ಮುಹಮ್ಮದ್ ಅಲಿ: ಕ್ರೀಡಾ ಲೋಕದ ಆದರ್ಶ ವ್ಯಕ್ತಿ

ಕ್ರೀಡಾ ಲೋಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರತಿಭೆಯಾಗಿದ್ದರು ಮುಹಮ್ಮದ್ ಅಲಿ ಯವರು. ಅಂದಿನ ಅಜೇಯ ಬಾಕ್ಸರ್ ಆಗಿದ್ದ ಸೋನಿ ಲಿಸ್ಟನ್ ನನ್ನು 1964 ರಲ್ಲಿ ಸೋಲಿಸಿ ರಿಂಗ್ ನೊಳಗೆ ಭರ್ಜರಿ ಎಂಟ್ರಿ ಕೊಟ್ಟರು. ಆ ಮೂಲಕ ಹಾಲಿ ಹೆವಿವೇಟ್ ಚಾಂಪಿಯನ್ ನನ್ನು ಸೋಲಿಸಿದ ಅತಿ ಕಿರಿಯ ಬಾಕ್ಸರ್ ಎಂಬ ಗರಿಮೆಗೆ ಪಾತ್ರರಾದರು. ಜೋ ಲೂಯಿಸ್ ಮತ್ತು ಸುಗರ್ ರೇ ರಾಬಿನ್ಸನ್ ಅವರ ಸಾಲಿನಲ್ಲಿ ‘ಯಶಸ್ವಿ ಬಾಕ್ಸರ್’ ಎಂದು ಕ್ರೀಡಾ ಕ್ಷೇತ್ರವು ಅವರನ್ನು ಗುರುತಿಸಿತು. ಮೂರು ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಪಡೆಯುವ ಮೂಲಕ ಅವರು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು.

ಆಗಿನ ಕಾಲದ ಅವರ ಬಾಕ್ಸಿಂಗ್ ಶೈಲಿಯು ತೀರ ಅಸಾಂಪ್ರದಾಯಿಕ (Unorthodox) ಹಾಗೂ ಒಂದು ರೀತಿಯಲ್ಲಿ ಅಪ್ಪಟ ಬಾಕ್ಸರ್ ಗಳ ಅವಹೇಳನದಂತಿತ್ತು. ಆದಾಗ್ಯೂ ಅವರ ವೇಗ ಮತ್ತು ಶಕ್ತಿಯುತ ಪಂಚ್ ಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು. ಆದ್ದರಿಂದಲೇ ಕ್ರೀಡಾ ವಿಶ್ಲೇಷಕರು ಅಲಿಯವರನ್ನು ‘ಸಾರ್ವಕಾಲಿಕ ಬಾಕ್ಸರ್’ ಎಂದು ಬಣ್ಣಿಸಿದ್ದರು. ರಿಂಗ್ ಒಳಗೆ ಅವರು ತೋರಿದ ಪ್ರದರ್ಶನದ ಕಾರಣದಿಂದಾಗಿ ‘ಸ್ಪೋರ್ಟ್ಸ್ ಇಲಸ್ಟ್ರೇಟೆಡ್’ (Sports Illustrated) ಎಂಬ ಮ್ಯಾಗಝೀನ್ ‘ಶತಮಾನದ ಕ್ರೀಡಾಪಟು’ ಎಂದು ವಿಶ್ಲೇಷಿಸಿತ್ತು. ಆಫ್ ಫೀಲ್ಡ್ ನಲ್ಲಿ ಅವರ ಆಕರ್ಷಕ ವ್ಯಕ್ತಿತ್ವವು ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಿತು ಎಂದೇ ಹೇಳಬಹುದು.

ಅವರು ಕೊಡುತ್ತಿದ್ದ ಮುಷ್ಟಿ ಪ್ರಹಾರಗಳಿಗಿಂತ ಹೆಚ್ಚಿನ ವೇಗವು ಅವರ ನಾಲಿಗೆ ಮತ್ತು ಮನಸ್ಸಿಗಿತ್ತು. ಅಮೆರಿಕದ ಮುಖ್ಯವಾಹಿನಿಗೆ ಕಹಿಯಾಗಿದ್ದ ಕೆಲವು ಸತ್ಯಗಳು ಓರ್ವ ಕರಿಯ ಯುವಕನ ಬಾಯಿಯಿಂದ ಹೊರಬೀಳುವುದನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ವೀಕ್ಷಿಸಿತು. ಆಫ್ರೋ- ಅಮೆರಿಕನ್ನರ ಅಭಿಮಾನದ ಸಂಕೇತವಾಗಿ ಅಲಿಯವರು ಬದಲಾದರು. ಮಾತ್ರವಲ್ಲದೆ, ಅವರು ಜನರ ನಡುವೆ ‘ಪೀಪಲ್ಸ್ ಚಾಂಪಿಯನ್’ ಎಂದು ಪ್ರಸಿದ್ಧರಾದರು. ಏಕಕಾಲದಲ್ಲಿ ಇಸ್ಲಾಮಿನ ಆದರ್ಶ ಮತ್ತು ಕಪ್ಪು ವರ್ಣದ ಶಕ್ತಿಯನ್ನು ಅಮೆರಿಕ ಹಾಗೂ ಇಡೀ ವಿಶ್ವಕ್ಕೆ ತಿಳಿಸಿದ ದಂತಕಥೆಯಾಗಿದ್ದರು ಅವರು.

1964 ರ ಫೆಬ್ರವರಿ 25 ರಂದು ಲಿಸ್ಟನ್ ನನ್ನು ಸೋಲಿಸಿದ ನಂತರ ಕಾಷಿಯಸ್ ಕ್ಲೇ ಎಂಬ ತನ್ನ ಹೆಸರನ್ನು ‘ಮುಹಮ್ಮದ್ ಅಲಿ’ ಎಂದು ಬದಲಾಯಿಸಿದ್ದಾಗಿ ಘೋಷಿಸಿದರು. ಆದರೆ ಬಹುತೇಕ ಕ್ರೀಡಾ ವರದಿಗಾರರು, ಅವರ ಪ್ರತಿಸ್ಪರ್ಧಿಗಳು ಅವರನ್ನು ಹೊಸ ಹೆಸರಿನಿಂದ ಕರೆಯಲು ಇಷ್ಟಪಡಲಿಲ್ಲ. ಅವರು ಕಾಷಿಯಸ್ ಕ್ಲೇ ಎಂದೇ ಕರೆಯುತ್ತಿದ್ದರು. “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಅರಿವು ನನಗಿದೆ. ಸತ್ಯ ಏನೆಂದು ನನಗೆ ತಿಳಿದಿದೆ. ನಿಮ್ಮ ಹಾದಿ ನನಗೆ ಬೇಕಾಗಿಲ್ಲ. ನನಗಿಷ್ಟ ಬಂದ ಹಾಗೆ ಬದುಕುವ ಸ್ವಾತಂತ್ರ್ಯ ನನಗಿದೆ”- ಇದು ಅವರು ‌ಮೊದಲ ಚಾಂಪಿಯನ್‌ಶಿಪ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಮಾತುಗಳು.

ಮುಂದಿನ ದಿನಗಳಲ್ಲಿ ಕೇವಲ ಓರ್ವ ಬಾಕ್ಸರ್ ಎಂಬುದರ ಹೊರತಾಗಿ, ಜನರ ನಡುವೆ ಬೆರೆತು ಜನನಾಯಕರಾಗಿ ರೂಪಾಂತರಗೊಂಡರು. ಅನ್ಯಾಯ, ಜನಾಂಗೀಯ ಅಸಮಾನತೆ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದರು. ತರುವಾಯ, ತಮ್ಮ ಜೀವನದ ಬಹುಭಾಗವನ್ನು ಜನಸೇವೆಗಾಗಿ ಮುಡಿಪಾಗಿಟ್ಟರು. ಅಲಿಯವರು ನೇಷನ್ ಆಫ್ ಇಸ್ಲಾಂನ್ನು ತ್ಯಜಿಸಿ ಮುಖ್ಯವಾಹಿನಿ ಇಸ್ಲಾಂ ಸೇರಿಕೊಂಡರು. 9/11 ರ ದಾಳಿ ನಡೆದಾಗ ಭಯೋತ್ಪಾದನಾ ಕೃತ್ಯಗಳನ್ನು ತೀವ್ರವಾಗಿ ಖಂಡಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. “ಇದರಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಇಸ್ಲಾಂ ಅಂದರೆ ಶಾಂತಿಯೇ ಹೊರತು ಹಿಂಸೆಯಲ್ಲ. ಕೆಲವರ ದುಷ್ಕೃತ್ಯಗಳು ಇಡೀ ಒಂದು ಧರ್ಮವನ್ನು ಕೆಟ್ಟದಾಗಿ ಚಿತ್ರಿಸಲು ಕಾರಣವಾಗುತ್ತವೆ” ಎಂದು ಅವರು ಹೇಳಿದ್ದರು.

1966ರ ಮಾರ್ಚ್‌ನಲ್ಲಿ ಸೇನೆಗೆ ಸೇರಲು ಅರ್ಹತೆ ಗಿಟ್ಟಿಸಿದ ಬಳಿಕ, ಅಮೆರಿಕದ ಸಶಸ್ತ್ರ ಸೈನ್ಯದಲ್ಲಿ ಕಡ್ಡಾಯ ಸೇವೆ ಸಲ್ಲಿಸಲು ನಿರಾಕರಿಸಿದ್ದರಿಂದ ಪುನಃ ಮಾಧ್ಯಮಗಳ ಗಮನದ ಕೇಂದ್ರಬಿಂದುವಾದರು. ಸೇವೆ ಸಲ್ಲಿಸದಿರುವ ಸ್ವಾತಂತ್ರ್ಯ ನನಗೆ ಬೇಕೆಂದು ಸರಕಾರವನ್ನು ವಿನಂತಿಸಿದರು. ವಿಯಟ್ನಾಂ ಯುದ್ಧವನ್ನು ಅಂದಿನ ಬಹುತೇಕ ಅಮೆರಿಕನ್ನರು ಬೆಂಬಲಿಸಿದರು. ಯುದ್ಧದ ವಿರುದ್ಧ ದನಿಯೆತ್ತುವ ಅಲಿಯವರ ತೀರ್ಮಾನವು ವಿವಾದದ ಕಿಡಿ ಹೊತ್ತಿಸಿತು. ಅವರನ್ನು ಹೇಡಿ, ದೇಶದ್ರೋಹಿಯೆಂದು ಚಿತ್ರಿಸಲು ರಾಜಕಾರಣಿಗಳು, ಇಸ್ಲಾಮೋಫೋಬಿಕ್ ಮಾಧ್ಯಮಗಳು ದಿನವಿಡೀ ದುಡಿದವು. ಆದರೆ ಅಲಿಯವರ ಪ್ರತಿಕ್ರಿಯೆ ಹೀಗಿತ್ತು; “ಆ ಅಮಾಯಕರ ವಿರುದ್ಧ ಬಂದೂಕು ಹಿಡಿಯಲು ನನಗೆ ಸಾಧ್ಯವಿಲ್ಲ, ಅದರ ಬದಲಾಗಿ ನನ್ನನ್ನು ಜೈಲಿಗಟ್ಟಿರಿ”.

ತಮ್ಮ ಧೃಡಚಿತ್ತದ ಸಹಾಯದಿಂದ ಅಲಿಯವರು ‌ಮುಂದೆ ಸಾಗಿದರು. ಆದರೆ ತಮ್ಮ ಕೆಲವು ತೀರ್ಮಾನಗಳು ಮುಂದೆ ಅವರು ಬೆಲೆ ತೆರುವಂತೆ ಮಾಡಿದವು. 1967 ರ ಮಾರ್ಚ್‌ನಲ್ಲಿ ಹೆವಿವೇಟ್ ನಿಂದ ಹೊರದಬ್ಬಲ್ಪಟ್ಟರು. ಜೂನ್ ತಿಂಗಳಲ್ಲಿ ಸೇವೆಗೆ ನಿಯೋಜಿಸಿದ ಡ್ರಾಫ್ಟ್ ನ್ನು ತಿರಸ್ಕರಿಸಿದ್ದಕ್ಕಾಗಿ 5 ವರ್ಷಗಳ ಸೆರೆಮನೆ ವಾಸ ಅನುಭವಿಸುವಂತಾಯಿತು. ಬಾಕ್ಸಿಂಗ್ ನಿಂದ ನಿಷೇಧಕ್ಕೊಳಗಾಗಿ ಪಾಸ್ ಪೋರ್ಟ್ ಜಪ್ತಿ ಮಾಡಲ್ಪಟ್ಟಿತು. ದೇಶದ ಯಾವುದೇ ಸಂಸ್ಥಾನದಲ್ಲೂ ಬಾಕ್ಸಿಂಗ್ ನಲ್ಲಿ ಭಾಗವಹಿಸಲು ಲೈಸೆನ್ಸ್ ನೀಡಲಿಲ್ಲ. ವೃತ್ತಿ ಜೀವನದ ಪ್ರಮುಖ ಐದು ವರ್ಷಗಳಲ್ಲಿ ವೃತ್ತಿಯಿಂದ ದೂರಸರಿದ ಕಾರಣ ಸಾಲದ ಸುಳಿಗೆ ಸಿಲುಕಿದರು. ನಂತರ ಬದುಕಿನ ಕೊನೆಯ ಮೂರು ದಶಕಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದರು.

ಆದರೆ ಅಲಿಯವರ ಇಸ್ಲಾಮಿಕ್ ವೀಕ್ಷಣೆಗಳು 60ರ ದಶಕದ ಯುದ್ಧ ವಿರೋಧಿ ಸಂಘಟನೆಗಳಿಗೆ ಶಕ್ತಿ ನೀಡಿದವು. 1967ರ ಎಪ್ರಿಲ್ ನಲ್ಲಿ ನಡೆದ ವಿಯಟ್ನಾಂ ಯುದ್ಧದ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ರಂಗಕ್ಕಿಳಿಯಲು ಅಲಿಯವರ ನಿಲುವು ಪ್ರೋತ್ಸಾಹ ನೀಡಿತು. ಬಾಕ್ಸಿಂಗ್ ನಿಂದ ನಿರ್ಬಂಧ ಹೇರಲ್ಪಟ್ಟ ಆ ದಿನಗಳಲ್ಲಿ ಕ್ಯಾಂಪಸ್ ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. ಅವರೋರ್ವ ಪ್ರಚಂಡ ವಾಗ್ಮಿಯಾಗಿದ್ದರು.

ತಮ್ಮ ನಂಬಿಕೆ- ಆದರ್ಶದ ವಿಷಯದಲ್ಲಿ ಅವರಿಗೆ ಬದ್ಧತೆ ಇತ್ತು. “ಬಾಕ್ಸಿಂಗ್ ರಿಂಗಿನೊಳಗಿನ ನನ್ನ ಕಾದಾಟದಿಂದ ಕೇವಲ‌ ನನಗೆ ಮಾತ್ರ ಜನಪ್ರಿಯತೆ ಸಿಕ್ಕಿತು. ನಾನು ಬಾಕ್ಸಿಂಗ್ ನ್ನು ಯಾವತ್ತೂ ಎಂಜಾಯ್ ಮಾಡುವುದಿಲ್ಲ. ಜನರನ್ನು ನೋಯಿಸುವುದು, ವೇಗವಾದ ಪಂಚ್ ಗಳ ಮೂಲಕ ಹೊಡೆದುರುಳಿಸುವುದನ್ನು ನಾನು ಸಂಭ್ರಮಿಸುವುದಿಲ್ಲ. ಆದರೆ ಈ ಜಗತ್ತು ಅಧಿಕಾರ, ಸಂಪತ್ತು, ಪ್ರಶಸ್ತಿಗಳನ್ನು ಮಾತ್ರವೇ ಗುರುತಿಸುತ್ತದೆ. ಆದರೆ, ಇಸ್ಲಾಮಿನ ಸುಂದರ ಆಶಯಗಳು, ಮುಸ್ಲಿಮರ ಐಕ್ಯತೆ, ಏಕತೆಯು ನನ್ನ ಮೇಲೆ ಪ್ರಭಾವ ಬೀರಿದವು. ಅವರು ಮಕ್ಕಳನ್ನು ಬೆಳೆಸುವ ರೀತಿ, ಇಸ್ಲಾಮಿಕ್ ಆಚಾರ-ಅನುಷ್ಠಾನಗಳ ಸೌಂದರ್ಯ, ಅವರ ಭಕ್ಷ್ಯ ರೀತಿ, ವಸ್ತ್ರಧಾರಣೆ ಸೊಗಸಾಗಿವೆ. ಇದನ್ನು ಎಲ್ಲರಿಗೂ ತಲುಪಿಸಲು ನಾನು ಉತ್ಸುಕನಾಗಿದ್ದೇನೆ. ಜನರು ಸತ್ಯವನ್ನು ಅರಿತರೆ, ಅದನ್ನು ಅಂಗೀಕರಿಸಿ, ಇಸ್ಲಾಮಿಗೆ ಆಕರ್ಷಿತರಾಗುತ್ತಾರೆ. ವರ್ಣ ಕಪ್ಪಾಗಲಿ, ಬಿಳುಪಾಗಿರಲಿ, ಕೆಂಪೇ ಆಗಿರಲಿ, ಕ್ರೈಸ್ತ, ಹಿಂದೂ, ಬೌದ್ಧ, ನಾಸ್ತಿಕ ಯಾರೇ ಆಗಲಿ ಖುರಾನ್ ಆಲಿಸಿದರೆ, ಪ್ರವಾದಿಯವರ ಬಗ್ಗೆ ತಿಳಿದರೆ, ಖಂಡಿತವಾಗಿಯೂ ಅದು ಆತನ ಮೇಲೆ ಪ್ರಭಾವ ಬೀರುತ್ತದೆ” ಎಂದು ಅವರೊಮ್ಮೆ ಹೇಳಿದ್ದರು.

ತಮ್ಮ ಪೂರ್ವಜರು ಅಮೆರಿಕಾಗೆ ಬಯಸಿ ಬಂದವರಲ್ಲ. ಗುಲಾಮಗಿರಿಗಾಗಿ ಹಡಗುಗಳ ಮೂಲಕ ದೂರದಿಂದ ಅವರನ್ನು ಅಮೆರಿಕದಲ್ಲಿ ತಂದು ಇಳಿಸಲಾಯಿತು ಎಂಬುದು ಅವರಿಗೆ ಗೊತ್ತಿದ್ದರೂ, ಅಮೆರಿಕವನ್ನು ಅವರು ಅತಿಯಾಗಿ ಪ್ರೀತಿಸಿದರು. ವರ್ಣಬೇಧ ವ್ಯವಸ್ಥೆಯ ಕೇಂದ್ರಗಳಾಗಿದ್ದ ಶಾಲೆಗಳಿಗೆ ಕರಿಯರು ಕಡ್ಡಾಯವಾಗಿ ಹೋಗಬೇಕಾಗಿದ್ದರೂ ಕೂಡಾ ಅವರು ತಾವಿರುವ ಮಣ್ಣನ್ನು ಗೌರವಿಸಿದರು. ಸರಕಾರವೇ ನಿರ್ಲಕ್ಷಿಸಿದರೂ ಅವರು ನಾಡನ್ನು ಅಭಿಮಾನದಿಂದ ಕಂಡರು. ಡ್ರಾಫ್ಟ್ ನ್ನು ನಿರ್ಲಕ್ಷಿಸಿದ ಕಾರಣ ಬಾಕ್ಸಿಂಗ್ ನಿಂದ ನಿಷೇಧಿಸ್ಪಟ್ಟಿದ್ದರೂ ದೇಶದ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ತನ್ನನ್ನು ಹೋರಾಟಗಾರನಾಗಿ ಬೆಳೆಸಿದ ಮಣ್ಣು ಎಂಬ ಕಾರಣಕ್ಕಾಗಿ ಅಮೆರಿಕಾವನ್ನು ಅವರು ಪ್ರೀತಿಸಿದರು.

ಮುಸ್ಲಿಂ ಜಗತ್ತಿನಲ್ಲಿ ಒಳ್ಳೆಯ ಹೆಸರಿದ್ದ ವ್ಯಕ್ತಿಯಾಗಿದ್ದರು ಅಲಿಯವರು. ಮುಸ್ಲಿಂ ದೇಶಗಳಿಂದ ಹೋಗಿ ಅಮೆರಿಕದಲ್ಲಿ ನಿರಾಶ್ರಿತರಾಗಿದ್ದವರು, ವಿವಿಧ ದೇಶಗಳಿಂದ ವಲಸೆ ಹೋದ ಜನರೊಂದಿಗೆ ಬಾಂಧವ್ಯ ಹೊಂದಿದ್ದರು. ವರ್ಷಗಳ ಕಾಲ ಸರ್ಕಾರದೊಂದಿಗೆ ಹೋರಾಟ ನಡೆಸಿದ್ದರೂ, ವರ್ಣ-ಧರ್ಮದ ವಿಚಾರದಲ್ಲಿ ವೈಯಕ್ತಿಕವಾಗಿ ನೋವನ್ನನುಭವಿಸಿದರೂ ಕ್ರೀಡಾಭಿಮಾನಿಗಳ ಎದುರು ದೇಶಪ್ರೇಮವನ್ನು ಪ್ರಕಟಿಸಲು ಸನ್ನದ್ಧರಾಗಿದ್ದರು.

ಬಾಲ್ಯದಿಂದಲೇ ಅವರೊಬ್ಬ ‘ರೆಬೆಲ್’ ಆಗಿದ್ದರು. ಅಧಿಕಾರ ಪ್ರಜೆಗಳದ್ದಾಗಿರಬೇಕೆಂಬ ತತ್ವದಲ್ಲಿ ಬಲವಾದ ನಂಬಿಕೆ ಇಟ್ಟಿದ್ದರು. ವಿವಿಧ ಜನಾಂಗ, ಪ್ರದೇಶ, ನಂಬಿಕೆಯ ಜನರು ಸೇರಿದಾಗ ಮಾತ್ರ ಒಂದು ದೇಶವು ತನ್ನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಅರಿತಿದ್ದರು. ಗುಲಾಮರು, ವಲಸಿಗರು, ಉಗ್ರವಾದಿಗಳು, ಸೈನಿಕರು ಮುಂತಾದವರೆಲ್ಲರೂ ಸೇರಿ ನಿರ್ಮಾಣವಾದ ರಾಷ್ಟ್ರವಾಗಿದೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು.

ಅವರ ವಿರುದ್ಧ ದಾಖಲಾಗಿದ್ದ ದೋಷಾರೋಪ ಪಟ್ಟಿಯನ್ನು 1971 ರಲ್ಲಿ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಅಸಿಂಧುಗೊಳಿಸಿತು. ಅಂತಃಕರಣಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಅವರ ಗುಣ ಓರ್ವ ರಾಜಕೀಯ ಪರಿಕಲ್ಪನೆ ಇರುವ ಕ್ರೀಡಾಪಟುಗಳಿಗೆ ಮಾದರಿ. ಸಾರ್ವಜನಿಕ ಅಭಿಪ್ರಾಯಗಳನ್ನು ದಾಟಿ, ಅಂತಃಕರಣಕ್ಕನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಅಲಿಯವರು ಇಂದಿಗೂ ಆದರ್ಶಪ್ರಾಯರಾಗಿರುತ್ತಾರೆ.

ಮೂಲ- ಜೋನಾಥನ್‌ ಎಯ್ಗ್
ಕನ್ನಡಕ್ಕೆ: ಮುಹಮ್ಮದ್ ಶಮೀರ್

ಮಕ್ಕಾದಿಂದ ಮಾಲ್ಕಮ್ ಎಕ್ಸ್  ಬರೆಯುತ್ತಾರೆ..    

ಇಬ್ರಾಹೀಮ್ (ಅ.ಸ) ಹಾಗೂ ಮುಹಮ್ಮದ್ (ಸ.ಅ) ರ ಪ್ರದೇಶವಾದ ಈ ಪವಿತ್ರ ನಗರದಲ್ಲಿ, ವಿವಿಧ ವರ್ಣದ ಜನರೊಂದಿಗಿನ ಸಹೋದರತೆಯ ಅದಮ್ಯ ಬಂಧವನ್ನೂ, ಉದಾರ ಹೃದಯದ ಆತಿಥ್ಯವನ್ನೂ ನಾನು ಇಂದಿನವರೆಗೂ ಅನುಭವಿಸಿರಲಿಲ್ಲ. ಕಳೆದ ವಾರ ಅವರೊಡನೆ ಕೆಲ ದಿನಗಳನ್ನು ಕಳೆದಾಗ ಅವರ ಅಪಾರ ಪ್ರೀತಿ, ವಿಶ್ವಾಸಕ್ಕೆ ನಾನು ಮೂಕವಿಸ್ಮಿತನಾಗಿದ್ದೆ. ನನಗೆ ಪವಿತ್ರ ನಗರ ಮಕ್ಕಾವನ್ನು ಸಂದರ್ಶಿಸುವ ಸೌಭಾಗ್ಯ ಒದಗಿಬಂತು. ಮುಹಮ್ಮದ್ ಎಂಬ ಯುವ ಮುತವ್ವಫ್ಫಿನ ಜೊತೆ ಕಅ್‌ಬಾಲಯವನ್ನು ಏಳು ಸಲ ಸುತ್ತಿದೆ. ಝಮ್ ಝಮ್ ಬಾವಿಯಿಂದ ದಾಹ ನೀಗಿಸಿಕೊಂಡೆ. ಸಫಾ-ಮರ್‌ವಾ ಬೆಟ್ಟಗಳ ನಡುವಿನ ದಾರಿಯಲ್ಲಿ ಏಳು ಸಲ ನಡೆದಾಡಿದೆ. ಪುರಾತನ ನಗರ ಮಿನಾದಲ್ಲಿ ಪ್ರಾರ್ಥಿಸಿದೆ. ಅರಫಾದಲ್ಲೂ ಪ್ರಾರ್ಥಿಸಿದೆ. ವಿವಿಧ ದಿಕ್ಕುಗಳಿಂದ ಹರಿದು ಬಂದ ಹದಿನಾರು ಸಾವಿರದಷ್ಟು ಜನಸಾಗರ ಅಲ್ಲಿ ಜಮಾಯಿಸಿತ್ತು. ನೀಲಿ ಕಣ್ಣಿನ ಬಿಳಿಯರಿಂದ ಹಿಡಿದು ಕಪ್ಪು ಬಣ್ಣದ ಆಫ್ರಿಕನ್ ಜನತೆಯೂ ಸೇರಿ ಹಲವು ವರ್ಣದವರು ನೆರೆದಿದ್ದರು. ಐಕ್ಯದ, ಸಹೋದರತೆಯ ಭಾವದಲ್ಲಿ ನಾವು ಒಂದೇ ಆಚಾರವನ್ನು ನಿರ್ವಹಿಸುತ್ತಿದ್ದೆವು. ಇಲ್ಲಿ ಬಿಳಿಯರ ಮತ್ತು ಕರಿಯರ ನಡುವೆ ಯಾವ ತಾರತಮ್ಯವೂ ಇಲ್ಲವೆಂದು ಅಮೇರಿಕಾದ ಅನುಭವಗಳಿಂದ ನಾನು ಕಲಿತುಕೊಂಡಿದ್ದೆ. ಇಸ್ಲಾಮಿನ ಕುರಿತು ಅಮೆರಿಕಾದವರು ಕಲಿಯಬೇಕಾಗಿದೆ. ಸಮಾಜದಲ್ಲಿನ ವರ್ಣಬೇಧವನ್ನು ನಿರ್ಮೂಲನೆ ಮಾಡಿದ್ದು ಈ ಒಂದು ಧರ್ಮವಾಗಿದೆ.

ಮುಸ್ಲಿಮ್ ರಾಷ್ಟ್ರದ ಮೂಲಕ ನಡೆಸಿದ ಯಾತ್ರೆಗಳಲ್ಲಿ ಅಮೆರಿಕಾದ ಬಿಳಿಯರನ್ನು ಕಾಣಲು ಸಾಧ್ಯವಾಯಿತು. ಅವರೊಂದಿಗೆ ಮಾತನಾಡಿ, ಜೊತೆಯಲ್ಲಿ ಊಟ ಮಾಡಿದೆನು. ಇಸ್ಲಾಮೆಂಬ ಧರ್ಮ ‘ನಾನು ಬಿಳಿಯನು’ ಎಂಬ ಭಾವನೆಯನ್ನು ಅವರ ಮನಸ್ಸಿನಿಂದ ತೆಗೆದುಹಾಕಿತ್ತು. ನಿಷ್ಕಳಂಕ ಮತ್ತು ಭಕ್ತಿಯ ಭಾವದೊಂದಿಗೆ ವಿವಿಧ ವರ್ಣದವರು ಜೊತೆಯಾಗಿ ಆರಾಧನೆಗಳನ್ನು ನಿರ್ವಹಿಸಿದ್ದನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ನನ್ನ ಮಾತುಗಳು ಕೇಳಿ ನಿಮಗೆ ಉತ್ಪ್ರೇಕ್ಷೆಯೆನಿಸಬಹುದು. ಆದರೆ ಈ ಯಾತ್ರೆಯ ಅನುಭವಗಳು ನನ್ನ ಹಿಂದಿನ ಧೋರಣೆ- ಆಲೋಚನೆಗಳನ್ನು ಬದಲಾಯಿಸಿತು. ಇದು ಅಷ್ಟೊಂದು ಪ್ರಯಾಸಕರವಾದ ಕಾರ್ಯವೇನಲ್ಲ. ನನ್ನ ಎಲ್ಲಾ ದೃಢ ತೀರ್ಮಾನಕ್ಕಿಂತಲೂ ನಾನು ವಾಸ್ತವವನ್ನು ಕಾಣಲು ಶ್ರಮಿಸುತಿದ್ದೆನು. ಹೊಸ ಅರಿವನ್ನು ಸಂಪಾದಿಸಿ,‌ ನವಿರಾದ ಅನುಭವದಿಂದ ನೈಜ ಜೀವನವನ್ನು ಕಟ್ಟಲು ಸನ್ನದ್ಧನಾಗಿರುತಿದ್ದೆನು. ಯಾವಾಗಲೂ ನನ್ನದು ತೆರೆದ ಮನಸ್ಸಾಗಿತ್ತು. ಪ್ರತಿಯೊಬ್ಬರ ಜೊತೆ ಕೈ ಜೋಡಿಸಿ ಸತ್ಯವನ್ನು ಅನ್ವೇಷಿಸಲು ಇದು ಅನಿವಾರ್ಯವಾಗಿತ್ತು. ಮುಸ್ಲಿಮರ ಜೊತೆ ಸೇರಿ ಹನ್ನೊಂದು ದಿನ ಏಕದೇವನಲ್ಲಿ ಪ್ರಾರ್ಥಿಸುವ ಸಂದರ್ಭ; ಒಂದೇ ಪಾತ್ರೆಯಲ್ಲಿ ತಿನ್ನುತ್ತಿದ್ದೆ. ಒಂದೇ ಗ್ಲಾಸಿನಲ್ಲಿ ಕುಡಿಯುತ್ತಿದ್ದೆ. ಅವರೊಂದಿಗೆ ಹಾಸಿಗೆಯಲ್ಲಿ ಮಲಗುತ್ತಿದ್ದೆ. ಅವರಲ್ಲಿರುವ ಕೆಲವರ ಕಣ್ಣು ನೀಲಿಯಾಗಿತ್ತು. ಅವರ ಕೂದಲು ಕಂದು ಬಣ್ಣವುಳ್ಳದಾಗಿತ್ತು. ಇವೆಲ್ಲಕ್ಕಿಂತಲೂ ಅವರ ಚರ್ಮ ಬಿಳಿಯಾಗಿ ಕಾಣುತ್ತಿತ್ತು. ನೈಜೀರಿಯಾ, ಸುಡಾನ್, ಘಾನಾ ಮುಂತಾದ ಕಪ್ಪು ಬಣ್ಣದ ಮುಸ್ಲಿಮರಲ್ಲಿ ಅನುಭವಿಸಿದ ಅದೇ ಭಕ್ತಿಯನ್ನು ಇಲ್ಲಿನ ಬಿಳಿ ಮುಸ್ಲಿಮರ ಒಡನಾಟದಿಂದ ಕಂಡುಕೊಂಡೆ. ಕಾರಣ, ಏಕದೈವ ನಂಬಿಕೆಯು ಅವರಲ್ಲಿದ್ದ ಬಿಳಿಯನೆಂಬ ಮನೋಧರ್ಮವನ್ನು ಮತ್ತು ಸ್ವಭಾವ ನಡವಳಿಕೆಯನ್ನು ಇಲ್ಲವಾಗಿಸಿತ್ತು. ಬಹುಶಃ ನನಗೆ ಅನಿಸುವುದೆಂದರೆ, ಬಿಳಿಯರಾದ ಅಮೇರಿಕನ್ಸ್ ಏಕದೈವ ವಿಶ್ವಾಸವನ್ನು ಸ್ವೀಕರಿಸುವುದಾದರೆ ಏಕತೆಯೆಂಬ ವಾಸ್ತವವನ್ನು ಒಪ್ಪಿಕೊಳ್ಳಬಹುದು ಹಾಗೂ ವರ್ಣಭೇದವನ್ನು ಕೊನೆಗಾಣಿಸಲು ಸಾಧ್ಯವಾಗಬಹುದು. ವರ್ಣಭೇದವೆಂಬ ವಾಸಿಯಾಗದ ಕ್ಯಾನ್ಸರಿನಂತಹ ಭೀಕರ ಅಪಾಯಗಳಿಗೆ ಸಿಲುಕಿದ “ಕ್ರಿಶ್ಚಿಯನ್” ಎಂದು ಕರೆಯಲ್ಪಡುವ ವೈಟ್ ಅಮೇರಿಕಾದವರ ಹೃದಯಕ್ಕೆ ಇದೊಂದು ದಿವ್ಯ ಪರಿಹಾರವಾಗಬಹುದು. ಜರ್ಮನಿಯಲ್ಲಿ ವ್ಯಾಪಕವಾಗಿದ್ದ ವರ್ಣಭೇದವು ಅವರನ್ನೇ ನಾಶದಂಚಿಗೆ ತಲುಪಿಸಿದಂತೆ ಅಮೇರಿಕವು ನಾಶಕ್ಕೀಡಾಗಬಹುದು.

ಪವಿತ್ರ ನಗರವಾದ ಈ ಮಣ್ಣಿನಲ್ಲಿ ಕಳೆದ ಒಂದೊಂದು ತಾಸುಗಳೂ ಅಮೇರಿಕಾದಲ್ಲಿ ಬಿಳಿಯರು ಮತ್ತು ಕರಿಯರ ನಡುವೆ ಏನು ಸಂಭವಿಸುತ್ತದೆ ಎಂಬುವುದರ ಅಂಶಗಳನ್ನು ವೇದ್ಯ ಮಾಡಿಕೊಳ್ಳಲು ಸಾಧ್ಯವಾಯಿತು. ವರ್ಣಬೇಧದ ಹೆಸರಿನಲ್ಲಿ ಅಮೇರಿಕಾದ ನೀಗ್ರೋಗಳನ್ನು ಕಡೆಗಣಿಸಬಾರದು. ಅವರು ಬಿಳಿಯರ ಪ್ರಜ್ಞಾಪೂರ್ವಕ ವರ್ಣಬೇಧದ ವಿರುದ್ದ ನಾಲ್ಕು ನೂರು ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತಿದ್ದಾರೆ. ಅತಿಯಾದ ವರ್ಣಭೇಧ ನೀತಿಯು ಅಮೆರಿಕವನ್ನು ಆತ್ಮಹತ್ಯೆಗೆ ತಳ್ಳುತ್ತದೆ. ಕಪ್ಪು ಬಣ್ಣದ ಅಮೇರಿಕಾದವರೊಂದಿಗಿನ ನನ್ನ ಅನುಭವ ಹೇಳುವುದೇನೆಂದರೆ; ಯುನಿವರ್ಸಿಟಿ, ಕಾಲೇಜುಗಳಲ್ಲಿ ಕಲಿಯುವ ಯುವ ಪೀಳಿಗೆಯ ಬಿಳಿಯರಲ್ಲಿ ಗೋಡೆಬರಹವನ್ನು ನೋಡಿದ ಹೆಚ್ಚಿನವರೂ ಸತ್ಯಮಾರ್ಗಕ್ಕೆ ಸರಿಯಬಹುದು ಎಂದಾಗಿದೆ. ವರ್ಣಬೇಧದ ದುರಂತವನ್ನು ಪ್ರತಿರೋಧಿಸಲು ಅಮೇರಿಕಾಗಿರುವುದು ಇದೊಂದೇ ದಾರಿ.

ಈ ರೀತಿಯ ಗೌರವ ನನಗೆಂದೂ ಸಿಕ್ಕಿರಲಿಲ್ಲ.‌ ಇದಕ್ಕಿಂತ ಮೊದಲು ಇಷ್ಟೊಂದು ಗೌರವಿಸಲ್ಪಡುವ ವ್ಯಕ್ತಿಯಾಗಿ ಸಮಾಜದಲ್ಲಿ ಹೆಸರುವಾಸಿಯಾಗಿದ್ದಿಲ್ಲ. ಅಮೆರಿಕಾದ ನೀಗ್ರೋಗೆ ಇಷ್ಟೊಂದು ಆಶೀರ್ವಾದಗಳು ಸಿಗುತ್ತದೆಯೆಂಬುವುದನ್ನು ಯಾರು ತಾನೇ ನಂಬಲು ಸಾಧ್ಯ. ಸ್ವಲ್ಪ ದಿನಗಳ ಮುಂಚೆ, ಅಮೆರಿಕಾದಲ್ಲಿ “ವೈಟ್ ಮ್ಯಾನ್” ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ರಾಯಭಾರಿಯೊಬ್ಬರು ಅವರ ಹೋಟೆಲ್ ರೂಮನ್ನು ನನಗೆ ನೀಡಿದ್ದರು. ಇವರು ಅಲ್ಲಿನ ಅಂಬಾಸಿಡರ್ ಹಾಗೂ ರಾಜರೊಂದಿಗೆ ಒಳ್ಳೆಯ ಸ್ನೇಹಬಂಧವಿರುವ ವ್ಯಕ್ಯಿಯಾಗಿದ್ದರು. ಇವರ ಮುಖಾಂತರ ಪವಿತ್ರ ನಗರದ ರಾಜಕುಮಾರನಾದ ಫೈಝಲ್ ಎಂಬುವವರು, ನನ್ನ ಜಿದ್ದಾದ ಇರವನ್ನು ಅರಿತುಕೊಂಡರು. ಮುಂದಿನ ದಿನದ ಮುಂಜಾನೆಯಲ್ಲಿ ಫೈಝಲ್ ರಾಜಕುಮಾರನ ಮಗ ತಂದೆಯ ಆಗ್ರಹದಲ್ಲಿ, “ನೀವು ಸ್ಟೇಟ್ ಗೆಷ್ಟ್” ಎಂದು ನನಗೆ ತಿಳಿಸಿದರು. ಅಲ್ಲಿನ ಪ್ರೋಟೊಕಾಲ್ ಡೆಪ್ಯುಟಿ ಚೀಫ್ ನನ್ನನು ಹಜ್ಜ್ ಕೋರ್ಟಿನಲ್ಲಿ ಹಾಜರುಪಡಿಸಿದರು. ಅಲ್ಲಿಂದ ಶೈಖ್ ಮುಹಮ್ಮದ್ ಹಾರ್ಕೊನ್ ಮಕ್ಕಾವನ್ನು ಸಂದರ್ಶಿಸಲು ಅನುಮತಿ ನೀಡಿದರು. ನನಗೆ ಅವರ ಹಸ್ತಾಕ್ಷರವಿರುವ ಇಸ್ಲಾಮಿನ ಕುರಿತಾದ ಎರಡು ಪುಸ್ತಕವನ್ನು ನೀಡಿ “ನಿಮ್ಮನ್ನು ಅಮೆರಿಕಾದ ಇಸ್ಲಾಮಿನ ಪ್ರಭೋಧಕನನ್ನಾಗಿ ಮಾಡಲಿ” ಎಂದು ಪ್ರಾರ್ಥಿಸಿದರು. ಈ ಪವಿತ್ರ ನಗರದಲ್ಲಿ ನನಗೆ ಬೇಕಾದ್ದಲ್ಲಿಗೆ ಸಂಚರಿಸಲು ಕಾರು, ಡ್ರೈವರ್ ಮತ್ತು ಗೈಡನ್ನು ನೀಡಿದ್ದರು. ನನಗೆ ಸಂದರ್ಶನವಿದ್ದ ಒಂದೊಂದು ನಗರದ ಸರ್ಕಾರವೂ ನನಗಾಗಿ ಕೊಠಡಿಗಳು, ಸಹಾಯಕರನ್ನು ಸಜ್ಜುಗೊಳಿಸಿತ್ತು. ಅಮೇರಿಕಾದ ರಾಜರಿಗೆ ಮಾತ್ರ ಸಿಗುವ ಗೌರವಕ್ಕೆ ನಾನು ಅರ್ಹನಾಗುವೆನೆಂದು ಕನಸಿನಲ್ಲೂ ಚಿಂತಿಸಿರಲಿಲ್ಲ.

ಈ ಲೋಕದ ಎಲ್ಲಾ ವಸ್ತುವಿನ ಪರಮಾಧಿಕಾರಿಯಾಗಿರುವ ಅಲ್ಲಾಹನಿಗೆ ಸರ್ವಸ್ತುತಿ.‌

ಮಾಲ್ಕಮ್ ಎಕ್ಸ್
ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್
ಗುಂಡಿಕೆರೆ, ಕೊಡಗು.    

ಮದೀನಾ ಮತ್ತು ಏಥೆನ್ಸ್:‌ ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ

ವಿದ್ಯಾವಂತ ಜನರಲ್ಲಿ ವಿದೃಶ ವಿಚಾರಗಳನ್ನು ಮತ್ತು ರೂಪಕಗಳನ್ನು ರೂಪಿಸುತ್ತಾ ಉದಾರ ಕಲೆ ಅಥವಾ ಲಿಬರಲ್‌ ಆರ್ಟ್ಸ್‌ ಎಂಬ ಪಾರಿಭಾಷಕ ಪದ ಇಂದು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಬರುತ್ತಿದೆ. ಸಂಜ್ಞೆಗಳನ್ನು ಸಮರ್ಪಕವಾಗಿ ವ್ಯಾಖ್ಯಾನ ಮಾಡುವಲ್ಲಿ ಮತ್ತು ವ್ಯತ್ಯಾಸಗಳನ್ನು ಸರಿಯಾಗಿ ವಿವರಿಸುವಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ ಎಡವುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಧ್ಯಕಾಲೀನ ದೇವತಾಶಾಸ್ತ್ರೀಯ ತತ್ವಚಿಂತಕರು(scholastic) ಈಯೆರಡು ವಿಷಯಗಳಲ್ಲಿ ವಹಿಸಿದ ಕಾಳಜಿ ಅಪಾರ ಮತ್ತು ಗಮನಾರ್ಹ. ಸರಿಯಾದ ವ್ಯಾಖ್ಯೆ ದೊರೆಯಬೇಕಾದರೆ ಸಂಜ್ಞೆಯ ‘ಕುಲ’ವನ್ನು (ಇಂಗ್ಲೀಷ್ ನ ಜೀನಸ್‌ ಅರಬಿಯ ಜಿನ್ಸ್)‌ ಅರ್ಥೈಸಬೇಕು ಮತ್ತು ಇತರ ಸದಸ್ಯರಿಂದ ಅದಕ್ಕಿರುವ ವ್ಯತ್ಯಾಸವೇನೆಂದು ತಿಳಿಯಬೇಕೆಂದು ತರ್ಕವಿಜ್ಞಾನದಲ್ಲಿ ಕಲಿಸಲಾಗುತ್ತದೆ. ಶಿಕ್ಷಣವೆ ಉದಾರ ಕಲೆಯ ಜೀನಸ್.‌ ಶಿಕ್ಷಣವೆಂಬ ಜೀನಸ್ ನಿಂದ ಉದಾರ ಶಿಕ್ಷಣವನ್ನು ಬೇರ್ಪಡಿಸುವ ಅರ್ಥಾತ್ ಅದರ ವ್ಯಾಖ್ಯೆ ಸಾಧ್ಯವಾಗಿಸುವ ಲಕ್ಷಣ ಯಾವುದು? ಈ ವ್ಯತ್ಯಾಸ ಹುದುಗಿರುವುದು ಲಿಬರಲ್‌ ಎಂಬ ಪದದಲ್ಲಿ. ಹೌದು, ದಾಸ್ಯ ಸ್ವಭಾವದ(servile) ವಿದ್ಯಾಭ್ಯಾಸಗಳಿಗಿಂತ ವ್ಯತಿರಿಕ್ತವಾಗಿ ನಿಲ್ಲುತ್ತದೆ ಉದಾರ ಶಿಕ್ಷಣ. ಈ ಸಂಜ್ಞೆಯ ವ್ಯುತ್ಪತ್ತಿ ನಡೆದಿರುವುದು ಸಮುದಾಯಗಳ ಕುರಿತ ಆಧುನಿಕಪೂರ್ವ ಗ್ರಹಿಕೆ ಮತ್ತು ಅವುಗಳ ಶ್ರೇಣೀಕೃತ ಸಂರಚನೆಯ ಆಧಾರದಲ್ಲಿ. ಅಂದು ಉದಾರ ಶಿಕ್ಷಣ ನೀಡಲಾಗುತ್ತಿದ್ದುದು ಸ್ವತಂತ್ರ ವ್ಯಕ್ತಿಗಳಿಗೆ. ಸೇವಕರಿಗೆ ಮತ್ತು ಗುಲಾಮರಿಗೆ ವೃತ್ತಿಜ್ಞಾನವನ್ನು ಕರಗತ ಮಾಡಲು ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿತ್ತು. ಹಾಗಾಗಿ ಸಮಾಜಕ್ಕೆ ಅಗತ್ಯವಿರುವ ಸರಕು ಸೇವೆಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಅಂಥ ಕಲೆ-ಕೌಶಲ್ಯಗಳನ್ನು ಕಲಿಯಲು ವೃತ್ತಿ ತರಬೇತಿಗಳೇ ಧಾರಾಳ. ಅದಕ್ಕಾಗಿ ಮಸ್ತಿಷ್ಕವನ್ನು ಪಳಗಿಸುವ ಕಠಿಣ ಶೈಕ್ಷಣಿಕ ತರಬೇತಿಯ ಅಗತ್ಯವಿಲ್ಲ.

ಅಧುನಿಕಪೂರ್ವ ಕಾಲದಲ್ಲಿ ಉದಾರ ಶಿಕ್ಷಣ ವಿದ್ಯಾರ್ಥಿಗಳನ್ನು ಮೂರು ಉದ್ಯೋಗಗಳಿಗೆ ಸಿದ್ಧಪಡಿಸುತ್ತಿತ್ತು; ದೇವತಾಶಾಸ್ತ್ರಜ್ಞ, ವಕೀಲ ಮತ್ತು ವೈದ್ಯ. ದೇವತಾಶಾಸ್ತ್ರಜ್ಞ ಅಭೌತಿಕ ಶರೀರದ ವ್ಯಾಧಿಗಳ ಚಿಕಿತ್ಸಕನಾದರೆ, ನ್ಯಾಯವಾದಿ ಮತ್ತು ವೈದ್ಯ ಅನುಕ್ರಮವಾಗಿ ಸಾಮಾಜಿಕ ಮತ್ತು ಭೌತಿಕ ಶರೀರಗಳಿಗೆ ವಕ್ಕರಿಸುವ ವ್ಯಾಧಿಗಳ ಚಿಕಿತ್ಸಕ. ಆದುದರಿಂದಲೇ ಉದಾರ ಶಿಕ್ಷಣ ದೊರೆತ ನಾಯಕರು ಮುನ್ನಡೆಸುವ ಸಮೂಹದಲ್ಲಿ ಭೂಲೋಕದಲ್ಲಿನ ಜೀವನದ ಮೂರು ಆಯಾಮಗಳ- ಮಾನವಾತ್ಮದ ನೈತಿಕ ಮತ್ತು ಆಧ್ಯಾತ್ಮಿಕ ಬದುಕು, ಕೂಡಿ ಬಾಳುವ ಮನುಷ್ಯರ ನಡುವಿನ ಸಾಮಾಜಿಕ, ವಾಣಿಜ್ಯ ಹಾಗೂ ರಾಜಕೀಯ ಜೀವನ; ಈಯೆರಡು ಆಯಾಮಗಳನ್ನು ಸಮರ್ಪಕವಾಗಿ ಆಸ್ವಾದಿಸಲೋಸುಗ ಅತ್ಯಗತ್ಯವಾದ ಭೌತಿಕ ದೇಹದ ಆರೋಗ್ಯಪೂರ್ಣ ಅವಸ್ಥೆ- ವ್ಯಾಧಿಗಳೊಂದಿಗೆ ಅನುಸಂಧಾನ ನಡೆಸಲು ಪರಿಣತವಾದ ಮೆದುಳುಗಳಿರುತ್ತವೆ.

ಏಳು ತರದ ಉದಾರ ಕಲೆಗಳು ಜಗತ್ತನ್ನು ಚೈತನ್ಯ ಮತ್ತು ಪದಾರ್ಥ,ಗುಣ ಮತ್ತು ಪರಿಮಾಣ, ದೇಹ ಮತ್ತು ಚೇತನ ಎಂಬಿತ್ಯಾದಿಯಾಗಿ ವಿಂಗಡಿಸುತ್ತದೆ. ಹಾಗಾಗಿ ವಿದ್ಯಾವಂತ ವ್ಯಕ್ತಿಗಳು ತನು-ಮನ ದ್ವಯಗಳ ಜೀವನದಲ್ಲೂ ಪರಿಣತಿ ಪಡೆದಿರುತ್ತಿದ್ದರು. ಗುಣಾತ್ಮಕ ಅಧ್ಯಯನ ವಿಭಾಗಗಳು ಸಾಹಿತ್ಯದ ಆಡುಭಾಷೆ, ಅದರಲ್ಲೂ ಪ್ರಮುಖವಾಗಿ ಕಾವ್ಯ; ಪರಿಕಲ್ಪನೆ, ತೀರ್ಪು, ತರ್ಕ ಸಮೇತ ಮನಸ್ಸಿನ ಆಲೋಚನಾ ಪ್ರಕ್ರಿಯೆ; ಪರಿಣಾಮಕಾರಿಯಾಗಿ ಪ್ರಭಾವ ಬೀರಲು, ಕೀರ್ತಿಸಲು,ಆರೋಪಿಸಲು ಇಲ್ಲವೇ ದೋಷಮುಕ್ತಿ ವಾದಿಸಲು ಅತ್ಯಗತ್ಯವಾಗಿರುವ ಅಲಂಕಾರ ಭಾವಗಳ ಪೋಷಣೆಗಳು ಮುಂತಾದವು ಒಳಗೊಳ್ಳುತ್ತದೆ. ಪರಿಮಾಣಾತ್ಮಕ ಅಧ್ಯಯನ ವಿಭಾಗಗಳು ಒತ್ತು ಕೊಡುವುದು ಅಂಕಗಣಿತ ಮತ್ತು ರೇಖಾಗಣಿತಗಳನ್ನು ಕರತಲಾಮಲಕಗೊಳಿಸುವ ಮೂಲಕ ಸಂಖ್ಯಾಲೋಕದ ಒಗಟುಗಳನ್ನು ಬಿಡಿಸುವಲ್ಲಿ. ಕಾಲದಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಸಂಗೀತದಲ್ಲಿ ಹಾಗೂ ಸ್ಥಳ-ಕಾಲಗಳೆರಡರಲ್ಲಿ ಸಂಖ್ಯೆಗಳನ್ನು ಅನ್ವಯಿಸುತ್ತಾ ಖಗೋಳದಲ್ಲಿ ಅಂಕಿಗಳನ್ನು ಒರೆಗೆ ಹಚ್ಚಲಾಗುತ್ತದೆಯಿಲ್ಲಿ.

ಶಿಕ್ಷಣದ ಕಡೆಗಿನ ಇಂಥಾ ಸಮಗ್ರವಾದ ನೋಟ ವಿಸ್ಮಯಗಳೆಡೆಗೆ ತೆರೆದುಕೊಂಡ, ಸೃಷ್ಟಿಲೋಕದ ಸಮತೋಲನವನ್ನು ಆರಾಧನಾತ್ಮಕವಾಗಿ ಹಿಂಬಾಲಿಸುವ ಉತ್ತಮ ಮನಸ್ಸುಗಳನ್ನು ರೂಪಿಸುತ್ತದೆ. ಈ ರೂಪದ ಶೈಕ್ಷಣಿಕ ವ್ಯವಸ್ಥೆಗಳ ಬೇರುಗಳು ಗ್ರೀಕ್‌, ಬ್ಯಾಬಿಲೋನಿಯ, ಈಜಿಪ್ತ್‌ ನಾಗರಿಕತೆಗಳ ಪೌರಾಣಿಕ ಧರ್ಮಗಳಲ್ಲಿ ಕಾಣಬಹುದು. ಆದರೆ ಇದು ತನ್ನ ಉಚ್ಪ್ರಾಯಕ್ಕೆ ತಲುಪಿದ್ದು ಯಹೂದಿ, ಕ್ರೈಸ್ತ ಮತ್ತು ಮುಸ್ಲಿಂ ನಾಗರಿಕತೆಗಳ ಕಾಲದಲ್ಲಿ. ಈ ನಾಗರಿಕತೆಗಳು ತಂತಮ್ಮ ಧಾರ್ಮಿಕ ಗ್ರಂಥಗಳನ್ನು ಮತ್ತು ತಮ್ಮ ಸುತ್ತಮುತ್ತಲಿನ ಭೌತಿಕ ಜಗತ್ತನ್ನು ಸಮರ್ಪಕವಾಗಿ ಅರ್ಥೈಸಲು ಈ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕಲೆಗಳನ್ನು ಬಳಸುತ್ತಿದ್ದರು. ಮುಸ್ಲಿಮರು ದೇವದತ್ತ ಗ್ರಂಥಗಳು ಎರಡು ರೂಪಗಳನ್ನು ಪಡೆದಿರುವುದಾಗಿ ಗ್ರಹಿಸುತ್ತಾರೆ. ತೌರಾತ್‌ (Torah), ಝಬೂರ್‌ (Psalms), ಇಂಜೀಲ್(‌Gospel), ಖುರ್‌ಆನ್ ಗ್ರಂಥಗಳಲ್ಲಿ‌ ಸಂಗ್ರಹಿತವಾದ ಯಥಾರ್ಥ ದೇವವಚನಗಳು ಒಂದಾದರೆ ಎರಡನೆಯದ್ದು ನಿಸರ್ಗವೆಂಬ ಪುಸ್ತಕ. ಟ್ರೈವಿಯಮ್ಮಿನ ಉಪಕರಣಗಳನ್ನು ಬಳಸಿ ಒಂದನೆಯದನ್ನು ಕಲಿಯಬಹುದು ಮತ್ತು ಕ್ವಾಡ್ರಿಯಮ್ಮನ್ನು ಉಪಯೋಗಿಸಿ ಎರಡನೆಯದನ್ನು ಕರಗತ ಮಾಡಬಹುದು.

ಉದಾರ ಶಿಕ್ಷಣವೆಂಬ ವಿವಾದಿತ ಸಂಜ್ಞೆಯ ವಿವಿಧ ವರ್ಗೀಕರಣಗಳ ಉಪಯುಕ್ತ ವಿವರಣೆಯನ್ನು ಡ್ಯಾನಿಯಲ್‌ ಆರ್‌ ಡೆ ನಿಕೋಲ ತಮ್ಮ ಉತ್ಕೃಷ್ಟ ಗ್ರಂಥವಾದ ‘ಲರ್ನಿಂಗ್‌ ಟು ಫ್ಲರಿಶ್:‌ ಎ ಫಿಲಾಸಫಿಕಲ್‌ ಎಕ್ಸ್‌ಪ್ಲೊರೇಶನ್‌ ಓಫ್‌ ಲಿಬರಲ್‌ ಎಜ್ಯುಕೇಶನ್‌’ ನಲ್ಲಿ ನೀಡಿದ್ದಾರೆ. ಅವರು ಅದರಲ್ಲಿ ಲಿಬರಲ್‌ ಶಿಕ್ಷಣ ವ್ಯವಸ್ಥೆಯ ಪಂಚಶೀಲ ಉದ್ದೇಶಗಳನ್ನು ಸಾದರಪಡಿಸಿದ್ದಾರೆ. ಅವುಗಳೆಂದರೆ; ಸಾಂಸ್ಕೃತಿಕ ಬಳುವಳಿಗಳ ತಲೆತಲಾಂತರ ವರ್ಗಾವಣೆ, ಪ್ರಮಾಣಕ(normative) ಪ್ರತ್ಯೇಕಾಸ್ತಿತ್ವದ ಕಡೆಗೆ ಕೊಂಡೊಯ್ಯುವ ಸ್ವಯಂ ವಾಸ್ತವೀಕರಣ (self actualization), ಜಗತ್ತಿನ ಹಾಗೂ ತನ್ನ ಜೀವನವನ್ನು ರೂಪಿಸುವ ಬಲಗಳ ಗ್ರಹಿಕೆ, ಜಗತ್ತಿನೊಂದಿಗೆ ಕ್ರಿಯಾಶೀಲ ಅನುಸಂಧಾನ, ಕಲಿಕಾ ಕೌಶಲ್ಯಗಳ ಸ್ವಾಧೀನ. ಉದಾರ ಕಲೆಗಳ ಬಲಿಷ್ಠ ಪರಿಕಲ್ಪನೆಗಳಲ್ಲೆಲ್ಲಾ ಈ ಐದು ಉದ್ದೇಶಗಳು ಒಂದೇ ವೇಳೆ ಮಿಳಿತವಾಗಿರುವುದನ್ನು ಕಾಣಬಹುದು ಎನ್ನುತ್ತಾರೆ ಡೆ ನಿಕೋಲ.

ಮೊಟ್ಟ ಮೊದಲಾಗಿ ಶಿಕ್ಞಣ ಮತ್ತು ಉದಾರ ಎಂಬೀ ಸಂಜ್ಞೆಗಳನ್ನು ನಿರ್ವಚಿಸಬೇಕಿದೆ. ಶಿಕ್ಷಣದ ಕುರಿತ ಪ್ರಯೋಜನಪ್ರದ ವ್ಯಾಖ್ಯೆಯನ್ನು ಹತ್ತೊಂಬತ್ತನೆ ಶತಮಾನದ ದೇವತಾಶಾಸ್ತ್ರಜ್ಞ ಕರ್ದಿನಾಲ್ ಜಾನ್‌ ಹೆನ್ರಿ ನ್ಯೂಮಾನ್‌ ನೀಡಿದ್ದಾರೆ. ವಿಶ್ವವಿದ್ಯಾಲಯದ ಪರಿಕಲ್ಪನೆಯ ಕುರಿತು ಅವರು ರಚಿಸಿರುವ ಡಿಸ್ಕೋರ್ಸ್‌ IV ಎಂಬ ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:

“ಶಿಕ್ಷಣ ಎಂಬುವುದು ಉನ್ನತವಾದ ಪದ; ಅದು ಜ್ಞಾನಾರ್ಜನೆಗಾಗಿ ಸಿದ್ಧಗೊಳಿಸುವ ಪ್ರಕ್ರಿಯೆ. ಪ್ರಸ್ತುತ ತಯಾರಿಗೆ ಅನುಗುಣವಾದ ಜ್ಞಾನ ಪ್ರದಾನಿಸುವ ಹಂತ”. ಈ ವ್ಯಾಖ್ಯೆಯು ‘ಜ್ಞಾನ ಎಂದರೇನು’ ಎಂಬ ಮತ್ತೊಂದು ಪ್ರಶ್ನೆಯ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪ್ರಶ್ನೆಗೆ ಉತ್ತರಿಸಲು ಆಳವಾದ ಚಿಂತನೆಯ ಅಗತ್ಯವಿದೆ. ಯಾವುದೇ ನಾಗರಿಕತೆಯ ಪಂಚಾಂಗದಲ್ಲಿರುವ ಅತಿಭೌತಶಾಸ್ತ್ರೀಯ(metaphysical) ಮೂಲಗ್ರಹಿಕೆಗಳು ಜ್ಞಾನದ ಪ್ರಮಾಣ ಮತ್ತು ಪ್ರಮೇಯಗಳ ನಿರ್ಣಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಜ್ಞಾನದ ವ್ಯಾಖ್ಯಾನ ಅಷ್ಟು ಸಲೀಸಾದ ಕಾರ್ಯವಲ್ಲ. ಎಂತಲೇ, ಸದ್ಯಕ್ಕೆ ಮೇಲ್ಕಾಣಿಸಿದ ಶಿಕ್ಷಣದ ವ್ಯಾಖ್ಯೆ ನೀಡುವ ಸಾಮಾನ್ಯ ಗ್ರಹಿಕೆಯೊಂದಿಗೆ ತೃಪ್ತರಾಗೋಣ. ಉದಾರ ಎಂಬ ಪದದ ಉತ್ತಮ ವ್ಯಾಖ್ಯೆಯನ್ನು ಅರಿಸ್ಟಾಟಲರ ರೆಟರಿಕ್‌ (ಅಲಂಕಾರ ಶಾಸ್ತ್ರ) ಎಂಬ ಗ್ರಂಥದಲ್ಲಿ ಕಾಣಬಹುದು. “ನಮ್ಮ ಒಡೆತನದಲ್ಲಿರುವ ಸಂಗತಿಗಳು ಒಂದೋ ಉತ್ತಮ ಫಲಿತಾಂಶ ನೀಡುವ ಉಪಯುಕ್ತ ಕಾರ್ಯಗಳು ಇಲ್ಲವೇ ರಂಜನೆಯನ್ನು ನೀಡುವ ಉದಾರ ಕಾರ್ಯಗಳಾಗಿವೆ. ಉಪಯುಕ್ತ ಸಂತಿಗಳು ಎಂಬುದರ ತಾತ್ಪರ್ಯ ಲಾಭಜನಕತೆಯಾಗಿದ್ದು ಉದಾರ ಎಂಬ ವಿಶೇಷಣದ ತಾತ್ಪರ್ಯ ಬಳಕೆಗೆ ಹೊರತಾದ ಬೇರೆ ಪರಿಣಾಮಗಳ ಅಭಾವವಾಗಿದೆ.”

ಹಾಗಾಗಿ, ಉದಾರ ಶಿಕ್ಷಣ ಎಂಬ ಪರಿಕಲ್ಪನೆಯು ವಿದ್ಯಾರ್ಥಿಯು ಜ್ಞಾನದ ಆವಾಹನೆಗೆ ಅಣಿಯಾಗುವ, ಶಿಕ್ಷಕ ಅದಕ್ಕಾಗಿ ವಿದ್ಯಾರ್ಥಿಯನ್ನು ಸಜ್ಜಾಗಿಸುವ, ಅದರ ವಿವಿಧ ಹಂತಗಳಿಗನುಗುಣವಾಗಿ ಅರಿವು ಪ್ರದಾನಿಸುವ, ಅದಕ್ಕೋಸ್ಕರ ಅನುಬೋಧೆಯ (apperception) ವಿಧಾನ ಮತ್ತು ವಿನ್ಯಾಸವನ್ನು ಬಳಸುವ, ಜೀವನೋಪಾಯದ ಬದಲು ಅರಿವೇ ಗುರಿಯಾಗಿರುವ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎನ್ನಬಹುದು. ಈ ಹಂತದಲ್ಲಿ ಉತ್ತೀರ್ಣರಾದರೆ ನೈಜ ಕಲಿಕೆಯನ್ನು ಆರಂಭಿಸಬಹುದು. ಉಪಾಧ್ಯಯನ (didactic) ಘಟ್ಟ ಮುಕ್ತಾಯವಾದರೆ ಭಾವ ಪ್ರಸೂತಿಕ (maieutic) ಅಧ್ಯಯನ ಆರಂಭವಾಗುವಂತೆ. ಈ ಮೂಲಕ ಜೀವನಾಧಾರಕ್ಕಾಗಿ ಶಿಕ್ಷಣ ಎಂಬ ಕಲ್ಪನೆಯಾಚೆಗೆ ಲಕ್ಷ್ಯಾಧಾರಿತ ಸಂತೃಪ್ತ ಜೀವನದ ಕಲೆಯನ್ನು ಕರಗತ ಮಾಡಲು ನಮಗೆ ಸಾಧ್ಯವಾಗುತ್ತದೆ.

ಸಜ್ಜುಗೊಳಿಸುವಿಕೆಯನ್ನು ವಿವರಿಸುವ ಇಸ್ಲಾಮಿಕ ಲೋಕದ ಅಕ್ವಿನಾಸ್‌ ಎಂದೇ ಖ್ಯಾತರಾದ ಏಳನೆಯ ಶತಮಾನದಲ್ಲಿ ಜೀವಿಸಿದ ಮಹೋನ್ನತ ತತ್ವಚಿಂತಕ ಇಮಾಂ ಗಝ್ಝಾಲಿಯವರ ಗುರುವರ್ಯ ‘ಇಮಾಂ ಅಲ್ ಜುವೈನಿ’ ಯವರ ಅಭಿವ್ಯಕ್ತಿಯೊಂದನ್ನು ಮುಂದಿಡಲು ಬಯಸುತ್ತೇನೆ. ಜುವೈನಿಯವರು ಹೇಳುತ್ತಾರೆ:

“ಆರು ಘಟಕಗಳ ಅಭಾವದಲ್ಲಿ ಜ್ಞಾನಾರ್ಜನೆ ಕೈಗೂಡದು. ಅದರ ಸಂಕ್ಷೇಪ ಹೀಗಿದೆ; ಕುಶಾಗ್ರ ಚಿತ್ತ, ಅದಮ್ಯ ಹುರುಪು, ಅನ್ಯ ದೇಶ, ಕಠಿಣ ಪ್ರಯತ್ನ, ಉಪನ್ಯಾಸಕರ ಪ್ರೋತ್ಸಾಹ, ದೀರ್ಘ ಕಾಲಾವಧಿ.”

ಆಸಕ್ತಿದಾಯಕ ವಿಷಯವೇನೆಂದರೆ, ಮುಸಲ್ಮಾನರ ಕೃತಿಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ದ್ವಿಪದಿಯ ಆಶಯ ಸ್ವಲ್ಪ ಬದಲಾವಣೆಗಳೊಂದಿಗೆ ಎಪ್ಪತ್ತು ಸಂವತ್ಸರಗಳ ಅನಂತರ ಲ್ಯಾಟಿನ್‌ ಭಾಷೆಯಲ್ಲಿಯೂ ಮೂಡಿಬಂತು. ಇದನ್ನು ಅನುವಾದಿಸಿದ ಚಾರ್ಟರ್ಸಿನ ಬರ್ನಾರ್ಡ್‌ ಬರೆದದ್ದು ಹೀಗೆ:

“Mens humilis, stadium quaerendi, vita quieta, Scrutinium tacitum, paupertas, terra aliena.
ವಿನಯಾನ್ವಿತ ಮನಸ್ಸು, ಕಲಿಕೆಯಲ್ಲಿ ಹುರುಪು, ಶಾಂತ ಜೀವನ, ಮೌನ ಅನ್ವೇಷಣೆ, ದಾರಿದ್ರ್ಯ, ವಿದೇಶಿ ಮಣ್ಣು.”

ನಾಗರಿಕತೆಗಳು ಹುಟ್ಟುವುದು ಮೂಲಗ್ರಂಥಗಳ ಸೆರಗಿನಲ್ಲಿ. ಹೋಮರ್‌ ಇಲ್ಲದಿದ್ದಲ್ಲಿ ಸೊಲೊನ್‌ ಪೆರಿಕಲ್ಸರ ಏಥೆನ್ಸ್‌ ಇರುತ್ತಿರಲಿಲ್ಲ. ಸಾಕ್ರೆಟಿಸ್‌, ಪ್ಲಾಟೊ, ಅರಿಸ್ಟೊಟಲರ ಏಥೆನ್ಸ್‌ ಕೂಡಾ ಕನ್ನಡಿಯ ಗಂಟಾಗುತ್ತಿತ್ತು. ಬೈಬಲ್‌ ಹಳೆಯ ಒಡಂಬಡಿಕೆ ಉನ್ನತ ಯಹೂದಿ ವಿದ್ವತ್‌ ಪರಂಪರೆ ಮೂಡಿ ಬರಲು ಕಾರಣವಾಯಿತು. ಲ್ಯಾಟಿನ್‌ ಭಾಷೆಗೆ ಅದು ಭಾಷಾಂತರಗೊಳ್ಳುವುದರೊಂದಿಗೆ ವೈಶಿಷ್ಟ್ಯಪೂರ್ಣವಾದ ಐರೋಪ್ಯ ಕ್ರಿಶ್ಚಿಯಾನಿಟಿಯ ಉದಯವಾಯಿತು. ಕ್ರೈಸ್ತರು ಏಥೆನ್ಸನ್ನು ಮಗದೊಮ್ಮೆ ಅಪ್ಪಿಕೊಂಡಾಗ ಏಥೆನ್ಸ್‌ ಮತ್ತು ಜೆರುಸಲೇಂ ಒಂದುಗೂಡಿ ಅಸಾಮಾನ್ಯ ಸಂಶ್ಲೇಷಣೆಯೊಂದು ಜರುಗಿತು. ಯವನ ತತ್ವಚಿಂತನೆ ಮತ್ತು ಕ್ರಿಶ್ಚಿಯಾನಿಟಿಯೆ ಪಾಶ್ಚಾತ್ಯ ನಾಗರಿಕತೆಯ ಆಧ್ಯಾತ್ಮಿಕ ತಳಹದಿ. ಈಯೆರಡು ಪರಂಪರೆಗಳು ಅಸಡ್ಡೆಯಿಂದ ಕೊಳೆತು ಅವನತಿಯ ಹಾದಿ ಹಿಡಿದಾಗ ಬುದ್ಧಿ ಮತ್ತು ದಿವ್ಯಬೋಧನೆಗಳ ಬೆಳಕು ಕ್ಷೀಣವಾಯಿತು. ಈ ಬೆಳಕಿನಿಂದ ವಂಚಿತರಾದ ತಲೆಮಾರು ವಿವಿಧ ಹಾನಿಗಳನ್ನು ಎದುರಿಸುತ್ತಿದ್ದು ಸಾಮಾಜಿಕ ಮೂಲರಚನೆಯನ್ನು ನೇಯ್ದ ಆಧ್ಯಾತ್ಮಿಕ ಬೆಸುಗೆಯ ಬಾಷ್ಪೀಕರಣ ನಡೆದಿದೆ.

ಎಂಟನೆಯ ಶತಮಾನದ ಹೊಸತರಲ್ಲಿ ಆರಂಭಗೊಂಡ ಇಸ್ಲಾಮೀ ನಾಗರಿಕತೆ ಕೂಡಾ ಪಾಶ್ಚಾತ್ಯ ನಾಗರಿಕತೆಗೆ ಸಮಾನಾಂತರವಾಗಿ ಪ್ರಯಾಣಿಸತೊಡಗಿತ್ತು. ಕೆಲವು ಸಂದರ್ಭಗಳಲ್ಲಿ ಎದುರುಬದುರಾಗಿದ್ದೂ ಇದೆ. ಕ್ರೈಸ್ತ ನಾಗರಿಕತೆಯ ಹಾಗೆ, ಇಸ್ಲಾಮೀ ನಾಗರಿಕತೆಯ ಬುನಾದಿಯಾಗಿ ಜ್ಞಾನ, ಕಲಿಕೆ ಮತ್ತು ಭಕ್ತಿಯೆಡೆಗಿನ ಕರೆಯನ್ನು ಎದೆಯಲ್ಲಿ ಹುದುಗಿಸಿಕೊಂಡಿರುವ ಗ್ರಂಥವೊಂದರ ಸಾನಿಧ್ಯವಿದೆ; ಖುರ್‌ಆನ್.‌ ಜ್ಞಾನ ಎಂಬ ಪದವನ್ನು ಖುರ್‌ಆನ್‌ ನೂರಕ್ಕಿಂತಲೂ ಹೆಚ್ಚು ಬಾರಿ ಪುನರಾವರ್ತಿಸಿದೆ. ಚಿಂತನೆಯ ಕುರಿತು ಅರುವತ್ತೆಂಟು ಸಲ ಪರಾಮರ್ಶಿಸಿದೆ. ಪ್ರವಾದಿ ಮುಹಮ್ಮದ(ಸ.ಅ)ರಿಗೆ ಅವತೀರ್ಣವಾದ ಪ್ರಥಮ ದಿವ್ಯ ವಚನ ‘ಓದಿರಿʼ ಎಂದಾಗಿತ್ತು. “ಪ್ರತಿ ಮುಸ್ಲಿಂ ಸ್ತ್ರೀಪುರುಷರಿಗೆ ಜ್ಞಾನಾರ್ಜನೆ ಕಡ್ಡಾಯವಾಗಿದೆ” ಎಂಬುದು ಅವರ ಉವಾಚ. ಚೀನಾಕ್ಕೆ ಹೋಗಿಯಾದರೂ ಕಲಿಯಿರೆಂದು ಅವರು ಮತ್ತೊಂದೆಡೆ ಹೇಳಿದ್ದಾರೆ.

ಏಥೆನ್ಸ್‌ ಮತ್ತು ಮದೀನಾದ ನಡುವಿನ ಸಂಶ್ಲೇಷಣಾ ಬೀಜವನ್ನು ಪೈಗಂಬರರ ಕಾಲದಲ್ಲೇ ಬಿತ್ತಲಾಗಿತ್ತು. ಬ್ರಿಟನ್ನಿನ ಆಂಗ್ಲೋ ಸ್ಯಾಕ್ಷನ್ ಜನತೆಯನ್ನು ಅಧಾರ್ಮಿಕತೆ ಮತ್ತು ಪ್ರಾಚೀನತೆಯ ಕೂಪದಿಂದ ಜಗತ್ತಿನ ಅತ್ಯಂತ ವಿದ್ಯಾಸಂಪನ್ನ ವಿಭಾಗವನ್ನಾಗಿ ಪರಿವರ್ತಿಸಿದ ಗ್ರೆಗೊರಿಯನ್‌ ದೌತ್ಯವನ್ನು ಜಾರಿ ಮಾಡಿದ ಯೂರೋಪಿನ ಖ್ಯಾತ ಪೋಪ್‌ ‘ಗ್ರೆಗರಿ ದ ಗ್ರೇಟ್’ ರ ಕಾಲವಾಗಿತ್ತದು. ಬೈಬಲ್‌ ಧರ್ಮೋಪದೇಶಕಾಂಡ ೧೮:೧೮ ರಲ್ಲಿ ಹೀಗಿದೆ, “ನಿಮ್ಮನ್ನು(ಮೂಸಾ,ಮೋಸಸ್) ಹೋಲುವ ಪೈಗಂಬರ್(ಮುಹಮ್ಮದ್)‌ ರನ್ನು ನಾವು ನಿಯೋಜಿಸಲಿದ್ದೇವೆ.” ಮೋಸಸ್‌ ಪರಂಪರೆಯ ವಾರಸುದಾರರೆಂಬಂತೆ ಮದೀನಾ ತಲುಪಿದ ಹೊಸತರಲ್ಲಿ ಪೈಗಂಬರ್ ಮುಹಮ್ಮದ(ಸ.ಅ)ರು ಯಹೂದಿಗಳೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸಿದ್ದರು. ಆರಂಭದಲ್ಲಿ ಸಕಾರಾತ್ಮಕ ಸ್ಪಂದನೆ ನೀಡಿದ್ದರೂ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅವರು ಕೊನೆವರೆಗೂ ಹಠಮಾರಿಗಳಾಗಿ ಉಳಿದರು ಎನ್ನಬಹುದು. ತಮ್ಮ ಗ್ರಂಥಗಳಲ್ಲೆ ಇರುವ ಪೈಗಂಬರರ ಕುರಿತಾದ ಭವಿಷ್ಯ ನುಡಿಗಳನ್ನು ಅರ್ಥಮಾಡುವ ಗೊಡವೆಗೆ ಅವರು ಹೋಗಲಿಲ್ಲ. ಪೈಗಂಬರರು ನಂತರ ಮೈತ್ರಿ ಮಾಡಲು ಮುಂದಾದದ್ದು ಕ್ರೈಸ್ತರೊಂದಿಗೆ. ಗ್ರೀಕ್‌ ಕ್ರೈಸ್ತರು ಮತ್ತು ಪರ್ಷಿಯನ್‌ ಪಾಗನ್‌ಗಳ ನಡುವೆ ಯುದ್ಧ ನಡೆದಾಗ ಪೈಗಂಬರರು ಗ್ರೀಕ್‌ ಪಕ್ಷಕ್ಕೆ ಬೆಂಬಲ ನೀಡಿದರು. (ಯಹೂದಿಗಳು ಪರ್ಶಿಯನ್‌ ಪಾಗನ್ನರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು ಎಂಬುದು ಗಮನಾರ್ಹ)

ಇಪ್ಪತ್ತನೆಯ ಶತಮಾನದ ಬ್ರಿಟಿಷ್‌ ವಿದ್ವಾಂಸ ಎ. ಜೆ ಆರ್ಬರಿ ಖುರ್‌ಆನಿನ ಮೂವತ್ತನೆಯ ಅಧ್ಯಾಯ “ರೂಮ” ನ್ನು ಗ್ರೀಕ್‌ ಎಂದು ಅನುವಾದಿಸಿದ್ದು ಸರಿಯಾಗಿಯೆ ಇದೆ. ಅವರು ಭಾಷಾಂತರಿಸಿದ ಆ ಅಧ್ಯಾಯದ ಪ್ರಾರಂಭ ಹೀಗಿದೆ:

“ಅಲಿಫ್‌ ಲಾಮ್‌ ಮೀಮ್‌,
ಗ್ರೀಕರು ಸೋಲನ್ನಪ್ಪಿದ್ದಾರೆ
ನಿಮ್ಮ ನೆರೆಯ ಭೂಮಿಯಲ್ಲಿ
ಸೋಲಿನ ತರುವಾಯ ಅವರು ಜಯಶಾಲಿಗಳಾಗಲಿದ್ದಾರೆ
ಆದೇಶ ಮಾಡುವ ಅಧಿಕಾರ ಅವನದ್ದು
ಹಿಂದೆ ಮತ್ತು ಮುಂದೆಯೂ
ಆ ದಿನ ವಿಶ್ವಾಸಿಗಳು ಆನಂದಿಸಲಿದ್ದಾರೆ
ದೇವರ ಸಹಾಯದಿಂದ
ಅವನು ಅವನಿಚ್ಛಿಸುವವರಿಗೆ ಸಹಾಯವನ್ನೀಯುವನು
ಅವನು ಸರ್ವಶಕ್ತನು, ಪರಮ ಕರುಣಾಮಯಿ.”

ಪಾಗನ್ ಪರ್ಶಿಯನ್ನರ ವಿರುದ್ಧ ಬೈಬಲ್‌ ಜಯಭೇರಿ ಬಾರಿಸಿದಾಗ ವಿಶ್ವಾಸಿಗಳು ಆನಂದ ತುಂದಿಲರಾದರು. ಕಂಝುಲ್‌ ಉಮ್ಮಾಲ್‌ ವರದಿ ಮಾಡಿದ ಹದೀಸೊಂದರಲ್ಲಿ ಪೈಗಂಬರ್‌ ಹೇಳತ್ತಾರೆ, “ಒಳಿತು ಲೋಕದಲ್ಲಿ ಉಳಿಯುವ ವರೆಗೆ ಗ್ರೀಕರು ನಿಮ್ಮ ಮಿತ್ರರಾಗಿರುತ್ತಾರೆ.” ಮತ್ತೊಂದೆಡೆ “ಹಿಕ್ಮತ್‌ ಅಥವಾ ತತ್ವಗಳು (ಗ್ರೀಕರ ಆಪ್ತ ವಿಷಯ) ಸತ್ಯ ವಿಶ್ವಾಸದ ಕಳೆದು ಹೋದ ವಾಹನ. ಎಲ್ಲಿ ಪತ್ತೆಯಾದರೂ ಅದನ್ನು ಸ್ವಾಧೀನಪಡಿಸುವ ಹಕ್ಕುಬಾಧ್ಯತೆ ಅವರಿಗೆ ಇದೆ” ಎಂದು ಹೇಳಿದ್ದಾರೆ.
ಪೈಗಂಬರರ ಕಾಲಾನಂತರದ ಮುಸಲ್ಮಾನರ ತಲೆಮಾರು ಗ್ರೀಕ್‌ ಚಿಂತನೆಗಳನ್ನು ಹೀರಿಕೊಂಡರು. ಗ್ರೀಕ್‌ ತತ್ವಚಿಂತನೆಗಳ ಪ್ರಭಾವ ಹೆಚ್ಚುತ್ತಾ ಬಂದು ಪೈಗಂಬರರು ಕಲಿಸಿದ ಸರಳ ಸೆಮಿಟಿಕ್‌ ಸತ್ಯಗಳನ್ನು ಕೂಡಾ ಸದೆಬಡಿದು ಮುನ್ನುಗ್ಗುವ ಹಂತಕ್ಕೆ ತಲುಪಿತ್ತು. ವಿಚಾರವಾದಿಗಳು ಮದೀನಾದ ಎದುರು ಏಥೆನ್ಸಿನ ಪರ ನಿಂತರು. ಆದಾಗ್ಯೂ, ಈ ಬೆಳವಣಿಗೆಯ ವಿರುದ್ಧ ಒಡಮೂಡಿದ ಸುನ್ನಿ ಪ್ರತಿಕ್ರಿಯೆ ಗೀಕ್‌ ಪ್ರಣೀತ ಅರಿವುಗಳ ಒಳಿತಾದ ಆಯಾಮಗಳನ್ನು ಒಳಗೊಳ್ಳಲು ಹಿಂದೆ ಮುಂದೆ ನೋಡಿರಲಿಲ್ಲ. ಅವರು ಉತ್ಪಾದಿಸಿದ ಕೂಲಂಕಷ ರೀತಿ ವಿಜ್ಞಾನ ದಿವ್ಯಬೋಧನೆಗೆ ಅದರ ವಿಚಾರ ವ್ಯಾಪ್ತಿಯಲ್ಲಿ ಇರುವ ಪರಮಾಧಿಕಾರವನ್ನು ಪುರಸ್ಕರಿಸಿತು ಮತ್ತು ಬುದ್ಧಿಗೆ ತಕ್ಕುದಾದ ಸ್ಥಾನಮಾನವನ್ನೂ ನೀಡಿತು. ಹಾಗೆ ಹೊರಹೊಮ್ಮಿದ ಸಂಶ್ಲೇಷಣಾತ್ಮಕ ಸುನ್ನಿ ವಿಧಾನಶಾಸ್ತ್ರ ಪ್ರಕೃತಿ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ದಿವ್ಯದರ್ಶನಾಧಾರಿತ ತಾತ್ವಿಕ ಸಿದ್ಧಾಂತ (metaphysics) ಕ್ಷೇತ್ರಗಳಲ್ಲಿ ಬುದ್ಧಿಯ ಪಾತ್ರವನ್ನು ಸಮರ್ಪಕವಾಗಿ ಗುರುತಿಸುವುದರೊಂದಿಗೆ ಬುದ್ಧಿಯ ವಿಚಾರ ವ್ಯಾಪ್ತಿಯ ಹೊರಗಿನ ವಿಷಯಗಳಲ್ಲಿ ದೇವದತ್ತ ತಥ್ಯಗಳ ಮಹತ್ವವನ್ನೂ ಸಮರ್ಥಿಸಿತು. ಮುಸ್ಲಿಂ ನಾಗರಿಕತೆ ಶತಮಾನಗಳ ಕಾಲ ಎತ್ತರಕ್ಕೆ ಹಾರುತ್ತಾ ಹೋಗಿದ್ದು ಈಯೆರಡು ರೆಕ್ಕೆಗಳನ್ನು ಬಳಸಿಕೊಂಡಾಗಿತ್ತು.

ಜ್ಞಾನದ ಹುಡುಕಾಟವು ಬಿಟ್ಟಿರಲಾಗದ ಹವ್ಯಾಸವಾಗಿ ಮುಸ್ಲಿಂ ಜಗತ್ತನ್ನು ಹಚ್ಚಿಕೊಂಡಿತ್ತು. ಇಸ್ಲಾಮಿ ನಾಗರಿಕತೆ ಜಾಗತಿಕ ಚರಿತ್ರೆಯಲ್ಲಿ ಅದ್ವಿತೀಯ ವೈಶಿಷ್ಟ್ಯತೆಯನ್ನು ಪಡೆಯಲು ಜ್ಞಾನದ ಆವಿಷ್ಕಾರ, ಸಂರಕ್ಷಣೆ ಮತ್ತು ಪ್ರಸಾರದ ವಿಷಯದಲ್ಲಿ ಅದು ವಹಿಸಿರುವ ಕಾಳಜಿಯೆ ಮುಖ್ಯ ಕಾರಣ ಎಂದು ಯಹೂದಿ ಇತಿಹಾಸಕಾರ ಫ್ರಾನ್ಝ್‌ ರೊಸೆಂತಲ್‌ ತಮ್ಮ ‘ನಾಲೆಜ್‌ ಟ್ರಯಂಫೆಂಟ್‌’ ಎಂಬ ಕೃತಿಯಲ್ಲಿ ವಾದಿಸಿದ್ದಾರೆ. ಆದರೆ ವಿಜ್ಞಾನದ ಪರಿಕಲ್ಪನೆ ಮನುಷ್ಯನ ವಿಶ್ವಾಸ, ಸರಿತಪ್ಪುಗಳ ಕುರಿತ ಅವನ ವಿವೇಚನೆ ಮತ್ತು ಅವನು ಜೀವನದಲ್ಲಿ ಪಾಲಿಸಲು ಬಯಸುವ ಆದರ್ಶಗಳು ಇವನ್ನೆಲ್ಲಾ ಒಳಗೊಳ್ಳುತ್ತವೆ. ಆದುದರಿಂದಲೇ, ಶಿಕ್ಷಣ ಎಂಬ ಕಲ್ಪನೆಯು ಮನುಷ್ಯನ ನೈತಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಅಡಕಗೊಳಿಸಿದ ವಿಚಾರವಾಗಿದೆ.

ಯುಗೇನ್‌ ಎ ಮೈಯರ್ಸ್‌ ತನ್ನ “ಅರಬಿಕ್‌ ಥಾಟ್‌ ಏಂಡ್‌ ವೆಸ್ಟೆರ್ನ್‌ ವರ್ಲ್ಡ್” ‌ಎಂಬ ಗ್ರಂಥದಲ್ಲಿ ಇಮಾಮ್‌ ಗಝ್ಝಾಲಿಯವರ ಕುರಿತು ಈ ಕೆಳಗಿನಂತೆ ವಿವರಿಸಿದ್ದಾರೆ:

“ಶಿಕ್ಷಣ ಮತ್ತು ಘನ ನೈತಿಕ ವ್ಯವಸ್ಥೆಯ ಮಧ್ಯೆ ಜೈವಿಕವಾದ ಬೆಸುಗೆ ಸಾಧಿಸಿದ್ದು ಇಮಾಮ್‌ ಗಝ್ಝಾಲಿಯವರು ಇಸ್ಲಾಮಿಗೆ ನೀಡಿದ ಉನ್ನತ ಕೊಡುಗೆ. ಆಧ್ಯಾತ್ಮಿಕ ಮತ್ತು ನೈತಿಕ ಪುನಶ್ಚೇತನವಿಲ್ಲದೆ ಕೇವಲ ಐಹಿಕ ಗಳಿಕೆಯಿಂದ ಸೌಖ್ಯ ದೊರೆಯದು ಎಂದು ಅವರು ಕಲಿಸಿದರು. ಹಾಗಾಗಿ ಶಿಕ್ಷಣ ಜ್ಞಾನ ಪ್ರಸಾರದಲ್ಲಿ ಮಾತ್ರ ನಿಯಮಿತವಾಗದೆ ವ್ಯಕ್ತಿಯ ನೈತಿಕ ಪ್ರಜ್ಞೆಯನ್ನು ಉತ್ತೇಜಿಸುವಂತಾಗಬೇಕು.”

ಮುಂದುವರಿದು ಅದೇ ಪುಸ್ತಕದಲ್ಲಿ ಮುಸಲ್ಮಾನರ ಮೇಲೆ ಏಥೆನ್ಸ್‌ ಬೀರಿದ ಪ್ರಭಾವವನ್ನು ಹೊರಗೆಡಹಿದ್ದಾರೆ ಮೈಯರ್ಸ್.‌ ಕ್ರಿಸ್ತ ಶಕ ೬೫೦-೧೦೦೦ ಇಸವಿಯ ನಡುವೆ ಗ್ರೀಕ್‌ ವಿಜ್ಞಾನ, ಗಣಿತಶಾಸ್ತ್ರ, ತರ್ಕಪದ್ಧತಿ ಮತ್ತು ತತ್ವಜ್ಞಾನ ರಂಗದ ಶ್ರೇಷ್ಠ ಕೃತಿಗಳು ಅರಬಿ ಭಾಷೆಗೆ ಭಾಷಾಂತರಗೊಂಡಿತ್ತಲ್ಲವೇ. ಬೈಝಾಂಟಿಯನ್ ಪರಂಪರೆಯಲ್ಲಿ ಜ್ಞಾನಾರ್ಜನೆ ಮಾಡಿದ್ದ ಅರೇಬ್ಯನ್‌ ಕ್ರೈಸ್ತರು ಕೂಡಾ ಪಾಲ್ಗೊಂಡಿದ್ದ ಬೃಹತ್ ಮಟ್ಟದ ಚಾರಿತ್ರಿಕ ಭಾಷಾಂತರ ಚಳುವಳಿಯು ಮುಸ್ಲಿಂ ಜಗತ್ತಿನಲ್ಲಿ ಪರಿವರ್ತನೆಯ ಗಾಳಿಯನ್ನು ಬೀಸಲು ಶಕ್ತಿಯಿರುವ ಹಲವಾರು ಮೇರುಗ್ರಂಥಗಳನ್ನು ಪರಿಚಯಿಸಿ ಕೊಟ್ಟಿದ್ದೇ ಅಲ್ಲದೆ ಬೌದ್ಧಿಕ ಬಿಕ್ಕಟ್ಟಿನ ಅಲೆಗಳನ್ನೂ ಎಬ್ಬಿಸಿತ್ತು.

ಖುರ್‌ಆನ್‌ ಮತ್ತು ಸುನ್ನತ್‌ (ಪೈಗಂಬರರ ಮಾತು, ಕೃತಿ ಮತ್ತು ಮೌನಾನುವಾದಗಳ ಲಿಖಿತ ಮತ್ತು ಶಾಬ್ಧಿಕ ಪರಂಪರೆ) ಗಳ ಮೇಲೆಯೆ ಹೆಚ್ಚು ನೆಚ್ಚಿಕೆ ಇದ್ದುದರಿಂದ ಭಾಷಾಧ್ಯಯನವು ಶೈಕ್ಷಣಿಕ ಕ್ರಮದ ಆದ್ಯಂತ ದಿಕ್ಕನ್ನು ನಿರ್ಣಯಿಸುತ್ತಿತ್ತು. ವ್ಯಾಕರಣ, ಕೋಶವಿಜ್ಞಾನ, ಇಸ್ಲಾಮ್‌ಪೂರ್ವದ ಸಾಹಿತ್ಯ ಸಂಪುಷ್ಟ ‘ಜಾಹಿಲಿಯ್ಯ’ ಕಾವ್ಯಗಳ ಅಧ್ಯಯನ ಮತ್ತು ಸಂರಕ್ಷಣೆ ಆದಿಕಾಲದ ಮುಸಲ್ಮಾನರ ಪಠ್ಯಕ್ರಮದ ಸಿಂಹಭಾಗವನ್ನು ವಶಪಡಿಸಿಕೊಂಡಿತ್ತು. ೧೦೩೭ರಲ್ಲಿ ಕೀರ್ತಿಶೇಷರಾದ ಅವಿಸೆನ್ನ ಯಾನೆ ಇಬ್ನು ಸೀನಾ, ಅರಿಸ್ಟಾಟಲನ ಅಷ್ಟೂ ವಾಙ್ಮಯವನ್ನು ಅರೆದು ಕುಡಿದು ‘ಕಿತಾಬು ಶಿಫಾ’ ಎಂಬ ಉದ್ಗ್ರಂಥವನ್ನೆ ಬರೆದರು. ಈ ಗ್ರಂಥದಲ್ಲಿ ಅವರು ಕೆಲವೆಡೆ ಅರಿಸ್ಟಾಟಲಿಯನ್‌ ನಿರ್ಣಯಗಳಿಂದ ದೂರ ಸರಿದಿದ್ದಾರೆ. ಇನ್ನೂ ಕೆಲವೆಡೆ ಸದ್ರಿ ಚಿಂತಕರ ವೀಕ್ಷಣೆಗಳನ್ನು ಪರಿಷ್ಕರಿಸಿದ್ದಾರೆ. ಆದುದರಿಂದ, ಶಿಫಾ ಗ್ರಂಥ ಅರಿಸ್ಟಾಟಲ್‌ ಬರೆದ “ದ ಆರ್ಗನನ್‌” ಗ್ರಂಥದ ಅವಿಸೆನ್ನನ್‌ ಆವೃತ್ತಿ ಎಂದರೆ ತಪ್ಪಿಲ್ಲ. ಶಿಫಾ ಒಂದು ಪ್ರಧಾನ ಗ್ರಂಥವೆನಿಸಿದ್ದು ಪೌರ್ವಾತ್ಯ ಮುಸಲ್ಮಾನರಿಗೆ ಮಾತ್ರವಲ್ಲ, ಲ್ಯಾಟಿನ್‌ ಅನುವಾದ ಹೊರಬಂದಾಗ ಪಶ್ಚಿಮ ಯೂರೋಪಿನ ಕ್ರೈಸ್ತರು ಕೂಡಾ ಅದನ್ನು ನೆಚ್ಚುವಂತಾಯಿತು. ಅಲ್‌ ಶಿಫಾದ ಚರ್ಚೆಯನ್ನೆ ಬೆಳೆಸಿಕೊಂಡು ಗಝ್ಝಾಲಿ ಇಮಾಮರು ಪ್ರಭಾವಶಾಲಿಯಾದ ಮತ್ತೊಂದು ಗ್ರಂಥವನ್ನು ರಚಿಸಿದರು, ‘ಮಖಾಸಿದುಲ್‌ ಫಲಾಸಿಫ’. ಈ ಗ್ರಂಥವು ಅರಿಸ್ಟಾಟಲ್‌ ಸ್ಥಾಪಿಸಿದ ಪರಿವ್ರಾಜಕ ಪರಂಪರೆಯನ್ನು (peripatetic tradition) ಸರಳ ಭಾಷೆಯಲ್ಲಿ ವಿವರಿಸಿತು. ಅಲ್‌ ಶಿಫಾ, ಕ್ರೈಸ್ತ ಮತ್ತು ಯಹೂದಿ ದೇವತಾಶಾಸ್ತ್ರೀಯ ತತ್ವಜ್ಞಾನ ಪರಂಪರೆಯನ್ನು ಪ್ರಭಾವಿಸಿದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ತರುವಾಯ ಇಮಾಂ ಗಝ್ಝಾಲಿ ರವರು ದೇವತಾಶಾಸ್ತ್ರ ಮತ್ತು ಕರ್ಮಶಾಸ್ತ್ರಗಳಿಗೆ ತರ್ಕಪದ್ಧತಿ ಪೂರ್ವಾಪೇಕ್ಷಿತ ಎಂದು ಸಮರ್ಥಿಸುತ್ತಾರೆ. ಮಧ್ಯ ಏಷ್ಯಾದಲ್ಲಿ ಅರೇಬಿಕ್‌ ಅಲಂಕಾರಶಾಸ್ತ್ರದ ಉದಯವಾಗಿ ಅದು ಕೂಡಾ ಇಸ್ಲಾಮಿಕ್‌ ಪರಂಪರೆಯ ಮೂಲಭೂತ ಪಠ್ಯವಿಷಯಗಳಾದ ವ್ಯಾಕರಣ ಮತ್ತು ತರ್ಕವಿಧಾನದೊಂದಿಗೆ ಸಂಕಲಿತವಾಗುತ್ತದೆ. ಈ ತ್ರಿಪಠ್ಯಗಳು ‘ನಿಮಿತ್ತ ಕಲೆ’ಗಳೆಂದು (ಅಲ್‌ ಉಲೂಮುಲ್‌ ಆಲಃ) ಖ್ಯಾತಿ ಪಡೆದಿದ್ದು ಕೆಲವೊಮ್ಮೆ ತ್ರಿಕಲೆಗಳು (ಅಲ್‌ ಸ್ವಿನಾಅತು ಸಲಾಸತ್)‌ ಎಂದೂ ಕರೆಯಲ್ಪಡುತ್ತದೆ. ಈ ರೀತಿ ಟ್ರೈವಿಯಂ ಮುಸ್ಲಿಂ ವಿದ್ವತ್‌ ಪರಂಪರೆಯಲ್ಲಿ ಸಂಪೂರ್ಣವಾಗಿ ನಿಗಮಿತಗೊಳ್ಳುತ್ತದೆ. ಅದಾಗ್ಯೂ ಕೇಂದ್ರಸ್ಥಾನ ವ್ಯಾಕರಣಕ್ಕೇ.

ಇಸ್ಲಾಮಿಕ್‌ ಲೋಕದ ವ್ಯಾಕರಣಜ್ಞರನ್ನು ಇಂದಿನ ಪರಿಭಾಷೆಯಲ್ಲಿ ಭಾಷಾವಿಜ್ಞಾನಿಗಳು(linguist) ಎಂದು ಕರೆಯಬೇಕಿದೆ ಎನ್ನುತ್ತಾರೆ ದ ಫೌಂಡೇಶನ್ಸ್‌ ಆಫ್‌ ಗ್ರ್ಯಾಮರ್‌ ಎಂಬ ಅದ್ವಿತೀಯ ಕೃತಿಯ ಕರ್ತೃ ಜೊನಾಥನ್‌ ಓವೆನ್ಸ್. ಭಾಷಾಸಂಬಂಧಿಯಾದ ತಾತ್ವಿಕ ಸಮಸ್ಯೆಗಳ ಸಹಿತ ಭಾಷೆಯ ಎಲ್ಲಾ ಆಯಾಮಗಳನ್ನು ಅವರು ಒರೆಗೆ ಹಚ್ಚಿದ್ದರು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದ ಅರಬಿವ್ಯಾಕರಣಜ್ಞರ ಗ್ರಂಥಗಳನ್ನು ಇಂದಿನ ಆಧುನಿಕ ಭಾಷಾವಿಜ್ಞಾನಿಗಳು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂಬುದು ಓವೆನ್ಸ್‌ ರವರ ಅಂಬೋಣ. ಆ ಮಧ್ಯಕಾಲೀನ ವಿದ್ವಾಂಸರು ಬರೆಯುತ್ತಿದ್ದಂತಹ ವಿಷಯಗಳನ್ನು ಅರ್ಥೈಸಲು ಬೇಕಾದ ವೈಚಾರಿಕ ಮಟ್ಟಕ್ಕೆ ಹತ್ತೊಂಬತ್ತನೆಯ ಶತಮಾನದ ಓರಿಯಂಟಲಿಸ್ಟ್‌ಗಳು ಇನ್ನೂ ತಲುಪಿಲ್ಲ ಎಂಬುದು ಓವೆನ್ಸ್‌ ವಾದ. ಯಾಕೆಂದರೆ, ಅವರ ಕೊಡುಗೆಗಳನ್ನು ಅರ್ಥೈಸಬಲ್ಲ ಭಾಷಾವಿಜ್ಞಾನ ಇನ್ನೂ ಹೊರಹೊಮ್ಮಿಲ್ಲವಷ್ಟೆ.

ಪಾಶ್ಚಿಮಾತ್ಯ ಪರಂಪರೆಗೆ ಸದೃಶವಾದ ವ್ಯಾಕರಣ ಶಾಲೆಗಳನ್ನು ಮುಸಲ್ಮಾನರು ಸ್ಥಾಪಿಸಿದ್ದರು. ಕಲಿಕೆಯ ಪ್ರಥಮ ಆರು- ಏಳು ವರ್ಷಗಳಲ್ಲಿ ವಿದ್ಯಾರ್ಥಿಗಳು ಖುರಆನ್‌ ಕಂಠಪಾಠ ಮತ್ತು ವ್ಯಾಕರಣ – ಪದಸಂಪತ್ತಿನ ಅಧ್ಯಯನ ಮಾಡುತ್ತಿದ್ದರು. ‘ಮಕಾಮಾತ್‌’ ಎಂದು ಕರೆಯಲಾಗುವ ವರ್ಣರಂಜಿತ ಕಾಲ್ಪನಿಕ ಕಥೆಗಳ ಮೂಲಕ ಪದಸಂಪತ್ತಿನ ಬೆಳವಣಿಗೆ ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು ಕಥೆಗಳನ್ನು ಮತ್ತು ಪದದ ವ್ಯಾಖ್ಯೆಗಳನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡುತ್ತಿದ್ದರು. ಉದಾರ ಶಿಕ್ಷಣದ ಮತ್ತೊದು ಘಟಕವಾಗಿದೆ ಕ್ವಾಡ್ರಿಯಂ ಎಂದು ಕರೆಯಲಾಗುವ ವೈಚಾರಿಕ ಕಲೆಗಳು(ಅಲ್‌ ಉಲೂಮುಲ್‌ ಅಖ್‌ಲಿಯ್ಯ).
(ಮುಂದುವರಿಯುವುದು)‌

ಶೈಖ್‌ ಹಂಝ ಯೂಸುಫ್

ಕನ್ನಡಕ್ಕೆ: ನಝೀರ್‌ ಅಬ್ಬಾಸ್

ಇಬ್ಬರು ಬಶೀರ್

ಈ ಟಿಪ್ಪಣಿಯನ್ನು ಬರೆದವನ ಹೆಸರು ನೋಡಿ ನಿಮಗೆ ಕುತೂಹಲವೆನಿಸಬಹುದು. ಬಾಲ್ಯದ ದಿನಗಳಲ್ಲಿ ಓದಿನ ನವಿರಾದ ಪ್ರಪಂಚಕ್ಕೆ ನನ್ನನ್ನು ಆಕರ್ಷಿಸಿ ಮಂತ್ರಮುಗ್ಧಗೊಳಿಸಿದವರು ಸಾಹಿತ್ಯಲೋಕದ ಸುಲ್ತಾನ ವೈಕಂ ಮೊಹಮ್ಮದ್ ಬಶೀರರು. ಅಂತಹಾ ಮೇರು ಪ್ರತಿಭೆಯ ಕುರಿತು ನೆನಪಿಸಿಕೊಳ್ಳದೆ ಇರುವುದು ಅಸಾಧ್ಯದ ಮಾತು. ಅದಕ್ಕೆ ಮನಸ್ಸು ಒಪ್ಪುವುದೂ ಇಲ್ಲ. ಬಶೀರರನ್ನು ನಾನೊಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಸಣ್ಣಪುಟ್ಟ ಅವಕಾಶಗಳು ದೊರೆತಾಗಲೆಲ್ಲಾ ಆ ದೊಡ್ಡ ಮನುಷ್ಯನ ಮುಂದೆ ನಿಂತುಕೊಳ್ಳುವುದು ಹೇಗೆಂಬ ಅಭಿಮಾನ ಮಿಶ್ರಿತ ಭಯದಿಂದ ದೂರವೇ ಉಳಿದುಬಿಡುತ್ತಿದ್ದೆ. ಎದೆಯಾಳದಲ್ಲಿ ಕೊಂಡಾಡುವ ಒಬ್ಬ ವ್ಯಕ್ತಿಯನ್ನು ದೂರದಿಂದಲೇ ನೋಡಿ ಆಸ್ವಾದಿಸುವ ಖುಷಿಯನ್ನು ಕೆಲವೊಮ್ಮೆ ಉಂಡಿದ್ದೆ ಕೂಡ. ಅದೊಂದು ಸೊಗಸಾದ ಅನುಭವ!

ಒಬ್ಬ ಬರಹಗಾರ ಮತ್ತು ಓದುಗನೆಡೆಯಲ್ಲಿ ಭೇಟಿಗೂ ಆಚೆಗೆ ಇರಬಹುದಾದ ಅವಿನಾಭಾವ ಸಂಬಂಧ ನಮ್ಮೆಡೆಯಲ್ಲೂ ರೂಪುಗೊಂಡಿತ್ತು. ಅಲ್ಲಾಹು ಮನುಷ್ಯರಿಗೆ ದಯಪಾಲಿಸಿದ ‘ಲೇಖನಿ’ ಎಂಬ ಸಶಕ್ತ ಆಯುಧವು ಅದೆಷ್ಟು ಮನಸ್ಸುಗಳನ್ನು ಒಂದೇ ದಾರದಲ್ಲಿ ಪೋಣಿಸಿಲ್ಲ ಹೇಳಿ! ಪವಿತ್ರ ಖುರ್‌ಆನಿನ ಮೊದಲ ಅಧ್ಯಾಯದಲ್ಲಿ ಅಲ್ಲಾಹನು ಪ್ರಸ್ತಾಪಿಸಿದಂತೆ ”ಲೇಖನಿಯ ಮೂಲಕ ಬರವಣಿಗೆಯನ್ನು ಭೋದಿಸಿದ ಅವನೆಷ್ಟು ಉತ್ಕೃಷ್ಟನು” ಅಲ್ಲವೇ!

ಮನ್ಸೂರ್ ಹಲ್ಲಾಜ್ ಅವರ ‘ಅನಲ್ ಹಕ್’ ಮತ್ತು ಶಂಕರಾಚಾರ್ಯರ ‘ಅಹಂ ಬ್ರಹ್ಮಾಸ್ಮಿ’ ಎರಡನ್ನೂ ಸಮಾನವೆಂದು ಹೇಳುತ್ತಾ, ‘ಅನರ್ಘ್ಯ ನಿಮಿಷಂ’ ನಂತಹ ರಚನೆಗಳಲ್ಲಿ ತೊಡಗಿಸಿಕೊಂಡ ಆ ವ್ಯಕ್ತಿಯೊಂದಿಗೆ ನನಗಾವ ಸಂಬಂಧ! ಸಿ. ಎನ್. ಅಹ್ಮದ್ ಮೌಲವಿಯಂತಹವರೊಂದಿಗೆ ಸಮಾಲೋಚಿಸಿ, ಕೇವಲ ಖುರ್‌ಆನಿನ ಕೆಲವೊಂದು ತರ್ಜುಮೆಗಳನ್ನು ಓದಿ, ಧರ್ಮದ ಸೂಕ್ಷ್ಮತೆಗಳನ್ನು ಅರ್ಥೈಸುವ ಗೋಜಿಗೆ ಹೋಗದೆ, ಮುಸ್ಲಿಮರ ಆಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಕಟುವಾಗಿ ಟೀಕಿಸಿ, ಲೇವಡಿಮಾಡಿದ ಆ ವ್ಯಕ್ತಿಯ ಮೇಲೆ ಯಾಕೆ ಇಷ್ಟೊಂದು ಅಭಿಮಾನ!
ಕೇಶವ್‌ದೇವ್, ತಕಝಿ, ಪೊನ್‌ಕುನ್ನಂವರ್ಕಿ ಮುಂತಾದ ತನ್ನ ಸಮಕಾಲೀನ ಬರಹಗಾರರೊಂದಿಗೆ ಕುಡಿದು ಮದೋನ್ಮತ್ತನಾಗಿ, ಸದಾ ಮದುಬಟ್ಟಲಿನ ಬಗಲಲ್ಲೇ ಬಿದ್ದುಕೊಂಡಿದ್ದ ಬಶೀರರೊಂದಿಗೆ ನನಗೆ ಯಾವ ತೆರನಾದ ಅಭಿಮಾನ!

“ತನ್ನನ್ನು ಕಾಣಲು ಬರುತ್ತಿದ್ದವರನ್ನು ಬೈಗುಳಗಳ ಮಳೆಗರೆದು, ಅವನು ಎಷ್ಟೇ ದೊಡ್ಡ ಮಹಾನುಭಾವನಾಗಿದ್ದರೂ ಮನೆಯ ಮೆಟ್ಟಿಲು ಹತ್ತಲೂ ಬಿಡದೆ ಅವರು ಓಡಿಸುತ್ತಿದ್ದರು. ಕೆಲವೊಮ್ಮೆ ಆ ಬೈಗುಳಗಳಲ್ಲಿ ಅಶ್ಲೀಲ ಪದಗಳೂ ಇರುತ್ತಿದ್ದವು. ಆಗೆಲ್ಲಾ ಅವರು ಮಧ್ಯದ ನಶೆಯಲ್ಲಿರುತ್ತಿದ್ದರು” ಹೀಗೆಂದು ತನ್ನ ಶಿಷ್ಯ ಎಮ್ ಟಿ ವಾದುದೇವನ್ ನಾಯರರಿಂದ ಪರಿಚಯಿಸಲ್ಪಟ್ಟ ಒಬ್ಬ ಗುರು ಶ್ರೇಷ್ಠ!

ಯಾತ್ರೆಯ ಮಧ್ಯೆ ಕಾರು ಕೈಕೊಟ್ಟು ಒಂದೆಡೆ ಬಾಕಿಯಾದಾಗ, ಕಾಗದದಲ್ಲಿ ತಾನು ಸುರುಟಿ ತಂದಿದ್ದ ಮದ್ಯದ ಬಾಟಲಿಯನ್ನು ತೆರೆದು ಕುಡಿಯಲು ನೋಡಿ, ಬಾಟಲಿಯು ಖಾಲಿಯಿರುವುದನ್ನು ಗಮನಿಸಿ ಕೋಪಗೊಂಡು ‘ಹೋಗೋ ನನ್ನ ಸಂಗಾತಿಯನ್ನು ಕರೆದುಕೊಂಡು ಬಾ’ ಎಂದು ಹಾಸ್ಯ ಚಟಾಕಿ ಸಿಡಿಸಿ ಆ ಬಾಟಲಿಯನ್ನು ಹೊರಕ್ಕೆಸೆದ ಪೊನ್ನುಂವರ್ಕಿಯ ಒಬ್ಬ ಆತ್ಮೀಯ ಸ್ನೇಹಿತ!

ಸ್ನೇಹಿತರೊಂದಿಗೆ ಎರ್ನಾಕುಲಂನ ಪುಸ್ತಕದಂಗಡಿಯಲ್ಲಿ ಮಾತುಕತೆಗೆ ಕುಳಿತರೆ ಸೂರ್ಯ ಕ್ಷೀಣಿಸುತ್ತಿದ್ದಂತೆ, ಕುಡಿದು ಮತ್ತನಾಗಿ ದಿನವಿಡೀ ಪಟ್ಟಾಂಗ ಹೊಡೆಯುತ್ತಾ ನಿರ್ಲಜ್ಜನಾಗಿ ಇರುತ್ತಿದ್ದ ‘ತಕಝಿ’ಯ ಸನ್ಮಿತ್ರ ಗೆಳೆಯ!
ಈ ಮನುಷ್ಯನೊಂದಿಗೆ ನನಗೆ ಎಲ್ಲಿಯ ನಂಟು! ಯಾವ ರೀತಿಯ ಸಂಬಂಧ! ಏನು ಅಭಿಮಾನ!

ಇದೆ. ಖಂಡಿತಾ ಇದೆ. ಅಭಿಮಾನ, ಸಂಬಂಧ, ನಂಟು ಎಲ್ಲವೂ ಇದೆ. ನಾನು ಹುಟ್ಟಿ ಬೆಳೆದ ಧರ್ಮದ ಭಾಗವಾಗಿರುವ ನನ್ನ ಸಹೋದರನೆಂಬ ಬಾಂಧವ್ಯದ ಬೆಸುಗೆ ಇದೆ. ನಾನೊಬ್ಬ ಮುಸ್ಲಿಂ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತಿದ್ದ ಬಶೀರರಲ್ಲಿ ಅಭಿಮಾನವಿದೆ.
ಮುಸ್ಲಿಮರ ಆಚಾರ ವಿಚಾರಗಳನ್ನು ತನ್ನ ಕಥೆಗಳುದ್ದಕ್ಕೂ ಹೇಳಿದ ಕಥೆಗಾರ ಎಂಬ ಹೆಮ್ಮೆಯೂ ಇದೆ.
‘ಅಂಡಕಡಾಹತ್ತೇಯುಂ ಮಹಾ ಪ್ರಪಂಚತ್ತೇಯುಂ ಸೃಷ್ಟಿಚ್ಚಿ ಪರಿಪಾಲಿಕುನ್ನ ನಾದಾ'(ಅಖಿಲ ಬ್ರಹ್ಮಾಂಡಗಳನ್ನೂ ಮಹಾವಿಶ್ವವನ್ನೂ ಸೃಷ್ಟಿಸಿ ಪರಿಪಾಲಿಸುವ ಪ್ರಭೂ) ಎನ್ನುತ್ತಲೇ ತನ್ನ ಕಥೆಗಳುದ್ದಕ್ಕೂ ಖುರ್‌ಆನಿನ ಒಳತಿರುಳನ್ನು ಓದುಗರ ಚಿತ್ತಪಟಲಕ್ಕೆ ದಾಟಿಸಿದ ಮಾಂತ್ರಿಕ ಕಥೆಗಾರ. ಖುರ್‌ಆನ್, ಹದೀಸುಗಳನ್ನು ಸಾಹಿತ್ಯ ಲೋಕದ ಮುಂದೆ ತೆರೆದಿಟ್ಟ ಪ್ರತಿಭಾಶಾಲಿ. ಸರಳವಾದ ಆಡುನುಡಿಯಲ್ಲಿ ಮುಸ್ಲಿಮರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮತ್ತು ಮುಸ್ಲಿಂ ಮನೆಗಳ ಅಡುಗೆಮನೆಗಳಲ್ಲಿ ಹುಟ್ಟಿಕೊಂಡ ನುಡಿಗಟ್ಟುಗಳನ್ನು ಚಂದಗೆ ಕಟ್ಟಿಕೊಟ್ಟ ಗಾರುಡಿಗ. ಪೂರ್ವಗ್ರಹ ಪೀಡಿತರಾದ ಮನಸ್ಸುಗಳೂ ಒಪ್ಪಿಕೊಳ್ಳುವಂತೆ ಅಕ್ಷರ ಕ್ರಾಂತಿ ನಡೆಸಿದ ವೈಕಂ ಬಶೀರ್. ಅವರಿಗಲ್ಲದೆ ‘ಭಗವದ್ಗೀದೆಯುಂ ಕೊರೇ ಮೊಲೆಗಳುಂ'(ಭಗವದ್ಗೀತೆ ಮತ್ತು ಅನೇಕ ಮೊಲೆಗಳು) ಎಂದು ನಸುನಗುತ್ತಲೇ ಈ ಭವ್ಯ ಭಾರತದ ಮಣ್ಣಿನಲ್ಲಿ ಇದ್ದುಕೊಂಡು ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವರನ್ನು ಮತ್ತೊಬ್ಬರೊಂದಿಗೆ ತುಲನೆಮಾಡುವುದು ಸಾಧ್ಯವಿಲ್ಲ.

ಬಶೀರರ ಕಥೆಗಳನ್ನು ವಿಶ್ಲೇಷಿಸುವ ಯಾವ ಅರ್ಹತೆಯೂ ನನಗಿಲ್ಲ. ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲ ಬಶೀರರ ಕಥೆಗಳು ಭಾಷಾಂತರಗೊಂಡ ಎಲ್ಲಾ ಭಾಷೆಗಳ ಶ್ರೇಷ್ಠ ಕತೆಗಾರರು, ವಿಮರ್ಶಕರು, ಬಶೀರರ ಕಥೆಗಳ ಓಘಕ್ಕೆ ತಲೆದೂಗಿದವರೆ. ಸ್ವತಃ ಕಥೆಗಾರನೂ ಅಚ್ಚರಿಗೊಳ್ಳುವಂತೆ ವೈಕಂ ಬಶೀರರ ಕಥೆಗಳ ವ್ಯಾಪ್ತಿ, ಉದ್ದೇಶ, ಸಂವೇದನೆಗಳೆಲ್ಲವೂ ಓದುಗರು ಮತ್ತು ಕಥೆಗಳನ್ನು ಒರೆಗಲ್ಲಿಗೆ ಹಚ್ಚಿ ನೋಡಿದವರಿಗೆ ದಕ್ಕುತ್ತದೆ ಎನ್ನುವುದೇ ಒಬ್ಬ ಕಥೆಗಾರನ ಗೆಲುವು. ಆ ಗೆಲುವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಕಥೆಗಾರ ವೈಕಂ.

ಸೌಂದರ್ಯಪ್ರಜ್ಞೆಯೆಂದರೆ ಏನೆಂದರಿಯದ ‘ಬಾಲಮಂಗಳ ಅಮರ ಚಿತ್ರಕಥಾ’ ಓದುವ ಪುಟಾಣಿಗಳೂ ಬಶೀರರ ಸಾಹಿತ್ಯದ ಆಸ್ವಾದಕರಾಗಿರುತ್ತಾರೆ. ಆ ಕಾರಣದಿಂದಲೇ ನಾನು ಪಳ್ಳಿದರ್ಸ್ ಕಲಿಯುತ್ತಿರುವ ದಿನಗಳಲ್ಲಿಯೇ ಬಶೀರರ ಕಥೆಗಳನ್ನು ಓದುತ್ತಾ ಬೆಳೆದವನು. ನಾನು ಓದಿರುವ ಕೃತಿಗಳು ಕೆಲವೇ ಕೆಲವೆಂದೂ ಇನ್ನೂ ಹಲವು ಕೃತಿಗಳು ಓದಲು ಬಾಕಿಯಿದೆಯೆಂಬ ನಂಬಿಕೆಯಲ್ಲಿದ್ದೆ. ಆದರೆ ಬಶೀರರ ಅಗಲಿಕೆಯ ಬಳಿಕ ಅವರು ರಚಿಸಿದ ಕೃತಿಗಳು ಮತ್ತು ನಾನು ಓದಿದ ಅವರ ಕೃತಿಗಳನ್ನು ತಾಳೆ ಹಾಕಿ ನೋಡಿದೆ. 32 ಕೃತಿಗಳು. ‘ಬಶೀರರ ಸಮಗ್ರ ಬರಹಗಳು’ ಸಂಪುಟಗಳಲ್ಲದೆ ಉಳಿದೆಲ್ಲವೂ ಓದಿ ಮುಗಿದದ್ದು ಮತ್ತು ಕೆಲವು ಪುನರಾವರ್ತಿಸಿ ಓದಿದ್ದು. ಅಬ್ಬಾ ಎಷ್ಟು ತೂಕದ ಬರಹಗಳಾಗಿದ್ದವು ಅವು!

ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಾದ, ಶಾಲೆಯ ಮೆಟ್ಟಿಲುಗಳನ್ನೇ ಹತ್ತದ ಅಸಂಖ್ಯಾತ ಓದುಗ ವೃಂದವನ್ನು ತನ್ನೆಡೆಗೆ ಸೆಳೆದುಕೊ‌ಳ್ಳಲು ಬಶೀರರಿಗೆ ಸಾಧ್ಯವಾಯಿತು. ವಿಭಿನ್ನ ತರಹದ ಓದುಗರು ಮತ್ತು ಅವರೆಲ್ಲರಿಗೂ ಭಿನ್ನವಾಗಿಯೇ ವೇದ್ಯವಾಗುತ್ತಿದ್ದ ಬಶೀರರ ಬರಹಗಳೇ ಒಂದು ಅಚ್ಚರಿ. ಅವರ ಹೊತ್ತಗೆಗಳು ಆವರ್ತಿಸಿ ಓದಿದಂತೆ ನಾನಾರ್ಥಗಳನ್ನು ಸ್ಪುರಿಸುವ ಕಲಾಕುಸುರಿಯಾಗಿತ್ತು. ಆ ಕುಸುರಿಯ ಒಡೆಯರಾಗಿದ್ದರು ಬೇಪೂರಿನ ಸುಲ್ತಾನ ಬಶೀರರು.

ಓ ಎನ್ ವಿ, ಎಮ್ ಟಿ, ಎನ್ ಪಿ ಮೊಹಮ್ಮದ್, ಟಿ ಪದ್ಮನಾಭನ್, ಎಮ್ ಎನ್ ವಿಜಯನ್, ಎಮ್ ಎಮ್ ಬಶೀರ್, ಯು ಎ ಖಾದರ್ ಹಾಗೂ ಇನ್ನಿತರ ಮಲಯಾಳಂ ಸಾಹಿತ್ಯ ಲೋಕದ ದಿಗ್ಗಜರು ತಮ್ಮ ಬರಹಗಳಲ್ಲಿ ತೀರಾ ಸ್ಪರ್ಶಿಸದ ಮತ್ತು ಮಲಯಾಳಂ ಸಾಹಿತ್ಯಕ್ಕೆ ಹೊಸತೆನಿಸುವ ಸಂವೇದನೆಯ ಬರಹಗಳನ್ನು ಹಾಸ್ಯದ ಕುಲುಮೆಯಲ್ಲಿ ಅದ್ದಿತೆಗೆದ ಬಶೀರರನ್ನು ಓದಿಕೊಂಡವರ ಮನಸ್ಸಿನಲ್ಲಿ ಅವರ ಕಥಾಪಾತ್ರಗಳು ಜೀವಂತವಾಗಿರುತ್ತವೆ.
ಪುಟಾಣಿ ಮಕ್ಕಳಿಂದ ಹಿಡಿದು ತಾಂಬೂಲ ಜಗಿಯುವ ಅಜ್ಜಂದಿರಿಗೂ ಬಶೀರರ ಕತೆಗಳು ಅಪ್ಯಾಯಮಾನವೆನಿಸುವುದು ಈ ಕಾರಣಕ್ಕೆ.

ನಮ್ಮದೇ ಮನೆಯ ಕಥೆಗಳೆನಿಸುವ ‘ಪಾತುಮ್ಮಾಂಡೆ ಆಡ್’ ಎಂಬ ಕಾದಂಬರಿಯ ನಾಯಕಿ ಎಲ್ಲರ ಮನೆಯ ಪ್ರೀತಿಯ ‘ಪಾತು’ ಆಗಿ ಬದಲಾದದ್ದು ಮತ್ತೊಂದು ಸೋಜಿಗ. ಆಡು ಕರುಹಾಕುವುದನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಕರುವನ್ನು ಮೊದಲು ಕಂಡದ್ದು ನಾನೆಂದು ಕುಣಿದು‌ ಕುಪ್ಪಳಿಸಿ ಕೇಕೆ ಹಾಕುವ ‘ಅಂಬಿ’ ‘ಪಾತುಕುಟ್ಟಿ’ಯಂತಹಾ ಮಕ್ಕಳು ನಮ್ಮ ಮನೆಯ ಮಕ್ಕಳಾಗದೇ ಉಳಿಯುವುದಾದರೂ ಹೇಗೆ! ಆನೆಯ ಬಾಲದ ಎರಡು ರೋಮಕ್ಕಾಗಿ ಅದರ ಬಾಲವನ್ನು ಕಡಿದೇ ಬಿಡುವ ಬಶೀರರ ತುಂಟಾಟ ನಮ್ಮ ಬಾಲ್ಯವನ್ನು, ನಮ್ಮಂಥ ಸಾವಿರಾರು ಮಕ್ಕಳ ಬಾಲ್ಯವನ್ನು ಮತ್ತೆಮತ್ತೆ ನೆನಪಿಸುತ್ತಾ ಸಾಗುತ್ತದೆ.

ಬಶೀರರ ಬರಹಗಳು ಓದಿಕೊಂಡ ಸರ್ವರಿಗೂ ಅವರದ್ದೊಂದು ಗುಣ ಸಹಜವಾಗಿಯೇ ಮನವರಿಕೆಯಾಗುತ್ತದೆ. ಅದು ಭೂಮಿಯಲ್ಲಿರುವ ಸಕಲ ಚರಾಚರಗಳೊಂದಿಗಿನ ಬಶೀರರ ಅಪಾರವಾದ ಪ್ರೀತಿ. ಪ್ರವಾದಿವರ್ಯರು ಒಂದು ಹದೀಸಿನಲ್ಲಿ ಹೀಗೆ ಹೇಳುತ್ತಾರೆ; “ಸಕಲ ಚರಾಚರಗಳೊಂದಿಗೂ ಕರುಣೆಯನ್ನು ತೋರಲು ಅಲ್ಲಾಹು ಅಜ್ಞಾಪಿಸಿದ್ದಾನೆ. ಆಹಾರಕ್ಕಾಗಿ ಮೃಗಗಳನ್ನು ದ್ಸಬಹ್ ಮಾಡುವಾಗಲೂ ನೀವು ದ್ಸಬಹಿನ ರೀತಿಯನ್ನು ಸರಳೀಕರಿಸಿ ಪ್ರಾಣಿಗಳೊಂದಿಗೆ ಕರುಣೆತೋರಿರಿ”(ಗ್ರಂಥ:ಮುಸ್ಲಿಂ) ಈ ಕರುಣೆ ತೋರುವ ಗುಣ ಬಶೀರರಿಗೆ ರಕ್ತಗತವಾಗಿತ್ತು. ಮನುಷ್ಯ, ಪ್ರಾಣಿ, ಪಕ್ಷಿಗಳಾಚೆಗೆ ನಿರ್ಜೀವ ವಸ್ತುಗಳನ್ನು ಕೂಡ ತುಚ್ಛವಾಗಿ ಕಾಣದ ಸ್ವಭಾವವಾಗಿತ್ತು ಬಶೀರರದ್ದು.

ಮೇಲೆ ಉಲ್ಲೇಖಿಸಿದಂತೆ ಬಶೀರರ ಬರಹಗಳ ತುಂಬೆಲ್ಲಾ ಹಾಸ್ಯದ ಪ್ರಭಾವ ಹಾಸುಹೊಕ್ಕಾಗಿ ಕಾಣಸಿಗುತ್ತದೆ. ಸಾಧಾರಣವಾಗಿ ಕೆಲವೊಂದು ಬರಹಗಳಲ್ಲಿನ ಹಾಸ್ಯಗಳು ಓದುಗರಲ್ಲಿ ತಕ್ಷಣದ ನಗುವಿಗೆ ಕಾರಣವಾದರೆ ಬಶೀರರು ಅದಕ್ಕೆ ವಿಪರೀತವೆನಿಸುವಂತಹವರು.
ಅವರದು ಉತ್ಕೃಷ್ಟ ಮಟ್ಟದ ಹಾಸ್ಯ.
ಮನುಷ್ಯನ ನೋವು ತಾಕಲಾಟಗಳನ್ನು ಹಾಸ್ಯದೊಂದಿಗೆ ಹೇಳುತ್ತಲೇ ಅದಕ್ಕೊಂದು ಗುಳಿಗೆಯನ್ನು ಕೊಡಮಾಡುವ ವಿಶಿಷ್ಟ ತೆರನಾದ ಔಷದೀಯ ಗುಣವುಳ್ಳ ಹಾಸ್ಯವಾಗಿರುವುದರಿಂದಲೇ ಅದನ್ನು’ಉತ್ಕೃಷ್ಟ’ವೆಂದು ಸರಾಗವಾಗಿ ಹೇಳಿಬಿಡಬಹುದು. ಈ ಹಾಸ್ಯದ ಬೆನ್ನುಬೆನ್ನಿಗೆ ಮಿಡಿಯುವ ಮನಸ್ಸು, ಆರ್ದ್ರಗೊಳ್ಳುವ ತಾಯ್ತನ ಎದ್ದುಕಾಣುತ್ತದೆ. ಕಾಂತೀಯ ಗುಣವುಳ್ಳ ಬರಹಗಳಾಗಿ ಬಶೀರರ ರಚನೆಗಳು ಅಚ್ಚರಿ ಹುಟ್ಟಿಸಿರುವುದಕ್ಕೆ ಇದನ್ನೊಂದು ಮುಖ್ಯ ಕಾರಣವಾಗಿ ನಿಸ್ಸಂದೇಹವಾಗಿ ಹೇಳಬಹುದು.

ವೈಕಂ ಮೊಹಮ್ಮದ್ ಬಶೀರರನ್ನು ಸ್ಮರಿಸುವಾಗಲೆಲ್ಲಾ ಜೊತೆಜೊತೆಗೆ ಸುಪ್ರಸಿದ್ಧ ಅರಬಿಕ್ ಸಾಹಿತ್ಯಗಾರರೊಬ್ಬರು ನೆನಪಾಗುತ್ತಾರೆ. ಅವರ ಹೆಸರು ಅಬೂ ನುವಾಸ್( ಹಿಜರಿ:145-195). ವಿಶ್ವವಿಖ್ಯಾತ ಅರಬ್ ನಿಮಿಷ ಕವಿ. ಕವಿಯಾಗಿಯೇ ಜನಿಸಿದವರೆಂದು ಜನಪ್ರಿಯರಾದವರು. ಶುದ್ಧ ಉಂಡಾಡಿಯಂತೆ ಬದುಕಿದ ಅಲೆಮಾರಿ. ನೈತಿಕತೆಯ ಎಲ್ಲೆ ಮೀರಿದ ನಡತೆ, ಮದ್ಯಪಾನ, ಎಲ್ಲಾ ವಿಧದ ಸುಖಲೋಲುಪತೆಯನ್ನು ಅನುಭವಿಸಿದ ವ್ಯಕ್ತಿ. ಬಶೀರರ ಕಥೆಯೊಂದರ ‘ಗಂಡು ವೇಶ್ಯೆ’ಯೊಂದಿಗೆ ಸಮಾನವೆನಿಸು ಸ್ವಭಾವದವರು.
ಗೆಳೆಯರೊಂದಿಗೆ ಕುಡಿತದ ಚಟಕ್ಕೆ ಬಲಿಯಾದವರು. ತಾನು ಮದ್ಯಪಾನ ನಿಲ್ಲಿಸಿದೆನೆಂದು ಕೇಳಿ ಅಭಿನಂದಿಸಲು ಬಂದ ಆಗಂತುಕನನ್ನು ಮುಂದೆಯೇ ಕುಳ್ಳಿರಿಸಿ ಗಂಟಲು ಮಟ್ಟ ಕುಡಿದ ವಿಕ್ಷಿಪ್ತ ಜೀವಿ. ಕುಡಿತದ ಮತ್ತಿನಲ್ಲಿರುವಾಗಲೂ ಸರ್ವಶಕ್ತನಾದ ಅಲ್ಲಾಹನ ಕ್ಷಮೆಯನ್ನು ಬಯಸುತ್ತಿದ್ದ ವಿಚಿತ್ರ ವ್ಯಕ್ತಿ. ಅವರ ಒಂದು ಕವಿತೆಯ ಸಾಲುಗಳು ಹೀಗಿವೆ:

‘ಎಷ್ಟು ಪಾಪಗಳನು ಬೇಕಾದರೂ ಮಾಡು,
ಕೊನೆಗೆ ತಲುಪಲಿರುವುದು
ಪರಮ ದಯಾಮಯನೂ ಪಾಪಮೋಚಕನೂ ಆಗಿರುವ ಪ್ರಭುವಿನ ಸನ್ನಿಧಿಗೆ.
ಅಲ್ಲಿ ತಲುಪಿದರೆ ನಿನ್ನ ಎಲ್ಲಾ ಪಾಪಗಳನ್ನೂ
ಅವನು ಮನ್ನಿಸಿಬಿಡುವನು,
ಕರುಣಾಮಯನಾದ ಮಹಾರಾಜನೂ ಒಡೆಯನೂ ಆಗಿರುವನವನು.
ನರಕಕ್ಕಂಜಿ ಇಲ್ಲಿನ ಸುಖಜೀವನವನ್ನು ಕಳೆದುಕೊಂಡರೆ
ಪರಮ ದಯಾಳುವಾದ ಅಲ್ಲಾಹನ ಬಳಿ
ವಿಷಾದದಿಂದ ಬೆರಳು ಕಚ್ಚಬೇಕಾದೀತು!’

ನುವಾಸರು ಅಲೆಮಾರಿ ಜೀವನ ಸಾಗಿಸಿದವರು.
ಅದಾಗ್ಯೂ ಅವರ ಕವಿತೆಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು, ಇಲಾಹಿ ಭೋದನೆಗಳು ಇರುತ್ತಿದ್ದವು. ಈ ಕಾರಣದಿಂದಲೇ ಆ ಕಾಲದ ಸಾಂಪ್ರದಾಯಿಕ ಮುಸ್ಲಿಮರಿಗೆ ಅವರ ವ್ಯಕ್ತಿಜೀವನದ ಬಗೆಗೆ ತಕರಾರು ಇದ್ದರೂ ನುವಾಸರ ಕವಿತೆಗಳಿಂದ ಆಕರ್ಷಿಸಲ್ಪಟ್ಟಿದ್ದರು.
ಅಲ್ಲಾಹನ ಮೇಲಿನ ಅವರ ಚಾಂಚಲ್ಯವಿಲ್ಲದ ಅಪಾರವಾದ ನಂಬಿಕೆ, ಭಕ್ತಿ, ಶ್ರದ್ಧೆ ಕವಿತೆಗಳ ಸಾಲುಗಳಲ್ಲಿ ಮಾರ್ದನಿಸುತ್ತಿದ್ದವು. ಇವರ ಸಮಕಾಲೀನರಾಗಿದ್ದ ಸೂಫಿವರ್ಯರೂ, ಆಧ್ಯಾತ್ಮಿಕ ಗುರುಗಳೂ ಆದ ಅಬುಲ್ ಅತ್ವಾಹಿಯ್ಯ ಹೇಳಿದರು; “ಝುಹುದಿನ( ಸರ್ವಸಂಗ ಪರಿತ್ಯಾಗ) ಕುರಿತು ಇಪ್ಪತ್ತು ಸಾವಿರಕ್ಕೂ ಹೆಚ್ಚು ಚರಣಗಳನ್ನು ನಾನು ಹಾಡಿದ್ದೇನೆ. ಅದೆಲ್ಲವೂ ಅಬೂ ನುವಾಸರ ಕೇವಲ ಮೂರೇ ಮೂರು ಸಾಲುಗಳಿಗೂ ಸಮನಾಗಲಾರದು. ಒಮ್ಮೆಯೂ ಸಮನಾಗಲಾರದು” ನುವಾಸರ ಆ ಸಾಲುಗಳು ಹೀಗಿದ್ದವು:
“ಓ ನುವಾಸ್,
ನೀನು ಅಲ್ಲಾಹನನ್ನು ಭಯಪಡು!
ನಿನ್ನ ದುಸ್ಥಿತಿಯಲ್ಲಿ ಮರುಕಪಡು!
ಕ್ಷಮಾಶೀಲನಾಗು,
ಬದುಕು ನಿನಗೆ ದುಃಖದ ಕೊಡುಗೆ ನೀಡಿದ್ದರೆ
ನಿನಗದು ಸಂತೋಷಪಡುವ ಎಷ್ಟೋ ಅನರ್ಘ್ಯ ನಿಮಿಷಗಳನ್ನು ಕೊಟ್ಟಿರಬಹುದು!
ಓ ಮಹಾಪಾಪಿ,
ನಿನ್ನ ಪಾಪವನ್ನು ನೆನೆದು ಹಿಂಜರಿಯದಿರು,
ಅಲ್ಲಾಹನ ಕ್ಷಮೆಯು ನಿನ್ನ ಪಾಪಕ್ಕಿಂತಲೂ ಅದೆಷ್ಟೋ ಮಿಗಿಲಾದದ್ದು”

ಆತ್ಮವಿಮರ್ಶೆಯಿಂದ ಕೂಡಿದ ಈ ಸಾಲುಗಳು ಅಲ್ಲಾಹನ ಕ್ಷಮೆಯಲ್ಲಿ ನಂಬಿಕೆಯಿರಿಸಿದ ಒಬ್ಬ ಭಕ್ತನಿಗಲ್ಲದೆ ಕಟ್ಟಲು ಸಾಧ್ಯವೇ! ನಿಜ, ಎಂಥಹಾ ಆರ್ದ್ರ ಸಾಲುಗಳು!

ಅಬುಲ್ ಅತ್ವಾಯಿಯವರು ನುವಾಸರಲ್ಲಿ
ಕೆಡುಕುಗಳಿಂದ ದೂರವಾಗಿ ಸಜ್ಜನಿಕೆಯ ಬಾಳು ನಡೆಸುವಂತೆ ಆಗ್ಗಾಗ್ಗೆ ವಿನಂತಿಸಿಕೊಳ್ಳುತ್ತಿದ್ದರು. ಒಮ್ಮೆ ನುವಾಸರು ತನ್ನ ಗೆಳೆಯನಲ್ಲಿ ಆ ಕುರಿತು ಹೀಗೆ ಹೇಳಿದರಂತೆ:
“ಓ ಅಬೂ ಅತ್ವಾಹಿಯ್ಯವರೇ;
ನಾನು ಈ ಸುಖಭೋಗದ ಬದುಕಿನಿಂದ ವಿರಮಿಸುತ್ತೇನೆಂದು ನೀವು ಭಾವಿಸುತ್ತೀರಲ್ಲವೇ!
ಆರಾಧನೆಯಲ್ಲಿ ಮುಳುಗಿ ನನ್ನ ಹೆಸರು ಮತ್ತು ಖ್ಯಾತಿಯನ್ನು ಕಳೆದುಕೊಳ್ಳುತ್ತೇನೆಂದು!”

ತನ್ನ ಮೇಲಿನ ಆರೋಪವು ಮತ್ತೂ ಗಂಭೀರವಾದಾಗ ಗೆಳೆಯನೊಡನೆ ಅಬು ನುವಾಸ್ ಹಾಡಿದರು: “ದೇಹವು ತನ್ನ ಆತ್ಮಸಾಕ್ಷಿಯ ಕರೆ ಇಲ್ಲದೆ ದುಷ್ಟ ಕಾರ್ಯಗಳಿಂದ ನಿವೃತ್ತಿಯಾಗುವುದಿಲ್ಲ.”

ಇದೇ ಅಬು ನುವಾಸರ ಬಗ್ಗೆ, ಮುಹಮ್ಮದ್ ಇಬ್ನ್ ನಾಫಿಯಾ(ರ) ಹೇಳುತ್ತಾರೆ: “ನುವಾಸರು ನನ್ನ ಆತ್ಮೀಯ ಗೆಳೆಯರಾಗಿದ್ದರು. ದುರಾದೃಷ್ಟವಶಾತ್ ನಮ್ಮ ನಡುವೆ ಸಣ್ಣ ಮನಸ್ತಾಪ ಉಂಟಾಯಿತು. ಈತನ್ಮದ್ಯೆ ಅವರ ಮರಣದ ವಾರ್ತೆ ಕೇಳಿ ದಿಗ್ಬ್ರಾಂತಗೊಂಡೆ. ಆ ದಿನವೆಲ್ಲಾ ನುವಾಸರ ನೆನಪೇ ಮರುಕಳಿಸತೊಡಗಿತ್ತು. ಹೀಗೆ ಅವರ ನೆನಪಲ್ಲಿರಬೇಕಾದರೆ ಸುಸ್ತಾದ ನನ್ನ ಕಣ್ಣುಗಳು ನಿದ್ದೆಯ ಮಂಪರಿಗೆಳೆಯತೊಡಗಿದವು.

ಅದೊಂದು ಪೂರ್ಣ ನಿದಿರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿ. ಅಬೂನುವಾಸರು ತಕ್ಷಣ ಪ್ರತ್ಯಕ್ಷಗೊಂಡರು. ನಾನು ಅವರ ಅಕ್ಕರೆಯ ಹೆಸರಿನಿಂದ ಕರೆದೆ. ‘ಓ‌ ಅಬೂನುವಾಸರೇ!’ ಅವರು ಹೇಳಿದರು; “ಇಲ್ಲಿ ಯಾವುದೇ ಅಕ್ಕರೆಯ ಹೆಸರುಗಳಿಗೆ ಮಾನ್ಯತೆಗಳಿಲ್ಲ”. ಆಗ ನಾನು ಅವರ ‘ಹಸನಿಬ್‌ನ್ ಹಾನಿಅ್’ ಎಂಬ ಮೂಲ ಹೆಸರಿನಿಂದ ಸಂಭೋಧಿಸಿದೆ. ಅವರು ಪ್ರತಿಕ್ರಿಯಿಸಲು ತೊಡಗಿದರು. ನಾನು ಕುತೂಹಲಭರಿತನಾಗಿ ಕೇಳಿದೆ. “ನಿಮ್ಮ ಪರಲೋಕದ ಪರಿಸ್ಥಿತಿ ಹೇಗಿದೆ, ಅಲ್ಲಿಯ ಸ್ಥಿತಿಗತಿಗಳೇನು”.
“ಮರಣದ ಕೆಲವು ದಿನಗಳ ಹಿಂದೆ‌ ನಾನು ರೋಗಶಯ್ಯೆಯಲ್ಲಿದ್ದಾಗ ಹಾಡಿದ ಕವಿತೆಯ ಕಾರಣದಿಂದ ಅಲ್ಲಾಹನು ನನ್ನೆಲ್ಲಾ ಪಾಪಗಳನ್ನು ಮನ್ನಿಸಿದನು. ಆ ಕವಿತೆಯು ನಾನು ಮಲಗುತ್ತಿದ್ದ ಹಾಸಿಗೆಯಡಿಯಲ್ಲಿದೆ.” ನಾನು ಆಶ್ಚರ್ಯಗೊಂಡು ತಕ್ಷಣ ಎಚ್ಚೆತ್ತು ಅವರ ಮನೆಕಡೆಗೆ ಹೆಜ್ಜೆಹಾಕಿದೆ. ನನ್ನನ್ನು ಕಂಡು ಮನೆಯವರೆಲ್ಲರೂ ಕಣ್ಣೀರಿಡತೊಡಗಿದರು. ಅವರು ತಮ್ಮ ಆತ್ಮೀಯನ ವಿಯೋಗದ‌ ವೇದನೆಯಿಂದ ತೊಯ್ದು ಹೋಗಿದ್ದರು. ನಾನು ಅವರ ಮನಸ್ಸು ಸ್ವಲ್ಪ ತಹಬದಿಗೆ ಬಂದ ಬಳಿಕ ವಿಚಾರಿಸಿದೆ. “ನುವಾಸರು ಮರಣದ ದಿನಗಳಲ್ಲಿ ಯಾವುದಾದರೂ ಕವಿತೆಗಳನ್ನು ಹಾಡುತ್ತಿರುವುದನ್ನು ಗಮನಿಸಿರುವಿರಾ?”
“ಹಾಗೆ ಪ್ರತ್ಯೇಕವಾಗಿ ನಮಗೆ ಕಾಣಲು ಸಾಧ್ಯವಾಗಿರಲಿಲ್ಲ. ಆದರೂ ಮರಣದ ಹಾಸಿಗೆಯಲ್ಲಿರಲು ನನಗೊಂದು ಕಾಗದ ಮತ್ತು ಲೇಖನಿ ಬೇಕೆಂದು ಹೇಳಿ ಅದರಲ್ಲಿ ಏನನ್ನೋ ಗೀಚುತ್ತಿದ್ದರು.”
“ಅವರ ಕೋಣೆಗೆ ಹೋಗಲು ನನಗೆ ಅನುಮತಿ ನೀಡಬಹುದೇ”? ನಾನು ಕೇಳಿದೆ. “ಧಾರಾಳವಾಗಿ ಹೋಗಬಹುದು” ಅವರೆಂದರು. ನಿಧಾನ ಹೆಜ್ಜೆಗಳನ್ನಿಡುತ್ತಾ ಉಸಿರು ಬಿಗಿ ಹಿಡಿದುಕೊಂಡು ಆ ಕೋಣೆಯ ಬಾಗಿಲಿನ ಬಳಿಗೆ ನಡೆದೆ. ಕೋಣೆಯಲ್ಲಿ ನುವಾಸರ ಉಡುಪುಗಳಿದ್ದವು. ಅದು ಇನ್ನೂ ಅವರದೇ ಕೋಣೆಯಂತೆ ನಿಶ್ಯಬ್ದವಾಗಿ ಇದ್ದಂತೆ ಕಂಡಿತು. ನನಗೆ ತಟ್ಟನೆ ಮಿತ್ರನ ಅನುಪಸ್ಥಿತಿ ಕಾಡತೊಡಗಿತು. ನಾನು ಬಂದ ಉದ್ದೇಶ ನೆನಪು ಮಾಡುತ್ತಾ ಅವರ ಹಾಸಿಗೆಯ ಹೊದಿಕೆಯೊಂದನ್ನು ಎತ್ತಿದೆ, ಅಲ್ಲೇನೂ ಇರಲಿಲ್ಲ. ಮತ್ತೊಂದು ಹೊದಿಕೆಯನ್ನು ಸರಿಸಿ ನೋಡಿದೆ, ‘ಮಡಚಿಟ್ಟ ಒಂದು ಕಾಗದದ ತುಂಡು’ ಹಾಸಿಗೆಯ ಭಾರಕ್ಕೆ ಮುದುಡಿಕೊಂಡು ಕುಳಿತಿತ್ತು. ಅದರಲ್ಲಿದ್ದ ಸಾಲುಗಳಿಗೆ ಕಣ್ಣಾಡಿಸಿದೆ. ಅಲ್ಲಿ ಈ ರೀತಿಯಾಗಿ ಬರೆಯಲಾಗಿತ್ತು:
“ಓ ನನ್ನ ಪ್ರಭೂ!
ನನ್ನ ಪಾಪದ ಮೂಟೆ ಭಾರೀ ದೊಡ್ಡದಾಗಿದ್ದರೂ,
ನಿನ್ನ ಕ್ಷಮೆ ಮತ್ತು ಮಾಫಿ ಅದಕ್ಕಿಂತಲೂ ಭಾರ ಹೆಚ್ಚಿರುವುದೆಂದು ನಾನು ನಂಬಿರುವೆ;
ಸದ್ಗುಣಶೀಲರಿಗೆ ಮಾತ್ರ ನಿನ್ನಲ್ಲಿ ಪ್ರಾರ್ಥಿಸಲು ಅರ್ಹತೆಯಿರುವುದೆಂದರೆ;
ಪಾಪಿಗಳು ಯಾರಲ್ಲಿ ಪ್ರಾರ್ಥಿಸಬೇಕು!
ಯಾರನ್ನು ಆಶ್ರಯಿಸಬೇಕು!
ಓ ನನ್ನ ಖುದಾ!
ನಿನ್ನ ಆಜ್ಞೆಯಂತೆ ಇದೋ
ನಿನ್ನಲ್ಲಿ ಬೇಡುತ್ತಿದ್ದೇನೆ.
ನನ್ನ ಬೇಡಿಕೆಯನ್ನು ತಿರಸ್ಕರಿಸುವುದಾದರೆ
ನನಗೆ ಕರುಣೆ ತೋರಲು ಯಾರಿದ್ದಾರೆ?
ಇದೋ ಪ್ರಭೂ
ಈ ಗುಲಾಮನ ಕೈಯಲ್ಲಿ ನಿನಗೆ ಸಮರ್ಪಿಸತಕ್ಕ ಏನೂ ಇಲ್ಲ,
ನಿನ್ನ ಕುರಿತು ಬದುಕಿನುದ್ದಕ್ಕೂ ನಾನು ಕಟ್ಟಿಕೊಂಡ
ನಿರೀಕ್ಷೆ ಮತ್ತು ನಿನ್ನ ಕ್ಷಮಾಗುಣವಲ್ಲದೆ ಬೇರೇನೂ ಇಲ್ಲ!
ಏನೆಂದರೂ ನಾನೋರ್ವ ಮುಸ್ಲಿಮನಲ್ಲವೆ”

ಇದನ್ನು ಓದುವಾಗಲೆಲ್ಲಾ ನನಗೆ ನಮ್ಮ ವೈಕಂ ಬಶೀರರು ನೆನಪಾಗುತ್ತಾರೆ. ನಮ್ಮ ಬಶೀರರೂ ಒಬ್ಬ ಮುಸ್ಲಿಮರಾಗಿದ್ದರು. ನಾನೊಬ್ಬ ಮುಸ್ಲಿಂ ಎಂದು ಯಾರ ಮುಂದೆಯೂ ಹೇಳಲು ಹೆಮ್ಮೆಪಡುತ್ತಿದ್ದ ಮುಸ್ಲಿಂ. ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮದ್ಯಪಾನವನ್ನು ತ್ಯಜಿಸಿದ ಮುಸ್ಲಿಂ. ತನ್ನ ಗುರುಗಳಾದ ಬಶೀರರ ಬಗ್ಗೆ ಪ್ರಿಯ ಶಿಷ್ಯರಾದ ಎಂಟಿ ವಾಸುದೇವನ್ ಹೇಳುವುದನ್ನು ನೋಡಿ.

“ವರ್ಷಗಳು ಕಳೆಯುತ್ತಿದ್ದಂತೆ ಬಶೀರರು ಹೆಚ್ಚು ಧಾರ್ಮಿಕರಾಗುತ್ತಾ ಹೋದರು. ಹಲವರು ಆಶ್ಚರ್ಯಗೊಂಡರು.
‘ಎನ್ಡುಪ್ಪಾಪ'(ನನ್ನಜ್ಜ) ದಂತಹಾ ಬರಹಗಳ ಒಡೆಯ ಧರ್ಮನಿಷ್ಠನಾಗುವುದೇ!
ಅವರು ಸಂದರ್ಶನಗಳಲ್ಲಿ ‘ನಾನೊಬ್ಬ ಮುಸಲ್ಮಾನ’ ಎಂದು ಉತ್ಸಾಹದಿಂದ ಹೇಳುತ್ತಿದ್ದರು. ಅವರ ಜಿಪುಣತನದ ಕುರಿತು ಹಲವೊಮ್ಮೆ ನಾನು ಗೇಲಿಮಾಡಿ ನಗುತ್ತಿದ್ದೆನಾದರೂ ಯಾರ ಅರಿವಿಗೂ ಬಾರದಂತೆ ಹಲವರ ಕಷ್ಟಗಳಿಗೆ ಹೆಗಲಾಗುತ್ತಿದ್ದರು. ಅವರಿಂದ ಸಹಾಯ ಪಡೆದುಕೊಂಡ ಎಷ್ಟೋ ಜನರು ನನ್ನ ಬಳಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡು ನಿರಾಳಗಾಗಿ ಹೋಗುತ್ತಿದ್ದರು.”

ಬಶೀರರ ಕುರಿತು ಪೊನ್‌ಕುನ್ನುಂ ವರ್ಕಿ ಎಂಬ ಆತ್ಮೀಯ ಗೆಳೆಯ ಹೇಳುವುದನ್ನು ಕೇಳಿ. “ನನಗೆ ಇಬ್ಬರು ಬಶೀರರನ್ನು ನೆನಪಿದೆ. ಒಂದು ಕುಡಿಯುತ್ತಿದ್ದ ಬಶೀರ್ ಮತ್ತು ಕುಡಿತ ನಿಲ್ಲಿಸಿದ್ದ ಬಶೀರ್. ಎರಡನೇ ಬಶೀರ್ ಆತ್ಮವಿಮರ್ಶೆಗೆ ತನ್ನನ್ನು ಒಡ್ಡಿಕೊಂಡ ಬಶೀರ್. ಅವರು ಕೊನೆಯವರೆಗೂ ಎರಡನೇ ಬಶೀರರಾಗಿಯೇ ಇದ್ದರು. ನಮಾಝನ್ನು ಗೌರವಿಸುವ ಆದರೆ ಸರಿಯಾಗಿ ನಮಾಝ್ ಮಾಡದ ಬಶೀರರಾಗಿದ್ದರು” ಎಂದು ವರ್ಕಿಯವರು ಹೇಳುವಾಗ, ಒಂದು ಹೆಜ್ಜೆ ಮುಂದಿಟ್ಟು ಓ‌.ಎನ್.ವಿ ಬಶೀರರನ್ನು ತೆರೆದಿಟ್ಟದ್ದು ಹೀಗೆ:
“ನಾವೆಲ್ಲರೂ ನಿದ್ರೆಗೆ ಜಾರಿದ ಬಳಿಕ ಹಜಾರದ ಮಧ್ಯದಲ್ಲಿ (ತ್ರಿಶೂರ್ ಸಾಹಿತ್ಯ ಅಕಾಡೆಮಿ ಅತಿಥಿ ಗೃಹದ) ತನ್ನ
ಶಲ್ಯವನ್ನು ಹಾಸಿ ಬಶೀರರು ನಮಾಝಿನಲ್ಲಿ ಮಗ್ನರಾಗುತ್ತಿದ್ದರು. ಪರಮ ದಯಾಳುವಾದ ಸೃಷ್ಟಿಕರ್ತನ ಮುಂದೆ ತನ್ನ ಹಣೆಯನ್ನಿಟ್ಟು ಸಾಷ್ಟಾಂಗವೆರಗುತ್ತಿದ್ದರು. ಅವರ ಪ್ರಾರ್ಥನೆಗೆ ಯಾವುದೇ ರೀತಿಯ ಭಂಗವಾಗದಂತೆ ನಾವು ಅದನ್ನೆಲ್ಲಾ ನಸುಕಿನಲ್ಲಿ ಇಣುಕಿ ನೋಡುತ್ತಿದ್ದೆವು.”

ಈ ಎರಡನೇ ಬಶೀರರಾಗಿದ್ದಾರೆ ನೈಜವಾದ ಬಶೀರ್. ಎರಡು ಬಶೀರುಗಳು ಸೇರಿದ ಅವರೇ ಹೇಳಿದಹಾಗೆ ‘ಇಮ್ಮಿನಿ ಬೆಲ್ಯ’ ಬಶೀರ್.(ಎರಡು ಬಶೀರ್ ಸೇರಿದ ಒಂದಿಷ್ಟು ದೊಡ್ಡ ಬಶೀರ್). ಅಬುನುವಾಸರ ಅಂತ್ಯದ ಸಾಲುಗಳ ಹಾಗೆಯೇ ತನ್ನ ಕೊನೆಯ ಕಾಲದಲ್ಲಿ “ಅಂದಿಮ ಕಾಹಳಂ” (ಅಂತಿಮ ತುತ್ತೂರಿ) ಬರೆದು ತನ್ನ ಎಲ್ಲಾ ಕೃತಿಗಳಲ್ಲಿಯೂ ಹೇಳುವಂತೆ ವಿದಾಯ ಹೇಳಿ ಹೊರಟು ಹೋದ ಬಶೀರ್. ಆ ಬಶೀರರ ಪಾಪ ಮೋಕ್ಷಕ್ಕಾಗಿ, ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸೋಣ.

(ವೈಕ್ಕಂ ಮೊಹಮ್ಮದ್‌ ಬಶೀರರ ಕುರಿತು ಕೇರಳದ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಾದ ಮೌಲಾನಾ ನಜೀಬ್ ಉಸ್ತಾದರ ಬರಹ.ಇದು ಬುಲ್‌ಬುಲ್ ಮ್ಯಾಗಜೀನಿನಲ್ಲಿ 1994 ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

ಭಾವಾನುವಾದ : ಝುಬೈರ್ ಹಿಮಮಿ ಪರಪ್ಪು

ಫಾತಿಮಾ ಅಲ್-ಫಿಹ್ರಿಯಾ: ವೈಜ್ಞಾನಿಕ ಲೋಕದ ಮೊರಾಕೋ ಮಹಿಳೆ

ಫಾತಿಮಾ ಬಿಂತ್ ಮುಹಮ್ಮದ್ ಅಲ್-ಫಿಹ್ರಿಯಾ 800 ರ ದಶಕದ ಆರಂಭದಲ್ಲಿ ಟುನೀಶಿಯಾದಲ್ಲಿ ಜನಿಸಿದಳು. ಅವಳು ಫಾತಿಮಾ ಅಲ್-ಫಿಹ್ರಿ ಎಂಬ ಹೆಸರಿನಲ್ಲಿ ಜಗಜ್ಜಾಹೀರಾಗಿದ್ದಾಳೆ. ಕ್ರಿ.ಶ 859 ರಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಅಲ್ ಖರಾವಿಯೀನ್ ಮಸೀದಿ, ಗ್ರಂಥಾಲಯ ಮತ್ತು ವಿಶ್ವವಿದ್ಯಾಲಯವನ್ನು ಫೆಸ್ ನಗರದಲ್ಲಿ ಸ್ಥಾಪಿಸಿದ ಕೀರ್ತಿಗೆ ಅಲ್-ಫಿಹ್ರಿ ಪಾತ್ರಳಾಗಿದ್ದಾಳೆ. ಅವಳ ಹುಟ್ಟೂರಾದ ಅಲ್ ಖೈರವಾನನ್ನೇ ಈ ಅದ್ಭುತ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲಾಗಿದೆ.
ಇತಿಹಾಸದಲ್ಲಿ, ವಿಶೇಷವಾಗಿ ಒಂಬತ್ತನೇ ಶತಮಾನದ ಸಾಮಾಜಿಕ ಜೀವನ ಶೈಲಿ ಮತ್ತು ಅಂದು ಮಹಿಳೆಯರಿಗಿದ್ದ ಸ್ಥಾನಮಾನವನ್ನು ಸ್ವಾಧೀನಪಡಿಸಿದ ಹಾಗೂ ಪದವಿ ಪ್ರದಾನ ಮಾಡಿ ಪ್ರಸಿದ್ಧಿ ಪಡೆದ ವಿಶ್ವದ ಮೊದಲ ವಿಶ್ವವಿದ್ಯಾಲಯಗಳಲ್ಲೊಂದು ‘ಅಲ್-ಖರಾವಿಯೀನ್’.

ಧರ್ಮ ಅಥವಾ ವಯಸ್ಸಿನ ಪರಿಮಿತಿಯಿಲ್ಲದೆ ಈ ವಿಶ್ವವಿದ್ಯಾನಿಲಯವು ಎಲ್ಲರಿಗೂ ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ ಎಂಬ ಅಂಶವು ಉತ್ತರ ಆಫ್ರಿಕಾದ ಮುಸ್ಲಿಂ ಮಹಿಳಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಂದಿದ್ದ ನವೀನ ದೃಷ್ಟಿಕೋನಗಳು ಮತ್ತು ಅಸಾಧಾರಣ ಬದ್ಧತೆಗೆ ಸಾಕ್ಷಿಯಾಗಿದೆ. ಅತ್ಯಂತ ಹಳೆಯದಾದ ಮತ್ತು ಯಶಸ್ಸಿನೊಂದಿಗೆ ಈಗಲೂ ಕಾರ್ಯಾಚರಿಸುತ್ತಿರುವ ಸಂಸ್ಥೆ ಎಂಬ ಗರಿಮೆ ಈ ವಿಶ್ವವಿದ್ಯಾಲಯಕ್ಕಿದೆ. ಪ್ರಪಂಚದಾದ್ಯಂತ ಹೆಸರು ಗಳಿಸಿದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಬೊಲೋಗ್ನ ಯುನಿವರ್ಸಿಟಿ (1088), ಆಕ್ಸ್ ಫರ್ಡ್ ಯುನಿವರ್ಸಿಟಿ (1096), ಸಲಮಾನ್ಕ ಯುನಿವರ್ಸಿಟಿ (1243), ಹಾರ್ವರ್ಡ್ ಯುನಿವರ್ಸಿಟಿ (1636) ಮುಂತಾದ ವಿವಿಗಳ ಸ್ಥಾಪನೆಗೆ ಈ ವಿಶ್ವವಿದ್ಯಾಲಯವು ಪ್ರಚೋದನೆಯಾಯಿತು. ಇಂದು ಉನ್ನತ ಶಿಕ್ಷಣದಲ್ಲಿ ಇರುವ ನಿಯಮಗಳು ಮತ್ತು ಆಚರಣೆಗಳು ಅಲ್ ಖರಾವಿಯೀನ್ ವಿಶ್ವವಿದ್ಯಾಲಯವು ಈ ಹಿಂದೆ ನಿರ್ವಹಿಸಿರುವ ಕೆಲವು ಆಚರಣೆಗಳೊಂದಿಗೆ ಹೆಣೆದುಕೊಂಡಿದೆ. ಇದಕ್ಕಿಂತ ಹೆಚ್ಚಾಗಿ, ಅಲ್-ಖರವಿಯೀನ್ ವಿಶ್ವವಿದ್ಯಾಲಯವು ಈಗ ವಿಶ್ವವಿದ್ಯಾಲಯಗಳ ಪದವಿ ಸಮಾರಂಭಗಳಲ್ಲಿ ಧರಿಸುವ ಸಮವಸ್ತ್ರ ಮತ್ತು ಸಮಾರಂಭಗಳ ಪಿತಾಮಹ ಎಂದೇ ಕರೆಯಿಸಿಕೊಂಡಿದೆ.

ಕ್ರಿ.ಶ 9 ನೇ ಶತಮಾನದಷ್ಟು ಹಳೆಯದಾದ ಕೂಫಿ ಲಿಪಿಯಲ್ಲಿ ಬರೆದ ಪವಿತ್ರ ಕುರ್‌ಆನ್‌ನ ಪ್ರತಿ ಮತ್ತು ವಿವಿಧ ವಿಷಯಗಳ ಕುರಿತಿರುವ ಸಾವಿರಾರು ಹಸ್ತಪ್ರತಿಗಳು. ವಿಶ್ವದ ಅತ್ಯಂತ ಹಳೆಯ ಗ್ರಂಥಾಲಯವಾದ ಅಲ್ ಖರಾವಿನ್ ನಲ್ಲಿ ಸಂರಕ್ಷಿಸಿಡಲಾಗಿದೆ. ಗ್ರಂಥಾಲಯವು ಹನ್ನೆರಡನೆಯ ಸುವಾರ್ತೆಯ ಅರೇಬಿಕ್ ನಕಲನ್ನು ಸಹ ಹೊಂದಿದೆ.

ಅಲ್-ಖರವಿಯೀನ್ ವಿಶ್ವವಿದ್ಯಾಲಯದ ಸ್ಥಾಪನೆಯ ಶತಮಾನಗಳಲ್ಲಿ ಶಿಕ್ಷಣವು ಪ್ರಪಂಚದ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಅದೂ ಅಲ್ಲದೆ ಅಸಂಖ್ಯಾತ ವಿಶ್ವಪ್ರಸಿದ್ಧ ವ್ಯಕ್ತಿಗಳನ್ನು ರೂಪಿಸಿದೆ. ಅನೇಕ ಪ್ರಮುಖ ಮುಸ್ಲಿಂ ವಿದ್ವಾಂಸರಲ್ಲದೆ, ವಿಶ್ವವಿದ್ಯಾಲಯವು ಯಹೂದಿ-ಕ್ರಿಶ್ಚಿಯನ್ ವಿದ್ವಾಂಸರನ್ನು ಸಹ ಆಕರ್ಷಿಸಿತು.
ಅಂದಲೂಸಿಯಾ(ಸ್ಪೇನ್)ದ ರಾಜತಾಂತ್ರಿಕ ಮತ್ತು ಭೂಗೋಳಶಾಸ್ತ್ರಜ್ಞ ಹಸನ್ ಅಲ್-ವಸ್ಸನ್ (ಲಿಯೋ ಆಫ್ರಿಕಾನಸ್), ಯಹೂದಿ ತತ್ವಚಿಂತಕ ಮೋಸ್ಸಸ್ ಬೆನ್ ಮೈಮೂನ್ (ಮೈಮೋನಿಡೆಸ್), ಇಸ್ಲಾಮಿಕ್ ತತ್ವಚಿಂತಕ ಇಬ್ನು ರುಶ್ದ್ (ಅವಿರೋಸ್), ಇತಿಹಾಸ ತಜ್ಞ ಹಾಗೂ ಚಿಂತಕರಾದ ಇಬ್ನು ಖಲ್ದೂನ್, ಸೂಫಿ ಕವಿ ಹಾಗೂ ತತ್ವಚಿಂತಕ ಇಬ್ನು ಹಸ್ಮ್ ಮುಂತಾದ ಪ್ರಖ್ಯಾತ ವ್ಯಕ್ತಿಗಳು ಈ ವಿವಿಯಲ್ಲಿ ವಿದ್ಯಾರ್ಜಿಸಿದ್ದಾರೆ.
ವೈದ್ಯಕೀಯ ವಿದ್ವಾಂಸ ಇಬ್ನ್ ಬೇಜಾ, ವ್ಯಾಕರಣ ವಿದ್ವಾಂಸ ಇಬ್ನ್ ಬೆನ್ ಅಜ್ರ್, ಡಚ್ ಓರಿಯಂಟಲಿಸ್ಟ್ ಮತ್ತು ಗಣಿತಜ್ಞ ಜಾಕೋಬ್ ವ್ಯಾನ್ ಗೂಲ್, ಶ್ರೇಷ್ಠ ಸೂಫಿಗಳಲ್ಲಿ ಪ್ರಧಾನಿಗಳಾದ ಮುಹಮ್ಮದ್ ಅಲ್-ಜಝೂಲಿ, ಒರಿಲಾಕ್‌ನ ಗೆರ್ಬರ್ಟ್ (ಕ್ರಿ.ಶ. 999 ರಿಂದ 1003ರ ವರೆಗೆ ಪೋಪ್ ಹುದ್ದೆಯಲ್ಲಿದ್ದವರು ಹಾಗೂ ಇಂದಿನವರೆಗೂ ನಾವು ಉಪಯೋಗಿಸುತ್ತಿರುವ ಅರೆಬಿಕ್ ನ್ಯೂಮೆರಲ್ಸನ್ನು ಪರಿಚಯಿಸಿದ ವ್ಯಕ್ತಿ) ಮುಂತಾದವರು ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆಂದು ನಂಬಲಾಗಿದೆ.

ಉಚಿತ ಶಿಕ್ಷಣ, ಪಠ್ಯಕ್ರಮದ ಗುಣಮಟ್ಟ ಮತ್ತು ವಿವಿಧ ತರಬೇತಿ ಕೋರ್ಸ್‌ಗಳು ಅಲ್ ಖರಾವಿಯ್ಯೀನ್ ವಿಶ್ವವಿದ್ಯಾಲಯವನ್ನು ಬುದ್ಧಿಜೀವಿಗಳ, ವಿದ್ವಾಂಸರ ಮತ್ತು ದಾರ್ಶನಿಕರ ತಾಣವನ್ನಾಗಿ ಮಾಡಿವೆ. ಅಲ್-ಖರವಿಯ್ಯೀನ್ ವಿಶ್ವವಿದ್ಯಾಲಯವು ಭಾಷೆ, ಸಾಹಿತ್ಯ, ತತ್ವಶಾಸ್ತ್ರ, ಖಗೋಳವಿಜ್ಞಾನ, ಔಷಧ, ಇಸ್ಲಾಮಿಕ್ ಕಾನೂನು ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರ ಕ್ಷೇತ್ರಗಳಲ್ಲಿ ವ್ಯಾಪಕವಾದ ವೈಜ್ಞಾನಿಕ ಮತ್ತು ತರ್ಕಬದ್ಧ ಚರ್ಚೆಗಳಿಗೆ ಕೊಡುಗೆ ನೀಡಿದೆ ಮತ್ತು ಪೋಷಿಸಿದೆ.
ಮುಖ್ಯವಾಗಿ ಮಾಲಿಕಿ ಚಿಂತನೆಯ ಕರ್ಮಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಐತಿಹಾಸಿಕವಾಗಿ ಮಹತ್ವದ ಚರ್ಚೆಗಳ ಜೊತೆಗೆ, ಅಲ್-ಖರವಿಯ್ಯೀನ್ ವಿಶ್ವವಿದ್ಯಾಲಯದ ವಿದ್ವಾಂಸರು ಅನೇಕ ರಾಜಕೀಯ ಚರ್ಚೆಗಳಲ್ಲಿ ಮುಂಚೂಣಿಯಲ್ಲಿದ್ದರು. ಮಧ್ಯಕಾಲೀನ ಯುರೋಪಿಯನ್ ಸಮಾಜಗಳ ಕರಾಳ ಯುಗದಲ್ಲಿ, ಧರ್ಮನಿಷ್ಠ ಮತ್ತು ದೂರದೃಷ್ಟಿಯ ಒಂಬತ್ತನೇ ಶತಮಾನದ ಮುಸ್ಲಿಂ ಮಹಿಳೆ ಬೌದ್ಧಿಕ ಪ್ರಗತಿ ಮತ್ತು ಜ್ಞಾನೋದಯಕ್ಕಾಗಿ ಅಪರೂಪದ ಜಾಗವನ್ನು ಸೃಷ್ಟಿ ಮಾಡಿದ್ದು ಆ ಕಾಲವನ್ನೇ ಸವಾಲು ಮಾಡುವ ಮೂಲಕವಾಗಿತ್ತು.

ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಫಾತಿಮಾ ಅಲ್-ಫಿಹ್ರಿ ಮಾಡಿದ ಸೇವೆಗೆ ಇಡೀ ಜಗತ್ತೇ ಕೃತಜ್ಞತೆಯನ್ನು ಸಲ್ಲಿಸುತ್ತಿದೆ.

ಛಾಪು ಮೂಡಿಸಿದ ಖೈರವಾನಿ ಮಹಿಳೆ

ಖೈರವಾನ್ (ಇಂದಿನ ಟುನೀಶಿಯಾ, ಖೈರುನ್) ನ ಶ್ರೀಮಂತ ವ್ಯಾಪಾರಿ ಮುಹಮ್ಮದ್ ಅಲ್-ಫಿಹ್ರಿಯ ಇಬ್ಬರು ಮಕ್ಕಳಲ್ಲಿ ಫಾತಿಮಾ ಅಲ್-ಫಿಹ್ರಿ ಒಬ್ಬಳು. 7ನೇ ಶತಮಾನದಲ್ಲೇ ಪ್ರಸಿದ್ಧಿಯಾದ ಅದರ ವಾಸ್ತುಶಿಲ್ಪವು ಇಂದಿಗೂ ಅತ್ಯಾಕರ್ಷಣೀಯ ಆಗಿರುವುದರಿಂದಲೇ ಖೈರವಾನ್ ನಗರವು ಯುನೆಸ್ಕೋ ವಿಶ್ವ ಪರಂಪರೆಯ (World heritage) ತಾಣವಾಗಿದೆ.
670 ರಲ್ಲಿ ಉಮಾಯತ್ ರಾಜವಂಶವು ಸ್ಥಾಪಿಸಿದ ಖೈರಾವಾನ್ ನಗರವು ಇಸ್ಲಾಮಿಕ್ ಜ್ಞಾನ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪರಿಷ್ಕಾರದ ಉತ್ತುಂಗದಲ್ಲಿತ್ತು. ಆಧ್ಯಾತ್ಮಿಕತೆ ಮತ್ತು ಜ್ಞಾನದ ಈ ಇಹಲೋಕದ ಸ್ವರ್ಗವು ಅನೇಕ ವಿದ್ವಾಂಸರ ಗಮನ ಸೆಳೆಯಿತು. ವಾಯುವ್ಯ ಆಫ್ರಿಕಾದಲ್ಲಿ ಅಲ್ ಘರ್ಬ್ ಅನ್ನು ವಶಪಡಿಸಿಕೊಂಡ ಸಮಯದಲ್ಲಿ ನಗರವು ಮಿಲಿಟರಿ ಶಿಬಿರವಾಗಿ ಕಾರ್ಯ ನಿರ್ವಹಿಸಬೇಕಾಯಿತು.
ಅಗ್ಲಾಬಿಡ್ ರಾಜವಂಶವು 8 ಮತ್ತು 9 ನೇ ಶತಮಾನಗಳಲ್ಲಿ ಅಬ್ಬಾಸಿಡ್ ರಾಜವಂಶದಡಿಯಲ್ಲಿ ಖೈರಾವಾನ್ ಅನ್ನು ಆಳಿತು. ಅವರು ಸಿಸಿಲಿಯನ್ನು ವಶಪಡಿಸಿಕೊಂಡರು ಮತ್ತು ಆಫ್ರಿಕಾವನ್ನು ಯುದ್ಧಮುಕ್ತ ವಲಯವನ್ನಾಗಿ ಮಾಡಿದರು.
ಗ್ಲೋಬ್ ಅಗ್ಲಾಬಿಡ್ ಅರಮನೆಗಳು ಬಹಳ ಪ್ರಸಿದ್ಧವಾಗಿವೆ. ಅಲ್-ಫಿಹ್ರಿ ಕುಟುಂಬವು ಹುಟ್ಟಿ ಬೆಳೆದ ತಾಯ್ನಾಡನ್ನು ಬಿಟ್ಟು, ಶಿಕ್ಷಣದಲ್ಲಿ ಹಿಂದುಳಿದಿದ್ದ
ಫಾಸಿಲಿನ ಜ್ಞಾನ ಸ್ವರ್ಗವನ್ನು ನಿರ್ಮಿಸಲು ಪಯಣ ಹೊರಟಿತು.

ವಾಸ್ತವದಲ್ಲಿ, ಫಾತಿಮಾ ಅಲ್-ಫಿಹ್ರಿ ಬಗ್ಗೆ ಅಷ್ಟೇನೂ ಮಾಹಿತಿ ಲಭ್ಯವಿಲ್ಲ. ಮುಸ್ಲಿಂ ರಾಜವಂಶಸ್ಥರಾದ ಇದ್ರೀಸಿನ ಆಸ್ಥಾನದಲ್ಲಿ ಫೆಸ್ ನ ಮೊದಲ ಪ್ರಜೆಗಳೆಡೆ ಖರಾವಿಯಾ (ಖೈರಾನ್‌ನ ವಂಶಸ್ಥರು) ಸಮುದಾಯಕ್ಕೆ ಸೇರಿದವರು. ಒಂಬತ್ತನೇ ಶತಮಾನದ ಆರಂಭದಲ್ಲಿ ಫಾತಿಮಾ ಮತ್ತು ಅವಳ ಕುಟುಂಬ ಖೈರವಾನ್‌ನಿಂದ ಫೆಸ್ ಗೆ ವಲಸೆ ಬಂದಿದ್ದರು.
ಆಗ ಫೆಸ್ ಪಟ್ಟಣವು ಧರ್ಮನಿಷ್ಠ ಮತ್ತು ಎಲ್ಲರಿಂದ ಗೌರವಕ್ಕೆ ಪಾತ್ರರಾಗಿದ್ದ ಇದ್ರಿಸ್ II ರ ಸಂಪೂರ್ಣ ಆಡಳಿತದಲ್ಲಿತ್ತು. ಆ ಸಮಯದಲ್ಲಿ ಫೆಸ್ ಇಡೀ ಪಶ್ಚಿಮದಲ್ಲೇ ಗಮನ ಸೆಳೆಯುವ ಕೇಂದ್ರವಾಗಿತ್ತು. ಸಂತೋಷ ಮತ್ತು ಸೌಭಾಗ್ಯದಿಂದ ತುಂಬಿದ ನಗರವಾಗಿತ್ತು. ವಿಶ್ವದ ಅತ್ಯಂತ ಅದ್ಭುತವಾದ ಮುಸ್ಲಿಂ ನಗರಗಳಲ್ಲಿ ಸ್ಥಾನ ಗಿಟ್ಟಿಸಿದ ಬಳಿಕ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ಧರ್ಮನಿಷ್ಠೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಸಮೃದ್ಧ ಮಿಶ್ರಣಕ್ಕಾಗಿ ಫೆಸ್ ಪ್ರಶಂಸಿಸಲ್ಪಟ್ಟಿತು. ಫಾತಿಮಾ ಅವರ ಕುಟುಂಬವು ಫೆಸ್ ನದಿಯ ಎಡದಂಡೆಯಲ್ಲಿರುವ ಈ ಪಟ್ಟಣದಲ್ಲಿ ವಾಸಿಸುತ್ತಿತ್ತು. ಅಂತಿಮವಾಗಿ, ಫಾತಿಮಾ ಫೆಸ್‌ನಿಂದಲೇ ಮದುವೆಯಾದಳು.

ಅಲ್ ಕರಾವಿನ್: ಫೆಸ್ ನಗರದ ಹೃದಯ

ಇಂದು, ಫೆಸ್ ವಿಶ್ವದ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಫೆಸ್ ನ ಹಳೆಯ ಪಟ್ಟಣವಾದ ‘ಫೆಸ್ ಅಲ್ ಬಾಲಿ’ ಅತ್ಯಾಕರ್ಷಕವಾಗಿದೆ.
ಹಳೆಯ ಪಟ್ಟಣದಲ್ಲಿರುವ ಚಕ್ರವ್ಯೂಹವನ್ನು ಹೋಲುವ
ಕ್ರಿಸ್ ಕ್ರಾಸ್‌ನೊಂದಿಗೆ ಇರುವ ಅನೇಕ ಕಿರಿದಾದ ಬೀದಿಗಳು ಅದ್ಬುತವಾಗಿದೆ ಇದು. ವರ್ಣರಂಜಿತ ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾದ ಗೇಟ್‌ಗಳು ಮತ್ತು ಪ್ರಸಿದ್ಧ ‘ಬ್ಲೂ ಗೇಟ್’, ಬೀದಿಗಳ ಮೂಲಕ ಪ್ರಾಚೀನ ಸಾರಿಗೆ ಸಂಪರ್ಕ ಯೋಜನೆಗಳು ಮತ್ತು ಸ್ಥಳೀಯ ವಾಸ್ತುಶಿಲ್ಪದ ಜಾಣ್ಮೆ ಸೇರಿದಂತೆ 14 ಕೋಟೆಯ ಗೇಟ್‌ಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಅಲ್ ಖರಾವಿಯ್ಯೀನ್ ಇನ್ನೂ ಫೆಸ್‌ನ ಹೃದಯ ಬಡಿತವಾಗಿದೆ.

ಹಿರಿಯರ ಪ್ರಯತ್ನ ಮತ್ತು ಶ್ರಮದ ಫಲವಾಗಿ ಅಲ್ ಫಿಹ್ರಿ ಕುಟುಂಬವು ಸಂಪತ್ತಿನಿಂದ ಕಂಗೊಳಿಸುತ್ತಿತ್ತು. ನಂತರ ಫಾತಿಮಾಳ ತಂದೆ ಮುಹಮ್ಮದ್ ಬಿನ್ ಅಬ್ದುಲ್ಲಾ ವಿಶಾಲವಾಗಿ ಹರಡಿದ್ದ ವ್ಯಾಪಾರ ಸಾಮ್ರಾಜ್ಯದ ನಾಯಕತ್ವ ವಹಿಸಿಕೊಂಡರು. ಪತಿ, ತಂದೆ ಮತ್ತು ಸಹೋದರ ನಿಧನರಾದಾಗ, ಫಾತಿಮಾ ಮತ್ತು ಅವಳ ಏಕೈಕ ಸಹೋದರಿ ಮರಿಯಂ ಆರ್ಥಿಕವಾಗಿ ಬಲಿಷ್ಠರಾದರು. ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಪ್ರಸಿದ್ಧಿ ಪಡೆದರು.
ಉನ್ನತ ಶಿಕ್ಷಣ ಪಡೆಯುವುದರಲ್ಲಿ ಮತ್ತು ತಮ್ಮ ಅಪಾರ ಸಂಪತ್ತನ್ನು ಸಮಾಜದ ಸುಧಾರಣೆಗಾಗಿ ಖರ್ಚು ಮಾಡುವಲ್ಲಿ ಮರಿಯಂ ಮತ್ತು ಫಾತಿಮಾ ಸಹೋದರಿಯರ ಸ್ಪರ್ಧೆ ನಡೆಯುತ್ತಿತ್ತು. ಫೆಸ್ ನಲ್ಲಿದ್ದ ಮಸೀದಿಗಳು ಇಸ್ಲಾಮಿಕ್ ಸ್ಪೇನ್ ನಿಂದ ನಿರಾಶ್ರಿತರಿಗೆ ಮತ್ತು ಫೆಸ್ನಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಗೆ ಸ್ಥಳಾವಕಾಶ ನೀಡುವಷ್ಟು ಹಿರಿದಾಗಿಲ್ಲ ಎಂದು ಮನಗಂಡಾಗ ಮರಿಯಂ ಸುಂದರವಾದ ಆಂದಲೂಸಿಯನ್ ಮಸೀದಿಯನ್ನು ಕ್ರಿ. ಶ. 859 ರಲ್ಲಿ ನಿರ್ಮಿಸಿದಳು.
ಮತ್ತೊಂದೆಡೆ, ಫಾತಿಮಾ ತನ್ನ ವ್ಯಕ್ತಿತ್ವದ ವರ್ಚಸ್ಸಿಗಾಗಿ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ ಮತ್ತು ಅದರ ಪಕ್ಕದ ಮಸೀದಿಯ ನಿರ್ಮಾಣದಲ್ಲಿ ತಲ್ಲೀನಳಾಗಿದ್ದಳು. ಇದನ್ನು ಇತಿಹಾಸಕಾರರು ಪದವಿ ನೀಡುವ ವಿಶ್ವದ ಮೊದಲ ಮತ್ತು ಇನ್ನೂ ಜೀವಂತವಾಗಿರುವ ವಿಶ್ವವಿದ್ಯಾಲಯವೆಂದು ಬಣ್ಣಿಸಿದ್ದಾರೆ.
ನಿರ್ಮಾಣ ಕ್ಷೇತ್ರದಲ್ಲಿ ಪರಿಣತಿ ಇಲ್ಲದಿದ್ದರೂ ಸಹ, ಅವರ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದಾಗಿ ನಿರ್ಮಾಣ ಕಾರ್ಯಗಳನ್ನು ನೇರವಾಗಿ ಮುನ್ನಡೆಸಲು ಮತ್ತು ನಿರ್ದೇಶಿಸಲು ಸಾಧ್ಯವಾಯಿತು ಎಂದು ಅಧಿಕೃತ ಇತಿಹಾಸ ಹೇಳುತ್ತದೆ. ಮಸೀದಿ ಮತ್ತು ವಿಶ್ವವಿದ್ಯಾನಿಲಯ ನಿರ್ಮಾಣದ ಆದಿಯಿಂದ ಹಿಡಿದು ಕೆಲಸ ಮುಗಿಯುವವರೆಗೂ ದಿನವಿಡೀ ಉಪವಾಸ ಮತ್ತು ಪ್ರಾರ್ಥನೆ ಮಾಡುವುದು ಅವರ ದಿನಚರಿಯಾಗಿತ್ತು.
ಅಂತಹ ಯಶಸ್ವಿ ನಿರ್ಮಾಣಕ್ಕೆ ಅಗತ್ಯವಾದ ದೃಢನಿಶ್ಚಯ, ತಾಳ್ಮೆ ಮತ್ತು ಸಮರ್ಪಣೆಯನ್ನು ಅವಳು ತೋರಿಸಿದಳು. ಉತ್ತರ ಆಫ್ರಿಕಾದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಅಲ್-ಖರವಿಯ್ಯೀನ್ ಮಸೀದಿ ಇಸ್ಲಾಮಿಕ್ ಜಗತ್ತಿನ ನವೀನ ಪಾಠ್ಯಗಳ ಉತ್ತುಂಗದಲ್ಲಿರುವ ವಿಶ್ವವಿದ್ಯಾಲಯಗಳಿಗೆ ನಾಂದಿ ಹಾಡಿತು.
ಪ್ರಪಂಚದಲ್ಲಿ ತಮ್ಮ ಛಾಪು ಮೂಡಿಸಿರುವ ಸಮಕಾಲೀನರಲ್ಲಿ ಪ್ರಸಿದ್ಧ ಮುಸ್ಲಿಂ ಚಿಂತಕ ಅಬುಲ್ ಅಬ್ಬಾಸ್, ಖಾಝಿ ಮುಹಮ್ಮದ್ ಅಲ್ ಫಾಸಿ, ಸೂಫಿ ವಿದ್ವಾಂಸರಾದ ಇಬ್ನು ಅರಬಿ, ಪ್ರಸಿದ್ಧ ಇತಿಹಾಸಕಾರ ಹಾಗೂ ಸಮಾಜಶಾಸ್ತ್ರದ ಪಿತಾಮಹರೆನಿಸಿರುವ ಇಬ್ನ್ ಖಲ್ದುನ್, ಪ್ರಸಿದ್ಧ ಭೂಗೋಳ ತಜ್ಞರಾದ ಮುಹಮ್ಮದ್ ಅಲ್-ಇದ್ರಿಸ್, ಜ್ಯೋತಿಷ್ಯ ಶಾಸ್ತ್ರಜ್ಞರಾದ ನೂರುದ್ದೀನ್ ಅಲ್ ಬಿಟ್ರೂಜಿ (Alpetragius) ಮುಂತಾದವರ ಕಾರ್ಯ ಸಾಧನೆಯಿಂದಲೂ ಅಲ್ ಖರಾವಿಯ್ಯೀನ್ ವಿವಿ ಪ್ರಸಿದ್ಧಿ ಪಡೆಯಿತು.

ಆರಂಭದಲ್ಲಿ ವಿಶ್ವವಿದ್ಯಾನಿಲಯವು ಪವಿತ್ರ ಕುರಾನ್ ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರದ ಮೇಲೆ ಕೇಂದ್ರೀಕರಿಸಿತು. ತದನಂತರ ಗಣಿತ, ಅರೇಬಿಕ್ ಭಾಷಾಶಾಸ್ತ್ರ, ಔಷಧ, ಖಗೋಳವಿಜ್ಞಾನ, ರಸಾಯನಶಾಸ್ತ್ರ, ಇತಿಹಾಸ ಮತ್ತು ಭೂಗೋಳವೆಂದು ವಿವಿಧ ವಿಭಾಗಗಳಾಗಿ ವಿಸ್ತರಿಸಿತು.
ಯಾವುದೇ ಕೋರ್ಸ್‌ಗಳು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದರ ಬಾಗಿಲುಗಳು ಯಹೂದಿ ಕ್ರಿಶ್ಚಿಯನ್, ಇನ್ನಿತರ ಧರ್ಮದ ವಿದ್ಯಾರ್ಥಿಗಳಿಗೂ ವಿಶಾಲವಾಗಿ ತೆರೆದಿತ್ತು.
ಈ ಸಂಸ್ಥೆಯ ಸಂಪೂರ್ಣ ವೆಚ್ಚವನ್ನು ಫಾತಿಮಾ ಭರಿಸುತ್ತಿದ್ದಂತೆ, ಸಂಪೂರ್ಣವಾಗಿ ಉಚಿತವಾಗಿದ್ದ ಅವರ ಶಿಕ್ಷಣವು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಪ್ರಸಿದ್ಧ ಲೇಖಕ ಮತ್ತು ಪ್ರವಾಸಿ ಲಿಯೋ ಆಫ್ರಿಕಾನಸ್, ಯಹೂದಿ ಪಾದ್ರಿ ಮತ್ತು ತತ್ವಜ್ಞಾನಿ ಮೈಮೋನೈಡ್ಸ್ ಮತ್ತು ಪೋಪ್ ಸಿಲ್ವೆಸ್ಟರ್ II ಎಲ್ಲರೂ ಅಲ್ ಕರವಿಯ್ಯೀನ್‌ನ ಪದವೀಧರರು.
ವಿಜ್ಞಾನ ಕ್ಷೇತ್ರದಲ್ಲಿ ಈಗಲೂ ಕಂಗೊಳಿಸುತ್ತಿರುವ ಅಲ್-ಕರಾವಿಯ್ಯೀನ್ ವಿಶ್ವವಿದ್ಯಾಲಯವು ಅದರ ಸಂಸ್ಥಾಪಕಿ ಅಲ್-ಫಿಹ್ರಿಯವರ ಔದಾರ್ಯ ಮತ್ತು ಪ್ರತಿಭೆಗೆ ಜೀವಂತ ಸಾಕ್ಷಿಯಾಗಿದೆ.

ಮಲಯಾಳಂ: ರಾನಿಯಾ ಹಾದಿಯಾ ಅಲ್ ಫಿಹಿರಿ
ಕನ್ನಡಕ್ಕೆ: ಎ.ಕೆ ಫೈಸಲ್ ಗಾಳಿಮುಖ

1 14 15 16