ನಾಗರಿಕತೆಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅದರ ವಿಕಾಸವು ಕೇವಲ ರಾಜ್ಯಗಳ ಉದಯ– ಪತನಗಳ ಚರಿತ್ರೆಯಲ್ಲ, ಅಥವಾ ಯುದ್ಧ– ವಿಜಯಗಳ ದಾಖಲೆಗಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯನ ನಿರಂತರ ಅನ್ವೇಷಣಾ ಪ್ರವೃತ್ತಿಯ, ಹೊಸತನ್ನು ಅರಿಯುವ ಆತುರದ, ದಿಗಂತಗಳನ್ನು ದಾಟುವ ಧೈರ್ಯದ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಉದಾತ್ತ ಮನೋಭಾವದ ಮಹಾಕಾವ್ಯದಂತೆ ಭಾಸವಾಗುತ್ತದೆ. ಮನುಷ್ಯನು ತನ್ನ ನೆಲೆಯನ್ನು ಬಿಟ್ಟು ಹೊರಟ ಕ್ಷಣದಿಂದಲೇ ಇತಿಹಾಸವು ಹೊಸ ದಿಕ್ಕನ್ನು ಪಡೆಯತೊಡಗಿತು. ಜಗತ್ತಿನಲ್ಲಿ ಆಗಿಹೋದ ಪ್ರತಿಯೊಂದು ಮಹಾನ್ ನಾಗರಿಕತೆಯೂ ಯಾವುದೋ ಒಂದು ಕಾಲದಲ್ಲಿ ತನ್ನ ಗಡಿಗಳನ್ನು ಮೀರಿ ಹೊರಜಗತ್ತಿನೊಂದಿಗೆ ಸಂವಾದ ನಡೆಸಿದೆ. ಪರ್ವತಗಳನ್ನು ದಾಟಿದ ವ್ಯಾಪಾರಿಗಳ ಕಾಲ್ನಡಿಗೆ, ಮರುಭೂಮಿಯನ್ನು ಭೇದಿಸಿ ಸಾಗಿದ ಒಂಟೆ ಕಾರವಾನ್‌ಗಳು, ಬೃಹತ್ ಅಲೆಗಳನ್ನು ಎದುರು ಹಾಕಿಕೊಂಡ ಹಡಗುಗಳು, ಜ್ಞಾನವನ್ನು ಹೊತ್ತ ಮಹದ್ ಗ್ರಂಥಗಳು, ಧರ್ಮ ಮತ್ತು ನೈತಿಕತೆಯನ್ನು ಹೊತ್ತ ಸೂಫಿ ದರವೇಶಿಗಳ ಪಾದಯಾತ್ರೆಗಳು, ಭಾಷೆಗಳನ್ನು ಮೀರಿ ಮಾನವೀಯತೆಯನ್ನು ವಿಸ್ತರಿಸಿದ ವಿದ್ವಾಂಸರ ಸಂಚಾರ ಇವೆಲ್ಲವೂ ಸೇರಿ ವಿಶ್ವ ನಾಗರಿಕತೆಯ ವಿಸ್ತಾರದ ನೈಜ ಶಕ್ತಿಗಳೆನಿಸಿವೆ. ಸಂಚಾರವನ್ನು ಭೌಗೋಳಿಕ ಚಲನೆಯ ದೃಷ್ಟಿಯಿಂದ ನೋಡುವುದಕ್ಕಿಂತಲೂ ಅದು ಸಂಸ್ಕೃತಿಗಳ ಪರಸ್ಪರ ಸಂವಾದ, ಜ್ಞಾನಗಳ ವಿನಿಮಯ, ತಂತ್ರಜ್ಞಾನಗಳ ಪ್ರಸರಣ, ಭಾಷೆಗಳ ಪುನಾರಚನೆ ಮತ್ತು ಮಾನವೀಯ ಅನುಭವಗಳ ವಿಸ್ತರಣೆಗೆ ಕಾರಣವಾದುದನ್ನು ಗುರುತಿಸುವುದು ಬಹಳ ಮುಖ್ಯ. ಈ ಅರ್ಥದಲ್ಲಿ ವಿಶ್ವ ಸಂಚಾರವು ನಾಗರಿಕತೆಗೆ ಹೊಸ ದಿಕ್ಕನ್ನು ತೋರಿಸಿ, ಮಾನವ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ನಾಟಿದೆ.
ಪ್ರಾಚೀನ ಈಜಿಪ್ಟ್, ಮೆಸಪೊಟೇಮಿಯಾ, ಸಿಂಧೂ ಕಣಿವೆ (Indus valley) ಮತ್ತು ಇತರ ಪ್ರಾಚೀನ ನಾಗರಿಕತೆಗಳು ತಮ್ಮ ಆಂತರಿಕ ವೈಭವದಿಂದ ಮೆರೆಯುವುದರ ಜೊತೆಜೊತೆಗೆ ಅವು ದೂರದ ದೇಶಗಳೊಂದಿಗೆ ನಡೆಸಿದ ಸಂಪರ್ಕಗಳಿಂದಲೂ ಸಮೃದ್ಧವಾದವು. ‘ಸಿಲ್ಕ್ ರೂಟ್’ (ರೇಷ್ಮೆ ಮಾರ್ಗ) ಅದಕ್ಕೊಂದು ನಿದರ್ಶನ. ಹಳೆಯ ಕಾಲದ ಸರಕು ಸಾಗಾಣಿಕೆಯ ದಾರಿಗಳು ಹಾಗೂ ಸಾಗರಪಥಗಳು ಕೇವಲ ವ್ಯಾಪಾರದ ದಾರಿಗಳಾಗಿರಲಿಲ್ಲ; ಅವು ವೈವಿಧ್ಯಮಯ ಆಲೋಚನೆಗಳ, ಕಲೆಯ, ಧರ್ಮದ, ವಿಜ್ಞಾನದ ಮತ್ತು ಜೀವನಶೈಲಿಯ ಹೆದ್ದಾರಿಗಳಾಗಿದ್ದವೆಂದು ಚರಿತ್ರೆಯನ್ನು ಅವಲೋಕಿಸಿದಾಗ ತಿಳಿಯುತ್ತದೆ. ಒಂದು ಪ್ರದೇಶದಲ್ಲಿ ಹುಟ್ಟಿದ ತತ್ವ ಮತ್ತೊಂದು ಪ್ರದೇಶದಲ್ಲಿ ಹೊಸ ರೂಪ ತಾಳಿತು; ಒಂದು ದೇಶದಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನ ಮತ್ತೊಂದು ದೇಶದಲ್ಲಿ ಪರಿಷ್ಕೃತವಾಯಿತು; ಒಂದು ಭಾಷೆಯಲ್ಲಿದ್ದ ಜ್ಞಾನ ಮತ್ತೊಂದು ಭಾಷೆಯ ಮೂಲಕ ಸಮೃದ್ಧವಾಯಿತು. ನಾಗರಿಕತೆಗಳು ಬೆಳೆಯುವುದು ಕೋಟೆಗಳನ್ನು ಕಟ್ಟಿ ತನ್ನನ್ನು ತಾನು ಸುರಕ್ಷಿತವಾಗಿ ಇಟ್ಟುಕೊಳ್ಳುವುದರಿಂದಲ್ಲ; ತನ್ನ ಗಡಿಯನ್ನು ದಾಟಿ ಜಗತ್ತಿನತ್ತ ತೆರೆದುಕೊಳ್ಳುವುದರಿಂದ ಎಂಬ ಇತಿಹಾಸದ ಮಹತ್ವದ ಪಾಠವನ್ನು ವಿಶ್ವ ಸಂಚಾರಗಳು ನಮಗೆ ಕಲಿಸುತ್ತವೆ.
ಇತಿಹಾಸದ ಈ ವಿಶಾಲ ಪ್ರವಾಹದಲ್ಲಿ ಇಸ್ಲಾಮಿನ ಉದಯವು ಮಾನವ ಸಂಚಾರಕ್ಕೆ ಹೊಸ ತಾತ್ವಿಕ ಅರ್ಥವನ್ನೂ ನೈತಿಕ ದಿಕ್ಕನ್ನೂ ನೀಡಿತು. ಇಸ್ಲಾಮ್ ಇಡೀ ಭೂಮಿಯನ್ನೇ ಅಲ್ಲಾಹನ ವಿಶಾಲ ಭೂಮಿಯೆಂದು ಪರಿಚಯಿಸಿತು. ಪವಿತ್ರ ಖುರ್‌ಆನ್ ಅನೇಕ ಕಡೆಗಳಲ್ಲಿ ಭೂಮಿಯಲ್ಲಿ ಸಂಚರಿಸಿ, ಪೂರ್ವಜರ ಇತಿಹಾಸವನ್ನು ಗಮನಿಸಿ, ಪ್ರಕೃತಿಯ ಚಿಹ್ನೆಗಳನ್ನು ಅವಲೋಕಿಸಿ ಎಂದು ಸೃಷ್ಟಿಯ ರಹಸ್ಯಗಳನ್ನು ಅರಿಯುವಂತೆ ಆಹ್ವಾನಿಸುತ್ತದೆ. ಈ ಆಹ್ವಾನವು ಸಂಚಾರವನ್ನು ಜ್ಞಾನಸಾಧನೆಯ ಸಾಧನವಾಗಿ ಪರಿವರ್ತಿಸಿತು. ‘ಸೀರೂ ಫಿಲ್ ಅರ್ಳ್..’ (ಭೂಮಿಯಲ್ಲಿ ಸಂಚರಿಸಿರಿ) ಎಂಬ ಖುರ್‌ಆನಿನ ಕರೆಯು ಮುಸ್ಲಿಮರಲ್ಲಿ ಅನ್ವೇಷಣಾ ಮನೋಭಾವವನ್ನು ಬೆಳೆಸಿತು. ಜ್ಞಾನಕ್ಕಾಗಿ ದೂರದ ದೇಶಗಳಿಗೆ ಪ್ರಯಾಣಿಸುತ್ತ, ವ್ಯಾಪಾರದ ಮೂಲಕ ಹೊಸ ಸಮಾಜಗಳನ್ನು ಪರಿಚಯ ಮಾಡಿಕೊಳ್ಳುತ್ತ, ವಿವಿಧ ಜನಾಂಗಗಳೊಂದಿಗೆ ಮುಖಾಮುಖಿಯಾಗುತ್ತ, ಹೊಸ ಭೌಗೋಳಿಕ ಪ್ರದೇಶಗಳನ್ನು ಅಧ್ಯಯನ ಮಾಡುತ್ತ ವಿಭಿನ್ನವಾದ ಸಾಂಸ್ಕೃತಿಕ, ಸಾಮಾಜಿಕ ಅನುಸಂಧಾನಗಳ ಮೂಲಕ ಮುಸ್ಲಿಮರು ಬೌದ್ಧಿಕ ವಿಕಸನದ ಉನ್ನತಿಗೇರಿದರು. ಅವರಿಗೆ ಅದು ಕೇವಲ ಧಾರ್ಮಿಕ ಕರ್ತವ್ಯವಾಗದೆ ಬೌದ್ಧಿಕ ಸಾಧನೆಯ ಭಾಗವಾಗಿಯೂ ಕಾರ್ಯನಿರ್ವಹಿಸಿತು.

ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿಯೇ ಅರೇಬಿಯಾದ ಸೀಮಿತ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ಮುಸ್ಲಿಮರು ಏಷ್ಯಾ, ಆಫ್ರಿಕಾ ಮತ್ತು ಯೂರೋಪಿನ ವಿಶಾಲ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಿದರು. ಆದರೆ ಈ ವಿಸ್ತಾರವನ್ನು ಕೇವಲ ರಾಜಕೀಯ ವಿಜಯಗಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವುದು ಇತಿಹಾಸಕ್ಕೆ ಮಾಡುವ ಅನ್ಯಾಯವಾಗುತ್ತದೆ. ನಿಜವಾದ ಪರಿವರ್ತನೆಯನ್ನು ತಂದವರು ವಿದ್ವಾಂಸರು, ಸೂಫಿಗಳು, ವ್ಯಾಪಾರಿಗಳು ಮತ್ತು ನಾವಿಕರು. ಒಂದು ರೀತಿಯಲ್ಲಿ ಸಾಂಸ್ಕೃತಿಕ ರಾಯಭಾರಿಗಳಂತೆ ಕಾರ್ಯಾಚರಿಸಿದ ಅವರು ತಮ್ಮೊಂದಿಗೆ ಸರಕುಗಳನ್ನು ಅಥವಾ ಗ್ರಂಥಗಳನ್ನು ಸಾಗಿಸುವುದರ ಜೊತೆಗೆ ಜ್ಞಾನ, ಕೌಶಲ್ಯ ಮತ್ತು ಪರಸ್ಪರ ಮಾನವೀಯ ಮೌಲ್ಯಗಳನ್ನೂ ಹೊತ್ತೊಯ್ದರು. ಈ ಕಾರಣದಿಂದಲೇ ಅನೇಕ ದೇಶಗಳಲ್ಲಿ ಇಸ್ಲಾಮಿನ ಪ್ರಭಾವವು ಖಡ್ಗದ ಮೂಲಕವಲ್ಲ, ವ್ಯಕ್ತಿತ್ವ ಮತ್ತು ಜ್ಞಾನಾಣ್ವೇಷಣೆಯ ಮೂಲಕ ಹರಡಿತು ಎಂದು ಅನೇಕ ಆಧುನಿಕ ಇತಿಹಾಸಕಾರರೂ ಸಮರ್ಥಿಸಿದ್ದಾರೆ.
ಜಾಗತಿಕ ಇತಿಹಾಸದ ಅನೇಕ ಮಹಾನ್ ಸಂಚಾರಗಳಲ್ಲಿ ಭೌಗೋಳಿಕ ಅನ್ವೇಷಣೆಗಿಂತ ಹೆಚ್ಚಿನ ಮಹತ್ವ ಪಡೆದದ್ದು ಜ್ಞಾನದ ಸಂಚಾರ. ಮೈಲಿಗಟ್ಟಲೆ ಸಂಚರಿಸಿದ ಪರಿಣಾಮವಾಗಿ ಮಹತ್ವದ ಗ್ರಂಥಗಳು ರಚಿಸಲ್ಪಟ್ಟವು. ಆ ಮೂಲಕ ಅನೇಕ ಪ್ರದೇಶಗಳಲ್ಲಿ ಬೃಹತ್ತಾದ ಗ್ರಂಥಾಲಯಗಳು ನಿರ್ಮಿಸಲ್ಪಟ್ಟವು. ವೈವಿಧ್ಯಮಯ ಕ್ಷೇತ್ರಗಳಲ್ಲಿ ಪರಿಣಿತರಾದ ಸಮರ್ಥ ವಿದ್ವಾಂಸರು ಬೆಳಕಿಗೆ ಬಂದರು. ಅಂತಹ ವಿದ್ವಾಂಸರನ್ನು ಅರಸಿ ಸಾವಿರಾರು ಶಿಷ್ಯಂದಿರು ರೂಪುಗೊಂಡರು. ಇಸ್ಲಾಮಿನ ಜ್ಞಾನ ಪರಂಪರೆಯಲ್ಲಿ ಈ ಸಂಚಾರಗಳಿಗೆ ಅಪೂರ್ವ ಸ್ಥಾನವಿದೆ. ಒಂದು ಹದೀಸನ್ನು ನೇರವಾಗಿ ಕೇಳಲು ನೂರಾರು ಮೈಲಿಗಳ ಪ್ರಯಾಣ ಮಾಡುವುದು, ಒಬ್ಬ ವಿದ್ವಾಂಸರ ಬಳಿಯಲ್ಲಿ ಕೆಲವು ತಿಂಗಳುಗಳು ಅಥವಾ ವರ್ಷಗಳು ಅಧ್ಯಯನ ಮಾಡುವುದು, ನಂತರ ಆ ಜ್ಞಾನವನ್ನು ಮತ್ತೊಂದು ದೇಶಕ್ಕೆ ಕೊಂಡೊಯ್ಯುವುದು ಇದು ಆರಂಭಿಕ ಹಂತದಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ಶೈಕ್ಷಣಿಕ ಪದ್ಧತಿಯಾಗಿತ್ತು. ಈ ರೀತಿಯಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಹರಡಿದ್ದ ಜ್ಞಾನವು ಒಂದು ಸಕ್ರಿಯ ಜಾಲವಾಗಿ ರೂಪುಗೊಂಡಿತು. ಇದೇ ಜಾಲವು ಮಧ್ಯಯುಗೀನ ಇಸ್ಲಾಮಿಕ್ ವಲಯವನ್ನು ಬೌದ್ಧಿಕವಾಗಿ ಏಕೀಕರಿಸಿದ ಮಹಾನ್ ಶಕ್ತಿಯಾಯಿತು.
ಈ ಜ್ಞಾನಯಾನಗಳ ವೈಶಿಷ್ಟ್ಯವೆಂದರೆ ಅವು ಯಾವುದೇ ಅಧಿಕಾರವನ್ನು ಆಶ್ರಯಿಸದೆ ಜ್ಞಾನವನ್ನೇ ಪರಮ ಸಂಪತ್ತೆಂದು ಬಗೆದ ವ್ಯಕ್ತಿಗಳ ಆತ್ಮಸಾಧನೆಯಾಗಿ ಬೆಳೆಯಿತೆಂಬುದು. ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿ ರೂಪುಗೊಂಡ ‘ರಿಹ್ಲಾ ಫೀ ತಲಬಿಲ್ ಇಲ್ಮ್’— ಜ್ಞಾನಾನ್ವೇಷಣೆಯ ಪ್ರಯಾಣ ಚಾರಿತ್ರಿಕವಾಗಿ ಮುಖ್ಯವಾದುದು. ಜ್ಞಾನದಾಹಿಯಾದ ವಿದ್ಯಾರ್ಥಿಗಳು ತಮ್ಮ ಊರಿನಿಂದ ಹೊರಟು ಮದೀನಾ, ಮಕ್ಕಾ, ಕೂಫಾ, ಬಸರಾ, ಡಮಾಸ್ಕಸ್, ಕೈರೋ, ನಿಶಾಪೂರ್, ಬುಖಾರಾ, ಸಮರ್ಖಂದ್, ಬಾಗ್ದಾದ್, ಕೊರ್ಡೋಬಾ, ಕೈರುವಾನ್‌ನಂತಹ ಜ್ಞಾನಕೇಂದ್ರಗಳಿಗೆ ತೆರಳುತ್ತಿದ್ದ ದೃಶ್ಯವು ಅಂದು ಸರ್ವೇಸಾಮಾನ್ಯವಾಗಿತ್ತು. ಪರಂಪರಾಗತವಾಗಿ ಸಾಗಿ ಬಂದ ಅಮೂಲ್ಯಜ್ಞಾನವನ್ನು ಸಮರ್ಥ ಗುರುಗಳಿಂದ ನೇರವಾಗಿ ಸ್ವೀಕರಿಸುವುದು, ಅವರ ವ್ಯಕ್ತಿತ್ವವನ್ನು ಅನುಭವಿಸುವುದು, ಜ್ಞಾನ ಮತ್ತು ನೈತಿಕತೆಯ ಏಕತೆಯನ್ನು ಅರಿಯುವುದು ಇವೇ ಮೊದಲಾದ ಉದ್ದೇಶಗಳಿಗಾಗಿ ಅವರು ನಿರಂತರವಾಗಿ ಅಲೆದರು. ಹೀಗೆ ಜ್ಞಾನವು ವ್ಯಕ್ತಿಯಿಂದ ವ್ಯಕ್ತಿಗೆ, ಹೃದಯದಿಂದ ಹೃದಯಕ್ಕೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಜೀವಂತ ಪರಂಪರೆಯಾಗಿ ಹರಿಯಿತು.
ಈ ಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಇಮಾಮ್ ಅಲ್ ಬುಖಾರಿ (810 – 870) ಪ್ರಮುಖರು. ತಮ್ಮ ಯೌವನದಲ್ಲಿಯೇ ಮಧ್ಯ ಏಷ್ಯಾದ ಬುಖಾರಾದಿಂದ ಹಿಜಾಝ್, ಇರಾಕ್, ಸಿರಿಯಾ ಮತ್ತು ಈಜಿಪ್ಟ್ ಸೇರಿದಂತೆ ಅನೇಕ ಜ್ಞಾನಕೇಂದ್ರಗಳಿಗೆ ಸಂಚರಿಸಿ ಅನೇಕ ವಿದ್ವಾಂಸರ ಬಳಿಯಿಂದ ಹದೀಸ್‌ಗಳನ್ನು ಅಧ್ಯಯನ ಮಾಡಿದರು. ಇಮಾಮ್ ಮುಸ್ಲಿಮ್, ಇಮಾಮ್ ತಿರ್ಮಿದಿ, ಇಮಾಮ್ ನಸಾಈ, ಇಮಾಮ್ ಅಬೂ ದಾವೂದ್ ಹಾಗೂ ಇತರ ಮಹಾನ್ ಮುಹದ್ದಿಸರೂ ಇದೇ ಪರಂಪರೆಯನ್ನು ಅನುಸರಿಸಿದರು. ಅವರ ಪ್ರಯಾಣಗಳು ಕೇವಲ ಮಾಹಿತಿ ಸಂಗ್ರಹಣೆಯ ಉದ್ದೇಶದ್ದಾಗಿರಲಿಲ್ಲ; ಪ್ರತಿಯೊಂದು ಹದೀಸ್‌ನ ನಿರೂಪಕರ ಸರಣಿ, ಅವರ ವಿಶ್ವಾಸಾರ್ಹತೆ, ಸ್ಮರಣಶಕ್ತಿ ಮತ್ತು ಪರಸ್ಪರ ಭೇಟಿಯ ಸಾಧ್ಯತೆಯವರೆಗೂ ಸೂಕ್ಷ್ಮವಾಗಿ ಪರಿಶೀಲಿಸುವ ವೈಜ್ಞಾನಿಕ ಸಂಶೋಧನಾ ವಿಧಾನವನ್ನು ಅವರು ರೂಪಿಸಿಕೊಂಡಿದ್ದರು. ಪ್ರತಿಯೊಬ್ಬ ಹದೀಸ್ ವಿದ್ವಾಂಸರಿಗೂ ತಮ್ಮದೇ ಆದ ಸಂಶೋಧನಾ ವಿಧಾನ (research methodology) ಗಳಿದ್ದವು. ಮೂಲಪರಿಶೀಲನೆ (source criticism), ಸಾಕ್ಷ್ಯ ವಿಮರ್ಶೆ (evidence evaluation) ಮತ್ತು ತಾರ್ಕಿಕ ವಿಶ್ಲೇಷಣೆ (logical analysis) ಗೆ ಅವರು ನೀಡಿದ ಮಹತ್ವವು ಇಸ್ಲಾಮಿಕ್ ಜ್ಞಾನಸಂಪ್ರದಾಯದ ವೈಜ್ಞಾನಿಕ ಪ್ರಬುದ್ಧತೆಯನ್ನು ಸ್ಪಷ್ಟಪಡಿಸುತ್ತದೆ.

ಜ್ಞಾನದ ಈ ಪಯಣವು ಕೇವಲ ಬೌದ್ಧಿಕ ಹಿರಿಮೆಗೆ ಸೀಮಿತವಾಗಿರಲಿಲ್ಲ; ಅದು ಆತ್ಮಪರಿಷ್ಕಾರ ಮತ್ತು ವ್ಯಕ್ತಿತ್ವದ ಅಲಂಕಾರ ಸಾಧನವೂ ಆಗಿತ್ತೆಂಬುದು ಇನ್ನೊಂದು ಮಹತ್ವದ ಸಂಗತಿ. ಇದರ ಉಜ್ವಲ ಉದಾಹರಣೆಯೇ ಇಮಾಮ್ ಅಬೂ ಹಾಮಿದ್ ಅಲ್-ಗಝಾಲಿ (1058 – 1111). ಅವರು ಬಾಗ್ದಾದ್‌ನ ಪ್ರಖ್ಯಾತ ನಿಝಾಮಿಯಾ ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ತ್ಯಜಿಸಿ ಸಿರಿಯಾ, ಪ್ಯಾಲೆಸ್ಟೈನ್ ಮತ್ತು ಹಿಜಾಝ್ ಪ್ರದೇಶಗಳಲ್ಲಿ ದೀರ್ಘಕಾಲ ಸಂಚರಿಸಿ ಧ್ಯಾನ, ಆತ್ಮಪರಿಶೀಲನೆ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಅವರು ಅದನ್ನೆಲ್ಲ ಹಠಾತ್ತನೆ ತ್ಯಜಿಸಿ ಊರಿಂದೂರಿಗೆ ಅಲೆದರು. ಆತ್ಮಜ್ಞಾನವನ್ನು ಅರಸಿ ನಡೆಸಿದ ಪರ್ಯಟನೆಗಳು ಅವು ಎಂದು ಅವರೇ ಆ ನಂತರ ಬರೆದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಆ ಅನುಭವಗಳೇ ಅವರ ಚಿಂತನೆಗೆ ಆಳವಾದ ಪ್ರಭಾವವನ್ನು ಬೀರಿದವು. ಅವರ ಕೃತಿಗಳಲ್ಲಿ ತಸವ್ವುಫ್, ಬೌದ್ಧಿಕತೆ, ಆಧ್ಯಾತ್ಮಿಕತೆ, ಜ್ಞಾನ ಮತ್ತು ಆಚರಣೆಗಳ ಅಪೂರ್ವ ಸಮನ್ವಯ ಕಾಣುವುದು ಈ ಸಂಚಾರಗಳ ಪರಿಣಾಮವಾಗಿದೆ. ಅವರ ಪ್ರಮುಖ ಕೃತಿ ‘ಇಹ್ಯಾ ಉಲೂಮುದ್ದೀನ್’ – ತಸವ್ವುಫ್ (ಸೂಫಿಸಮ್) ಜ್ಞಾನಶಾಖೆಗೆ ಬುನಾದಿಯಾದ ಗ್ರಂಥವೆಂಬ ಅಭಿಪ್ರಾಯವಿದೆ. ಜ್ಞಾನವು ವ್ಯಕ್ತಿಯ ಅಂತರಂಗವನ್ನು ಪರಿಷ್ಕರಿಸಿ ಜೀವನವನ್ನು ರೂಪಿಸದಿದ್ದರೆ ಅದು ಅಪೂರ್ಣವೆಂದು ಅವರು ಪ್ರತಿಪಾದಿಸುತ್ತಾರೆ. ಮಧ್ಯಯುಗೀನ ಮುಸ್ಲಿಮ್ ವಿದ್ವಾಂಸರ ಪೈಕಿ ಸಂಚಾರಿಗಳೆಂದು ಗುರುತಿಸಲ್ಪಡುವ ಅನೇಕರ ಪೈಕಿ ಅಲ್ ಗಝಾಲಿಯವರು ವಿಶಿಷ್ಟವಾಗಿ ನಿಲ್ಲುವುದು ಈ ಕಾರಣಕ್ಕೆ.
ಒಂಬತ್ತನೇ ಶತಮಾನದಿಂದ ಶುರುವಾದ ಸುವರ್ಣಯುಗದ ಕಾಲದಲ್ಲಿ ಧಾರ್ಮಿಕ ಜ್ಞಾನಾಣ್ವೇಷಣೆಗಿಂತ ವೈಜ್ಞಾನಿಕವಾದ ಅಥವಾ ಕೌಶಲ್ಯಾಧಾರಿತ ವಿಜ್ಞಾನ ವಿಭಾಗಗಳತ್ತ ಅನೇಕರು ಆಸಕ್ತಿಯನ್ನು ಬೆಳೆಸಿದರು. ಒಂದು ರೀತಿಯ ಬೌದ್ಧಿಕ ವರ್ತುಲವು (intellectual circle) ಅಲ್ಲಿ ರೂಪುಗೊಂಡಿತು. ಆ ಕಾಲದ ಅನೇಕ ಜ್ಞಾನಪಿಪಾಸುಗಳ ಬೌದ್ಧಿಕ ಸಂಚಾರಗಳು ಇಸ್ಲಾಮಿಕ್ ನಾಗರಿಕತೆಯನ್ನು ವಿಶ್ವವ್ಯಾಪಿಯಾಗಿಸಿದವು. ಅರಬ್ಬೀ ಭಾಷೆಯು ವಿಜ್ಞಾನ, ತತ್ತ್ವಶಾಸ್ತ್ರ, ವೈದ್ಯಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಮತ್ತು ಧರ್ಮಶಾಸ್ತ್ರಗಳ ಸಾಮಾನ್ಯ ಮಾಧ್ಯಮವಾಗಿ ರೂಪುಗೊಂಡಿತು. ಈ ಘಟ್ಟದಲ್ಲಿ ಪರ್ಷಿಯನ್, ಸಿರಿಯಕ್, ಗ್ರೀಕ್, ಸಂಸ್ಕೃತ, ಲ್ಯಾಟಿನ್ ಸೇರಿದಂತೆ ಅನೇಕ ಭಾಷೆಗಳ ಜ್ಞಾನವನ್ನು ಅರಬ್ಬೀ ಭಾಷೆಗೆ ಅನುವಾದಿಸಿ, ಪುನಃ ಅದನ್ನು ವಿಶ್ವದಾದ್ಯಂತ ಹಂಚುವ ಮಹತ್ವದ ಕೆಲಸಗಳು ನಡೆದವು. 9 ನೇ ಶತಮಾನದಲ್ಲಿ ಅಬ್ಬಾಸೀ ಖಲೀಫಾ ಹಾರೂನ್ ರಶೀದ್ ಬಾಗ್ದಾದ್‌ನಲ್ಲಿ ಸ್ಥಾಪಿಸಿ, ಖಲೀಫಾ ಅಲ್ ಮಅ್‌ಮೂನ್ ರ ಕಾಲದಲ್ಲಿ ಉತ್ತುಂಗಕ್ಕೇರಿದ ‘ಬೈತುಲ್ ಹಿಕ್ಮಾ’ ಕೇಂದ್ರವು ಈ ಬೌದ್ಧಿಕ ವಿನಿಮಯದ ಉಜ್ವಲ ಸಂಕೇತವಾಗಿತ್ತು. ಇಲ್ಲಿ ಗ್ರೀಕ್ ಮತ್ತು ಭಾರತೀಯ ತತ್ವಶಾಸ್ತ್ರ, ಪರ್ಷಿಯನ್ ಮೂಲದ ಜ್ಞಾನ ಮತ್ತು ಇತರ ನಾಗರಿಕತೆಗಳ ವೈಜ್ಞಾನಿಕ ಪರಂಪರೆಗಳು ಭಾಷಾಂತರಗೊಂಡವು; ವಿಮರ್ಶಿಸಲ್ಪಟ್ಟವು; ಪರಿಷ್ಕೃತವಾದವು ಮತ್ತು ಹೊಸ ಸೃಜನಶೀಲತೆಯೊಂದಿಗೆ ಮರುರೂಪಿಸಲ್ಪಟ್ಟವು. ಬೈತುಲ್ ಹಿಕ್ಮಾ ಕೇವಲ ಒಂದು ಗ್ರಂಥಾಲಯವಾಗಿರಲಿಲ್ಲ; ಅನುವಾದ ಕೇಂದ್ರ, ಸಂಶೋಧನಾ ಸಂಸ್ಥೆ, ಶಿಕ್ಷಣ ಕೇಂದ್ರ ಮತ್ತು ವೀಕ್ಷಣಾಲಯ (Observatory) ಆಗಿಯೂ ಅದು ಕಾರ್ಯನಿರ್ವಹಿಸಿತು. ಬೀಜಗಣಿತದ ಪಿತಾಮಹ ಅಲ್ ಖವಾರಿಝ್ಮಿ (780–850), ಗ್ಯಾಲನ್, ಹಿಪ್ಪೊಕ್ರೇಟಿಸ್, ಅರಿಸ್ಟಾಟಲ್ ಮೊದಲಾದವರ ಅನೇಕ ಕೃತಿಗಳನ್ನು ಅರಬಿಗೆ ಅನುವಾದಿಸಿ ಇಸ್ಲಾಮಿಕ್ ಜ್ಞಾನಪರಂಪರೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಕ್ರೈಸ್ತ ವೈದ್ಯ ಹುನೈನ್ ಬಿನ್ ಇಸ್ಹಾಖ್ (809–873), ತತ್ವಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ಖಗೋಳಶಾಸ್ತ್ರ, ಸಂಗೀತ, ಬೆಳಕಿನ ವಿಜ್ಞಾನ (Optics) ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ‘ಅರಬ್ಬರ ಮೊದಲ ತತ್ವಜ್ಞಾನಿ’ ಎಂದು ಕರೆಯಲ್ಪಡುವ ಅಲ್ ಕಿಂದಿ (801–873) ಮುಂತಾದ ಮೇಧಾವಿಗಳು ಇದೇ ಬೈತುಲ್ ಹಿಕ್ಮಾದ ಕೊಡುಗೆಗಳು.
ಈ ಪ್ರಕ್ರಿಯೆಯ ಫಲವಾಗಿ ಮಾನವ ಚಿಂತನೆಗೆ ಹೊಸ ಆಯಾಮಗಳು ದೊರಕಿದವು. ಭಾರತೀಯ ಸಂಖ್ಯಾ ಪದ್ಧತಿ ಮತ್ತು ಶೂನ್ಯದ ಕಲ್ಪನೆ ಅರಬ್ಬೀ ಜಗತ್ತಿನ ಮೂಲಕ ವಿಶ್ವದಾದ್ಯಂತ ತಲಪಿತು; ಗ್ರೀಕ್ ವೈದ್ಯಶಾಸ್ತ್ರವು ಮುಸ್ಲಿಮ್ ವೈದ್ಯರ ಕೈಯಲ್ಲಿ ಪ್ರಯೋಗಾತ್ಮಕ ಶಕ್ತಿಯನ್ನು ಪಡೆದುಕೊಂಡಿತು; ಖಗೋಳಶಾಸ್ತ್ರವು ನಿಖರ ಅವಲೋಕನಗಳ ಮೂಲಕ ಹೊಸ ಎತ್ತರಕ್ಕೇರಿತು; ಭೂಗೋಳಶಾಸ್ತ್ರವು ಪ್ರವಾಸಿಗರ ಅನುಭವಗಳಿಂದ ವಾಸ್ತವಿಕತೆಯನ್ನು ಅಳವಡಿಸಿಕೊಂಡಿತು. ಈ ಜ್ಞಾನವಿಕಾಸದ ಹಾದಿಯಲ್ಲಿ ನಿರಂತರ ಸಂಚಾರವು ಮಹತ್ತರ ಪಾತ್ರವನ್ನು ವಹಿಸಿತು. ಒಂದು ನಗರದಲ್ಲಿ ಹುಟ್ಟಿದ ಆಲೋಚನೆ ಮತ್ತೊಂದು ನಗರದಲ್ಲಿ ಪರಿಪಕ್ವವಾಯಿತು; ಒಂದು ದೇಶದಲ್ಲಿ ರೂಪುಗೊಂಡ ಗ್ರಂಥ ಮತ್ತೊಂದು ದೇಶದಲ್ಲಿ ವ್ಯಾಖ್ಯಾನಿಸಲ್ಪಟ್ಟು ಹೊಸ ರೂಪ ತಾಳಿತು. ಹೀಗೆ ಇಸ್ಲಾಮಿಕ್ ಜಗತ್ತು ಒಂದೇ ಬೌದ್ಧಿಕ ವಲಯವಾಗಿ ಕಾರ್ಯನಿರ್ವಹಿಸಿತು.

ಭೂಗೋಳಶಾಸ್ತ್ರ ಮತ್ತು ಪ್ರವಾಸ ಸಾಹಿತ್ಯದಲ್ಲಿ ಅಲ್-ಇದ್ರೀಸಿ (1100-1166) ಅವರ ಕೊಡುಗೆ ವಿಶ್ವಮಟ್ಟದಲ್ಲಿ ವಿಶೇಷವಾಗಿ ಸ್ಮರಣೀಯವಾಗಿದೆ. ಸಿಸಿಲಿಯ ಇಮ್ಮಡಿ ರೋಜರ್ ನ ಅರಮನೆಯ ಆಶ್ರಯದಲ್ಲಿ ಅವರು ರಚಿಸಿದ ವಿಶ್ವನಕ್ಷೆ ಮತ್ತು ಭೌಗೋಳಿಕ ಗ್ರಂಥವು (ನುಝ್‌ಹತುಲ್ ಮುಶ್ತಾಖ್ ಫೀ ಇಶ್ತಿರಾಖಿಲ್ ಆಫಾಖ್) ಮಧ್ಯಯುಗದ ಅತ್ಯಂತ ನಿಖರ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಅದು ಕೇವಲ ಕಲ್ಪನೆಯ ನಕ್ಷೆಯಾಗಿರಲಿಲ್ಲ; ವ್ಯಾಪಾರಿಗಳು, ನಾವಿಕರು ಮತ್ತು ಯಾತ್ರಿಕರಿಂದ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ಸಂಗ್ರಹವಾಗಿತ್ತು. ಅದೇ ರೀತಿ ಇಬ್ನ್ ಬತ್ತುತಾ (1304-1369) ಅವರ ಸುಮಾರು ಮೂರು ದಶಕಗಳ ವಿಶ್ವಸಂಚಾರ ಮಾನವ ಇತಿಹಾಸದ ಅತ್ಯಂತ ವಿಸ್ತಾರವಾದ ವೈಯಕ್ತಿಕ ಪ್ರವಾಸಗಳಲ್ಲಿ ಒಂದಾಗಿದೆ. ಉತ್ತರ ಆಫ್ರಿಕಾದ ಮೊರೊಕ್ಕೊದಿಂದ ಆರಂಭಿಸಿ ಈಜಿಪ್ಟ್, ಹಿಜಾಝ್ (ಮಕ್ಕಾ ಮತ್ತು ಮದೀನಾ), ಸಿರಿಯಾ ಮತ್ತು ಇರಾಕ್, ಪರ್ಷಿಯಾ (ಇರಾನ್), ಯಮನ್ ಮತ್ತು ಒಮಾನ್, ಪೂರ್ವ ಆಫ್ರಿಕಾ, ಅನಾತೋಲಿಯಾ (ಇಂದಿನ ಟರ್ಕಿ), ಮಧ್ಯ ಏಷ್ಯಾ, ಭಾರತ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಆಗ್ನೇಯ ಏಷ್ಯಾ, ಚೀನಾ ತನಕ ಅವರು ಸಂಚರಿಸಿ ವಿವಿಧ ಸಮಾಜಗಳ ರಾಜಕೀಯ, ನ್ಯಾಯವ್ಯವಸ್ಥೆ, ಶಿಕ್ಷಣ, ಧಾರ್ಮಿಕ ಆಚರಣೆ ಮತ್ತು ದೈನಂದಿನ ಜೀವನದ ಅಮೂಲ್ಯ ಚಿತ್ರಣಗಳನ್ನು ‘ರಿಹ್ಲ ಇಬ್ನ್ ಬತೂತ’ ಎಂಬ ಹೆಸರಿನಲ್ಲಿ ದಾಖಲಿಸಿದರು. ಅವರ ಪ್ರವಾಸ ವಿವರಣೆಯು ಮಧ್ಯಯುಗದ ಜಾಗತಿಕ ನಾಗರಿಕತೆಯ ಜೀವಂತ ದಾಖಲೆಯೆಂಬಂತಿದೆ.
ನಾಗರಿಕತೆಯ ಏಳುಬೀಳುಗಳ ಚರಿತ್ರೆಯಲ್ಲಿ ಸಮುದ್ರವು ಯಾವತ್ತಿಗೂ ಒಂದು ವಿಚಿತ್ರ ವಿರೋಧಾಭಾಸವನ್ನು ಹೊಂದಿದೆ. ಒಂದು ಕಡೆ ಅದು ಭೂಭಾಗಗಳನ್ನು ಬೇರ್ಪಡಿಸಿದರೆ, ಮತ್ತೊಂದು ಕಡೆ ಅವುಗಳನ್ನು ಸಂಪರ್ಕಿಸುವ ಮಹಾಮಾರ್ಗವಾಗಿ ಕೆಲಸ ಮಾಡಿದೆ. ಸಮುದ್ರವನ್ನು ಭಯದಿಂದ ನೋಡಿದ ಜನಾಂಗಗಳು ತಮ್ಮ ಗಡಿಗಳೊಳಗೆ ಸೀಮಿತವಾದರೆ, ಅದನ್ನು ಅವಕಾಶವೆಂದು ಕಂಡ ಸಮುದಾಯಗಳು ಇತಿಹಾಸವನ್ನು ನಿರೂಪಿಸಿದವು. ಮುಸ್ಲಿಮರು ಈ ಎರಡನೆಯ ವಿಭಾಗಕ್ಕೆ ಸೇರಿದವರು. ಅರಬ್ ನಾವಿಕರು ಋತುಮಾರುತಗಳ ಚಲನವಲನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಗಾಳಿಯ ದಿಕ್ಕುಗಳನ್ನು ಅರ್ಥಮಾಡಿಕೊಂಡು, ನಕ್ಷತ್ರಗಳ ನೆರವಿನಿಂದ ಸಮುದ್ರದ ಮಧ್ಯದಲ್ಲಿ ದಿಕ್ಕನ್ನು ನಿರ್ಧರಿಸುವ ಅದ್ಭುತ ಪರಿಣತಿಯನ್ನು ಗಳಿಸಿದರು. ಏಳನೆಯ ಶತಮಾನದಿಂದಲೇ ಅರಬ್ಬೀ ಸಮುದ್ರ, ಕೆಂಪು ಸಮುದ್ರ, ಪರ್ಷಿಯನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳಲ್ಲಿ ಅವರ ನೌಕಾಯಾನವು ಚರಿತ್ರೆಯನ್ನು ಬರೆಯಿತು. ಬಸರಾ, ಸೀರಾಫ್, ಅದನ್, ಮಸ್ಕತ್, ಜಿದ್ದಾ ಮತ್ತು ಮಲಬಾರ್ ತೀರದ ಬಂದರುಗಳು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರಗಳಾದವು. 8ನೇ ಶತಮಾನದಿಂದ 15 ನೇ ಶತಮಾನದವರೆಗೆ ಈ ಬಂದರುಗಳ ಜಾಲವು ಹಿಂದೂ ಮಹಾಸಾಗರದ ವ್ಯಾಪಾರವನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಈ ಬಂದರುಗಳಿಂದ ಹೊರಟ ಹಡಗುಗಳು ಪೂರ್ವ ಆಫ್ರಿಕಾದ ಕರಾವಳಿಯಿಂದ ಚೀನಾದ ‘ಗ್ವಾಂಗ್‌ಝೌ’ (Guangzhou) ವರೆಗೆ ನಿರಂತರ ಸಂಚಾರ ನಡೆಸುತ್ತಿದ್ದವು. ಈ ಸಾಗರಪಥವು ‘ಸಮುದ್ರದ ರೇಷ್ಮೆ ಮಾರ್ಗ’ (Maritime silk road) ಎಂದೇ ಪ್ರಸಿದ್ಧವಾಗಿದೆ.

ಮುಸ್ಲಿಮರ ಈ ನೌಕಾಯಾನದ ಬೆಳವಣಿಗೆಯಲ್ಲಿ ಅಬ್ಬಾಸಿದ್ ಆಡಳಿತ ಕಾಲಘಟ್ಟವು ವಿಶೇಷ ಮಹತ್ವ ಪಡೆದಿದೆ. ಬಾಗ್ದಾದ್ ನಗರವು ಜ್ಞಾನರಾಜಧಾನಿಯಾಗಿ ಬೆಳೆಯುತ್ತಿದ್ದಾಗ, ಅದರ ಬಂದರು ಪಟ್ಟಣವಾದ ಬಸರಾ ವಿಶ್ವ ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿತು. ಅಲ್ಲಿಂದ ಹೊರಟ ವ್ಯಾಪಾರಿಗಳು ಭಾರತೀಯ ಕರಾವಳಿ, ಶ್ರೀಲಂಕಾ, ಸುಮಾತ್ರಾ, ಜಾವಾ, ಮಲಯಾ ಮತ್ತು ಚೀನಾದೊಂದಿಗೆ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. ಮಸಾಲೆ ಪದಾರ್ಥಗಳು, ರೇಷ್ಮೆ, ಅಮೂಲ್ಯ ರತ್ನಗಳು, ಸುಗಂಧದ್ರವ್ಯಗಳು, ಔಷಧೀಯ ಸಸ್ಯಗಳು ಮತ್ತು ವೈವಿಧ್ಯಮಯ ಉತ್ಪನ್ನಗಳೊಂದಿಗೆ ಅವರು ವೈಜ್ಞಾನಿಕ ಮಾಹಿತಿಯನ್ನೂ, ಭೌಗೋಳಿಕ ಜ್ಞಾನವನ್ನೂ ಮತ್ತು ಸಾಂಸ್ಕೃತಿಕ ಅನುಭವಗಳನ್ನೂ ಹೊತ್ತು ತರುತ್ತಿದ್ದರು. ಈ ಸಂಚಾರಗಳ ದಾಖಲೆಗಳು ಅರಬ್ ಭೂಗೋಳಶಾಸ್ತ್ರದ ಬೆಳವಣಿಗೆಗೆ ಮಹತ್ತರವಾದ ಆಧಾರಗಳಾದವು.
ವ್ಯಾಪಾರದ ಉದ್ದೇಶದಿಂದ ಸಮುದ್ರಕ್ಕಿಳಿದ ಮುಸ್ಲಿಮ್ ನಾವಿಕರು ಖಗೋಳಶಾಸ್ತ್ರವನ್ನು ನೌಕಾಯಾನದೊಂದಿಗೆ ಸಮನ್ವಯಗೊಳಿಸಿ ದಿಕ್ಕು ನಿರ್ಣಯದ ವಿಧಾನಗಳನ್ನು ಪರಿಷ್ಕರಿಸಿದರು. ನಕ್ಷತ್ರಗಳು, ಸೂರ್ಯ- ಚಂದ್ರರ ಸ್ಥಾನಗಳು ಮತ್ತು ಋತುಮಾರುತಗಳ (Monsoon winds) ಚಲನವಲನವನ್ನು ಆಧರಿಸಿ ಸುರಕ್ಷಿತ ಸಮುದ್ರ ಮಾರ್ಗಗಳನ್ನು ಕಂಡುಹಿಡಿದರು. ಗ್ರೀಕರ ಕೊಡುಗೆಯೆನ್ನಲಾಗುವ ಪ್ರಾಚೀನ ಆಸ್ಟ್ರೋಲಾಬ್ (Astrolabe) ನ್ನು ಮತ್ತಷ್ಟು ನಿಖರಗೊಳಿಸಿ ಸಮುದ್ರಯಾನಕ್ಕೆ ಹೊಂದುವಂತೆ ಬಳಸಿದರು. ಈ ಜ್ಞಾನವು ನಂತರ ಯೂರೋಪಿನ ನೌಕಾಯಾನ ಮತ್ತು ಭೌಗೋಳಿಕ ಅನ್ವೇಷಣೆಗಳ ಬೆಳವಣಿಗೆಗೂ ಮಹತ್ವದ ಪ್ರಭಾವ ಬೀರಿತು ಎಂದು ಜಾರ್ಜ್ ಎಫ್. ಹೌರಾನಿ, ಡೇವಿಡ್ ಎ. ಕಿಂಗ್, ಜಾರ್ಜ್ ಸಲೀಬಾ ಮತ್ತು ಇತರ ವಿಜ್ಞಾನ ಇತಿಹಾಸಕಾರರ ಅಧ್ಯಯನಗಳು ಸೂಚಿಸುತ್ತವೆ. ಹದಿನಾಲ್ಕನೇ ಶತಮಾನದಲ್ಲಿ ನಡೆದ ಯೂರೋಪಿನ ನವೋದಯಕ್ಕೆ ಮಧ್ಯಯುಗೀನ ಮುಸ್ಲಿಮ್ ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ಚಿಂತಕರ ಕೊಡುಗೆ ಸಾಕಷ್ಟಿದೆ ಎಂಬುದನ್ನು ರಾಬರ್ಟ್ ಬ್ರಿಫಾಲ್ಟ್ (Making of Humanity) ಮತ್ತು ಫಿಲಿಪ್ ಕೆ. ಹಿಟ್ಟೀ (History of Arabs) ತಮ್ಮ ಕೃತಿಗಳಲ್ಲಿ ಉಲ್ಲೇಖಿಸುತ್ತಾರೆ.

(Al-Masudi)
ಈ ಹಿನ್ನೆಲೆಯಲ್ಲೇ ಸುಲೈಮಾನ್ ಅಲ್ ತಾಜಿರ್ (ಕೃತಿ: ಅಖ್‌ಬಾರ್ ಅಸ್ಸೀನ್ ವಲ್ ಹಿಂದ್), ಅಬೂ ಝೈದ್ ಅಲ್ ಸೀರಾಫಿ, ಅಲ್ ಮಸುಊದಿ (ಕೃತಿ: ಮುರೂಜು ಝಹಬ್ ವ ಮಆದಿನುಲ್ ಜೌಹರ್) , ಅಹ್ಮದ್ ಇಬ್ನ್ ಮಾಜಿದ್ (ಕೃತಿ: ಕಿತಾಬುಲ್ ಫವಾಇದ್ ಫೀ ಉಸೂಲಿ ಇಲ್ಮಿಲ್ ಬಹ್ರಿ ವಲ್ ಖವಾಇದ್) ರಂತಹ ನಾವಿಕರು ಮತ್ತು ಯಾತ್ರಿಕರ ಕೃತಿಗಳು ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವರ ಬರಹಗಳಲ್ಲಿ ಮಾರ್ಗನಕ್ಷೆಗಳ ಜೊತೆಗೆ ವಿವಿಧ ದೇಶಗಳ ಸಾಮಾಜಿಕ ಜೀವನ, ಆರ್ಥಿಕ ವ್ಯವಸ್ಥೆ, ಧಾರ್ಮಿಕ ಆಚರಣೆಗಳು, ನೈಸರ್ಗಿಕ ಸಂಪತ್ತು ಮತ್ತು ಜನರ ಜೀವನಶೈಲಿಗಳ ಸೂಕ್ಷ್ಮ ಚಿತ್ರಣಗಳೂ ಉಲ್ಲೇಖಿತವಾಗಿವೆ. ಇಂತಹ ಪ್ರವಾಸ ಸಾಹಿತ್ಯವು ಇತಿಹಾಸ, ಭೂಗೋಳ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳಿಗೆ ಅಮೂಲ್ಯ ಮೂಲಸಾಧನಗಳಾಯಿತು. ನಂತರದ ಯೂರೋಪಿಯನ್ ಅನ್ವೇಷಕರೂ ಅರಬ್ ಭೌಗೋಳಿಕ ಜ್ಞಾನದಿಂದ ವಿವಿಧ ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಅನೇಕ ಸಂಶೋಧಕರು ಒಪ್ಪಿಕೊಂಡಿದ್ದಾರೆ.
ಈ ಬೌದ್ಧಿಕ ಸಂಚಾರಕ್ಕೆ ಸಮಾನಾಂತರವಾಗಿ ಇನ್ನೊಂದು ಮಹತ್ತರವಾದ ಪ್ರವಾಹವೂ ಮುಸ್ಲಿಮ್ ಸಮುದಾಯವನ್ನು ಬೆಳಗುತ್ತಿತ್ತು. ಅದು ಸೂಫಿಗಳ, ಔಲಿಯಾಗಳ ಮತ್ತು ಧರ್ಮಪ್ರಚಾರಕರ ಸಂಚಾರವಾಗಿತ್ತು. ಅವರ ಕೈಯಲ್ಲಿ ಖಡ್ಗವಿರಲಿಲ್ಲ; ಅವರ ತುಟಿಗಳಲ್ಲಿ ಪ್ರೀತಿಯ ಭಾಷೆ ಇತ್ತು. ಅವರ ಬಳಿ ಅಧಿಕಾರದ ಬಲವಿರಲಿಲ್ಲ; ಆದರೆ ಆಕರ್ಷಕ ವ್ಯಕ್ತಿತ್ವದ ಪ್ರಭಾವವಿತ್ತು. ಅವರ ಗುರಿ ಸಾಮ್ರಾಜ್ಯಗಳ ನಿರ್ಮಾಣವಾಗಿರಲಿಲ್ಲ; ಮಾನವನ ಅಂತರಂಗದ ಉದ್ಧಾರವಾಗಿತ್ತು. ಅವರು ಭಾಷೆಯ ಗೋಡೆಗಳನ್ನು ಮೀರಿ ಪ್ರೀತಿಯ ಭಾಷೆಯಲ್ಲಿ ಮಾತನಾಡಿದರು; ಜನಾಂಗದ ಗಡಿಗಳನ್ನು ಮೀರಿ ಮಾನವೀಯತೆಯ ಬಾಂಧವ್ಯವನ್ನು ಗಟ್ಟಿಗೊಳಿಸಿದರು; ಸ್ಥಳೀಯ ಸಂಸ್ಕೃತಿಯನ್ನು ಧ್ವಂಸಗೊಳಿಸುವ ಬದಲು ಅದರಲ್ಲಿದ್ದ ಶ್ರೇಷ್ಠ ಮೌಲ್ಯಗಳನ್ನು ಗೌರವಿಸಿ, ನೈತಿಕತೆ ಮತ್ತು ದೈವಭಕ್ತಿಯೊಂದಿಗೆ ಸಂಯೋಜಿಸಿದರು.

ಸೂಫಿಗಳ ಸಂಚಾರವು ಧರ್ಮದ ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯ (ಮಿಶನರಿ) ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನ ಯಾವ ಪ್ರದೇಶದ ಸೂಫೀ ದರವೇಶಿಗಳ ಖಾನಖಾಹಗಳನ್ನು, ಕುಟೀರಗಳನ್ನು ಅಥವಾ ಅವರು ನೆಲೆಸುತ್ತಿದ್ದ ಪ್ರದೇಶಗಳನ್ನು ಅಧ್ಯಯನ ಮಾಡಿದರೆ ಈ ಅಭಿಪ್ರಾಯವು ಸತ್ಯಕ್ಕೆ ದೂರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸೂಫೀಗಳ ಸಂಚಾರವು ವಿಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯನ್ನು ನಿರ್ಮಿಸಿದೆ. ಅವರು ಸ್ಥಳೀಯ ಭಾಷೆಗಳನ್ನು ಕಲಿತು, ಜನರ ಜೀವನಶೈಲಿಯನ್ನು ಅರ್ಥಮಾಡಿಕೊಂಡು, ಅವರ ನೋವು- ನಲಿವುಗಳಲ್ಲಿ ಪಾಲ್ಗೊಂಡರು. ಜನರ ಸಂಸ್ಕೃತಿಯನ್ನು ತಿರಸ್ಕರಿಸುವ ಬದಲು ಅದರಲ್ಲಿದ್ದ ಉತ್ತಮ ಮೌಲ್ಯಗಳನ್ನು ಅಪ್ಪಿಕೊಂಡರು. ಪರಿಣಾಮವಾಗಿ ಇಸ್ಲಾಮಿನ ವಿಶ್ವಮಾನವ ಸಂದೇಶವು ವಿವಿಧ ದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಸಹಜವಾಗಿ ಬೆರೆಯಿತು. ಇದೇ ಕಾರಣದಿಂದ ಏಷ್ಯಾ ಮತ್ತು ಆಫ್ರಿಕಾದ ಅನೇಕ ಪ್ರದೇಶಗಳಲ್ಲಿ ಇಸ್ಲಾಮಿನ ಸಾಂಸ್ಕೃತಿಕ ಬೇರುಗಳು ಸೂಫಿಗಳ ಪಾದಸ್ಪರ್ಶದಿಂದ ಆಳವಾಗಿ ಬೇರೂರಿದವು.
ಭಾರತೀಯ ತೀರಪ್ರದೇಶಗಳಲ್ಲಿ ಇದೇ ರೀತಿಯ ಅವಸ್ಥೆಯನ್ನು ಕಾಣಬಹುದು. ಅರಬ್ ವ್ಯಾಪಾರಿಗಳು ಮತ್ತು ಸೂಫಿಗಳು ಶತಮಾನಗಳ ಹಿಂದೆಯೇ ಮಲಬಾರ್ ಹಾಗೂ ಕರಾವಳಿ ಕರ್ನಾಟಕವನ್ನು ತಲಪಿದರು. ಅವರು ವ್ಯಾಪಾರದ ಜೊತೆಗೆ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಆದರ್ಶವನ್ನೂ ತಂದರು. ಅವರ ವ್ಯವಹಾರದಲ್ಲಿದ್ದ ಸತ್ಯನಿಷ್ಠೆ ಹಾಗೂ ವರ್ತನೆಯಲ್ಲಿದ್ದ ವಿಧೇಯ ಗುಣವು ಸ್ಥಳೀಯ ಜನರಲ್ಲಿ ಗೌರವವನ್ನು ಹುಟ್ಟಿಸಿತು. ಅನೇಕ ಕಡೆಗಳಲ್ಲಿ ಮಸ್ಜಿದುಗಳು ಕೇವಲ ಪ್ರಾರ್ಥನಾ ಕೇಂದ್ರಗಳಾಗಿರದೆ, ಶಿಕ್ಷಣ, ಸಾಮಾಜಿಕ ಸಹಕಾರ ಮತ್ತು ಸಾಂಸ್ಕೃತಿಕ ಕೊಡುಕೊಳೆಯ ಕೇಂದ್ರಗಳಾಗಿದ್ದವು. ಈ ಸಂಬಂಧವು ಇಂದಿಗೂ ಭಾರತದ ಸಾಮಾಜಿಕ ರಂಗದಲ್ಲಿ ಎದ್ದು ಕಾಣುತ್ತದೆ.
ಈ ಎಲ್ಲ ಉದಾಹರಣೆಗಳು ಒಂದು ಮೂಲಭೂತ ತತ್ವವನ್ನು ಸ್ಪಷ್ಟಪಡಿಸುತ್ತವೆ. ಜ್ಞಾನವು ಸ್ಥಾವರ ಸ್ಥಿತಿಯಲ್ಲಿ ಕ್ಷೀಣಿಸುತ್ತದೆ; ಸಂಚಾರಿ ಸ್ಥಿತಿಯಲ್ಲಿ ವಿಕಸಿಸುತ್ತದೆ. ಒಂದು ಸಂಸ್ಕೃತಿ ತನ್ನೊಳಗೆ ಮಾತ್ರ ಸೀಮಿತವಾದಾಗ ಅದು ನಿಧಾನವಾಗಿ ಕುಗ್ಗುತ್ತದೆ. ಆದರೆ ಅದು ಇತರ ಸಂಸ್ಕೃತಿಗಳೊಂದಿಗೆ ಮುಕ್ತ ಸಂವಾದ ನಡೆಸಿದಾಗ ತನ್ನ ಮೂಲತತ್ವವನ್ನು ಕಳೆದುಕೊಳ್ಳದೆ ಹೊಸ ಸೃಜನಶೀಲತೆಯನ್ನು ಪಡೆಯುತ್ತದೆ. ಇಸ್ಲಾಮಿಕ್ ನಾಗರಿಕತೆಯ ಸುವರ್ಣಯುಗದ ವೈಭವಕ್ಕೆ ಕಾರಣ ಇದೇ. ಅದು ತನ್ನ ಆತ್ಮವಿಶ್ವಾಸವನ್ನು ಕಾಪಾಡಿಕೊಂಡೇ ಇತರ ನಾಗರಿಕತೆಗಳಿಂದ ಕಲಿಯಿತು, ಅವುಗಳನ್ನು ವಿಮರ್ಶಿಸಿತು ಮತ್ತು ಹೊಸರೂಪ ನೀಡಿ ಅವುಗಳನ್ನು ಪುನರುದ್ಧರಿಸಿತು.
~ ಡಾ. ಸಿ.ಎಂ. ಹನೀಫ್ ಅಮ್ಜದಿ

ಕವಿ, ಗೀತೆ ರಚನೆಕಾರ, ಲೇಖಕರು. ಸುಳ್ಯ ತಾಲೂಕಿನ ಬೆಳ್ಳಾರೆ ಇವರ ಊರು. ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಹಾಗೂ ಉತ್ತರ ಪ್ರದೇಶದ ಜಾಮಿಅ ಅಮ್ಜದಿಯಾ ಸಂಸ್ಥೆಯಲ್ಲಿ ‘ರಝಾ ಅಮ್ಜದಿ’ ಧಾರ್ಮಿಕ ಪದವಿ ಪಡೆದಿದ್ದಾರೆ. ‘ಅನುರಾಗ ದೀಪ್ತಿ’ ಕವನ ಸಂಕಲನ ಮತ್ತು ಆಲಾ ಹಝ್ರತ್ ಇಮಾಮ್ ಅಹ್ಮದ್ ರಝಾ ಖಾನ್ ಬರೇಲ್ವಿ ವಿರಚಿತ ‘ಹದಾಇಖೇ ಬಖ್ಶಿಶ್’ ಕಾವ್ಯದ ಕನ್ನಡ ಅನುವಾದ ‘ಔದಾರ್ಯದ ಉದ್ಯಾನ’ ಇವರ ಪ್ರಕಟಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿ ಲೇಖನ, ಕವಿತೆ, ಅನುವಾದಗಳು ಪ್ರಕಟಗೊಂಡಿವೆ. ಡಾ. ಹುಸೈನ್ ರಂಡತ್ತಾನಿ ಅವರ ‘ಸೂಫಿಸಂ ಇಸ್ಲಾಮ್ ಜಿಹಾದ್’ ಕೃತಿಯನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ಸದ್ಯದಲ್ಲೆ ಪ್ರಕಟಗೊಳ್ಳಲಿದೆ.