ಫ್ಯೂದರ್ ದಸ್ತೋವಸ್ಕಿ, ಪ್ರವಾದಿ ಮತ್ತು ಕುರಾನ್

“ಕಾಂಟ್‌ನ Critique of Pure Reason ಹಾಗೂ ಕುರಾನ್ ಅನ್ನು ನನಗೆ ಕಳುಹಿಸಿಕೊಡು, ರಹಸ್ಯವಾಗಿ ಕಳುಹಿಸಿ ಕೊಡುವುದಿದ್ದರೆ ಹೆಗೆಲ್‌ನ ಬರೆಹಗಳನ್ನೂ ಕಳುಹಿಸು, ಮುಖ್ಯವಾಗಿ ಹೆಗೆಲ್‌ನ History of Philosophy”.
ಇದು ಫೆಬ್ರವರಿ 22, 1854 ರಂದು ಸೆರೆಮನೆಯಿಂದ ಬಿಡುಗಡೆಯಾದ ಒಂದು ವಾರದ ನಂತರ ದಸ್ತೋವ್ಸ್ಕಿ ತನ್ನ ಸಹೋದರ ಮಿಖಾಯಿಲ್‌ಗೆ ಓಮ್ಸ್ಕ್‌ನಿಂದ ಬರೆದ ಪತ್ರದ ಒಂದು ಭಾಗ.
ಒಂದು ವರ್ಷದ ಬಳಿಕ, ಅದುವರೆಗೂ ಬರೆಯಲ್ಪಟ್ಟಿರದ ಸೈಬೀರಿಯಾದ ಖೈದಿಗಳ ದುರಂತಾವಸ್ಥೆ ಬಗ್ಗೆ Memoirs from the House of the Dead ಅನ್ನು ದಸ್ತೋವ್ಸ್ಕಿ ಬರೆಯುತ್ತಾರೆ. “ನಾನು ಓರ್ವ ಯುವ cherkess ಗೆ (cherkess ರಷ್ಯನ್‌ ರಿಪಬ್ಲಿಕ್‌ನ ಒಂದು ಪ್ರದೇಶ) ರಷ್ಯನ್‌ ಓದಲು ಕಲಿಸುತ್ತಿದ್ದೆ. ಎಂತಹಾ ಅದ್ಭುತ ವ್ಯಕ್ತಿ ಆತ” ಎಂದು ಅದರಲ್ಲಿ ಅಲಿ ಎಂಬ ಟಾಟರ್ ಮೂಲದ ಖೈದಿಯೊಂದಿಗಿನ ಮುಖಾಮುಖಿಯನ್ನು ದಸ್ತೋವ್ಸ್ಕಿ ವಿವರಿಸುತ್ತಾರೆ.

ಅಲಿ ಹಾಗೂ ದಸ್ತೋವ್ಸ್ಕಿಯ ಈ ಮುಖಾಮುಖಿ ಭೇಟಿಗಳಿಂದ ರಷ್ಯನ್ನರಿಗೆ ʼಇಸ್ಲಾಂʼ ಎಂಬ ಹೊಸ ವಿಷಯದ ಪರಿಚಯವೂ ಆಯಿತು.

1840 ರ ದಶಕದಲ್ಲಿ ರಷ್ಯನ್ ಅಥವಾ ಫ್ರೆಂಚ್ ಅನುವಾದದ ಕುರಾನ್‌ ಅನ್ನು ದಸ್ತೋವ್ಸ್ಕಿ ಓದಿರಬೇಕು. 18 ನೇ ಶತಮಾನದಲ್ಲಿ ಕುರಾನ್ ಅನ್ನು ಫ್ರೆಂಚ್ನಿಂದ ರಷ್ಯನ್ ಭಾಷೆಗೆ ಹಲವಾರು ಬಾರಿ ಅನುವಾದಿಸಲಾಗಿದೆ.

Memoirs from the House of the Dead ನಲ್ಲಿ, ದಸ್ತೋವ್ಸ್ಕಿ ಬರೆಯುತ್ತಾರೆ: “ದರೋಡೆ ಮಾಡಿದ ಶಿಕ್ಷೆಗೆ ಗುರಿಯಾದ ಬಹುತೇಕ ಎಲ್ಲಾ ಕಕೇಶಿಯನ್ ಪರ್ವತಾರೋಹಿಗಳ ಗುಂಪು – ಅದರಲ್ಲಿ ಇಬ್ಬರು ಲೆಜ್ಜಿಯನ್ನರು, ಒಬ್ಬ ಚೆಚೆನ್, ಡಾಗೆಸ್ತಾನ್‌ ನ ಮೂವರು ಟಾಟರ್‌ಗಳು – (ಜೈಲು ಬ್ಯಾರಕ್‌ಗಳ) ಎಡಭಾಗವನ್ನು ತಮ್ಮದಾಗಿಸಿಕೊಂಡಿದ್ದಾರೆ”. ಅವರಲ್ಲಿ ನೌರಾ (Nourra) ಎಂಬ ಚೆಚೆನ್‌ ಮೂಲದ ಧರ್ಮನಿಷ್ಠ ಮುಸ್ಲಿಂ ವ್ಯಕ್ತಿಯ ನಡವಳಿಕೆಯಲ್ಲಿ ದಸ್ತೋವ್ಸ್ಕಿ ಆಸಕ್ತಿ ವ್ಯಕ್ತಪಡಿಸುತ್ತಾರೆ: “ಅವರ ಸೆರೆವಾಸದ ಸಮಯದಲ್ಲಿ, ಅವರು ಏನನ್ನೂ ಕದಿಯಲಿಲ್ಲ ಅಥವಾ ಯಾವುದೇ ಅಪರಾಧವನ್ನೂ ಮಾಡಲಿಲ್ಲ. ಅತ್ಯಂತ ತೀವ್ರ ವಿಶ್ವಾಸಿಗಳಾಗಿದ್ದ ಅವರು ತಮ್ಮ ಆರಾಧನೆಗಳನ್ನು ಸಮಯೋಚಿತವಾಗಿ ನೆರವೇರಿಸುತ್ತಿದ್ದರು, ಮಹಮ್ಮದೀಯನ್ ಹಬ್ಬದ ಮೊದಲು ಉಪವಾಸಗಳನ್ನು ಆಚರಿಸಿದ್ದರು. ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆದರು. ಬ್ಯಾರಕ್‌ನಲ್ಲಿರುವ ಕೈದಿಗಳ ನಡುವೆ ಧಾರ್ಮಿಕ ಭಿನ್ನಾಭಿಪ್ರಾಯವು ಎಂದಿಗೂ ಸಂಘರ್ಷದ ಮೂಲವಾಗಿರಲಿಲ್ಲ”.

ದಸ್ತೋವ್ಸ್ಕಿ ತನ್ನ ಸಹ ಖೈದಿಗಳ ಅದರಲ್ಲೂ ಡಾಗೆಸ್ತಾನ್‌ ಮೂಲದ ಖೈದಿಗಳ ಸಹಾನುಭೂತಿಯನ್ನು ಹಾಗೂ ರಕ್ಷಣೆಯನ್ನು ಪಡೆದಿದ್ದರು, “ಡಾಗೆಸ್ತಾನ್‌ನ ಮೂವರು ಟಾಟರ್‌ಗಳು ಸಹೋದರರಾಗಿದ್ದರು. ಇಬ್ಬರು ಮಧ್ಯವಯಸ್ಕರು, ಅದರಲ್ಲಿ ಮೂರನೇಯವನಾದ ಅಲಿ ಸುಮಾರು ಇಪ್ಪತ್ತೆರಡು ವರ್ಷದವನು, ಆದರೆ ಆತ ಅದಕ್ಕೂ ಎಳೆಯವನಂತೆ ಕಾಣುತ್ತಿದ್ದ”.

ದೋಸ್ಟೋವ್ಸ್ಕಿ ಅಲಿಗೆ ರಷ್ಯನ್ ಕಲಿಸುತ್ತಾರೆ. ಬದಲಾಗಿ, ಅವರ ಎರಡು ಧರ್ಮಗಳು (ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ) ಅನೇಕ ಸಾಮ್ಯತೆಗಳನ್ನು ಪರಸ್ಪರ ಹಂಚಿಕೊಂಡಿರುವುದನ್ನು, ಅದರಲ್ಲೂ ವಿಶೇಷವಾಗಿ ಯೇಸುವಿನ ಬಗ್ಗೆ ಅವರಿಗಿದ್ದ (ಮುಸ್ಲಿಮರಿಗೆ) ಗೌರವವನ್ನು ದಸ್ತೋವ್ಸ್ಕಿ ಕಂಡುಕೊಳ್ಳುತ್ತಾರೆ.

“ಒಂದು ಸಂಜೆ ನಾನು ಅಲಿಯಲ್ಲಿ ಕೇಳಿದೆ. ʼಅಲಿ ಇಲ್ಲಿ ಕೇಳು, ರಷ್ಯನ್‌ ಭಾಷೆಯನ್ನು ಓದಲು, ಬರೆಯಲು ನೀನೇಕೆ ಕಲಿಯಕೂಡದು? ಸೈಬೀರಿಯಾದಲ್ಲಿ ಇದು ನಿನಗೆ ಬಹಳ ಪ್ರಯೋಜನಕ್ಕೆ ಬರಬಹುದುʼ ಅಲಿ: ನನಗೆ ಆಗ್ರಹವಿದೆ, ಆದರೆ, ಯಾರ ಜೊತೆ ಕಲಿಯುವುದು? ʼಇಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಬೇಕಿದ್ದರೆ ನಾನೇ ನಿನಗೆ ಕಲಿಸಿಕೊಡಬಲ್ಲೆʼ ಅಲಿ: ಓಹ್‌, ಹಾಗಿದ್ದರೆ ನಾವು ಶುರು ಮಾಡೋಣ. “

ಅಲಿ ರಷ್ಯನ್‌ ಭಾಷೆ ಕಲಿತ ವೇಗ ದಸ್ತೋವ್ಸ್ಕಿಯನ್ನು ಬೆರಗುಗೊಳಿಸುತ್ತದೆ. ಕೇವಲ ಮೂರೇ ತಿಂಗಳಲ್ಲಿ ಟಾಟರ್‌ ಯುವಕ ಓದಲು, ಬರೆಯಲು ಕಲಿತ. ಆದರೆ ಹೊಸ ಒಡಂಬಡಿಕೆಯಲ್ಲಿ ಬರುವ ಪರ್ವತದ ಮೇಲಿನ ಧರ್ಮೋಪದೇಶದ ಓದುವಿಕೆಯು ಅವರಿಬ್ಬರ ನಡುವಿನ ಗೆಳೆತನವನ್ನು ಇನ್ನಷ್ಟು ಗಾಢಗೊಳಿಸಿತು:

“ಆತ ಕೆಲವು ಭಾಗಗಳನ್ನು ಅವನ ಹೃದಯಕ್ಕೆ ತೆಗೆದುಕೊಂಡ. ಆತ ಓದಿದ್ದನ್ನು ಇಷ್ಟಪಟ್ಟನೇ ಎಂದು ನಾನು ಆತನಲ್ಲಿ ಕೇಳಿದೆ. ಆತ ನಾಚುತ್ತಲೇ ತೀಕ್ಷ್ಣವಾಗಿ ನನ್ನನ್ನು ನೋಡಿ, “ಖಂಡಿತಾ. ಈಸಾ (ಜೀಸಸ್) ಪವಿತ್ರ ಪ್ರವಾದಿ, ಈಸಾ ಮಾತಾಡುವುದು ದೈವ ಭಾಷೆಯಲ್ಲಿ. ಇದು ಅತ್ಯಂತ ಸುಂದರವಾಗಿದೆ”. ʼನಿನಗೆ ಯಾವುದು ಇದರಲ್ಲಿ ಅತ್ಯಂತ ಇಷ್ಟವಾಯಿತು?ʼ “ಕ್ಷಮಿಸಿ, ಪ್ರೀತಿಸಿ, ತಪ್ಪು ಮಾಡಬೇಡಿ, ನಿಮ್ಮ ಶತ್ರುವನ್ನೂ ಪ್ರೀತಿಸಿ, ಅವರು ಎಷ್ಟು ಮನೋಹರವಾಗಿ ಇದನ್ನು ಹೇಳಿದ್ದಾರೆ”

ಜೀಸಸ್‌ ಬಗ್ಗೆ ಅಲಿಗಿರುವ ಗೌರವ ಅಚ್ಚರಿದಾಯಕವಾಗಿರಲಿಲ್ಲ. ಜೀಸಸ್‌ರನ್ನು ಕುರ್‌ಆನ್‌ ನಲ್ಲಿ ʼದೈವಿಕ ವಚನʼ, ʼದಿವ್ಯಾತ್ಮʼ, ʼಪವಿತ್ರಾತ್ಮʼ ಎಂಬೆಲ್ಲಾ ವಿಶೇಷಣಗಳಿಂದ ಪದೇ ಪದೇ ಪರಾಮರ್ಶಿಸಲಾಗುತ್ತದೆ.

“ಅವರು (ಅಲಿ ಹಾಗೂ ಸಹೋದರು) ತಲೆ ಬಾಗಿ, ಗೌರವಾದರಗಳಿಂದ ಬಹಳ ಹೊತ್ತು ಮಾತನಾಡಿದರು. ಬಳಿಕ ದಯೆ ಹಾಗೂ ಗಾಂಭೀರ್ಯ ಮಿಶ್ರಿತ ನಗುಭಾವದಿಂದ ನನ್ನನ್ನು ನೋಡಿ ಈಸಾ ದೇವರ ಪ್ರವಾದಿ ಎಂದು ಧೃಡೀಕರಿಸಿದರು, ಈಸಾ ಹಲವಾರು ಅದ್ಭುತಗಳನ್ನು ತೋರಿಸಿದ್ದಾರೆ. ಜೇಡಿಮಣ್ಣಿನ ಹಕ್ಕಿ ಮಾಡಿ ಅದಕ್ಕೆ ಊದಿ ಜೀವ ಕೊಟ್ಟು ಹಾರಿಸಿದರು; ಅದರ ಬಗ್ಗೆ ಅವರ ಪುಸ್ತಕದಲ್ಲಿ ಉಲ್ಲೇಖವಿದೆ”

ಪ್ರವಾದಿ ಮುಹಮ್ಮದ್ ಮತ್ತು ದಸ್ತೋವ್ಸ್ಕಿ

ಟಾಟರ್‌ಗಳೊಂದಿಗಿನ ಈ ಭೇಟಿಯು ಮುಸ್ಲಿಮ್ ಪ್ರಪಂಚದೊಂದಿಗೆ ದಸ್ತೋವ್ಸ್ಕಿಯ ಮೊದಲ ನೇರ ಸಂಪರ್ಕವೇನಲ್ಲ.

ಅವರ ವೃತ್ತಿಜೀವನದ ಆರಂಭದಲ್ಲಿ ಅವರು ಪ್ರವಾದಿ ಮುಹಮ್ಮದ್ (ಸ) ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರು. ಪ್ರತಿಗಾಮಿ, ರಾಷ್ಟ್ರೀಯತಾವಾದಿ ಕಾದಂಬರಿಕಾರನಂತೆ ಅವರನ್ನು ಸಾಮಾನ್ಯವಾಗಿ ಬಿಂಬಿಸಲಾಗಿದ್ದರೂ, ದಸ್ತೋವ್ಸ್ಕಿ ಅನ್ಯತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಳಜಿ ವಹಿಸಿದ್ದರು.

ಅವರು ಮೊದಲು ಪ್ರವಾದಿಯನ್ನು ದಿ ಡಬಲ್ ಎಂಬ ಕಾದಂಬರಿಯಲ್ಲಿ “ಟರ್ಕಿಶ್ ಪ್ರವಾದಿ ಮುಹಮ್ಮದ್” ಎಂದು ಉಲ್ಲೇಖಿಸುತ್ತಾರೆ.

ಅತ್ಯುನ್ನತ ರಾಜಕಾರಣಿ ಎಂದು ತಾನು ಪರಿಗಣಿಸುವ ʼತುರ್ಕಿಯ ಪ್ರವಾದಿ ಮುಹಮ್ಮದ್ ವಿರುದ್ಧದ ಅಪಪ್ರಚಾರದʼ ಬಗ್ಗೆ ಕೆಲವು ವಿದ್ವಾಂಸರೊಂದಿಗೆ ಕಾದಂಬರಿಯ ಮುಖ್ಯ ಕಥಾಪಾತ್ರ ಮಿಸ್ಟರ್ ಗೋಲಿಯಾಡ್ಕಿನ್‌ ಗೆ ಭಿನ್ನಾಭಿಪ್ರಾಯ ಇತ್ತು.

“ಜರ್ಮನ್ ಚಿಂತಕರಿಂದ ಅಪವಿತ್ರಗೊಂಡ ನಮ್ಮ ಸ್ನೇಹಿತ, ಟರ್ಕಿಶ್ ಪ್ರವಾದಿ ಮುಹಮ್ಮದ್ ಅವರ ಖ್ಯಾತಿಯನ್ನು ಮರುಸ್ಥಾಪಿಸುವ” ಅಗತ್ಯವನ್ನು ಕಾದಂಬರಿಯು ಉಲ್ಲೇಖಿಸುತ್ತದೆ.

ದಸ್ಟೋವ್ಸ್ಕಿಯಂತೆಯೇ, ಆ ಕಾಲದ ಅನೇಕ ಯುರೋಪಿಯನ್ ತತ್ವಜ್ಞಾನಿಗಳು ಪ್ರವಾದಿಯ ಬಗ್ಗೆ ಬರೆದಿದ್ದಾರೆ. ಥಾಮಸ್ ಕಾರ್ಲೈಲ್ 1841 ರಲ್ಲಿ Heroes and Cult of Heroes ನಲ್ಲಿ ಪ್ರವಾದಿಯನ್ನು ಟೀಕಿಸಿ ಬರೆದರೆ, ಮತ್ತೊಂದೆಡೆ ಸರ್ ಜಾರ್ಜ್ ಬರ್ನಾರ್ಡ್ ಶಾ ಪ್ರವಾದಿಯನ್ನು ಮನುಕುಲದ ಸಂರಕ್ಷಕನಾಗಿ ನೋಡಿದ್ದರು. ವಿಕ್ಟರ್ ಹ್ಯೂಗೋ‌ ತನ್ನ Year Nine of the Hegira ವನ್ನು ಪ್ರವಾದಿಗೆ ಅರ್ಪಿಸಿದ್ದರು.

ಪ್ರವಾದಿಯಲ್ಲಿ ದಸ್ತೋವ್ಸ್ಕಿಗಿದ್ದ ಆಸಕ್ತಿಯನ್ನು ಇತರ ಕೃತಿಗಳಲ್ಲಿಯೂ ಕಾಣಬಹುದು. Crime and Punishment ಕಾದಂಬರಿಯಲ್ಲಿನ ಪ್ರಮುಖ ಪಾತ್ರವಾದ ರಾಸ್ಕೋಲ್ನಿಕೋವ್ (Raskolnikov) ಸೀಸರ್ ಮತ್ತು ನೆಪೋಲಿಯನ್‌ಗೆ ಸಮಾನವಾಗಿ ಪ್ರವಾದಿಯನ್ನು ಮಾನವಕುಲದ ಪ್ರಮುಖ ನಾಯಕ ಹಾಗೂ ಶಿಕ್ಷಕರಲ್ಲಿ ಒಬ್ಬರು ಎಂದು ಪರಿಗಣಿಸುತ್ತದೆ.

ದಸ್ತೋವ್ಸ್ಕಿಯ ಕೃತಿಗಳಲ್ಲಿನ ಪ್ರವಾದಿಯ ಚಿತ್ರಣವು Crime and Punishment ನಲ್ಲಿ ಪ್ರಾಬಲ್ಯ ಹೊಂದಿರುವ ನಿರಾಕರಣವಾದಕ್ಕಿಂತ ನೀಷೆಯ ಸೂಪರ್‌ಮ್ಯಾನ್ ಕಲ್ಪನೆ ಕಡೆಗೆ ಹೆಚ್ಚು ಒಲವು ತೋರುವ ವ್ಯಕ್ತಿಯ ದೃಷ್ಟಿಯನ್ನು ಸೂಚಿಸುತ್ತದೆ.

ದಸ್ತೋವ್ಸ್ಕಿಗೆ, ಪ್ರವಾದಿ ಮಹಮ್ಮದ್‌ ಅವರು ಹಳೆಯ ದೃಷ್ಟಿಕೋನಗಳನ್ನು ಮೀರಿದ ಮತ್ತು ಹೊಸ ಮೌಲ್ಯ ವ್ಯವಸ್ಥೆಯನ್ನು ಕಂಡುಹಿಡಿದ ಮಹಾನ್ ವ್ಯಕ್ತಿ. ಹೊಸದನ್ನು ಅನ್ವೇಷಿಸಲು ಇತರರನ್ನು ಪ್ರೇರೇಪಿಸುವ ಮಹಾನ್‌ ವ್ಯಕ್ತಿಯಾಗಿ ದಸ್ತೋವ್ಸ್ಕಿ ಪ್ರವಾದಿಯನ್ನು ನೋಡುತ್ತಾರೆ.
ದಸ್ತೋವ್ಸ್ಕಿಗೆ ಪ್ರವಾದಿಯು ‘ಅತೀಂದ್ರಿಯ’ರೂ ಹೌದು. ದಿ ಈಡಿಯಟ್‌ನಲ್ಲಿ, ದಸ್ತೋವ್ಸ್ಕಿ ಪ್ರವಾದಿಯ ಆಕಾಶಾರೋಹಣವನ್ನು (ಇಸ್ರಾ, ಮಿಹ್‌ʼರಾಜ್) ಚಿತ್ರಿಸುತ್ತಾರೆ.

ಮೂಲ: ಶಾತಿಲ್ ನವಾಫ್
ಅನುವಾದ: ಫೈಝ್‌ ವಿಟ್ಲ

Leave a Reply

*