ಸೂಫಿ ಸಿದ್ಧಾಂತ
ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ ಪ್ರವರ್ಧಮಾನಕ್ಕೆ ಬಂದ ಸೂಫಿ ಪಂಥಗಳಲ್ಲಿ ದೈವವನ್ನು ಪ್ರಿಯಕರ, ಸಾಕಿ, ಮದಿರೆ, ಸಂಗೀತ, ಕಾವ್ಯಗಳ ರೂಪಕಗಳ ಮೂಲಕ ಸಾಕಾರ ರೂಪ ನೀಡಿವೆ. ಇದು, “ದೈವ ನಿನ್ನ ಕಣ್ಣಿಗೆ ಕಾಣುವವರೆಗೂ ಪ್ರಾರ್ಥಿಸು”, ಎಂಬ ಪ್ರವಾದಿಗಳ ಮಾತಿನ ಇನ್ನೊಂದು ರೂಪವೇ ಆಗಿದೆ.
ಭಕ್ತಿ ಆಚರಣೆ ಸ್ವರೂಪ ಮತ್ತು ಗುರು
ಸೂಫಿಗಳ ಇಂಥ ಸಾನಿರಾಕಾರ ಅಥವ ಸನಿರ್ಗುಣದ ಆಚರಣೆಯ ಬೀಜಗಳು ಕ್ರಿ.ಶ ಮೂರನೆಯ ಶತಮಾನದಲ್ಲಿ ಆಸುಪಾಸಲ್ಲಿ ಪ್ಲೆಟೋನಸ್ ಅನುಯಾಯಿಗಳಿಂದ ಪ್ರವರ್ಧಮಾನಕ್ಕೆ ಬಂದ ನವ ಪ್ಲೆಟೋನಸ್ ಸಿದ್ಧಾಂತ ಮತ್ತು ಇತರ ತತ್ವಗಳಲ್ಲಿ ಹುದುಗಿರುವುದನ್ನು ಅಧ್ಯಯನಗಳು ಗುರುತಿಸುತ್ತವೆ.
ಇಸ್ಲಾಂಪೂರ್ವ ಧರ್ಮ ಸಿದ್ಧಾಂತಗಳಾದ ಅಗ್ನಿಪೂಜಕ ಜರಾತೃಷ್ಟ್ರ ತತ್ವ, ಕ್ರಿಸ್ತ ಸಿದ್ಧಾಂತ, ಯಹೂದಿ ಹಾಗೂ ಗ್ರೀಕ್‌ಮೂಲದ ಧಾರ್ಮಿಕ ಆಚರಣೆಗಳಲ್ಲಿ ಇಂಥ ಸನಿರ್ಗುಣದ ಅಂಶಗಳು ಹುದುಗಿವೆ, ಎಂದು ಈ ಅಧ್ಯಯನಗಳು ಹೇಳುತ್ತವೆ. ಕ್ರಿ.ಶ ಆರನೆಯ ಶತಮಾನದಿಂದಲೇ ಈ ಬಗೆಯ ಭಕ್ತಿ ಆಚರಣೆಗಳು ರೂಢಿಯಲ್ಲಿದ್ದವೆಂಬುದು ಅವುಗಳ ಅರಹು. ಸೂಫಿಗಳು ಸಾಕಾರ ರೂಪದ ಗುರುವನ್ನು ದೈವ ಸ್ವರೂಪಿಯನ್ನಾಗಿ ಸ್ವೀಕರಿಸಿದ್ದು ಇಂಥ ಆಚರಣೆಗಳಿಂದ ಪ್ರೇರಣೆ ಪಡೆದುದೇ ಆಗಿದೆ, ಎಂಬುದೂ ಇಂಥ ಅಧ್ಯಯನಗಳ ಅಭಿಮತ. ಅಂತೆಯೇ, ಸಾಕಾರ ರೂಪದಲ್ಲಿರುವ ಗುರು- (ಮೌಲಾನಾ/ಔಲಿಯಾ/ಶೇಖ್/ಪೀರ್) ಸ್ವರ್ಗ ಮತ್ತು ಭೂಮಿಗಳ ನಡುವಿನ ಬಿಡುಗಡೆಯ ಕೊಂಡಿಯಾಗಿ ಕಾಣಿಸುತ್ತಾನೆ (ರೆನಾಲ್ಡ್ ನಿಕಲ್‌ಸನ್, 1898).
ವೈದಿಕ-ಅವೈದಿಕ ಧರ್ಮ ಪ್ರಸ್ತಾವನೆಗಳಲ್ಲಿ ಗುರುವಿಗಿರುವ ಸ್ಥಾನ ನಮಗೆಲ್ಲ ತಿಳಿದುದಾಗಿದೆ. ಗುರುಕೃಪೆಯಿಲ್ಲದೆ ಮೋಕ್ಷವಿಲ್ಲ ಎಂಬುದೇ ಅವುಗಳ ಸಾರ. ಹೀಗಾಗಿ, ಏಕೋಪಾಸನೆ ಮತ್ತು ನಿರಾಕಾರಗಳನ್ನು ಬುನಾದಿಯಾಗಿ ಹೊಂದಿರುವ ಸಿದ್ಧಾಂತಗಳಲ್ಲಿ ಕೂಡ ದೈವಸ್ವರೂಪಿ ಗುರುವೇ ಪರಮ ಪುರುಷನನ್ನು ಸಾಕ್ಷಾತ್ಕರಿಸಬಲ್ಲ ಊರುಗೋಲಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಏನೂ ಕಾಣಿಸದ ಕತ್ತಲಿನ ಹೊದಿಕೆಯೊಳಗೆ ಬೆಳಕಿನ ಕಿರಣವನು ಬೆಳಗಿಸುವವನು ಈ ಗುರುವೇ. ಸಗ್ಗವನು ಸಾಧಿಸಬೇಕೆಂದರೆ ಬುವಿಯಲ್ಲಿ ಸಗುಣನೂ, ಸಾಕಾರನೂ ಆಗಿರುವ ಗುರುವಿನ ಕರುಣೆ ಪಡೆಯಲೇಬೇಕು. ‘ಪ್ರಜ್ಞೆಯೇ ಪರಮೇಶ್ವರ’, ಎಂಬ ಕಾಶ್ಮೀರ ಶೈವಸಿದ್ಧಾಂತದ ನಿಲುವು ಕೂಡ ಈ ಮಾದರಿಗೆ ಹತ್ತಿರವಾಗಿದೆ. ಬ್ರಹ್ಮಾಂಡದ ಅಮೂರ್ತ ಜ್ಞಾನರಹಸ್ಯವನ್ನು ಅರಿಯಲು ಗುರುವಿನ ಸಾಕಾರರೂಪ ಶಿಷ್ಯನಿಗೆ ವರದಾನ. ಮಧ್ಯಯುಗದ “ಸೂಫಿ ಪಂಥಗಳಲ್ಲಿ ಸಾಧಕನಿಗೆ ಗುರುವಿಲ್ಲದಿದ್ದರೆ ಆತ ದಾರಿ ತಪ್ಪಬಹುದು. ಸರಿಯಾದ ಮಾರ್ಗದಲ್ಲಿ ನಡೆಯಲು ಆತನಿಗೆ ಗುರು ಬೇಕೇಬೇಕು”, ಎಂಬುದೇ ನಿಲುವಾಗಿತ್ತು. ಗುರು, ದೇವ ಪ್ರತಿನಿಧಿ, ಆತನ ಕ್ರಿಯೆಗಳು ದೈವಪ್ರೇರಿತ. ಆತ ತೋರುವ ದಾರಿ ಮೋಕ್ಷದ ದಾರಿ. (ಜಾರ್ಜ್ ರೋಸೆನ್, 1866).
ಸಂಪ್ರದಾಯನಿಷ್ಠ ಎಂದೇ ಗುರುತಿಸಲಾಗುವ ಹನ್ನೊಂದನೆಯ ಶತಮಾನದ ಇಸ್ಲಾಂ ವಿದ್ವಾಂಸ ಅಲ್ ಘಜಲಿ, ಎಲ್ಲ ಬಗೆಯ ಆಧ್ಯಾತ್ಮಿಕ ಸಾಧ್ಯತೆಗಳನ್ನು ಪರಿಶೀಲಿಸಿದ ಮೇಲೆ ಸೂಫಿ ಸಿದ್ಧಾಂತದಲ್ಲಿ ನೆಮ್ಮದಿಯನ್ನು ಪಡೆದ. ಸತ್ಯದ ನೆಲೆಗಟ್ಟು, ಅನುಭಾವಿಕ ತಳಹದಿಯ ಸೂಫಿ ಇಸ್ಲಾಂನಲ್ಲಿ ತನ್ನ ನಂಬಿಕೆಯನ್ನು ಕಂಡುಕೊಂಡಿದ್ದಾಗಿ ಘಜಲಿ ನುಡಿದ (ರುಡಾಲ್ಫ್ ಸ್ಪೆನ್ಸರ್). ಘಜಲಿಯ ತುರ್ಕಿ ಭಾಷೆಯ ಕೃತಿಯನ್ನು ಇಂಗ್ಲಿಶಿಗೆ ಅನುವಾದಿಸಿರುವ ಎಚ್. ಎ. ಹೋಮ್ಸ್, ಆತನನ್ನು ಗ್ರೀಕ್ ತತ್ವಶಾಸ್ತ್ರಜ್ಞ `ಆರಿಜನ್’ಗೆ ಹೋಲಿಸುತ್ತಾನೆ. ಆತನೊಬ್ಬ ಧರ್ಮಶ್ರದ್ಧೆಯ, ನಿಜವಾದ ಮುಹಮ್ಮದೀಯ. ಮುಹಮ್ಮದನ ಧರ್ಮಶಾಸ್ತ್ರವನ್ನು ಅತ್ಯಂತ ಸಮರ್ಪಕವಾಗಿ ವ್ಯಾಖ್ಯಾನಿಸಿದವನು, ಎಂದು ಹೊಗಳುತ್ತಾನೆ. ಘಜಲಿಯಂತೆಯೇ, `ಶುದ್ಧ ಸೋದರತೆ’ಯನ್ನು ಪಶ್ಚಿಮಕ್ಕೆ ಕೊಂಡೊಯ್ದವನು ಹನ್ನೊಂದನೆಯ ಶತಮಾನದ ಸ್ಪೇನ್‌ನ ಮುಹಮ್ಮದ್ ಅಬುಲ್ ಖಾಸೀಮ್ ಅಲ್ ಮರ್ಜಿತಿ ಅಲ್-ಅಂದಲುಸಿ. ಆನಂತರ ಮೂರಿಶ್ ತತ್ವಶಾಸ್ತ್ರಜ್ಞ ಇಬ್ನೆ ರಶ್ದಿಯಿಂದಾಗಿ (ಲ್ಯಾಟೀನ್ ಹೆಸರು: ಆವರೂಸ್) ಸ್ಪೇನ್, ಇಸ್ಲಾಂ ಪ್ರಚಾರಕ ಕೇಂದ್ರವಾಗಿ ಬದಲಾಯಿತು. ಉತ್ತರ ಆಫ್ರಿಕಾದ ಮೂರೀಶ್ ಇಸ್ಲಾಂ ಪಂಗಡ ಕ್ರಿ.ಶ 711ರಿಂದ 1492ರವರೆಗೆ ಸ್ಪೇನ್‌ನಲ್ಲಿ ಆಳ್ವಿಕೆ ನಡೆಸಿತ್ತು.
ಇಂದು ಪರ್ಶಿಯಾ, ತುರ್ಕಿ, ಮಧ್ಯ ಏಶಿಯಾ ಎಂದು ಗುರುತಿಸಲಾಗುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸುನ್ನಿ ಮತ್ತು ಶಿಯಾ ಪಂಗಡಗಳಲ್ಲಿ ಉಂಟಾಗುತ್ತಿದ್ದ ರಾಜಕೀಯ ಮತ್ತು ಧಾರ್ಮಿಕ ಬದಲಾವಣೆಗಳು ಕೂಡ ಇಸ್ಲಾಂ ಧರ್ಮದ ವ್ಯಾಖ್ಯಾನ ಹಾಗೂ ಪ್ರಚಾರಕ್ಕೆ ತಮ್ಮದೇ ಆದ ಪ್ರಭಾವವನ್ನು ಬೀರಿದವು. ಮುಸ್ಲೀಂ ಸಮುದಾಯದ ಪರಮೋಚ್ಚ ಧರ್ಮಗುರುವಾದ ಇಮಾಮ್ ಪದ್ಧತಿ ಜಾರಿ ಬಂದಿದ್ದು ಕೂಡ ಈ ಕಾಲಘಟ್ಟದಲ್ಲಿಯೇ. ಆರನೆಯ ಇಮಾಮ್ ಜಾಫರ್ ಅಶ್ ಶಾದಿಕ್ ಕ್ರಿ.ಶ. 765ರಲ್ಲಿ ಮರಣಿಸಿದ ಬಳಿಕ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡವು.
ಈ ಪ್ರದೇಶದ ಆರಂಭಿಕ ಭಕ್ತಿ ಆಚರಣೆಗಳ ಕುರಿತು ಹೇಳುವುದಾದರೆ, ಇಂತಹ ದೈವಭಕ್ತರು ಸರ್ವದೇವತಾ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು.
ಸೂಫಿ ಪದದ ಅರ್ಥ, ವಿಸ್ತಾರ
ಸೂಫಿ ಎಂಬ ಪದದ ವ್ಯುತ್ಪತ್ತಿಯ ಕುರಿತು ಓರಿಯಂಟಲಿಸ್ಟ್ ಅಧ್ಯಯನಕಾರರು, ಮುಸ್ಲೀಂ ವಿದ್ವಾಂಸರು ಸಾಕಷ್ಟು ಚರ್ಚೆ, ವಾಗ್ವಾದಗಳನ್ನು ನಡೆಸಿದ್ದಾರೆ. ಅಂತಿಮವಾಗಿ ಆ ಪದದ ನಿಷ್ಪತ್ತಿ ಅರಬ್ಬಿಯ ಶೂಫ್‌ನಿಂದಾಗಿದ್ದು, ಉಣ್ಣೆಯ ನೂಲನ್ನು ಸೂಚಿಸುತ್ತದೆ. ಪ್ರಾರಂಭದ ಧರ್ಮಶ್ರದ್ಧೆಯ ಮುಸ್ಲೀಂ ಸಮುದಾಯದಲ್ಲಿ ಸರಳತೆಯನ್ನು ಸೂಸುವ ಉಣ್ಣೆಯ ಬಟ್ಟೆಗಳು ಅತ್ಯಂತ ಜನಾನುರಾಗಿಯಾಗಿದ್ದವು. ಪರ್ಶಿಯನ್ ಗುಣವಾಚಕ, ಪಶ್ಮಿನಾ-ಪೂಶ್‌ಎಂದರೆ ಉಣ್ಣೆಯ ಬಟ್ಟೆ ತೊಡುವವನು, ಎಂಬ ಅರ್ಥ ನೀಡುತ್ತದೆ. ಎರಡನೆಯ ಕಲೀಫನಾಗಿದ್ದ ಉಮರ್, ತಾನು ಉಣ್ಣೆಯ (ಶೂಫ್) ಜುಬ್ಬಾ ತೊಡುತ್ತಿದುದಾಗಿ ಹೇಳಿಕೊಂಡಿದ್ದಾನೆ. ಪ್ರವಾದಿಯ ಒಡನಾಡಿಯಾಗಿದ್ದ ಅಬು ಉಬೆದುಲ್ಲ ಇಬ್ನೆ ಅಲ್‌ಜರ್‌ಹಾ ಮತ್ತು ಪರ್ಶಿಯಾದ ಸುಲೇಮಾನ್‌ರಂಥ ಧರ್ಮನಿಷ್ಠರು ಕೂಡ ಇಂಥ ಸರಳ ಉಣ್ಣೆಯ ಬಟ್ಟೆ ತೊಡುತ್ತಿದ್ದರೆಂದು ಇತಿಹಾಸ ದಾಖಲಿಸುತ್ತದೆ (ಮುರುಜೂದ್ ದಹಬ್ ಸಂ. ಬಾರ್ಬೇರ್ ಮೇನರ್ಡ್, ಸಂ. 4). ಈ ಎಲ್ಲ ಕಾರಣವಾಗಿ ಸೂಫಿ ಎಂದರೆ `ಸರಳ ಉಡುಗೆ-ತೊಡುಗೆಯ, ಸಚ್ಚಾರಿತ್ರ್ಯದ ಧರ್ಮಶ್ರದ್ಧೆಯ ವ್ಯಕ್ತಿ’, ಎಂಬ ಅರ್ಥವನ್ನು ಇಂದು ಬಹುಪಾಲು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಉಳಿದ ನಿಷ್ಪತ್ತಿಗಳು ಬೌದ್ಧಿಕ ಚರ್ಚೆಗಳು.
ಪ್ರವಾದಿಗಳ ನಿಕಟ ಸಂಗಾತಿಗಳ ಧಾರ್ಮಿಕತೆಯನ್ನು ಒಪ್ಪಿಕೊಂಡಿದ್ದ ಅನುಯಾಯಿಗಳಿಗೆ ಬರುಬರುತ್ತ ಧರ್ಮದ ಬಾಹ್ಯ ಆಡಂಬರ ಮತ್ತು ಪ್ರದರ್ಶನ ಆತಂಕವನ್ನು ಹುಟ್ಟಿಸತೊಡಗಿತು. ಸರಳತೆಯನ್ನು ಮರೆಮಾಚಿದ ದುಂದುಗಾರಿಕೆ ಹಾಗೂ ಬಾಹ್ಯ ತೋರಿಕೆಗಳನ್ನು ಈ ಅನುಯಾಯಿಗಳು ಮೌನವಾಗಿ ಪ್ರತಿಭಟಿಸತೊಡಗಿದರು. ನಿರಾಡಂಬರತೆ, ಶ್ರದ್ಧೆ, ಲೌಕಿಕ ವಿಷಯಗಳ ಕುರಿತು ನಿರ್ಲಿಪ್ತತೆಯನ್ನು ತೋರುವ ಜನ ಮತ್ತು ಗುಂಪಗಳನ್ನು ಪ್ರಾಜ್ಞರು ಸೂಫಿಗಳು ಎಂದು ಗುರುತಿಸಲಾರಂಭಿಸಿದರು. ಇದು ಆರಂಭ ಕಾಲದ ಸೂಫಿ ಧಾರ್ಮಿಕರ ಚಿತ್ರಣ. ಸೂಫಿ ಸಂತರ ಕುರಿತು, ಅಲ್-ಖುಶಾಯಿರಿ ಹೇಳುವುದು ಹೀಗೆ:
“ದೈವವಾಣಿಯ ಪ್ರಚಾರಕರ ಮರಣದ ಬಳಿಕ, ಯಾವುದೇ ಸ್ಥಾನಮಾನ ಹೊಂದಿರದ ಅತ್ಯಂತ ಶ್ರೇಷ್ಠ ಮುಸಲ್ಮಾನರು, ಇದಕ್ಕಿಂತ ಉದಾತ್ತವಾದುದು ಯಾವುದೂ ಇಲ್ಲವೆಂಬಂತೆ ಪ್ರವಾದಿಯೊಂದಿಗಿನ ತಮ್ಮ ಒಡನಾಟವನ್ನು ಗಟ್ಟಿಗೊಳಿಸಿಕೊಂಡರು. ಮಾತ್ರವಲ್ಲ, ಆ ಕಾರಣವಾಗಿಯೇ ಅವರನ್ನು `ಸಂಗಾತಿ’ಗಳು ಎಂದು ಕರೆಯಲಾಗುವುದು. ಮುಂದಿನ ಕಾಲಾವಧಿಯಲ್ಲಿ ಅವರೊಂದಿಗೆ ಒಡನಾಟ ಸಾಧಿಸಿ, ಆ ಸಂಗಾತಿಗಳೊಂದಿಗೆ ಸಂವಾದ ನಡೆಸಿದವರನ್ನು `ಅನುಯಾಯಿ’ಗಳು ಎಂದು ಕರೆಯಬಹುದು. ಅಂಥವರನ್ನು ಮಹಾ ಮಹಿಮರು ಎಂದು ಗುರುತಿಸಲಾಗುತ್ತಿತ್ತು. ಆ ಬಳಿಕ ಬಂದವರು ಅನುಯಾಯಿಗಳ `ಅನುಚರ’ರು. ಮುಂದೆ ಭಿನ್ನತೆಗಳು ಮೈದೋರಿ, ವಿವಿಧ ಪಂಗಡಗಳು ಉಂಟಾದವು. ಧರ್ಮದ ಕುರಿತು ವಿಶೇಷ ಕಾಳಜಿ ವಹಿಸಿ, ಅದರಲ್ಲಿ ತಲ್ಲೀನರಾದವರನ್ನು ಭಕ್ತರು ಮತ್ತು ಸಂತರು ಎಂದು ಕರೆದರು. ಬಳಿಕ ಪಾಖಂಡಿತನ ಶುರುವಾಯಿತು. ವಿವಿಧ ಪಂಥಗಳ ನಡುವೆ ವಿರೋಧ ಹುಟ್ಟಿ ತಮ್ಮದೇ ನಿಜವಾದ ಭಕ್ತಿ ಎಂಬ ತಗಾದೆ ಉಂಟಾಯಿತು. ದೈವಭಕ್ತಿಯಲ್ಲಿ ಮನವನ್ನು, ದೈವ ಚಿಂತನೆಯಲ್ಲಿ ಹೃದಯವನ್ನು ನೆಟ್ಟ ಸುನ್ನಿ ಸಮುದಾಯವನ್ನು ಸೂಫಿಗಳು ಎಂದು ಗುರುತಿಸಲಾಯಿತು. ಇಂತಹ ಪುಣ್ಯ ಪುರುಷರು ಬದುಕಿದ್ದು ಹಿಜರಾ ಶಕೆ ಎರಡನೆಯ ಶತಮಾನದ ಸೋಪಾನದಲ್ಲಿ (ಹಿ.ಶ. 200/ಕ್ರಿ.ಶ 815-16).” (ಜಾಮಿ, ನಾಸೂ ಲೀಸ್, ಕಲ್ಕತ್ತ, 1858)
ಪ್ರಥಮ ಸೂಫಿ ಅಬೂ ಹಾಶಿಮ್, ಹುತಾತ್ಮ ಹಲ್ಲಾಜ್ ಮತ್ತು ಹಮದಾನಿ
ಎಂಟನೆಯ ಶತಮಾನದಲ್ಲಿ ಬದುಕಿದ್ದ, ಸಿರಿಯಾದ ಶ್ರದ್ಧಾವಂತ ಅಬೂ ಹಾಶಿಮ್‌ನನ್ನು ಮೊದಲಬಾರಿಗೆ `ಸೂಫಿ’ ಎಂಬ ವಿಶೇಷಣ ಅಥವ ಪದನಾಮದ ಮೂಲಕ ಗುರುತಿಸಲಾಯಿತು. ಈತ ಪ್ಯಾಲೆಸ್ತೀನ್‌ನ ರಮ್ಲಾದಲ್ಲಿ, ಧರ್ಮಭೀರುಗಳ ಪ್ರಾರ್ಥನಾತಾಣ `ಖಾನಕ಼ಾ’ ನಿರ್ಮಿಸಿದನೆಂದು ಪ್ರತೀತಿ. ಸೂಫಿ ಸಿದ್ಧಾಂತವನ್ನು ವ್ಯಾಖ್ಯಾನಿಸಿದ ಆದ್ಯಪುರುಷ, ಗುರು ಮಾಲಿಕ್‌ನ ಶಿಷ್ಯ, ಈಜಿಪ್ಟಿನ ಧೂನ್ ನೂನ್ ಅಲ್-ಮಿಶ್ರಿ (ಕ್ರಿ.ಶ. 796-859). ಈ ಎರಡೂ ಅಂಶಗಳನ್ನು ಕವಿ ಜಾಮಿ ದಾಖಲಿಸಿದ್ದಾನೆ. ಮಿಶ್ರಿಯ ಸೂಫಿ ಸಿದ್ಧಾಂತವನ್ನು ವಿಸ್ತರಿಸಿ, ಅದಕ್ಕೊಂದು ಚೌಕಟ್ಟು ಒದಗಿಸಿ ಪಠ್ಯರೂಪಕ್ಕಿಳಿಸಿದವನು ಅಬೂ ಖ಼ಾಸಿಮ್ ಇಬ್ನೆ ಮುಹಮ್ಮದ್ ಜುನೈದ್ ಬಾಗ್ದಾದಿ (ಕ್ರಿ.ಶ. 830-910). ಜುನೈದ್, ತನ್ನ ಕಾಲದ ಮಹಾ ಗುರು ಎಂದು ಪ್ರಸಿದ್ಧ. ಒಂದೆಡೆ: “ಮೂರು ದಶಕಗಳಿಂದ ಜನರೊಡನೆ ಜುನೈದನ ನಾಲಗೆಯ ಮೂಲಕ ದೈವ ಮಾತಾಡಿತು. ಆದರೆ, ಜನಕ್ಕೆ ಇದರ ಅರಿವಿರಲಿಲ್ಲ! ಪರಮಪುರುಷನ ಸಮ್ಮಿಲನದ ಸಿದ್ಧಾಂತ ಪ್ರಮಾಣವು ದೈವ ಸಮ್ಮಿಲನದ ನಿರಾಕರಣೆಯೇ ಆಗಿದೆ!” ಎಂಬಂಥ ಒಡಪಿನ ಮಾತಾಡಿದ. ಈತನ ಶಿಷ್ಯರೂ ಕಡಿಮೆಯೇನಲ್ಲ. ಜುನೈದ್, `ಅನ್ ಅಲ್ ಹಕ್’, ಸಿದ್ಧಾಂತ ಪ್ರತಿಪಾದಕ ಹುಸೇನ್ ಮನ್ಸೂರ್ ಅಲ್-ಹಲ್ಲಾಜ್‌ನ ದೀಕ್ಷಾ ಗುರುವೂ ಹೌದು.
ತನ್ನ, `ನಾನೇ ಸತ್ಯ, ನಾನೇ ದೈವ’ (ಅನ್ ಅಲ್ ಹಕ್) ಸಿದ್ಧಾಂತಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಹಲ್ಲಾಜ್‌ನ ಉಸಿರಿನ ಕೊನೆ ಗಳಿಗೆಯಲ್ಲಿ ನಿಶಾಪುರದ ಫಾತೀಮಳನ್ನು ಆತನೊಂದಿಗೆ ಮಾತನಾಡಲು ಕಳಿಸಲಾಯಿತು. ಆಕೆ, ‘ಸೂಫಿ ಸಿದ್ಧಾಂತವೆಂದರೇನು?’ ಎಂದು ಕೇಳಿದಾಗ, ಹಲ್ಲಾಜ್ ಹೇಳಿದ್ದು: “ನನ್ನದೆಲ್ಲವೂ ದೇವನದೇ ಆಗಿದೆ. ನನ್ನ ಸುಖ ಮತ್ತು ಯಾತನೆಗಳನ್ನು ಅರೆಚಣವು ಕೂಡ ಎರಡಾಗಿ ನೋಡಲಾರೆ!” ಎಂದು! ಅಂದರೆ, ತಾನು ಮತ್ತು ದೈವ ಒಂದೇ, ಹಾಗೂ ಈ ಅಹಂ ಬ್ರಹ್ಮಾಸ್ಮಿ ಸ್ಥಿತಿಯೇ ಸೂಫಿ ಸಿದ್ಧಾಂತವಾಗಿದೆ, ಎಂಬುದು ಹಲ್ಲಾಜ್ ನೀಡಿದ ಸಂದೇಶವಾಗಿತ್ತು.

ಸೂಫಿ ಸಿದ್ಧಾಂತವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರವಚನಗಳ ಮೂಲಕ ಪ್ರಸಿದ್ಧಿಗೆ ತಂದವನು ಜುನೈದ್‌ನ ಇನ್ನೊಬ್ಬ ಶಿಷ್ಯ ಮತ್ತು ಹುಸೇನ್ ಮನ್ಸೂರ್ ಹಲ್ಲಾಜನ ಪ್ರೀತಿಪಾತ್ರ ಗೆಳೆಯ ಅಬೂ ಬಕ್ರ್ ಶಿಬ್ಲಿ (ಕ್ರಿ.ಶ. 861-946). ಹಿಜರಿ ಶಕೆ ಎರಡನೆಯ ಶತಮಾನದ ಸೋಪಾನದಲ್ಲಿ (ಕ್ರಿ.ಶ. ಒಂಬತ್ತನೆಯ ಶತಮಾನದ ಆರಂಭದಿಂದ ಕೊನೆಯವರೆಗೆ) ಪ್ರಕಟಗೊಂಡ ಕೆಲವು ಸೂಫಿ ಜ್ಞಾನಿಗಳ ಹೆಸರುಗಳು ಹೀಗಿವೆ: ಇಬ್ರಾಹೀಂ ಬಿನ್ ಆದಮ್ ಅಬು ಸುಲೇಮಾನ್ ದಾವೂದ್ ಇಬ್ನೆ ನಾಸೀರ್, ಅಲ್ ಫುದೈಲ್ ಇಬ್ನೆ ಇಯಾದ್, ಅಬು ಮಹ್‌ಫೂಸ಼್ ಇಬ್ನೆ ಫಿರೂಜ಼್ (ಮಾರೂಫ್ ಕರ್‌ಖಿ) ಮತ್ತು ಹುಸೇನ್ ಮನ್ಸೂರ್ ಅಲ್-ಹಲ್ಲಾಜ್. ರಬಿಯ ಅಲ್ ಬಸ್ರ್ಳನ್ನು ಕೂಡ ಸೂಫಿ ಪರಂಪರೆಯ ಪರಮಜ್ಞಾನಿ ಎಂದು ಸ್ವತಃ ಸೂಫಿ ಕವಿಗಳಾಗಿದ್ದ ಜಾಮಿ ಮತ್ತು ಫರೀದುದ್ದೀನ್ ಅತ್ತಾರ್ ಗುರುತಿಸುತ್ತಾರೆ.
ಆ ಕಾಲದ ಉಳಿದ ಐತಿಹಾಸಿಕ ಉಲ್ಲೇಖಗಳನ್ನು ಗಮನಿಸಿ, ಕ್ರಿ.ಶ. ಎಂಟನೆಯ ಶತಮಾನದ ಅಂತ್ಯದ ವೇಳೆಗೆ ಸೂಫಿ ಸಿದ್ಧಾಂತ ಸ್ಪಷ್ಟ ರೂಪ ಪಡೆಯಿತು, ಎಂದು ಗುರುತಿಸಬಹುದಾಗಿದೆ. ಆರಂಭಿಕ ಸೂಫಿ ಸಿದ್ಧಾಂತ-ಕಾವ್ಯ ಅರಳಿದ್ದು ಇಂದಿನ ಇರಾಕ್-ಇರಾನ್‌ಗಳ ಖೋರಾಸನ್, ಬಸ್ರ್, ಹೇರತ್, ಶಿರಾಜ್, ಬಾಗ್ದಾದ್, ಹಮದಾನ್, ನಿಶಾಪುರ ಮುಂತಾದ ಸ್ಥಳಗಳಲ್ಲಿ. ಪಂಥ ಸೂಫಿಯಾದರೂ ಇಲ್ಲಿನ ಕವಿಗಳು ಬೇರೆ ಬೇರೆ ಆಚರಣಾ ಪರಂಪರೆ (ಸಿಲ್‌ಸಿಲಾ)ಯಲ್ಲಿ ದೀಕ್ಷೆಯನ್ನು (ಬಯತ್) ಪಡೆದ ಸಾಧಕರು (ಸಾಲಿಕ್).
ಹುಸೇನ್ ಮನ್ಸೂರ್ ಹಲ್ಲಾಜ್‌ನಂತೆಯೇ ಆಳುವ ವರ್ಗದ ಕ್ರೌರ್ಯಕ್ಕೆ ಬಲಿಯಾದ ಇನ್ನೊಬ್ಬ ಹುತಾತ್ಮನೆಂದರೆ, ‘ಹಿಕ್ಮತ್’ ಸಿದ್ಧಾಂತದ ಬೀಜ ಪುರುಷ ಐನ್ ಅಲ್-ಖುದಾತ್ ಹಮದಾನಿ (ಕ್ರಿ.ಶ. 1098-1131). ಮೂವತ್ಮೂರು ವರ್ಷದ ಯುವ ತತ್ವಜ್ಞಾನಿಯ ಪ್ರಖರ ವಿಚಾರಗಳನ್ನು ಸಹಿಸುವುದಾಗದೆ ಇರಾಕಿನ ವಜೀರ ಸೆಲ್ಜೂಖಿದ್ ಆತನನ್ನು ಹತ್ಯೆ ಮಾಡಿದ. ಹಮದಾನಿಯ ಸೂತ್ರವನ್ನು ಸರಳ ಮಾತಿನಲ್ಲಿ ಹೇಳುವುದಾದರೆ- “ತಕ್ಷಣದ ಖಾಸಗಿ ಅನುಭವದ ಮೂಲಕ ವಸ್ತುಲೋಕವನ್ನು ಅರಿಯುವುದು ಮತ್ತು ವಸ್ತುವೊಂದರ ಕುರಿತು ಅರಿಯುವುದು, ಎಂಬ ಪರಿಕಲ್ಪನೆಯ ನಡುವಿನ ವಿಶಿಷ್ಟ ವ್ಯತ್ಯಾಸವನ್ನು ತಿಳಿದುಕೊಳ್ಳುವುದಾಗಿದೆ. ಇದು, ಜೇನು ಸಿಹಿಯಾಗಿದೆ ಎಂದು ಅರಿಯುವುದು ಮತ್ತು ಜೇನಿನ ಸಿಹಿಯನ್ನು ಅದನ್ನು ಸೇವಿಸುವ ಮೂಲಕ ಅನುಭವಿಸುವುದು. ಈ ಎರಡು ಅರಿವಿನ ನಡುವೆ ಅಗಾಧವಾದ ವ್ಯತ್ಯಾಸವಿದೆ. ಇದರಂತೆಯೇ, ಉನ್ನತ ಸ್ತರದ ಧಾರ್ಮಿಕ ಬದುಕಿನಲ್ಲಿಯೂ ಎರಡು ಬಗೆಯ ಜ್ಞಾನಗಳಿವೆ. ದೇವರ ಕುರಿತು ಅರಿಯುವುದು ಒಂದು ಬಗೆಯ ಜ್ಞಾನವಾದರೆ, ದೈವಿಕ ಸ್ತರಗಳ ಮೂಲಕ ನೇರವಾಗಿ ಆತನೊಂದಿಗೆ ಸಮಾಗಮ ಸಾಧಿಸಿ, ಅನುಭಾವಿಕವಾಗಿ ದಿವ್ಯಜ್ಞಾನ ಪಡೆವುದು ಇನ್ನೊಂದು ಬಗೆ. ಹೀಗೆ ಆಗಬೇಕಾದರೆ ಭಕ್ತನ ಅಂತರಂಗದ ಆಧ್ಯಾತ್ಮಿಕ ಕಣ್ಣು ತೆರೆಯಬೇಕು. ಇದಕ್ಕಾಗಿ ಕಾರ್ಯಕಾರಣಗಳ ಪರಿಮಿತಿಯನ್ನು ದಾಟಿ, ಅಂತರಂಗ ಕಣ್ಣು ತೆರೆದಿಟ್ಟ ಒಳಲೋಕವನ್ನು ಪ್ರವೇಶಿಸಬೇಕು,” ಎಂಬುದು. ಹಮದಾನಿಯ ಜ್ಞಾನಸೂತ್ರಗಳನ್ನು ಕಂಡು ಆತನಿಗೆ ನಾಸ್ತಿಕನೆಂಬ ಹಣೆಪಟ್ಟಿ ಕಟ್ಟಲಾಯಿತು. ಸುಲ್ತಾನ್ ಮುಹಮ್ಮದ್ ಇಬ್ನೆ ಮಲಿಕ್‌ಶಾನ ಸಮ್ಮುಖದಲ್ಲಿ, ಮೇ 23, 1131ರಂದು ಹಮದಾನಿಯನ್ನು ವಧಿಸಲಾಯಿತು.
ಸೂಫಿ: ಪ್ರಾಜ್ಞರ ದೃಷ್ಟಿ
ಸೂಫಿ ಸಿದ್ಧಾಂತವು ಪ್ರವಾದಿ ಮುಹಮ್ಮದರು ಬೋಧಿಸಿದ ರಹಸ್ಯಜ್ಞಾನವನ್ನು ಪ್ರತಿನಿಧಿಸುತ್ತದೆ. ಕುರಾನ್, ಸೂಫಿ ಸಿದ್ಧಾಂತದ ತಳಹದಿಯಾಗಿದೆ ಎಂಬುದು ಸೂಫಿ ನಂಬಿಕೆಯಾಗಿದೆ. ಪರಮಪುರುಷ ತತ್ವಜ್ಞಾನ, ಭಾವೋನ್ಮಾದಿತ ಭಕ್ತಿ, ಅನುಭಾವಿಕತೆಯನ್ನು ಸಿದ್ಧಾಂತ ಒಳಗೊಂಡಿದ್ದು, ಸನ್ನಡತೆ, ಸಚ್ಚಾರಿತ್ರ್ಯಗಳಿಗೆ ಮಹತ್ವ ನೀಡಬೇಕು, ಚೆಲುವು ಹಾಗೂ ಒಳಿತು ದೈವಲೀಲೆಯಾಗಿವೆ, ಜೀವದೈವಗಳ ಸಂಯೋಗವೇ ಮೋಕ್ಷ, ಎನ್ನುವುದೂ ಸೂಫಿ ನಂಬಿಕೆಯೆ.
ಈ ಅನುಭಾವವು (ತಸವೂಫ್) ಬುದ್ಧಿ, ತರ್ಕ ಮತ್ತು ಭಾಷೆಗೆ ನಿಲುಕದ್ದಾಗಿದೆ. ಅನುಭಾವದಿಂದ ಪಡೆವ ಅರಿವು ಪವಿತ್ರವೂ, ಕೋಮಲವೂ ಆಗಿದೆ. ಆದಾಗ್ಯೂ, ಭಾಷೆಗಿರುವ ಅಪಾರವಾದ ಮಿತಿಯನ್ನು ಒಪ್ಪಿಕೊಂಡು ಸೂಫಿ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಮುಕ್ತಿಮಾರ್ಗ ಕೊಂಚ ಸುಗಮವಾಗಬಹುದು (ಹಜ್ರತ್ ಮಹಮೂದ ಬಹರಿ).
“ಶುದ್ಧತೆ (ಸಫಾ) ಅಶುದ್ಧದ ವಿರುದ್ಧ ಪದವಾಗಿದೆ. ಕಲ್ಮಶತೆ ಮನುಷ್ಯನ ಗುಣಗಳಲ್ಲೊಂದು. ನಿಜವಾದ ಸೂಫಿ ಈ ಕಲ್ಮಶತೆಯನ್ನು ತ್ಯಜಿಸಿರುತ್ತಾನೆ. ಮನುಷ್ಯನು ಮೃಣ್ಮಯನಾಗಿರುವುದರಿಂದ ಶುದ್ಧತೆ ಆತನ ಗುಣವಲ್ಲ. ಆತ ಅಶುದ್ಧತೆಯಿಂದ ತಪ್ಪಿಸಿಕೊಳ್ಳಲಾರ. ಹೀಗಾಗಿಯೇ, ಅಕಳಂಕತೆಯು ಪ್ರಿಯಕರನ ಮುಖ್ಯಲಕ್ಷಣವಾಗಿದೆ. ಈ ಪ್ರಿಯಕರ ಮೋಡಗಳಿಲ್ಲದ ಸೂರ್ಯನಂತೆ. ಶುದ್ಧತೆ ಪ್ರೀತಿಗೊಳಗಾಗುವವನ ಗುಣವಿಶೇಷವಾಗಿದೆ. ಪ್ರೇಮಿ ತನ್ನದೇ ಗುಣವಿಶೇಷಣದಲ್ಲಿ ಹತನಾಗುವವನು. ತನ್ನ ಪ್ರಿಯಕರನ ಗುಣವಿಶೇಷಣಗಳಲ್ಲಿ ಜೀವಿಸುವವನು. ಆ ಸ್ಥಿತಿ ಸ್ಫಟಿಕ ಸೂರ್ಯನಂತಿರುವುದು. ಸಾಧಕನ ಸ್ಥಿತಿಯ ಕುರಿತು ಪ್ರವಾದಿಯನ್ನು ಕೇಳಿದಾಗ, ಅವರು ಹೇಳಿದ್ದು: “ಆತನ ಹೃದಯವು ನಂಬಿಕೆಯ ಬೆಳಕಿನಿಂದ ಬೆಳಗುತಿದೆ. ಆತನ ಮುಖವು ಚಂದ್ರನ ಕಾಂತಿಯಿಂದ ತುಳುಕುತಿದೆ. ಆತನನ್ನು ದೈವಿಕ ಬೆಳಕಿನಿಂದ ರೂಪಿಸಲಾಗಿದೆ.”
“ಸೂರ್ಯಚಂದ್ರರು ಸಮಾಗಮ ಸಾಧಿಸಿದಾಗ ಉಂಟಾಗುವ ಬೆಳಕು ಪರಿಶುದ್ಧ ಪ್ರೇಮದಂತೆ. ಇಬ್ಬರ ಸಂಯೋಗ ಇಂಥ ದೈವಿಕತೆಯನ್ನು ಹುಟ್ಟುಹಾಕುವುದು. ಆಧ್ಯಾತ್ಮವನ್ನು ಅಪ್ಪಿಕೊಂಡವರೇ ಸೂಫಿಗಳು. ಪ್ರೇಮದಿಂದ ಪರಿಶುದ್ಧಗೊಂಡವರೂ, ಉಳಿದೆಲ್ಲವನೂ ತೊರೆದು ಪ್ರೇಮಿಯಲ್ಲಿ ಲೀನವಾದವರೇ ಸೂಫಿಗಳು. ಸೂಫಿಗಳು ತಮ್ಮ ಅಸ್ತಿತ್ವ ಕುರಿತು ಅತ್ಯಂತ ನೈಜ ಭಾಷೆಯಲ್ಲಿ ಮಾತನಾಡುವರು. ತಮ್ಮಲ್ಲಿಲ್ಲದ ಯಾವುದರ ಕುರಿತೂ ಅವರು ಹೇಳರು. ಅವರು ಮೌನವಾಗಿದ್ದಾಗ ಆ ಮೌನವೇ ಸೂಫಿಗಳ ವ್ಯಕ್ತಿತ್ವವನು ಅರಹುವುದು.” (ಹಜ್ರತ್ ಅಲೀ ಬಿನ್ ಉಸ್ಮಾನ್ ಅಲ್ ಹುಜ್ವಿರಿ)
“ಸೂಫಿ ಪಂಥವೆಂದರೇನು?”
“ಯಾತನೆ ನಿನ್ನನ್ನು ಹುಡುಕಿಕೊಂಡು ಬಂದಾಗ
ಹೃದಯದಲಿ ಅನುರಾಗವನ್ನು ಹುಡುಕುವುದು” (ರೂಮಿ)
“ಏನನ್ನೂ ಗಳಿಸದಿರುವುದು, ಶೂನ್ಯದಲ್ಲೇ ತುಂಬಿಹೋಗಿರುವುದೇ ಸೂಫಿ ಸಿದ್ಧಾಂತ”. (ಜುನೈದ್)
“ಸ್ವಾರ್ಥವನು ಬಿಟ್ಟುಕೊಟ್ಟಾಗ ದೊರಕುವ ಉದಾರತೆ ಮತ್ತು ಸ್ವಾತಂತ್ರ್ಯ, ನಿನ್ನ ಆತ್ಮವನು ತ್ಯಜಿಸುವುದೇ ಸೂಫಿ ಸಿದ್ಧಾಂತ.” (ರೂವಯ್ಯಂ)
“ಪ್ರೀತಿಯ ಶುದ್ಧತೆಯಲಿ ಮಿಂದವನು, ಒಡನಾಡಿಯಿಂದ ಶುದ್ಧಗೊಂಡವನೇ ಸೂಫಿ”. (ಖರಖ್ವಾನಿ)
ಯುರೋಪಿಯನ್ನರ ಪರ್ಶಿಯನ್ ಸಾಹಿತ್ಯ ಪ್ರೇಮ
ಪರ್ಶಿಯನ್ ಸಾಹಿತ್ಯ ಯುರೋಪಿಯನ್ನರ ಗಮನ ಸೆಳೆದದ್ದು ಹತ್ತೊಂಬತ್ತನೆ ಶತಮಾನದ ಎರಡನೆಯ ದಶಕದ ಬಳಿಕ. ಓರಿಯಂಟಲಿಸ್ಟರು ಎಂದು ಗುರುತಿಸಲಾಗುವ ಯುರೋಪಿಯನ್ ವಿದ್ವಾಂಸರು ಪರ್ಶಿಯನ್ ಸಾಹಿತ್ಯವನ್ನು ಓದಿ ವಜ್ರದ ಗಣಿ ದೊರೆತಷ್ಟು ಸಂಭ್ರಮಪಟ್ಟರು. ಜರ್ಮನಿಯ ಎಫ್. ಎ. ಡಿ ಥೊಲಕ್ 1821ರಲ್ಲಿ ಸೂಫಿ ಸಿದ್ಧಾಂತದ ಕುರಿತು ಹೊತ್ತಿಗೆಯೊಂದನ್ನು ಪ್ರಕಟಿಸಿದರು. ಜಾನ್ ಪೇನ್‌ರ ಅರೇಬಿಯನ್ ನೈಟ್ಸ್ ಮತ್ತು ಉಮರ್ ಖಯಾಮ್ ಅನುವಾದಗಳು ಪಾಶ್ಚಾತ್ಯರಿಗೆ ಹೊಸಲೋಕವನ್ನೇ ತೆರೆದಿಟ್ಟವು. ಇ. ಎಚ್. ಪಾಮರ್ ಓರಿಯಂಟಲ್ ಮಿಸ್ಟಿಸಿಸಂ (1867), ಅಲ್ಫ್ರೆಡ್ ವಾನ್ ಕ್ರೇಮರ್ 1968ರಲ್ಲಿ, ರೈನ್ ಹರ್ಟ್ ಪಿ ಡೋಸಿ 1869ರಲ್ಲಿ, ರೆನಾಲ್ಡ್ ಎ. ನಿಕೊಲ್‌ಸನ್ 1900ರಲ್ಲಿ, ಇ. ಜೆ. ಡಬ್ಲು. ಗಿಬ್ 1900ರಲ್ಲಿ, ಎಡ್ವರ್ಡ್ ಜಿ. ಬ್ರೌನ್ 1900ರಲ್ಲಿ, ಲೂಯಿ ಮಸ್ಸಿನಾನ್ 1931 ಪರ್ಶಿಯನ್ ಮತ್ತು ಒಟ್ಟೋಮನ್ ಸಾಹಿತ್ಯದ ಕುರಿತು ತಮ್ಮ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದೇ ಸೂಫಿ ಸಿದ್ಧಾಂತ ಜಗತ್ತಿನ ಬಹುಮುಖ್ಯ ಚರ್ಚಾ ವಿಷಯವಾಗಿ ಮಾರ್ಪಟ್ಟಿತು. ಇನ್ನೂರು ವರ್ಷಗಳಿಂದಲೂ ಹೊಸ ಅನುವಾದಗಳು ಪ್ರಕಟಗೊಳ್ಳುತ್ತಲೇ ಇವೆ. ಹೊಸದಾಗಿ ಹಸ್ತಪತ್ರಿಗಳ ಶೋಧ ನಡೆದೇ ಇದೆ. ಇದಕ್ಕೊಂದು ಉದಾಹರಣೆಯೆಂದರೆ, ದಿಢೀರನೆ ಕಣ್ಮರೆಯಾದ ಜಲಾಲುದ್ದೀನ್ ರೂಮಿಯ ಹಿರಿಯ ಸಂಗಾತಿ ಶಂಷುದ್ದೀನ್ ಎ- ತಬ್ರಿಜ್‌ನ ಇನ್ನೊಂದು ಆಯಾಮ ಪರಿಚಯವಾದುದು 2004ರಲ್ಲಿ ಪ್ರಕಟಗೊಂಡ ಆತನ ಆತ್ಮಚರಿತ್ರೆಯಿಂದ.
ಜರ್ಮನ್ ವಿದ್ವಾಂಸ ವಾರ್ನ್ ಕ್ರೇಮರ್ ಮತ್ತು ಬೆರಳೆಣಿಕೆಯ ಪಂಡಿತರು ಪರ್ಶಿಯನ್ ಸೂಫಿ ಪರಂಪರೆಯು ಭಾರತೀಯ ತತ್ತ್ವಸಿದ್ಧಾಂತ ಮತ್ತು ವೇದಾಂತಗಳಿಂದ ಪ್ರೇರಣೆ ಪಡೆದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಈ ವಾದವನ್ನು ಪರ್ಶಿಯನ್ ಭಾಷೆ, ಸಾಹಿತ್ಯವನ್ನು ಅಧ್ಯಯನ ಮಾಡಿ ಅನುವಾದದಲ್ಲಿ ತೊಡಗಿಕೊಂಡ ಎಡ್ವರ್ಡ್ ಜಿ. ಬ್ರೌನ್ ಮತ್ತಿತರರು ಒಪ್ಪುವುದಿಲ್ಲ. ಜತೆಗೆ, ಆರ್ಯಜ್ಞಾನ ಕೇಂದ್ರಿತ ಮತ್ತು ಭಾರತೀಯ ಕೇಂದ್ರಿತ ಇಂಥ ಸಂಕಥನಗಳು ಪರ್ಶಿಯನ್ ಸಾಹಿತ್ಯವನ್ನು ಅರ್ಥೈಸುವಲ್ಲಿ ಹಾನಿಯನ್ನುಂಟು ಮಾಡಿದೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಇಪ್ಪತ್ತನೆ ಶತಮಾನದ ಕೊನೆಗೆ ಮತ್ತು ಇಪ್ಪತ್ತೊಂದನೆಯ ಶತಮಾನ ಆರಂಭದಲ್ಲಿ ತುರ್ಕಿ-ಪರ್ಶಿಯನ್, ತಾಜಿಕಿ, ಪಶ್ತೋ ಮತ್ತಿತರ ಸ್ಥಳೀಯ ಭಾಷೆಗಳ ಅಧ್ಯಯನದಲ್ಲಿ ತೊಡಗಿಕೊಂಡಿರುವ ಅಧ್ಯಯನಕಾರಿಗೂ ವಾರ್ನ್ ಕ್ರೇಮರ್‌ನ ವಾದ ಅಮಾನ್ಯ.
ಅದೇನೆ ಇದ್ದರೂ, ಸೂಫಿ ಮತ್ತು ಉಪಖಂಡದ ಸನಿರ್ಗುಣ ಭಕ್ತಿ ಪಂಥ ಹಾಗೂ ಕಾಶ್ಮೀರ ಶೈವ ಸಿದ್ಧಾಂತಗಳಲ್ಲಿ ಸಾಮ್ಯತೆಯಂತೂ ಇದೆ. ಇವುಗಳ ತೌಲನಿಕ ಅಧ್ಯಯನ ಮಧ್ಯಯುಗದ ಭಕ್ತಿ ಸಾಹಿತ್ಯಕ್ಕೆ ಹೊಸ ಒಳನೋಟ ಮತ್ತು ದಿಕ್ಕುದೆಸೆಯನ್ನು ಒದಗಿಸಬಲ್ಲುದು. ಹುಸೇನ್ ಮನ್ಸೂರ್ ಅಲ್-ಹಲ್ಲಾಜ್ ತನ್ನ ಶಿಷ್ಯವೃಂದದೊಂದಿಗೆ, ಕ್ರಿ.ಶ.897 ಸುಮಾರಿಗೆ ಪಂಜಾಬ್ ಮತ್ತು ಸಿಂಧ್ ಪ್ರಾಂತಗಳಿಗೆ ಭೇಟಿ ನೀಡಿ, ವಾಸ್ತವ್ಯ ಹೂಡಿ ಜನಾನುರಾಗಿಯಾಗಿದ್ದು ಮತ್ತು ಅದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿ ಕಾಲಾಂತರದಲ್ಲಿ ಶ್ರೇಷ್ಠ ಸೂಫಿಗಳು ಹೊರಹೊಮ್ಮಿದ್ದು ಮಾತ್ರವಲ್ಲ, ಜನಪದರ ಸಾಮಾನ್ಯ ಬದುಕಲ್ಲೂ ಹಲ್ಲಾಜ್‌ನ ನೆನಪು ರಕ್ತನೀರಿನಂತೆ ಬೆರೆತು ಹೋಗಿದೆ. ಕಾಶ್ಮೀರದ ಲಲ್ಲೇಶ್ವರಿ ತನ್ನ ವಿಚಾರ ಮತ್ತು ಕಾವ್ಯಗಳಿಂದ ಭಾರತೀಯ ಮತ್ತು ಮುಸ್ಲೀಂ ಸಮುದಾಯದಿಂದ ಏಕಪ್ರಕಾರವಾಗಿ ಸ್ವೀಕಾರಗೊಂಡಿರುವುದು, ಭಾರತ ಉಪಖಂಡದ ಹಜರತ್ ಅಲಿ ಬಿನ್ ಉಸ್ಮಾನ್ ಅಲ್-ಹುಜ್ವಿರಿ ಸೂಫಿ ಶಾಸ್ತ್ರಗ್ರಂಥ ರಚಿಸಿದ್ದು, ಬಾಬಾ ಫರೀದ್, ಬುಲ್ಲೆಹ್ ಶಹಾರ ಕಾವ್ಯ, ಹಜ್ರತ್ ನಿಜಾಮುದ್ದೀನ್ ಔಲಿಯಾರ ಉಪಕ್ರಮಗಳು, ಅಮೀರ್ ಖುಸ್ರೋ ಸಾಹಿತ್ಯ, ಖ್ವಾಜಿ ಮೊಯಿನುದ್ದೀನ್ ಚಿಸ್ತಿ ಅವರ ಉಪಕ್ರಮಗಳು, ಖ್ವಾಜಿ ಬಂದೇ ನವಾಜರ ಉಪಕ್ರಮ ಮತ್ತು ಸಾಹಿತ್ಯ, ಹಜ್ರತ್ ಖ್ವಾಜಿ ಮಹಮೂದ ಬಹರಿಯವರ ಉಪಕ್ರಮ ಮತ್ತು ಸಾಹಿತ್ಯ ಇಂಥ ಅಧ್ಯಯನಗಳ ಅಗತ್ಯವನ್ನು ಎತ್ತಿ ತೋರಿಸುತ್ತವೆ.
ರಾಜಕೀಯ ಬದಲಾವಣೆ, ಅಸ್ಥಿರ ಪಂಥ
ಅಂದಿನ ವಿಶಾಲ ಪರ್ಶಿಯನ್ ಭೂಪ್ರದೇಶದ ಜನಜೀವನ, ಸಂಸ್ಕೃತಿ, ಧರ್ಮಗಳು ರಾಜಕೀಯ ಮೇಲಾಟಗಳಿಗೆ ನೇರವಾಗಿ ಬಲಿಯಾಗುತ್ತಿದ್ದುದನ್ನು ಈ ಹಿಂದೆ ಹೇಳಿದೆ. ರಾಜಪ್ರಭುತ್ವ ಮತ್ತು ಧರ್ಮಗಳಲ್ಲಿ ಯಾವುದು ಪ್ರಬಲ ಎಂಬ ಪ್ರಶ್ನೆ ಎಲ್ಲ ಕಾಲದಲ್ಲೂ ಇರುವಂಥದ್ದೆ. ಎರಡೂ ಶಕ್ತಿಗಳು ಮೇಲುಗೈ ಸಾಧಿಸಲು ನಿರಂತರವಾಗಿ ಪ್ರಯತ್ನಿಸಿರುವುದನ್ನು ಇತಿಹಾಸದುದ್ದಕ್ಕೂ ಕಾಣುವಂಥದ್ದೆ. ಮಧ್ಯಯುಗದ ಯುರೋಪಿನಂತೆಯೇ ವಿಶಾಲ ಪರ್ಶಿಯಾದಲ್ಲಿಯೂ ಈ ಸಂಘರ್ಷ ಸ್ಪಷ್ಟವಾಗಿ ಗೋಚರಿಸುತ್ತದೆ.
ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ನಾಲ್ವರು ಖಲಿಫತ್ತರ ಆಳ್ವಿಕೆ ಕಾಲ ಮುಗಿದು ಪರ್ಶಿಯನ್ ಮೂಲದ ಬುವಾಹಿದ್‌ರ ಶಕ್ತಿಸಾಮರ್ಥ್ಯ ಏರಿಕೆ ಕಾಣತೊಡಗಿತು. ಶಿಯಾ ಪಂಗಡದ ಈ ಆಳರಸರು ಸಾಹಿತ್ಯ ಮತ್ತು ಲೋಕವಿಜ್ಞಾನಕ್ಕೆ ಪ್ರೋತ್ಸಾಹ ನೀಡಿದರು. ವೈದ್ಯಪದ್ಧತಿ, ರೇಖಾಗಣಿತ, ನಾಮಾ ಮುಂತಾದ ಕ್ಷೇತ್ರಗಳಲ್ಲಿ ಪ್ರಕಟಣೆಗಳು ಕಂಡುಬಂದರೂ ಧಾರ್ಮಿಕ ಕ್ಷೇತ್ರ ನಿಷ್ಕ್ರಿಯವಾಗಿತ್ತೆಂದು ಅಧ್ಯಯನಗಳು ನುಡಿಯುತ್ತವೆ. ಅಲ್ ಖುಶೈರಿ (ಅಬ್ದಲ್ ಕರೀಮ್ ಇಬ್ನೆ ಹಂಜಾನ್) ಈ ಸಮಯದಲ್ಲಿ ಪ್ರಕಟಿಸಿದ ‘ಫಿಹ್‌ರಿಸ್ತ್’ (ಸೂಚಿಕೆ) ಇಸ್ಲಾಮಿಕ್ ಪ್ರಕಟಣಾ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ಕೃತಿಯೆಂದು ಗುರುತಿಸಲಾಗುತ್ತದೆ. ತನ್ನ ಕಾಲದಲ್ಲಿ ಲಭ್ಯವಿದ್ದ ಅರಬ್ಬಿ ಭಾಷೆಯ ಸ್ವತಂತ್ರ ಕೃತಿಗಳು ಮತ್ತು ಅನುವಾದಗಳ ಸೂಚಿಕೆಯನ್ನು ಈ ಪುಸ್ತಕ ನೀಡುತ್ತದೆ. ನಮ್ಮಲ್ಲಿ ಆರ್. ನರಸಿಂಹಾಚಾರ್ಯರು ಪ್ರಕಟಿಸಿದ ಕವಿಚರಿತೆಯಂತೆ ಅಥವ ಅದಕ್ಕೂ ಶತಮಾನಗಳ ಹಿಂದಿನ ಕವಿರಾಜಮಾರ್ಗದಂತೆ. ಇದು ತನ್ನ ಕಾಲದ ಸಾಹಿತ್ಯ ಚರಿತ್ರೆ, ಕವಿ ಪರಿಚಯವನ್ನು ನೀಡುವುದು ಮಾತ್ರವಲ್ಲದೆ, ಒಟ್ಟಾರೆ ಸಾಮಾಜಿಕ ಜನಜೀವನವನ್ನು ಚಿತ್ರಿಸುವುದರಿಂದ ಆಕರಗ್ರಂಥವಾಗಿ ಪರಿಗಣಿತವಾಗಿದೆ.

ಕಾಲಕ್ರಮೇಣ ಬದಲಾದ ರಾಜಕೀಯ ಸನ್ನಿವೇಶ; ಶಿಯಾ ಮತ್ತು ಸುನ್ನಿಗಳ ರಾಜಕೀಯ-ಸಾಂಸ್ಕೃತಿಕ ಸಂಘರ್ಷ, ಅರಬ್ಬಿ ಮತ್ತು ಪರ್ಶಿಯನ್ ಭಾಷೆಗಳ ನಡುವಿನ ತಣ್ಣಗಿನ ತಿಕ್ಕಾಟ, ರಕ್ತಪಾತ, ಅಧಿಕಾರ ಪಡೆಯಲು ನಡೆಸುವ ಷಡ್ಯಂತ್ರಗಳು, ಮಂಗೋಲರ ಉತ್ಥಾನ ಮತ್ತು ಪ್ರವರ್ಧಮಾನ, ಒಟ್ಟೋಮನ್ ಅರಸರ ಹೊರಹೊಮ್ಮುವಿಕೆ ಮತ್ತು ಮುನ್ನಡೆ, ಸಣ್ಣಪುಟ್ಟ ತುರ್ಕಿ ಆಳರಸರು ಇತ್ಯಾದಿಗಳು ಕಾಲಕಾಲದ ಸೂಫಿ ಪಂಥ-ಸಾಹಿತ್ಯದ ಏಳುಬೀಳುಗಳನ್ನು ನಿರ್ಧರಿಸಿವೆ. ಹದಿಮೂರನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ, ಏಶಿಯಾ ಮೈನರ್ ಭಾಗದಲ್ಲಿ ರೋಮನ್ನರು ಎಂದು ಕರೆಯಲಾಗುತ್ತಿದ್ದ, ಒಟ್ಟೋಮನ್ ಆಳ್ವಿಕೆಯ ನಂತರ ಆ ಪ್ರದೇಶದಲ್ಲಿದ್ದ ವಾಸಿಸುತ್ತಿದ್ದ ಸೂಫಿ ಪರಂಪರೆಯ ಲೇಖಕರನ್ನು ಒಟ್ಟೋಮನ್ ಲೇಖಕರೆಂದು ಗುರುತಿಸಲಾರಂಭಿಸಿದರು. ಹೀಗಾಗಿ, ಜಲಾಲುದ್ದೀನ್ ರೂಮಿ, ಆತನ ತಂದೆ ಬಹಾವುದ್ದೀನ್ ವಲದ್, ಸುಲ್ತಾನ್ ವಲದ್, ಶಂಷುದ್ದೀನ್ ತಬ್ರೀಜ್ ಇನ್ನು ಕೆಲವು ಲೇಖಕರನ್ನು ಪರ್ಶಿಯನ್ ಹಾಗೂ ಒಟ್ಟೋಮನ್ ಎರಡೂ ಸಾಹಿತ್ಯ ಚರಿತ್ರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾಲದ ರಾಜಕೀಯ ಬೇಗುದಿ ಅಸಾಧಾರಣ. ಆಳರಸರ ಅಪಕೃಪೆಗೆ ಒಳಗಾದ ಕವಿಗಳು, ಬುದ್ಧಿಜೀವಿಗಳು ಸುರಕ್ಷಿತ ಪ್ರದೇಶಗಳನ್ನು ಹುಡುಕಿ ಸ್ಥಳಾಂತರಗೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗೆ ನೋಡಿದರೆ, ತನ್ನ ನಿಷ್ಠುರ ನಿಲುವುಗಳಿಂದ ಅರಸನ ಕೆಂಗಣ್ಣಿಗೆ ಗುರಿಯಾಗಿದ್ದ ರೂಮಿಯ ತಂದೆ ಬಹಾವುದ್ದೀನ್ ಕೂಡ ಹೀಗೆ ವಲಸೆ ಹೋದವನೆ. ಇಂತಹ ನೂರಾರು ಪ್ರಸಂಗ, ಸನ್ನಿವೇಶಗಳು, ಹಲವಾರು ದೃಷ್ಟಾಂತ ಕಥೆಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿದ್ದು, ಆಸಕ್ತರಿಗೆ ಲಭ್ಯವಿವೆ.
ಆರಂಭಕಾಲದಲ್ಲಿ, ಆಳರಸರಂತೆಯೇ ಜನಸಾಮಾನ್ಯರ ಸಂದೇಹ, ದ್ವೇಷಗಳಿಗೂ ಸೂಫಿ ಪಂಥೀಯರು ಈಡಾಗಿರುವುದು ಕಂಡುಬರುತ್ತದೆ. ಅವರ ಅನುಯಾಯಿಗಳನ್ನು ಹೊರತುಪಡಿಸಿ, ಉಳಿದ ಸಾಮಾನ್ಯರಲ್ಲಿ ಅವರ ಕುರಿತು ಹಿತಕರವಾದ ಭಾವನೆ ಇರಲಿಲ್ಲ. ಮಾತ್ರವಲ್ಲ, ಎಷ್ಟೋ ಸಲ ಅವಹೇಳನವೇ ಕಾದಿರುತ್ತಿತ್ತು. ಈ ಗುಂಪುಗಳು ರಹಸ್ಯವಾಗಿ, ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗಿವೆ, ಎಂಬ ಅನ್ನಿಸಿಕೆ ವ್ಯಾಪಕವಾಗಿರುತ್ತಿತ್ತು. ಮೇಲಾಗಿ, ಸೂಫಿಗಳು ಮಾದಕತೆಯ ವ್ಯಸನಿಗಳು, ನಶೆಯಲ್ಲಿರುವವರು, ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರು, ಎನ್ನುವ ಅಭಿಪ್ರಾಯಕ್ಕೂ ಸೂಫಿಗಳು ತುತ್ತಾಗುತ್ತಿದ್ದರು. ಕೆಲವು ಅರಸರಂತೂ ಈ ಗುಂಪುಗಳು ತಮ್ಮ ಆಳ್ವಿಕೆ ವಿರುದ್ಧ ಬಂಡಾಯವನ್ನು ಸಂಘಟಿಸುತ್ತಿವೆ ಎಂಬ ಕಾರಣಕ್ಕೆ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಗುಪ್ತಪಡೆಗಳನ್ನು ರಚಿಸಿದ್ದೂ ಕಾಣ ಸಿಗುತ್ತದೆ. ಹುಸೇನ್ ಹಲ್ಲಾಜ್ ತನ್ನ ಅರಸನ ವಿರುದ್ಧ ಸುನ್ನಿ ಬಂಡಾಯವನ್ನು ಸಂಘಟಿಸಿದ್ದ ಎಂಬ ಆಪಾದನೆಯನ್ನು ಎದುರಿಸಿದ್ದ. ಈ ಎಲ್ಲ ಭಾವನೆಗಳೂ ಹಲವೊಮ್ಮೆ ವ್ಯಂಗ್ಯ ರೂಪದಲ್ಲಿ, ವಿಷಾದಕರವಾಗಿ ಸೂಫಿ ಕಾವ್ಯದಲ್ಲಿ ಅಭಿವ್ಯಕ್ತಿಗೊಂಡಿರುವುದುಂಟು.
ಉಪಖಂಡದ ಭಕ್ತಿಪಂಥದಂತೆಯೇ ಸೂಫಿ ಸಿದ್ಧಾಂತದಲ್ಲಿಯೂ ಭಾವೋನ್ಮಾದಿತ ಭಕ್ತಿ ಇಲ್ಲವೆ ದೈವಪರವಶತೆ ಎದ್ದು ಕಾಣುವ ಅಂಶವಾಗಿದೆ. ತನ್ಮಯತೆ ತುಂಬಿದ ಭಕ್ತಿಯಿಂದ ಲೌಕಿಕ ಬಿಡುಗಡೆ ಸಾಧ್ಯವೆಂಬ ಅಗಾಧ ನಂಬಿಕೆ, ಅಚಲ ಗುರು ಅದರತ್ತ ಕರೆದೊಯ್ಯುವನೆಂಬ ಅದಮ್ಯ ವಿಶ್ವಾಸ, ಪರವಶೆಯತೆಯ ಮೂಲಕ ಬೇರೊಂದು ಲೋಕದೊಂದಿಗೆ ಸಾಮೀಪ್ಯ, ಸಾಯುಜ್ಯತೆಗಳು ಸಾಧಿಸುವ ಭರವಸೆಗಳು ಇಲ್ಲಿವೆ.
ಮಧ್ಯಯುಗದ ಅತ್ಯುತ್ತಮ ಸೂಫಿ ಸಂತರು ಮತ್ತು ಅನುಭಾವಿ ಕವಿಗಳು ಎಂದು ಗುರುತಿಸಲಾಗುವ ಹಕೀಮ್ ಅಬುಲ್ ಮಜ್ದೂದ್ ಸನಾಯಿ, ಫರೀದುದ್ದೀನ್ ಅತ್ತಾರ್, ಜಲಾಲುದ್ದೀನ್ ರೂಮಿ ಮತ್ತಿತರರು ಇಸ್ಲಾಂನ ಸುನ್ನಿ ಪಂಗಡಕ್ಕೆ ಸೇರಿದವರು. ಸೂಫಿ ಸಂತರಲ್ಲಿ ಬಹುಪಾಲು ಕಾಣುವುದು ಸುನ್ನಿ ಪಂಗಡವೇ. ಶಿಯಾ ಪಂಗಡದ ಸೂಫಿಗಳು ಇಲ್ಲವೇ ಇಲ್ಲ ಎಂದು ಇದರರ್ಥವಲ್ಲ.
ಸಾಮಾನ್ಯವಾಗಿ ಸೂಫಿ ಸಾಹಿತ್ಯದ ಮಧ್ಯಯುಗದ ಅಂತ್ಯವನ್ನು ಸೂಫಿ ಸಂತ ಮತ್ತು ಶ್ರೇಷ್ಠ ಕವಿ ಎಂದು ಗುರುತಿಸಲಾಗುವ ಮೌಲಾನಾ ಜಾಮಿಯ ಮರಣದ ದಿನಾಂಕದೊಂದಿಗೆ ನಿಗದಿಪಡಿಸಲಾಗಿದೆ. ಅಂದರೆ, ಮಧ್ಯಯುಗದ ಸೂಫಿ ಸಾಹಿತ್ಯದ ಅಧ್ಯಯನವನ್ನು ಕ್ರಿ.ಶ. 1492ಕ್ಕೆ ನಿಲ್ಲಿಸಲಾಗುತ್ತದೆ. ಆಮೇಲೆ ಮಹತ್ವದ ಸಂತರು, ಕವಿಗಳು ಬಂದಿಲ್ಲವೆಂದಲ್ಲ. ಜಾಮಿಯಂಥ ಶ್ರೇಷ್ಠ ಕವಿಗಳೊಂದಿಗೆ ಅಧ್ಯಯನವನ್ನು ನಿಲ್ಲಿಸಿದರೆ ಅದಕ್ಕೊಂದು ವಿಶೇಷ ಅರ್ಥ ಎಂಬ ಕಾರಣದಿಂದ ನಿಗದಿಪಡಿಸಿರುವಂತೆ ಕಾಣುತ್ತದೆ.
ಜಾಮಿಯ ಮರಣದ ನಂತರ ಇಂದು ಇರಾನ್ ಎಂದು ಗುರುತಿಸಲಾಗುವ ಭಾಗವನ್ನು ಸಫಾವಿದ್ ಅರಸರು ಆಳ್ವಿಕೆ ನಡೆಸತೊಡಗಿದರು. ಶಿಯಾ ಪಂಗಡದ ಈ ದೊರೆಗಳು ಶಿಯಾ ಇಸ್ಲಾಂ ಧರ್ಮವನ್ನು ಆಳ್ವಿಕೆ ಪ್ರದೇಶದ ಧರ್ಮವಾಗಿ ಪಾಲಿಸುವಂತೆ ಆಜ್ಞೆ ಮಾಡಿದರು. ಆದಾಗ್ಯೂ, ಅಭಿಜಾತ ಮತ್ತು ಸೂಫಿ ಸಾಹಿತ್ಯ ಈ ಎಲ್ಲ ರಾಜಕೀಯ ಬದಲಾವಣೆಗಳು ಹಾದು ಉಳಿದುಕೊಂಡು ಬಂದಿತು. ಮಾತ್ರವಲ್ಲ, ಪರ್ಶಿಯನ್ ಭೂಭಾಗದ ಅಸ್ಮಿತೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿತು. ಹದಿನಾರನೆಯ ಶತಮಾನದ ಬಳಿಕ ತುರ್ಕಿಗಳು ಮತ್ತು ಭಾರತದ ಉಪಖಂಡದ ಲೇಖಕರು ಗಮನಾರ್ಹ ಪ್ರಮಾಣದಲ್ಲಿ ಪರ್ಶಿಯನ್ ಭಾಷೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದರು.
ರುಬಾಯಿ (ರುಬಾಯತ್) ಅಥವ ಚೌಪದಿಗಳನು ಪರ್ಶಿಯನ್, ಅರೆಬಿಕ್ ಭಾಷೆಗಳ ಅತಿ ಹಳೆಯ ಕಾವ್ಯಾಭಿವ್ಯಕ್ತಿಯ ಮಾದರಿಯೆಂದು ಗುರುತಿಸಲಾಗಿದೆ. ಬಿಡಿಸಾಲುಗಳೆಂದು ಕರೆಯಲಾಗುವ ಖತಾ/ಮುಖತ್ತಾತ್‌ಗಳನ್ನು, ಖ಼ಾಸೀದ, ಗ಼ಜಲ್, ಮಸ್ನವಿಗಳನ್ನು (ಕಥನ ಕಾವ್ಯ) ಕೂಡ ಸೂಫಿ ಕವಿಗಳು ಅಭಿವ್ಯಕ್ತಿಗಾಗಿ ಬಳಸಿಕೊಂಡಿರುವುದುಂಟು. ಅಭಿಜಾತ ಅರೆಬಿಕ್ ಮತ್ತು ಪರ್ಶಿಯನ್ ಕಾವ್ಯದಲ್ಲಿ ಖ಼ಾಸೀದ ಪದ್ಯಪ್ರಕಾರ ಬಹು ಜನಪ್ರಿಯ. ಸಮಮಾತ್ರೆ, ಹತ್ತು ಅಥವ ಅದಕ್ಕಿಂತ ಹೆಚ್ಚಿನ ಸಾಲಿನ ದ್ವಿಪದಿಗಳು, ತ್ರಿಪಕ್ಷೀಯ ಕಥನದ ಅಂಶ, ಗುಣಗಾನ, ವಿರಹ, ಶೋಕವನ್ನು ವ್ಯಕ್ತಪಡಿಸುವುದು ಈ ಪ್ರಕಾರದ ವಿಶಿಷ್ಟತೆಯಾಗಿದೆ. ಅಂತೆಯೇ, ಗಜ಼ಲ್ ಇತ್ಯಾದಿಗಳು. ಸೂಫಿ ಸಂತರು ಆಯಾ ಸನ್ನಿವೇಶಕ್ಕೆ ತಕ್ಕಂತೆ ಕಾವ್ಯ ಮಾದರಿಗಳನ್ನು ಬಳಸಿಕೊಂಡಿರುವುದನ್ನು ಕಾಣುತ್ತೇವೆ.
ಸೂಫಿಗಳು ಅದಾಗಲೆ ಲಭ್ಯವಿದ್ದ ಛಂದಸ್ಸಗಳನ್ನು ತಮ್ಮ ಆಧ್ಯಾತ್ಮಿಕ ಅಭಿವ್ಯಕ್ತಿಗಾಗಿ ಬಳಸಿಕೊಂಡರು. ಹಳೆಯ ಛಂದಸ್ಸುಗಳಲ್ಲಿದ್ದ ಭಾವದೀಪ್ತಿಯೂ ಸೂಫಿ ಅಭಿವ್ಯಕ್ತಿಯಲ್ಲಿ ಸೇರಿಕೊಂಡಿತು. ಭಕ್ತಿಯೊಡನೆ ನವಿರು ಶೃಂಗಾರಭಾವ ಸೇರಿಕೊಂಡಿತು. ಅಭಿಜಾತ ಕಾವ್ಯದ ಪ್ರೇಮದ ಪ್ರೇಮದ ಉತ್ಕಟತೆಯಲ್ಲಿ ಪ್ರಿಯತಮನಿಗೆ ಸಮರ್ಪಣೆಗೊಳ್ಳಲು ಸಿದ್ಧವಿರುವ ದೇಹ ಇಲ್ಲಿ ದೈವಿಕ ಸ್ವರೂಪವನ್ನು ಪಡೆಯಿತು. ಋಜುಮಾರ್ಗದಲಿ ಬದುಕಿದವನಿಗೆ ದೇವಪ್ರೀತಿ ದೊರಕಿಯೇ ತೀರುವುದು ಎಂಬ ಕುರಾನಿನ ಭರವಸೆಯೇ ಈ ಸೂಫಿ ಸಂತರು ಕನ್ನೆಯರಾಗಿ ದೇವನಿಗೆ ಅರ್ಪಿಸಿಕೊಳ್ಳುವಂತೆ ಮಾಡುತ್ತದೆ. ದೈವಪ್ರೇಮ ಕುರಾನಿನಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಅಂಶ. ಪುರುಷ-ಸ್ತ್ರೀ ಸಂಬಂಧಗಳ ಬಗ್ಗೆ ಕೂಡ ಉಲ್ಲೇಖಗಳು ಕಾಣುವುದುಂಟು. “ನೀವು ಪರಸ್ಪರ ನೆಮ್ಮದಿಯನ್ನು ಕಂಡುಕೊಳ್ಳಲು ನಿಮ್ಮ ಸಂಗಾತಿಗಳಿಂದ ನಿಮ್ಮನ್ನು ಸೃಷ್ಟಿಸಿದನು; ನಿಮ್ಮ ಹೃದಯದಲಿ ಅಕ್ಕರೆ, ಕರುಣೆಗಳನ್ನು ಇರಿಸಿದನು. ವಿಚಾರವಂತರು ನಿಜಕ್ಕೂ ಯೋಚಿಸುವ ಅಂಶವಿದು”, (ಕುರಾನ್: 30:21). ಅಲ್ ಅಜ಼ೀಜ್‌ನ ಮಡದಿ ಜೋಸೆಫ್‌ನೊಂದಿಗೆ ಮಾಡಿಕೊಳ್ಳುವ ಪ್ರೇಮ ನಿವೇದನೆಯ ಶ್ಲೋಕಗಳಲ್ಲಿ ತೆಳುವಾದ ಶೃಂಗಾರವನ್ನು ಕಾಣಬಹುದು (ಕುರಾನ್: 12:24 ರಿಂದ 30). ತಾತ್ಪರ್ಯದಲ್ಲಿ, ಸೂಫಿಗಳು ದೈವದೊಂದಿಗೆ ಶೃಂಗಾರಭಕ್ತಿಯನ್ನು ಕಾಣಲು ಮೂಲ ಆಕರದಿಂದಲೇ ಸ್ಫೂರ್ತಿ ಪಡೆದರು, ಎಂಬುದು.
ಈ ಬಗೆಯ ಶೃಂಗಾರಭಕ್ತಿಯನ್ನು ರಬಿಯ ಅಲ್-ಬಸ್ರ್, ಹುಸೇನ್ ಮನ್ಸೂರ್ ಅಲ್-ಹಲ್ಲಾಜ್, ರೂಮಿ, ಇಬ್ನೆ ಅರಬಿ, ಅಲ್ ಫಾರಿದ್, ಸಾದಿ, ಇರಾಕಿ, ಜಾಮಿ, ಅಮೀರ್ ಖುಸ್ರೋ ಕಾವ್ಯದಲ್ಲಿ ನವುರಾಗಿ ಕಾಣುವೆವು.
“ಸಾಕಿ, ತೆಗೆದುಕೊಂಡು ಬಾ ಮದಿರೆ
ಸುರಿ ನನಗೂ ಕೊಂಚ.
ಪ್ರೇಮವೆಂದರೆ ಮೊದಲಿಗೆ
ಸರಾಗವೆಂದುಕೊಂಡಿದ್ದೆ,
ಈಗ ಬದುಕು ಮೂರಾಬಟ್ಟೆಯಾಗಿಸುತಿದೆ”
ನಮ್ಮನ್ನೆಲ್ಲ ನಿಯಂತ್ರಿಸುವ ಎರಡು ಅತ್ಯಂತ ಪ್ರಬಲ ಶಕ್ತಿಗಳೆಂದರೆ ಧರ್ಮ ಮತ್ತು ರಾಜಕಾರಣ. ಎರಡರಲ್ಲೂ ಕರ್ಮಠತೆ, ಕಬ್ಬಿಣದ ಕಾಠಿಣ್ಯವನ್ನು ಎಲ್ಲ ಕಾಲಗಳಲ್ಲೂ ಕಾಣುವುದು ಸಾಮಾನ್ಯ. ಅವುಗಳ ಇನ್ನೊಂದು ಮಗ್ಗುಲಿಗೆ ಹೂವಿನ ಮೃದುತ್ವವನು ಗುಣವಾಗಿ ಪಡೆದ ಇನ್ನೊಂದು ಲೋಕವೂ ಇದೆ. ನಿಜ. ಹೂವಿನ ಮೃದುತ್ವಕ್ಕಿಂತ ಕಬ್ಬಿಣದ ಕಠಿಣತೆಯ ಬಲ ಹೆಚ್ಚು. ಮೃದುತ್ವದ ಆಯುಷ್ಯ ಕಡಿಮೆ. ಆದರೆ, ಅದರ ನವುರು ಸುಗಂಧ ನಮ್ಮ ಸ್ಮೃತಿಯಲ್ಲಿ ಉಳಿದಿರುತ್ತದೆ. ನಮ್ಮ ನಾಗರಿಕತೆಗಳು ನಿರ್ಮಾಣಗೊಂಡಿರುವುದು ಇಂತಹ ಶ್ರುತಿ ಮತ್ತು ಸ್ಮೃತಿಗಳಿಂದಲೇ. ಸ್ಮೃತಿ ಮತ್ತು ಶ್ರುತಿಗೆ ಸೂಫಿ ಸಂವಾದಿ ಪದ: `ಸಮಾ’. ಇದು ಮೋಕ್ಷ ಸಾಧನೆಯ ಹನ್ನೊಂದನೆಯ `ಪರದೆ’. ಆಲಿಕೆ, ಸ್ಮರಣೆ, ಮನನ ಮತ್ತು ಪರಿಷ್ಕರಣೆಗಳನ್ನು ಆಚರಣೆಗೆ ತರುತ್ತ ಮುಂದಡಿ ಇಡುವುದು ಒಂದು ವಿಧಾನ. ಆರ್ದ್ರತೆಯ ಕಾಲಾವಧಿ ಕಡಿಮೆ. ನಿಜವೇ. ಆದರೆ, ಕಬ್ಬುನ ಮತ್ತು ಕಲ್ಲುಗಳಿಂದ ಕಟ್ಟಿದ ಶ್ರೇಷ್ಠ ಇಮಾರತುಗಳು ಮುಂದೊಂದು ಕಾಲಕ್ಕೆ ಪ್ರಾಚ್ಯವಸ್ತುಗಳಾಗಿ, ಪಾಳು ಕೊತ್ತಲಗಳಾಗಿ ಬದಲಾಗುವವು ಎನ್ನುವುದೂ ನಿಜವೆ.
ದೇಹವನು ಕಾಯಕದಲಿ ಕರಗಿಸುವ ಶರಣ, ದೇಹವನು ವ್ಯೂಮದಲಿ ಸಿಲುಕಿಸಿ ಸಿಕ್ಕುಸಿಕ್ಕಾದ ಲೋಕದ ಅರ್ಥ ಒಡೆದು ಬ್ರಹ್ಮಾಂಡದಲಿ ಲೀನನಾಗುವ ಯೋಗಿ, ತನ್ನನ್ನು ಕನ್ನೆಯಂತೆ ಪರಮಪುರುಷನಿಗೆ ಸಮರ್ಪಸಿಕೊಳ್ಳುವ ಸೂಫಿ ಸಂತ, ಇವರೆಲ್ಲ ನಮಗೆ ಏನನ್ನಾದರೂ ಹೇಳುತ್ತಿದ್ದಾರೆಯೆ? ನಿಸ್ವಾರ್ಥ ಪ್ರೇಮ, ತಾನು ಮಾಡುವ ಕೆಲಸದಲಿ ತನ್ಮಯತೆ, ಸಿದ್ಧಿಸಲು ರಾಗದ್ವೇಷಗಳಿಂದ ಮುಕ್ತನಾಗಿರಬೇಕಾದ ಅಗತ್ಯ, ಕುಹಕ, ತರತಮ, ಅವಹೇಳನ, ಶೋಷಣೆ ಮಾಡುವ, ಕೀರ್ತಿ-ಪ್ರಸಿದ್ಧಿಗಾಗಿ ಹಾತೊರೆಯುವುದರ ಹೊರತಾಗಿಯೂ ಬೇರೊಂದು ವಿಧಾನವಿರಲು ಸಾಧ್ಯ, ಎಂದು ಈ ಹೂವಿನ ಮೃದುತ್ವದ ಮನುಷ್ಯರು ಹೇಳುತ್ತಿದ್ದಾರೆಂದು ಅನ್ನಿಸಿದರೆ, ಅಂಥ ನಿಷ್ಕಲ್ಮಶ ಲೋಕವನು ನಿರ್ಮಿಸಬೇಕಾದ ಹೊಣೆ ನಮ್ಮ ಮೇಲೆಯೇ ಇದೆ.
• ಕೇಶವ ಮಳಗಿ

ಕೇಶವ ಮಳಗಿ ಕನ್ನಡದ ಪ್ರಮುಖ ಕಥೆಗಾರ, ಕವಿ, ಅನುವಾದಕ ಮತ್ತು ವಿಮರ್ಶಕರಲ್ಲಿ ಒಬ್ಬರು. ಅವರ ಪ್ರಮುಖ ಕೃತಿಗಳಲ್ಲಿ ಕಡಲ ತೆರೆಗೆ ದಂಡೆ, ಮಾಗಿ ಮೂವತ್ತೈದು, ವೆನ್ನೆಲ ದೊರೆಸಾನಿ, ಹೊಳೆ ಬದಿಯ ಬೆಳಗು, ಅಕಥಾ ಕಥಾ, ಕುಂಕುಮ ಭೂಮಿ, ಅಂಗದ ಧರೆ ಮತ್ತು ನೇರಳೆ ಮರ ಮೊದಲಾದವು ಸೇರಿವೆ. ಕಥೆ, ಕಾವ್ಯ ಮತ್ತು ಲಲಿತ ಪ್ರಬಂಧದ ಅಂಶಗಳನ್ನು ಒಳಗೊಂಡಿರುವ ನೇರಳೆ ಮರ ಅವರ ವಿಶಿಷ್ಟ ಕಥನಪ್ರಯೋಗಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ವಿಶ್ವಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ಅವರ ಅನುವಾದ ಮತ್ತು ಸಾಂಸ್ಕೃತಿಕ ಬರಹಗಳ ಪೈಕಿ ಕಮೂ: ತರುಣ ವಾಚಿಕೆ, ಬೋರಿಸ್ ಪಾಸ್ತರ್ನಾಕ್: ವಾಚಿಕೆ, ಸಂಕಥನ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯ ವಿಮರ್ಶೆ), ಕಡಲಾಚೆಯ ಚೆಲುವೆ (ಫ್ರೆಂಚ್ ಕಥೆಗಳು), ಗುಂಡಿಗೆಯ ಬಿಸಿರಕ್ತ (ಆಫ್ರಿಕನ್ ಸಮಾಜ–ಸಾಹಿತ್ಯ–ಸಂಸ್ಕೃತಿ ಸಂಕಥನ) ಮೊದಲಾದವು ಪ್ರಮುಖವಾಗಿವೆ. ಈ ಕೃತಿಗಳ ಮೂಲಕ ಫ್ರೆಂಚ್, ಆಫ್ರಿಕನ್ ಸೇರಿದಂತೆ ವಿವಿಧ ಜಾಗತಿಕ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ.