ರೂಮಿಯನ್ನು ಕಾಡಿದ ಕಥೆಗಳು

1. ಗಿಳಿ ಮತ್ತು ವ್ಯಾಪಾರಿ


ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನ ಬಳಿ ಸುಂದರವಾದ ಒಂದು ಗಿಳಿಯಿತ್ತು. ಅದು ಮಾತನಾಡುತ್ತಾ, ಹಾಡುತ್ತಾ ವ್ಯಾಪಾರಿಗೂ, ಗ್ರಾಹಕರಿಗೂ ಮನರಂಜನೆ ನೀಡುತ್ತಿತ್ತು. ಸುತ್ತಮುತ್ತಲ ಊರುಗಳಿಂದ ಜನರು ಆ ಗಿಳಿಯ ಹಾಡು, ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಆ ಅಂಗಡಿಗೆ ಬರುತ್ತಿದ್ದರು. ಅಷ್ಟರಮಟ್ಟಿಗೆ ಆ ಗಿಳಿ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇದರಿಂದ ಆ ವ್ಯಾಪಾರಿಗೆ ಭರ್ಜರಿ ವ್ಯಾಪಾರವೂ ಆಗುತ್ತಿತ್ತು.
ಆ ಗಿಳಿ‌ ಕೇವಲ ಜನರಿಗೆ ಮನರಂಜನೆಯಷ್ಟೇ ನೀಡುತ್ತಿರಲಿಲ್ಲ. ವ್ಯಾಪಾರಿ ಇಲ್ಲದ ಸಮಯದಲ್ಲಿ ಅಂಗಡಿಯನ್ನೂ ನೋಡಿಕೊಳ್ಳುತ್ತಿತ್ತು. ಅದೊಂದು ದಿನ ಮಧ್ಯಾಹ್ನ ವ್ಯಾಪಾರಿಯು ಅಂಗಡಿಯನ್ನು ಗಿಳಿಯ ಸುಪರ್ದಿಗೆ ಬಿಟ್ಟು ಮನೆಗೆ ಊಟಕ್ಕೆ ಹೋದನು. ಅಷ್ಟರಲ್ಲಿ ಬೆಕ್ಕೊಂದು ಇಲಿಯನ್ನು ಅಟ್ಟಿಸಿಕೊಂಡು ಆ ಅಂಗಡಿಗೆ ನುಗ್ಗಿತು. ಇದನ್ನು ನೋಡಿ ಗಿಳಿಗೆ ಭಯವಾಯಿತು. ಅದು ತನ್ನನ್ನು ರಕ್ಷಿಸಿಕೊಳ್ಳಲು ಹಾರಿತು. ಈ ವೇಳೆ ಬಾದಾಮಿ ಎಣ್ಣೆಯ ಒಂದೆರಡು‌ ಬಾಟಲಿಗಳು ಕೆಳಗೆ ಬಿದ್ದು, ಒಡೆದು‌‌ ನೆಲದ ಮೇಲೆಲ್ಲಾ ಎಣ್ಣೆ ಚೆಲ್ಲಿತು.
ಸ್ವಲ್ಪ ಹೊತ್ತಿನಲ್ಲಿ ವ್ಯಾಪಾರಿ ಹಿಂದಿರುಗಿದನು. ನೆಲದ ಮೇಲೆ‌ ಎಣ್ಣೆ ಚೆಲ್ಲಿರುವುದನ್ನು ಕಂಡು ಕುಪಿತನಾದನು. ಗಿಳಿಯು ಭಯದಿಂದ ಮೂಲೆಯಲ್ಲಿ ಅಡಗಿ ಕುಳಿತಿತ್ತು. ಇದನ್ನು ಕಂಡು ಸಿಟ್ಟಿನಲ್ಲಿ ಮೈಮರೆತ ವ್ಯಾಪಾರಿ ಗಿಳಿಯ ತಲೆಗೆ ಒಂದೇಟು ಕೊಟ್ಟನು. ಅದಾಗಲೇ ಪಶ್ಚಾತ್ತಾಪ, ಭಯದಿಂದ ನಡುಗುತ್ತಿದ್ದ ಗಿಳಿಯು ತಲೆಗೆ ಬಿದ್ದ ಏಟಿಗೆ ಆಘಾತಕ್ಕೊಳಗಾಗಿ ಮಾತು ಮರೆತಿತು.
ಗಿಳಿಯ ಮಾತು, ಹಾಡಿಲ್ಲದೆ ಅಂಗಡಿ ಪೇಲವವಾಗಿ ಕಾಣಿಸತೊಡಗಿತು. ಗ್ರಾಹಕರ ಸಂಖ್ಯೆಯೂ ಕಡಿಮೆಯಾಯಿತು. ವ್ಯಾಪಾರಿಗೆ ಪಶ್ಚಾತ್ತಾಪವಾಯಿತು. ಸಿಟ್ಟಿನ ಕೈಗೆ ದೊಣ್ಣೆ ಕೊಟ್ಟು ತಪ್ಪು ಮಾಡಿದೆ ಎನಿಸಿತು. ಗಿಳಿಯ ಮಾತು ಕೇಳದೆ ಅಂಗಡಿಯಲ್ಲಿ ಕುಳಿತುಕೊಳ್ಳುವುದಕ್ಕೂ ಬೇಸರವಾಗತೊಡಗಿತು. ಆತ ತನ್ನನ್ನು ತಾನೇ ಶಪಿಸತೊಡಗಿದನು.
‘ತನ್ನ ಈ ಕೈಗೆ ಪಾರ್ಶ್ವವಾಯು ಬಡಿಯಲಿ! ಅಷ್ಟು ಮುದ್ದಾದ ದನಿಯ ಮೂಲಕ ನನ್ನ ಮನರಂಜಿಸುತ್ತಿದ್ದ ಗಿಳಿಗೆ ಹೊಡೆಯಲು ಮನಸಾದರೂ ಹೇಗೆ ಬಂತು? ನಾನೇಕೆ ಅಷ್ಟೊಂದು ಕ್ರೂರಿಯಾದೆ!”
ತನ್ನ ಕೃತ್ಯಕ್ಕೆ ಪಶ್ಚಾತ್ತಾಪವಾಗಿ ವ್ಯಾಪಾರಿಯೂ‌ ಬಡ ದರ್ವೇಶಿಗಳಿಗೆ ದಾನ ಮಾಡಲು ಆರಂಭಿಸಿದನು. ಹೀಗೆ ಮಾಡುವುದರಿಂದ ತನ್ನ ಪಾಪವು ಮನ್ನಿಸಲ್ಪಟ್ಟು, ತನ್ನ ಮುದ್ದಿನ ಗಿಣಿ ಮತ್ತೆ ಮಾತನಾಡಲು ಶುರು‌ಮಾಡುತ್ತವೆ ಎಂಬುದು ಆತನ ನಂಬಿಕೆಯಾಗಿತ್ತು.
ಮೂರು ದಿನಗಳ ನರಳಿಕೆಯ ನಂತರ ಕೊನೆಗೂ ವ್ಯಾಪಾರಿಯ ಅದೃಷ್ಟ ಖುಲಾಯಿಸಿತು.
ಬೊಕ್ಕ ತಲೆಯ ದರ್ವೇಶಿ ಒಬ್ಬ ಆ ಅಂಗಡಿಗೆ ಬಂದನು. ಅವನನ್ನು ಕಂಡೊಡನೇ ಗಿಳಿಯು‌; ”ನೀನು ಕೂಡ ಬಾದಾಮಿ ಎಣ್ಣೆಯ ಬಾಟಲಿಯನ್ನು ಒಡೆದಿರುವೆಯಾ?” ಎಂದು ಕೇಳಿತು. ಆತ ಕೂಡ ತನ್ನಂತೆಯೇ ಬಾದಾಮಿ ಎಣ್ಣೆಯ ಬಾಟಲಿ ಒಡೆದಿರುವುದರಿಂದ ಆತನ ತಲೆಗೂದಲು ಉದುರಿವೆ ಎಂಬುದು ಗಿಳಿಯ ಭಾವನೆಯಾಗಿತ್ತು. ಆದರೆ, ಗಿಳಿಯ ಮಾತು ಕೇಳಿ ಅಲ್ಲಿದ್ದ ಗ್ರಾಹಕರು ನಗತೊಡಗಿದರು.
ಬೊಕ್ಕ ತಲೆಯ ಗ್ರಾಹಕ ಗಿಳಿಯನ್ನು ಕರೆದು, “ಪ್ರಿಯ ಗಿಣಿರಾಮ, ಒಂದನ್ನು ಇನ್ನೊಂದಕ್ಕೆ ಹೋಲಿಸಲು ಹೋಗಬೇಡ.‌ ಒಂದು ಇನ್ನೊಂದರಂತಿರುವುದಿಲ್ಲ.‌ ಮೇಲ್ನೋಟಕ್ಕೆ ಒಂದೇ ರೀತಿ ಕಾಣಿಸಿದರೂ ಒಳಗಿನ ಹೂರಣ ಬೇರೆಯೇ ಇರುತ್ತದೆ” ಎಂದು ಬುದ್ಧಿವಾದ ಹೇಳಿದನು.‌


2. ಮರಣ ದೂತ

ಮಹಾಜ್ಞಾನಿಯಾದ ಪ್ರವಾದಿ ಸುಲೈಮಾನ್(ಸೋಲೊಮನ್)ರವರು ಪ್ರತಿದಿನವೂ ಒಂದು ನಿಗದಿತ ಸಮಯವನ್ನು ಜನರ ಕಷ್ಟಸುಖಗಳ‌ನ್ನು ಆಲಿಸಲು ಮೀಸಲಿಟ್ಟಿದ್ದರು. ಅದಕ್ಕೆ ಪರಿಹಾರವನ್ನೂ ನೀಡುತ್ತಿದ್ದರು. ಒಂದು ದಿನ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿರಬೇಕಾದರೆ ಅತ್ಯಂತ ವಿಚಲಿತನಾದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದನು. ಆತ ಭಯದಿಂದ ನಡುಗುತ್ತಿದ್ದುದನ್ನು ಪ್ರವಾದಿ ಕಂಡರು. ಆತನನ್ನು ಬಳಿಗೆ ಕರೆದು ಸಂತೈಸಿ, ಕಾರಣ ವಿಚಾರಿಸಿದರು. ಆತ ಪ್ರವಾದಿಯವರ ಬಳಿ ತನ್ನ ದುಃಖವನ್ನು ತೋಡಿಕೊಂಡನು.
”ಇಲ್ಲಿಗೆ ಬರುವ ಮೊದಲು ನಾನು ರಸ್ತೆ ದಾಟುತ್ತಿರಬೇಕಾದರೆ ಸಾವಿನ ದೂತ ಅಝ್ರಾಯಿಲರು ನನ್ನನ್ನು ದಿಟ್ಟಿಸಿ ನೋಡುತ್ತಿರುವುದನ್ನು ಕಂಡೆ. ನನಗೆ ವಿಪರೀತ ಭಯವಾಗುತ್ತಿದೆ. ತಾವೇ ನನ್ನನ್ನು ಕಾಪಾಡಬೇಕು” ಎಂದನು‌.
“ಅಝ್ರಾಯೀಲರ ಕೆಲಸದಲ್ಲಿ ನಾನು ಹೇಗೆ ಮಧ್ಯಪ್ರವೇಶಿಸಲಿ. ಅವರು ದೇವನ ಆಜ್ಞೆಗಳನ್ನು ಯಥಾ ಪ್ರಕಾರ ಪಾಲಿಸುವವರು. ಅವರನ್ನು ತಡೆಯುವುದು ಸಾಧ್ಯವಿಲ್ಲ” ಎಂದು ಪ್ರವಾದಿ ಹೇಳಿದರು.
”ಇಲ್ಲ. ತಾವು ಮನಸು ಮಾಡಿದರೆ ನನ್ನನ್ನು ರಕ್ಷಿಸಲು ಸಾಧ್ಯವಿದೆ “
“ಹೇಗೆ?”
“ತಾವು ಗಾಳಿಗೆ ನಿರ್ದೇಶನ ನೀಡಿ ನನ್ನನ್ನು ಇಂಡಿಯಾಕ್ಕೆ ಕಳುಹಿಸಬೇಕು. ಅಲ್ಲಿ ನಾನು ಸುರಕ್ಷಿತವಾಗಿರುವೆನು”
ಪ್ರವಾದಿ ಆತನಿಗೆ ಸಹಾಯ ಮಾಡಿದರು. ಆತನನ್ನು ಇಂಡಿಯಕ್ಕೆ ಕರೆದುಕೊಂಡು ಹೋಗುವಂತೆ ಗಾಳಿಗೆ ಆಜ್ಞಾಪಿಸಿದರು. ಗಾಳಿ ಆತನನ್ನು ಇಂಡಿಯಾದತ್ತ ಕರೆದೊಯ್ಯಿತು.
ಅಂದು ಸಂಜೆ ಅಝ್ರಾಯೀಲ್ ಪ್ರವಾದಿಯ ದರ್ಬಾರಿಗೆ ಆಗಮಿಸಿದರು.
“ತಾವು ಯಾಕೆ ಬಡಪಾಯಿಗಳನ್ನು ಹೆದರಿಸುತ್ತೀರಿ. ಇಂದು ಬೆಳಿಗ್ಗೆ ಒಬ್ಬ ಬಡಪಾಯಿ ರಸ್ತೆ ದಾಟುತ್ತಿರಬೇಕಾದರೆ ತಾವು ಆತನನ್ನು ದುರುಗುಟ್ಟಿ ನೋಡಿದಿರಂತೆ” ಎಂದು ಪ್ರವಾದಿ ಅಝ್ರಾಯಿಲರೊಂದಿಗೆ ಕೇಳಿದರು.
”ಪ್ರವಾದಿಯವರೇ, ನಾನು ಯಾರನ್ನೂ ಹೆದರಿಸಲು ಹೋಗಿಲ್ಲ. ಇಂದು ಒಬ್ಬ ವ್ಯಕ್ತಿಯನ್ನು ನೋಡಿ ಆಶ್ಚರ್ಯವ್ಯಕ್ತಪಡಿಸಿದೆ ಅಷ್ಟೇ”
“ಏನು ಕಾರಣ?”
“ನಾಳೆ ಇಂಡಿಯಾದಲ್ಲಿ ಮರಣ ಹೊಂದಬೇಕಾದ ವ್ಯಕ್ತಿಯನ್ನು ಇಂದು ಇಲ್ಲಿ ಕಂಡು ಆಶ್ಚರ್ಯವಾಯಿತು. ಆತನಿಗೆ ಸಾವಿರ ರೆಕ್ಕೆಗಳಿದ್ದರೂ ಒಂದು ರಾತ್ರಿಯಲ್ಲಿ ಆತ ಇಂಡಿಯ ತಲುಪುವುದು ಅಸಾಧ್ಯ. ಆದ್ದರಿಂದ ನಾನು ಆತನನ್ನು ಆಶ್ಚರ್ಯ ಚಕಿತನಾಗಿ ನೋಡಿದೆ” ಎಂದು ಹೇಳಿ ಅಝ್ರಾಯೀಲರು ಅಲ್ಲಿಂದ ಹೋದರು.


3. ನಾವಿಕ ನೊಣ

ಕತ್ತೆಯೊಂದು ದಿನವಿಡೀ ಭಾರ ಹೊತ್ತು ನಡೆಯುತ್ತಿತ್ತು. ಅದಕ್ಕೆ ಮೂತ್ರ ಮಾಡುವಷ್ಟು ಸ್ವಾತಂತ್ರ್ಯವೂ ಇರಲಿಲ್ಲ. ವಿಶ್ರಾಂತಿಯಂತೂ ಇಲ್ಲವೇ ಇಲ್ಲ. ವಿಪರೀತ ಸುಸ್ತಾಗಿತ್ತು.
ಗುರಿ ಮುಟ್ಟಿದ ಮೇಲೆ ಯಜಮಾನ ಕತ್ತೆಯ ಬೆನ್ನಿನಿಂದ ಭಾರವನ್ನು ಇಳಿಸಿ, ಅದನ್ನು ಅದರ ಪಾಡಿಗೆ ಬಿಟ್ಟನು. ಕತ್ತೆಗೆ ಹೋದ ಜೀವ ಮರಳಿ ಬಂದಂತೆನಿಸಿತು. ಬೆನ್ನು ಗಾಳಿಯಲ್ಲಿ ತೇಲಾಡುವಷ್ಟು ಹಗುರವಾಯಿತು. ಏನೇ ಆಗಲೀ ಮೊದಲು ಕಟ್ಟಿ‌ ನಿಂತಿರುವ ಮೂತ್ರಕ್ಕೆ ಬಿಡುಗಡೆಯ ಭಾಗ್ಯ ನೀಡಬೇಕೆಂದು ಒಂದು ಕಡೆ‌ ನಿಂತು ಮೂತ್ರ ಮಾಡಲಾರಂಭಿಸಿತು.
ಸ್ವಲ್ಪ ದೂರದಲ್ಲಿ ನೊಣವೊಂದು ಎಲೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿತ್ತು. ಕತ್ತೆಯ ಮೂತ್ರ ಹರಿದು ಬಂದಾಗ ನೊಣ ಕೂತಿದ್ದ ಎಲೆಯೂ ಹರಿಯುತ್ತಿದ್ದ ಮೂತ್ರದಲ್ಲಿ ಚಲಿಸಿತು. ಈ ಅಚಾನಕ್ ಚಲನೆಯಿಂದ ನೊಣಕ್ಕೆ ಆಘಾತವಾದರೂ, ಕ್ರಮೇಣ ಅದು ತಾನು ಹಡಗೊಂದರಲ್ಲಿ ಕುಳಿತು ಸಮುದ್ರದಲ್ಲಿ ಚಲಿಸುತ್ತಿರುವುದಾಗಿ ಭಾವಿಸಿತು. ಅದರ ಖುಷಿಗೆ ಪಾರವೇ ಇರಲಿಲ್ಲ.
”ಓ ಎಂತಹ ಭಾಗ್ಯ! ಹಡಗಿನ ಮೂಲಕ ಸಮುದ್ರದಲ್ಲಿ ಸಂಚರಿಸುವ ಸೌಭಾಗ್ಯ ಪಡೆದ ಏಕೈಕ ನೊಣ ನಾನೇ ಇರಬೇಕು. ಈಗ ನಾನು ಮಹಾ ಹಡಗೊಂದನ್ನು ಮುನ್ನಡೆಸುವ ನಾವಿಕ. ಸಮುದ್ರದಿಂದ ಸಮುದ್ರಕ್ಕೆ ಸಂಚರಿಸುವ ನನ್ನನ್ನು ತಡೆಯೋರು ಯಾರಿದ್ದಾರೆ” ಎಂದು‌ ನೊಣ ಜಂಭ ಕೊಚ್ಚಿಕೊಂಡಿತು.
ಆಗಲೂ ಅದು ಯಾರಾದರು ಚಪ್ಪಾಳೆ ತಟ್ಟಿದರೆ ಹೆದರಿ‌ ಹಾರಿ ಹೋಗುವ ಕೇವಲ ನೊಣವಾಗಿತ್ತು. ಆದರೆ, ಅದಕ್ಕೆ ಕತ್ತೆಯ ಮೂತ್ರದಲ್ಲಿ ತಾನು ಹರಿಯುತ್ತಿದ್ದೇನೆ ಎಂಬ ಸತ್ಯ ತಿಳಿದಿರಲಿಲ್ಲ. ತಾನು ಹಡಗೊಂದರಲ್ಲಿ ಕುಳಿತು ಸಮುದ್ರದಲ್ಲಿ ಸಂಚರಿಸುತ್ತಿದ್ದೇನೆ ಎಂದು ಅದು ಭಾವಿಸಿತ್ತು.

ಅನು: ಸ್ವಾಲಿಹ್‌ ತೋಡಾರ್

1 Comment

  1. 1. ليس الشديد بالصُّرَعة، إنما الشديد الذي يملك نفسه عند الغضب
    2. أَيْنَمَا تَكُونُوا يُدْرِكْكُمُ الْمَوْتُ وَلَوْ كُنْتُمْ فِي بُرُوجٍ مُشَيَّدَةٍ
    3. ….

Leave a Reply

*