ಸೀರಾ ಪುರಾಣಂ : ಉಮರ್ ಪುಲವರ್ ಮತ್ತು ತಮಿಳು ಇಸ್ಲಾಮಿಕ ಸಾಹಿತ್ಯ

” ಭಾರತ ನಮ್ಮ ರಾಷ್ಟ್ರ
ಇಸ್ಲಾಂ ನಮ್ಮ ಜೀವನಮಾರ್ಗ ಮತ್ತು
ತಮಿಳು ನಮ್ಮ ಭಾಷೆಯೂ ಆಗಿದೆ “

‘ಮಕ್ಕಾ ನಗರ್ ಮನಾಪಿ’ ಎಂಬ ತಮಿಳು ಕ್ಯಾಸೆಟ್ ಹಾಡು.

‘ದಕ್ಷಿಣ ಭಾರತದಲ್ಲಿರುವವರಾಗಿದ್ದಾರೆ ಭಾರತೀಯ ಮುಸಲ್ಮಾನರ ಪೈಕಿ ಪುರಾತನ ಮುಸಲ್ಮಾನರೆಂಬುವುದನ್ನು ನಾವು ಖಚಿತಪಡಿಸುತ್ತೇವೆ. ಮತ್ತು ಹೆಮ್ಮೆಪಡುತ್ತೇವೆ.’
ಕೆ.ಪಿ.ಎಸ್ ಹಾಮಿದ್ – 1973

ಪ್ರವಾದಿ ಪೈಗಂಬರರ ಕಾಲದಲ್ಲಿಯೇ ಇಸ್ಲಾಂ ಸ್ವೀಕರಿಸಿದವರ ಉತ್ತರಾಧಿಕಾರಿಗಳೆಂದೂ ಭಾರತೀಯ ಮುಸಲ್ಮಾನರ ಪೈಕಿ ಪುರಾತನ ಸಮುದಾಯ ನಾವಾಗಿದ್ದೇವೆಯೆಂದೂ ದಕ್ಷಿಣ ಭಾರತದ ಮುಸ್ಲಿಮರು ಹೆಮ್ಮೆಪಟ್ಟುಕೊಳ್ಳುತ್ತಾರೆ. ತಮಿಳುನಾಡಿನ ಬಹುಪಾಲು ಮುಸಲ್ಮಾನರು ಅರಬಿ, ಪರ್ಷಿಯನ್ ಮತ್ತು ಸಂಸ್ಕೃತ ಪದಗಳನ್ನೊಳಗೊಂಡ ತಮಿಳು ಭಾಷೆಯನ್ನು ಅವಲಂಬಿಸುವರಾಗಿದ್ದಾರೆ. ತಮಿಳು ಸಾಹಿತ್ಯದ ಭಾಗವಾಗಿ ಧಾರ್ಮಿಕ, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮುಸ್ಲಿಂ ಸಾಹಿತಿಗಳ ಬಹು ದೊಡ್ಡ ದಂಡೇ ಇದೆ. ತಮಿಳು ಭಾಷೆಯ ಉನ್ನತ ವಿದ್ವಾಂಸರ ಪಟ್ಟಿಯಲ್ಲಿ ಮುಸ್ಲಿಮರಾದ ಪುರುಷರ ಮತ್ತು ಸ್ತ್ರೀಗಳ ಹೆಸರುಗಳೂ ಇವೆ. 17ನೇ ಶತಮಾನದಲ್ಲಿ ಕಾಂಬನ್ (ಕಂಬ ರಾಮಾಯಣ) ಎಂಬ ಕವಿ ರಚಿಸಿದ ತಮಿಳು ರಾಮಾಯಣಕ್ಕೆ ಮದ್ರಾಸ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರೂ, ಪ್ರಖ್ಯಾತ ತಮಿಳು ರಾಮಾಯಣ ವಿದ್ವಾಂಸರೂ ಆಗಿದ್ದ ಎಂ.ಎಂ ಇಸ್ಮಾಯಿಲ್ 40 ವ್ಯಾಖ್ಯಾನ ಗ್ರಂಥಗಳನ್ನು ಬರೆದಿರುವುದು ಇದಕ್ಕೊಂದು ನಿದರ್ಶನವೆನ್ನಬಹುದು. ಹೀಗೆ ಎಲ್ಲಾ ತಲೆಮಾರುಗಳಲ್ಲಿಯೂ ತಮಿಳು ರಾಮಾಯಣದಲ್ಲಿ ನೈಪುಣ್ಯತೆ ಪಡೆದ ಮುಸ್ಲಿಂ ವಿದ್ವಾಂಸರಿದ್ದರು. ತದ್ವಿರುದ್ಧವಾಗಿ, ತಮಿಳು ಇಸ್ಲಾಮಿಕ್ ಸಾಹಿತ್ಯಗಳ ಅಧ್ಯಯನದಲ್ಲಿ ತಮಿಳು ಹಿಂದೂಗಳು ಉತ್ಸುಕರಾಗಿರಲಿಲ್ಲ. ಅವರು ಇಸ್ಲಾಮಿಕ್ ಪರಂಪರೆಯನ್ನು ಕೇವಲ ಐತಿಹ್ಯ ಹಾಗೂ ಅನುಷ್ಠಾನ ಕರ್ಮಗಳು ಮಾತ್ರವೆಂಬ ನಿಟ್ಟಿನಲ್ಲಿ ಪರಿಗಣಿಸಿದರು. ಮುಸ್ಲಿಮರೊಂದಿಗಿನ ಒಡನಾಟಗಳು ಕೇವಲ ಸೂಫಿವರ್ಯರಾದ ಮುಸ್ಲಿಂ ವಿದ್ವಾಂಸರ ಖಬರ್ (ಗೋರಿ)ಗಳನ್ನು ತಮ್ಮ ಕ್ಷೇತ್ರಗಳಿಗೆ ಸಂಯೋಜಿಸುವ ಮತ್ತು ಅಲ್ಲಿಗೆ ತೀರ್ಥಯಾತ್ರೆಗೆ ಹೊರಡುವ ಮತ್ತು ಐತಿಹ್ಯ ಕಥೆಗಳಲ್ಲಿನ ಮುಸ್ಲಿಂ ಮಹಾತ್ಮರುಗಳ ಹೆಸರುಗಳನ್ನು ಸೇರಿಸುವುದಕ್ಕೆ ಮಾತ್ರ ಸೀಮಿತವಾಯಿತು. ಉದಾಹರಣೆಗೆ, ಶ್ರೀರಂಗದ ಮಹಾವಿಷ್ಣುವಿನ ಅವತಾರವಾದ ರಂಗನಾಥನಿಗೆ ಒಬ್ಬ ಮುಸ್ಲಿಂ ಪತ್ನಿಯಿರುವುದಾಗಿ ಐತಿಹ್ಯಗಳಲ್ಲಿದೆ. ಅವರ ಹೆಸರಿನಲ್ಲಿ ದೇವಾಲಯವನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ವೈಷ್ಣವ ದೇವಾಲಯಗಳಲ್ಲೂ ಈ ಸಂಪ್ರದಾಯ ಮುಂದುವರಿಸಲಾಯಿತು. ಮುಸ್ಲಿಂ ಮೆಲೋಡಿ (ಸಂಗೀತ )ಗಳನ್ನು ಅಂದಿನ ದಕ್ಷಿಣ ಭಾರತದ ಕರ್ನಾಟಿಕ್ ಸಂಗೀತಕಾರರು ಪರ್ಷಿಯನ್ ಸ್ವಾಧೀನವಿರುವ ದಕ್ಷಿಣ ಭಾರತದ ಸಂಗೀತದ ‘ರಾಗ’ ರೂಪಕ್ಕೆ ಪರಿವರ್ತಿಸಿರುವುದು ಪರಸ್ಪರ ಸ್ವಾಧೀನದ ಫಲವೆನ್ನಬಹುದು.

ತಮಿಳು ಮುಸ್ಲಿಂ ಅಸ್ಮಿತೆಯನ್ನು ರೂಪಗೊಳಿಸಿದ ವ್ಯವಹಾರಗಳ ಬಗೆಗಿನ ಅಧ್ಯಯನಗಳು ಸಮೀಪ ಕಾಲದಲ್ಲಿ ಬೆಳಕಿಗೆ ಬಂದವು. ಇಸ್ಲಾಮಿಕ್ ತಮಿಳು ಅಸ್ಮಿತೆಯನ್ನು ವ್ಯಾಖ್ಯಾನಿಸಿದ ವಿವಿಧ ತೆರನಾದ ಸಾಹಿತ್ಯ ರಚನೆಗಳ ಮೂಲಕ ಮುಸ್ಲಿಂ ಗ್ರಂಥಕಾರರು ತಮ್ಮ ಇಸ್ಲಾಮಿನ ಕುರಿತಾದ ಜ್ಞಾನವನ್ನು ಅನಾವರಣಗೊಳಿಸಿದರು. 17ನೇ ಶತಮಾನದಲ್ಲಿ ವಿರಚಿತಗೊಂಡ ಪ್ರವಾದಿ ಚರಿತ್ರೆ ಗ್ರಂಥವಾದ ‘ಸೀರಾ ಪುರಾಣಂ’ ಅವುಗಳ ಪೈಕಿ ಪ್ರಧಾನವಾಗಿದೆ. ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ವಿನಿಮಯ ಮಾಡಿಕೊಂಡ ಸಾಂಸ್ಕೃತಿಕ ಮೌಲ್ಯಗಳು ಮತ್ತು ಭರವಸೆಗಳ ನಿರ್ಮಾಣಕ್ಕೆ ಕಾರಣವಾದ ಸಾಹಿತ್ಯ ಪದಗಳು, ಚಿತ್ರಗಳು ಮತ್ತು ಆಚಾರಗಳ ಕುರಿತಂತೆ ಈ ಬರಹದಲ್ಲಿ ಪ್ರತಿಪಾದಿಸಲಾಗುತ್ತಿದೆ.

ತಮಿಳುನಾಡಿನ ಮುಸ್ಲಿಂ ವಂಶಾವಳಿ
ಇಸ್ಲಾಮ್ ಸ್ವೀಕರಿಸಿದ ನಾವಿಕರ ಪರಂಪರೆಯವರು ನಾವು ಎಂದಾಗಿದೆ ತಮಿಳುನಾಡಿನ ಬಹುಪಾಲು ಮುಸ್ಲಿಮರು ಸ್ವಂತದ ಕುರಿತಂತೆ ನಂಬಿರುವುದು. ಕೆಲವೊಂದು ಪ್ರದೇಶಗಳ ಮುಸ್ಲಿಮರ ಉಪನಾಮವಾಗಿ ಮರಕ್ಕಾರ್ ಎಂಬುವುದು ಬಳಕೆಯಲ್ಲಿದೆ. ಈ ಪದದ ಮೂಲ ಹಡಗು ಎಂಬರ್ಥದ ಮರಕ್ಕಳಂ ಎಂದಾಗಿದ್ದರೂ, ನಾವಿಕ ಎಂಬ ಅರ್ಥವನ್ನೂ ಈ ಪದಕ್ಕೆ ಕಲ್ಪಿಸಲಾಗುತ್ತಿದೆ. ತಮಿಳು ನಿಘಂಟುವಿನಲ್ಲಿ ಮರಕ್ಕಾರಿನ ಮೂಲ ಮರ್ ಕಬ್ ಎಂಬ ಅರಬಿ ಪದವೆಂದು ಉಲ್ಲೆಖಿಸಲಾಗಿದೆ. ಇವೆಲ್ಲವೂ ತಮಿಳು ಮುಸ್ಲಿಮರ ಪೂರ್ವಜರು ನಾವಿಕರಾಗಿದ್ದರೆಂದು ಬೊಟ್ಟು ಮಾಡುತ್ತಿದೆ. ಅರೇಬಿಯಾದಿಂದ ಬಂದವರು ಅಥವಾ ಪ್ರವಾದಿವರ್ಯರ ವಿಯೋಗದ ಬಳಿಕ ಬಂದ ಅರಬಿ ವ್ಯಾಪಾರಿಗಳೊಂದಿಗಿನ ಸಂಪರ್ಕದಿಂದ ಇಸ್ಲಾಮ್ ಸ್ವೀಕರಿಸಿದ ತಮಿಳು ವಂಶಜರು ತಮ್ಮ ಪೂರ್ವಜರು ಎಂದಾಗಿದೆ ಮರಕ್ಕಾರ್ ವಂಶಜರ ನಂಬಿಕೆ. ತಮಿಳು ಭಾಷೆ ಮತ್ತು ಸಾಹಿತ್ಯ ಆಖ್ಯಾನಗಳು ಈ ನಂಬಿಕೆಗೆ ಪುಷ್ಠಿ ನೀಡುತ್ತಿವೆ.
ಭಾರತದ ಮುಸಲ್ಮಾನರ ಪೈಕಿ ಪ್ರಥಮರು ತಮಿಳು ಮುಸ್ಲಿಮರು ಎಂದಾಗಿದೆ ಕೆ ಪಿ ಎಸ್ ಹಾಮಿದರ ಅಭಿಮತ. ಹಜ್ಜಾಜ್ ಬಿನ್ ಯೂಸುಫನ ಕಾಲದಲ್ಲಿಯೇ ದಕ್ಷಿಣ ಭಾರತಕ್ಕೆ ಇಸ್ಲಾಂ ತಲುಪಿರುವುದಾಗಿ ಕರ್ನಲ್ ವಿಲ್ಸೆಂಟರ ಹಿಸ್ಟರಿ ಆಫ್ ಮೈಸೂರನ್ನು ಉಲ್ಲೇಖಿಸಿ ಅವರು ಅಭಿಪ್ರಾಯಪಡುತ್ತಾರೆ. ಹಜ್ಜಾಜ್ಬಿನ್ ಯೂಸುಫನ ಕಿರುಕುಳವನ್ನು ತಾಳಲಾರದೆ ಗುಳೆ ಹೊರಟವರು ಕನ್ಯಾಕುಮಾರಿಗೆ ಬಂದು ನೆಲೆಸಿದರು. ಅವರು ಲಬ್ಬೈ, ಮರಕ್ಕಾರ್, ಮಲೂಮಿ, ನಯನಾರ್ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದರು. ಭಾರತದಲ್ಲಿನ ಇಸ್ಲಾಮಿನ ಉದಯ ಶ್ರೀಲಂಕಾ, ಮಲೇಷಿಯಾ, ಇಂಡೋನೆಷ್ಯಾ, ಚೀನಾ ರಾಷ್ಟ್ರಗಳಲ್ಲಿ ಇಸ್ಲಾಮ್ ಪ್ರಚಾರಗೈದ ವ್ಯಾಪಾರಿಗಳ ಆಖ್ಯಾನಗಳ ಪರಿಣಾಮ ಎಂದಾಗಿದೆ ಹಾಮಿದರ ಅಭಿಪ್ರಾಯ. ತಿರುಚಿನಾಪಳ್ಳಿಯಲ್ಲಿರುವ ಸಣ್ಣ ಮಸೀದಿಯೊಂದನ್ನು ಅದಕ್ಕೆ ಪುರಾವೆಯಾಗಿ ತಿಳಿಸಿದ್ದಾರೆ. ಪುರಾತನ ಚೋಳ ಸಾಮ್ರಾಜ್ಯದ ರಾಜಧಾನಿಯಾದ ಊರಾಯೂರ್ ಎಂಬಲ್ಲಿನ ಆ ಮಸೀದಿಗೆ ಜೈನ ಹಾಗೂ ಬುದ್ಧ ಆರಾಧನಾಲಯಗಳೊಂದಿಗೆ ಸಾಮ್ಯತೆ ಇರುವುದಾಗಿಯೂ ಮತ್ತು ಕ್ರಿ.ಶ 738 ರ ಅತಿ ಪುರಾತನವಾದ ಕಲ್ಲಿನ ಶಾಸನಗಳನ್ನು ಈ ಮಸೀದಿಯಲ್ಲಿ ಕಾಣಬಹುದು ಎಂದು ಹಾಮಿದರು ಹೇಳುತ್ತಾರೆ.

ತಮಿಳು ಇಸ್ಲಾಮಿಕ್ ಕೃತಿಗಳು ಮತ್ತು ಮುಸ್ಲಿಂ ತಮಿಳು ಗ್ರಂಥಗಳು

ಕಳೆದೊಂದು ಸಾವಿರ ವರ್ಷದಲ್ಲಿ ಇಸ್ಲಾಂ ಮತ್ತು ಇಸ್ಲಾಮೇತರ ವಿಷಯಗಳ ಕುರಿತಂತೆ ಹಲವಾರು ತಮಿಳು ಕೃತಿಗಳು ವಿರಚಿತಗೊಂಡಿವೆ. ಬೃಹತ್ತಾದ ತಮಿಳು ಸಾಹಿತ್ಯ ಲೋಕದಲ್ಲಿ ಅವುಗಳು ತನ್ನದೇ ಆದ ಸ್ಥಾನವನ್ನು ಅಲಂಕರಿಸಿದೆ ಕೂಡಾ. 12 ಅಥವಾ 14ನೇ ಶತಮಾನದಲ್ಲಿ ವಿರಚಿತವಾದ ಮತ್ತು ಭಾಗಶಃ ಸಂರಕ್ಷಿಸಲ್ಪಟ್ಟಿರುವ ಕವಿತೆಯಾಗಿದೆ ಲಭ್ಯವಾಗಿರುವ ಪ್ರಥಮ ಕೃತಿ. “ಕಾಂಡ ಪಾಲ್ಕಂಡಮಲೈ” ಎಂಬ ಕವನ ಸಂಕಲನದ ಎಂಟು ಕವಿತೆಗಳು ಕೂಡಾ ಅದರ ವಿಶಾಲವಾದ ವ್ಯಾಖ್ಯಾನಗಳೊಂದಿಗೆ ಸಂರಕ್ಷಿಸಲ್ಪಟ್ಟಿವೆ. ಕ್ಲಾಸಿಕಲ್ ಸಾಹಿತ್ಯ ರೂಪವಾದ ಅಗಂ ಕವಿತೆಯ ರೀತಿಯಲ್ಲೇ ರಚಿಸಲಾದ ಈ ಕೃತಿಯ ಪ್ರಮೇಯವು ಆಂತರಿಕ ಪ್ರಣಯ (ಅಗಂ) ಆಗಿದೆ.
ಇಸ್ಲಾಮಿನ ಕುರಿತಂತೆ ಬರೆಯಲಾದ ಹೇರಳವಾದ ಗ್ರಂಥಗಳು ತಮಿಳಿನಲ್ಲಿವೆ. ಪಾಲ್ಕಂಡಮಲೈ ಅವುಗಳಲ್ಲೊಂದು. ಶತಮಾನಗಳಿಂದ ಸೆಕ್ಯುಲರ್ ಕೃತಿಗಳು ಹಾಗೂ ಹಿಂದೂ ಧರ್ಮದ ಕಾವ್ಯಗಳ ಕುರಿತ ಅಧ್ಯಯನದ ಬಳಿಕ ಪರಂಪರಾಗದ ತಮಿಳು ಸಾಹಿತ್ಯದಲ್ಲಿ ಪಾರಂಗತರಾದ ವಿದ್ವಾಂಸರು ಧಾರ್ಮಿಕ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವುಗಳ ಪೈಕಿ ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ.

  1. ಕಾಪಿಯಂಗಳ್ (ಸಂಸ್ಕೃತ : ಕಾವ್ಯ ಮತ್ತು ಐತಿಹಾಸಿಕ ಕವಿತೆಗಳು )17ನೇ ಶತಮಾನದ ರಚಿಸಲಾದ ಪ್ರವಾದಿ ಪೈಗಂಬರರ ಜೀವನಚರಿತ್ರೆಯಾದ ಚಿರಪುರಾಣಂ ಈ ಸಾಲಿಗೆ ಸೇರುತ್ತದೆ.
  2. ಪ್ರವಾದಿವರ್ಯರು, ಖಲೀಫಾಗಳು, ಸೂಫಿಸಂತರು ಮುಂತಾದ ಪುಣ್ಯಾತ್ಮರ ಕುರಿತಂತೆ ಬರೆಯಲಾದ ತಮಿಳು ಭಕ್ತಿಗೀತೆಗಳು. ಅವುಗಳ ಪೈಕಿ ಕೆಲವು ಸೂಫೀ ಮಿಸ್ಟಿಕ್ ಸಾಹಿತ್ಯವನ್ನೊಳಗೊಂಡಿವೆ. ಇಸ್ಲಾಮಿಕ್ ರಚನೆಗಳಿಗಾಗಿ ಕೀರ್ತನ ಸಿಂಧು, ಕುಮ್ಮಿ, ಅಮ್ಮಾನೈ, ಏಗಲ್, ತೆಮಾಂಕು, ತಿರುಪುಗಳ್ ಹೀಗೆ ವಿವಿಧ ತೆರನಾದ ತಮಿಳು ಕಲಾ ಸಾಹಿತ್ಯ ರೂಪಕಗಳನ್ನು ಬಳಸಲಾಯಿತು.
  3. ತಮಿಳು ಸಾಹಿತ್ಯ ಹಾಗೂ ಅರಬಿ ಕಥೆಗಳೆಡೆಯಲ್ಲಿನ ಸಾಮ್ಯತೆಗಳನ್ನು ಗುರುತಿಸುವ ಬಾಯಿಮಾತಾಗಿ ಬಂದಿರುವ ಹಾಡುಗಳನ್ನೊಳಗೊಂಡ ವಿವಿಧ ರಚನೆಗಳು.
  4. ನಾಗೂರಿನಂಥ ಪುಣ್ಯಸ್ಥಳಗಳ ಕುರಿತು ವಿವರಣೆ ನೀಡುವ ಕೃತಿಗಳು.
  5. ಅರಬಿ ಕಲಾರೂಪಗಳಿಂದ ಎರವಲು ಪಡೆದ ಕಿಸ್ಸಾ, ಪಡೈಪೋರ್, ನಾಮ, ಮಸ್ಅಲ ಮುಂತಾದ ಹಲವಾರು ಕೃತಿಗಳಿವೆ.

ಉಮರ್ ಪುಲವರ್ (ಕವಿ ಉಮರ್)
ತಮಿಳು ಭಾಷೆಯಲ್ಲಿನ ಇಸ್ಲಾಮಿಕ್ ಕೃತಿಗಳ ಪೈಕಿ ಕೀಳಕ್ಕರೆಯ ಕವಿ ಉಮರ್ ರಚಿಸಿದ ಸೀರಾಪುರಾಣವು ಜನಜನಿತವಾಗಿದೆ. ಉಮರರ ಜನನ 1665 ಅಥವಾ 1642ರಲ್ಲಾಗಿತ್ತು ಎಂಬ ಭಿನ್ನ ಅಭಿಪ್ರಾಯಗಳಿವೆ. 1703 ಜುಲೈ 28 ರಂದು ಕವಿಯು ಇಹಲೋಕ ತ್ಯಜಿಸಿದರು. ಅಂದು ಬರೆದ ಕೃತಿಯು 1842ರ ವೇಳೆಗೆ ಶೈಖ್ ಅಬ್ದುಲ್ ಖಾದಿರ್ ನಯನಾರರ ನಾಯಕತ್ವದಲ್ಲಿ ಹೊರತರಲಾಯಿತು. ಕವಿಯ ಕುರಿತಾದ ಯಾವುದೇ ಲಿಖಿತ ಪುರಾವೆಗಳು ಲಭ್ಯವಿಲ್ಲ. ಅವರ ಬಗೆಗಿನ ತಿಳುವಳಿಕೆಗಳು ಕೇವಲ ಬಾಯಿ ಮಾತು ಮುಖಾಂತರ ತಿಳಿದವುಗಳಾಗಿವೆ.ಎಟ್ಟಾಯಿಪುರಂನಲ್ಲಿ ಹುಟ್ಟಿದ ಕವಿಯ ತಂದೆಯು ಸುಗಂಧ ದ್ರವ್ಯ ಉತ್ಪಾದಕರಾಗಿದ್ದರು. ಈ ಮೂಲಕ ಉಮರರ ಪೂರ್ವಜರು ಅರೇಬಿಯಾದಿಂದ ವಲಸೆ ಬಂದ ವ್ಯಾಪಾರಿಗಳೆಂದು ಮನದಟ್ಟು ಮಾಡಿಕೊಳ್ಳಬಹುದು. ಕವಿಯು ಅರಬ್ ಅಥವಾ ಗ್ರೀಕ್ ವಂಶವಾದ ಕೋನಕಾರ್ ಸಮುದಾಯಕ್ಕೆ ಒಳಪಟ್ಟವರೆಂದು ನಂಬಲಾಗುತ್ತಿದೆ. ಕೀಳಕ್ಕರೆಯಿಂದ ವಿವಾಹಗೈದು ಅಲ್ಲಿಯೇ ನೆಲೆಸಿದ ಕಾರಣದಿಂದ ಅವರ ಮೇಲಿನ ಗೌರವಾರ್ಥ ಎಲ್ಲಾ ಮುಸ್ಲಿಂ ಸಮಾರಂಭಗಳಲ್ಲೂ ‘ಕವಿಯ ಪಾಲು’ ಎಂಬ ಹೆಸರಿನಲ್ಲಿ ಧನ ಸಹಾಯ ನೀಡುವ ಪರಿಪಾಠವಿದೆ.


ಅಂದಿನ ಹಿಂದೂ ಮತ್ತು ಮುಸ್ಲಿಂ ವಿದ್ವಾಂಸರ ರಕ್ಷಾಧಿಕಾರಿಯಾಗಿದ್ದ ಸೀದಕಾಟಿ ಉಮರರ ಅಪಾರವಾದ ಬುದ್ಧಿಶಕ್ತಿಗೆ ಮನಸೋತರು. ಶೈಖ್ ಅಬ್ದುಲ್ ಖಾದಿರ್ ಎಂದಾಗಿತ್ತು ಸೀದಕಾಟಿಯ ನಿಜನಾಮ. ಅವರು ರಾಮನಾಥದ ಆಡಳಿತಾಧಿಕಾರಿಯಾಗಿದ್ದ ವಿಜಯ ರಘುನಾಥ ಸೇತುಪತಿಯ ಆರ್ಥಿಕ ಸಲಹೆಗಾರರಾಗಿದ್ದರು. ಅಬ್ದುಲ್ ಖಾದಿರರ ಬೇಡಿಕೆಯಂತೆ ಪ್ರವಾದಿವರ್ಯರ ಜೀವನಚರಿತ್ರೆ ರಚನೆಗಾಗಿ ಅರಬಿಕ್, ಪರ್ಷಿಯನ್ ಮೂಲಗಳಿಂದ ಜೀವನಚರಿತ್ರೆಯನ್ನು ಕಲಿಯುವ ಹಂಬಲದಿಂದ ಲಬೈ ಅಲಿ ಹಾಜಿಯನ್ನು ಕೇಳಿಕೊಂಡರು. ಮುಸ್ಲಿಂ ವೇಷದ ಕೊರತೆಯ ನೆಪವೊಡ್ಡಿ ಉಮರರಿಗೆ ಕಲಿಸುವುದನ್ನು ನಿರಾಕರಿಸಿದರು. ಇಬ್ಬರ ಕನಸಿನಲ್ಲೂ ಪ್ರವಾದಿವರ್ಯರ ದರ್ಶನವುಂಟಾದ ಬಳಿಕ, ಪರಂಗಿಪೇಟೆಯಲ್ಲಿರುವ ತನ್ನ ಸಹೋದರನ ಬಳಿ ಕಲಿಯಲು ಲಬೈ ಅನುಮತಿ ನೀಡಿದರು.
ಉಮರರ ಪ್ರಥಮ ಸೀರಾ ಪಾರಾಯಣ ಶೈಖ್ ಅಬ್ದುಲ್ ಖಾದಿರರ ವಿಯೋಗಾನಂತರ ಅಬ್ದುಲ್ ಕಾಸಿಮರ ಬಳಿಯಾಗಿತ್ತು ಎಂಬ ವರದಿಗಳಿವೆ. ಕವಿಯು ಅಬ್ದುಲ್ ಕಾಸಿಂ ಮರಕ್ಕಾರರನ್ನು ತನ್ನ ಮಾರ್ಗದರ್ಶಕನಾಗಿ ಸೀರಾಪುರಾಣದಲ್ಲಿ ಪರಿಚಯಿಸಿದ್ದಾರೆ ಮತ್ತು 22 ಸ್ಥಳಗಳಲ್ಲಿ ಅವರನ್ನು ಹಾಡಿಹೊಗಳಿದ್ದಾರೆ. ಉಮರರು ಸೀರಾಪುರಾಣ ರಚನೆಯ ವೇಳೆಯಲ್ಲಿ ಅಬ್ದುಲ್ ಖಾಸಿಮರ ಮನೆಯಲ್ಲಿ ವಾಸವಾಗಿದ್ದರು ಎಂಬ ವರದಿಗಳಿವೆ. ಪದ್ಯದ ಕೊನೆಯ ಭಾಗಗಳಲ್ಲಿ ಮಾರ್ಗದರ್ಶಕರ ಕುರಿತಾದ ಪರಾಮರ್ಶೆಯ ಅಭಾವ ಎದ್ದು ಕಾಣುತ್ತದೆ. ಇದಕ್ಕೆ ಕಾರಣ ಅವರಡೆಯಲ್ಲಿನ ಭಿನ್ನಮತ ಅಥವಾ ಮಿತಿಮೀರಿದ ಪ್ರಶಂಸೆಯಲ್ಲಿ ಕವಿಗೆ ನಂಬಿಕೆಯಿಲ್ಲದಿರುವುದೂ ಆಗಿರಬಹುದೆಂಬ ಅಭಿಪ್ರಾಯಗಳಿವೆ. ಅಬ್ದುಲ್ ಕಾಸಿಮರ ವಿಯೋಗವಾಗಿದೆ ಕಾರಣ ಎಂದು ವರದಿಯಾಗಿವೆ. ಅಬ್ದುಲ್ ಖಾದಿರರ ಸ್ಮರಣಾರ್ಥ ‘ಕೋವಯ್’ ಮತ್ತು ಪ್ರವಾದಿವರ್ಯರ ಕುರಿತಂತೆ 88 ಶ್ಲೋಕಗಳನ್ನೊಳಗೊಂಡ ‘ಮುತ್ತುಮೋಳಿ ಮಾಲೈ’ ಎಂಬ ಎರಡು ಕವಿತೆಗಳನ್ನೂ ಕವಿ ರಚಿಸಿದ್ದಾರೆ.

ಸೀರಾ ಪುರಾಣ


‘ಸೀರಾ ಪುರಾಣ’ ವೆಂಬ ಶೀರ್ಷಿಕೆಯು ವಿಭಿನ್ನವಾದ ಎರಡು ಸಾಹಿತ್ಯ ರೂಪಕಗಳನ್ನು ಸೂಚಿಸುತ್ತಿದೆ. ಅರಬಿ ಭಾಷೆಯ ಸೀರಾದ (ಪ್ರವಾದಿ ಜೀವನಚರಿತ್ರೆ )ತಮಿಳು ಭಾಷಾರೂಪವಾಗಿದೆ ಸೀರಾ. ಸಂಸ್ಕೃತ ಪದವಾಗಿರುವ ಪುರಾಣ ಹಿಂದೂ ಸಾಹಿತ್ಯದ ತಮಿಳು ಮತ್ತು ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿರುವ ಸಾಹಿತ್ಯ ರೂಪವಾಗಿದೆ. ಪುರಾಣಗಳಲ್ಲಿ ಹಿಂದೂ ದೇವತೆಗಳಾದ ಶಿವ, ವಿಷ್ಣು, ದುರ್ಗ ಮತ್ತು ಮಾನವ ಕುಲದ ರಕ್ಷಣೆಗಾಗಿ ಅವತಾರವೆತ್ತ ಪುಣ್ಯಾತ್ಮರ ಕಥೆಗಳು ಅಡಕವಾಗಿವೆ. ಪ್ರವಾದಿ ಪೈಗಂಬರರ ಜೀವನದ ಕುರಿತು ಪುರಾಣವೆಂಬ ಬಳಕೆಯು ಮುಖ್ಯ ಕಥಾಪಾತ್ರದ ಬಗೆ ಓದುಗರಲ್ಲಿ ಭರವಸೆ ಮತ್ತು ಜಿಜ್ಞಾಸೆಗೆ ಕಾರಣವಾಗುತ್ತದೆ. ಸೀರಾಪುರಾಣದ ಅರಬಿ ಮತ್ತು ಸಂಸ್ಕೃತ ಭಾಷೆಗಳ ಮಿಶ್ರಣವು ಹೊರನಾಡಿನ ಧರ್ಮವೊಂದನ್ನು ಪ್ರಾದೇಶಿಕರು ಪ್ರಾಮುಖ್ಯತೆ ನೀಡುವ ಸಾಹಿತ್ಯರೂಪದಲ್ಲಿ ಕಟ್ಟಿಕೊಡಲಾಗಿದೆ. ತಮಿಳು ಸಾಹಿತ್ಯ ಸಂಪ್ರದಾಯಗಳು, ರೀತಿ ರಿವಾಜುಗಳು, ಪ್ರಕೃತಿ ದೃಶ್ಯಗಳು ಇವೆಲ್ಲವನ್ನೂ ಪ್ರವಾದಿವರ್ಯರ ಮತ್ತು ಕುಟುಂಬದ ಜೀವನಚರಿತ್ರೆಯ ಪ್ರದರ್ಶನಕ್ಕೆ ಬಳಸಲಾಗಿದೆ. ಕವಿಯವರಿಗೆ ತಮಿಳು ಭಕ್ತಿ ಸಾಹಿತ್ಯದ ಕುರಿತಂತೆ ಆಗಾಧವಾದ ಪಾಂಡಿತ್ಯವಿದೆ ಮತ್ತು ಇದನ್ನು 9ನೇ ಶತಮಾನದಲ್ಲಿ ಕಾಂಬನ್ ರಚಿಸಿದ ತಮಿಳು ರಾಮಾಯಣದಿಂದ ಕರಗತಮಾಡಿಕೊಂಡದ್ದಾಗಿರಬಹುದೆಂದು ಊಹಿಸಲಾಗಿದೆ. ಐದು ಸಾವಿರದ ಇಪ್ಪತ್ತೆಂಟು ವಚನಗಳಿರುವ ಚಿರಪುರಾಣಂ 3 ಕಾಂಡಗಳಾಗಿ ವಿಂಗಡಿಸಲಾಗಿದೆ.

  1. ವಿಲಾದತ್ ಕಾಂಡ (24 ಅಧ್ಯಾಯಗಳು, 1240 ವಚನಗಳು )
  2. ನುಬುವ್ವತ್ ಕಾಂಡ (21ಅಧ್ಯಾಯಗಳು, 1105 ವಚನಗಳು)
  3. ಹಿಜ್ರತ್ ಕಾಂಡ (92 ಅಧ್ಯಾಯಗಳು, 2683 ವಚನಗಳು)

ಹುಟ್ಟು (ವಿಲಾದತ್), ಪ್ರವಾದಿತ್ವ (ನುಬುವ್ವತ್), ಪಲಾಯನ (ಹಿಜ್ರತ್) ಎಂಬ ಅರಬಿ ಮೂಲದ ಪದಗಳಿಂದ ಕಾಂಡಗಳನ್ನು ಹೆಸರಿಸಲಾಗಿದೆ.

ಪ್ರಥಮ ಅಧ್ಯಾಯ : ಅಲ್ಲಾಹನ ವರ್ಣನೆಗಳು
ಅಲ್ಲಾಹನ ಮತ್ತು ಪ್ರವಾದಿವರ್ಯರ ವರ್ಣನೆಗಳೊಂದಿಗೆ ಸೀರಾಪುರಾಣ ಪ್ರಾರಂಭಿಸಲಾಗಿದೆ. ದೇವರ ಕುರಿತಂತೆ ತಿರುವಿನ್ ತಿರುವೈ ಎಂದಾಗಿದೆ ಪರಾಮರ್ಶಿಸಿರುವುದು. ತಿರು ಎಂಬ ಪದವು ಶ್ರೀ ಎಂಬ ಪದದ ತಮಿಳು ಅನುವಾದವೆನ್ನಬಹುದು. ಈ ಪದಕ್ಕೆ ಪುಣ್ಯ, ಸೌಭಾಗ್ಯ, ಪರಿಶುದ್ಧ ಎಂಬಿತ್ಯಾದಿ ನಾನಾರ್ಥಗಳಿವೆ. ಆದ್ದರಿಂದಲೇ ತಮಿಳಿನಲ್ಲಿರುವ ವಿಶುದ್ಧ ರಚನೆಗಳೆಲ್ಲವೂ ಶ್ರೀ ಅಥವಾ ತಿರು ಪದಬಳಕೆಯಿಂದ ಆರಂಭಿಸಲಾಗುತ್ತದೆ. ಉಮರ್ ಪುಲವರರ ತಿರುವಿನ್ ತಿರುವೈ ಎಂಬ ಪದ ಬಳಕೆಗೆ ಸಮಾಂತರವಾದ ಬಳಕೆಗಳನ್ನು ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿರುವ ವೈಷ್ಣವ ಸಾಹಿತ್ಯಗಳಲ್ಲಿ ಕಾಣಬಹುದಾಗಿದೆ. ದೇವರ ಕೀರ್ತನೆಗಳ ಬಳಿಕ ಪ್ರವಾದಿ ಮಹಮ್ಮದರನ್ನು ಗೌರವಿಸಲಾಗಿದೆ.
” ಜಗತ್ತಿಗೆ ಸನ್ಮಾರ್ಗವನ್ನು ತೋರಿದ
ನಾಲ್ಕು ವೇದಗಳ
ಪ್ರಕಾಶವಾಗಿ ಬೆಳಗಿದವರು.
ಈ ಮಹಾ ನೇತಾರನ ಮಾತನ್ನು
ಅನುಕರಿಸಿದವರು
ಕವಿಗಳಿಂದ ಕೊಂಡಾಡಲ್ಪಟ್ಟವರಾಗಿರುವರು
ಎಲ್ಲರಿಂದಲೂ ಪ್ರಶಂಸೆಗೆ ಅರ್ಹರಾಗಿರುವರು.
ಅವರು ಸತ್ಯವನ್ನರಿಯುವಾಗ
ಸಂದೇಹಗಳು ಇಲ್ಲವಾಗಿ
ಅವರ ಕಿವಿಗಳಿಗೆ
ಸಮಾಧಾನ ಲಭಿಸುವುದು
ಪೈಶಾಚಿಕ ಕೃತ್ಯಗಳಿಗೆ ಪ್ರೇರಣೆಯಾಗುವ
ಚಿಂತನೆಗಳು ಮರೆಯಾಗುವುದು. “
ತೌರಾತ್, ಝಬೂರ್, ಇಂಜೀಲ್, ಖುರ್ ಆನ್ ಎಂಬೀ ನಾಲ್ಕು ವೇದ ಗ್ರಂಥಗಳು ಮತ್ತು ಪ್ರವಾದಿ ವಚನಗಳನ್ನು ಪ್ರತಿಪಾದಿಸುವ ಈ ಸಾಲುಗಳು ಬಹಳ ಮುಖ್ಯವಾಗಿದೆ. ಇಲ್ಲಿ ಪರಾಮರ್ಶಿಸಲಾದ ನಿರಂತರ ಅನುಕರಿಸುವ ಪದ ಎಂಬುವುದರ ತಾತ್ಪರ್ಯ ತಮಿಳಿನ ಮೂಲಮಂತ್ರ ಅಥವಾ ಶಹಾದತ್ ಕಲಿಮ ಎಂದು ಅಂದಾಜಿಸಲಾಗಿದೆ. ಇಸ್ಲಾಮಿಕ್ ಇತಿಹಾಸದ ನಾಲ್ಕು ಖಲೀಫಾಗಳು, ಬಗ್ದಾದಿನ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜೀಲಾನೀ, ಉಮರರ ಗುರುವರ್ಯರಾದ ಸ್ವದಖತುಲ್ಲಾ ಅಪ್ಪ (ಸ್ವದಖತುಲ್ಲಾಹಿಲ್ ಖಾಹಿರಿ ) ಮುಂತಾದ ಪಾರ್ಥ ಸ್ಮರಣೀಯರನ್ನು ಗೌರವದೊಂದಿಗೆ ಪರಾಮರ್ಶಿಸಲಾಗಿದೆ. ಅವರ ಪಾದಗಳನ್ನು ಗೌರವಾರ್ಥ ತನ್ನ ಶರೀರದಲ್ಲಿಡುವ ಶ್ರಮವೂ ಇಲ್ಲಿ ಕಾಣಬಹುದು. ಉಸ್ಮಾನ್ (ರ) ಕುರಿತಂತೆ ಅಂತಹ ಒಂದು ಪ್ರತಿಪಾದನೆಯಿದೆ.
” ಚಂದ್ರನನ್ನು ಸೋಲಿಸುವಂತೆ
ಉಜ್ವಲ ಪ್ರಕಾಶವಿರುವ ಪ್ರವಾದಿವರ್ಯರ
ನಾಲಗೆಯಿಂದ ಹೊರಬಂದ ನುಡಿಮುತ್ತುಗಳು
ವಿಶ್ವವ್ಯಾಪಿಯಾಗಬೇಕೆಂದು
ಉಸ್ಮಾನರು ಆದೇಶವಿತ್ತರು.
ತನ್ನ ಪ್ರಾಣವೆಂಬಂತೆ
ಪ್ರಾಯಭೇದವಿಲ್ಲದೆ
ನಾಲ್ಕು ವೇದ ಬಲ್ಲವರನ್ನು
ಉಸ್ಮಾನ್ ಜೊತೆಗಿರಿಸಿದರು.
ಅವರನ್ನು ಮರೆಯದಿರೋಣ.
ಅವರ ಎರಡು ಪಾದಗಳು ನಮ್ಮ ಮೇಲಿಡೋಣ.”
ತಾನು ಈ ಕೃತಿ ರಚಿಸಲು ಅರ್ಹನಲ್ಲವೆಂದು ತಿಳಿಸುವ ಕವಿಯು ವಿನಯದ ಧಾಟಿಯಲ್ಲಿ ಅಧ್ಯಾಯವನ್ನು ಕೊನೆಗೊಳಿಸುತ್ತಾರೆ. ದಕ್ಷಿಣ ಭಾರತದ ವೈಷ್ಣವ ಕೃತಿಗಳಲ್ಲಿರುವ ಸ್ತೋತ್ರ ಸಾಹಿತ್ಯದಲ್ಲಿ ಈ ಪರಿಯ ಬಳಕೆಗಳಿವೆ.

ಕವಿ ಮುಂದುವರಿಯುತ್ತಾ
” ಪರ್ವತಗಳಲ್ಲಿ ಬೀಸುವ
ಏಳು ಸಮುದ್ರಗಳಿಗೆ ಹೊಡೆತ ನೀಡುವ
ಚಂಡಮಾರುತಗಳೆದುರು
ಹಸಿವಿನಿಂದ ಕಂಗಾಲಾಗಿ
ನಿಟ್ಟುಸಿರು ಬಿಡುವ ಇರುವೆಯಂತೆ,
ಶ್ರೇಷ್ಠರಾದ ತಮಿಳು ಕವಿಗಳ ಮುಂದೆ ನಾನು ಕವನ ರಚಿಸುತ್ತಿದ್ದೇನೆ.
ನನ್ನ ಕವಿತೆಯ
ಪ್ರತಿಯೊಂದು ಸಾಲುಗಳಲ್ಲೂ
ನನಗೆ ಕೊರತೆಗಳು ಎದ್ದು ಕಾಣುತ್ತಿವೆ.
ಹಂತ ಹಂತವಾಗಿ ಜ್ಞಾನ ಕರಗತಮಾಡಿದ
ಮಹಾ ಕವಿಗಳೆದುರು
ನಾನು ಕವನ ಬರೆಯುವುದನ್ನು
ಕೈಗಳಿಂದ ಹೊರಡುವ ಶಬ್ದವನ್ನು
ಗುಡುಗಿನ ಶಬ್ದಕ್ಕೆ ಹೋಲಿಸಿದಂತಾಗಬಹುದು.”

ಸಂಸ್ಕೃತದ ಸ್ತೋತ್ರ ಸಾಹಿತ್ಯದಲ್ಲೂ ಈ ರೀತಿಯ ವಚನಗಳು ಕಾಣಲು ಸಾಧ್ಯವಾಗುತ್ತಿದೆ.

” ನನ್ನ ಜ್ಞಾನದ ಬಗ್ಗೆ
ನನಗರಿವಿದ್ದರೂ
ದೇವರ ಪಾದಗಳ ಬಗೆಗಿನ
ಈ ಪ್ರೇಮ ಕಾವ್ಯಗಳನ್ನು ಒಟ್ಟುಗೂಡಿಸಲು
ನಾನು ನಾಚಲಾರೆ.
ಪುಣ್ಯ ನದಿಯಾದ ಗಂಗೆಯನ್ನು
ನಾಯಿ ನೆಕ್ಕಿದರೂ
ಅದು ಶುದ್ಧವಾಗಿಯೇ ಉಳಿಯುತ್ತದೆ. “

ಈ ಎರಡು ಪದ್ಯಗಳಲ್ಲಿ ಸಮಾನತೆಗಳಿದ್ದರೂ ಉಮರ್ ಪುಲವರರ ಉಪಮೆಗಳು ಬಹಳ ಸರಳವಾಗಿ ಕಾಣಿಸುತ್ತದೆ.

ಮೂಲ: ವಸುಧ ನಾರಾಯಣನ್‌
ಕನ್ನಡಕ್ಕೆ: ಆಶಿಕ್‌ ಅಲಿ ಕೈಕಂಬ

ವಸುಧ ನಾರಾಯಣನ್‌

Leave a Reply

*