ಇಬ್ಬರು ಬಶೀರ್

ಈ ಟಿಪ್ಪಣಿಯನ್ನು ಬರೆದವನ ಹೆಸರು ನೋಡಿ ನಿಮಗೆ ಕುತೂಹಲವೆನಿಸಬಹುದು. ಬಾಲ್ಯದ ದಿನಗಳಲ್ಲಿ ಓದಿನ ನವಿರಾದ ಪ್ರಪಂಚಕ್ಕೆ ನನ್ನನ್ನು ಆಕರ್ಷಿಸಿ ಮಂತ್ರಮುಗ್ಧಗೊಳಿಸಿದವರು ಸಾಹಿತ್ಯಲೋಕದ ಸುಲ್ತಾನ ವೈಕಂ ಮೊಹಮ್ಮದ್ ಬಶೀರರು. ಅಂತಹಾ ಮೇರು ಪ್ರತಿಭೆಯ ಕುರಿತು ನೆನಪಿಸಿಕೊಳ್ಳದೆ ಇರುವುದು ಅಸಾಧ್ಯದ ಮಾತು. ಅದಕ್ಕೆ ಮನಸ್ಸು ಒಪ್ಪುವುದೂ ಇಲ್ಲ. ಬಶೀರರನ್ನು ನಾನೊಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಸಣ್ಣಪುಟ್ಟ ಅವಕಾಶಗಳು ದೊರೆತಾಗಲೆಲ್ಲಾ ಆ ದೊಡ್ಡ ಮನುಷ್ಯನ ಮುಂದೆ ನಿಂತುಕೊಳ್ಳುವುದು ಹೇಗೆಂಬ ಅಭಿಮಾನ ಮಿಶ್ರಿತ ಭಯದಿಂದ ದೂರವೇ ಉಳಿದುಬಿಡುತ್ತಿದ್ದೆ. ಎದೆಯಾಳದಲ್ಲಿ ಕೊಂಡಾಡುವ ಒಬ್ಬ ವ್ಯಕ್ತಿಯನ್ನು ದೂರದಿಂದಲೇ ನೋಡಿ ಆಸ್ವಾದಿಸುವ ಖುಷಿಯನ್ನು ಕೆಲವೊಮ್ಮೆ ಉಂಡಿದ್ದೆ ಕೂಡ. ಅದೊಂದು ಸೊಗಸಾದ ಅನುಭವ!

ಒಬ್ಬ ಬರಹಗಾರ ಮತ್ತು ಓದುಗನೆಡೆಯಲ್ಲಿ ಭೇಟಿಗೂ ಆಚೆಗೆ ಇರಬಹುದಾದ ಅವಿನಾಭಾವ ಸಂಬಂಧ ನಮ್ಮೆಡೆಯಲ್ಲೂ ರೂಪುಗೊಂಡಿತ್ತು. ಅಲ್ಲಾಹು ಮನುಷ್ಯರಿಗೆ ದಯಪಾಲಿಸಿದ ‘ಲೇಖನಿ’ ಎಂಬ ಸಶಕ್ತ ಆಯುಧವು ಅದೆಷ್ಟು ಮನಸ್ಸುಗಳನ್ನು ಒಂದೇ ದಾರದಲ್ಲಿ ಪೋಣಿಸಿಲ್ಲ ಹೇಳಿ! ಪವಿತ್ರ ಖುರ್‌ಆನಿನ ಮೊದಲ ಅಧ್ಯಾಯದಲ್ಲಿ ಅಲ್ಲಾಹನು ಪ್ರಸ್ತಾಪಿಸಿದಂತೆ ”ಲೇಖನಿಯ ಮೂಲಕ ಬರವಣಿಗೆಯನ್ನು ಭೋದಿಸಿದ ಅವನೆಷ್ಟು ಉತ್ಕೃಷ್ಟನು” ಅಲ್ಲವೇ!

ಮನ್ಸೂರ್ ಹಲ್ಲಾಜ್ ಅವರ ‘ಅನಲ್ ಹಕ್’ ಮತ್ತು ಶಂಕರಾಚಾರ್ಯರ ‘ಅಹಂ ಬ್ರಹ್ಮಾಸ್ಮಿ’ ಎರಡನ್ನೂ ಸಮಾನವೆಂದು ಹೇಳುತ್ತಾ, ‘ಅನರ್ಘ್ಯ ನಿಮಿಷಂ’ ನಂತಹ ರಚನೆಗಳಲ್ಲಿ ತೊಡಗಿಸಿಕೊಂಡ ಆ ವ್ಯಕ್ತಿಯೊಂದಿಗೆ ನನಗಾವ ಸಂಬಂಧ! ಸಿ. ಎನ್. ಅಹ್ಮದ್ ಮೌಲವಿಯಂತಹವರೊಂದಿಗೆ ಸಮಾಲೋಚಿಸಿ, ಕೇವಲ ಖುರ್‌ಆನಿನ ಕೆಲವೊಂದು ತರ್ಜುಮೆಗಳನ್ನು ಓದಿ, ಧರ್ಮದ ಸೂಕ್ಷ್ಮತೆಗಳನ್ನು ಅರ್ಥೈಸುವ ಗೋಜಿಗೆ ಹೋಗದೆ, ಮುಸ್ಲಿಮರ ಆಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಕಟುವಾಗಿ ಟೀಕಿಸಿ, ಲೇವಡಿಮಾಡಿದ ಆ ವ್ಯಕ್ತಿಯ ಮೇಲೆ ಯಾಕೆ ಇಷ್ಟೊಂದು ಅಭಿಮಾನ!
ಕೇಶವ್‌ದೇವ್, ತಕಝಿ, ಪೊನ್‌ಕುನ್ನಂವರ್ಕಿ ಮುಂತಾದ ತನ್ನ ಸಮಕಾಲೀನ ಬರಹಗಾರರೊಂದಿಗೆ ಕುಡಿದು ಮದೋನ್ಮತ್ತನಾಗಿ, ಸದಾ ಮದುಬಟ್ಟಲಿನ ಬಗಲಲ್ಲೇ ಬಿದ್ದುಕೊಂಡಿದ್ದ ಬಶೀರರೊಂದಿಗೆ ನನಗೆ ಯಾವ ತೆರನಾದ ಅಭಿಮಾನ!

“ತನ್ನನ್ನು ಕಾಣಲು ಬರುತ್ತಿದ್ದವರನ್ನು ಬೈಗುಳಗಳ ಮಳೆಗರೆದು, ಅವನು ಎಷ್ಟೇ ದೊಡ್ಡ ಮಹಾನುಭಾವನಾಗಿದ್ದರೂ ಮನೆಯ ಮೆಟ್ಟಿಲು ಹತ್ತಲೂ ಬಿಡದೆ ಅವರು ಓಡಿಸುತ್ತಿದ್ದರು. ಕೆಲವೊಮ್ಮೆ ಆ ಬೈಗುಳಗಳಲ್ಲಿ ಅಶ್ಲೀಲ ಪದಗಳೂ ಇರುತ್ತಿದ್ದವು. ಆಗೆಲ್ಲಾ ಅವರು ಮಧ್ಯದ ನಶೆಯಲ್ಲಿರುತ್ತಿದ್ದರು” ಹೀಗೆಂದು ತನ್ನ ಶಿಷ್ಯ ಎಮ್ ಟಿ ವಾದುದೇವನ್ ನಾಯರರಿಂದ ಪರಿಚಯಿಸಲ್ಪಟ್ಟ ಒಬ್ಬ ಗುರು ಶ್ರೇಷ್ಠ!

ಯಾತ್ರೆಯ ಮಧ್ಯೆ ಕಾರು ಕೈಕೊಟ್ಟು ಒಂದೆಡೆ ಬಾಕಿಯಾದಾಗ, ಕಾಗದದಲ್ಲಿ ತಾನು ಸುರುಟಿ ತಂದಿದ್ದ ಮದ್ಯದ ಬಾಟಲಿಯನ್ನು ತೆರೆದು ಕುಡಿಯಲು ನೋಡಿ, ಬಾಟಲಿಯು ಖಾಲಿಯಿರುವುದನ್ನು ಗಮನಿಸಿ ಕೋಪಗೊಂಡು ‘ಹೋಗೋ ನನ್ನ ಸಂಗಾತಿಯನ್ನು ಕರೆದುಕೊಂಡು ಬಾ’ ಎಂದು ಹಾಸ್ಯ ಚಟಾಕಿ ಸಿಡಿಸಿ ಆ ಬಾಟಲಿಯನ್ನು ಹೊರಕ್ಕೆಸೆದ ಪೊನ್ನುಂವರ್ಕಿಯ ಒಬ್ಬ ಆತ್ಮೀಯ ಸ್ನೇಹಿತ!

ಸ್ನೇಹಿತರೊಂದಿಗೆ ಎರ್ನಾಕುಲಂನ ಪುಸ್ತಕದಂಗಡಿಯಲ್ಲಿ ಮಾತುಕತೆಗೆ ಕುಳಿತರೆ ಸೂರ್ಯ ಕ್ಷೀಣಿಸುತ್ತಿದ್ದಂತೆ, ಕುಡಿದು ಮತ್ತನಾಗಿ ದಿನವಿಡೀ ಪಟ್ಟಾಂಗ ಹೊಡೆಯುತ್ತಾ ನಿರ್ಲಜ್ಜನಾಗಿ ಇರುತ್ತಿದ್ದ ‘ತಕಝಿ’ಯ ಸನ್ಮಿತ್ರ ಗೆಳೆಯ!
ಈ ಮನುಷ್ಯನೊಂದಿಗೆ ನನಗೆ ಎಲ್ಲಿಯ ನಂಟು! ಯಾವ ರೀತಿಯ ಸಂಬಂಧ! ಏನು ಅಭಿಮಾನ!

ಇದೆ. ಖಂಡಿತಾ ಇದೆ. ಅಭಿಮಾನ, ಸಂಬಂಧ, ನಂಟು ಎಲ್ಲವೂ ಇದೆ. ನಾನು ಹುಟ್ಟಿ ಬೆಳೆದ ಧರ್ಮದ ಭಾಗವಾಗಿರುವ ನನ್ನ ಸಹೋದರನೆಂಬ ಬಾಂಧವ್ಯದ ಬೆಸುಗೆ ಇದೆ. ನಾನೊಬ್ಬ ಮುಸ್ಲಿಂ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಿದ್ದ ಬಶೀರರಲ್ಲಿ ಅಭಿಮಾನವಿದೆ.
ಮುಸ್ಲಿಮರ ಆಚಾರ ವಿಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಹೇಳಿದ ಕಥೆಗಾರ ಎಂಬ ಹೆಮ್ಮೆಯೂ ಇದೆ.
‘ಅಂಡಕಡಾಹತ್ತೇಯುಂ ಮಹಾ ಪ್ರಪಂಚತ್ತೇಯುಂ ಸೃಷ್ಟಿಚ್ಚಿ ಪರಿಪಾಲಿಕುನ್ನ ನಾದಾ'(ಅಖಿಲ ಬ್ರಹ್ಮಾಂಡಗಳನ್ನೂ ಮಹಾವಿಶ್ವವನ್ನೂ ಸೃಷ್ಟಿಸಿ ಪರಿಪಾಲಿಸುವ ಪ್ರಭೂ) ಎನ್ನುತ್ತಲೇ ತನ್ನ ಕಥೆಗಳುದ್ದಕ್ಕೂ ಖುರ್‌ಆನಿನ ಒಳತಿರುಳನ್ನು ಓದುಗರ ಚಿತ್ತಪಟಲಕ್ಕೆ ದಾಟಿಸಿದ ಮಾಂತ್ರಿಕ ಕಥೆಗಾರ. ಖುರ್‌ಆನ್, ಹದೀಸುಗಳನ್ನು ಸಾಹಿತ್ಯ ಲೋಕದ ಮುಂದೆ ತೆರೆದಿಟ್ಟ ಪ್ರತಿಭಾಶಾಲಿ. ಸರಳವಾದ ಆಡುನುಡಿಯಲ್ಲಿ ಮುಸ್ಲಿಮರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮತ್ತು ಮುಸ್ಲಿಂ ಮನೆಗಳ ಅಡುಗೆಮನೆಗಳಲ್ಲಿ ಹುಟ್ಟಿಕೊಂಡ ನುಡಿಗಟ್ಟುಗಳನ್ನು ಚಂದಗೆ ಕಟ್ಟಿಕೊಟ್ಟ ಗಾರುಡಿಗ. ಪೂರ್ವಗ್ರಹ ಪೀಡಿತರಾದ ಮನಸ್ಸುಗಳೂ ಒಪ್ಪಿಕೊಳ್ಳುವಂತೆ ಅಕ್ಷರ ಕ್ರಾಂತಿ ನಡೆಸಿದ ವೈಕಂ ಬಶೀರ್. ಅವರಿಗಲ್ಲದೆ ‘ಭಗವದ್ಗೀದೆಯುಂ ಕೊರೇ ಮೊಲೆಗಳುಂ'(ಭಗವದ್ಗೀತೆ ಮತ್ತು ಅನೇಕ ಮೊಲೆಗಳು) ಎಂದು ನಸುನಗುತ್ತಲೇ ಈ ಭವ್ಯ ಭಾರತದ ಮಣ್ಣಿನಲ್ಲಿ ಇದ್ದುಕೊಂಡು ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವರನ್ನು ಮತ್ತೊಬ್ಬರೊಂದಿಗೆ ತುಲನೆಮಾಡುವುದು ಸಾಧ್ಯವಿಲ್ಲ.

ಬಶೀರರ ಕಥೆಗಳನ್ನು ವಿಶ್ಲೇಷಿಸುವ ಯಾವ ಅರ್ಹತೆಯೂ ನನಗಿಲ್ಲ. ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲ ಬಶೀರರ ಕಥೆಗಳು ಭಾಷಾಂತರಗೊಂಡ ಎಲ್ಲಾ ಭಾಷೆಗಳ ಶ್ರೇಷ್ಠ ಕತೆಗಾರರು, ವಿಮರ್ಶಕರು, ಬಶೀರರ ಕಥೆಗಳ ಓಘಕ್ಕೆ ತಲೆದೂಗಿದವರೆ. ಸ್ವತಃ ಕಥೆಗಾರನೂ ಅಚ್ಚರಿಗೊಳ್ಳುವಂತೆ ವೈಕಂ ಬಶೀರರ ಕಥೆಗಳ ವ್ಯಾಪ್ತಿ, ಉದ್ದೇಶ, ಸಂವೇದನೆಗಳೆಲ್ಲವೂ ಓದುಗರು ಮತ್ತು ಕಥೆಗಳನ್ನು ಒರೆಗಲ್ಲಿಗೆ ಹಚ್ಚಿ ನೋಡಿದವರಿಗೆ ದಕ್ಕುತ್ತದೆ ಎನ್ನುವುದೇ ಒಬ್ಬ ಕಥೆಗಾರನ ಗೆಲುವು. ಆ ಗೆಲುವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಕಥೆಗಾರ ವೈಕಂ.

ಸೌಂದರ್ಯಪ್ರಜ್ಞೆಯೆಂದರೆ ಏನೆಂದರಿಯದ ‘ಬಾಲಮಂಗಳ ಅಮರ ಚಿತ್ರಕಥಾ’ ಓದುವ ಪುಟಾಣಿಗಳೂ ಬಶೀರರ ಸಾಹಿತ್ಯದ ಆಸ್ವಾದಕರಾಗಿರುತ್ತಾರೆ. ಆ ಕಾರಣದಿಂದಲೇ ನಾನು ಪಳ್ಳಿದರ್ಸ್ ಕಲಿಯುತ್ತಿರುವ ದಿನಗಳಲ್ಲಿಯೇ ಬಶೀರರ ಕಥೆಗಳನ್ನು ಓದುತ್ತಾ ಬೆಳೆದವನು. ನಾನು ಓದಿರುವ ಕೃತಿಗಳು ಕೆಲವೇ ಕೆಲವೆಂದೂ ಇನ್ನೂ ಹಲವು ಕೃತಿಗಳು ಓದಲು ಬಾಕಿಯಿದೆಯೆಂಬ ನಂಬಿಕೆಯಲ್ಲಿದ್ದೆ. ಆದರೆ ಬಶೀರರ ಅಗಲಿಕೆಯ ಬಳಿಕ ಅವರು ರಚಿಸಿದ ಕೃತಿಗಳು ಮತ್ತು ನಾನು ಓದಿದ ಅವರ ಕೃತಿಗಳನ್ನು ತಾಳೆ ಹಾಕಿ ನೋಡಿದೆ. 32 ಕೃತಿಗಳು. ‘ಬಶೀರರ ಸಮಗ್ರ ಬರಹಗಳು’ ಸಂಪುಟಗಳಲ್ಲದೆ ಉಳಿದೆಲ್ಲವೂ ಓದಿ ಮುಗಿದದ್ದು ಮತ್ತು ಕೆಲವು ಪುನರಾವರ್ತಿಸಿ ಓದಿದ್ದು. ಅಬ್ಬಾ ಎಷ್ಟು ತೂಕದ ಬರಹಗಳಾಗಿದ್ದವು ಅವು!

ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಾದ, ಶಾಲೆಯ ಮೆಟ್ಟಿಲುಗಳನ್ನೇ ಹತ್ತದ ಅಸಂಖ್ಯಾತ ಓದುಗ ವೃಂದವನ್ನು ತನ್ನೆಡೆಗೆ ಸೆಳೆದುಕೊ‌ಳ್ಳಲು ಬಶೀರರಿಗೆ ಸಾಧ್ಯವಾಯಿತು. ವಿಭಿನ್ನ ತರಹದ ಓದುಗರು ಮತ್ತು ಅವರೆಲ್ಲರಿಗೂ ಭಿನ್ನವಾಗಿಯೇ ವೇದ್ಯವಾಗುತ್ತಿದ್ದ ಬಶೀರರ ಬರಹಗಳೇ ಒಂದು ಅಚ್ಚರಿ. ಅವರ ಹೊತ್ತಗೆಗಳು ಆವರ್ತಿಸಿ ಓದಿದಂತೆ ನಾನಾರ್ಥಗಳನ್ನು ಸ್ಪುರಿಸುವ ಕಲಾಕುಸುರಿಯಾಗಿತ್ತು. ಆ ಕುಸುರಿಯ ಒಡೆಯರಾಗಿದ್ದರು ಬೇಪೂರಿನ ಸುಲ್ತಾನ ಬಶೀರರು.

ಓ ಎನ್ ವಿ, ಎಮ್ ಟಿ, ಎನ್ ಪಿ ಮೊಹಮ್ಮದ್, ಟಿ ಪದ್ಮನಾಭನ್, ಎಮ್ ಎನ್ ವಿಜಯನ್, ಎಮ್ ಎಮ್ ಬಶೀರ್, ಯು ಎ ಖಾದರ್ ಹಾಗೂ ಇನ್ನಿತರ ಮಲಯಾಳಂ ಸಾಹಿತ್ಯ ಲೋಕದ ದಿಗ್ಗಜರು ತಮ್ಮ ಬರಹಗಳಲ್ಲಿ ತೀರಾ ಸ್ಪರ್ಶಿಸದ ಮತ್ತು ಮಲಯಾಳಂ ಸಾಹಿತ್ಯಕ್ಕೆ ಹೊಸತೆನಿಸುವ ಸಂವೇದನೆಯ ಬರಹಗಳನ್ನು ಹಾಸ್ಯದ ಕುಲುಮೆಯಲ್ಲಿ ಅದ್ದಿತೆಗೆದ ಬಶೀರರನ್ನು ಓದಿಕೊಂಡವರ ಮನಸ್ಸಿನಲ್ಲಿ ಅವರ ಕಥಾಪಾತ್ರಗಳು ಜೀವಂತವಾಗಿರುತ್ತವೆ.
ಪುಟಾಣಿ ಮಕ್ಕಳಿಂದ ಹಿಡಿದು ತಾಂಬೂಲ ಜಗಿಯುವ ಅಜ್ಜಂದಿರಿಗೂ ಬಶೀರರ ಕತೆಗಳು ಅಪ್ಯಾಯಮಾನವೆನಿಸುವುದು ಈ ಕಾರಣಕ್ಕೆ.

ನಮ್ಮದೇ ಮನೆಯ ಕಥೆಗಳೆನಿಸುವ ‘ಪಾತುಮ್ಮಾಂಡೆ ಆಡ್’ ಎಂಬ ಕಾದಂಬರಿಯ ನಾಯಕಿ ಎಲ್ಲರ ಮನೆಯ ಪ್ರೀತಿಯ ‘ಪಾತು’ ಆಗಿ ಬದಲಾದದ್ದು ಮತ್ತೊಂದು ಸೋಜಿಗ. ಆಡು ಕರುಹಾಕುವುದನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಕರುವನ್ನು ಮೊದಲು ಕಂಡದ್ದು ನಾನೆಂದು ಕುಣಿದು‌ ಕುಪ್ಪಳಿಸಿ ಕೇಕೆ ಹಾಕುವ ‘ಅಂಬಿ’ ‘ಪಾತುಕುಟ್ಟಿ’ಯಂತಹಾ ಮಕ್ಕಳು ನಮ್ಮ ಮನೆಯ ಮಕ್ಕಳಾಗದೇ ಉಳಿಯುವುದಾದರೂ ಹೇಗೆ! ಆನೆಯ ಬಾಲದ ಎರಡು ರೋಮಕ್ಕಾಗಿ ಅದರ ಬಾಲವನ್ನು ಕಡಿದೇ ಬಿಡುವ ಬಶೀರರ ತುಂಟಾಟ ನಮ್ಮ ಬಾಲ್ಯವನ್ನು, ನಮ್ಮಂಥ ಸಾವಿರಾರು ಮಕ್ಕಳ ಬಾಲ್ಯವನ್ನು ಮತ್ತೆಮತ್ತೆ ನೆನಪಿಸುತ್ತಾ ಸಾಗುತ್ತದೆ.

ಬಶೀರರ ಬರಹಗಳು ಓದಿಕೊಂಡ ಸರ್ವರಿಗೂ ಅವರದ್ದೊಂದು ಗುಣ ಸಹಜವಾಗಿಯೇ ಮನವರಿಕೆಯಾಗುತ್ತದೆ. ಅದು ಭೂಮಿಯಲ್ಲಿರುವ ಸಕಲ ಚರಾಚರಗಳೊಂದಿಗಿನ ಬಶೀರರ ಅಪಾರವಾದ ಪ್ರೀತಿ. ಪ್ರವಾದಿವರ್ಯರು ಒಂದು ಹದೀಸಿನಲ್ಲಿ ಹೀಗೆ ಹೇಳುತ್ತಾರೆ; “ಸಕಲ ಚರಾಚರಗಳೊಂದಿಗೂ ಕರುಣೆಯನ್ನು ತೋರಲು ಅಲ್ಲಾಹು ಅಜ್ಞಾಪಿಸಿದ್ದಾನೆ. ಆಹಾರಕ್ಕಾಗಿ ಮೃಗಗಳನ್ನು ದ್ಸಬಹ್ ಮಾಡುವಾಗಲೂ ನೀವು ದ್ಸಬಹಿನ ರೀತಿಯನ್ನು ಸರಳೀಕರಿಸಿ ಪ್ರಾಣಿಗಳೊಂದಿಗೆ ಕರುಣೆತೋರಿರಿ”(ಗ್ರಂಥ:ಮುಸ್ಲಿಂ) ಈ ಕರುಣೆ ತೋರುವ ಗುಣ ಬಶೀರರಿಗೆ ರಕ್ತಗತವಾಗಿತ್ತು. ಮನುಷ್ಯ, ಪ್ರಾಣಿ, ಪಕ್ಷಿಗಳಾಚೆಗೆ ನಿರ್ಜೀವ ವಸ್ತುಗಳನ್ನು ಕೂಡ ತುಚ್ಛವಾಗಿ ಕಾಣದ ಸ್ವಭಾವವಾಗಿತ್ತು ಬಶೀರರದ್ದು.

ಮೇಲೆ ಉಲ್ಲೇಖಿಸಿದಂತೆ ಬಶೀರರ ಬರಹಗಳ ತುಂಬೆಲ್ಲಾ ಹಾಸ್ಯದ ಪ್ರಭಾವ ಹಾಸುಹೊಕ್ಕಾಗಿ ಕಾಣಸಿಗುತ್ತದೆ. ಸಾಧಾರಣವಾಗಿ ಕೆಲವೊಂದು ಬರಹಗಳಲ್ಲಿನ ಹಾಸ್ಯಗಳು ಓದುಗರಲ್ಲಿ ತಕ್ಷಣದ ನಗುವಿಗೆ ಕಾರಣವಾದರೆ ಬಶೀರರು ಅದಕ್ಕೆ ವಿಪರೀತವೆನಿಸುವಂತಹವರು.
ಅವರದು ಉತ್ಕೃಷ್ಟ ಮಟ್ಟದ ಹಾಸ್ಯ.
ಮನುಷ್ಯನ ನೋವು ತಾಕಲಾಟಗಳನ್ನು ಹಾಸ್ಯದೊಂದಿಗೆ ಹೇಳುತ್ತಲೇ ಅದಕ್ಕೊಂದು ಗುಳಿಗೆಯನ್ನು ಕೊಡಮಾಡುವ ವಿಶಿಷ್ಟ ತೆರನಾದ ಔಷದೀಯ ಗುಣವುಳ್ಳ ಹಾಸ್ಯವಾಗಿರುವುದರಿಂದಲೇ ಅದನ್ನು’ಉತ್ಕೃಷ್ಟ’ವೆಂದು ಸರಾಗವಾಗಿ ಹೇಳಿಬಿಡಬಹುದು. ಈ ಹಾಸ್ಯದ ಬೆನ್ನುಬೆನ್ನಿಗೆ ಮಿಡಿಯುವ ಮನಸ್ಸು, ಆರ್ದ್ರಗೊಳ್ಳುವ ತಾಯ್ತನ ಎದ್ದುಕಾಣುತ್ತದೆ. ಕಾಂತೀಯ ಗುಣವುಳ್ಳ ಬರಹಗಳಾಗಿ ಬಶೀರರ ರಚನೆಗಳು ಅಚ್ಚರಿ ಹುಟ್ಟಿಸಿರುವುದಕ್ಕೆ ಇದನ್ನೊಂದು ಮುಖ್ಯ ಕಾರಣವಾಗಿ ನಿಸ್ಸಂದೇಹವಾಗಿ ಹೇಳಬಹುದು.

ವೈಕಂ ಮೊಹಮ್ಮದ್ ಬಶೀರರನ್ನು ಸ್ಮರಿಸುವಾಗಲೆಲ್ಲಾ ಜೊತೆಜೊತೆಗೆ ಸುಪ್ರಸಿದ್ಧ ಅರಬಿಕ್ ಸಾಹಿತ್ಯಗಾರರೊಬ್ಬರು ನೆನಪಾಗುತ್ತಾರೆ. ಅವರ ಹೆಸರು ಅಬೂ ನುವಾಸ್( ಹಿಜರಿ:145-195). ವಿಶ್ವವಿಖ್ಯಾತ ಅರಬ್ ನಿಮಿಷ ಕವಿ. ಕವಿಯಾಗಿಯೇ ಜನಿಸಿದವರೆಂದು ಜನಪ್ರಿಯರಾದವರು. ಶುದ್ಧ ಉಂಡಾಡಿಯಂತೆ ಬದುಕಿದ ಅಲೆಮಾರಿ. ನೈತಿಕತೆಯ ಎಲ್ಲೆ ಮೀರಿದ ನಡತೆ, ಮದ್ಯಪಾನ, ಎಲ್ಲಾ ವಿಧದ ಸುಖಲೋಲುಪತೆಯನ್ನು ಅನುಭವಿಸಿದ ವ್ಯಕ್ತಿ. ಬಶೀರರ ಕಥೆಯೊಂದರ ‘ಗಂಡು ವೇಶ್ಯೆ’ಯೊಂದಿಗೆ ಸಮಾನವೆನಿಸು ಸ್ವಭಾವದವರು.
ಗೆಳೆಯರೊಂದಿಗೆ ಕುಡಿತದ ಚಟಕ್ಕೆ ಬಲಿಯಾದವರು. ತಾನು ಮದ್ಯಪಾನ ನಿಲ್ಲಿಸಿದೆನೆಂದು ಕೇಳಿ ಅಭಿನಂದಿಸಲು ಬಂದ ಆಗಂತುಕನನ್ನು ಮುಂದೆಯೇ ಕುಳ್ಳಿರಿಸಿ ಗಂಟಲು ಮಟ್ಟ ಕುಡಿದ ವಿಕ್ಷಿಪ್ತ ಜೀವಿ. ಕುಡಿತದ ಮತ್ತಿನಲ್ಲಿರುವಾಗಲೂ ಸರ್ವಶಕ್ತನಾದ ಅಲ್ಲಾಹನ ಕ್ಷಮೆಯನ್ನು ಬಯಸುತ್ತಿದ್ದ ವಿಚಿತ್ರ ವ್ಯಕ್ತಿ. ಅವರ ಒಂದು ಕವಿತೆಯ ಸಾಲುಗಳು ಹೀಗಿವೆ:

‘ಎಷ್ಟು ಪಾಪಗಳನು ಬೇಕಾದರೂ ಮಾಡು,
ಕೊನೆಗೆ ತಲುಪಲಿರುವುದು
ಪರಮ ದಯಾಮಯನೂ ಪಾಪಮೋಚಕನೂ ಆಗಿರುವ ಪ್ರಭುವಿನ ಸನ್ನಿಧಿಗೆ.
ಅಲ್ಲಿ ತಲುಪಿದರೆ ನಿನ್ನ ಎಲ್ಲಾ ಪಾಪಗಳನ್ನೂ
ಅವನು ಮನ್ನಿಸಿಬಿಡುವನು,
ಕರುಣಾಮಯನಾದ ಮಹಾರಾಜನೂ ಒಡೆಯನೂ ಆಗಿರುವನವನು.
ನರಕಕ್ಕಂಜಿ ಇಲ್ಲಿನ ಸುಖಜೀವನವನ್ನು ಕಳೆದುಕೊಂಡರೆ
ಪರಮ ದಯಾಳುವಾದ ಅಲ್ಲಾಹನ ಬಳಿ
ವಿಷಾದದಿಂದ ಬೆರಳು ಕಚ್ಚಬೇಕಾದೀತು!’

ನುವಾಸರು ಅಲೆಮಾರಿ ಜೀವನ ಸಾಗಿಸಿದವರು.
ಅದಾಗ್ಯೂ ಅವರ ಕವಿತೆಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು, ಇಲಾಹಿ ಭೋದನೆಗಳು ಇರುತ್ತಿದ್ದವು. ಈ ಕಾರಣದಿಂದಲೇ ಆ ಕಾಲದ ಸಾಂಪ್ರದಾಯಿಕ ಮುಸ್ಲಿಮರಿಗೆ ಅವರ ವ್ಯಕ್ತಿಜೀವನದ ಬಗೆಗೆ ತಕರಾರು ಇದ್ದರೂ ನುವಾಸರ ಕವಿತೆಗಳಿಂದ ಆಕರ್ಷಿಸಲ್ಪಟ್ಟಿದ್ದರು.
ಅಲ್ಲಾಹನ ಮೇಲಿನ ಅವರ ಚಾಂಚಲ್ಯವಿಲ್ಲದ ಅಪಾರವಾದ ನಂಬಿಕೆ, ಭಕ್ತಿ, ಶ್ರದ್ಧೆ ಕವಿತೆಗಳ ಸಾಲುಗಳಲ್ಲಿ ಮಾರ್ದನಿಸುತ್ತಿದ್ದವು. ಇವರ ಸಮಕಾಲೀನರಾಗಿದ್ದ ಸೂಫಿವರ್ಯರೂ, ಆಧ್ಯಾತ್ಮಿಕ ಗುರುಗಳೂ ಆದ ಅಬುಲ್ ಅತ್ವಾಹಿಯ್ಯ ಹೇಳಿದರು; “ಝುಹುದಿನ( ಸರ್ವಸಂಗ ಪರಿತ್ಯಾಗ) ಕುರಿತು ಇಪ್ಪತ್ತು ಸಾವಿರಕ್ಕೂ ಹೆಚ್ಚು ಚರಣಗಳನ್ನು ನಾನು ಹಾಡಿದ್ದೇನೆ. ಅದೆಲ್ಲವೂ ಅಬೂ ನುವಾಸರ ಕೇವಲ ಮೂರೇ ಮೂರು ಸಾಲುಗಳಿಗೂ ಸಮನಾಗಲಾರದು. ಒಮ್ಮೆಯೂ ಸಮನಾಗಲಾರದು” ನುವಾಸರ ಆ ಸಾಲುಗಳು ಹೀಗಿದ್ದವು:
“ಓ ನುವಾಸ್,
ನೀನು ಅಲ್ಲಾಹನನ್ನು ಭಯಪಡು!
ನಿನ್ನ ದುಸ್ಥಿತಿಯಲ್ಲಿ ಮರುಕಪಡು!
ಕ್ಷಮಾಶೀಲನಾಗು,
ಬದುಕು ನಿನಗೆ ದುಃಖದ ಕೊಡುಗೆ ನೀಡಿದ್ದರೆ
ನಿನಗದು ಸಂತೋಷಪಡುವ ಎಷ್ಟೋ ಅನರ್ಘ್ಯ ನಿಮಿಷಗಳನ್ನು ಕೊಟ್ಟಿರಬಹುದು!
ಓ ಮಹಾಪಾಪಿ,
ನಿನ್ನ ಪಾಪವನ್ನು ನೆನೆದು ಹಿಂಜರಿಯದಿರು,
ಅಲ್ಲಾಹನ ಕ್ಷಮೆಯು ನಿನ್ನ ಪಾಪಕ್ಕಿಂತಲೂ ಅದೆಷ್ಟೋ ಮಿಗಿಲಾದದ್ದು”

ಆತ್ಮವಿಮರ್ಶೆಯಿಂದ ಕೂಡಿದ ಈ ಸಾಲುಗಳು ಅಲ್ಲಾಹನ ಕ್ಷಮೆಯಲ್ಲಿ ನಂಬಿಕೆಯಿರಿಸಿದ ಒಬ್ಬ ಭಕ್ತನಿಗಲ್ಲದೆ ಕಟ್ಟಲು ಸಾಧ್ಯವೇ! ನಿಜ, ಎಂಥಹಾ ಆರ್ದ್ರ ಸಾಲುಗಳು!

ಅಬುಲ್ ಅತ್ವಾಯಿಯವರು ನುವಾಸರಲ್ಲಿ
ಕೆಡುಕುಗಳಿಂದ ದೂರವಾಗಿ ಸಜ್ಜನಿಕೆಯ ಬಾಳು ನಡೆಸುವಂತೆ ಆಗ್ಗಾಗ್ಗೆ ವಿನಂತಿಸಿಕೊಳ್ಳುತ್ತಿದ್ದರು. ಒಮ್ಮೆ ನುವಾಸರು ತನ್ನ ಗೆಳೆಯನಲ್ಲಿ ಆ ಕುರಿತು ಹೀಗೆ ಹೇಳಿದರಂತೆ:
“ಓ ಅಬೂ ಅತ್ವಾಹಿಯ್ಯವರೇ;
ನಾನು ಈ ಸುಖಭೋಗದ ಬದುಕಿನಿಂದ ವಿರಮಿಸುತ್ತೇನೆಂದು ನೀವು ಭಾವಿಸುತ್ತೀರಲ್ಲವೇ!
ಆರಾಧನೆಯಲ್ಲಿ ಮುಳುಗಿ ನನ್ನ ಹೆಸರು ಮತ್ತು ಖ್ಯಾತಿಯನ್ನು ಕಳೆದುಕೊಳ್ಳುತ್ತೇನೆಂದು!”

ತನ್ನ ಮೇಲಿನ ಆರೋಪವು ಮತ್ತೂ ಗಂಭೀರವಾದಾಗ ಗೆಳೆಯನೊಡನೆ ಅಬು ನುವಾಸ್ ಹಾಡಿದರು: “ದೇಹವು ತನ್ನ ಆತ್ಮಸಾಕ್ಷಿಯ ಕರೆ ಇಲ್ಲದೆ ದುಷ್ಟ ಕಾರ್ಯಗಳಿಂದ ನಿವೃತ್ತಿಯಾಗುವುದಿಲ್ಲ.”

ಇದೇ ಅಬು ನುವಾಸರ ಬಗ್ಗೆ, ಮುಹಮ್ಮದ್ ಇಬ್ನ್ ನಾಫಿಯಾ(ರ) ಹೇಳುತ್ತಾರೆ: “ನುವಾಸರು ನನ್ನ ಆತ್ಮೀಯ ಗೆಳೆಯರಾಗಿದ್ದರು. ದುರಾದೃಷ್ಟವಶಾತ್ ನಮ್ಮ ನಡುವೆ ಸಣ್ಣ ಮನಸ್ತಾಪ ಉಂಟಾಯಿತು. ಈತನ್ಮದ್ಯೆ ಅವರ ಮರಣದ ವಾರ್ತೆ ಕೇಳಿ ದಿಗ್ಬ್ರಾಂತಗೊಂಡೆ. ಆ ದಿನವೆಲ್ಲಾ ನುವಾಸರ ನೆನಪೇ ಮರುಕಳಿಸತೊಡಗಿತ್ತು. ಹೀಗೆ ಅವರ ನೆನಪಲ್ಲಿರಬೇಕಾದರೆ ಸುಸ್ತಾದ ನನ್ನ ಕಣ್ಣುಗಳು ನಿದ್ದೆಯ ಮಂಪರಿಗೆಳೆಯತೊಡಗಿದವು.

ಅದೊಂದು ಪೂರ್ಣ ನಿದಿರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿ. ಅಬೂನುವಾಸರು ತಕ್ಷಣ ಪ್ರತ್ಯಕ್ಷಗೊಂಡರು. ನಾನು ಅವರ ಅಕ್ಕರೆಯ ಹೆಸರಿನಿಂದ ಕರೆದೆ. ‘ಓ‌ ಅಬೂನುವಾಸರೇ!’ ಅವರು ಹೇಳಿದರು; “ಇಲ್ಲಿ ಯಾವುದೇ ಅಕ್ಕರೆಯ ಹೆಸರುಗಳಿಗೆ ಮಾನ್ಯತೆಗಳಿಲ್ಲ”. ಆಗ ನಾನು ಅವರ ‘ಹಸನಿಬ್‌ನ್ ಹಾನಿಅ್’ ಎಂಬ ಮೂಲ ಹೆಸರಿನಿಂದ ಸಂಭೋಧಿಸಿದೆ. ಅವರು ಪ್ರತಿಕ್ರಿಯಿಸಲು ತೊಡಗಿದರು. ನಾನು ಕುತೂಹಲಭರಿತನಾಗಿ ಕೇಳಿದೆ. “ನಿಮ್ಮ ಪರಲೋಕದ ಪರಿಸ್ಥಿತಿ ಹೇಗಿದೆ, ಅಲ್ಲಿಯ ಸ್ಥಿತಿಗತಿಗಳೇನು”.
“ಮರಣದ ಕೆಲವು ದಿನಗಳ ಹಿಂದೆ‌ ನಾನು ರೋಗಶಯ್ಯೆಯಲ್ಲಿದ್ದಾಗ ಹಾಡಿದ ಕವಿತೆಯ ಕಾರಣದಿಂದ ಅಲ್ಲಾಹನು ನನ್ನೆಲ್ಲಾ ಪಾಪಗಳನ್ನು ಮನ್ನಿಸಿದನು. ಆ ಕವಿತೆಯು ನಾನು ಮಲಗುತ್ತಿದ್ದ ಹಾಸಿಗೆಯಡಿಯಲ್ಲಿದೆ.” ನಾನು ಆಶ್ಚರ್ಯಗೊಂಡು ತಕ್ಷಣ ಎಚ್ಚೆತ್ತು ಅವರ ಮನೆಕಡೆಗೆ ಹೆಜ್ಜೆಹಾಕಿದೆ. ನನ್ನನ್ನು ಕಂಡು ಮನೆಯವರೆಲ್ಲರೂ ಕಣ್ಣೀರಿಡತೊಡಗಿದರು. ಅವರು ತಮ್ಮ ಆತ್ಮೀಯನ ವಿಯೋಗದ‌ ವೇದನೆಯಿಂದ ತೊಯ್ದು ಹೋಗಿದ್ದರು. ನಾನು ಅವರ ಮನಸ್ಸು ಸ್ವಲ್ಪ ತಹಬದಿಗೆ ಬಂದ ಬಳಿಕ ವಿಚಾರಿಸಿದೆ. “ನುವಾಸರು ಮರಣದ ದಿನಗಳಲ್ಲಿ ಯಾವುದಾದರೂ ಕವಿತೆಗಳನ್ನು ಹಾಡುತ್ತಿರುವುದನ್ನು ಗಮನಿಸಿರುವಿರಾ?”
“ಹಾಗೆ ಪ್ರತ್ಯೇಕವಾಗಿ ನಮಗೆ ಕಾಣಲು ಸಾಧ್ಯವಾಗಿರಲಿಲ್ಲ. ಆದರೂ ಮರಣದ ಹಾಸಿಗೆಯಲ್ಲಿರಲು ನನಗೊಂದು ಕಾಗದ ಮತ್ತು ಲೇಖನಿ ಬೇಕೆಂದು ಹೇಳಿ ಅದರಲ್ಲಿ ಏನನ್ನೋ ಗೀಚುತ್ತಿದ್ದರು.”
“ಅವರ ಕೋಣೆಗೆ ಹೋಗಲು ನನಗೆ ಅನುಮತಿ ನೀಡಬಹುದೇ”? ನಾನು ಕೇಳಿದೆ. “ಧಾರಾಳವಾಗಿ ಹೋಗಬಹುದು” ಅವರೆಂದರು. ನಿಧಾನ ಹೆಜ್ಜೆಗಳನ್ನಿಡುತ್ತಾ ಉಸಿರು ಬಿಗಿ ಹಿಡಿದುಕೊಂಡು ಆ ಕೋಣೆಯ ಬಾಗಿಲಿನ ಬಳಿಗೆ ನಡೆದೆ. ಕೋಣೆಯಲ್ಲಿ ನುವಾಸರ ಉಡುಪುಗಳಿದ್ದವು. ಅದು ಇನ್ನೂ ಅವರದೇ ಕೋಣೆಯಂತೆ ನಿಶ್ಯಬ್ದವಾಗಿ ಇದ್ದಂತೆ ಕಂಡಿತು. ನನಗೆ ತಟ್ಟನೆ ಮಿತ್ರನ ಅನುಪಸ್ಥಿತಿ ಕಾಡತೊಡಗಿತು. ನಾನು ಬಂದ ಉದ್ದೇಶ ನೆನಪು ಮಾಡುತ್ತಾ ಅವರ ಹಾಸಿಗೆಯ ಹೊದಿಕೆಯೊಂದನ್ನು ಎತ್ತಿದೆ, ಅಲ್ಲೇನೂ ಇರಲಿಲ್ಲ. ಮತ್ತೊಂದು ಹೊದಿಕೆಯನ್ನು ಸರಿಸಿ ನೋಡಿದೆ, ‘ಮಡಚಿಟ್ಟ ಒಂದು ಕಾಗದದ ತುಂಡು’ ಹಾಸಿಗೆಯ ಭಾರಕ್ಕೆ ಮುದುಡಿಕೊಂಡು ಕುಳಿತಿತ್ತು. ಅದರಲ್ಲಿದ್ದ ಸಾಲುಗಳಿಗೆ ಕಣ್ಣಾಡಿಸಿದೆ. ಅಲ್ಲಿ ಈ ರೀತಿಯಾಗಿ ಬರೆಯಲಾಗಿತ್ತು:
“ಓ ನನ್ನ ಪ್ರಭೂ!
ನನ್ನ ಪಾಪದ ಮೂಟೆ ಭಾರೀ ದೊಡ್ಡದಾಗಿದ್ದರೂ,
ನಿನ್ನ ಕ್ಷಮೆ ಮತ್ತು ಮಾಫಿ ಅದಕ್ಕಿಂತಲೂ ಭಾರ ಹೆಚ್ಚಿರುವುದೆಂದು ನಾನು ನಂಬಿರುವೆ;
ಸದ್ಗುಣಶೀಲರಿಗೆ ಮಾತ್ರ ನಿನ್ನಲ್ಲಿ ಪ್ರಾರ್ಥಿಸಲು ಅರ್ಹತೆಯಿರುವುದೆಂದರೆ;
ಪಾಪಿಗಳು ಯಾರಲ್ಲಿ ಪ್ರಾರ್ಥಿಸಬೇಕು!
ಯಾರನ್ನು ಆಶ್ರಯಿಸಬೇಕು!
ಓ ನನ್ನ ಖುದಾ!
ನಿನ್ನ ಆಜ್ಞೆಯಂತೆ ಇದೋ
ನಿನ್ನಲ್ಲಿ ಬೇಡುತ್ತಿದ್ದೇನೆ.
ನನ್ನ ಬೇಡಿಕೆಯನ್ನು ತಿರಸ್ಕರಿಸುವುದಾದರೆ
ನನಗೆ ಕರುಣೆ ತೋರಲು ಯಾರಿದ್ದಾರೆ?
ಇದೋ ಪ್ರಭೂ
ಈ ಗುಲಾಮನ ಕೈಯಲ್ಲಿ ನಿನಗೆ ಸಮರ್ಪಿಸತಕ್ಕ ಏನೂ ಇಲ್ಲ,
ನಿನ್ನ ಕುರಿತು ಬದುಕಿನುದ್ದಕ್ಕೂ ನಾನು ಕಟ್ಟಿಕೊಂಡ
ನಿರೀಕ್ಷೆ ಮತ್ತು ನಿನ್ನ ಕ್ಷಮಾಗುಣವಲ್ಲದೆ ಬೇರೇನೂ ಇಲ್ಲ!
ಏನೆಂದರೂ ನಾನೋರ್ವ ಮುಸ್ಲಿಮನಲ್ಲವೆ”

ಇದನ್ನು ಓದುವಾಗಲೆಲ್ಲಾ ನನಗೆ ನಮ್ಮ ವೈಕಂ ಬಶೀರರು ನೆನಪಾಗುತ್ತಾರೆ. ನಮ್ಮ ಬಶೀರರೂ ಒಬ್ಬ ಮುಸ್ಲಿಮರಾಗಿದ್ದರು. ನಾನೊಬ್ಬ ಮುಸ್ಲಿಂ ಎಂದು ಯಾರ ಮುಂದೆಯೂ ಹೇಳಲು ಹೆಮ್ಮೆಪಡುತ್ತಿದ್ದ ಮುಸ್ಲಿಂ. ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮದ್ಯಪಾನವನ್ನು ತ್ಯಜಿಸಿದ ಮುಸ್ಲಿಂ. ತನ್ನ ಗುರುಗಳಾದ ಬಶೀರರ ಬಗ್ಗೆ ಪ್ರಿಯ ಶಿಷ್ಯರಾದ ಎಂಟಿ ವಾಸುದೇವನ್ ಹೇಳುವುದನ್ನು ನೋಡಿ.

“ವರ್ಷಗಳು ಕಳೆಯುತ್ತಿದ್ದಂತೆ ಬಶೀರರು ಹೆಚ್ಚು ಧಾರ್ಮಿಕರಾಗುತ್ತಾ ಹೋದರು. ಹಲವರು ಆಶ್ಚರ್ಯಗೊಂಡರು.
‘ಎನ್ಡುಪ್ಪಾಪ'(ನನ್ನಜ್ಜ) ದಂತಹಾ ಬರಹಗಳ ಒಡೆಯ ಧರ್ಮನಿಷ್ಠನಾಗುವುದೇ!
ಅವರು ಸಂದರ್ಶನಗಳಲ್ಲಿ ‘ನಾನೊಬ್ಬ ಮುಸಲ್ಮಾನ’ ಎಂದು ಉತ್ಸಾಹದಿಂದ ಹೇಳುತ್ತಿದ್ದರು. ಅವರ ಜಿಪುಣತನದ ಕುರಿತು ಹಲವೊಮ್ಮೆ ನಾನು ಗೇಲಿಮಾಡಿ ನಗುತ್ತಿದ್ದೆನಾದರೂ ಯಾರ ಅರಿವಿಗೂ ಬಾರದಂತೆ ಹಲವರ ಕಷ್ಟಗಳಿಗೆ ಹೆಗಲಾಗುತ್ತಿದ್ದರು. ಅವರಿಂದ ಸಹಾಯ ಪಡೆದುಕೊಂಡ ಎಷ್ಟೋ ಜನರು ನನ್ನ ಬಳಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡು ನಿರಾಳಗಾಗಿ ಹೋಗುತ್ತಿದ್ದರು.”

ಬಶೀರರ ಕುರಿತು ಪೊನ್‌ಕುನ್ನುಂ ವರ್ಕಿ ಎಂಬ ಆತ್ಮೀಯ ಗೆಳೆಯ ಹೇಳುವುದನ್ನು ಕೇಳಿ. “ನನಗೆ ಇಬ್ಬರು ಬಶೀರರನ್ನು ನೆನಪಿದೆ. ಒಂದು ಕುಡಿಯುತ್ತಿದ್ದ ಬಶೀರ್ ಮತ್ತು ಕುಡಿತ ನಿಲ್ಲಿಸಿದ್ದ ಬಶೀರ್. ಎರಡನೇ ಬಶೀರ್ ಆತ್ಮವಿಮರ್ಶೆಗೆ ತನ್ನನ್ನು ಒಡ್ಡಿಕೊಂಡ ಬಶೀರ್. ಅವರು ಕೊನೆಯವರೆಗೂ ಎರಡನೇ ಬಶೀರರಾಗಿಯೇ ಇದ್ದರು. ನಮಾಝನ್ನು ಗೌರವಿಸುವ ಆದರೆ ಸರಿಯಾಗಿ ನಮಾಝ್ ಮಾಡದ ಬಶೀರರಾಗಿದ್ದರು” ಎಂದು ವರ್ಕಿಯವರು ಹೇಳುವಾಗ, ಒಂದು ಹೆಜ್ಜೆ ಮುಂದಿಟ್ಟು ಓ‌.ಎನ್.ವಿ ಬಶೀರರನ್ನು ತೆರೆದಿಟ್ಟದ್ದು ಹೀಗೆ:
“ನಾವೆಲ್ಲರೂ ನಿದ್ರೆಗೆ ಜಾರಿದ ಬಳಿಕ ಹಜಾರದ ಮಧ್ಯದಲ್ಲಿ (ತ್ರಿಶೂರ್ ಸಾಹಿತ್ಯ ಅಕಾಡೆಮಿ ಅತಿಥಿ ಗೃಹದ) ತನ್ನ
ಶಲ್ಯವನ್ನು ಹಾಸಿ ಬಶೀರರು ನಮಾಝಿನಲ್ಲಿ ಮಗ್ನರಾಗುತ್ತಿದ್ದರು. ಪರಮ ದಯಾಳುವಾದ ಸೃಷ್ಟಿಕರ್ತನ ಮುಂದೆ ತನ್ನ ಹಣೆಯನ್ನಿಟ್ಟು ಸಾಷ್ಟಾಂಗವೆರಗುತ್ತಿದ್ದರು. ಅವರ ಪ್ರಾರ್ಥನೆಗೆ ಯಾವುದೇ ರೀತಿಯ ಭಂಗವಾಗದಂತೆ ನಾವು ಅದನ್ನೆಲ್ಲಾ ನಸುಕಿನಲ್ಲಿ ಇಣುಕಿ ನೋಡುತ್ತಿದ್ದೆವು.”

ಈ ಎರಡನೇ ಬಶೀರರಾಗಿದ್ದಾರೆ ನೈಜವಾದ ಬಶೀರ್. ಎರಡು ಬಶೀರುಗಳು ಸೇರಿದ ಅವರೇ ಹೇಳಿದಹಾಗೆ ‘ಇಮ್ಮಿನಿ ಬೆಲ್ಯ’ ಬಶೀರ್.(ಎರಡು ಬಶೀರ್ ಸೇರಿದ ಒಂದಿಷ್ಟು ದೊಡ್ಡ ಬಶೀರ್). ಅಬುನುವಾಸರ ಅಂತ್ಯದ ಸಾಲುಗಳ ಹಾಗೆಯೇ ತನ್ನ ಕೊನೆಯ ಕಾಲದಲ್ಲಿ “ಅಂದಿಮ ಕಾಹಳಂ” (ಅಂತಿಮ ತುತ್ತೂರಿ) ಬರೆದು ತನ್ನ ಎಲ್ಲಾ ಕೃತಿಗಳಲ್ಲಿಯೂ ಹೇಳುವಂತೆ ವಿದಾಯ ಹೇಳಿ ಹೊರಟು ಹೋದ ಬಶೀರ್. ಆ ಬಶೀರರ ಪಾಪ ಮೋಕ್ಷಕ್ಕಾಗಿ, ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸೋಣ.

(ವೈಕ್ಕಂ ಮೊಹಮ್ಮದ್‌ ಬಶೀರರ ಕುರಿತು ಕೇರಳದ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಾದ ಮೌಲಾನಾ ನಜೀಬ್ ಉಸ್ತಾದರ ಬರಹ.ಇದು ಬುಲ್‌ಬುಲ್ ಮ್ಯಾಗಜೀನಿನಲ್ಲಿ 1994 ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

ಭಾವಾನುವಾದ : ಝುಬೈರ್ ಹಿಮಮಿ ಪರಪ್ಪು

1 Comment

Leave a Reply

*