬಡ್ಡಿ ವ್ಯಾಪಾರಿ ಮುದುಕ ತನ್ನ ಓದಿನ ಕೊಠಡಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ದಿಟ್ಟಿ ಹಾಯಿಸುತ್ತಾ ಹದಿನೈದು ವರ್ಷಗಳ ಹಿಂದೆ ಇದೇ ಶರತ್ಕಾಲದಲ್ಲಿ ತಾನು ನೀಡಿದ್ದ ಔತಣ ಕೂಟವನ್ನು ನೆನಪಿಸಿಕೊಳ್ಳುತ್ತಿದ್ದ. ಅಂದು ಹಲವು ಜನ ಮಹನೀಯರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು ಮತ್ತು ಅತೀ ಆಸಕ್ತಿದಾಯಕ ವಿಷಯಗಳ ಬಗ್ಗೆ ಅಲ್ಲಿ ಚರ್ಚೆಯಾಗಿತ್ತು. ಹಲವು ವಿಷಯಗಳ ಜೊತೆಗೆ ಅವರು ಮರಣ ದಂಡನಾ ಶಿಕ್ಷೆಯನ್ನೂ ಖಂಡಿಸಿದ್ದರು. ಅವರು ಅದೊಂದು ಹಳೆಯ ಪದ್ಧತಿಯೆಂದೂ, ಕ್ರೈಸ್ತನಾಡಿಗೆ ಹೇಳಿಸಿದ್ದಲ್ಲವೆಂದೂ, ಅನೈತಿಕವೆಂದೂ ಬಗೆದಿದ್ದರು. ಇನ್ನು ಕೆಲವರು ಮರಣದಂಡನೆಯಂತಹ ಶಿಕ್ಷೆಯ ಬದಲಿಗೆ ವಿಶ್ವದಾದ್ಯಂತ ಜೀವಾವಧಿ ಶಿಕ್ಷೆಯನ್ನೇ ಜಾರಿಗೆ ತರಬೇಕು ಎಂದೂ ಚಿಂತನೆ ನಡೆಸಿದ್ದರು.

“ನಾನು ನಿಮ್ಮ ವಾದವನ್ನು ಒಪ್ಪಲಾರೆ”, ಆತಿಥೇಯ ನುಡಿದಿದ್ದ. ನಾನು ಸ್ವತಃ ಮರಣದಂಡನಾ ಶಿಕ್ಷೆಯನ್ನಾಗಲೀ ಜೀವಾವಧಿ ಶಿಕ್ಷೆಯನ್ನಾಗಲೀ ಅನುಭವಿಸಿದವನಲ್ಲ. ಆದರೆ ಯಾರಾದರೂ ಈ ಬಗ್ಗೆ ತೀರ್ಪು ಕೇಳಿದ್ದರೆ ನನ್ನ ಅಭಿಪ್ರಾಯ ಮಾತ್ರ ಈ ಮರಣ ದಂಡನಾ ಶಿಕ್ಷೆಯೆಂಬುದು ಜೀವಾವಧಿ ಶಿಕ್ಷೆಗಿಂತ ಹೆಚ್ಚು ಮಾನವೀಯವೂ, ನೈತಿಕವೂ ಆಗಿರುತ್ತದೆ ಎಂಬುದಾಗಿಯೇ ಇರುತ್ತದೆ. ಮರಣದಂಡನಾ ಶಿಕ್ಷೆ ವ್ಯಕ್ತಿಯನ್ನು ಕ್ಷಿಪ್ರವಾಗಿ ಸಾಯಿಸಿಬಿಡುತ್ತದೆ, ಜೀವಾವಧಿ ಶಿಕ್ಷೆ ಅನುಕ್ರಮವಾಗಿ ಸಾಯಿಸುತ್ತದೆ. ಹೆಚ್ಚು ಮಾನವೀಯ ಕೊಲೆಗಾರ ಯಾರು, ನಿಮ್ಮನ್ನು ಕೆಲವೇ ಕ್ಷಣಗಳಲ್ಲಿ ಕೊಲ್ಲುವವನೇ ಅಥವಾ ನಿಮ್ಮ ಜೀವವನ್ನು ಹಲವು ವರ್ಷಗಳ ಕಾಲ ಹಿಂಡುವವನೇ?”

“ಅವೆರಡೂ ಅನೈತಿಕವೇ”, ಒಬ್ಬ ಅತಿಥಿ ಹೇಳಿದ. “ಏಕೆಂದರೆ ಅವೆರಡರ ಉದ್ದೇಶಗಳು ಒಂದೇ ಆಗಿವೆ- ಜೀವ ತೆಗೆಯುವುದು! ದೇಶವೆಂದರೆ ದೇವರಲ್ಲ, ತಾನು ನೀಡಬೇಕೆಂದು ಬಯಸಿದರೂ ವಾಪಾಸು ನೀಡಲಾಗದ ಪ್ರಾಣವನ್ನು ತೆಗೆದುಕೊಳ್ಳಲು ಅದಕ್ಕೆ ಯಾವುದೇ ಹಕ್ಕಿಲ್ಲ.”

ಆ ಗುಂಪಿನಲ್ಲಿ ಒಬ್ಬ ವಕೀಲನಿದ್ದ. ಸುಮಾರು ಇಪ್ಪತ್ತೈದರ ತರುಣ. ಯಾರೋ ಆತನ ಅಭಿಪ್ರಾಯವನ್ನು ಕೇಳಿದುದರಿಂದ ಆತ ನುಡಿದ, “ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆಗಳೆರಡೂ ಅನೈತಿಕವೇ, ಆದರೆ ನನಗೇನಾದರೂ ಆಯ್ಕೆ ನೀಡಿದಲ್ಲಿ ನಾನು ಖಂಡಿತವಾಗಿಯೂ ಎರಡನೆಯದ್ದನ್ನೇ ಆಯ್ಕೆ ಮಾಡುವೆ. ಬದುಕದೇ ಇರುವುದಕ್ಕಿಂತ ಹೇಗಾದರೂ ಬದುಕಿಯೇ ಬಿಡುವುದು ಒಳ್ಳೆಯದೇ ಅಲ್ಲವೇ?”.

ಚರ್ಚೆ ಹೀಗೆ ಜೀವಕಳೆ ಪಡೆದುಕೊಂಡಿತು. ಬಡ್ಡಿ ವ್ಯಾಪಾರಿ ಆಗ ವಯಸ್ಕನಾಗಿದ್ದ ಮತ್ತು ಅಧೀರನಾಗಿದ್ದರಿಂದಲೋ ಏನೋ ತಕ್ಷಣ ತಾಳ್ಮೆ ಕಳೆದುಕೊಂಡನು, ತನ್ನ ಮುಷ್ಠಿಯನ್ನು ಮೇಜಿಗೆ ಗುದ್ದುತ್ತಾ ವಕೀಲನ ಕಡೆಗೆ ನೋಡುತ್ತಾ ಕಿರುಚಿದ. “ಇದು ಸುಳ್ಳು, ಬೇಕಾದರೆ ಎರಡು ಮಿಲಿಯನ್ ಬಾಜಿ ಕಟ್ಟುತ್ತೇನೆ, ನೀನು ಐದು ವರ್ಷ ಕೂಡಾ ಸೆರೆಮನೆಯೊಳಗೆ ಇರಲಾರೆ”.

“ನೀನು ಇದನ್ನು ಅಷ್ಟೊಂದು ಗಂಭೀರವಾಗಿ ಸ್ವೀಕರಿಸಿರುವಿಯೆಂದಾದರೆ..” ವಕೀಲ ಉತ್ತರಿಸಿದ. “.. ನಾನು ನಿನ್ನ ಬಾಜಿಯನ್ನು ಸ್ವೀಕರಿಸಿರುವೆ, ನಾನು ಐದಲ್ಲ ಹದಿನೈದು ವರ್ಷಗಳವರೆಗೆ ಸೆರೆಮನೆಯಲ್ಲಿರಲು ಸಿದ್ಧ!”.

“ಹದಿನೈದು ! ಸರಿ ಒಪ್ಪಿದೆ” ಬಡ್ಡಿ ವ್ಯಾಪಾರಿ ಕೂಗಿದ. “ಮಾನ್ಯರೇ ನಾನು ಎರಡು ಮಿಲಿಯನ್ ಬಾಜಿಯಲ್ಲಿ ತೊಡಗಿಸಲು ಸಿದ್ಧ”.

“ಒಪ್ಪಿದೆ. ನೀನು ಎರಡು ಮಿಲಿಯನ್ ತೊಡಗಿಸು ನಾನು ನನ್ನ ಸ್ವಾತಂತ್ರ್ಯವನ್ನು ತೊಡಗಿಸುವೆ” ಯುವ ವಕೀಲ ಹೇಳಿದ.

ಹೀಗೆ ಕ್ರೂರವೂ, ಅಸಂಬದ್ಧವೂ ಆದ ಬಾಜಿಯೊಂದು ಜರುಗಿತು.

ಬಡ್ಡಿ ವ್ಯಾಪಾರಿ ಹಲವು ಮಿಲಿಯನ್ಗಳ ಒಡೆಯನಾಗಿದ್ದು, ಜೊತೆಗೆ ಪರಮ ಸ್ವಾರ್ಥಿಯೂ ಕಪಟಿಯೂ ಆಗಿದ್ದ. ರಾತ್ರಿ ಔತಣಕೂಟದ ಸಮಯದಲ್ಲಿ ಆತ ಯುವ ವಕೀಲನನ್ನು ಹಂಗಿಸುವಂತೆ ಹೀಗೆ ಹೇಳಿದ. “ಯೋಚಿಸಿ ನೋಡು ಹುಡುಗ ಇನ್ನೂ ಸಮಯವಿದೆ. ಎರಡು ಮಿಲಿಯನ್ ನನಗೆ ದೊಡ್ಡ ಮೊತ್ತವೇ ಅಲ್ಲ. ಆದರೆ ನೀನು ಮಾತ್ರ ನಿನ್ನ ಬದುಕಿನ ಅಮೂಲ್ಯ ಮೂರ್ನಾಲ್ಕು ವರ್ಷಗಳನ್ನು ಕಳೆದುಕೊಳ್ಳಲಿರುವೆ. ನಾನು ಮೂರ್ನಾಲ್ಕು ವರ್ಷಗಳೆಂದೆ, ಯಾಕೆಂದರೆ ಅದಕ್ಕಿಂತ ಹೆಚ್ಚು ದಿನ ಒಳಗಿರಲು ನಿನಗೆ ಸಾಧ್ಯವೇ ಇಲ್ಲ. ಇದನ್ನು ಕೂಡಾ ಯೋಚಿಸು, ಸ್ವಇಚ್ಛಾ ಸೆರೆವಾಸ, ಸೆರೆಮನೆ ಶಿಕ್ಷೆಗಿಂತಲೂ ಕೆಟ್ಟದು. ನೀನು ಯಾವಾಗ ಬೇಕಾದರೂ ಮುಕ್ತನಾಗಬಹುದು ಎಂಬ ಯೋಚನೆಯೇ ನಿನ್ನ ಸೆರೆಮನೆವಾಸದ ಇಡೀ ಬದುಕನ್ನೇ ವಿಷಮಯಗೊಳಿಸುವುದು. ನಿನ್ನ ಮೇಲೆ ಅನುಕಂಪವಿದೆ”.

ಮತ್ತು ಈಗ ಅದೇ ಬಡ್ಡಿ ವ್ಯಾಪಾರಿ ಕೊಠಡಿಯ ಮೂಲೆಯಿಂದ ಮೂಲೆಗೆ ಶತಪಥ ಹಾಕುತ್ತಾ ಎಲ್ಲವನ್ನೂ ಜ್ಞಾಪಿಸುತ್ತಾ ತನಗೆ ತಾನೇ ಕೇಳಿಕೊಳ್ಳುತ್ತಿದ್ದ. ‘ನಾನು ಯಾಕಾಗಿ ಈ ಬಾಜಿ ಕಟ್ಟಿದೆ? ಏನು ಸಿಕ್ಕಿತು?’

ಆ ವಕೀಲನಾದರೋ ತನ್ನ ಹದಿನೈದು ವರ್ಷಗಳನ್ನು ಕಳೆದುಕೊಳ್ಳುವನು ಮತ್ತು ನಾನು ಎರಡು ಮಿಲಿಯ ಹಣವನ್ನು ಬಿಸಾಕಿಬಿಡುವೆ. ಆದರೆ ಇದು ಮರಣದಂಡನಾ ಶಿಕ್ಷೆ ಜೀವಾವಧಿ ಶಿಕ್ಷೆಗಿಂತ ಒಳ್ಳೆಯದೇ ಅಥವಾ ಕೆಟ್ಟದೇ ಎಂದು ಜನರಿಗೆ ಅರಿವು ಮೂಡಿಸುವುದೇ? ಇಲ್ಲ ಇಲ್ಲ! ಇವೆಲ್ಲಾ ಬರೀ ಓಳು! ಇದು ತನ್ನಂತಹ ಹೊಟ್ಟೆತುಂಬಿದ ಸಿರಿವಂತರ ಆಷಾಡಭೂತಿತನ ಮತ್ತು ಆ ವಕೀಲನಂತಹವರ ಹಣಗಳಿಸುವ ದುರಾಸೆ.

ಆ ದಿನ ಮುಸ್ಸಂಜೆಯ ಔತಣ ಕೂಟದ ನಂತರ ನಡೆದ ಘಟನೆಗಳ ಬಗ್ಗೆ ಆತ ಜ್ಞಾಪಿಸಿಕೊಂಡನು. ಅಂದು ಯುವ ವಕೀಲನು ಕಟ್ಟುನಿಟ್ಟಿನ ನಿಗಾವಣೆಯ ಅಡಿಯಲ್ಲಿ ಬಡ್ಡಿ ವ್ಯಾಪಾರಿಯ ಮನೆಯ ತೋಟದ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ಸೆರೆಮನೆವಾಸ ಅನುಭವಿಸಬೇಕೆಂದು ತೀರ್ಮಾನಿಸಲಾಯಿತು. ಸೆರೆಮನೆವಾಸದ ಅವಧಿಯಲ್ಲಿ ಆತ ಮನೆಯ ಆವರಣದ ಗೋಡೆಯನ್ನು ದಾಟಬಾರದಾಗಿಯೂ ಯಾವುದೇ ಮನುಷ್ಯರನ್ನು ನೋಡುವುದಾಗಲೀ ಮಾತುಗಳನ್ನು ಆಲಿಸುವುದಾಗಲೀ ಪತ್ರಗಳನ್ನು ಮತ್ತು ದಿನ ಪತ್ರಿಕೆಗಳನ್ನು ಸ್ವೀಕರಿಸುವುದಾಗಲೀ ಮಾಡಬಾರದೆಂದು ತೀರ್ಮಾನಿಸಲಾಯಿತು.

ಆದರೆ ಆತನಿಗೆ ಸಂಗೀತ ಉಪಕರಣಗಳನ್ನು ನುಡಿಸಲು, ಓದಲು ಮತ್ತು ಪತ್ರಗಳನ್ನು ಬರೆಯಲು, ವೈನ್ ಕುಡಿಯಲು ಮತ್ತು ತಂಬಾಕು ಸೇದಲು ಅನುಮತಿ ನೀಡಲಾಯಿತು.

ಒಪ್ಪಂದದ ಪ್ರಕಾರ ಆತ ಯಾರನ್ನಾದರೂ ಸಂಪರ್ಕಿಸಬಹುದು. ಆದರೆ ಕೇವಲ ಗೋಡೆಯಲ್ಲಿರುವ, ಸದರಿ ಉದ್ದೇಶಕ್ಕೆಂದೇ ರಚಿಸಲಾದ ಒಂದು ಸಣ್ಣ ಕಿಂಡಿಯ ಮೂಲಕ ಮಾತ್ರ. ಆತನಿಗೆ ಅವಶ್ಯವಿರುವ ವೈನ್, ಹೊಗೆಸೊಪ್ಪು, ಪುಸ್ತಕಗಳು, ಸಂಗೀತ ಉಪಕರಣ ಇತ್ಯಾದಿಗಳನ್ನು ಎಷ್ಟೇ ಸಂಖ್ಯೆಯಲ್ಲಿ ಪಡೆಯಬಹುದು. ಆದರೆ ಕೇವಲ ಆ ಪುಟ್ಟ ಕಿಂಡಿಯಲ್ಲಿ ಒಂದು ಕಾಗದದಲ್ಲಿ ಕೋರಿಕೆ ಸಲ್ಲಿಸುವ ಮೂಲಕ ಮಾತ್ರ. ಒಪ್ಪಂದ ಪತ್ರದಲ್ಲಿ ಎಲ್ಲವನ್ನೂ ವಿಷದವಾಗಿ ಬರೆಯಲಾಗಿತ್ತು ಮತ್ತು ಆ ಪ್ರಕಾರ ಸೆರೆಮನೆವಾಸವನ್ನು ಏಕಾಂತವಾಗಿ ಕಳೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿತ್ತು. ಆ ವಕೀಲ 1870 ನೇ ಇಸವಿಯ ನವೆಂಬರ ತಿಂಗಳ 14ರ ರಾತ್ರಿ ಹನ್ನೆರಡು ಗಂಟೆಯಿಂದ 1885ರ ನವೆಂಬರ ತಿಂಗಳ 14 ನೇ ತಾರೀಖು ರಾತ್ರಿ ಹನ್ನೆರಡು ಗಂಟೆಯವರೆಗೆ ಸೆರೆಮನೆವಾಸ ಅನುಭವಿಸತಕ್ಕದ್ದೆಂದು ಒಪ್ಪಿ ತಯಾರಿಸಿದ ಕರಾರಾಗಿತ್ತು. ಒಂದು ವೇಳೆ ನಿಗದಿತ ಸಮಯದಿಂದ ಕೇವಲ ಎರಡು ನಿಮಿಷಗಳ ಮುಂಚೆ ಆತ ತಪ್ಪಿಸಲು ಪ್ರಯತ್ನಿಸಿದರೂ ಆ ಬಡ್ಡಿ ವ್ಯಾಪಾರಿ ತನ್ನ ಬಾಜಿಯಿಂದ ಮುಕ್ತನಾಗುತ್ತಿದ್ದ ಮತ್ತು ಆತ ಆ ವಕೀಲನಿಗೆ ಎರಡು ಮಿಲಿಯನ್ ಹಣವನ್ನು ನೀಡುವ ಭಾದ್ಯತೆಯಿಂದ ವಿರಹಿತಗೊಳ್ಳುತ್ತಿದ್ದನು.

ಮೊದಲ ವರ್ಷದ ಸೆರೆವಾಸದ ಸಮಯದಲ್ಲಿ ಆ ವಕೀಲ ಬರೆದಿದ್ದ ಕೆಲವು ಕಿರು ಟಿಪ್ಪಣಿಗಳಿಂದ, ಆತ ಭಯಂಕರವಾದ ಏಕಾಂತತೆಯನ್ನೂ, ಬೇಸರವನ್ನೂ ಅನುಭವಿಸಿದ್ದನೆಂದು ತಿಳಿದುಬಂದಿತ್ತು. ಸೆರೆಮನೆಯ ಬದಿಯಿಂದ ರಾತ್ರಿ-ಹಗಲು ಪಿಯಾನೋ ಧ್ವನಿ ಕೇಳಿಬರುತ್ತಿತ್ತು. ಆತ ವೈನ್ ಮತ್ತು ಹೊಗೆಸೊಪ್ಪನ್ನು ತಿರಸ್ಕರಿಸಿದ್ದ. “ವೈನು” ಆತ ಬರೆದಿದ್ದ “ಅದು ಆಸೆಯನ್ನು ಹೆಚ್ಚಿಸುತ್ತದೆ ಮತ್ತು ಆಸೆಯೆಂಬುದು ಕೈದಿಯ ಎಲ್ಲಾ ತರಹದ ಕಷ್ಟಗಳ ಮೂಲ. ಅಷ್ಟುಮಾತ್ರವಲ್ಲದೆ ಒಬ್ಬನೇ ಕುಳಿತು ಒಂದೊಳ್ಳೆಯ ವೈನ್ ಹೀರುವುದಕ್ಕಿಂತ ದೊಡ್ಡ ಬೇಸರದ ಕೆಲಸ ಇನ್ನೊಂದಿಲ್ಲ, ಮತ್ತು ಹೊಗೆಸೊಪ್ಪು ಕೋಣೆಯ ಗಾಳಿಯನ್ನು ಕಲುಷಿತಗೊಳಿಸುತ್ತದೆ”.

ಮೊದಲ ವರ್ಷದಲ್ಲಿ ಆ ವಕೀಲನಿಗೆ ಕೆಲವು ಲಘು ಸಾಹಿತ್ಯವಿರುವ ಪುಸ್ತಕಗಳನ್ನೂ, ಕ್ಲಿಷ್ಟ ಪ್ರೇಮ ಪ್ರಕರಣದ ಕಾದಂಬರಿಗಳು, ಅಪರಾಧ ಮತ್ತು ಭಾವುಕತೆಯ ಕಥೆಗಳನ್ನು , ಹಾಸ್ಯ ಸಾಹಿತ್ಯಗಳನ್ನು ಕಳುಹಿಸಲಾಯಿತು.

ಆರನೇ ವರ್ಷದ ಉತ್ತರಾರ್ಧದಲ್ಲಿ ಕೈದಿಯು ಸಂಭ್ರಮದಿಂದ ಭಾಷೆಗಳನ್ನು, ತತ್ತ್ವಶಾಸ್ತ್ರವನ್ನು ಮತ್ತು ಇತಿಹಾಸವನ್ನು ಓದಲು ತೊಡಗಿದನು. ಆತನು ಈ ವಿಷಯಗಳಲ್ಲಿ ಎಷ್ಟು ಉತ್ಸುಕನಾದನೆಂದರೆ ಬಡ್ಡಿ ವ್ಯಾಪಾರಿಗೆ ಆತನಿಗೆ ಸಾಕಾಗುವಷ್ಟು ಪುಸ್ತಕಗಳನ್ನು ಒದಗಿಸಲು ಸಮಯ ಹೊಂದಿಸುವುದೇ ದುಸ್ತರವಾಗಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಆರುನೂರು ಸಂಪುಟಗಳಷ್ಟು ಪುಸ್ತಕಗಳನ್ನು ಖರೀದಿಸಿ ಆತನಿಗೆ ನೀಡಲಾಯಿತು.

ಬಡ್ಡಿ ವ್ಯಾಪಾರಿಯ ಉತ್ಸಾಹ ಸೋರಿಹೋಗುತ್ತಿರುವ ಸಮಯದಲ್ಲಿಯೇ ಒಂದು ದಿನ ಕೈದಿಯಿಂದ ಒಂದು ಪತ್ರ ಬಂದಿತು. “ನನ್ನ ಪ್ರೀತಿಯ ಕೈದುಗಾರನೇ, ನಾನು ಈ ಸಾಲುಗಳನ್ನು ಆರು ಭಾಷೆಗಳಲ್ಲಿ ಬರೆಯುತ್ತಿರುವೆ. ಇವನ್ನು ತಜ್ಞರಿಗೆ ತೋರಿಸು. ಅವರು ಇವುಗಳನ್ನು ಓದಲಿ. ಅವರಿಗೆ ಈ ಸಾಲುಗಳಲ್ಲಿ ಒಂದು ತಪ್ಪಾದರೂ ಗೋಚರಿಸದಿದ್ದರೆ ನಿನ್ನಲ್ಲಿ ನನ್ನದೊಂದು ವಿನಂತಿಯಿದೆ, ತೋಟದ ಮೂಲೆಯಲ್ಲಿ ತುಪಾಕಿಯಿಂದ ಗುಂಡೊಂದನ್ನು ಹಾರಿಸಲು ಆದೇಶ ನೀಡು. ಆ ಗುಂಡಿನ ಸದ್ದಿನಿಂದ ನನ್ನ ಪ್ರಯತ್ನಗಳು ವಿಫಲವಾಗಲಿಲ್ಲ ಎಂದು ತಿಳಿಯುವೆ. ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ದೇಶಗಳ ಜಾಣರು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದರು. ಆದರೆ ಅವರೆಲ್ಲರ ಒಳಗೆ ಒಂದೇ ಜ್ವಾಲೆ ಉರಿಯುತ್ತಿದೆ. ನಿನಗೆ ಗೊತ್ತೆ? ನಾನೀಗ ಆ ಸ್ವರ್ಗಸುಖವನ್ನು ಅನುಭವಿಸುತ್ತಿರುವೆ!”.

ಕೈದಿಯ ಆಸೆಯನ್ನು ಪೂರೈಸಲಾಯಿತು. ಬಡ್ಡಿ ವ್ಯಾಪಾರಿಯ ಆದೇಶದಂತೆ ಎರಡು ಗುಂಡುಗಳನ್ನು ತೋಟದಲ್ಲಿ ಹಾರಿಸಲಾಯಿತು.

ಬಳಿಕ, ಹತ್ತನೆಯ ವರ್ಷದ ನಂತರ, ವಕೀಲ ನಿಶ್ಚಲನಾಗಿ ತನ್ನ ಮೇಜಿನ ಮುಂದೆ ಕುಳಿತುಕೊಂಡು ಬೈಬಲಿನ ಹೊಸ ಒಡಂಬಡಿಕೆಯನ್ನು ಓದುತ್ತಿದ್ದ. ಬಡ್ಡಿ ವ್ಯಾಪಾರಿಗೆ ಇದು ಅಚ್ಚರಿಯೆನಿಸಿತ್ತು. ಒಬ್ಬ ಮನುಷ್ಯ ಕೇವಲ ನಾಲ್ಕು ವರ್ಷಗಳಲ್ಲಿ ಆರುನೂರು ಸಂಪುಟಗಳನ್ನಷ್ಟನ್ನು ತನ್ನದಾಗಿಸಿಕೊಂಡವನು, ಈಗ ಸರಳ ಪುಸ್ತಕವೊಂದನ್ನು ಓದಲು ಒಂದು ವರ್ಷ ತೆಗೆದುಕೊಳ್ಳುವುದೆಂದರೆ ! ಹೊಸ ಒಡಂಬಡಿಕೆಯ ನಂತರ ಧರ್ಮಗಳ ಇತಿಹಾಸ ಮತ್ತು ಧರ್ಮಶಾಸ್ತ್ರಗಳು ಸ್ಥಾನ ಪಡೆದುಕೊಂಡವು.

ಕೊನೆಯ ಎರಡು ವರ್ಷಗಳ ಸೆರೆವಾಸದಲ್ಲಿ ಕೈದಿಯು ಅಸಾಮಾನ್ಯ ಸಂಖ್ಯೆಯಲ್ಲಿ ಮತ್ತು ಅಷ್ಟೇ ಅಸಂಬದ್ಧವಾಗಿ ಓದಿದ. ಈಗ ಆತ ತನ್ನನ್ನು ಪ್ರಕೃತಿ ವಿಜ್ಞಾನದಲ್ಲಿ ತೊಡಗಿಸಿದ್ದ. ಆನಂತರ ಬೈರನ್, ಶೇಕ್ಸ್ ಪಿಯರ್ ಓದುತ್ತಿದ್ದ. ಆತನಿಂದ ಆಗಾಗ ಕಿರುಪತ್ರಗಳು ಬರುತ್ತಿದ್ದವು. ಒಮ್ಮೆಲೆ ರಸಾಯನ ಶಾಸ್ತ್ರ, ಔಷದ ಶಾಸ್ತ್ರದ ಪುಸ್ತಕ, ಒಂದು ಕಾದಂಬರಿ, ತತ್ತ್ವಶಾಸ್ತ್ರದ ಮೇಲಿನ ಟೀಕೆ, ಅಥವಾ ಧರ್ಮಶಾಸ್ತ್ರದ ಬಗೆಗಿನ ಪುಸ್ತಕಗಳ ಬೇಡಿಕೆಯಿಡುತ್ತಿದ್ದ. ಮುರಿದುಹೋದ ಹಡಗುಗಳ ಚೂರು ಚೂರುಗಳ ನಡುವೆ ಸಮುದ್ರದಲ್ಲಿ ಈಜುತ್ತಿರುವವನಂತೆ ಆತ ಓದುತ್ತಿದ್ದ. ಆತನ ಓದುವ ಆಸೆ ಬದುಕುಳಿಯಲು ಒಂದು ಚೂರಿನಿಂದ ಇನ್ನೊಂದು ಚೂರಿನತ್ತ ಏದುಸಿರು ಬಿಡುವವನಂತೆ ಭಾಸವಾಗುತ್ತಿತ್ತು.

ಬಡ್ಡಿ ವ್ಯಾಪಾರಿ ಇವೆಲ್ಲವುಗಳನ್ನೂ ಜ್ಞಾಪಿಸಿಕೊಂಡನು. ಮತ್ತು ಯೋಚಿಸಿದನು, “ನಾಳೆ ಹನ್ನೆರಡು ಗಂಟೆಯ ಸರಿ ಸುಮಾರಿಗೆ ಆತ ತನ್ನ ಸ್ವಾತಂತ್ರ್ಯವನ್ನು ಪಡೆಯಲಿದ್ದಾನೆ. ಒಪ್ಪಂದದ ಪ್ರಕಾರ ನಾನು ಆತನಿಗೆ ಎರಡು ಮಿಲಿಯನ್ ಹಣವನ್ನು ನೀಡಬೇಕು. ನಾನು ಅದನ್ನು ಪಾವತಿಸಿದರೆ ಅಲ್ಲಿಗೆ ಮುಗಿಯಿತು. ನಾನು ಎಂದೆಂದಿಗೂ ಕಳೆದುಕೊಳ್ಳುವೆ.

ಹದಿನೈದು ವರ್ಷಗಳ ಹಿಂದೆ ಆತನ ಬಳಿ ಹಲವು ಮಿಲಿಯನ್ ಹಣವಿತ್ತು. ಆದರೆ ಈಗ ಆತನ ಬಳಿ ಹಣ ಹೆಚ್ಚಿರುವುದೋ ಅಥವಾ ಸಾಲದ ಮೊತ್ತವೋ ಎಂದು ಸ್ವತಃ ಕೇಳಿಕೊಳ್ಳಲು ಭಯವೆನಿಸುವ ಹಾಗಿತ್ತು. ಶೇರು ಮಾರುಕಟ್ಟೆಯಲ್ಲಿ ಜುಗಾರಿ, ಅಪಾಯಕಾರಿ ದೂರದರ್ಶಿತ್ವ ಮತ್ತು ಅಜಾಗರೂಕ ನಡೆಯಿಂದ ಆತನಿಗೆ ಹಿನ್ನಡೆಯಾಗಿತ್ತು. ಇಳೀ ವಯಸ್ಸು ಕೂಡಾ ಆತನ ವ್ಯವಹಾರವನ್ನು ನಾಶ ಮಾಡುತ್ತಿತ್ತು. ನಿರ್ಭೀತ, ಆತ್ಮವಿಶ್ವಾಸವುಳ್ಳ, ಹೆಮ್ಮೆಯ ವ್ಯವಹಾರಸ್ಥ ಮನುಷ್ಯ ಈಗ ಮಾರುಕಟ್ಟೆಯ ಏರಿಳಿತಕ್ಕೆ ನಡುಗುವ ಸಾಮಾನ್ಯ ಹೂಡಿಕೆದಾರನಾಗಿದ್ದ.

“ಆ ಹಾಳಾದ ಬಾಜಿ!” ನಿರಾಶೆಯಿಂದ ತಲೆ ಕೊಡವಿಕೊಳ್ಳುತ್ತಾ ಆ ವೃದ್ಧ ಬಡಬಡಿಸಿದ. “ಆ ಮನುಷ್ಯ ಸತ್ತಾದರೂ ಯಾಕೆ ಹೋಗಲಿಲ್ಲ? ಆತನಿಗೆ ಈಗ ಕೇವಲ 40 ವರ್ಷ, ಆತ ನನ್ನೆಲ್ಲಾ ದುಡಿಮೆಯನ್ನು ಕಸಿದುಕೊಳ್ಳುವನು, ಮದುವೆಯಾಗಿ, ಬದುಕನ್ನು ಅನುಭವಿಸುತ್ತಾ, ಶೇರು ಮಾರುಕಟ್ಟೆಯಲ್ಲಿ ಜುಗಾರಿ ಆಡುವನು. ನಾನು ಮಾತ್ರ ಒಬ್ಬ ಹೊಟ್ಟೆಕಿಚ್ಜಿನ ಬಿಕ್ಷುಕನಂತೆ ಪ್ರತೀ ದಿನ ಆತನ ಬಾಯಿಯಿಂದ ಒಂದೇ ಮಾತನ್ನು ಕೇಳುವಂತಾಯಿತು. — ‘ ನಾನು ನನ್ನ ಜೀವನದ ಸಂತೋಷಕ್ಕಾಗಿ ಈ ಬಾಜಿಗೆ ಒಪ್ಪಿದೆ., ಈಗ ನಿನಗೆ ನಾನು ಸಹಾಯ ಮಾಡಲೇ? ‘ — ಇಲ್ಲ ! ಇದು ಬಹಳವಾಯಿತು, ಈ ಅವಮಾನದಿಂದ ಮತ್ತು ದಿವಾಳಿತನದಿಂದ ಪಾರಾಗಲು ಒಂದೇ ದಾರಿ, ಅದೇನೆಂದರೆ –ಆತ ಸಾಯಬೇಕು!”

ಗಡಿಯಾರ ಮೂರು ಸಲ ಸದ್ದು ಮಾಡಿತು. ಬಡ್ಡಿ ವ್ಯಾಪಾರಿ ಆಲಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿಗಳಾಚೆ ಹಿಮದಿಂದ ಹೆಪ್ಪುಗಟ್ಟಿದ ಮರಗಳ ನರಳಾಟ ಕೇಳಿ ಬರುತ್ತಿತ್ತು. ಮೇಲಂಗಿಯನ್ನು ಧರಿಸಿ, ಹದಿನೈದು ವರ್ಷಗಳಿಂದ ಒಮ್ಮೆಯೂ ತೆರೆದಿರದಿದ್ದ ಸೆರೆಮನೆಯ ಬಾಗಿಲುಗಳ ಕೀಲಿ ಕೈಯನ್ನು ಹಿಡಿದುಕೊಂಡು ಆತ ಸದ್ದಿಲ್ಲದೆ ಹೊರನಡೆದನು.

ತೋಟದಲ್ಲಿ ಕತ್ತಲಿತ್ತು, ಚಳಿಯು ಬಹಳವಿತ್ತು, ಮಳೆಯೂ ಸುರಿಯುತ್ತಿತ್ತು. ಮರಗಳ ನಡುವೆ ನುಸುಳಿ ಬೀಸುತ್ತಿದ್ದ ಗಾಳಿಗೆ ಮರಗಿಡಗಳು ಎಡೆಬಿಡದೆ ತುಯ್ದಾಡುತ್ತಿದ್ದವು. ಕಣ್ಣುಗಳನ್ನು ಎಷ್ಟು ದಂಡಿಸಿದರೂ ಆತನಿಗೆ ನೆಲವಾಗಲಿ, ಬಿಳಿಯ ಪ್ರತಿಮೆಗಳಾಗಲಿ, ತೋಟದ ಆವರಣವಾಗಲೀ, ಮರಗಳಾಗಲಿ ಕಾಣಿಸುತ್ತಲೇ ಇರಲಿಲ್ಲ. ಸೆರೆಮನೆಯ ಗೋಡೆಯತ್ತ ಬರುತ್ತಲೇ ಆತ ಕಾವಲುಗಾರರನ್ನು ಕೂಗಿದ. ಆದರೆ ಆತನಿಂದ ಉತ್ತರವಿಲ್ಲ. ಕಾವಲುಗಾರ ಆ ಕೆಟ್ಟ ಹವಾಮಾನದಿಂದ ತಪ್ಪಿಸಿಕೊಳ್ಳಲು ಅಡುಗೆ ಕೋಣೆಯಲ್ಲೋ ಹಸಿರುಮನೆಯಲ್ಲೋ ಹೋಗಿ ಮಲಗಿರಬೇಕು.

“ನನಗೇನಾದರೂ ನನ್ನ ಇಚ್ಛೆಯನ್ನು ಪೂರೈಸುವ ಧೈರ್ಯವಿದ್ದರೆ ” ಆ ವೃದ್ಧ ಬಡ್ಡಿ ವ್ಯಾಪಾರಿ ಯೋಚಿಸಿದ, “ಮೊದಲು ಸಂಶಯ ಬರುವುದು ಮಾತ್ರ ಆ ಕಾವಲುಗಾರನ ಮೇಲೆಯೇ”.

ಕಗ್ಗತ್ತಲಿನಲ್ಲಿಯೇ ಆತ ಮೆಟ್ಟಿಲುಗಳಿಗೆ ತಡಕಾಡಿದ. ಮತ್ತು ಗೇಟು ತೆರೆದು ತೋಟದ ಒಳ ನಡೆದ. ಓಣಿಯೊಂದರಲ್ಲಿ ಸಾಗುತ್ತಾ ಬೆಂಕಿಕಡ್ಡಿಯನ್ನು ಗೀರಿದ. ಮುಂದೆ ಕೈದಿಯ ಕೋಣೆಯಿತ್ತು. ಬಾಗಿಲಿಗೆ ಹಾಕಿದ ಸೀಲು ಹಾಗೆಯೇ ಇತ್ತು.

ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಕೆಳಗೆ ಬೆಡ್ ಶೀಟುಗಳಿಲ್ಲದ ಒಂದು ಹಾಸಿಗೆ ಬಿದ್ದುಕೊಂಡಿತ್ತು ಬಳಿಯಲ್ಲಿಯೇ ಒಂದು ಎಣ್ಣೆಒಲೆಯಿತ್ತು. ಕೈದಿಯ ಕೋಣೆಗೆ ಸಾಗುವ ಬಾಗಿಲಿನ ಬೀಗ ಭದ್ರವಾಗಿತ್ತು. ಕಡ್ಡಿ ಉರಿದು ಖಾಲಿಯಾಗಿ ಆರಿಹೋದಾಗ ಆ ವೃದ್ಧ ಥರ ಥರ ನಡುಗುತ್ತಾ ಆ ಸಣ್ಣ ಕಿಂಡಿಯ ಮೂಲಕ ಆ ಕೋಣೆಯೊಳಗೆ ಇಣುಕಿದ. ಕೈದಿಯ ಕೋಣೆಯೊಳಗೆ ಕ್ಯಾಂಡಲೊಂದು ಮಂದವಾಗಿ ಉರಿಯುತ್ತಿತ್ತು. ಕೈದಿಯು ಮೇಜಿನ ಮುಂದೆ ಕುಳಿತಿದ್ದ. ಅವನ ಬೆನ್ನು ತಲೆಯ ಕೂದಲು ಮತ್ತು ಕೈಗಳು ಕಾಣಿಸುತ್ತಿದ್ದವು. ತೆರೆದ ಪುಸ್ತಕಗಳು ಮೇಜಿನ ಮೇಲೆ ಹರಡಿಕೊಂಡಿದ್ದವು. ಎರಡು ಕುರ್ಚಿಗಳು ಮೇಜಿನ ಬಳಿಯಲ್ಲಿ ಮತ್ತು ನೆಲಹಾಸು ನೆಲದಲ್ಲಿದ್ದವು.

ಐದು ನಿಮಿಷಗಳುರುಳಿದವು. ಕೈದಿಯು ಒಂದಿಂಚೂ ಕದಲಿಲ್ಲ. ಹದಿನೈದು ವರ್ಷಗಳ ಸೆರೆವಾಸ ಆತನಿಗೆ ಅಚಲವಾಗಿ ಕುಳಿತುಕೊಳ್ಳಲು ಕಲಿಸಿತ್ತು. ಬಡ್ಡಿ ವ್ಯಾಪಾರಿ ಬೆರಳುಗಳಿಂದ ಕಿಟಕಿಯ ಮೇಲೆ ತಟ್ಟಿದ. ಆದರೆ ಕೈದಿಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನಂತರ ಆತ ಮೆಲ್ಲನೆ ಬೀಗದ ಮೇಲಿನ ಸೀಲುಗಳನ್ನು ಹರಿದು ಕೀಲಿಕೈಯನ್ನು ಬೀಗಕ್ಕೆ ಸೇರಿಸಿದ. ತುಕ್ಕು ಹಿಡಿದಿದ್ದ ಬೀಗವು ಕರ ಕರ ಸದ್ದು ಮಾಡುತ್ತಾ ತೆರೆದುಕೊಂಡಿತು. ಬಾಗಿಲುಗಳು ಕಿರಗುಟ್ಟಿದವು. ಬಡ್ಡಿ ವ್ಯಾಪಾರಿ ತಕ್ಷಣ ದೊಡ್ಡ ಅಚ್ಚರಿಯ ಧ್ವನಿಗಳೂ, ಹೆಜ್ಜೆಗಳ ಸಪ್ಪಳವೂ ಕೇಳಿಸಬಹುದೆಂದುಕೊಂಡ. ಮೂರು ನಿಮಿಷಗಳು ಕಳೆದವು. ಹೊರಗಿದ್ದಂತೆ ಒಳಗೂ ನಿಶ್ಶಬ್ದವೇ ಮನೆಮಾಡಿತ್ತು.

ಆತ ಒಳನುಗ್ಗಲು ಮಾನಸಿಕವಾಗಿ ಸಿದ್ಧಗೊಂಡನು. ಒಳಗೆ ಮೇಜಿನ ಮುಂದೆ ಸಾಮಾನ್ಯ ಮನುಷ್ಯನಂತಿಲ್ಲದ ವ್ಯಕ್ತಿ ಕುಳಿತಿದ್ದ. ಮೂಳೆಗಳಿಗೆ ಗಟ್ಟಿಯಾಗಿ ಅಂಟಿದ ಚರ್ಮಗಳುಳ್ಳ ಅಸ್ಥಿ ಪಂಜರ. ಹೆಂಗಸರಂತೆ ನೀಳವಾಗಿರುವ ತಲೆಗೂದಲು, ಜೋತು ಬಿದ್ದಿರುವ ಗಡ್ಡ. ಮುಖವು ಮಣ್ಣಿನಂತೆ ಹಳದಿಗುಟ್ಟಿತ್ತು. ಕೂದಲುಗಳಿಂದ ತುಂಬಿಹೋದ ಆತನ ತಲೆ ಮುಂದಕ್ಕೆ ಬಾಗಿಕೊಂಡಿತ್ತು, ಕೆನ್ನೆಗಳು ಆಳ ಮತ್ತು ವಕ್ರವಾಗಿ ಹೂತುಹೋಗಿದ್ದು, ಆತನೆಡೆಗೆ ದೃಷ್ಠಿಹಾಯಿಸುವುದೇ ನೋವಿನ ಸಂಗತಿಯಾಗಿತ್ತು. ಆತನ ಕೂದಲುಗಳು ಆಗಲೇ ಬೆಳ್ಳಗಾಗತೊಡಗಿದ್ದವು. ಆತನ ಕಳೆಗುಂದಿದ ಆ ಮುಖವನ್ನು ನೋಡಿದ ಯಾರಿಗಾದರೂ ಆತನಿಗಿನ್ನೂ ಬರೇ 40 ವರ್ಷ ವಯಸ್ಸೆಂದರೆ ನಂಬಲು ಸಾಧ್ಯವೇ ಇರಲಿಲ್ಲ. ಆತ ತಲೆ ಬಾಗಿಸಿ ಕುಳಿತಿದ್ದ ಆ ಮೇಜವಾನಿಯ ಮೇಲೆ ಸಣ್ಣ ಅಕ್ಷರಗಳಿಂದ ಬರೆದಿರುವ ಒಂದು ಕಾಗದದ ಹಾಳೆಯಿತ್ತು.

“ಬಡಪಾಯಿ ಪಾಪಿ”, ಬಡ್ಡಿ ವ್ಯಾಪಾರಿ ಯೋಚಿಸಿದ, “ಹೇಗೆ ನಿದ್ರಿಸುತ್ತಿದ್ದಾನೆ! ಬಹುಶಃ ನಾಳೆ ಸಿಗಲಿರುವ ಮೊತ್ತದ ಬಗ್ಗೆ ಕನಸು ಕಾಣುತ್ತಿರಬಹುದು. ಒಂದೊಮ್ಮೆ ಈ ಅರೆಜೀವವನ್ನು ಹಾಸಿಗೆಯ ಮೇಲೆ ಒದ್ದುರುಳಿಸಿ ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಬಿಟ್ಟರೆ ಮುಗಿಯಿತು, ಎಂತಹ ತನಿಖೆಯಲ್ಲಿಯೂ ಈತನ ಅಸಹಜ ಸಾವು ಪತ್ತೆಯಾಗಲಿಕ್ಕಿಲ್ಲ! ಅದರೂ ಮೊದಲೊಮ್ಮೆ ಈತ ಆ ಹಾಳೆಯಲ್ಲಿ ಏನು ಬರೆದಿದ್ದಾನೆಂದು ಒಮ್ಮೆ ಓದಿ ಬಿಡೋಣ”.

ಬಡ್ಡಿ ವ್ಯಾಪಾರಿ ಆ ಪತ್ರವನ್ನು ಕೈಗೆತ್ತಿಕೊಂಡು ಓದತೊಡಗಿದ.

“ನಾಳೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಾನು ನನ್ನ ಸ್ವಾತಂತ್ರ್ಯವನ್ನು ಮತ್ತು ಹೊರಗಿನ ಜನರೊಂದಿಗೆ ಬೆರೆಯುವ ಹಕ್ಕನ್ನು ಮರು ಪಡೆಯಲಿದ್ದೇನೆ. ಆದರೆ ನಾನು ಇಲ್ಲಿಂದ ಹೊರ ಹೋಗಿ ಸೂರ್ಯನನ್ನು ನೋಡುವುದಕ್ಕಿಂತ ಮೊದಲು ನಿನಗೆ ಕೆಲವು ಮಾತುಗಳನ್ನು ಹೇಳಿ ಬಿಡುವುದು ಒಳ್ಳೆಯದು. ಪ್ರಜ್ಞಾಪೂರ್ವಕವಾಗಿ ಮತ್ತು ದೇವರ ಸಾಕ್ಷಿಯಾಗಿ ನಾನು ನಿನಗೆ ಹೇಳ ಬಯಸುವುದೇನೆಂದರೆ, ನಾನು ನನ್ನ ಸ್ವಾತಂತ್ರ್ಯ, ಆರೋಗ್ಯ ಮತ್ತು ಆ ನಿನ್ನ ಗ್ರಂಥಗಳು ಹೇಳುವ ಐಹಿಕ ಭೋಗಗಳೆಲ್ಲವನ್ನೂ ತ್ಯಜಿಸಿದೆ. ಹದಿನೈದು ವರ್ಷಗಳವರೆಗೆ ಇಹದ ಜೀವನದ ಬಗ್ಗೆ ಅತಿ ಆಸಕ್ತಿಯಿಂದ ಅಧ್ಯಯನ ಮಾಡಿದೆ. ಸತ್ಯ, ನಾನು ಹೊರಗಿನ ನೆಲವನ್ನಾಗಲೀ ಜನರನ್ನಾಗಲೀ ನೋಡಲಿಲ್ಲ ಆದರೆ ಆ ನಿನ್ನ ಪುಸ್ತಕಗಳ ಮೂಲಕ ನಾನು ಪರಿಮಳಯುಕ್ತ ವೈನನ್ನು ಕುಡಿದೆ, ಹಾಡುಗಳನ್ನು ಹಾಡಿದೆ, ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿದೆ, ಆ ನಿನ್ನ ಕವಿಗಳು ಕೈಚಳಕದಿಂದ ಸೃಷ್ಟಿಸಿದ ಸ್ನಿಗ್ಧ ಮೇಘ ಸುಂದರಿಯರೊಂದಿಗೆ.. ರೂಪಸಿಯರೊಂದಿಗೆ ರಮಿಸಿದೆ, ನನ್ನ ರಾತ್ರಿಗಳನ್ನು ಸುತ್ತುವರಿದು ಕಿವಿಯಲ್ಲಿ ಪಿಸುಗುಟ್ಟಿದ ರಮ್ಯ ಕಥೆಗಳನ್ನು ಆಲಿಸುತ್ತಾ ಉನ್ಮತ್ತನಾದೆ. ನಿನ್ನ ಪುಸ್ತಕಗಳಲ್ಲಿ ನಾನು ಎಲ್ಬ್ರೂಝ್ ಮತ್ತು ಮೌಂಟ್ ಬ್ಲಾಂಕ್ ಪರ್ವತಗಳ ಶಿಖರಾಗ್ರವನ್ನು ಏರಿ ಅಲ್ಲಿ ಬೆಳಗಿನ ಸೂರ್ಯೋದಯವನ್ನೂ, ಸಂಜೆ ಬಾನು ಸಮುದ್ರದಲ್ಲಿ ಕರಗಿ ಹೇಮವರ್ಣಕ್ಕೆ ತಿರುಗುವ ಪರ್ವತಗಳನ್ನು ಕಂಡೆ. ಆ ಶಿಖರಾಗ್ರದಿಂದ ಮೋಡಗಳನ್ನು ಸೀಳುತ್ತಾ ಕೋರೈಸುವ ಮಿಂಚುಗಳ ಕಂಡೆ, ಹಸಿರು ಬೆಟ್ಟ ಗುಡ್ಡಗಳನ್ನೂ, ಹೊಲಗಳನ್ನೂ, ನದಿಗಳನ್ನೂ, ಕೆರೆಗಳನ್ನೂ, ಪಟ್ಟಣಗಳನ್ನೂ ನೋಡಿದೆ.

ವಿವಿಧ ಕೂಗುಗಳನ್ನೂ, ಮಧುರ ಕೊಳಲಿನ ನಿನಾದವನ್ನೂ ಆಲಿಸಿದೆ, ನನ್ನೆಡೆಗೆ ದೇವರ ಸಂದೇಶವನ್ನು ಹೊತ್ತು ತಂದ ದೇವತೆಗಳ ರೆಕ್ಕೆಗಳನ್ನು ಸ್ಪರ್ಷಿಸಿದೆ.. ಆ ನಿನ್ನ ಪುಸ್ತಕಗಳಲ್ಲಿ ನಾನು ತಳವಿಲ್ಲದ ಕಾಲಗರ್ಭದಲ್ಲಿ ಪಯಣಿಸಿದೆ. ನಿಜವಾದ ಪವಾಡಗಳನ್ನೂ, ಸುಟ್ಟು ಧರೆಗುರುಳಿದ ನಗರಗಳನ್ನೂ, ಭೋದಿಸಿದ ಹೊಸ ಧರ್ಮಗಳನ್ನೂ, ದಂಡೆತ್ತಿ ಹೋದ ದೇಶಗಳನ್ನೂ ನೋಡಿದೆ.

ನಿನ್ನ ಪುಸ್ತಕಗಳು ನನಗೆ ಜ್ಞಾನವನ್ನು ನೀಡಿದವು.
ಶತಮಾನಗಳಿಂದ ಸೃಷ್ಠಿಯಾದ ಮಾನವನ ಅದಮ್ಯ ಚಿಂತನೆಗಳೆಲ್ಲವೂ ನನ್ನ ತಲೆಯಲ್ಲಿ ಪುಟ್ಟ ಗುಳ್ಳಿಯಂತೆ ಸೇರಿಕೊಂಡಿವೆ. ಇವತ್ತು ನಾನು ನಿಮ್ಮೆಲ್ಲರಿಗಿಂತ ಜಾಣನಾಗಿರುವೆ ಎಂದು ತಿಳಿದಿದೆ. ಮತ್ತು ನಾನು ನಿನ್ನೆಲ್ಲಾ ಪುಸ್ತಕಗಳನ್ನು ತ್ಯಜಿಸಿರುವೆ, ಎಲ್ಲಾ ಪುಣ್ಯಗಳ ಸರಕುಗಳನ್ನು ಮತ್ತು ಜ್ಞಾನವನ್ನು ಕೂಡಾ. ಎಲ್ಲವೂ ಶೂನ್ಯ, ನಶ್ವರ ಮತ್ತು ಮರೀಚಿಕೆಗಳನ್ನು ಹುಟ್ಟಿಸುವ ಮತಿಭ್ರಾಂತಿ. ನೀನು ಅದೆಷ್ಟು ಗರ್ವದಿಂದಲೂ, ಜಾಣತನದಿಂದಲೂ, ಸುಂದರವಾಗಿಯೂ ಬದುಕಿದರು ಕೂಡಾ ಮೃತ್ಯು ನಿನ್ನನ್ನು ಬಿಲದೊಳಗಿನ ಇಲಿಯನ್ನು ಹೊರಗೆಳೆದು ಕೊಲ್ಲುವಂತೆ ಈ ಭೂಮಿಯ ಮೇಲಿಂದ ಒರೆಸಿ ಹಾಕಬಲ್ಲದು. ಮತ್ತು ನಿನ್ನ ಸಮೃದ್ಧತೆ, ನಿನ್ನ ಇತಿಹಾಸ, ನಿನ್ನ ಮಹಾಪುರುಷರ ಅಮರ ಜ್ಞಾನಗಳೆಲ್ಲವೂ ಮಂಜಿನ ಹನಿಗಳಂತೆ ಈ ವಿಶ್ವದಿಂದ ಕರಗಿ ಹೋಗಬಲ್ಲವು. ನೀನೊಬ್ಬ ಹುಚ್ಚ ಮತ್ತು ತಪ್ಪು ಹಾದಿಯಲ್ಲಿ ಕ್ರಮಿಸಿದೆ. ಸತ್ಯದ ಬದಲಿಗೆ ಸುಳ್ಳನ್ನೂ, ಸೌಂದರ್ಯದ ಬದಲಿಗೆ ಕುರೂಪವನ್ನೂ ಆರಿಸಿಕೊಂಡೆ. ಸೇಬು ಮತ್ತು ಕಿತ್ತಳೆ ಮರಗಳಿಂದ ಹಣ್ಣುಗಳ ಬದಲಿಗೆ ಒಮ್ಮೆಲೇ ಹಲ್ಲಿಗಳು ಮತ್ತು ಕಪ್ಪೆಗಳು ಉದುರಿದರೆ ನಿನಗೆ ಅಚ್ಚರಿಯಾಗಬಹುದು. ಗುಲಾಬಿ ಹೂಗಳು ಒಮ್ಮೆಲೆ ಕುದುರೆಯ ಬೆವರಿನಂತೆ ದುರ್ನಾತ ಬೀರತೊಡಗಿದರೆ ನಿನಗೆ ಅಚ್ಚರಿಯಾಗಬಹುದು. ಸ್ವರ್ಗದ ಬದಲಿಗೆ ಭೂಮಿಯನ್ನು ಬಯಸಿ ಚೌಕಾಸಿಗಿಳಿದ ನಿನ್ನನ್ನು ನಾನು ಅದೇ ಅಚ್ಚರಿಯಿಂದ ನೋಡುತ್ತಿರುವೆ.

ನಾನು ನಿನ್ನನ್ನು ಅರ್ಥೈಸಲು ಬಯಸುವುದಿಲ್ಲ. ಮತ್ತು ನೀನು ನನಗೆ ಕೊಡಲಿರುವ ಆ ಎರಡು ಮಿಲಿಯ ಹಣವನ್ನು ತಿರಸ್ಕರಿಸುವ ಮೂಲಕ ನಿನ್ನನ್ನು ಋಣಮುಕ್ತಗೊಳಿಸುತ್ತಿರುವೆ. ಒಂದೊಮ್ಮೆ ಆ ಹಣದ ಮೂಲಕ ಸ್ವರ್ಗದ ಕನಸು ಕಾಣುತ್ತಿದ್ದ ನಾನು ಇಂದು ಅದನ್ನು ತಿರಸ್ಕರಿಸುತ್ತಿರುವೆ, ಮತ್ತು ನನಗೆ ಅದರ ಮೇಲಿರುವ ಸಂಪೂರ್ಣ ಹಕ್ಕಿನಿಂದ ವಿರಹಿತಗೊಂಡಿರುವೆ. ನಿಗದಿತ ಸಮಯದಿಂದ ಐದು ನಿಮಿಷಗಳ ಮುಂಚೆಯೇ ಇಲ್ಲಿಂದ ಹೊರ ಹಾರಿ ನಿನ್ನ ಒಪ್ಪಂದವನ್ನೇ ಮುರಿಯುವೆ”.

ಅಷ್ಟನ್ನೂ ಓದಿ ಮುಗಿಸಿದ ಆ ಬಡ್ಡಿವ್ಯಾಪಾರಿ ಆ ಪತ್ರವನ್ನು ಮೆಲ್ಲನೆ ಮೇಜಿನ ಮೇಲಿರಿಸಿ, ಆ ಅಪರೂಪದ ವ್ಯಕ್ತಿಯ ತಲೆಯನ್ನೊಮ್ಮೆ ಚುಂಬಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದ. ಆತನ ಜಂಘಾಬಲವೇ ಉಡುಗಿಹೋಗಿತ್ತು. ಆತ ಹಿಂದೆಂದೂ ಇಷ್ಟು ದುರ್ಬಲನಾಗಿರಲಿಲ್ಲ. ಶೇರುಮಾರುಕಟ್ಟೆಯ ಮಹಾಕುಸಿತದ ಸಮಯದಲ್ಲಿಯೂ ಇಂತಹ ನಿಕೃಷ್ಟ ಸ್ಥಿತಿಗಿಳಿದಿರಲಿಲ್ಲ.

ಮನೆಗೆ ಬಂದವನೇ ಹಾಸಿಗೆಯ ಮೇಲೆ ಬಿದ್ದುಕೊಂಡನು. ಬಿಕ್ಕಳಿಕೆಗಳು ಮತ್ತು ಕಣ್ಣೀರುಗಳು ನಿದ್ರೆಯನ್ನು ಆತನಿಂದ ತುಂಬಾ ಹೊತ್ತು ತಡೆಹಿಡಿದವು.

ಮಾರನೇ ದಿನ ಬೆಳಿಗ್ಗೆ ಬಡಪಾಯಿ ಕಾವಲುಗಾರ ಆತನ ಬಳಿ ಓಡೋಡುತ್ತ ಬಂದು ಆತ ಕಂಡುದನ್ನು ಹೇಳಿದ. ಕೈದಿಯು ಕೋಣೆಯ ಕಿಟಕಿಯ ಮೇಲೆ ಹತ್ತಿ ತೋಟದೊಳಕ್ಕೆ ಇಳಿದು ಅಲ್ಲಿಂದ ಗೇಟಿನ ಮೂಲಕ ಹೊರಹೋಗಿ ಕಾಣದಾಗಿದ್ದ.

ಬಡ್ಡಿವ್ಯಾಪಾರಿ ಕೂಡಲೇ ಕಾವಲುಗಾರನೊಡನೆ ತೋಟದ ಕೋಣೆಗೆ ಹೋಗಿ ಕೈದಿ ಪರಾರಿಯಾದುದನ್ನು ಖಚಿತಪಡಿಸಿದ.

ಅನಗತ್ಯ ಗಾಳಿಸುದ್ದಿಗಳು ಹರಡದಂತೆ ತಡೆಯಲು ಆತ ಆ ಕರಾರುಭಂಗ ಪತ್ರವನ್ನು ಮೇಜಿನಿಂದ ತೆಗೆದುಕೊಂಡ. ಮನೆಗೆ ಬಂದವನೇ ಅದನ್ನು ಪೆಟ್ಟಿಗೆಯೊಳಗೆ ಭದ್ರವಾಗಿಟ್ಟುಕೊಂಡು ಬೀಗಜಡಿದ.

ಮುಗಿಯಿತು

ಆಂಟನ್ ಚೆಕೋವ್
ಕನ್ನಡಕ್ಕೆ : ಪುನೀತ್ ಅಪ್ಪು

1 Comment

Leave a Reply

*