ಅನ್ನಾ ಮೇರಿ ಶಿಮ್ಮೆಲ್

ನನ್ನ ದಾಹವನ್ನು ತಣಿಸದಿರು ಪ್ರಿಯಾ
ದಾಹದಲ್ಲಿಯೇ ಬದುಕಗೊಡು

ಅದಮ್ಯವಾಗಿ ಪ್ರೀತಿಸಲು ಬಿಡು
ನಿದ್ದೆಯೇ ಬಾಗಿಲಿನಿಂದ ಓಡಿಹೋಗುವಂತೆ

ಓಡಿ ಹೋಗಲಿ ನಿದ್ದೆ
ನನ್ನ ಉರಿವ ಕಣ್ಣಾಲಿಗಳ ನೋಡಿ,

ಮುಳುಗಿಹೋಗುವೆ ನೀನು,
ಬಳಿ ಬಂದರೆ
ಕಣ್ಣೀರ ಸಾಗರವ ದಾಟಲೆಂದು,

ಉನ್ಮತ್ತನಾಗುವೆ ಅದರಿಂದ
ಗುಟುಕನೆತ್ತಿಕೊಂಡರೆ ಕುಡಿಯಲೆಂದು,

ಅಂದು ನೀ ನನ್ನ ಕಂಗಳಿಗೆ ಸುರಿದಿದ್ದ
ಆ ಅಮೃತ ಸುರಾಹಿಯಿಂದ,

ಒಂದೊಮ್ಮೆ ನಿನ್ನ ಭವ್ಯ ಸೌಂದರ್ಯವನ್ನು
ಕಣ್ದುಂಬಿಕೊಂಡಿದ್ದ ಕಂಗಳವು
ನಿನ್ನನ್ನೇ ಕನ್ನಡಿಯಂತೆ ಪ್ರತಿಫಲಿಸಿದ್ದ
ಕಣ್ಣೀರಿನ ಹನಿಗಳವು

ನನ್ನನ್ನು ದಾಹದಲ್ಲಿರಲು ಬಿಡು ಪ್ರಿಯಾ
ಪ್ರಾಂಜಲವ ದಯಪಾಲಿಸದಿರು ನನಗೆ
ನಾನು ದಾಹದಲ್ಲಿರುವುದೇ
ನೀನು ದಾಹದಲ್ಲಿರುವುದಕ್ಕೆ ಸಾಕ್ಷಿಯೆಂದು

ಅನ್ನಾ ಮೇರಿ ಶಿಮ್ಮೆಲ್
ಅನುವಾದ : ಪುನೀತ್ ಅಪ್ಪು

ಕಲೆಗಾರಿಕೆಯನ್ನು ವಿಸ್ತರಿಸಿದ ಕತೆಗಾರರು

ಕಥನ ಕಲೆಗಾರಿಕೆಯ ತಾತ್ವಿಕ ಸಾಧ್ಯತೆಗಳನ್ನು ವಿಸ್ತರಿಸಿದ ಅಮರೇಶ ನುಗಡೋಣಿ ಕನ್ನಡದ ಮಹತ್ವದ ಕತೆಗಾರರು. ಅವರ ಕಥನ ಮಾದರಿ ಕನ್ನಡದಲ್ಲಿಯೇ ವಿಶಿಷ್ಟವೆಂಬಂತೆ ರೂಪತಾಳಿದೆ. ಸಾಹಿತ್ಯ ಚಳುವಳಿಗಳು ಸ್ಥಗಿತಗೊಂಡ ಕಾಲದಲ್ಲಿ ಬದುಕನ್ನು ಭಿನ್ನ ನೋಟಗಳಿಂದ, ವಿಭಿನ್ನ ಆಶಯಗಳಿಂದ ವಿಸ್ತರಿಸಿದ ನುಗಡೋಣಿ ಅವರು ಕಥೆಗಳಲ್ಲಿ ತಿಳಿಯ ಹೇಳುವ ಕ್ರಮವೇ ವಿಶಿಷ್ಟ ತಮ್ಮ ಸೀಮೆಯ ಬದುಕಿನ ಅನುಭವಗಳನ್ನು ತೋರುಗಾಣಿಸುವ ರೀತಿಯೇ ಹೊಸದು. ಅವರ ಯಾವುದೇ ಪಾತ್ರಗಳು ಅಗಾಧವಾದ ಬದುಕಿನ ಹಿನ್ನೆಲೆಯಿಂದ ಕೂಡಿವೆ. ಕಥೆಗಳಲ್ಲಿ ಅಧಿಕಾರ ಮತ್ತು ಅಧೀನತೆಯ ನೆಲೆಗಳನ್ನು, ಜೀವನ ಕ್ರಮದಲ್ಲಾದ ಪಲ್ಲಟಗಳನ್ನು, ಹೊಸ ಕಾಲದ ಸ್ಥಿತ್ಯಂತರಗಳನ್ನು ದಾಖಲಿಸುವಲ್ಲಿ ಜನಪ್ರಿಯ ಮಾದರಿಯ ಕ್ರಮಗಳನ್ನು ಮೀರಿದ ಕಂಪನವಿಸ್ತಾರವಿದೆ.

ಈ ನೆಲದ ಅನುಭಾವ, ಬಾಳಿನ ಹಿರಿತನ, ಕರುಣೆ ಅಂತಃಕರಣಗಳನ್ನು ಜನಸಮುದಾಯಗಳ ನಿತ್ಯಬದುಕಿನ ಲಯಗಳಲ್ಲಿ ಅವರು ಕಾಣುತ್ತಾರೆ. ಸಾಮುದಾಯಿಕ ಅನುಭವಗಳ ಆದ್ರ್ರವಾದ ಚಹರೆಗಳನ್ನು ಸ್ಥಳೀಯ ಅನನ್ಯತೆಯಲ್ಲಿ ಗುರುತಿಸುತ್ತಾರೆ. ಅದಕ್ಕೆ ತಕ್ಕಹಾಗೆ ಭಾಷೆಯನ್ನು ಹದಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಕಥೆಗಳಿಗೆ ಸೂಕ್ತತೆ ಮತ್ತು ಅಗಾಧತೆಯ ಛಾಯೆ ಇದೆ. ಅವರ ಗದ್ಯ ಕುವೆಂಪು ಅವರ ಗದ್ಯವನ್ನು ನೆನಪಿಸುತ್ತದೆ. ಕನ್ನಡ ಕಥಾಪರಂಪರೆಯ ಸಮಗ್ರ ತಿಳುವಳಿಕೆ ಅವರನ್ನು ಸಾಕಷ್ಟು ಮುಂದೆ ನಡೆಸಿದೆ. ಅವರ ‘ದಡ ಸೇರಿಸು ತಂದೆ’ ಸಂಕಲನದ ಕತೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಹೊತ್ತಿನಲ್ಲಿ ಅವರು ‘ಪ್ರಶಸ್ತಿಯು ಇಡೀ ಕನ್ನಡ ಕಥಾ ಸಾಹಿತ್ಯಕ್ಕೆ ಸಂದ ಗೌರವ’ ಎಂದಿರುವುದು ವಿಶೇಷವಾಗಿದೆ.

ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಪಾಠಗಳ ಮಧ್ಯೆಯೇ ನಲವತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ನುಗಡೋಣಿ ಅವರು ಕಥನವನ್ನು ಬಹುದೀರ್ಘ ಕಾಲದವರೆಗೆ ಧ್ಯಾನಿಸಿದವರು. ಅವರು ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಕಥೆಗಳನ್ನು ಬೆಳೆಸುತ್ತಾರೆ. ಸಾಕಷ್ಟು ಕಾಯ್ದು ಬರೆಯುತ್ತಾರೆ. ಅವರ ಮೊದಲ ಕಥಾ ಸಂಕಲನ ‘ಮಣ್ಣು ಸೇರಿತು ಬೀಜ’ ಪ್ರಕಟವಾದದ್ದು ೧೯೯೧ರಲ್ಲಿ. ನಂತರ ‘ತಮಂಧದ ಕೇಡು’ (೨೦೦೭), ‘ಸವಾರಿ’ (೨೦೦೭), ‘ಓಡಲ ಹಂಗು’ (೨೦೧೪), ‘ಚುಕ್ಕಿ ಮದುವೆ ಪ್ರಸಂಗ’ (೨೦೧೭), ‘ದಡ ಸೇರಿಸು ತಂದೆ’ (೨೦೧೯), ಸೇರಿ ಇದುವರೆಗೆ ಒಟ್ಟು ಆರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಬುತ್ತಿ’ (೨೦೧೭) ಎಂಬ ಬಾಲ್ಯದ ಅನುಭವ ಕಥನವನ್ನು, ‘ದಂದುಗ’ (೨೦೨೦), ‘ಗೌರಿಯರು’ (೨೦೨೨) ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಈ ಬರಹಗಳಲ್ಲಿ ಮನುಷ್ಯನ ವಿಕಾಸ ಮತ್ತು ಅವನತಿಯ ಹಂತಗಳನ್ನು ಬದುಕಿನ ಸಮಗ್ರ ವ್ಯಾಪಾರದಿಂದ ಕಾಣುವ ಪ್ರಯತ್ನಗಳನ್ನು ಮಾಡುತ್ತಾರೆ. ಹೈದ್ರಾಬಾದ್ ಕರ್ನಾಟಕದ ಜನಬದುಕು ಇಲ್ಲಿನ ಕೊರತೆಗಳನ್ನೂ ಮೀರಿ ಜೀವನಪ್ರವಾಹದಲ್ಲಿ ಕೊಚ್ಚಿಹೋಗದೆ ಹೇಗೆ ದೃಢವಾಗಿ ನಿಂತಿದೆ ಎಂದು ದಾಖಲಿಸುತ್ತಾರೆ. ದಂದುಗ ಕಾದಂಬರಿಯು ಕೊರೋನಾ ಕಾಲದ ಅನುಭವಗಳನ್ನು ಚಿತ್ರಿಸಿದರೆ ಗೌರಿಯರು ಕಾದಂಬರಿ ಹೊಸಕಾಲದ ಮಹಿಳೆಯರ ಬದುಕು ಮತ್ತು ಸಾಧ್ಯತೆಗಳನ್ನು ಸ್ತ್ರೀವಾದಿ ನೆಲೆಯಿಂದ ತೀವ್ರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಅಮರೇಶ ನುಗಡೋಣಿ ಅವರು ಸಂಶೋಧಕರಾಗಿಯೂ ನಾಡಿನಾದ್ಯಂತ ಹೆಸರಾದವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಸಂವೇದನೆಯನ್ನು ರೂಪಿಸಿದವರು. ತತ್ವಪದಗಳ ಸಾಂಸ್ಕೃತಿಕ ಅಧ್ಯಯನವಾದ ‘ನುಡಿವ ಬೆಡಗು’ (೧೯೯೯). ‘ತತ್ವಪದ ಸಾಹಿತ್ಯ ಅಧ್ಯಯನ’ (೨೦೧೪), ಸಾಹಿತ್ಯ ವಿಮರ್ಶೆಯ – ‘ಶ್ರೀಕೃಷ್ಣ ಆಲನಹಳ್ಳಿ’ (೧೯೯೫), ‘ನುಡಿವ ಪಾಡು’ (೨೦೧೧), ‘ನುಡಿ ದಂದುಗ’ (೨೦೧೪), ಹಾಗೆಯೇ ‘ರಾಯಚೂರು ಜಿಲ್ಲೆಯಲ್ಲಿ ಹೈ. ಕ. ವಿಮೋಚನಾ ಚಳುವಳಿ’ (೨೦೦೦), ‘ಹೈದ್ರಾಬಾದು ಕರ್ನಾಟಕ ಹಾಡು ಪಾಡು’ (೨೦೦೩), ‘ಸಣ್ಣಕತೆ : ಸಾಮಾಜಿಕ ವಾಸ್ತವ’ (೨೦೧೬), ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆಯಲ್ಲಿ ‘ಜೇಡರ ದಾಸಿಮಯ್ಯ’ (೨೦೧೮). ‘ವಚನಗಳ ಅನುಸಂಧಾನ’ (೨೦೨೧), ‘ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ’ (೨೦೨೨) ಎನ್ನುವ ಪುಸ್ತಕಗಳು ಸಂಶೋಧನೆ ಮತ್ತು ವಿಮರ್ಶೆಯ ಭಾಗವಾಗಿ ಬೆಳಕು ಚೆಲ್ಲಿದ ವಿಶಿಷ್ಟ ಬರಹಗಳು.

೧೯೯೫ರಲ್ಲಿ ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಕಥಾಸಂಕಲನವಾದ ‘ಬಿಸಿಲ ಹನಿಗಳು’, ಕನ್ನಡ ಸಾಹಿತ್ಯ ಅಕಾಡೆಮಿಗೆ ‘ಸಣ್ಣಕತೆ:೧೯೯೭’, ಮಹಾಂತೇಶ ಮಸ್ಕಿ ಅವರೊಂದಿಗೆ ಜಂಬಣ್ಣ ಅಮರಚಿಂತ ಅವರ ಗೌರವ ಗ್ರಂಥವಾದ ‘ಅಮರಚಿಂತ’, ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟವಾದ ‘ಕಲ್ಯಾಣ ಕರ್ನಾಟಕ’, ಎಚ್.ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯದ ಕುರಿತ ವಿಮರ್ಶಾ ಕೃತಿಯಾದ ‘ನುಡಿ ಬಾಗಿನ’ ದಂಡೆ ನಂದೀಶ್ವರ ಅವರೊಂದಿಗೆ ‘ಬಸವಣ್ಣ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ವಿವಿಧ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ ನಿಮಿತ್ತ ಶೂನ್ಯಸಂಪಾದನೆಗಳು, ಬಸವಣ್ಣನ ವಚನಗಳು, ಅಲ್ಲಮಪ್ರಭು ವಚನಗಳು, ಹರಿಚಂದ್ರ ಚಾರಿತ್ಯ, ಜೈಮಿನಿ ಭಾರತ, ಗ್ರಾಮಾಯಣ ಕುರಿತ ‘ಸಾಂಸ್ಕೃತಿಕ ಮುಖಾಮುಖಿ’ಗಳ ಸಂಪಾದನೆಗಳನ್ನು ಅಷ್ಟೇ ಅಲ್ಲದೆ ‘ನಾನೇಕೆ ಬರೆಯುತ್ತೇನೆ?’, ‘ಕಥೆ ಹುಟ್ಟುವ ಪರಿ’. ‘ಪುರಂದರದಾಸರ ಸಾಹಿತ್ಯ ಅಧ್ಯಯನಗಳು’, ‘ದಿನಕರ ದೇಸಾಯಿ -೧೦೦. ‘ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು’, ಸಂಶೋಧನಾ ವೈಧಾನಿಕತೆಯ ಕುರಿತ ‘ಕನ್ನಡ ಸಂಶೋಧನೆಯ ವೈಧಾನಿಕತೆಗಳು’ ಪುಸ್ತಕಗಳನ್ನು ವಿಚಾರಸಂಕಿರಣಗಳಿಂದ ಸಂಪಾದಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲದೆ ನುಗಡೋಣಿ ಅವರ ಅನೇಕ ಕತೆಗಳು ರಂಗ ಪಠ್ಯಗಳಾಗಿ, ನಾಟಕಗಳಾಗಿ ಮತ್ತು ಸಿನಿಮಾಗಳಾಗಿ ರೂಪಾಂತರಗೊಂಡಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ‘ಸವಾರಿ’ ಕತೆಯನ್ನು ಆಧರಿಸಿದೆ. ಹಾಗೆಯೇ ‘ನೀರು ತಂದವರು’ (ನೀರು ತಂದವರು ಕತೆ), ‘ಆಲಿಂಡಿಯಾ ರೇಡಿಯೋ’ (ದೈವಕ್ಕೆ ಮೊದಲು ಶರಣೆಂಬೆವು ಕತೆ), ‘ವಾಘಚಿಪಾಣಿ’ (ಧರೆ ಉರಿದರೆ ಕತೆ) ಆಸಿಫ್ ಕ್ಷತ್ರಿಯ, ರಂಗಸ್ವಾಮಿ ಮತ್ತು ನಟೇಶ್ ಹೆಗಡೆ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಪ್ರಶಸ್ತಿಗಳನ್ನೂ ಪಡೆದಿವೆ.

ಮಮತೆ ವಾತ್ಸಲ್ಯಗಳಿಂದ ಒಡನಾಡುವ ಅಮರೇಶ ನುಗಡೋಣಿ ಅವರದು ಯಾವಾಗಲೂ ಬೆಳೆಯುವ ಜೀವನ್ಮುಖಿ ವ್ಯಕ್ತಿತ್ವ, ಬದುಕಿನ ಬಗೆಗೆ ಅವರಿಗಿರುವ ಜೀವನಾಸಕ್ತಿ ತೀವ್ರವಾದದ್ದು. ಜೊತೆಗೆ ಇದ್ದಷ್ಟು ಅಪ್ತವಾದ ಸೃಜನಶೀಲ ವಾತಾವರಣವನ್ನು ನಿರ್ಮಿಸುವವರು. ಮುಗ್ಧವಾಗಿಯೇ ತಮ್ಮಲ್ಲಿನ ಪ್ರಬುದ್ಧತೆಯನ್ನು ಕಾಪಿಟ್ಟುಕೊಂಡು ತಮ್ಮ ಸಾತ್ವಿಕ ಗುಣದಿಂದ ನಮ್ಮಲ್ಲಿ ಜೀವನಾಸಕ್ತಿಯನ್ನು ಎಚ್ಚರಿಸುವಂತೆ ಬೆರೆಯುತ್ತಾರೆ. ಅವರ ಬದುಕಿನ ವಿಸ್ತರಣೆಯಾಗಿ ಅವರ ಕತೆಗಳಿವೆ. ಅವರು ನಂಬಿದ ಮೌಲ್ಯಗಳು ಜೀವಪರ, ಅವರ ಬದುಕು ಮತ್ತು ಬರಹಗಳಲ್ಲಿ ವಚನ ಸಾಹಿತ್ಯ ಚಳವಳಿಯ ದಟ್ಟವಾದ ಪ್ರಭಾವವಿದೆ. ಅವರ ಮನಸ್ಸು ದಡಗಳಲ್ಲಿ ಬೆಳೆದು ನಿಂತ ಗಿಡಬಳ್ಳಿಗಳಿಗೆ ಸದಾ ನೀರೂಡುತ್ತ ಚಲಿಸುವ ನದಿಯ ಹಾಗೆ. ಹರಿಯುವ ನದಿಗೆ ಕತೆಗಳು ಹೆಚ್ಚು.

‘ತಮಂಧದ ಕೇಡು’, ‘ಸವಾರಿ’, ‘ಏ ದಿಲ್ ಮಾಂಗೆ ಮೋರ್’, ‘ಪರಿಣಾಮಿ’, ‘ಧರೆ ಉರಿದರೆ’, ‘ಧೈವಕ್ಕೆ ಮೊದಲು ಶರಣೆಂಬೆವು’, ಮೊದಲಾದ ಕತೆಗಳಿಂದ ಕನ್ನಡ ಕಥಾಜಗತ್ತಿನಲ್ಲಿ ಮಹತ್ವದ ಲೇಖಕನಾಗಿ ಉಳಿಯುವ ಅಮರೇಶ ನುಗಡೋಣಿ ಅವರು ಮಾಸ್ತಿ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶ್, ತೇಜಸ್ವಿ ಅವರ ಸ್ಥಾನವನ್ನು ತುಂಬಬಲ್ಲ ಶಕ್ತಿಶಾಲಿ ಕತೆಗಾರರಾಗಿ ನಿಲ್ಲುತ್ತಾರೆ. ಪ್ರಶಸ್ತಿ ಸಂಭ್ರಮದಲ್ಲಿ ಇರುವ ಕತೆಗಾರರಿಗೆ ಇದೊಂದು ಸಣ್ಣ ನುಡಿಗೌರವ. ಹೇಳಬೇಕಾದದ್ದು ಇನ್ನೂ ಉಳಿದಿದೆ.

-ಮಂಜುನಾಥ ಬಾದಾಮಿ


ಅಗ್ನಿದಿವ್ಯದ ಕವಿ ಬಶೀರ್ ಬದ್ರ್ !

ಅದು 1987ನೇ ಇಸವಿಯ ಏಪ್ರಿಲ್ ತಿಂಗಳು
ದೆಹಲಿಯಲ್ಲಿ ನಡೆಯುತ್ತಿದ್ದ ಮುಶಾಇರವೊಂದರಲ್ಲಿ ಕವಿ‌ಯೊಬ್ಬ ಸೌಹಾರ್ದತೆ ಮತ್ತೆ ಸಹೋದರತ್ವದ ಕುರಿತಾದ ಸುಂದರವಾದ ಹಾಗೂ ಎಂದಿನಂತೆಯೇ ಮೊನಚು ಮತ್ತು ತಿಳಿ ಹಾಸ್ಯದಿಂದ ಕೂಡಿದಂತಹ ಗಝಲಿನ ರದೀಫ್‌ಗಳನ್ನು ಒತ್ತಿ ಒತ್ತಿ ಹೇಳುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿದ್ದ.

ಅದೇ ಹೊತ್ತಿನಲ್ಲಿ ಕವಿಯ ಹುಟ್ಟೂರಾದ ಮೀರತಿನಲ್ಲಿ ಕೋಮು ಗಲಭೆಯೊಂದು ದಿಢೀರನೆ ಸ್ಫೋಟಗೊಂಡಿತ್ತು. ಹಿಂದೂ ಮುಸ್ಲಿಮರಿಬ್ಬರು ಸೇರಿ ಹಲವಾರು ಮನೆಗಳನ್ನು ಸುಟ್ಟುಹಾಕಿದ್ದರು. ಅದರಲ್ಲಿ ಒಂದು ಮನೆ ಆ ಕವಿಯದಾಗಿತ್ತು. ಕೇವಲ ಕವಿಮನೆ ಮಾತ್ರವಲ್ಲ ಆ ಕವಿಯ ಗ್ರಂಥಾಲಯ, ಹಲವಾರು ಕವನ ಸಂಕಲನಗಳ ಹಸ್ತಪ್ರತಿಗಳು ಸುಟ್ಟುಕರಕಲಾಗಿದ್ದವು. ಮನೆಮಂದಿಯೆಲ್ಲ ಕೂದಲೆಳೆಯಲ್ಲಿ ಬದುಕುಳಿದಿದ್ದರು. ಆ ಕವಿ ಆತ ಬೇರಾರೂ ಅಲ್ಲ, ಗಝಲ್ ಸಾಮ್ರಾಟ ಬಷೀರ್ ಬದ್ರ್.

ಮರುದಿನ ಬೆಳಗಿನ ರೈಲಿಗೆ ಮೀರತಿಗೆ ಬಂದಿಳಿದ ಕವಿ ತಾನು ಗೆಳೆಯರೊಂದಿಗೆ ನಕ್ಕುನಲಿದಿದ್ದ ಗಲ್ಲಿಗಳಲ್ಲಿ ದ್ವೇಷದ ಹೆಬ್ಬಾವುಗಳು ಬುಸುಗುಟ್ಟುವುದನ್ನು ನೋಡಿದ. ತನ್ನವರೆನಿಸಿಕೊಂಡವರೇ ಬೆವರುಸುರಿಸಿ ಕಟ್ಟಿದ ತನ್ನ ಮನೆಗೆ, ರಕ್ತ ಹರಿಸಿ ಬರೆದಿದ್ದ ತನ್ನ ಕವಿತೆಗಳಿಗೆ, ಜೀವಮಾನದಲ್ಲಿ‌ ಕಾಪಿಟ್ಟ ಪುಸ್ತಕಗಳಿಗೆ ಬೆಂಕಿಯಿಟ್ಟದ್ದನ್ನು ನೋಡಿ ಕಣ್ಣೀರು ಹರಿಸಿದ.

ಬಡೇ ಶೌಕ್ ಸೇ ಮೇರಾ ಘರ್ ಜಲಾ
ಕೋಯೀ ಆಂಚ್ ತುಜ್ ಪೇ ನಾ ಆಯೇಗೀ..

ಸಂತೋಷದಿಂದ ನನ್ನ ಮನೆಯನ್ನು ಸುಟ್ಟುಹಾಕು
ನಿನಗೆ ಯಾವ ಕಳಂಕವೂ ತಟ್ಟದಿರಲೀ ಎಂದು ಉದ್ಗರಿಸಿದ.

ಸುಟ್ಟು ಕರಕಲಾದ ಮನೆಯ ಗೋಡೆಯ ಕೆಳಗೆ ಕುಳಿತು ಪುಸ್ತಕಗಳ ಬೀದಿಯನ್ನು ನೋಡುತ್ತಾ ಕವಿ ಯೋಚಿಸುತ್ತಿದ್ದ,
ಸುಟ್ಟು ಹೋದ ಮನೆಗಳನ್ನು ಮತ್ತೆ ಕಟ್ಟಬಹುದು, ದ್ವಂಸಗೊಂಡ ಊರು ಮತ್ತೆ ಸರಿಯಾಗಬಹುದು, ಮುರಿದ ಸೇತುವೆ ರಿಪೇರಿಯಾಗಬಹುದು ಆದರೆ… ಒಡೆದು ಹೋದ‌ ಮನಸ್ಸುಗಳು! ಹತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ‌ ನಂದಿಸಬಹುದು ಆದರೆ ಎದೆಯಲ್ಲಿ ಧಗಧಗಿಸುತ್ತಿರುವ ಕೋಮು ದಳ್ಳುರಿಯನ್ನು ನಂದಿಸುವ ನೀರನ್ನು ಎಲ್ಲಿಂದ ತರಲಿ?? ಈ ಪಾರಿವಾಳಗಳ ಗೂಡಿನಲ್ಲಿ ವಿಷ ಸರ್ಪಗಳನ್ನು ಇಟ್ಟವರಾರು? ಕವಿ ದುಃಖದಿಂದ ಬಡಬಡಿಸಿದ

ಲೋಗ್ ಟೂಟ್ ಜಾತೇ ಹೈಂ
ಏಕ್ ಘರ್ ಬನಾನೆ ಮೆ
ತುಮ್ ತರಸ್ ನಹೀ ಕಾತೆ
ಬಸ್ತಿಯ ಜಲಾನೆ ಮೆ…

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !

ಜೀವಮಾನದ‌ ಸಂಪಾದನೆಯ ಜೊತೆಗೆ ಹಲವಾರು ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಗಳನ್ನೂ ಕಳೆದುಕೊಂಡಿದ್ದ ಬಷೀರ್ ಬದ್ರ್ ತೀವ್ರ ಆಘಾತ‌ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸ್ವಲ್ಪ ಕಾಲದವರೆಗೆ ಅವರ ಕುಟುಂಬ ಚಲನಚಿತ್ರ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮನೆಯಲ್ಲಿ ಆಶ್ರಯಪಡೆಯಿತು. ಬಷೀರ್ ಬದ್ರ್ ಕವಿಯ ಅಪ್ಪಟ ಅಭಿಮಾನಿಯಾಗಿದ್ದ ವಿಶಾಲ್ ಭಾರಧ್ವಾಜ್ ಗೆ ಬಷೀರ್ ವೈಯ್ಯಕ್ತಿಕವಾಗಿ ಭೇಟಿಯಾಗುತ್ತಿದ್ದಾಗ ವಾಚಿಸುತ್ತಿದ್ದ ಅಸಂಖ್ಯಾತ ಗಝಲ್ ಗಳ ಮತ್ಲಾಗಳು , ತಖಲ್ಲುಸ್ ಗಳು ನೆನೆಪಿದ್ದವು. ಆ‌ ನೆನಪೇ ಬಷೀರ್ ಬದ್ರ್ ಶೇಕಡಾ ಅರುವತ್ತರಷ್ಟು ಗಝಲ್ ಗಳನ್ನು ಮತ್ತೆ ಕಟ್ಟಲು ಸಾಧ್ಯವಾಯಿತು. ಮಾನಸಿಕವಾಗಿ ನೊಂದುಹೋಗಿದ್ದ ಕವಿ ಮೀರತ್‌ನಿಂದ ಭೋಪಾಲ್‌ಗೆ ತಮ್ಮ ನೆಲೆಯನ್ನು ಬದಲಾಯಿಸಿದರು.‌

ಭಾರತದ ರಾಜಕೀಯ ನಾಯಕರು (ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು) ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ರ‍್ಯಾಲಿಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಲು ಬಷೀರ್ ಬದ್ರ್ ಕವಿತೆಗಳನ್ನು ಬಳಸಿಕೊಂಡರು.‌ 2016 ರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣದ (Demonetisation) ವಿರುದ್ಧ ಇದೇ “ಲೋಗ್ ಟೂಟ್ ಜಾತೇ ಹೈ…” ಗಝಲಿನ ಸಾಲುಗಳನ್ನು ಬಳಸಿದ್ದರು.

ಬಶೀರ್ ಬದ್ರ್ ಅವರು ಸಾಂಪ್ರದಾಯಿಕ ಉರ್ದು ಗಝಲ್‌ಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಆದರೆ ಆಳವಾದ ಉರ್ದು ಮತ್ತು ಹಿಂದಿ ಮಿಶ್ರಿತ ಭಾಷೆಯನ್ನು ಅವರು ಬಳಸುತ್ತಿದ್ದರು. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಿಗೆ ಪ್ರತಿಷ್ಠಿತ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಕೂಡ ಲಭಿಸಿತ್ತು .

ಇನ್ನು ಬದುಕು ಸಾಕು ಎನಿಸಿತ್ತೋ ಏನೋ ಒಂದು ದಿನ ಬಷೀರ್ ಸಾಬ್ ಹೀಗೆ ಬರೆದರು,

ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು !

ಧೂಳು ಮಾತ್ರವಲ್ಲ ಆದಿಮಕಾಲದ
ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ
ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು !

ಕೋಮುದಳ್ಳುರಿಯಲ್ಲಿ ತನ್ನ ಬದುಕನ್ನೇ ಸುಟ್ಟುಕೊಂಡರೂ ಸದಾ ಸೌಹಾರ್ದ ಭಾರತದ ಕನಸನ್ನು ಬಡಬಡಿಸುತ್ತಿದ್ದ ಕವಿ ತಮ್ಮ ಬದುಕಿನ ಸಂದ್ಯಾಕಾಲದಲ್ಲಿ ಡಿಮೆಂಶಿಯಾ ಎಂಬ ಸ್ಮರಣರೋಗಕ್ಕೆ ತುತ್ತಾದರು ಮತ್ತು 2026 ಮೇ ತಿಂಗಳಿನ 28 ರ ಬಕ್ರೀದಿನ ಹಬ್ಬದ ಪವಿತ್ರ ಬಲಿದಾನದ ದಿನ ತಮ್ಮ 91 ನೇ ವಯಸ್ಸಿನಲ್ಲಿ ಭಾವಪ್ರಪಂಚಕ್ಕೆ ಕಾವ್ಯ ಬಲಿಯನ್ನು ನೀಡಿ ಹಸಿದಿರುವ ಸಹೃದಯರ ಹೃದಯೋದರಕ್ಕೆ ತಂಪನೆರೆದಿದ್ದ ಕವಿ ಶಾಶ್ವತ ನಿದ್ದೆಗೆ ಜಾರಿದರು.

ಕವಿ ಬಷೀರ್ ಬದ್ರ್ ಬಕ್ರೀದಿನ ಪವಿತ್ರ ಬಲಿದಾನದ ದಿನವೇ ಬದುಕಿನ‌ ಯಾತ್ರೆ ಮುಗಿಸಿದರು. ದೊರೆ ನಮ್ರೂದನು ಇಬ್ರಾಹಿಂರನ್ನು ಬೆಂಕಿಯಲ್ಲಿ ದೂಡಿ ಪರೀಕ್ಷಿಸಿದಂತೆ ಕವಿ ಬಷೀರ್ ಬರ್ದ್ ರನ್ನು ಕೂಡಾ ಭಾರತದ ಕೋಮು ದಳ್ಳುರಿಯು ಪರೀಕ್ಷಿಸಿತ್ತು. ಆದರೆ ಬಷೀರ್ ಬದ್ರ್ ಕೊನೆಯವರೆಗೂ ಕೋಮುವಾದದ ವಿರುದ್ಧ ಬರೆದರೇ ಹೊರತು ಕೋಮುವಾದಿಯಾಗಲಿಲ್ಲ. ಬದಲಿಗೆ ಕೋಮುದಳ್ಳುರಿಯಲ್ಲಿ ಉರಿದು‌ ಪುಟಗೊಂಡ ಅಗ್ನಿದಿವ್ಯದಂತೆ ಹೊರಹೊಮ್ಮಿದರು.

‘ಉಜಾಲೇ ಅಪನೀ ಯಾದೋಂ ಕೇ ಹಮಾರೇ ಸಾಥ್ ರಹನೇ ದೋ
ನ ಜಾನೇ ಕಿಸ್ ಗಲೀ ಮೇ ಜಿಂದಗೀ ಕೀ ಶಾಮ್ ಹೋ ಜಾಯೇ…’

ನನ್ನ ನೆನಪುಗಳ ಹಣತೆಯೊಂದು ನನ್ನ ಕೈಯ್ಯಲ್ಲಿ ಸದಾ ಇರಲಿ ಯಾವ ತಿರುವಿನಲ್ಲಿ ಬದುಕಿನ ಮುಸಂಜೆಯಾಗುವುದೋ ಯಾರು ಬಲ್ಲರು….. ತಮ್ಮ ನೆನಪುಗಳ ಹಣತೆಯೊಂದನ್ನು ಹಿಡಿದುಕೊಂಡು ಬಷೀರ್ ಸಾಬ್ ಹೊರಟೇಹೋದರು.‌

ಕವಿಗೆ ಸಾವಿಲ್ಲ ಆತನ ಕವಿತೆಗಳಲ್ಲಿ ಉಸಿರಾಡುತ್ತಾನೆ ಎಂಬುದು ಲೋಕೋಕ್ತಿಯಾಗಿರಬಹುದು ಆದರೆ ಕವಿಯ ಅಂತಿಮ ಯಾತ್ರೆಗೆ ಕೇವಲ ಇಪ್ಪತ್ತು ಜನರು ಮಾತ್ರ ಸೇರಿದ್ದರು ಎಂಬುದು ಕವಿತೆಗಳೇ ಶಾಶ್ವತ, ಎಲ್ಲಾ ಮನ್ನಣೆಗಳೂ ಕವಿತೆಗಳಿಗೆ ಮಾತ್ರ, ಕವಿಯು ನಿಮಿತ್ತ‌ ಮಾತ್ರ ಎಂಬ ಸುಡುವಾಸ್ತವವನ್ನು ಮತ್ತೆ ನೆನಪಿಸಿತು.


ನನಗೆ ಯಾವದೇ ಸಮಾಧಿಯ‌ ಅವಶ್ಯಕತೆಯಿಲ್ಲ, ಸಜ್ಜನರ ಹೃದಯವೇ ನನ್ನ ಸಮಾಧಿ ‘ ಎಂಬ ರೂಮಿಯ ವಾಕ್ಯದಂತೆ ಬಷೀರ್ ಬದ್ರರ ಗಝಲ್ಗಳು ಸಹೃದಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿವೆ.‌

-ಪುನೀತ್ ಅಪ್ಪು
(ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಕವಿತೆಗಳ ಕನ್ನಡ ಅನುವಾದಗಳು ಲೇಖಕರದ್ದು)

ಬಶೀರ್ ಬದ್ರ್ ಕವಿತೆಗಳು

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !


ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು

ಧೂಳು ಮಾತ್ರವಲ್ಲ ಆದಿಮಕಾಲದ ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು

ಉರ್ದು ಮೂಲ: ಬಶೀರ್ ಬದ್ರ್
ಕನ್ನಡಕ್ಕೆ ಪುನೀತ್ ಅಪ್ಪು




ಬನೀ ಆದಮ್

ಒಂದೇ ಜೀವರತ್ನದಿಂದ ಉದಿಸಿದವರು
ಒಂದು ದೇಹದ ಅಂಗಾಂಗಳಂತೆ
ಆದಮನ ಸಂತತಿ ನಾವು ಮನುಷ್ಯರೆಲ್ಲಾ

ಕಾಲಚಕ್ರದ ಹೊಡೆತಕ್ಕೆ ಸಿಲುಕಿ
ಒಂದು ಅಂಗವು ನರಳಿದಾಗಲೆಲ್ಲಾ
ಉಳಿದ ಅಂಗಗಳೂ ಸುಖದಿಂದಿರಲು ಸಾಧ್ಯವಿಲ್ಲ

ಪರರ ದುಃಖಕ್ಕೆ ನಿನ್ನ ಮನಸ್ಸು ಕರಗದಿದ್ದರೆ
ಮನುಷ್ಯ(ಆದಮಿ)ನೆಂದುಕೊಳ್ಳಲು ನಿನಗೆ ಯೋಗ್ಯತೆಯಿಲ್ಲ

– ಸಾದಿ ಶಿರಾಝಿ
ಅನುವಾದ : ಪುನೀತ್ ಅಪ್ಪು


ಇರಾನ್ ದೇಶ ಯುನೈಟೆಡ್ ನೇಷನ್ಸ್ ಗೆ ನೀಡಿದ ಕಾರ್ಪೆಟ್‌ನ ಜೊತೆಗೆ ಶಾದಿ ಶಿರಾಝಿಯ ವಿಶ್ವಮಾನವತೆಯನ್ನು ಸಾರುವ ಈ ‘ಬನೀ ಆದಮ್’ ಕವಿತೆಯ ಫಲಕವನ್ನೂ ಸ್ಥಾಪಿಸಲಾಗಿದೆ.

ಧಾರ್ಮಿಕ ಅಧ್ಯಯನಗಳು, ಮಾನವಿಕ ವಿಷಯ: ಸಂಶೋಧನಾ ಸಾಧ್ಯತೆಗಳು

ಉನ್ನತ ವ್ಯಾಸಂಗಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದತ್ತ

ಪೂನೂರ್ ಜಾಮಿಯಾ ಮದೀನತುನ್ನೂರ್ ವಿದ್ಯಾರ್ಥಿ ಜೀವನದಲ್ಲಿ ಹ್ಯುಮಾನಿಟೀಸ್ ವಿಷಯಗಳಲ್ಲಿನ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಾಧ್ಯತೆಗಳ ಕುರಿತು ತಿಳಿದು ಅಚ್ಚರಿಗೊಂಡಿದ್ದೆ. ಭಾರತ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ ಉನ್ನತ ವ್ಯಾಸಂಗ ಮಾಡಿಕೊಳ್ಳುವುದರ ಜೊತೆಗೆ, ಕಾನ್ಫರೆನ್ಸ್ ಪೇಪರ್ ಸಮ್ಮಿಟ್‌ಗಳಲ್ಲಿ ನಿರಂತರ ತಮ್ಮ ಅಧ್ಯಯನ ವಿಷಯಗಳನ್ನು ಮಂಡಿಸುವ ಮದೀನತುನ್ನೂರ್ ವಿದ್ಯಾರ್ಥಿಗಳ ಒಡನಾಟ ಮತ್ತು ಸಂಸ್ಥೆಯ ಅಕಾಡೆಮಿಕ್ ವಾತಾವರಣ ನನ್ನ ಕನಸುಗಳಿಗೆ ಹೊಸ ರೂಪು ನೀಡಿತು. ರಾಜಕೀಯ ಶಾಸ್ತ್ರದಲ್ಲಿ ಪಿ.ಜಿ. ಮಾಡುವ ನಿಮಿತ್ತ ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ತಲುಪಿದಾಗ ಆ ಕನಸಿಗೆ ಇನ್ನಷ್ಟು ಹುರುಪು ತುಂಬಿತು. ಮಾಸ್ಟರ್ಸ್ ಡಿಗ್ರಿಯ ಮಧ್ಯೆ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನಿನ ಎಕೆಯುಐಎಸ್ಎಮ್ ಸೇರಿ ನೀಡುವ ‘ಮಾಸ್ಟರ್ಸ್ ಇನ್ ಇಸ್ಲಾಮಿಕ್ ಸ್ಟಡೀಸ್ ಆಂಡ್ ಮುಸ್ಲಿಮ್ ಕಲ್ಚರ್ಸ್’ಗಾಗಿ ಅರ್ಜಿ ಸಲ್ಲಿಸಿದೆ. ಸಾಮಾನ್ಯವಾಗಿ ಉನ್ನತ ವ್ಯಾಸಂಗಕ್ಕಾಗಿ ಅಪರೂಪಕ್ಕೆ ವಿದ್ಯಾರ್ಥಿ ವೇತನ ಅಮೆರಿಕಾದಲ್ಲಿ, ಒಬ್ಬ ವಿದ್ಯಾರ್ಥಿಯ ಸಂಪೂರ್ಣ ವೆಚ್ಚ ಭರಿಸುವುದು ಈ ಸ್ಕಾಲರ್‌ಶಿಪ್‌ನ ವಿಶೇಷತೆ. ಸದ್ಯ ಈ ವಿಷಯದ ಮೇಲೆ ವ್ಯಾಸಂಗ ಮಾಡುತ್ತಿರುವ ನೂರಾನಿ ಮಿತ್ರರ ಸಹಾಯ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ಡೀನ್ ಆಫ್ ಸೋಶಿಯಲ್ ಸೈನ್ಸಿನ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು. ಎರಡನೆಯ ಡಿಗ್ರಿಯ ಅವಶ್ಯಕತೆ ಏನಿದೆ ಎಂಬ ಸಂದೇಹದ ಮಧ್ಯೆಯೂ ಕೊಲಂಬಿಯಾದಂತಹ ಐವಿ ಲೀಗ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನಕ್ಕಿರುವ ಅವಕಾಶವನ್ನು ತೊರೆಯಲು ಮನಸ್ಸೊಪ್ಪಲಿಲ್ಲ. ಅಲ್ಲಿನ ಅಧ್ಯಯನಾಸಕ್ತ ವಿದ್ಯಾರ್ಥಿಗಳ ಚಿಂತನೆ ಮತ್ತು ಒಡನಾಟ ಮುಂದಿನ ಅಕಾಡೆಮಿಕ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯಲ್ಪಡುವುದು ಖಚಿತ ಎಂಬ ನಿಟ್ಟಿನಲ್ಲಿ ಹೊರಟು ನಿಂತೆ. ನಿರಂತರ ಹೊಸದೊಂದನ್ನು ಅರಿಯುವ ಜಿಜ್ಞಾಸೆ ಅಧ್ಯಯನಶೀಲ ವಿದ್ಯಾರ್ಥಿಗೆ ಎಷ್ಟು ಮುಖ್ಯವೋ, ಅಧ್ಯನಾಸಕ್ತ ವಿದ್ಯಾರ್ಥಿಗಳೊಂದಿಗಿನ ಜಾಗತಿಕ ಒಡನಾಟವೂ ಅಷ್ಟೇ ಮುಖ್ಯ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಧಾರ್ಮಿಕ ಅಧ್ಯಯನದ ಜೊತೆಗೆ ವಿದೇಶಿ ವಿವಿಗಳಲ್ಲಿ ಉನ್ನತ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು

ಸಾಮಾನ್ಯವಾಗಿ ಧಾರ್ಮಿಕ ಅಧ್ಯಯನದ ಜೊತೆಗೆ ಲೌಕಿಕ ಅಧ್ಯಯನದ ಸಾಧ್ಯತೆಗಳು ವಿಶೇಷವಾಗಿ ಸಮನ್ವಯ ಶಿಕ್ಷಣ ಪಡೆಯುವ ನನ್ನಂತಹ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ತಿಳಿದಿಲ್ಲ. ಮದೀನತುನ್ನೂರ್ ವಿದ್ಯಾಸಂಸ್ಥೆ ನಿರಂತರ ನೀಡಿದ ಪ್ರೋತ್ಸಾಹದಿಂದಾಗಿ ಈ ದಾರಿ ಸುಗಮಗೊಂಡಿತು. ನಮ್ಮ ಇಂಟರ್‌ಗ್ರೇಟೆಡ್ ಕಾಲೇಜುಗಳಲ್ಲಿ ಸಿಗುವ ಬಿರುದುಗಳು ಯುಜಿಸಿ ಅಂಗೀಕೃತವಲ್ಲದಿದ್ದರೂ ಅದರ ಸಿಲಬಸ್ ಸಾಮ್ಯತೆ ಹೊಂದಿರುತ್ತದೆ. ನಾವು ಅಭ್ಯಸಿಸುವ ವಿಷಯಗಳು ಹಾಗೂ ಅರಬಿ ಭಾಷೆಯ ಆಳ ಅಧ್ಯಯನ ವಿದೇಶಿ ಯೂನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಾನವಾಗಿರುತ್ತದೆ. ಆ ಕಾರಣದಿಂದಲೇ ಇಂಟರ್ವೀವರ್‌ಗಳು ಹಲವು ಬಾರಿ ನನ್ನ ಅಧ್ಯಯನ ವಿಷಯಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಿದೆ.

ಪಿ. ಎಚ್. ಡಿ ಅಧ್ಯಯನಕ್ಕೆ ಲಭಿಸುವ ಸ್ಕಾಲರ್‌ಶಿಫ್

ಐದರಿಂದ ಎಂಟು ವರ್ಷಗಳ ದೀರ್ಘ ಯೋಜನೆಯಾಗಿರುತ್ತದೆ ಪಿಎಚ್‌ಡಿ ಸಂಶೋಧನಾ ಪ್ರಶ್ನೆಗಳು. ಅಧ್ಯಯನಕ್ಕಾಗಿ ತಮ್ಮ ಸಂಪೂರ್ಣ ಸಮಯ ಮೀಸಲಿಡುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದಲೇ, ಹಣಕಾಸು ಭದ್ರತೆ ಅವಶ್ಯಕ. ಹೈದರಾಬಾದಿನ ಪಿ.ಜಿ.ಯ ವೇಳೆ ನೆಟ್ ಎಕ್ಸಾಮ್ ಬರೆದು ಜೆ.ಆರ್.ಎಫ್. ಗಿಟ್ಟಿಸಿಕೊಂಡ ಉದ್ದೇಶ ಇದಾಗಿತ್ತು. ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಭಾರತ ಸರಕಾರದ ಅಧ್ಯಯನ ಫಂಡ್ ಅತಿ ಕಡಿಮೆ. ಅಮೇರಿಕನ್/ ನಾರ್ತ್ ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅತಿ ಹೆಚ್ಚು ಮೊತ್ತವೂ ದೊರಕುತ್ತದೆ. ನನಗೆ ದಾಖಲಾತಿ ದೊರಕಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್. ಡಿ. ಅಧ್ಯಯನಕ್ಕಾಗಿ ಮ್ಯಾಕ್ ಕ್ರಾಕನ್ ಫೆಲೋಶಿಪ್ ನೀಡಲ್ಪಡುತ್ತದೆ. ಇದರ ಹೊರತಾಗಿ ಡೀನ್ಸ್ ಡಾಕ್ಟರಲ್ ಫೆಲೋಶಿಪ್, ಡೀನ್ಸ್ ಹ್ಯುಮಾನಿಟೀಸ್ ಸ್ಕಾಲರ್ಸ್ ಪ್ರೋಗ್ರಾಮ್ ಫೆಲೋಶಿಪ್‌ಗಳು ನನಗೆ ದೊರೆತಿದೆ. ಅಧ್ಯಯನ ಪ್ರಶ್ನೆಗಳು ಹಾಗೂ ರೈಟಿಂಗ್ ಸ್ಯಾಂಪಲ್‌ಗಳು ಉತ್ತಮವಾಗಿದ್ದರೆ ಫೆಲೋಶಿಪ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ ಇದರ ಹೊರತಾಗಿ ಇತರ ವಿಶ್ವವಿದ್ಯಾನಿಲಯಗಳಿಂದ ಅಡ್ಮಿಶನ್ ಲಭಿಸಿರುವುದು ಕೂಡಾ ಸ್ಕಾಲರ್‌ಶಿಪ್ ಮೇಲೆ ಪರಿಣಾಮ ಬೀರುತ್ತದೆ. ಟೊರೆಂಟೋ, ವಾಂಡರ್ಬಿಲ್ಟ್ ಹಾಗೂ ಪೆನ್ಸಿಲ್ವೇನಿಯಾ ಯೂನಿವರ್ಸಿಟಿಗಳಿಂದ ನನಗೆ ದೊರಕಿದ ಪ್ರವೇಶಾತಿ ಸ್ಕಾಲರ್‌ಶಿಪ್ ದೊರಕುವಲ್ಲಿ ಸಹಾಯಕವಾದವು.

ಯೂನಿವರ್ಸಿಟಿ ಅಧ್ಯಯನ ಅವಧಿಯಲ್ಲಿ ನೆರವಾದ ಧಾರ್ಮಿಕ ಸಂಸ್ಥೆಗಳ ವಿದ್ಯಾರ್ಥಿ ಜೀವನ

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ‌ ವಿಶೇಷವಾಗಿ ಅಮೇರಿಕದ ಅಧ್ಯಯನ ಅವಧಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುವುದಿದೆ. ನಿರಂತರ ಸಂಶೋಧನೆ, ಅಧ್ಯಯನ ನಿಮಿತ್ತ ಪ್ರತಿ ವಾರದಲ್ಲಿ ಸಾವಿರಕ್ಕೂ ಮಿಕ್ಕ ಪೇಜ್ ಓದು ಇವೆಲ್ಲವೂ ಅದಕ್ಕಿರುವ ಕಾರಣ. ಆದರೆ, ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಬೆಳೆದು ಬಂದ ನನಗೆ ಇದು ಸಾಮಾನ್ಯವೆಂಬಂತೆ ತೋರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಅಳವಡಿಸಿಕೊಂಡು ಬಂದ ಆ ಜೀವನಶೈಲಿ ಇಲ್ಲಿ ನನಗೆ ಬಹಳ ಉಪಯುಕ್ತವೆನಿಸಿದೆ. ನಮ್ಮ ಸಂಸ್ಥೆಯಲ್ಲಿ ಕರಗತ ಮಾಡಿಕೊಂಡ ಭಾಷಾನೈಪುಣ್ಯತೆಯೂ ಅಧ್ಯಯನಕ್ಕೆ ಬಹಳ ಸಹಕಾರಿಯಾಗಿದೆ. ಅಮೇರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನದ ಮೊದಲ ಎರಡು – ಮೂರು ವರ್ಷಗಳ ಅವಧಿಯನ್ನು ಕೇವಲ ಭಾಷಾ ಅಧ್ಯಯನಕ್ಕಾಗಿ ಮಾತ್ರ ಮೀಸಲಿಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳು ಬಹಳ ಉತ್ತಮ ಅವಕಾಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

~ ಅಬ್ದುಲ್ ಫತ್ತಾಹ್ ನೂರಾನಿ
ಅನುವಾದ: ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ

ವಿಚಾರ ಪ್ರಚೋದಕ ಬ್ಯಾರಿ ಕವನಗಳ ಸಂಕಲನ ‘ನಸೀಅತ್’

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಕವಿ ಹೈದರಲಿ ಕಾಟಿಪಳ್ಳ ಅವರ ಬ್ಯಾರಿ ಕವನಗಳ ಸಂಕಲನ ‘ನಸೀಅತ್’. ನಸೀಅತ್ ಗೆ ಉಪದೇಶ ನೀಡುವುದು, ಶುದ್ಧಗೊಳಿಸುವುದು ಮೊದಲಾದ ಅರ್ಥಗಳಿವೆ.‌ ನಸೀಅತ್ ನ ಉದ್ದೇಶ ತಝ್ಕಿಯತ್. ಅಂದರೆ ಹೃದಯದ ಶುದ್ದೀಕರಣ. ದೇಹ, ಮನೆ, ಬಟ್ಟೆಬರೆ ಸ್ವಚ್ಛಗೊಳಿಸುವುದು ಸುಲಭ, ಆದರೆ, ಹೃದಯದ ಶುದ್ದೀಕರಣ ‘ಚೆನ್ನತ್ತರ ಸುಲಭ ಅಲ್ಲ'(ಹೇಳಿದಷ್ಟು ಸುಲಭ ಅಲ್ಲ)’ ಎಂಬುದನ್ನು ಸ್ವತಃ ಕವಿಯೇ ಒಪ್ಪಿಕೊಂಡರೂ, ಅವರು ತಮ್ಮ ಕಾವ್ಯಗಳ ಮೂಲಕ ‘ನಸೀಅತ್’ ಮಾಡುವ ಸಾಹಸಕ್ಕಿಳಿದಿದ್ದಾರೆ.

ಪೈಗಂಬರರಿಂದ ಹಿಡಿದು ಸೂಫಿಗಳವರೆಗಿನ ಎಲ್ಲರ ಜೀವನದಲ್ಲೂ ನಸೀಅತ್ ಹಾಸುಹೊಕ್ಕಾಗಿದೆ.‌ ಇಸ್ಲಾಮ್ ಜಗತ್ತಿನಾದ್ಯಂತ ವ್ಯಾಪಿಸಿರುವುದರ ಹಿಂದೆ ನಸೀಅತ್ ನ ಪಾತ್ರ ದೊಡ್ಡದು. ನನ್ನ ಪ್ರಕಾರ ಮುಸ್ಲಿಮರಷ್ಟು ನಸೀಅತ್ ಗಳನ್ನು ಕೇಳುವ ಜನಾಂಗ, ಸಮುದಾಯ ಇನ್ನೊಂದಿಲ್ಲ. ಹುಟ್ಟಿನಿಂದಲೇ ಅವರು ನಸೀಅತ್ ಕೇಳುತ್ತಾ ಬೆಳೆಯುತ್ತಾರೆ. ಶಾಲೆ, ಮದ್ರಸ ಎರಡು ಕಡೆಗಳಲ್ಲೂ ಮುಸ್ಲಿಮರಿಗೆ ಸಾಕಷ್ಟು ನಸೀಅತ್ ಸಿಗುತ್ತದೆ, ಶುಕ್ರವಾರದ ಖುತ್ಬಾದಲ್ಲಿ, ನಮಾಝಿನ ನಂತರದ ಭಾಷಣದಲ್ಲಿ, ಜೊತೆಗೆ ಮಾಸಿಕ, ವಾರ್ಷಿಕವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಸೀಅತ್ ನ ಮಹಾಪೂರವೇ ಇರುತ್ತದೆ. ಸಮುದಾಯ ಇದರಿಂದ ಪಡೆದಿರುವ ಪ್ರಯೋಜನಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

ದೀನ್ ಅಥವಾ ಧರ್ಮ‌ ಎಂದರೆ ನಸೀಅ ಎಂದು ಪೈಗಂಬರರು ಹೇಳಿದ್ದಾರೆ. ಸೂಫಿಗಳ ಕಾವ್ಯ, ಪ್ರವಚನಗಳೆಲ್ಲವೂ ನಸೀಅತ್ ನ ವಿವಿಧ ರೂಪಗಳು. ಸೂಫಿಸಂನಲ್ಲಿ ಉಪದೇಶಗಳನ್ನು ನೀಡುವ ಗುರುವಿಗೆ ಅತ್ಯಧಿಕ ಮಹತ್ವವಿದೆ.‌ ಶಿಷ್ಯನಾದವನು ಗುರುವಿನ ಪರಂಪರೆಯನ್ನು ನೆನಪಿಟ್ಟುಕೊಂಡಿರುತ್ತಾನೆ.‌ ಮೌಲಾನ ಜಲಾಲುದ್ದೀನ್ ರೂಮಿಯವರ ಮಹಾಕಾವ್ಯ ಮಸ್ನವಿ, ಗದ್ಯ ಕೃತಿ ‘ಫೀಹಿ ಮಾ ಫೀಹಿ’ ಲೋಕ ಪ್ರಸಿದ್ಧಿ ಪಡೆದಿದೆ, ಪಾಶ್ಚಾತ್ಯ ಲೋಕ ರೂಮಿಯವರ ಈ ಕೃತಿಗಳನ್ನು ಎದೆಗಪ್ಪಿಕೊಂಡು ಸ್ವೀಕರಿಸಿವೆ. ಮಸ್ನವಿ ಸಾರೋಪದೇಶಗಳ ಕಾವ್ಯಾತ್ಮಕ ಅಭಿವ್ಯಕ್ತಿಯಾದರೆ, ಫೀಹಿ ಮಾ ಫೀಹಿ ರೂಮಿಯವರು ತಮ್ಮ ಶಿಷ್ಯಂದಿರಿಗೆ, ಜನರಿಗೆ ನೀಡಿದ ನಸೀಅತ್ ಗಳ ಸಂಗ್ರಹ. ಅವರ ಪುತ್ರ ಸುಲ್ತಾನ್ ವಲದ್ ಈ ಕೃತಿಯನ್ನು ಸಂಗ್ರಹಿಸಿದ್ದಾರೆ.

‘ನಸೀಅ’ ಎಂಬುದು ಅರಬಿ ಭಾಷೆಯ ಪದ. ಧಾರ್ಮಿಕ ಕಾರಣಗಳಿಂದ ಈ ಪದ ಬ್ಯಾರಿ ಭಾಷೆಯಲ್ಲೂ ವ್ಯಾಪಕ ಬಳಕೆಯಲ್ಲಿರುವುದರಿಂದ ತಮ್ಮ ಬ್ಯಾರಿ ಕವನಗಳ ಸಂಕಲನಕ್ಕೆ ಹೈದರಲಿ ಕಾಟಿಪಳ್ಳ ಅವರು ಈ ಹೆಸರಿಟ್ಟಿರುವುದು ಸೂಕ್ತವೆನಿಸುತ್ತದೆ, ಸಂಕಲನದ ಕವಿತೆಗಳೂ ಸಹ ಕೆಲವು ಕಡೆ ನೇರವಾಗಿ ಮತ್ತು ಹಲವು ಕಡೆ ಪರೋಕ್ಷವಾಗಿ ಓದುಗರಿಗೆ ನಸೀಅತ್ ಮಾಡುತ್ತದೆ.

ಪ್ರಶ್ನೆಯೇನೆಂದರೆ, ಕಾವ್ಯಕ್ಕೂ ಉಪದೇಶಕ್ಕೂ ಏನು ಸಂಬಂಧ? ರೋಮನ್ ಕವಿ ಹೋರೇಸ್, ‘ಕಾವ್ಯ ಆನಂದವನ್ನೂ ನೀಡಬೇಕು, ಉಪದೇಶವನ್ನೂ ಮಾಡಬೇಕು’ ಎನ್ನುತ್ತಾನೆ.‌‌ ಕಾವ್ಯ ಒಣ ಉಪದೇಶವಾಗಬಾರದೆಂಬುದು ಆಧುನಿಕ ಕವಿಗಳ, ವಿಮರ್ಶಕರ ಅಭಿಪ್ರಾಯ. ಮುಖ್ಯವಾಗಿ ವರ್ಡ್ಸ್‌ವರ್ತ್ ‘ಕಾವ್ಯವು ಶಕ್ತಿಯುತ ಭಾವನೆಗಳ ಸ್ವಾಭಾವಿಕ ಹರಿವು’ ಎನ್ನುತ್ತಾನೆ.‌ ಆದರೂ, ಆಧುನಿಕ ಕಾಲಘಟ್ಟದ ಅನೇಕ ಉತ್ತಮ ಕಾವ್ಯಗಳಲ್ಲಿ ‘ನಸೀಅತ್’ ಗುಪ್ತಗಾಮಿನಿಯಂತೆ ಹರಿಯುತ್ತಿರುವುದನ್ನು ಕಾಣಬಹುದು.

ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಸಂಕಲನದ ಕವಿತೆಗಳ ಒಟ್ಟು ಆಶಯ ಪ್ರೀತಿ ಮತ್ತು ಕನಸು.‌ ಈ ಎರಡು ಗುಣಗಳಿಲ್ಲದೆ ಮನುಷ್ಯ ಈ ಲೋಕದಲ್ಲಿ ಬಾಳಲಾರ, ಅಂತಿಮವಾಗಿ ಅವನ ಉದ್ದೇಶವೂ ಈ ಎರಡರ ಮೂಲಕ ಜೀವನವನ್ನು ಸುಂದರಗೊಳಿಸುವುದು, ಸುಖಕರಗೊಳಿಸುವುದು. ಆದರೆ, ಇದಾಗಬೇಕಾದರೆ ಖಲ್ಬ್, ಮನಸು ಶುದ್ಧಿಯಾಗಿರಬೇಕು, ಆದರೆ, ಖಲ್ಬ್ ಶುದ್ದಿ ಮಾಡುವುದೇ ಸಾಹಸದ ಕೆಲಸ. ಶುದ್ಧ ಖಲ್ಬಿನಲ್ಲಿ ನಿಜವಾದ ಪ್ರೀತಿ ಮತ್ತು ಕನಸುಗಳಿದ್ದರೆ ಜೀವನ ಸುಂದರವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದೇ ಇಲ್ಲಿಯ ಬಹುತೇಕ ಕವನಗಳು ನಮಗೆ ನೀಡುವ ನಸೀಅತ್.

ಈ ಸಂಕಲನದ ಇನ್ನೊಂದು ವಿಶೇಷತೆ, ಕಾಲದ ದೋಷಗಳನ್ನು ವಿಡಂಬನೆಯ ಮೂಲಕ ಹೇಳುವುದು, ಆಧುನಿಕ ಕಾಲದ ಬಹುದೊಡ್ಡ ದೋಷವೆಂದರೆ, ಜನರಲ್ಲಿರುವ ಅತಿಯಾಗಿರುವ ಗುರುತಿಸಿಕೊಳ್ಳುವ ಬಯಕೆ, ಸಮಾಜದಲ್ಲಿ ಮಹಾದಾನಿ, ಒಳ್ಳೆಯವನೆಂದು ಗುರುತಿಸಿಕೊಳ್ಳಬೇಕು, ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಲೈಕ್ ಪಡೆಯುವ ಮೂಲಕ ಗುರುತಿಸಿಕೊಳ್ಳಬೇಕು, ಎಲ್ಲರೂ ಹೊಗಳಬೇಕೆಂಬ ಬಯಕೆಗಳು ಈ ಕಾಲದ ವ್ಯಕ್ತಿತ್ವಗಳ ಮುಖ್ಯ ಗುಣಲಕ್ಷಣವಾಗಿದೆ. ಅವುಗಳನ್ನೇ ಇಲ್ಲಿಯ ಕವಿತೆಗಳು ತಮ್ಮದೇ ಶೈಲಿಯಲ್ಲಿ ವಿಡಂಬಿಸುತ್ತವೆ.‌

ಉದಾಹರಣೆಗೆ ನನಗೆ ಇಷ್ಟವಾದ ಸಾಲು;
ಪಲ್ಲಿಗ್ ಕೊರಿಯ ಪೈಸ ಕೊಡ್ತ
ಸೀಕ್‌ರವುನುಗು ಎಪುಲು ಕೊಡ್ತ
ಪಾವತ್ತವುನುಗು ಕಿಟ್ಸ್ ಕೊಡ್ತ
ಕೊಡ್ತದೆಂದುರೊ ಬಿಸಯ ಅಲ್ಲ
ಕೊಡ್ತದೆಂದಿಗ್ ಬಿಸಯ ಅಲ್ಲ
ನಾ ಕೊಡ್ತದ್ ಎಲ್ಲಾರ್ಗುಂ ಪಿಡಿಯಾವೊನು
ಅದುರೊ ಒರು ಪೊಟ ಬೇನು
ಅದ್ ಕೊರಿಯ ಲೈಕ್ ಬೇನು
(ಮಸೀದಿಗೆ ಅಲ್ಪ ಹಣ ಕೊಟ್ಟ
ರೋಗಿಗೆ ಆಪಲ್ ಕೊಟ್ಟ
ಬಡವನಿಗೆ ಕಿಟ್ ಕೊಟ್ಟ
ಕೊಟ್ಟದ್ದು ದೊಡ್ಡ ವಿಷಯವಲ್ಲ
ನಾನು ಕೊಟ್ಟದ್ದು ಎಲ್ಲರಿಗೂ ತಿಳಿಯಬೇಕು
ಅದರ ಒಂದು ಪೋಟೋ ಬೇಕು
ಅದಕ್ಕೊಂದಿಷ್ಟು ಲೈಕು ಬೇಕು)

ಈ ಸಂಕಲನದಲ್ಲಿರುವ ‘ನಸೀಅತ್’ ಎಂಬ ಹೆಸರಿನ ಕವನವೂ ಸಹ ಈ ಕಾಲದ ಇನ್ನೊಂದು ಮುಖ್ಯ ದೋಷದ ಕುರಿತು ಗಮನಸೆಳೆಯುತ್ತದೆ.

‘ಇನ್ನೊರ್ತಡೊ ಪುಣ್ಣು
ಚೊರಿಯಂಡ ಪುತ್ತೇ
ನಿಂಡೊ ಮುದು ನಿಕ್ ಕಾಂಡಿಲ್ಲೆ’
(ಇನ್ನೊಬ್ಬನ ಹುಣ್ಣು
ತುರಿಸಬೇಡ
ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ)

ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದು ರೋಗ, ಇನ್ನೊಬ್ಬನ ಬಗ್ಗೆ ಕೀಳಾಡುವುದು, ವ್ಯಕ್ತಿತ್ವದ ದೋಷಗಳನ್ನು ಬಹಿರಂಗವಾಗಿ ಚರ್ಚಿಸುವುದು, ಆಕ್ಷೇಪಿಸುವುದು, ಕುಹಕವಾಡುವುದು ಇವತ್ತಿನ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಕವಿ ಇದನ್ನೇ ವಿಡಂಬನೆಯ ಮೂಲಕ ಈ ಸಮಸ್ಯೆ ಎಷ್ಟು ಗಂಭೀರವಾದುದು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತಾರೆ. ‘ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ’ ಎಂಬಲ್ಲಿ ಮನುಷ್ಯನಿಗಿರಬೇಕಾದುದು ಪರದೂಷಣೆ ಅಲ್ಲ, ಸ್ವವಿಮರ್ಶೆ ಎಂಬ ಧ್ವನಿ‌‌ ಇದೆ.
ಕವಿಗೆ ಈ‌ ಕಾಲಕ್ಕಿಂತ ಹಳೆಯ ಕಾಲವೇ ಹೆಚ್ಚು ಆಪ್ತವೆನಿಸುತ್ತದೆ. ಹಿಂದಿನ ಕಾಲದ ಅಜ್ಜಿ ಮತ್ತು ಈ ಕಾಲದ ಅಜ್ಜಿಯರ ನಡುವಿನ ಸಾಮಾನ್ಯ ವ್ಯತ್ಯಾಸವನ್ನು ಕವಿ ಗುರುತಿಸುತ್ತಾರೆ. ಹಿಂದಿನ ಕಾಲದ ಅಜ್ಜಿಯ ಬಾಯಿಯಲ್ಲಿ ಎಂದೆಂದೂ ಮುಗಿಯದ ಕಥೆಗಳಿದ್ದವು, ಈಗಿನ ಕಾಲದ ಅಜ್ಜಿಯ ಕೈಯಲ್ಲಿ ಮೊಬೈಲ್ ಇದೆ ಎಂಬುದು ಕವಿಯ ದೂರು. ಇದು ಕಟು ವಾಸ್ತವವೂ ಹೌದು. ಒಂದು ವೇಳೆ ಆಧುನಿಕ ಅಜ್ಜಿ ಕಥೆ ಹೇಳಿದರೂ ಆ ಕಥೆಯಲ್ಲಿ ಯಾವುದೇ ಸಿಹಿ ಅರ್ಥಾತ್ ರಸವಿರುವುದಿಲ್ಲ ಎಂದು ಕವಿ ಹೇಳುತ್ತಾರೆ. ಅದಕ್ಕೆ ಕವಿ ಹೇಳುವ ಮಾರ್ಮಿಕ ಕಾರಣ ಈಗಿನ ಕಾಲದ ಅಜ್ಜಿಗೆ ಶುಗರ್ ಇದೆ ಎಂಬುದು. ಬಹುಶಃ ಕವಿ ಇಲ್ಲಿ ಹೊಸ ಪೀಳಿಗೆ ದೈಹಿಕ ಶ್ರಮವಿಲ್ಲದೆ ರೋಗಗ್ರಸ್ಥರಾಗುತ್ತಿರುವುದನ್ನು ವಿಷಾದದಿಂದ ಹೇಳುತ್ತಿದ್ದಾರೆ.

‘ನೀನ್ ನಿಂಡೊ ಬೇಜಾರ್ ಚೆನ್ನದ್ ತಪ್ಪಲ್ಲ ಚಂಜಾಯಿ
ಅವೊಂಡೊ ಕಾದ್‌ಲಿನ್ನೊ
ಬ್ಲೂಟೂತ್ ನೋಕಾತದ್ ತಪ್ಪು’
(ನೀನು ನಿನ್ನ ಬೇಸರ ಹೇಳಿಕೊಂಡದ್ದು ತಪ್ಪಲ ಗೆಳೆಯಾ
ಅವನ ಕಿವಿಯಲ್ಲಿರುವ ಬ್ಲೂಟೂತ್ ನೋಡದಿರುವುದು ತಪ್ಪು)
ಪರಸ್ಪರ ಮಾತನಾಡದಿರುವುದು ಆಧುನಿಕ ಕಾಲದ ಇನ್ನೊಂದು ದೋಷ, ಒಬ್ಬನ ನೋವನ್ನು, ಕಷ್ಟವನ್ನು ಕೇಳುವಷ್ಟು ಪುರುಸೊತ್ತಾಗಲಿ, ವ್ಯವಧಾನವಾಗಲಿ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಆಧುನಿಕ ಸೌಲಭ್ಯಗಳು ಮನುಷ್ಯರು ಪರಸ್ಪರ‌ ನೋವು ನಲಿವುಗಳನ್ನು ಆಲಿಸದಷ್ಟು ದೂರ ಮಾಡಿಬಿಟ್ಟಿವೆ. ಕೇಳಿಸಿಕೊಳ್ಳುವುದು ಅಥವಾ ಆಲಿಸುವುದು ಬಹಳ ದೊಡ್ಡ ಮೌಲ್ಯವಾಗಿದೆ. ಕೇಳಿಸಿಕೊಳ್ಳುವವರು ಅಥವಾ ಶ್ರೋತೃಗಳು ಇಲ್ಲದಿದ್ದರೆ ನಸೀಅತ್ ನಡೆಯುವುದಿಲ್ಲ.‌ ಆದರೆ, ಆಧುನಿಕ ಮನುಷ್ಯನ ಕಿವಿಯಲ್ಲಿ ಯಾವತ್ತು ನೋಡಿದರೂ ಬ್ಲೂಟೂತ್ ಇರುವುದರಿಂದ ಅವನು ನಸೀಅತ್ ಗೆ, ಸಹ ಮನುಷ್ಯರ ಕಷ್ಟಗಳನ್ನು ಆಲಿಸುವುದರಿಂದ ವಿಮುಖನಾಗುತ್ತಿದ್ದಾನೆ.‌ ಈ ಬಗೆಯ ಮೌಲ್ಯಪತನದ ಬಗ್ಗೆ ಕವಿಗೆ ಬೇಸರವಿದೆ. ಆದ್ದರಿಂದ ಅವನು ದುಃಖಿತನಿಗೆ ಸಾಂತ್ವನ ಮಾಡುತ್ತಿದ್ದಾನೆ, ಆದರೆ ಆ ಸಾಂತ್ವನವೇ ವಿಡಂಬನೆಯ ರೂಪದಲ್ಲಿರುವ ಇಲ್ಲಿನ ಸಾಲುಗಳ ವಿಶೇಷತೆ. ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದೂ ಕಷ್ಟ ಹೇಳಲು ಹೋದದ್ದು ನಿನ್ನ ತಪ್ಪು ಅಲ್ಲ, ಅವನೇಕೆ ಕೇಳಿಸಿಕೊಳ್ಳುತ್ತಿಲ್ಲ ಎಂಬುದನ್ನು ನೋಡದಿರುವುದು ನಿನ್ನ ತಪ್ಪು ಎಂದು ಕವಿ ಹೇಳುತ್ತಿರುವುದರ ಹಿಂದೆ ಆಧುನಿಕ ಸೌಲಭ್ಯಗಳ ದಾಸನಾಗುತ್ತಿರುವುದೇ ಮನುಷ್ಯನೊಳಗಿನ ಮೌಲ್ಯಪತನಕ್ಕೆ ಕಾರಣ ಎನ್ನುವ ಧ್ವನಿ ಕೇಳಿಸುತ್ತದೆ.

ಇಂತಹ ಹಲವಾರು ವಿಚಾರ ಪ್ರಚೋದಕ ಕವನಗಳು ಈ ಸಂಕಲನದಲ್ಲಿವೆ.‌ ಒಮ್ಮೆ ಓದಿದರೆ ಮತ್ತೆ ಓದಬೇಕೆನಿಸುವಷ್ಟು ಸರಳ ಸುಂದರವಾಗಿವೆ. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಈ ಕವನ ಸಂಕಲನ ಒಂದು ಉತ್ತಮ ಕೊಡುಗೆ ಎನ್ನಬಹುದು.

– ಸ್ವಾಲಿಹ್‌ ತೋಡಾರ್


ವಿಜ್ಞಾನ, ತತ್ವಜ್ಞಾನ ಹಾಗೂ ಸಾಹಿತ್ಯ: ಭಾಷೆ ರೂಪಿಸುವ ಪ್ರಪಂಚಗಳು

ಸುಂದರ್‌ ಸರುಕ್ಕೈ/ಮಶ್ಕೂರ್‌ ಖಲೀಲ್

ಉ: ಕ್ಯಾಲಿಕಟ್‌ಗೆ ಬರುವುದೆಂದರೆ ನನಗ್ಯಾವತ್ತೂ ಇಷ್ಟ. ಇಲ್ಲಿರುವ ವಿವಿಧ ಗುಂಪುಗಳ ಜೆತಗೆ ಮಾತಾಡುವುದು ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಅನುಭವ ನೀಡುತ್ತದೆ. ನನ್ನ ಪ್ರಕಾರ, ವಿಜ್ಞಾನದ ವಿಭಾಗಗಳು ಜಗತ್ತನ್ನು ಗ್ರಹಿಸಲು ನಾವೇ ನಿರ್ಮಿಸಿಕೊಂಡಿರುವ ಕೆಲವು ಚೌಕಟ್ಟುಗಳಾಗಿವೆ. ಭೌತವಿಜ್ಞಾನದಲ್ಲಿ ನಾನು ಆಸಕ್ತನಾಗಿದ್ದ ಸಂದರ್ಭದಲ್ಲಿ ಅದು ಜಗತ್ತನ್ನು ಗ್ರಹಿಸುವ ಒಂದು ಮಾರ್ಗ ಎಂದು ಭಾವಿಸಿದ್ದೆ. ಈಗಲೂ ಅಷ್ಟೇ.

ಭೌತವಿಜ್ಞಾನ ಹಾಗೂ ಗಣಿತ ಬಹಳ ನಿಕಟವಾಗಿವೆ. ಅವುಗಳ ಆಸ್ವಾದನೆ ನನಗೆ ಇಷ್ಟ. ಆದರೆ, ಭೌತವಿಜ್ಞಾನದ ವೃತ್ತದೊಳಗೆ ನಿಂತುಕೊಂಡು ಕಂಡುಹಿಡಿಯಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳಿವೆಯೆಂದು ನನಗೆ ಕ್ರಮೇಣ ಅನಿಸತೊಡಗಿತು. ಬಾಲ್ಯದಲ್ಲೆ ಸಾಹಿತ್ಯದಲ್ಲಿ ನನಗೆ ಒಲವಿತ್ತು. ಹಾಗಾಗಿ, ಸಾಹಿತ್ಯ ಹಾಗೂ ತತ್ವಜ್ಞಾನ ಜಗತ್ತಿನ ಬಗ್ಗೆ ಆಲೋಚಿಸಲು ಬೇರೊಂದು ಚಿಂತನಾ ಚೌಕಟ್ಟನ್ನು ಒದಗಿಸಿತು. ತತ್ವಜ್ಞಾನದ ಕಡೆಗಿನ ಪಯಣವನ್ನು ನನ್ನ ಚಿಂತನೆಯ ಸಹಜ ಹಂತವೆಂದೆ ನಾನು ಭಾವಿಸಿದ್ದೇನೆ. ಆದರೆ, ಯಾವ ಕ್ಷೇತ್ರಕ್ಕೆ ಹೋಗುವುದಿದ್ದರೂ ಅದನ್ನು ಸಾಧ್ಯವಾಗಿಸುವ ಕೆಲವು ಸಾಂಸ್ಥಿಕ ಅಂಶಗಳಿವೆ. ಭೌತವಿಜ್ಞಾನದಲ್ಲಿ ಪಿಎಚ್ಡಿ ಮಾಡುವಾಗಲೇ ತತ್ವಚಿಂತನೆ ಕಲಿಯುವ ಅವಕಾಶ ಸಿಕ್ಕಿತ್ತು. ಅದುವೆ ಈ ಪಲ್ಲಟಕ್ಕೆ ನಾಂದಿ ಹಾಡಿತು.

ಉ: ಸ್ವಾರಸ್ಯಕರವಾದ ಪ್ರಶ್ನೆಯಿದು. ಭೌತದಿಂದ ತತ್ವಕ್ಕೆ ಪಲ್ಲಟಗೊಂಡಾಗ ಸ್ವತಂತ್ರವಾದ ಸಮಸ್ಯೆಗಳೊಂದಿಗೆ ನಾನು ಅನುಸಂಧಾನ ನಡೆಸಿದೆ ಎಂದು ಹೇಳುವ ಹಾಗಿಲ್ಲ. ಪ್ರತಿ ವಿಭಾಗಕ್ಕೂ ಅದರದ್ದೇ ಆದ ಸ್ವಾತಂತ್ರ್ಯ ಹಾಗೂ ಮಿತಿಗಳಿವೆ. ಭೌತವಿಜ್ಞಾನದಲ್ಲಿ ಬಹಳ ಸ್ವಾರಸ್ಯಕರ ಪ್ರಶ್ನೆಗಳಿಗೆ ಸಾಧ್ಯತೆ ಇದೆ. ಅದಾಗ್ಯೂ, ಆ ನೆಲೆಗಟ್ಟಿನ ಸಂಶೋಧನೆಗಳು ನನ್ನ ಕುತೂಹಲವವನ್ನು ಪೂರ್ಣವಾಗಿ ತೃಪ್ತಿಪಡಿಸಲಿಲ್ಲ. ಮನುಷ್ಯರು, ಸಂಸ್ಕೃತಿಗಳು ಹಾಗೂ ಸಮಾಜಗಳ ಬಗೆಗಿನ ಅಧ್ಯಯನದಲ್ಲಿ ನನಗೆ ಹೆಚ್ಚಿನ ಒಲವಿತ್ತು. ನಾವು ಬದುಕುವ ಜಗತ್ತಿನ ಸಾಮಾಜಿಕ ಲೋಕ ಹಾಗೂ ವೈಯುಕ್ತಿಕ ಮನೋವಿಜ್ಞಾನವನ್ನು ಅರ್ಥೈಸುವ ಪ್ರಯತ್ನ ಅದಾಗಿತ್ತು. ಆ ಪ್ರಶ್ನೆಗಳು ನನ್ನ ವೈಜ್ಞಾನಿಕ ಅಧ್ಯಯನಗಳ ಮೇಲೂ ಪ್ರಭಾವ ಬೀರಿತು. ವೈಜ್ಞಾನಿಕ ಅಧ್ಯಯನ ಬಹಳ ಕ್ಲಿಷ್ಟಕರವಾದ ಪ್ರವೃತ್ತಿ ಎನ್ನುವುದನ್ನೂ ನಾವಿಲ್ಲಿ ತಿಳಿಯಬೇಕಿದೆ. ಅತಿ ಏಕಾಗ್ರತೆ ಹಾಗೂ ನಿರಂತರ ಪರಿಶ್ರಮ ಅದಕ್ಕೆ ಅವಶ್ಯಕ. ನುರಿತ ವಿಜ್ಞಾನಿಗಳು ಕೂಡಾ ಬಹುತೇಕ ವೇಳೆ ತಮ್ಮ ಆಸಕ್ತಿಕರ ಕ್ಷೇತ್ರಗಳನ್ನು ಕೈಬಿಡಬೇಕಾಗಿ ಬರುತ್ತದೆ. ಒಂದು ಹಂತದಲ್ಲಿ ನನಗೂ ಅದು ಅರ್ಥವಾಯಿತು. ಆ ತ್ಯಾಗಕ್ಕೆ ನಾನು ಸಿದ್ಧನಾದದ್ದು ಭೌತವಿಜ್ಞಾನಕ್ಕಲ್ಲ, ತತ್ವಜ್ಞಾನಕ್ಕಾಗಿ.

ಭೌತವಿಜ್ಞಾನದ ಮಾದರಿಗಳನ್ನು ನಿರ್ಮಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಾದ ಚೈತನ್ಯವನ್ನು ಖರ್ಚು ಮಾಡುವ ಆಸಕ್ತಿ ನನಗಿರಲಿಲ್ಲ. ಆದರೆ, ತತ್ವಜ್ಞಾನ ಕಲಿಯಲು, ಬರೆಯಲು ಹಾಗೂ ಆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಪಡಲು ನಾನು ತಯಾರಿದ್ದೆ. ಆ ಕ್ಷೇತ್ರ ನನ್ನನ್ನು ಬಹಳ ಆಕರ್ಷಿಸಿತ್ತು. ಒಂದು ಆಯಾಮದಲ್ಲಿ ವಿಜ್ಞಾನವನ್ನು ಗೌರವಿಸಲು ಹಾಗೂ ಮೌಲ್ಯಯುತವಾಗಿ ಕಾಣಲು ತತ್ವಜ್ಞಾನ ನನಗೆ ಸಹಾಯ ಮಾಡಿದೆ ಎನ್ನಬಹುದು. ಯಾವುದೇ ವಿಷಯದ ಮೌಲಿಕತೆಯನ್ನು ನಾವು ಗ್ರಹಿಸುವುದು ತತ್ವಜ್ಞಾನದ ಮೂಲಕವೇ. ವಿಜ್ಞಾನ ವಿಕಾಸವಾದದ್ದು ಹೇಗೆ, ಅದು ಯಾಕೆ ನಿಗದಿತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೆಲ್ಲಾ ಅರ್ಥ ಮಾಡಲು ಆರಂಭಿಸಿದೆ. ವಿಜ್ಞಾನದ ಇತಿಹಾಸ ಹಾಗೂ ತತ್ವಜ್ಞಾನ ಬಹಳ ಆಕರ್ಷಕ ಲೋಕವಾಗಿ ನನ್ನ ಮುಂದೆ ಬಂದು ನಿಂತಿತು.

ಆಮೇಲೆ ʼವಿಜ್ಞಾನದ ಸಮಾಜವಿಜ್ಞಾನʼವನ್ನು ಓದಲು ಆರಂಭಿಸಿದಾಗ ವಿಜ್ಞಾನ ಸೇರಿದಂತೆ ಮನುಷ್ಯನ ಯಾವುದೇ ಕೆಲಸಗಳು ಎಷ್ಟು ಸಂಕೀರ್ಣತೆ ಹಾಗೂ ಸಮೃದ್ಧತೆಯಿಂದ ಕೂಡಿದೆ ಎನ್ನುವ ವಿಚಾರ ಸ್ಪಷ್ಟವಾಯಿತು. ತತ್ವಜ್ಞಾನದಲ್ಲಿನ ಸಂಕೀರ್ಣತೆ ವಿಜ್ಞಾನದಲ್ಲಿರುವುದಕ್ಕಿಂತ ಭಿನ್ನವಾದದ್ದು. ಸಾಹಿತ್ಯರಚನೆ ಎನ್ನುವುದು ಸದಾ ನನ್ನಲ್ಲಿದ್ದ ಆಗ್ರಹ. ತತ್ವಜ್ಞಾನದಲ್ಲಿ ಬರಹದೊಂದಿಗೆ ನಾನು ತೋರುತ್ತಿದ್ದ ಮನೋಭಾವವೇ ಸಾಹಿತ್ಯದ ಕಡೆಗೆ ನನ್ನನ್ನು ಆಕರ್ಷಿಸಿದ್ದು ಎಂದು ನನಗೆ ತೋರುತ್ತದೆ. ಫಿಕ್ಷನ್‌ ಹಾಗೂ ತತ್ವಜ್ಞಾನವನ್ನು ಬರೆಯುವುದು ಸಮಾನವಾದ ಅನುಭವ ನೀಡುವ ಹಾಗೆ ನನಗೆ ಭಾಸವಾಗಿದೆ. ಹಾಗಾಗಿ ಸಾಹಿತ್ಯ ನನಗೆ ಸ್ವಲ್ಪ ಅಧಿಕ ಸ್ವಾತಂತ್ರ್ಯವನ್ನು ನೀಡಿದೆ ಎನ್ನಬಹುದು.
ನಾವು ಮಾತನಾಡಲಿಚ್ಚಿಸಿರುವ ಪುಸ್ತಕದ ಹಿನ್ನೆಲೆಯಲ್ಲಿ ಮಾತಾಡುವುದಾದರೆ , ಒಂದು ದಾರ್ಶನಿಕ ಯಾ ಅಕಾಡೆಮಿಕ್‌ ರಚನೆಯಲ್ಲಿ ಸಾಧ್ಯವಾಗದ ರೀತಿಯಲ್ಲಿ ಧರ್ಮದ ಬಗ್ಗೆ ಬರೆಯುವ ಅವಕಾಶ ನನಗೆ ದೊರಕಿದೆ. ಜತೆಗೆ, ಭಾಷೆಯ ಸುಪ್ರಧಾನ ಕಾರ್ಯದ ಕಡೆಗೆ ಫಿಕ್ಷನ್‌ ನನ್ನನ್ನು ಮರಳಿಸಿದೆ. ಭಾಷೆ ಎನ್ನುವುದು ಕೇವಲ ಸಿದ್ಧಾಂತಗಳು, ಸತ್ಯಗಳು ಹಾಗೂ ಜ್ಞಾನಗಳನ್ನು ವಿನಿಮಯಿಸುವ ಮಾರ್ಗ ವಷ್ಟೇ ಅಲ್ಲ. ಮನುಷ್ಯನೊಳಗೆ ಆಳವಾದ ಅನುಭವಗಳನ್ನು ಸೃಜಿಸುವ ಶಕ್ತಿಯದು. ನನ್ನ ಅನುಭವದಲ್ಲಿ ಫಿಕ್ಷನ್‌ ಎನ್ನುವುದು ಕಥೆ ಹೇಳುವ ಪ್ರಕ್ರಿಯೆಯಾಚೆಗೆ ಭಾಷೆಯಿಂದ ಏನೇನೆಲ್ಲಾ ಸಾಧ್ಯ ಎನ್ನುವ ಪರೀಕ್ಷೆ ಕೂಡಾ ಹೌದು. ಭಾಷೆಯ ಮೂಲಕ ಮಾನವನನ್ನು ಹೇಗೆಲ್ಲಾ ಸ್ಪರ್ಶಿಸಬಹುದು, ಆತನನ್ನು ಹೇಗೆಲ್ಲಾ ಇರವಿನ ಅಂಚಿಗೆ ದೂಡಬಹುದೆನ್ನುವ ಅನ್ವೇಷಣೆ.

ನನ್ನ ಜೀವನದಲ್ಲಿ ವಿವಿಧ ಹಂತಗಳಿತ್ತು ಎನ್ನುವುದು ನಿಜವಾದರೂ ಸಾಹಿತ್ಯ ತತ್ವಜ್ಞಾನದ ನಂತರ ಬಂದದ್ದಲ್ಲ. ಸದಾ ಅದು ನನ್ನಲ್ಲಿತ್ತು. ನಾಟಕಗಳೂ ಸೇರಿದಂತೆ ಆಮೇಲೆ ಪ್ರಕಟಿಸಿದ ಕಥಾ ಸಾಹಿತ್ಯದ ಕೆಲವು ಭಾಗಗಳೆಲ್ಲ ಬಹಳ ಹಿಂದೆಯೇ ಬರೆದದ್ದು. ಅವುಗಳನ್ನು ಪ್ರಕಟಿಸಲು ಪ್ರಕಾಶಕರು ದೊರಕುತ್ತಿದ್ದಾರೆನ್ನೆವುದೇ ಸದ್ಯ ಇರುವ ಬದಲಾವಣೆ. ಅದು ಬಹುಷಃ ಬರಹಕ್ಕಿಂತಲೂ ಮುಖ್ಯವಾದದ್ದು.

ಉ: ವಿಜ್ಞಾನದ ಬಗೆಗಿನ ಮುಖ್ಯವಾದ ಪ್ರಶ್ನೆಯ ಕಡೆಗೆ ತಾವು ಬೊಟ್ಟು ಮಾಡಿದ್ದೀರಿ. ವಿಜ್ಞಾನ ವಿಶಿಷ್ಟವಾದ ಒಂದು ವಿವರಣಾಮಾದರಿಯಲ್ಲಿ ಗಮನ ಕೇಂದ್ರೀಕರಿಸುತ್ತದೆ ಎನ್ನುವುದ ಸರಿಯೇ. ಅದರಲ್ಲೂ ಬಹಳ ಮುಖ್ಯವಾಗಿ ಅಳೆಯುವಿಕೆಯನ್ನು (quantification) ಬಳಸಿಕೊಂಡು ವಿದ್ಯಮಾನಗಳನ್ನು ಅಲ್ಲಿ ವಿವರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅವಲೋಕಿಸಿದರೆ ವಿಜ್ಞಾನ ಸ್ಲಲ್ಪ ʼವಸ್ತುನಿಷ್ಠʼವಾದ ಪ್ರಕ್ರಿಯೆ ಎನ್ನಬಹುದು. ಒಂದು ವಿದ್ಯಮಾನವನ್ನು ಅಳೆಯುವ ಮಾಪನವನ್ನು ಬಳಸಲು ಸಾಧ್ಯವಾದಲ್ಲಿ ಆ ಚರ್ಚೆಗೆ ವಿಶೇಷ ಸ್ವಭಾವ ಸಿಗುತ್ತದೆ. ಆದರೆ, ಅದರಿಂದ ಅಸ್ಪಷ್ಟತೆ, ಆರ್ಥಶಂಕೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.

ವಾಸ್ತವದಲ್ಲಿ, ನಾನು ಬರೆದ ಮೊದಲ ತಾತ್ವಿಕ ಪುಸ್ತಕವಾಗಿರುವ “Translating the World Science and Language” ಎಂಬ ಕೃತಿ ಕೂಡಾ ವಿಜ್ಞಾನ ಹಾಗೂ ಗಣಿತದಲ್ಲಿ ಅರ್ಥ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನೇ ಚರ್ಚೆಗೆ ಕೈಗೆತ್ತಿಕೊಂಡಿದೆ. ಸಾಹಿತ್ಯದೊಂದಿಗೆ ಮಾತ್ರ ಥಳಕು ಹಾಕಲಾಗುವ ರೂಪಕಾತ್ಮಕ ಭಾವಗಳು ಗಣಿತ ಹಾಗೂ ವಿಜ್ಞಾನದ ಬರಹಗಳ ಅನಿವಾರ್ಯ ಅಂಶವೂ ಹೌದೆಂದು ನಾನು ಅದರಲ್ಲಿ ವಾದಿಸಿದ್ದೇನೆ. ವಿಜ್ಞಾನ ಭಾಷೆಯನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಬಗೆಗಿನ ಅತ್ಯಂತ ಪ್ರಸಕ್ತವಾದ ಪ್ರಶ್ನೆಯಿದು. ಅಸ್ಪಷ್ಟತೆ (ambiguity) ಎನ್ನುವ ಸಮಸ್ಯೆ ಸಾಹಿತ್ಯ ಹಾಗೂ ತತ್ವಚಿಂತನೆಗೆ ಮಾತ್ರ ಸೀಮಿತವಾದದ್ದಲ್ಲ. ಮೂಲಭೂತವಾಗಿ ಅದು ಭಾಷೆಗೆ ಸಂಬಂಧಪಟ್ಟದ್ದು. ಇಂಗ್ಲಿಷ್‌, ಮಲಯಾಳಂ ಸಹಿತ ಇರುವ ಭಾಷೆಗಳಲ್ಲೆಲ್ಲಾ ಈ ಅರ್ಥಶಂಕೆ ಇದೆ. ಸರಳವಾಗಿ ಹೇಳುವುದಾದರೆ, ಪದಗಳಿಗೆ ಏಕಕಾಲದಲ್ಲಿ ಬೇರೆ ಬೇರೆ ಅರ್ಥಗಳು ಇರಬಹುದು. ಇದು ಭಾಷೆಯ ಬಗೆಗಿನ ತಾತ್ವಿಕವಾದ ಮೌಲಿಕ ಪ್ರಶ್ನೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಒಂದು ಪದಕ್ಕೆ ಸ್ವಯಂ ಸ್ಥಿರವಾದ ಅರ್ಥವಿದೆಯೇ? ಅದಕ್ಕೆ ಅರ್ಥ ಸಿಗುವುದು ಒಂದು ವಾಕ್ಯದಲ್ಲಿ ಯಾ ಒಂದು ಸಂದರ್ಭದಲ್ಲಿ ಮಾತ್ರವೇ? ಇದೊಂದು ಬಹಳ ಮೌಲಿಕ ಪ್ರಶ್ನೆ.

ಉ: ಮೂಲಭೂತವಾದ ಅಂತಹದ್ದೊಂದು ಪ್ರಶ್ನೆಯನ್ನು ನನ್ನ ಕಾದಂಬರಿಗಳಲ್ಲಿ ವಿವಿಧ ರೀತಿಯಲ್ಲಿ ಶೋಧಿಸಿದ್ದೇನೆ. ಆಂಬಿಗ್ಯುಟಿ ಎನ್ನುವ ಪರಿಕಲ್ಪನೆಯ ಸಾರದಲ್ಲಿರುವುದೂ ಇದುವೆ. ಗಣಿತವು ವಿಜ್ಞಾನದ ಭಾಷೆ ಎನ್ನುವ ವಿಜ್ಞಾನಿಗಳ ಮಾತಿನ ತಾತ್ಪರ್ಯ ಅಳತೆಗಳು ಹಾಗೂ ಲೆಕ್ಕಗಳು ಅಸ್ಪಷ್ಟತೆಯನ್ನು ಕಡಿಮೆಗೊಳಿಸುತ್ತದೆ ಎನ್ನುವುದೇ. ಆದರೆ ಇದು ಪೂರ್ಣವಾಗಿ ಸರಿ ಎನ್ನಲಾಗದು. ವಾಸ್ತವಲ್ಲಿ ಒಂದೇ ಚಿಹ್ನೆಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥ ಸ್ಫುರಿಸಲು ಸಾಧ್ಯವಾಗುವಲ್ಲಿಯೇ ವೈಜ್ಞಾನಿಕ ಸಿದ್ದಾಂತ ನಿರ್ಮಾಣದ ಶಕ್ತಿ ಅಡಗಿರುವುದು. ವಿಜ್ಞಾನ ಅಷ್ಟೂ ಶಕ್ತಿಯುತ ಹಾಗೂ ಉತ್ಪಾದನಾಶೀಲ ಆಗಿರುವುದು ಇದೆ ಕಾರಣದಿಂದ. ಇದನ್ನು ವಿವಿಧ ರೀತಿಯಲ್ಲಿ ಗ್ರಹಿಸಲು ಸಾಧ್ಯವಿದೆ. ಒಂದು ಪದ ಇಲ್ಲವೇ ಚಿಹ್ನೆಗೆ ಒಂದೇ ಒಂದು ಸ್ಥಿರವಾದ ಅರ್ಥವಿದೆ ಎನ್ನುವುದು ಒಂದನೆಯದ್ದು. ಇಲ್ಲ ಬೇರೆ ಬೇರೆ ಅರ್ಥ ಇದೆ ಎನ್ನವುದು ಎರಡನೆಯದ್ದು. ಮೂರನೆಯದ್ದು, ಚಿಹ್ನೆಯನ್ನು ಶೂನ್ಯವಾಗಿಟ್ಟುಕೊಂಡು ತಮಗೆ ಬೇಕಾದ ಅರ್ಥವನ್ನು ಆರೋಪಿಸುವ ಗಣಿತದ ಪ್ರತಿಮಾತ್ಮಕ ವಿದ್ಯೆ. ವೈಜ್ಞಾನಿಕ ಸಿದ್ಧಾಂತ ನಿರ್ಮಾಣದ ಕಾರ್ಯವಿಧಾನ ಮೂರನೆಯ ತರದ್ದು. ವಿಜ್ಞಾನ ಅಷ್ಟೂ ಸೃಜನಶೀಲ ಹಾಗೂ ಶಕ್ತಿಯುತ ಆಗುವುದು ಇದೇ ಕಾರಣದಿಂದ. ಹಾಗಾಗಿ, ವಿಜ್ಞಾನದಲ್ಲಿ ಕೆಲಸ ಮಾಡುವ ವೇಳೆಯಲ್ಲೂ ಬರಹ ನನಗೆ ಸವಾಲಾಗಿ ಪರಿಣಮಿಸಲಿಲ್ಲ.
ವಿಜ್ಞಾನ ಹಾಗೂ ಇತರ ಕ್ಷೇತ್ರಗಳು ಭಿನ್ನ ಎನ್ನುವ ಪ್ರಜ್ಞೆ ನನಗೆ ಮೊದಲೇ ಇತ್ತು. ವಿಜ್ಞಾನ ಚರ್ಚಿಸುವುದು ಕೆಲವು ಪ್ರತ್ಯೇಕ ವಸ್ತುಗಳನ್ನು ಮಾತ್ರ; ಇಲೆಕ್ಟ್ರೋನ್‌ಗಳ ಕಾರ್ಯನಿರ್ವಹಣೆ, ಪರಮಾಣು ರಚನೆ, ಗುರುತ್ವಾಕರ್ಷಣೆ ಇತ್ಯಾದಿಗಳು. ವಿಜ್ಞಾನದ ವಿಷಯ ವ್ಯಾಪ್ತಿ ಇರುವುದು ಅಷ್ಟೇ. ಆ ವಿಷಯಗಳಲ್ಲಿ ಒಂದು ಪ್ರತ್ಯೇಕ ಮಾದರಿಯನ್ನು ಮಾತ್ರ ಬಳಸಿಕೊಂಡು ಇಲ್ಲವೇ ಬೇರೆ ಮಾದರಿಯನ್ನು ಬಳಸಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯ ಇದೆ. “ಗುರುತ್ವಾಕರ್ಷಣೆ ಇನ್ನೊಂದಾಗಿದ್ದಲ್ಲಿ ಏನಾಗುತ್ತಿತ್ತು? ಎಂಬ ಆಲೋಚನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಮಾದರಿಯನ್ನು ನಿರ್ಮಿಸಿ ಫಲಿತಾಂಶಗಳನ್ನು ಶೋಧಿಸಬಹುದು. ಅದಕ್ಕೆ ಬೇರೆ ಖರ್ಚುಗಳೇನೂ ಬರುವುದಿಲ್ಲ. ಆದರೆ, ನಿಮ್ಮ ಬಗ್ಗೆ, ಮನುಷ್ಯ ಸಮುದಾಯಗಳ ಬಗ್ಗೆ ಮಾತನಾಡಲು ಬಯಸಿದರೆ ಮಾತ್ರ ನನಗಲ್ಲಿ ಸ್ವಾತಂತ್ರ್ಯವಿಲ್ಲ. ಅಲ್ಲಿ ಅರ್ಥಗಳು ಬಹಳ ನಿಯಂತ್ರಿತವಾದುದು. ಒಂದು ಕಲ್ಲಿನ ಬಗ್ಗೆ ನನಗೆ ಏನು ಬೇಕಾದರೂ ಹೇಳಬಹುದು. ಗುರುತ್ವಾಕರ್ಷಣವು ೧/r೨ ಆಗಿದೆ ಎMದು ನ್ಯೂಟನ್‌ ಹೇಳಿದ್ದಕ್ಕೆ ವಿರುದ್ಧವಾಗಿ ಅದು ೧/r೩ ಎಂದೋ ೧/r೨.೦೦೩ ಎಂದೋ ನಾನು ವಾದಿಸುವ ಅವಕಾಶ ಅಲ್ಲಿದೆ. ಆ ವಾದದ ಫಲಿತಾಂಶಗಳನ್ನು ಪರಿಶೋಧಿಸಲು ಒಂದು ಮಾದರಿಯನ್ನೂ ನಿರ್ಮಿಸಬಹುದು. ಅದೇ ವೇಳೆ, ಮನುಷ್ಯರ ಕುರಿತು, ಕಾದಂಬರಿಯೊಂದರ ಪಾತ್ರದ ಕುರಿತು ಅಥವಾ ಸಮಾಜವಿಜ್ಞಾನದಲ್ಲಿ ಒಂದು ಸಮಾಜದ ಕುರಿತು ಬರೆಯುವಾಗ ನನಗೆ ಬಹಳ ಹೆಚ್ಚು ನಿಯಂತ್ರಣಕ್ಕೆ ವಿಧೇಯನಾಗಬೇಕಾಗುತ್ತದೆ.

ಉ: ನನ್ನ ಅಭಿಪ್ರಾಯದಲ್ಲಿ ವಿಜ್ಞಾನ ಹೆಚ್ಚು ಸೃಜಶೀಲತೆ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತದೆ. ಇದನ್ನು ಸ್ಪಷ್ಟಪಡಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಒಂದು ಸರಳವಾದ ಪ್ರಶ್ನೆಯನ್ನು ಕೇಳುತ್ತಿರುತ್ತೇನೆ. “ವಿಜ್ಞಾನ” ಎಂಬ ಪದದ ಮೂಲಾರ್ಥ ಅರಿವು ಎಂದಾದರೂ ಇಂದಿನ ವಿಜ್ಞಾನ ಮುಖ್ಯವಾಗಿ ಸಂಶೋಧನೆಗೆ ಸಂಬಂಧಪಟ್ಟಿದೆ. ಹೊಸ ಅರಿವಿನ ಉತ್ಪಾದನೆಯನ್ನೇ ವಿಜ್ಞಾನ ಎಂದು ಸೂಚಿಸಲಾಗುತ್ತಿದೆ. ಅದು ಕೇವಲ ಜ್ಞಾನ ವಿನಿಮಯವಲ್ಲ. ನೀವು ವಿಜ್ಞಾನಿಯಾಗಿದ್ದಲ್ಲಿ ಪ್ರಕಟಿಸುತ್ತಾ ಇರಬೇಕು. ಹೊಸ ಜ್ಞಾನದ ಉತ್ಪಾದನೆಯನ್ನೇ ಪ್ರಕಟಣೆ ಎನ್ನುವುದು. ಇಂದು ಹೊಸ ಅರಿವಿನ ಉತ್ಪಾದನೆ ಎನ್ನುವುದು ಒಂದು ಕೈಗಾರಿಕೆಯಾಗಿ ಮಾರ್ಪಟ್ಟಿದೆ, ಬೃಹತ್‌ ಕೈಗಾರಿಕೆ. ಪ್ರತಿವರ್ಷವೂ ಹೊರಬರುವ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆ ಲಕ್ಷ ದಾಟಿದೆ. ಪ್ರತಿ ಪ್ರಬಂಧವೂ ಹೊಸ ಅರಿವಿನ ಒಂದಂಶವನ್ನುಸೇರಿಸುತ್ತಾ ಬರುತ್ತದೆ. ಆದರೆ, ನಾವು ನಿಜವಾಗಿಯೂ ಅಷ್ಟು ಅರಿವನ್ನು ಸೃಜಿಸುತ್ತಿದ್ದೇವೆಯೇ? ಜ್ಞಾನದ ಸೃಷ್ಟಿ ಎನ್ನುವ ಕಡ್ಡಾಯವಾದ ಪ್ರಕ್ರಿಯೆಯ ಮೂಲಕ ನಾವು ಹಾದು ಹೋಗುತ್ತಿದ್ದೇವೆಯೇ? ಇದು ನನ್ನ ಪ್ರಶ್ನೆ. ಯಾಕೆಂದರೆ, ಪ್ರಪಂಚದ ಕುರಿತು ನಿಮಗೆ ಏನು ಬೇಕಾದರೂ ಊಹಿಸಬಹುದು. ಅದನ್ನು ದಾಖಲಿಸುವ ಭಾಷೆ ಹಾಗೂ ಲೆಕ್ಕಾಚಾರದ ನಿಯಮಗಳು ಮಾತ್ರ ನಿಮ್ಮ ಮುಂದಿರುವ ಏಕಮಾತ್ರ ಪರಿಮಿತಿ. ಅದರಾಚೆಗೆ, ಅತ್ಯಂತ ಮೂಲಭೂತವಾದ ವಿಜ್ಞಾನದ ಬಾಗಿಲು ತೆರೆದೇ ಇದೆ. ಐನ್‌ಸ್ಟೈನ್‌ ತನ್ನ ಕಾಲದ ಪ್ರಯೋಗಗಳ ಫಲಿತಾಂಶಗಳನ್ನು ಮತ್ತೊಮ್ಮೆ ಓದಿಕೊಂಡು ದೇಶ-ಕಾಲಗಳ ಅರ್ಥವನ್ನೇ ನವೀಕರಿಸಿದರು. ಇದು ಅತ್ಯಂತ ಧೈರ್ಯಶಾಲಿ ಹಾಗೂ ದಾರ್ಶನಿಕವಾದ ಸಾಹಿತ್ಯಿಕ ವಿದ್ಯಮಾನವೂ ಹೌದು. ವಿಜ್ಞಾನದ ಔಪಚಾರಿಕ ಭಾಷೆ ಹಾಗೂ ವೈಜ್ಞಾನಿಕ ಚೌಕಟ್ಟುಗಳ ಮೂಲಕ ಅದು ನಿಯಂತ್ರಣಕ್ಕೆ ಒಳಗಾದದ್ದು ಆಮೇಲೆ.

ಸಮಾಜವಿಜ್ಞಾನ ಹಾಗೂ ಅದರ ಸಿದ್ಧಾಂತ ನಿರ್ಮಾಣದಲ್ಲಿ ಇಷ್ಟು ಸ್ವಾತಂತ್ರ್ಯ ಲಭ್ಯವಲ್ಲ ಎನ್ನವುದು ನನ್ನ ಅಭಿಪ್ರಾಯ. ಅನೇಕ ಕಾರಣಗಳಿಂದಾಗಿ ಅಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ಒಂದು ವಸ್ತುವಿನ ವಿಚಾರದಲ್ಲಿ ನಮಗೇನನ್ನೂ ಮಾಡಬಹುದು. ಒಂದು ಕಲ್ಲನ್ನು ತೆಗೆಯಬಹುದು, ಅದನ್ನು ಒಡೆಯಬಹುದು,ಹೊತ್ತಿಸಬಹುದು, ಎರಕಹೊಯ್ಯಬಹುದು. ಆದರೆ, ಮಾನವ ಸಮಾಜ ಹಾಗೂ ಜೀವಜಾಲಗಳ ನಡುವೆ ಅಂತಹ ವಿಧಾನವನ್ನು ಅನ್ವಯಿಸುವುದು ಅಸಾಧ್ಯ. ಸಮಾಜ ವಿಜ್ಞಾನದಲ್ಲಿನ ನಿಯಂತ್ರಣಗಳನ್ನು ನಮಗೆ ಈ ಮೂಲಕ ತಿಳಿಯಬಹುದು. ಹಾಗಾಗಿ, ನಿಯಂತ್ರಿತವಾದವುಗಳೊಳಗೆ ನಿಂತುಕೊಂಡೆ ಅಲ್ಲಿ ಅರ್ಥವಂತಿಕೆ ಇರುವ ಅರಿವನ್ನು ಉತ್ಪಾದಿಸಬೇಕಾಗುತ್ತದೆ. ಅದೇವೇಳೆ, ಸಮಾಜವಿಜ್ಞಾನವೂ ಗಣಿತವನ್ನು ಭಾಷೆಯಾಗಿ ಬಳಸುತ್ತಾ ಇರುವುದರಿಂದ ಅದಕ್ಕೂ ಬಹಳ ಸೃಷ್ಟಿಶೀಲ ಆಯಾಮ ದೊರಕುತ್ತದೆ. ಇಲ್ಲಿ ಗಣಿತವೂ ಕಾವ್ಯದ ಹಾಗೆ ಇರುವುದನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿ ಇಪ್ಪತ್ತು ಮೂವತ್ತು ವರ್ಷದ ಹಿಂದಿನವರೆಗೂ ಗಣಿತವನ್ನು ಬಿಎ ವಿಷಯವಾಗಿ ಪರಿಗಣಿಸಲಾಗುತ್ತಿತ್ತು. ಅಂದರೆ ಅದು ಮಾನವಿಕ ವಿಭಾಗದಡಿಯಲ್ಲಿ ಬರುತ್ತಿತ್ತು. ಅದರಲ್ಲಿ ಕಾವ್ಯ ಹಾಗೂ ಸೃಜನಭಾವದ ಆತ್ಮವಿದೆ. ಈ ಜಗತ್ತಿನೊಂದಿಗೆ ಹೊಂದಾಣಿಕೆ ಆಗುತ್ತಿದೆಯಾ ಎನ್ನುವ ಆತಂಕವೇ ಇಲ್ಲದೆ ಗಣಿತದಲ್ಲಿ ಊಹೆಗಳನ್ನು ಕೈಗೊಳ್ಳಬಹುದು. ಪಾಶ್ಚಾತ್ಯ ಚಿಂತನೆಯ ಪರಂಪರೆಯಲ್ಲಿ ಗಣಿತ ದೇವವಿದ್ಯೆಯೊಂದಿಗೆ (theology) ನಿಕಟವಿದ್ದುಕೊಂಡೆ ಬೆಳೆದು ಬಂದಿದೆ. ಇಸ್ಲಾಮಿಕ್‌ ಜ್ಞಾನ ಪರಂಪರೆಯಲ್ಲೂ ನಮಗದನ್ನು ಕಾಣಬಹುದು. ಆ ಚಿಂತನಾ ಪರಂಪರೆ ನ್ಯೂಟನ್‌ ಕಾಲದ ವರೆಗೂ ಸಾಗಿ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗೆ ನೋಡಿದರೆ ಅದು ಕೂಡಾ ಒಂದು ರೀತಿಯ ಸೃಜನಶೀಲತೆ ಹಾಗೂ ಸ್ವಾತಂತ್ರ್ಯ ಎನ್ನುವುದು ತಿಳಿದು ಬರುತ್ತದೆ. ಸಮಾಜ ವಿಜ್ಞಾನದಲ್ಲಿ ಬರವಣಿಗೆಗೆ ಇಳಿಯುವಾಗ ಆ ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ.

ತಾತ್ವಿಕ ವ್ಯವಹಾರಗಳು ಕೂಡಾ ಬಹಳ ನಿಯಂತ್ರಿತವಾಗಿವೆ. ಇಂಗ್ಲಿಷ್‌, ಲ್ಯಾಟಿನ್‌, ಸಂಸ್ಕೃತ ಸಹಿತ ಯಾವುದೇ ಕ್ಲಾಸಿಕಲ್‌ ಪಾರಂಪರಿಕ ಭಾಷೆಯಿರಲಿ ಅವುಗಳದ್ದೇ ಆದ ಸ್ವಂತ ದಾರ್ಶನಿಕ ಪರಂಪರೆ ಇದೆ ಎನ್ನುವುದು ಗಮನಾರ್ಹ. ಪ್ರತಿ ಭಾಷೆಯೂ ತನ್ನದ್ದೇ ಆದ ದಾರ್ಶನಿಕತೆಯನ್ನು ಸೃಷ್ಟಿಸಿದೆ. ಆದರೆ, ಆ ದಾರ್ಶನಿಕ ಚಿಂತನೆಗಳು ಆಯಾ ಭಾಷೆಗಳ ಸಂರಚನೆ ಹಾಗ ಅದರಲ್ಲಿ ರೂಪುಗೊಳ್ಳುವ ಸಿದ್ದಾಂತಗಳಗೆ ವಿಧೇಯವಾಗಿವೆ. ಯಾವ ಭಾಷೆಯಲ್ಲಿ ತತ್ವ ಚಿಂತನೆ ಮಾಡಿದರೂ ಆ ಭಾಷೆ ಏರ್ಪಡಿಸುವ ಬೌದ್ಧಿಕ ನಿಯಂತ್ರಣಗಳನ್ನು ಹಾಗೂ ಮಿತಿಗಳನ್ನು ಮೀರಲು ಸಾಧ್ಯವಿಲ್ಲ. ಹಾಗಾಗಿ, ನನ್ನ ವೈಯುಕ್ತಿಕ ಅನುಭವದ ಪ್ರಕಾರ ವಿಜ್ಞಾನ ಅತ್ಯಂತ ಹೆಚ್ಚು ಸಜನಶೀಲ ಉದ್ಯಮ ಎಂದನಿಸಿದೆ.


(ಮುಂದುವರಿಯುವುದು) ‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್‌


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

ಶ್ರೀಲಂಕಾ: ಶ್ರೀಮಂತ ಇಸ್ಲಾಮಿಕ್ ಪರಂಪರೆಯ ದ್ವೀಪರಾಷ್ಟ್ರ

“ಶ್ರೀಲಂಕಾದ ಮುಸ್ಲಿಂ ಹೆಸರು ‘ಸರಂದೀಬ್’ (Sarandib) ಎಂಬುದು ಅನೇಕರಿಗೆ ತಿಳಿದಿಲ್ಲ – ಈ ಹೆಸರಿನಿಂದಲೇ ಇಂಗ್ಲಿಷ್‌ನ ‘ಸೆರೆಂಡಿಪಿಟಿ’ (Serendipity) ಎಂಬ ಪದವು ಹುಟ್ಟಿಕೊಂಡಿದೆ. ‘ಸೆರೆಂಡಿಪಿಟಿ’ ಎಂದರೆ ಆಕಸ್ಮಿಕವಾಗಿ ಯಾವುದಾದರೂ ಆಸಕ್ತಿದಾಯಕ ಅಥವಾ ಬೆಲೆಬಾಳುವ ವಿಷಯವನ್ನು ಕಂಡುಹಿಡಿಯುವ ಅಥವಾ ಸೃಷ್ಟಿಸುವ ಅನುಭವ ಎಂದರ್ಥ. ಈ ಪದವು ಹಿಂದೂ ಮಹಾಸಾಗರದಲ್ಲಿರುವ ಕಣ್ಣೀರಿನ ಹನಿಯ ಆಕಾರದ ದ್ವೀಪಕ್ಕೆ ಅರಬ್ಬಿ ಮತ್ತು ಪರ್ಷಿಯನ್ನರು ಇಟ್ಟಿದ್ದ ಹಳೆಯ ಹೆಸರಾದ ‘ಸರಂದೀಬ್‌’ನಿಂದ ಬಂದಿದೆ, ಇದನ್ನು ಇಂದು ಶ್ರೀಲಂಕಾ ಎಂದು ಕರೆಯಲಾಗುತ್ತದೆ. ತನ್ನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯದಿಂದಾಗಿ ಈ ದ್ವೀಪ ರಾಷ್ಟ್ರವು ಒಂದರ್ಥದಲ್ಲಿ ‘ಸೆರೆಂಡಿಪಿಟಿ’ಯ ನಾಡಾಗಿದೆ.”

ಶತಮಾನಗಳಿಂದಲೂ, ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸಂಚರಿಸುತ್ತಿದ್ದ ಸಮುದ್ರಯಾನಿಗಳಿಗೆ ವಿಶ್ರಾಂತಿ ಪಡೆಯಲು, ಅಗತ್ಯ ವಸ್ತುಗಳನ್ನು ಮರುಪೂರಣ ಮಾಡಿಕೊಳ್ಳಲು, ವ್ಯಾಪಾರ ಮಾಡಲು ಮತ್ತು ಅನ್ವೇಷಣೆ ನಡೆಸಲು ಇದು ಒಂದು ಪ್ರಮುಖ ತಾಣವಾಗಿದೆ. ಮತ್ತು ಖಂಡಿತವಾಗಿಯೂ, ಸ್ವತಃ ಶ್ರೀಲಂಕನ್ನರು ತಮ್ಮ ದ್ವೀಪದ ಮನೆಯ ಗಡಿಗಳನ್ನು ಮೀರಿ ಬೆಳೆಯುವಂತಹ ಒಂದು ಪರಂಪರೆಯನ್ನು ಉಳಿಸಿ ಹೋಗಲು ಸಹ ಇದು ಸಹಕಾರಿಯಾಗಿದೆ. ಶ್ರೀಲಂಕಾದಲ್ಲಿ ಇಸ್ಲಾಂ ಧರ್ಮದ ಇತಿಹಾಸವು ಈ ಕಥೆಯ ಒಂದು ಪ್ರಮುಖ ಅಧ್ಯಾಯವಾಗಿದೆ. ಇದು ಪ್ರವಾದಿ ಅವರ ನಿಧನದ ಕೆಲವೇ ದಶಕಗಳ ನಂತರ ಪ್ರಾರಂಭವಾಯಿತು. ಮತ್ತು ಶ್ರೀಲಂಕಾದ ಮುಸ್ಲಿಮರು ಇಂದಿಗೂ ಆ ರಾಷ್ಟ್ರದ ಸಾಂಸ್ಕೃತಿಕ ಚೌಕಟ್ಟಿನ ಅವಿಭಾಜ್ಯ ಅಂಗವಾಗಿದ್ದಾರೆ.

ದಾಲ್ಚಿನ್ನಿ (Cinnamon) – ಶ್ರೀಲಂಕಾದ ಗುಪ್ತ ನಿಧಿ

ಶ್ರೀಲಂಕ ಅಲ್ಲಿನ ದಾಲ್ಚಿನ್ನಿಗೆ (Cinnamon) ಅತ್ಯಂತ ಪ್ರಸಿದ್ಧ. ಇಂದು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸಲಾಗುವ ದಾಲ್ಚಿನ್ನಿಯು ‘ಕ್ಯಾಸಿಯಾ’ (Cassia) ಎಂಬ ವಿಧದ್ದಾಗಿದ್ದು, ಇದು ಮುಖ್ಯವಾಗಿ ಇಂಡೋನೇಷ್ಯಾದಲ್ಲಿ ಉತ್ಪಾದನೆಯಾಗುತ್ತದೆ. ಇದು ಶ್ರೀಲಂಕಾದ ವಿಶಿಷ್ಟ ತಳಿಯಾದ ‘ಸಿಲೋನ್ ದಾಲ್ಚಿನ್ನಿ’ ಅಥವಾ ‘ಅಸಲಿ’  ದಾಲ್ಚಿನ್ನಿಗಿಂತ ಹೆಚ್ಚು ಪರಿಮಳ ಮತ್ತು ರುಚಿಯನ್ನು ಹೊಂದಿರುತ್ತದೆ. ಶ್ರೀಲಂಕಾದ ಮುಸ್ಲಿಂ ವ್ಯಾಪಾರಿಗಳು ಈ ದ್ವೀಪದ ದಾಲ್ಚಿನ್ನಿಯನ್ನು ಏಷ್ಯಾ ಮತ್ತು ಆಫ್ರಿಕಾದ ವಿವಿಧ ಭಾಗಗಳಿಗೆ ಹರಡಲು ಸಹಾಯ ಮಾಡಿದರು, ಅಷ್ಟೇ ಅಲ್ಲದೆ ಇದನ್ನು ಯುರೋಪ್‌ಗೂ ಪರಿಚಯಿಸಿದರು.

ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡುವುದನ್ನು ತಪ್ಪಿಸಲು ವ್ಯಾಪಾರಿಗಳು ದಾಲ್ಚಿನ್ನಿಯ ಮೂಲವನ್ನು ಬಹಳ ರಹಸ್ಯವಾಗಿ ಇಟ್ಟಿದ್ದರು.  ಆದರೂ ಕೆಲವು ಮಾಹಿತಿಗಳು  ಸೋರಿಕೆಯಾದವು. ಕ್ರಿ.ಶ.  ೧೦ನೇ ಶತಮಾನದ ಪರ್ಷಿಯನ್ ಸಮುದ್ರ ನಾಯಕ ಬುಝುರ್ಗ್ ಬಿನ್ ಶಹರ್ಯಾರ್ ದಾಲ್ಚಿನ್ನಿಯ ಮೂಲ ಶ್ರೀಲಂಕಾ ಎಂದು ಗುರುತಿಸಿದ ಮೊದಲಿಗರಲ್ಲಿ ಒಬ್ಬನಾಗಿದ್ದನು.ಇನ್ನು. 1344 ರಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸಿದ ಮೊರಾಕ್ಕೊದ ವಿಶ್ವಸಂಚಾರಿ ಇಬ್ನ್ ಬತೂತ, ‘ದೇಶದ ಸಂಪೂರ್ಣ ಕರಾವಳಿಯು ಪರ್ವತದ ತೊರೆಗಳಿಂದ ಕೊಚ್ಚಿಬಂದ ದಾಲ್ಚಿನ್ನಿ ತುಂಡುಗಳಿಂದ ಆವೃತವಾಗಿದೆ’ ಎಂದು ಬರೆದಿದ್ದರು. ‌

ಕಾಲಾನಂತರದಲ್ಲಿ, ದಾಲ್ಚಿನ್ನಿಯು ಯುರೋಪಿಯನ್ ಅನ್ವೇಷಕರು ಹೊಸ ಮಾರ್ಗಗಳನ್ನು ಹುಡುಕಲು ಹಾತೊರೆಯುತ್ತಿದ್ದ ಅತ್ಯಂತ ಬೇಡಿಕೆಯ ಸಾಂಬಾರ ಪದಾರ್ಥಗಳಲ್ಲಿ ಒಂದಾಯಿತು; ಕ್ರಿಸ್ಟೋಫರ್ ಕೊಲಂಬಸ್ ತಾನು ಅಮೆರಿಕಾದಲ್ಲಿ ದಾಲ್ಚಿನ್ನಿಯನ್ನು ಕಂಡುಹಿಡಿದಿರುವುದಾಗಿ ಪ್ರತಿಪಾದಿಸಿದನು (ವಾಸ್ತವವಾಗಿ, ಅವನು ಅದನ್ನು ಪತ್ತೆಹಚ್ಚಿರಲಿಲ್ಲ), ಮತ್ತು ಗೊಂಜಾಲೊ ಪಿಜಾರೊ ಎಂಬ ಸ್ಪೇನ್ ದೇಶದವನು ‘ದಾಲ್ಚಿನ್ನಿ ನಾಡನ್ನು’  ಹುಡುಕುವ ಪ್ರಯತ್ನದಲ್ಲಿ ಅಮೆಜಾನ್ ಪ್ರದೇಶವನ್ನು ಅನ್ವೇಷಿಸಿದನು. ವಸಾಹತುಶಾಹಿ ಕಾಲದಲ್ಲಿ, ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಶ್ರೀಲಂಕಾದ ದಾಲ್ಚಿನ್ನಿ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಪರಸ್ಪರ ಹೋರಾಡಿದರು.

ಇಂದು ಕೂಡ ಶ್ರೀಲಂಕಾದ ದಾಲ್ಚಿನ್ನಿಯನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ ಮತ್ತು ಮೆಚ್ಚಲಾಗುತ್ತದೆ; ವಿಶ್ವದ ಶೇಕಡಾ 85 ರಷ್ಟು ‘ಅಸಲಿ’ ದಾಲ್ಚಿನ್ನಿಯನ್ನು ಈ ರಾಷ್ಟ್ರವೇ ಪೂರೈಸುತ್ತದೆ ಮತ್ತು ಇದರ ಉತ್ಪಾದನೆಯು 3,50,000 ಜನರಿಗೆ ಉದ್ಯೋಗವನ್ನು ಒದಗಿಸಿದೆ.

ಮುಸ್ಲಿಂ ವ್ಯಾಪಾರಿಗಳ ಜಾಗತಿಕ ಸಂಪರ್ಕ

ಶ್ರೀಲಂಕಾದ ಇಸ್ಲಾಮಿಕ್ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಮುಖ ವಸ್ತುವೆಂದರೆ ಅದು ‘ಹಡಗಿನ ಗಂಟೆ’ (Ship’s bell). ಕ್ರಿ.ಶ. 1830ರ ದಶಕದಲ್ಲಿ, ಕಾರ್ನಿಷ್ ಮಿಷನರಿ ವಿಲಿಯಂ ಕೊಲೆನ್ಸೊ ಅವರು ನ್ಯೂಜಿಲೆಂಡ್‌ನಲ್ಲಿ ಮಾವೊರಿ (Maori) ಮಹಿಳೆಯರ ಗುಂಪಿನೊಂದಿಗಿದ್ದರು (ಮಾವೊರಿಗಳು ಅಂದರೆ ನ್ಯೂಜಿಲೆಂಡ್‌ನ ಮೂಲನಿವಾಸಿಗಳು). ಈ ಮಹಿಳೆಯರು ಆಲೂಗಡ್ಡೆಗಳನ್ನು ಕುದಿಸಲು ಬಳಸುತ್ತಿದ್ದ ‘ಪಾತ್ರೆ’ಯ ಮೇಲೆ ಒಂದು ಶಾಸನವಿರುವುದನ್ನು ಅವರು ಗಮನಿಸಿದರು. ನಂತರ ಆ ಶಾಸನವು ತಮಿಳು ಭಾಷೆಯಲ್ಲಿದೆ ಎಂಬುದು ಅವರಿಗೆ ದಿಟವಾಯಿತು.  ಮತ್ತು ಅದರಲ್ಲಿ Muhiud Din Buk’s  ship’s bell ಎಂದು ತಮಿಳಿನಲ್ಲಿ ಬರೆಯಲಾಗಿದೆ ಎಂಬುದನ್ನು ಕಂಡುಕೊಂಡರು. ಇದು  ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಎಂಬುದು ಸ್ಪಷ್ಟ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ, ಅದರಲ್ಲಿ ಬಳಸಲಾದ ತಮಿಳು ಭಾಷೆಯ ಶೈಲಿಯು ಆ ಗಂಟೆಯು ಸುಮಾರು 500 ವರ್ಷಗಳಷ್ಟು ಹಳೆಯದಿರಬಹುದು ಎಂಬುದರ ಮೇಲೆ ಬೆಳಕು ಚೆಲ್ಲಿತು.

​ಈ ಹಡಗಿನ ಗಂಟೆಯು ಶ್ರೀಲಂಕಾ ಮತ್ತು ತಮಿಳುನಾಡಿನ  ತಮಿಳು ಮುಸ್ಲಿಂ ನಾವಿಕರು ಎಷ್ಟು ದೂರದವರೆಗೆ ತಲುಪಿರಬಹುದು ಎಂಬುದಕ್ಕೆ ಒಂದು ಸೂಚನೆಯಾಗಿದೆ. ಶತಮಾನಗಳ ಕಾಲ ಅವರು ಹಿಂದೂ ಮಹಾಸಾಗರದ ಉದ್ದಗಲಕ್ಕೂ ಸರಕುಗಳು, ಜನರು ಹಾಗೂ ಇಸ್ಲಾಂ ಧರ್ಮದ ಸಂದೇಶವನ್ನೂ ಒಳಗೊಂಡ ವಿಚಾರಗಳನ್ನು ಸಾಗಿಸುತ್ತಿದ್ದರು.

ಆಯೆಶಾ ರವೂಫ್: ಲಂಕನ್ ಮುಸ್ಲಿಂ ಹುಡುಗಿಯರ ಪರ ಶಿಕ್ಷಣದ ಪ್ರತಿಪಾದಕಿ

ಆಯೆಶಾ ರವೂಫ್ ಅವರು ಶ್ರೀಲಂಕಾದಲ್ಲಿ ಜನಿಸಿದವರಲ್ಲ, ಆದರೆ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿಯೆತ್ತುವ ಮೂಲಕ ಮತ್ತು ರಾಜಕೀಯದಲ್ಲಿ ಮುಸ್ಲಿಂ ಮಹಿಳೆಯರನ್ನು ಪ್ರತಿನಿಧಿಸುವ ಮೂಲಕ ಅವರು ತಮ್ಮ ಪರಂಪರೆಯನ್ನು ಅಲ್ಲಿಯೇ ಸ್ಥಾಪಿಸಿದರು. ಮೂಲತಃ ನೆರೆಯ ಭಾರತದವರಾದ ಆಯೆಶಾ, 1943 ರಲ್ಲಿ ಶ್ರೀಲಂಕಾದ ಉದ್ಯಮಿಯೊಬ್ಬರೊಂದಿಗೆ ವಿವಾಹವಾದ ನಂತರ ಆ ದ್ವೀಪಕ್ಕೆ ಬಂದಿಳಿದರು. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಅವರ ಸಂಸ್ಕೃತಿಗೆ ಪೂರಕವಾದ ಯಾವುದೇ ಪ್ರೌಢಶಾಲೆ ಇಲ್ಲದಿರುವುದನ್ನು ಗಮನಿಸಿದ ಅವರು, 1946 ರಲ್ಲಿ ಕೊಲಂಬೊದಲ್ಲಿ ‘ಮುಸ್ಲಿಂ ಲೇಡೀಸ್ ಕಾಲೇಜ್’  ಅನ್ನು ಪ್ರಾರಂಭಿಸಿದರು. ಅವರು ಮನೆಮನೆಗೆ ತೆರಳಿ, ಶ್ರೀಲಂಕಾದ ಮುಸ್ಲಿಂ ಕುಟುಂಬಗಳಿಗೆ ತಮ್ಮ ಯೋಜನೆಯನ್ನು ವಿವರಿಸಿದರು ಮತ್ತು ಅವರ ಪುತ್ರಿಯರನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಿದರು. ಮೊದಲ ವರ್ಷದಲ್ಲೇ ಅವರು 200 ವಿದ್ಯಾರ್ಥಿನಿಯರನ್ನು ಸೇರಿಸುವಲ್ಲಿ ಯಶಸ್ವಿಯಾದರು. ಉಳಿದದ್ದು ಇತಿಹಾಸ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕ ಯುವತಿಯರು ಶ್ರೀಲಂಕಾದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದರು.


​1949 ರಲ್ಲಿ, ಸಂಸದೀಯ ರಾಜಕೀಯಕ್ಕೆ ಸೇರುವ ಭರವಸೆಯ ಮೂಡಿಸಿ ವಿಫಲರಾದ ನಂತರ, ಆಯೆಶಾ ರವೂಫ್ ಅವರು ಕೊಲಂಬೊ ಮಹಾನಗರ ಪಾಲಿಕೆಗೆ ಆಯ್ಕೆಯಾದರು. ಮುಂದಿನ ಹನ್ನೆರಡು ವರ್ಷಗಳ ಕಾಲ ಅವರು ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಅವರು ಶ್ರೀಲಂಕಾದ ಅತಿದೊಡ್ಡ ನಗರವಾದ ಕೊಲಂಬೊದ ಉಪಮೇಯರ್ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ರಾಣಿ ಎಲಿಜಬೆತ್ II ಅವರು ನಗರಕ್ಕೆ ಭೇಟಿ ನೀಡಿದಾಗ ಅವರನ್ನು ಭೇಟಿಯಾದರು ಮತ್ತು ನಗರದ ವಸತಿ ಹಾಗೂ ನೈರ್ಮಲ್ಯ ಸವಾಲುಗಳಿಗೆ ಪರಿಹಾರಕ್ಕಾಗಿ ಧ್ವನಿಯೆತ್ತಿದರು. 1961 ರಲ್ಲಿ, ಅವರು ಮತ್ತೆ ‘ಮುಸ್ಲಿಂ ಲೇಡೀಸ್ ಕಾಲೇಜಿನ’ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡರು ಮತ್ತು 1970 ರಲ್ಲಿ ನಿವೃತ್ತರಾಗುವವರೆಗೂ ಅಲ್ಲಿಯೇ ಸೇವೆ ಸಲ್ಲಿಸಿದರು. ಆಯೆಶಾ ಅವರು ಜನವರಿ 1992 ರಲ್ಲಿ ತಮ್ಮ 78 ನೇ ವಯಸ್ಸಿನಲ್ಲಿ ಕೊಲಂಬೊದಲ್ಲಿ ನಿಧನರಾದರು. ಸಮುದಾಯದ ಸದಸ್ಯರು ಅವರನ್ನು “ನಿರ್ಭೀತ ಸಾರ್ವಜನಿಕ ಭಾಷಣಗಾರ್ತಿ” ಎಂದು ಮತ್ತು “ಅತ್ಯಂತ ಸೌಮ್ಯ ಸ್ವಭಾವದವರು, ದಯಾಪರರು ಹಾಗೂ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಸಮುದಾಯದ ಜೀವನವನ್ನು ಉತ್ತಮಗೊಳಿಸುವಲ್ಲಿ ಆಸಕ್ತಿ ಹೊಂದಿದ್ದವರು” ಎಂದು ಬಣ್ಣಿಸಿದ್ದಾರೆ.

ತುವಾನ್ ಬುರ್ಹಾನುದ್ದೀನ್ ಜಯಾ (ಟಿ.ಬಿ. ಜಯಾ): ಶ್ರೀಲಂಕಾದ ರಾಷ್ಟ್ರೀಯ ಹೀರೋ

​ಟಿ. ಬಿ. ಜಯಾ ಅವರನ್ನು ಶ್ರೀಲಂಕಾದ ರಾಷ್ಟ್ರೀಯ ಹೀರೋಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಇವರು ಕ್ರಿ.ಶ‌. 1890ರಲ್ಲಿ ಶ್ರೀಲಂಕಾದ ಮಲಯ್ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಿಂದಲೇ ಶಿಕ್ಷಣದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದ ಜಯಾ ಅವರು ಶಿಕ್ಷಕರಾದರು. ಲಂಡನ್ ವಿಶ್ವವಿದ್ಯಾಲಯದಿಂದ ‘ಕ್ಲಾಸಿಕ್ಸ್’ ವಿಷಯದಲ್ಲಿ ಪದವಿ ಪೂರೈಸಿದರು ಮತ್ತು ವಕೀಲರಾಗಬೇಕೆಂದು ಬಯಸಿದ್ದರು. ಆದರೆ, ಅವರಿಗೆ ಝಾಹಿರಾ ಕಾಲೇಜಿನ ಪ್ರಾಂಶುಪಾಲರ ಹುದ್ದೆಯು ಲಭಿಸಿದಾಗ ಅದನ್ನು ಸ್ವೀಕರಿಸಿದರು. ಮುಂದಿನ 27 ವರ್ಷಗಳ ಕಾಲ ಅವರು ಆ ಶಾಲೆಯನ್ನು ಅಭಿವೃದ್ಧಿಪಡಿಸಿದರು. ಶ್ರೀಲಂಕಾದ ವಿವಿಧ ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ದೇಶದ ಅತ್ಯಂತ ಪ್ರಮುಖ ಶಾಲೆಗಳಲ್ಲಿ ಒಂದಾಗಿ ಅದು ಹೊರಹೊಮ್ಮಿತು. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಪರವಾಗಿರುತ್ತಿದ್ದರು. ಏಪ್ರಿಲ್ 5, 1942 ರಂದು (ಎರಡನೇ ಮಹಾಯುದ್ಧದ ಸಮಯದಲ್ಲಿ) ಜಪಾನಿನ ಪಡೆಗಳು ಕೊಲಂಬೊ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿದಾಗಲೂ, ಜಯಾ ಅವರು ಅಂದು ನಿಗದಿಯಾಗಿದ್ದ ತಮ್ಮ ವಿದ್ಯಾರ್ಥಿಯ ವಿವಾಹಕ್ಕೆ ಹಾಜರಾಗಿ ನವದಂಪತಿಗಳಲ್ಲಿ ಉತ್ಸಾಹ ತುಂಬಿದ್ದರು.


​ಜಯಾ ಅವರು ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರು ಮತ್ತು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಕ್ರಿ.ಶ. 1944ರಲ್ಲಿ ಅವರು ನೀಡಿದ ಪ್ರಸಿದ್ಧ ಭಾಷಣದಲ್ಲಿ, ಶ್ರೀಲಂಕಾದ ಮುಸ್ಲಿಮರು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸುತ್ತಾರೆ ಎಂದು ಘೋಷಿಸಿದರು. ಧಾರ್ಮಿಕ ಅಥವಾ ಜನಾಂಗೀಯ ಭೇದಗಳನ್ನು ಬಳಸಿಕೊಂಡು ‘ಒಡೆದು ಆಳುವ’ ಬ್ರಿಟಿಷ್ ಸಾಮ್ರಾಜ್ಯದ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಕ್ರಿ.ಶ. 1948ರ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಅವರು ಸ್ವತಂತ್ರ ಶ್ರೀಲಂಕಾದ ಮೊದಲ ಮುಸ್ಲಿಂ ಸಂಪುಟ ಸಚಿವರಾದರು. ನಂತರ ಅವರು ಪಾಕಿಸ್ತಾನಕ್ಕೆ ಶ್ರೀಲಂಕಾದ ಮೊದಲ ಹೈಕಮಿಷನರ್ ಆಗಿ ನೇಮಕಗೊಂಡು ಒಂಬತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ಪಾಕಿಸ್ತಾನದಲ್ಲಿ ಅನೇಕರ ಗೌರವ ಮತ್ತು ಪ್ರೀತಿಯನ್ನು ಗಳಿಸಿದ ಅವರು, ಉಭಯ ದೇಶಗಳ ನಡುವೆ ಬಲವಾದ ಮತ್ತು ಶಾಶ್ವತವಾದ ಸಂಬಂಧವನ್ನು ಸ್ಥಾಪಿಸಿದರು. ಕ್ರಿ.ಶ. 1960ರಲ್ಲಿ ಜಯಾ ಅವರು ಮದೀನಾದಲ್ಲಿದ್ದಾಗ ಶ್ರೀಲಂಕಾದ ಯಾತ್ರಿಕರಿಗಾಗಿ ಸೇವೆಗಳನ್ನು ಸ್ಥಾಪಿಸಲು ಶ್ರಮಿಸುತ್ತಿದ್ದರು; ಅಲ್ಲಿಯೇ ಅವರು ನಿಧನರಾದರು ಮತ್ತು ಪ್ರವಾದಿ ಅವರ ಮಸೀದಿಯ ಪಕ್ಕದಲ್ಲಿರುವ ಪ್ರಸಿದ್ಧ ಜನ್ನತ್ ಅಲ್-ಬಖಿಯಲ್ಲಿ ಅವರನ್ನು ದಫನ ಮಾಡಲಾಯಿತು.

ಮೂಲ : ಹಸ್ಸಾಂ ಮುನೀರ್
ಅನು: ಮುಹಮ್ಮದ್ ಶಮೀರ್, ಪೆರುವಾಜೆ

ಮಧ್ಯಕಾಲೀನ ನಾಗರಿಕತೆಗಳು ರೂಪಿಸಿದ ಭಾರತೀಯ ನಗರಗಳು

ಭಾರತದ ಇತಿಹಾಸ ತಜ್ಞರು ಇಸ್ಲಾಮ್ ಧರ್ಮವು ದೇಶಕ್ಕೆ ಏನನ್ನು ತಂದಿದೆ ಎಂಬುದನ್ನು ಪರಿಶೀಲಿಸುವಾಗ, ಅವರು ಹೆಚ್ಚಾಗಿ ಭಾಷೆ, ಕಾವ್ಯ, ಸಂಗೀತ, ಚಿತ್ರಕಲೆ, ಪಾಕಶಾಲೆಯ ಕಲೆಗಳು ಅಥವಾ ಆಧ್ಯಾತ್ಮಿಕತೆಯಂತಹ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆಯೇ ಹೊರತು ನಗರ ವಿನ್ಯಾಸ ಅಥವಾ ನಗರೀಕರಣವನ್ನು  ಪರಿಗಣಿಸುವುದು ತೀರಾ ಅಪರೂಪ.

‘ಮಾರ್ಕೈಸ್’ ಸಹೋದರರು ಎಂದು ಖ್ಯಾತರಾದ ವಿಲಿಯಂ ಮತ್ತು ಜಾರ್ಜ್ಸ್ ಎಂಬ ಇತಿಹಾಸಕಾರರು ‘ಇಸ್ಲಾಮಿಕ್ ನಗರ’ ಎಂದು ಕರೆದ ನಗರ ಸ್ವರೂಪವು ಭಾರತದಾದ್ಯಂತ ಹೇಗೆ ಹರಡಿತು ಎಂಬುದನ್ನು  ಇತಿಹಾಸಕಾರರು ಮತ್ತು ಭೂಗೋಳಶಾಸ್ತ್ರಜ್ಞರು ಪರಿಶೀಲಿಸುತ್ತಾರೆ. ಅವರು ಇದನ್ನು ಮುಖ್ಯವಾಗಿ ಒಂದು ಪರಕೀಯ ಸಂಸ್ಥೆಯಾಗಿ (exogenous institution) ಅಥವಾ ಹೊರಗಿನಿಂದ ಬಂದು ಸಮಾಜದಿಂದ ಪ್ರತ್ಯೇಕವಾಗಿ ನೆಲೆಸಿದ ಗಣ್ಯ ವರ್ಗಕ್ಕೆ ಆಶ್ರಯ ನೀಡುವ ಒಂದು ಪ್ರತ್ಯೇಕ ಪ್ರದೇಶವಾಗಿ (enclave) ಮಾತ್ರ ನೋಡುತ್ತಾರೆ. ಪ್ರತ್ಯುಷ್ ಶಂಕರ್ ಅವರ ಇತ್ತೀಚಿನ ಪುಸ್ತಕವು ಈ ಆಯಾಮವನ್ನು ಒಳಗೊಂಡಿದೆಯಾದರೂ, ಅದಕ್ಕಿಂತಲೂ ಆಳವಾದ ವಿಚಾರಗಳನ್ನು ಮಂಡಿಸುತ್ತದೆ.

42 ಭಾರತೀಯ ನಗರಗಳ ವಿಶ್ಲೇಷಣೆಯನ್ನು ಆಧರಿಸಿದ ಕೃತಿಯಾದ ‘ಹಿಸ್ಟರಿ ಆಫ್ ಅರ್ಬನ್ ಫಾರ್ಮ್ ಆಫ್ ಇಂಡಿಯಾ’ (History of Urban Form of India) ದಲ್ಲಿ, ಲೇಖಕರು ಪ್ರಾಚೀನ ನಗರಗಳು, ಮಧ್ಯಕಾಲೀನ ನಗರಗಳು ಮತ್ತು ಆಧುನಿಕ ರಾಜ್ಯಗಳಿಂದ ನಿರ್ಮಿತವಾದ ನಗರಗಳು ಎಂದು ನಗರಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.

ಸಿಂಧೂ ನಾಗರಿಕತೆಯ ನಗರಗಳನ್ನು ಹೊರತುಪಡಿಸಿದರೆ, ಪ್ರಾಚೀನ ನಗರಗಳನ್ನು ಮುಖ್ಯವಾಗಿ ದಕ್ಷಿಣ ಭಾರತದ ‘ದೇವಸ್ಥಾನ ನಗರಿ’ಗಳಲ್ಲಿ (Temple cities) ಕಾಣಬಹುದು. ಮಧ್ಯಕಾಲೀನ ನಗರಗಳು ಹಲವಾರು ವಿಭಿನ್ನ ಮಾದರಿಗಳನ್ನು ಅನುಸರಿಸುತ್ತವೆಯಾದರೂ, ಪ್ರತ್ಯುಷ್ ಶಂಕರ್ ಅವರು ಮುಖ್ಯವಾಗಿ ಮೂರು ವಿಧಗಳನ್ನು ಗುರುತಿಸುತ್ತಾರೆ: ಗುಜರಾತ್‌ನ ವಿಶಿಷ್ಟವಾದ ವಾಣಿಜ್ಯ ನಗರಗಳು, ಹಿಮಾಲಯದ ಭೂಪ್ರದೇಶದ ಸ್ವರೂಪಕ್ಕೆ ಅನುಗುಣವಾಗಿ ನಿರ್ಮಿತವಾದ ನಗರಗಳು,  ಡೆಕ್ಕನ್‌ನಲ್ಲಿ ಮುಸ್ಲಿಮರು ನಿರ್ಮಿಸಿದ ನಗರಗಳು.

ಭಾರತೀಯ ನಾಗರಿಕತೆಗೆ ಇಸ್ಲಾಮ್ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇವುಗಳನ್ನು ಪರಸ್ಪರ ಹೋಲಿಸುವುದು ಬಹಳ ಉಪಯುಕ್ತವಾಗಿದೆ. ಪ್ರತ್ಯುಷ್ ಶಂಕರ್ ಅವರು ಇದನ್ನು ನೇರವಾಗಿ ಪ್ರಯತ್ನಿಸದಿದ್ದರೂ, ನಗರಗಳ ರಚನಾತ್ಮಕ ಸ್ವರೂಪದ (Morphological approach) ಅಧ್ಯಯನದ ಮೂಲಕ ನಮಗೆ ಪರಸ್ಪರ ಹೋಲಿಕೆ ಮಾಡಲು ಸಹಾಯ ಮಾಡುತ್ತಾರೆ. ಅವರಿಗೆ ನಗರದ ಆಡಳಿತ ವಿಧಾನ ಅಥವಾ ರಾಜ್ಯದೊಂದಿಗಿನ ಅದರ ಸಂಬಂಧಕ್ಕಿಂತ ಹೆಚ್ಚಾಗಿ, ನಗರದ ಸ್ವರೂಪ ಅಥವಾ ಆಕಾರದ ಬಗ್ಗೆ ಮಾತ್ರ ಆಸಕ್ತಿ ಇದೆ.
ಎಲ್ಲಾ ಭಾರತೀಯ ನಗರಗಳು ತಮ್ಮ ವಿನ್ಯಾಸ ಅಥವಾ ರಚನೆಯ ಒಂದು ಗಮನಾರ್ಹ ಭಾಗವನ್ನು ಜಾತಿ ವ್ಯವಸ್ಥೆಯಿಂದಲೇ ಪರಂಪರಾಗತವಾಗಿ ಪಡೆದುಕೊಂಡಿವೆ. ಪ್ರತ್ಯುಷ್ ಶಂಕರ್ ಅವರು ಪೀಠಿಕೆಯಲ್ಲಿ ಹೀಗೆ ಬೆಟ್ಟು ಮಾಡುತ್ತಾರೆ:  ‘ಜಾತಿ ವ್ಯವಸ್ಥೆಯು ಒಳಮುಖಿ ನೆರೆಹೊರೆಯ ಸಮೂಹಗಳ  ಸ್ಥಳ ಮತ್ತು ರಚನೆಯನ್ನು ನಿರ್ಧರಿಸುವಲ್ಲಿ ದೊಡ್ಡ ಪ್ರಭಾವ ಬೀರಿತ್ತು (ಜೋಧ್‌ಪುರ ಮತ್ತು ಉದಯಪುರದಂತೆ). ಅಷ್ಟೇ ಅಲ್ಲದೆ, ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಮೂಲಕ ನಗರದ ಸಂಪರ್ಕವನ್ನೇ ಕಡಿತಗೊಳಿಸುವ ವ್ಯವಸ್ಥೆಯನ್ನೂ ಇದು ರೂಪಿಸಿತ್ತು (ಅಹಮದಾಬಾದ್‌ ಪೋಲ್)’

ದೇವಸ್ಥಾನ ನಗರಿಗಳಲ್ಲಿ (temple city) ಜಾತಿ ವ್ಯವಸ್ಥೆಯು ಸಹಜವಾಗಿಯೇ ಕೆಲಸ ಮಾಡುತ್ತಿರುತ್ತದೆ. ದಕ್ಷಿಣ ಭಾರತದಲ್ಲಿ ನಗರಗಳ ಉಗಮಕ್ಕೆ ದೇವಾಲಯದ ಸುತ್ತಲಿನಲ್ಲಿ ವಾಸವಿದ್ದ ಬ್ರಾಹ್ಮಣ ವಸಾಹತುಗಳನ್ನು ಬಳಸಿಕೊಂಡು ಹೆಚ್ಚುವರಿ ಆರ್ಥಿಕತೆಯನ್ನು (surplus economy) ಸೃಷ್ಟಿಸುವ ಆಲೋಚನೆಯೇ ಕೇಂದ್ರಬಿಂದುವಾಗಿತ್ತು. ಇದು ವೈದಿಕ ಮತ್ತು ಪುರಾಣ ಧರ್ಮಗಳ ಮೂಲಕ ವ್ಯಕ್ತವಾದ ‘ಬ್ರಾಹ್ಮಣ- ಕ್ಷತ್ರಿಯ ಒಕ್ಕೂಟ’ದ ಸಿದ್ಧಾಂತದ ಮೂಲಕ ಮಾನ್ಯತೆ ಪಡೆಯಿತು.

ಸಜಹವಾಗಿಯೇ ‘ದೇವಾಲಯ ನಗರಿ’ಯು ಕಾರ್ಯವಿಭಜನೆಯ ಆಧಾರದ ಮೇಲೆ ವಿವಿಧ ವಲಯಗಳಾಗಿ ವಿಂಗಡಿಸಲ್ಪಟ್ಟಿತ್ತು ಮತ್ತು ಇದನ್ನು ವಿವಿಧ ಜಾತಿ ಆಧಾರಿತ ವಸತಿಗಳ ಮೂಲಕ ಗುರುತಿಸಲಾಗುತ್ತಿತ್ತು. ಜಾತಿ ವ್ಯವಸ್ಥೆಯನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು ಮತ್ತು ಈ ನಗರ ಕೇಂದ್ರಗಳ ಯೋಜನೆಯಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

14ನೇ ಶತಮಾನದಿಂದೀಚೆಗೆ ದಖನ್ ಪ್ರಾಂತ್ಯದಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳಿಗೂ ಕೂಡ ಈ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಂದೂ ಮತ್ತು ಇಸ್ಲಾಮಿಕ್ ನಗರಗಳ ನಡುವೆ ವ್ಯತ್ಯಾಸ ಗುರುತಿಸುವುದು ಒಂದು ‘ಅತಿ ಸರಳವಾದ ದ್ವಂದ್ವ’ (simplistic binary) ಆಗಿರುತ್ತದೆ. ಆದರೆ, ವಾಸ್ತವವು ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಮಧ್ಯಕಾಲೀನ ದಖನ್‌ನ ಈ ನಗರಗಳು ಅಲ್ಲಿಯವರೆಗೆ ದೇಶದಲ್ಲಿದ್ದ ನಗರ ಸ್ವರೂಪಕ್ಕೆ ಹೊಸತೊಂದನ್ನು ಸೇರಿಸಿದವು. ಈ ನಾವೀನ್ಯತೆಯು ನಗರದ ಒಳಗಡೆ ನಡೆಯಲಿಲ್ಲ, ಬದಲಿಗೆ ಹೊರಗಡೆ ನಡೆಯಿತು. ಅದು ನಗರದ ಚಲನಶೀಲತೆಯ ಪ್ರಮುಖ ಅಂಶವಾಗಿತ್ತು. ನಗರದ ಗೋಡೆಗಳಿಂದ ಬಹಳ ದೂರವಲ್ಲದಿದ್ದರೂ, ನಗರದ ವ್ಯಾಪ್ತಿಯ ಹೊರಗೆ ಸೂಫಿ ಸಂತರು  ವ್ಯವಸ್ಥಿತ ರೀತಿಯಲ್ಲಿ ನೆಲೆಸಿದರು. ಭೌತಿಕ ವಸ್ತುಗಳಲ್ಲಿ ತಮಗಿದ್ದ ವೈರಾಗ್ಯವನ್ನು ಪ್ರದರ್ಶಿಸಲು ಮತ್ತು ಶಾಂತಿಯಿಂದ ಬದುಕಲು ಅವರು ಉದ್ದೇಶಪೂರ್ವಕವಾಗಿಯೇ ನಗರದಿಂದ ದೂರವಿದ್ದರು. ಅದೇ ಸಮಯದಲ್ಲಿ, ನಗರದ ನಿವಾಸಿಗಳು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಜನರು ಒಂದು ದಿನ ಪವಿತ್ರ ಸೂಫಿ ತಾಣಗಳಲ್ಲಿ ಕಳೆಯುವುದಕ್ಕಾಗಿ ನಗರವನ್ನು ಬಿಟ್ಟು ಹೊರಬರುತ್ತಿದ್ದರು ಮತ್ತು ಸಂಜೆಯ ವೇಳೆಗೆ ವಾಪಸ್ಸಾಗುತ್ತಿದ್ದರು.

ಈ ಸಂತರ ಮರಣದ ನಂತರ, ಅವರನ್ನು ಅವರು ವಾಸವಿದ್ದ ಸ್ಥಳದಲ್ಲೇ ಸಮಾಧಿ ಮಾಡಲಾಯಿತು ಮತ್ತು ಅವರ ಸಮಾಧಿಯ ಸುತ್ತಲೂ ‘ದರ್ಗಾ’ ಎಂಬ ಭವ್ಯ ಸ್ಮಾರಕಗಳನ್ನು ನಿರ್ಮಿಸಲಾಯಿತು. ಸಂತರ ಜನಪ್ರಿಯತೆಗೆ ಅನುಗುಣವಾಗಿ ಇವುಗಳ ಗಾತ್ರವಿರುತ್ತಿತ್ತು.
ಪ್ರತ್ಯುಷ್ ಶಂಕರ್ ಅವರು ಹೇಳದ ಒಂದು ವಿಷಯವೇನೆಂದರೆ, ಇಡೀ ಸಮಾಜ ಸೂಫಿ ಸಂತರಿಗೆ ಮರಣಾನಂತರವೂ ಅಪಾರ ಶಕ್ತಿ ಇದೆ ಎಂದು ನಂಬಿತ್ತು. ಸಂತರು ಮರಣ ಹೊಂದಿದ ಶತಮಾನಗಳ ನಂತರವೂ ಅನೇಕ ಭಕ್ತರು ತಮ್ಮ ಆಸೆಗಳನ್ನು (ಮಕ್ಕಳನ್ನು ಪಡೆಯುವುದು, ರೋಗ ಗುಣಪಡಿಸುವುದು ಅಥವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು) ಪೂರೈಸುವಂತೆ ಕೇಳಿಕೊಳ್ಳಲು ದರ್ಗಾಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಹಿಂದೂ,ಕ್ರೈಸ್ತ, ಸಿಖ್ಖರು ಹೀಗೆ ಎಲ್ಲಾ ಧರ್ಮೀಯರೂ ಸೂಫಿ ಸಂತರನ್ನು ಗೌರವಿಸುತ್ತಾರೆ. ಗಣ್ಯರಿಂದ ಹಿಡಿದು ಕೆಳಜಾತಿಯವರೆಗೆ ಎಲ್ಲಾ ವರ್ಗದ ಜನರು ದರ್ಗಾ ಸಂದರ್ಶಿಸುತ್ತಾರೆ ಮತ್ತು ಅತ್ಯಂತ ಪವಿತ್ರವಾದ ಆ ಸ್ಥಳಗಳಲ್ಲೂ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಪ್ರವೇಶವಿರುತ್ತದೆ. ಈ ಕೆಳಗಿನ ತೀರ್ಮಾನಕ್ಕೆ ಬರುವಾಗ ಪ್ರತ್ಯುಷ್ ಶಂಕರ್ ಅವರು ನಾನು ಮೇಲೆ ಹೇಳಿದ ವಿಷಯಗಳನ್ನು ಓದುಗರು ತಿಳಿದಿದ್ದಾರೆಂದೇ ಭಾವಿಸುತ್ತಾರೆ.

ದಖನ್ ನಗರಗಳ ವಿಶಿಷ್ಟ ಕೊಡುಗೆಯೆಂದರೆ ನಗರದ ಒಳಗಿನ ಅಸಾಧಾರಣ ರಚನೆಯಲ್ಲ, ಬದಲಿಗೆ ಸೂಫಿ ಸಂತರು ನೆಲೆಸಿದ್ದ ಜಿಲ್ಲೆ ಮತ್ತು ಉಪನಗರಗಳ ಅಭಿವೃದ್ಧಿ. ಸೂಫಿ ಸಂತರು ಜನಸಾಮಾನ್ಯರಲ್ಲಿ ಜನಪ್ರಿಯರಾಗಿದ್ದರು ಮತ್ತು ಆಡಳಿತ ವ್ಯವಸ್ಥೆಗೆ ಅಗತ್ಯವಾದ ಪರ್ಯಾಯ ಶಕ್ತಿಯಾಗಿ (counterpoint) ಕಾರ್ಯನಿರ್ವಹಿಸಿದರು. ನಗರವು ವ್ಯಾಪಾರ, ವಾಣಿಜ್ಯ ಮತ್ತು ಅಧಿಕಾರದ ಭೌತಿಕ ಪ್ರಪಂಚವನ್ನು ಪ್ರತಿನಿಧಿಸಿದರೆ, ಸೂಫಿ ಸಮಾಧಿಗಳ ಉಪನಗರ ಪ್ರದೇಶಗಳು ಅದಕ್ಕೆ ತದ್ವಿರುದ್ಧವಾಗಿದ್ದವು; ಅವು ಪ್ರಕೃತಿಯ ಮಡಿಲಿನಲ್ಲಿರುವ ಮಿತವ್ಯಯದ ಮೂಲಸೌಕರ್ಯ ಹೊಂದಿದ ಪವಿತ್ರ ಮತ್ತು ಆಧ್ಯಾತ್ಮಿಕ ಸ್ಥಳಗಳಾಗಿದ್ದವು. ಶತಮಾನಗಳು ಉರುಳಿದಂತೆ ಈ ಸ್ಥಳಗಳು ಸಾರ್ವಜನಿಕ ಸ್ಥಳಗಳಾಗಿ ಬದಲಾದವು. ನಗರದ ಕೋಟೆಯ ಗೋಡೆಗಳ ಹೊರಗೆ ಇರುತ್ತಿದ್ದ ಈ ಸ್ಥಳಗಳಿಗೆ ನಗರವಾಸಿಗಳು ಯಾತ್ರಾಸ್ಥಳಗಳಂತೆ ಭೇಟಿ ನೀಡುತ್ತಿದ್ದರು.

ಕ್ರಿ.ಶ. 14ನೇ ಶತಮಾನದಲ್ಲಿ ದಖನ್‌ನಲ್ಲಿ ಮುಸ್ಲಿಮ್ ನಾಯಕರು ನಿರ್ಮಿಸಿದ ನಗರಗಳು ಭಾರತೀಯ ಜಗತ್ತಿಗೆ ‘ಸಾರ್ವಜನಿಕ ಸ್ಥಳ’ದ ಪರಿಕಲ್ಪನೆಯನ್ನು ಪರಿಚಯಿಸಿದವು. ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜವು ತೀವ್ರವಾಗಿ ವಿಭಜನೆಯಾಗಿದ್ದರಿಂದ ಅಲ್ಲಿಯವರೆಗೆ ಭಾರತದಲ್ಲಿ ಇಂತಹ ಪರಿಕಲ್ಪನೆ ಇರಲಿಲ್ಲ. ಇದು ಇಸ್ಲಾಮ್ ಭಾರತಕ್ಕೆ ನೀಡಿದ ಒಂದು ವಿಶಿಷ್ಟವಾದ ಕೊಡುಗೆಯಾಗಿದೆ. ಆದರೆ ಇಸ್ಲಾಮ್ ಭಾರತಕ್ಕೆ ಪ್ರವೇಶಿಸುವ ಮೊದಲು, ಇಂತಹ ಮುಕ್ತ ಸಾರ್ವಜನಿಕ ಸ್ಥಳಗಳು ದೇಶದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ತಿರುವಣ್ಣಾಮಲೈ ಬೆಟ್ಟದ ಮೇಲಿರುವ ರಮಣ ಮಹರ್ಷಿಗಳ ಗುಹೆಯಂತೆ, ಋಷಿ ಮುನಿಗಳು ನಗರಗಳಿಂದ ಹೊರಗೆ ತಮ್ಮ ಆಶ್ರಮಗಳನ್ನು ಸ್ಥಾಪಿಸಿದ್ದರು. ಆದರೆ ಅವರ ಅನುಯಾಯಿಗಳು ಅಲ್ಲಿ ಅವರಿಗೆ ತೊಂದರೆ ನೀಡುತ್ತಿರಲಿಲ್ಲ, ಮತ್ತು ಒಂದು ವೇಳೆ ಭೇಟಿಯಾದಲ್ಲಿ ಅದು ಕೇವಲ ‘ಗುರು-ಶಿಷ್ಯ ಪರಂಪರೆ’ಯ ರೂಪದಲ್ಲಿರುತ್ತಿತ್ತು. ಆದರೆ ದರ್ಗಾಗಳ ಸುತ್ತಮುತ್ತ ಆಟದ ಮೈದಾನಗಳು ಹಾಗೂ ಪಿಕ್ನಿಕ್ ತಾಣಗಳನ್ನೂ ಕಾಣಬಹುದಾಗಿತ್ತು.

ತಮ್ಮ ಪುಸ್ತಕದಲ್ಲಿ ಪ್ರತ್ಯುಷ್ ಶಂಕರ್ ಅವರು ಈ ಕೊಡುಗೆಯನ್ನು ಕೇವಲ ದಕ್ಷಿಣ ಭಾರತಕ್ಕೆ (ದಖನ್) ಸೀಮಿತಗೊಳಿಸಿದ್ದಾರೆ, ಆದರೆ ಅವರು ಬೆಟ್ಟು ಮಾಡಿರುವ ಈ ನಾವೀನ್ಯತೆಯು ಭಾರತದಾದ್ಯಂತ ಕಂಡುಬರುತ್ತದೆ ಎಂದು ಹೇಳಬಹುದು. ಉತ್ತರ ಭಾರತದಲ್ಲೂ ಸಹ ಸೂಫಿ ಸಂತರು ನಗರಗಳ ಹೊರವಲಯದಲ್ಲೇ ನೆಲೆಸಿದ್ದರು. ನಿಝಾಮುದ್ದೀನ್ ಔಲಿಯಾ ಅವರು ದೆಹಲಿಯಿಂದ ದೂರವಿರಲು ಬಯಸಲಿಲ್ಲವೇ? ಅವರ ಸಮಾಧಿಗಳು ಇಂದಿಗೂ ಎಲ್ಲರಿಗೂ ಮುಕ್ತವಾದ ಸಾರ್ವಜನಿಕ ಸ್ಥಳವಾಗಿ ರೂಪುಗೊಂಡಿದೆ. ಅಹಮದಾಬಾದ್‌ನ ಸರ್ಖೇಜ್ ರೋಜಾ ಅಥವಾ ದೆಹಲಿಯ ಫಿರೋಜ್ ಶಾ ಕೋಟ್ಲಾದಂತಹ ಸ್ಥಳಗಳು ಇಂದು ನಗರದ ಭಾಗವಾಗಿದ್ದರೂ, ಅವುಗಳ ಸುತ್ತಲಿನ ಹಸಿರು ಪರಿಸರವು ಈ ಅಂಶವನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡುತ್ತದೆ. ಆನಂದ್ ತನೇಜಾ ಅವರು ಸ್ಪಷ್ಟಪಡಿಸಿರುವಂತೆ, ಇಂದಿಗೂ ಸಮಾಜದ ಎಲ್ಲಾ ವರ್ಗದ ಜನರು ಅಲ್ಲಿ ಜಮಾಯಿಸುತ್ತಾರೆ, ಇದು ಸಾರ್ವಜನಿಕ ಸ್ಥಳಕ್ಕೆ ಇರಬೇಕಾದ ನೈಜ ಲಕ್ಷಣವಾಗಿದೆ.

ಕ್ರಿಸ್ಟೋಫ್ ಜಾಫ್ರೆಲೋ
ಅನು: ಮುಹಮ್ಮದ್ ಶಮೀರ್ ಪೆರುವಾಜೆ


ಕ್ರಿಸ್ಟೋಫ್ ಜಾಫ್ರೆಲೊ