ಒಟ್ಟೋಮನ್ ಸ್ತ್ರೀಜೀವನ ಮತ್ತು ಹರಮಿನ ಫೆಮಿನಿಸಂ

ಪೌರಸ್ತ್ಯ ಜಗತ್ತಿನ ಬಗ್ಗೆ ಪಾಶ್ಚಿಮಾತ್ಯರು ಹೊಂದಿದ್ದ ಪೂರ್ವಾಗ್ರಹವು ಅಕೆಡಮಿಕ್ ವಲಯದಲ್ಲಿ ಸೃಷ್ಟಿಸಿದ ಅನಾಹುತಗಳೇನು ಸಣ್ಣದಲ್ಲ. ಅನಾಗರಿಕರೂ, ಬುಡಕಟ್ಟು ಜನಾಂಗಗಳಾದ ಪೌರಾಸ್ತ್ಯರಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳುವ ಸಾಮರ್ಥ್ಯವಿಲ್ಲ, ಅವರನ್ನು ಸುಸಂಸ್ಕೃತರನ್ನಾಗಿಸುವುದು ‘ಬಿಳಿಯರ ಭಾರಿ ಹೊಣೆಗಾರಿಕೆ’ ಎಂಬ ವಾದದೊಂದಿಗೆ ಪ್ರವೇಶಿಸಿದ ಯುರೋಪಿಯನ್ ಶಕ್ತಿಗಳು ಪೂರ್ವದ ಇತಿಹಾಸವನ್ನು ತಿರುಚಿ ಬರೆಯುವಲ್ಲಿ ವಿನಾಶಕಾರಿ ಪಾತ್ರ ವಹಿಸಿದೆ‌.‌ ಕಪೋಲಕಲ್ಪಿತ ಕಥನಗಳನ್ನು ಸೃಷ್ಟಿಸುವ ಮೂಲಕ ನೈಜ ಸತ್ಯಗಳನ್ನು ಮರೆಮಾಚುವಲ್ಲಿ ಅದು ಯಶಸ್ವಿಯಾಯಿತು. ಜ್ಞಾನೋತ್ಪಾದನೆಯು ಕೇವಲ ಪಾಶ್ಚಿಮಾತ್ಯರ ಕಾರ್ಯ ಎಂದು ವ್ಯವಸ್ಥಿತವಾಗಿ ಬಿಂಬಿಸುವ ಮೂಲಕ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟ ನಾಡುಗಳು ತಮ್ಮದೇ ಇತಿಹಾಸವನ್ನು ಮುಕ್ತವಾಗಿ ಹೇಳಿಕೊಳ್ಳುವ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿತು.

ಜ್ಞಾನೋತ್ಪಾದನಾ ವಲಯದಲ್ಲಿ ಪಾಶ್ಚಿಮಾತ್ಯರ ಏಕಸ್ವಾಮ್ಯವು ಎಂತಹ ಕಳಂಕವನ್ನು ಸೃಷ್ಟಿಸಿದೆ ಎಂಬುದಕ್ಕೆ ಒಟ್ಟೋಮನ್ ‘ಹರಂ'(ಅಂತಃಪುರ) ಗಳ ಕುರಿತು ಯುರೋಪಿಯನ್ನರ ಬರಹಗಳೇ ಜ್ವಲಂತ ನಿದರ್ಶನ. ಪೂರ್ವದ ಮಹಿಳೆಯರ ಬಗ್ಗೆ ಯುರೋಪಿಯನ್ನರಲ್ಲಿ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಹಾಗೂ ಅಸಂಬದ್ಧ ತಪ್ಪು ಕಲ್ಪನೆಗಳು ಬೇರೂರಿದ್ದವು. ಅಲ್ಲಿನ ಮಹಿಳೆಯರು ತೀರಾ ಅನಾಗರಿಕ, ಸೋಮಾರಿ ಹಾಗೂ ಅಸಂಸ್ಕೃತರು. ಪುರುಷರ ಕಾಮದಾಹಕ್ಕೆ ತಲೆಬಾಗಿ ಕೇವಲ ಗುಲಾಮರಾಗಿ ಬದುಕುವುದೇ ಅವರ ಬದುಕಿನ ಏಕೈಕ ಗುರಿ ಎಂಬ ವಿಕೃತ ಭ್ರಮೆ ಪಾಶ್ಚಿಮಾತ್ಯರಲ್ಲಿತ್ತು. ಇಂತಹ ಮಿಥ್ಯೆಗಳನ್ನು ತಮ್ಮ ವರ್ಣ ಚಿತ್ರ ಮತ್ತು ಲೇಖನಗಳಲ್ಲಿಯೂ ಯಥಾವತ್ತಾಗಿ ಚಿತ್ರಿಸಿದ್ದರು. ಯಜಮಾನನನ್ನು ಆಕರ್ಷಿಸುವ ಉದ್ದೇಶದಿಂದ ತನ್ನ ನಗ್ನತೆಯನ್ನು ಪ್ರದರ್ಶಿಸುತ್ತಾ ಸೋಫಾದ ಮೇಲೆ ಮಲಗಿರುವ ಮಹಿಳೆಯರು, ಹಮ್ಮಾಮ್ (ಸ್ನಾನಗೃಹ) ನಲ್ಲಿ ವಿಶ್ರಮಿಸುತ್ತಿರುವ ವಿವಸ್ತ್ರ ಸ್ತ್ರೀ ದೇಹಗಳನ್ನು ಒಟ್ಟೋಮನ್ ಅರಮನೆಯ ಸ್ತ್ರೀ ಸೇವಕಿಯರದ್ದೆಂದು ಅನೇಕ ಪಾಶ್ಚಿಮಾತ್ಯ ವರ್ಣಚಿತ್ರ ಕಲಾವಿದರು ಪರಿಚಯಿಸಿದ್ದರು. ದುರದೃಷ್ಟವಶಾತ್,
ಹರಮ್ ಹಾಗೂ ಒಟ್ಟೋಮನ್ ಮಹಿಳೆಯರ ಬಗ್ಗೆ ಅವರಿಗೆ ಕನಿಷ್ಠ ಜ್ಞಾನವೂ ಇರಲಿಲ್ಲ.

ಪೌರಸ್ತ್ಯ ಸ್ತ್ರೀಯರ ಕುರಿತಾದ ಐರೋಪ್ಯನ್ ದೃಷ್ಟಿಕೋನಗಳು ಉಗಮಗೊಂಡಿದ್ದು ‘ಸಾವಿರದೊಂದು ರಾತ್ರಿಗಳು’ (ಅಲ್ಫ್ ಲೈಲಾ ವ-ಲೈಲಾ) ಎಂಬ ಕೃತಿಯಿಂದ ಎಂದು ಅಮೆರಿಕನ್ ಇತಿಹಾಸಕಾರ್ತಿ ಅಸ್ಲಿ ಸಂಚಾರ್ (Asli Sancar) ತಮ್ಮ ‘ಓಟ್ಟೋಮನ್ ವಿಮೆನ್; ಮಿತ್ ಆಡ್ ರಿಯಾಲಿಟಿ'(Ottoman Women: Myth and Reality ) ಎಂಬ ಗ್ರಂಥದಲ್ಲಿ ಚರ್ಚಿಸುತ್ತಾರೆ. ‌ಆರಂಭದಲ್ಲಿ ‘ಸಾವಿರದೊಂದು ರಾತ್ರಿಗಳು’ ಕೃತಿ ಫ್ರೆಂಚ್ ಭಾಷೆಗೆ ತದನಂತರ ‘ಅರೇಬಿಯನ್ ನೈಟ್ಸ್'( The Arabian Nights) ಎಂಬ ತಲೆಬರಹದಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿತು. ಈ ಕೃತಿಯಲ್ಲಿರುವ ಜೀವನ ಶೈಲಿಯನ್ನು ಆಧಾರವಾಗಿಟ್ಟುಕೊಂಡು ಉಸ್ಮಾನಿ ಮಹಿಳೆಯರು ಹಾಗೂ ಅವರು ವಾಸಿಸುವ ‘ಹರಮ್’ಗಳ ಕುರಿತು ಅವರು ತನ್ನ ಕೃತಿಯಲ್ಲಿ ವಿಷದಪಡಿಸಿದ್ದಾರೆ. ಆದರೆ ಯುರೊಪಿಯನ್ ಸ್ತ್ರೀಯರ ಕುರಿತ ಅವರ ದೃಷ್ಟಿಕೋನವೂ ಸಂಕುಚಿತವಾಗಿತ್ತು. ಆರಂಭಿಕ ಕ್ರೈಸ್ತ ಸಿದ್ಧಾಂತಗಳಲ್ಲಿ ಲೈಂಗಿಕತೆಯನ್ನು ಒಂದು ನೀಚ ಕೃತ್ಯವೆಂದೂ, ಆಧ್ಯಾತ್ಮಿಕ ಉನ್ನತಿಗೆ ಬ್ರಹ್ಮಚರ್ಯವೇ ಶ್ರೇಷ್ಠ ಮಾರ್ಗವೆಂದೂ ಬಿಂಬಿಸಲಾಗಿತ್ತು. ವಿವಾಹ ಮತ್ತು ಸಂತಾನೋತ್ಪತ್ತಿಯನ್ನೂ ಸಹ ಅನಿವಾರ್ಯ ಪಾಪವೆಂಬಂತೆ ಅವರು ಪ್ರತಿಪಾದಿಸಿದ್ದರು. ಇಂತಹ ದೃಷ್ಟಿಕೋನ ಹೊಂದಿದ್ದ ಯುರೋಪಿಯನ್ನರು, ತಮ್ಮ ಗ್ರಂಥಗಳಲ್ಲಿ ಪೌರಸ್ತ್ಯ ಸ್ತ್ರೀಯರನ್ನು ಕಾಮತೃಷೆ ತೀರಿಸಿಕೊಳ್ಳಲು ಮಾತ್ರ ಇರುವ ಸಾಧನವಾಗಿ ಚಿತ್ರೀಕರಿಸಿದ್ದಾರೆ. 19ನೇ ಶತಮಾನದವರೆಗೂ ಯುರೋಪಿಯನ್ ಮಹಿಳೆಯರಿಗೂ ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನಗಳಿರಲಿಲ್ಲ ಎಂಬುದು ಗಮನಾರ್ಹ.

ಹರಮೇ – ಹುಮಾಯೂನ್

ಹರಂ ಎಂಬ ಪದಕ್ಕೆ ‘ಪವಿತ್ರವಾದದ್ದು’ ‘ನಿಶಿದ್ಧವಾದದ್ದು’ ಎಂಬ ಅರ್ಥಗಳಿವೆ. ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮಕ್ಕಾ, ಮದೀನಾ, ಅಲ್ ಅಖ್ಸಾದಂತಹ ಸ್ಥಳಗಳಿಗೆ ‘ಹರಮ್ ಶರೀಫ್’ ಎಂದು ಕರೆಯುವಂತೆ ಓಟ್ಟೋಮನ್ ಹರಮಿಗೂ ಈ ರೀತಿ ಕರೆಯಲಾಯಿತು. ‘ಸಾರ್ವಜನಿಕ ಪ್ರವೇಶ, ನಿಷೇಧಿತ ಸ್ಥಳ’ ಎಂಬುವುದು ಇದರ ತಾತ್ಪರ್ಯ.

ಒಟ್ಟೋಮನ್ ಸುಲ್ತಾನರನ್ನು ‘ಅಲ್ಲಾಹನ ಪ್ರತಿನಿಧಿಗಳು’ (ಖಲೀಫರು) ಎಂದು ಗೌರವಿಸಲಾಗುತ್ತಿತ್ತು. ಆರಂಭಿಕ ಕಾಲಘಟ್ಟದಲ್ಲಿ ಅವರು ಅರಮನೆಯ ಆಂತರಿಕ ಭಾಗವನ್ನು ‘ಹರಮೇ – ಹುಮಾಯೂನ್’ ಎಂದು ಕರೆಯುತಿದ್ದರು. ತದನಂತರದ ದಿನಗಳಲ್ಲಿ, ಅರಮನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ವಾಸಸ್ಥಳಗಳನ್ನು ನಿಯೋಜಿಸಿದಾಗ ಆ ಭಾಗಕ್ಕೂ ‘ಹರಮೇ – ಹುಮಾಯೂನ್’ ಎಂದೇ ಹೆಸರಿಡಲಾಯಿತು. ಸುಲ್ತಾನನ ಭವ್ಯ ಉಪಸ್ಥಿತಿಯೇ ಈ ನಾಮಕರಣದ ಹಿನ್ನೆಲೆ. 2ನೇ ಸುಲ್ತಾನ್ ಮುಹಮ್ಮದರ ಆಳ್ವಿಕೆಯಲ್ಲಿ ಈ ಹರಮ್ ವ್ಯವಸ್ಥೆಯು ಹೆಚ್ಚು ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು.
ಒಟ್ಟೋಮನ್ ನಿವಾಸವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದ್ದವು. ಪುರುಷರು ಪರಸ್ಪರ ಸಂವಹನ ನಡೆಸುವ ಹಾಗೂ ಅತಿಥಿಗಳನ್ನು ಬರಮಾಡಿಕೊಳ್ಳುವ ಭಾಗವನ್ನು ‘ಸಲಾಂಲಿಕ್'(Salamlik) ಎಂದೂ ಮಹಿಳೆಯರು ಮತ್ತು ಮಕ್ಕಳು ಮುಕ್ತವಾಗಿ ಸಂಚರಿಸುವ ಹಾಗೂ ವಾಸಿಸುವ ಅಂತರಂಗಕ್ಕೆ ‘ಹರಮ್ಲಿಕ್'(Haremlik)
ಎಂದು ಕರೆಯಲಾಗುತ್ತಿತ್ತು.

ತೋಪ್‌ಕಾಪಿ ಅರಮನೆಯ ಸಾಮ್ರಾಜ್ಯಿಕ ಹರಮ್‌ನ ಒಳಾಂಗಣ.
Image source: Topkapı Palace Museum website

ಸುಲ್ತಾನನ ಪತ್ನಿಯರು, ಮಕ್ಕಳು ಹಾಗೂ ಸೇವಕಿಯರೇ ಹರಮ್ ನ ಅಂತರ್ವಾಸಿಯಾಗಿದ್ದರು. ಆಳ್ವಿಕೆ ನಡೆಸುತ್ತಿರುವ ಸುಲ್ತಾನನ ತಾಯಿಯೇ ಹರಮ್ ನ ನೇತೃತ್ವವನ್ನು ವಹಿಸುತ್ತಿದ್ದರು. ಒಂದು ವೇಳೆ ತಾಯಿಯು ನಿಧನರಾದರೆ ಆ ಅಧಿಕಾರವು ಪತ್ನಿಯರಿಗೆ ಹಸ್ತಾಂತರವಾಗುತ್ತಿತ್ತು. ಇಸ್ಲಾಮಿಕ್ ಶರೀಆದ ಪ್ರಕಾರ ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ನಾಲ್ಕು ಪತ್ನಿಯರನ್ನು ಹೊಂದಲು ಅನುಮತಿಸಲಾಗಿದೆ (ಎಲ್ಲರನ್ನೂ ಸಮಾನವಾಗಿ ಪರಿಗಣಿಸಲು ಸಾಧ್ಯವಿದ್ದಲ್ಲಿ ಮಾತ್ರ). ಇದರ ಜೊತೆಗೆ ಗುಲಾಮ ಮಹಿಳೆಯರನ್ನು ಹೊಂದುವುದಕ್ಕೂ ಅನುಮತಿಯಿತ್ತು. ಕೆಲವು ರಾಜಕೀಯ ಕಾರಣಗಳಿಂದಾಗಿ ಒಟ್ಟೋಮನ್ ಸುಲ್ತಾನರಲ್ಲಿ ಅನೇಕರು ವಿವಾಹವಾಗುವ ಬದಲಿಗೆ ಗುಲಾಮ ಮಹಿಳೆಯರನ್ನು ಸ್ವೀಕರಿಸುತ್ತಿದ್ದರು. ಹರಮ್ ನ ಬಹುತೇಕ ನಿವಾಸಿಗಳು ಒಟ್ಟೋಮನ್ನರಿಗೆ ಗುಲಾಮರಾಗಿ ಮಾರಲ್ಪಟ್ಟ ವಿದೇಶಿ ಮಹಿಳೆಯರಾಗಿದ್ದರು. ಅವರು ವಿಶ್ವಾಸಿಗಳಾಗಿ ಜೀವಿಸುತ್ತಾ ಶಿಕ್ಷಣವನ್ನು ಪಡೆದು ಕ್ರಮೇಣ ಒಟ್ಟೋಮನ್ ಅರಮನೆಯ ಕಾರ್ಯನಿರ್ವಾಹಕರಾಗುತ್ತಿದ್ದರು. ಅವರಲ್ಲಿ ಕೆಲವರು ಅರಮನೆಯ ಸೇವಕರಾದರೆ ಇನ್ನು ಕೆಲವರು ಸುಲ್ತಾನರ ಸಂಗಾತಿಗಳಾಗುತ್ತಿದ್ದರು. ಒಟ್ಟೋಮನ್ ರಾಜಕೀಯ ಇತಿಹಾಸದಲ್ಲಿ ಪ್ರಮುಖ ದರ್ಜೆಯಲ್ಲಿ ಕೆಲಸಮಾಡುತ್ತಿದ್ದ ಅನೇಕ ಮಹಿಳೆಯರು ಗುಲಾಮರಾಗಿ ಬಂದವರಾಗಿದ್ದರು ಎಂಬುದು ಗಮನಾರ್ಹ.

ವ್ಯಾಪಕವಾದ ತಪ್ಪು ಧೋರಣೆಗಳು:

ಒಟ್ಟೋಮನ್ ತುರ್ಕಿಗೆ ಭೇಟಿ ನೀಡಿದ ಕೆಲವು ಯುರೋಪಿಯನ್ ಯಾತ್ರಿಕರು ಹರಮ್‌ಗಳ ಕುರಿತು ವ್ಯಾಪಕ ತಪ್ಪು ವಿವರಣೆಗಳನ್ನು ನೀಡಿದ್ದರು. ವಾಸ್ತವದಲ್ಲಿ ಓಟ್ಟೋಮನ್ ಮಹಿಳೆಯರ ಈ ಹರಮ್ ಗಳಿಗೆ ಕೇವಲ ಅತ್ಯಂತ ನಿಕಟ ಸಂಬಂಧಿಗಳಿಗೆ ಮಾತ್ರ ಪ್ರವೇಶವಿರುತ್ತಿತ್ತು. ಬಹುಪಾಲು ತುರ್ಕಿಶ್ ಜನರೇ ಎಂದಿಗೂ ಕಣ್ಣಾರೆ ಕಂಡಿರದ ಇಂತಹ ಹರಮ್ ನಿವಾಸಿಗಳ ಬಗ್ಗೆ ಯುರೋಪಿಯನ್ ಪ್ರವಾಸಿಗರು ಅತ್ಯಂತ ಸವಿಸ್ತಾರವಾಗಿ ವರ್ಣಿಸಿದ್ದಾರೆ. ಬಹುತೇಕ ಬರಹಗಾರರು ಸುಳ್ಳು , ಅರೆಸತ್ಯಗಳಿಂದ ಕೂಡಿದ ಕೇವಲ ವದಂತಿಗಳನ್ನು ಹಾಗೂ ಹಳೆಯ ಗ್ರಂಥಗಳನ್ನು ಆಧರಿಸಿ ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂಬುದು ವಿಪರ್ಯಾಸ. ಇಂತಹ ಪ್ರವಾಸಿಗರಿಗೆ ಒಟ್ಟೋಮನ್ ಅರಮನೆಗೆ ಪ್ರವೇಶ ದೊರೆಯಬೇಕಾದರೂ ಅವರು ಉನ್ನತ ರಾಜಕೀಯ ಅಥವಾ ನಯತಾಂತ್ರಿಕ ಸಂಬಂಧಗಳನ್ನು ಹೊಂದಿರಬೇಕಾಗಿತ್ತು. ಹೀಗಿದ್ದೂ, ಕಣ್ಣಾರೆ ಒಮ್ಮೆಯೂ ಕಾಣದ ಅರಮನೆಯ ಆಂತರಿಕ ವಿದ್ಯಮಾನಗಳ ಬಗ್ಗೆ ಅನೇಕರು ಅತ್ಯಂತ ಸವಿಸ್ತಾರವಾಗಿ ದಾಖಲಿಸಿದ್ದಾರೆ. ಸ್ವತಃ ಪೌರಸ್ತ್ಯರು ಇಂದಿಗೂ ತಮ್ಮ ಶೈಕ್ಷಣಿಕ ಅಧ್ಯಯನಗಳಿಗಾಗಿ ಇಂತಹ ಆಧಾರರಹಿತ ಗ್ರಂಥಗಳನ್ನೇ ಅವಲಂಬಿಸುತ್ತಿದ್ದಾರೆ.

ಒಟ್ಟೋಮನ್ ಹರಮ್‌ಗಳ ಕುರಿತು ಯುರೋಪ್‌ನಲ್ಲಿ ಚಾಲ್ತಿಯಲ್ಲಿದ್ದ ತಪ್ಪು ಗ್ರಹಿಕೆಗಳನ್ನು ಇಲ್ಲವಾಗಿಸುವಲ್ಲಿ ಕೆಲವು ಯುರೋಪಿಯನ್ ಮಹಿಳಾ ಪ್ರವಾಸಿಗರು ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ. ಲೇಡಿ ಮೊಂಟಾಗು, ಜೂಲಿಯಾ ಪಾರ್ಡೋ, ಲೂಸಿ ಗಾರ್ನೆಟ್ ಮತ್ತು ಫ್ಯಾನಿ ಬ್ಲಂಟ್ ಇವರಲ್ಲಿ ಪ್ರಮುಖರು.
ಪುರುಷ ಪ್ರವಾಸಿಗರಿಗೆ ಹರಮ್ ಪ್ರವೇಶ ನಿಷೇಧಿತವಾಗಿದ್ದಾಗ, ಮಹಿಳಾ ಪ್ರವಾಸಿಗರು ಅಲ್ಲಿಗೆ ಮುಕ್ತವಾಗಿ ಪ್ರವೇಶ ಪಡೆದು ವಾಸ್ತವವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ಅವರು ಅಲ್ಲಿನ ಅನೇಕ ಮಹಿಳಾ ಸೇವಕಿಯರೊಂದಿಗೂ ಸಂವಾದ ನಡೆಸಿದರು. ತಾವು ಈ ಮುಂಚೆ ರೂಪಿಸಿಕೊಂಡಿದ್ದ ಒಟ್ಟೊಮನ್ ಮಹಿಳೆಯರ ಕುರಿತಾದ ತಪ್ಪು ಧೋರಣೆಗಿಂತ ಅಲ್ಲಿನ ಮಹಿಳೆಯರು ಎಷ್ಟು ಭಿನ್ನವಾಗಿದ್ದಾರೆ ಎಂಬುದನ್ನು ಅವರು ಮನಗಂಡರು.

ಈ ನಿಟ್ಟಿನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಕಥೆಯೇ ‘ಕರವಸ್ತ್ರದ ಕಥೆ'(Story of the Handkerchief). ಸುಲ್ತಾನನು ಹರಮ್ ನ ಎಲ್ಲಾ ದಾಸಿಯರನ್ನು ಸೂಕ್ಷ್ಮವಾಗಿ ಗಮನಿಸಿ, ಆ ರಾತ್ರಿ ತಾನು ಯಾರೊಂದಿಗೆ ಕಳೆಯಬೇಕೆಂದು ಬಯಸುತ್ತಾನೋ ಆ ಮಹಿಳೆಯ ಕಡೆಗೆ ಒಂದು ಕರವಸ್ತ್ರವನ್ನು ಎಸೆಯುತ್ತಿದ್ದನೆಂದೂ, ತದನಂತರ ಆಕೆಯನ್ನು ಅಲಂಕರಿಸಿ ಸುಲ್ತಾನನ ಬಳಿಗೆ ಕಳುಹಿಸಿಕೊಡುವ ಪದ್ಧತಿಯೊಂದು ಅಲ್ಲಿ ರೂಢಿಯಲ್ಲಿತ್ತೆಂಬುದು ಈ ಕಥೆಯ ಸಾರ. ಅನೇಕರು ಈ ಕಥೆಯನ್ನು ಹಲವಾರು ಬಾರಿ ಪುನರಾವರ್ತಿಸಿದ ಕಾರಣ, ಇದೇ ವಾಸ್ತವವೆಂದು ಬಹುತೇಕರು ನಂಬಿದ್ದರು. ಆದರೆ, ಪ್ರಮುಖ ಮಹಿಳಾ ಪ್ರವಾಸಿಗರಾದ ಲೇಡಿ ಮೊಂಟಗೂ ಅವರು ವ್ಯಾಪಕ ಪ್ರಚಾರದಲ್ಲಿದ್ದ ಈ ‘ಕರವಸ್ತ್ರದ ಕಥೆ’ಯನ್ನು ಸುಳ್ಳೆಂದು ನಿರೂಪಿಸಿದರು. ಟರ್ಕಿಯ ಬ್ರಿಟಿಷ್ ರಾಯಭಾರಿಯ ಪತ್ನಿಯಾಗಿದ್ದ ಇವರು 1716ರಲ್ಲಿ ತುರ್ಕಿಗೆ ಭೇಟಿ ನೀಡಿದ್ದರು. ಒಟ್ಟೋಮನ್ ಹರಮ್ ನಲ್ಲಿದ್ದ ಸುಲ್ತಾನ್ ಮುಸ್ತಫಾನ ಜೀವನ ಸಂಗಾತಿಯಾಗಿದ್ದ ಹಫ್ಸಾಳೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿ, ಇದೊಂದು ಕೇವಲ ಕಟ್ಟುಕಥೆಯಷ್ಟೇ ಎಂದು ಸಮರ್ಥಿಸಿದರು. ಸುಲ್ತಾನನ ದಿನಚರಿ ಮತ್ತು ಸಂಗಾತಿಗಳ ಭೇಟಿಗೆ ನಿಖರವಾದ ಶರೀಅತ್ ನಿಯಮಗಳು ಮತ್ತು ಆಡಳಿತಾತ್ಮಕ ಕ್ರಮಗಳಿದ್ದವೇ ವಿನಃ ಅದು ಕರವಸ್ತ್ರ ಎಸೆಯುವಂತಹ ವಿಕೃತ ಆಟವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಓರಿಯಂಟಲಿಸ್ಟ್‌ಗಳು ಸೃಷ್ಟಿಸಿದ ಭೀಕರ ಕಥೆಗಳಂತಲ್ಲ ಒಟೋಮನ್ ಹರಮ್‌ಗಳೆಂದೂ, ಅಲ್ಲಿ ಜೀವಿಸುವಾಗ ಮಹಿಳೆಯರಿಗೆ ತಾವು ಬಂಧನದಲ್ಲಿದ್ದೇವೆ ಎಂಬ ಭಾವನೆಗಿಂತ ಮಿಗಿಲಾಗಿ ತಾವು ಸಂಪೂರ್ಣ ಸುರಕ್ಷಿತರಾಗಿದ್ದೇವೆ ಎಂಬ ಚಿಂತನೆ ಇರುತ್ತದೆಂದೂ, ಪುರುಷರು ತಮ್ಮ ಮಹಿಳಾ ಸಂಗಾತಿಗಳನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾರೆಂದೂ ವಿಕ್ಟೋರಿಯನ್ ಮಹಿಳಾ ಪ್ರವಾಸಿಗರು ಇಂತಹ ಮಿಥ್ಯಾಕಲ್ಪನೆಗಳನ್ನು ಖಂಡಿಸುತ್ತಾ ಬರೆದಿದ್ದಾರೆ.

ಹರಮ್ ಗೆ ಪ್ರವೇಶಾವಕಾಶವಿದ್ದ ಪುರುಷರೆಂದರೆ ಸುಲ್ತಾನರು ಮತ್ತು ಅವರ ಚಿಕ್ಕ ಮಕ್ಕಳು ಮಾತ್ರ. ಮಕ್ಕಳಿಗೆ ಏಳು ವರ್ಷ ವಯಸ್ಸಾಗುವವರೆಗೆ ಅವರು ಸಂಪೂರ್ಣವಾಗಿ ತಮ್ಮ ತಾಯಿಯೊಂದಿಗೆ ಹರಮ್‌ನಲ್ಲಿಯೇ ವಾಸಿಸುತ್ತಿದ್ದರು. ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಹರಮ್‌ನ ಒಳಗಡೆಯೇ ಕಲ್ಪಿಸಲಾಗುತ್ತಿತ್ತು. ಹರಮ್‌ನಲ್ಲಿ ಸೇವಕಿಯರಾಗಿದ್ದ ಮಹಿಳೆಯರನ್ನು ಹೊರತುಪಡಿಸಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತೊಂದು ಪ್ರಮುಖ ವರ್ಗವೆಂದರೆ ನಪುಂಸಕರು. ಅವರಲ್ಲಿ ಲೈಂಗಿಕ ಆಸಕ್ತಿ ಇರುವುದಿಲ್ಲ ಎಂಬ ಕಾರಣಕ್ಕಾಗಿಯೇ ಅವರಿಗೆ ಹರಮ್‌ನ ಒಳಭಾಗದಲ್ಲಿ ಉದ್ಯೋಗವನ್ನು ನೀಡಲಾಗುತ್ತಿತ್ತು. ಅರಮನೆಯ ಒಳಗಿನ ಮಹಿಳೆಯರಿಗೆ ನೆರವಾಗುವುದು, ಮಕ್ಕಳ ಉಸ್ತುವಾರಿ ನೋಡಿಕೊಳ್ಳುವುದು ಮತ್ತು ಸುಲ್ತಾನರೊಂದಿಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು ಅವರ ಪ್ರಮುಖ ಕರ್ತವ್ಯಗಳಾಗಿದ್ದವು. ಮುಖ್ಯವಾಗಿ ಅವರು ಹರಮ್‌ನ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹರಮ್‌ನಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೊಂದು ನಿರ್ದಿಷ್ಟ ಜವಾಬ್ದಾರಿ ಇರುತ್ತಿತ್ತು. ಪಾಶ್ಚಾತ್ಯ ಕಾಲ್ಪನಿಕ ಕಲಾಚಿತ್ರಗಳಲ್ಲಿ ಬಿಂಬಿತವಾಗಿರುವಂತೆ, ಸುಲ್ತಾನನನ್ನು ಆಕರ್ಷಿಸಲು ಮಹಿಳೆಯರು ವಿವಸ್ತ್ರರಾಗಿ ನಿಲ್ಲುವ ಯಾವುದೇ ಪದ್ಧತಿ ಹರಮ್‌ನಲ್ಲಿ ಇರಲಿಲ್ಲ. ಬದಲಾಗಿ ಅಲ್ಲಿನ ಮಹಿಳೆಯರು ಒಂದೋ ಸೇವಕಿಯರಾಗಿ ಕಾರ್ಯನಿರ್ವಹಿಸಿದರೆ ಇನ್ನು ಕೆಲವರು ವಿವಿಧ ಅಧ್ಯಯನಗಳಲ್ಲಿ ನಿರತರಾಗುತ್ತಿದ್ದರು. ಸಂಗೀತಾಸಕ್ತರಿಗೆ ಸಂಗೀತ ತರಬೇತಿ ನೀಡುವುದು ಮತ್ತು ತೀಕ್ಷ್ಣ ಬುದ್ಧಿಯುಳ್ಳವರಿಗೆ ಲೆಕ್ಕಪತ್ರ ನಿರ್ವಹಣೆಯನ್ನು ಕಲಿಸುವುದು ಸೇರಿದಂತೆ, ಅವರವರ ವೈಯಕ್ತಿಕ ಅಭಿರುಚಿಗೆ ಅನುಗುಣವಾಗಿ ಕಲಾ ಕೌಶಲ್ಯಗಳ ತರಬೇತಿಯನ್ನು ಅಲ್ಲಿ ನೀಡಲಾಗುತ್ತಿತ್ತು.
ಒಟ್ಟೋಮನ್ ಸುಲ್ತಾನರ ಪತ್ನಿಯರಲ್ಲಿ ಬಹುತೇಕರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಅನೇಕ ಜನೋಪಕಾರಿ ಕಟ್ಟಡಗಳು ಹಾಗೂ ಸಂಸ್ಥೆಗಳನ್ನು ನಿರ್ಮಿಸಿದ್ದರು. ಪ್ಯಾಲೆಸ್ತೀನಲ್ಲಿ ಇಂದಿಗೂ ನಿರ್ಗತಿಕರಿಗೆ ಉಚಿತವಾಗಿ ಆಹಾರವನ್ನು ಉಣಬಡಿಸುವ ಓಟ್ಟೋಮನ್ ಸುಲ್ತಾನ್ ಸುಲೈಮಾನ್ ಖಾನೂನಿಯವರ ಪತ್ನಿಯಾದ ‘ಹುರ್ರಮ್ ಸುಲ್ತಾನ’ ಅವರು ನಿರ್ಮಿಸಿದ ಪ್ರಸಿದ್ಧ ‘ಹಾಸೆಕಿ ಸುಲ್ತಾನ್ ಇಮಾರತ್’ ಎಂದು ಕರೆಯಲ್ಪಡುವ ಅನ್ನದಾಸೋಹ ಕೇಂದ್ರವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

ಯುರೋಪಿಗಿಂತ ಉತ್ತಮವಾದ ಸ್ತ್ರೀ ಸ್ವಾತಂತ್ರ್ಯ:

ಫೆಮಿನಿಸಂ ಯುರೋಪಿನಲ್ಲಿ ಮೊಳಕೆಯೊಡೆಯುವುದಕ್ಕಿಂತ ಶತಮಾನಗಳ ಹಿಂದಯೇ ಒಟ್ಟೋಮನ್ ಮಹಿಳೆಯರು ನಿರಾಯಾಸವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದರು. ಇಸ್ಲಾಮಿಕ್ ಶರೀಆನುಸಾರ ನಡೆಸುತ್ತಿದ್ದ ಒಟ್ಟೋಮನ್ ಆಳ್ವಿಕೆಯಡಿಯಲ್ಲಿ ಅಲ್ಲಿಯ ಮಹಿಳೆಯರು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರು ಎಂದು ಅನೇಕ ಜಾಗತಿಕ ಸಂಚಾರಿಗಳು ದಾಖಲಿಸಿದ್ದಾರೆ. 1789ರಲ್ಲಿ ತುರ್ಕಿಗೆ ಭೇಟಿ ನೀಡಿದ್ದ ಮಹಿಳಾ ಸಂಚಾರಿ ಎಲಿಜಬೆತ್ ಕ್ರೇವನ್ ಹೇಳುವಂತೆ “ತುರ್ಕಿಯ ಮಹಿಳೆಯರು ಅನುಭವಿಸುತ್ತಿರುವ ‘ಸ್ವಾತಂತ್ರ್ಯ’ವನ್ನು ಮತ್ತ್ಯಾವ ದೇಶದಲ್ಲೂ ನಾನು ಕಂಡಿಲ್ಲ. ಸ್ತ್ರೀ ಗೌರವ, ಅವರನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಪರಿ ತುರ್ಕಿಸ್ಥಾನ್ ಜಗತ್ತಿನ ಇತರ ಎಲ್ಲಾ ರಾಷ್ಟ್ರಗಳಿಗೂ ಮಾದರಿಯಾಗಿದೆ”

ಒಟ್ಟೋಮನ್ ಮಹಿಳೆಯರಿಗೆ ವಿವಾಹದ ನಂತರವೂ ತಮ್ಮ ಸಂಪತ್ತಿನೊಂದಿಗೆ ಅಧಿಕಾರವಿತ್ತು. ಯುರೋಪಿನ ಕ್ರಿಶ್ಚಿಯನ್ ಮಹಿಳೆಯರಿಗಿಂತ ಇವರ ಜೀವನವು ಪೂರ್ಣ ಭದ್ರತೆಯಿಂದ ಕೂಡಿತ್ತು ಎಂದು ಲೇಡಿ ಮಾಂಟೆಗ್ಯೂ (Lady Montagu) ಆಶ್ಚರ್ಯದಿಂದ ದಾಖಲಿಸಿದ್ದಾರೆ. ಸ್ಮಾಲ್ಪಾಕ್ಸ್ (Smallpox) ವಿರುದ್ಧ ಟರ್ಕಿಯರು ಕಂಡುಹಿಡಿದ ವ್ಯಾಕ್ಸಿನೇಶನ್ ವಿಧಾನವನ್ನು ಯುರೋಪಿಯನ್ನರಿಗೆ ಪರಿಚಯಿಸಿದ್ದು ಈ ಪ್ರಯಾಣದಲ್ಲಿ ಬರೆದ ಪತ್ರದ ಮೂಲಕವೇ ಆಗಿತ್ತು. ಆದರೂ, ವ್ಯಾಕ್ಸಿನೇಶನ್ ಮೊದಲ ಬಾರಿ ಕಂಡುಹಿಡಿದದ್ದು ಉಸ್ಮಾನಿಗಳು ಎಂಬ ನಗ್ನ ಸತ್ಯವನ್ನು ಮರೆಮಾಚುವ ಮೂಲಕ ಇತಿಹಾಸ ರಚನೆಯಲ್ಲಿನ ಯುರೋಪಿಯನ್ನರ ಕರಾಳ ಮುಖ ಮತ್ತೊಮ್ಮೆ ಎದ್ದು ಕಾಣುತ್ತದೆ.

ಒಟ್ಟೋಮನ್ ಆಳ್ವಿಕೆಯಲ್ಲಿ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿದ್ದ ಸ್ವಾತಂತ್ರ್ಯದ ಕುರಿತು ಝಾರಾ ಫಾರಿಸ್ ಅವರು ತಮ್ಮ ‘Ottoman Women at the Dawn of Western Feminism’ ಎಂಬ ಲೇಖನದಲ್ಲಿ ಆಳವಾಗಿ ಚರ್ಚಿಸಿದ್ದಾರೆ. ಪಾಶ್ಚಿಮಾತ್ಯ ಮಹಿಳಾ ಪ್ರವಾಸಿಗರು, ವಿದ್ವಾಂಸರ ಉಲ್ಲೇಖಗಳನ್ನು ಆಧಾರವಾಗಿರಿಸಿಕೊಂಡ ಅವರು ಈ ವಾದವನ್ನು ಮಂಡಿಸಿದ್ದಾರೆ. ಪಾಶ್ಚಿಮಾತ್ಯ ಮಹಿಳೆಯರಿಗೆ
ವಿವಾಹದ ನಂತರ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು, ಆಕೆಯ ಎಲ್ಲ ಭೌತಿಕ ಅಧಿಕಾರ ಸಂಪೂರ್ಣವಾಗಿ ಪತಿಯ ಅಧೀನಕ್ಕೊಳಪಡುತ್ತಿದ್ದು, ಒಟ್ಟೋಮನ್ ಮಹಿಳೆಯರು ವಿವಾಹದ ನಂತರವೂ ತಮ್ಮ ಸಂಪೂರ್ಣ ಹಕ್ಕುಗಳನ್ನು ಉಳಿಸಿಕೊಂಡಿದ್ದರು ಎಂದು ಅವರು ಈ ಲೇಖನದಲ್ಲಿ ಸಮರ್ಥಿಸುತ್ತಾರೆ. ಉಸ್ಮಾನಿ ಮಹಿಳೆಯರು ಚುನಾವಣೆಗಳು ಹಾಗೂ ಆಡಳಿತಾತ್ಮಕ ವ್ಯವಹಾರಗಳಿಂದ ವಂಚಿತರಾಗಿದ್ದರು ಎಂದು ಯುರೋಪಿಯನ್ನರು ಆರೋಪಿಸುತಿದ್ದ ಅದೇ ಮಹಿಳೆಯರನ್ನು 16ನೇ ಶತಮಾನದ ‘ಸುಲ್ತಾನೇಟ್ ಆಫ್ ವಿಮೆನ್’ (Sultanate of Women) ಎಂದು ಬಣ್ಣಿಸುವಷ್ಟು ಮಟ್ಟಿಗೆ ಒಟ್ಟೋಮನ್ ಮಹಿಳೆಯರು ಆಡಳಿತ ವಿಷಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಪುರುಷರಂತೆಯೇ ಮಹಿಳೆಯರೂ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಆಡಳಿತಗಾರೊಂದಿಗೆ ನೇರವಾಗಿ ಸಂಪರ್ಕಿಸಬಹುದಾಗಿತ್ತು. ಯುರೋಪ್‌ನಲ್ಲಿ ವಿವಾಹ ವಿಚ್ಛೇದನ (Divorce) ಪಡೆಯುವುದು ಮಹಿಳೆಯರಿಗೆ ಅಸಾಧ್ಯವಾಗಿದ್ದ ಕಾಲದಲ್ಲೂ, ಒಟ್ಟೋಮನ್ ಮಹಿಳೆಯರಿಗೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯುವ ಹಕ್ಕಿತ್ತು.
ಹೀಗೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿಯೂ ಒಟ್ಟೊಮನ್ ಮಹಿಳೆಯರು ಯುರೋಪಿಯನ್ ಮಹಿಳೆಯರಿಗಿಂತ ಬಹುಮಟ್ಟಿಗೆ ಮುಂಚೂಣಿಯಲ್ಲಿದ್ದರು. ಮೂಲಭೂತ ಹಕ್ಕುಗಳು ಧಾರ್ಮಿಕ ಕಾನೂನಿನ ಮೂಲಕವೇ ಲಭ್ಯವಿದ್ದ ಕಾರಣ, ಒಟ್ಟೋಮನ್ ಮಹಿಳೆಯರಿಗೆ ಪ್ರತ್ಯೇಕ ‘ಪಾಶ್ಚಿಮಾತ್ಯ ಮಾದರಿಯ ಫೆಮಿನಿಸಂ’ನ ಅಗತ್ಯವೇ ಬರಲಿಲ್ಲ.

References:

  1. Sancar, Asli: Ottoman Women: Myth and Reality
  2. Peirce, L.: The Imperial Harem: Women and Sovereignty in the Ottoman Empire
  3. Zara Huda Faris: Ottoman Women During the Advent of Western Feminism
  4. Osmanoğlu, Ayşe: Babam Sultan Abdülhamid


    ಲೇ : ಅಬೂಬಕರ್ ಓಗ್ಲು
    ಕನ್ನಡಕ್ಕೆ: ಇಝ್ಝುದ್ದೀನ್ ಅದನಿ ಅಲ್ ಮುಈನಿ

Leave a Reply

*