ಅಸ್ತಿತ್ವದ ಏಕತ್ವ(ವಹ್ದತುಲ್‌ ವುಜೂದ್):‌ ಒಂದು ತಾತ್ವಿಕ ವಿಶ್ಲೇಷಣೆ

ಜಗತ್ತಿನಲ್ಲಿ ಅಸ್ತಿತ್ವದಲ್ಲಿ ಇದೆ ಎನ್ನಬಹುದಾದ ವಸ್ತುವಾದರೂ ಯಾವುದು? ವಾಸ್ತವದಲ್ಲಿ ಇಲ್ಲೇನಿದೆ? ನಮ್ಮ ಸುತ್ತಮುತ್ತ ಕಣ್ಣಾಡಿಸುವಾಗ ಹಾಗೂ ಇಂದ್ರಿಯಗಳ ಮೂಲಕ ಅನುಭವಿಸುವಾಗ ಅನೇಕ ವಸ್ತುಗಳು ಅಸ್ತಿತ್ವದಲ್ಲಿರುವುದು ಸ್ವಯಂವೇದ್ಯ ಸತ್ಯವಾಗಿ ತೋರುತ್ತದೆ. ಆದರೆ, ಇವೆಲ್ಲ ಇಲ್ಲಿ ಇರಲೇಬೇಕೆಂಬ ಅನಿವಾರ್ಯತೆಯಿಲ್ಲ ಎಂಬ ಅಂಶವೂ ಕೂಡ ಅಷ್ಟೇ ಸತ್ಯ. ಇಸ್ಲಾಮೀ ತತ್ವಚಿಂತನೆ ಪ್ರಕಾರ ಮನುಷ್ಯರಾದಿ ಎಲ್ಲಾ ಸೃಷ್ಟಿಗಳು ಸಾಧ್ಯತಾ ಅಸ್ತಿತ್ವವನ್ನು(contingent being) ಹೊಂದಿದೆ. ಅಂದರೆ ನಾವೆಲ್ಲ ಅನಿವಾರ್ಯವಾಗಿ ಇರಬೇಕಾದವರಲ್ಲ; ನಮ್ಮ ಇರವು ದೇವರನ್ನು ಅವಲಂಬಿಸಿಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ದೇವರು ಅನಿವಾರ್ಯ ಅಸ್ತಿತ್ವ(necessary existence) ಹೊಂದಿದವನು ಮತ್ತು ಆತನ ಅಸ್ತಿತ್ವ ಖಂಡಿತವಾಗಿ ಇರಬೇಕಾದದ್ದು.

ಆದಾಗ್ಯೂ, ಇರುವಿಕೆ ಎನ್ನುವುದು ದೇವರ ಸತ್ತುವಿನ (ದ್ಸಾತ್, ಅಸ್ತಿತ್ವದ ಯಥಾರ್ಥತೆ) ಅವಿಭಾಜ್ಯ ಗುಣವಾಗಿರುವಾಗ(ಅಂದರೆ ದೇವರು ಇಲ್ಲದಿರುವುದು ಅಸಾಧ್ಯ) ಇತರ ವಸ್ತುಗಳೂ ಕೂಡ ʼಇದೆʼ ಎನ್ನಬಹುದೇ? ಅಸ್ತಿತ್ವವೆಂಬ ಗುಣವನ್ನು ದೇವರಿಗೂ ಸೃಷ್ಟಿಗಳಿಗೂ ಆರೋಪಿಸಬಹುದೇ? ಹಾಗೆ ಮಾಡಬಹುದಾದರೆ, ಅಸ್ತಿತ್ವವೆಂಬ ಪರಿಕಲ್ಪನೆಯನ್ನೇ ದೃಢಪಡಿಸದೆ ಮಾಡುವುದಾದರೂ ಹೇಗೆ? ಹಲವಾರು ಶತಮಾನಗಳಿಂದೀಚಿಗೆ ಇಸ್ಲಾಮೀ ತತ್ವಜ್ಞರು, ದೇವತಾಶಾಸ್ತ್ರಜ್ಞರು ಮತ್ತು ಅನುಭಾವಿ ತಾತ್ವಿಕರನ್ನು ಗಾಢ ಚಿಂತನೆಗೆ ಪ್ರೇರೇಪಿಸಿದ ಪ್ರಶ್ನೆಗಳಿವು. ಪರಿಣಾಮವಾಗಿ, ಕೆಲವು ತತ್ವಜ್ಞಾನಿಗಳು ಅಸ್ತಿತ್ವದಲ್ಲಿರುವುದು ದೇವರು ಮಾತ್ರ, ಆತನ ಹೊರತು ಯಾವುದೂ ಇಲ್ಲ ಎಂಬ ವಾದವನ್ನೂ ಹೂಡಿದ್ದಾರೆ. ಮತ್ತೊಮ್ಮೆ ನೀವು ಸುತ್ತಲೂ ನೋಟ ಬೀರಿದರೆ ನೀವೊಳಪಟ್ಟಂತೆ ಯಾವುದೂ ಕೂಡ ನಿಜದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ತೋರಬಹುದು. ವಹ್‌ದತುಲ್‌ ವುಜೂದ್‌ (ಅಸ್ತಿತ್ವದ ಏಕತ್ವ) ಎನ್ನಲಾಗುವ ಪ್ರಸ್ತುತ ಸಿದ್ದಾಂತ, ಮೂಲತಃ ಸತ್ಯದ ಅನುಭವಾತ್ಮಕ ಅನಾವರಣಗಳ ಮೇಲೆ ಆಧಾರಿತಗೊಂಡಿದೆಯೆಂದು ಹೇಳಬಹುದಾದರೂ, ತಾರ್ಕಿಕವಾಗಿ ಸಾದರಪಡಿಸಬಹುದಾದ ತಾತ್ವಿಕ ಸಿದ್ದಾಂತವಾಗಿಯೂ ಇದನ್ನು ತೆಗೆದುಕೊಳ್ಳಬಹುದು.

ಈ ನಿಟ್ಟಿನಲ್ಲಿ ಮಂಡಿಸಲಾದ ತಾರ್ಕಿಕ ವಿಚಾರ ಸರಣಿಯನ್ನೊಮ್ಮೆ ಅವಲೋಕಿಸೋಣ. ಅಸ್ತಿತ್ವವೆಂಬುದು ದೇವರ ನೈಜಸತ್ತುವೇ(essence) ಆಗಿದೆ. ಆದ್ದರಿಂದ ಇತರ ವಸ್ತುಗಳನ್ನು ಆತನ ಅಂಶಗಳು ಎಂದರೆ ಮಾತ್ರ ಅವುಗಳಿಗೆ ಅಸ್ತಿತ್ವವನ್ನು ಆರೋಪಿಸಲು ಸಾಧ್ಯ. ಪ್ರಸ್ತುತ ವಾದಸರಣಿಯನ್ನು ಇನ್ನೂ ಸರಳವಾಗಿ ಹೀಗೆ ಮಂಡಿಸಬಹುದು. ದೇವರು ಅನಿವಾರ್ಯ ಅಸ್ತಿತ್ವ ಉಳ್ಳವನು ಅಥವ ನಿರ್ಮಲ ಇರವನ್ನು(pure existence) ಹೊಂದಿದವನು. ವಹ್‌ದತುಲ್ ವುಜೂದಿನ ವಕ್ತಾರರ ಪ್ರಕಾರ ದೇವರ ಹೊರತಾಗಿರುವ ವಸ್ತುಗಳು ಅಸ್ತಿತ್ವದಲ್ಲಿದೆಯೆಂದು ಅಲಂಕಾರಿಕವಾಗಿ ಮಾತ್ರ ಹೇಳಬಹುದು. ವಾಸ್ತವಿಕವಾಗಿ ತೆಗೆದುಕೊಂಡರೆ, ಎಲ್ಲ ವಸ್ತುಗಳಲ್ಲಿ ದೇವರು ಅಡಕಗೊಂಡಿದ್ದಾನೆಂದು ತರ್ಕಿಸುವ ವಿಶ್ವ ದೇವತಾವಾದದಲ್ಲಿ(ಪ್ಯಾಂಥಿಯಿಸಂ) ಸಿಲುಕಿದಂತಾಗುವುದು. ಇವರ ಪ್ರಕಾರ ತೌಹೀದ್‌ನ ಮೂಲಾರ್ಥ ನೈಜ ಅಸ್ತಿತ್ವವು ದೇವರಿಗೆ ಮಾತ್ರ ಸಲ್ಲುವಂತದ್ದು ಎಂದಾಗಿದೆ. ಜತೆಗೆ, ಅನೇಕ ವಸ್ತುಗಳು ಇವೆ ಎನ್ನುವಾಗ ಇರುವಿಕೆ ಎಂಬುದು ದೇವರಿಗಿಂತ ಪೂರ್ವಭಾವಿಯಾಗಿರುವ ಹಾಗೂ ಆತನಿಗಿಂತ ಉನ್ನತವಾದ ಒಂದು ಸಂಗತಿಯಾಗುವುದು. ಆಗ ದೇವರು ಮತ್ತು ಸೃಷ್ಟಿಗಳನ್ನು ಇರುವಿಕೆ ಎಂಬ ಅತ್ಯುನ್ನತ ವರ್ಗದ ವಿಭಿನ್ನ ಉಪಾಂಗಗಳಾಗಿ ಪರಿಗಣಿಸಬೇಕಾಗುತ್ತದೆ.

ಇರುವಿಕೆ ಎಂಬುವುದು ದೇವರಿಗಿಂತ ಮೇಲೆಯಾದ ಸಂಗತಿಯೋ ಅಥವಾ ವರ್ಗವೋ ಆಗುವ ತಾತ್ವಿಕ ಸಮಸ್ಯೆಯನ್ನು ಪರಿಹರಿಸಲು ಹಾಗೂ ದೇವರನ್ನು ವಿಶ್ವದ ಭಾಗವಾಗಿ ಪರಿಗಣಿಸುವ ಸರ್ವದೇವತಾವಾದದಿಂದ ಮುಕ್ತಿ ಹೊಂದಲು ವಹ್‌ದತುಲ್ ವುಜೂದಿನ ವಕ್ತಾರರು ದೇವರು ಮಾತ್ರ ವಾಸ್ತವಿಕವಾಗಿ ಅಸ್ತಿತ್ವದಲ್ಲಿರುವುದು ಎಂಬ ಪ್ರತಿಪಾದನೆಯನ್ನು ಸಾರಿದರು. ಇಂತ ಪ್ರತಿಪಾದಕರ ಪೈಕಿ ಸದ್ರುದ್ದೀನ್‌ ಅಲ್-ಖೂನವೀ(d.673AH/1274CE)‌ ಮತ್ತು ದಾವೂದುಲ್‌ ಖೈಸರಿ(d.751AH/1350CE) ಯಂತಹ ಹಲವು ವಿದ್ವಾಂಸರು ಮತ್ತು ಸಂತರು ಇದ್ದಾರೆ. ಶೈಖುಲ್‌ ಅಕ್ಬರ್‌ ಮುಹ್ಯುದ್ದೀನ್‌ ಇಬ್ನ್ ಅರಬಿ (d.638AH/1240CE) ಯವರ ಮುಖ್ಯಶಿಷ್ಯನೂ ಅಳಿಯನೂ ಆಗಿದ್ದ ಖೂನವೀ, ಶ್ರೇಷ್ಠ ಸಂತ ಜಲಾಲುದ್ದೀನ್‌ ರೂಮಿ(d.672AH/1273CE) ಯವರ ಸಹವರ್ತಿಯೂ ಆಗಿದ್ದರು. ಖೈಸರಿ ಎಂಬವರು ಇಝನಿಕ್‌ ಎಂಬಲ್ಲಿ ನೆಲೆನಿಂತಿದ್ದ ಪ್ರಪಥಮ ಒಟ್ಟೋಮನ್‌ ವಿದ್ಯಾಲಯದ ಮುಖ್ಯಾಧಿಕಾರಿಯಾಗಿ ಪ್ರಸಿದ್ಧರಾದವರು.

ಖೂನವೀ ಮತ್ತು ಖೈಸರಿ ಎಂಬೀ ಉಭಯ ಮಹಾತ್ಮರು ಸೃಷ್ಟಿಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲವೆಂದೂ, ಅವು ಯಥಾರ್ಥ ಇರವು ಆಗಿರುವ ದೇವರೊಂದಿಗೆ ಸಂಬಂಧ(ನಿಸ್‌ಬ) ವನ್ನು ಮಾತ್ರ ಹೊಂದಿದೆಯೆಂದು ಪ್ರತಿಪಾದಿಸಿದರು. ಇಂಥ ಒಂದು ತತ್ವವನ್ನು ಒಪ್ಪಿಕೊಂಡು ನಿಜಾರ್ಥದಲ್ಲಿ ಸೃಷ್ಟಿಗಳು ಇವೆ ಎನ್ನಲಾಗದೆಂದು ಬಗೆದುಕೊಂಡರೆ ಇನ್ನಷ್ಟು ಸಮಸ್ಯೆಗಳು ಕಾಡುತ್ತವೆ. ಕಡೇಪಕ್ಷ ನಮ್ಮ ಮತ್ತು ಸುತ್ತಮುತ್ತಲಿರುವ ವಸ್ತುಗಳ ಇರವನ್ನು ನಾವು ಅನುಭವಿಸುತ್ತಿದ್ದೇವೆಂಬ ಭಾವವನ್ನು ಅಲ್ಲಗಳೆಯಲಾಗದು. ನಿಜದಲ್ಲಿ ಇಲ್ಲದಿದ್ದರೆ ಅವುಗಳ ಸಂವೇದನೆಯಾದರೂ ಹೇಗುಂಟಾಗುತ್ತದೆ?. ಸೃಷ್ಟಿಗಳು ʼಇವೆʼ ಎನ್ನಲಾಗದಿದ್ದರೂ ಕೂಡ, ನಾವು ಅನುಭವಿಸುವ ಅವುಗಳ ಉಪಸ್ಥಿತಿಯನ್ನು ವಿವರಿಸಲು ಬೇರೊಂದು ವಿಧಾನ ಕಂಡುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವಹ್ದತುಲ್‌ ವುಜೂದಿನ ಪ್ರವರ್ತಕರು ಸೃಷ್ಟಿಗಳನ್ನು ದೇವರ ಜ್ಞಾನದಲ್ಲಿರುವ ಸ್ಥಿರ ಘಟಕಗಳೆಂದು (ಅಲ್‌ ಅಯ್‌ನು ತ್ಸಾಬಿತಃ) ನಿರೂಪಿಸಿದ್ದಾರೆ. ಅವು ವಾಸ್ತವಿಕ ಅಸ್ತಿತ್ವ ಹೊಂದಿಲ್ಲ; ಹೊರತು, ದೇವರ ಜ್ಞಾನದ ಮೂಲಕ ಆತನ ಅಸ್ತಿತ್ವದೊಂದಿಗೆ ನಂಟನ್ನು ಹೊಂದಿ, ಅವು ಆತನ ಅರಿಯುವಿಕೆಯ ಒಳಗೆ ಅಂತರ್ಗತಗೊಂಡಿದೆ. ಪ್ರಸ್ತುತ ತಾತ್ವಿಕ ಸಾಮಾಗ್ರಿ ಆಧಾರಿತ ವಿಶ್ಲೇಷಣೆಯ ಹಿನ್ನಲೆಯಲ್ಲಿ, ಮತ್ತೊಮ್ಮೆ ಸುತ್ತಮುತ್ತಲ ವಸ್ತುಗಳನ್ನು ಸರ್ವೇಕ್ಷಣೆ ಮಾಡಿದರೆ ತಮ್ಮ ಇಂದ್ರಿಯಗಳ ಮೂಲಕ ಸತ್ಯವಾದ ಯಾವೊಂದನ್ನೂ ಅನುಭವಿಸುತ್ತಿಲ್ಲ ಎಂದು ಹೇಳಬಹುದು. ಒಟ್ಟಾರೆ ಸೃಷ್ಟಿಗಳ ಅಸ್ತಿತ್ವವೆಂದರೆ ಇಷ್ಟೆ, ಅವುಗಳ ಕುರಿತು ದೇವರಿಗೆ ಅರಿವಿದೆ ಹಾಗೂ ಪ್ರಸ್ತುತ ಅರಿವು ಸೃಷ್ಟಿಗಳ ಸಂಯೋಜನೆಗೆ ಹೇತುವಾಗುವುದು.

ಪ್ರಸ್ತುತ ವೈಚಾರಿಕ ಚಿಂತನೆಯ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ತಮ್ಮನ್ನು ಬಹುವಾಗಿ ಕಾಡಬಹುದು. ದೇವರನ್ನು ಬಿಟ್ಟು ಯಾವುದಕ್ಕೂ ವಾಸ್ತವಿಕ ಸತ್‌ ಇಲ್ಲವೆಂದೂ ಹಾಗೂ ನಾವು ಅನುಭವಿಸುವ ವಸ್ತುಗಳೆಲ್ಲ ದೇವರ ಜ್ಞಾನದಲ್ಲಿರುವ ಘಟಕಗಳು ಮಾತ್ರವೆಂದು ನಿರೂಪಿಸುವುದರಿಂದ ಪ್ರಯೋಜನವಾದರೂ ಏನು? ನಾವಿಲ್ಲಿ ಸುಖಾಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಿದ್ದೇವೆಂದು ತೋರಬಹುದು. ಕಾರಣ, ಸೃಷ್ಟಿಗಳಿಗೆ ಅಸ್ತಿತ್ವವೆಂಬ ಗುಣಲಕ್ಷಣ ಇದೆ ಎಂದರೂ ಇಲ್ಲ ಅಂದರೂ ದೇವತಾಶಾಸ್ತ್ರ ನಿಲುವಿನ ಪ್ರಕಾರ ಅವೆಲ್ಲ ದೈವಿಕ ಪರಮ ಇಚ್ಛೆಯ ಪ್ರಭಾವಶಾಲಿ ಪರಿಧಿಯೊಳಗೇ ಬರುತ್ತವೆ. ಈ ಹಿನ್ನಲೆಯಲ್ಲಿ, ಸೃಷ್ಟಿಗಳನ್ನು ಅಸ್ತಿತ್ವದಲ್ಲಿರುವ ಮೂರ್ತ ವಸ್ತುಗಳೆಂದು ಕರೆಯುವುದಕ್ಕೆ ಬದಲಾಗಿ ದೇವರ ಜ್ಞಾನದ ಅಪರಿವರ್ತನೀಯ ಘಟಕಗಳೆಂದು ಬಣ್ಣಿಸುವುದು ಪದಗಳ ಆಟಾಟೋಪವಲ್ಲದೆ ಬೇರೇನೂ ಅಲ್ಲವೆಂದು ಭಾಸವಾದರೆ ಅಚ್ಚರಿಯೇನೂ ಇಲ್ಲ.

ಆದಾಗ್ಯೂ, ಪದಗಳಲ್ಲಿ ಅಗಾಧ ಶಕ್ತಿ ಅಂತರ್ಲೀನಗೊಂಡಿದೆ ಹಾಗೂ ಅವುಗಳನ್ನು ಅರ್ಥೈಸುವ ರೀತಿಗೂ ಪ್ರಾಮುಖ್ಯತೆ ಇದೆ. “ಇರುವುದು” ಎಂಬ ಸಂಜ್ಞೆ ಪೌರಾಣಿಕ ಕಾಲದಿಂದಲೇ ಚರ್ವಿತ ಚರ್ವಣಗೊಂಡಿರುವಂತದ್ದು. ಇಸ್ಲಾಮಿನ ಆಗಮನದೊಂದಿಗೆ ದೈವೇತರ ವಸ್ತುಗಳಿಗೆ ಇರುವಿಕೆ ಎಂಬ ಗುಣ ಆರೋಪಿಸುವುದರ ಒಳತಿರುಳೇನು ಎಂಬ ಚರ್ಚೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡಿತು. ನಿರ್ದಿಷ್ಟ ವಸ್ತುವೊಂದು ಇದೆ ಎನ್ನುವುದು ತತ್ವಮೀಮಾಂಸಕರ ನಿಟ್ಟಿನಲ್ಲಿ ಆ ವಸ್ತುವಿನ ಕುರಿತ ಗಂಭೀರ ಚಿಂತನೆಗೆ ಎಡೆಮಾಡಿಕೊಡುತ್ತದೆ. ನಿಜದಲ್ಲಿ, ದೇವರ ಹೊರತುಪಡಿಸಿ ಏನಾದರೂ ಇದೆ ಎನ್ನಲು ಸಾಧ್ಯವೇ?. ಖುರಾನಿನ ಅರ್ರಹ್ಮಾನ್‌ ಎಂಬ ಅಧ್ಯಾಯದಲ್ಲಿ ಬರುವ ಸೂಕ್ತ ಹೀಗಿದೆ: “ಭೂಮಿಯಲ್ಲಿರುವುದೆಲ್ಲಾ ನಾಶ ಹೊಂದುವುದು, ಆದರೆ ಪರಮ ಸಾರ್ವಭೌಮತೆಯನ್ನೂ ಅಪಾರ ಕರುಣೆಯನ್ನೂ ಹೊಂದಿದ ನಿಮ್ಮ ಪಾಲಕನು ಚಿರಂತನಾಗಿರುವನು”.(55:26-27).

ಕೆಲವೊಂದು ವ್ಯಾಖ್ಯಾನ ಸರಣಿ ಪ್ರಸ್ತುತ ಸೂಕ್ತವನ್ನು, ಸಂಪೂರ್ಣ ನಾಶವಾಗುವ ಕಾರಣದಿಂದ, ದೇವರ ಹೊರತು ಯಾವುದೂ ಕೂಡ ಇದೆ ಎನ್ನಲಾಗದು ಎಂಬರ್ಥದಲ್ಲಿ ವ್ಯಾಖ್ಯಾನಿಸಿದೆ. “ನಾಶವಾಗುತ್ತದೆ” ಎಂಬುವುದರ ಅರಬಿಕ್‌ ಸಂವಾದೀ ಪದ “ಫಾನ್” ಎಂದಾಗಿದೆ.‌ ನಾಶವಾಗುವ ಸ್ಥಿತಿಯಲ್ಲಿರುವಂತದ್ದು ಎಂಬರ್ಥ ಬರುವ ಕರ್ತೃಪದವಾಗಿದೆ ಇದು. ಪ್ರಸ್ತುತ ಅಂಶವನ್ನು ಗಣನೆಗೆ ತೆಗೆದುಕೊಳ್ಳುವಾಗ ದೇವರು ಮತ್ತು ಸೃಷ್ಟಿಗಳಿಗಿರುವ ಅಸ್ತಿತ್ವ ಸಮಾನ ಸ್ವರೂಪವನ್ನು ಹೊಂದಿದೆಯೇ, ಅಲ್ಲ ತಾರತಮ್ಯದಿಂದ ಕೂಡಿದೆಯೇ ಎಂಬ ಜಿಜ್ಞಾಸೆಯೂ ಮೂಡುತ್ತದೆ. ಜಗತ್ತಿನ ಕುರಿತ ನಮ್ಮ ನಂಬಿಕೆಗಳಿಗೆ ಸಂಕೀರ್ಣವಾದ ಸವಾಲೊಡ್ಡಬಹುದಾದ ತೀವ್ರತರ ಪ್ರಭಾವವು ಪದಗಳ ಅರ್ಥಗಳಿಗಿವೆ ಎಂದರೆ ಉತ್ಪ್ರೇಕ್ಷೆಯ ಮಾತಾಗದು.

ಇನ್ನೂ ಮುಂದುವರಿದು ಆಲೋಚಿಸುವಾಗ, ಮನುಷ್ಯರ ಸಮೇತ ಸೃಷ್ಟಿಗಳಿಗೆ ಅಸ್ತಿತ್ವವಿದೆಯೆಂಬ ನಂಬಿಕೆ ಆತ್ಮ ಶುದ್ಧೀಕರಣ (ತಝ್‌ಕಿಯತುನ್ನಫ್‌ಸ್‌) ಪಥದಲ್ಲಿ ಕೆಲವೊಂದು ಪ್ರತಿಬಂಧಕಗಳನ್ನು ಒಡ್ಡುತ್ತವೆ ಎಂಬ ವಿಚಾರವನ್ನು ಮನಗಾಣಬಹುದು. ಅಹಂ ಭಾವವನ್ನು ನಿರ್ಮೂಲನೆ ಮಾಡುವುದು ಅಧ್ಯಾತ್ಮದ ಅಡಿಪಾಯವಾಗಿರುವಾಗ ದೇವರ ಜತೆಗೆ ನಾವೂ ಇದ್ದೇವೆಂದು ಭಾವಿಸುವುದು ಸಮಸ್ಯತ್ಮಾಕವೇ ಸರಿ. ಆದ್ದರಿಂದ, ನಾವು ಈಗಾಗಲೇ ವಿವರಿಸಿದ ಸೈದ್ಧಾಂತಿಕ ನೆಲೆಗಟ್ಟಿಗಿಂತ ಮಿಗಿಲಾಗಿ ವಹ್ದತುಲ್‌ ವುಜೂದಿನ ರೂವಾರಿಗಳಿಗೆ ಪ್ರಾಯೋಗಿಕ ನೆಲೆಗಟ್ಟಿನಲ್ಲೇ ನಾವೆಲ್ಲ ಅಸ್ತಿತ್ವವಿಲ್ಲದವರು ಹಾಗೂ ದೇವರ ಸತ್ತುವಿನಲ್ಲಿ ಲೀನವಾಗುವಂತವರು. ಪ್ರಸ್ತುತ ಮಾರ್ಗದಲ್ಲಿ ದೇವರ ಹೊರತಾದ ಆತ್ಮ ಮತ್ತು ಅಸ್ತಿತ್ವದ ಕಲ್ಪನೆ ನಿರರ್ಥಕವಾದುದು.

ಇಸ್ಲಾಮೀ ಚಿಂತನಾ ಧಾರೆಯಲ್ಲಿ, ವಹ್ದತುಲ್‌ ವುಜೂದ್‌ ಎಂಬ ಪರಿಕಲ್ಪನೆಯು ಆಧ್ಯಾತ್ಮಿಕ, ಖುರಾನ್ ವ್ಯಾಖ್ಯಾನ ಹಾಗೂ ನೀತಿಶಾಸ್ತ್ರ ಗ್ರಂಥಗಳಲ್ಲಿ ಕಂಡುಬರುವಂತೆ ಹಲವಾರು ದಾರ್ಶನಿಕ ವಿಶ್ಲೇಷಣೆಗಳ ಮುಖಾಂತರ ಸಮೃದ್ಧಗೊಡಿದೆ. ಹಾಗೆಯೇ ಪ್ರಸ್ತುತ ತತ್ವವನ್ನು ಖಂಡಿಸುವ ಧಾರೆಗಳಿಗೂ ಭದ್ರ ತಾತ್ವಿಕ ಬುನಾದಿಯಿದೆ. ಅತ್ಯಂತ ಮುಖ್ಯ ಟೀಕೆ ಕಂಡುಬರುವುದು ಪ್ರಸಿದ್ದ ದೇವತಾಶಾಸ್ತ್ರಜ್ಞ ಸಅದುದ್ದೀನ್‌ ತಫ್‌ತಾಝಾನಿ (d.791AH/1390CE)ಯವರ ಶರ್ಹುಲ್‌ ಮಖಾಸಿದ್‌ನಲ್ಲಿ. ಅವರ ಪ್ರಕಾರ ʼಅಸ್ತಿತ್ವʼ ಎಂಬಂತ ಒಂದು ಸಂಗಂತಿಯೇ ಇಲ್ಲ. ದೇವರು ಮತ್ತು ಸೃಷ್ಟಿಗಳೆಂಬ ವಿಭಿನ್ನ ವಸ್ತುಗಳಿಗೆ ಪ್ರಯೋಗಿಸಬಹುದಾದ ಕೇವಲ ಕಾಲ್ಪನಿಕ ಪದ ಅದು. ಆದ್ದರಿಂದ ಅದು ದ್ವಂದ್ವಾರ್ಥವುಳ್ಳ ಪದ. ಸ್ಪಷ್ಟವಾಗಿ ಹೇಳುವುದಾದರೆ, ಅಸ್ತಿತ್ವ ಪ್ರಾಥಮಿಕವಾಗಿ ದೇವರಿಗೆ ಹಾಗೂ ಎರಡನೆಯದಾಗಿ ಸೃಷ್ಟಿಗಳಿಗೆ ಅನ್ವವಾಗುತ್ತದೆ. ಅದು ಮನಸ್ಸು ಆಧಾರಿತ ಕಲ್ಪನೆಯಾದ ಕಾರಣದಿಂದ, ಎಲ್ಲ ವಸ್ತುಗಳಿಗೆ ಅಸ್ತಿತ್ವ ಇದೆ ಎನ್ನುವುದು ವಿಶ್ವದೇವತಾವಾದವಾಗಿ ಪರಿಣಮಿಸುವ ಸಮಸ್ಯೆ ಬರದು. ನಿಜದಲ್ಲಿ, ತಫ್‌ತಾಝಾನಿ ಅವರು ವಹ್ದತುಲ್‌ ವುಜೂದ್ ಪಂಥೀಯರನ್ನು ಸರ್ವದೇವತಾವಾದಿಗಳೆಂದು ಆರೋಪಿಸುತ್ತಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತಲ ವಸ್ತುಗಳ ಇರವನ್ನು ಅಲ್ಲಗಳೆಯಲಾಗದು. ದೇವರೆಂಬ ಸತ್‌ ಮಾತ್ರ ಇರುವುದೆಂದು ವಾದ ಮಾಡಿದರೆ ಅನಿವಾರ್ಯವಾಗಿ ಮಿಕ್ಕಿದ್ದೆಲ್ಲವೂ ದೇವರೇ ಆಗಬೇಕಾಗುವುದು. ಆದ್ದರಿಂದ, ಇಂದ್ರಿಯಾನುಭವಕ್ಕೆ ದಕ್ಕುವ ವಸ್ತುಗಳು ಮಿಥ್ಯೆ ಗಳು ಎನ್ನಲು ಯಾವುದೇ ಅವಕಾಶವಿಲ್ಲ. ಒಟ್ಟಾರೆ, ಪ್ರಸ್ತುತ ವಿವಾದ ಎಷ್ಟರ ಮಟ್ಟಿಗೆ ಇಂದ್ರಿಯಾನುಭವಗಳ ಮೇಲೆ ನಮಗೆ ವಿಶ್ವಾಸವಿದೆ ಎಂಬ ಅಂಶದ ಸುತ್ತ ಕೇಂದ್ರೀಕರಿಸಿದೆಯೆಂದು ತೋರುತ್ತದೆ. ನಾವು ಅನುಭವಿಸುತ್ತಿದ್ದೇವೆ ಎಂದ ಮಾತ್ರಕ್ಕೆ ಇಂದ್ರಿಯ ಗ್ರಾಹ್ಯ ವಸ್ತುಗಳಿಗೆ ಅಸ್ತಿತ್ವವಿದೆ ಎನ್ನಲಾದೀತೇ?

ನಮ್ಮ ಪ್ರಜ್ಞೆ ಮತ್ತು ಇಂದ್ರಿಯ ಗ್ರಹೀತ ಜ್ಞಾನಗಳಲ್ಲಿ ಗೊಂದಲವುಂಟು ಮಾಡುತ್ತದೆ ಎಂಬ ಕಾರಣದಿಂದ ಅನೇಕರಿಗೆ ಇಂದ್ರಿಯಾನುಭವಗಳಿಗೆ ನಿಲುಕುವ ವಸ್ತುಗಳಿಗೆ ಅಸ್ತಿತ್ವವಿಲ್ಲ ಎಂಬ ಸಿದ್ದಾಂತವನ್ನು ಒಪ್ಪುವುದು ಕಷ್ಟವೆನಿಸುತ್ತದೆ. ದೇವರು ಮತ್ತು ಸೃಷ್ಟಿಗಳ ನಡುವೆ ವ್ಯತ್ಯಾಸವನ್ನು ಪರಿಗಣಿಸುವುದರ ಜತೆಗೆ, ಅಸ್ತಿತ್ವದ ವಿಭಿನ್ನ ದರ್ಜೆಗಳು (ಮರಾತಿಬ್‌-ಉಲ್-ವುಜೂದ್)‌ ಎಂಬ ತತ್ವದ ಮೂಲಕ ಅಸ್ತಿತ್ವದ ಅನೇಕತ್ವಕ್ಕೊಂದು ಸ್ಪಷ್ಟೀಕರಣ ನೀಡಬಹುದಾಗಿದೆ. ಹಲವು ದೇವತಾಶಾಸ್ತ್ರಜ್ಞರು, ಅನುಭಾವಿಗಳು ಮತ್ತು ದಾರ್ಶನಿಕರ ವಿಶ್ಲೇಷಣೆಗೀಡಾದ ಪ್ರಸ್ತುತ ಸಿದ್ದಾಂತವು ಸೃಷ್ಟಿಗಳಿಗೆ ಅಸ್ತಿತ್ವಗುಣವನ್ನು ಆರೋಪಿಸಲು ವಿವಿಧ ಸ್ತರಗಳಿಂದ ಕೂಡಿದ ಶ್ರೇಣೀಕೃತ ವಿಧಾನವೊಂದನ್ನು ಮುಂದಿಡುತ್ತದೆ. ಪ್ರಸ್ತುತ ಸಿದ್ಧಾಂತದ ಪ್ರಕಾರ, ಅಸ್ತಿತ್ವಕ್ಕೆ ಮೂರು ಶ್ರೇಣಿಗಳಿವೆ. (1) ವಾಸ್ತವಿಕ. ಮನಸ್ಸಿನಲ್ಲಿರುವುದಕ್ಕಿಂತ ಹೆಚ್ಚುವರಿಯಾಗಿ ಬಾಹ್ಯದಲ್ಲಿ ಇರುವಂತದ್ದು ಹಾಗೂ ಇದನ್ನು ಸತ್ಯಕ್ಕೆ ಆರೋಪಿಸಲಾಗುತ್ತದೆ. (2) ಮಾನಸಿಕ ಅಸ್ತಿತ್ವ. ಇದನ್ನು ಮನಸ್ಸಿನಲ್ಲಿ ಮಾತ್ರವಿರುವ ಕಾರ್ಯಗಳಿಗೆ ಬಳಸಲಾಗುತ್ತದೆ. (3) ಭಾಷೀಯ ಅಸ್ತಿತ್ವ. ಇದನ್ನು ನಮ್ಮ ಮಾತು ಬರೆಹಗಳಲ್ಲಿ ಬರುವ ಕಾರ್ಯಗಳಿಗೆ ನೀಡಲಾಗುತ್ತದೆ.

ಮರಾತಿಬುಲ್‌ ವುಜೂದ್‌ ಎಂಬ ಸಿದ್ಧಾಂತವು ನಾವು ಚರ್ಚೆ ಮಾಡಿದ ಗೊಂದಲಕ್ಕೆ ಪೂರ್ಣತೆರೆ ಎಳೆಯಲು ಅಸಮರ್ಥವಾಗಿದೆ. ಕಾರಣ, ಯಥಾರ್ಥದಲ್ಲಿ ಅಥವಾ ಮನಸ್ಸಿನ ಹೊರಗೆ ಅಸ್ತಿತ್ವದಲ್ಲಿರುವಂತದ್ದೆಂಬ ವಿಂಗಡನೆಯನ್ನು ಅದು ಮುಂದಿಟ್ಟಿದೆ. ಆದರೆ ಸಮಸ್ಯೆಯ ಪರಿಹಾರಕ್ಕೆ ಮತ್ತೊಂದು ಆಯಾಮವನ್ನು ಹೆಚ್ಚಿಸಿದೆ ಎನ್ನಬಹುದು. ಅಸ್ತಿತ್ವಕ್ಕೆ ಬಹುಸ್ತರಗಳನ್ನು ದೃಢಪಡಿಸುವ ಮೂಲಕ, ವಿದ್ವಾಂಸರು ಅಸ್ತಿತ್ವದ ಭೇದರಾಹಿತ್ಯವನ್ನು ಹಾಗೂ ಒಂದೇ ವೇಳೆಯಲ್ಲಿ ಇರುವಿಕೆ-ಇಲ್ಲದಿರುವಿಕೆ ಒಂದುಗೂಡುತ್ತದೆಯೆಂಬ ಅಭಿಮತವನ್ನು ನಿರಾಕರಿಸಿದರು. ಇರುವಿಕೆಗೆ ವಿವಿಧ ಆಯಾಮಗಳಿವೆ ಮತ್ತು ಅವುಗಳ ವಿಭಿನ್ನ ಶ್ರೇಣಿಗಳಿಂದ ಅರ್ಥಮಾಡುವುದು ತಾತ್ವಿಕ ಪ್ರಶ್ನೆಗಳಿಗಿರುವ ನಮ್ಮ ಉತ್ತರಗಳು, ನಾವು ಕಾರ್ಯಾಚರಿಸುವ ಅಸ್ತಿತ್ವದ ಧಾರೆ ಅಥವಾ ಸ್ತರಕ್ಕನುಗುಣವಾಗಿ ಬದಲಾಗಬಹುದು ಎಂದಾಗಿದೆ.

ಖಂಡಿತವಾಗಿಯೂ, ಪ್ರಸ್ತುತ ಲೇಖನ ಒಂದು ನಿರ್ದಿಷ್ಠ ನಿಲುವಿನ ಪರವಾಗಿ ಬರೆದದ್ದಲ್ಲ. ಹೊರತು ವಹ್ದತುಲ್‌ ವುಜೂದಿನ ತಾತ್ವಿಕ ಆಧಾರ ಮತ್ತು ದೃಷ್ಟಿಕೋನಗಳ ಮೇಲೆ ಬೆಳಕು ಚೆಲ್ಲುವ ಉದೇಶವನ್ನು ಮಾತ್ರ ಹೊಂದಿದೆ. ವಹ್ದತುಲ್‌ ವುಜೂದಿನ ಮೇಲೆ ಯಾವುದೇ ನಿಲುವನ್ನು ತಾಳಿದರೂ ಕೂಡ, ಅಸ್ತಿತ್ವಕ್ಕೆ ಅನೇಕ ಆಯಾಮಗಳಿವೆಯೆಂಬ ತತ್ವವು ದೇವರು ನಮ್ಮ ಜಗತ್ತಿನೊಂದಿಗೆ ಎಂತಹ ಸಂಬಂಧವನ್ನು ಹೊಂದಿದ್ದಾನೆ ಎಂಬುದರ ಕುರಿತ ನಮ್ಮ ಗ್ರಹಿಕೆಯನ್ನು ಉಜ್ವಲಗೊಳಿಸಲು ಸಮರ್ಥವಾಗಿದೆ. ಇನ್ನೂ ಹೆಚ್ಚಿನ ಚಿಂತನೆ ನಡೆಸಿದರೆ, ಅಸ್ತಿತ್ವದ ಅನೇಕತ್ವವೆಂಬ ಸಿದ್ದಾಂತಕ್ಕೆ ಸಮಕಾಲೀನ ತತ್ವಶಾಸ್ತ್ರೀಯ ಚರ್ಚೆಗಳಲ್ಲಿ ಮಹತ್ವದ ಕೊಡುಗೆ ನೀಡಲು ಶಕ್ಯವಿದೆ.

ಮೂಲ: ರೊಸಾಬೆಲ್ಅನ್ಸಾರಿ

ಅನುವಾದ : ಎಂ.ಎಂ. ಮಸ್ರೂರ್

ಕೃಪೆ: ರೆನೊವೇಶಿಯ ಮ್ಯಾಗಝಿನ್

Leave a Reply

*